ವಿಷಯಕ್ಕೆ ಹೋಗು

ನಳಚರಿತ್ರೆ:ಎಂಟನೆಯ ಸಂಧಿ

ವಿಕಿಸೋರ್ಸ್ದಿಂದ

<ನಳಚರಿತ್ರೆ

ನಳಚರಿತ್ರೆ:ಎಂಟನೆಯ ಸಂಧಿ (ಸಂಗ್ರಹ)

[ಸಂಪಾದಿಸಿ]

ಎಂಟನೆಯ ಸಂಧಿ

ಸುರರ ದುಂದುಭಿ ಮೊಳಗೆ ಧರಣೀ
ಸುರರುಲಿಯೆ ಮುರಹರನ ಕರುಣದಿ
ತರುಣಿ ದಮಯಂತಿಯಳನೊಡಗೂಡಿದನು ನಳನೃಪತಿ

ಧರೆಯೊಳೆಲ್ಲಿಹನೋ ವಿಚಾರಿಸಿ
ಕರೆಸಿಕೊಡು ಎಲೆ ತಾಯೆ ಎನ್ನಯ
ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು
ಮರುಗಿದಳು ಮಗಳೆಂದ ಮಾತಿಗೆ
ಕರಗಿ ಕಂಬನಿಲೊಡೆದು ತನ್ನಯ
ಪುರುಷನೊಡನಿಂತೆನಲು ಭೀಮನೃಪಾಲ ಚಿಂತಿಸಿದ ||೮||

ನಳನೃಪತಿ ನಿಜರಾಜತೇಜವ
ನುಳಿದು ತಾ ಪ್ರತಿರೂಪುದಾಳಿಹ
ನಿಳೆಯೊಳಗ್ಗದ ಸಭೆಯೊಳಗೆ ನೀವೆಂಬುದೀ ನುಡಿಯ
ಹಳುವದಲಿ ಸತಿಯುಟ್ಟ ಸೀರೆಯ
ಸೆಳೆಯುತರ್ಧವ ಕೊಂಡು ನಾರಿಯ
ಕಳೆದು ಹೋದವರುಂಟೆಯೆನಲುತ್ತರವ ಪೇಳುವನು ||೧೦||

ಆ ನುಡಿಯ ತಂದೆನಗೆ ನೀವನು
ಮಾನವಿಲ್ಲದೆ ಪೇಳೆನುತ ಸ
ನ್ಮಾನದಿಂ ಬೀಳ್ಕೊಟ್ಟಳಂಗನೆ ತೆರಳಿದರು ಬಳಿಕ
ಮಾನವೇಂದ್ರರ ಸಭೆಯ ನೋಡಿ ನಿ
ಧಾನಿಸುತ ನಾನಾ ದಿಗಂತ
ಸ್ಥಾನದಲಿ ನಗರಿಗಳ ಭೇದಿಸುತೈದಿದರು ಪಥವ ||೧೧||

ಮುಂದೆ ಬರುತಿರೆ ಕಂಡರೊಬ್ಬನ
ಸಂದ ಯಾಚಕ ಭೂಸುರನನೆ
ಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲು
ಕುಂದದಲ್ಲಿ ವಿಶೇಷನುಂ
ಟೆಂದೆನಲು ಪೇಳಿದನು ಮಖವಹು
ದೆಂದ ವಿಪ್ರನ ಮಾತಿನಿಂದೈದಿದರಯೋಧ್ಯೆಯನು ||೧೩||

ಮರುದಿವಸ ಋತುಪರ್ಣ ಮುನಮು
ಖ್ಯರು ಸಹಿತಲೋಲಗದೊಳಿರೆ ಕಂ
ಡರು ಮಹಾಸಭೆಯೊಳಗೆ ಹೊಕ್ಕರು ನಿಂದು ಕೈನೆಗಹಿ
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಕೇಳಿ ನೀವೆಂ
ದುರುತರವ ಗಂಭೀರವಾಕ್ಯದೊಳೆಂದನಾ ವಿಪ್ರ ||೧೪||

ಹಳುವದಲಿ ಬಂದಲಸಿ ಮಲಗಿದ
ಕುಲಸತಿಯ ವಸನದೊಳಗರ್ಧವ
ಕಳೆದುಕೊಂಡೊಯ್ದಗಲಿ ಪೋದವರುಂಟೆ ರಾತ್ರಿಯಲಿ
ಇಳೆಯನಾಳುವ ನೃಪರ ಸತ್ಯದ
ಬಳಕೆಗಿದು ಲೇಸಲ್ಲವೆನೆ ಮನ
ವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನ ||೧೫||

ಈತನಾರು ಕುರೂಪಿ ನೈಷಧ
ನೀತನೋ ಸಭೆಯೊಳಗೆ ತಾನೀ
ಮಾತನಾಡಲದೇಕೆ ಸಂಶಯವೆನುತ ಮನದೊಳಗೆ
ದೂತರಾಲೋಚಿಸುತ ಬಂದರು
ಭೂತಳಾಧಿಪತಿ ಭೀಮನೃಪ ಸಂ
ಜಾತೆಯನು ಕಂಡೆರಗಿ ಕೈಮುಗಿದೆಂದರೀ ಹದನ ||೧೭||

ದೇವಿಯರು ಚಿತ್ತೈಸುವುದು ಭುವ
ನಾವಳಿಗಳೆಲ್ಲವನು ನೋಡಿದು
ನಾವು ಮುಂದೈತರಲು ಕಂಡೆವಯೋಧ್ಯೆನಗರಿಯನು
ಭೂವರನ ಋತುಪರ್ಣರಾಯನ
ಸೇವೆಯಲ್ಲಿ ಕುರೂಪಿಯೋರ್ವನು
ಜೀವಸಖನಾತಂಗೆ ಬಾಹುಕನೆಂಬ ನಾಮದಲಿ ||೧೮||

ತುರಗನಿಕರದ ಶಿಕ್ಷೆಯಲಿ ಮಂ
ದಿರದ ಬಾಣಸಿತನದ ಕೆಲಸದಿ
ನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭೆಯೊಳಗೆ
ಪರುಠವಿಸಿ ನೀವೆಂದ ಮಾತನು
ವರಸಭಾಮಧ್ಯದಲಿ ನುಡಿಯ
ಲ್ಕಿರದೆ ತಾನೀ ಮಾತನೆಂದನು ನಗುತ ಬಾಹುಕನು ||೧೯||

ಸತಿಗೆ ವಂಚನೆಗೈದ ಪತಿ ತಾ
ಮತಿವಿಕಳನಂತಿರಲಿ ಭೂಸುರ
ಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕಣಾ
ಪತಿವ್ರತವನಾಚರಿಸುವಳು ನಿಜ
ಪತಿಯ ಗುಣದೋಷಗಳನೆಣಿಸುವಳೆ
ಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ ||೨೦||

ಎನಲು ತಲೆದೂಗಿದಳು ಈ ಮಾ
ತಿನಲಿ ಸಂಶಯವಿಲ್ಲದಿಹುದೆಂ
ದೆನುತ ಕಂಬನಿದುಂಬಿದಳು ದಮಯಂತಿ ಮನದೊಳಗೆ
ಇನಿಯನಹುದಾತನ ಪರೀಕ್ಷೆಗೆ
ನೆನೆಯಬೇಕೆಂದನುವನೆಂದಾ
ವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು ||೨೨||

ಇಳೆಯಮರ ಬಾರೆಂದು ವಿವರವ
ತಿಳುಹಿ ಪಯಣವ ಮಾಡಿ ಕಳುಹಲು
ಹೊಳಲ ಹೊರವಂಟನು ಸುದೇವನು ಹಲವು ಯೋಜನವ
ಕಳೆದು ಬರುತಿರೆ ಮುಂದೆ ಕಂಡನು
ಲಲಿತರತ್ನಪ್ರಭೆಯ ಗೋಪುರ
ಹೊಳೆವಯೋಧ್ಯಾಪುರವನೀಕ್ಷಿಸಿ ಹೊಕ್ಕನವನಂದು ||೨೩||

ಇಟ್ಟ ಫಣೆಯೊಳಗೆಸೆವ ಮಟ್ಟಿಯ
ತೊಟ್ಟ ಹೊಸ ಯಜ್ಞೋಪವೀತದ
ಕಟ್ಟಿಯಿರುಕಿದ ಕಕ್ಷಪಾಳದ ಬೆರಳ ಜಪಸರದ
ಉಟ್ಟ ಧೋತ್ರದ ಬಳಲುಗಚ್ಚೆಯ
ಸೃಷ್ಟಿಗಚ್ಚರಿರೂಪಿನಲಿ ಪರ
ಮೇಷ್ಠಿಯಂದದಿ ಬಂದನಾ ಋತುಪರ್ಣನೋಲಗಕೆ ||೨೪||

ಆರು ನೀವೆಲ್ಲಿಂದ ಬಂದಿರಿ
ದೂರದೇಶದ ಹಿರಿಯರಿಳೆಯೊಳು
ಕಾರಣವದೇನಿರುವುದಲ್ಲಿ ವಿಶೇಷವೇನೆನಲು
ಭೂರಮಣ ಕೇಳವನಿಯಲಿ ಸಂ
ಚಾರಿಸುತ ಬಂದೆವು ವಿದರ್ಭಕೆ
ಭೂರಿನೃಪರೈತರುತಲಿದೆ ಚತುರಂಗಬಲಸಹಿತ ||೨೫||

ದೇಶದೇಶದ ಯಾಚಕಕರು ಧರ
ಣೀಶರುನ್ನತ ತುರಗ ಗಜ ರಥ
ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕಲರು
ಭಾಸುರದ ತೇಜದಲಿ ಜನ ಸಂ
ತೋಷದಲಿ ನಡೆತರುತಲಿದೆ ಪರ
ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ ||೨೬||

ಶಯನದಲಿ ಮಲಗಿದ ಸತಿಯನಡ
ವಿಯಲಿ ನಳನೃಪನಗಲಿ ಹೋದನು
ನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವ
ಪಯಣ ನಿಮಗುಂಟೀಗಳೆನೆ ನೃಪ
ಬಯಸಿ ಹೆಣ್ಣಿನ ಮೋಹದಲಿ ವಾ
ಜಿಯ ವರೂಥಕೆ ಹೂಡಹೇಳಿದ ಕರೆಸಿ ಬಾಹುಕನ ||೨೭||

ಹೈ ಹಸಾ ದವೆನುತ್ತ ವಂದಿಸಿ
ಬಾಹುಕನು ಮಂದಿರಕೆ ಬಂದು ವಿ
ವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥ
ಈ ಹದನವಾರಿಂದಲಾದುದೊ
ದ್ರೋಹಿಯಾ ದಮಯಂತಿಯಿದು ಸಂ
ದೇಹವಾಗಿದೆ ಎನುತ ಚಿಂತಿಸಿ ಬಂದನರಮನೆಗೆ||೨೮||

ಲಾಯದೊಳಗುತ್ತಮದ ತೇಜಿಯ
ನಾಯ್ದು ಹೂಡಿದ ರಥಕೆ ಸೇರಿಸಿ
ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ
ರಾಯನೇರಲು ಕರಿ ತುರಗ ರಥ
ಪಾಯದಳ ಸಂದಣಿಸಿದುದು ನೆಲ
ಬಾಯ ಬಿಡೆ ಹೊರವಂಟ ನೃಪ ಘನವಾದ್ಯ ರಭಸದಲಿ ||೨೯||

ಜನಪನೆಂದನು ಬಾಹುಕಗೆ ಮಾ
ನಿನಿಯನೀಕ್ಷಿಸಬೇಕು ನಿಲ್ಲದು
ಮನವಿದೊಂದೇ ದಿನಕೆ ನಡೆಸು ವಿದರ್ಭಪುರಕೆ
ಎನಲು ನಕ್ಕನು ಮನದೊಳಗೆ ತ
ನ್ನಿನಿಯಳಿಗೆ ವಿಧಿ ಬರೆದನೇ ಶಾ
ಸನವ ಮೀರುವರಾರೆನುತ ಮರುಗಿದನು ನಳನೃಪತಿ ||೩೦||

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದುವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನವೇಗದಲಿ
ಭರದೊಳೈತರೆ ನೃಪನ ಹಚ್ಚಡ
ಧರೆಗೆ ಬೀಳಲು ಸಾರಥಿಯನೆ
ಚ್ಚರಿಸಿದನು ಋತುಪರ್ಣನಿದಕಿನ್ನೇನು ಹದನೆನುತ ||೩೧||

ಜೀಯ ಚಿತ್ತೈಸುರವಣಿಸಿ ನಿ
ರ್ದಾಯದಲಿ ಹಿಂದುಳಿದುದಂಬರ
ವಾಯುಗತಿಯಲಿ ದಾಟಿಬಂದೆವು ಹಲವು ಯೋಜನವ
ಹೋಯಿತಾ ಮಾತೇಕೆ ನಡೆಯೆನೆ
ರಾಯ ಮೆಚ್ಚಿದ ಸಾರಥಿಯ ಬಿರು
ದಾಯಕನು ನೀನೆಂದು ಕೊಂಡಾಡಿದನು ಬಾಹುಕನ ||೩೨||

ಮುಂದೆ ಕಂಡನು ಬರುತಲಡವಿಯೊ
ಳೊಂದು ತಾರೆಯ ಮರನನದರೊಳು
ಸಂದ ಫಲಪರ್ಣಂಗಳೆಣಿಸದೆ ಸೂತ ಪೇಳೆನಲು
ಇಂದೆನಗೆ ಮತಿದೋರದವನಿಪ
ಕುಂದದೆನಿಸಿದ ಪೇಳು ನೀನೆನ
ಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ ||೩೩||

ಇಳಿದು ರಥವನು ಬಂದು ವೃಕಷದ
ಬಳಿಗೆ ನಿಂದಾ ಶಾಖೆಗಳಲಿಹ
ಫಲದ ಪರ್ಣಂಗಳೆಣಿಸಿದನಾ ಪದ್ಮ ಸಂಖ್ಯೆಯಲಿ
ಒಲಿದು ಲೆಕ್ಕವಕಂಡು ತಾ ಮನ
ನಲಿದು ನಳನನೃಪ ಪುಷ್ಕರನ ತಾ
ಗೆಲುವ ಹದನಾಯ್ತೆನುತ ಬರೆ ಕಲಿಪುರುಷನಿದಿರಾದ ||೩೪||

ಎಲೆ ನೃಪಾಲಕ ನಿನ್ನ ಸತ್ಯದ
ನೆಲೆಯನೀಕ್ಷಿಸಬೇಕೆನುತ ಬಂ
ದಳಲಿಸಿದೆ ಹಿರಿದಾಗಿ ನೋಯದಿರಿನ್ನು ಚಿತ್ತದಲಿ
ತೊಲಗಿದೆನು ಇಂದಿನಲಿ ಶುಭಮಂ
ಗಳಕರವು ನಿನಗಪ್ಪುದೆನಲಾ
ನಳನೃಪತಿ ಖತಿಗೊಂಡು ಶಾಪವಕೊಡದೆ ಮನ್ನಿಸಿದ ||೩೫||

ಮಾನವಾಧಿಪ ಕೇಳು ಲೋಕಕೆ
ದೀನಜನಬಾಂಧವನು ನಳನೃಪ
ಕಾನನದೊಳವನತ್ತ ಕಳುಹಿಸಿ ಬಂದು ರಥವೇರಿ
ಆ ನರೇಂದ್ರಗಶ್ವಹೃದಯವ
ತಾನರುಹಿ ಆತನಲಿ ಪಡೆದನು
ಸಾನುರಾಗದಿ ಭೂರುಹದ ಹೃದಯವನು ನಿಮಿಷದಲಿ ||೩೬||

ಕರದ ವಾಘೆಯ ಕೊಂಡು ನೃಪಗೆ
ಚ್ಚರಿಸಿ ನೂಕಿದ ತೇಜಿಗಳು ಹೂಂ
ಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲಿ
ಭರದ ಗಮನವನೇನನೆಂಬೆನು
ನೆರೆದ ಜನವಲ್ಲಲ್ಲಿ ನಿಂದುದು
ಧರೆಯೊಳೀ ಸಾರಥಿಗೆ ಸರಿಯಾರರಸ ಕೇಳೆಂದ ||೩೭||

ತುರಗ ಹೇಷಾರವದ ಗಾಲಿಯ
ಧರಧುರದ ಚೀತ್ಕೃತಿಯ ಸಾರಥಿ
ಯುರವಣೆಯ ರಥದಚ್ಚುಗಳ ಝೇಂಕಾರನಾದದಲಿ
ಭರದಿ ಕೆಂಧೂಳಿಡುತ ಬರಲಾ
ಪುರಜನರು ಸಂದಣಿಸಿ ನೋಡಲು
ಪರಿಚರರು ಬಂದರು ವಿದರ್ಭನೃಪಾಲಗರುಹಿದರು ||೩೮||

ಬಂದನೇ ಋತುಪರ್ಣನೆನುತಾ
ನಂದ ಮಿಗೆ ಕರೆಸಿದನು ಸಚಿವರ
ಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆ
ಸಂದಣಿಯ ಪರಿಹರಿಸಿ ನೃಪ ಮುದ
ದಿಂದ ಬೇರರಮನೆಯೊಳುಲುಪೆಗೆ
ಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೃಪ ||೩೯||

ಕೇಳಿದಳು ದಮಯಂತಿ ವಾರ್ತೆಯ
ತಾಳಿದಳು ಹರುಷವನು ಮನದಲಿ
ಫಾಲಲೋಚನದಿಂದ ಫಲಿಸಿತು ಪುಣ್ಯವೆನಗಿಂದು
ಬಾಲೆ ಕೇಳೆನಗಿಂದು ಶೋಕ
ಜ್ವಾಲೆ ಪರಿಹರವಾಯ್ತು ಮಂಗಳ
ದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ||೪೦||

ಖಿನ್ನನಾದನು ಚಿತ್ತದಲಿ ಋತು
ಪರ್ಣ ಭೂಸುರನೆಂದ ಮಾತಿನ
ಭಿನ್ನಣಕೆ ಮರುಳಾಗಿ ಬಂದೆನು ಮೂಢನಾದೆನಲ
ಭಿನ್ನವಿಲ್ಲದೆ ಕೊಂಡ ನಾಚಿಕೆ
ಗಿನ್ನು ಹದನೇನೆನುತ ಗುಣಸಂ
ಪನ್ನ ಮರುಗಿದ ತನ್ನ ಮನದ ದುರಂತಚಿಂತೆಯಲಿ ||೪೧||

ನಾರಿಯರ ಮರೆಗೊಂಡು ಸಭೆಯಲಿ
ಸಾರಥಿಯ ಕುಬ್ಜಾವತಾರವ
ನೋರೆಗಣ್ಣಿನೊಳೀಕ್ಷಿಸುತ ದಮಯಂತಿ ಮನದೊಳಗೆ
ಆರಿವನು ನಳನೃಪನ ಹೋಲುವ
ಚಾರುಚಿಹ್ನೆಗಳಿಲ್ಲ ತೋರ್ಕೆ ವಿ
ಕಾರವಾಗಿದೆ ರೂಪೆನುತ ಚಿಂತಿಸಿದಳಿಂದುಮುಖಿ ||೪೩||

ತಾಯೆ ಚಿತ್ತೈಸಿನ್ನವನ ಕರ
ಣಾಯತತನವೇನೆಂಬೆ ಲೋಕದ
ಸ್ತ್ರೀಯರೊಳಗಿನ್ನಿಲ್ಲ ರಚಿಸುವ ಶಾಕಪಾಕದಲಿ
ಮಾಯವನು ಮಿಗೆ ತಿಳಿಯಲರಿಯದು
ಪಾಯದಿಂದೀಕ್ಷಿಸಲು ಸಕಲ ರ
ಸಾಯನವು ಪರಿಪಕ್ವವಾಗಿದೆ ಪೇಳಲರಿದೆಮಗೆ ||೪೩||

ದಾದಿಯರು ಬಾಹುಕನ ಗುಣಗಳ
ಭೇದಿಸಿದರೊಂದೊಂದು ಬಗೆ ತ
ಳೋದರಿಗೆ ಬಿನ್ನೈಸೆ ನಿಶ್ಚೈಸಿದಳು ದಮಯಂತಿ
ಆದಡವ ನಳನಹುದು ಗುಣದಲಿ
ಭೇದಿಸುವೆನಿನ್ನೊಮ್ಮೆಯೆನುತ ವಿ
ನೋದದಿಂದಾಡುವ ಕುಮಾರರ ತರಿಸಿದಳು ತರುಣಿ ||೪೭||

ತರಳರಿಗೆ ನೀರೆರೆದು ಕಾಂಚನ
ವರದುಕೂಲವನಿತ್ತು ದಿವ್ಯಾ
ಭರಣಭೂಷಿತರಾದ ತನಯರ ದಾದಿಯರ ಕೈಯ
ಪಿರಿದು ಕಳುಹಲು ಬಾಣಸಿನ ಮಂ
ದಿರದ ಬಾಗಿಲ ಮುಂದೆ ಬಿಡೆ ಸಂ
ಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ ||೪೮||

ತರಳರನು ಪಿಡಿದೆತ್ತಿ ತೊಡೆಯೊಳ
ಗಿರಿಸಿ ಮುದ್ದಾಡಿದನು ನೋಡುತ
ಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದು
ಮತಿಯ ಜಾಲಂದ್ರದಲಿ ಕಂಡಳು
ತರುಣಿ ನಳನೃಪನೀತನಹುದೆಂ
ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ ||೪೯||

ತಾಯೆ ಸಂಶಯವಿಲ್ಲ ನೈಷಧ
ರಾಯನೀತನು ಸೂತನಲ್ಲ ವಿ
ಡಾಯದಲಿ ಬಂದಿಹನು ನೋಡು ಕುರೂಪಿವೇಶದಲಿ
ರಾಯರೊಳಗಗ್ಗಳೆಯ ನಳನೃಪ
ಮಾಯವನು ತೋರಿಹನು ಇವನ ನಿ
ಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ ||೫೦||

ಧರಣಿಪತಿಯನುಮತದೊಳಾತನ
ಕರೆಸಿದಳು ನೃಪನರಸಿ ಬಾಹುಕ
ನಿರದೆ ಬಂದನು ರಾಜಮಂದಿರದಲ್ಲಿ ಕುಳ್ಳಿರಲು
ತರಳೆ ಮಾಸಿದ ಸೀರೆಯಲಿ ಗರ
ಗರಿಕೆ ತಪ್ಪಿದ ಚೆಲುವಿನಲಿ ನಿಂ
ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ ||೫೧||

ಹಿಮಕರಾನ್ವಯತಿಲಕ ವಸುಧಾ
ರಮಣ ಪುಣ್ಯೋದಯ ಸುಭಾಷಿತ
ವಿಮಲಗುಣ ಚಾರಿತ್ರಸನ್ನುತ ಸತ್ಯಸಂಚಾರ
ಕುಮತಿ ಪುಷ್ಕರ ಮುನಿದನೇ ವಿ
ಕ್ರಮದರಿದ್ರತೆ ಬಂದುದೇ ಸಾ
ಕಮಿತಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ ||೫೨||

ತುರುಬ ಹಿಡಿದೆತ್ತಿದನು ಸತಿಯಳ
ಸುರಿವ ಕಂಬನಿದೊಡೆದು ನುಡಿದನು
ಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯ
ಅರಿಯದವಳೇಂ ನೀನು ಲೋಕದ
ಸರಸಿಜಾಕ್ಷಿಯರೆಲ್ಲರಿಗೆ ವರ
ಗುರುವಲಾ ಬರಿದೆನ್ನ ಬಯಸಲುಬೇಡ ಹೋಗೆಂದ ||೫೪||

ವಿನಯಹೀನನು ತಾನು ಮನದಲಿ
ನೆನೆದು ತಪ್ಪಿದ ನಿರ್ದಯನು ಕಾ
ನನದಿ ನಿನ್ನನು ಬಿಸುಟು ಕಳೆದ ದುರಾತ್ಮ ಬಾಹಿರನ
ನೆನೆವರೇ ಬಿಡು ಮರುಳೆ ನಿನಗಿಂ
ದಿನಲಿ ಮಾಳ್ಪ ಪುನಸ್ವಯಂವರ
ಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ ||೫೫||

ಎನಲು ಕರ್ಣಂಗಳಿಗೆ ಸಬಳದ
ಮೊನೆಗಳಿರಿದಂತಾಗೆ ಸತಿ ಕ
ಣ್ಣಿನಲಿ ತುಂಬಿದಳುದಕವನು ಹರಹರ ಶಿವಾಯೆನುತ
ಎನಗೆಯಿನ್ನು ಪುನಸ್ವಯಂವರ
ಮನದೊಳುಂಟೆ ನೀವು ಬರಬೇ
ಕೆನುತ ವಾರ್ತೆಯ ಕಲ್ಪಿಸಿದೆ ಕೇಳೆಂದಳಿಂದುಮುಖಿ ||೫೬||

ನಡೆಯುತೆಡಹಿದ ಪಟಟ್ಟದಾನೆಯ
ಪಿಡಿದು ಕೊಲ್ಲುವರುಂಟೆ ನಂಬಿದ
ಮಡದಿಯಲ್ಲವೆ ತಾನು ಬಿರುನುಡಿಯೇಕೆ ನಳನೃಪತಿ
ಅಡವಿಯಲಿ ಕಡುನೊಂದು ದೇಹವ
ಬಿಡದೆಯುಳುಹಿದೆನಿನ್ನು ಪ್ರಾಣದ
ಗೊಡವೆಯಿನ್ನೇಕೆನುತ ಕಂಬನಿದುಂಬಿದಳು ತರಳೆ ||೫೮||

ಇದಕೆ ಯಮ ವರುಣಾನಿಲೇಂದ್ರರು
ಮದನಜನಕನೆ ಸಾಕ್ಷಿಯೆನೆ ಮೇ
ಘದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನು
ಚದುರ ಕೇಳ್ ದಮಯಂತಿ ಲೋಕದ
ಸುದತಿಯೇ ತಿಳಿ ಲೋಕಪಾವನೆ
ಯಿದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು ||೬೨||

ಪವನನಾಡಿದ ನುಡಿಯ ಕೈಕೊಂ
ಡವನಿಪತಿ ಬಿನ್ನೈಸಿದನು ಕೈ
ತವಕದಲಿ ಕಲಿಯಿಂದ ನೊಂದೆನು ನಿಮ್ಮ ದರುಶನದಿ
ಬವಣೆ ಹಿಂಗಿ ಕೃತಾರ್ಥನಾದೆನು
ಬುವಿಯೊಳಿನ್ನೇನೆನುತ ಪಕ್ಷಿಯ
ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ ||೬೩||

ಧರಿಸಿದನಾ ನಳನಾ ದುಕೂಲವ
ಪರಿಹರಿಸಿತಾ ರೂಪು ಮುನ್ನಿನ
ಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲು
ಸುರರ ದುಂದುಭಿ ಮೊಳಗೆ ಮಲ್ಲಿಗೆ
ಯರಳ ಮಳೆ ಸೂಸಿದರು ಗಗನದಿ
ಸುರಸತಿಯರಕ್ಷತೆಯ ತಳಿದರು ಹರಸಿ ನಳನೃಪಗೆ ||೬೪||

ನಳಚರಿತ್ರೆ- ಸಂಧಿಗಳು>:

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ