ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬
ಚ೦ದ್ರಮತಿ.

ಗುರು--ಆಡಲೇಬಾರದು. ಅಸತ್ಯಕ್ಕೆ ನಾವು ಒಂದುವಿಷಯದಲ್ಲಿ ಅವಕಾಶವನ್ನು ಕೊಟ್ಟರೆ, ಮತ್ತೊಂದು ವಿಷಯದಲ್ಲಿಯೂ ಹಾಗೆಯೇ ಅಸತ್ಯವನ್ನಾಡಬೇಕೆಂಬ ಬುದ್ದಿಯು ಹುಟ್ಟಿ ಕ್ರಮಕ್ರಮವಾಗಿ ನಾವು ಅಸತ್ಯಕ್ಕೆ ತವರ್ಮನೆಯಾಗಿ ದುರ್ಗತಿಯನ್ನು ಹೊಂದುವೆವು.

ಚ೦ದ್ರ- ಈಗ ನೀವು ಸತ್ಯದ ವಿಷಯದಲ್ಲಿ ಹೇಳಿದುದನ್ನು ಪರಿಶೀಲಿಸಿದರೆ, ನಾವು ಯಾವಾಗಲೂ ಶಾಂತತ್ವ ಮೊದಲಾದ ಗುಣಗಳನ್ನೇ ಹೊ೦ದಿರಬೇಕೆಂದೂ, ಕೋಪಾದಿಗಳಿಗೆ ಯಾವಾಗಲೂ ಅವಕಾಶವನ್ನು ಕೊಡಲಾಗದೆಂದೂ ತೋರುವುದು

ಗುರು-ಅನೃತ, ಅಹಂಕಾರ, ಕ್ರೂರತ್ವ ಮೊದಲಾದುವುಗಳನ್ನು ಕೈಲಾದಷ್ಟು ಮಟ್ಟಿಗೆ ಯಾವಾಗಲೂ ನಾವು ದೂರೀಕರಿಸಿರಬೇಕಾದರೂ ಆಗಾಗ ಒ೦ದೊ೦ದುಬಾರಿ ಯುಕ್ತರೀತಿಯಲ್ಲಿ ಕೋಪ ಮೊದಲಾದ ಕೆಲವನ್ನು ತೋರಿಸುತ್ತಿರಬೇಕು. ಒಬ್ಬ ಸೇವಕನಾಗಲಿ, ಬಾಲಕನಾಗಲಿ, ತಪ್ಪು ಮಾಡಿದಾಗ ಅವನಮೇಲೆ ನಾವು ಕೋಪವನ್ನು ತೋರಿಸದಿದ್ದರೆ ಅವನ ನಡೆಯು ಕೆಟ್ಟು ಹೋಗಿ ಅವನು ದುರ್ಮಾರ್ಗಪ್ರವರ್ತಕನಾಗುವನು ಆದುದರಿಂದ ಕ್ರೂರೋದ್ದೇಶವಾವುದೂ ಇಲ್ಲದೆ ಪರರಿಗೆ ಮೇಲ್ಮೆಯುoಟಾಗುವುದಕ್ಕೋಸುಗ ತಕ್ಕಮಟ್ಟಿಗೆ ಯುಕ್ತ ಕಾಲಗಳಲ್ಲಿ ನಾವು ಕೋಪವನ್ನು ಮಾಡಬೇಕು. ಅದರಂತೆಯೇ ನಾವು ನ್ಯಾಯವಾದ ಸಕಲ ಮನೋರಥಗಳನ್ನೂ ಅಪೇಕ್ಷಿಸಬಹುದು. ಅತ್ಯಾಶೆಯನ್ನು ಮಾತ್ರ ತ್ಯಜಿಸಬೇಕು.

ಚ೦ದ್ರ-ಉಳಿದ ಸುಗುಣಗಳನ್ನು ಕುರಿತು ತಿಳಿಸಬೇಕಾದುದೇನಾದರೂ ಇರುವ ಪಕ್ಷದಲ್ಲಿ ನನ್ನಲ್ಲಿ ಅನುಗ್ರಹವಿಟ್ಟು ಅದನ್ನೂ ತಿಳಿಸಬೇಕು.

ಗುರು-ವಿಸ್ತಾರವಾಗಿ ತಿಳಿಸಬೇಕಾದುದಾವುದೂ ಇಲ್ಲ. ಶಾಂತತೆಯೊಂದಿದ್ದರೆ ನಮ್ಮ ಇತರ ಸುಗುಣಗಳೆಲ್ಲ ಮತ್ತಷ್ಟು ಪ್ರಕಾಶವನ್ನು ಹೊಂದುವುವು. ಭೃತ್ಯರೂ, ನೆರೆಹೊರೆಯವರೂ, ಮನೆಯವರೂ ನಮ್ಮ ವಿಷಯದಲ್ಲಿ ಅಧಿಕಾನುರಾಗವುಳ್ಳವರಾಗುವರು. ಆಪತ್ಕಾಲಗಳಲ್ಲಿ ನಾವು ಮುಖ್ಯವಾಗಿ ಧೈರ್ಯವನ್ನವಲಂಬಿಸಿರಬೇಕು. ಅಂತಹ ಧೈರ್ಯವನ್ನು ಕಳೆದುಕೊಂಡರೆ, ಅದರಿಂದ ನಮಗೆ ಯಾವಲಾಭವೂ ಉಂಟಾಗದಿದ್ದರೂ, ವಿಪತ್ತುಗಳು ಇಮ್ಮಡಿಯಾಗಿ ತೋರಿ ಅಧಿಕ ದುಃಖವನ್ನುಂಟುಮಾಡುವುವು;