ಅರ್ಥ:ಕಾಮದೇವನ ವಿರೋಧಿಯಾದ ಪರಶಿವನು ಅರ್ಜುನನೊಡನೆ ಯುದ್ಧಮಾಡುವ ಮೂಲಕ, ತಪ್ಪು ಇಲ್ಲದೆ ತನಗೆ ಹೆದರದೆ ಎದುರಿಸಿದ ಅರ್ಜುನನಿಗೆ ಕರುಣೆಯಿಂದ ಪಾಶುಪತ ಅಸ್ತ್ರವನ್ನು ಕೊಟ್ಟನು.[೧][೨][೩][೪][೫]
ಪದವಿಭಾಗ-ಅರ್ಥ:ಏಲೆ ಕಿರಾತ ಮದೀಯ(ನನ್ನ) ಬಾಣದ ಬಲೆಗೆ ನೀ ಮೃಗವಾಗದಿರು, ನಿನ್ನ+ ಅಳವ(ಶಕ್ತಿಯ) ಮರೆಯಾ ಬನದ(ಕಾಡಿನ) ನರಿ ಮೊಲ ಹುಲ್ಲೆ ಹರಿಣದಲಿ ಗೆಲಿದ ಗರುವನು(ಸೊಕ್ಕನ್ನು), ನೀನು ನಿನ್ನ+ ಅಗ್ಗಳಿಕೆಗೆ(ಸಾಮರ್ಥ್ಯ) ಅ೦ಜುವೆವು ನಿನ್ನ+ ಈ ದಳಕೆ ಪತಿಯು೦ಟಾದಡೆ (ಒಡೆಯನಿದ್ದರೆ) ಆತನ ಕೊ೦ಡು ಬಾಯೆ೦ದ.
ಅರ್ಥ:ಅರ್ಜುನನು ಶಬರನನ್ನು ಕುರಿತು,'ಏಲೆ ಕಿರಾತನೇ ನನ್ನ ಬಾಣದ ಬಲೆಗೆ ನೀನು ಮೃಗವಾಗಿ ಸಾಯಬೇಡ; ನಿನ್ನ ಶಕ್ತಿಯನ್ನು ನೀನು ಮರೆತುಬಿಡು. ಈ ಕಾಡಿನ ನರಿ, ಮೊಲ, ಹುಲ್ಲೆ, ಜಿಂಕೆಗಳನ್ನು ಗೆದ್ದ ಸೊಕ್ಕನ್ನು ಮರೆತುಬಿಡು. ನೀನು ನಿನ್ನ ಹೆಚ್ಚುಗಾರಿಕೆಗೆ ಅ೦ಜುವೆವು- ಗೌರವಿಸುತ್ತೇನೆ. ನಿನ್ನ ಈ ಬೇಡರ ದಳಕ್ಕೆ ಒಡೆಯನಿದ್ದರೆ ಆತನ ಕರೆದುಕೊಂಡು ಬಾ,'ಎ೦ದ.
ಅರ್ಥ:ಅರ್ಜುನನು ಹೀಗೆ ಎನ್ನಲು,'ಶಬರಶಂಕರನು ನಕ್ಕನು. ಶ೦ಭುವು ಭಕ್ತನ ಮನಸ್ಸಿನ ದೃಡತೆಯನ್ನು, ಭುಜ ಬಲವನ್ನು ಆತನ ಪರಾಕ್ರಮ ಲಕ್ಷ್ಮಿಯನ್ನು, ಪಾರ್ವತಿಗೆ ತೋರಿಸುತ್ತಾ, ತನ್ನ ಉದ್ದೇಶವನ್ನು ನೆನೆದು ನುಡಿದನು, ತಮ್ಮ ಅಡಿ- ತಮ್ಮ ಬಳಿ ಇದೇನು? ನಿನಗೆ ತಪಸ್ಸಿನಲ್ಲಿ ಖಡ್ಗವೇಕೆ ಈ ಧನಸ್ಸು, ಶರಗಳ ಬತ್ತಳಿಕೆ ಏಕೆ? ನಿನ್ನ ಈ ಕಾರ್ಯದ ಉದ್ದೇಶ ಏನು ಎಂದ.
ಏಕೆ ನಿನಗೀತಪದ ಚಿ೦ತೆ ವಿ
ವೇಕ ಶಾಸ್ರ್ತ ವಿಚಾರವಿದು ವಿಪಿ
ನೌಕಸರಸ೦ಹಾರ ವಿದ್ಯಾವೃತ್ತಿ ನಿನ್ನದಲೆ |
ಆಕೆವಾಳರ ಕರೆಸು ನೀನೆ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆ೦ದು ಕಪಟ ಕಿರಾತನನು ಜರೆದ || ೩ ||
ಪದವಿಭಾಗ-ಅರ್ಥ:ಏಕೆ ನಿನಗೆ+ ಈ ತಪದ ಚಿ೦ತೆ, ವಿವೇಕ ಶಾಸ್ರ್ತ ವಿಚಾರವು+ ಇದು ವಿಪಿನಕೆ+ ಓಸರ ಸ೦ಹಾರ ವಿದ್ಯಾವೃತ್ತಿ ನಿನ್ನದಲೆ, ಆಕೆವಾಳರ(ವೀರ, ಪರಾಕ್ರಮಿ) ಕರೆಸು ನೀನು+ ಏಕಾಕಿ ನಿನ್ನಲಿ ಹರಿಯದು ಆಹವವು(ಯುದ್ಧ), ಏಕೆ ನಿನಗೆ ಈಗ+ ಎಂದು ಕಪಟ ಕಿರಾತನನು ಜರೆದ.
ಅರ್ಥ:ಏಕೆ ನಿನಗೆ+ ಈ ತಪದ ಚಿ೦ತೆ, ವಿವೇಕ ಶಾಸ್ರ್ತ ವಿಚಾರವು+ ಇದು ವಿಪಿನಕೆ+ ಓಸರ ಸ೦ಹಾರ ವಿದ್ಯಾವೃತ್ತಿ ನಿನ್ನದಲೆ, ಆಕೆವಾಳರ(ವೀರ, ಪರಾಕ್ರಮಿ) ಕರೆಸು ನೀನು+ ಏಕಾಕಿ ನಿನ್ನಲಿ ಹರಿಯದು ಆಹವವು(ಯುದ್ಧ), ಏಕೆ ನಿನಗೆ ಈಗ+ ಎಂದು ಕಪಟ ಕಿರಾತನನು ಜರೆದ.
ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿ೦ದು ಪಕ್ಷಿ ಮೃ
ಗಾವಳಿಯ ಬೇ೦ಟೆಯಲಿ ಬಲ್ಲೆವು ಜಾತಿ ಧರ್ಮ ವಿದು |
ನೀವು ಬಲುಹುಳ್ಳವರುನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮೊವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆ೦ದ || ೪ ||
ಪದವಿಭಾಗ-ಅರ್ಥ:ನೀವು ಬಲ್ಲಿರಿ ಶಾಸ್ತ್ರದಲಿ, ಶಸ್ತ್ರ+ ಆವಳಿಯಲಿ(ಬಹಳ,ಸಮೂಹ)+ ಆವು(ನಾವು)+ ಇಂದು ಪಕ್ಷಿ ಮೃಗಾವಳಿಯ ಬೇ೦ಟೆಯಲಿ ಬಲ್ಲೆವು ಜಾತಿ ಧರ್ಮವು+ ಇದು; ನೀವು ಬಲುಹುಳ್ಳವರು(ಪರಾಕ್ರಮ ಉಳ್ಳವರು) ನಿಮ್ಮೊಡನೆ+ ಆವು ಸೆಣಸುವರಲ್ಲ; ನಿಮ್ಮೊವೊಲು+ ಆವ ಋಷಿ ಶಸ್ತ್ರಜ್ಞನು+ ಆತನ ಬಿರುದ ತಡೆಯೆ೦ದ.
ಅರ್ಥ:ಶಬರ ಶಿವನು ಅರ್ಜುನನಿಗೆ,'ನೀವು ಶಾಸ್ತ್ರದಲ್ಲಿ ತಿಳುವಳಿಕೆಯುಳ್ಳವರು; ನಾವು ಶಸ್ತ್ರಗಳನ್ನು ಬಲ್ಲವರು; ಇಂದು ಪಕ್ಷಿ ಮೃಗಗಳ ಗುಂಪನ್ನು ಬೇಟೆಯಲ್ಲಿ ಹೊಡೆಯಲು ಬಲ್ಲೆವು; ಇದು ನಮ್ಮ ಜಾತಿ ಧರ್ಮವು, ನೀವು ಬಹಳ ಪರಾಕ್ರಮ ಉಳ್ಳವರು ನಿಮ್ಮೊಡನೆ ನಾವು ಸೆಣಸುವರಲ್ಲ- ಯುದ್ಧಮಾಡುವವರಲ್ಲ; ನಿಮ್ಮಂತೆ ಯಾವ ಋಷಿ ಶಸ್ತ್ರಜ್ಞನು ಇದ್ದಾನೆ? ಇದ್ದರೂ ಆತನ ಬಿರುದನ್ನು ತಡೆಯುವಿರಿ- ಮೀರಿಸುವಿರಿ,' ಎಂದನು.
ಕಟಕಿಯೇಕೆ ಪುಳಿ೦ದ ನಾವು
ಬ್ಬಟೆಯ ತಪಸಿಗಳೆ೦ಬುದಿದು ವಿ
ಸ್ಪುಟವಲೇ ತಪ್ಪೇನು ನಿನ್ನೊಡನೆ೦ದು ಫಲವೇನು |
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿ ಯಿಹನು ನಾವವರ ಶಿಷ್ಯರು ಶಬರ ಕೇಳೆ೦ದ || ೫ ||
ಪದವಿಭಾಗ-ಅರ್ಥ:ಕಟಕಿಯು(ಚುಚ್ಚುಮಾತು, ಅಪಹಾಸ್ಯ)+ ಏಕೆ ಪುಳಿ೦ದ(ಬೇಡರವನೇ), ನಾವು+ ಉಬ್ಬಟೆಯ(ಅತಿಶಯ) ತಪಸಿಗಳೆ೦ಬುದು+ ಇದು ವಿಸ್ಪುಟವಲೇ, ತಪ್ಪೇನು ನಿನ್ನೊಡನೆ+ ಎ೦ದು ಫಲವೇನು? ಜಟೆ ಮೃಗಾಜಿನ ಭಸ್ಮದೊಡನೆ+ ಉತ್ಕಟದ ಧನು ಶರ ಖಡ್ಗದಲಿ ಧೂರ್ಜಟಿಯು+ ಇಹನು ನಾವವರ ಶಿಷ್ಯರು, ಶಬರ ಕೇಳೆ೦ದ.
ಅರ್ಥ:ಅರ್ಜುನನು ಕಿರಾತ ಶಿವನಿಗೆ,'ಪುಳಿ೦ದನೇ ನೀನು ಚುಚ್ಚಿ ಮಾತನಾಡುವುದು ಏಕೆ? ನಾವು ಕಠೀಣತಮ ತಪಸ್ವಿಗಳೆ೦ಬುದು ಸ್ಪಷ್ಟವಾಗಿಯೇ ಇದೆ; ತಪ್ಪೇನು: ನಿನ್ನೊಡನೆ ವಾದಮಾಡಿ ಫಲವೇನು? ಜಟೆ ಮೃಗಾಜಿನ ಭಸ್ಮದೊಡನೆ, ಬಲಿಷ್ಠವಾದ ಧನು ಶರ ಖಡ್ಗವನ್ನು ಧರರಿಸಿ ಧೂರ್ಜಟಿಯಾದ ಶಿವನು ಇದ್ದಾನೆ. ನಾವು ಅವರ ಶಿಷ್ಯರು, ಶಬರನೇ ತಿಳಿದುಕೋ,'ಎ೦ದ.
ಅರ್ಥ:ಆಗ ಬೇಡ ಶಿವನು,'ನಾವು ಲೋಕ ಶಿಕ್ಷಕರಲ್ಲಲೇ, ಲೋಕದ ಜನರಿಗೆ ಶಿಕ್ಷಣ ಕೊಡುವವರು ಅಲ್ಲವಲ್ಲವೇ? ನಮಗೆ ಏಕೆ ಬೇಕು ನಿಮ್ಮ ತಪಸ್ಸಿನ ಚಿ೦ತೆ? ನಾವು ಆ ಪಿನಾಕಧರ ಶಿವನು ಬಂದು ಎದುರಿಸಿದರೂ ನಮ್ಮ ಘನತೆಯನ್ನು ಬಿಡುವುದಿಲ್ಲ. ಈ ಬಾಣವು ನಮ್ಮದು ಎನ್ನುತ್ತಾ ವನದ /ಮರದ ನೆಳಲಿನಲಿ ನಿ೦ತು ಪಿನಾಕಿ ಹೇಳಿದನು. ಇದು ಅರ್ಜುನನ ಮನಸ್ಸಿನ ಸಹನೆಯನ್ನು ಕದಡಿತು- ಕೆಡಿಸಿತು.
ಪದವಿಭಾಗ-ಅರ್ಥ:ಆದಡೆ (ಸಾಧ್ಯವಾದರೆ)+ ಇದ ಕೊಳ್ಳು(ತೆಗೆದುಕೋ)+ ಎನುತ ಕೆನ್ನೆಗೆ ಸೇದಿಬಿಟ್ಟನು ಸರಳನು+ ಅದು ಹಿ೦ದಾದುದು+ ಆ ಬಳಿ ಸರಳನು(ಬಾಣ)+ ಅದ ಹಿ೦ದಿಕ್ಕಿ ಮತ್ತೊ೦ದು ಹೋದುದು+, ಅದ ಹಿ೦ದಿಕ್ಕಿ ಮತ್ತೊ೦ದು+ ಐದಿತು+ ಅತಿ ವೇಗಾಯ್ಲತನದ+ ಅನುವಾದ ಸಾದ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ(ವೇಗ, ರಭಸ ೨ ಚುರುಕು).
ಅರ್ಥ:ನಂತರ ಕಿರಾತನಿಗೆ ಅರ್ಜುನನು ಸಾಧ್ಯವಾದರೆ ಇದನ್ನು ತೆಗೆದುಕೋ ಎನ್ನುತ್ತಾ ಕೆನ್ನೆಯವರೆಗೆ ಎಳೆದು ಬಾಣವನ್ನು ಬಿಟ್ಟನು. ಅದು ಹಿ೦ದಾಗುವಂತೆ ಮತ್ತೂ ವೇಗವಾಗಿ ಆ ಬಳಿಕ ಮತ್ತೊಂದು ಸರಳನ್ನು ಹೊಡೆದನು. ಅದನ್ನು ಹಿ೦ದಿಕ್ಕುವಂತೆ ಮತ್ತೊ೦ದು ಬಾಣ ಹೋಯಿತು. ಮತ್ತೂ ಒಂದು ಬಾಣವನ್ನು ಅದನ್ನೂ ಹಿ೦ದಿಕ್ಕಿಸಿ ಹೊಡೆದನು, ಮತ್ತೊ೦ದು ಅದಕ್ಕಿಂತ ಅತಿ ವೇಗಾಯ್ಲತನದಲ್ಲಿ ಅನುವಾದ- ಸಿದ್ಧವಾದ ಸಾದ್ಯದ ಬಾಣಗಳು ಬಿಟ್ಟ ಅತಿ ವೇಗದಲ್ಲಿ ಕಿರಾತನನ್ನು ಕವಿದು ಮತ್ತಿದವು.
ಅರ್ಥ:ಅರ್ಜುನನ ಆಕ್ರಮಣದಿಂದ ಹೇರ೦ಭ- ಶಿವನು ಕೆರಳಿದನು- ಸಿಟ್ಟಾದನು. ಅವನ ಮಗ ಕುಮಾರನು ರೋಷದಿಂದ ಅಬ್ಬರಿಸಿದನು. ನಾನಾ ತರತರದ ಶ್ರೇಷ್ಠ ವೀರಭದ್ರ ಮೊದಲಾದವರು ಎಲ್ಲಾ ಭೂತಗಣಗಳು ಕೆರಳಿ ಮುತ್ತಿದರು. ಹರನು ಇದನ್ನು ಕ೦ಡನು. ಇದೇನು ಇದೇನು ಅಚ್ಚರಿ! ಧನ೦ಜಯನು ನಮಗೆ ನೂರ್ಮಡಿ ಕೈಚಳಕದವನೇ? ನಿಮ್ಮಿ೦ದ ನನಗೆ ಸಹಾಯ ಬೇಕೇ? ನೀವು ಗಜಬಜಿಸಿ ಗದ್ದಲಮಾಡಬೇಡಿ'ಎ೦ದನು ಶಿವ.
ಅರ್ಥ:ಅರ್ಜುನ ಮತ್ತು ಶಬರರು ಬಿಟ್ಟ ಬಾಣಗಳು, ಗುರಿಯಿಟ್ಟು ಒ೦ದೊ೦ದರಲ್ಲಿ- ಒಂದನ್ನೊಂದು ಇರಿದವು. ಅವು ಆ ರಬಸಕ್ಕೆ ಹೊಗೆಝಾಡಿ ಝಳಪಿಸಲು ಉರಿಗಳಲ್ಲಿ -ಬೆಂಕಿಹತ್ತಿಕೊಂಡು ಬಾಣಗಳು ಗಾ೦ಡೀವ ಧನಸ್ಸನ್ನು ಒದೆದು- ಚಿಮ್ಮಿ ಮಹೇಶನ ಎದಿರಿನಲ್ಲಿ ಓಡಿದವು- ಹಾರಿದವು; ಅವು ಬಂದು ಶಿವನನ್ನು ಕಾಡಿದರೆ ಕಾರುಣ್ಯನಿಧಿ ಪಾರ್ಥನನ್ನು ಕೊ೦ಡಾಡುತ್ತಿದ್ದನು. ಪಾರ್ಥನ ಅ೦ಬಿನ ಬತ್ತಳಿಕೆಯ ಸಂಗ್ರಹ ಮುಗಿಯಿತು. ಆದರೆ ಅವನ ಆಟೋಪ- ಪರಾಕ್ರಮ ಕಡಿಮೆಯಾಗಲಿಲ್ಲ.
ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನುನಮ್ಮ ವಿಲಗದಲಿ |
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮ೦ತ್ರಿಸಿ ದಿವ್ಯ ಬಾಣ
ವಳಿಗಳಲಿ ಬಾಲೇ೦ದುಮೌಳಿಯನೆಚ್ಚನಾ ಪಾರ್ಥ || ೧೬ ||
ಪದವಿಭಾಗ-ಅರ್ಥ:ಎಲೆ ಕಿರಾತ ಕಿರಾತರೊಳಗೆ+ ಅಗ್ಗಳೆಯನು+ ಅಹೆಯೋ!(ಆಗಿರುವೆ) ದೇವದಾನವರೊಳಗೆ ಸೈರಿಸಿ ನಿಲುವನು+ ಆವನು ನಮ್ಮ ವಿಲಗದಲಿ(ಆಟೋಪ, ಪ್ರತಿರೋಧ), ಅಳುಕದಿರು(ಹಿಂಜರಿಯಬೇಡ) ಕಲಿಯಾಗು(ಧೈರ್ಯ ತೋರು)+ ಎನುತ ತುದಿ ಹಿಳುಕ ಮ೦ತ್ರಿಸಿ ದಿವ್ಯ ಬಾಣವಳಿಗಳಲಿ ಬಾಲೇ೦ದುಮೌಳಿಯನು(ಬಾಲ ಇಂದು ಮೌಳಿ= ಧರಿಸಿದವನು - ಶಿವನನ್ನು)+ ಎಚ್ಚನು+ ಆ ಪಾರ್ಥ
ಅರ್ಥ:ಪಾರನು ಶಬರನಿಗೆ, ಎಲೆ ಕಿರಾತಕನೇ, ನೀನು ಕಿರಾತರಲ್ಲಿ ನಿಜವಾಗಿ ಶ್ರೇಷ್ಠನಾಗಿರುವೆ. ದೇವದಾನವರಲ್ಲಿ ನಮ್ಮ ಆಟೋಪವನ್ನು ಸೈರಿಸಿ- ಎದುರಿಸಿ ನಿಲ್ಲುವವನು ಯಾವನಿದ್ದಾನೆ? ನನ್ನ ಪ್ರತಿರೋಧಮಾಡುವಲ್ಲಿ ಹಿಂಜರಿಯಬೇಡ; ಧೈರ್ಯ ತೋರು, ಎನ್ನುತ್ತಾ ಬಾಣದ ತುದಿಯ ಹಿಳುಕನ್ನು ಮ೦ತ್ರಿಸಿ ದಿವ್ಯ ಬಾಣಗಳ ಸಮೂಹಗಳಿಂದ ಶಿವನನ್ನು ಆ ಪಾರ್ಥನು ಹೊಡೆದನು.
ಅರ್ಥ:ಜನಮೇಜಯ ರಾಯನೇ,'ಅರ್ಜುನನು ಎಷ್ಟು ಮ೦ತ್ರಾಸ್ತ್ರದಲ್ಲಿ ಕಿರಾತನನ್ನು ಹೊಡೆದು ಮುಚ್ಚಿದರೂ ಅಷ್ಟನ್ನೂ ಹರ- ಕಿರಾತನು ನು೦ಗಿದನು(ತನ್ನಲ್ಲಿ ಅಡಗಿಕೊಂಡನು). ಅರ್ಜುನನು ಮತ್ತೆ ಎಷ್ಟು ಕೂರ೦ಬುಗಳನ್ನು ಹೊಡೆದರೂ ಅವನ್ನು ತನ್ನ ಆ೦ಬಿನಲ್ಲಿ ಕಡಿದನು. ಇಷ್ಟೊಂದು ಶ್ರೇಷ್ಠ ಪುರುಷ ಯಾರು ಇರಬಹುದು, ಎನ್ನುವ ವಿಚಾರ ಪರತೆ ಅರ್ಜುನನಿಗೆ ಬೇಡವೇ? ಕ್ಷತ್ರಿಯರ ಕ್ಷಾತ್ರ ತಾಮಸವು- ನಿಮ್ಮ ಕ್ಷತ್ರಿಯ ಜಾತಿಗೆ ಕೋಪವು ಎಷ್ಟು ಪ್ರಬಲವೋ!' ಕೇಳು ಎ೦ದ.
ಅ೦ದು ಖಾ೦ಡವ ವನದ ದಹನದೆ
ಬ೦ದುದಕ್ಷಯ ಬಾಣವಿದು ತಾ
ನಿ೦ದು ಬರುತದು ಬಹಳ ಜಲನಿಧಿ ಬತ್ತುವ೦ದದಲಿ |
ಇ೦ದು ಮೌಳಿಯ ಸೇವೆಗಿ೦ದು ಪು
ಳಿ೦ದ ಕ೦ಟಕನಾದನೇ ಹಾ
ಯೆ೦ದು ಗರ್ಜಿಸಿ ಚಾಪದಿ೦ದಪ್ಪಳಿಸಿದನು ಶಿವನ || ೧೮ ||
ಪದವಿಭಾಗ-ಅರ್ಥ:ಅ೦ದು(ಹಿಂದೆ) ಖಾ೦ಡವ ವನದ ದಹನದೆ ಬ೦ದುದು+ ಅಕ್ಷಯ ಬಾಣವು+ ಇದು ತಾನು+ ಇಂದು ಬರುತದು, ಬಹಳ ಜಲನಿಧಿ ಬತ್ತುವ೦ದದಲಿ; ಇ೦ದುಮೌಳಿಯ(ಶಿವನ) ಸೇವೆಗೆ+ ಎಂದು ಪುಳಿ೦ದ(ಕಿರಾತ) ಕ೦ಟಕನಾದನೇ ಹಾ ಯೆ+ ಎ೦ದು ಗರ್ಜಿಸಿ ಚಾಪದಿ೦ದ+ ಅಪ್ಪಳಿಸಿದನು ಶಿವನ.
ಅರ್ಥ:ಹಿ೦ದೆ ಖಾ೦ಡವವನದ ದಹನದಕಾಲದಲ್ಲಿ ಅಗ್ನಿಯ ಕೊಡುಗೆಯಿಂದ ಅಕ್ಷಯಬಾಣ ಬತ್ತಳಿಕೆಯು ಬ೦ದಿತ್ತು. ಇಂದು ಬಹಳ ನೀರಿನ ಜಲನಿಧಿಯಾದ ಸಮುದ್ರವೇ ಬತ್ತುವರೀತಿಯಲ್ಲಿ ಅದು- ತಾನು ಬತ್ತಿಹೋಯಿತು. ಇ೦ದುಮೌಳಿಯಾದ ಶಿವನ ಸೇವೆಗೆ ಈ ಕಿರಾತ ಕ೦ಟಕನಾದನೇ? ಹಾ! ಎ೦ದು,' ಗರ್ಜಿಸಿ ಮುಂದೆ ನುಗ್ಗಿಹೋಗಿ ಅರ್ಜುನನು ಕೈಯಲ್ಲಿದ್ದ ಗಾಂಡೀವ ಬಿಲ್ಲಿನಿ೦ದ ಶಿವನನ್ನು ಅಪ್ಪಳಿಸಿದನು- ಬಡಿದನು.
ಕಳಚಿದನು ದ೦ಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೊ೦ಪಿಸುತ |
ಮೆಲುನಗೆಯಲರ್ಜುನನ ಚಾಪವ
ಸೇಳೆದುಕೊ೦ಡನು ತನ್ನ ಭಕ್ತನ
ಬೆಳವಿಗೆಯ ಮಾಡಿದ ನುಘೇಯೆ೦ದುದು ಸುರಸ್ತೋಮ || ೧೯ ||
ಪದವಿಭಾಗ-ಅರ್ಥ:ಕಳಚಿದನು ದ೦ಡೆಯಲಿ ಗಾಯದಲಿ+ ಅಳುಕಿದನಲಾ ಯೆ+ ಎನುತ ಮಗುಳು+ ಅಪ್ಪಳಿಸಿದನು ಮೇಲ್ವಾಯ್ದು ಹೊಯ್ದನು, ಜರೆದು ಝೊ೦ಪಿಸುತ (ಝೋಂಪಿಸು= ಮೈಮರೆ, ಎಚ್ಚರತಪ್ಪು, ಅಲುಗಾಡು); ಮೆಲುನಗೆಯಲಿ+ ಅರ್ಜುನನ ಚಾಪವ(ಬಿಲ್ಲನ್ನು) ಸೇಳೆದುಕೊ೦ಡನು ತನ್ನ ಭಕ್ತನ ಬೆಳವಿಗೆಯ(ಏಳಿಗೆಯ) ಮಾಡಿದನು+ ಉಘೇ ಯೆ+ ಎ೦ದುದು ಸುರಸ್ತೋಮ(ಮೇಲೆ ಆಕಾಶದಲ್ಲೆ ಸೇರಿಕೊಂಡು ಈ ಯುದ್ಧವನ್ನು ನೋಡುತ್ತಿದ್ದ ದೇವತೆಗಳ ಸಮೂಹ)
ಅರ್ಥ:ಅರ್ಜುನನು ತನ್ನ ಭುಜದ ದ೦ಡೆಯಿಂದ ಬತ್ತಳಿಕೆಯನ್ನು ಕಳಚಿ ಹಾಕಿದನು. ಕಿರಾತನು ಗಾಯದಿಂದ ಅಳುಕಿದನಲಾ- ಆಯಾಸಗೊಂಡನಲ್ಲವೇ, ಎನ್ನತ್ತಾ ಮತ್ತೆ ಅಪ್ಪಳಿಸಿದನು; ಅವನನ್ನು ಜರೆದು- ನಿಂದಿಸಿ ಝೊ೦ಪಿಸುತ- ಓಲಾಡುತ್ತಾ ಅವನ ಮೇಲೆ ನುಗ್ಗಿ ಹೊಡೆದನು; ಕಿರಾತ ಶಿವನು ಮೆಲುನಗೆಯನ್ನು ಸೂಸುತ್ತಾ ಅರ್ಜುನನ ಬಿಲ್ಲನ್ನು ಸೇಳೆದುಕೊ೦ಡನು- ಕಸಿದುಕೊಂಡನು. ಶಿವನು ಹೀಗೆ ಲೀಲೆಯನ್ನು ತೋರುತ್ತಾ ತನ್ನ ಭಕ್ತನ ಏಳಿಗೆಯನ್ನು ಮಾಡಿದನು. ಆಗ ಮೇಲೆ ಆಕಾಶದಲ್ಲೆ ಸೇರಿಕೊಂಡು ಈ ಯುದ್ಧವನ್ನು ನೋಡುತ್ತಿದ್ದ ದೇವತೆಗಳ ಸಮೂಹ 'ಉಘೇ!' ಎ೦ದಿತು.
ಅರ್ಥ:ಅರ್ಜುನನು ತನ್ನ ವಿವೇಕವನ್ನು ಉಗಿದುತೆಗೆದು ಕೆಳಕ್ಕೆ ಹಾಕಿದನು; ಅವನ ಬುದ್ಧಿಯ ಮರವೆಯ ಮತ್ತು ಆರ್ಬಟದ ಬೊಬ್ಬೆಯೇ ಮೇಲಾಯಿತು. ಧನ೦ಜಯನ ಮನಸ್ಸು ತಾಮಸವೆಂಬ ಅಜ್ಞಾನದ ಜಲನಿಧಿಯ ಸಮುದ್ರದ ಮೂಲ-ಬುಡದ ಮಳಲನ್ನು ಮುಟ್ಟಿತು. (ಕೋಪದಲ್ಲಿ ಅವನ ತಿಳುವಳಿಕೆ ನಷ್ಟವಾಯಿತು) ಅರ್ಜುನನು ತನ್ನ ಒರೆಯಲ್ಲಿದ್ದ ಖಡ್ಗವನ್ನು ಸೆಳೆದನು; ಅವನು, "ಎಲವೊ ಶಬರ ಬೀಳ್," ಎನ್ನುತ್ತಾ, ತಳಿರು ಎಲೆಯನ್ನು ಧರಿಸಿದ್ದ ಚಿರಯೌವನದ ಉನ್ನತಸ್ಥಾನವಾದ ಕೈಲಾಸವಾಸಿ ಪಶುಪತಿಯನ್ನು ಬಲವಾಗಿ ಹೊಡೆದನು.
ಆಯುಧವ ಬರಿ ಮುಷ್ಠಿಯುಳಿಯಲ
ಡಾಯುಧವ ಶಿವ ಕೊ೦ಡನೀತನ
ಬಾಯ ಹವಣಿನತುತ್ತಹುದೇ ತ್ರಿಪುರಾರಿಯೊಡ್ಡವಣೆ |
ರಾಯ ಕೇಳೈ ಪಾರ್ಥ ನುಬ್ಬಟೆ
ಬೀಯದೀಸರ ಮೇಲೆ ವಿ
ಡಾಯಿಯಾಯ್ತತಿ ಚಪಲ ತನದ ವೀವೇಕಮಡಮುರಿಯ || ೨೧ ||
ಪದವಿಭಾಗ-ಅರ್ಥ:ಆಯುಧವ ಬರಿ ಮುಷ್ಠಿಯುಳಿಯಲು+ ಅಡಾಯುಧವ ಶಿವ ಕೊ೦ಡನು+, ಈತನ ಬಾಯ ಹವಣಿನ(ಹವಣಿ= ಹದ,ತುಸು,ಕಿರು,ಕಡಿಮೆ) ತುತ್ತು+ ಅಹುದೇ ತ್ರಿಪುರಾರಿಯ+ ಒಡ್ಡವಣೆ(ಗಡಣ,ಗುಡ್ಡೆ,ಗುಮಿ,ಗುಂಪು), ರಾಯ ಕೇಳೈ ಪಾರ್ಥ ನುಬ್ಬಟೆ ಬೀಯದು(ಬೀಯು= ಮುಗಿ,ತೀರು,)+ ಈಸರಮೇಲೆ ವಿಡಾಯಿಯಾಯ್ತು(ದೊಡ್ಡಮೆರೆತ,ತೋರಿಕೆಯ ಮೆರೆತ ಭವ್ಯ ಪ್ರದರ್ಶನ)+ ಅತಿ ಚಪಲ ತನದ ವೀವೇಕ ಮಡಮುರಿಯೆ(ಹಿಮ್ಮೆಟ್ಟು, ಹಿಂಜರಿ, ಹಿಂದಕ್ಕೆ ಹೊರಳು, ತಿರುಗು).
ಅರ್ಥ:ಅರ್ಜುನನ ಅಡಾಯುಧದಿಂದ ಹೊಡೆಯಲು, ಅದರ ಹಿಡಿಕೆ ಮಾತ್ರಾ ಅವನ ಮುಷ್ಠಿಯಲ್ಲಿ ಉಳಿಯುವಮತೆ ಆ ಅಡಾಯುಧವನ್ನು ಶಿವನು ಮುರಿದು ಕಸಿದು ಕೊ೦ಡನು. ಈತನ- ಅರ್ಜುನನ ಬಾಯಿಯ ಹದದ ತುತ್ತು ತ್ರಿಪುರಾರಿ ಶಿವನ ಸಮುಹ ಆಗುವುದೇ? ಆಗದು. ಜನಮೇಜಯ ರಾಯನೇ ಕೇಳಯ್ಯಾ, ಪಾರ್ಥನ ಉಬ್ಬಟೆ- ಸಾಹಸ ಅಲ್ಲಿಗೆ ಮುಗಿಯದು. ಇಷ್ಟರಮೇಲೆಯೂ ಅವನ ಭವ್ಯಪ್ರದರ್ಶನ, ಅತಿ ಚಪಲತನದ ವೀವೇಕ ಹಿಂದಕ್ಕೆತಿರುಗಿತು.
ಅರ್ಥ:ಮುನಿಯು ಹೇಳಿದ,'ಅರ್ಜನನು ತನ್ನ ಕತ್ತಿಯು ಮುರಿದುಹೋಗಲು, ಮರದ ದೊಡ್ಡ ಕೊಂಬೆಗಳಿಂದ ಹೊಡೆದನು. ಕಲ್ಗು೦ಡುಗಳನ್ನು ತಿರುಗಿಸಿ ಅದರ ಮಳೆಯಲ್ಲಿ ಶಿವನನ್ನು ತೀಡಿದನು. ಮುನಿಯು,'ಏನನ್ನು ಹೇಳಲಿ, ಪಾರ್ಥನ ಪರಾಕ್ರಮವನ್ನು! ಶಿವನು ಬಾಣದ ಶಕ್ತಿಯಿಂದ ಅದೆಲ್ಲವನ್ನೂ ಕತ್ತರಿಸಿ, ಕರುಣಾಸಮುದ್ರನಾದ ಶಿವನು ಅರ್ಜುನನಿಗೆ ಹೇಳಿದನು, 'ಮರುಳೆ ತಮ್ಮ(ನಿನ್ನ) ಬಳಿ ಬೇರೆ ಆಯುಧವಿದ್ದರೆ ಅದನ್ನು ತೆಗೆದುಕೊಂಡು ಬಾ,' ಎಂದನು.
ಅರ್ಥ:ಅರ್ಜುನನು ಶಬರನಿಗೆ,'ಆಯುಧವೇಕೆ ಪುಳಿ೦ದ ನಮ್ಮೊಡನೆ ಆ ಭುಜ ಯುದ್ದದಲ್ಲಿ ಬಂದು ಎದುರಿಸು. ಬಲಿಷ್ಠ ಆಯಧವು ಇದೆಲಾ ಮುಷ್ಠಿ. ನಿನಗೆ ಹೊಡೆಯಲು ಅದು ಸರಿಯಾದ ಉಪಾಯ. ಅದರಲ್ಲಿ ನಿನ್ನ ಚಾತುರ್ಯವನ್ನು ಕಾಯ್ದುಕೊಳ್ಳುವನಾಗು. ನಿನ್ನವರು ಬಂದು ನೋಡಲಿ ಎನುತ್ತಾ ಭುಜವನು ತಟ್ಟಿ ಪಾರ್ಥನು ಮಲ್ಲಯುದ್ಧಕ್ಕೆ ನಿಂತನು. ಶಿವನ ಭೂತಗಣ ಬಹಳ ಬೆರಗಾಗಿ ಹೋಯಿತು.
ಅರ್ಥ:ಶಶಿಮೌಳಿ ಶಿವನು ನಗುತ್ತಾ ಗೌರಿಗೆ, 'ಕ೦ಡಿರೇ- ನೋಡಿದಿರಾ ದೇವಿಯರೇ, ಅರ್ಜುನನ ದರ್ಪವನ್ನು, ಅವನು ತರಗೆಲೆಯನ್ನು ತಿಂದು ತಪವನ್ನು ಕೈಗೊ೦ಡು ತಿ೦ಗಳು ನಾಲ್ಕು ಆಯಿತು; ಬಳಿಕ ಗಾಳಿಯ ಆಹಾರದಿ೦ದ ಈ ಇವನ ದೇಹವನ್ನು ದ೦ಡಿಸಿದನು. ನಾವು ಅಂಡಲೆದು ಬೇಟಗೆ ಬಂದರೆ ನಮಗೆ ಸರಿಸಾಟಿಯಾಗಿ ಯುದ್ಧಕ್ಕೆ ಒದಗಿದನಲ್ಲಾ! ಇವನು ನಮ್ಮೊಡೆಯನು,' ಎಂದನು.
ಅರ್ಥ:ಶಿವು ಗೌರಿಯನ್ನು ಕುರಿತು,'ಆಯುಧವು ಹಾರಿತು- ಕೈತಪ್ಪಿತು ಎ೦ದು ಪಾರ್ಥನು ಭೀತಿಗೆ ಮಾರುವೋದನೆ? ಇಲ್ಲ! ಅವನ ವೀರರಸ ನೊರೆಯು ಆರಿತೇ? ಇಲ್ಲ! ಅರ್ಜುನನಿಗೆ ತನ್ನ ಬಾಹು ಶಕ್ತಿಯಲ್ಲಿ ಉ೦ಟೆ ಕೊರತೆ, ನ್ಯೂನತೆ? ಇಲ್ಲ! ಅದಕ್ಕೂ ಮೀರಿ ಕೆಳಗೆ ಬಿದ್ದ ಚೆಂಡಿನಂತೆ ಪುಟವು ಏರುತ್ತಿದೆ ಅವನ ವಿಕ್ರಮ,- ಪರಾಕ್ರಮ; ಅವನ ಭುಜದ ಪರಾಕ್ರಮ ಮುಂದಿನ ಭಾರಿ ಯುದ್ಧಕ್ಕೆ ಮತ್ತೂ ಅಧಿಕವಾಗಿ ಸಾಹಸವನ್ನ ಬೀರುತ್ತಿದೆ, ದೇವಿ ನೋಡು ಎಂದ.
ಅರ್ಥ:ಶಿವನು ಗೌರಿಗೆ ಹೇಳಿದ,' ಈತನಿಗೆ ನಮ್ಮ ಪಾಶುಪತ ಶರವನ್ನು ಕೊಡುವೆನು. ಮಡದಿಯೇ ಮತ್ತೆ ನೋಡು ಪಾರ್ಥನ ಶೌರ್ಯವನ್ನು,' ಎನ್ನುತ್ತಾ ಅರ್ಜುನನಿಗೆ ಎದುರಿಸಿ ನಿ೦ತು ಬಾಹುವನ್ನು ಅಪ್ಪಳಿಸಿದನು. ಅವರು ಬೊಬ್ಬಿಡುತ್ತಾ- ಘರ್ಜಿಸುತ್ತಾ ಇಬ್ಬರು ಪರಸ್ಪರ ಕೈಗಳನ್ನು ಹಿಡಿದರು. ಅವರು ಹೊಕ್ಕು-ಬಗ್ಗಿ ನುಗ್ಗಿ, ಒಡನೆ ಹತ್ತಾ ಹತ್ತಿಯಲ್ಲಿ ಬಹಳ ಹೊಡೆಯುತ್ತಾ ಪರಸ್ಪರ ಬಹುವಿಧದ ಬಿನ್ನಾಣದಿಂದ ಚಾಳಿಸಿದರು- ಹೀಯಾಳಿಸಿದರು.
ಅರ್ಥ:ಪಾರ್ಥನು ಶಿವನಿಗೆ,'ನಿನಗೆ ಗಾಯವು೦ಟೇ ತೋರು, ಎರಡನೆಯ ದಾರಿ ಬಿಡು, 'ಜೊಕ್ಕೆಯ ಯವನ' ಎಂದು ನಿಂದಿಸಿ, ಅಜೀಯನಾದ ಶಿವನೊಡನೆ ಅವನ ಎದುರು ಎದ್ದು ಹರನನ್ನು ಕೈಯಿಂದ ತಿವಿದನು. ಪೇರುವ- ಪೇರಿಸು ಗಾಯವಾಗುವ ಘಾತಿಗೆ- ಹೊಡೆತಕ್ಕೆ ನಿಮ್ಮ ಮತವು ಎಮಗಾಯಿತೆ, ನೀವು ಮಾಡಿದ್ದನ್ನ ನಾವೂ ಮಾಡಬೆಕಾಯಿತೇ- ಎನ್ನುತ್ತಾ ಶಿವನು ಬಲವಾಗಿ ಪೂರ್ಣ ಕೈ ಎತ್ತಿ ಧನ೦ಜಯನನ್ನು ಮೆಲ್ಲಗೆ ತಿವಿದನು.
ಅರ್ಥ:ಅರ್ಜುನನು ಶಿವನ ಸಣ್ನ ತಿವಿತಕ್ಕೆ ಬಳಲಿ ಸುಧಾರಿಸಿಕೊಂಡನು. ನಂತರ ಅವನು ಶ೦ಕರನ ವಕ್ಷಸ್ಥಳವನ್ನು ಹೊಡೆದನು. ಅಲ್ಲಿಯೇ ತಿರುಗಿ ತಪ್ಪಸಿಕೊಂಡು ಗಿರೀಶನು ಮೇಲೆಬಿದ್ದನು. ಇಂದ್ರನ೦ದನ ಪಾರ್ಥನು ಪುನಃ ತಿವಿದನು. ಶ೦ಭುವು ಪಾರ್ಥನ ಆತನ ತಲೆಗೆ ಹೊಡೆತಕೊಟ್ಟನು; ಹೀಗೆ ಇಬ್ಬರ ವಿಷಮ ಹೊಡೆದಾಟದ ಆರ್ಭಟ ಜಗತ್ತನ್ನೇ ನಡುಗಿಸಿತು.
ಅರ್ಥ:ಅರ್ಜುನನು ಕಿರಾತವೇಶದ ಶಿವನಿಗೆ,'ನಿನಗೆ ನಾನು ಕೂಡಾ ಬೆರಗಾದೆ ಕಾಣಯ್ಯಾ, ನೀನು ಇ೦ದು ನನಗೆ ಮೆಚ್ಚಿದೆ; ದೇವ ದಾನವ ಮನುಜರು ನನಗೆ ಪಾಡಲ್ಲ- ಜೋಡಿಯಲ್ಲ- ಸಮವಲ್ಲ; ನೀನು ನಮ್ಮ- ನನ್ನನ್ನು ಬಗ್ಗಿಸಿದೆಯಲ್ಲಾ; ನೀನು ಸೂರ್ಯನೊ, ಅಥವಾ ದೇವೆ೦ದ್ರನೋ, ಹರ ತನುಜ ಕುಮಾರನೊ, ವಿಷ್ಣುವೊ, ಅಥವಾ ಆ ಪರಶಿವನೋ! ನೀನು ಕಿನಿಜವಾಗಿಯೂ ಕಿರಾತನೊ?' ಎನ್ನುತ್ತಾ ಮತ್ತೆ ಶಿವನನ್ನು ಆಕ್ರಮಿಸಿದನು.
ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ |
ನೋಯನೊ೦ದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ || ೩೬ ||
ಪದವಿಭಾಗ-ಅರ್ಥ:ಗಾಯವನು ಮನ್ನಿಸುತ(ಕ್ಷಮಿಸಿ, ಲೆಕ್ಕಿಸದೆ) ಶಿವ ಪೂರಾಯದಲಿ(ಪೂರಾ ಶಕ್ತಿಯನ್ನು ಉಪಯೋಗಿಸಿ) ಮೆಟ್ಟಿದನು ಪಾರ್ಥನ, ಬಾಯೊಳೊ+ ಉಕ್ಕುದು ರುಧಿರ(ರಕ್ತ) ನಾಸಿಕದ+ ಎರಡು ಬಾಹೆಯಲಿ, ನೋಯ ನೊ೦ದನು ಮೀರಿ ಮುನಿಯಲು+ ಅಪಾಯವಾದುದು+ ಅಕಟಕಟಾ, ತಪ್ಪಾಯಿತೇ! ತಪ್ಪಾಯ್ತು+ ಎನುತ ಮರುಗಿದನು ಮದನಾರಿ(ಮದನ- ಮನ್ಮಥನ ಶತ್ರು, ಶಿವ).
ಅರ್ಥ:ಕಿರಾತ ವೇಸದ ಶಿವನು ಅರ್ಜುನನ ಆಕ್ರಮಣದಿಂದ ತನಗಾದ ಗಾಯವನ್ನು ಲೆಕ್ಕಿಸದೆ, ಪೂರಾ ಶಕ್ತಿಯನ್ನು ಉಪಯೋಗಿಸಿ ಪಾರ್ಥನನ್ನು ಮೆಟ್ಟಿದನು; ಆಗ ಪಾರ್ಥನ ಬಾಯಿಯಿಂದ ಮೂಗಿನ ಎರಡೂ ಹೊಳ್ಳೆಗಳಲ್ಲಿ ರಕ್ತವು ಉಕ್ಕಿತು. ಓಹೋ, ಭಕ್ತ ಪಾರ್ಥನು ನೋವಿನಿಂದ ನೊ೦ದನು; ತಾನು ಮಿತಿಮೀರಿ ಮುನಿಯಲು- ಸಿಟ್ಟುಮಾಡಿದಾಗ ಅಪಾಯವಾಯಿತು. ಅಕಟಕಟಾ, ತಪ್ಪಾಯಿತೇ! ತಪ್ಪಾಯ್ತು! ಎನ್ನುತ್ತಾ ಶಿವನು ಭಕ್ತನಿಗಾಗಿ ಮರುಗಿದನು.
ಬಿರುದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿ೦ದ್ರಿಯವರ್ಗ ನೆಗ್ಗಿತು ನೆನಹಿನೊಡ್ಡವಣೆ |
ಹರಿದುದ೦ಗ ಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆ೦ಡಾದನಾ ಪಾರ್ಥ || ೩೭ ||
ಪದವಿಭಾಗ-ಅರ್ಥ:ಬಿರುದುದು(ಒಡೆಯಿತು)+ ಈತನ ಗರ್ವಗಿರಿ, ಮದ+ ಮುರಿದುದು+ ಈತನ ಶಕ್ತಿ ಸಲೆ ಟೆಬ್ಬರಿಸಿತು(ಶಕ್ತಿಗುಂದಿತು, ಕುಗ್ಗಿಸು- ವೆಂ.ಸು.ನಿಘಂಟು),+ ಇ೦ದ್ರಿಯವರ್ಗ ನೆಗ್ಗಿತು(ಬಳಲಿತು), ನೆನಹಿನ+ ಒಡ್ಡವಣೆ(ನೆನಪಿನ ಹತೋಟಿ) ಹರಿದುದು,+ ಅಂಗ(ದೇಹ) ಸ್ವೇದಜಲ(ಬೆವರಿತು), ಕಾಹುರತೆ(ಆವೇಶ, ಸೊಕ್ಕು, ಕೋಪ- ದಾಸ ಸಾಹಿತ್ಯ ನಿಘಂಟು) ಕಾಲ್ವೊಳೆಯಾಯ್ತು ಮತಿ(ಬುದ್ಧಿ ಕಾಲಿನ ಕೆಳಗಾಯಿತು), ನಿಬ್ಬರದ( ಅತಿಶಯ, ಹೆಚ್ಚಳ, ಕಠೋರತೆ) ಬೆರಗಿನ ಬೇಟದಲಿ ಬೆ೦ಡಾದನು+ ಆ ಪಾರ್ಥ
ಅರ್ಥ:ಶವನು ಪಾರ್ಥನನ್ನು ಕೆಡವಿ ಅಲ್ಪ ಬಲದಿಂದ ಮೆಟ್ಟಿದಾಗ, ಪಾರ್ಥನ ಗರ್ವಗಿರಿ-ಗರ್ವದ ಬೆಟ್ಟ ಒಡೆಯಿತು. ಅವನ ಮದ ಮುರಿಯಿತು. ಅನನ ಶಕ್ತಿಯ ಸಲೆ- ಮೂಲ ಶಕ್ತಿಗುಂದಿತು, ಇ೦ದ್ರಿಯವರ್ಗ ಬಳಲಿತು, ಅವನ ನೆನಪಿನ ಹತೋಟಿ ಹರಿಯಿತು. ದೇಹದಿಂದ ಬೆವರು ಹರಿಯಿತು, ಸೊಕ್ಕು, ಕೋಪ ಇಳಿಯಿತು. ಬುದ್ಧಿ ಕಾಲಿನ ಕೆಳಗಾಯಿತು, ಅತಿಶಯವಾದ ಬೆರಗಿನಲ್ಲಿ ಸಿಲುಕಿ ಆ ಪಾರ್ಥನು ಬೆ೦ಡಾದನು.
ಅರ್ಥ:ಅರ್ಜುನನು ತನಗಾದ ಸೋಲಿನ ಕಾರಣವನ್ನು ಕುರಿತು ಚಿಂತಿಸಿದ; ತನ್ನಿಂದ ಯಾವ ಸುವ್ರತವು ಭ೦ಗವಾಗಿತ್ತೋ?, ಅಥವಾ ತನ್ನಿಂದ ಯಾವ ದೈವ ದ್ರೋಹವು ಆಗಿತ್ತೋ? ತಾನು ಯಾವ ಶಿವಭಕ್ತನ ಅಪರಾಧಿಯೋ? ತಾನು ಪೂರ್ವ ಜನ್ಮದಲ್ಲಿ ಯಾವ ಹಿರಿಯರನ್ನು ಹಳಿದೆನೋ- ನಿಂದಿಸಿದೆನೋ?, ಅಥವಾ ಯಾವ ಧರ್ಮವನನ್ನು ಅಳಿದೆನೋ- ನಾಶಮಾಡಿಗೆನೋ? ತನಗೆ ಈ ಯಾವ ಪರಿ ಪರಿಭವ- ಸೋಲು ಎಂಬ ಫಲ- ಹಣ್ಣು ಯಾವ ಅಪರಾಧದಮರ ಈ ಫಲವನ್ನು ನೀಡಿತು? ಎ೦ದ.
ಅರ್ಥ:ಅರ್ಜುನನುಯೋಚಿಸಿದ,'ಈತ ದಿಟಕ್ಕೂ ಬೇಡರವನೇ? ತಾನೊ ವಿಖ್ಯಾತ ನರ ಅಲ್ಲಲೇ!, ತಾನು ದಿಟವಾಗಿಯೂ ಜಾತ ಪಾರ್ಥನೇ? ಚಿಂತಿಸಿ ನೋಡಿದರೆ, ಇವನು ಶಬರನಲ್ಲ; ಈತ ವೇಷ ಮರಸಿದ ಪಲ್ಲಟದವನೋ? ಅಥವಾ ಶ್ವೇತತುರುಗನಾದ- ತನ್ನ (ಅರ್ಜುನನ) ಪ್ರತಿರೂಪವೊ? ಇವನಿಗೆ ಸೊತರೆ ತಾನು ಕು೦ತೀತನುಜನಲ್ಲ, ನಿಶ್ಚಯವು ಎಂದು ಚಿ೦ತಿಸಿದ.
ಅರ್ಥ: ಶಿವನು ತಿಳಿಯೆನೇ ಎ೦ದು ದೈವದ ಸರಿಯ- ಸಹಜ ಶಕ್ತಿಯನ್ನು ನೋಡಿದರೂ ಸತ್ಯ ಗೋಚರಿಸಬಹುದೇ? ರಹಸ್ಯವಾದ ಮಾಯೆಯಲ್ಲಿ ಗೌಪ್ಯವಾಗಿ ಅಡಗಿರುವ ಆತ್ಮನನ್ನು ವೇದಗಳು ಹೇಳಿಕೊಡವೇ? ವೇದಗಳು ಮನುಷ್ಯನ ಶಿರವನ್ನು ಎಚ್ಚರಿಸಿ ತನ್ನನ್ನು ಅಖ೦ಡ ಚಿನ್ಮಯದ ಅರಿವು ತಾನು ಎಂದು ಯಾವನು ಅರಿವನು- ತಿಳಿಯುವನು?' ರಾಯನೇ ಕೇಳು ಎಂದ ಮುನಿ.
ಅರ್ಥ:ಅರ್ಜುನನು ಮತ್ತೂ ಚಿಂತಿಸಿದ,'ತನಗೆ ಹ೦ದಿಯೇತಕ್ಕೆ ಬೇಕಿತ್ತು? ಕಾಡಿನ ಶಬರನೊಡನೆ ಹೋರಾಟಮಾಡಲು ಏತಕ್ಲೆ ಹೋದೆನೊ? ಪುಳಿಂದನೇ ಮಾನ್ಯವಂತನು ನಾವು ಅವಮಾನ್ಯರಾದೆವಲ್ಲಾ- ಅಗೌರವಕ್ಕೆ ಒಳಗಾದೆವಲ್ಲಾ! ತನ್ನಿಂದ ಶಿವನ ಉಪೇಕ್ಷೆಯೊ, ತಾನು ಇ೦ದು ಶಿವಪದ ಭಕ್ತಿ ಶೂನ್ಯನೋ? ಭಾಗ್ಯಹೀನನು ತಾನು ಆದೆನಲ್ಲಾ! ಹಾ!' ಎನ್ನುತ್ತಾ ಚಿ೦ತಿಸಿದ.
ಅರ್ಥ:ಅರ್ಜುನನು ಮತ್ತೆ ಯೋಚಿಸಿದ,' ಚಿಂತೆ ಏಕೆ ಮಾಡುವುದು? ಅದು ಕೆಟ್ಟದ್ದು; ತಾನು ವಿಚಾರ ಇಲ್ಲದವನಾದರೆ ಶಿವನು ಮಾಡುವುದೇನು? ಮಹೇಶ್ವರನನ್ನು ಮರೆಹೋಗುತ್ತೇನೆ; ಈ ಕಿರಾತನ ವಿಚಾರವನ್ನು ಬಳಿಕ ನೋಡಿಕೊಳ್ಳುವೆನು . ಏಕೆ, ಇವನನ್ನು ನಿಮಿಷದಲ್ಲಿ ಗೆಲ್ಲುವೆ,' ಎನ್ನುತ್ತಾ, ಮನಸ್ಸನು ವಿವೇಕ ಸಂಪತ್ತಿಗೆ ವಿವೇಕ ಲಕ್ಷ್ಮಿಯ ಕಟಾಕ್ಷ ಮತ್ತು ಚಿತ್ತಕ್ಕೆ ಮನಸ್ಸನ್ನು ಒಪ್ಪಿಸಿದನು.
ಅರ್ಥ:ಅರ್ಜುನನು ,'ಶ್ರೇಷ್ಠವಾದ ಶೈವ-ಸ್ತವವವನ್ನು ಹೇಳಿ ಆ ಲಿಂಗಕ್ಕೆ ನಮಿಸಿದನು; ಅದನ್ನು ಸುತ್ತಿಬಂದು,ಮತ್ತೆ ಶುದ್ಧಮನಸ್ಸಿನ ಪಾರ್ಥನು ಮನದ ಭಾವಶುದ್ದಿಯಲಿ ಅಡ್ಡಬಿದ್ದು ನಮಿಸಿದನು; ಕಮಲಭವನೂ, ದೇವತೆಗಳಿಂದ ನಮಸ್ಕಾರ ಪಡೆದವನೂ, ಗಿರಿಜಾರಮಣನೂ, ಭಕ್ತ ಕುಟು೦ಬಿಯೂ,, ದೇವೋತ್ತಮನೂ, ತ್ರಿಯ೦ಬಕನೂ ಆದ ಶಿವನನ್ನು ಪುಷ್ಟಿವರ್ಧನನೇ ಕರುಣಿಸುವುದು,' ಎ೦ದು ಬೇಡಿಕೊಂಡ.
ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭ೦ಗಿಸಿತೆನ್ನ ಬಿ೦ಕದವೊಡೆಯ ನೀನಿರಲು |
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯ೦ಕರ ಭುಜವನೊದರಿಸುತಿತ್ತ ಮು೦ದಾದ || ೪೫ ||
'ಪದವಿಭಾಗ-ಅರ್ಥ:- ಗೆಲಿದನು+ ಎನ್ನನು ಶಬರನು,+ ಈತನ ಗೆಲುವ ಶಕ್ತಿಯ ಕೊಡು, ಕಿರಾತನ ಬಲುಹು ಭ೦ಗಿಸಿತು, ಎನ್ನ ಬಿ೦ಕದ+ ವೊ+ ಒಡೆಯ ನೀನಿರಲು ಹಲವು ಮಾತೇನು+ ಇವನ ಮುರಿವ+ ಅಗ್ಗಳಿಕೆಯನೆ (. ಸಾಮರ್ಥ್ಯ ) ಕೃಪೆ ಮಾಡು+ ಎನುತ, ಪರಬಲ(ಶತ್ರು ಸೇನೆಗೆ) ಭಯ೦ಕರ ಭುಜವನು+ ಒದರಿಸುತ+ ಇತ್ತ ಮು೦ದಾದ.
ಅರ್ಥ:ಅರ್ಜುನನು ಶಿವನನ್ನು ಕುರಿತು ಪ್ರಾರ್ಥಿಸಿದ,' ನನ್ನನು ಈ ಶಬರನು ಗೆದ್ದನು; ಈತನನ್ನು ಗೆಲ್ಲುವ ಶಕ್ತಿಯನ್ನು ಶಿವನೇ ನನಗೆ ಕೊಡು, ಕಿರಾತನ ಬಲಾಢ್ಯತೆ ನನ್ನನ್ನು ಭ೦ಗಿಸಿತು- ನನ್ನ ಬಿ೦ಕದ- ಅಭಿಮಾನದ ಒಡೆಯನು ನೀನಿರುವಾಗ ಅವನಾನ ಪಡಿಸಿತು. ಹಲವು ಮಾತೇನು? ಇವನನ್ನು ಮುರಿವ+- ಸೋಲಿಸುವ ಸಾಮರ್ಥ್ಯವನ್ನು ನನಗೆ ಕೃಪೆ ಮಾಡು,' ಎನ್ನುತ್ತಾ, ಪರಬಲ ಭಯ೦ಕರನಾದ ಅರ್ಜುನನ ಭುಜವನನ್ನು ತಟ್ಟಿ ಸದ್ದುಮಾಡುತ್ತಾ, ಇತ್ತ ಶಿವನ ಕೆಡೆ ಮು೦ದೆ ಬಂದ.
ಅರ್ಥ: ಅರ್ಜುನನು ಶಬರನಿಗೆ, 'ಈಗ ನೀನು ನನ್ನ ಪೌರುಷವನ್ನು ಕಾಣಬಹುದೋ ಶಬರ; ನಿನ್ನ ಈ ಪ್ರಾಣವು ನನ್ನ ಅಧೀನದಲ್ಲಿದೆ ತಿಳಿಯೋ!; ನನಗೆ ಸ್ಥಾಣು ಶಿವನ ಬಲ ಬೆಂಬಲವಿದೆ. ಇನ್ನು ನಿನ್ನ ನಿನ್ನ ಪ್ರಾಣವನ್ನು ಹಿ೦ಡುವೆನು; ಪೌರುಷ ತೋರಿದರೆ ಕುತ್ತಿಗೆಯನ್ನು ಮುರಿಯುವೆನು; ಶಿವನಾಣೆ ಹಾಣಾಹಾಣಿಗೆ ಸಮ್ಮುಖಕೆ- ನನ್ನೆದುರು ಯುದ್ಧಕ್ಕೆ ಬಾ; ಅನುವಾಗು ಎನ್ನುತ್ತಲೆ ಎವೆಯಿಕ್ಕದೆ ನೇರವಾಗಿ ಶಬರನನ್ನು ದಿಟ್ಟಿಸಿ ನೋಡಿದ.
ಕ೦ಡನರ್ಜುನನೀ ಕಿರಾತನ
ಮ೦ಡೆಯಲಿ ತಾ ಮಳಲ ಲಿ೦ಗದ
ಮ೦ಡೆಯಲಿ ಪೂಜಿಸಿದ ಬಹು ವಿಧ ಕುಸುಮ ಮ೦ಜರಿಯ |
ಕ೦ಡನಿತ್ತಲು ಮುರಿದು ಪುನರಪಿ
ಕ೦ಡನೀ ಶಬರ೦ಗಿದೆತ್ತಣ
ದ೦ಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ || ೪೭ ||
ಪದವಿಭಾಗ-ಅರ್ಥ:ಕ೦ಡನು+ ಅರ್ಜುನನು+ ಈ ಕಿರಾತನ ಮ೦ಡೆಯಲಿ (ತಲೆಯಮೇಲೆ) ತಾ ಮಳಲ ಲಿ೦ಗದ ಮ೦ಡೆಯಲಿ (ಶಿವಲಿಂಗದ ತಲೆಯಮೇಲೆ) ಪೂಜಿಸಿದ ಬಹು ವಿಧ ಕುಸುಮ ಮ೦ಜರಿಯ (ಗೊಂಚಲು), ಕ೦ಡನು+ ಇತ್ತಲು(ಹಿಂದಕ್ಕೆ ಮಳಲ ಲಿಂಗದ ಕಡೆ ) ಮುರಿದು, ಪುನರಪಿ ಕ೦ಡನು+ ಈ ಶಬರ೦ಗೆ+ ಇದೆತ್ತಣ ದ೦ಡಿಯೋ (ಹಿರಿಮೆ) ಹಾ ! ಯೆ+ ಎನುತ ಸೈವೆರಗಾದನು (ಅತ್ಯಾಶ್ಚರ್ಯ.) + ಆ ಪಾರ್ಥ.
ಅರ್ಥ: ಪುನಃ ಹೂಗೊಂಚಲು ಹಾಕಿ ಅರ್ಜುನನು ಕ೦ಡನು ಈ ಕಿರಾತನ ತಲೆಯಮೇಲೆ ತಾನು ಮಳಲ ಶಿವಲಿಂಗದ ತಲೆಯಮೇಲೆ ಪೂಜಿಸಿದ ಬಹು ವಿಧ ಕುಸುಮ ಗೊಂಚಲುನ್ನು ಕ೦ಡನು. ಹಿಂದಕ್ಕೆ ಬಂದು ಮಳಲ ಲಿಂಗದ ಕಡೆ ಮುರಿದು ಹೋಗಳನ್ನು ಹಅಕಿದನು., ಪುನರಪಿ- ಮತ್ತೆ ಆ ಹೂವುಗಳನ್ನು ಶಬರನ ತಲೆಯಮೇಲೆ ಕಂಡನು. ಈ ಶಬರನಿಗೆ ಇದೆಲ್ಲಿಯ ಹಿರಿಮೆಯೋ ಹಾ ! ಎನ್ನುತ್ತಾ ಆ ಪಾರ್ಥನು ಅತ್ಯಾಶ್ಚರ್ಯಪಟ್ಟನು .
ಅರ್ಥ:ಅರ್ಜುನನು ಮತ್ತೆ ಖ೦ಡ ಪರಶು ಶಿವನ ತಲೆಯಲ್ಲಿ ತಾನು ಲಿಂಗಕ್ಕೆ ಏರಿಸಿದ ಹೂಗೊಂಚಲನ್ನು ಕ೦ಡನು. ಈಚೆಯಲಿ ಲಿ೦ಗದ ಉತ್ತಮಾ೦ಗವಾದ ಅದರ ತಲೆಯ ಮೇಲೆ ತಾನು ಇಟ್ಟ ಹೂಗಳ ಗೊಂಚಲನ್ನು ಕಾಣದೆಹೋದನು. ಈ ಕೌತುಕವು ಪಾರ್ಥನನ್ನು ರ೦ಜಿಸಿ- ಆನಂದಿಸಿ ಸಂತಸ ಮತ್ತು ಅದ್ಭುತವನ್ನು ಹೊತ್ತು ತಂಬಿದವು . ಇದು ಎತ್ತ- (ಶಿವನೊಡನೆ ಯುದ್ಧ); ಇದು ಯಾವ ಬಗೆಯ- ಎಷ್ಟೊಂದು ಭಯಾನಕವು ಎಂದು ಯೋಚಿಸುತ್ತಾ ಧನ೦ಜಯನನ್ನು ಕಣ್ಣುಗಳು ಆನಂದ ಭಾಷ್ಪದ+ ರಸದಲಿ- ಮುಳುಗಿದವು .
ಅರ್ಥ: ಮೂರನೆಯ ಬಾರಿಯೂ ತನ್ನ ಪೂಜೆ ಹೂವು ಶಬರನ ತಲೆಯ ಮೇಲೆ ಕಾಣಲು ಅಚ್ಚರಿಯ ಜೊತೆಗೆ ಪಾರ್ಥನಿಗೆ ಜ್ಞಾನೋದಯವೂ ಆಯಿತು. ಅವನು "ಈ ಬೇಡನೇ ಶಿವನಲಾ! ಸಾಕ್ಷಾತ್ ಚತುರ್ದಶ ಲೋಕದ ಕರ್ತುವಲಾ! ಕಿರಾತ ವೇಸದ ವ್ಯವಹಾರದಿಂದ ಸುಳಿದದದ್ದು ನನಗೆ ಅನುಗ್ರಹ ಮಾಡಲು ಅನುಗ್ರಹಮಾಡಲಲ್ಲವೇ)! ನನಗೆ ಇದು ಈ ಉಪವಾಸ ತಪದ ಪಿತ್ತದ ಪರಿಶ್ರಮದ ಅಹಂಕಾರ ತಲೆಗೇರಿದುದಲ್ಲವೇ! ಶಿವಶಿವಾ ಮಹಾದೇವಾ," ಎನ್ನುತ್ತಾ ಕಲಿಪಾರ್ಥನು ಮರುಗಿದನು.
ಅರ್ಥ: ಪಾರ್ಥನ ಮನಸ್ಸು ಇಬ್ಬಗೆಯಾಯ್ತು- ಎರಡು ಭಾವಗಳಿಂದ ತುಂಬಿತು- ಶಿವನನ್ನು ಕಂಡ ಆನಂದ, ಅವನೊಡನೆ ಹೊಡೆದು ಬಡಿದು ಹೋರಾಟ ಮಾಡಿದ ದುಃಖದಿಂದ ಕೂಡಿದ ಪಶ್ಚಾತ್ತಾಪ. ಅವನ ಕಣ್ನುಗಳು ಬೆದರಿದವು; ಮೈ (ಬಣ್ಣದಲ್ಲಿ) ಬಿಳಿಚಿ ಕೊಂಡಿತು; ದೇಹ ಗದಗದನೆ ನಡುಗಿತು. ಅದೇ ಸಮಯದಲ್ಲಿ ಶಿವನನ್ನು ಕಂಡ ಆನಂದದಿಂದ ಅಡಿಗಡಿಗೆ ರೋಮಗಳಿ ಹರುಷದಿಂದ ಜಡಿದುದು- ಎದ್ದುನಿಂತವು. ಕಣ್ಣುಗಳಿಂದ ಆನಂದ ಭಾಷ್ಪಗಳು ಉದುರಿದವು. ಪೌರುಷದ ಹಮ್ಮಿನ ಬೆದರಿಕೆಯ ಮೂಡತೆಯನ್ನು ಹೋಗಲಾಡಿಸಿ ತಿಳಿವಿನ ಆನಂದದ, ಭೇದದ ಗಾಯ ಘಾತಿಗೆ- ಅಂತರಂಗದಲ್ಲಿ ಈ ಎರಡು ಬಗೆಯ ಹೊಡೆತಕ್ಕೆ ಪಾರ್ಥನು ಒಳಗಾದನು.
ಅರ್ಥ:ಅರ್ಜುನನಿಗೆ ಎದುರಿಗಿದ್ದವನು ಶಿವನೇ ಸರಿ ಎಂದು ನಿಶ್ಚಯವಾಗುತ್ತಲು, ಅವನು ಮೈ ಬೆವರಿ ಆ ಬೆವರಿನ ನೀರಿನಲ್ಲಿ ಮಿ೦ದುಬಿಟ್ಟನು. ಮತ್ತೆ ಹರಸಲು ಬಂದ ಶಿವನಿಗೆ ಅಪಚಾರ ಮಾಡಿದ್ದಕ್ಕಾಗಿ ಅವನನ್ನು ದುಃಖ, ಚಿಂತೆ ಆವರಿಸಿತು, ಆ ದುಃಖದ ಕೆಸರಿನಲ್ಲಿ ಅವನು ಅದ್ದಿಹೋದನು. ಅವನು ಬಹಳ ವಿಷಾದದ ಧೂಳಿನಲ್ಲಿ ಹೊರಳಿ, ಭಯರಸದ ನದಿಯಲ್ಲಿ ಈಜಾಡಿ, ಮೈದೆಗೆದು- ಮೈಮರೆತು ಮರಗಟ್ಟಿ, ದೆಸೆಯಲಿ, ತನ್ನ ಮುಂದಿನ ನೆಡೆಯ ದಾರಿಯನ್ನು ಅರಿವುತ- ಯೋಚಿಸುತ್ತಾ, ವಿವಿಧ ಭಾವನೆಗಳ ಭೇದದಲ್ಲಿ ಧನ೦ಜಯನ ಮನಸ್ಸು ಮು೦ದುಗಾಣದೆ- ಮುಂದೆ ಏನು ಮಾಡಬೇಕೆಂದು ತೋರದೆ ಕೆಡುತ್ತಿತ್ತು- ಕೆಟ್ಟಿತು.
ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನು೦ಗಿದಡರಿದನೇ ಬಳಿಕ |
ಆಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತನೇ ಹಿ೦
ದೇಸು ಜನ್ಮದ ಜಾಡ್ಯ ಜವನಿಕೆಯಾಯ್ತು ತನಗೆ೦ದ || ೫೩ ||
ಪದವಿಭಾಗ-ಅರ್ಥ:ಏಸು(ಎಷ್ಟು) ಬಾಣದಲಿ+ ಎಚ್ಚರೆಯು(ಹೊಡೆದರೂ) ಹೊರಸೂಸಿದವು(ಗುರಿತಪ್ಪಿ ಹೊರಕ್ಕೆ ಹೋದವು) ನಾನು+ ಅರಿದುದಿಲ್ಲ(ತಿಳಿದುಕೊಳ್ಳಲಿಲ್ಲ.) ಮಹಾ ಶರೌಘವ(ಮಹಾಸ್ತ್ರವನ್ನು) ಕಳುಹೆ (ಅವನ ಮೇಲೆ ಬಿಟ್ಟರೆ) ನು೦ಗಿದಡೆ+ ಅರಿದನೇ(ಆ ಮಹಾಸ್ತ್ರವನ್ನು ನುಂಗಿದಾಗಲಾದರೂ ತಿಳಿದುಕೊಂಡೆನೇ- ಇವನು ಶಿವನೆಂದು -ಇಲ್ಲ!) ಆಶರಾಸನ ಖಡ್ಗವನ್ನು ಅವನು ಕೊಳ್ಳಲು(ಕಸಿದುಕೊಳ್ಳಲು), ಏಸರೊಳಗೆ+ ಎಚ್ಚತ್ತನೇ ಹಿ೦ದೆ+ ಏಸು ಜನ್ಮದ ಜಾಡ್ಯ, ಜವನಿಕೆ(ಯೌವನ)ಯಾಯ್ತು ತನಗೆ+ ಎಂದ
ಅರ್ಥ:ಎಷ್ಟು ಬಾಣಗಳಿಂದ ಅವನನ್ನು ಹೊಡೆದರೂ ಗುರಿತಪ್ಪಿ ಹೊರಕ್ಕೆ ಹೋದವು; ಆದರೂ ನಾನು ಇವನು ಶಿವನೆಂದು ತಿಳಿದುಕೊಳ್ಳಲಿಲ್ಲ. ಮಹಾ ಮಹಾಸ್ತ್ರವನ್ನು ಅವನ ಮೇಲೆ ಬಿಟ್ಟರೆ, ಆ ಮಹಾಸ್ತ್ರವನ್ನು ನುಂಗಿದಾಗಲಾದರೂ ತಿಳಿದುಕೊಂಡೆನೇ- ಇವನು ಶಿವನೆಂದು -ಇಲ್ಲ! ಬಳಿಕ ಮಯನು ಕೊಟ್ಟ ಸೋಲಿಲ್ಲದ ಆಶರಾಸನ ಖಡ್ಗವನ್ನು ಅವನು ಕಸಿದುಕೊಳ್ಳಲು ಅಷ್ಟರೊಳಗೆ ಎಚ್ಚತ್ತನೇ? - ಇಲ್ಲ. ಇದು ನಾನು ಹಿ೦ದೆ ಎಷ್ಟು ಜನ್ಮದ ಜಾಡ್ಯವು -ಅಜ್ಞಾನವು ತನ್ನಲ್ಲಿ ಈಗ ಯೌವನವನ್ನು ಪಡೆದುಕೊಂಡಿತು,ಎಂದ.
ಅರ್ಥ:ಅರ್ಉನನು,'ಯಾವನನ್ನು ಯಜ್ನಾದಿ ಕರ್ಮದಲ್ಲಿ, ಯಾವನನ್ನು ನಿಯಮಾದಿ ಯೋಗದಲ್ಲಿ, ಯಾವನನ್ನು ವಿವಿದ ಅರ್ಚನೆಯಲ್ಲಿ ಅಂಕಿತಮಾಡಿ, ಭಕ್ತಿ ಮಾರ್ಗದಲ್ಲಿ ಪೂಜಿಸುವರೊ, ಯಾವನನ್ನು ಜೀವಾತ್ಮ ಚೈತನ್ಯಕ್ಕೆ ಅವಲ೦ಬನಾದವನು ಎಂದು ಭಜಿಸುವರೊ ಅವನನ್ನು ನಾವು ರಣದಲಲಿ ಸೆಣಸಿದೆವಲಾ!ಹೋರಾಡಿದೆವಲ್ಲಾ, ಶಿವಶಿವಾ!'ಎ೦ದ.
ಅರ್ಥ:ಅರ್ಜುನನು,'ಲೋಕಪಾವನವಾದ ಮಾಯೆಯಜಗಕ್ಕೆ ಒಡೆಯರು ಅದು ಯಾರು,- ಶಿವನಲ್ಲವೇ? ಚ೦ದ್ರ ಸೂರ್ಯ ಮೊದಲಾದ ಗ್ರಹರಾಶಿ ಮತ್ತು ತಾರೆಗಳು ಯಾರ ತೇಜಸ್ಸಿನಿಂದ ಬೆಳಗುವುವು? ಶಿವನದಲ್ಲವೇ?, ಲೋಕರಚನೆ- ಸೃಷ್ಠಿ, ರಕ್ಷೆ, ಸ೦ಹೃತಿಯು- ಸಂಹಾರವು, ಇವುಗಳ ವ್ಯಾಪಾರ ತಾನು ಯಾರದು? ಶಿವನದಲ್ಲವೇ? ಆ ಜಗದೇಕ ದೈವದ ಕೂಡೆ ಕಾದಾಟವೇ? ಶಿವಶಿವಾ! ಎ೦ದ.
ಅರ್ಥ:ಅರ್ಜುನನು ಶಿವನ ಸ್ವರೂಪ- ಗುಣಗಳನ್ನು ನೆನೆಯುತ್ತಾನೆ; 'ಪ್ರಕಾಶಿಸುವ ಲಿ೦ಗಸ್ವರೂಪನು, ವಿಶ್ವಗಳ ಸಮೂಹಕ್ಕೆ ಲಿ೦ಗನು- ಮೂಲನು; ಉದಾರವಾಗಿ, ಸುಲಭವಾಗಿ ಪ್ರತ್ಯಕ್ಷನಾಗುವವನ;) ಸತ್ ಮತ್ತು ಸತ್ ಎಂಬ ಪರಲೋಕದ ಪರಶಿವನು; ಯಾರು ಶಿವಭಾವದ ಹೆಚ್ಚಿನದೊ ಆ ಲಿ೦ಗದಲ್ಲಿ ಪರಮ- ಶ್ರೇಷ್ಠನಾದ ಪರರೂಪಕ್ಕಿಂತ ಪರಾತ್ಪರ ತರನಾದ ನಿರೂಪನದ ಆವನು ಪರಶಿವನು; ಆತನೊಡನೆ ಅರರೆ ನಾವು ಹೊಡೆದಾಡಿದೆವಲಾ! ಶಿವಶಿವಾ!' ಎಂದ.
ಆ ಅಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾ ರಿಯಾವನಮಾತೃಕಾಕ್ಷರ ರೂಪನಕ್ಷಯನು |
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕದನವೆ ಶಿವಶಿವಾಯೆ೦ದ || ೫೯ ||
ಪದವಿಭಾಗ-ಅರ್ಥ:ಆ 'ಅ'ಕಾರ 'ಉ'ಕಾರ ವಿಮಲ 'ಮ'ಕಾರ ಯುಕ್ತ- ಕೂಡಿದ ಏಕಾಕ್ಷರದ ವಿಸ್ತಾರಿಯು, ಆವನ ಮಾತೃಕ+ ಅಕ್ಷರ ರೂಪನು+ ಅಕ್ಷಯನು; ಆರು ವಾಙ್ಮಯನು+ ಆರು ವಾಚೋದೂರನು+ ಆರು ವಚೋ ನಿಯಾಮಕನು+ ಆರು+ ಅವನ ಕೂಡೆ+ ಎವಗೆ(ನಮಗೆ) ಕದನವೆ? ಶಿವಶಿವಾ! ಯೆ+ ಎ೦ದ.
ಅರ್ಥ:ಅರ್ಜುನನು,'ಆ 'ಓಂ' ಕಾರದ ಬೀಜಾಕ್ಷರಗಳಾದ 'ಅ'ಕಾರ 'ಉ'ಕಾರ ಶ್ರೇಷ್ಠ 'ಮ'ಕಾರ ಇವುಗಳಿಂದ ಕೂಡಿದ ಏಕಾಕ್ಷರವಾದ ಓಂ ಕಾರದ ವಿಸ್ತಾರ ಸ್ವರೂಪನು, ಯಾವನು ಮಾತೃಕ- ಮೂಲ ಅಕ್ಷರ ರೂಪನು- ಅಕ್ಷಯನು- ನಾಶವಿಲ್ಲದವನು; ಯಾರು ವೇದಗಳ ವಾಕ್ ರೂಪನಾದ ವಾಙ್ಮಯನು; ಯಾರು ವಾಚೋ ದೂರನು- ಭಾಷೆಗೆ ಸಿಗದವನು, ಯಾರು ವಚೋ- ವಚನ- ಭಾಷೆಯ ನಿಯಾಮಕನು, ಇಂಥವನು ಯಾರೊ ಅವನ ಕೂಡೆ- ಸಂಗಡ ನಮಗೆ ಕದನವೆ? ಶಿವಶಿವಾ! ಎ೦ದ.
ಅರ್ಥ:ಅರ್ಜುನನು ತಾನೇ ಅಚ್ಚರಿ ಪಡುತ್ತಾನೆ;'ಅತಿಶಯವಾದ ಹತ್ತಾಹತ್ತಿ- ಕುಸ್ತಿ ಗಡ! ಅದೂ ದೇಹವಿಲ್ಲದ ನಿರಾಕಾರನೊಡನೆ; ತಾನು ಬಿಟ್ಟ ಮಹಾ ಅಸ್ತ್ರಗಳ ಸನೂಹಕ್ಕೆ ದೇಹವಿಲ್ಲದ ಶಿವನು ಬಲಿ, ಗಡ! ಜೀವನವು ಮೃತ್ಯು೦ಜಯನ ಸೀಮೆಯಲಿ ಆಹ! (ಇವನಿಗೆ)ಅಧಿದೈವ, ಅಧ್ಯಾತ್ಮ, ಅದಿಭೂತವೆಂಬ ಮೂರು ತಲೆ ಗಡ! ಸು- ಶ್ರೇಷ್ಠ ನಿಗಮದ ವ್ಯೂಹಕ್ಕೂ ದೂರನು- ಸಿಗದೆ ಇರುವವನ ಕೂಡೆ, ಹರನೊಡನೆ ಯುದ್ಧಕ್ಕೆ ನಾವು ಸಮಜೋಳಿ- ಸರಿಸಾಟಿ! ಏನು ಅದ್ಭುತ ಗಡ! ಶಿವ ಶಿವಾ!' ಎ೦ದ.
ಎವಗೆರಡು ಕಣು ವಿಶ್ವತೋ ಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸ೦ಗ್ರಾಮ |
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಗಡಿಸಿ ಗೆಲಲಾವು ಸಮರ್ಥರೆ ಶಿವಶಿವಾಯೆ೦ದ || ೬೧ ||
ಪದವಿಭಾಗ-ಅರ್ಥ:ಎವಗೆ(ನಮಗೆ- ನನಗೆ)+ ಎರಡು ಕಣು(ಕಣ್ಣುಗಳು,) ವಿಶ್ವತೋ ಚಕ್ಷುವಿನೊಡನೆ ಸಕ್ರೋಧ ದರುಶನವು+ ಎವಗೆ(ನಮಗೆ)+ ಎರಡು ಭುಜ ವಿಶ್ವತೋ ಭುಜನೊಡನೆ ಸ೦ಗ್ರಾಮ! ಭುವನ ಚರಣನ ವಿಶ್ವತೋಮುಖ ಶಿವನ ನಮ್ಮ ಈ ಕಾಲು ನಾಲಗೆಯ+ ಅವಗಡಿಸಿ ಗೆಲಲು+ ಆವು ಸಮರ್ಥರೆ! ಅಲ್ಲ! ಶಿವಶಿವಾಯೆ೦ದ
ಅರ್ಥ:ನನಗೆ ಎರಡು ಕಣ್ಣುಗಳು; ಅವನು ಸಹಸ್ರಾಕ್ಷ- ವಿಶ್ವತೋಚಕ್ಷು, ಅವನೊಡನೆ ನಮ್ಮದು ಬಹಳ ಕ್ರೋಧದ ದೃಷ್ಟಿ- ನೋಟ; ನಮಗೆ ಎರಡು ಭುಜ, ಅವನಗೊ ಸಹಸ್ರ- ಆ ವಿಶ್ವತೋಭುಜನೊಡನೆ ನಮ್ಮ ಸ೦ಗ್ರಾಮ! ಭುವನ- ಸ್ವರ್ಗ ಮರ್ತ್ಯ, ಪಾತಾಳಲೋಕಗಳನ್ನು ಒಂದೊಂದು ಪಾದಗಲ್ಲಿ ಅಳೆಯಬಲ್ಲವನು; ಲೋಕವ ಅಗಲ ಚರಣನ- ಪಾದವುಳ್ಳವನ ಜೊತೆ ನಮಗೆ ಕದನ! ವಿಶ್ವತೋಮುಖನಾದ ಶಿವನನ್ನು ನಮ್ಮ ಈ ಕಾಲು ನಾಲಗೆಯಿಂದ ಅವಗಡಿಸಿ- ಎದುರಿಸಿ ಗೆಲ್ಲಲು ನಾವು ಸಮರ್ಥರೆ! ಅಲ್ಲ! ಶಿವಶಿವಾ! ಎ೦ದ.
ಅರ್ಥ:ಅರ್ಜುನನು ಅವನ ನಿಜ ಪರಬ್ರಹ್ಮ ಸ್ವರೂಪವನ್ನು ವರ್ಣಿಸುತ್ತಾನೆ;'ಯಾವನೊಬ್ಬನು ಅಣೋರಣೀಯನೋ, ಅದು ಯಾವನು ಹೆಚ್ಚಿನ ಮಹತೋ ಮಹೀಯನೊ, ಅದು+ ಯಾವ ನಿರುತವೂ- ಸದಾಕಾಲವೂ ವಿಶ್ವ ಸಮಯದಲ್ಲಿ ದೄಷ್ಠಿಸ೦ಗತವೋ, ಯಾವನೊಬ್ಬನು ನಾಮ, ರೂಪು, ಗುಣಗಳ ಅವಲ೦ಬನನು ಅಲ್ಲದ ಈಶ್ವರ ನಾಮವುಳ್ಳವನೋ ಆತನಲ್ಲಿ ನಮಗೆ ಜಗಳವೇ ಶಿವಶಿವಾ!' ಎ೦ದ.
ಅರ್ಥ:ಅರ್ಜುನನು,'ಸತ್ಕೃತಿಗಳಲ್ಲಿ ಸೇವೆಗಳನ್ನು ಪಡೆಯುವವನು, ದೄಡಚಿತ್ತದಲ್ಲಿ ದರ್ಶನವನ್ನು ಪಡೆಯಬೇಕಾದವನು, ಮ೦ತ್ರವ್ಯನನ್ನು, ಆ ಶ್ರೋತವ್ಯನನ್ನು ಸ೦ಕೀರ್ತಿತವ್ಯನನ್ನು, ಅವ್ಯಯನನ್ನು, ಅಕ್ಷಯನನ್ನು ಅಭವನನ್ನು, ಅವ್ಯಧನನ್ನು, ಅಜ್ಞಾನದಿಂದ- ತಿಳುವಳಿಕೆ ಇಲ್ಲದೆ ಯೋಗವ್ಯನು- ಸಾಧನೆಯ ಬಲದಿಂದ ಸೋಲಿಸಲ್ಪಡುವವನು ಎ೦ದು ಭಾವಿಸಿ ಸೆಣಸಿದೆವಲಾ ಶಿವಶಿವಾ'!ಎ೦ದ.
ಅರ್ಥ:ಈ ರೀತಿಯಲ್ಲಿ ಅರ್ಜುನನು ಮನಸ್ಸಿನ ಅನುತಾಪವನ್ನು ಅನುಭವಿಸುತ್ತಾ, ಬೇಡನರೂಪದ ರಚನೆಯ ತೆರೆಯ ಮರೆಯಲ್ಲಿ, ಮೆರೆಯುತ್ತಿದ್ದ ಚಿನ್ಮಯದ ರೂಪಿ ಶಿವನು ನಿರಂತರವಾಗಿ ತನ್ನ ಉನ್ನತರೂಪ ರಸದಲ್ಲಿ ಅರ್ಜುನನ ಮನಸ್ಸಿನ ತಾಪವು ಅವಡಗುವಂತೆ ತರುಣ ಶಶಿಮೌಳಿ ಶಿವನು ತನ್ನ ರೂಪವನ್ನು ತೊರಿ ತ೦ಪನ್ನು ಎರೆದನು.
ಅರ್ಥ:ಶಿವನು ತನ್ನ ಈಶಾನ ರೋಪವನ್ನು ತೊರಿಸುತ್ತಾನೆ. "ಎಳೆಯ ಮುತ್ತಿನ ಕಾಂತಿಯನ್ನು ಹೊಂದಿ, ತೊಳೆದ ಪರಿಶುದ್ಧ ದೇಹದಕಾಂತಿಯಿಂದ, ಅಭಯ ವರದಹಸ್ತ ಮತ್ತು ಜೋಲಾಡುತ್ತಿರುವ ಜಪಮಣಿಯೊಂದಿಗೆ, ವೇದಗಳನ್ನೂ, ಪಾಶ ಮತ್ತು ಅ೦ಕುಶಗಳನ್ನೂ ಡಮರುಗವನ್ನೂ, ಸುಂದರ ಖಟ್ವಾ೦ಗವೆಂಬ ತಲೆಬುರುಡೆಯ ಗದೆಯನ್ನೂ, ಕಪಾಲವನ್ನು ಕೈಯಲ್ಲಿ ಹಿಡಿದವನೂ ಆದ, ಹೊಳೆವ ಶೂಲವನ್ನು ಹಿಡಿದ, ಕೈಯಲ್ಲಿ ವೇದಗಳ ಗ್ರಂಥವನ್ನು ಹಿಡಿದ, ಶೀರೋಮಣಿಯಾದ ಶಿವನು ಅ೦ದು ತನ್ನ ಈಶಾನ ಮುಖವನ್ನು ಹೊಂದಿ ಮೆರೆದನು.
ಬೇರೆ ಬೇರುರಿಗಣ್ಣುಗಳ
ಫೂತ್ಕಾರದಹಿ ಭ೦ದದ ಜಟಾ ಕೋ
ಟೀರ ಭಾರದ ಮುಖ ಚತುಷ್ಟಯ ಭುಜ ಚತುಷ್ಟಯದ |
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪ೦ಚ ವಕ್ತ್ರಾ
ಕಾರದಲಿ ಶಿವಮೆರೆದ ಪ೦ಚಬ್ರಹ್ಮ ರೂಪದಲಿ || ೭೪ ||
ಪದವಿಭಾಗ-ಅರ್ಥ:ಬೇರೆ ಬೇರೆ+ ಉರಿಗಣ್ಣುಗಳ, ಫೂತ್ಕಾರದ+ ಅಹಿ ಭ೦ದದ, ಜಟಾ ಕೋಟೀರ ಭಾರದ, ಮುಖ ಚತುಷ್ಟಯ, ಭುಜ ಚತುಷ್ಟಯದ, ವಾರಿಜಾಸನ ವಿಷ್ಣು ರುದ್ರ+ ಆಧಾರನು+ ಈಶ್ವರ ಪ೦ಚ ವಕ್ತ್ರಾಕಾರದಲಿ ಶಿವ ಮೆರೆದ ಪ೦ಚಬ್ರಹ್ಮ ರೂಪದಲಿ.
ಅರ್ಥ:ಕೊನೆಯಲ್ಲಿ ತನ್ನ ಪ೦ಚಬ್ರಹ್ಮ ರೂಪವನ್ನು ತೋರುತ್ತಾನೆ. ಶಿವನು ಐದು ಮುಖಗಳನ್ನು ಹೊಂದಿ, ಅದರಲ್ಲಿ ಬೇರೆ ಬೇರೆ ಉರಿಗಣ್ಣುಗಳು, ಕುತ್ತಿಗೆಯಲ್ಲಿ ಫೂತ್ಕರಿಸುವ ಸರ್ಪ ಸುತ್ತುವರಿದ ಭ೦ದ, ಕೋಟಿ ಕೋಟಿ ಜಟೆಗಳ ಭಾರವನ್ನು ಹೊಂದಿದ ತಲೆಗಳು,ಎದುರಿನಲ್ಲಿ ಮುಖ ಚತುಷ್ಟಯ- ನಾಲ್ಕು ಮುಖ, ನಾಲ್ಕು ಭುಜದ, ವಾರಿಜಾಸನನಾದ ಬ್ರಹ್ಮನ ರೂಪ, ಮತ್ತೆ ವಿಷ್ಣು ರುದ್ರರಿಗೆ ಆಧಾರನು; ಈಶ್ವರನು, ಪ೦ಚವಕ್ತ್ರಾಕಾರದಲಿ- ಐದು ಮುಖದ ರೂಪದಲ್ಲಿ- ಪ೦ಚಬ್ರಹ್ಮ ರೂಪದಲ್ಲಿ, ಶಿವನು ಮೆರೆದನು.
ಅರ್ಥ:ಶ್ರುತಿಗಳು, ಉಪನಿಷದ್‍ಗಳು ಮೊದಲಾದ ಅಖಿಲ ದೇವತೆಯರು, ಆ ಕಲ್ಪಿತ ಕಿರಾತರು ತಮ್ಮ ಘೋರ ಆಕೃತಿಯನ್ನು ಬಿಟ್ಟು ಸೌಮ್ಯರಾಗಿ ಈತನ ಸುತ್ತುವಲಯದಲ್ಲಿ ಸುಳಿದರು; ಸ್ಮಿತ, ಮಧುರ ಮುಖಕಾ೦ತಿ, ಶಂತ ಕಡೆಗಣ್ಣಿನ ನೋಟದ ಅಲೆಯಲಲ್ಲಿ ಶಿವನು ಈಶಾನನ ಧೀರತನದಲ್ಲಿ ಕಾಣಿಸಿಕೊಂಡನು. ಅವನ ಎಡದಲ್ಲಿ ಗೌರಿದೇವಿಯರು ಸಮೀಪವೇ ಇದ್ದು ಶೋಭಿಸಿದರು.
ಅರ್ಥ:ಅರ್ಜುನನ ಮೈತುಂಬಾ ಬಯಲಲ್ಲಿ ಮುಳ್ಲಿನ ಗಿಡಬೆಳೆಯುವಂತೆ ರೋಮಾಚನವಾಯಿತು. ಹರುಷದ ಉಕ್ಕೇರುವಿಕೆಯಲ್ಲಿ ಕುಸಿದ ಮನಸ್ಸನ್ನು ತಿರುವಿ ಚಿತ್ತವನ್ನು ಹತೋಟಿಗೆ ತಂದನು. ಮನಸ್ಸಿಗೆ ಬುದ್ಧಿಯ ಹಮ್ಮು- ಅಹಂಕಾರದ ಹಮ್ಮುಗೆಯ- ಸೊಕ್ಕನ್ನು, ಕುಂಬಾರನು ಚಕ್ರವನ್ನು ಪರಿಶ್ರಮದಿಂದ ಹಿಡಿಯುವ ರೀತಿಯಲ್ಲಿ, ಸೊಕ್ಕನ್ನು ಹಿಡಿತಕ್ಕೆ ತಂದು ಶಿವನ ಕರುಣೆಗೆ ಕಾತರಿಸುತ್ತಾ ನೆಲಕ್ಕೆ ಮೈಯನ್ನು ಚಾಚಿ, ತನ್ನ ಎರಡೂ ತೋಳುಗಳನ್ನು ಮುಂದಕ್ಕೆ ನೀಡಿ ಕೈಮುಗಿದನು.
ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾ೦ದಕೂಪ ಜಲಾವಗಾಹದಲಿ |
ಸ್ತಿಮಿತನನು ದುರ್ಭೊಧವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯ ಬೇಕೆ೦ದ || ೮೦ ||
ಪದವಿಭಾಗ-ಅರ್ಥ:ಕ್ಷಮಿಸುವುದು ಸರ್ವೇಶ ಸರ್ವೋತ್ತಮ ವೃಥಾ ಸುಭಟಾಭಿಮಾನ ಭ್ರಮಿತನನು ಮೋಹಾ೦ದಕೂಪ ಜಲ+ ಅವಗಾಹದಲಿ(ಮುಳುಗಿ ಸ್ನಾನ ಮಾಡುವುದು, ನೀರಿನ ದೋಣಿ, ಆಳ, ಮಗ್ನವಾಗಿರುವಿಕೆ) ಸ್ತಿಮಿತನನು ದುರ್ಭೊಧವೇದ ಭ್ರಮಿತನನು ಕಲ್ಯಾಣಪದ ನಿರ್ಗಮಿತನನು(ಹಿಂತಿರುಗಿದವನು) ಕಾರುಣ್ಯನಿಧಿ ಕೈಗಾಯಬೇಕು (ಕೈಹಿಡಿದು ಕಾಪಾಡಬೇಕು; ಮುಳುಗುವವನನ್ನು ಕೈಹಿಡಿದು ಎತ್ತಿದಂತೆ)+ ಎ೦ದ.
ಅರ್ಥ:ಅರ್ಜುನನು ಶಿವನಿಗೆ ಅಡ್ಡಬಿದ್ದು, ಕೈಮುಗಿದುಕೊಂಡು,'ಶಿವನೇ ನನ್ನನ್ನು ಕ್ಷಮಿಸುವುದು- ಕ್ಷಮಿಸಬೇಕು! ಸರ್ವೇಶ, ಸರ್ವೋತ್ತಮ, ನಾನು ವೃಥಾ ಸುಭಟಾಭಿಮಾನ ಭ್ರಮಿತನನು ಮೋಹಾ೦ದಕೂಪ ಜಲ+ ಅವಗಾಹದಲಿ(ಮುಳುಗಿ ಸ್ನಾನ ಮಾಡುವುದು, ನೀರಿನ ದೋಣಿ, ಆಳ, ಮಗ್ನವಾಗಿರುವಿಕೆ) ಸ್ತಿಮಿತನನು ವೇದದ ದುರ್ಭೊಧೆಯಿಂದ ಭ್ರಮಿತನಮತೆ ವರ್ತಿಸಿದೆ; ಕಲ್ಯಾಣಪದದ ದಾರಿಯಿಂದ ಹಿಂತಿರುಗಿದವನು, ಕ್ಷಮಿಸುವುದು! ಕಾರುಣ್ಯನಿಧಿ ಕೈಗಾಯಬೇಕು,' ಎ೦ದ.
ಅರಿವರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕ೦ಡು ಕ೦ಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲಾ |
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆ೦ದ || ೮೧ ||
ಪದವಿಭಾಗ-ಅರ್ಥ:ಅರಿವ(ಅರಿವು- ಬುದ್ಧಿ; ಬುದ್ಧಿಯನ್ನು)+ ಅರಿದು(ಕತ್ತರಿಸಿ) ಮತಿಗೆಟ್ಟ ಮಾನವ ಕುರಿಯಲಾ! ನೆರೆ ಕ೦ಡು ಕ೦ಡು+ ಎಚ್ಚರದ ಖೂಳನಲಾ! ವಿವೇಕದ ಮೂಗು ಮಾರಿಯಲಾ(ಮೂಗು ಮಾರಿ, ಕೂಗು ಮಾರಿ, ರಾತ್ರಿ ಕೂಗುವ ಕೆಡುಕಿ ದೇವತೆ, ಇವನು ತನಗೇ ಕೆಡುಕುಮಾಡಿಕೊಂಡ ಮೂಕಳಾದ ಮಾರಿಯಂತೆ)! ಬರಿಮನದ(ಮನದ ಕೊಡ ಬರಿದಾಗಿದೆ; ಖಾಲಿ ಮನಸ್ಸಿನ) ಬಾಹಿರನೊಳು+ ಎನ್ನಲಿ ಮರೆವುದು+ ಅಪರಾಧವನು; ನಿನ್ನನೆ ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆ೦ದ.
ಅರ್ಥ:ಅರ್ಜುನನು ದೀನನಾಗಿ, 'ತಾನು ಬುದ್ಧಿಯನ್ನು ಕಡಿದುಹಾಕಿದ ಬುದ್ಧಿಗೆಟ್ಟ ಮಾನವ ಕುರಿಯಲಾ! ಚೆನ್ನಾಗಿ ಕ೦ಡೂ ಕ೦ಡು, ಎಚ್ಚರದಲ್ಲಿ ತಪ್ಪುಮಾಡಿದ ಖೂಳನಲಾ! ವಿವೇಕದ ಮೂಗು ಮಾರಿಯಲಾ! ವಿವೇಕವಿಲ್ಲದ ಬರಿಮನದ ಬಾಹಿರನಾಗ- ಅಯೋಗ್ಯನಾದ ತನ್ನಲ್ಲಿ ಕೃಪೆಇಟ್ಟು ಅಪರಾಧವನ್ನು ಮರೆಯುವುದು. ಈ ಕ್ಷಮೆ ನಿನ್ನನ್ನೇ ಮೆರೆವುದೈ- ಶ್ರೇಷ್ಠನನ್ನಾಗಿ ಮಾಡುವುದು. ಕಾರುಣ್ಯನಿಧಿ ಪರಶಿವನೇ ಕೈಗಾಯಬೇಕು,' ಎ೦ದ.
ದೇವದೇವ ಕೃಪಾ೦ಬುನಿಧಿ ಭ
ಕ್ತಾವಲ೦ಬನ ಭಕ್ತ ದೇಹಿಕ
ಸೇವಕಪ್ರಿಯ ಭೂತ ಭಾವನ ಭಾವನಾತೀತ |
ದೇವವ೦ದಿತ ಕಾಲರೂಪ ಮ
ಹಾ ವಿಭವ ಭವರಹಿತ ಪಾವನ
ಪಾವಕಾ೦ಬಕ ಸುತಿ ಕುಟು೦ಬಿಕ ಕರುಣಿಸುವುದೆ೦ದ || ೮೨ ||
ಪದವಿಭಾಗ-ಅರ್ಥ:ದೇವದೇವ ಕೃಪಾ೦ಬುನಿಧಿ(ಕೃಪಿಯೆಂಬ ನೀರಿನ ನಿಧಿ ಸಮುದ್ರ) ಭಕ್ತ+ ಅವಲ೦ಬನ ಭಕ್ತ ದೇಹಿಕ(ಭಕ್ತರನ್ನೇ ದೇಹವಾಗಿ ಉಳ್ಳವನು; ಭಕ್ತರ ದೇಹದಲ್ಲಿ ನೆಲೆಸಿರುವವನ) ಸೇವಕಪ್ರಿಯ, ಭೂತಭಾವನ(ಜೀವಿಗಳು, ಅವುಗಳನ್ನು ಭಾವವಾಗಿ ಉಳ್ಳವನು) ; ಭಾವನಾತೀತ(ಭಾವನೆಗೆ ಸಿಗದವನು), ದೇವವ೦ದಿತ, ಕಾಲರೂಪ(ಕಾಲ= ಮೃತ್ಯು; ಅಥವಾ ಜಗತ್ತನ್ನು ಆವರಿಸಿರುವ 'ಸಮಯ', ವಿವರಿಸಲು ಬಾರದಿರುವ ಅಂಶ), ಮಹಾವಿಭವ(ಹುಟ್ಟುಸಾವುದಳಿಲ್ಲದವ) ಭವರಹಿತ(ಪ್ರಾಪಂಚಿಕ ಭಾವನೆ), ಪಾವನ ಪಾವಕಾ೦ಬಕ(ಪಾವಕ= ಬೆಂಕಿ; ಅಂಬಕ =ಕಣ್ಣು; - ಅಗ್ನಿಚಕ್ಷು- ಅದು ಮೂರನೇ ಹಣೆಗಣ್ಣು - ಬಿಟ್ಟಾಗ ಅದರ ಬೆಂಕಿಯಿಂದ ಪ್ರಳಯ) ಸುತಿ(ಶ್ರುತಿ) ಕುಟು೦ಬಿಕ ಕರುಣಿಸುವುದು+ ಎ೦ದ.
ಅರ್ಥ:ಪಾರ್ಥನು,'ಹರಹರಾ! ತ್ತ್ರೈಮೂರ್ತಿ ರೂಪನು ಧರಸಿ, ಅಸಮಾನ ಮಹಾ ಅಷ್ಟಮೂರ್ತಿಗಳನ್ನು ಧರಸಿ, ಅನುಪಮ ವಿಶ್ವಮೂರ್ತಿಯನ್ನು ಧರಸಿ, ರ೦ಜಿಸುವ ಪರಿಯನ್ನು ಅರಿವವರಾರು? ದೇವತೆಗಳು, ಅಸುರರು, ಮುನೀಶರಿಗೆ ಪಡೆಯಲು ಅಸಾಧ್ಯವಾದ ಕೃಪೆಯನ್ನು ನನಗೆ ಕರುಣಿಸಲು ಬ೦ದೈ ಮಹಾದೇವ,' ಎ೦ದನು.
ದೇವಸುರ ದನುಜೇಶ ವ೦ದಿತ
ದೇವ ಮನು ಮುನಿ ನಿಕರ ಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ |
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ದರಿಪ ಶಿವ ಮಾ
ದೇವ ಕರುಣಿಸಿದೈಯನಾಥಗೆ೦ದನಾ ಪಾರ್ಥ || ೯೨ ||
ಪದವಿಭಾಗ-ಅರ್ಥ:ದೇವ, ಸುರ+ದನುಜ+ ಈಶ ವ೦ದಿತ, ದೇವ ಮನು ಮುನಿ ನಿಕರ ಪೂಜಿತ, ದೇವ, ತತ್ವಾಕಾರ, ಭಾವಿಪೊಡೆ+ ಅತಿ ನಿರಾಕಾರ, ದೇವ ಸಾಕಾರದಲಿ ನಿಜ ಭಕ್ತಾವಳಿಯನು+ ಉದ್ದರಿಪ ಶಿವ, ಮಾದೇವ ಕರುಣಿಸಿದೈ+ ಯ+ ಅನಾಥಗೆ,+ ಎ೦ದನು+ ಆ ಪಾರ್ಥ
ಅರ್ಥ:ಪಾರ್ಥನು ಮತ್ತೂ ಸ್ತುತಿಸುತ್ತಾನೆ;'ದೇವ ನೀನು, ಸುರರ,ದನುಜರ ಈಶನು; ಅವರಿಂದ ವ೦ದಿತನು; ದೇವ, ಮನುಜರು ಮತ್ತು ಮುನಿಜನರಿಂದ ಪೂಜಿತನು; ದೇವ, ನೀನು ತತ್ತ್ವಾಕಾರನು, ಭಾವಿಸಿ ನೊಡಿದರೆ ಅತಿ ನಿರಾಕಾರನು, ದೇವನೇ ನೀನು ಸಾಕಾರದಲ್ಲಿ ನಿಜ ಭಕ್ತಾವಳಿಯನನು ಉದ್ಧರಿಸುವ ಶಿವನು, ಮಾಹಾದೇವ ಕರುಣಿಸಿದೈ- ಅನಾಥನಾದ ನನಗೆ ದರ್ಶನವನ್ನು ಕರುಣಿಸಿದೆಯಲ್ಲವೇ,' ಎ೦ದನು.
ಅರ್ಥ:ವೈಶಂಪಾಯನ ಮುನಿಯು ಜನಮೇಜಯ ದರಣಿಪತಿಯೇ ಕೇಳು, ಈಶ್ವರನು ಪಾರ್ಥನ ಬಳಿಗೆ ಬಂದು, ಪಾರ್ಥನ ಶಿರವನ್ನು ಹಿಡಿದು ಎತ್ತಿದನು. ನಂತರ ಅವನನ್ನು ಬಿಗಿಯಾಗಿ ಪ್ರೀತಿಯಿಂದ ಬರಸೆಳೆದು ಅಪ್ಪಿದನು; ಅರ್ಜುನನಿಗೆ,'ಮರುಳು ಮಗನೇ ಮಹಾ ತಪಸ್ಸಿನ ಆಚರಣೆಯಲ್ಲಿ ಬಹಳ ನೊ೦ದಯಲ್ಲಾ, ಎನ್ನುತ್ತಾ ಅತಿಯಾದ ಕರುಣಿ ಶಿವನು ತನ್ನ ಕರುಣೆಯ ಅಮೃತ ಸಮುದ್ರದಲ್ಲಿ ಅರ್ಜುನನ್ನು ಅದ್ದಿದನು.
ಅರ್ಥ:ಶಿವನು ತನಗೆ ಅಡ್ಡಬಿದ್ದಿದ್ದ ಅರ್ಜುನನ್ನು ಎತ್ತಿ ಕೂಡಲೆ ಮೈದಡವಿ ಸಮಾಧಾನ ಪಡಿಸಿದನು. ಪ್ರೀತಿಯಿಂದ ತಲೆ ಸವರಿ ಮು೦ಡಾಡಿದನು; ಪಾರ್ಥನಿಗೆ,' ಮನಸ್ಸನಲ್ಲಿ ನೋವನ್ನು ಅನುಭವಿಸಬೇಡ. ನೀನು ಮಾಡಿದ ತೊಂದರೆ ನಮಗೆ ಅರ್ಚನೆಯು- ಪೂಜೆಯು, ನಮಸ್ಕಾರ.ನನ್ನೊಡನೆ ಹೋರಾಡಿದ್ದಕ್ಕಾಗಿ ಕೋಡದಿರು- ದುಃಖಿಸಬೇಡ ಕೊ೦ಕಬೇಡ- ಕುಗ್ಗಬೇಡ, ನಿನ್ನ ಭಕ್ತಿಗೆ ನಾನು ಬಹಳ ಮೆಚ್ಚಿದನು. ನನ್ನ ಚಿತ್ತಕ್ಕೆ- ಮನಸ್ಸಿಗೆ ನಿನ್ನಮೇಲೆ ಸಿಟ್ಟು ಇಲ್ಲಲೇ ಮಗನೆ! ಕುಮಾರ ಗಣಪತಿಗಳಾಣೆ!' ಎ೦ದ
ನರನು ನೀ ಪೂರ್ವದಲಿ ಪೀತಾ೦
ಬರನ ವಿಮಲಾ೦ಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿ೦ತೆ ಬೇಡಿನ್ನು |
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆ೦
ದುರುತರ ಪ್ರೇಮಮದಲಿ ಕೊಟ್ಟನು ಖಡ್ಗ ಶರಧನುವ ||೯೬ ||
ಪದವಿಭಾಗ-ಅರ್ಥ:ನರನು ನೀ ಪೂರ್ವದಲಿ, ಪೀತಾ೦ಬರನ ವಿಮಲಾ೦ಶ(ಶುದ್ಧ ಅಂಶದಲ್ಲಿ) ಪ್ರಸೂತನು(ಹುಟ್ಟಿದವನು) ಪರಮಋಷಿ, ನೀನು+ ಎನ್ನ ಭಕ್ತನು, ಚಿ೦ತೆ ಬೇಡ+ ಇನ್ನು ವರದನಾದೆನು ಮಗನೆ ಶಸ್ತ್ರೋತ್ಕರವನು+ ಇದನು+ ಈ ಮುನ್ನ ಕೊಳ್ಳೆ೦ದು+ ಉರುತರ ಪ್ರೇಮಮದಲಿ ಕೊಟ್ಟನು ಖಡ್ಗ ಶರ ಧನುವ.
ಅರ್ಥ:ಶಿವನು ಅರ್ಜುನನಿಗೆ,' ನೀನು ಪೂರ್ವ ಜನ್ಮದಲ್ಲಿ 'ನರ' ನೆಂಬುವವನು. ಪೀತಾ೦ಬರಧರ ವಿಷ್ಣುವಿನ ಪರಿಶುದ್ಧ ಅಂಶದಲ್ಲಿ ಹುಟ್ಟಿದವನು, ನೀನು ಹಿಂದೆ ಪರಮಋಷಿ. ನೀನು ನನ್ನ ಭಕ್ತನು. ಇನ್ನು ಚಿ೦ತೆ ಬೇಡ. ಮಗನೆ, ವರದನಾದೆನು-ಪ್ರಸನ್ನನಾದೆನು. ನಾನು ಕಸಿದುಕೊಂಡ ಶಸ್ತ್ರಗಳ ಸಮೂಹವಾದ ಇವನ್ನು ಈ ಮೊದಲು ಹಿಂದಕ್ಕೆ ತೆಗೆದುಕೊ,ಎ೦ದು ಬಹಳ ಪ್ರೇಮಮದಿಂದ ಅವನ ಖಡ್ಗ, ಶರಗಳು ಮತ್ತು ಗಾಂಡೀವ ಧನುಸ್ಸನ್ನು ಅರ್ಜುನನಿಗೆ ಹಿಂತಿರುಗಿಕೊಟ್ಟನು.
ಅರ್ಥ:ಶಿವನು ಅರ್ಜುನನಿಗೆ,'ನೀ ಬೇಡಿದುದನ್ನು ತಪ್ಪದೆ ಕೊಡುವೆನು, ಸಾಕು ಇನ್ನು ಅ೦ಜಬೇಡ.' ಎನ್ನಲು,ಅರ್ಜುನನು,'ನೀನು ಭಕ್ತರಿಗೆ ಸುಲಭವಾಗಿ ಒಲಿಯುವವನು. ಇನ್ನು ನನಗೆ ಭಯವೇಕೆ?' ಎನ್ನುತ್ತಾ,'ನನಗೆ ಪಾಶುಪತಾಸ್ತ್ರವನ್ನು ಕೊಡು; ಹೆಚ್ಚಿನದಾದ ಬ್ರಹ್ಮಾಸ್ತ್ರವನ್ನು ಮೀರಿದ ಶ್ರೇಷ್ಠ ಅಸ್ತ್ರವನ್ನು ನ್ನ ಮೇಲೆ ಕೃಪೆಯಿದ್ದರೆ ನನಗೆ ಕೈಗೊಳಿಸುವುದು.' ಎ೦ದು ಕಲಿಪಾರ್ಥ ನಗುತ್ತಾ ಹೇಳಿದನು.
ಅರ್ಥ:ಶಿವನು ಅರ್ಜುನನಿಗೆ,'ತನ್ನದು ಎರಡು ನುಡಿಯು೦ಟೇ? ಇಲ್ಲ! ನೀನು ಕೇಳಿದ ಅಸ್ತ್ರವನ್ನು ಕೊಡುವುದುನಿಜ. ಈ ಅಸ್ತ್ರವು ಹದಿನಾಲ್ಕುಲೋಕದೊಡನೆ ಯುದ್ಧಕ್ಕೆ ಯೋಗ್ಯವು. ಬ್ರಹ್ಮಶೀರೋಮಹಾಶರವಾದ ಈ ಬಾಣವನ್ನು ಮಗನೆ, ನಿನಗೆ ಕೊಟ್ಟೆನು(ಕೊಡಲು ನಿರ್ಧರಿಸಿದೆನು). ಇದು ದೇವ, ದಾನವ, ನಾಗರು ಮೊದಲಾದವರು ವಿರೋಧಿಸುಲು ಮತ್ತೂ ಹೆಚ್ಚುವುದು. ಎದುರಿಸದ ಅವರೆಲ್ಲರೂ ಇದಕ್ಕೆ ಸ೦ಭವಿಸಿದ- ಸಿಕ್ಕಿದ ಆಹುತಿಯಾಗುವರು, ಈ ಶರವು ಎದರಿಲ್ಲದ ಉದ್ದ೦ಡ ಬಲವು,'ಎಂದ.
ಅರ್ಥ:ಅರ್ಜುನನು ಸರಸ್ಸಿನಲ್ಲಿ ಮಿ೦ದು ಅಚಮನ ಮೊದಲಾದ ದೇಹಶುದ್ಧಿ ಮನಃ ಶುದ್ಧಿಯ ವಿಸ್ತರಣೆಯ ಕ್ರಮಗಳನ್ನು ಎಲ್ಲವನ್ನೂ ಮಾಡಿಕೊಂಡು ಶಿವನ ಪಾದಗಳಿಗೆ ಅಡ್ಡಬಿದ್ದು ಭಾವಶುದ್ದಿಯಿಂದ ನಿ೦ತನು. ಪಾಶುಪತ ಅಸ್ತ್ರದ ಸಾ೦ಗ ಉಪಾ೦ಗ ಮ೦ತ್ರೋಚ್ಚರಣ, ಸಂಹಾರಕ್ಕೆ ಪ್ರಯೊಗ, ಅದರ ಉಪಸಂಹಾರ, ಹಿಂಪಡೆಯುವುದು, ಈ ಕ್ರಮಗಳನ್ನು ವಿಸ್ತಾರವಾಗಿ ಹೇಳುತ್ತಾ ರಹಸ್ಯವಾಗಿ ಪಾಶುಪತ ಶರವನ್ನು ಅರ್ಜುನನಿಗೆ ಕೊಟ್ಟನು.
ಜಗವುಘೇಯೆ೦ದುದು ಜಯಧ್ವನಿ
ಗಗನದಲಿ ಗಾಡಿಸಿತು ಹೂವಿನ
ಮುಗುಳಸರಿವಳೆ ಸುರಿದುದೀಶ್ವರನ೦ಘ್ರಿ ಕಮಲದಲಿ |
ಡಗೆಯ ತಳಿ ಮುರಿದುದು ಮನೋರಥ
ದಗಳು ತು೦ಬಿತು ನರನ ಮನ ಬು
ದ್ದಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ || ೧೦೦ ||
ಪದವಿಭಾಗ-ಅರ್ಥ:ಜಗವು+ ಉಘೇ ಯೆ+ ಎ೦ದುದು ಜಯಧ್ವನಿ ಗಗನದಲಿ ಗಾಡಿಸಿತು(ತುಂಬಿತು); ಹೂವಿನ ಮುಗುಳ ಸರಿವಳೆ ಸುರಿದುದು+ ಈಶ್ವರನ+ ಅ೦ಘ್ರಿ ಕಮಲದಲಿ, ಡಗೆಯ(ಭಯದ) ತಳಿ(ಗೋಡೆಯ ಬದಲಿಗೆ ಮರದಪಟ್ಟಿ ಅಥವಾ ಕಬ್ಬಿಣದ ಕಂಬಿಗಳಿಂದ ಮಾಡಿದ ಚೌಕ ರಂದ್ರಗಳಿರುವ ಅಡ್ಡ ತಡೆಗೋಡೆ- ದೇಸಿಪದ) ಮುರಿದುದು ಮನೋರಥದಗಳು ತು೦ಬಿತು ನರನ(ಅರ್ಜುನನ) ಮನ ಬುದ್ದಿಗಳು ನೆರೆ(ಬಹಳ- ಹೆಚ್ಚು) ಸಿಲುಕಿತ್ತು ಹರುಷೋತ್ಸವದ ದಾಳಿಯಲಿ.
ಅರ್ಥ:ಶಿವನು ಅರ್ಜುನನಿಗೆ ಅಸ್ತ್ರ ನೀಡುತ್ತಿದ್ದಂತೆ,'ಜಗತ್ತೇ ಉಘೇ! ಎ೦ದು ಜಯಧ್ವನಿ ಮಾಡಿತು. ಅದು ಗಗನದಲ್ಲಿ ತುಂಬಿತು; ದೇವತೆಗಳು ಹೂವಿನ ಮುಗುಳ-ಮೊಗ್ಗುಗಳ ಸುರಿಮಳೆಯನ್ನು ಈಶ್ವರನ ಪಾದ ಕಮಲದಲ್ಲಿ ಸುರಿಸಿದರು. ಭಯದ ತಡೆಗೋಡೆ ಮುರಿಯಿತು. ಅರ್ಜುನನ ಮತ್ತು ದೇವತೆಗಳ ಮನೋರಥದಗಳು ತು೦ಬಿತು. ಅರ್ಜುನನ ಮನಸ್ಸು ಬುದ್ದಿಗಳು ಹರುಷೋತ್ಸವದ ಧಾಳಿಯಲ್ಲಿ ಪೂರಾ ಸಿಲುಕಿತ್ತು. -ಅರ್ಜುನನ ಮನಸ್ಸು ಬುದ್ದಿಗಳು ತನ್ನ ಅಸ್ತ್ರಸಾದನೆಯ ಉದ್ದೇಶ ಈಡೇರಿದ್ದರಿಂದ ಹರ್ಷದಿಂದ ತುಂಬಿಹೋಯಿತು.
ಅರ್ಥ:ಅರ್ಜುನನಿಗೆ ಶಿವನ ಆಶೀರ್ವಾದದ ಕೋಮಲ ಹಸ್ತಕಮಲದ ಸ್ಪರ್ಷವೆಂಬ ಅಮೃತದಲ್ಲಿ ಮುಳುಗಿದ ಅರ್ಜುನನ ದೇಹ ಪೊರೆ ಕಳಚಿದ ಸರ್ಪದಂತೆ ಕಾಂತಿಯ ಕಿರಣಗಳ ಲಹರಿಯ ರಭಸದ ದಿವ್ಯವಾದ ಹೆಚ್ಚಿನ ಕಾಂತಿಯಿಂದ ಸೊಗಸಾದ ಮೈನವಿರೇಳುವ ಕಂಪನ ಮಿನುಗಿತು. ಶಿವನ ಆಶೀರ್ವಾದ ಅವನ ಮನಸ್ಸನ್ನೂ ದೇವತೆಗಳ ಮತ್ತು ಅಲ್ಲಿದ್ದ ಜನರ ಕಣ್ಣು ಮತ್ತು ಮನಸ್ಸುಗಳನ್ನು ಸಂತೈಸಿತು.
ಅರ್ಥ:ಹೀಗೆ ಕಲಿಪಾರ್ಥನು, ದೇವತೆಗಳ ಮುನೀಶ್ವರರ ವೇದ ಮ೦ತ್ರೋಚ್ಚರಣದ ನಾದದಿಂದಲೂ, ಗರುಡ ಗ೦ಧರ್ವರ ಮಹಾ ಸ್ತುತಿಗಳ ಸದ್ದಿನಿಂದಲೂ, ತು೦ಬುರ ನಾರದು ಮೊದಲಾದವರ ಉತ್ತಮ ರಸದಿಂದ ಕೂಡಿದ ಗೀತದಿಂದಲೂ, ಊರ್ವಸಿಯರ ಸುನೃತ್ಯದಿಂದಲೂ, ದಿವ್ಯ ವಾದ್ಯದಿಂದಲೂ ಸಂತಸಪಟ್ಟು ಜೊತೆಗೆ ಶಿವನ ಕರುಣೆ ಎಂಬ ಸಮದ್ರದಲ್ಲಿ ಓಲಾಡಿದನು.
ಅರ್ಥ: ಶಿವನು ಅರ್ಜುನನಿಗೆ ಭೂಮಿಯಲ್ಲಿ ಪ್ರಸಿದ್ಧವಾದ ಧರ್ಮ,ಅರ್ಥ, ಕಾಮ, ಮತ್ತು ಉತ್ತಮವಾದ ಅನುಪಮ ಮೋಕ್ಷಪದವನ್ನು, ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವ ಶೌರ್ಯದ ಉನ್ನತಿಯನ್ನು, ಸಾಹಸವನ್ನು ಕರುಣಿಸಿದನು; ಮತ್ತು ಪ್ರೀತಿಯಿಂದ ಅವನನ್ನು ಅಪ್ಪಿದನು. ಶಿವನು ಗಿರಿತನುಜೆ ಗೌರಿಯನ್ನು ಕರೆದನು; ಅವಳಿಗೆ ನೀನು ಈ ಪರಮ ಭಕ್ತನನ್ನು ಉದ್ದರಿಸುವುದು, ಎನ್ನಲು, ಗಿರಿಜೆಯು ಅರ್ಜುನನ್ನು ಕರುಣೆಯಿಂದ ನೋಡಿದಳು.
ಅರ್ಥ:ಪಾರ್ಥನು ಗೌರಿಯನ್ನು ಸ್ತುತಿಸುತ್ತಾನೆ;'ಗಿರಿಜೆ, ತ್ರಿಜಗನ್ಮಾತೆ ರಕ್ಷಿಸು; ನೀನು ಪರಮ ಕರುಣಾಮೂರ್ತಿ; ಜಗತ್ತಿನಲ್ಲಿ ಲಕ್ಷ್ಮಿ, ಸರಸ್ವತಿ, ಚ೦ಡಿ, ದುರ್ಗಿಯರು ಎಂಬ ಹೆಸರಿನಿಂದ ಚರಿಸುತ್ತಿರುವೆ- ಕಾರ್ಯನಿರ್ವಹಿಸುತ್ತರುವೆ; ನಿನ್ನ ಏಕ ರೂಪದ ಪರಿಯನ್ನು ತಿಳಿಯ ಬಲ್ಲವವರು ಯಾರು ಇದ್ದಾರೆ? ಯಾರೂ ಇಲ್ಲ, ಎನ್ನುತ್ತಾ ಅವಳ ಎರದೂಪಾದಕ್ಕೆ ಬಿದ್ದು ನಮಿಸಿ ಆ ಪಾರ್ಥನು ಪುಳಕಿತನಾದನು.
ಅರ್ಥ:ಈ ಅಂಜಾನಾಸ್ತ್ರವು, ಒ೦ದು ದಶ ಶತ ಸಾವಿರದ ಹೆಸರಿ೦ದ ಲಕ್ಷವು- ಎದುರಿಸುವ ಶಕ್ತಿಯದು; ಕೋಟಿಯಷ್ಟು ಅಗಣಿತದ -ಲೆಕ್ಕಹಿಡಿಯಲಾಗದಷ್ಟು ಶತ್ರುಗಳು ನಿನಗೆ ಎದುರು ನೀಂತರೂ, ಬಲಿಷ್ಟ ವೀರ ಶತ್ರುಗಳನ್ನು ತಿ೦ದು ತೇಗುವುದು; ಮತ್ತೆ ಹಿಂತಿರುಗಿ ಬ೦ದು ಮತ್ತೇನು ಮಾಡಬೇಕೆಂದು ಕೇಳುವುದು. ಗೌರಿಯು- 'ತಾನು ಒ೦ದು ಶರ ರೂಪಾಗು' ಎನ್ನುತ್ತಾ ಸಂತೊಷದಿಂದ ಶ್ರೇಷ್ಠ ಮ೦ತ್ರೋಪದೇಶವನನ್ನು ಅರ್ಜುನನಿಗೆ ಕೊಟ್ಟಳು. .
ಕರಿ ಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮ ಭಕ್ತಿಗೆ ಮೆಚ್ಚಿ ತೆಗೆದಪ್ಪಿದರು ಕರುಣದಲಿ |
ವರ ಮಹಾಸ್ತ್ರ೦ಗಳನು ಮ೦ತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆ೦ದು ಪರಸಿದರಾ ದನ೦ಜಯನ || ೧೦೭ ||
ಪದವಿಭಾಗ-ಅರ್ಥ:ಕರಿ(ಆನೆ)ಮುಖನ, ಷಣ್ಮುಖನ, ಚರಣಕ್ಕೆ+ ಎರಗಿ ನುತಿಸುತ್ತಿರಲು ಪಾರ್ಥನ ಪರಮ ಭಕ್ತಿಗೆ ಮೆಚ್ಚಿ, ತೆಗೆದು+ ಅಪ್ಪಿದರು ಕರುಣದಲಿ+ ಇವರ ಮಹಾಸ್ತ್ರ೦ಗಳನು ಮ೦ತ್ರೋತ್ಕರವನು+ ಅವರು+ ಒಲಿದಿತ್ತು ಗೆಲು- ನೀ ಧುರದೊಳು+ ಅಹಿತರನು+ ಎ೦ದು ಪರಸಿದರು+ ಆ ದನ೦ಜಯನ.
ಅರ್ಥ:ಅರ್ಜುನನು, ಗಜಾನನನ, ಷಣ್ಮುಖನ, ಪಾದಗಳಿಗೆ ಅಡ್ಡಬಿದ್ದು ಸ್ತುತಿಸುತ್ತಿರಲು, ಅವರು ಪಾರ್ಥನ ಪರಮ ಭಕ್ತಿಗೆ ಮೆಚ್ಚಿ, ಪ್ರೀತಿಯಿಂದ ಅವನನ್ನು ಅಪ್ಪಿದರು. ನಂತರ ಅವರು ಕರುಣಯಿಂದ ಅವರು ತಮ್ಮ ಮಹಾಸ್ತ್ರಗಳನ್ನು ಅಸ್ತ್ರದ ಮ೦ತ್ರೋತ್ಕರದ ಸಹಿತ ಅವನಿಗೆ ಒಲಿದು ಕೊಟ್ಟು, 'ನೀನು ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲು,'ಎ೦ದು ಆ ದನ೦ಜಯನನ್ನು ಹರಸಿದರು.
ಅರ್ಥ:ಶಿವನು ಅರ್ಜುನನ್ನು ಕುರಿತು,'ಪಾಶುಪತ ಅಸ್ತ್ರದ) ಸಾ೦ಗೋಪಾ೦ಗವನ್ನು ನಿನಗೆ ತಿಳಿಸಿದ್ದೇನೆ. ನೀನು ಇನ್ನು ಇಂದ್ರನ ನಗರ- ಅಮರಾವತಿಗೆ ನಡೆ. ನಿನ್ನ ಉತ್ತರೋತ್ತರ- ಮುಂದಿನ ಕಾರ್ಯಗತಿಗಳಿಗೆ ಕೃಷ್ಣನು ಸಹಾಯಕನಾಗಿರುವನು. ಅವನು ನಮ್ಮ ಸತ್ವದ ಪರಮ ರೂಪವೇ ಆತನು ಕಣಾ! ನೀನು ಅದನ್ನು ತಿಳಿದಿರು.' ಎ೦ದು ಮಹೇಶನು ಧನ೦ಜಯನನ್ನು ಕಳುಹಿಸಿಕೊಟ್ಟನು.
ನಿಮ್ಮಕಥೆ ವೇದೋಕ್ತ ವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ |
ನಿಮ್ಮ ನಿ೦ದಿಸುವವರುಗಳು ದು
ಷ್ಕ್ರರ್ಮಿಗಳು ಪಾತಕರು ತಾನಿದು
ನಮ್ಮ ಮತವೆ೦ದಭವ ಹರಸಿದನಾ ಧನ೦ಜಯನ || ೧೦೯ ||
ಪದವಿಭಾಗ-ಅರ್ಥ:ನಿಮ್ಮಕಥೆ ವೇದೋಕ್ತ ವಾಗಲಿ, ನಿಮ್ಮ ಚರಿತ ಸುಚರಿತವಾಗಲಿ, ನಿಮ್ಮ ಕಥನಾಮೃತವನು+ ಆಲಿಸಿ ಕೇಳ್ದರ+ ಅಘ(ಕೇಳಿದವರ ಪಾಪ) ಕೆಡಲಿ, ನಿಮ್ಮ ನಿ೦ದಿಸುವವರುಗಳು ದುಷ್ಕ್ರರ್ಮಿಗಳು, ಪಾತಕರು, ತಾನು(ತಾವು)+ ಇದು ನಮ್ಮ ಮತವೆ೦ದು+ ಅಭವ(ಹುಟ್ಟು ಇಲ್ಲದವನು) ಹರಸಿದನು+ ಆ ಧನ೦ಜಯನ
ಅರ್ಥ:ಮಹೇಶ್ವರನು ಅರ್ಜುನನಿಗೆ,'ನಿಮ್ಮ ಈ ಸಿವನೊಡನೆ ಹೋರಾಡಿ ಅಸ್ತ್ರ ಪಡೆದ ಕಥೆ, ವೇದೋಕ್ತವಾಗಲಿ, ನಿಮ್ಮ ಚರಿತ ಸುಚರಿತವಾಗಲಿ, ನಿಮ್ಮ ಕಥನಾಮೃತವನ್ನು ಆಲಿಸಿ ಕೇಳಿದವರ ಪಾಪ ನಾಶವಾಗಲಿ, ನಿಮ್ಮನ್ನು ನಿ೦ದಿಸುವವರು, ತಾವು ದುಷ್ಕ್ರರ್ಮಿಗಳು, ಪಾತಕರು ಎನಿಸಲಿ! ಇದು ನಮ್ಮ ಮತ.'ಎ೦ದು ಅಭವನಾದ ಶಿವನು ಆ ಧನ೦ಜಯನನ್ನು ಹರಸಿದನು.
ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮೋಟ್ಟನವರ ಕೃ
ಪಾವಲೋಕನದಿ೦ದ ಹೋ೦ಪುಳಿ ಹೋದನಡಿಗಡಿಗೆ |
ದೇವ ಬಿಜಯ೦ಗೈದ ರಜತ
ಗ್ರಾವ ಶಿಖರಕೆ ಮನದೊಳಗೆ ಸ೦
ಭಾವಿಸಿದನೀ ವೀರ ನಾರಯಣನ ಮೈದುನನ || ೧೧೦ ||
ಪದವಿಭಾಗ-ಅರ್ಥ:ದೇವಿಯರು ಗುಹ ಗಣಪ ಮುಖ್ಯ ಗಣ+ ಆವಳಿಗೆ ಪೊಡಮೋಟ್ಟನು;+ ಅವರ ಕೃಪಾವಲೋಕನದಿ೦ದ ಹೋ೦ಪುಳಿ(ಆಧಿಕ್ಯ, ರೋಮಾಂಚನ, ಹಿಗ್ಗು, ಪುಳಕ) ಹೋದನು+ ಅಡಿಗಡಿಗೆ; ದೇವ ಬಿಜಯ೦ಗೈದ ರಜತಗ್ರಾವ ಶಿಖರಕೆ; ಮನದೊಳಗೆ ಸ೦ಭಾವಿಸಿದನು(ಸಾಂತ್ವನಗೊಳಿಸು)+ ಈ ವೀರ ನಾರಯಣನ ಮೈದುನನ.
ಅರ್ಥ:ಅರ್ಜುನನು ಗಂಗಾ, ಗೌರೀ ದೇವಿಯರು, ಕುಮಾರ, ಗಣಪತಿ, ಮತ್ತು ಮುಖ್ಯ ಗಣಗಳ ಸಮೂಹಕ್ಕೆ ನಮಿಸಿದನು. ಅವರ ಕೃಪಾದೃಷ್ಟಿಯಿಂದ ಮತ್ತೆ ಮತ್ತೆ ಹಿಗ್ಗಿ ಪುಳಕಗೊಂಡನು; ದೇವ ಶಿವನು ಹಿಮಗಿರಿಗಯ ಕೈಲಾಸ ಶಿಖರಕ್ಕೆ ಬಿಜಯ೦ಗೈದ- ಹೊದನು. ಅವನು ತನ್ನ ಮನಸ್ಸಿನಲ್ಲೇ ಈ ವೀರ ನಾರಯಣನ ಮೈದುನನನ್ನು- ಪಾರ್ಥನನ್ನು ಸ೦ಭಾವಿಸಿದನು- ಸಾಂತ್ವನಗೊಳಿಸಿದನು.