ಕನ್ನಡಿಗರ ಕರ್ಮ ಕಥೆ/ಪ್ರಯಾಣ
೪ನೆಯ ಪ್ರಕರಣ
ಪ್ರಯಾಣ
ರಾಮರಾಜನು ಶೂರನಿದ್ದನು : ಆದರೆ ಅಪಮೃತ್ಯುವೆಂಬ ಶಬ್ದವನ್ನು, ಅಥವಾ ಅದನ್ನು ಸೂಚಿಸುವ ಬೇರೆ ಶಬ್ದಗಳನ್ನು ಯಾರ ಮುಖದಿಂದಾದರೂ ಕೇಳಿದ ಕೂಡಲೆ ಆತನ ಎದೆಯು ಧಸಕ್ಕೆನ್ನುತಿತ್ತು. ಆತನು ೨೫ ವರ್ಷದವನಾಗುವ ಮೊದಲೇ ಎರಡು ಯುದ್ಧಗಳಲ್ಲಿ ಪರಾಕ್ರಮವನ್ನು ತೋರಿಸಿ, ಮೃತ್ಯುವಿನ ಅತ್ಯಂತ ಉಗ್ರಸ್ವರೂಪವನ್ನು ಕಣ್ಣುಮುಟ್ಟಿ ನೋಡಿದ್ದನು; ಆದರೆ ಯುದ್ಧದ ಹೊರತು ಉಳಿದ ಅಪಘಾತದ ಮೃತ್ಯುವಿನ ಹೆಸರನ್ನು ಕೇಳಿದ ಕೂಡಲೆ ಆತನ ಸೊಂಡೆಯು ಒಣಗುತ್ತಿತ್ತು. ಆತನು ಒಳ್ಳೆ ಮಹತ್ವಾಕಾಂಕ್ಷಿಯಿದ್ದನೆಂದು ಮೇಲೆ ಹೇಳಿದೆಯಷ್ಟೇ? ಆತನು ತನ್ನ ಆಯುಷ್ಯದಲ್ಲಿ ಎಷ್ಟೊಂದು ಯುದ್ಧಗಳನ್ನು ಮಾಡಬೇಕು, ಎಷ್ಟೊಂದು ದೊಡ್ಡ ದೊಡ್ಡ ಪದವಿಗಳನ್ನು ಸಂಪಾದಿಸುತ್ತ ಹೋಗಬೇಕು ಎಂಬದನ್ನು ಕುರಿತು ಕಲ್ಪಿಸಿದ್ದನೆಂಬದನ್ನು ಮನಸ್ಸಿನಲ್ಲಿ ತಂದರೆ, ಆತನು ಅಪಘಾತದ ಮರಣಕ್ಕೆ ಇಷ್ಟು ಯಾಕೆ ಹೆದರುತ್ತಿದ್ದನೆಂಬುವ ಬಗ್ಗೆ ಯಾರಿಗಾದರೂ ಆಶ್ಚರ್ಯವಾಗಬಹುದಾಗಿದೆ. ಆದರೆ ಹೀಗೆ ಆಶ್ಚರ್ಯಪಡುವ ಕಾರಣವಿಲ್ಲ. “ಒಳ್ಳೆಯ ಕುದುರೆಗೊಂದು ಗೋಮವೆಂ"ಬಂತೆ ಒಳ್ಳೆಯ ಜನರಲ್ಲಿ ಒಂದೊಂದು ಗೋಮವಿರುವದುಂಟು. ಅರ್ಜುನ ಕರ್ಣರೆಂಬ ಭಾರತೀಯ ಮಹಾಯೋಧರಲ್ಲಿಯೂ ಒಂದೊಂದು ಗೋಮವಿತ್ತೆಂಬದನ್ನು ವಾಚಕರು ನೆನಪಿನಲ್ಲಿ ತಂದುಕೊಳ್ಳಬೇಕು. ಜರಿದಂತೆ ಅರ್ಜುನನ ಪರಾಕ್ರಮವೂ; ಹೊಗಳಿದಂತೆ ಕರ್ಣನ ಪರಾಕ್ರಮವೂ ಹೆಚ್ಚುತ್ತಿದ್ದವೆಂಬುದನ್ನು ವಾಚಕರು ಅರಿತಿರಬಹುದು. ಇದರ ವಿರುದ್ಧ ಸ್ಥಿತಿಯೊದಗಿದಾಗ, ಅಂದರೆ ಅರ್ಜುನನನ್ನು ಹೊಗಳಿದಾಗ, ಕರ್ಣನನ್ನು ಬೊಗಳಿದಾಗ ಅವರವರ ಪರಾಕ್ರಮಗಳು ಕುಗ್ಗುತ್ತಿದ್ದವು. ಅದರಂತೆ ರಾಮರಾಜನಲ್ಲಿಯಾದರೂ ಅಪಮೃತ್ಯುವಿನ ಭಯದ ಖೋಡಿಚಾಳಿಯೊಂದು ಇತ್ತು. ಮೆಹರ್ಜಾನಳು ಅಂದಂತೆ, ಈಗ ತಾನು ಪುಷ್ಕರಣಿಯಲ್ಲಿ ಮುಳುಗಿ ಹೋದರೆ ತನ್ನ ಮಹತ್ವಾಕಾಂಕ್ಷೆಯೆಲ್ಲ ವ್ಯರ್ಥವಾಗುವದೆಂಬ ವಿಚಾರದಿಂದ ಆ ತರುಣವೀರನು ಭಯಭೀತನಾದನು : ಆದರೂ ಆತನು ಅದನ್ನೇನು ಹೊರಗೆ ತೋರಗೊಡದೆ ಮೆಹರ್ಜಾನಳನ್ನು ಕುರಿತು-
ರಾಮರಾಜ-ಶಾಬಾಸ್ ! ನಿನ್ನ ಇಚ್ಛೆಯು ವಿಲಕ್ಷಣವಾದದ್ದೆಂಬುದರಲ್ಲೇನೂ ಸಂಶಯವಿಲ್ಲ; ಆದರೆ ಅದು ಪೂರ್ಣವಾಗಲಿಕ್ಕೆ ದೊಡ್ಡದೊಂದು ಪ್ರತಿಬಂಧವಿರುತ್ತದಲ್ಲ ! ಆ ಪ್ರತಿಬಂಧವು ಹ್ಯಾಗೆ ದೂರವಾಗಬೇಕು ?
ಮೆಹರ್ಜಾನ-ಅದೇನು ಪ್ರತಿಬಂಧ ?
ರಾಮರಾಜ-ಪ್ರತಿಬಂಧವಿಷ್ಟೆ ನನಗೆ ಚೆನ್ನಾಗಿ ಈಜಲಿಕ್ಕೆ ಬರುತ್ತದೆ. ಇದಲ್ಲದೆ ದುರ್ಯೋಧನನ ಹಾಗೆ ನನಗೆ ಜಲಸ್ತಂಭನ ವಿದ್ಯೆಯು ಬರುವುದು. ಪಾತಾಳದವರೆಗೆ ಮುಳುಗಿದರೂ ನಾನು ತಿರುಗಿ ಮೇಲಕ್ಕೆ ಬರುವೆನಲ್ಲದೆ, ನಿನ್ನನ್ನು ಸಹ ಮುಳುಗಗೊಡದೆ ಮೇಲಕ್ಕೆ ತರುವೆನು ! ಮೆಹರ್, ಹೀಗೆ ನಿನ್ನನ್ನು ಕಳಕೊಳ್ಳಬೇಕೆಂದು ನಾನು ಈ ಮೊದಲೆ ಹುಲಿಯ ಬಾಯೊಳಗಿಂದ ನಿನ್ನನ್ನು ಬಿಡಿಸಿಕೊಂಡು ಬಂದಿರುವೇನೋ ಏನು ?
ಇದನ್ನು ಕೇಳಿ ಸರಳ ಹೃದಯದ ಮೆಹರ್ಜಾನಳೂ ಮನಃಪೂರ್ವಕವಾಗಿ ನಕ್ಕಳು. ಆಕೆಯು ಪ್ರೇಮದಿಂದ ರಾಮರಾಜನನ್ನು ಕುರಿತು-
ಮೆಹರ್ಜಾನ-ಒಮ್ಮೆ ನನ್ನ ಜೀವವನ್ನು ಬದುಕಿಸಿದುದಕ್ಕಾಗಿ ನನ್ನ ದೇಹವನ್ನೇ ತಮಗೆ ಅರ್ಪಿಸಿರುವೆನು. ಇನ್ನೊಮ್ಮೆನನ್ನ ಜೀವವನ್ನು ಬದುಕಿಸಿದರೆ ತಮಗೆ ಕೊಡುವದಕ್ಕಾಗಿ ನನ್ನ ಬಳಿಯಲ್ಲಿ ಏನು ಇದೆ ?
ರಾಮರಾಜ-ಏನೂ ಇಲ್ಲದಿದ್ದರೆ ಇಲ್ಲ; ನನ್ನಿಂದ ಏನಾದರೂ ಅಪರಾಧವಾದರೆ ಅದನ್ನು ಕ್ಷಮಿಸಲಿಕ್ಕೂ, ನನಗೇನಾದರೂ ಪ್ರಾಣಸಂಕಟ ಒದಗಿ ಬಂದಾಗ, ಶಕ್ಯವಿದ್ದರೆ ನನ್ನನ್ನು ಬದುಕಿಸಲಿಕ್ಕೂ ನಿನಗೆ ಬರುವದಿಲ್ಲೇನು ? ಅಷ್ಟು ಮಾಡಿದರೆ ಸಾಕು.
ಮೆಹರ್ಜಾನ-(ಗಾಂಭೀರ್‍ಯದಿಂದ) ಸರಿ, ಸರಿ, ಇದೊಳ್ಳೆಯ ಮಾತು. ತಾವು ತಪ್ಪು ಮಾಡುವುದೂ ಬೇಡ, ನಾನು ಕ್ಷಮಿಸುವುದೂ ಬೇಡ : ಅದರಂತೆ ತಾವು ಪ್ರಾಣಸಂಕಟಕ್ಕೆ ಗುರಿಯಾಗುವದೂ ಬೇಡ. ನಾನೂ ಬದುಕಿಸುವುದೂ ಬೇಡ. ಸಾಕು, ಇನ್ನು ಈ ಮಾತುಗಳನ್ನೇ ಮರೆತು ಬಿಡೋಣ !
ರಾಮರಾಜ-ಹಾಗೇ ಹಾಗಲಿ! ಮೆಹರ್, ನಾನು ಬೆಳಗಾದ ಕೂಡಲೇ ವಿಜಯನಗರಕ್ಕೆ ಹೋಗಬೇಕಾಗಿದೆ ; ಹೀಗೆ ಎಷ್ಟು ಹೊತ್ತು ನೌಕೆಯಲ್ಲಿ ಕುಳಿತುಕೊಳ್ಳಬೇಕೆನ್ನುತ್ತೀ ಮೆಹರ್ಜಾನ-ಏನು ? ಬೆಳಗಾದ ಕೂಡಲೇ ಹೋಗುವಿರಾ ? ಎಂಟು ದಿವಸ ದರ್ಶನವಿಲ್ಲದಿರುವಾಗ ಒಂದೆರಡು ದಿನವಾದರೂ ತಾವು ಇಲ್ಲಿ ಇರದಿದ್ದರೆ ನನಗೆ ಸಮಾಧಾನವಾಗಲಾರದು. ನಾನಂತು ನಾಳೆ ಹೋರಗೊಡುವುದಿಲ್ಲ.
ರಾಮರಾಜ-ಪ್ರಿಯೇ, ಮೆಹರ್, ಕೃಷ್ಣದೇವರಾಯರು ನನ್ನನ್ನು ಯಾವಾಗ ಕರಿಸಿಯಾರು ಯಾವಾಗ ಕರಸಲಿಕ್ಕಿಲ್ಲೆಂಬುದರ ನಿಯಮ ಇಲ್ಲೆಂದು ನಾನು ಆಗಲೇ ನಿನಗೆ ಹೇಳಲಿಲ್ಲವೇ ?
ಮೆಹರ್ಜಾನ-ಹಾಗಿದ್ದರೆ ನನ್ನನ್ನು ಅಲ್ಲಿಗೆ ಕರಕೊಂಡು ಹೋಗಿ ಬಿಡಿರಿ; ಸುಮ್ಮನೆ ಎಡತಾಕುವದೇಕೆ ? ಅಲ್ಲಾವುದ್ದಿನ ಬಾದಶಹನು ಉತ್ತರ ಹಿಂದುಸ್ಥಾನದಲ್ಲಿ ರಜಪೂತ ಕನ್ನಿಕೆಯನ್ನುತನ್ನ ಪಟ್ಟ ರಾಣಿಯಾಗಿ ಮಾಡಿಕೊಂಡಂತೆ, ತಾವು ನನ್ನನ್ನು ಪಟ್ಟರಾಣಿಯಾಗಿ ಮಾಡಿಕೊಂಡಿರುವಿರಷ್ಟೆ ?
ರಾಮರಾಜ-ಹೋ ಹೋ ! ಮಾಡಿಕೊಂಡಿರುವೆನು. ಅದರಲ್ಲಿ ಸಂಶಯವೇನು ? ಆದರೆ ಕೃಷ್ಣದೇವರಾಯರ ಮನಸ್ಸು ನೋಡಿ ಅವರ ಒಪ್ಪಿಗೆಯನ್ನು ಪಡೆದ ಬಳಿಕ ಅದನ್ನು ಪ್ರಸಿದ್ದಗೊಳಿಸಬೇಕಾಗಿದೆ. ಅಲ್ಲಿಯವರೆಗೆ ಪ್ರಸಿದ್ಧಮಾಡಿ ಪ್ರಯೋಜನವೇನು ?
ಸಂಭಾಷಣದ ಈ ವಿಷಯವು ರಾಮರಾಜನಿಗೆ ತೀರ ಅಪ್ರಿಯವಾಗಿದ್ದಂತೆ ತೋರಿತು. ಆತನು ತನ್ನ ಮಾತು ಮುಗಿದ ಕೂಡಲೆ ಮೆಹರ್ಜಾನಳನ್ನು ಕುರಿತು - ಮೆಹರ್, ಇಂದಿನ ರಾತ್ರಿಯನ್ನು ಇಲ್ಲಿ ನೌಕೆಯಲ್ಲಿಯೇ ಕುಳಿತು ಕಳೆಯಬೇಕೆಂದು ನಿನ್ನಮನಸ್ಸಿನಲ್ಲಿದ್ದರೆ, ಅದಕ್ಕೆ ನನ್ನ ಪ್ರತಿಬಂಧವಿಲ್ಲ, ಆದರೆ ಆಗಲೆ ಹಾಡಿದಂತೆ ಒಂದು ಸುಂದರ ಚೀಸನ್ನಾದರೂ ಹಾಡು ; ಇಲ್ಲವೆ ನಾನು ನಿನಗೆ ಕಲಿಸಿರುವ ಆ ಅಷ್ಟಪದಿಯನ್ನಾದರೂ ಅನ್ನು, ಅಥವಾ ನಿಮ್ಮ ಪಾರಸೀ ಭಾಷೆಯೊಳಗಿನ ಒಂದು ಗಜಲವನ್ನು ಅಂದರೂ ಚಿಂತೆಯಿಲ್ಲ : ಆದರೆ ನಮ್ಮ ಅಷ್ಟಪದಿಯಲ್ಲಿರುವ ಸ್ವಾರಸ್ಯವೇನೂ ನಿಮ್ಮ ಗದ್ದಲದಲ್ಲಿ ಬರಲಾರದು, ಅನ್ನಲು ಮೆಹರ್ಜಾನಳೂ ನಕ್ಕು-ಅವರವರದು ಅವರವರಿಗೆ ಸ್ವಾರಸ್ಯವೆಂಬ ಮಾತು ಎಲ್ಲ ಕಡೆಗೂ ನಿಜವಾಗುತ್ತದೆಂದು ಹೇಳಲಿಕ್ಕಾಗುವುದಿಲ್ಲ. ಎಂದು ನುಡಿದು, ಪತಿಯನ್ನು ಆಲಿಂಗಿಸಿ, ನೀವು ಕಲಿಸಿದ್ದಲ್ಲದೆ ನಾನೇ ಕಲಿತದ್ದೊಂದು ಅಷ್ಟಪದಿಯನ್ನು ಅನ್ನುವೆನು, ಎಂದು ಹೇಳಿ ಕೆಳಗೆ ಬರೆದ ಅಷ್ಟಪದಿಯನ್ನು ಅಂದಳು.
- ನಿಂದತಿ ಚಂದನಾಮಿಂದುಕಿರಣಮನುವಿಂದತಿ ಸ್ವದಮಧಿರಮ್ ||
- ವ್ಯಾಲನಿಲಯಮಿಲನೇನ ಗರಲಮಿವ ಕಲಯತಿ ಮಲಯ ಸಮೀರಮ್|
- ಮಾಧವಮನಸಿಜ ವಿಶಿಖಭಯಾದಿವ ಭಾವನಯಾ ತ್ವಯಿ ಲೀನಾ||
- ಸಾ ವಿರಹೆ ತವ ದೀನಾ ||ಧ್ಯ||
ಮೆಹರ್ಜಾನಳ ಈ ಅಷ್ಟಪದಿಯ ಮಂಜುಳ ಗಾನಧ್ವನಿಯು ಕುಂಜವನದಲ್ಲಿ ಪುನಃ ತುಂಬಿಹೋಯಿತು ; ಆದರೆ ಅಪಘಾತಕ್ಕೆ ಹೆದರಿದ್ದ ರಾಮರಾಜನಿಗೆ ಅದರಿಂದ ಸುಖವಾಗಲಿಲ್ಲ. ತಾನು ಎಲ್ಲಿ ನೀರಲ್ಲಿ ಮುಳುಗಿ ಸತ್ತೇನೋ ಎಂಬ ಭಯದಿಂದ ಆತನು ಪುಷ್ಕರಣಿಯ ಮಧ್ಯದಲ್ಲಿ ನಿಲ್ಲಲಾರದೆ ಧ್ವಜಸ್ತಂಭಕ್ಕೆ ಕಟ್ಟಿದ ನೌಕೆಯನ್ನು ಬಿಚ್ಚಿ ಅದನ್ನು ದಂಡೆಯ ಕಡೆಗೆ ಸಾಗಿಸಿದನು. ಗಾನಲೋಲುಪಳಾದ ಮೆಹರ್ಜಾನಳೀಗೆ ಇದು ಗೊತ್ತಾಗಲಿಲ್ಲ. ತಾನು ಹಿಡಿದಿದ್ದ ಹಸ್ತವನ್ನು ರಾಮರಾಜನು ಯಾವಾಗ ಬಿಡಿಸಿಕೊಂಡನೆಂಬುದರ ಸ್ಮರಣವೂ ಆಕೆಗೆ ಉಳಿಯಲಿಲ್ಲ. ನೌಕೆಯು ದಂಡೆಗೆ ಹತ್ತಿದ ಕೂಡಲೆ ರಾಮರಾಜನು-ಪ್ರಿಯೇ, ಮೆಹರ್, ಇನ್ನು ಇಲ್ಲಿಯ ಶೀತ ಹವೆಯು ನಿನಗೆ ತಡೆಯಲಿಲ್ಲ ನಡೆ, ಮಂದಿರಕ್ಕೆ ಹೋಗೋಣ, ಎಂದು ನುಡಿದು, ಒಂದು ಸಣ್ಣ ಹುಡಿಗೆಯನ್ನು ಒತ್ತಾಯದಿಂದ ಕೈ ಹಿಡಿದು ಕರೆದೊಯ್ಯುವಂತೆ ಮಂದಿರದ ಕಡೆಗೆ ಆಕೆಯನ್ನು ಕರಕೊಂಡು ನಡೆದನು. ಕುಂಜವನವನ್ನು ಬಿಟ್ಟು ಬಂದು. ಮಂದಿರದ ಪಾವಟಗೆಗಳನ್ನು ಹತ್ತುವಾಗ ಮೆಹರ್ಜಾನಳು ಕಣ್ಣೀರು ಸುರಿಸುತ್ತ ರಾಮರಾಜನನ್ನು ಬಿಗಿಯಾಗಿ ಅಪ್ಪಿಕೊಂಡು - ಪ್ರಿಯಕರಾ, ಯಾವ ಕಾರಣದಿಂದಲೋ ಅದನ್ನು ನಾನು ಹೇಳಲಾರೆನು ; ಆದರೆ ಈ ಕುಂಜವನದಿಂದ ಹಾಗು ಪುಷ್ಕರಣಿಯಿಂದ ಒದಗಿದ ಇಂದಿನಂಥ ಸುಖವು ಇನ್ನು ತಿರುಗಿ ನನಗೆ ಲಭಿಸಲಾರದೆಂಬ ಹಾಗೆ ತೋರುತ್ತದೆ ; ಆದ್ದರಿಂದ ನಾವಿಬ್ಬರು ದಂಡೆಯ ಕಡೆಗೆ ಬರುತ್ತಿದ್ದಾಗ ಪುಷ್ಕರಣಿಯಲ್ಲಿ ಮುಳುಗಿ ಹೋಗಿದ್ದರೆ ಬಹಳ ನೆಟ್ಟಗಾಗುತ್ತಿತ್ತೆಂದು ನನ್ನ ಮನಸ್ಸಿನಲ್ಲಿ ಕಟಿಯುತ್ತಿರುವದು, ಎಂದಳು. ಅದನ್ನು ಕೇಳಿದ ಕೂಡಲೆ ರಾಮರಾಜನ ಹೃದಯವು ಮತ್ತೆ ಕಂಪಿಸಹತ್ತಿತು, ಆತನ ಮನಸ್ಸಿಗೆ ಮೊದಲಿನಂತೆ ಹ್ಯಾಗೆ ಹ್ಯಾಗೋ ಆಗಹತ್ತಿತು. ತಾನು ಪುಷ್ಕರಣಿಯಿಂದ ಹೊರಟು ಮಂದಿರಕ್ಕೆ ಬಂದು ಮುಟ್ಟಿದ್ದನಷ್ಟೇ, ಎಂದು ಆತನು ಸ್ಮರಣಮಾಡಿಕೊಂಡನು. ಈ ಮಾತಿಗೆ ನಂಬಿಗೆಯನ್ನು ಮಾಡಿಕೊಳ್ಳುವದಕ್ಕಾಗಿಯೋ ಅನ್ನುವಂತೆ ಆತನು ಸುತ್ತುಮುತ್ತಲು ನೋಡಿ, ಕಾಲುಬುಡದಲ್ಲಿಯ ಪಾವಟಿಗೆಗಳನ್ನು ನೋಡಿದನು. ಮನಸ್ಸಿನ ನಂಬಿಗೆಯಾದ ಮೇಲೆ ಆತನು ಮೆಹರ್ಜಾನಳನ್ನು ಕುರಿತು-ನೀನು ಸಂಜೆಯಿಂದ ಇಷ್ಟು ಹೊತ್ತಿನವರೆಗೆ ಕುಂಜವನದಲ್ಲಿಯೂ, ಪುಷ್ಕರಣೆಯಲ್ಲಿಯೂ ಕಾಲಹರಣ ಮಾಡಿದ್ದರಿಂದ ನಿನ್ನ ಚಿತ್ತಕ್ಕೆ ಭ್ರಮೆಯಾದಂತೆ ತೋರುತ್ತದೆ. ಆದ್ದರಿಂದ ಶಯನಗೃಹಕ್ಕೆ ಹೋಗಿ ಸ್ವಸ್ಥವಾಗಿ ಮಲಗಿಕೊಳ್ಳಳು ನಡೆ, ಎಂದು ಹೇಳಿ ಆಕೆಯನ್ನು ಶಯನಗೃಹಕ್ಕೆ ಕರೆದೊಯ್ದು ಪಲ್ಲಂಗದ ಮೇಲೆ ಮಲಗಿಸಿ, ತಾನು ತಲೆದಿಂಬಿಗೆ ಕುಳಿತುಕೊಂಡು ಆಕೆಯ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡನು. ತನಗೆ ನಿದ್ದೆ ಹತ್ತಿದ ಬಳಿಕ ರಾಮರಾಜನು ಹೇಳದೆ ಕೇಳದೆ ವಿಜಯನಗರಕ್ಕೆ ಹೋಗಬಹುದೆಂದು ಶಂಕಿಸಿ, ಮೆಹರ್ಜಾನಳು ರಾಮರಾಜನ ಬಲಗೈಯನ್ನು ತನ್ನ ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡಳು, ನಿದ್ದೆ ಮಾಡಬಾರದೆಂಬ ನಿಶ್ವಯದಿಂದ ಆಕೆಯು ಕಣ್ಣು ತೆರೆದು ಮಲಗಿಕೊಂಡಳು ; ಆದರೆ ಆ ವಿಶಾಲಾಕ್ಷಿಯ ಮೇಲೆ ಸ್ವಲ್ಪಹೊತ್ತಿನಲ್ಲಿಯೇ ನಿದ್ದೆಯ ಅಮಲು ಕೂತು, ಆಕೆಯು ಕಣ್ಣುಗಳನ್ನು ಮುಚ್ಚಿ ಗಡದ್ದು ನಿದ್ದೆ ಮಾಡಹತ್ತಿದಳು. ಇದನ್ನು ನೋಡಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ಆತನು ಬೇಗನೆ ವಿಜಯನಗರಕ್ಕೆ ಹೋಗಬೇಕಾಗಿತ್ತು; ಆದ್ದರಿಂದ ಆತನು ಮೆಲ್ಲನೆ ತನ್ನ ಕೈಗಳನ್ನು ಬಿಡಿಸಿಕೊಂಡು, ಮೆಹರ್ಜಾನಳು ಎಲ್ಲಿ ಎಚ್ಚರಿಯುವಳೋ, ಎಂಬ ಭಯದಿಂದ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡನು. ಆಮೇಲೆ ತನ್ನ ತೊಡೆಯನ್ನು ಮೆಲ್ಲನೆ ಒಂದೊಂದೇ ಬೆರಳು ಹಿಂದಕ್ಕೆ ಸರಿಸಿಕೊಳ್ಳುತ್ತ ಸ್ವಲ್ಪ ಹೊತ್ತು ಸುಮ್ಮನೆ ಕೂಡುತ್ತ ಕಡೆಗೊಮ್ಮೆ ಮೆಹರ್ಜಾನಳ ತಲೆಯನ್ನು ಬಹು ಸೂಕ್ಷ್ಮವಾಗಿ ಎತ್ತಿ ತಲೆದಿಂಬಿನ ಮೇಲೆ ಇಟ್ಟು ತನ್ನ ತೊಡೆಯನ್ನು ತಕ್ಕೊಂಡನು. ಮೆಹರ್ಜಾನಳಿಗೆ ಎಚ್ಚರವಾಗದಿರುವದನ್ನು ನೋಡಿ ಆತನಿಗೆ ಬಹಳ ಸಮಾಧಾನವಾಯಿತು. ಆತನು ಮತ್ತೆ ಕೆಲವು ಹೊತ್ತು ಸುಮ್ಮನೆ ಕುಳಿತುಕೊಂಡು ಮೆಹರ್ಜಾನಳಿಗೆ ಎಚ್ಚರವಾಗದಿರುವುದನ್ನು ಮನಗಂಡನು. ಆಮೇಲೆ ಆತನು ಮಂಚವನ್ನು ಇಳಿದು ಶಯನಗೃಹದಿಂದ ಹೊರಗೆ ಹೊರಟು ಪ್ರಯಾಣವನ್ನು ಬೆಳೆಸಿದವನಂತೆ ಮಾರ್ಜೀನೆಯ ಬಳಿಗೆ ಹೋದನು.
ಮೆಹರ್ಜಾನಳ ಮೇಲೆ ತುಂಬಾ ವಾತ್ಸಲ್ಯವುಳ್ಳ ಮಾರ್ಜೀನೆಯು ಆಗ ಮತ್ತೊಂದು ಕೋಣೆಯಲ್ಲಿ ಏನೋ ಆಲೋಚಿಸುತ್ತ, ಕಣ್ಣಿಗೆ ಕಣ್ಣು ಹಚ್ಚದೆ ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತ ಮಲಗಿಕೊಂಡಿದ್ದಳು. ರಾಮರಾಜನು ಅಕಸ್ಮಾತ್ತಾಗಿ ತನ್ನ ಬಳಿಗೆ ಬರುವದನ್ನು ನೋಡಿ ಆಕೆಯು ಚಟ್ಟನೆ ಎದ್ದು ನಿಂತು-ಇದೇನು ? ಮಹಾರಾಜರು ಇಷ್ಟರೊಳಗೆ ಮೆಹರ್ಜಾನಳ ಬಳಿಯಿಂದ ಹೊರಟು ಯಾವ ಕಡೆಗೆ ಹೋಗುವದು ! ಮೆಹರ್ಜಾನಳು ಮಹಾರಾಜರನ್ನು ಕಳಿಸಲಿಕ್ಕೆ ಬಾರದಿರುವದನ್ನು ನೋಡಿದರೆ, ಆಕೆ ನಿದ್ದೆ ಹತ್ತಿ ಮಲಗಿಕೊಂಡ ಹಾಗೆ ತೋರುತ್ತದೆ. ತರುಣಿಯನ್ನು ವಂಚಿಸಿ ಹೀಗೆ ಹೋಗುವದು ಪುರುಷರಿಗೆ ಸಲ್ಲದು. ಮಹಾ ರಾಜರೇ, ಮೆಹರ್ಜಾನಳು ಅಭಿಮಾನ ಸ್ವಭಾವದವಳು. ಹೀಗೆ ತಾವು ಮೇಲೆ ಮೇಲೆ ಆಕೆಯನ್ನು ವಂಚಿಸಿ ಹೋಗುವದರಿಂದ ವಿಕಲ್ಪವನ್ನು ಎಣಿಸಿಯಾಳು, ಕಾರ್ಯ ನಿಮಿತ್ತವಾಗಿ ನಾಳೆ ಹೋಗಲೇ ಬೇಕಾಗಿರುವದೆಂದು ನೀವು ಹೇಳಿದರೆ, ಆಕೆಯು ಬೇಡೆನ್ನುವಳೋ ? ಮೆಹರ್ಜಾನಳು ಇಂದಿನ ಇಡಿಯ ರಾತ್ರಿ ಕಣ್ಣಿಗೆ ಕಣ್ಣು ಹಚ್ಚಿರುವುದಿಲ್ಲ, ತಮ್ಮ ಎಂಟು ದಿನದ ವಿಯೋಗದಿಂದ ಆಕೆ ಒಂದೇ ಸಮನೆ ಚಡಪಡಿಸುತ್ತಿರುವಾಗ, ಇಂದು ತಮ್ಮ ದರ್ಶನವಾಗಿ ಆಕೆಗೆ ಸ್ವಲ್ಪ ಸಮಾಧಾನವಾಗಿದೆ. ಇಂಥ ಸ್ಥಿತಿಯಲ್ಲಿ ತಾವು ಗಾಯದ ಮೇಲೆ ಬರೆಕೊಟ್ಟಂತೆ ಮಾಡಿ ಆಕೆಯನ್ನು ವ್ಯಥೆಪಡಿಸಬಾರದು. ಆಕೆಯ ಕೋಮಲ ಹೃದಯವನ್ನು ನಾನು ಪೂರಾ ಬಲ್ಲೆನು. ಆಕೆಯು ಬಹು ಸುಜನೆಯು, ಲಜ್ಜಾಶೀಲಳು. ಒಂದು ಗುಪ್ತವಾದ ಸಂಗತಿಯನ್ನು ನಿಮ್ಮ ಮುಂದೆ ಹೇಳಬೇಕು ಎಂದು ಈಗ ಒಂದು ತಿಂಗಳಿಂದ ಆತುರಪಟ್ಟು, ಕಡೆಗೆ ಲಜ್ಜೆಯ ಮೂಲಕ ಅದನ್ನು ಹೇಳಲಾರದೆ ಸುಮ್ಮನೆ ಇರುತ್ತ ಬಂದಿರುವಳು. ಆ ಗುಪ್ತ ಸಂಗತಿಯನ್ನು ಆಕೆಯ ಮುಖದಿಂದ ಕೇಳಿದರೆ ನಿಮಗೆ ಬಹಳ ಆನಂದವಾದೀತು ; ಆದ್ದರಿಂದ ತಾವು ವಿಜಯನಗರಕ್ಕೆ ಇಷ್ಟು ಅವಸರ ಮಾಡದೆ, ಬೆಳಗಾಗುವತನಕ ಮೆಹರ್ಜಾನಳ ಬಳಿಯಲ್ಲಿದ್ದು, ಸ್ವಲ್ಪ ವಿಶ್ರಮಿಸಿರಿ ಆಮೇಲೆ ಆಕೆಯ ಅನುಮತಿಯಿಂದ ಬೇಕಾದಲ್ಲಿಗೆ ಹೋಗಬಹುದು, ಎಂದು ಹೇಳಿದಳೂ. ಇತ್ತ ರಾಮರಾಜನು ತನ್ನೊಡನೆ ಸರಳತನದಿಂದ ನಡಕೊಳ್ಳದೆ ತನ್ನನ್ನು ಮೋಸಗೊಳಿಸುವನೆಂಬುದು ಪ್ರೇಮದ ಮೂರ್ತಿಯಾದ ಮೆಹರ್ಜಾನಳಿಗೆ ಅಷ್ಟು ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಮಾರ್ಜೀನೆಯು ತನ್ನ ತೀಕ್ಷ್ಣ ಬುದ್ದಿಯ ಯೋಗದಿಂದ ಅದನ್ನು ಸಷ್ಟವಾಗಿ ಆರಿತುಕೊಂಡಿದ್ದಳು ; ಆದ್ದರಿಂದಲೇ ಆಕೆಯು ಹೀಗೆ ಸ್ಪಷ್ಟವಾಗಿ ಮಾತಾಡಿದಳು!
ರಾಮರಾಜನು ಮಾರ್ಜೀನೆಯ ಮಾತುಗಳನ್ನು ಕೇಳಿ ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಆಕೆಯನ್ನು ಕುರಿತು-ಮಾರ್ಜೀನೇ, ನೀನು ವಿಲಕ್ಷಣ ಮನುಷ್ಯಳು ಕಾಣುತ್ತೀ, ನನಗೆ ಮೆಹರ್ಜಾನಳು ಹೊರಗಿನವಳೇ ? ಪತಿ ಪತ್ನಿಯರ ಸಂಬಂಧವು ಬಿಡುವಹಾಗಿದೆಯೇ ? ಅಂದ ಬಳಿಕ ನಾನು ಮೆಹರ್ಜಾನಳನ್ನು ಮೋಸಗೊಳಿಸಿದರೆ, ಅಥವಾ ಮೆಹೆರ್ಜಾನಳು ನನ್ನನ್ನು ಮೋಸಗೊಳಿಸಿದರೆ, ವಿಕಲ್ಪವನ್ನೆಣಿಸಬಹುದೇ ? ಅತಿ ವಾತ್ಸಲ್ಯದ ಮೂಲಕ ಮೆಹರ್ಜಾನಳ ಮಾತನ್ನು ಮೀರುವದು ನನ್ನಿಂದಾಗುವದಿಲ್ಲ. ಕೆಲಸವು ಬಹು ಸೂಕ್ಷ್ಮವಿರುವದರಿಂದ ಮೆಹರ್ಜಾನಳಿಗೆ ಹೇಳದೆ ನಾನು ಈಗ ವಿಜಯನಗರಕ್ಕೆ ಹೊರಟಿರುವೆನು. ಅದಿರಲಿ, ನೀನು ಈ ಗುಪ್ತವಾದ ಸಂಗತಿಯೆಂದು ಹೇಳದೆಯಲ್ಲ, ಅದು ಯಾವದೆಂಬುದನ್ನು ನೀನು ಈಗ ಹೇಳಲೇಬೇಕು. ಆ ಸಂಗತಿಯನ್ನು ಕೇಳಿ ನನ್ನ ಮನಸ್ಸಿಗೆ ಆನಂದವಾದ ಪಕ್ಷದಲ್ಲಿ ನಾನು ನಾಳಿನ ದಿನ ಇಲ್ಲಿಯೇ ಮೆಹರ್ಜಾನಳ ಬಳಿಯಲ್ಲಿಯೇ ಇರುವೆನು. ಹುಂ, ಹೇಳು ಗುಪ್ತ ಸಂಗತಿ ಯಾವದು ಹೇಳು.
ತಾನು ಹೇಳುವ ಗುಪ್ತಮಾತನ್ನು ಕೇಳಿ ರಾಮರಾಜನು ಸಂತೋಷ ಪಟ್ಟು ಈಗಲೇ ವಿಜಯನಗರಕ್ಕೆ ಹೋಗುವದನ್ನು ರಹಿತ ಮಾಡುವನೆಂದು ಮಾರ್ಜೀನೆಯು ತಿಳಿದಿದ್ದಳು. ಆಕೆಯು ರಾಮರಾಜನನ್ನು ಕುರಿತು ಲಜ್ಜೆಯಿಂದ-ಮಹಾರಾಜ, ಮೆಹರ್ಜಾನಳು ಈಗ ನಾಲ್ಕು ತಿಂಗಳು ಗರ್ಭಿಣಿಯಿದ್ದಾಳೆ. ಆಕೆಗೆ ಒಂದೊಂದೇ ಬಯಕೆಗಳು ಆಗ ಹತ್ತಿರುವವು. ಆಕೆಯು ಈ ವರ್ತಮಾನವನ್ನು ತಾನೇ ಬಾಯಿಬಿಟ್ಟು ನಿಮ್ಮ ಮುಂದೆ ಹೇಳಲಾರದೆ, ನನಗೆ ಹೇಳೆಂದು ಹೇಳಿದ್ದಳು; ಆದರೆ ಒತ್ತಾಯದಿಂದ ಆಕೆಯ ಮುಖದಿಂದ ನೀವು ಕೇಳುವದರಿಂದ ನಿಮಗೆ ಬಹಳ ಸಂತೋಷವಾದೀತು, ಎಂದು ಹೇಳಿ ರಾಮರಾಜನ ಭಾವವನ್ನು ತಿಳಿದುಕೊಳ್ಳುವದಕ್ಕಾಗಿ ಆತನ ಮುಖವನ್ನು ನೋಡಹತ್ತಿದಳು ; ಆದರೆ ಈ ಸುದ್ದಿಯನ್ನು ಕೇಳಿ ರಾಮರಾಜನಿಗೆ ಸಂತೋಷವಾಗುವುದರ ಬದಲು ಖೇದವಾದಂತೆ ತೋರಿತು ! ಆತನು ಉಪಚಾರಕ್ಕಾದರೂ ಒಂದು ಒಳ್ಳೆಯ ಮಾತಾಡದೆ, ಅರಗಿನ ಮುದ್ರೆ ಹಾಕಿದ ಎರಡು ಚೀಲಗಳನ್ನು ಮಾರ್ಜೀನೆಯ ಕೈಯಲ್ಲಿ ಕೊಟ್ಟು, ಇವನ್ನು ಮೆಹರ್ಜಾನಳಿಗೆ ಕೊಡೆಂದು ಹೇಳಿ ಮಂದಿರದಿಂದ ಹೊರಬಿದ್ದನು. ಆತನಿಗೆ ಮಂತ್ರಿ ಪದವು ದೊರೆಯುವದಕ್ಕೂ, ಆತನು ಕೃಷ್ಣದೇವರಾಯರ ಅಳಿಯನಾಗುವದಕ್ಕೂ, ಮೆಹೆರ್ಜಾನಳೂ ದೊಡ್ಡ ವಿಘ್ನವಾದದ್ದರಿಂದ, ಮೆಹರ್ಜಾನಳೊಡನೆ ಆಕೆಯ ಗರ್ಭವೂ ಆತನಿಗೆ ಮತ್ತಷ್ಟು ವಿಘ್ನವಾಗಿ, ಅದು ಆತನ ಅಸಂತೋಷಕ್ಕೆ ಕಾರಣವಾಯಿತು. ಅದರಿಂದ ಕೇವಲ ಮಹತ್ವಾಕಾಂಕ್ಷೆಯಿಂದ ಅಂಧನಾದ ಆತನು ಒಬ್ಬ ಅನಾಥ ಅಬಲೆಗೆ ಕೊಟ್ಟ ವಚನವನ್ನು ಮರೆತು ಕೃತಘ್ನತೆಯಿಂದ ಕುದುರೆಯನ್ನು ಹತ್ತಿದನು. ಆಗ ಅತ್ತ ಮೆಹರ್ಜಾನಳನ್ನು ಕನಸಿನಲ್ಲಿ -ಮಹಾರಾಜರೇ, ಈ ದಿನ ನಾವಿಬ್ಬರೂ ಪುಷ್ಕರಣಿಯಲ್ಲಿ ಮುಳುಗಿ ಹೋದರೆ, ನೆಟ್ಟಗಾದೀತು. ಎಂದು ಕನಕರಿಸುತ್ತಿರಲು, ಇತ್ತ ರಾಮರಾಜನು ಅದೇ ಅಪಘಾತದ ನೆನಪಿನಿಂದ ಭಯಗೊಳುತ್ತ ಕುದುರೆಯನ್ನು ಮುಂದಕ್ಕೆ ನೂಕಿದನು.
ಮೆಹರ್ಜಾನಳೂ ಸ್ವಪ್ನದಲ್ಲಿ ಹಲವು ಸಂಗತಿಗಳನ್ನು ನೋಡ ಹತ್ತಿದಳು. ಆಕೆ ಒಮ್ಮೆ ಕೈಗಳನ್ನು ಮೇಲಕ್ಕೆ ಏನೋ ತೋರಿಸುವಂತೆ ಮಾಡುವಳು. ಒಮ್ಮೆ ಏನೋ ಒಟಗುಟ್ಟುವಳು, ಒಮ್ಮೆ ಆಕೆಯ ತುಟಿಗಳಷ್ಟೇ ಅಲ್ಲಾಡುವವು. ಒಮ್ಮೆ ಆಕೆಯು ಅತ್ತಹಾಗೆ ಮಾಡುವಳು. ಒಮ್ಮೆ ನಗುವಳು. ಹೀಗಾಗುತ್ತಾಗುತ್ತ ಆಕೆಯ ಮುಖದಲ್ಲಿ ಭಯದ ಚಿಹ್ನವು ತೋರಹತ್ತಿತು. ಆಕೆಯು ಪಲ್ಲಂಗದ ತುದಿಯನ್ನು ಗಟ್ಟಿಯಾಗಿ ಹಿಡಿಯಹತ್ತಿದಳು. ಆಮೇಲೆ ಆಕೆಯು ಒಮ್ಮಿಂದೊಮ್ಮೆ ಚಿಟ್ಟಿ ಚಿಟ್ಟನೆ ಚೀರುತ್ತ ದೊಪ್ಪನೆ ಮಂಚದ ಕೆಳಗೆ ಕಡಕೊಂಡು ಬಿದ್ದಳು. ಆಕೆಗೆ ಚೀರಿದ್ದು ಮಾರ್ಜೀನೆಯ ಕಿವಿಗೆ ಬೀಳಲು, ಆಕೆಯು ಗಾಬರಿಯಾಗಿ ಮೆಹರ್ಜಾನಳ ಕೋಣೆಯೊಳಗೆ ಬಂದಳು. ಮಾರ್ಜೀನೆಯು ರಾಮರಾಜನನ್ನು ಅದೇ ಕಳಿಸಿ ಬರುತ್ತಿದ್ದಳು. ಆಕೆಯ ಪಲ್ಲಂಗದ ಕೆಳಗೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಮೆಹರ್ಜಾನಳನ್ನು ನೋಡಿ ವ್ಯಸನಪಟ್ಟು- "ಅಮ್ಮಾ, ಮೆಹರ್ಜಾನ ಹೀಗೆ ಯಾಕೆ ಮಾಡುವೆಯಮ್ಮಾ" ಎಂದು ಮೆಹರ್ಜಾನಳನ್ನು ಹೆಸರುಗೊಂಡು ಕರೆಯುತ್ತ ಮಮತೆಯಿಂದ ಉಪಚರಿಸಹತ್ತಿದಳು. ಆಕೆಯು, ಬಳಿಯಲ್ಲಿರುವ ತಂಬಿಗೆಯೊಳಗಿನ ನೀರನ್ನು ನೆತ್ತಿಗೆ ತಟ್ಟಿ ಕಣ್ಣಿಗೆ ಹಚ್ಚಿ ಮೆಹರ್ಜಾನಳನ್ನು ಎಚ್ಚರಗೊಳಿಸುತ್ತಿದ್ದಳು. ಅಷ್ಟರಲ್ಲಿ ಮೆಹೆರ್ಜಾನಳು ಮತ್ತೆ ಚಿಟ್ಟನೆ ಚೀರಿ "ಬೇಡಿರಿ, ಹೀಗೆ ನನ್ನನ್ನು ಕೊಲ್ಲ......" ಎಂದು ಒಟಗುಟ್ಟುತ್ತ ಮಾರ್ಜೀನೆಯನ್ನು ಕಸುವಿನಿಂದ ಅಪ್ಪಿಕೊಂಡಳು. ಸುಕುಮಾರಿಯಾದ ಮೆಹರ್ಜಾನಳಿಗೆ ಇಷ್ಟು ಕಸುವು ಎಲ್ಲಿಂದ ಬಂದಿರಬಹುದೆಂದು ಮಾರ್ಜೀನೆಗೆ ಆಶ್ಚರ್ಯವಾಯಿತು. ಆಕೆಯ ಮೆಹರ್ಜಾನಳನ್ನು ಒಂದೇಸಮನೆ ಹೆಸರುಗೊಂಡು ಕೂಗಿ ಎಚ್ಚರಗೊಳಿಸಿದ್ದಳು. ಮೆಹರ್ಜಾನಳ ಮೇಲೆ ಮಾರ್ಜೀನೆಯ ಪ್ರೀತಿಯು ಎಷ್ಟಿತೆಂಬುದನ್ನು ವಾಚಕರು ಬಲ್ಲರು. ಹೊಟ್ಟೆಯ ಮಗಳಂತೆ ಇದ್ದ ಮೆಹರ್ಜಾನಳು ಹೀಗೆ ಮಾಡುವದನ್ನು ನೋಡಿ ಮಾರ್ಜೀನೆಯು ಬಹು ದುಃಖಿತಳಾದಳು. ಆಕೆಯ ಕಣ್ಣೂಳಗಿಂದ ಒಂದೇಸಮನೆ ನೀರುಗಳು ಹೋಗಹತ್ತಿದವು, ಯಾವನೊಬ್ಬ ಸೇವಕನನ್ನು ಕರೆಯಬೇಕೆಂಬ ಎಚ್ಚರವು ಸಹ ಇಷ್ಟು ಹೊತ್ತಿನತನಕ ಆಕೆಗೆ ಆಗಿದ್ದಿಲ್ಲ, ಇನ್ನು ಮೆಹರ್ಜಾನಳನ್ನು ಹಾಗೆ ಎಚ್ಚರಗೊಳಿಸಬೇಕೆಂದು ತಿಳಿಯದಿದ್ದರಿಂದ ಆಕೆಯು ಗಟ್ಟಿಯಾಗಿ "ಧನಮಲ್ಲ, ಧನಮಲ್ಲ" ಎಂದು ಕೂಗಿದಳು. ಕೂಡಲೆ ಯಮದೂತನಂತೆ ಭಯಂಕರವಾಗಿ ತೋರುವ ಧನಮಲ್ಲನು ಎದುರಿಗೆ ಬಂದು ನಿಂತನು. ಆತನು ಮಾರ್ಜೀನೆಯನ್ನೂ, ಮೆಹರ್ಜಾನಳನ್ನೂ ನೋಡಿ, ಯಾಕೆ ಕರೆದೆಯೆಂದು ಮಾರ್ಜೀನೆಯನ್ನು ಸನ್ನೆಮಾಡಿ ಕೇಳಿದನು. ಆಗ ಮಾರ್ಜೀನೆಯು-ಯಾಕೆ ಕರೆದೆಯೆಂದು ಏನು ಕೇಳು ಕಣ್ಣಿಗೆ ಕಾಣುವದಿಲ್ಲವೇ ? ಹಿಡಿ, ಇವರನ್ನು ಎತ್ತಿ ಪಲ್ಲಂಗದ ಮೇಲೆ ಮಲಗಿಸೋಣ. ನಿದ್ದೆಯಲ್ಲೇನು ಹೆದರಿದರೋ, ಕೆಟ್ಟ ಕನಸು ಬಿದ್ದಿತೋ ಏನಾಯಿತೋ ಯಾರಿಗೆ ಗೊತ್ತು. ಒಂದೇ ಸಮನೆ ಚೀರುತ್ತಿರುವರು. ಆಗಿನಿಂದ ಎಷ್ಟು ಒದರಿದರೂ ಎಚ್ಚರವಾಗಲೊಲ್ಲರು. ಇನ್ನು ಇವರನ್ನು ಪಲ್ಲಂಗದ ಮೇಲೆ ಮಲಗಿಸಿ ಹತ್ತ ಕುಳಿತುಕೊಳ್ಳುತ್ತೇನೆ, ಅನ್ನಲು, ಧನಮಲ್ಲನು ಮುಂದಕ್ಕೆ ಬಂದು ಮೆಹರ್ಜಾನಳನ್ನು ಪಲ್ಲಂಗದ ಮೇಲೆ ಮಲಗಿಸುವದಕ್ಕಾಗಿ ಕೈಗಳನ್ನು ಮುಂದಕ್ಕೆ ಮಾಡಿದನು. ಆಗ ಮಾರ್ಜೀನೆಯು ಅವನನ್ನು ಕುರಿತು ತಿರಸ್ಕಾರದಿಂದಜೋಕೆ, ನಿನ್ನ ಆ ಹುರಬರಕ ಕೈಯಿಂದ ಸಿಕ್ಕ ಹಾಗೆ ಎತ್ತಿ ಲಡ್ಡತನ ಮಾಡಬೇಡ. ಒಂದು ಗುಲಾಬಿಯ ಹೂವನ್ನು ಎತ್ತಿ ಇಡುವಂತೆ ಮೆಲ್ಲನೆ ಮಲಗಿಸು, ಹೂ ! ಎತ್ತಿಕೋ, ನಾನು ತಲೆಯ ಕಡೆಗೆ ಹಿಡಿಯುತ್ತೇನೆ, ಅನ್ನಲು, ಧನಮಲ್ಲನು ಸನ್ನೆಯಿಂದ-ನೀವು ಏನೋ ಚಿಂತೆ ಮಾಡಬೇಡಿರಿ, ನಾನು ಎಲ್ಲ ಮಲಗಿಸುತ್ತೇನೆ. ಎಂದು ಸೂಚಿಸಿ ತಾನು ಸೂಚಿಸಿದಂತೆಯೇ ಮೆಹರ್ಜಾನಳನ್ನು ಬಹು ಸೂಕ್ಷವಾದ ಹೂವಿನಂತೆ ಎತ್ತಿ ಪಲ್ಲಂಗದ ಮೇಲೆ ಮಲಗಿಸಿದನು. ಆತನು ಮಲಗಿಸಿದ್ದೊಂದೇ ತಡ, ಮೆಹರ್ಜಾನಳು ಚಿಟ್ಟನೆ ಚೀರಿ ಪಲ್ಲಂಗದ ಮೇಲೆ ಎದ್ದು ಕುಳಿತುಕೊಂಡಳು. ಆಗ ಆಕೆಯ ಎದುರಿನಲ್ಲಿ ಮಾರ್ಜೀನೆಯೂ. ಧನಮಲ್ಲನೂ ನಿಂತುಕೊಂಡಿದ್ದರು. ಆಕೆಯು ಗಾಬರಿಯಾಗಿ ಸುತ್ತು ಮುತ್ತು ನೋಡುತ್ತಿರಲು, ಮಾರ್ಜೀನೆಯು ಆಕೆಯನ್ನು ಕುರಿತು-ಅಮ್ಮಾ, ಮೆಹರ್ಜಾನ, ಹೀಗೆ ಯಾಕೆ ಗಾಬರಿಯಾಗುತ್ತೀ? ಬೆದರ ಬೇಡಮ್ಮಾ, ಇತ್ತ ನೋಡು, ನಾನ ಇದ್ದೇನೆ-ಧನಮಲ್ಲನು ಇದ್ದಾನೆ. ಬೇಡವೆಂದರೆ ನಿನ್ನೆ ರಾತ್ರಿ ಕುಂಜವನದಲ್ಲಿಯ ಪುಷ್ಕರಣಿಗೆ ಹೋದೆ, ಅಲ್ಲಿ ನಿನಗೆ ಪಿಶಾಚಿಗಿಶಾಚಿಯ ಬಾಧೆಯು ತಟ್ಟಿತ್ತೋ ಏನೋ ? ನೆಟ್ಟಗೆ ಎಚ್ಚೆತ್ತು ನೋಡು. ನಿನಗೆ ಕೆಟ್ಟ ಕನಸು ಬಿದ್ದಿತ್ತೋ ಏನು ? ಎಂದು ಮಾತಾಡಿಸಲು, ಆ ಮಾತುಗಳು ಮೆಹರ್ಜಾನಳಿಗೆ ಕೇಳಿಸಿದಂತೆ ತೋರಲಿಲ್ಲ. ಆಕೆಯು ನಡುವೇ ಮಾರ್ಜೀನೆಯನ್ನು ಕುರಿತು ಮಾರ್ಜೀನೆ. ನಾನು ಎಲ್ಲಿ ಇದ್ದೇನೆ ? ಅವರು ಎತ್ತ ಹೋದರು ? ಅವರು ನನ್ನನ್ನು ನೌಕೆಯೊಳಗಿಂದ ಪುಷ್ಕರಣಿಯಲ್ಲಿ ಎತ್ತಿ ಒಗೆದರು. ಇತ್ತ ನಿಂತವನು ಯಾವನಿವನು ? ನನ್ನನ್ನು ಪುಷ್ಕರಣಿಯಲ್ಲಿ ಅವರು ಎತ್ತಿ ಒಗೆಯುವಾಗ ಅವರ ಹಿಂದೆ ಇವನೇ ನಿಂತಿದ್ದನೇನೇ ಮಾರ್ಜೀನೆ ? ಇವನೇ ಇದ್ದ ನೆಂಬಂತೆ ಕಾಣುತ್ತದೆ. ಹೌದು ಇವನೇ ............
ಮೆಹರ್ಜಾನಳು ಹೀಗೆ ಮಾತಾಡುವದನ್ನು ಕೇಳಿ ಮಾರ್ಜೀನೆಯ ಆಕೆಗೆ ಕುರುಳುಗಳನ್ನು ತೀಡಿ ಗಲ್ಲಗಳನ್ನು ಹಿಡಿದು-ಮೆಹರ್ಜಾನ, ಹೀಗೆ ಯಾಕೆ ಹುಚ್ಚಿಯ ಹಾಗೆ ಮಾತಾಡುತ್ತೀ ? ಈ ಪಲ್ಲಂಗದ ಮೇಲೆ ಮಲಗಿಕೊಂಡಿದ್ದ ನೀನು "ಮಹಾರಾಜರು ನನ್ನನ್ನು ಪುಷ್ಕರಣಿಯಲ್ಲಿ ಎತ್ತಿ ಒಗೆದರೆಂ" ದು ಹೇಳುತ್ತೀಯಲ್ಲ ! ನಿನ್ನ ಸೇವಕನಾದ ಈ ಮೂಕ ಧನಮಲ್ಲನು ಇಲ್ಲಿಯೇ ಇದ್ದಾನೆ, ಎಲ್ಲಿಯೂ ಹೋಗಿಲ್ಲ. ಇದೆಲ್ಲ ಭೂತಚೇಷ್ಟೆಯೆಂಬಂತೆ ನನಗೆ ತೋರುತ್ತದೆ. ನೀನು ಈಗ ನನ್ನ ಮಾತನ್ನು ಕೇಳಿ ಸ್ವಲ್ಪ ಹೊತ್ತು ಸುಮ್ಮನೆ ಮಲಗಿಕೊಂಡು ನಿದ್ದೆ ಮಾಡಬೇಕು. ನೀನು ನಿದ್ದೆ ಮಾಡಿ ವಿಶ್ರಾಂತಿಯನ್ನು ಹೊಂದಿದ ಬಳಿಕ ನಿನಗೊಂದು ಜೀನಸನ್ನು ಕೊಡುವೆನು, ಎಂದು ಹೇಳಲು, ಮೆಹರ್ಜಾನಳು-ಏನು ಹಾಗಾದರೆ ? ನಾನು ನೋಡಿದ್ದೆಲ್ಲ ಸ್ವಪ್ನವೇ ಏನು ? ನಾನು ನನ್ನ ಕೋಣೆಯಲ್ಲಿರುವದು ನಿಜವು ; ಆದರೆ ಅವರು ಎತ್ತ ಹೋದರು ? ಮಾರ್ಜೀನೇ, ಕಡೆಗೆ ಅವರು ನಿದ್ದೆ ಹತ್ತಿದಾಗ ನನ್ನ ಕೈಯೊಳಗಿಂದ ತಮ್ಮ ಕೈಯನ್ನು ಬಿಡಿಸಿಕೊಂಡು, ತನ್ನ ತೊಡೆಯ ಮೇಲಿಟ್ಟಿದ್ದ ನನ್ನ ತಲೆಯನ್ನು ತಲೆದಿಂಬಿನ ಮೇಲಿಟ್ಟು, ಹೇಳದೆ ಹೊರಟುಹೋದರಲ್ಲವೆ ? ಮಾರ್ಜೀನೆ, ಈಗ ನನಗೆ ಏನೋ ಕೊಡುತ್ತೇನೆಂದು ಹೇಳಿದೆಯಲ್ಲ : ತಾ. ಎಲ್ಲಿ ಅದೆ ಅದು ? ಹೇಳದೆ ಹೋದದ್ದಕ್ಕಾಗಿ ನಾನು ಅಸಮಾಧಾನಪಟ್ಟೇನೆಂದು ನನಗೆ ಕೊಡುವದಕ್ಕಾಗಿ ಮಹಾರಾಜರು ಪತ್ರವನ್ನು, ಇಲ್ಲವೆ ಯಾವದೊಂದು ಆಭರಣವನ್ನು ಕೊಟ್ಟಿರಬಹುದು ! ಸಣ್ಣ ಹುಡುಗರನ್ನು ರಮಿಸಿದ ಹಾಗೆ ನನ್ನನ್ನು ರಮಿಸಿದರೆ ನಾನು ಕೇಳುವ ಹಾಗಿಲ್ಲ. ಗುಪ್ತ ಸುದ್ದಿಯನ್ನು ಅವರಿಗೆ ಹೇಳೆಂದು ನಾನು ನಿನಗೆ ಹೇಳಿದ್ದೆನಷ್ಟೆ ? ಅವರ ಮುಂದೆ ಹೇಳಿದೆಯೇನು ? ಎಂದು ಕೇಳಲು, ಮಾರ್ಜೀನೆಯು..... ಹೇಳಿದೆನು, ಗುಪ್ತ ಸಂಗತಿಯನ್ನು ಮಹಾರಾಜರ ಮುಂದೆ ಹೇಳಿದೆನು ; ಆದರೆ ಅವರು ನಿಲ್ಲಲಿಲ್ಲ. ಮೆಹರ್ಜಾನ, ಮಹಾರಾಜರ ಆಗ್ರಹದ ಮುಂದೆ ನನ್ನ ಆಟವೇನು ನಡೆಯುವದು ಹೇಳು. ನೀನು ಅಂದಂತೆ ಮಹಾರಾಜರು ನಿನ್ನ ಸಮಾಧಾನಕ್ಕಾಗಿ ಪತ್ರವನ್ನು, ಅಥವಾ ಯಾವದೊಂದು ಅಲಂಕಾರವನ್ನು ಕೊಟ್ಟಿರಬಹುದು ; ಆದರೆ ಈಗ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ, ಆ ಮೇಲೆ ಮಹಾರಾಜರು ಕೊಟ್ಟಿರುವ ಮೊಹರು ಮಾಡಿದ ಎರಡು ಚೀಟಿಗಳನ್ನು ನಿನಗೆ ಕೊಡುವೆನು, ಎಂದು ಹೇಳಿದಳು.
ಮಹಾರಾಜರ ಮುಂದೆ ಗುಪ್ತ ಸಂಗತಿಯನ್ನು ಹೇಳಿದೆನೆಂದು ಮಾರ್ಜೀನೆಯು ನುಡಿಯಲು, ಅದನ್ನು ಕೇಳಿ ಮೆಹರ್ಜಾನಳಿಗೆ ಮೊದಲು ಮನಸ್ಸಿನಲ್ಲಿ ಬಹಳ ಸಂತೋಷವಾಯಿತು; ಆದರೆ ಅವರು ನಿಲ್ಲದೆ ಹಾಗೇ ವಿಜಯನಗರಕ್ಕೆ ಹೋದದ್ದನ್ನು ಸ್ಮರಿಸಿ, ಆಕೆಯು ಅಸಮಾಧಾನದಿಂದ-ಮಾರ್ಜೀನೆ, ಆ ಮಾತನ್ನು ಕೇಳಿ ಮಹಾರಾಜರು ಏನು ಅಂದರು ? ಅವರ ಮುಖಲಕ್ಷಣವು ಹ್ಯಾಗಾಯಿತು ? ಅವರು ಎಷ್ಟು ಆನಂದಪಟ್ಟರು ? ಇದನ್ನು ಹೇಳಬಾರದೇ ? ಮೂಢೆಯ ಹಾಗೆ ಸುಮ್ಮನೆ ಯಾಕೆ ನಿಂತುಕೊಂಡೇ ? ನಿನ್ನ ಮಾತನ್ನು ಕೇಳಿ ಮಹಾರಾಜರಿಗೆ ಬಹಳ ಸಂತೋಷವಾಗಿರಬಹುದು. ಆ ಸಂತೋಷದ ಸುದ್ದಿಯನ್ನು ಕೇಳಿದ ಬಳಿಕ ನನ್ನನ್ನು ಕಾಣದೆ ಅವರು ಹೋಗತಕ್ಕವರಲ್ಲ. ಆದರೆ ಕೃಷ್ಣದೇವ ಮಹಾರಾಜರ ನೌಕರಿಯ ಮುಂದೆ ಅವರ ಆಟವೇನು ನಡೆಯುವದು ? ನಾನು ಬಸುರಿ ಎಂಬ ಸುದ್ದಿಯನ್ನು ಕೇಳಿದ ಬಳಿಕ ಅವರು ನನ್ನನ್ನು ಒಬ್ಬಳನ್ನೇ ಬಿಟ್ಟು ವಿಜಯನಗರದಲ್ಲಿ ಇರದೆ, ಇನ್ನು ಒಂದೆರಡು ದಿನಗಳಲ್ಲಿ ನನ್ನ ಬಳಿಗೆ ಬರಬಹುದು. ಮಾರ್ಜೀನೆ ನಿನಗೆ ಏನು ಅನ್ನಿಸಿತು ಹೇಳು, ಎಂದು ಕೇಳಿದಳು. ಆಗ ಮಾರ್ಜೀನೆಗೆ ಏನು ಉತ್ತರ ಕೊಡಬೇಕೆಂಬುದು ತಿಳಿಯದೆ ಆಕೆಯು ಸುಮ್ಮನೆ ನಿಂತುಕೊಂಡಳು. ಅದನ್ನು ನೋಡಿ ಮೆಹರ್ಜಾನಳು ಮತ್ತೆ ಆಕೆಯನ್ನು ಕುರಿತು-ಮಾರ್ಜೀನೆ, ಹೀಗೆ ಯಾಕೆ ದೆವ್ವ ಬಡಿದವರ ಹಾಗೆ ನಿಂತುಕೊಂಡೆ ಮಾತಾಡಬಾರದೆ ? ಮಹಾರಾಜರು ಕೊಟ್ಟ ಜೀನಸಾದರೂ ಯಾವದು ತೋರಿಸು, ಎಂದು ಅನ್ನುತ್ತಿರಲು, ಆಕೆಯ ದೃಷ್ಟಿಯು ಧನಮಲ್ಲನ ಕಡೆಗೆ ತಿರುಗಿತು. ಆಗ ಆಕೆಯು ತಿರಸ್ಕರದಿಂದ ಅವನನ್ನು ಕುರಿತು - ನೀನು ಅತ್ತ ಹೋಗೋ ! ಈ ಟೊಣಪನು ಇಲ್ಲಿ ಯಾಕೆ ಬಂದಿರುತ್ತಾನೆ. ನಡೆ ಅತ್ತ, ಎಂದು ಒಸಕ್ಕನೆ ಅವನ ಮೈಮೇಲೆ ಹೋಗಿ ನುಡಿಯಲು ಧನಮಲ್ಲನು ವಿಲಕ್ಷಣ ಪ್ರಕಾರದಿಂದ ನಕ್ಕನು. ಆತನು ಗಟ್ಟಿಯಾಗಿ ನಗಲಿಲ್ಲ. ಸುಮ್ಮನೆ ನಗೆಯ ಝಳಕು ಮಾತ್ರ ಆತನ ಮೋರೆಯ ಮೇಲೆ ತೋರಿತು, ಆತನು ಮಹಾ ಮೂಢನಂತೆ ಮೆಹರ್ಜಾನಳನ್ನು ನೋಡುತ್ತ ನಿಂತಲ್ಲಿ ಸುಮ್ಮನೆ ನಿಂತು, ಕೆಲವು ಹೊತ್ತಿನ ಮೇಲೆ ಅಲ್ಲಿಂದ ಹೊರಟು ಹೋದನು. ಆಗ ಮಾರ್ಜೀನೆಯು, ರಾಮರಾಜನು ಕೊಟ್ಟಿದ್ದ ಎರಡು ಥೈಲಿಗಳನ್ನು ಮೆಹರ್ಜಾನಳ ಕೈಯಲ್ಲಿ ಕೊಡಲು, ಒಂದರಲ್ಲಿ ಒಂದು ಪತ್ರವೂ, ಮತ್ತೊಂದರಲ್ಲಿ ಒಂದು ಮುದ್ರೆಯ ಉಂಗುರವೂ ಇದ್ದವು. ಮೆಹರ್ಜಾನಳು ಉತ್ಸುಕತೆಯಿಂದ ಪತ್ರವನ್ನು ಓದಲು, ಸಂತಾಪದಿಂದ ಆಕೆಯ ಮೈಮೇಲಿನ ಎಚ್ಚರವು ತಪ್ಪಿದಂತಾಯಿತು ! ಈ ಸಂತಾಪವೇ ಮುಂದೆ ಆಕೆಯ ಪ್ರಯಾಣಕ್ಕೆ ಕಾರಣವಾಯಿತೆಂದು ಹೇಳಬಹುದು.
****