ಚಿತ್ತ ಚಂಚಲತೆಯ ಖಿನ್ನತೆ ಹೆಂಗಸರಲ್ಲಿ, ಒಂಟಿಯಾಗಿ ಜೀವಿಸುವವರಲ್ಲಿ, ಮೇಲಿಂದ ಮೇಲೆ ಕಷ್ಟ ಸಮಸ್ಯೆಗಳಿಗೆ ಒಳಗಾದವರಲ್ಲಿ ಕೀಳರಿಮೆ ಹೆಚ್ಚಿರುವವರಲ್ಲಿ, ದೀರ್ಘಕಾಲದ ಅನಾರೋಗ್ಯ ಪೀಡಿತರಲ್ಲಿ, ಇಳಿವಯಸ್ಸಿನವರಲ್ಲಿ, ಮನೆಯವರ ನಿರ್ಲಕ್ಷ್ಯಕ್ಕೆ ಒಳಗಾದವರಲ್ಲಿ, ದೌರ್ಜನ್ಯಕ್ಕೆ ಒಳಗಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ಒಳಜನ್ಯ ಖಿನ್ನತೆ (ENDOGENUOS DEPRESSION)
ಇದು ಶರೀರದೊಳಗೆ ಮೆದುಳಿನಲ್ಲೇ ಉತ್ಪತ್ತಿಯಾಗುತ್ತದೆ. ನರವಾಹಕಗಳಾದ ಡೋಪಮಿನ್ /ಸೆರೊಟೊನಿನ್ ಕಡಿಮೆಯಿರುವುದು, 'ಥೈರಾಕ್ಸಿನ್' ಹಾರೋನ್ ಕಡಿಮೆ ಇರುವುದು ಈ ಬಗೆಯ ಖಿನ್ನತೆಗೆ ಕಾರಣವಾಗುತ್ತದೆ. ಒಳಜನ್ಯ ಖಿನ್ನತೆ ಸಾಮಾನ್ಯವಾಗಿ 30 ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತದೆ. ಮಧ್ಯ ವಯಸ್ಕರಲ್ಲಿ, ಸ್ತ್ರೀಯರಲ್ಲಿ ಹೆಚ್ಚು. ಮುಟ್ಟು ನಿಲ್ಲುವ ಅವಧಿಯಲ್ಲಿ (ಮೆನೋಪಾಸ್-ಋತುಬಂಧ) ಒಳಜನ್ಯ ಖಿನ್ನತೆ ಕಾಣಿಸಿಕೊಳ್ಳಬಹುದು. ಇಳಿವಯಸ್ಸಿನಲ್ಲಿ ಚಿತ್ತ ಚಂಚಲತೆಯ ಖಿನ್ನತೆ ಜೊತೆಜೊತೆಗೆ ಒಳಜನ್ಯ ಖಿನ್ನತೆಯೂ ಇರಬಹುದು-ಆಗ ಇದನ್ನು DOUBLE DEPRESSION ಎನ್ನುತ್ತಾರೆ.
ಹೊರಗಿನ ಯಾವ ಕಾರಣ, ಒತ್ತಡ, ಸಮಸ್ಯೆಗಳಿಲ್ಲದ, ಖಿನ್ನರಾಗಿರುವ ವ್ಯಕ್ತಿ ಮನೆಯವರ ಪಾಲಿಗೆ ಒಗಟಾಗುತ್ತಾನೆ/ಳೆ. ಒಳ್ಳೆಯ ಮನೆ, ಕುಟುಂಬ, ಹಣದ ಕೊರತೆಯಿಲ್ಲ, ಮಕ್ಕಳೆಲ್ಲಾ ಚೆನ್ನಾಗಿದ್ದಾರೆ. ಯಾವುದಕ್ಕೂ ಕೊರತೆಯಿಲ್ಲಾ, ಇವನು/ಳು ಏಕೆ ಖಿನ್ನನಾಗಿದ್ದಾನೆ/ಳೆ ಡಾಕ್ಟರೇ ಎಂದು ಜನ ಕೇಳುವಂತಾಗುತ್ತದೆ. ಮದ್ದು, ಮಾಟ, ಮಂತ್ರ, ಜಾತಕ ಫಲ, ಗ್ರಹಗತಿ, ಗ್ರಹಚಾರ, ಕೆಟ್ಟಕಣ್ಣು ಎಂದೆಲ್ಲಾ ಯೋಚಿಸಿ ಆ ದಿಸೆಯಲ್ಲಿ ಪರಿಹಾರಕ್ಕೂ ಹಣ, ಶ್ರಮವನ್ನು ವ್ಯಯ ಮಾಡುತ್ತಾರೆ. ಸರಿಯಾದ ಪ್ರತಿಫಲವಿಲ್ಲದೆ ಕಂಗಾಲಾಗುತ್ತಾರೆ. ಒಳಜನ್ಯ ಖಿನ್ನತೆಗೂ ಹೊರಜನ್ಯ ಖಿನ್ನತೆಗೂ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ: