<ಕುಮಾರವ್ಯಾಸಭಾರತ-ಸಟೀಕಾ
- ಮುನಿಗಳುಪ ಕಥೆಯಲಿ ಯುಧಿಷ್ಟಿರ
- ಜನಪತಿಯ ಸ೦ತೈಸಿ ಕಾಮ್ಯಕ
- ವನದಿನಸುರಾರಿ ಬ೦ದನು ದ್ವಾರಕಾ ಪುರಿಗೆ || ಸೂ||
- ಪದವಿಭಾಗ-ಅರ್ಥ: ಮುನಿಗಳು+ ಉಪ ಕಥೆಯಲಿ ಯುಧಿಷ್ಟಿರ ಜನಪತಿಯ ಸ೦ತೈಸಿ, ಕಾಮ್ಯಕ ವನದಿಂ+ ನ+ ಅಸುರಾರಿ ಬ೦ದನು ದ್ವಾರಕಾ ಪುರಿಗೆ.
- ಅರ್ಥ:ವೈಶಂಪಾಯನ ಮುನಿಯು ಜನಮೇಜಯನಿಗೆ ಹೇಳಿದನು,'ಮಾರ್ಕಾಂಡೇಯ ಮುನಿಗಳು ಧರ್ಮರಹಸ್ಯದ ಉಪ ಕಥೆಗಯನ್ನು ಹೇಳಿ, ಯುಧಿಷ್ಟಿರ ಜನಪತಿಯನ್ನು ಸ೦ತೈಸಿದರು. ಆನಂತರ ಅಸುರಾರಿ ಕೃಷ್ಣನು ಕಾಮ್ಯಕ ವನದಿಂದ ಹೊರಟು ದ್ವಾರಕಾನಗರಕ್ಕೆ ಬ೦ದನು'.[೧][೨] [೩] [೪]
- ॐ
ತಪಸ್ವಿ ವಿಪ್ರನಿಗೆ ಗೃಹಣಿಯ ಹಿತವಚನ[ಸಂಪಾದಿಸಿ]
- ಕೇಳುಜನಮೇಜಯ ಧರಿತ್ರೀ
- ಪಾಲ ಮಾರ್ಕಾ೦ಡೇಯ ಮುನಿಪತಿ
- ಹೇಳಿದನು ವೇದೋಕ್ತ ಧರ್ಮದ ಸಾರ ಸ೦ಗತಿಯ |
- ಶೀಲಗುಣ ಸಚ್ಚರಿತನಲಿ ಸ೦
- ಮೇಳವಿಸಿ ಮುದ್ಗಲವ೦ಶವಿ
- ಶಾಲನೊಬ್ಬನು ವಿಪ್ರನಿದ್ದನು ಬೊಮ್ಮಚರಿಯದಲಿ || ೧ ||
- ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ, ಮಾರ್ಕಾ೦ಡೇಯ ಮುನಿಪತಿ ಹೇಳಿದನು ವೇದೋಕ್ತ(ವೇದದಲ್ಲಿ ಹೇಳಿದ) ಧರ್ಮದ ಸಾರ ಸ೦ಗತಿಯ, ಶೀಲಗುಣ ಸಚ್ಚರಿತನಲಿ ಸ೦ಮೇಳವಿಸಿ(ಒಟ್ಟಾಗಿ ಸೇರಿ) ಮುದ್ಗಲವ೦ಶ ವಿಶಾಲನು( ಹಿರಿದು, ಹಿರಿಮೆಯುಳ್ಳವನು)+ ಒಬ್ಬನು ವಿಪ್ರನಿದ್ದನು(ಬ್ರಾಹ್ಮಣ) ಬೊಮ್ಮಚರಿಯದಲಿ (ಬ್ರಹ್ಮಚರ್ಯದಲ್ಲಿ).
- ಅರ್ಥ:ಕೇಳು ಜನಮೇಜಯ ರಾಜನೇ, ಮಾರ್ಕಾ೦ಡೇಯ ಮುನಿಶ್ರೇಷ್ಠನು ವೇದದಲ್ಲಿ ಹೇಳಿದ ಧರ್ಮದ ಸಾರ ಸ೦ಗತಿಯನ್ನು ಧರ್ಮಜನಿಗೆ ಒಬ್ಬ ಬ್ರಾಹ್ಮಣನ ಕಥೆಯ ಮೂಲಕ ಹೇಳಿದನು. 'ಶೀಲಗುಣ ಸಚ್ಚರಿತನಗಳು ಒಟ್ಟಾಗಿ ಸೇರಿದ ಮುದ್ಗಲವ೦ಶದ ಹಿರಿಮೆಯುಳ್ಳ ಒಬ್ಬ ಬ್ರಾಹ್ಮಣನು ಬ್ರಹ್ಮಚರ್ಯದ ನಿಷ್ಠೆಯಲ್ಲಿ ಇದ್ದನು'.
- ಧರಣಿಪತಿ ಕೇಳಾ ಮಹೀಸುರ
- ವರನು ವೇದಾದ್ಯಯನ ಪರನನ
- ವರತ ವಿದ್ಯಾಭ್ಯಾಸ ಶೀಲನು ವನದಲೊ೦ದುದಿನ |
- ಮರದ ಮೊದಲಲಿ ವೇದ ಪಾಠದ
- ಲಿರೆ ಮಹೀರುಹದಗ್ರದಲಿ ಸ೦
- ಚರಿಸುತಿಹ ಖಗ ವಿಷ್ಟೆ ಬಿದ್ದುದು ಮೇಲೆ ಭೂಸುರನ || ೨ ||
- ಪದವಿಭಾಗ-ಅರ್ಥ: ಧರಣಿಪತಿ ಕೇಳು+ ಆ ಮಹೀಸುರವರನು(ಬ್ರಾಹ್ಮಣನು) ವೇದಾದ್ಯಯನ ಪರನು+ ಅನವರತ().ಸದಾ ವಿದ್ಯಾಭ್ಯಾಸ ಶೀಲನು, ವನದಲಿ+ ಒ೦ದು ದಿನ ಮರದ ಮೊದಲಲಿ(ಬುಡದಲ್ಲಿ) ವೇದ ಪಾಠದಲಿ+ ಇರೆ(ಇರಲು) ಮಹೀರುಹದ(ಮರದ)+ ಅಗ್ರದಲಿ(ತುದಿಯಲ್ಲಿ) ಸ೦ಚರಿಸುತಿಹ ಖಗ ವಿಷ್ಟೆ(ಪಕ್ಷಿಯ ಪಿಷ್ಟೆ, ಮಲ) ಬಿದ್ದುದು ಮೇಲೆ ಭೂಸುರನ(ಬ್ರಾಹ್ಮಣನ)
- ಅರ್ಥ:ಮಾರ್ಕಾಂಡೇಯ ಮುನಿಯು,'ಧರಣಿಪತಿ ಧರ್ಮಜನೇ ಕೇಳು ಆ ಬ್ರಾಹ್ಮಣನು ಸದಾ ವೇದಾದ್ಯಯನ ಪರನು, ವಿದ್ಯಾಭ್ಯಾಸ ಶೀಲನು, ವನದಲ್ಲಿ ಒ೦ದು ದಿನ ಮರದ ಬುಡದಲ್ಲಿ ವೇದ ಪಾಠದಲ್ಲಿ ತೊಡಗಿರಲು ಮರದ ಮೇಲೆ-ತುದಿಯಲ್ಲಿ ಸ೦ಚರಿಸುತ್ತಿರುವ ಪಕ್ಷಿಯ ಪಿಷ್ಟ ಬ್ರಾಹ್ಮಣನ ಮೇಲೆ ಬಿದ್ದಿತು.
- ಮೇಲೆ ನೋಡಿದಡಧಿಕ ರೋಷ
- ಜ್ವಾಲೆಯಲಿ ಗರಿ ಸೀದು ಧರಣಿಯ
- ಮೇಲೆ ಬಿದ್ದುದು ವಿಹಗವೀತನ ಮುಒದೆ ತನುಬೆ೦ದು |
- ಲೀಲೆಯಲಿ ಭೂದೇವನಲ್ಲಿ೦
- ಮೇಲೆ ಬಿಕ್ಷಾಟನಕೆ ಭೂಸುರ
- ರಾಲಯದ ಹ೦ತಿಯಲಿ ಹೊಕ್ಕನು ರಾಯ ಕೇಳೆ೦ದ || ೩ ||
- ಪದವಿಭಾಗ-ಅರ್ಥ: ಮೇಲೆ ನೋಡಿದಡೆ+ ಅಧಿಕ ರೋಷಜ್ವಾಲೆಯಲಿ ಗರಿ ಸೀದು(ಸುಟ್ಟು) ಧರಣಿಯಮೇಲೆ ಬಿದ್ದುದು ವಿಹಗವು(ಹಕ್ಕಿ)+ ಈತನ ಮುಂದೆ ತನುಬೆ೦ದು; ಲೀಲೆಯಲಿ(ಸಂತಸದಿಂದ) ಭೂದೇವನು(ವಿಪ್ರ, ಬ್ರಾಹ್ಮಣ)+ ಅಲ್ಲಿ೦- ಮೇಲೆ(ಆ ನಂತರ) ಬಿಕ್ಷಾಟನಕೆ ಭೂಸುರರ+ ಆಲಯದ(ಮನೆ) ಹ೦ತಿಯಲಿ (ಕೇರಿ) ಹೊಕ್ಕನು ರಾಯ ಕೇಳೆ೦ದ.
- ಅರ್ಥ:ಮುನಿಯು,'ಮರದ ಬುಡದಲಗಲಿದ್ದ ವಿಪ್ರನ ಮೈಮೇಲೆ ಹಕ್ಕಿಯು ಪಿಷ್ಟಹಾಕಲು, ಆ ವಿಪ್ರನು ಅತಿಯಾದ ಬೆಂಕಿಯಜ್ವಾಲೆಯಷ್ಟು ಸಿಟ್ಟಿನಿಂದ ಮೇಲೆ ಹಕ್ಕಿಯನ್ನು ನೋಡಿದರೆ, ಆ ಹಕ್ಕಿ ಗರಿ ಸುಟ್ಟು ಈತನ ಮುಂದೆ ಭೂಮಿಯಮೇಲೆ ಬಿದ್ದಿತು. ತನ್ನ ತಪಶ್ಶಕ್ತಿಗೆ ಹೆಮ್ಮೆಪಟ್ಟು ಸಂತಸದಿಂದ ಬ್ರಾಹ್ಮಣನು ಆ ನಂತರ ಬಿಕ್ಷಾಟನಕ್ಕೆ ವಿಪ್ರರು ಇರುವ ಮನೆಗಳ ಬೀದಿಯಲ್ಲಿ ಹೊಕ್ಕನು' ಧರ್ಮರಾಯನೇ ಕೇಳು ಎಂದ.
- ಒ೦ದು ಮನೆಯಲಿ ಭಿಕ್ಷೆ ಗೋಸುಗ
- ನಿ೦ದನಾ ಮನೆಯಾಕೆ ಭಕ್ಷವ
- ತ೦ದಿಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ |
- ತ೦ದು ಬಿಕ್ಷವ ಹಿಡಿಯೆನಲ್ ದ್ವಿಜ
- ನ೦ದು ಮುನಿದೀಕ್ಷಿಸಿದೊಡಾ ಸತಿ
- ಯೆ೦ದಳೆಲೆ ಮರುಳೆ ಕುಜಾಗ್ರದ ವಿಹಗ ನಲ್ಲೆ೦ದು || ೪ ||
- ಪದವಿಭಾಗ-ಅರ್ಥ: ಒ೦ದು ಮನೆಯಲಿ ಬಿಕ್ಷೆಗೋಸುಗ ನಿ೦ದನು;+ ಆ ಮನೆಯಾಕೆ ಭಿಕ್ಷವತ೦ದಿಪೆನು ನಿಲ್ಲು+ ಎನುತ ಪತಿ ಪರಿಚರ್ಯೆಯನು ಮಾಡಿ, ತ೦ದು ಬಿಕ್ಷವ ಹಿಡಿಯೆನಲ್ ದ್ವಿಜನು(ವಿಪ್ರನು)+ ಅ೦ದು ಮುನಿದು+ ಈಕ್ಷಿಸಿದೊಡೆ(ನೋಡಿದಾಗ)+ ಆ ಸತಿಯೆ೦ದಳು+ ಎಲೆ ಮರುಳೆ ಕುಜಾಗ್ರದ(ಕುಜ+ ಅಗ್ರ- ಮರದಮೇಲಿನ) ವಿಹಗನು(ಪಕ್ಷಿ)+ ಅಲ್ಲೆ೦ದು
- ಅರ್ಥ:ವಿಪ್ರನು ಒ೦ದು ಮನೆಯಲ್ಲಿ ಭಿಕ್ಷೆಗಾಗಿ ಬಾಗಿಲಲ್ಲಿ ನಿ೦ತನು; ಆ ಮನೆಯಾಕೆಯು ಭಿಕ್ಷವನ್ನು ತರುವೆನು ಸ್ವಲ್ಪ ನಿಲ್ಲು ಎಂದು ಹೇಳಿ, ಪತಿಯ ಪರಿಚರ್ಯೆ- ಸೇವೆಯನ್ನು ಮಾಡಿ, ನಂತರ ಭಿಕ್ಷವನ್ನು ತ೦ದು ಹಿಡಿಯೆನ್ನಲು, ಆ ವಿಪ್ರನು ತಡವಾದುದಕ್ಕೆ ಅ೦ದು ಸಿಟ್ಟುಗೊಂಡು, ಆ ಗೃಹಣಿಯನ್ನು ಉರಿಕಣ್ಣಿನಿಂದ ನೋಡಿಗಾಗ, ಆ ಸತಿಯು- ಪತಿವ್ರತೆಯು,'ಎಲೆ ಮರುಳೆ ನಾನು ಆ ಮರದ ಮೇಲಿನ ಪಕ್ಷಿಯಲ್ಲ,' ಎಂದಳು.
- ಬೆರಗಿನಲಿ ದ್ವಿಜನಿರ್ದನಿದನೆ೦
- ತರಿತಳೆನುತಲೆ ವಿಪ್ರ ನಿಗಮವ
- ನರಿಯೆ ದರ್ಮರಹಸ್ಯ ತತ್ವದ ಸಾರಸ೦ಗತಿಯ |
- ಅರಿದು ಪತಿ ಪರಿಚರ್ಯದಲಿ ಕೈ
- ಮೆರೆಯುದಾರಾಗಲಿ ಸುಧರ್ಮದೊ
- ಳೆರಕವುಳ್ಳೊಡೆ ದನ್ಯರೆ೦ದಳು ಕಾ೦ತೆ ಭೂಸುರಗೆ || ೫ |
- ಪದವಿಭಾಗ-ಅರ್ಥ: ಬೆರಗಿನಲಿ ದ್ವಿಜನು+ ಇರ್ದನು+ ಇದನು+ ಎ೦ತರಿತಳು+ ಎನುತಲೆ, ವಿಪ್ರ ನಿಗಮವನು+ ಅರಿಯೆ ದರ್ಮರಹಸ್ಯ ತತ್ವದ ಸಾರಸ೦ಗತಿಯ ಅರಿದು ಪತಿ ಪರಿಚರ್ಯದಲಿ ಕೈ ಮೆರೆಯುದ+ ಆರಾಗಲಿ ಸುಧರ್ಮದೊಳು+ ಎರಕವುಳ್ಳೊಡೆ ದನ್ಯರೆ೦ದಳು ಕಾ೦ತೆ ಭೂಸುರಗೆ.
- ಅರ್ಥ:ಬೆರಗಿನಲಿ ದ್ವಿಜನು+ ಇರ್ದನು+ ಇದನು+ ಎ೦ತರಿತಳು+ ಎನುತಲೆ, ವಿಪ್ರ ನಿಗಮವನು+ ಅರಿಯೆ ದರ್ಮರಹಸ್ಯ ತತ್ವದ ಸಾರಸ೦ಗತಿಯ ಅರಿದು ಪತಿ ಪರಿಚರ್ಯದಲಿ ಕೈ ಮೆರೆಯುದ+ ಆರಾಗಲಿ ಸುಧರ್ಮದೊಳು+ ಎರಕವುಳ್ಳೊಡೆ ದನ್ಯರೆ೦ದಳು ಕಾ೦ತೆ ಭೂಸುರಗೆ.
- ಇಲ್ಲಿಗಿದೆ ನಾಲ್ಕೈದು ಯೋಜನ
- ದಲ್ಲಿ ಪಟ್ಟಣವದರೊಳೊಬ್ಬನು
- ಬಲ್ಲನಗ್ಗದ ಧರ್ಮ ಮುದ್ರಾಘಟನ ವಿಘಟನವ |
- ಅಲ್ಲಿಗೈದುವು ದಾತನಲಿ ನೀ
- ನೆಲ್ಲವನು ತಿಳಿನಿನ್ನಚಿತ್ತದೊ
- ಳಿಲ್ಲಲೇ ಪರಿಪಾಕವೆ೦ದುಪದೇಶಿಸಿದಳಬಲೆ || ೬ ||
- ಪದವಿಭಾಗ-ಅರ್ಥ: ಇಲ್ಲಿಗೆ+ ಇದೆ ನಾಲ್ಕೈದು ಯೋಜನದಲ್ಲಿ ಪಟ್ಟಣವು+ ಅದರೊಳೊಬ್ಬನು ಬಲ್ಲನು+ ಅಗ್ಗದ(ಉತ್ತಮ) ಧರ್ಮ ಮುದ್ರಾಘಟನ ವಿಘಟನವ ಅಲ್ಲಿಗೆ+ ಐದುವುದು(ಹೋಗುವುದು)+ ಆತನಲಿ ನೀನು+ ಎಲ್ಲವನು ತಿಳಿ, ನಿನ್ನಚಿತ್ತದೊಳು+ ಇಲ್ಲಲೇ ಪರಿಪಾಕವೆ೦ದು+ ಉಪದೇಶಿಸಿದಳು+ ಅಬಲೆ
- ಅರ್ಥ:ಆ ಗೃಹಣಿಯು ವಿಪ್ರನನ್ನು ಕುರಿತು,'ಇಲ್ಲಿಗೆ ನಾಲ್ಕೈದು ಯೋಜನದಲ್ಲಿ ಒಂದು ಪಟ್ಟಣವು ಇದೆ. ಅದರೊಳೊಬ್ಬನು ಉತ್ತಮ ಧರ್ಮ ಮುದ್ರಾಘಟನನ್ನು- ರಹಸ್ಯವನ್ನೂ, ಉತ್ತಮ ವಿಘಟನವನ್ನು- ರಹಸ್ಯದ ಬಿಡುಸುವಿಕೆಯನ್ನೂ ಬಲ್ಲನು. ಅಲ್ಲಿಗೆ ನೀನು ಹೋಗಬೆಕು; ಆತನಲ್ಲಿ ನೀನು ಎಲ್ಲ ಧರ್ಮಸೂಕ್ಮವನ್ನು ತಿಳಿ. ನಿನ್ನ ಚಿತ್ತದಲ್ಲಿ ಪರಿಪಾಕ- ಪಕ್ವವಾದ ತಿಳುವಳಿಕೆ ಇಲ್ಲವೋ, ಹೊಗು ಎಂದು ಉಪದೇಶಿಸಿದಳು.'
ವಿಪ್ರನಿಗೆ ಧರ್ಮವ್ಯಾಧನ ಧರ್ಮರಹಸ್ಯ ಬೋಧೆ[ಸಂಪಾದಿಸಿ]
- ಹೆಸರು ಧರ್ಮವ್ಯಾಧ ನಾತನ
- ದೆಸೆಯೊಳರಿ ಹೋಗೆನಲು ಬ೦ದನು
- ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ |
- ಹಸಿದು ಬೀದಿಗಳೊಳಗೆ ತೊಳಲಿದು
- ಗಸಣಿಗೊಳುತ ಪುರಾ೦ತದಲಿ ಕ
- ರ್ಕಶ ಪುಳಿ೦ದರ ಕೇರಿಯಿರೆ ಕ೦ಡಲ್ಲಿಗೈತ೦ದ || ೭ ||
- ಪದವಿಭಾಗ-ಅರ್ಥ: ಹೆಸರು ಧರ್ಮವ್ಯಾಧನು+ ಆತನ ದೆಸೆಯೊಳು+ ಅರಿ (ತಿಳಿದುಕೊ) ಹೋಗು+ ಎನಲು ಬ೦ದನು, ವಸುಧೆಯ+ ಅಮರನು(ಭೂ+ ಸುರ- ವಿಪ್ರ) ನಗರಿಗೆ+ ಆ ಸತಿ ಕೊಟ್ಟ ಕುರುಹಿನಲಿ(ಗುರುತಿನಿಂದ), ಹಸಿದು ಬೀದಿಗಳೊಳಗೆ ತೊಳಲಿದು(ಕಷ್ಟದಿಂದ ಅಲೆದು), ಗಸಣಿಗೊಳುತ((ಸಂ>. ಘರ್ಷಣ; ತೊಂದರೆ, ಗೊಡವೆ, ಘರ್ಷಣೆ) ಪುರಾ೦ತದಲಿ(ಪು+ ಅಮತ: ನಗರದ ಅಂತ್ಯದಲ್ಲಿ) ಕರ್ಕಶ ಪುಳಿ೦ದರ(ಬೇಡರ) ಕೇರಿಯಿರೆ ಕ೦ಡಲ್ಲಿಗೆ+ ಐತ೦ದ
- ಅರ್ಥ:ಗೃಹಣಿಯು ವಿಪ್ರನಿಗೆ ಹೇಳಿದಳು,'ಧರ್ಮರಹಸ್ಯವನ್ನು ತಿಳಿದವನ ಹೆಸರು ಧರ್ಮವ್ಯಾಧನು. ಆತನ ಮೂಲಕ ಧರ್ಮರಹಸ್ಯವನ್ನು ತಿಳಿದುಕೊ ಹೋಗು.' ಎನ್ನಲು, ಆ ವಿಪ್ರನು ಗೃಹಣಿ ಹೇಳಿದ ನಗರಕ್ಕೆ ಬ೦ದನು; ಆ ಸತಿ- ಪತಿವ್ರತೆ ಕೊಟ್ಟ ಗುರುತಿನಿಂದ, ಬೀದಿಗಳಲ್ಲಿ ಹಸಿದುಕೊಂಡು ತೊಳಲಿ, ತೊಂದರೆಪಡುತ್ತಾ ನಗರದ ಕೊನೆಯಲ್ಲಿ ಕರ್ಕಶವಾದ ಸದ್ದಿನಿಂದ ಕೂಡಿದ ಬೇಡರ ಕೇರಿ ಇರಲು, ಅದನ್ನು ಕಂಡು ಅಲ್ಲಿಗೆ ಬಂದನು.
- ಬಸೆ ನೆಣನ ಸು೦ಟಿಗೆಯ ಹರಹಿದ
- ಹಸಿಯ ತೊಗಲಿನ ತಳಿತ ಖ೦ಡದ
- ಹಸರದುರುಗಲ ಕಾಳಿಜದ ಜ೦ಗಡೆಯ ಗಳಗೆಗಳ |
- ಬಸೆಯ ಹರವಿಯ ಸಾಲ ತೊರಳೆಗೆ
- ಬೆಸಳಿಗೆಯ ಕುರಿದಲೆಯ ಹ೦ತಿಯ
- ಕುಸುರಿದೆಲುವಿನ ಕೋದ ಮೀನ೦ಗಡಿಯಲೈತ೦ದ || ೮ ||
- ಪದವಿಭಾಗ-ಅರ್ಥ: ಬಸೆ ನೆಣನ(ಎಲುಬಿನ/ಮೂಳೆಯ ಸಾರ) ಸು೦ಟಿಗೆಯ (ಸುಟ್ಟ ಮಾಂಸ) ಹರಹಿದ ಹಸಿಯ ತೊಗಲಿನ(ಚರ್ಮ) ತಳಿತ(ಚಿಗುರಿದ) ಖ೦ಡದ(ಮಾಂಸ) ಹಸರದ( ಹರಡುವಿಕೆ, ವ್ಯಾಪ್ತಿ )+ ಉರುಗಲ(ಉರುಗಲು- ಸೌದೆ), ಕಾಳಿಜದ (ಕಲಿಜ- ಮೂತ್ರಪಿಂಡ) ಜ೦ಗಡೆಯ(ರಾಶಿ, ಸಮೂಹ) ಗಳಗೆಗಳ(ಬಿದಿರಿನ ದೊಡ್ಡ ಗೂಡೆ) ಬಸೆಯ ಹರವಿಯ ಸಾಲ ತೊರಳೆಗೆ(ತೊರಳೆ- ಗುಲ್ಮ, ಪ್ಲೀಹ) ಬೆಸಳಿಗೆಯ(ಅಗ್ಗಿಷ್ಟಿಕೆ ಬಾಣೆಲೆ,ಓಡು) ಕುರಿದಲೆಯ(ಕುರಿಯ ತಲೆಯ) ಹ೦ತಿಯ (ಸಾಲು), ಕುಸುರಿದ(ತಿರುಳು)+ ಎಲುವಿನ ಕೋದ(ಜೊಡಿಸಿದ) ಮೀನ+ ಅ೦ಗಡಿಯಲಿ+ ಐತ೦ದ(ಬಂದ).
- ಅರ್ಥ:ವಿಪ್ರನು ಧರ್ಮವ್ಯಾಧನನ್ನು ಹುಡುಕುತ್ತಾ ಬೇಡರ ಬೀದಿಗೆ ಬಂದ; ಅಲ್ಲಿ ಬಸಿಯುವ ನೆಎಲುಬಿನ ಮೂಳೆಯ ಸಾರ, ಸುಟ್ಟ ಮಾಂಸ, ಹರಗಿದ ಹಸಿಯ ಚರ್ಮ, ಎದ್ದುಕಾಣುವ ಮಾಂಸ ಹರಡಿದ ಉರುಗಲು- ಸೌದೆ, ಮೂತ್ರಪಿಂಡಗಳ ರಾಶಿ, ಬಿದಿರಿನ ದೊಡ್ಡ ಗೂಡೆ,
ಬಸಿಯುತ್ತಿರುವ ಹರವಿ- ಮಣ್ಣಿನಬಾನಿ, ಗುಡಾಣ, ಸಾಲು ಸಾಲಗಿ ಇಟ್ಟ ಗುಲ್ಮ, ಅಗ್ಗಿಷ್ಟಿಕೆ- ಅದರಮೆಲೆ ಬಾಣೆಲೆ,ಕುರಿಯ ತಲೆಯ ಸಾಲನ, ಎಲುವಿನ ತಿರುಳು, ಜೊಡಿಸಿದ ಮೀನುಗಳ ಅ೦ಗಡಿಯ ಬಳಿಗೆ ಬಂದ.
- ಬರಬರಲು ದೂರದಲಿ ವಿಪ್ರನ
- ಬರವ ಕ೦ಡಿದಿರಾಗಿ ಬ೦ದುಪ
- ಚರಿಸಿದನು ಬ೦ದೈ ಪತಿವ್ರತೆಯೆನ್ನ ದೂರಿದಳೆ |
- ಧರಣಿಯಮರೋತ್ತಮರಿಗಿದು ಸ೦
- ಚರಣೆ ಯೋಗ್ಯ ಸ್ಥಾನವಲ್ಲಾ
- ದರಿಸಿದೊಡೆ ಬಾಯೆನುತ ತನ್ನಾಲಯಕೆ ಕೊ೦ಡೊಯ್ದ || ೯ ||
- ಪದವಿಭಾಗ-ಅರ್ಥ: ಬರಬರಲು ದೂರದಲಿ ವಿಪ್ರನ ಬರವ ಕ೦ಡು+ ಇದಿರಾಗಿ ಬ೦ದು+ ಉಪಚರಿಸಿದನು, ಬ೦ದೈ ಪತಿವ್ರತೆಯು+ ಎನ್ನ ದೂರಿದಳೆ, ಧರಣಿಯ ಮರೋತ್ತಮರಿಗೆ(ಭೂ ಸುರರಿಗೆ- ವಿಪ್ರರಿಗೆ)+ ಇದು ಸ೦ಚರಣೆ ಯೋಗ್ಯ ಸ್ಥಾನವಲ್ಲ+ ಆದರಿಸಿದೊಡೆ ಬಾ+ ಯೆನುತ ತನ್ನ+ ಆಲಯಕೆ ಕೊ೦ಡೊಯ್ದ.
- ಅರ್ಥ:ಹೀಗೆ ವಿಪ್ರನು ಬೇಡರ ಸಂತೆ ಬೀದಿಯಲ್ಲಿ ಬರುತ್ತಿರುವಾಗ, ದೂರದಲ್ಲಿ ವಿಪ್ರನು ಬರುತ್ತಿರುವುದನ್ನು ಕ೦ಡು ವ್ಯಾಧನು ಅವನಿಗೆ ಎದುರಾಗಿ ಬ೦ದು ಅವನನ್ನು ಉಪಚರಿಸಿದನು. 'ಮುನಿಯೇ ಬ೦ದೆಯಾ, ಪತಿವ್ರತೆಯು ನನ್ನನ್ನು ದೂರಿದಳೆ? ವಿಪ್ರರಿಗೆ ಇದು ಸ೦ಚಾರಯೋಗ್ಯವಾದ ಸ್ಥಾನವಲ್ಲ. ಆದರಿಸಿದರೆ- ಗೌರವಕ್ಕೆ ಕುಂದಿಲ್ಲ ಎನಿಸಿದರೆ, ನನ್ನೊಡನೆ ಬಾ!,' ಎನ್ನುತ್ತಾ ಆ ಬೇಡನು ತನ್ನ ಮನೆಗೆ ಅವನನ್ನು ಕರೆದುಕೊ೦ಡು ಹೋದನು..
- ಒಳಗೆ ಮ೦ಚದ ನಡುಗುವ
- ತಲೆಯ ತೆರಳಿದ ಮೈಯ ಬೆಳುಪಿನ
- ತಲೆ ನವಿರ ತಗ್ಗಿದ ಶರೀರದ ನೆಗ್ಗಿದವಯವದ |
- ತಳಿತ ಸೆರೆಗಳ ತಾರಿದಾನನ
- ದಿಳಿದ ಹುಬ್ಬಿನ ಹುದಿದ ಕಣ್ಗಳ
- ಚಲಿತ ವಚನದ ವೃದ್ದರನು ತೋರಿದನು ಮುನಿಸುತಗೆ || ೧೦ ||
- ಪದವಿಭಾಗ-ಅರ್ಥ: ಒಳಗೆ ಮ೦ಚದ ನಡುಗುವ ತಲೆಯ ತೆರಳಿದ(ಸೊರಗಿದ) ಮೈಯ ಬೆಳುಪಿನ ತಲೆ ನವಿರ ತಗ್ಗಿದ ಶರೀರದ ನೆಗ್ಗಿದ+ ಅವಯವದ ತಳಿತ(ಚಿಗುರಿದ,-ಹೊರಹೊಮ್ಮಿದ) ಸೆರೆಗಳ(ಕೊರಳ ರಕ್ತನಾಳಗಳು), ತಾರಿದ(ಬಾಡಿದ)+ ಆನನದ(ಮುಖ)+ ಇಳಿದ ಹುಬ್ಬಿನ, ಹುದಿದ(ಒಳಹೊಕ್ಕ) ಕಣ್ಗಳ, ಚಲಿತ(ತೊದಲು) ವಚನದ, ವೃದ್ದರನು ತೋರಿದನು, ಮುನಿಸುತಗೆ(ಋಷಿಪುತ್ರನಿಗೆ)
- ಅರ್ಥ:ವ್ಯಾಧನು ತರುಣ ವಿಪ್ರನನ್ನು ತನ್ನ ಮನೆಗೆ ಕರೆತಂದನು; ಬೇಡನ ಜೊತೆ ಹೋದ ವಿಪ್ರನು ಅಲ್ಲಿ, ಒಳಗೆ ಮ೦ಚದ ಮೇಲೆ ನಡುಗುವ ತಲೆಯ, ಸೊರಗಿದ ದೇಹದ, ಬೆಳುಪಿನಕೂದಲ ತಲೆಯ, ನವಿರಾಗಿ ಕುಂದಿದ ಶರೀರದ, ನೆಗ್ಗಿ ತಗ್ಗಿದ- ಅವಯವದ, ಹೊರಹೊಮ್ಮಿದ ಕೊರಳ ರಕ್ತನಾಳಗಳ, ಬಾಡಿದ ಮುಖದ, ಕೆಳಕ್ಕೆ ಇಳಿದ ಹುಬ್ಬಿನ, ಒಳಹೊಕ್ಕ ಕಣ್ಗುಗಳ, ತಡವರಿಸಿ ತೊದಲು ಮಾತಿನ, ವೃದ್ದರನ್ನು ವ್ಯಾಧನು ವಿಪ್ರ ಯುವಕನಾದ ಋಷಿಪುತ್ರನಿಗೆ ತೋರಿಸಿದನು.
- ಇವರು ಮಾತಾ ಪಿತೃಗಳೆನ್ನಯ
- ಯುವತಿ ಯಿವಳಿವನೆನ್ನ ಮಗನಿ೦
- ತಿವರ ರಕ್ಷೆಗೆ ಬೇ೦ಟೆಯಾಡುವೆನಡವಿಯಡವಿಯಲಿ |
- ಕವಲುಗೋಲಲಿ ಮೃಗ ಗಣವ ಕೊ೦
- ದವನು ತಹೆನ೦ಗಡಿಯಲವ ಮಾ
- ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆ೦ದ || ೧೧ ||
- ಪದವಿಭಾಗ-ಅರ್ಥ: ಇವರು ಮಾತಾ ಪಿತೃಗಳು ಎನ್ನಯ ಯುವತಿ+ ಯಿ+ ಇವಳು+ ಇವನು+ ಎನ್ನ ಮಗನು+ ಇ೦ತಿವರ ರಕ್ಷೆಗೆ ಬೇ೦ಟೆಯಾಡುವೆನು+ ಅಡವಿಯ+ ಅಡವಿಯಲಿ ಕವಲುಗೋಲ,ಲಿ ಮೃಗ ಗಣವ(ಸಮೂಯ, ಗುಂಪು) ಕೊ೦ದು+ ಅವನು(ಅವುಗಳನ್ನು) ತಹೆನು(ತರುವೆನು)+ ಅ೦ಗಡಿಯಲಿ+ ಅವ ಮಾರುವೆನು ಲೋಭವನ+ ಇಲ್ಲಿ ಮಾಡೆನು ವಿಪ್ರ ಕೇಳೆ೦ದ.
- ಅರ್ಥ:ಧರ್ಮವ್ಯಾಧನು ವಿಪ್ರನಿಗೆ ತಂದೆತಾಯಿಯರನ್ನೂ, ಪತ್ನಿಯನ್ನೂ, ಮಗನನ್ನೂ ತೋರಿಸಿ,'ವಿಪ್ರನೇ ಕೇಳು, ಇವರು ನನ್ನ ಮಾತಾ ಪಿತೃಗಳು, ಇವಳು ನನ್ನ ಯುವತಿ, ಇವನು ನನ್ನ ಮಗನು, ಹೀಗೆ ನನ್ನ ಸಂಸಾರ. ಇವರ ರಕ್ಷೆಗೆ ಬೇಟೆಯಾಡುವೆನು. ಅಡವಿ- ಅಡವಿಗಳಲ್ಲಿ ಕವಲುಗೋಲಲ್ಲಿ, ಮೃಗಗಳನ್ನು ಕೊ೦ದು ಅವುಗಳನ್ನು ತರುವೆನು. ಅ೦ಗಡಿಯಲ್ಲಿ ಅವನ್ನು ಮಾರುವೆನು. ಇದರಲ್ಲಿ ಲೋಭವನ್ನ್ನು- ಅತಯಾಸೆ ಮಾಡುವುದಿಲ್ಲ,' ಎ೦ದ.
- ದೊರಕಿದನಿತಾ ದ್ರವ್ಯದಲಿ ವಿ
- ಸ್ತರಿಸುವೆನು ಸಕುಟು೦ಬವಿದನೇ
- ಹೊರೆವೆನಾರ್ಜಿಸುವೆನು ಕುಟು೦ಬಕೆ ತಕ್ಕನಿತು ಧನವ |
- ನಿರುತವಿದು ಮಾತಾಪಿತರ ಪರಿ
- ಚರಿಯದಲಿ ರಾಗಾದಿ ದೋಷಾ
- ಚರಣವದು ಮನವಚನ ಕಾಯದಲಿಲ್ಲ ತನಗೆ೦ದ || ೧೨ ||
- ಪದವಿಭಾಗ-ಅರ್ಥ: ದೊರಕಿದ+ ಅನಿತು(ಅಷ್ಟು)+ ಆ ದ್ರವ್ಯದಲಿ(ಹಣದಲ್ಲಿ) ವಿಸ್ತರಿಸುವೆನು(ನಿರ್ವಹಿಸುವೆನು) ಸಕುಟು೦ಬವ(ಸ- ನನ್ನ)+ ಇದನು+ ಏ ಹೊರೆವೆನು+ ಆರ್ಜಿಸುವೆನು (ಸಂಪಾದಿಸುವೆನು) ಕುಟು೦ಬಕೆ ತಕ್ಕ(ಅಗತ್ಯ)+ ಅನಿತು(ಅಷ್ಟು) ಧನವ+ ನಿರುತವು(ನಿತ್ಯದ ಕಾಯಕ)+ ಇದು ಮಾತಾಪಿತರ ಪರಿಚರಿಯದಲಿ(ಸೇವೆಯಲ್ಲಿ) ರಾಗಾದಿ() ದೋಷ+ ಆಚರಣವು+ ಅದು ಮನ ವಚನ, ಕಾಯದಲಿ+ ಇಲ್ಲ (ಕಾಯಾವಾಚಾಮನಸಾ ಇಲ್ಲ)ತನಗೆ+ ಎ೦ದ
- ಅರ್ಥ:ವ್ಯಾಧನು ವಿಪ್ರನನ್ನು ಕುರಿತು,'ದೊರಕಿದಷ್ಟು- ಆ ಹಣದಲ್ಲಿಯೇ ಈ ನನ್ನ ಕುಟು೦ಬವನ್ನು ನಿರ್ವಹಿಸುವೆನು. ಇದನ್ನೇ ಹೊರೆಯಲು ಸಂಪಾದಿಸುವೆನು. ಕುಟು೦ಬಕೆ ಅಗತ್ಯವಾದಷ್ಟು ಧನವನ್ನು ಗಳಿಸುವುದು ನಿತ್ಯದ ಕಾಯಕ ಇದು. ಮಾತಾಪಿತರ ಸೇವೆಯಲ್ಲಿ ರಾಗದ್ವೇಷಾದಿ ದೋಷಾಚರಣಗಳು, ಇದರಲ್ಲಿ ತನಗೆ, ಮನಸ್ಸು,ವಚನ, ಕಾಯ,-ಕಾಯಾವಾಚಾಮನಸಾ ಇಲ್ಲ,' ಎ೦ದ.
- ಭೂತ ಹಿ೦ಸೆಯಿದಲ್ಲ ನಮಗಿದು
- ಮಾತಾ ಪಿತೃ ರಕ್ಷಾರ್ಥವೆಮ್ಮಯ
- ಜಾತಿ ಧರ್ಮವು ಮಾ೦ಸ ವಿಕ್ರಯ ಮೃಗವಧಾದಿಗಳು
- ಜಾತಿಧರ್ಮತ್ಯಾಗ ಕರ್ಮ ವಿ
- ಜಾತಿಧರ್ಮ ಗ್ರಹಣವೇ ವಿ
- ಖ್ಯಾತ ಕು೦ಭೀಪಾಕಸಾಧನ ವಿಪ್ರ ಕೇಳೆ೦ದ ೧೩
- ಪದವಿಭಾಗ-ಅರ್ಥ: ಭೂತ(ಜೀವಸಂಕುಲ, ಪ್ರಾಣಿಗಳು, ಜಗತ್ತಿನ ಪ್ರಾಣಿವರ್ಗ, ಚರಾಚರಾತ್ಮಕ ಜೀವರಾಶಿ) ಹಿ೦ಸೆಯು+ ಇದಲ್ಲ ನಮಗೆ+ ಇದು ಮಾತಾ ಪಿತೃ ರಕ್ಷಾರ್ಥವುರಕ್ಷಾ+ ಅರ್ಥ ಉದ್ದೇಶ)+ ಎಮ್ಮಯ ಜಾತಿಧರ್ಮವು ಮಾ೦ಸ ವಿಕ್ರಯ ಮೃಗವಧಾದಿಗಳು ಜಾತಿಧರ್ಮತ್ಯಾಗ ಕರ್ಮ ವಿಜಾತಿಧರ್ಮ ಗ್ರಹಣವೇ ವಿಖ್ಯಾತ ಕು೦ಭೀಪಾಕ ಸಾಧನ ವಿಪ್ರ ಕೇಳೆ೦ದ.
- ಅರ್ಥ:ವ್ಯಾಧನು ವಿಪ್ರನಿಗೆ,'ಇದು ಪ್ರಾಣಿಹಿ೦ಸೆ ಅಲ್ಲ; ನಮಗೆ ಇದು ಮಾತಾ ಪಿತೃಗಳ ರಕ್ಷೆಯ ಉದ್ದೇಶದಿಂದ ಮಾಡುವ ಕಾರ್ಯ. ಮಾ೦ಸ ವಿಕ್ರಯ, ಮೃಗವಧೆ ಮೊದಲಾದ- ಇವು ನಮ್ಮ ಜಾತಿಧರ್ಮವು. ಜಾತಿಧರ್ಮ ತ್ಯಾಗವು, ವಿಜಾತಿಧರ್ಮ ಕರ್ಮ ಗ್ರಹಣವೇ-ಸ್ವೀಕಾರವೇ ವಿಖ್ಯಾತ ಕು೦ಭೀಪಾಕ ನರಕದ ಸಾಧನವು, ವಿಪ್ರನೇ ಕೇಳು,'ಎ೦ದ.
- ವಿತಥ ಭಾಷಿತವನ್ಯವಿತ್ತಾ
- ಹೃತಿ ಪರ ವ್ಯಾಪದವಾತ್ಮ
- ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ |
- ಕೃತವಿನಾಶನಡ೦ಭ ಹಿ೦ಸಾ
- ರತಿ ನಿಜಾನ್ವಯ ಧರ್ಮ ಕರ್ಮ
- ಚ್ಯುತಿಗಳಿವು ದೋಷಾ೦ಕುರ೦ಗಳು ವಿಪ್ರ ಕೇಳೆ೦ದ || ೧೪ ||
- ಪದವಿಭಾಗ-ಅರ್ಥ: ವಿತಥ ಭಾಷಿತವು (ಸಂ- ಸತ್ಯವಲ್ಲದ, ಸುಳ್ಳಾದ; ವ್ಯರ್ಥವಾದ, ನಿಷ್ಫಲವಾದ)+ ಅನ್ಯ+ ವಿತ್ತ+ ಆಹೃತಿ ((ಸಂ- ತರುವುದು, ಅಪಹರಿಸುವುದು), ಪರವ್ಯಾಪದವು (ಪರ+ ಅವಪದ- ನಿಂದೆ)+ ಆತ್ಮಸ್ತುತಿ ಪರಸ್ತ್ರೀವ್ಯಸನವು (ಪರಸ್ತ್ರೀಯಲ್ಲಿ ಮನಸ್ಸು)+ ಅತ್ಯಾಚಾರ ಬಕವೃತ್ತಿ(ಮೋಸಗಾರಿಕೆ, ಕಪಟ) ಕೃತವಿನಾಶನ (ಕೃತಘ್ನ - ಉಪಕಾರಿಯನ್ನು ವಿನಾಸ ಮಾಡುವವನು) ಡ೦ಭ (ಇಲ್ಲದ ಸದ್ಗುಣವನ್ನು- ಇದೆಎಂದು ತೋರಿಸಿಕೊಳ್ಳುವುದು) ಹಿ೦ಸಾರತಿ(ಹಿಂಸೆಕೊಟ್ಟು ಅನಂದಪಡುವುದು,) ನಿಜ+ ಅನ್ವಯ(ನಿಜ- ತನ್ನ, ಅನ್ವಯ- ಅನ್ವಯಿಸಿಕೊಂಡ ಧರ್ಮ, ಅನುಸರಿಸುತ್ತಿರುವ ಧರ್ಮ) ಧರ್ಮ ಕರ್ಮಚ್ಯುತಿಗಳಿವು- ಈವರೆಗೆ ಹೇಳಿದವು ಧರ್ಮ ಮಾರ್ಗ ಮತ್ತು ಅದರಲೊಪಗಳು; ದೋಷಾ೦ಕುರ೦ಗಳು(ದೋಷ- ಅಂಕುರ- ದೋಷಕ್ಕೆ ಕಾರಣಗಳು,) ವಿಪ್ರ ಕೇಳು+ ಎ೦ದ
- ಅರ್ಥ:ವ್ಯಾಧನು ವಿಪ್ರನನನ್ನು ಕುರಿತು,'ಸುಳ್ಳುಮಾತು, ಅನ್ಯರ ಹಣವನ್ನು ಅಪಹರಿಸುವುದು, ಪರನಿಂದೆ, ಆತ್ಮಸ್ತುತಿ ಪರಸ್ತ್ರೀಯಲ್ಲಿ ಮನಸ್ಸು, ಅತ್ಯಾಚಾರ, ಮೋಸ- ಕಪಟ, ಉಪಕಾರಿಯನ್ನು ವಿನಾಶ ಮಾಡುವವನು, ಮರೆಯುವವನು, ಮರೆತು ಅಪಕಾರ ಮಾಡುವವನು, ಇಲ್ಲದ ಸದ್ಗುಣವನ್ನು-ತನ್ನಲಿ ಇದೆ ಎಂದು ಡ೦ಭ ತೋರಿಸುವ ಡಂಬಗಾರಿಕೆ, ಹಿ೦ಸಾರತಿ, ಈವರೆಗೆ ಹೇಳಿದವು ಧರ್ಮ ಮಾರ್ಗ ಮತ್ತು ಅದರ ಲೊಪಗಳು; ಹೀಗೆ ತಿಳಿದು ಧರ್ಮಲೋಪಗಳನ್ನು ಬಿಟ್ಟು ಉಳಿದ ದರ್ಮ ನಿಯಮಗಳು ತಾನು, ಅನುಸರಿಸುತ್ತಿರುವ ಧರ್ಮ,' ಎ೦ದ.
- ಸಾ೦ಗ ವೇದಾದ್ಯಯನ ಸಜ್ಜನ
- ಸ೦ಗ ಶಾಸ್ತ್ರ ಶ್ರವಣ ತೃಷ್ಣಾ
- ಭ೦ಗ ಯಜನಾಧ್ಯಾನ ಮೌನವ್ರತ ಸದಾಚಾರ |
- ಮಾ೦ಗಲಿಕ ಕರ್ಮಾಭಿಯೋಗ ಕು
- ಲಾ೦ಗನಾ ರತಿಯಾತ್ಮಚಿ೦ತೆ ಪ
- ರಾ೦ಗನಾ ವೈಮುಖ್ಯ ವಿವು ಸದ್ದರ್ಮಗತಿಯೆ೦ದ || ೧೫ ||
- ಪದವಿಭಾಗ-ಅರ್ಥ: ಸಾ೦ಗ(ಕ್ರಮಬದ್ಧ; ಸಾಂಗೋಪಾಂಗ-(ಸಂ- ವಿಧಿವತ್ತಾದುದು, ಶಾಸ್ತ್ರೋಕ್ತವಾದುದು, ಪೂರ್ಣವಾದುದು,) ವೇದಾದ್ಯಯನ, ಸಜ್ಜನಸ೦ಗ, ಶಾಸ್ತ್ರ ಶ್ರವಣ(ಶ್ರವಣ- ಕೇಳುವುದು), ತೃಷ್ಣಾಭ೦ಗ(ತೃಷ್ಣೆ - ಆಸೆ, ಅಪೇಕ್ಷೆ, ಇಲ್ಲದಿರುವುದು) ಯಜನ(ಸಂ, ಯಜ್ಞ, ಯಾಗ, ಯಾಗ ಮಾಡುವಿಕೆ,, ಪೂಜೆ, ಅರ್ಚನೆ), ಧ್ಯಾನ, ಮೌನವ್ರತ, ಸದಾಚಾರಮು+ ಆ೦ಗಲಿಕ ಕರ್ಮಾಭಿಯೋಗ (ಕೈಯಾರ ಕಾರ್ಯ ತತ್ಪರತೆ), ಕುಲಾ೦ಗನಾ(ಪತ್ನಿ) ರತಿಯು+ ಆತ್ಮಚಿ೦ತೆ, ಪರಾ೦ಗನಾ ವೈಮುಖ್ಯವು(ಪರಸತಿಯ ಬಗೆಗೆ ವಿಮುಖತೆ, ನಿರಾಕರಣೆ)+ ಇವು ಸದ್ದರ್ಮಗತಿಯು+ ಎ೦ದ.
- ಅರ್ಥ:ವ್ಯಾಧನು ವಿಪ್ರರು ಅನುಸರಿಸಬೇಕಾದಧರ್ಮವನ್ನು ಹೇಳುತ್ತಾನೆ,'ಸಾ೦ಗವಾದ ವೇದಾದ್ಯಯನ, ಸಜ್ಜನಸ೦ಗ, ಶಾಸ್ತ್ರ ಶ್ರವಣ, ಆಸೆ, ಅಪೇಕ್ಷೆ, ಇಲ್ಲದಿರುವುದು, ಯಜ್ಞ, ಯಾಗ,ಮಾಡುವಿಕೆ, ಪೂಜೆ, ಅರ್ಚನೆ, ಧ್ಯಾನ, ಮೌನವ್ರತ, ಸದಾಚಾರವು, ಕೈಯಾರ ಕಾರ್ಯ ತತ್ಪರತೆ, ಪತ್ನಿಯೊಡನೆ ರತಿಯು, ಆತ್ಮಚಿ೦ತೆ, ಪರಸತಿಯ ಬಗೆಗೆ ವಿಮುಖತೆ, ಇವು ಸದ್ದರ್ಮಗತಿಯು,' ಎ೦ದ.
- ಧನಮದವ ಸತ್ಕುಲ ಮದವ ಯೌ
- ವನ ಮದವ ವಿದ್ಯಾ ಮದವ ಪರಿ
- ಜನ ಮದವ ವೈಭವ ಮದವನಪಚಾರ ಪದ ಮದವ |
- ಮನನದಿ೦ಶ್ರವಣದಿ ನಿಧಿ ದ್ಯಾ
- ಸನದಿನಿವಗಳನೊತ್ತಿ ವಿದ್ಯಾ
- ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆ೦ದ || ೧೬ ||
- ಪದವಿಭಾಗ-ಅರ್ಥ: ಧನಮದವ(೧.ಹಣವಂತನೆಂಬ ಮದ,) ಸತ್ಕುಲ ಮದವ(೨.ಕುಲಮದ- ತಾನು ಸತ್ಕುಲನು ಎಂಬ ಮದ ) ಯೌವನಮದವ, ವಿದ್ಯಾ ಮದವ ಪರಿಜನ ಮದವ, ವೈಭವ ಮದವನ,+ ಉಪಚಾರ ಪದ ಮದವ, ಮನನದಿ೦, ಶ್ರವಣದಿ, ನಿಧಿ ದ್ಯಾಸನದಿಂ,+ನಿ+ ಇವಗಳನು+ ಒತ್ತಿ ವಿದ್ಯಾವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆ೦ದ.
- ಟಿಪ್ಪಣಿ:ಅಷ್ಟಮದಗಳು- ಧನ - ಸಂಪತ್ತು; ಕುಲ - ವಂಶ; ವಿದ್ಯೆ - ಶಿಕ್ಷಣ; ರೂಪ - ಸೌಂದರ್ಯ; ಯೌವನ - ಪ್ರಾಯ; ಬಲ - ಶಕ್ತಿ; ಪರಿವಾರ - ಕುಟುಂಬ;ಅಧಿಕಾರ - ನಾಯಕತ್ವ.
- ಅರ್ಥ:ವ್ಯಾಧನು ಅಷ್ಟಮದಗಳನ್ನು ನಿವಾರಿಸಿಕೊಳ್ಳಲು ಹೇಳುವನು,'ಧನಮದವನ್ನು, ಕುಲಮದ- ತಾನು ಸತ್ಕುಲನು ಎಂಬ ಮದವನ್ನೂ, ಯೌವನಮದವನ್ನೂ, ವಿದ್ಯಾಮದವನ್ನೂ ಪರಿಜನ ಮದವನ್ನೂ, ವೈಭವ ಮದವನ್ನೂ, ಉಪಚಾರ ಪದ ಮದವನ್ನೂ, ಮನನದಿ೦ದಲೂ, ನೀತಿ ಸಾಸ್ತ್ರದ ಶ್ರವಣದಿಂದಲೂ, ನಿಧಿ ದ್ಯಾಸನದಿಂದಲೂ,,ಇವಗಳನ್ನು ತಿಳಿದು ಬದಿಗೆ ಸರಿಸಿ, ವಿದ್ಯಾವಿನಯ ಸುಶೀಲವಾದ ನೆಡೆಯಲ್ಲಿ ನಡೆಯುವುದು,' ಧರ್ಮಕ್ರಮ ವಿಪ್ರನೇ ಕೇಳು ಎ೦ದ.
- ನೀವು ಜಾತಿಯೊಳಧಿಕ ತರದಿ೦
- ದಾವು ಜಾತಿ ವೀಹೀನರಾಗಿಯೆ
- ಭಾವ ಶುದ್ದಿಯಲೇ ಸ್ವಧರ್ಮಾಚಾರ ಮಾರ್ಗದಲಿ |
- ಆವುದೂಣಯವಿಲ್ಲವೀ ದ್ವಿಜ
- ದೇವ ಗುರು ಪರಿಚರ್ಯದಲಿ ಸ೦
- ಭಾವಿತರು ನಾವಾದೆವೆಮ್ಮನು ನೋಡಿ ನಡೆಯೆ೦ದ || ೧೭ ||
- ಪದವಿಭಾಗ-ಅರ್ಥ: ನೀವು ಜಾತಿಯೊಳು+ ಅಧಿಕತರದಿ೦ದ+ ಆವು(ನಾವು) ಜಾತಿ ವೀಹೀನರಾಗಿಯೆ, ಭಾವ ಶುದ್ದಿಯಲೇ, ಸ್ವಧರ್ಮಾಚಾರ ಮಾರ್ಗದಲಿ, ಆವುದೂ+ ಊಣಯವಿಲ್ಲವು+ ಈ ದ್ವಿಜ ದೇವ ಗುರು ಪರಿಚರ್ಯದಲಿ, ಸ೦ಭಾವಿತರು ನಾವಾದೆವು+ ಎಮ್ಮನು ನೋಡಿ ನಡೆಯೆ೦ದ.
- ಅರ್ಥ:ಧರ್ಮವ್ಯಾಧನು ವಿಪ್ರನಿಗೆ,'ನೀವು ಜಾತಿಯಲ್ಲಿ ಅಧಿಕತರದವರು; ನಾವು ಜಾತಿ ವೀಹೀನರಾಗಿಯೆ ಭಾವ ಶುದ್ದಿಯಲ್ಲೇ, ಸ್ವಧರ್ಮಾಚಾರ ಮಾರ್ಗದಲ್ಲಿ, ಯಾವುದೂ+ ಊನ ವಾದದಂತೆ ನೆಡೆದು, ಈ ದ್ವಿಜ ದೇವ ಗುರು ಪರಿಚರ್ಯದಲ್ಲಿ ಸ೦ಭಾವಿತರು- ಯೋಗ್ಯರು ನಾವು ಆದೆವು. ನೀನು ನಮ್ಮನು ನೋಡಿ ನಡೆಯುವುದು,'ಎ೦ದ.
- ಈ ಪರಿಯಲುರು ಧರ್ಮ ಕಥನಾ
- ಳಾಪದಲಿ ಮುನಿಸುತಗೆ ಸ೦ದೇ
- ಹಾಪನೋದವ ಗೈದು ತಿಳುಹಿದನಾ ಮಹೀಸುರನ |
- ಭೂಪ ಕೇಳೈ ಕ್ಷತ್ರ ಧರ್ಮ ಕ
- ಳಾಪದಲಿ ನಿನಗಿಲ್ಲ ಕೊರತೆ ಕೃ
- ತಾಪ ರಾಧರು ಕೌರವರು ನಿರ್ನಾಮರಹರೆ೦ದ || ೧೮ ||
- ಪದವಿಭಾಗ-ಅರ್ಥ: ಈ ಪರಿಯಲಿ+ ಉರು(ಹೆಚ್ಚಿನ) ಧರ್ಮ ಕಥನಾಳಾಪದಲಿ (ಕಥನ ಆಲಾಪನ- ಮಾತು) ಮುನಿಸುತಗೆ ಸ೦ದೇಹ+ ಅಪನೋದವ(ಅಪನೋದ= ಹೋಗಲಾಡಿಸುವುದು,ನಿವಾರಣೆ) ಗೈದು (ಮಾಡಿ) ತಿಳುಹಿದನು+ ಆ ಮಹೀಸುರನ(ವಿಪ್ರನ) ಭೂಪ- ರಾಜನೇ ಕೇಳೈ ಕ್ಷತ್ರ ಧರ್ಮ ಕಳಾಪದಲಿ(ಮಾತು, ಚರ್ಚೆಯಲ್ಲಿ) ನಿನಗಿಲ್ಲ ಕೊರತೆ ,ಕೃತಾಪರಾಧರು (ಕೃತ ಅಪರಾಧರು; ಅಪರಾಧ ಕೃತರು- ಮಾಡಿದವರು.) ಕೌರವರು ನಿರ್ನಾಮರು (ಹೆಸರಿಲ್ಲದಂತೆ);+ ಅಹರು (ಆಗುವರು)+ ಎ೦ದ.
- ಅರ್ಥ:ಮಾರ್ಕಾಂಡೇಯ ಮುನಿಯು,'ಈ ರೀತಿಯಲ್ಲಿ ಹೆಚ್ಚಿನ ಧರ್ಮ ಕಥನದ ಸಂಭಾಷಣೆಯಿಂದ ಮುನಿಸುತ ವಿಪ್ರನಿಗೆ ಧರ್ಮವ್ಯಾಧನು ಸ೦ದೇಹ ನಿವಾರಣೆ ಮಾಡಿ ತಿಳುಹಿದನು. ಧರ್ಮರಾಜನೇ ಕೇಳಯ್ಯಾ, ಕ್ಷತ್ರಧರ್ಮ ಕಲಾಪದಲ್ಲಿ ನಿನಗೆ ಕೊರತೆಯಿಲ್ಲ. ಅಪರಾಧ ಮಾಡಿದವರು ಕೌರವರು ನಿರ್ನಾಮವಾಗುವರು,' ಎ೦ದ.
- ಬಾಹುಬಲ ಬಲವಲ್ಲ ದೈವ
- ದ್ರೋಹಿಗಳಿಗೆ ಸುಧರ್ಮನಿಷ್ಠರ
- ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ |
- ಆ ಹರಾತ್ಮಜ ಹಸುಳೆತನದ
- ವ್ಯೂಹದಲಿ ತಾರಕನ ನಿಕ್ಕನೆ
- ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆ೦ದ || ೧೯ ||
- ಪದವಿಭಾಗ-ಅರ್ಥ: ಬಾಹುಬಲ ಬಲವಲ್ಲ ದೈವದ್ರೋಹಿಗಳಿಗೆ, ಸುಧರ್ಮನಿಷ್ಠರ ಸಾಹಸವು ಕಿರಿದಾದೊಡೆಯು ಕೊಯ್ವರು(ನಾಶಮಾಡುವುದು) ವಿರೋಧಿಗಳ, ಆ ಹರಾತ್ಮಜ (ಶಿವನ ಆತ್ಮಜ -ಮಗ, ಕಾರ್ತಿಕೇಯ, ಕುಮಾರ) ಹಸುಳೆತನದ ವ್ಯೂಹದಲಿ (ಬಾಲಕನಾಗಿದ್ದಾಗಲೇ) ತಾರಕನ ನಿಕ್ಕನೆಯು(ನಿಕ್ಕಿ - ಕೊನೆ, ನಿಶ್ಚಯ, ನಿಕಾಲಿ?)+ ಆಹವದ(ಯುದ್ಧದ) ಜಯಸಿರಿಯು ಧರ್ಮದ ಬೆನ್ನಲಿಹುದು+ ಎ೦ದ
- ಅರ್ಥ:ಮುನಿಯು ಧರ್ಮಜನನ್ನು ಕುರಿತು,'ದೈವದ್ರೋಹಿಗಳಿಗೆ ಇರುವ ಬಾಹುಬಲವು ನಿಜವಾದ ಬಲವಲ್ಲ. ಸುಧರ್ಮನಿಷ್ಠರ ಸಾಹಸವು ಕಿರಿದಾಗಿದ್ದರೂ ಅವರು ವಿರೋಧಿಗಳನ್ನು ನಾಶಮಾಡುವರು. ಆ ಹರನಮಗನಾದ ಕಾರ್ತಿಕೇಯನು ಹಸುಳೆತನದಲ್ಲಿಯೇ ಯುದ್ಧ ವ್ಯೂಹದಲಿ ತಾರಕನನ್ನು ಯುದ್ಧದಲ್ಲಿ ಕೊನೆಗೊಳಿಸಿದನು. ಜಯಸಿರಿಯು ಧರ್ಮದ ಬೆನ್ನಲ್ಲಿ ಇರುವುದು- ಧರ್ಮದ ಜೊತೆಯೇ ಇರುವುದು,'ಎ೦ದ.
- ಎ೦ದು ಮಾರ್ಕಡೇಯಮುನಿ ಯಮ
- ನ೦ದನನನಿತಿಹಾಸ ಕಥೆಗಳ
- ಲ೦ದವಿಟ್ಟನು ಚಿತ್ತವನು ಖಯ ಖೋಡಿಗಳ ಕಳೆದು |
- ಕ೦ದು ಕಸುರಿಕೆಯೇಕೆ ನಿಮಗೆ ಮು
- ಕು೦ದನೊಲವಿದೆ ಬಯಕೆ ಬೇರೇ
- ಕೆ೦ದು ಮಾರ್ಕಾ೦ಡೇಯ ನಾರದರಡರಿದರು ನಭವ ||೨೦ ||
- ಪದವಿಭಾಗ-ಅರ್ಥ: ಎ೦ದು ಮಾರ್ಕಡೇಯಮುನಿ ಯಮನ೦ದನನ+ ಇತಿಹಾಸ ಕಥೆಗಳಲಿ+ ಅ೦ದವಿಟ್ಟನು ಚಿತ್ತವನು, ಖಯ ಖೋಡಿಗಳ ಕಳೆದು ಕ೦ದು ಕಸುರಿಕೆಯೇಕೆ (ಕುಗ್ಗುವುದು,ಮನಸ್ಸಿಗೆ ನೋವು) ನಿಮಗೆ ಮುಕು೦ದನ+ ಒಲವಿದೆ ಬಯಕೆ ಬೇರೆ+ ಏಕೆ೦ದು ಮಾರ್ಕಾ೦ಡೇಯ ನಾರದರು+ ಅಡರಿದರು(ಸೇರಿದರು) ನಭವ.
- ಅರ್ಥ:ಜಯವು ಧರ್ಮದ ಜೊತೆಗೇ ಇರುವುದು ಎ೦ದು ಮಾರ್ಕಡೇಯಮುನಿ ಯಮನ೦ದನನಾದ ಧರ್ಮರಾಯನಿಗೆ ಇತಿಹಾಸ ಕಥೆಗಳನ್ನು ಹೇಳಿ ಮನಸ್ಸನ್ನು ಸಂತೋಷಗೊಳಿಸಿದನು. ಖಯ ಖೋಡಿಗಳನ್ನು ಬಿಟ್ಟುಬಿಡಿ; ಕುಗ್ಗುವುದು,ಮನಸ್ಸಿಗೆ ನೋವು, ಕಸುರಿಕೆಯೇಕೆ ನಿಮಗೆ ಮುಕು೦ದನ-ಕೃಷ್ನನ ಒಲವಿದೆ. ಬೇರೆ ಬಯಕೆ ಏಕೆ? ಎ೦ದು ಮಾರ್ಕಾ೦ಡೇಯ ನಾರದರು+ ಅಡರಿದರು(ಸೇರಿದರು) ನಭವ.
ಕೃಷ್ಣ ಸತ್ಯಭಾಮಾರೊಡನೆ ಪಾಂಡವರ ಸಲ್ಲಾಪ[ಸಂಪಾದಿಸಿ]
- ಅರಸ ಕೇಳೈ ದ್ರೌಪದಿಗೆ ಹರಿ
- ಯರಸಿ ನುಡಿದಳು ಸತ್ಯಭಾಮಾ
- ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ |
- ಅರಸಿ ಕೌತುಕವೆನಗೆ ನೀನೈ
- ವರಿಗೆ ಸತಿ ವಲ್ಲಭರ ಚಿತ್ತಾ
- ಕರ್ಷಣವು ನಿನಗೆ೦ತು ಸೇರಿಹುದೇಕ ಭಾವದಲಿ ||೨೧ ||
- ಪದವಿಭಾಗ-ಅರ್ಥ: ಅರಸ ಕೇಳೈ ದ್ರೌಪದಿಗೆ ಹರಿಯ+ ಅರಸಿ ನುಡಿದಳು ಸತ್ಯಭಾಮಾ ಸರಸಿಜಾನನೆ(ಕಮಲಮುಖಿ) ನಗೆನುಡಿಯ(ಹಾಸ್ಯವಾಗಿ) ಸಮ್ಮೇಳ ಖೇಳದಲಿ(ಜನರ ಎದುರಲ್ಲಿ), ಅರಸಿ ಕೌತುಕವು+ ಎನಗೆ ನೀನು+ ಐವರಿಗೆ ಸತಿ ವಲ್ಲಭರ ಚಿತ್ತ+ ಆಕರ್ಷಣವು(ಮನಸ್ಸನ್ನು ಸೆಳೆಯುವುದು) ನಿನಗ+ ಎ೦ತು ಸೇರಿಹುದು+ ಎಕ ಭಾವದಲಿ.
- ಅರ್ಥ:ಜನಮೇಜಯ ಅರಸನೇ ಕೇಳು,'ದ್ರೌಪದಿಯನ್ನು ಕುರಿತು ಕೃಷ್ನನ ಅರಸಿ ಕಮಲಮುಖಿಯಾದ ಸತ್ಯಭಾಮಾದೇವಿಯು ಜನರ ಎದುರಲ್ಲಿ ಹಾಸ್ಯವಾಗಿ ಹೇಳಿದಳು,'ಅರಸಿ ದ್ರೌಪದಿಯೇ ನನಗೆ ಕೌತುಕವು - ಏನೆಂದರೆ ನೀನು ಐದು ಜನರಿಗೆ ಸತಿಯು; ಈ ಐದು ವಲ್ಲಭರ- ಗಂಡರ ಮನಸ್ಸನ್ನು ಎಕ ಭಾವದಿಂದ ಸೆಳೆಯುವುದು ನಿನಗೆ ಹೇಗೆ ಸಾಧ್ಯವಾಯಿತು- ಇಷ್ಟವಾಯಿತು?
- ಮ೦ತ್ರಸಿದ್ದಿಯೋ ಮೇಣುಶಾಬರ
- ಯ೦ತ್ರ ರಕ್ಷೆಯೊ ಮೇಣ್ ವರೌಷಧ
- ತ೦ತ್ರ ತಿಲಕವೊ ರಮಣರೈವರ ವಶೀಕರಣ |
- ಯ೦ತ್ರಮಯ ಹೂಹೆಗಳು ನೃಪರೀ
- ಯ೦ತ್ರ ಸೂತ್ರದ ಕುಣಿಕೆ ನಿನ್ನ ನಿ
- ಯ೦ತ್ರಣವ ಹೇಳೌ ನಿಧಾನವನೆ೦ದಳಿ೦ದು ಮುಖಿ || ೨೨ ||
- ಪದವಿಭಾಗ-ಅರ್ಥ: ಮ೦ತ್ರಸಿದ್ದಿಯೋ ಮೇಣು ಶಾಬರಯ೦ತ್ರ ರಕ್ಷೆಯೊ (ಬೇಡನ ಯಂತ್ರ- ಶಿವಯಂತ್ರ) ಮೇಣ್( ಮತ್ತೆ) ವರ+ ಔಷಧತ೦ತ್ರ ತಿಲಕವೊ(ಶ್ರೇಷ್ಠ ಔಷದವುಳ್ಳ ತಾಂತ್ರಿ- ಮಾಟಮಾಡುವ ತಿಲಕವೋ) ರಮಣರು+ ಐವರ ವಶೀಕರಣ ಯ೦ತ್ರಮಯ ಹೂಹೆಗಳು(ಶಿಶುದಳು, ಗೊಂಬೆಗಳು) ನೃಪರು(ಐವರು ರಾಜಕುಮಾರರು)+ ಈ ಯ೦ತ್ರ ಸೂತ್ರದ ಕುಣಿಕೆ ನಿನ್ನ ನಿಯ೦ತ್ರಣವ ಹೇಳೌ ನಿಧಾನವನು(ಆಶ್ರಯಸ್ಥಾನ, ರಹಸ್ಯವನ್ನು)+ ಎ೦ದಳು+ ಇ೦ದು ಮುಖಿ(ಸತ್ಯಭಾಮೆ)
- ಅರ್ಥ:ಸತ್ಯಭಾಮೆಯು,'ಈ ಐವರು ರಾಜಕುಮಾರರು ಈ ಯ೦ತ್ರ ಸೂತ್ರದ ಕುಣಿಕೆಯಲ್ಲಿ ಸಿಕ್ಕಿದಂತೆ ನಿನ್ನ ಅಧೀನರಾಗಿದ್ದಾರೆ. ಅದಕ್ಕೆ ಕಾರಣ ನಿನ್ನ ಮ೦ತ್ರಸಿದ್ದಿಯೋ, ಅಥವಾ ಕಾಡಿನ ಬೇಡಜನರ ಮಂತ್ರಪ್ರಭಾವವವವೋ, ಬೇಡನಾದ ಶಿವಯಂತ್ರದ ಮಹಿಮೆಯೋ ಅಥವಾ ಶ್ರೇಷ್ಠ ಔಷದವುಳ್ಳ ತಾಂತ್ರಿಕರ ಮಾಟಮಾಡುವ ನೀನು ಧರಿಸುವ ತಿಲಕವೋ? ನಿನ್ನ ಐವರು ಪತಿಗಳ ವಶೀಕರಣಕ್ಕೆ ಸಿಕ್ಕಿದ ಯ೦ತ್ರಮಯದ ಗೊಂಬಬೆಗಳಂತೆ ಇರುವರು. ಈ ಯ೦ತ್ರ ಸೂತ್ರದ ಕುಣಿಕೆ ನಿನ್ನ ನಿಯ೦ತ್ರಣವಲ್ಲಿದೆ. ದ್ರೌಪದಿಯೇ ಹೇಳವ್ವಾ ಇದರ ರಹಸ್ಯವನ್ನು, ಎ೦ದಳು.
- ದೇವಿಯೆ೦ದಳು ಸತ್ಯಭಾಮಾ
- ದೇವಿಯರು ಮುಗುದೆಯರಲಾ ನಾ
- ನಾವಮ೦ತ್ರದ ತ೦ತ್ರ ತೊಡಕಿನ ತೋಟಿಯುಳ್ಳವಳು |
- ಭಾವ ಶುದ್ದಿಯಲೈವರನು ಸ೦
- ಭಾವಿಸುವೆನವರಚಿತ್ತದ
- ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ || ೨೩ ||
- ಪದವಿಭಾಗ-ಅರ್ಥ: ದೇವಿಯೆ೦ದಳು(ದ್ರೌಪದಿ) ಸತ್ಯಭಾಮಾದೇವಿಯರು ಮುಗುದೆಯರಲಾ, ನಾನು ಆವ (ಯಾವ) ಮ೦ತ್ರದ ತ೦ತ್ರ ತೊಡಕಿನ ತೋಟಿಯುಳ್ಳವಳು, ಭಾವ ಶುದ್ದಿಯಲಿ+ ಐವರನು ಸ೦ಭಾವಿಸುವೆನು+ ಅವರ ಚಿತ್ತದ ಭಾವವರಿದು+ ಉಪಚರಿಸುವೆನು ಚತುರತೆಯ ಚಾಳಿಯಲಿ.
- ಅರ್ಥ:ದ್ರೌಪದಿಯು ಸತ್ಯಭಾಮೆಯ ಹಾಸ್ಯಕ್ಕೆ ಪ್ರತಿಯಾಗಿ ಗಂಭೀರವಾಗಿ ಉತ್ತರಿಸಿದಳು:'ಸತ್ಯಭಾಮಾದೇವಿಯವರು ಮುಗ್ಧೆಯಾಗಿರುವರು, ನಾನು ಯಾವ ಮ೦ತ್ರದ ತ೦ತ್ರ ತೊಡಕಿನ ಗೊಡವೆಯುಳ್ಳವಳಲ್ಲ; ನಾನು ಭಾವ ಶುದ್ದಿಯಿಂದ ಐವರು ಪತಿಗಳನ್ನೂ ಗೌರವಿಸುವೆನು; ಅವರ ಮನಸ್ಸಿನ ಭಾವವನ್ನು ಅರಿತು ಚತುರತೆಯ ನಡೆಯಿಂದ ಉಪಚರಿಸುವೆನು.' ಎಂದಳು ದ್ರೌಪದಿ.
- ಒಲವರಿದು ಹತ್ತುವುದು ಚಿತ್ತದ
- ನೆಲೆಯರಿದು ನೆಮ್ಮುವುದು ಮುರಿವಿನ
- ಹೊಳವರಿದು ಹಿ೦ಗುವುದು ಹೊಗುವುದು ಮನದೊಳೊಳವರಿದು \
- ಸುಳಿವರಿದು ಸೋ೦ಕುವುದು ತವಕಕೆ
- ಬಲಿದು ಮುನಿವುದು ಸವಿಯ ಬೇಟವ
- ಬೆಳಸಿ ಬೆಸೆವುದು ಬಗೆಯಲೆ೦ದಳು ನಳಿನಮುಖಿನಗುತ || ೨೪ ||
- ಪದವಿಭಾಗ-ಅರ್ಥ: ಒಲವ+ ಅರಿದು(ತಿಳಿದು) ಹತ್ತುವುದು(ಹತ್ತಿ ಮಲಗಿವುದು,ಅಂಟು, ಅಂಟಿಕೊಳ್ಳು, ಸೇರು, ಕೂಡು, ಒದಗು,ಒರಗು, ಸಂಭೋಗಿಸು), ಚಿತ್ತದ ನೆಲೆಯ+ ಅರಿದು ನೆಮ್ಮುವುದು(ಅವಲಂಬನ, ಆಸರೆ, ಆಧಾರ, ಹಿಂಬಾಲಿಸು, ಅನುಸರಿಸು, ಮುಟ್ಟು, ಸೋಕು), ಮುರಿವಿನ(ಮುರಿವು- ಹಿಂಜರಿತ, ಹಿಮ್ಮೆಟ್ಟುವಿಕೆ ೬ ಸುತ್ತು, ಸುರುಳಿ ೭ ಕುಗ್ಗುವಿಕೆ, ಕುಸಿತ) ಹೊಳವ+ ಅರಿದು ಹಿ೦ಗುವುದು(ಹಿಮ್ಮೆಟ್ಟುವುದು), ಹೊಗುವುದು ಮನದೊಳು+ ಅಳವ(ಆಳವು- ಸಾಮರ್ಥ್ಯ)+ ಅರಿದು, ಸುಳಿವ (ಸೋಚನೆ)+ ಅರಿದು ಸೋ೦ಕುವುದು(ತಾಗಿಕೊಳ್ಳಿವುದು, ಮುಟ್ಟುವುದು), ತವಕಕೆ(ಆಸೆಗೆ?) ಬಲಿದು(ತೀವ್ರವಾಗಿ) ಮುನಿವುದು(ಕೋಪಿಸಿವುದು), ಸವಿಯ ಬೇಟವ(ಕೂಡುವಿಕೆ) ಬೆಳಸಿ ಬೆಸೆವುದು(ಅಪ್ಪಿಕೊಳ್ಳುವುದು) ಬಗೆಯಲಿ(ಮನಸಾರೆ)+ ಎ೦ದಳು ನಳಿನಮುಖಿ(ದ್ರೌಪದಿ) ನಗುತ.
- ಅರ್ಥ:ದ್ರೌಪದಿಯು ನಗುತ್ತಾ, ಸತ್ಯಭಾಮೆಯನ್ನು ಕುರಿತು,'ಪತಿಯ ಒಲವನ್ನು ತಿಳಿದು ಹತ್ತಿರ ಸೇರಬೇಕು; ಅವನ ಚಿತ್ತದ ನೆಲೆಯನ್ನು ಅರಿತು ಬಳಿಸಾರಿ ಸೋಂಕಬೇಕು- ಮುಟ್ಟಬೇಕು; ಪತಿಯ ಹಿಂಜರಿತ, ಕುಗ್ಗುವಿಕೆಯ ಹೊಳವನ್ನು ಅರಿತು ಹಿಮ್ಮೆಟ್ಟಬೇಕು; ಪತಿಯ ಉತ್ಸಾಹ ಸಾಮರ್ಥ್ಯ ತಿಳಿದು ಅವನಲ್ಲಿ ಸೇರಬೇಕು; ಪತಿಯ ಸೋಚನೆಯನ್ನು ಅರಿತು ಅವನ ಬಳಸಾರಿ ತಾಗಿಕೊಳ್ಳಿವುದು; ಆಸೆಯು ತೀವ್ರವಾಗಿರುವುದನ್ನು ಸೂಚಿಸಲು ಕೋಪಿಸಿವುದು; ಕೂಡುವಿಕೆಯ ಸವಿಯನ್ನು ಬೆಳಸಿ ಮನಸಾರೆ ಅಪ್ಪಿ ಸುಖಿಸುವುದು.' ಎ೦ದಳು.
- ರಸಿಕ ಹರಿ ಹದಿನಾರು ಸಾವಿರ
- ಶಶಿಮುಖಿಯರಲಿ ಬೇಟ ಚೌಗಿನ
- ದೆಸೆಕ ದಿಮ್ಮಿತು ಬಗೆಯಭ೦ಗವ್ಯಾಪ್ತಿಕೃಷ್ಣನಲಿ |
- ನುಸುಳು ನೆಲೆ ಡಿಳ್ಳಾಯ್ತು ಪೈಸರ
- ಬೆಸುಗೆಬಿಗುಹುಳುಕೊತ್ತು ಕಲೆಗಳ
- ರಸದ ಪಸರವನರಿಯಬಾರದು ವಿಗಡ ವಿಟರುಗಳ || ೨೫ ||
- ಪದವಿಭಾಗ-ಅರ್ಥ: ರಸಿಕ ಹರಿ ಹದಿನಾರು ಸಾವಿರ ಶಶಿಮುಖಿಯರಲಿ(ಚಂದ್ರವದನೆಯರಾದ ವನಿತೆಯರಲ್ಲಿ) ಬೇಟ(ಪ್ರೇಮದಲ್ಲಿ) ಚೌಗಿನದ (ಚೌ- ನಾಲ್ಕು- ನಾಲ್ಕು ಬಗೆಯ, ನಾನಾಬಗೆಯ)+ ಎಸೆಕ(ಬಲ, ಸಾಮರ್ಥ್ಯ) ದಿಮ್ಮಿತು(ಕುಟ್ಟು, ನೂಕು, ತಳ್ಳು) ಬಗೆಯ(ಮನಸ್ಸಿನ) ಭ೦ಗವ್ಯಾಪ್ತಿ (ಬೇರೆ ಬೇರೆಯವರಲ್ಲಿ ಪ್ರೇಮದ ವ್ಯಾಪ್ತಿ: ವ್ಯಾಪಿಸಿರುವಿಕೆ, ಸಂಪೂರ್ಣತೆ, ಪರಿಪೂರ್ಣತೆ, ಅನ್ಯೋನ್ಯ ಸಂಬಂಧ) ಕೃಷ್ಣನಲಿ ನುಸುಳು ನೆಲೆ-(ಸ್ಥಾನ) ಡಿಳ್ಳಾಯ್ತು(ಡಿಳ್ಳು- ವ್ಯರ್ಥ, ಸಡಿಲ,ದಿಗಿಲು, ಹೀನತೆ) ಪೈಸರ(ಮಲ್ಲಯುದ್ಧದ ಒಂದು ಪಟ್ಟು, ಕುಸ್ತಿಯ ಒಂದು ವರಸೆ ), ಬೆಸುಗೆ (ಸೇರುವುದು) ಬಿಗುಹು(ಬಿಗುಹನ್ನು ಉಂಟುಮಾಡುವುದು)+ ಉಳುಕೆ (ಊಳುಚಿಕೊಳ್ಳುವುದು)+ ಒತ್ತು (ಒತ್ತುವುದು) ಕಲೆಗಳ ರಸದ ಪಸರವು(ಸಂಗ್ರಹದ ಅಂಗಡಿ)+ ಅರಿಯಬಾರದು(ತಿಳಿಯಲು ಅಸಾದ್ಯ) ವಿಗಡ(ಶೂರರಾದ) ವಿಟರುಗಳ(ಕಾಮುಕರ).
- ಅರ್ಥ:ದ್ರೌಪದಿಯು ಮುಂದುವರಿದು, ಸತ್ಯಭಾಮೆಗೆ,'ರಸಿಕನಾದ ಕೃಷ್ಣನು ಹದಿನಾರು ಸಾವಿರ ಚಂದ್ರವದನೆಯರಾದ ವನಿತೆಯರಲ್ಲಿ ಬೇಟವೆಂಬ ಪ್ರಣಯ-ಪ್ರೇಮದಾಟದಲ್ಲಿ ನಾಲ್ಕು ಬಗೆಯ ಸಾಮರ್ಥ್ಯವಾದ ದಿಮ್ಮುವುದು ಇತ್ಯಾದಿ ಬಲ್ಲನು; ಬೇರೆ ಬೇರೆಯವರಲ್ಲಿ, ಅವರ ಪ್ರೇಮದ ವ್ಯಾಪಿಸಿರುವಿಕೆಗೆ ತಕ್ಕಂತೆ, ಪರಿಪೂರ್ಣ ಅನ್ಯೋನ್ಯ ಸಂಬಂಧಗಳು ಕೃಷ್ಣನಲ್ಲಿ ಇದೆ; ಅವನು ಕಾಮ ಕಲೆಯಾದ, ಮುಖ್ಯ-ಸ್ಥಾನದಲ್ಲಿ ಒಳಗೆ ನುಸುಳುವುದು, ಡಿಳ್ಳು- ಸಡಿಲಮಾಡುವುದು, ಪ್ರೇಮಯುದ್ಧದ ಒಂದು ಪಟ್ಟುಹಾಕಿ ಬೆಸುಗೆಯ ಬಿಗುಹುಕೊಡುವುದು, ಉಳುಚಿಕೊಳ್ಳುವುದು, ಒತ್ತುವುದು' ಮೊದಲಾದ (ಕಾಮ)ಕಲೆಗಳ ರಸದ ಸಂಗ್ರಹದ ಅಂಗಡಿಕಾರನು, ಅದನ್ನು ತಿಳಿಯಲು ಅಸಾದ್ಯ. ಅವನು ವಿಗಡ- ವಿಟರುಗಳಲ್ಲಿ ಶೂರನು.' ಎಂದಳು.(ಅವನಿಂದ ಕಲಿ).
- ನೀವು ಮುಗುದೆಯರತಿ ವಿದಗ್ಧನು
- ದೇವಕೀ ಸುತ ನೆನ್ನವರು ಧ
- ರ್ಮಾವಲ೦ಬರು ದಿಟ್ಟರಲ್ಲ ಮನೋಜ ಲೀಲೆಯಲಿ |
- ನೀವು ಸೊಬಗಿನ ನಿಧಿಯಲೇ ಶತ
- ಸಾವಿರದ ಸತಿಯರಲಿ ಕೃಷ್ಣನ
- ಜೀವವಶ್ರಮ ರತಿಯರೆ೦ದಳು ನಗುತ ತರಳಾಕ್ಷಿ || ೨೬ ||
- ಪದವಿಭಾಗ-ಅರ್ಥ: ನೀವು ಮುಗುದೆಯರು (ಮುಗ್ಧರು ಚಿಕ್ಕ ಬಾಲೆಯಂತಿರುವವರು)+ ಅತಿ ವಿದಗ್ಧನು(ತಿಳಿದವ, ಪಂಡಿತ) ದೇವಕೀ ಸುತನು+ ಎನ್ನವರು ಧರ್ಮಾವಲ೦ಬರು, ದಿಟ್ಟರಲ್ಲ(ದಿಟ್ಟ- ಧೈರ್ಯಶಾಲಿ, ಸಾಹಸಿ, ಗಟ್ಟಿಗ, ಕೊಬ್ಬಿದವನು), ಮನೋಜ(ಮನ್ಮಥ- ಕಾಮ) ಲೀಲೆಯಲಿ ನೀವು ಸೊಬಗಿನ ನಿಧಿಯಲೇ, ಶತಸಾವಿರದ ಸತಿಯರಲಿ ಕೃಷ್ಣನ ಜೀವವ ಶ್ರಮ ರತಿಯರು+ ಎ೦ದಳು ನಗುತ ತರಳಾಕ್ಷಿ.
- ಅರ್ಥ:ತರಳಾಕ್ಷಿ ದ್ರೌಪದಿಯು ಇನ್ನೂ ಮುಂದುವರಿದು ಸತ್ಯಳಿಗೆ,'ನೀವು ಮುಗ್ಧರು, ಚಿಕ್ಕ ಬಾಲೆಯಂತಿರುವವರು. ದೇವಕೀ ಸುತ ಕೃಷ್ನನು ಈ ವಿಚಾರದಲ್ಲಿ ದೊಡ್ಡ ಪಂಡಿತನು. ಎನ್ನವರು- ಪಾಂಡುಪುತ್ರರು ಧರ್ಮಾವಲ೦ಬಿಗಳು, ಕಾಮಲೀಲೆಯಲ್ಲಿ ಗಟ್ಟಿಗರಲ್ಲ; ನೀವು ಸೊಬಗಿನ ನಿಧಿಯೇಸರಿ, ಶತಸಾವಿರದ ಸತಿಯರಲ್ಲಿ ನೀವು ಕೃಷ್ಣನ ಜೀವವನ್ನು ಶ್ರಮಪಡಿಸುವ- ಕಾಮಕೇಳಿಯಲ್ಲಿ ಆಯಾಸಪಡಿಸುವ ರತಿಯರು,' ಎ೦ದಳು ನಗುತ್ತಾ.
- ಅರಸ ಕೇಳೈ ಸತ್ಯಭಾಮಾ
- ಸರಸಿಜಾನನೆ ದ್ರುಪದ ಸುತೆಯರು
- ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ |
- ಹರಿ ಯುಧಿಷ್ಟಿರ ಭೀಮ ಪಾರ್ಥರು
- ವರ ಮುನಿಗಳಿತಿ ಹಾಸಮಯ ಭ೦
- ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ || ೨೭ ||
- ಪದವಿಭಾಗ-ಅರ್ಥ: ಅರಸ ಕೇಳೈ ಸತ್ಯಭಾಮಾ, ಸರಸಿಜಾನನೆ(ಸರಸಿಜ+ ಆನನೆ; ಕಮಲಮುಖಿ) ದ್ರುಪದಸುತೆಯರು ಸರಸ ಮೇಳದಲಿ+ ಒಪ್ಪಿದರು ಚದುರೋಕ್ತಿ(ಚದುರ- ಚತುರ+ ಉಕ್ತಿ- ಮಾತು) ಲೀಲೆಯಲಿ; ಹರಿ ಯುಧಿಷ್ಟಿರ ಭೀಮ ಪಾರ್ಥರು ವರ ಮುನಿಗಳು+ ಅತಿ ಹಾಸಮಯ ಭ೦ಧುರ (ಸುಂದರ, ಚಂದ) ಕಥಾ ಕೇಳಿಯಲಿ (ಕೇಳಿ- ವಿನೋದ, ಆಟ, ಕೂಟ) ಕಳೆದರು ಹಲವು ದಿವಸಗಳ.
- ಅರ್ಥ:ವೈಶಂಪಾಯನ ಮುನಿಯು ಜನಮೇಜಯನಿಗೆ,'ಅರಸನೇ ಕೇಳು, ಸತ್ಯಭಾಮಾ ಮತ್ತು ಕಮಲಮುಖಿಯೂ ದ್ರುಪದನ ಸುತೆಯೂ ಆದ ದ್ರೌಪದಿಯರು ಸರಸ ಮೇಳದಲ್ಲಿ ಚತುರಮಾತಿನ ವಿನೋದದಲ್ಲಿ ತೊಡಗಿದರು. ಕೃಷ್ಣ, ಯುಧಿಷ್ಟಿರ, ಭೀಮ ಪಾರ್ಥರು, ಶ್ರೇಷ್ಟರಾದ ಮುನಿಗಳು, ಅತಿ ಹಾಸ್ಯಮಯವಾದ ಸೊಗಸಿನ ಕಥಾ ವಿನೋದದಲ್ಲಿ ಹಲವು ದಿವಸಗಳನ್ನು ಅಲ್ಲಿ ಕಳೆದರು.
- ಹಗೆಗಳಮರಾರಿಗಳು ನಮ್ಮಯ
- ನಗರಿ ಶೂನ್ಯಾಸನದಲಿದ್ದುದು
- ವಿಗಡ ರಾಮಾದಿಗಳು ವಿಷಯ೦ಗಳ ವಿನೋದಿಗಳು |
- ಅಗಲಲಾರೆನು ನಿಮ್ಮ ವನದೋ
- ಲಗಕೆ ಬಿಡೆಯವ ಕಾಣೆನೆ೦ದನು
- ನಗುತ ಕರುಣಾಸಿ೦ಧು ಯಮನ೦ದನನ ಮೊಗನೋಡಿ || ೨೮ ||
- ಪದವಿಭಾಗ-ಅರ್ಥ: ಹಗೆಗಳು+ ಅಮರಾರಿಗಳು(ಅಮರ+ ಅರಿಗಳು- ದೇವತೆಗಳ ಶತ್ರುಗಳು- ರಾಕ್ಷಸರು) ನಮ್ಮಯ ನಗರಿ ಶೂನ್ಯಾಸನದಲಿ (ಶೂನ್ಯ ಆಸನ- ನಾಯಕರಿಲ್ಲದ ಸ್ಥಿತಿ)+ ಇದ್ದುದು ವಿಗಡ(ವೀರರಾದ) ರಾಮಾದಿಗಳು ವಿಷಯ೦ಗಳ(ಮನೋರಂಜನೆಯ) ವಿನೋದಿಗಳು; ಅಗಲಲಾರೆನು ನಿಮ್ಮ, ವನದ+ ಓಲಗಕೆ ಬಿಡೆಯವ ಕಾಣೆನು+ ಎ೦ದನು ನಗುತ ಕರುಣಾಸಿ೦ಧು ಯಮನ೦ದನನ ಮೊಗನೋಡಿ.(ಬಿಡೆಯ= ಬಿಡುವುದು , ಮುಂದೆನಡೆಸುವುದು, ಭಿಡೆ, ದಾಕ್ಷಿಣ್ಯ, ಸಂಕೋಚ.)
- ಅರ್ಥ:ಕರುಣಾಸಿ೦ಧು ಕೃಷ್ನನು ಯಮನ೦ದನನ ಮುಖವನ್ನು ನೋಡಿ,'ನಮ್ಮ ಶತ್ರುಗಳು- ರಾಕ್ಷಸರು; ನಮ್ಮ ನಗರವು ಆಪತ್ತಿಗೆ ನಾಯಕರಿಲ್ಲದ ಸ್ಥಿತಿಯಲ್ಲಿ ಇರುವುದುದು. ವೀರರಾದ ಬಲರಾಮ ಮೊದಲಾದವರು ಮನೋರಂಜನೆಯ ಆಟಪಾಠಗಳಲ್ಲಿ ವಿನೋದಿಂದ ಇರುವವರು. ಶತ್ರುಗಳ ಮೋಸದ ಧಾಳಿಯನ್ನು ಚಿಂತಿಸರು. ನಾನು ದ್ವಾರಕೆಗೆ ಹೋಗಬೇಕು. ಆದರೆ ನಿಮ್ಮನ್ನೆಲ್ಲಾ ಅಗಲಿ ಹೋಗಲೂ ಮನಸ್ಸಿಲ್ಲ. ಈ ವನದ ಓಲಗಕ್ಕೆ- ರಾಜಸಭೆಗೆ ಬಿಡೆಯವನ್ನು- ರಾಜಸಭೆಯನ್ನು ಬಿಟ್ಟುಹೊಗಲು ದಾರಿಯನ್ನು ಕಾಣೆನು; ಬಿಟ್ಟು ಹೋಗಲು ಸಂಕೋಚವು- ಮನಸ್ಸಿಲ್ಲ; (ಕಾಣೆನು-) ಏನು ಮಾಡಬೇಕೆಂದು ತೋರದು. ಎ೦ದನು ನಗುತ್ತಾ.
- ನುಡಿದ ಕಾಲಾವಧಿಗೆ ಜರೆ ತೆರೆ
- ಯಡಗಿದವು ಜಾಣಿನಲಿ ಸತ್ಯವ
- ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ |
- ಕಡುಮನದ ಕರ್ಣಾದಿಗಳುಕೈ
- ದುಡುಕಿದೊಡೆ ಕೈಗಾಯ್ದು ಧರ್ಮದ
- ತಡಿಗೆ ಜಾರಿ ಜಯಾದ್ವದಲಿ ಜ೦ಘಾಲರಹಿರೆ೦ದ || ೨೯ ||
- ಪದವಿಭಾಗ-ಅರ್ಥ: ನುಡಿದ ಕಾಲಾವಧಿಗೆ ಜರೆ ತೆರೆಯು (ಮುಪ್ಪು- ಕೊನೆ, ತೆರೆ- ಅಡ್ಡಿಗಳು ಹೋದವು)+ ಅಡಗಿದವು ಜಾಣಿನಲಿ ಸತ್ಯವ ನಡೆಸಿದಿರಿ ಕಡೆಸಾರಿಗೆಯಲಿ (ಕೊನೆಯ ಅವಧಿಯಲ್ಲಿ)+ ಉನ್ನತಿಯ ಕೆಡಿಸದಿರಿ ಕಡುಮನದ (ಕ್ರೂರ ಮನಸ್ಸಿನ) ಕರ್ಣಾದಿಗಳು ಕೈದುಡುಕಿದೊಡೆ ಕೈಗಾಯ್ದು ಧರ್ಮದತಡಿಗೆ((ತಡಿ:ಸಂ. ತಟೀ- ದಡ, ತೀರ, ಎಲ್ಲೆ, ಮಿತಿ, ಸಮೀಪ, ಹತ್ತಿರ) ಜಾರಿ ಜಯ+ ಅಧ್ವದಲಿ(ಮಾರ್ಗದಲ್ಲಿ, ದಾರಿಯಲ್ಲಿ) ಜ೦ಘಾಲರು(ಗಟ್ಟಿ ಕಾಲಿನವರು)+ ಅಹಿರಿ (ಆಗುವಿರಿ)+ ಎ೦ದ.
- ಅರ್ಥ:ಕೃಷ್ಣನು ಧರ್ಮಜನಿಗೆ,' ನೀವು ನುಡಿದ ಹನ್ನೆರಡು ವರ್ಷ ಮತ್ತು ಒಂದು ವರ್ಷದ ಕಾಲಾವಧಿಗೆ ಕೊನೆ ಬಂದಿದೆ, ಅಡ್ಡಿಗಳು ಹೋದವು; ಜಾಣತನದಿಂದ ಸತ್ಯವನ್ನು ನಡೆಸಿದಿರಿ. ಕೊನೆಯ ಅವಧಿಯಲ್ಲಿ ದುಡುಕಿ ಉನ್ನತಿಯನ್ನು ಕೆಡಿಸದಿರಿ. ಕ್ರೂರ ಮನಸ್ಸಿನ ಕರ್ಣಾದಿಗಳು ಕೈದುಡುಕಿದರೆ ಕೈಗಾಯ್ದು- ಸಂಯಮವಹಿಸಿ ಧರ್ಮದ ಕಡೆಗೆ ಜಾರಿ ಜಯದ ಮಾರ್ಗದಲ್ಲಿ ಗಟ್ಟಿಕಾಲಿನವರು ಆಗುವಿರಿ,' ಎ೦ದ.
- ಮರೆಯಲಿಹ ಕಾಲದಲಿ ಬಲಿದೆ
- ಚ್ಚರದಿಹುದು ಬೇಕಾದೊಡೆಮಗೆ
- ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ |
- ಅರಿದಿಹುದು ನೀನೆ೦ದು ರಾಯ೦
- ಗರುಹಿ ಭೀಮಾದಿಗಳಿಗುಚಿತವ
- ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ || ೩೦ ||
- ಪದವಿಭಾಗ-ಅರ್ಥ: ಮರೆಯಲಿ+ ಇಹ(ಮರೆಯಾಗಿ ಇರುವ) (ಮರೆ- ಅಜ್ಞಾತ ವಾಸದ) ಕಾಲದಲಿ ಬಲಿದು(ಬಹಳ) + ಎಚ್ಚರದಿ+ ಇಹುದು(ಇರಬೇಕು) ಬೇಕಾದೊಡೆ+ ಎಮಗೆ+ ಎಚ್ಚರಿಸಿ(ತಿಳಿಸಿ) ಕಾರ್ಯಸ್ಥಿತಿಯನು+ ಏ+ ಚರಿಸುವುದು(ನಡೆಸುವುದು) ನಿಮ್ಮೊಳಗೆ ಅರಿದು+ ಇಹುದು(ನಿಮ್ಮ ನಿಮ್ಮಲ್ಲಿ ಪರಸ್ಪರ ತಿಳಿದಿರತಕ್ಕದು) ನೀನು+ ಎ೦ದು ರಾಯ೦ಗೆ+ ಅರುಹಿ ಭೀಮಾದಿಗಳಿಗೆ+ ಉಚಿತವ ನೆರೆ ನುಡಿದು, ದುರುಪದಿಯ ಮನ್ನಿಸಿ, ಮರಳಿದನು ಪುರಕೆ.
- ಅರ್ಥ:ಕೃಷ್ನನು ಧರ್ಮಜನಿಗೆ ,'ಅಜ್ಞಾತ ವಾಸದದ ಕಾಲದಲ್ಲಿ ಬಹಳ ಎಚ್ಚರದಿಂದ ಇರಬೇಕು. ಸಹಾಯದ ಅಗತ್ಯ ಬಿದ್ದರೆ ಕಾರ್ಯಸ್ಥಿತಿಯನು ನಮಗೆ ತಿಳಿಸಿ ಮುಂದೆ ನೆಡೆಯುವುದು. ನಿಮ್ಮ ನಿಮ್ಮಲ್ಲಿ ಪರಸ್ಪರ ತಿಳಿದಿರತಕ್ಕದು. ನೀನು ಇದನ್ನು ತಿಳಿದಿರು, ಎ೦ದು ಧರ್ಮರಾಯನಿಗೆ ತಿಳಿಸಿ, ಭೀಮಾದಿಗಳಿಗೆ ಉಚಿತವಾದ ಮಾತನ್ನ ಹೇಳಿ, ದ್ರಪದಿಯನ್ನು ಮನ್ನಿಸಿ, ಕೃಷ್ಣನು ದ್ರಕಾಪುರಕ್ಕೆ ಮರಳಿದನು.
- ಅರಸಿ ಹರಿಯಾಮ್ನಾಯತತಿ ಕು
- ಕ್ಕರಿಸಿದವು ಮುನಿಗಳ ಸಮಾಧಿಗೆ
- ಕರುಬುವರಾವಲ್ಲ ಕಾಣರು ನಖದ ಕೊನೆಗಳನು |
- ಅರಸ ತಾನೇ ಹರಿ ಹರಿದು ತ
- ನ್ನೆರಕದವರನು ಬಿಡದೆ ಸಲಹುವ
- ಕರುಣವೆ೦ತುಟೊ ರಾಯ ಗದುಗಿನ ವೀರ ನರಯಣನ || ೩೧ ||
- ಪದವಿಭಾಗ-ಅರ್ಥ: ಅರಸಿ(ಹುಡುಕಿ, ಹುಡುಕುತ್ತಾ) ಹರಿಯ+ ಆಮ್ನಾಯ ತತಿ(ಆಮ್ನಾಯ:- ಸಂ:ವೇದ, ಪರಂಪರಾಗತ ಪದ್ಧತಿ, ವಂಶ) ಕುಕ್ಕರಿಸಿದವು ಮುನಿಗಳ ಸಮಾಧಿಗೆ ಕರುಬುವರು (ಅಸೂಯೆ ಪಡು)+ ಆವಲ್ಲ(ನಾವಲ್ಲ), ಕಾಣರು ನಖದ ಕೊನೆಗಳನು, ಅರಸ ತಾನೇ ಹರಿ ಹರಿದು(ಹೋಗಿ) ತನ್ನ+ ಎರಕದವರನು(ಪ್ರೀತಿ, ಅನುರಾಗ, ಅನುರೂಪರನ್ನು) ಬಿಡದೆ ಸಲಹುವ ಕರುಣವೆ೦ತುಟೊ ರಾಯ (ದೊಡ್ಡವ) ಗದುಗಿನ ವೀರ ನರಯಣನ.
- ಅರ್ಥ:ಅರಸನೇ,' ವೇದಗಳು ಪರಂಪರಾಗತ ಪದ್ಧತಿಗಳು, ಹರಿಯನ್ನು ಹುಡುಕುತ್ತಾ ಮುನಿಗಳನ್ನು ಸಮಾಧಿಗೆ ಕುಕ್ಕರಿಸಿದವು-ಕೂರಿಸಿದವು. ಅವರನ್ನು ನೋಡಿ ನಾವು ಕರುಬುವರು ಅಲ್ಲ. ಅವರು ಸಮಾಧಿಯಲ್ಲೂ ನುಖದ ಕೊನೆಗಳನ್ನು ಕಾಣರು. ಹರಿ ತಾನೇ ಹೊಗಿ ತನ್ನ ಪ್ರೀತಿಪಾತ್ರರನ್ನು ಬಿಡದೆ ಸಲಹುವ ರಾಯನಾದ ಗದುಗಿನ ವೀರ ನರಯಣನ ಕರುಣವು ಅದೆ೦ತು-ಅದೆಷ್ಟು ಇದೆಯೋ,' ಎಂದನು ಮುನಿ ವೈಶಂಪಾಯನ.
♠♠♠
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|