ವಿಷಯಕ್ಕೆ ಹೋಗು

ಹರಿಭಕ್ತಿಸಾರ

ವಿಕಿಸೋರ್ಸ್ದಿಂದ
<ಕನಕದಾಸರ ಸಾಹಿತ್ಯ
<ತಾತ್ವಿಕ ಸಾಹಿತ್ಯ

ಕನಕದಾಸ ವಿರಚಿತ ಹರಿಭಕ್ತಿಸಾರ

[ಸಂಪಾದಿಸಿ]

ಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತಚಲರಣ ಕಮಲದ
ಳಾಯತಾಂಬಕರೂಪ ಚಿನ್ಮಯ ದೇವಕೀತನಯ।
ರಾಯ ರಘುಕುಲವರ್ಯ ಭೂಸುರ
ಪ್ರೀಯ ಸುರಪುರನಿಲಯ ಚೆನ್ನಿಗ
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ॥೧॥

ದೇವದೇವ ಜಗದ್ಭರಿತ ವಸು
ದೇವಸುತ ಜಗದೇಕನಾಥ ರ
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ।
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ॥೨॥

ಅನುಪಮಿತಚಾರಿತ್ರ ಕರುಣಾ
ವನಧಿ ಭಕ್ತಕುಟುಂಬಿ ಯೋಗೀ
ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ।
ವನಜನಾಭ ಮುಕುಂದ ಮುರಮ
ರ್ದನ ಜನಾರ್ದನ ತ್ರೈಜಗತ್ಪಾ
ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ॥೩॥

ಕಮಲಸಂಭವನಿನುತ ವಾಸವ
ನಮಿತ ಮಂಗಳ ಚರಿತ ದುರಿತ
ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ।
ಅಮಿತವಿಕ್ರಮ ಭೀಮ ಸೀತಾ
ರಮಣ ವಾಸುಕಿಶಯನ ಖಗವತಿ
ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ॥೪॥

ಕ್ಷೀರವಾರಿಧಿಶಯನ ಶಾಂತಾ
ಕಾರಾ ವಿವಿಧವಿಚಾರ ಗೋಪೀ
ಜಾರ ನವನೀತಚೋರ ಚಕ್ರಾಧಾರ ಭವದೂರ।
ಮಾರಪಿತ ಗುಣಹಾರ ಸರಸಾ
ಕಾರ ರಿಪುಸಂಹಾರ ತುಂಬುರ
ನಾರದಪ್ರಿಯ ವರದ ರಕ್ಷಿಸು ನಮ್ಮನನವರತ ॥೫॥

ತಾಮರಸದಳನಯನ ಭಾರ್ಗವ
ರಾಮ ಹಲಧರರಾಮ ದಶರಥ
ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ।
ಸಾಮಗಾನಪ್ರೇಮ ಕಾಂಚನ
ಧಾಮಧರ ಸುತ್ರಾಮವಿರಚಿತ
ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ ॥೬॥

ವೇದಗೋಚರ ವೇಣುನಾದವಿ
ನೋದ ಮಂದರಶೈಲಧರ ಮಧು
ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ।
ಯಾದವೇಂದ್ರ ಯಶೋದನಂದನ
ನಾದಬಿಂದುಕಳಾತಿಶಯ ಪ್ರ
ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥೭॥

ಅಕ್ಷಯಾಶ್ರಿತ ಸುಜನಜನ ಸಂ
ರಕ್ಷಣ ಶ್ರೀವತ್ಸ ಕೌಸ್ತುಭ
ಮೊಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ।
ಪಕ್ಷಿವಾಹನ ದೇವಸಂಕುಲ
ಪಕ್ಷಜಗದಧ್ಯಕ್ಷವರನಿಟಿ
ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ ॥೮॥

ಚಿತ್ರಕೂಟನಿವಾಸ ವಿಶ್ವಾ
ಮಿತ್ರ ಕ್ರತುಸಂರಕ್ಷಕ ರವಿ ಶಶಿ
ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ।
ಧಾತ್ರಿಜಾಂತಕ ಕಪಟನಾಟಕ
ಸೂತ್ರ ಪರಮಪವಿತ್ರ ಫಲ್ಗುಣ
ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ॥೯॥

ಮಂಗಳಾತ್ಮಕ ದುರಿತತಿಮಿರ ಪ
ತಂಗ ಗರುಡತುರಂಗ ರಿಪುಮದ
ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ।
ಅಂಗದಪ್ರಿಯನಂಗಪಿತ ಕಾ
ಳಿಂಗಮರ್ದನ ಅಮಿತ ಕರುಣಾ
ಪಾಂಗ ಶೀನರಸಿಂಗ ರಕ್ಷಿಸು ನಮ್ಮನನವರತ ॥೧೦॥

ದಾಶರಥಿ ವೈಕುಂಠನಗರಿ ನಿ
ವಾಸ ತ್ರೈಜಗದೀಶ ಪಾಪ ವಿ
ನಾಶ ಪರಮವಿಲಾಸ ಹರಿಸರ್ವೇಶ ದೇವೇಶ।
ವಾಸುದೇವ ದಿನೇಶ ಶತಸಂ
ಕಾಶ ಯದುಕುಲವಂಶತಿಲಕ ಪ
ರಾಶರಾನತ ದೇವ ರಕ್ಷಿಸು ನಮ್ಮನನವರತ ॥೧೧॥

ಕುಂದಕುಟ್ಮಲರದನ ಪರಮಾ
ನಂದ ಹರಿ ಗೋವಿಂದ ಸನಕ ಸ
ನಂದ ವಂದಿತ ಸಿಂಧುಬಂಧನ ಮಂದರಾದ್ರಿಧರ।
ಇಂದಿರಾಪತ ವಿಜಯಸಖ ಅರ
ವಿಂದನಾಭ ಪುರಂದರಾರ್ಚಿತ
ನಂದಕುಲ ಮುಕುಂದ ರಕ್ಷಿಸು ನಮ್ಮನನವರತ ॥೧೨॥

ಬಾಣಬಾಹುಚ್ಛೇದ ರಾವಣ
ಪ್ರಾಣನಾಶನ ಪುಣ್ಯನಾಮ ಪು
ರಾಣಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ।
ಕ್ಷೋಣಿಪತ ಸುಲಲಿತ ಸುದರ್ಶನ
ಪಾಣಿ ಪಾಂಡವರಾಜಕಾರ್ಯ ಧು
ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ ॥೧೩॥

ನೀಲವರ್ಣ ವಿಶಾಲ ಶುಭಗುಣ
ಶೀಲ ಮುನಿಕುಲಪಾಲ ಲಕ್ಷ್ಮೀ
ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ।
ಮೂಲಕಾರಣ ವಮಲ ಯಾದವ
ಜಾಲಹಿತ ಗೋಪಾಲ ಅಗಣಿತ
ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥೧೪॥

ನಾಗನಗರಿ ಧರಿತ್ರಿ ಕೋಶ ವಿ
ಭಾಗ ತಂತ್ರ ನಿಯೋಗಗಮನ
ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸೀಮ।
ಯೋಗಗಮ್ಯ ಭವಾಬ್ಧಿ ವಿಷಧರ
ನಾಗ ಗಾರುಡಮಂತ್ರವಿದ ಭವ
ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ ॥೧೫॥

ಶ್ರೀಮದುತ್ಸಹ ದೇವನುತ ಶ್ರೀ
ರಾಮ ನಿನ್ನಯ ಚರಣಸೇವಕ
ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳ್ಪೆ ಬಿನ್ನಪವ।
ಈ ಮಹಿಯೊಳೀವರಿಗೆ ನಾವು ಸು
ಕ್ಷೇಮಿಗಳು ನಿನ್ನಯ ಪದಾಬ್ಜ
ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ ॥೧೬॥

ಈಗಲೀ ಮರ್ಯಾದೆಯಲಿ ಶರ
ಣಾಗತರ ಸೇವೆಯೊಳು ಹೊಂಪುಳಿ
ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ।
ಭೋಗಭಾಗ್ಯವ ಬಯಸಿ ಮುಕ್ತಿಯ
ನೀಗಿ ನಿಮ್ಮನು ಭಜಿಸಲರಿಯದ
ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ ॥೧೭॥

ಭಕ್ತಿಸಾರದ ಚರಿತೆಯನು ಹರಿ
ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಪುದು।
ಮುಕ್ತಿಗಿದು ನೆಲೆದೋರುವುದು ಹರಿ
ಭಕ್ತರಿದ ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ ॥೧೮॥

ನಳಿನಲೋಚನ ನಿಮ್ಮ ಮೂರ್ತಿಯ
ಕಳೆಬೆಳಗುತಿದೆ ಲಹರಿಯಲಿ ಭೂ
ತಳದೊಳಚ್ಚರಿಯಾದ ನಾಮಾಮೃತ ಸಮುದ್ರದಲಿ।
ಬಳಸುವರು ಸತ್ಕವಿಗಳಿವರ
ಗ್ಗಳಿಕೆ ಎನಗಿನಿತಿಲ್ಲ ಸನ್ಮತಿ
ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ ॥೧೯॥

ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ ಕಲಿಸಿ ಮೃದುನುಡಿ
ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ।
ತಿಳುಹು ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ॥೨೦॥

ಪೊಗಲಳೆವೇ ನಿನ್ನ ನಾಮದ
ಸುಗುಣ ಸಚ್ಚಾರಿತ್ರ ಕಥನವ
ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು।
ನಿಗಮತತಿ ಕೈವಾರಿಸುತ ಪದ
ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ ॥೨೧॥

ವೇದಶಾಸ್ತ್ರ ಪುರಾಣ ಪುಣ್ಯದ
ಹಾದಿಯನು ನಾನರಿಯೆ ತರ್ಕದ
ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ।
ಆದಿಮೂರುತಿ ನೀನು ನೆರೆ ಕರು
ಣೋದಯನು ಹೃದಯಾಂಗಣದಿ ಜ್ಞಾ
ನೋದಯವನೆನಗಿತ್ತು ರಕ್ಷಿಸು ನಮ್ಮನನವರತ॥೨೨॥

ಹಸಿವರಿತು ತಾಯ್ ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು।
ಬಸಿರೊಳಗೆ ಬ್ರಹ್ಮಾಂಡಕೋಟಿಯ
ಪಸರಿಸಿದ ಪರಮಾತ್ಮ ನೀನೆಂ
ದುಸಿರುತಿದೆ ವೇದಗಳು ರಕ್ಷಿಸು ನಮ್ಮನನವರತ॥೨೩॥

ಇಬ್ಬರಣುಗರು ನಿನಗೆಯವರೊಳ
ಗೊಬ್ಬ ಮಗನೀರೇಳು ಲೋಕದ
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು।
ಒಬ್ಬ ಮಗನದ ಬರೆವ ಕರಣಿಕ
ರಿಬ್ಬರೆ ಲೋಕಪ್ರಸಿದ್ಧರು
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ॥೨೪॥

ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು।
ನಿರುತ ಮಾಯೆಯು ದಾಸಿ ನಿಜ ಮಂ
ದಿರವಜಾಂಡವು ಜಂಗಮಸ್ಥಾ
ವರಕುಟುಂಬಿಗ ನೀನು ರಕ್ಷಿಸು ನಮ್ಮನನವರತ॥೨೫॥

ಸಾಗರನ ಮಗಳರಿಯದಂತೆ ಸ
ರಾಗದಲಿ ಸಂಚರಿಸುತಿಹವು
ದ್ಯೋಗವೇನು ನಮಿತ್ತ ಕಾರಣವಿಲ್ಲ ಲೋಕದಲಿ।
ಭಾಗವತರಾದವರ ಸಲಹುವ
ನಾಗಿ ಸಂಚರಿಸುವುದು ಈ ಭವ
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ ॥೨೬॥

ಹಸ್ತಿವಾಹನನಾದಿಯಾದ ಸ
ಮಸ್ತ ದೇವನಿಕಾಯದೊಳಗೆ ಪ್ರ
ಶಾಸ್ತನಾವನು ನಿನ್ನ ವೋಲ್ ಶರಣಾಗತರ ಪೊರದೆ।
ಹಸ್ತ ಕಲಿತ ಸುದರ್ಶನದೊಳರಿ
ಮಸ್ತಕವನಿಳುಹುವ ಪರಾಪರ
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ ॥೨೭॥

ಹಗೆಯರಿಗೆ ವರನೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ।
ಸುಗುಣರಿನ್ನಾರುಂಟು ಕದನವ
ಬಗೆದು ನಿನ್ನೊಳು ಜಯಿಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ ॥೨೮॥

ಸುಮನರಸ ವೈರದಲಿ ಕೆಲಬರು
ಕುಮತಿಗಳು ತಪದಿಂದ ಭರ್ಗನ
ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು।
ಸಮರಮುಖದೊಳಗುಪಮೆಯಲಿ ವಿ
ಕ್ರಮದಿ ವೈರವ ಮಾಡಿದವರಿಗೆ
ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ ॥೨೯॥

ಬಲಿಯ ಬಂಧಿಸಿ ಮೊರೆಯಿಡುವ ಸತಿ
ಗೊಲಿದು ಅಕ್ಷಯವಿತ್ತು ಕರುಣದಿ
ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ।
ಶಿಲೆಯ ಸತಿಯಳ ಮಾಡಿ ತ್ರಿಪುರದ
ಲಲನೆಯರ ವ್ರತಗೆಡಿಸಿ ಕೂಡಿದ
ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ॥೩೦॥

ಕರಿಯ ಕಾಯ್ದಾ ಜಲದಿ ಮಕರವ
ತರಿದು ಹಿರಣ್ಯಾಕ್ಷಕನ ಸೀಳ್ದಾ
ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ।
ದುರುಳ ಕಂಸನ ಕೊಂದು ಮಗಧನ
ಮುರಿದು ವತ್ಸನ ಹಮ್ಮಳಿಸಿ ಖರ
ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ॥೩೧॥

ಶಿಶುತನದ ಸಾಮರ್ಥ್ಯದಲಿ ಕೆಲ
ರಸುರರನು ಸಂಹರಿಸಿ ಚಕ್ರವ
ಬಿಸುಟು ಯೌವನಕಾಲದಲಿಯಾ ಪಾಂಡುಸುತರಿಂದ।
ವಸುಮತಿಯ ಭಾರವನಿಳುಹಿ ಸಾ
ಹಸದಿ ಮೆರೆದವನಾಗಿ ನೀ ಮೆ
ಚ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ॥೩೨॥

ಎಲ್ಲರಲಿ ನೀನಾಗಿ ಸುಮನಸ
ರಲ್ಲಿಯತಿಹಿತನಾಗಿ ಯಾದವ
ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ।
ಕೊಲ್ಲಿಸಿದೆ ಭೀಮಾರ್ಜುನರ ಕೈ
ಯಲ್ಲಿ ಕೌರವಕುಲವನೆಲ್ಲವ
ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ॥೩೩॥

ನರಗೆ ಸಾರಥಿಯಾಗಿ ರಣದೊಳು
ತುರಗ ನೀರಡಿಸಿದರೆ ವಾರಿಯ
ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ।
ಶಿರವನು ಕೆಡುಹಿಸಿ ಅವನ ತಂದೆಯ
ಕರತಲಕೆ ನೀಡಿಸಿದೆ ಹರಹರ
ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ॥೩೪॥

ಬವರದಲಿ ಖತಿಗೊಂಡು ಗದೆಯೊಳು
ಕವಿದು ನಿನ್ನಶ್ರುತಾಯುಧನು ಹೊ
ಕ್ಕವಘಡಿಸಿ ಹೊಯ್ದಾಡಿ ತನ್ನಯುಧದಿ ತಾ ಮಡಿದ।
ವಿವರವೇನೋ ತಿಳಿಯೆ ಈ ಮಾ
ಯವನು ನೀನೇ ಬಲ್ಲೆ ನಿನ್ನಾ
ಯುವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ॥೩೫॥

ಇಳೆಗೆ ಪತಿಯಾದವನು ಯಾದವ
ರೊಳಗೆ ಬಾಂಧವ ನಿನಗೆ ಸೋದರ
ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ।
ಅಳಲಿನಬುಧಿಯಳದ್ದಿತಂಗಿಯ
ಬಳಲಿಸಿದೆ ಕುಲಗೋತ್ರ ಬಾಂಧವ
ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ॥೩೬॥

ತಾಯನಗಲಿದ ತನಯನೀ ರಾ
ಧೆಯನೊಳು ರಹಸ್ಯದಲಿ ಕುಲ
ತಾಯವನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ।
ಮಾಯಾಮಂತ್ರದ ಕುಟಿಲಗುಣದ
ನ್ಯಾಯವೋ ಇದನ್ಯಾಯವೋ ನೀ
ನ್ಯಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ॥೩೭॥

ಕೊಲ್ಲುಬಗೆದವನಾಗಿ ನೀ ಹಗೆ
ಯಲ್ಲಿಸಖ್ಯವ ಬೆಳೆಸದು ಹಿತ
ವಲ್ಲ ನಿನ್ನಯ ಗುಣವ ಬಲ್ಲವರಿಗೆ ಯದುಕುಲದಿ।
ಗೊಲ್ಲನಾರಿಯರೊಳು ಪ್ರವರ್ತಕ
ನಲ್ಲವೇ ಭಾವಿಸಲು ಲೋಕದೊ
ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ॥೩೮॥

ಮಗನ ಕೊಂದವನಾಳುವಂತಾ
ಸುಗುಣೆಯರು ಹದಿನಾರು ಸಾವಿರ
ಸೊಗಸುಗಾತಿಯವರ ಮೋಹದ ಬಲೆಗೆ ವಿಟನಾಗಿ।
ಬಗೆಬಗೆಯ ರತಿಕಲೆಗಳಲಿ ಕೂ
ರುಗರ ನಾಟಿಸಿ ಮೆರೆದು ನೀನಿ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ॥೩೯॥

ಏನುಮಾಡಿದಡೇನು ಕರ್ಮವ
ನೀನೊಲಿಯದಿನ್ನಿಲ್ಲವಿದಕನು
ಮಾನವುಂಟೆ ಭ್ರಮರಕೀಟನ್ಯಾಯದಂದದಲಿ।
ನೀನೊಲಿಯೆ ತೃಣ ಪರ್ವತವು ಪುಸಿ
ಯೇನು ನೀ ಪತಿಕರಿಸೆ ಬಳಿಕಿ
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ॥೪೦॥

ಎಷ್ಟುಮಾಡಲು ಮುನ್ನ ತಾ ಪಡೆ
ದಷ್ಟುಯೆಂಬುದ ಲೋಕದೊಳು ಮತಿ
ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ।
ಪಟ್ಟವಾರಿಂದಾಯ್ತು ಧ್ರುವನಿಗೆ
ಕೊಟ್ಟ ವರ ತಪ್ಪಿತೆ ಕುಚೇಲನಿ
ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ॥೪೧॥

ತನ್ನ ದೇಹಾತುರದೊಳಡವಿಯೊ
ಳನ್ಯರನು ಸಂಹರಿಸುತಿರುತಿರೆ
ನಿನ್ನ ನಾಮದೊಳಧಿಕವೆರದಕ್ಷರವ ಬಣ್ಣಿಸುತ।
ಧನ್ಯನಾದನೆ ಮುನಿಕುಲದಿ ಸಂ
ಪನ್ನನಾದನು ನೀನೊಲಿದ ಬಳಿ
ಕಿನ್ನು ಪಾತಕವುಂಟೇ ರಕ್ಷಿಸು ನಮ್ಮನನವರತ॥೪೨॥

ನಿನ್ನ ಸತಿಗಳುಕಿದ ದುರಾತ್ಮನ
ಬೆನ್ನಿನಲಿ ಬಂದವನ ಕರುಣದಿ
ಮನ್ನಿಸಿದ ಕಾರಣ ದಯಾಪರಾಮೂರ್ತಿ ಎಂದೆನುತ।
ನಿನ್ನ ಭಜಿಸಿದ ಸಾರ್ವಭೌಮರಿ
ಗಿನ್ನು ಇಹಪರವುಂಟು ಸದ್ಗುಣ
ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ॥೪೩॥

ವೀರರಾವಣನೊಡನೆ ಹೋರಿದ
ವೀರರಗ್ಗದ ಕಪಿಗಳವರೊಳು
ಮಾರುತ ನವನಿಗೇನು ಧನ್ಯನೋ ಬ್ರಹ್ಮಪಟ್ಟದಲಿ।
ಸೇರಿಸಿದೆ ನಿನ್ನಂತೆ ಕೊಡುವ ಉ
ದಾರಿಯಾವನು ತ್ರಿಜಗದೊಳಗಾ
ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ॥೪೪॥

ಶಿವಶಿವಾ ನೀ ಮಾಡಿದುಪಕಾ
ರವನು ಮರೆವರುಂಟೆ ಪಾಪದಿ
ನವೆದಳಾಮಿಳಗೊಲಿದ ಪ್ರಾಣವಿಯೋಗ ಕಾಲದಲಿ।
ಆವನವರ ಕೈಗೊಪ್ಪಿಸದೆ
ಕಾಯ್ದವನು ಮಿಕ್ಕಾ
ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ॥೪೫॥

ಹೆತ್ತಮಗಳು ಮದುವೆಯಾದವ
ನುತ್ತಮನು ಗುರುಪತ್ನಿಗಳುಪಿದ
ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು।
ಹೊತ್ತು ತಪ್ಪಿಸಿ ಕಾಮದಲಿ ಮುನಿ
ಪೋತ್ತಮನ ಮಡದಿಯನ್ನು ನಿರಿದವ
ಗಿತ್ತೆಕೈವಲ್ಯವನ್ನು ರಕ್ಷಿಸು ನಮ್ಮನನವರತ॥೪೬॥

ಇಲ್ಲಿಹನು ಅಲ್ಲಿಲ್ಲವೆಂಬೇ
ಸೊಲ್ಲು ಸಲ್ಲದು ಹೊರಗೊಳಗೆ ನೀ
ಇಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು।
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸಿದ ಕುಜನರಿ
ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ॥೪೭॥

ಸಿರಿ ಸಂಪತ್ತಿನಲಿ ನೀ ಮೈ
ಮರೆದು ಮದಗರ್ವದಲಿ ದೀನರ
ಕರುಣದಿಂದೀಕ್ಷಿಸದೆ ಕಡೆಗಣ್ಣಿಂದ ನೋಡುವರೇ।
ಹರಹರ ಅನಾಥರನು ಪಾಲಿಸಿ
ಕೊಡುವ ಉದಾರಯೆಂಬೀ
ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ॥೪೮॥

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು।
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೆ ದೇವ ರಕ್ಷಿಸು ನಮ್ಮನನವರತ॥೪೯॥

ತರಳತನದಲಿ ಕೆಲವು ದಿನ ದುರು
ಭರದ ಗರ್ವದಿ ಕೆಲವು ದಿನ ಮೈ
ಮರೆದು ನಿಮ್ಮೆಡಿಗೆರಗೆದಾದೆನು ವಿಷಯಕೇಳಿಯಲಿ।
ನರಕಭಾಜನನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ॥೫೦॥

ಮರೆದನಭ್ಯುದಯಲಿ ನಿಮ್ಮನು
ಮರೆಯೆನಾಪತ್ತಿನಲಿ ಹರಿಯೆಂ
ದೊರಲುವೆನು ಮನವೇಕಭಾವದೊಳಿಲ್ಲ ನಿಮ್ಮಡಿಯ।
ಮರೆದು ಬಾಹಿರನಾದವ ನೀ
ಮರೆವರೇ ಹಸು ತನ್ನ ಕಂದನ
ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ॥೫೧॥

ಧಾರಿಣಿಗೆ ವರ ಚಕ್ರವರ್ತಿಗ
ಳಾರು ಮಂದಿ ನೃಪಾಲಕರು ಹದಿ
ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೋ।
ವೀರರನು ಮೆಚ್ಚಿದಳೆ ಧರಣೀ
ನಾರಿ ಬಹು ಮೋಹದೊಳು ನಿನ್ನನು
ಸೇರಿಯೋಲೈಸುವಳು ರಕ್ಷಿಸು ನಮ್ಮನನವರತ॥೫೨॥

ಭಾರಕರ್ತನು ನೀನು ಬಹು ಸಂ
ಸಾರಿಯೆಂಬುದು ನಿಗಮತತಿ ಕೈ
ವಾರಿಸುತಿದೆ ದಿವಿಜ ಮನುಜ ಭುಜಂಗರೊಳಗಿನ್ನು।
ಆರಿಗುಂಟು ಸ್ವತಂತ್ರ ನಿನ್ನಂ
ತಾರು ಮುಕ್ತಿಯನೀವ ಸದ್ಗುರು
ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ॥೫೩॥

ಗತಿವಿಹೀನರಿಗಾರು ನೀನೇ ನನ್ನ ವಿರುದ್ಧ
ಗತಿ ಕಣಾ ಪತಿಕರಿಸಿಕೊಡು ಸ
ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ।
ಶ್ರುತಿವಚನವಾಡುವುದು ಶರಣಾ
ಗತನ ಸೇವಕನೆಂದು ನಿನ್ನನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ॥೫೪॥

ಈಗಲೋ ಈ ದೇಹವಿನ್ನ್ಯಾ
ವಾಗಲೋ ನಿಜವಿಲ್ಲವೆಂಬುದ
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ।
ರಾಗಲೋಭದಿ ಮುಳುಗಿ ಮುಂದಣ
ತಾಗುಬಾಗುಗಳರಿಯೆ ನಿನ್ನ ಸ
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ॥೫೫॥

ಮಾಂಸ ರಕ್ತದ ಮಡುವಿನಲಿ ನವ
ಮಾಸ ಜನನಿಯ ಜಠರದೊಳಗಿರು
ವಾ ಸಮಯದಲ್ಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು।
ನೀ ಸಲಹಿದವನಲ್ವೇ ಕರು
ಣಣಾಸಮುದ್ರನು ನೀನಿರಲು ಕಮ
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ॥೫೬॥

ಬಲು ಮೃಗ ಮರವು ಪಕ್ಷಿಕೀಟಕ
ಜಲಷರೌಘದಿ ಜನಿಸಿದೆನು ಕೋ
ಟಲೆಗೊಳಿಸಬೇಡಕಟ ಮಾನವನಾದ ಬಳಿಕಿನ್ನು।
ಕೊಲಿಸದಿರು ಯಮನಿಂದ ಮುರಚದ
ಒಲಿದು ನಿನ್ನನು ಭಜಿಸುವವರಿಗೆ
ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ ॥೫೭॥

ಪಂಚಭೂತದ ಕಾಯದೊಳು ನೀ
ವಂಚಿಸದೆ ಇರುತಿರಲು ಪೂರ್ವದ
ಸಂಚಿತದ ಫಲವೆನ್ನಲೇಕಿದು ಮರುಳುತನದಿಂದ।
ಮಿಂಚಿದವರಿನ್ನುಂಟೆ ತಿಳಿಯೆ ಪ್ರ
ಪಂಚವೆಲ್ಲಕೆ ತಪ್ಪಿದವನೀ
ಕೊಂಚಗಾರನೆ ಕೃಷ್ಣ ರಕ್ಷಿಸು ನಮ್ಮನನವರತ ॥೫೮॥

ಹಲವು ಕರ್ಮಗಳಿಂದ ಮೂತ್ರದ
ಬಿಲಗಳಲಿ ಸಂಚರಿಸಿ ಪದವಿಯ
ಫಲವ ಕಾಣದೆ ಹೊಲವು ತಪ್ಪಿದೆನೆನ್ನ ದೇಹದಲಿ।
ಒಲಿದು ನೀನಿರೆ ನಿನ್ನ ಸಲುಗೆಯ
ಒಲುಮೆಯಲಿ ಬರಸೆಳೆವ ಮುಕುತಿಯ
ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ ॥೫೯॥

ಎತ್ತಿದೆನು ನಾನಾ ಶರೀರವ
ಹೊತ್ತು ಹೊತ್ತಲಸಿದೆನು ಸಲೆ ಬೇ
ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು।
ಸತ್ತು ಹುಟ್ಟುವ ಹುಟ್ಟಿ ಹಿಂಗುವ
ಸುತ್ತ ತೊಡಕನು ಮಾಣಿಸಲೆ ಪುರು
ಷೋತ್ತಮನೆ ಮನವೊಲಿದು ರಕ್ಸಷಿಸು ನಮ್ಮನನವರತ॥೬೦॥

ಇಂದು ಈ ಜನ್ಮದಲಿ ನೀನೇ
ಬಂಧು ಹಿಂದಣ ಜನ್ಮದಲಿ ಬಳಿ
ಸಂದು ಮುಂದಣ ಜನ್ಮಕಧಿಪತಿಯಾಗಿ ಇರುತಿರಲು।
ಎಂದಿಗೂ ತನಗಿಲ್ಲ ತನಸಂ
ಬಂಧ ನಿನ್ನದು ಎನಗೆ ನೀ ಗತಿ
ಯೆಂದು ಬಿನ್ನೈಸಿದೆನು ರಕ್ಷಿಸು ನಮ್ಮನನವರತ ॥೬೧॥

ಗಣನೆಯಿಲ್ಲದ ಜನನಿಯರು ಮೊಲೆ
ಯುಣಿಸಲಾ ಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು।
ಬಣಗು ಕಮಲಜನದಕೆ ತಾನೇ
ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀಬಿಡಿಸಿ ರಕ್ಷಿಸು ನಮ್ಮನನವರತ॥೬೨॥

ಲೇಸಕಾಣೆನು ಜನನ ಮರಣದಿ
ಘಾಸಿಯಾದೆನು ನೊಂದೆನಕಟಾ
ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ।
ನೀ ಸಲಹುವವನಲ್ಲವೇ ಕರುಣಾ
ಸಮುದ್ರನು ನೀನಿರಲು ಕಾಮ
ಲಾಸನನ ಹಂಗೇನು ರಕ್ಷಿಸು ನಮ್ಮನನವರತ॥೬೩॥

ಕಾಪುರುಷರೈದಾರುಮಂದಿ ಸ
ಮೀಪದಲಿ ಕಾಡುವರು ಎನ್ನೆನು
ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ।
ಶ್ರೀಪದಾಬ್ಜದ ಸೇವೆಯಲಿ ನೆರೆ
ಪಾಪವನು ಪರಿಹರಿಸೇ ನೀ ನಿಜ
ರೂಪಿನಲಿ ಬಂದೊಳಿದು ರಕ್ಷಿಸು ನಮ್ಮನನವರತ॥೬೪॥

ಐದು ತತ್ವಗಳಾದವೊಂದ
ಕ್ಕೈದು ಕಡೆಯಲಿ ತತ್ವವಿಪ್ಪ
ತ್ತೈದು ಕೂಡಿದ ತನುಳೆನಲಿ ವಂಚಿಸದೆ ನೀನಿರಲು।
ಭೇದಿಸದೆ ಜೀವಾತ್ಮ ತಾ ಸಂ
ಪಾದಿಸಿದ ಸಂಚಿತ ಸುಕರ್ಮವ
ನಾದರಸಿ ಕೈಕೊಂಡು ರಕ್ಷಿಸು ನಮ್ಮನನವರತ॥೬೫॥

ಎಂಟು ಗೇಣಿನ ದೇಹ ರೋಮಗ
ಳೆಂಟು ಕೋಟಿಯ ಕೀಲ್ಗಳರುವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು।
ನೆಂಟ ನೀನಿರ್ದಗಲಿದಡೆ ಒಣ
ಹೆಂಟೆಯಲಿ ಮುಚ್ಚುವರು ದೇಹದ
ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ॥೬೬॥

ಸ್ನಾನಸಂಧ್ಯಾಧ್ಯಾನಜಪತಪ
ದಾನ ಧರ್ಮ ಪರೋಪಕಾರ ನ
ಹೀನಕರ್ಮದೊಳುಲಿವನಲ್ಲದೆ ಬೇರೆ ಗತಿಯುಂಟೆ।
ಏನು ಮಾದಿದರೇನು ಮುಕ್ತಿ
ಜ್ಞಾನವಿಲ್ಲದಡಿಲ್ಲ ಭಕ್ತಿಗೆ
ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ॥೬೭॥

ಕೋಪವೆಂಬುದು ತನುವಿನಲಿ ನೆರೆ
ಪಾಪ ಪಾತಕದಿಂದ ನರಕದ
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ।
ರಾಪು ಮಾಡದೆ ಬಿಡನು ಯಮನು ನಿ
ರಾಪರಾಧಿಯು ನೋಡಿ ಕೀರ್ತಿಕ
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ॥೬೮॥

ನಿನ್ನ ಸೂತ್ರದೊಳಾಡುವವು ಚೈ
ತನ್ಯ ಸಚರಾಚರಗಳೆಲ್ಲವು
ನಿನ್ನ ಸೂತ್ರವು ತಪ್ಪಿದರೆ ಮೊಗ್ಗುಪವು ಹೂಹೆಗಳು।
ಇನ್ನು ನಮಗೆ ಸ್ವತಂತ್ರವೆಲ್ಲಿಯ
ದನ್ಯ ಕರ್ಮಸುಕರ್ಮವೆಲ್ಲವು
ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ॥೬೯॥

ಒಡೆಯ ನೀನೆಂದರಿತು ನಾ ನಿ
ಮ್ಮಡಿಯ ಭಜಿಸದೆ ದುರುಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ।
ಮಡದಿಯಾರೀ ಮಕ್ಕಳಾರೀ ಒ
ಡಲಿಗೊಡೆಯನು ನೀನು ನೀ ಕೈ
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ॥೭೦॥

ವಂಟಿಸಿದ ಮುದಮುಖರು ಕೆಲಗಳ
ರುಂಟು ರಿಪುಗಳು ದಂಟಿಸುತ ಬಲು
ಕಂಟಕದಿ ಕಾಡುವರು ಕಾಯೈ ಕಲುಷಸಂಹಾರ।
ಬಂಟನಲ್ಲವೆ ನಾನು ದೀನರ
ನೆಂಟನಲ್ಲವೆ ನೀನು ನಿನ್ನೊಳ
ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ॥೭೧॥

ದಂಡಧರನುಪಟಲದಿ ಮಿಗೆ ಮುಂ
ಕೊಂಡು ಮೊರೆಯಾಗುವವರ ಕಾಣೆನು
ಪುಂಡರಿಕೊದ್ಭವನ ಶಿರವನು ಕಡಿದು ತುಂಡರಿಸಿದ।
ಖಂಡಪರಶವು ರುದ್ರಭೂಮಿಯೊ
ಳಂಡಲೆದು ತಿರುಗುವನು ನೀನು
ದ್ದಂಡ ದೇವರದೇವ ರಕ್ಷಿಸು ನಮ್ಮನನವರತ॥೭೨॥

ಶಕ್ತಿಯಂಬುದು ಮಾಯೆ ಮಾಯಾ
ಶಕ್ತಿಯದು ತನುವಿನಲಿ ನೀ ನಿಜ
ಮುಕ್ತಿದಾಯಕನಿರಲು ಸುಖದುಃಖಾದಿಗಳಿಗಾರು।
ಯುಕ್ತಿಯೊಳಗಿದನರಿತು ಮನದಿ ವಿ
ರುಕ್ತಿಯಲಿ ಭಜಿಸುವಗೆ ಮುಕ್ತಿಗೆ
ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ॥೭೩॥

ಮೂರುಗುಣ ಮೊಳೆದೋರಿತದರೊಳು
ಮೂರು ಮೂರ್ತಿಗಳಾಗಿ
ರಂಜಿಸಿ ತೋರಿ ಸೃಷ್ಟಿಸ್ಥಿತಿಲಯಂಗಳ ರಚಿಸಿ ವಿಲಯದಲಿ।
ಮೂರು ರೂಪೊಂದಾಗಿ ಪ್ರಳಯದ
ವಾರಿಯಲಿ ವಟಪತ್ರಶಯನದಿ
ಸೇರಿದವ ನೀನೀಗ ರಕ್ಷಿಸು ನಮ್ಮನನವರತ॥೭೪॥

ನೀರ ಮೇಲಣ ಗುಳ್ಳೆಯಂದದಿ
ತೋರಿಯಡಗುವ ದೇಹವೀ ಸಂ
ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ।
ತೋರಿಸಚಲಾನಂದಪದವಿಯ
ಸೇರಿಸಕಟಾ ನಿನ್ನವೋಲ್ ನಮ
ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ॥೭೫॥

ಹೊದ್ದಿ ನಿಲುವುದೆ ದರ್ಪಣದ ಮೇ
ಲುದ್ದುರುಳಿ ಬೀಳ್ವಂತೆ ನಿಮಿಷದಿ
ಬಿದ್ದುಹೋಗುವ ಕಾಯವೀ ತನುವೆಂಬ ಪಾಶದಲಿ।
ಬದ್ಧನಾದೆನು ಮಮತೆಯಲಿ ನೀ
ನಿದ್ದುದಕೆ ಫಲವೇನು ಭಕ್ತವಿ
ರುದ್ಧವಾಗದಪೋಲು ರಕ್ಷಿಸು ನಮ್ಮನನವರತ॥೭೬॥

ಕೇಳುವುದು ಕಡುಕಷ್ಟ ಕಷ್ಟದ
ಬಾಳುವೆಯ ಬದುಕೇನು ಸುಡುಸುಡು
ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಯು।
ಬಾಳಬೇಕೆಂಬವಗೆ ನೆರೆ ನೀ
ಮ್ಮೂಳಿಗವ ಮಿಗೆ ಮಾಡಿ ಭಕ್ತಿಯೊ
ಳಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ॥೭೭॥

ದೇಹಧಾರಕನಾಗಿ ಬಹುವಿಧ
ಮೋಹದೇಳಿಗೆಯಾಗಿ ಮುಕುತಿಗೆ
ಬಾಹಿರನು ವಿಷಯಾದಿಗಳಿಗೊಳಗಾಗಿ।
ದೇಹವೀ ಸಂಸಾರವೆನ್ನದೆ
ಮೋಹಿಸುವ ಮತಿಗೇಡಿ ಮಾನವ
ಸಾಹಸಿಯ ಸಟೆಮಾತು ರಕ್ಷಿಸು ನಮ್ಮನನವರತ॥೭೮॥

ಅಳಿವ ಒಡಲನು ನೆಚ್ಚಿವಿಷಯಂ
ಗಳಿಗೆ ಕಾತುರನಾಗಿ ಮಿಗೆ ಕಳ
ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ।
ತಿಳಿದು ಮನದೊಳು ನಿನ್ನ ನಾಮಾ
ವಳಿಯ ಜಿಹ್ವೆಗೆ ತಂದು ಪಾಪವ
ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ॥೭೯॥

ವರುಷ ನೂರಾಯುಷ್ಯವದರೊಳ
ಗಿರುಳು ಕಳೆದೈವತ್ತು ಐವ
ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಾಳಿ ಮೂವತ್ತು।
ಇರದೆ ಸಂದದು ಬಳಿಕ ಇಪ್ಪ
ತ್ವರುಷವದರೊಳಗಾದುದಂತಃ
ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ॥೮೦॥

ಊರು ತನಗೊಂದಿಲ್ಲ ಹೊತ್ತ ಶ
ರೀರಗಳ ಮಿತಿಯಿಲ್ಲ ತಾ ಸಂ
ಚಾರಿಸದ ಸ್ಥಳವಿಲ್ಲ ನುಡಿಯಾದ ಭಾಷೆಮತ್ತಿಲ್ಲ
ಬೇರೆ ಹೊಸತೊಂದಿಲ್ಲ ಉಣ್ಣದ
ಸಾರವಸ್ತುಗಳಿಲ್ಲ ತನು ಸಂ
ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ॥೮೧॥

ಗೋಪುರದ ಭಾರವನು ಗಾರೆಯ
ರೂಪದೋರಿದ ಪ್ರತಿಮೆಯಂದದೋ
ಳೀಪರಿಯ ಸಂಸಾರಭಾರವನಾರು ತಾಳುವರು।
ತಾ ಪರಾಕ್ರಮಿಯಂದು ಮನುಜನು
ಕಾಪಥವನೈದುವನು ವಿಶ್ವ
ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ॥೮೨॥

ಬೀಜವೃಕ್ಷದೊಳಾಯ್ತು ವೃಕ್ಷಕೆ
ಬೀಜವಾರಿಂದಾಯ್ತು ಲೋಕದಿ
ಬೀಜವೃಕ್ಷ ನ್ಯಾಯವಿದ ಭೇದಿಸುವರಾರಿನ್ನು।
ಸೋಜಿಗವ ನೀ ಬಲ್ಲೆ ನಿನ್ನೊಳು
ರಾಜಿಸುತ ಮೊಳೆದೋರುವದು ಸುರ
ರಾಜನಂದನ ನಮಿತ ರಕ್ಷಿಸು ನಮ್ಮನನವರತ॥೮೩॥

ತೊಗಲು ಬೊಂಬೆಗಳಂತೆ ನಾಲಕು
ಬಗೆಯ ನಿರ್ಮಾಣದಲಿ ಇದರೊಳು
ನೆಗಳದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ।
ಬಗೆಬಗೆಯ ನಾಮಾಂಕಿತದ ಜೀ
ವಿಗಳದೆಲ್ಲವು ನಿನ್ನ ನಾಮದಿ
ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ॥೮೪॥

ಹೂಡಿದೆಲುಮರಮಟ್ಟು ಮಾಂಸದ
ಗೋಡೆ ಚರ್ಮದ ಹೊದಿಕೆ ನರವಿನ
ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು।
ಬೀಡು ತೊಲಗಿದ ಬಳಿಕಲಾ ಸುಡು
ಗಾಡಿನಲಿ ಬೆಂದುರಿವ ಕೊಂಪೆಯ
ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ॥೮೫॥

ಬೀಗಮುದ್ರೆಗಳಿಲ್ಲದೂರಿಗೆ
ಬಾಗಿಲುಗಳೊಂಬತ್ತು ಹಗಲಿರು
ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ।
ನೀಗಿಯೆಲ್ಲವ ಬಿಸುಟು ಬೇಗದಿ
ಹೋಗುತಿಹ ಸಮಯದಲಿ ಇವರವ
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ॥೮೬॥

ಕೀಲು ಬಿಲಿದಿಹದೈದು ತಿರುಗುವ
ಗಾಲಿಯರಡರ ರಥಕೆ ತ್ರೈಗುಣ
ಶೀಲನೋರ್ವನು ಸಂಚರಿಸುತಿಹನಾ ರಥಾಗ್ರಹದಲಿ।
ಕೀಲು ಕಡೆಗೊಂದೂಡಿ ಬೀಳಲು
ಕಾಲಗತಿ ತಪ್ಪುವುದು ಅದರನು
ಕೂಲ ನಿನ್ನೂಳಗಿಹುದು ರಕ್ಷಿಸು ನಮ್ಮನನವರತ॥೮೭॥

ಬಿಗಿದ ರಕುತದ ರೋಮಕೂಪದ
ತೊಗಲ ಕೋಟೆಯ ನಂಬಿ ರೋಗಾ
ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು।
ವಿಗಡ ಯಮನಾಳು ಬರುತಿರೆ
ತೆಗೆದು ಕಾಲನ ಬಲವ ಬಲು ಮು
ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ॥೮೮॥

ವಾರುಣಗಳೆಂಟೆಸೆವ ನಗರಕೆ
ದ್ವಾರವೊಂಬತ್ತವಕೆ ಬಲು ಮೊನೆ
ಗಾರರಾದಾಳುಗಳ ಕಾವಲುಗಾರರನು ಮಾಡಿ।
ಆರರಿಯದಂತರೊಳಗೆ ಹೃದ
ಯಾರವಿಂದದಿ ನೀನಿರಲು ಬರಿ
ದೂರ ನಿನಗುಂಟೆ ರಕ್ಷಿಸು ನಮ್ಮನನವರತ॥೮೯॥

ಪೇಳಲಿನ್ನಳವಲ್ಲವೀಗೆಮ
ನಾಳುಗಳು ನೆರೆಯಂಗದೇಶವ
ಧಾಳಿಮಾಡುವರಕಟಕಟ ಸೆರೆ ಸೂರೆಗಳ ಪಿಡಿದು।
ಕಾಳುಮಾಡುವರಿನ್ನು ತನುವಿದು
ಬಾಳಲರಿಯದು ಕೋಟೆಯವರಿಗೆ
ಕೋಳುಹೋಗದ ಮುನ್ನ ರಕ್ಷಿಸು ನಮ್ಮನನವರತ॥೯೦॥

ನಾಲಿಗೆಯು ನಾಸಿಕವು ನಯನ
ಕಪಾಲ ಪದ ಪಾಣಿಗಳ ತನುವಿನ
ಮೂಲಕರ್ತವಿನಲಿ ಪರಿಚಾರಕರು ತಾವಾಗಿ।
ಲೀಲೆಯಿಂದಿರುತಿರ್ದ ಕಡೆಯಲಿ
ಕಾಲ ತೀರಿದ ಬಳಿಕಲದರನು
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ॥೯೧॥

ಸತ್ತವರಿಗಲಲೇಕೆ ತನ್ನನು
ಹೊತ್ತವರು ಹೆತ್ತವರುಗಳು ತಾ
ಸತ್ತು ಹೋಗುವರಲ್ಲದುಳಿದವರೆ ಮರುಗಲೇಕಿನ್ನು।
ಮೃತ್ಯು ಬೆನ್ನಿನ್ನೊಲಿಹುದು ತಾವಿ
ನ್ನತ್ತು ಮಾಡುವುದೇನು ಪೂರ್ವದ
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ॥೯೨॥

ಮಣ್ಣು ಮಣ್ಣಿನೊಳುದಿಸಿರಲು
ಮಣ್ಣು ಗೊಂಬೆಗಳಾಗಿಸಿ ರಂಜಿಸಿ
ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ।
ಮಣ್ಣಿನಲಿ ಬಂಧಿಸಿದ ದೇಹವ
ಮಣ್ಣುಗೂಡಿಸಬೇಡ ಜ್ಞಾನದ
ಕಣ್ಣದೃಷ್ಟಿಯನ್ನಿತ್ತು ರಕ್ಷಿಸು ನಮ್ಮನನವರತ॥೯೩॥

ದೀಯವಾಗುವ ತನುವಿನಲಿ ನಿ
ರ್ದಾಯಕನು ನೀನಿರ್ದು ಅತಿ ಹಿರಿ
ದಾಯ ಸಂಬಡಿಸುವರೆ ನೀನನುಕೂಲವಾಗಿರ್ದು।
ತಾಯನಗಲಿದ ಶಿಶುವಿನಂದದಿ
ಬಾಯವಿಡುವಂತಾಯ್ತಲೇ ಚಿಂತಾ
ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ॥೯೪॥

ಮೊದಲು ಜನನವನರಿಯೆ ಮರ
ಣದ ಹದನ ಕಡೆಯಲಿ ತಿಳಿಯೆ ನಾ
ಮಧ್ಯದಲಿ ನೆರೆ ನಿಪುಣನೆಂಬುದು ಬಳಿಕ ನೆಗೆಗೇಡು।
ಮೊದಲುಕಡೆ ಮಧ್ಯಗಳ ಬಲ್ಲವ
ಮದನಜನಕನು ನೀನು ನಿನ್ನಯ
ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ॥೯೫॥

ಸಾರವಿಲ್ಲದ ದೇಹವಿದು ನಿ
ಸ್ಸಾರವಾಗಿಹ ತನುವಿನಲಿ ಸಂ
ಚಾರಿಯಾಗಿಹ ನೀನಿದ್ದು ಕಡೆಯಲಿ ತೊಲಗಿ ಹೋಗುತಲಿ।
ದೂರ ತಪ್ಪಿಸಿಕೊಂಡು ಬರಿಯಪ
ದೂರ ಹೊರಸಿದೆ ಜೀವನದಲಿ ಇದ
ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ॥೯೬॥

ಅಂಡವೆರೆಡುದ್ಭವಿಸಿದವು
ಬ್ರಹ್ಮಾಂಡವದರೊಪಾದಿಯಲಿ ಪಿಂ
ಡಾಂಡವೆಸೆದುದು ಸ್ಥೂಲಕಾರಣ ಸೂಕ್ಷ್ಮತನುವಿನಲಿ।
ಆಂಡ ನಿನ್ನಯ ರೋಮಕೂಪದೊ
ಳಂಡಲೆದವಖಿಲಾಂಡವಿದು ಬ್ರ
ಹ್ಮಾಂಡನಾಯಕ ನೀನು ರಕ್ಷಿಸು ನಮ್ಮನನವರತ॥೯೭॥

ಒಂದು ದಿನ ತನುವಿನಲಿ ನಡೆವುವು
ಭಾಸ್ಕರಸ್ವರಗಳಿಪ್ಪ
ತ್ತೊಂದು ಸಾವಿರದಾರನೂರನು ಏಳುಭಾಗದಲಿ।
ಬಂದದನು ಉಡುಚಕ್ರದಲ್ಲಿಗೆ
ತಂದು ಧಾರೆಯನೆರೆದ ಮುನಿಕುಲ
ವೃಂದಹೃದಯನು ನೀನು ರಕ್ಷಿಸು ನಮ್ಮನನವರತ॥೯೮॥

ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದು ಕಾಣ ಬರಿದೆ ಮನನೊಂದು।
ಜಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ॥೯೯॥

ಬರಿದಹಂಕಾರದಲಿ ತತ್ವದ
ಕುರುಹ ಕಾಣದೆ ನಿನ್ನ ದಾಸರ
ಜರೆದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು।
ನರರು ದುಷ್ಕರ್ಮದಲಿ ಮಾಡಿದ
ದುರಿತವಡಗಲು ನಿನ್ನ ನಾಮ
ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ॥೧೦೦॥

ಎಂಜಲೆಂಜಲು ಎಂಬರಾ ನುಡಿ
ಎಂಜಲಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ।
ಎಂಜಲೆಲ್ಲಿಯದೆಲ್ಲಿಯುಂ ಪರ
ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ॥೧೦೧॥

ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ।
ಊಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಕಾಂತೆಯ
ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ॥೧೦೨॥

ಈ ತೆರೆದೊಳಚ್ಚುತನ ನಾಮದ
ನೂತನದಿ ವಸುಧಾತಲದಿ ವಿ
ಖ್ಯಾತಿ ಬಯಸದೆ ಬಣ್ಣಿಸಿದೆ ಕುಸುಮಷ್ಟಪದಿಯಲಿ।
ನೀತಿಕೋವಿದರಾಲಿಸುವದತಿ
ಪ್ರೀತಿಯಲಿ ಕೇಳ್ದವರಿಗೆ ಅಸುರಾ
ರಾತಿ ಚೆನ್ನಿಗರಾಯ ಸುಖಗಳನೀವನನವರತ॥೧೦೩॥

ಬಾದರಾಯಣ ಪೇಳ್ದ ಭಾರತ
ಕಾದಿಕರ್ತನುದಾರ ಶ್ರೀಪುರ
ದಾದಿ ಕೇಶವಮೂರ್ತಿಗಂಕಿತವಾದ ಚರಿತೆಯನು।
ಮೇದಿನಿಯೊಳಿದನಾರು ಹೃದಯದೋ
ಳಾದರಿಸಿ ಕೇಳ್ದಪರು ಮುದದಲಿ
ಯಾದಿಮೂರುತಿ ವರಪುರಾಧಿಪನೊಲಿವನನವರತ॥೧೦೪॥

ಕುಲಗಿರಿಗಳನ್ವಯವ ಧಾರಿಣಿ
ಜಲದ ಪಾವಕ ಮರುತ ಜಲ ನಭ
ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ।
ಚಲನೆಯಿಲ್ಲದೆ ನಿನ್ನ ಚರಿತೆಯು
ಒಲಿದು ಧರೆಯೊಳಗೊಪ್ಪುವಂದದಿ
ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ॥೧೦೫॥

ನೂರು ಕನ್ಯಾದಾನವನು ಭಾ
ಗೀರಥೀಸ್ನಾನವನು ಮಿಗೆ ಕೈ
ಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು।
ಊರುಗಳ ನೂರಗ್ರಹಾರವ
ಧಾರೆಯೆರೆದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವಗೆ॥೧೦೬॥

ಮೇರು ಮಂದರನಿಭಸುವರ್ಣವ ವಾರಿ
ಮಧ್ಯದೊಳಿರುವ ಅವನಿಯ
ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು।
ಧಾರುಣಿಯೊಳೀ ಭಕ್ತಿಸಾರವ
ನಾರು ಓದುವವರಿಗನುದಿನ
ಚಾರುವರಗಳನ್ನಿತ್ತು ರಕ್ಷಿಪನಾದಿಕೇಶವನು॥೧೦೭॥

ಲೋಕದೊಳಗತ್ಯಧಿಕವೆನಿಸುವ
ಕಾಗಿನೆಲೆಸಿರಿಯಾದಿಕೇಶವ
ತಾ ಕೃಪೆಯೊಳಗೆ ನುಡಿದನು ಈ ಭಕ್ತಿಸಾರವನು।
ಜೋಕೆಯಲಿ ಬರೆದೋದಿಕೇಳ್ದರ
ನಾಕುಲದಿ ಮಾಧವನು ಕರುಣಿಪ
ಶ್ರೀಕಮಲವಲ್ಲಭನುಮಿಗೆ ಬಿಡದಾದಿಕೇಶವನು॥೧೦೮॥

ಮಂಗಳಂ ಸರ್ವಾದಿಭೂತಗೆ
ಮಂಗಳಂ ಸರ್ವವನು ಪೊರೆವಗೆ
ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ
ಮಂಗಳಂ ಸರ್ವಸ್ವತಂತ್ರಗೆ
ಮಂಗಳಂ ಸತ್ಯಸ್ವರೂಪಗೆ
ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ॥೧॥

ಮಂಗಳಂ ಜಗದಾದಿ ಮೂರ್ತಿಗೆ
ಮಂಗಳಂ ಶ್ರಿತಪುಣ್ಯಕೀರ್ತಿಗೆ
ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ।
ಮಂಗಳಂ ದ್ರೌಪದಿಯ ಪೊರೆದಗೆ
ಮಂಗಳಂ ಧ್ರುವರಾಜಗೊಲಿದಗೆ
ಮಂಗಳಂ ಬೇಲೂರ ಚೆನ್ನಿಗರಾಯಕೇಶವಗೆ ॥೨॥

ಜಯ ಸುರೇಂದ್ರವರಾರ್ಚಿತಾಂಘ್ರಿಯೆ
ಜಯ ಪುರಾಧಿಪಸಂಸ್ತುತಾತ್ಮನೆ
ಜಯ ಮಹಾಮುನಿಯೋಗಗಮ್ಯನೆ ಮೇಘಮೇಚಕನೆ
ಜಯ ಕಲಾಧಿಪಸೂರ್ಯನೇತ್ರನೆ
ಜಯ ಜಯ ಜಗನ್ನಾಥದೇವನೆ ಚೆನ್ನಕೇಶವನೆ ॥೩॥

[] []

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ

ಉಲ್ಲೇಖ

[ಸಂಪಾದಿಸಿ]
  1. ಹರಿಭಕ್ತಿಸಾರ (1)
  2. ಹರಿಭಕ್ತಿಸಾರವು- ಟಿ.ಕೆ.ಕೃಷ್ಣಸ್ವಾಮಿಶೆಟ್ಟಿ ಕಳಾನಿಧಿ ಬುಕ್ ಡಿಪೊ; ಚಿಕ್ಕಪೇಟೆ ಬೆಂಗಳೂರುಸಿಟಿ; ೧೯೪೯ (ಪ್ರಕಟಿತ- ಕ್ರಯ ೦-೨-೦)