೯೪
ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ,
ಶರ್ವ ಪಂಪ ರನ್ನ ರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರವರೇಣ್ಯರ
ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ!
ಹಳೆಯಬೀಡ ಬೇಲನಾಡ ಮಾಡಮೆನಿತೋ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪವಿಲ್ಲ ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನಮ್ಮ ತೃಷೆಗೆ ದಕ್ಕಿಸು-
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!
ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚು ಪಡಿಯನಾಂತರೆನಿತೊ ತಕ್ಕುದಂ!
ಎನಿತೋ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ? ನೀನದನ್ನ
ನವಶಕ್ತಿಯನೆಬ್ಬಿಸು-
ಹೊಸ ಸುಗಂದದೊಸಗೆಯಿಂದ ಜಗದಿ ಹಸುರ ಹಬ್ಬಿಸು !