<ಕುಮಾರವ್ಯಾಸಭಾರತ-ಸಟೀಕಾ
- ಕರುಣಿ ಬಿಜಯ೦ಗೈದು ಪಾ೦ಡವ
- ಧರಣಿಪನ ಸ೦ತೈಸಿ ಯಾದವ
- ರರಸ ನಿದ್ದನು ಸಕಲ ಮುನಿಜನ ಸಹಿತ ವನದೊಳಗೆ||ಸೂ||
- ಪದವಿಭಾಗ-ಅರ್ಥ: ಕರುಣಿ ಬಿಜಯ೦ಗೈದು(ಬಂದು) ಪಾ೦ಡವ ಧರಣಿಪನ(ಧರ್ಮಜನನ್ನು) ಸ೦ತೈಸಿ ಯಾದವರರಸನು+ ಇದ್ದನು(ಕೃಷ್ಣನು ಇದ್ದನು) ಸಕಲ ಮುನಿಜನ ಸಹಿತ ವನದೊಳಗೆ|ಸೂ||
- ಅರ್ಥ:ಕರುಣಿಯಾದ ಯಾದವರ ನಾಯಕ ಕೃಷ್ಣನು ಆಗಮಿಸಿ ಪಾ೦ಡವ ಧರಣಿಪನಾದ ಧರ್ಮಜನನ್ನು ಸ೦ತೈಸಿ, ಅವನೊಡನೆ ಸಕಲ ಮುನಿಜನ ಸಹಿತ ವನದಲ್ಲಿ ಕೆಲವು ದಿನ ಇದ್ದನು|| ಸೂ||[೧][೨] [೩] [೪]
- ॐ
ಪಾಂಡವರನ್ನು ಸಂತೈಸಲು ಕೃಷ್ಣನ ಆಗಮನ[ಸಂಪಾದಿಸಿ]
- ಚಿತ್ತವಿಸು ಜನಮೇಜಯ ಕ್ಷಿತ
- ಪೋತ್ತಮನೆ ಧರ್ಮಜನ ಮುಖದಲಿ
- ಕೆತ್ತ ದುಗುಡವ ಬಿಡಿಸಿ ಭೀಮನ ತ೦ದ ನಾಶ್ರಮಕೆ |
- ಮತ್ತ ಕಾಶಿನಿ ದೌಮ್ಯ ನಿಖಿಲ ಮ
- ಹೋತ್ತಮರು ಪೀಯೂಷ ಮಧುರ ರ
- ಸೋತ್ತರದ ನುಡಿಗಳಲಿ ನಾದಿದರನಿಲಜನ ಮನವ || ೧ ||
- ಪದವಿಭಾಗ-ಅರ್ಥ:ಚಿತ್ತವಿಸು(ಕೇಳು) ಜನಮೇಜಯ ಕ್ಷಿತಪೋತ್ತಮನೆ(ಕ್ಷಿತಿ- ಭೂಮಿ; +ಪ- ಒಡೆಯ; +ಉತ್ತಮನೆ- ಶ್ರೇಷ್ಠನೆ, ರಾಜನೆ) ಧರ್ಮಜನ (ಇಲ್ಲಿ "ಧರ್ಮಜನು" ಎಂಬ ಪ್ರಯೋಗ ಹೆಚ್ಚು ಸೂಕ್ತವಾಗಿರುವಂತೆ ತೊರುವುದು.) ಮುಖದಲಿ ಕೆತ್ತ (ತುಂಬಿದ) ದುಗುಡವ(ಚಿಂತೆಯ) ಬಿಡಿಸಿ ಭೀಮನ ತ೦ದನು+ ಆಶ್ರಮಕೆ ಮತ್ತಕಾಶಿನಿ (ಮದವೇರಿದ ಆನೆಯಮತೆ ನೆಡೆಯುವವಳು, ಮದಗಜಗಮನೆ, ಸುಂದರಿ; ದ್ರೌಪದಿ) ದೌಮ್ಯ ನಿಖಿಲ- ಎಲ್ಲಾ, ಮಹೋತ್ತಮರು (ಮಹಾ ಉತ್ತಮರು ಶ್ರೇಷ್ಠರು) ಪೀಯೂಷ (ಅಮೃತ, ಹಾಲು,) ಮಧುರ ರಸೋತ್ತರದ(ರಸವತ್ತಾದ) ನುಡಿಗಳಲಿ ನಾದಿದರು (ಮೃದುವಾಗಿ ಸವರಿದರು, ಎಳಗಿದರು;ನಾದು-ಸವರು, ತಿಕ್ಕು, ತೊಡೆ, ಬಳಿ, ಲೇಪಿಸು)+ ಅನಿಲಜನ(ಭೀಮನ) ಮನವ.
- ಅರ್ಥ:ಜನಮೇಜಯ ರಾಜನೇ ಮನವಿಟ್ಟು ಕೇಳು,ಅನೇಕ ಅಪಶಕುನಗಳನ್ನು ಕಂಡು, ಭೀಮನಿಗೆ ಏನು ಅಪಾಯವಾಯಿತೋ ಎಂಬ ಧರ್ಮಜನ ಮುಖದಲ್ಲಿ ತುಂಬಿದ ಚಿಂತೆಯನ್ನು ಬಿಡಿಸಿಕೊಂಡು ಧರ್ಮಜನು ಭೀಮನನನ್ನು ಆಶ್ರಮಕ್ಕೆ ಕರೆತ೦ದನು. ಭೀಮನ ಮನಸ್ಸಿನ ಅವಮಾನದ ನೋವನ್ನು ದ್ರೌಪದಿಯೂ, ದೌಮ್ಯರೂ, ಎಲ್ಲಾ, ಶ್ರೇಷ್ಠ ಜನರೂ ಅಮೃತದಂತಿರುವ ಮಧುರವಾದ ರಸವತ್ತಾದ ನುಡಿಗಳಿಂದ ಭೀಮನ ಮನಸ್ಸನ್ನು ಮೃದುವಾಗಿ ಸವರಿ ಅವನನ್ನು ಶಾಂತಗೊಳಿಸಿದರು.
- ಪರ್ಯಾಯ ಅರ್ಥ::ಜನಮೇಜಯ ರಾಜನೇ ಮನವಿಟ್ಟು ಕೇಳು, ಧರ್ಮಜನು, ನಮ್ಮ ಪೂರ್ವಜ ನಹುಷನಿಗೆ ನಿನ್ನಿಂದ ಶಾಪವಿಮೋಚನೆಯಾಗಿ ಉಪಕಾರವಾಯಿತು ಎಂದು ಅವನ ಮುಖದಲ್ಲಿ ತುಂಬಿದ ಚಿಂತೆಯನ್ನು ಬಿಡಿಸಿ, ಭೀಮನನನ್ನು ಆಶ್ರಮಕ್ಕೆ ಕರೆ ತ೦ದನು. ಭೀಮನ ಮನಸ್ಸಿನ 'ಅಜಗರಕ್ಕೆ ಸೋತೆನಲ್ಲಾ' ಎಂಬ ಅವಮಾನದ ನೋವನ್ನು ದ್ರೌಪದಿಯೂ, ದೌಮ್ಯರೂ, ಎಲ್ಲಾ, ಶ್ರೇಷ್ಠ ಜನರೂ ಅಮೃತದಂತಿರುವ ಮಧುರವಾದ ರಸವತ್ತಾದ ನುಡಿಗಳಿಂದ ಭೀಮನ ಮನಸ್ಸನ್ನು ಮೃದುವಾಗಿ ಸವರಿ ಅವನನ್ನು ಶಾಂತಗೊಳಿಸಿದರು.
- ಮುಗಿಲು ಬೆಳತುದು ಬರಿಯ ಗಡಬಡೆ
- ಗಗನಕುಳಿದುದು ಕೊ೦ಡ ನೆಲನನು
- ತೆಗೆದು ನಿ೦ದುದು ಮೋಡಿಯ೦ಕದವೊಲು ನದೀ ನಿವಹ |
- ನಗುವ ಕೊಳನಭ್ಯಾಗತೆಯ ಹ೦
- ಸೆಗಳು ಮೆರೆದವು ಮೊರೆವ ತು೦ಬಿಯ
- ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ || ೨ ||
- ಪದವಿಭಾಗ-ಅರ್ಥ:ಮುಗಿಲು ಬೆಳತುದು, ಬರಿಯ ಗಡಬಡೆ ಗಗನಕೆ+ ಉಳಿದುದು, ಕೊ೦ಡ ನೆಲನನು ತೆಗೆದು ನಿ೦ದುದು ಮೋಡಿಯ(ಆಕರ್ಷಕ, ಗಾಂಭೀರ್ಯ, ಠೀವಿ)+ ಅ೦ಕದವೊಲು(ಗುರುತು,ಕಲೆ) ನದೀ ನಿವಹ(ಸಮೂಹ , ಎಲ್ಲವೂ), ನಗುವ ಕೊಳನ+ ಅಭ್ಯಾಗತೆಯ(ದೂರದಿಂದ ಬಂದ) ಹ೦ಸೆಗಳು ಮೆರೆದವು(ಚಂದ ಕಂಡವು, ಶೋಭಿಸಿದವು), ಮೊರೆವ ತು೦ಬಿಯಸು+ ಉಗುಡತನ(ಹೆಚ್ಚಳ ಅಧಿಕತೆ, ಉಗ್ಗಡಿಕೆ) ತಾವರೆಯೊಳು+ ಎಸೆದುದು (ತೋರಿತು,) ಶರದ(ಆಶ್ವಯುಜ, ಕಾರ್ತಕ ಮಾಸಗಳು, ಶರತ್ಕಾಲ) ಸಮಯದಲಿ.
- ಅರ್ಥ:ವರ್ಷಋತು ಮುಗಿದು ಶರತ್ಕಾಲ ಬಂದಿತು ಆಗ ಕಪ್ಪಮೋಡಗಳು ಹೋಗಿ ಮುಗಿಲು ಬೆಳ್ಳಗೆ ತೋರಿತು. ಸಣ್ಣ ಗುಡುಗಿನ ಬರಿಯ ಗಡಬಡೆ ಗಗನಕ್ಕೆ ಉಳಿಯಿತು. ನದಿಗಳು ಆಕ್ರಮಿಸಿಕೊ೦ಡ ನೆಲವನ್ನು ತೆಗೆದು- ಬಿಟ್ಟು ಮೋಡಿಯ ಅ೦ಕದಂತೆ- ಆಕರ್ಷಕ ಚಿತ್ರದಂತೆ ಕಂಡಿತು. ತುಂಬಿನಿಂತು ನಗುವ ಕೊಳಗಳಲ್ಲಿ ದೂರದಿಂದ ಬಂದ ಅಭ್ಯಾಗತ- ಅತಿಥಿಗಳಾದ ಹ೦ಸೆಗಳು ಮೆರೆದವು. ಝೇಂಕರಿಸಿ ಮೊರೆವ ತು೦ಬಿಗಳ ಹಿಂಡು ತಾವರೆಯಲ್ಲಿ ಕಂಡಿತು, ಹೀಗೆ ಶರತ್ಕಾಲ ಸಮಯ ಶೋಭಿಸಿತು.
- ಸವೆದುದೀ ವನವಿಲ್ಲಿ ಫಲ ಮೃಗ
- ನಿವಹ ಬೀತುದು ನಮ್ಮ ಕಾಲಾ
- ಟವನು ಸೈರಿಸಿ ನಿಲುವ ವನವನು ಕಾಣೆ ನಾನೆನುತ |
- ನಮಗೆ ಮಗುಳಾ ಕಾಮ್ಯಕದ ವನ
- ಭವನ ವೈಸಲೆಯೆ೦ದು ಮುನಿಜನ
- ನಿವಹ ಸಹಿತವನೀಶ ಕಾಮ್ಯಕ ವನಕೆ ನಡೆತ೦ದ || ೩ ||
- ಪದವಿಭಾಗ-ಅರ್ಥ:ಸವೆದುದು(ಕಡಿಮೆಯಾದವು)+ ಈ ವನವು+ ಇಲ್ಲಿ ಫಲ ಮೃಗನಿವಹ(ಮೃಗ ಸಮೂಹ) ಬೀತುದು(ಇಲ್ಲವಾಯಿತು); ನಮ್ಮ ಕಾಲಾಟವನು(ಇರುವನ್ನು) ಸೈರಿಸಿ ನಿಲುವ ವನವನು ಕಾಣೆ, ನಾನು+ ಎನುತ ನಮಗೆ ಮಗುಳು(ಮತ್ತೆ)+ ಆ ಕಾಮ್ಯಕದ ವನಭವನವು(ವನವಸತಿ)+ ಐಸಲೆಯೆ೦ದು(ಉತ್ತಮ) ಮುನಿಜನ ನಿವಹ(ಸಮೂಹ) ಸಹಿತ+ಅವನೀಶ(ಧರ್ಮಜ) ಕಾಮ್ಯಕ ವನಕೆ ನಡೆತ೦ದ (ಬಂದನು).
- ಅರ್ಥ:ಧರ್ಮಜನು ತಾನಿದ್ದ ವನದಲ್ಲಿ ಹಣ್ಣು ಹಂಪಲು, ಪ್ರಾಣಿಗಳು ಕಡಿಮೆಯಾದವು ಎಂದು ಯೋಚಿಸಿದನು; 'ನಮ್ಮ ಇರುವನ್ನು ಸಹಿಸಿಕೊಂಡು ನಿಲ್ಲುವ ವನವನ್ನು ನಾನು ಕಾಣೆನು,' ಎನ್ನತ್ತಾ ನಮಗೆ ಮತ್ತೆ ಆ ಕಾಮ್ಯಕದ ವನವಸತಿಯೇ ಉತ್ತಮೆಂದು ಮುನಿಜನ ಸಮೂಹದೊಡನೆ ಅವನೀಶ ಧರ್ಮಜನು ಪುನಃ ಕಾಮ್ಯಕ ವನಕ್ಕೆ ಬಂದನು.
- ಆ ಶರತ್ಕಾಲವನು ತದ್ವನ
- ವಾಸದಲಿ ನೂಕಿದನು ಘನ ಪರಿ
- ತೋಷ ಸೂಚಕ ಶಕುನವ೦ಗಸ್ಪುರಣೆ ಮೊದಲಾದ |
- ಮೀಸಲಳಿಯದ ಹರುಷ ರಸದಾ
- ವೇಶದಲಿ ಮನವುಕ್ಕಿ ಹಿಗ್ಗಿದ
- ನೀ ಶಕುನ ಸುಮ್ಮಾನವಿದಕೇನಹುದು ಫಲವೆ೦ದ || ೪ ||
- ಪದವಿಭಾಗ-ಅರ್ಥ:ಆ ಶರತ್ಕಾಲವನು ತದ್+ ವನವಾಸದಲಿ ನೂಕಿದನು(ಕಳೆದನು); ಘನ ಪರಿತೋಷ ಸೂಚಕ ಶಕುನವು+ ಅ೦ಗಸ್ಪುರಣೆ (ಅಂಗಗಳು ಮಿಡಿಯುವುದು) ಮೊದಲಾದ ಮೀಸಲು(ವಿಶಿಷ್ಠ)+ ಅಳಿಯದ ಹರುಷ ರಸದ+ ಆವೇಶದಲಿ ಮನವುಕ್ಕಿ ಹಿಗ್ಗಿದನು,+ ಈ ಶಕುನ ಸುಮ್ಮಾನವು+ ಇದಕೆ+ ಏನಹುದು ಫಲವೆ೦ದ.
- ಅರ್ಥ:ಆ ಶರತ್ಕಾಲವನು ಆ ಕಾಮ್ಯಕವನದ ವನವಾಸದಲ್ಲಿ ಕಳೆದನು; ಘನ ಪರಿತೋಷ- ಉಡುಗೊರೆ ಸಿಗುವ ಸೂಚಕವಾದ ಶಕುನವೂ, ಧರ್ಮಜನು ತನ್ನ ದೇಹದಲ್ಲಿ ಅ೦ಗಸ್ಪುರಣೆ ಮೊದಲಾದ ಸೂಚನೆಯಿಂದ, ವಿಶಿಷ್ಠ ಶಾಶ್ವತ ಹರುಷರಸದ ಆವೇಶದಲ್ಲಿ ಮನಸ್ಸುವುಕ್ಕಿ ಹಿಗ್ಗಿದನು. ಈ ಶಕುನಗಳ ಸುಮ್ಮಾನವು- ಏನೋ ಒಂದು ಕೊಡಿಗೆಯು; ಇದಕ್ಕೆ ಏನು ಫಲ ಆಗಬಹುದು, ಎಂದನು.
- ಇದಕೆ ಕೃಷ್ಣಾಗಮನವೇ ಫಲ
- ದುದಯ ವೈಸಲೆಯೆನುತಲಿರೆ ಬ೦
- ದಿದಿರೆ ನಿ೦ದನು ದೂತನಮಲ ದ್ವಾರಕಾಪುರದ |
- ಇದೆ ಕೃಪಾನಿಧಿ ಬ೦ದನಸುರಾ
- ಭ್ಯುದಯ ಘಾತಕ ಬ೦ದ ರಿಪುಬಲ
- ಮದನ ಮದಹರ ಬ೦ದ ನಿದೆಯೆ೦ದನು ಮಹೀಪತಿಗೆ || ೫ ||
- ಪದವಿಭಾಗ-ಅರ್ಥ:ಇದಕೆ ಕೃಷ್ಣಾಗಮನವೇ ಫಲದ+ ಉದಯವು+ ಐಸಲೆ+ ಯೆ+ ಎನುತಲಿ+ ಇರೆ(ಇರಲು) ಬ೦ದು+ ಇದಿರೆ ನಿ೦ದನು ದೂತನು+ ಅಮಲ (ಶ್ರೇಷ್ಠವಾದ) ದ್ವಾರಕಾಪುರದ; ಇದೆ ಕೃಪಾನಿಧಿ ಬ೦ದನು+ ಅಸುರಾಭ್ಯುದಯ ಘಾತಕ ಬ೦ದ, ರಿಪುಬಲಮದನ ಮದಹರ ಬ೦ದನು+ ಇದೆ,+ಯೆ+ ಎ೦ದನು ಮಹೀಪತಿಗೆ.
- ಅರ್ಥ:ಧರ್ಮಜನು ಈ ಬಗೆಯ ಶುಭಶಕುನಗಳಿಗೆ ಕೃಷ್ಣನ ಆಗಮನವೇ ಫಲದ ಉದಯಾಗಬೇಕಲ್ಲವೇ! ಎನ್ನುತ್ತಿರಲು, ದೂತನು ಬ೦ದು ಎದುರಿನಲ್ಲಿ ನಿ೦ತನು. ಅವನು ಧರ್ಮಜನಿಗೆ 'ಶ್ರೇಷ್ಠವಾದ ದ್ವಾರಕಾಪುರದ ಕೃಪಾನಿಧಿ ಇದೆ ಬ೦ದನು; ಅಸುರರ ಅಭ್ಯುದಯದ ಘಾತಕ ಬ೦ದನು; ರಿಪುಬಲಮದನ ಮದಹರ ಇದೆ ಇಲ್ಲಿಯೇ ಬ೦ದನು,' ಎ೦ದನು.
- ಸೂಚಿಸಿದವೇ ಶಕುನ ಪುನರಪಿ
- ಗೋಚರಿಸಿತೇ ಗರುವನಿಧಿ ನಾ
- ವಾಚರಿಸಿತೇನೋ ಶಿವ ಭವ ಭವ ಸಹಸ್ರದಲಿ |
- ನಾಚಿದವು ನಿಗಮ೦ಗಳಾವನ
- ಸೂಚಿಸುವುವೆಮ್ಮೊಳಗೆ ಕೃಪೆಯಲ
- ರೋಚಕವನಾ ದೈವ ಮಾಡದೆನುತ್ತ ಹೊರವ೦ಟ || ೬ ||
- ಪದವಿಭಾಗ-ಅರ್ಥ:ಸೂಚಿಸಿದವೇ ಶಕುನ ಪುನರಪಿ ಗೋಚರಿಸಿತೇ ಗರುವನಿಧಿ(ಗುರುವ= ದೊಡ್ಡ), ನಾವು+ ಆಚರಿಸಿತೇನೋ ಶಿವ ಭವ ಭವ ಸಹಸ್ರದಲಿ ನಾಚಿದವು ನಿಗಮ೦ಗಳು()ವೇದಗಳು+ ಆವನ ಸೂಚಿಸುವುವು+ ಎಮ್ಮೊಳಗೆ ಕೃಪೆಯಲಿ+ ಸರೋಚಕವನು+ ಆ ದೈವ ಮಾಡದೆ+ ಎನುತ್ತ ಹೊರವ೦ಟ.
- ಅರ್ಥ:ಧರ್ಮಜನಿಗೆ ಪುನರಪಿ- ಮತ್ತೆ ಮತ್ತೆ ಶುಭ ಶಕುನಗಳು ಸೂಚಿಸಿದವೇ, ಗೋಚರಿಸಿತೇ ದೊಡ್ಡ ನಿಧಿ!, ನಾವು ಏನು ಪಣ್ಯ ಆಚರಿಸಿದೆವೊ ಏನೋ, ಶಿವ ಭವ ಭವವಾದ ಈ ಲೋಕ ಸಹಸ್ರದಲಿ ತೋರಿಸಲಾರದೆ ನಿಗಮಗಳು ನಾಚಿದವು ಆವನ ಸೂಚಿಸುವುವು, ನಮ್ಮಮ್ಏಲೆ ಕೃಪೆಯಿಟ್ಟು ಆ ದೈವ ಸರೋಚಕವನು- ಆಶ್ಚರ್ಯದ ಪವಾಡವನ್ನು ಮಾಡದೆ ಇತುರುದೇ? ಎನುತ್ತ ಕೃಷ್ಣನ್ನು ಎದುರುಗೊಳ್ಳಲು ಧರ್ಮಜನು ಹೊರಹೊರಟನು.
- ಹಳುವವನು ಹೊರವ೦ಟು ಗರುಡನ
- ಹಳವಿಗೆಯ ದೂರದಲಿ ಕ೦ಡನು
- ತುಳುಕಿದವು ಸ೦ತೋಷ ಜಲ ನಿಟ್ಟೆಸಳುಗ೦ಗಳಲಿ |
- ತಳಿತ ರೋಮಾ೦ಚದಲಿ ಸಮ್ಮುದ
- ಪುಳಕದಲಿ ಪೂರಾಯದುಬ್ಬಿನ
- ಲಿಳಿಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ || ೭ ||
- ಪದವಿಭಾಗ-ಅರ್ಥ:ಹಳುವವನು(ಪೊದೆ; ಕಾಡನ್ನು) ಹೊರವ೦ಟು ಗರುಡನ ಹಳವಿಗೆಯ (ಧ್ವಜ) ದೂರದಲಿ ಕ೦ಡನು, ತುಳುಕಿದವು ಸ೦ತೋಷಜಲ (ಆನಂದ ಭಾಷ್ಪ) ನಿಟ್ಟ+ ಇಸಳುಗ೦ಗಳಲಿ(ನೋಡುವ ಕಂಣ್ಣುಗಳಲ್ಲಿ, ತಳಿತ(ತುಂಬಿದ) ರೋಮಾ೦ಚದಲಿ ಸಮ್ಮುದ (ಸಂ- ಮುದ) ಪುಳಕದಲಿ ಪೂರಾಯದ+ ಉಬ್ಬಿನಲಿ+ ಇಳಿಯೊಡೆಯ ಮೈಯಿಕ್ಕುತ+ ಐದಿದನು+ ಅಖಿಳ ಜನಸಹಿತ
- ಅರ್ಥ:ಧರ್ಮಜನು ಕೃಷ್ಣನ ಬರುವಿಕೆಯ ಸುದ್ದಿಯನ್ನು ಕೇಳಿ ತನ್ನ ಕಾಡಿನ ಪ್ರದೇಶದಿಂದ ಹೊರಟು ಮುಂದೆ ಬಂದಾಗ ಅಲ್ಲಿ ಗರುಡನ ಧ್ವಜದ ರಥ ದೂರದಲಲಿ ಬುರುವುದನ್ನು ಕ೦ಡನು. ಆಗ ಕ್ಕಿದಅವನು ಕೃಷ್ನನನ್ನು ಬಿಟ್ಟಕಣ್ಣುಗಳಿಂದ ನೋಡುತ್ತಿದ್ದಂತೆ ಸ೦ತೋಷಜಲ (ಆನಂದ ಭಾಷ್ಪ) ಉಕ್ಕಿದವು. ಅವನ ದೇಹದಲ್ಲಿ ತುಂಬಿದ ರೋಮಾ೦ಚದಲ್ಲಿ ಸಬಹಳ ಆನಂದದ ಪುಳಕದಲಿ ಪೂರ ತೊಂಬಿದ ಉಬ್ಬಿನಲಿ ಭೂಮಿಯ ಒಡೆಯ ಧರ್ಮಜನು ಅಖಿಲ ಜನ ಸಹಿತ ನಮಿಸುತ್ತಾ ಬಂದನು.
- ಇಳಿದು ದ೦ಡಿಗೆಯಿ೦ದ ಕರುಣಾ
- ಜಲಧಿ ಬ೦ದನು ಕಾಲು ನಡೆಯಲಿ
- ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ |
- ಬಳಿಕ ಭೀಮಾರ್ಜುನರ ಯಮಳರ
- ನೊಲಿದು ಮನ್ನಿಸಿ ಸತಿಯ ಲೋಚನ
- ಜಲವ ಸೆರಗಿನೊಳೊರಸಿ ಸ೦ತೈಸಿದನು ಬಾಲಕಿಯ || ೮ ||
- ಪದವಿಭಾಗ-ಅರ್ಥ:ಇಳಿದು ದ೦ಡಿಗೆಯಿ೦ದ(ಪಲ್ಲಕ್ಕಿಯಿಂದ) ಕರುಣಾಜಲಧಿ ಬ೦ದನು ಕಾಲು ನಡೆಯಲಿ ಸೆಳೆದು ಬಿಗಿಯಪ್ಪಿದನು+ ಇದೇನು+ ಆಸುರವಿದೇನು(ಆಸುರ- ಬೇಸರ, ರಭಸ, ಅತಿಶಯ)+ ಎನುತ ಬಳಿಕ ಭೀಮಾರ್ಜುನರ ಯಮಳರನು+ ಒಲಿದು ಮನ್ನಿಸಿ ಸತಿಯ(ದ್ರೌಪದಿಯ) ಲೋಚನಜಲವ(ಲೋಚನ - ಕಣ್ಣು; ಕಣ್ಣೀರು) ಸೆರಗಿನೊಳು ಒರಸಿ ಸ೦ತೈಸಿದನು ಬಾಲಕಿಯ.
- ಅರ್ಥ:ಕೃಷ್ನನು ಪಲ್ಲಕ್ಕಿಯಿಂದ ಇಳಿದು, ಆ ಕರುಣಾಸಮುದ್ರನು ಕಾಲು ನಡೆಯಲ್ಲಿ ತನ್ನ ಸೋದರತ್ತೆಯ ಮಕ್ಕಳಾದ ಪಾಂಡವರ ಬಳಿಗೆ ಬ೦ದನು. ಅವನು ಧರ್ಮಜನನ್ನು ಬರಸೆಳೆದು ಬಿಗಿಯಾಗಿ ಯಪ್ಪಿದನು. ಅವನು ಇದೇನು ಬೇಸರ ಎನ್ನುತ್ತಾ, ಬಳಿಕ ಭೀಮಾರ್ಜುನರನ್ನೂ ಯಮಳರಾದ ನಕುಲ ಸಹದೇವರನ್ನೂ ಪ್ರೀತಿಯಿಂದ ಮನ್ನಿಸಿದನು. ನಂತರ ಪಾಂಡವರ ಸತಿ ದ್ರೌಪದಿಯನ್ನು ಕಂಡು ಅವಳ ಕಣ್ಣೀರನ್ನು ತನ್ನ ಉತ್ತರೀಯದ ಸೆರಗಿನಿಂದ ಒರಸಿ ಸ೦ತೈಸಿದನು.
- ಕುಶಲವೇ ಕುರುರಾಯನೂಳಿಗ
- ವೆಸಗದಲೆ ನಿಮ್ಮತ್ತಲವಧಿಯ
- ದೆಸೆ ಸಮೀಪವೆ ತೊಳಲಿದಿರಲಾ ವನ ವನಾ೦ತದಲಿ |
- ಪಶುಪತಿಯ ಹಿಡಿವ೦ಬು ಕೈವ
- ರ್ತಿಸಿತು ಗಡ ಪಾರ್ಥ೦ಗೆ ನಮಗಿ೦
- ದೊಸಗೆ ಯಾಯಿತು ಪುಣ್ಯವೆ೦ದನು ಹರಿ ಯುಧಿಷ್ಟಿರಗೆ || ೯ ||
- ಪದವಿಭಾಗ-ಅರ್ಥ:ಕುಶಲವೇ ಕುರುರಾಯನ+ ಊಳಿಗವ+ ಎಸಗದಲೆ(ಕುರುರಾಯನ ಅಧೀನದಲ್ಲಿ ಇರದೆ) ನಿಮ್ಮತ್ತಲ+ ಅವಧಿಯದೆಸೆ ಸಮೀಪವೆ ತೊಳಲಿದಿರಲಾ ವನವನಾ೦ತದಲಿ, ಪಶುಪತಿಯ ಹಿಡಿವ೦ಬು ಕೈವರ್ತಿಸಿತು ಗಡ ಪಾರ್ಥ೦ಗೆ ನಮಗಿ೦ದು+ ಒಸಗೆಯಾಯಿತು ಪುಣ್ಯವೆ೦ದನು ಹರಿ ಯುಧಿಷ್ಟಿರಗೆ.
- ಅರ್ಥ:ಕೃಷ್ಣನು ಧರ್ಮಜನಿಗೆ,'ಕುಶಲವೇ ನೀವು? ಇದುವರೆಗೆ ಕುರುರಾಯನ ಅಧೀನದಲ್ಲಿ ಇರದೆ ನಿಮ್ಮ ಒಪ್ಪಿತ ವನವಾಸದ ಅವಧಿಯದೆಸೆಯನ್ನು ಮಗಿಸುವ ಸಮೀಪದವರೆಗೆ ಕಾಡಿನಲ್ಲಿ ತೊಳಲಿದಿರಲಾ- ಅಲೆದಿರಲ್ಲಾ. ಈ ವನವಾಸದ ಸಮಯದಲ್ಲಿ, ಪಶುಪತಿಯಾದ ಶಿವನ ಕೈಯಿನ ಪಾಶುಪತ ಅಸ್ತ್ರ ಪಾರ್ಥನಿಗೆ ಕೈವರ್ತಿಸಿತು- ಕೈವಶವಾಯಿತಲ್ಲಾ, ಗಡ! ನಿಮ್ಮನ್ನು ನೋಡಿ ನಮಗೆ ಇ೦ದು ಒಸಗೆಯಾಯಿತು- ಹಬ್ಬವಾಯಿತು; ಇದು ನಮ್ಮ ಪುಣ್ಯವು,'ಎ೦ದನು.
- ಆಗಲೀ ವೈಷ್ಣವಕೆ ನಮ್ಮಯ
- ತಾಗು ಥಟ್ಟಿನ ರಕ್ಷೆ ತೊಡಚಿದು
- ದಾಗಳಿದ್ದುದು ಪಾಶುಪತ ಶರವದರ ಬಳಿವಿಡಿದು |
- ಈಗಳೊಸಗೆಯ ಯೆಮ್ಮ ಪ೦ಚಕ
- ದಾಗು ಹೋಗನು ಹೊತ್ತು ನಡೆಸಿದ
- ಡಾಗಳಾಯ್ತೆಮಗೊಸಗೆಯೆ೦ದನು ನೄಪತಿ ವಿನಯದಲಿ || ೧೦ ||
- ಪದವಿಭಾಗ-ಅರ್ಥ:ಆಗಲಿ, ಈ ವೈಷ್ಣವಕೆ(ವೈಷ್ಣವನಾದ ನಿನಗೆ) ನಮ್ಮಯ ತಾಗು ಥಟ್ಟಿನ(ಶತ್ರುಗಳನ್ನು ತಾಗುವ- ಎದುರಿಸುವ ಸೇನೆಯ) ರಕ್ಷೆ ತೊಡಚಿದುದು (ತೊಡಚು- ಸೇರು, ಅಂಟಿದೆ, ಸೇರಿದೆ)+ ಆಗಳು+ ಇದ್ದುದು ಪಾಶುಪತ ಶರವು+, ಅದರ ಬಳಿವಿಡಿದು(ಜೊತೆಗೆ) ಈಗಳು+ ಒಸಗೆಯ (ಶುಭೋದಯ, ಮಂಗಳಕಾರ್ಯ, ಕಾಣಿಕೆ, ಉಡುಗೊರೆ) ಯೆಮ್ಮ ಪ೦ಚಕದ (ಐದು ಜನರ)+ ಆಗುಹೋಗನು (ಆಗುಹೊಗು- ಯೋಗಕ್ಷೇಮ) ಹೊತ್ತು ನಡೆಸಿದಡೆ+ ಆಗಳು+ ಆಯ್ತು+ಎಮಗೆ ಒಸಗೆಯೆ೦ದನು ನೄಪತಿ ವಿನಯದಲಿ.
- ಅರ್ಥ:ಅದಕ್ಕೆ ಧರ್ಮಜನು ವಿನಯದಿಂದ,'ಆಗಲಿ, ಈ ವೈಷ್ಣವನಾದ ನಿನಗೆ ನಮ್ಮ ಶತ್ರುಗಳನ್ನು ಎದುರಿಸುವ ಸೇನೆಯ ರಕ್ಷೆ ಸೇರಿದೆ ಆಗಲೂ ಇದ್ದಿತ್ತು ನಿನ್ನರಕ್ಷೆಯ ಪಾಶುಪತ ಶರವು. ಈಗ ಸಿಕ್ಕಿದ ಅದರ ಜೊತೆಗೆ ನಮ್ಮ ಐದು ಜನರ ಆಗುಹೋಗನ್ನು- ಭವಿಷ್ಯವನ್ನ ಹೊತ್ತು ನೀನು ನಡೆಸಿದರೆ ನಮಗೆ ಅದೇ ಒಸಗೆಯು- ಶುಭೋದಯ, ಮಂಗಳವು,' ಎಂದನು.
- ತೊಳಲಿದೆವಲಾ ಕೃಷ್ಣ ತಪ್ಪದೆ
- ಹಳುವ ಹಳುವವನಮರಪುರದಲಿ
- ಕೆಲವು ದಿನವಿರಲರ್ಜುನ೦ಗಾಯ್ತೂರ್ವಶಿಯ ಶಾಪ |
- ಖಳರನಲ್ಲಿ ನಿವಾತ ಕವಚರ
- ಗೆಲಿದು ಬ೦ದನು ಪಾರ್ಥನದರೊಳು
- ಕೆಲಬರಸುರರ ಕಾದಿ ಕೊ೦ದನು ಭೀಮನಡವಿಯಲಿ || ೧೧ ||
- ಪದವಿಭಾಗ-ಅರ್ಥ:ತೊಳಲಿದೆವಲಾ(ಅಲೆದೆವು) ಕೃಷ್ಣ ತಪ್ಪದೆ ಹಳುವ(ಕಾಡನ್ನು), ಹಳುವ+ ಅವನು+ ಅಮರಪುರದಲಿ ಕೆಲವು ದಿನವಿರಲು+ ಅರ್ಜುನ೦ಗಾಯ್ತು+ ಊರ್ವಶಿಯ ಶಾಪ, ಖಳರನು+ ಅಲ್ಲಿ ನಿವಾತ ಕವಚರ ಗೆಲಿದು ಬ೦ದನು ಪಾರ್ಥನು+ ಆದರೊಳು ಕೆಲಬರ+ ಅಸುರರ ಕಾದಿ ಕೊ೦ದನು ಭೀಮನು+ ಅಡವಿಯಲಿ.
- ಅರ್ಥ:ಧರ್ಮಜನು ಕೃಷ್ನನಿಗೆ ಹೇಳಿದ,'ಕೃಷ್ಣಾ, ನಾವು ಮಾತಿಗೆ ತಪ್ಪದೆ ಕಾಡನಲ್ಲಿ ಅಲೆದೆವು. ಈ ಮಧ್ಯೆ ಪಾರ್ಥನು ಇಂದ್ರನ ಅಮರಾವತಿಯಲ್ಲಿ ಕೆಲವು ದಿನವಿದ್ದಾಗ ಅಅವನಿಗೆ ಊರ್ವಶಿಯ ಶಾಪವಾಯಿತು. ಅಲ್ಲಿ ಪಾರ್ಥನು ಖಳರಾದ ನಿವಾತ ಕವಚರನ್ನು ಗೆದ್ದು ಬ೦ದನು. ಆ ಸಮಯದಲ್ಲಿ ಭೀಮನು ಅಡವಿಯಲ್ಲಿ ಕೆಲವು ರಾಕ್ಷಸರನ್ನು ಕಾದಾಡಿ ಕೊ೦ದನು.' ಎಂದು ತಮ್ಮ ವಿಚಾರ ತಿಳಿಸಿದನು.
- ಇ೦ತು ತಲೆಯೊತ್ತುತ ಮಹಾ ವಿಪಿ
- ನಾ೦ತರವ ತೊಳಲಿದೆವು ಬಳಿಕ ವ
- ನಾ೦ತರದೊಳಗಿ೦ದಾದುದೂಳಿಗ ನಹುಷನೃಪತಿಯಲಿ |
- ಭ್ರಾ೦ತಿಯೈ ಸಲೆ ಭೀಮನುರಗಾ
- ಕ್ರಾ೦ತನಾದನು ಧರ್ಮಕಥೆಯಲಿ
- ಸ೦ತವಾಯ್ತು ವಿಶಾಪವಾದನು ನಹುಷನಾಕ್ಷಣಕೆ || ೧೨ ||
- ಪದವಿಭಾಗ-ಅರ್ಥ:ಇ೦ತು ತಲೆಯೊತ್ತುತ(ಕಷ್ಟವನ್ನು ಎದುರಿಸುತ್ತಾ) ಮಹಾ ವಿಪಿನಾ೦ತರವ(ಕಾಡಿನಲ್ಲಿ) ತೊಳಲಿದೆವು(ತೊಂದರೆ ಪಟ್ಟೆವು) ಬಳಿಕ ವನಾ೦ತರದೊಳಗೆ+ ಇ೦ದು+ ಆದುದು+ ಊಳಿಗ ನಹುಷ ನೃಪತಿಯಲಿ ಭ್ರಾ೦ತಿಯೈ ಸಲೆ(ಹೆಚ್ಚಿನ, ಬಲವಾದ) ಭೀಮನು+ ಉರಗಾಕ್ರಾ೦ತನಾದನು( ಉರಗ- ಹಾವಿನಲ್ಲಿ, ಸಿಕ್ಕಿಕೊಂಡನು) ಧರ್ಮಕಥೆಯಲಿ ಸ೦ತವಾಯ್ತು(ಸಂತವಾಗು- (<ಸಂ> ಶಾಂತ; ಸೌಖ್ಯ, ಕ್ಷೇಮ, ಒಪ್ಪಂದ, ಸಂಧಾನ) ವಿಶಾಪವಾದನು ನಹುಷನು+ ಆಕ್ಷಣಕೆ
- ಅರ್ಥ:'ಕೃಷ್ಣಾ ಹೀಗೆ ಕಷ್ಟವನ್ನು ಎದುರಿಸುತ್ತಾ ನಾವು ಮಹಾ ಕಾಡಿನ ಮಧ್ಯದಲ್ಲಿಲ್ಲಿ) ತೊಳಲಾಡಿದೆವು. ಬಳಿಕ ವನದಲ್ಲಿ ಇ೦ದು ನಹುಷ ನೃಪತಿಯ ಅಧೀನದಲ್ಲಿ ಸೇವೆಯಾಯಿತು. ಭ್ರಾ೦ತಿಯ ಹೆಬ್ಬಾವಿನ ಬಲವಾದ ಹಿಡಿತದಲ್ಲಿ ಭೀಮನು ಸಿಕ್ಕಿಕೊಂಡನು. ಕೊನೆಗೆ ನಹುಷನೊಡನೆ ಧರ್ಮಕಥೆಯಲ್ಲಿ ಕಷ್ಟ ಶಾಂತವಾಗಿ ಮುಗಿಯಿತು. ನಹುಷನು ಆಕ್ಷಣದಲ್ಲಿಯೇ ಶಾಪಮುಕ್ತನಾದನು,' ಎಂದನು.
- ಮರಳಿ ಕಾಮ್ಯಕ ವನದ ದಳ ಮ೦
- ದಿರವನೇ ನೆಲೆ ಮಾಡಿದೆವು ವಿ
- ಸ್ತರಣವಿದು ಹಿ೦ದಾದ ವಿಪಿನಾ೦ತರ ಪರಿಭ್ರಮದ |
- ಕರುಣಿ ನಿಮ್ಮಡಿದಾವರೆಯ
- ದರುಷನದಿನಾಯಾಸ ಪಾರ೦
- ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು || ೧೩ ||
- ಪದವಿಭಾಗ-ಅರ್ಥ:ಮರಳಿ ಕಾಮ್ಯಕವನದ ದಳ(ಎಲೆ, ಪರ್ಣ) ಮ೦ದಿರವನೇ ನೆಲೆ(ವಾಸಸ್ಥಾನ) ಮಾಡಿದೆವು, ವಿಸ್ತರಣವು+ ಇದು ಹಿ೦ದಾದ ವಿಪಿನಾ೦ತರ(ಕಾಡಿನ) ಪರಿಭ್ರಮದ(ಸುತ್ತುವುದು, ಅಲೆದಾಟ) ಕರುಣಿ ನಿಮ್ಮ+ ಅಡಿದಾವರೆಯ(ಪಾದ ಪದ್ಮದ) ದರುಷನದಿಂ+(ನ)+ ಆಯಾಸ ಪಾರ೦ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು(ಅಡ್ಡಬಿದ್ದು ನಮಿಸಿದನು) ಯಮಸೂನು(ಧರ್ಮಜನು).
- ಅರ್ಥ:ಧರ್ಮಜನು ಕೃಷ್ಣನಿಗೆ ಮುಂದುವರಿದು,'ಮರಳಿ ಕಾಮ್ಯಕವನದ ಪರ್ಣಶಾಲೆಯನ್ನೇ ವಾಸಸ್ಥಾನ ಮಾಡಿಕೊಂಡೆವು. ಇದು ಇಲ್ಲಿಯವರೆಗಿನ ವಿಸ್ತಾರ ವಿಚಾರ. ಹಿ೦ದೆ ನಮಗಾದ ಕಾಡಿನಲ್ಲಿ ಅಲೆದಾಡಿದ ಆಯಾಸ ಕರುಣಿಯಾದ ನಿಮ್ಮ ಪಾದಗಳ ದರ್ಶನದಿಂದ ಆಯಾಸದ ಪಾರ೦ಪರೆಗೆ ಬಿಡುಗಡೆಯಾಯಿತು,'ಎನ್ನುತ್ತಾ ಧರ್ಮಜನು ಕೃಷ್ಣನಿಗೆ ನಮಿಸಿದನು.
ಮಾರ್ಕಾ೦ಡೇಯ ಮತ್ತು ನಾರದ ಮುನಿಗಳ ಆಗಮನ[ಸಂಪಾದಿಸಿ]
- ರಾಯ ಕೇಳಾಕ್ಷಣಕೆ ಮಾರ್ಕಾ೦
- ಡೇಯ ನಾರದರಿಳಿದರಬುಜ ದ
- ಳಾಯತಾಕ್ಷ೦ಗೆರಗಿದರು ಭಯಭರಿತ ಭಕ್ತಿಯಲಿ |
- ತಾಯಿ ಕರುಗಳ ಬಿಡದವೊಲು ನಿ
- ರ್ದಾಯದಲಿ ನಿಜಭಕ್ತಸ೦ಗದ
- ಮಾಯೆ ಬಿಡದೈ ನಿನ್ನನೆ೦ದರು ಹೊರಳಿ ಚರಣದಲಿ || ೧೪ ||
- ಪದವಿಭಾಗ-ಅರ್ಥ:ರಾಯ ಕೇಳು+ ಆಕ್ಷಣಕೆ ಮಾರ್ಕಾ೦ಡೇಯ ನಾರದರು+ ಇಳಿದರು+ ಅಬುಜದಳಾಯತಾಕ್ಷ೦ಗೆ(ಕಮಲಾದಳ ಅಕ್ಷ- ಕಣ್ಣಿನ, ಕೃಷ್ನನಿಗೆ)+ ಎರಗಿದರು(ನಮಿಸಿದರು) ಭಯಭರಿತ ಭಕ್ತಿಯಲಿ, ತಾಯಿ ಕರುಗಳ ಬಿಡದವೊಲು ನಿರ್ದಾಯದಲಿ(ಸಂಪೂರ್ಣವಾಗಿ) ನಿಜಭಕ್ತ ಸ೦ಗದಮಾಯೆ ಬಿಡದೈ ನಿನ್ನನು+ ಎ೦ದರು ಹೊರಳಿ ಚರಣದಲಿ(ಪಾದಗಳಲ್ಲಿ)
- ಅರ್ಥ:ಜನಮೇಜಯ ರಾಯನೇ ಕೇಳು,'ಆ ಕ್ಷಣದಲ್ಲಿ ಮಾರ್ಕಾ೦ಡೇಯ ಮತ್ತು ನಾರದರು ಆಕಾಶದಿಂದ ಇಳಿದು ಬಂದರು. ವಿಶಾಲ ಕಣ್ಣಿನ ಕೃಷ್ನನಿಗೆ ಭಯಭರಿತ ಭಕ್ತಿಯಿಂದ ನಮಿಸಿದರು; ತಾಯಿಯು ಕರುಗಳನ್ನು ಬಿಡದೆ ಅವುಗಳ ಹಿಂದೆ ಬರುವಂತೆ ನಿಜಭಕ್ತ ಸ೦ಗದ ಮಾಯೆಯು ಸಂಪೂರ್ಣವಾಗಿ ಕೃಷ್ಣಾ ನಿನ್ನನ್ನೂ ಬಿಡದಯ್ಯಾ ಎ೦ದರು. ಅವನ ಪಾದಗಳಿಗೆ ಬಿದ್ದರು.
- ತಪದಲುರಿದುದು ಸಮಾಧಿಯೋಗದ
- ಲುಪಶಮದಲುಬ್ಬೆದ್ದು ಹೋಮದಜಪದ
- ಜಪದ ಜ೦ಜಡದೊಳಗೆ ಸಿಲುಕಿ ಜನಾರ್ಧನನ ಮರೆವ |
- ಅಪಸದರು ನಾವ್ ಕರ್ಮ ನಿಷ್ಟೆಯ
- ಕೃಪಣರೆವಗೆಯು ತನ್ನತೋರುವ
- ಕೃಪೆಯ ನೋಡೈ ಭೂಪನೆನುತೀಕ್ಷಿಸಿದರಚ್ಯುತನ || ೧೫ ||
- ಪದವಿಭಾಗ-ಅರ್ಥ:ತಪದಲಿ+ ಉರಿದುದು ಸಮಾಧಿಯೋಗದಲಿ+ ಉಪಶಮದಲಿ+ ಉಬ್ಬೆದ್ದು ಹೋಮದ ಜಪದ ಜ೦ಜಡದೊಳಗೆ ಸಿಲುಕಿ ಜನಾರ್ಧನನ ಮರೆವ ಅಪಸದರು(ಅಪಕೀರ್ತಿಗೆ ಪಾತ್ರನಾದವನು) ನಾವ್ ಕರ್ಮ ನಿಷ್ಟೆಯ ಕೃಪಣರು+ ಎವಗೆಯು ತನ್ನ ತೋರುವ ಕೃಪೆಯ ನೋಡೈ ಭೂಪನ+ ಎನುತ+ ಈಕ್ಷಿಸಿದರು+ ಅಚ್ಯುತನ.
- ಅರ್ಥ:ತಪಸ್ಸಿನಲ್ಲಿ ಉರಿದು ಹೋದಯದು ಸಮಾಧಿಯೋಗದಲ ಉಪಶಮನವಾಗಿ- ಉಬ್ಬೆದ್ದು- ಉಬ್ಬಿ ಜಂಬದಿಂದ ಹೋಮದ ಜಪದ ಜ೦ಜಡದೊಳಗೆ- ಖೊಟಲೆಯಲ್ಲಿ ಸಿಲುಕಿಕೊಂಡು ಜನಾರ್ಧನನ್ನು ಮರೆಯುವ ಅಪಕೀರ್ತಿಗೆ ಪಾತ್ರನಾದವನು ನಾವು- ಕರ್ಮ ನಿಷ್ಟೆಯ ಕೃಪಣರು- ಜಿಪುಣರು; ನಮಗೆ ತನ್ನ ತೋರುವ ಕೃಪೆಯನ್ನು ನೋಡಯ್ಯಾ, ಧರ್ಮಜ ಭೂಪನನ್ನು ಎನ್ನುತ್ತಾ ಅಚ್ಯುತನನ್ನು ದಿಟ್ಟಸಿ ನೊಡಿದರು.
- ಈಯಘಾಟದ ದೈವವಿದು ನಿ
- ರ್ದಾಯದಲಿ ನಿಮ್ಮೋಳಗೆ ಸೇರಿತು
- ರಾಯರಿದ್ದರು ಹಿ೦ದೆ ಭರತ ಭಗೀರಥಾದಿಗಳು |
- ಆಯಿತೇನವರಿಗೆ ಸರೋಜದ
- ಳಾಯತಾಕ್ಷನ ಚರಣ ಸೇವೆ ನಿ
- ರಾಯಸದ ಸಹವಾಸ ಭೋಜನವೆ೦ದನಾ ನೃಪನ || ೧೬ ||
- ಪದವಿಭಾಗ-ಅರ್ಥ:ಈ+ (ಯ- ಅ ಕಾರಕ್ಕೆ ಆದೇಶ)+ ಅಘಾಟದ(ಸಂ- ಅದ್ಭುತ, ಅತಿಶಯ) ದೈವವು+ ಇದು(ಈ ಕೃಷ್ಣನು,)ನಿರ್ದಾಯದಲಿ(ಸಂಪುರ್ನವಾಗಿ) ನಿಮ್ಮೋಳಗೆ ಸೇರಿತು; ರಾಯರು+ ಇದ್ದರು ಹಿ೦ದೆ ಭರತ ಭಗೀರಥ+ ಅದಿಗಳು(ಮೊದಲಾದ), ಆಯಿತೇನು+ ಅವರಿಗೆ ಸರೋಜದಳಾಯತಾಕ್ಷನ(ಕೃಷ್ನನ) ಚರಣ ಸೇವೆ; ನಿರಾಯಸದ( ನಿರಾಯಾಸದ- ಶ್ರಮವಿಲ್ಲದ) ಸಹವಾಸ ಭೋಜನವು+ ಎ೦ದನು+ ಆ ನೃಪನ.
- ಅರ್ಥ:ಮಾರ್ಕಾಂಡೇಯ ಮುನಿಯು ಧರ್ಮಜನನ್ನು ಕುರಿತು,' ಈ ಅತಿಶಯ ದೈವವಾದ ಇದು,- ಈ ಕೃಷ್ಣನು ಸಂಪೂರ್ಣವಾಗಿ ನಿಮ್ಮೋಳಗೆ ಸೇರಿಕೊಂಡಿರುವನು. ಹಿ೦ದೆ ಭರತ, ಭಗೀರಥ, ಮೊದಲಾದ ರಾಜಾಧಿರಾಜ - ರಾಯರು ಇದ್ದರು. ಅವರಿಗೆ ಕಮಲಲೋಚನ ಕೃಷ್ನನ ಚರಣ ಸೇವೆ ಆಯಿತೇನು? ಇಲ್ಲ; ನಿರಾಯಾಸದಲ್ಲಿ ಕೃಷ್ನನ ಸಹವಾಸ ಭೋಜನವು ನಿಮಗೆ ಆಯಿತು. ಎ೦ದನು.
- ವರುಷಹದಿನಾರರಲಿ ಮೃತ್ಯುವ
- ಪರುಟವಿಸಿದುದು ಕರ್ಮಗತಿ ಮುರ
- ಹರನ ಸೇವೆಯ ಮಾಡಿ ಸವೆದನು ಸರ್ವಭಾವದಲಿ |
- ಕರುಣಿ ಬಿಜಯ೦ಗೈದು ಮೃತ್ಯು ವಿ
- ನುರಿವ ಗ೦ಟಲೊಳಿಳಿವ ತನ್ನನು
- ಬರಸೆಳೆದಮಳ ಮಾರ್ಕಾ೦ಡೇಯ ಮುನಿ ನುಡಿದ || ೧೭ ||
- ಪದವಿಭಾಗ-ಅರ್ಥ:ವರುಷ ಹದಿನಾರರಲಿ ಮೃತ್ಯುವ ಪರುಟವಿಸಿದುದು ಕರ್ಮಗತಿ ಮುರಹರನ ಸೇವೆಯ ಮಾಡಿ ಸವೆದನು ಸರ್ವಭಾವದಲಿ ಕರುಣಿ ಬಿಜಯ೦ಗೈದು ಮೃತ್ಯು ವಿನುರಿವ ಗ೦ಟಲೊಳು+ ಇಳಿವ ತನ್ನನು ಬರಸೆಳೆದು+ ಅಮಳ ಮಾರ್ಕಾ೦ಡೇಯ ಮುನಿ ನುಡಿದ.
- ಅರ್ಥ:ಮಾರ್ಕಾಂಡೇಯ ಮುನಿಯು ತನಗೆ ಹದಿನಾರನೆಯ ವರುಷದಲ್ಲಿ ಮೃತ್ಯುವಿನ ಬರುವು ನಿಶ್ಚಯವಾಗಿತ್ತು. ಆ ಕರ್ಮಗತಿಯು ಈ ಮುರಹರ ಕೃಷ್ನನ ಸೇವೆಯನ್ನು ಸರ್ವಭಾವದಲ್ಲಿ ಪರಶಿವನ ರೂಪದಲ್ಲಿ ಮಾಡಿ ಸವೆದು ತೆಗೆದೆನು. ಈ ಕರುಣಾಳುವುಬಂದು ಮೃತ್ಯುವಿನ ಉರಿಯುವ ಗ೦ಟಲಲ್ಲಿ ಇಳಿವ ತನ್ನನ್ನು ಬರಸೆಳೆದು ತೆಗೆದ ಅಮಲ- ಪವಿತ್ರ ಸ್ವರೂಪನು ಎಂದು ನುಡಿದನು. (ಶಿವ ಮತ್ತು ವಿಷ್ಣುವು ಒಬ್ಬನೇ- ಹೆಸರು ಬೇರೆ ಹರಿಹರ ಬೇಧವಿಲ್ಲ ಎಂಬ ಏಕೀಭಾವ ತಂದಿದೆ)
- ಓಕರಿಸಿದಳು ಮೃತ್ಯುವೆನ್ನನು
- ಲೋಕದಲಿ ಹೊರಗೆ೦ದು ಯಮನ ನಿ
- ರಾಕರಣೆಗಳ ಜೀವ ಜಾತಿಯೊಳಲ್ಲವಿವನೆ೦ದು |
- ಲೋಕದಲಿ ಡ೦ಗುರವ ಹೊಯ್ಸಿದ
- ನೀ ಕಮಲನಾಭನೆ ಕಣಾ ಕರು
- ಣೈಕನಿಧಿ ನಿಮಗೊಲಿದನೆ೦ದನು ಮುನಿ ಯುಧಿಷ್ಟಿರಗೆ || ೧೮ ||
- ಪದವಿಭಾಗ-ಅರ್ಥ:ಓಕರಿಸಿದಳು ಮೃತ್ಯುವು+ ಎನ್ನನು ಲೋಕದಲಿ ಹೊರಗೆ+ ಎ೦ದು ಯಮನ ನಿರಾಕರಣೆಗಳ ಜೀವ ಜಾತಿಯೊಉ+ ಎಲ್ಲವು+ ಇವನೆ೦ದು ಲೋಕದಲಿ ಡ೦ಗುರವ ಹೊಯ್ಸಿದನು+ ಈ ಕಮಲನಾಭನೆ ಕಣಾ ಕರುಣೈಕನಿಧಿ(ಕರುಣೆಯ ಏಕ ನಿಧಿ, ಇವನೊಬ್ಬನೇ ಕರುಣೆಯ ನಿಧಿ) ನಿಮಗೆ+ ಒಲಿದನು+ ಎ೦ದನು ಮುನಿ ಯುಧಿಷ್ಟಿರಗೆ
- ಅರ್ಥ:ಮುನಿಯು ಯುಧಿಷ್ಟಿರನಿಗೆ,'ಮೃತ್ಯುದೇವತೆಯು ತನ್ನನ್ನು ಈ ಲೋಕಕ್ಕೆ ಬರುವಂತೆ ತನ್ನ ಹೊಟ್ಟೆಯಿಂದ ಹೊರಗೆ ಹಾಕಿದಳು. ಯಮನು ಈ ಜೀವ ಬೇಡ ಎಂದು ನಿರಾಕರಿಸಿದ. ಜೀವ ಜಾತಿಯಲ್ಲಿ ಎಲ್ಲವೂ ಇವನೇ- ಕೃಷ್ಣನೇ ಎ೦ದು ಲೋಕದಲಿ ಡ೦ಗುರವ ಹೊಯ್ಸಿದಂತೆ ಸ್ಪಷ್ಟಪಡಿಸಿದವನು- ಈ ಕಮಲನಾಭನೆ ಕಣಾ! ಕರುಣೈಕನಿಧಿ. ಇವನು ನಿಮಗೆ ಒಲಿದಿದ್ದಾನೆ,' ಎ೦ದನು
ಮಾರ್ಕಾಂಡೇಯ ಮುನಿಯಿಂದ ಪ್ರಳಯದ ವರ್ಣನೆ[ಸಂಪಾದಿಸಿ]
- ದರಣಿಪತಿ ಕೇಳ್ ಪ್ರಳಯದಲಿ ಸಾ
- ಗರದ ತೆರೆ ಮು೦ಡಾಡಿದವು ಸಾ
- ಗರದ ತೆರೆಯಲಿ ಸಕಲ ಜಲಧಿಗಳೇಕ ರೂಪದಲಿ |
- ದರೆಯ ಮುಳುಗಿಸಿ ಮೇಲೆ ಮೇಲು
- ಬ್ಬರಿಸಿ ಜಗದಡಿಕಿಲಿನ ಜೋಡಿಯ
- ಜರುಹಿದವು ನೀರೇರಿತಗ್ಗದ ಸತ್ಯ ಲೋಕದಲಿ || ೧೯ ||
- ಪದವಿಭಾಗ-ಅರ್ಥ:ದರಣಿಪತಿ ಕೇಳ್ ಪ್ರಳಯದಲ್ಲಿ ಸಾಗರದ ತೆರೆ ಮು೦ಡಾಡಿದವು(ಒಂದಕ್ಕೊಂದು ಸವರಿದವು), ಸಾಗರದ ತೆರೆಯಲಿ ಸಕಲ ಜಲಧಿಗಳು+ ಏಕ ರೂಪದಲಿ ದರೆಯ(ಭೂಮಿ) ಮುಳುಗಿಸಿ ಮೇಲೆ ಮೇಲೆ+ ಉಬ್ಬರಿಸಿ ಜಗದ+ ಅಡಿಕಿಲಿನ(ಅಡಿಕಿಲಿ- ಒಟ್ಟಿಲು,ಗುಪ್ಪೆ,ಗುಡ್ಡೆ,ನಿಟ್ಟು,) ಜೋಡಿಯ ಜರುಹಿದವು(ಜಾರಿದವು) ನೀರು+ ಏರಿತು+ ಅಗ್ಗದ(ಶ್ರೇಷ್ಠ) ಸತ್ಯ ಲೋಕದಲಿ.
- ಅರ್ಥ:ಮುನಿಯು ಹೇಳಿದ,' ದರಣಿಪತಿ ಧರ್ಮಜನೇ ಕೇಳು ಪ್ರಳಯದಲ್ಲಿ ಸಾಗರದ ತೆರೆ ಒಂದಕ್ಕೊಂದು ತಾಗಿ ಸವರಿದವು, ಸಾಗರದ ತೆರೆಯಲ್ಲಿ ಸಕಲ ಜಲಧಿಗಳು- ಸಮುದ್ರಗಳು ಏಕ ರೂಪದಲ್ಲಿ ಸೇರಿ ಭೂಮಿಯನ್ನು ಮುಳುಗಿಸಿ ಮೇಲೆ ಮೇಲೆ ಉಬ್ಬರಿಸಿ ಎದ್ದು ಜಗದ ಗುಡ್ಡ ಬೆಟ್ಟಗಳ ಜೋಡಿಗಳನ್ನು ಕುಸಿದು ಬೀಳಿಸಿದವು, ಜಾರಿ ಮುಳುಗಿದವು; ನೀರು ಮೇಲೆ ಏರಿ ಶ್ರೇಷ್ಠ ಸತ್ಯ ಲೋಕದಲ್ಲಿ ಕಾಣಿಸಿತು.
- ಜಗದ ಜೀವರ ಕರ್ಮ ಬೀಜಾ
- ಳಿಗಳ ಭೈತ್ರವ ತನ್ನ ಬಾಲಕೆ
- ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ |
- ಬಗೆಯಲಾ ಹರಿಯೀತನೇ ದೃ
- ಗ್ಯುಗಕೆ ಗೋಚರನಾದನರಸುವ
- ನಿಗಮವೀತನ ಹೆಜ್ಜೆಗಾಣೆವು ರಾಯ ಕೇಳೆ೦ದ || ೨೦ ||
- ಪದವಿಭಾಗ-ಅರ್ಥ:ಜಗದ ಜೀವರ ಕರ್ಮ ಬೀಜಾಳಿಗಳ (ಬೀಜ+ ಆಳಿ; ಬೀಜಗಳ ಸಮೂಹ, ಬೀಜಗಳ ರಾಶಿ) ಭೈತ್ರವ(ನಾವೆಯನ್ನು) ತನ್ನ ಬಾಲಕೆ ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ; ಬಗೆಯಲು+ ಆ ಹರಿಯು+ ಈತನೇ ದೃಗ್ಯುಗಕೆ (ದೃಕ್- ಕಣ್ಣು+ ಯುಗ- ಎರಡು) ಗೋಚರನು+ ಆದನು+ ಅರಸುವ (ಹುಡುಕುವ) ನಿಗಮವು(ವೇದ)+ ಈತನ ಹೆಜ್ಜೆಗಾಣೆವು ರಾಯ ಕೇಳೆ೦ದ.
- ಅರ್ಥ:ಮುನಿಯು,'ಆ ಪ್ರಳಯ ಸಮಯದಲ್ಲಿ ಮತ್ಸ್ಯಾವತಾರದಲ್ಲಿ, ಜಗದ ಜೀವರ ಕರ್ಮಗಳ ಬೀಜಗಳ ರಾಶಿಯ ನಾವೆಯನ್ನು ತನ್ನ ಬಾಲಕ್ಕೆ ಬಿಗಿದು ನೀರಿನಲ್ಲಿ ಸೇರಿದನು; ವಿಚಾರಮಾಡಿದರೆ ಆ ಹರಿಯು ಈತನೇ. ಈಗ ನಮ್ಮ ಎರಡು ಕಣ್ಣುಗಳಿಗೆ ಗೋಚರನಾಗಿರುವನು. ಅವನನ್ನುಹುಡುಕುವ ವೇದವು ಈತನ ಹೆಜ್ಜೆಯನ್ನು ಕಾಣವು,' ರಾಯನೇ ಕೇಳು ಎ೦ದ.
- ಮರಳಿ ಹೂಡಿದನಿವನು ಜಗದ್ವಿ
- ಸ್ತರಣವನು ಮಾಯಾ ಮಹೋದಧಿ
- ಹೊರೆದನುನ್ನತ ಸತ್ವದಲಿ ಮೇಲಾದ ಲೋಚನದ
- ಉರಿಯಲದ್ದುವನಿದನು ಲೀಲಾ
- ಚರಿತವಿದು ಕೃಷ್ಣ೦ಗೆ ನಿನ್ನಯ
- ಸಿರಿಯೆ ಸಿರಿ ಬಡತನವೆ ಬಡತನವೆ೦ದನಾ ಮುನಿಪ || ೨೧ ||
- ಪದವಿಭಾಗ-ಅರ್ಥ:ಮರಳಿ ಹೂಡಿದನು+ಇವನು ಜಗದ್ವಿಸ್ತರಣವನು(ಜಗತ್+ ವಿಸ್ತರನವನು) ಮಾಯಾ ಮಹೋದಧಿ(ಮಹಾ+ ಉದಧಿ= ಸಮುದ್ರ,ಕಡಲು) ಹೊರೆದನು(ಹಪರೆ- ಪೋಷಿಸು, ಸಲಹು)+ ಉನ್ನತ ಸತ್ವದಲಿ ಮೇಲಾದ ಲೋಚನದ (ಶಿವನ ಫಾಲ ಲೋಚನ- ಹಣೆಗಣ್ಣು), ಉರಿಯಲು+ ಉದ್ದುವನಿದನು ಲೀಲಾ ಚರಿತವು+ ಇದು ಕೃಷ್ಣ೦ಗೆ ನಿನ್ನಯ ಸಿರಿಯೆ ಸಿರಿ, ಬಡತನವೆ ಬಡತನವು+ ಎ೦ದನು+ ಆ ಮುನಿಪ.
- ಅರ್ಥ:ಮುನಿಯು, 'ಈ ಕೃಷ್ಣನು ಮರಳಿ ಜಗತ್ತಿನ ವಿಸ್ತರಣವನನ್ನು ಹೂಡಿದನು.ಇವನು ಮಾಯಾ ಮಹಾ ಸಮುದ್ರನು; ಪೋಷಿಸಿದನು ಉನ್ನತ ಸತ್ವದಲಿ ಮೇಲಾದ ಫಾಲ ಲೋಚನದ ಪ್ರಳಯಾಗ್ನಿಯಲ್ಲಿ ಜಗತ್ತು ಉರಿಯಲು- ಸುಟ್ಟು ಭಸ್ಮವಾಗಲು, ಇವನು - ಶ್ರೀಕೃಷ್ನ ಅದನ್ನು ಉದ್ದುವನು- ಶಾಂತಗೊಳಿಸುವನು. ಇದು ಇವನ ಲೀಲಾ ಚರಿತೆ. ಕೃಷ್ಣನಿಗೆ ನಿನ್ನಯ ಸಿರಿಯೆ ಸಿರಿ- ನಿನ್ನ ಸುಖ ಸಂಪತ್ತೇ ಸಂಪತ್ತು. ನಿನ್ನ ಬಡತನವೆ ಅವನಿಗೆ ಬಡತನವು,' ಎ೦ದನು ಆ ಮುನಿಪ.
- ಅರಸ ಕೇಳ್ ಕಲ್ಪಾ೦ತದಲಿ ಬಿಡೆ
- ಬಿರುದುದೀ ಬ್ರಹ್ಮಾ೦ಡ ಬಹಿರಾ
- ವರಣ ಜಲನಿಧಿ ಜಲದೊಳೊ೦ದಾಯ್ತೇನನುಸುರುವೆನು |
- ಹರಿ ವಿನೋದದೊಳಾಲದೆಲೆಯಲಿ
- ಸಿರಿಸಹಿತ ಪವಡಿಸಿದನಿನ ಶಶಿ
- ಕಿರಣವಿಲ್ಲ ಮಹಾ೦ಧಕಾರ ಸಭಾರವಾಯ್ತೆ೦ದ || ೨೨ ||
- ಪದವಿಭಾಗ-ಅರ್ಥ:ಅರಸ ಕೇಳ್ ಕಲ್ಪಾ೦ತದಲಿ ಬಿಡೆ-ಬಿರುದುದು(ಬಿಡಿಯಾಗಿ ಒಡೆದುಹೋಯಿತು)+ ಈ ಬ್ರಹ್ಮಾ೦ಡ ಬಹಿರ್(ಹೊರ)+ ಆವರಣ ಜಲನಿಧಿ(ಸಮುದ್ರದ) + ಜಲದೊಳು+ ಒ೦ದಾಯ್ತು+ ಏನನು+ ಉಸುರುವೆನು(ಹೇಳುವೆನು) ಹರಿ ವಿನೋದದೊಳು+ ಆಲದ+ ಎಲೆಯಲಿ ಸಿರಿಸಹಿತ(ಸಿರಿ - ಲಕ್ಷ್ಮಿ) ಪವಡಿಸಿದನು (ಮಲಗಿದನು)+ ಇನ(ಸೂರ್ಯ) ಶಶಿಕಿರಣವು+ ಇಲ್ಲ ಮಹಾ+ ಅ೦ಧಕಾರ ಸಭಾರವಾಯ್ತು(ದಟ್ಟವಾಯಿತು)+ ಎ೦ದ
- ಅರ್ಥ:ಮುನಿಯು,'ಅರಸನೇ ಕೇಳು ಕಲ್ಪಾ೦ತದಲ್ಲಿ ಈ ಬ್ರಹ್ಮಾ೦ಡವು ಬಿಡಿಯಾಗಿ ಒಡೆದುಹೋಯಿತು. ಹೊರ ಆವರಣವು ಸಮುದ್ರದ ನೀರಿನಲ್ಲಿ ಸೇರಿ ಒ೦ದಾಯ್ತು. ಏನನ್ನು ಹೇಳಲಿ? ಹರಿ ತನ್ನ ವಿನೋದದಲ್ಲಿ ಆಲದ ಎಲೆಯಲ್ಲಿ ಲಕ್ಷ್ಮಿಸಹಿತ ಮಲಗಿ ನೀರಿನಲ್ಲಿ ತೇಲಿದನು. ಸೂರ್ಯನ, ಚಂದ್ರನ ಕಿರಣವು ಇಲ್ಲ. ಆಗ ಮಹಾ ಅ೦ಧಕಾರ ದಟ್ಟವಾಗಿತ್ತು,' ಎ೦ದನು
- ಈನೆಲನನೀ ಚ೦ದ್ರ ಸೂರ್ಯ ಕೃ
- ಶಾನು ತೇಜವನೀ ಸಮೀರಣ
- ನೂನ ಭುವನವ ಕಾಣೆನೊ೦ದೇ ಸಲಿಲ ಸೃಷ್ಠಿಯಲಿ |
- ಏನ ಹೇಳುವೆನೆನ್ನ ಚಿತ್ತ
- ಗ್ಲಾನಿಯನು ಬಲುತೆರೆಯ ಹೊಯ್ಲಿನೊ
- ಳಾನುಮುಳುಗುತ್ತೇಳುತಿದ್ದೆನು ರಾಯ ಕೇಳೆ೦ದ || ೨೩ ||
- ಪದವಿಭಾಗ-ಅರ್ಥ:ಈ ನೆಲನನು+ ಈ ಚ೦ದ್ರ ಸೂರ್ಯ ಕೃಶಾನು(ಅಗ್ನಿ, ಬೆಂಕಿ) ತೇಜವನು+ ಈ ಸಮೀರಣನ(ವಾಯು) ಊನ(ಕುಂದು ಕೊರತೆ ) ಭುವನವ ಕಾಣೆನು;+ ಒ೦ದೇ ಸಲಿಲ( ನೀರು, ಜಲ) ಸೃಷ್ಠಿಯಲಿ; ಏನ ಹೇಳುವೆನು+ ಎನ್ನ ಚಿತ್ತಗ್ಲಾನಿಯನು ಬಲುತೆರೆಯ ಹೊಯ್ಲಿನೊಳು+ ಆನು (ನಾನು) ಮುಳುಗುತ್ತ+ ಏಳುತಿದ್ದೆನು ರಾಯ ಕೇಳೆ೦ದ.
- ಅರ್ಥ:ಮಾರ್ಕಾಂಡೇಯನು,'ಈ ನೆಲವನ್ನು ಈ ಚ೦ದ್ರ, ಸೂರ್ಯ, ಅಗ್ನಿ, ತೇಜಸ್ಸನ್ನು ಈ ವಾಯುವಿನ ಕೊರತೆಯಿಂದ ಭೂಮಿಯನ್ನ ಕಾಣಲಿಲ್ಲ. ಸೃಷ್ಠಿಯಲ್ಲಿ ನೀರು ಒ೦ದೇ ತುಂಬಿತ್ತು. ನನ್ನ ಮನಸ್ಸು ಮಂಕಾದ ವಿಷಯ ಏನನ್ನು ಹೇಳಲಿ! ಬಲು ದೊಡ್ಡ ತೆರೆಯ ಹೊಯ್ಲಿನೊಳು- ಸದ್ದಿನಲ್ಲಿ ನಾನು ಮುಳುಗುತ್ತ ಏಳುತಾ ಇದ್ದೆನು,' ರಾಯನೇ ಕೇಳು ಎಂದ.
- ಹೇಳಲೇನದ ಮೃತ್ಯುವಿನ ಗೋ
- ನಾಳಿಯೊಳಗ೦ದಿಳಿಯಲೊಲ್ಲದೆ
- ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ |
- ಬಾಲಕನೊಳವಗುಣವನಕಟಾ
- ತಾಳಬಹುದೇ ತಾಯೆ ಮೃತ್ಯುವ
- ತಾಳಿಗೆಯ ತೆಗೆದೆನ್ನ ನೊಳಕೊಳ್ಳೆ೦ದು ಹಲುಬಿದನು || ೨೪ ||
- ಪದವಿಭಾಗ-ಅರ್ಥ:ಹೇಳಲು+ ಏನು+ ಅದ ಮೃತ್ಯುವಿನ ಗೋನಾಳಿಯೊಳಗೆ+ ಅ೦ದು+ ಇಳಿಯಲೊಲ್ಲದೆ ಕಾಳು(ತಪ್ಪು, ಕೆಡುಕು) ಮಾಡಿದೆನೇ, ಮುರಾರಿಯ ಭಜಿಸಿ ಭಕ್ತಿಯಲಿ ಬಾಲಕನೊಳು+ ಅವಗುಣವನು+ ಅಕಟಾ ತಾಳಬಹುದೇ ತಾಯೆ ಮೃತ್ಯುವ ತಾಳಿಗೆಯ ತೆಗೆದು+ ಎನ್ನನು+ ಒಳಕೊಳ್ಳೆ೦ದು ಹಲುಬಿದನು.
- ಅರ್ಥ:ಮುನಿಯು,'ಅದನ್ನು ಏನು ಹೇಳಲಿ. ಮೃತ್ಯುವಿನ ಗಂಟಲೊಳಗೆ ಅ೦ದು ನಾನು ಇಳಿಯಲು ಇಷ್ಟಪಡದೆ,ತಪ್ಪು ಮಾಡಿದೆನೇ ಎಂದು ಕಂಡಿತು. ಮುರಾರಿಯನ್ನು ಭಜಿಸಿದ ಭಕ್ತಿಯುಳ್ಳ ಬಾಲಕನಲ್ಲಿ ಅವಗುಣವನ್ನು ಅಕಟಾ ತಾಳಬಹುದೇ? ತಾಯೆ ಮೃತ್ಯುವಿನ ನಾಲಿಗೆಯನ್ನು ಚಾಚಿ- ತೆಗೆದು ನನ್ನನ್ನು ಒಳಗೆ ಎಳೆದುಕೋ ಎ೦ದು ಹಲುಬಿದೆನು,' ಎಂದನು.
- ನೀರು ಹೊಕ್ಕುದು ನೂಕಿ ವಿವಿಧ
- ದ್ವಾರದಲಿ ಬೆ೦ಡೇಳ್ವೆನೊಮ್ಮತಿ
- ದೂರ ಮುಳುಗುವೆನಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ |
- ಮಾರಿಗುಬ್ಬಸವೆನ್ನ ಮರಣವ
- ನಾರು ಕ೦ಡರು ಹೇಸಿ ನನ್ನನು
- ದೂರ ಬಿಸುಟಳುಮೃತ್ಯು ಬಳಲಿದೆನಿ೦ತು ಹಲಕಾಲ || ೨೫ ||
- ಪದವಿಭಾಗ-ಅರ್ಥ:ನೀರು ಹೊಕ್ಕುದು ನೂಕಿ ವಿವಿಧದ್ವಾರದಲಿ, ಬೆ೦ಡೇಳ್ವೆನು(ಆಯಾಸಗೊಳ್ಳುವೆನು, ನಿಶಕ್ತನಾಗುವೆನು )+ ಒಮ್ಮೆ+ ಅತಿದೂರ ಮುಳುಗುವೆನು+ ಅಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ(ಹೊಡೆತದಲ್ಲಿ), ಮಾರಿಗೆ+ ಉಬ್ಬಸವು+ ಎನ್ನ ಮರಣವನು+ ಆರು ಕ೦ಡರು ಹೇಸಿ ನನ್ನನು ದೂರ ಬಿಸುಟಳು ಮೃತ್ಯು, ಬಳಲಿದೆನು+ ಇ೦ತು(ಹೀಗೆ) ಹಲಕಾಲ(ಹಲವುಕಾಲ- ಬಹಲಕಾಲ).
- ಅರ್ಥ:ಮನಿ ಧರ್ಮಜನಿಗೆ,ರಾಜನೇ ಕೇಳು,'ಪ್ರಳಯ ಕಾಲದ ಸಮುದ್ರದಲ್ಲಿ ತೇಲುವಾಗ ನೀರು ನನ್ನ ದೇಹದ ಮೂಗು ಬಾಯಿ ಕಿವಿ ಮೊದಲಾದ ವಿವಿಧದ್ವಾರಗಳಲ್ಲಿ ನುಗ್ಗಿ ಹೊಕ್ಕಿತು. ನಾನು ನಿಶಕ್ತನಾದೆನು; ತೆರೆಯ ಹೊಡೆತದಲ್ಲಿ ಒಮ್ಮೆ ಅತಿದೂರ 'ತಳ್ಳಲ್ಪಡುವೆನು' ಮತ್ತೆ ಮುಳುಗುವೆನು, ಅಡ್ಡ ಬೀಳುವೆನು; ಮಾರಿಗೆ ಉಬ್ಬಸವು- ಆಯಾಸವಾಯಿತೋ ನನ್ನನ್ನು ಬಿಟ್ಟಳು; ನನ್ನ ಮರಣವನ್ನು ಯಾರು ಕ೦ಡರು? ಮೃತ್ಯು ದೆವತೆಯು ಹೇಸಿ ನನ್ನನು ದೂರ ಬಿಸುಟಳು. ನುಂಗಲಿಲ್ಲ. ಹೀಗೆ ನಾನು ಬಹಳಕಾಲ ಬಳಲಿದೆನು,' ಎಂದನು.
- ಮುಳುಗುತೇಳುತ ಬರುತ ವಟ ಕುಜ
- ದೆಲೆಯಲೀತನ ಕ೦ಡೆನೈ ನಾ
- ನೆಳತಳಕೆ ಬಿದ್ದ೦ತೆ ತೆರೆಯೆಡತರಕೆ ತನಿಗೆಡದು
- ಜಲಜ ಸ೦ಭವನಾ ಜಲವ ಮು
- ಕ್ಕುಳಿಸುತುಗುಳುತ ನಾಲ್ಕು ಮುಖದಲಿ
- ನಿಲುಕಿನಿಗುರುತ ನಿಲುತ ಬ೦ದನು ಕ೦ಡನೀ ಹರಿಯ ೨೬
- ಪದವಿಭಾಗ-ಅರ್ಥ:ಮುಳುಗುತ+ ಏಳುತ ಬರುತ, ವಟ ಕುಜದೆಲೆಯಲಿ(ವಟ ಕುಜ-ಆಲದಮರ, ಅಥವಾ ಅರಳಿಮರ)+ ಈತನ ಕ೦ಡೆನೈ, ನಾನು+ ಎಳ-ತಳಕೆ ಬಿದ್ದ೦ತೆ ತೆರೆಯ+ ಎಡತರಕೆ ತನಿಗೆಡದು(ತನಿ+ ಕೆಡೆದು; ತನಿ+ ಕೆಡೆದು; ತನಿ-ಚೆನ್ನಾಗಿ ಬೆಳೆದ, ಕೆಡೆದು ಬಿದ್ದು?) ಜಲಜ ಸ೦ಭವನು(ಬ್ರಹ್ಮನು)+ ಆ ಜಲವ ಮುಕ್ಕುಳಿಸುತ+ ಉಗುಳುತ ನಾಲ್ಕು ಮುಖದಲಿ ನಿಲುಕಿ- ನಿಗುರುತ(ಚಾಚಿರುವಿಕೆ, ನೀಡಿರುವಿಕೆ) ನಿಲುತ(ನಿಲ್ಲತ್ತಾ) ಬ೦ದನು ಕ೦ಡನು+ ಈ ಹರಿಯ.
- ಅರ್ಥ:ಮುನಿಯು,'ರಾಜನೇ,ನಾನು ಸಮುದ್ರದಲ್ಲಿ ಮುಳುಗುತ್ತಾ ಏಳುತ್ತಾ ಬರುತ್ತಿರುವಾಗ ಆಲದೆಲೆಯ ಮೇಲೆ ಮಲಗಿದ ಈತನನ್ನು ನಾನು ಕ೦ಡೆನಯ್ಯಾ! ನಾನು ತೆರೆಯ ಎಳತಕ್ಕೆ ತಳಕ್ಕೆ ಬಿದ್ದ೦ತೆ, ತೆರೆಯ ಎಡತರಕೆ-ಏರಿಳಿತದ ಹೊಡೆತಕ್ಕೆ ಪೂರಾಬಳಲಿ ಬಿದ್ದು ಬ್ರಹ್ಮನು ಆ ಜಲವನ್ನು ಮುಕ್ಕುಳಿಸುತ್ತಾ ಉಗುಳುತ್ತಾ ನಾಲ್ಕು ಮುಖದಲ್ಲಿಯೂ ನಿಲುಕಿ ಬಗ್ಗಿ ಮುಖವನ್ನು ಚಾಚುತ್ತಾ- ನೆಟ್ಟಗೆ ನಿಲ್ಲತ್ತಾ ಬ೦ದನು; ಅವನು ಈ ಹರಿಯನ್ನು ಕ೦ಡನು.' ಎಂದನು.
- ಆರು ನೀನೆನುತಾತನೀತನ
- ಸಾರಿದನು ಬೆಸಗೊಳಲು ಜಗದಾ
- ಧಾರಕನು ಜಗದುದರ ಹರಿ ತಾನೆ೦ದೊಡಜ ನಗುತ |
- ಭೂರಿ ಜಗವೆನ್ನುದರದಲಿ ನೀ
- ನಾರು ಜಗಕೆ೦ದೆನುತ ಗರುವ ವಿ
- ಕಾರದಲಿ ಪರಮೇಷ್ಠಿ ನಿಜತೇಜನಪಚಾರಿಸಿದ || ೨೭ ||
- ಪದವಿಭಾಗ-ಅರ್ಥ:ಆರು(ಯಾರು) ನೀನು+ ಎನುತ+ ಆತನು+ ಈತನ ಸಾರಿದನು, ಬೆಸಗೊಳಲು()ಕೇಳಲು, ಹೇಳಲು), ಜಗದ+ ಆಧಾರಕನು ಜಗದ+ ಉದರ ಹರಿ ತಾನು+ ಎ೦ದೊಡೆ+ ಅಜ(ಬ್ರಹ್ಮ) ನಗುತ ಭೂರಿ ಜಗವು+ ಎನ್ನ (ನನ್ನ)+ ಉದರದಲಿ, ನೀನು+ ಆರು ಜಗಕೆ೦ದು+ ಎನುತ ಗರುವ ವಿಕಾರದಲಿ ಪರಮೇಷ್ಠಿ ನಿಜತೇಜನ ಪಚಾರಿಸಿದ (ಪಚಾರಿಸು- ಹೀಯಾಳಿಸು).
- ಅರ್ಥ:ಮಿನಿಯು ರಾಜನನ್ನು ಕುರಿತು,'ಬ್ರಹ್ಮನು,ಯಾರು ನೀನು ಈ ಪ್ರಳಯ ಸಮುಗ್ರದಲ್ಲಿ ಎನ್ನುತ್ತಾ, ಆತನು ಈತನ- (ಕೃಷ್ನನ) ಬಳಿಗೆ ಬಂದನು. ಹಾಗೆ ಕೇಳಲು, ಇವನು ತಾನು ಜಗತ್ತಿನ ಆಧಾರಕನು, ಜಗತ್ತನ್ನು ಹೊಟ್ಟೆಯಲ್ಲಿ ಹೊಂದಿದ ಹರಿ ತಾನು, ಎ೦ದಾಗ ಅಜನು ನಗುತ್ತಾ ಭೂರಿ- ಅತಿದೊಡ್ಡ ಜಗವು ನನ್ನು ಉದರದಲ್ಲಿದೆ. ಹೀಗಿರುವಾಗ ನೀನು ಜಗತ್ತಿಗೆ ಯಾರು ಎನ್ನುತ್ತಾ ಗರ್ವ ವಿಕಾರದಿಂದ ಪರಮೇಷ್ಠಿಯಾದ ಬ್ರಹ್ಮನು ನಿಜತೇಜನಾದ ವಿಷ್ನುವನ್ನು ಹೀಯಾಳಿಸಿದನು.
- ಅದುವೇ ನಿನ್ನುದರದಲಿ ಜಗ
- ವಾದೊಡೀಕ್ಷಿಪೆನೆನುತಲೀ ಕಮ
- ಲೋದರನು ಕಮಲಜನ ಜಠರವ ಹೊಕ್ಕು ಹೊರವ೦ಟು |
- ಭೇಧಿಸಿದೆನಾನೆನ್ನ ಜಠರದೊ
- ಳಾದ ಲೋಕವನೆಣಿಸಿ ಬಾಯೆನ
- ಲಾ ದುರಾಗ್ರಹಿಯಿಳಿದ ನಸುರಾ೦ತಕನ ಜಠರದಲಿ || ೨೮ ||
- ಪದವಿಭಾಗ-ಅರ್ಥ:ಅದುವೇ ನಿನ್ನ+ ಉದರದಲಿ(ಹೊಟ್ಟೆಯಲ್ಲಿ) ಜಗವು+ ಆದೊಡೆ ಈಕ್ಷಿಪೆನು (ಹಾಗಿದ್ದರೆ ನೋಡುವೆನು)+ ಎನುತಲಿ+ ಈ ಕಮಲೋದರನು(ವಿಷ್ಣುವು) ಕಮಲಜನ (ಬ್ರಹ್ಮನ)ಜಠರವ ಹೊಕ್ಕು ಹೊರವ೦ಟು, ಭೇಧಿಸಿದೆನು+ ಆನು(ನಾನು),+ ಎನ್ನ ಜಠರದೊಳು+ ಆದ ಲೋಕವನು+ ಎಣಿಸಿ ಬಾ+ ಯೆ+ ಎನಲು+ ಆ ದುರಾಗ್ರಹಿ(ಬ್ರಹ್ಮನು)+ ಯಿ+ ಇಳಿದನು+ ಅಸುರಾ೦ತಕನ(ವಿಷ್ಣುವಿನ) ಜಠರದಲಿ.
- ಅರ್ಥ:ವಿಷ್ಣುವು ಬ್ರಹ್ಮನಿಗೆ,'ನಿನ್ನ ಉದರದಲ್ಲಿ ಜಗವು ಸೃಷ್ಟಿ ಅಯಿತೇ? ಹಾಗಿದ್ದರೆ ನೋಡುವೆನು, ಎನ್ನುತ್ತಾ ಈ ಕೃಷ್ಣನ ಅವತಾರದ ವಿಷ್ಣುವು ಬ್ರಹ್ಮನ ಜಠರವನ್ನು ಹೊಕ್ಕು ಅಲ್ಲಿಂದ ಹೊರಹೊರಟು, 'ನಾನು ನಿನ್ನ ಜಠರದಲ್ಲಿರು ಜಗತ್ತಿನ ರಹಸ್ಯವನ್ನು ಭೇಧಿಸಿದೆನು. ನನ್ನ ಜಠರದಲ್ಲಿ ಆದ- ಸೃಷ್ಟಿಯಾದ ಲೋಕಗಳನ್ನು ಎಣಿಸಿ ಬಾ,' ಎನ್ನಲು; ಆ ದುರಾಗ್ರಹಿ ಬ್ರಹ್ಮನು ಅಸುರಾ೦ತಕನಾದ ವಿಷ್ಣುವಿನ ಜಠರದಲ್ಲಿ ಇಳಿದನು.
- ಹೊಲಬು ದಪ್ಪಿದನಲ್ಲಿ ಭುವನಾ
- ವಳಿಗಳಿದ್ದವು ಕೋಟಿ ರುದ್ರಾ
- ವಳಿಗಳಿದ್ದರು ಕೋಟಿ ಪರಮೇಸ್ಠಿಗಳು ಶತಕೋಟಿ |
- ಹುಲು ನೊರಜು ಸಾಗರವ ಸಲಿಲವ
- ನೆಳೆವವೊಲು ನೊಣ ಹಾರಿ ಗಗನದ
- ತಲೆಗಡೆಯ ಕಾಣಿಸುವದೆ೦ಬವೊಲಾಯ್ತು ಕೇಳೆ೦ದ || ೨೯ ||
- ಪದವಿಭಾಗ-ಅರ್ಥ:ಹೊಲಬು ((ದಾರಿ, ಮಾರ್ಗ))+ ದ+ ತಪ್ಪಿದನಲ್ಲಿ ಭುವನಾವಳಿಗಳು(ಲೋಕಗಳ ಸಮೂಹ)+ ಇದ್ದವು ಕೋಟಿ, ರುದ್ರಾವಳಿಗಳು+ ಇದ್ದರು ಕೋಟಿ, ಪರಮೇಸ್ಠಿಗಳು(ಬ್ರಹ್ಮರು) ಶತಕೋಟಿ, ಹುಲು ನೊರಜು (ನುಸಿ) ಸಾಗರವ ಸಲಿಲವ ನೆಳೆವವೊಲು(ನೀರನ್ನು ಎಳೆದುಹಾಕುವಂತೆ), ನೊಣ ಹಾರಿ ಗಗನದ ತಲೆ+ ಗ+ ಕಡೆಯ ಕಾಣಿಸುವದೆ೦ಬವೊಲು(ಆಕಾಶದ ತುದಿಯನ್ನು ನೋಡಲುಹೋದಂತೆ)+ ಆಯ್ತು ಕೇಳು+ ಎಂದ.
- ಅರ್ಥ:ಮುನಿಯು ಯುಧಿಷ್ಠಿರನಗೆ ಹೇಳಿದ,'ಬ್ರಹ್ಮನು ವಿಷ್ಣವಿನ ಉದರದೊಳಗೆ ಹೋಗಿ ದಿಕ್ಕು ತಪ್ಪಿದಂತಾದನು. ಅಲ್ಲಿ ಕೋಟಿ ಲೋಕಗಳ ಸಮೂಹಗಳೇ ಇದ್ದವು; ಮತ್ತೆ ಸಮೂಹಗಳಲ್ಲಿ ಕೋಟಿ ಸಂಖ್ಯೆಯಲ್ಲಿ ರುದ್ರರು ಇದ್ದರು. ಬ್ರಹ್ಮರು ಶತಕೋಟಿ ಇದ್ದರು. ಬ್ರಹ್ಮನು ವಿಷ್ಣುವಿನ ಉದರದಲ್ಲಿ ಹೋದುದು ಹುಲು ನುಸಿಯು ಸಮುದ್ರದ ನೀರನ್ನು ಎಳೆದುಹಾಕಲು ಹೋದಂತೆ ಆಯಿತು. ನೊಣವು ಹಾರಿ ಆಕಾಶದ ತುದಿಯನ್ನು ನೋಡಲುಹೋದಂತೆ ಆಯಿತು, ಕೇಳು,' ಎಂದ.
- ಹಲವು ಯುಗ ಪರಿಯ೦ತರಲ್ಲಿಯೆ
- ತೊಳಲಿ ಕಡೆಗಾಣದೆ ಕೃಪಾಳುವ
- ನೊಲಿದು ಹೊಗಳಿದನಜನು ವೇದ ಸಹಸ್ರ ಸೂಕ್ತದಲಿ |
- ಬಳಿಕ ಕಾರುಣ್ಯದಲಿ ನಾಭೀ
- ನಳಿನದಲಿ ತೆಗೆದನು ವಿರಿ೦ಚಿಗೆ
- ನಳಿನಸ೦ಭವನೆ೦ದು ಹೆಸರಾಯ್ತು೦ದುಮೊದಲಾಗಿ || ೩೦ ||
- ಪದವಿಭಾಗ-ಅರ್ಥ:ಹಲವು ಯುಗ ಪರಿಯ೦ತರ (ಕಾಲ)+ ಅಲ್ಲಿಯೆ ತೊಳಲಿ(ಆಯಾಸಪಟ್ಟು ಅಲೆದು) ಕಡೆಗಾಣದೆ(ಅಲೆದಾಟಕ್ಕೆ ಅಂತ್ಯವನ್ನು ಕಾಣದೆ; ಮುಂದಿನ ದಾರಿತೋರದೆ) ಕೃಪಾಳುವನು (ವಿಷ್ಣುವನ್ನು) + ಒಲಿದು ಹೊಗಳಿದನು+ ಅಜನು(ಬ್ರಹ್ಮನು) ವೇದ ಸಹಸ್ರ ಸೂಕ್ತದಲಿ, ಬಳಿಕ ಕಾರುಣ್ಯದಲಿ ನಾಭೀ ನಳಿನದಲಿ(ಹೊಕ್ಕಳಿನ ಕಮಲದ ದಂಟಿನಲ್ಲಿ) ತೆಗೆದನು ವಿರಿ೦ಚಿಗೆ(ಬ್ರಹ್ಮನಿಗೆ) ನಳಿನಸ೦ಭವನು+ ಎ೦ದು ಹೆಸರಾಯ್ತು+ ಅ೦ದು ಮೊದಲಾಗಿ(ಅಂದಿನಿಂದ).
- ಅರ್ಥ:ಮುನಿಯು ಮುಂದುವರಿದು,'ವಿಷ್ಣುವಿನ ಉದರದೊಳಗೆ ಹೋದ ಬ್ರಹ್ಮನು ಅಲ್ಲಿ ಅನೇಕ ಯುಗ ಪರಿಯ೦ತ ಅಲ್ಲಿಯೆ ಅಲೆದು ಆಯಾಸಪಟ್ಟು ಅಲೆದಾಟಕ್ಕೆ ಅಂತ್ಯವನ್ನು ಕಾಣದೆ ಮುಂದಿನ ದಾರಿತೋರದೆ ಕೃಪಾಳುವಾದ ವಿಷ್ಣುವನ್ನು ಪ್ರೀತಿಯಿಂದ ಹೊಗಳಿದನು. ಬ್ರಹ್ಮನು ವಿಷ್ಣವನ್ನು ವೇದದ ಸಹಸ್ರ ಸೂಕ್ತದಿಂದ ಸ್ತುಸಿದನು. ಬಳಿಕ ವಿಷ್ಣುವು ಕಾರುಣ್ಯದಿಂದ ತನ್ನ ನಾಭಿಯ- ಹೊಕ್ಕಳಿನ ಕಮಲದ ದಂಟಿನಲ್ಲಿರುವ ಕಮಲದ ಆಸನದಲ್ಲಿ ಕೂರಿಸಿ ಅವನನ್ನು ಹೊರಕ್ಕೆ ತೆಗೆದನು. ಹೀಗೆ ಅಂದಿನಿಂದ ಬ್ರಹ್ಮನಿಗೆ 'ನಳಿನಸ೦ಭವನು' (ಕಮಲಜ) ಎ೦ದು ಹೆಸರಾಯ್ತು.' ಎಂದನು.
- ಆ ಮಹಾ ಜಮದಗ್ನಿ ಮುಖದಲಿ
- ಹೋಮವಾಯ್ತು ತದಗ್ನಿಯಡಗಿದು
- ದಾ ಮರುತ್ತಿನಲಾ ಬಹಳ ಬಹಿರಾವರಣ ಪವನ |
- ವ್ಯೋಮದಲಿ ತದಹಮ್ಮ ಹತ್ತು ವಿ
- ರಾಮವಾ ಪ್ರಕೃತಿಯಲಿ ಮಾಯಾ
- ಕಾಮಿನಿಗೆ ಪರಮಾತ್ಮನಲಿ ಲಯವೆ೦ದನಾ ಮುನಿಪ || ೩೧ ||
- ಪದವಿಭಾಗ-ಅರ್ಥ:ಆ ಮಹಾ ಜಮದಗ್ನಿ ಮುಖದಲಿ ಹೋಮವಾಯ್ತು, ತದ್+ ಅಗ್ನಿಯು+ ಅಡಗಿದುದು+ ಆ ಮರುತ್ತಿನಲಿ+ ಆ ಬಹಳ ಬಹಿರ್+ ಆವರಣ ಪವನ ವ್ಯೋಮದಲಿ ತದ್+ ಅಹಮ್+ ಮಹತ್ತು ವಿರಾಮವು+ ಆ ಪ್ರಕೃತಿಯಲಿ ಮಾಯಾಕಾಮಿನಿಗೆ ಪರಮಾತ್ಮನಲಿ ಲಯವು+ ಎ೦ದನು+ ಆ ಮುನಿಪ
- ಅರ್ಥ:ಮಾರ್ಕಾಂಡೇಯ ಮುನಿಯು ಪ್ರಲಯಕ್ರಮವನ್ನು ಧರ್ಮಜನಿಗೆ ಹೇಲುತ್ತಾ,'ಆ ಮಹಾ ಜಮದಗ್ನಿ ಮುಖದಲ್ಲಿ- ಕುಂಡದಲ್ಲಿ ಹೋಮವಾಯ್ತು, ಆ ಅಗ್ನಿಯು ಆ ಮರುತ್ತಿನಲ್ಲಿ ವಾಉವಿನಲ್ಲಿ ಅಡಗಿತು, ಆ ಬಹಳ ಬಹಿರ್- ಹೊರ ಆವರಣ ಪವನ ವ್ಯೋಮದಲ್ಲಿ- ಆಕಾಶ ತತ್ವ ವಾಯುವಿನಲ್ಲಿ (ಅಡಗಿತು), ಆ ಅಹಮ್ ಎಂಬ ಮಹತ್ತು ಆ ಪ್ರಕೃತಿಯಲ್ಲಿ ವಿರಾಮಹೊದಿತು- ಲಯವಾಯಿತು. ಪ್ರಕೃತಿ ಎಂಬ 'ಮಾಯಾ'ಕಾಮಿನಿಗೆ ಪರಮಾತ್ಮನಲ್ಲಿ ಲಯವು- ಅಡಗಿ ಇಲ್ಲವಾಯಿತು ಎ೦ದನು,' ಆ ಮುನಿಪ.
- ಏಸು ದಿನವೀ ಜಗದ ಬಾಳುವೆ
- ಯೇಸು ದಿನವೀ ಪ್ರಳಯಮಯ ಪರಿ
- ಭಾಸ ಮಾನ ಬ್ರಹ್ಮತೇಜೋ ರೂಪವೇಸು ದಿನ |
- ಆ ಸದಾನ೦ದೈಕ ರಸಕೆ ಪ
- ರಾಸಿತಾವಿದ್ಯಾ ಪ್ರಪ೦ಚ ವಿ
- ಲಾಸ ವಾಯ್ತು ವಿಭಾಗ ಸೃಷ್ಠಿ ವಿಧಾನ ಚಿ೦ತೆಯಲಿ || ೩೨ ||
- ಪದವಿಭಾಗ-ಅರ್ಥ:ಏಸು(ಎಷ್ಟು) ದಿನವು+ ಈ ಜಗದ ಬಾಳುವೆ+ ಯೇಸು ದಿನವು+ ಈ ಪ್ರಳಯ ಮಯ ಪರಿಭಾಸ, ಮಾನ ಬ್ರಹ್ಮ ತೇಜೋ ರೂಪವೇಸು ದಿನ? ಆ ಸದಾನ೦ದ+ ಏಕ ರಸಕೆ ಪರಾಸಿತ+ ಅವಿದ್ಯಾ ಪ್ರಪ೦ಚ ವಿಲಾಸ ವಾಯ್ತು ವಿಭಾಗ ಸೃಷ್ಠಿ ವಿಧಾನ ಚಿ೦ತೆಯಲಿ.
- ಅರ್ಥ:ಮುನಿಯು ಮುಂದುವರಿದಿ,'ಎಷ್ಟು ದಿನವು ಈ ಜಗದ ಬಾಳುವೆ? ಎಷ್ಟು ದಿನವು ಈ ಪ್ರಳಯ ಮಯ ಪರಿಭಾಸಮಾನ(ತೋರಿಕೆಯ) ಬ್ರಹ್ಮ ತೇಜೋ ರೂಪವು ಎಷ್ಟು ದಿನ? ಆ ಸದಾನ೦ದ ತತ್ತ್ವದ ಏಕ ರಸಕ್ಕೆ ಪರಾಸಿತವಾದ(ಅವಲಂಬಿತವಾದ?) ಅವಿದ್ಯಾ ಪ್ರಪ೦ಚವು ವಿಭಾಗ ಸೃಷ್ಠಿ ವಿಧಾನದ ಚಿ೦ತೆಯಲ್ಲಿ(ಕಲ್ಪನೆಯಲ್ಲಿ) ವಿಲಾಸವಾಯ್ತು (ಸುಂದರವಾಗಿ ತೋರಿಕೊಂಡಿತು),' ಎಂದನು.
- ಏಕಮೇವಾದ್ವಿತೀಯವೆ೦ಬ ನಿ
- ರಾಕುಳಿತ ತೇಜೋನಿಧಿಗೆ ಮಾ
- ಯಾ ಕಳತ್ರದೊಳಾಯ್ತು ನಿಜಗುಣ ಭೇಧವವರಿ೦ದ |
- ಆ ಕಮಲ ಭವನೀ ಮುಕು೦ದ ಪಿ
- ನಾಕಿಯೆ೦ಬಭಿದಾನದೊಳ್ ತ್ರಿಗು
- ಣಾಕೃತಿಯ ಕೈಕೊ೦ಡನುರು ಲೀಲಾ ವಿನೋದದಲಿ || ೩೩ ||
- ಪದವಿಭಾಗ-ಅರ್ಥ:ಏಕಮೇವಾದ್ವಿತೀಯವೆ೦ಬ ನಿರಾಕುಳಿತ (ಆಕುಳ - ವ್ಯಥೆ, ವ್ಯಥೆ ಇಲ್ಲದ, ಶಾಂತ, ಆನಂದ) ತೇಜೋನಿಧಿಗೆ ಮಾಯಾ ಕಳತ್ರದೊಳು+ ಆಯ್ತು ನಿಜಗುಣ ಭೇಧವು+ ಅವರಿ೦ದ ಆ ಕಮಲಭವನು+ ಈ ಮುಕು೦ದ ಪಿನಾಕಿಯೆ೦ಬ+ ಅಭಿದಾನದೊಳ್(ಹೆಸರಿನಲ್ಲಿ) ತ್ರಿಗುಣಾಕೃತಿಯ ಕೈಕೊ೦ಡನು+ ಉರು(ಹೆಚ್ಚಿನ) ಲೀಲಾ ವಿನೋದದಲಿ.
- ಅರ್ಥ:ಏಕಮೇವಾದ್ವಿತೀಯವೆ೦ಬ- ಎರಡಿಲ್ಲದ ಶಾಂತಸ್ವರೂಪದ ತೇಜೋನಿಧಿ ಪರಮಾತ್ಮನಿಗೆ ಮಾಯಾ ಕಳತ್ರದಲ್ಲಿ- ಮಾಯಾಸಂಯೋಗದಲ್ಲಿ ನಿಜಗುಣದಲ್ಲಿ ಭೇಧಗಳು ಆದವು. ಅವರಿ೦ದ ತ್ರಿಮೂರ್ತಿಗಳಾದ ಆ ಕಮಲಭವ ಬ್ರಹ್ಮನು, ಈ (ಕೃಷ್ಣನೂ) ಮುಕು೦ದನೂ, ಶಿವನೂ- ಪಿನಾಕಿಯೆ೦ಬ ಹೆಸರಿನಲ್ಲಿ ತ್ರಿಗುಣಾಕೃತಿಯ ರೂಪವನ್ನು ಬಹಳ ಲೀಲಾ ವಿನೋದದಲ್ಲಿ ಪರಮಮಾತ್ಮನು ಕೈಕೊ೦ಡನು.
- ಆ ರಜೋ ಗಣಕಬುಜಭವನಧಿ
- ಕಾರಿ ತನ್ನ ಶರೀರದರ್ಧವ
- ನಾರಿಯನು ಮಾಡಿದನುಶರರೂಪಾಭಿಧಾನದಲಿ |
- ಸೇರಿಸಿದನರ್ಧದಲಿ ಮನುವನು
- ದಾರ ಚರಿತನು ಸಕಲ ಧರ್ಮದ
- ಸಾರವನು ವಿಸ್ತರಿಸಿದನು ಮನುಭುವನ ವಿಭುವಾಗಿ || ೩೪ ||
- ಪದವಿಭಾಗ-ಅರ್ಥ:ಆ ರಜೋ ಗಣಕೆ+ ಅಬುಜಭವನು(ಕಮಲಭವ)+ ಅಧಿಕಾರಿ, ತನ್ನ ಶರೀರದ+ ಅರ್ಧವ+ ನಾರಿಯನು ಮಾಡಿದನು ಶತರೂಪಾ+ ಅಭಿಧಾನದಲಿ (ಹೆಸರಿನಲ್ಲಿ) ಸೇರಿಸಿದನು+ ಅರ್ಧದಲಿ ಮನುವನು+ ಉದಾರ ಚರಿತನು ಸಕಲ ಧರ್ಮದಸಾರವನು, ವಿಸ್ತರಿಸಿದನು(ಬೋಧಿಸಿದನು) ಮನುಭುವನ ವಿಭುವಾಗಿ.
- ಅರ್ಥ:ಮುನಿಯು ಮಂದುವರಿದು,'ಆ ರಜೋ ಗಣಕ್ಕೆ ಕಮಲಭವನಾದ ಬ್ರಹ್ಮನು ಅಧಿಕಾರಿ. ತನ್ನ ಶರೀರದ ಅರ್ಧವನ್ನು ಶತರೂಪಾ ಎಂಬ ನಾರಿಯನ್ನಾಗಿ ಮಾಡಿದನು. ಮತ್ತೆ ಅರ್ಧದಲ್ಲಿ ಮನುವನ್ನು ಸೃಷ್ಟಿಸಿದನು. ಅವನು ಉದಾರ ಚರಿತನು ಸಕಲ ಧರ್ಮದಸಾರವನ್ನೂ ಅವನನ್ನು ಮನುಭುವನ ವಿಭುವಾಗಿ ನೇಮಿಸಿದನು(ಭೂಮಿಯ ಒಡೆಯನಾಗಿ ನೇಮಿಸಿದನು).
- ಟಿಪ್ಪಣಿ:ಶತರೂಪಾ ಹಿಂದೂ ಧರ್ಮದಲ್ಲಿ ವಿಶ್ವದ ಮೊದಲ ಮಹಿಳೆ. ಅವಳು ಬ್ರಹ್ಮನ ವಮಾಂಗದಿಂದ (ಯೂನಿವರ್ಸ್. 2-1-57) ಜನಿಸಿದಳು ಮತ್ತು ಸ್ವಯಂಂಭುವ ಮನುವಿನ ಹೆಂಡತಿ. ಸುಖ್‌ಸಾಗರ್ ಪ್ರಕಾರ, ಬ್ರಹ್ಮಾಂಡದ ಬೆಳವಣಿಗೆಗಾಗಿ, ಬ್ರಹ್ಮನು ತನ್ನ ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿದನು, ಅವುಗಳ ಹೆಸರುಗಳು 'ಕಾ' ಮತ್ತು 'ಯಾ' (ಕಾಯ). ಆ ಎರಡು ಭಾಗಗಳಲ್ಲಿ, ಪುರುಷನು ಒಂದರಿಂದ ಮತ್ತು ಮಹಿಳೆ ಇನ್ನೊಂದು ಭಾಗದಿಂದ ಜನಿಸಿದರು. ಪುರುಷನ ಹೆಸರು ಸ್ವಯಂಂಭುವ ಮನು ಮತ್ತು ಮಹಿಳೆಯ ಹೆಸರು ಶತರೂಪಾ. ಪ್ರಪಂಚದ ಎಲ್ಲಾ ಜನರು ಈ ಮೊದಲನೆಯ ಗಂಡು ಮತ್ತು ಮೊದಲ ಹೆಣ್ಣುಗಳಿಂದ ಹುಟ್ಟಿದ್ದಾರೆ. ಮನು ಅವರ ಮಕ್ಕಳಿಂದಾಗಿ ಅವರನ್ನು ಮನುಷ್ಯರು ಎಂದು ಕರೆಯಲಾಗುತ್ತದೆ.(ಹಿಂದಿ ವಿಕಿಪಿಡಿಯಾ)
- ಭೃಗು ಪುಲಸ್ತ್ಯ ವಸಿಷ್ಥ ದಕ್ಷಾ
- ದಿಗಳೆನಿಪ್ಪ ನವ ವ್ರಜೇಶ್ವರ
- ರೊಗುಮಿಗೆಯ ಮಾಡಿದನು ಸೃಷ್ಟಿಗೆ ಬೇರೆ ಬೇರವರ |
- ಜಗದ ಜೋಡಣೆಯಾಯ್ತು ಭೂತಾ
- ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
- ನಿಗಮ ಮತದಲಿ ಹೂಡಿದವನೀಪಾಲ ಕೇಳೆ೦ದ || ೩೫ ||
- ಪದವಿಭಾಗ-ಅರ್ಥ:ಭೃಗು ಪುಲಸ್ತ್ಯ ವಸಿಷ್ಥ ದಕ್ಷಾದಿಗಳು+ ಎನಿಪ್ಪ(ಎನ್ನುವ) ನವ(೯) ವ್ರಜೇಶ್ವರರು+ ಒಗುಮಿಗೆಯ(ಹೆಚ್ಚಿನ) ಮಾಡಿದನು ಸೃಷ್ಟಿಗೆ ಬೇರೆ ಬೇರರ+ ಅವರ ಜಗದ ಜೋಡಣೆಯಾಯ್ತು ಭೂತಾಳಿಗೆ(ಭೂತ- ಜೀವಿ; ಆಳಿ ಸಮೂಹ; ಜೀವಿಗಳಿಗೆ) ಚತುರ್ವಿಧ ಸೃಷ್ಟಿಯೊಡ್ಡಣೆ(ತುಂಬಾ- ಸಮೂಹ) ನಿಗಮ(ವೇದ) ಮತದಲಿ ಹೂಡಿದವು(ವ್ಯವಸ್ಥೆ)+ ಅನೀಪಾಲ ಕೇಳು'ಎ೦ದ.
- ಅರ್ಥ:ಮಾರ್ಕಾಂಡೇಯ ಮುನಿಯು,' ಅವನೀಪಾಲನೇ ಕೇಳು, ಭೃಗು, ಪುಲಸ್ತ್ಯ, ವಸಿಷ್ಥ, ದಕ್ಷ ಎನ್ನುವ ಮೊದಲಾದವರು ಒಂಭತ್ತು ವ್ರಜೇಶ್ವರರು ಎಂದು ಹೆಚ್ಚುವರಿ ಬ್ರಹ್ಮರನ್ನು ಮಾಡಿದನು. ಸೃಷ್ಟಿಗೆ ಬೇರೆ ಬೇರೆಯಾದ ಅವರ ಜಗದ ಜೋಡಣೆಯಯೂ ಆಯ್ತು. ಜೀವಿ ಸಮೂಹಗಳಿಗೆ ಭೂಮಿಯ ಚತುರ್ವಿಧ ಸೃಷ್ಟಿಯ ತುಂಬಾ ಬಗೆಯಜೀವಿಗಳ ಸಮೂಹಗಳು ವೇದಗಲ ಅನುಸಾರ ವ್ಯವಸ್ಥೆ ಮಾಡಲ್ಪಟ್ಟವು,'ಎ೦ದ.
- ಆದಿಯಲಿ ಕೃತಯುಗ ಹರಿಶ್ಚ೦
- ದ್ರಾದಿಗಳು ಸೂರ್ಯಾನ್ವಯಕೆ ಬುಧ
- ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ |
- ಮೇದಿನಿಯನಾ ಯುಗದಲವಗೋ
- ಪಾದಿ ಸಲಹಿದರಿಲ್ಲ ಬೆಳಗಿತು
- ವೇದ ಭೋದಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ || ೩೬ ||
- ಪದವಿಭಾಗ-ಅರ್ಥ:ಆದಿಯಲಿ ಕೃತಯುಗ ಹರಿಶ್ಚ೦ದ್ರಾದಿಗಳು ಸೂರ್ಯಾನ್ವಯಕೆ(ಸೂರ್ಯವಂಶಕ್ಕೆ) ಬುಧನಾದಿ ನಿಮ್ಮನ್ವಯಕೆ(ನಿಮ್ಮ ವಂಶಕ್ಕೆ) ಬಳಿಕ(ನಂತರ) ಪುರೂರವ ಕ್ಷಿತಿಪ (ರಾಜ) ಮೇದಿನಿಯನು+ ಆ ಯುಗದಲಿ+ ಅವಗೋಪ+ ಆದಿ ಸಲಹಿದರಿಲ್ಲ, ಬೆಳಗಿತು ವೇದ ಭೋದಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ.
- ಅರ್ಥ:ಮಾರ್ಕಾಂಡೇಯ ಮುನಿಯು ಧರ್ಮಜನನ್ನ ಕುರಿತು,'ಆದಿಯಲ್ಲಿ ಕೃತಯುಗವು ಆರಂಭವಾಯಿತು. ಆಗ ಹರಿಶ್ಚ೦ದ್ರ ಮೊದಲಾದವರು ಸೂರ್ಯವಂಶದಲ್ಲಿ ಜನಿಸಿ ಆಳಿದರು. ಧರ್ಮಜನೇ ನಿಮ್ಮ ವಂಶಕ್ಕೆ ಬುಧನೇ ಆದಿ ಪುರುಷನಾಗಿದ್ದು ಸೂರ್ಯವಂಶದ ನಂತರ ಪುರೂರವ ರಾಜನಾಗಿ ಭೂಮಿಯನ್ನು ಆ ಯುಗದಲ್ಲಿ ಆಳಿದನು.(ಅವಗೋಪ ಆದಿ ಸಲಹಿದರಿಲ್ಲ) ವೇದ ಭೋದಿತ ಧರ್ಮವು ಸೂರ್ಯಪ್ರಭೆಗೆ ಮಿಗಿಲಾಗಿ ಬೆಳಗಿತು.
- ಆ ಯುಗದ ತರುವಾಯಲಾ ತ್ರೇ
- ತಾಯುಗವಲೇ ಬಳಿಕ ಧರ್ಮದ ಲಾ
- ಯದಲಿ ಕತ್ತಿದರಧರ್ಮವನೊ೦ದು ಪಾದದಲಿ |
- ರಾಯ ಕೇಳೈ ದ್ವಾಪರದಲಿ ಧೄ
- ಡಾಯದಲಿ ತಾಧರ್ಮವೆರಡಡಿ
- ಬೀಯವಾದುದು ನಿ೦ದುದೆನಿಸಿತು ನಿನ್ನ ದೆಸೆಯಿ೦ದ || ೩೭ ||
- ಪದವಿಭಾಗ-ಅರ್ಥ:ಆ ಯುಗದ ತರುವಾಯ (+ದ-ಲಿ)+ಆ ತ್ರೇತಾಯುಗವಲೇ ಬಳಿಕ ಧರ್ಮದ ಲಾಯದಲಿ(ತಾಣದಲ್ಲಿ) ಕಟ್ಟಿದರು+ ಅಧರ್ಮವನು+ ಒ೦ದು ಪಾದದಲಿ, ರಾಯ ಕೇಳೈ ದ್ವಾಪರದಲಿ ಧೃಡಾಯದಲಿ ತಾಧರ್ಮವು+ ಎರಡು+ ಅಡಿ(ಪಾದ) ಬೀಯವಾದುದು(ಇಲ್ಲವಾದುದು) ನಿ೦ದುದು+ ಎನಿಸಿತು ನಿನ್ನ ದೆಸೆಯಿ೦ದ
- ಅರ್ಥ:ಮುನಿಯು,'ಆ ಕೃತ ಯುಗದ ತರುವಾಯದಲ್ಲಿ ಆ ತ್ರೇತಾಯುಗವಲ್ಲವೇ; ಆ ಕೃತಯುಗದ ಬಳಿಕ ಧರ್ಮದ ಲಾಯದಲ್ಲಿ ಅಧರ್ಮವನ್ನು ಒ೦ದು ಪಾದದಲ್ಲಿ ಕಟ್ಟಿದರು, ಮೂರು ಪಾದ ದರ್ಮದ ನೆಡೆ. ಧರ್ಮರಾಯನೇ ಕೇಳಯ್ಯಾ, ಆ ನಂತರದ ದ್ವಾಪರದಲ್ಲಿ ಧೃಡವಾದ ಆಯದಲಿ- ತಾಣದಲ್ಲಿ ಧರ್ಮವು ತಾನು ಎರಡುಪಾದದಷ್ಟು ಇಲ್ಲವಾದುದು; ಅದು ನಿನ್ನ ದೆಸೆಯಿ೦ದ ಆ ಎರಡು ಪಾದದಲ್ಲಿ ಧರ್ಮನಿ೦ತಿದೆ ಎನಿಸಿತು,'ಎಂದನು.
- ಕಲಿಯ ರಾಜ್ಯದೊಳೊ೦ದು ಪಾದದ
- ಸಲುಗೆ ಧರ್ಮಕ್ಕಹುದು ಗಡ ವೆ
- ಗ್ಗಳೆಯವದರೊಳಸತ್ಯ ಧರ್ಮ ದ್ರೋಹ ಮಾತ್ಸರ್ಯ |
- ಕಳವು ಹಿ೦ಸೆಯನೀತಿ ಲೋಭ
- ಸ್ಖಲಿತ ವಾರಡಿ ಠಕ್ಕು ವ೦ಚನೆ
- ಹಳಿವು ಹಾದರವಗತೆಯೆ೦ಬಿವರುಬ್ಬು ಹಿರಿದೆ೦ದ || ೩೮ ||
- ಪದವಿಭಾಗ-ಅರ್ಥ:ಕಲಿಯ ರಾಜ್ಯದೊಳ+ ಒ೦ದು ಪಾದದ ಸಲುಗೆ(ಸಲ್ಲುವಿಕೆ, ಇರುವಿಕೆ) ಧರ್ಮಕ್ಕೆ+ ಅಹುದು ಗಡ, ವೆಗ್ಗಳಯವು(ಶ್ರೇಷ್ಠತೆ, ಹಿರಿಮೆ)+ ಅದರೊಳು+ ಅಸತ್ಯ, ಧರ್ಮದ್ರೋಹ, ಮಾತ್ಸರ್ಯ, ಕಳವು, ಹಿ೦ಸೆಯನೀತಿ, ಲೋಭಸ್ಖಲಿತವು((ಸಂ- ಜಾರಿಬಿದ್ದ, ಕಳಚಿ ಬಿದ್ದಿರುವ, ಎಡಹುವ, ತಡವರಿಸುವ ತಪ್ಪಾದ),+ ಆರಡಿ(ಕಿರುಕುಳ, ಮೋಸ, ನೋವು, ಸಂಕಟ) ಠಕ್ಕು, ವ೦ಚನೆ, ಹಳಿವು, ಹಾದರ+ ಅವಗತೆಯೆ೦ಬ(ಅವಗತ- ಕೆಳಗೆ ಹೋಗು,(ಸಂ)ಚೆನ್ನಾಗಿ ತಿಳಿದುಕೊಂಡ, ಕಳೆದುಹೋದ, ಹೊರಟುಹೋದ)+ ಇವರ+ ಉಬ್ಬು(ಹೆಚ್ಚು) ಹಿರಿದು+ ಎ೦ದ.
- ಅರ್ಥ:ಮುನಿಯು,'ಕಲಿಯ ರಾಜ್ಯದಲ್ಲಿ ಒ೦ದು ಪಾದದ ಧರ್ಮ ಮಾತ್ರಾ ಸಲ್ಲುವುದು. ಧರ್ಮಕ್ಕೆ ಒಂದು ಪಾದದ ಇರುವಿಕೆ ಮಾತ್ರಾ ಶ್ರೇಷ್ಠತೆ ಇರವುದು ಗಡ! ಅದರಲ್ಲಿ- ಆ ಕಲಿಯುಗದಲ್ಲಿ ಅಸತ್ಯ, ಧರ್ಮದ್ರೋಹ, ಮಾತ್ಸರ್ಯ, ಕಳವು, ಹಿ೦ಸೆಯನೀತಿ, ಲೋಭವು ಮನಸ್ಸಿಗೆಜಾರುವುದು, ಠಕ್ಕು, ವ೦ಚನೆ, ಹಳಿವು, ಹಾದರ, ಕೀಳುತನ ಇವುಗಳು ಈ ಕಾದ ಜನರ ಹೆಚ್ಚಿನ ಹಿರಿದು ಗುಣ,'ಎ೦ದ.
- ಈ ಯಧರ್ಮವ ಪತಿಕರಿಸಿ ತ
- ನ್ನಾಯತಕೆ ಭೂತಳವ ತ೦ದು ನಿ
- ರಾಯಾಸದಲೇ ಬಳಸುತಿರ್ದನು ದು೦ದುವೆ೦ಬಸುರ |
- ರಾಯ ಕೇಳಾ ದೈತ್ಯನನು ತ
- ನ್ನಾಯುಧಕೆ ಬಲಿಗೊಟ್ಟು ಬಳಿಕ
- ಸ್ಥಾಯಿ ಧರ್ಮವ ಬಲಿದು ಕೊಟ್ಟನು ದು೦ದುಮಾರನೃಪ || ೩೯ ||
- ಪದವಿಭಾಗ-ಅರ್ಥ:ಈ ಯ+ ಅಧರ್ಮವ ಪತಿಕರಿಸಿ(ಪತಿಕರಿಸು- ಅಂಗೀಕರಿಸು, ಸ್ವೀಕರಿಸು, ಕಾಪಾಡು) ತನ್ನ+ ಆಯತಕೆ(ಕ್ರಮ, ನೆಲೆ) ಭೂತಳವ(ಭೂಮಿಯನ್ನು) ತ೦ದು ನಿರಾಯಾಸದಲೇ(ಕಷ್ಟವಿಲ್ಲದೆ) ಬಳಸುತಿರ್ದನು ದು೦ದುವೆ೦ಬ+ ಅಸುರ; ರಾಯ ಕೇಳು+ ಆ ದೈತ್ಯನನು ತನ್ನಾಯುಧಕೆ ಬಲಿಗೊಟ್ಟು ಬಳಿಕ ಸ್ಥಾಯಿ ಧರ್ಮವ ಬಲಿದು(ಗಟ್ಟಿಮಾಡಿ) ಕೊಟ್ಟನು ದು೦ದುಮಾರ ನೃಪ.
- ಟಿಪ್ಪಣಿ:(ದುಂದುಮಾರ ಒಬ್ಬ ಸೂರ್ಯವಂಶದ ರಾಜ, ಕೃತಯುಗದವನು. "ಭರತ, ನಹುಷ, ಯಯಾತಿ, ನಳ, ಸಂವರಣ, ಸಗರ, ದಿಳೀಪ, ನೃಗ, ರಘುವರ, ಪುರೂರವ, ದುಂದುಮಾರ ಭಗೀರಥಾದಿಗಳು ಧರಣಿಪಾಲರು- ಇದೇ ಕಾವ್ಯ-ಗದಾಪರ್ವ; ಈ ವಿಷಯವು ಕೃತಯುಗದ ವರ್ಣನೆಯಲ್ಲಿ ಬರಬೇಕಿತ್ತು; ಆದರೆ ಕಲಿಯುಗ ಧರ್ಮದ ವರ್ಣೆಯಲ್ಲಿ ಬಂದಿದೆ- ಹಾಗಾಗಿ ಗೊಂದಲಕ್ಕೆ ಕಾರಣವಾಗಿದೆ. ದುಂದುಮಾರನಿಗೂ ಕಲಿಯುಗದ ಧರ್ಮಕ್ಕೂ ಹೊಂದುವುದಿಲ್ಲ).
- ಅರ್ಥ:ರಾಜನೇ ಕೇಳು,ಕೃತಯುಗದಲ್ಲಿ,'ಈ ಅಧರ್ಮವನ್ನು ಸ್ವೀಕರಿಸಿ ತನ್ನ ಕ್ರಮದಲ್ಲಿ ಭೂಮಿಯನ್ನು- ಜನರನ್ನು ತ೦ದು ದು೦ದುವೆ೦ಬ ಅಸುರನು ನಿರಾಯಾಸವಾಗಿ- ಕಷ್ಟವಿಲ್ಲದೆ ಆಳುತ್ತಿದ್ದನು. ರಾಜನೇ ಕೇಳು, ದು೦ದುಮಾರ ನೃಪನು, ಆ ದೈತ್ಯನನ್ನು ತನ್ನ ಆಯುಧಕ್ಕೆ ಬಲಿಗೊಟ್ಟು- ಕೊಂದು ಬಳಿಕ ಸ್ಥಾಯಿಯಾದ ಧರ್ಮವನ್ನು ಗಟ್ಟಿಮಾಡಿ ಜನತೆಗೆ ಕೊಟ್ಟನು.
- ಆನೃಪನ ರಾಜ್ಯದಲಿ ಯಜ್ಞ ವಿ
- ಧಾನ ವೈದಿಕವಿಧಿ ಕೃತಾನು
- ಸ್ಠಾನ ಯಮ ನಿಯಮಾದಿ ಯೋಗ ವಿಸಿಷ್ಠ ನೀತಿಯಲಿ |
- ದೀನ ಭಾವವ ನುಳಿದು ಯಾಚ್ನಾ
- ಹೀನ ವೃತ್ತಿಯ ಬಿಸುಟು ಲೋಕದ
- ಬಾನು ತೇಜದಲೆಸೆದುದ೦ದು ಮಹೀಸುರ ವ್ರಾತ || ೪೦ ||
- ಪದವಿಭಾಗ-ಅರ್ಥ:ಆ ನೃಪನ ರಾಜ್ಯದಲಿ ಯಜ್ಞ ವಿಧಾನ ,ವೈದಿಕವಿಧಿ, ಕೃತಾನುಸ್ಠಾನ(ಕೃತ+ ಅನುಸ್ಥಾನ- ಮಾಡಬೇಕಾದ ಕರ್ತವ್ಯವನ್ನು ಮಾಡುವುದು). ಯಮ ನಿಯಮ,+ ಅದಿ ಯೋಗ, ವಿಶಿಷ್ಠ ನೀತಿಯಲಿ, ದೀನ ಭಾವವ ನುಳಿದು(ಬಿಟ್ಟು), ಯಾಚ್ನಾಹೀನ(ಯಾಚಿಸುವ- ಬೇಡುವ ಹೀನ) ವೃತ್ತಿಯ ಬಿಸುಟು, ಲೋಕದ ಬಾನು(ಸೂರ್ಯ) ತೇಜದಲಿ+ ಎಸೆದುದು+ ಅ೦ದು ಮಹೀಸುರ(ವಿಪ್ರರ ಸಮೂಹ) ವ್ರಾತ.
- ಅರ್ಥ:ಮುನಿಯು,'ಆ ನೃಪನ ರಾಜ್ಯದಲ್ಲಿ ಯಜ್ಞ ವಿಧಾನ ,ವೈದಿಕವಿಧಿ, ಮಾಡಬೇಕಾದ ಕರ್ತವ್ಯವನ್ನು ಮಾಡುವುದು, ಯಮ, ನಿಯಮ ಮೊದಲಾದ ಅದಿಯೋಗದ ಅಭ್ಯಾಸಗಳನ್ನು ವಿಶಿಷ್ಠ ನೀತಿಯಲ್ಲಿ ನೆಡೆಯುವಂತೆ ಮಾಡಿದನು. ದೀನ ಭಾವವನ್ನು ಬಿಟ್ಟು ಬೇಡುವ ಹೀನ ವೃತ್ತಿಯ ಬಿಸುಟು, ಅ೦ದು ವಿಪ್ರರ ಸಮೂಹ ಲೋಕದ ಸೂರ್ಯನ ತೇಜದಂತೆ ಶೋಭಿಸಿತು.
- ಪ್ರೌಡನೇ ವ್ಯವಹರಿಸಲಗ್ಗದ
- ಮೂಢನೇ ಬರಲೊ೦ದೆ ಸತ್ಯನಿ
- ರೂಢಿಯಲಿ ವಾಣಿಜ್ಯ ಸುವ್ಯ್ವಹಾರ ಮಾರ್ಗದಲಿ |
- ಗಾಢ ವಿಕ್ರಯ ಸಕ್ರಯ ದೊಳೇ
- ಗೂಢಕರು ಮೂಲೈಕ ಲಾಭ ನಿ
- ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ || ೪೨ ||
- ಪದವಿಭಾಗ-ಅರ್ಥ:ಪ್ರೌಡನೇ (ತಿಳಿದವನು- ಯೋಗ್ಯನು) ವ್ಯವಹರಿಸಲು+ ಅಗ್ಗದ(ಉತ್ತಮ) ಮೂಢನೇ ಬರಲು+ ಒ೦ದೆ ಸತ್ಯನಿರೂಢಿಯಲಿ ವಾಣಿಜ್ಯ ಸುವ್ಯ್ವಹಾರ ಮಾರ್ಗದಲಿ, ಗಾಢ ವಿಕ್ರಯ ಸಕ್ರಯ ದೊಳೇ ಗೂಢಕರು ಮೂಲ+ ಏಕ ಲಾಭ ನಿರೂಢಪರು (ಬದಲಾಯಿಸುವ ನಿರೀಕ್ಷೆ ಇಲ್ಲದ , ಒಬ್ಬರಿಗೊಂದು ಮತ್ತೊಬ್ಬರಿಗೊಂದು ನೀತಿ ಮಾಡದ)+ ಒಪ್ಪಿದರು (ಇದ್ದರು) ವೈಶ್ಯರು ಧರ್ಮಕಾಲದಲಿ.
- ಅರ್ಥ: ಬಹಳ ಮೂಢನಾದವನೇ ಕೊಳ್ಳಲು ಬರಲು ಒ೦ದೆ ಸತ್ಯದ ನಿರೂಢಿಯಲ್ಲಿ ವಾಣಿಜ್ಯದ ಸುವ್ಯವಹಾರ ಮಾರ್ಗದಲ್ಲಿ ವ್ಯವಹರಿಸಲು ತೊಡಗುವವನೇ ಪ್ರೌಡ ವೈಶ್ಯನು. ಗಾಢ-ಗಹನವಾದ ವಿಕ್ರಯ- ಮಾರಾಟ ಸಕ್ರಯ, ಕೊಳ್ಳುವಿಕೆಯ ಗೂಢಕರು- ರಹಸ್ಯಬಲ್ಲವರು. ಮೂಲಧನಕ್ಕೆ ಏಕ- ಒಂದೇ ಕ್ರಮದ ಲಾಭವನ್ನು ಪಡೆಯುವ ಬದಲಾಯಿಸುವ ಕ್ರಮ ಇಲ್ಲದ ವೈಶ್ಯರು ಧರ್ಮ ಅನುಸರಿಸಿ ಇದ್ದವರು.
- ನಿಜಕೃಷಿ ವ್ಯವಸಾಯದಲಿ ತ
- ದ್ವಿಜ ಕುಲದ ಶಿಶ್ರೂಷೆಯಲಿ ಪಾ
- ದಜರು ಕೃತ್ಯರು ಚತುರ್ವರ್ಣದಲಿ ಮಾರ್ಗವಿದು
- ನಿಜ ನಿಜಾ೦ಗದಧರ್ಮಗತಿಯಲಿ
- ಮಜಡನಾದರೆ ಮನುಜರಾದವ
- ರಜನ ಪರಮಾಯುಷ್ಯ ಪರಿಯ೦ತಿಹರು ನರಕದಲಿ ೪೩
- ಪದವಿಭಾಗ-ಅರ್ಥ:ನಿಜಕೃಷಿ, ವ್ಯವಸಾಯದಲಿ ತದ್ವಿಜ ಕುಲದ ಶಿಶ್ರೂಷೆಯಲಿ ಪಾದಜರು(ವಿಷ್ಣುವಿನ ಪಾದದಲ್ಲಿ ಜನಿಸಿದ, ಶೂದ್ರರು) ಕೃತ್ಯರು, ಚತುರ್ವರ್ಣದಲಿ ಮಾರ್ಗವು+ ಇದು ನಿಜ ನಿಜಾ೦ಗದ ಧರ್ಮಗತಿಯಲಿ ಮಜಡನಾದರೆ(ಮ+ ಜಡ- ಅನುಸರಿಸದವನಾದರೆ) ಮನುಜರಾದ+ ಅವರ(ಆ) ಜನ ಪರಮಾಯುಷ್ಯ ಪರಿಯ೦ತ+ ಇಹರು ನರಕದಲಿ.
- ಅರ್ಥ:ತನ್ನ ಕರ್ತವ್ಯ ಕೃಷಿ, ವ್ಯವಸಾಯದಲ್ಲಿ ಮತ್ತು ಆ ದ್ವಿಜಕುಲದ ಸೇವೆಯಲ್ಲಿ ವಿಷ್ಣುವಿನ ಪಾದದಲ್ಲಿ ಜನಿಸಿದ ಶೂದ್ರರು ಕೃತಕೃತ್ಯರು, ಚತುರ್ವರ್ಣದಲ್ಲಿ ಈ ಮಾರ್ಗವು ಇದು ನಿಜವು. ಈ ನಿಜಾ೦ಗದ ಧರ್ಮಗತಿಯಲ್ಲಿ ಅನುಸರಿಸದವನಾದರೆ ಮನುಜರಾದ ಆ ಜನರು ಪರಮಾಯುಷ್ಯ ಪರಿಯ೦ತ ನರಕದಲ್ಲಿ ಇರುವರು.
- ನಯವಿದನೆ ಕೇಳ್ ವೇದ ಶಾಸ್ತ್ರಾ
- ಧ್ಯಯನದಲಿ ಪಿತೃ ಮಾತೃ ಶಿಶ್ರೂ
- ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ |
- ನಿಯತ ಮೌನವ್ರತದ ಸ೦ಗ
- ಪ್ರಿಯದ ಶೌಚಾಸ್ತೇಯ ದಿ೦ದ್ರಿಯ
- ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆ೦ದ || ೪೪ ||
- ಪದವಿಭಾಗ-ಅರ್ಥ:ನಯವಿದನೆ (ನಯವಿನಯವನ್ನು ಅರಿತವನೆ- ಧರ್ಮಜನೆ; ಪ್ರಾಸಕ್ಕಾಗಿ ಹರಸ್ವವೇ-ನ್ಯಾಯವಿದನೆ, ನ್ಯಾಯವನ್ನು ತಿಳಿದವನೆ?) ಕೇಳ್ ವೇದ ಶಾಸ್ತ್ರಾಧ್ಯಯನದಲಿ ಪಿತೃ ಮಾತೃ ಶಿಶ್ರೂಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ(ಪವಿತ್ರ ಅಗ್ನಿಯ) ಕಾರ್ಯದಲಿ (ಪ್ರತಿದಿನ ಬೆಳಿಗ್ಗೆ ಶುಚಿಯಾಗಿ, ಅಗ್ನಿಗೆ ಪೂಜಿಸಿ, ಅಹುತಿಹಾಕುವುದು) ನಿಯತ( ಸ್ಥಿರವಾದ), ಮೌನವ್ರತದ- ಸ೦ಗಪ್ರಿಯದ, ಶೌಚ+ ಆಸ್ತೇಯದ(ಕದಿಯದ)+ ಇಂದ್ರಿಯ ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆ೦ದ(ಮರಣಾನಂತರ ಉತ್ತಮ ಗತಿಯನ್ನು ಕೊಡುವುದು).
- ಅರ್ಥ:ಮುನಿಯು ಧರ್ಮಜನಿಗೆ,'ನಯವಿನಯವನ್ನು ಅರಿತವನೆ- ಧರ್ಮಜನೆ ಕೇಳು, ವೇದ ಶಾಸ್ತ್ರಾಧ್ಯಯನದಲ್ಲಿ, ಪಿತೃ, ಮಾತೃ ಶಿಶ್ರೂಷೆಯಲ್ಲಿ, ಗುರು ಪರಿಚರ್ಯದಲ್ಲಿ- ಸೇವೆಯಲ್ಲಿ, ಪವಿತ್ರ ಅಗ್ನಿಕಾರ್ಯದಲ್ಲಿ, ಮೌನವ್ರತದ, ಸ೦ಗಪ್ರಿಯದ, ಶೌಚದ- ಶುದ್ಧಮನಸ್ಸಿನ, ಕದಿಯದ, ಇಂದ್ರಿಯ ಜಯದ, ಶ್ರೇಷ್ಠ ಬ್ರಹ್ಮಚರ್ಯ ಆಶ್ರಮವು ಮರಣಾನಂತರ ಉತ್ತಮ ಗತಿಯನ್ನು ಕೊಡುವುದು,'ಎಂದ.
- ದೇವ ಗುರು ಪಿತೃ ವಹ್ನಿ ಶಿಶ್ರೂ
- ಷಾವಧಾನ ನಿರ೦ತ ಷಟ್ಕ
- ರ್ಮಾವಲ೦ಬ ನಿಜೋನ್ನತಾಲಾಭೈಕ ಸ೦ತೋಷ |
- ಪಾವನವ್ರತ ನಿಜ ಪುರ೦ದ್ರೀ
- ಸೇವೆ ಸತ್ಯಾಸ್ತೇಯ ಶೌಚ ಗು
- ಣಾವಳಿಗಳುಳ್ಳಾತ ಗೃಹಪತಿಯೆ೦ದನಾ ಮುನಿಪ || ೪೫ ||
- ಪದವಿಭಾಗ-ಅರ್ಥ:ದೇವ ಗುರು ಪಿತೃ ವಹ್ನಿ(ಅಗ್ನಿ) ಶಿಶ್ರೂಷೆ+ ಅವಧಾನ (ಮನಸ್ಸಿನ ಏಕಾಗ್ರತೆ; ಎಚ್ಚರಿಕೆ ಹೇಳುವುದು; ಸ್ತುತಿ ಮಾಡುವುದು) ನಿರ೦ತ ಷಟ್ಕರ್ಮ+ ಅವಲ೦ಬ ನಿಜ+ ಉನ್ನತಾಲಾಭ+ ಎಕ ಸ೦ತೋಷ ಪಾವನವ್ರತ ನಿಜ ಪುರ೦ದ್ರೀಸೇವೆ(ನಿಜ-ತನ್ನ, ಪುರಂದ್ರೀ-ಪತ್ನಿಯ, ಸೇವೆ-ಕ್ಷೇಮವನ್ನು ನೋಡಿಕೊಳ್ಳುವುದು ) ಸತ್ಯ+ ಆಸ್ತೇಯ(ಕದಿಯದಿರುವುದು) ಶೌಚ(ಶುದ್ಧವಾಗಿರುವುದು) ಗುಣ+ ಆವಳಿಗಳು+ ಉಳ್ಳಾತ ಗೃಹಪತಿಯು (ಗೃಹಸ್ಥ)+ ಎ೦ದನು+ ಆ ಮುನಿಪ.
- ಅರ್ಥ:ಮುನಿಯು,'ದೇವರು, ಗುರುಗಳು, ಪಿತೃ- ತಂದೆತಾಯಿ, ಅಗ್ನಿ ಇವುಗಳ ಶಿಶ್ರೂಷೆ- ಸೇವೆ, ಮನಸ್ಸಿನ ಏಕಾಗ್ರತೆ, ಎಚ್ಚರಿಕೆ, ನಿರ೦ತರ ಷಟ್ಕರ್ಮಗಳನ್ನು ಅವಲ೦ಬಿಸಿರುವುದು, ತನ್ನ ಉನ್ನತ ಅಲಾಭದಲ್ಲಿಯೂ ಎಕರೀತಿ ಸ೦ತೋಷವಾಗಿರುವುದು, ಪಾವನವ್ರತ ನಿಷ್ಠತೆ, ತನ್ನ ಪತ್ನಿಯ ಕ್ಷೇಮವನ್ನು ನೋಡಿಕೊಳ್ಳುವುದು ಸತ್ಯವಂತಿಕೆ ಕದಿಯದಿರುವುದು, ಶುದ್ಧವಾಗಿರುವುದು, ಈ ಗುಣಗಳನ್ನು ಉಳ್ಳಾತನು ಉತ್ತಮ ಗೃಹಸ್ಥನು ಎ೦ದನು,' ಆ ಮುನಿಪ.
- ವನ ವನದೊಳಾಶ್ರಮದೊಳಗೆ ಕುಲ
- ವನಿತೆ ಸಹಿತಮಲಾಗ್ನಿ ಹೋತ್ರದ
- ನೆನಹು ತಪ್ಪದೆ ಕ೦ದಮೂಲ ಫಲಾಶನ೦ಗಳಲಿ |
- ವಿನಯ ಯಜ್ಞ ತಪೋವ್ರತಾದಿ ಗ
- ಳನಿತರಲಿ ನಿಷ್ಟಾತ್ಮನಾದೊಡೆ
- ವಿನುತ ವಾನಪ್ರಸ್ಥ ನೆ೦ಬರು ರಾಯ ಕೇಳೆ೦ದ || ೪೬ ||
- ಪದವಿಭಾಗ-ಅರ್ಥ:ವನ ವನದೊಳು+ ಆಶ್ರಮದೊಳಗೆ ಕುಲವನಿತೆ ಸಹಿತ+ಅಮಲ+ ಅಗ್ನಿ ಹೋತ್ರದ ನೆನಹು ತಪ್ಪದೆ ಕ೦ದಮೂಲ ಫಲ+ ಅಶನ೦ಗಳಲಿ(ಆಹಾರ), ವಿನಯ ಯಜ್ಞ ತಪೋವ್ರತ+ ಆದಿಗಳನು+ ಇತರಲಿ ನಿಷ್ಟಾತ್ಮನಾದೊಡೆ(ಆತ್ಮ ಪೂರ್ವಕ ನಿಷ್ಠನಾದರೆ) ವಿನುತ(ಉತ್ತಮ, ಶ್ರೇಷ್ಠ) ವಾನಪ್ರಸ್ಥನು+ ಎ೦ಬರು ರಾಯ ಕೇಳೆ೦ದ.
- ಅರ್ಥ:ಮುನಿಯು, ಧರ್ಮರಾಯನೇ ಕೇಳು,'ವನ ವನಗಳಲ್ಲಿ ಆಶ್ರಮದಲ್ಲಿ ಕುಲವನಿತೆಯಾದ ಪತ್ನಿ ಸಹಿತ, ಪವಿತ್ರ ಅಗ್ನಿಹೋತ್ರದ ನೆನಪನ್ನು ತಪ್ಪದೆ ಆಚರಿಸುತ್ತಾ ಕ೦ದಮೂಲ ಫಲಗಳ - ಗಡ್ಡೆ ಗೆಣಸುಗಳ ಆಹಾರಳಲ್ಲಿ ಇದ್ದು, ವಿನಯ ಗುಣಹೊಂದಿ ಯಜ್ಞ ತಪಸ್ಸು, ವ್ರತಾದಿಗಳನ್ನು ಮಾಡತ್ತಾ, ಇತರಲ್ಲಿ ನಿಷ್ಥಾತ್ಮನು- ಆತ್ಮ ಪೂರ್ವಕ ನಿಷ್ಠನಾದರೆ, ಅವನನ್ನು ಉತ್ತಮ, ವಾನಪ್ರಸ್ಥನು ಎ೦ಬರು,'ಎ೦ದ.
- ಮದನನ೦ಬನು ಮುರಿದು ರೋಷವ
- ಕದನದಲಿ ಸೋಲಿಸಿದು ಲೋಭವ
- ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ |
- ಎದೆಯಲ೦ಕವ ಬರೆದು ವೈರಾ
- ಗ್ಯದ ಸುಸಮ್ಯಗ್ ಜ್ಞಾನಯೋಗದ
- ಪದದ ಬೆಳೆ ಸಿರಿ ವ೦ತನೇ ಯತಿಯೆ೦ದನಾ ಮುನಿಪ || ೪೭ ||
- ಪದವಿಭಾಗ-ಅರ್ಥ:ಮದನನು (ಕಾಮ ಎಂಬುವನನ್ನು)+ ಎಂಬನು ಮುರಿದು, ರೋಷವ(ಕೋಪವನ್ನು) ಕದನದಲಿ ಸೋಲಿಸಿದು, ಲೋಭವನು+ ಒದೆದು, ಮೋಹವ ನೂಕಿಯು+ ಉಳಿದ+ ಆ ಮದವ ಮತ್ಸರದ ಎದೆಯಲಿ+ ಅ೦ಕವ(ಹತೋಟಿನ್ನು) ಬರೆದು, ವೈರಾಗ್ಯದ ಸು+ ಸಮ್ಯಗ್+ ಜ್ಙಾನಯೋಗದ ಪದದ ಬೆಳೆ(ಬೆಳೆದ) ಸಿರಿವ೦ತನೇ ಯತಿಯು+ ಎ೦ದನು+ ಆ ಮುನಿಪ
- ಅರ್ಥ:ಆ ಮುನಿಯು,'ಕಾಮ' ಎಂದರೆ ಯಾವುದೇ 'ಬಯಕೆ' ಎಂಬುವನ್ನು ಇಲ್ಲವಾಗಿಸಿ, ಕೋಪವನ್ನು ಅಂತರಗದ ಕದನದಲ್ಲಿ ಸೋಲಿಸಿದ್ದು, ಇನ್ನೂ ಬೇಕು ಎಲ್ಲ ಇರಲಿ ಎಂಬ ಲೋಭವನ್ನು ಒದೆದು- ತಳ್ಳಿ ಇಲ್ಲವಾಗಿಸಿ,, ಆ ವಸ್ತು ಇಲ್ಲವಾದರೆ ಬದುಕಲಾರೆನು ಎಂಬ ಮೋಹವನ್ನು ನೂಕಿ ಕಳೆದು, ಇನ್ನೂ ಮನಸ್ಸಿನ ಒಳಗೆ ಉಳಿದ 'ನಾನು ಹೆಚ್ಚಿನವ, ಘೋರ ತಪಸ್ವಿ' ಎಂಬ ಆ ಮದವನ್ನು ಬಿಟ್ಟು, ತನಗಿಂತ ಉತ್ತಮರನ್ನು ನೋಡಿ ಸಹಿಸದ ಮತ್ಸರವನ್ನು ಎದೆಯಲ್ಲಿ- ಅಂತರಂಗದ ಹತೋಟಿಯ ಬರೆದು-ಮೇಲೇಳದಂತೆ ಮಾಡಿ , ವೈರಾಗ್ಯದ ಉತ್ತಮ ಸಮ್ಯಗ್(ಸರ್ವತ್ರ ಸಮಭಾವದ) ಜ್ಙಾನಯೋಗದ ಪದವಿಯ ಬೆಳೆಯನ್ನು ಬೆಳೆದವನೇ ಸಿರಿವ೦ತನಾದ ಯತಿಯು,' ಎ೦ದನು.
- ಧರಣಿಪತಿ ಕೇಳ್ ಜಾತಿ ವರ್ಗದ
- ಪರಮ ಧರ್ಮದ ಸಾರವಿದನಾ
- ಚರಿಸಿ ಸಿದ್ದಿಯನೈದಿದನ ಪಿತೃ ಮಾತೃ ಭಕ್ತಿಯಲಿ |
- ಒರೆಗೆ ಬಣ್ಣಕೆ ಬೆರಸಿ ವೇದೋ
- ಚ್ಚರಿತ ಧರ್ಮವನರುಹಿದನು ಭೂ
- ಸುರಗೆ ಧರ್ಮವ್ಯಾಧನೆ೦ಬನ ಕಥೆಯ ಕೇಳೆ೦ದ ೪೮
- ಪದವಿಭಾಗ-ಅರ್ಥ:ಧರಣಿಪತಿ ಕೇಳ್, ಜಾತಿ ವರ್ಗದ ಪರಮ ಧರ್ಮದ ಸಾರವು+ ಇದನು+ ಆಚರಿಸಿ ಸಿದ್ದಿಯನು+ ಐದಿದನ(ಹೊಂದಿದವನ) ಪಿತೃ ಮಾತೃ ಭಕ್ತಿಯಲಿ ಒರೆಗೆ ಬಣ್ಣಕೆ ಬೆರಸಿ ವೇದ+ ಉಚ್ಚರಿತ (ಹೇಳಿದ) ಧರ್ಮವನು+ ಅರುಹಿದನು(ಹೇಳಿದನು) ಭೂಸುರಗೆ(ಬ್ರಾಹ್ಮಣನಿಗೆ), ಧರ್ಮವ್ಯಾಧನು+ ಎ೦ಬನ ಕಥೆಯ ಕೇಳೆ೦ದ.
- ಅರ್ಥ:ಮುನಿಯು, ಧರಣಿಪತಿ ಧರ್ಮಜನೇ ಕೇಳು, ಇದು ಜಾತಿ ವರ್ಗದ ಪರಮ ಧರ್ಮದ ಸಾರವು. ಇದನ್ನು ಆಚರಿಸಿ ಸಿದ್ದಿಯನನ್ನು ಹೊಂದಿದವನ, ಪಿತೃ- ಮಾತೃ ಭಕ್ತಿಯಲ್ಲಿ ಒರೆಗೆ ಹಚ್ಚಿ, ಅದರ ಬಣ್ಣಕ್ಕೆ ಬೆರಸಿ, ವೇದದಲ್ಲಿ ಹೇಳಿದ ಧರ್ಮವನ್ನು ಬ್ರಾಹ್ಮಣನಿಗೆ ಧರ್ಮವ್ಯಾಧನು ಎ೦ಬುವವನು ಹೇಳಿದನು; ಆ 'ಧರ್ಮವ್ಯಾಧ' ಎ೦ಬುವವನ ಕಥೆಯನ್ನು ಕೇಳು,'ಎ೦ದ.
♠♠♠
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|