ವಿರಾಟಪರ್ವ: ೦೨. ಎರಡನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಕರ್ಣಾಟ ಭಾರತ ಕಥಾಮಂಜರಿ, ವಿರಾಟಪರ್ವ: ೨/ ಎರಡನೆಯ ಸಂಧಿ[ಸಂಪಾದಿಸಿ]

ಸೂ: ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ||

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟನಗರಿಯಲಿ||
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ||1||

ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು||
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕವಿಡಂಬವ ಕೇಳು ಭೂಪಾಲ ||2||

ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು||
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ||3||

ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ||
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ||4||

ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ||
ಅವಯವದ ಪರಿಮಳಕೆ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ||5||

ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟವು ಕೀಳಲರಿದಾಯ್ತಾಲಿಗಳನಲುಗಿ||
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ||6||

ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ||
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ||7||

ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ||
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ||8||

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು ||
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ||9||

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದದು ಕರಣದಲಿ ಕಳವಳದ ಬೀಡಾಯ್ತು||
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ||10||

ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ||
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ||11||

ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ||
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯನಾತನ ತನುವಿನಂತಸ್ತಾಪದೇಳ್ಗೆಯನು ||12||

ಬೀಳುಗೊಂಡದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು||
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸುಗೊಂಡ ||13||

ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು||
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ||14||

ತಾರಿತಂತಃಕ್ಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದದು ಮುಸುಕು ಮೋರೆಯಲಿ||
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ||15||

ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು||
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ||16||

ಖಳನ ಮನವಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ||
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ||17||

ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು ||
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ||18||

ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ||
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನವ ||19||

ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ||
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನವ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ||20||

ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯಳೊಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು||
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ||21||

ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ||
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳಹೆಂದ ||22||

ಎಳೆನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು||
ಅಳಿಮನದ ಬಡತನವ ನಿನ್ನಯ
ಕಳಸ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ||23||

ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ||
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ||24||

ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ||
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ||25||

ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜಧರ್ಮದ ಚಿತ್ತಚಪಲವಲ||
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದುಳಿಂದುಮುಖಿ ||26||

ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು||
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ||27||

ಮರುಳತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು||
ಸೊರಹದಿರು ಅಪಕೀರ್ತಿ ನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ||28||

ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನದೇಗುವರು||
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ||29||

ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ||
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ||30||

ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು||
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ||31||

ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು||
ಕೊಲೆಗಡಿಕೆಯೊ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ||32||

ಹರಿ ವಿರಂಚಿಗಳಾದೊಡೆಯು ಸಂ
ಗರದೊಳೆನಿಗಿದಿರಿಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ||
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯ್ತೆಂದಳಿಂದುಮುಖಿ ||33||

ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ||
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನೆಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ||34||

ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ||
ಸರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ||35||

ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು||
ಸೋಲಿಸಿದ ಗೆಲವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ||36||

ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ||
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ||37||

ನ್ಯಾಯವನು ಮಿಗೆ ಗೆಲುವದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು||
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲನರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ||38||

ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದದು ಮನದ ಸರ್ವಸ್ವ||
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ||39||

ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ||
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ||40||

ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ||
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ||41||

ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ||
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ||42||

ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ||
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ||43||

ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ||
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ||44||

ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು||
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ||45||

ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ||
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ||46||

ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ||
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ||47||

ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ||
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ||48||

ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ||
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ||49||

ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಿಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ||
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದಳವನಿ ತಳತಳಿಸೆ ||50||

ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ||
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ||51||

ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ||
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ||52||

ಹಾಸಿದೆಳೆದಳಿರೊಣಗಿದವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು||
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ||53||

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ||
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ||54||

ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ||
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ ||55||

ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ||
ಪರಿಮಳದ ಪಾವುದದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ||56||

---@@@---

[೧][೨]

ನೋಡಿ[ಸಂಪಾದಿಸಿ]

<ಕುಮಾರವ್ಯಾಸ ಭಾರತ

ವಿರಾಟಪರ್ವ:ಸಂಧಿಗಳು>: ೧೦

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.