ವಿಷಯಕ್ಕೆ ಹೋಗು

ಶಲ್ಯಪರ್ವ: ೦೨. ಎರಡನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಶಲ್ಯ ಪರ್ವ-ಎರಡನೆಯ ಸಂಧಿ

[ಸಂಪಾದಿಸಿ]

ಸೂ. ಗಂಡುಗಲಿ ಕದನ ಪ್ರಚಂಡನ
ಖಂಡ ಭುಜಬಲ ಧರ‍್ಮಸುತ ಮುಂ
ಕೊಂಡು ರಣದಲಿ ಕಾದಿ ಗೆಲಿದನು ಮಾದ್ರ ಭೂಪತಿಯ

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ ೧

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ ೨

ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿರಶಿರವ
ಆಳು ನೆರೆದಿರೆ ನಾಲ್ಕುದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ ೩

ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ ೪

ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆಡವುಡೆಗಳ
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳೆಂದ ೫
ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ ೬

ಹತ್ತು ಸಾವಿರದೇಳುನೂರರು
ವತ್ತು ಗಜ ಹೊನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ ೭

ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು ೮

ಶಕುನಿ ಮೋಹರಿಸಿದನು ಸಮಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ ೯

ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದುವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ ೧೦
ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ ೧೧

ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯೂತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ ೧೨

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನಿಂದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ ೧೩

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು ೧೪

ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು ೧೫

ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ ೧೬

ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ ೧೭

ನಿಲಿಸಿದರು ನಿನ್ನವರು ಬಲದ
ಗ್ಗಳೆಯರನು ಬಿರುದಾವಳಿಯ ಮೂ
ದಲಿಸಿದರು ವಿಮಲಾನ್ವಯಾಗತ ವಿಕ್ರಮೋನ್ನತರ
ಬಲನೆಡನ ಮಡಿವೆರಳ ಮುಡಿಮುಂ
ದಲೆಯ ಲಘುವಾಗದಿರಿ ಶಸ್ತ್ರಾ
ವಳಿಯ ಬಾಯ್ದುತ್ತುಗಳ ಸೆಳೆಯದಿರೆಂದರುಬ್ಬಿನಲಿ ೧೮

ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ ೧೯

ನೂಕಿದರು ನಿನ್ನವರು ಹಿನ್ನೆಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್‌ಬಯ್ದು ಚಪಲಾ
ನೀಕ ಬಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ ೨೦

ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣೆಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರ ಭೂಪತಿಯ ೨೧

ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜು
ಜ್ಜಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯಹಳಚಿದನರ್ಜುನಾನುಜರ ೨೨

ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠಿರರಾಯನೌಕಿದ (೨೩
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು

ಏರಿತೊಬ್ಬನ ಮೇಲೆ ರಿಪುರಥ
ವಾರು ಸಾವಿರ ಮತ್ತಗಜಘಟೆ
ಮೂರು ಸಾವಿರ ಹತ್ತು ಸಾವಿರ ತುರುಗದಳ ಸಹಿತ
ತೂರುವಂಬಿನ ತುಂಡಿಸುವ ಬಿ
ಟ್ಟೇರುಗಳ ಚೂರಿಸುವ ಸಬಳದ
ಗೀರುಗಳ ಕಾಲಾಳು ಕವಿದುದು ಶಲ್ಯನಳವಿಯಲಿ ೨೪

ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ ೨೫

ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತುಸಾವಿರ ಹೊದರುದೆಗೆದವು ಶಲ್ಯನೆಡಬಲಕೆ ೨೬

ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ ೨೭

ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ
ಅಪ್ಪಿದುದು ಕೆಂಧೂಳಿನೊಡ್ಡಿನ
ದರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳೆಂದ ೨೮

ತೆಗೆದರರ್ಜುನನನು ಸುಶರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ತೂರಂಬಿನಲಿ ತೆರಳದೆ ಕೃಪಾಚಾರ‍್ಯ ೨೯

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು ೩೦

ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ ೩೧

ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ ೩೨

ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ ೩೩

ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ ೩೪

ಪೂತುರೇ ಪಾಂಚಾಲ ಬಲ ಬಂ
ದಾತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ ೩೫

ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ ೩೬

ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ ೩೭

ಅರಸ ಕೇಳೈ ಬಳಿಕ ಶಲ್ಯನ
ಶರಹತಿಗೆ ಬಿಚ್ಚಿದವು ಹೂಡಿದ
ಹರಿಗೆಯಿಬ್ಬಗಿಯಾದವಾ ಬದ್ಧರದ ಬಂಡಿಗಳು
ಸರಳುಗಳ ಬಳಿಸರಳು ಬೆಂಬಳಿ
ಸರಳ ಹಿಂದಣ ಸರಳುಗಳ ಪಡಿ
ಸರಳ ಸಾರದ ಸೋನೆ ಸದೆದುದು ವೈರಿವಾಹಿನಿಯ ೩೮

ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟುದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ ೩೯

ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ ೪೦

ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು
ಪ್ರಳಯದಿನದಲಿ ಪಂಟಿಸುವ ಸಿಡಿ
ಲಿಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ ೪೧

ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ ೪೨

ತರಹರಿಸಿದುದು ಪಾರುದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಳಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಳನಾ ಶಲ್ಯನಿದಿರಿನಲಿ ೪೩

ಚುರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳ ಜು
ಜ್ಜಾರರೇರಿತು ಸರಳ ಧಾರಾ
ಸಾರದಲಿ ದಕ್ಕಡರು ಬಿಲ್ಲವರಾಂತರರಿ ಭಟನ ೪೪

ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ ೪೫

ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ ೪೬

ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ ೪೭

ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಂಬರಧ್ವನಿಯ
ನಿರುಪಮಾಸ್ತ್ರಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ ೪೮

ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೊಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ ೪೯

ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ ೫೦

ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ‍್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ ೫೧

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯ್ದು ಕೊಳ್ಳೆನುತೆಚ್ಚನಾ ಪಾರ್ಥ ೫೨

ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ ೫೩

ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ‍್ಮಜನ
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ ೫೪

ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ
ನೀವು ಕೌರವ ಸರ‍್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ ೫೫

ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೊ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ ೫೬

ಕಡಿದು ಬಿಸುಟನು ಶಲ್ಯವಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ ೫೭

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ ೫೮

ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ‍್ಮಪುತ್ರನ ರಣದ ಚೂಣಿಯಲಿ ೫೯

ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿಸ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ
ಬೊಬ್ಬಿಡಲು ಕುರುರಾಯ ನೀ ಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ ೬೦

ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ
ಉಳಿದರಿಬ್ಬರು ದೊರೆಗಳೆನೆ ಮು
ಮ್ಮುಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ‍್ಮಸುತನೆನುತ ೬೧

ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ
ತೆತ್ತಿಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದುವು ಮಾದ್ರೇಶನಂಬುಗಳು ೬೨
ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ‍್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ ೬೩[][]

ಸಂಧಿಗಳು

[ಸಂಪಾದಿಸಿ]
<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.