ಇವನಾರು!
ವಿಚಿತ್ರವೆಸಪ ಚಿತ್ರ ಚತುರ ಇವನಾರು?!!
[ಸಂಪಾದಿಸಿ]- ಕವಿ:ಡಿವಿಜಿ
ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್ ।
ಕಾಲದಿಂದೆ ಮಾಸದಾ ವಿ
ಚಿತ್ರವೆಸಪನಾರ್
ಗಿರಿಯ ತೊರೆಯ ಬಣದ ಹೊಲದ
ಬೆರಗಿನಿಂದೆ ಮೃಗದ ಖಗದ
ಮೆರೆತದಿಂದಲೀ ವಿಹಾರ
ಭವನವೆಸಪನಾರ್ ।
ಮರೆಯಲಿರ್ದು ಸೊಗವನಿಂತು
ಕವಿಸುತಿರ್ಪನಾರ್
ಜ್ಯೋತಿಗಳನು ಗಗನ ತಲದಿ
ಗೀತಗಳನು ವಿಹಗ ಮುಖದಿ
ಪ್ರೀತಿಗಳನು ಜನರ ಮನದಿ
ತೋರುತ್ತಿರ್ಪನಾರ್ ।
ಮಾತನುಳಿದು ಕವಿತೆಯಿಂತು
ಬೀರುತ್ತಿರ್ಪನಾರ್
ಅವನ ಕೃತಿಯ ನೋಡಿ ಮಣಿವೆ
ವವನ ದನಿಯ ಕೇಳಿ ನಲಿವೆ
ವವನ ಭಿಕ್ಷೆಯುಂಡು ಬೆಳೆವೆ
ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ
ವವನ ಕಾಣೆವು
ರವಿಗೆ ಬೆಳಕ ಭುವಿಗೆ ಬಲವ
ಜವವ ವಾಯುಗೀವ ತೆರದಿ
ಕವಿಯ ವಚನಕವನೆ ಸರಸ
ಭಾವವೀವನು ।
ಅವನೆ ಶಿಲ್ಪ ಚಿತ್ರ ಕೃತಿಗೆ
ಜೀವವೀವನು
ಕಿರಿಯ ಮಕ್ಕಳಳುವ ದನಿಗೆ
ಪಿರಿಯರಿಡುವ ಕಣ್ಣ ಪನಿಗೆ
ಕರಗದೆದೆಯ ಬಿದಿಯು ಬಣಗು
ಕವಿತೆಗೊಲಿವನೇಂ ।
ಮರುಳು ನುಡಿಯಲಿದನು ನಿನ್ನ
ಕಿವಿಯೊಳುಲಿವನೇಂ
ದೈವ ಕೃತಿಯ ಸೊಬಗ ಸರಸ
ಭಾವಿತತಿಯ ಸೊಬಗ ಸುಜನ
ಜೀವ ಕಥೆಯ ಸೊಬಗ ಬರಿಯ
ಕನಸವೆಂಬರೇಂ ।
ಬೇವ ಮನವ ಸೊಬಗಿನೊಂದು
ನೆನಪೆ ತಣಿಸದೇಮ್
- ಕವನ ಸಂಕಲನ- ನಿವೇದನ(1942)
ನೋಡಿ
[ಸಂಪಾದಿಸಿ]- ಬಯಕೆ -(ಇಂಗ್ಲಿಷ್ ಕವನದ ಅನುವಾದ)
- ಪ್ರಿಯತಮೆಗೆ
- ನಿವೇದನ ಡಿ.ವಿ.ಜಿ.
- ಜೋಗದ ಜೋಕು ಲಾವಣಿ
- ಇವನಾರು! ಡಿ.ವಿ.ಜಿ.
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ