ಪದವಿಭಾಗ-ಅರ್ಥ: ಸವೆದುದು(ಕ್ಷೀಣಿಸಿತು)+ ಅಗ್ಗದ(ಉತ್ತಮ, ದೊಡ್ಡ) ಪಾಂಡುಸುತ ಕೌರವ ಬಲಾಂಬುಧಿ(ಬಲ+ ಅಂಬುಧಿ= ಸೇನಾ ಸಮುದ್ರ), ಧರ್ಮತನುಜನನು+ ಅವಗಡಿಸಿ(ಅಪಮಾನಿಸಿ, ಸೋಲಿಸಿ) ಸಮರದಲಿ ಮಡಿದನು(ಸತ್ತನು) ಮಾದ್ರಭೂಪಾಲ ಅರ್ಥ:ಪಾಂಡವರ ಮತ್ತು ಕೌರವರ ದೊಡ್ಡ ಸೇನಾ ಸಮುದ್ರ ಈ ಹದಿನೆಂಟು ದಿನಗಳ ಯುದ್ಧದಲ್ಲಿ ನಾಶವಾಗಿ ಕ್ಷೀಣಿಸಿತು. ಧರ್ಮತನುಜನಾದ ಯುಧಿಷ್ಠಿರನನ್ನು ಮಾದ್ರಭೂಪಾಲನಾದ ಶಲ್ಯನು ಯುದ್ಧದಲ್ಲಿ ಬಳಲಿಸಿ ಕೊನೆಗೆ ಅವನಿಂದಲೇ ಯುದ್ದದಲ್ಲಿ ಮಡಿದನು [೧][೨][೩]
ಅರ್ಥ:ಸಂಜಯನು ಹೇಳಿದ,'ಕೇಳು ಧೃತರಾಷ್ಟ್ರ ರಾಜನೇ, ಭೂಪಾಲಧರ್ಮರಾಯ ಮತ್ತು ಶಲ್ಯರ ಯುದ್ಧಕ್ಕೆ ಇವರು-ಕೃಪಾದಿಗಳು ಸಅಹಾಯಮಾಡಿ ಅನುಕೂಲವಾದರಲ್ಲವೇ. ಇತ್ತ ಮತ್ತು ಆಚೆಯಲ್ಲಿ ಅರ್ಜುನ, ನಕುಲ, ಪಾಂಚಾಲರು, ಬಲಭೀಮ ಮೊದಲಾದವರು ಮೇಳವಿಸಿ- ಒಟ್ಟಾಗಿ ನಿಂತರು. ಅವರೆಲ್ಲರ ಪಾದ ಘಟ್ಟನೆಯ ಧೂಳಿನಿಂದ ಜಗತ್ತೇ ಮುಳುಗೆಇತು. ಅವರ ಉಭಯ ಸೇನೆಗಳೂ ಪರಸ್ಪರ ಜೋಡಿಸಿಕೊಂಡು ಹೋರಾಡಿದರು.
ಅರ್ಥ:ಕಲಿಭೀಮನು ರಣರಂಗದ ಬಲಗಡೆ ಆವೇಶದಿಂದ ಹೋರಾಡಿದನು. ಸಾತ್ಯಕಿ ನಕುಲರು ಮತ್ತು ಪಾಂಚಾಲನಾಯಕರು ಎಡಭಾಗದಲ್ಲಿ ಮುಂದಕ್ಕೆ ನುಗ್ಗಿದರು. ಒಂದು ಕಡೆಯಲ್ಲಿ ಫಲ್ಗುಣನು ಅಹಂಕಾರಿ ಶತ್ರುಗಳನ್ನು ಬಾಣಗಳಿಂದ ಹೊಡೆದನು. ಒಂದು ಕಡೆಯಲಿ ದ್ರೌಪದೀ ಸುತರು ಹೊಡೆದು ಸೇನೆಯನ್ನು ಸವರಿದರು.
ಅರ್ಥ: ರಾಜನೇ ಕೇಳು, ಈಚೆಯಲ್ಲಿ ಗುರುಸುತ ಅಶ್ವತ್ಥಾಮ, ಸುಶರ್ಮಕ, ಶಲ್ಯ, ನಿನ್ನಯ ಮಗ ಕೌರವ ಕೃತವರ್ಮ, ಕೃಪಾಚಾರ್ಯ ಮೊದಅಲಾದವರು ಶತ್ರು ಸೇನೆಯನ್ನು ಮುತ್ತಿದರು. ತುಪ್ಪದ ಸಮುದ್ರದ ಬದಿಯಲ್ಲಿ ಬೆಂಕಿ ಸೋಕಿದ ಹಾಗೆ ಉತ್ಸಾಹದಿಂದ ವೈರಿಸಮೂಹವನ್ನು ತರುಬಿದರು- ಆಕ್ರಮಿಸಿದರು. ಅವರು ಬಾಣಗಳ ಸಾರದಲ್ಲಿ- ಸಮೂಹದಲ್ಲಿ ಸೇನೆಯನ್ನು ಕಡಿದುಹಾಕಿದರು.
ಅರ್ಥ:ಅರ್ಜುನನು ಗುರುಸುತ ಅಶ್ವತ್ಥಾಮನನ್ನು ಹೊಡೆದು ಕೆಣಕಿದಾಗ ಅವನು ಇವನಿಗೆ ಅಡಹಾಯ್ದು ಅಂಬಿನಲ್ಲಿ ಹೊಡೆದನು. ಅರ್ಜುನನ ಬಾಣಗಳ ಮಹಾ ಅರಣ್ಯದಲ್ಲಿ ಗುರುಸುತನ ಕಡಿಯುವಿಕೆಯು ನಡೆಯಿತು.(ಅರಣ್ಯದಲ್ಲಿ ಮರಗಳನ್ನು ಕಡಿದು ಕೆಡಗುವಂತೆ ಅರ್ಜುನನ ಬಾಣಗಳನ್ನು ಕಡಿದು ಕೆಡವಿದನು), ಅದಕ್ಕೆ ಅರ್ಜುನನು ಅಶ್ವತ್ಥಾಮನಿಗೆ ನೀವು ರಣವಿಶಾರದರು ಆಗಿರುವಿರಲ್ಲವೇ? ಯುದ್ಧದ ಅಣಕವು ಏತಕ್ಕೆ? ರಾಜಗುರುಗಳು ನಿಜವಾಗಿ ಸೆಣಸುವುದಾದರೆ ನೀವು ಈ ಬಾಣಗಳನ್ನು ಸೈರಿಸಿರಿ ಎನ್ನುತ್ತಾ ಪಾರ್ಥನು ಹೊಡೆದನು.
ಅರ್ಥ:ಸಂಜಯನು ಹೇಳಿದ,'ಅರಸನೇ ಕೇಳು, ಪಾರ್ಥನನ್ನು ಅಡಹಾಯ್ದು ಅವನ ಉತ್ತಮ ರಥವನ್ನು ಹಿಂದಿಕ್ಕಿ ಭೀಮನು ಆಶ್ವತ್ಥಾಮಾದಿಗಳ ಮುಂದೆ ಹೋದನು. ನಕುಲ ಸಾತ್ಯಕಿ ಸಹಿತ ಅವರನ್ನು ಆಕ್ರಮಿಸಿದನು. ಗುರುಸುತನು ಬಾಣಗಳ ಧಾರಕಾರ ಮಳೆಸುರಿಸಿ ಅರಿಭಟರಾದ ಭೀಮಾದಿಗಳನ್ನುನನೆಸಿದನು; ಈ ಮಹೋಗ್ರವಾದ ಯುದ್ಧವನ್ನು ನೃಪತಿ ಕೌರವನು ಕಂಡನು. ಅವನು ಕಂಡು ರಭಸದಿಂದ ಬಿಟ್ಟ ಸೂಠಿಯಲಿ- ಉಳಿದ ಕಾರ್ಯವನ್ನು ಬಿಟ್ಟು ತಡಮಾಡದೆ ಅಲ್ಲಿಗೆ ಬಂದನು.
ಅರ್ಥ: ಕೌರವರಾಯನು ತನ್ನ ವೈರಿಗಳ ಪಡೆಯನ್ನು ಹೊಕ್ಕನು. ಇದು ಭೀಮಸೇನನ ಯುದ್ಧ ಬಲುಹೋ- ಬಲವಾದುದು. ಇದು ಧರ್ಮಪುತ್ರನ ಕಾರ್ಯ- ಯುದ್ಧವಲ್ಲ. ನುಗ್ಗು, ಎನ್ನುತ್ತಾ ಕೃತವರ್ಮ ಗೌತಮರು/ಕೃಪರು ಬಾಣಗಳ ಮಳೆಗರೆದು ಕೌರವರಾಯನನ್ನು ಹಿಂದೆ ಬಿಟ್ಟು ಆಕ್ರಮಣಮಾಡಿ, ಅರಿಬಲವಾದ ಭೀಮನ ಸೇನೆಯನ್ನು ಮುರಿದರು ತರಿದರು.
ಅರ್ಥ: ತ್ರಿಗರ್ತರ ಗುಂಪು ಜೊತೆಗೆ ಕೃಪ ಕೃತವರ್ಮರ, ಅವರ ಸಂಗಡ ಅಶ್ವತ್ಥಾಮನು, ಈ ಹೇರಾಳ ಸೇನೆಸಹಿತ, ಈ ಬೆಂಬಲದ ದೊಡ್ಡಪಡೆ ಪಾಂಡವಬಲವನ್ನು ಹೊಕ್ಕು ಕೊಡಹಿದರು; ಭೀಮನನ್ನು ಕುಗ್ಗಿಸಿ ಭಂಗಿಸಿದರು. ಭೀಮನ ಶ್ರೇಷ್ಠ ಭಟರ ಸೇನೆ ಬೆದರಿಹೊಯಿತು.
ಅರ್ಥ:ಸಂಜಯನು ರಾಜನಿಗೆ, ಏನು ಹೇಳಲಿ, ಫಡ! ಎಂದು ಪಾಂಚಾಲಸೇನೆ ಭೀಮನ ಜೊತೆಗೂಡಿತು. ಭೀಮನೊಡನೆ ಸೃಂಜಯರು, ಎಹತ್ತಿರವೇ ಅಡ್ಡಹಾದು ಸಹಾಯಕ್ಕೆ ಬಂದರು. ಅವರೊಡನೆ ಸುತ ಸೋಮಾದಿಗಳು ಸಹಿತ ಆಕಡೆ ಶಸ್ತ್ರ ಹಿಡಿದು ನಿಂತರು. ಮತ್ತೆ ಅಲ್ಲಿ ಕಲಿಪಾರ್ಥನ ಬಾಣದ ಬೆಂಕಿಯೂ ಎದ್ದಿತು. ಕುರು ಸೇನೆಯ ದೊಡ್ಡ ಕಡಲು ಬತ್ತಿಹೋಯಿತು. ಅದನ್ನು ಏನು ಹೇಳಲಿ,'ಎಂದ.
ಆ ಸಮಯದಲಿ ಬಹಳ ಶೌರ‍್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ |
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ || ೧೦ ||
ಪದವಿಭಾಗ-ಅರ್ಥ:ಆ ಸಮಯದಲಿ ಬಹಳ ಶೌರ್ಯ+ ಆವೇಶದಲಿ ನಿನ್ನಾತ ನೂಕಿದನು+ ಆ ಶಕುನಿ+ ಯೈ+ ಐವತ್ತು ಸಾವಿರ ತುರಗದಳ ಸಹಿತ ಕೇಸು+ ಉರಿಯ ಕರ್ಬೊಗೆಯವೊಲು ನಿಟ್ಟಾಸಿನ+ ಆಯುಧದ+ ಆನೆಗಳು ಕೈವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ.
ಅರ್ಥ: ಆ ಸಮಯದಲ್ಲಿ ಬಹಳ ಶೌರ್ಯ ಮತ್ತು ಆವೇಶದಲ್ಲಿ ನಿನ್ನಾತ ಕೌರವನು, ಆ ಶಕುನಿಯನ್ನು ಮುಂದೆ ನೂಕಿದನು. ಅವನೊಡನೆ ಐವತ್ತು ಸಾವಿರ ಅಶ್ವದಳ, ಕೆಂಪು ಬೆಂಕಿಯ ಕಪ್ಪು ಹೊಗೆಯಂತಿರುವ ಆನೆಗಳು, ಖಡ್ಗಹಿಡಿದ ಮಾವುತರು ಇದ್ದರು; ಅವರು ಕೌರವನು ಸನ್ನೆ ಮಾಡಿ ಕೈಬೀಸಿದಾಗ ಅಲ್ಲಿಂದ ಮುಂದೆ ವೈರಿಸೇನೆಯನ್ನು ಮೊಗೆದುವು- ನುಗ್ಗಿ ಎತ್ತಿಹಾಕಿದವು.
ಅರ್ಥ: ಗಜದಳದ ಆಕ್ರಮಣಕ್ಕೆ, ಕುದುರೆ ದಳದ ಸಮೂಹದ ಆಕ್ರಮಣಕ್ಕೆ ಭೀಮನು ಗಾಬರಿಯಾಗುವನೇ ಗಜಬಜಿಸುವನೆ? ಹೊಡೆಸೆಂಡನ ಆಟದಂತೆ ಅವುಗಳನ್ನು ಹೊಡೆದು ಆಡಿದನು. ಸಾಮಾನ್ಯದ ಗಿಡಗಂಟಿಯ ಪೊದೆಯಂತಿರುವ ಶತ್ರುಗಳ ಸೇನೆಯು ಭೀಮನ ಪರಾಕ್ರಮದ ಬೆಂಕಿಯ ಶಿಖಿಯ ಝಳ ನಿಮಿಷದಲಿ ಝೊಂಪಿಸಿತು(ಹಬ್ಬಿತು?); ಆನೆ, ಅಶ್ವ ಸಮೂಹಗಳು ನಾಶವಾಗಿ ಬಿದಿರು ಮೆಳೆಯು ಬೆಂಕಿಯ ಶಾಖಕ್ಕೆ ಒಣಗಿದಂತೆ ನಿಮಿಷದಲ್ಲಿ ಒಣಗಿದವು.
ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ |
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ || ೧೨ ||
ಪದವಿಭಾಗ-ಅರ್ಥ: ಅಳಿದುದೈ(ಸತ್ತವು) ನೂರು+ ಆನೆ, ಸಾವಿರ ಬಲುಗುದುರೆ, ರಥ ಮೂರು ಸಾವಿರ, ನೆಲಕೆ ಕೈವರ್ತಿಸಿತು(ಕೈಬಿಡು); ಭೀಮನ ಹೊಯ್ಲ ಹೋರಟೆಗೆ ಬಿಲುಹರಿಗೆ ಸಬಳದ ಪದಾತಿಯ ತಲೆಯ ತೊಡಸಿದನು+ ಎಂಟು ಲಕ್ಕವನು+ ಉಳಿದ ಬಲ ವೋಲೈಸುತಿರ್ದುದು(ಓಲೈಸು- ) ಘನ ಪಲಾಯನವ
ಅರ್ಥ:ರಾಜನೇ, 'ಕೌರವನ ಸೇನೆಯ ನೂರು ಆನೆಗಳು, ಸಾವಿರ ಬಲಿಷ್ಠ ಕುದುರೆಗಳು ಸತ್ತವು; ಮೂರು ಸಾವಿರ ರಥ ನೆಲಕೆ ಬಿದ್ದವು; ಭೀಮನ ಹೊದೆತ ಹೋರಾಟಕ್ಕೆ ಬಿಲ್ಲಿನ ಪ್ರಯೋಗಕ್ಕೆ ಎಂಟು ಲಕ್ಸ್ಷ ಸಬಳದ/ಭರ್ಜಿಯ ಪದಾತಿಗಳ ತಲೆಯ ತಗೆದನು. ಉಳಿದ ಬಲ/ಸೇನೆ ಘನ ಪಲಾಯನವ ದಾರಿ ಹಿಡಿಯಿತು- ಓಡಿಹೋಯಿತು,'ಎಂದನು.
ಅರ್ಥ:ಅಶ್ವತ್ಥಾಮನು, ಪವನಜ ಭೀಮನನ್ನುಎಂಟು+ ಅಂಬುಗಳಲ್ಲಿ, ಪಾಂಡವಸುತರನ್ನು ಐವತ್ತು ಬಾಣಗಳಲ್ಲಿ, ಯಾದವ ಸಾತ್ಯಕಿಯನ್ನು ಇಪ್ಪತ್ತು ಅಂಬಗಳಲ್ಲಿ, ಮಾದ್ರೀಕುಮಾರಾದ ನಕುಲ ಸಹದೇವರನ್ನು ಇಪ್ಪತ್ತು ಕರಕವಲುಬಾಣಗಳಿಂದ ಮುರಿದು ಹಿಮ್ಮಟ್ಟಿಸಿ, ಪಾಂಚಾಲ ಸೃಂಜಯ ಸಮೂಹವನ್ನು ನೂರು ಅಂಬಗಳಲ್ಲಿ ಬೀಳುವ ಹಾಗೆ ಹೊಡೆದು ಬೊಬ್ಬಿರಿದನು.
ಅರ್ಥ:ಗುರುಸುತ ಅಶ್ವತ್ಥಾಮನ ಬಾಣಗಳು ನಾಳಿನ ಆಳ್ವಿಕೆಗಾಗಿ ಮಾದಕ ಶಕ್ತಿಯಿಂದ ಶತ್ರುಗಳನ್ನು ತಾಗಿದವು, ಮುಂದೆಬಂದ ಅಶ್ವ ಸಮೂಹವನ್ನು ನೀಗಿದವು/ನಾಶಮಾಡಿದವು. ಶರವೊಂದು/ಒಂದೇ ಭಾಣ ಸಾವಿರ ರಥಗಳ, ಹಯ/ಕುದುರೆಗಳ ಸಮೂಹವನ್ನು ನಾಶಮಾಡಿತು; ಕಾಲಾಳುಗಳನ್ನು ಕಬಳಿಸಿ/ನುಂಗಿ ತೇಗಿದವು; ಹೀಗೆ ಚತುರಂಗಸೇನೆಯನ್ನೂ ಅಂತಕನ/ಯಮನ ಮನೆಗೆ ವಿನಿಯೋಗಿಸಿದವು- ಕಳಿಸಿದವು.
ಅರ್ಥ: ಇನ್ನೂರು ಆನೆಗಳು ಭೂಮಿಗೆ ಕಡಿದು ಬಿದ್ದವು; ಸಾವಿರ ತೇರು ಮುರಿದು ಬಿದ್ದವು; ಸಾವಿರದ ಮೂನೂರು ಕುದುರೆಗಳ ಸಮೂಹ ಸತ್ತುಬಿದ್ದು ಮಾಂಸವಾದವು; ಅರುವತ್ತು ಸಾವಿರ ಕಡುಗಲಿ ಭಟರು ದೇಹವನ್ನು ನೆಲಕ್ಕೆ ಕೊಟ್ಟರು- ಮಡಿದರು. ಕೌರವನ ಪಾಯದಳವು- ಕಾವಲು ಸೇನೆಯು ಬೆಂಗಾಡಿನ ಬರಗಾಲಕ್ಕೆ ಸಿಕ್ಕಿದಂತೆ ವೈರಿಸುಭಟರಿಗೆ ಸಿಕ್ಕಿ ಕ್ಷೀಣವಾಯಿತು.
ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ |
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ || ೧೮ ||
ಪದವಿಭಾಗ-ಅರ್ಥ: ಮತ್ತೆ ಕವಿದುದು ಪಾಂಡುಬಲವು+ ಅರುವತ್ತು ಸಾವಿರ ಕುದುರೆ ನೂರಿಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ ಸತ್ತಿಗೆಯ(ಛತ್ರಿ) ಸಾಲಿನಲಿ ಧರಣಿಯ ಕಿತ್ತು ಮಗುಚುವ ವಾದ್ಯರಭಸದಲಿ+ ಎತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ.
ಅರ್ಥ:ಪಾಂಡವರ ಸೇನೆ ಮತ್ತೆ ಕೌರವನ ಸೇನೆಯನ್ನು ಮತ್ತಿತು. ಪಾಂಡವರ ಬಲವು ಅರುವತ್ತು ಸಾವಿರ ಕುದುರೆ, ನೂರಿಪ್ಪತ್ತು ಗಜಗಳು, ನೂರು ಮೀರಿದ ರಥಗಳು, ಲಕ್ಷ ಪಾಯದಳ/ ಸೇನೆ ಚಾಮರ ಛತ್ರಿಗಳನ್ನು ಹಿಡಿದು ಸಾಲಿನಲ್ಲಿ ಭೂಮಿಯು ಕಿತ್ತು ಮಗುಚುವಂತೆ ವಾದ್ಯರಭಸದ ಸದ್ದು ಮಾಡುತ್ತಾ ಗುರುತನುಜ ಅಶ್ವತ್ಥಾಮನ ರಥದ ಸಮ್ಮುಖಕ್ಕೆ- ಎದುರಿಗೆ ದಂಡೆತ್ತಿ ನುಗ್ಗಿತು.
ಅರ್ಥ: ಇತ್ತ ಈ ಕಡೆ- ಕೌರವನ ಕಡೆ ಹೇಳುವುದಾದರೆ ಶಲ್ಯ ಮತ್ತು ಅಶ್ವತ್ಥಾನಿಗೆ ಬೆಂಬಲವಾಗಿ ಇಪ್ಪತ್ತು ಸಾವಿರ ಕುದುರೆ, ಆನೆಗಳು ಐವತ್ತು, ನಾನೂರ ಏಳು ರಥ, ಸಾವಿರದ ನಾನೂರು ರಕ್ಷಕ ಪಡೆ, ಲಕ್ಷ ಕಾಲಾಳು ಸೇನೆ ಎದುರಿಸಿದಾಗ ಅಲ್ಲಿಯ ವಾದ್ಯಗಳ ಸದ್ದು ಆರ್ಬಟಿಸಿತು,ಬಹಳಷ್ಟು ನಗಾರಿ), ತಮ್ಮಟೆಯ ಸದ್ದು ಜಗತ್ತುನ್ನು ಕೀರಿತ್ತು- ಆವರಿಸಿತ್ತು.
ಅರ್ಥ:ಈ ಕೌರವಸೇನೆ ಗುರುಸುತನಾದ ಅಶ್ವತ್ಥಾಮನನ್ನು ಹಿಂದಕ್ಕೆ ಇರಿಸಿಕೊಂಡು ಪರಬಲವಾದ ಪಾಂಡವ ಸೇನೆಯ ಅಭಿಮುಖಕ್ಕೆ ಒಟ್ಟುಗೂಡಿಕೊಂಡು ಪರಾಕ್ರಮ ತೋರಿ ನಿಂತಿತು, ಇತ್ತ ದೂರದಲ್ಲಿ ಯುದ್ಧಮಾಡುತ್ತಿದ್ದ ಶಲ್ಯನು ಇದನ್ನು ಕಂಡನು. ಆ ಪ್ರಬಲವಾದ ಯುದ್ಧಕ್ಕೆ ನಾವು ಇರುವಾಗ ಸೇನೆಯನ್ನು ಮುಂದೆಬಿಟ್ಟು ಮಹಾರಥನು ಹಿಂದೆಸರುಯಬಹುದೇ? ಈ ಕ್ರಮ ಹಿಂದೆ ಹಿಮ್ಮಟ್ಟದೆ ಯುದ್ಧಮಾಡಿದ (ಸ್ವರ್ಗದಲ್ಲಿರುವ) ದ್ರೋಣ ಭೀಷ್ಮ ಮೊದಲಾದವರ ನಗೆಗೆ ಎಡೆಮಾಡಿ ಕೊಡುವುದು. ನಾವು ಇಲ್ಲಿ ಸೇನಾಧಿಪಿಯಾಗಿ ಇದ್ದೇವೆ, ತೆಗೆ,' ಎನ್ನುತ್ತಾ ಶಲ್ಯನು ಮುಂದೆ ಬಂದನು.
ಅರ್ಥ:ಕೌರವ ಮತ್ತು ಅವನ ಕಡೆಯವರಿಗೆ ನನ್ನ ಯುದ್ಧವನ್ನು ನೋಡುತ್ತಿರಿ ಎಂದು ಶಲ್ಯನು ಹೇಳಲು, ಕೌರವನು ಕಾಂಚನಮಯವಾದ ರಥವ ತರಿಸಿ, ಅದನ್ನು ವಿಶೇಷವಾಗಿ ಸಿದ್ಧಗೊಳಿಸಿದನು. ಬಾವುಟವನ್ನು ಎತ್ತರಕ್ಕೆ ಎತ್ತಿಸಿ ಕಟ್ಟಿಸಿದನು. ಬಾಣಗಳನ್ನು ತುಂಬಿದ ಬಂಡಿಗಳನ್ನು ಅವನ ರಥದ ಎಡಬಲದಲ್ಲಿ ಇರುವಂತೆ ಜೋಡಿಸಿದನು. ಶಲ್ಯನ ಬಿರುದನ್ನು ಕೂಗುವ ಪಾಠಕರ ಸಮೂಹವನ್ನು ರತ್ನಮಣಿ ಮತ್ತು ಹಣವನ್ನು ಬೊಗಸೆಯಲ್ಲಿ ಮೊಗೆದು ಅವರಿಗೆ ಕೊಟ್ಟು ಜೊತೆಗೂಡಿಸಿದನು. ಆಗ ಶಲ್ಯನು,'ಅರರೆ! ಕರೆಯೋ ಧರ್ಮಜನನು,' ಎಂದು ಉಬ್ಬಿ ಕೂಗಿದನು.
ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ |
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ || ೨೪ ||
ಪದವಿಭಾಗ-ಅರ್ಥ: ರಾಯ(ಧರ್ಮರಾಯ) ನಿಲುವನೊ ಮೇಣು(ಮತ್ತೆ, ಅಥವಾ) ಪಾರ್ಥನೊ, ವಾಯುಸುತನೋ, ನಿಮ್ಮ ಮೂವರೊಳು+ ಆಯುಧವ ಕೊಂಡು(ಹಿಡಿದು)+ ಆರು(ಯಾರು) ಹೊಕ್ಕರು(ಯುದ್ಧಕ್ಕೆ) ನಿಲುವೆನು,+ ಅವರೊಡನೆ ನಾಯಕರು ಮಿಕ್ಕವರೊಡನೆ ಬಿಲುಸಾಯಕವನು(ಸಾಯಕ-ಸಂ ೧ ಬಾಣ,ಶರ, ಕತ್ತಿ, ಖಡ್ಗ, ವ್ಯವಸಾಯ)+ ಒಡ್ಡಿದಡೆ ಕೌರವರಾಯನಾಣೆ+ ಯೆ+ ಎನುತ್ತ ಮದವೇರಿದನು ಕಲಿಶಲ್ಯ.
ಅರ್ಥ:ವೀರನಾದ ಶಲ್ಯನು,'ಧರ್ಮರಾಯನು ಯುದ್ಧಕ್ಕೆ ನಿಲ್ಲುವನೊ, ಅಥವಾ ಪಾರ್ಥನೊ, ವಾಯುಸುತ ಭೀಮನೋ, ನಿಮ್ಮ ಮೂವರಲ್ಲಿ ಆಯುಧವನ್ನು ಹಿಡಿದುಕೊಂಡು ಯಾರು ಯುದ್ಧಕ್ಕೆ ಬರುತ್ತೀರಿ ಬನ್ನಿ, ಅವರನ್ನು ನಾನು ಎದುರಿಸಿ ನಿಲ್ಲುವೆನು; ಅವರೊಡನೆ ಅಲ್ಲದೆ ಮಿಕ್ಕ-ಬೇರೆ ನಾಯಕರೊಡನೆ ಬಿಲ್ಲನ್ನು ಒಡ್ಡಿದರೆ ಕೌರವರಾಯನಾಣೆ,' ಎನುತ್ತ ಮದವೇರಿ ಆರ್ಭಟಿಸಿದನು. (ತಾನು ಕರೆದ ಆ ಮೂವರೊಡನೆ ಮಾತ್ರಾ ಯುದ್ಧ ಮಾಡುವುದು- ಬೇರೆಯವರೊಡನೆ ಮಾಡುವುದಿಲ್ಲ -ಅವರೇ ಬರಲಿ, ಎಂದು ಶಲ್ಯನು ಹೇಳಿದನು.)
ಅರ್ಥ: ದಳಪತಿಯಾದ ಶಲ್ಯನ ಸಂತೋಷ ಮತ್ತು ಗರ್ವತುಂಬಿದ ಮುಖ ಬೆಳಬೆಳಗುತದೆ- ಪ್ರಖಾಶಿಸುತ್ತಿದೆ; ಭೀಷ್ಮನ, ದ್ರೋಣನ, ಕರ್ಣನ, ರಂಗಭೂಮಿ ಈ ಕುರುಕ್ಷೇತ್ರವಿದು, ಈ ರಣರಂಗವನ್ನು ಆಕ್ರಮಿಸುವುದಾದರೆ ಶ್ರೇಷ್ಠ ಮಾದ್ರಮಹೀಶನಾದ ಶಲ್ಯನು ಅಲ್ಲದೆ ಬೇರೆಯವರಿಗೇನು ಸಾಧ್ಯ?+ ಎನ್ನುತ್ತಾ ಕುರುಸೇನೆಯು ಶಲ್ಯನನ್ನು ಕೊಂಡಾಡಿತ್ತು.
ಅರ್ಥ: ಶಲ್ಯನ ಆರ್ಭಟಕ್ಕೆ ಸೇನೆಯ ವೀರರು 'ಭಲೇ ಮಝರೇ ಶಲ್ಯ! ಇವನು ಕರ್ಣನ ಕಾರ್ಯದಲ್ಲಿ ಹೊಕ್ಕನೆ? ವೀರರ ಸಮೂಹದಲ್ಲಿ ಗಣನೆಮಾಡಿದರೆ ಈತ ಒಬ್ಬನೆ ಕರಣನಿಗೆ ಸಮ., ಹಾ ಮಹಾದೇವ! ಇವನ ಶಕ್ತಿ ಚೆನ್ನಾಗಿದೆ. ಶಲ್ಯನು ದಿಟ್ಟನೈ- ಧೀರನೇಸಿ. ಇವನು ನಿರ್ಭೀತ, ಗರ್ವಿತನು, ಇವನು', ಎನ್ನುತ್ತಾ. ಭಟರು ಮತ್ತು ಸಾತ್ಯಕಿ ಸೋಮಕಾದಿ ವೀರರು ಈತನನ್ನೂ ಹೊಗಳಿದರು.
ಅರ್ಥ:ಶಲ್ಯನು ಶತ್ರುಬಲವನ್ನು/ ಸೇನೆಯನ್ನು ತಡೆದು ನಿಂತನು. ಅವನು,'ಪಾಂಡವ ಸೇನೆಗೆ ನಿಮ್ಮ ಒಡೆಯನು ಯಾವಕಡೆ ಇದ್ದಾನೆ? ಸಾಮಾನ್ಯ ಸೇನೆಉ ಕದನವನ್ನು ಕೊಟ್ಟರೆ, ನಾನು ಆಯುದ್ಧವನ್ನು ಸ್ವೀಕರಿಸುವವನಲ್ಲ. ರಾಜನನ್ನು ಬಿಟ್ಟು ಉಳಿದರಿಗೆ ಆಯಧವನ್ನು ಸೆಳೆಯುವುದಿಲ್ಲ. ರಾಜ್ಯದ ದೊರೆ ಕೌರವೇಶ್ವರನೊಡನೆ ನೇರ ಶರಾಸನ/ಯುದ್ಧ ಕೂಡದು ಗಡ! ಸೇನಾಧಿಪತಿ ನಾನು ಇದ್ದೇನೆ. ಆ ಧರ್ಮಜನಿಗೆ ಧನುವನ್ನು ಹಿಡಿದು ಯುದ್ಧಕ್ಕೆ ಬರಲು ಹೇಳು,' ಎಂದು ಆರ್ಭಟಿಸಿದನು.
ಅರ್ಥ:ಸಂಜಯ ಹೇಳಿದ,'ಶಲ್ಯನ ಪಂಥ ನಿಂತಲ್ಲಿ ನಿಲ್ಲದೆ ನಾನಾ ಕಡೆಗೆ ಹರಡಿತು. ಅಲ್ಲಿ ಸೃಂಜಯ ಮೊದಲಾದವರನ್ನೂ, ಸೋಮಕರ ಪಾಂಚಾಲರ ಸೇನೆಯನ್ನೂ ಕಾಣಲಿಲ್ಲ. ಪಕ್ಕದಲ್ಲಿ ಭೀಮಾರ್ಜುನರು ತಮ್ಮ ದೊಡ್ಡ ಬಿಲ್ಲನ್ನು ಠೇಂಕಾರ ಮಾಡಲು, ಕದನಚೌಪಟಮಲ್ಲ- ಯುದ್ಧವಿಶಾರದನಾದ ಪಾಂಡವರ ರಾಯನು ತಾನೇ ಶಲ್ಯನಿಗೆ ಇದಿರಾಗಿ ನಿಂತನು .
ಅರ್ಥ:ಧರ್ಮಜನು ಯುದ್ಧಕ್ಕೆ ಸನ್ನದ್ಧನಾಗಿ ಬಂದಾಗ, ಹೊಗಳುಭಟರು ಧರ್ಮಜನಿಗೆ,'ಜೀಯ, ನೀನು, ಬುಧನ ಪುರೂರವನ ಸುತನಾದ ಆಯುವಿನ, ನಹುಷನ, ಯಯಾತಿಯ ಈ ಮಹಾವೀರರ ದಾಯಾದಿಯಾಗಿ ಅವರ ವಂಶದಲ್ಲಿ ರಾಜ/ಭೋಗನಿಧಿಯಾಗಿ ಅವತರಿಸಿ ಈ ಭೂಮಿಗೆ ಬಂದವನು.ಜೂಜಿನಲ್ಲಿ ಸೋತವನು ಎನಿಸಿದೆ, ಈಗ ಅಜೇಯನಾದ ಕೌರವನು ನಿನ್ನಿಂದ ಯುದ್ಧದಲ್ಲಿ ಜಯಿಸಲ್ಪಟ್ಟವನು(ಸೋತವನು) ಆಗುವನು ಎಂಬುದನ್ನು ಈ ನಿನ್ನ ಸಾಮರ್ಥ್ಯದಿಂದ ಸಂಭವಿಸುವಂತೆ ಮಾಡು' ಎಂದು ಹೊಗಳಿದರು.
ಪದವಿಭಾಗ-ಅರ್ಥ:,'ಮಾವನವರೇ ನಿಮ್ಮ ಹಿಂಸೆಗೆ ನಾವು ಕಡುಗೆವು(ಕಡುಗು= ಬಯಕೆ, ಬಯಸೆವು) ಕ್ಷತ್ರಜಾತಿಯ ಜೀವನವಲೇ ಕಷ್ಟವು+ ಇದು ಕಾರ್ಪಣ್ಯತರವಾಗಿ(ಸಂಕೋಚ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ) ನೀವು ಸೈರಿಸಬೇಕು ನಮ್ಮ ಶರಾವಳಿಯನು+ ಎನುತ+ ಅವನಿಪತಿ ಬಾಣಾ++ ಆವಳಿಯ(ಸಮೂಹ) ಕೆದರಿದನು ಸೇನಾಪತಿಯ ಸಮ್ಮುಖಕೆ.
ಅರ್ಥ: ಧರ್ಮಜನು ಶಲ್ಯನನ್ನು ಕುರಿತು,'ಮಾವನವರೇ ನಿಮ್ಮನ್ನು ಹಿಂಸೆಮಾಡಲು ನಾವು ಬಯಸುವುದಿಲ್ಲ. ಆದರೆ ನಮ್ಮ ಕ್ಷತ್ರಜಾತಿಯ ಜೀವನವ ಧರ್ಮವಲ್ಲವೇ; ನಿಮ್ಮನ್ನು ಹೊಡೆಯುವುದು ನಮಗೆ ಕಷ್ಟ. ಕಾರ್ಪಣ್ಯತರವಾಗಿ ಬೇಸರ ಮಾಡಿಕೊಳ್ಳದೆ ನೀವು ನಮ್ಮ ಶರಗಳ ಸಮೂಹದ ಹೊಡೆತವನ್ನು ಸೈರಿಸಬೇಕು,' ಎನ್ನುತ್ತಾ ರಾಜ ಧರ್ಮಜನು ಬಾಣಗಳನ್ನು ಸೇನಾಪತಿ ಶಲ್ಯನ ಸಮ್ಮುಖಕ್ಕೆ ಚದುರಿಸಿ ಹಾಕಿದನು.
ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಶಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ |
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ || ೩೩ ||
ಪದವಿಭಾಗ-ಅರ್ಥ:ನಿನಗೆ ಮಾತುಳರು+ ಆವು(ನಾವು- ದೊಡ್ಡವರು ತಮಗೆ ಬಹುವಚನ ಉಪಯೋಗಿಸಿ ಕೊಳ್ಳುವರು.) ಮಾಣಲಿ(ಹೋಗಲಿ ಬೇಡ) ಮುನಿಯೆ(ನೀನು ಸಿಟ್ಟಾದರೆ)+ ಎಮಗೆ ಮೊರೆಯಲ್ಲ(ದೊರೆ= ಸಮಾನ), ದುಶ್ಶಾಸನ ಜಯದ್ರಥರು+ ಅಲ್ಲಲಾ ಸಂಬಂಧಿಗಳು, ನಿನಗೆ ಜನಪ(ರಾಜ) ಧರ್ಮದ ಹಿಂಸೆ ಬಂದುದು ನಿನಗೆ, ಸಾಕು+ ಅದನು+ ಆಡಲೇತಕೆ ಮನದ ಗರ್ವದ ಗಾಢವು+ ಐಸೆ(ಇದೆ ನಿಜ)+ ಎನುತ+ ಎಚ್ಚನು+ ಆ ಶಲ್ಯ.
ಅರ್ಥ:ಅದಕ್ಕೆ ಶಲ್ಯನು ಧರ್ಮಜನನ್ನು ಕುರಿತು,'ನಿನಗೆ ನಾವು ಸೋದರಮಾವಂದಿರು. ಅದು ಹೋಗಲಿ ಬೇಡ, ನೀನು ಸಿಟ್ಟಿನಿಂದ ಯುದ್ಧ ಮಾಡುವುದಾದರೆ ನೀನು ನಮಗೆ ಸರಸಾಟಿಯಲ್ಲ. ನಿನಗೆ ದುಶ್ಶಾಸನ, ಜಯದ್ರಥರು ಸಂಬಂಧಿಗಳಾಗಿರಲಿಲ್ಲವೇ? ಅವರನ್ನು ಕೊಂದೆಯಲ್ಲಾ. ರಾಜನೇ ನಿನಗೆ ಧರ್ಮದಂತೆ, ಹಿಂಸೆಯ ದೋಷ ಬಂದಿರುವುದು. ಸಾಕು ಅದನ್ನು ಸುಮ್ಮನೆ ಮಾತಾಡುವುದು ಏತಕ್ಕೆ? ನಿನ್ನ ಮನದಲ್ಲಿ ಗರ್ವದ ಗಾಢವು, ದಟ್ಟವಾಗಿ ತುಂಬಿದೆ ಎನ್ನುತ್ತಾ ಆ ಶಲ್ಯನು ಧರ್ಮಜನಿಗೆ ಬಾಣಗಳಿಂದ ಹೊಡೆದನು.
ಅರ್ಥ: ಧೃತರಾಷ್ಟ್ರ ಅರಸನೇ ಕೇಳು, ಶಲ್ಯನ ಮತ್ತು ಯುಧಿಷ್ಠಿರ ಅರಸನ ಯುದ್ಧವು ಅಂದಿನ- ಹಿಂದೆ ಆದ ಭೀಷ್ಮನ, ದ್ರೋಣನ, ಕರ್ಣನ, ಅರನ ಭೂರಿಶ್ರವನ, ಭೀಮನ ಮತ್ತು ಕುರುಪತಿ ಕೌರವನ ವೃಷಸೇನ ಮತ್ತು ಸುಭದ್ರೆಯ ಮಗ ಅಭಿಮನ್ಯವಿನ, ಸಮಗ್ರ- ಈ ಎಲ್ಲಾ ಯುದ್ಧಗಳನ್ನೂ ಮರಸಿತು. (ಆ ಎಲ್ಲಾ ಯುದ್ಧಕ್ಕಿಂತ ಮಿಗಲಾಗಿತ್ತು.) ಏನನ್ನು ಹೇಳಲಿ ಎಂದನು, ಸಂಜಯ.
ಅರ್ಥ:ಶಲ್ಯನು ಧರ್ಮಜನನ್ನು ಕುರಿತು,'ನೀನು ದಿಟ್ಟನೇಸರಿ- ಧೈರ್ಯಶಾಲಿ, ರಾಜರುಗಳಲ್ಲಿ ಜಗಜಟ್ಟಿಯೇ ಅಹುದು; ನಿನಗೆ ಅಸ್ತ್ರವಿದ್ಯವನ್ನು ಕಲಿಸಿ ಕೊಟ್ಟವನನ್ನು ನಾನು ಬಲ್ಲೆನು. ಅದನ್ನು ಇನ್ನು ಹೇಳಿ ಫಲವೇನು? ನೀನು ದ್ರೋಣನ ಶಿಷ್ಯ ಎಂಬ ಸೊಕ್ಕು- ಸೋಗನ್ನು ಬಿಟ್ಟು ನಮಗೆ ನಿನ್ನ ಒಡಹುಟ್ಟಿದ ಭೀಮ ಅರ್ಜುನ ಈ ಇಬ್ಬರನ್ನು ಎದುರಿಗೆ ತಂದು ಒಡ್ಡುವುದು, ನಿನ್ನಿಂದ ನನ್ನನ್ನು ಎದುರಿಸಲು ಆಗದು,' ಎನ್ನುತ್ತಾ ತೆಗೆದು ಬಾಣದಿಂದ ಧರ್ಮಜನನ್ನು ಹೊಡೆದನು.
ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು |
ನೀವು ತೋರಿರೆ ಸಾಕು ಸಾಮ
ರ್ಥ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ || ೩೬ ||
ಪದವಿಭಾಗ-ಅರ್ಥ: ಮಾವ ಭೀಮಾರ್ಜುನರ ಭಾರಣೆಗೆ+ ಆವ(ಗೌರವ, ಮಹಿಮೆಗೆ ಯಾವನು) ನಿಲುವನು ಸಾಕು+ ಅದಂತಿರಲ+ ಈ ವಿಚಿತ್ರ ಕಳಂಬ(ಬಾಣ) ಖಂಡನ ಪಂಡಿತತ್ವವನು ನೀವು ತೋರಿರೆ ಸಾಕು ಸಾಮರ್ಥ್ಯ+ ಅವಲಂಬನವುಳ್ಳಡೆ+ ಈ ಶಸ್ತ್ರ+ ಆವಳಿಯ ಸೈರಿಸಿ+ಯೆ+ ಎನುತ ಯಮಸೂನು ತೆಗೆದೆಉ+ ಎಚ್ಚ.
ಅರ್ಥ:ಧರ್ಮಜನು,'ಮಾವ ಭೀಮಾರ್ಜುನರ ಮಹಿಮೆ- ಪರಾಕ್ರಮಕ್ಕೆ ಯಾವನು ನಿಲ್ಲುವನು, ನಿಮಗೆ ಅವರನ್ನು ಎದುರಿಸಲು ಆಗದು. ಸಾಕು ಅದು ಹಾಗಿರಲಿ; ಈ ವಿಚಿತ್ರ ಬಾಣವನ್ನು ಖಂಡಿಸಿ ಪಂಡಿತತ್ವವನ್ನು ನೀವು ತೋರಿಸಿರೆ, ಸಾಕು. ನಿಮಗೆ ಸಾಮರ್ಥ್ಯ ಅವಲಂಬನವಿದ್ದರೆ ಈ ಶಸ್ತ್ರಗಳ ಸಮೂಹವನ್ನು ಸೈರಿಸಿಕೊಳ್ಳಿ,' ಎನ್ನುತ್ತಾ ಯಮಸೂನು ಬಾಣಗಳಿಂದ ತೆಗೆದು ಹೊಡೆದನು.
ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ |
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ || ೩೭ ||
ಪದವಿಭಾಗ-ಅರ್ಥ:ಧರಣಿಪತಿಯ+ ಅಂಬುಗಳನು+ ಎಡೆಯಲಿ ತರಿದು ತುಳುಕಿದನು+ ಅಂಬಿನ+ ಉಬ್ಬಿನ ಗರಿಯ(ಬಾಣದ ಬುಡದಲ್ಲಿ ಕಟ್ಟಿದ ಗರಿಗಳು), ಗಾಳಿಯ ದಾಳಿ ಪೈಸರಿಸಿದುದು(ಹಿಮ್ಮೆಟ್ಟು, ಹಿಂಜರಿ) ಪರ್ವತವ ಮೊರೆವ ಕಣೆ ಮಾರ್ಗಣೆಗಳನು ಕತ್ತರಿಸಿದವು ಬಳಿಯ+ ಆಂಬುಗಳು ಪಡಿಸರಳ(ಆಕ್ರಮಿಸಿದ ಸರಳು- ಬಾಣ) ತೂಳಿದಡೆ(ತೂಳು- ಬೆನ್ನಟ್ಟು, ಹಿಂಬಾಲಿಸು )+ ಎಚ್ಚರು+ ಎಚ್ಚರು ಮೆಚ್ಚಲು+ ಉಭಯ ಬಲ(ಸೇನೆ).
ಅರ್ಥ:ಧರಣಿಪತಿ ಧರ್ಮಜನ ಬಾಣಗಳನ್ನು ಮಧ್ಯದಲ್ಲಿ ಕತ್ತರಿಸಿ, ಶಲ್ಯನು ಉಬ್ಬಿದ ಗರಿಯ ಬಾಣಗಳನ್ನು ತುಳುಕಿದನು- ತುಂಬಿದನು.ಪರ್ವತವ ಗಾಳಿಯ ದಾಳಿಯನ್ನು ಹಿಮ್ಮಟ್ಟಿಸಿ ವಾಯುವೇಗಕ್ಕೂ ಹೆಚ್ಚಿನ ವೇಗದಲ್ಲಿ ಹೋದವು. ಮೊರೆವ-ಸುಯ್ಯೆಂದು ಸದ್ದು ಮಾಡುವ ಬಾಣಗಳು, ಅದಕ್ಕೆ ಬಂದ ಪ್ರತಿ ಮಾರ್ಗಣೆಗಳನ್ನು ಕತ್ತರಿಸಿದವು. ಬಳಿಯ ಆಂಬುಗಳು ಆಕ್ರಮಿಸಿದ ಬಾಣಗಳನ್ನು ಬೆನ್ನಟ್ಟಿದರೆ, ಎಚ್ಚರ, ಎಚ್ಚರ, ಎಂದು ಎರಡು ಸೇನೆಯ ಭಟರು ಮೆಚ್ಚಿ ಕೂಗುತ್ತಿದ್ದರು.
ಅರ್ಥ:ಮಹೀರಮಣ ಧರ್ಮಜನು ಸಾಧ್ಯವಾದರೆ ಸಹಿಸಿಕೊ ಯೆನ್ನುತ್ತಾ ಸಿಟ್ಟಿನಿಂದ ಮದ್ರಾಧಿಪ ಶಲ್ಯನನ್ನು ಹೊಡೆದು ಆರ್ಭಟಿಸಿದನು. ಮತ್ತೆ ಮತ್ತೆ ಹೊಡೆದು ಹೊಡೆದು, ಅದರಮೇಲೆ ಪುನಃ ಹೊಡೆಯಲು ಬಾಣದ ಕೂರಲಗು ಶಲ್ಯನ ಸೀಸಕ- ಕವಚವನ್ನು ತೂತುಮಾಡಿ ಹೋರುಗಳೆದವು. ಆಗ ಅದರಿಂದ ದಳಪತಿ ಶಲ್ಯನ ಪರಭಾಗದಲ್ಲಿ ನೆತ್ತರಿನ/ ರಕ್ತದ ಬಾಯ್ಧಾರೆಗಳು ಕಂಡವು.
ಅರ್ಥ:ಶಲ್ಯನು ಮೈಮರವೆಯಿಂದ ಎಚ್ಚತ್ತು ಸುಧಾರಿಸಿಕೊಂಡು, ಬಿಲ್ಲನ್ನೂ ಬಾಣಗಳನ್ನೂ ಸೆಳೆದು ತೆಗೆದುಕೊಂಡನು. ಅಕಟ! ಧರ್ಮಸುತನು ತನ್ನನ್ನು ಸೋಲಿಸಿ ಅಪಮಾನಿಸಿದನಲ್ಲಾ. ತನಗೆ ಉತ್ಕಟತೆಯ ಮೈಮರೆವು ಒಂದು ಮುಹೂರ್ತವಾಯಿತೆ? ಶತ್ರುವಿಗೆ ಸುಮ್ಮಾನವಾಯಿತೇ? ಯುದ್ಧಕ್ಕೆ ತೊಡಗಿದ ಸಂದರ್ಭದಲ್ಲಿ ಜಯಾಪಜಯಗಳು ಸಂಭವಿಸುವುವು; ಅದರಲ್ಲಿ ತಪ್ಪೇನು? ಸಹಜ, ಎಂದು ತನಗೇ ತಾನೇ ಸಮಾಧಾನ ಮಾಡಿಕೊಂಡು, ಶಲ್ಯನು,'ಯಮಸುತ ಧರ್ಮಜನೇ ಹಿಡಿ ಧನುಸ್ಸನ್ನು, ಅನುವಾಗು+ ಎನ್ನುತ್ತಾ ಧರ್ಮಜನನ್ನು ಮೂದಲಿಸಿದನು.
ಟಿಪ್ಪಣಿ:(ಧರ್ಮಯುದ್ಧದಲ್ಲಿ, ಶಸ್ತ್ರ ಹಿಡಿಯದೆ ಇರುವವರನ್ನು ಹೊಡೆಯುವುದಿಲ್ಲ. ಮೈಮರೆತವರನ್ನು, ಬಿದ್ದವರನ್ನು, ಶರಣಾಗತರಾದವರನ್ನು ಹೊಡೆಯುವುದಿಲ್ಲ. ಇದು ಒಪ್ಪಂದ).
ಅರ್ಥ:ಶಲ್ಯನು ವೀರಾವೇಶದಿಂದ ಧರ್ಮಜನಿಗೆ,'ಅರ್ಜುನನ ರಥವು ಅಲ್ಲಿದೆ ಅವನ ಮರೆಹೊಗು; ಕೃಷ್ಣನ ಮರೆಹೊಗು, ಇಲ್ಲವೇ ಭೀಮಸೇನನ ಕರಸಿ ಯುದ್ಧವನ್ನು ನೂಕು- ಮುಂದುವರೆಸು; ಶಿಖಂಡಿ, ಸಾತ್ಯಕಿ, ಸೃಂಜಯಾದಿ ಅರಸುಗಳಿಂದ ಗುರಿ ಹೊಡೆಸು; ಇಲ್ಲವೇ ಈಗ ನೀನು ಗೆಲುವನ್ನು ಪಡೆದೆ ಎಂದು ಗರ್ಪಡುವವನಾದರೆ ನನ್ನೊಡನೆ ಯುದ್ಧಕ್ಕೆ ನಿಲ್ಲು ಎನ್ನುತ್ತಾ ಉತ್ಸಾಹಿಸಿ ಮಾದ್ರಾಧೀಶ ಶಲ್ಯನು ಧರ್ಮನಂದನನನ್ನು ಬಾಣಗಳಿಂದ ಹೊಡೆದನು.
ಏನ ಹೇಳುವೆ ಭಟನ(ವೀರನ) ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ |
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನ ರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ || ೪೩ ||
ಪದವಿಭಾಗ-ಅರ್ಥ:ಏನ ಹೇಳುವೆ ಭಟನ ಶರ ಸಂಧಾನವನು ಪುಂಖ+ ಅನುಪುಂಖ(ಪುಂಖ - ಬಾಣದ ಹಿಂದೆಕಟ್ಟದ ಗರಿ; ಒಂದರ ಹಿಂದೆ ಮತ್ತೊಂದು) ವಿಧಾನವನು ಝೇಂಕಾರ ಶರಜಾಳ ಪ್ರಸಾರಣವ ಆ ನಿರಂತರ ಸರಳ ಸಾರದ ಸೋನೆ ಸದೆದುದು(ಸದೆ- ಹೊಡೆ) ಧರ್ಮಸುತನ ರಣಾನುರಾಗವ(ಯುದ್ಧದ ಬಯಕೆ) ತೊಳೆದುದದ್ಭುತವಾಯ್ತು ನಿಮಿಷದಲಿ
ಅರ್ಥ: ಸಂಜಯನು,'ವೀರನಾದ ಶಲ್ಯನ ಶರ ಸಂಧಾನವನ್ನು ಏನೆಂದು ವರ್ಣಿಸಲಿ; ಅದು ಅದ್ಭುತವಾದುದು, ಪುಂಖಾನುಪುಂಖ ವಿಧಾನವನು- ಒಂದರ ಹಿಂದೆ ಮತ್ತೊಂದು ಬಾಣದಂತೆ ತೆರವಿಲ್ಲದೆ ಬಿಡುವನು. ಅವು ಝೇಂಕಾರಮಾಡುತ್ತಾ ಶರಜಾಲವು ಪ್ರಸಾರವಾಗುತ್ತಿದ್ದವು. ಆ ನಿರಂತರ ಸರಳ ಸಾರದ ಸೋನೆ-ಮಳೆ ಧರ್ಮಜನ ಯುದ್ಧದ ಬಯಕೆಯನ್ನು ನಿಮಿಷದಲ್ಲಿ ಸದೆದುದಲ್ಲದೆ ತೊಳೆದುಹಾಕಿ ಅದ್ಭುತವಾಯ್ತು.
ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ |
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ || ೪೪ ||
ಪದವಿಭಾಗ-ಅರ್ಥ: ಸರಳ ಮುರಿಯೆ+ ಎಸಲು(ಎಸಲು- ಬಾಣ ಹೊಡೆಯಲು)+ ಆ ಸರಳ ಕತ್ತರಿಸಿ ಹತ್ತು+ ಅಂಬಿನಲಿ ರಾಯನ ಬರಿಯ ಕವಚವ ಹರಿಯಲು+ ಎಚ್ಚನು ಮೂರು ಬಾಣದಲಿ, ಶಿರದ ಸೀಸಕವನು ನಿಘಾತದಲಿ+ ಎರಡು ಶರದಲಿ ಮತ್ತೆ ಭೂಪತಿಯ+ ಉರವನು+ ಅಗುಳಿದನು+ ಎಂಟರಲಿ ಮಗುಳೆ(ಮತ್ತೆ)+ ಎಚ್ಚು ಬೊಬ್ಬಿರಿದ.
ಅರ್ಥ:ಶಲ್ಯನು,ತಾನು ಬಿಟ್ಟ ಬಾಣವನ್ನು ಧರ್ಮಜನು ಮುರಿದು ಬಾಣ ಹೊಡೆಯಲು, ಆ ಸರಳನ್ನು ಶಲ್ಯನು ಕತ್ತರಿಸಿ, ಹತ್ತು ಅಂಬಗಳಿಂದ ಧರ್ಮರಾಯನ ಬರಿಯ ಕವಚವು ಹರಿಯುವಂತೆ ಮೂರು ಬಾಣಗಳಿಂದಹೊಡೆದನು; ಎರಡು ಶರಗಳಿಂದ ಧರ್ಮಜನ ತಲೆಯ ರಕ್ಷಕ ಸೀಸಕವನ್ನು ಹೊಡೆದು, ಮತ್ತೆ ಭೂಪತಿ ಧರ್ಮಜನ ಎದೆಯನ್ನು ಎಂಟು ಬಾಣಗಳಿಂದ ನಾಟುವಂತೆ ಮತ್ತೆ ಹೊಡೆದು ಬೊಬ್ಬಿರಿದನು.
ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ರ್ಜ್ಜರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ (೪೫
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ ೪೫
ಪದವಿಭಾಗ-ಅರ್ಥ: ಗರುಡತುಂಡದ ಹತಿಗೆ(ಹೊಡೆತಕ್ಕೆ) ಫಣಿಯ+ ಎದೆ ಬಿರಿವವೊಲು ಯಮಸುತನ ತನು(ದೇಹ) ಜರ್ಜ್ಜರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ(ರಕ್ತ) ಮುರಿದ ಕಂಗಳ ಮಲಗಿನಲಿ ಪೈಸರದ(ವಿಸ್ತಾರ, ವ್ಯಾಪ್ತಿ, ಹರಹು) ಗಾತ್ರದ ಗಾಢ (ತೀವ್ರವಾದ)ವೇದನೆಯು+ ಉರವಣಿಸೆ(ತೀವ್ರವಾಗಲು) ಸೊಂಪು(ಎಚ್ಚರ ಸಂತಸ)+ ಅಡಗಿ ನಿಮಿಷ ಮಹೀಶ ಮೈಮರೆದ.
ಅರ್ಥ: ಗರುಡ ಪಕ್ಷಿಗಳ ತುಂಡದ ಹೊಡೆತಕ್ಕೆ ಸರ್ಪದ ಎದೆ ಬಿರಿಯುವಂತೆ ಧರ್ಮಜನ ದೇಹ ಜರ್ಜ್ಜರಿತವಾಯಿತು. ಜೋಡಿಸಿದ ಕವಚದ ಜರುಗಿ ರಕ್ತವು ಜಿಗಿಯಲು- ಹೊರಹೊಮ್ಮಲು, ಮುರಿದ- ಅರ್ಧಮುಚ್ಚಿದ ಕಣ್ಣುಗಳು ಮಲಗಿದಂತೆ ಬಾಣದ ಪೆಟ್ಟಿನ ವ್ಯಾಪ್ತಿ ಗಾತ್ರಗಳು ಧರ್ಮಜನಿಗೆ ಬಹಳ ವೇದನೆಯು ಹೆಚ್ಚಾಗಿ ಮನದಸೊಂಪು ಒಂದು ನಿಮಿಷ ಅಡಗಿತು.ಹೀಗೆ ಮಹೀಶ ಧರ್ಮಜನು ಶಲ್ಯನ ಬಾಣದ ಪೆಟ್ಟಿನಿಂದ ಮೈಮರೆತನು.
ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರವ |
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ || ೪೬ ||
ಪದವಿಭಾಗ-ಅರ್ಥ: ಬಿದ್ದನು+ ಆಚೆಯ ದೊರೆ, ಸುಯೋಧನ ಗೆದ್ದನು+ ಇನ್ನೇನು+ ಎನುತ ಸುಭಟರನು+ ಅದ್ದಿತು+ ಅತಿ ಸುಮ್ಮಾನಸಾಗರ ನಿನ್ನ ಮೋಹರವ, ಅದ್ದರೋ ಶೋಕಾಂಬುಧಿಯಲಿ+ ಒಡೆಬಿದ್ದರೋ ಭೀಮಾರ್ಜುನರಿಗೆ+ ಉಸುರಿದ್ದುದೋ ಬರಹೇಳು+ ಎನುತ ಬೊಬ್ಬಿರಿದನು+ ಆ ಶಲ್ಯ.
ಅರ್ಥ:'ಆಚೆಯ ಶತ್ರುಗಳ ದೊರೆ ಬಿದ್ದನು/ ಇಲ್ಲವಾದನು, ಸುಯೋಧನನು ಗೆದ್ದನು, ಇನ್ನೇನು ಯುದ್ಧ ಉಳಿಯಿತು, ಎನ್ನುತ್ತಾ ನಿನ್ನ ಕೌರವನ ಸುಭಟಸೇನೆ ಅತಿ ಸುಮ್ಮಾನಸಾಗರದಲ್ಲಿ- ಸಂತೊಷದ ಸಮುದ್ರದಲ್ಲಿ ಮುಳುಗಿತು. ಶತ್ರುಗಳು ಶೋಕಸಾಗರದಲ್ಲಿ ಮುಳುಗಿದರೋ, ಆ ಶಲ್ಯನು ಆಗ. ಒಡೆದು ಸೋತುಬಿದ್ದರೋ, ಧರ್ಮಜನಿಗೆ ಉಸುರು ಇದೆಯೋ- ಇಲ್ಲವೋ, ಭೀಮಾರ್ಜುನರಿಗೆ ಬರಹೇಳು ಎನ್ನುತ್ತಾ ಬೊಬ್ಬಿರಿದನು- ಆರ್ಭಟಿಸಿದನು.
ಅರ್ಥ:ಧರ್ಮಜನು ಆ ಕ್ಷಣದಲ್ಲಿ ಮರಳಿ ಎಚ್ಚತ್ತನು. ಅಸ್ತ್ರದಿಂದ ಆದ ವ್ರಣ-ಘಾಯವನ್ನು ಸೇವಕರು ತೊಳೆದರು; ಘಾಯದಲ್ಲಿ ದಿವ್ಯೌಷಧಿಯ ಗಂಧವನ್ನು ಅನುಲೇಪಿದಸಿದರು, ರಣವಿಜಯಕ್ಕಾಗಿ ಧರ್ಮಜನು ಹೊಸ ವಸ್ತ್ರಗಳನ್ನೂ, ಮಣಿಭೂಷಣಗಳನ್ನೂ ಪರಿಷ್ಕೃತನಾಗಿ- ಧರಿಸಿ ಬಿಲ್ಲಿನ ತುದಿಯ ದಾರ ಕಟ್ಟುವ ತಿರುವಿನ ಗೊಣೆಯದ ನಾಣನ್ನು ಸರಿಪಡಿಸಿ ನೇವರಿಸಿದನು.
ಅರ್ಥ:ಶಲ್ಯನು ಧರ್ಮಜನು ಎಚ್ಚರಾದುದನ್ನು ನೋಡಿ,'ರಾಜಾ,ನನ್ನಬಾನದ ಹೊಡೆತಕ್ಕ ನಿನ್ನ ಸ್ಮೃತಿ ಮಂಕಾಯಿತೆ?, ರಾಜನೇ ಕಣ್ಣು ತೆರೆದಿರೇ? ಭೀಮ, ಅರ್ಜುನರು ನಿಮ್ಮ ಕಷ್ಟಕ್ಕೆ -ನೋವಿಗೆ ಒದಗಿದೆ ಹೋದರಲ್ಲಾ! ನೀವೇಕೆ? ನಿಮಗೆ ಯುದ್ಧವೇಕೆ? ಶಲ್ಯನು, ಅದಕ್ಕೂ ಮಿಗಿಲಾಗಿ 'ಧನುರ್ವೇದಾರ್ಥ ಸಾರವನ್ನು ತಿಳಿದಿರುವೆಯಾದರೆ ತೆಗೆದುಕೊಳ್ಳು,' ಎನ್ನತ್ತಾ ಬಿಡದೆ ಎಂಟು ಅಂಬಿಗಳಿಂದ ಧ್ವಜ ರಥ ಕುದುರೆಗಳನ್ನು ತರಿದನು.
ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ |
ಮನನ ಶಾಸ್ತ್ರ ಶ್ರವಣ ನಿಮಯಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ || ೫೦ ||
ಪದವಿಭಾಗ-ಅರ್ಥ:ಧನುವನು+ ಎರಡು+ ಅಂಬಿನಲಿ ಮಗುಳೆ+ ಎಚ್ಚನು ಮಹೀಶನ ಸಾರಥಿಯ ಮೈನನೆಯೆ ನವ ರುಧಿರದಲಿ, ಮರಳೆ+ ಎಚ್ಚನು ಯುಧಿಷ್ಠಿರನ, ಮನನ ಶಾಸ್ತ್ರ ಶ್ರವಣ ನಿಮಯ+ ಆಸನ ಸಮಾಧಿ ಧ್ಯಾನ ವಿದ್ಯಾವಿನಯವು+ ಅಲ್ಲದೆ ರಣದ ಜಂಜಡವು+ ಏಕೆ ನಿಮಗೆ+ ಎಂದ.
ಅರ್ಥ:ಶಲ್ಯನು ಅಷ್ಟಕ್ಕೆ ನಿಲ್ಲದೆ ಧರ್ಮಜನ ಧನಸ್ಸನ್ನು ಎರಡು ಬಾಣಗಳಿಂದ ಮತ್ತೆ ಹೊಡೆದನು. ನಂತರ ಯುಧಿಷ್ಠಿರನ ಸಾರಥಿಯನ್ನು ರಕ್ತದಲ್ಲಿ ಮೈ ನೆನೆಯವಂತೆ ಹೊಡೆದನು. ಶಲ್ಯನು ಧರ್ಮಜನನ್ನು ಕುರಿತು,ನೀನು ಯೋಗದ ಮನನ, ಶಾಸ್ತ್ರ ಶ್ರವಣ, ನಿಮಯ, ಆಸನ, ಸಮಾಧಿ, ಧ್ಯಾನ, ವಿದ್ಯೆ, ವಿನಯ ಇವುಗಳು ಅಲ್ಲದೆ ರಣರಂದಲ್ಲಿ ಯುದ್ಧದ ಜಂಜಡದ ಕಷ್ಟ ನಿಮಗೆ ಏಕೆ ಬೇಕು?,'ಎಂದ.
ಅರ್ಥ:ಶಲ್ಯನ ಬಾಣದ ಹೊಡೆತಕ್ಕೆ ಬಿಲ್ಲು ಮುರಿದು ಬಿದ್ದಿತು. ಸಾರಥಿಯು ಗಾಯಗೊಂಡನು; ರಥವು ನುಗ್ಗುನುಸಿಯಾಗಿ ಪುಡಿಪುಡಿಯಾಯಿತು. ಉತ್ತಮಜೋಡು ಕುದುರೆಗಳು ತಡಿ ಸಹಿತ ಮಾಂಸದ ಮುದ್ದೆಯಾದವು. ಪಾಂಡವ-ಶತ್ರುಬಲವು ಹೆದರಿ ನಡುಗಿತು. ಅವನಿಪತಿ ಧರ್ಮಜನು ರಥವನ್ನು ಬಿಟ್ಟು ಕಾಲು ನಡಿಗೆಯಿಂದ ಬಂದನು. ಅವನು ಮತ್ತೆ ರಥವನ್ನು ಅದರ ಅಂಗಗಳನ್ನು ಜೋಡಿಸಿಕೊಂಡನು. ನಂತರ ಗಾಬರಿ ಇಲ್ಲದೆ ನಗುತ್ತಾ ಹೊಸ ಮಣಿರಥವನ್ನು ಅಡರಿದನು- ಏರಿದನು.
ಅರ್ಥ:ಧರ್ಮಜನು ಚೇತನಗೊಂಡುದನ್ನು ನೋಡಿ ಅವನ ಆ ಸೇನೆ ಬೊಬ್ಬಿರಿದು ಆರ್ಭಟಿಸಿತು. ಧರ್ಮರಾಯನ ಪಾಯದಳ ವ್ಯವಸ್ಥಿತವಾಗಿ ಜೋಡಿಸಿಕೊಂಡು ಯುದ್ಧಕ್ಕೆ ನಿಂತಿತು. ಸೋಲಿನ ಮಬ್ಬು ಹರಿದುಹೋಯಿತು. ನರನಾಥ ಧರ್ಜನು ಜಯದ ಯಶಸ್ಸನ್ನು ಏರಿದನು, ಉತ್ಸಾಹಗೊಂಡನು. ಸಚ್ಚಾರಿತ್ರ್ಯದ ಕ್ಷತ್ರತೇಜದ ಒಳಗಿನ ಕಾಂತಿ ಗಾಡಿಸಿತು- ಮುಖದಲ್ಲಿ ತುಂಬಿತು. ಅವನು ಮೇಲೆ ಎತ್ತಿದ ಅಸ್ರವನ್ನು - ಬಿಲ್ಲನ್ನು ಮಿಡಿದನು- ನಾಣನ್ನು ಠೇಂಕಾರ ಮಾಡಿದನು. ನಂತರ ಬಿಲ್ಲನ್ನು ತೂಗಿ ಬಾಣಗಳ ಸಮುದ್ರವನ್ನೇ ಶಲ್ಯನಮೇಲೆ ತುಳುಕಿದನು- ಸುರಿಸಿದನು.
ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ ೫೩
ಪದವಿಭಾಗ-ಅರ್ಥ:ಕಾದುಕೊಳು ಮಾದ್ರೇಶ ಕುರುಬಲವ+ ಐದಿಬರಲಿ(ಐದಿ = ಬಂದು, ಬಂದೇ ಬರಲಿ?)+ ಇಂದಿನಲಿ ನಿನ್ನಯ ಮೈದುನನ ಕಾಣಿಕೆಯಲೇ ಸಂಘಟನೆಗೆ+ ಈ ಸರಳು ಕೈದುಕಾತಿಯರುಂಟೆ ಕರೆ ನೀನು+ ಐದಲು+ ಆರೆಯೆ(ಎದುರಿಸು)+ ಎನುತ್ತ ಮೂನೂರೈದು ಶರದಲಿ ಕಡಿದನು+ ಆ ಸಾರಥಿಯ ರಥ ಹಯವ.
ಅರ್ಥ:ಹೀಗೆ ಯುದ್ಧಕ್ಕೆ ಸಿದ್ಧನಾದ ಧರ್ಮಜನು ಶಲ್ಯನಿಗೆ,'ಮಾದ್ರೇಶ, ನಿನ್ನನ್ನು ನೀನು ಕಾದುಕೊ- ಕಾಪಾಡಿಕೋ; ಕುರುಸೇನೆಯೇ ಒಟ್ಟಾಗಿ ಬರಲಿ. ಇಂದು ನಿನ್ನ ಮೈದುನ ಪಾಂಡುವಿನ ಕಾಣಿಕೆಯು; ಸಂಘಟನೆಗೆ ಈ ಬಾಣ ಕೈದುಕಾತಿಯರು- ಯುದ್ಧವಿಶಾರದರು ಇದ್ದಾರೆಯೇ?- ನೀನು ಅವರನ್ನು ಬರಲು ಕರೆ; ಎದುರಿಸು ಎನ್ನುತ್ತಾ ಮುನ್ನೂರಾ ಐದು ಬಾಣಗಳಿಂದ ಅವನ ಆ ಸಾರಥಿಯನ್ನೂ ರಥವನ್ನೂ ಕುದುರೆಯನ್ನೂ ಕಡಿದನು.
ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರು ಬೊಬ್ಬಿರಿದರಸವೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ ೫೪
ಪದವಿಭಾಗ-ಅರ್ಥ:ತೇರು ಹುಡಿಹುಡಿಯಾಯ್ತು ಹೂಡಿದ ವಾರುವಂಗಳು(ಕುದುರೆಗಳು)+ ಅಲ್ಲಿ ಕಾಣೆನು ಸಾರಥಿಯ ತಲೆ ನೆಲದೊಳು+ ಅದ್ದುದು ಮಿದುಳ ಜೊಂಡಿನಲಿ, ಆರು(ಕೂಗಿ) ಬೊಬ್ಬಿರಿದು+ ಅರಸ+ ವೆ+ ಎಸಲು(ಹೊಡೆಯಲು)+ ಉಬ್ಬಾರದಲಿ(ಉಬ್ಬರ- ಅತಿಶಯ, ಉದ್ವೇಗ) ಕಣೆಯು+ ಅಡಸಿದವು(ತಾಗಿದವು, ಹೊಕ್ಕವು) ಕೈವಾರವು(ಹೊಗಳಿಕೆ ೨ ಸಾಮರ್ಥ್ಯ, ಬಾಹುಬಲ )+ ಏಕೆ ಛಡಾಳಿಸಿತು(ಪ್ರಜ್ವಲಿಸು) ಚಪಳತೆ ಯುಧಿಷ್ಠಿರನ.
ಅರ್ಥ:ಸಂಜಯ ಹೇಳಿದ,'ಧರ್ಮಜನ ಹೊಡೆತಕ್ಕೆ ಶಲ್ಯನ ರಥ ಹುಡಿಹುಡಿಯಾಯ್ತು; ಅವನ ರಥಕ್ಕೆ ಹೂಡಿದ ಕುದುರೆಗಳನ್ನು ನಾನು ಅಲ್ಲಿ ಕಾಣಲಿಲ್ಲ (ಸತ್ತು ಬಿದ್ದಿದ್ದವು). ಸಾರಥಿಯ ತಲೆ ನೆಲದಲ್ಲಿ ಮಿದುಳ ಜೊಂಡಿನಲಿ ಅದ್ದಿ ಬಿದ್ದಿತ್ತು. ಅರಸ ಧರ್ಮಜನು ಕೂಗಿ ಬೊಬ್ಬಿರಿದು ಹೊಡೆಯಲು ಅತಿಶಯವಾಗಿ ಬಾಣಗಳು ಹೊಕ್ಕವು. ಧರ್ಮಜನ ಸಾಮರ್ಥ್ಯ, ಬಾಹುಬಲ, ಚಪಲತೆ- ಚುರಕುತನ ಅದೇಕೋ ಪ್ರಜ್ವಲಿಸಿತು,' ಎಂದನು
ಅರ್ಥ: ಅರಸನೇ ಕೇಳು.'ಮಾದ್ರೇಶ್ವರನ ರಥ ಸಾರಥಿ ನಾಶವಾಗಲು, ಬಳಿಕ ಅವನು ಕೋಪದಿಂದ ಉರಿದನು. ಅವನ ಕಣ್ಣಿನಲ್ಲಿ ಅಧಿಕವಾದ ಕ್ರೋಧದ ಬೆಂಕಿ ಉದ್ಭವಿಸಿತು; ಕುರುಸೇನೆಯ ತಲ್ಲಣ- ಕಳವಳವನ್ನು ಬಹಳಷ್ಟು ಸಂಹರಿಸಿ- ಕಡಿಮೆಮಾಡಿ, ಅವನು ಗುರಾಣಿಯನ್ನೂ ಅಡಾಯುಧವಾದ ಈಟಿಯನ್ನೂ ಹಿಡಿದು ಶತ್ರುವಾದ ಧರಣಿಪ ಯುಧಷ್ಠಿರನ ಮೇಲೆ ಹಾಯ್ದು ರಥವನ್ನೂ ಕುದುರೆಗಳನ್ನೂ ಹೊಡೆದನು.
ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೆಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ |
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕಸಾವಿರವ || ೫೬ ||
ಪದವಿಭಾಗ-ಅರ್ಥ:ವಾರುವನ(ಕುದುರೆ) ವೈಚಿತ್ರಗತಿಯ ನಿಹಾರದಲಿ ಸಾರಥಿ ನರೆಂದ್ರನ ತೇರ ತಿರುಗಿಸಿದನು; ವಿಘಾತಿಯಲಿ(ಪೆಟ್ಟು ಬೀಳದಂತೆ)+ ಒಂದು ಬಾಹೆಯಲಿ, ಆರಿ(ಶತ್ರು) ಹೊಯ್ದನು ಹಯವನು+ ಅಗ್ಗದ ವಾರಣಾವಳಿಗಳ ಪದಾತಿಯ ತೇರ ತೆಕ್ಕೆ(ಟೆಕ್ಕೆ- ಬಾವುಟ)ಯನು+ ಇಕ್ಕಿದನು(ಇಕ್ಕು - ಹೊಡೆ) ಪ್ರತ್ಯೇಕ ಸಾವಿರವ.
ಅರ್ಥ:ಶಲ್ಯನು ನೆಡೆದು ಬಂದು ಹೊಡೆಯಲು,ಸಾರಥಿಯು ಕುದುರೆಯನ್ನು ವೈಚಿತ್ರಗತಿಯ ಸಂಚಲನೆಯಲ್ಲಿ ನರೆಂದ್ರ ಧರ್ಮಜನ ರಥವನ್ನು ಪೆಟ್ಟು ಬೀಳದಂತೆ ಒಂದು ಬದಿಗೆ ತಿರುಗಿಸಿದನು; ಶತ್ರು ಶಲ್ಯನು ನಂತರ ಅಡ್ಡ ಬಂದ ಕುದುರೆಗಳನ್ನು ಹೊಡೆದನು, ಶ್ರೇಷ್ಠ ಆನೆಗಳನ್ನು, ಪ್ರತ್ಯೇಕ ಸಾವಿರವ ಪದಾತಿಗಳನ್ನು, ರಥ, ಬಾವುಟಗಳನ್ನು ಹೊಡೆದು ಕೆಡವಿದನು.
ಅರ್ಥ:ಶಲ್ಯನು ತನ್ನನ್ನು ಎದುರಿಸಿದ ಧೃಷ್ಟದ್ಯುಮ್ನನನ್ನು ಭಯಪಡುವಣತೆ ಹೊಡೆದು, ಸೋಮಕ ಸೃಂಜಯರನ್ನು ಅಪ್ಪಳಿಸಿದನು; ಸಾತ್ಯಕಿ ಯುಧಾಮನ್ಯು ಮತ್ತು ಉತ್ತಮೌಂಜಸರನ್ನು ಮುರಿದು-ಸೋಲಿಸಿ ಸೇನೆಯ ಮರೆಗೆ ಓಡಿಸಿ, ಚತುರ್ಬಲಸೇನೆಯನ್ನು ಸವರಿದನು. ನಂತರ ಶಿಖಂಡಿ ನಕುಲರನ್ನು ಬಳಲಿಸಿ ಮಹೀಪತಿ ಧರ್ಮಜನ ಎದುರು ನಿಂತು ಹೋರಾಟಕ್ಕೆ ಸಿದ್ಧನಾದನು.
ಅರ್ಥ:ಶಲ್ಯನು ರಥಸಾರಥಿಗಳನ್ನು ಕಳೆದುಕೊಂಡು,ಗುರಾಣಿ,ಖಡ್ಗ ಹಿಡಿದು ಎದುರುಬಂದವರನ್ನೆಲ್ಲಾ ಸೋಲಿಸಿ ಧರ್ಮಜನ ಎದುರು ನಿಂತು,'ಯುಧಿಷ್ಠಿರನೇ ಗುರಾಣಿ ಖಡ್ಗವ ಚಮತ್ಕಾರವನ್ನು ತಿಳಿದಿಲ್ಲವೇ?, ನಿನಗೆ ಬಿಲ್ಲುವಿದ್ಯೆಯಲ್ಲಿ ಕುಶಲನೆಂಬರು; ಎಲೈ ಧರ್ಮಜಾ, ನಮಗೆ ಕವಚ ರಥಗಳು ಇಲ್ಲ; ಪ್ರಾಣ ಉಳಿಸಿಕೊಳ್ಳಲು ಯುದ್ಧಭೂಮಿಯಿಂದ ಓಡುವುದೇ? ಇಲ್ಲ. ಯುದ್ಧಮಾಡುವುದೇ ಕ್ಷತ್ರಿಯರಿಗೆ ಧರ್ಮ; ನೀನು ಅತಿ ಸಾಹಸಿಯಾದರೆ ಯುದ್ಧಕ್ಕೆ (ಖಡ್ಗ ಹಿಡಿದು)ನಿಲ್ಲು,'ಎನ್ನತ್ತಾ ಧರ್ಮಜನನ್ನು ಶಲ್ಯನು ಮೂದಲಿಸಿದನು.
ಅರ್ಥ:ಶಲ್ಯನು ತನ್ನ ಆಯುಧವನ್ನು ಮುರಿದ ಭೀಮನನ್ನು ಕುರಿತು,'ಒಳ್ಲೆಯ ಕೆಲಸ ಮಾಡಿದೆ, ಭೀಮ. ಅವರೊಳಗೆ ನೀನು ನಿಜಕ್ಕೂ ಕಟ್ಟಾಳೇ ಸರಿ,' ಎಂದನು. ' ಧರ್ಮಪುತ್ರನ ಸತ್ವಸಂಪದಕೆ ತರುವುದು ನಿನ್ನ ಆಸೆಯಲ್ಲವೇ? ಅದು ಸರಿ. ಆದರೆ ಈ ಬಳಿಕ ಏನು? ಎನ್ನುತ್ತಾ ಶಲ್ಯಮಹೀಶನು ತನ್ನ ರಥ, ಕತ್ತಿ ಮುರಿಯಲು, ಹೊಸ ರಥವನ್ನು ಸಿದ್ಧಪಡಿಸಿ ಸಾರಥಿಯನ್ನು ಹೊಂದಿಸಿಕೊಂಡು, ಕೌರವನಿಗೆ ಅವಧಾನ- ಎಚ್ಚರ! ಜೀಯ; ಎನ್ನುತ್ತಾ ಧರ್ಮಜನನ್ನು ಯುದ್ಧಕ್ಕೆ ಸಂಧಿಸಿದನು.
ಅರ್ಥ:ಶಲ್ಯನು ರಥಕ್ಕೆ ಬಂದು ಸಾರಥಿಗೆ ಉಡುಗೊರೆ, ಸಂಭಾವನೆಗಳನ್ನು ಕೊಟ್ಟನು. ಬಿಲ್ಲು ಬಾಣಗಳನ್ನು ರಥದೊಳಗೆ ತುಂಬಿದನು. ಸುಯೋಧನನ್ನು ಕುಂತಿಯ ಮಕ್ಕಳ ರಣ ಪರಾಕ್ರಮವು ವೃಥಾ- ಪ್ರಯೋಜನವಿಲ್ಲ ಕಣಾ, ಎಂದು ಹೇಳಿ ನಂಬಿಸಿದನು. ತಾನು (ಧರ್ಜನನ್ನು ಕೊಂದು) ಕರ್ಣ ಮೊದಲಾದ ಸುಭಟರು ಸತ್ತ ವ್ಯಥೆಯನ್ನು ನಿಲ್ಲಿಸುವೆನು ಎಂದು ಹೇಳಿ ಅವನು ಧರ್ಮಜನನ್ನು ಮೂದಲಿಸಿದನು.
ಅರ್ಥ:ಶಲ್ಯನು ಸಾರಥಿಗೆ ಸೂಚಿಸಿ ಧರ್ಮಜ ನೃಪಾಲನ ಬಳಿಗೆ ಸಾರಲು ತೀವ್ರಗತಿಯಿಂದ ಹೋಗಲು ಹೇಳಿದನು. ಹಾಗೆ ಹೋಗಲು ಶಲ್ಯನು ತಿರುಗಲು, ನೃಪಧರ್ಮಜನು ಓರೆಗೊಂಡು ತಪ್ಪಿಸಿ ತಿರುಗಿದನು; ಶಲ್ಯನು ಒಲೆದರೆ, ನೃಪನು ಒಲೆದು ಚೂರಿಸುವ- ಚೂಪಾದ ಉದ್ದವಾದ ಐದುಗರಿಗಳಿಂದ ಕೂಡಿಕೊಂಡಿರುವ ಬಾಣಗಳಿಂದ ಹೊಡೆದನು. ಶಲ್ಯನು ಅದರಿಂದ ತಪ್ಪಸಿಕೊಳ್ಳುವ ವಿಕ್ರಮ- ಪರಾಕ್ರಮದ ದೋರಣೆಗೆ ಒಪ್ಪುವಂತೆ ಬಿಲ್ಲು ಬಾಣಗಳ ವಿದ್ಯೆಯನ್ನು ವಿಸ್ತಾರದಲಿ ವಿಸ್ತರಿಸಿ ಜಯಸಮರ ಸಾಹಸವನ್ನು ತೋರಿಸಿದನು.
ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ |
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ || ೬೩ ||
ಪದವಿಭಾಗ-ಅರ್ಥ: ಹಿಂದೆ ಕರ್ಣನು ಫಲುಗುಣನು ಬಳಿಕ+ ಇಂದು ಶಲ್ಯ ಯುಧಿಷ್ಠಿರರು ಸಾನಂದದಲಿ(ಚೆನ್ನಾಗಿ) ಸಮತಳಿಸಿ ಕಾದಿದರು+ ಉಭಯಬಲ ಹೊಗಳೆ; ಇಂದು ಮಾದ್ರಾಧೀಶ್ವರಗೆ ಯಮನಂದನನು, ಯಮಸುತಗೆ ಪಡಿ(ಸಮಸಾಟಿ) ತಾಸಂದನೈ ಮಾದ್ರಾಧಿಪತಿಯು+ ಎಂದುದು ಭಟಸ್ತೋಮ(ವೀರರ ಸೇನೆ).
ಅರ್ಥ: ಈ ಯುದ್ಧವನ್ನು ನೋಡುತ್ತಿದ್ದ ವೀರರ ಸೇನೆ,'ಹಿಂದೆ ಕರ್ಣ ಮತ್ತು ಫಲ್ಗುಣರ ಯುದ್ಧ, ಬಳಿಕ ಇಂದು ಶಲ್ಯ ಮತ್ತು ಯುಧಿಷ್ಠಿರರ ಯುದ್ಧ ಚೆನ್ನಾಗಿ ಸಮ- ಸಮವಾಗಿ ಕಾದಾಡಿದರು, ಎಂದು ಎರಡೂ ಸೇನೆಯವರು ಹೊಗಳಲು; ಇಂದು ಮಾದ್ರಾಧೀಶ್ವರ ಶಲ್ಯನಿಗೆ- ಯಮನಂದನ ಧರ್ಮಜನು, ಯಮಸುತ ಧರ್ಮಜನಿಗೆ- ಸಮಸಾಟಿಯಾಗಿ ತಾನು ಮಾದ್ರಾಧಿಪತಿಯು ಸಂದನು- ಒಪ್ಪಿದನು ಎಂದು ಸೇನಾಭಟರ ಸಮೂಹ ಹೊಗಳಿತು.
ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು |
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ || ೬೪ ||
ಪದವಿಭಾಗ-ಅರ್ಥ: ಅರಸ ಕೇಳೈ ಕೃಷ್ಣಶಕ್ತಿಸ್ಫುರಣವು+ ಐಸಲೆ; ನಿಮ್ಮ ಬಲ ಸಂಹರಣಕೆ+ ಆವುದು ಬೀಜ? ನಿರ್ದೈವರ ವಿಲಾಸವು+ ಇದು ಹರಿ ಯುಧಿಷ್ಠಿರ ನೃಪನ ನೆಕ್ಕಟಿ(ಪ್ರತ್ಯೇಕ)+ ಗ+ ಕರೆದು ನಿಜಶಕ್ತಿ ಪ್ರಯೋಗವನು+ ಒರೆದಡೆ(ಹೇಳಿದರೆ)+ ಒಡಬಟ್ಟನು(ಒಪ್ಪಿದನು) ಹಸಾದದ ಮಧುರವಚನದಲಿ(ಪ್ರೀತಿಯಿಂದ).
ಅರ್ಥ:ಸಂಜಯನು ಹೇಳಿದ,'ಅರಸನೇ ಕೇಳಯ್ಯಾ, ಪಾಂಡವರಿಗೆ ಕೃಷ್ಣಶಕ್ತಿಸ್ಫುರಣವು ಇದೆಯಲ್ಲವೇ, ನಿಮ್ಮ ಬಲವನ್ನು (ಸಂಹಾರ) ಸಂಹರಣಮಾಡಲು. ಈ ಸೋಲು ಸಂಹಾರಕ್ಕೆ ಯಾವುದು ಬೀಜ? ನಿರ್ದೈವರ- ದೈವ ಬಲವಿಲ್ಲದವರ ವಿಲಾಸವು ಇದು- ನಿಮ್ಮದು. ಕೃಷ್ಣನು ಯುಧಿಷ್ಠಿರ ನೃಪನನ್ನು ಪ್ರತ್ಯೇಕ ಕರೆದು ಧರ್ಮಜನಲ್ಲಿದ್ದ ಶಕ್ತಿಆಯುಧವನ್ನು ಪ್ರಯೋಗಿಸಲು ಹೇಳಿದರೆ ಅವನು ಅದಕ್ಕೆ ಅವನು 'ಹಸಾದ'/ನಿಮ್ಮ ಪ್ರಸಾದ- ಆಶಿರ್ವಾದ ಎಂದು ಮಧುರ ವಚನದಲ್ಲಿ- ಪ್ರೀತಿಯಿಂದ ಒಪ್ಪಿದನು.
ಅರ್ಥ:ನೃಪತಿ ಧರ್ಮಜನು ರಥದಲ್ಲಿದ್ದ ಶಸ್ತ್ರಾಸ್ತ್ರಗಳಲ್ಲಿ ದಿವ್ಯಾಯುಧವನ್ನು ಆರಿಸಿಕೊಂಡನು. ಅದು ಅರೆಬಳಿದ ಉತ್ತಮ ಸುಡುವ ರೇಖೆಯುಳ್ಳದ್ದು, ಕುಣಿವ ಚಿಕ್ಕಗಂಟೆಯನ್ನು ಹೊಳೆಯುವ ಹೊಂಗರಿಯನ್ನೂ, ಎಣ್ಣೆ ಹಚ್ಚಿದ ಹರಿತವಾದ ಬಾಯಿಧಾರೆಯುಳ್ಳ ಉಚಿತವಾದ ಚೌರಿಗಳಿಂದ ಅಲಂಕೃತವಾದ, ಶತ್ರುಭಟನ ಆಯುಷ್ಯದ ಕಡೆಯ ಹಗಲನ್ನು ತಿನ್ನುವ ಶಕ್ತಿ ಆಯುಧವು. ಅದನ್ನು ಧರ್ಮಜನು ಆರಿಸಿಕೊಂಡನು.
ಅರ್ಥ:ಶಕ್ತ್ಯಾಯಧದ ಹೊಡೆತಕ್ಕೆ ಶಲ್ಯನು ರಕ್ತವನ್ನು ಕಾರಿದನು; ನೆಲಕ್ಕೆ ಹಾರಿ ಬಿದ್ದನು; ಮಾದ್ರಪತಿಯ ಎದೆ ಡೊಗರಿನಲ್ಲಿ ರಕ್ತ ಜಲದ ಧಾರೆಗಳು ಆವರಿಸಿದವು. ಪ್ರಾಣ ಕಂಠವನ್ನು ಮೀರಿ ಮೂಗಿಗೆ ಏರಿತು, ಉದ್ದದ ಉಸಿರುಬಿಟ್ಟಾಗ ಪ್ರಾಣಹೋಯಿತು. ಆ ಸಮಯದಲ್ಲಿ ಕುರುರಾಯನ ಸೇನೆ ಶಲ್ಯನ ಸಾವನ್ನು ಕಂಡು ದುಃಖದಿಂದ ಚೀರಿತು.
ಅರ್ಥ:ಶಲ್ಯನ ತಮ್ಮನು ಧರ್ಮಜನಿಗೆ,'ಅರಸನೇ, ನಿನಗೆ ಅಣ್ನನಮೇಲೆ ಗೆಲುವಾಯಿತು. ಕಾಳಗಮಾಡಬೇಕಾದ ಕರ್ತವ್ಯಕ್ಕೆ ನಿಲುಕಿರುವ ನನ್ನನ್ನು ಯುದ್ಧದಲ್ಲಿ ಸಮಾಧಾನ ಪಡಿಸಿ ನಿನ್ನ ಸೇನೆಯಲ್ಲಿ ಆ ಮಾದ್ರೇಶ ಶಲ್ಯನ ಮಾರಣದ ಹಬ್ಬದೂಟ ಮಾಡಿಸು. ಹೆದರದೆ ಎದುರು ನಿಲ್ಲು,'ಎನ್ನುತ್ತಾ ಬಾಣಗಳ ಮಳೆಯನ್ನು ಧರ್ಮಜನ ಮೇಲೆ ಸುರಿಸಿ ಮುಚ್ಚಿದನು. ಆ ನಿರಂತರ ಅಸ್ತ್ರದ ಸಮುದ್ರಕ್ಕೆ ಯಮಸೂನು ನಗುತ ಬಡಬಾಗ್ನಿಯಾದನು, ಬೆಂಕಿಯಾದನು.
ಅರ್ಥ:ಧರ್ಮಜನು ಶಲ್ಯನ ತಮ್ಮನ ಅಸ್ತ್ರಗಳನ್ನು ಮುರಿದು ನಾಶಪಿಸಿ, ಮತ್ತೆ ಬಾಣಗಳಿಂದ ಹೊಡೆದು ಅವನ ರಥ, ಸಾರಥಿ, ಕುದುರೆಗಳನ್ನು ಕಡಿದು, ಬಾಣಗಳ ಸಮೂಹಹದಲ್ಲಿ ಶಲ್ಯಾನುಜನನ್ನು ಸಂಪೂರ್ಣವಾಗಿ ಮುಚ್ಚಿದನು, ಮತ್ತು ಈತನನ್ನು ಕೊಂದು ಕೆಡವಿದನು. ಸಾಲ್ವ ರಾಜನು ಅವನ ಸಹಾಯಕ್ಕೆ ಬಂದು ಭೂತಳೇಶ ಧರ್ಮನನ್ನು ಕೆಣಕಿ ಶ್ರೇಷ್ಠ ದೇವಲೋಕದ ವಾಸಿಗರನ್ನು ಕಂಡನು, ಸತ್ತು ಸ್ವರ್ಗಕ್ಕೆ ಹೋದನು.
ಅರ್ಥ:ನಂತರ,ಕೌರವಸೇನೆಯ ಶಲ್ಯನೃಪನ ಪರಿವಾರ, ಮಾದ್ರದೇಶದ ನಾಯಕರು, ಆರ್ಭಟಿಸಿ ಹೊಕ್ಕುಪಾಂಡವ ಸೇನೆಯನ್ನು ಹೊಕ್ಕರು. ಜೊತೆಗೆ ಯುವಕರಾದ ಹೆಸರುವಾಸಿ ಮಂಡಳಿಕರು, ಸಾಮಂತ ರಾಜರ ಸಮೂಹ,ದೊಡ್ಡಸೇನೆ ಮತ್ತು ಸಾಲ್ವನ ಭಟರ ಸೈನ್ಯ ಆರ್ಭಟದಿಂದ ಮುಂದೆ ನುಗ್ಗಿತು. ಹೀಗೆ ಧರ್ಮನಂದನನೊಡನೆ ದೊಡ್ಡಸಮರ ವಿಸ್ತರಿಸಿತು.
ಅರ್ಥ: ಕೌರವರಾಯನೊಡನೆ ಅವನ ಸಮಸ್ತ ಸೇನೆಯೂ, ಹೋರಾಟ ಸೆಣಸಾಟಗಳಲ್ಲಿ ನುಗ್ಗಿದವು. ಪಾರ್ಥ, ಸಾತ್ಯಕಿ, ವಾಯುಸುತ- ಭೀಮರು ಆಚೆಯ ಸೇನೆಯಲ್ಲಿ ಮೇಳೈಸಿತ್ತು- ಒಗ್ಗೂಡಿತ್ತು. ನೃಪನ ಸೇನೆ, ಕತ್ತಿ, ಖಡ್ಗಗಳನ್ನು ಹಿಡಿದ ಶೂರರು ಮತ್ತು ದೊಡ್ಡ ಈಟಿ, ಭರ್ಜಿ ಪಾಯದಳ, ರಥ, ಕುದುರೆ, ಗಜಸೇನೆ ಲಾಯದಿಂದ ಬಂದ ಶುದ್ಧ ವೇಗದ ಕುದುರೆಗಳು ವಾಘೆಯ ಹತೋಟಿಯಲ್ಲಿ ಸಾಲು ಸಾಲಾಗಿ ರಣರಂಗವನ್ನು ಹೊಕ್ಕವು.
ಅರ್ಥ: ಕುರುರಾಯ ಕೌರವನು ಪುನಃ ದ್ರೌಪದಿಯ ಐದು ಮಕ್ಕಳನ್ನೂ ಸೋಲಿಸಿದನು. ಧರ್ಮಪುತ್ರ ಯುಧಿಷ್ಠಿರನನ್ನು ಯುದ್ಧದಿಂದ ಹಿಮ್ಮಟ್ಟುವಂತೆ ಮಾಡಿದನು. ಸಹದೇವ ನಕುಲರನ್ನು ಮತ್ತೆ ಸೋಲಿಸಿದನು. ಅವರ ಕಡೆಯ ಯುಧಾಮನ್ಯು ಉತ್ತಮೌಜರರನ್ನು ಭೂಮಿಯಲ್ಲಿ ಹೊರಳಿಸಿದನು. ಭೀಮನೇ ಮೊದಲಾದವರಿಗೆ ಭೀತಿಯು ಹುಟ್ಟುವಂತೆ ಶಲ್ಯನ ಮರಣದ ಬೇಸರದಲ್ಲಿ - ಸಿಟ್ಟಿನಲ್ಲಿ ಯುದ್ಧಮಾಡಿದನು.
ಅರ್ಥ:ಉಳಿದ ಜೊತೆಯವರು ಬಳಲಿ ಕೌರವರಾಯನು ಯುದ್ಧಕ್ಕೆ ಒಬ್ಬನೆ ಆದ. ಅವನು ಒಬ್ಬನೆ ಯುದ್ಧದಲ್ಲಿ ಕೈದೋರಿ- ಶೌರ್ಯತೋರಿಸಿ ಮಹಾರಥರನ್ನು ಹಿಮ್ಮಟಿಸಿದನು. ಅವನ ಪರಾಕ್ರಮವೂ ಕುಗ್ಗಿತು. ಬಾಡಿದ ಪೊದೆ ಚಿಗುರೀತು,- ಪುನಃ ಕೌರವನು ಸಿಟ್ಟಿನ್ನಲ್ಲಿ ಧಾಳಿಗೆ ಬರಬಹುದು, ನಮ್ಮವರ ಸೇನೆ ಕೆದರಿ ಚಲ್ಲಾಪಿಲ್ಲಿಯಾಗಿದೆ. ಪಾರ್ಥನೇ ದಿವ್ಯಾಸ್ತ್ರದಿಂದ ಅವನನ್ನು ಎದುರಿಸು ಎಂದು ಕೃಷ್ಣನು ಹೇಳಿದನು.
↑ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.