ಗದಾಪರ್ವ: ೧೧. ಹನ್ನೋಂದನೆಯ ಸಂಧಿ

ವಿಕಿಸೋರ್ಸ್ದಿಂದ
Jump to navigation Jump to search

<ಕುಮಾರವ್ಯಾಸ ಭಾರತ

ಗದಾ ಪರ್ವ-ಹನ್ನೊಂದನೆಯ ಸಂಧಿ[ಸಂಪಾದಿಸಿ]

ಸೂ. ರಾಯನಯ್ಯನ ತಿಳುಹಿದನು ದ್ವೈ
ಪಾಯನನು ಸಾಮದಲಿ ಕಮಳದ
ಳಾಯತಾಕ್ಷಿಯು ಶಾಪವಿತ್ತಳು ಮುಳಿದು ಗಾಂಧಾರಿ

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ ೧

ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ ೨

ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೋಧನನೆಂದನಾ ಮುನಿಪ ೩

ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ ೪

ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪರಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತರ್ಜುನನ ಸೂತಜನ ಸಮರದಲಿ ೫

ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ ೬

ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ ೭

ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾ ಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ ೮

ಆರು ಸಂತೈಸುವರು ಲೋಚನ
ವಾರಿ ಹೊನಲಾಯ್ತರಮನೆಯ ನೃಪ
ನಾರಿಯರ ಬಹಳಪ್ರಳಾಪವ್ಯಥೆಯ ಬೇಳುವೆಗೆ
ಆರು ಮರುಗರು ಶೋಕಪನ್ನಗ
ಘೋರವಿಷ ಮುನಿವರನ ಹೃದಯವ
ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ ೯

ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ ೧೦

ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗ ಎ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶಜಗದ ಜೀವರಿಗೆ ೧೧

ಬಹ ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ‍್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ ೧೨

ಕೇಳು ಮುನಿಭಾಷಿತವ ನೃಪ ನೀ
ನಾಲಿಸುವುದಾತ್ಮಜರನಿಲ್ಲಿಂ
ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ
ಪಾಲಿಸುವುದಾ ಪಾಂಡುಸುತರ ಸ
ಮೇಳದಲಿ ಸೇರುವುದು ಚಿತ್ತಕೆ
ತಾಳದಿರು ರಾಜಸ ವಿಕಾರವನೆಂದನಾ ವಿದುರ ೧೩

ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ ೧೪

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾ ಎಯರು ನೆರೆದುದು ಲಕ್ಕ ಸಂಖ್ಯೆಯಲಿ ೧೫

ವಣಿಜಸತಿಯರು ಶಿಲ್ಪಿಜನವುಪ
ವಣಿಜದಬಲಾಜನವಘಾಟದ
ಗಣಿಕೆಯರು ನಾನಾದಿಗಂತದ ರಾಜಪತ್ನಿಯರು
ಹಿಣಿಲ ಕಬರಿಯ ಹೊಲೆವ ಮುಂದಲೆ
ವಣಿಯ ಮುಕುರ ಮುಖಾಂಬುಜದ ಪದ (೧೬
ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ

ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ (೧೭
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ

ತಮ್ಮೊಳೇಕತ್ವದ ಸಖಿತ್ವದ
ಸೊಮ್ಮಿನಲಿ ಶ್ರುತಿಯಶ್ರುಜಲವನು
ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು
ನೆಮ್ಮಿತತಿಶಯ ಶೋಕವಹ್ನಿಯ
ರೊಮ್ಮಿಗೆಯ ಕರಣಂಗಳಲಿ ನೃಪ
ಧರ್ಮಪತ್ನಿಯರಳುತ ಹೊರವಂಟರು ಪುರಾಂತರವ೧೮

ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳ ಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ ೧೯

ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ‍್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನ ಪರಿಯಂತ ಕಂಡುದು ರಾಯ ರಾಣಿಯರ ೨೦

ಅರಸ ಚಿತ್ತೈಸವರು ಹಸ್ತಿನ
ಪುರವ ಹೊರವಡೆ ದೂರದಲಿ ಕೃಪ
ಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ
ಅರಸಿಯರ ನಾನಾದಿಗಂತದ
ಧರಣಿಪರ ಭಗದತ್ತ ಮಾದ್ರೇ
ಶ್ವರ ಜಯದ್ರಥ ಕರ್ಣ ದುಶ್ಶಾಸನರ ರಾಣಿಯರ ೨೧

ಗಣಿಕೆಯರನೇಕಾದಶಾಕ್ಷೋ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ ೨೨

ಬಂದು ಧೃತರಾಷ್ಟ್ರಾವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಂಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ರೆಂದನಂಧನೃಪ ೨೩

ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ
ಕ್ಷಿತಿಪನಂತ್ಯದೊಳಲಲ್ಲಿ ಶ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು ೨೪

ಲೇಸು ಮಾಡಿದಿರಿನ್ನು ನಿಮಗಿ
ನ್ನೈಸಲೇ ಕರ್ತವ್ಯವೆನೆ ಧರ
ಣೀಶನನು ಬೀಳ್ಕೊಂಡರವರಗಲಿದರು ತಮ್ಮೊಳಗೆ
ವ್ಯಾಸಮುನಿಯಾಶ್ರಮದ ಗಂಗಾ
ದೇಶವನು ತದ್ದ್ವಾರಕಿಯ ಸಂ
ವೇಶಸಿದರೈ ಗುರುಜ ಕೃಪ ಕೃತವರ್ಮರೊಲವಿನಲಿ ೨೫

ತಿರುಗಿದನು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತುಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹಯುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬನೀನಿಕರ ೨೬

ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು ೨೭

ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು
ತೆರಳಿತೇಳಕ್ಷೋಹಿಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ ೨೮
ಇವರು ಬಂದರು ದೂರದಲಿ ಮಾ
ದವನ ಮತದಲಿ ನಿಂದರಾಚೆಯ
ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ
ವಿವಿಧವಿಕೃತವಿಳಾಸನಯನೋ
ದ್ಭವಪಯಸ್ತಿಮಿರಾಂಶುಕೆಯರಂ
ದವನಿಯಲಿ ಕೆಡೆದೊರಲುತಿರ್ದರು ತಾರು ಥಟ್ಟಿನಲಿ ೨೯

ಅರಸ ಕೇಳ್ ಧೃತರಾಷ್ಟ್ರ ಸಂಜಯ
ವರಮುನಿಪ ವಿದುರಾದಿ ಪರಿಜನ
ಪುರಜನಾವಳಿಯಿದ್ದುದುಪವನದೊಂದು ಬಾಹೆಯಲಿ
ನೆರೆದುದೀಚೆಯಲೊಂದೆಸೆಯಲು
ತ್ತರೆ ಸುಭದ್ರೆಯರಾದಿ ಯಾದವ
ರರಸಿಯರು ಸಹಿತೊರಲುತಿರ್ದಳ್ ದ್ರೌಪದೀದೇವಿ ೩೦

ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ ೩೧

ಇದಕೆ ಸಂಶಯವೇನು ಬೊಪ್ಪನ
ಪದಯುಗವ ಕಾಣಿಸುವುದೆಮ್ಮನು
ಹದುಳವಿಡುವುದು ಹಸ್ತಿನಾಪುರದರಸುತನ ತನಗೆ
ಒದೆದು ನೂಕಿದ ಹದನ ಮಕುಟಾ
ಗ್ರದಲಿ ಧರಿಸುವೆವೆಂದು ಬಿನ್ನವಿ (೩೨
ಪುದು ಮಹೀಪತಿಗೆಂದು ಮುನಿಗರುಹಿದನುಯಮಸೂನು

ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ನಿನ್ನ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ ೩೩

ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತು ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ ೩೪

ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ‍್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ ೩೫

ಖಳನ ಹೃದಯದ ಕಾಳಕೂಟದ
ಗುಳಿಗೆಗಳನಿವರೆತ್ತ ಬಲ್ಲರು
ತಿಳುಹಿ ನುಡಿದೊಡಬ ಡಿಸಿದರು ನಾನಾಪ್ರಕಾರದಲಿ
ಘಳಿಲನೀಚೆಗೆ ಬಂದು ಹದನನು
ನಳಿನನಾಭಂಗರುಹೆ ನಸುನಗು
ತೊಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ ೩೬

ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ‍್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು ೩೭

ಬಾ ಮಗನೆ ಕುರುರಾಜವಂಶ ಶಿ
ರೋಮಣಿಯೆ ನಿರ್ಧೂತ ರಾಜಸ
ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ
ಭೂಮಿಪನ ತೆಗೆದಪ್ಪಿ ಬಹಳ
ಪ್ರೇಮದಲಿ ಮುಮಡಾಡಿದನು ಕಲಿ
ಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ ೩೮

ಭೀಮನನು ಹಿಂದಿಕ್ಕಿ ಲೋಹದ
ಭೀಮನನು ಮುಂದಿರಿಸಿದಡೆ ಸು
ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ
ಆ ಮಹಾವಜ್ರಾಯತಪ್ರೋ
ದ್ದಾಮದಾಯಸ ಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ ೩೯

ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ
ದುಗುಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ ೪೦

ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ ೪೧

ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ ೪೨

ಕುರುಮಹೀಪತಿ ನಮ್ಮ ಪೂರ್ವಕ
ರರಸು ತತ್ಸಂತಾನಪಾರಂ
ಪರೆಯನಳಿವಡೆ ಕೆಲಬರಾದರು ಹೋದರವರಿಂದು
ಭರತಕುಲವನು ಹೊರೆದು ಮಿಗೆ ವಿ
ಸ್ತರಿಸು ಮಗನೆ ಸುಯೋಧನಾದ್ಯರ
ದುರುಳತನದವಗುಣವನೆಮ್ಮನು ನೋಡಿ ಮರೆಯೆಂದ ೪೩

ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ‍್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ ೪೪

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ ೪೫

ವಿದುರ ವೇದವ್ಯಾಸ ಮುನಿಯೀ
ಹದನನರುಹುವೆವೆಂದು ರಾಯನ
ಸುದತಿಯಲ್ಲಿಗೆ ಬಂದು ನುಡಿದರು ಮಧುರವಚನದಲಿ
ಕದಪನಂಗೈಗಿತ್ತು ತಲೆಗು
ತ್ತಿದಳು ನಯನೋದಕದ ಪರಿವಾ
ಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ ೪೬

ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಲಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ ೪೭

ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿಬಾಂಧವರ
ಮನುಜಪತಿಗಳನಂ ವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ ೪೮
ಅಳಿದವರಿಗಳಲುವುದು ಸಲ್ಲದು
ನಿಲಲಿ ಸಾಕದು ನಿಮ್ಮ ಚಿತ್ತದ
ನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನೆಮಗೆ
ಕಳವಳಿಪ ಕುಂತೀಸುತರ ಕಣು
ವಳೆಗವಗ್ರಹವಾಗು ನಿರ್ಜರ
ರೊಳಗೆ ಮಕ್ಕಳ ಮಾನ್ಯರನು ಮಾಡೆಂದನಾ ಮುನಿಪ ೪೯

ನಂಬಿಸುವುದೈವರನು ಕಾಣಿಸಿ
ಕೊಂಬುದನಿಬರ ಕರಣವೃತ್ತಿಗೆ
ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ
ಝೊಂಬಿಸಲಿ ಕೌರವರು ನಾಕ ನಿ
ತಂಬಿನಿಯರಳಕವನು ಮಗಳೆ ವಿ
ಡಂಬಿಸುವ ಖಳರಭಿಮತಕೆ ಮನವೀಯಬೇಡೆಂದ ೫೦

ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ ೫೧

ಐಸಲೇ ಗುಣಮಯವಚೋವಿ
ನ್ಯಾಸವಿದು ಸಾರೆನುತ ಮರಳಿದು
ಭೂಸುರಾಗ್ರಣಿ ಬಂದು ನುಡಿದನು ಧರ್ಮನಂದನಗೆ
ರೋಷವಹ್ನಿಯನುಪಶಮಾಂಬುವಿ
ಲಾಸದಲಿ ನಿಲಿಸೇಳು ನೃಪನ ಮ
ಹಾಸತಿಯ ಖತಿ ಹಿರಿದು ನಮಗೊಳಗಾಗಿ ಭಯವೆಂದ ೫೨

ಹರಿ ವಿದುರ ಪಾರಾಶರಾತ್ಮಜ
ವರ ಮಹೀಪತಿ ಭೀಮ ಮಾದ್ರೇ
ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ
ಚರಣದಲಿ ಮೆಯ್ಯಿಕ್ಕಿದರೆ ನೃಪ
ವರನ ನೆಗಹಿದಳನಿಲಸುತ ಸಿತ
ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ ೫೩

ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ ೫೪

ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ ೫೫

ಧರ್ಮ ನಿಮ್ಮದು ಮಗನೆ ಬರಿಯ ವಿ
ಕರ್ಮವೆಮ್ಮದು ತನ್ನ ಮಕ್ಕಳು
ದುರ್ಮತಿಗಳನ್ಯಾಯಶೀಲರಸಾಧುಸಂಗತು
ನಿರ್ಮಳರು ನೀವೈವರಾಹವ
ಧರ್ಮಕುಶಲರು ಲೋಕ ಮೆಚ್ಚಲು
ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ ೫೬

ಧರ್ಮವಾಗಲಿ ಮೇಣು ರಣದಲ
ಧರ್ಮವಾಗಲಿ ಖಾತಿಯಲಿ ಪರ
ಮರ್ಮಘಾತಕವಾಯ್ತು ಸಾಕಿನ್ನೆಂದು ಫಲವೇನು
ನಿರ್ಮಳಾಂತಃಕರಣಕೃತಪರಿ
ಕರ್ಮವಿಳಸಿತೆ ತಾಯೆ ಸೈರಿಪು
ದುಮ್ಮಳವು ಬೇಡೆಂದು ಮೆಯ್ಯಿಕ್ಕಿದನು ಕಲಿಭೀಮ ೫೭

ಏಳು ತಮ್ಮ ವೃಥಾ ವಿಡಂಬನ
ದಾಳಿಯಾಟವಿದೇಕೆ ಸೈರಿಸ
ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ
ಕಾಳೆಗದ ಕೃತಸಮಯಸತ್ಯವ
ಪಾಲಿಸಿದವರು ನೀವಲೇ ದಿಟ
ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ ೫೮

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂದ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ ೫೯

ಅರಗಿನರಮನೆ ಕೊಂಡವೆಮ್ಮೈ
ವರು ಸಮಿತ್ತುಗಳಾ ಸುಯೋಧನ
ಪರಮಯಜಮಾನರು ಜಯಾಧ್ವರವಿಧಿಯಪೂರ‍್ವವನು
ಕುರುನೃಪತಿಯನುಭವಿಸಿದನು ತ
ಚ್ಚರಿತವೇನನ್ಯಾಯಪಥವೇ
ಧುರದೊಳೆಮಗನ್ಯಾಯವೈಸಲೆ ದೈವಕೃತವೆಂದ ೬೦

ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ ೬೧

ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಿಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ ೬೨

ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ ೬೩

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ ೬೪

ಶಾಪವನು ನೀ ಹೆಸರಿಸೌ ಸ
ರ್ವಾಪರಾಧಿಗಳಾವು ನಿಮ್ಮಯ
ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ
ನೀ ಪತಿವ್ರತೆ ನಿನ್ನ ಖತಿ ಜೀ
ವಾಪಹಾರವು ತಮಗೆ ನಿಮ್ಮನು
ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ ೬೫

ನನೆದುದಂತಃಕರಣ ಕರುಣಾ
ವಿನುತರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ ೬೬

ಉರಿದವರಸನ ನಖನಿಕರ ಹೊಗೆ
ವೆರಸಿ ಕೌರಿಡಲೋಡಿ ಹೊಕ್ಕರು
ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ
ಹರಿಯಭಯಕರವೆತ್ತಿ ಯಮಜಾ
ದ್ಯರನು ಸಂತೈಸಿದನು ರೋಷ
ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ ೬೭

ಕೃತಕ ಭೀಮನ ಕೊಂಡು ಮುಳುಗಿತು
ಕ್ಷಿತಿಪತಿಯ ರೋಷ್ಗ್ನಿ ಯಾತನ
ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ
ಜಿತವಿರೋಧವ್ಯಾಪ್ತಿ ಬಹಳ
ವ್ಯತಿಕರದೊಳಾಯ್ತೆಂದು ಲಕ್ಷ್ಮೀ
ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ ೬೮

ಭೀತಿ ಬೇಡೆಲೆ ಮಕ್ಕಳಿರ ನಿ
ರ್ಧೂತಧರ್ಮಸ್ಥಿತಿಗಳನ್ವಯ
ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ
ನೀತಿಯಲಿ ನೀವಿನ್ನು ಪಾಲಿಸಿ
ಭೂತಳವನುರೆ ಕಳಿದ ಬಂಧು
ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ ೬೯

ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ ೭೦

ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ ೭೧

ಕರೆದು ತಂದರು ವಿಗತಲೋಚನ
ನರಸಿಯನು ಕಾಣಿಸಿದರತ್ತೆಯ
ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ
ಮರುಳು ಮಗಳೆ ಕುಮಾರ ವರ್ಗದ
ಮರಣ ಸೊಸೆಯತ್ತೆಯರಿಗೊಂದೇ
ಪರಿ ವೃಥಾ ವ್ಯಥೆಯೇಕೆನುತ ಸಂತೈಸಿದಳು ಸತಿಯ ೭೨

ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ ೭೩

ನೋಡಿ[ಸಂಪಾದಿಸಿ]

ಗದಾಪರ್ವ ಸಂಧಿಗಳು[ಸಂಪಾದಿಸಿ]

೧೦ ೧೧ ೧೨ ೧೩

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ