<ಕುಮಾರವ್ಯಾಸಭಾರತ-ಸಟೀಕಾ
|| ಸೂಚನೆ||
- ಅಡವಿಯಲಿ ಫಣಿಭೋಗದಲಿ ಬಿಗಿ
- ವಡೆದು ಬಳಲಿದ ಬೀಮಸೇನನ
- ಬಿಡಿಸಿದನು ಯಮಸೂನು ಧರ್ಮಕಥಾ ಪ್ರಸ೦ಗದಲಿ ||ಸೂ||
- ಪದವಿಭಾಗ-ಅರ್ಥ:ಅಡವಿಯಲಿ ಫಣಿಭೋಗದಲಿ(ಹಾವಿನ ಸಹವಾಸದಲ್ಲಿ; ಬಂಧನದಲ್ಲಿ) ಬಿಗಿವಡೆದು(ಬಿಗಿಯಾಗಿ ಹೆಬ್ಬಾಹಾವಿನ ಹಿದಿತ ಪಡೆದು) ಬಳಲಿದ ಬೀಮಸೇನನ ಬಿಡಿಸಿದನು ಯಮಸೂನು ಧರ್ಮಕಥಾ (ಕಥಿಸು - ಹೇಳು)ಪ್ರಸ೦ಗದಲಿ(ಧರ್ಮಸೂಕ್ಷ್ಮ ಸಂಭಾಷಣೆಯಲ್ಲಿ),
- ಅರ್ಥ:ಪಾಂಡವರು ಅರಣ್ಯ ವಾಸದಲ್ಲಿದ್ದಾಗ ಬೇಟೆಗೆ ಹೋಗಿ ಅಡವಿಯಲ್ಲಿ ಹೆಬ್ಬಾವಿನ ಹಾವಿನ ಬಿಗಿಯಾದ ಸುತ್ತಿಸಿಕೊಂಡ ಹಿಡಿತದಲ್ಲಿ ತಪ್ಪಿಸಿಕೊಳ್ಳಲಾದೆ ಬಳಲಿದ ಬೀಮಸೇನನ್ನು ಯಮಸೂನು ಧರ್ಮಜನು ಅಜಗರ ಹಾವಿನ ಧರ್ಮಸೂಕ್ಷ್ಮದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವನನ್ನು ಬಿಡಿಸಿದನು.[೧][೨] [೩] [೪]
- ॐ
ಧರ್ಮಜನಿಗೆ ಅರ್ಜುನನು ಮಹಾಸ್ತ್ರಗಳನ್ನು ತೋರಿಸಲು ಸಿದ್ಧತೆ[ಸಂಪಾದಿಸಿ]
- ಕೇಳು ಜನಮೇಜಯ ಧರಿತ್ರೀ
- ಪಾಲ ಪಾಶುಪತಾಸ್ತ್ರ ವೇದದ
- ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ |
- ಮೇಳವಿಸಿತರುಣಾ೦ಶು ಪೂರ್ವದಿ
- ಶಾ ಲತಾ೦ಗಿಯ ಮ೦ಡನೋಚಿತ
- ಮೌಳಿಮಾಣಿಕವೆನಲು ಮೆರೆದುದು ಬಿ೦ಬ ದಿನಮಣಿಯ || ೧ ||
- ಪದವಿಭಾಗ-ಅರ್ಥ:ಕೇಳು ಜನಮೇಜಯ ಧರಿತ್ರೀಪಾಲ ಪಾಶುಪತಾಸ್ತ್ರ ವೇದದಪಾಳಿಯ+ ಉಚ್ಚರಣೆಯಲಿ ತತ್(ಅದು)+ ಪ್ರಣವ ಸ್ವರೂಪವು+ ಎನೆ ಮೇಳವಿಸಿತು(ಹೊಂದಿತು, ಜೊತೆಗೂಡಿತು)+ ಅರುಣಾ೦ಶು(ಅರುಣೋದಯದ ಬೆಳಕು) ಪೂರ್ವದಿಶಾ ಲತಾ೦ಗಿಯ ಮ೦ಡನೋಚಿತಮೌಳಿಮಾಣಿಕವು(ಮಂಡನ- ಇಟ್ಟ, ಉಚಿತ, ಮೌಳಿ- ತಲೆ)+ ಎನಲು ಮೆರೆದುದು ಬಿ೦ಬ ದಿನಮಣಿಯ(ಸೂರ್ಯನ)
- ಅರ್ಥ: ವೈಶಂಪಾಯನ ಮುನಿಯು ಹೇಳಿದ,'ಕೇಳು ಜನಮೇಜಯ ಧರಿತ್ರೀಪಾಲನೇ ಪಾಶುಪತಾಸ್ತ್ರವು, ವೇದದ ಪಠಣ ಸಮಯದ ಉಚ್ಚರಣೆಯಲ್ಲಿ ವೇದದ ಆದಿಯಲ್ಲಿ ಬರುವ ಆ ಪ್ರಣವ ಸ್ವರೂಪವಾದ ಓಂ ಕಾರವು ಎನ್ನುವಂತೆ ಅರುಣೋದಯದ ಬೆಳಕು ಪೂರ್ವದಿಕ್ಕೆಂಬ ಲತಾ೦ಗಿಯ-ವನಿತೆಯ ತಲೆಯಲ್ಲಿ ಕ್ರಮಬದ್ಧವಾಗಿ ಮುಡಿದ ಮಾಣಿಕ್ಯವು ಎನ್ನುವಂತೆ ಸೂರ್ಯನ ಬಿ೦ಬವು ಪೂರ್ವದಿಕ್ಕಿನಲ್ಲಿ ಪ್ರಕಾಶಿಸಿ ಮೇಳವಿಸಿತು.
- ಅರಸನುಪ್ಪವಡಿಸಿದನೆದ್ದನು
- ವರವೃಕೋದರನರ್ಜುನನ ದೃಗು
- ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು |
- ಹರಿಯ ನೆನೆದರು ನಿದ್ರೆ ತಿಳಿದುದು
- ಪರಿಜನಕೆ ಮುನಿನಿಕರವೆದ್ದುದು
- ತರಣಿ ಸ೦ದ್ಯಾ ಸಮಯ ಸತ್ಕೃತಿ ಜಪ ಸಮಾಧಿಯಲಿ || ೨ ||
- ಪದವಿಭಾಗ-ಅರ್ಥ:ಅರಸನು+ ಉಪ್ಪವಡಿಸಿದನು (ಎದ್ದನು.)+ ಎದ್ದನು ವರ ವೃಕೋದರನು+ ಅರ್ಜುನನ ದೃಗುಸರಸಿರುಹವು (ದೃಕ್- ಕಣ್ಣು, ಸರಸಿರುಹ- ಕಮಲ, ಕಮಲದಂತಹ ಕಣ್ಣು)+ ಅರಳಿದವು ಮಾದ್ರೀಸುತರು ಮೈಮುರಿದು ಹರಿಯ ನೆನೆದರು, ನಿದ್ರೆ ತಿಳಿದುದು ಪರಿಜನಕೆ ಮುನಿನಿಕರವು+ ಎದ್ದುದು ತರಣಿ(ಸೂರ್ಯ) ಸ೦ದ್ಯಾ ಸಮಯ ಸತ್ಕೃತಿ ಜಪ ಸಮಾಧಿಯಲಿ.
- ಅರ್ಥ:ಅರಣ್ಯದ ಪರ್ಣಕುಟೀರದಲ್ಲಿ ಮರುದಿನ ಬೆಳಗಾಗಲು, ಮಲಗಿದ್ದ ಅರಸನು ಎದ್ದನು. ಹಾಗೆಯೇ ಶ್ರೇಷ್ಠ ವೃಕೋದರನು ಎದ್ದರು. ಅರ್ಜುನನ ಕಮಲದಂತಹ ಕಣ್ಣುಗಳು ಅರಳಿದವು. ಮಾದ್ರೀಸುತರು ಮೈಮುರಿದು ಎದ್ದು ಕೃಷ್ಣನನ್ನು ನೆನೆದರು; ಪಾಂಡವರ ಜೊತೆಗಿದ್ದ ಪರಿಜನರಗೂ ನಿದ್ರೆ ತಿಳಿದು ಎಚ್ಚರಾಯಿತು. ಮುನಿಗಳ ಸಮೂಹವು ಎದ್ದು ಸೂರ್ಯನ ಸ೦ದ್ಯಾಸಮಯದ ಸತ್ಕೃತಿಯಾದ ಜಪ ಸಮಾಧಿಯಲ್ಲಿ ತೊಡಗಿದರು.
- ಮುನಿಜನಕೆ ಕೈಮುಗಿದು ಯಮ ನ೦
- ದನನ ಚರಣಕ್ಕೆರಗಿ ಶ೦ಭುವ
- ನೆನೆದುಗವಸಣಿಗೆಯಲಿ ತೆಗೆದನು ಗರುವ ಗಾ೦ಡಿವವ |
- ಜನಪ ಕೇಳೈ ಕೊಪ್ಪಿನಲಿ ಸಿ೦
- ಜಿನಿಯ ಸಿಕ್ಕಿದನಳ್ಳಿರಿದು ಮಾ
- ರ್ದನಿ ದಿಗ೦ತರವೊದರಲೊದರಿಸಿದನು ಮಹಾ ಧನುವ || ೩ ||
- ಪದವಿಭಾಗ-ಅರ್ಥ:ಮುನಿಜನಕೆ ಕೈಮುಗಿದು ಯಮ ನ೦ದನನ ಚರಣಕ್ಕೆ+ ಎರಗಿ(ನಮಿಸಿ) ಶ೦ಭುವ ನೆನೆದು ಗವಸಣಿಗೆಯಲಿ (ಮುಸುಕು, ಆನೆಯ ಹೊದಿಕೆ), ತೆಗೆದನು ಗರುವ (ದೊಡ್ಡ) ಗಾ೦ಡಿವವ ಜನಪ ಕೇಳೈ ಕೊಪ್ಪಿನಲಿ ಸಿ೦ಜಿನಿಯ (ನಾಣು, ದಾ)ರ ಸಿಕ್ಕಿದನು+ ಅಳ್ಳಿರಿದು(ದೊಡ್ಡದಾಗಿ) ಮಾರ್ದನಿ ದಿಗ೦ತರ ವೊದರಲು(ದೊಡ್ಡ ಸದ್ದುಮಾಡಲು)+ ಒದರಿಸಿದನು(ಟಂಕಾರ ಮಾಡಿದನು) ಮಹಾ ಧನುವ.
- ಅರ್ಥ:ಅರ್ಜುನನು ತಾನು ಪಡೆದ ಅಸ್ತ್ರಗಳನ್ನು ತೋರಿಸಲು ಸಿದ್ಧನಾಗಿ, ಮುನಿಜನರಿಗೆ ಕೈಮುಗಿದನು. ಯಮನ೦ದನ ಧರ್ಮಜನ ಪಾದಗಳಿಗೆ ನಮಸ್ಕರಿಸಿ, ಶಿವನನ್ನು ನೆನೆದು ಹೊದಿಕೆಯಲ್ಲಿ ಸುತ್ತಿಟ್ಟ ದೊಡ್ಡ ಗಾ೦ಡೀವ ಧನಸ್ಸನ್ನು ತೆಗೆದನು. ರಾಜನೇ ಕೇಳು ಆನಂತರ ಬಿಲ್ಲಿನ ತುದಿಯ ಕೊಪ್ಪಿನಲ್ಲಿ ನಾಣನ್ನು ಸಿಕ್ಕಿಸಿದನು. ದೊಡ್ಡದಾಗಿ ಮಾರ್ದನಿಯು ದಿಗ೦ತಗಳಲ್ಲಿ ಒದರುವಂತೆ ಮಹಾ ಧನುವಿನ ನಾಣನ್ನು ಎಳೆದು ಠೇಂಕಾರ ಮಾಡಿದನು.
- ಘೋರತರ ಲಯ ಬೈರವನ ಹು೦
- ಕಾರ ವೋ ಸ೦ಹಾರ ಸುತಿಯೋ೦
- ಕಾರವೋ ಕಲ್ಪಾ೦ತ ತಾ೦ಡವ ವೇದ ಪ೦ಡಿತನ |
- ಆರುಭಟೆಯೋ ಮೇಣ್ ತ್ರಿವಿಕ್ರಮ
- ವೀರಪದಭಿನ್ನಾಬ್ಜಜಾ೦ಡ ಕ
- ಠೋರ ರವಮನೆ ಮೆರೆದುದರ್ಜುನ ಚಾಪ ಟ೦ಕಾರ || ೪ ||
- ಪದವಿಭಾಗ-ಅರ್ಥ:ಘೋರತರ ಲಯ ಬೈರವನ ಹು೦ಕಾರವೋ, ಸ೦ಹಾರ ಸುತಿಯ(ಶ್ರುತಿಯ)+ ಓ೦ಕಾರವೋ, ಕಲ್ಪಾ೦ತ ತಾ೦ಡವ ವೇದ ಪ೦ಡಿತನ ಆರುಭಟೆಯೋ, ಮೇಣ್ ತ್ರಿವಿಕ್ರಮ ವೀರಪದ+ ಭಿನ್ನ+ ಅಬ್ಜ(ಕಮಲ)+ ಅಜಾ೦ಡ ಕಠೋರ ರವಮನೆ(ಅಜ-ಬ್ರಹ್ಮ; ಅಜ+ ಅಂಡ= ಬ್ರಹ್ಮಾಂಡ; ರವಂ-ಸದ್ದು ಎನೆ) ಮೆರೆದುದು+ ಅರ್ಜುನ ಚಾಪ ಟ೦ಕಾರ.
- ಟಿಪ್ಪಣಿ: ತ್ರಿವಿಕ್ರಮ ವೀರಪದ(ಪಾದ), ಭಿನ್ನ, ಅಬ್ಜ(ಕಮಲ), ಅಜಾ೦ಡ ಕಠೋರ ರವಮನೆ = ತ್ರಿವಿಕ್ರಮನು ಮೂರು ಪಾದ ಪ್ರದೇಶವನ್ನು ಬಲಿಯಿಂದ ಬೇಡಿ ಭೂಮಿಯನ್ನು ಒಂದು ಪಾದದಿಂದ ಅಳೆದು ಎರಡನೇ ಪಾದಕ್ಕೆ ಸ್ವರ್ಗವನ್ನು ಅಳೆಯುವಾಗ ಅವನ ಪಾದದ ಹೆಬ್ಬೆರಳು ವಿಶ್ವದ ಅಂಚಿನ ಕಟವಾಯಿಗೆ ತಾಗಿ ಒಡೆದು ನೀರು ಸುರಿಯಿತು, ಅದು ಬ್ರಹ್ಮನ ಕಲಶದಲ್ಲಿ ಸೇರಿತು, ಅಲ್ಲಿಂದ ಬಂದು ಶಿವನ ತಲೆಯಲ್ಲಿ ನಿಂತಿತ್ತು. ಅದೇ ಗಂಗೆ ಭೂಮಿಗೆ ಬಂತು ಎನ್ನುವುದು ಪುರಾಣ. ಹಾಗೆ ಜಗತ್ತಿನ ಅಂಚು ಒಡೆದಾಗ ದೊಡ್ಡ ಸದ್ದಾಗಿರಬೇಕು- ಅದರ ಹೋಲಿಕೆಯನ್ನು ಕವಿ ಕೊಟ್ಟಿರಬಹುದು.
- ಅರ್ಥ:ಅರ್ಜುನನ ಬಿಲ್ಲಿನ ಟ೦ಕಾರವು ಘೋರತರವಾದ ಲಯಕಾರ ಬೈರವನ ಹು೦ಕಾರವೋ ಎನ್ನುವಂತಿತ್ತು, ಪ್ರಳಯದ ಸ೦ಹಾರಕಾಲದ ಸದ್ದೋ; ಚತುರ್‍ಯುಗಳು ಮುಗಿದುಕಲ್ಪಾ೦ತದಲ್ಲಿ ಪ್ರಳಯದ ಕಾಲದಲ್ಲಿ ತಾ೦ಡವ ವೇದ ಪ೦ಡಿತನ ಓ೦ಕಾರದ ಆರ್ಭಟೆಯೋ ಎನ್ನುವಂತಿತ್ತು. ಮತ್ತೆ ತ್ರಿವಿಕ್ರಮನು ಮೂರು ಲೋಕಗಳನ್ನು ಅಳೆಯುವಾಗ ಇಟ್ಟ ವೀರಪಾದದದಿಂದ ಭಿನ್ನವಾದ ಬ್ರಹ್ಮನ ಕಮಲದ ಅಜಾ೦ಡವು ಒಡೆದ ಕಠೋರ ಸದ್ದು ಎನ್ನುವಂತೆ ಮೆರಯಿತು.
- ಏನಿದದ್ಭುತ ರವವೆನುತ ವೈ
- ಮಾನಿಕರು ನಡ ನಡುಗಿದರು ಗ
- ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ |
- ಆ ನಿರುತಿ ಯಮ ವರುಣ ವಾಯು ಕೃ
- ಶಾನು ಧನದ ಮಹೇಶ ರೈತರ
- ಲಾನೆಯಲಿ ಹೊರವ೦ಟನ೦ಬರಗತಿಯಲಮರೇ೦ದ್ರ || ೫ ||
- ಪದವಿಭಾಗ-ಅರ್ಥ:ಏನಿದು+ ಅದ್ಭುತ ರವವು(ಸದ್ದು)+ ಎನುತ ವೈಮಾನಿಕರು(ದೇವತೆಗಳು) ನಡ ನಡುಗಿದರು, ಗರ್ವ+ ಅನುನಯ ಗತವಾಯ್ತಲೇ, ಸುರಪುರದ ಗರುವರಿಗೆ(ಶ್ರೇಷ್ಠರಿಗೆ), ಆ ನಿರುತಿ(ನೈರುತ್ತದ ದೇವತೆ) ಯಮ ವರುಣ ವಾಯು ಕೃಶಾನು(ಅಗ್ನಿ) ಧನದ(ಕುಬೇರ) ಮಹೇಶರು(ಈಶಾನ)+ ಐತರಲು(ಬರಲು)+ ಆನೆಯಲಿ ಹೊರವ೦ಟನು+ ಅ೦ಬರಗತಿಯಲಿ(ಆಕಾಶಮಾರ್ಗದಲ್ಲಿ)+ ಅಮರೇ೦ದ್ರ
- ಅರ್ಥ:'ಅರ್ಜುನನ ಗಾಂಡೀವದ ಠೇಂಕಾರದ ಸದ್ದಿಗೆ, ಏನಿದು ಅದ್ಭುತ ಸದ್ದು ಎನ್ನುತ್ತಾ ವಿಮಾನದಲ್ಲಿದ್ದ ದೇವತೆಗಳು ನಡ ನಡುಗಿದರು. ಇಂದ್ರಲೋಕದ ಶ್ರೇಷ್ಠರಿಗೆ ಗರ್ವವು ಅನುನಯವಾಗಿ ಹೋಯಿತು. ಆ ಸದ್ದು ಏನೆಂದು ನೋಡಲು, ಆ ನಿರುತಿ ಯಮ ವರುಣ ವಾಯು ಅಗ್ನಿ ಕುಬೇರ ಈಶಾನರು ಬರಲು, ಆನೆಯಲ್ಲಿ ಕುಳಿತು ಆಕಾಶಮಾರ್ಗದಲ್ಲಿ ಅಮರೇ೦ದ್ರನು ಸಹ ಹೊರಹೊರಟನು.
- ನೆರೆದುದಬ್ರದೊಳಮರ ಗಣ ಮುನಿ
- ವರುಣ ಸಹಿತ ಯುಡಿಷ್ಟ್ರಿರಾದಿಗ
- ಳೆರಡು ವ೦ಕವ ಹೊದ್ದಿದರು ಹರಿತನಯ ನೆಡ ಬಲವ |
- ತರುನಿಕರ ಗಿರಿನಿಚಯವೆಲ್ಲಿಯ
- ಪರಿಜನವು ತರುಬಿದುದು ನನಗಿದ
- ನರಸ ಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ || ೬ ||
- ಪದವಿಭಾಗ-ಅರ್ಥ:ನೆರೆದುದು+ ಅಬ್ರದೊಳು(ಆಕಾಶ)+ ಅಮರ ಗಣ ಮುನಿ ವರುಣ ಸಹಿತ ಯುಧಿಷ್ಠಿರಾದಿಗಳು+ ಎರಡು ವ೦ಕವ(ಬಾಗಿಲು, ಕಡೆ) ಹೊದ್ದಿದರು (ಸರಿದರು) ಹರಿತ(ಕಟು ಪ್ರತಿಕ್ರಿಯೆ, ರಭಸ, ತೀವ್ರತೆ) + ನಯನ+ ಎಡ ಬಲವ ತರುನಿಕರ ಗಿರಿನಿಚಯವು+ ಎಲ್ಲಿಯ ಪರಿಜನವು ತರುಬಿದುದು ನನಗಿದನು+ ಅರಸ ಬಣ್ಣಿಸಲು+ ಅಳವೆ(ಸಾಧ್ಯವೇ) ನರನ ಮಹಾಸ್ತ್ರ ನಾಟಕವ.
- ಅರ್ಥ:'ಆ ಮಹಾಶಬ್ದದ ಅಚ್ಚರಿಯನ್ನು ನೋಡಲು ಆಕಾಶದಲ್ಲಿ ದೇವತೆಗಳ ಸಮೂಹವೂ, ದೇವಮುನಿ, ವರುಣ ಸಹಿತ ಆಕಾಶದಲ್ಲಿ ನೆರೆಯಿತು. ಯುಧಿಷ್ಠಿರಾದಿಗಳು ಎರಡೂ ಬಾಗಿಲು ಕಡೆ ಸರಿದರು. ಬೆದರಿದ ಕಣ್ಣಿನ ಎಡ ಬಲವ ದನಕರುಗಳ ಹಿಂಡು, ಗಿರಿಗಳ ಬದಿಯಲ್ಲಿ ನಿಂತವು. ಪರಿಜನರು ತರುಬಿ- ಗುಂಪಾಗಿ ನಿಂತರು. ಈ ರೀತಿ ಎಲ್ಲಿಯದು, ಜನಮೇಜಯ ಅರಸನೇ ನನಗೆ ಇದನ್ನು ಬಣ್ಣಿಸಲು ಸಾಧ್ಯವೇ? ಅರ್ಜುನನ ಮಹಾಸ್ತ್ರದ ನಾಟಕವನ್ನು- ಪ್ರದರ್ಶನವನ್ನು ಬಣ್ಣಿಸಲು ಸಾಧ್ಯವಿಲ್ಲ,' ಎಂದನು ವೈಶಂಪಾಯನ ಮುನಿ.
- ಮೊದಲೊಳನಲ ಮಹಾಸ್ತ್ರವನು ಹೂ
- ಡಿದನು ಹೊಗೆದುದು ಭುವನ ದಿಕ್ಕುಗ
- ಳೊದರಿದವು ಪ೦ಟಿಸಿತು ರವಿರಥ ಗಗನ ಮಾರ್ಗದಲಿ |
- ಉದಧಿ ಉದಧಿಯ ತೆರೆಯ ಗ೦ಟಿ
- ಕ್ಕಿದವು ಹರಹರ ಹೇಳಬಾರದ
- ಹೊದರು ಹೊದಿಸಿತು ಕೀಳು ಮೇಲಿನ ಜಗದ ಹ೦ತಿಗಳ || ೭ ||
- ಪದವಿಭಾಗ-ಅರ್ಥ:ಮೊದಲೊಳು+ ಅನಲ(ಅಗ್ನಿ) ಮಹಾಸ್ತ್ರವನು ಹೂಡಿದನು, ಹೊಗೆದುದು ಭುವನ ದಿಕ್ಕುಗಳು+ ಒದರಿದವು ಪ೦ಟಿಸಿತು(ಪಂಟಿಸು= ಉರುಳಿಸು, ಸಿಡಿ, ತಲೆಕೆಳಗಾಗು, ನೆಲದಮೇಲೆ ಹೊರಳು, ಸುತ್ತುವರಿ, ಮುಗ್ಗರಿಸು?) ರವಿರಥ ಗಗನ ಮಾರ್ಗದಲಿ, ಉದಧಿ ಉದಧಿಯ(ಸಮುದ್ರ) ತೆರೆಯ ಗ೦ಟಿಕ್ಕಿದವು ಹರಹರ ಹೇಳಬಾರದ ಹೊದರು(ಪೊದೆ, ತೊಡಕು, ತೊಂದರೆ) ಹೊದಿಸಿತು(ಮುಚ್ಚಿತು, ಉಂಟುಮಾಡಿತು) ಕೀಳು(ಕೆಳಗಿನ- ಭೂಮಿ); ಮೇಲಿನ(ಸ್ವರ್ಗ) ಜಗದ ಹ೦ತಿಗಳ(ಸಾಲು).
- ಅರ್ಥ:ಅರ್ಜುನನು ಮೊದಲಗೆ ಅಗ್ನಿಯ ಮಹಾಸ್ತ್ರವನು ಹೂಡಿದನು; ಆಗ ಭೂಮಿಯ ದಿಕ್ಕುಗಳು ಹೊಗೆಯಿತು, ಅವು ಮಾರ್ದನಿಯನ್ನು ಕೊಟ್ಟು ಒದರಿದವು- ಆರ್ಭಟಿಸಿದವು; ಸೂರ್ಯನ ರಥ ಗಗನ ಮಾರ್ಗದಲ್ಲಿ ಮುಗ್ಗರಿಸಿತು; ಸಮುದ್ರವು ಸನುದ್ರದ ತೆರೆಯನ್ನು ಎಬ್ಬಿಸಿ ಒಂದಕ್ಕಂದು ಸೇರಿ ಗ೦ಟಿಕ್ಕಿದವು. ಹರಹರ ಭೂಮಿ ಸ್ವರ್ಗಗಳಲ್ಲಿ, ಜಗತ್ತುಗಳ ಸಾಲಿನಲ್ಲಿ ಹೇಳಬಾರದ ತೊಡಕು, ತೊಂದರೆಯನ್ನು ಉಂಟುಮಾಡಿತು.
- ಅಹಹ ಬೆ೦ದುದುಭುವನವಿದು ವಿ
- ಗ್ರಹದ ಸಮಯವೆ ತಮ್ಮ ಲೀಲೆಗೆ
- ಕುಹಕಮತಿಗಳು ತ೦ದರೈ ತ್ರೈಜಗಕೆ ತಲ್ಲಣವ |
- ರಹವಿದೇನೆ೦ದಭ್ರ ತಳದಿ೦
- ಮಹಿಗೆ ಬ೦ದನು ದೇವಮುನಿ ದು
- ಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆ೦ದ || ೮ ||
- ಪದವಿಭಾಗ-ಅರ್ಥ:ಅಹಹ ಬೆ೦ದುದು ಭುವನವು+ ಇದು, ವಿಗ್ರಹದ ಸಮಯವೆ ತಮ್ಮ ಲೀಲೆಗೆ ಕುಹಕಮತಿಗಳು ತ೦ದರೈ ತ್ರೈಜಗಕೆ ತಲ್ಲಣವ(ಭಯ) ರಹವಿದು (ರಹವು-ಗುಟ್ಟು)+ಇದು ಏನೆ೦ದು+ ಅಭ್ರ ತಳದಿ೦ (ಆಕಾಶತಳದಿಂದ) ಮಹಿಗೆ(ಭೂಮಿಗೆ) ಬ೦ದನು ದೇವಮುನಿ(ನಾರದನು) ದುಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆ೦ದ.
- ಅರ್ಥ:ಅರ್ಜುನನು ಮಹಾಸ್ತ್ರಗಳನ್ನು ಪ್ರದರ್ಶಿಸಲು ಆರಂಭಿಸಿ ಆಗ್ನೇಯಾಸ್ತ್ರವನ್ನು ಬಿಡಲು,'ದೇವಮುನಿ ನಾರದನು ಆಕಾಶಮಾರ್ಗದಿಂದ ಬಂದು, ' ಅಹಹ! ಭೂಮಿಯು ಬೆಂದು ಹೋಗುವುದು, ಇದು, ಯುದ್ದದ ಸಮಯವೆ? ತಮ್ಮ ಲೀಲೆಗಾಗಿ ತಿಳುವಳಿಕೆ ಇಲ್ಲದ ಕುಹಕಿಗಳು ಮೂರು ಲೋಕಕ್ಕೂ ತಲ್ಲಣವನ್ನು ತ೦ದರಲ್ಲಾ! ಈ ಮಾಹಾಸ್ತ್ರಗಳ ಪ್ರಯೋಗದ ರಹಸ್ಯವೇನು? ಎಂದು ಆಕಾಶದಿಂದ ಭೂಮಿಗೆ ಧರ್ಮಜರಿದ್ದಲ್ಲಿಗೆ ಬಂದನು. ದೇವಮುನಿಯು ಅರ್ಜುನನಿಗೆ,'ಪಾರ್ಥ, ಇದೇನು ದುಸ್ಸಾಹಸ, ಹೋ ಹೋ ಸಾಕು ಸಾಕು ಎಂದು ಮುಂದಿನ ಪ್ರಯೋಗಗಳನ್ನು ತಡೆದನು.
- ತೊಡಚದಿರು ಬೊಮ್ಮಾಸ್ತ್ರವಿದು ಬಾ
- ಯ್ಗಡಿಯನಿದು ನಿಮಿಷದಲಿ ಭುವನವ
- ನುಡುಗಿ ತಣಿಯದಿದೊ೦ದು ಮತ್ತೀ ಶಾ೦ಭವಾದಿಗಳ |
- ತೊಡಚಿದೊಡೆ ಸ೦ಹಾರ ಸಮಯವ
- ನೆಡೆಯಲನುಭವಿಸುವುದು ಜಗವಿದು
- ಕೆಡಿಸದಿರು ಕೆಡಿಸದಿರು ತೆಗೆ ತೆಗೆ ಯೆ೦ದನಾ ಮುನಿಪ || ೯ ||
- ಪದವಿಭಾಗ-ಅರ್ಥ:ತೊಡಚದಿರು(ತೊಡಬೇಡ, ತೊಡಚು- ಬಾಣ ಸಂಧಾನ ಮಾಡು) ಬೊಮ್ಮಾಸ್ತ್ರವು+ ಇದು ಬಾಯ್ಗಡಿಯನು+ ಇದು ನಿಮಿಷದಲಿ ಭುವನವನು+ ಉಡುಗಿ(ಗುಡಿಸಿ, ಕುಗ್ಗಿಸಿ, ಸ್ತಬ್ಧವಾಗು) ತಣಿಯದು(ತೃಪ್ತಿಯಾಗದು)+ ಇದೊ೦ದು ಮತ್ತೆ+ ಈ ಶಾ೦ಭವಾದಿಗಳ(ಶಿವ ಮೊದಲಾದವರ) ತೊಡಚಿದೊಡೆ ಸ೦ಹಾರ ಸಮಯವ ನೆಡೆಯಲು+ ಅನುಭವಿಸುವುದು, ಜಗವು+ ಇದು ಕೆಡಿಸದಿರು ಕೆಡಿಸದಿರು, ತೆಗೆ ತೆಗೆ ಯೆ೦ದನಾ ಮುನಿಪ.
- ಅರ್ಥ:ನಾರದ ಮನಿಯು ಅರ್ಜುನನಿಗೆ, 'ಬ್ರಹ್ಮಾಸ್ತ್ರವನ್ನು ತೊಡಬೇಡ; ಇದು ಬಾಯಿಕಡಿಯದು -ಜಗತ್ತನ್ನು ತಿಂದು ನಿಲ್ಲಿಸದು; ಇದು ನಿಮಿಷದಲ್ಲಿ ಭೂಮಿಯನ್ನು ಗುಡಿಸಿ ಸ್ತಬ್ಧಮಾಡಿ ತೃಪ್ತಿಯಾಗದು; ಇದೊ೦ದು ಮತ್ತೆ ಈ ಶಿವ ಮೊದಲಾದವರ ಅಸ್ತ್ರಗಳನ್ನು ಪ್ರಯೋಗಿಸಿದರೆ ಅದು ಸ೦ಹಾರ ಸಮಯವಾದ ಪ್ರಳಯವನ್ನು ನೆಡೆಸಲು ತೊಡಗುವುದು; ಈ ಜಗವನ್ನು ಕೆಡಿಸದಿರು ಕೆಡಿಸದಿರು, ತೆಗೆ ತೆಗೆ- ಬಿಡು, ಇಲ್ಲಗೇ, ಬಿಡು,'ಎಂದನು.
- ಲಕ್ಷ್ಯವಿಲ್ಲದೆ ತೊಡಚಿದರೆ ನಿ
- ರ್ಲಕ್ಷ್ಯಶರವೇ ನೀನುಪಾರ್ಜಿಸಿ
- ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನ೦ಬುಗಳೆ |
- ಶಿಕ್ಷೆ ರಕ್ಷೆಗೆ ಬಾಣವೊ೦ದೇ
- ಲಕ್ಷ್ಯ ವಿದು ನೀನರಿಯದುದಕೆ ವಿ
- ಲಕ್ಷ್ಯನಾದೆನು ನಾನೆನುತ ಮುನಿ ನುಡಿದನರ್ಜುನಗೆ || ೧೦ ||
- ಪದವಿಭಾಗ-ಅರ್ಥ:ಲಕ್ಷ್ಯವಿಲ್ಲದೆ ತೊಡಚಿದರೆ(ಉದ್ದೇಶದ ಗುರಿ ಇಲ್ಲದೆ ಬಾಣತೊಟ್ಟರೆ) ನಿರ್ಲಕ್ಷ್ಯ ಶರವೇ(ಶರವು ನಿರ್ಲಕ್ಷ್ಯವಾಗಿ, ನೀನು+ ಉಪಾರ್ಜಿಸಿದ ಕ್ಷಯವಲೇ(ನಷ್ಟವೇ ಆಗುವುದು) ಪಾರ್ಥ ಗಣನೆಯ(ಮಹತ್ತಾದ) ಗುತ್ತಿನ೦ಬುಗಳೆ(ಗುತ್ತಿ- ಗೊಂಚಲು- ಅನೇಕ ಶಕ್ತಿಯ ಅಸ್ತ್ರಗಳು) ಶಿಕ್ಷೆ ರಕ್ಷೆಗೆ ಬಾಣವು+ ಒ೦ದೇ ಲಕ್ಷ್ಯವು+ ಇದು ನೀನು+ ಅರಿಯದುದಕೆ ವಿಲಕ್ಷ್ಯನಾದೆನು (ವಿಲಕ್ಷ್ಯ- ವಿಲಕ್ಷಣ? -ವಿಲಕ್ಷಣವಾಗಿ) ವಿಶೇಷ ರೀತಿಯ ನೆಡೆ) ನಾನು+ ಎನುತ ಮುನಿ ನುಡಿದನು+ ಅರ್ಜುನಗೆ.
- ಅರ್ಥ:ಮುನಿಯು ಅರ್ಜುನನ್ನು ಕುರಿತು,'ಲಕ್ಷ್ಯವಿಲ್ಲದೆ, ಉದ್ದೇಶದ ಗುರಿ ಇಲ್ಲದೆ ಮಹಾಸ್ತ್ರವಾದ ಬಾಣವನ್ನು ತೊಟ್ಟರೆ, ಅದು ಗರಿ ಉದ್ದೇಶಗಳಿಲ್ಲದ ನಿರ್ಲಕ್ಷ್ಯ ಶರವಾಗಿ ವ್ಯರ್ಥವಾಗುವುದು. ಆಗ ನೀನು ಕಷ್ಟದಿಂದ ಉಪಾರ್ಜಿಸಿದ- ಗಳಿಸಿದ ನಿನ್ನ ಅಸ್ತ್ರ ಶಕ್ತಿಯು ನಷ್ಟವೇ ಆಗುವುದು, ನಂತರ ನೀನು ಆದನ್ನು ಉಪಯೋಗಿಸಲಾರೆ. ಪಾರ್ಥ, ಮಹತ್ತಾದ ಅನೇಕ ಶಕ್ತಿಯುಳ್ಳ ಅಸ್ತ್ರಗಳು ಶಿಕ್ಷೆ ಮತ್ತು ರಕ್ಷೆಗೆ ಮಾತ್ರಾ ಉಪಯೋಗಿಸತಕ್ಕದ್ದು. ಆ ದಿವ್ಯ ಬಾಣವು ಒ೦ದೇ ಲಕ್ಷ್ಯವುಳ್ಳದ್ದು. ಇದನ್ನು ನೀನು ಅರಿಯದೆ ಇದ್ದುದಕಾಗಿ ನಾನು ವಿಶೇಷ ರೀತಿಯ ನೆಡೆಯಿಂದ ಇಲ್ಲಿಗೆ ಬಂದೆನು,'ಎಂದನು.
- ಹರ ಮಹಾಸ್ತ್ರಾದಿಗಳ ಲೀಲೆಯ
- ನರಸ ನೋಡಲು ಬೇಹುದಾದರೆ
- ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ |
- ಹೊರೆವ ಹೇರಾಳದ ಮಹಾ ಸ೦
- ಗರವಹುದು ಮು೦ದಣ ಕಥಾ ವಿ
- ಸ್ತರವ ವಿರಚಿಸಬಾರದನುಚಿತವೆ೦ದನಾ ಮುನಿಪ || ೧೧ ||
- ಪದವಿಭಾಗ-ಅರ್ಥ:ಹರ ಮಹಾಸ್ತ್ರಾದಿಗಳ ಲೀಲೆಯನು+ ಅರಸ ನೋಡಲು ಬೇಹುದಾದರೆ(ಬೇಹು- ಬಯಸು, ಬೇಕು ಎನಿಸಿದರೆ), ಬೆರಸುವುದು(ಬಂದು ಸೇರುವುದು) ತತ್(ಆ)+ ಸಮಯ(ಬಂದು ಸೇರುವುದು; ಆ ಸಮಯ ಬರುವುದು) ಸೈರಿಸು ನೃಪನ ಕಣುಮನವ ಹೊರೆವ(ಪೋಷಿಸು) ಹೇರಾಳದ ಮಹಾ ಸ೦ಗರವು+ ಅಹುದು; ಮು೦ದಣ ಕಥಾ ವಿಸ್ತರವ ವಿರಚಿಸಬಾರದು+ ಅನುಚಿತವು+ ಎ೦ದನಾ ಮುನಿಪ.
- ಅರ್ಥ:ನಾರದನು ಅರ್ಜುನನಿಗೆ,'ಹರನ ಮಹಾಸ್ತ್ರಾದಿಗಳ ಲೀಲೆಯನ್ನು ಅರಸ ಧರ್ಮಜನು ನೋಡಲು ಬಯಸುವುದಾದರೆ, ಆ ಸಮಯವು ಬರುವುದು. ಅಲ್ಲಿಯವರೆಗೆ ಸೈರಿಸು,ತಡೆದುಕೋ, ಯುಧಿಷ್ಠಿರ ನೃಪನ ಕಣ್ಣು ಮನಸ್ಸನ್ನು ತುಂಬುವ ಅತಿಯಾದ ಮಹಾ ಯುಧ್ಧವು ಆಗುವುದು; ಮು೦ದಣ ಕಥಾ ವಿಸ್ತಾರವನ್ನು ವಿವರಿಸಬಾರದು. ಅದು ಅನುಚಿತವು,' ಎ೦ದನು.
- ಅರಸ ಕೇಳೈ ನಾರದನ ನುಡಿ
- ಗುರುತರದಲೀ ಪಾರ್ಥನಾ ಬಿಲು
- ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತಾ |
- ಹರಿದುದಮರರ ಮೇಲೆ ನೋಡುವ
- ನೆರವಿ ದಿಗುಪಾಲಕರು ನಿಜ ಮ೦
- ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ || ೧೨ ||
- ಪದವಿಭಾಗ-ಅರ್ಥ:ಅರಸ ಕೇಳೈ ನಾರದನ ನುಡಿಗೆ+ ಉರುತರದಲಿ(ಬಹಳ ಶ್ರೇಷ್ಠ, )+ ಈ ಪಾರ್ಥನು+ ಆ ಬಿಲು+ ದಿ+ ತಿರುವ(ಬಿಲ್ಲಿನ ತುದಿಯ ತಿರುವುಗೆ ಕಟ್ಟಿದ ದಾರವನ್ನು) ಮಗುಳೆ+ ಇಳುಹಿದನು ಮುನಿಪನ ಮಾತ ಮನ್ನಿಸುತ+ ಆ ಹರಿದುದು+ ಅಮರರ ಮೇಲೆ ನೋಡುವ ನೆರವಿ(ಗುಂಪು) ದಿಗುಪಾಲಕರು ನಿಜ ಮ೦ದಿರಕೆ ಸರಿದರು(ಹೋದರು) ದೇವಮುನಿ ಹಾಯಿದನು(ವೇಗವಾಗಿ ಹೋದನು) ಗಗನದಲಿ.
- ಅರ್ಥ:ಅರಸ ಜನಮೇಜಯನೇ ಕೇಳು,'ನಾರದನ ಮಾತಿಗೆ ಮನ್ನಣೆಕೊಟ್ಟು ಈ ಪಾರ್ಥನು ಆ ಬಿಲ್ಲಿನ ತುದಿಯ ತಿರುವುಗೆ ಕಟ್ಟಿದ ದಾರವನ್ನು ಬಿಚ್ಚಿ ಬಿಲ್ಲನ್ನು ಇಳಿಸಿದನು. ಮೇಲೆ ಆಕಾಶದಲ್ಲಿ ಬಂದು ನೋಡುತ್ತಿದ್ದ ದೇವತೆಗಳ ಗುಂಪು ಚದುರಿತು. ದಿಕ್ಪಾಲಕರು ತಮ್ಮ ಮ೦ದಿರಕ್ಕೆ ಹೋದರು. ದೇವಮುನಿ ನಾರದನು ಆಕಾಶದಲ್ಲಿ ವೇಗವಾಗಿ ಹಾರಿ ಹೋದನು.
ಧರ್ಮಜನ ಪರಿವಾರ ಋಷಿಗಳ ಆಶ್ರಮಗಳಿಗೆ ಪಯಣ[ಸಂಪಾದಿಸಿ]
- ಇವರು ಕಾಮ್ಯಕ ಕಾನನವನನು
- ಭವಿಸಿ ಬಳಿಕಲ್ಲಿ೦ದ ಹೊರವ೦
- ಟವಗಡೆಯ ಪರ್ವತಕೆ ಬ೦ದರು ಯಾಮುನಾಹ್ವಯದ |
- ದಿವಿಜರಿಪು ಹೈಡಿ೦ಬನಾ ತುದಿ
- ಗವರನೇರಿಸಿದನು ತದಗ್ರದೊ
- ಳವನಿಪತಿ ಕೆಲ ದಿವಸವಿದ್ದಲ್ಲಿ೦ದ ಹೊರವ೦ಟ || ೧೩ ||
- ಪದವಿಭಾಗ-ಅರ್ಥ:ಇವರು ಕಾಮ್ಯಕ ಕಾನನವನು+ ಅನುಭವಿಸಿ ಬಳಿಕ+ ಅಲ್ಲಿ೦ದ ಹೊರವ೦ಟು+ ಅವಗಡೆಯ ಪರ್ವತಕೆ ಬ೦ದರು, ಯಾಮುನಾಹ್ವಯದ ದಿವಿಜರಿಪು(ದಾನವ) ಹೈಡಿ೦ಬನಾ ತುದಿಗೆ+ ಅವರನು+ ಏರಿಸಿದನು ತದಗ್ರದೊಳು(ತತ್ ಅಗ್ರ- ಮೇಲೆ)+ ಅವನಿಪತಿ ಕೆಲ ದಿವಸವಿದ್ದು+ ಅಲ್ಲಿ೦ದ ಹೊರವ೦ಟ.
- ಅರ್ಥ:ಪಾಂಡವರು ಕಾಮ್ಯಕ ವನದಲ್ಲಿ ಕೆಲವುದಿನ ವನವಾಸ ಅನುಭವಿಸಿ, ಬಳಿಕ ಅಲ್ಲಿ೦ದ ಹೊರಹೊರಟು ಅವಗಡೆಯೆಂಬ ಪರ್ವತಕ್ಕೆ ಬ೦ದರು. ಯಾಮುನ ವಂಶದ ದಾನವ ಹಿಡಿ೦ಬೆಯ ಮಗನು ಅವರನ್ನು ಪರ್ವತದ ತುದಿಗೆ ತಲುಪಿಸಿದನು. ಅಲ್ಲಿ ಪರ್ವತದ ಮೇಲೆ ಅವನಿಪತಿ ಧರ್ಜನು ಕೆಲ ದಿವಸವಿದ್ದು ಅಲ್ಲಿ೦ದ ಹೊರಹೊರಟನು.
- ಅರಸ ಕೇಳೈಕಾರ್ತಿಕೇಯನ
- ವರ ಮಹಾಶ್ರಮಕೈದಿದನು ಮುನಿ
- ವರರು ಸಹಿತೊಲವಿನಲಿ ನೂಕಿದನೊ೦ದು ವತ್ಸರವ |
- ಧರಣಿಪತಿ ಭೃಹದಶ್ವ ನಾಶ್ರಮ
- ವರಕೆ ಬ೦ದನು ತೀರ್ಥಸೇವಾ
- ಪರಮಪಾವನ ಕರಣನಿರ್ದನು ಪರ್ಣಶಾಲೆಯಲಿ || ೧೪||
- ಪದವಿಭಾಗ-ಅರ್ಥ:ಅರಸ ಕೇಳೈ ಕಾರ್ತಿಕೇಯನ(ಶಿವನ ಮಗ)+ ಅವರ ಮಹಾಶ್ರಮಕೆ+ ಐದಿದನು(ಬಂದನು) ಮುನಿವರರು ಸಹಿತ+ಒಲವಿನಲಿ ನೂಕಿದನು+ ಓ೦ದು ವತ್ಸರ (ವರ್ಷ) ಧರಣಿಪತಿ ಭೃಹದಶ್ವನ+ ಆಶ್ರಮವರಕೆ ಬ೦ದನು ತೀರ್ಥಸೇವಾ ಪರಮಪಾವನ ಕರಣನು+ ಇರ್ದನು ಪರ್ಣಶಾಲೆಯಲಿ.
- ಅರ್ಥ:ಜನಮೇಜಯ ಅರಸನೇ ಕೇಳಯ್ಯಾ,'ಶಿವನ ಮಗ ಕಾರ್ತಿಕೇಯನ ಮಹಾಶ್ರಮಕ್ಕೆ ಧರ್ಮಜನು ಮುನಿವರರ ಪರಿವಾರ ಸಹಿತ ಬಂದನು. ಅಲ್ಲಿ ಸಂತೋಷದಿಂದ ಒಂದು ವರ್ಷ ಕಳೆದನು. ನಂತರ ಧರಣಿಪತಿ ಧರ್ಮಜನು ಭೃಹದಶ್ವನ ಆಶ್ರಮಕ್ಕೆ ಬ೦ದನು. ಅಲ್ಲಿ ತೀರ್ಥಸೇವಾ ಪರಮಪಾವನನೂ ಕರಣನೂ ಆದ ಧರ್ಮಜನು ಒಂದು ಪರ್ಣಶಾಲೆಯಲ್ಲಿ ಇದ್ದನು.
- ಬ೦ದನೊಬ್ಬನು ಪವನಸುತನ ಪು
- ಳಿ೦ದನಟವೀ ತಟದ ಖಗ ಮೃಗ
- ವೃ೦ದದಿಕ್ಕೆಯ ಹಕ್ಕೆಯಾಡು೦ಬೊಲದ ಸೋಹೆಗಳ |
- ನಿ೦ದನೆಲೆ ನಿರ್ದಾಣ ಹೆಜ್ಜೆಗ
- ಳಿ೦ದ ಭೇಧಿಸಿ ಜೀಯ ಚಿತ್ತವಿ
- ಸೆ೦ದು ಬಿನ್ನಹ ಮಾಡಿದನು ಕಲಿ ಭೀಮಸೇನ೦ಗೆ || ೧೫ ||
- ಪದವಿಭಾಗ-ಅರ್ಥ:ಬ೦ದನು+ ಒಬ್ಬನು ಪವನಸುತನ(ಭೀಮನ) ಪುಳಿ೦ದನ(ಬೇಡ)+ ಅಟವೀ(ಅಡವಿ) ತಟದ ಖಗ ಮೃಗ ವೃ೦ದದ(ಪಕ್ಷಿ ಪ್ರಾಣಿ, ಸಮೂಹ)+ ಇಕ್ಕೆಯ ಹಕ್ಕೆಯ(ನೆಲೆ, ಆಶ್ರಯ ಸ್ಥಾನ)+ ಆಡು೦ಬೊಲದ(ತಿರುಗಾಡುವ ಸ್ಥಳ) ಸೋಹೆಗಳ(ಸುಳಿವು,ಸೋವು,ಕುರುಹು,) ನಿ೦ದನೆಲೆ ನಿರ್ದಾಣ(ಹೋದ) ಹೆಜ್ಜೆಗಳಿ೦ದ ಭೇಧಿಸಿ ಜೀಯ ಚಿತ್ತವಿಸು+ ಎ೦ದು ಬಿನ್ನಹ ಮಾಡಿದನು ಕಲಿ ಭೀಮಸೇನ೦ಗೆ.
- ಅರ್ಥ:ಧರ್ಮಜನು ಭೃಹದಶ್ವನ ಆಶ್ರಮದಲ್ಲಿದ್ದಾಗ ಒಬ್ಬ ಬೇಡನು ಭೀಮನ ಬಳಿಗೆ ಬಂದು,'ಜೀಯ ಚಿತ್ತವಿಸು-ಕೇಳು, ಅಡವಿಯ ಬಳಿಯ ಪಕ್ಷಿ ಪ್ರಾಣಿ ಸಮೂಹದ ಇಕ್ಕೆಯನೆಲೆಯ- ತಿರುಗಾಡುವ ಸ್ಥಳದ ಸುಳಿವು, ಕುರುಹುಗಳನ್ನು, ನಿ೦ತ ನೆಲೆಯನ್ನು, ಹೋದ ಹೆಜ್ಜೆಗಳಿ೦ದ ತಿಳಿದು ಭೇಧಿಸಿ (ಬೇಟೆಯಾಡಿರಿ),'ಎ೦ದು ಬಿನ್ನಹ ಮಾಡಿದನು.
- ಇದೆ ಮಹಾಕಾ೦ತಾರವತಿ ದೂ
- ರದಲಿ ವೃಕ ಶಾರ್ದೂಲ ಕೇಸರಿ
- ಕದಲಿ ಕಳಭ ಕ್ರೋಡ ಖಿಳಿ ಲೂಲಾಯ ಸಾರ೦ಗ |
- ಮದದ ರಹಿಯಲಿ ಮಾನಿಸರು ಸೋ೦
- ಕಿದೊಡೆ ಸೆಡೆಯವು ಹೊಲನ ಹೊದರಿ
- ಕ್ಕಿದವು ದೀಹದ ಹಿ೦ಡಿನ೦ತಿರೆ ಜೀಯ ಚಿತ್ತೈಸು || ೧೬ ||
- ಪದವಿಭಾಗ-ಅರ್ಥ:ಇದೆ ಮಹಾಕಾ೦ತಾರವು(ಅರಣ್ಯ)+ ಅತಿ ದೂರದಲಿ ವೃಕ(ತೋಳ) ಶಾರ್ದೂಲ ಕೇಸರಿ ಕದಲಿ(ಗುಂಪು,ಸಮೂಹ) ಕಳಭ(ಆನೆ, ಆನೆಮರಿ) ಕ್ರೋಡ(ಹಂದಿ) ಖಿಳಿ ಲೂಲಾಯ(ಮಹಿಷ ಕೋಣ) ಸಾರ೦ಗ(ಜಿಂಕೆ, ಆನೆ,) ಮದದ ರಹಿಯಲಿ(ರೀತಿ, ಸಡಗರ), ಮಾನಿಸರು(ಸಾಮಾನ್ಯ ಮಾನವರು) ಸೋ೦ಕಿದೊಡೆ (ಮುಟ್ಟಿದರೆ) ಸೆಡೆಯವು(ಹೆದರುವುದಿಲ್ಲ) ಹೊಲನ ಹೊದರಿಕ್ಕಿದವು( ಪೊದೆಮಾದಿದವು, ತುಳಿದು ನಾಶ ಮಾಡಿದವು) ದೀಹದ(ಪುಂಡಾಟ) ಹಿ೦ಡಿನ೦ತಿರೆ ಜೀಯ ಚಿತ್ತೈಸು.
- ಅರ್ಥ:ಆ ಬೇಡನು ಭೀಮನಿಗೆ,' ಮಹಾಅರಣ್ಯವು ಅತಿ ದೂರದಲ್ಲಿ ಇದೆ. ಅಲ್ಲಿ ತೋಳ, ಶಾರ್ದೂಲ, ಕೇಸರಿ-ಸಿಂಹಗಳ ಗುಂಪು, , ಆನೆ, ಹಂದಿ ಖಿಳಿ ಕೋಣ, ಸಾರ೦ಗ-ಜಿಂಕೆ, ಆನೆ ಮದತುಂಬಿದ ರೀತಿಯಲ್ಲಿ ತುಂಬಿವೆ. ಸಾಮಾನ್ಯ ಮಾನವರು ಮುಟ್ಟಿದರೆ- ಹೊಡೆದರೆ ಹೆದರುವುದಿಲ್ಲ. ಅವು ನಮ್ಮ ಹೊಲಗಳನ್ನು ಹೊದರಿಕ್ಕಿ ಪುಡಿಮಾಡಿದವು, ತುಳಿದು ನಾಶ ಮಾಡಿದವು.ಅವು ಬಹಳ ಪುಂಡಾಟ ಹಿ೦ಡಿನ೦ತಿವೆ,' ಜೀಯ ಚಿತ್ತೈಸು- ಕೇಳು ಎಂದನು.
- ಮೇಹುಗಾಡಿನೊಳವರ ಮೈ ಮಿಗೆ
- ಸೋಹಿದರೆ ಸುವ್ವಲೆಯ ಸುಬ್ಬಲೆ
- ಯಾಹವದಲೇ ತೋಳತೆಕ್ಕೆಯ ತೋಟಿ ತೇಗುವರೆ |
- ತೋಹಿನಲಿ ತೊದಳಾಗಿ ಗೋರಿಯ
- ಗಾಹಿನಲಿ ಗುರಿ ಗಡಬಡಿಸೆ ಬಲು
- ಸಾಹಸಕ೦ಜುವೆವೆ ನೀನೇಳೆ೦ದನಾ ಶಬರ || ೧೭ ||
- ಪದವಿಭಾಗ-ಅರ್ಥ:ಮೇಹುಗಾಡಿನೊಳು+ ಅವರ ಮೈ ಮಿಗೆ(ಮೇಯುವ ಕಾಡಿನಲ್ಲಿ ಅವುಗಳ ಮೈಯನ್ನು- ಸುಳಿವನ್ನು) ಸೋಹಿದರೆ(ಬೇಟಯಾಡಲು ತೊಡಗಿದರೆ) ಸುವ್ವಲೆಯ ಸುಬ್ಬಲೆಯ(ಎಂದು ಕೂಗುತ್ತಾ)+ ಆಹವದಲೇ(ಯುದ್ಧ- ಬೇಟೆಯಲ್ಲೇ) ತೋಳ ತೆಕ್ಕೆಯ ತೋಟಿ(ಹೊಯ್ದಾಟ, ತೊಳಲಾಟ,) ತೇಗುವರೆ(ಕಷ್ಟಪಡು) ತೋಹಿನಲಿ(ಮರಗಳ ಗುಂಪು) ತೊದಳಾಗಿ ಗೋರಿಯ(ಆಕರ್ಷಣೆ, ಸೆಳೆತ, ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು, ಒಂದು ಬಗೆಯ ಬೇಟೆ;) ಗಾಹುನಲಿ(ಮೋಸ, ವಂಚನೆ) ಗುರಿ ಗಡಬಡಿಸೆ ಬಲುಸಾಹಸಕೆ+ ಅ೦ಜುವೆವೆ ನೀನು+ ಏಳೆ೦ದನು(ನೀನು ಬಾ)+ ಆ ಶಬರ.
- ಅರ್ಥ:ಆ ಶಬರನು ಹಳ್ಳಿಗಾಡಿನ ತನ್ನ ಭಾಷೆಯಲ್ಲಿ ಭೀಮನಿಗೆ,'ಪ್ರಾಣಿಗಳು ಮೇಯುವ ಕಾಡಿನಲ್ಲಿ ಅವುಗಳ ಮೈಯನ್ನು- ಜಾಡನ್ನು -ಸುಳಿವನ್ನು ತಿಳಿದು ಬೇಟಯಾಡಲು ತೊಡಗಿದರೆ, ಸುವ್ವಲೆಯ ಸುಬ್ಬಲೆಯ ಎಂದು ಕೂಗುತ್ತಾ ಬೇಟೆಯಲ್ಲೇ ನಮ್ಮ ಹೊಯ್ದಾಟ, ತೊಳಲಾಟದಲ್ಲಿ ಕಷ್ಟಪಡುವುದು ಮಾತ್ರಾ ಆಗುವುದು; ಆ ಕಾಡಿನ ಮರಗಳ ನಡುವೆ ಪೊದೆಗಳಲ್ಲಿ ವ್ಯರ್ಥವಾಗಿ ಬೇಟೆ ಮಾಡುವೆವು. ನಮ್ಮ ಬೇಟೆಯ ಗಡಿಬಿಡಿಯಲ್ಲಿ ಗುರಿ ಉಪಾಯ ಗಡಬಡಿಸಿ ತಪ್ಪುವುದೆಂದು ಹೆಚ್ಚಿನ ಸಾಹಸಮಾಡಲು ಅ೦ಜುವೆವು ಅದಕ್ಕಾಗಿ ಬೇಟೆಗೆ ನೀನೆ ಬರಬೇಕು, ಏಳು ನೀನು ಬಾ,' ಎಂದ.
- ಕ೦ಡ ಮೃಗ ಮೈದಿಗೆಯದಿಕ್ಕೆಯ
- ಹಿ೦ಡು ಹೊಳಹಿನ ಹುಲಿಯ ಮೇಕೆಯ
- ಮಿ೦ಡವ೦ದಿಯ ಲಾವಣಿಗೆಯ ಲುಲಾಯ ಲಾಲನೆಯ |
- ತೊ೦ಡು ಮೊಲನ ತೊಡ೦ಕು ನವಿಲಿನ
- ಖ೦ಡೆಯದ ಮೊಳನೆಡೆದ ಖಡ್ಗದ
- ಹಿ೦ಡುಗಳ ತೋರಿಸುವೆನೇಳೆ೦ದನಿಲಜಗೆ ನುಡಿದ || ೧೮ ||
- ಪದವಿಭಾಗ-ಅರ್ಥ:ಕ೦ಡ ಮೃಗ ಮೈದಿಗೆಯದು(ಮೈ+ ತೆಗೆಯದು)+ ಇಕ್ಕೆಯ(ಬೀಡು; ಆಶ್ರಯ ಸ್ಥಾನ;) ಹಿ೦ಡು ಹೊಳಹಿನ ಹುಲಿಯ ಮೇಕೆಯ ಮಿ೦ಡವ೦ದಿಯ(ಪುಂಡಾಟದ ಹಂದಿಯ ) ಲಾವಣಿಗೆಯ(ಗುಂಪು, ಸಮೂಹ ) ಲುಲಾಯ(ಕಾಡುಕೋಣ) ಲಾಲನೆಯ ತೊ೦ಡು(ತುಂಟ) ಮೊಲನ ತೊಡ೦ಕು(ಕುಣಿಯುವ) ನವಿಲಿನ, ಖ೦ಡೆಯದ(ಖದ್ಗದ- ಸುಂಡಿಯ ಮೇಲಿನ ಕೊಂಬು) ಮೊಳ ನೆಡೆದ ಖಡ್ಗದ(ಮೊಳ ಉದ್ದದ ಕೋಡಿನ ಖಡ್ಗಮೃಗಗಳ) ಹಿ೦ಡುಗಳ ತೋರಿಸುವೆನು+ ಏಳೆ೦ದು+ ಅನಿಲಜಗೆ ನುಡಿದ
- 'ಅರ್ಥ:'ಶಬರನು,'ತಾನು ಕ೦ಡ ಮೃಗಗಳು ತಿಂದು ಮೈತೆಗೆದು ಮಲಗಿದ ಇಕ್ಕೆಯ ಬೀಡುನ್ನೂ, ಹಿ೦ಡು ಹಿಂಡಾಗಿರುವ ಹೊಳೆಯುವ ಪಟ್ಟೆ ಹುಲಿಯನ್ನೂ, ಕಾಡು ಮೇಕೆಯ ಮತ್ತು ಪುಂಡಾಟದ ಹಂದಿಯ ಗುಂಪುನ್ನೂ, ಕಾಡು ಎಮ್ಮೆ ಕೋಣಗಳ ಲಾಲನೆಯನ್ನೂ, ತುಂಟ ಓಡುವ ಮೊಲನನ್ನೂ ಕುಣಿಯುವ ನವಿಲಿನ್ನೂ, ಮೊಳ ಉದ್ದದ ಕೋಡಿನ ಖಡ್ಗಮೃಗಗಳ ನೆಡೆಯನ್ನೂ, ತೋರಿಸುವೆನು ಏಳೆ೦ದು ಅನಿಲಜ ಭೀಮನಿಗೆ ಹೇಳಿದನು.
- ಅ೦ಗಚಿತ್ತವನಿತ್ತನಾ ಶಬ
- ರ೦ಗೆ ಬಲೆಗಳ ತೆಗೆಸಿದನು ಹಸು
- ರ೦ಗಿಯನು ತೋಟ್ಟನು ಚಡಾಳಿಸಿ ಪದದೊಳೆಕ್ಕಡವ |
- ಸಿ೦ಗ ಶರಭವನಳವಿಗೊಡಲವ
- ರ೦ಗುಲಿಯಲಡುಪಾಯ ಲೌಡಿಯ
- ಜ೦ಗುಳಿಯ ಜೋಡಿಸಿದನ೦ದು ಜವಾಯ್ಲ ಜಾಯಿಲನ || ೧೯ ||
- ಪದವಿಭಾಗ-ಅರ್ಥ:ಅ೦ಗಚಿತ್ತವನು(ಮನಸ್ಸನ್ನು)+ ಇತ್ತನು(ಕೊಟ್ಟನು)+ ಆ ಶಬರ೦ಗೆ, ಬಲೆಗಳ ತೆಗೆಸಿದನು, ಹಸುರ೦ಗಿಯನು ತೋಟ್ಟನು, ಚಡಾಳಿಸಿ(ಹೊಳೆಯುವಂತೆ ಮಾಡಿ) ಪದದೊಳು (ಪಾದದಲ್ಲಿ)+ ಎಕ್ಕಡವ(ಪಾದರಕ್ಷೆಯನ್ನು), ಸಿ೦ಗ ಶರಭವನು+ ಅಳವಿಗೊಡಲ(ಅಳವು-ಶಕ್ತಿ, ಒಡಲು ದೇಹ)+ ಅವರ೦ಗುಲಿಯಲಿ(ಅಂಗಲಿ - ಬೆರಲು- ಕೈ+ ಅಡುಪಾಯ(ಸೆಣಸಾಟ,ಹೋರಾಟ) ಲೌಡಿಯ(ಅಶಿಕ್ಷತ ಬೇಟೆಗಾರರ) ಜ೦ಗುಳಿಯ(ತಂಡ) ಜೋಡಿಸಿದು+ ಅ೦ದು ಜವಾಯ್ಲು(ವೇಗದ) ಜಾಯಿಲನ(ಬೇಟೆ ನಾಯಿಯನ್ನು)
- ಅರ್ಥ:ಭೀಮನು ಬೇಡನ ಮಾತಿಗೆ ಮನಸಾರೆ ಒಪ್ಪಿ ಬೇಟೆಗೆ ಹೋಗಲು ಸಿದ್ಧನಾದನು. ಅವನು ಬೇಟೆಯ ಬಲೆಗಳ ತೆಗೆಸಿದನು, ಹಸುರ೦ಗಿಯನು ತೋಟ್ಟನು. ಹೊಳೆಯುವಂತೆ ಶುಚಿಮಾಡಿ ಪಾದದಲ್ಲಿ ಪಾದರಕ್ಷೆಯನ್ನು ಹಾಕಿದನು. ಸಿ೦ಗ- ಸಿಂಹ, ಶರಭಗಳ ಶಕ್ತಿಗೆ ಸಮನಾದ ದೇಹವುಳ್ಳ ಅವರ ಕೈಯಲ್ಲಿ ಶಕ್ತಿಯಿರುವ ಹೋರಾಟಗಾರರಾದ ಅಶಿಕ್ಷತ ಬೇಟೆಗಾರರ ತಂಡವನ್ನು ಜೋಡಿಸಿಕೊಂಡು ಅ೦ದು ಚುರುಕಾದ ಬೇಟೆ ನಾಯಿಗಳನ್ನು ಜೋಡಿಸಿಕೊಂಡನು.
- ಮಡಿದ ಕೊಡಿಕೆಗಳೊಡ್ಡಿ ದುರದೊ
- ಪ್ಪಿಡಿಯ ನಡುವಿನ ಕೊ೦ಕಿದುಗುರಿನ
- ನಿಡುವೊಡಲ ನಿರ್ಮಾ೦ಸ ಜ೦ಘೆಯ ಕೆ೦ಪಿನಾಲೆಗಳ |
- ಸಿಡಿಲುಗಳ ಗರ್ಜನೆಯ ಗಗನವ
- ತುಡುಕುವಾಗುಳಿಕೆಗಳ ಮೊರಹಿನ
- ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ೦ || ೨೦ ||
- ಪದವಿಭಾಗ – ಅರ್ಥ:- ಮಡಿದ ಕೊಡಿಕೆಗಳ (ಮಡಚಿದ ಕಿವಿಗಳ)+ ಒಡ್ಡಿ ದುರದ (ಹೋರಾಟಕ್ಕೆ- ಬೇಟೆಗೆ ಒಡಿ,್ಡ ಅನುಭವದ,) ಒಪ್ಪಿಡಿಯ(ಒಂದು ಹಿಡಿಯಷ್ಟು- ಸಣ್ಣ) ನಡುವಿನ (ಸೊಂಟದ) ಕೊ೦ಕಿದ (ಡೊಂಕಾದ)+ ಉಗುರಿನ ನಿಡುವೊಡಲ(ಉದ ್ದದೇಹದ) ನಿರ್ಮಾ೦ಸ ಜ೦ಘೆಯ(ತೆಳುವಾದ ಕಾಲಿನ) ಕೆ೦ಪಿನಾಲೆಗಳ (ಕೆಂಪು ನಾಲಿಗೆಗಳ), | ಸಿಡಿಲುಗಳ ಗರ್ಜನೆಯ(ಬೊಗಳಿದರೆ ಸಿಡಿಲಿನಂತೆ ಆರ್ಭಟಿಸುವ) ಗಗನವ ತುಡುಕುವ (ಹಾರಿ ಆಕಾಶವನ್ನೇ ಹಿಡಿಯುವ)+ ಆಗುಳಿಕೆಗಳ(ಬಾಯಿ ಕಳೆದು ಆಗಾಗ ದೊಡ್ಡದಾಗಿ ಆಕಳಿಸುವ) ಮೊರಹಿನ(ಘರ್ಜನೆ ಮಾಡುವ) ಮಿಡುಕುಗಳ (ಮಿಡುಕು-ಚೈತನ್ಯ, ಶಕ್ತಿಶಾಲಿ) ನಾಯ್(ನಾಯಿಗಳು) ನೂಕಿದವು ಹಾಸದ ವಿಳಾಸದಲಿ( ವಿಳಾಸ- ಭಾವ; ನೂಕಿಕೊಂಡು ಸಂತಸದ ಭಾವದಲ್ಲಿ ಹಿಡಿದವರನ್ನು ನೂಕಿಕೊಂಡು ಓಡಿದವು.
- ಅರ್ಥ:- ಮಡಚಿದ ಜೋಲ ಕಿವಿಗಳ ಹೋರಾಟ ಬೇಟೆಗೆ ಒಡ್ಡಿದ ಅನುಭವದ, ಒಂದು ಹಿಡಿಯಷ್ಟು- ಸಣ್ಣ ಸೊಂಟದ, ಡೊಂಕಾದ ಉಗುರಿನ, ಉದ್ದ ದೇಹದ, ತೆಳುವಾದ ಕಾಲಿನ, ಕೆಂಪು ನಾಲಿಗೆಗಳ ಬೊಗಳಿದರೆ ಸಿಡಿಲಿನಂತೆ ಆರ್ಭಟಿಸುವ, ಹಾರಿ ಆಕಾಶವನ್ನೇ ಹಿಡಿಯುವ, ಬಾಯಿ ಕಳೆದು ಆಗಾಗ ದೊಡ್ಡದಾಗಿ ಆಕಳಿಸುವ, ಘರ್ಜನೆ ಮಾಡುವ ಚೈತನ್ಯಯುತ ಶಕ್ತಿಶಾಲಿ ಬೇಟೆನಾಯಿಗಳು ಹಿಡಿದವರನ್ನು ನೂಕಿಕೊಂಡು ಸಂತಸದ ಭಾವದಲ್ಲಿ ಓಡಿದವು.
- ಹೆಸರ ನಾಯ್ಗಳ ಹಾಸ ಹರಿದು
- ಬ್ಬಸದಲುಳಿಗದವದಿರ ಹಿಡಿಮೃಗ
- ಮಸಗಿದವು ಹದವಿಲುಗಳೊದೆದವು ಹದೆಯ ಹರವಿನಲಿ |
- ನುಸುಳಿದವು ಮೊಲನುರಿಯ ಹೊಗೆಗಳ
- ದೆಸೆವಿಡಿದು ಕೆದರಿದವು ಹೊಲದಲಿ
- ಹಸುಬ ಹರಡೆಗಳನೇನನೆ೦ಬೆನು ಶಕುನ ಸೂಚಕವ || ೨೧ ||
- ಪದವಿಭಾಗ- ಅರ್ಥ:- ಹೆಸರ(ಪ್ರಸಿದ್ಧ; ಬೇಟೆಗೆ ಹೆಸರಾದ) ನಾಯ್ಗಳ ಹಾಸ (ಹಾಸ- ಕೊರಳ ಹಗ್ಗ) ಹರಿದು+ ಉಬ್ಬಸದ (ಕಷ್ಟಕರವಾದ)+ ಲುಳಿಗದ(ಚತುರತೆಯಿಂದ)+ ಅವದಿರ ಹಿಡಿ ಮೃಗ(ಆ ಮೃಗಗಳನ್ನು ಹಿಡಿ ಎನ್ನಲು ನಾಯಿಗಳು) ಮಸಗಿದವು (ಉತ್ಸಾಹದಿಂದ ಆಕ್ರಮಿಸಿದವು) ಹದವಿಲುಗಳು+ ಒದೆದವು ಹದೆಯ(ಹುಲ್ಲಿನ ಪೊದೆಂiÀಗಳ ಒಳಗೆ) ಹರವಿನಲಿ; ನುಸುಳಿದವು. ಮೊಲನು (ಮೊಲಗಳು)+ ಉರಿಯ(ಬೇಟೆಗಾರರು ಹಾಕಿದ ಬೆಂಕಿಯ) ಹೊಗೆಗಳ ದೆಸೆವಿಡಿದು (ದಿಕ್ಕಿನಲ್ಲಿ) ಕೆದರಿದವು(ಚದುರಿ ಹೊಲದಲ್ಲಿ ಓಡಿದವು) ಹೊಲದಲಿ,; ಹಸುಬ (ಹಸಿರು ಬಣ್ನದ ಹಕ್ಕಿಗಳ ಮತ್ತು) ಹರಡೆಗಳನು(ಹರಡೆ- ಕೊಕ್ಕರೆಗಳ ವಿಚಾರವನ್ನು ಏನು ಹೇಳಲಿ.)+ ಏನನೆ೦ಬೆನು (ಇವುಗಳ ಶಕುನ ಸೂಚಕವನ್ನು ಏನು ಹೇಳಲಿ) ಎಂದನು ಮುನಿ..
- ಅರ್ಥ :- ‘ಭೀಮನ ಬೇಟೆಯಲ್ಲಿ ಅಲ್ಲಿರುವ ಆ ಮೃಗಗಳನ್ನು ಹಿಡಿ ಎನ್ನಲು ಹೆಸರಾದ ಉತ್ತಮ ಬೇಟೆ ನಾಯಿಗಳು ಕೊರಳ ಹಗ್ಗ ಬಿಡಿಸಿಕೊಂಡು ಬಹಳ ಚತುರತೆ ಮತ್ತು ಉತ್ಸಾಹದಿಂದ ಆಕ್ರಮಿಸಿದವು. ಹುಲ್ಲಿನ ಪೊದೆಗಳ ಒಳಗೆ- ಹರವಿನಲ್ಲಿ ನುಸುಳಿ ಹೋದವು. ಮೊಲಗಳು ಬೇಟೆಗಾರರು ಹಾಕಿದ ಬೆಂಕಿಯ ಹೊಗೆಗಳ ದಿಕ್ಕಿನಲ್ಲಿ ಚದುರಿ ಹೊಲದಲ್ಲಿ ಓಡಿದವು). ಹೊಲದಲ್ಲಿ ಹಸುಬ ಎಂಬ ಹಸಿರು ಬಣ್ನದ ಹಕ್ಕಿಗಳ ಮತ್ತು ಕೊಕ್ಕರೆಗಳ ವಿಚಾರವನ್ನು ಏನು ಹೇಳಲಿ (ಅವು ಅಪಶಕುನವನು ಸೂಚಿಸಿ ಹಾರಿ ಹೋದವು?). ಇವುಗಳ ಶಕುನ ಸೂಚಕವನ್ನು ಏನು ಹೇಳಲಿ,’ ಎಂದನು ಮುನಿ.
- ಬಗೆಯನವ ಶಕುನವ ಮೃಗವ್ಯದ
- ಸೊಗಸಿನಲಿ ಸಿಲುಕಿದ ಮನೋ ವೃ
- ತ್ತಿಗ ಳೊಳು೦ಟೆ ವಿವೇಕ ದರ್ಮ ವಿಚಾರ ವಿಸ್ತಾರ |
- ಹೊಗರೊಗುವ ಹೊ೦ಗರಿಯ ಬಿಲು ಸರ
- ಳುಗಳ ಹೊದೆಗಳ ನಡೆದುದಡವಿಯ
- ಬೆಗಡುಗೊಳಿಸುತ ಮು೦ದೆ ಮು೦ದೆ ಪುಳಿ೦ದ ಸ೦ದೋಹ ||೨೨ ||
- ಪದವಿಭಾಗ-ಅರ್ಥ: ಬಗೆಯನು (ಗಮನಿಸುವುದಿಲ್ಲ, ಚಿಂತೆಮಾಡುವುದಿಲ್ಲ)+ ಅವ (ಅವ ಭೀಮನು ಶಕುನಗಳನ್ನು.) ಶಕುನವ; ಮೃಗವ್ಯದ ಸೊಗಸಿನಲಿ ಸಿಲುಕಿದ (ಮೃಗಬೇಟೆಯ ಸೊಗಸು ಸಂತೋಷದ ಹಿಡಿತದಲ್ಲಿ ಸಿಕ್ಕಿದ) ಮನೋವೃತ್ತಿಗಳೊಳು (ಮನೋವೃತ್ತಿಯಲ್ಲಿ, ವ್ಯಸನ, ಚಟಗಳಲ್ಲ್ಲಿ)+ ಉ೦ಟೆ ವಿವೇಕ ದರ್ಮ ವಿಚಾರ ವಿಸ್ತಾರ (ವಿವೇಕ ದರ್ಮ ವಿಚಾರ ಇರುವುದೇ? ಇರುವುದಿಲ್ಲ ; ಹೊಗರು (ಗರ್ವ, ಕಾಂತಿ )+ ಒಗುವ (ಹೊರಚೆಲ್ಲುವ- ಹೊರಸೂಸುವ) ಹೊ೦ಗರಿಯ (ಹೊನ್ನಿನ- ಚಿನ್ನದ ಗರಿಯ) ಬಿಲು ಸರಳುಗಳ (ಬಾಣಗಳ) ಹೊದೆಗಳ(ರಾಶಿಗಳ) ನಡೆದುದು+ ಅಡವಿಯ ಬೆಗಡುಗೊಳಿಸುತ (ಅಚ್ಚರಿಗೊಳಿಸುತ್ತ) ಮು೦ದೆ ಮು೦ದೆ ಪುಳಿ೦ದ ಸ೦ದೋಹ(ಸಮೂಹ).
- ಅರ್ಥ: ಮೃಗಬೇಟೆಯ ಸೊಗಸು ಮತ್ತು ಸಂತೋಷದ ಹಿಡಿತದಲ್ಲಿ ಸಿಕ್ಕಿದ ಆ ಭೀಮನು ಶಕುನಗಳನ್ನು ಗಮನಿಸುವುದಿಲ್ಲ; ವ್ಯಸನ, ಚಟಗಳಲ್ಲ್ಲಿ ಹಿಡಿತದಲ್ಲಿ ಸಿಕ್ಕಿದವರಿಗೆ ವಿವೇಕ ದರ್ಮ ವಿಚಾರ ಇರುವುದೇ? ಇರುವುದಿಲ್ಲ, ಹೊಳಪನ್ನು ಹೊರಸೂಸುವ ಹೊ೦ಗರಿಯ ಬಿಲ್ಲು ಬಾಣಗಳ ರಾಶಿಗಳನ್ನು ಬೀರುತ್ತಾ ಅಡವಿಯನ್ನು ಅಚ್ಚರಿಗೊಳಿಸುತ್ತ ಬೇಡರ ಸಮೂಹ ಮು೦ದೆ ಮು೦ದೆ ನಡೆಯಿತು.
- ಬ೦ಡಿಗಳ ಬೆಳ್ಳಾರೆವಲೆಗಳ
- ಖ೦ಡವಲೆಗಳ ತಡಿಕೆವಲೆಗಳ
- ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ |
- ದ೦ಡೀವಲೆಗಳ ತೊಡಕುವಲೆಗಳ
- ಹಿ೦ಡುವಲೆಗಳ ಮಯಣದ೦ಟಿನ
- ಮ೦ಡುವಿಗೆ ಬಲೆಗಳ ಕಿರಾತರು ಕೆದರಿತಗಲದಲಿ || ೨೩ ||
- ಪದವಿಭಾಗ-ಅರ್ಥ:ಬ೦ಡಿಗಳ ಬೆಳ್ಳಾರೆವಲೆಗಳ (ವಲೆಗಳ= ಬಲೆಗಳ ) ಖ೦ಡವಲೆಗಳ, ತಡಿಕೆವಲೆಗಳ, ಗುಂಡುವಲೆಗಳ, ಬೀಸುವಲೆಗಳ, ಕಾಲುಗಣ್ಣಿಗಳ (ಕಾಲಿಗೆ ಕಟ್ಟುವ ಕಣ್ಣಿ - ಹಗ್ಗ); ದ೦ಡೀವಲೆಗಳ, ತೊಡಕುವಲೆಗಳ, ಹಿ೦ಡುವಲೆಗಳ; ಮಯಣದ೦ಟಿನ ಮ೦ಡುವಿಗೆ ಬಲೆಗಳ, ಕಿರಾತರು ಕೆದರಿತು+ ಅಗಲದಲಿ
- ಅರ್ಥ: ಬೇಟೆಗೆ ಭೀಮನ ಜೊತೆಗೆ ಹೊರಟ ಬೇಟೆಗಾರರು, ಬ೦ಡಿಗಳನ್ನೂ ನಾನಾ ಬಗೆಯ ಬಲೆಗಳಾದ ಹಕ್ಕಿ ಹಿಡಿಯುವ ಬೆಳ್ಳಾರೆ ಬಲೆಗಳು, ಖ೦ಡಬಲೆಗಳು, ಅಡ್ಡಕಟ್ಟುವ ತಡಿಕೆಯಂತಿರುವ ಬಲೆಗಳು, ಗುಂಡುಕಟ್ಟಿದ ಬಲೆಗಳ, ಬೀಸುಬಲೆಗಳ, ಹಿಡಿದ ಪ್ರಾಣಿಗಳನ್ನು ಕಟ್ಟಲು ಕಾಲುಗಣ್ಣಿಗಳು; ದ೦ಡೀಬಲೆಗಳ, ತೊಡಕು ಬಲೆಗಳು, ಹಿ೦ಡು ಬಲೆಗಳ; ಹಕ್ಕಿಗಳನ್ನು ಹಿಡಿಯಲು ಮಯಣ ದ೦ಟಿನ ಮ೦ಡುವಿಗೆ ಬಲೆಗಳು, ಇವುಗಳನ್ನು ತೆಗೆದುಕೊಂಡು ಬೇಡರು ಕಾಡಿನ ಅಗಲವಾದ ಪ್ರದೇಶದಲ್ಲಿ ಕೆದರಿ ಹರಡಿಕೊಂಡರು.
- ಏನನೆ೦ಬೆನು ಜೀಯ ಹೊಕ್ಕನು
- ಕಾನನವನನಿಲಜನು ಶಬರ ವಿ
- ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ |
- ಕಾನನಪನಳಿವಿನ ಶಿಲೋಚ್ಚಯ
- ಸಾನುವಿನ ಗಹ್ವರದ ಗ೦ಡ
- ಸ್ಥಾನ ದೀರ್ಘದ್ರೋಣಗಳರಸಿದರು ಮೃಗಕುಲವ || ೨೪ ||
- ಪದವಿಭಾಗ-ಅರ್ಥ: ಏನನೆ೦ಬೆನು ಜೀಯ ಹೊಕ್ಕನು ಕಾನನವನು+ ಅನಿಲಜನು(ಭೀಮನು) ಶಬರ (ಬೇಡ) ವಿತಾನ (ಸಮೂಹ) ವು+ ಇಕ್ಕಿದ (ಇಟ್ಟ) ವೇಡೆಗಳ (ಸುತ್ತುಗಟ್ಟುವಿಕೆಯನ್ನು) ಬೆಳ್ಳಾರ ಸುತ್ತುಗಳ (ವಿಶಾಲ ಪ್ರದೇಶದಲ್ಲಿ ಬಲೆಹಾಕಿ ಸುತ್ತುಗಟ್ಟಿರುವುದನ್ನು) ಕಾನನಪನ+ ಅಳಿವಿನ ಶಿಲೋಚ್ಚಯ (ಕಲ್ಲಿನ ಎತ್ತರದ ಬಂಡೆ ) ಸಾನುವಿನ (ಬೆಟ್ಟದ ತಪ್ಪಲಿನ) ಗಹ್ವರದ (ದೊಡ್ಡ ಗುಹೆಯ) ಗ೦ಡಸ್ಥಾನ (ಅಪಾಯದ ಪ್ರದೇಶಗಳು,) ದೀರ್ಘದ್ರೋಣಗಳ (ಉದ್ದ ಕಣಿವೆ ಅಥವಾ ನೀರು ತುಂಬಿದ ಕಣಿವೆ, ನೀರು ಹರಿಯುವ ಅಗಳಗಳು) + (ಅಲ್ಲಿ) ಅರಸಿದರು (ಹುಡುಕಿದರು) ಮೃಗಕುಲವ (ಕಾಡು ಪ್ರಾಣಿಗಳನ್ನು).
- ಅರ್ಥ: ರಾಜನೇ, ಏನನ್ನು ಹೇಳಲಿ ಆ ಬೇಟೆಯ ಅದ್ಭುತವನ್ನು;, ಭೀಮನು ಬೇಡರ ಸಮೂಹದ ಜೊತೆಗೆ ಕಾಡನ್ನು ಹೊಕ್ಕನು. ಬೇಡರ ಸಮೂಹವು ಇಟ್ಟ ಸುತ್ತುಬಲೆಯ ವೇಡೆಗಳು- ಬೆಳ್ಳಾರದ ವಿಸ್ತಾರ ಸುತ್ತುಗಳನ್ನು ಕುರಿತು ಏನು ಹೇಳಲಿ. ಕಾಡುರಾಜನ ದೊಡ್ಡ ತಗ್ಗುಳ್ಳ ದರೆಯನ್ನು ಮಾಡಿದ, ಕಲ್ಲಿನ ಎತ್ತರದ ಬಂಡೆ, ಮತ್ತೆ ಬೆಟ್ಟದ ತಪ್ಪಲಿನಲ್ಲಿರುವ ಗಹ್ವರದ ದೊಡ್ಡ ಗುಹೆ, ಅಪಾಯದ ಪ್ರದೇಶಗಳು, ಉದ್ದ ಕಣಿವೆ ಅಥವಾ ನೀರು ತುಂಬಿದ ಕಣಿವೆ, ನೀರು ಹರಿಯುವ ಅಗಳಗಳು, ಅಲ್ಲಿ ಭೀಮ ಮತ್ತು ಬೇಡರು ಕಾಡು ಪ್ರಾಣಿಗಳನ್ನು ಹುಡುಕಿದರು.
- ಬೊಬ್ಬೆಗಳ ಪಟಹದ ಮೃದ೦ಗದ
- ಸರ್ಬ ಲಗ್ಗೆಯ ಸೋಹಿನಲಿ ಸುಳಿ
- ವಬ್ಬರಕೆ ಹಿ೦ಡೊಡೆದು ಹಾಯ್ದವು ಸೂಸಿದವು ದೆಸೆಗೆ |
- ತೆಬ್ಬಿದವು ಬೆಳ್ಳಾರವಲೆಹರಿ
- ದುಬ್ಬಿ ಹಾಯ್ದೊಡೆ ವೇಡೆಯವರಿಗೆ
- ಹಬ್ಬವಾಯ್ತೇನೆ೦ಬೆನಗಣಿತ ಮೃಗ ನಿಪಾತನವ || ೨೫ ||
- ಪದವಿಭಾಗ-ಅರ್ಥ:ಬೊಬ್ಬೆಗಳ (ಕೂಗಾಡುವ ,) ಪಟಹದ ಮೃದ೦ಗದ ಸರ್ಬ(ಎಲ್ಲಾ) ಲಗ್ಗೆಯ ಸೋಹಿನಲಿ (ಪಟಹ, ಮೃದಂಗಗಳನ್ನು ಬಡಿಯುತ್ತಾ ಧಾಳಿಇಟ್ಟು ಹುಡುಕಿ ಹೊಡೆಯುವ ಸೋ-ಬೇಟೆಯನ್ನು ಮಾಡುತ್ತಾ) ಸುಳಿವ+ ಅಬ್ಬರಕೆ, ಹಿ೦ಡೊಡೆದು ಹಾಯ್ದವು (ಪ್ರಾಣಿಗಳು ಗುಂಪು ಉಡೆದು ಭಯದಿಂದ ದಿಕ್ಕು ದಿಕ್ಕಿಗೆ ಓಡಿದವು.) ಸೂಸಿದವು ದೆಸೆಗೆ ದಿಕ್ಕು ದಿಕ್ಕಿಗೆ ಓಡಿದವು; ತೆಬ್ಬಿದವು (ಸುತ್ತಿಕೊಳ್ಳು, ನೆಗೆ) ವಿಸ್ತಾರವಾಗಿ ಹಾಕಿದ ಬೆಳ್ಳಾರ ಬಲೆ ಹರಿದು+ ಉಬ್ಬಿ(ಉತ್ಸಾಹದಿಂದ) ಹಾಯ್ದೊಡೆ(ಓಡಿದರೆ) ವೇಡೆಯವರಿಗೆ (ಮುತ್ತಿಗೆ ಹಾಕಿದವರಿಗೆ) ಹಬ್ಬವಾಯ್ತು+ ಏನೆ೦ಬೆನು+ ಅಗಣಿತ ಮೃಗ ನಿಪಾತನವ(ನಿಪಾತ - ಬೀಳು.)
- ಅರ್ಥ:ಬೇಟಗಾರರು ಆರ್ಭಟಿಸುವ ಮತ್ತು ಮೃದಂಗಂತಿರುವ ಪಟಹವನ್ನು ಬಡಿಯುವ ಎಲ್ಲಾ ತರದ ಧಾಳಿಇಟ್ಟು ಹುಡುಕಿ ಹೊಡೆಯುವ ಸೋ-ಬೇಟೆಯನ್ನು ಮಾಡುತ್ತಾ, ಬೇಟೆಗಾರರು ಓಡಾಡುವ ಅಬ್ಬರಕ್ಕೆ ಪ್ರಾಣಿಗಳು ಭಯದಿಂದ ದಿಕ್ಕು ದಿಕ್ಕಿಗೆ ಓಡಿದವು. ಕೆಲವು ನೆಗೆದವು; ವಿಸ್ತಾರವಾಗಿ ಹಾಕಿದ ಬೆಳ್ಳಾರ ಬಲೆ ಪ್ರಾಣಿಗಳು ಕೆಲವು ಹರಿದು ಉಬ್ಬಿ ಓಡಿದರೆ ಮುತ್ತಿಗೆ ಹಾಕಿದವರಿಗೆ ಹಬ್ಬವಾಯಿತು ಅಗಣಿತವಾಗ ಮೃಗಗಳು ಬೇಟೆಗೆ ಬಿದ್ದುದನ್ನು ಏನೆ೦ಬೆನು,’ ಎಂದನು ಮುನಿ.
- ಹೊಕ್ಕು ತಿವಿದರು ಸಬಳದಲಿ ಜಡಿ
- ವೆಕ್ಕಲನನಳವಿಯಲಿ ಹರಿಣವ
- ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ |
- ಸೊಕ್ಕಿದರು ಸುರಗಿಯಲಿ ಹೊದರಲಿ
- ಹೊಕ್ಕು ಹುಲಿಗಳ ಕೆಣಕಿ ಖಡ್ಗದ
- ಲಿಕ್ಕಡಿಯ ತೋರಿದರು ತೂರಿದರಖಿಳ ಮೃಗಕುಳವ || ೨೬ ||
- ಪದವಿಭಾಗ-ಅರ್ಥ:ಹೊಕ್ಕು ತಿವಿದರು ಸಬಳದಲಿ(ಈಟಿಯಿಂದ) ಜಡಿವ+ ಎಕ್ಕಲನನ(ಎಕ್ಕಲ = ಕಾಡುಹಂದಿ)+ ಅಳವಿಯಲಿ (ಸಶಕ್ತಿಯಿಂದ) ಹರಿಣವನು+ ಇಕ್ಕಿದರು(ಹೊಡೆದರು) ನಾರಾಚದಲಿ(ಬಾಣದಿಂದ), ಸೈವರಿದು(ನುಗ್ಗಿ) ಸೈರಿಭನ (ಸೈರ್+ ಇಭ- ಆನೆಯನ್ನು) ಸೊಕ್ಕಿದರು ಸುರಗಿಯಲಿ (ಕತ್ತಿಯಿಂದ) ,ಹೊದರಲಿ (ಪೊದೆಯಲ್ಲಿ) ಹೊಕ್ಕು ಹುಲಿಗಳ ಕೆಣಕಿ ಖಡ್ಗದ ಲಿಕ್ಕಡಿಯ(ಹೊಡೆತ?) ತೋರಿದರು ತೂರಿದರು+ ಅಖಿಳ ಮೃಗಕುಳವ(ಪ್ರಾಣಿಗಳ ಸಮೂಹವನ್ನು)
- ಅರ್ಥ:ಬೇಟಗಾರರು ಕಾಡಿನಲ್ಲಿ ಪ್ರಾಣಿಗಳನ್ನು ಈಟಿಯಿಂದ ಹೊಕ್ಕು ತಿವಿದರು. ಜಡಿವ-ನುಗ್ಗಿ ಕೋರೆಯಿಂದ ಸೀಳುವ ಕಾಡುಹಂದಿಯನ್ನು ಸಶಕ್ತಿಯಿಂದ ಹೊಡೆದರು. ಹರಿಣ- ಜಿಂಕೆಗಳನ್ನು ಬಾಣಗಳಿಂದ ಹೊಡೆದರು. ನುಗ್ಗಿ ಆನೆಯನ್ನು ಸೊಕ್ಕಿನಿಂದ ಈಟಿ ಕತ್ತಿಗಳಿಂದ ಹೊಡೆದರು. ಪೊದೆಯಲ್ಲಿ ಹೊಕ್ಕು ಹುಲಿಗಳನ್ನು ಕೆಣಕಿ ಖಡ್ಗದ ಹೊಡೆತ ತೋರಿದರು. ಅವುಗಳಲ್ಲಿ ಖಡ್ಗವನ್ನು ತೂರಿಸಿದರು. ಹೀಗೆ ಪ್ರಾಣಿಗಳ ಸಮೂಹವನ್ನು ಬೇಟೆಯಾಡಿದರು.
- ಕಳಚಿ ಹಾಸವನುಬ್ಬರಿಸಿಲ
- ವ್ವಳಿಸಿ ಕ೦ಠೀರವನ ಮೋರೆಗೆ
- ನಿಲುಕಿದವು ಕದುಬಿದವು ಹಾಯ್ದವು ಹಣುಗಿ ಹುಡುಕಿದವು |
- ಸೆಳೆವುಡಿದುಕ್ಕುಳಿಸಿತೆಡ ಬಲ
- ಬಳಸಿದವು ಮೆಲುವಾಯಿದವು ವೆ
- ಗ್ಗಳಿಸಿದವು ಕುಸುಬಿದವು ಕುನ್ನಿಗಳಖಿಳ ಮೃಗ ಕುಲವ || ೨೭ ||
- ಪದವಿಭಾಗ-ಅರ್ಥ:ಕಳಚಿ ಹಾಸವನು (ಕೊರಳ ಹಗ್ಗವನ್ನು)+ ಉಬ್ಬರಿಸಿ(ಉತ್ಸಾಹದಿಂದ) ಲವ್ವಳಿಸಿ(ಲವಲವಿಸಿ- ಆತುರಪಟ್ಟು ) ಕ೦ಠೀರವನ (ಸಿಂಹದ) ಮೋರೆಗೆ ನಿಲುಕಿದವು ಕದುಬಿದವು (ಮುತ್ತಿದವು, ಆವರಿಸು) ಹಾಯ್ದವು ಹಣುಗಿ (ಬಗ್ಗಿನೋಡಿ, ಹಣುಕಿ) ಹುಡುಕಿದವು; ಸೆಳೆವುಡಿದು (ಗುರಿ. ಆಕರ್ಷಿಸಿ, ಸಮಯ ನೋಡಿ)+ ಉಕ್ಕುಳಿಸಿತು (ಶಕ್ತಿ ತೋರಿತು, ಮೇಲೆ ಬಿದ್ದವು)+ ಎಡ ಬಲ ಬಳಸಿದವು (ಸುತ್ತಾಡಿದವು ಮೆಲುವಾಯಿದವು ( ಆಕ್ರಮಿಸಲು ಮೇಲೆ ಬಿದ್ದವು) ವೆಗ್ಗಳಿಸಿದವು (ವೆಗ್ಗಳ- ಹೆಚ್ಚು, ಸೊಕ್ಕಿ ಆಕ್ರಮಿಸಿದವು) ಕುಸುಬಿದವು (ತೊಳೆಯುವಾಗ ಬಟ್ಟೆಯನ್ನು ಕುಸುಬಿದಂತೆ, ಮತ್ತೆ ಮತ್ತೆ ಕುಕ್ಕು, ಮೇಲೆಬಿದ್ದು ಕೆಡವಿದವು) ಕುನ್ನಿಗಳು+ ಅಖಿಳ ಮೃಗ ಕುಲವ.ಪ್ರಾಣಿಗಳ ಸಮೂಹವನ್ನು.
- ಅರ್ಥ:ಬೇಟೆಯಲ್ಲಿ ನಾಯಿಗಳು ಕೊರಳ ಹಗ್ಗವನ್ನು ಕಳಚಿಕೊಂಡು ಉಬ್ಬರಿಸಿ ರಬಸದಿಂದ ಆತುರಪಟ್ಟು ಸಿಂಹದ ಮೋರೆಗೆ ಹಾರಿದವು, ಪ್ರಾಣಿಗಳನ್ನು ಮುತ್ತಿ ಹಿಡಿದವು, ಅವು ಬಗ್ಗಿ ನೋಡಿ, ಹಣುಕಿಹಾಕಿ ಪ್ರಾಣಿಗಳನ್ನು ಹುಡುಕಿದವು. ಗುರಿ ಹಿಡಿದು ಸಮಯ ನೋಡಿ ಶಕ್ತಿ ತೋರಿ ಮೇಲೆ ಬಿದ್ದವು. ಎಡ ಬಲ ಬಳಸಿ ಸುತ್ತಾಡಿದವು. ಮೇಲೆ ಹಾಯ್ದು ಪ್ರಾಣಿಗಳನ್ನು ಆಕ್ರಮಿಸಲು ಮೇಲೆ ಬಿದ್ದವು. ಹೆಚ್ಚು ಸೊಕ್ಕಿನಿಂದ ಆಕ್ರಮಿಸಿದವು. ಮತ್ತೆ ಮತ್ತೆ ಮೇಲೆಬಿದ್ದು ಕೆಡವಿದವು. ನಾಯಿಗಳು ಕಾಡಿನ ಎಲ್ಲಾ ಪ್ರಾಣಿಗಳ ಸಮೂಹವನ್ನು ಆಕ್ರಮಿಸಿದವು.
- ಗಾಯವಡೆದೆಕ್ಕಲನ ರಭಸದ
- ಜಾಯಿಲ೦ಗಳ ಗರ್ಜನೆಯ ಪೂ
- ರಾಯದೇರಿನ ಕರಡಿ ಕಾಡಾನೆಗಳ ಕಳವಳದ |
- ನೋಯಲೊರಲುವ ಶರಭ ಸಿ೦ಹ ಲು
- ಲಾಯ ವೃಕ ಶಾರ್ದೂಲ ಶಶ ಗೋ
- ಮಾಯು ಮೊದಲಾದಖಿಳ ಮೃಗರವ ತು೦ಬಿತ೦ಬರವ || ೨೮ ||
- ಪದವಿಭಾಗ-ಅರ್ಥ: ಗಾಯವಡೆದ+ ಎಕ್ಕಲನ(ಕಾಡು ಹಂದಿಯ) ರಭಸದ ಜಾಯಿಲ೦ಗಳ (ಬೇಟೆ ನಾಯಿಗಳ) ಗರ್ಜನೆಯ ಪೂರಾಯದ (ಎಲ್ಲಾ ಬಗೆಯ)+ ಏರಿನ (ಎತ್ತರದ, ಮರದ ಮೇಲಿನ) ಕರಡಿ ಕಾಡಾನೆಗಳ ಕಳವಳದ, ನೋಯಲ (ಭಯ¸ದ ಕೂಗಿನ)+ ಒರಲುವ ಶರಭ ಸಿ೦ಹ ಲುಲಾಯ (ಕಾಡುಕೋಣ) ವೃಕ (ತೋಳ) ಶಾರ್ದೂಲ ಶಶ (ಮೊಲ) ಗೋಮಾಯು (ನರಿ) ಮೊದಲಾದ+ ಅಖಿಳ ಮೃಗ-ರವ (ಸದ್ದು) ತು೦ಬಿತು+ ಅ೦ಬರವ
- ಅರ್ಥ:ಭೀಮನ ಮತ್ತು ಬೇಡರ ಬೇಟೆ ಅತಿಯಾಗಲು, ಗಾಯಪಡೆದ ಕಾಡು ಹಂದಿಯ ಆರ್ಭಟ; ರಭಸದ ಬೇಟೆ ನಾಯಿಗಳ ಗರ್ಜನೆಯ ಎಲ್ಲಾ ಬಗೆಯ ಪ್ರಾನಿಗಳ ಕೂಗು, ಮರದ ಮೇಲಿನ ಕರಡಿ, ಕಾಡಾನೆಗಳ ಭಯದ ಕೂಗು, ಒರಲುವ ಶರಭ, ಸಿ೦ಹ, ಕಾಡುಕೋಣ, ವೃಕ- ತೋಳ, ಶಾರ್ದೂಲ- ಹುಲಿ, ಮೊಲ, ನರಿ ಮೊದಲಾದ ಎಲ್ಲಾ ಮೃಗಗಳ ಸದ್ದು ಕಾಡನ್ನು ಮೀರಿ ಆಕಾಶವನ್ನು ತು೦ಬಿತು.
- ಮುಳುದೊಡಕಿನೊಳು ಕೂದಲೊ೦ದೇ
- ಸಿಲುಕಿ ನಿ೦ದವು ಚಮರಿ ಮೃಗ ಮರಿ
- ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು |
- ಎಳೆವರಿಯ ನಡಗಲಿಸಿ ನಿ೦ದವು
- ಮಲೆತು ಸಿ೦ಹದ ಮಿಥುನ ಹಿ೦ಡಿನ
- ಕಳಭವನು ಹಿ೦ದಿಕ್ಕಿ ವನಕರಿ ತೂಳಿದವು ಪಡೆಯ || ೨೯ ||
- ಪದವಿಭಾಗ-ಅರ್ಥ: ಮುಳುದೊಡಕಿನೊಳು (ಮುಳ್ಳಿನ ತೊಡಕಿನ ಪೊದೆಯಲ್ಲಿ ಕೂದಲುಸಿಕ್ಕಿಕೊಂಡು.) ಕೂದಲೊ೦ದೇ ಸಿಲುಕಿ ನಿ೦ದವು ಚಮರಿ ಮೃಗ (ಅಲ್ಲಿಯೇ ಚಮರೀ ಮೃಗಗಳು ನಿಂತವು); ಮರಿಗಳಿಗೆ ಮೊಲೆಗೊಡುತ+ ಇರುಕಿನಲಿ ಹುದುಗಿದವು ಹುಲ್ಲೆಗಳು (ಜಿಂಕೆಗಳು ಮರಿಗಳಿಗೆ ಮೊಲೆಯುಣ್ಣಿಸುತ್ತಾ ಸಂದಿಗಳಲ್ಲಿ ಅಡಗಿದವು) ಎಳೆವರಿಯನು+ ಅಡಗಲಿಸಿ (ಅಡಗಿಸಿಕೊಂಡು) ನಿ೦ದವು, ಮಲೆತು (ಸಿಟ್ಟಿನಿಂದ) ಬೇಟಗಾರರನ್ನು ಎದುರಿಸಿ ನಿಂತವು) ಸಿ೦ಹದ ಮಿಥುನ (ಜೋಡಿ) ; ಹಿ೦ಡಿನ ಕಳಭವನು(ಆನಗಳು ತಮ್ಮಹಿಂಡಿನ ಆನೆ ಮರಿಗಳನ್ನಿ ತಮ್ಮ ಹಿಂದಕ್ಕೆ ಇಟ್ಟುಕೊಂಡು,ಆನೆಗಳು ಬೇಟೆಯ ಪಡೆಯ ಕಡೆ ನುಗ್ಗಿದವು.) ಹಿ೦ದಿಕ್ಕಿ ವನಕರಿ ತೂಳಿದವು ಪಡೆಯ.
- ಅರ್ಥ: ಬೇಟೆಯ ಸಮಯದಲ್ಲಿ ಮುಳ್ಳಿನ ತೊಡಕಿನ ಪೊದೆಯಲ್ಲಿ ಕೂದಲುಸಿಕ್ಕಿಕೊಂಡು ಅಲ್ಲಿಯೇ ಚಮರೀ ಮೃಗಗಳು ನಿಂತವು; ಜಿಂಕೆಗಳು ಮರಿಗಳಿಗೆ ಮೊಲೆಯುಣ್ಣಿಸುತ್ತಾ ಸಂದಿಗಳಲ್ಲಿ ಅಡಗಿದವು. ಸಿ೦ಹದ ಜೋಡಿ ಸಿಟ್ಟಿನಿಂದ ಬೇಟಗಾರರನ್ನು ಎದುರಿಸಿ ನಿಂತವು. ಹಿಂಡಿನಲ್ಲಿದ್ದ ಎಳೆಯ ಆನೆ ಮರಿಗಳನ್ನು, ಕಾಡು ಆನೆಗಳು ತಮ್ಮ ಹಿಂದಕ್ಕೆ ಇಟ್ಟುಕೊಂಡು ಬೇಟೆಗಾರರ ಪಡೆಯ ಕಡೆ ನುಗ್ಗಿದವು.
- ಪಡೆ ಬೆದರೆ ಪಡಿತಳಿಸಿ ಪವನಜ
- ಹಿಡಿದು ಬೀಸಿದನಾನೆಗಳನವ
- ಗಡಿಸಿ ಸಿ೦ಹವ ಸೀಳಿದನು ಹಾಯ್ದೆತ್ತುವೆಕ್ಕಲನ
- ಮಡದಲುರೆ ಗಟ್ಟಿಸಿದ ಮುಷ್ಟಿಯೊ
- ಳಡಸಿ ತಿವಿದನು ಹುಲಿಯ ಕರಡೀಯ
- ಕೊಡಹಿದನು ಕೊ೦ದನು ವನಾ೦ತದೊಳಖಿಳ ಮೃಗಕುಲವ || ೩೦ ||
- ಪದವಿಭಾಗ-ಅರ್ಥ:ಪಡೆ(ಬೇಡಪಡೆ) ಬೆದರೆ ಪಡಿತಳಿಸಿ(ಮುಂದೆನುಗ್ಗಿ ಆಕ್ರಮಿಸಿ) ಪವನಜ ಹಿಡಿದು ಬೀಸಿದನು+ ಆನೆಗಳನು+ ಅವಗಡಿಸಿ(ಪ್ರತಿಭಟಿಸು,ಮೇಲೆ ನುಗ್ಗು -ಹಿಮ್ಮಟ್ಟಿಸಿ) ಸಿ೦ಹವ ಸೀಳಿದನು ಹಾಯ್ದು+ ಎತ್ತುವ+ ಎಕ್ಕಲನ(ಕಾಡುಹಂದಿಯ) ಮಡದಲಿ(ಹಿಮ್ಮಡಿಯಿಂದ)+ ಉರೆ(ಚೆನ್ನಾಗಿ) ಗಟ್ಟಿಸಿದ(ಗುದ್ದಿದ) ಮುಷ್ಟಿಯೊಳು+ ಅಡಸಿ(ಗುರಿನೊಡಿ) ತಿವಿದನು, ಹುಲಿಯ ಕರಡೀಯ ಕೊಡಹಿದನು, ಕೊ೦ದನು, ವನಾ೦ತದೊಳು(ವನದಲ್ಲಿ)+ ಅಖಿಳ ಮೃಗಕುಲವ.
- ಅರ್ಥ:ಬೇಡಪಡೆ ಬೆದರಿ ಹಿಮ್ಮಟ್ಟಲು, ಪವನಜ ಭೀಮನು ಮುಂದೆನುಗ್ಗಿ ಆಕ್ರಮಿಸಿ ಆನೆಗಳನ್ನು ಹಿಡಿದು ಬೀಸಿದನು ಎಸೆದನು. ಸಿಂಹವನ್ನು ಪ್ರತಿಭಟಿಸಿ, ಮೇಲೆ ನುಗ್ಗಿ ಸೀಳಿದನು. ಮೈಮೇಲೆ ಹಾಯ್ದು ಕೋರೆಯಿಂದ ತಿವಿದು ಮೇಲೆ ಎತ್ತುವ ಕಾಡುಹಂದಿಯನ್ನು ಕಾಲಿನ ಹಿಮ್ಮಡಿಯಿಂದ ಬಲವಾಗಿ ಒದೆದು, ಮುಷ್ಟಿಯಿಂದ ಗುರಿ ನೊಡಿ ತಿವಿದನು. ಹುಲಿಯನ್ನು ಕರಡಿಯನ್ನು ಕೊಡಹಿದನು, ಕೊ೦ದನು. ಹೀಗೆ ಆ ವನಾ೦ತರದಲ್ಲಿ ಮೃಗಗಳ ಬೇಟೆಯಾಡಿದನು.
- ಈತನುರುಬೆಗೆ ಬೆದರಿತುರು ಸ೦
- ಘಾತದಲಿ ಹೆಬ್ಬ೦ದಿಯೊ೦ದು ವಿ
- ಘಾತದಲಿ ಹಾಯ್ದುದು ಕಿರಾತ ವ್ರಜವನೊಡೆದುಳಿದು |
- ಈತ ನೆರೆಯಟ್ಟಿದನು ಶಬರ
- ವ್ರಾತ ವುಳಿದುದು ಹಿ೦ದೆ ಭೀಮನ
- ಭೀತಿಯಲಿ ಹೊಕ್ಕುದುಮಹಾ ಗಿರಿ ಗಹನ ಗಹ್ವರವ || ೩೧ ||
- ಪದವಿಭಾಗ-ಅರ್ಥ:ಈತನ+ ಉರುಬೆಗೆ(ರಭಸದ ಆಕ್ರಮಣಕ್ಕೆ) ಬೆದರಿತು+ ಉರು(ಬಹಳ, ಹೆಚ್ಚಿನ) ಸ೦ಘಾತದಲಿ ಹೆಬ್ಬ೦ದಿಯೊ೦ದು ವಿಘಾತದಲಿ(ಅಪಾಯ, ಘಾಸಿ ಮಾಡುವಂತೆ) ಹಾಯ್ದುದು ಕಿರಾತ ವ್ರಜವನು(ಬೇಡರ ಗುಂಪನ್ನು)+ ಒಡೆದು+ ಉಳಿದು ಈತ ನೆರೆ+ಯ+ ಅಟ್ಟಿದನು, ಶಬರವ್ರಾತ(ಗುಂಪು) ವುಳಿದುದು ಹಿ೦ದೆ, ಭೀಮನ ಭೀತಿಯಲಿ ಹೊಕ್ಕುದು ಮಹಾಗಿರಿ ಗಹನ ಗಹ್ವರವ(ಗುಹೆಯನ್ನ)
- ಅರ್ಥ:ಭೀಮನ ರಭಸದ ಆಕ್ರಮಣಕ್ಕೆ ಮೃಗಗಳು, ಹಂದಿಗಳು ಸಹ ಬೆದರಿದವು. ಆದರೆ ಒಂದು ತೀವ್ರ ಹೋರಾಟದಲ್ಲಿ ಹೆಬ್ಬ೦ದಿಯೊ೦ದು ಘಾಸಿ ಮಾಡುವಂತೆ ಬೇಟೆಗಾರರ ಮೇಲೆ ಹಾಯ್ದು- ನುಗ್ಗಿ ಬೇಡರಗುಂಪನ್ನು ಒಡೆದು ಇಬ್ಭಾಗ ಮಾಡಿತು. ಅವರ ಬೇಟೆಗೆ ಸಿಗದೆ ಉಳಿದ ಅದನ್ನು ಈತ- ಭೀಮನು ಜೋರಾಗಿ ಅಟ್ಟಿ ಓಡಿಸಿದನು. ಬೇಡರ ಗುಂಪು ಹಿ೦ದೆ ವುಳಿಯಿತು. ಭೀಮನು ಅದನ್ನು ಅಟ್ಟಿಸಿಕೊಂಡು ಹೋದಾಗ ಅದು ಭೀತಿಯಿಂದ ಮಹಾಗಿರಿಯೊಂದರ ಅಪಾಯಕಾರಿಯಾದ ಗುಹೆಯನ್ನು ಹೊಕ್ಕಿತು.
ಭೀಮನು ಮಹಾ ಉರಗದ ತೆಕ್ಕೆಯಲ್ಲಿ ಸಿಕ್ಕಿದನು[ಸಂಪಾದಿಸಿ]
- ಮುಡುಹು ಸೊ೦ಕಿದೊಡುಲಿದು ಹೆಮ್ಮರ
- ನುಡಿದು ಬಿದ್ದುದು ಪಾದ ಘಾತದೊ
- ಳಡಿಗಡಿಗೆ ನೆಗ್ಗಿದುದು ನೆಲನುಬ್ಬರನ ಬೊಬ್ಬೆಯಲಿ |
- ಜಡಿದುದ೦ಬುಜ ಭವಾ೦ಡವೆನಲವ
- ಗಡೆಯ ಭೀಮನ ಕಳಕಳಕೆ ಕಿವಿ
- ಯೊಡೆದು ತಿಳಿದುದು ನಿದ್ರೆ ಮರಿದಿಕ್ಕೆಯ ಮಹೋರಗನ|| ೩೨ ||
- ಪದವಿಭಾಗ-ಅರ್ಥ: ಮುಡುಹು(ಭುಜಾಗ್ರ, ಹೆಗಲು) ಸೊ೦ಕಿದೊಡೆ ಉಲಿದು(ಕೂಗಿ) ಹೆಮ್ಮರನು+ ಉಡಿದು(ಮುರಿದು, ಉಡಿ- ತುಂಡು ಮಾಡು) ಬಿದ್ದುದು, ಪಾದ ಘಾತದೊಳು+ ಅಡಿಗಡಿಗೆ ನೆಗ್ಗಿದುದು ನೆಲನು+ ಉಬ್ಬರನ (ಅತಿಶಯ, ಆಡಂಬರ)+ ಬೊಬ್ಬೆಯಲಿ(ಉತ್ಸಾಹ ಭರಿತನಾಗಿ ಬೊಬ್ಬೆಹಾಕಿದ್ದಕ್ಕೆ) ಜಡಿದುದು+ ಅ೦ಬುಜ ಭವಾ೦ಡವೆನಲು+ ಅವಗಡೆಯ(ತೊಂದರೆ,ಅಡ್ಡಿ) ಭೀಮನ ಕಳಕಳಕೆ(ಗಲಾಟೆಗೆ) ಕಿವಿಯೊಡೆದು ತಿಳಿದುದು ನಿದ್ರೆ ಮರಿದ+ ಇಕ್ಕೆಯ(ನೆಲೆ; ಬೀಡು;) ಮಹೋರಗನ(ಮಹಾ ಉರಗನ- ಹಾವಿನ)
- ಅರ್ಥ:ಭೀಮನ ಭುಜ ತಾಗಿದರೆ ದೊಡ್ಡ ಸದ್ದಿನೊಂದಿಗೆ ಹೆಮ್ಮರವೂ ಉಡಿದು ಬಿದ್ದಿತು; ನೆಡೆದ ಪಾದದ ಪೆಟ್ಟಿಗೆ ಅಡಿಗಡಿಗೆ ನೆಲವು ನೆಗ್ಗಿತು. ಹೀಗೆ ಬೀಮನು ಉಬ್ಬರನಾಗಿ/ಉತ್ಸಾಹ ಭರಿತನಾಗಿ ಬೊಬ್ಬೆಹಾಕಿದ್ದಕ್ಕೆ ಬ್ರಹ್ಮನ ಕಮಲದಲ್ಲಿದ್ದ ಬ್ರಹ್ಮಾಂಡಕ್ಕೆ ಬಡಿಯಿತು ಎನ್ನುವಂತೆ ಇರುವ ಭೀಮನ ಗಲಾಟೆಗೆ ಕಾಡಿನಲ್ಲಿ ಬೀಡುಬಿಟ್ಟಿದ್ದ ಮಹಾ ಉರಗನ- ಹೆಬ್ಬಾವಿನ ಕಿವಿಯು ಒಡೆದಂತಾಗಿ ಅದರ ನಿದ್ರೆಯು ಕೆಟ್ಟು ಎಚ್ಚರಾಯಿತು.
- ತೆಕ್ಕೆ ಸಡಲಿತು ತರಗೆಲೆಯ ಹೊದ
- ರಿಕ್ಕಲಿಸೆ ಮೈ ಮುರಿಯಲನಿಲಜ
- ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ |
- ಸಿಕ್ಕಿದವು ಹೆದ್ದೊಡೆಗಳುರುಗನ
- ತೆಕ್ಕೆಯಲಿ ಡೆ೦ಡೆಣಿಸಿ ಫಣಿಪತಿ
- ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ || ೩೩ ||
- ಪದವಿಭಾಗ-ಅರ್ಥ:ತೆಕ್ಕೆ( ಸುತ್ತಿಕೊಂಡಿರುವಿಕೆ) ಸಡಲಿತು ತರಗೆಲೆಯ ಹೊದರ+ ಇಕ್ಕಲಿಸೆ (ರಾಶಿ,ಇಕ್ಕಲು,ಗುಂಪೆ,ಗುಪ್ಪೆ,ಗೊಪ್ಪೆ) ಮೈ ಮುರಿಯಲು+ ಅನಿಲಜನು+ ಎಕ್ಕತುಳದಲಿ(ಅದೇ ರಭಸದಲ್ಲಿ) ಮೇಲೆ ಹಾಯ್ದನು ಕಾಣದೆ+ ಅಹಿಪತಿಯ(ಹಾವನ್ನು); ಸಿಕ್ಕಿದವು ಹೆದ್ದೊಡೆಗಳು+ ಉರುಗನ ತೆಕ್ಕೆಯಲಿ ಡೆ೦ಡೆಣಿಸಿ (ಪೌರುಷದಿಂದ, ಕೋಪದಿಂದ) ಫಣಿಪತಿ(ಹಾವು) ಡೊಕ್ಕರಕೆ(ಡೊಕ್ಕರ- ಗುದ್ದು, ಹೊಡೆತ) ಹಬ್ಬಿದನು ಬಿಗಿದನು ಭಟನ(ಭೀಮನ) ಪೇರು+ ಉರವ(ದೊಡ್ಡ ಎದೆಯ, ವಕ್ಷಸ್ಥಳ)
- ಅರ್ಥ:ಹೆಬ್ಹಾವಿನ ಸುತ್ತಿಕೊಂಡಿದ್ದ ದೇಹ ಸಡಲಿತು. ಅದು ತರಗೆಲೆಯ ರಾಶಿಯ ಗುಪ್ಪೆಯಲ್ಲಿ ಎಚ್ಚರಾಗಿ ಮೈಮುರಿಯಲು, ಅನಿಲಜ ಭೀಮನು ಅದೇ ಹಿಂದಿನ ರಭಸದಲ್ಲಿ, ಹಾವನ್ನು ಕಾಣದೆ ಅದರ ಮೇಲೆ ಹಾಯ್ದನು- ನುಗ್ಗಿದನು. ಭೀಮನ ದಪ್ಪ ತೊಡೆಗಳು ಹಾವಿನ ತೆಕ್ಕೆಯಲಿ ಸಿಕ್ಕಿದವು. ಪೌರುಷದಿಂದ, ಕೋಪದಿಂದ ಫಣಿಪತಿಯನ್ನು ಗುದ್ದಿ ಹೊಡೆದರೆ, ಲೆಕ್ಕಿಸದೆ ಭೀಮನ ಎದೆಗೆ ಏರಿ- ಹಬ್ಬಿ ಸುತ್ತಿ, ಅವನ ದೊಡ್ಡ ಎದೆಯನ್ನು ಅಜಗರ(ಹೆಬ್ಬಾವು) ಬಿಗಿಯಿತು.
- ಭಟ ಮರಳಿ ಸ೦ತೈಸಿಕೊ೦ಡಟ
- ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
- ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ |
- ಪುಟದ ಕ೦ತುಕದ೦ತೆ ಫಣಿ ಲಟ
- ಕಟಿಸಲೌಕಿತು ಗಿಡಗನೆರಕೆಯ
- ಪುಟದ ಗಿಳಿಯ೦ದದಲಿ ಗಿರಿಗಿರಿ ಗುಟ್ಟಿದನು ಭೀಮ || ೩೪ ||
- ಪದವಿಭಾಗ-ಅರ್ಥ:ಭಟ(ವೀರ ಭೀಮಸೇನ) ಮರಳಿ(ಪುನಃ) ಸ೦ತೈಸಿಕೊ೦ಡು+ ಅಟಮಟಿಸಿ(ಜಾಣತನದಿಂದ ಮೋಸಪಡಿಸಿ ಕೈಯನ್ನು ತಪ್ಪಿಸಿಕೊಂಡು, ಅಟಮಟ- (ದೇ)ಸುಳ್ಳು, ಮಾಯೆ, ಮೋಸ) ಗದೆಯಲಿ ಹೊಯ್ದು(ಹೊಡೆದು) ಬಿಗುಹಿನ ಕಟಕವನು(ಕಟಕ- ಏಡಿ, ಆ ಬಗೆಯ ಹಿಡಿತ) ಬಿಚ್ಚಿದನು, ಹೆಚ್ಚಿದನು+ ಔಕಿ ಬೊಬ್ಬಿಡುತ(ಆರ್ಭಭಟಿಸುತ್ತಾ) ಪುಟದ(ಮೇಲೆ ಚಿಮ್ಮಿದ) ಕ೦ತುಕದ೦ತೆ(ಚೆಂಡಿನಂತೆ) ಫಣಿ ಲಟಕಟಿಸಲು (ಆತುರಪಡು, ಉತ್ಸಾಹ)+ ಔಕಿತು(ಒತ್ತಿತು) ಗಿಡಗನ ಎರಕೆಯ(ಬೇಟೆಯ) ಪುಟದ(ಪುಟಿದ? - ಹಾರಿದ) ಗಿಳಿಯ೦ದದಲಿ ಗಿರಿಗಿರಿ ಗುಟ್ಟಿದನು ಭೀಮ.
- ಅರ್ಥ:ವೀರಭಟ ಭೀಮಸೇನನು ಪುನಃ ಸ೦ತೈಸಿಕೊ೦ಡು, ಸುಧಾರಿಕೊಂಡು ಜಾಣತನದಿಂದ ಮೋಸಪಡಿಸಿ ಕೈಯನ್ನು ತಪ್ಪಿಸಿಕೊಂಡು, ಗದೆಯಿಂದ ಹೊಡೆದು ಬಿಗುಹಿನಿಂದ ಹಿಡಿದ ಏಡಿಹಿಡಿತವನ್ನು ಬಿಚ್ಚಿದನು; ಅದರಿಂದ ಉತ್ಸಾಹದಿಂದ ಹೆಚ್ಚಿದನು. ಅವನು ಬೊಬ್ಬಿಡುತ- ಕೂಗುತ್ತಾ ಆರ್ಭಭಟಿಸುತ್ತಾ, ಹಾವನ್ನು ಒತ್ತಿಹಿಡಿದು ಚೆಂಡಿನಂತೆ ಮೇಲೆ ಚಿಮ್ಮಲು ಆತುರಪಡಲು ಫಣಿ-ಹಾವು ಅವನನ್ನು ಒತ್ತಿತು.ಆಗ ಭೀಮನು ಗಿಡಗನ ಬೇಟೆಯ ಪುಟದ ಗಿಳಿಯಂತೆ ಗಿರಿಗಿರಿ ಗುಟ್ಟಿ ತಿರುಗಿದನು.
- ಜಾಡಿಸಲು ಜಾಡಿಸಲು ಬಿಗುಹತಿ
- ಗಾಡಿಸಿತು ಕೊಡಹಿದೊಡೆ ಮಿಗೆ ಮೈ
- ಗೂಡಿ ಬಿಗಿದುದು ಭುಜಗವಳಯದ ಮ೦ದರಾದ್ರಿಯೆನೆ |
- ರೂಡಿಸಿದ ಭುಜಬಲದ ಸಿರಿಯ
- ಕಾಡಿತೇ ತನಗೆನುತ ಖಾಡಾ
- ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ || ೩೫ ||
- ಪದವಿಭಾಗ-ಅರ್ಥ:ಜಾಡಿಸಲು ಜಾಡಿಸಲು(ಹಾವನ್ನು ಮತ್ತೆ ಮತ್ತೆ ಒದೆದರೆ) ಬಿಗುಹು+ ಅತಿಗಾಡಿಸಿತು (ಅತಿ ಹೆಚ್ಚತು) ಕೊಡಹಿದೊಡೆ (ಕೊಡವಿದರೆ) ಮಿಗೆ(ಹೆಚ್ಚು) ಮೈಗೂಡಿ ಬಿಗಿದುದು, ಭುಜಗವಳಯದ(ನಾಗಲೋಕದ) ಮ೦ದರಾದ್ರಿಯೆನೆ ರೂಡಿಸಿದ(ಮಣಿಸಿದ) ಭುಜಬಲದ ಸಿರಿಯ ಕಾಡಿತೇ ತನಗೆ+ ಎನುತ ಖಾಡಾಖಾಡಿಯಲಿ(ಹೋರಾಟದಲ್ಲಿ) ಕಾತರಿಸಿ ಕಳವಳಿಸಿದನು ಕಲಿಭೀಮ.
- ಅರ್ಥ:ಕಲಿ ಭೀಮನು ಹಾವನ್ನು ಜಾಡಿಸಿ ಮತ್ತೆ ಮತ್ತೆ ಒದೆದರೆ, ಅದರ ಬಿಗುಹು ಅತಿ ಹೆಚ್ಚತು. ಕಾಲನ್ನು ಕೊಡವಿದರೆ) ಮತ್ತೂಹೆಚ್ಚು ಮೈಗೂಡಿಕೊಂಡು ಬಿಗಿದುಕೊಂಡಿತು ಹಾವು. ನಾಗಲೋಕದ ಮ೦ದರಾದ್ರಿಯೆನ್ನೇ ಮಣಿಸಿದ ತನ್ನ ಭುಜಬಲದ ಶಕ್ತಿಸಂಪತ್ತು ಈಗ ಈ ಹಾವಿನ ಬಳಿ ಹೋರಾಟದಲ್ಲಿ ಕಾಡಿತೇ? ತನಗೆ ತೊಂದರೆ ಕೊಟ್ಟಿತೇ? ಸೋತಿತೇ? ಎನ್ನುತ್ತಾ ಕಲಿಭೀಮನು ಕಾತರಿಸಿ ಕಳವಳಗೊಂಡನು- ಚಿಂತಿತನಾದನು.
- ಅರಸ ಕೇಳಿತ್ತಲು ಮಹೀಶನ
- ಹೊರೆಯಲಾಯ್ತುತ್ಪಾತಶತ ನಿ
- ಷ್ಟುರವಿದೇನೋದೈವಕೃತಫಲವಾವುದಿದಕೆನುತ |
- ಕರಸಿ ದೌಮ್ಯ೦ಗರುಹಲಿದು ನ
- ಮ್ಮರಸುಗಳಿಗಪಘಾತ ಸೂಚಕ
- ವರಿದಿದರ ನಿರ್ವಾಹವೆ೦ದೊಡೆ ನೄಪತಿ ಚಿ೦ತಿಸಿದ || ೩೬ ||
- ಪದವಿಭಾಗ-ಅರ್ಥ:ಅರಸ ಕೇಳು+ ಇತ್ತಲು ಮಹೀಶನ(ಧರ್ಮಜನ) ಹೊರೆಯಲಿ(ಕಡೆ)+ ಆಯ್ತು+ ಉತ್ಪಾತ ಶತ ನಿಷ್ಟುರವು(ನೂರಾರು ಅಪಶಕುನಗಳು)+ ಇದೇನೋ ದೈವಕೃತ ಫಲವು+ ಆವುದು(ಯಾವುದು)+ ಇದಕೆ+ ಎನುತ, ಕರಸಿ ದೌಮ್ಯ೦ಗೆ+ ಅರುಹಲು(ಹೇಳಲು)+ ಇದು ನಮ್ಮ+ ಅರಸುಗಳಿಗ (ನಿಮ್ಮ ಸೊದರರಿಗೆ) + ಅಪಘಾತ ಸೂಚಕವು+ ಅರಿದು(ತಿಳಿಯದು)+ ಇದರ ನಿರ್ವಾಹವು(ಪರಿಹಾರವು)+ ಎ೦ದೊಡೆ ನೃಪತಿ ಚಿ೦ತಿಸಿದ.
- ಅರ್ಥ:ಅರಸ ಜನಮೇಜಯನೇ ಕೇಳು, ಇತ್ತ ಧರ್ಮಜನ ಕಡೆಯಲ್ಲಿ ನೂರಾರು ಅಪಶಕುನಗಳು ಆಯಿತು. ಇದೇನೋ ದೈವಕೃತವು. ಇದರ ಫಲವು ಯಾವುದು, ಇದಕ್ಕೆ ಪರಿಹಾರವೇನು ಎನ್ನತ್ತಾ, ಪುರೋಹಿತ ದೌಮ್ಯೃಷಿಗಳನ್ನು ಕರಸಿ ವಿಷಯ ತಿಳಿಸಲು, ಇದು ನಮ್ಮ ಅರಸುಗಳಾದ ನಿಮ್ಮ ಸೊದರರಿಗೆ ಅಪಘಾತ ಸೂಚಕವು. ಇದರ ಪರಿಹಾರ ತಿಳಿಯದು, ಎ೦ದಾಗ ನೃಪತಿ ಧರ್ಮಜನು ಯೋಚಿಸಿದ.
- ಭೀಮ ನಾವೆಡೆಯೆನೆ ಕಿರಾತ
- ಸ್ತೊಮಸಹಿತ ಮೃಗವ್ಯ ಕೇಳೀ
- ಕಾಮನೈದಿದನೆನಲು ನೃಪ ಹೊರವ೦ಟನಾಶ್ರಮವ |
- ಭೂಮಿಸುರರೊಡನೈದಿ ಬರೆ ಸ೦
- ಗ್ರಾಮ ದೀರನ ಹೆಜ್ಜೆವಿಡಿದು ಮ
- ಹೀಮನೋಹರನರಸಿ ಹೊಕ್ಕನು ಘೋರ ಕಾನನವ || ೩೭ ||
- ಪದವಿಭಾಗ-ಅರ್ಥ:ಭೀಮನು+ ಆವೆಡೆ+ ಯೆನೆ, ಕಿರಾತಸ್ತೊಮ(ಬೇಡರ ಪಡೆ) ಸಹಿತ ಮೃಗವ್ಯ ಕೇಳೀಕಾಮನು(ಬೇಟೆಯಾದುವ ಬಯಕೆಯಿಂದ)+ ಐದಿದನು(ಹೋದನು)+ ಎನಲು ನೃಪ ಹೊರವ೦ಟನು+ ಆಶ್ರಮವ ಭೂಮಿಸುರರೊಡನೆ+ ಐದಿ ಬರೆ ಸ೦ಗ್ರಾಮ ದೀರನ ಹೆಜ್ಜೆವಿಡಿದು(ಹೋದ ದಾರಿಯನ್ನು ತಿಳಿದು) ಮಹೀ-ಮನೋಹರನು+ ಅರಸಿ(ಹುದುಕಿ) ಹೊಕ್ಕನು ಘೋರ ಕಾನನವ(ಕಾಡನ್ನು).
- ಅರ್ಥ:ಧೌಮ್ಯರು ಶಕುನದ ಫಲವನ್ನು ಹೇಳಲು, ಧರ್ಮಜನು ತಮ್ಮಂದಿರಲ್ಲಿ ಭೀಮನನ್ನು ಕಾಣದೆ, ಭೀಮನು ಯಾವೆಡೆಯಲ್ಲಿ ಇದ್ದಾನೆ? ಎನ್ನಲು, ತಿಳಿದ ಜನರು ಬೇಡರ ಪಡೆ ಸಹಿತ ಬೇಟೆಯಾದುವ ಬಯಕೆಯಿಂದ ಕಾಡಿಗೆ ಹೋದನು ಎನ್ನಲು, ನೃಪ ಧರ್ಮಜನು ಆಶ್ರಮದಿಂದ ಬ್ರಾಹ್ಮಣರ ಸಮೂಹದೊಡನೆ ಕಾಡಿನಕಡೆ ಹೊರಹೊರಟನು. ಹಾಗೆ ಬರಬರುತ್ತಾ ಬರಲು ಸ೦ಗ್ರಾಮ ದೀರ ಭೀಮನ ಹೆಜ್ಜೆಹಿಡಿದು ಅವನು ಹೋದ ದಾರಿಯನ್ನು ತಿಳಿದು ಜನರ ಪ್ರೀತಿ ಪಾತ್ರರಾಜನು ಭೀಮನನ್ನು ಹುಡುಕುತ್ತಾ ಘೋರ ಕಾಡನ್ನು ಹೊಕ್ಕನು.
- ಹುದುಗಿದಗ್ಗದ ಸತ್ವ ದುಸ್ಸಹ
- ಸದ ನಿರೂಡಿಯ ಸೋಸಮಯ ಗದು
- ಗದಿತ ಕ೦ಠದ ತಳಿತ ಭ೦ಗದ ತಿರುಗುವಾಲಿಗಳ |
- ಹೆದರೆದೆಯ ಹೇರಾಳ ಶೋಕದ
- ಕೆದರುಗೇಶದ ಕೆಲಕೆ ಜಾರಿದ
- ಗದೆಯ ಗರುವಾಯಳದ ಭೀಮನ ಕ೦ಡನಾ ಭೂಪ || ೩೮ ||
- ಪದವಿಭಾಗ-ಅರ್ಥ:ಹುದುಗಿದ (ಅಡಗಿದ)+ ಅಗ್ಗದ(ಉತ್ತಮ) ಸತ್ವ, ದುಸ್ಸಹಸದ ನಿರೂಡಿಯ(ರೂಢಿಸು- ಸಂ. ರೂಢಿ + ಇಸು) ಹೆಚ್ಚಾಗು,ನಿರೂಢಿ- ಕುಗ್ಗಿದ ) ಸೋಸ-ಮಯ(ಸೋಸು - ಜರಡಿ, ಜರಡಿಯಂತೆ- ಸತ್ವವೆಲ್ಲಾ ಉದರಿ ಹೋಗಿ ಹೊಟ್ಟು ಉಳಿದಂತೆ ಆದ ಮನಸ್ಸಿನ) ಗದುಗದಿತ(ಗದ್ಗಧಿತ- ಬಿಕ್ಕುವ) ಕ೦ಠದ, ತಳಿತ ಭ೦ಗದ(ತೋರುವ ಭಂಗ ಅವಮಾನ ಸೋಲು ), ತಿರುಗುವ+ ಆಲಿಗಳ(ಕಣ್ಣು ಗುಡ್ಡೆಗಳ) ಹೆದರೆದೆಯ(ಹೆದರ- ಹೆದರಿದ ಎದೆಯ) ಹೇರಾಳ ಶೋಕದ(ಅತಿಯಾದ ದುಃಖದ) ಕೆದರುಗೇಶದ(ಕೆದರಿದ ಕೂದಲುಳ್ಳ ತಲೆಯ) ಕೆಲಕೆ(ಪಕ್ಕಕ್ಕೆ) ಜಾರಿದ ಗದೆಯ, ಗರುವಾಯಳದ (ಶ್ರೇಷ್ಠನಾದ) ಭೀಮನ ಕ೦ಡನು+ ಆ ಭೂಪ.
- ಅರ್ಥ:ಆ ಭೂಪ ಧರ್ಮಜನು ಕಾಡಿನೊಳಗೆ ಭೀಮನನ್ನು ಹುಡುಕುತ್ತಾ ಬಂದಾಗ ಅಲ್ಲಿ, ಉತ್ತಮ ಶ್ರೇಷ್ಠ ಸತ್ವವು ಅಡಗಿಹೋದ ಭೀಮನನ್ನು ಕಂಡನು. ಭೀಮನ ಸ್ಥಿತಿಯು ದುಸ್ಸಾಹಸಮಾಡಿ ಕುಗ್ಗಿದ ಸತ್ವದ, ಸೋತ ಮನಸ್ಸಿನ, ಗದ್ಗಧಿತ- ಬಿಕ್ಕುವ ಕ೦ಠದ, ಎದ್ದುಕಾಣುವ ಭ೦ಗದ, ಅತಿ ಬಳಲಿ ತಿರುಗುವ ಕಣ್ಣು ಗುಡ್ಡೆಗಳ, ಹೆದರಿದ ಎದೆಯ, ಹೇರಾಳ ಶೋಕದ, ಕೆದರಿದ ತಲೆಯ, ಪಕ್ಕಕ್ಕೆ ಅವನ ಕೈಯಿಂದ ಜಾರಿದ ಗದೆಯ, ಶ್ರೇಷ್ಠನಾದ ಭೀಮನನ್ನು ಕ೦ಡನು ಆ ಧರ್ಮಜ.
- ಅಕಟ ಹಿ೦ದನುಭವಿಸಿದೆನು ಕ೦
- ಟಕ ಹಲವನೀ ಪರಿಯ ಬಲು ಕ೦
- ಟಕ ಮಹಾ ಕರ್ದಮ ದೊಳದ್ದಿತೆ ವಿಧಿ ಮಹಾದೇವ |
- ವಿಕಟ ನಾಗಾಯತ ಮದತ್ಪ್ರಾ
- ಣಕನ ಸಾಹಸ ವಡಗಿತೇ ವನ
- ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ || ೩೯ ||
- ಪದವಿಭಾಗ-ಅರ್ಥ:ಅಕಟ ಹಿ೦ದೆ+ ಆನುಭವಿಸಿದೆನು ಕ೦ಟಕ(ಆಪತ್ತು) ಹಲವನು+ ಈ ಪರಿಯ ಬಲು ಕ೦ಟಕ ಮಹಾ ಕರ್ದಮದೊಳು(ಪಾಪ; ಕೆಸರು)+ ಅದ್ದಿತೆ ವಿಧಿ ಮಹಾದೇವ ವಿಕಟ(ಭೀಕರವಾದ,ಭಾರಿಯಾದ, ಸೊಕ್ಕಿದ,ಡೊಂಕು ) ನಾಗಾಯತ(ನಾಗ+ ಆಯತ= ನಾಗದ ನೆಲೆ) ಮದತ್(ನನ್ನ)+ ಪ್ರಾಣಕನ(ಪ್ರಾಣಸಮಾನನ) ಸಾಹಸವು+ ಅಡಗಿತೇ, ವನನಿಕಟ(ಕಾಡಿನಲ್ಲಿರುವ, ಕಾಡಿನ ಹತ್ತಿರ) ಭುಜಗಾಗವು)+ ಆಟೋಪ ಠೌಳಿಯೊಳು(ಮೋಸ, ವಂಚನೆ)+ ಎನುತ ಬಿಸುಸುಯ್ದ.
- ಅರ್ಥ:ಧರ್ಮಜನು ಭೀಮನ ದೀನಸ್ಥಿತಿಯನ್ನು ಕಂಡು,'ಅಕಟ! ಮಹಾದೇವ, ಹಿ೦ದೆ ಹಲವು ಕ೦ಟಕಗಳನ್ನು ಆನುಭವಿಸಿದೆನು. ಆದರೆ ಈ ಪರಿಯ ಬಲು ದೊಡ್ಡ ಕ೦ಟಕವು ಬಂದಿರಲಿಲ್ಲ; ವಿಧಿಯು ತನ್ನನ್ನು ಮಹಾಕೆಸರು ಕೂಪದಲ್ಲಿ ಅದ್ದಿತೆ! ಮಹಾದೇವ ಭೀಕರವಾದ ಸೊಕ್ಕಿದ ಡೊಂಕುನಾಗದ ನೆಲೆಯಿಂದ ಕಾಡಿನಲ್ಲಿರುವ, ಹಾವಿನ ಆಟೋಪದ ವಂಚನೆಯಿಂದ ನನ್ನ ಪ್ರಾಣಸಮಾನನಾದ ಭೀಮನ ಸಾಹಸವು ಅಡಗಿತೇ!'ಎನ್ನುತ್ತಾ ನಿಟ್ಟುಸಿರುಬಿಟ್ಟನು.
- ಏನು ಕು೦ತೀಸುತಗಪಾಯ ವಿ
- ದೇನು ಫಣಿ ಬ೦ಧನ ವಿಧಾನವಿ
- ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೋ |
- ಏನಿದಕೆ ಕರ್ತವ್ಯ ನಮಗೀ
- ಹೀನ ದೆಸೆಗೆ ನಿಮಿತ್ತ ದುಷ್ಕೃತ
- ವೇನು ಶಿವ ಶಿವಯೆನುತ ನುಡಿಸಿದನನಿಲ ನ೦ದನನ || ೪೦ ||
- ಪದವಿಭಾಗ-ಅರ್ಥ:ಏನು ಕು೦ತೀಸುತಗೆ+ ಅಪಾಯವು+ ಇದೇನು, ಫಣಿ ಬ೦ಧನ ವಿಧಾನವು+ ಇದೇನು? ನಿನಗೆ ವಿನೋದವೋ ತ್ರಾಣಾಪಜಯ(ತ್ರಾಣ ಅಪಜಯ- ಶಕ್ತಿಹೀನತೆ) ವಿಧಿಯೋ, ಏನು+ ಇದಕೆ ಕರ್ತವ್ಯ, ನಮಗೆ+ ಈ ಹೀನ ದೆಸೆಗೆ ನಿಮಿತ್ತ ದುಷ್ಕೃತವೇನು(ಪಾಪದ ಕೆಲಸ)? ಶಿವ ಶಿವಯೆನುತ ನುಡಿಸಿದನು+ ಅನಿಲ ನ೦ದನನ.
- ಅರ್ಥ:ಧರ್ಮಜನು, 'ಏನು ಕು೦ತೀಸುತನಿಗೆ ಅಪಾಯವು ಇದೇನು? ಫಣಿ ಬ೦ಧನ ವಿಧಾನವು ಇದೇನು ವಿಚಿತ್ರ? ಭೀಮಾ ನಿನಗೆ ವಿನೋದವೋ ಅಥವಾ ನಿಜವಾಗಿ ಶಕ್ತಿಹೀನತೆಯಾಯಿತೇ? ಇದು ವಿಧಿಯೋ(ಜನ್ಮಾಂತರದ ಕರ್ಮಫಲವೋ?), ಈಗ ಇದಕ್ಕೆ ನಾನು ಮಾಡಬೇಕಾದ ಕರ್ತವ್ಯ ಏನು? ನಮಗೆ ಈ ಹೀನ ದೆಸೆಗೆ ನಿಮಿತ್ತವಾದ ನಾವು ಮಾಡಿದ ದುಷ್ಕೃತವೇನು? ಶಿವ ಶಿವಯೆನ್ನುತ್ತಾ, ಅನಿಲ ನ೦ದನ ಭೀಮನನ್ನು ಕೇಳಿದನು.
- ನೋಡಿದನು ಕ೦ದೆರೆದು ಕ೦ಠಕೆ
- ಹೂಡಿದುರುಗನ ಘೋರ ಬ೦ಧದ
- ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ |
- ಖೇಡನಾದನಜಾತರಿಪು ಮಾ
- ತಾಡಿಸಿದನಹಿಪತಿಯೆನಲೆ ನಾ
- ಡಾಡಿಗಳ ನಾಟಕದ ಫಣಿಯಲ್ಲಾರು ನೀನೆ೦ದ || ೪೧ ||
- ಪದವಿಭಾಗ-ಅರ್ಥ:ನೋಡಿದನು ಕ೦ದೆರೆದು(ಕಣ್ಣು ತೆರೆದು) ಕ೦ಠಕೆ ಹೂಡಿದ+ ಉರುಗನ ಘೋರ ಬ೦ಧದ ಗಾಢದಲಿ ನುಡಿ(ಮಾತು, ದನಿ) ನೆಗ್ಗಿ ನುಡಿದನು ಬೆರಳ ಸನ್ನೆಯಲಿ ಖೇಡನಾದನು(ಖೇಡ :ಸಂ- ೧ ಹಳ್ಳಿ, ಗ್ರಾಮ, ಹೆದರಿದವನು, ಭಯಗ್ರಸ್ತ) ಖೇಡನಾದವನು- ಹೆದರಿದವನು)+ ಅಜಾತರಿಪು( , ಅಜಾತ ರಿಪು-ರಿಪು- ಶತ್ರು, ಅಜಾತ- ಹುಟ್ಟಿಲ್ಲ;ಅಜಾತಶತ್ರು- ಶತ್ರುಗಳೇ ಇಲ್ಲದವ- ಧರ್ಮಜ) ಮಾತಾಡಿಸಿದನು+ ಅಹಿಪತಿಯೆನು(ನಾಗರಾಜನನ್ನು)+ ಎಲೆ ನಾಡಾಡಿಗಳ(ಸಾಧಾರಣವಾದ,ಸಾಮಾನ್ಯ ಗುಣವುಳ್ಳ) ನಾಟಕದ ಫಣಿಯಲ್ಲ+ ಆರು ನೀನು+ ಎ೦ದ
- ಅರ್ಥ:ಧರ್ಮಜನು ಭೀಮನನ್ನು ಮಾತನಾಡಿಸಲು, ಅವನು ಮುಚ್ಚಿದ ಕಣ್ಣನ್ನು ಬಿಟ್ಟು ನೋಡಿದನು. ಅವನ ಕುತ್ತಿಗೆಗೆ ಹೂಡಿದ ಉರುಗ- ಹೆಬ್ಬಾವಿನ ಘೋರ ಬ೦ಧನದ ಅತಿಯಾದ ಬಿಗಿಯಲ್ಲಿ, ಅವನ ಮಾತಿನ ದನಿ ತಗ್ಗಿರಲು ಮೆಲ್ಲಗೆ ಬೆರಳ ಸನ್ನೆಯನ್ನು ಮಾಡುತ್ತಾ ಹಾವನ್ನು ತೋರಿಸಿ ನುಡಿದನು- ಬೆರಳ ಸನ್ನೆಯಲ್ಲಿ ಇವನು ಹಾವಲ್ಲ ಎಂದು ಸನ್ನೆ ಮಾಡಿದನು. ಆಗ ಆಜಾತ ಶತ್ರು ಧರ್ಮಜನು,'ನಾಗರಾಜನನ್ನು ಮಾತಾಡಿಸಿದನು,'ಎಲೆ ನಾಗನೇ,ನೀನು ಸಾಧಾರಣವಾದ, ಸಾಮಾನ್ಯ ಗುಣವುಳ್ಳ ಹಾವಲ್ಲ, ನಾಟಕದ ಫಣಿಯು, ಯಾರು ನೀನು,' ಎ೦ದ.(ಇಲ್ಲಿ ಕವಿಯ ಆಶಯಕ್ಕೆ ತಕ್ಕಂತೆ ಅರ್ಥಮಾಡಿದೆ.)
- ಅನಿಲಸುತನಪರಾಧಿಯೋ ನೀ
- ವಿನಯ ಹೀನನೋ ಮೇಣು ಪರಪೀ
- ಡನ ವೃಥಾ ದುಷ್ಕರ್ಮ ಸ೦ಗ್ರಹ ಬೇಹುದೇ ನಿನಗೆ |
- ದನುಜನೋ ಗ೦ಧರ್ವನೋ ಯ
- ಕ್ಷನೋ ಸರೀಸೃಪರೂಪ ದಿವಿಜೇ೦
- ದ್ರನೋ ನಿಧಾನಿಸ ಲರಿಯೆ ನೀನಾರೆ೦ದನವನೀಶ || ೪೨ |\
- ಪದವಿಭಾಗ-ಅರ್ಥ:ಅನಿಲಸುತನು+ ಅಪರಾಧಿಯೋ, ನೀ ವಿನಯ ಹೀನನೋ, ಮೇಣು(ಅಥವಾ) ಪರಪೀಡನ ವೃಥಾ ದುಷ್ಕರ್ಮ ಸ೦ಗ್ರಹ ಬೇಹುದೇ ನಿನಗೆ, ದನುಜನೋ (ರಾಕ್ಷಸ), ಗ೦ಧರ್ವನೋ, ಯಕ್ಷನೋ, ಸರೀಸೃಪರೂಪ, ದಿವಿಜೇ೦ದ್ರನೋ, ನಿಧಾನಿಸಲು(ತರ್ಕದಿಂದ ತಿಳಿಯಲು)+ ಅರಿಯೆ(ತಿಳಿಯದು) ನೀನಾರು+ ಎ೦ದನು+ ಅವನೀಶ.
- ಅರ್ಥ:ನಂತರ ಧರ್ಮಜನು ನಾಗನನ್ನು ಕುರಿತು,'ಅನಿಲಸುತ ಭೀಮನು ನಿನಗೆ ತೊಂದರೆ ಮಾಡಿದ ಅಪರಾಧಿಯೋ? ನೀನು ವಿನಯ ಇಲ್ಲದ ದುಷ್ಟನೋ? ಅಥವಾ ಪರಪೀಡನೆ ಮಾಡುವ ಸ್ವಭಾವದವನೇ? ನಿನಗೆ ವೃಥಾ- ಸುಮ್ಮನೆ ದುಷ್ಕರ್ಮಮಅಡಿ ಪಾಪ ಸ೦ಗ್ರಹ ಬೇಕೇ? ಅದನ್ನು ಮಾಡಬಹುದೇ? ನೀನು ದನುಜನೋ? ಗ೦ಧರ್ವನೋ? ಯಕ್ಷನೋ? ಸರೀಸೃಪ (ಹಾವು) ರೂಪದಲ್ಲಿರುವ ದೇವೇ೦ದ್ರನೋ? ವಿಚಾರಮಾಡಿ ತಿಳಿಯಲು ನನ್ನಿಂದ ಆಗದು. ನೀನು ಯಾರು?' ಎ೦ದನು.
- ಕೇಳಿದನು ಫಣಿ ಭೀಮಸೇನನ
- ಮೌಳಿ ತಲ್ಪದ ತಲೆಯ ಹೊಳಹಿನ
- ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
- ಮೇಲು ಮೊಗದಲಿ ನೃಪನ ನುಡಿಗಳ
- ನಾಲಿಸುತ ನುಡಿದನು ಕರಾಳಾ
- ಭೀಳ ದಂಷ್ಪ್ರಾ೦ತರ ವಿಸ೦ಸ್ಥಳ ಜಿಹ್ವೆಗಳ ಜಡಿದು ೪೩
- ಪದವಿಭಾಗ-ಅರ್ಥ:ಕೇಳಿದನು ಫಣಿ ಭೀಮಸೇನನ ಮೌಳಿ(ತಲೆ) ತಲ್ಪದ(ಹಾಸಿಗೆಯ) ತಲೆಯ, ಹೊಳಹಿನ ನಾಲಗೆಯ, ಚೂರಣದ (ಚೂರ್ಣದ)ಝಡಿತೆಗೆ(ಆತುರ) ಚಲಿಸುವ+ ಆಲಿಗಳ (ಕಣ್ಣುಗಳ), ಮೇಲು ಮೊಗದಲಿ ನೃಪನ (ಧರ್ಮಜನ) ನುಡಿಗಳನು+ ಆಲಿಸುತ ನುಡಿದನು, ಕರಾಳ+ ಅಬೀಳ (ಕರಾಳ(ಭೀಕರ) + ಆಭೀಳ(ಆಭೀಲ- ಭಯಂಕರ ಉಗ್ರ) ದಂಷ್ಪ್ರಾ೦ತರ (ದಂಷ್ಟ್ರ (ಹಲ್ಲು)+ ದೂರ ಅಂತರದಲ್ಲಿ )ವಿಸ೦ಸ್ಥಳ(ವಿ+ ಸಂಸ್ಥಳ, ಸುಮ್ಮನೆ ನಿಲ್ಲದ- ನಾಲಿಗೆ) ಜಿಹ್ವೆಗಳ ಜಡಿದು(ಬಡಿದು)ಭಯಂಕರವಾದ,
- ಅರ್ಥ:ಧರ್ಮಜನ ಮಾತನ್ನು ಫಣಿ- ನಾಗನು ಕೇಳಿದನು. ಹೇಗೆಂದರೆ, ಭೀಮಸೇನನ ತಲೆಯನ್ನೇ ಹಾಸಿಗೆಯಂತೆ, ಅಲ್ಲಿ ನಾಗನು ಹೊಳೆಯುವ ತಲೆಯನ್ನಿಟ್ಟುಕೊಂಡು, ಸೀಳಿದ ನಾಲಗೆಯ ಚಲಿಸುವ ಕಣ್ಣುಗಳೊಂದಗೆ ಮುಖವನ್ನು ಮೇಲುಮಾಡಿಕೊಂಡು ನೃಪ ಧರ್ಮಜನ ನುಡಿಗಳನ್ನು ಆಲಿಸುತ್ತಾ ಭೀಕರನೂ, ಭಯಂಕರ ಉಗ್ರನೂ ಆದ ನಾಗನು ಅಂತರದಲ್ಲಿ ಹಲ್ಲು ಉಳ್ಳ, ಸುಮ್ಮನೆ ನಿಲ್ಲದ- ನಾಲಿಗೆನ್ನು ಬಡಿದು ಹೇಳಿದನು.
- ಏನಹನು ನಿನಗೀತ ನೀನಾ
- ರೇನು ನಿನ್ನಭಿದಾನ ವಿಪ್ರನ
- ಸೂನುವೋ ಕ್ಷತ್ರಿಯನೋ ವೈಶ್ಯನೊ ಶೂದ್ರ ಸ೦ಭವನೊ |
- ಏನು ನಿನಗೀ ವನಕೆ ಬರವು ನಿ
- ದಾನವನು ಹೇಳೆನಲು ಕು೦ತೀ
- ಸೂನು ನುಡಿದನು ತನ್ನ ಪೂರ್ವಾಪರದ ಸ೦ಗತಿಯ || ೪೪ ||
- ಪದವಿಭಾಗ-ಅರ್ಥ:ಏನು+ ಅಹನು(ಆಗಿರುವನು) ನಿನಗೆ+ ಈತ, ನೀನಾರು+ ಏನು ನಿನ್ನ+ ಅಭಿದಾನ(ಹೆಸರು)? ವಿಪ್ರನ ಸೂನುವೋ(ಮಗನೋ) ಕ್ಷತ್ರಿಯನೋ? ವೈಶ್ಯನೊ? ಶೂದ್ರ ಸ೦ಭವನೊ(ಹುಟ್ಟಿದವ- ಮಗ)? ಏನು ನಿನಗೆ+ ಈ ವನಕೆ ಬರವು ನಿದಾನವನು(ಕಾರಣ) ಹೇಳು+ ಎನಲು ಕು೦ತೀ ಸೂನು(ಧರ್ಮಜನು) ನುಡಿದನು ತನ್ನ ಪೂರ್ವಾಪರದ ಸ೦ಗತಿಯ.
- ಅರ್ಥ:ಧರ್ಮಜನ ಪ್ರಶ್ನೆಗೆ ನಾಗನು,'ಈತನು(ಭೀಮನು) ನಿನಗೆ ಏನು ಸಂಬಂಧವಾಗಿರುವನು? ನೀನು ಯಾರು? ನಿನ್ನ ಹೆಸರು ಏನು? ನೀನು ವಿಪ್ರನ ಮಗನೋ? ಕ್ಷತ್ರಿಯನೋ? ವೈಶ್ಯನೊ? ಶೂದ್ರ ಸ೦ಭವನೊ? ನಿನಗೆ ಈ ವನಕ್ಕೆ ಬರವ ಏನು ಕಾರಣ ಎನಿತ್ತು ಹೇಳು,' ಎನ್ನಲು, ಧರ್ಮಜನು ತನ್ನ ಪೂರ್ವಾಪರದ ಸ೦ಗತಿಯನ್ನು ಹೇಳಿದನು .
- ಸೋಮವ೦ಶದ ಪರ೦ಪರೆಯೊಳು
- ದ್ದಾಮ ಪಾ೦ಡು ಕ್ಷಿತಿಪನುದಿಸಿದ
- ನಾ ಮಹೀಶನ ಸುತ ಯುದಿಷ್ಠಿರನೆ೦ಬುದಭಿದಾನ |
- ಭೀಮನೀತನು ಪಾರ್ಥ ನಕುಲ ಸ
- ನಾಮ ಸಹದೇವಾಖ್ಯ ಪಾ೦ಡವ
- ನಾಮ ಧೇಯರು ನಾವೆಯೆ೦ದನು ಭೂಪನಾ ಫಣಿಗೆ || ೪೫ ||
- ಪದವಿಭಾಗ-ಅರ್ಥ:ಸೋಮವ೦ಶದ ಪರ೦ಪರೆಯೊಳು+ ಉದ್ದಾಮ ಪಾ೦ಡು ಕ್ಷಿತಿಪನು(ರಾಜನು)+ ಉದಿಸಿದನು(ಹುಟ್ಟಿದನು)+ ಆ ಮಹೀಶನ(ರಾಜನ) ಸುತ(ಮಗ) ಯುದಿಷ್ಠಿರನು+ ಎ೦ಬುದು+ ಅಭಿದಾನ(ಹೆಸರು), ಭೀಮನು+ ಈತನು, ಪಾರ್ಥ ನಕುಲ ಸನಾಮ ಸಹದೇವಾಖ್ಯ ಪಾ೦ಡವ ನಾಮಧೇಯರು ನಾವೆ ಯೆ೦ದನು ಭೂಪನು+ ಆ ಫಣಿಗೆ (ಭೂಪತಿ ಯುಧಿಷ್ಠಿರನು ಆ ನಾಗವನ್ನ ಕುರಿತು).
- ಅರ್ಥ:ಭೂಪತಿ ಯುಧಿಷ್ಠಿರನು ಆ ನಾಗವನ್ನ ಕುರಿತು,'ಚಂದ್ರವ೦ಶದ ಪರ೦ಪರೆಯಲ್ಲಿ ಶ್ರೇಷ್ಠನಾದ ಪಾ೦ಡು ರಾಜನು ಹುಟ್ಟಿದನು. ಆ ಮಹೀಶನ ಮಗ ಯುದಿಷ್ಠಿರನು ಎ೦ಬುದು (ನನ್ನ ಹೆಸರು), ಈತ ನಿನ್ನ ಬಳಿ ಇರುವವನು ಭೀಮನು,ನಂತರ ಜನಿಸಿದ ಪಾರ್ಥ ನಕುಲ ಸಹದೇವ ಹೆಸರಿನವರು, ಪಾ೦ಡವರು ಎಂಬ ನಾಮಧೇಯರು; ಅವರು ನಾವೆ,'ಎ೦ದನು.
- ಬೀತುದಖಿಳೈಶ್ವರ್ಯ ಕಪಟ
- ದ್ಯೂತದಲಿ ಕೌರವರು ಕೊ೦ಡರು
- ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ |
- ಈತನನ್ನೊಡ ಹುಟ್ಟಿದನು ನೀ
- ನೀತನನು ಬಿಡಬಹುದೆ ಬಿಡು ವಿ
- ಖ್ಯಾತರಿಗೆ ಪರಪೀಡೆ ದರ್ಮ ವಿನಾಶಕರವೆ೦ದ || ೪೬ ||
- ಪದವಿಭಾಗ-ಅರ್ಥ:ಬೀತುದು(ಇಲ್ಲವಾಯಿತು)+ ಅಖಿಳ(ಎಲ್ಲಾ)+ ಐಶ್ವರ್ಯ, ಕಪಟದ್ಯೂತದಲಿ ಕೌರವರು ಕೊ೦ಡರು ಭೂತಳವನು (ರಾಜ್ಯ),+ ಎಮಗಾಯ್ತು ಬಳಿಕ+ ಅಟವೀ ಪರಿಭ್ರಮಣ (ಸಂಚಾರ), ಈತನು+ ಎನ್ನ+ ಒಡಹುಟ್ಟಿದನು ನೀನು+ ಈತನನು ಬಿಡಬಹುದೆ, ಬಿಡು ವಿಖ್ಯಾತರಿಗೆ ಪರಪೀಡೆ ದರ್ಮ ವಿನಾಶಕರವು+ ಎ೦ದ
- ಅರ್ಥ:ಧರ್ಮಜನು ನಾಗನನ್ನು ಕುರಿತು,'ಕಪಟದ್ಯೂತದಲ್ಲಿ ನಮ್ಮ ಎಲ್ಲಾ ಐಶ್ವರ್ಯ ಹೋಯಿತು; ಕೌರವರು ನಮ್ಮ ರಾಜ್ಯವನ್ನು ಪಡೆದುಕೊ೦ಡರು. ಬಳಿಕ ನಮಗೆ ಅಡವಿಯಲ್ಲಿ ಸಂಚಾರ ಮಾಡುವ ಸ್ಥಿತಿ ಆಯಿತು, ಈತನು, ನಿನ್ನ ಬಳಿ ಇರುವವನು ನನ್ನ ಒಡಹುಟ್ಟಿದನು. ನೀನು ಈತನನ್ನು ಬಿಡಬಹುದೆ? ದಯಮಾಡಿ ಅವನನ್ನು ಬಿಡು.(ಈ ನಾಗನು ಯಾರೋ ಮಹಾಪುರುಷ ಎಂದು ಭಾವಿಸಿದ) ಧರ್ಮಜನು ವಿಖ್ಯಾತರಾದ ನಿನ್ನಂಥವರಿಗೆ ಪರಪೀಡೆ ದರ್ಮ ವಿನಾಶಕರವು,'ಎ೦ದ.
- ಆದೊಡೆಲೆ ದರಣೀಶ ಧರ್ಮವ
- ನಾದರಿಸುವೈ ಧರ್ಮವೆ೦ಬುದು
- ವೇದ ಮಾರ್ಗವಲೇ ಸುಧರ್ಮದ ಸಾರ ಸ೦ಗತಿಯ |
- ಕೈದು ವುಳ್ಳೊಡೆ ಕಾದುನಿನ್ನಯ
- ಸೋದರನ ಬಿಡುವೆನು ಮನಃಪರಿ
- ಭೇದವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ || ೪೭ ||
- ಪದವಿಭಾಗ-ಅರ್ಥ:ಆದೊಡೆ+ ಎಲೆ ದರಣೀಶ, ಧರ್ಮವನು+ ಆದರಿಸುವೈ? ಧರ್ಮವೆ೦ಬುದು ವೇದ ಮಾರ್ಗವಲೇ; ಸುಧರ್ಮದ ಸಾರ ಸ೦ಗತಿಯ ಕೈದು( ಆಯುಧ- ಕತ್ತಿ) ವುಳ್ಳೊಡೆ(ಇದ್ದರೆ) ಕಾದು(ಕಾಪಾಡಿ) ನಿನ್ನಯ ಸೋದರನ ಬಿಡುವೆನು; ಮನಃಪರಿಭೇಧವನು(ಚಿಂತೆಯನ್ನು, ಮನಸ್ಸಿನಲ್ಲಿ ಬೇರೆ ಬಗೆಯ ಯೋಚನೆಯನ್ನು) ಬಿಸುಟು(ಬಿಟ್ಟು) ಬಿಸುಟು (ಬಿಟ್ಟು)+ ಇನ್ನು ಧರ್ಮ ರಹಸ್ಯ ವಿಸ್ತರವ.
- ಅರ್ಥ:ಆಗ ಆ ನಾಗನು,'ಹಾಗಿದ್ದರೆ, ಎಲೆ ದರಣೀಶನೇ, ಧರ್ಮವನ್ನು ಆದರಿಸುವೆಯಾ? ಧರ್ಮವೆ೦ಬುದು ವೇದ ಮಾರ್ಗವಲ್ಲವೇ; ಸುಧರ್ಮದ ಸಾರ ಸ೦ಗತಿಯ ಆಯುಧವು ನಿನ್ನ ಬಳಿ ಇದ್ದರೆ, ನಿನ್ನಯ ಸೋದರನನ್ನು (ಕೊಲ್ಲದೆ, ತಿನ್ನದೆ) ಕಾದು ಬಿಡುವೆನು; ಚಿಂತೆಯನ್ನು ಬಿಟ್ಟು ಇನ್ನು ಧರ್ಮ ರಹಸ್ಯ ವಿಸ್ತರವನ್ನು ಹೇಳು,'ಎಂದನು.
ಅಜಗರ ನಹುಷನೊಡನೆ - ಧರ್ಮಜನ ಧರ್ಮ ಜಿಜ್ಞಾಸೆ[ಸಂಪಾದಿಸಿ]
- ಉಸುರ ಬಹುದೇ ಧರ್ಮತತ್ವ
- ಪ್ರಸರಣ ವಿದೇನೆ೦ದು ನೀಶ೦
- ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ |
- ಎಸೆವ ವಿಪ್ರರ ಮತಿಗೆ ಸ೦ಭಾ
- ವಿಸುವ ಧರ್ಮವ ನರುಹುವೆನು ನೀ
- ಬೆಸಗೊಳೆ೦ದನು ಧರ್ಮಸುತ ನಹುಷ೦ಗೆ ವಿನಯದಲಿ || ೪೮ ||
- ಪದವಿಭಾಗ-ಅರ್ಥ:ಉಸುರಬಹುದೇ(ಉಸುರು- ಹೇಳು) ಧರ್ಮತತ್ವಪ್ರಸರಣವು+ ಇದು+ ಏನೆ೦ದು ನೀ ಶ೦ಕಿಸಲು ವೇದಸ್ಮೃತಿಪುರಾಣ ತ್ರಾಣ(ಸತ್ವ) ತುಟ್ಟಿಸದೆ(ಕುಂದನ್ನು ತಅರದೆ; ತುಟ್ಟಿಸು- ಶಕ್ತಿಗುಂದು, ಕುಂದು) ಎಸೆವ(ಪ್ರಸಿದ್ಧ) ವಿಪ್ರರಮತಿಗೆ(ವೇದವಿದರಾದ ಬ್ರಾಹ್ಮಣರ ಅಭಿಪ್ರಾಯಕ್ಕೆ,) ಸ೦ಭಾವಿಸುವ (ಮನ್ನಿಸು,ಗೌರವಿಸುವ) ಧರ್ಮವನು+ ಅರುಹುವೆನು(ಹೇಳುವೆನು) ನೀ ಬೆಸಗೊಳು(ಹೇಳು, ಕೇಳು)+ ಎ೦ದನು ಧರ್ಮಸುತ ನಹುಷ೦ಗೆ ವಿನಯದಲಿ.
- ಅರ್ಥ:ಧರ್ಮಜನು ನಹುಷನಿಗೆ ವಿನಯದಿಂದ,'ಇದು ಧರ್ಮತತ್ವಪ್ರಸರಣ- ಧರ್ಮತತ್ತ್ವವಿಚಾರ. ಕ್ಷತ್ರಿಯನಾದ ನಾನು ಹೇಳಬಹುದೇ? ನೀನು ಇವನು ಏನೆ೦ದು ಶ೦ಕಿಸಲು ಬೇಡ. ನಾನು ವೇದಸ್ಮೃತಿಪುರಾಣ ಸತ್ವಕ್ಕೆ ಕುಂದನ್ನು ತಾರದೆ ಪ್ರಸಿದ್ಧವಾದ ವೇದವಿದರಾದ ವಿಪ್ರರ ಅಭಿಪ್ರಾಯಕ್ಕೆ ಗೌರವಿಸುವಂತೆ ಧರ್ಮವನ್ನು ಹೇಳುವೆನು. ನೀನು ಧರ್ಮತತ್ತ್ವ ವಿಚಾರವಾಗಿ ನಿನಗೆ ಬೇಕಾದ್ದನ್ನು ಕೇಳು,' ಎ೦ದನು.
- ಎಸೆವ ವಿಪ್ರರ ಮತಿಗೆ ಸ೦ಭಾ
- ವಿಸುವ ಧರ್ಮ ಸ್ಥಿತಿಯನಭಿವ
- ರ್ಣಿಸುವೆನೆ೦ದೈ ಭೂಪತಿಯೆ ಭೂದೇವ ಕುಲದೊಳಗೆ |
- ಎಸೆವ ವಿಪ್ರನದಾರು ಪರಿಶೋ
- ಭಿಸುವುದೈ ಬ್ರಾಹ್ಮಣ್ಯವೇತರ
- ದೆಸೆಯೊಳಿದನೇ ಮುನ್ನಹೇಳೆನೆ ಭೂಪನಿ೦ತೆ೦ದ || ೪೯ ||
- ಪದವಿಭಾಗ-ಅರ್ಥ:ಎಸೆವ(ಶೋಭಿಸುವ) ವಿಪ್ರರ ಮತಿಗೆ(ಬುದ್ಧಿಗೆ) ಸ೦ಭಾವಿಸುವ(ಒಪ್ಪಿಗೆಯಾಗುವ) ಧರ್ಮ ಸ್ಥಿತಿಯನು+ ಅಭಿವರ್ಣಿಸುವೆನು(ವಿಶೇಷವಾಗಿ ವರ್ಣಿಸುವೆನು)+ ಎ೦ದೈ(ಎಂದೆಯಲ್ಲಾ) ಭೂಪತಿಯೆ, ಭೂದೇವ(ವಿಪ್ರರ) ಕುಲದೊಳಗೆ ಎಸೆವ(ಶೋಭಿಸುವ) ವಿಪ್ರನು+ ಅದು+ ಆರು(ಯಾರು?) ಪರಿಶೋಭಿಸುವುದೈ? ಭ್ರಾಹ್ಮಣ್ಯವು+ ಏತರ ದೆಸೆಯೊಳು?+ ಇದನೇ ಮುನ್ನ ಹೇಳು+ ಎನೆ(ಎನ್ನಲು), ಭೂಪನು (ರಾಜ ಧರ್ಮಜನು)+ ಇ೦ತು(ಹೀಗೆ)+ ಎ೦ದ.
- ಅರ್ಥ:ಧರ್ಮಜನ ಮಾತಿಗೆ ನಾಗರೂಪದ ನಹುಷನು,'ಶೋಭಿಸುವ ವಿಪ್ರರ ಬುದ್ಧಿಗೆ ಒಪ್ಪಿಗೆಯಾಗುವ ಧರ್ಮ ಸ್ಥಿತಿಯನ್ನು ಅಭಿವರ್ಣಿಸುವೆನು ಎಂದೆಯಲ್ಲಾ, ಭೂಪತಿಯೆ, ವಿಪ್ರರ ಕುಲದಲ್ಲಿ ಪ್ರಕಾಶಿಸುವ ವಿಪ್ರನು ಅದು ಯಾರು ಪರಿಶೋಭಿಸುವುದಯ್ಯಾ? ಬ್ರಾಹ್ಮಣ್ಯವು ಯಾವುದರ ದೆಸೆಯೊಳು? ವಿಚಾರದಲ್ಲಿ ಶೋಬಿಸುವುದು? ಇದನ್ನೇ ಮೊದಲು ಹೇಳು,'ಎನ್ನಲು, ರಾಜ ಧರ್ಮಜನು ಹೀಗೆ ಹೇಳಿದನು.
- ಉರಗ ಕೇಳ್ ಪಿತೃ ಮಾತೃ ವ೦ಶೋ
- ತ್ಕರ ವಿಶುದ್ದ ಸದಾಗ್ನಿ ಹೋತ್ರದ
- ಭರದಮಸ್ವಾದ್ಯಾಯ ಸತ್ಯವಹಿ೦ಸೆ ಪರಿತೋಷ |
- ವರ ಗುಣ೦ಗಳಿವನಾವನಲಿ ಗೋ
- ಚರಿಸಿದಾತನೆ ವಿಪ್ರನೆ೦ಬರು
- ಹಿರಿಯರೆ೦ದನು ಧರ್ಮಸುತ ನಹುಷ೦ಗೆ ವಿನಯದಲಿ || ೫೦ ||
- ಪದವಿಭಾಗ-ಅರ್ಥ:ಉರಗ ಕೇಳ್ ಪಿತೃ ಮಾತೃ ವ೦ಶ+ ಉತ್ಕರ(ಸಮೂಹ) ವಿಶುದ್ದ, ಸದ+ ಅಗ್ನಿಹೋತ್ರದ ಭರ(ಭರನೋ, ತೊಡಗಿರುವನೊ), ದಮ(ಸಹನೆ, ಸಂಯಮ), ಸ್ವಾದ್ಯಾಯ, ಸತ್ಯವು,+ ಅಹಿ೦ಸೆ ಪರಿತೋಷ, ವರ(ಉತ್ತಮ) ಗುಣ೦ಗಳು+ ಇವನು+ ಅವನಲಿ ಗೋಚರಿಸಿದೆ+ ಆತನೆ ವಿಪ್ರನು+ ಎ೦ಬರು ಹಿರಿಯರು+ ಎ೦ದನು ಧರ್ಮಸುತ ನಹುಷ೦ಗೆ ವಿನಯದಲಿ.
- ಅರ್ಥ:ಧರ್ಮಜನು ನಹುಷನಿಗೆ,'ಉರಗನೇ ಕೇಳು, ತಂದೆ ತಾಯಿ ಇವರ ವ೦ಶಸಮೂಹವು ಯಾರಲ್ಲಿ ಪರಿಶುದ್ದವೋ, ಯಾವನು ಸದಾ ಅಗ್ನಿಹೋತ್ರದಲ್ಲಿ ತೊಡಗಿರುವನೊ, ಯಾವನಲ್ಲಿ ದಮ, ಸ್ವಾದ್ಯಾಯ, ಸತ್ಯವು, ಅಹಿ೦ಸೆ, ಇವು ಯಾವನಿಗೆ ಪರಿತೋಷ ಕೊಡುವುದೋ, ಈ ಉತ್ತಮ ಗುಣ೦ಗಳಾದ ಇವು ಯಾವನಲ್ಲಿ ಗೋಚರಿಸಿದೆಯೋ ಆತನೆ ವಿಪ್ರನು ಎಂದು ಹಿರಿಯರು ಹೇಳುವರು,'ಎ೦ದು ವಿನಯವಾಗಿ ಹೇಳಿದನು.
- ಆಯಿತಿದು ಮತವಾವುದೈ ಸ್ವಾ
- ಧ್ಯಾಯ ವೆ೦ಬುದದೇನು ಸತ್ಯದ
- ಕಾಯವಾವುದಹಿ೦ಸೆ ಪರಿತೋಷಗಳೀ೦ದೇನು |
- ರಾಯ ಹೇಳಿವರಿರವ ನಿಜಗುಣ
- ದಾಯತನವನೆನೆ ಧರ್ಮವತಿ ರಮ
- ಣೀಯವೆನೆ ನಹುಷ೦ಗೆ ವಿವರಿಸಿದನು ಮಹೀಪಾಲ || ೫೧ ||
- ಪದವಿಭಾಗ-ಅರ್ಥ:ಆಯಿತು+ ಇದು, ಮತವು+ ಆವುದೈ ಸ್ವಾಧ್ಯಾಯ ವೆ೦ಬುದದೇನು, ಸತ್ಯದಕಾಯವು+ ಅವುದು+ ಅಹಿ೦ಸೆ ಪರಿತೋಷಗಳಿಂದ+ ಏನು ರಾಯ ಹೇಳು+ ಇವರ+ ಇರವ ನಿಜಗುಣದ+ ಆಯತನವನು(ನೆಲೆ)+ ಎನೆ ಧರ್ಮವತಿ ರಮಣೀಯವು+ ಎನೆ(ಎನ್ನುವಂತೆ) ನಹುಷ೦ಗೆ ವಿವರಿಸಿದನು ಮಹೀಪಾಲ(ರಾಜ, ಧರ್ಮಜ).
- ಅರ್ಥ:ನಹುಷನು,'ಆಯಿತು ಒಪ್ಪಿದೆ, ಇದು. ಮತವು ಆವುದಯ್ಯಾ? ಸ್ವಾಧ್ಯಾಯವೆ೦ಬುದು ಅದೇನು? ಸತ್ಯದ ಕಾಯವು ಯಾವುದು? ಅಹಿ೦ಸೆ ಪರಿತೋಷಗಳಿಂದ ಏನು- ಪ್ರಯೋಜನ? ರಾಜನೇ, ಇವರು ಇರುವ ಸ್ಥಾನವನ್ನು ಹೇಳು, ನಿಜಗುಣದ ನೆಲೆಯನ್ನು ಎನ್ನಲು, ಧರ್ಮವತಿ ರಾಜನು ರಮಣೀಯವಾಗಿ ನಹುಷಮಿಗೆ ವಿವರಿಸಿದನು.
- ನಿಯತವೀ ಶ್ರೋತ್ರಾದಿ ಪ೦ಚೇ
- ದ್ರಿಯದ ನಿಗ್ರಹ ದಮವೆನಿಪುದು
- ಭಯವನಿತರರಿಗಾಚರಿಸದಿಹುದೇಯಹಿ೦ಸೆ ಕಣ
- ನಯವಿದನೆ ಚಿತೈಸು ಲೋಕ
- ತ್ರಯವನೊ೦ದೇ ಸತ್ಯದಿ೦ದವೆ
- ಜಯಿಸಬಹುದಾ ಸತ್ಯವುಳ್ಳೊಡೆ ವಿಪ್ರನವನೆ೦ದ ೫೨
- ಪದವಿಭಾಗ-ಅರ್ಥ:ನಿಯತವು+ ಈ ಶ್ರೋತ್ರಾದಿ ಪ೦ಚೇದ್ರಿಯದ ನಿಗ್ರಹ ದಮವೆನಿಪುದು ಭಯವ+ಅನಿತರರಿಗೆ (ಅನಿತರು- ಎಲ್ಲರೂ)+ ಆಚರಿಸದಿಹುದೇ+ ಯ+ ಅಹಿ೦ಸೆ ಕಣ ನಯವು+ ಇದನೆ ಚಿತೈಸು(ಕೇಳು) ಲೋಕತ್ರಯವನು+ ಒ೦ದೇ ಸತ್ಯದಿ೦ದವೆ ಜಯಿಸಬಹುದು+ ಆ ಸತ್ಯವುಳ್ಳೊಡೆ ವಿಪ್ರನು+ ಅವನೆ೦ದ
- ಪದವಿಭಾಗ-ಅರ್ಥ:ಧರ್ಮಜನು,'ನಿಯತವು ಅಥವಾ ನಿಯಮವು ಈ ಶ್ರೋತ್ರಾದಿ ಪ೦ಚೇಂದ್ರಿಗಳ ನಿಗ್ರಹವು, ಅದೇ ದಮವು, ಯಾರಿಗೂ ಭಯವನ್ನುಂಟು ಮಾಡದೇ ಇರುವುದು ಅಹಿ೦ಸೆ, ಇದೇ ನಯವು ಎನ್ನಿಸುದು ಕಣ; ಇದನ್ನು ಕೇಳು, ಲೋಕತ್ರಯವನ್ನು ಒ೦ದೇ ಸತ್ಯದಿ೦ದ ಜಯಿಸಬಹುದು, ಆ ಸತ್ಯವಿದ್ದರೆ ಅವನೇ ವಿಪ್ರನು,'ಎ೦ದ
- ಸತ್ಯವೇಸ್ವಾದ್ಯಾಯ ಸತ್ಯವೇ
- ನಿತ್ಯಕರ್ಮ ವಿಧಾನವೊ೦ದೇ
- ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪ |
- ಸತ್ಯವುಳ್ಳೊಡೆ ಶೂದ್ರನವನಿ೦
- ದತ್ಯಧಿಕನಾ ದ್ವಿಜರೊಳಗೆ ವರ
- ಸತ್ಯಹೀನನೆ ಹೀನಜಾತಿಗನೆ೦ದನಾ ಭೂಪ || ೫೩ ||
- ಪದವಿಭಾಗ-ಅರ್ಥ:ಸತ್ಯವೇ ಸ್ವಾದ್ಯಾಯ; ಸತ್ಯವೇ ನಿತ್ಯಕರ್ಮವಿಧಾನವೊ೦ದೇ; ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪ; ಸತ್ಯವುಳ್ಳೊಡೆ ಶೂದ್ರನವನಿ೦ದ+ ಅತ್ಯಧಿಕನು+ ಆ ದ್ವಿಜರೊಳಗೆ ವರಸತ್ಯಹೀನನೆ ಹೀನಜಾತಿಗನು+ ಎ೦ದನಾ ಭೂಪ.
- ಅರ್ಥ:ಭೂಪ ಧರ್ಮಜನು,'ಸತ್ಯವೇ ಸ್ವಾದ್ಯಾಯ; ಒ೦ದೇ ಸತ್ಯವೇ ನಿತ್ಯಕರ್ಮವಿಧಾನವು; ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪವು; ಸತ್ಯವನ್ನು ಅನುಸರಿಸಿದರೆ ಶೂದ್ರನು ಅವನಿ೦ದ- ವಿಪ್ರನಿಂದ ಅತ್ಯಧಿಕನು. ಆ ದ್ವಿಜರಲ್ಲಿ- ವಿಪ್ರರಲ್ಲಿ ವರಸತ್ಯಹೀನಬಾದವನು ಹೀನಜಾತಿಯವನು,'ಎ೦ದನು .
- ಧೀರನಾವನು ದಿಟ್ಟನಾರು ವಿ
- ಕಾರಿ ಯಾರು ವೀನೀತನಾರಾ
- ಚಾರ ಹೀನನದಾರು ಸುವ್ರತಿ ಯಾರು ಶಠ ನಾರು |
- ಕ್ರೂರನಾರತಿ ಕಷ್ಟನಾರು ವಿ
- ಚಾರಿಯಾರುವಿಮುಕ್ತನಾರು ವಿ
- ದೂರನಾರಿಹಪರಕೆ ಭೂಮೀಪಾಲ ಹೇಳೆ೦ದ || ೫೪ ||
- ಪದವಿಭಾಗ-ಅರ್ಥ:ಧೀರನು+ ಆವನು(ಯಾವನು) ದಿಟ್ಟನು+ ಆರು(ಯಾರು) ವಿಕಾರಿ ಯಾರು? ವೀನೀತನು+ ಆರು+ ಆಚಾರ ಹೀನನು+ ಅದು+ ಆರು? ಸುವ್ರತಿ (ಉತ್ತಮ ವ್ರತಮಾಡುವವ) ಯಾರು? ಶಠನು+ ಆರು? ಕ್ರೂರನು+ ಆರು+ ಅತಿ ಕಷ್ಟನಾರು? ವಿಚಾರಿ ಯಾರು? ವಿಮುಕ್ತನು+ ಆರು? ವಿದೂರನು+ ಆರು ಇಹಪರಕೆ ಭೂಮೀಪಾಲ ಹೇಳು+ ಎ೦ದ
- ಅರ್ಥ:ನಹುಷನು ರಾಜನೇ 'ಧೀರನು ಯಾವನು? ದಿಟ್ಟನು ಯಾರು? ವಿಕಾರಿ ಯಾರು? ವೀನೀತನು ಯಾರು? ಆಚಾರ ಹೀನನು ಅದು ಯಾರು? ಉತ್ತಮ ವ್ರತಮಾಡುವವನು ಯಾರು? ಶಠನು ಯಾರು? ಕ್ರೂರನು ಯಾರು? ಅತಿ ಕಷ್ಟನು ಯಾರು? ವಿಚಾರಿ ಯಾರು? ವಿಮುಕ್ತನು ಯಾರು? ಇಹಕ್ಕೂ ಪರಕ್ಕೂ ವಿದೂರನು ಯಾರು? ಹೇಳು,'ಎ೦ದ
- ನಾರಿಯರ ಕಡೆಗಣ್ಣ ಹೊಯ್ಲಿನ
- ಧಾರೆಗಳುಕದನಾವನಾತನೆ
- ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ |
- ಮೇರೆದಪ್ಪುವನೇ ವಿಕಾರಿ ವಿ
- ಚಾರಪರನೆ ವಿನೀತನನ್ಯಾ
- ಚಾರಯುತನಾಚಾರ ಹೀನನು ಫಣಿಪ ಕೇಳೆ೦ದ || ೫೫ ||
- ಪದವಿಭಾಗ-ಅರ್ಥ:ನಾರಿಯರ ಕಡೆಗಣ್ಣ ಹೊಯ್ಲಿನ ಧಾರೆಗೆ+ ಅಳುಕದನು+ ಆವನು+ ಆತನೆ ಧೀರನು+ ಆತನೆ ದಿಟ್ಟನು+ ಅಬಲೆಯರ+ ಉಬ್ಬುಗ ವಳದಲಿ(ವಲಯದಲ್ಲಿ- ಪ್ರದೇಶದಲ್ಲಿ) ಮೇರೆದಪ್ಪುವನೇ ವಿಕಾರಿ, ವಿಚಾರಪರನೆ ವಿನೀತನು+ ಅನ್ಯಾಚಾರಯುತನೆ+ ಆಚಾರ ಹೀನನು. ಫಣಿಪ ಕೇಳು+ ಎ೦ದ (ಅಳುಕದನು+ ಆವನು+ ಆತನೆ ದಿಟ್ಟನು+ ಅಬಲೆಯರ+ ಉಬ್ಬುಗ ವಳದಲಿ (ಯುವತಿಯರ ಉಬ್ಬುಗಳ ಅವಯುವ ಪ್ರದೇಶದಲ್ಲಿ ನೋಡಿದಾಗ, ಮನಸ್ಸಿನಲ್ಲಿ ಅಳುಕದನು- ಅಳುಕದವನು- ಸೋಲದವನು ದಿಟ್ಟನು; ಅಳುಕಿದವ ಅಥವಾ ಮೇರೆತಪ್ಪಿದವ ವಿಕಾರಿ: ಧೀರ, ದಿಟ್ಟ, ಎರಡಕ್ಕೂ ಅನ್ವಯ)
- ಅರ್ಥ:ಧರ್ಮಜನು ನಾಗ-ನಹುಷನ ಪ್ರಶ್ನೆಗೆ,'ನಾರಿಯರ ಕಡೆಗಣ್ಣ ಹೊಡೆತದ ಧಾರೆಗೆ ಅಳುಕದವನು- ಸೋಲದವನು ಯಾವನೋ ಆತನೆ ಧೀರನು ಮತ್ತು ಆತನೆ ದಿಟ್ಟನು. ಯುವತಿಯರ ಉಬ್ಬುಗಳ ವಲಯದ ಪ್ರದೇಶದಲ್ಲಿ ನೋಡಿದಾಗ ಮನಸ್ಸಿನ ಮೇರೆದಪ್ಪುವವನೇ ವಿಕಾರಿ, ವಿಚಾರಪರನೆ ವಿನೀತನು. ಅನ್ಯ ಆಚಾರಯುತನೆ ಆಚಾರ ಹೀನನು. ಫಣಿರಾಜನೇ ಕೇಳು,' ಎ೦ದ.
- ಕೃತಕವಲ್ಲ ದ್ವ೦ದ್ವ ಸಹನೇ
- ವ್ರತಿ ಮುಮುಕ್ಷು ವಿಚಾರಯುಕ್ತನು
- ಕೃತಕನೇ ಶಠನಪ್ರಗಲ್ಭ ಕೃತಘ್ನನೇ ಕ್ರೂರ |
- ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ
- ರತನೆ ಮುಕ್ತನು ವೇದ ಮಾರ್ಗ
- ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳೆ೦ದ || ೫೬ ||
- ಪದವಿಭಾಗ-ಅರ್ಥ:ಕೃತಕವಲ್ಲ ದ್ವ೦ದ್ವ ಸಹನೇ ವ್ರತಿ ಮುಮುಕ್ಷು ವಿಚಾರಯುಕ್ತನು; ಕೃತಕನೇ ಶಠನು+ ಅಪ್ರಗಲ್ಭ ಕೃತಘ್ನನೇ ಕ್ರೂರ, ಕ್ಷಿತಿಗೆ(ಭೂಮಿಗೆ) ಲೋಭಿಯೆ ಕಷ್ಟನು+ ಆತ್ಮರತನೆ ಮುಕ್ತನು, ವೇದ ಮಾರ್ಗಚ್ಯುತನೆ ಲೋಕದ್ವಯಕೆ(ಎರಡು ಲೋಕ: ಇಹ- ಪರ, ಭೂಮಿ, ಸ್ವರ್ಗ) ದೂರನು, ಫಣಿಪ ಕೇಳೆ೦ದ.
- ಅರ್ಥ:ಧರ್ಮಜನು,'ಜೀವನದಲ್ಲಿ ಕೃತಕವಲ್ಲದ ಸಹಜವಾಗಿರುವ ಸುಖ- ದುಃಖ ದ್ವ೦ದ್ವವನ್ನು ಕಂಡು ಸಹನೆಯಿಂದ ಇರುವವನೇ ವ್ರತಿ- ವ್ರತನಿಷ್ಠನು; ವಿಚಾರಯುಕ್ತನು ಮುಮುಕ್ಷು- ಮೋಕ್ಕ್ಷಪರನು; ; ಜೀವನದಲ್ಲಿ ಸಹಜವಾಗಿರದೆ ತನ್ನಲ್ಲಿ ಇಲ್ಲದೇ ಇರುವ ಗುಣವನ್ನು ಪ್ರದರ್ಶಿಸುವ- ಕೃತಕನೇ ಶಠನು ಅಪ್ರಗಲ್ಭ- ಪ್ರೌಢತೆ ಇಲ್ಲದವನು; ಉಪಕಾರ ಸ್ಮರಣೆ ಇಲ್ಲದ ಕೃತಘ್ನನೇ ಕ್ರೂರ- ಕ್ರೂರಿ; ಈ ಭೂಮಿಯಲ್ಲಿ ಸಂಪತ್ತು ಇದ್ದರೂ ಬಂಧುಗಳಿಗೆ ಉಣ್ಣಿಸಲಾರದ, ಕೊಡಲಾರದ, ತಾನೂ ಉಣ್ಣಲಾರದ ಲೋಭಿಯೆ ಕಷ್ಟನು-ಕಷ್ಟಕ್ಕೆ ಒಳಗಾದವನು- ಕಷ್ಟಕ್ಕೆ ಸಿಕ್ಕಿದವನು; ತನ್ನ ಆತ್ಮದಲ್ಲಿ ಮನಸ್ಸನ್ನು ಲಯಗೊಳಿಸಿದ ಆತ್ಮರತನೆ ಮುಕ್ತನು; ವೇದ ಮಾರ್ಗಚ್ಯುತನೆ- ಬಿಟ್ಟವನೆ ಇಹ ಮತ್ತು ಪರ ಈ ಲೋಕದ್ವಯಕೆ ದೂರನಾದವನು, ಫಣಿರಾಜನೇ ಕೇಳು,'ಎ೦ದ.
- ಆರು ಭ೦ಡರು ಸುಜನ ನಿ೦ದ್ಯರ
- ದಾರು ಹಾಲಾಹಲ ಸ್ವರೂಪ
- ರದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು |
- ಆರು ಹಗೆ ಸಖನಾರು ಸೇವ್ಯನ
- ದಾರು ದುರ್ಬಲನಾರು ದುಸ್ಸಹ
- ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆ೦ದ || ೫೭ ||
- ಪದವಿಭಾಗ-ಅರ್ಥ:ಆರು(ಯಾರು) ಭ೦ಡರು ಸುಜನ ನಿ೦ದ್ಯರು+ ಅದಾರು? ಹಾಲಾಹಲ ಸ್ವರೂಪರು+ ಅದಾರು? ಸಾಹಸಿ ಯಾರು? ಸಜ್ಜನನಾರು> ಶುಚಿ ಯಾರು?ಆರು ಹಗೆ? ಸಖನಾರು? ಸೇವ್ಯನು+ ಅದಾರು? ದುರ್ಬಲನು+ ಆರು? ದುಸ್ಸಹನು+ ಆರು? ದುರ್ಮತಿ ಯಾರು? ಧರ್ಮಜ ತಿಳಿಯ ಹೇಳೆ೦ದ.
- ಅರ್ಥ:ನಹುಷನು ಮತ್ತೆ ಪ್ರಶ್ನೆ ಕೇಳಿದ,'ಯಾರು ಭ೦ಡರು? ಸುಜನ ನಿ೦ದ್ಯರು ಅದಾರು? ಹಾಲಾಹಲ ಸ್ವರೂಪರು ಅದಾರು? ಸಾಹಸಿ ಯಾರು? ಸಜ್ಜನನಾರು? ಶುಚಿ ಯಾರು? ಆರು(ಯಾರು) ಹಗೆ? ಸಖನಾರು? ಸೇವ್ಯನು+ ಅದಾರು? ದುರ್ಬಲನು ಯಾರು? ದುಸ್ಸಹನು ಆರು? ದುರ್ಮತಿ ಯಾರು? ಧರ್ಮಜನೆ ತಿಳಿಯ ಹೇಳು,;ಎ೦ದ.
- ವ್ಯಸನಿ ನಿ೦ದ್ಯನು ರಣದೊಳೊಡೆಯನ
- ಬಿಸುಟು ಹೋಹನೆ ಭ೦ಡನತಿ ಸಾ
- ಹಸಿಕನೇ ಸೇವಕನು ಮಿತ್ರದ್ರೋಹೊಯೇ ವಿಷವು |
- ಪಿಸುಣನೇ ಹಗೆ ಪರಸತಿಗೆ ಮನ
- ಮಿಸುಕದವನೇ ಶುಚಿ ಪರಾರ್ಥ
- ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳೆ೦ದ || ೫೮ ||
- ಪದವಿಭಾಗ-ಅರ್ಥ:ವ್ಯಸನಿ ನಿ೦ದ್ಯನು (ನಿಂದೆಗೆ ತಕ್ಕವನು), ರಣದೊಳು(ಯುದ್ಧದಲ್ಲಿ)+ ಒಡೆಯನ ಬಿಸುಟು ಹೋಹನೆ(ಹೋಗುವವನು) ಭ೦ಡನು,+ ಅತಿ ಸಾಹಸಿಕನೇ ಸೇವಕನು, ಮಿತ್ರದ್ರೋಹಿಯೇ ವಿಷವು ಪಿಸುಣನೇ ಹಗೆ(ಶತ್ರು); ಪರಸತಿಗೆ ಮನಮಿಸುಕದವನೇ ಶುಚಿ, ಪರಾರ್ಥ (ಪರರ ಸಂಪತ್ತು ಸೌಖ್ಯಕ್ಕಾಗಿ ) ವ್ಯಸನಿಯೇ(ಚಿಂತಿಸುವವನು) ಸಜ್ಜನನು, ಸರ್ಪಾಧೀಶ ಕೇಳು,'ಎ೦ದ
- ಅರ್ಥ: ಕೆಟ್ಟ ಅಭ್ಯಾಸವಿರುವ ವ್ಯಸನಿಯು ನಿ೦ದ್ಯನು. ಯುದ್ಧದಲ್ಲಿ ಒಡೆಯನನ್ನು ಬಿಸುಟು-ಬಿಟ್ಟು ಹೋಗುವವನೇ ಭ೦ಡನು. ಯಜಮಾನನು ಕೊಟ್ಟ ಕೆಲಸವು ಕಷ್ಟದ್ದಾದರೂ ಅದನ್ನು ಅತಿ ಸಾಹಸದಿಂದ ಪೂರೈಸುವವನು ನಿಜವಾದ ಸೇವಕನು. ಮಿತ್ರದ್ರೋಹಿಯೇ ವಿಷವು; ಪಿಸುಣನೇ- ಜಿಪುಣನೇ ಶತ್ರು; ಪರಸತಿಗೆ ಮನಸ್ಸನ್ನು ಕೊಡದವನೇ ಶುಚಿ- ಶುದ್ಧನು; ಪರಾರ್ಥ- ಪರರ ಸಂಪತ್ತು ಸುಖಕ್ಕಾಗಿ ಚಿಂತಿಸುವವನೇ ಸಜ್ಜನನು; ಸರ್ಪಾಧೀಶನೇ ಕೇಳು,'ಎ೦ದ
- ವಿನುತ ಪರತತ್ವಜ್ಞನತಿ ಸೇ
- ವ್ಯನುಸುದುರ್ಲಭನೇ ಜಿತೇ೦ದ್ರಿಯ
- ನನುಗುಣನೇ ಸಖನಾರು ಸೈರಿಸದವನೇ ದುಸ್ಸಹನು |
- ಮನುಜರಲಿ ದುರ್ಮತಿಯಲಾ ದು
- ರ್ಜನರಿ ಗಾಶ್ರಯ ವೆ೦ದು ತೋರಿದು
- ದೆನಗೆ ನಿನಗಭಿಮತವೇ ಕೈಕೊಳ್ಳೆ೦ದನಾ ಭೂಪ || ೫೯ ||
- ಪದವಿಭಾಗ-ಅರ್ಥ:ವಿನುತ(ಪ್ರಖ್ಯಾತ) ಪರತತ್ವಜ್ಞನು+ ಅತಿ ಸೇವ್ಯನು(ಸೇವೆಗೆ ಯೋಗ್ಯನಾದವನು) ಸುದುರ್ಲಭನೇ(ಸಿಗಲಾರನೇ) ಜಿತೇ೦ದ್ರಿಯನು+ ಅನುಗುಣನೇ, ಸಖನಾರು ಸೈರಿಸದವನೇ ದುಸ್ಸಹನು ಮನುಜರಲಿ ದುರ್ಮತಿಯಲಾ ದುರ್ಜನರಿಗಾಶ್ರಯವೆ೦ದು ತೋರಿದುದೆನಗೆ ನಿನಗೆ+ ಅಭಿಮತವೇ ಕೈಕೊಳ್ಳು+ ಎ೦ದನಾ ಭೂಪ
- ಅರ್ಥ:ವಿನುತನಾದ ಪರತತ್ವವನ್ನು ತಿಳಿದವನು ಅತಿ ಸೇವೆಗೆ ಯೋಗ್ಯನಾದವನು ಸುದುರ್ಲಭನೇ ಸರಿ. ಜಿತೇ೦ದ್ರಿಯನು ಅನುಗುಣನೇ- ಗುಣವಂತನೇ ಅಹುದು; ಸಖನು- ಸ್ನೇಹಿತನು ಯಾರು? ಸೈರಿಸಲು ಅಸಾಧ್ಯವಾದವನೇ ದುಸ್ಸಹನು; ದುರ್ಜನರಿಗೆ ಆಶ್ರಯವ ಕೊಡುವವನು ಮನುಜರಲ್ಲಿ ದುರ್ಮತಿಯಲಾ; ನನಗೆ ಹೀಗೆ ತೋರಿದೆ: ಅದು ನಿನಗೆ ಅಭಿಮತವೇ- ಒಪ್ಪಿಗೆಯೇ? ಉತ್ತರವನ್ನು ಕೈಕೊಳ್ಳು- ಹೇಳು ಎ೦ದನು ಆ ಭೂಪ ಧರ್ಮಜ.
- ಅಹುದಲೇ ಬಳಿಕೇನು ವಿದ್ಯಾ
- ಮಹಿಮೆ ದಾನ ತಪೋಗುಣಕೆ ಸ
- ನ್ನಿಹತನೀ ಧರ್ಮದಲಿ ಸತ್ಯಾಚಾರ ಶೀಲದಲಿ |
- ಕುಹಕಿಯಲ್ಲ ವಿರೋಧಿಯಲ್ಲತಿ
- ಸಹಸಿಯೈ ಸಾರಜ್ಞನಲ್ಲೆನ
- ಬಹುದೆ ನಿನ್ನುಕುತಿಗಳನೆ೦ದನು ನಹುಷನರಸ೦ಗೆ || ೬೦ ||
- ಪದವಿಭಾಗ-ಅರ್ಥ:ಅಹುದಲೇ(ನಿಜವೇ ಒಪ್ಪಿದೆ) ಬಳಿಕ+ ಎನು ವಿದ್ಯಾಮಹಿಮೆ, ದಾನ, ತಪೋಗುಣಕೆ ಸನ್ನಿಹತನು, ಈ ಧರ್ಮದಲಿ ಸತ್ಯಾಚಾರ ಶೀಲದಲಿ ಕುಹಕಿಯಲ್ಲ, ವಿರೋಧಿಯಲ್ಲ+ ಅತಿಸಹಸಿಯೈ ಸಾರಜ್ಞನು(ಶಾಸ್ತ್ರದ ಸಾರವನ್ನು ತಿಳಿದವನು)+ ಅಲ್ಲ+ ಎನಬಹುದೆ? ನಿನ್ನ+ ಉಕುತಿಗಳನು(ಉಕ್ತಿ, ಹೇಳಿಕೆ)+ ಎ೦ದನು ನಹುಷನು+ ಅರಸ೦ಗೆ.
- ಅರ್ಥ:ನಹುಷನು ಅರಸ ಧರ್ಮಜನಿಗೆ,'ನೀನು ಹೇಳಿದ್ದ ನಿಜವೇ, ಒಪ್ಪಿದೆ. ಬಳಿಕ ಎನು ಹೇಳಲಿ; ನೀನು ವಿದ್ಯಾಮಹಿಮೆ, ದಾನ, ತಪೋಗುಣಕೆ ಸನ್ನಿಹತನು. ಈ ಧರ್ಮದಲಿ ಸತ್ಯಾಚಾರ ಶೀಲದಲಿ ಕುಹಕಿಯಲ್ಲ. ವಿರೋಧಿಯಲ್ಲ. ಅತಿಸಾಹಸಿಯು; ಸಾರಜ್ಞನು, ನಿನ್ನ ಉಕ್ತಿಗಳನ್ನು ಅಲ್ಲ ಎನ್ನಬಹುದೆ?' ಎ೦ದನು.
- ಅರಸ ಕೇಳೈ ಕ್ಷಾತ್ರ ತೇಜವ
- ಹೊರೆವುದೇ ಬ್ರಾಹ್ಮಣ್ಯ ಶಕ್ತಿ
- ಸ್ಪುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ |
- ಮೆರೆದೆಲಾ ವಿಪ್ರಾವಮಾನವೆ
- ಸಿರಿಗೆ ನ೦ಜು ಕಣಾ ಮಹೀಸುರ
- ವರರುಪಾಸನೆ ನಿನಗೆ ನೀ ಕೃತಕೃತ್ಯ ನಹೆಯೆ೦ದ || ೬೧ ||
- ಪದವಿಭಾಗ-ಅರ್ಥ:ಅರಸ ಕೇಳೈ ಕ್ಷಾತ್ರ ತೇಜವ ಹೊರೆವುದೇ(ಕಾಪಾಡುವುದೇ) ಬ್ರಾಹ್ಮಾಣ್ಯ ಶಕ್ತಿಸ್ಪುರಣೆ(ಪ್ರತಿಭೆ); ನೀನು+ ಈ ಬ್ರಹ್ಮವರ್ಗದ ಸಾರಸೌಖ್ಯದಲಿ ಮೆರೆದೆಲಾ, ವಿಪ್ರ+ ಅವಮಾನವೆ ಸಿರಿಗೆ ನ೦ಜು(ವಿಷ, ಕೇಡು) ಕಣಾ, ಮಹೀಸುರ(ವಿಪ್ರರ) ವರರ (ಶ್ರೇಷ್ಠರ)+ ಉಪಾಸನೆ ನಿನಗೆ ನೀ ಕೃತಕೃತ್ಯನು(ಜೀವನದಲ್ಲಿ ಸಾಧಿಸಬೇಕಾದ್ದನ್ನ ಸಾಧಿಸಿದವನು)+ ಅಹೆ(ಆಗಿರುವೆ) + ಯೆ೦ದ.
- ಅರ್ಥ:ನಹುಷನು,'ಯುಧಿಷ್ಠಿರ ಅರಸನೇ ಕೇಳಯ್ಯಾ, ಕ್ಷಾತ್ರ ತೇಜಸ್ಸನ್ನು ಕಾಪಾಡುವುದೇ ಬ್ರಾಹ್ಮಣ್ಯ ಶಕ್ತಿಸ್ಪುರಣೆಯು. ನೀನು ಈ ಬ್ರಹ್ಮವರ್ಗದ ಸಾರಸೌಖ್ಯದಲ್ಲಿ ಮೆರೆದಿರುವೆ! ವಿಪ್ರರ ಅವಮಾನವೆ ಸಂಪತ್ತು ಮತ್ತು ಸಿರಿಗೆ ಕೇಡು ಕಣಾ! ವಿಪ್ರಶ್ರೇಷ್ಠರ ಉಪಾಸನೆಯು ನಿನಗೆ- ನಿನ್ನಲ್ಲಿ ಇದೆ. ನೀನು ಜೀವನದಲ್ಲಿ ಕೃತಕೃತ್ಯನು ಸಹ ಆಗಿರುವೆ,' ಎ೦ದ.
- ನೂರು ಯಜ್ಞದ ಹೊಯ್ದರಿಗೆ ಹರಿ
- ದೇರಿದೆನು ಸುರಪತಿಯ ಪೀಠವ
- ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ |
- ಮಾರು ಮಾತೇನೈ ಮಹೀಸುರ
- ರೇರಿಸಿದರೇರುವುದು ಮುನಿದರೆ
- ಹಾರಿಸುವರೈ ನೂರು ಯಜ್ಞವನೆ೦ದನಾ ನಹುಷ || ೬೨ ||
- ಪದವಿಭಾಗ-ಅರ್ಥ:ನೂರು ಯಜ್ಞದ ಹೊಯ್ದರಿಗೆ(ಹೊಯ್= ಸುರಿ, ಎರೆ, ಹೊಡೆ?,"ನೂರು ಯಜ್ಞನವನ್ನು ಮಾಡಿಹೊಡೆದ- ಸಾಹಸದಿಂದ ಮಾಡಿ ಮುಗಿಸಿದ") ಹರಿದು(ಚಲಿಸಿ, ಈಗ ಅವನು ಹಾವು -ಅದಕ್ಕಾಗಿ - ಹೋದೆನು ಎನ್ನಲು 'ಹರಿದು' ಎನ್ನುವನು)+ ಏರಿದೆನು ಸುರಪತಿಯ ಪೀಠವನು+ ಓರುಗುಡಿಸಿತು(ರಾಶಿಯಾಗಿ ಒಂದು ಕಡೆ ಬೀಳು, ದಿಕ್ಕೆಟ್ಟು ಬೀಳು) ಪದವಿಯು+ ಅದು ವಿಪ್ರಾವಮಾನದಲಿ ಮಾರು(ಮರು?) ಮಾತೇನೈ ಮಹೀಸುರರು(ವಿಪ್ರರು)+ ಏರಿಸಿದರೆ(ಹರಸಿ ಉನ್ನತಿಗೆ ಎತ್ತಿದರೆ)+ ಏರುವುದು ಮುನಿದರೆ ಹಾರಿಸುವರೈ (ಹಾರಿಸು- ಇಲ್ಲದಂತೆ ಮಾಡುವರು ) ನೂರು ಯಜ್ಞವನು+ ಎ೦ದನು+ ಆ ನಹುಷ.
- ಅರ್ಥ:ನಹುಷನು ಧರ್ಮಜನಿಗೆ,'ನೂರು ಅಶ್ವಮೇಧ ಯಜ್ಞದ ಕಾರ್ಯವನ್ನು ಮಾಡಿ ಮುಗಿಸಿದವರಿಗೆ ಇಂದ್ರಪದವಿ ಎಂಬ ಫಲದಂತೆ ಸ್ವರ್ಗಕ್ಕೆ ಹರಿದು ಸುರಪತಿಯಾದ ಇಂದ್ರನ ಪೀಠವನ್ನು ಏರಿದೆನು. ಆ ಪದವಿ ಕೆಟ್ಟು ಕೆಳಗೆ ದಿಕ್ಕೆಟ್ಟುಬಿದ್ದೆನು. ಆ ಪದವಿಯು ವಿಪ್ರರ ಅವಮಾನದ ಕಾರಣದಿಂದ ತಪ್ಪಿಹೋಯಿತು. ಮಾರುದ್ದ ಮಾತಿನಿಂದ ಏನು ಪ್ರಯೋಜನ? ವಿಪ್ರರು ಮೇಲಕ್ಕೆ - ಉನ್ನತಿಗೆ ಹರಸಿ ಏರಿಸಿದರೆ, ಏರುವುದು; ಅವರು ಮುನಿದರೆ ನೂರು ಯಜ್ಞವನ್ನೂ ಹಾರಿಸಿ, ಗತಿ ಇಲ್ಲದಂತೆ ಮಾಡುವರು,' ಎ೦ದನು.
- ಎನ್ನ ವೃತ್ತಾ೦ತದ ನಿಧಾನವ
- ಮುನ್ನವೇ ಬೆಸಗೊಳಲು ಹೇಳಿದೆ
- ನಿನ್ನುನಿನ್ನಭಿಧಾನವನು ನೀನಾವನೆ೦ಬುದನು |
- ಇನ್ನು ಕೇಳುವೆನೆನಲು ನಿಮ್ಮಲಿ
- ಮುನ್ನಿನವರ ಯಯಾತಿಯಯ್ಯನು
- ನನ್ನ ನಾಮವೆ ನಹುಷನೆ೦ಬುದು ನೃಪತಿ ಕೇಳೆ೦ದ || ೬೩ ||
- ಪದವಿಭಾಗ-ಅರ್ಥ:ಎನ್ನ ವೃತ್ತಾ೦ತದ(ವಿಷಯದ) ನಿಧಾನವ(ಮೂಲವನ್ನು) ಮುನ್ನವೇ(ಮೊದಲೇ) ಬೆಸಗೊಳಲು(ಹೇಳಲು) ಹೇಳಿದೆನು+ ಇನ್ನು ನಿನ್ನ+ ಅಭಿಧಾನವನು ನೀನು+ ಆವನು+ ಎ೦ಬುದನು, ಇನ್ನು ಕೇಳುವೆನು ಎನಲು ನಿಮ್ಮಲಿ ಮುನ್ನಿನವರ( ನಿನ್ನ ವಂಶದ ಹಿಂದಿನವರ) ಯಯಾತಿಯ+ ಅಯ್ಯನು (ತಂದೆ); ನನ್ನ ನಾಮವೆ ನಹುಷನು+ ಎ೦ಬುದು ನೃಪತಿ ಕೇಳೆ೦ದ.
- ಅರ್ಥ:ಧರ್ಮಜನು ಅಜಗರ ನಾಗನಿಗೆ, 'ನನ್ನ ವಿಷಯದ ವಿವರ ಮೂಲವನ್ನು ಮೊದಲೇ ಹೇಳಲು ಕೋರಿದೆ. ಅದನ್ನು ಹೇಳಿದೆನು. ಇನ್ನು ನಿನ್ನ ಹೆಸರನ್ನು, ನೀನು ಯಾವನು ಎ೦ಬುದನ್ನು ಹೇಳು ಎನ್ನಲು'; ನಾಗನು, 'ಇನ್ನು ಕೇಳುವೆನು ರಾಜನೇ ಕೇಳು, ಎಂದು ಹೇಳಿ, ನಿಮ್ಮ ಚಂದ್ರವಂಶದ, ಹಿಂದಿನವರಾದ ಯಯಾತಿಯ ತಂದೆ ನಾನು; ನನ್ನ ಹೆಸರು ನಹುಷನು,' ಎ೦ದನು.
- ಮಾಡಿದೆನು ಮಖ ಶತವನದು ಹೋ
- ಗಾಡಿತಿ೦ದ್ರನನಲ್ಲಿ ತನಗೆಡೆ
- ಮಾಡಿತರಮನೆ ಕ೦ಡುದಾ ತೆತ್ತೀಸ ಕೋಟಿಗಳು |
- ನಾಡು ಬಿಡೆನಗಾಯ್ತು ವಶ ಖಯ
- ಖೋಡಿಯಿಲ್ಲದೆ ಶಕ್ರಪದದಲಿ
- ಜಾಡಿಸುವೆನದನೇನ ಹೇಳುವೆನೆನುತ ಬಿಸುಸುಯ್ದ || ೬೪ ||
- ಪದವಿಭಾಗ-ಅರ್ಥ:ಮಾಡಿದೆನು ಮಖ(ಯಾಗ, ಯಜ್ಞ) ಶತವನು(ನೂರು)+ಅದು ಹೋಗಾಡಿತು+ ಇ೦ದ್ರನನು+ ಅಲ್ಲಿ ತನಗೆ+ ಎಡೆಮಾಡಿತು(ಸ್ಥಾನ)+ ಅರಮನೆ ಕ೦ಡುದು+ ಆ ತೆತ್ತೀಸ ಕೋಟಿಗಳು ನಾಡು ಬಿಡು+ ಎನಗಾಯ್ತು ವಶ, ಖಯ(ಜಂಬ, ಸೊಕ್ಕು, ಮೊಂಡುತನ, ಹಟಮಾರಿತನ) ಖೋಡಿಯಿಲ್ಲದೆ ಶಕ್ರ(ಇಂದ್ರ) ಪದದಲಿ ಜಾಡಿಸುವೆನು(ದೆನು?) (ರಭಸದಿಂದ ಕೈಕಾಲು ಬಡಿದೆನು), ಅದನು+ ಏನ ಹೇಳುವೆನು+ ಎನುತ ಬಿಸುಸುಯ್ದ.
- ಅರ್ಥ:ನಹುಷ ಹೇಳಿದ,'ನಾನು ನೂರು ಅಶ್ವಮೇಧಯಾಗವನ್ನು ಮಾಡಿದೆನು. ಅದು ಇ೦ದ್ರನನ್ನು ಅವನ ಸ್ಥಾನದಿಂದ ಹೊರಹೋಗಿಸಿತು. ಅಲ್ಲಿ ತನಗೆ ಸ್ಥಾನ ಕೊಟ್ಟಿತು. ಇಂದ್ರನ ಅರಮನೆ ನನ್ನ ಒಡೆತನ ಕ೦ಡಿತು. ಆ ಮೂವತ್ಮುರು ಕೋಟಿ ದೇವತೆಗಳ ನಾಡು- ಲೋಕವು ಬಿಡು, ನನಗೆ ವಶವಾಯಿತು. ಜಂಬವಿಲ್ಲದೆ ಇಂದ್ರಪದದಲ್ಲಿ ವೈಭವದಿಂದ ಮೆರೆದೆನು, ಅದನ್ನು ಏನೆಂದು ಹೇಳುವೆನು?' ಎನ್ನುತ್ತಾ ಬಿಸುಸುಯ್ದ, ನಿಟ್ಟುಸಿರು ಬಿಟ್ಟನು.
- ಅರಸ ಕೇಳೈ ರ೦ಭೆ ಯೂರ್ವಶಿ
- ವರ ತಿಲೋತ್ತಮೆ ಗೌರಿ ಮೇನಕಿ
- ಸುರಸೆ ಸುವದನೆಮ೦ಜುಘೋಷೆ ಸುಕೇಸಿ ಮೊದಲಾದ |
- ಸುರಸತಿಯರೆನ್ನರಮನೆಯ ತೊ
- ತ್ತಿರುಗಳಾದರು ಮೂರು ಲಕ್ಷದ
- ಹೊರಗೆ ಮೂವತ್ತಾರು ಸಾವಿರವೆ೦ದನಾ ನಹುಷ || ೬೫ ||
- ಪದವಿಭಾಗ-ಅರ್ಥ:ಅರಸ ಕೇಳೈ ರ೦ಭೆಯು+ ಊರ್ವಶಿ, ವರ ತಿಲೋತ್ತಮೆ, ಗೌರಿ, ಮೇನಕಿ, ಸುರಸೆ, ಸುವದನೆ, ಮ೦ಜುಘೋಷೆ, ಸುಕೇಸಿ, ಮೊದಲಾದ ಸುರಸತಿಯರು+ ಎನ್ನ+ ಅರಮನೆಯ ತೊತ್ತಿರುಗಳು(ಸೇವಕಿಯರು)+ ಆದರು; ಮೂರು ಲಕ್ಷದ ಹೊರಗೆ ಮೂವತ್ತಾರು ಸಾವಿರವೆ೦ದನು ಆ ನಹುಷ.
- ಅರ್ಥ:ಅರಸ ಧರ್ಮಜನೇ ಕೇಳಯ್ಯಾ,'ರ೦ಭೆಯು, ಊರ್ವಶಿ, ವರ- ಉತ್ತಮಳಾದ ತಿಲೋತ್ತಮೆ, ಗೌರಿ, ಮೇನಕಿ, ಸುರಸೆ, ಸುವದನೆ, ಮ೦ಜುಘೋಷೆ, ಸುಕೇಸಿ, ಮೊದಲಾದ ಸುರಸತಿಯರು- ಅಪ್ಸರೆಯರು ನನ್ನ ಅರಮನೆಯ ಸೇವಕಿಯರು ಆದರು; ಅದಲ್ಲದೆ ಹೊರಗೆ ಮೂರು ಲಕ್ಷದ ಮೂವತ್ತಾರು ಸಾವಿರ ದೇವತೆಗಳು ಸೇವಕರು,'ಎ೦ದನು ಆ ನಹುಷ.
- ಈಸು ನಾರಿಯರಿರಲು ಬಯಲಭಿ
- ಲಾಷೆ ದಿವಿಜೇಶ್ವರನ ರಾಣೀ
- ವಾಸದಲಿ ಗರಿಗಟ್ಟಿ ತ೦ದುದು ತನ್ನನೀ ವಿಧಿಗೆ |
- ಮೀಸಲಿನ ಮಾನಿನಿಯರಲಿ ಮನ
- ದಾಸೆ ಮನುಜರ ಮುರಿವುದಕೆ ನಾ
- ನೈಸಲೇ ದೃಷ್ಟಾ೦ತವೆ೦ದನು ನಹುಷನರಸ೦ಗೆ || ೬೬ ||
- ಪದವಿಭಾಗ-ಅರ್ಥ:ಈಸು(ಇಷ್ಟೊಂದು) ನಾರಿಯರು+ ಇರಲು ಬಯಲ+ ಅಭಿಲಾಷೆ, ದಿವಿಜೇಶ್ವರನ(ಇಂದ್ರನ) ರಾಣೀವಾಸದಲಿ(ಪತ್ನಿ) ಗರಿಗಟ್ಟಿ(ಇಂದ್ರನ ಪತ್ನಿಯ ವಿಷಯದಲ್ಲಿ ಬಯಕೆ ಗರಿಕಟ್ಟಿ ತೀವ್ರ ಬಯಕೆಯು) ತ೦ದುದು ತನ್ನನು+ ಈ ವಿಧಿಗೆ; ಮೀಸಲಿನ ಮಾನಿನಿಯರಲಿ(ಒಬ್ಬರಿಗೇ ಮೀಸಲಾದ ಸ್ತ್ರೀಯಲ್ಲಿ) ಮನದಾಸೆ, ಮನುಜರ ಮುರಿವುದಕೆ(ಕೇಡಿಗೆ) ನಾನೈಸಲೇ(ನಾನೇ ಸರಿ) ದೃಷ್ಟಾ೦ತವು+ ಎ೦ದನು ನಹುಷನು+ ಅರಸ೦ಗೆ.
- ಅರ್ಥ:ನಹುಷನು ಅರಸನಿಗೆ,'ಇಷ್ಟೊಂದು ಸುಂದರ ನಾರಿಯರು ಹತ್ತಿರ ಇರಲು ನನಗೆ ಬಯಲ- ಅರ್ಥಹೀನ ಅಭಿಲಾಷೆಯು ಉಂಟಾಯಿತು. ಇಂದ್ರನ ರಾಣೀವಾಸದವಳಾದ -ಇಂದ್ರನ ಪತ್ನಿ ಶಚೀದೇವಿಯ ವಿಷಯದಲ್ಲಿ ಬಯಕೆ ಗರಿಗಟ್ಟಿ- ತೀವ್ರವಾಗಿ, ಅದು ತನ್ನನ್ನು ಈ ವಿಧಿಗೆ ತ೦ದಿರುವುದು; ಒಬ್ಬರಿಗೇ ಮೀಸಲಾದ ಸ್ತ್ರೀಯಲ್ಲಿ ಉಂಟಾದ ಮನದಾಸೆ, ಮನುಜರ ಕೇಡಿಗೆ- ಪತನಕ್ಕೆ ದಾರಿ ಎಂಬುದಕ್ಕೆ ನಾನೇ ಸರಿಯಾದ ದೃಷ್ಟಾ೦ತವು,'ಎ೦ದನು .
- ಆಧಿ ಬಿದ್ದುದು ಶಚಿಯ ಮೇಲಣ
- ವೇಧೆಯಲಿ ವಿಟಬುದ್ದಿಸಿರಿಗುಪ
- ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ |
- ಬೋಧಿಸಿದಡವರೆನ್ನ ವಾಹನ
- ಸಾಧನವೆಯಾದರು ಮುನೀ೦ದ್ರ ವಿ
- ರೋಧ ವಾಯ್ತೆನಗಲ್ಲಿ ಶಪಿಸಿದನ೦ದಗಸ್ತ್ಯಮುನಿ || ೬೭ ||
- ಪದವಿಭಾಗ-ಅರ್ಥ:ಆಧಿ(ಮಾನಸಿಕ ತೊಂದರೆ, ಬಾಧೆ ದುರ್ವ್ಯಸನ, ನೆಲೆ;) ಬಿದ್ದುದು ಶಚಿಯ ಮೇಲಣ ವೇಧೆಯಲಿ(ಬಾಧೆ, ವೇದನೆ) ವಿಟ ಬುದ್ದಿ ಸಿರಿಗೆ+ ಉಪರೋಧವೈ( ಅಡ್ಡಿ ) ಸಲೆ(ಪೂರ್ಣವಾಗಿ ೫ ಬಹಳವಾಗಿ ೬ ನಿಜ); ಸತಿಯು+ ಉಪಾಯವ ಮಾಡಿ ಋಷಿಗಳಿಗೆ ಭೋಧಿಸಿದಡೆ+ ಅವರು+ ಎನ್ನ ವಾಹನ ಸಾಧನವೆಯಾದರು ಮುನೀ೦ದ್ರ ವಿರೋಧ ವಾಯ್ತು+ ಎನಗಲ್ಲಿ ಶಪಿಸಿದನು+ ಅ೦ದು+ ಅಗಸ್ತ್ಯಮುನಿ.
- ಅರ್ಥ:ಧರ್ಮಜನೇ,'ನನಗೆ ಅಲ್ಲಿ ಇಂದ್ರನ ಪತ್ನಿ ಶಚೀದೇವಿಯ ಮೇಲೆ ದುರ್ವ್ಯಸನದ ನೆಲೆ ಬಿದ್ದಿತು. ಶಚಿಯ ಮೇಲಿನ ಆಸೆಯ ವೇದನೆಯಲ್ಲಿ ಸಿಲುಕಿದೆನು. ಪರಸ್ತ್ರೀ ಸಂಗದ ವಿಟ ಬುದ್ದಿಯು ಸಿರಿ- ಸಂಪತ್ತಿಗೆ ನಿಜವಾಗಿ ಅಡ್ಡಿಯೇ ಸರಿ. ಸತಿ ಶಚಿಯು ಉಪಾಯವ ಮಾಡಿ ಸಪ್ತ ಋಷಿಗಳು ಅವಳಿಗೆ ಬೋಧಿಸಿದಂತೆ, ನನ್ನನ್ನು ಪಲ್ಲಕ್ಕಿಯಲ್ಲಿ ಅವರು ಹೊತ್ತು ಶಚಿಯ ಬಳಿಗೆ ತರಬೇಕೆಂದು - ಹೇಳಿದಾಗ, ಅವರು ನನ್ನನ್ನು ಹೊತ್ತುತರುವ ಪಲ್ಲಕ್ಕಿಯ ವಾಹನದ ಸಾಧನವಾದರು. ಆಗ ಅಗಸ್ತ್ಯಮುನಿಯು ಅಡ್ಡಾದಿಡ್ಡಿ ನೆಡೆಯುತ್ತಿರಲು ಅವನಿಗೆ ಕೋಪದಿಂದ ನಾನು ಎಡಗಾಲಿಂದ ವದ್ದೆನು. ಹೀಗೆ ಮುನೀ೦ದ್ರನ ವಿರೋಧ ವಾಯ್ತು. ಅವನು ನನಗೆ 'ಅಜಗರನಾಗಿ ಭೂಮಿಗೆ ಬೀಳು' ಎಂದು ಅಲ್ಲಿಯೇ ಅ೦ದು ಶಪಿಸಿದನು. (ಹೀಗೆ ಇಂದ್ರಪದವಿಯಿಂದ ಕೆಳಗೆ ಭೂಮಿಗೆ ಬಿದ್ದೆನು)'ಎಂದನು.
- ಸರ್ಪಗತಿ ಸರ್ಪತ್ವವೆನೆ ಫಡ
- ಸರ್ಪ ನಿನಾಗೆ೦ದರೆನ್ನಯ
- ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ |
- ಸರ್ಪತನದನುಭವಕೆ ಕಡೆಯೆ೦
- ದಪ್ಪುದೆನೆ ಧರ್ಮಜನ ವರ ವಾ
- ಗ್ದರ್ಪಣದಲಹುದೆ೦ದನಿ೦ದಿದು ಘಟಿಸಿತೆನಗೆ೦ದ || ೬೮ ||
- ಪದವಿಭಾಗ-ಅರ್ಥ:'ಸರ್ಪಗತಿ ಸರ್ಪತ್ವವು+ ಎನೆ ಫಡ ಸರ್ಪ ನಿನಾಗು' ಎ೦ದರೆ+ ಎನ್ನಯ ದರ್ಪವನು ಕೆಡೆನೂಕಿ(ಕೆಡೆ - ಬೀಳು; ಕೆಳಕ್ಕೆ ಬೀಳುವಂತೆ ತಳ್ಳಿ) ಬಿದ್ದೆನು ಮುನಿಯ ಚರಣದಲಿ(ಪಾಗಳಿಗೆ), ಸರ್ಪತನದ+ ಅನುಭವಕೆ ಕಡೆಯೆ೦ದು(ಕೊನೆಯು ಎಂದು)+ ಅಪ್ಪುದೆನೆ(ಅಪ್ಪುದು- ಆಗುವುದು) ಧರ್ಮಜನ ವರ ವಾಗ್ದರ್ಪಣದಲಿ (ಶ್ರೇಷ್ಠ ವಾಕ್- ಮಾತಿನ,ದರ್ಪಣ- ಕನ್ನಡಿಯಲ್ಲಿ)+ ಅಹುದೆ೦ದನು (ಆಗುವುದು)+ ಇ೦ದಿದು ಘಟಿಸಿತು+ ಎನಗೆ+ ಎ೦ದ
- ಅರ್ಥ:ಅಗಸ್ಯನು,' "ನಿನಗೆ ಸರ್ಪಗತಿ ಸರ್ಪತ್ವವು" ಎನ್ನಲು, "ಫಡ! ಸರ್ಪ ನೀನಾಗು" ಎ೦ದರೆ, ನಾನು ಎಚ್ಚೆತ್ತು ನನ್ನ ದರ್ಪವನ್ನು ಕೆಡೆನೂಕಿ- ಕೆಳಗೆತಳ್ಳಿ ಅಗಸ್ತ್ಯ ಮುನಿಯ ಚರಣಗಳಲ್ಲಿ ಕ್ಷಮಿಸಬೇಕೆಂದು ಬಿದ್ದೆನು. 'ನನ್ನ ಸರ್ಪತನದ ಅನುಭವಕ್ಕೆ ಕಡೆಯು ಎಂದು ಆಗುವುದು,' ಎಂದು ಬೇಡಲು, ಅದಕ್ಕೆ ಆ ಮುನಿಯು, ಧರ್ಮಜನ ಶ್ರೇಷ್ಠ ವಾಗ್ದರ್ಪಣದಲ್ಲಿ ಆಗುವುದೆ೦ದನು; ಇ೦ದು ನಿನ್ನ ದರ್ಮದ ಜಿಜ್ಙಾಸೆಯ ಕನ್ನಡಿಯಲ್ಲಿ ನಾನು ನನ್ನನ್ನು ಕಂಡಾಗ, ಆ ಶಾಪ ವಿಮೋಚನೆ ನನಗೆ ಘಟಿಸಿತು- ನರವೇರಿತು,'ಎ೦ದನು.
- ಎನುತ ದಿವ್ಯಾವಯವ ಕಾ೦ತಿಯ
- ಮಿನುಗು ಮೋಹರದೇಳ್ಗೆ ಮೂಡಿದ
- ವನಿಷಾ೦ಗದಲುರಗ ಕಾಯದ ಕೋಹಳೆಯನುಗಿದು |
- ಜನಪನಿನ್ನೊಡ ಹುಟ್ಟಿದನ ಕೊ
- ಳ್ಳೆನುತ ಹೇಮ ವಿಮಾನದಲಿ ಸುರ
- ವನಿತೆಯರ ವ೦ಗಡದಲೆಸೆದನು ನಹುಷನಭ್ರದಲೆ || ೬೯ ||
- ಪದವಿಭಾಗ-ಅರ್ಥ:ಎನುತ ದಿವ್ಯ+ ಅವಯವ ಕಾ೦ತಿಯ ಮಿನುಗು ಮೋಹರದ+ ಏಳ್ಗೆ ಮೂಡಿದವು+ ಅನಿಷಾ೦ಗದಲಿ(ಕೆಟ್ಟ ಹಾವಿನ ಅಂಗ)+ ಉರಗ ಕಾಯದ(ಹಾವಿನ ದೇಹದ) ಕೋಹಳೆಯನು(ಹೊದಿಕೆ, ಪೊರೆ)+ ಉಗಿದು(ಕಳಚಿ, ಬಿಟ್ಟು) ಜನಪ+ ನಿನ್ನ+ ಒಡಹುಟ್ಟಿದನ ಕೊಳ್ಳು(ತೆಗೆದುಕೊ)+ ಎನುತ ಹೇಮ(ಚಿನ್ನ) ವಿಮಾನದಲಿ ಸುರವನಿತೆಯರ ವ೦ಗಡದಲಿ(ವಂಗಡ- ಪಂಗಡ)+ ಎಸೆದನು(ಶೋಭಿಸಿದನು) ನಹುಷನು+ ಅಭ್ರದಲೆ(ಅಬ್ರ- ಆಕಾಶ).
- ಅರ್ಥ:ನಹುಷನು ಹೀಗೆ ತನಗೆ ಬಂದ ಶಾಪ- ಅದರ ವಿಮೋಚನೆಯನ್ನು ಹೇಳುತ್ತಾ, ದಿವ್ಯವಾದ ದೇಹದ ಕಾ೦ತಿಯಿಂದ ಮಿನುಗುವ ಲಕ್ಷಣದ ಏಳ್ಗೆಯು ಅವನ ಅಜಗರ ದೇಹದಲ್ಲಿ ಮೂಡಿದವು. ಉರಗ- ಹಾವಿನ ದೇಹದ ಪೊರೆಯನ್ನು ಕಳಚಿ, 'ಜನಪ ಧರ್ಮಜನೇ ನಿನ್ನ ಒಡಹುಟ್ಟಿದವನನ್ನು- ಭೀಮನನ್ನು ತೆಗೆದುಕೊ,' ಎನ್ನುತ್ತಾ ಚಿನ್ನದ ದೇವವಿಮಾನದಲ್ಲಿ ದೇವಕನ್ಯೆಯರ ಗುಂಪಿನೊಡನೆ ನಹುಷನು ಆಕಾಶದಲ್ಲಿ ಶೋಭಿಸಿದನು.
- ದುಗುಡದಲಿ ಬರೆ ಭೀಮ ಸೇನನ
- ತೆಗೆದು ಬಿಗಿದಪ್ಪಿದನು ಖೇದದ
- ಹೊಗರಿದೇತಕೆ ವೃಥಾ ಮನೋವ್ಯಥೆಯೇನು ತಾಳದಿರು |
- ಜಗವರಿಯೆ ನಮ್ಮನ್ವಯದ ಪೂ
- ರ್ವಿಗನಲಾ ನಹುಷ೦ಗೆ ಬ೦ದು
- ಬ್ಬೆಗದ ಹದನಿದು ನಮ್ಮಪಾಡೇನೆ೦ದನಾ ಭೂಪ ೭೦
- ಪದವಿಭಾಗ-ಅರ್ಥ:ದುಗುಡದಲಿ(ಚಿಂತೆ, ದುಃಖ) ಬರೆ(ಬರಲು) ಭೀಮಸೇನನ ತೆಗೆದು ಬಿಗಿದಪ್ಪಿದನು ಖೇದದ ಹೊಗರು( ಮಂಕು, ಕಂದು ಬಣ್ಣ)+ ಇದೇತಕೆ? ವೃಥಾ ಮನೋವ್ಯಥೆಯೇನು? ತಾಳದಿರು ಜಗವು+ ಅರಿಯೆ ನಮ್ಮ+ ಅನ್ವಯದ ಪೂರ್ವಿಗನಲಾ, ನಹುಷ೦ಗೆ ಬ೦ದ+ ಉಬ್ಬೆಗದ(ಉದ್ವೇಗ,) ಹದನ(ಕಾರಣ - ಕಾರ್ಯ, ರೀತಿ)+ ಇದು, ನಮ್ಮಪಾಡೇನು,+ ಎ೦ದನಾ ಭೂಪ.
- ಅರ್ಥ:ನಹುಷನು ಹೊಗಲು, ಇತ್ತ ಸೋಲರಿಯದ ಭೀಮನು ತಲೆತಗ್ಗಿಸಿ ಅವಮಾನ ಮತ್ತು ಚಿಂತಿಯಿಂದ ಧರ್ಮಜನ ಬಳಿಗೆ ಬರಲು, ಧರ್ಮಜನು ಭೀಮಸೇನನನ್ನು ಬರಸೆಳೆದು ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡುದು ಸಂತೈಸಿದನು. ಭೀಮಾ ಚಿಂತೆ ಮತ್ತು ದುಃಖದ ಕಂದಿದ ಮುಖ ಇದೇತಕ್ಕೆ? ವೃಥಾ- ಸುಮ್ಮನೆ ಮನೋವ್ಯಥೆಯೇನು? ಮನೋವ್ಯಥೆಯನ್ನು ಹೊಂದಬೇಡ. ಜಗವವು ಅರಿತಿದೆ, ನಮ್ಮವಂಶದ ಪೂರ್ವಿಗನಲ್ಲವೇ ನಹುಷ, ಅವನಿಗೆ ನೀನು ಸೋತರೆ ಅವಮಾನವೇ? ಇದು ನಹುಷನ ಶಾಪ ಮತ್ತು ವಿಮೋಚನೆಯ ಸನ್ನಿವೇಶ. ನಹುಷನಿಗೆ ಬ೦ದ ಸಂಕಟದ ಸನ್ನಿವೇಶ ಇದು. ಅವನಿಗೇ ಹಾಗೆ ಆಗಿರುವಾಗ ನಮ್ಮ ಪಾಡೇನು ಎ೦ದನು,'ಆ ಭೂಪ ಧರ್ಮಜ.
- ನಿನ್ನದೆಸೆ ಯಿ೦ದಾಯ್ತಲೇ ಪ್ರತಿ
- ಪನ್ನ ಶಾಪ ವಿಮೋಕ್ಷವಿದರಲಿ
- ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು |
- ತನ್ನರಿಷ್ಠ ವನೀಕ್ಷಿಸದೆ ಪರ
- ರುನ್ನತಿಯ ಬಯಸುವರಿನ್ನು ಸಜ್ಜನ
- ರಿನ್ನು ಸಾಕೆ೦ದೊರಸಿದನು ಪವನಜನ ಕ೦ಬನಿಯ || ೭೧ ||
- ಪದವಿಭಾಗ-ಅರ್ಥ:ನಿನ್ನ ದೆಸೆಯಿ೦ದ+ ಆಯ್ತಲೇ ಪ್ರತಿಪನ್ನ (ಬಂದಿದ್ದ) ಶಾಪ ವಿಮೋಕ್ಷವು+ ಇದರಲಿ ನಿನ್ನ ದರ್ಪಕೆ(ಆಭಿಮಾನಕ್ಕೆ) ಹಾನಿಯೇ? ಹೇರಾಳ(ದೊಡ್ಡ, ಬಹಳ) ಸುಕೃತವಿದು(ಪುಣ್ಯ); ತನ್ನ+ ಅರಿಷ್ಠವನು(ಕೆಡುಕನ್ನು)+ ಈಕ್ಷಿಸದೆ (ನೋಡದೆ) ಪರರ+ ಉನ್ನತಿಯ ಬಯಸುವರು+ ಇನ್ನು ಸಜ್ಜನರು;+ ಇನ್ನು ಸಾಕೆ೦ದು+ ಒರಸಿದನು ಪವನಜನ ಕ೦ಬನಿಯ.
- ಅರ್ಥ: ಭೀಮನು ತನ್ನ ಅಭೀಮಾನ ಭಂಗವಾಯಿತು ಎಂದು ಬಾಡಿದ ಮುಖದಲ್ಲಿ ಕಂಬನಿ ತುಂಬಿಕೊಂಡಿರುವಾಗ ಅದನ್ನು ಧರ್ಮಜನು ನೋಡಿ,'ನಿನ್ನ ದೆಸೆಯಿ೦ದ ನಹುಷನಿಗೆ ಬಂದಿದ್ದ ಶಾಪ ವಿಮೋಚನೆಯಾಯಿತಲ್ಲವೇ! ಇದರಲ್ಲಿ ನಿನ್ನ ಆಭಿಮಾನಕ್ಕೆ ಹಾನಿಯೇ? ಇಲ್ಲ. ಇದು ದೊಡ್ಡ, ಸುಕೃತವು- ಪುಣ್ಯವು; ತನ್ನ ಅರಿಷ್ಠವನ್ನು ನೋಡದೆ ಪರರ ಉನ್ನತಿಯ ಬಯಸುವವರು ಇನ್ನಣ ಹೆಚ್ಚಿನ ಸಜ್ಜನರು; ಇನ್ನು ನಿನ್ನ ತಾಪ ಸಾಕು,'ಎ೦ದು ಹೇಳಿ ಭೀಮನ ಕ೦ಬನಿಯನ್ನು ಧರ್ಮಜನು ಒರಸಿದನು.
- ತಿಳುಹಿ ತ೦ದನು ಸಕಲಮುನಿ ಸ೦
- ಕುಲ ಸಹಿತ ತನ್ನಾಶ್ರಮಕೆ ಕೋ
- ಮಲೆಯ ಕೈಯಿ೦ದೊರಸಿದನು ಭೀಮನ ಮನೋವ್ಯಥೆಯ |
- ಹಳಿವು ನಮಗೆಲ್ಲಿಯದಪಾಯದ
- ಜಲಧಿ ಗಳು ಬತ್ತುವವು ಯದುಕುಲ
- ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ || ೭೨ ||
- ಪದವಿಭಾಗ-ಅರ್ಥ:ತಿಳುಹಿ(ಭೀಮನಿಗೆ ತಿಳಿಯಹೇಳಿ) ತ೦ದನು(ಕರೆತಂದನು) ಸಕಲಮುನಿ ಸ೦ಕುಲ ಸಹಿತ ತನ್ನ+ ಆಶ್ರಮಕೆ, ಕೋಮಲೆಯ(ದ್ರೌಪದಿಯ) ಕೈಯಿ೦ದ+ ಒರಸಿದನು ಭೀಮನ ಮನೋವ್ಯಥೆಯ; ಹಳಿವು(ನಿಂದೆ ಅವಮಾನ) ನಮಗೆಲ್ಲಿಯದು+ ಅಪಾಯದ ಜಲಧಿಗಳು(ಸಮುದ್ರಗಳು) ಬತ್ತುವವು ಯದುಕುಲತಿಲಕ(ಶ್ರೀ ಕೃಷ್ನನ) ಗದುಗಿನ ವೀರ ನಾರಾಯಣನ ಕರುಣದಲಿ.
- ಅರ್ಥ:ಧರ್ಮಜನು ಭೀಮನಿಗೆ ತಿಳಿಯಹೇಳಿ ಸಕಲಮುನಿ ಸಮೂಹ ಸಹಿತ ತನ್ನ ಆಶ್ರಮಕ್ಕೆ ಭೀಮನನ್ನು ಕರೆದುಕೊಂಡು ಬಂದನು. ನಂತರ ದ್ರೌಪದಿಯನ್ನು ಕರೆದು ಅವಳಿಗೆ ಭೀಮನನ್ನು ಸಮಾಧಾನ ಪಡಿಸಲು ಹೇಳಿ, ಭೀಮನ ಮನೋವ್ಯಥೆಯನ್ನು ಹೋಗಲಾಡಿಸಿದನು. ನಿಂದೆ, ಅವಮಾನಗಳು ನಮಗೆ(ಪಾಂಡವರಿಗೆ) ಎಲ್ಲಿಯದು? ಅವು ಬರಲಾರವು. ಏಕೆಂದರೆ ಯದುಕುಲತಿಲಕ ಶ್ರೀ ಕೃಷ್ನನ- ಗದುಗಿನ ವೀರ ನಾರಾಯಣನ ಕರುಣೆಯಿಂದ ಅಪಾಯದ ಸಮುದ್ರಗಳು ಬತ್ತಿಹೋಗುವವು.
♠♠♠
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|