ವಿಷಯಕ್ಕೆ ಹೋಗು

ವರ್ಗ:ಭಾವಗೀತೆಗಳು

ವಿಕಿಸೋರ್ಸ್ದಿಂದ

ನನ್ನ ಕವನ


ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ

ಬದುಕ ಪ್ರೀತಿಸುವ ಬಡವರ ಮಗಳು ನಿರಾಭರಣೆ ಕವನ ಜನಗಳು ತಿನ್ನುವ ಅನ್ನದ ಅಗುಳು ಜೀವ ನನ್ನ ಕವನ

ಚಿಮ್ಮಿ ಹರಿಯುವ ರಕ್ತದ ಕೋಡಿ ಕೆಂಪು ಕಡಲು ಕವನ ಹೆಣ್ಣು ತುಳುಕಿಸಿದ ಕಣ್ಣೀರಿನ ಹನಿ ನನ್ನ ಪುಟ್ಟ ಕವನ

ಕಾಡಿನ ನಡುವೆ ಕಂಗೆಟ್ಟವರಿಗೆ ಕಂಡ ದಾರಿ ಕವನ ನಡು ರಾತ್ರಿಯಲಿ ನಡುಗುವ ಜನತೆಗೆ ಧೈರ್ಯ ಕೊಡುವ ಕವನ

ಮರಳುಗಾಡಿನಲಿ ಬೀಸುತಲಿರುವ ಬಿರುಗಾಳಿ ನನ್ನ ಕವನ ಅರಮನೆಯಲ್ಲಿ ಉರುಳುತಿರುವ ಸಾವು ನನ್ನ ಕವನ

ಕುರಿಗಳ ಕಾಯುವ ಕುರುಬನ ಕೂಗು ಜನರ ಮಾತು ಕವನ ಸೋತ ರಟ್ಟೆಗಳ ಹೂತ ಕಾಲುಗಳ ಬೆವರ ಹಸಿರು ಕವನ

ನನ್ನ ಜನರೊಡನೆ ನಾನಾಡಿದ ಮಾತು ನಾನು ಕೊಡುವ ಕವನ ನನ್ನ ಜನರ ನಾ ನೋಡಿದ ರೀತಿ ನನ್ನ ಒಡಲ ಕವನ

- ಕವಿ - ಡಾ. ಸಿದ್ಧಲಿಂಗಯ್ಯ ಹಕ್ಕುಗಳು: ಲೇಖಕರದು