<ಕುಮಾರವ್ಯಾಸಭಾರತ-ಸಟೀಕಾ
||ಸೂಚನೆ||
- ಲೀಲೆ ಮಿಗೆ ನರನಮರ ಲೋಕದ
- ಕಾಲಕೇಯನಿವಾತಕವಚರ
- ಸೀಳಿ ಬಿಸುಟ೦ದವನು ಬಣ್ಣಿಸಿದನು ಮಹೀಪತಿಗೆ || ಸೂಚನೆ||
- ಪದವಿಭಾಗ-ಅರ್ಥ:ಲೀಲೆ(ಆನಂದ, ಸಂತೋಷ) ಮಿಗೆ ನರನು(ಪಾರ್ಥನು)+ ಅಮರ ಲೋಕದ ಕಾಲಕೇಯ ನಿವಾತಕವಚರ ಸೀಳಿ(ಕೊಂದು) ಬಿಸುಟ+ ಅ೦ದವನು(ರೀತಿಯನ್ನು) ಬಣ್ಣಿಸಿದನು ಮಹೀಪತಿಗೆ(ಧರ್ಮಜನಿಗೆ)
- ಅರ್ಥ:ಅರ್ಜುನನು ಹಿಂತಿರುಗಿ ಬಂದ ಸಮತೋಷ ಇನ್ನೂ ಹೆಚ್ಚುವಂತೆ ಪಾರ್ಥನು ಧರ್ಮಜನಿಗೆ ದೇವಲೋಕದವರಿಗೆ ತೊಂದರೆಕೊಡುತ್ತಿದ್ದ ಕಾಲಕೇಯರು ಮತ್ತು ನಿವಾತಕವಚರನ್ನು ತಾನು ಕೊಂದುಹಾಕಿದ ರೀತಿಯನ್ನು ಬಣ್ಣಿಸಿದನು.[೧][೨] [೩] [೪]
- ॐ
- ಕೇಳು ಜನಮೇಜಯ ದರಿತ್ರೀ
- ಪಾಲ ಧರ್ಮಜನರ್ಜುನನನುಪ
- ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ |
- ಹೇಳು ಪಾರ್ಥ ಕಪರ್ದಿಯಸ್ತ್ರ
- ವ್ಯಾಳ ಸ೦ಗ್ರಹಣ ಪ್ರಪ೦ಚವ
- ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ || ೧ ||
- ಪದವಿಭಾಗ-ಅರ್ಥ:ಕೇಳು ಜನಮೇಜಯ ದರಿತ್ರೀಪಾಲ ಧರ್ಮಜನು+ ಅರ್ಜುನನನು+ ಉಪಲಾಲಿಸಿದನು+ ಉರೆ ಮುಳುಗಿದನು ಪುಳಕಾಶ್ರು(ಪುಳಕ+ ಅಶ್ರು- ಕಣ್ಣೀರು) ಪೂರದಲಿ(ತುಂಬುತ್ತಿರಲು - ಕೇಳಿದನು), ಹೇಳು ಪಾರ್ಥ ಕಪರ್ದಿಯ(ಜಟಾಜೂಟವುಳ್ಳವ, ಶಿವ)+ ಅಸ್ತ್ರವ್ಯಾಳ (ವ್ಯಾಳ- ಸರ್ಪ, ಆನೆ)ಸ೦ಗ್ರಹಣ (ಪಡೆ) ಪ್ರಪ೦ಚವನು+ ಆಲಿಸುವೆನು+ ಎನೆ, ನೃಪತಿಗೆ+ ಅಭಿವರ್ಣಿಸಿದನು+ ಆ ಕಥೆಯ.
- ಅರ್ಥ:ಕೇಳು ಜನಮೇಜಯ ರಾಜನೇ ಧರ್ಮಜನು ಅರ್ಜುನನ ಮಾತನ್ನು ಚೆನ್ನಾಗಿ ಕೇಳಿದನುದನು. ಅದರಲ್ಲಿ ಚೆನ್ನಾಗಿ ಮುಳುಗಿದನು. ಕೇಳಿ ಅವನ ಮೈಯಲ್ಲಿ ಪುಳಕವೂ ಕನ್ಣಲ್ಲಿ ಆನಂದದಿಂದ ನೀರೂ ತುಂಬಿದವು. ಅವನು ಪಾರ್ಥನೇ ಶಿವನ ಶಕ್ತಿಯುಳ್ಳ ಅಸ್ತ್ರವನ್ನು ಪಡೆದ ವಿವರವನ್ನು ಹೇಳು, ಆಲಿಸುವೆನು ಎನ್ನಲು, ರಾಜನಿಗೆ ಆ ಕಥೆಯನ್ನು ಅಭಿವರ್ಣಿಸಿ ಹೇಳಿದನು.
- ಹರನ ಶರ ಲಾಭಾರ್ಥ ಸಿದ್ದಿಗೆ
- ಕರಸಿದನು ಸುರನಾಥ ರಾಗದ
- ಲರುಹಲಾ ಸುರರಿಪುಗಳೂಳಿಗವನು ಸುರಾಚಾರ್ಯ |
- ಅರಿಗಳಳಿವಿಗೆ ನಿವಾತ ಕವಚರು
- ಸುರಪದವಿ ಸೋಪದ್ರವದ ನಿ
- ಷ್ಟುರವಿದೆ೦ದು ರಹಸ್ಯದಲಿ ನನಗೆ೦ದನಮರೇ೦ದ್ರ || ೨ ||
- ಪದವಿಭಾಗ-ಅರ್ಥ:ಹರನ ಶರ ಲಾಭಾರ್ಥ ಸಿದ್ದಿಗೆ ಕರಸಿದನು ಸುರನಾಥ(ಇಂದ್ರ), ರಾಗದಲಿ+ ಆರುಹಲು(ಪ್ರೀತಿಯಿಂದ ಹೇಳಲು)+ ಆ ಸುರರಿಪುಗಳ+ ಊಳಿಗವನು(ಕಾರ್ಯವನ್ನು) ಸುರಾಚಾರ್ಯ(ಬ್ರಹಸ್ಪತಿಯು) ಅರಿಗಳ+ ಅಳಿವಿಗೆ ನಿವಾತ ಕವಚರು ಸುರಪದವಿ ಸ+ ಉಪದ್ರವದ ನಿಷ್ಟುರವು(ಕಷ್ಟವು)+ ಇದೆ೦ದು ರಹಸ್ಯದಲಿ ನನಗೆ೦ದನು+ ಅಮರೇ೦ದ್ರ.
- ಅರ್ಥ: ವಿವರವಾಗಿ ಪಾಶುಪತ ಅಸ್ತ್ರ ಪಡೆದ ವಿಷಯವನ್ನು ಧರ್ಮಜನಿಗೆ ಹೇಳಿದ ನಂತರ, ಅರ್ಜುನನು ಧರ್ಮಜನಿಗೆ,'ಇಂದ್ರನು ಹರನ ಪಾಶುಪತ ಶರವನ್ನು ಪಡೆದ ವಿಷಯ ತಿಳಿದು, ಆ ಸಿದ್ದಿಗಾಗಿ ತನ್ನನ್ನು ಅಮರಾವತಿಗೆ ಪ್ರೀತಿಯಿಂದ ಕರಸಿದನು. ಬ್ರಹಸ್ಪತಿಯು ಆ ದೇವತೆಗಳ ಶತ್ರುಗಳ ಕೆಟ್ಟ ಕಾರ್ಯಗಳನ್ನು ಹೇಳಿದನು; ಆ ಶತ್ರುಗಳಾದ ನಿವಾತಕವಚರ ಅತಿ ಉಪದ್ರವದಿಂದ ಇಂದ್ರನ ಸುರಪದವಿಗೆ ಕಷ್ಟವು ಉಂಟಾಗಿ ಈ ಪಾಶುಪತ ಅಸ್ತ್ರವು ಅವರ ಅಳಿವಿಗಾಗಿ ಇರುವುದು - ಎ೦ದು ರಹಸ್ಯದಲ್ಲಿ ಅಮರೇ೦ದ್ರ ಇಂದ್ರನು ನನಗೆ ಪ್ರೀತಿಯಿಂದ ಹೇಳಿದನು.
- ಶಿವನ ಶರ ನಿನಗಾಯ್ತು ನಿರ್ಜರ
- ನಿವಹವಿದೆ ನಾಕದಲಿ ಬಲು ದಾ
- ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ |
- ಜವ ಸಭೆಯು ಜೀವರಿಗೆ ದುರ್ಜನ
- ರವಗಡವು ಸುಜನರಿಗೆ ತಮ ಶಶಿ
- ರವಿಗಳಿಗೆ ಮುನಿವ೦ತೆ ಖಳರಿದೆಯೆ೦ದನಮರೇ೦ದ್ರ || ೩ ||
- ಪದವಿಭಾಗ-ಅರ್ಥ:ಶಿವನ ಶರ ನಿನಗಾಯ್ತು ನಿರ್ಜರ ನಿವಹವಿದೆ(ಮುಪ್ಪಿಲ್ಲದವನು, ದೇವತೆಗಳ ಸಮೂಹ) ನಾಕದಲಿ(ಸ್ವರ್ಗದಲ್ಲಿ), ಬಲು ದಾನವರ ವಿಲಗದಿ(ಮರಾಠಿ ವಿಲಗ- ತೊಂದರೆ, ಹಿಂಸೆ, ಉಪದ್ರವ, ವೈರ, ದ್ವೇಷ, ಆಟೋಪ, ಪ್ರತಿರೋಧ) ವೀಚಿ( ಸಣ್ಣಅಲೆ, ತರಂಗ, ತೇಲು) ಹೋದುದು ಸಗ್ಗ ಸೌಖ್ಯಫಲ; ಜವ ಸಭೆಯು(ಯಮನ ಸಭೆಯ) ಜೀವರಿಗೆ ದುರ್ಜನರ+ ಅವಗಡವು(ತೊಂದರೆ) ಸುಜನರಿಗೆ, ತಮ(ಅಂಧಕಾರ, ರಾಹು) ಶಶಿರವಿಗಳಿಗೆ ಮುನಿವ೦ತೆ, ಖಳರು+ ಇದೆಯೆ೦ದನು+ ಅಮರೇ೦ದ್ರ(ಇಂದ್ರ)
- ಅರ್ಥ:ಇಂದ್ರನು ನನ್ನನ್ನು ಕುರಿತು,'ಶಿವನ ಅಸ್ತ್ರ ನಿನಗೆ ದೊರಕಿತು. ಇಲ್ಲಿ ನಿನಗೆ ಸಹಾಯಕವಾಗಿ ಸ್ವರ್ಗದಲ್ಲಿ ದೇವತೆಗಳ ಸಮೂಹವಿದೆ. ದಾನವರದ್ದು ಬಲು ಹಿಂಸೆ, ಉಪದ್ರವ, ಆಟೋಪ ಗಳಿಂದ ಸ್ವರ್ಗದ ಸೌಖ್ಯಫಲವು ಆ ಸಣ್ಣಅಲೆಯಿಂದ ತೇಲಿ ಹೋಯಿತು. ಯಮನ ಸಭೆಯ ಜೀವರಿಗೆ ಮತ್ತು ಸುಜನರಿಗೆ ದುರ್ಜನರಿಂದ ಆಪತ್ತು ತೊಂದರೆ, ರಾಹುವು ಚಂದ್ರ ಸೂರ್ಯರಿಗೆ ಮುನಿದು ತೊಂದರೆ ಕೊಡುವ೦ತೆ, ಖಳರಾದ ನಿವಾತಕವಚರು ಇದ್ದಾರೆ,'ಎ೦ದನು.
- ಮುದದ ನೆಲೆ ಶುಭದಿಕ್ಕೆ ಸೊಗಸಿನ
- ಸದನ ಸೌಖ್ಯದ ಗರುಡಿ ಸೊ೦ಪಿನ
- ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ |
- ಮದದ ಮಡು ಭೋಗೈಕನಿಧಿ ಸ೦
- ಪದದ ಜನ್ಮಸ್ಥಳ ಮನೋರಥ
- ದುದಯಗಿರಿ ಹಿ೦ದೀಸು ದಿನವಮರಾವತೀ ನಗರ || ೪ ||
- ಪದವಿಭಾಗ-ಅರ್ಥ:ಮುದದ(ಆನಂದದ) ನೆಲೆ ಶುಭದ+ ಇಕ್ಕೆ(ವಾಸಸ್ಥಾನ, ಆಶ್ರಯ) ಸೊಗಸಿನ ಸದನ(ಮನೆ) ಸೌಖ್ಯದ ಗರುಡಿ(ನಿಲಯ, ತಾಣ) ಸೊ೦ಪಿನ ಪದವಿ ಲೀಲೆಯ ತಾಣ ತಾಯ್ಮನೆ, ಖೇಳ(ಆಟ) ಮೇಳವದ ಮದದ(ಸಂತಸದ) ಮಡು(ಕೊಳ) ಭೋಗೈಕನಿಧಿ ಸ೦ಪದದ ಜನ್ಮಸ್ಥಳ ಮನೋರಥದ+ ಉದಯಗಿರಿ ಹಿ೦ದೆ+ ಈಸು ದಿನವು(ಇಷ್ಟುದಿನವೂ)+ ಅಮರಾವತೀ ನಗರ
- ಅರ್ಥ: ಅಮರಾವತೀ ನಗರವು ಇಷ್ಟು ದಿನವೂ- ಈ ಹಿಂದೆ ಮುದದ ನೆಲೆಯಾಗಿತ್ತು; ಶುಭದಾಶ್ರಯವಾಗಿತ್ತು; ಸೊಗಸಿನ ಸದನವೂ ಸೌಖ್ಯದ ನಿಲಯವಾಗಿತ್ತು; ಸೊ೦ಪಿನ ಅಧಿಕಾರದ ಹುದ್ದೆಯಾಗಿತ್ತು; ಲೀಲೆಯ ತಾಣವೂ ತಾಯ್ಮನೆಯೂ ಆಗಿತ್ತು;, ನಾನಾ ಕ್ರೀಡೆಗಳ ಮೇಳಗಳ ಮದದ ಕೊಳವಾಗಿತ್ತು; ಈ ಸ್ವರ್ಗ ಭೋಗದ ಏಕನಿಧಿಯೂ, ಸ೦ಪದದ ಜನ್ಮಸ್ಥಳವೂ, ಮನೋರಥದ- ಆಸೆಯ ಉದಯಗಿರಿಯೂ ಆಗಿತ್ತು. (ಆದರೆ ಈಗ ಅವು ಇಲ್ಲ).
- ಕಳವಳದ ನೆಲೆ ಭಯದ ಜನ್ಮ
- ಸ್ಥಳ ವಿಷಾದದ ಪೇಟೆ ಖಾತಿಯ
- ನಿಳಯ ಖೋಡಿಯ ಕಟಕ ಭ೦ಗದ ಸ೦ಭವಸ್ಥಾನ |
- ಅಳುಕಿನ೦ಗಡಿ ಹಳುವಿನಾಡು೦
- ಬೊಲ ನಿರೋಧದ ಶಾಲೆ ದುಗುಡದ
- ಕಳನೆನೆಸಿತೀ ನಗರಿ ಈಗಲು ಪಾರ್ಥ ಕೇಳೆ೦ದ || ೫ ||
- ಪದವಿಭಾಗ-ಅರ್ಥ:ಕಳವಳದ ನೆಲೆ, ಭಯದ ಜನ್ಮಸ್ಥಳ, ವಿಷಾದದ ಪೇಟೆ, ಖಾತಿಯ ನಿಳಯ, ಖೋಡಿಯ(ಹಾನಿ) ಕಟಕ, ಭ೦ಗದ ಸ೦ಭವಸ್ಥಾನ(ನೆಡಯುವ ತಾಣ), ಅಳುಕಿನ(ಭಯ)+ ಅ೦ಗಡಿ, ಹಳುವಿನ(ಕಾಡು)+ ಆಡು೦ಬೊಲ(ಆಡುವ ಸ್ಥಳ,ಬಯಲು,ಕ್ರೀಡಾಂಗಣ); ನಿರೋಧದ ಶಾಲೆ, ದುಗುಡದ(ಚಿಂತೆಯ) ಕಳನು(ಅಖಾಡ, ಮೈದಾನ)+ ಎನೆಸಿತು+ ಈ ನಗರಿ(ಅಮರಾವತಿ) ಈಗಲು, ಪಾರ್ಥ ಕೇಳೆ೦ದ.
- ಅರ್ಥ:ಅರ್ಜುನನು ಧರ್ಮಜನಿಗೆ,' ಇಂದ್ರನು, ಅಮರಾವತಿಯು ಈಗ ಕಳವಳದ ನೆಲೆಯೂ,, ಭಯದ ಜನ್ಮಸ್ಥಳವೂ,, ವಿಷಾದದ ಪೇಟೆಯೂ, ಖಾತಿಯ- ಕ್ರೋಧದ ನಿಲಯವೂ, ಹಾನಿಯ ಕಟಕ- ಸಮೂಹವೂ, ಭ೦ಗದ- ಅವಮಾನ ಸ೦ಭವಸ್ಥಾನವೂ, ಅಳುಕಿನ ಅ೦ಗಡಿಯೂ, ಕಾಡಿನಂತೆ ಅಪಾಯದ ಸ್ಥಳವೂ, ನಿರೋಧದ ಶಾಲೆಯೂ, ಚಿಂತೆಯ ಮೈದಾನವೂ ಎನ್ನಿಸಿದೆ, ಪಾರ್ಥ ಕೇಳು ಎ೦ದನು,'ಎಂಬುದಾಗಿ ಹೇಳಿದನು.
- ಸಿಡಿಲಕಾಲದೊಳೆರೆಗುವ೦ತಿರೆ
- ಕಡಲು ಕಲ್ಪದೊಳುಕ್ಕುವ೦ತಿರೆ
- ಪೊಡವಿಯಾಕಸ್ಮಿಕದೊಳಳಿವ೦ತಿರೆ ರಸಾತಳಕೆ |
- ತುಡುಕುವುದು ರಕ್ಕಸರ ಭಯ ಹುಡಿ
- ಹುಡಿಯಹುದು ಸುರ ವಿಭವವೆಮಗಿ
- ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆ೦ದ || ೬ ||
- ಪದವಿಭಾಗ-ಅರ್ಥ:ಸಿಡಿಲ ಕಾಲದೊಳು+ ಎರೆಗುವ೦ತಿರೆ, ಕಡಲು ಕಲ್ಪದೊಳು+ ಉಕ್ಕುವ೦ತಿರೆ ಪೊಡವಿಯು(ಭೂಮಿ)+ ಆಕಸ್ಮಿಕದೊಳು+ ಅಳಿವ೦ತಿರೆ ರಸಾತಳಕೆ ತುಡುಕುವುದು ರಕ್ಕಸರ ಭಯ ಹುಡಿಹುಡಿಯಹುದು ಸುರ ವಿಭವವ+ ಎಮಗೆ+ ಇಮ್ಮಡಿಯು+ ಅವರು ನಿವಾತಕವಚರು ಪಾರ್ಥ ಕೇಳೆ೦ದ.
- ಅರ್ಥ: ಪಾರ್ಥನು ಇಂದ್ರನು ತನನ್ನು ಕುರಿತು,' ಇಲ್ಲಿ ಸ್ವರ್ಗದಲ್ಲಿ ವಾಸವು ಸಿಡಿಲುಬಡಿಯುವ ಕಾಲದಲ್ಲಿ ಅದು ಸದಾ ಎರೆಗುವ೦ತಿರವುದು;, ಕಡಲು ಕಲ್ಪದ ಅಂತ್ಯದಲ್ಲಿ ಉಕ್ಕುವ೦ತಿರುವುದು; ಭೂಮಿಯುಆಕಸ್ಮಿಕವಾಗಿ ನಾಶವಾದೆರೆ ಹೇಗೋ ಹಾಗೆ ಇಲ್ಲಿಯ ಸ್ಥಿತಿ ಇದೆ. ನಮಗೆ ರಕ್ಕಸರ ಭಯ ರಸಾತಳಕ್ಕೆ ತುಡುಕುವುದು, ಸುರರ ದೇವತೆಗಳ ವೈಭವವ ಹುಡಿಹುಡಿಯಾಗುವುದು ಎಂಬ ಭಯವಿದೆ. ನಮಗೆ ಇಮ್ಮಡಿಯಷ್ಟು ಅವರು- ಆ ನಿವಾತಕವಚರು ಬಲಿಷ್ಠರು ಪಾರ್ಥನೇ ಕೇಳು, ಎಂದ.
- ಕೆತ್ತಕದ ತೆಗೆಯದು ಸುರೌಘದ
- ಹೊತ್ತಸರಕಿಳಿಯದು ಸುಕಲ್ಪಿತ
- ಮತ್ತ ಗಜ ರಥವಾಜಿ ತೆಗೆಯವು ಪುರದ ಭಾಹೆಯಲಿ |
- ತೆತ್ತು ಹರಿಯದು ಕಾದಿ ರಣದಲಿ
- ಸತ್ತು ಜ೦ಗಿದು ಸುರರ ಸತಿಯರು
- ತೊತ್ತಿರಾದರು ಖಳರ ಮನೆಗಳಿಗೆ೦ದನಮರೇ೦ದ್ರ || ೭ ||
- ಪದವಿಭಾಗ-ಅರ್ಥ:ಕೆತ್ತ ಕದ ತೆಗೆಯದು ಸುರ+ ಓಘದ(ರಭಸ, ಸಮೂಹ,) ಹೊತ್ತ ಸರಕು((ವಸ್ತುಗಳನ್ನು)) ಇಳಿಯದು ಸುಕಲ್ಪಿತ(ಸಿಂಗರಿಸಿದ) ಮತ್ತ ಗಜ ರಥವಾಜಿ ತೆಗೆಯವು, ಪುರದ ಭಾಹೆಯಲಿ, ತೆತ್ತು ಹರಿಯದು ಕಾದಿ ರಣದಲಿ(ರಣ- ಯುದ್ಧ) ಸತ್ತು ಜ೦ಗಿದು ಸುರರ ಸತಿಯರು ತೊತ್ತಿರು+ ಆದರು ಖಳರ ಮನೆಗಳಿಗೆ+ ಎ೦ದನು+ ಅಮರೇ೦ದ್ರ
- ಅರ್ಥ:ಮುಂದುವರಿದು ಇಂದ್ರನು ಪಾರ್ಥನಿಗೆ,'ಈ ದಾನವರ ಕಾಟದಿಂದ ಕೆತ್ತನೆ ಮಾಡಿದ ಸ್ವರ್ಗದ ಸುಂದರ ಬಾಗಿಲ ಕದವನ್ನು ತೆಗೆಯುವಂತಿಲ್ಲ. ಸುರರ ಸಮೂಹ ಹೊತ್ತು ತಂದ ಸರಕನ್ನು ವಳಗೆ ತಂದು ಇಳಿಸುವಂತಿಲ್ಲ. ಸಿಂಗರಿಸಿದ ಮತ್ತ ಗಜ ರಥ ಕುದುರೆಗಳನ್ನು ಹಸ್ತಿನಾಪುರದ ಹೊರಗೆ ತೆಗೆಯವಂತಿಲ್ಲ. ಯುದ್ಧದಲ್ಲಿ ಹೋರಾಡಿ ತೆತ್ತು ಹರಿಯದು- ಸಾಧ್ಯವಾಗದು, ದೇವಗಣ ಸತ್ತು ಜ೦ಗಾಗಿ- ಸತ್ವ ಇಲ್ಲದವರಾಗಿರುವರು. ಅಷ್ಟೇ ಅಲ್ಲ ದೇವಕನ್ಯೆಯರು, ಪತ್ನಿಯರು ಆ ಖಳರ- ದುಷ್ಟರ ಮನೆಗಳಿಗೆ ತೊತ್ತಾಗಿರುವರು- ಸೇವಕರಾಗಿರುವರು,' ಎ೦ದನು ಇ೦ದ್ರ.
- ಭಯದ ಬಾಹೆಯಲಪಸರದ ನಿ
- ಶ್ಚಯದ ದುಮ್ಮಾನದ ವಿಘಾತಿಯ
- 'ಲಯದ ಲಾವಣಿಗೆಯ ವಿರಾಗದ ತಡಿಯ ಸ೦ಕಟದ |
- 'ಪಯದ ಪಾಡಿನ ಹೃದಯ ಕ೦ಪದ
- 'ನಯನದೊರತೆಯ ಬಗೆಯ ಕೊರತೆಯ
- ಜಯದ ಜೋಡಿಯ ದೇವರಿದೆ ನೋಡೆ೦ದನಮರೇ೦ದ್ರ || ೮ ||
- ಪದವಿಭಾಗ-ಅರ್ಥ:ಭಯದ ಬಾಹೆಯಲಿ(ಬದಿ)+ ಅಪಸರದ(ಸರ- ಉಲಿ, ಧ್ವನಿ) ನಿಶ್ಚಯದ, ದುಮ್ಮಾನದ(ಸಂಕಟ) ವಿಘಾತಿಯ(ನಾಶವಾಗುವ) ಲಯದ(ಮನ ಸ್ಥಿತಿಯ) ಲಾವಣಿಗೆಯ(ಗುಂಪು, ಸಮೂಹ, ವಶ, ಅಧೀನ) ವಿರಾಗದ ತಡಿಯ(ಆಸಕ್ತಿಯಿಲ್ಲದ ಎಲ್ಲೆಯ, ದಡದಲ್ಲಿ), ಸ೦ಕಟದ ಪಯದ(ನೀರು,ಹಾಲು ) ಪಾಡಿನ(ಸ್ಥಿತಿ), ಹೃದಯ ಕ೦ಪದ(ನಡುಕ) ನಯನದ+ ಒರತೆಯ(ನೀರು) ಬಗೆಯ(ಮನಸ್ಸಿನ) ಕೊರತೆಯ ಜಯದ ಜೋಡಿಯ(ಇವುಗಳ ಒಟ್ಟಿನ ಸ್ಥತಿಯಲ್ಲ) ದೇವರು(ದೇವತೆಗಳು)+ ಇದೆ(ಇದ್ದಾರೆ) ನೋಡೆ೦ದನು+ ಅಮರೇ೦ದ್ರ
- ಅರ್ಥ:ಅರ್ಜುನನಿಗೆ ದೇವೇಂದ್ರನು,ದೇವತೆಗಳು ಭಯದ ಬದಿಯಲ್ಲಿ, ನಿಶ್ಚಯದ ಗಟ್ಟಿದನಿಯಿಲ್ಲದ, ಸಂಕಟದ, ನಾಶದ ಲಯದ ವಶದಲ್ಲಿ, ವಿರಾಗದ ಅಂಚಿನಲ್ಲಿ, ಸ೦ಕಟದ ನೀರುಕುಡಿದ ಪಾಡುಪಡುತ್ತಾ, ಹೃದಯ ನಡುಕದಲ್ಲಿ ಕಣ್ಣಲ್ಲಿ ನೀರಿನ ಒರತೆಯನ್ನು ಹೊಂದಿದ ಮನಸ್ಸಿನ, ಜಯದ ಕೊರತೆಯನ್ನು ಜೋಡಿಸಿಕೊಂಡು ದೇವತೆಗಳು ಇದ್ದಾರೆ ನೋಡು ಎ೦ದನು,' ಇ೦ದ್ರ.
- ಅವರುಪೇಕ್ಷೆಯ ಉಳಿವಿನಲಿ ನ
- ಮ್ಮವರ ಬೇಹಿನ ಸುಳಿವಿನಲಿ ಮೇ
- ಣವರನಳುಕಿಸುವಾದಿದೈವಿಕ ಕರ್ಮಗತಿಗಳಲಿ |
- ದಿವಿಜರಿ೦ದವರುಳಿದರಾ ದಾ
- ನವರ ಮರ್ದಿಸಿ ದೇವಲೋಕವ
- ನೆವಗೆ ನಿರುಪದ್ರವದಲೆಡೆಮಾಡೆ೦ದ ನಮರೇ೦ದ್ರ || ೯ ||
- ಪದವಿಭಾಗ-ಅರ್ಥ:ಅವರುಪೇಕ್ಷೆಯ(ಅವರ + ಉಪೇಕ್ಷೆಯ- ಎಚ್ಚರಿಕೆ ಇಲ್ಲದ) ಉಳಿವಿನಲಿ(ಉಳಿವು- ಇರುವಿಕೆ, ಇರುವಾಗ, ಸಂದರ್ಭದಲ್ಲಿ) ನಮ್ಮವರ ಬೇಹಿನ ಸುಳಿವಿನಲಿ(ಎಚ್ಚರಿಕೆಯ ಕಾವಲಿನ ಸಂದರ್ಭದಲ್ಲಿ) ಮೇಣ್+ ಅವರನು+ ಅಳುಕಿಸುವ(ಸೂಲಿಸುವ)+ ಆದಿದೈವಿಕ ಕರ್ಮಗತಿಗಳಲಿ(ದೈವನಿಯಮದ ಕರ್ಮಫಲಕ್ಕೆ ಅನುಗುಣವಾಗಿ) ದಿವಿಜರಿ೦ದ (ದೇವತೆಗಳಿಂದ)+ ಅವರು+ ಉಳಿದರೆ(ಸಾಯದಿದ್ದರೆ) ದಾನವರ ಮರ್ದಿಸಿ(ನಾಶಮಾಡಿ) ದೇವಲೋಕವನು+ ಎವಗೆ(ನಮಗೆ) ನಿರುಪದ್ರವದಲಿ(ತೊಂದರೆ ಇಲ್ಲದಂತೆ)+ ಎಡೆಮಾಡು (ಸ್ಥಳವನ್ನು ಮಾಡು)+ ಎ೦ದನು+ ಅಮರೇ೦ದ್ರ
- ಅರ್ಥ:ಇಂದ್ರನು ಅರ್ಜುನನಿಗೆ, ಆ ದಾನವರು ಎಚ್ಚರಿಕೆಯಿಂದ ಇಲ್ಲದ ಸಂದರ್ಭದಲ್ಲಿ, ನಮ್ಮವರು ಎಚ್ಚರಿಕೆಯಿಂದ ಕಾವಲಿರುವ ಸಂದರ್ಭವನ್ನು ನೋಡಿಕೊಂಡು, ಮತ್ತು ಆದಿದೈವಿಕ ಕರ್ಮಗತಿಯ ಕರ್ಮಾನುಸಾರವಾಗಿ ಅವರನ್ನು ಸೋಲಿಸುವುದಕ್ಕೆ ದೇವತೆಗಳಿಂದ ಆಗದೆ, ಅವರು ಸಾಯದೆ ಉಳಿದರೆ, ಆ ದಾನವರನ್ನು ನಾಶಮಾಡಿ ನಮಗೆ ದೇವಲೋಕವನ್ನು ದಾನವರಿಂದ ತೊಂದರೆ ಇಲ್ಲದ ಸ್ಥಳವನ್ನಾಗಿ ಮಾಡು ಎ೦ದನು+ ಅಮರೇ೦ದ್ರ
- ಹೈಹಸಾದವು ನಿಮ್ಮ ಕೃಪೆಯವ
- ಗಾಹಿಸುವೊಡರಿದೇನು ದೈತ್ಯರು
- ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ |
- ಆಹರಾಸ್ತ್ರದೊಳಮರವೈರಿ
- ವ್ಯೂಹಭ೦ಜನವಹುದು ನಿಷ್ಪ್ರ
- ತ್ಯೂಹ ನಿಶ್ಚಯವೆ೦ದು ಬಿನ್ನವಿಸಿದನು ಸುರಪತಿಗೆ || ೧೦ ||
- ಪದವಿಭಾಗ-ಅರ್ಥ:ಹೈ,ಹಸಾದವು(ಆಯಿತು ನಿಮ್ಮ ಆಜ್ಞೆ - ಒಪ್ಪಿಗೆ) ನಿಮ್ಮ ಕೃಪೆಯ+ ಅವಗಾಹಿಸುವೊಡೆ+ ಅರಿದೇನು ದೈತ್ಯರು ಸಾಹಸಿಗರೇ ಸದೆವೆನು+ ಈ ಸುರಜನಕೆ ಹಿತವಹರೆ ಆಹರಾಸ್ತ್ರದೊಳು+ ಅಮರವೈರಿ ವ್ಯೂಹಭ೦ಜನವು+ ಅಹುದು ನಿಷ್ಪ್ರತ್ಯೂಹ(ನಿಷ್ಪ್ರತಿ+ ಪ್ರತಿ ವ್ಯೂಹ- ಶತ್ರು ಸೇನೆ, ವ್ಯೂಹ- ಸೇನೆಯ, ನಿಷ್-ಇಲ್ಲ, ನಾಶ- ಶತ್ರುಸೇನೆಯ ನಾಶ) ನಿಶ್ಚಯವೆ೦ದು ಬಿನ್ನವಿಸಿದನು(ತಿಳಿಸಿದನು) ಸುರಪತಿಗೆ(ಇಂದ್ರನಿಗೆ)
- ಅರ್ಥ:ಅರ್ಜುನನು ತಂದೆ ಇಂದ್ರನಿಗೆ,'ಆಯಿತು ನಿಮ್ಮ ಆಜ್ಞೆಗೆ - ಒಪ್ಪಿಗೆ. ನಿಮ್ಮ ಕೃಪೆಯ ಗಮನ ನನ್ನ ಮೇಲಿರಲು,ಅದು ಅಸಾದ್ಯವೇ? ದೈತ್ಯರು ಗೆಲ್ಲಲಅರದ ಸಾಹಸಿಗರೇ? ಕೊಲ್ಲುವೆನು. ಈ ಸುರಲೋಕದ ಜನರಿಗೆ ಹಿತವು ಆಗುವುದಾದರೆ, ಆ ಶಿವನ ಪಾಶುಪತ ಅಸ್ತ್ರದಲ್ಲಿ ದೇವತೆಗಳ ವೈರಿ ವ್ಯೂಹದ ನಾಶವು ಆಗುವುದು. ಶತ್ರುಸೇನೆಯ ನಾಶ ನಿಶ್ಚಯವು ಎ೦ದು ವಿನಯದಿಂದ ತಿಳಿಸಿದನು.
- ಈ ರಥವನೇ ಹೊಡಿಸಿದೆನೀ
- ಸಾರಥಿಯ ಬೆಸಸಿದೆನು ಸುರ ಪರಿ
- ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ |
- ವಾರಣದ ಹಯ ರಥ ಪದಾತಿಯ
- ಭಾರಣೆಗೆ ದೆಸೆ ನೆರೆಯದಿ೦ದ್ರನ
- ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆ೦ದ || ೧೧ ||
- ಪದವಿಭಾಗ-ಅರ್ಥ:ಈ ರಥವನೇ ಹೊಡಿಸಿದೆನು(ಯುದ್ಧಕ್ಕೆ ಹೊಡೆಸಿದನು- ನೆಡೆಸಿದನು ),+ ಈ ಸಾರಥಿಯ(ಮಾತಲಿಯ) ಬೆಸಸಿದೆನು(ಮುಂದೆ ಯುದ್ಧಕ್ಕೆ ಹೋಗಲು ಹೇಳಿದೆನು), ಸುರ(ದೇವತೆಗಳ) ಪರಿವಾರ ನೆರೆದುದನು (ಸೇರಿತ್ತು)+ ಎಣಿಸಲು+ ಅಳವೇ(ಸಾಧ್ಯವೇ- ಇಲ್ಲ.) ಕೋಟಿ ಜಿಹ್ವೆಯಲಿ(ನಾಲಿಗೆಯಲ್ಲಿ), ವಾರಣದ(ಆನೆ) ಹಯ ರಥ ಪದಾತಿಯ ಭಾರಣೆಗೆ (ಮಹಿಮೆ, ಗೌರವ; ದಟ್ಟಣೆ) ದೆಸೆ ನೆರೆಯದು (ನೆರೆ-ಪೂರ್ತಿಯಾಗಿ, ಪೂರ್ಣವಾಗಿ; ಸಾಲದು)+ ಇ೦ದ್ರನ ವೀರ ಭಟರು+ ಎನ್ನೊಡನೆ ನೆರೆದುದು(ಸೇರಿದರು) ರಾಯ ಕೇಳೆ೦ದ.
- ಅರ್ಥ:ಧರ್ಮಜನಿಗೆ ಅರ್ಜುನನು ಎದುರಿಗಿದ್ದ ರಥ, ಸಾರಥಿಗಳನ್ನು ತೋರಿಸಿ, ಇಂದ್ರನು ಈ ರಥವನ್ನೇ ಯುದ್ಧಕ್ಕೆ ಹೊಡೆಸಿದನು; ಈ ಸಾರಥಿ ಮಾತಲಿಯನ್ನು ನಾನು ಯುದ್ಧ ಭೂಮಿಗೆ ಮುಂದೆ ಹೋಗಲು ಹೇಳಿದೆನು. ಅಲ್ಲಿ ದೇವತೆಗಳ ಪರಿವಾರ ಸೇರಿತ್ತು. ಆ ಪರಿವಾರವನ್ನು ಎಣಿಸಲು ಸಾಧ್ಯವೇ- ಇಲ್ಲ. ಅವರನ್ನು ಕೋಟಿ ನಾಲಿಗೆಯಲ್ಲಿಯೂ ಎಣಿಸಲು ಆಗದು. ಆನೆ, ಕುದುರೆ ರಥ ಪದಾತಿಯ ದಟ್ಟಣೆಗೆ ದಿಕ್ಕುಗಳೇ ಸಾಲದು. ಇ೦ದ್ರನ ವೀರ ಭಟರು ನನ್ನೊಡನೆ ಸೇರಿದರು. ಧರ್ಮರಾಯನೇ ಕೇಳು,' ಎ೦ದ.
- ಹೊಲಬಿಗರು ಹರಿದರು ಸುರೇ೦ದ್ರನ
- ದಳದ ಮಾನ್ಯರ ಸನ್ನೆಯಲಿ ದಿಗು
- ವಳೆಯದಗಲದೊಲಿವ ಲಲಿತಚ್ಛತ್ರ ಚಮರಗಳ |
- ಜಲಧಿ ಜಲಧಿಯ ಹಳಚಲಗಿದ
- ವ್ವಳಿಪ ವಾದ್ಯ ದ್ವನಿಯ ಡಾವರ
- ಸೆಳೆದುದಸುರರ ಧುರದ ದೈರ್ಯವನರಸ ಕೇಳೆ೦ದ || ೧೨ ||
- ಪದವಿಭಾಗ-ಅರ್ಥ:ಹೊಲಬಿಗರು((ದೇ) ದಾರಿಗ, ಪ್ರಯಾಣಿಕ) ಹರಿದರು(ಚಲಿಸಿದರು) ಸುರೇ೦ದ್ರನ ದಳದ ಮಾನ್ಯರ(ಮುಖ್ಯರು) ಸನ್ನೆಯಲಿ, ದಿಗುವಳೆಯದಗಲದ (ದಿಕ್+ ವಲಯದ-ಪ್ರದೇಶದ+ ಅಗಲದ) ಒಲಿವ ಲಲಿತಚ್ಛತ್ರ ಚಮರಗಳ, ಜಲಧಿ ಜಲಧಿಯ ಹಳಚಲು (ಪಳಂಚು- ತಾಗು, ಬಡಿ, ಆಕ್ರಮಿಸು, ಮುತ್ತು, ವ್ಯಾಪಿಸು,ಪ್ರಕಾಶಿಸು)+ ಅಗಿದು+ ಅವ್ವಳಿಪ(ಹಬ್ಬು,ಹರಡು,ಕೆರಳು, ಹಾರು, ಆರ್ಭಟಿಸುವ) ವಾದ್ಯ ದ್ವನಿಯ ಡಾವರ(ತೀವ್ರತೆ,ರಭಸ, ಗದ್ದಲ) ಸೆಳೆದುದು+ ಅಸುರರ(ದಾನವರ) ಧುರದ ದೈರ್ಯವನು+ ಅರಸ ಕೇಳೆ೦ದ.
- ಅರ್ಥ:ಅರ್ಜುನನು ಅರಸನೇ ಕೇಳು,'ಪ್ರಯಾಣಕ್ಕೆ ಸಿದ್ಧರಾದ ದೇವಸೈನಿಕರು ಸುರೇ೦ದ್ರನ ದಳದ ಮುಖ್ಯರು ಸನ್ನೆಮಾಡಿದ ಕೂಡಲೆ ಮುಂದೆ ಚಲಿಸಿದರು. ಅವರು ದಿಕ್ಕುಗಳ ವಲಯದ ಅಗಲದಲ್ಲಿ ಒಲೆದಾಡುವ ಸುಂದರ ಚ್ಛತ್ರ ಚಾಮರಗಳ ಸಾಗರವು ಸಮುದ್ರವನ್ನೇ ಆಕ್ರಮಿಸುವಂತೆ ವ್ಯಾಪಿಸಿ ಅಗಿದು-ಬಡಿದು ಆರ್ಭಟಿಸುವ ವಾದ್ಯ ದ್ವನಿಯ ಗದ್ದಲವು ದಾನವರ ಯುದ್ಧದ ದೈರ್ಯವನ್ನು ಸೆಳೆದುದು- ಎಳೆದು ಇಲ್ಲದಂತೆ ಮಾಡಿತು,' ಎ೦ದ.
- ಆಳು ನೆಡೆದುದು ಮು೦ಗುಡಿಯ ಹರಿ
- ಧಾಳಿ ನೂಕಿ ಹಿರಣ್ಯ ನಗರಿಯ
- ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ |
- ಸೂಳವಿಸಿದವು ಸನ್ನೆಯಲಿ ನಿ
- ಸ್ಸಾಳ ದನುಜ ಪುರೋಪಕ೦ಠದ
- ಕೂಲವತಿಗಳ ತೀರದಲಿ ಬಿಡಿಸಿದನು ಪಾಳೆಯವ || ೧೩ ||
- ಪದವಿಭಾಗ-ಅರ್ಥ:ಆಳು(ಸೈನಿಕ, ಸೇನೆ) ನೆಡೆದುದು ಮು೦ಗುಡಿಯ(ಮುಂಭಾಗದ ಸೈನ್ಯ) ಹರಿಧಾಳಿ(ಹರಿ -ಇಂದ್ರನ), ನೂಕಿ ಹಿರಣ್ಯ ನಗರಿಯ ಮೂಲೆಗೆ+ ಐದಿತು(ಬಂದಿತು) ಹೊಯ್ದರು+ ಅಲ್ಲಿಯ ಬಿನುಗು (ಅಲ್ಪವಾದ, ಕ್ಷುದ್ರವಾದ) ಬಿಚ್ಚಟೆಯ(ಹರಡು), ಸೂಳವಿಸಿದವು (ದೊಡ್ಡ ಸದ್ದುಮಾಡು; ಆರ್ಭಟಿಸು; ಕೂಗು.) ಸನ್ನೆಯಲಿ ನಿಸ್ಸಾಳ(ಚರ್ಮವಾದ್ಯ, ರಣವಾದ್ಯ); ದನುಜ ಪುರೋಪಕ೦ಠದ(ಪುರ+ ಉಪಕಂಠ- ನಗರದ ಉಪಕಂಠ- ಬಾಗಿಲ- ದ್ವಾರದ) ಕೂಲವತಿಗಳ (ನದಿ} ತೀರದಲಿ ಬಿಡಿಸಿದನು ಪಾಳೆಯವ.
- ಅರ್ಥ:ಅರ್ಜುನನು ಧರ್ಮಜನಿಗೆ ಮಂದುವರಿದು,'ದೇವಸೇನೆಯ ಮುಂಭಾಗದ ಇಂದ್ರನ ಧಾಳಿಸೈನ್ಯ ನೂಕಿ- ನುಗ್ಗಿ ಮುಂದೆ ನೆಡೆಯಿತು. ಅದು ಹಿರಣ್ಯ ನಗರಿಯ ಮೂಲೆಗೆ ಬಂದಿತು. ಅಲ್ಲಿಯ ಚಿಕ್ಕ ಕ್ಷುದ್ರವಾದ ಬಯಲಿನಲ್ಲಿ ಸೇರಿ ದೊಡ್ಡ ಸದ್ದುಮಾಡಿದವು. ಇಂದ್ರನ ಸನ್ನೆಯನ್ನು ನೋಡಿ ರಣವಾದ್ಯ ಮೊಳಗಿತು. ದಾನವರ ನಗರದ ದ್ವಾರದ ಬಳಿಯ ನದಿಯ ತೀರದಲ್ಲಿ ಇಂದ್ರನು ಪಾಳೆಯವನ್ನು ಬಿಡಿಸಿದನು.
- ಅರಿಯದಾ ಪಟ್ಟಣವಿದೇನೋ
- ಹೊರಗೆ ಗಜ ಬಜವೆನೆಸುಪರ್ವರ
- ಕುರುಹುಗಳನರಿದಮರರಿಪು ಹರಿದರರಮನೆಗೆ |
- ಬಿರುನಗೆಯ ಸುಮ್ಮಾನದುಬ್ಬಿನ
- ನೆರೆನಗೆಯ ನಯನಾ೦ಬುಗಳ ಖಳ
- ನೆರಗಲತಿ ಸುಮ್ಮಾನವೇನೆ೦ದಸುರ ಬೆಸಗೊ೦ಡ || ೧೪ ||
- ಪದವಿಭಾಗ-ಅರ್ಥ:ಅರಿಯದು+ ಆ ಪಟ್ಟಣವು+ ಇದು+ ಏನೋ ಹೊರಗೆ ಗಜಬಜವು+ ಎನೆ(ಎನ್ನಲು), ಸುಪರ್ವರ (ಸು+ ಪರ್ವ - ಭಾಗದವರು- ದೇವತೆಗಳ) ಕುರುಹುಗಳನು+ ಅರಿದು+ ಅಮರರಿಪು(ದಾನವ- ) ಹರಿದರು(ಹೋದರು)+ ಅರಮನೆಗೆ ಬಿರುನಗೆಯ ಸುಮ್ಮಾನದ+ ಉಬ್ಬಿನ ನೆರೆನಗೆಯ ನಯನಾ೦ಬುಗಳ(ಕಣ್ಣಲ್ಲಿ, ಅಂಬು- ನೀರು) ಖಳನು(ದಾನವರಾಜನು)+ ಎರಗಲು(ಬರಲು)+ ಅತಿ ಸುಮ್ಮಾನವೇನೆ೦ದು+ ಅಸುರ ಬೆಸಗೊ೦ಡ
- ಅರ್ಥ:ದಾನವರ ದೊರೆ,'ಸುವರ್ಣನಗರಿಯ ಹೊರಗೆ ಇದು ಏನೋ ಗಜಬಜವು,ಅದೇನೆಂದು ತಿಳಿಯದು ಎನ್ನಲು, ದೇವತೆಗಳ ಕುರುಹುಗಳನ್ನು ತಿಳಿದು, ದಾನವ ದೂತರು ದೊಡ್ಡದಾಗಿ ನಗುತ್ತಾ ಅರಮನೆಗೆ ಹೋದರು. ಸಂತೊಷದ ಉಬ್ಬಿನಲ್ಲಿ ಬಹಳ ನಗೆಯಿಂದ ಕಣ್ಣುಗಳಲ್ಲಿ ನೀರು ಬರಲು, ಖಳ ದಾನವರಾಜನು ಅತಿಯಾದ ಆನಂದದ ಸಂಗತಿ ಏನು ಎಂದು ಕೇಳಿದ.
- ಜೀಯ ಬಲೆಗಳ ತೆಗೆಸು ನೆಡೆ ನಿ
- ರ್ದಾಯದಲಿ ನಿಮ್ಮಡಿಯ ಬೇಟೆಗೆ
- ರಾಯ ಮೃಗವೈತ೦ದವಿದೆ ನಗರೋಪಕ೦ಠದಲಿ |
- ಹೋಯಿತಸುರರಕೈಯ ಹೊಸೆದಿರು
- ಪಾಯ ಪಾಯವಧಾರೆನಲು ಖಳ
- ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊ೦ಡ || ೧೫ ||
- ಪದವಿಭಾಗ-ಅರ್ಥ:ಜೀಯ ಬಲೆಗಳ(ಶತ್ರುಗಳನ್ನು ಹಿಡಿಯುವ ಸಾಧನ) ತೆಗೆಸು ನೆಡೆ ನಿರ್ದಾಯದಲಿ (ಅಖಂಡ,ಪರಿಪೂರ್ಣ) ನಿಮ್ಮಡಿಯ ಬೇಟೆಗೆ ರಾಯ ಮೃಗವು (ದೊಡ್ಡ ಮೃಗವು)+ ಐತ೦ದವಿದೆ(ಬಂದಿದೆ) ನಗರ+ ಉಪಕ೦ಠದಲಿ(ಬಾಗಿಲಲ್ಲಿ) ಹೋಯಿತು+ ಅಸುರರ ಕೈಯ ಹೊಸೆದಿರು(ಹೊಸೆದು ಇರು- ಸಿದ್ಧಗೊಳಿಸು)+ ಉಪಾಯ+ ಅಪಾಯ+ ಅವಧಾರು(ಆಲಿಸು) ಕೇಳು+ ಎನಲು ಖಳರಾಯ ಕೇಳುತ ಮೃಗವು+ ಅದಾವುದು+ ಎನುತ್ತ ಬೆಸಗೊ೦ಡ(ಕೇಳಿದ)
- ಅರ್ಥ:ದಾನವ ದೂತನು ರಾಕ್ಷಸ ರಾಜನಿಗೆ, 'ಜೀಯ ಬಲೆಗಳ ತೆಗೆಸು, ಪೂರ್ತಿ ಸಿದ್ಧನಾಗಿ ನೆಡೆ. ನಿಮ್ಮ ಪಾದಗಳ- ನೀವು ಮಾಡುವ ಬೇಟೆಗೆ 'ರಾಯ ಮೃಗವು' ನಮ್ಮ ನಗರದ ಬಾಗಿಲಿಗೆ ಬಂದಿದೆ. ಸುಮ್ಮನಿದ್ದರೆ ಅಸುರರ ಕೈ ಹೋಯಿತು; ಅಸುರರನ್ನು ಉಪಾಯದಲ್ಲಿ ಸಿದ್ಧಗೊಳಿಸು; ಅಪಾಯವನ್ನು ಆಲಿಸು,' ಎನ್ನಲು ಖಳ ನಿವಾತಕವಚ ರಾಜನು, ಇದನ್ನು ಕೇಳುತ್ತಾ,'ಮೃಗವು- ನಮ್ಮ ಬೇಟೆಗೆ ಸಿಗಲು ಬಂದಿರುವುದು ಅದು ಯಾವುದು? ಎಂದು ಕೇಳಿದ.
- ಜೋಡಿಸಿದ ನಮರೇ೦ದ್ರ ನಮರರ
- ವೇಡೆಯಾಯ್ತು ಹಿರಣ್ಯ ನಗರಿಗೆ
- ಗಾಢ ಬಲರದೆ ಬ೦ದು ವರುಣ ಯಮಾಗ್ನಿ ವಾಯುಗಳು |
- ರೂಢಿ ಗಚ್ಚರಿಯಾಯ್ತಲಾ ಪರಿ
- ಗೂಢ ಮೃಗಗಣವಿಲ್ಲವಿದೆ ನಿ
- ರ್ಮೂಢರನು ಹಿಡಿತರಿಸುಯೆ೦ದನು ದೂತನೊಡೆಯ೦ಗೆ|| ೧೬ ||
- ಪದವಿಭಾಗ-ಅರ್ಥ:ಜೋಡಿಸಿದನು+ ಅಮರೇ೦ದ್ರನು+ ಅಮರರ ವೇಡೆಯ(ದೇವತೆಗಳ ಆಕ್ರಮಣ, ಆವರಣ (ಪ್ರದೇಶ), ಬಂಧನ, ಬಲೆ)+ ಆಯ್ತು ಹಿರಣ್ಯ ನಗರಿಗೆ ಗಾಢಬಲರು(ಬಹಳ ಬಲರು)+ ಅದೆ ಬ೦ದು ವರುಣ ಯಮ+ ಅಗ್ನಿ ವಾಯುಗಳು, ರೂಢಿ ಗಚ್ಚರಿಯು+ ಆಯ್ತಲ+ ಆ ಪರಿ ಗೂಢ ಮೃಗಗಣವಿಲ್ಲವು+ ಇದೆ(ಈಗ ಈ ಕೂಡಲೆ) ನಿರ್ಮೂಢರನು(ಜಾಣ ದೇವತೆಗಳನ್ನು) ಹಿಡಿತರಿಸು+ ಯೆ೦ದನು ದೂತನು+ ಒಡೆಯ೦ಗೆ
- ಅರ್ಥ:ದಾನವ ದೂತನು ತನ್ನ ಒಡೆಯನಿಗೆ- ರಾಜನಿಗೆ,'ದೇವತೆಗಳ ಅಮರೇ೦ದ್ರನು ನಮ್ಮ ಹಿರಣ್ಯನಗರ ಪ್ರದೇಶದ ಬಂಧನವನ್ನು ಮಾಡಲು ಬಲೆಯ ಜೋಡಿಸಿಯೂ ಆಕ್ರಮಣವೂ ಆಯ್ತು. ಅವರು ಬಹಳಬಲರು; ಅದೇ ವರುಣ, ಯಮ, ಅಗ್ನಿ ವಾಯುಗಳು ಬ೦ದು ಮುತ್ತಿರುವರು. ಇದು ರೂಢಿಗೆ ವಿರೋಧ; ಸೋತವರು ಬಂದುದು ಅಚ್ಚರಿಯು ಆಯ್ತಲ್ಲವೇ. ಆ ಪರಿಯ ಗೂಢ-ರಹಸ್ಯ ಮೃಗಗಣವು ಇಲ್ಲವು. ಈ ಕೂಡಲೆ ಜಾಣ ದೇವತೆಗಳನ್ನು ಹಿಡಿತರಿಸು,'ಎಂದನು.
- ಇವನ ಹೊಯ್ ಕಟವಾಯಕೊಯ್ ತ
- ಪ್ಪುವನೆ ಸುರಪತಿ ಶಿವಶಿವಾ ಸುರ
- ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ ||
- ಇವನ ಸೀಳೆನೆ ಹೊರಗೆ ಸುರ ಸೈ
- ನ್ಯವನು ಸೀಳಿದು ಬಳಿಕ ನೀ ನಿ
- ನ್ನವನ ಮನವೊಲಿವ೦ತೆ ಮಾಡೆನೆ ಖಳನು ಖತಿಗೊ೦ಡ || ೧೭||
- ಪದವಿಭಾಗ-ಅರ್ಥ:ಇವನ ಹೊಯ್(ಇವನಿಗೆ ಹೊಡಿ,) ಕಟವಾಯಕೊಯ್(ಇವನ ಕಟಬಾಯನ್ನು ಕೊಯಿದುಹಾಕು) ತಪ್ಪುವನೆ ಸುರಪತಿ ಶಿವಶಿವಾ(ಸುರಪತಿ ಇಂದ್ರ ನನಗೆವಿರುದ್ಧವಾಗಿ ನೆಡೆದು ತಪ್ಪು ಮಾಡುವನೇ?) ಸುರರು+ ಅವಗಡಿಸುವರೆ(ಧಾಳಿಮಾಡುವರೇ?) ವೇಡೆ ಗಡ(ಆಕ್ರಮಣವೇ ಅಬ್ಬಾ!) ಹೈರಣ್ಯ ನಗರಿಯಲಿ, ಇವನ(ಸುಳ್ಳು ಹೇಳುವ ಇವನನ್ನು) ಸೀಳೆನೆ(ಸೀಳು ಎನೆ- ಎನ್ನಲು) ಹೊರಗೆ ಸುರ(ದೇವ) ಸೈನ್ಯವನು ಸೀಳಿದು(ಸೀಳಿದ ಆ ನಂತರ) ಬಳಿಕ ನೀ ನಿನ್ನವನ(ನೀನು ನಿನ್ನ ದೂತನನ್ನು ಮನಸ್ಸಿಗೆ ತೋಚಿದಂತೆಏನುಬೇಕಾದರೂ ಮಾಡು) ಮನವೊಲಿವ೦ತೆ ಮಾಡೆನೆ, ಖಳನು ಖತಿಗೊ೦ಡ(ದಾನವರಾಜನು ಪೋದ್ರೇಕಗೊಂಡ.)
- ಅರ್ಥ:ದಾನವರಾಜನು ದೂತನ ಮಾತನ್ನು ಕೇಳಿ, ಅದನ್ನು ನಂಬದೆ ಸಿಟ್ಟಿನಿಂದ,'ಇವನಿಗೆ ಹೊಡಿಯಿರಿ, ಸುಳ್ಳು ಹೇಳುವ ಇವನ ಕಟಬಾಯನ್ನು ಕೊಯಿದುಹಾಕು. ಸುರಪತಿ ಇಂದ್ರ ನನಗೆ ವಿರುದ್ಧವಾಗಿ ನೆಡೆದು ತಪ್ಪು ಮಾಡುವನೇ? ಸುರರು ಧಾಳಿಮಾಡುವರೇ? ಸೊತು ಸುಣ್ನವಾಗಿರುವ ಅವರಿಂದ ಆಕ್ರಮಣವೇ ಗಡ! ಅಬ್ಬಾ! ಈ ಹಿರಣ್ಯ ನಗರದಲ್ಲಿ, ಸುಳ್ಳು ಹೇಳುವ ಇವನನ್ನು ಸೀಳು- ಎನ್ನಲು. ದೂತನು ಹೊರಗೆ ದೇವತೆಗಳ ಸೈನ್ಯವನ್ನು ಆ ನಂತರ ನೀನು ನಿನ್ನವನೇ ಆದ ನಿನ್ನ ದೂತನನ್ನು ಮನಸ್ಸಿಗೆ ತೋಚಿದಂತೆ ಏನುಬೇಕಾದರೂ ಮಾಡು, ಸೀಳಿಹಾಕು ಎನ್ನಲು, ಖಳ ದಾನವರಾಜನು ಪೋದ್ರೇಕಗೊಂಡ.
- ಬ೦ದನೇ ಸುರರಾಯನಕಟಕಟೈ
- ತ೦ದು ಮುತ್ತಿತೆ ದಿವಿಜಗಣ ತರು
- ಣೇಂದುಧರನೇ ತರಿಸಿದನೋ ಶಿವಶಿವ ವೀಶೇಷವಲ |
- ಇ೦ದಿನಲಿ ಕಡೆ ತನಗೆ ಮೇಣು ಪು
- ರ೦ಧರನು ನಿರ್ನಾಮನೈಸಲೆ
- ಯೆ೦ದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ || ೧೮ ||
- ಪದವಿಭಾಗ-ಅರ್ಥ:ಬ೦ದನೇ ಸುರರಾಯನು+ ಅಕಟಕಟ+ ಐತ೦ದು(ಬಂದು) ಮುತ್ತಿತೆ ದಿವಿಜಗಣ(ದೇವಸೇನೆ), ತರುಣೇಂದುಧರನೇ (ಬಾಲಚಂದ್ರನನ್ನು ಧರಿಸಿದ ಶಿವನೇ) ತರಿಸಿದನೋ ಶಿವಶಿವ! ವೀಶೇಷವಲ! ಇ೦ದಿನಲಿ ಕಡೆ ತನಗೆ, ಮೇಣು ಪುರ೦ಧರನು ನಿರ್ನಾಮನು+ ಐಸಲೆಯೆ೦ದು(ಹಾಗೇಸರಿ) ಬಿಟ್ಟನು ಚೂಣಿಯನು(ಸೇನೆಯನ್ನು) ಪಟುಭಟರ ಬೊಬ್ಬೆಯಲಿ೯ಗದ್ದಲದಲ್ಲಿ೦
- ಅರ್ಥ:ಆಗ ದಾನವರಾಜನು,' ಇಂದ್ರನು ಬ೦ದನೇ? ಅಕಟಕಟ ದೇವಸೇನೆ ಬಂದು ಮುತ್ತಿತೆ? ಶಿವನೇ ಈ ದೇವಸೇನೆಯನ್ನು ತರಿಸಿದನೋ! ಶಿವಶಿವ! ಇದು ವೀಶೇಷವಲಾ! ಹಾಗಿದ್ದರೆ ಇಂದ್ರನನ್ನು ಸೋಲಿಸದಿದ್ದರೆ ತನಗೆ ಇ೦ದೇ ಕಡೆಯದಿನ. ಬದುಕಿ ಫಲವೇನು? ಮತ್ತೆ ಪುರ೦ಧರನು ನಿರ್ನಾಮನು- ಇಲ್ಲವಾಗಬೇಕು ಎಂದು ನಿಶ್ಚಯಿಸಿ ಸೇನೆಯನ್ನು ಪಟುಭಟರು ಬೊಬ್ಬೆಮಾಡುತ್ತಿರಲು ಯುದ್ಧಕ್ಕೆ ಬಿಟ್ಟನು.
ಅರ್ಜುನನ ಸೇನಾಧಿಪತ್ಯದಲ್ಲಿ ದೇವ ದಾನವರ ಯುದ್ಧ[ಸಂಪಾದಿಸಿ]
- ಧರಣಿಪತಿ ಚಿತ್ತೈಸು ವೇಲೆಯ
- ಶಿರವನೋಡೆದುಬ್ಬೇಳ್ವ ಘನ ಸಾ
- ಗರದವೊಲು ಪಿಡಿದೊದರಿ ಕವಿದುದು ಕೂಡೆ ವ೦ಕದಲಿ |
- ಕರಿತುರಗ ರಥವಾಜಿ ಕಾಲಾ
- ಳುರಣಿಸಿತೀನೇ೦ಬೆನಸುರರ
- ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ || ೧೯ ||
- ಪದವಿಭಾಗ-ಅರ್ಥ:ಧರಣಿಪತಿ ಚಿತ್ತೈಸು(ಕೇಳು) ವೇಲೆಯ(ಸಮುದ್ರ ತೀರ, ಎಲ್ಲೆ) ಶಿರವನು+ ಒಡೆದು+ ಉಬ್ಬೇಳ್ವ ಘನ(ದೊಡ್ಡ, ಶ್ರೇಷ್ಠ) ಸಾಗರದವೊಲು ಪಿಡಿದು+ ಒದರಿ ಕವಿದುದು(ಮತ್ತಿತು) ಕೂಡೆ ವ೦ಕದಲಿ (ಅಂಕುಡೊಂಕಾದ ನಗರಬಾಗಿಲ ದಾರಿಯಲ್ಲಿ) ಕರಿ ತುರಗ ರಥವಾಜಿ (ಆನೆ ಕುದುರೆ, ಕುದುರೆರಥ) ಕಾಲಾಳು+ ಉರಣಿಸಿತು(ಪರಾಕ್ರಮದಿಂದ ಹೊರಟಿತು)+ ಏನ+ ಎ೦ಬೆನು+ ಅಸುರರ ದೊರೆಯ ಸನ್ನೆಗೆ ಸೂಳವಿಪ(ಸರದಿ, ಸಮಯ ೩ ಆರ್ಭಟ,) ನಿಸ್ಸಾಳ(ಭೇರಿ) ರಭಸದಲಿ.
- ಅರ್ಥ:ಧರಣಿಪತಿ ಧರ್ಮಜನೇ ಕೇಳು ಸಮುದ್ರ ತೀರದ ಎಲ್ಲೆಯ ಶಿರವನ್ನು ಒಡೆದು ಉಬ್ಬಿ ಮೇಲೆಏಳುವ ಘನ ಸಾಗರದಂತೆ ಹಿಡಿದು ಆರ್ಭಟಿಸಿ ಅಂಕುಡೊಂಕಾದ ನಗರಬಾಗಿಲ ದಾರಿಯಲ್ಲಿ ಕೂಡಲೆ ನುಗ್ಗಿಹೋಗಿ ಮತ್ತಿತು. ಅಸುರರ ದೊರೆಯು ಸನ್ನೆಮಾಡಲು ಆನೆ ಕುದುರೆ, ಕುದುರೆರಥ ಕಾಲಾಳು ಪರಾಕ್ರಮದಿಂದ ಆರ್ಭಟಮಾಡುತ್ತಾ ಭೇರಿಯನ್ನು ಬಡಿಯುತ್ತಾ ರಭಸದಿಂದ ಹೊರಟಿತು. ಅದನ್ನು ಏನೆಂದು ಹೇಳಲಿ,'ಎಂದನು. .
- ಕವಿದುದಸುರರ ಚೂಣಿ ಬೊಬ್ಬೆಯ
- ವಿವಿಧ ವಾದ್ಯದ್ವನಿಯ ಕಹಳಾ
- ರವದ ಕೋಳಾಹಳಕೆ ತು೦ಬಿತು ಬಹಳ ಬೇರಿಗಳು |
- ರವಿಯನಾಕಾಶವ ದಿಗ೦ತವ
- ತಿವಿದು ಕೆದರುವ ಧೂಳಿ ತಿಮಿರಾ
- ರ್ಣವವಲೈ ತ್ರೈಜಗವೆನಲು ಜೋ೦ಪಿಸಿದುದರಿಸೇನೆ || ೨೦ ||
- ಪದವಿಭಾಗ-ಅರ್ಥ:ಕವಿದುದು(ಮುತ್ತಿತು)+ ಅಸುರರ ಚೂಣಿ(ಸೇನೆ), ಬೊಬ್ಬೆಯ(ಕೂಗು ಸದ್ದು) ವಿವಿಧ ವಾದ್ಯದ್ವನಿಯ ಕಹಳಾ ರವದ() ಕೋಳಾಹಳಕೆ(ಕೋಲಾಹಲ- ಸದ್ದು), ತು೦ಬಿತು ಬಹಳ ಬೇರಿಗಳು, ರವಿಯನು+ ಆಕಾಶವ ದಿಗ೦ತವ ತಿವಿದು ಕೆದರುವ ಧೂಳಿ ತಿಮಿರ(ಕತ್ತಲೆ)+ ಆರ್ಣವವಲೈ(ಸಮುದ್ರ) ತ್ರೈಜಗವು+ ಎನಲು ಜೋ೦ಪಿಸಿದುದು+ ಅರಿಸೇನೆ.(ಮೈಮರೆ,ಅಲುಗಾಡಿಸು,ನಡುಗಿಸು,).
- ಅರ್ಥ:ದಾನವರ ಶತ್ರು ಸೇನೆಯು, ಆರ್ಭಟಿಸುತ್ತಾ ಕೂಗುತ್ತಾ ವಿವಿಧ ವಾದ್ಯದ್ವನಿಯನ್ನು ಮಾಡುತ್ತಾ, ಕಹಳೆಗಳ ಮೊಳಗಿನೊಂದಿಗೆ ಮುತ್ತಿತು. ಅವರ ಕೋಲಾಹಲ ಬಹಳ ಬೇರಿಗಳ ಸದ್ದು ಆಕಾಶವ ದಿಗ೦ತದಲ್ಲಿರುವ ರವಿಯನ್ನು ತಿವಿದು, ಅವರ ನೆಡಿಗಡೆಯಿಂದ ಎದ್ದ ಕೆದರಿದ ಧೂಳಿಯಿಂದ ಮೂರುಜಗವನ್ನೂ ಕತ್ತಲೆಯ ಸಮುದ್ರವವು ಆವರಿಸಿತು ಎನ್ನವಂತೆ ಶತ್ರು ಸೇನೆಯು ಬರಲು, ಅದು ದೇವಸೇನೆಯನ್ನು ನಡುಗಿಸಿತು.
- ದಾನವರ ದಕ್ಕಡತನವನದ
- ನೇನನೆ೦ಬೆನು ಜೀಯ ತೂಳಿದ
- ವಾನೆಗಳು ತರುಬಿದವು ತೇಜಿಗಳುರುಬಿದವು ತೇರು |
- ಆನಲಳವೇ ಭಟರ ಶರ ಸ೦
- ಧಾನವನು ಬಲುಸರಳ ಸೂಟಿಯ
- ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ || ೨೧ ||
- ಪದವಿಭಾಗ-ಅರ್ಥ:ದಾನವರ ದಕ್ಕಡತನವನು(ದಕ್ಕಡತನ- ಧೈರ್ಯ,ಸಾಮರ್ಥ್ಯ)+ ಅದನು+ ಏನನೆ೦ಬೆನು ಜೀಯ(ರಾಜನೇ), ತೂಳಿದವು(ನುಗ್ಗು)+ ಆನೆಗಳು ತರುಬಿದವು(ಅಡ್ಡಹಾಕು, ಒಟ್ಟಾಗಿಸು) ತೇಜಿಗಳು+ ಉರುಬಿದವು(ಚುರುಕು,ಬಿರುಸು,ಒತ್ತರ) ತೇರು, ಆನಲು+ ಅಳವೇ(ಅನ್ನಲು- ಹೇಳಲು ಸಾಧ್ಯವೇ) ಭಟರ ಶರ ಸ೦ಧಾನವನು ಬಲುಸರಳ(ಬಾಣ) ಸೂಟಿಯ(ವೇಗ, ರಭಸ) ಸೋನೆಯಲಿ(ವೇಗದ ಬಾಣಗಳ ಮಳೆ) ಜಗ ನೆನೆಯಿತು+ ಎನೆ ಜೋಡಿಸಿತು ಖಳಸೇನೆ.
- ಅರ್ಥ:ರಾಜನೇ, ದಾನವರ ಧೈರ್ಯ,ಸಾಮರ್ಥ್ಯ- ವನ್ನು ಏನೆಂದು ಹೇಳಲಿ! ಆನೆಗಳು ನುಗ್ಗಿದವು, ಕುದುರೆಗಳು ಒಟ್ಟಾಗಿಸು ಉರುಬಿದವು- ಬಿರುಸಿನಿಂದ ತೇರು- ರಥಗಳು ನುಗ್ಗಿದವು. ದಾನವಭಟರ ಬಾಣಗಳ ಸ೦ಧಾನದ ವಿಷಯ ಹೇಳಲು ಸಾಧ್ಯವೇ!ಅದು ಬಾಣಗಳ ಬಹಳ ರಭಸದ ಮಳೆಯಲ್ಲಿ ಜಗತ್ತು ನೆನೆಯಿತು ಎಂಬಂತೆ ಇತ್ತು. ಖಳರಸೇನೆ ಒಟ್ಟಾಗಿ ಬಂದು ಸೇರಿತು.
- ಮುರಿದುದಮರರ ಚೂಣಿ ದಾನವ
- ರುರುಬೆಗಳುಕಿತು ಸಿದ್ದ ವಿದ್ಯಾ
- ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು |
- ಹೊರಗೆ ವನವೀಧಿಯಲಿ ಕಾಹಿನ
- ಕುರುವದಲಿ ಗೋಪುರದೊಳೌಕಿತು
- ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ || ೨೨ ||
- ಪದವಿಭಾಗ-ಅರ್ಥ:ಮುರಿದುದು+ ಅಮರರ ಚೂಣಿ(ದೇವತೆಗಳ ಸೇನೆ) ದಾನವರ+ ಉರುಬೆಗೆ+ ಅಳುಕಿತು(ಹಿಮ್ಮೆಟಿತು); ಸಿದ್ದ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು ಹೊರಗೆ ವನವೀಧಿಯಲಿ ಕಾಹಿನ ಕುರುವದಲಿ(ದ್ವೀಪ, ನಡುಗಡ್ಡೆ) ಗೋಪುರದೊಳು+ ಔಕಿತು, ಸುರರು ಮುರಿದರು ಮೇಲು ಕಾಳಗವಾದುದು+ ಅಸುರರಿಗೆ
- ಅರ್ಥ:ದೇವತೆಗಳ ಸೇನೆ ಮುರಿದು ಚೆಲ್ಲಪಿಲ್ಲಿಯಾಯಿತು. ದಾನವರ ಪರಾಕ್ರಮಕ್ಕೆ ದೇವಸೇನೆ ಹಿಮ್ಮೆಟಿತು; ಸಿದ್ದರು, ವಿದ್ಯಾಧರರು ಮಹೋರಗಗಳು, ದೇವತೆಗಳ ಪರ ಇದ್ದ ಯಕ್ಷ ರಾಕ್ಷಸರು, ಗುಹ್ಯಕಾದಿಗಳು (ಕುಬೇರನ ಸೈನ್ಯದವರು) ಹೊರಗೆ ಕಾಡು ಬೀದಿಯ ಕಾವಲಿನ ನಡುಗಡ್ಡೆಯ ಗೋಪುರದಲ್ಲಿ ಅವಿತುಕೊಂಡರು., ಸುರರು-ದೇವತೆಗಳು ಸೋತರು, ಅಸುರರಿಗೆ ಕಾಳಗದಲ್ಲಿ ಮೇಲಾಯಿತು.
- ಕೆಣಕಿದಸುರರು ಕೋಳುಗಟ್ಟಿತು
- ಬಣಗು ಸುರರೋಸರಿಸಿ ಭಾರಾ೦
- ಕಣವನೆನ್ನಿದಿರಿನಲಿ ಸುಭಟರು ಸೂಸಿದೆಸೆದೆಸೆಗೆ |
- ರಣವನದನೇನೆ೦ಬೆನೈ ಧಾ
- ರುಣಿಪತಿಯೆವಿಗ್ರಹದ ವಿಸ್ತಾ
- ರಣ ನಿಗುರ್ಗಣೆ ವಿಗಡಿಸಿತು ವಿಬುಧರ ವಿಡಾಯಿಗಳ || ೨೩ ||
- ಪದವಿಭಾಗ-ಅರ್ಥ:ಕೆಣಕಿದ ಸುರರು ಕೋಳುಗಟ್ಟಿತು(ಸೋಲುಪಡೆದರು, ಮಾನ ಗೆಟ್ಟರು) ಬಣಗು(ದುರ್ಬಲ) ಸುರರು+ ಓಸರಿಸಿ(ಪಕ್ಕಕ್ಕೆ ಸರಿ, ಹಿಂಜರಿ) ಭಾರಾ೦ಕಣವನು(ರಣರಂಗವನ್ನು)+ ಎನ್ನಿದಿರಿನಲಿ(ಅರ್ಜುನನ - ನನ್ನ ಎದುರಲ್ಲಿ) ಸುಭಟರು ಸೂಸಿ(ಚೆಲ್ಲಿ - ಹರಡಿ) ದೆಸೆದೆಸೆಗೆ ರಣವನು,+ ಅದನು+ ಏನು+ ಎ೦ಬೆನೈ ಧಾರುಣಿಪತಿಯೆ, ವಿಗ್ರಹದ(ಯುದ್ಧ) ವಿಸ್ತಾರಣ ನಿಗುರ್ಗಣೆ(ನಿಗುರ್ + ಕಣೆ- ಗಟ್ಟಿ ಬಾಣಗಳು) ವಿಗಡಿಸಿತು(ವಿಗಡಿಸು- ಭಂಗಪಡಿಸು; ಕ್ಷೋಭೆಗೆ ಒಳಗಾಗು; ವಿರೋಧಿಸು) ವಿಬುಧರ(ಸುರ, ದೇವತೆ) ವಿಡಾಯಿಗಳ(ಠೀವಿ,ಗತ್ತು, ಜಂಬ).
- ಅರ್ಥ::ಅರ್ಜುನನು ಧರ್ಮಜನಿಗೆ ಹೇಳಿದ,'ದಾನವರನ್ನು ಕೆಣಕಿದ ದೇವತೆಗಳು ಸೋಲುಪಡೆದರು, ಮಾನ ಗೆಟ್ಟರು. ದುರ್ಬಲ ಸುರರು ಹಿಂದೆ ಸರಿದು ರಣರಂಗವನ್ನು ನನ್ನ ಎದುರಿನಲ್ಲಿ ಸುಭಟರು ಚದುರಿ ದಿಕ್ಕುದಿಕ್ಕಿಗೆ ರಣವನ್ನು ಬಿಟ್ಟು ಓಡಿದರು. ಅದನ್ನು ಏನೆಂದು ಹೇಳಲಿ ಧಾರುಣಿಪತಿಯೆ- ರಾಜನೇ! ಯುದ್ಧದ ವಿಸ್ತಾರ ವಿಚಾರವನ್ನು ಏನೆಂದು ಹೇಳಲಿ ರಾಜ ಧರ್ಮಜನೇ. ಉತ್ತಮ ಅಸ್ತ್ರ ಮತ್ತು ಬಾಣಗಳು ವಿಫಲವಾಗಿ, ದೇವತೆಗಳ ಠೀವಿ,ಗತ್ತು, ಭಂಗಪಟ್ಟಿತು.
- ಬಳಿಕ ಬಿಟ್ಟನು ರಥವನೀ ಮಾ
- ತಲಿ ವಿಭಾಡಿಸಿ ಹೊಕ್ಕು ಚೂಣಿಯ
- ಬಲಸಮುದ್ರದ ಮಧ್ಯದಲಿ ಮುಳುಗಿತು ವರೂಥವಿದು |
- ಬಲದಲೆಚ್ಚೆನು ಹಿ೦ದು ಮು೦ದಿ
- ಟ್ಟಳಿಸಿದರನಿಟ್ಟೊರೆಸಿದೆನು ಮು೦
- ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ || ೨೪ ||
- ಪದವಿಭಾಗ-ಅರ್ಥ:ಬಳಿಕ ಬಿಟ್ಟನು ರಥವನು+ ಈ ಮಾತಲಿ(ಸ್ವರ್ಗದಿಂದ ಅರ್ಜುನನ್ನು ಕರೆತಂದು ರಥದೊಡನೆ ಧರ್ಮಜನ ಎದುರಿಗೆ ಇದ್ದವನು). ವಿಭಾಡಿಸು(ಭೇದಿಸಿ, ಪರಾಕ್ರಮದಿಂದ) ಹೊಕ್ಕು ಚೂಣಿಯ(ಯುದ್ಧದಲ್ಲಿ ಮುಂದೆ ಇರುವ ಸೈನ್ಯ, ) ಬಲಸಮುದ್ರದ (ವಿಶಾಲವಾದ ಸೇನೆ) ಮಧ್ಯದಲಿ, ಮುಳುಗಿತು(ಕಾಣದಂತೆ ಸೈನಿಕರಿಂದ ಮುತ್ತಲ್ಪಟ್ಟತು) ವರೂಥವು + ಇದು, ಬದಲಿ + ಎಚ್ಚೆನು ಹಿ೦ದು ಮು೦ದೆ+ ಇಟ್ಟಳಿಸಿದರನು(ಒಗ್ಗೂಡಿಕೊಂಡು, ಗುಂಪಾಗಿ) ಇಟ್ಟು(ಹೊಡೆದು)+ ಒರೆಸಿದೆನು, ಮು೦ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ.
- ಅರ್ಥ:ಅರ್ಜುನನು ಮುಂದುವರೆದು ಹೇಳಿದನು,'ಬಳಿಕ ಈ ಮಾತಲಿಯು ರಥವನ್ನು ದಾನವರ ಕದೆಗೆ ಬಿಟ್ಟನು. ಅವರ ಸೇನೆಯನ್ನು ಭೇದಿಸಿ ಹೊಕ್ಕು ಸೇನಯ ಮುಂಭಾಗದ 'ಬಲ ಸೇನಾಸಮುದ್ರದ' ಮಧ್ಯದಲ್ಲಿ, ಇದು ನಮ್ಮ ರಥವು ಮುಳುಗಿತು. ಬಲದ ಕಡೆ ಹೊಡೆದೆನು; ಹಿ೦ದು ಮು೦ದೆ ಇಟ್ಟಳಿಸಿ ಮುತ್ತಿದವರನ್ನು ಹೊಡೆದು ಒರೆಸಿದೆನು- ಸಾಯಿಸಿದೆನು. ಮು೦ದೆ ಬಂದು ನನ್ನ ಮೇಲೆ ಎಡ ಭಾಗದಲಿ ಹಾಯ್ವವರನ್ನು ಮುರಿದೆನು- ಕೊಂದೆನು.' ಎಂದನು.
- ಕೆಟ್ಟುದಹಿತರ ಚೂಣಿ ರಿಪು ಜಗ
- ಜಟ್ಟಿಗಳು ನುಗ್ಗಾಯ್ತು ದಿವಿಜರ
- ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು |
- ಬಿಟ್ಟಮ೦ಡೆಯಲಸುರ ಸುಭಟರು
- ಕೆಟ್ಟು ಹಾಯ್ದರು ಕೂಡೆ ಹೆಣ ಸಾ
- ಲಿಟ್ಟು ದುರೆಯೆನಲರುಣಜಲ ನಗರೋಪಕ೦ಠದಲಿ || ೨೫ ||
- ಪದವಿಭಾಗ-ಅರ್ಥ:ಕೆಟ್ಟುದು+ ಅಹಿತರ ಚೂಣಿ(ಅಹಿತ-ಶತ್ರು; ಶತ್ರುಗಳ ಸೇನೆ) ರಿಪು(ಶತ್ರು) ಜಗಜಟ್ಟಿಗಳು ನುಗ್ಗಾಯ್ತು(ದುರ್ಬಲವಾಯಿತು) ದಿವಿಜರ(ದೇವತೆಗಳ) ಥಟ್ಟಿನಲಿ (ಸೇನೆಯಲ್ಲಿ)ಬೊಬ್ಬಾಟವಾಯ್ತು (ಆರ್ಭಟವಾಯಿತು) ಗಭೀರ ಭೇರಿಗಳು ಬಿಟ್ಟಮ೦ಡೆಯಲಿ+ ಅಸುರ ಸುಭಟರು(ದಾನವ ವೀರರು) ಕೆಟ್ಟು ಹಾಯ್ದರು(ಓಡಿದರು.) ಕೂಡೆ ಹೆಣ ಸಾಲಿಟ್ಟುದು+ ಉರೆ(ಹೆಚ್ಚು)+ ಯೆನಲು+ ಅರುಣಜಲ(ರಕ್ತ) ನಗರ+ ಉಪಕ೦ಠದಲಿ (ಒಳ ಬಾಗಿಲಿನಲ್ಲಿ)
- ಅರ್ಥ:ಅರ್ಜುನನ ಪರಾಕ್ರಮದಿಂದ ಶತ್ರುಗಳ ಸೇನೆಯ ವ್ಯವಸ್ಥೆ ಬಲ ಕೆಟ್ಟುಹೋಯಿತು. ಜಗಜಟ್ಟಿಗಳು ಪಟ್ಟುತಿಂದು ದುರ್ಬಲರಾದರು. ದೇವತೆಗಳ ಸೇನೆಯಲ್ಲಿ ಸಂತಸದಿಂದ ಗಭೀರ- ದೊಡ್ಡ ಭೇರಿಗಳುನ್ನು ಬಡಿದು ಕೂಗಾಟವಾಯಿತು. ದಾನವ ವಿರರು ಬಿಟ್ಟಮ೦ಡೆಯಲ್ಲಿ ಸೊತು- ಕೆಟ್ಟು ಓಡಿದರು. ಕೂಡಲೆ ಹೆಣಗಳು ಎಲ್ಲಕಡೆ ಸಾಲಾಗಿ ಇಡಲ್ಪಟ್ಟಿತು. ಮತ್ತೂ ಹೇಳುವುದಾದರೆ ರಕ್ತ ನಗರದ ಒಳ ಬಾಗಿಲಿನಲ್ಲಿ ಹರಿಯಿತು.
- ನೂಕಿದೈತ್ಯರ ಚೂಣಿಯನು ಮುರಿ
- ದೌಕಿ ದುರ್ಗವ ಹೊಗಿಸಿದೆನು ಸ
- ವ್ಯಾಕುಲರು ಸೂಸಿದರು ಭಯವ ನಿವಾತ ಕವಚರಿಗೆ |
- ಆಕೆವಾಳರು ಜೀಯ ನಮ್ಮದಿ
- ವೌಕಸರ ಪರಿಯಲ್ಲ ಯುದ್ಧ
- ವ್ಯಾಕರಣ ಪಾ೦ಡಿತ್ಯವು೦ಟೆ೦ದೆನ್ನ ದೂರಿದರು || ೨೬ ||
- ಪದವಿಭಾಗ-ಅರ್ಥ:ನೂಕಿ ದೈತ್ಯರ ಚೂಣಿಯನು(ಸೇನೆಯನ್ನು) ಮುರಿದು+ ಔಕಿ (ಕೊಂದು, ಹಿಂದೆಒತ್ತಿ ) ದುರ್ಗವ ಹೊಗಿಸಿದೆನು; ಸವ್ಯಾಕುಲರು(ದೇವತೆಗಳು) ಸೂಸಿದರು(ಚೆಲ್ಲದರು- ಬಿಟ್ಟರು) ಭಯವ; ನಿವಾತ ಕವಚರಿಗೆ ಆಕೆವಾಳರು(ತಿಳಿದ ಹಿರಿಯರು) ಜೀಯ ನಮ್ಮ ದಿವೌಕಸರ ದಿವಿ+ ಓಕಸರ(ದಿವಿ= ಆಕಾಶ, ಸ್ವರ್ಗ, ಸ್ವರ್ಗದ ಮನೆಯ- ವಾಸಿಗಳ, ದೇವತೆಗಳ) ಪರಿಯಲ್ಲ(ರೀತಿಯಲ್ಲ), ಯುದ್ಧವ್ಯಾಕರಣ ಪಾ೦ಡಿತ್ಯವು೦ಟು (ಯುದ್ಧದ ಕ್ರಮದ ಪಾ೦ಡಿತ್ಯವಿದೆ) ಎ೦ದು+ ಎನ್ನ(ಅರ್ಜುನನ) ದೂರಿದರು.
- ಅರ್ಥ:ಧರ್ಮಜನಿಗೆ ಅರ್ಜುನನು 'ತಾನು ದೈತ್ಯರ ಸೇನೆಯನ್ನು ಹಿಂದಕ್ಕೆ ನೂಕಿ, ಕೆಲವರನ್ನು ಕಂದು ಅವರ ವ್ಯೂಹವನ್ನು ಮುರಿದು, ಹಿಂದೆ ಒತ್ತಿ, ಅವರನ್ನು ಅವರ ದುರ್ಗದೊಳಗೆ ಹೊಗಿಸಿದೆನು,' ಎಂದನು; ದೇವತೆಗಳು ಸಂತಸದಿಂದ ಭಯವನ್ನು ಬಿಟ್ಟರು; ನಿವಾತ ಕವಚರಿಗೆ ತಿಳಿದ ಹಿರಿಯರು,'ಜೀಯ ಇವನು ನಮ್ಮ ದೇವತೆಗಳರೀತಿಯಲ್ಲ; ಯುದ್ಧದ ಕ್ರಮದ ಪಾ೦ಡಿತ್ಯವಿದೆ,'ಎ೦ದು ನನ್ನನ್ನು(ಅರ್ಜುನನ) ದೂರಿದರು ಎಂದನು.
- ಕೇಳಿದನು ಕಡುಗೋಪದಲಿ ಸಿಡಿ
- ಲೇಳಿಗೆಯಲೆದ್ದನು ಸುರೇ೦ದ್ರಗೆ
- ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ |
- ಕಾಲಗತಿಯೋ ಮೇಣ್ ಕಪರ್ದಿಯ
- ಕೀಲಕವೊ ರವಿಯೊಡನೆ ತಮಕೈ
- ಮೇಳವಿಸಿತೇ ಶಿವಶಿವಾಯೆನುತಸುರ ಹಲು ಮೊರೆದ || ೨೭ ||
- ಪದವಿಭಾಗ-ಅರ್ಥ:ಕೇಳಿದನು ಕಡುಗೋಪದಲಿ(ಕಡು+ ಕೋಪದಲಿ) ಸಿಡಿಲ+ ಏಳಿಗೆಯಲಿ+ ಎದ್ದನು ಸುರೇ೦ದ್ರಗೆ ಮೇಲು+ ಗಾ+ ಕಾಳಗವೇ(ಜಯವೇ) ಸುಪರ್ವರು(ಸು+ ಪರ್ವ= ಭಾಗ, ಉತ್ತಮ ಭಾಗಿಗಳು,ಹಿಸೆಯಲ್ಲಿ ಉತ್ತಮ ಭಾಗ ಪಡೆದವರು- ಅಮೃತ ಪಡೆದವರು- ಕುಮಾರವ್ಯಾಸನ ಸೃಷ್ಠಿಪದ) ನಮ್ಮ ಸದೆವರಲೆ(ಬಡಿಯುವರು- ಸೋಲಿಸುವರು), ಕಾಲಗತಿಯೋ ಮೇಣ್ ಕಪರ್ದಿಯ(ಶಿವನ) ಕೀಲಕವೊ(ತಂತ್ರವೋ) ರವಿಯೊಡನೆ(ಸೂರ್ಯನೊಡನೆ - ತಾನು ರವಿಯಂತೆ, ದೇವತೆಗಳು ತಮದಂತೆ- ಕತ್ತಲೆ ) ತಮ+ ಕೈಮೇಳವಿಸಿತೇ (ಹೋರಾಟಕ್ಕೆ ನಿಂತಿತೇ!), ಶಿವಶಿವಾ+ ಯೆ+ ಎನುತ+ ಅಸುರ ಹಲು ಮೊರೆದ(ಕಟಕಟನೆ ಹಲ್ಲುಕಡಿದು ಸದ್ದುಮಾಡಿದ).
- ಅರ್ಥ:ದಾನವರ ದೊರೆಯು ತಮ್ಮವರ ಸೋಲನ್ನು ಕೇಳಿದನು. ಆಗ ಅವನು ಅತಿ ಕೋಪದಿಂದ ಸಿಡಿಲು ಸಿಡಿದಂತೆ ಮೇಲೆದ್ದನು. ಸುರೇ೦ದ್ರನಿಗೆ ಜಯವೇ? ಸುಪರ್ವರು ನಮ್ಮ ಸದೆವರಲೆ(ಬಡಿಯುವರು- ಸೋಲಿಸುವರು), ಇದೇನು ಕಾಲಗತಿಯೋ ಅಥವಾ ಶಿವನ ತಂತ್ರವೋ? ಸೂರ್ಯನೊಡನೆ ಕತ್ತಲೆಯು ಹೋರಾಟಕ್ಕೆ ನಿಂತಿತೇ! ಯುದ್ಧಕ್ಕೆ ಬಂದಿತೇ? ಶಿವಶಿವಾ! ಎನ್ನುತ್ತಾ ಅಸುರದೊರೆ ನಿವಾತಕವಚ ಕಟಕಟನೆ ಹಲ್ಲುಕಡಿದನು.
- ಭಟರ ಬರಹೇಳೋ ಸುರೇ೦ದ್ರನ
- ಕಟಕವಿಕ್ಕಿದ ವೇಡೆಯಲಿ ಲಟ
- ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ |
- ನಿಟಿಲನಯನನನೇಳಿಸುವ ಚಾ
- ವಟೆರಾವೆಡೆ ಚದುರ ರಣ ಲ೦
- ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ || ೨೮ ||
- ಪದವಿಭಾಗ-ಅರ್ಥ:ಭಟರ ಬರಹೇಳೋ ಸುರೇ೦ದ್ರನ ಕಟಕವು+ಇಕ್ಕಿದ ವೇಡೆಯಲಿ(ಆಕ್ರ ಮಣ) ಲಟಕಟಿಸುತಿದೆ(ಪುಡಿಯಾಗುತ್ತಿದೆ) ದಾನವರು ಮಾನಚ್ಯುತಿಯ ಮನ್ನಿಸದೆ, ನಿಟಿಲನಯನನು(ಹಣೆಯಲ್ಲಿ ಕಣ್ಣುಳ್ಳವ,ಶಿವ)+ ಏಳಿಸುವ ಚಾವಟೆರು(ಚಾಟಿ ಹಿಡಿದವರು ; ಸುವ್ಯವಸ್ಥೆ ಕಾಯ್ದುಕೊಳ್ಳುವರು)+ ಯಾವೆಡೆ ಚದುರ ರಣ ಲ೦ಪಟರ (ಚಟವಾಗಿ ಇರುವವರು. ಹವ್ಯಾಸದವರು) ಬರಹೇಳು(ಯುದ್ಧಪರಿಣತರು)+ ಎನುತ ಮಿಗೆ ಗರ್ಜಿಸಿದನು+ ಅಮರಾರಿ
- ಅರ್ಥ:ಅಮರಾರಿ ದಾನವನು ಸಿಟ್ಟಿನಿಂದ,'ದೂತನನ್ನು ಕುರಿತು ಇನ್ನೂ ಹೆಚ್ಚು ಭಟರನ್ನು ಬರಹೇಳೋ; ಸುರೇ೦ದ್ರನ ಸೇನೆಯು ಮಾಡಿದ ಆಕ್ರಮಣದಿಂದ ದಾನವ ಸೇನೆ ಪುಡಿಯಾಗುತ್ತಿದೆ. ದಾನವರ ಮಾನ ಹೋಗುವುದನ್ನು ಮನ್ನಿಸದೆ ಇರುವ ಹಣೆಯಲ್ಲಿ ಕಣ್ಣುಳ್ಳ ಶಿವನನ್ನು ಎಚ್ಚರಿಸುವರು(ಪೂಜಿಸುವವರು) ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವರು ಎಲ್ಲಿದ್ದಾರೆ? ಆ ಚತುರ ಯುದ್ಧಹವ್ಯಾಸಿಗರನ್ನು ಬರಲು ಹೇಳು,' ಎನ್ನುತ್ತಾ ದೊದ್ದದಾಗಿ ಗರ್ಜಿಸಿದನು.
- ನೆರೆದರಸುರರು ಕಾಲಕೂಟದ
- ಕರುವಿನೆರಕವೊ ಸಿಡಿಲ ದಳ್ಳುರಿ
- ತಿರುಳ ದಡ್ಡಿಯೊ ವಿಲಯ ಬೈರವನುಬ್ಬಟೆಯ ಪಡೆಯೋ |
- ಹರನ ನಯನ ಜ್ವಾಲೆಯವದಿರ
- ಗರುಡಿಯೋ ಗಾಡಾಯ್ಲ ತೇಜದ
- ದುರುಳ ದಾನವ ಭಟರು ಬ೦ದುದು ಕೋಟಿ ಸ೦ಖ್ಯೆಯಲಿ || ೨೯ ||
- ಪದವಿಭಾಗ-ಅರ್ಥ:ನೆರೆದರು (ಸೇರಿದರು)+ ಅಸುರರು ಕಾಲಕೂಟದ ಕರುವಿನ(ರೂಪದ)+ ಎರಕವೊ, ಸಿಡಿಲ ದಳ್ಳುರಿ ತಿರುಳ ದಡ್ಡಿಯೊ, ವಿಲಯ ಬೈರವನ+ ಉಬ್ಬಟೆಯ ಪಡೆಯೋ, ಹರನ ನಯನ ಜ್ವಾಲೆಯು+ ಅವದಿರ ಗರುಡಿಯೋ(ತಾಣವೋ), ಗಾಡಾಯ್ಲ(ಗಾಡ-ತೀಕ್ಷಣ; ಆಯಿಲ-ಅತಿಶಯ, ಕೆಟ್ಟ, ಕೄರ ) ತೇಜದ ದುರುಳ ದಾನವ ಭಟರು ಬ೦ದುದು ಕೋಟಿ ಸ೦ಖ್ಯೆಯಲಿ.
- ಅರ್ಥ: ಅರಜುನನು ಧರ್ಮಜನಿಗೆ ಹೇಳಿದ,'ಅಸುರರು ಕಾಲಕೂಟ ವಿಷದ ರೂಪದ ಎರಕವೊ, ಸಿಡಿಲಿನ ದಳ್ಳುರಿಯ ತಿರುಳ ರಾಶಿಯೋ, ಪ್ರಳಯಕಾಲದ ಬೈರವನ ಪರಾಕ್ರಮದ ಪಡೆಯೋ, ಹರನ ಹಣೆಗಣ್ಣಿನ ಬೆಂಕಿಜ್ವಾಲೆಯೋ, ಅದು ಅವರ ತಾಣವೋ, ಬಲಿಷ್ಠ ಕೄರ ತೇಜಸ್ಸಿನ ದುರುಳರಾದ ದಾನವಭಟರು ಕೋಟಿ ಸ೦ಖ್ಯೆಯಲ್ಲಿ ಬ೦ದು ಸೇರಿದರು.'
- ನೆರೆದರೈ ಪರಿಭವದ ನೆಲೆಯಲಿ
- ನೆರೆದರೈ ದುಷ್ಕೀರ್ತಿಸತಿಯಲಿ
- ನೆರೆದಿರೈ ಸಲೆ ಹೊರೆದರೈ ದುಷ್ಕೃತಿಯಲೊಡಲುಗಳ |
- ಸುರರೆಲೇ ನೀವ್ ನಿಮ್ಮಹೆ೦ಡಿರ
- ಕುರುಳ ಕೈದೊಳಸಿ೦ಗೆ ಕಾ
- ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆ೦ದ೦ || ೩೦ ||
- ಪದವಿಭಾಗ-ಅರ್ಥ:ನೆರೆದರೈ(ಒಟ್ಟಾಗಿ ಬಂದರು) ಪರಿಭವದ(ಸೋಲಿನ) ನೆಲೆಯಲಿ, ನೆರೆದರೈ ದುಷ್ಕೀರ್ತಿ ಸತಿಯಲಿ(ಜೊತೆಯಲ್ಲಿ), ನೆರೆದಿರೈ ಸಲೆ(ಮತ್ತೂ) ಹೊರೆದರೈ ದುಷ್ಕೃತಿಯಲಿ+ ಒಡಲುಗಳ(ದೇಹ, ಹೊಟ್ಟೆಯನ್ನು) ಸುರರೆಲೇ(ದೇವತೆಗಳಲ್ಲವೇ ನೀವು) ನೀವ್ ನಿಮ್ಮ ಹೆ೦ಡಿರ ಕುರುಳ ಕೈದೊಳಸಿ೦ಗೆ(ಕಯ್ಯಾಡಿಸಲು) ಕಾತರಿಸುತಿದೆ(ಆಸೆಪಡುತ್ತಿದೆ) ವಾಸವನೊಡನೆ (ಇಂದ್ರನೊಡನೆ ಇರುವ) ವಾಸಿಗಳ (ವಾಸಮಾಡುವ ದೇವಕನ್ಯೆಯರನ್ನು) ಬಿಡಿಯೆ೦ದ.
- ಅರ್ಥ:ರಾಜ ಧರ್ಮಜನೇ,' ಆ ದಾನವರು, ಸೋಲಿನ ನೆಲೆಯಲ್ಲಿ ಸಿಟ್ಟಿನಿಂದ ಒಟ್ಟಾಗಿ ಬಂದರು; ಸೋಲಿನ ಅಪಕೀರ್ತಿಯನ್ನು ಹೊತ್ತು ಸೇಡು ತೀರಿಸಲು ಒಟ್ಟಾಗಿ ಬಂದರು; ಸೋಲೆಂಬ ದುಷ್ಕೀರ್ತಿ- ಕಳಂಕದ ಸತಿಯ ಜೊತೆಯಲ್ಲಿ ಬಂದರು;, ಮತ್ತೆ ಮತ್ತೆ ಬಹಳಷ್ಟು ದಾನವರು ದುಷ್ಕೃತಿಯ ಕಾರ್ಯದಿಂದ ಹೊಟ್ಟೆಯನ್ನು ತಂಬಿಕೊಳ್ಳುವ ದಾನವರು ಬಂದರು. ಅವರು ನಮಗೆ ನೀವು ದೇವತೆಗಳಲ್ಲವೇ ನೀವು? ನಿಮ್ಮ ಹೆ೦ಡಿರ ಮುಂದಲೆಯ ಕುರುಳ ಮೇಲೆ ಕಯ್ಯಾಡಿಸಲು ನಮ್ಮ ಮನಸ್ಸು ಆಸೆಪಡುತ್ತಿದೆ. ಇಂದ್ರನೊಡನೆ ವಾಸಮಾಡುವ ದೇವಕನ್ಯೆಯರನ್ನು ನಮ್ಮೊಡನೆ ಬಿಡಿಯೆ೦ದರು.
- ಜೀಯ ಖಾತಿಯದೇಕೆ ದಿವಿಜರ
- ರಾಯನರಸಿಯ ನಿನ್ನ ತೊತ್ತಿರ
- ಲಾಯದಲಿ ತೋರುವೆವು ತಾ ತಾ ವೀಳಯವನೆನುತ |
- ಹಾಯಿದರು ತಮ ತಮಗೆ ಮು೦ಗುಡಿ
- ದಾಯದಲಿ ಧಟ್ಟಿಸುವ ನಿಸ್ಸಾ
- ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ || ೩೧ ||
- ಪದವಿಭಾಗ-ಅರ್ಥ:ಜೀಯ ಖಾತಿಯು(ಸಿಟ್ಟು)+ ಅದೇಕೆ ದಿವಿಜರ(ದೇವತೆಗಳ) ರಾಯನ+ ಅರಸಿಯ ನಿನ್ನ ತೊತ್ತಿರ ಲಾಯದಲಿ ತೋರುವೆವು ತಾ ತಾ ವೀಳಯವನು(ಯುದ್ಧಕ್ಕೆ ಅಪ್ಪಣೆಯನ್ನು)+ ಎನುತ ಹಾಯಿದರು ತಮ ತಮಗೆ ಮು೦ಗುಡಿ ದಾಯದಲಿ ಧಟ್ಟಿಸುವ(ಗದರಿಸು; ಒರಸಿಹಾಕು, ಉಜ್ಜು, ತಿಕ್ಕುವ. ಬಡಿಯುವ) ನಿಸ್ಸಾಳಾಯತದ(ರಣವಾದ್ಯದ) ಬಹುವಿಧದ ವಾದ್ಯದ ಲಳಿಯ (ರಭಸ, ವೇಗ) ಲಗ್ಗೆಯಲಿ (ಧಾಳಿ).
- ಅರ್ಥ:ಜೀಯ ಧರ್ಮಜ,'ದಾನವ ವೀರರು ತಮ್ಮ ರಾಜನ ಬಳಿಗೆ ಬಂದು ದೊರೆಯೇ ಸಿಟ್ಟು ಮಾಡುವುದೇಕೆ? ದೇವತೆಗಳ ರಾಜ ಇಂದ್ನನ ಅರಸಿಯರನ್ನು ನಿನ್ನ ಸೇವೆಮಾಡುವ ತೊತ್ತುಗಳು ಇರುವ ಲಾಯದಲ್ಲಿ ತಂದು ತೋರಿಸುವೆವು. ನಮಗೆ ಯುದ್ಧಕ್ಕೆ ವೀಳಯವನು ತಾ ತಾ, ಬೇಗಕೊಡು ಎನ್ನುತ್ತಾ ತಮ ತಮಗೆ ಮು೦ಭಾಗದ ಸೇನೆಯ ತಾಣದಲ್ಲಿ ಓಡಿ ನಿಂತರು. ಬಡಿಯುವ ನಿಸ್ಸಾಳ ರಣವಾದ್ಯದಗಳನ್ನೂ, ಬಹುವಿಧದ ವಾದ್ಯದದೊಡನೆ ರಭಸದಿಂದ ಧಾಳಿಯಿಟ್ಟರು.
- ಒಡೆದುದಿಳೆಯೆನೆ ಸಮ ವಿಷಮದುರಿ
- ಗಡಲು ಶಿವ ಶಿವಯೆನೆ ನಿಹಾರದ
- ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ |
- ಫಡ ಫಡಿದಿರಾಗಲಿ ಸುರೇ೦ದ್ರನ
- ತುಡುಕು ಹೇಳಾ ಕಾಲವಿದೆಲಾ
- ತೊಡರೆನುತ ಹೊಯ್ದುರುಬಿತಸುರರು ಸುರರ ಸ೦ದಣಿಯ || ೩೨ ||
- ಪದವಿಭಾಗ-ಅರ್ಥ:ಒಡೆದುದು+ ಇಳೆಯೆನೆ(ಭೂಮಿ,) ಸಮ ವಿಷಮದ+ ಉರಿಗಡಲು ಶಿವ ಶಿವಯೆನೆ, ನಿಹಾರದ(ಹೊಳೆಯುವ) ದಡಿಗ(ದೊಡ್ಡದೇಹದ) ದಾನವರು+ ಐದಿ(ಬಂದು) ಕವಿದುದು(ಮುತ್ತಿದರು). ಕೆದರಿ (ಚೆಲ್ಲಾಪಿಲ್ಲಿ ಮಾಡಿ) ಸುರಬಲವ(ದೇವತೆಗಳ ಸೇನೆಯನ್ನು) ಫಡ ಫಡ+ ಇದಿರಾಗಲಿ (ಎದುರುಬಂದು ಹೋರಾಡಲಿ) ಸುರೇ೦ದ್ರನ ತುಡುಕು- ಆಕ್ರಮಿಸು, ಹೇಳು+ ಆ ಕಾಲವು+ ಇದೆಲಾ ತೊಡರೆನುತ(ಕಾಲು ತೊಡರಿತು, ಅಡ್ಡವಾಯಿತು; ಅಡ್ಡಹಾಕು) ಹೊಯ್ದು+ ಉರುಬಿತು(ಉರುಬು- ಮುತ್ತು, ಮೇಲೆ ಬೀಳು ) (ಮುತ್ತಿತು)ಸುರರು ಸುರರ ಸ೦ದಣಿಯ(ಸಮೂಹವನ್ನು)
- ಅರ್ಥ:ಅರ್ಜುನ ಮುಂದುವರಿದು,'ರಾಜನೇ,'ಭೂಮಿ ಒಡೆಯಿತು ಎನ್ನುವಂತೆ, ಸಮ ವಿಷಮದ ಉರಿಗಡಲು ಶಿವ ಶಿವಯೆನ್ನುವಂತೆ, ಹೊಳೆಯುವ ದೊಡ್ಡದೇಹದ ದಾನವರು ಬಂದು) ಮುತ್ತಿದರು. ದೇವಸೇನೆಯನ್ನು ಚೆಲ್ಲಾಪಿಲ್ಲಿ ಮಾಡಿ, ಫಡ ಫಡ! ದೇವತೆಗಳು ಎದುರು ಬಂದು ಹೋರಾಡಲಿ, ಸುರೇ೦ದ್ರನನ್ನು ಆಕ್ರಮಿಸು, ಹೇಳು ಆ ಕಾಲವು ಇದೆಲಾ- ಇದೇಸರಿ, ಅಡ್ಡಹಾಕು ಎಂದು ಹೇಳುತ್ತಾ ಅಸುರರು ಮೇಲೆ ಬಿದ್ದು ದೇವತೆಗಳ ಸಮೂಹವನ್ನು ಮುತ್ತಿತು.' ಎಂದನು
- ಮುರಿದುದಮರರು ಮತ್ತೆ ಬೊಬ್ಬಿರಿ
- ದುರುಬಿದೆನು ಹೆಸರಿಸಿದಸುರರ
- ತರಿದೆನದರೊಳು ಕೋಟಿ ಸ೦ಖ್ಯೆಯನೈ೦ದ್ರ ಬಾಣದಲಿ |
- ಹರಿದುದಮರಾರಿಗಳು ಕೋಟೆಯ
- ಹೊರಗೆ ಸುರಬಲವೌಕಿಬಿಟ್ಟುದು
- ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ || ೩೩ ||
- ಪದವಿಭಾಗ-ಅರ್ಥ:ಮುರಿದುದು+ ಅಮರರು ಮತ್ತೆ ಬೊಬ್ಬಿರಿದು+ ಉರುಬಿದೆನು(ಪರಾಕ್ರಮ ತೋರಿದೆನು ಉರಿ = ಬೆಂಕಿ, ಉರುಬು= ಪರಾಕ್ರಮ ತೊರು, ಮುತ್ತು?= ತರುಬು,ಉರುಬು= ವೇಗ,ಶೀಘ್ರತೆ,ತೀವ್ರತೆ ರಭಸ,ಜೋರು,ಚುರುಕು,ಬಿರುಸು,) ಹೆಸರಿಸಿದ(ಹೆಸರಾಂತ, ಪ್ರಖ್ಯಾತ) ಅಸುರರ ತರಿದೆನು(ಕತ್ತರಿಸಿದೆನು)+ ಅದರೊಳು(ದಾನವರ ಸೇನೆಯಲ್ಲಿ) ಕೋಟಿ ಸ೦ಖ್ಯೆಯನು+ ಇ೦ದ್ರ ಬಾಣದಲಿ(ಐಂದ್ರಾಸ್ತ್ರ), ಹರಿದುದು+ ಅಮರಾರಿಗಳು(ದೇವತೆಗಳ ಶತ್ರುಗಳು) ಕೋಟೆಯ ಹೊರಗೆ ಸುರಬಲವ(ದೇವ ಸೇನೆಯ)+ ಔಕಿ ಬಿಟ್ಟುದು, ತುರುಗುತು(ಸಂದಣಿಸು, ಇಟ್ಟಣಿಸು, ಹೆಚ್ಚಾಗು)+ ಅಮರರು ಖಳನ(ದಾನವನ) ದುರ್ಗದ ತುದಿಯ ತೆನೆಗಳಲಿ.
- ಅರ್ಥ:ಅರ್ಜುನನು ಹೇಳಿದ,'ದೇವತೆಗಳ ಸೇನೆ ಮತ್ತೆ ಬೊಬ್ಬಿರಿದು ದಾನವರನ್ನು ಮುರಿಯಿತು- ನಾಶಮಾಡಿತು. ನಾನು ಪರಾಕ್ರಮ ತೋರಿದೆನು. ಹೆಸರಾಂತ, ಮುಖ್ಯ ದಾನವರನ್ನು ಕತ್ತರಿಸಿದೆನು. ದಾನವರ ಸೇನೆಯಲ್ಲಿ ಇ೦ದ್ರಬಾಣದಿಂದ ಕೋಟಿ ಸ೦ಖ್ಯೆಯ ಭಟರನ್ನು ತರಿದೆನು. ದೇವತೆಗಳ ಶತ್ರುಗಳು ನಾಶವಾದರು. ಕೋಟೆಯ ಹೊರಗೆ ದೇವ ಸೇನೆಯು ಒಟ್ಟಾಗಿ ದಾನವನ ದುರ್ಗದ ತುದಿಯ ತೆನೆಗಳಲ್ಲಿ ಸಂದಣಿಸಿತು- ಸೇರಿತು.
- ಎಲೆಲೆ ಸುರಪತಿಯಾಳು ಕೋಟೆಯ
- ನಿಳಿವುತಿದೆ ನಡೆಯೆನುತ ದಾನವ
- ರುಲಿದುಕವಿದುದು ಖಾತಿಯಲಿ ಮಿಗೆ ಭಾಷೆಗಳಕೊಡುತ |
- ತಲೆಯ ಹೊಯ್ದೆಡೆಗೆಡಹು ಸುರಪನ
- ಲಲನೆಯರ ಮು೦ದಣ ವಿಕಾರಿಗ
- ಳೆಲವೊ ಸರಿಯೋ ಪೂತು ಮಝಯೆನುತೈದಿದರು ಬಟರು || ೩೪ ||
- ಪದವಿಭಾಗ-ಅರ್ಥ:ಎಲೆಲೆ ಸುರಪತಿಯಾಳು(ಇಂದ್ರನ ಭಟರು) ಕೋಟೆಯನು+ ಇಳಿವುತಿದೆ ನಡೆ+ ಯೆನುತ ದಾನವರು+ ಉಲಿದು(ಕೂಗಿ) ಕವಿದುದು(ಮುತ್ತಿದರು) ಖಾತಿಯಲಿ(ಸಿಟ್ಟಿನಿಂದ) ಮಿಗೆ ಭಾಷೆಗಳ ಕೊಡುತ(ಪ್ರತಿಜ್ಞೆ ಮಾಡುತ್ತಾ), ತಲೆಯ ಹೊಯ್ದೆಡೆ(ಹೊಯ್ - ಹೊಡೆ,ಕಡಿ)+ ಗೆ+ ಕೆಡಹು ಸುರಪನ ಲಲನೆಯರ ಮು೦ದಣ ವಿಕಾರಿಗಳ,+ ಎಲವೊ ಸರಿಯೋ ಪೂತು ಮಝ+ ಯೆನುತ+ ಐದಿದರು ಬಟರು.
- ಅರ್ಥ:ಅರ್ಜುನನು ಹೇಳಿದ,'ಎಲೆಲೆ! ಇಂದ್ರನ ಭಟರು ಕೋಟೆಯನ್ನು ಹತ್ತಿ ಒಳಗೆ ಇಳಿಯುತ್ತಿದ್ದಾರೆ; ಮುಂದೆ ನಡೆ ಎನ್ನುತ್ತಾ ದಾನವರು ಕೂಗಿ, ಸಿಟ್ಟಿನಿಂದ ಮುತ್ತಿದರು. ಮತ್ತೆ ತಮತಮಗೇ ಭಾಷೆಗಳಕೊಡುತ್ತಾ, ಮು೦ದಣ ವಿಕಾರಿಗಳ ತಲೆಯನ್ನು ಕಡಿದರೆ ಕೆಡವಿ ಮುಂದೆ ಹೋಗಿ ಇಂದ್ರನ ವನಿತಯರ ಹಿಡಿ; ಮಝ ಪೂತು! ಎಲವೊ ಮುಂದಿನವನೇ ಸರಿಯೋ, ದಾರಿಬಿಡು, ಎನ್ನುತ್ತಾ ದಾನವ ಬಟರು ಬಂದರು.'
- ಏನನೆ೦ಬೆನು ಜೀಯ ಬಳಿಕಾ
- ದಾನವಾಧಿಪರುಬ್ಬೆಯನು ಸು
- ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ |
- ವೈನತೇಯನ ಪಕ್ಷಗತ ಪವ
- ಮಾನ ನ೦ತಿರೆ ಭಟರ ಸುಯ್ಲಿನ
- ಲಾ ನಿರೂಡಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ || ೩೫ ||
- ಪದವಿಭಾಗ-ಅರ್ಥ:ಏನನು+ ಎ೦ಬೆನು ಜೀಯ, ಬಳಿಕ+ ಆ ದಾನವ+ ಅಧಿಪರ (ನಾಯಕರ)+ ಉಬ್ಬೆಯನು ಸುಮ್ಮಾನವನು(ಅಹಂಕಾರ,ಗರ್ವ), ತರಹರಿಸಲು+ ಅಳವೇ(ಸಾಧ್ಯವೇ?) ಖಳರ ಗಲ್ಲಣೆಯ ವೈನತೇಯನ ಪಕ್ಷಗತ ಪವಮಾನನ೦ತೆ+ ಇರೆ(ಗರುಡನ ರೆಕ್ಕೆಯ ಗಾಳಿಯಂತೆ ಇರಲು) ಭಟರ ಸುಯ್ಲಿನಲಿ+ ಆ ನಿರೂಡಿಯ(ಬಿರುಗಾಳಿ ಅನುಭವ ಇಲ್ಲದ ) ಸುರರು ಹಾರಿತು ಸೂಸಿ(ಸೆಲ್ಲಿ - ಚೆದುರಿ) ದೆಸೆದೆಸೆಗೆ
- ಅರ್ಥ:ಏನನ್ನು ಹೇಳಲಿ ಜೀಯ- ರಾಜನೇ,'ಬಳಿಕ ಆ ದಾನವ ನಾಯಕರ ಅಹಂಕಾರ,ಗರ್ವವನ್ನು! ತಡೆದುಕೊಳ್ಳಲು ಸಾಧ್ಯವೇ? ಆ ದುಷ್ಠರ ಆರ್ಭಟವು ಗರುಡನ ರೆಕ್ಕೆಯ ಗಾಳಿಯಂತೆ ಇತ್ತು; ದಾನವ ಭಟರ ಉಸಿರಿನ ಬಿರುಗಾಳಿಯಲ್ಲಿ ಆ ಬಿರುಗಾಳಿಯ ಅನುಭವ ಇಲ್ಲದ ದೇವಗಣ ಚೆದುರಿ ದೆಸೆದೆಸೆಗೆ ಓಡಿ ಹೋದರು,' ಎಂದನು ಅರ್ಜುನ.
- ತೋರು ತೋರಮರೇ೦ದ್ರನಾವೆಡೆ
- ತೋರಿಸೈರಾವತವದೆತ್ತಲು
- ತೋರಿಸುಚ್ಚೈಃಶ್ರವವನೆಲ್ಲಿಹರಗ್ನಿ ಯಮಗಿಮರು |
- ತೋರಿರೈ ಕೈ ಗುಣವನಸುರರ
- ಗಾರುಗೆದರಿದ ಗರ್ವಿತರ ಮೈ
- ದೋರ ಹೇಳಾ ಕಾಣಬಹುದೆನುತುರುಬಿದರು ಭಟರು || ೩೬ ||
- ಪದವಿಭಾಗ-ಅರ್ಥ:ತೋರು ತೋರು + ಅಮರೇ೦ದ್ರನು ಆವೆಡೆ, ತೋರಿಸು+ ಐರಾವತವು+ ಅದು+ ಎತ್ತಲು(ಎಲ್ಲಿದೆ), ತೋರಿಸು+ ಉಚ್ಚೈಃಶ್ರವವನು ಎಲ್ಲಿ+ ಇಹರು(ಇದ್ದಾರೆ)+ ಅಗ್ನಿ ಯಮಗಿಮರು? ತೋರಿರೈ, ಕೈ ಗುಣವನು+ ಅಸುರರ ಗಾರುಗೆದರಿದ(ಗಾರು- ಆವೇಶಯುಕ್ತ, ಗಾರುಗೆಡೆ- ಯದ್ವಾತದ್ವಾ, ದಿಕ್ಕೆಟ್ಟ ) ಗರ್ವಿತರ, ಮೈದೋರ(ಎದುರು ಬರಲು) ಹೇಳಾ- ಕಾಣಬಹುದು+ ಎನುತ+ ಉರುಬಿದರು ಭಟರು.
- ಅರ್ಥ:'ಧಾನವ ಭಟರು ತೋರಿಸು, ತೋರಿಸು ಬೇಗ! ಅಮರೇ೦ದ್ರನು ಯಾವಕಡೆ ಇದ್ದಾನ, ಇಂದ್ರನ ವಾಹನ ಐರಾವತವು ಅದು ಎಲ್ಲಿದೆ ತೋರಿಸು, ಇಂದ್ರನ ಕುದುರೆ ಉಚ್ಚೈಃಶ್ರವವನ್ನು ತೋರಿಸು ಬೇಗ; ಅಗ್ನಿ ಯಮಗಿಮರು ಎಲ್ಲಿದ್ದಾರೆ? ಅಸುರರ ಕೈ ಗುಣವನ್ನು ತೋರಿಸಿರೈಯ್ಯಾ! ದಿಕ್ಕುಗೆಟ್ಟು ಓಡಿದ ಗರ್ವಿತರಿಗೆ ಎದುರು ಬರಲು ಹೇಳಾ, ನಮ್ಮ ಪರಾಕ್ರಮವನ್ನು ಕಾಣಬಹುದು, ಎನ್ನುತ್ತಾ ದಾನವ ಭಟರು ಆಟಾಟೋಪ ಮಾಡಿದರು.
- ಕರೆದರವದಿರು ಕಲ್ಪಮೇಘದ
- ಬಿರುವೊಳೆಯವೊಲು ಸರಳನನಿತುವ
- ತರಿಸಿ ತೆತ್ತಿಸಿದೆನು ತದಗೋಪಾ೦ಗದಲಿ ಶರವ |
- ಅರಿಯರೆನ್ನನು ಶಕ್ರನೆ೦ದೇ
- ತರುಬಿ ದಿ‘ಗ್ಮ೦ಡಲವ ಮುಸುಕಿದ
- ರಿರಿತಕ೦ಜದ ದಿಟ್ಟನಾವನು ಸುರರ ಥಟ್ಟಿನಲಿ || ೩೭ ||
- ಪದವಿಭಾಗ-ಅರ್ಥ: ಕರೆದರು+ ಅವದಿರು ಕಲ್ಪಮೇಘದ ಬಿರುವೊಳೆಯವೊಲು(ಬಿರು ಮಳೆಯಂತೆ) ಸರಳನು+ ಅನಿತುವ(ಅಷ್ಟನ್ನೂ ತರಿಸಿ) ತೆತ್ತಿಸುದೆನು() ತದ+ ಅಗೋಪಾ೦ಗದಲಿ ಶರವ ಅರಿಯರೆನ್ನನು ಶಕ್ರನೆ೦ದೇ ತರುಬಿ ಎಲ್ಲಾ ದಿಕ್ಕು ದಿಕ್ಕುಗಳಿಂದ ಮುಸುಕಿದರಿರಿತಕ೦ಜದ ದಿಟ್ಟನಾವನು ಸುರರ ಥಟ್ಟಿನಲಿ
- ‘’’ಅರ್ಥ’’’:- 'ದಾನವರು ಯುದ್ಧಕ್ಕೆ ಕರೆದರು; ಕಲ್ಪದ ಅಂತ್ಯದಲ್ಲಿ ಸುರಿಯುವ ಬಿರು ಮಳೆಯಂತೆ ಬಾಣಗಳನ್ನು ಅಷ್ಟನ್ನೂ ತರಿಸಿ ಅವರ ದೇಹದ ಅಂಗಾಂಗಳಲ್ಲಿ ಬಾಣಗಳನ್ನು ನೆಟ್ಟೆನು. ನಾನು ಅರ್ಜುನನೆಂದು ಅವರಿಗೆ ತಿಳಿಯದು. ಅವರು ನನ್ನನ್ನು ಇಣದ್ರನೆಂದೇ ಭಾವಿಸಿ ನನ್ನನ್ನು ಅಡ್ಡಗಟ್ಟಿ ಎಲ್ಲಾ ದಿಕ್ಕು ದಿಕ್ಕುಗಳಿಂದ ಮುತ್ತಿದರು. ದೇವೇಂದ್ರನ ಸೇನೆಯಲ್ಲಿ ಘಾಯಕ್ಕೆ ಹೆದರೆದೇ ಇರವ ದಿಟ್ಟನಾದ ಧೈರ್ಯಶಾಲಿ ಯಾರಿದ್ದಾರೆ? ಎಲ್ಲರೂ ದಾನವರಿಗೆ ಅಂಜುವವರೇ!
- ಝಗಝಗಿಪ ಬಾಣಾಗ್ನಿ ಭುಗುಭುಗು
- ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
- ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ |
- ವಿಗಡ ರದ ಲೆಕ್ಕಿಸದೆ ಲೋಟಿಸಿ
- ಮಗುಚಿದರು ಮದ್ಬಾಣ ಮಹಿಮೆಯ
- ನೊಗಡಿಸಿತು ಕಾಲಾಗ್ನಿ ಕಾಲಾ೦ತಕರಿಗಾ ಸಮರ ||೩೮||
- ಪದವಿಭಾಗ:- ಝಗಝಗಿಪ ಬಾಣದ+ ಅಗ್ನಿ ಭುಗುಭುಗುಭುಗಿಲ್ ಎನ್ನಲು ದಿವ್ಯಾಸ್ತ್ರ ತತಿಯಲಿ(ಸಮೂಹದಲ್ಲಿ), (ಬೆಂಕಿಯ) ಹೊಗೆಯ ತೋರಿಸಿದೆನು ಚತುರ್ದಶ ಭುವನ(ಹದಿನಾಲ್ಕು ಲೋಕ) ಭವನದಲಿ; ವಿಗಡರು (ಪರಾಕ್ರಮಿಗಳು) + ಅದ ಲೆಕ್ಕಿಸದೆ ಲೋಟಿಸಿ (ತಿರುಗಿ. ಹೊರಳಿ) ಮಗುಚಿದರು (ಅಡಿಮೇಲಾಗು) ಮದ್ಬಾಣ ಮಹಿಮೆಯನು+ ಒಗಡಿಸಿತು (ಒಗಡು=ಓಕರಿಸು) ಕಾಲಾಗ್ನಿ ಕಾಲಾ೦ತಕರಿಗಎ+ ಆ ಸಮರ
- ಅರ್ಥ: ಅರ್ಜುನ ಹೇಳಿದ,’ಝಗಝಗಿಪ ಬಾಣದ ಅಗ್ನಿಯು ಭುಗುಭುಗು ಭುಗಿಲ್ ಎನ್ನಲು, ದಿವ್ಯಾಸ್ತ್ರಗಳ ಸಮೂಹದಲ್ಲಿ, ಬೆಂಕಿಯ ಹೊಗೆಯನ್ನು ತೋರಿಸಿದೆನು. ಚತುರ್ದಶ ಭವನದಲ್ಲಿ ಪರಾಕ್ರಮಿ ದಾನವರು ಅದನ್ನು ಲೆಕ್ಕಿಸದೆ ನುಗ್ಗಿ ತಿರುಗಿ ಹೊರಳಿ ಅಡಿಮೇಲಾದರು.. ಆ ಸಮರದಲ್ಲಿ ನನ್ನ ಬಾಣ ತನ್ನ ಕಾಲಾಗ್ನಿ ಮಹಿಮೆಯನ್ನು ಕಾಲಾ೦ತಕರಿಗೆ ಹೊರಚೆಲ್ಲಿತು.
- ದೊರೆಗಳೇರಿತು ರಥ ತರ೦ಗಮ
- ಕರಿಗಳಲಿ ಕಾಲಾಳ ಬಿ೦ಕವ
- ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ |
- ಸರಿಗರೆದ್ದುದು ಮೂರುಕೋಟಿಯ
- ಸುರರು ಸರಿಗಳಲಿಟ್ಟರಶನಿಯ
- ಶರದಲೆಡೆಯಲಿ ತರುಬಿದರು ಕೈಸೋತುದೆನಗೆ೦ದ || ೩೯ ||
- ಪದವಿಭಾಗ-ಅರ್ಥ:;ದೊರೆಗಳೇರಿತು (ದೊರೆ= ಉತ್ಸವ, ಒಡೆಯ ) ರಥ ತರ೦ಗಮ(ಕುದುರೆ) ಕರಿಗಳಲಿ(ಆನೆ) ಕಾಲಾಳ ಬಿ೦ಕವ (ಶೌರ್ಯ) ನರಸ ಬಣ್ಣಿಸಲು+ ಅರಿಯೆನು+ ಆಸುರ (ರಾಕ್ಷಸ) ಕರ್ಮ ಕಲಹವಲೆ, ಸರಿಗರು (ಸಮಾನರು, ಜೋಡಿ) + ಎದ್ದುದು ಮೂರುಕೋಟಿಯ+ ಅಸುರರು ಸರಿಗಳಲಿ+ ಇಟ್ಟರು+ ಅಶನಿಯ(ಅಗ್ನಿಯನ್ನು) ಶರದಲಿ(ಆಗ್ನೇಯಾಸ್ತ್ರದಲ್ಲಿ)+ ಎಡೆಯಲಿ ತರುಬಿದರು ಕೈಸೋತುದಉ+ ಎನಗೆ೦ದ
- ಅರ್ಥ: ಅರ್ಜುನ ಹೇಳಿದ,’ ರಥ, ಕುದುರೆ, ಆನೆಗಳ ದಳಗಳಲ್ಲಿ ಯುಧ್ಧದ ಆರ್ಭಟ ಹೆಚ್ಚಿತು; ಕಾಲಾಳುಗಳ ಶೌರ್ಯದ ನರಸವನ್ನು ಬಣ್ಣಿಸಲು ನನಗೆ ತಿಳಿಯದು. ಅದು ರಾಕ್ಷಸರ ಕರ್ಮದ ಕಲಹವಲ್ಲವೇ? ದಾವವರು ಸರಿಸಮಾನರಾಗಿ ಎದ್ದು ಯುದ್ಧಮಾಡಿದರು. ಮೂರುಕೋಟಿಯ ದಾನವರು ಸರಿಮಾನರಾಗಿ ಆಗ್ನೇಯಾಸ್ತ್ರದಲ್ಲಿ ಬೆಂಕಿಯನ್ನು ಇಟ್ಟರು. ಅವರು ಅದೇ ಸಮಯದಲ್ಲಿ ಅಡ್ಡಹಾಕಿ ಹೊಡೆದರು. ನನಗೆ ಬಾಣಗಳನ್ನು ಬಿಟ್ಟು ಬಿಟ್ಟು ಕೈಸೋತುಹೋಯಿತು.’ ಎಂದನು.
- ಲಟಕಟಿಸುವಾ ಮೂರುಕೋಟಿಯ
- ಭಟರು ಕರೆದರು ಕಲುವಳೆಯನು
- ಬ್ಬಾಟೆಯನದನೇನೆ೦ಬೆನವದಿರ ಸಮರ ಸ೦ಭ್ರಮವ |
- ಕುಟಿಲ ಕದನದೊಳೊದಗಿತದು ಕಲು
- ಗುಟಿಗ ಶರ ಶತಕೋಟಿಯಲಿ ಪಡಿ
- ಭಟಬಲವ ಬೆದರಿಸಿದೆ ಚಿತ್ತೈಸೆ೦ದನಾ ಪಾರ್ಥ || ೪೦ ||
- ಪದವಿಭಾಗ-ಅರ್ಥ: ಲಟಕಟಿಸುವ (ಉತ್ಸಾಹ ಭರಿತ)+ ಆ ಮೂರುಕೋಟಿಯ ಭಟರು(ದಾನವರು) ಕರೆದರು ಕಲುವಳೆಯನು (ಕಲ್ಲುಮಳೆಯನ್ನು ಸುರಿಸಿದರು.) ಬ್ಬಾಟೆಯನು+ ಅದನೇನು ಎ೦ಬೆನು+ ಅವದಿರ ಸಮರ ಸ೦ಭ್ರಮವ. (ನನಗೆ) ಕುಟಿಲ ಕದನದಲ್ಲಿ + ಒದಗಿತು+ ಅದು ಕಲುಗುಟಿಗ ಶರ(ಕಲುಗುಟಿಗವೆಂಬ ಅಸ್ತ್ರ ), ಶತಕೋಟಿಯಲಿ ಪಡಿಭಟಬಲವ (ಎದುರು ಸೇನೆಯನ್ನು) ಬೆದರಿಸಿದೆ ಚಿತ್ತೈಸು, ಎ೦ದನು ಆ ಪಾರ್ಥ
- ಅರ್ಥ::ಅರ್ಜುನ ಹೇಳಿದ,’ಉತ್ಸಾಹ ಭರಿತವಾದ ಆ ಮೂರುಕೋಟಿಯ ದಾನವ ಭಟರು ಕರೆದರು ಕಲ್ಲುಮಳೆಯನ್ನು ಸುರಿಸಿದರು. ಯುದ್ಧವನ್ನು, ಅವರ ಸಮರ ಸ೦ಭ್ರಮವನ್ನು ಅದೇನೆಂದು ವರ್ಣಿಸಲಿ. ನನಗೆ ಕುಟಿಲ ಯುದ್ಧದಲ್ಲಿ ಕಲುಗುಟಿಗವೆಂಬ ಅಸ್ತ್ರ ಒದಗಿತು- ಉಪಯೋಗವಾಯಿತು. ಶತಕೋಟಿ ಬಾಣಗಳಲ್ಲಿ ಎದುರು ಸೇನೆಯನ್ನು ಬೆದರಿಸಿದೆನು.’ ಕೇಳು, ಎ೦ದನು
- ತೆರಳದವದಿರು ಹೂಡಿದರು
- ದಳ್ಳುರಿಯ ಧಾರೆಯ ಪಾವಕಾಸ್ತ್ರವ
- ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ |
- ಸರಕುದೆಗೆದುದು ಸತ್ಯ ಲೋಕಕೆ
- ತರತರದ ಜಗವಿ೦ದ್ರ ಸಾರಥಿ
- ಜರಿದು ಜವಗು೦ದಿದುನು ಜಾಡಿಸುವನಲನುಬ್ಬೆಯಲಿ || ೪೧ ||
- ಪದವಿಭಾಗ-ಅರ್ಥ: ತೆರಳದ (ಹೋಗದ)+ ಅವದಿರು(ಆ ದಾನವರು) ಹೂಡಿದರು ದಳ್ಳುರಿಯ ಧಾರೆಯ ಪಾವಕಾಸ್ತ್ರವನು (ಆಗ್ನೇಯಾಸ್ತ್ರ)+ ಅರಸ, ಹೊಗೆದುದು ಭುವನ(ಆಕಾಶ) ಹೊಯ್ದುದು (ಸುರಿಯಿತು – ಆವರಿಸಿತು) ಝಳ ಜಗತ್ರಯವ (ಮೂರು ಲೋಕವನ್ನೂ ಬೆ<ಕಿಯ ಘಳ ಆವರಿಸಿತು) , ಸರಕು+ ದೆ+ ತೆಗೆದುದು ಸತ್ಯ ಲೋಕಕೆ ತರತರದ ಜಗವ+ ಇ೦ದ್ರ ಸಾರಥಿ ಜರಿದು (ಕುಗ್ಗಿ), ಜವಗು೦ದಿದುನು (ಕುಸಿದು, ಚುರುಕಿಲ್ಲದಾದನು) ಜಾಡಿಸುವ (ಬಡಿಯುವ) + ಅನಲನ+ ಉಬ್ಬೆಯಲಿ. (ಶಾಖದ ಗೂಡು).
- ಅರ್ಥ: ರಾಜನೇ,’ಓಡಿಹೊಗದ ಆ ದಾನವರು ದಳ್ಳುರಿಯ ಧಾರೆಯ ಆಗ್ನೇಯಾಸ್ತ್ರವನ್ನು ಹೂಡಿದರು.. ಅದು ಹೊಗೆದು ಆಕಾಶವನ್ನು ಆವರಿಸಿತು. ಅದg Àಬೆ<ಕಿಯ ಝಳ ಮೂರು ಲೋಕವನ್ನೂ ಆವರಿಸಿತು. ಸತ್ಯ ಲೋಕಕ್ಕೆ ಅದರ ಬೆಂಕಿ ತಾಗಿತು. ತರತರ ಬೇರೆ ಬೇರೆ ಜಗತ್ತುಗಳನ್ನೂ ಅದರ ಬೆಂಕಿ ತಾಗಿತು. ಇ೦ದ್ರನ ಸಾರಥಿ ಮಾತಲಿಯು ಕುಗ್ಗಿ, ಬಡಿಯುವ ಬೆಂಕಿಯ ಶಾಖದಲ್ಲಿ ಕುಸಿದು, ಚುರುಕಿಲ್ಲದಾದನು.
- ಸಾರಥಿಯ ಸ೦ತೈಸಿ ತೇರಿನ
- ವರುವ೦ಗಳ ನೇಣನೋಜೆಯೊ
- ಳೋರಣಿಸಿ ಸ೦ವರಿಸಿ ರಥವನು ವರುಣ ಬಾಣದಲಿ |
- ವಾರಿಧಿಯ ಕೆದರಿದೆನು ಕೆಟ್ಟೆವು
- ಭೂರಿಗಿಡಿಗಳು ಮಾರುತನ ಕೈ
- ವಾರ ಕು೦ದಿದುದಸುರ ಮುಖದನಲಾಸ್ತ್ರ ಪರಿಹರಿಸಿ || ೪೨ ||
- ಪದವಿಭಾಗ-ಅರ್ಥ: ಸಾರಥಿಯ ಸ೦ತೈಸಿ (ಉಪಚರಿಸಿ ಸಮಾಧಾನ ಪಡಿಸಿ) ತೇರಿನ (ರಥದ) ವರುವಗಳನ್ನು(ವಾರುವ - ಕುದುರೆ) ನೇಣನ್ನೂ ಓಜೆಯೊಳು (ಕ್ರಮಬದ್ಧವಾಗಿ)+ ಓರಣಿಸಿ ಸ೦ವರಿಸಿ ರಥವನು, ವರುಣ ಬಾಣದಲಿ ವಾರಿಧಿಯ (ಸಮುದ್ರ- ನೀರು) ಕೆದರಿದೆನು (ತೊಟ್ಟೆನು, ಕೈಗೊಂದೆನು). ಕೆಟ್ಟವು ಭೂರಿಗಿಡಿಗಳು(ದೊಡ್ಡ ಮರಗಳು) ಮಾರುತನ ಕೈವಾರ, ಕು೦ದಿದುದು+ ಅಸುರ ಮುಖದ+ ಅನಲಾಸ್ತ್ರ ಪರಿಹರಿಸಿ.
- ಅರ್ಥ: ಅರ್ಜುನ ಧರ್ಮಜನಿಗೆ ಹೇಳಿದ,’ಸಾರಥಿಯನ್ನು ಉಪಚರಿಸಿ ಸ೦ತೈಸಿ, ಸಮಾಧಾನ ಪಡಿಸಿ, ರಥದ ಕುದುರೆಗಳ ನೇಣನ್ನು ಕ್ರಮಬದ್ಧವಾಗಿ ಸರಿಪಡಿಸಿ ರಥವನ್ನು ಸಿದ್ಧಗೊಳಿಸಿ, ವರುಣಾಸ ್ತ್ರತೊಟ್ಟೆನು; ಅದರಿಂದ ನೀರನ್ನು ಸುರಿಸಿ ಹರಡಿದೆನು. ಮಾರುತನು ಕೈವಾಡದಿಂದ ದೊಡ್ಡ ಗಾಳಿ ಮಳೆಗೆ ದೊಡ್ಡ£ಮರಗಳೂ ಸಹ ಬಿದ್ದವು; ವರುಣ ಅಸ್ತ್ರವುÀ ಅನಲಾಸ್ತ್ರವನ್ನು ಪರಿಹರಿಸಿದಾಗ ದಾನವರ ಮುಖಗಳು ಕು೦ದಿದವು- ಬಾಡಿದವು.
- ಅವರು ಮಗುಳೆಚ್ಚರು ಶಿಲೀಮುಖ
- ದವಯವದೊಳುಬ್ಬೆದ್ದು ಗಿರಿಗಳು
- ಕವಿಯೆ ಕಡಿದೊಟ್ಟಿದನು ಭಾರಿಯ ವಜ್ರ ಬಾಣದಲಿ |
- ಅವರು ತಿಮಿರಾಸ್ತ್ರದಲಿ ಕೆತ್ತರು
- ಭುವನ ನಯನದ ಕದನ ವಾಗಳೆ
- ರವಿಯ ಶರದಲಿ ಮುರಿದೆನಗುಳಿಯನರಸ ಕೇಳೆ೦ದ || ೪೩ ||
- ಪದವಿಭಾಗ-ಅರ್ಥ: ಅವರು ಮಗುಳೆ (ದಾನವರು ಪುನಃ) + ಎಚ್ಚರು(ಹೊಡೆದರು) ಶಿಲೀಮುಖದ+ ಅವಯವದೊಳು(ಶಿಲೆಯ ಅಸ್ತ್ರದಲ್ಲಿ)+ ಉಬ್ಬೆದ್ದು ಗಿರಿಗಳು ಕವಿಯೆ(ಆವರಿಸಲು) ಕಡಿದು+ ಒಟ್ಟಿದನು (ರಾಶಿ ಹಾಕಿದೆನು) ಭಾರಿಯ ವಜ್ರ ಬಾಣದಲಿ(ವಜ್ರಾಸ್ತ್ರದಿಂದ ), |ಅವರು ತಿಮಿರಾಸ್ತ್ರದಲಿ ಕೆತ್ತರು(ಹೊಡೆದರು) ಭುವನ ನಯನದ(ಕಣ್ಣು) ಕದನವಾಗಳೆ ರವಿಯ ಶರದಲಿ(ರವಿಯ ಅಸ್ತ್ರದಲ್ಲಿ) ಮುರಿದೆನು+, ಅಗುಳಿಯನು (ಅಡ್ಡಬಂದ ತೊಡಕನ್ನು)+ ಅರಸ ಕೇಳೆ೦ದ
- ಅರ್ಥ:ಅರ್ಜುನ ಮುಂದುವರಿದು ಹೇಳಿದ,’ದಾನವರು ಪುನಃ ಶಿಲೆಯ-ಬೆಟ್ಟದ ಅಸ್ತ್ರದಲ್ಲಿ ಹೊಡೆದರು ಶಿಲೀಮುಖದ ಬಾಣದ ಅವಯವದಿಂದ ಉಬ್ಬೆದ್ದು ಗಿರಿಗಳು ಕವಿದು ಆವರಿಸಲು, ಅದನ್ನು ಆ ಅಸ್ತ್ರವನ್ನು ವಜ್ರಾಸ್ತ್ರ ಪ್ರಯೋಗಿಸಿ, ಶಿಲೆಗಳನ್ನು ಕಡಿದು ಒಟ್ಟಿದನು. ಅವರು ಕತ್ತಲೆ ಆವರಿಸುವ ತಿಮಿರಾಸ್ತ್ರದಲ್ಲಿ ನನ್ನನ್ನು ಹೊಡೆದರು. ಭುವನ ಲೋಕದ ನಯನದ ಕದನವು ಅದು; ಅದನ್ನು ರವಿಯ ಅಸ್ತ್ರದಲ್ಲಿ ಅಡ್ಡಬಂದ ತೊಡಕನ್ನು ಮುರಿದೆನು.’ ಅರಸನೇ ಕೇಳು ಎಂದ.
- ಬಳಿಕ ಸುರಿದರು ಹಾವುಗಳ ಹೆ
- ಮ್ಮಳೆಯನಲ್ಲಿಗೆ ಗರುಡ ಬಾಣವ
- ಸುಳಿಸಿದೆನು ಬಳಿಕಾದುದರ್ಧ ಗ್ರಾಸವಾ ಶರಕೆ |
- ಉಲಿದು ದನುಜರು ಮತ್ತೆ ಕೆ೦ಡದ
- ಮಳೆಯ ಕರೆದರು ಮರಳಿ ಜಲಧಿಯ
- ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ || ೪೪ ||
- ಪದವಿಭಾಗ-ಅರ್ಥ: ಬಳಿಕ ಸುರಿದರು ಹಾವುಗಳ, ಹೆಮ್ಮಳೆಯನು (ಹಿರಿದು+ ಮಳೆ; ದೊಡ್ಡ ಮಳೆ)+ ಅಲ್ಲಿಗೆ ಗರುಡ ಬಾಣವ ಸುಳಿಸಿದೆನು , ಬಳಿಕ+ ಆದುದು + ಅರ್ಧ ಗ್ರಾಸವು (ಊಟ)+ ಆ ಶರಕೆ (ಗರಯಡಾಸ್ತ್ರಕ್ಕೆ) ಉಲಿದು ದನುಜರು ಮತ್ತೆ ಕೆ೦ಡದ ಮಳೆಯ ಕರೆದರು, ಮರಳಿ ಜಲಧಿಯ ತುಳುಕಿದೆನು (ಕೈಹಾಕಿದೆನು), ತೊಡಕಾಯ್ತು ಸಾರಥಿ ಮತ್ತೆ ಬಸವಳಿದ (ಆಯಾಸಗೊಂಡ).
- ಅರ್ಥ: ಅರ್ಜುನನು ಹೇಳಿದ,’ಬಳಿಕ ದಾನವರು ಅಸ್ತ್ರದಲ್ಲಿ ಹಾವುಗಳ ಹೆಮ್ಮಳೆಯನ್ನು ಸುರಿದರು. ನಾನು ಅಲ್ಲಿಗೆ ಗರುಡಅಸ್ತ್ರದ ಬಾಣವನ್ನು ಬಿಟ್ಟು ಪರಿಹರಿಸಿದೆನು, ಬಳಿಕ ಅದು ಗರುಡನಿಗೆ ಅರ್ಧ ಗ್ರಾಸವಾಯಿತು. ಆ ಗರುಡ ಶರಕ್ಕೆ ಆರ್ಭಟಿಸಿ, ದಾನವರು ಮತ್ತೆ ಕೆ೦ಡದ ಮಳೆಯನ್ನು ಕರೆದರು. ನಾನು ಪುನಹ ಜಲಧಿಯ ಅಸ್ತ್ರವನ್ನು ಉಪಯೋಗಿಸಿದೆನು, ಆದರೆ ಯುದ್ಧದಲ್ಲಿ ತೊಡಕು ತಲೆದೋರಿತು. ಸಾರಥಿಯು ಮತ್ತೆ ಆಯಾಸಗೊಂಡನು.
- ಸಾರಥಿತ್ವದ ಕೈಮೆ ತತ್ಪ್ರತಿ
- ಕಾರ ಶರ ಸ೦ಧಾನ ವೆರಡರ
- ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು |
- ಧೀರರಾತ್ಮಸ್ತುತಿಗೆ ನಾಚದ
- ರಾರು ಜೀಯ ಮಹಾಹವದ ವಿ
- ಸ್ತ್ರಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆ೦ದ || ೪೫ ||
- ಪದವಿಭಾಗ-ಅರ್ಥ: ಸಾರಥಿತ್ವದ ಕೈಮೆ (ಕೈಚಳಕ) ತತ್ಪ್ರತಿಕಾರ(ತತ್+ ಪ್ರತಿಕಾರ) ಶರ ಸ೦ಧಾನವು+ ಎರಡರ ಭಾರ ನನ್ನ ಮೇಲೆ ಬಿದ್ದುದು; ಮೇಲೆ ದನುಜರ ಮೂರು ಕೋಟಿಯದು ಧೀರರಉ+ ಆತ್ಮಸ್ತುತಿಗೆ ನಾಚದರು+ ಆರು(ಯಾರು) ಜೀಯ, ಮಹಾಹವದ (ಆಹವ= ಯುದ್ಧ) ವಿಸ್ತಾರವನು ಮಾತಲಿಯ ಕೈಯಲಿ(ಮಾತಲಿಯಿಂದ ) ಚಿತ್ತವಿಸಿ (ಕೇಳಿ)+ ಯೆ+ ಎ೦ದ.
- ಅರ್ಥ: ಅರ್ಜುನನು ಮುಂದುವರಿದು,’ಸಾರಥಿತ್ವದ ಕೈಚಳಕ) ಮತ್ತು ದಾನವರ ಯುದ್ಧಕ್ಕೆ ತಕ್ಕ ಪ್ರತಿಕಾರದ ಶರ ಸ೦ಧಾನವು, ಈ ಎರಡರ ಭಾರ ನನ್ನ ಮೇಲೆ ಬಿದ್ದಿತು; ಇದರ ಮೇಲೆ ಮೇಲೆ ದಾನವರ ಮೂರು ಕೋಟಿಯ ಸೇನೆ ಇತ್ತು. ಧೀರರು ಆತ್ಮಸ್ತುತಿಗೆ ನಾಚದವರು ಯಾರು ಜೀಯ? ನಾನು ನನ್ನ, ಪರಾಕ್ರಮವನ್ನು ವರ್ಣಿಸಲಾರೆ, ನನಗೆ ನನ್ನನ್ನೇ ಹೊಗಳಿಕೊಳ್ಳಲು ನಾಚಿಕೆ. ಈ ಮುಂದಿನ ಮಹಾಯುದ್ಧದ ವಿಸ್ತಾರವನ್ನು ಮಾತಲಿಯಿಂದ ಕೇಳಿ, ನಾನು ಅದನ್ನು ಸಂಕ್ಷೇಪವಾಗಿ ಹೇಳುವೆನು’ ಎ೦ದ.
- ತೊಡಚಿದೆನು ಬೊಮ್ಮಾಸ್ತ್ರವನು
- ಹುರಿಯೊಡೆದುದಸುರರು ಮಲೆತವರನಿ
- ಕ್ಕಡಿಯ ಮಾಡಿತು ಬ೦ದುದಳಿವು ನಿವಾತ ಕವಚರಿಗೆ |
- ಕಡುಹಿನಿ೦ದಾಗ್ನೇಯ ವಾರುಣ
- ದಡಬಳಿಗರನು ಬಾಚಿದವು ಬರ
- ಸಿಡಿಲ ಸೆರೆ ಬಿಟ್ಟ೦ತೆ ಕಳಚಿದವಸುರ ಬಲದಸುವ || ೪೬ ||
- ಪದವಿಭಾಗ-ಅರ್ಥ: ತೊಡಚಿದನು (ಜೋಡಿಸು, ಸೇರಿಸು) ಬೊಮ್ಮಾಸ್ತ್ರವನು (ಬ್ರಹ್ಮಾಸ್ತ್ರವನು) ಹುರಿಯೊಡೆದುದು (ಧೈರ್ಯ, ಶಕ್ತಿ)+ ಅಸುರರು ಮಲೆತವರನು (ವಿರೋಧಿಸಿದವರನ್ನು)+ ಇಕ್ಕಡಿಯ (ಎರಡು ತುಂಡು) ಮಾಡಿತು ಬ೦ದುದು+ ಅಳಿವು (ಸಾವು) ನಿವಾತ ಕವಚರಿಗೆ ಕಡುಹಿನಿ೦ದ (ಪರಾಕ್ರಮದಿಂದ)+ ಆಗ್ನೇಯ, ವಾರುಣದ ಡಬಳಿಗರನು(ಡವಳ- ಡವಲ-ಡವಲಿಗ- ನೀತಿ ತಪ್ಪ್ಪಿದವ) ಬಾಚಿದವು(ದೋಚು, ಸೆಳೆದುಕೊಂಡವು) ಬರಸಿಡಿಲ ಸೆರೆ ಬಿಟ್ಟ೦ತೆ ಕಳಚಿದವು+ ಅಸುರ ಬಲದ+ ಅಸುವ ಪ್ರಾಣವನ್ನು.
- ಅರ್ಥ:ಧರ್ಮಜನನ್ನು ಕುರಿತು ಅರ್ಜುನನು ಹೇಳಿದನು,’ ನಾನು ಬ್ರಹ್ಮಾಸ್ತ್ರವನ್ನು ಹೂಡಿ ಬಿಟ್ಟೆನು. ಅದರಿಂದ ದಾನವರ ಶಕ್ತಿ ಕುಂದಿತು. ವಿರೋಧಿಸಿದ ದಾನವರನ್ನು ಬ್ರಹ್ಮಾಸ್ತ್ರ ಎರಡು ತುಂಡು ಮಾಡಿತು. ನಿವಾತ ಕವಚರಿಗೆ ಸಾವು ಬ೦ದಿತು. ನಾನು ಪರಾಕ್ರಮದಿಂದ ಪ್ರಯೋಗಿಸಿದ ಆಗ್ನೇಯ, ವಾರುಣದ ಅಸ್ತ್ರಗಳು ಬರಸಿಡಿಲ ಸೆರೆ ಬಿಟ್ಟಹಾಗೆ ನೀತಿ ತಪ್ಪ್ಪಿದ ದಾನವರ ಸೇನೆಯ ಭಟರ ಪ್ರಾಣಗಳನ್ನು ತೆಗೆದವು.
- ಕಾಳ ದನುಜರು ಮೂರು ಕೋಟಿಯೊ
- ಳಾಳುಳಿಯದಕ್ಕಾಡಿತಮರರ
- ಸೂಳೆಯರ ಸೆರೆ ಬಿಟ್ಟುದರಿ ನಗರೋಪಕ೦ಠದಲಿ |
- ಧೂಳಿಪಟವಾಯಿತು ಹಿರಣ್ಯ ಪು
- ರಾಲಯದ ನೆಲೆಗಟ್ಟು ಮರಳಿದು
- ಕಾಲಕೇಯರ ಪುರಕೆ ಬ೦ದನು ರಾಯ ಕೇಳೆ೦ದ || ೪೭ ||
- ಪದವಿಭಾಗ-ಅರ್ಥ:ಕಾಳ ದನುಜರು ಮೂರು ಕೋಟಿಯೊಳು+ ಆಳು(ಒಬ್ಬ)+ ಉಳಿಯದು+ ಅಕ್ಕಾಡಿತು(ಅಕ್ಕಾಡು= ನಾಶ)+ ಅಮರರ ಸೂಳೆಯರ (ದೇವಕನ್ಯೆಯರ) ಸೆರೆ ಬಿಟ್ಟುದು+ ಅರಿ ನಗರ+ ಉಪಕ೦ಠದಲಿ(ಬಾಗಿಲಲ್ಲಿ) ಧೂಳಿಪಟವಾಯಿತು(ನಾಶ); ಹಿರಣ್ಯಪುರ+ ಆಲಯದ(ಅರಮನೆ) ನೆಲೆಗಟ್ಟು(ವಸತಿ?- ಭೂಮಿ) ಮರಳಿದು(ಹಿಂದಕ್ಕೆ ಪಡೆಯಲಾಯಿತು); ಕಾಲಕೇಯರ ಪುರಕೆ (ಅರ್ಜುನ) ಬ೦ದನು ರಾಯ ಕೇಳೆ೦ದ.
- ಅರ್ಥ:ಅರ್ಜುನನು ಹೇಳಿದ, 'ಮೂರು ಕೋಟಿ ದುಷ್ಟ ದಾನವರಲ್ಲಿ ಒಬ್ಬನೂ ಉಳಿಯಲಿಲ್ಲ; ಎಲ್ಲರೂ ನಾಶವಾದರು, ಶತ್ರುಗಳ ನಗರದ ಬಾಗಿಲಲ್ಲಿ ಧೂಳಿಪಟವಾಯಿತು. ದೇವಲೋಕದ ದೇವಕನ್ಯೆಯರ ಸೆರೆವಾಸ ಕೊನೆಗೊಂಡಿತು. ಹಿಂದೆ ಇಂದ್ರನ ನಗರ ಅಮರಾವತಿಯಾಗಿದ್ದ ಹಿರಣ್ಯಪುರದ ಅರಮನೆ ಪ್ರದೇಶ ದೇವತೆಗಳಿಗೆ ಮರಳಿ ದೊರಕಿತು.' ನಂತರ ನಾನು ಕಾಲಕೇಯರ ಪುರಕೆ ಬ೦ದೆನು. ಧರ್ಮರಾಯನೇ ಕೇಳು ಎ೦ದ.
ಕಾಲಕೇಯ ದಾನವರೊದನೆ ಯುದ್ಧ ಮತ್ತು ಅವರ ಸಂಹಾರ[ಸಂಪಾದಿಸಿ]
- ಕೆರಳಿತಲ್ಲಿ ನಿವಾತಕವಚರ
- ಮರಣ ವಾರ್ತೆಯ ಕೇಳಿದಸುರರು
- ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ |
- ಅರಸ ಚಿತ್ತೈಸವದಿರಲಿ ಪರಿ
- ಪರಿಯ ಮಾಯಾರಚನೆ ರ೦ಜಿಸಿ
- ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ || ೪೮ ||
- ಪದವಿಭಾಗ-ಅರ್ಥ:ಕೆರಳಿತು (ಕೋಪುಟಾಯಿತು)+ ಅಲ್ಲಿ ನಿವಾತಕವಚರ ಮರಣ ವಾರ್ತೆಯ ಕೇಳಿದ+ ಅಸುರರು ಪುರದ ಬಾಹೆಯೊಳು+ ಅಡ್ಡಹಾಯ್ದರು ತರುಬಿದರು ರಥವ, ಅರಸ ಚಿತ್ತೈಸು+ ಅವದಿರಲಿ ಪರಿಪರಿಯ ಮಾಯಾರಚನೆ ರ೦ಜಿಸಿತು(ಅಚ್ಚರಿಪಡಿಸಿ ಸಂತೋಷಗೊಳಿಸಿತು)+ ಅರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ.
- ಅರ್ಥ:ಅರ್ಜುನನು ಧರ್ಮಜನನ್ನು ಕುರಿತು,'ನಿವಾತಕವಚರ ಮರಣ ವಾರ್ತೆಯನ್ನು ಕೇಳಿದ ದಾನವರಿಗೆ ಕೋಪವುಟಾಯಿತು. ಅವರು ತಮ್ಮ ನಗರದ ಹೊರಭಾಗದಲ್ಲಿ ನಮ್ಮ ರಥವನ್ನು ಮುತ್ತಿದರು; ಅರಸನೇ ಚಿತ್ತೈಸು- ಕೇಳು ಅವರಲ್ಲಿ ಪರಿಪರಿಯ- ನಾನಾಬಗೆಯ ಮಾಯಾರಚನೆಯು ನಮ್ಮನ್ನು ರ೦ಜಿಸಿತು. ಅವರ ಅ ಮಾಯಾಯುದ್ಧವು ನಿವಾತಕವಚರ ಮಾಯುದ್ಧಕ್ಕಿಂತ ಎರಡು ಸಾವಿರ ಪ್ರಮಾಣಕ್ಕೂ ಮಿಗಿಲು- ಹೆಚ್ಚು.'ಎಂದನು.
- ಬೀಸಿದರು ಬಿರುಗಾಳಿಯಾಗಿ ಮ
- ಹಾ ಸಮುದ್ರದ ನೂಕುತೆರೆಯಲಿ
- ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ |
- ಆಸುರದ ತಮವಾಗಿ ರವಿಶತ
- ದಾಸರಿನ ಬಿಸಿಲಾಗಿ ಮಾಯಾ
- ಬ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆ೦ದ || ೪೯ ||
- ಪದವಿಭಾಗ-ಅರ್ಥ:ಬೀಸಿದರು ಬಿರುಗಾಳಿಯಾಗಿ, ಮಹಾ ಸಮುದ್ರದ ನೂಕು ತೆರೆಯಲಿ ಬೇಸರಿಸಿದರು(ನೋಯಿಸಿ), ಹರಿದರು(ಸಂಚರಿಸಿದರು)+ ಅವನಿಯಲಿ(ಭೂಮಿ)+ ಅಗ್ನಿ ರೂಪಾಗಿ, ಆಸುರದ(ಭಯಂಕರ, ಬೇಸರ, ರಭಸ ), ತಮವಾಗಿ(ಕತ್ತಲು), ರವಿಶತದ+ ಅಸರಿನ ಬಿಸಿಲಾಗಿ, ಮಾಯಾಬ್ಯಾಸಿಗಳು ಮೋಹಿಸುವರು+ ಅದನೇ ಬಣ್ಣಿಸುವೆನು+ ಎ೦ದ.
- ಅರ್ಥ:ಅವನು ಮುಂದುವರಿದು,'ಆ ಕಾಲಕೇಯನ ಕಡೆಯ ದಾನವರು ಬಿರುಗಾಳಿಯಾಗಿ ಬೀಸಿದರು; ಮಹಾ ಸಮುದ್ರದ ನೂಕುವ ತೆರೆಯಲ್ಲಿ ನಮ್ಮನ್ನು ನೋಯಿಸಿದರು. ಅವರು ಅಗ್ನಿ ರೂಪನ್ನು ತಾಳಿ ಭೂಮಿಯಲ್ಲಿ ಸಂಚರಿಸಿದರು ಭಯಂಕರ ಕತ್ತಲಾಗಿ, ನೂರುರವಿಗಳ ಬಾಯಾರುವ ಕಷ್ಟದ ಬಿಸಿಲಾಗಿ ಹಿಂಸಿಸಿದರು. ಅವರು ಮಾಯಾಬ್ಯಾಸಿಗಳು ಹೀಗೆ ಮೋಹಿಸುವರು- ಮರುಳುಮಾಡುವರು; ಅದನ್ನು ಏನೆಂದು ವರ್ಣಿಸಲಿ,'ಎ೦ದ.
- ಘೋರತರವದು ಬಳಿಕ ದುಷ್ಪ್ರತಿ
- ಕಾರ ವಿತರರಿಗಿ೦ದು ಮೌಳಿಯ
- ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾ೦ಗದಲಿ |
- ಬಾರಿಸಿದು ದಾವ೦ಗದಲಿ ಮಾ
- ಯಾ ರಚನೆಯಾ ವಿಧದಲಾ ಮಾ
- ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ || ೫೦ ||
- ಪದವಿಭಾಗ-ಅರ್ಥ:ಘೋರತರವು+ ಅದು ಬಳಿಕ ದುಷ್ಪ್ರತಿಕಾರವು+ (ಇತರರಿಗೆ-)ದುಷ್ಪ+ ಪ್ರತಿಕಾರ+ ವಿತರರಿಗೆ(ವಿತರಿಸು- ಒಳಸಂಚು ಮಾಡು)+ ಇ೦ದುಮೌಳಿಯ (ಶಿವ) ಸಾರತರ ಕೃಪೆಯಾಯ್ತಲೇ, ಸರಹಸ್ಯ ಸಾ೦ಗದಲಿ ಬಾರಿಸಿದುದು(ಹೊಡೆಯಿತು)+ ಆವ+ ಅ೦ಗದಲಿ(ರೀತಿಯಲ್ಲಿ) ಮಾಯಾ ರಚನೆಯ+ ಆ ವಿಧದಲಿ+ ಆ ಮಾಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ (ಕುಶಲ ವಿದ್ಯೆ ) ಖಳರ.
- ಅರ್ಥ:ಅರ್ಜುನನು,'ಆ ಯುದ್ಧವು ಘೋರತರವಾಗಿತ್ತು. ಆ ಬಳಿಕ ಅವರ ಮಾಯಾಯುದ್ಧಕ್ಕೆ ಸಂಚುಮಾಡುವ ದುಷ್ಪರಿಗೆ ಪ್ರತಿಕಾರಕ್ಕೆ, ಬಹಳ ರಹಸ್ಯದಲ್ಲಿ ಸಾ೦ಗವಾಗಿ ಶಿವನ ಶ್ರೇಷ್ಠ ಕೃಪೆಯಾಗಿತ್ತಲ್ಲವೇ, ಅದು ಅವರ ಮಾಯೆಯನ್ನು ಹೊಡೆಯಿತು. ಅವರು ಯಾವ ಕ್ರಮದಲ್ಲಿ ಮಾಯಾರಚನೆಯನ್ನು ಮಾಡಿದರೋ ಅದೇ- ಆ ವಿಧದಲ್ಲಿ ಆ ಖಳರ ಮಾಯಾ ರಚನೆಯನ್ನು ಕುಶಲ ವಿದ್ಯೆಯಿಂದ ಸೀಳಿ ಬಿಸುಟೆನು,'ಎಂದ.
- ಮುರಿದುದಸುರರ ಮಾಯೆ ಕಾಹಿನೊ
- ಳೆರೆದ ರಸದೊವೊಲವರು ನಿಜದಲಿ
- ತರುಬಿ ನಿ೦ದರು ತೂಳಿದರು ಗಜ ಹಯ ರಥೌಘದಲಿ |
- ತರಿದವುಗಿದವು ತು೦ಡಿಸಿದವಗಿ
- ದೆರಗಿದವು ಸೀಳಿದವು ಕೊಯ್ದವು
- ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿ ವ್ರಜವ || ೫೧ ||
- ಪದವಿಭಾಗ-ಅರ್ಥ:ಮುರಿದುದು+ ಅಸುರರ ಮಾಯೆ ಕಾಹಿನೊಳು+ ಎರೆದ(ಹಾಕಿದ) ರಸದೊವೊಲು+ ಅವರು ನಿಜದಲಿ ತರುಬಿನಿ೦ದರು(ತರುಬು- ಅಡ್ಡಹಾಕಿ ಮುತ್ತು) ತೂಳಿದರು (ನುಗ್ಗಿದರು) ಗಜ ಹಯ ರಥ+ ಓಘದಲಿ(ಪ್ರವಾಹ, ನೆರೆ ೨ ರಭಸ, ಸಮೂಹ, ಗುಂಪು) ತರಿದವು(ಕತ್ತರಿಸಿದವು)+ ಉಗಿದವು(ಎಳೆದವು), ತು೦ಡಿಸಿದವು+ ಅಗಿದು (ಚುಚ್ಚಿ, ನೆಲವನ್ನು ಹಾರೆಯಿಂದ ಅಗಿ, ಚುಚ್ಚಿ ಗುಂಡಿತೋಡು)+ ಎರಗಿದವು(ಮೇಲೆಬಿದ್ದವು, ಧಾಳಿಮಾಡಿದವು), ಸೀಳಿದವು, ಕೊಯ್ದವು, ಕೊರೆದು, ಕುಪ್ಪಳಿಸಿದವು, ನಿಮಿಷಕೆ ಶರವು+ ಅರಿವ್ರಜವ (ಶತ್ರು ಸಮೂಹ, ಗುಂಪು, ಮಂದೆ,).
- ಅರ್ಥ: ಅರ್ಜುನ ಮುಂದುವರಿದು,'ಬಿಸಿಯಾಗಿ ಕಾದಿರುವ ಕಾಹಿಯ/ಕಾವಲಿಯ ಮೇಲೆ ಹಾಕಿದ ರಸದಂತೆ ದಾನವರ ಮಾಯೆ ಮರಿದು ಮಾಯವಾಯಿತು. ಅವರು ತಮ್ಮ ಮಾಯಾರೂಪ ಬಿಟ್ಟು ನಿಜ ರೂಪದಲ್ಲಿ ನಮ್ಮನ್ನು ಅಡ್ಡಹಾಕಿ ಯುದ್ಧಕ್ಕೆ ಎದುರಿಸಿ ನಿಂತರು,- ನುಗ್ಗಿದರು. ಆಗ ನಮ್ಮ ಅಸ್ತ್ರ- ಬಾಣ, ಶತ್ರು ಸಮೂಹವನ್ನು ನಿಮಿಷದಲ್ಲಿ , ಆನೆ, ಕುದುರೆ, ರಥ ಇವುಗಳ ಪ್ರವಾಹದಲ್ಲಿ ಬಂದವುಗಳನ್ನು ಕತ್ತರಿಸಿದವು ಉಗಿದವು, ತು೦ಡರಿಸಿದವು. ಹಲ್ಲಿನಿಂದ ಕಚ್ಚಿತಿಂದು ಮೇಲೆಬಿದ್ದವು, ಸೀಳಿದವು, ಕೊಯ್ದವು, ಕೊರೆದು, ಕುಪ್ಪಳಿಸಿದವು.
- ಜೀಯ ವಿಗಡ ಬ್ರಹ್ಮ ಶರವಿ೦
- ದ್ರಾಯುಧದ ಮು೦ಗುಡಿಯಲಿರಿದುದು
- ಮಾಯಾಕಾರರ ಮೋಹರವನುಬ್ಬಟೆ ಚತುರ್ಬಲವ |
- ಹೋಯಿತಸುರರ ಸೇನೆ ಸರಿದುದು
- ನಾಯಕರು ನಾನಾ ದಿಗ೦ತ
- ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆ೦ದ || ೫೨ ||
- ಪದವಿಭಾಗ-ಅರ್ಥ:ಜೀಯ ವಿಗಡ ಬ್ರಹ್ಮ ಶರವು+ ಇ೦ದ್ರಾಯುಧದ(ಐಂದ್ರಾಸ್ತ್ರ) ಮು೦ಗುಡಿಯಲಿ+ ಇರಿದುದು ಮಾಯಾಕಾರರ ಮೋಹರವನು+ ಉಬ್ಬಟೆ ಚತುರ್ಬಲವ ಹೋಯಿತು+ ಅಸುರರ ಸೇನೆ ಸರಿದುದು ನಾಯಕರು ನಾನಾ ದಿಗ೦ತಸ್ಥಾಯಿಗಳು(ದಿಕ್ಕುಗಳಲ್ಲಿರುವ ದಿಕ್ಪಾಲಕರು) ಸಗ್ಗಾದಿ ಭೋಗಕೆ ಭೂಪ ಕೇಳೆ೦ದ.
- ಅರ್ಥ:ಜೀಯ ಧರ್ಮಜ ಭೂಪನೇ,'ಶಕ್ತಿಶಾಲಿ ಪರಾಕ್ರಮಿ ಬ್ರಹ್ಮ ಅಸ್ತ್ರವು ಇ೦ದ್ರಾಯುಧದ ಮು೦ದುಗಡೆಯಲ್ಲಿ ಮಾಯಾಕಾರ ದಾನವರ ಸೈನ್ಯವನ್ನು ಇರಿದು ಸಾಯಿಸಿತು. ದಾನವರ ಚತುರ್ಬಲವ ಉಬ್ಬಟೆ ಆರ್ಭಟ ಹೋಯಿತು. ಅಸುರರ ಸೇನೆ ಅದರ ನಾಯಕರು ಸತ್ತು ನಾನಾ ದಿಗ೦ತದಲ್ಲಿ ಇರುವ ಸ್ವರ್ಗವೇ ಮೊದಲಾದ ಲೋಕದ ಭೋಗಕ್ಕೆ ಸರಿದುಹೋದರು,'ಕೇಳು ಎಂದ ಅರ್ಜುನ.
- ಕಡುಹುವಗ್ಗದ ಕಾಲಕೇಯರ
- ಗಡಣವಡಗಿತು ಸುರರ ಬಲುಸೆರೆ
- ಬಿಡಿಸಿದೆವು ಬಳಿಕಾಯ್ತು ಕಡು ಸುಮ್ಮಾನ ಸುರಕುಲಕೆ |
- ಒಡೆದುದಿಳೆಯೆನೆ ಬಾಹುವಿನ ಬಿರು
- ನುಡಿಯ ಕೈಗಳ ತುದಿವೆರಳ ಬೊ
- ಬ್ಬಿಡೀಕೆಗಳ ಸುರಭಟರು ಹರಿದರು ಮು೦ದೆ ಸುರಪುರಕೆ || ೫೩ ||
- ಪದವಿಭಾಗ-ಅರ್ಥ:ಕಡುಹುವ(ಸಾಹಸ, ಹುರುಪು, ಉತ್ಸಾಹ)+ ಅಗ್ಗದ(ಬಲಿಷ್ಠ, ಉತ್ತಮ) ಕಾಲಕೇಯರ ಗಡಣವು+ ಅಡಗಿತು ಸುರರ ಬಲುಸೆರೆ ಬಿಡಿಸಿದೆವು(ನಾನು ಬಿಡಿಸಿದೆನು, ತನ್ನ ಗೌರವಕ್ಕಾಗಿ ಬಹವಚಬ ಪ್ರಯೋಗ). ಬಳಿಕ+ ಆಯ್ತು(ನೆಡೆಯಿತು) ಕಡು ಸುಮ್ಮಾನ(ಸಂಭ್ರಮ, ದೊಡ್ಡ ಸನ್ಮಾನ) ಸುರಕುಲಕೆ; ಒಡೆದುದು+ ಇಳೆಯೆನೆ(ಭೂಮಿ ಎನ್ನುವಂತೆ) ಬಾಹುವಿನ (ತಮ್ಮ ತೋಳಿನ ಶಕ್ತಿ,) ಬಿರುನುಡಿಯ(ಆರ್ಭಟದ) ಕೈಗಳ ತುದಿವೆರಳ(ತುದಿ ಬೆರಳ ಬಿಚ್ಚಿದ ಅಂಗೈ ಬಡಿತ) ಬೊಬ್ಬಿಡಿಕೆಗಳ(ಘರ್ಜನೆಗಳ) ಸುರಭಟರು ಹರಿದರು(ಹೋದರು) ಮು೦ದೆ ಸುರಪುರಕೆ(ಹಸ್ತಿನಾಪುರಕ್ಕೆ)
- ಅರ್ಥ:ಅರ್ಜುನ ಹೇಳಿದ,'ಹೀಗೆ ಸಾಹಸಿ ಬಲಿಷ್ಠ ಕಾಲಕೇಯರ ಸಮೂಹವು ನಾಶವಾಯಿತು. ದೇವತೆಗಳ ಗಟ್ಟಿ ಸೆರೆವಾಸವನ್ನು ನಾನು ಬಿಡಿಸಿದೆನು. ಬಳಿಕ ದೊಡ್ಡ ದೇವತೆಗಳ ಸಮೂಹದಲ್ಲಿ ಸಂಭ್ರಮದ ಕಾರ್ಯ ನೆಡೆಯಿತು. ಆ ಸಂಭ್ರಮ ಆರ್ಭಟಕ್ಕೆ ಭೂಮಿ ಒಡೆಯಿತು ಎನ್ನುವಂತೆ ಇತ್ತು. ಅವರು ತಮ್ಮ ತೋಳಿನ ಶಕ್ತಿ ತೋರಿಕೆ, ಆರ್ಭಟದ ಕೈಗಳ ಚಪ್ಪಳೆ ಬಡಿತ, ಮೊದಲಾದ ದೊಡ್ಡ ಸದ್ದಿನನೊಡನೆ ಕಾಲಕೇಯರಿಂದ ತೆರವಾದ ಮು೦ದೆ ಇರುವ ಹಸ್ತಿನಾಪುರಕ್ಕೆ ಹೋದರು.
ದೇವಲೋಕದಲ್ಲಿ ಸಂಭ್ರಮ- ಅರ್ಜುನಿಗೆ ಸನ್ಮಾನ[ಸಂಪಾದಿಸಿ]
- ಕಟ್ಟು ಗುಡಿಯನು ಕೋಡಿಯೇ ಜಗ
- ಜಟ್ಟಿಗಳು ನುಗ್ಗಾಯ್ತಲೇ ನೀ
- ನಟ್ಟಸಸಿ ಸುರಕುಜವಲೇ ಕೊಡದೆ ಮನೋರಥವ |
- ಕೆಟ್ಟುದಹಿತ ನಿವಾತಕವಚರ
- ಥಟ್ಟು ಹುಡಿ ಹುಡಿಯಾಯ್ತು ದನುಜರ
- ಹುಟ್ಟುವರಿವುದು ಜೀಯ ಚಿತ್ತೈಸೆ೦ದರಿ೦ದ್ರ೦ಗೆ || ೫೪ ||
- ಪದವಿಭಾಗ-ಅರ್ಥ:ಕಟ್ಟು ಗುಡಿಯನು (ವಿಜಯ ಧ್ಜವನ್ನು ಕಟ್ಟು - ಹಾರಿಸು), ಕೋಡಿಯೇ(ಕ್ಷುದ್ರ ದೇವತೆಯ ಹೆಸರು; ಖೋಡಿ- ದುರುಳತನ, ನೀಚತನ ೨ ಕೆಟ್ಟ ವ್ಯಕ್ತಿ, ನೀಚ ) ಜಗಜಟ್ಟಿಗಳು ನುಗ್ಗಾಯ್ತಲೇ(ದುರ್ಬಲವಾಗು, ಪುಡಿಯಾಗು), ನೀ ನಟ್ಟ ಸಸಿ (ನೀನು ಜನ್ಮಕೊಟ್ಟ ಅರ್ಜುನ) ಸುರಕುಜವಲೇ ಕೊಡದೆ ಮನೋರಥವ ಕೆಟ್ಟುದು+ ಅಹಿತ ನಿವಾತಕವಚರ ಥಟ್ಟು(ಸೇನೆ) ಹುಡಿ ಹುಡಿಯಾಯ್ತು, ದನುಜರ ಹುಟ್ಟು+ ವ+ ಅರಿವುದು(ಹುಟ್ಟು-ಅರಿ- ಕತ್ತರಿಸು, ನಾಶ) ಜೀಯ ಚಿತ್ತೈಸೆ೦ದರು+ ಇ೦ದ್ರ೦ಗೆ.
- ಅರ್ಥ:ದೇವತೆಗಳು ಇಂದ್ರನಿಗೆ,'ವಿಜಯ ಧ್ಜಜವನ್ನು ಹಾರಿಸು, ನೀಚ ಜಗಜಟ್ಟಿಗಳು ನುಗ್ಗಾಗಿ ಹೋದರಲ್ಲವೇ! ನೀನು ನಟ್ಟ ಸಸಿ - ನೀನು ಜನ್ಮಕೊಟ್ಟ ಅರ್ಜುನ ಸುರರಿಗೆ ಕುಜನಂತೆ ವಿಜಯದ ಸೇನಾನಿಯ ಹಾಗಿದ್ದು, ಅವನ ಸಾಹಸ ನಿನ್ನ ಆಸೆಯನ್ನು ಈಡೇರಿಸದೆ ಇರುವುದೇ! ಕೆಟ್ಟುವರಾದ ನಿವಾತಕವಚರ ಸೇನೆ ಹುಡಿ ಹುಡಿಯಾಯಿತು. ದಾನವರ ಹುಟ್ಟು ಇಲ್ಲದಂತಾಯಿತು,' ಜೀಯ ಆಲಿಸು ಎಂದರು.
- ಕಾಲಕೇಯರ ನಗರಿಯಲಿ ದು
- ವ್ವಾಳಿಸಿತಲೇ ಮೃತ್ಯು ದಿವಿಜರ
- ಸೂಳೆಯರು ಸೆರೆಬಿಟ್ಟು ಬ೦ದರು ಯಕ್ಷ ಕಿನ್ನರರ |
- ಕಾಲಸ೦ಕಲೆ ಕಡಿದವಾ ಖಳ
- ರೂಳಿಗಕೆ ಕಡೆಯಾಯ್ತು ಸುರಪುರ
- ದಾಳುವೇರಿಯಕಾಹು ತೆಗೆಯಲಿಯೆ೦ದರಾ ಚರರು || ೫೫ ||
- ಪದವಿಭಾಗ-ಅರ್ಥ:ಕಾಲಕೇಯರ ನಗರಿಯಲಿ ದುವ್ವಾಳಿಸಿತಲೇ(ದಾಳಿ, ಮುತ್ತಿಗೆ) ಮೃತ್ಯು; ದಿವಿಜರ(ದೇವತೆಗಳ) ಸೂಳೆಯರು (ಕನ್ಯೆಯರು) ಸೆರೆಬಿಟ್ಟು ಬ೦ದರು, ಯಕ್ಷ ಕಿನ್ನರರ ಕಾಲಸ೦ಕಲೆ ಕಡಿದವು+ ಆ ಖಳರ+ ಊಳಿಗಕೆ ಕಡೆಯಾಯ್ತು, ಸುರಪುರದ+ ಆಳುವೇರಿಯ(ಕೋಟೆಯ ಸುತ್ತಣ ಗೋಡೆ) ಕಾಹು ತೆಗೆಯಲಿ+ ಯೆ+ ಎ೦ದರು+ ಆ ಚರರು.
- ಅರ್ಥ:ಕಾಲಕೇಯರನ್ನು ಸಂಪೂರ್ಣ ನಾಶಮಾಡಿದ ಮೇಲೆ ಕಾಲಕೇಯರ ನಗರದೊಳಗೆ ಮೃತ್ಯು ಧಾಳಿ ಇಟ್ಟಂತೆ ಅಲ್ಲಿದ್ದ ದಾನವರನ್ನೂ ಸಂಹರಿಸಿದರು. ಅಲ್ಲಿ ಸೆರೆಯಲ್ಲಿದ್ದ ದೇವಕನ್ಯೆಯರು ಸೆರೆವಾಸವನ್ನು ಬಿಟ್ಟು ಬ೦ದರು. ಯಕ್ಷ ಕಿನ್ನರರ ಕಾಲಿಗೆ ಹಾಕಿದ ಸ೦ಕಲೆಯನ್ನು ಕಡಿದು ಅವರನ್ನು ಬಿಡುಗಡೆ ಮಾಡಿದರು. ದೇವತೆಗಳು ಯಕ್ಷ ಕಿನ್ನರರು ಆ ಖಳ ದಾನವರ ಸೇವೆಯನ್ನು ಮಾಡುವ ಕೆಲಸಕ್ಕೆ ಕೊನೆಯಾಯಿತು. ಆ ದೇವಲೋಕದ ಚರರು ಸುರಪುರದ ಕೋಟೆಯ ಸುತ್ತಣ ಗೋಡೆ ಕಾವಲನ್ನು ತೆಗೆಯಲಿ ಎ೦ದರು.(?)
- ಪುರದ ಬಾಹೆಯ ಕೋರಡಿಯ ಸ೦
- ವರಣೆ ತೆಗೆಯಲಿ ನಿರ್ಭಯದಿ ಸ೦
- ಚರಿಸುವುದು ನ೦ದನದೊಳಗೆ ನಿಮ್ಮಡಿಯ ರಾಣಿಯರು |
- ತರತರದ ಕೊತ್ತಳದ ಕಾಹಿನ
- ಸುರಭಟರು ಸುಖನಿದ್ರೆ ಗೈಯ್ಯಲಿ
- ನಿರುತ ನಿಜನಿಳಯದೊಳಗೆ೦ದುದು ಸುರಜನವ್ರಾತ || ೫೬ ||
- ಪದವಿಭಾಗ-ಅರ್ಥ:ಪುರದ ಬಾಹೆಯ(ಹೊರಗೆ ಪಕ್ಕದ) ಕೋರಡಿಯ(ಉಪದ್ರದ, ನಿರ್ಬಂಧ) ಸ೦ವರಣೆ( ರಕ್ಷಿಸಿಕೊಳ್ಳುವ ಸಿದ್ಧತೆ) ತೆಗೆಯಲಿ, ನಿರ್ಭಯದಿ ಸ೦ಚರಿಸುವುದು ನ೦ದನದೊಳಗೆ ನಿಮ್ಮಡಿಯ ರಾಣಿಯರು ತರತರದ ಕೊತ್ತಳದ(ಕೋಟೆಯ ಮೇಲಿನ ಕಾವಲಿನ ಗೂಡಾ) ಕಾಹಿನ (ಕಾವಲಿನ) ಸುರಭಟರು(ದೇವ ಭಟರು) ಸುಖನಿದ್ರೆ ಗೈಯ್ಯಲಿ ನಿರುತ(ಸದಾ) ನಿಜನಿಳಯದೊಳಗೆ(ತಮ್ಮಮನೆಯಲ್ಲಿ)+ ಎ೦ದುದು ಸುರಜನವ್ರಾತ(ಸಮೂಹ)
- ಅರ್ಥ:ಸುರಜನರ ಸಮೂಹವು,'ಹಸ್ತಿನಾಪುರದ ಪುರದ ಹೊಗೆ ಪಕ್ಕದಲ್ಲಿ ಉಪದ್ರದವಾಗಿರುವ ನಿರ್ಬಂಧ ರಕ್ಷಿಸಿಕೊಳ್ಳುವ ಸಿದ್ಧತೆಯನ್ನು ತೆಗೆಯಲಿ ಎಂದರು. ಎಲ್ಲರೂ ಅಲ್ಲಿ ನ೦ದನವನದೊಳಗೆ ನಿರ್ಭಯದಿಂದ ಸ೦ಚರಿಸುವಂತೆ ಆಗಬೇಕು. ನಿಮ್ಮವರಾದ ರಾಣಿಯರು, ನಾನಾಬಗೆಯ ಕೋಟೆಯ ಮೇಲಿನ ಕಾವಲಿನ ಗೂಡಾದ ಕೊತ್ತಳದ ಕಾವಲಿನ ಸುರಭಟರು ತಮ್ಮಮನೆಯಲ್ಲಿ ಸದಾ ಸುಖನಿದ್ರೆ ಮಾಡಲಿ,' ಎ೦ದರು.
- ಕೇಳಿದನು ಹರುಷಾಶ್ರು ಹೊದಿಸಿದ
- ವಾಲಿಗಳ ಸಾವಿರವನುಬ್ಬಿದ
- ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ |
- ಬಾಲೆಯರ ಬರಹೇಳು ರತುನ ನಿ
- ವಾಳಿಗಳ ತರಹೇಳೆನುತ ಸುರ
- ಮೌಳಿ ಮ೦ಡಿತಚರಣನೆದ್ದನು ಬ೦ದನಿದಿರಾಗಿ || ೫೭ ||
- ಪದವಿಭಾಗ-ಅರ್ಥ:ಕೇಳಿದನು ಹರುಷಾಶ್ರು (ಆನಂದಭಾಷ್ಪ) ಹೊದಿಸಿದವು+ ಆಲಿಗಳ(ಕಣ್ಣುಗಳ) ಸಾವಿರವನು(ಇಂದ್ರ ಸಾವಿರ ಕಣ್ಣಿನವನು)+ ಉಬ್ಬಿದ ಮೇಲು ಮದದ ಸರೋಮ ಪುಳಕದ(ರೋಮಾಂಚನ ಹೊಂದಿದ) ಸರ್ವಸೌಖ್ಯದಲಿ, ಬಾಲೆಯರ ಬರಹೇಳು ರತುನ ನಿವಾಳಿಗಳ(ಆರತಿಯ ಜೊತೆ ದೃಷ್ಠಿದೋಷ ಹೋಗಲು ಮುಖದ ಎದುರು ಸುತ್ತಿ ಸುಳಿಯುವ ರತ್ನದ ನಿವಾಳಿಸುವ ಸುಳಿಯುಂಡೆಗಳನ್ನು) ತರಹೇಳು+ ಎನುತ ಸುರಮೌಳಿ(ಇಂದ್ರ) ಮ೦ಡಿತಚರಣನು(ಸಿಂಹಾಸನದಲ್ಲಿ ಕುಳಿತಿದ್ದ)+ ಎದ್ದನು ಬ೦ದನು+ ಇದಿರಾಗಿ.
- ಅರ್ಥ:ದೇವಲೋಕದ ಜನರು ಹೇಳಿದುದನ್ನು ಇಂದ್ರನು ಕೇಳಿದನು. ಅವನ ಸಹಸ್ರ ಕಣ್ನುಗಳಿಂದಲೂ ಆನಂದಭಾಷ್ಪಗಳು ತುಂಬಿ ಕಣ್ಣುಗಳನ್ನು ಹೊದಿಸಿದವು. ಅತಿಯಾಗಿ ಉಬ್ಬಿದ ಮದ- ಹೆಮ್ಮೆಯಿಂದ ಮತ್ತಸಂತಸದಿಂದ ಅವನಲ್ಲಿ ಸದ್ಭಾವದ ರೋಮಾಂಚನಗೊಂಡು ಸರ್ವಸೌಖ್ಯವನ್ನು ಹೊಂದಿದನು. ಅವನು ದೂತರಿಗೆ ದೇವಲೋಕದ ಬಾಲೆಯರನ್ನು ಬರಹೇಳು, ಅವರು ರತ್ನದ ನಿವಾಳಿ ಉಂಡೆಗಳನ್ನು ತರಲು ಹೇಳು, ಎನ್ನುತ್ತಾ ಸಿಂಹಾಸನದಲ್ಲಿ ಕುಳಿತಿದ್ದ ಇಂದ್ರನು ಎದ್ದನು. ಎದ್ದು ದೇವತೆಗಳ ಸಮೂಹಕ್ಕೆ ಎದುರಾಗಿ ಬ೦ದನು.
- ಕವಿದುದಮರವ್ರಾತ ಕಾ೦ತಾ
- ನಿವಹ ಹೊರವ೦ಟುದು ಸುರೇ೦ದ್ರನ
- ಭವನದಲಿ ಗುಡಿ ನೆಗಹಿದಮರಾವತಿಯ ಚೌಕದಲಿ |
- ತವತವಗೆ ತನಿವರಿವ ಜನದು
- ತ್ಸವವನದನೇನೆ೦ಬೆನ೦ದಿನ
- ದಿವಸದೊಸಗೆಯನಮರ ಲೋಕದೊಳರಸ ಕೇಳೆ೦ದ || ೫೮ ||
- ಪದವಿಭಾಗ-ಅರ್ಥ:ಕವಿದುದು(ಒಟ್ಟುಗೂಡಿ)+ ಅಮರವ್ರಾತ(ದೇವ ಸಮೂಹ) ಕಾ೦ತಾನಿವಹ(ದೇವ ವನಿತೆಯರ ಸಮೂಹ) ಹೊರವ೦ಟುದು ಸುರೇ೦ದ್ರನ ಭವನದಲಿ ಗುಡಿ ನೆಗಹಿದ+ ಅಮರಾವತಿಯ ಚೌಕದಲಿ ತವತವಗೆ ತನಿವ+ ಅರಿವ(ತನಿ- ಹೆಚ್ಚಾಗಿ; ಸಿಹಿ ಸವಿ,) ಜನದ+ ಉತ್ಸವವನು(ಸಂಭ್ರಮ)+ ಅದನೇನು+ ಎ೦ಬೆನು+ ಅ೦ದಿನ ದಿವಸದ+ ಒಸಗೆಯನು(ಶುಭ, ಮಂಗಳಕಾರ್ಯ)+ ಅಮರ ಲೋಕದೊಳು+ ಅರಸ ಕೇಳೆ೦ದ
- ಅರ್ಥ: ಅರ್ಜುನನು,'ಸುರೇ೦ದ್ರನ ಭವನದಲ್ಲಿದ್ದ ದೇವ ಸಮೂಹವೂ, ದೇವ ವನಿತೆಯರ ಸಮೂಹವೂ ಒಟ್ಟುಗೂಡಿ ಹೊರಹೊರಟಿತು. ಅಮರಾವತಿಯ ಚೌಕದಲಿ ಬಾವುಟವು ಎದ್ದಿತು- ಹಾರಿತು. ದೇವಗಣ ಸಮೂಹವು ತಮತಮಗೆ ದಾನವರನ್ನು ಗೆದ್ದ ಸಿಹಿಸುದ್ದಿಯನ್ನು ಹೇಳುವ ಜನರ ಸಂಭ್ರಮವನ್ನು- ಅಮರ ಲೋಕದಲ್ಲಿ ಅ೦ದಿನ ದಿವಸದ ಶುಭಸಮಾರಂಭವನ್ನು ಅದನ್ನು ಏನು ಹೇಳಲಿ! ಅರಸನೇ ಕೇಳು,'ಎ೦ದ
ಧರ್ಮಜನಿಗೆ ಅರ್ಜುನನ ಗೌರವ ಸಮರ್ಪಣೆ ಮತ್ತು ಸೋದರರ ಸಂತಸ[ಸಂಪಾದಿಸಿ]
- ಇದಿರು ಬ೦ದನು ಪದಯುಗದಲೆರ
- ಗಿದರೆ ಬಿಗಿದಪ್ಪಿದನು ಸುಮ್ಮಾ
- ನದ ಸಗಾಢವನೇನನೆ೦ಬೆನು ಸಾವಿರಾಲಿಗಳ |
- ಹೊದರಿನಲಿ ಹೊದಿಸಿದನು ಮಿಗೆ ನಾ
- ದಿದನು ಹರುಷಾಶ್ರುಗಳೆಲೆನ್ನ
- ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆ೦ದ || ೫೯ ||
- ಪದವಿಭಾಗ-ಅರ್ಥ:ಇದಿರು ಬ೦ದನು ಪದಯುಗದಲಿ(ಎರಡು ಪಾದಗಳಿಗೆ)+ ಎರಗಿದರೆ ಬಿಗಿದಪ್ಪಿದನು, ಸುಮ್ಮಾನದ ಸಗಾಢವನು+ ಏನನೆ೦ಬೆನು ಸಾವಿರ+ ಆಲಿಗಳ(ಕಣ್ಣುಗಳ) ಹೊದರಿನಲಿ(ಪೊದೆಯಲ್ಲಿ, ಗೂಡಿನಲ್ಲಿ, ಸಮೂಹದಲ್ಲಿ) ಹೊದಿಸಿದನು ಮಿಗೆ(ಬಹಳ) ನಾದಿದನು (ಸವರಿದನು) ಹರುಷಾಶ್ರುಗಳೆಲೆ+ ಎನ್ನಭ್ಯುದಯವೇ ನಿಮ್ಮಡಿಯ(ನಿಮ್ಮ+ ಅಡಿಯ- ಪಾದದ) ಕರುಣ ಕಟಾಕ್ಷ ಕೃಪೆಯೆ೦ದ.
- ಅರ್ಥ:ಅರ್ಜುನನು,'ದೇವೇಂದ್ರನು ನನ್ನುನ್ನು ಗೌರವಿಸಲು ನನ್ನ ಎದುರು ಬ೦ದನು. ಆಗ ನಾನು ಅವನ ಪಾದಗಳಿಗೆ ಬಗ್ಗಿ ನಮಿಸಿದರೆ, ನನ್ನನ್ನು ಎತ್ತಿ ಬಿಗಿಯಾಗಿ ಅಪ್ಪಿದನು. ನನಗೆ ಅವನು ಮಾಡಿದ ಸುಮ್ಮಾನದ ಅತಿಶಯ ರಭಸವನ್ನು ಏನನ್ನು ಹೇಳಲಿ. ಅವನ ಸಾವಿರಕಣ್ಣುಗಳ ಹೊದರಿನಲ್ಲಿ ನನ್ನನ್ನು ಹೊದಿಸಿದನು- ಮುಚ್ಚಿದನು. ಮತ್ತೆ ಬಹಳವಾಗಿ ಪ್ರೀತಿಯಿಂದ ಹರುಷದ ಕಣ್ಣುಹನಿಯೊಡನೆ ನನ್ನ ಮೈಯನ್ನು ಸವರಿದನು. ಅಣ್ಣ ಧರ್ಮಜನೇ, ಶಿವನನ್ನು ಒಲಿಸಿಕೊಳ್ಳಲು ಶಿವಪಂಚಾಕ್ಷರಿಯನ್ನು ಕ್ರಮಬದ್ಧವಾಗಿ ನನಗೆ ಉಪದೇಶಮಾಡಿ ಶಿವನ್ನು ಒಲಿಸಿಕೊಳ್ಳಲು ಇಂದ್ರಕೀಲಕ್ಕೆ ಕಳುಹಿಸಿದೆ, ಅಲ್ಲಿ ಶಿವನ ದರ್ಶನವಾಯಿತು, ದಿವ್ಯ ಅಸ್ತ್ರಗಳು ದೊರಕಿದವು,ಇಂದ್ರನು ತನ್ನ ಸಿಂಹಾಸನದಲ್ಲಿ ಕೂರಿಸಿಕೊಂಡನು, ನಾನು ದಾನವರನ್ನು ಸಂಹರಿಸಿದ ನಂತರ ಇಂದ್ರನೂ ದೇವತೆಗಳೂ ನನ್ನನ್ನು ಬಹುವಾಗಿ ಗೌರವಿಸಿದರು. ಹೀಗೆ ಇವೆಲ್ಲವೂ ನಿಮ್ಮ ಪಾದದ ಕರುಣ ಕಟಾಕ್ಷದ ಕೃಪೆಯೆ೦ದ ನನ್ನ ಅಭ್ಯುದಯವಾಯಿತು,'ಎಂದ.
- ಸುರರು ಕೋ೦ಡಾಡಿದರು ಸುರಮುನಿ
- ವರರ ಪರಮಾಶೀರ್ವಚೋ ವಿ
- ಸ್ತರಕೆ ಫಲವಿದೆಲಾ ಭವತ್ಕರುಣಾ೦ಬಕಾಲೋಕ |
- ಅರಿ ಸುಭಟ ಸ೦ತೋಷಮಯ ಸಾ
- ಗರವ ಸುರಿಯುವೆ ಸರಳು ವಡಬ
- ಸ್ಪುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ || ೬೦ ||
- ಪದವಿಭಾಗ-ಅರ್ಥ:ಸುರರು ಕೋ೦ಡಾಡಿದರು, ಸುರಮುನಿವರರ ಪರಮ+ ಆಶೀರ್ವಚೋ (ಆಶೀರ್ವಚನ) ವಿಸ್ತರಕೆ ಫಲವಿದೆಲಾ, ಭವತ್(ನಿನ್ನ)+ ಕರುಣಾ೦ಬಕ(ಕರುಣೆಯ ಕಣ್ಣಿನ)+ ಆಲೋಕ(ದೃಷ್ಟಿ) ಅರಿಸುಭಟ ಸ೦ತೋಷಮಯ ಸಾಗರವ ಸುರಿಯುವೆ ಸರಳು(ಬಾಣ) ವಡಬಸ್ಪುರಣ(ವಡಬ- ಸಮುದ್ರದಲ್ಲಿರುವ ಬೆಂಕಿ,ಬಡಬಾಗ್ನಿ- ಪ್ರಳಯ ಕಾಲದಲ್ಲಿ ಸಮುದ್ರದಲ್ಲಿ ತೊರುವ ಬೆಂಕಿ ಬಡಬಾಗ್ನಿ - ಸ್ಪುರಣ- ಮಿಂಚಿನಂತೆ ಹೊಳೆಯುವುದು, ತೊರುವುದು- ಪ್ರಕಾಶ, ಮಿಂಚು ) ಮೇಘಜ್ವಾಲೆ ಜಾಲ ಕರಾಳ(ಭಯಂಕರ, ಘೋರ) ಜಿಹ್ವೆಯಲಿ(ನಾಲಿಗೆಯಿಂದ).
- ಅರ್ಥ:ಅರ್ಜುನನು ಧರ್ಮಜನೇ,'ದೇವತೆಗಳು ನನ್ನನ್ನು ಕೋ೦ಡಾಡಿದರು; ಕುಲ ಪುರೋಹಿತ ಧೌಮ್ಯಾದಿ ದೇವಸಮಾನ ಮುನಿಗಳ ಪರಮ ಆಶೀರ್ವಾದದ ವಚನ ವಿಸ್ತಾರಕ್ಕೆ ಮತ್ತು ನನ್ನ ಮೇಲೆ ನಿನ್ನ ಕರುಣೆಯ ಕಣ್ಣಿನ ಕೃಪೆಯದೃಷ್ಟಿಗೆ ಇದು ಫಲವು ಇದಲ್ಲವೇ! ಅರಿಸುಭಟರಾದ ಕೌರವರ ಸ೦ತೋಷಮಯ ಸಾಗರವನ್ನು ಸುಡಲು, ಬಡಬಾಗ್ನಿಯಂತಿರುವ ನನ್ನ ಅಗ್ನಿಸ್ಪುರಣ ಮೇಘಜ್ವಾಲೆಯ ಜಾಲದ ಘೋರವಾದ ಬಾಣಗಳ ನಾಲಿಗೆಯಿಂದ ಸುರಿಯುವೆನು.' ಎಂದ
- ಲೇಸು ಮಾಡಿದೆ ನಾಕವನು ಖಳ
- ರೀಸುದಿವಸ ವಿಭಾಡಿಸಿದರೆ ಸು
- ರೇಶನಾಪಶ್ಚಾತ್ತಾಪ ನಿರ್ವಾಪಣದ ರಚಿಸಿದೆಲಾ |
- ಈಸು ಪುಣ್ಯೋದಯಕೆ ಪೂರ್ವ ಮ
- ಹೀಶಕುಲ ನೋ೦ತುದುಯೆನುತ ಸ೦
- ತೋಷಮಯ ಜಲಧಿಯಲಿ ತೆ೦ಕಾಡಿದನು ಯಮಸೂನು || ೬೧ ||
- ಪದವಿಭಾಗ-ಅರ್ಥ:ಲೇಸು ಮಾಡಿದೆ ಸಾಕವನು(ನಾಕ- ಸ್ವರ್ಗ) ಖಳರು+ ಈಸು ದಿವಸ ವಿಭಾಡಿಸಿದರೆ(ಆಕ್ರಮಿಸಿದರೆ) ಸುರೇಶನ(ಇಂದ್ರನ)+ ಆ ಪಶ್ಚಾತ್ತಾಪ(ಪಶ್ಚಾತ್- ನಂತರ+ ತಾಪ, ಹಸ್ತಿನಾವತಿಯನ್ನು ಕಳೆದುಕೊಂಡ ನಂತರದ ತಾಪ- ದುಃಖ; ತಪ್ಪು ಮಾಡಿ ಪಶ್ಚಾತ್- ನಂತರ ಅದಕ್ಕೆ ವಿಷಾದ ಪಡುವುದು ರೂಢಿಯಲ್ಲಿರುವ ಪ್ರಯೋಗ) ನಿರ್ವಾಪಣದ(ಆಪಣ- ಮಾರುಕಟ್ಟೆ ಅಂಗಡಿ;ತಾಣ, ಕ್ಷೇತ್ರ? ನಿರ್- ಇಲ್ಲವಾಗುವುದು) ರಚಿಸಿದೆಲಾ(ರಚಿಸು- ಮಾಡು, ಮಾಡಿದೆಯಲ್ಲವೇ), ಈಸು(ಇಷ್ಟೊಂದು) ಪುಣ್ಯೋದಯಕೆ ಪೂರ್ವ ಮಹೀಶಕುಲ(ಹಿಂದಿನ ಚಂದ್ರವಂಶದವರು) ನೋ೦ತುದು+ ಯೆನುತ(ಹರಕೆಯ ಫಲ) ಸ೦ತೋಷಮಯ ಜಲಧಿಯಲಿ ತೆ೦ಕಾಡಿದನು(ತೆಂಕಾಡು- ತೇಕಾಡು - ತೇಲು) ಯಮಸೂನು
- ಅರ್ಥ:ಧರ್ಮಜನು ಅರ್ಜುನನಿಗೆ,ಉತ್ತಮಕಾರ್ಯ ಮಾಡಿದೆ. ಖಳರರಾದ ದಾನವರು ನಾಕವನ್ನು ಇಷ್ಟೊಂದು ದಿನ ಆಕ್ರಮಿಸಿದ್ದರೆ ಅದು ಇಂದ್ರನಿಗೆ ಅಪಾರ ನೋವು ಕೊಡುವ ವಿಚಾರ. ನೀನು ಆ ಇಂದ್ರನ ಆ ಮನದ ಪಶ್ಚಾತ್ತಾಪದ ತಾಣವನ್ನು ಇಲ್ಲವಾಗಿಸುವ ಕಾರ್ಯವನ್ನು ಮಾಡಿದೆಯಲ್ಲವೇ!. ನಮ್ಮ ಇಷ್ಟೊಂದು ಪುಣ್ಯೋದಯಕ್ಕೆ ನಮ್ಮ ಹಿಂದಿನ ಚಂದ್ರವಂಶದ ರಾಜರು ಪುಣ್ಯ ಪುರುಷನರು ಮಾಡಿಕೊಂಡ ತಮ್ಮ ಹರಕೆಯ ವ್ರತಾಚರಣೆಯ ಫಲವೇ ಸರಿ, ಎಂದು ಧರ್ಮಜನು ಸ೦ತೋಷಮಯವಾದ ಸಮುದ್ರದಲ್ಲಿ ತೇಲಾಡಿದನು.
- ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
- ಸೊಗಸಿನಲಿ ಮೈ ದಣಿಯದೀಕ್ಷಣ
- ಯುಗಲಾ ಬೀಯದು ನೋಡಿ ಪಾರ್ಥನ ಮಾತ ಸವಿ ಸವಿದು |
- ತೆಗೆದು ನಿಲ್ಲದು ಕರ್ಣಯುಗ ಸುರ
- ನಗರಿಯುತ್ತಮ ಗ೦ಧ ಭರದಲಿ
- ಮುಗಿಯದರಸನ ಗ೦ಧವಹವ ನೀಶ ಕೇಳೆ೦ದ || ೬೨ ||
- ಪದವಿಭಾಗ-ಅರ್ಥ:ಹೊಗಳಿ ನಿಲ್ಲದು ಜಿಹ್ವೆ (ನಾಲಿಗೆ), ತೆಕ್ಕೆಯ ಸೊಗಸಿನಲಿ ಮೈ ದಣಿಯದು,+ ಈಕ್ಷಣ ಯುಗಳ(ಈಕ್ಷಣ- ನೋಡುವ ಕಣ್ಣು, ಯುಗಳ- ಎರಡು) ಬೀಯದು(ಸೋಲದು) ನೋಡಿ ಪಾರ್ಥನ ಮಾತ ಸವಿ ಸವಿದು, ತೆಗೆದು ನಿಲ್ಲದು ಕರ್ಣಯುಗ (ಯುಗ- ಎರಡು) ಸುರನಗರಿಯ+ ಉತ್ತಮ ಗ೦ಧ ಭರದಲಿ ಮುಗಿಯದು+ ಅರಸನ ಗ೦ಧವಹ (ವಾಯು, ಪ್ರಾಣ)+ ಅವನೀಶ ಕೇಳೆ೦ದ.
- ಅರ್ಥ:ಧರ್ಮಜನಿಗೆ ಅರ್ಜುನನ್ನು ಹೊಗಳಿ ಮುಗಿಯಿತು ಎಂದು ನಾಲಿಗೆ ನಿಲ್ಲದು. ಅಪ್ಪಿದತೆಕ್ಕೆಯ ಸೊಗಸಿನಲ್ಲಿ ಮೈ ದಣಿಯದು; ಅವನನ್ನು ನೋಡುವ ಎರಡು ಕಣ್ಣುಗಳು ನೋಡಿ ಸೋಲದು. ಧರ್ಮಜನ ಎರಡು ಕಿವಿಗಳು ಪಾರ್ಥನ ಮಾತನ್ನು ಸವಿ ಸವಿದು ತೆಗೆದು-ಸಾಕೆಂದು ನಿಲ್ಲದು. ಅಮರಾವತಿಯ ಉತ್ತಮ ಸುಮಧುರ ಗ೦ಧಭರದ ವಿಚಾರ- ಹೇಳಿ ಅರಸನ ಉಸಿರು ಮುಗಿಯದು, ಅವನೀಶ ಜನಮೇಜಯನೇ ಕೇಳು ಎಂದ ವೈಶಂಪಾಯನ ಮುನಿ.
ಧರ್ಮಜನಿಗೆ ದಿವ್ಯಾಸ್ತ್ರಗಳನ್ನು ನೊಡುವ ಬಯಕೆ[ಸಂಪಾದಿಸಿ]
- ನೃಪನ ಮುದವನು ಭೀಮಸೇನನ
- ವಿಫುಳಸುಮ್ಮಾನವನು ನಕುಲನ
- ಚಪಲ ಮದವನು ಪುಳಕವನು ಸಹದೇವನವಯವದ |
- ದ್ರುಪದ ಸುತೆಯುತ್ಸವವ ಮುನಿಜನ
- ದಪಗತ ಗ್ಲಾನಿಯನು ಪರಿಜನ
- ದುಪಚಿತಾನ೦ದವನು ಬಣ್ಣಿಸಲರಿದು ತನಗೆ೦ದ || ೬೩ ||
- ಪದವಿಭಾಗ-ಅರ್ಥ:ನೄಪನ ಮುದವನು(ಆನಂದವನ್ನು) ಭೀಮಸೇನನ ವಿಫುಳ ಸುಮ್ಮಾನವನು(ಸಂತೋಷ, ಹಿಗ್ಗು) ನಕುಲನ ಚಪಲ ಮದವನು ಪುಳಕವನು ಸಹದೇವನ+ ಅವಯವದ, ದ್ರುಪದ ಸುತೆಯ+ ಉತ್ಸವವ ಮುನಿಜನದ+ ಅಪಗತ(ಹೋದ, ದೂರವಾದ) ಗ್ಲಾನಿಯನು(ಅಜ್ಞಾನ) ಪರಿಜನದ+ ಉಪಚಿತ (ಉಪ ಚಿತ್ತದ- ಮನಸ್ಸಿನ)+ ಆನ೦ದವನು ಬಣ್ಣಿಸಲು+ ಅರಿದು(ಅರಿಯದು) ತನಗೆ+ ಎ೦ದ
- ಅರ್ಥ:'ಯುಧಿಷ್ಠಿರ ನೃಪನಆನಂದವನ್ನು, ಭೀಮಸೇನನ ಅತಿಯಾದ ಜಂಬದ ಸಂತೋಷವನ್ನೂ, ನಕುಲನ ಚಪಲದ ಹೆಮ್ಮೆಯನ್ನೂ, ಸಹದೇವನ ಅವಯವಗಳಲ್ಲಿ ಹಿಗ್ಗಿನಿಂದ ಆದ ಪುಳಕವನ್ನೂ, ದ್ರುಪದಸುತೆ ದ್ರೌಪದಿಯ ಮನಸ್ಸಿನ ಉತ್ಸವವನ್ನೂ, ಮುನಿಜನದ ಅಜ್ಞಾನ ನಿವಾರಣೆಯನ್ನೂ, ಪರಿಜನದ ಮನಸ್ಸಿನ ಆನ೦ದವನ್ನೂ ತನಗೆ ಬಣ್ಣಿಸಲು ತಿಳಿಯದು,'ಎ೦ದನು ಮುನಿ.
- ಶಿವನ ಘಾಟದ ಶರ ಚತುರ್ದಶ
- ಭುವನ ಭ೦ಜನವಿದು ಮದೀಯಾ
- ಹವಕೆ ಹೂಣಿಗ ನಾಯ್ತಲಾ ಹೇರಾಳ ಸುಕೃತವಿದು |
- ಎವಗೆ ತೋರಿಸಬೇಹುದೀ ಶಾ೦
- ಭವ ಮಹಾಸ್ತ್ರ ಪ್ರೌಡಕೇಳೀ
- ವಿವರಣವ ಕಾ೦ಬರ್ತಿಯಾಯ್ತೆ೦ದನು ಧನ೦ಜಯಗೆ || ೬೪ ||
- ಪದವಿಭಾಗ-ಅರ್ಥ:ಶಿವನ ಘಾಟದ (ಸಂ- ಕುತ್ತಿಗೆಯ ಹಿಂಭಾಗ, ಹೆಕ್ಕತ್ತು) ಶರ ಚತುರ್ದಶಭುವನ ಭ೦ಜನವಿದು(ನಾಶ) ಮದೀಯ+ ಆಹವಕೆ (ನನ್ನಯುದ್ಧಕ್ಕೆ) ಹೂಣಿಗನಾಯ್ತಲಾ(ಪ್ರಯೋಗ - ಸಾಧನ, ಸಲಕರಣೆ) ಹೇರಾಳ(ಹೇರಳ, ಅತಿಯಾದ, ಬಹುದೊಡ್ಡ) ಸುಕೃತವಿದು(ಪುಣ್ಯ) ಎವಗೆ (ನಮಗೆ) ತೋರಿಸಬೇಹುದು+ ಈ ಶಾ೦ಭವ(ಶಂಭುವಿನ- ಶಿವನ) ಮಹಾಸ್ತ್ರ ಪ್ರೌಡಕೇಳೀ (ಮಹಾ ಅಸ್ತ್ರದ ಆಟದ ಲೀಲೆ, ಶಕ್ತಿ)+ ವಿವರಣವ ಕಾ೦ಬ+ ಅರ್ತಿಯಾಯ್ತು(ಆಸೆ)+ ಎ೦ದನು ಧನ೦ಜಯಗೆ
- ಅರ್ಥ:ಧರ್ಮಜನು ಅರ್ಜುನನಿಗೆ,'ಶಿವನ ಕುತ್ತಿಗೆಯ ಹಿಂಭಾಗದಲ್ಲಿ ಧರಿಸಿರುವ ಶರವು ಇದು- ಪಾಶುಪತಾಸ್ತ್ರ; ಇದು ಹದಿನಾಲ್ಕು ಲೋಕಗಳನ್ನು ನಾಶಮಾಡಬಲ್ಲದು. ನನ್ನ ಮುಂದಿನ ಯುದ್ಧಕ್ಕೆ ಪ್ರಯೋಗ ಸಾಧನಸಾಧನವಾಯಿತಲ್ಲವೇ!.ನಮಗೆ ಇದು ಅತಿಯಾದ, ಬಹುದೊಡ್ಡ ಸುಕೃತ-ಪುಣ್ಯವು. ಅರ್ಜುನನೇ ಈ ಶಿವನ ಮಹಾಸ್ತ್ರದ ಆಟದ ಲೀಲೆಯ ವಿವರಣವನ್ನು ಕಾಣುಬ ಆಸೆಯಾಗಿದೆ. ನನಗೆ ತೋರಿಸಬೇಕು,' ಎ೦ದನು.
- ಜೀಯ ನಿಮ್ಮರ್ತಿಯನು ಶ೦ಭುವಿ
- ನಾಯುಧದಲೇ ಸಲಿಸಿದಪೆನಾ
- ಗ್ನೇಯ ವಾರುಣವೈ೦ದ್ರ ಕೌಬೇರಾಸ್ತ್ರ ಕೌಶಲವ |
- ಆಯತವ ತೋರಿಸುವೆನೀಗಳ
- ನಾಯತವು ರವಿ ತುರಗ ರಾಜಿಗೆ
- ಲಾಯ ನೀಡಿತು ಪಶ್ಚಿಮಾಶಾ ಗಿರಿಯ ತಪ್ಪಲಲಿ || ೬೫ ||
- ಪದವಿಭಾಗ-ಅರ್ಥ:ಜೀಯ ನಿಮ್ಮ+ ಅರ್ತಿಯನು(ಬಯಕೆಯನ್ನು) ಶ೦ಭುವಿನ(ಶಿವ)+ ಆಯುಧದಲೇ ಸಲಿಸಿದಪೆನು+ ಆಗ್ನೇಯ ವಾರುಣವು+ ಐ೦ದ್ರ ಕೌಬೇರಾಸ್ತ್ರ ಕೌಶಲವ ಆಯತವ(ಉಚಿತವಾದ ಕ್ರಮ, ನೆಲೆ) ತೋರಿಸುವೆನು+ ಈಗಳು+ ಅನಾಯತವು(ಅನು+ ಆಯತವು, ಅನು+ ಉಚಿತ) ರವಿ ತುರಗರಾಜಿಗೆ(ಸೂರ್ಯನ ಕುದುರೆಗಳಿಗೆ) ಲಾಯ(ಕುದುರೆಕಟ್ಟುವ ಲಾಯ, ಕೊಟ್ಟಿಗೆ) ನೀಡಿತು ಪಶ್ಚಿಮ+ ಆಶಾ(ದಿಕ್ಕಿನ) ಗಿರಿಯ(ಬೆಟ್ಟದ) ತಪ್ಪಲಲಿ.
- ಅರ್ಥ:ಅರ್ಜುನನು, 'ರಾಜನೇ ಜೀಯ, ನಿಮ್ಮ ಬಯಕೆಯನ್ನು ಶ೦ಭುವಿನ ಆಯುಧದಿಂದಲೇ ಆರಂಭಿಸಿ ಸಲ್ಲಿಸುವೆನು. ಆಗ್ನೇಯ ವಾರುಣ, ಐ೦ದ್ರ, ಕೌಬೇರಾಸ್ತ್ರ ಇವುಗಳ ಕೌಶಲವನ್ನು ಉಚಿತವಾದ ಕ್ರಮ, ನೆಲೆ ಎಲ್ಲವನ್ನೂ ತೋರಿಸುವೆನು. ಆದರೆ ಈಗ ಅನುಚಿತವಾದ ಸಮಯವು. ಸೂರ್ಯನು ತನ್ನ ಕುದುರೆಗಳನ್ನು ಲಾಯದಲ್ಲಿ ಸೇರಿಸಲು ಪಶ್ಚಿಮ ದಿಕ್ಕಿನ ಬೆಟ್ಟದ ತಪ್ಪಲಿನಲ್ಲಿ ಇಳಿಯುತ್ತಿದ್ದಾನೆ,'ಎಂದನು.
- ಅರಸ ಕಳುಹಿದನಿ೦ದ್ರ ಸೂತನ
- ನರಮನೆಗೆ ಬ೦ದನು ಧನ೦ಜಯ
- ವೆರಸಿ ಪರ್ಣದ ಚೌಕಿಗೆಯಲಿ ಮುನೀ೦ದ್ರ ಮೇಳದಲಿ |
- ಅರಸಿ ಬಣ್ಣದ ಸೊಡರ ಬಲಿದಳು
- ಹರಸಿದರು ಮುನಿ ವಧುಗಳಕ್ಷತೆ
- ವೆರಸಿ ಗದುಗಿನ ವೀರ ನಾರಾಯಣನ ಮೈದುನನ || ೬೬ ||
- ಪದವಿಭಾಗ-ಅರ್ಥ:ಅರಸ ಕಳುಹಿದನು+ ಇ೦ದ್ರ ಸೂತನನು+ ಅರಮನೆಗೆ, ಬ೦ದನು ಧನ೦ಜಯವೆರಸಿ ಪರ್ಣದ ಚೌಕಿಗೆಯಲಿ ಮುನೀ೦ದ್ರ ಮೇಳದಲಿ, ಅರಸಿ ಬಣ್ಣದ ಸೊಡರ ಬಲಿದಳು(ನೆಲಕ್ಕೆ ಊರಿದಳು), ಹರಸಿದರು ಮುನಿ ವಧುಗಳ+ ಅಕ್ಷತೆವೆರಸಿ ಗದುಗಿನ ವೀರ ನಾರಾಯಣನ ಮೈದುನನ.
- ಅರ್ಥ:ಅರಸ ಧರ್ಮಜನು ಇ೦ದ್ರನ ಸೂತನಾದ ಮಾತಲಿಯನ್ನು ಅವನ ಅರಮನೆಗೆ ಕಳುಹಿಸಿದನು. ನಂತರ ಅವನು ಧನ೦ಜಯ ಮೊದಲಾದವರ ಜೊತೆ ತನ್ನ ಪರ್ಣಕುಟೀರದ ಚೌಕಿಗೆ ಮುನೀ೦ದ್ರರ ಮೇಳದಲ್ಲಿ ಬಂದು ಸೇರಿದನು. ಅರಸಿ ದ್ರೌಪದಿ ಬಣ್ಣದ ಸೊಡರ ದೀವಟಿಗೆಗಳನ್ನು ಅಲ್ಲಲ್ಲಿ ಊರಿದಳು. ಸಭೆಸೇರಿದ ನಂತರ ಮುನಿಗಳು ಅಕ್ಷತೆಯೊಂದಿಗೆ ಮಹಿಳೆಯರನ್ನೂ ಗದುಗಿನ ವೀರ ನಾರಾಯಣನ ಮೈದುನನಾದ ಅರ್ಜುನನ್ನೂ ಹರಸಿದರು.
♠♠♠
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|