ಕನಕದಾಸರ ಸಾಹಿತ್ಯ

ವಿಕಿಸೋರ್ಸ್ ಇಂದ
Jump to navigation Jump to search

ಕನಕದಾಸರ ಕಾವ್ಯಗಳು[ಸಂಪಾದಿಸಿ]

 1. ನಳಚರಿತ್ರೆ [೧]
 2. ಹರಿಭಕ್ತಿಸಾರ
 3. ಮೋಹನ ತರಂಗಿಣಿ
 4. ರಾಮಧಾನ್ಯಚರಿತೆ ಕಥಾಸಾರ.

[೨] [೩] [೪] [೫]

ಕನಕದಾಸರ ಪದಗಳು[ಸಂಪಾದಿಸಿ]

 1. ತಲ್ಲಣಸಿದಿರು ಕಂಡ್ಯ
 2. ನಮ್ಮಮ್ಮ ಶಾರದೆ
 3. ನೀ ಮಾಯೆಯೊಳಗೊ
 4. ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
 5. ಶ್ರೀ ಹರೇ ಶ್ರೀನಿವಾಸ

ವಿಕಿಪೀಡಿಯಾದಿಂದ[ಸಂಪಾದಿಸಿ]

[೬][೭]

ಪದ್ಯಗಳು[ಸಂಪಾದಿಸಿ]

ಬೇರೆ ಬೇರೆ ಪುಟಗಳಿಗೆ ತುಂಬಬೇಕಾದವು:-

=== ಅಂಧಂತಮಸು ಇನ್ನಾರಿಗೆ ===
ಅಂಧಂತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ ಪ

ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಅ

ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿಧಾತುಗ್ರಂಥಗಳೆಲ್ಲ ತೋರಿಸಿ ವೇದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟುನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ 1

ಮೂಲಕವತಾರಕ್ಕೆ ಭೇದವು - ಮುಖ್ಯಶೀಲ ಪಂಡಿತರೊಳಗೆ ವಿವಾದವುಲೀಲಾ ಸಾದೃಶ್ಯವ ತೋರುತ -ಲಿಂಗಭಂಗವಿಲ್ಲದ ದೇಹ ಹಾರುತಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ 2

ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತದೋಷವೆಂದರೆ ನುಡಿ ಕೇಳದೆ ಸಂತೋಷವೆಂದರೆ ನೋಡಿ ಬಾಳದೆಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ 3
=== ಅಂಬುಜದಳಾಕ್ಷಗೆ ===
ಅಂಬುಜದಳಾಕ್ಷಗೆ ಮಂಗಳ ಪ

ಸರ್ವ ಜೀವರಕ್ಷಕಗೆ ಮಂಗಳ ಅ

ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ1

ವಸುಧೆಯ ಈರಡಿಗೈದಗೆ ಮಂಗಳವಸುದಾಧಿಪರಳಿದಗೆ ಜಯಮಂಗಳದಶಕಂಧರನನ್ನು ಗೆಲಿದಗೆ ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ 2

ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ 3
=== ಅಜ್ಞಾ ನಿಗಳ ಕೂಡೆ ಅಧಿಕ ===
ಅಜ್ಞಾ ನಿಗಳ ಕೂಡೆ ಅಧಿಕ ಸ್ನೇಹಕ್ಕಿಂತಸುಜ್ಞಾ ನಿಗಳ ಕೂಡೆ ಜಗಳವೇ ಲೇಸು ಪ

ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ - ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು1

ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗಜ್ಞಾ ತ ವಾಸವೇ ಲೇಸು2

ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು 3
=== ಅಟ್ಟು ಇಕ್ಕದವರ ಮನೆಯ ===
ಅಟ್ಟು ಇಕ್ಕದವರ ಮನೆಯ ಪ

ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ಅ

ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು 1

ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು 2

ಉರಗಾದ್ರಿ ವಾಸ ನಾರಾಯಣಾದಿಕೇಶವನಚರಣ ಕಮಲವನು ಸೇರಿಕೊಳ್ಳದೆವರ ಶಾಪವಿಲ್ಲದ ಬಣಗು ದೈವಗಳಿಗೆಶರಣೆಂದರೇನು ಶರಣೆನದಿದ್ದರೇನು
=== ಅಡಿಗೆಯನು ಮಾಡಬೇಕಣ್ಣ ===
ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾ ನದಡಿಗೆಯನು ಮಾಡಬೇಕಣ್ಣ ಪ

ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ

ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1

ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2

ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3

____

=== ಅಣು ಮಹತ್ತಾದ ದೇವ ===
ಅಣು ಮಹತ್ತಾದ ದೇವ ಪ

ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳಗುಣಭರಿತ ಪರಮ ಪಾವನ ಚರಿತ ಎನ್ನ ನಿರ-ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬನೆನಹನೊಲಿದಿತ್ತು ಸಲಹಯ್ಯ ಅ

ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿಮಾಡಿರುವ ಪಾತಕವು ವ್ಯಾಧಿರೂಪಗಳಿಂದಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿತೀಡಿ ಬಸವಳಿದ ಬಳಿಕನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲುಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ-ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವಪಾಡಿ ಪೊಗಳುವುದ ಕರುಣಿಸಯ್ಯ 1

ಕಂದ ಬಾರೆಂತೆಂದು ಶೋಕಿಪ ಜನನಿ ಜನಕನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿಅಂದವಾಗಿಹ ಮಂದಿರಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ-ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು-ಕುಂದ ಮುಕುತಿಯನೊದಗಿಸಯ್ಯ 2

ಘಾತೀತಿಯನು ಹಿಡಿದು ಹೆಡಗಟ್ಟಿ ಪಂಚ ಮಹಾಪಾತಕನ ತೊಗಲ ಸುಲಿದೆದೆಯ ಸೀಳೆಂಬ ಯಮದೂತರುದ್ಧತ ಕಣ್ಗಳನು ಕಂಡು ಮನದಲಿಭೀತಿಯಿಂ ನಡುನಡುಗಿ ಬಳಲಿಚೇತನವು ಕುಂದಿ ನಾಲಗೆ ಬೀಳ್ವ ಸಮಯದಲಿಯಾತರಾಸೆಯು ಬಾರದಂತಾದಿಕೇಶವ ಅ-ನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬಮಾತನಾಡಿಸಿ ಮುಕುತಿಯೊದಗಿಸಯ್ಯ 3
=== ಅಭ್ಯಾಸವನು ಮಾಡಬೇಕು ===
ಅಭ್ಯಾಸವನು ಮಾಡಬೇಕು ಬಿಡದೆ.... ಶ್ರೀ ಗು-ರುಭ್ಯೋನಮಃ ಎಂಬ ದಿವ್ಯನಾಮಂಗಳಂ ಪ

ಕೇಶವ ನಾರಾಯಣ ಮಾಧವ ಗೋವಿಂದ ಭವನಾಶ ಭಕ್ತ ಹೃದಯ ಕಮಲಾಬ್ಜದ್ಯುಮಣಿದೋಷರಹಿತ ವಿಷ್ಣು ಮದುಸೂದನ ತ್ರಿವಿಕ್ರಮ ಸು-ರೇಶ ಸರ್ವೋತ್ತಮ ದಿವ್ಯ ನಾಮಂಗಳನು 1

ವಾಮನ ಶ್ರೀಧರ ಹೃಷಿಕೇಶ..........ಪುಣ್ಯೋದರ ಹಿರಣ್ಯವಾಸದಾಮೋದರಾಮಲ ಕೌಸ್ತುಭರತ್ನ ವನಮಾಲಿರಾಮ ರಘುಪುಂಗವನ ನಾಮಂಗಳನು 2

ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ-ಳಾಂಕ ಪಂಕೇಜ ಪತ್ರಾಯತಾಕ್ಷಕಿಂಕರ ರಕ್ಷಕ ಅನಿರುದ್ಧ ಪುರುಷೋತ್ತಮಶಂಕರಪ್ರಿಯ ಅಧೋಕ್ಷಜ ನಾಮಂಗಳಂ3

ನಾರಸಿಂಹಾಚ್ಯುತ ಜನಾರ್ದನ ಉಪೇಂದ್ರಸಾರ ಭವಭಯ ಹರ ಕೃಷ್ಣ ವಿಶ್ವೋ-ದ್ಧಾರ.............. ವನಮಾಲಿ ಆಮೂರುತಿಯ ನಾಮಂಗಳಂ 4

ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದರಸವಿರುದ್ಧ ತಾವಿಗೊದಗುವ ತೆರದೊಳುಬಿಸಜಾಕ್ಷ ಕಾಗಿನೆಲೆಯಾದಿಕೇಶವ ಎನ್ನಅಸುವಳಿದು ಪೋಪಾಗ ಜಿಹ್ವೆಗೊದಗುವಂತೆ5

___

=== ಅರಸಿನಂತೆ ಬಂಟನೋ ಹನುಮರಾಯ ===
ಅರಸಿನಂತೆ ಬಂಟನೋ ಹನುಮರಾಯ ಪ

ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ

ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1

ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2

ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3

____

=== ಅರಿತು ನಡೆಯಲಿ ಬೇಕು ===
ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆಅರಿಯದಿದ್ದರೆ ನರಕವೇ ಪ್ರಾಪ್ತಿ ಪ

ದುರ್ಜನರ ಮನೆಯ ಪಾಯಸಾನ್ನಕಿಂತಸಜ್ಜನರ ಮನೆಯ ರಬ್ಬಳಿಗೆ ಲೇಸುಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ - ಬಲುದುರ್ಜನರ ಸಂಗ ಬಲು ಭಂಗ ಹರಿಯೆ 1

ಭಕ್ತಿಹೀನರ ಮನೆಯ ಪಟ್ಟು ಸುಪ್ಪತ್ತಿಗೆಗಿಂತಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸುಮುಕ್ತಿಮಾರ್ಗವ ತೋರ್ಪ ಮುರಹರನ ದಾಸರನುಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ 2

ಆಶೆಕಾರರ ಮನೆಯ ವಿಲಾಸ ಸುಖಕಿಂತಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸುಭೂಸುರಪ್ರಿಯ ಕಾಗಿನೆಲೆಯಾದಿಕೇಶವನಮೀಸಲಿನ ಪಾದಭಜನೆ ಕಡುಲೇಸು ಮನವೆ 3

_____

=== ಅರಿತು ಭಜಿಪರ್ಯಾರಯ್ಯ ===
ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ

ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ

ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು1

ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾ ನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ 2

ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ 3

____

=== ಅಹಹ ಮೋಸ ಹೋದೆನಯ್ಯ ===
ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ಪ

ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ ಅ

ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನುಪಾಯದಿಂದ ಹೇಮದಂತೆ ಬಣ್ಣಗಟ್ಟಿಬಾಯ ಬಡಿದು ತಂದು ತಂದುಕಾಯ ಕಳದೆನಲ್ಲದೆ 1

ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆಪಂಚಬಾಣನಯ್ಯ ಕಾಯೊ ಎನ್ನವಗುಣಗಳನೆಣಿಸದೆ2

ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆಉಕ್ಕಿ ಸವಿದು ಮನುಜರೊಡನೆಸೊಕ್ಕಿ ದಿನವ ಕಳೆದೆನೆನಗೆತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ3

_____

=== ಅಹುದಾದಡಹುದೆನ್ನಿ ===
ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿಸಹಜವಿದು ಸಜ್ಜನರ ಮನಕೆ ಸಮ್ಮತವು ಪ

ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳುಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳುಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟುಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ1

ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ2

ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು 3

ಪರನಾರಿಯರೊಡನಾಟ ಗರಲವನಟ್ಟುಂಬಾಟಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ4

ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥಸವತಿಯರೊಳಗಣ ಕೂಟ ಎಳನಾಗರ ಕಾಟಅಮರರಿಗೊದಗದ ಯಾಗ ಆಡಿನ ಮೇಲಣ ರೋಗನಮ್ಮ ಆದಿಕೇಶವನ ಭಕ್ತ ಅವ ಜೀವನ್ಮುಕ್ತ 5

____

=== ಆ ವೇಳೆಯಲಿ ಆರಾರ ಕಾಯ್ದೆಯೊ ===
ಆ ವೇಳೆಯಲಿ ಆರಾರ ಕಾಯ್ದೆಯೊ ದೇವಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು ಪ

ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆಶರಣನನು ಪಾಲಿಸುತೆ ಕಾಯ್ದೆಯಂತೆಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದುಕರುಣದಿಂದಲಿ ಕಾಯ್ದೆಯಂತೆ ಹರಿಯೆ 1

ಧರೆಗಧಿಕನಾಥನಾ ತೊಡೆಯನೇರಲು ಕಂಡುಜರೆಯಲಾ ಧ್ರುವನ ನೀ ಕಾಯ್ದೆಯಂತೆದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ 2

ಅಂದು ರಾವಣ ವಿಭೀಷಣನ ನೂಕಲು ಕಂಡುಇಂದಿರಾರಮಣ ನೀ ಕಾಯ್ದೆಯಂತೆಮಂದರೋದ್ಧರ ಮಧುಸೂದನ ಮಾಧವ ಗೋ-ವಿಂದ ರಕ್ಷಿಸು ಬಾಡದಾದಿಕೇಶವರಾಯ 3

______

=== ಆತನ ಪಾಡುವೆ ಅನವರತ ===
ಆತನ ಪಾಡುವೆ ಅನವರತಪ್ರೀತಿಯಿಂದ ಭಾಗವತರ ಸಲಹುವ ದೇವನೆಂದು ಪ

ಆವಾತನ ಕೀರ್ತಿಯ ಕಳೆ ಪೆರೆಯು..........ಯಿಂದ ಶುಕನಾರ ಪೊಗಳಿದನು ?ಆವಗೆ ಬಲೀಂದ್ರನು ಆರ......................................ವಿದನಯ್ಯಾ ? 1

ಕಲು ತರುಣಿಯ ಮಾಡಿದ ಪಾದವಾರದುಜಲಜ ಸಂಭವನ ಪೆತ್ತವನಾರು ?ಕಲಿಯುಗದ ಜನರಿಗೆ ಆರ ನಾಮವು ಗತಿಇಳೆಯ ಭಾರವನುಳುಹಿದನಾರಯ್ಯ2

ದ್ರುಪದನ ಮಗಳ ಅಭಿಮಾನ ರಕ್ಷಕನಾರುನೃಪ ಧರ್ಮನೆನೆಸಿಕೊಂಡವನಾರು ?ಕೃಪೆಯೊಳು ವಿದುರನ ಮನೆಯಲುಂಡವನಾರುಆಪತ್ಕಾಲದಿ ಗಜೇಂದ್ರನ ಸಲಹಿದರಾರು ? 3

ಅತಿ ಸ್ನೇಹದಿಂದ ಅರ್ಜುನಗೆ ಸಾರಥಿಯಾಗಿರಥವ ನಡೆಸಿದವನಾರು ?ಪೃಥಿವಿಯಲಿ....................................................................................................4

_____

=== ಆತನೇ ಪರಮಾತ್ಮ ಪರತತ್ತ್ವ ===
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ

ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1

ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2

ವೇದಮುಖದವನ ಅತಿ ಮೋದದಲಿ ಪುಟ್ಟಿಸಿದಆದಿಮೂರುತಿ ಆವನುನಾದದಲಿ ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3

______

=== ಆನೆ ಬಂದಿದೆ ಇದಿಗೊ ===
ಆನೆ ಬಂದಿದೆ ಇದಿಗೊ ಮದ್ದಾನೆ ಪ

ಜ್ಞಾ ನಿಗಳೊಳಾಡುವ ಮದ್ದಾನೆ ಅ

ದೇವಕಿಯೊಳು ಪುಟ್ಟಿದಾನೆ - ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ - ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ 1

ನೀಲವರ್ಣದ ನಿಜದಾನೆ - ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ - ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ 2

ಬಾಲೇಂದು ಮುಖದ ಮರಿಯಾನೆ - ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ 3

ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ 4

ಮಲ್ಲರೊಡನೆ ಗೆಲಿದಾನೆ - ಕಡುಖುಲ್ಲ ಕಂಸನ ಕೆಡಹಿದಾನೆ - ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ 5

ತರಳೆ ರುಕ್ಮಿಣಿಯ ತಂದಾನೆ - ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ 6

_____

=== ಆನೆ ಬರುತಾದೆ ನೋಡಮ್ಮ ===
ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ಪ

ಆನೆ ಬರುತಾದೆ ಎಲ್ಲರು ನೋಡಿರಿ ಒಂ-ದಾನೆಯ ಕೊಂದ ಮದ್ದಾನೆಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿತಾನೇ ತಾನಾಗಿ ಮದ ಸೊಕ್ಕಿದಾನೆಅ

ನೀರ ಮುಳುಗಿ ಖಳನ ಕೊಂದು ವೇದ ತಂದುಬರಮದೇವಗಿತ್ತ ಮದ್ದಾನೆಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದಜಾರ ಕೃಷ್ಣನೆಂಬ ಸೊಕ್ಕಿದಾನೆ 1

ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆಕುಸುಮಶರನ ಪೆತ್ತ ಮದ್ದಾನೆದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದದಶರಥಸುತನೆಂಬ ಮದ ಸೊಕ್ಕಿದಾನೆ 2

ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟುಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ 3

ಸಾವಿರ ತೋಳವನ ಸರಸದಿಂದಲಿ ಕಡಿದಭುವನ ರಕ್ಷಕನಾದ ಮದ್ದಾನೆಯೌವನದ ಗೋಪಿಯರ ಕಣ್ಮಣಿ ಎನಿಪ ವಸುದೇವಸುತನೆಂಬ ಮದ ಸೊಕ್ಕಿದಾನೆ 4

ಗರುಡವಾಹನವೇರಿ ಧಿಮಕೆಂದು ಬರುತಾನೆಸರುವ ಲೋಕರಕ್ಷಕನೆಂಬ ಮದ್ದಾನೆಉರೆ ಪೂತನಿಯ ಹೀರಿ ಮಾವ ಕಂಸನ ಕೊಂದಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ 5

___

=== ಆನೆಯ ನೋಡಿರಯ್ಯ ===
ಆನೆಯ ನೋಡಿರಯ್ಯ ನೀವೆಲ್ಲರುಆನಂದ ಪಡೆಯಿರಯ್ಯ ಪ

ತಾನು ತನ್ನವರೆಂಬ ಮಾನವರ ಸಲಹಿದಅ

ಪಾಂಡು ಚಕ್ರೇಶನ ಸುತರಿಗೊಲಿದಾನೆಗಂಡುಗಲಿ ಮಾಗಧನ ಒರಸಿದಾನೆಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆಲಂಡರಿಗೆ ಎದೆಗೊಡುವ ಪುಂಡಾನೆ 1

ಬಾಲಕನ ನುಡಿಗೇಳಿ ಖಳನ ಸೀಳಿದಾನೆಪಾಲುಂಡು ವಿದುರನ ಸಲಹಿದಾನೆಲೋಲಾಕ್ಷಿ ಮಾನಭಂಗಕ್ಕೊದಗಿದಾನೆಖೂಳ ಶಿಶುಪಾಲನನು ಸೀಳಿದಾನೆ2

ಅಜಮಿಳನಿಗೆ ನಿಜಪದವಿಯ ಕೊಟ್ಟಾನೆಕುಜನರೆಲ್ಲರನು ಒರಗಿಸಿದಾನೆಅಜಪಿತ ಕಾಗಿನೆಲೆಯಾದಿಕೇಶವಾನೆತ್ರಿಜಗವಲ್ಲಭ ತಾನು ಭಜಕರ ವಶವಾನೆ 3

____

=== ಆರಿಗಳವಲ್ಲಾತ್ಮ ಯೋಗ ===
ಆರಿಗಳವಲ್ಲಾತ್ಮ ಯೋಗ ಸಿದ್ಧಿಸೇರಿ ಸುಜ್ಞಾ ನದಲಿ ಸವಿದುಂಬಗಲ್ಲದೆ ಪ

ರಜಸು - ತಾಮಸವೆಂಬ ರಯವನೆಲ್ಲವ ಕಳೆದುಗಜ ಬಜಿಸುವ ಪಂಚಭೂತಗಳರಜನಿಗೆ ಸಿಲ್ಕದೆ ಪರಬ್ರಹ್ಮನ ಬಲುನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ 1

ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದುತನ್ನೊಳಗೆ ತಾ ತಿಳಿದು ತಾರಕಬ್ರಹ್ಮವಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ 2

ಅಕಾರ ಉಕಾರ ಮಕಾರ ಎಂತೆಂಬಓಂಕಾರಕೆ ಕೂಡಿ ಎರಡಿಲ್ಲದಸಾಕಾರ ಕಾಗಿನೆಲೆಯಾದಿಕೇಶವನಆಕಾರದೊಡನಾಡುವರಿಗಲ್ಲದೆ 3

____

=== ಆರಿಗಾರಿಲ್ಲ ಆಪತ್ಕಾಲದೊಳಗೆ ===
ಆರಿಗಾರಿಲ್ಲ ಆಪತ್ಕಾಲದೊಳಗೆ ಪ

ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ ಅ

ಹಸಿದು ಬಳಲುವಾಗ ಹಗೆ ಕೈಗೆ ಸಿಲುಕಿದಾಗದೆಸೆಗೆಟ್ಟು ಅಧಿಕ ವ್ಯಾಧಿಯಲಿ ಇರುವಾಗಅಸಮಾನನಾದಾಗ ಅತಿ ಭೀತಿಗೊಂಡಾಗಬಿಸಜನಾಭನ ನಾಮ ನೆನೆಕಂಡ್ಯ ಮನವೆ 1

ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪಘಳುಘುಳಿಸುತ ಕೋಪವನು ತೋರಿದಾಗಮೇಲು ತಾನರಿಯದಯೆ ನಿಂದೆ ಹೊಂದಿರುವಾಗನೀಲಮೇಘಶ್ಯಾಮನ ನೆನೆಕಂಡ್ಯ ಮನವೆ 2

ಪಂಥದಲಿರುವಾಗ ಪದವಿ ತಪ್ಪಿರುವಾಗದಂತಿಮದವೇರಿ ಬೆನ್ನತ್ತಿದಾಗಕಂತುಪಿತ ಕಾಗಿನೆಲೆಯಾದಿಕೇಶವನ ನಿ-ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮನವೆ 3

____

=== ಆರು ಬದುಕಿದರಯ್ಯ ಹರಿ ===
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಪ

ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ಅ

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ 1

ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನಸರಸದಿಂ ಮಗಳ ಗಂಡನ ಕೊಲಿಸಿದೆಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ತಂದೆ2

ತಿರಿದುಂಬ ದಾಸರ ಕೈ ಕಪ್ಪ ಕೊಂಬ ಮರ್ಮತಿರುಮಲಾಚಾರ್ಯ ಶ್ರೀಗುರುವೆ ಬಲ್ಲವರ ಕಾಗಿನೆಲೆಯಾದಿಕೇಶವನ ಭಜಿಸಿದರೆತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ3

____

=== ಆರು ಬಲ್ಲರು ಹರಿಹರಾದಿಗಳ ===
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ

ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ

ಪೌರತ್ರಯವ ಗೆಲ್ವ ಸಮಯದಲಿ ತಪ ಮಾಡಿನಾರಾಯಣಾಸ್ತ್ರವನು ಪಡೆದನೀತಗೌರೀ ಮನೋಹರನ ಘನತರಾರ್ಚನೆಗೈದುಚಾರುತರ ಚಕ್ರವನು ಪಡೆದನಾ ಶೌರಿ 1

ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2

ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3

______

=== ಆರು ಹಿತವರು ಎಂದು ನಂಬಬೇಡ ===
ಆರು ಹಿತವರು ಎಂದು ನಂಬಬೇಡ ಪ

ಆರಿಗಾರಿಲ್ಲ ಆಪತ್ತು ಬಂದೊದಗಿದಡೆ ಅ

ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿತನಯ ರಾಧೇಯನಿಗೆ ಎರಡೆಣಿಸಿದ ಮೇಲೆ 1

ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನನಿಗಳ ಬಂಧನದಿಂದ ಬಂಧಿಸಿದನುಜಗವರಿಯೆ ಸೋದರನು ಮಮತೆಯುಳ್ಳವನೆನಲೆಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ2

ತನಗೆ ದೇಹಾನುಬಂಧಿಗಳೆ ಬಂಧುಗಳೆಂದುಮನದಿ ನಿಚ್ಚಳವಾಗಿ ನಂಬಬೇಡಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನಅನುದಿನದಿ ನಂಬಿದವಗಿಹಪರದಿ ಸುಖವು 3

_____

=== ಆರೂ ಸಂಗಡ ಬಾಹೋರಿಲ್ಲ ===
ಆರೂ ಸಂಗಡ ಬಾಹೋರಿಲ್ಲ ಪ

ನಾರಾಯಣ ನಾಮ ನೆರೆ ಬಾಹೋದಲ್ಲದೆ ಅ

ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ 1

ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು2

ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು 3

ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು 4

ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ5

* ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.

_____

=== ಆರೂ ಸಮಯ ===
ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ ಪ

ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ1

ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ2

ಪಿತನು ಸಾಗರನು ಹಿತದಾಕೆ ಶ್ರೀದೇವಿಅತಿ ಬೀಗನಾದವ ನಾರಾಯಣಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ 3

ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ 4

ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ5

_____=== ಆವ ಕರ್ಮವೊ ಇದು ===
ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ಪ

ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ1

ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು 2

ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ 3

ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ4

ಹೇಳುವವನು ಅವಿವೇಕಿಕೇಳುವವನು ಅಜ್ಞಾ ನಿಹೇಳುವ ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ5

_____

=== ಆವ ಪರಿಯಲಿ ನಿಮ್ಮನೊಲಿಸಿ ===
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ

ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ

ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1

ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2

ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3

ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4

ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5

____

=== ಆವ ಬಲವಿದ್ದರೇನು ===
ಆವ ಬಲವಿದ್ದರೇನು - ವಾಸುದೇವನಾ ಬಲವು ನಿಜವಾಗಿ ಇರದನಕ ಪ

ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ 1

ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ2

ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ 3

ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲಹಿಂಗದೆ ಹರನು ಬಾಗಿಲ ಕಾಯ್ದ ಬಲವುಮುಂಗೈಯ ಶಕ್ತಿ ಸಾವಿರ ತೋಳ ಬಾಣನತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ 4

ಈಸು ದೇವರ ಬಲಗಳಿದ್ದರೆ ಫಲವೇನುವಾಸುದೇವನ ಬಲವಿಲ್ಲದವಗೆದೇಶಕಧಿಕ ಕಾಗಿನೆಲೆಯಾದಿಕೇಶವನಲೇಸಾದ ಚರಣ ಕಮಲದ ಬಲವಿರದನಕ 5

___

=== ಆವ ಸಿರಿಯಲಿ ನೀನು ===
ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ

ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ 1

ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ2

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ 3

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ 4

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ5ಚಿ

____

=== ಆವುದೊಳ್ಳೆಯದೊ ನಿನ್ನಂಗ ===
ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ

ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1

ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2

ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3

ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4

ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5

_____

=== ಇಂದು ಸೈರಿಸಿರಿ ಶ್ರೀಕೃಷ್ಣನ ===
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಪ

ಮುಂದಕೆ ನಿಮ್ಮ ಮನೆಗೆ ಬಾರನಮ್ಮಅ

ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ 1

ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ 2

ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ 3

=== ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ-ವಿಂದ ===
ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ - ವಿರಹ ಬೇಗೆಯಲಿಬೆಂದು ಸೈರಿಸಲಾರೆ - ಸಖಿ, ನೀನು ತಂದು ತೋರೆ ಪ

ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ ಅ

ಕಾಲಿಲ್ಲದಲೆ ಆಡಿದ - ವೇದ ತಂದಿತ್ತಕಾಲಿಲ್ಲದವನ ಪೊತ್ತ - ಅಮೃತ ತಂದಿತ್ತಕಾಲ ತೂಗಿ ನೋಡುತ್ತ - ಗಜ ಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ 1

ಎವೆಯಿಕ್ಕದೆ ನೋಡಿದ - ತಲೆಯ ತಗ್ಗಿಸಿಕವಲು ಕೋರೆದಾಡೆಯೊಳಾಡಿದ - ಕಂಬದಿ ಮೂಡಿದತವಕದಿಂದಲಿ ಬೇಡಿದ - ಭೂಭುಜರ ಕಡಿದಶಿವನ ಬಿಲ್ಲನು ಮುರಿದ _ ದೇವಕಿಕುವರ ನಗ್ನ ಹಯವನೇರಿದವಿವಿಧಾಬ್ಧಿಯೊಳಾಡಿ ಗಿರಿಧರಸವಿದು ಬೇರನು ಬಾಲಗೊಲಿದನಅವನಿ ಬೇಡಿ ಕೊಡಲಿ ಪಿಡಿದನಸವರಿ ದಶಶಿರನ ಬೆಣ್ಣೆ ಕದ್ದನಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ2

ವರ ಮತ್ಸ್ಯ ನಗಧರನ - ಸೂಕರ ಸಿಂಹನತಿರುಕ ತಾಯ್ತರಿದನ - ವರವಿತ್ತು ಶಬರಿಗೆತುರುಗಾಯ್ದ ನಿರ್ವಾಣನ - ಅಶ್ವಾರೂಢನಊರಿಲ್ಲದೆ ಹೊರೆ ಹೊತ್ತನ ಮುರುಢ ಕ್ರೂರನಉರವ ಸೀಳಿದ ವಿಪ್ರ ನೃಪರರಿಧರಣಿಜೆಯ ವರ ಕೃಷ್ಣ ಗಗನದಿಪುರವ ದಹಿಸಿದ ತೇಜಿರೂಢನಮೆರೆವ ಜಲಜ ಕೂರ್ಮ ವರಹನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರಶೌರಿ ಬುದ್ಧನ ತುರಗವೇರಿದ ಆದಿಕೇಶವನ3

___

=== ಇದ್ದೀಯಾ ಶ್ರೀ ಹರಿ ===
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಪ

ಇದ್ದೀಯಾ ಶ್ರೀಹರಿ ನೀನು - ವೃದ್ಧಿಸಿದ್ಧಿಯ ನಡುವೆ ಪದುಮನಾಭನು - ಅಭಿ-ವೃದ್ಧಿಯಾಗಲು ತಡವೇನು - ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ - ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ 1

ನಂಬಿದ್ದ ಸುಜನರು ಹರಿಯೆ - ಕೆಟ್ಟದೆಂಬ ಸುದ್ದಿಯ ನಾನರಿಯೆ - ಸತ್ಕು-ಟುಂಬ ಎಂಬುದು ಹೊಸಪರಿಯೆ - ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ2

ಶೇಷಗಿರೀಶ ಮದ್ಬಂಧು - ಆದಿಕೇಶವ ಗುರುವೆ ನೀನೆಂದು - ಕೃಷ್ಣಕ್ಲೇಶ ಬಿನ್ನೈಸುವೆ ಇಂದು - ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ3

____

=== ಇರಬಂದುದಿಲ್ಲ ಸಂಸಾರ ===
ಇರಬಂದುದಿಲ್ಲ ಸಂಸಾರ - ಇದನರಿತುಸಿರಿಹರಿಯ ಭಜಿಸುವುದು ಸಾರ ಪ

ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1

ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2

ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3

_____

=== ಇಷ್ಟುದಿನ ಈ ವೈಕುಂಠ ===
ಇಷ್ಟು ದಿನ ಈ ವೈಕುಂಠಎಷ್ಟು ದೂರವೊ ಎನ್ನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೆ ಶ್ರೀರಂಗಶಾಯಿ ಪ

ಎಂಟು ಏಳನು ಕಳೆದುದರಿಂದತುಂಟರೈವರ ತುಳಿದುದರಿಂದಕಂಟಕನೊಬ್ಬನು ಅಳಿದುದರಿಂದಭಂಟನಾಗಿ ಬಂದೇ ಶ್ರೀರಂಗಶಾಯಿ1

ವನ ಉಪವನಗಳಿಂದಘನ ಸರೋವರಗಳಿಂದಕನಕ ಗೋಪುರಗಳಿಂದಘನಶೋಭಿತನೆ ಶ್ರೀರಂಗಶಾಯಿ2

ವಜ್ರವೈಢೂರ್ಯ ತೊಲೆಗಳ ಕಂಡೆಪ್ರಜ್ವಲಿಪ ಮಹಾದ್ವಾರವ ಕಂಡೆನಿರ್ಜರಾದಿ ಮುನಿಗಳ ಕಂಡೆದುರ್ಜನಾಂತಕ ಶ್ರೀರಂಗಶಾಯಿ 3

ರಂಭೆ ಊರ್ವಶಿ ಮೇಳವ ಕಂಡೆತುಂಬುರು ನಾರದರ ಕಂಡೆಅಂಬುಜೋದ್ಭವ ಪ್ರಮುಖರ ಕಂಡೆಶಂಬರಾರಿ ಪಿತನೆ ಶ್ರೀರಂಗಶಾಯಿ4

ನಾಗಶಯನನ ಮೂರುತಿ ಕಂಡೆಭೋಗಿ ಭೂಷಣ ಶಿವನನು ಕಂಡೆಭಾಗವತರ ಸಮ್ಮೇಳವ ಕಂಡೆಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ 5

____

=== ಈ ಪರಿಯ ಸೊಬಗಾವ ===
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ ಪ

ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು 1

ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ2

ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ 3

___&

=== ಈ ಸಿರಿಯ ನಂಬಿ ===
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ಪ

ವಾಸುದೇವನ ಭಜಿಸೊ ಒರಟು ಜೀವನವೆ ಅ

ನೆಂಟರೂರಿಗೆ ಹೋಗಿ ನಾಲ್ಕು ದಿವಸವಿದ್ದರೆಎಂಟು ದಿನದಾಯಾಸ ಅಟ್ಟಬಹುದೊಉಂಟು ಸೌಭಾಗ್ಯವೆಂಬ ಧೈರ್ಯವ ಬಿಟ್ಟು ವೈ-ಕುಂಠವಾಸಿಯ ಭಜಿಸೊ ತುಂಟ ಜೀವನವೆ1

ಮಡದಿ ಮಕ್ಕಳು ಎಂಬ ಮಾಯಾ ಸಂಸಾರಕ್ಕೆಸಡಗರವಗೊಂಡು ಬರಿದೆ ಭ್ರಮಿಸಲೇಕೆಬಿಡದೆ ಯಮನಾಳುಗಳು ಬಾರೆಂದು ಎಳೆವಾಗಮಡದಿ ಮಕ್ಕಳು ಬಹರೆ ಭಂಡ ಜೀವನವೆ2

ಇಷ್ಟ ಸಂಪತ್ತನ್ನು ಬಡವರಾ ಕರೆತಂದುಕೊಟ್ಟು ಮಾಡಿದ ಪುಣ್ಯಫಲ ತನ್ನದೊಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಮನದಲಿ ಭಜಿಸೊ ಭ್ರಷ್ಟಜೀವನವೆ3

____

=== ಈತನೀಗ ವಾಸುದೇವನು ===
ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು ಪ

ಈತನೀಗ ವಾಸುದೇವನೀ ಸಮಸ್ತ ಲೋಕದೊಡೆಯ ದೂತಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ಅ

ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನನುಜೆಯಾಳಿದವನ ಶಿರವ ಕತ್ತರಿಸುತ - ತನ್ನಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ1

ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿಶರಗಳನ್ನು ತೀಡುತಿಪ್ಪನ ಯೋಚಿಸಿಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನಶಿರವನ್ನು ಛೇದಿಸಿದ ದೇವ ಕಾಣಿರೊ 2

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನನಿಷ್ಠ ಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-ತ್ಕøಷ್ಟ ಮಹಿಮನಾದ ದೇವ ಕಾಣಿರೊ 3

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗವೀರ ನರನತ್ತ ಬಪ್ಪುದನ್ನು ಈಕ್ಷಿಸಿ ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದಭಾರಕರ್ತನಾದ ದೇವನೀತ ಕಾಣಿರೊ4

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತಸಾಮಜವನೇರಿ ಬಹನ ಶಕ್ತಿಯನೀಕ್ಷಿಸಿಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-ಭೌಮ ಬಾಡದಾದಿಕೇಶವನ್ನ ನೋಡಿರೊ 5

=== ಈತನೇನೆ ನಿನ್ನ ===
ಈತನೇನೆ ನಿನ್ನ ಮಗನು ಪ

ಸೀತಾಪತಿ ರಘುನಾಥನೆಂಬವನು ಅ

ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು 1

ಆನೆವಾಹನ ಪಿತನ ತಾಯನಳೆದೋನುಭಾನುಸುತಗೆ ಶಾಪವಿತ್ತವನುಕಾನನ ಜನನಿಯ ಕೊಂದು ಪ್ರಿಯದಲಿ ನಿ-ಧಾನದಿ ಶರಧಿ ಶಯನ ಮಾಡಿದಾತನು 2

ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ 3

___

=== ಕೇಶವ ನಾಮ ===
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಪ

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ1

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾ ನವೆನಗೆಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ 2

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ 3

ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ 4

ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ 5

ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ 6

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ 7

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ 8

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ 9

ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ10

ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ 11

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ12

ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ 13

ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ 14

ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ 15

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ 16

ಸಾಧು ಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನಭೇದ ಮಾಡಿ ನೋಡದಿರೋ ಅಧೋಕ್ಷಜ 17

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ 18

ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ19

ಜ್ಞಾ ನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ 20

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ 21

ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ22

ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ23

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರಅರ್ತಿಯಿಂದ ಕಾಯದಿರನು ಕರ್ತೃ ಕೇಶವ 24

ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆಕರೆದು ಮುಕ್ತಿ ಕೊಡುವ ಬಾಡದಾದಿಕೇಶವ 25

_____

=== ಊರಿಗೆ ಬಂದರೆ ದಾಸಯ್ಯ ===
ಊರಿಗೆ ಬಂದರೆ ದಾಸಯ್ಯ - ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ಪ

ಕೈಲಿ ಕೋಲು ಕೊಳಲು ದಾಸಯ್ಯಕಲ್ಲಿಗೆ ವರವಿತ್ತೆ ದಾಸಯ್ಯಮಲ್ಲನ ಮರ್ದಿಸಿ ಮಾವನ ಮಡುಹಿದನೀಲಮೇಘಶ್ಯಾಮ ದಾಸಯ್ಯ 1

ಕೊರಳೊಳು ವನಮಾಲೆ ದಾಸಯ್ಯ - ಬಲುಗಿರಿಯನು ನೆಗಹಿದೆ ದಾಸಯ್ಯಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡುವಂಥ ದಾಸಯ್ಯ 2

ಆದಿನಾರಾಯಣ ದಾಸಯ್ಯಮೋದದೊಂದು ಸಾಸಿರ ನಾಮದ ದಾಸಯ್ಯಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದಆದಿಕೇಶವರಾಯ ದಾಸಯ್ಯ3

___

=== ಎಂತಹುದೊ ನಿನ್ನಯ ಭಕುತಿ ===
ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ

ಹಿಂದೆ ಮಾಡಿದ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾ ನವನು 1

ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2

ಹುಟ್ಟಿದ ಮೊದಲುಗೊಂಡು ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3

ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4

ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5

___

=== ಎಂಥ ಕೀರುತಿ ಪೊತ್ತುವೆರಡು ===
ಎಂಥ ಕೀರುತಿ ಪೊತ್ತುವೆರಡು ಪಾದ - ಶ್ರೀ-ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ಪ

ಕುಬ್ಜ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದಅರ್ಜುನನ ಶಿರವ ಕಾಯಲು ಬಾಣದಿಂದ ರಥವಗುಜ್ಜೆಯಲೂರಿ ನೆಲಕೊತ್ತಿದ ಪಾದ 1

ಶಾಪದಿ ಬಹುಕಾಲ ಅಹಲ್ಯೆಯು ಶಿಲೆಯಾಗೆಆ ಪ್ರಾಣ ನಿರ್ಮಿಸಿದ ಅಧಿಕ ಪಾದಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತಆ ಫಣಿಯ ತಲೆಯ ಮೇಲಾಡಿದ ಪಾದ 2

ಕುರುರಾಯನೇಳದೆಯೆ ಕುಳಿತ ಸಿಂಹಾಸನದಿಉರುಳಿಸಿಬಿಟ್ಟಂತ ಉನ್ನತ ಪಾದಮರಕತ ನಗರಿಯ ಬಾಡ ಬಂಕಾಪುರದರಸು ಸಿರಿಯಾದಿಕೇಶವನ ಶ್ರೀಪಾದ3

______

=== ಎಂಥ ಟವಳಿಗಾರನಮ್ಮ ===
ಎಂಥ ಟವಳಿಗಾರನಮ್ಮ ಪ

ನಂದ ಗೋಪ್ಯಮ್ಮ ಕೇಳೆ - ನಿನ್ನ ಮಗ ಎಂಥ ಟವಳಿಗಾರನಮ್ಮ ಅ

ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ - ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? - ಹೋಗೆನುತಾನೆ 1

ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ - ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? - ಹೋಗೆನುತಾನೆ2

ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ - ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? - ಹೋಗೆನುತಾನೆ 3

ವಾಲೆಯ ಕೊಟ್ಟೇನೆಂದುಒಲವಿನಿಂದ ತಂದವಾಲೆಯ ಕೇಳಿದರಲ್ಲಿ - ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? - ಹೋಗೆನುತಾನೆ 4

ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ - ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? - ಹೋಗೆನುತಾನೆ 5

ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ - ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? - ಹೋಗೆನುತಾನೆ 6

ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ - ಶ್ರೀ ಕೃಷ್ಣರಾಯ 7

____

=== ಎಂದಿದ್ದರೀ ಕೊಂಪೆ ===
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ

ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ

ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1

ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2

ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3=== ಎನ್ನ ಕಂದ ಹಳ್ಳಿಯ ಹನುಮ ===
ಎನ್ನ ಕಂದ ಹಳ್ಳಿಯ ಹನುಮ ಪ

ಚೆನ್ನಾಗೈದಾರ ಲಕ್ಷ್ಮಣ ದೇವರು ಅ

ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲೈದಾರೆ1

ನವ ವಸ್ತ್ರಗಳು ಅಂದು ನಾರಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾಜಿ ಕತ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲೈದಾರೆ2

ಕನಕ ರಥಗಳಂದು ಕಾಲುನಡಿಗೆಯಿಂದುಘನ ಛತ್ರ ಚಾಮರವಂದು ಬಿಸಿಲು ಇಂದುಸನಕಾದಿಗಳೋಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲೈದಾರೆ 3

____

=== ಎನ್ನ ನುಡಿ ಪುಸಿಯಲ್ಲ ===
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ

ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ 1

ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ2

ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ 3

=== ಎಲ್ಲಿ ನೋಡಿದರಲ್ಲಿ ===
ಎಲ್ಲಿ ನೋಡಿದರಲ್ಲಿ ರಾಮ - ಇದ ಪ

ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಅ

ಕಣ್ಣೇ ಕಾಮನ ಬೀಜ - ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು - ಒಳಗಣ್ಣಿಂದಲೇ ದೇವರ ನೋಡಣ್ಣ 1

ಮೂಗೇ ಶ್ವಾಸ ನಿಶ್ವಾಸ - ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ - ಒಳಮೂಗಲಿ ನೋಡಣ್ಣ ಲೀಲಾವಿಲಾಸ 2

ಕಿವಿಯೇ ಕರ್ಮಕೆ ದ್ವಾರ - ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರಕಿವಿಯೇ ಕರ್ಮ ಕುಠಾರ - ಒಳಗಿವಿಯಲ್ಲಿ ಕಾಣೊ ನಾದದ ಬೇರ 3

ಬೊಮ್ಮ ಮಾಡಿದ ತನುಬಿಟ್ಟು - ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟುಸುಮ್ಮನೆ ಕೂಗುಗಳಿಟ್ಟು - ಅದನಂಬುವನೆಂಬೋನು ಹೋಹ ಕಂಗೆಟ್ಟು4

ರೂಢಿಯೊಳಗೆ ಶುದ್ಧ ಮೂಢ - ಈಕಾಡುಕಲ್ಲುಗಳನ್ನು ನಂಬಬೇಡನಾಡಾಡಿ ದೈವಗಳನೆಲ್ಲ - ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ 5

____

=== ಎಲ್ಲಿಂದ ಬಂದೆ ===
ಎಲ್ಲಿಂದ ಬಂದೆ ಮುಂದೆತ್ತ ಪಯಣಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ಪ

ಮಾತೆಯುದರದೊಳು ನವಮಾಸ ಮಲಮೂತ್ರದೊಳುಯಾತನೆಯ ಯೋನಿ ಮುಖ ಮಾರ್ಗವಿಡಿದುಭೂತಳಕೆ ಬಂದ ಹದನೇನ ತೀರಿಸಿಕೊಂಡೆಜಾತಿ ಯಾವುದು ನಿನ್ನ ಹೆಸರೇನು ಮರುಳೆ1

ಮುಂದಾವ ಪಥವ ಸೇರುವೆ ಮರುಳೆ, ಸಾಕಿನ್ನುಹಿಂದೆ ನೆರವಾಗಿ ನಿಂತಾಪ್ತರುಂಟೆಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರುನಿಂದು ಮಾತಾಡು ಬರಿದೆ ಬಳಲಿದೆ ಮರುಳೆ 2

ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಗೊಂಡುಇರುವ ಮಂದಿರವಾವುದದನೆನಗೆ ಪೇಳೊಧರೆಯೊಳಗೆ ವರಕಾಗಿನೆಲೆಯಾದಿಕೇಶವನಸಿರಿ ಚರಣಕಮಲವನು ನೆರೆನಂಬಿ ಸುಖಿಸೊ3

____

=== ಎಲ್ಲಿರುವನೋ ರಂಗ ===
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಪ

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನುಅ

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಬರೆದೋದಲವನ ಪಿತ ಕೋಪದಿಂದಸ್ಥಿರವಾದಡೀ ಕಂಬದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ1

ಪಾಪ ಕರ್ಮವ ಮಾಡಿದಜಮಿಳನ ಯಮಭಟರುಕೋಪದಿಂದೆಳೆಯುತಿರೆ ಭೀತಿಯಿಂದತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸನಿಹದಲ್ಲಿಹುದೆ 2

ಕರಿರಾಜನನು ನೆಗಳು ನುಂಗುತಿರೆ ಭಯದಿಂದಮೊರೆಯಿಡಲು ಕೇಳಿ ತ್ವರಿತದಲಿ ಬಂದುಕರುಣದಲಿ ಬಂಧನವ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ 3

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಣಿ ಹಾ ಕೃಷ್ಣ ಎಂದೊದರೆ ಕೇಳ್ದುಭರದಿಂದ ಅಕ್ಷಯಾಂಬರವೀಯೆ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೆ 4

ಅಣು ಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯಗಣನೆಯಿಲ್ಲದ ಮಹಾಮಹಿಮನೆನಿಪಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನುನೆನೆದವರ ಮನದೊಳಿಹನೆಂಬ ಬಿರುದುಂಟಾಗಿ5

_____

=== ಎಷ್ಟು ಪೊಗಳಲಿ ನಾನು ===
ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ಪ

ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ಅ

ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ1

ಕಡಲ ಬೇಗನೆ ಹಾರಿ ಶ್ರೀರಾಮರ ಮಡದಿಗುಂಗುರವ ಕೊಟ್ಟು ಅಲ್ಲಿದ್ದ ದನುಜರ ಹೊಡೆದು ಬಲು ಹಂತಕಾರಿ ಮಾಡಿದೆ ಶೌರಿ ಒಡೆಯಗೆ ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರವ ನೊಡಿಸಿದಾಕ್ಷಣ ಲೋಕಮಾತೆಯ ನೊಡಗೂಡಿಸಿದೆ ಶ್ರೀವಾಸುದೇವರಿಗೆ 2

ಮೂರು ರೂಪವ ತಾಳಿ ಮಹಾಯೋಗ್ಯರುಗಳಿಗೆ ಸಾರ ತತ್ತ್ವವ ಪೇಳ್ದೆ ಶರಣು ಹೊಕ್ಕ ಮನುಜರ ಘೋರ ದುರಿತವ ಸೀಳ್ದೆ ಧೀರ ತನು ಧುರದುಂಡಿ ಹನುಮಯ್ಯರಿಂ ಸೇವಿಸಿದ ನಿಮ್ಮಂಘ್ರಿ ಕಮಲವದೂರ ಮಾಡದೆ ಎನ್ನ ಸಲಹಯ್ಯ ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ3

_____

=== ಎಷ್ಟು ಪ್ರೀತಿಯೊ ಮನಕೆ ===
ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಪ

ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಅ

ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ 1

ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು2

ಅಸ್ಥಿ ಚರ್ಮ ರಕ್ತ ಮಾಂಸ ವಿಸ್ತರವಾದ ಹೇಯ ಮಧ್ಯಮೆವಸ್ತು ಏರುತಿಳಿಯುತುದಯ ಅಸ್ತಮಾನದಿರಕ್ತ ಕುಸುಮ ಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು3

ಬೇಯದಿರುವ ಹಸಿಯ ಬಿಂದಿಗೆ ತೋಯ ಹಿಂಗುವಂತೆ ಸಾಕ್ಷಿ ಆಯುಷ್ಯವನರಿಯದಿರುವ ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ 4

ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ5=== ಏಳು ನಾರಾಯಣ ಏಳು ಲಕ್ಷ್ಮೀರಮಣ ===
ಏಳು ನಾರಾಯಣ ಏಳು ಲಕ್ಷ್ಮೀರಮಣ

ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ

ಏಳಯ್ಯ ಬೆಳಗಾಯಿತು ||ಪಲ್ಲವಿ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು

ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ

ಶೇಷಶಯನನೆ ಏಳು ಸಮುದ್ರ ಮಥನವ ಮಾಡು

ದೇಶ ಕೆಂಪಾಯಿತು ಏಳಯ್ಯ ಹರಿಯೇ ||1||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ

ಸುರರು ತಂದಿದ್ದಾರೆ ಬಲು ಭಕುತಿಯಿಂದ

ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ

ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ||2||

ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು

ಲೇಸಾಗಿ ತಾಳ ದಂಡಿಗೆಯ ಪಿಡಿದು

ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು

ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||3||

______

=== ಎಳ್ಳು ಕಾಳಿನಷ್ಟು ಭಕ್ತಿ ===
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ

ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ

ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1

ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2

ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3

_____

=== ಏಕೆ ದಯವಿನಿತಿಲ್ಲ ===
ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ಪ

ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ಅ

ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲಬಡವನೆಂದು ವಸ್ತ್ರವ ಕೊಡುವರಿಲ್ಲದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವುಒಡೆಯ ಕಂಡೂ ಕಾಣದಿರುವುದುಚಿತವಲ್ಲ1

ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲಪರಮಾತ್ಮ ನಿನ್ನೊಳಗೆ ನಾನರಿತಿಲ್ಲಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ 2

ನೀಲವರ್ಣದ ಲೋಲ ಕಾಲನವರಿಗೆ ಶೂಲಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತುಪಾಲಿಸೋ ಶ್ರೀ ಕಾಗಿನೆಲೆಯಾದಿಕೇಶವನೆ3

____

=== ಏಕೆ ನಡುಗಿದೆ ತಾಯೆ ===
ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ

ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ

ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1

ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2

ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3

ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4

ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5

_____

=== ಏನಿದೆತ್ತಣ ಬಯಕೆ ===
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ

ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1

ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2

ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3

____

=== ಏನು ಇಲ್ಲದ ಎರಡು ದಿನದ ===
ಏನು ಇಲ್ಲದ ಎರಡು ದಿನದ ಸಂಸಾರಜ್ಞಾ ನದಲಿ ದಾನಧರ್ಮವ ಮಾಡಿರಯ್ಯ ಪ

ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1

ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2

ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3

_____

=== ಏನು ಕಾರಣ ಬಾಯಿ ತೆರೆದಿ ===
ಏನು ಕಾರಣ ಬಾಯಿ ತೆರೆದಿ - ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ಪ

ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ1

ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ - ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ2

ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ 3

____

=== ಏನು ಬರುವುದೊ ಸಂಗಡೇನು ===
ಏನು ಬರುವುದೊ ಸಂಗಡೇನು ಬರುವುದೊ ಪ

ದಾನ ಧರ್ಮ ಮಾಡಿ ಬಹು ನಿಧಾನಿ ಎನಿಸಿಕೊಳ್ಳೊ ಮನುಜಅ

ಹೆಂಡರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧುಬಳಗಕಂಡು ಬಿಡಿಸಿಕೊಂಬರಾರೊ ದುಂಡ ಯಮನ ದೂತರೆಳೆಯೆಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನಅಂಡಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ1

ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿಬನ್ನಪಟ್ಟು ಬಾಯಿಬಿಡುವೆ ಬರಿದೆ ಮೋಹದಿಚೆನ್ನ ಮನದಿ ಪರಹಿತಾರ್ಥ ಮಾಡಿ ಪುಣ್ಯಪಡೆಯೊ ನೀನುಇನ್ನು ಮುಂದೆ ಕಿತ್ತು ತಿಂಬ ಕೂಪದಲ್ಲಿ ಕೆಡಲು ಬೇಡ ಮನುಜ2

ಬತ್ತಲಿಂದ ಬರುತ್ತಿಹರು ಬತ್ತಲಿಂದ ಹೋಗುತಿಹರುಕತ್ತಲೆ ಕಾಲವನು ಬೆಳಕು ಮಾಡಿ ಹೊತ್ತುಗಳೆವರುಸತ್ತರಿಲ್ಲ ಅತ್ತರಿಲ್ಲ ಹೊತ್ತುಕೊಂಡು ಹೋಹರಿಲ್ಲಿಮತ್ತೆ ದೇಹ ಮಣ್ಣುಗೂಡಿದಂತೆ ಕೆಡಲು ಬೇಡ ಮನುಜ3

ಕಟ್ಟಲಿಲ್ಲ ಬಿಚ್ಚಲಿಲ್ಲ ಕಷ್ಟಪಟ್ಟು ಬಳಲಲಿಲ್ಲಸುಟ್ಟು ಸುಟ್ಟು ಸುಣ್ಣದ್ಹರಳು ಆಯಿತಲ್ಲೊ ಕಾಯಬಿಟ್ಟು ಹೋಗುವಾಗ ಬೊಟ್ಟು ಬಟ್ಟೆ ನಿನಗೆ ಹೊಂದಲಿಲ್ಲಕಟ್ಟ ಕಡೆಗೆ ದೃಷ್ಟಿ ನೋಟ ಬಟ್ಟ ಬಯಲು ಆಗುತಿಹುದು 4

ಗರುವದೋರಿ ನಿಂದ ನೀನು ಬರಿದೆ ಕಾಲ ಕಳೆದೆ - ಮುಂ-ದರಿದು ನೋಡು ನರರ ತನುವು ದೊರಕಲರಿಯದುನೆರೆ ಮಹಾಮೂರ್ತಿ ಒಡೆಯ ಬಾಡದಾದಿಕೇಶವನಲಿಟ್ಟು ಭಕುತಿಚರಣ ಭಜಿಸಿ ಚಂಚಲಳಿಸಿ ವರವ ಪಡೆದು ಹೊಂದು ಮುಕುತಿ 5

____

=== ಏನು ಮಾಡಲಯ್ಯ ಬಯಲಾಸೆ ===
ಏನು ಮಾಡಲಯ್ಯ ಬಯಲಾಸೆ ಬಿಡದು ಪ

ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ

ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1

ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2

ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3

ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4

ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5

_____

=== ಏನೆಂದಳೇನೆಂದಳೋ ===
ಏನೆಂದಳೇನೆಂದಳೋ ಪ

ನಿನ್ನೊಳು ಸೀತೆ ಹನುಮಯ್ಯ ಅ

ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು 1

ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು 2

ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು3

____

=== ಏನೆಂದು ಕೊಂಡಾಡಿ ===
ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ಪ

ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನುಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು 1

ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನುಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು2

ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನುವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು 3

ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನುಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು4

ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನುಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು 5

____

=== ಏನೆಂದು ನುಡಿವೆ ===
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ - ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ

ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ 1

ಸನಕಾದಿ ಮುನಿಯಂತೆ ವನದೊಳು ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ2

ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ3

ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ4

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|ಜೀವನ ಚರಿತ್ರೆ


ಉಲ್ಲೇಖ[ಸಂಪಾದಿಸಿ]

 1. (ಮೈಸೂರು.ಜಿ.ಟಿ.ಪಿ.ಮುದ್ರಾ ಶಾಲೆಯಲ್ಲಿ ಮುದ್ರಿತ: 1906)
 2. ಹಳಗನ್ನಡ ಕಾವ್ಯ ಸಂಗ್ರಹ
 3. ಹರಿಭಕ್ತಿಸಾರ (1)
 4. ಹರಿಭಕ್ತಿಸಾರವು- ಟಿ.ಕೆ.ಕೃಷ್ಣಸ್ವಾಮಿಶೆಟ್ಟಿ ಕಳಾನಿಧಿ ಬುಕ್ ಡಿಪೊ; ಚಿಕ್ಕಪೇಟೆ ಬೆಂಗಳೂರುಸಿಟಿ; ೧೯೪೯ (ಪ್ರಕಟಿತ- ಕ್ರಯ ೦-೨-೦)
 5. ಹಳಗನ್ನಡ ಕಾವ್ಯ ಸಂಗ್ರಹ
 6. ರಾಘವೇಂದ್ರ ಫೌಂಡೇಶನ್ ಅವರ ಸಂಗ್ರಹ
 7. ಕನಕದಾಸರ ಕೃತಿಗಳು -ಟಿ.ಕೃಷ್ನಯ್ಯಸೆಟ್ಟಿ & ಸನ್ಸ್ ೧೯೪೦.