ಸೋಮೇಶ್ವರ ಶತಕ

ವಿಕಿಸೋರ್ಸ್ ಇಂದ
Jump to navigation Jump to search

<ತಾತ್ವಿಕ ಸಾಹಿತ್ಯ

ಪುಲಿಗೆರೆ ಸೋಮ[ಸಂಪಾದಿಸಿ]

  • ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮ ಅಥವಾ ಸೋಮನಾಥನೆಂದು ನಂಬಲಾಗಿದೆ . ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ , ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ , ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮ ನ ದಲ್ಲವೆಂದೂ, ಭಾಷೆ ಸಡಿಲತೆ, ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಶೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ . ಅವು ಮತ್ತೇಭ ವಿಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಸೋಮೇಶ್ವರ ಶತಕ ಕನ್ನಡದಲ್ಲಿ ಬಹಳಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ ಅದು ೧೦೦ ಪದ್ಯಗಳನ್ನು ಹೊಂದಿದೆ. ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ. ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ. ಅವಗಳಲ್ಲಿ ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದೆ.

ಸೋಮೇಶ್ವರ ಶತಕ - ಆಯ್ದ ಪದ್ಯಗಳು[ಸಂಪಾದಿಸಿ]

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ

ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ
ಕುವರಂ ವಂಶಕೆ ಭೂಷಣಂ ಸರಸಿಗಂಬೋಜಾತಗಳ್ ಭೂಷಣಂ
ಹವಿಯಜ್ಞಾಳಿಗೆಭೂಷಣಂ ಸತಿಗೆ ಪಾತಿವ್ರತವೇ ಭೂಷಣಂ
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು
ಶೃತಿಮಾರ್ಗಂ ಬಿಡದಾತ ಸುವ್ರತಿ ಮಹಾಸದ್ವಿದ್ಯೆಯೇ ಪುಣ್ಯದಂ
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್
ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವ ಜನ್ಮಂಗಳೊಳ್ ಮಾನುಷಂ
ಕವಿತಾ ವಿದ್ಯೆಸುವಿದ್ಯೆಯೊಳ್ ಹರಹರಾ ಶ್ರೀಚೆನ್ನಸೋಮೇಶ್ವರಾ

ಮಳೆಯೇ ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ
ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ
ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ
ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ
 ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಅವಿನೀತಂ ಮಗನೇ ಅಶೌಚಿ ಮುನಿಯೇ ಬೈವಾಕೆ ತಾಂ ಪತ್ನಿಯೇ
ಸವಗೆಟ್ಟನ್ನವದೂಟವೇ ಕುಜನರೊಳ್ ಕೂಡಿರ್ಪವಂ ಮಾನ್ಯನೇ
ಬವರಕ್ಕಾಗದ ಬಂಟನೇ ಎಡರಿಗಂ ತಾನಾಗದಂ ನಂಟನೇ
ಶಿವನಂ ಬಿಟ್ಟವ ಶಿಷ್ಟನೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ
ಮರಗಳ್ ಪುಟ್ಟವೇ ಪುಷ್ಪಮೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ
ನಿರುತಂ ಸತ್ಕವಿಗೊರ್ವ ಗರ್ವಿ ಪುಸಿಯುತ್ತ ಲೋಭಿಯಾಗಲ್ ನಿಜಂ
ಧರೆಯೊಳ್ ದಾತರು ಪುಟ್ಟರೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಮದನಂ ದೇಹವ ನೀಗಿದ ನೃಪವರಂ ಚಂಡಾಲಗಾಳಾದ ಪೋ
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ
ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದ ರಾಘವಂ
ವಿಧಿಯಂ ಮೀರುವನಾದನೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ
ಡಿರನತ್ಯುಗ್ರದಿಂ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್
ತರುವೇ ಪಣ್ಗಳ ಮೆಲ್ಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ಪರಕಾಯ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ

.ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರಕನ ರಾಮನಂ
ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ
ತೊಳೆವಾತಂ ಹತಮಾಡರೇ ಫಣೆಯೊಳಂ ಪೂರ್ವಾರ್ಜಿತಂ ಹಾಗಿರಲ್
ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಮೃಡತಾಂ ಭಿಕ್ಷವ ಬೇಡನೇ ಮಖಜೆ ತಾಂ ತೊಳ್ತಾಗಳೆ ಪಾಂಡವರ್
ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ
ಸುಡುಗಾಡಿಕ್ಕೆಗೆ ಭಂಟನಾಗನೆ ಹರಿಶ್ಚಂದ್ರಂ ನರರ್ ಪೂರ್ವದೊಳ್
ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಕೊಡಬಲ್ಲಂಗೆ ದರಿದ್ರಮಂ ಪ್ರವುಢಗಂ ಮೂಢಾಂಗನಾ ಲಾಭಮಂ
ಮಡೆಯಂಗುತ್ತಮಜಾತಿ ನಾಯಕಿಯ ಪಾಪಾತ್ಮಂಗೆ ದೀರ್ಘಾಯುವಂ
ಕಡುಲೋಭಂಗತಿ ದ್ರವ್ಯಮಂ ಸುಕೃತಿಗಲ್ಪಾಯುಷ್ಯಮಂ ನೀಡುವಂ
ಸುಡು ಪಾಪಿಷ್ಟನ ಬೊಮ್ಮನಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಗಿಡವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್
ಕಡು ಕಾರ್ಪಣ್ಯದಿ ಕೇಳ್ವವೇ ಶಿಖಿ ಜಲೋರ್ವಿಮಾರುತಾಕಾಶಮಂ
ಮೃಡ ನೀನಲ್ಲದದಾರು ಕಾಯ್ವರು ಜಗದ್ರಕ್ಷಾಕರಂ ನೀನೆಲೈ
ಕೊಡುವರ್ ಕೊಂಬುವರು ಮರ್ತ್ಯರೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಉಡುರಾಜಂ ಕಳೆಗುಂದಿ ಪೆರ್ಚದಿಹನೆ ನ್ಯಗ್ರೋದ ಬೀಜಂ ಕೆಲಂ
ಸಿಡಿದು ಪೆರ್ಮರನಾಗದೇ ಎಳೆಗರುಂ ಎತ್ತಾಗದೇ ಲೋಕದೊಳ್
ಮಿಡಿ ಪಣ್ಣಾಗದೆ ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಬರೆ ದಾರಿದ್ರ್ಯದಿ ದ್ರೋಣನಂ ದ್ರುಪದ ಪೂರ್ವ ಸ್ನೇಹದಿಂ ಕಂಡನೇ
ಕುರುಭೂಪಾನು ಪಾಂಡುಪುತ್ರರು ಮಹಾ ಧರ್ಮಾತ್ಮರೆಂದಿತ್ತನೇ
ಹರಿಯ ತಂಗಿಯ ಬಾಲನೆಂದು ಬಗೆದೇಂ ಕಂಸಾಸುರ ಕಂಡನೇಂ
ದೊರೆಗಳ್ಗೆತ್ತಣ ನಂಟರೈ ಹರಹರಾ ಶ್ರೀಚೆನ್ನಸೋಮೇಶ್ವರಾ
ಹರತಾಂ ಕುಂಟಿಣಿಯಾಗೆ ನಂಬಿಯೊರೆದಂ ಚಂದ್ರಾವತಿ ದೇವಿಗಂ
ಕರ ಕಷ್ಟಂಗಳ ಮಾಡಿದಂ ದ್ವಿಜ ವಿರಾಟಂ ಧರ್ಮಭೂಪಾಲನಂ
ಶಿರಮಂ ಚಿಟ್ಟೆಯೊಳಿಟ್ಟನಗ್ನಿಜೆಗೆ ಬಂದಾಪತ್ತನೇನೆನೆಂಬೆನಾಂ

ಅರೆಯಂ ಸೀಳುವೊಡಾನೆ ಮೆಟ್ಟಲಹುದೇ ಚಾಣಂಗಳಿಂದಲ್ಲದೆ
ಕಿರಿದಾಗಿರ್ದೊಡದನೇನುಪಾಯಪರನೊರ್ವಂ ಕೋಟಿಗೀಡಕ್ಕು ಹೆ
ಮ್ಮರನಿರ್ದೇನದರಿಂದಲೆತ್ತಬಹುದೇ ಬಲ್ಭಾರಮಂ ಸನ್ನೆಸಾ
ವಿರ ಕಾಲಾಳಿನ ಸತ್ವವೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ
ಬಿಡಬೇಕೈ ಧನಲೋಭ ಬಂಧು ಜನರೊಳಗೆ ದುಷ್ಟಾತ್ಮರೊಳ್ ಗೋಷ್ಠಿಯಂ
ಇಡಬೇಕೀಶ್ವರನಲ್ಲಿ ಭಕ್ತಿರಸಮಂ ವಿಶ್ವಾಸಮಂ ಸ್ವಾಮಿಯೊಳ್
ಇಡಬೇಕಿದ್ದುಣಬೇಕೆಲೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಕ್ಷಿತಿಯಂ ಶೋಧಿಸಲಕ್ಕುವೀಚಿಗಳ ಲೆಕ್ಕಂ ಮಾಡಲಿಕ್ಕಾಗದೋ
ನ್ನತಿಯಂ ಕಾಣಲುಬರ್ಕು ಸಾಗರಗಳೇಳನಂ ದಾಂಟಲಕ್ಕು ನಭೋ
ಗತಿಯಂ ಸಾಧಿಸಲಕ್ಕು ಬೆಟ್ಟಗಳ ಚೂರ್ಣಂ ಮಾಡಲಕ್ಕೀಕ್ಷಿಸಲ್
ಸತಯಾ ಚಿತ್ತವಭೇದ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ

ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತ ಮಾ
ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ
ಕ್ಷಣದೊಳ್ ವೆಚ್ಚವಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ
ರುಣಭಾರಕ್ಕೆಣೆಯಾವುದೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಪೊರಬೇಡಂಗಡಿ ಸಾಲ ವೂರ ಹೊಣೆಯಂ ಪಾಪಗಳಂ ನಿಂದೆಯಂ
ಮರೆಬೇಡಾತ್ಮಜ ಸತ್ಕಳತ್ರ ಸಖರೊಳ್ ನ್ಯಾಯಂಗಳೊಳ್ ಸತ್ಯದೊಳ್
ಸೆರೆ ಬೇಡರ್ಭಕ ಪಕ್ಷಿ ವೃದ್ಧ ತರುಣೀ ಗೋ ವಿಪ್ರ ದೀನರ್ಕಳಂ
ತೆರಬೆಡೊತ್ತೆಗೆ ಬಡ್ಡಿಯಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಅನುಮಾನಂಬಡೆ ರಾಮನಗ್ನಿಯೊಳಪೊಕ್ಕಾ ಸೀತೆ ತಾನೈತರಲ್
ವನದೊಳ್ ನೇರಿಳೆವಣ್ಣನಗ್ನಿಜೆ ಬಹುಪ್ರಖ್ಯಾತಿಯಿಂ ಪತ್ತಿಸಲ್
ದನುಜಾರಾತಿ ಸ್ಯಮಂತ ರತ್ನವ ನೃಪಂಗೀಯಲ್ಕೆ ದೂರ್ ಪೋದುದೇ
ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಅಡಿಮೂರೀಯೆನಲೀಯನೇ ಬಲಿನೃಪಂ ಮೂಲೋಕಮಂ ದೇಹಮಂ
ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗವಾದ್ಯಂತಮಂ
ಮೃಡಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ
ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಮಡೆಯಂಗುತ್ತಮ ವಿದ್ಯೆ ಬೆಟ್ಟಕುರುಡಂಗೆ ಮಾರ್ಗವೇ ಬೆಟ್ಟ ಕೇಳ್
ಬಡವಂಗೆಲ್ಲರ ವೈರ ಬೆಟ್ಟ ಜಡದೇಹಂಗುಜ್ಜುಗ ಬೆಟ್ಟ ಮು
ಮುಪ್ಪಡಸಿರ್ದಾತಗೆ ಪೆಣ್ಣು ಬೆಟ್ಟ ರುಣವೇ ಪೆರ್ಬೆಟ್ಟ ಮೂಲೋಕದದೊಳ್
ಕಡುಲೋಭಂಗಿಡೆ ಬೆಟ್ಟವೈ ಹರಹರ ಶ್ರೀಚೆನ್ನಸೋಮೇಶ್ವರಾ

ಶಿವಸುಜ್ಞಾನವೆ ಯೋಗಿಗಳ್ಗೆ ನಯನಂ ಚಂಡಾಂಶು ಶುಭ್ರಾಂಶುಗಳ್
ಭವನೇತ್ರಂ ಪುರುಷೋತ್ತಮಂಗೆ ಕಮಲಂ ಕಣ್ ರಾತ್ರಿಗಾ ಪಾವಕಂ
ರವಿ ಲೋಕತ್ರಯಕ್ಕೆಲ್ಲ ದೃಷ್ಟಿ ವಿಭುಧವ್ರಾತಕ್ಕೆ ಶಾಸ್ತ್ರಾಂಬಕಂ
ಕವಿಯೇ ರಾಜರ ಕಣ್ಣೆಲೈ ಹರಹರ ಶ್ರೀಚೆನ್ನಸೋಮೇಶ್ವರಾ

ಮದನಂಗೀಶ್ವರ ಶತೃ ಬಂಧನಿಚಯಕ್ಕೆ ಜಾರೆಯೇ ಶತ್ರು ಪೇ
ಳದ ವಿದ್ಯಂಗಳ ತಂದೆ ಶತೃ ಕುವರರ್ಗಂ ಶತೃ ಸನ್ಮಾನ್ಯರಾ
ಸದನಕ್ಕಂ ಕಡುಸಾಲ ರೂಪವತಿ ತಾನೇ ಶತೃ ಗಂಡಂಗೆ ಮೇಣ್
ಮುದಿಗಾ ಯವ್ವನೆ ಶತೃವೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಹರಿಯೊಳ್ ನಾರದ ಮಂದಿವಾಳದೆ ಮಹಾ ಶಾಪಂಗಳಂ ತಾಳನೇ
ಸುರವೆಣ್ಣಿಂದಲಿ ಪುಷ್ಪದಂತ ವನದೊಳ್ ತಾಂ ಕ್ರೋಡರೂಪಾಗನೇ
ವಿರಸಂ ಬರ್ಪುದು ಬೇಡೆನಲ್ ದೃಪದೆಯಂ ಭೀಮಾರಿ ತಾಂ ನೋಯನೆ
ಸರಸಂ ವೆಗ್ಗಳಮಾಗದೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಸುರಚಾಪಾಯತಮಿಂದ್ರಜಾಲದ ಬಲಂ ಮೇಘಂಗಳಾಕಾರ ಬಾ
ಲರು ಕಟ್ಟಾಡುವಕಟ್ಟೆ ಸ್ವಪ್ನದ ಧನಂ ನೀರ್ಗುಳ್ಳೆ ಗಾಳೀಸೊಡರ್
ಪರಿವುತ್ತಿರ್ಪ ಮರೀಚಿಕಾ ಜಲ ಜಲವರ್ತಾಕ್ಷರಂ ತೋರುವೈ
ಸಿರಿ ಪುಲ್ಲಗ್ರದ ತುಂತುರೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಮಹಿಯೊಳ್ ಭೂಸುರವೇಷದಿಂ ಕಲಿಯಲ್ ಕರ್ಣಂ ಧನುರ್ವೇದಮಾ
ರಹಿಗೆಟ್ಟಂ ಬಲು ನೊಂದನಿಲ್ವಲ ಮಹಾವಾತಾಪಿಯೊಳ್ ಶುಕ್ರನುಂ
ಅಹಿರಾತ್ಮಜೆ ಮಂತ್ರತಂತ್ರವರಿದಾಣ್ಮಂ ಪೋಗೆ ತಾ ತಂದಳೇ
ಬಹು ವಿದ್ವಾಂಸನು ಭ್ರಾಂತನೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಕುರುಡಂ ಕನ್ನಡಿಯಂ ಕವೀಂದ್ರರ ದುರ್ಮಾರ್ಗಿಗಳ್ ತ್ಯಾಗಿಯಂ
ಬರಡಂ ಬಾಲರ ಮುದ್ದ ಬಂಜೆ ಕಡುಚೋರಂ ಚಂದ್ರನಂ ಕಾವ್ಯದ
ಚ್ಚರಿಯಂ ಗಾಂಪರು ಪಾಪಿಗಳ್ ಸುಜನರಂ ಮಾಣಿಕ್ಯಮಂ ಮರ್ಕಟಂ
ಜರೆಯಲ್ ಸಿಂಗವ ಕುನ್ನಿಯೇಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಕೊಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಿ ಪಾಡುಬಿ
ದ್ದುಳುವಾರಂಬದ ಧಾನ್ಯ ಶತೃಜಯ ಪುತ್ರೋತ್ಪತ್ತಿ ಕೈಗಿಕ್ಕುವಾ
ಬಳೆ ರಾಜಾಶ್ರಯಮಿಕ್ಕುವಾಪದ ಧನಂ ಬೇಹಾರಮಿಂತೆಲ್ಲಮುಂ
ಪಲಕಷ್ಟಂ ಕಡೆಗೊಳ್ಳಿತೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ
ಕಡುಪಾಪಂ ಬಲು ಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೆ
ಗುಡಪಾನಂಗಳೊಳದ್ದೆ ಬೇವಿನ ಫಲಂ ಸ್ವಾದಪ್ಪುದೇ ಲೋಕದೊಳ್
ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಶುಚಿ ತಾನಾಗದೆ ಸರ್ವಶಾಸ್ತ್ರ ನಿಪುಣಂ ತಾನಾಗದೆ ಕಾಮಮಂ
ಪಚನಂಗೈಯ್ಯದೆ ಕೋಪಮಂ ಬಿಡದೆ ಲೋಭಚ್ಛೇದ ಮಾಡದೇ
ರುಚಿ ಮೋಹಕ್ಕೊಳಗಾಗದಂತು ಮದ ಮಾತ್ಸರ್ಯಂಗಳಂ ನೀಗದೇ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಪ್ರಚುರಂ ಪತ್ತೊಳಗಾಗೆ ರಂಧ್ರವನೆ ಕೈಗೊಂಡೆಂಟನೀಗೇಳ್ ಬಿ
ಟ್ಟುಚಿತಂ ತಾನೆನಿಪಾರ ಕಟ್ಟಯಿದಕ್ಕೀಡಾಗದೇ ನಾಲ್ವರಂ
ರಚನಂಗೆಯ್ಯದೆ ಮೂರನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ
ಯತಮಂ ನಿಶ್ಚಲಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ
ಅತಿ ಮಾಧುರ್ಯ ಸುಭಾಷಿತಂಗಳ ಮಹಾ ಸತ್ಕೀರ್ತಿಯಂ ಬಾಳ್ಕೆಯಂ
ಶತಕಾರ್ಥಂ ಕೊಡದಿರ್ಪುದೆ ಹರಹರಾ ಶ್ರೀಚನ್ನಸೋಮೇಶ್ವರಾ

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ
ರವಿ ಮುಖ್ಯಂ ಗ್ರಹವಗ್ರದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ

ಹರನಿಂದುರ್ವಿಗೆ ದೈವವೇ ಕಿರಣಕಿಂದುಂ ಬಿಟ್ಟು ಸೊಂಪುಂಟೇ ಪೆ
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ಲಾಳೆ ಮೂಲೋಕದೊಳ್
ಗುರುವಿಂದುನ್ನತ ಸೇವ್ಯನೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ
ನಿಜ ಮಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್ ನಕ್ಷತ್ರ ವೆಷ್ಟಾದೊಡಂ
ದೊರೆಯೇ ಚಂದ್ರಗೆ ಜೀವರತ್ನಕೆಣೆಯೇ ಮಿಕ್ಕಾದ ಪಾಷಾಣಗಳ್
ಉರಗೇಂದ್ರಂಗೆ ಸಮಾನಮೊಳ್ಳೆಯೇ ಸುಪರ್ಣಂಗೀಡೆ ಕಾಕಾಳಿ ಸ
ಕ್ಕರೆಗುಪ್ಪಂ ಸರಿಮಾಳ್ಪಲರೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಮರಗಳ್ ಪುಟ್ಟುವ ತಾಣಮೊಂದೆ ಖಗಕಂ ರಾಜ್ಯಂಗಳೇಂ ಪಾಳೆ ಭೂ
ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೃವೇಂ ಬಂಜೆಯೇ
ಧ,ರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್
ನರರಂ ಪುಟ್ಟಿಸಿ ಕೊಲ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಕೃತ ಶಾಪಾನ್ವಿತನಾ ಹಿಮಾಂಶುಗುರುವಿಂ ಗೋತ್ರಾರಿಯನ್ಯಾಂಗನಾ
ರತಿಯಿಂ ಕೀಚಕನಂ ಬಕಾರಿ ಮುರಿದಂ ಸುಗ್ರೀವನಿಂ ವಾಲಿ ತಾಂ
ಹತನಾದಂ ದಶಕಂಠನಾ ಹರಿಶರಕ್ಕೀಡಾದನೇವೇಳ್ವೆನಾ
ನತಿ ಕಾಮರ್ಗತಿ ಹಾನಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಚಿಗುರೆಂದುಂ ಮೆಲೆ ಬೇವು ಸ್ವಾದುವಹುದೇ ಚೇಳ್ ಚಿಕ್ಕದೆಂದಳ್ಕರಿಂ
ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ
ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಿಂದೋವರೇ
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಪಿಡಿಯಲ್ ಸಿಂಗವ ಮತ್ಸರಂ ಬಿಡುವುದೇ ದುರ್ಗಂಧಮೇಲಾದಿಯೊಳ್
ತೊಡೆಯಲ್ ನಾರದೆ ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚೆನ್ನಪ್ಪುದೇ
ಸುಡುಚೇಳಂ ತೆಗೆಯಲ್ಕೆ ಸುಮ್ಮನಿಹುದೇನೇನೆಂದೊಡೆಷ್ಟಾದೊಡಂ
ಬಿಡ ತನ್ನಂದವ ನೀಚ ತಾಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಘನ ದೈನಂ ಬಡುವರ್ ಗುರುತ್ವಗೆಡುವರ್ ಗ್ರಾಸಕ್ಕೆ ಕುಗ್ರಾಮವಾ
ಗನುಗೊಟ್ಟಿಪ್ಪರು ವೀಕ್ಷಣಕ್ಕೆ ಮುನಿವರ್ ಮಾತಾಡಶಲುಂ ಬೀಗಿ ಬಿ
ರ್ರನೆ ಬಾಗರ್ ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಿಪರ್
ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಬಡಿಕೋಲಂ ಸಮಮಾಡಲಕ್ಕುಮರೆಯೊಳ್ ಕೂಪಂಗಳಂ ತೋಡಲ
ಕ್ಕಿಡಿದಿಕ್ಕುಂ ಮೃದುಮಾಡಲಕ್ಕು ಮಳಲೊಳ್ ತೈಲಂಗಳಂ ಹಿಂಡಲ
ಕ್ಕಡವೀ ಸಿಂಗವ ತಿದದ್ದಲಕ್ಕು ಕರೆಯಲ್ ಬಕ್ಕುಗ್ರದ ವ್ಯಾಘ್ರಮಂ
ಕಡುಮೂರ್ಖಂ ಹಿತಕೇಳ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ

ಕುಲದೊಳ್ ಕೂಡರು ಕೂಸನೀಯರ್ ನೃಪರ್ ನಿಷ್ಕಾರಣಂ ದಂಡಿಪರ್
ನೆಲೆಯೊಳ್ ಸೇರಲು ಪೋರುಗೈದು ಸತಿ ತಾಂ ಪೋಗಟ್ಟುವಳು ಸಾಲಿಗರ್
ಕಲುಗುಂಡಂ ತಲೆಗೇರಿಪರ್ ತೊಲಗಿರಲ್ ಲಕ್ಷ್ಮೀ ಕಟಾಕ್ಷೇಕ್ಣಂ
ನೆಲಮುಟ್ಟಲ್ ಮುನಿದಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಬಲವಂತರ್ ನೆರವಾಗಲಿಕ್ಕೆಲದವರ್ ಮಿತ್ರತ್ವಮಂ ತಾಳ್ದಿರಲ್
ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ
ಕೊಳದೆಲ್ಲರ್ ಸೊಗವಾಗೆ ನಂಬುಗೆಗಪೋಹಂ ಬಾರದಂತಾಳೆ ತಾಂ
ಬಲು ಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಅಣುಮಾತ್ರಂ ಕೊಸರಿಲ್ಲದಾಳ್ದನೆಡೆಯೊಳ್ ಲಂಚಕ್ಕೊಡಂಬಟ್ಟುಮಾ
ರ್ಪಣಮಂ ಕೊಂಡತಿ ವಿತ್ತಮಂ ಕೆಡಿಸಿ ಪೈಶೂನ್ಯೋಕ್ತಿಯಿಂ ದ್ರೋಹಮಂ
ಎಣಿಸುತ್ತೆಲ್ಲರ ಬಾಳ್ಗೆ ನೀರನೆರೆದಾರುಂ ಕಾಣದೇ ಭಕ್ಷಿಪಾ
ಗಣಕಂ ಹೆಗ್ಗಣಕಂ ಸಮಂ ಹರಹರಾ ಶ್ರೀಚೆನ್ನಸೋಮೇಶ್ವರಾ

ಕಳವಂ ಕೊಂಡವನೆಯ್ದೆ ಹೆಜ್ಜೆವಿಡಿದಾ ಮರ್ಮಂಗಳಂ ಕಾಣದೇ
ಪೊಳಲೊಳ್ ಪೊಕ್ಕರ ಪೋದರ ನುಡಿವಮಾತಂ ಕೇಳದೇ ಕಾಣದೇ
ಪಳಿವನ್ಯಾಯವ ನೋಡದನ್ಯರೊಳೇ ದೂರಿಟ್ಟೆಲ್ಲರಂ ಬಾಧಿಪಾ
ತಳವಾರಂ ಬೆಳವಾರನೈ ಹರಹರಾ ಶ್ರೀಚೆನ್ನಸೋಮೇಶ್ವರಾ

ಇರಿಯಲ್ಬಲ್ಲೊಡೆ ವೀರನಾಗು ಧರೆಯೊಳ್ ನಾನಾ ಚಮತ್ಕಾರಮಂ
ಅರಿಯಲ್ಬಲ್ಲೊಡೆ ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ
ತೊರೆಯಲ್ಬಲ್ಲೊಡೆ ಯೋಗಿಯಪ್ಪುದರಿಷಡ್ವರ್ಗಂಗಳಂ ಗೆಲ್ವೊಡೇ
ತೆರಬಲ್ಲರ್ಪೊಣೆಯಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ


[೧]

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|ಜೀವನ ಚರಿತ್ರೆ|ಸ್ತೋತ್ರಗಳು


ಹೆಚ್ಚಿನ ಓದಿಗೆ[ಸಂಪಾದಿಸಿ]

ಭಾವಾರ್ಥದೊಂದಿಗೆ ಸೋಮೇಶ್ವರ ಶತಕ

ಉಲ್ಲೇಖ[ಸಂಪಾದಿಸಿ]

  1. https://knningaiah.blogspot.com/search/label/ಸೋಮೇಶ್ವರ%20ಶತಕ ಸೋಮೇಶ್ವರ ಶತಕ (2)