ಗದಾಪರ್ವ: ೦೫. ಐದನೆಯ ಸಂಧಿ
ಗದಾ ಪರ್ವ-ಐದನೆಯ ಸಂಧಿ
[ಸಂಪಾದಿಸಿ]ಸೂ. ಮುತ್ತಿಮೂದಲಿಸಿದರು ಕುರುರಾ
ಜೋತ್ತಮನನುದಕದಲಿ ಹೊರವಡಿ
ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ ೧
ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು ೨
ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ‍್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ ೩
ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ ೪
ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ ೫
ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ ೬
ಮರಣವೆಂದಿಂಗಾಗದಂತಿರೆ
ವರವ ಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ‍್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ ೭
ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿದ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳೆಂದ ೮
ಹರನ ವರದಲಿ ಹೆಚ್ಚಿ ಭಸ್ಮಾ
ಸುರನು ಶಿವನ ವಿರೋಧಿಸಿದನು
ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ
ಸುರರನರೆಯಾಳಿದನು ಭುವನವ
ನೊರಲಿಸಿದ ರಾವಣನ ರೂಢಿಯ
ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ ೯
ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳೆಂದ ೧೦
ಕಾಲಯವನನ ದಂತವಕ್ರನ
ಸಾಲುವನ ಮಾಗಧನ ನರಕನ
ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ
ಢಾಳರನು ಢವಳರನು ಠಕ್ಕಿನ
ಠೌಳಿಕಾರರನವರ ವಿದ್ಯೆಯ
ಲಾಳಿಗೊಂಡಡೆ ದೋಷವಿಲ್ಲವನೀತ ಕೇಳೆಂದ ೧೧
ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ ೧೨
ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ‍್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ ೧೩
ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ ೧೪
ಜಾತಿಮಾತ್ರದ ಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ‍್ಮಳಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ ೧೫
ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ ೧೬
ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾ ಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ ೧೭
ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ ೧೮
ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದು ಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ ೧೯
ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಶಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ ೨೦
ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ ೨೧
ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ ೨೨
ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ ೨೩
ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ ೨೪
ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ ೨೫
ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್‌ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ ೨೬
ಕೆಡಹಿ ದುಶ್ಶಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ ೨೭
ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ ೨೮
ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್‌ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸರಲಿ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ ೨೯
ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ ೩೦
ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿ ಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ ೩೧
ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ ೩೨
ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಮತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ ೩೩
ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ‍್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ ೩೪
ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ ೩೫
ನಗೆ ಮಸಗಿ ಕರತಳವ ಹೊಯ್‌ಹೊ
ಯ್ದೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು ೩೬
ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನುಜ ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ ೩೭
ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಶಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ ೩೮
ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ (೩೯
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು
ಪೂರವಿಸಿದನು ಗಂಧವನು ಸರ
ಳೋರೆಪೋರೆಯ ಮೈಯ ಘಾಯದ
ಹೇರುಗಳ ಹೂಳಿದನು ವರಕಸ್ತುರಿಯ ಸಾರದಲಿ
ಸಾರತರ ಸಾದಿನ ಜವಾಜಿಯ
ಭೂರಿ ಪರಿಮಳದಿಂದ ನವಕ
ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ ೪೦
ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ ೪೧
ಘೋಳಿಸಿದ ಕರ್ಪೂರ ಕಸ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ ೪೨
ಹಿಡಿ ಧನುವನೆಲೆ ಭೂಪ ಪವನಜ
ತುಡುಕು ಗದೆಯನು ಪಾರ್ಥ ಸಮರಕೆ
ತಡೆಯದಿರು ಮಾದ್ರೀಕುಮಾರಕರೇಳಿ ಕಾಳೆಗಕೆ
ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ
ಹೊಡಕರಿಸು ಪಾಂಚಾಲ ನೀ ವಂ
ಗಡದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ ೪೩
ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಧಿಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ದೀವಸಿಯಾವನೆಂದುದು ನಿಖಿಳ ಪರಿವಾರ ೪೪
ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ ೪೫
ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ‍್ಮಸುತ ನಗುತ ೪೬
ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲವೆಂಬ ಡೊಂಬಿನ
ವಾಯಿವಿನ ಮಗನೆನ್ನೊಡನೆ ಮಾರಾಂತಡಹುದೆಂದ ೪೭
ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಿಮ್ಮಿಷ್ಟವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ ೪೮
ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆ ತವನು ಜೀವಿಸಿ
ಮರಳಲರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ ೪೯
ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ ೫೦
ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ
ಇಂದಿನೀ ಸಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ ೫೧
ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತ ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ ೫೨
ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ‍್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳೆಂದ ೫೩
ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಬೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡವರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ ೫೪
ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನವಿಘಟನದಿಂದ ಮೂದಲಿಸಿದರು ಮುಳಿಸಿನಲಿ ೫೫
ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ‍್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು ೫೬
ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ ೫೭
ನೋಡಿ
[ಸಂಪಾದಿಸಿ]ಸಂಧಿಗಳು
[ಸಂಪಾದಿಸಿ]೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ |
ಪರ್ವಗಳು
[ಸಂಪಾದಿಸಿ]ಕುಮಾರವ್ಯಾಸ ಭಾರತ | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ