ವಿಮೋಚನೆ/ಬರೆದವರು ಮತ್ತು ಕೃತಿ
ಟಕ್ ಟಕ್ ಎಂದಿತು ಬಾಗಿಲು.
ಪಕ್ಕದ ಮನೆಯದಿರಬಹುದೆಂದು ನಾನು ಸುಮ್ಮನಾದೆ.
....ಆದರೆ ನನ್ನ ಊಹೆ ತಪ್ಪಾಗಿತ್ತು. ಬಂದಿದ್ದವರು ಮತ್ತೆ ಸಪ್ಪಳ ಮಾಡಿದರು. ಧಾಳಿಯನ್ನು ಇದಿರಿಸಲು ಸಿದ್ಧನಾಗಿ ನಾನು ಹೊರಬಂದೆ.
ಶುಭ್ರವಾದ ಕಣ್ಣುಗಳಿದ್ದ, ನೀಳವಾದ ಕ್ರಾಪಿನ, ಅಂದವಾದ ಉಡುಗೆ ತೊಟ್ಟಿದ್ದ, ಒಬ್ಬ ಯುವಕ. ಆತ ಕೇಳಿದರು:
"ನಿರಂಜನರ ಮನೆ ಇದೇನಾ?"
"ಸರಿಯಾದ ಜಾಗಕ್ಕೇ ಬಂದಿದೀರಿ. ನಾನೇ. ಬನ್ನಿ."
"ಓ! ....ಕುಳುಕುಂದ ಶಿವರಾಯರು?"
"ಆ ಹೆಸರಿನ ಆರೋಪಿಯೂ ನಾನೇ. ಒಳಕ್ಕೆ ಬನ್ನಿ."
ಅವರು ಸಂಕೋಚಪಡುತ್ತಾ ಕುರ್ಚಿಯ ಮೇಲೆ ಕುಳಿತುಕೊಂಡರು. ಕರವಸ್ತ್ರ ಹೊರಬಂದು ಅವರ ಮುಖವನ್ನು ಒರೆಸಿತು.
"ನಾನು ಬಂದು ನಿಮಗೆ ತೊಂದರೆಯಾಯ್ತೇನೋ?"
"ಏನೂ ಇಲ್ಲ. ಏನೇನೂ ಇಲ್ಲ. ಈ ದಿವಸ ಯಾರಾದರೂ ಬಂದೇ ಬರ್ತಾರೆ ಅಂತ ನನಗೆ ನಂಬಿಕೆ ಇತ್ತು."
"ಆದರೆ ನಾನು ಅಪರಿಚಿತ."
"ಅದಕ್ಕೇನಂತೆ? ಇವತ್ತಿನಿಂದಲೇ ಪರಿಚಿತರಾದ ಹಾಗಾಯ್ತು."
ಅವರು ಮುಗುಳ್ನಕ್ಕರು.
"ನೀವೂ ನನ್ನ ಹಾಗೆ ಬರೆಹಗಾರರೇನೋ?" ಎಂದು ನಾನೇ ಮಾತಿನ ಪ್ರಕರಣವನ್ನು ಆರಂಭಿಸಿದೆ.
"ಇಲ್ಲ ! ಇಲ್ಲ ! ನಾನೊಬ್ಬ ಓದುಗ ಆಷ್ಟೆ."
"ಇತ್ತೀಚೆಗೆ ಏನು ಓದಿದೀರಿ?"
"ನೀವೊಂದು ಕಾದಂಬರಿ ಬರೀತಾ ಇದ್ದೀರಿ ಅಂತ 'ಸಾಹಿತ್ಯ –– ಸುದ್ದಿ –– ಸಾರ'ದಲ್ಲಿ ಓದಿದೆ."
"ಓ! .. ನೋಡಿ, ಮೇಜಿನ ಮೇಲಿರೋ ಹಸ್ತಪ್ರತಿಯೇ ಆ ಕಾದಂಬರಿ. ಇದೇ ಈಗ ಮುಕ್ತಾಯವಾಗಿದೆ. ಇತಿ ಶ್ರೀ ಬರೆದು ಕೈ ಇನ್ನೋ ಚೇತರಿಸಿಕೊಂಡಿಲ್ಲ.... ಹಸ್ತ ಪ್ರತಿ ನೋಡ್ತೀರೇನು ?"
ಆತ ಫೂಲ್ಸ್ ಕ್ಯಾಪ್ ಹಾಳೆಗಳ ರಾಶಿಯನ್ನೆಲ್ಲ ಎತ್ತಿಕೊಂಡರು. ಅದರಿಂದಲೇ ಎತ್ತಿಕೊಂಡರು ಎನ್ನಬೇಕು.....
ಅವರ ಮುಖವನ್ನು ನಾನು ಕುತೂಹಲದಿಂದ ದಿಟ್ಟಿಸುತ್ತಿದ್ದೆ. ಬಲು ಸೂಕ್ಶ್ಮವಾಗಿ, ಬಣ್ಣದ ಬದಲಾವಣೆಗಳಾಗುತ್ತವೇನೋ ಎಂದು ನಿರೀಕ್ಶಿಸುತ್ತಿದ್ದೆ. ಆದರೆ ಆ ವಿಶಾಲ ಕಣ್ಣುಗಳ ಹೊಳಪು ಎಲ್ಲವನ್ನೂ ಮರೆಮಾಡಿತ್ತು.
"ಪ್ರತಿ ಮಾಡಿಸಿದೀರೇನು? ಬೇರೆ ಬೇರೆ ಕೈಬರಹಗಳಿವೆಯಲ್ಲ?"
"ಇಲ್ಲವಪ್ಪ. ಮೊದಲ ಇನ್ನೂರೈವತ್ತು ಪುಟ ನಾನು ಬರೆದದ್ದಲ್ಲ "
ಅವರಿಗೆ ಸ್ವಲ್ಪ ಆಶ್ಚರ್ಯವೇ ಆಯಿತು.
"ಹಾಗಂದರೆ?"
"ಗಾಬರಿ ಬೀಳಬೇಡಿ. ಮೊನ್ನೆ ಕಾಹಿಲೆ ಮಲಗಿದ್ದೆ. ಏನೂ ಬರೆಯದೆ ಮನಸ್ಸಿಗೆ ಬೇಸರವಾಗಿತ್ತು. ಆಗ ಸ್ನೇಹಿತರೊಬ್ಬರು ಬಂದು ನನಗಾಗಿ ಬರೆದುಕೊಂಡರು-ರಾಘವೇಂದ್ರ ಅಂತ. ನೂರೈವತ್ತು ಪುಟ ಅವರು ಬರೆದದ್ದು. ಇನ್ನೊಬ್ಬ ಸ್ನೇಹಿತರು - ನಾಗಭೂಷಣ ಅಂತ-ನೂರು ಪುಟ ಬರೆದುಕೊಂಡರು. ಕೈಲಾಗದವನಿಗೆ ನೆರವಾದ ಪುಣ್ಯಾತ್ಮರು!... ಅದಾದಮೇಲೆ ಉಳಿದದ್ದೆಲ್ಲ ನನ್ನ ಕೈಬರಹ ಏನೂ ಚೆನ್ನಾಗಿಲ್ಲ ಅಲ್ಲವೆ?"
"ಯಾವುದು?"
"ಕೈ ಬರಹ!"
"ಆ ಸಾಹಿತ್ಯ ಸೃಷ್ಟಿಯ ವೇದನೆ ಯಾರಿಗೆ ಗೊತ್ತಿರುತ್ತದೆ ಹೇಳಿ? ಮುದ್ದಾಗಿ ಮುದ್ರಣವಾದ ಮೇಲೆಯೇ ನಾವು ಓದೋದು."
"... .... .... ...."
"ಚೊಚ್ಚಲ ಸಂಭ್ರಮ. ಹೆಸರು ಮೊದಲೇ ಗೊತ್ತಾಗಿರುತ್ತದೆ. ಅಲ್ಲವೆ ಸಾರ್?"
"ಅಂಥ ಮೋಹವೇ ಇಲ್ಲದ ನಿರ್ವಿಕಾರ ನಾನು. ಆತುರವಿಲ್ಲದವನು. ಆತ್ಮ ಪ್ರಶಂಸೆ ಅಂತ ನಗಬೇಡಿ ದಯವಿಟ್ಟು.......ನೀವು ಕೇಳಿದಿರಿ, ಹೇಳೋಣ. 'ವಿಮೋಚನೆ' ಅಂತ ಹೆಸರಿಟ್ಟಿದೀನಿ."
ಅವರು ಹಸ್ತಪ್ರತಿಯ ಮೊದಲ ಹಾಳೆಯನ್ನೋದಿದರು-ಅರ್ಪಣೆಯ ವಿಷಯ.
"ಓ!" ಅದು ಅವರಿಂದ ಹೊರಟ ಆಶ್ಚರ್ಯದ ಉದ್ಗಾರ. ನನ್ನನ್ನು ನೋಡಿ ಅವರು ಮುಗುಳುನಕ್ಕರು.
"ಅದು ಸ್ಟಂಟ್ ಅಲ್ಲ ಇವರೆ. ಗುಣವನ್ನು ಕಂಡು ಮತ್ಸರ ಪಡುವವನು ಅನಾಗರಿಕ. ಇದ್ದುದನ್ನು ಇದ್ದಂತೆ ಹೇಳಲಾಗದವನು ದುರ್ಬಲ. ನನ್ನ ಜಾತಿ ಬೇರೆ. ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯ ಬಯಲು ಈ ದಿನ ಮುಖ್ಯವಾಗಿದ್ದರೆ ಅದಕ್ಕೆ, ಆ ಹೊಲದಲ್ಲಿ ಮೊದಲು ಉಳುಮೆ ಮಾಡಿದವರೇ ಕಾರಣರು. ಅವರೆಲ್ಲ ಆಧುನಿಕ ಕನ್ನಡ ಸಾಹಿ ತ್ಯದ ಹುಟ್ಟಿನೊಡನೆಯೆ ಬರಹಗಾರರಾಗಿ ಹುಟ್ಟಿದವರು.ಹಳೆಯ ಹುಲಿಗಳು. ಅಲ್ಲವೆನ್ನುತ್ತೀರಾ?"
"ನೀವು ಹೇಳುತ್ತಿರೋದು ನಿಜ"
"ಈ ದಿನ ಕಾದಂಬರಿಯ ಹೊಲದಲ್ಲಿ ಎಂಥ ಬೆಳೆ ಬೆಳೆಯು ತ್ತಿದೆ ಎನ್ನುವುದು ಬೇರೆ ವಿಷಯ . ಒಳ್ಳೆಯ ಫಸಲು ಬರುವಂತೆ ಮಾಡುವುದು ನಮ್ಮ ನಿಮ್ಮ ಕರ್ತವ್ಯ. ಆದರೆ ಕಾಡು ಕಡಿದು ಕನ್ನಡ ಸಾಹಿತ್ಯದ ಭೂಮಿಯನ್ನು ವಿಸ್ತರಿಸಿ ಕಾದಂಬರಿಯ ಹೊಲ ವನ್ನು ನಮ್ಮದಾಗಿ ಮಾಡಿಕೊಟ್ಟ ಕನ್ನಡದ ಪ್ರಮುಖ ಕಾದಂಬರಿ ಕಾರರಿಗೆ ನಾವು ಗೌರವ ಸೂಚಿಸಬೇಕು. ಅದು ನ್ಯಾಯವಾದ್ದು. ಅಂತಹ ನಮ್ಮ ಕಾದಂಬರಿಕಾರರಲ್ಲಿ ಕಾರಂತ ಮತ್ತು ಅನಕೃ ಪ್ರಮುಖರು. ಅವರಿಗೆ ಈ ಕೃತಿಯನ್ನು ಆರ್ಪಿಸುವುದು ನ್ಯಾಯೋಚಿತ."
ನನ್ನ ವಿವರಣೆ, ಅವರ ಸಂತೋಷವನ್ನು ಹೆಚ್ಚಿಸಿದಂತೆ ತೋರಿತು. ಮುಂದೆ ಹಾಳೆಗನ್ನು ಅವರು ತಿರುವಿದರು.
"ಇದು,'ನಾನು' ಹೇಳಿದ ಕತೆಯಾಗಿದೆಯಲ್ಲ!"
"ಈ ಕಾದಂಬರಿಯ 'ನಾನು' ನಾನಲ್ಲ! ಓದಿ ನೋಡಿ. ನಿಮಗೇ ಗೊತ್ತಾಗ್ತದೆ."
"ಅದು ಸ್ಪಷ್ಟವಾಗಿಯೇ ಇದೆ. ತಮಾಷೆಗೆ ಹೇಳಿದೆ ಅಷ್ಟೆ. ಆ ಪತ್ರಿಕೆಯಲ್ಲಿ ಬರೆದಿದ್ದರು: ಸನ್ಮಾರ್ಗದಲ್ಲಿ ಸಾಗಲಾಗದೆ ಅಡ್ಡದಾರಿ ಹಿಡಿದ ವಿದ್ಯಾವಂತ ಯುವಕನೋರ್ವನ ದುರಂತ ಕಥೆ -ಆಂತ. ಹೌದೆ?"
"ನೀವೇ ಓದಿ ನೋಡಿ. ತೋರಿಕೆಗೆ ಹಾಗಿದೆ. ಆದರೆ ––?"
"ಹಾಗಾದರೆ ಇದು ಒಬ್ಬ ವ್ಯಕ್ತಿಯ ಜೀವನಕಥೆ ಅಲ್ಲವೆ?"
"ಅಲ್ಲ, ಇದು ನಮ್ಮೆಲ್ಲರ ಸುತ್ತುಮುತ್ತಲಿನ ಜೀವನದ ಕಥೆ. ಇಲ್ಲಿ ಬರುವ ಮುಖ್ಯ ಪಾತ್ರವಾದ ಚಂದ್ರಶೇಖರ –– ಒಬ್ಬ medium. ಆತನೊಬ್ಬ, ಜಗತ್ತನ್ನು ನಾವು ನೋಡುವುದಕ್ಕೋಸ್ಕರ ಇರುವ ಕಿಟಿಕಿ. ಸ್ವಲ್ಪ ವಿಚಿತ್ರವಾದ ಕಿಟಿಕೀಂತಲೇ ಅನ್ನಿ. ಅವನ ಜೀವನ ಕಥೆಯನ್ನು ನಾವು ತಿಳಿಯುವುದರ ಮೂಲಕ, ಇಡಿಯ ಜೀವನದ, ಕಥೆಯನ್ನೇ ಓದಿದಂತಾಗಬೇಕೆಂಬುದು ನನ್ನ ಅಪೇಕ್ಷೆ......"
"ಈ ಪ್ರಯೋಗ ಯಶಸ್ವಿಯಾಗಬಹುದು ಅನ್ನುತ್ತೀರಾ?"
"ಯಾಕಾಗಬಾರದು?"
"ನಿಮಗೆ ತೃಪ್ತಿಯಾಗಿದೆಯೆ?"
"ಆಗಿದೆ-ಬಹಳಮಟ್ಟಿಗೆ. ಇದು ಚಂದ್ರಶೇಖರನೋಬ್ಬನ ಕತೆಯೇ ಅಲ್ಲ. ಹಳ್ಳಿಯಿಂದ ಅನ್ನಾನ್ನಗತಿಕರಾಗಿ ನಗರಕ್ಕೆ ಬರುವ ರೈತರು, ಮಗ ದೊಡ್ಡವ್ಯಕ್ತಿಯಾಗಬೇಕೆಂಬ ಹಂಬಲದಿಂದ ತನ್ನನ್ನು ತಾನು ಹಗಲಿರುಳೂ ತೇಯುವ ತಂದೆ, ಅನ್ಯ ಜಾತಿಯವರನ್ನೂ ಆತ್ಮೀಯತೆಯಿಂದ ಕಾಣಬಲ್ಲ ಹಳೆಯ ತಲೆಮಾರಿನ ಅಜ್ಜಿ, ಬಿಟ್ಟಿ ಬೇಗಾರಿ ಮಾಡಿಸುವ ಬಡ ಉಪಾದ್ಯಯರು, 'ದಾನಶೀಲ'ರಾದ ಲೋಕ ಪರಾಯಣರು, ಅನಿವಾರ್ಯವಾಗಿ ಬೀದಿತಿರುಗುವ ಪೋಲಿ ಹುಡುಗರು, ಜೇಬುಗಳ್ಳರು, ನಮ್ಮ ಡಾಕ್ಟರು –– ಲಾಯರು, ಸಮಾಜದ ದೃಷ್ಟಿಯಲ್ಲಿ ಕಲಂಕಿನಿಯಾದ ಸ್ತ್ರೀ, ಅದರೆ ದೃಷ್ಟಿಯಲ್ಲಿ ಪ್ರತಿಷ್ಠಿತರ ಮಗಳು, ಸಮಾಜದ ಹಸಿದವರು –– ಕಸಿದವರು, ಅನುನಯದ ದಂಪತಿಗಳು, ವೈಷಮ್ಯದ ಗಂಡ ಹೆಂಡಿರು, ದೇಹ ಮಾರುವ ಸೂಳೆಯರು ... ಹೀಗೆ ಈ ಕಾದಂಬರಿಯಲ್ಲಿ ಬರುವ ವ್ಯಕ್ತಿಗಳು ಒಬ್ಬರೆ-ಇಬ್ಬರೆ? ಅವರೆಲ್ಲರ ಜೀವನದ ವಿಭಿನ್ನ ಇಣಿಕು ನೋಟ ಇಲ್ಲಿದೆ. ಅದರ ಸಮಗ್ರ ಚಿತ್ರವೇ ನಮ್ಮ ಸಮಾಜ."
"ಮುಂದಕ್ಕೆ ಹೇಳಿ."
" ಈ ಕಾದಂಬರಿಯ ವ್ಯಕ್ತಿಗಳು ಹುಟ್ಟಿ ಬೆಳೆಯುತ್ತಾರೆ. ವಿಧ ವಿಧವಾಗಿ ರೂಪುಗೊಳ್ಳುತ್ತಾರೆ-ನಮ್ಮೆಲ್ಲರನ್ನೂ ನಿಯಂತ್ರಿಸುತ್ತಿ ರುವ ಈ ಲೋಕದ ಸೂತ್ರಕ್ಕೆ ಅನುಸಾರವಾಗಿ. ನಾನು ಬೇಕು ಬೇಕೆಂದೇ ಅವರನ್ನು ಕುಣಿಸುವುದಿಲ್ಲ. ಸಮಾಜದಲ್ಲಿ ಕೇಳಬರುವ ರಾಗತಾಳಕ್ಕೆ ಮೇಳೈಸುವಂತೆ ಆ ಪಾತ್ರಗಳೆ ಕುಣಿಯುತ್ತವೆ."
"ಮುಂದೆ?"
"ಇಲ್ಲಿನ ಪಾತ್ರಗಳು ಬಾರಿಬಾರಿಗೂ ಮುಖ ತೋರಿಸುತ್ತಲೇ ಇರುವುದಿಲ್ಲ.ಜೀವನ ಇರುವುದು ಒಂದು ಪ್ರವಾಹದ ಹಾಗೆ. ಚಂದ್ರ ಶೇಖರ ಆರು ವರ್ಷದ ಹುಡುಗನಾಗಿದ್ದಾಗ ಜೀವನದ ದೊಡ್ಡ ದೋಣಿ ಯಲ್ಲೊಬ್ಬ ಪ್ರವಾಸಿಯಾಗುತ್ತಾನೆ. ಆದರೆ ಒಬ್ಬಂಟಿಗರಾಗಿ ಯಾರೂ ಪ್ರವಾಸ ಮಾಡುವುದಿಲ್ಲ ಅಲ್ಲವೆ? ಸಹ ಪ್ರವಾಸಿಗಳಿರುತ್ತಾರೆ. ಪ್ರವಾಸ ಒಂದೊಂದು ಘಟ್ಟಕ್ಕೆ ಬಂದಾಗಲೂ ಕೆಲವರಿಳಿಯುತ್ತಾರೆ. ಹೊಸಬರು ಬರುತ್ತಾರೆ. ಒಬ್ಬಿಬ್ಬರು, ಅಥವಾ ಮೂವರು ನಾಲ್ವರು, ಪ್ರವಾಸದುದ್ದಕ್ಕೂ ಬರುವುದು ಸ್ವಾಭಾವಿಕ ಚಂದ್ರಶೇಖರ ಹೀಗೆ ಪ್ರಯಾಣ ಬೆಳೆಸುತ್ತಾನೆ.ಮೂವತ್ತೆಂಟನೆಯ ವಯಸ್ಸಿನವರೆಗೂ ಅವನ ಪ್ರಯಾಣ..."
"ಸರಿಯಾಗಿದೆ."
"ಅಷ್ಟೇ ಅಲ್ಲ. ಚಾರಿತ್ರಿಕ ಕಾಲಾವಧಿಯ ಬೆಳವಣಿಗೆಯೂ ಸೂಚಿತವಾದರೆ ಸಾಹಿತ್ಯ ಕೃತಿ ಯಾವಾಗಲೂ ಜೀವಂತವಾಗ್ತದೆ."
"ಅದೂ ನಿಜವೇ."
"ಇಲ್ಲಿ ೧೯೩ಂರ ಸ್ವಾತಂತ್ರ್ಯ ಹೋರಾಟ, ೧೯೪೯ರ ಮಹಾ ಸಮರ, ನಾಲ್ವತ್ತೇಳರ ಸ್ವಾತಂತ್ರ್ಯದ ಹಿನ್ನಲೆಯ ಸಣ್ಣ ಪುಟ್ಟ ಚಿತ್ರ ಗಳನ್ನೂ ಕಾಣಬಹುದು. ನಾನು ಚಿತ್ರಿಸಿರುವ ಚಂದ್ರಶೇಖರ ಮತ್ತಿ ತರ ವ್ಯಕ್ತಿಗಳ ಮೇಲೆ ಆ ಸಂಭವಗಳಿಂದಾದ ಪರಿಣಾಮವನ್ನು ತೋರಿಸಿ ಕೊಡುವುದಕ್ಕಾಗಿಯೇ ಆ ಘಟನೆಗಳು ಬಂದಿವೆ. ನಿಜ ಜೀವನದಲ್ಲಿ ಯಾವ ವ್ಯಕ್ತಿಯೂ ಸಮಾಜದಲ್ಲಾಗುತ್ತಿರುವ ಮಾರ್ಪಾ ಟುಗಳ ಸೂತ್ರದಿಂದ ಬಾಹಿರನಾಗುವುದು ಸಾಧ್ಯವಿಲ್ಲ ಅಲ್ಲವೆ? ಅಂದ ಮೇಲೆ ಜೀವನದೊಡನೆ ನಿಕಟ ಸಂಬಂಧವಿರಿಸಿಕೊಂಡು ಸೃಷ್ಟಿಯಾ ಗುವ ಸಾಹಿತ್ಯವೂ ಅಷ್ಟೆ."
ನಾನು ಮಾತನಾಡುತ್ತಲೇ ಇದ್ದೆ. ಭೈರಿಗೆ ಕೊರೆದ ಹಾಗೆ ಆಗುತ್ತಿದೆಯೆನೋ ಎಂದು ಭಯನಾಯಿತು ನಡುವೆ. ಆ ವ್ಯಕ್ತಿ ಯನ್ನು ದಿಟ್ಟಿಸಿ ನೋಡಿದೆ. ಆದರೆ ಅವರು ಆಸಕ್ತಿಯಿಂದ ಕಿವಿ ಗೊಡುತಿದ್ದರು.
ನಾನು ಸಸುಮ್ಮನಾದಾಗ ಅವರೊಂದು ಪ್ರಶ್ನೆ ಕೇಳಿದರು:
"ಇದನ್ನ ದುರಂತ ಕಥೆಯಾಗಿ ಯಾಕೆ ಮಾಡಿದೀರಿ?'
"ದುರಂತ ಯಾವುದು? ಚಂದ್ರ ಶೇಖರನ ಆತ್ಮಹತ್ಯೆಯೆ? ನೀವು ಓದಿನೋಡಿ ದುರಂತವನ್ನು ಸುಖಾಂತ ಮಾಡುವುದು ಸುಲಭ. ಪಶ್ಚಾತ್ತಾಪದ ಬೆಂಕಿಯಲ್ಲಿ ಸುಟ್ಟು ಪುನೀತನಾದ ಆತ, ಜೀವಿತ ದ್ಯೇಯವೊಂದನ್ನು ಅಪ್ಪಿಕೊಂಡು, ಭವ್ಯ ಬಾಳ್ವೆ ನಡೆಸುವುದು... ಆದರೆ ಅದು ಕೃತಕವಾಗುವುದಲ್ಲವೆ? ನಿಮಗೆ ಗೊತ್ತಾದೀತು... ಚಂದ್ರ ಶೇಖರನಂತಹ ಬಾಳ್ವೆ ನಡೆಸಿದವರು ಕೊನೆಗಾಣುವ ರೀತಿಯೇ ಅಂಥದು ಕಡಿಮೆ. ತನ್ನ ಬಾಳ್ವೆ ಯಾಕೆ ಹಾಗಾಯಿತೆಂದು ಚೆನ್ನಾಗಿ ತಿಳಿದ ಚಂದ್ರಶೇಖರ, ತನ್ನ ಹಾಗೆಯೇ ಇನ್ನೊಂದು ಜೀವ ಈ ಸಮಾಜದಲ್ಲಿ ಬೇಯದಿರಲೆಂದು ಹಾರೈಸುತ್ತಾನೆ. ಆತನನ್ನು ಕೆಲವರು ಹೇಡಿಯೆನ್ನಬಹುದು; ದುರ್ಬಲನೆನ್ನಬಹುದು. ನಾನು ಮಾತ್ರ ಅವನ ಬಗ್ಗೆ ಕನಿಕರ ಪಡಲು ಬಯಸುವೆ. ಎಷ್ಟೋ ಓದುಗರಿಗೂ ಹಾಗೆಯೇ ಅನಿಸುವುದರಲ್ಲಿ ಸಂಶಯವಿಲ್ಲ."
ಅವರ ತುಟಗಳಲ್ಲೆ ಅಡಗಿರಲಾರದೆ ನಗು ಹೊರಸೂಸುತಿತ್ತು.
"ಯಾಕೆ ನಗುತ್ತೀರಿ ?"
"ಕತೆಗಾರರೂ ವಿಮರ್ಶಕರೂ ಅದ ನಿಮ್ಮನ್ನಿನ್ನು ಕಾದಂಬರಿ ಕಾರನೆಂದೂ ಕರೆಯುತ್ತಾರೆ."
"ನಾಟಕವನ್ನೂ ಬರೆಯಬೇಕೆಂದಿಧೇನೆ!"
"ಹಾಗಲ್ಲ; ವಿಮರ್ಶೆ ಮತ್ತು ಸೃಷ್ಟನೆಯ ಸಾಹಿತ್ಯ, ಎರಡನ್ನು ಒಬ್ಬನೇ ಮಾಡುವುದು ಸಾಧ್ಯ ಅಲ್ಲವೆ?"
"ಯಾಕಾಗದು? ಎರಡನ್ನೂ ಚೆನ್ನಾಗಿಯೇ ಮಾಡುವ ದೇಶ ವಿದೇಶಗಳ ಸಾಹಿತಿಗಳ ನಾಮಾವಳಿಯನ್ನು ಜಸಿಸಿ ನಿಮ್ಮನ್ನು ಬೆರಗುಗೊಳಿಸಲೇನು ?"
"ದಮ್ಮಯ್ಯ, ಅಷ್ಟು ಮಾಡಬೇಡಿ."
"ತಮಾಷೆಗೆ ಹೇಳಿದೆ. ವಿಮರ್ಶೆಯ ಪ್ರಕಾರ ಕನ್ನಡದಲ್ಲಿ ಬೆಳೆದೇ ಇಲ್ಲ. ವಿಮರ್ಶೆ ಪರಸ್ಪರ ಪ್ರಶಂಸೆಯಾಗುವುದೂ ಉಂಟು; ಧ್ವೇಷ ಸಾಧನೆಯ ರೇತಿಯಾಗುವುದೂ ಉಂಟು. ಆಧುನಿಕ ಕನ್ನಡ ಸಾಹಿತ್ಯವೀಗ ಸಂಧಿಕಾಲದಲ್ಲಿದೆ. ನಾನಾ ಪ್ರವೃತಿಗಳು ತಲೆ ಎತ್ತುತ್ತಿವೆ. ಜನ ಸಾಮುದಾಯದ ಅಭ್ಯುದಯ ಸಾಧ್ಯವಾಗುವಂತಹ ಹಾದಿಯಲ್ಲಿ ನಮ್ಮ ಸಾಹಿತ್ಯ ಮುನ್ನಡೆಯುವಂತೆ ನಾವೆಲ್ಲ ಮಾಡಬೇಕು. ವಜ್ರ ಕಠೋರತೆಯ ಹಾಗು ಕುಸುಮ ಕೋಮಲತೆಯ ಯೋಗ್ಯ ಸಮ್ಮಿಶ್ರಣವನ್ನು ಸಮರ್ಥನಾದ ಸಹೃದಯಿ ವಿಮರ್ಶಕ ಸಾಧಿಸಬಲ್ಲ ...ನಮ್ಮ ಸಾಹಿತ್ಯ ಅಭಿವೃದ್ಧಿ ಹೊಂದಬೇಕಾದರೆ ಎಲ್ಲ ಓದು ಗರಲ್ಲೂ ವಿಮರ್ಶನ ಬುದ್ಧಿ ಜಾಗೃತವಾಗುವುಧು ಅಗತ್ಯ. ಯಾವನೇ ಬರೆಹಗಾರ ವಿಮರ್ಶಕರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ .... ನನ್ನ ಈ ಕಾದಂಬರಿಯ ದೃಷ್ಟಾಂತವನ್ನೆ ತೆಗೆದುಕೊಳ್ಳಿ. 'ವಿಮೋಚನೆ' ಯೆನ್ನೆತ್ತಿಕೊಂಡು ಕನ್ನಡ ವಿಮರ್ಶಕರೆಲ್ಲ ನಿರ್ಧಾಕ್ಷಿಣ್ಯವಾದ ನಿಷ್ಪಕ್ಷ ಪಾತವಾದ ವಿಮರ್ಶೆ ಮಾಡಬೇಕೆಂಬುದೇ ನನ್ನ ಬಯಕೆ."
"ವಿಮರ್ಶಕರೂ ಆದ ನೀವೇ ಸ್ವತಃ ನಿಮ್ಮ ಕಾದಂಬರಿಯನ್ನು ವಿಮರ್ಶಿಸಲ್ಲಿರಾ?"
"ಅದೊಳ್ಳೆಯ ಪ್ರಶ್ನೆ ಅದು ಯೋಗ್ಯ ಆಹ್ವಾನ. ಆ ಕೆಲಸ ಮಾಡಬಲ್ಲೆ ಸ್ವಾಮಿಾ, ಖಂಡಿತವಾಗಿಯೂ ಮಾಡಬಲ್ಲೆ."
ಸಮಾಧಾನಗೊಂಡ ಅವರು, "ಇನ್ನೊಂದು ವಿಷಯ ಕೇಳಬೇ ಕೂಂತ," ಎಂದರು.
"ಹತ್ತುಕೇಳಿ."
"ಸಾಹಿತ್ಯ ವ್ಯವಸಾಯಿಯಾದ ನೀವು ಈಗಾಗಲೇ ಜೀವನದ ನಾನಾ ಮುಖಗಳನ್ನು ಸಾಕಷ್ಟು ಕಂಡಿದ್ದೀರಿ... ಶ್ರಮಜೀವಿಗಳ ಹೋರಾಟ, ರಾಜಕಾರಣ, ನಾಡಿನ ನಾನಾ ಭಾಗಗಳ ಜನ ಜೀವನ ......ನೀವು ಸ್ನಾನಮಾಡಿರುವ ಇಂಥ ಪುಣ್ಯ ತೀರ್ಥಗಳೆಷ್ಟೊ !"
"ದಿವಂಗತರಿಗೆ ಶ್ರದ್ಧಾಂಜಲಿ ಅನ್ನುವ ರೀತಿ ಹೇಳ್ತಿದೀರಲ್ಲ!"
"ಕ್ಷಮಿಸಿ. ನಿಮ್ಮ ಕಾದಂಬರಿ ಎಂದಾಗ ಓದುಗರಲ್ಲಿ ಒಂದು ನಿರ್ದಿಷ್ಟ ಇರುತ್ತದೆ. ಈ ಕಾದಂಬರಿಯಿಂದ—?" "ಕೆಲವರಿಗೆ ಆಶ್ಚರ್ಯವಾಗಬಹುದಲ್ಲವೆ? ಆದರೆ ಆಗಲೇ ಹೇಳಿದೆನಲ್ಲ, ಇದು ಒಬ್ಬ ವ್ಯಕ್ತಿಯ ಆವಾರಾ ಕತೆಯಲ್ಲ–ಇದು ಬಾಳ್ವೆಯ ಕತೆ. ಪರಿಣಾಮಕಾರಿಯಾಗಿ ಬರಲೆಂಬ ಉದ್ದೇಶದಿಂದ, ಒಂದು ಪ್ರಯೋಗವೆಂತ, ಈ ಪಾತ್ರಗಳನ್ನು ಸೃಷ್ಟಿಸಿದೆ. ಹೌದು, ನಾನು ಬರೆಯಬೇಕೆಂದು ಯೋಚಿಸಿರುವ ಹಲವಾರು ವಸ್ತುಗಳು ಹಾಗೆಯೇ ಉಳಿದಿವೆ. ನಾಡಿನ ದಕ್ಷಿಣಕ್ಕಿರುವ ಕಯಯ್ಯೋರು ರೈತರು, ಉತ್ತರ ಕರ್ನಾಟಕದ ಕಾರವಾರದ ರೈತರು, ಮೈಸೂರಿನ ಕಾಗೋಡು ರೈತರು, ಹೊಸ ಇತಿಹಾಸ ರಚಿಸಿದ್ದಾರೆ. ನಮ್ಮ ಕಾಫಿ ತೋಟಗಳ ಕೆಲಸಗಾರರು, ಚಿನ್ನದ ಗಣಿಯ ಕಾರ್ಮಿಕರು,'ವರ್ಣರಂಜಿತ ಜೀವನ' ನಡೆಸುತಿದ್ದಾರೆ. ಇವುಗಳಿಂದೆಲ್ಲ ಬರೆಹಗಾರ ಪ್ರಭಾವಿತನಾಗದೆ ಇರು ವುದು ಸಾಧ್ಯವಿಲ್ಲ.... ಛಾಯಾಗ್ರಹಣವಾಗಬೇಕೆಂದು, ವರದಿ ಯಾಗಬೇಕೆಂದು, ನಾನು ಹೇಳುವುದಿಲ್ಲ. ಹಾಗಾಗುವುದು ಸರಿಯಲ್ಲ ಆದರೆ ವಾಸ್ತವ ಜೀವನದಲ್ಲಿ ಬೇರು ಬಿಟ್ಟು ನಮ್ಮ ಸಾಹಿತ್ಯ ಕೃತಿಗಳು ಬೆಳೆಯಬೇಕು. ನಾವು ಆಯ್ದುಕೊಳ್ಳುತ್ತಿರುವ ವಸ್ತುವಿನ ಕ್ಷೇತ್ರ, ವೇಶ್ಯಾ ಸಮಸ್ಯೆ - ಪವಾಡ ಕಥೆಗಳನ್ನು ದಾಟಿ , ಹೆಚ್ಚು ನಿಸ್ತಾರ ಗೊಳ್ಳುವುದು ಅಗತ್ಯ......ಅಲ್ಲವೆನ್ನುತ್ತೀರಾ?"
"ತಲೆದೂಗಿದೆ..... ಆದರೆ ಚಂದ್ರಶೇಖರನೇ ಇಂಥ ಶೈಲಿಯಲ್ಲಿ ಬರೆದನೆನ್ನುವುದು ವಾಸ್ತನಿಕವೆ?"
"ಆದರೆ ವಿಷಯ ಏನು ಗೊತ್ತೆ ? ತಾನು ಬರೆದುದಕ್ಕೆ ಸಾಹಿತಿ ಯೊಬ್ಬ ಒಸ್ಸ ಕೊಡಲಿ - ಎಂತ ಚಂದ್ರಶೇಖರನೇ ಹೇಳುತ್ತಾನೆ ಒಂದೆಡೆ! ಹಾಗೆಯೇ, ಇದು ಸಾಹಿತಿಯೊಬ್ಬ ಕೈಯಾಡಿಸಿದ ಕಥನ ಅಂತ ತಿಳಿದುಕೊಂಡರಾಯಿತು."
"ಹಾಗಾದರೆ ಸರಿ."
"ಬೇಸರವಾಯಿತೇನೋ ಉಪನ್ಯಾಸ ಕೇಳಿ. ಸಾಮಾನ್ಯವಾಗಿ, ನಾನು ಮಾತುಗಾರನೇ ಅಲ್ಲ . ಆದರೆ ಯಾರಾದರೂ ಕೇಳಿದರೆ, ಕೆರಳಿಸಿದರೆ, ತಕ್ಕಮಟ್ಟಿಗೆ ಚೆನ್ನಾಗಿಯೇ ಮಾತನಾಡ್ತೇನೆ!"
"ನೀವು ಕಾದಂಬರಿ ಬರೆದಿರುವುದು ಸಂತೋಷದ ವಿಷಯ. ನಿಮ್ಮ ಕೃತಿಗೆ ಓದುಗನಾದ ನನ್ನ, ನನ್ನಂಥವರ, ಸ್ವಾಗತವಿದೆ. ಪ್ರಕಟ ಣೆಗೆ ಏನು ಏರ್ಪಾಟು ಮಾಡಿದೀರಿ?"
"ಕನ್ನಡದಲ್ಲಿ ಕೈ ಹೊತ್ತಗೆಗಳು ಬರುತ್ತಿರುವುದು ಗೊತ್ತೆ?"
"ಗೊತ್ತಿಲ್ಲದೆ ಉಂಟೆ? ಸಾಹಸಿಗಳಾದ ಚಿಂತಾಮಣಿ ಮತ್ತು ಕಾಮೇಶ್‌ರವರು ಆರಂಭಿಸಿರುವ ಉದ್ಯಮ. ಅ.ನ.ಕೃ. 'ಗೈಹಲಕ್ಷ್ಮಿ' ಆಗಲೇ ಬಂದಿದೆ."
"ಹೌದು; ದೇವುಡುರವರ 'ಮಲ್ಲಿ' ಕೂಡಾ ಪ್ರಕಟನಾಗಿದೆ. ಈ 'ವಿಮೋಚನೆ'ಯ ಪ್ರಕಟಣೆಯೂ ಆ ರೂಪದಲ್ಲೇ."
"ಬಹಳ ಸಂತೋಷ. ಒಂದೂವರೆ ರುಪಾಯಿಗೆ ಇಷ್ಟು ಗಾತ್ರದ ನಿಮ್ಮ ಕಾದಂಬರಿ ಓದುಗರಿಗೆ ದೊರೆಯುವಂತಾಗಿರುವುದು ಸಂತೋಷದ ವಿಷಯ."
"ಆ ಏರ್ಪಾಟನ ಶ್ರೇಯಸ್ಸೆಲ್ಲ ವಾಹಿನಿ ಪ್ರಕಾಶನದ ಚಿಂತಾಮಣಿ –– ಕಾಮೇಶರಿಗೆ ಸಲ್ಲಬೇಕು. ಕಲಾವಿದ ರಮೇಶರದು ಸುಂದರ ಹೊದಿಕೆಯ ಚಿತ್ರ. ಅವರಿಗೂ ನೆನಕೆ ಸಲ್ಲಬೇಕು."
ಅವರು ಹಸ್ತಪ್ರತಿಯನ್ನು ಮೇಜಿನ ಮೇಲಿಟ್ಟು ಎದ್ದುನಿಂತರು.
"ನಿಮಗೆ ತೊಂದರೆ ಕೊಟ್ಟಹಾಗಾಯಿತು. ಹೋಗಿ ಬರಲೆ ಹಾಗಾದರೆ?"
"ಯಾಕೆ ಅವಸರ? ಹೋಟೆಲಿನವರೆಗೂ ಬರ್ತೀನಿ. ಸ್ವಲ್ಪ ಕಾಫಿ ಹೀರಿಕೊಂಡು ಹೋಗಿ."
ನಾನು ಬಾಗಿಲೆಳೆದುಕೊಂಡು ಹೊರಬಿದ್ದಾಗ ಆ ವ್ಯಕ್ತಿ ನಗುತ್ತ ಕೇಳಿದರು:
"ನೀವು ಬಾಗಿಲು ತೆರೆದಾಗ ನಾನೇನು ಭಾವಿಸಿದೆ ಗೊತ್ತೆ?"
"ಮನೋ ವಿಶ್ಲೇಷಣೆ ಮಾಡುತ್ತೇನಾದರೂ ಒಬ್ಬರ ಭಾವನೆ ಗಳನ್ನೆಲ್ಲ ಊಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ಅಂತೂ ನನ್ನ ವಿಷಯ, ನನ್ನ ಮನೆಯ ವಿಷಯ, ಯೋಚಿಸಿರಬೇಕು. ಹೌದೆ?"
"ಹೌದು, ನಿಮ್ಮನ್ನು ನೋಡಿದಾಗ, ನಿರಂಜನರ ತಮ್ಮನೋ ಹುಡುಗನೋ ಇರಬಹುದೂಂತ ತೋರಿತು."
"ನಿರಂಜನರ ಹುಡುಗ? ಓ ದೇವರೇ! ನಾನು ಮೂವತ್ತರ ಗಡಿ ಸಮಾಪಿಸಿದ್ದೇನೆ--ಅಷ್ಟೆ. ಅಷ್ಟರಲ್ಲೇ ನನ್ನನ್ನು ಕಳಿಸುವ ಯೋಚನೆ ಮಾಡ್ತಿದ್ದೀರಲ್ಲ! ಇನ್ನೂ ಕೆಲವು ವರ್ಷ ಬದುಕಬೇಕೂಂತಿದೆ ಇವರೆ. ಇನ್ನೂ ಬರೆಯುವ ಕೆಲಸ ಮುಗಿದಿಲ್ಲ."
"ತ್ಸ್ ತ್ಸ್ –– ಹಾಗನ್ಬಾರದು," ಎಂದರು ಅವರು.
ಕಾಫಿ ಕುಡಿದಾದ ಮೇಲೆ ನಾನು ಕೇಳಿದೆ:
"ನನಗೊಂದು ಉಪಕಾರ ಮಾಡ್ತೀರಾ?"
"ಏನು ಹೇಳಿ?"
"ಈ ಕಾದಂಬರಿ ಓದಿದವರೆಲ್ಲ, ತಮ್ಮ ಸ್ಪಷ್ಟ ಆಭಿಪ್ರಾಯ ಬರೆದು ನನಗೆ ತಿಳಿಸಬೇಕೂಂತ ನನ್ನ ಆಸೆ. ನೀವು ––"
"ಓದಿದೊಡನೆ ಅವಶ್ಯವಾಗಿ ಬರೀತೀನಿ. ಆದರೆ ವಿಳಾಸ?"
"ವಿಳಾಸಕ್ಕೇನು? ನಿರಂಜನ, ಬಸವನಗುಡಿ, ಬೆಂಗಳೂರು-೪ ಆಂತ ಬರಯಿರಿ. ಬಂದು ತಲಪ್ತದೆ."
"ಅಂತೂ ನಿಮ್ಮ ಮತ್ತು ನಿಮ್ಮ ಕೃತಿಯ ವಿಷಯ ಮಾತನಾಡಿ ಸಿದ ಹಾಗಾಯಿತು."
"ಅದರಿಂದ ನನ್ನ ಆರೋಗ್ಯಕ್ಕೂ ಹಿತವೇ."
ಬಸ್ ನಿಲ್ಡಾಣ ಸಮಿಪಿಸಿತ್ತು. ಬಂದು ನಿಂತ ಬಿ.ಟಿ.ಸಿ. ಬಸ್ಸನ್ನು ಆತ ಏರಿದರು.
"ಇವರೆ, ನಿಮ್ಮ ಹೆಸರು ಹೇಳಲೇ ಇಲ್ಲ."
"ಓದುಗ."
ಸ್ವರ ಕೇಳಿಸಿತು ಅಷ್ಟೇ. ಆದರೆ ಆಕೃತಿ ಕಾಣಿಸಲಿಲ್ಲ. ಜನ ರೆಡೆಯಲ್ಲಿ ಅದು ಲೀನವಾಗಿತ್ತು.
ಬೆಂಗಳೂರು
೬ ಅಕ್ಟೋಬರ್ ೧೯೫೩
- -ನಿರಂಜನ