ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತಂಕ ಪೊದೆಯಲ್ಲಿರುವ ಮೊಲವನ್ನು ಹಿಡಿಯಲು ಹೋಗುವಾಗ ಭಾರೀ ದೊಣ್ಣೆಯನ್ನು ಸಿದ್ಧಮಾಡಿಕೊಂಡು ಹೋಗುತ್ತಾನೆ. ಘಟ ಸರ್ಪಏನಾದರೂ ಇದ್ದರೆ ಅದನ್ನು ಬಡಿದು ಹಾಕಲು ಸಿದ್ಧನಾಗಿರುತ್ತಾನೆ. ಅಂದರೆ, ಭಯ, ಭಯದಿಂದ ಹುಟ್ಟಿದ ಆತಂಕ, ಇವು ಸಂಭವಿಸಬಹುದಾದ ಆಪತ್ತುಗಳ ವಿರುದ್ಧ ಮುಂಜಾಗ್ರತಾ ಕ್ರಮವನ್ನು ಸಿದ್ಧಪಡಿಸಿಕೊಳ್ಳಲು ಪ್ರೇರಕವಾದುವು. ಕಾಡಿನ ವೈರ ಪರಿಸರದಲ್ಲಿ ಬದುಕಿ ಬಾಳಲು ಆತಂಕವು ಅಗತ್ಯವೂ ಪ್ರಯೋಜನಕಾರಿಯೂ ಆಗಿತ್ತು ಎಂದು ಊಹಿಸಲು ಸಾಕಾದಷ್ಟು ಸಾಕ್ಷ್ಯಗಳು ಇವೆ. ಆತಂಕ, ಕಾತರ, ತವಕ, ತಲ್ಲಣ, ತಳಮಳ ಇವೆಲ್ಲಾ ವಾಕ್ಕುಗಳು ನಿಘಂಟಿನ ಪ್ರಕಾರ ಒಂದೇ ಅರ್ಥವನ್ನು ಸೂಚಿಸುತ್ತವೆ. Anxiety-worry-perturbed- uneasy-ಇವೆಲ್ಲ ಪದಗಳೂ ಸೂಚಿಸುವ ಅರ್ಥ. ಹಾಗಿದ್ದರೂ ಆತಂಕದ ಹಂತವನ್ನು ಸೂಚಿಸಲು ಈ ಮಾತುಗಳನ್ನು ಬಳಕೆಗೆ ತರುವುದು ಒಳ್ಳೆಯದು. ಆತಂಕಕ್ಕಿಂತ, ಕಾತರ, ಅದಕ್ಕಿಂತಲೂ ಹೆಚ್ಚಾದಾಗ, ತವಕ, ತಲ್ಲಣ ಮತ್ತೂ ಹೆಚ್ಚಾದಾಗ ತಳಮಳ ಎಂದು ಬಳಸಿದರೆ ಶಬ್ದಭಾಂಡಾರವನ್ನು ಮತ್ತಷ್ಟು ಸ್ಪಷ್ಟಮಾಡಿದಂತಾಗುತ್ತದೆ. ವಸ್ತುವಿನ ಜ್ಞಾನವು ಹೆಚ್ಚು ಹೆಚ್ಚು ಆದಂತೆಲ್ಲಾ ನಿಖರವಾಗಿ ಇತರರಿಗೆ ಆ ಜ್ಞಾನವನ್ನು ಪ್ರಸಾರಮಾಡುವಾಗ ಸ್ಪಷ್ಟವಾದ ಅರ್ಥವನ್ನು ಕೊಡುವ ಮಾತುಗಳು ಅಗತ್ಯ. ಆದಕಾರಣ ಇನ್ನು ಮುಂದೆ ಈ ಮಾತುಗಳನ್ನು ಹಂತ ಹಂತದ ಆತಂಕವನ್ನು ಸೂಚಿಸಲು ಬಳಸಲಾಗುತ್ತದೆ. ಆತಂಕವು ಮನಸ್ಸಿನಲ್ಲಿ ಕಾಣಬರುವ ಒಂದು ಪರಿಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸಿಗೆ ಯಾವ ನೆಮ್ಮದಿಯೂ ಇರುವುದಿಲ್ಲ; ಯಾವ ಸುಖವೂ ಇರುವುದಿಲ್ಲ. ಬದಲು ದುಃಖದ ಛಾಯೆಯನ್ನು ಹೊಂದಿದ ಮನೋಭಾವವು, ಅಪ್ರಿಯವಾದ ಮನೋಭಾವವು ಇರುತ್ತದೆ. ಆತಂಕವಿದ್ದಾಗ ಬಾಳಿನಲ್ಲಿ ಉತ್ಸಾಹವು ಕಡಿಮೆಯಾಗಿ ಬೇಸರವು ಮೂಡುತ್ತದೆ. ಆತಂಕವನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಎನ್ನುವ ಕಾತರವೂ ಜತೆ ಜತೆಯಲ್ಲಿ ಮೂಡುತ್ತದೆ. ಮನಸ್ಸು ಈ ರೀತಿ ಚಡಪಡಿಸುವಾಗ ದೇಹವೂ ಅದಕ್ಕನುಗುಣವಾಗಿ ಸೆಟೆದುಕೊಳ್ಳುತ್ತದೆ. ಅನುದಿನವೂ ನಡೆಯುವ ದೇಹದ ಸಾಮಾನ್ಯ ಕಾರ್ಯಗಳು ಕುಂಟುತ್ತವೆ. ಉದಾ-ಹಸಿವು ಕಡಿಮೆಯಾಗುತ್ತದೆ. ಸುಖವಾಗಿ ಊಟಮಾಡಬೇಕು ಎನ್ನುವ ಸಹಜ ಚಪಲವು ಕುಗ್ಗುತ್ತದೆ. ಮನೆಯವರು ಬಲವಂತ ಮಾಡಿದರೆ ಶಾಸ್ತ್ರಕ್ಕೆ ಅಂತ ಊಟಕ್ಕೆ ಕೂರುವುದು, ಅಷ್ಟೋ ಇಷ್ಟೋ ತಿನ್ನುವುದು, ಕೈ ತೊಳೆಯುವುದು. ಅಥವಾ