ಸಂಸಾರಸ೦ಬ೦ಧಗಳಾದ ಕೆಲವು ವಿಷಯಗಳನ್ನು ನಿರ್ವಹಿಸುವುದಕ್ಕೂ ಯುಕ್ತಗಳಾಗಿರುವುವು. ಇನ್ನು ಆತ್ಮಶುದ್ದಿಯೆಂದರೇನೋ ಅದನ್ನೂ ದಯೆಯಿಟ್ಟು ತಿಳಿಸಿರಿ.
ಗುರು-ಆತ್ಮಕ್ಕೆ ದುಃಖವನ್ನುಂಟುಮಾಡತಕ್ಕ ದುರ್ಗುಣಗಳಾವುವೂ ಇಲ್ಲದಿರುವ ಕಾಲದಲ್ಲಿ ಅದು ಪರಿಶುದ್ದವಾದ ದಶೆಯಲ್ಲಿರುವುದು. ಶರೀರಕ್ಕೆ ರೋಗಕಾರಣಗಳಾದ ಅಪಥ್ಯಪದಾರ್ಥಗಳು ಹೇಗೋ ಆತ್ಮಕ್ಕೆ ಈ ದುರ್ಗುಣಗಳೂ ಹಾಗೆಯೇ. ಆರೋಗ್ಯಕರಗಳಾದ ಪಥ್ಯಪದಾರ್ಥಗಳಂತೆಯೇ ಸುಗುಣಗಳು ಆತ್ಮಕ್ಕೆ ಆವಶ್ಯಕವಾದುವುಗಳು. ಯಾವಾಗಲೂ ಸುಗುಣಗಳು ಸಂತೋಷವನ್ನೂ ದುರ್ಗುಣಗಳು ದುಃಖವನ್ನೂ ಉಂಟು ಮಾಡುವುವು. ಸತ್ಯ, ಶಾಂತತ್ವ, ಧೈರ್ಯ, ವಿನಯ, ದಯೆ, ತೃಪ್ತಿ ಮೊದಲಾದುವು ಆತ್ಮಾನಂದವನ್ನುಂಟುಮಾಡತಕ್ಕ ಸುಗುಣಗಳು. ಇವುಗಳಿಗೆ ವ್ಯತಿರಿಕ್ತಗಳಾಗಿರುವ, ಅನೃತ, ಕೋಪ, ಅಹಂಕಾರ, ಕ್ರೂರತ್ವ, ಆಶೆ ಮೊದಲಾದುವುಗಳು ಆತ್ಮಕ್ಕೆ ಆಯಾಸವನ್ನುಂಟುಮಾಡತಕ್ಕ ದುರ್ಗುಣಗಳು.
ಚ೦ದ್ರ-ಈಗ ನೀವು ತಿಳಿಸಿದ ಸುಗುಣದುರ್ಗುಣಗಳ ವಿಷಯದಲ್ಲಿ ಮತ್ತೇನಾದರೂ ಹೇಳತಕ್ಕುದಿರುವುದೇ!
ಗುರು-ಇವೆಲ್ಲವೂ ಇತರರ ವಿಷಯವಾಗಿ ನಾವು ನಡೆದುಕೊಳ್ಳಬೇಕಾದ ಧರ್ಮಗಳಲ್ಲಿ ಸೇರುವುವು. ಈಗ ಅವುಗಳ ವಿಷಯದಲ್ಲಿ ಸ್ವಲ್ಪ ತಿಳಿಸುವೆನು. ಸಮಸ್ತ ಶುಭಗಳಿಗೂ ಸತ್ಯವೇ ಮೂಲವಾದುದು; ನಾವು ಪ್ರಾಣಾಂತಕರವಾದ ವಿಪತ್ತು ಸಂಭವಿಸಿದಾಗಲೂ ಸತ್ಯವನ್ನು ತಪ್ಪಬಾರದು; ಸರ್ವಧನವೂ ನಾಶವಾಗಿ ಹೋಗುವಂತಹ ಕಾಲದಲ್ಲಿಯಾದರೂ ನಿಶ್ಚಯವನ್ನೇ ಹೇಳಬೇಕು. ಸುಳ್ಳಾಡಿದರೆ ಪರಲೋಕಹಾನಿಯುಂಟಾಗುವುದೊಂದಲ್ಲದೆ, ನಾವು ಅಸತ್ಯವನ್ನಾಡಿದೆವೆಂದು ಇಹಲೋಕದಲ್ಲಿರುವವರೂ ನಮ್ಮಲ್ಲಿ ವಿಶ್ವಾಸವನ್ನಿಡದಿರುವರು.
ಚಂದ್ರ-ನಾವು ಯಾವ ವಿಷಯದಲ್ಲಿಯೂ ಅನೃತವನ್ನಾಡಲೇ ಬಾರದೇ?