ಗದಾಪರ್ವ: ೦೮. ಎಂಟನೆಯ ಸಂಧಿ
ಗದಾ ಪರ್ವ-ಎಂಟನೆ ಸಂಧಿ
[ಸಂಪಾದಿಸಿ]ಸೂ : ಕೆಡೆದ ಕೌರವನೃಪನ ನೇಮವ
ಪಡೆದು ಕೃಪ ಕೃತವರ್ಮ ಗುರುಸುತ
ರೊಡನೆ ಬಂದರು ಸಾರಿದರು ಪಾಂಡವರ ಪಾಳೆಯವ
ಕೇಳು ಧೃತರಾಷ್ಟ್ರಾವನೀಶ ಕ
ರಾಳ ಲೋಹಗದಾಭಿಹತಿಗೆ ನೃ
ಪಾಲಬಿದ್ದನು ಭಾರತದ ದುಸ್ಸಂಗ ಭಂಗದಲಿ
ಮೇಲೆ ಚಾರಣ ಸೂತ ಮಾಗಧ
ಜಾಲ ಹೊಗಳಿತು ಗರುವ ಕುರುಭೂ
ಪಾಲ ಗಂಡಿಗನಕಟೆನುತ ಕೊಂಡಾಡಿತಮರಗಣ ೧
ಏನೆನಂಬೆನು ಜೀಯ ಮಹಿಯಲಿ
ಮಾನನಿಧಿ ಮಲಗಿದನಲೈ ತವ
ಸೂನು ರುಧಿರದ ತಿಲಕವಾದನಲೈ ಧರಾಂಗನೆಗೆ
ಭಾನುಮತಿ ವೈಧವ್ಯ ವಿಧಿಗಿ
ನ್ನೇನ ನೋಂತಳೊ ರಾಜರವಿಯವ
ಸಾನಸಮಯದೊಳಾದುದದ್ಭು ತವರಸ ಕೇಳೆಂದ ೨
ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದುದು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ ೩
ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ ೪
ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳೆಂದ ೫
ದ್ರುಪದತನುಜ ಶಿಖಂಡಿ ಸೃಂಜಯ
ನೃಪ ಯುದಾಮನ್ಯೂತ್ತಮೌಂಜಸ
ಚಪಳಪಂಚದ್ರೌಪದೀಸುತ ಸೋಮಕಾದಿಗಳು
ಅಪದಶಾವಿರ್ಭೂತಚೇತ:
ಕೃಪಣರತಿಚಿಂತಿಸಿದರಂದಿರು
ಳುಪಹತಿಯ ಸೂಚಿಸುವ ವಾಮಭುಜಾಕ್ಷಿಕಂಪದಲಿ ೬
ಅವನಿಪತಿ ಕೇಳೀಚೆಯಲಿ ಕೌ
ರವನಹೊರಗೈ ತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ‍್ವದಲಿ
ಪವನುಸುತ ನುಡಿಸಿದನಲೈ ನಿ
ನ್ನವನಸೇನ್ಯೆ ಭೂಪ ಕುಡುವೈ
ನವಗೆ ನೆಲಸರ್ದವನು ಸಾಚಿಕೆಯೇಕೆ ನುಡಿಯೆಂದ ೭
ಊರ ಬೇಡಿದಡೈದ ನಾವೆರ
ಡೂರುಗಳನೇ ಕೊಂಡೆವೈ ನಿಜ
ಧಾರುಣಿಯ ಕೊಡೆನೆಂದಲೈ ಸೂಚ್ಯಾಗ್ರಸಮ್ಮಿತವ
ನಾರಿ ಋತುಮತಿಯೆಂದಡೆಯು ಸುಲಿ
ಸೀರೆಗಳನೆಂಬಗ್ಗಳಿಕೆ ಕಾ
ಸಾರದಲಿ ಕರಗಿತೆ ಸುಯೋಧನ ಎಂದನಾ ಭೀಮ ೮
ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ ೯
ಕೃತ್ರಿಮವ ನಿರ್ಮಿಸಿದ ಫಲ ಕೈ
ವರ್ತಿಸಿತೆ ನೀವರಗುಮನೆಯಲಿ
ಹೊತ್ತಿಸಿದ ಫಲ ಬಂದುದೇ ವ್ಯವಧಾನವಾದುದಲೆ
ಬಿತ್ತಿದಿರಿ ವಿಷಬೀಜವನು ನೆರೆ
ದತ್ತ ಫಲ ಕೈಸಾರ್ವದಾದಡೆ
ಕೆತ್ತು ಕೊಂಡಿರಲೇಕೆ ನುಡಿ ತನ್ನಾಣೆ ನುಡಿಯೆಂದ ೧೦
ಸಂದುದೇ ನೀ ಮೆಚ್ಚೆ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಯಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಹೇಳೆಂದ ೧೧
ರಾಯನಾಸ್ಥಾನದಲಿ ಖೂಳದ
ರಾಯ ನೀನೇ ಭಂಗಪಡಿಸಿ ನ
ವಾಯಿಯಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ ೧೨
ಹಳವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯನು ಮಕುಟದಲಿ
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆದೆಸೆಗೆ ೧೩
ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೆ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದು ಮುಖಿಯನು ಬೂತುಗೆಡೆದುದ
ಕೊಂದು ಘಾವಯ ಕೊಳ್ಳೆನುತ ಮಡ
ದಮದ ವದನವನೊದೆದು ಹಲುಗಳ ಕಳಚಿದನು ಭೀಮ ೧೪
ಉಚಿತವೆಂದರು ಕೆಲರು ಕೆಲರಿದ
ನುಚಿತವೆಂದು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ ೧೫
ಭೀಮ ಹಾ ಹಾ ಕಷ್ಟವಿದು ಸಂ
ಗ್ರಾಮಜಯವೇ ಸಾಲದೇ ಕುರು
ಭೂಮಿಪತಿಯಶ್ಲಾಘ್ಯನೇ ಲೋಕೈಕಮಾನ್ಯನಲಾ
ನೀ ಮರುಳಲಾ ಸಾರೆನುತ ತ
ಆತ್ಸೀಮೆಗೈತಂದನಿಲತನುಜನ
ನಾ ಮಹೀಪತಿ ನೂಕಿ ಸಂತೈಸಿದನು ಕುರುಪತಿಯ ೧೬
ಗುಣನಿಧಿಯನೇಕಾದಶಾಕ್ಷೋ
ಹಿಣಿಯಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣೆದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ ೧೭
ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ (೧೮
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ
ಅವ ಮೋರೆಯೊಳಪ್ಪ ದೇವರ
ನಾವು ನೋಡುವೆವವ್ವೆಯರ ಸಂ
ಭಾವಿಸುವೆವಾವಂಗದಲಿ ಗಾಂಧಾರಿ ಕಡುಗೋಪಿ
ದೇವಿಯರುಗಳ ಶೋಕವಹ್ನಿಯ
ನಾವ ವಿಧದಲಿ ನಿಲಿಸುವೆವು ಕಾಂ
ತಾವಳಿಗಳೇನೆಂದು ಬಯ್ಯರಯ ಭೀಮ ಹೇಳೆಂದ ೧೯
ಅಳಿಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳಾಯ್ತಲ್ಲದುಳಿದಂ
ತೊಳುಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ ೨೦
ಸೈರಿಸೆಮ್ಮ ಪರಾಧವನು ಕುರು
ವೀರ ಸಂಚಿತಪಾಪಕತ್ಮ ವಿ
ಕಾರವಿದು ಭೋಗಾದಿ ನಿನಗೆಂದರಸ ದುಗುಡದಲಿ
ನೀರೊರೆವ ಕಣ್ಣುಗಳನೊರಸುತ
ಸೀರೆಯಲಿ ಗದಗದಿತ ಗಳದಲಿ
ಸಾರಹೃದಯ ಮಹೀಶನದ್ದನು ಖೇದಪಂಕದಲಿ ೨೧
ಕಂಡ ನೀವಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನುನ ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೋಮಡುದಕ್ಷಗಳಲಿ ಮೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ ೨೨
ಎಲವೆಲವೊ ಪಾಂಡವರಿರಾ ನೀ
ವಳಿಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂರಿ ಕೌರವೇಶ್ವರನ ೨೩
ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಠಿತರಲೇ ಧರ‍್ಮೆಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವಾರವೆ ಸಾಕೈಸೆ ಕಾಲಕ್ಕಿದಿರಿ ಸಿರಿಮುಡಿಗೆ ೨೪
ಎಂದು ನೇಗಿಲ ತುಡುಕಿಯೆಡಗೈ
ಯಿಂದ ನೆಗಹಿ ಮಹೋಗ್ರ ಮುಸಲವ
ನೊಂದು ಕಯ್ಯಲಿ ತಿರುಹಿ ಕೊಬ್ಬಿದ ಖತಿಯ ಭಾರದಲಿ
ಮುಂದೆ ನಡೆತರೆ ಸಕಲಸೇನಾ
ವೃಂದ ನಡುಗಿತು ಬಹಳ ಭೀತಿಯ
ಬಂದಿಯಲಿ ಜರುಗಿದವು ಜವಳಿಯ ಜಗದ ಜೋಡಿಗಳು ೨೫
ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಬಾದನು ರಣೋತ್ಸವವಾಯ್ತು ಯಮಳರಿಗೆ
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ ೨೬
ಹಲಧರನ ಖತಿಬಲಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು ೨೭
ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜರ ಯಮಳರ ಚಿತ್ತವಿಭ್ರಮವ
ಬಲಿಮಥನನೀ ಇಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ ೨೮
ಚಿತ್ತವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ ೨೯
ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂನು ನುಡಿಯನೆ ಸಮಯವನು ಶಾಸ್ತ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ ೩೦
ಅದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ ೩೧
ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ ೩೨
ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಬಂಧಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ ೩೩
ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ ೩೪
ಎಂದು ರಾಮನ ಮನವ ನಯನುಡಿ
ಯಿಂದ ತಿಳುಹಿದನೈಸಲೇ ಬಳಿ
ಕಂದು ದುಗುಡದಲವರು ನಡೆದರು ದ್ವಾರಕಾಪುರಿಗೆ
ಬಂದ ಕಂಟಕ ಬಳಿಚಿತೇ ಸಾ
ಕೆಂದು ಹರಿ ಕುರುಪತಿಯ ಹೊರೆಗೈ
ತಂದು ಬೋಳೈಸಿದನು ಭೀಮಾರ್ಜುನ ಯುಧಿಷ್ಠಿರರ ೩೫
ಈಸುದಿನ ಪರಿಯಂತ ಧರ‍್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ ೩೬
ಅರಸ ತಲೆಗುತ್ತಿದನು ದೃಗುಜಲ
ವುರವಣಿಸಿ ಮೌನದಲಿ ಫಲುಗುಣ
ನಿರೆ ಮುರಾರಿ ಸುಯೋಧನನ ಸರ‍್ವಾವಗುಣ ಗಣವ
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತೈಸಿದಡೆ ಮುರ
ಹರನ ಬೈದನು ನಿನ್ನ ಮಗ ನಾನಾ ವಿಡಂಬದಲಿ ೩೭
ಆರ ಬಸುರಲಿ ಬಂದು ಮೊಲೆಯುಂ
ಡಾರ ಮಡಲಲಿ ಬೆಳೆದು ಬಳಿಕಿನೊ
ಳಾರ ಹೆಂಡಿರ ಕೊಂಡು ಕರು ತುರುಗಾದು ಕಳವಿನಲಿ
ವೀರ ದೈತ್ಯನ ಸದೆಬಡಿದು ಕುರು
ವೀರವಂಢದ ರಾಯರೆಮ್ಮೊಳು
ವೈರಬಂಧವ ಬಿತ್ತಿ ಕೊಂದವ ಕೃಷ್ಣ ನೀನೆಂದ ೩೮
ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ ೩೯
ಪಾಪ ನಿನಗೀ ಗೋತ್ರವಧೆಯ ವಿ
ಳಾಪ ನಿನ್ನನು ತಾಗಲೀ ಸ
ರ‍್ವಾಪರಾಧವು ನಿನ್ನದೀ ಕೌರವರ ಪಾಂಡವರ
ಕೋಪವನು ಕೊನರಿಸುವ ನೃಪರನು
ತಾಪವನು ತೂಳುವ ಕುಬುದ್ಧಿ
ವ್ಯಾಪಕನು ನೀ ವೈರಿಯಲ್ಲದೆ ಭೀಮನಲ್ಲೆಂದ ೪೦
ರಣಮುಖದೊಳೀ ಕ್ಷತ್ರಧರ‍್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆಣಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ ೪೧
ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಳವನಳ್ಳಿರಿದುದಾ ಸ್ತುತಿಪಾಠಕರ ರಭಸ ೪೨
ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ‍್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ ೪೩
ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು
ತಡೆಯಿದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ ೪೪
ಬೀಳುಕೊಂಡುದು ಸಕಲಬಲ ಪಾಂ
ಚಾಲ ಪಂಚದ್ರೌಪದೇಯರು
ಪಾಳೆಯವ ಹೊಕ್ಕರು ಯುಧಿಷ್ಠಿರನೃಪನ ನೇಮದಲಿ
ಏಳಿ ನಾವೀ ಕೌರವೇಂದ್ರನ
ಪಾಳೆಯವ ನೋಡುವೆವೆನುತ ವನ
ಮಾಲಿ ರಥವೇಽರಿದನಿವರು ತಂತಮ್ಮ ರಥವೇರೆ ೪೫
ನರ ಯುಧಿಷ್ಠಿರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು ೪೬
ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ ೪೭
ಇಳಿ ರಥವನೆಲೆ ಪಾರ್ಥ ಬಳಿಕಾ
ನಿಳಿವೆನೆಂದನು ಶೌರಿ ನೀವ್ ಮು
ನ್ನಿಳಿವುದೆಂದನು ಪಾರ್ಥನಾಯ್ತು ವಿವಾದವಿಬ್ಬರಿಗೆ
ಎಲೆ ಮರುಳೆ ನಾ ಮುನ್ನಿಳಿಯೆ ನೀ
ನುಳಿವೆಲಾ ಸಾಕಿನ್ನು ಗರ್ವದ
ಗಳಹತನವನು ಬಳಿಕ ತೋರುವೆ ರಥವನಿಳಿಯೆಂದ ೪೮
ಬಳಿಕ ಫಲುಗುಣ ರಥದ ಮೇಳಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ ೪೯
ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಂಗ ರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ ೫೦
ಹರಿಯಿದೇನಾಕಸ್ಮಿಕದ ದ
ಳ್ಳುರಿಯೊಳದ್ದುದು ತೇರು ನಮಗೀ
ಯರಿಯ ಭಯ ಭಾರಿಸಿತಿದೇನು ನಿಮಿತ್ತವಿದಕೆನಲು
ಉರಿವುದಂದೇ ತೇರು ಕರ್ಣನ
ಗುರು ನದೀನಂದನನ ದೈವಿಕ
ಶರಹತಿಯೊಳೆಮ್ಮಿಂದ ನಿಂದುದು ಪಾರ್ಥ ಕೇಳೆಂದ ೫೧
ನಾವಿಳಿದ ಬಳಿಕೀ ರಥದೊಳಿರ
ಲಾವ ಹದನೋ ನಿನಗೆ ಕಂಡೈ
ದೈವಿಕಾಸ್ತ್ರದ ಮಹಿಮೆಗಳನೆನೆ ಪಾರ್ಥ ತಲೆವಾಗಿ
ನೀವು ಬಲ್ಲಿರಿ ದೇವ ನೀ ಮಾ
ಯಾವಿ ಮಾಯಾಪಾಶಬದ್ಧರು
ನಾವು ಬಲ್ಲೆವೆ ನಿಮ್ಮನೆಂದೆರಗಿದನು ಚರಣದಲಿ ೫೨
ಧರಣಿಪತಿ ಕೇಳೀಚೆಯಲಿ ಕೃಪ
ಗುರುತನುಜ ಕೃತವರ್ಮಕರು ನ
ಮ್ಮರಸನೇನಾದನೊ ವಿರೋಧಿಯ ದಳದ ವೇಢೆಯಲಿ
ತರಣಿ ತಿಮಿರಕೆ ತೆರಹುಗೊಟ್ಟನು
ಭರತಖಂಡವನಿನ್ನು ರಾಯನ
ಪರಿಗತಿಯನಾರೈವೆವೆನುತೇರಿದರು ನಿಜರಥವ ೫೩
ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊಗಿಸಿದನು ಕೊಳನ
ತ್ವರಿತದಲಿ ಶೌಚಾಚಮನ ವಿ
ಸ್ತಾರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ ೫೪
ಬಳಸಿ ಜಂಬುಕ ಘೂಕ ಕಾಕಾ
ವಳಿಗಳೆದ್ದವು ಮೇಲುವಾಯ್ದ
ವ್ವಳಿಸಲಮ್ಮದೆ ಗಾಢತರ ಗರ್ಜನೆಗೆ ಕುರುಪತಿಯ
ಕರಳಕಳವಿದೆತ್ತಣದೆನುತ ಕಳ
ವಳಿಸಿ ಬಂದು ಮಹಾರಥರು ನೃಪ
ತಿಲಕನಿರವನು ಕಂಡು ಧೊಪ್ಪನೆ ಕೆರಡದರವನಿಯಲಿ ೫೫
ಉಡಿದ ತೊಡೆಗಳ ಮಗ್ಗುಲಲಿ ಹೊನ
ಲಿಡುವ ರಕುತದ ಭೀಮಸೇನನ
ಮಡದ ಹೊಯ್ಲಲಿ ಕೆಲಕೆ ಸೂಸಿದ ಮಕುಟಮಣಿಮಯದ
ಕೆಡೆದು ಮೈವೇದನೆಗೆ ನರಳುವ
ನಿಡುಸರದ ಖಗ ಜಂಬುಕೌಘವ
ನಿಡುವ ಕೈಗಲ್ಲುಗಳ ನೃಪತಿಯ ಕಂಡರಿವರಂದು ೫೬
ಒರಲಿದರು ಧರೆ ಬಿರಿಯೆ ಹುಡಿಯಲಿ
ಹೊರಳಿದರು ಬಾಹ್ಗಳನು ಹೊಯ್ ಹೊ
ಯ್ದರಿಚಿ ಕೆಡೆದರು ಕುಂದಿದರು ಕಾತರಿಸಿ ಕಳವಳಿಸಿ
ಮರುಗಿದರು ಮನಗುಂದಿದರು ಮೈ
ಮರೆದರದ್ದರು ಶೋಕಜಲಧಿಯೊ
ಳರಲುಗೊಂಡರು ತಳ್ಳಬಾರಿದರವರು ನಿಮಿಷದಲಿ ೫೭
ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ ೫೮
ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ‍್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಳನು ತಹೆನೆಂದನಾ ದ್ರೌಣಿ ೫೯
ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ‍್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ ೬೦
ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪಕೃತವರ್ಮಕರು ಹ
ತ್ತಿರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ ೬೧
ಆಗಲಾ ಪಾಂಡವರ ವಧೆ ನಿನ
ಗಾಗಲರಿಯದು ನಿನ್ನ ಭುಜಬಲ
ವಾಗುರಿಯ ವೇಢೆಯಲಿ ಬೀಳದು ಕೃಷ್ಣಬುದ್ಧಿಮೃಗ
ಈಗಳೀ ನಿರ್ಬಂಧವಚನವಿ
ರಾಗಮೆವಗೇಕಾರಿಗಾವುದು
ಭಾಗಧೇಯವದಾಗಲೆಂದನು ಕೌರವರರಾಯ ೬೨
ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ ೬೩
ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ ೬೪
ನೋಡಿ
[ಸಂಪಾದಿಸಿ]ಗದಾಪರ್ವ ಸಂಧಿಗಳು
[ಸಂಪಾದಿಸಿ]೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ |
ಪರ್ವಗಳು
[ಸಂಪಾದಿಸಿ]ಕುಮಾರವ್ಯಾಸ ಭಾರತ | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ