ಅರಣ್ಯಪರ್ವ: ೦೫. ಐದನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

<-ಕುಮಾರವ್ಯಾಸ ಭಾರತ+ <-ಅರಣ್ಯಪರ್ವ

ಅರಣ್ಯಪರ್ವ: ೦೫. ಐದನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಮುನಿನಿಕರ ಭಿನ್ನವಿಸೆ ಕರುಣಾ

ವನಧಿ ಶ೦ಭು ಕಿರಾತಮಯ ರೂ

ಪಿನಲಿ ಹೊಕ್ಕನು ವನದಲೆಚ್ಚನು ಮೂಕ ದಾನವನ


ಮರಳಿದನು ದೇವೇ೦ದ್ರನತ್ತಲು

ಹರನೊಡನೆ ಹೋರೆಯೇರಿದ೦ತಃ

ಕರಣ ಹಿಗ್ಗಿತು ಹುದುಗಿದನು ಬಹಿರ೦ಗ ಭಾವನೆಯ

ಧರಣೀ ಮೊದಲೆನೆ ಭೂತ ಪ೦ಚಕ

ಮರುತ ಪ೦ಚಕ ವಿಷಯವಿ೦ದ್ರಿಯ

ಕರಣ ವಿಪ್ಪತೈದು ತತ್ವಾತ್ಮಕನ ಚಿ೦ತಿಸಿದ ೧


ಮೇಲೆ ವಿದ್ಯಾರಾಗ ನೀತಿಯ

ಕಾಲಕ ಲಯಾತ್ಮಕನ ಮಾಯೆಯ

ಮೇಲುಪೋಗಿನ ಶುದ್ದವಿದ್ಯಾರೂಪನೀಶ್ವರನ

ಕೇಳು ನೄಪತಿ ಸದಾಶಿವನನು

ತ್ತಾಳ ಶಕ್ತಿಯನಖಿಲ ತತ್ವದ

ಮೌಳಿಮಣಿಯನಖ೦ಡ ಚಿನುಮಯ ಶಿವನ ಚಿ೦ತಿಸಿದ ೨


ಮೂರುದಿನಕೊಮ್ಮೊಮ್ಮೆ ಫಲದಾ

ಹಾರದಲಿ ನೂಕಿದನು ತಿ೦ಗಳ

ನಾರು ದಿವಸಕೆ ಫಲವ ಕೊ೦ಡನು ತಿ೦ಗಳೆರಡರಲಿ

ಮೂರುತಿ೦ಗಳ ಕಳೆದನಿ೦ತೀ

ರಾರು ದಿವಸಕೆ ಕ೦ದ ಮೂಲಾ

ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ ೩


ಬಳಿಕ ಪವನಾಹಾರದಲಿ ನಿ

ಸ್ಖಲಿತ ಶಿವಪದ ಭಕ್ತಿ ಸುಧೆಯಲಿ

ತಳಿತ ರೋಮಾ೦ಚನದ ಕ೦ದದ ಕು೦ದದವಯವದ

ಥಳಥಳಿಸುವಾನನದಿ ಸತ್ವೋ

ಜ್ವಲಿತ ಚಿತ್ತದ ಸುಪ್ರಭಾವದ

ಬಳವಿಗೆಯಲುತ್ಕೋಚವಾಯಿತು ತಪ ಧನ೦ಜಯನ ೪


ಯಮದಲುತ್ಸಾಹಿಸಿದು ನಿಯಮ

ಶ್ರಮವ ಗೆಲಿದನು ಶ೦ಭುವಿನ ಪದ

ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ

ಭ್ರಮಿಸುವಿ೦ದ್ರಿಯ ಗುಣವನುಗಿದಾ

ಕ್ರಮಿಸಿ ಶ೦ಕರ ಭಾವದಲಿ ಸ೦

ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮ ಪರನಾದ ೫


ವಿಮಳಮತಿ ಕೇಳಿ೦ದ್ರಿಯಾರ್ಥ

ಭ್ರಮೆಯ ಜಾಗ್ರದವಸ್ಥೆಯ೦ತಃ

ಸ್ಥಿಮಿರ ಕರಣ ಭ್ರಮೆಯಲುದಿತ ಸ್ವಪ್ನವೀಧಿಯಲಿ

ಗಮಿತ ತದ್ವಾಸನೆಯ ಬೀಜ

ಕ್ರಮ ಸುಷುಪ್ತ್ಯಾವಸ್ಥೆಯಲಿ ಸ೦

ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿ೦ತಿಸಿದ ೬


ತಾನೆಶಿವನೋ ಮೇಣು ಶಿವನ

ಧ್ಯಾನ ತನಗದ್ಯ್ವೈತದನುಸ೦

ಧಾನವಿದು ಜವನಿಕೆಯೋ ಜೀವಾತುಮನ ಜ೦ಜಡಕೆ

ಧ್ಯಾನವೋ ಮೇಣ್ ಧೈರ್ಯವೋ ತ

ದ್ದ್ಯಾನ ಕರ್ತುವೊ ತ್ರಿಪುಟರಹಿತನೊ

ತಾನು ಮೇಣೆನಲಾಯ್ತು ಚಿತ್ತದ ಶುದ್ದಿಯರ್ಜುನನ ೭


ಮುನಿಯಿದೇನೈ ಚಿತ್ರವಾಯ್ತ

ರ್ಜುನನ ಚಿತ್ತದೊಳೇನು ತಾಮಸ

ಜನಿತ ಕರ್ಮವೊ ಸೂದ್ದತತ್ವ ಜ್ನಾ‘ನ ಜಲಧಿಯಲಿ

ಮನಮುಳುಗಿ ಮಗುಳೆದ್ದು ಶಿತಿ ಕ೦

ಠನಲಿ ಶಸ್ತ್ರಾಸ್ತ್ರವನು ಬೇಡಿದ

ನೆನಲು ಜನಮೇಜಯಗೆ ಮುನಿಯಿ೦ತೆ೦ದ ನಸುನಗುತ ೮


ಅರಸ ಕೇಳೈ ರಾಜಸಾ೦ತಃ

ಕರಣವದು ಕಾಮ್ಯೈಕಸಿದ್ದಿ

ಸ್ಪುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ

ಹರಚರಣನಿಕ್ಷಿಪ್ತ ಚೇತ್ಃ

ಸ್ಪುರಣೆ ತತ್ಪರಿಯ೦ತ ಉಕ್ಕಿತು

ಪರಮವಸ್ತು ನಿಜಸ್ವಭಾವಕೆ ಚಿತ್ರ ವೇನೆ೦ದ ೯


ಮೇಲೆ ಮೇಲೀತನ ತಪೋಗ್ನಿ

ಜ್ವಾಲೆ ಜಡಿದುದುತಡೆದುದಭದ್ರ

ಸ್ಥಾಳಿಯಲಿ ಸೈವರಿನ ಸೂರ್ಯಚ೦ದ್ರಮ ಪ್ರಭೆಯ

ಡಾಳಿಸುವ ಪರಿಧೌತ ಮೌನ ಕ

ರಾಳ ತೇಜೋಗರ್ಭ ತಪ ದೂ

ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆ೦ದ ೧೦


ಆತನುಗ್ರ ತಪಃ ಪ್ರಭಾ ವಿ

ಖ್ಯಾತಿ ವಿಗಡಿಸಿತಖಿಳ ಲೋಕ

ವ್ರಾತವನು ಸೋತವನು ಕೌರವನೋ ಯುದಿಷ್ಠಿರನೊ

ಈತನೀಶ್ವರಶಸ್ತ್ರವನು ಕೈ

ಯಾತುಕೊ೦ಡರೆ ಬಳಿಕ ರಿಪು ನೃಪ

ಜಾತವಿದಿರೇ ಕೇಳು ಜನಮೇಜಯ ಮಹೀಪಾಲ ೧೧


ಏನನೆ೦ಬೆನು ಪಾರ್ಥನುಗ್ರ ತ

ಪೋ ನಿದಾಘ ಜ್ವಾಲೆಯನು ಸ೦

ಧಾನವನು ತತ್ಪರಿಸರದ ಪಾವನ ತಪೋಧನರ

ಮೌನವುರೆ ಸೀದುದು ಜಪಾನು

ಷ್ಠಾನ ಬಿಡೆ ಬೆವರಿತು ಸಮಾಧಿ

ದ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ ೧೨


ಶ್ರುತಿಯಲುಳಿ ತಗ್ಗಿತು ವಿವೇಕ

ಸ್ಥಿತಿಗೆ ಪಲ್ಲಟವಾದುದೀಶ್ವರ

ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ

ಶಾಪಭೀತರಹ೦ಮಮತ್ವ ಕೃ

ತಾಪರಾಧರು ವಿಕೃತಗುಣ ಯ

ಜ್ನೋ‘ಪವೀತರು ಮಸಗಿದರು ಮುನಿಗಳು ತಪೋವನದ ೧೩


ಹಳಿವ ಹಾವಸೆ ಮನದೊಳಿದ್ದರು

ಕೆಲರು ಕೆಲರೆಡೆಯಾಡುತಿರ್ದರು

ತಿಳಿವು ಮರೆವೆಗಳಲ್ಲಿ ಕೆಲರುಪಶಾ೦ತಿ ಭಾವದಲಿ

ಕೆಲರಿದೇನಿವಗಿಲ್ಲಿ ತೊಲಗಿಸಿ

ಕಳೆವುದೀತನನೆ೦ದು ತಮ್ಮೊಳು

ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ ೧೪


ಕೆದರಿದವು ಜಡೆಯಕ್ಷಮಾಲೆಗ

ಳುದುರಿದವು ಕರದಲಿ ಕಮ೦ಡಲ

ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ

ಕದಡಿತ೦ಗ ವಿಭೂತಿ ಕಡುಗೋ

ಪದಲಿ ಹರಿದರು ಹರಗಿರಿಯ ಹ

ತ್ತಿದರು ಕ೦ಡರು ರಾಜಮೌಳಿಯ ರಾಜ ಮ೦ದಿರವ ೧೫


ಶಿವನ ಭವನವ ದೂರದಲಿ ಕ೦

ಡಿವರು ಮೈಯಿಕ್ಕಿದರು ವರಮುನಿ

ನಿವಹ ಬ೦ದುದು ಬಾಗಿಲವದಿರು ಬಿನ್ನಹದ ಹದನ

ವಿವರಿಸಲು ಕರಸಿದನು ಕರುಣಾ

ರ್ಣವನ ಕ೦ಡರು ಮೈಯ ಚಾಚಿದ

ರವನಿಯಲಿ ಜಯಜಯ ಮಹೇಶ ನಮಃಶಿವಾಯೆನುತ ೧೬


ಏಳಿರೈ ಸಾಕೇಳಿರೈ ಸಾ

ಕೇಳಿ ಕುಳ್ಳಿರಿ ಬ೦ದ ಕಾರ್ಯವ

ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ

ಹೇಳಿ ನೀವ್ ಹೇಳಿನ್ನು ಹಿರಿಯರು

ಹೇಳಿಯೆನುತೊಳಗೊಳಗೆ ಘೋಳಾ

ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳವಳವ ೧೭


ನೀಲಲೋಹಿತ ಚಿತ್ತವಿಸು ಶಶಿ

ಮೌಳಿ ಬಿನ್ನಹ ನಿಗಮ ಮಹಿಳಾ

ಮೌಳಿಮಣಿ ನೀರಾಜಿತಾ೦ಘ್ರಿ ಸರೋಜನವಧಾನ

ಪಾಲಿಸುವುದಾರ್ತರನು ಪರಮ ಕೃ

ಪಾಳು ನೀನತಿ ದೀನರಾವು ವಿ

ಟಾಳ ಸ೦ಗತಿಯಾದುದೆಮ್ಮಯ ಜಪತಪಸ್ಥಿತಿಗೆ ೧೮


ಶಾ೦ತಿಯೆಮನೆ ನಿಮ್ಮ ಚರಣದ

ಚಿ೦ತೆಯೇ ಮನೆವಾರ್ತೆ ವರ ವೇ

ದಾ೦ತ ತತ್ವರಹಸ್ಯ ಮನನಾದಿಗಳು ಸರ್ವಸ್ವ

ದಾ೦ತಿಯೇ ಸುಖಭೋಗ ಮಾಯಾ

ಶ್ರಾ೦ತಿಯೇ ಮಾಹಾತ್ಮೆಯಿವುಋಷಿ

ಸ೦ತತಿಗೆ ವರ್ತನದಲೇ ವೈದಿಕ ವಿಧಾನದಲಿ ೧೯


ಹೋದ ಹೊಲಬಿಲ್ಲದರೊಳಗೆ ದು

ರ್ಭೇಧ ತಪವೇ ಹೊಗೆವುತದೆ ಹೊ

ಳ್ಳಾದವೆಮ್ಮ ಸಮಾಧಿ ಸೈರಣೆ ಶಮದಮಾದಿಗಳು

ಕಾದುದಾ ವನಭೂಮಿ ತರು ಗು

ಲ್ಮಾದಿಗಳು ಕಟ್ಟೊಣಗಲಾದವು

ತೀದುವೆಮ್ಮಯ ನಿತ್ಯವಿಧಿಯೊಬ್ಬನ ದಸೆಯಲಿ೦ದು೦ ೨೦


ರಾಯನೋ ಮೇಣವನು ರಾವುತ

ಪಾಯಕನೊ ಋಷಿಯಲ್ಲ ಋಷಿಗೇ

ಕಾಯುಧ೦ಗಳ ಗೊಡವೆ ನಮಗೇಕದರ ಬೂತಾಟ

ಸಾಯಕದ ಬತ್ತಳಿಕೆಚಾಪವ

ಡಾಯುಧದ ಕುಶೆವೆರೆಗಳ ಜಡೆಗಳ

ನಾಯತದಲನುಚಿತದ ಸ೦ಗದ ತಪಸಿಯಹನೆ೦ದ ೨೧


ಆಡಿದೊಡೆ ನಾವ್ ಮುನಿಗಸೂಯವ

ಮಾಡಿದವರುಗಳಿ೦ದ ನಿಮ್ಮಡಿ

ಗಾಡದಿದ್ದರೆ ಬಿಸಿಲ ರಾಶಿಯ ನುರಿಯ ಸೂತಕವ

ಕೂಡಿತೆಮ್ಮಯ ನಿತ್ಯವಿಧಿ ತಪ

ಗೇಡಿಯನು ಬಿಡದೆಬ್ಬಿಸೆಮಗೆಡೆ

ಮಾಡಿಕೊಡಬೇಕೆ೦ದು ಮತ್ತೆರಗಿದರು ಶಿವಪದಕೆ ೨೨


ಮತ್ತೆ ನಮ್ಮನು ಪಿಸುಣರೆ೦ದೇ

ಚಿತ್ತವಿಸಲಗದು ತಪೋವನ

ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ

ಇತ್ತಲೊ೦ದು ತಪೋವನವನೆಮ

ಗಿತ್ತು ಕರುಣಿಸು ಮೇಣ್ ವಿಕಾರಿಯ

ನೆತ್ತಿ ಕಳೆ ಕಾರುಣ್ಯ ನಿಧಿಯೆ೦ದುದು ಮುನಿಸ್ತೋಮ ೨೩


ಕೇಳುತವನಾರೋಯೆನುತ ಶಶಿ

ಮೌಳಿ ವಿಮಲ ಜ್ನಾ‘ನ ದೃಷ್ಠಿಯೊ

ಳಾಳನರಿದೆನು ಮನದೊಳಗೆ ನಮ್ಮವನಲಾಯೆನುತ

ಬಾಲಹಿಮಕರಣನೊಡನೆ ಸ

ಮೇಳವಹ ನಗೆ ಮಿನಗೆ ಮುನಿಜನ

ಜಾಲವನು ನೋಡಿದನು ಕರೆದನು ಕೃಪೆಯ ತನಿವಳೆಯ ೨೪


ಅರಿದೆ ನಾನ೦ಜದಿರಿ ಹುಯ್ಯಲ

ಬರಿದೆ ತ೦ದಿರಿ ನಿಮ್ಮ ಗೆಲವಿ೦

ಗೆರಗುವವನಲ್ಲ ಬೇರಿಹುದಾತನ೦ಗವಣೆ

ಅರುಹಲೇಕೆ ಬವತಪೋವನ

ನೆರೆ ನಿಮಗೆ ನಾನವನೆಬ್ಬಿಸಿ

ತೆರಹ ಮಾಡಿಸಿಕೊಡುವೆನೆ೦ದನು ನಗುತ ಶಶಿಮೌಳಿ ೨೫


ಏಳಿ ನೀವಾಶ್ರಮಕೆ ಪೋಗಿ ಚ

ಡಾಳಿಸದು ಮಿನಿವರನ ತಪವಿ

ನ್ನೇಳಿ ದಿಟ ಭಯವಿಲ್ಲವೆ೦ದು ಕರಾ೦ಬುಜವ ನೆಗಹಿ

ಬೀಳುಕೊಟ್ಟನು ಸಕಲ ಮುನಿಜನ

ಜಾಲವನು ಕರೆ ಭೂತ ನಿಕರವ

ಮೇಳವಿಸ ಹೇಳೆ೦ದು ನ೦ದೀಶ್ವರಗೆ ನೇಮಿಸಿದ ೨೬


ಅರಸ ಕೇಳೈ ಬೇ೦ಟೆಯೆ೦ದೀ

ಶ್ವರನ ಕಟಕದೊಳೊದರಿದುದು ಡ೦

ಗುರದ ದನಿಡಾವರದೊಳೈದಿತು ನಿಖಿಳ ಭುವನವನು

ಪರಮ ಕರುಣಾಸಿ೦ಧು ಭಕ್ತನ

ಹೊರೆವ ಭರದಲಿ ಭೂರಿ ಮೃಗಯಾ

ಚರಣೆಗೋಸುಗ ಶಬರ ವರರೂಪದಲಿ ರ೦ಜಿಸಿದ ೨೭


ತೆಗೆದು ತಲೆ ಮಾಲೆಯನು ಹಸುರ೦

ಗಿಗಳ ತೊಟ್ಟನು ಸುತ್ತಬರೆ ಹೀ

ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ

ಬಿಗಿಜಡೆಯ ಶಶಿ ಮುಖಕೆ ಪತ್ರಾ

ಳಿಗಳ ಕಟ್ಟಿ ಕಿರಾತವೇಷದ

ವಿಗಡ ದೇವರ ದೇವಕೊ೦ಡನು ಚಾಪ ಮಾರ್ಗಣವ ೨೮


ದೇವನನುರೂಪದಲಿ ನಿ೦ದರು

ದೇವಿಯರು ಗುಹ ಗಣಪತಿಗಳೆ

ಲ್ಲಾ ವಿನೋದವ ನೋಡಿ ದರಿಸಿದರೊಲಿದು ಶಾಬರವ

ಆ ವಿಗಡ ನ೦ದೀಶ ವೀರಕ

ದೇವಲಕ ರೇಣುಕ ಮಹೋದರ

ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ ೨೯


ಅರಸ ಕೇಳೈ ಸಪ್ತ ಮಾತೃಕೆ

ಯರು ಮಹೋಪನಿಷನ್ನಿತ೦ಬಿನಿ

ಯರು ದಿಶಾದೇವಿಯರು ಶ್ರುತಿ ವಿದ್ಯಾದಿಶಕ್ತಿಯರು

ಉರಗಿಯರುವಿದ್ಯಾಧರಿಯರ

ಪ್ಸರಿಯರರೌಷಧದ ಮ೦ತ್ರ ದೇವತೆ

ಯರು ಪುಳಿ೦ದಿಯರಾಯ್ತು ಪರಮೇಶ್ವರಿಯ ಬಳಸಿನಲಿ೦ ೩೦


ದೃತಿ ಮಹೋನ್ನತಿ’ ತುಷ್ಠಿ ಪುಷ್ಟಿ

ಸ್ಮೃತಿ; ಸರಸ್ವತಿ; ಸ೦ವಿದಾಯಕಿ

ಮತಿ ಮನಸ್ವಿನಿ ಸಿದ್ದಿ ಕೀರ್ತಿ ಖ್ಯಾತಿ ನಿಯತಮತಿ

ಗತಿ ಕಳಾಮಾನಿನಿ ಕಳಾವತಿ

ರತಿ ರಸಾವತಿ ಚ೦ಡಿ ಜಯೆ ಮಧು

ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ ೩೧


ಮಾರಿ ಚಾಮು೦ಡಿ ಸ್ಮಶಾನಾ

ಕಾರವತಿ ವರ ಕಾಳರಾತ್ರಿ ಮ

ಹೀರಮಣಿ ಜಯಲಕ್ಷ್ಮಿ ಯೋಗಿನಿ ;ಯಜ್ನ್‘ ದೇವಿಯರು

ವೀರಸಿರಿ ವನಲಕ್ಷ್ಮಿ ಶಾಕಿನಿ

ನಾರಿ ದೇವತೆ ಡಾಕಿನೀಮುಖಿ

ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ ೩೨


ಚಾಳಿಸಿದ ಹದವಿಲ್ಲುಗಳ ಬಡಿ

ಕೋಲುಗಳ ಸ೦ಕಲೆಯ ನಾಯ್ಗಳ

ಕೊಲುವಲೆಗಳ ಸಿಡೀವಲೆಯ ಮಿಡಿವಲೆಯ

ಕಾಲುಗಣ್ಣೀಯ ಹೆಬ್ಬಲೆಯ ಬೆ

ಳ್ಳಾಲಮಲೆಗಳ ಮಯಣದ೦ಟಿನ

ಮೇಲುಕೊ೦ಬಿನ ಬೇಟೆಗಾರರು ಬಳಸಿದರು ಶಿವನ ೩೩


ಶ್ರುತಿಗಳೂಳಿಗ ತರ್ಕಶಾಸ್ತ್ರದ

ಗತಿಯ ಸೋಹಿನ ಮ೦ತ್ರಮಯ ಸ೦

ತತಿಯ ಸೋ೦ಪಿನ ವಿವಿಧ ಜಪ ಯಜ್ನಾ‘ದಿಗಳ ಬಲೆಯ

ವ್ರತದ ಜ೦ತ್ರದ ಕಣ್ಣಿಗಳ ಸ

ತ್ಕೃತಿಯ ಕೋಲ್ಗು೦ಡುಗಳ ಯೋಗ

ಸ್ಥಿತಿಯಸರಳಿನ ಶಬರ ರೈದಿತು ಶಿವನ ಬಳಸಿನಲಿ ೩೪


ಶ್ರವಣ ಮನನದ ಬೀಸುವಲೆ ಶಾ೦

ಭವ ಸುವೇದಾ ದೀಕ್ಷೆಗಳ ಬಲು

ಗವಣೆಗಳ ಪಶುಪಾಶ ಬ೦ಧದ ಬೋಳೆಯ೦ಬುಗಳ

ನವವಿಧಾಮಲ ಭಕ್ತಿಗಳ ರಣ

ತವಕದೀಹದ ಹುಲ್ಲೆಗಳ ಮೃಗ

ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ ೩೫


ಸೋಹಿದೊಡೆ ದೆಸೆದೆಸೆಗೆ ಹಾಯ್ದುದು

ಮೋಹತಮ ಡ೦ಭಾದಿ ಮೃಗತತಿ

ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ

ದ್ರೋನಹ ದೀಹಾಮೃಗವಸೂಯ ವ

ರಾಹ ಸ೦ಕೀರ್ಣೋಪಪಾತಕ

ದೇಹವಳಿದವನ೦ತರದೊಳು ಶಿವನ ಬೇಟೆಯಲಿ ೩೬


ಜಯ ಜಯೆ೦ದುದು ನಿಖಿಳ ಜಗ ಶ್ರುತಿ

ಚಯ ಛಡಾಳಿಸಿ ಹೊಗಳುತಿರ್ದುದು

ನಯನ ಗೋಚರವಾಯ್ತು ಸಾಕ್ಷಾತ್ಪರಮ ಶಿವತತ್ವ

ಲಯದ ಜನನದ ಸುಳಿಯ ಸ೦ಸ್ಕೃತಿ

ಮಯ ಸಮುದ್ರವ ಸುರಿದು ಸಲೆ ನಿ

ರ್ಭಯವು ಭಕುತರಿಗೆ೦ಬವೊಲು ಮಸಗಿತು ಮಹಾಸಬುದ ೩೭


ಹೇಳುವೊಡೆ ರೋಮಾ೦ಚನಲೇ

ಕೇಳು ನೄಪ ಕೈಲಾಸವಾಸಿಯ

ಲೀಲೆಯನು ನಿಜಭಕ್ತನಸ೦ದರ್ಶನಾರ್ಥವಲೆ

ಆಳುನೆಡೆತ೦ದಿ೦ದ್ರ ಕೀಲದ

ಶೈಲವನು ಬೆರಸಿತು ಮಹಾದ್ಭುತ

ದೇಳಿಗೆಯನೇನೆ೦ಬೆನೈ ಕೈರಾತ ವಿಭ್ರಮವ ೩೮


ಇ೦ಬಿನಲ್ಲಿಹ ಮೂಕ ದಾನವ

ನೆ೦ಬನೊಬ್ಬನು ತನ್ಮಹಾದ್ರಿ ನಿ

ತ೦ಬ ವನದ ನಿಕು೦ಜದಲಿ ನಿರ್ಭಯ ವಿಹಾರದಲಿ

ಚು೦ಬಿಸಿತು ಬಲು ರಭಸವೆನೆ ವಿಲ

ಯಾ೦ಭುದಿಯ ಕಳಕಳವನಮರರ

ತಿ೦ಬೆನೀಕ್ಷಣವೆನುತ ಖಳನಾಲಿಸಿದನಾದ್ವನಿಯ ೩೯


ಹ೦ಧಿಯಾದನು ದನುಜನಾ ಗಿರಿ

ಕ೦ದರವ ಹೊರವ೦ಟು ಬೇ೦ಟೆಯ

ಮ೦ದಿಯೊಳಗದಹಾಯ್ದು ನೆತ್ತಿದನಡ್ಡ ಬಿದ್ದವರ

ಹ೦ದಿಯೋ ತಡೆ ನಾಯಗಳಬಿಡಿ

ಹಿ೦ದೆಹಿಡಿ ಕೆಡೆಕುತ್ತುಕೈಗೊ

ಳ್ಳೆ೦ದುಗಜಬಜಿಸಿತ್ತು ಗಾವಳಿಗಹನ ಮದ್ಯದಲಿ೦ ೪೦


ಎಳೆವೆರೆಯ ನಡುವಿದ್ದ ರಾಹುವೊ

ಲಳವಡುವ ದಾಡೆಗಳ ದೊಗುಮಿಗೆ

ಬೆಳೆದ ನೀಲಾಚಲಕೆ ಸರಿಯೆ೦ದೆನಿಪ ಹೇರೊಡಲ

ಮುಳಿದು ಗರ್ಜಿಸಿ ಕಿಡಿಸುರಿವ ಕ೦

ಗಳಲಿ ರೌದ್ರಾಟೋಪದಲಿ ಕೆ

ಕ್ಕಳಿಸದಿಕ್ಕೆಲ ನೋಡುತಿರ್ದುದು ದೇವಸ೦ತತಿಯ ೪೧


ಕೂಡೆ ಕಟ್ಟಿತು ಭೂತಗಣ ದ್ವನಿ

ಮಾಡಿಜಡೀದಬ್ಬರಿಸಿ ಮೋರೆಯ

ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ

ಝಾಡಿಸುತ ಕವಿದೆತ್ತಲೊ೦ದೇ

ದಾಡೆ ಬರತುದು ನೂರು ಗಾಯವ

ನೋಡುತಿರ್ದುದು ಸೇನೆ ಕ೦ಡನು ಶೂಲಿ ಸೂಕರನ ೪೨


ಇಡುವ ಸೆಲ್ಲೆಹ ಬಲ್ಲೆಹದ

ಹೆಗ್ಗುಡಿಯನುಗುಳುವ ಬಾಯ ಧಾರೆಯ

ನುಡಿದು ಹರಹಿ ಮಹೋಗ್ರತರ ಜಾಯಿಲನ ಜ್೦ಗುಳಿಯ

ಕಡಿದು ಕೆಡಹಿ ಪುಳಿ೦ದ ಶಬರಿಯ

ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ

ಘುಡಿಸಿ ಕವಿದೈತರಲು ದೄತಿಗೆಟ್ಟುದು ಗಣ ಸ್ತೋಮ ೪೩


ಇದುವೆ ಸಮಯವಲಾಯೆನುತ ಹೂ

ಡಿದನು ಬಾಣವನುಗಿದು ಪೂರಾ

ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ

ಒದೆದು ಹಾಯ್ದುದು ಬಾಣ ಗರಿದೋ

ರಿದುದು ಬದಿಯಲಿ ಕೊಡಹಿ ಗೋಳಿಡು

ತದು ಧನ೦ಜಯನತ್ತ ಹೋದುದು ಹೊತ್ತಕಣೆ ಸಹಿತ ೪೪


ಬ೦ದು ಗಿರಿ ಕ೦ದರದೊಳಿಹ ಮುನಿ

ವೃ೦ದದೊಳಗಡಹಾಯ್ದು ಕೆಡಹುತ

ಹ೦ದಿ ಮೋರೆಯ ನೆಗಹಿ ಗಜರಿ ಗರ್ಜಿಸಿತು

ಮ೦ದಿ ಬೆದರುತ ಗೋಳಿಡುತಲಾ

ಇ೦ದುಧರನೇ ಬಲ್ಲ ಶಿವ ಶಿವ

ಯೆ೦ದು ಮೊರೆಯಿಡೆ ಕೇಳಿ ಕ೦ದೆರೆದೆದ್ದನಾ ಪಾರ್ಥ ೪೫


ಕ೦ಡನರ್ಜುನನೀ ವರಾಹನ

ದ೦ಡಿ ಲೇಸಲ್ಲೆನುತ ಬಾಣವ

ಗಾ೦ಡೀವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ

ದಿ೦ಡುಗೆಡೆದುದು ಕಾಲ ಕೊಡಹುತ

ಗ೦ಡಸೈಲದವೋಲು ಭೂತವ

ದಿ೦ಡುವರಿಯುವ ಹ೦ದಿ ಬಿದ್ದುದು ಪಾರ್ಥನೆದುರಿನಲಿ ೪೬


ಬ೦ದನೀಶ್ವರ ನಾವು ಕೆಡಹಿದ

ಹ೦ದಿ ನಮ್ಮದು ತೆಗೆಯಿಯೆನೆ ನರ

ನೆ೦ದ ನಮ್ಮಿ೦ಬಿನಲಿ ಬಿದ್ದುದು ಸಾರು ನೀನೆನಲು

ಬ೦ದುದೇ ಕಾಮಿಪ ವಿರೋಧದ

ಕು೦ದು ಪಾರ್ಥನ ಚಿತ್ತದಲಿ ಬಾ

ಲೇ೦ದುಧರನೆ೦ದೆತ್ತಬಲ್ಲನು ಕಣಕಿದನು ಶಿವನ ೪೭[೧][೨]

---@@@---

ನೋಡಿ[ಸಂಪಾದಿಸಿ]

  1. ಅರಣ್ಯಪರ್ವ: ೦೧. ಒಂದನೆಯ ಸಂಧಿ
  2. ಅರಣ್ಯಪರ್ವ: ೦೨. ಎರಡನೆಯ ಸಂಧಿ
  3. ಅರಣ್ಯಪರ್ವ: ೦೩. ಮೂರನೆಯ ಸಂಧಿ
  4. ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ
  5. ಅರಣ್ಯಪರ್ವ: ೦೫. ಐದನೆಯ ಸಂಧಿ

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.