ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ರಾಮಕೃಷ್ಣ ಪರಮಹಂಸರ ತಾಯಿತಂದೆಗಳು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (1919)  by ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ
ರಾಮಕೃಷ್ಣ ಪರಮಹಂಸರ ತಾಯಿತಂದೆಗಳು

ಮೊದಲನೆಯ ಅಧ್ಯಾಯ

ರಾಮಕೃಷ್ಣಪರಮಹಂಸರ ತಾಯಿತಂದೆಗಳು

ಬಂಗಾಳದೇಶದ ಬರ್ದವಾನ್ ಡಿಸ್ಟ್ರಿಕ್ಟಿಗೆ ಸೇರಿದ 'ದೇರೆ' ಎಂಬ ಗ್ರಾಮದಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದೆ ಮಾಣಿಕರಾಮಚಟೋಪಾಧ್ಯಾಯನೆಂಬ ಒಬ್ಬ ವೈದಿಕ ಬ್ರಾಹ್ಮಣ ನಿದ್ದನು. ಆತನಿಗೆ ಖುಧಿರಾನು, ನಿಧಿರಾಮ, ಕನೈರಾಮ ಎಂಬ ಮೂರು ಜನ ಗಂಡುಮಕ್ಕಳೂ, ರಾಮಶಿಲಾ ಎ೦ಬ ಒಬ್ಬ ಹೆಣ್ಣು ಮಗಳೂ ಇದ್ದರು. ಹಿರಿಯಮಗನಾದ ಖುದಿರಾಮನು ಕ್ರಿ. ಶ. ೧೬೭೫ ರಲ್ಲಿ ಹುಟ್ಟಿದನು. ಆತನು ಜೀವನೋಪಾಯಕ್ಕೆ ಅನುಕೂಲವಾದ ಯಾವುದಾದರೂ ಲೌಕಿಕವಿದ್ಯೆಯನ್ನು ಕಲಿತಿದ್ದನೋ ಇಲ್ಲವೋ ತಿಳಿಯದು. ಆದರೆ ಶಾಸ್ತ್ರದಲ್ಲಿ ಸದ್ಭ್ರಾಹ್ಮಣರಿಗೆ ಸ್ವಭಾವಸಿದ್ಧವಾಗಿ ಇರಬೇಕೆಂದು ಹೇಳಿರುವ ಸತ್ಯನಿಷ್ಠೆ, ತೃಪ್ತಿ, ತಾಳ್ಮೆ, ವೈರಾಗ್ಯ ಮುಂತಾದ ಗುಣಗಳನ್ನು ವಿಧಾತನು ಆತನಿಗೆ ಯಥೇಚ್ಛವಾಗಿ ಕೊಟ್ಟಿದನು. ಪ್ರತಿನಿತ್ಯವೂ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಮನೆದೇವರಾದ ಶ್ರೀರಾಮ ಚಂದ್ರನನ್ನು ಭಕ್ತಿಪೂರ್ವಕವಾಗಿ ಪೂಜೆಮಾಡಿದಹೊರತು ಒಂದು ತೊಟ್ಟು ನೀರನ್ನು ಸಹ ಕುಡಿಯುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ದಾನವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ಪೌರೋಹಿತ್ಯ, ಪೂಜೆಮುಂತಾದವನ್ನು ಮಾಡಿಸುತ್ತಿದ್ದ ಬ್ರಾಹ್ಮಣರ ಮನೆಗೆ ಊಟ ಉಪಚಾರಗಳಿಗೆ ಹೋಗುತ್ತಿರಲಿಲ್ಲ. ಈ ವಿವಾದ ನಿಷ್ಠೆ ಮತ್ತು ಸದಾಚಾರವನ್ನು ನೋಡಿ ಆಗ್ರಾಮದವರೆಲ್ಲರೂ ಅವನಲ್ಲಿ ವಿಶೇಷ ಭಕ್ತಿಯನ್ನೂ ಗೌರವವನ್ನೂ ಇಟ್ಟು ಕೊ೦ಡಿದ್ದರು.

ತಂದೆಯ ಮರಣಾನಂತರ ಸಂಸಾರದ ಭಾರವೆಲ್ಲ ಖುದಿ ರಾಮನಮೇಲೆ ಬಿತ್ತು. ಆತನು ಧರ್ಮಮಾರ್ಗವನ್ನು ಬಿಡದೆ ಸಾಧ್ಯವಾದ ಮಟ್ಟಿಗೆ ಸಂಸಾರವನ್ನು ಅನುಕೂಲವಾದ ರೀತಿ ಯಲ್ಲಿ ನಡೆಸಿಕೊಂಡು ಹೋಗುತ್ತಿದ್ದನು. ಇದಕ್ಕೆ ಮುಂಚೆಯೇ ಆತನಿಗೆ ಮದುವೆಯಾಗಿ ಹೆಂಡತಿ ತೀರಿಹೋಗಿದಳು. ಕ್ರಿ. ಶ. ೧೭೯೯ ರಲ್ಲಿ ಮತ್ತೆ ಮದುವೆಯಾಯಿತು. ಆಗ ಆತನಿಗೆ ಸುಮಾರು ೨೫ ವರ್ಷ. ಈ ಎರಡನೆಯ ಹೆಂಡತಿಯಾದ ಶ್ರೀಮತಿ ಚಂದ್ರಾದೇವಿಗೆ ಎಂಟು ವರ್ಷ. ಆಕೆಯು ಚಿಕ್ಕ ವಯಸ್ಸಿನಿಂದಲೂ ಸರಳಸ್ವಭಾವವುಳ್ಳವಳಾಗಿಯೂ ದೇವಬ್ರಾಹ್ಮಣರಲ್ಲಿ ಭಕ್ತಿ ಯುಳ್ಳವಳಾಗಿಯೂ ಪ್ರೇಮಮಯಿಯಾಗಿಯೂ ಇದ್ದಳು. ಆದರಿಂದ ಈಕೆಯನ್ನು ಕಂಡರೆ ಮನೆಯಲ್ಲಿ ಎಲ್ಲರಿಗೂ ಕೇವಲವಿಶ್ವಾಸ. ಹೀಗಿರಲು ಈಕೆಯ ಹೊಟ್ಟೆಯಲ್ಲಿ ೧೮೦೫ ರಲ್ಲಿ ರಾಮಕುಮಾರ ನೆಂಬೊಬ್ಬ ಮಗನೂ ೧೮೧೦ ರಲ್ಲಿ ಕಾತ್ಯಾಯನೀ ಎ೦ಬೊಬ್ಬ ಮಗಳೂ ಹುಟ್ಟಿದರು. ಹೀಗೆ ಸಂಸಾರವು ಹೆಚ್ಚಾದ್ದರಿಂದ ಖುದಿರಾಮನಿಗೆ ಜೀವನ ಮಾಡುವುದು ಕಷ್ಟವಾಗುತ್ತಬಂತು. ಸಾಲ ದ್ಕ್ಕೆ ಕಾತ್ಯಾಯನಿಯು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಅಕಸ್ಮಾತ್ತಾಗಿ ಆತನಿಗೆ ಇನ್ನೊಂದು ವಿಷಮಕಷ್ಟವು ಪ್ರಾಪ್ತವಾಯಿತು.

ಆವೂರಿನ ಜಮೀನುದಾರನಾದ ರಾಮಾನಂದರಾಯನು ಐಶ್ವರ್ಯಮತ್ತನಾಗಿ ತನಗಾಗದ ಜನರನ್ನೆಲ್ಲಾ ಕಿರುಕುಳಗುಟ್ಟಿಸುತ್ತಿದ್ದನು. ಇವನು ಒಂದುಕಾಲದಲ್ಲಿ ಯಾರಮೇಲೆಯೋ ಒಂದು ಸುಳ್ಳುದಾವಾಹಾಕಿ ಅದಕ್ಕೆ ಯೋಗ್ಯನಾದ ಸಾಕ್ಷಿ ಬೇಕಾಗಿದ್ದುದರಿಂದ ಖುದಿರಾಮನನ್ನು ಸಾಕ್ಷಿಯಾಗಿ ಕೋರಿದನು. ಪಾಪ! ಧರ್ಮ ಪರಾಯಣನಾದ ಖುದಿರಾಮನು ತನ್ನ ಸ್ವಭಾವಕ್ಕೆ ವಿರುಧ್ಧವಾಗಿ ಸುಳ್ಳುಸಾಕ್ಷ್ಯವನ್ನು ಕೊಡುವುದೆಂದರೆ ಹೇಗೆ? ಹೇಳದೇ ಹೋದರೋ, ರಾಮಾನಂದರಾಯನು ಯಾವುದಾದರೂ ಒಂದು ನೆಪದಲ್ಲಿ ತನ್ನನ್ನು ನಿರ್ಮೂಲ ಮಾಡಿಬಿಡುವುದು ನಿಶ್ಚಯ. ಆದರೂ ಸತ್ಯಕ್ಕೆಹೆದರಿ ಅವನಿಗೆ ವಿರೋಧವಾಗಿ ನಡೆಯಬೇಕಾಯಿತು. ತಾನು ಸುಳ್ಳುಸಾಕ್ಷಿ ಹೇಳಲಾರೆನೆಂದು ಕಂಠೋಕ್ತವಾಗಿ ಹೇಳಿಬಿಟ್ಟನು. ಇದರಿಂದ ಆತನಿಗೆ ಮಹಾಕೋಪ ಉಂಟಾಗಿ, ಸ್ವಲ್ಪ ದಿವಸದಲ್ಲಿಯೇ ಸುಳ್ಳು ಪತ್ರ ಗಳನ್ನು ಹುಟ್ಟಿಸಿ ಖುದಿರಾಮನಮೇಲೆ ದಾವಾಹಾಕಿ ಆತನ ಅಲ್ಪ ಸ್ವಲ್ಪ ಪಿತ್ರಾರ್ಜಿತ ಸ್ವತ್ತನ್ನೆಲ್ಲಾ ಅಪಹರಿಸಿಬಿಟ್ಟನು. ಖುದಿರಾಮನಿಗೆ ಡೇರೆಯಲ್ಲಿ ನಿಲ್ಲುವುದಕ್ಕೆ ಒಂದು ಹೆಜ್ಜೆ ಜಾಗವೂ ಇಲ್ಲದಂತಾ ಯಿತು. ಈ ದುರ್ದರೆಯನ್ನು ಕಂಡು ಊರಿನವರಿಗೆಲ್ಲಾ ಕನಿಕರ ಉಂಟಾದರೂ ರಾಮಾನಂದರಾಯನ ಮೇಲಿನ ಭಯದಿಂದ ಅವನಿಗೆ ಸಹಾಯಮಾಡಲು ಯಾರೂ ಮುಂದುವರಿಯಲಿಲ್ಲ. ಈಗ ಖುದಿರಾಮನಿಗೆ ೪೦ ವರ್ಷ. ಸಂಸಾರ ದೊಡ್ಡದು. ಅದರ ಮೇಲೆ ಬಡತನ. ಆದರೂ 'ರಾಮನೇಗತಿ' ಯೆಂದು ಹೇಗೋ ಕಾಲವನ್ನು ತಳ್ಳುತ್ತಿದನು. ಈ ಸಮಾಚಾರವು ಕೆಲವುದಿನಗಳಲ್ಲಿ,ಡೇರೆಗೆ ಸುಮಾರು ಎರಡುಮೈಲಿಯಲ್ಲಿದ್ದ ಕಾಮಾರಪುಕುರ ಗ್ರಾಮದ ಸುಖಲಾಲಗೋಸ್ವಾಮಿಯ ಕಿವಿಗೆಬಿತ್ತು. ಖುದಿ ರಾಮನಿಗೂ ಈತನಿಗೂ ಮೊದಲಿನಿಂದಲೂ ಸ್ನೇಹವಿದುದರಿಂದ ಈ ಕಷ್ಟಕಾಲದಲ್ಲಿ ಅವನನ್ನು ಬರಮಾಡಿಕೊಂಡು ತನ್ನ ಮನೆಯಲ್ಲಿಯೇ ಇರಲು ಸ್ವಲ್ಪ ಜಾಗವನ್ನು ಕೊಟ್ಟದ್ದಲ್ಲದೆ ಕೆಲವುದಿನಗಳಾದ ಮೇಲೆ ಸುಮಾರು ಅರ್ಧ ಎಕರೆ ಜಮೀನನ್ನೂ ಕೊಟ್ಟನು. ಇಲ್ಲಿಂದ ಮುಂದಕ್ಕೆ ಕಾಮಾರಪುಕುರವೇ ಖುದಿರಾಮನ ವಾಸಸ್ಥಾನವಾಯಿತು.

ಈ ಕಷ್ಟಾನುಭವದಿಂದ ಖುದಿರಾಮನಿಗೆ ಪ್ರಾಪಂಚಿಕ ಸುಖವು ಕ್ಷಣಿಕವೆಂಬುದು ಮನಸ್ಸಿಗೆ ತಟ್ಟಿ ವೈರಾಗ್ಯವು ಹೆಚ್ಚಿತು. ಶಾಂತಿ, ತೃಪ್ತಿ, ಈಶ್ವರ ನಿರ್ಭರತೆ ಇವು ಹೆಚ್ಚುತ್ತಾಹೋದುವು. ಅವನ ಮುಖದಲ್ಲಿ ಕಂಡುಬರುತ್ತಿದ್ದ ಒಂದುವಿಧವಾದ ತೇಜಸ್ಸನ್ನೂ ಶಾಂತಿಯನ್ನೂ ಗ್ರಾಮ ನಿವಾಸಿಗಳೆಲ್ಲರೂ ನೋಡಿ ಅವನನ್ನು ಋಷಿಯಂತೆ ಗೌರವದಿಂದಲೂ ಭಕ್ತಿಯಿಂದಲೂ ಕಾಣುತ್ತಿದ್ದರು. ಅವನನ್ನು ನೋಡಿದಕೂಡಲೆ ತಮ್ಮ ಕಾಡು ಹರಟೆಗಳನ್ನು ಬಿಟ್ಟು ಎದ್ದುನಿಂತು ಅವನೊಡನೆ ಮಾತನಾಡುತ್ತಿದ್ದರು ಅವನ ಆಶೀರ್ವಚನವು ನಿಶ್ಚಯವಾಗಿಯೂ ಫಲಕಾರಿಯಾಗುವದೆಂದು ನಂಬಿ ಸಂಪತ್ತಿನಲ್ಲಿಯೂ ವಿಪತ್ತಿನಲ್ಲಿಯೂ ಅವನ ಆಶೀರ್ವಾದವನ್ನು ಪಡೆಯಲು ಜನರು ಬಂದು ಹೋಗುತ್ತಲೇ ಇದ್ದರು. ಶ್ರೀಮತಿ ಚಂದ್ರಾದೇವಿಯಲ್ಲಿಯೂ ಜನರಿಗೆ ಇದೇ ವಿಧವಾದ ಗೌರವವೂ ವಿಶ್ವಾಸವೂ ಇದ್ದುವು. ಆಕೆಯೂ ತನ್ನ ಸರಳತೆ, ದಯೆ, ಪ್ರೀತಿಗಳಿಂದ ಆ ಗ್ರಾಮಕ್ಕೆ ತಾಯಿಯಂತಿದ್ದಳು. ಬಡವರನ್ನು ಕಂಡರೆ ಆಕೆಗೆ ಕೇವಲಮರುಕ. ತನ್ನ ಹತ್ತಿರ ಇದ್ದದ್ದನ್ನು ಹಿಂದು ಮುಂದು ನೋಡದೆ ಕೊಟ್ಟುಬಿಡುವಳು. ವಿಶ್ವಾಸಪೂರ್ವಕವಾಗಿ ಮಾತನಾಡಿಸುವಳು. ಭಿಕ್ಷುಕರಿಗೂ ಸಾಧು ಸನ್ಯಾಸಿಗಳಿಗೂ ಎಂದಿಗೂ ಆ ಮನೆಯ ಬಾಗಿಲು ಹಾಕಿದ್ದುದೇ ಅಲ್ಲ. ಮಕ್ಕಳಿಗೂ ಕೂಡ ಅವರಮನೆಗೆ ಹೋದರೆ ಏನಾದರೂ ತಿಂಡಿಸಿಕ್ಕುವುದೆಂದು ಪೂರ್ಣ ಭರವಸೆ ಇತ್ತು. ಹೀಗೆ ಆಬಾಲವೃದ್ದರೂ ಖುದಿರಾಮನಮನೆಗೆ ಆಗಾಗ್ಗೆ ಸಂತೋಷದಿಂದ ಬಂದುಹೋಗುತ್ತಿದ್ದರು. ಮನೆಯಲ್ಲಿ ದಾರಿದ್ರ್ಯವಿದ್ದರೂ ಒಂದು ಅಪೂರ್ವವಾದ ಶಾಂತಿಯು ಬೆಳಗುತ್ತಿತ್ತು.

ಈ ಕಾಲದಲ್ಲಿ ನಡೆದ ಒಂದುಸಂಗತಿಯಿಂದ ಖುದಿರಾಮನ ದೈವಭಕ್ತಿಯು ಎಷ್ಟಿನಮಟ್ಟಿಗಿತ್ತೆಂಬುದನ್ನು ಊಹಿಸಬಹುದು. ಆತನತಂಗಿಯಾದ ರಾಮಶೀಲೆಯ ಮಗ ರಾಮಚಂದ್ರನು ಮೇದಿನೀಪುರದಲ್ಲಿ ಮೊಖ್ತೆಯಾರನಾಗಿದ್ದನು. ಕಾಮಾರಪುರಕ್ಕೂ ಅಲ್ಲಿಗೂ ಸುಮಾರು ೪೦ ಮೈಲಿ. ಈ ರಾಮಚಂದ್ರನ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುವುದಕ್ಕೆ ಆಗಿಂದಾಗ್ಗೆ ಖುದಿರಾಮನು ಅಲ್ಲಿಗೆ ಹೋಗಿಬರುತ್ತಿದ್ದನು. ಒಂದುದಿನ ಹೀಗೆ ಮೇದಿನೀಪುರಕ್ಕಾಗಿ ಬೆಳಗ್ಗೆ ಹೊರಟು ಸುಮಾರು ಹತ್ತು ಗಂಟೆಯ ಹೊತ್ತಿಗೆ ದಾರಿಯಲ್ಲಿ ಒಂದು ಊರನ್ನು ಸೇರಿದನು. ಅಲ್ಲಿ ಆಗ ತಾನೇ ಚಿಗುರಿ ತಳತಳನೆ ಹೊಳೆಯುತ್ತಿರುವ ದಳಗಳಿಂದ ಕೂಡಿದ ಒಂದು ಬಿಲ್ವವೃಕ್ಷವನ್ನು ನೋಡಿ ಅವನಿಗೆ ಪರಮಾನಂದವಾಯಿತು. ತಾನು ಮೇದಿನಿಪುರಕ್ಕೆ ಹೊರಟಿದ್ದೆನೆಂಬುದು ಸಂಪೂರ್ಣವಾಗಿ ಮರೆತು ಹೋಯಿತು. ಆ ಊರಿನೊಳಕ್ಕೆ ಹೋಗಿ ಒಂದು ಹೊಸ ಬುಟ್ಟಿಯನ್ನೂ ಒಂದು ಚೌಕವನ್ನೂ ಕೊಂಡು ಕೊಂಡು ಆ ಚೌಕವನ್ನು ಚೊಕ್ಕಟವಾಗಿ ಕೊಳದಲ್ಲಿ ಒಗೆದು ಆ ಕುಕ್ಕೆಯತುಂಬ ಬಿಲ್ವಪತ್ರೆಯ ದಳಗಳನ್ನು ಕುಯ್ದು ತುಂಬಿ ಅದರಮೇಲೆ ಒದ್ದೆಯ ಬಟ್ಟೆಯನ್ನು ಮುಚ್ಚಿಕೊಂಡು ಉರಿಬಿಸಿಲಿನಲ್ಲಿಯೇ ಹಿಂತಿರುಗಿದನು. ಕಾಮಾರಪುಕುರವನ್ನು ಸೇರಿದಾಗ ಮಧ್ಯಾಹ್ನ ಸುಮಾರು ಒಂದು ಗಂಟೆಯಾಗಿತ್ತು. ಕೂಡಲೇ ಸ್ನಾನಮಾಡಿ ಬಹಳ ಹೊತ್ತು ಈ ಪತ್ರೆಗಳಿಂದ ದೇವತಾರ್ಚನೆಯನ್ನು ಮಾಡಿದನು. ಇದೆಲ್ಲವೂ ಆದಮೇಲೆ ಊಟಮಾಡುತ್ತಿದ್ದಾಗ ಶ್ರೀಮತಿ ಚಂದ್ರಾದೇವಿಯು ಈ ವೃತ್ತಾಂತವನ್ನೆಲ್ಲಾ ತಿಳಿದು ಕೇವಲವಿಸ್ಮಿತೆಯಾದಳು. ಖುದಿರಾಮನು ಮೇದಿನೀಪುರಕ್ಕೆ ಮರುದಿನ ಹೊರಟನು.

ಕಾಮಾರಪುಕುರಕ್ಕೆ ಬಂದಮೇಲೆ ಈರೀತಿ ಆರುವರ್ಷಗಳು ಕಳೆದುವು. ಈಗ ರಾಮಕುಮಾರನಿಗೆ ಹದಿನಾರುವರ್ಷ, ಕಾತ್ಯಾಯನಿಗೆ ಹನ್ನೊಂದುವರ್ಷ, ಮಗಳಿಗೆ ವಿವಾಹವಾಗಬೇಕಾದ ವಯಸ್ಸು ಮೀರುತ್ತಾಬಂದದ್ದನ್ನು ನೋಡಿ ಖುದಿರಾಮನು ಹುಡುಗಿಯನ್ನು ಹತ್ತಿರದಲ್ಲಿದ್ದ ಆನೂರುಗ್ರಾಮದ ಕೇನೇರಾಮನಿಗೆಕೊಟ್ಟುಮದುವೆಮಾಡಿದನು. ಇದರ ಜೊತೆಯಲ್ಲಿಯೇ ಕೇನೇರಾಮನ ತಂಗಿ ಯನ್ನು ಕೊಟ್ಟು ರಾಮಕುಮಾರನ. ಮದುವೆಯೂ ನಡೆದುಹೋ ಯಿತು. ಇಷ್ಟು ಹೊತ್ತಿಗೆ ರಾಮಕುಮಾರನು ಸಾಹಿತ್ಯ ವ್ಯಾಕರಣ ಗಳನ್ನು ಮುಗಿಸಿ ಸ್ಮೃತಿ ಶಾಸ್ತ್ರಗಳನ್ನು ಓದುತ್ತಿದ್ದನು. ಮೂರು ನಾಲ್ಕು ವರ್ಷಗಳಲ್ಲಿ ರಾಮಕುಮಾರನು ಸಂಪಾದಿಸುವುದಕ್ಕೆ ಶಕ್ತನಾದನು. ಮಗನು ವಯಸ್ಕನಾಗಿ ಸಂಸಾರ ಭಾರವನ್ನು ವಹಿಸುವುದಕ್ಕೆ ಸಮರ್ಥನಾದದ್ದನ್ನು ನೋಡಿ ತೀರ್ಥಯಾತ್ರೆ ಮಾಡಿಕೊಂಡು ಬರಲು ಮನಸ್ಸು ಹುಟ್ಟಿ, ೧೮೨೪ ರಲ್ಲಿ ಖುದಿರಾಮನು ರಾಮೇಶ್ವರಕ್ಕೆ ಹೊರಟನು. ಆ ಕಾಲದಲ್ಲಿ ಈಗಿನಹಾಗೆ ಪ್ರಯಾಣಕ್ಕೆ ರೈಲು ಮುಂತಾದ ಅನುಕೂಲಗಳಿರಲಿಲ್ಲ. ಆದರೂ ದಕ್ಷಿಣ ದೇಶದಲ್ಲಿದ್ದ ತೀರ್ಥ ಕ್ಷೇತ್ರಗಳನ್ನೆಲ್ಲಾ ಸುತ್ತಿಕೊಂಡು ಸುಮಾರು ಒಂದುವರ್ಷದ ತರುವಾಯ ಹಿಂತಿರುಗಿ ಬಂದನು. ಇದಾದ ಕೆಲವು ದಿನಗಳಲ್ಲಿ ಶ್ರೀಮತಿ ಚಂದ್ರಾದೇವಿಯು ಗರ್ಭಧಾರಣಮಾಡಿ ಒಬ್ಬ ಮಗನನ್ನು ಹೆತ್ತಳು (೧೮೨೬). ರಾಮೇಶ್ವರಯಾತ್ರೆ ಮಾಡಿಕೊ೦ಡು ಬ೦ದತರುವಾಯ ಹುಟ್ಟಿದನಾದ ರಿಂದ ಈ ಹುಡುಗನಿಗೆ ರಾಮೇಶ್ವರನೆಂದು ನಾಮಕರಣ ಮಾಡಿದರು.

ಇದಾದ ಏಳೆಂಟುವರ್ಷಗಳ ತರುವಾಯ ಖುದಿರಾಮನಿಗೆ ಪುನಃ ತೀರ್ಥಯಾತ್ರೆ ಮಾಡಬೇಕೆಂನಬ ಅಭಿಲಾಷೆ ಹುಟ್ಟಿತು. ಸನ್ ೧೮೩೫ ನೆಯ ಇಸವಿಯ ಫಾಲ್ಗುಣ ಮಾಸದಲ್ಲಿ ಹೊರಟು ಕಾಶಿಗೆ ಹೋಗಿ ಅಲ್ಲಿ ವಿಶ್ವೇಶ್ವರನ ದರ್ಶನಮಾಡಿಕೊಂಡು ಚೈತ್ರ ಮಾಸದಲ್ಲಿ ಗಯಾ ಕ್ಷೇತ್ರವನ್ನು ಸೇರಿದನು. ಈ ತಿಂಗಳಲ್ಲಿ ಗಯಾಕ್ಷೇತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಪಿತೃಗಳಿಗೆ ಅಕ್ಷಯತೃಪ್ತಿಯಾಗುವುದೆಂದು ಹೇಳಿರುವುದರಿಂದ ಈ ತಿಂಗಳಿಗೆ ಸರಿಯಾಗಿ ಅಲ್ಲಿಗೆ ಒ೦ದನು. ಅಲ್ಲಿ ಸುಮಾರು ಒಂದುತಿ೦ಗಳು ಇದ್ದು ಯಥಾವಿಧಿಯಾಗಿ ತೀರ್ಥಕ್ಷೇತ್ರಗಳಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಕೊನೆಗೆ ಗದಾಧರನ ಶ್ರೀ ಪಾದಪದ್ಮಗಳಲ್ಲಿ ಪಿಂಡಪ್ರದಾನಮಾಡಿದನು. ಈ ರೀತಿಯಲ್ಲಿ ಶಾಸ್ತ್ರೀಯವಾಗಿ ಪಿತೃಕರ್ಮಗಳನ್ನು ಮುಗಿಸಿದರಿ೦ದ ಅವನ ಹೃದಯದಲ್ಲಿ ಎಷ್ಟು ತೃಪ್ತಿಯೂ ಶಾ೦ತಿಯೂ ನೆಲಗೊಂಡವೋ ಅದನ್ನು ಹೇಳಬೇಕಾದ್ದಿಲ್ಲ. ಭಗವಂತನು ತನ್ನಂಥ ದೀನನಿಗೆ ಈ ಕಾವ್ಯವನ್ನು ನಡೆಸಲು ಶಕ್ತಿ ಕೊಟ್ಟನಲ್ಲಾ ಎಂಬ ಆಲೋಚನೆಯಿಂದ ಅವನಲ್ಲಿ ಕೃತಜ್ಞತೆಯೂ ಭಕ್ತಿಯೂ ತುಂಬಿಹೋದುವು. ಹಗಲೆಲ್ಲಾ ಇದೇ ಯೋಚನೆಯಲ್ಲಿಯೇ ಇದ್ದು ರಾತ್ರಿ ಮಲಗಿಕೊಂಡಮೇಲೆ ನಿದ್ರೆ ಹತ್ತಿತೋ ಇಲ್ಲವೋ ಆಗ ಅವನಿಗೆ ಒಂದು ಸ್ವಪ್ನವಾಯಿತು. ಅದರಲ್ಲಿ ಒಬ್ಬ ದಿವ್ಯ ಪುರುಷನು ಕಾಣಿಸಿಕೊಂಡು ವೀಣಾಧ್ವನಿಯಂತೆ ಮಧುರ ವಾದ ಸ್ವರದಿಂದ ಅವನನ್ನು ಕುರಿತು "ಖುದಿರಾಮ, ನಿನ್ನ ಭಕ್ತಿಗೆ ನಾನು ಬಹಳವಾಗಿ ಮೆಚ್ಚಿದೆ. ನಾನು ನಿನ್ನ ಮನೆಯಲ್ಲಿ ಪುತ್ರರೂಪದಿಂದ ಅವತಾರಮಾಡಿ ನಿನ್ನ ಸೇವೆಯನ್ನು ಸ್ವೀಕರಿಸುವೆನು" ಎಂದು ಹೇಳಿದನು. ಈ ಮಾತನ್ನು ಕೇಳಿ ಆನಂದವಾದರೂ ಖುದಿರಾಮನು ಉತ್ತರಕ್ಷಣದಲ್ಲಿಯೇ ಚಿರದರಿದ್ರನಾದ ತಾನು ಭಗವಂತನಿಗೆ ತಿನ್ನುವುದಕ್ಕೆ ಏನು ಕೊಡಲಿ ಹೇಗೆ ಕಾಪಾಡಲಿ ಎಂದು ಮುಂತಾಗಿ ಚಿಂತಿಸುತ್ತ "ಬೇಡ, ಬೇಡ, ಪ್ರಭೋ ! ನನಗೆ ಅಷ್ಟು ಸೌಭಾಗ್ಯ ಬೇಡ ; ನನ್ನ ಮೇಲೆ ಕೃಪೆಮಾಡಿ ದರ್ಶನ ಕೊಟ್ಟು ನನ್ನನ್ನು ಕೃತಾರ್ಥನಾಗಿ ಮಾಡಿ ಈವಿಧವಾದ ನಿನ್ನ ಅಭಿಪ್ರಾಯವನ್ನು ಪ್ರಕಾರಮಾಡಿದೆಯಲ್ಲಾ, ಇದೇ ನನಗೆ ಯಥೇಚ್ಛವಾಯಿತು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದರೆ ದರಿದ್ರನಾದ ನಾನು ನಿನ್ನ ಸೇವೆಯನ್ನು ಹೇಗೆಮಾಡೇನು?" ಎಂದು ಹೇಳಿದನು. ಆ ದಿವ್ಯ ಪುರುಷನು ಖುದಿರಾಮನ ಈ ವಿಧವಾದ ದೈನ್ಯವನ್ನು ನೋಡಿ ಪ್ರಸನ್ನನಾಗಿ "ಭಯಪಡಬೇಡ, ಖುದಿರಾಮ, ನೀನು ಏನುಕೊಟ್ಟರೆ ಅದನ್ನೇ ಸ್ವೀಕರಿಸಿ ತೃಪ್ತಿಹೊಂದುವೆನು. ನನ್ನ ಅಭಿಲಾಷೆ ಪೂರ್ಣವಾಗುವುದಕ್ಕೆ ಅಡ್ಡಿ ಮಾಡಬೇಡ." ಎಂದನು. ಈ ಮಾತನ್ನು ಕೇಳಿ ಖುದಿರಾಮನು ಏನೂ ಹೇಳಲಾರದೆಹೋದನು. ಅದರಿಂದ ಆನಂದದುಃಖ ಮೊದಲಾದ ಪರಸ್ಪರವಿರುದ್ಧವಾದ ಭಾವಗಳು ಅವನ ಹೃದಯದಲ್ಲಿ ಏಕಕಾಲದಲ್ಲಿ ಪ್ರವಹಿಸುತ್ತಾ ಅವನನ್ನು ಸ್ತಂಭಿತನನ್ನಾಗಿ ಮಾಡಿದುವು. ಇಷ್ಟುಹೊತ್ತಿಗೆ ಎಚ್ಚರವಾಗಲು ಹಾಸಿಗೆಯಮೇಲೆ ಎದ್ದು ಕುಳಿತು ಏನೇನೋ ಯೋಚನೆ ಮಾಡುತ್ತಾ ಕೊನೆಗೆ ಯಾವನೋ ಒಬ್ಬ ಮಹಾ ಪುರುಷನು ತನ್ನ ಮನೆಯಲ್ಲಿ ಅವತಾರ ಮಾಡುವನೆಂದು ದೃಢಮಾಡಿಕೊಂಡನು. ಆದರೆ ಈ ಅದ್ಭುತ ಸ್ವಪ್ನದ ಸಾಫಲ್ಯವನ್ನು ಪರೀಕ್ಷೆ ಮಾಡುವವರೆಗೂ ಯಾರ ಎದುರಿಗೂ ಈ ಸುದ್ದಿಯನ್ನು ಎತ್ತುವುದಿಲ್ಲವೆಂದು ನಿಶ್ಚಯಮಾಡಿ ಕೊಂಡು ಊರಿಗೆ ಹಿಂತಿರುಗಿ ಹೊರಟನು. ಇದೇ ಕಾಲದಲ್ಲಿಯೇ ಶ್ರೀಮತಿ ಚಂದ್ರಾದೇವಿಗೂ ಒಂದು ವಿಚಿತ್ರವಾದ ಸ್ಪಷ್ಟವಾಯಿತು. ಒಂದುದಿನ ರಾತ್ರಿಯಾವನೋ ಒಬ್ಬ ದಿವ ಪುರುಷನು ತನ್ನ ಹಾಸಿಗೆಯಲ್ಲಿ ಮಲಗಿದದನ್ನು ನೋಡಿ ಬೆಚ್ಚಿ ದೀಪವನ್ನು ದೊಡ್ಡದುಮಾಡಿ ನೋಡಿದಳು. ಆದರೆ ಯಾರೂ ಇರಲಿಲ್ಲ. ಬಾಗಿಲಿನ ಅಗಳಿ ಹಾಕಿದುಹಾಕಿದ ಹಾಗೆಯೇ ಇತ್ತು. ಇದನ್ನು ನೋಡಿ ಏನೂ ತಿಳಿಯದ ಆಕೆಯು ಯಾರೋ ಹೊರಗಣಿ೦ದ ಬ೦ದಿದು ಉಪಾಯವಾಗಿ ಅಗಳಿಯನ್ನು ಹಾಕಿಕೊಂಡು ಹೊರಟು ಹೋಗಿದ್ದಾರೆಂದು ಭಾವಿಸಿಕೊಂಡಳು. ನೆರೆ ಹೊರೆಯವರು ಇದನ್ನು ಕೇಳಿ ನಕ್ಕು ಅದೆಲ್ಲಾ ಕನಸೆಂದು ನಿರ್ಧರ ಮಾಡಿದರು. ಇನ್ನೊಂದುದಿನ ತಮ್ಮ ಮನೆಯ ಎದುರಿಗಿರುವ ಈಶ್ವರ ದೇವಸ್ಥಾನದ ಹತ್ತಿರ ನಿಂತಿರಲು ಅಲ್ಲಿಂದ ಒಂದು ದಿವ್ಯ ಜ್ಯೋತಿಯು ಹೊರಟು ಆಕೆಯ ದೇಹವನ್ನು ಪ್ರವೇಶಿಸಿದಂತಾಯಿತು. ಇಲ್ಲಿಂದ ಮುಂದಕ್ಕೆ ಆಕೆಯಲ್ಲಿ ಗರ್ಭಿಣಿಯ ಚಿಹ್ನೆಗಳು ಕಾಣುತ್ತ ಬಂದುವು. ಖುದಿರಾಮನು ಊರಿಗೆ ಬಂದಕೂಡಲೇ ಈ ವಿಷಯಗಳನ್ನೆಲ್ಲಾ ಆತನಿಗೆ ತಿಳಿಸಲು ಖುದಿರಾಮನು ತನ್ನ ಸ್ವಪ್ನವನ್ನು ಜ್ಞಾಪಿಸಿ ಕೊಂಡು" ಇದನ್ನು ಯಾರೊಡನೆಯೂ ಹೇಳಬೇಡ. ಶ್ರೀರಘುವೀರನು ನಮ್ಮ ಮೇಲೆ ಕೃಪೆಮಾಡಿ ಹೀಗೆಲ್ಲಾ ನಡೆಸಿದ್ದಾನೆ” ಎಂದು ಹೇಳಿ ಸಮಾಧಾನಮಾಡಿದನು.

ಶಿವಮಂದಿರದಬಳಿಯಲ್ಲಿ ಜ್ಯೋತಿಯ ದರ್ಶನವಾದಂದಿನಿಂದ ಚಂದ್ರಾದೇವಿಗೆ ಆಗಾಗ್ಗೆ ದೇವದೇವಿಯರ ಮೂರ್ತಿಗಳು ಕಾಣು ತಿದ್ದುವು. ಈ ಕಾಲದವರು "ಇದೆಲ್ಲಾ ಅಜ್ಜಮ್ಮನಕಥೆ! ದೇವದೇವಿಯರೆಂದರೇನು ? ಅದನ್ನು ನೋಡುವುದೆಂದರೇನು ? ಈ ಇಪ್ಪತ್ತನೆಯ ಶತಮಾನದಲ್ಲಿಯೂ ಇದನ್ನು ನಂಬುವರಾರು ?" ಎಂದು ಆಕ್ಷೇಪಿಸಬಹುದು. ಆದರೆ ಮಹಾಪುರುಷರು ಅವತಾರಮಾಡುವ, ಕಾಲದಲ್ಲಿ ಅವರ ತಾಯಿತಂದೆಗಳಿಗೆ ಅಸಾಧಾರಣವಾದ ಆಧ್ಯಾತ್ಮಿಕ ಅನುಭವವೂ, ದರ್ಶನವೂ ಆಗುವವಿಷಯವು ಪ್ರಪಂಚದ ಎಲ್ಲಾ ಜನರ ಧರ್ಮಗ್ರಂಥಗಳಲ್ಲಿಯೂ ಹೇಳಿದೆ ಭಗರ್ವಾ ಶ್ರೀರಾಮ ಚಂದ್ರ, ಶ್ರೀಕೃಷ್ಣ, ಬುದ್ಧ, ಶಂಕರಾಚಾರ, ಏಸುಕ್ರಿಸ್ತ, ಚೈತನ್ಯ ಮುಂತಾದ ಅವತಾರಪುರುಷರ ತಾಯಿತಂದೆಗಳ ಉದಾಹರಣೆಯನ್ನು ತೆಗೆದುಕೊಂಡು ಇದರತತ್ವವನ್ನು ವಿಚಾರ ಮಾಡಬಹುದು. ಯಜ್ಞ ಪುರುಷನು ತಂದುಕೊಟ್ಟ ಪಾಯಸವನ್ನು ಭೋಜನವಾಡಿ ಕೌಸಲ್ಯೆ ಮೊದಲಾದ ದಶರಥನ ಹೆಂಡಿರು ಗರ್ಭಧಾರಣ ಮಾಡಿದಮೇಲೆ ಅವರಿಗಾದ ನಾನಾವಿಧವಾದ ದಿವ್ಯ ಅನುಭನವು ರಾಮಾಯಣದಲ್ಲಿ ವಿಸ್ತಾರವಾಗಿ ಲಿಖಿತವಾಗಿದೆ. ಶ್ರೀ ಕೃಷ್ಣನು ಗರ್ಭದಲ್ಲಿದ್ದಾಗ ಅವನ ತಾಯಿತಂದೆಗಳಿಗೆ ಜಗದೀ ಊರನು ದರ್ಶನಕೊಟ್ಟನೆಂದೂ ಹುಟ್ಟಿದಮೇಲೆ ಪ್ರತಿನಿತ್ಯವೂ ಯಾವುದಾದರೂ ಒಂದು ಅದ್ಭುತವು ನಡೆಯುತ್ತಿತ್ತೆಂದೂ ಭಾಗ ವತದಲ್ಲಿ ಹೇಳಿದೆ. ಬುದ್ಧ ದೇವನು ಶ್ರೀಮತಿಮಾಯಾದೇವಿಯ ಗರ್ಭವನ್ನು ಪ್ರವೇಶಮಾಡಿದ ಕಾಲದಲ್ಲಿಯೂ ಆಕೆಗೆ ಒಬ್ಬ ಮಹಾಪುರುಷನು ಜೋತಿರ್ಮಯವಾದ ಒಂದು ಬಿಳಿಯ ಆನೆಯ ರೂಪವನ್ನು ಧರಿಸಿ ಉದರವನ್ನು ಪ್ರವೇಶಮಾಡಿದಂತೆಯೂ ಆಮೇಲೆ ಇಂದ್ರಾದಿದೇವತೆಗಳು ಬಂದು ಆಕೆಗೆ ನಮಸ್ಕಾರಮಾಡಿದಂತೆಯೂ ಹೇಳಿದೆ. ಏಸುವಿನ ತಾಯಿಯಾದ ಶ್ರೀಮತಿ ಮೇರಿಗೂ ಜೋಸೆಫ್ ನೊಡನೆ ಸಂಗಮಾಡುವುದಕ್ಕೆ ಮುಂಚೆಯೇ ಗರ್ಭವಾದಂತೆಯ ಒಂದು ಅಪೂರ್ವವಾದ ದಿವಾನುಭವವಾದಂತೆಯೂ ಹೇಳಿದೆ. ಶ೦ಕರಾಚಾರರ ತಾಯಿಯೂ ಕೂಡ ದೇವಾದಿ ದೇವನಾದ ಮಹಾದೇವನ ದಿವ್ಯ ದರ್ಶನದಿಂದಲೂ ವರಮಹಿಮೆ ಯಿಂದಲೂ ಗರ್ಭೋತ್ಪತ್ತಿಯನ್ನು ಅನುಭವಮಾಡಿದಂತೆ ಬರೆಯಲ್ಪಟ್ಟಿದೆ. ಚೈತನ್ಯದೇವನ ತಾಯಿಯಾದ ಶಚೀದೇವಿಗೂ ಈ ವಿಧವಾದ ದಿವ್ಯಾನುಭವವಾದ ವಿಷಯವೂ ಶ್ರೀಚೈತನ್ಯ ಚರಿತಾಮೃತ ಮುಂತಾದ ಗ್ರಂಥಗಳಲ್ಲಿ ಹೇಳಿದೆ.

ಹಿಂದೂ, ಬೌದ್ಧ, ಕ್ರೈಸ್ತ ಮುಂತಾದ ಎಲ್ಲಾ ಧರ್ಮ ಗ್ರಂಥ ಗಳಲ್ಲಿಯೂ ಭಕ್ತಿ ಪುರಸ್ಸರವಾದ ಈಶ್ವರ ಪೂಜೆಯೇ ಮೋಕ್ಷವನ್ನು ಪಡೆಯುವುದಕ್ಕೆ ಸುಲಭವಾದ ಮಾರ್ಗವೆಂದು ಹೇಳಿದೆ. ಇದಕ್ಕೆ ಸಾಮಾನ್ಯವಾಗಿ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಇವೇ ಧರ್ಮ ಗ್ರಂಥಗಳೇ ಅವತಾರ ಪುರುಷರ ಜನಕ ಜನನಿಯರಿಗೆ ದಿವ್ಯ ದರ್ಶನ ಮತ್ತು ಅನುಭವಗಳಾದುವೆಂದು ಏಕ ಕಂಠದಿಂದ ಹೇಳುತ್ತವೆ. ಇದನ್ನು ಮಾತ್ರ ಸಾಮಾನ್ಯವಾಗಿ ಯಾರೂ ನಂಬುವುದಿಲ್ಲ. ಏಕೆಂದರೆ, ಇವೆಲ್ಲಾ ಜನಸಾಮಾನ್ಯದ ಅನುಭವಕ್ಕೆ ಮಾರಿದ್ದಾಗಿವೆ. ಆದರೆ ನಮ್ಮ ಅನುಭವಕ್ಕೆ ಮಾರಿದುವುಗಳನ್ನೆಲ್ಲಾ ನಾವು ಶುದ್ಧ ಸುಳ್ಳೆಂದು ಹೇಳುವುದು ಅಸಂಗತ, ಆತ್ಮ, ಮುಕ್ತಿ, ಈಶ್ವರ ಮುಂತಾದ ಆಧ್ಯಾತ್ಮಿಕ ವಿಚಾರಗಳನ್ನು ನಾವೇ ಅನುಭವಮಾಡಿದ ಹೊರತು ಎಂದೂ ಪೂರ್ಣವಾಗಿ ನಂಬುವುದಕ್ಕಾಗುವುದಿಲ್ಲ. ಹೀಗೆಂದು ಸಾರ ಲೌಕಿಕ ವಿಷಯಗಳನ್ನು ಬಿಟ್ಟು ಬಿಡಲಾಗದು. ಇದರ ನಿಜಸ್ಥಿತಿಯನ್ನು ತಿಳಿಯಬೇಕಾದರೆ ಶ್ರದ್ಧೆ ವಹಿಸಿ ಅವುಗಳ ಸಾಧಕ ಬಾಧಕ ಗಳನ್ನೆಲ್ಲಾ ಸಂಗ್ರಹಿಸಿ ನಿಷ್ಪಕ್ಷಪಾತವಾಗಿ ವಿಚಾರಮಾಡಿ, ಆಮೇಲೆ ಬೇಕಾದರೆ ಅವುಗಳನ್ನು ಒಪ್ಪಬಹುದು, ಬಿಟ್ಟರೆ ಬಿಡಬಹುದು.

ಅದು ಹೇಗಾದರೂ ಇರಲಿ. ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆಯಲ್ಲಿಯೂ ಈ ಸಂಗತಿಗಳು ನಂಬುಗೆಗೆ ಅರ್ಹರಾದ ಜನರಿಂದ ತಿಳಿಯಬಂದಿರುವುದರಿಂದ ಅವುಗಳನ್ನು ಇಲ್ಲಿ ಬರೆದಿದ್ದೇವೆ.