ವಿರಾಟಪರ್ವ: ೦೧. ಒಂದನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ

ಕರ್ಣಾಟ ಭಾರತ ಕಥಾಮಂಜರಿ, ವಿರಾಟಪರ್ವ: ೧/ ಒಂದನೆಯ ಸಂಧಿ[ಸಂಪಾದಿಸಿ]

ಸೂಚನೆ: ಕಾಯಿದರು ಸತ್ಯವನು ವನವಾ
ಸಾಯತವ ನೆರೆ ಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟನಗರಿಯಲಿ ||

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರು ನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸಾರಿದರೊಂದು ವಟಕುಜವ ||1||

ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿಂಗೇನು ಗತಿ ಬಳಿ
ಕೊಂದು ವರುಷಜ್ಞಾತವಾಸಕ್ಕಾವ ಠಾವೆಂದ ||2||

ಬಡಗಲವರದು ಮೂಡಣರಸುಗ
ಳೊಡೆ ಗೆಣೆಯರಾಗಿಹರು ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಾವಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ||3||

ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲ ವಿರಾಟನಿಗವನ ದೆಸೆಯಿಂ ಭಯವಿಹೀನವವದು
ಮುಳಿದು ಹೇಳಿಕೆಯಾದ ರವಿಸುತ
ಕಲಿ ತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ||4||

ನೃಪತಿ ನಿಶ್ಚೈಯಿಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಕಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ||5||

ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ||6||

ವಲಲನೆಂಬಭಿಧಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರ ನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ||7||

ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ||8||

ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ||9||

ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕ ದೆಸೆಗೆ ಸಹೋದರರು ಸಹಿತ
ದುಷ್ಟ ಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ||10||

ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣಿ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ||11||

ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣಿ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ||
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ||11||

ಬಂದು ಮತ್ಸ್ಯ ಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ||
ತಂದು ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು ||12||

ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ||
ವಿಗಡನೀ ಕಲಿಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದನೆಂದು ಸುರರಿಗೆ ನುಡಿದನವನೀಶ ||13||

ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ||
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡತ್ತಿ ಗರ್ಜಿಸಿದ ||14||

ಸುರನಿಕರ ಕಾದಿರಲಿ ಮೇಣೀ
ಧರಣಿ ಕೊಡೆನೆಂದಿರಲಿ ಹಸ್ತಿನ
ಪುರಿಗೆ ಧಾಳಿಯನಿಡುವೆನಮರರ ಮೋರೆಗಳ ತಿವಿದು||
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿದಪ್ಪಿ ಮೈದಡವಿದನು ಭೂಪಾಲ ||15||

ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು||
ಅವನಿಯಲಿ ಹನ್ನೆರಡು ವರುಷವು
ನವೆದುದುಂ ನಿಷ್ಫಲವಲಾ ಕೌ
ರವರಿಗತಿ ಲಾಗಹುದು ನೀನೇ ಬಲ್ಲೆ ಹೋಗೆಂದ ||16||

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನ ಪುರಿಗೆ ಯತಿ ವೇ
ಷದಲಿ ಬಂದನು ಹೊನ್ನ ಸಾರಿಯ ಚೀಲ ಕಕ್ಷದಲಿ||
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ||17||

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು||
ಇತ್ತಪೆವು ಬೇಡಿದುದ ನಾವೆನೆ
ಸುತ್ತಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ||18||

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟು ಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ||
ಬಿಟ್ಟರೆಮ್ಮನು ಜಠರಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಿಧಾನ ತನಗೆಂದ ||19||

ಓಲಗಕೆ ಬಂದಖಿಳರಾಯರ
ಮೌಳಿಮೌಕ್ತಿಕಮಣಿಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದಪದ್ಮಯುಗ
ಕಾಲವಾವನನಾವ ಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ||20||

ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು||
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪುಬಲ
ಭೇದಿ ಮಾರುತಿ ಬಂದು ಕಂಡನು ಮತ್ಸ್ಯಭೂಪತಿಯ ||21||

ಏನು ಪರಿಣತೆ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ||
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ||22||

ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ||
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ||23||

ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ||
ಹಿರಿದು ಸೈರಿಸಲಾರನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳ ಢಾಳವೊಪ್ಪಿರೆ ಬಂದಳಬುಜಮುಖಿ ||24||

ಮೊಲೆಯ ಮೇಲುದ ಜಾರೆ ಜಾರಿದ
ರಳಿ ಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟು ನಿಂದರು ಚಿತ್ತವಿಹ್ವಲರು||
ತೆಳುವಸರು ತಲೆದೋರೆ ತೋರಿದು
ದಲಗು ಮರು ಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ ||25||

ಎಲೆಲೆ ಮದನನ ಗಜವು ತೊತ್ತಳ
ದುಳಿದುದೋ ಕಾಮುಕರೆನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟ ವಿದೂಷಕರ||
ಅಳುಕಿದರು ಮನುಮಥನ ಗರುಡಿಯ
ಬಲುವೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ||೨೬||

ಜನದ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು||
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ||೨೭||

ಬರವ ಕಂಡು ಸುದೇಷ್ಣೆ ಮನದಲಿ
ಹರುಷ ಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನನಿಬರನು||
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ ||೨೮||

ಕೆಳದಿಯರು ಕಾಣಿಸಿದರರಸನ
ಲಲನೆಯರು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ||
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನ ವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ||೨೯||

ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯ ಮಾಡಿದರೊಂದು ವರುಷವು ಬಿಡುವೆನವರುಗಳ||
ಸತತವಾ ಕುಂತೀಕುಮಾರರ
ಸತಿಯರೋಲೈಸಿದ್ದೆ ಬಳಿಕವ
ರತಿ ಗಹನವನನಿಷ್ಠರಾದರು ತನಗೆ ಬರವಾಯ್ತು ||೩೦||

ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವ
ಸೂನ ಮುಡಿಸುವ ವರ ಕಟಾಕ್ಷಕೆ ಕಾಡಿಗೆಯನಿಡುವ||
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿಳಂದು ವಿನಯದಲಿ ||೩೧||

ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳಬನಿರಿಗಾಯ್ತು ನಿರ್ವಾಹ||
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈ ಮರೆ
ಸನುಪಮಿತ ಭುಜಸತ್ವರಿದ್ದರು ಭೂಪ ಕೇಳೆಂದ ||೩೨||

ಆ ಸುದೇಷ್ಣಾ ದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು||
ಆ ಸತಿಯ ಮನವೊಲಿದು ನಡೆವಳು
ಲೇಸು ಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ||೩೩||

ಜವನ ಮಗ ಸನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜರಾಯನ ತನಯನಿರ್ದ ಶಿಖಂಡಿ ವೇಷದಲಿ||
ಜವಳಿ ಮಕ್ಕಳು ತುರಗ ಗೋವ್ರಜ
ನಿವಹರಾದರು ಕಮಲಮುಖಿ ಕಾ
ಲವನು ಕಳೆದಳು ರಾಯನೊಲುಮೆಯ ಕೆಳದಿಯರ ಕೂಡ ||೩೪||[೧][೨]

---@@@---

ನೋಡಿ[ಸಂಪಾದಿಸಿ]

ವಿರಾಟಪರ್ವ:ಸಂಧಿಗಳು>: ೧೦

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.