ನಾಸ್ತಿಕ ಕೊಟ್ಟ ದೇವರು/ಆ ಕಾಳ ರಾತ್ರಿ
ಕಥೆ : ಒ೦ಭತ್ತು
ಆ ಕಾಳ ರಾತ್ರಿ
ಅನಂತಯ್ಯ, ರುಕ್ಮಿಣಮ್ಮ, ಕಮಲ, ನಾಣಿ ಮತ್ತು ಬಾಲೂ ಈ ಐವರ ಕುಟು೦ಬದ ಕತೆ ಇದು. ಮೊದಲು ನಾಲ್ವರು ಕತೆಯ ಹೆಚ್ಚಿನಂಶ ಹೇಳಿದ್ದಾರೆ. ಡಾಕ್ಟರ್ ಮಾಧವರಾವ್ ಆ ಕಾಳರಾತ್ರಿಯ ಬಗೆಗೆ ಹೇಳಿದ್ದಾರೆ . ಕೊನೆಯ ಮಾತು ನನ್ನದು.
ಅನoತಯ್ಯ
ಬನ್ನಿ, ಸಮೀಪ ಬನ್ನಿ . . . ರುಕ್ಕೂ, ರಾಯರಿಗೆ ಒಂದಿಷ್ಟು ಕಾಫಿ . . . ಯಾಕೆ ಬೇಡ? ಯಾವಾಗಲೂ ಹಾಗೇನೇ ನೀವು . . . ಏನು? ಕಿಟಿಕಿ ಕೊಂಚ ತೆರೆಯೋಣ ಎಂದಿರಾ ? ಕಮ್ಲೂ ಕೊಂಚ ತೆರೆಯಮ್ಮಾ.
ಎನೀಮಿಯಾ ರಾಯರೇ...ಮೂವತ್ತೈದನೆ ವಯಸ್ಸಿನಿಂದ ಬೆಳೆಸ್ಕೊಂಡು ಬಂದಿದೇನೆ... ನಿಧಾನವಾಗಿ, ಕ್ರಮ ಪ್ರಕಾರ... ಈ ಹತ್ತು ವರ್ಷ ಕಾಲ. ಈ ರೆಕಾರ್ಡ್ ಕೀಪರ ಜೀವನ... ಎಷ್ಟು ಸಹಸ್ರ ಕುಟುಂಬಗಳ ಎಷ್ಟು ಸಹಸ್ರ ರೆಕಾರ್ಡ್ಗಳು... ಎಷ್ಟು ಮನೆಮುರಿದು ಹೋದುದನ್ನು ಈ ಕಣ್ಣಲ್ಲೇ ಕಂಡೆನೋ! ಆತ್ಮಹತ್ಯೆ ಮಾಡಿಕೊಂಡಿರುವವರು ಎಷ್ಟು ಜನವೋ...
ಬಾಲೂ ಹುಟ್ಟಿದಾಗ ನನಗೆ, ಇಪ್ಪತ್ತೈದು-ರುಕ್ಕೂಗೆ ಹದಿನೆಂಟು . . . ಈಗ ನಮ್ಮ ಕಮ್ಲೂ ಇಲ್ವೇ . . . ಹಾಗೇನೆ ಅಷ್ಟೇ ಎತ್ತರ, ಅಷ್ಟೇ ಪ್ರಾಯ, ತದ್ರೂಪ . . . ಆ೦ ! ಆಯಾಸಾನಪ್ಪಾ . . . ಎಲ್ಲಿ, ಒಂದು ಚಮಚ ಬಾರ್ಲಿ ನೀರು . . .
ಸುಮ್ಮನಿರಿ ಅ೦ತೀರಾ? ಹೋಗಿ ಇವರೆ. ಎಷ್ಟೋ ದಿನ ಆದ್ಮೇಲೆ ಬಂದಿದೀರಾ. ಮಾತಾಡದೆ ಇರಲೆ? ಇಪ್ಪತ್ತೆರಡನೇ ದಿನ ಈ ಹೊತ್ತು. ನೆನ್ನೆ ತಾನೇ ಮುಖಕ್ಷೌರ ಮಾಡಿಸ್ಕೊಂಡೆ... ಸುಸ್ತಾಗಿದ್ದ ಜೀವ ಹಾಸಿಗೆ ಹಿಡೀತು. ಏನೋ ನಿಶ್ಯಕ್ತಿ ವಾಸಿಯಾಗುತ್ತೆ ಅಂತ ಇದ್ದರೆ, ಹಾಳು ಶನಿ ಹೀಗೂ ವಕ್ರಿಸಬೇಕೇ... ಏನೇನು ಔಷಧಿ ಕುಡಿದ್ನೋ ಈ ಜನ್ಮದಲ್ಲಿ... ಏನೇನು ಔಷಧೀನೋ... ಆ ಭಗವಂತನಿಗೇ ಗೊತ್ತು...
...ಕ್ಯಾಷುವಲ್ ಲೀವ್, ಪ್ರಿವಿಲೇಜ್ ಲೀವ್ ಎಲ್ಲ ಮುಗಿದ್ಹೋಗಿತ್ತು... ಈಗ ಲೀವ್ ವಿತೌಟ್ ಪೇ... ಸಾಲದ್ದಕ್ಕೆ ನಮ್ಮ ಬಾಲೂ ಎಸ್. ಎಸ್. ಎಲ್. ಸಿ. ಪರೀಕ್ಷೆ ಕಟ್ಟಿದ್ದ... ತುಂಬ ದಿಗಿಲು... ನೆನ್ನೆ ತಾನೇ ಮೈಸೂರಿಗೆ ಹೋದ... ಅವನ ಚಿಕ್ಕಪ್ಪ ಬಾಂತ ಬರೆದಿದ್ದ. ಏನಾದರೂ ಕೆಲಸ ನೋಡಬಹುದೂಂತ... ಕಮಲಿ ಮದುವೆ... ಈ ವರ್ಷಾನಾದರೂ ಮಾಡಬೇಡ್ವೆ? ವಿದ್ಯಾಭ್ಯಾಸಾನೋ ನಾಲ್ಕನೇ ಫಾರಂನಲ್ಲೇ ನಿಂತುಬಿಡ್ತು. ಬಾಲೂಗೆ ತಾನೆ ವಿದ್ಯೆ ಬೇಕಾದ್ದು?...ಆದರೆ ಈಗನ ಹುಡುಗರಿಗೆ ಇಂಟರ್ ಮೀಡಿಯೆಟ್ ಓದಿರೋ ಹುಡುಗೀರೇಬೇಕಂತೆ...
... ಎಲ್ಲೀ ಕಮಲೂ ? ಕೊಂಚ ಬೀದಿಗೆ ಹೋಗ್ಬಿಟ್ಟು ಬಾರಮ್ಮಾ, ಡಾಕ್ಟ್ರು ಬಂದ್ರೇನೋ...
... ಚಿನ್ನದಂಥ ಹುಡುಗಿ ರಾಯರೇ... ಒಬ್ಬಳೇನೇ ದೇವ್ರು: ಕೊಟ್ಟಿರೋದು... ಆಕೇನ ಒಳ್ಳೇ ಗಂಡನ ಮನೇಗೆ ಕಳಿಸೋಕೆ ಆಗದೆಹೋಯಿತೇ...
... ಈ ವರ್ಷ ಹೇಗಾದರೂ ಮದುವೆ ಮುಗಿಸಿ ಬಿಡಬೇಕೂಂತಿದ್ದೆ. ವರದಕ್ಷಿಣೆಗೇ೦ತ ಒಂದು ಸಾವಿರ ಸಾಲಾನೂ ಮಾಡೋಣಾಂತಿದ್ದೆ
... ಮುಂದಿನ ವರ್ಷ ಬಾಲೂಗೆ ಎಲ್ಲಿಂದಾದರೂ ಹುಡುಗೀನ ತಂದು ಆ
ಸಾಲ ತೀರಿಸೋದು... ಆದರೆ ಏರ್ಪಾಟುಮಾಡೋಣ ಅನ್ನೋದ್ರಲ್ಲೇ ಬಂತು ಈ ಕಾಯಿಲೇ...
... ನೀವು ಚೆನ್ನಾಗಿದ್ದೀರಾ? ಮನೇಲಿ ಎಲ್ಲರೂ... ಅ೦ತೂ
ಸುಖವಾಗಿರೀಪ್ಪಾ... ಇಲ್ಲಿ ನಾನು ಹುಷಾರಾಗ್ತೀನಿ... ಇನ್ನೇನು ನಾಲ್ಕು ದಿನ... ಎದ್ಬಿಡ್ತೀನಿ... ಯುಗಾದಿ ಹೊತ್ತಿಗೆ ಅನಂತಯ್ಯ ಓಡಾಡದೆ
ಇರೋಕಾಗುತ್ಯೆ? ಯಾವ ವಾರಾನೋ ಯುಗಾದಿ... ಹೂಂ. ಶನಿವಾರವಂತೆ... ಬನ್ನೀಪ್ಪಾ... ಊಟಕ್ಕಲ್ದೆ ಹೋದ್ರೂನೂ... ಹಾಗೇ ಬಂದ್ಬಿಟ್ಟು ಹೋಗಿ...
... ಹೂಂ. ಹೋಗಿ ... ಒಳಗೇನೆ ಕಾಫಿ ತಗೊಂಡರಾಯಿತು....
ಏ ರುಕ್ಕೂ ... ರಾಯರು ಹೊರಡ್ತಾರಂತೆ ... ಕಮ್ಲೂ-ನಾಣಿ
ಬಸ್ ಸ್ಟ್ಯಾಂಡ್ ತನಕ ಹೋಗಿ ಇವರನ್ನು ಬಿಟ್ಬಿಟ್ಟು ಬನ್ನಿ ... ಇಲ್ಲ.
ನಾನು ಏಳೋಲ್ಲ ... ಮಲಗೇ ಇರ್ತೀನಿ... ತುಂಬಾ ಆಯಾಸ ... ಏ
ಪರಮಾತ್ಮ...
ರುಕ್ಮಿಣಮ್ಮ
ನೀವು ಅಳಬೇಡ ಅಂತೀರಿ ... ಆದರೆ ನಾನೇನು ಕಲ್ಲೆ ? ಮರವೆ ?
ಹೇಗೆ ಸಹಿಸೋದು ? ಹಿರಿಯರ ಪುಣ್ಯದಿಂದ ಎಲ್ಲ ಸರಿಹೋಯಿತು ...
ಇವತ್ತು ಇಷ್ಟಾದ್ರೂ ಮಾತಾಡಿದ್ದಾರೆ. ನಿಮ್ಮನ್ನು ಗುರುತುಹಿಡಿದಿದ್ದಾರೆ...
ಆದರೆ ಮೊನ್ನೆ, ಮೊನ್ನೆ... ಅಯ್ಯೋ ... ಅಷ್ಟು ದಿನ ಕಳೆದದ್ದೇ...
ಏನಾದರೂ ಆಗಿದ್ದರೆ-ಅನಾಹುತ ಆಗಿದ್ದರೆ- ಅಯ್ಯೋ-
ಇಲ್ಲಪ್ಪ ಅಳೋದಿಲ್ಲ; ಅಪ್ಪಾ, ನೀನು ನನ್ನ ತಮ್ಮ ಇದ್ದ ಹಾಗೆ...
ನಿನ್ನಂಥವರು ನಾಲ್ಕು ಜನ ಈ ಪ್ರಪಂಚದಲ್ಲಿ ಇಲ್ಲದೇ ಇದ್ರೆ
ಬದುಕೋದುಂಟೆ ?
ಆ ಮನೆಯ ಯಜಮಾನನೋ...ಆ ಮಹರಾಯ ಕಟುಕ...
ಮೂರು ತಿಂಗಳ ಬಾಡಿಗೆ ಬಾಕೀಂತ ಹಿಂಸೆ ಕೊಡ್ತಿದಾನೆ. . . ಅವರು
ಪ್ರಜ್ಞೆ ಇಲ್ದೆ ಮಲಗಿದ್ದಾಗ್ಲೂ ಬಂದು, ಮನೆ ಖಾಲಿ ಮಾಡೀಂತಂದ ;
ಯುಗಾದಿಗೆ ಬೇರೆಯವರಿಗೆ ಬಾಡ್ಗೆಗೆ ಕೊಡ್ತೀನೀಂತಂದ ; ಆ ಒಂದೇ
ಒ೦ದು ಹಳೇ ಧರ್ಮಾವರ ಸೀರೇನ ಮೂರು ಕಾಸಿಗೆ ಕೊಟ್ಟಿದ್ದಾಯಿತಪ್ಪಾ... ಅಂತೂ ಇನ್ನು ಎರಡು ತಿಂಗಳ ಬಾಡಿಗೆ ಬಾಕೀನೇ...
...ಸಂಪಾದ್ಸೋದು ಇನ್ನು ಯಾವತ್ತೊ. . . ಬಾಲೂ . . .ಉ!...
ನಾಣೀನೂ ಈ ವರ್ಷ ಲೋಯರ್ ಸೆಂಕೆಂಡರಿ. . . ಮುಂದೆ ಹೇಗಪ್ಪಾ
ಓದ್ಸೋದು . . .
...ಮನಸ್ಸು ಕಠಿನವಾಗುತ್ತೆ ಒಮ್ಮೊಮ್ಮೆ...ಯಾತಕ್ಕೆ ಈ ಮಕ್ಕಳು
ಹುಟ್ಟಿದುವೋ. . . ಸದ್ಯ ಕಮ್ಲೂ ಹುಟ್ಟಿದ್ಮೇಲೆ ಎರಡನ್ನೂ ಯಮರಾಯ
ಕಣ್ಣು ತೆರೆಯೋಕೆ ಮುಂಚೇನೆ ತಗೊಂಡು ಹೋದ. ಇಲ್ದೇ ಹೋಗಿದ್ರೆ
ಇವಿಷ್ಟೂ ಮಕ್ಕಳ ಬವಣೆ ನೋಡೋದಕ್ಕಾಗ್ತಿತ್ತೆ?
...ಯುಗಾದೀನಂತೆ, ನಾಡಿದ್ದು... ಏನು ಯುಗಾದೀನೋ! ಅಂತೂ ಮಕ್ಕಳ ಭಾಗ್ಯ-ಕಮಲೂ ಭಾಗ್ಯ-ಅವರು ಪಾರಾಗಿದ್ದಾರಲ್ಲಾ...
...ರಿಲಾಪ್ಸೆ? ಹಾಗೇಂತಂದ್ರೆ?... ಅಯ್ಯೋ, ಇಲ್ಲಪ್ಪ...ಸರಿಯಾಗಿ ನೋಡ್ಕೋತೀವಿ ನಮ್ಮಪ್ಪ ... ಏನೂ ತಿನ್ನಿಸೋಲ್ಲ... ಹೋಗ್ಬಿಟ್ಟು ಬಾ...ಮರೀಬೇಡಾಣ್ಣಾ ... ಯುಗಾದಿ ದಿನ ಬಂದ್ಬಿಡು... ಕಮ್ಲೂ, ನಾಣಿ, ಅಣ್ಣನ ಜೊತೇಲಿ ಅಷ್ಟು ದೂರ ಹೋಗ್ಬಿಟ್ಟು ಬನ್ನೀಪ್ಪಾ...
ಕಮಲ
ಇನ್ನೂ ಒಂದಷ್ಟು ಪುಸ್ತಕ ತಗೊಂಡು ಬನ್ನಿ ಅಣ್ಣ...ಅದೊಂದೇನೆ ನನಗಿರೋ ಸುಖ... ಈ ಮೂರು ತಿಂಗಳು ಒಂದೇ ಒಂದು ಸಿನಿಮಾ ನೋಡಿಲ್ಲ...ಒಬ್ಬಳೇ ಒಬ್ಬ ಸ್ನೀಹಿತೆಯ ಮನೆಗೂ ಹೋಗಿಲ್ಲ...ಈ ಚಿಂದಿ ಉಟ್ಕೊಂಡು ಹೇಗೆ ಹೋಗಲಿ?... ಇರೋದು ಎರಡೇ ಸೀರೆ. ಒಂದನ್ನ ನೋಡಿ ಇನ್ನೊಂದು ಹಲ್ಕಿಸೀತಾ ಇದೆ... ಈ ಒಂದು ವರ್ಷವೆಲ್ಲಾ ಚಪ್ಪಲಿಕೊಂಡಿಲ್ಲ. ಅಪ್ಪನಿಗೆ ಬರೋ ಐವತ್ತನಾಲ್ಕರಲ್ಲಿ ಏನನ್ನಕೊಳ್ಳೋದು, ಏನನ್ನ ಬಿಡೋದು...
...ಓ, ಯಾವುದೊ ಬಸ್ಸು ಬರ್ತಾ ಇದೆ. ಈ ಬಸ್ನಲ್ಲಿ ಹೋಗ್ತೀರಾ? ಅದರಲ್ಲಿ ಐದಾಣೆ. . . ಸಿಟಿಮಾರ್ಕೆಟ್ ಬಸ್ನಲ್ಲಿಹೋಗಿ . . . ಮೂರಾಣೆ, ಅಲ್ಲಿಂದ ಚಾಮರಾಜಪೇಟೆಗೆ ನಡೆದರಾಯ್ತು...ಇಲ್ಲ ಈ ಬಸ್ಸಲ್ಲ. . . ಇನ್ನೊಂದು ಬರುತ್ತೆ. . .
ತಿಂಡೀನೇ ? ಬೇಡಿ, ನಾವೇನೂ ತಿನ್ನೋಲ್ಲ... ಕೋಪಿಸ್ಕೋಬೇಡಿ...ಅಮ್ಮ ಗಲಾಟೆ ಮಾಡ್ತಾಳೆ . . . ಅಪ್ಪನೂ ಒಪ್ಪೋಲ್ಲ . . . ಹೋಟ್ಲಿನ ತಿಂಡಿ ತಿನ್ಬಾರ್ದು. . . ಬೇಡಿ . . . ಬೇಕಾದರೆ ಯಾವುದಾದ್ರೂ ಮಾಸಪತ್ರಿಕೆ ತೆಗಿಸ್ಕೊಡಿ. . .
ನಾಣಿ
ನಾನು ಮುಟ್ಟೊಲ್ಲಮ್ಮ ... ಒಂದು ರೂಪಾಯೀನೋ ! ಓಹೋ
ಬೇಡಿ... ಹಾಗೆ ದುಡ್ಡು ತಗೋಬಾರ್ದು...ಒಂದು ಪೆನ್ಸಿಲು ತೆಗಿಸಿಕೊಡಿ ಸಾಕು...
ಮುಂದಿನ ವರ್ಷ ಹೈಸ್ಕೂಲಿಗೆ ಹೋಗ್ಬೇಕು ... ಆಮೇಲೆ ಕಾಲೇಜು...
ಇಂಜನಿಯರಾಗ್ತೀನಿ. . .
ಅಂತೂ ಮೊದಲು ಕಮ್ಲೂ ಮದುವೆ. . .ಅದು ಮುಖ್ಯ. ಹಾಗೇಂತ ಅಪ್ಪಯ್ಯ ಯಾವಾಗ್ಲೂ ಹೇಳ್ತಾನೆ ಇರ್ತಾನೆ. . .
ಬಸ್ಸು ಬಂದ್ಬಿಡ್ತು. . .ಅಣ್ಣ ಹೊರಡ್ತೀರಾ?. . .ಯುಗಾದಿ ದಿವಸ
ಬನ್ನಿ. . .ನಮಸ್ತೆ. . .ನಮಸ್ತೆ. . .
ಕತೆಗಾರ
ನಾನು ಶ್ರೀಮಂತನಲ್ಲ; ಕ್ಷುದ್ರಸಾಹಿತ್ಯ ನಿರ್ಮಾಣ ಮಾಡಿ ಆ ಮಸಾಲೆ ಮಾರಿದರೆ ಮಾತ್ರ ದುಡ್ಡು ಬರುವ ಕಾಲ ಇದು. ಆದರೂ ಬರೆದು ಬದುಕುವ ಸಾಹಿಸಿ ನಾನು. . .ಯುಗಾದಿ ಬಂದಾಗ ಆ ಖರ್ಚು, ಈ ಖರ್ಚು ಇಲ್ಲದಿರುವುದುಂಟೆ? ಹಬ್ಬ ವೊಹರಂ ಇರಲಿ, ಕ್ರಿಸ್ ಮಸ್
ಇರಲಿ, ಖರ್ಚು ಖರ್ಚೇ.
ಹಾಗಂತಲೇ ಯುಗಾದಿ ದಿನ ಅನಂತಯ್ಯನ ಮನೆ ಹುಡುಗರಿಗೆ ಉಡುಗೊರೆಯೆಂದು ಎರಡು ಮೂರು ಪೊಟ್ಟಣಗಳನ್ನು ಸಿದ್ಧಪಡಿಸಿದೆ. ಅದು ಏನೆಂದು ಹೇಳಿ ನನ್ನ ಬಂಡವಾಳ ತೋರಿಸಿಕೊಳ್ಳುವ ಇಷ್ಟವಿಲ್ಲ.
ಮಲ್ಲೇಶ್ವರದ ಹಾದಿ ಹಿಡಿದು ಅವರ ಮನೆಗೆ ಹೋದೆ, ಬೀಗ ಹಾಕಿತ್ತು. ಮನೆ ಮಾಲಿಕ ಅವರನ್ನು ಹೊರ ಹಾಕಿರಬಹುದೇ? ಎಂಬ ಶಂಕೆ ಮೂಡಿತು. ವಿಚಾರಿಸಿದೆ. ಅದೇ ಬೆಳಗ್ಗೆ ಅನಂತಯ್ಯನನ್ನು ಅಸ್ಪತ್ರೆ ಸೇರಿಸಿದರೆಂದೂ ಮನೆಯವರೆಲ್ಲ ಅಲ್ಲಿದ್ದಾರೆಂದೂ ತಿಳಿಯಿತು.
ಮನಸ್ಸಿಗೆ ತುಂಬಾ ಕಸಿವಿಸಿಯಾಯಿತು. ಅಂತೂ ಯಾವುದರ ಬಗೆಗೆ ನಾನು ಭಯಪಟ್ಟಿದ್ದೆನೊ ಅದೇ ಸಂಭವಿಸಬೇಕೆ ?
ಸಿಟಿ ಮಾರ್ಕೆಟ್ ಬಸ್ ಹಿಡಿದು, ಬಂದಿಳಿದು, ನಾನು ಆಸ್ಪತ್ರೆ ಸೇರಿದೆ. ಹುಡುಕುವುದು ಕಷ್ಟವಾಗಲಿಲ್ಲ. ಜನರಲ್ ವಾರ್ಡಿನಲ್ಲಿ ಒಂದು ಮೂಲೆಯಲ್ಲಿ ಒಂದು ಮಂಚದ ಮೇಲೆ ಅನಂತಯ್ಯನನ್ನು ಮಲಗಿಸಿದ್ದರು. ಅದೊಂದು ಎಲುಬುಗೂಡು.
ಬಲು ಕಠಿನವಾಗಿ ಶ್ವಾಸೋಛ್ವಾಸವಾಗುತಿತ್ತು. ಮೈ ಕೆಂಡದಂತೆ ಕಾದಿತ್ತು. ಆಂ-ಊಂ ಎಂದು ನರಳುತಿದ್ದರು. ಮಾತಾಡಲೆಂದು ಬಾಯ್ತೆರೆಯುತಿದ್ದರು. ಸ್ವರ ಬರುತ್ತಿರಲಿಲ್ಲ. ಗಂಟಲಷ್ಟೇ ಗರಗರ ಎನ್ನುತ್ತಿತ್ತು.
ನನ್ನನ್ನು ನೋಡಿದ ತಾಯಿ ಮಕ್ಕಳು ಗೊಳೋ ಎಂದು ಅಳತೊಡಗಿದರು.
ಯುಗಾದಿ ಆ ದಿನ. ನನ್ನ ಉಡುಗೊರೆಗಳು ಯಾರಿಗೆ ಬೇಕಿದ್ದುವು ? 'ಅಳಬೇಡಿ, ಅಳಬೇಡಿ ಏನೂ ಆಗೊಲ್ಲ' ಎಂದು ಸಂತೈಸಿದೆ. ಆದರೆ ನನ್ನ ಮನಸ್ಸು ಮಾತ್ರ ಗಾಬರಿಗೊಂಡಿತ್ತು.
ಹೊರಟು ಬರುವಂತೆ ಬಾಲೂಗೆ ಆಗಲೇ ತಂತಿ ಕಳಿಸುವುದಾಗಿ ಹೇಳಿದೆ. 'ನಾಣಿ, ಬಾ ನಮ್ಮಲ್ಲಿಗೆ ಹೊಗೋಣ' ಎಂದೆ. ರುಕ್ಮಿಣಮ್ಮನೂ 'ಅಣ್ಣನ ಜೊತೆಯಲ್ಲಿ ಹೋಗಪ್ಪ' ಎಂದರು. ಆತ ಕೊಟ್ಟ ಉತ್ತರ ಒಂದೇ : " ಊಹೂಂ. ಅಪ್ಪಯ್ಯನ್ನ ಬಿಟ್ಟು ಹೋಗೊಲ್ಲ."
ಆದರೆ ಅಪ್ಪಯ್ಯ ಅವರೆಲ್ಲರನ್ನೂ ಬಿಟ್ಟು___
ಮರುದಿನ ಮಧ್ಯಾಹ್ನ ಪುನಃ ಆಸ್ಪತ್ರೆಗೆ ಹೋದೆ. . . ಬೆಡ್ ಖಾಲಿಯಾಗಿತ್ತು. ಡಾಕ್ಟರ್ ಮಾಧೂರಾವ್ ಸಮೀಪ ಬಂದು ಹೆಗಲ ಮೇಲೆ ಕೈಯಿರಿಸಿ "ರಾವ್, ಅವರು ನಿಮ್ಮ ಸಂಬಂಧಿಕರೆ?" ಎಂದು ಕೇಳಿದರು
"ಅಲ್ಲ ಸ್ನೇಹಿತರು " ಎಂದೆ ನಾನು.
"ಓ . . ." ಎನ್ನುತ್ತ ಅವರು ವಿವರಿಸಿದರು.
ಡಾಕ್ಟರ್ ಮಾಧೂರಾವ್
ಒಂದು ಗಂಟೆಯ ಹಿಂದೆ ಆ ಬಡಪಾಯಿ ಕಣ್ಣುಮುಚ್ಚಿಕೊಂಡ. ಕಳೆದ ರತ್ರಿಯೊಂದು ಭೀಕರ ರಾತ್ರೆ ಮಿಸ್ಟರ್ ಇವರೇ ; ಭೀಕರ. ನನ್ನ ಕಣ್ಣು ನೋಡಿದಿರಾ ? ಎಷ್ಟು ಕೆಂಪಾಗಿದೆ ! ರೆಪ್ಪೆ ಮುಚ್ಚದೆ ರಾತ್ರೆ ಇಡೀ ಸೀನಿಯರ್ ಫಿಸಿಶಿಯನ್, ನಾನು ಮತ್ತು ಇನ್ನೊಬ್ಬರು, ಆ ರೋಗಿ,ಸಾವಿನೊಡನೆ ಹೋರಾಡಿದೆವು. . . ನ್ಯುಮೋನಿಯಾ ರಿಲಾಪ್ಸ್ ಆಗಿ, ಬಂದಿತ್ತು ಡಬ್ಬಲ್ ನ್ಯುಮೋನಿಯಾ . . . ಪ್ಲಾಸ್ಟರ್ ಹಾಕಿದೆವು ; ಪೆನ್ಸಿಲಿನ್ ಇಂಜೆಕ್ಷನ್ ಕೊಟ್ಟೆವು. ಗ್ಲೂಕೋಸ್ ಇಂಜೆಕ್ಷನ್ ಕೂಡಾ. . .ಆಮೇಲೆ ಬ್ಲಡ್ ಟ್ರಾನ್ ಪ್ಯೂಷನ್. ಎಂಥ ಕೇಸು ! ಎಂಥ ನೋವು ! ವೇದನೆ . . . ಏನೇನು ಆಸೆಗಳಿದ್ದವೋ ಆ ಜೀವಕ್ಕೆ ; ಎಷ್ಟು ಚಡಪಡಿಸ್ತು. ಗೊತ್ತೆ ? ಆ ಉನ್ಮಾದವೊ ! ಹಾ-ಹ ಎನ್ನುತ್ತ ಆ ಕೈ ಎಲುಬು, ಭೀಮ ಬಲ ಬಂದಂತೆ ಎತ್ತಿ ಎತ್ತಿ ಬೀಸುತಿತ್ತು ; ಹತ್ತಿರ ಬರುತ್ತಿದ್ದ ಸಾವನ್ನು ದೂರಕ್ಕೆ ಓಡಿಸೋಹಾಗೆ.
ಏನಂದಿರಿ? ಏನು ಕಾರಣವೆಂದೆ ?
ಏನು ಕಾರಣ ! ಆ ರೋಗ ಎನೀಮಿಯಾ . . . ಮೊದಲೇ ನಿಶ್ಯಕ್ತಿ . . . ಮೂರು ನಾಲ್ಕು ವಾರಕ್ಕೆ ಹಿಂದೆ ಜ್ವರ ಬಂದಾಗಲೇ ಆಸ್ಪತ್ರೆ ಸೇರಿಸಬೇಕಾಗಿತ್ತು . . . ಗೊತ್ತು, ಖರ್ಚು-ಎನ್ನುತ್ತೀರಿ ನೀವು . . . ಎಲ್ಲ ಕೇಸುಗಳೂ ಹಾಗೇನೇ . . . ಕೊನೆ ಸ್ಥಿತೀಲೇ ಇಲ್ಲಿಗೆ ಬರೋದು... ಆದರೂ ನಾವು ವಿಶ್ವಯತ್ನ ಮಾಡಿದ್ದಾಯ್ತು.
ಹತ್ತು ವರ್ಷಗಳಿಂದ ಅಂಟಿಕೊಂಡಿದ್ದು, ಬಲಗೊಂಡದ್ದು. ಹತ್ತು ವರ್ಷ! ಯುದ್ಧದ ವರ್ಷಗಳು ಮಿಸ್ಟರ್ ಇವರೇ. ಮ್ಯಾಲ್ ನುಟ್ರಿಶನ್ . . . ಪೌಷ್ಟಿಕದ ಅಭಾವ . . . ಚಿಂತೆ, ಭೀತಿ, ಸಂಕಷ್ಟ . . .ನಾನೂ ನೋಡಿ ನೋಡಿ ಸಾಕಾಯ್ತು . . . ಎಷ್ಟೊಂದು ಕೇಸುಗಳು !
ಎಲ್ಲಾ ಒಂದೇ ಥರ . . . ಎಲ್ಲಾ ಈ ಯುದ್ಧ ವರ್ಷಗಳ ಹುತಾತ್ಮರು . . .ಇನ್ನು ಈ ತಲೆ ಮಾರಿನ ಮಕ್ಕಳೋ . . . ಮೈ ಗಾಡ್ !
ಸಾರಿ ಮಿಸ್ಟರ್ ಇವರೇ . . . ನಿಮ್ಮ ಸ್ನೇಹಿತರ ವಿಷಯ ಶುರು ಮಾಡಿ ಇನ್ನೆಲ್ಲಿಗೋ ಬಂದೆ. ಒಮ್ಮೊಮ್ಮೆ ಮನಸ್ಸು ರೋಸಿಹೋಗುತ್ತೆ. ಸಹಿಸೊಕ್ಕಾಗೋದಿಲ್ಲ. ಪಾಪ ! ಆ ಹೆಂಗಸು, ಆ ಮದುವೆಯಾಗದ ಮಗಳು, ಆ ಮಗು ! ಆತ ಒಬ್ಬನೇನಂತೆ ಸಂಪಾದನೆ ಮಾಡ್ತಿದ್ದಾತ.
ಆ ತಾಯಿ ಮತ್ತು ಮಕ್ಕಳು ಬೆಳಗ್ಗಿನವರೆಗೂ ಎಚ್ಚತ್ತೇ ಇದ್ರು. ಎಂಥ ಭಯ-ಎಂಥ ಆಸೆ ಅವರಿಗೆ ! ಆತನೂ ಅಷ್ಟೆ. ಖಂಡಿತ ಸಾಯೋಕೆ ಇಷ್ಟವಿರಲಿಲ್ಲ. ಆ ಕಣ್ಣುಗಳು ಹೊರಳಾಡುತ್ತಿದ್ದ ರೀತೀನೋ. ಈ ಜೀವನದಲ್ಲಿ ಎಷ್ಟೋ ಸಾವು ನೋವು ನೋಡಿದ್ದೇನೆ. ಆದರೆ ಸೋರೇಕಾಯಿ ಆಗಿದ್ದ ಆ ಹುಡುಗಿ ಮುಖ ನೋಡಿ ನನ್ನ ಕರುಳು ಕಿವಿಚಿಕೊಳ್ತಿತ್ತು.
ಈ ದಿನ ಬೆಳಗ್ಗೆ ರೋಗಿ ಕೊಂಚ ಶಾಂತವಾಗಿದ್ದ ಹಾಗೆ ಕಂಡಿತು. ಬಿರುಗಾಳಿಗೆ ಮೊದಲು ಬರುವ ಶಾಂತಿ ಗೊತ್ತೇ ಇದೆಯಲ್ಲ! ಆದರೆ ತಾಯಿ, ಮಗಳು, ಆ ಹುಡುಗ ಗಂಡಾತರ ಕಳೀತು, ಕಾಳರಾತ್ರಿ ಕಳೆದು ಬೆಳಗಾಯಿತು.
ನಿಧಾನವಾಗಿ ಉಸಿರಾಡುವುದು ಕಡಮೆಯಾಗುತ್ತಾ ಬಂತು. ಆಕ್ಸಿಜನ್ ಕೊಟ್ಟೆವು . . . ಲಾಸ್ಟ್ ಛಾನ್ಸ್ . . . ಅಲ್ಲಿಗಾಯಿತು.
ತುಂಬ ದುಃಖವಾಗುತ್ತೆ ಮಿಸ್ಟರ್ ಇವರೇ. ನಿಮ್ಮ ಸ್ನೇಹಿತರು . . .
ಕತೆಗಾರ
ಹೌದು; ನನ್ನ ಸ್ನೇಹಿತರು: ಬಾಲೂ ಮೈಸೂರಿನಿಂದ ಬಂದಿದ್ದಾನೆ. ಯಾರೂ ಯಾರನ್ನೊ ಕೂಡಿಸಿದ್ದಾನೆ.
'ಮಾರ್ಗ್'ನಲ್ಲಿ ಶವವನ್ನಿರಿಸಿದ್ದಾರೆ. ಇನ್ನು ಬಾಡಿಗೆ ಕೊಡದೆ ಇವರು ತಮ್ಮ ಮನೆಗೆ ಒಯ್ಯಬೇಕು. ಅಲ್ಲಿಂದ ಮಸಣಕ್ಕೆ.
ನಾನು ಅವರ ಜನವಲ್ಲ; ನನಗೆ 'ಜಾತಿ' ಇಲ್ಲ. ಆದರೆ ನಾನು ಅವರ ಸ್ನೇಹಿತ. ಮಸಣಕ್ಕೆ ಅವರ ಜೊತೆಯಲ್ಲಿ ನಾನೂ ನಡೆಯುವೆ.
ಆ ತಾಯಿಯೋ, ಅತ್ತು ಅತ್ತು ಆ ಕೊಡ ಬರಿದಾಗಿದೆ ; ಆ ಮಗಳು—ತಂಗಿ, ನಿನ್ನ ಮುಖವನ್ನು ಏನೆಂದು ಹೇಗೆಂದು ನೋಡಲಿ ?
ಇಂಜಿನಿಯರಾಗಲಿದ್ದ ಆ ಮಗು ?
ಇದಕ್ಕೆಲ್ಲಕ್ಕೂ ನಾನೇ ಹೊಣೆಯೆಂಬ ಮಹಾಪರಾಧದ ಭಾವನೆ ನನ್ನನ್ನು ಬಾಧಿಸುತ್ತಿದೆ.
ಆ ಕುಟುಂಬದ ಪಾಲಿಗೆ ಕಳೆದ ಒಂದು ರಾತ್ರಿ ಕಾಳರಾತ್ರಿಯಾಯಿತು. ಆದರೆ ಆ ರಾತ್ರಿ ಬರೇ ಹನ್ನೆರಡು ಗಂಟೆಗಳ ಕಾಲಾವಧಿಯ ರಾತ್ರಿ ಖಂಡಿತವಾಗಿಯೂ ಅಲ್ಲ.
ಈ ದಿನ ಒಂದು ಕುಟುಂಬದ ಮೇಲೆ ಈ ಪ್ರೇತವಸ್ತ್ರ; ಒಂದು ಬೆಡ್ ಖಾಲಿ. ನಾಳೆ ಇನ್ನೊಂದು ಕುಟುಂಬದ ಮೇಲೆ ಈ ಪ್ರೇತವಸ್ತ್ರ; ಇನ್ನೊಂದು ಬೆಡ್ ಖಾಲಿ.
ಎಂದ ವಿಷಚಕ್ರ ! ಕಾಳರಾತ್ರಿಯ, ಉರಿ ಹಗಲಿನ, ಮತ್ತೆ ಕಾಳರಾತ್ರಿಯ ಎಂಥ ವಿಷಚಕ್ರ!
. . . ಯುಗಾದಿಯ ಮರುದಿನ ಇದು. ನಾನು ದಿಙ್ಮೂಢನಾಗಿದ್ದೇನೆ. ಚಂದ್ರನದೊಂದು ಅರ್ಧವರ್ತುಲರೇಖೆ ಮುಚ್ಚಂಜೆಯಾದಾಗ ಕಾಣಿಸುತ್ತಿದೆ.
... ಯುದ್ಧವರ್ಷಗಳ ಆಹಾರಾಭಾವ, ರೋಗ, ರುಜಿನ, ನೋವು-ಸಾವು...
...ಮಸಣಕ್ಕೆ ಆ ದೀರ್ಘ ನಡಿಗೆ.
...ಚಿತೆಯುರಿಯಿತು. ಆ ಅಳುರೋದನ, ಹಾಹಾಕಾರ. ಆ ನಶ್ವರ ದೇಹದೊಡನೆ ಅಪೂರ್ಣ ಆಶೆಗಳೂ ಉರಿದುಹೋದುವು. ಎಲ್ಲ ಹಂಬಲಗಳೂ ಭಸ್ಮವಾದುವು.
ಅದು ಕಾಳರಾತ್ರಿ ಕೊಳ್ಳುವ ಬಲಿದಾನ. ಉಷೆಯ ಕಿರಣದ ವಜ್ರಾಘಾತವಾಗುವವರೆಗೂ ಕಾಳರಾತ್ರಿಯದೇ ದಮನರಾಜ್ಯ.