ಸಜ್ಜನ-ದುರ್ಜನ
ಗೋಚರ
ರಚನೆ: ಸರ್ವಜ್ಞ
ಸತ್ಯರಾ ನುಡಿ ತೀರ್ಥ ನಿತ್ಯರಾ ನಡೆ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವ ನೀ
ರೆತ್ತಣದು ತೀರ್ಥ ಸರ್ವಜ್ಞ ||
ಒಳ್ಳಿದರ ಒಡನಾಡಿ ಕಳ್ಳನೊಳ್ಳಿದನಕ್ಕು
ಒಳ್ಳಿದ ಕಳ್ಳರೊಡನಾಡಿ ಅವ ಶುದ್ಧ
ಕಳ್ಳ ತಾನಕ್ಕು ಸರ್ವಜ್ಞ ||
ನೀಚರಾ ನೆರೆಯಿಂದ ಈಚಲದ ಮರ ಲೇಸು
ಈಚಲೊಂದೆಡೆಗೆ ಉಪಕಾರಿ; ನೀಚನು
ಈಚಲಿಂ ಕಷ್ಟ ಸರ್ವಜ್ಞ ||
ದಂತಪಂಕ್ತಿಯ ನಡುವೆ ಎಂತಿರ್ಪುದು ಜಿಹ್ವೆ
ಅಂತು ದುರ್ಜನರ ಬಳಸಿನಲಿ ಸಜ್ಜನನು
ನಿಂತಿರ್ದ ನೋಡು ಸರ್ವಜ್ಞ ||