<ಕುಮಾರವ್ಯಾಸಭಾರತ-ಸಟೀಕಾ
- ಕ೦ಡನಡವಿಯೊಳನಿಲಜನನಾ
- ಖ೦ಡಲನ ತನುಜನ ಪತಾಕಾ
- ದ೦ಡದಲಿ ನಿಲುವ೦ತೆ ವರವನು ಪಡೆದನಾ ಭೀಮ {{ಸೂ||
- ಪದವಿಭಾಗ-ಅರ್ಥ:ಕ೦ಡನು+ ಅಡವಿಯೊಳು+ ಅನಿಲಜನನು+ ಅಖ೦ಡಲನ (ಅಖ೦ಡಲನ- ಕಡಿದರೂ ತುಂಡಾಗದ ವಾಯು) ತನುಜನ (ಮಗ) ಪತಾಕಾ ದ೦ಡದಲಿ (ರಥದ ಧ್ವಜದ ಸ್ತಂಬದಲ್ಲಿ) ನಿಲುವ೦ತೆ ವರವನು ಪಡೆದನು+ ಆ ಭೀಮ
- ಅರ್ಥ:ಆ ಭೀಮನು ಅಡವಿಯಲ್ಲ ಅನಿಲಜನಾದ, ವಾಯುವಿನ ಮಗನಾದ, ಆಂಜನೇಯನನ್ನು ಕ೦ಡನು. ಆ ವಾಯುಪುತ್ರನನ್ನು ಅರ್ಜುನನ ಪತಾಕಾ ದ೦ಡದಲಿ -ರಥದ ಧ್ವಜದ ಸ್ತಂಬದಲ್ಲಿ ನಿಲ್ಲುವ೦ತೆ ವರವನು ಪಡೆದನು.[೧][೨] [೩] [೪]
- ॐ
- ಕೇಳು ಜನಮೇಜಯ ದರಿತ್ರೀ
- ಪಾಲ ನರ ನಾರಾಯಣಾಶ್ರಮ
- ಕೂಲವತಿಗಳ ನ೦ದನದ ನಿರ್ಮಳ ಸರೋವರದ |
- ಕೇಳಿಕೆಯ ನವಿಲುಗಳ ತು೦ಬಿಯ
- ಮೇಳವದ ಗೀತದ ವಿನೋದದ
- ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ || ೧ ||
- ಪದವಿಭಾಗ-ಅರ್ಥ:ಕೇಳು ಜನಮೇಜಯ ದರಿತ್ರೀಪಾಲ ನರ ನಾರಾಯಣಾಶ್ರಮ ಕೂಲವತಿಗಳ(ಹೊಳೆ,ನದಿ) ನ೦ದನದ(ಸೊಗಸಿನಲಿ) ನಿರ್ಮಳ ಸರೋವರದ ಕೇಳಿಕೆಯ ನವಿಲುಗಳ ತು೦ಬಿಯ ಮೇಳವದ ಗೀತದ ವಿನೋದದಲಿ+ ಆಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ.
- ಅರ್ಥ:ಶೌನಿಕಮುನಿಯು ಹೇಳಿಸನು,'ಕೇಳು ಜನಮೇಜಯ ದರಿತ್ರೀಪಾಲನೇ ನರನಾರಾಯಣಾಶ್ರಮದಲ್ಲಿ ನದಿ ಹೊಳೆಗಳ ಸನ್ನಿವೇಶದಲ್ಲಿ ಆನ೦ದ ನೀಡುವ ಸೊಗಸಿನಲ್ಲಿ ನಿರ್ಮಲ ಸರೋವರದ ಮತ್ತು ನವಿಲುಗಳ ಕೂಗಿನ ಕೇಳಿಕೆಯಲ್ಲಿ ತು೦ಬಿಯ ಮೇಳವದ-ಸದ್ದಿನ ಹಾಡಿನ ಗೀತದ ವಿನೋದದಲ್ಲಿ ವನವಾಸ ಸಾಮ್ರಾಜ್ಯವನ್ನು ಆಳಿದರು.
- ಪರಮ ಧರ್ಮಶ್ರವಣ ಸೌಖ್ಯದೊ
- ಳರಸನಿರೆ ಬದರಿಯಲಿ ಪೂರ್ವೋ
- ತ್ತರದ ದೆಸೆವಿಡಿದೆಸೆಗಿತತಿಶಯ ಗ೦ಧ ಬ೦ಧುರದ |
- ಭರಣಿ ಮನ್ಮಥ ಪೋತ ವಣಿಜನ
- ತರಣಿ ತರುಣ ಭ್ರಮರ ಸೇವಾ
- ಸರಣಿಯೆನೆ ಸುಳಿದುದು ಸಮೀರಣನಾ ಮಹಾದ್ರಿಯಲಿ || ೨ ||
- ಪದವಿಭಾಗ-ಅರ್ಥ:ಪರಮ ಧರ್ಮಶ್ರವಣ ಸೌಖ್ಯದೊಳು+ಅರಸನು+ ಇರೆ(ಇರಲು) ಬದರಿಯಲಿ ಪೂರ್ವೋತ್ತರದ(ಈಶಾನ್ಯ) ದೆಸೆವಿಡಿದು(ದೆಸೆ- ದಿಕ್ಕು, ಹಿಡಿದು)+ ಎಸೆಗಿತು+ ಅತಿಶಯ ಗ೦ಧ ಬ೦ಧುರದ(ಮಣಿದುದು, ಸುಂದರವಾದುದು) ಭರಣಿ ಮನ್ಮಥ ಪೋತ(ಮರಿ, ನಾವೆ) ವಣಿಜನ(ವ್ಯಾಪಾರಿ,ವಣಿಕ,ವರ್ತಕ,ಸಗಟು ವ್ಯಾಪಾರಿ) ತರಣಿ(ದೋಣಿ, ಹರಿಗೋಲು ೨ ಸೂರ್ಯ, ನೇಸರು) ತರುಣ(ಪ್ರಾಯದ) ಭ್ರಮರ(ಜೇನು) ಸೇವಾಸರಣಿಯು+ ಎನೆ ಸುಳಿದುದು ಸಮೀರಣನು(ವಾಯು)+ ಆ ಮಹಾದ್ರಿಯಲಿ(ಅದ್ರಿ- ಬೆಟ್ಟ).
- ಅರ್ಥ:ಹೀಗೆ ಅರಸ ಧರ್ಮಜನು ಪರಮ ಧರ್ಮಶ್ರವಣವನ್ನ ಕೇಳುತ್ತಾ ಬದರಿಯಲ್ಲಿ ಸೌಖ್ಯದಲ್ಲಿ ಇರಲು, ಈಶಾನ್ಯ ದಿಕ್ಕಿನಿಂದ ಅತಿಶಯ ಸುಗ೦ಧವು ಅಲ್ಲಿದ್ದವರ ಮೇಲೆ ಬೀಸಿತು. ಅದು ಸುಂದರ ಭರಣಿಯ ಮನ್ಮಥನ ಶಿಶು, ವಣಿಜನ- ವರ್ತಕನ ನಾವೆಯೋ, ಎಳೆಯ ಭ್ರಮರದ ಮಧುವನ್ನು ತರುವ ಸೇವಾಸರಣಿಯೋ ಎನ್ನುವಂತೆ ಆ ಬೆಟ್ಟದಲ್ಲಿ ಸುಗಂಧಗಾಳಿಯು ಸುಳಿಯಿತು.
- ಸರಸ ಸೌಗ೦ಧಿಕದ ಪರಿಮಳ
- ಭರದ ಭಾರವಣೆಯಲಿ ತಿಳಿಗೊಳ
- ನುರುಬುದೆರೆಗಳ ತಿವಿಗುಳಿನ ತು೦ತುರು ತುಷಾರದಲಿ |
- ಮೊರೆದೊಗುವ ಮರಿದು೦ಬಿಗಳ ಮೋ
- ಹರದ ಮೋಡಾಮೋಡಿಯಲಿ ಡಾ
- ವರಿಸಿತೈ ದಿ೦ದ್ರಿಯದಲೊ೦ದಿರೆ ಸಕಲ ಮುನಿಜನವ || ೩ ||
- ಪದವಿಭಾಗ-ಅರ್ಥ:ಸರಸ ಸೌಗ೦ಧಿಕದ ಪರಿಮಳ ಭರದ ಭಾರವಣೆಯಲಿ ತಿಳಿಗೊಳನು+ ಉರುಬು+ ದೆ+ ತೆರೆಗಳ ತಿವಿಗುಳಿನ ತು೦ತುರು ತುಷಾರದಲಿ ಮೊರೆದು+ ಒಗುವ ಮರಿದು೦ಬಿಗಳ ಮೋಹರದ(ಮೋಹರ- ಗುಂಪು) ಮೋಡಾಮೋಡಿಯಲಿ(ಮೋಹಕತೆಯಲ್ಲಿ) ಡಾವರಿಸಿತು(ಚುಚ್ಚು, ಸುತ್ತು,ತಿರುಗಾಡು, ಹಬ್ಬು,ಆವರಿಸು)+ ಐದಿ(ಬಂದು)+ ಇ೦ದ್ರಿಯದಲೊ೦ದಿ (ಮೂಗಿನಲ್ಲಿ- ಒಂದಿ - ಸೇರಿ)+ ಇರೆ ಸಕಲ ಮುನಿಜನವ
- ಅರ್ಥ:ಮನೋಹರವಾದ ಸೌಗ೦ಧಿಕದ ಪರಿಮಳವು ವೇಗವಾಗಿ ಅದರ ದಟ್ಟ ಪರಿಮಳದೊಡನೆ ತಿಳಿಯಾದ ಕೊಳದ ಏಳುವ ತೆರೆಗಳ ತೆರೆಗಳ ತಿವಿವ ಕುಳಿನೀರಿನ ತು೦ತುರುಗಳಲ್ಲಿ ತಂಪಾದ ಹನಿಗಳಲ್ಲಿ ಮೊರೆದು ಒಳನುಗ್ಗುವ ಮರಿದು೦ಬಿಗಳ ಗುಂಪಿನ ಮೋಹಕತೆಯಲ್ಲಿ ಸುತ್ತಿ ಬಂದು ಆವರಿಸಿ ಸಕಲ ಮುನಿಜನರ ಮೂಗಿನಲ್ಲಿ ಸೇರಿತ್ತು.
- ಮೇಲುತರದಲಿ ಪರಿಮಳದ ವೈ
- ಹಾಳಿಯಲಿ ಸಲೆ ಬೀದಿವರಿದು ಚ
- ಡಾಳಿಸುವ ಸೊಗಸಿನಲಿ ಸೊ೦ಪಾದಳು ಸರೋಜಮುಖಿ |
- ಸೋಲಿಸಿತಲಾ ಚೂಣಿಯಲಿ ಸ೦
- ಪಾಳಿಸಿದ ಸೌಗ೦ಧವಿನ್ನು ವಿ
- ಶಾಲ ಪದುಮದೆ೦ತುಟೆನುತವೆ ತೂಗಿದಳು ಶಿರವ || ೪ ||
- ಪದವಿಭಾಗ-ಅರ್ಥ:ಮೇಲುತರದಲಿ ಪರಿಮಳದ ವೈಹಾಳಿಯಲಿ(ಸಂಚಾರ,ವಿಹಾರ) ಸಲೆ ಬೀದಿವರಿದು ಚಡಾಳಿಸುವ(ದಟ್ಟವಾಗಿ ಹಬ್ಬುವ) ಸೊಗಸಿನಲಿ ಸೊ೦ಪಾದಳು ಸರೋಜಮುಖಿ, ಸೋಲಿಸಿತಲಾ ಚೂಣಿಯಲಿ(ಮುಂದಾಗಿ) ಸ೦ಪಾಳಿಸಿದ(ಸೂಸಿದ, ಬೀರಿದ ) ಸೌಗ೦ಧವು+ ಇನ್ನು ವಿಶಾಲ ಪದುಮದ+ ಎ೦ತುಟೊ+ ಎನುತವೆ ತೂಗಿದಳು ಶಿರವ.
- ಅರ್ಥ:ಸರೋಜಮುಖಿ ದ್ರೌಪದಿಯು ಉತ್ತಮ ತರದ ಪರಿಮಳದ ಸಮಚಾರವು ಚೆನ್ನಾಗಿ ಬೀದಿಹಿಡಿದು ದಟ್ಟವಾಗಿ ಹಬ್ಬುವ ಸೊಗಸಿನಿಂದ ಸೊ೦ಪಾಗಿ ಆನಮದಿಸಿದಳು. ಚೂಣಿಯಲಿ- ಮೊದಲಿಗೇ ಸೂಸಿದ ಸುಗ೦ಧವು ತನ್ನ ಮನಸ್ಸನ್ನು ಅಪಹರಿಸಿ ಸೋಲಿಸಿತಲಾ! ಇನ್ನು ವಿಶಾಲವಾದ/ ಅರಳಿದ ಪದ್ಮದ ಸಮೀಪದ ಸುವಾಸನೆಯು ಹೇಗಿದೆಯೋ! ಎನ್ನುತ್ತಾ ತಲೆಯನ್ನು ತೂಗಿದಳು.
- ಅರಸನಲಿ ಮೇಣ್ ನಕುಲ ಸಹದೇ
- ವರಲಿ ತನ್ನ ಮನೋರಥಕೆ ವಿ
- ಸ್ತರಣ ವಾಗದು ನುಡಿವಡಿಲ್ಲರ್ಜುನ ಸಮೀಪದಲಿ |
- ಅರಿ ಭಯ೦ಕರ ಭೀಮನೇ ಗೋ
- ಚರಿಸುವನಲಾಯೆನುತಲಾತನ
- ಹೊರೆಗೆ ಬ೦ದಳು ನಗುತ ನುಡಿದಳು ಮಧುರ ವಚನದಲಿ || ೫ ||
- ಪದವಿಭಾಗ-ಅರ್ಥ:ಅರಸನಲಿ ಮೇಣ್ ನಕುಲ ಸಹದೇವರಲಿ ತನ್ನ ಮನೋರಥಕೆ ವಿಸ್ತರಣವಾಗದು, ನುಡಿವಡೆ+ ಇಲ್ಲ+ ಅರ್ಜುನ ಸಮೀಪದಲಿ, ಅರಿ ಭಯ೦ಕರ ಭೀಮನೇ ಗೋಚರಿಸುವನಲಾ+ಯೆನುತಲಿ+ ಆತನ ಹೊರೆಗೆ ಬ೦ದಳು ನಗುತ ನುಡಿದಳು ಮಧುರ ವಚನದಲಿ.
- ಅರ್ಥ:ದ್ರೌಪದಿಯು ಪರಿಮಳದ ವಿಚಾರವನ್ನು ಅರಸ ಧರ್ಮಜನ ಬಳಿ ಅಥವಾ ನಕುಲ ಸಹದೇವರಲ್ಲಿ ಹೇಳಿದರೆ ತನ್ನ ಮನೋರಥದ ಬಯಕೆ ಈಡೇರದು. ಅರ್ಜುನನ ಬಳಿ ಹೇಳೋಣವೆಂದರೆ ಅವನು ಸಮೀಪದಲ್ಲಿ ಇಲ್ಲ; ಇನ್ನು ಅರಿಭಯ೦ಕರನಾದ ಭೀಮನೇ ಗೋಚರಿಸುವನಲ್ಲಾ ಎನುತ್ತಾ ಆತನು ಇದ್ದಕಡೆಗೆ ಬ೦ದಳು. ಅವನೊಡನೆ ನಗುತ್ತಾ ಮಧುರವಾದ ಮಾತುಗಳಿಂದ ಹೇಳಿದಳು.
- ಹಿರಿದು ಸೊಗಸಾಯ್ತೆನಗೆ ಪೂರ್ವದ
- ಪರಿಮಳದ ಕೇಳಿಯಲಿ ನೀನಾ
- ಸರಸಿಜವ ತ೦ದಿತ್ತು ತನ್ನ ಮನೋರಥವ್ಯಥೆಯ |
- ಪರಿಹರಿಪುದೆನಲಬುಜವದನೆಯ
- ಕುರುಳನುಗುರಲಿ ತಿದ್ದಿದನು ತ
- ತ್ಸರಸಿಜವ ತಹೆನೆನುತ ಕೊಂಡನು ನಿಜ ಗಧಾಯುಧವ || ೬ ||
- ಪದವಿಭಾಗ-ಅರ್ಥ:ಹಿರಿದು(ಬಹಳ) ಸೊಗಸಾಯ್ತು(ಸಂತಸ, ಹಿತ)+ ಎನಗೆ ಪೂರ್ವದ ಪರಿಮಳದ ಕೇಳಿಯಲಿ(ಅನುಭವ, ಅಟ), ನೀನು+ ಆ ಸರಸಿಜವ (ಸರಸಿಜ= ಕಮಲ) ತ೦ದು+ ಇತ್ತು(ಕೊಟ್ಟು) ತನ್ನ ಮನೋರಥ(ಬಯಕೆ) ವ್ಯಥೆಯ ಪರಿಹರಿಪುದು+ ಎನಲು+ ಅಬುಜವದನೆಯ (ಅಂಬುಜ ವದನೆ - ಕಮಲಮುಖಿ) ಕುರುಳನು+ ಉಗುರಲಿ ತಿದ್ದಿದನು'ತತ್(ಆ)+ ಸರಸಿಜವ ತಹೆನು(ತರುವೆನು)+ ಎನುತ ಕೊಂಡನು ನಿಜ(ತನ್ನ) ಗಧಾಯುಧವ.
- ಅರ್ಥ:ದ್ರೌಪದಿಯು ಭೀಮನ ಬಳಿಗೆ ಬಂದು,'ಪೂರ್ವದಿಕ್ಕಿನಿಂದ ಬಂದ ಕಮಲದ ಹೂವಿನ ಪರಿಮಳದ ಅನುಭವದಿಂದ ನನಗೆ ಬಹಳ ಆನಂದವಾಯಿತು. ನೀನು ಆ ಕಮಲವನ್ನು ತ೦ದು ನನಗೆ ಕೊಟ್ಟು ತನ್ನ ಮನಸ್ಸಿನಲ್ಲಿ ಅದನ್ನು ಪಡೆಯಬೇಕು ಎಂಬ ವ್ಯಥೆಯ ಪರಿಹರಿಸಬೇಕು,' ಎನ್ನಲು, ಭೀಮನು ಕಮಲಮುಖಿ ದ್ರೌಪದಿಯ ಮುಂಗುರುಳನ್ನು ಪ್ರೀತಿಯಿಂದ ಬೆರಳತುದಿಯಲ್ಲಿ ಸವರಿದನು. ಆ ಕಮಲವನ್ನು ತರುವೆನು ಎನ್ನುತ್ತಾ ತನ್ನ ಗಧಾಯುಧವನ್ನು ಕೈಗೆ ತೆಗೆದುಕೊಂಡನು.
- ಬಿಗಿದು ಬತ್ತಳಿಕೆಯನು ಹೊನ್ನಾ
- ಯುಗದ ಖಡ್ಗ ಶರಾಸನವ ಕೊ೦
- ಡಗಧರನ ನೆನೆದನಿಲಸುತ ಹೊರವ೦ಟ ನಾಶ್ರಮವ
- ಬಗಿದು ಹೊಕ್ಕನರಣ್ಯವನು ಬೊ
- ಬ್ಬೆಗಳಬಿರುಬಿನ ಭಾಹುಸತ್ವದ
- ವಿಗಡ ಭೀಮನ ಕಾಲುದುಳಿ ಕ೦ಪಿಸಿತು ಕಾನನವ ೭
- ಪದವಿಭಾಗ-ಅರ್ಥ:ಬಿಗಿದು ಬತ್ತಳಿಕೆಯನು ಹೊನ್ನಾಯುಗದ(ಆಯ- ಆಯಕಟ್ಟು) ಖಡ್ಗ ಶರಾಸನವ(ಬಿಲ್ಲು) ಕೊ೦ಡು+ ಅಗಧರನ(ಕೃಷ್ಣ- ಬೆಟ್ಟ ಹೊತ್ತವ) ನೆನೆದು+ ಅನಿಲಸುತ(ವಾಯು ಮಗ) ಹೊರವ೦ಟನು+ ಆಶ್ರಮವ, ಬಗಿದು ಹೊಕ್ಕನು+ ಅರಣ್ಯವನು ಬೊಬ್ಬೆಗಳ(ಆರ್ಭಟ) ಬಿರುಬಿನ ಭಾಹುಸತ್ವದ ವಿಗಡ(ವೀರ, ಪರಾಕ್ರಮಿ) ಭೀಮನ ಕಾಲುದುಳಿ(ಕಾಲು ತುಳಿ-ತ) ಕ೦ಪಿಸಿತು ಕಾನನವ(ಕಾಡು).
- ಅರ್ಥ:ಅನಿಲಸುತ ಭೀಮನು ಬೆನ್ನಿಗೆ ಬತ್ತಳಿಕೆಯನ್ನು ಬಿಗಿದು. ಗದೆಯ ಜೊತೆ, ತನ್ನ ಹೊನ್ನಿನ ಹಿಡಿಯ ಖಡ್ಗವನ್ನೂ ಬಿಲ್ಲನ್ನೂ ತೆಗೆದುಕೊ೦ಡು, ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು ಆಶ್ರಮವನ್ನು ಬಿಟ್ಟು ಹೊರಹೊರಟನು. ಅವನು ವೇಗವಾಗಿ ಕಾಡನ್ನು ಬಗಿದು- ನುಗ್ಗಿ ಅರಣ್ಯವನ್ನು ಹೊಕ್ಕನು. ಆರ್ಭಟದ ಬಲಿಷ್ಠವಾದ ಭಾಹುಸತ್ವದ ಪರಾಕ್ರಮಿ ಭೀಮನ ವೇಗದ ಕಾಲು ತುಳಿತವು ಕಾಡನ್ನೇ ನಡುಗಿಸಿತು.
- ಒದರಿದರೆ ಪರ್ವತದ ಶಿಖರದ
- ಲುದುರಿದವು ಹೆಗ್ಗು೦ಡುಗಳು ಮುರಿ
- ದೊದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮಾಳಿಗಳು |
- ಗದೆಯ ಹೊಯ್ಲಿನ ಗ೦ಡ ಶೈಲವೊ
- ಕದಳಿಗಳೊ ತಾವರೆಯ ವುಬ್ಬಿದ
- ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ || ೮ ||
- ಪದವಿಭಾಗ-ಅರ್ಥ:ಒದರಿದರೆ ಪರ್ವತದ ಶಿಖರದಲಿ+ ಉದುರಿದವು ಹೆಗ್ಗು೦ಡುಗಳು(ದೊಡ್ಡ ಕಲ್ಲಿನ ಗುಂಡುಗಳು) ಮುರಿದು+ ಒದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮ+ ಆಳಿಗಳು(ಮರಗಳ ಸಮೂಹ), ಗದೆಯ ಹೊಯ್ಲಿನ(ಹೊಡೆತ, ಸದ್ದಿನ) ಗ೦ಡ ಶೈಲವೊ ಕದಳಿಗಳೊ(ಕದಳಿ= ಬಾಳೆ) ತಾವರೆಯ ವುಬ್ಬಿದ ಮದಮುಖನ(ಮೂರ್ಖ; ಅಹಂಕಾರಿ, ಗರ್ವಿ; ದೈತ್ಯ) ಪರಿಮಸಕ(ಮಸಕ= ರೋಷ,ಉದ್ವೇಗ) ಮುರಿದುದು ಗಿರಿತರುವ್ರಜವ(ಬೆಟ್ಟ ಮರಗಳ ಸಮೂಹವ)
- ಅರ್ಥ:ಭೀಮನು ಆರ್ಭಟಿಸಿದರೆ ಪರ್ವತದ ಶಿಖರದಲ್ಲಿದ್ದ ಹೆಗ್ಗು೦ಡುಗಳು ಉದರಿ ಬಿದ್ದವು. ಮರಗಳನ್ನು ಮುರಿದು ಒದೆಯಲು ಬೇರುಸಹಿತ ಮಹಾ ಮರಗಳ ಸಮೂಹಗಳು ಬಿದ್ದವು. ಗದೆಯ ಹೊಡೆತಕ್ಕೆ ಗಟ್ಟಿ ಬೆಟ್ಟವೊ ಕದಳಿಗಳೊ- ಬಾಳೆಯ ಗಿಡಗಳೂ ಬಿದ್ದವು. ತಾವರೆಯ ಉಬ್ಬಿದ ಮದಮುಖನ ಪರಿಮಸಕ ಮುರಿದುದು
- ಮುಡುಹು ಸೋ೦ಕಿದೊಡಾ ಮದಾದ್ರಿಗೆ
- ಳೊಡನೆ ತೋರಹತರು ಕೆಡೆದುವಡಿ
- ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು |
- ಒಡೆದುದಿಳೆ ಬೊಬ್ಬಿರಿತಕೀತನ
- ತೊಡೆಯ ಗಾಳಿಗೆ ಹಾರಿದವು ಕಿರು
- ಗಿಡ ಮರ೦ಗಳು ಮೀರಿ ನಡೆದನು ಭೀಮ ನಡವಿಯಲಿ ೯
- ಪದವಿಭಾಗ-ಅರ್ಥ:ಮುಡುಹು(ಹೆಗಲು) ಸೋ೦ಕಿದೊಡೆ (ತಾಗಿದರೆ)+ ಆ ಮದಾದ್ರಿಗೆಳೊಡನೆ(ಮದ ಅದ್ರಿ- ಸೊಕ್ಕಿನಗಟ್ಟಿ ಬೆಟ್ಟ) ತೋರಹ(ತೋರ- ದಪ್ಪ) ತರು(ಮರ) ಕೆಡೆದುವು(ಬಿದ್ದವು)+ ಅಡಿಯಿಡಲು(ಅಡಿ- ಪಾದ) ಹೆಜ್ಜೆಗೆ ತಗ್ಗಿದುದು ನೆಲಸಹಿತ, ಹೆದ್ದವರು(ಮೀಟುಗೋಲು), ಒಡೆದುದು+ ಇಳೆ(ಭೂಮಿ) ಬೊಬ್ಬಿರಿತಕೆ (ಆರ್ಭಟಕ್ಕೆ),+ ಈತನ ತೊಡೆಯ ಗಾಳಿಗೆ ಹಾರಿದವು ಕಿರುಗಿಡ ಮರ೦ಗಳು, ಮೀರಿ ನಡೆದನು ಭೀಮನು+ ಅಡವಿಯಲಿ.
- ಅರ್ಥ:ಭೀಮನು ರಭಸದಿಂದ ಹೊಗುವಾಗ ಅವನ ಭುಜ ತಾಗಿದರೆ ಆ ದೊಡ್ಡಬೆಟ್ಟಗಳಲ್ಲಿದ್ದ ಮರಗಳು ದಪ್ಪನಾದ ಮರಗಿಡಗಳು ಸಹ ಬಿದ್ದುವು. ಅವನು ಹೆಜ್ಜೆಇಟ್ಟರೆ, ಆ ಹೆಜ್ಜೆಯ ಮೀಟುವಿಕೆಗೆ ನೆಲಸಹಿತ ತಗ್ಗಿತು. ಅವನು ಬೊಬ್ಬಿರಿತಕ್ಕೆ ಭೂಮಿಯು ಬಾಯಿಬಿಟ್ಟಿತು. ಈತನ ತೊಡೆಯ ಗಾಳಿಗೆ ಕಿರುಗಿಡ ಮರಗಳು ಹಾರಿದವು. ಹೀಗೆ ಅವನು ಮಿತಿಮೀರಿದ ವೇಗದಿಂದ ಅಡವಿಯಲ್ಲಿ ನಡೆದನು.
- ಹುಲಿ ಕರಡಿ ಕಾಡಾನೆ ಸಿ೦ಹಾ
- ವಳಿಗಳೀತನ ದನಿಗೆ ಯೋಜನ
- ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿ ಮುರಿದು |
- ಹಳುವ ತಟಪಟ ವಾಯ್ತು ದಿಗ್ಗಜ
- ತುಳಿದ ಬಾಳೆಯ ವನದವೊಲು ವೆ
- ಗ್ಗಳೆಯನೈ ಕಲಿಭೀಮ ಬ೦ದನು ವನದ ಮಧ್ಯದಲಿ || ೧೦ ||
- ಪದವಿಭಾಗ-ಅರ್ಥ:ಹುಲಿ ಕರಡಿ ಕಾಡಾನೆ ಸಿ೦ಹ+ ಆವಳಿಗಳು(ಗುಂಪುಗಳು)+ ಈತನ ದನಿಗೆ ಯೋಜನ ವಳೆಯದಲಿ(ವಳಯ- ವಲಯ, ಪ್ರದೇಶ) ಹಾಯ್ದು+ ಓಡಿದವು, ನೋಡುತ್ತ ಮುರಿ ಮುರಿದು ಹಳುವ ತಟಪಟವಾಯ್ತು ದಿಗ್ಗಜ ತುಳಿದ ಬಾಳೆಯ ವನದವೊಲು ವೆಗ್ಗಳೆಯನೈ(ವೆಗ್ಗಳ ಶ್ರೇಷ್ಠ) ಕಲಿಭೀಮ ಬ೦ದನು ವನದ ಮಧ್ಯದಲಿ.
- ಅರ್ಥ:ಭೀಮನ ದನಿಗೆ ಹುಲಿ ಕರಡಿ ಕಾಡಾನೆ ಸಿ೦ಹಹಳ ಗುಂಪುಗಳು ಯೋಜನ ಪ್ರದೇಶದಷ್ಟು ದೂರ ಹಾಯ್ದು ಓಡಿದವು. ಅವನು ಅತ್ತ ಇತ್ತ ನೋಡುತ್ತ ಗಿಡಗಳ ಹಳುವನ್ನು ಮುರಿ ಮುರಿದು ನುಗ್ಗಲು, ಅದು ದಿಗ್ಗಜ ತುಳಿದ ಬಾಳೆಯತೋಟದಂತೆ ಕಾಡು ತಟಪಟವಾಯಿತು- ಪುಡಿಪುಡಿಯಾಯಿತು. ಕಲಿಭೀಮನು ಶ್ರೇಷ್ಠ ಪರಾಕ್ರಮಿಯೇ ಸರಿ. ಅವನು ವನದ ಮಧ್ಯಕ್ಕೆ ಬ೦ದನು.
- ಟಿಪ್ಪಣಿ: ದಟ್ಟ ಕಾಡಿನಲ್ಲಿ ಒಬ್ಬರೋ ಇಬ್ಬರೋ ಹೋಗುವಾಗ ಕಾಡು ಮೃಗಗಳು ಅಕಸ್ಮಾತ್ ಎದರಾಗದೇ ಇರಲಿ, ದೂರ ಸರಿಯಲಿ ಎಂದು, ಕೂಗುತ್ತಾ ಹೋಗುವುದು ಪದ್ದತಿ.
- ಬಿರಿದವದ್ರಿಗಳನಿಲಸುತನು
- ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
- ಶರಭ ಶಾರ್ದೂಲ೦ಗಳಿಲ್ಲ ವಿಲೋಚನಾ೦ತದಲಿ |
- ಮರಗಿರದ ಮೃಗಗಿಗದ ಮಾತೇ
- ನರಸ ಭೀಮನ ದನಿಗೆ ಬೆಚ್ಚದೆ
- ಗಿರಿ ಗುಹೆಗಳೇ ಮಲೆತು ನಿ೦ದವುದನಿಗೆ ದನಿಗೊಡುತ || ೧೧ ||
- ಪದವಿಭಾಗ-ಅರ್ಥ:ಬಿರಿದವು+ ಅದ್ರಿಗಳು(ಬೆಟ್ಟಗಳು)+ ಅನಿಲಸುತನ+ ಉಬ್ಬರದ ಬೊಬ್ಬೆಗೆ, ಮಿಕ್ಕ ಮೃಗತತಿ ಶರಭ ಶಾರ್ದೂಲ೦ಗಳು+ ಇಲ್ಲ ವಿಲೋಚನಾ೦ತದಲಿ(ಕಣ್ಣಿನ ನೋಟದ ಕೊನೆಯವರೆಗೆ), ಮರಗಿರದ ಮೃಗಗಿಗದ ಮಾತೇನು+ ಅರಸ ಭೀಮನ ದನಿಗೆ ಬೆಚ್ಚದೆ ಗಿರಿ ಗುಹೆಗಳೇ ಮಲೆತು ನಿ೦ದವು ದನಿಗೆ ದನಿಗೊಡುತ
- ಅರ್ಥ:ಅನಿಲಸುತ ಭೀಮನು ಕಾಡಿನಲ್ಲಿ ಬರುತ್ತಾ ಮಾಡಿದ ಉಬ್ಬರದ ಬೊಬ್ಬೆಗೆ ಬೆಟ್ಟಗಳು ಬಿರಿದವು; ಉಳಿದ ಮೃಗಗಳ ಗುಂಪು, ಶರಭ ಶಾರ್ದೂಲಗಳು ಕಣ್ಣಿನ ನೋಟದ ಕೊನೆಯವರೆಗೂ ಕಾಣದಮತಾದವು. ಮರ-ಗಿರದ ಮೃಗ-ಗಿಗದ ಮಾತೇನು? ಅರಸ ಭೀಮನ ದನಿಗೆ ಬೆಚ್ಚದೆ- ಹೆದರದೆ ಗಿರಿ ಗುಹೆಗಳು ಮಾತ್ರಾ ವಿರೋಧಿಸಿ ಅವನ ದನಿಗೆ ಮರುದನಿಕೊಡುತ್ತಾ ನಿ೦ತವು.
- ಆ ಮಹಾದ್ರಿಯ ತಪ್ಪಲಲಿ ನಿ
- ಸ್ಸೀಮ ಕದಳೀ ಷ೦ಡದಲಿ ರಘು
- ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
- ಭೀಮವಿಕ್ರಮ ನಿದ್ದನೀಯು
- ದ್ದಾಮ ಸಿ೦ಹದ್ವನಿಗೆ ನಿದ್ರಾ
- ತಾಮಸದ ತನಿಮದವಡಗೆ ಕ೦ದೆರೆದನಾ ಹನುಮ || ೧೨ ||
- ಪದವಿಭಾಗ-ಅರ್ಥ:ಆ ಮಹಾದ್ರಿಯ(ಮಹಾ+ ಅದ್ರಿ ) ತಪ್ಪಲಲಿ ನಿಸ್ಸೀಮ ಕದಳೀ(ಬಾಳೆ)+ ಷ೦ಡದಲಿ(ವಿಶೇಷ ಪ್ರಯೋಗ- ಷ೦ಡ:ಶಂಡ= ನಿವೇಶ, ಶಿಬಿರ, ಪಾಳಯ, ಸಮೂಹ.) ರಘು ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ(ರಾಮನಾಮದ ಹಾಲಿನ ಆಭಿಷೇಕದ ಪೂರ್ಣ ನಿದ್ದೆಯ ಸುಖದಲ್ಲಿ) ಭೀಮವಿಕ್ರಮ(ಮಹಾಶೂರ) ನಿದ್ದನು+ ಈ ಯು+ ಉದ್ದಾಮ(ಉತ್ತಮ, ಶ್ರೇಷ್ಠವಾದ) ಸಿ೦ಹದ್ವನಿಗೆ ನಿದ್ರಾತಾಮಸದ ತನಿಮದವು+ ಅಡಗೆ ಕ೦ದೆರೆದನು+ ಆ ಹನುಮ.(ನಿದ್ದೆಯಲ್ಲೂ ರಾಮನಾಮ)
- ಅರ್ಥ:ಆ ಮಹಾಬೆಟ್ಟದ ತಪ್ಪಲಲ್ಲಿ ಬಾಳೆಯತೋಟದಲ್ಲಿ ನಿಸ್ಸೀಮನಾದ ಭೀಮವಿಕ್ರಮನಾದ ಹನುಮನು,'ರಘು ರಾಮನಾಮ ಸುಧಾಭಿಷೇಕದ ಪೂರ್ಣ ಸೌಖ್ಯದಲ್ಲಿ ಇದ್ದನು. ಈ ಭೀಮನ ಉದ್ದಾಮ ಸಿ೦ಹದ್ವನಿಗೆ ನಿದ್ರೆಯ ತಾಮಸದಲ್ಲಿ ತನಿಮದವು- ಗಾಢನಿದ್ದೆಯು ಅಡಗಿ ಎಚ್ಚರಾಗಲು, ಆ ಹನುಮಂತನು ಕಣ್ಣು ತೆರೆದನು.
- ಏನಿದೆತ್ತಣ ರಭಸವೀ ಗಿರಿ
- ಸಾನುವಿದಮಾನುಷ ವಿಹಾರ
- ಸ್ಥಾನವಿವನಾರೋ ಮಹಾದೇವ ಪ್ರಚ೦ಡನಲ |
- ಈನಿನದವೆಮ್ಮ೦ದಿನಗ್ಗದ
- ವಾನರ ಗರ್ಜನೆಗೆ ಗುರುವಾ
- ಯ್ತೇನನ೦ಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ || ೧೩ ||
- ಪದವಿಭಾಗ-ಅರ್ಥ:ಏನಿದು+ ಎತ್ತಣ ರಭಸವು+ ಈ ಗಿರಿ ಸಾನುವು+ ಇದು(ಸಾನು= ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ಪ್ರಸ್ಥಭೂಮಿ ೨ ಬೆಟ್ಟದ ತುದಿ, ಶಿಖರ)+ ಅಮಾನುಷ ವಿಹಾರಸ್ಥಾನವು+ ಇವನಾರೋ ಮಹಾದೇವ ಪ್ರಚ೦ಡನಲ(ಉಗ್ರ, ಮಹಾಶೂರ), ಈ ನಿನದವು+ ಎಮ್ಮ+ ಅ೦ದಿನ+ ಅಗ್ಗದ(ಶ್ರೇಷ್ಠ) ವಾನರ ಗರ್ಜನೆಗೆ ಗುರುವಾಯ್ತು(ಹೆಚ್ಚಾಯಿತು)+ ಏನನ೦ಬೆನು+ ಎನುತ್ತ ಮೆಲ್ಲನೆ ಮಿಡುಕಿದನು ಹನುಮ.
- ಅರ್ಥ:ಹನುಮನು ಭೀಮನ ಆರ್ಭಟವನ್ನು ಕೇಳಿ,'ಏನಿದು, ಎಲ್ಲಿಯ ರಭಸದ ಆರ್ಭಟವು? ಈ ಗಿರಿ ಶಿಕರದ ವಿಶಾಲ ಪ್ರದೇಶವು- ಇದು ಮನುಷ್ಯರಿಗೆ ಪ್ರವೇಶವಿಲ್ಲ, ಅಮಾನುಷರ ವಿಹಾರದ ಸ್ಥಳವು. ಇವನಾರೋ ಮಹಾದೇವ! ಪ್ರಚ೦ಡನಾಗಿದ್ದಾನೆ, ಈ ಸದ್ದು ನಮ್ಮ ಅ೦ದಿನ ಲಂಕೆಯ ದೊಡ್ಡ ವಾನರ ಗರ್ಜನೆಗೆ ಹೆಚ್ಚಾಯಿತು. ಏನನ್ನು ಹೇಳುವುದು? ಎನ್ನುತ್ತ ಹನುಮನು ಮೆಲ್ಲನೆ ಮಿಡುಕಿ ಮೈಮುರಿದನು.
- ಮುರಿಯದ೦ತಿರೆ ಲಘುವಿನಲಿ ಹೆ
- ಮ್ಮರವನೊಯ್ಯನೆ ನೆಮ್ಮಿ ಕುಳ್ಳಿ
- ರ್ದರಿ ದಿಶಾಪಟ ನುಡಿಸಿದನು ಪವಮಾನನ೦ದನನ |
- ಭರವಿದೆಲ್ಲಿಗೆ ಮರ್ತ್ಯನೋ ಖೇ
- ಚರನೋದೈತ್ಯನೋ ದಿವಿಜನೋ ಕಿ
- ನ್ನರನೋ ನೀನಾರೆ೦ದು ಭೀಮನ ನುಡಿಸಿದನು ಹನುಮ || ೧೪ ||
- ಪದವಿಭಾಗ-ಅರ್ಥ:ಮುರಿಯದ೦ತೆ+ ಇರೆ ಲಘುವಿನಲಿ(ಹಗುರ) ಹೆಮ್ಮರವನು(ದೊಡ್ಡಮರ)+ ಒಯ್ಯನೆ ನೆಮ್ಮಿ(ಒರಗಿ ಆಧರಿಸಿ) ಕುಳ್ಳಿರ್ದ+ ಅರಿ ದಿಶಾಪಟ(ಶತ್ರುಗಳನ್ನು ದಿಕ್ಕು ದಿಕ್ಕಿಗೆ ಓಡಿಸುವವ, ದಿಕ್ಪಟ, ದಿಶಾಮಂಡಲ.) ನುಡಿಸಿದನು ಪವಮಾನ ನ೦ದನನ(ವಾಯುಪುತ್ರನ); ಭರವು+ ಇದೆಲ್ಲಿಗೆ ಮರ್ತ್ಯನೋ(ಮನುಷ್ಯ), ಖೇಚರನೋ, ದೈತ್ಯನೋ, ದಿವಿಜನೋ(ದೇವತೆ), ಕಿನ್ನರನೋ, ನೀನಾರು+ ಎ೦ದು ಭೀಮನ ನುಡಿಸಿದನು ಹನುಮ.
- ಅರ್ಥ:ಮುರಿಯದೇ ಇರುವಂತೆ ಹಾಗೆಯೇ ಹಗುರವಾಗಿ ಹೆಮ್ಮರವನ್ನು ಒಯ್ಯನೆ-ಮೆಲ್ಲಗೆ ಒರಗಿ ಕುಳಿತಿದ್ದ ವಾಯುಪುತ್ರನನ್ನು ಶತ್ರುನಾಶಕ ದಿಕ್ಪಟ ಭೀಮನು ಮಾತನಾಡಿಸಿದನು. ಆಗ ಹನುಮನು ತಾವು ಈ ಭರಾಟೆಇಂದ ಇದೆಲ್ಲಿಗೆ ಹೊರಟಿದ್ದೀರಿ? ನೀವು ಮಾನವರೊ? ಖೇಚರಾದ ಗಂಧರ್ವನೊ?, ದೈತ್ಯನೋ? ದೇವನೋ, ಕಿನ್ನರನೋ, ನೀನಾರು? ಎ೦ದು ಭೀಮನನ್ನು ಕೇಳಿದನು.
- ನಾವು ಮರ್ತ್ಯರು ದೂರದಲಿ ರಾ
- ಜೀವಗ೦ಧ ಸಮೀರಣನ ಸ೦
- ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ |
- ತಾವರೆಯ ತಹೆನೆನುತ ಸಿ೦ಹ ವಿ
- ರಾವದಲಿ ವಿಕ್ರಮಿಸೆ ವಿಗಡನ
- ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ || ೧೫ ||
- ಪದವಿಭಾಗ-ಅರ್ಥ:ನಾವು ಮರ್ತ್ಯರು ದೂರದಲಿ ರಾಜೀವಗ೦ಧ(ಕಮಲದ ಪರಿಮಳದ) ಸಮೀರಣನ(ಗಾಳಿಯ) ಸ೦ಭಾವನೆಗೆ(ಬೀಸುವಿಕೆಗೆ) ಸೊಗಸಿದಳು ಸತಿಯು+ ಆಕೆಯ ವಚಸ್ಸಿನಲಿ(ಮಾತಿನ ಬೇಡಿಕೆಯ ಕಾರಣ) ತಾವರೆಯ ತಹೆನು(ತರುವೆನು)+ ಎನುತ ಸಿ೦ಹ ವಿರಾವದಲಿ(ರವ- ಸದ್ದು; ರಾವ, ಸದ್ದು ಅರಚಾಟ, ಕೂಗು, ಕುಹೂರವ; ವಿರಾವ- ವಿಶೇಷ ದ್ವನಿ, ಸಿಂಹದ ದ್ವನಿಯಲ್ಲಿ) ವಿಕ್ರಮಿಸೆ(ಮುಂದೆಹೊಗಲು) ವಿಗಡನ(ವೀರನನ್ನು)+ ಅದು+ ಆವರಿಸಿ ಬಲುಬಾಲ ತಡೆದುದು ಪವನಜನ(ಭೀಮ) ಪಥವ(ದಾರಿ)
- ಅರ್ಥ:ಹನುಮನ ಪ್ರಶ್ನೆಗೆ ಭೀಮನು, 'ನಾವು ಮಾನವರು, ದೂರದಲ್ಲಿ ಕಮಲದ ಪರಿಮಳದ ಗಾಳಿಯ ಬೀಸುವಿಕೆಗೆ ನನ್ನ ಸತಿ ದ್ರೌಪದಿಯು ಸೊಗಸಿದಳು-ಆನಂದಪಟ್ಟಳು. ಆಕೆಯ ಮಾತಿನ ಬೇಡಿಕೆಯ ಕಾರಣ, ಆ ತಾವರೆಯನ್ನು ತರಲು ಹೋಗುವೆನು,'ಎಂದು ಸಿ೦ಹಧ್ವನಿಯಲ್ಲಿ ಹೇಳಿ ಮುಂದೆ ಹೋಗಲು ಕಾಲಿಡುವಾಗ ವೀರ ಭೀಮನ ದಾರಿಯನ್ನು ಆವರಿಸಿ ಹನುಮನ ಬಲುಉದ್ದ ಬಾಲ ತಡೆಯಿತು.
- ಗದೆಯ ಮೊನೆಯಲಿ ನೂಕಿದನು ರೋ
- ಮದಲಿ ಚಲಿಸದು ಬಾಲ ನೋಡಿದ
- ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ |
- ಒಡೆದಡದ್ರಿಗಳಳಿವವೆನ್ನ೦
- ಗದಲಿ ನಾಬಲ್ಲಿದನು ಬಾಲದ
- ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ || ೧೬ ||
- ಪದವಿಭಾಗ-ಅರ್ಥ:ಗದೆಯ ಮೊನೆಯಲಿ ನೂಕಿದನು ರೋಮದಲಿ ಚಲಿಸದು ಬಾಲ, ನೋಡಿದನು+ ಇದು ವಿಚಿತ್ರವಲಾ ಯೆನುತ ನುಡಿಸಿದನು ಕಪಿವರನ, ಒಡೆದಡೆ+ ಅದ್ರಿಗಳು+ ಅಳಿವವು(ನಾಶವಾಗುವುವು)+ ಎನ್ನ+ ಅ೦ಗದಲಿ(ಬಾಹುಗಳಲ್ಲಿ) ನಾ ಬಲ್ಲಿದನು ಬಾಲದ ಕದವ ತೆಗೆ ಬಟ್ಟೆಯಲಿ+ ಎನುತ ಗರ್ಜಿಸಿದನು+ ಆ ಭೀಮ.
- ಅರ್ಥ: ಭೀಮನು ಆ ದಾರಿಯಲ್ಲಿದ್ದ ಬಾಲವನ್ನು ಸರಿಸಲು ಗದೆಯ ಮೊನೆಯಿಂದ ನೂಕಿದನು. ಆ ಬಾಲವು ರೋಮದಷ್ಟೂ ಚಲಿಸಲಿಲ್ಲ. ಅದನ್ನು ನೋಡಿದನು, ಇದು ವಿಚಿತ್ರವಲಾ ಎನ್ನುತ್ತಾ, ಕಪಿವರ ಹನುಮನನ್ನು ಕುರಿತು ನುಡಿದನು. ಆ ಭೀಮನು,'ನನ್ನ ಬಾಹುಗಳಿಂದ ಒಡೆದರೆ ಬೆಟ್ಟಗಳು ಪುಡಿಯಾಗುವುವು. ನಾನು ಸಾಮಾನ್ಯನಲ್ಲ. ಬಲ್ಲಿದನು- ಬಲಾಢ್ಯ. ನಿನ್ನ ಅಡ್ಡವಿಟ್ಟ ಬಾಲದ ಕದವನ್ನು ತೆಗೆ,' ಎಂದು ಗರ್ಜಿಸಿದನು.
- ನೀವು ಬಲ್ಲಿದರಿದಕೆ ಸ೦ಶಯ
- ವಾವು ದಲ್ಲದೊಡೀ ಮದದ್ವಿಪ
- ವೀ ವಿಹಗಕುಲವೀ ಮೃಗವ್ರಜವ೦ಜುವವೆ ನಿಮಗೆ |
- ನಾವು ವೃದ್ದರು ನಮ್ಮ ಬಾಲವ
- ನಾವು ಹದುಳಿಸಲಾರೆ ವೀಗಳು
- ನೀವು ತೊಲಗಿಸಿ ಬಿಜಯ ಮಾಡುವುದೆ೦ದನಾ ಹನುಮ || ೧೭ ||
- ಪದವಿಭಾಗ-ಅರ್ಥ:ನೀವು ಬಲ್ಲಿದರು+ ಅದಕೆ ಸ೦ಶಯವು+ ಆವುದು?+ ಅಲ್ಲದೊಡೆ+ ಈ ಮದದ್ವಿಪವು+ ಈ ವಿಹಗಕುಲವು+ ಈ ಮೃಗವ್ರಜವು+ ಅ೦ಜುವವೆ ನಿಮಗೆ? ನಾವು ವೃದ್ದರು ನಮ್ಮ ಬಾಲವ ನಾವು ಹದುಳಿಸಲಾರೆವು+ ಈಗಳು ನೀವು ತೊಲಗಿಸಿ ಬಿಜಯ ಮಾಡುವುದು+ ಎ೦ದನು+ ಆ ಹನುಮ
- ಅರ್ಥ:ಅದಕ್ಕೆ ಆ ಹನುಮನು,'ನೀವು ಬಲ್ಲಿದರು-ಬಲಾಢ್ಯರು; ಅದಕ್ಕೆ ಸ೦ಶಯವು ಯಾವುದು? ಅಲ್ಲದಿದ್ದರೆ ನಿಮಗೆ ಈ ಮದದ ಆನೆ, ಈ ಪಕ್ಷಿಗಳು, ಈ ಮೃಗ ಸಮೂಹ, ಅ೦ಜುವುವೆ? ನಾವು ವೃದ್ದರು ನಮ್ಮ ಬಾಲವನ್ನು ನಾವು ಸರಿಸಲಾರೆವು. ಈಗ ನೀವು ಅದನ್ನು ಸರಿಸಿ ಬಿಜಯ ಮಾಡುವುದು, ಮುಂದೆಹೋಗಬಹುದು,' ಎ೦ದನು.
- ಐಸಲೇ ತಪ್ಪೇನೆನುತ ತನ
- ಗೇಸು ಬಲವು೦ಟೈಸರಲಿ ಕ
- ಟ್ಟಾಸುರದಲೌ೦ಕಿದನು ಬಾಲವನೊದರಿ ಬೊಬ್ಬಿಡುತ |
- ಗಾಸಿಯಾದನು ಪವನ ಸುತನೆ
- ಳ್ಳೈಸು ಮಿಡುಕದು ಬಾಲ ಊರ್ಧ್ವ
- ಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ || ೧೮ ||
- ಪದವಿಭಾಗ-ಅರ್ಥ:ಐಸಲೇ(ಹಾಗೋ) ತಪ್ಪೇನು+ ಎನುತ ತನಗೆ+ ಏಸು(ಎಷ್ಟೊಂದು) ಬಲವು೦ಟು+ ಐಸರಲಿ ಕಟ್ಟಾಸುರದಲಿ(ಆವೇಶದಿಂದ)+ ಔ೦ಕಿದನು ಬಾಲವನು+ ಒದರಿ(ಕೂಗಿ) ಬೊಬ್ಬಿಡುತ; ಗಾಸಿಯಾದನು(ನೊಂದನು, ಬಳಲಿ ಬೆಂಡಾದನು) ಪವನ ಸುತನು+ ಎಳ್ಳೈಸು ಮಿಡುಕದು(ಮಿಡುಕು= ಅಲುಗು) ಬಾಲ ಊರ್ಧ್ವ-ಶ್ವಾಸ(ಮೇಲುಸಿರು) ಲಹರಿಯಲಿ(ಸ್ಥಿತಿ)+ ಅಡಿಗಡಿಗೆ ಲಟಕಟಿಸಿದನು(ಲಟಕಟಿಸು- ಆತುರಪಡು, ಉತ್ಸಾಹಪಡು, ಹಲ್ಲುಕಡಿದ ಸದ್ದು?) ಭೀಮ.
- ಅರ್ಥ: ಭೀಮನು,'ವಯಸ್ಸಾಯಿತೇ? ಹಾಗೋ? ಹಾಗಿದ್ದರೆ ಸರಿ, ತಪ್ಪೇನು? ಎನ್ನುತ್ತಾ ತನಗೆ ಎಷ್ಟೊಂದು ಬಲವು೦ಟು, ಅದಷ್ಟನ್ನೂ ಉಪಯೊಗಿಸಿ ಆವೇಶದಿಂದ ಕೂಗಿ ಬೊಬ್ಬಿಡುತ್ತಾ ಬಾಲವನ್ನು ಪಕ್ಕಕ್ಕೆ ಒತ್ತಿದನು. ಪವನಸುತ ಭೀಮನು ಬಳಲಿ ಬೆಂಡಾದನು. ಅವನು ಶಕ್ತಿಯನ್ನಲ್ಲಾ ಉಯೋಗಿಸಿದರೂ, ಆ ಬಾಲ ಎಳ್ಳಿನಷ್ಟೂ ಅಲುಗಲಿಲ್ಲ. ಭೀಮನು ಬಳಲಿ ಮೇಲುಸಿರು ಸಿಕ್ಕಿದ ಸ್ಥಿತಿಯಲ್ಲಿ ಅಡಿಗಡಿಗೆ ಲಟಕಟಿಸಿದನು- ಹಲ್ಲಹಲ್ಲುಕಡಿದನು.
- ತೆಗೆದು ಸೈರಿಸಿ ನಿ೦ದು ಹೊಯ್ವ
- ಳ್ಳೆಗಳು ಡಾವರವಡಗಲೊಳ ತಾ
- ಳೀಗೆಗೆ ಕಳವಳ ನೂಕಿದನು ಕರ್ಪುರದ ಹಳಕುಗಳ |
- ಡಗೆ ಡಗೆಯ ಮರುವಲಗೆ ಗೌಡೊ
- ತ್ತುಗಳ ಬಲಿದವಯವದ ಸತ್ರಾ
- ಣಿಗಳದೇವನು ಠಾವುರಿಯಲೊದಗಿದನು ಬಾಲದಲಿ || ೧೯ ||
- ಪದವಿಭಾಗ-ಅರ್ಥ:ತೆಗೆದು ಸೈರಿಸಿ(ಪ್ರಯತ್ನ ನಿಲ್ಲಿಸಿ, ಸ್ವಲ್ಪ ಹಿಂದಕ್ಕೆ ಸರಿದು, ಸುಧಾರಿಸಿಕೊಂಡು) ನಿ೦ದು ಹೊಯ್ವ+ ಅಳ್ಳೆಗಳ(ಹಿಗ್ಗಿ ಕುಗ್ಗುವ ಮೂಗಿನ ಹೊಳ್ಳೆ) ಡಾವರವು(ದಗೆ, ತಾಪ)+ ಅಡಗಲು+ ಒಳ ತಾಳೀಗೆಗೆ, ಕಳವಳ ನೂಕಿದನು, ಕರ್ಪುರದ ಹಳಕುಗಳ, ಡಗೆ ಡಗೆಯ ಮರುವ+ ಅಲಗೆ ಗೌಡೊತ್ತುಗಳ (ಹಲ್ಲಮಟ್ಟೆ ಕಚ್ಚಿ ದವಡೆಯನ್ನು ಒತ್ತಿಕೊಂಡು) ಬಲಿದ ಅವಯವದ ಸತ್ರಾಣಿಗಳ(ಬಲಶಾಲಿಗಳ) ದೇವನು ಠಾವುರಿಯಲಿ(ಪರಾಕ್ರಮದಿಂದ ಠೀವಿಯಿಂದ)+ ಒದಗಿದನು(ಕಾರ್ಯಶೀಲನಾದು) ಬಾಲದಲಿ.
- ಅರ್ಥ: ಭೀಮನು ಪ್ರಯತ್ನ ನಿಲ್ಲಿಸಿ, ಸ್ವಲ್ಪ ಹಿಂದಕ್ಕೆ ಸರಿದು, ಸುಧಾರಿಸಿಕೊಂಡು, ಬಳಲಿಕೆಯ ಮೇಲುಸಿರಿನಿಂದ ಹಿಗ್ಗಿ ಕುಗ್ಗುವ ಮೂಗಿನ ಹೊಳ್ಳೆಗಳೊಡನೆ ನಿ೦ತು, ಆಯಾಸದ ತಾಪವು ಅಡಗುವಂತೆ, ಗಂಟಲ ಒಳ ತಾಳೀಗೆಗೆ ಕಳವಳವನ್ನು- ಚಿಂತೆಯನ್ನು ಬಿಟ್ಟು ಕರ್ಪುರದ ಹಳಕುಗಳನ್ನು ನೂಕಿದನು- ಹಾಕಿಕೊಂಡನು. ಡಗೆಡಗೆಯ ಮರುವಲಗೆ- ಮೇಲುಸಿರಿನ ದಗೆಕಡಿಮೆಯಾಗಲು ದವಡೆಯನ್ನು ಒತ್ತಿಕೊಂಡು- ಅವಯವಗಳನ್ನು ಗಟ್ಟಿಮಾಡಿಕೊಂಡು ಬಲಶಾಲಿಗಳ ದೇವ ಭೀಮನು ಹೆಚ್ಚಿನ ಪರಾಕ್ರಮದಿಂದ ಬಾಲವನ್ನು ಸರಿಸುವ ಕಾಯಕಕ್ಕೆ ಒದಗಿದನು- ಮುಂದಾದನು.
- ಮಿಡುಕದದು ಮಹಿಯಿ೦ದ ಭೀಮನ
- ಕಡುಹು ನಿ೦ದುದು ಬಾಲದಲಿ ತುದಿ
- ನಡುಗದನಿಲಜನ೦ಗವಟ್ಟದ ಕಡುಹು ಕ೦ಪಿಸದು |
- ತೋಡಕೆ ಕೆಟ್ಟುದು ಕಾರ್ಯ ದುರ್ಬಲ
- ನೊಡನೆ ಭ೦ಗವ್ಯಾಪ್ತಿ ತನ್ನನು
- ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ || ೨೦ ||
- ಪದವಿಭಾಗ-ಅರ್ಥ:ಮಿಡುಕದು+ ಅದು(ಅದು ಅಲುಗಾಡದು) ಮಹಿಯಿ೦ದ(ಮಹಿ= ಭೂಮಿ) ಭೀಮನ ಕಡುಹು(ಬಲ) ನಿ೦ದುದು ಬಾಲದಲಿ ತುದಿ ನಡುಗದು+ ಅನಿಲಜನ+ ಅ೦ಗವಟ್ಟದ ಕಡುಹು(ಮೈಕಟ್ಟಿನ ದೇಹ ಶಕ್ತಿ -+ಕ್ಕೆ?) ಕ೦ಪಿಸದು(ಅಲುಗು) ತೋಡಕೆ( ಕಡಗ- ಬಿರುದಿನ ಸಂಕೇತವಾಗಿ)) ಕೆಟ್ಟುದು, ಕಾರ್ಯ ದುರ್ಬಲನೊಡನೆ ಭ೦ಗವ್ಯಾಪ್ತಿ(ಭಂಗ- ಅವಮಾನ ಸೋಲು), ತನ್ನನು ಸುಡಲಿ+ ಎನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ.
- ಅರ್ಥ:ಭೀಮನು ತನ್ನ ಬಲವನ್ನು ಒಟ್ಟುಗೋಡಿಸಿ ಬಾಲವನ್ನು ತಳ್ಳಿದನು. ಆದರ ಅದು ಸ್ವಲ್ಪವೂ ಮಿಡುಕಲಿಲ್ಲ, ಬಾಲ ಭೂಮಿಯಿಂದ ಅಲುಗಾಡಲಿಲ್ಲ. ಭೀಮನ ಕಡುಕಾದ ಬಲ ನಿ೦ತಿತು. ಅವನ ಪೂರಾಬಲ ಉಪಯೋಗಿಸಿದರೂ ಬಾಲದ ತುದಿಯೂ ಸಹ ನಡುಗಲಿಲ್ಲ. ಭೀಮನ ಮೈಕಟ್ಟಿನ ಕಡುಹು ಶಕ್ತಿಗೆ- ಗಟ್ಟಿತನಕ್ಕೆ ಬಾಲ ಅಲುಗಲಿಲ್ಲ. ಅವನು ಧರಿಸಿದ ವಿಜಯದ ಬಿರುದಿನ ತೋಡಕ್ಕೆ ಕೆಟ್ಟಹೆಸರು ಬಂತು. ಈ ಮುದಿ ವಾನರನ ಬಾಲ ಸರಿಸುವ ಸಣ್ಣ ಕಾರ್ಯಕ್ಕೆ ಕೈಹಾಕಿದ ಭೀಮನಿಗೆ ದುರ್ಬಲನೊಡನೆ ಭ೦ಗವ್ಯಾಪ್ತಿಯಾಯಿತು; ಸೋತುಹೋದ! ಇನ್ನು ಬದುಕಿನಲ್ಲಿ ಸುಖವಿಲ್ಲ ಎಂದುಕೊಂಡು, 'ತನ್ನನು ಸುಡಲಿ' ಎನ್ನುತ್ತಾ ಹಿಮ್ಮೆಟ್ಟಿ, ಭೀಮನು ಮಮ್ಮಲ ಮರುಗಿದನು.
- ಈತ ಕಪಿರೂಪದ ಸುರೇ೦ದ್ರನೊ
- ಭೂತನಾಥನೊ ಮೇಣು ವಿಮಳ
- ತ್ರೇತೆಯಲಿ ದಶಮುಖನ ಹಾಣಾ ಹಾಣಿಗಳ ಕಪಿಯೋ |
- ಏತರವು ನಮ್ಮುಬ್ಬಟ್ಟೆಗಳಿ೦
- ದೀತ ಗೆಲಿದನು ಬಾಲದಲಿ ಸ
- ತ್ವಾತಿಶಯವಿನ್ನಿವನೊಳೆ೦ತುಟೊ ಶಿವಶೀವಾಯೆ೦ದ || ೨೧ ||
- ಪದವಿಭಾಗ-ಅರ್ಥ:ಈತ ಕಪಿರೂಪದ ಸುರೇ೦ದ್ರನೊ(ದೇವೇಂದ್ರನೋ) ಭೂತನಾಥನೊ(ಪರಶಿವನೋ) ಮೇಣು(ಅಥವಾ) ವಿಮಳ(ವಿಮಲ- ಉತ್ತಮ) ತ್ರೇತೆಯಲಿ(ಯುಗದಲ್ಲಿ) ದಶಮುಖನ(ರಾವಣನ) ಹಾಣಾ ಹಾಣಿಗಳ(ಕಾದಾಡಿದ) ಕಪಿಯೋ(ಮಾರುತಿಯೋ) ಏತರವು(ಏನು ಮಹಾ) ನಮ್ಮ+ ಉಬ್ಬಟ್ಟೆಗಳಿ೦ದ(ಉನ್ನತಿಕೆ, ಉತ್ಸಾಹ, ಪರಾಕ್ರಮದಿಂದ),+ ಈತ ಗೆಲಿದನು ಬಾಲದಲಿ, ಸತ್ವಾತಿಶಯವು+ ಇನ್ನು+ ಇವನೊಳು+ ಎ೦ತುಟೊ ಶಿವಶೀವಾ+ ಯೆ೦ದ.
- ಅರ್ಥ:ಭೀಮನು ತನ್ನ ಅತಿಶಯ ಶಕ್ತಿಯಿಂದ ಬಾಲವನ್ನು ಅಲುಗಿಸಲಾಗದ- ಈತ ಯಾರಿರಬಹುದು ಎಂದು ಚಿಂತಿಸಿದ. ಇವನು ಕಪಿರೂಪದ ದೇವೇಂದ್ರನೋ? ಭೂತನಾಥನಾದ ಪರಶಿವನೋ? ಅಥವಾ ವಿಮಲ ತ್ರೇತಾಯುಗದಲ್ಲಿ ದಶಮುಖ ರಾವಣನೊಡನೆ ಹಾಣಾಹಣಿ ಕಾದಾಡಿದ ಮಹಾಕಪಿ ಮಾರುತಿಯೋ? ನಮ್ಮ ಉಬ್ಬಟ್ಟೆಗ ಪರಾಕ್ರಮಗಳು ಏತರವು- ಏನು ಮಹಾ, ಈತ ಕೇವಲ ಬಾಲದಲ್ಲಿ ನಮ್ಮನ್ನು ಗೆದ್ದುಬಿಟ್ಟನು. ಇದನ್ನು ಕಂಡರೆ ಇವನಲ್ಲಿ ಇನ್ನೂ ಸತ್ವಾತಿಶಯವು ಎಷ್ಟಿದೆಯೊ! ಶಿವಶೀವಾ! ಎ೦ದ ಭೀಮ.
- ಭೀಮ ಗದೆ ತಾನೌಕಿ ನಿಲಲು
- ದ್ದಾಮ ಬಾಲದ ನಿದ್ರೆ ತಿಳಿಯದು
- ರೋಮತತಿ ಮಸೆಗಾಣಿಸದವೆನುತುತ್ತಮಾ೦ಗದಲಿ |
- ಈ ಮನುಷ್ಯ ಶರೀರವಪಜಯ
- ಧಾಮವಲ್ಲಾ ಶಿವ ಶಿವಾ ನಿ
- ಸ್ಸೀಮ ಕಪಿನೀನಾರೆನುತ ಪವನಜ ಬೆಸಗೊ೦ಡ || ೨೨ ||
- ಪದವಿಭಾಗ-ಅರ್ಥ:ಭೀಮ ಗದೆ ತಾನು+ ಔಕಿ ನಿಲಲು+ ಉದ್ದಾಮ ಬಾಲದ ನಿದ್ರೆ ತಿಳಿಯದು, ರೋಮತತಿ(ತತಿ-ರಾಶಿ) ಮಸೆಗಾಣಿಸದವೆ (ಮಸಗು-ಕೆಟ್ಟದು ಕುಂದು) + ಎನುತ+ ಉತ್ತಮಾ೦ಗದಲಿ(ತಲೆಯಲ್ಲಿ) ಈ ಮನುಷ್ಯ ಶರೀರವು+ ಅಪಜಯ ಧಾಮವಲ್ಲಾ(ಧಾಮ-ಸ್ಥಳ) ಶಿವ ಶಿವಾ ನಿಸ್ಸೀಮ(ಸಮಾನರಿಲ್ಲದ) ಕಪಿ ನೀನಾರು+ ಎನುತ ಪವನಜ(ಭೀಮ) ಬೆಸಗೊ೦ಡ(ಪ್ರಶ್ನಿಸಿದ)
- ಅರ್ಥ:ಭೀಮನು (ತಾನು) ಗದೆಯನ್ನು ನೆಲಕ್ಕೆ ಔಕಿ- ಒತ್ತಿ ನಿಂತು, ಚಿಂತಿಸಿದ, ಈ "ಉದ್ದಾಮ ಬಾಲದ ನಿದ್ರೆ"- ಅಲುಗಾಡದ ರಹಸ್ಯ ತಿಳಿಯದು. ಅದರ ರೋಮ ತತಿಗೂ ಕುಂದುತರಲು ಆಗಲಿಲ್ಲ,'ಎನ್ನುತ್ತಾ, ನನ್ನ ಮನುಷ್ಯ ತಲೆಯ ಈ ಶರೀರವು ಅಪಜಯ ಪಡೆಯುವ ಸ್ಥಳವಲ್ಲ, ಶಿವ ಶಿವಾ! ಎಂದುಕೊಂಡು, 'ನಿಸ್ಸೀಮನಾದ ಕಪಿಯೇ ನೀನಾರು? ಎಂದು ಭೀಮನು ಮಾರುತಿಯನ್ನು ಪ್ರಶ್ನಿಸಿದ.
- ನಾವು ವಾನರರಡವಿಯಲಿ ಫಲ
- ಜೀವಿಗಳು ನಿಸ್ಸತ್ವರಿಲ್ಲಿಯ
- ಠಾವ ಬಿಡಲನ್ಯತ್ರ ಗಮನ ತ್ರಾಣ ವಿಲ್ಲೆಮಗೆ |
- ನೀವುದಿಟವಾರೈ ಮಹಾ ಸ೦
- ಭಾವಿತರು ಸುರ ನರ ಭುಜ೦ಗರೊ
- ಳಾವ ಕುಲ ನಿಮಗೆ೦ದು ಭೀಮನ ನುಡಿಸಿದನು ಹನುಮ || ೨೩ ||
- ಪದವಿಭಾಗ-ಅರ್ಥ:ನಾವು ವಾನರರು+ ಅಡವಿಯಲಿ ಫಲಜೀವಿಗಳು, ನಿಸ್ಸತ್ವರು+ ಇಲ್ಲಿಯ ಠಾವ(ಸ್ಥಳವ, ವಸತಿಯ) ಬಿಡಲು+ ಅನ್ಯತ್ರ(ಬೇರೆಕಡೆ) ಗಮನ(ಹೋಗುವುದು) ತ್ರಾಣ ವಿಲ್ಲ+ ಎಮಗೆ, ನೀವು ದಿಟವು(ನಿಜವಾಗಿ)+ ಆರೈ ಮಹಾ ಸ೦ಭಾವಿತರು, ಸುರ(ದೇವ) ನರ(ಮಾನವ) ಭುಜ೦ಗ(ಉರಗ- ನಾಗರು)ರೊಳು+ ಆವ ಕುಲ ನಿಮಗೆ+ ಎ೦ದು ಭೀಮನ ನುಡಿಸಿದನು ಹನುಮ.
- ಅರ್ಥ:ಅದಕ್ಕೆ ಹನುಮಂತನು, 'ನಾವು ವಾನರರು ಅಡವಿಯಲ್ಲಿ ಫಲಗಳನ್ನು ತಿಂದು ಜೀವಿಸುವವರು, ನಿಸ್ಸತ್ವರು- ಶಕ್ತಿ ಇಲ್ಲದವರು, ಇಲ್ಲಿಯ ವಸತಿಯನ್ನು ಬಿಟ್ಟು ಅನ್ಯತ್ರ ಹೋಗಲು ನಮಗೆ ತ್ರಾಣವಿಲ್ಲ. ನೀವು ದಿಟವಾಗಿ ಯಾರಯ್ಯಾ? ಮಹಾ ಸ೦ಭಾವಿತರು- ದೊಡ್ಡವರು.; ದೇವತೆಗಳು, ಮಾನವರು,ನಾಗರಲ್ಲಿ ನಿಮಗೆ ಯಾವ ಕುಲ,' ಎಂದು ಭೀಮನನ್ನು ಹನುಮನು ಕೇಳಿದನು.
- ಮನುಜರಾವ್ ಸೋಮಾಭಿಕುಲದಲಿ
- ಜನಿಸಿದನು ವರ ಪಾ೦ಡುವಾತನ
- ತನುಜರಾವು ಯುಧಿಷ್ಠರಾರ್ಜುನ ಭೀಮ ಯಮಳರೆನೆ |
- ವನಕೆ ಬ೦ದೆವು ನಮ್ಮ ದಾಯಾ
- ದ್ಯನ ವಿಕಾರ ದ್ಯೂತ ಕೇಳೀ
- ಜನದ ಕಿಲ್ಬಿಷದಿ೦ದ ರಾಜ್ಯಭ್ರ೦ಶವಾಯ್ತೆ೦ದ || ೨೪ ||
- ಪದವಿಭಾಗ-ಅರ್ಥ:ಮನುಜರ+ ಆವ್(ನಾವು) ಸೋಮಾಭಿ ಕುಲದಲಿ(ಚಂದ್ರವಂಶದಲ್ಲಿ) ಜನಿಸಿದನು ವರ ಪಾ೦ಡುವು+ ಆತನ ತನುಜರು+ ಆವು(ತನುಜ= ಮಗ) ಯುಧಿಷ್ಠರ+ ಅರ್ಜುನ ಭೀಮ ಯಮಳರು+ ಎನೆ, ವನಕೆ ಬ೦ದೆವು ನಮ್ಮ ದಾಯಾದ್ಯನ ವಿಕಾರ(ಕೆಟ್ಟ) ದ್ಯೂತ ಕೇಳೀ ಜನದ ಕಿಲ್ಬಿಷದಿ೦ದ ರಾಜ್ಯಭ್ರ೦ಶವಾಯ್ತು+ ಎ೦ದ.
- ಅರ್ಥ:ಹನುಮನ ಪ್ರಶ್ನೆಗೆ, ಭೀಮನು, 'ನಾವು 'ಮನುಜರು'. ಚಂದ್ರವಂಶದಲ್ಲಿ ವರ ಪಾ೦ಡುವು ಜನಿಸಿದನು. ಆತನ ಮಕ್ಕಳು. ಯುಧಿಷ್ಠರ, ಅರ್ಜುನ, ಭೀಮ, ಯಮಳರು, ಎಂದು ಐವರು. ನಾವು ವನಕ್ಕೆ ಬ೦ದೆವು. ನಮ್ಮ ದಾಯಾದಿಯ, ಕೆಟ್ಟ ದ್ಯೂತದ ಆಟವಾಡುವ ಜನರ ಮೋಸದಿ೦ದ ರಾಜ್ಯಭ್ರಷ್ಟವಾಯ್ತು, ರಾಜ್ಯ ಕಳೆದು ಹೋಯಿತು,'ಎ೦ದ.
- ಬಳಿಕ ಸೌಗ೦ಧಿಕದ ಪವನನ
- ಬಳಿವಿಡಿದು ನಾಬ೦ದೆನೆಮ್ಮಯ
- ಲಲನೆ ಕಾಮಿಸಿದಳು ಸಹಸ್ರದಳಾಬ್ಜ ದರುಶನವ |
- ತಿಳಿಯಲಿದು ವೃತ್ತಾ೦ತ ನೀನ
- ಸ್ಖಲಿತ ಬಲ ನೀನಾರು ತನ್ನನು
- ತಿಳುಹ ಹೇಳು ಮಹಾತ್ಮ ಕಪಿ ನೀ ನೆನುತ ಕೈ ಮುಗಿದ || ೨೫ ||
- ಪದವಿಭಾಗ-ಅರ್ಥ:ಬಳಿಕ ಸೌಗ೦ಧಿಕದ ಪವನನ(ವಾಯುವಿನ) ಬಳಿವಿಡಿದು(ಜೊತೆಸೇರಿ) ನಾ ಬ೦ದೆನು+ ಎಮ್ಮಯ ಲಲನೆ ಕಾಮಿಸಿದಳು(ಹೂವಿಗೆ ಆಸೆಪಟ್ಟಳು) ಸಹಸ್ರದಳಾಬ್ಜ(ಕಮಲ) ದರುಶನವ(ನೋಡುವ) ತಿಳಿಯಲು+ ಇದು ವೃತ್ತಾ೦ತ. ನೀನು+ ಅಸ್ಖಲಿತ( ಅಲ್ಲಾಡದ) ಬಲ ನೀನು+ ಆರು ತನ್ನನು ತಿಳುಹಹೇಳು ಮಹಾತ್ಮ ಕಪಿ ನೀನು+ ಎನುತ ಕೈ ಮುಗಿದ.
- ಅರ್ಥ:ಭೀಮನು,'ಹೀಗೆ ವನಕ್ಕೆ ಬಂದ ಬಳಿಕ ಸೌಗ೦ಧಿಕದ ಪರಿಮಳವು ಗಾಳಿಯ ಜೊತೆಸೇರಿ ನಮಗೆ ತಾಗಿತು. ನಮ್ಮ ಲಲನೆ-ಪತ್ನಿ ಆ ಹೂವಿಗೆ ಆಸೆಪಟ್ಟಳು. ನಾನು ಅದಕ್ಕಾಗಿ ಬ೦ದೆನು. ಆ ಪರಿಮಳದ ಸಹಸ್ರದಳ ಕಮಲದ ದರ್ಶನವನ್ನು ಮಾಡಿ ತಿಳಿಯಲು ಬಂದೆನು. ಇದು ನಮ್ಮ ವಿಷಯ. ನೀನು ಅಸ್ಖಲಿತ- ಅಲುಗಿಸಲೂ ಆಗದ ಬಲಶಾಲಿ ನೀನು ಯಾರು? ಮಹಾತ್ಮ ಕಪಿಯೇ ನೀನು ನಿನ್ನ ವಿಷಯ ತಿಳುಹಿಸಿ ಹೇಳು.'ಎಂದು ಭೀಮನು ಕೈ ಹನುಮನಿಗೆ ಮುಗಿದನು.
- ನಾವು ಹಿ೦ದಣ ಯುಗದ ರಾಘವ
- ದೇವನೋಲೆಯಕಾರರಾ ಸು
- ಗ್ರೀವ ಸಖ್ಯರು ಪವನನಿ೦ದ೦ಜನೆಗೆ ಜನಿಸಿದೆವು |
- ನಾವು ನಿಮ್ಮೊಡ ಹುಟ್ಟಿದರು ಸ೦
- ಭಾವಿಸಿತುನಿಮ್ಮಿಷ್ಟವೆನೆ ನಗು
- ತಾ ವೃಕೋದರ ನೆರಗಿದನು ಕಲಿ ಹನುಮನ೦ಘ್ರಿಯಲಿ || ೨೬ ||
- ಪದವಿಭಾಗ-ಅರ್ಥ:ನಾವು ಹಿ೦ದಣ ಯುಗದ ರಾಘವದೇವನ+ ಓಲೆಯಕಾರರು;+ ಆ ಸುಗ್ರೀವ ಸಖ್ಯರು; ಪವನನಿ೦ದ+ ಅ೦ಜನೆಗೆ ಜನಿಸಿದೆವು; ನಾವು ನಿಮ್ಮೊಡ ಹುಟ್ಟಿದರು; ಸ೦ಭಾವಿಸಿತು ನಿಮ್ಮಿಷ್ಟವು+ ಎನೆ ನಗುತ+ ಆ ವೃಕೋದರನು+ ಎರಗಿದನು ಕಲಿ ಹನುಮನ+ ಅ೦ಘ್ರಿಯಲಿ(ಪಾದ).
- ಅರ್ಥ:ಭೀಮನು ತಾನು ಭೀಮ, ಪಾಂಡುವಿನ ಮಗ ಎಂದು ಹೇಳಿ, ವಿನಯದಿಂದ ನೀವು ಯಾರೆಂದು ಕೇಳಲು,ಹನುಮನು,'ನಾವು ಹಿ೦ದಿನ ತ್ರೇತಾಯುಗದ ರಾಘವದೇವನ- ಶ್ರೀರಾಮನ ದೂತರು. ಆ ಸುಗ್ರೀವನ ಸಖರು; ವಾಯುವಿನಿ೦ದ ಅ೦ಜನೆಗೆ ಜನಿಸಿದೆವು; ನಾವು ನಿಮ್ಮೊಡ ಹುಟ್ಟಿದವರು. ನಮ್ಮ ಪರಿಚಯ ತಿಳಿಯುವ ನಿಮ್ಮ ಇಷ್ಟವು ಮತ್ತು ಹೀಗೆ ನಮ್ಮ ಭೇಟಿಯು ಸ೦ಭವಿಸಿತು ಎನ್ನಲು, ಆ ವೃಕೋದರನು ನಗುತ್ತಾ ಕಲಿ ಹನುಮನ ಪಾದಕ್ಕೆ ಎರಗಿದನು- ಬಿದ್ದನು.
- ಜರುಗಿನಲಿ ಜಾ೦ಬೂನದದ ಸ೦
- ವರಣೆಕಾರ೦ಗೆಡೆಯಲಿದ್ದುದು
- ಪರಮನಿಧಿ ಮಝ ಪೂತು ಪುಣ್ಯೋದಯದ ಫಲವೆನುತ |
- ಸರಸಿಯೆತ್ತಲು ಗ೦ಧವೆತ್ತಲು
- ಬರವಿದೆತ್ತಣಿದೆತ್ತ ಘಟಿಸದು
- ದರೆರೆ ಮಾರುತಿ ತ೦ದೆ ನೀನೆ೦ದೆನುತ ಬಣ್ಣಿಸಿದ || ೨೭ ||
- ಪದವಿಭಾಗ-ಅರ್ಥ:ಜರುಗಿನಲಿ(ಜರುಗು- ಜಾರುವ ಪ್ರದೇಶ, ಜಾರಿಕೆಯಯಲ್ಲಿ; ಜಾರಿಬಿದ್ದ ಜಾಗದಲ್ಲಿ) ಜಾ೦ಬೂನದದ(ಚಿನ್ನ, ಚಿನ್ನದಿಂದ ಮಾಡಿದ ವಡವೆ) ಸ೦ವರಣೆಕಾರ೦ಗೆ(ಕಾಪಾಡಿಕೊಳ್ಳು , ಸಿದ್ಧಗೊಳಿಸು, ರಕ್ಷಿಸಿಕೊಳ್ಳು, ಪ್ರಯತ್ನಪಟ್ಟು ಏಳುವವನಿಗೆ)+ ಎಡೆಯಲಿ+ ಇದ್ದುದು ಪರಮನಿಧಿ; ಮಝ ಪೂತು ಪುಣ್ಯೋದಯದ ಫಲವೆನುತ, ಸರಸಿಯೆತ್ತಲು, ಗ೦ಧವೆತ್ತಲು, ಬರವಿದು ಎತ್ತಣ+ ಇದು+ ಎತ್ತ ಘಟಿಸದುದು+ ಅರೆರೆ ಮಾರುತಿ ತ೦ದೆ ನೀನು+ ಎ೦ದೆನುತ ಬಣ್ಣಿಸಿದ.
- ಅರ್ಥ:ಜಾರಿಬಿದ್ದ ಜಾಗದಲ್ಲಿ ಸುಧಾರಿಸಿಕೋಡು ಏಳವಾಗ ಚಿನ್ನದ ಒಡವೆಯ ಪರಮನಿಧಿ ಪಕ್ಕದಲ್ಲಿ ಇದ್ದುದು ಕಂಡಂತಾಯಿತು. ಮಝಪೂತು! ನಿನ್ನ ದರ್ಶನ ತನ್ನ ಪುಣ್ಯೋದಯದ ಫಲವು, ಎನ್ನುತ್ತಾ, ಚಿಂತಿಸಿದ,- ಎಲ್ಲಿಯ ಸರೋವರ! ಅದೆಲ್ಲಿಯ ಪರಿಮಳ! ಅಲ್ಲಿಗೆ ತನ್ನ ಬರುವಿಕೆ ಎತ್ತಣದು- ಏನು ವಿಚಿತ್ರ! ಇದು- ಈ ಮಾರುತಿಯ ದರ್ಶನ ಹೇಗೆ ಘಟಿಸಿತೋ! ಅರೆರೆ! ಮಾರುತಿ ತ೦ದೆ(ಹಿರಿಯ) ನೀನು! ಎ೦ದು ಹೇಳುತ್ತಾ ಆ ಘಟನೆಯನ್ನು ಬಣ್ಣಿಸಿದ.
- ತೀದುದೆಮಗೆ ವನ ಪ್ರವಾಸದ
- ಖೇದವರ್ಜುನನಗಲಿಕೆಯ ದು
- ರ್ಭೇಧ ವಿಷವಿ೦ದಿಳಿದುದೈ ಶಿವ ಶಿವ ಮಹಾದೇವ |
- ಹೋದ ರಾಜ್ಯಭ್ರ೦ಶ ಬಹಳ ವಿ
- ಷಾದ ಬೀತುದು ನಿಮ್ಮ ಕಾರು
- ಣ್ಯೋದಯವುಯಮಗಾಯ್ತಲಾ ಚರಿತಾರ್ಥ ರಾವೆ೦ದ || ೨೮ ||
- ಪದವಿಭಾಗ-ಅರ್ಥ:ತೀದುದು+ ಎಮಗೆ(ತುಂಬಿ, ಮುಗಿಸಿ; ಇಲ್ಲವಾಗು; ) ವನ ಪ್ರವಾಸದ ಖೇದವು,+ ಅರ್ಜುನನ+ ಅಗಲಿಕೆಯ ದುರ್ಭೇಧ ವಿಷವಿ೦ದು+ ಇಳಿದುದೈ, ಶಿವ ಶಿವ ಮಹಾದೇವ! ಹೋದ ರಾಜ್ಯಭ್ರ೦ಶ ಬಹಳ ವಿಷಾದ ಬೀತುದು(ಮುಗಿಯಿತು, ಇಲ್ಲವಾಯಿತು.), ನಿಮ್ಮ ಕಾರುಣ್ಯೋದಯವು+ ಯ+ ಎಮಗಾಯ್ತಲಾ(ನಮಗೆ), ಚರಿತಾರ್ಥರು(ಪುಣ್ಯವಂತ)+ ಆವು(ನಾವು)+ ಎ೦ದ
- ಅರ್ಥ:ಮಾರುತಿಯೇ, 'ನಿನ್ನ ದರ್ಶನದಿಂದ ನಮಗೆ ವನದಲ್ಲಿ ಪ್ರವಾಸ ಮಾಡಿದ ದುಃಖವು ಇಲ್ಲವಾಯಿತು. ಅರ್ಜುನನ ಅಗಲಿಕೆಯ ದುರ್ಭೇಧ ವಿಷವು ಇ೦ದು ಇಳಿದುಹೊಯಿತು. ಶಿವ ಶಿವ ಮಹಾದೇವ! ಕಳೆದು ಹೋದ ರಾಜ್ಯಭ್ರಷ್ಟತೆಯ ಬಹಳ ದುಃಖ ಶಮನವಾಯಿತು. ಇಂದು ನಿಮ್ಮ ಕರುಣೆಯ ಉದಯವು ನಮಗಾಯ್ತಲಾ! ನಾವು ಚರಿತಾರ್ಥರು- ಪುಣ್ಯವಂತರು,' ಎ೦ದ.
- ಹಿರಿಯರೆನಗಿಬ್ಬರು ಯುಧಿಷ್ಠಿರ
- ಧರಣಿಪತಿ ನೀನೊಬ್ಬನಯ್ಯ೦
- ದಿರುಗಳಿಬ್ಬರು ಮಾರುತನು ನೀನೊಬ್ಬನಿ೦ದೆನಗೆ |
- ಗುರುಗಳಿಬ್ಬರು ಬಾದರಾಯಣ
- ಪರಮಋಷಿ ನೀನೊಬ್ಬನೆ೦ದುಪ
- ಚರಿಸಿದನು ಪವಮಾನ ನ೦ದನನ೦ಜನಾ ಸುತನ || ೨೯ ||
- ಪದವಿಭಾಗ-ಅರ್ಥ:ಹಿರಿಯರು+ ಎನಗೆ+ ಇಬ್ಬರು, ಯುಧಿಷ್ಠಿರ ಧರಣಿಪತಿ, ನೀನೊಬ್ಬನು+ ಅಯ್ಯ೦ದಿರುಗಳು(ತಂದೆಯರು)+ ಇಬ್ಬರು, ಮಾರುತನು, ನೀನೊಬ್ಬನು+ ಇ೦ದೆನಗೆ ಗುರುಗಳಿಬ್ಬರು ಬಾದರಾಯಣ ಪರಮಋಷಿ, ನೀನೊಬ್ಬನೆಉ+ ಎ೦ದು+ ಉಪಚರಿಸಿದನು ಪವಮಾನ ನ೦ದನನ+ ಅ೦ಜನಾ ಸುತನ.
- ಅರ್ಥ:ಭೀಮನು ಹನುಮಂತನನ್ನು ಕುರಿತು, ಗೌರವದಿಂದ, ನನಗೆ ಇಬ್ಬರು ಹಿರಿಯರು ಆದರು,- ಯುಧಿಷ್ಠಿರ ಧರಣಿಪತಿ ಮತ್ತು ನೀನೊಬ್ಬನು; ಅಯ್ಯ೦ದಿರುಗಳು ಇಬ್ಬರು ಆದರು ಮಾರುತ ವಾಯುದೇವನು ಮತ್ತು ತಂದೆಯಸಮಾನನಾದ ನೀನೊಬ್ಬನು; ಇ೦ದು ನನಗೆ ಗುರುಗಳು ಇಬ್ಬರಾದರು ಬಾದರಾಯಣ ಪರಮಋಷಿ ಮತ್ತು ನೀನೊಬ್ಬನು,' ಎ೦ದು ವಾಯುವಿನ ಮಗನೂ,ಅ೦ಜನಾದೇವಿಯ ಮಗನೂ ಆದ ಮಾರುತಿಯನ್ನು ಉಪಚರಿಸಿದನು.
- ಲಲಿತ ವಚನಕೆ ನಿನ್ನಭುಜದ
- ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
- ಕುಲ ಪವಿತ್ರರು ಜನಿಸಿದಿರಲಾ ಪಾ೦ಡು ಜಠರದಲಿ ||
- ಗೆಲವು ನಿಮಗಹಿತರಲಿ ಪಾರ್ಥನ
- ಕೆಲವು ದಿವಸಕೆ ಕಾ೦ಬಿರೆಮಗೆಯು
- ಫಲಿಸಿತೀ ದಿನಕೆ೦ದು ಕೊ೦ಡಾಡಿದನು ಹನುಮ೦ತ || ೩೦ ||
- ಪದವಿಭಾಗ-ಅರ್ಥ:ಲಲಿತ ವಚನಕೆ ನಿನ್ನ ಭುಜದ+ ಅಗ್ಗಳಿಕೆಗೆ+ ಆ(ಆನ್) ಮೆಚ್ಚಿದೆನು ಹಿಮಕರಕುಲ(ಚಂದ್ರವಂಶ) ಪವಿತ್ರರು ಜನಿಸಿದಿರಲಾ ಪಾ೦ಡು ಜಠರದಲಿ, ಗೆಲವು ನಿಮಗೆ+ ಅಹಿತರಲಿ(ಶತ್ರುಗಳ ಮೇಲೆ) ಪಾರ್ಥನ ಕೆಲವು ದಿವಸಕೆ ಕಾ೦ಬಿರಿ+ ಎಮಗೆಯು ಫಲಿಸಿತೀಉ+ ಈ ದಿನಕೆ+ ಎ೦ದು ಕೊ೦ಡಾಡಿದನು ಹನುಮ೦ತ.
- ಅರ್ಥ:ಹನುಮಂತನು ಭೀಮನಿಗೆ ನಿನ್ನ ಸೊಗಸಾದ ಮಾತಿಗೆ ಮೆಚ್ಚಿದೆನು ಎಂದ. ಹಾಗೆಯೇ,'ನಿನ್ನ ಭುಜದ ಸಾಮರ್ಥ್ಯಕ್ಕೆ,ನಾನು ಮೆಚ್ಚಿದೆನು.' ಎಂದ. ನೀವು ಚಂದ್ರವಂಶದಲ್ಲಿ ಪಾ೦ಡುವಿನ ಮಕ್ಕಳಾಗಿ ಹುಟ್ಟಿದ ಪವಿತ್ರರು. ಶತ್ರುಗಳ ಮೇಲೆ ನಿಮಗೆ ಗೆಲವು ಆಗುವುದು, ಪಾರ್ಥನನ್ನು ಕೆಲವು ದಿವಸದಲ್ಲಿ ಪನಃ ಕಾಣುವಿರಿ. ನಮಗೆ ಕೂಡಾ ಈ ದಿನ ಫಲಿಸಿತು.,' ಎ೦ದು ಹನುಮ೦ತನು ಭೀಮನನ್ನು ಕೊ೦ಡಾಡಿದನು .
- ಅ೦ಜುವೆನು ಬಿನ್ನಹಕೆ ಬಾ೦ಧವ
- ವ೦ಜಿಕೆಯು ನಭಕೊತ್ತುತಿದೆ ಕೇ
- ಳ೦ಜನಾ ಸುತ ತನ್ನ ಸಲುಗೆಯ ಮಾತ ಸಲಿಸುವೊಡೆ |
- ಅ೦ಜದೆ೦ಬೆನು ದನುಜ ಪುರಕೆ ಧ
- ನ೦ಜಯನ ಹೊತ್ತಿಸಿದ ಖಳರನು
- ಭ೦ಜಿಸಿದ ಸಾಗರವ ದಾ೦ಟಿದ ರೂಪು ತೋರೆ೦ದ || ೩೧ ||
- ಪದವಿಭಾಗ-ಅರ್ಥ:ಅ೦ಜುವೆನು ಬಿನ್ನಹಕೆ ಬಾ೦ಧವವು+ ಅ೦ಜಿಕೆಯು ನಭಕೆ+ ಒತ್ತುತಿದೆ; ಕೇಳು+ ಅ೦ಜನಾ ಸುತ ತನ್ನ ಸಲುಗೆಯ ಮಾತ; ಸಲಿಸುವೊಡೆ ಅ೦ಜದೆ+ ಎ೦ಬೆನು(ಹೇಳುವೆನು) ದನುಜಪುರಕೆ(ಲಂಕೆಗೆ) ಧನ೦ಜಯನ(ಅಗ್ನಿಯ) ಹೊತ್ತಿಸಿದ ಖಳರನು(ರಾಕ್ಷಸರನ್ನು) ಭ೦ಜಿಸುದ(ಸೋಲಿಸಿದ) ಸಾಗರವ(ಸಮುದ್ರ) ದಾ೦ಟಿದ ರೂಪು ತೋರೆ೦ದ.
- ಅರ್ಥ:ಭೀಮನು,'ಮಾರುತಿಯೇ ನಾನು ನಿನ್ನನ್ನು ಕೇಳಲು ಅ೦ಜುವೆನು. ಬೇಡಿಕೆಗೆ ನಿನ್ನ ಬಾಂಧವವು- ಬಂಧುತ್ವ ಕಾರಣ; ಕೇಳಲು ಅ೦ಜಿಕೆಯು ಆಕಾಶಕ್ಕೆ ಮುಟ್ಟವಷ್ಟಿದೆ. ಆದರೂ ಕೇಳುವೆ; ಅ೦ಜನಾಸುತನೇ ಕೇಳು ತನ್ನ ಸಲುಗೆಯ ಮಾತನ್ನು; ಸಲ್ಲಿಸುವುದಾದರೆ ಅ೦ಜದೆ ಹೇಳುವೆನು. ಲಂಕೆಗೆ ಅಗ್ನಿಯನ್ನು ಹೊತ್ತಿಸಿದ, ಮತ್ತು ಖಳರಾದ ರಾಕ್ಷಸರನ್ನು ಸೋಲಿಸಿದ, ಮತ್ತು ಸಾಗರವನ್ನು ಹಾರಿ ದಾಟಿದ ರೂಪವನ್ನು ತೋರಿಸು,' ಎ೦ದ.
- ಈ ಯುಗದ ಗುಣ ಧರ್ಮವಾ ತ್ರೇ
- ತಾಯುಗದವರಿಗೈದದಾ ತ್ರೇತಾ
- ಯುಗವು ಸರಿಯಿಲ್ಲ ಕೃತಯುಗದೇಕ ದೇಶದಲಿ |
- ಆ ಯುಗದಲಾ ಮನುಜರಾ ಸ
- ತ್ವಾಯುವಾ ಸಾಮರ್ಥ್ಯವಾ ತರು
- ವಾಯ ಯುಗದಲಿ ಸಲ್ಲದೆ೦ದನು ನಗುತ ಹನುಮ೦ತ || ೩೨ ||
- ಪದವಿಭಾಗ-ಅರ್ಥ:ಈ ಯುಗದ ಗುಣಧರ್ಮವ+ ಆ ತ್ರೇತಾಯುಗದವರಿಗೆ+ ಐದದು(ಐದು-ಬಾ, ಹೋಗು)+ ಆ ತ್ರೇತಾಯುಗವು ಸರಿಯಿಲ್ಲ ಕೃತಯುಗದ+ ಏಕ ದೇಶದಲಿ ಆ ಯುಗದಲಿ+ ಆ ಮನುಜರು+ ಆ ಸತ್ವಾಯುವು+ ಆ ಸಾಮರ್ಥ್ಯವು+ ಆ ತರುವಾಯ ಯುಗದಲಿ ಸಲ್ಲದು+ ಎ೦ದನು ನಗುತ ಹನುಮ೦ತ.
- ಅರ್ಥ:ಭೀಮನ ಕೋರಿಕೆಗೆ ಹನುಮಂತನು ನಗುತ್ತ,'ಈ ಯುಗದ ಗುಣಧರ್ಮವು ಆ ತ್ರೇತಾಯುಗದ ಗುಣಧಧರ್ಮಕ್ಕೆ ಹೊಂದುವುದಿಲ್ಲ. ಕೃತಯುಗದ ಗುಣವು ಏಕ ದೇಶದಲ್ಲಿ- ತ್ರೇತಾಯುಗದ ಗುಣವನ್ನು ಹೊಂದಿಸುವುದು ಸರಿಯಿಲ್ಲ. ಆ ಯುಗದಲಿ ಆ ಮನುಷ್ಯರು, ಆ ಸತ್ವ ಮತ್ತು ಆಯುಷ್ಯವು, ಆ ಸಾಮರ್ಥ್ಯವು ಅಲ್ಲಿಗೇಸರಿ. ಆ ತರುವಾಯದ ಯುಗದಲಿ ಸಲ್ಲದು' ಎ೦ದನು.
- ಕೃತಯುಗದವರು ತ್ರೇತೆಯವರಿ೦
- ದತಿ ಪರಾಕ್ರಮ ಯುಕ್ತರವರದು
- ಭುತದ ಬಲವೀ ತ್ರೇತೆಯವರಲಿ ದ್ವಾಪರ ಸ್ಥಿತಿಗೆ |
- ವಿತತ ಸತ್ವರು ಕಲಿಯುಗದ ದು
- ರ್ಮತಿ ಮನುಷ್ಯವ್ರಾತ ಹೀನಾ
- ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ || ೩೩ ||
- ಪದವಿಭಾಗ-ಅರ್ಥ:ಕೃತಯುಗದವರು ತ್ರೇತೆಯವರಿ೦ದ+ ಅತಿ ಪರಾಕ್ರಮ ಯುಕ್ತರು+ ಅವರ+ ಅದುಭುತದ ಬಲವು+ ಈ ತ್ರೇತೆಯವರಲಿ ದ್ವಾಪರ ಸ್ಥಿತಿಗೆ ವಿತತ(ಉತ್ತಮವಾದ) ಸತ್ವರು, ಕಲಿಯುಗದ ದುರ್ಮತಿ ಮನುಷ್ಯವ್ರಾತ(ಸಮೂಹ) ಹೀನ+ ಆಕೃತಿ(ದುರ್ಬಲ) ಕಣಾ, ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ.
- ಅರ್ಥ:ಹನುಮಂತನು,'ಕೃತಯುಗದವರು ತ್ರೇತಾಯುಗವರಿಗಿಂತ ಅತಿ ಪರಾಕ್ರಮ ಯುಕ್ತರು. ಅವರ ಅದ್ಭುತದ ಬಲವು ಈ ತ್ರೇತಾಯುಗದವರಲ್ಲಿ ಇಲ್ಲ. ದ್ವಾಪರದ ಸ್ಥಿತಿಗೆ ಅವರಿಗಿಂತ ತ್ರೇತೆಯವರು ಉತ್ತಮ ಸತ್ವರು. ಕಲಿಯುಗದ ದುರ್ಮತಿ ಮನುಷ್ಯಸಮೂಹವು ದುರ್ಬಲ ಆಕೃತಿ ಕಣಾ! , ಕೃತಯುಗ ಮೊದಲಾಗಿ ಕಲಿಯುಗಕ್ಕೆ ಇದು ಯುಗಧರ್ಮ,'ಎಂದನು.
- ಹೀನಸತ್ವರು ಸತ್ಯ ಧರ್ಮ ವಿ
- ಹೀನರರ್ಥ ಪರಾಯಣರು ಕುಜ
- ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು
- ದಾನಿಗಳು ದುಷ್ಪಾತ್ರದಲಿ ಗುಣ
- ಮೌನಿಗಳು ಗರ್ವಿತರು ಮಿಥ್ಯಾ
- ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆ೦ದ ೩೪
- ಪದವಿಭಾಗ-ಅರ್ಥ:ಹೀನಸತ್ವರು ಸತ್ಯ ಧರ್ಮ ವಿಹೀನರು+ ಅರ್ಥ(ಧನ) ಪರಾಯಣರು, ಕುಜನ+ ಅನುರಕ್ತರು, ವರ್ಣ ಧರ್ಮಾಶ್ರಮ ವಿದೂಷಕರು, ದಾನಿಗಳು ದುಷ್ಟ+ ಪಾತ್ರದಲಿ-ಗುಣದವರಲ್ಲಿ, ಗುಣಮೌನಿಗಳು, ಗರ್ವಿತರು, ಮಿಥ್ಯಾಜ್ಞಾನಿಗಳು, ಕಲಿಯುಗದ ಮನುಜರು ಭೀಮ ಕೇಳೆ೦ದ.
- ಅರ್ಥ:ಭೀಮನೇ ಕೇಳು,'ಕಲಿಯುಗದ ಮನುಷ್ಯರು ಸತ್ವಹೀನರು- ದುರ್ಬಲರು. ಸತ್ಯ ಧರ್ಮ ಇಲ್ಲದವರು. ಸಂಪತ್ತನ್ನು ಗಳಿಸುವುದರಲ್ಲಿ ಪರಾಯಣರು- ನಿರತರು., ಕೆಟ್ಟಜನರಲ್ಲಿ ಪ್ರೀತಿಯುಳ್ಳವರು. ವರ್ಣ ಧರ್ಮಾಶ್ರಮವನ್ನು ಹಾಸ್ಯಮಾಡುವರು. ದುಷ್ಟರಿಗೆ ದಾನಿಗಳು. ಗುಣವಂತರ ಬಗೆಗೆ ಮೌನಿಗಳು- ಮೆಚ್ಚಿಗೆಯ ಮಾತಾಡುವುದಿಲ್ಲ., ಗರ್ವಿತರು- ಅಹಂಕಾರಿಗಳು, ಮಿಥ್ಯಾಜ್ಞಾನಿಗಳು- ಮಿಥ್ಯೆಯನ್ನೇ ಜ್ಞಾನವೆಂದು ತಿಳಿದವರು,'ಎಂದ.
- ಅದರಿನೀ ದ್ವಾಪರದ ಕಡೆಯಲಿ
- ಯುದಿತ ಮಾನುಷ ಕರ್ಮ ಸ೦ಶಯ
- ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ |
- ಇದು ನಿಧಾನವು ಭೀಮಯೆನೆ ತ
- ತ್ಪದ ಯುಗಕೆ ಮಗುಳೆರಗಿ ನಿಬಂ
- ಧದಲಿ ಬಿನ್ನಹ ಮಾಡಲಮ್ಮೆನು ರೂಪ ತೋರೆ೦ದ || ೩೫ ||
- ಪದವಿಭಾಗ-ಅರ್ಥ:ಅದರಿನು(ಅದರಿಂದ)+ ಈ ದ್ವಾಪರದ ಕಡೆಯಲಿ+ ಯು+ ಉದಿತ ಮಾನುಷ ಕರ್ಮ ಸ೦ಶಯವು+ ಇದರೊಳು+ ಎಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ, ಇದು ನಿಧಾನವು(ನಿಜವಿಚಾರ) ಭೀಮ+ ಯೆ+ ಎನೆ ತತ್+ ಪದಯುಗಕೆ ಮಗುಳು(ಮತ್ತೆ)+ ಎರಗಿ ನಿರ್ಬಂಧದಲಿ(ಹಠ) ಬಿನ್ನಹ(ಬೇಡಿಕೆ) ಮಾಡಲು+ ಅಮ್ಮೆನು(ಆರೆನು) ರೂಪ ತೋರೆ೦ದ.
- ಅರ್ಥ:ಹನುಮಂತನು,'ನಾನು ನುಡಿದ ಈ ಕಾರಣಗಳಿಂದ, ಈ ದ್ವಾಪರದ ಕಡೆಯಲ್ಲಿ ಮಾನುಷ ಕರ್ಮ ಸ೦ಶಯವು ಉದಿತವಾಗಿರುವುದು. ಇದರಲ್ಲಿ ನಮ್ಮ ರೂಪವು ಮರ್ತ್ಯರಿಗೆ- ಸಮಾನ್ಯ ಮಾನವರಿಗೆ ಗೋಚರವಲ್ಲ- ಕಾಣುವುದಿಲ್ಲ-/ ತೊರಿಸುವುದು ಸರಿಯಲ್ಲ. ಭೀಮಾ, ಇದು ನಿಜವಿಚಾರ,'ಎನ್ನಲು, ಅವನ ಪಾದಗಳಿಗೆ ಮತ್ತೆ ನಮಿಸಿ, ಹಠಮಾಡಿ ಕೇಳಲಾರೆನು. ಆದರೆ ಆ ರೂಪವನ್ನು ನೋಡಬೇಕು, ತೋರಿಸು ಎಂದ.
- ಆದಡಿನ್ನು ನೀರೀಕ್ಷಿಸೆನುತ ನಿ
- ನಾದದಲಿ ನೆಲಬಿರಿಯೆ ಬಾಲದ
- ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮ೦ಡಲವ |
- ಮೇದಿನಿಯ ಹೊರೆಗಾರರಳ್ಳೆದೆ
- ಯಾದರಳುಕಿದವದ್ರಿಗಳು ಸಪ್ತೋ
- ದಧಿಗಳ೦ಜಿದವೆನಲು ಹೆಚ್ಚಿದನು ಕಲಿ ಹನುಮ || ೩೬ ||
- ಪದವಿಭಾಗ-ಅರ್ಥ:ಆದಡೆ+ ಇನ್ನು ನೀರೀಕ್ಷಿಸು+ ಎನುತ ನಿನಾದದಲಿ(ಸದ್ದು) ನೆಲಬಿರಿಯೆ ಬಾಲದ ಬೀದಿವರಿ(ಮುನ್ನುಗ್ಗು) ಬಾಸಣಿಸು(ಬಾಚು) ಘನ ನಕ್ಷತ್ರ ಮ೦ಡಲವ, ಮೇದಿನಿಯ(ಭೂಮಿ) ಹೊರೆಗಾರರ+ ಅಳ್ಳೆದೆಯಾದರೆ+ ಅಳುಕಿದವು(ಅಳುಕು- ಹೆದರು)+ ಅದ್ರಿಗಳು- (ಬೆಟ್ಟಗಲು) ಸಪ್ತೋದಧಿಗಳು+ ಅ೦ಜಿದವು+ ಎನಲು ಹೆಚ್ಚಿದನು(ಬೆಳೆದನು) ಕಲಿ ಹನುಮ.
- ಅರ್ಥ:ಆಗ ಹನುಮನು,'ಹಾಗಿದ್ದರೆ ಇನ್ನು ನೀರೀಕ್ಷಿಸು- ನೋಡು, ಎನ್ನುತ್ತಾ ನೆಲಬಿರಿಯುವಂತೆ ದೊಡ್ಡ ಸದ್ದುಮಾಡುತ್ತಾ ಬೆಳೆದನು; ಬಾಲವು ಮುನ್ನುಗ್ಗಿ ಘನ ನಕ್ಷತ್ರ ಮ೦ಡಲವನ್ನು ಬಾಚುವಂತೆ ಬಳೆಯಿತು. ಭೂಮಿಯ ಹೊಣೆಗಾರ ದೊರೆಗಳ ಎದೆ ಅಳ್ಳೆದೆಯಾಯಿತು, ನಡುಗಿತು. ಅದ್ರಿಗಳು ಏಳು ಸಮುದ್ರಗಳು ಅ೦ಜಿದವು ಎನ್ನುವಂತೆ ಕಲಿ ಹನುಮನು ಬೆಳೆದನು.
- ಮೇರುವಿನ ತಪ್ಪಲಲಿ ಬೆಳೆದ ಬ
- ಲಾರಿ ಚಾಪವೊ ಮೇಣ್ತ್ರಿವಿಕ್ರಮ
- ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ |
- ಚೂರಿಸಿವ ಬಲು ಬಾಲವೋ ಜ೦
- ಬಾರಿಭವನವ ನಳ್ಳಿರಿಯೆ ತ್ರಿಪು
- ರಾರಿ ಯೊಡ್ಡಿನ ಹೊಳಹಿನಲಿ ಹೊಳೆ ಹೊಳೆದನಾ ಹನುಮ || ೩೭ ||ಪ್ರಯೋಗ
- ಪದವಿಭಾಗ-ಅರ್ಥ:ಮೇರುವಿನ ತಪ್ಪಲಲಿ ಬೆಳೆದ ಬಲಾರಿ(ಇಂದ್ರ) ಚಾಪವೊ(ಇಂದ್ರಧನುಷ್) ಮೇಣ್+ ತ್ರಿವಿಕ್ರಮನ+ ಆರುಭಟೆಯಲಿ ಜಡಿವ(ಝಳಪಿಸುವ) ಜ್ಯೋತಿರ್ಗಣದ ಬಲು ಮಿಳಿಯೊ(ಬಂಧನದ ತೊಗಲ ಹಗ್ಗ, ದಪ್ಪಹಗ್ಗ, ಅಲಾಶಿ, ಮಿಣಿ), ಚೂರಿಸಿವ(ಉದ್ದ ಚೂರಿಯಂತಿರುವ) ಬಲು ಬಾಲವೋ ಜ೦ಬಾರಿ(ಜಂಭಾಸುರನನ್ನು ಭೇದಿಸಿದ ಇಂದ್ರ) ಭವನವ ನಳ್ಳಿರಿಯೆ(ನಳ್+ ಇರಿಯೆ(ಚುಚ್ಚು)- ನಕ್ಷತ್ರ? ಕರ್ಕಾಟಕ) ತ್ರಿಪುರಾರಿಯ+ ಒಡ್ಡಿನ(ಠೀವಿ, ಬೆಡಗು) ಹೊಳಹಿನಲಿ ಹೊಳೆ ಹೊಳೆದನು+ ಆ ಹನುಮ.
- ಅರ್ಥ:ಎತ್ತರಕ್ಕೆ ಬೆಳೆದ ಆ ಹನುಮನು ಕಾಂತಿಯಿಂದ, ಮೇರುಪರ್ವತದ ತಪ್ಪಲಲಿ ಬೆಳೆದು ತೋರಿದ ಇಂದ್ರಧನುಷೋ, ಅಥವಾ ತ್ರಿವಿಕ್ರಮನು ಬೆಳೆದಂತೆ ಬೆಳೆದ ಆರ್ಭಟೆಯಲ್ಲಿ ಅವನ ಬಾಲವು ಝಳಪಿಸುವ ಜ್ಯೋತಿರ್ಗಣದ ದೊಡ್ಡ ಮಿಣಿಯೋ,, ಉದ್ದ ಚೂರಿಯಂತಿರುವ ಬಲು ಬಾಲವೋ ಎಂಬಂತೆ ಇರುವ ಬಾಲದೊಂದಿಗೆ ತೋರಿದನು. ಅವನು ಜಂಭಾಸುರನನ್ನು ಭೇದಿಸಿದ ಇಂದ್ರನ ಭವನವ ನಕ್ಷತ್ರಗಳನ್ನು ತಾಗುವಂತೆ, ತ್ರಿಪುರಾರಿ ಶಿವನ ಠೀವಿಯ ಹೊಳಪಿನಿಂದ ಹೊಳೆ ಹೊಳೆದನು - ಪ್ರಕಾಶಿಸಿದನು.
- ಟಿಪ್ಪಣಿ: ಈಪದ್ಯದಲ್ಲಿ ಅನ್ವಯದಂತೆ ಅರ್ಥಮಾಡಲು ಸ್ವಲ್ಪ ಗೊಂದಲವಿದೆ.
- ನೋಡಿದನು ನಡುಗಿದನು ಕ೦ಗಳ
- ಕೋಡಿಯಲಿ ನೀರೊರೆಯೆ ಹರುಷದ
- ರೂಡಿಯಲಿ ಜೊಮ್ಮೆದ್ದು ಮನ ಡೆ೦ಡಣಿಸಿ ಭೀತಿಯಲಿ |
- ಬಾಡು ಮೋರೆಯನೆತ್ತಿ ಕೈಗಳ
- ನೀಡಿ ಕ೦ಗಳ ಮುಚ್ಚಿ ಮರಳಿದು
- ನೋಡಿ ಶಿವ ಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ || ೩೮ ||
- ಪದವಿಭಾಗ-ಅರ್ಥ:ನೋಡಿದನು ನಡುಗಿದನು ಕ೦ಗಳ ಕೋಡಿಯಲಿ(ಕೆರೆಯ ನೀರು ಹೋಗುವ ಕಾಲುವೆ ಕೋಡಿ; ಬದಿಯಲ್ಲಿ) ನೀರು+ ಒರೆಯೆ ಹರುಷದ ರೂಡಿಯಲಿ(ಸ್ವಭಾವ) ಜೊಮ್ಮೆದ್ದು(ರೋಮಾಂಚನಹೊಂದಿ) ಮನ ಡೆ೦ಡಣಿಸಿ(ದಿಗ್‍ಭ್ರಮೆಗೊಂಡು) ಭೀತಿಯಲಿ ಬಾಡು(ಬಾಡಿದ) ಮೋರೆಯನು+ ಎತ್ತಿ ಕೈಗಳ ನೀಡಿ ಕ೦ಗಳ ಮುಚ್ಚಿ ಮರಳಿದು(ಮತ್ತೆ) ನೋಡಿ ಶಿವ ಶಿವಾಯೆನುತ ಬೆಚ್ಚಿದನು(ಹೆದರಿದನು)+ ಅಡಿಗಡಿಗೆ(ಮತ್ತೆಮತ್ತೆ) ಭೀಮ.
- ಅರ್ಥ:ಭೀಮನು ತ್ರಿವಿಕ್ರಮನಂತೆ ಬೆಳೆದ ಹನುಮನನ್ನು ನೋಡಿದನು; ನಡುಗಿದನು; ಕಣ್ಣುಗಳ ಬದಿಯಲ್ಲಿ ನೀರು ಒರೆಯಿಯು. ಆದರೆ ಆ ದರ್ಶನದಿಂದ ಅತಿ ಹರ್ಷದ ರೂಡಿ/ಭಾವದಲ್ಲಿ ರೋಮಾಂಚನಹೊಂದಿ ಮನಸ್ಸು ದಿಗ್‍ಭ್ರಮೆಗೊಂಡು- ನಂತರ ಭೀತಿಯಲಿ ಬಾಡಿದ ಮುಖವನ್ನು ಎತ್ತಿ, ಕೈಗಳನ್ನು ನೀಡಿ, ಕಣ್ಣುಗಳನ್ನು ಮುಚ್ಚಿಕೊಂಡನು; ಅದರೆ ಮತ್ತೆ ನೋಡಿ, ಶಿವ ಶಿವಾಯೆನ್ನುತ್ತಾ ಮತ್ತೆಮತ್ತೆ ಬೆಚ್ಚಿದನು.
- ಸಾಕುಸಾಕ೦ಜಿದೆನು ಮನುಜರು
- ಕಾಕುಬಲರು ನಿಜ ಸ್ವಭಾವವ
- ನೇಕೆ ಬಿಡುವೆವು ತಿಳಿದು ತಿಳಿಯೆವು ಕ೦ಡೊಡ೦ಜುವೆವು |
- ಸಾಕುಪೂರ್ವದ ರೂಪಿನಲಿ ನಿ
- ರ್ವ್ಯಾಕುಲನ ಮಾಡೆನಲು ಪವನಜ
- ನಾ ಕಪೀಶ್ವರ ನಗುತ ಮುನ್ನಿನರೂಪ ಕೈಕೊ೦ಡ || ೩೯ ||
- ಪದವಿಭಾಗ-ಅರ್ಥ:ಸಾಕುಸಾಕು+ ಅ೦ಜಿದೆನು ಮನುಜರು ಕಾಕುಬಲರು(ದುರ್ಬಲರು), ನಿಜ(ತಮ್ಮ) ಸ್ವಭಾವವನು+ ಏಕೆ ಬಿಡುವೆವು, ತಿಳಿದು ತಿಳಿಯೆವು, ಕ೦ಡೊಡೆ+ ಅ೦ಜುವೆವು; ಸಾಕು ಪೂರ್ವದ(ಮೊದಲಿನ) ರೂಪಿನಲಿ ನಿರ್ವ್ಯಾಕುಲನ(ದುಃಖರಹಿತನ) ಮಾಡು+ ಎನಲು ಪವನಜನು(ವಾಯುಪುತ್ರ ಭೀಮನು)+ ಆ ಕಪೀಶ್ವರ ನಗುತ ಮುನ್ನಿನ ರೂಪ ಕೈಕೊ೦ಡ(ಧರಿಸಿದ)
- ಅರ್ಥ:ಭೀಮನು ಮಾರುತಿಯ ಸಮುದ್ರವನ್ನು ಹಾರುವಾಗ ಧರಿಸಿದ ರೂಪವನ್ನು ನೋಡಿ 'ಮಾರುತಿಯೇ, ಸಾಕುಸಾಕು ಅ೦ಜಿದೆನು- ಭಯವಾಗುತ್ತಿದೆ; ನೀನು ಹೇಳಿದಂತೆ ಮನುಜರು ದುರ್ಬಲರು; ನಮ್ಮ ಸ್ವಭಾವವನ್ನು ಏಕೆ ಬಿಡುವೆವು? ತಿಳಿದು ತಿಳಿಯೆವು. ನಿಜವನ್ನು ಕ೦ಡಾಗ ಅ೦ಜುವೆವು; ಹಿರಿಯನೇ ನಿನ್ನ ವಿರಾಟ ದರ್ಶನ ಸಾಕು; ಮೊದಲಿನ ರೂಪವನ್ನು ಧರಿಸಿ ನನ್ನನ್ನು ದುಃಖರಹಿತನನ್ನಾಗಿ ಮಾಡು.'ಎಂದು ಭೀಮನುಹೇಳಲು, ಆ ಕಪೀಶ್ವರನು ನಗುತ್ತಾ ಮೊದಲಿನ ರೂಪವನ್ನು ಧರಿಸಿದನು.
- ಅ೦ಜದಿರು ನೀನಿನ್ನುಮೆಚ್ಚಿದೆ
- ನ೦ಜಲಿಸು ನಾ ಸಲಿಸುವೆನು ನ
- ಮ್ಮ೦ಜನಾ ದೇವಿಯರು ಕು೦ತೀದೇವಿಯಾದರೆಲೆ |
- ರ೦ಜಕರು ನಾವಲ್ಲ ಹೇಳು ಸ
- ಮ೦ಜಸದಲೆನೆ ಭೀಮ ನಗುತ ಧ
- ನ೦ಜಯನ ಟೆಕ್ಕೆಯಕೆ ಬಿಜಯ೦ಗೈಯ ಬೇಕೆ೦ದ || ೪೦ ||
- ಪದವಿಭಾಗ-ಅರ್ಥ:ಅ೦ಜದಿರು ನೀನು+ ಇನ್ನು, ಮೆಚ್ಚಿದೆನು+ ಅ೦ಜಲಿಸು(ಅಂಗೈಯನ್ನು ಒಡ್ಡು, ಕೈಯೊಡ್ಡು) ನಾ ಸಲಿಸುವೆನು(ಕೊಡುವೆನು), ನಮ್ಮ+ ಅ೦ಜನಾ ದೇವಿಯರು- ಕು೦ತೀದೇವಿಯಾದರು+ ಎಲೆ, ರ೦ಜಕರು(ಕೇವಲ ಮನೋರಂಜನೆಗೆ ಮಾತನಾಡುವವರಲ್ಲ) ನಾವಲ್ಲ, ಹೇಳು ಸಮ೦ಜಸದಲಿ+ ಎನೆ(ಎನ್ಲಲು), ಭೀಮ ನಗುತ ಧನ೦ಜಯನ ಟೆಕ್ಕೆಯಕೆ(ಧ್ವಜಕ್ಕೆ) ಬಿಜಯ೦ಗೈಯಬೇಕು(ಬರಬೇಕು)+ ಎ೦ದ.
- ಅರ್ಥ:ಹನುಮಂತನು ಭೀಮನಿಗೆ,'ನೀನು ಇನ್ನು ಹೆದರಬೇಡ; ನಿನ್ನ ಗುಣಕ್ಕೆ ಮೆಚ್ಚಿದೆನು. ಈಗ ನಿನಗೆ ಏನು ಬೇಕೋ ಕೇಳು, ಕೈ ಚಾಚು, ನಾನು ಕೊಡುವೆನು. ನಮ್ಮ ತಾಯಿ ಅ೦ಜನಾದೇವಿಯಯ ಈಗ ಇನ್ನತಅಯಿ ಕು೦ತೀದೇವಿಯಾದರು. ಇಬ್ಬರೂ ನನಗೆ ಸಮಾನರು. ಎಲೆ, ಭೀಮ, ಕೇವಲ ಮನೋರಂಜನೆಗೆ ಮಾತನಾಡುವವರು ನಾವಲ್ಲ. ಏನು ಬೇಕು ಹೇಳು ಸ್ಪಷ್ಟವಾಗಿ,'ಎನ್ಲಲು, ಭೀಮನು ನಗುತ್ತ ನನ್ನ ತಮ್ಮ ಧನ೦ಜಯನ ಧ್ವಜಕ್ಕೆ ನೀನು ಬಂದು ಕೂರಬೇಕು,'ಎ೦ದನು.
- ಐಸೆ ಸಲಿಸಿದೆವೆನುತಲಾ ಕಪಿ
- ಯಾ ಸಮಯದಲದೃಶ್ಯವಾಗೆ ವಿ
- ಕಾಸ ವಾದುದು ವಿಸ್ಮಯಕೆ ಪವಮಾನ ನ೦ದನನ |
- ಆ ಸುಗ೦ಧಿಕ ಕಮಲ ತಾನಿ
- ನ್ನೇಸು ದೂರವೊ ದ್ರುಪದಸುತೆ ತನ
- ಗೇಸು ಮುನಿವಳೊ ಹಾಯೆನುತ ಹರಿದನು ವನಾ೦ತರವ || ೪೧ ||
- ಪದವಿಭಾಗ-ಅರ್ಥ:ಐಸೆ(ಆಯಿತು, ಆಗಲಿ) ಸಲಿಸಿದೆವು(ಮಾತು ಕೊಟ್ಟೆವು)+ ಎನುತಲಿ+ ಆ ಕಪಿಯು+ ಆ ಸಮಯದಲಿ+ ಅದೃಶ್ಯವಾಗೆ, ವಿಕಾಸವಾದುದು ವಿಸ್ಮಯಕೆ ಪವಮಾನ ನ೦ದನನ(ವಾಯುವಿನ ಮಗ) ಆ ಸುಗ೦ಧಿಕ ಕಮಲ ತಾನು+ ಇನ್ನು+ ಏಸು(ಎಷ್ಟು) ದೂರವೊ, ದ್ರುಪದಸುತೆ ತನಗೆ+ ಏಸು ಮುನಿವಳೊ, ಹಾ ಯೆನುತ ಹರಿದನು(ವೇಗವಾಗಿ ಹೋದನು) ವನಾ೦ತರವ(ಕಾಡಿನಲ್ಲಿ).
- ಅರ್ಥ:ಹನುಮನು ಭೀಮನ ಕೋರಿಕೆಗೆ,'ಆಯಿತು, ಮಾತು ಕೊಟ್ಟೆವು ಎನ್ನತ್ತಾ, ಆ ವಾನರನು ಆ ಕ್ಷನದಲ್ಲಿ ಅದೃಶ್ಯವಾದನು. ತಾನು ವೃದ್ಧ- ಕೈಲಾಗದವನೆಂದ ಮಾರುತಿಯ ಅದ್ಬತ ಶಕ್ತಿ, ಪವಮಾನ ನ೦ದನ ಭೀಮನ ವಿಸ್ಮಯಕ್ಕೆ ಕಾರಣವಾಯಿತು. ತನ್ನ ಗುರಿಯನ್ನು ನೆನೆದು, ಆ ಸುಗ೦ಧಿಕ ಕಮಲವು ತಾನು ಇನ್ನೆಷ್ಟು ದೂರವೊ, ದ್ರುಪದಸುತೆ ದ್ರೌಪದಿ ತನಗೆ ಎಷ್ಟು ಕೋಪಿಸುವಳೊ, ಹಾ ಎನ್ನತ್ತಾ ಕಾಡಿನಲ್ಲಿ ವೇಗವಾಗಿ ಹೋದನು.
ಗಂಧರ್ವರನ್ನು ಸೋಲಿಸಿ ಭೀಮನು ಸುಗಂಧ ಪುಷ್ಪವನ್ನು ಪಡೆದನು[ಸಂಪಾದಿಸಿ]
- ಧರಣಿಪತಿಕೇಳ್ ಬಹಳ ವಿಪಿನಾ
- ತರವನ೦ತವ ಕಳೆದುಬರೆ ಬರೆ
- ಸರಸಿಜದ ಮೋಹರದ ಮು೦ದೈತಪ್ಪ ಪರಿಮಳದ |
- ಮೊರೆಯತು೦ಬಿಯ ತಟ್ಟುಗಳ ತನಿ
- ವರಿವ ತ೦ಪಿನ ತುರುಗನಲಿ ತ
- ತ್ಸರಸಿಯನು ದೂರದಲಿ ಕ೦ಡುಬ್ಬಿದನು ಕಲಿಭೀಮ || ೪೨ ||
- ಪದವಿಭಾಗ-ಅರ್ಥ:ಧರಣಿಪತಿ ಕೇಳ್, ಬಹಳ ವಿಪಿನಾತರವನು+ ಅ೦ತು(ಕೊನೆಗೂ)+ ಅವ ಕಳೆದು(ದಾಟಿ) ಬರೆ, ಬರೆ ಸರಸಿಜದ (ಕಮಲ) ಮೋಹರದ(ರಾಶಿ, ಗುಂಪು) ಮು೦ದೆ+ ಐತಪ್ಪ(ಬರುವ) ಪರಿಮಳದ ಮೊರೆಯ ತು೦ಬಿಯ ತಟ್ಟುಗಳ(ಗುಂಪು) ತನಿವರಿವ(ಚೆನ್ನಾಗಿ ತಂಪುಕೊಡುವ, ಹರಿಯುವ- ನಿರ್ಮಲವಾದ, ಪರಿಶುದ್ಧವಾದ) ತ೦ಪಿನ ತುರುಗನಲಿ(ಗುಂಪು, ವೇಗವಾಗಿ ) ತತ್+ ಸರಸಿಯನು ದೂರದಲಿ ಕ೦ಡು+ ಉಬ್ಬಿದನು ಕಲಿಭೀಮ.
- ಅರ್ಥ:ಧರಣಿಪತಿ ಜಮೇಜಯನೇ ಕೇಳು,'ಭೀಮನು ಬಹಳ ವನಗಳಲ್ಲಿ ನೆಡೆದು ಕೊನೆಗೂ ಅವನ್ನು ದಾಟಿ ಬರಲು, ಬಂದಾಗ ಕಮಲಗಳ ರಾಶಿಗಳಿಂದ ಬರುವ ಪರಿಮಳದ, ಮೊರೆದು ಝೇಂಕರಿಸುವ ತು೦ಬಿಗಳ ಗುಂಪುಗಳನ್ನು ಚೆನ್ನಾಗಿ ತಂಪುಕೊಡುವ, ತ೦ಪಿನ ಗಿಡಗಳ ಗುಂಪಿನಲ್ಲಿ ಆ ಸರೋವರವನ್ನು ದೂರದಲ್ಲಿ ಕ೦ಡು ಸಂತೋಷದಿಂದ ಕಲಿಭೀಮನು ಉಬ್ಬಿದನು.
- ಒಗು ಮಿಗೆಯ ಪರಿಮಳದ ಕ೦ಪಿನ
- ತಗಡ ತೆಕ್ಕೆಯ ಬೀದಿವರಿಗಳ
- ಮುಗುಳ ಮೊಗ್ಗೆಯ ತೆಗೆವ ತು೦ಬಿಯ ಲಳಿಯ ಲಗ್ಗೆಗಳ |
- ಹೊಗರ ಹೊರಳಿಯ ಕಿರುದೆರೆಯ ನೂ
- ಕುಗಳ ತಳಿತ ತುಷಾರ ಭಾರದ
- ಸೊಗಸ ಸೇರಿಸಿ ಮ೦ದಮಾರುತ ನಪ್ಪಿದನು ಮಗನ || ೪೩ ||
- ಪದವಿಭಾಗ-ಅರ್ಥ:ಒಗು(ಉಕ್ಕು, ಸೂಸು; ಚೆಲ್ಲು) ಮಿಗೆಯ ಪರಿಮಳದ ಕ೦ಪಿನ ತಗಡ(ಅತಿಯಾದ ದಟ್ಟಣೆ, ಸಾಂದ್ರತೆ) ತೆಕ್ಕೆಯ ಬೀದಿವರಿಗಳ (ಸಾಲಾಗಿರುವ) ಮುಗುಳ ಮೊಗ್ಗೆಯ ತೆಗೆವ(ಹಾರುವ) ತು೦ಬಿಯ ಲಳಿಯ(ವೇಗದ) ಲಗ್ಗೆಗಳ ಹೊಗರ(ಕಾಂತಿ, ಪ್ರಕಾಶ) ಹೊರಳಿಯ ಕಿರು+ ದೆ+ ತೆರೆಯ ನೂಕುಗಳ ತಳಿತ ತುಷಾರ ಭಾರದ ಸೊಗಸ ಸೇರಿಸಿ ಮ೦ದಮಾರುತನು+ ಅಪ್ಪಿದನು ಮಗನ(ಮಾರತನ ಮಗ- ಭೀಮನ)
- ಅರ್ಥ:ಒಗ್ಗಾಗಿ-ಚೆನ್ನಾಗಿ ಸೂಸುತ್ತಿರುವ ಬಹಳ ಪರಿಮಳದ ಅತಿಯಾದ ಕ೦ಪಿನ ಅಪ್ಪುಗೆಯ, ಸಾಲಾಗಿರುವಳ ಮುಗುಳ-ಅರಳುತ್ತಿರುವ ಮೊಗ್ಗುಗಳಿಮದ ಹಾರುವ ತು೦ಬಿಯ ವೇಗದ ಲಗ್ಗೆಗಳ-ಧಾಳಿಯ, ಕಾಂತಿಯ ಹೊರಳುತ್ತಿರುವ ಕಿರುತೆರೆಯ ನೂಕುಗಳ-ಚಲನೆಯ ತಳಿತ ತುಷಾರ- ತಂಪು ಹನಿಗಳ ಭಾರದ ಸೊಗಸನ್ನು ಸೇರಿಸಿ ಮ೦ದಮಾರುತನು ಮಗ- ಭೀಮನನ್ನು ಅಪ್ಪಿದನು. (ತಾತ್ಪರ್ಯ: ಭೀಮನ ಮೇಲೆ ಮಾರುತನು ದುಂಬಿಗಳ ಸದ್ದಿನೊಂದಿಗೆ ಕಮಲದ ಸರೋವರದ ಮೇಲೆ ಹಾದು ಪರಿಮಳವನ್ನು ಹೊತ್ತು ತಂಪಾಗಿ ಬೀಸಿದನು.)
- ಝಳದ ಲಳಿ ಲಟಕಟಿಸೆ ಮಾರ್ಗ
- ಸ್ಖಲಿತ ಖೇದ ಸ್ವೇದಬಿ೦ದುಗ
- ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯದೆಸೆ ಮುರಿಯೆ |
- ತಳಿತುದಾಪ್ಯಾಯನ ಮನೋರಥ
- ಫಲಿತರಸಿಯ ಹರುಷ ದರ್ಪಣ
- ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ || ೪೪ ||
- ಪದವಿಭಾಗ-ಅರ್ಥ:ಝಳದ ಲಳಿ ಲಟಕಟಿಸು(ಬಿಸಿಲ ಝಳದ ವೇಗ/ ತೀವ್ರತೆ - ಕಡಿಮೆಯಾಗಲು) ಮಾರ್ಗಸ್ಖಲಿತ (ಮಾರ್ಗದಲ್ಲಿ ಬಿದ್ದ) ಖೇದ (ಬೇಸರ) ಸ್ವೇದಬಿ೦ದುಗಳು(ಬೆವರು)+ ಒಳ ಸರಿಯೆ, ರೋಮಾಳಿ ಚಾಳಿಸೆ(ಸೋಲಿಸೆ), ತೃಷೆಯದೆಸೆ ಮುರಿಯೆ(ಬಾಯಾರಿಕೆ ಇಂಗಲು) ತಳಿತುದು+ ಆಪ್ಯಾಯನ ಮನೋರಥ, ಫಲಿತು+ ಅರಸಿಯ ಹರುಷ, ದರ್ಪಣಬೆಳಗುವುದು ಮಝ ಭಾಪು+ ಎನುತ ಭುಲ್ಲವಿಸಿದನು(ಉತ್ಸಾಹಗೊಂಡನು) ಭೀಮ.
- ಅರ್ಥ:ಭೀಮನು ಕಮಲದ ಸರೋವರದ ಹತ್ತಿರ ಬರಲು, ಬಿಸಿಲ ಝಳದ ತೀವ್ರತೆ - ಕಡಿಮೆಯಾಯಿತು; ಮಾರ್ಗದಲ್ಲಿ ಆದ ಬೇಸರ ಕಳೆಯಿತು. ಬೆವರಹನಿ ಒಳ ಸರಿಯಿತು; ಮೈಮೇಲಿನ ರೋಮಗಳು ಶಾಂತವಾಗಿ ಮಲಗಿದವು. ಬಾಯಾರಿಕೆ ಇಂಗಲು, ಸಂತಸದ ಮನೋರಥ ಚಿಗುರಿ- ನೆರವೇರಿತು ಎಂದುಕೊಂಡನು. ಅರಸಿ ದ್ರೌಪದಿಯ ಹರ್ಷದರ್ಪಣ- ಮನಸ್ಸಿನಸಂತಸದ ಕನ್ನಡಿ ಬೆಳಗುವುದು. ಮಝ ಭಾಪು! ಎನ್ನುತ್ತ ಭೀಮನು ಹಿಗ್ಗಿ ಉತ್ಸಾಹಗೊಂಡನು.
- ಸಾರ ಬರೆವರೆ ಕ೦ಡನಲ್ಲಿ ಕು
- ಬೇರನಾಳಿದ್ದುದು ತದೀಯ ಸ
- ರೋರುಹದ ಕಾಹಿನಲಿ ಯಕ್ಷರು ಲಕ್ಷ ಸ೦ಖ್ಯೆಯಲಿ |
- ಸಾರೆ ಚಾಚಿದ ಹರಿಗೆಗಳ ಕರ
- ವಾರಿಗಳ ಹೊದೆಯ೦ಬು ಚಾಪ ಕ
- ಠಾರಿ ಸಲ್ಲೆಹ ಸಬಳಗಳ ಸೋಪಾನ ಮಾರ್ಗದಲಿ || ೪೫ ||
- ಪದವಿಭಾಗ-ಅರ್ಥ:ಸಾರ ಬರೆವರೆ(ಸಾರು-ಹೊಗು; ಹತ್ತಿರಬರುದಾಗ) ಕ೦ಡನು+ ಅಲ್ಲಿ ಕುಬೇರನ+ ಆಳು(ಸೈನಿಕ, ಸೈನಿಕರು ಕಾವಲುಗಾರರು)+ ಇದ್ದುದು ತದೀಯ(ತದ್-ಯ- ಅದರ) ಸರೋರುಹದ(ನೀರಿನಲ್ಲಿ- ರುಹ- ಹುಟ್ಟಿದ್ದು, ಕಮಲ) ಕಾಹಿನಲಿ(ಕಾಹು- ಕಾವಲು) ಯಕ್ಷರು ಲಕ್ಷ ಸ೦ಖ್ಯೆಯಲಿ ಸಾರೆ(ಸಾರು- ಹೋಗು, ಹೋಗಲು ಬರಲು) ಚಾಚಿದ ಹರಿಗೆಗಳ(ಗುರಾಣಿ,ಡಾಲು) ಕರವಾರಿಗಳ(ಕೈ ಆಯುಧಗಳ; ಖಡ್ಗ?) ಹೊದೆಯ+ ಅ೦ಬು(ಬಾಣಗಳ ಹೊದೆ- ರಾಶಿ) ಚಾಪ(ಬಿಲ್ಲು) ಕಠಾರಿ(ಸಣ್ಣ ಕತ್ತಿ) ಸಲ್ಲೆಹ(ಭರ್ಚಿ) ಸಬಳಗಳ(ಈಟಿ,) ಸೋಪಾನ (ಕೆರೆಯ ಮೆಟ್ಟಲು) ಮಾರ್ಗದಲಿ.
- ಅರ್ಥ:ಭೀಮನು ಸರೋವರದ ಹತ್ತಿರ ಸಾರಿ ಬರುದಾಗ ಅಲ್ಲಿ ಕುಬೇರನ ಸೈನಿಕರು ಮತ್ತು ಕಾವಲುಗಾರರು ಇದ್ದುದನ್ನು ಕ೦ಡನು. ಅವನು ಅಲ್ಲಿ ಹೋಗಲು, ಕಮಲಗಳ ಕಾವಲಿನಲ್ಲಿ ಯಕ್ಷರು ಲಕ್ಷ ಸ೦ಖ್ಯೆಯಲ್ಲಿ ಇದ್ದರು. ಅಲ್ಲಿ ಚಾಚಿದ- ಒರಗಿಸಿ ಇಟ್ಟ ಗುರಾಣಿ, ಡಾಲು, ಕೈ ಖಡ್ಗ, ಬಾಣಗಳ ರಾಶಿ, ಬಿಲ್ಲು, ಕಠಾರಿ, ಭರ್ಚಿ, ಈಟಿ, ಇವುಗಳನ್ನು ಸರೋವರದ ಸೋಪಾನದ ಮಾರ್ಗದಲ್ಲಿ ಕಂಡನು.
- ಎದ್ದವರಿದಿರಾಗಿ ಭೀಮನ
- ಹೊದ್ದಿದರು ನೀನಾರು ಹದ್ದಿಗೆ
- ಬಿದ್ದಿದನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿದನೋ |
- ಉದ್ದರುಟತನ ನಿನ್ನ ಮೋರೆಯ
- ಲಿದ್ದುದೈ ನೀನಾರು ನಿನಗೇ
- ನಿದ್ದುದಿಲ್ಲಿಯೆನುತ್ತ ಜರೆದರು ಯಕ್ಷರನಿಲಜನ || ೪೬ ||
- ಪದವಿಭಾಗ-ಅರ್ಥ:ಎದ್ದ+ ಅವರು+ ಇದಿರಾಗಿ ಭೀಮನ ಹೊದ್ದಿದರು(ಸಮೀಪ ಬಂದರು.) ನೀನಾರು ಹದ್ದುಗೆ(ಗಡಿ, ಅಧೀನ;) ಬಿದ್ದಿದನೊ(ಹದ್ದುಮೀರಿ ಬಂದವನೋ), ಮೇಣ್ ಮಿತ್ರಭಾವದಲಿ+ ಎಮಗೆ ಬಿದ್ದಿದನೋ(ಅತಿಥಿಯೋ); ಉದ್ದರುಟತನ ನಿನ್ನ ಮೋರೆಯಲಿ(ಮುಖದಲ್ಲಿ)+ ಇದ್ದುದೈ(ಇದೆ) ನೀನಾರು ನಿನಗೇ ನಿದ್ದುದು+ ಇಲ್ಲಿ+ ಯೆನುತ್ತ ಜರೆದರು(ಜರೆ- ನಿಂದಿಸು ಗದರಿಸು) ಯಕ್ಷರು+ ಅನಿಲಜನ(ಭೀಮನ).
- ಅರ್ಥ:ಭೀಮನು ಅಲ್ಲಿ ರೋವರದ ಹತ್ತಿರ ಹೋಗಲು, ಕಳಿತಲ್ಲಿಂದ ಎದ್ದ ಅವರು ಇವನಿಗೆ ಎದುರಾಗಿ, ಭೀಮನ ಸಮೀಪ ಬಂದರು. ಕಾಲುಗಾರರು ಭೀಮನಿಗೆ, 'ನೀನಾರು? ಗಡಿಯ ಹದ್ದುಮೀರಿ ಬಂದವನೋ? ಅಥವಾ ಮಿತ್ರಭಾವದಲ್ಲಿರುವ ನಮಗೆ ಅತಿಥಿಯೋ?; ನಿನ್ನ ಮುಖದಲ್ಲಿ ಉದ್ದಟ ಒರುಟತನ ಇದೆ. ನೀನಾರು? ಇಲ್ಲಿ ನಿನಗೇನು ಕೆಲಸ ಇದ್ದುದು- ಇದೆ?' ಎನುತ್ತ ಯಕ್ಷರು ಭೀಮನನ್ನು ಗದರಿಸಿದರು.
- ನಾವಲೇ ಕು೦ತೀ ಕುಮಾರರು
- ಭೂವಧೂವಲ್ಲಭರು ನಮ್ಮಯ
- ದೇವಿಗಾದುದು ಬಯಕೆ ಸೌಗ೦ಧಿಕ ಸರೋರುಹದ |
- ಠಾವು ಕಾಣಿಸಿಕೊ೦ಡು ಬಹುದಾ
- ತಾವರೆಯನೆನೆ ಬ೦ದೆವಿಲ್ಲಿಗೆ
- ನೀವು ಕಾಹಿನ ಬ೦ಟರೆ೦ಬುದನರಿಯೆ ನಾವೆ೦ದ || ೪೭ ||
- ಪದವಿಭಾಗ-ಅರ್ಥ:ನಾವಲೇ ಕು೦ತೀ ಕುಮಾರರು, ಭೂವಧೂವಲ್ಲಭರು(ಅವನಿ-ಪತಿಗಳು, ರಾಜರು), ನಮ್ಮಯ ದೇವಿಗೆ+ ಆದುದು ಬಯಕೆ(ಆಸೆ) ಸೌಗ೦ಧಿಕ ಸರೋರುಹದ, ಠಾವು(ಇರುವ ಸ್ಥಳ) ಕಾಣಿಸಿಕೊ೦ಡು(ಅದರ ಸ್ಥಳವನ್ನು)ಹುಡುಕಿಕೊಂಡು) ಬಹುದು ಆ ತಾವರೆಯನು+ ಎನೆ ಬ೦ದೆವು+ ಇಲ್ಲಿಗೆ, ನೀವು ಕಾಹಿನ ಬ೦ಟರೆ೦ಬುದನು+ ಅರಿಯೆ ನಾವು+ ಎ೦ದ.
- ಅರ್ಥ:ಭೀಮನು ಯಕ್ಷಭಟರ ಪ್ರಶ್ನೆಗೆ,'ನಾವೋ ಕು೦ತೀ ಕುಮಾರರು- ಪಾಂಡವರು. ರಾಜರು. ನಮ್ಮ ರಾಣಿದೇವಿಗೆ ಸೌಗ೦ಧಿಕ ಸರೋವರದ ಕಮಲವನ್ನು ಪಡೆಯುವ ಬಯಕೆ ಆಯಿತು. ಆ ತಾವರೆಯು ಇರುವ ಸ್ಥಳವನ್ನು ಹುಡುಕಿಕೊಂಡು ಇಲ್ಲಿಗೆ ಬಂದೆವು,'ಎಂದವನು ಮತ್ತೆ,'ನೀವು ಕಾವಲಿನ ಬ೦ಟರು ಎ೦ಬುದನ್ನು ನಾವು ಅರಿಯೆವು- ತಿಳಿಯಲಿಲ್ಲ.'ಎ೦ದ.
- ಐ ಸಲೇ ತಪ್ಪೇನು ನೀಯ
- ಕ್ಷೇಶ ನಲ್ಲಿಗೆ ಹೋಗಿ ಬೇಡುವುದೀ
- ಸರೋರುಹವಾವ ಘನ ಧನಪತಿಯುದಾರನಲೆ |
- ಮೀಸಲಿನ ಸರಸಿಯಲಿ ದೃಷ್ಠಿಯ
- ಸೂಸಬಹುದೇ ರಾಯನಾಜ್ನಾ‘
- ಭಾಷೆಯಿಲ್ಲದೆ ಬಗೆಯಲರಿದೆ೦ದುದು ಭಟಸ್ತೊಮ || ೪೮ ||
- ಪದವಿಭಾಗ-ಅರ್ಥ:ಐಸಲೇ(ಹಾಗೋ!) ತಪ್ಪೇನು. ನೀ ಯಕ್ಷೇಶ ನಲ್ಲಿಗೆ ಹೋಗಿ ಬೇಡುವುದು+ ಈ ಸರೋರುಹವ, + ಆವ ಘನ(ಶ್ರೇಷ್ಠ) ಧನಪತಿಯು+ ಉದಾರನು+ ಎಲೆ ಮೀಸಲಿನ ಸರಸಿಯಲಿ ದೃಷ್ಠಿಯ ಸೂಸಬಹುದೇ(ಚೆಲ್ಲಬಹುದೇ, ಹಾಕಬಹುದೇ) ರಾಯನ+ ಆಜ್ಞಾಭಾಷೆಯಿಲ್ಲದೆ ಬಗೆಯಲು+ ಅರಿದು(ಆಗದು)+ ಎ೦ದುದು ಭಟಸ್ತೊಮ(ಯಕ್ಷರ ಸೇನೆಯ ಭಟರ ಗುಂಪು.)
- ಅರ್ಥ:ಕಾವಲಿದ್ದ ಭಟನು ಭೀಮನಿಗೆ,'ರಾಜರೋ, ಹಾಗೋ! ತಪ್ಪೇನು. ನೀನು ಯಕ್ಷರ ರಾಜ ಕುಬೇರನಲ್ಲಿಗೆ ಹೋಗಿ ಕಮಲವನ್ನು ಬೇಡಿ ಅನುಮತಿ ಪಡೆಯಬೇಕು. ಘನ ಧನಪತಿಯು ಉದಾರಮನಸ್ಸಿನವನು. ಎಲವೂ ಭೀಮ ಯಕ್ಷರಾಜನಿಗೆ ಮೀಸಲಿರುವ ಸರಸ್ಸಿನ ಮೇಲೆ ನೀನು ಕಣ್ಣು ಹಾಕಬಹುದೇ? ಯಕ್ಷರಾಯನ ಅಪ್ಪಣೆ ಇಲ್ಲದೆ ಕಮಲಕ್ಕೆ ಆಸೆಪಡುವುದು,'ಎ೦ದು ಯಕ್ಷಭಟರ ಗುಂಪು ಹೇಳಿತು.
- ಬೇಡಲರಿಯೆವು ನಾವು ಬೇಡುವರ ಕೂ
- ಡಾಡುವರು ನಾವಲ್ಲ ಕದನವ
- ಬೇಡಬಲ್ಲೆವು ಕರೆಯಿ ಕೊಡಲಾಪರೆ ಧನೇಶ್ವರನ |
- ಬೇಡುವುದು ಗದೆ ನಿಮ್ಮವಕ್ಷವ
- ತೋಡಿ ನೆತ್ತರುಗೊಳದಲೋಕುಳಿ
- ಯಾಡುವುದನೆ೦ದನಿಲಸುತ ಬೀಸಿದನು ನಿಜಗದೆಯ ೪೯
- ಪದವಿಭಾಗ-ಅರ್ಥ:ಬೇಡಲು+ ಅರಿಯೆವು(ತಿಳಿದಿಲ್ಲ) ನಾವು, ಬೇಡುವರ ಕೂಡೆ+ ಆಡುವರು ನಾವಲ್ಲ, ಕದನವ (ಯುದ್ಧ) ಬೇಡಬಲ್ಲೆವು ಕರೆಯಿ ಕೊಡಲು+ ಆಪರೆ(ಸಾಧ್ಯವಿದೆಯೇ?) ಧನೇಶ್ವರನ ಬೇಡುವುದು, ಗದೆ ನಿಮ್ಮ ವಕ್ಷವ(ಸೇನೆಯ) ತೋಡಿ(ಒಡೆದು, ಕತ್ತರಿಸಿ) ನೆತ್ತರು+ ಗೊ+ ಕೊಳದಲಿ+ ಓಕುಳಿಯಾಡುವುದನು+ ಎ೦ದು+ ಅನಿಲಸುತ ಬೀಸಿದನು ನಿಜ(ತನ್ನ) ಗದೆಯ.
- ಅರ್ಥ:ಭೀಮನು ನಾವು ಕ್ಷತ್ರಿಯರು,' ನಾವು ಬೇಡುವುದನ್ನು ತಿಳಿದಿಲ್ಲ. ಬೇಡುವವರ ಜೊತೆ ಒಡನಾಡುವವರಲ್ಲ ನಾವು. ನಾವು ಯುದ್ಧವನ್ನು ಬೇಡಬಲ್ಲೆವು. ಧನೇಶ್ವರನನ್ನು ಕರೆಯಿಸಿ ಕಮಲವನ್ನು ಕೊಡಲು ಸಾಧ್ಯವೇ? ಈ ಗದೆಯು ಬೇಡುವುದು. ನನ್ನನ್ನು ತಡೆದರೆ ಅದು ನಿಮ್ಮ ಸೇನೆಯನ್ನು ತೋಡಿ ರಕ್ತದ ಕೊಳದಲ್ಲಿ ಓಕುಳಿಯಾಡುವುದನ್ನು ನೋಡಬಹುದು,' ಎ೦ದು ಹೇಳಿ ಅನಿಲಸುತ ಭೀಮನು ತನ್ನ ಗದೆಯನ್ನು ಬೀಸಿದನು.
- ಎಲೆಲೆ ಕವಿ ಯಕ್ಷ ರಾಕ್ಷಸ
- ದಳವನೊಟ್ಟೈಸುವೆನೆ ಹೆ
- ಬ್ಬುಲಿಯ ಹಿ೦ಡಿಗೆ ಹೋತ ಹೊಡಕರಿಸಿತು ಮಹಾದೇವ |
- ತಲೆಯ ಹೋಯ್ ಚೆ೦ಡಾಡು ತಿನ್ನಿವ
- ನೆಲುವನೆನು ತೀಟಿಯಲಿ ಸಬಳದ
- ಲಲಗಿನಲಿ ಖಡುಗದಲಿ ಹೊಯ್ದರು ಪವನ ನ೦ದನನ೦ || ೫೦ ||
- ಪದವಿಭಾಗ-ಅರ್ಥ:ಎಲೆಲೆ ಕವಿ ಯಕ್ಷ ರಾಕ್ಷಸ ದಳವನು+ ಒಟ್ಟೈಸುವೆ+ ಎನೆ, ಹೆಬ್ಬುಲಿಯ ಹಿ೦ಡಿಗೆ ಹೋತ ಹೊಡಕರಿಸಿತು(ಗೋಚರಿಸು, ಕಾಣಿಸುತು) ಮಹಾದೇವ, ತಲೆಯ ಹೋಯ್ ಚೆ೦ಡಾಡು ತಿನ್ನು+ ಇವನ+ ಎಲುವನು+ ಎನುತ+ ಈಟಿಯಲಿ ಸಬಳದಲಿ+ ಅಲಗಿನಲಿ, ಖಡುಗದಲಿ, ಹೊಯ್ದರು(ಹೊಡೆದರು.) ಪವನ ನ೦ದನನ೦
- ಅರ್ಥ:ಆಗ ಗಂದರ್ವರು ಮತ್ತ ಕುಬೇರನ ಕಡೆಯ ರಾಕ್ಷಸರು,'ಎಲೆಲೆ ಮುತ್ತು ಯಕ್ಷ ರಾಕ್ಷಸ ದಳಗಳನ್ನು ಒಟ್ಟಾಗಿಸುವ,' ಎನ್ನಲು, ಹೆಬ್ಬುಲಿಯ ಹಿ೦ಡಿಗೆ(ಗಂಧರ್ವರ ಗುಂಪಿಗೆ ಒಬ್ಬನೇ ಭೀಮ) ಹೋತ ಹೊಡಕರಿಸಿತು-ಕಂಡಂತಾಯಿತು ಮಹಾದೇವ. ತಲೆಯ ಹೊಡೆ, ಚೆ೦ಡಾಡು, ತಿನ್ನು ಇವನನ್ನು, ಇವನ ಎಲುಬನ್ನು ಎನ್ನುತ್ತಾ, ಈಟಿಯಿಂದ ಸಬಳದಿಂದ, ಕತ್ತಿಯ ಅಲಗಿನಿಂದ, ಖಡ್ಗದಿಂದ, ಪವನ ನ೦ದನ ಭೀಮನನ್ನು ಹೊಡೆದರು.
- ತಾಗಿದೆದೆ ಮುಳ್ಳಿನಲಿ ಮದಗಜ
- ಸೀಗುರಿಸುವುದೇ ಭಟರ ಕೈದುಗ
- ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ |
- ತಾಗಿದವದಿರನಿಕ್ಕಿದನು ರಣ
- ದಾಗಡಿಗರನುಯೆಕ್ಕಿದನು ಕೈ
- ದಾಗಿಸಿದನನಿಬರಲಿ ಗ೦ಡುಗತನದ ಗಾಡಿಕೆಯ || ೫೧ ||
- ಪದವಿಭಾಗ-ಅರ್ಥ:ತಾಗಿದ(ಮುಟ್ಟಿದ, ಮೇಲೆಬಿದ್ದ)+ ಎದೆ ಮುಳ್ಳಿನಲಿ ಮದಗಜ ಸೀಗುರಿಸುವುದೇ(ವಾಲುವುದೇ), ಭಟರ ಕೈದುಗಳು+ ಏಗುವವು ಪವಮಾನಸುತ(ಭೀಮ) ಕೈದೋರೆ(ಪರಾಕ್ರಮ ತೋರಲು) ಖಾತಿಯಲಿ(ಸಿಟ್ಟಿನಿಂದ) ತಾಗಿದ(ಮೇಲೆಬಿದ್ದ)+ ಅವದಿರನು+ ಇಕ್ಕಿದನು(ಹೊಡೆದನು), ರಣದ+ ಆಗಡಿಗರುನುಯೆ(ದೂತರನ್ನೂ ಸಹ)+ ಇಕ್ಕಿದನು(ಹೊಡೆದಮು) ಕೈದಾಗಿಸಿದನು(ಯುದ್ಧಮಾಡಿದನು)+ ಅನಿಬರಲಿ(ಅವರೆಲ್ಲರೊಡನೆ) ಗ೦ಡುಗತನದ(ಪರಾಕ್ರಮದ) ಗಾಡಿಕೆಯ(ಠೀವಿಯ).
- ಅರ್ಥ:ಭೀಮನು, ಮೈಗೆ ತಾಗಿದ ಎದೆ ಮುಳ್ಳಿನಿಂದ ಮದಗಜವು ವಾಲುವುದೇ? ಹಾಗೆಯೇ ಪವಮಾನಸುತ ಭೀಮನು ಪರಾಕ್ರಮ ತೋರಲು ಭಟರ ಆಯುಧಗಳು ತಡೆಯುವುವೇ? ಸಿಟ್ಟಿನಿಂದ ಮೇಲೆಬಿದ್ದ ಅವರನ್ನು ಭೀಮನು ಬಲವಾಗಿ ಹೊಡೆದನು. ರಣರಂಗದಲ್ಲಿ ಬಂದ ದೂತರನ್ನೂ ಸಹ ಹೊಡೆದು ಹಾಕಿದನು. ಅವರೆಲ್ಲರೊಡನೆ ಪರಾಕ್ರಮದ ಠೀವಿಯಿಂದ ಯುದ್ಧಮಾಡಿದನು.
- ಗಾಡಿಸಿತು ಗಜಬಜ ಕೂಬೇರನ
- ಬೀಡಿನಗ್ಗದ ಬ೦ಟರೇ ಕೈ
- ಮಾಡಿರೈ ಕೋಳಗಾಹಿಗಳು ಫಡ ಹಿ೦ಗ ಬೇಡೆನುತ |
- ಜಾಡಿಸುವ ಮಣಿಮಯದ ಗಧೆಯಲಿ
- ತೋಡುವೊಯ್ಲಿನ ತುಡುಕುಗಾಯದ
- ನೀಡು ಮೊನೆಗಳ ವಿಗಡನಿಕ್ಕಿದನಕಟ ರಕ್ಕಸರ || ೫೨ ||
- ಪದವಿಭಾಗ-ಅರ್ಥ:ಗಾಡಿಸುತು(ಪ್ರಚೋದಿಸು,ಪ್ರೇರಿಸು,ಹುರಿದುಂಬಿಸು) ಗಜಬಜ ಕೂಬೇರನ ಬೀಡಿನ(ವಾಸಸ್ಥಳ)+ ಅಗ್ಗದ(ಉತ್ತಮ) ಬ೦ಟರೇ ಕೈಮಾಡಿರೈ ಕೋಳಗಾಹಿಗಳು(ತಡೆಯುವ ಕಾವಲಿನವರು), ಫಡ ಹಿ೦ಗಬೇಡ(ಹಿಮ್ಮೆಟ್ಟಬೇಡ)+ ಎನುತ ಜಾಡಿಸುವ(ಹೊಡೆಯುವ) ಮಣಿಮಯದ ಗಧೆಯಲಿ ತೋಡು ವೊಯ್ಲುನ(ಹೊಯಿಲು- ಏಟು, ಹೊಡೆತ ೨ ಕದನ; ತೋಡು-ಗುಂಪು, ಸಮೂಹದ ಹೊಡೆತ) ತುಡುಕು(ನುಗ್ಗಿದ,ತಾಗಿದ) ಗಾಯದ, ನೀಡು(ಮುಂದಕ್ಕೆ ಚಾಚಿದ) ಮೊನೆಗಳ ವಿಗಡನು(ಶೂರ)+ ಇಕ್ಕಿದನು()ಹೊಡೆದನು+ ಅಕಟ ರಕ್ಕಸರ
- ಅರ್ಥ:ಭೀಮ ಮತ್ತು ಗಂಧರ್ವ - ರಕ್ಕಸರ ಹೋರಾಟ ಗಜಬಜ- ಗಲಾಟೆ ಹೆಚ್ಚಿತು. ಕೂಬೇರನ ರಾಜ್ಯದ ಉತ್ತಮ ಸೇವಕರೇ ಕೈಮಾಡಿರಯ್ಯಾ- ಹೋರಅಡಿರಯ್ಯಾ! ಶತ್ರುಗಳನ್ನು ತಡೆಯುವ ಕಾವಲಿನವರೇ ಫಡ! ಹಿಮ್ಮೆಟ್ಟಬೇಡ, ಎನ್ನುತ್ತಾ ಹೊಡೆಯುವ ಮಣಿಮಯದ ಗದೆಯಲ್ಲಿ ಗುಂಪನ್ನೆ ಹೊಡೆದನು. ಅಕಟ! ನುಗ್ಗಿದ ಗಾಯದ ಬಟರನ್ನು ಮುಂದಕ್ಕೆ ಚಾಚಿದ ಗದೆಯಿಂದ ಶೂರ ಭೀಮನು ರಕ್ಕಸರನ್ನು ಬಲವಾಗಿ ಹೊಡೆದನು.
- ಹಾರಿದವು ಹ೦ಸೆಗಳು ತುದಿಮರ
- ನೇರಿದವು ನವಿಲುಗಳು ತು೦ಡವ
- ನೂರಿ ನೀರೊಳು ಮುಳುಗಿ ಮರಳವು ಜಕ್ಕ್ವಕ್ಕಿಗಳು |
- ಚೀರಿದವು ಕೊಳವಕ್ಕಿ ಜಲದಲಿ
- ಜಾರಿ ತಾವರೆಯೆಲೆಯ ಮರೆಗಳ
- ಲಾರಡಿಗಳಡಗಿದವು ಕೋಳಾಹಳಕೆ ಪವನಜನ || ೫೩ ||
- ಪದವಿಭಾಗ-ಅರ್ಥ:ಹಾರಿದವು ಹ೦ಸೆಗಳು ತುದಿಮರ ನೇರಿದವು, ನವಿಲುಗಳು ತು೦ಡವನು+ ಊರಿ ನೀರೊಳು ಮುಳುಗಿ ಮರಳವು, ಜಕ್ಕ್ವಕ್ಕಿಗಳು ಚೀರಿದವು, ಕೊಳವಕ್ಕಿ ಜಲದಲಿ ಜಾರಿ ತಾವರೆ ಯೆಲೆಯ ಮರೆಗಳಲಿ ಆರಡಿಗಳು(ಜೇನುಹುಳಗಳು)+ ಅಡಗಿದವು ಕೋಳಾಹಳಕೆ(ಆಟಾಟೋಪ) ಪವನಜನ
- ಅರ್ಥ:ಪವನಜ ಭೀನ ಆಟಾಟೋಪಕ್ಕೆ ಹೆದರಿ,'ಕೊಳದಲ್ಲಿದ್ದ ಹ೦ಸೆಗಳು ಹಾರಿದವು. ಅವು ಮರದತುದಿಗೆ ಹಾರಿಹೋಗಿ ಅಲ್ಲಿ ನೇರಿದವು, ನವಿಲುಗಳು ತಮ್ಮ ಕೊಕ್ಕನ್ನು ಊರಿ ನೀರಲ್ಲಿ ಮುಳುಗಿ ಭಯದಿ ಮರಳಿಬಲಾರವು. ಜಕ್ಕವಕ್ಕಿಗಳು ಭಯದಿಂದ ಚೀರಿದವು. ಕೊಳವಹಕ್ಕಿಗಳು ಜಲದಲಲ್ಲಿ ಜಾರಿಹೋಗಿ ತಾವರೆ ಯೆಲೆಯ ಮರೆಗಳಲ್ಲಿ ನಿಂತವು. ಪವನಜನ ಕೋಳಾಹಲಕ್ಕೆ ಜೇನುಹುಳಗಳು ಅಡಗಿದವು.
- ಚೆಲ್ಲಿದರು ರಕ್ಕಸರು ಯಕ್ಷರು
- ಬಿಲ್ಲ ಬಿಸುಟರು ಗುಹ್ಯಕರು ನಿ೦
- ದಲ್ಲಿ ನಿಲ್ಲರು ಕಿನ್ನರರ ನಿನ್ನೇನನುಸುರುವೆನು |
- ಗೆಲವಿದು ಲೇಸಾಯ್ತು ಮಾನವ
- ನಲ್ಲಿ ನಮಗೀ ಭ೦ಗ ಭಯರಸ
- ವೆಲ್ಲಿ ಭಾಪುರೆ ವಿಧಿಯೆನುತ ಬೆಚ್ಚಿದುದು ಭಟಸ್ತೋಮ || ೫೪ ||
- ಪದವಿಭಾಗ-ಅರ್ಥ:ಚೆಲ್ಲಿದರು(ಎಸೆದರು) ರಕ್ಕಸರು ಯಕ್ಷರು ಬಿಲ್ಲ, ಬಿಸುಟರು ಗುಹ್ಯಕರು(ಕುಬೇರನ ಬಂಟರು) ನಿ೦ದಲ್ಲಿ ನಿಲ್ಲರು, ಕಿನ್ನರರನು+ ಇನ್ನು+ ಏನನು+ ಉಸುರುವೆನು(ಹೇಳಲಿ) ಗೆಲವು+ ಇದು ಲೇಸಾಯ್ತು ಮಾನವನಲ್ಲಿ ನಮಗೀ ಭ೦ಗ ಭಯ ರಸವೆಲ್ಲಿ ಭಾಪುರೆ ವಿಧಿ+ ಯೆನುತ ಬೆಚ್ಚಿದುದು ಭಟಸ್ತೋಮ.
- ಅರ್ಥ:ಕುಬೇರನ ಭಟರು- ರಕ್ಕಸರು ಯಕ್ಷರು ಆಯುಧಗಳನ್ನೂ ಬಿಲ್ಲನ್ನೂ ಎಸೆದರು. ಗುಹ್ಯಕರೆಂಬ ಕುಬೇರನ ಬಂಟರು ನಿ೦ತಲ್ಲಿ ನಿಲ್ಲರು ಓಡಿದರು. ಕಿನ್ನರರನ್ನು ಕುರಿತು ಇನ್ನು ಏನನ್ನು ಹೇಳಲಿ. ಭೀಮನಿಗೆ ಗೆಲವು ಆಯಿತು; ಇದು ಲೇಸಾಯ್ತು; ಮಾನವನಲ್ಲಿ ನಮಗೆ ಈ ಬಗೆಯ ಭ೦ಗ- ಸೋಲು, ಅವಮಾನ, ಭಯರಸವು ಎಲ್ಲಿಯದು! ಭಾಪುರೆ ವಿಧಿ! ಎನ್ನುತ್ತಾ ಗಂದರ್ವ ಭಟರ ಸಮೂಹ ಭೀಮನಿಗೆ ಬೆಚ್ಚಿ ಬೆದರಿತು.
- ಗಾಯವಡೆದರು ಕೆಲರು ಕೆಲರಸು
- ಬೀಯವಾದುದು ಬಿಡುದಲೆಯ ಬಲು
- ನಾಯಕರು ಸ೦ತೈಸಿದರು ಕೌಬೇರ ಭವನದಲಿ |
- ವಾಯುಸುತನೀ ವಿಜಯ ಸಿರಿಯ ಪ
- ಸಾಯಿತ೦ಗಭಿಷೇಕವೆ೦ದು ಗ
- ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ || ೫೫ ||
- ಪದವಿಭಾಗ-ಅರ್ಥ:ಗಾಯವಡೆದರು(ಗಾಯಪಡೆದರು) ಕೆಲರು; ಕೆಲರ+ ಅಸು(ಪ್ರಾಣ) ಬೀಯವಾದುದು(ಬೀಯ- ಇಲ್ಲವಾದುದು) ಬಿಡು+ ದ+ ತಲೆಯ ಬಲುನಾಯಕರು ಸ೦ತೈಸಿದರು ಕೌಬೇರ ಭವನದಲಿ, ವಾಯುಸುತನು+ ಈ ವಿಜಯ ಸಿರಿಯ ಪಸಾಯತು (ಪಸಾಯ- ಪ್ರಸಾದ ಉಡುಗೊರೆ,ಬಹುಮಾನ),+ ಅ೦ಗಭಿಷೇಕವೆ೦ದು ಗದಾಯುಧವನು+ ಅಲುಬಿದನು ಕೊಳನಲಿ ಚಾಚಿದನು ತಡಿಗೆ.
- ಅರ್ಥ:ಗಂದರ್ವರಲ್ಲಿ ಕೆಲವರು ಗಾಯಪಡೆದರು; ಕೆಲವರ ಪ್ರಾಣ ಇಲ್ಲದಂತಾಯಿತು. ಬಿಟ್ಟ ತಲೆಯಕೂದಲಿನಲ್ಲಿ ಕುಬೇರನ ಬಳಿಗೆ ಓಡಿದರು. ಅವರನ್ನು ಮೇಲಿನ ದೊಡ್ಡ ನಾಯಕರು ಕೌಬೇರ ಭವನದಲ್ಲಿ (ಅವನು ನಮ್ಮವನೇ- ವಾಯುಪುತ್ರ ಎಂದು) ಸ೦ತೈಸಿದರು. ವಾಯುಸುತನು ಈ ವಿಜಯ ಸಿರಿಯ ನಮಗೆ ದೈವಿಕ ವರಪ್ರಸಾದ, ವಿಜಯದ ಅ೦ಗ ಅಭಿಷೇಕವೆ೦ದು ಸಂತಸದಿಂದ ಗದಾಯುಧವನ್ನು ತೂಗಿ, ಕೊಳತಡಿಗೆ ಅದನ್ನು ಚಾಚಿ ಇಟ್ಟನು.
- ತೊಳೆದು ಚರಣಾನನವ ನಡುಗೊಳ
- ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
- ಕ್ಕುಳಿಸಿ ತೀರದಲುಗುಳಿದಿವ್ಯಾ೦ಭೋಜ ಪರಿಮಳವ |
- ವಿಲಸದಲಿ ತನಿಹೊರೆದ ಶೀತಳ
- ಜಲವ ಕುಡಿದಪ್ಯಾಯನ೦ತರ
- ಲಲಿತ ಹೃದಯ ನಿಮಿರ್ದು ಹಿಡಿದನು ಕಮಲ ಪ೦ಕ್ತಿಗಳ || ೫೬ ||
- ಪದವಿಭಾಗ-ಅರ್ಥ:ತೊಳೆದು ಚರಣ+ ಅನನವ (ಕಾಲು ಮುಖವ) ನಡು+ ಗೊ+ ಕೊಳದೊಳಗೆ ಹೊಕ್ಕು+ ಅಡಿಗಡಿಗೆ ಮಿಗೆ ಮುಕ್ಕುಳಿಸಿ, ತೀರದಲಿ+ ಉಗುಳಿ+ ದಿವ್ಯ+ ಅ೦ಭೋಜ(ಕಮಲ) ಪರಿಮಳವ ವಿಲಸದಲಿ(ಸಂತೋಷದಲ್ಲಿ) ತನಿಹೊರೆದ(ನಿರ್ಮಲವಾದ, ಪರಿಶುದ್ಧವಾದ) ಶೀತಳ(ತಣ್ಣನೆಯ) ಜಲವ ಕುಡಿದು+ ಅಪ್ಯಾಯನು+ ಅ೦ತರ ಲಲಿತ ಹೃದಯ ನಿಮಿರ್ದು ಹಿಡಿದನು ಕಮಲ ಪ೦ಕ್ತಿಗಳ .
- ಅರ್ಥ:ಭೀಮನು ಕಾಲು ಮುಖಗಳನ್ನು ತೊಳೆದುಕೊಂಡು,) ನಡು ಕೊಳದೊಳಗೆ ಹೊಕ್ಕು ಮತ್ತೆ ಮತ್ತೆ ಚಿನ್ನಾಗಿ ಬಾಯಿ ಮುಕ್ಕುಳಿಸಿ, ತೀರದಲ್ಲಿ ಉಗುಳಿ, ದಿವ್ಯವಾದ ಕಮಲದಹೂವಿನ ಪರಿಮಳವ ವಿಲಾಸದಲಿ- ಆನಂದದಲ್ಲಿ, ಪರಿಶುದ್ಧವಾದ ತಣ್ಣನೆಯ ನೀರನ್ನು ಕುಡಿದು ತೃಪ್ತಿಪಟ್ಟನು. ಮನದೊಳಗಿನ ಲಲಿತ ಹೃದಯ ಉಬ್ಬಿ ಕಮಲದ ಹೂವಿನ ಪ೦ಕ್ತಿಗಳನ್ನು ಕೈಹಾಕಿ ಹಿಡಿದನು.
- ಚಾಚಿದನು ಬರಿ ಕೈಯನಬುಜಕೆ
- ಚಾಚುವಿಭಪತಿಯ೦ತೆ ತು೦ಬಿಗ
- ಳಾ ಚಡಾಳ ದ್ವನಿಯ ದಟ್ಟಣೆ ಮಿಗಲು ಚೀರಿದವು |
- ವೀಚಿ ಮಸಗುವ ಕೊಳನು ಜಿನ ಋಷಿ
- ಯಾಚರಣೆಯೊಳು ಕಮಲ ವನವನು
- ಲೋಚಿನಲಿ ಲಾವಣಿಗೆಗೊ೦ಡನು ಭೀಮ ನಿಮಿಷದಲಿ || ೫೭ ||
- ಪದವಿಭಾಗ-ಅರ್ಥ:ಚಾಚಿದನು ಬರಿ ಕೈಯನು+ ಅಬುಜಕೆ(ಕಮಲಕ್ಕೆ) ಚಾಚುವ+ ಇಭಪತಿಯ೦ತೆ(ಇಭ- ಆನೆ, ಮದ್ದಾನೆ) ತು೦ಬಿಗಳು+ ಆ ಚಡಾಳ (ಹೆಚ್ಚಳ, ಆಧಿಕ್ಯ) ದ್ವನಿಯ ದಟ್ಟಣೆ ಮಿಗಲು ಚೀರಿದವು, ವೀಚಿ(ಸಣ್ಣಅಲೆ, ತರಂಗ) ಮಸಗುವ(ಮಸಗು- ಹರಡು; ಕೆರಳು;) ಕೊಳನು ಜಿನಋಷಿಯ+ ಆಚರಣೆಯೊಳು ಕಮಲ ವನವನು ಲೋಚಿನಲಿ(ಲೋಚು- ಕೀಳು, ತಲೆಗೂದಲನ್ನು ಕೈಯಿಂದ ಕೀಳು, ಜೈನಸಂನ್ಯಾಸಿಗಳ ತಲೆಕೂದಲನ್ನು ಕತ್ತಿಯನ್ನು ಉಪಯೋಗಿಸದೆ ಕೈಯಿಂದ ಒಂದೂ ಉಳಿಯದಂತೆ ಕೀಳುವುದಕ್ಕೆ "ಲೋಚು"ವುದು ಎಂದು ಹೆಸರು. ಲೋಚಿನಲಿ ಲಾಣಿಗೊಂಡನು= ಬಲವಂತವಾಗಿ ಎಲ್ಲಾ ಕಮಲಗಳನ್ನೂ ಕಿತ್ತನು- ಎಂದು.) ಲಾವಣಿಗೆಗೊ೦ಡನು(ಲಾವಣಿ- ಗೇಣಿ) ಭೀಮ ನಿಮಿಷದಲಿ.
- ಅರ್ಥ:ಭೀಮನು ಕತ್ತಿಯನ್ನು ಉಪಯೋಗಸದೆ ಕಮಲಗಳಿಗೆ ಬರಿ ಕೈಯನ್ನು ಚಾಚಿದನು; ಸೊಂಡಿಲನ್ನು ಚಾಚುವ ಮದ್ದಾನೆಯಂತೆ ಕೈಚಾಚಿದನು. ಅದಕ್ಕೆ ಮುತ್ತಿದ ತು೦ಬಿಗಳು ಅತಿಯಾಗಿ ದ್ವನಿಯ ದಟ್ಟಣೆಯು ಹೆಚ್ಚುವಂತೆ ಝೇಂಕರಿಸಿ ಚೀರಿದವು. ಭೀಮನು ಕೈಬೀಸಲು ಎದ್ದ ತರಂಗಗಳು ಸರೋವರದಲ್ಲಿ ಹರಡುತ್ತಿದ್ದಂತೆ 'ಕೊಳವೆಂಬ ಜಿನಋಷಿಯ ಆಚರಣೆ'ಯಂತೆ ಕಮಲ ವನವನ್ನು ಕೈಯಿಂದ ಲೋಚಿನಲ್ಲಿ- ಜಿನಋಷಿಯ ತಲೆಗೂದಲನ್ನು ಪೂರಾ ಕೈಯಿಂದ ಕೀಳುವಂತೆ ಎಲ್ಲಾ ಕಮಲಗಳನ್ನು ಕತ್ತಿಯನ್ನು ಉಪಯೋಗಿಸದೆ ನಿಮಿಷದಲ್ಲಿ ಕೈಯಿಂದ ಕಿತ್ತನು. ಮಾಲಿಕನು ಗೇಣಿಯನ್ನು ಬಲವಂತವಾಗಿ ಪಡೆಯುವಂತೆ ಭೀಮನು ಕಮಲಗಳನ್ನು ಗಂದರ್ವರಿಂದ ಬಲವಂತವಾಗಿ ಪಡೆದನು.
- ತಿರಿದು ತಾವರೆ ವನವ ಕಕ್ಷದೊ
- ಳಿರುಕಿ ಗದೆಯನು ಕೊ೦ಡು ಸರಸಿಯ
- ಹೊರವಳಯದಲಿ ನಿ೦ದು ಕಾಹಿನ ಯಕ್ಷ ರಾಕ್ಷಸರ |
- ಒರಲಿ ಕರೆದನು ನಿಮ್ಮ ಕೊಳನಿದೆ
- ಬರಿದೆ ದೂರದಿರೆಮ್ಮನೆನುತಾ
- ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ || ೫೮ ||
- ಪದವಿಭಾಗ-ಅರ್ಥ:ತಿರಿದು(ಕಿತ್ತು) ತಾವರೆ ವನವ ಕಕ್ಷದೊಳು+ ಇರುಕಿ(ಅವುಚಿ), ಗದೆಯನು ಕೊ೦ಡು ಸರಸಿಯ ಹೊರವಳಯದಲಿ ನಿ೦ದು, ಕಾಹಿನ ಯಕ್ಷ ರಾಕ್ಷಸರ ಒರಲಿ(ಕೂಗಿ) ಕರೆದನು, ನಿಮ್ಮ ಕೊಳನಿದೆ, ಬರಿದೆ ದೂರದಿರಿ+ ಎಮ್ಮನು+ ಎನುತ+ ಆಸರಿನ(ದಾಹ, ಬಾಯಾರಿಕೆ; ಆಸರಿನ ಮಾತು= ಸುಮ್ಮನೆ ಬಾಯಾರಿಕೆಗೆ- "ಆಸರಿಗೆ ಏನಾದರೂ ಬೇಕೆ?" ಎಂದು ಉಪಚಾರಕ್ಕಾಗಿ ಅತಿಥಿಗಳನ್ನು ಕೇಳುವುದು.) ಮಾತಿನ ನಲವಿನಲಿ ಮರಳಿದನು ಕಲಿಭೀಮ.
- ಅರ್ಥ:ತಾವರೆಗಳನ್ನು (ತಾವರೆ ವನವನ್ನೇ) ಕಿತ್ತುಕೊಂಡು ಬಗಲಲ್ಲಿ ಅವುಚಿಟ್ಟುಕೊಂಡು, ಗದೆಯನ್ನು ತೆಗೆದುಕೊ೦ಡು ಸರಸ್ಸಿ ಹೊರವಲಯದಲ್ಲಿ ನಿ೦ತು,ಅಲ್ಲಿ ಉಳಿದ ಕಾವಲಿನ ಯಕ್ಷ ರಾಕ್ಷಸರರಿಗರಿಗೆ ಒರಲಿ ಕರೆದನು. "ನಿಮ್ಮ ಕೊಳವು ಅಲ್ಲೇ ಇದೆ, ನಮ್ಮನ್ನು ಬರಿದೆ ದೂರಬೇಡಿ", ಎನ್ನುತ್ತಾ 'ಆಸರಿನ ಬಾಯಿ ಉಪಚಾರದ' ಮಾತನ್ನು ಹೇಳಿದ ಸಂತಸದಲ್ಲಿ ಕಲಿಭೀಮನು ಮರಳಿ ತನ್ನ ಬೀಡಿಗೆ ಬಂದನು.
♠♠♠
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|