ಅರ್ಥ:ಅರ್ಜುನನು ಶಿವನ ಪಾಶುಪತಾಸ್ತ್ರವನ್ನು ಪಡೆದ ಹೆಚ್ಚಿನ ಹರ್ಷೋತ್ಸವದಲ್ಲಿ ಇ೦ದ್ರನ ಅಪೇಕ್ಷೆಯಂತೆ ಅವನ ಅಮರಾವತಿ ನಗರವನ್ನು ಪ್ರವೇಶಿಸಿದನು. ಅಲ್ಲಿ ಪಾರ್ಥನು ಶಕ್ರನಾದ ಇಂದ್ರನ ತೇಜಸ್ಸಿನಿಂದ ಶೋಭಿಸಿದನು.[೧][೨][೩][೪]
ಅರ್ಥ:ವೈಶಂಪಾಯನ ಮುನಿಯು ಹೇಳಿದ,'ಕೇಳು ಜನಮೇಜಯ ದರಿತ್ರೀಪಾಲನೇ, ಶ್ರೇಷ್ಠನಾದ ಕೈಲಾಸ ವಾಸಿ ಶಿವನನ್ನು ಅರ್ಜುನನು ಇ೦ದ್ರ ಕೀಲದಲ್ಲಿ ಬೀಳ್ಕೊಂಡನು- ಕಳಿಸಿಕೊಟ್ಟನು. ಆ ವಿಯೋಗದಿಂದ - ಅಗಲುವಿಕೆಯಿಂದ ಅರ್ಜುನನು ಬಹಳ ದುಃಖದಲ್ಲಿ ತಾನು ಅಸ್ತ್ರ ಲಾಭವನ್ನು ಪಡೆದ ಆನಂದವನ್ನು ಅನುಭವಿಸದೆ ಶ೦ಕರನ ಪಾದಪದ್ಮಗಳ ಬಳಿ ಇದ್ದು ಅವನ ಪರಿವಾರದ ಓಲಗದ- ಸಭೆಯಲ್ಲಿ ಇರುವ ಸೌಭಾಗ್ಯ ತಪ್ಪಿತು ಎನ್ನುತ್ತಾ ಪಾರ್ಥನು ವ್ಯಥೆಯಿಂದದ ಉಮ್ಮಳಿಸಿದನು.
ಅರ್ಥ:ಅರ್ಜುನನು ಆಘಟನೆಗಳನ್ನು ನೆನೆಯುತ್ತಾ,'ಇದೇನು ತನ್ನ ಮರುಳ ದೇವಾರ್ಚನೆಯೊ! ಕನಸಿನ ಸಿರಿ ಸಂಪತ್ತೋ! ಬೆಲೆ ತಿಳಿಯದ ಶಿಶುವಿನ ಕೈಯಲ್ಲಿದ್ದ ರತ್ನವೋ! ಹರಿಯ ಹೂಮಾಲೆಯೊ! ನನ್ನ ವಿವೇಕ ವಿಲ್ಲದ ಕಾರ್ಯವೋ! (ವಿಭ್ರಮವೊ), ಹರನನ್ನು ಈ ಚರ್ಮದ ಕಣ್ಣಿಂದ ಕಾಣುವಹಾಗೆ ಗೋಚರಿಸಲು, ತಾನು ಬೇಡಿದ್ದು ಶಿವನೊಡನೆ ಕೈಲಾಸವಾಸದ ಬದಲಿಗೆ ಕೇವಲ ಬಾಣ! ಈ ಮರ್ತ್ಯ ಭೂಮಿಯಲ್ಲಿ ಬಾಳು! ಮಝ ಬಾಪು! ನನ್ನ ಪುಣ್ಯವು ಅಷ್ಟೆ!' ಎನ್ನುತ್ತ ನಿಟ್ಟುಸಿರುಬಿಟ್ಟ.
ಅರ್ಥ:ಮುನಿ ಹೇಳಿದ,'ಅರಸನೇ ಕೇಳು, ಅದ್ಭುತವನ್ನು ಇತ್ತ ಚರಮ ದಿಗ್ಭಾಗವಾದ ಪಶ್ಚಿಮ ದಿಕ್ಕಿನಲ್ಲಿ ಅಖಿಲ ಜಲಚರ ಸಮೂಹದೊನೆ ಮುಂಭಾಗದಲ್ಲಿ ಪತಾಕೆಯೊಡನೆ ಇಕ್ಕೆಲದಲ್ಲಿ ನಾಗರೊಡನೆ, ನದೀ ನದ-ಬೆಟ್ಟ ಕೋಟಿಗಳ ಸಾಗರದ ಪರಿವಾರದೊಂದಿಗೆ ಸಮುದ್ರರಾಜ ವರುಣನು ದೇವೇ೦ದ್ರನ ಕುಮಾರ ಅರ್ಜುನನ್ನು ಕಾಣುವ ತವಕದಿಂದ ಬ೦ದನು.
ವಿಕಟ ರಾಕ್ಷಸ ಯಕ್ಷಜನಗು
ಹ್ಯಕರು ಕಿನ್ನರಗಣ ಸಹಿತ ಪು
ಷ್ಪಕದಲೈತ೦ದನು ಧನೇಶ್ವರನಾ ತಪೋವನಕೆ |
ಸಕಲ ಪಿತೃಗಣ ಸಹಿತ ದೂತ
ಪ್ರಕರ ಧರ್ಮಾಧ್ಯಕ್ಷ ರೊಡನ೦
ತಕನು ಬೆರಸಿದನಿ೦ದ್ರಕೀಲ ಮಹಾ ವನಾ೦ತರವ || ೪ ||
ಪದವಿಭಾಗ-ಅರ್ಥ:ವಿಕಟ ರಾಕ್ಷಸ ಯಕ್ಷಜನ ಗುಹ್ಯಕರು ಕಿನ್ನರಗಣ ಸಹಿತ ಪುಷ್ಪಕದಲಿ+ ಐತ೦ದನು ಧನೇಶ್ವರನು+ ಆ ತಪೋವನಕೆ ಸಕಲ ಪಿತೃಗಣ ಸಹಿತ ದೂತಪ್ರಕರ(ಸಮೂಹ) ಧರ್ಮಾಧ್ಯಕ್ ರೊಡನೆ+ ಅ೦ತಕನು ಬೆರಸಿದನು+ ಇ೦ದ್ರಕೀಲ ಮಹಾ ವನಾ೦ತರವ.
ಅರ್ಥ:ಅರ್ಜುನನ್ನು ನೋಡಲು ಬಂದ ಸಮುದ್ರರಾಜನೊಡನೆ ವಿಕಟ ರಾಕ್ಷಸರು, ಯಕ್ಷಜನರು, ಗುಹ್ಯಕರು, ಕಿನ್ನರಗಣ ಸಹಿತ ಪುಷ್ಪಕ ವಿಮಾನದಲ್ಲಿ ಧನೇಶ್ವರನಾದ ಕುಬೇರನು ಆ ತಪೋವನಕ್ಕೆ ಬಂದನು. ಸಕಲ ಪಿತೃಗಳ ಸಮೂಹದೊಡನೆ ಮತ್ತು ದೂತರ ಸಮೂಹದೊಂದಿಗೆ ಧರ್ಮಾಧ್ಯಕ್ಷ ಅ೦ತಕ ಯಮಧರ್ಮನೂ ಇ೦ದ್ರಕೀಲ ಮಹಾ ವನಪ್ರದೇಶವನ್ನು ಸೇರಿದನು.
ಅರ್ಥ:ಅರ್ಜುನನು ಎಲ್ಲರೂ ಬರವುದನ್ನು ಕ೦ಡನು. ಅವರನ್ನು ಒಲಿದು ಪ್ರೀತಿಯಿಂದ ಎದುರಗೊ೦ಡನು- ಬರಮಾಡಿಕೊಂಡನು. ಅವರವರ ಸ್ಥಾನಕ್ಕೆ ತಕ್ಕಂತೆ ಉಚಿತವಾಗಿ ಮುಂದೆಹಾಗಿ ಮನ್ನಿಸಿ, ಲೋಕಪಾಲಕರ ಮನದ ಪ್ರೀತಿಯನ್ನು ಪಡೆದನು, ಶಿವನ ಅಸ್ತ್ರವನು ಪಡದೆ ನಿನಗೆ ಏನು ತಾನೆ ಅಸಾದ್ಯ ನೀನು ಉದ್ದ೦ಡ-ಬಹಳ ಬಲದವನು ಎಂದು ಅವರೆಲ್ಲರೂ ಫಲುಗುಣನನ್ನು ಉಪಚರಿಸಿದರು.
ಅರ್ಥ:ಇಂದ್ರನು,' ಆ ಮಹಾಸ್ತ್ರಕ್ಕೆ ಬಳುವಳಿಯಾಗಿ ನನ್ನ ಇಂದ್ರಾಸ್ಸ್ರವನ್ನು ಕೊಳ್ಳು- ತೆಗೆದುಕೋ,' ಎನ್ನುತ್ತಾ ತನ್ನ ದಿವ್ಯ ಬಾಣವಾದ ಇಂದ್ರಾಸ್ತ್ರವನ್ನ ನ್ನು ಇತ್ತನು. ಇಂದ್ರನ ಸಂಕೇತದಂತೆ ಅದಕ್ಕೆ ಸಮಾನವಾದ ದ೦ಡವೆಂಬ ಅಸ್ತ್ರವನ್ನು ಆ ಮಹಾ೦ತಕ ಯಮನೂ, ವಾರುಣಸ್ತ್ರವನ್ನು ವರುಣನೂ, 'ತಾಮಸದ- ನಿದ್ದೆಯ ಸನ್ಮೋಹನವು ಇದು,' ಎ೦ದು ಧನದ ಕುಬೇರನೂ ಅರ್ಜುನನಿಗೆ ಅ೦ಬುಗಳನ್ನು ಕೊಟ್ಟರು.
ಎಲೆ ಧನ೦ಜಯ ನಿನಗಿದೇನ
ಗ್ಗಳದ ಶರವೇ ನಿನ್ನಭಕ್ತಿಗೆ
ಸಿಲುಕಿದೆನು ಶಿವನಾತನ೦ಬಿದೆ ನಿನ್ನ ಸೀಮೆಯಲಿ |
ಸುಲಭ ನಿನಗಿ೦ದಮಳ ಲಕ್ಷ್ಮೀ
ನಿಲಯನೀನೆ ಪೂರ್ವದಲಿ ನಿ
ರ್ಮಲಿನ ನರ ಋಷಿಯೆ೦ದು ಹರಿತೆಗೆದಪ್ಪಿದನು ಮಗನ || ೮ ||
ಪದವಿಭಾಗ-ಅರ್ಥ:ಎಲೆ ಧನ೦ಜಯ ನಿನಗೆ+ ಇದೇನು+ ಅಗ್ಗಳದ(ಮಹತ್ತಾದ) ಶರವೇ! ನಿನ್ನ ಭಕ್ತಿಗೆ ಸಿಲುಕಿದನು ಶಿವನು+ ಆತನ+ ಅ೦ಬು+ ಇದೆ ನಿನ್ನ ಸೀಮೆಯಲಿ ಸುಲಭ ನಿನಗೆ+ ಇ೦ದು+ ಅಮಳ ಲಕ್ಷ್ಮೀನಿಲಯ ನೀನೆ ಪೂರ್ವದಲಿ ನಿರ್ಮಲಿನ ನರ ಋಷಿಯೆ೦ದು ಹರಿ(ಇಂದ್ರ) ತೆಗೆದಪ್ಪಿದನು ಮಗನ.
ಅರ್ಥ:ಇಂದ್ರನು ತನ್ನ ಮಗನಿಗೆ,'ಎಲೆ ಧನ೦ಜಯ, ನಿನಗೆ ಇದೇನು ಮಹತ್ತಾದ ಶರವೇ! ನಿನ್ನ ಭಕ್ತಿಗೆ ಶಿವನು ಸಿಲುಕಿದನು; ಆತನ ಅ೦ಬು- ಅಸ್ತ್ರ ನಿನ್ನ ಬಳಿಯಲ್ಲಿ ಇದೆ. ನಿನಗೆ ಈಗ ಶ್ರೇಷ್ಠವಾದ ಲಕ್ಷ್ಮೀನಿಲಯ- ವೈಕುಂಠ ಪದವು ಸುಲಭ ಸಾಧ್ಯವು. ನೀನು ಪೂರ್ವದಲಿ ನಪರಿಶುದ್ಧ ನರ ಋಷಿ!'ಎ೦ದು ಇಂದ್ರನು ಮಗ ಅರ್ಜುನನ್ನು ಎಳೆದುಕೊಂಡು ಅಪ್ಪಿದನು.
ಕೃತ ತಪಸ್ಸಿ೦ಭಿನ್ನಖೇಧ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥ ಸಹಿತ ಕಳುಹುವೆನು ಮಾತಲಿಯ |
ಕ್ರತುಶತದ ಕೈ ಗಾಣಿಕೆಯ ದೀ
ಕ್ಷಿತರ ಸಿರಿಯ೦ತರವ ಮನವಾ
ರತೆಯದೆ೦ತುಟೊ ಕಾಣಬೇಹುದು ಪಾರ್ಥ ನೀನೆ೦ದ || ೯ ||
ಪದವಿಭಾಗ-ಅರ್ಥ:ಕೃತ(ಮಾಡಿದ) ತಪಸ್ಸಿ೦ ಭಿನ್ನ ಖೇಧಕ್ಷತ (ಜರ್ಝರಿತವಾದ)ಶರೀರ ವ್ಯಥೆಯನು+ ಅಮರಾವತಿಯೊಳಗೆ ಕಳೆ; ರಥ ಸಹಿತ ಕಳುಹುವೆನು ಮಾತಲಿಯ; ಕ್ರತುಶತದ (ನೂರು ಯಾಗಮಾಡಿ ಸ್ವರ್ಗಪಡೆದರ) ಕೈ ಗಾಣಿಕೆಯ ದೀಕ್ಷಿತರ(ಪಡೆದ ಸ್ವರ್ಗಸುಖದ) ಸಿರಿಯ+ ಅ೦ತರವ ಮನವಾರತೆಯು+ ಅದು+ ಎ೦ತುಟೊ ಕಾಣಬೇಹುದು ಪಾರ್ಥ ನೀನೆ೦ದ.
ಅರ್ಥ:ಇಂದ್ರನು ಅರ್ಜುನನಿಗೆ, 'ಇದುವರೆಗೆ ಕಠಿಣ ತಪಸ್ಸಿನಿಂದ ಜರ್ಝರಿತವಾದ ಶರೀರದ ವ್ಯಥೆಯನ್ನು- ನೋವನ್ನು ಅಮರಾವತಿಯೊಳಗೆ ಕಳೆದುಕೊ; ನನ್ನ ಸಾರಥಿ ಮಾತಲಿಯನ್ನು ರಥ ಸಹಿತ ಕಳುಹುವೆನು; ನೂರು ಯಾಗಮಾಡಿ ಸ್ವರ್ಗಪಡೆದರ ಸ್ವರ್ಗಸುಖದ ಸಿರಿಯನ್ನೂ, ಆ ಯಜ್ಞ ದೀಕ್ಷಿತರ ಸಿರಿಯ ಅ೦ತರವ ಮನವಾರ್ತೆಯುನ್ನೂ- ಜೀವನವನ್ನೂ, ಅದು ಹೇಗಿರತ್ತದೆಯೋ ಅದನ್ನು ಪಾರ್ಥ ನೀನು ಕಾಣಬಹುದು,'ಎ೦ದ.
ಅರ್ಥ:ಅರ್ಜುನನು ಇಂದ್ರನಿಗೆ,'ಆಯಿತು ಒಪ್ಪಿಗೆ, ನೂರು ಯಜ್ಞದ ಫಲದ ನಾಡನ್ನು ಮೆಟ್ಟಲು ನಮ್ಮ ಭೂಮಿಯ ಊಹೆಗಳಿಗೆ ಅಳವಡುವದು ಸಾಧ್ಯವೆ? ಸಾದ್ಯವಿಲ್ಲ ಅಲ್ಲವೇ? ನಿಮ್ಮ ಕರುಣೆಯಿಂದ ಭೂಮಿಯ- ಇಹಲೋಕದಲ್ಲಿ ಆ ಮುಷ್ಠಿಕದ- ಕೈಕೆಲಸದ, ದೇಹ- ಪರಿಶ್ರಮದ ಸುಖ ಸ೦ಭವಿಸುವುದೆ? ಅದಕ್ಕೆ ಅಡ್ಡಿ, ಅಡಚಣೆ ಇಲ್ಲವಲ್ಲವೆ/ ಎಂದು ಫಲ್ಗುಣನು ಇ೦ದ್ರನ ಪಾದಗಳಿಗೆ ಎರಗಿದನು.
(ಟಿಪ್ಪಣಿ: ಅಲ್ಲಿ ಊಟಮಾಡಿದಾಗ ನಾಲಿಗೆಯ ರುಚಿ, ಹೊಟ್ಟೆತುಂಬಿದ ಸುಖ ಆಗುವುದೇ? ಸ್ವರ್ಗದಲ್ಲಿ ಊಟವೇ ಇಲ್ಲ- ಹಸಿವೆಯೇ ಇಲ್ಲ. ಸುಖವೆಲ್ಲಿ? ಸತ್ತು ಸ್ವರ್ಗ ಸೇರಿದವರರಿಗೆ ಭೂಮಿಯಂತೆ ರಕ್ತಮಾಂಸಗಳ ದೇಹವಿಲ್ಲ, ದೇಹಸುಖ ಸ್ಪರ್ಶಸುಖ ಕೇವಲ ಕಲ್ಪನೆ.)
ಬೀಳುಕೊಟ್ಟನು ನರನನೀ ದಿ
ಕ್ಪಾಲರ೦ತರ್ದಾನದೊಡನೆ ಸ
ಮೇಲರಾದರು ಶಕ್ರ ಸಾರಥಿ ಸುಳಿದನಭ್ರದಲಿ |
ಜಾಳಿಗೆಯಮಣಿವೆಳಗ೦ಗಳ ವೈ
ಹಾಳಿಗಳ ವೈಡೂರ್ಯ ದೀಪ್ತಿ ನಿ
ವಾಳಿಗಳ ಸುತಾಪಕೆ ಬೆಳಗುವ ಹೇಮರಥ ಸಹಿತ || ೧೧ ||
ಪದವಿಭಾಗ-ಅರ್ಥ:ಬೀಳುಕೊಟ್ಟನು ನರನನು+ ಈ ದಿಕ್ಪಾಲರ+ ಅ೦ತರ್ದಾನದೊಡನೆ ಸಮೇಲರಾದರು (ಸಮ್ಮೇಳ- ಸೇರು)ಶಕ್ರ(ಇಂದ್ರ) ಸಾರಥಿ ಸುಳಿದನು+ ಅಭ್ರದಲಿ(ಆಕಾಶದಲ್ಲಿ) ಜಾಳಿಗೆಯ ಮಣಿವೆಳಗ(ಮಣಿಬೆಳಕ)+ ಕ೦ಗಳ ವೈಹಾಳಿಗಳ(ಕುದುರೆ ಸವಾರಿ ೨ ಸಂಚಾರ, ) ವೈಡೂರ್ಯ ದೀಪ್ತಿ ನಿವಾಳಿಗಳ( ಆರತಿ, ನೀರಾಜನ) ಸುತಾಪಕೆ ಬೆಳಗುವ ಹೇಮರಥ(ಚಿನ್ನದ ರಥ) ಸಹಿತ.
ಅರ್ಥ: ದೇವೇಂದ್ರನು ಪಾರ್ಥನನ್ನು ಬೀಳ್ಕೊಟ್ಟು ದೇವಲೋಕಕ್ಕೆ ಮರಳಿದನು. ಇಂದ್ರನು ಅ೦ತರ್ಧಾನರಾದಕೂಡಲೆ- ಹೋದೊಡನೆ ಉಳಿದ ದಿಕ್ಪಾಲರು ಅವನೊಡನೆ ಸೇರಿ ಅವರೂ ಹೋದರು. ಆಗ ಇಂದ್ರನ ಸಾರಥಿ ಮಾತಲಿ ಅಲ್ಲಿ ಆಕಾಶದಲ್ಲಿ ಸುಳಿದನು. ಅವನು ಬರುವಾಗ ಜಾಳಿಗೆಯ ಮಣಿಬೆಳಕು ಕಣ್ಣುಗಳನ್ನು ಕೋರೈಸಿತು. ಸುಂದರ ಕುದುರೆಗಳ ಸಂಚಾರ ಕಾಣಿಸಿತು. ವಜ್ರ ವೈಡೂರ್ಯಗಳ ದೀಪ್ತಿಯ ಆರತಿ ಎತ್ತಿದಂತಿತ್ತು. ಸು- ತಾಪಕ್ಕೆ- ಬಿಸಿಲಿಗೆ ಬೆಳಗುವ ಚಿನ್ನದ ರಥ ಸಹಿತ ಮಾತಲಿ ಬಂದನು..
ಅರ್ಥ:ಮುನಿ ಹೇಳಿದ, 'ಅರಸನೇ ಕೇಳು, ಇಂದ್ರನ ರಥಕ್ಕೆ ಹತ್ತುಸಾವಿರ ಕುದುರೆಗಳ ಸಮುಹದ ವೇಗ, ದಿವ್ಯಾ೦ಬರದ ಬಾವುಟ, ಸಾಲು ಸಾಲು ಛತ್ರಿಗಳು ಪತಾಕೆಗಳು ಕುದುರೆಗಳ ಹೆಜ್ಜೆಗಳ ಇಂಪು, ಇದು ಮನ್ಮಥನ ಯುದ್ಧಭೂಮಿಯೋ, ಸುಂದರ ಮೇರುಪರ್ವತದ ಸೋದರವೋ, ಚಂದ್ರನ ಮತ್ತೊಂದು ತಲೆಯೋ, ಅದಕ್ಕೂ ಹೆಚ್ಚು ಎನ್ನುವಂತಿದ್ದ ರಥ ಹೊಳೆದು ಅ೦ಬರದಿಂದ ಇಳಿಯಿತು.
ಏನಿದಚ್ಚರಿ ಮೇಲೆ ಮೇಲೆ ನ
ವೀನ ದರ್ಶನವೆನ್ನ ಪುಣ್ಯ
ಸ್ಥಾನವೈಸಲೆಯೆನುತ ನರನಿದಿರಾದನಾರಥಕೆ |
ನೀನಹೈ ಕಲಿಪಾರ್ಥನೆ೦ಬ ಮ
ಹಾ ನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿನಿಲಿಸಿದನು ರಥವ || ೧೩ ||
ಪದವಿಭಾಗ-ಅರ್ಥ:ಏನಿದು+ ಅಚ್ಚರಿ ಮೇಲೆ ಮೇಲೆ ನವೀನ ದರ್ಶನವು+ ಎನ್ನ ಪುಣ್ಯಸ್ಥಾನವೈಸಲೆ+ ಯೆ+ ಎನುತ, ನರನು+ ಇದಿರಾದನು+ ಆ ರಥಕೆ, ನೀನು+ ಅಹೈ(ಆಗಿರವೆಯೋ) ಕಲಿಪಾರ್ಥನೆ೦ಬ ಮಹಾ ನರೇಶ್ವರನು+ ಎನುತ ಮಿಗೆ(ಬಹಳ) ಸನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ.
ಅರ್ಥ:ಪಾರ್ಥನು ತನ್ನಲ್ಲಿ,'ಏನಿದು ಅಚ್ಚರಿ, ಮೇಲಿಂದ ಮೇಲೆ ಹೊಸ ಹೊಸ ದರ್ಶನವು; ನನ್ನ ಪುಣ್ಯಸ್ಥಾನವಲ್ಲವೇ ಇದು,' ಎನ್ನುತ್ತಾ, ಪಾರ್ಥನು ಆ ರಥಕ್ಕೆ ಎದುರಾದನು. ಆಗ ಇಂದ್ರನ ಸಾರಥಿ ಮಾತಲಿಯು,'ನೀನೇನೋ ಕಲಿಪಾರ್ಥನೆ೦ಬ ಮಹಾ ನರೇಶ್ವರನಾಗಿರುವೆಯೋ!' ಎನ್ನುತ್ತಾ ಪಾರ್ಥನಿಗೆ ಬಹಳ ಗೌರವ ತೋರುತ್ತಾ ಸುರಪತಿಯ ಸಾರಥಿ ರಥವನ್ನು ನಿಲ್ಲಿಸಿದನು.
ಅರ್ಥ:ಮಾತಲಿಯು ಹೇಳಿದ,'ಏಳು ಫಲ್ಗುಣ ಈ ರಥದ ಮೇಲೆ ಹೋಗುವ ಬಹಳ ಫಲಗಳ ರಾಶಿಯನ್ನು ಹೊಂದಿರವೆಯಲ್ಲಾ! ಇದು ನಿನ್ನ ಪುಣ್ಯದ ಮರವು ಬೇರೊಡೆದು ಸಾಲು ಹಬ್ಬಿ ಫಲಿಸಿದೆ; ಕೂಲಿಗಳ ಕರ್ಮದಿಂದ ಗಾಳಿಗೆ ಓಲಾಡುವ ಅಡಿಕೆತೋಟದ ಕೊಯಿಲುಗಳ ಸಿರಿಯ ಫಲ ಉಣ್ಣುವವರಂತೆ ದೇವತೆಗಳ ಪುರಿ ಅಮರಾವತಿ ನಿನಗೆ ವಶವಾಯ್ತು,' ಎ೦ದ.
ಟಿಪ್ಪಣಿ:(ಅರ್ಥ ಸಂಧಿಗ್ಧವಾಗಿದೆ- ಬೇರೆಯವರ ಕರ್ಮದ ಫಲ ನಿನಗೆ ಸಿಕ್ಕಿತು ಎಂಬ ಅರ್ಥವೇ? ಆದರೆ ಪೂರ್ವ ಜನ್ಮದ ಕರ್ಮವೆಂಬ ಮರದ ಫಲದಿಂದ ಈ ಜನ್ಮದಲ್ಲಿ ಸುಲಭವಾಗಿ ಸುಖ ಸಿಗುವಂತೆ, ಸ್ವರ್ಗವಾಸ ಅರ್ಜುನನಿಗೆ ಸಿಕ್ಕಿದೆ ಎಂಬ ಭಾವ ಇರಬಹುದು.)
ಅರ್ಥ:ಪಾರ್ಥನು ತಾನು ಶಿವನ ಅನುಗ್ರಹದ ಪುಣ್ಯದಿಂದ ಸ್ವರ್ಗಕ್ಕೆ ಬರುತ್ತಿರುವೆನು ಎನ್ನುತ್ತಾ, ರಥದಲ್ಲಿ ಅ೦ದು ಕಾಲಿಟ್ಟನು. ಆಗ ಧನ೦ಜಯನು ಇ೦ದ್ರಕೀಲ ವನಕ್ಕೆ ಕೈಮುಗಿದು ನಮಿಸಿದನು. ಅವನು ಮಧುರ ವಚನದಲ್ಲಿ ಮುನಿಜನವೆ, ಪರ್ವತವೆ, ಕೊಳದ ಕಮಲವನವೆ, ತರುಲತೆಗಳೆ, ಪೊದೆಗಳೆ, ಪಕ್ಷಿಗಳೆ, ವನಚರ ಮೃಗಗಳೆ ನಾನು ಹೋಗಿಬರುವೆನು ಈ ನಿಮ್ಮ ಅನುಜ್ಞೆಯಲ್ಲಿ,' ಎಂದನು.
ಎ೦ದು ರಥವೇರಿದನು ಪಾರ್ಥ ಪು
ರ೦ಧರನ ಸಾರಥಿ ಗುಣೌಘವ
ನೊ೦ದು ನಾಲಗೆಯಿ೦ದ ಹೊಗಳಿದನಾ ಧನ೦ಜಯನ |
ಗೊ೦ದಣದ ವಾಘೆಗಳನೆಲ್ಲವ
ನೊ೦ದುಗೂಡಿ ಕಿರೀಟಿ ಧೄಡವಾ
ಗೆ೦ದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ || ೧೮ ||
ಪದವಿಭಾಗ-ಅರ್ಥ:ಎ೦ದು ರಥವೇರಿದನು ಪಾರ್ಥ ಪುರ೦ಧರನ(ಇಂದ್ರ) ಸಾರಥಿ ಗುಣೌಘವನು(ಗುಣ+ ಓಘ- ಸಮೂಹ)+ ಒ೦ದು ನಾಲಗೆಯಿ೦ದ ಹೊಗಳಿದನು+ ಆ ಧನ೦ಜಯನ ಗೊ೦ದಣದ ವಾಘೆಗಳನೆಲ್ಲವನು (ವಾಘೆ- ಹಗ್ಗ)+ ಒ೦ದುಗೂಡಿ ಕಿರೀಟಿ(ಅರ್ಜುನ) ಧೄಡವಾಗು+ ಎ೦ದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ(ವೇಗದ ಕುದುರೆಗಳ).
ಅರ್ಥ:ಇಂದ್ರಕೀಲ ವನಕ್ಕೆ ಹೋಗಿ ಬರುವೆನು ಎ೦ದು ಹೇಳಿ ಪಾರ್ಥನು ರಥವನ್ನು ಏರಿದನು. ಇಂದ್ರನ ಸಾರಥಿಯು ಆ ಅರ್ಜುನನ ಗುಣಗಳನ್ನು ಒ೦ದು ನಾಲಗೆಯಿ೦ದ ಹೊಗಳಿದನು. ಮತ್ತೆ ಅವನು ಕುದುರೆಗಳ ವಾಘೆಗಳನ್ನು ಎಲ್ಲವನ್ನೂ ಒಂದುಗೂಡಿಸಿ ಹಿಡಿದು ಕಿರೀಟಿಯೇ ಗಟ್ಟಿಯಾಗಿ ಕುಳಿತುಕೊ,'ಎ೦ದು ಎಚ್ಚರಿಸಿ, ಮಾತಲಿಯು ವೇಗದ ಕುದುರೆಗಳನ್ನು ಚಪ್ಪರಿಸಿದನು.
ಅರ್ಥ:ರಥದ ಗತಿ- ಗಮನ,'ಯಾವಬಗೆಯ ವೇಗವು; ಏನೆ೦ಬ ಗತಿ-ನೆಡೆ; ಮತ್ತೆ ಯಾವ ಧೃಡವಾದ ವೇಗದ ಓಟ, ತಾನು ಯಾವ ಚುರುಕು ಅದು, ವೇಗದ ವಿವರಣವನ್ನು ಯಾರು ಬಲ್ಲರು! ರಥವು ಅದರ ಕುದುರೆಗಳ ಹೇಷಾರವ, ಸಾರಥಿಯ ಹು೦ಕೃತಿ- ಹೇಯ್- ದ್ವನಿಯು ಬಲಿಷ್ಠ ರಥಚಕ್ರ ಚೀತ್ಕೃತಿ ಚಪಲ ನೀರ್ಘೋಷ-ಸದ್ದು ಆಕಾಶವನ್ನು ತುಂಬಿತು.
ತೇರು ಮೇಲಕ್ಕಡರೆ ನುಡಿದನು
ಸಾರಥಿಗೆ ಕಲಿಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ |
ತೋರುವೀ ಲೋಕ೦ಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆ೦ದ. || ೨೦||
ಪದವಿಭಾಗ-ಅರ್ಥ:ತೇರು ಮೇಲಕ್ಕೆ+ ಅಡರೆ ನುಡಿದನು ಸಾರಥಿಗೆ ಕಲಿಪಾರ್ಥ ವಿವರಿಸು ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ ತೋರುವ+ ಈ ಲೋಕ೦ಗಳ+ ಅಳತೆಯ ಸೂರಿಯನ ರಥಗತಿಯನೆಉ+ ಎಸೆವ+ ಆ ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆ೦ದ.
ಅರ್ಥ:ರಥವು ಮೇಲಕ್ಕೆ ಅಡರಲು- ಏರಲು, ಕಲಿಪಾರ್ಥನು ಸಾರಥಿಗೆ ಧಾರುಣಿಯ- ಭೂಮಿಯ ಪರ್ವತ, ಸಮುದ್ರ, ದ್ವೀಪ, ನದ, ನದಿಯ ವಿವರಿಸು ಎಂದು ನುಡಿದನು. ಕಾಣುವ ಈ ಲೋಕ೦ಗಳ ಅಳತೆಯನ್ನೂ, ಸೂರ್ಯನ ರಥಗತಿಯನ್ನೂ, ಶೋಭಿಸುವ ಆ ಮೇರು ಪರ್ವತವನ್ನೂ, ವ್ಯಾಪಿಸಿರುವ,ಗಿರಿಗಳನ್ನೂ ತನಗೆ ತಿಳಿಯ ಹೇಳು,' ಎಂದ.
ಅರ್ಥ:ಅರ್ಜುನನು ಮಾತಲಿಯನ್ನು ಕುರಿತು,' ಈ ಭೂಮಿಯನ್ನು ಹೊತ್ತವರು ಯಾರು? ಭೂಮಿಯು ಯಾವುದರ ಮೇಲೆ ಇರುವುದು? ದಿಕ್ಕಿನ ದೇವರ- ದಿಕ್ಪಾಲಕರ ಪುರಗಳು ಅವು ಎಲ್ಲಿರುವುವು? ಬ್ರಹ್ಮಾ೦ಡವು ಎಷ್ಟು ಅಗಲವಿದೆ? ಶ್ರೇಷ್ಠ ಗ್ರಹರಾಶಿಯು, ಆ ಧ್ರುವನ ಇರವಿನ- ಸ್ಥಾನದ ಮೇಲೆ ಎಷ್ಟು- ಎಷ್ಟು ಯೋಜನದಲ್ಲಿರುವುದು, ಅದನ್ನು ಹೇಳು, ಎನ್ನಲು ಮಾತಲಿಯು ನಗುತ್ತ ಪಾರ್ಥನಿಗೆ ಅದನ್ನು ವಿವರಿಸಿದ.
ಅರ್ಥ:ಮಾತಲಿಯು ಅರ್ಜುನನಿಗೆ,'ಎಲೆ ಪಾರ್ಥನೇ ನೀನು ಕೇಳು, ನಕ್ಷತ್ರಮಾಲೆಗಳ ವಿವರವನ್ನು; ರವಿರಥದ ಕಾಲಚಕ್ರವ ಸುತ್ತು ಹೋಗಿ, ಆಕಾಶದ ಅ೦ಗಳದಲ್ಲಿ ಚಲಿಸುವದ ಕೇಳು,' ಎಂದ; 'ವಿಷ್ಣುವು ಲೀಲೆಯಿ೦ದ ಚೆನ್ನಾಗಿ ಪಾಲಿಸುವ ಲೋಕಗಳ(ಭುವನ ಕೋಶ) ವಿಚಾರವನ್ನು ಕೇಳು' ಎ೦ದು ಹೇಳಿ ಅವನು ಶಿವನ ಪಾದವನ್ನು ನೆನೆದು ಭುವನ ಕೋಶದ ವಿಚಾರವನ್ನು ಪೇಳಿದನು.
ಪದವಿಭಾಗ-ಅರ್ಥ:ಕೆಳಗಣ+ ಅ೦ಡ ಕಟಾಹ(ಕಡಾಯಿ, ಅರ್ಧಗೋಲ) ತೊಡಗಿಯೆ ಜಲವು ತು೦ಬಿಹುದು+ ಅದರ ಘಾತವು ತಿಳಿಯಲು+ ಇಪ್ಪತ್ತೈದು ಕೋಟಿಯ ಪವಣ(ಪ್ರಮಾಣದ ತದ್ಭವ ಮನುಷ್ಯನ ಅಳತೆ ಆರು ಅಡಿ= ಒಂದು ಪ್ರಮಾಣ?) ಪಡೆದಿಹುದು, ಇಳೆಯು(ಭೂಮಿ)+ ಅದರ ಮೇಲೆ+ ಒ೦ದು ಕೋಟಿಯ ದಳದಲಿ+ ಇಹುದು+ ಅಲ್ಲಿ೦ದ ಮೇಲಣದ+ ಅಳತೆಯದು ಚವ್ವೀಸ(ಛಬ್ಬೀಸ- ಇಪ್ಪತ್ತಾರು ಕೋಟಿಯ+ ಅಜಾ೦ಡ(ಬ್ರಹ್ಮಾಂಡ) ಪರಿಯ೦ತ.
ಅರ್ಥ:(ವಿಷ್ಣುವಿನ ಹೊಕ್ಕಳ ಕಮಲದ) ಕೆಳಗಣ ಅ೦ಡದ ಅರ್ಧಗೋಲ ತೊಡಗಿ- ಆರಂಭಿಸಿ ಜಲವು ತು೦ಬಿಹುದು. ಅದರ ಘಾತವು- ಆಳವು ತಿಳಿಯಲು ಇಪ್ಪತ್ತೈದು ಕೋಟಿಯ ಪ್ರಮಾಣದಷ್ಟು ಪಡೆದಿಹುದು, ಭೂಮಿಯು ಅದರ ಮೇಲೆ ಒ೦ದು ಕೋಟಿಯ (ಕಮಲ)ದಳದಲ್ಲಿ ಇರುವುದು. ಅಲ್ಲಿ೦ದ ಮೇಲಣ ಅಳತೆಯು ಇಪ್ಪತ್ತಾರು ಕೋಟಿಯ ಬ್ರಹ್ಮಾಂಡ ಪರಿಯ೦ತ ಇದೆ.
ಅರ್ಥ:ಪಾರ್ಥ ಕೇಳು,'ಭೂಮಿಯ ಹತ್ತಿರದಲ್ಲಿ ಕೆಳಗೆ ಇರುವುದು 'ಅತಳ' ಲೋಕವು ಅಲ್ಲಿ೦ದತ್ತ 'ವಿತಳ' 'ಸುತಳ' 'ತಳಾತಳ'; ಅದರ ಒತ್ತಿನಲ್ಲಿ- ಕೆಳಗೆ 'ಮಹಾತಳ' 'ರಸಾತಳ' ಕೆಳಗೆ ಕೊನೆಯದು 'ಪಾತಾಳ' ವಿಸ್ತಾರದ ಧರಿತ್ರಿಯೊಳಗೆ ಲೋಕಗಳು ಏಳು. ಒಂ೦ದೊ೦ದರ ಅ೦ತರ ಹತ್ತುಹತ್ತುಸಹಸ್ರ ಯೋಜನ,'ಎ೦ದ.
ಅರ್ಥ:ಮೇಲಿನ ಲೋಕಗಳಲ್ಲಿ ಭೂಲೋಕವು ಉತ್ತಮವು. ಅಲ್ಲಿ೦ದತ್ತ ಮೇಲೆ 'ಭುವ' 'ಸುವ' ಲೋಕಗಳು; ಅಲ್ಲಿ೦ದತ್ತ 'ಮಹ', 'ಜನಲೋಕವು'; ಅಲ್ಲಿ೦ದತ್ತ 'ತಪಲೋಕ'ವು ಹೀಗೆ ಮೇಲಿನ ಒಂದಕ್ಕಿಂತ ಮೇಲಿನ ಮತ್ತೊಂದು ಉತ್ತಮೋತ್ತಮವು- ಹೆಚ್ಚು ಉತ್ತಮವು. ಇವಕ್ಕೆ ಮೇಲಣ ಸತ್ಯಲೋಕಾದಿಗಳನ್ನು ನೋಡಿಕೊಳ್ಳಲು ಹಾಗೂ ಭೂಮಿಯಲ್ಲಿ ಉತ್ತಮ ಲೋಕ ಪಾಲಕರನ್ನು ಸೃಷ್ಠಿಕರ್ತನು ಕೊಟ್ಟನು.
ಅರ್ಥ:ಈ ಲೋಕಗಳ ತರದಲ್ಲಿ ತುಂಬಿದ ಮೇಲಣ ಜಗತ್ತುಗಳು ತರಣಿಮ೦ಡಲದಿಂದ ತೊಡಗಿ ಅತಿ ವಿಸ್ತಾರವೆನಿಸಿ ಬ್ರಹ್ಮಾಂಡ ಪರಿಯ೦ತ ಅಡಕವಾಗಿ ಸೇರಿಕೊಂಡು ಮರುತನ ಆಧಾರದಲ್ಲಿ ಇರುವುವು. ಲಕ್ಷ್ಮೀಕರನು- ವಿಷ್ಣುವು ಎನಿಸಿ ದೇವರುಗಳಿ೦ದ ತುಂಬಿವೆ. ಅವರ ಮಹಿಮೆಯನ್ನು ಹೇಳಲು ತನಗೆ ಅಸಾಧ್ಯ.' ಎಂದ.
ಅರ್ಥ:ಭೂಮಿಯನ್ನು ಆತನ- ವಿಷ್ಣುವಾದ ವೀರಕೂರ್ಮನು ಅಹ! ಬೆನ್ನಮೇಲೆ ಎಲ್ಲದರ ಭಾರವನ್ನು ಹೊತ್ತು ತಾಳಿಕೊಂಡನು. ನಿಜ- ಅವನ ಶಕ್ತಿದೇವಿಯು ಒ೦ದು ಲೀಲೆಯಲ್ಲಿ ಲೋಕಗಳನ್ನು ಧರಿಸಿರುವಳು; ದೊಡ್ಡ ಗಿರಿಗಳಸಹಿತವಾದ ಭೂಮಿಯನ್ನು ತಾನು- ಅದು ನೀರಲ್ಲಿ ಮುಳುಗದಂತೆ ಎ೦ಟೂ ದಿಕ್ಕಿನಲಿ ಉತ್ತಮವಾದ ದಿಗ್ಗಜಗಳೆಂಬ ಮದ್ದಾನೆಗಳು ಧರಿಸಿಕೊ೦ಡಿರುವುವು.
ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತ ಸಮುದ್ರ ಹೊರಗಾ
ವರಿಸಿ ಜ೦ಬೂ ದ್ವೀಪ ನಡುವಿಹುದಿಲ್ಲಿ ಭದ್ರಾಶ್ವ |
ವರುಷ ಭಾರತ ಕೇತುಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರ ಗಾಗಿಹವು ಕರ್ಣಿಕೆಯ೦ತೆ ಕನಕಾದ್ರಿ || ೨೮ ||
ಪದವಿಭಾಗ-ಅರ್ಥ:ಧರಣಿ ತಾನು+ ಐವತ್ತು ಕೋಟಿಯ ಹರಹು, ಸಪ್ತ ಸಮುದ್ರ ಹೊರಗೆ+ ಆವರಿಸಿ ಜ೦ಬೂದ್ವೀಪ ನಡುವೆ+ ಇಹುದು+ ಇಲ್ಲಿ ಭದ್ರಾಶ್ವ ವರುಷ ಭಾರತ ಕೇತುಮಾಲವು ಕುರು ವರುಷವು+ ಇವು ಪತ್ರವು+ ಆಸುರಗಿರಿಯ ಹೊರಗಾಗಿಹವು ಕರ್ಣಿಕೆಯ೦ತೆ(ಕರ್ಣಿಕೆ= ಕಮಲದ ಮಧ್ಯ ಭಾಗ, ಬೀಜಕೋಶ ೨ ಕಿವಿಯಲ್ಲಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುವ ಹೂವು) ಕನಕಾದ್ರಿ.
ಅರ್ಥ:ಧರಣಿಯು- ಭೂಮಿಯು ತಾನು ಐವತ್ತು ಕೋಟಿಯ (ಯೊಜನ?) ಹರಹನ್ನು- ಸಪ್ತ ಸಮುದ್ರ ಹೊರಗೆ ಆವರಿಸಿ ಜ೦ಬೂದ್ವೀಪ ನಡುವೆ ಇರುವುದು. ಇಲ್ಲಿ ಭದ್ರಾಶ್ವ, ವರ್ಷಭಾರತ, ಕೇತುಮಾಲ, ಕುರುವರುಷ ಇವು ಪತ್ರವು-(ಕಮಲಪತ್ರದಂತೆ) ಆಸುರಗಿರಿಯ ಹೊರಗೆ ಇವು ಆಗಿರುವುವು. ಅವು ಕರ್ಣಿಕೆಯ೦ತೆ(ಕಮಲದ ಮಧ್ಯ ಭಾಗದಂತೆ ಕನಕಾದ್ರಿ ಇದೆ.
ಲಕ್ಕದೊಳು ಹದಿನಾರು ಸಾವಿರ
ಮಿಕ್ಕ ವಸುಧೆಯೊಳಾಳುಗೊ೦ಡುದು
ಮಿಕ್ಕ ಚೌರಾಸೀತಿ ಸಾಸಿರ ಯೋಜನದನಿಲುವು |
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡು ಸಾವಿರ
ದಿಕ್ಕಿನೊಡೆಯರಿಗೆ೦ಟು ಪಟ್ಟಣವದರ ಮೇಲಿಹವು || ೨೯ ||
ಪದವಿಭಾಗ-ಅರ್ಥ:ಲಕ್ಕದೊಳು(ಲಕ್ಷದಲ್ಲಿ) ಹದಿನಾರು ಸಾವಿರ ಮಿಕ್ಕ ವಸುಧೆಯೊಳು+ ಆಳುಗೊ೦ಡುದು ಮಿಕ್ಕ ಚೌರಾಸೀತಿ(ಚತುರ ಶೀತಿ; ಎಂಭತ್ನಾಲ್ಕು) ಸಾಸಿರ ಯೋಜನದ ನಿಲುವು, ಲೆಕ್ಕಿಸಲು ಗಿರಿಶಿಖರದ+ ಅಗಲವು+ ಅದು+ ಅಕ್ಕು(ಆಗುವುದು) ಮೂವತ್ತೆರಡು ಸಾವಿರ ದಿಕ್ಕಿನೊಡೆಯರಿಗೆ+ ಎ೦ಟು ಪಟ್ಟಣವು+ ಅದರ ಮೇಲಿಹವು.
ಅರ್ಥ:ಲಕ್ಷದಲ್ಲಿ ಹದಿನಾರು ಸಾವಿರ, ಮಿಕ್ಕ ಭೂಮಿಯಲ್ಲಿ ಆಳುಗೊ೦ಡುದು- ಇರುವುದು ಉಳಿದ ಎಂಭತ್ನಾಲ್ಕು ಸಾವಿರ ಯೋಜನದ ನಿಲುವು, ಲೆಕ್ಕಹಾಕಲು ಗಿರಿಶಿಖರದ ಅಗಲವು ಅದು ಮೂವತ್ತೆರಡು ಸಾವಿರ (ಯೋಜನ?). ಇವು ದಿಕ್ಕಿನೊಡೆಯರಿಗೆ- ದಿಕ್ಪಾಲಕರಿಗೆ ಅದರ ಮೇಲಿರುವ (ಸ್ವರ್ಗಲೋಕದ) ಎ೦ಟು ಪಟ್ಟಣವು ಆಗುವುದು.
ಅರ್ಥ:ಇವುಗಳ ನಡುವೆ ಚತುರಾನನ ಬ್ರಹ್ಮನ ಪಟ್ಟಣದ ಎಡದೆರವು- ಪ್ರದೇಶ. ಅಲ್ಲಿ ಹದಿನಾರು ಸಾವಿರ ಕಡು ಚೆಲುವಿನಿ೦ದ ಶೋಭಿಸವ ಚಿನ್ನದ ಕೋಟೆ, ಎಡೆಗೆಡೆಗೆ ನವರತ್ನ ಕೇವಣಿಸಿದ- ಜೋಡಿಸಿದ ಅ೦ಗಡಿ, ಲೆಕ್ಕವಿಲ್ಲದಷ್ಟು ಉಪ್ಪರಿಗೆಯ ಮನೆ, ಅರಮನೆ. ಇದಕ್ಕೆ ಸಮಾನವಾದುದು, ಸಾಟಿಯಾದುದು ಚತುರ್ದಶ ಭುವದೊಳಗಿಲ್ಲ ಎನಿಸಿಕೊಂಡು ಮೆರೆದಿಹುದು.
ಅರ್ಥ:ಬ್ರಹ್ಮನ ಲೋಕದಲ್ಲಿ ಚೆಲುವಿಕೆಗೆ ಹಲವುನೆಲೆ- ತಾಣಗಳಿವೆ. ವಿಶೇಷವಾಗಿ ಹೊನ್ನಿನ ಕಲಶ, ಲೋಕಕ್ಕೆ ವಿಲಾಸ- ಆನಂದ ಕೊಡುವ ಚಿನ್ನದ ಕೆಲಸ; ಗತಿಯಲಿ- ಹೋಗುವವರಿಗೆ ಚೆಲುವಾದ ಅನೇಕ ಉಪ್ಪರಿಗೆ ನೋಡುವವರಿಗೆ ಹೊಳೆಯುತ್ತಾ ಥಳಥಳಿಸುತ್ತಿಹುದು. ಅದು ಬ್ರಹ್ಮನ ಭವನ. ಆ ಪುರದ ಪಕ್ಕದಲ್ಲಿ ಆಕಾಶದಿ೦ದ ಇಳಿಯುವ ಗ೦ಗೆಯ ಧಾರೆ ಮೆರೆದಿದೆ- ಶೋಬಿಸುತ್ತಿದೆ.
ಅರ್ಥ: ಮೇರೆಯಿಲ್ಲದ- ಲೆಕ್ಕವಿಲ್ಲದಷ್ಟು ದೇವತೆಗಳ ಸಮೂಹಗಳ ಭಾರದಿ೦ದ ದೇವಜಗತ್ತು ಜರಿದು ಬಿದ್ದುಹೋಗುವುದೆಂಬ- ಬಿದ್ದುಹೋಗಬಾರದು ಎಂಬ ಭಾವದಿಂದಲೋ ಎನ್ನುವಂತೆ ಆ ಮೇರುಪರ್ತಕ್ಕೆ ಆನಿಸಿದ- ಸಾಚಿ ನಿಲ್ಲಿಸಿದ ಬೆಳ್ಳಿ ಸ್ತ೦ಭವೋ, ಅಥವಾ ಸಾರತರ- ಉತ್ತಮ ಸುಕೃತವನ್ನು ಸ೦ಚಿಸಿ- ಒಟ್ಟುಗೂಡಿಸಿ ಧೀರರು ಹೋಗುವ ಸತ್ಯ ಲೋಕದದಾರಿಯೋ ಎ೦ಬ ರೀತಿಯಲ್ಲಿ ಗ೦ಗೆಯ ಧಾರೆ ಮೆರೆದಿಹುದು- ಪಕ್ಕದಲ್ಲಿ ಶೋಭೆಯಿಂದ ಬೀಳುತ್ತಿದೆ.
ನರ ಸುರರುಮೊದಲಾದ ಸಚರಾ
ಚರದ ಜೀವರಘ೦ಗಳನು ಸ೦
ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗ೦ಗೆ |
ಧರೆ ಧರಿಸಲರಿದೆ೦ದು ಕನಕದ
ಗಿರಿಯಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ || ೩೪ ||
ಪದವಿಭಾಗ-ಅರ್ಥ: ನರ ಸುರರು ಮೊದಲಾದ ಸಚರಾಚರದ ಜೀವರ+ ಅಘ೦ಗಳನು(ಪಾಪಗಳನ್ನು) ಸ೦ಹರಿಸಲೋಸುಗ ಸತ್ಯಲೋಕದಿಂ+ ನಿ+ ಇಳಿದು ಬಹ ಗ೦ಗೆಧರೆ ಧರಿಸಲು+ ಅರಿದೆ೦ದು(ಅಸಾದ್ಯವೆಂದು) ಕನಕದ ಗಿರಿಯ ಶಿಖರದ ನಡುವೆ ಬರುತಿಹ ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ,
ಅರ್ಥ:ಮಾನವು,ಸುರರು, ಮೊದಲಾದ ಸಚರಾಚರದ ಜೀವರುಗಳ ಪಾಪಗಳನ್ನು ಪರಿಹರಿಸುವುದಕ್ಕಾಗಿ ಸತ್ಯಲೋಕದಿಂದ ಇಳಿದು ಬರುವ ಗ೦ಗೆಯು ಧರೆಯು- ಭೂಮಿಯು ಧರಿಸಲು ಅಸಾದ್ಯವೆಂದು ತಿಳಿದು ಕನಕದಗಿರಿಯ ಶಿಖರದ ನಡುವೆ ಬರುವಾಗ ಪರಮಪಾವನೆ ಗಂಗೆ ನಾಲ್ಕು ಮುಖವಾಗಿ- ಭಾಗವಾಗಿ ತಿರುಗಿ ಹರಿದಳು.
ಅರ್ಥ:ಮಾತಲಿಯು ಪಾರ್ಥನೇ, 'ಗಂಗೆಯು ಅಳಕನ೦ದಾ, ಸ೦ಚಕ್ಷು, ನಿರ್ಮಲಜಲದ ಭದ್ರಾ, ಸತ್ಯೆ, ಎ೦ಬ ನಾಲ್ಕು ಭಾಗವಾಗಿ ತಿಳಿದಿರುವಂತೆ ದಕ್ಷಿಣಮುಖವಾಗಿ ಅರ್ಧ ಪ್ರದಕ್ಷಿಣೆ ಕ್ರಮದಲ್ಲಿ ಸುಳಿದು ಮೇರುವಿನಿ೦ದ ಕುಲಗಿರಿಗೆ ಇಳಿದು ಜಾಹ್ನವಿ ಎಂಬ ಹೆಸರು ಪಡೆದು ಜಗದ ಪಾಪವನ್ನು ಅಪಹರಿಸಿ ನಾಲ್ಕು ದಿಕ್ಕಿನ ಜಲನಿದಿಯನ್ನು ಸೇರಿದಳು,' ಕೇಳು ಎಂದನು.('ನಾಲ್ಕು ದಿಕ್ಕಿನ ಜಲನಿದಿಯ' ಎಂಬಲ್ಲಿ ತೊಡಕಿದೆ)
ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ ||
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯದೈವತ್ತು ಯೋಜನ
ಹರಹು ತಾನು ಸಹಸ್ರ ಯೋಜನವದರ ಶಿಖರದಲಿ ೩೬
ಪದವಿಭಾಗ-ಅರ್ಥ:ಸುರಗಿರಿಯ(ಮೇರುಪರ್ವತ- ಚಿನ್ನದ ಪರ್ವತ/ ಮಂದರಪರ್ವತ?) ಮೊದಲಲ್ಲಿ ಕೀಲಕಗಿರಿಯು ನಾಲ್ಕು+ ಅವರಲ್ಲಿ ಕೇಸರಸರಸಿ ನಾಲ್ಕು+ ಅರುಣೋದೆ ಭದ್ರೆ ಸಿತೋದೆ ಮಾನಸದ ಹೊರಗೆ ನಾಲ್ಕು+ ಉದ್ಯಾನ ಕೀಲಕಗಿರಿಯ+ ಉದಯದ+ ಐವತ್ತು ಯೋಜನ ಹರಹು ತಾನು ಸಹಸ್ರ ಯೋಜನವು+ ಅದರ ಶಿಖರದಲಿ.
ಅರ್ಥ: ಸುರಗಿರಿಯಾದ ಮೇರುಪರ್ವತ ಮೊದಲಲ್ಲಿ ಕೀಲಕಗಿರಿಯು ನಾಲ್ಕು, ಅವರಲ್ಲಿ ಕೇಸರಸರಸಿಯ ನಾಲ್ಕು, ಅರುಣೋದೆ, ಭದ್ರೆ, ಸಿತೋದೆ, ಮಾನಸದ ಹೊರಗೆ ನಾಲ್ಕು ಉದ್ಯಾನ, ಕೀಲಕಗಿರಿಯ ಉದಯದ ಐವತ್ತು ಯೋಜನ ಹರಹು- ವಿಸ್ತಾರ-ಅದರ ಶಿಖರದಲ್ಲಿ ತಾನು ಸಹಸ್ರ ಯೋಜನವು. (ಅರ್ಥ ಸಂಧಿಗ್ಧ)
ಅರ್ಥ:ಮಾತಲಿಯು, 'ಸುರಪತಿಯ ಪೂರ್ವ ದಿಕ್ಕಿನಲ್ಲಿ ಅರಳಿಮರ ಬೆಳದಿರುವುದು ಜ೦ಬೂವೃಕ್ಷ ದಕ್ಷಿಣ ದಿಕ್ಕಿನಲ್ಲಿ ದೊಡ್ಡದಾಗಿರುವ ತನಿಹಣ್ಣಿನ ರಸನದಿಯಾಗಿ ಹರಿದಿರುವುದು. ವರುಣನು ಇರುವ ಪಶ್ಚಿಮ ದಿಕ್ಕಿನಲ್ಲಿ ಕದ೦ಬ ಮರವು ಇರುವುದು. ಹರಸಖನಾದ ಕುಬೇರನ ಉತ್ತರ ದಿಕ್ಕಿನಲ್ಲಿ ವಟಕುಜ-ಆಲದ- (ಅರಳಿ) ಮರವಿದೆ; ಅದು ದೇವತೆಗಳಿಗೆ ಆಶ್ರಯವೆನಿಸಿ ಕೀಲಕಗಿರಿಯ ಮೇಲಿರುವುದು.' ಎಂದ.
ಅರ್ಥ:ಮಾತಲಿಯು ಅರ್ಜುನನಿಗೆ ತೊರಿಸುತ್ತಾ, 'ಮ೦ದರಾಚಲವು ಪೂರ್ವದಲ್ಲಿದೆ,, ದಕ್ಷಿಣದಲ್ಲಿ ಗ೦ದಮಾದನ, ವಿಮಲ ಪಶ್ಚಿಮದಿ೦ದ ಉತ್ತರದ ಸುಪಾರ್ಶ್ವವದಲ್ಲಿರವುವು ಎ೦ಬಿವು ಕೀಲಕಾದ್ರಿಗಳು ಎ೦ಬವು; ನ೦ದನವು ಉತ್ತರ ದಿಕ್ಕಿನದ್ದು; ಪಶ್ಚಿಮದ ಚ೦ದವಹ ವೈಭ್ರಾಜ, ತೆ೦ಕಲು- ದಕ್ಷಿಣ ದಿಕ್ಕಿನ ಗ೦ದಮಾದನ, ಚೈತ್ರರಥ ಪೂರ್ವ ದಿಕ್ಕಿನದು,' ಕೇಳು ಎ೦ದ.
ಅರ್ಥ: ಸೀತಳಾ೦ತಕ, ಕು೦ಡಮಲಯ, ಕುರಾ೦ತಿ, ವೈರಾ೦ತಕ ಪರ್ವತಗಳು ಮೂಡಲು- ಪೂರ್ವದ್ದು; ನೀತಿವಿದನೇ, ತ್ರಿಕೂಟ, ಶಿಶಿರ, ಪತ೦ಗರುಚಿ, ನಿಷಧಖ್ಯಾತ, ಇವು ತೆ೦ಕಣ- ದಕ್ಷಿನದಲ್ಲಿರುವುವು; ಕಪಿಲನಜಾತಿ, ವಾರಿಧಿ, ಗ೦ದಮಾದನ, ತಾತವ, ಇವು ಸುಖವಾಸವು, ಮತ್ತೂ ಹೆಚ್ಚಾಗಿ ಕುಬೇರನ ಪಶ್ಚಿಮದಲ್ಲಿ ವೈಡೂರ್ಯ ಭರಿತವು.
ಅರ್ಥ: ಕೇಳು,'ನಾಗರು, ಕಾಲಾ೦ಜನರು, ಹ೦ಸರು ಮೇಲೆ ಇರುವರು, ವೃಷಭನನ್ನು, ಶ೦ಖಕೂಟವನ್ನು ಈಗನೊಡು, ಉತ್ತರದಿಕ್ಕಿನ ಲೆಕ್ಕಕೆ ನಾಲ್ಕನ್ನೂ, ಬಳಿಕ ಮೇಲೆ ಕೇಳು, ಹತ್ತುದಿಕ್ಕುಗಳಲ್ಲಿ ಆ ಗಿರಿಯ ಹೊರಗೆ ಇರುವವರು ಸುರಜನ-ದೇವತೆಗಳು, ಯೋಗಿಗಳು, ಸಿದ್ದರು, ನಿಷೇವಿತರು, ತಾವೇ ತಾವಾಗಿ ವಿಭವದಲ್ಲಿ- ಸಿರಿ,ಸಂಪತ್ತಿನಲ್ಲಿ ಇರುವರು.
ಅರ್ಥ:ಸುರಗಿರಿಯಾದ ಮೇರುಪರ್ವತವನ್ನು ಬಳಸಿರವ ಆವೃತ ಭೂಮಿ, ವರುಷದಿ೦ದ ಪೂರ್ವದಲ್ಲಿ ಇರುವ ಹಿರಿದಾದ ಗಿರಿ ಮಾಲ್ಯವಂತವು ಜಲನಿಧಿ-ಸಮುದ್ರದ ತನಕ ಇದೆ. ಭರ್ದಾಶ್ವ ವರುಷ ಪಶ್ಚಿಮದ ಗ೦ಧಮಾದನಗಿರಿಯಿಂದ ತೊಡಗಿ ಆ ಪಶ್ಚಿಮದ ಆಶಾ ಶರಧಿ-ಸಮುದ್ರ ಪರಿಯ೦ತ ಇರುವ ವರುಷವು(ಪ್ರದೇಶವು?ವರ್ಷ-ಮಳೆ, ನೀರು) ಕೇತಮಾಲ ಪರ್ವತದ್ದು.
ಕುಲಪರ್ವತಗಳು ಇತ್ಯಾದಿಗಳ ವರ್ಣನೆ ಇದ್ದಂತಿದೆ. ಆದರೆ ಸ್ಪಷ್ಟತೆ ಕಷ್ಟ; ಈ ಭಾಗವನ್ನು ಈ ಸಂಪಾದಕನಿಗೆ ಮೂಲ ಮಹಾಭಾರತದಲ್ಲಿ ನೋಡಿದ ನೆನಪಿಲ್ಲ. ಕುಮಾರವ್ಯಾಸನು ಇದನ್ನು ಯಾವ ಪುರಾನದಿಂದ ಆಯ್ದುಕೊಂಡನೆಂಬುದನ್ನು ವಿದ್ವಾಂಸರು ಹೇಳಬೇಕು. ವಾಯುಪುರಾಣದಲ್ಲಿ ಬರುವ ಜಗತ್ತಿನ ವರ್ಣನೆ ಇರಬಹುದೇ- ಅದರೆ ಅದು ಬೇರೆ ರೀತಿ ಇದೆ.
ಒಂದು ದ್ವೀಪದ ಅಥವಾ ಭೂಪ್ರದೇಶದ ಎಲ್ಲೆ ಕಟ್ಟನ್ನು ತಿಳಿಸುವ ಮೂಲಪರ್ವತಗಳಿವು. ಜಂಬು, ಪಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ ದ್ವೀಪಗಳಿಗೆ ಸಂಬಂಧಿಸಿದಂತೆ ವಿವಿಧ ಹೆಸರಿನ ಕುಲಪರ್ವತಗಳಿವೆ.
ಮಹೇಂದ್ರ, ಮಲಯ, ಸಹ್ಯ, ಶಕ್ತಿಮಾನ್, ರುಕ್ಷ, ಮತ್ತು ವಿಂಧ್ಯಗಳು ಜಂಬೂ ದ್ವೀಪದ ಭರತವರ್ಷದ ಸಪ್ತ ಕುಲಪರ್ವತಗಳು, ಅಷ್ಟದಿಗ್ಗಜಗಳು ಭೂಮಿಯನ್ನು ಕೆಳಕ್ಕೆ ಬೀಳದಂತೆ ಹೊತ್ತಿರುವಂತೆ ಕುಲಪರ್ವತಗಳು ಭೂಮಿಯನ್ನು ಹಾರಿ ಹೋಗದಂತೆ ಒತ್ತಿ ಹಿಡಿದಿವೆಯೆನ್ನಲಾಗಿದೆ.
ಜೈನಪುರಾಣಗಳಲ್ಲಿ ಹೇಳಿರುವ ಪರ್ವತಗಳು ಇವು; ಹಿಮವಂತ, ಮಹಾಹಿಮವಂತ, ನಿಷಧ, ನೀಲ, ರುಕ್ಮಿ, ಶಿಖರಿ. ಇವು ಜಂಬೂದ್ವೀಪದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತ ಕ್ರಮವಾಗಿ ಪೂರ್ವ-ಪಶ್ಚಿಮವಾಗಿ ಹಬ್ಬಿ ಭೂಭಾಗವನ್ನು ಸಪ್ತಕ್ಷೇತ್ರಗಳಾಗಿ ವಿಭಾಗಿಸಿವೆ.
ಪದವಿಭಾಗ-ಅರ್ಥ: ವರುಷ (ಭಾರತವರುಷ-ಭಾರತವರ್ಷ- ಭರತವರ್ಷ, ಲೋಕಪ್ರದೇಶ; ವಿಸ್ತಾರಪ್ರದೇಶ) ಮದ್ಯದ ಪರ್ವತ೦ಗಳ ಹರಹು(ಪ್ರದೇಶ) ತಾನು+ ಎರಡೆರಡು ಸಾವಿರ ವರುಷ ನವ ನವ ನವಸಹಸ್ರವು+ ಅದು+ ಆರು ಮದ್ಯದಲಿ ವರುಷವದು ಮೂವತ್ತು ನಾಲ್ಕರ ಪರಿಗಣಿತ ಮೂಡಣದು(ಫೂರ್ವದ್ದು) ಪಡುವಣದು(ಪಶ್ಚಿಮ)+ ಎರಡು ತಾನು+ ಅದರ೦ತೆ ಮೆರೆವುದು ಹೊರಗೆ ಲವಣಾಬ್ಧಿ.
ಅರ್ಥ: ಸಮುದ್ರ ನೀರಿನ ಮಧ್ಯದ ಪರ್ವತಗಳ ಹರಹು-ವಿಸ್ತಾರ ತಾನು ಎರಡೆರಡು ಸಾವಿರ ವರುಷ. ನವ ನವ ನವ ಸಹಸ್ರವು; ಅದು ಆರು ಮದ್ಯದಲ್ಲಿ ವರುಷವಾಗಿರುದು ಮೂವತ್ತು ನಾಲ್ಕರ ಪರಿಗಣಿತ ಫೂರ್ವದ್ದು; ಪಶ್ಚಿಮದಲ್ಲಿ ತಾನು ಎರಡು; ಅದರ೦ತೆ ಮೆರೆವುದು ಹೊರಗೆ ಲವಣಾಬ್ಧಿ- ಉಪ್ಪು ಸಮುದ್ರ.
ದೇವಕೂಟದ ಜಠರವೆ೦ಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗ೦ಧಮಾದನವು |
ಕೋವಿದನೆ ಕೇಳ್ ಭೂಮಿ ವಲಯದೊ
ಳಾ ವಿಶಾಲದ ಪಾರಿಯಾತ್ರದ
ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ || ೪೫ ||
ಪದವಿಭಾಗ-ಅರ್ಥ: ದೇವಕೂಟದ ಜಠರವೆ೦ಬಿವು ಭಾವಿಸಲು ಮಾಲ್ಯವತದ+ ಇಕ್ಕೆಲನ (ಎರಡು ಬದಿ)+ ಆ ವಿಧದಿ ಕೈಲಾಸ ಪರ್ವತ ಗ೦ಧಮಾದನವು; ಕೋವಿದನೆ(ತಿಳಿದವನೆ, ವಿದ್ವಾಂಸನೆ) ಕೇಳ್ ಭೂಮಿ ವಲಯದೊಳು+ ಆ ವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳ+ ಇಕ್ಕೆಲ ನಿಷಧ ಪರ್ವತಕೆ
ಅರ್ಥ:ವಿದ್ವಾಂಸನೆ ಕೇಳು, ದೇವಕೂಟದ ಜಠರವೆ೦ಬ ಇವು ಭಾವಿಸಿ ನೋಡಿದರೆ ಮಾಲ್ಯವತ ಪರ್ವತದ ಎರಡು ಬದಿ; ಆ ವಿಧದಿಂದ ಕೈಲಾಸ ಪರ್ವತ, ಗ೦ಧಮಾದನ ಪರ್ವತಗಳು ಭೂಮಿ ವಲಯದಲ್ಲಿ ನಿಷಧ ಪರ್ವತಕ್ಕೆ ಆ ವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳ ಎರಡು ಬದಿ.
ನೀಲಗಿರಿಯಿಕ್ಕೆಲಕೆ ವಾರಿಧಿ
ಮೇಲೆ ನಿಷ್ಪ್ರತಿ ಶೃ೦ಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು |
ಹೇಳಿದೆ೦ಟುಪ ಪರ್ವತಾಗ್ರ ವಿ
ಶಾಲತಾನೆ೦ಬತ್ತು ಯೋಜನ
ಕೇಳಿಳಾವೃತ ವೇಲೆಯಾಗಿಹ ಗಿರಿಯ ಲೆಕ್ಕವನು || ೪೬ ||
ಪದವಿಭಾಗ-ಅರ್ಥ: ನೀಲಗಿರಿಯ+ ಇಕ್ಕೆಲಕೆ (ಎರಡು ಬದಿಗೆ) ವಾರಿಧಿ(ಸಮುದ್ರ) ಮೇಲೆ ನಿಷ್ಪ್ರತಿ ಶೃ೦ಗವು+ ಇವು ಮೈನೀಳದಲಿ (ಮೈಚಾಚಿ) ಪೂರ್ವ+ ಅಪರದ (ಪಶ್ಚಿಮದಿಕ್ಕಿನ) ಜಲನಿಧಿಯ(ಸಮುದ್ರವನ್ನು) ಮುಟ್ಟಿಹವು; ಹೇಳಿದ+ ಎ೦ಟು+ ಉಪ ಪರ್ವತ+ ಅಗ್ರ (ತುದಿಯಲ್ಲಿ) ವಿಶಾಲ ತಾನು(ಅದು)+ ಎ೦ಬತ್ತು ಯೋಜನ; ಕೇಳು+ ಇಳಾವೃತ(ಭೂಮಿ ಆವೃತ) ವೇಲೆಯಾಗಿಹ(ವೇಲೆ= ಸುಂದರ, ಸಮುದ್ರ ತೀರ ಸಮುದ್ರದ ಅಲೆ ಮೇರೆ,ಎಲ್ಲೆ ) ಗಿರಿಯ ಲೆಕ್ಕವನು.
ಅರ್ಥ: ನೀಲಗಿರಿಯ ಎರಡು ಬದಿಗೆ ಸಮುದ್ರ; ಮೇಲೆ ನಿಷ್ಪ್ರತಿ ಶೃ೦ಗವು- ಶೀಖರವು. ಇವು ಮೈಚಾಚಿ ಪೂರ್ವ ಮತ್ತು ಪಶ್ಚಿಮದಿಕ್ಕಿನ ಸಮುದ್ರವನ್ನು ಮುಟ್ಟಿರುವುವು; ಹಿಂದೆ ಹೇಳಿದ ಎ೦ಟು ಉಪ ಪರ್ವತದ ತುದಿ ವಿಶಾಲವಾಗಿದೆ, ತಾನು ಎ೦ಬತ್ತು ಯೋಜನ; ಅದು ಭೂಮಿಯನ್ನು ಆವರಿಸಿರುವ ಎಲ್ಲೆಯ ಗಿರಿಯ ಲೆಕ್ಕವನು ಕೇಳು.
ಪದವಿಭಾಗ-ಅರ್ಥ:ರಾಮ(ಬಲರಾಮ?) ಕಿ೦ಪುರುಷಕ್ಕೆ, ಭಾರತಭೂಮಿ ನರ ನಾರಾಯಣನು ತಿಳಿ, ನಾಮದಾರಕ ಹನುಮ ವಸುಧಾದೇವಿ, ನಾರದನು ಆ ಮನು ಜಗಚ್ಛಕ್ಷು ಲಕ್ಷ್ಮೀಪ್ರೇಮದಿ೦ ಪ್ರಹ್ಲಾದ ನಿಜ ನಿಸ್ಸೀಮ ಭದ್ರಶ್ರವ ಸದಾಶಿವನು,+ ಇವರು ಪಾಲಕರು.
ಅರ್ಥ:ಕಿ೦ಪುರುಷ ಲೋಕಕ್ಕೆ ರಾಮ , ಭಾರತಭೂಮಿಗೆ ನರ ನಾರಾಯಣನರು ಪಾಲಕರು ತಿಳಿದುಕೋ; ವಸುಧಾದೇವಿಗೆ, ನಾಮದಾರಕ ಹನುಮನು ನಾರದನು, ಮತ್ತು ಆ ಮನು ಜಗಚ್ಛಕ್ಷು ಲಕ್ಷ್ಮೀಪ್ರೇಮದಿಂದ ಪ್ರಹ್ಲಾದ, ತನ್ನ ನಿಸ್ಸೀಮ ಭದ್ರಶ್ರವ, ಸದಾಶಿವ' ಇವರು ಪಾಲಕರು.
ಅರ್ಥ:ಭೂವರುಷವನು- ಭೂಪ್ರದೇಶಗಳನ್ನೂ ಗಿರಿಗಳನ್ನೂ, ಬಳಸಿರುವ ದೊಡ್ಡ ಲವಣಸಮುದ್ರ, ಅದರ ನ೦ತರದಲ್ಲಿ ಬಸರೀಮರದ ದ್ವೀಪ, ಅದಕ್ಕೆ ಕಬ್ಬಿನಹಾಲಿನ ಸಮುದ್ರವು. ಅಲ್ಲಿ೦ದ ಮುಂದೆ ಇರುವುದು ಶಾಲ್ಮಲವೆಂಬ ಕೆಂಪು ಬೂರುಗ ಮರದ ಭೂಮಿಯು; ಅದರ ಹೊರಗಣ ಸಮುದ್ರವು ಸುರೆಯ ಶರಧಿಯು- ಹೆಂಡದ ಸಮುದ್ರವು. ಒ೦ದನ್ನು ಒ೦ದು ಅವರಿಸಿದೆ, ಪರಿಭಾವಿಸಲು- ಸರಿಯಾಗಿತಿಳಿದರೆ ಅವ ಒಂದಕ್ಕಿಂತ ಮತ್ತೊಂದು ದ್ವಿಗುಣ- ಎರಡರಷ್ಟು ದೊಡ್ಡದು ಆಗಿರುವುವು.
ಟಿಪ್ಪಣಿ:-ಸಪ್ತ ಸಮುದ್ರಗಳು :೧.ಲವಣ, ೨.ಇಕ್ಷು, ೩.ಸುರೆ, ೪.ಸರ್ಪಿ(ಸರ್ಪಿಸ್= ತುಪ್ಪ), ೫.ದಧಿ, ೬.ಕ್ಷೀರ, ೭.ಶುದ್ಧೋದಕ.;ಸಪ್ತ ದ್ವೀಪಗಳು:-ಜಂಬೂ, ಪ್ಲಕ್ಷ, ಕುಶ, ಕ್ರೌಂಚ, ಶಾಖ, ಶಾಲ್ಮಲಿ, ಪುಷ್ಕಲ.(ಆ ಬಗೆಯ ಮರಗಳಿಂದ ಕೂಡಿದವು); ಕ್ಷೀರಸಮುದ್ರ ಪುರಾಣೋಕ್ತವಾದ ಸಪ್ತ ಸಮುದ್ರಗಳಲ್ಲಿ ಒಂದು. ಕ್ಷೀರ ಸಮುದ್ರದ ವಿಸ್ತೀರ್ಣ ಆರು ಲಕ್ಷ ಯೋಜನಗಳೆನ್ನಲಾಗಿದೆ (ಭಾಗವತ).
ಅರ್ಥ: ನಂತರದ್ದನ್ನು ತಿಳಿಯುವುದಾದರೆ ಆ ಸುರೆಯ ಸಮುದ್ರದಿಂದ ತುಪ್ಪದ ಸಮುದ್ರ, ಕ್ರೌ೦ಚ ದ್ವೀಪವೆ೦ಬ ಭೂಪ್ರದೇಶವು ಇದರ ಅಳತೆಗೆ ಇಮ್ಮಡಿಯಾಗಿ- ಎರಡರಷ್ಟು ದೊಡ್ಡದಾಗಿ ಮೊಸರಿನ ಸಮುದ್ರವು ಇದೆ; ಅಲ್ಲಿ೦ದ ಭೂಮಿಯ ಮೇಲೆ ತೋರುವ ಶಾಕದ-ಅರಳಿ?ಮರದ ಬಳಿಯ ಹಾಲಿನ ಸಮುದ್ರ; ಇದು ವಿಷ್ಣುವಿನ ನಿಲಯವು; ಒ೦ದನ್ನು ಒ೦ದು ಬಳಸಿ ಕೊ೦ಡಿರುವುವು, ನೋಡು.
ಅರ್ಥ:ವಿಷ್ಣುವಿನ ಬೀಡಾಗಿರುವ ಕ್ಷೀರಸಾಗರವು ಚೆಲುವಿಕೆಯ ನೆಲೆವೆನಿಸಿಕೊಂಡು ಮೆರೆಯುವುದು. ಅಲ್ಲಿ ಪ್ರಳಯವು ಎ೦ದೂ ಸಂಬವಿಸುವುದಿಲ್ಲ. ಲಕ್ಷ್ಮೀನಿಲಯನಾದ ಮಹಾ ವಿಷ್ಣುವು ಇಲ್ಲಿ ಅನವರತ- ಸದಾ ಇರುವನು; ಮೃತ್ಯು ಮಾಯೆಗಳು ಇಲ್ಲಿ ಸುಳಿಯುವುದಿಲ್ಲ; ಕಲಿಯ ಕಾಲದ ಹೊಲಬು- ಕೆಡುಕಿನ ಬಳಕೆ ಇಲ್ಲಿ ಸಲ್ಲುವುದಿಲ್ಲ. ಹರಿಯ ರೂಪವನು ತಳೆದು ಹೊದ್ದ ಇದು, ಪುರವನ್ನು ಕ್ಷೀರವಾರಿಧಿ- ಕ್ಷೀರಸಮುದ್ರ- ಹಾಲಿನಸಮುದ್ರವು ಬಳಸಿಕೊ೦ಡಿದಿ- ಆವರಿಸಿಕೊಂಡಿದೆ.
ಪದವಿಭಾಗ-ಅರ್ಥ: ನಳಿನನಾಭನ(ಕಮಲನಾಭ, ಶ್ರೀಹರಿ) ದುಗ್ದ ಶರಧಿಯ(ಹಾಲಿನ ಸಮುದ್ರ, ಕ್ಷೀರಸಾಗರ) ಬಳಸಿಕೊ೦ಡಿಹ ಪುಷ್ಕರದ(ಕಮಲ, ಕೊಳ) ಹೊರ ವಳಯದಲಿ ಮೆರೆದಿಪ್ಪುದು+ ಆ ಸ್ವಾದ+ ಉದ ವಾರಾಸಿ(ಸಿಹಿನೀರಿನ ಸಮುದ್ರ) ಇಳೆಗೆ ಕೋಟೆಯನು ಇಕ್ಕಿದ೦ತಿರೆ ಬೆಳೆದ ಲೋಕಾಲೋಕಾ ಪರ್ವತ ತಿಳಿವಡೆ+ ಅಲ್ಲಿ೦ದತ್ತ ತಿಮಿರವು (ತಿಮಿರವು-ಕತ್ತಲೆಯು)+ ಅಜಾ೦ಡ ಪರಿಯ೦ತ
ಅರ್ಥ:ಕಮಲನಾಭನಾದ ಶ್ರೀಹರಿಯ ಕ್ಷೀರಸಾಗರವನ್ನು ಬಳಸಿಕೊ೦ಡಿರುವ ಸಮುದ್ರದ ಹೊರವಲಯದಲ್ಲಿ ಮೆರೆದಿಪ್ಪುದು ಆ ಸಿಹಿನೀರಿನ ಸಮುದ್ರವು ಭೂಮಿಗೆ ಕೋಟೆಯನ್ನು ಹಾಕಿದ೦ತಿರಲು, ಆನಂತರ ಬೆಳೆದ ಲೋಕಾಲೋಕಾ ಪರ್ವತಗಳು ತಿಳಿದುನೋಡಿದರೆ ಅಲ್ಲಿ೦ದ ಅತ್ತಲಾಗಿ ಬ್ರಹ್ಮಾಂಡ ಪರಿಯ೦ತ ಕತ್ತಲೆಯು.
ಅರ್ಥ: ತಾನು ಅರವತ್ತು ನಾಲ್ಕು ಲಕ್ಷ (ಯೋಜನ) ಆಗಿರುವುದು ಶಾಕದ್ವೀಪವು; ಕ್ಷೀರ ಕೋಟಿಯ ಇಪ್ಪತ್ತೆ೦ಟು ಲಕ್ಷವು(ಯೋಜನ) ಪುಷ್ಕರದ್ವೀಪವು ಸುಜಲವು ಒ೦ದಾಗಿ, ಮಿಕ್ಕ ಕೋಟಿಯ ಎರಡರಷ್ಟು ಅದರ ಮೇಲಣ ಲಕ್ಷ ಯೊಜನವು; ಲೋಕಾಲೋಕ ಗಿರಿಸಹಿತ ಐವತ್ತಾರು ಯೋಜನವು ಅಕ್ಕು- ಆಗುವುದು ಹೇಮದ(ಚಿನ್ನದ) ಭೂಮಿ.
ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮ೦ಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯ೦ತ |
ಇತ್ತಸುರಗಿರಿಯಿ೦ದ ಹಿ೦ದಿ
ಪ್ಪತ್ತು ಕೋಟಿಯ ಕೂಡಿ ನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕನೋಡೆ೦ದ || ೫೬ ||
ಪದವಿಭಾಗ-ಅರ್ಥ: ಹತ್ತು ಲಕ್ಕವು ಹೀನವಾಗಿ(ಕಡಿಮೆಯಾಗಿ)+ ಇಪ್ಪತ್ತು ಕೋಟಿ ತಮ+ ಅ೦ಧದುರ್ವರೆ ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯ೦ತ ಇತ್ತ ಸುರಗಿರಿಯಿ೦ದ ಹಿ೦ದೆ+ ಇಪ್ಪತ್ತು ಕೋಟಿಯ ಕೂಡಿ ನೋಡೆ, ಧರಿತ್ರಿ ತಾನು+ ಐವತ್ತು ಕೋಟಿಯ ಲೆಕ್ಕ ನೋಡೆ೦ದ
ಅರ್ಥ:ಮಾತಲಿಯು,'ಪುಷ್ಕರದ್ವೀಪದಲ್ಲಿಂದ, ಹತ್ತು ಲಕ್ಷವು ಕಡಿಮೆಯಾಗಿ ಇಪ್ಪತ್ತು ಕೋಟಿ (ಯೋಜನ) ತಮ-ಅ೦ಧ ದುರ್ವರೆ- ದುರ್ಧರವಾದ ಕತ್ತಲೆ ಸುತ್ತುವರೆದು ಬೆಳೆದಿರುವುದು. ಗರ್ಭೋದಕದ-ದ್ವೀಪದ ಒಳಗಿನ ನೀರಿನ ಪರಿಯ೦ತ; ಇತ್ತ ಸುರಗಿರಿಯಿ೦ದ-ಮೇರುಪರ್ವತದಿಂದ ಹಿ೦ದೆ ಇಪ್ಪತ್ತು ಕೋಟಿ ಯೋಜನವ ಕೂಡಿ ನೋಡಲು, ಧರಿತ್ರಿ-ಭೂಮಿಯು ತಾನು ಐವತ್ತು ಕೋಟಿ ಯೋಜನವು ಇದರ ಲೆಕ್ಕ ನೋಡು ಎ೦ದ.
ವರುಷವೊ೦ಬತ್ತಾಗಿಹುದು ವಿ
ಸ್ತರದ ಜ೦ಬೂ ದ್ವೀಪವೋ೦ದೇ
ವರುಷವೇಳಾಗಿಹವು ತಾ ಶತಸ೦ಖ್ಯೆಯಾ ದ್ವೀಪ |
ನಿರುತ ಕಡೆಯ ದ್ವೀಪವೆ೦ಬುದು
ವರುಷವೆರಡಾಗಿರಲು ,ಮಾನಸ
ಗಿರಿಯದರ ಮೇಲಿಹುದು ಚಕ್ರದ ಕ೦ಬಿಯ೦ದದಲಿ || ೫೭ ||
ಪದವಿಭಾಗ-ಅರ್ಥ: ವರುಷವು(ಪ್ರದೇಶವು)+ ಒ೦ಬತ್ತಾಗಿಹುದು, ವಿಸ್ತರದ ಜ೦ಬೂ ದ್ವೀಪವೋ೦ದೇ ವರುಷವು+ ಏಳಾಗಿಹವು, ತಾ ಶತಸ೦ಖ್ಯೆಯಾ ದ್ವೀಪ ನಿರುತ ಕಡೆಯ ದ್ವೀಪವೆ೦ಬುದು ವರುಷವು ಎರಡಾಗಿರಲು ,ಮಾನಸಗಿರಿಯು+ ಅದರ ಮೇಲಿಹುದು ಚಕ್ರದ ಕ೦ಬಿಯ೦ದದಲಿ.
ಅರ್ಥ: ಭೂ ಪ್ರದೇಶವು ಒ೦ಬತ್ತಾಗಿರುವುದು. ವಿಸ್ತಾರವಾದ ಜ೦ಬೂ ದ್ವೀಪವೋ೦ದೇ ಏಳು ವರುಷ- ಪ್ರದೇಶವಾಗಿವೆ. ಅದು ತಾನು ಶತಸ೦ಖ್ಯೆಯ ನಿರುತ-ಅನೇಕ ದ್ವೀಪ. ಕಡೆಯ ದ್ವೀಪವೆ೦ಬುದು ಎರಡು ವರುಷವಾಗಿರುವುದು. ಮಾನಸಗಿರಿಯು ಅದರ ಮೇಲಿರುವುದು. ಅದು ಚಕ್ರದ ಮಧ್ಯಕ೦ಬಿಯ೦ತೆ ಇದೆ.
ಪದವಿಭಾಗ-ಅರ್ಥ: ವರುಷವು+ ಎರಡಾಗಿ+ ಒಪ್ಪುತಿಹ(ಶೋಭಿಸುತ್ತಿರುವ) ಪುಷ್ಕರದ(ಕೊನೆಯ ದ್ವೀಪ- ಪುಷ್ಕಲ) ನಡುವಣ ಮಾನಸೋತ್ತರ ಗಿರಿಯು+ ಉದಯವು+ ಐವತ್ತು ಸಾವಿರ ಹರಹು ತದ್ವಿಗುಣ-(ಎರಡರಷ್ಟು) ಪಿರಿದು(ಹಿರಿದು) ಪುಣ್ಯಶ್ಲೋಕ ಕೇಳು+ ಆ ಗಿರಿಯ ಶಿಖರದ ಮೇಲೆ ದಿಗ್ದೇವರ ಪುರ೦ಗಳು, ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು.
ಅರ್ಥ: 'ಆ ಪ್ರದೇಶವು ಎರಡಾಗಿ ಶೋಭಿಸುತ್ತಿರುವ ಪುಷ್ಕಲ ದ್ವೀಪದ ನಡುವಿನ ಮಾನಸೋತ್ತರ ಗಿರಿಯು ಉದಯವು ಐವತ್ತು ಸಾವಿರ ಯೋಜನ ಹರಹು- ವಿಸ್ತಾರ. ಅದರ ಎರಡರಷ್ಟು ದೊಡ್ಡದು ಆ ಗಿರಿಯ ಶಿಖರದ ಮೇಲೆ ದಿಗ್ದೇವತೆಗಳ ಪುರಗಳು; ಅವು ಸಂಪತ್ತಿಗೆ ನೆಲೆಮನೆ- ಆಶ್ರಯವೆನಿಸಿ ಮೆರೆದಿರುವುವು. ಪುಣ್ಯಶ್ಲೋಕನೇ ಕೇಳು,' ಎಂದ.
ಪದವಿಭಾಗ-ಅರ್ಥ: ಉರಗ ನಾಳಾ+ ಅ೦ಬುಜ ಕುಸುಮವು+ ಈ ಧರಣಿ ಕರ್ಣಿಕೆ, ಮೇರುಗಿರಿ ಕೇಸರ ನಗ೦ಗಳು(ನಗ= ಬೆಟ್ಟ), ಬಳಸಿ ಕೇಸರದ೦ತೆ ಸೊಗಯಿಪವು ಸರಸಿರುಹ ಸ೦ಭವನು ಮದ್ಯದೊಳಿರಲು ಭೂತಲವ+ ಐದೆ ಮೆರೆವುದು ಸಿರಿ ಮಹಾ ವಿಷ್ಣುವಿನ ನಾಭೀಕಮಲದ+ ಅ೦ದದಲಿ
ಅರ್ಥ: ಉರಗಂತಿರುವ ನಾಳವುಳ್ಳ ಕಮಲ ಕುಸುಮವು ಈ ಧರಣಿಯು- ಭೂಮಿಯು ಕರ್ಣಿಕೆ-ಕಮಲದ ಮಧ್ಯ ಭಾಗ; ಮೇರುಗಿರಿಯು ಆ ಕಮಲದ ಕೇಸರವು ಬೆಟ್ಟಗಳು, ಸರಸಿರುಹ ಸ೦ಭವನಾದ ಬ್ರಹ್ಮನು ಮಧ್ಯದಲ್ಲಿ ಇದ್ದು ಅವನನ್ನು ಬಳಸಿ ಕಮಲದ ಕೇಸರದ ಹಾಗೆತ ಸೊಗಸಾಗಿ ತೋರುವುವು. ಭೂತಲಕ್ಕೆ ಹೋದರೆ ಅಲ್ಲಿ ಸಿರಿ- ಲಕ್ಷ್ಮಿಇದ್ದಾಳೆ ಮತ್ತು ಮಹಾ ವಿಷ್ಣುವಿನ ನಾಭೀಕಮಲದ- ಹೊಕ್ಕಳಿನಿಂದ ಹೊರಟ ರೀತಿಯಲ್ಲಿ ಲೋಕಗಳು ಶೋಭಿಸುವುದು.
ಅರ್ಥ: ಭೂಮಿಯ ಪ್ರದೇಶಗಳ, ದ್ವೀಪ ಗಿರಿಗಳ, ಶರಧಿಗಳ-ಸಮುದ್ರದ ಸುರಶೈಲದ- ಮೇರುಪರ್ವತದ ಮೇಲಿನ ಹರನ- ಶಿವನ, ಚತುರಾನನನ(ಬ್ರಹ್ಮನ) ಪಟ್ಟಣಗಳು ಇರವ ರಿತಿಯನ್ನು ತಿಳುಹಿಸಿದೆನು. ಕಮಲದ ಬ೦ಧು ಸೂರ್ಯನ ರಥವು ಇಹಪರಿಯ- ಲೋಕವನ್ನು ಸಂಚರಿಸುವ ಪಥವನ್ನು, ತಾರೆಗಳ ಇರವನ್ನು ನೀನು ಕೇಳೆ೦ದು ಮಾತಲಿ ಅರ್ಜುನನಿಗೆ ಹೇಳಿದನು.
ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊ೦ದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟೆಯ ಮೇಲೆಯೈವತ್ತು |
ಏಳುಲೆಕ್ಕದ ನೀಳ ರಥದ ವಿ
ಶಾಲವದು ಮೂವತ್ತುಸಾವಿರ
ಮೇಲೆ ಧ್ರುವ ಮ೦ಡಲಕೆ ಬಿಗಿದಿಹುದನಿಲ ಪಾಶದಲಿ || ೬೨||
ಪದವಿಭಾಗ-ಅರ್ಥ: ಗಾಲಿ ಮಾನಸಗಿರಿಯ(ಕೈಲಾಸ) ಶಿಖರದ ಮೇಲೆ ತಿರುಗುವುದು+ ಒ೦ದು ಕಡೆ ಸುರಶೈಲದಲಿ(ಮೇರುಪರ್ತ) ಬಿಗಿದ+ ಅಚ್ಚು ಕೋಟೆಯ ಮೇಲೆ ಯೈ+ ಐವತ್ತು+ಏಳು ಲೆಕ್ಕದ ನೀಳ ರಥದ ವಿಶಾಲವದು ಮೂವತ್ತು ಸಾವಿರ ಮೇಲೆ ಧ್ರುವ ಮ೦ಡಲಕೆ ಬಿಗಿದಿಹುದು+ ಅನಿಲ ಪಾಶದಲಿ.
ಅರ್ಥ: ಸೂರ್ಯನ ರಥದ ಗಾಲಿ ಕೈಲಾಸ ಶಿಖರದ ಮೇಲೆ ತಿರುಗುವುದು. ಒ೦ದು ಕಡೆ ಮೇರುಪರ್ವತದಲ್ಲಿ ಬಿಗಿದ ಅಚ್ಚು, ಕೋಟೆಯ ಮೇಲೆ ಐವತ್ತೇಳು ಲೆಕ್ಕದ ನೀಳ ರಥದ ವಿಶಾಲವು ಅದು ಮೂವತ್ತು ಸಾವಿರ (ಯೋಜನದ) ಮೇಲೆ ಧ್ರುವ ಮ೦ಡಲಕೆ ಅನಿಲ- ವಾಯು ಪಾಶದಲ್ಲಿ ಬಿಗಿದಿರುವುಹದು.
ಅರ್ಥ: ಸೂರ್ಯನ ಗಾಲಿಯನಾಭಿ ಮೂರು ಅಚ್ಚರಿಯ ಚಾತುರ್ಮಾಸಗಳು; ಉತ್ತಮ ತರದ ಆರು ಋತುಗಳು; ಬಳೆ ಷಡ೦ಗವೆ ನೇಮಿ- ರಥದ ಚಕ್ರದ - ಅಂಚು, ಪಟ್ಟ ; ಚತುರಯುಗ ತರವು ತುಂಬಿದ ಸ೦ವತ್ಸರವು; ಘನತರದ ಸರಿವತ್ಸರವು. ಇದು ಆ ವತ್ಸರವು ವಿದ್ವತ್ಸರವು ವತ್ಸರವು ಎಂಬ ಮೊಳೆಯಾಯ್ತು.
ಉರಗನಾಳದ ಹೊರಜೆ ನವ ಸಾ
ವಿರದ ಕುರಿಗುಣಿಯೀಸುಗಳು ತಾ
ವೆರಡು ಮಡಿ ತೋ೦ಬತ್ತುವೊ೦ದು ಸಹಸ್ರ ದರ್ಧವದು |
ಪರಿಯ ನೊಗನದರಿನಿತು ಸ೦ಖ್ಯೆಗೆ
ಸರಿಯೆನಿಪ ಮೇಲಚ್ಚು ಮ೦ಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆ೦ದ || ೬೪ ||
ಪದವಿಭಾಗ-ಅರ್ಥ: ಉರಗನಾಳದ(ಹಾವಿನ ಹಗ್ಗ) ಹೊರಜೆ( ದಪ್ಪವಾದ ಹಗ್ಗ, ಸರಪಣಿ ) ನವ ಸಾವಿರದ ಕುರಿಗುಣಿ(ಕುಣಿಕೆಗಳು)+ ಯೀ+ ಈಸುಗಳು(ಗಾಡಿಯ ಮೂಕಿ,ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರದ ಈಸು- ತೊಲೆ) ತಾವು+ ಎರಡು ಮಡಿ ತೋ೦ಬತ್ತುವೊ೦ದು ಸಹಸ್ರದ+ ಅರ್ಧವದು ಪರಿಯ ನೊಗನು+ ಅದರ+ ಇನಿತು ಸ೦ಖ್ಯೆಗೆ ಸರಿಯೆನಿಪ ಮೇಲಚ್ಚು; ಮ೦ಗಳ ತರವೆನಿಪ ನವರತ್ನ ರಚನೆಯ ಚಿತ್ರರಥವೆ೦ದ.
ಅರ್ಥ: 'ಉರಗನಾಳದ ಬಳ್ಳಿಯಿಂದ ಮಾಡಿದ ದಪ್ಪವಾದ ಹಗ್ಗ ನವ ಸಾವಿರದ ಕುಣಿಕೆಗಳು; ಈಸುಗಳು- ಗಾಡಿಯ ಮೂಕಿಗಳು; ತಾವು-ಅವು ಎರಡು ಮಡಿ ತೋ೦ಬತ್ತೊ೦ದು ಸಹಸ್ರದ ಅರ್ಧವದು ಹರಿಯ ನೊಗವು; ಅದರ ಇಷ್ಟು ಸ೦ಖ್ಯೆಗೆ ಸರಿಯೆನಿಪ ಮೇಲಚ್ಚು; ಮ೦ಗಳ ತರವಾಗಿರುವ ನವರತ್ನ ರಚನೆಯ ಚಿತ್ರರಥವು ಸೂರ್ಯನದು' ಎಂದ ಮಾತಲಿ.
ಟಿಪ್ಪಣಿ:- ಗಾಡಿಯ ಭಾಗಗಳ ಅಂದಿನ ಹೆಸರುಗಳು ಈಗ ರೂಢಿಯಲ್ಲಿಲ್ಲ- ಹಾಗಾಗಿ ಅರ್ಥ- ಸಂಧಿಗ್ದ
ಅರ್ಥ:ಸೂರ್ಯನು ಸಾವಿರ ಹಸ್ತವುಳ್ಳವನು; ಆ ಕರ ಸಹಸ್ರನ ರಥಕ್ಕೆ ಹೂಡಿದ ಕುದುರೆಗಳು ಛ೦ದೋಮಯವು; ವೇದದ ಛಂದಸ್ಸುಗಳು. ಸಾರಥಿಯು ಕಶ್ಯಪ ಮತ್ತು ವಿನಿತೆಯ ಮಗ ಅರುಣ, 'ಕಾಲ'ವೆ ಗಾಲಿ, ಶ್ರೇಷ್ಠ ರಥದ ಮದ್ಯದಲ್ಲಿ ವಿಸ್ತಾರವಾದ ಮಣಿಪೀಠದಮೇಲೆ ಕುಳಿತು ನವಕೋಟಿಯ (೦ಯೋಜನ)ದೂರವನ್ನು ಚಲಿಸುವನು. ಮೇಲಾಗಿ ದಿನಕರನು- ಸೂರ್ಯನು ಮೇಷ, ವೃಷಭ ಇತ್ಯಾದಿ ಹನ್ನರಡು ಗ್ರಹಭವನಕ್ಕೆ ಉತ್ತಮ ಆಧಾರವಾಗಿರುವನು.
ಅರ್ಥ:ಜ್ಯೋತಿಷ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರನಿಗೆ ಕರ್ಕಟ ರಾಶಿ, ಧರಣಿಜ೦ಗೆ- ಮಂಗಳನಿಗೆ ಅಜ- ಮೇಷ ಮತ್ತು ವೃಶ್ಚಿಕರಾಶಿಗಳು; ಹಿಮಕರನ ತನಯ- ಬುಧನಿಗೆಗ, ಮಿಥುನ ಮತ್ತು ಕನ್ಯಾ ರಾಶಿಗಳು ಬೃಹಸ್ಪತಿಗೆ- ಗುರುವಿಗೆ ಚಾಪ- ಧನುರಾಶಿ ಮತ್ತು ಝಷ-ಮೀನ ರಾಶಿ; ತುಲೆ ವೃಷಭರಾಶಿಗಳು ದಾನವರ ಗುರು ಶುಕ್ರನದು, ಮೃಗ-ಮಕರ, ಕು೦ಭರಾಶಿಗಳು ಮ೦ದನೆಂಬ ಹೆಸರಿನ ಶನಿಗೆ, ಹೀಗೆ ನಿಜ ಗೃಹಗಳು ಇರುವುವು, ರಾಹುಕೇತುಗಳು ಅವರ ಜೊತೆ ಕೂಡಿಕೊಂಡಿರುವರು.
ಲಕ್ಕ ಉರ್ವಿಗೆ ರವಿಯ ಪಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ |
ಲಕ್ಕವೇಳಾ ಶುಕ್ರಕುಜ ನವ
ಲಕ್ಕಗುರು ಹನ್ನೊ೦ದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ || ೬೭ ||
ಪದವಿಭಾಗ-ಅರ್ಥ: ಲಕ್ಕ(ಲಕ್ಷ) ಉರ್ವಿಗೆ(ಭೂಮಿಗೆ) ರವಿಯ ಪಥ ಶಶಿ ಲಕ್ಕವೆರಡು ತ್ರಿಲಕ್ಕ ಯೋಜನಲೆಕ್ಕಿಸಲು ನಕ್ಷತ್ರ ಬುಧನಿಹನು+ ಐದು ಲಕ್ಕದಲಿ; ಲಕ್ಕವು+ ಏಳು+ ಆ ಶುಕ್ರಕುಜ ನವ ಲಕ್ಕ ಗುರು ಹನ್ನೊ೦ದು ಲಕ್ಕವು ಮಿಕ್ಕ ವಸುಧಾ ತಳಕೆ ಶನಿ ಹದಿಮೂರುವರೆ ಲಕ್ಕ.
ಟಿಪ್ಪಣಿ:-ಇದರ ಹಿಂದಣ ಜ್ಯೋತಿಷದ ಲೆಕ್ಕದ ಅರ್ಥ ಸಂಧಿಗ್ದ (ಊಹಾತ್ಮಕ).
ಅರ್ಥ:ಭೂಮಿಗೆ ಲಕ್ಷ ರವಿಯ ಪಥ; ಚಂದ್ರನಿಗೆ ಲಕ್ಕವು ಎರಡು; ಮೂರು ಲಕ್ಕ ಯೋಜನದಲ್ಲಿ ಲೆಕ್ಕಿಸಲು ನಕ್ಷತ್ರ ಬುಧನು(ಇಲ್ಲಿ ಬುಧನನ್ನು ನಕ್ಷತ್ರವೆಂದು ಹೇಳಿದೆ.) ಇರುವನು. ಐದು ಲಕ್ಕದಲಿ, ಲಕ್ಕವು ಏಳು(ಲಕ್ಕ ಯೋಜನ) ಆ ಶುಕ್ರ ಮತ್ತು ಕುಜರು ಇರುವರು. ನವ ಲಕ್ಕ ಯೋಜನದಲ್ಲಿ ಗುರುವು ಇರುವನು; ಹನ್ನೊ೦ದು ಲಕ್ಕ ಯೋಜನ ದೂರ ಮಿಕ್ಕವು ವಸುಧಾತಳಕೆ- ಭೂಮಿಗೆ. ಶನಿಯು ಹದಿಮೂರುವರೆ ಲಕ್ಕಯೋಜನ ದೂರದಲ್ಲಿ ಇರುವನು.
ಪದವಿಭಾಗ-ಅರ್ಥ: ವಿದಿತವು+ ಇ೦ತಿದು ಸಪ್ತಋಷಿಗಳ ಸದನವು+ ಅದು ಹದಿನಾಲ್ಕು ಲಕ್ಕವು, ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ, ಅದರ ಮೇಲಿಹ ವಿಷ್ಣುಪದದಲಿ ಸದ್+ ಅಮಳಾತ್ಮಕ ಶಿ೦ಶುಮಾರನು ಪದುಳದಲಿ (ಸುಖವಾಗಿ) ಸಕಲಕ್ಕೆ ಸಲೆ(ಬಹಳ, ಚೆನ್ನಾಗಿ)ಯಾಧಾರ ವಾಗಿಹನು.
ಅರ್ಥ:ಮಾತಲಿಯು ಹೇಳಿದ,' ನೋಡು, (ಇ೦ತು) ಇದು ಸಪ್ತಋಷಿಗಳ ಸದನವು ವಾಸದ ಬೀಡು ಎಂದು ಪ್ರಸಿದ್ಧವಾದುದು. ಅದು ಹದಿನಾಲ್ಕು ಲಕ್ಷ ಯೋಜನ ವಿಸ್ತಾರವು . ಅದರ ಕೆಳಗೆ ಸಮತಸದಿಂದ ಧ್ರುವನು ನೆಲಸಿರುವನು; ತಾನು ಹದಿನೈದು ಲಕ್ಷದ ವಿಸ್ತಾರದಲ್ಲಿ, ಅದರ ಮೇಲಿರುವ ವಿಷ್ಣುಪದದಲಿ- ವಿಷ್ನವಿನ ಲೋಕದಲ್ಲಿ ಸತ್ ಸ್ವರೂಪನಾದ ಅಮಲ ಆತ್ಮಕ ಶಿ೦ಶುಮಾರನು ಸುಖವಾಗಿ ಸಕಲಕ್ಕೆ ಬಹಳಬಲವಾದ ಆಧಾರವಾಗಿರುನು.
ಟಿಪ್ಪಣಿ:-ಶಿ೦ಶುಮಾರನ ಸ್ತೋತ್ರಗಳಿವೆ ಅದರೆ ಅವನು ಯಾರು, ಯಾವ ಪುರಾಣದಲ್ಲಿ ಬರುವನೆಂದು ತಿಳಿಯದು. (ಶಿಂಶುಮಾರ ಎಂಬ ಹೆಸರಿಗೆ ವಿಕ್ಷ್ನರಿಯಲ್ಲಿ ಮೊಸಳೆ,ನೆಗಳು ಎಂಬ ಅರ್ಥವಿದೆ)- (Source: Cologne Digital Sanskrit Dictionaries: The Purana Index:Śiṃśumāra (शिंशुमार).—A son of Sarvarī and Doṣa; an aṃśa of Hari.)
ಪದವಿಭಾಗ-ಅರ್ಥ: ವರಕುಮಾರಕ(ಅರ್ಜುನನೇ) ನೀನು ಕೇಳೈ ಪಿರಿಯ ಲೋಕಾ ಲೋಕವೆ೦ಬ+ ಆ ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ ದರೆಯೊಳು+ ಅರುಣ ದ್ವೀಪವು+ ಅದರೊಳು ನೆರೆದ ಮ೦ದೇಹರುಗಳು+ ಎ೦ದು+ ಅಚ್ಚರಿಯದಲಿ ಸರಸಿರುಹದ+ ಆಸನನಿ೦ದ(ಕಮಲದ ಆಸನನು- ಬ್ರಹ್ಮನಿಂದ) ಜನಿಸಿದರು.
ಅರ್ಥ:ಇಂದ್ರನ ವರಕುಮಾರನಾದ ಅರ್ಜುನನೇ ನೀನು ಕೇಳಯ್ಯಾ, ಪಹಿರಿಯ ಲೋಕಾಲೋಕವೆ೦ಬ ಆ ಗಿರಿಯನ್ನು ಬಳಸಿದ ಕಾಳಗತ್ತಲೆಯೊಳಗೆ ಪ್ರಖ್ಯಾತವಾದ ದರೆಯಲ್ಲಿ ಅರುಣ ದ್ವೀಪವು ಇದೆ. ಅದರಲ್ಲಿ ಮ೦ದೇಹರುಗಳು ಎ೦ದು ಹೇಳುವ (ದೈತ್ಯರು) ತುಂಬಿರುವರು. ಅಚ್ಚರಿಯ ಅವರು ಕಮಲದ ಆಸನನಾದ ಬ್ರಹ್ಮನಿಂದ ಜನಿಸಿದರು.
ಅರ್ಥ:ಹರಿ ಹರ ಬ್ರಹ್ಮರು ಮೊದಲಾದ ಹೆಚ್ಚಿನ ದೇವರುಗಳಲ್ಲಿ ಮತ್ತೆ ಅದೇ ಬಗೆಯ ತುಂಬಿದ ಹದಿನಾಲ್ಕು ಜಗತ್ತುಗಳಲ್ಲಿ ಇರುವ ದೇವರಲ್ಲಿ ತರಣಿಯು- ಸೂರ್ಯನು ಅತಿ ಬಲವ೦ತನು ಎ೦ಬುದನ್ನು ತಿಳಿದುಕೊಂಡು ಆ ಮ೦ದೇಹ ಅಸುರರು- ದೈತ್ಯರು ಸಾವಿರ ಬಾಹುಗಳ ದಿನನಾಥನಾದ ಸೂರ್ಯನನೊಡನೆ ಕಾಳಗವನ್ನು ಬಯಸಿರುವರು.ಸೂರ್ಯನಿಗೆ ಅವರಿಂದ ತೊಂದರೆ, ಕಷ್ಟ.
ಟಿಪ್ಪಣಿ:- ಸೂರ್ಯನಿಗೆ ತೊಂದರೆಕೊಡುವ ಈ ಮಂದೇಹ ಅಸುರನ್ನು ಓಡಿಸಲು - ನಾಶಮಾಡಲು ಭೂಮಿಯ ಜನರು ಗಾಯತ್ರೀ ಮಂತ್ರದಿಂಗ ಸೂರ್ಯನಿಗೆ ನೀರಿನ ಅರ್ಘ್ಯವನ್ನು ತ್ರಿಸಂಧ್ಯಾ ಕಾಲದಲ್ಲೂ ಕೊಡಬೇಕು. ಆ ಅರ್ಘ್ಯವು ಅಸ್ತ್ರ ಶಕ್ತಿಯನ್ನು ಹೊಂದಿದ್ದು ಮಂದೇಹ ರಾಕ್ಷಸರನ್ನು ಓಡಿಸುವುದು ಎಂಬ ನಂಬುಗೆ ಇದೆ.
ಪದವಿಭಾಗ-ಅರ್ಥ: ಅವನಿಪತಿ ಕೇಳು+ ಇ೦ದ್ರ ಸಾರಥಿ ವಿವರಿಸಿದನು+ ಅರ್ಜುನಗೆ ಭೂಮಿಯ ಭುವನ ಕೋಶದ ಸನ್ನಿವೇಶವನು+ ಅದ್ರಿ-ಪರ್ವತ, ಜಲಧಿಗಳ, ಇವು ಕುಲಾದ್ರಿಗಳು,+ ಇವು ಪಯೋಧಿಗಳು,+ ಇವು ಮಹಾ ದ್ವೀಪ೦ಗಳು+ ಇವು ಮಾನವರ ದರಣೀ, ಸ್ವರ್ಗ ಮೇಲೆ+ ಇನ್ನು+ ಇತ್ತ ನೋಡೆ೦ದ
ಅರ್ಥ:'ಮುನಿಯು ಹೇಳಿದ,'ಅವನಿಪತಿ ಜನಮೇಜಯನೇ ಕೇಳು, ಇ೦ದ್ರ ಸಾರಥಿಯು ಅರ್ಜುನನಿಗೆ ಭೂಮಿಯ ಭುವನಕೋಶದ ಸನ್ನಿವೇಶವನ್ನು ವಿವರಿಸಿದನು- ಪರ್ವತಗಳ, ಸಮುದ್ರಗಳನ್ನು- ಇವು ಕುಲಾದ್ರಿಗಳು, ಇವು ಸಾಗರಗಳು, ಇವು ಮಹಾ ದ್ವೀಪಗಳು, ಇವು ಮಾನವರ ಭೂಮಿ ಮತ್ತು ಮೇಲೆ ಸ್ವರ್ಗ; ಇನ್ನು ಇತ್ತ ಈ ಕಡೆ ನೋಡು ಎಂದ.'
ಪದವಿಭಾಗ-ಅರ್ಥ: ಈ ವಿಮಾನದ ಸಾಲ(ಸಾಲನ್ನು) ಸ೦ದಣಿ ತೀವಿಕೊ೦ಡಿದೆ(ತೀವು- ತುಂಬು) ಗಗನ ತಳದಲಿ ದೇವಕನ್ಯಾ ಶತಸಹಸ್ರದ ಖೇಳೆ ಮೇಳದಲಿ, ಭೂ ವಳಯದಲಿ ಸುಕೃತಿಗಳು ನಾನಾವಿಧದ ಜಪ ತಪ ಯಜ್ಞ ದಾನ ತಪೋ ವಿಧಾನದಲಿ+ ಒದಗಿದವರನು ಪಾರ್ಥ ನೋಡೆ೦ದ.
ಅರ್ಥ:ಮಾತಲಿ ಹೇಳಿದ,'ಈ ವಿಮಾನದ ಸಾಲನ್ನು ನೋಡು; ಗಗನ ತಲದಲ್ಲಿ ದೇವಕನ್ಯೆಯರ ಸ೦ದಣಿ ಶತಸಹಸ್ರದ ಆಟ ಮತ್ತು ಮೇಳದಲ್ಲಿ ತುಂಬಿಕೊ೦ಡಿದೆ. ಭೂವಲಯದಲ್ಲಿದ್ದು ಸುಕೃತಿಗಳನ್ನೂ ನಾನಾವಿಧದ ಜಪ ತಪ ಯಜ್ಞ ದಾನ ತಪೋ ವಿಧಾನದಲಿ ತೊಡಗಿದ್ದವರನ್ನು ಅವರ ಮರಣದ ನಂತರ ಇಲ್ಲಿ ನೋಡು,'ಪಾರ್ಥ ನೋಡು ಎ೦ದ.
ಭೂತದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯ ಭಾಷಿತ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ |
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರ ಪೂಜಕ
ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆ೦ದ || ೭೫ ||
ಪದವಿಭಾಗ-ಅರ್ಥ:ಭೂತ(ಪ್ರಾಣಿ) ದಯೆಯಲಿ ನಡೆವನು+ ಈ ತೋರ್ಪ+ ಆತ ನಿರ್ಮಳ ಸತ್ಯ ಭಾಷಿತನು,+ ಈತ ತೀರ್ಥವಿಹಾರಿ ಸಜ್ಜನನು,+ ಈತ ಗುಣಿ+ ಯೀ+ ಈತ, ಈತ ನಿರ್ಮತ್ಸರನು+ ಅಸೂಯಾತೀತನು+ ಇವನು+ ಅತಿ ವಿಪ್ರ(ಬ್ರಾಹ್ಮಣರ) ಪೂಜಕನು+ ಈತ ಮಾತಾಪಿತರ ಭಕ್ತನು, ಪಾರ್ಥ ನೋಡು+ ಎ೦ದ.
ಅರ್ಥ:ಮಾತಲಿಯು ದೇವಲೋಕದ ವಾಸಿಗಳನ್ನು ತೋರಿಸುತ್ತಾ,'ಇವನು ಪ್ರಾಣಿಗಳ ಬಗೆಗೆ ದಯೆಯಲ್ಲಿ ನಡೆದವನು. ಈಕಡೆ ತೋರುವ ಆತ ನಿರ್ಮಲ ಸತ್ಯ ಭಾಷಿತನು; ಈತ ತೀರ್ಥವಿಹಾರಿ ಸಜ್ಜನನು, ಈತ ಸದ್ಗುಣಿಯು; ಈತ ಮತ್ಸರ ಇಲ್ಲದವನು- ಅಸೂಯಾತೀತನು; ಇವನು ಅತಿ ವಿಪ್ರ ಪೂಜಕನು. ಈತ ಮಾತಾಪಿತರ ಭಕ್ತನು;' ಪಾರ್ಥನೇ ನೋಡು ಎ೦ದ.
ಈತನಿ೦ದ್ರಿಯ ವಿಜಯಿ ಸತ್ಕೃತ
ನೀತನಿವ ವೇದಾದ್ಯಯನ ಪರ
ನೀತ ಪರಹಿತನಿವ ಯಥಾಲಾಬೈಕ ಸ೦ತೋಷಿ |
ಈತಶುಚಿ ರುಜುವೀತ ನಿಸ್ಪೃಹ
ನೀತ ನಿರ್ಭಯನೀತ ನಿರ್ಮಳ
ನೀತ ರಾಗದ್ವೇಶ ರಹಿತನು ಪಾರ್ಥ ನೋಡೆ೦ದ || ೭೬ ||
ಪದವಿಭಾಗ-ಅರ್ಥ: ಈತನು+ ಇ೦ದ್ರಿಯ ವಿಜಯಿ; ಸತ್ಕೃತನು+ ಈತನು+ ಇವ ವೇದಾದ್ಯಯನ ಪರನು+ ಈತ ಪರಹಿತನು+ ಇವ ಯಥಾಲಾಬ+ ಏಕ ಸ೦ತೋಷಿ, ಈತ ಶುಚಿ, ರುಜುವು+ ಈತ ನಿಸ್ಪೃಹನು+ ಈತ; ನಿರ್ಭಯನು+ ಈತ; ನಿರ್ಮಳನು+ ಈತ; ರಾಗದ್ವೇಶ ರಹಿತನು; ಪಾರ್ಥ ನೋಡು ಎ೦ದ.
ಅರ್ಥ:ಮಾತಲಿಯು,'ಈತನು ಇ೦ದ್ರಿಯ ವಿಜಯಿ; ಈತನು ಸತ್ಕೃತನು; ಇವನು ವೇದಾದ್ಯಯನ ಪರನು; ಈತನು ಪರಹಿತನು; ಈತ ಯಥಾಲಾಬದಲ್ಲಿ ಏಕ ಸ೦ತೋಷಿ; ಈತ ಶುಚಿಯು, ರುಜುವು(ಪ್ರಾಮಾಣಿಕ); ಈತ ನಿಸ್ಪೃಹನು; ಈತ ನಿರ್ಭಯನು; ಈತ ನಿರ್ಮಲನು; ಈತ ರಾಗದ್ವೇಶ ರಹಿತನು,' ಪಾರ್ಥನೇ ನೋಡು ಎ೦ದ.
ಇತ್ತ ನೋಡೈ ಸ್ವಾಮಿ ಕಾರ್ಯಕೆ
ತ್ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ |
ಇತ್ತವನು ಸತ್ಪುತ್ರನನು ತಾ
ಹೆತ್ತವನು ಗೋ ವಿಪ್ರ ಭಾಧೆಗೆ
ಸತ್ತವನನೆಲೆ ಪಾರ್ಥ ನೋಡುತ್ತಮ ವಿಮಾನದಲಿ || ೭೭ ||
ಪದವಿಭಾಗ-ಅರ್ಥ:ಪಾರ್ಥ. ಇತ್ತ ನೋಡೈ ಸ್ವಾಮಿ ಕಾರ್ಯಕೆ ತ್ತೆತ್ತನು+ ಒಡಲನು(ದೇಹವನ್ನು) ವರ ರಣಾಗ್ರದೊಳು,+ ಇತ್ತಲು+ ಐದನೆ(ಇದ್ದಾನೆ) ಭೂಮಿ ಕನ್ಯಾ ಗೋ ಧನಾವಳಿಯ ಇತ್ತವನು, ಸತ್ಪುತ್ರನನು ತಾಹೆತ್ತವನು, ಗೋ ವಿಪ್ರ ಭಾಧೆಗೆ ಸತ್ತವನನೆಲೆ, ಪಾರ್ಥ ನೋಡು+ ಉತ್ತಮ ವಿಮಾನದಲಿ.
ಅರ್ಥ:ಪಾರ್ಥನೇ. ಇತ್ತ ನೋಡಯ್ಯಾ, ಸ್ವಾಮಿ ಕಾರ್ಯಕ್ಕೆ ಉತ್ತಮ ಯುದ್ಧದಲ್ಲಿ ದೇಹವನ್ನು ತ್ತೆತ್ತವನು; ಇತ್ತ ಇದ್ದಾನೆ ಭೂಮಿ, ಕನ್ಯಾ, ಗೋ, ಧನಾ ರಾಶಿಯನ್ನು ಕೊಟ್ಟವನು; ಸತ್ಪುತ್ರನನ್ನು ತಾನು ಹೆತ್ತವನು ಇವನು; ಗೋ ವಿಪ್ರರ ಭಾಧೆಗೆ ಅಳುಕಿ ಸಹಾಯಮಾಡಿ ಸತ್ತವನು; ಎಲೆ, ಪಾರ್ಥ ನೋಡು ಉತ್ತಮ ವಿಮಾನದಲ್ಲದ್ದಾರೆ.' ಎಂದ.
ಅರ್ಥ: ತಾರಾಮಾಲೆಗಳಂತೆ ರಾಜಸೂಯ ಯಾಗ ಮಾಡಿದ ದೊಡ್ಡ ಉತ್ತಮ ಯಜ್ಞದ ಅಶ್ವಮೇಧದ ಭೂರಿ ಸುಕೃತಿಗಳು ಮೇಲೆ ಮೇಲೆಕ್ಕೆ ಇದ್ದಾರೆ; ಯುದ್ಧದಲ್ಲಿ ಶತ್ರು ಸುಭಟರನ್ನು ಸೋಲಿಸಿದ ಸಿತಕರವಾಲ ಧಾರಾತೀರ್ಥ ಸೇವಿಸಿದ ನೃಪಾಲರು ದೀಪ್ಯಮಾನ ವಿಮಾನ ಮದ್ಯದಲಿ ಇದ್ದಾರೆ.
ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚ೦ದ್ರ ನಳ ನೃಗ
ರೀತಗಳು ಪುರು ಕುತ್ಸನೀತ ಮರುತ್ತ ನೄಪನೀತ ||
ಈತ ಹೈಹಯ ದು೦ದುಮಾರಕ
ನೀತ ನಹುಷ ದೀಳೀಪ ದಶರಥ
ನೀತ ರಘು ತಾನೀತ ಶ೦ತನು ಪಾರ್ಥ ನೋಡೆ೦ದ || ೭೯ ||
ಪದವಿಭಾಗ-ಅರ್ಥ: ಈತ ಭರತನು; ದೂರದಲಿ ತೋರ್ಪಾತನು ಹರಿಶ್ಚ೦ದ್ರ, ನಳ, ನೃಗರು+ ಈತಗಳು ಪುರು, ಕುತ್ಸನೀತ, ಮರುತ್ತ, ನೄಪನು+ ಈತ, ಈತ ಹೈಹಯ, ದು೦ದುಮಾರಕನು+ ಈತ ನಹುಷ, ದೀಳೀಪ ದಶರಥನು+ ಈತ ರಘು ತಾನು+ ಈತ ಶ೦ತನು; ಪಾರ್ಥ ನೋಡು+ ಎ೦ದ.
ಅರ್ಥ:ಮಾತಲಿ ಹೇಳಿದ, 'ಈತ ಭರತನು; ದೂರದಲಿ ತೋರವಾತನು ಹರಿಶ್ಚ೦ದ್ರ, ನಳ, ನೃಗರು; ಇವರು ಪುರು, ಕುತ್ಸನು,ಈತ, ಮರುತ್ತ ನೄಪನು ಈತ; ಈತ ಹೈಹಯ; ದು೦ದುಮಾರಕನು ಈತ ನಹುಷ, ದಿಲೀಪ, ದಶರಥನು; ಈತ ರಘು; ತಾನು ಈತ ಶ೦ತನು; ಪಾರ್ಥ ನೋಡು+ ಎ೦ದ.
ಅರ್ಥ:ಇಂದ್ರನ ಸಾರಥಿ ಮಾತಲಿಯು,'ಅರ್ಜುನಾ ನೋಡು, ಇದೆ ಅಸ೦ಖ್ಯಾತ ರಾಜರು ತಾವು ಮಾಡಿದ ಪುಣ್ಯವು ಫಲಿಸಿ ಭೋಗದಲ್ಲಿ ಇರುವುದನ್ನು. ಭರತವರ್ಷ ನಿಮ್ಮದು, ಪುಣ್ಯ ಭೂಮಿಕಣಾ; ಇದರಲ್ಲಿ ಜಪ ಯಜ್ಞ ದಾನವು ಅಭ್ಯುದಯಕ್ಕೆ ಕಾರಣ; ವೈದಿಕ ಕರ್ಮನಿಷ್ಠರ ಪದವಿಗಳ ನೆಗೆದಾಟ- ಹಾರಾಟಗಳನ್ನು ನೋಡು,' ಎಂದ.
ಅರ್ಥ:ಮಾತಲಿಯು ಪಾರ್ಥನಿಗೆ,' ದೂರದಲ್ಲಿ ಬೆಳ್ಳಿಯ ಬೆಟ್ಟದಂತೆ ಹೊಳೆಯುತ್ತಿದೆ, ಪಕ್ಕದಲ್ಲಿ ಬಲರಾಕ್ಷಸನ ವಿರೋಧಿಯಾದ ಇಂದ್ರನ ಪಟ್ಟದಾನೆ ಇದೆ. ಸುರೇ೦ದ್ರನ ಮಗನಮಗನ ಮನೆ ಎನ್ನುವಂತೆ ಸ್ವಲ್ಪದೂರದಲ್ಲಿ ತಳತಳಿಸುವ ಶ್ರೇಷ್ಠ ಮುನಿಪ್ರಭಾ ಪರಿವಲಯ ಬೆಳಕು ನಿಭದ್ದವಾಗಿದೆ; ಆ ಅಮರಾವತಿಯನ್ನು ನೋಡು,' ಎ೦ದ.
ಅರ್ಥ:ಅರ್ಜುನನು ರಥದಿಂದ ಇಳಿದು ಇಂದ್ರನ ಅರಮನೆಯನ್ನು ಹೊಕ್ಕನು. ಅರ್ಜುನನ್ನು ದೂರದಲ್ಲಿ ಕ೦ಡು,ಇಂದ್ರನು ಎದ್ದು ನಗುತ ಎದುರು ಬ೦ದನು; ಅರ್ಜುನನ್ನು ಸೆಳೆದು ಬಿಗಿದಪ್ಪಿದನು; ಅವನು ತನ್ನ ಕೈಯಲ್ಲಿ ಅನ ಕೈಯನ್ನು ತುಳುಕಿ ಹಿಡಿದು, ಕರೆತ೦ದು ತನ್ನ ಪಕ್ಕದಲ್ಲಿ ಸಿ೦ಹಾಸನಾರ್ಧದಲ್ಲಿ ಕೂರಿಸಿಕೊಂಡನು.
ಅರ್ಥ: ನೂರು ಕುದುರೆಗಳನ್ನು ಅಗ್ನಿಯಲ್ಲಿ ಕೆಡವಿ ಬಲಿಕೊಟ್ಟು ಅಶ್ವಮೇಧಯಾಗ ಮಾಡಿದವರಿಗೆ ಸುರೇ೦ದ್ರನು ಸಿಂಹಾಸನವನ್ನು ಬಿಟ್ಟುಕೊಡುವನು; ಅರ್ಜುನನು ಯಾಗ ಮಾಡದೆಯೇ ಬರಿದೇ ಸುರಪತಿಯಾದ ಇಂದ್ರನ ಸಿ೦ಹಾಸನವನ್ನು ಸೂರೆಗೊ೦ಡನು- ಕೊಳ್ಳೆಹೊಡೆದನು- ಅವನ ಸಿರಿಯನ್ನು ಕೊಳ್ಳೆಹೊಡೆದನು. ಮೂರು ಯುಗದ ಅರಸುಗಳಲ್ಲಿ ಈ ಅರ್ಜುನನಿಗೆ ಸಮಾನರನ್ನು ತೋರಿಸಲು ಅವನ ಸಮಾನರಿಲ್ಲ' ಎನ್ನುವ ಹಾಗೆ ಇಂದ್ರನ ನೂರುಮಡಿ ತೇಜಸ್ಸಿನಿಂದ ಕಲಿಪಾರ್ಥನು ತೊಳತೊಳಗಿ ಪ್ರಕಾಶಿಸಿದನು.
ಅರ್ಥ: ಅ೦ದಿನ ಉತ್ಸವದ ಅಮರರ ಸಮೂಹದ ಸ೦ದಣಿಯನ್ನು ಏನೆ೦ದು ಹೇಳಲಿ! ಇ೦ದ್ರನ ಮ೦ದಿರದಲ್ಲಿ ಜನದ ದೊ೦ಬಿಯಲ್ಲಿ ಒತ್ತೊತ್ತೆಯಾಯಿತು. ಮ೦ದಿ-ಜನ ತೊಲಗಲಿ, ಮು೦ದಿದ್ದವರನ್ನು ತೆರಹುಗೊಡು ಹೊಯ್! ಎಂದು ಕೂಗಿದರು. ಇ೦ದ್ರನ ಆಸ್ಥಾನದಲ್ಲಿ ಗಜಬಜವನ್ನು ಮಾಡಬೇಡಿ ಎ೦ದು ಸುರರ-ದೇವತೆಗಳ ಗುಂಪು ಗರ್ಜಿಸಿತ್ತು.
ನೂಕು ಬಾಗಿಲ ಚಾಚು ಬಣಗು ದಿ
ವೌಸಕರ ನಿಲಿಸಲ್ಲಿ ಪುಣ್ಯರ
ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ |
ಓಕುಳಿಯ ನೆವದಿ೦ದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರ೦ಭಾದಿಗಳ ಸೋಕೆ೦ದುದು ಸುರಸ್ಥೋಮ ೮೭
ಪದವಿಭಾಗ-ಅರ್ಥ: ನೂಕು ಬಾಗಿಲ ಚಾಚು, ಬಣಗು(ಸಾಮಾನ್ಯ) ದಿವ(ಸ್ವರ್ಗದ)+ ಔಸಕರ(ಕೆಲಸದವರು) ನಿಲಿಸಲ್ಲಿ ಪುಣ್ಯರನು+ ಏಕೆ ಹೊಗಿಸಿದೆ ಬಹಳ ದಾನ ತಪೋ+ ವಿವರ್ಜಿತರ, ಓಕುಳಿಯ(ಉತ್ಸವಕಾಲದಲ್ಲಿ ಮೈಮೇಲೆ ಪರಸ್ಪರ ಎರಚುವ ಸುಣ್ಣ-ಅರಿಶಿನದ ನೀರು) ನೆವದಿ೦ದ ತೆಕ್ಕೆಯ(ಅಪ್ಪುಗೆ, ಆಲಿಂಗನ, ಎರಡು ತೋಳುಗಳ ಹಿಡಿತ. ಗುಂಪು,) ಬಾಕುಳಿಗಳು(ಹೆಬ್ಬಯಕೆ, ಅತ್ಯಾಸೆ)+ ಉರವಣಿಸಿತೇ? ತಮಗೇಕೆ ರ೦ಭಾದಿಗಳ ಸೋಂಕು+ ಎ೦ದುದು ಸುರಸ್ಥೋಮ
ಅರ್ಥ:ದೇವತೆಗಳ ಮತ್ತು ದೇವಲೋಕ ವಾಸಿಗಳ ನೂಕುನುಗ್ಗಲಿನಲ್ಲಿ ,'ನೂಕು ಬಾಗಿಲನ್ನು ಚಾಚು; ಸಾಮಾನ್ಯ ಕೆಲಸದವರನ್ನು ಅಲ್ಲಿಯೇ ನಿಲ್ಲಿಸು. ಪುಣ್ಯವಂತರನ್ನು ಏಕೆ ಹೊಗಿಸಿದೆ ಒಳಗೆ? (ದೇವತೆಗಳಿಗೆ ಮಾತ್ರಾ ಪ್ರವೇಶ) ಬಹಳ ದಾನ ತಪಸ್ಸು ಮಾಡಿದವರು ಓಕುಳಿಯ ನೆವದಿ೦ದ ಒತ್ತಾಗಿ ನುಗ್ಗುವ ಹೆಬ್ಬಯಕೆ ತೋರಿದರು. ಆ ಬಯಕೆ ಹೆಚ್ಚಿತೇ?' 'ಅರ್ಜುನನ್ನು ಕಾಣುವ ಈ ಸಮಯದಲ್ಲಿ ತಮಗೇಕೆ ರ೦ಭೆ ಮೊದಲಾದ ಸುರಸುಂದರಿಯರನ್ನು ಸೋಂಕುವ- ತಾಗುವ ಮುಟ್ಟುವ ಬಯಕೆ,' ಎ೦ದು ಸುರರ ಸಮೂಹ ಹೇಳುತ್ತಿತ್ತು.(ಟಿ: ಜಾತ್ರೆ ಮೊದಲಾದ ಸಮಯದಲ್ಲಿ ನೂಕುನುಗ್ಗಲು ಇದ್ದಾಗ ಸುಂದರಿಯರನ್ನು ಸವರಿಕೊಂಡು ನುಗ್ಗುವ ಪರಿಪಾಠ ಕವಿಯ ಕಾಲದಲ್ಲೂ ಇತ್ತು ಎಂದು ತೋರುವುದು.)
ಅರ್ಥ: ಅಪ್ಸರೆಯರಲ್ಲಿ ಶ್ರೇಷ್ಠಳಾದ ತಿಲೋತ್ತಮೆ, ರ೦ಭೆ, ಮಧುರ ಸ್ವರ ಘೄತಾಚಿ, ಸುಕೇಶಿ, ಗೌರೀಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿ, ಗ೦ಧಿನಿ, ಚಾರುಮುಖಿ, ಸೌ೦ದರ್ಯ ನಿಧಿಯಾದ ಊರ್ವಶಿ, ಸುಲೋಚನೆ, ಸುರಸೆ ಎಂಬ ದೇವ ಅ೦ಗನೆಯರ ಸಮೂಹ ಕೋಟಿ ಸ೦ಖ್ಯೆಯಲಿ ಅಲ್ಲಿಗೆ ಬಂದಿತು.
ಅರ್ಥ: 'ಏನನ್ನು ಹೇಳಲಿ, ಜೀಯ, 'ಶಕ್ರಾಸ್ಥಾನವಲ್ಲವೇ ಅದು! ದಿವ್ಯವಾದ್ಯ ಉತ್ತಮ ಗಾನ, ನರ್ತನ, ಹೀಗೆ ವಿಮಲ ಧ್ವನಿತ್ರಯದ ಮೇಳವು ಅದು. ಅದನ್ನು ಆ ನಿತ೦ಬಿನಿಯುರ ಸುರೇಖಾ ಸ್ಥಾನಕದ- ದೇಹದ ಸುಂದರ ವಕ್ರವಿನ್ಯಾಸದ, ಉಟ್ಟ ಬಟ್ಟೆಯ ನಿರುಗೆಯ, ಹೊಳಪಿನ ಕೊರತೆ ಇಲ್ಲದ ಸಮ್ಮೋಹನದ ತೂಕದ-ಗಂಭೀರವಾದ ಭಾವಭ೦ಗಿಗಳ ವಿಚಾರವಾಗಿ ಏನನ್ನು ಹೇಳಲಿ.' ಎಂದ ವೈಶಂಪಾಯನ ಮುನಿ.
ಅರ್ಥ: ಈ ಅಮಾನುಷವಾದ ನೄತ್ಯ ವಾದ್ಯ ಸುಗೇಯ-ಉತ್ತಮ ಗಾನ ರಸದಲ್ಲಿ ಮುಳುಗಿದರೂ ಪಾರ್ಥನು ತನ್ನ ಮನಸ್ಸಿನ ಅಯ-ಸಂಯಮವನ್ನು ಚಂಚಲವಾಗಿ ಅದರಲ್ಲಿ ಸಿಕ್ಕಿಕೊಳ್ಳದೆ ಧೈರ್ಯ ಶಿಖರದಲ್ಲಿ ಇದ್ದನು. ಆದರೆ ಅವನು ನೃತ್ಯ ಮಾಡುತ್ತಿದ್ದ ಊರ್ವಶಿಯನ್ನು- 'ಈ ಯುವತಿ ತಾನು ಯಾವಳೋ! ಇವಳು ಮನ್ಮಥನ ಖಡ್ಗದಂತಿರುವಳಲ್ಲಾ! ಮಝ ಮಾಯೆಯೆ' ಎನ್ನುತ್ತಾ ಊರ್ವಶಿಯನ್ನು ಕಣ್ಣು ಮಿಟುಕಿಸದೆ ನೋಡಿದ.
ಅರ್ಥ: ಇಂದ್ರನು ಯೂರ್ವಶಿ ರ೦ಭೆ ಮೇನಕೆ ಗೌರಿ ಮೊದಲಾದ ಎಲ್ಲಾ ಪಾತ್ರಧಾರಿಗಳಿಗೆ ಪರಮ ಹರುಷದಿಂದ ಉಡುಗೊರೆಗಳನ್ನು ಕೊಟ್ಟನು. ಆ ವನಿತೆಯರು ನಿಖಿಲ ಅಮರರು ಬೀಡಾರಕ್ಕೆ ಹೋದರು. ಓಲಗವು ಮುಗಿಯಿತು; ಅದಕ್ಕೆ ಸರಿಯಾಗಿ ಮಂಗಳ ಆರತಿಯ ಹರಿವಾಣಗಳ ಸಾಲು ಸೊಡರುಗಳಲ್ಲಿ ಸುಳಿದು, ಆರತಿ ಎತ್ತಿದರು.
ಅರ್ಥ:ಜನಮೇಜಯ ಅರಸನೇ ಕೇಳು,ಇಂದ್ರ ಅರ್ಜುನರು ಇಬ್ಬರೂ ಒಟ್ಟಾಗಿ ಇದ್ದು ಊಟಮಾಡಿದರು. ನಂತರ ಇಂದ್ರನು ತನ್ನ ಮಗನನ್ನು ಬೇರೆಯ ಒಂದು ಅರಮನೆಗೆ ಮಲಗುವುದಕ್ಕೆ ಕಳುಹಿದನು. ಇತ್ತ ಇಂದ್ರನು ತನ್ನ ಮಿತ್ರ ಚಿತ್ರಸೇನನನ್ನು ಕರಸಿದನು. ಅವನಿಗೆ ಫಲ್ಗುಣನ ಉರ್ವಸಿಯನ್ನು ಅವನು ದಿಟ್ಟಿಸಿನೋಡಿದ ಭಾವವನ್ನು ಹೇಳಿದನು. ಹೇಳಿ ನಮ್ಮ ಊರ್ವಶಿಯನ್ನು ಅರ್ಜುನನ ಬಳಗೆ ಕಳುಹಿಸುವುದು ಎಂದು ನೇಮಿಸಿದ.
ಅರ್ಥ:ದೇವೇಂದ್ರನು ಚಿತ್ರಸೇನನ್ನು ಕುರಿತು,'ಇಷ್ಟೊಂದು ಅಪ್ಸರೆಯರು ಇರುವಾಗ, ರ೦ಭೆಮೊದಲಾದ ಸೀಮ೦ತಿನಿಯರನ್ನು ಬಿಟ್ಟು ಊರ್ವಶಿಯಲ್ಲಿ ಅವನ- ಅರ್ಜುನನ ಬಯಕೆ ಆಯಿತು. ಧನ೦ಜಯನು ರೆಪ್ಪೆಮುಚ್ಚದೆ ಏಕ ದೃಷ್ಟಿಯಲ್ಲಿ ಆ ವನಿತೆಯನ್ನು ಈಕ್ಷಿಸಿದನು. ನೀನು ಊರ್ವಸಿಗೆ ಅವನಲ್ಲಿಗೆ ಕಳುಹಿಸಲು ಹೇಳಿದ್ದೇನೆ ಎ೦ದು ಹೇಳು, ಎನ್ನಲು, ಚಿತ್ರಸೇನನು ಹಸಾದವು- ತಮ್ಮ ಆಜ್ಞೆಯು, ಎನ್ನತ್ತಾ ಅವನು ಇಂದ್ರನ ನೇಮದಂತೆ ದೇವಾ೦ಗನೆಯಾದ ಊರ್ವಸಿಯ ಮಂದಿರಕ್ಕೆ ಬ೦ದನು.
ಅರ್ಥ:ಊರ್ವಸಿಯ ಅರಮನೆಯ ದ್ವಾರಪಾಲಕನು ಊರ್ವಸಿಗೆ,'ತಾಯೆ ಕೇಳು ಅರಮನೆಯ ರಾಜದೂತನು ಬ೦ದಿದ್ದಾನೆ,' ಎನ್ನಲು ಆ ಕಮಲನೇತ್ರೆ ಊರ್ವಸಿ ಚಿತ್ರಸೇನನ್ನು ಕರಸಿದಳು. ಅವನು ತಾಯೆ, ಎನ್ನುತ್ತಾ ಸುದ್ದಿ ಹೇಳಲುತೊಡಗಿದಾಗ ಅವಳು, ಅವನಿಗೆ ನಗುತ್ತಾ ವಸ್ತ್ರಾಭರಣದ ಉಡುಗೊರೆಯನ್ನು ಕೊಟ್ಟಳು; ಮತ್ತು ಪರಿಮಳದ ಕರ್ಪೂರ ಹಾಕಿದ ಸುಂದರ (ತಾಂಬೂಲದ) ಭರಣಿಯನ್ನು ಅವನ ಕಡೆ ನೂಕಿದಳು.
ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯ ಗತಿಗಳ
ಕುಣಿಕೆಯ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ |
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆ೦
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ || ೧೦೦ ||
ಪದವಿಭಾಗ-ಅರ್ಥ: ಅಣಕವಲ್ಲ(ಕುಚೋದ್ಯ, ಅಲ್ಲಗಳೆ ಯುವುದು, ಹುಡುಗಾಟಿಕೆ)+ ಇದು ರಾಯನು+ ಅಟ್ಟಿದ(ಕಳಿಸಿದ) ಮಣಿಹವೋ(ರಾಜಾಜ್ಞೆಯೋ) ನಿಜಕಾರ್ಯ ಗತಿಗಳ ಕುಣಿಕೆಯ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ, ಗುಣಭರಿತ ಹೇಳೆನಲು ನಸುನಗೆ ಕುಣಿಯೆ ಮುಖದಲಿ, ಮಾನಿನಿಗೆ ವೆ೦ಟಣಿಸಿ(ನಮಸ್ಕರಿಸಿ,ವಂದಿಸಿ) ಲಜ್ಜಾಭರದಿ (ಬಹಳ ನಾಚಿಕೆಯಿಂದ) ನುಡಿದನು ದೂತನು+ ಈ ಮಾತ.
ಅರ್ಥ: ಊರ್ವಸಿಯು,'ನಿನ್ನದು ಹುಡುಗಾಟಿಕೆಯಲ್ಲ ಅಲ್ಲವೇ? ಇದು ದೇವೇಂದ್ರನು ಕಳಿಸಿದ ರಾಜಾಜ್ಞೆಯೇ? ನಿಜವಾದ ಕಾರ್ಯತಂತ್ರವೇನು? ಕಾರ್ಯತಂತ್ರದಿಂದ ಯಾರನ್ನು ಮೋಹದ ಕುಣಿಕೆಯ ಹಗ್ಗದಲ್ಲಿ ಸಿಕ್ಕಿಸಿ ಕೆಡವಬೇಕು? ನಿಮಗೆ ನಮ್ಮಲ್ಲಿಂದ ಆಗಬೇಕಾದ ಕರ್ತವ್ಯವಾವುದು? ಗುಣಭರಿತನೇ, ಹೇಳು,' ಎನ್ನಲು, ಚಿತ್ರಸೇನನಿಗೆ ಮುಖದಲ್ಲಿ ನಸುನಗೆಯು ಕುಣಿಯಿತು. ಮಾನಿನಿ ಊರ್ವಸಿಗೆ ಬಗ್ಗಿ ವಂದಿಸಿ, ಲಜ್ಜೆಯಿಂದ ದೂತನು ನುಡಿದನು ಈ ಮಾತನ್ನು ಹೇಳಿದನು.
ಎಮಗೆ ಮಗನರ್ಜುನನು ನೀನಿ೦
ದೆಮಗೆ ಸೊಸೆಯಹುದಾತನ೦ತ
ಸ್ಥಿಮಿರವನುಕಳೆ ನಿನ್ನ ಕುಚಯುಗಕಾ೦ತಿ ಲಹರಿಯಲಿ |
ಕಮಲಮುಖಿ ನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆ೦ದು ಬೆಸಸಿದನಮರಪತಿಯೆ೦ದ || ೧೦೧ ||
ಪದವಿಭಾಗ-ಅರ್ಥ: ಎಮಗೆ ಮಗನು+ ಅರ್ಜುನನು, ನೀನು+ ಇ೦ದು+ ಎಮಗೆ ಸೊಸೆಯಹುದು+ ಆತನ+ ಅ೦ತಸ್ಥಿಮಿರವನು(ಅಂತರಂಗದ- ಮನಸ್ಸಿನ ಕತ್ತಲೆಯನ್ನು) ಕಳೆ(ಹೋಗಲಾಡಿಸು) ನಿನ್ನ ಕುಚಯುಗಕಾ೦ತಿ ಲಹರಿಯಲಿ(ಲಹರಿ= ರಭಸ, ಆವೇಗ, ಚಾಕಚಕ್ಯತೆ, ಚುರುಕು, ಕೌಶಲ್ಯ, ಚಮತ್ಕಾರ; ಎರಡು ಸುಂದರ ಕುಚಗಳ ಶೋಭೆಯ ಚಾಕಚಕ್ಯತೆಯಿಂದ), ಕಮಲಮುಖಿ, ನೀ ಕಮಲವು+ ಆತನು ಭ್ರಮರ(ಕಮಲದ ಮಧುವನ್ನು ಕುಡಿಯುವ ಜೇನುಹುಳ) ನೀ ಸುರವನದ- (ದೇವಲೋಕದ ನಂದನವನದ) ಸಿರಿಮಧು(ಉತ್ತಮ ಅಮೃತ) ಸಮಯವು+ ಅರ್ಜುನನು+ ಎ೦ದು ಬೆಸಸಿದನು(ಹೇಳಿದನು, ಆದೇಶಿಸಿದನು)+ ಅಮರಪತಿ+ ಯೆ+ ಎ೦ದ.
ಅರ್ಥ: ದೇವೇದ್ರನು ಹೇಳಿಕಳಿಸಿದ ಮಾತು ಏನೆಂದರೆ,'ನಮಗೆ ಅರ್ಜುನನು ಮಗನು. ನೀನು(ಊರ್ವಸಿಯು) ಇ೦ದು ನಮಗೆ ಸೊಸೆಯಾಗುವುದು. ಆತನ ಅಂತರಂಗದ ಮನಸ್ಸಿನ ವಿರಹ ಸಂಕಟವನ್ನು ಕಳೆಯುವುದು. ನಿನ್ನ ಎರಡು ಸುಂದರ ಕುಚಗಳ ಶೋಭೆಯ ಚಾಕಚಕ್ಯತೆಯಿಂದ ಅವನ ಮನಸ್ಸಿನ ವಿರಹಸಂಕಟವೆಂಬ ಕತ್ತಲೆಯನ್ನು ಕಳಯಬೇಕು; ಕಮಲಮುಖಿ, ನೀನು ಕಮಲವು, ಆತನು ಕಮಲದ ಮಧುವನ್ನು ಕುಡಿಯುವ ಭ್ರಮರ- ಜೇನುಹುಳ; ಊರ್ವಸಿಯೇ ನೀನು ದೇವಲೋಕದ ನಂದನವನದ ಸಿರಿಮಧುವಿದ್ದಂತೆ- ಅದರಲ್ಲಿ ವಿಹರಿಸುವ ಸಮಯವು ಅರ್ಜುನನಾಗಬೇಕು-'ಎ೦ದು ದೇವೇಂದ್ರನು ಬೆಸಸಿದನು,'ಎ೦ದ.
ಅರ್ಥ:ಊರ್ವಸಿಯು ರಾಜದೂತ ಚಿತ್ರಸೇನನು ಹೇಳಿದ ಇಂದ್ರನ ಸಂದೇಶವನ್ನು ಕೇಳುತ್ತಲು, ಅವಳು ರೋಮಾ೦ಚಗೊಂಡು, ಲಜ್ಜೆಯ ಜೋಲಿಯಲ್ಲಿ ಸಿಲುಕಿ ಝೊ೦ಪಿಸಿದಳು- ಓಲಾಡಿದಳು. ಅವಳ ಮೈ ಪುಳಕಗಳಿಂದ ಆವರಿಸಿ, ಭಯವನ್ನು ನಟಿಸಿತು. ಅನುರಾಗದ ಅಭಿಮಾನ ಮೇಲಿಂದ ಮೇಲೆ ಅಭಿಲಾಷೆ- ಬಯಕೆಯಾದರೂ ದೈರ್ಯವನ್ನು ಚಾಳಿಸಿತು- ಕುಂದಿಸಿತು. ಜುತೆಗೆ ಇದು ಇಂದ್ರನು ತನಗೆ ಕೊಟ್ಟ ಮಬುಮಾನ ಎಮದು ಭಾವಿಸಿ, ಆ ಪರಿತೋಷ ಪೂರಣದಲ್ಲಿ ಮುಳುಗಿಹೋದಳು. ಅವಳು ಉತ್ತರಸಲು ಚಿತ್ರಸೇನನ ಕಡೆ ತನ್ನ ತಲೆಯನ್ನು ಸ್ವಲ್ಪ ಬಾಗಿಸಿದಳು.
ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ |
ಸೋತಡೆಯು ದಿಟ ಭ೦ಗವಲ್ಲ ಪು
ರಾತನದ ನಳ ನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆ೦ದ || ೧೦೩ ||
ಪದವಿಭಾಗ-ಅರ್ಥ: ಆಗ ಚಿತ್ರಸೇನನು ಆತನು+ ಉತ್ತಮ ನಾಯಕನು; ವಿಖ್ಯಾತನು+ ಈ ಸುರಲೋಕದಲಿ ಲಜ್ಜಾತಿಶಯವೇಕೆ+ ಇಲ್ಲಿ ನಾವೇ ನಿಮ್ಮ ಪರಿವಾರ ಸೋತಡೆಯು ದಿಟ(ನಿಜವಾಗಿ) ಭ೦ಗವಲ್ಲ (ಅವಮಾನವಲ್ಲ)ಪುರಾತನದ ನಳ ನಹುಷ ಭರತ ಯಯಾತಿ ನೃಪರೊಳಗೆ+ ಈತನು+ ಅಗ್ಗಳನು(ಶ್ರೇಷ್ಠನು)+ ಅಬಲೆ ಕೇಳೆ೦ದ
ಅರ್ಥ: ಆಗ ಚಿತ್ರಸೇನನು ಹೇಳಿದ,'ಅಬಲೆಯೇ ಕೇಳು, ಆತನು ಉತ್ತಮ ನಾಯಕನು, ವಿಖ್ಯಾತನು, ಈ ಸುರಲೋಕದಲ್ಲಿ ಅತಿಶಯ ನಾಚಿಕೆಯೇಕೆ? ಇಲ್ಲಿ ನಾವೇ ನಿಮ್ಮ ಪರಿವಾರ- ಕುಟುಂಬ, ಭಯಬೇಡ, ನೀನು ಅವನಿಂದ ಸುರತಕ್ರೀಡೆಯಲ್ಲಿ ಸೋತುಹೋದರೂ ನಿಜವಾಗಿ ಅದು ಅವಮಾನವಲ್ಲ. ಪುರಾತನರಾದ ನಳ, ನಹುಷ, ಭರತ, ಯಯಾತಿ ನೃಪರಂತೆ ಈತನೂ ಸಹ ಶ್ರೇಷ್ಠನು,'ಎಂದ.
ರಾಯನಟ್ಟಿದ ನೇಮ ಗಡ ಕಮ
ನೀಯವಲ್ಲಾ ನಿನ್ನನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನು ಭಾವವಲೆ |
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ೧೦೪ [೧][೨]
ಪದವಿಭಾಗ-ಅರ್ಥ: ರಾಯನು+ ಅಟ್ಟಿದ(ವೇಗವಾಗಿ ಕಳಿಸಿದ) ನೇಮ(ಆಜ್ಜೆ) ಗಡ ಕಮನೀಯವಲ್ಲಾ(ಮನೋಹರ, ಆನಂದಕರ) ನಿನ್ನ ನುಡಿ ರಮಣೀಯತರವು+ ಇದು ನಿನ್ನ ರಚನೆ, ಮಹಾನುಭಾವವಲೆ, ಆಯಿತು+ ಇದು ನೀ ಹೋಗು+ ಎನುತಲಿ+ ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಮನಸ್ಸಿನ ಗೋಡೆಯಲ್ಲಿ).
ಅರ್ಥ: ಊರ್ವಸಿ ಯೋಚಿಸಿ ಹೇಳಿದಳು,'ದೇವರಾಯ ಇಂದ್ರನು ಹೇಳಿಕಳಿಸಿದ ಆಜ್ಜೆ ಗಡ! ಕಮನೀಯವಾಗಿದೆಯಲ್ಲವೇ? ನಿನ್ನ ಮಾತು ಸಹ ಮನಸ್ಸಿಗೆ ಆನಂದಕೊಡುವ ತರದಲ್ಲಿದೆ. ಇದು ನಿನ್ನ ರಚನೆ- ವಿಧಾನ, ಮಹಾನುಭಾವನಲ್ಲವೇ ನೀನು! ಇದು ನೀನು ಹೇಳಿದ್ದು ಆಯಿತು- ಒಪ್ಪಿಗೆ. ನೀನು ಹೋಗು ಎಂದು ಹೇಳುತ್ತಾ ಕಮಲದ ಎಸಳಿನ ಅಗಲದ ಕಣ್ಣಿನ ಅವಳು ಮಹಾ ಉತ್ಸವದಿಂದ ನಾರಾಯಣನ ಮೈದುನನಾದ ಅರ್ಜುನನ ಚಿತ್ರವನ್ನು ಮನಸ್ಸಿನ ಗೋಡೆಯಲ್ಲಿ ಬರೆದಳು.