ಅಕ್ಕಿ ಆರಿಸುವಾಗ
- ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
- ಕವನ ಸಂಕಲನ: ಮೈಸೂರು ಮಲ್ಲಿಗೆ
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು |ಪ|
ತಗ್ಗಿರುವ ಕೊರಳಿನ ಸುತ್ತ ಕರಿಮಣೆ ಒಂದೆ
ಸಿಂಗಾರ ಕಾಣದ ಹೆರಳು
ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲ್ಲಿ
ಹದಿನಾರು ವರುಶದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು |೧|
ಕಲ್ಲ ಹರಳನ್ನು ಹುಡುಕಿ
ಎಲ್ಲಿಗೊ ಎಸೆವಾಗ ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೊ ಹೋದ ಇತ್ತ ಯಾರೊ ಬಂದ
ಕಡೆಗೆಲ್ಲ ಕಣ್ಣು ಬಿದ್ದು
ಬಂಗಾರವಿಲ್ಲದ ಬೆರಳು |೨|
ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಬೆಸರಿಯ ಕಿರಿ ಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು |೩|
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ