ಗದಾಪರ್ವ: ೦೬. ಆರನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಗದಾ ಪರ್ವ-ಆರನೆಯ ಸಂಧಿ[ಸಂಪಾದಿಸಿ]

ಸೂ. ರಂಜಿಸಿತು ತ್ರೈಭುವನವನು ರಿಪು
ಭಂಜನದ ಭಾರವಣೆ ಸುಭಟರ
ನಂಜಿಸಿತು ಕಲಿಭೀಮದುರಿಯೋಧನರ ಸಂಗ್ರಾಮ

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ ೧

ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿ ೨

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ ೩

ಆಹವದಿ ಪಾಂಡವ ಮಮ ಪ್ರಾ
ಣಾ ಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ ೪

ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ ೫

ನಿವಗೆ ಪಾಂಡವ ಪಕ್ಷಪಾತ
ವ್ಯವಹರಣೆ ಹುಸಿ ನಾವಲೇ ಕೌ
ರವನ ಪಕ್ಷಾವೇಶಿಗಳು ಸಾಕಿನ್ನದಂತಿರಲಿ
ಎವಗೆ ಸರಿಯಿಬ್ಬರು ಗದಾಭ್ಯಾ
ಸವನು ನಮ್ಮಲಿ ಮಾಡಿದರು ತಾ
ವಿವರು ಕಾದಲಿ ನಾವು ನೋಡುವೆವೆಂದನಾ ರಾಮ ೬

ಎಲೆ ಮುನೀಶ್ವರ ಪೂರ‍್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ ೭

ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ‍್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ ೮

ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ ೯

ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣೀಯಕವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ ೧೦

ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ ೧೧

ಅವನಿತಪಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ
ಅವರು ನೊಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ ೧೨

ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ ೧೩

ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋಡು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ ೧೪

ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಸಹುದೆಂದನಾ ಭೀಮ ೧೫

ಆಟವಿಕ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ ೧೬

ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಶಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ ೧೭

ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರೆತಿಹೆಯೆಂದನಾ ಭೂಪ ೧೮

ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರೆಘಳಿಯಲಿ ಹೆಡ (೧೯
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ

ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ ೨೦

ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ ೨೧

ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯ ಲವಠಾಣದಲಿ ಮರೆದರು ಭೀಮ ಕೌರವರು ೨೨

ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳವನಾರೈವ ಭಟರೊದಗಿದರು ಸಮರದಲಿ ೨೩

ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಗಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ ೨೪

ಬವರಿ ಮತ್ಸ್ಯೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾವಪರಿರಂಭ ವಿಕ್ಷೇಪ
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ ೨೫

ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮ್ಞಬಲರಾಹವಾಗ್ರದಲಿ ೨೬

ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ ೨೭

ಗಾಹಿನಲಿ ಗಾಢಿಸಿದ ಗದೆ ಹೊರ
ಬಾಹೆಯಲಿ ಹಿಂಗಿದವು ಠಾಣದ
ಲೂಹಿಸಿದ ಮನ ಮುಗ್ಗಿದುದು ಕಂದೊಳಲ ತೋಹಿನಲಿ
ಕಾಹುರದ ಹೊಯ್ಲುಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳೆಂದ ೨೮

ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ ೨೯

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಳವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ ೩೦

ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ ೩೧

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ ೩೨

ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ ೩೩

ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು ೩೪

ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ ೩೫

ನೋಡಿ[ಸಂಪಾದಿಸಿ]

ಗದಾಪರ್ವ ಸಂಧಿಗಳು[ಸಂಪಾದಿಸಿ]

೧೦ ೧೧ ೧೨ ೧೩

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ