ವಿಷಯಕ್ಕೆ ಹೋಗು

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಪರಮಹಂಸರು ಕಾಳಿಯ ಅರ್ಚಕರಾಗಿ ನಿಂತದ್ದು

ವಿಕಿಸೋರ್ಸ್ದಿಂದ

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (1919)  by ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ
ಪರಮಹಂಸರು ಕಾಳಿಯ ಅರ್ಚಕರಾಗಿ ನಿಂತದ್ದು

ನಾಲ್ಕನೆಯ ಅಧ್ಯಾಯ.

ಪರಮಹಂಸರು ಕಾಳಯ ಅರ್ಚಕರಾಗಿ ನಿಂತದ್ದು.

ದಕ್ಷಿಣೇಶ್ವರದಲ್ಲಿ ಕಾಳಿಕಾದೇವಿಯ ಪ್ರತಿಷ್ಠೆಯಾದ ದಿವಸ ಪರಮಹಂಸರು[] ಅಲ್ಲಿಯೇ ಇದ್ದರು. ಆದಿನ ನಡೆದ ದಾನಧರ್ಮ, ಪೂಜೆ ಪುರಸ್ಕಾರಗಳನ್ನು ನೋಡಿ ಅವರಿಗೆ ಬಹಳ ಆನಂದವಾಯಿತು. ಬೇರೆ ಅರ್ಚಕನು ಸಿಕ್ಕುವವರೆಗೆ ನಾಲ್ಕು ದಿನ ತಾನು ಅಲ್ಲಿಯೇ ಇರುವುದಾಗಿ ರಾಮಕುಮಾರನು ಹೇಳಿದ್ದರಿಂದ ಪರಮಹಂಸರ ಬ್ಬರೇ ಕಲ್ಕತ್ತೆಗೆ ಹಿಂತಿರುಗಿ ಬಂದುಬಿಟ್ಟರು. ಆದರೆ ಒಂದುವಾರ ವಾದರೂ ಅಣ್ಣನು ಬರಲಿಲ್ಲವಾಗಿ ಅದಕ್ಕೆ ಕಾರಣವನ್ನು ತಿಳಿಯ ಬೇಕೆಂದು ಪುನಃ ದಕ್ಷಿಣೇಶ್ವರಕ್ಕೆ ಹೋಗಲು, ರಾಣಿಯು ಬಲ ವಂತ ಪಡಿಸಿದ್ದರಿಂದ ತಾನು ಅಲ್ಲಿಯೇ ಅರ್ಚಕನ ಕೆಲಸದಲ್ಲಿ ಇರುವುದಕ್ಕೆ ಒಪ್ಪಿಕೊಂಡೆನೆಂದು ರಾಮಕುಮಾರನು ಹೇಳಿದನು. ಇದರಿಂದ ಪರಮಹಂಸರಿಗೆ ಸಮಾಧಾನವಾಗಲಿಲ್ಲ. ತಮ್ಮತಂದೆ ಯು ಶೂದ್ರರಮನೆಯಲ್ಲಿ ಪೂಜೆಮಾಡದೆ ಇದ್ದದ್ದು, ಶೂದ್ರರಿಂದ ದಾನವನ್ನು ಸ್ವೀಕರಿಸದೆ ಇದ್ದದ್ದು, ಮುಂತಾದ ಆತನಸದಾಚಾರಗಳ ನ್ನೆಲ್ಲಾ ಅಣ್ಣನಿಗೆ ಜ್ಞಾಪಿಸಿ ಅವನನ್ನು ಕರೆದುಕೊಂಡು ಹೋಗುವು ದಕ್ಕೆ ಪ್ರಯತ್ನ ಮಾಡಿದರು. ರಾಮಕುಮಾರನು ಶಾಸ್ತ್ರಸಹಾಯ ದಿಂದಲೂ ಯುಕ್ತಿ ಸಹಾಯದಿಂದಲೂ ತಮ್ಮನಿಗೆ ಏನೇನೋ ಸಮಾಧಾನ ಹೇಳಿದನು. ಇದು ಯಾವುದೂ ಒಪ್ಪಿಗೆಯಾಗಲಿಲ್ಲ: ಆದ್ದರಿಂದ ದೇವರಮುಂದೆ ಚೀಟಿಹಾಕಿ ನೋಡಬೇಕೆಂದು ನಿರ್ಧರ ವಾಯಿತು. ಇದರಲ್ಲಿಯೂ ರಾಮಕುಮಾರನಿಗೇ ಅನುಕೂಲವಾಗಿ ಬರಲು ಪರಮಹಂಸರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಯಿತು.

ಆದರೆ ಇನ್ನೊಂದು ವಿಷಯದಲ್ಲಿ ಪುನಃ ಯೋಚನೆಗಾರಂಭ ವಾಯಿತು. ಅರ್ಚಕನ ಕೆಲಸವನ್ನು ವಹಿಸುವುದಕ್ಕೆ ಆಕ್ಷೇಪಣೆ ಮಾಡಿದವರು ಅಲ್ಲಿ ಊಟಮಾಡುವುದಕ್ಕೆ ಒಪ್ಪುವುದು ನಿಜವೆ! ರಾಮಕುಮಾರನು “ ಇದುದೇವಾಲಯ, ಗಂಗಾಜಲದಲ್ಲಿ ಮಾಡಿದ ಪದಾರ್ಥಗಳು, ಅದರ ಮೇಲೆ ಜಗದಂಬೆಗೆ ನೈವೇದ್ಯವಾದುವು: ಇದನ್ನು ಊಟಮಾಡುವುದರಿಂದ ಯಾವದೋಷವೂ ಬರುವುದಿಲ್ಲ" ಎಂದು ಮುಂತಾಗಿ ಎಷ್ಟೆಷ್ಟೋ ಸಮಾಧಾನಗಳನ್ನು ಹೇಳಿದನು.ಆದರೆ ಅವರ ಮನಸ್ಸಿಗೆ ಇವೊಂದೂ ಸರಿತೋರದೆ ಸ್ವಯಂಪಾಕ ವನ್ನು ತೆಗೆದುಕೊಂಡು ಹೋಗಿ ಗಂಗೆಯಹತ್ತಿರ ತಾವೇ ಅಡಿಗೆಮಾಡಿ ಕೊಂಡು ಊಟಮಾಡಿಬಿಟ್ಟರು.

ಕಾಳಿಕಾದೇವಿಯ ಪ್ರತಿಷ್ಟೆಯಾದಮೇಲೆ ಒಂದು ತಿಂಗಳ ವರೆಗೂ ಪರಮಹಂಸರು ಏನುಮಾಡಬೇಕೆಂಬುದನ್ನು ತಿಳಿಯದೆ ದಕ್ಷಿಣೇಶ್ವರದಲ್ಲಿ ಕಾಲಯಾಪನೆ ಮಾಡುತ್ತಿದ್ದರು. ಮಧುರಾ ನಾಥನು ಅವರನ್ನು ಯಾವುದಾದರೂ ಒಂದು ಕೆಲಸಕ್ಕೆ ಸೇರಿಸಬೇ ಕೆಂದು ಸಂಕಲ್ಪ ಮಾಡಿ ತನ್ನ ಉದ್ದೇಶವನ್ನು ರಾಮಕುಮಾರನಿಗೆ ತಿಳಿಸಿದನು. ರಾಮಕುಮಾರನು ವಿಚಾರಮಾಡಿ ಅವರು ಒಪ್ಪುವುದಿಲ್ಲ ವೆಂದು ಹೇಳಿಬಿಟ್ಟನು. ಮಧುರಾನಾಥನು ಮಾತ್ರ ತನ್ನ ಸಂಕಲ್ಪ ವನ್ನು ಬಿಡದೆ ಸಮಯವನ್ನು ಕಾಯುತ್ತಿದ್ದನು. ಆದರೆ ಅವನ ಉದ್ದೇಶವು ಗೊತ್ತಾದಂದಿನಿಂದ ಪರಮಹಂಸರು ಅವನಕಣ್ಣಿಗೆ ಬೀಳದಹಾಗೆ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದರು. ಏಕೆಂದರೆ, ಮಧುರಾನಾಥನು ಏನೋ ಉಪಕಾರ ಮಾಡುತ್ತೇನೆಂದು ತಿಳಿದು, ಒಂದು ನೌಕರಿ ಕೊಡುವುದಕ್ಕೆ ಬಂದರೆ ಬೇಡವೆಂದುಹೇಳಿ ಅವನ ಮನಸ್ಸನ್ನು ನೋಯಿಸುವುದು ಅವರಿಗೆ ಚೆನ್ನಾಗಿ ತೋರಲಿಲ್ಲ. ಒಂದುದಿನ ಪರಮಹಂಸರೂ ಹೃದಯನೂ[] ದೇವಸ್ಥಾನದ ಹತ್ತಿರ ತಿರುಗಾಡುತ್ತಿದರು. ಮಧುರಾನಾಥನು ದೇವರದರ್ಶನ ಮಾಡಿಕೊಂಡು ಬರುತ್ತ ಪರಮಹಂಸರನ್ನು ನೋಡಿ, ಅವರನ್ನು ಕರೆದುಕೊಂಡು ಬರುವಹಾಗೆ ತನ್ನ ಸೇವಕನೊಬ್ಬನನ್ನು ಕಳುಹಿಸಿದನು. ಮಧುರನು ಕಣ್ಣಿಗೆ ಬಿದ್ದ ಒಡನೆಯೇ ಅವರು ಆ ಜಾಗವನ್ನೇಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟರಲ್ಲಿಯೇ ಮಧುರಾ ನಾಥನ ಸೇವಕನು ಬಂದು " ಯಜಮಾನರು ತಮ್ಮನ್ನು ಕರೆಯುತ್ತಾರೆ ” ಎಂದು ಹೇಳಿದನು. ಪರಮಹಂಸರು ಹೋಗಲು ಹಿಂಜರಿಯುತ್ತ ನಿಂತುಬಿಟ್ಟಿದ್ದನ್ನು ಕಂಡು,

ಹೃದಯ:—— ಮಾವಾ, ಯಾಕೆ ಹೀಗೆ ಹಿಂದು ಮುಂದು ನೋಡುತ್ತೀ?
ಪರಮ:—— ಹೋಯಿತು ಅ೦ದರೆ ಇಲ್ಲೇ ಇರು ಅಂತ ಹೇಳುತ್ತಾನೆ. ಚಾಕರಿಗೆ ಸೇರಿಕೊ ಅಂತಾನೆ.
ಹೃದಯ:——ಅದರಿಂದ ದೋಷವೇನು? ಇಂಥ ಸ್ಥಳದಲ್ಲಿಮಹದಾಶ್ರಯದಲ್ಲಿ ನೌಕರಿಗೆ ಸೇರುವುದು ಒಳ್ಳೆದೇ ಹೊರತುಕೆಟ್ಟದ್ದೇನೂ ಅಲ್ಲ. ಇದಕ್ಕೇಕೆ ಹಿಂದು ಮುಂದು ನೋಡಬೇಕು ?
ಪರಮ:——ಇಲ್ಲಿ ಸುಮ್ಮನೆ ಚಾಕರಿಯಿಂದ ಕಟ್ಟುಬಿದ್ದಿರುವುದಕ್ಕೆ ನನಗೆ ಮನಸ್ಸಿಲ್ಲ. ಪೂಜೇಕೆಲಸಕ್ಕೆ ಒಪ್ಪಿಕೊಂಡರೆಆಭರಣಗಳ ಜವಾಬ್ದಾರಿ ಹೊತ್ತುಕೋಬೇಕು, ಅದು ಮಹಾ ಹಂಗಿನ ಕೆಲಸ, ಅದು ನನ್ನಿಂದ ಸಾಧ್ಯವಲ್ಲ. ಆ ಭಾರ ನೀನು ಹೊತ್ತುಕೊಳ್ಳುವಹಾಗಿದ್ದರೆ ನಾನು ಪೂಜೆ ಮಾಡುವುದಕ್ಕೆ ಅಡ್ಡಿಯಿಲ್ಲ.

ಹೃದಯನು ಚಾಕರಿಗಾಗಿಯೇ ಬಂದಿದ್ದರಿಂದ ಅದಕ್ಕೆ


ಕೂಡಲೇ ಸಮ್ಮತಿಸಿದನು. ಇಷ್ಟಾದಮೇಲೆ ಅವರು ಮಧುರಾನಾಥನ

ಹತ್ತಿರಕ್ಕೆ ಹೋದರು. ಎಲ್ಲವೂ ಹಿಂದೆ ಯೋಚಿಸಿದ್ದಂತೆಯೇ ಆ ಯಿತು. ಮಧುರಾನಾಥನು ಬಲವಂತಮಾಡಿ ಕೆಲಸಕ್ಕೆ ಸೇರಬೇಕೆಂದು ಹೇಳಿದನು. ಪರಮಹಂಸರು ತಮ್ಮ ಅಭಿಪ್ರಾಯವನ್ನು ಸೂಚಿಸಿದರು. ಮಧುರನೂ ಅದಕ್ಕೆ ಒಪ್ಪಿ ಪರಮಹಂಸರಿಗೆ ದೇವಸ್ಥಾನದಲ್ಲಿ ಅಲಂಕಾರ ಮಾಡುವ ಕೆಲಸವನ್ನೂ ಹೃದಯನಿಗೆ ಪರಿಚಾರಿಕೆಯ ಕೆಲಸವನ್ನೂ ಗೊತ್ತು ಮಾಡಿದನು.

ಹೃದಯನು ಸದಾ ಪರಮಹಂಸರ ಜೊತೆಯಲ್ಲಿಯೇ ಇರುತಿದ್ದನು. ಇಬ್ಬರೂ ಒಟ್ಟಿಗೆ ಏಳುವರು. ಒಟ್ಟಿಗೆ ಸ್ನಾನಮಾಡುವರು; ಜೊತೆಯಾಗಿ ತಿರುಗಾಡವರು. ಹೀಗಿದ್ದರೂ ಹೃದಯನು ರಾಮಕುಮಾರನಿಗೆ ಏನಾದರೂ ಸಹಾಯಮಾಡುವುದಕ್ಕೆ ಹೋವಾಗ, ಮಧ್ಯಾಹ್ನ ಊಟವಾದಮೇಲೆ ಮಲಗಿದ್ದಾಗ, ಅಥವಾ ಸಾಯಂಕಾಲದಲ್ಲಿ ದೇವಸ್ಥಾನಕ್ಕೆ ಮಂಗಳಾರತಿಗೆ ಹೋಗಿದ್ದಾಗ ಪರಮಹಂಸರು ಅವನ ಜೊತೆಯನ್ನು ತಪ್ಪಿಸಿಕೊಂಡು ಹೋಗಿ ಸ್ವಲ್ಪ ಹೊತ್ತು ಎಲ್ಲಿಯೋ ಮಾಯವಾಗುತ್ತಿದ್ದರು. ಎಷ್ಟು ಹುಡುಕಿದರೂ ಸಿಕ್ಕುತ್ತಿರಲಿಲ್ಲ. ಒಂದೆರಡು ಘಂಟೆಯಾದ ಮೇಲೆ ಎಲ್ಲಿಂದಲೋ ಹಿಂದಿರುಗಿ ಬರುತ್ತಿದ್ದರು. ಈ ಎಲ್ಲಿ ಹೋಗಿದ್ದೆ ?” ಎಂದು ಕೇಳಿದರೆ "ಎಲ್ಲೂ ಇಲ್ಲ-ಇಲ್ಲೆ ಇದ್ದೆ” ಎಂದು ಹೇಳುತ್ತಿದ್ದರು. ಹೃದಯನು ಪತ್ತೆ ಮಾಡಬೇಕೆಂದು ಹೊರಟು ಒಂದುದಿನ ಅವರು ಪಂಚವಟಿ[]ಯ ಕಡೆಯಿಂದ ಬರುತ್ತಿದ್ದದ್ದನ್ನು ಕಂಡು ಶೌಚಕ್ಕೆ ಹೋಗಿದ್ದಾರೆಂದುಕೊಂಡು ಸುಮ್ಮನಾದನು.

ರಾಮಕುಮಾರನಿಗೆ ತಮ್ಮನ ಸ್ಥಿತಿಯನ್ನು ನೋಡಿ ಚಿಂತೆ ಹತ್ತಿತು. ಏಕೆಂದರೆ ಪರಮಹಂಸರು ಯಾವಾಗಲೂ ನಿರ್ಜನ ಸ್ಥಳ ಪ್ರಿಯರಾಗಿಯೂ ಸಂಸಾರ ವಿಚಾರಗಳಲ್ಲಿ ಉದಾಸೀನರಾಗಿಯೂ ಇದ್ದರು. ಬೆಳಗ್ಗೆ, ಸಂಜೆ, ಯಾವಾಗೆಂದರಾವಾಗ ದೇವ ಸ್ಥಾನದಿಂದ ದೂರಹೋಗಿ ಗಂಗಾತೀರದಲ್ಲಿ ತಿರುಗಾಡುತ್ತಲೋ ಪಂಚವಟಿಯಲ್ಲಿ ಅಥವಾ ಅದರ ಹತ್ತಿರವಿದ್ದ ಕಾಡಿನಲ್ಲಿ ಕುಳಿತುಕೊಂಡೋ ಇರುತ್ತಿದ್ದರು. ತನಗೋ ವಯಸ್ಸಾಗುತ್ತ ಬಂದಿತ್ತು. ತಾನು ಹೋದರೆ ಸಂಸಾರ ನಡೆಸುವವರಾರು ? ಹೇಗಾದರೂ ಗದಾಧರನು ಎರಡು ಕಾಸು ಸಂಪಾದಿಸುವಂತಾಗಿ ಸಂಸಾರ ನಡೆಸುವ ಹಾಗಾದರೆ ತಾನು ನಿಶ್ಚಿಂತೆ ಯಾಗಿರಬಹುದು ಎಂದು ಅಂದುಕೊಳ್ಳುತ್ತಿದ್ದನು. ಈಗ ಮಧುರಾನಾಥನ ಬಲವಂತದಿಂದ ತಮ್ಮನು ನೌಕರಿಗೆ ಸೇರಲು ರಾಮಕುಮಾರನಿಗೆ ಚಿಂತೆಯು ಕಡಿಮೆಯಾಗಿ, ಅವನಿಗೆ ಚಂಡೀಪಾಠ, ಕಾಳಿಕಾಪೂಜೆಯ ಕ್ರಮ ಮುಂತಾದುವುಗಳನ್ನು ಕಲಿಸುತ್ತ ಬಂದನು. ಪರಮಹಂಸರೂ ಇವೆಲ್ಲವುಗಳನ್ನೂ ಬಲುಬೇಗ ಕಲಿತರು; ಮತ್ತು ಶಕ್ತಿ ದೀಕ್ಷೆಯನ್ನು ತೆಗೆದುಕೊಳ್ಳದಿದ್ದರೆ ದೇವಿಯಪೂಜೆಯು ಪ್ರಶಸ್ತವಾಗುವುದಿಲ್ಲವೆಂದಂದುಕೊಂಡು ಕೇನೋರಾಮಚಟ್ಟೋಪಾಧ್ಯಾಯನೆಂಬ ಪ್ರಸಿದ್ಧ ಶಕ್ತಿ ಸಾಧಕನಿಂದ ಶಕ್ತಿಮಂತ್ರವನ್ನು ಉಪದೇಶ ಮಾಡಿಸಿಕೊಂಡರು.

ಪರಮಹಂಸರು ಅಣ್ಣನಿಗೆ ಪೂಜೆಯ ಕೆಲಸದಲ್ಲಿ ಸಹಾಯಕರಾಗಿ ಬಂದ ಕೆಲವು ದಿನಗಳಮೇಲೆ ಅದೇ ದೇವಸ್ಥಾನದಲ್ಲಿದ್ದ ರಾಧಾಗೋವಿಂದದೇವರ ಅರ್ಚಕನು ಗೋವಿಂದದೇವರನ್ನು ಎತ್ತಿ ಹಾಕಿ ಭಿನ್ನಮಾಡಿದ ತಪ್ಪಿಗಾಗಿ ಆ ಕೆಲಸದಿಂದ ನಿವೃತ್ತನಾದನು. ಪರಮಹಂಸರು ಆತನ ಸ್ಥಾನದಲ್ಲಿ ನಿಯಮಿಸಲ್ಪಟ್ಟರು.

ರಾಮಕುಮಾರನು ತನಗೆ ವಯಸ್ಸಾಗಿದ್ದದ್ದರಿಂದಲೋ ದೇಹ ಸ್ಥಿತಿಯು ನೆಟ್ಟಗಿಲ್ಲದ್ದರಿಂದಲೋ ಅಥವಾ ತಮ್ಮನಿಗೆ ಅಭ್ಯಾಸವಾಗಲಿಯೆಂಬ ಅಭಿಪ್ರಾಯದಿಂದಲೋ ಆಗಾಗ ಪರಮಹಂಸರನ್ನು ದೇವೀಪೂಜೆಗೆ ನಿಯಮಿಸಿ ತಾನು ರಾಧಾಗೋವಿಂದನ ಪೂಜೆಗೆ ಹೋಗುತ್ತಿದ್ದನು. ದೇವೀ ಪೂಜೆಗೆ ಬೇಕಾದಷ್ಟು ದೇಹಶಕ್ತಿಯು ರಾಮಕುಮಾರನಿಗೆ ಇಲ್ಲವೆಂದು ತಿಳಿದು ಮಧುರನು ರಾಣಿಗೆ ಹೇಳಿ? ರಾಮಕುಮಾರನು ರಾಧಾಗೋವಿಂದನನ್ನೂ ಪರಮಹಂಸರು ಕಾಳಿ ದೇವಿಯನ್ನೂ ಪೂಜೆಮಾಡಬೇಕೆಂದು ವ್ಯವಸ್ಥೆ ಮಾಡಿದನು. ರಾಮ ಕುಮಾರನಿಗೂ ಇದರಿಂದ ಸಂತೋಷವಾಗಿ ತಾನೇ ನಿಂತುಕೊಂಡು ಪೂಜೆ ಪುರಸ್ಕಾರಗಳ ವಿಧಾನಗಳನ್ನೆಲ್ಲ ತಮ್ಮನಿಗೆ ಹೇಳಿಕೊಟ್ಟನು. ಇದೆಲ್ಲ ವ್ಯವಸ್ಥೆಯಾದಮೇಲೆ ರಾಮಕುಮಾರನು, ರಾಧಾಗೋ ವಿಂದನ ಪೂಜೆಗೆ ಹೃದಯನನ್ನು ನಿಲ್ಲಿಸಿ ಒಂದುಸಾರಿ ತಮ್ಮ ಊರಿಗೆ ಹೋಗಿಬರಬೇಕೆಂದು ಯೋಚಿಸುತ್ತಿದ್ದನು. ಆದರೆ ಅವನಿಗೆ ಮತ್ತೆ ಕಾಮಾರಪುಕುರವನ್ನು ನೋಡುವ ಋಣಾನುಬಂಧವಿರಲಿಲ್ಲ. ಕಾರ್ಯಾಂತರದಿಂದ ಹತ್ತಿರದಲ್ಲಿದ್ದ ಒಂದುಗ್ರಾಮಕ್ಕೆ ಹೋಗಿರಲು ಇದಕ್ಕಿದಹಾಗೆ ರಾಮಕುಮಾರನು ದೇಹತ್ಯಾಗ ಮಾಡಿದನು.

ಹೀಗೆ ವಿಧಿಯು ಪರಮಹಂಸರನ್ನು ಎಳೆದುತಂದು ದಕ್ಷಿಣೇ ಶ್ವರ ದೇವಸ್ಥಾನವು ಪ್ರತಿಷ್ಟಿತವಾದ ಒಂದುವರ್ಷದ ಒಳಗಾಗಿ ಅಲ್ಲಿನ ಕಾಳೀಪೂಜೆಗೆ ಗಂಟುಹಾಕಿತು.



  1. 'ರಾಮಕೃಷ್ಣ' ನೆಂಬ ಹೆಸರು ಬಹುಶಃ ಸನ್ಯಾಸ ಸ್ವೀಕಾರ ಕಾಲದಲ್ಲಿ ತೋತಾಪುರಿ ಗೋಸ್ವಾಮಿಯು ಕಟ್ಟಿದ್ದು: ಪರಮಹಂಸತ್ವವು ಎಲ್ಲದಕ್ಕೂ ಕೊನೆಯಲ್ಲಿ ಬಂದದ್ದು. ಆದರೂ ಇಲ್ಲಿಂದ ಮುಂದಕ್ಕೆ ಏಕವಚನವನ್ನು ಉಪಯೋಗಿಸಲು ಸಂಕೋಚವಾಗಿ ರಾಮಕೃಷ್ಣಪರಮ ಹಂಸರು ಅಥವಾ ಪರಮಹಂಸರು ಎಂದೇ ಹೇಳುತ್ತ ಹೋಗಿದ್ದೇವೆ.
  2. ಹೃದಯ ರಾಮಮುಖ್ಯೋಪಾಧ್ಯಾಯ, ಪರಮಹ೦ಸ ರ ಸೋದ ರತ್ತೆಯ ಮಗಳ ಮಗ; ಏನಾದರೂ ಒಂದು ನೌಕರಿಯನ್ನು ಸಂಪಾದಿಸ ಬೇಕೆಂದು ದಕ್ಷಿಣೇಶ್ವರಕ್ಕೆ ಬಂದಿದ್ದನು.
  3. ದಕ್ಷಿಣೇಶ್ವರದ ಹತ್ತಿರದಲ್ಲಿದ್ದ ಒ೦ದುತೋಪು.