ಕರ್ಣಪರ್ವ: ೨೭. ಇಪ್ಪತ್ತೇಳನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಕರ್ಣ ಪರ್ವ-ಇಪ್ಪತ್ತೇಳನೆಯ ಸಂಧಿ[ಸಂಪಾದಿಸಿ]

ಸೂ. ಸಮರ ಸಾಹಸ ವೀರನನುಪಮ
ಕಮಲಸಖನ ಕುಮಾರನದಟಿಂ
ದಮರನಗರಿಗೆ ನಡೆಯೆ ಹಲುಬಿದ ಕೌರವರ ರಾಯ

ಸಾಲದೇ ಕಥೆಯಿನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ ೧

ತೂಳಿದನು ಕಲಿ ಪಾರ್ಥನೀತನ
ಮೇಲೆ ಶಿವ ಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ ೨

ಆ ಮಹಾಧ್ವಜ ದಂಡ ಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ ೩

ಮತ್ತೆ ಕೇಳರಿವಿಕ್ರಮವ ನಭ
ಕೊತ್ತಿತೀತನ ಶೌರ‍್ಯವಾತನ
ನೆತ್ತರಲಿ ನಾದಿದನು ನಾನಾವಿಧ ಶರಾವಳಿಯ
ಹತ್ತು ಶರದಲಿ ಕರ್ಣಚಾಪವ
ಕತ್ತರಿಸಿದನು ಪಾರ್ಥನೀತನ
ಚಿತ್ತದಲಿ ಕರುಣಾರಸಕೆ ಕಾಲಾಟವಾಯ್ತೆಂದ ೪

ದ್ರೋಣಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ ೫

ಕುಲಕೆ ಕೀಳಿವನೆಂದು ಟಿಕ್ಕರಿ
ಗಳೆದಡಾ ಬಹುಬಂಧುವರ್ಗವ
ನುಳಿದು ಸಿಂಹಾಸನದಲೆನಗಭಿಷೇಕವನು ಮಾಡಿ
ಕುಲದ ಮಲಿನವ ತೊಳೆದು ಕೌರವ
ಕುಲದೊಳೊಡಬೆಚ್ಚವನಿಪಾಲಕ
ತಿಲಕ ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ ೬

ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಖೇಳ ಮೇಳದ
ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ
ಓಡಲರಿಯದೆ ದ್ರೋಣ ಭೀಷ್ಮರು
ಗೂಡ ತಲೆಗೊಟ್ಟೈಸರಲಿ ತಾ
ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ ೭

ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ ೮

ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವುದೊಂದು ಪುಣ್ಯದ
ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತೆವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ ೯

ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ ೧೦

ಅರಸ ಚಿತ್ತೈಸಾಚೆಯಲಿ ಮುರ
ಹರನಲೇ ನಿಮ್ಮನ್ವಯವ ಸಂ
ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ
ಸರಳ ತೊಡುತೊಡು ಪಾರ್ಥ ಕರ್ಣನ
ಶಿರವನಿಳುಹಾ ಹಾರದಿರು ಹೇ
ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ ೧೧

ಕರಗುವರೆ ನೀ ಸಾರು ಭೀಮನ
ಕರೆದು ಕೂಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನುಯುಧಿಷ್ಠಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ ೧೨

ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ ೧೩

ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ ೧೪

ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ ೧೫

ತ್ಯಾಗಿ ಸಿಂಹಾಸನದ ಮೇಲಿ
ದ್ದಾಗ ಬೇಡಿತನೀಯಬೇಹುದು
ಈಗಳೀವುದ ಬೆಸಸಿಯೆನೆ ನಗುತೆಂದನಾ ವಿಪ್ರ
ತೂಗುವೀ ಕುಂಡಲವನೀವುದು
ಬೇಗ ಧಾರೆಯನೆರೆದು ಕೊಡಿಯೆನ
ಲಾಗಳುದಕವನರಸಿ ಕಾಣದೆ ನೋಡಿದನು ಕೆಲನ ೧೬

ಉದಕವನು ಹೊರಗರಸುತಿರಲಾ
ಪದುಮನಾಭನು ನಗುತ ನಿನ್ನಯ
ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ
ಹದುಳದಿಂದೆರೆ ಧಾರೆಯನು ಸಂ
ಪದದ ಮುಕುತಿಯ ಪದವನೊಲುವಡೆ
ಇದು ಶುಭೋದಯವೆಂದು ಮಾಯಾವಿಪ್ರನರುಹಿದನು ೧೭

ಸರಳ ತೆಗೆದನು ಸರಸಿಜಪ್ರಿಯ
ವರ ಸುತನು ತನ್ನುರವ ಬಗಿದನು
ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ
ಪರಮ ಸಂತೋಷದಲಿ ಧಾರೆಯ
ನೆರೆದು ಕುಂಡಲವೀಯೆ ಮಿಗೆ ಪು (೧೮
ಷ್ಕರದ ಜನ ಜಯಯೆನಲು ಮುರರಿಪುವೊಲಿದು ಕೈಕೊಂಡ

ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದು ದಮರಗಣ ೧೯

ಹಿಂದೆ ಪಾಶುಪತಕ್ಕೆ ಬಳುವಳಿ
ಬಂದುದಂಜನ ಬಾಣವದರೆಣೆ
ಯಿಂದ ತೆಗೆದನು ಗಿರಿಜೆಯಂಘ್ರಿಯ ನೆನೆದು ಮಂತ್ರಿಸುತ
ಮಂದರಾಚಲ ನಡುಗೆ ಕಿಡಿಗಳ
ಸಂದಣಿಯ ಸುರಿವಂಬನಾ ರವಿ
ನಂದನನ ಕೊರಳೆಡೆಯೊಳೆಚ್ಚನು ವಾಸವನ ಸೂನು ೨೦

ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ ೨೧

ಕೊಟ್ಟ ಭಾಷೆಗೆ ಮರಳಿ ಬಾಣವ
ತೊಟ್ಟನೇ ತಾನೊಡೆಯನೆಂದರೆ
ಯಟ್ಟಿದನೆ ಪಾಂಡವರೊಳನುಸಂಧಾನವನು ಬಿಸುಟು
ನಟ್ಟ ಕಣೆಗಳುಕಿದನೆ ಕೌರವ
ಕೆಟ್ಟನಕಟಕಟೆಂದು ಕಾಯವ
ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ೨೨

ಬಲುವಿಡಿಯ ಬಿಲು ವಾಮದಲಿ ಬೆರ
ಳೊಳಗೆ ಸವಡಿಸಿ ತೆಗೆವ ತಿರುವಿನ
ಹಿಳುಕು ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ
ಬಲಿದ ಮಂಡಿಯ ಬಾಗಿದೊಡಲಿನ
ಹೊಳೆವ ತನುಕಾಂತಿಯ ಮಹೀಪತಿ
ತಿಲಕ ಕೇಳೈ ಕರ್ಣನೆಸೆದನು ರಥದ ಮಧ್ಯದಲಿ ೨೩

ಕಳಚಿ ದುರಿಯೋಧನನ ಬೆಳುಗೊಡೆ
ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ‍್ಯವಿಳೆಗೊರ್ಗುಡಿಸಿ ಕೆಡೆವಂತೆ
ಥಳಥಳಿಪ ನಗೆಮೊಗದ ಗಂಟಿಕಿ
ಬಲಿದ ಹುಬ್ಬಿನ ಬಿಟ್ಟ ಕಂಗಳ
ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ ೨೪

ಕರ್ಣ ಹಾ ಹಾ ಸೂತಸುತ ಹಾ
ಕರ್ಣ ಹಾ ರಾಧಾತನುಜ ಹಾ
ಕರ್ಣ ಹಾ ಎನ್ನಾನೆ ಹಾ ಬಹಿರಂಗ ಜೀವನವೆ
ನಿರ್ಣಯವು ಕುರುಕುಲಕೆ ಹಾ ಹಾ
ಕರ್ಣ ಮಡಿದೈ ತಂದೆಯೆನುತವೆ
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದನವನಿಯಲಿ ೨೫

ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ ೨೬

ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಕ್ಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ ೨೭

ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ ೨೮

ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿ ಸಹಿತ ೨೯

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ ೩೦

ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ ೩೧ [೧]

ಇತಿ ಶ್ರೀಮದಚಿಂತ್ಯಮಹಿಮ ಗದುಗು ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪರಿಪುಷ್ಟ ವಚಃಷಟ್ಪದೀನಿಕಾಯ
ಶ್ರೀಮತ್ಕುಮಾರವ್ಯಾಸಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಕರ್ಣಪರ್ವಂ ಸಮಾಪ್ತಮಾದುದು.

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.