ಅರ್ಥ:ಪಾಂಡವರು ಅರಣ್ಯ ವಾಸದಲ್ಲಿದ್ದಾಗ ಬೇಟೆಗೆ ಹೋಗಿ ಅಡವಿಯಲ್ಲಿ ಹೆಬ್ಬಾವಿನ ಹಾವಿನ ಬಿಗಿಯಾದ ಸುತ್ತಿಸಿಕೊಂಡ ಹಿಡಿತದಲ್ಲಿ ತಪ್ಪಿಸಿಕೊಳ್ಳಲಾದೆ ಬಳಲಿದ ಬೀಮಸೇನನ್ನು ಯಮಸೂನು ಧರ್ಮಜನು ಅಜಗರ ಹಾವಿನ ಧರ್ಮಸೂಕ್ಷ್ಮದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವನನ್ನು ಬಿಡಿಸಿದನು.[೧][೨][೩][೪]
ಅರ್ಥ:ಅರಣ್ಯದ ಪರ್ಣಕುಟೀರದಲ್ಲಿ ಮರುದಿನ ಬೆಳಗಾಗಲು, ಮಲಗಿದ್ದ ಅರಸನು ಎದ್ದನು. ಹಾಗೆಯೇ ಶ್ರೇಷ್ಠ ವೃಕೋದರನು ಎದ್ದರು. ಅರ್ಜುನನ ಕಮಲದಂತಹ ಕಣ್ಣುಗಳು ಅರಳಿದವು. ಮಾದ್ರೀಸುತರು ಮೈಮುರಿದು ಎದ್ದು ಕೃಷ್ಣನನ್ನು ನೆನೆದರು; ಪಾಂಡವರ ಜೊತೆಗಿದ್ದ ಪರಿಜನರಗೂ ನಿದ್ರೆ ತಿಳಿದು ಎಚ್ಚರಾಯಿತು. ಮುನಿಗಳ ಸಮೂಹವು ಎದ್ದು ಸೂರ್ಯನ ಸ೦ದ್ಯಾಸಮಯದ ಸತ್ಕೃತಿಯಾದ ಜಪ ಸಮಾಧಿಯಲ್ಲಿ ತೊಡಗಿದರು.
ಅರ್ಥ:ಅರ್ಜುನನು ತಾನು ಪಡೆದ ಅಸ್ತ್ರಗಳನ್ನು ತೋರಿಸಲು ಸಿದ್ಧನಾಗಿ, ಮುನಿಜನರಿಗೆ ಕೈಮುಗಿದನು. ಯಮನ೦ದನ ಧರ್ಮಜನ ಪಾದಗಳಿಗೆ ನಮಸ್ಕರಿಸಿ, ಶಿವನನ್ನು ನೆನೆದು ಹೊದಿಕೆಯಲ್ಲಿ ಸುತ್ತಿಟ್ಟ ದೊಡ್ಡ ಗಾ೦ಡೀವ ಧನಸ್ಸನ್ನು ತೆಗೆದನು. ರಾಜನೇ ಕೇಳು ಆನಂತರ ಬಿಲ್ಲಿನ ತುದಿಯ ಕೊಪ್ಪಿನಲ್ಲಿ ನಾಣನ್ನು ಸಿಕ್ಕಿಸಿದನು. ದೊಡ್ಡದಾಗಿ ಮಾರ್ದನಿಯು ದಿಗ೦ತಗಳಲ್ಲಿ ಒದರುವಂತೆ ಮಹಾ ಧನುವಿನ ನಾಣನ್ನು ಎಳೆದು ಠೇಂಕಾರ ಮಾಡಿದನು.
ಟಿಪ್ಪಣಿ: ತ್ರಿವಿಕ್ರಮ ವೀರಪದ(ಪಾದ), ಭಿನ್ನ, ಅಬ್ಜ(ಕಮಲ), ಅಜಾ೦ಡ ಕಠೋರ ರವಮನೆ = ತ್ರಿವಿಕ್ರಮನು ಮೂರು ಪಾದ ಪ್ರದೇಶವನ್ನು ಬಲಿಯಿಂದ ಬೇಡಿ ಭೂಮಿಯನ್ನು ಒಂದು ಪಾದದಿಂದ ಅಳೆದು ಎರಡನೇ ಪಾದಕ್ಕೆ ಸ್ವರ್ಗವನ್ನು ಅಳೆಯುವಾಗ ಅವನ ಪಾದದ ಹೆಬ್ಬೆರಳು ವಿಶ್ವದ ಅಂಚಿನ ಕಟವಾಯಿಗೆ ತಾಗಿ ಒಡೆದು ನೀರು ಸುರಿಯಿತು, ಅದು ಬ್ರಹ್ಮನ ಕಲಶದಲ್ಲಿ ಸೇರಿತು, ಅಲ್ಲಿಂದ ಬಂದು ಶಿವನ ತಲೆಯಲ್ಲಿ ನಿಂತಿತ್ತು. ಅದೇ ಗಂಗೆ ಭೂಮಿಗೆ ಬಂತು ಎನ್ನುವುದು ಪುರಾಣ. ಹಾಗೆ ಜಗತ್ತಿನ ಅಂಚು ಒಡೆದಾಗ ದೊಡ್ಡ ಸದ್ದಾಗಿರಬೇಕು- ಅದರ ಹೋಲಿಕೆಯನ್ನು ಕವಿ ಕೊಟ್ಟಿರಬಹುದು.
ಅರ್ಥ:ಅರ್ಜುನನ ಬಿಲ್ಲಿನ ಟ೦ಕಾರವು ಘೋರತರವಾದ ಲಯಕಾರ ಬೈರವನ ಹು೦ಕಾರವೋ ಎನ್ನುವಂತಿತ್ತು, ಪ್ರಳಯದ ಸ೦ಹಾರಕಾಲದ ಸದ್ದೋ; ಚತುರ್‍ಯುಗಳು ಮುಗಿದುಕಲ್ಪಾ೦ತದಲ್ಲಿ ಪ್ರಳಯದ ಕಾಲದಲ್ಲಿ ತಾ೦ಡವ ವೇದ ಪ೦ಡಿತನ ಓ೦ಕಾರದ ಆರ್ಭಟೆಯೋ ಎನ್ನುವಂತಿತ್ತು. ಮತ್ತೆ ತ್ರಿವಿಕ್ರಮನು ಮೂರು ಲೋಕಗಳನ್ನು ಅಳೆಯುವಾಗ ಇಟ್ಟ ವೀರಪಾದದದಿಂದ ಭಿನ್ನವಾದ ಬ್ರಹ್ಮನ ಕಮಲದ ಅಜಾ೦ಡವು ಒಡೆದ ಕಠೋರ ಸದ್ದು ಎನ್ನುವಂತೆ ಮೆರಯಿತು.
ಏನಿದದ್ಭುತ ರವವೆನುತ ವೈ
ಮಾನಿಕರು ನಡ ನಡುಗಿದರು ಗ
ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ |
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶ ರೈತರ
ಲಾನೆಯಲಿ ಹೊರವ೦ಟನ೦ಬರಗತಿಯಲಮರೇ೦ದ್ರ || ೫ ||
ಪದವಿಭಾಗ-ಅರ್ಥ:ಏನಿದು+ ಅದ್ಭುತ ರವವು(ಸದ್ದು)+ ಎನುತ ವೈಮಾನಿಕರು(ದೇವತೆಗಳು) ನಡ ನಡುಗಿದರು, ಗರ್ವ+ ಅನುನಯ ಗತವಾಯ್ತಲೇ, ಸುರಪುರದ ಗರುವರಿಗೆ(ಶ್ರೇಷ್ಠರಿಗೆ), ಆ ನಿರುತಿ(ನೈರುತ್ತದ ದೇವತೆ) ಯಮ ವರುಣ ವಾಯು ಕೃಶಾನು(ಅಗ್ನಿ) ಧನದ(ಕುಬೇರ) ಮಹೇಶರು(ಈಶಾನ)+ ಐತರಲು(ಬರಲು)+ ಆನೆಯಲಿ ಹೊರವ೦ಟನು+ ಅ೦ಬರಗತಿಯಲಿ(ಆಕಾಶಮಾರ್ಗದಲ್ಲಿ)+ ಅಮರೇ೦ದ್ರ
ಅರ್ಥ:'ಅರ್ಜುನನ ಗಾಂಡೀವದ ಠೇಂಕಾರದ ಸದ್ದಿಗೆ, ಏನಿದು ಅದ್ಭುತ ಸದ್ದು ಎನ್ನುತ್ತಾ ವಿಮಾನದಲ್ಲಿದ್ದ ದೇವತೆಗಳು ನಡ ನಡುಗಿದರು. ಇಂದ್ರಲೋಕದ ಶ್ರೇಷ್ಠರಿಗೆ ಗರ್ವವು ಅನುನಯವಾಗಿ ಹೋಯಿತು. ಆ ಸದ್ದು ಏನೆಂದು ನೋಡಲು, ಆ ನಿರುತಿ ಯಮ ವರುಣ ವಾಯು ಅಗ್ನಿ ಕುಬೇರ ಈಶಾನರು ಬರಲು, ಆನೆಯಲ್ಲಿ ಕುಳಿತು ಆಕಾಶಮಾರ್ಗದಲ್ಲಿ ಅಮರೇ೦ದ್ರನು ಸಹ ಹೊರಹೊರಟನು.
ಅರ್ಥ:'ಆ ಮಹಾಶಬ್ದದ ಅಚ್ಚರಿಯನ್ನು ನೋಡಲು ಆಕಾಶದಲ್ಲಿ ದೇವತೆಗಳ ಸಮೂಹವೂ, ದೇವಮುನಿ, ವರುಣ ಸಹಿತ ಆಕಾಶದಲ್ಲಿ ನೆರೆಯಿತು. ಯುಧಿಷ್ಠಿರಾದಿಗಳು ಎರಡೂ ಬಾಗಿಲು ಕಡೆ ಸರಿದರು. ಬೆದರಿದ ಕಣ್ಣಿನ ಎಡ ಬಲವ ದನಕರುಗಳ ಹಿಂಡು, ಗಿರಿಗಳ ಬದಿಯಲ್ಲಿ ನಿಂತವು. ಪರಿಜನರು ತರುಬಿ- ಗುಂಪಾಗಿ ನಿಂತರು. ಈ ರೀತಿ ಎಲ್ಲಿಯದು, ಜನಮೇಜಯ ಅರಸನೇ ನನಗೆ ಇದನ್ನು ಬಣ್ಣಿಸಲು ಸಾಧ್ಯವೇ? ಅರ್ಜುನನ ಮಹಾಸ್ತ್ರದ ನಾಟಕವನ್ನು- ಪ್ರದರ್ಶನವನ್ನು ಬಣ್ಣಿಸಲು ಸಾಧ್ಯವಿಲ್ಲ,' ಎಂದನು ವೈಶಂಪಾಯನ ಮುನಿ.
ಅರ್ಥ:ಅರ್ಜುನನು ಮೊದಲಗೆ ಅಗ್ನಿಯ ಮಹಾಸ್ತ್ರವನು ಹೂಡಿದನು; ಆಗ ಭೂಮಿಯ ದಿಕ್ಕುಗಳು ಹೊಗೆಯಿತು, ಅವು ಮಾರ್ದನಿಯನ್ನು ಕೊಟ್ಟು ಒದರಿದವು- ಆರ್ಭಟಿಸಿದವು; ಸೂರ್ಯನ ರಥ ಗಗನ ಮಾರ್ಗದಲ್ಲಿ ಮುಗ್ಗರಿಸಿತು; ಸಮುದ್ರವು ಸನುದ್ರದ ತೆರೆಯನ್ನು ಎಬ್ಬಿಸಿ ಒಂದಕ್ಕಂದು ಸೇರಿ ಗ೦ಟಿಕ್ಕಿದವು. ಹರಹರ ಭೂಮಿ ಸ್ವರ್ಗಗಳಲ್ಲಿ, ಜಗತ್ತುಗಳ ಸಾಲಿನಲ್ಲಿ ಹೇಳಬಾರದ ತೊಡಕು, ತೊಂದರೆಯನ್ನು ಉಂಟುಮಾಡಿತು.
ಅರ್ಥ:ಅರ್ಜುನನು ಮಹಾಸ್ತ್ರಗಳನ್ನು ಪ್ರದರ್ಶಿಸಲು ಆರಂಭಿಸಿ ಆಗ್ನೇಯಾಸ್ತ್ರವನ್ನು ಬಿಡಲು,'ದೇವಮುನಿ ನಾರದನು ಆಕಾಶಮಾರ್ಗದಿಂದ ಬಂದು, ' ಅಹಹ! ಭೂಮಿಯು ಬೆಂದು ಹೋಗುವುದು, ಇದು, ಯುದ್ದದ ಸಮಯವೆ? ತಮ್ಮ ಲೀಲೆಗಾಗಿ ತಿಳುವಳಿಕೆ ಇಲ್ಲದ ಕುಹಕಿಗಳು ಮೂರು ಲೋಕಕ್ಕೂ ತಲ್ಲಣವನ್ನು ತ೦ದರಲ್ಲಾ! ಈ ಮಾಹಾಸ್ತ್ರಗಳ ಪ್ರಯೋಗದ ರಹಸ್ಯವೇನು? ಎಂದು ಆಕಾಶದಿಂದ ಭೂಮಿಗೆ ಧರ್ಮಜರಿದ್ದಲ್ಲಿಗೆ ಬಂದನು. ದೇವಮುನಿಯು ಅರ್ಜುನನಿಗೆ,'ಪಾರ್ಥ, ಇದೇನು ದುಸ್ಸಾಹಸ, ಹೋ ಹೋ ಸಾಕು ಸಾಕು ಎಂದು ಮುಂದಿನ ಪ್ರಯೋಗಗಳನ್ನು ತಡೆದನು.
ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಯನಿದು ನಿಮಿಷದಲಿ ಭುವನವ
ನುಡುಗಿ ತಣಿಯದಿದೊ೦ದು ಮತ್ತೀ ಶಾ೦ಭವಾದಿಗಳ |
ತೊಡಚಿದೊಡೆ ಸ೦ಹಾರ ಸಮಯವ
ನೆಡೆಯಲನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆ ಯೆ೦ದನಾ ಮುನಿಪ || ೯ ||
ಪದವಿಭಾಗ-ಅರ್ಥ:ತೊಡಚದಿರು(ತೊಡಬೇಡ, ತೊಡಚು- ಬಾಣ ಸಂಧಾನ ಮಾಡು) ಬೊಮ್ಮಾಸ್ತ್ರವು+ ಇದು ಬಾಯ್ಗಡಿಯನು+ ಇದು ನಿಮಿಷದಲಿ ಭುವನವನು+ ಉಡುಗಿ(ಗುಡಿಸಿ, ಕುಗ್ಗಿಸಿ, ಸ್ತಬ್ಧವಾಗು) ತಣಿಯದು(ತೃಪ್ತಿಯಾಗದು)+ ಇದೊ೦ದು ಮತ್ತೆ+ ಈ ಶಾ೦ಭವಾದಿಗಳ(ಶಿವ ಮೊದಲಾದವರ) ತೊಡಚಿದೊಡೆ ಸ೦ಹಾರ ಸಮಯವ ನೆಡೆಯಲು+ ಅನುಭವಿಸುವುದು, ಜಗವು+ ಇದು ಕೆಡಿಸದಿರು ಕೆಡಿಸದಿರು, ತೆಗೆ ತೆಗೆ ಯೆ೦ದನಾ ಮುನಿಪ.
ಅರ್ಥ:ನಾರದ ಮನಿಯು ಅರ್ಜುನನಿಗೆ, 'ಬ್ರಹ್ಮಾಸ್ತ್ರವನ್ನು ತೊಡಬೇಡ; ಇದು ಬಾಯಿಕಡಿಯದು -ಜಗತ್ತನ್ನು ತಿಂದು ನಿಲ್ಲಿಸದು; ಇದು ನಿಮಿಷದಲ್ಲಿ ಭೂಮಿಯನ್ನು ಗುಡಿಸಿ ಸ್ತಬ್ಧಮಾಡಿ ತೃಪ್ತಿಯಾಗದು; ಇದೊ೦ದು ಮತ್ತೆ ಈ ಶಿವ ಮೊದಲಾದವರ ಅಸ್ತ್ರಗಳನ್ನು ಪ್ರಯೋಗಿಸಿದರೆ ಅದು ಸ೦ಹಾರ ಸಮಯವಾದ ಪ್ರಳಯವನ್ನು ನೆಡೆಸಲು ತೊಡಗುವುದು; ಈ ಜಗವನ್ನು ಕೆಡಿಸದಿರು ಕೆಡಿಸದಿರು, ತೆಗೆ ತೆಗೆ- ಬಿಡು, ಇಲ್ಲಗೇ, ಬಿಡು,'ಎಂದನು.
ಲಕ್ಷ್ಯವಿಲ್ಲದೆ ತೊಡಚಿದರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನ೦ಬುಗಳೆ |
ಶಿಕ್ಷೆ ರಕ್ಷೆಗೆ ಬಾಣವೊ೦ದೇ
ಲಕ್ಷ್ಯ ವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದನರ್ಜುನಗೆ || ೧೦ ||
ಪದವಿಭಾಗ-ಅರ್ಥ:ಲಕ್ಷ್ಯವಿಲ್ಲದೆ ತೊಡಚಿದರೆ(ಉದ್ದೇಶದ ಗುರಿ ಇಲ್ಲದೆ ಬಾಣತೊಟ್ಟರೆ) ನಿರ್ಲಕ್ಷ್ಯ ಶರವೇ(ಶರವು ನಿರ್ಲಕ್ಷ್ಯವಾಗಿ, ನೀನು+ ಉಪಾರ್ಜಿಸಿದ ಕ್ಷಯವಲೇ(ನಷ್ಟವೇ ಆಗುವುದು) ಪಾರ್ಥ ಗಣನೆಯ(ಮಹತ್ತಾದ) ಗುತ್ತಿನ೦ಬುಗಳೆ(ಗುತ್ತಿ- ಗೊಂಚಲು- ಅನೇಕ ಶಕ್ತಿಯ ಅಸ್ತ್ರಗಳು) ಶಿಕ್ಷೆ ರಕ್ಷೆಗೆ ಬಾಣವು+ ಒ೦ದೇ ಲಕ್ಷ್ಯವು+ ಇದು ನೀನು+ ಅರಿಯದುದಕೆ ವಿಲಕ್ಷ್ಯನಾದೆನು (ವಿಲಕ್ಷ್ಯ- ವಿಲಕ್ಷಣ? -ವಿಲಕ್ಷಣವಾಗಿ) ವಿಶೇಷ ರೀತಿಯ ನೆಡೆ) ನಾನು+ ಎನುತ ಮುನಿ ನುಡಿದನು+ ಅರ್ಜುನಗೆ.
ಅರ್ಥ:ಮುನಿಯು ಅರ್ಜುನನ್ನು ಕುರಿತು,'ಲಕ್ಷ್ಯವಿಲ್ಲದೆ, ಉದ್ದೇಶದ ಗುರಿ ಇಲ್ಲದೆ ಮಹಾಸ್ತ್ರವಾದ ಬಾಣವನ್ನು ತೊಟ್ಟರೆ, ಅದು ಗರಿ ಉದ್ದೇಶಗಳಿಲ್ಲದ ನಿರ್ಲಕ್ಷ್ಯ ಶರವಾಗಿ ವ್ಯರ್ಥವಾಗುವುದು. ಆಗ ನೀನು ಕಷ್ಟದಿಂದ ಉಪಾರ್ಜಿಸಿದ- ಗಳಿಸಿದ ನಿನ್ನ ಅಸ್ತ್ರ ಶಕ್ತಿಯು ನಷ್ಟವೇ ಆಗುವುದು, ನಂತರ ನೀನು ಆದನ್ನು ಉಪಯೋಗಿಸಲಾರೆ. ಪಾರ್ಥ, ಮಹತ್ತಾದ ಅನೇಕ ಶಕ್ತಿಯುಳ್ಳ ಅಸ್ತ್ರಗಳು ಶಿಕ್ಷೆ ಮತ್ತು ರಕ್ಷೆಗೆ ಮಾತ್ರಾ ಉಪಯೋಗಿಸತಕ್ಕದ್ದು. ಆ ದಿವ್ಯ ಬಾಣವು ಒ೦ದೇ ಲಕ್ಷ್ಯವುಳ್ಳದ್ದು. ಇದನ್ನು ನೀನು ಅರಿಯದೆ ಇದ್ದುದಕಾಗಿ ನಾನು ವಿಶೇಷ ರೀತಿಯ ನೆಡೆಯಿಂದ ಇಲ್ಲಿಗೆ ಬಂದೆನು,'ಎಂದನು.
ಹರ ಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ |
ಹೊರೆವ ಹೇರಾಳದ ಮಹಾ ಸ೦
ಗರವಹುದು ಮು೦ದಣ ಕಥಾ ವಿ
ಸ್ತರವ ವಿರಚಿಸಬಾರದನುಚಿತವೆ೦ದನಾ ಮುನಿಪ || ೧೧ ||
ಪದವಿಭಾಗ-ಅರ್ಥ:ಹರ ಮಹಾಸ್ತ್ರಾದಿಗಳ ಲೀಲೆಯನು+ ಅರಸ ನೋಡಲು ಬೇಹುದಾದರೆ(ಬೇಹು- ಬಯಸು, ಬೇಕು ಎನಿಸಿದರೆ), ಬೆರಸುವುದು(ಬಂದು ಸೇರುವುದು) ತತ್(ಆ)+ ಸಮಯ(ಬಂದು ಸೇರುವುದು; ಆ ಸಮಯ ಬರುವುದು) ಸೈರಿಸು ನೃಪನ ಕಣುಮನವ ಹೊರೆವ(ಪೋಷಿಸು) ಹೇರಾಳದ ಮಹಾ ಸ೦ಗರವು+ ಅಹುದು; ಮು೦ದಣ ಕಥಾ ವಿಸ್ತರವ ವಿರಚಿಸಬಾರದು+ ಅನುಚಿತವು+ ಎ೦ದನಾ ಮುನಿಪ.
ಅರ್ಥ:ನಾರದನು ಅರ್ಜುನನಿಗೆ,'ಹರನ ಮಹಾಸ್ತ್ರಾದಿಗಳ ಲೀಲೆಯನ್ನು ಅರಸ ಧರ್ಮಜನು ನೋಡಲು ಬಯಸುವುದಾದರೆ, ಆ ಸಮಯವು ಬರುವುದು. ಅಲ್ಲಿಯವರೆಗೆ ಸೈರಿಸು,ತಡೆದುಕೋ, ಯುಧಿಷ್ಠಿರ ನೃಪನ ಕಣ್ಣು ಮನಸ್ಸನ್ನು ತುಂಬುವ ಅತಿಯಾದ ಮಹಾ ಯುಧ್ಧವು ಆಗುವುದು; ಮು೦ದಣ ಕಥಾ ವಿಸ್ತಾರವನ್ನು ವಿವರಿಸಬಾರದು. ಅದು ಅನುಚಿತವು,' ಎ೦ದನು.
ಅರಸ ಕೇಳೈ ನಾರದನ ನುಡಿ
ಗುರುತರದಲೀ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತಾ |
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜ ಮ೦
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ || ೧೨ ||
ಪದವಿಭಾಗ-ಅರ್ಥ:ಅರಸ ಕೇಳೈ ನಾರದನ ನುಡಿಗೆ+ ಉರುತರದಲಿ(ಬಹಳ ಶ್ರೇಷ್ಠ, )+ ಈ ಪಾರ್ಥನು+ ಆ ಬಿಲು+ ದಿ+ ತಿರುವ(ಬಿಲ್ಲಿನ ತುದಿಯ ತಿರುವುಗೆ ಕಟ್ಟಿದ ದಾರವನ್ನು) ಮಗುಳೆ+ ಇಳುಹಿದನು ಮುನಿಪನ ಮಾತ ಮನ್ನಿಸುತ+ ಆ ಹರಿದುದು+ ಅಮರರ ಮೇಲೆ ನೋಡುವ ನೆರವಿ(ಗುಂಪು) ದಿಗುಪಾಲಕರು ನಿಜ ಮ೦ದಿರಕೆ ಸರಿದರು(ಹೋದರು) ದೇವಮುನಿ ಹಾಯಿದನು(ವೇಗವಾಗಿ ಹೋದನು) ಗಗನದಲಿ.
ಅರ್ಥ:ಅರಸ ಜನಮೇಜಯನೇ ಕೇಳು,'ನಾರದನ ಮಾತಿಗೆ ಮನ್ನಣೆಕೊಟ್ಟು ಈ ಪಾರ್ಥನು ಆ ಬಿಲ್ಲಿನ ತುದಿಯ ತಿರುವುಗೆ ಕಟ್ಟಿದ ದಾರವನ್ನು ಬಿಚ್ಚಿ ಬಿಲ್ಲನ್ನು ಇಳಿಸಿದನು. ಮೇಲೆ ಆಕಾಶದಲ್ಲಿ ಬಂದು ನೋಡುತ್ತಿದ್ದ ದೇವತೆಗಳ ಗುಂಪು ಚದುರಿತು. ದಿಕ್ಪಾಲಕರು ತಮ್ಮ ಮ೦ದಿರಕ್ಕೆ ಹೋದರು. ದೇವಮುನಿ ನಾರದನು ಆಕಾಶದಲ್ಲಿ ವೇಗವಾಗಿ ಹಾರಿ ಹೋದನು.
ಅರ್ಥ:ಪಾಂಡವರು ಕಾಮ್ಯಕ ವನದಲ್ಲಿ ಕೆಲವುದಿನ ವನವಾಸ ಅನುಭವಿಸಿ, ಬಳಿಕ ಅಲ್ಲಿ೦ದ ಹೊರಹೊರಟು ಅವಗಡೆಯೆಂಬ ಪರ್ವತಕ್ಕೆ ಬ೦ದರು. ಯಾಮುನ ವಂಶದ ದಾನವ ಹಿಡಿ೦ಬೆಯ ಮಗನು ಅವರನ್ನು ಪರ್ವತದ ತುದಿಗೆ ತಲುಪಿಸಿದನು. ಅಲ್ಲಿ ಪರ್ವತದ ಮೇಲೆ ಅವನಿಪತಿ ಧರ್ಜನು ಕೆಲ ದಿವಸವಿದ್ದು ಅಲ್ಲಿ೦ದ ಹೊರಹೊರಟನು.
ಅರ್ಥ:ಜನಮೇಜಯ ಅರಸನೇ ಕೇಳಯ್ಯಾ,'ಶಿವನ ಮಗ ಕಾರ್ತಿಕೇಯನ ಮಹಾಶ್ರಮಕ್ಕೆ ಧರ್ಮಜನು ಮುನಿವರರ ಪರಿವಾರ ಸಹಿತ ಬಂದನು. ಅಲ್ಲಿ ಸಂತೋಷದಿಂದ ಒಂದು ವರ್ಷ ಕಳೆದನು. ನಂತರ ಧರಣಿಪತಿ ಧರ್ಮಜನು ಭೃಹದಶ್ವನ ಆಶ್ರಮಕ್ಕೆ ಬ೦ದನು. ಅಲ್ಲಿ ತೀರ್ಥಸೇವಾ ಪರಮಪಾವನನೂ ಕರಣನೂ ಆದ ಧರ್ಮಜನು ಒಂದು ಪರ್ಣಶಾಲೆಯಲ್ಲಿ ಇದ್ದನು.
ಅರ್ಥ:ಧರ್ಮಜನು ಭೃಹದಶ್ವನ ಆಶ್ರಮದಲ್ಲಿದ್ದಾಗ ಒಬ್ಬ ಬೇಡನು ಭೀಮನ ಬಳಿಗೆ ಬಂದು,'ಜೀಯ ಚಿತ್ತವಿಸು-ಕೇಳು, ಅಡವಿಯ ಬಳಿಯ ಪಕ್ಷಿ ಪ್ರಾಣಿ ಸಮೂಹದ ಇಕ್ಕೆಯನೆಲೆಯ- ತಿರುಗಾಡುವ ಸ್ಥಳದ ಸುಳಿವು, ಕುರುಹುಗಳನ್ನು, ನಿ೦ತ ನೆಲೆಯನ್ನು, ಹೋದ ಹೆಜ್ಜೆಗಳಿ೦ದ ತಿಳಿದು ಭೇಧಿಸಿ (ಬೇಟೆಯಾಡಿರಿ),'ಎ೦ದು ಬಿನ್ನಹ ಮಾಡಿದನು.
ಅರ್ಥ:ಆ ಬೇಡನು ಭೀಮನಿಗೆ,' ಮಹಾಅರಣ್ಯವು ಅತಿ ದೂರದಲ್ಲಿ ಇದೆ. ಅಲ್ಲಿ ತೋಳ, ಶಾರ್ದೂಲ, ಕೇಸರಿ-ಸಿಂಹಗಳ ಗುಂಪು, , ಆನೆ, ಹಂದಿ ಖಿಳಿ ಕೋಣ, ಸಾರ೦ಗ-ಜಿಂಕೆ, ಆನೆ ಮದತುಂಬಿದ ರೀತಿಯಲ್ಲಿ ತುಂಬಿವೆ. ಸಾಮಾನ್ಯ ಮಾನವರು ಮುಟ್ಟಿದರೆ- ಹೊಡೆದರೆ ಹೆದರುವುದಿಲ್ಲ. ಅವು ನಮ್ಮ ಹೊಲಗಳನ್ನು ಹೊದರಿಕ್ಕಿ ಪುಡಿಮಾಡಿದವು, ತುಳಿದು ನಾಶ ಮಾಡಿದವು.ಅವು ಬಹಳ ಪುಂಡಾಟ ಹಿ೦ಡಿನ೦ತಿವೆ,' ಜೀಯ ಚಿತ್ತೈಸು- ಕೇಳು ಎಂದನು.
ಮೇಹುಗಾಡಿನೊಳವರ ಮೈ ಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳತೆಕ್ಕೆಯ ತೋಟಿ ತೇಗುವರೆ |
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಬಲು
ಸಾಹಸಕ೦ಜುವೆವೆ ನೀನೇಳೆ೦ದನಾ ಶಬರ || ೧೭ ||
ಪದವಿಭಾಗ-ಅರ್ಥ:ಮೇಹುಗಾಡಿನೊಳು+ ಅವರ ಮೈ ಮಿಗೆ(ಮೇಯುವ ಕಾಡಿನಲ್ಲಿ ಅವುಗಳ ಮೈಯನ್ನು- ಸುಳಿವನ್ನು) ಸೋಹಿದರೆ(ಬೇಟಯಾಡಲು ತೊಡಗಿದರೆ) ಸುವ್ವಲೆಯ ಸುಬ್ಬಲೆಯ(ಎಂದು ಕೂಗುತ್ತಾ)+ ಆಹವದಲೇ(ಯುದ್ಧ- ಬೇಟೆಯಲ್ಲೇ) ತೋಳ ತೆಕ್ಕೆಯ ತೋಟಿ(ಹೊಯ್ದಾಟ, ತೊಳಲಾಟ,) ತೇಗುವರೆ(ಕಷ್ಟಪಡು) ತೋಹಿನಲಿ(ಮರಗಳ ಗುಂಪು) ತೊದಳಾಗಿ ಗೋರಿಯ(ಆಕರ್ಷಣೆ, ಸೆಳೆತ, ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು, ಒಂದು ಬಗೆಯ ಬೇಟೆ;) ಗಾಹುನಲಿ(ಮೋಸ, ವಂಚನೆ) ಗುರಿ ಗಡಬಡಿಸೆ ಬಲುಸಾಹಸಕೆ+ ಅ೦ಜುವೆವೆ ನೀನು+ ಏಳೆ೦ದನು(ನೀನು ಬಾ)+ ಆ ಶಬರ.
ಅರ್ಥ:ಆ ಶಬರನು ಹಳ್ಳಿಗಾಡಿನ ತನ್ನ ಭಾಷೆಯಲ್ಲಿ ಭೀಮನಿಗೆ,'ಪ್ರಾಣಿಗಳು ಮೇಯುವ ಕಾಡಿನಲ್ಲಿ ಅವುಗಳ ಮೈಯನ್ನು- ಜಾಡನ್ನು -ಸುಳಿವನ್ನು ತಿಳಿದು ಬೇಟಯಾಡಲು ತೊಡಗಿದರೆ, ಸುವ್ವಲೆಯ ಸುಬ್ಬಲೆಯ ಎಂದು ಕೂಗುತ್ತಾ ಬೇಟೆಯಲ್ಲೇ ನಮ್ಮ ಹೊಯ್ದಾಟ, ತೊಳಲಾಟದಲ್ಲಿ ಕಷ್ಟಪಡುವುದು ಮಾತ್ರಾ ಆಗುವುದು; ಆ ಕಾಡಿನ ಮರಗಳ ನಡುವೆ ಪೊದೆಗಳಲ್ಲಿ ವ್ಯರ್ಥವಾಗಿ ಬೇಟೆ ಮಾಡುವೆವು. ನಮ್ಮ ಬೇಟೆಯ ಗಡಿಬಿಡಿಯಲ್ಲಿ ಗುರಿ ಉಪಾಯ ಗಡಬಡಿಸಿ ತಪ್ಪುವುದೆಂದು ಹೆಚ್ಚಿನ ಸಾಹಸಮಾಡಲು ಅ೦ಜುವೆವು ಅದಕ್ಕಾಗಿ ಬೇಟೆಗೆ ನೀನೆ ಬರಬೇಕು, ಏಳು ನೀನು ಬಾ,' ಎಂದ.
ಅರ್ಥ:- ಮಡಚಿದ ಜೋಲ ಕಿವಿಗಳ ಹೋರಾಟ ಬೇಟೆಗೆ ಒಡ್ಡಿದ ಅನುಭವದ, ಒಂದು ಹಿಡಿಯಷ್ಟು- ಸಣ್ಣ ಸೊಂಟದ, ಡೊಂಕಾದ ಉಗುರಿನ, ಉದ್ದ ದೇಹದ, ತೆಳುವಾದ ಕಾಲಿನ, ಕೆಂಪು ನಾಲಿಗೆಗಳ ಬೊಗಳಿದರೆ ಸಿಡಿಲಿನಂತೆ ಆರ್ಭಟಿಸುವ, ಹಾರಿ ಆಕಾಶವನ್ನೇ ಹಿಡಿಯುವ, ಬಾಯಿ ಕಳೆದು ಆಗಾಗ ದೊಡ್ಡದಾಗಿ ಆಕಳಿಸುವ, ಘರ್ಜನೆ ಮಾಡುವ ಚೈತನ್ಯಯುತ ಶಕ್ತಿಶಾಲಿ ಬೇಟೆನಾಯಿಗಳು ಹಿಡಿದವರನ್ನು ನೂಕಿಕೊಂಡು ಸಂತಸದ ಭಾವದಲ್ಲಿ ಓಡಿದವು.
ಅರ್ಥ :- ‘ಭೀಮನ ಬೇಟೆಯಲ್ಲಿ ಅಲ್ಲಿರುವ ಆ ಮೃಗಗಳನ್ನು ಹಿಡಿ ಎನ್ನಲು ಹೆಸರಾದ ಉತ್ತಮ ಬೇಟೆ ನಾಯಿಗಳು ಕೊರಳ ಹಗ್ಗ ಬಿಡಿಸಿಕೊಂಡು ಬಹಳ ಚತುರತೆ ಮತ್ತು ಉತ್ಸಾಹದಿಂದ ಆಕ್ರಮಿಸಿದವು. ಹುಲ್ಲಿನ ಪೊದೆಗಳ ಒಳಗೆ- ಹರವಿನಲ್ಲಿ ನುಸುಳಿ ಹೋದವು. ಮೊಲಗಳು ಬೇಟೆಗಾರರು ಹಾಕಿದ ಬೆಂಕಿಯ ಹೊಗೆಗಳ ದಿಕ್ಕಿನಲ್ಲಿ ಚದುರಿ ಹೊಲದಲ್ಲಿ ಓಡಿದವು). ಹೊಲದಲ್ಲಿ ಹಸುಬ ಎಂಬ ಹಸಿರು ಬಣ್ನದ ಹಕ್ಕಿಗಳ ಮತ್ತು ಕೊಕ್ಕರೆಗಳ ವಿಚಾರವನ್ನು ಏನು ಹೇಳಲಿ (ಅವು ಅಪಶಕುನವನು ಸೂಚಿಸಿ ಹಾರಿ ಹೋದವು?). ಇವುಗಳ ಶಕುನ ಸೂಚಕವನ್ನು ಏನು ಹೇಳಲಿ,’ ಎಂದನು ಮುನಿ.
ಅರ್ಥ: ಬೇಟೆಗೆ ಭೀಮನ ಜೊತೆಗೆ ಹೊರಟ ಬೇಟೆಗಾರರು, ಬ೦ಡಿಗಳನ್ನೂ ನಾನಾ ಬಗೆಯ ಬಲೆಗಳಾದ ಹಕ್ಕಿ ಹಿಡಿಯುವ ಬೆಳ್ಳಾರೆ ಬಲೆಗಳು, ಖ೦ಡಬಲೆಗಳು, ಅಡ್ಡಕಟ್ಟುವ ತಡಿಕೆಯಂತಿರುವ ಬಲೆಗಳು, ಗುಂಡುಕಟ್ಟಿದ ಬಲೆಗಳ, ಬೀಸುಬಲೆಗಳ, ಹಿಡಿದ ಪ್ರಾಣಿಗಳನ್ನು ಕಟ್ಟಲು ಕಾಲುಗಣ್ಣಿಗಳು; ದ೦ಡೀಬಲೆಗಳ, ತೊಡಕು ಬಲೆಗಳು, ಹಿ೦ಡು ಬಲೆಗಳ; ಹಕ್ಕಿಗಳನ್ನು ಹಿಡಿಯಲು ಮಯಣ ದ೦ಟಿನ ಮ೦ಡುವಿಗೆ ಬಲೆಗಳು, ಇವುಗಳನ್ನು ತೆಗೆದುಕೊಂಡು ಬೇಡರು ಕಾಡಿನ ಅಗಲವಾದ ಪ್ರದೇಶದಲ್ಲಿ ಕೆದರಿ ಹರಡಿಕೊಂಡರು.
ಏನನೆ೦ಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ |
ಕಾನನಪನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗ೦ಡ
ಸ್ಥಾನ ದೀರ್ಘದ್ರೋಣಗಳರಸಿದರು ಮೃಗಕುಲವ || ೨೪ ||
ಪದವಿಭಾಗ-ಅರ್ಥ: ಏನನೆ೦ಬೆನು ಜೀಯ ಹೊಕ್ಕನು ಕಾನನವನು+ ಅನಿಲಜನು(ಭೀಮನು) ಶಬರ (ಬೇಡ) ವಿತಾನ (ಸಮೂಹ) ವು+ ಇಕ್ಕಿದ (ಇಟ್ಟ) ವೇಡೆಗಳ (ಸುತ್ತುಗಟ್ಟುವಿಕೆಯನ್ನು) ಬೆಳ್ಳಾರ ಸುತ್ತುಗಳ (ವಿಶಾಲ ಪ್ರದೇಶದಲ್ಲಿ ಬಲೆಹಾಕಿ ಸುತ್ತುಗಟ್ಟಿರುವುದನ್ನು) ಕಾನನಪನ+ ಅಳಿವಿನ ಶಿಲೋಚ್ಚಯ (ಕಲ್ಲಿನ ಎತ್ತರದ ಬಂಡೆ ) ಸಾನುವಿನ (ಬೆಟ್ಟದ ತಪ್ಪಲಿನ) ಗಹ್ವರದ (ದೊಡ್ಡ ಗುಹೆಯ) ಗ೦ಡಸ್ಥಾನ (ಅಪಾಯದ ಪ್ರದೇಶಗಳು,) ದೀರ್ಘದ್ರೋಣಗಳ (ಉದ್ದ ಕಣಿವೆ ಅಥವಾ ನೀರು ತುಂಬಿದ ಕಣಿವೆ, ನೀರು ಹರಿಯುವ ಅಗಳಗಳು) + (ಅಲ್ಲಿ) ಅರಸಿದರು (ಹುಡುಕಿದರು) ಮೃಗಕುಲವ (ಕಾಡು ಪ್ರಾಣಿಗಳನ್ನು).
ಅರ್ಥ: ರಾಜನೇ, ಏನನ್ನು ಹೇಳಲಿ ಆ ಬೇಟೆಯ ಅದ್ಭುತವನ್ನು;, ಭೀಮನು ಬೇಡರ ಸಮೂಹದ ಜೊತೆಗೆ ಕಾಡನ್ನು ಹೊಕ್ಕನು. ಬೇಡರ ಸಮೂಹವು ಇಟ್ಟ ಸುತ್ತುಬಲೆಯ ವೇಡೆಗಳು- ಬೆಳ್ಳಾರದ ವಿಸ್ತಾರ ಸುತ್ತುಗಳನ್ನು ಕುರಿತು ಏನು ಹೇಳಲಿ. ಕಾಡುರಾಜನ ದೊಡ್ಡ ತಗ್ಗುಳ್ಳ ದರೆಯನ್ನು ಮಾಡಿದ, ಕಲ್ಲಿನ ಎತ್ತರದ ಬಂಡೆ, ಮತ್ತೆ ಬೆಟ್ಟದ ತಪ್ಪಲಿನಲ್ಲಿರುವ ಗಹ್ವರದ ದೊಡ್ಡ ಗುಹೆ, ಅಪಾಯದ ಪ್ರದೇಶಗಳು, ಉದ್ದ ಕಣಿವೆ ಅಥವಾ ನೀರು ತುಂಬಿದ ಕಣಿವೆ, ನೀರು ಹರಿಯುವ ಅಗಳಗಳು, ಅಲ್ಲಿ ಭೀಮ ಮತ್ತು ಬೇಡರು ಕಾಡು ಪ್ರಾಣಿಗಳನ್ನು ಹುಡುಕಿದರು.
ಬೊಬ್ಬೆಗಳ ಪಟಹದ ಮೃದ೦ಗದ
ಸರ್ಬ ಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿ೦ಡೊಡೆದು ಹಾಯ್ದವು ಸೂಸಿದವು ದೆಸೆಗೆ |
ತೆಬ್ಬಿದವು ಬೆಳ್ಳಾರವಲೆಹರಿ
ದುಬ್ಬಿ ಹಾಯ್ದೊಡೆ ವೇಡೆಯವರಿಗೆ
ಹಬ್ಬವಾಯ್ತೇನೆ೦ಬೆನಗಣಿತ ಮೃಗ ನಿಪಾತನವ || ೨೫ ||
ಪದವಿಭಾಗ-ಅರ್ಥ:ಬೊಬ್ಬೆಗಳ (ಕೂಗಾಡುವ ,) ಪಟಹದ ಮೃದ೦ಗದ ಸರ್ಬ(ಎಲ್ಲಾ) ಲಗ್ಗೆಯ ಸೋಹಿನಲಿ (ಪಟಹ, ಮೃದಂಗಗಳನ್ನು ಬಡಿಯುತ್ತಾ ಧಾಳಿಇಟ್ಟು ಹುಡುಕಿ ಹೊಡೆಯುವ ಸೋ-ಬೇಟೆಯನ್ನು ಮಾಡುತ್ತಾ) ಸುಳಿವ+ ಅಬ್ಬರಕೆ, ಹಿ೦ಡೊಡೆದು ಹಾಯ್ದವು (ಪ್ರಾಣಿಗಳು ಗುಂಪು ಉಡೆದು ಭಯದಿಂದ ದಿಕ್ಕು ದಿಕ್ಕಿಗೆ ಓಡಿದವು.) ಸೂಸಿದವು ದೆಸೆಗೆ ದಿಕ್ಕು ದಿಕ್ಕಿಗೆ ಓಡಿದವು; ತೆಬ್ಬಿದವು (ಸುತ್ತಿಕೊಳ್ಳು, ನೆಗೆ) ವಿಸ್ತಾರವಾಗಿ ಹಾಕಿದ ಬೆಳ್ಳಾರ ಬಲೆ ಹರಿದು+ ಉಬ್ಬಿ(ಉತ್ಸಾಹದಿಂದ) ಹಾಯ್ದೊಡೆ(ಓಡಿದರೆ) ವೇಡೆಯವರಿಗೆ (ಮುತ್ತಿಗೆ ಹಾಕಿದವರಿಗೆ) ಹಬ್ಬವಾಯ್ತು+ ಏನೆ೦ಬೆನು+ ಅಗಣಿತ ಮೃಗ ನಿಪಾತನವ(ನಿಪಾತ - ಬೀಳು.)
ಅರ್ಥ:ಬೇಟಗಾರರು ಆರ್ಭಟಿಸುವ ಮತ್ತು ಮೃದಂಗಂತಿರುವ ಪಟಹವನ್ನು ಬಡಿಯುವ ಎಲ್ಲಾ ತರದ ಧಾಳಿಇಟ್ಟು ಹುಡುಕಿ ಹೊಡೆಯುವ ಸೋ-ಬೇಟೆಯನ್ನು ಮಾಡುತ್ತಾ, ಬೇಟೆಗಾರರು ಓಡಾಡುವ ಅಬ್ಬರಕ್ಕೆ ಪ್ರಾಣಿಗಳು ಭಯದಿಂದ ದಿಕ್ಕು ದಿಕ್ಕಿಗೆ ಓಡಿದವು. ಕೆಲವು ನೆಗೆದವು; ವಿಸ್ತಾರವಾಗಿ ಹಾಕಿದ ಬೆಳ್ಳಾರ ಬಲೆ ಪ್ರಾಣಿಗಳು ಕೆಲವು ಹರಿದು ಉಬ್ಬಿ ಓಡಿದರೆ ಮುತ್ತಿಗೆ ಹಾಕಿದವರಿಗೆ ಹಬ್ಬವಾಯಿತು ಅಗಣಿತವಾಗ ಮೃಗಗಳು ಬೇಟೆಗೆ ಬಿದ್ದುದನ್ನು ಏನೆ೦ಬೆನು,’ ಎಂದನು ಮುನಿ.
ಪದವಿಭಾಗ-ಅರ್ಥ:ಕಳಚಿ ಹಾಸವನು (ಕೊರಳ ಹಗ್ಗವನ್ನು)+ ಉಬ್ಬರಿಸಿ(ಉತ್ಸಾಹದಿಂದ) ಲವ್ವಳಿಸಿ(ಲವಲವಿಸಿ- ಆತುರಪಟ್ಟು ) ಕ೦ಠೀರವನ (ಸಿಂಹದ) ಮೋರೆಗೆ ನಿಲುಕಿದವು ಕದುಬಿದವು (ಮುತ್ತಿದವು, ಆವರಿಸು) ಹಾಯ್ದವು ಹಣುಗಿ (ಬಗ್ಗಿನೋಡಿ, ಹಣುಕಿ) ಹುಡುಕಿದವು; ಸೆಳೆವುಡಿದು (ಗುರಿ. ಆಕರ್ಷಿಸಿ, ಸಮಯ ನೋಡಿ)+ ಉಕ್ಕುಳಿಸಿತು (ಶಕ್ತಿ ತೋರಿತು, ಮೇಲೆ ಬಿದ್ದವು)+ ಎಡ ಬಲ ಬಳಸಿದವು (ಸುತ್ತಾಡಿದವು ಮೆಲುವಾಯಿದವು ( ಆಕ್ರಮಿಸಲು ಮೇಲೆ ಬಿದ್ದವು) ವೆಗ್ಗಳಿಸಿದವು (ವೆಗ್ಗಳ- ಹೆಚ್ಚು, ಸೊಕ್ಕಿ ಆಕ್ರಮಿಸಿದವು) ಕುಸುಬಿದವು (ತೊಳೆಯುವಾಗ ಬಟ್ಟೆಯನ್ನು ಕುಸುಬಿದಂತೆ, ಮತ್ತೆ ಮತ್ತೆ ಕುಕ್ಕು, ಮೇಲೆಬಿದ್ದು ಕೆಡವಿದವು) ಕುನ್ನಿಗಳು+ ಅಖಿಳ ಮೃಗ ಕುಲವ.ಪ್ರಾಣಿಗಳ ಸಮೂಹವನ್ನು.
ಅರ್ಥ:ಬೇಟೆಯಲ್ಲಿ ನಾಯಿಗಳು ಕೊರಳ ಹಗ್ಗವನ್ನು ಕಳಚಿಕೊಂಡು ಉಬ್ಬರಿಸಿ ರಬಸದಿಂದ ಆತುರಪಟ್ಟು ಸಿಂಹದ ಮೋರೆಗೆ ಹಾರಿದವು, ಪ್ರಾಣಿಗಳನ್ನು ಮುತ್ತಿ ಹಿಡಿದವು, ಅವು ಬಗ್ಗಿ ನೋಡಿ, ಹಣುಕಿಹಾಕಿ ಪ್ರಾಣಿಗಳನ್ನು ಹುಡುಕಿದವು. ಗುರಿ ಹಿಡಿದು ಸಮಯ ನೋಡಿ ಶಕ್ತಿ ತೋರಿ ಮೇಲೆ ಬಿದ್ದವು. ಎಡ ಬಲ ಬಳಸಿ ಸುತ್ತಾಡಿದವು. ಮೇಲೆ ಹಾಯ್ದು ಪ್ರಾಣಿಗಳನ್ನು ಆಕ್ರಮಿಸಲು ಮೇಲೆ ಬಿದ್ದವು. ಹೆಚ್ಚು ಸೊಕ್ಕಿನಿಂದ ಆಕ್ರಮಿಸಿದವು. ಮತ್ತೆ ಮತ್ತೆ ಮೇಲೆಬಿದ್ದು ಕೆಡವಿದವು. ನಾಯಿಗಳು ಕಾಡಿನ ಎಲ್ಲಾ ಪ್ರಾಣಿಗಳ ಸಮೂಹವನ್ನು ಆಕ್ರಮಿಸಿದವು.
ಅರ್ಥ:ಭೀಮನ ಮತ್ತು ಬೇಡರ ಬೇಟೆ ಅತಿಯಾಗಲು, ಗಾಯಪಡೆದ ಕಾಡು ಹಂದಿಯ ಆರ್ಭಟ; ರಭಸದ ಬೇಟೆ ನಾಯಿಗಳ ಗರ್ಜನೆಯ ಎಲ್ಲಾ ಬಗೆಯ ಪ್ರಾನಿಗಳ ಕೂಗು, ಮರದ ಮೇಲಿನ ಕರಡಿ, ಕಾಡಾನೆಗಳ ಭಯದ ಕೂಗು, ಒರಲುವ ಶರಭ, ಸಿ೦ಹ, ಕಾಡುಕೋಣ, ವೃಕ- ತೋಳ, ಶಾರ್ದೂಲ- ಹುಲಿ, ಮೊಲ, ನರಿ ಮೊದಲಾದ ಎಲ್ಲಾ ಮೃಗಗಳ ಸದ್ದು ಕಾಡನ್ನು ಮೀರಿ ಆಕಾಶವನ್ನು ತು೦ಬಿತು.
ಅರ್ಥ: ಬೇಟೆಯ ಸಮಯದಲ್ಲಿ ಮುಳ್ಳಿನ ತೊಡಕಿನ ಪೊದೆಯಲ್ಲಿ ಕೂದಲುಸಿಕ್ಕಿಕೊಂಡು ಅಲ್ಲಿಯೇ ಚಮರೀ ಮೃಗಗಳು ನಿಂತವು; ಜಿಂಕೆಗಳು ಮರಿಗಳಿಗೆ ಮೊಲೆಯುಣ್ಣಿಸುತ್ತಾ ಸಂದಿಗಳಲ್ಲಿ ಅಡಗಿದವು. ಸಿ೦ಹದ ಜೋಡಿ ಸಿಟ್ಟಿನಿಂದ ಬೇಟಗಾರರನ್ನು ಎದುರಿಸಿ ನಿಂತವು. ಹಿಂಡಿನಲ್ಲಿದ್ದ ಎಳೆಯ ಆನೆ ಮರಿಗಳನ್ನು, ಕಾಡು ಆನೆಗಳು ತಮ್ಮ ಹಿಂದಕ್ಕೆ ಇಟ್ಟುಕೊಂಡು ಬೇಟೆಗಾರರ ಪಡೆಯ ಕಡೆ ನುಗ್ಗಿದವು.
ಅರ್ಥ:ಭೀಮನ ರಭಸದ ಆಕ್ರಮಣಕ್ಕೆ ಮೃಗಗಳು, ಹಂದಿಗಳು ಸಹ ಬೆದರಿದವು. ಆದರೆ ಒಂದು ತೀವ್ರ ಹೋರಾಟದಲ್ಲಿ ಹೆಬ್ಬ೦ದಿಯೊ೦ದು ಘಾಸಿ ಮಾಡುವಂತೆ ಬೇಟೆಗಾರರ ಮೇಲೆ ಹಾಯ್ದು- ನುಗ್ಗಿ ಬೇಡರಗುಂಪನ್ನು ಒಡೆದು ಇಬ್ಭಾಗ ಮಾಡಿತು. ಅವರ ಬೇಟೆಗೆ ಸಿಗದೆ ಉಳಿದ ಅದನ್ನು ಈತ- ಭೀಮನು ಜೋರಾಗಿ ಅಟ್ಟಿ ಓಡಿಸಿದನು. ಬೇಡರ ಗುಂಪು ಹಿ೦ದೆ ವುಳಿಯಿತು. ಭೀಮನು ಅದನ್ನು ಅಟ್ಟಿಸಿಕೊಂಡು ಹೋದಾಗ ಅದು ಭೀತಿಯಿಂದ ಮಹಾಗಿರಿಯೊಂದರ ಅಪಾಯಕಾರಿಯಾದ ಗುಹೆಯನ್ನು ಹೊಕ್ಕಿತು.
ಅರ್ಥ:ಹೆಬ್ಹಾವಿನ ಸುತ್ತಿಕೊಂಡಿದ್ದ ದೇಹ ಸಡಲಿತು. ಅದು ತರಗೆಲೆಯ ರಾಶಿಯ ಗುಪ್ಪೆಯಲ್ಲಿ ಎಚ್ಚರಾಗಿ ಮೈಮುರಿಯಲು, ಅನಿಲಜ ಭೀಮನು ಅದೇ ಹಿಂದಿನ ರಭಸದಲ್ಲಿ, ಹಾವನ್ನು ಕಾಣದೆ ಅದರ ಮೇಲೆ ಹಾಯ್ದನು- ನುಗ್ಗಿದನು. ಭೀಮನ ದಪ್ಪ ತೊಡೆಗಳು ಹಾವಿನ ತೆಕ್ಕೆಯಲಿ ಸಿಕ್ಕಿದವು. ಪೌರುಷದಿಂದ, ಕೋಪದಿಂದ ಫಣಿಪತಿಯನ್ನು ಗುದ್ದಿ ಹೊಡೆದರೆ, ಲೆಕ್ಕಿಸದೆ ಭೀಮನ ಎದೆಗೆ ಏರಿ- ಹಬ್ಬಿ ಸುತ್ತಿ, ಅವನ ದೊಡ್ಡ ಎದೆಯನ್ನು ಅಜಗರ(ಹೆಬ್ಬಾವು) ಬಿಗಿಯಿತು.
ಅರ್ಥ:ವೀರಭಟ ಭೀಮಸೇನನು ಪುನಃ ಸ೦ತೈಸಿಕೊ೦ಡು, ಸುಧಾರಿಕೊಂಡು ಜಾಣತನದಿಂದ ಮೋಸಪಡಿಸಿ ಕೈಯನ್ನು ತಪ್ಪಿಸಿಕೊಂಡು, ಗದೆಯಿಂದ ಹೊಡೆದು ಬಿಗುಹಿನಿಂದ ಹಿಡಿದ ಏಡಿಹಿಡಿತವನ್ನು ಬಿಚ್ಚಿದನು; ಅದರಿಂದ ಉತ್ಸಾಹದಿಂದ ಹೆಚ್ಚಿದನು. ಅವನು ಬೊಬ್ಬಿಡುತ- ಕೂಗುತ್ತಾ ಆರ್ಭಭಟಿಸುತ್ತಾ, ಹಾವನ್ನು ಒತ್ತಿಹಿಡಿದು ಚೆಂಡಿನಂತೆ ಮೇಲೆ ಚಿಮ್ಮಲು ಆತುರಪಡಲು ಫಣಿ-ಹಾವು ಅವನನ್ನು ಒತ್ತಿತು.ಆಗ ಭೀಮನು ಗಿಡಗನ ಬೇಟೆಯ ಪುಟದ ಗಿಳಿಯಂತೆ ಗಿರಿಗಿರಿ ಗುಟ್ಟಿ ತಿರುಗಿದನು.
ಅರ್ಥ:ಕಲಿ ಭೀಮನು ಹಾವನ್ನು ಜಾಡಿಸಿ ಮತ್ತೆ ಮತ್ತೆ ಒದೆದರೆ, ಅದರ ಬಿಗುಹು ಅತಿ ಹೆಚ್ಚತು. ಕಾಲನ್ನು ಕೊಡವಿದರೆ) ಮತ್ತೂಹೆಚ್ಚು ಮೈಗೂಡಿಕೊಂಡು ಬಿಗಿದುಕೊಂಡಿತು ಹಾವು. ನಾಗಲೋಕದ ಮ೦ದರಾದ್ರಿಯೆನ್ನೇ ಮಣಿಸಿದ ತನ್ನ ಭುಜಬಲದ ಶಕ್ತಿಸಂಪತ್ತು ಈಗ ಈ ಹಾವಿನ ಬಳಿ ಹೋರಾಟದಲ್ಲಿ ಕಾಡಿತೇ? ತನಗೆ ತೊಂದರೆ ಕೊಟ್ಟಿತೇ? ಸೋತಿತೇ? ಎನ್ನುತ್ತಾ ಕಲಿಭೀಮನು ಕಾತರಿಸಿ ಕಳವಳಗೊಂಡನು- ಚಿಂತಿತನಾದನು.
ಅರ್ಥ:ಅರಸ ಜನಮೇಜಯನೇ ಕೇಳು, ಇತ್ತ ಧರ್ಮಜನ ಕಡೆಯಲ್ಲಿ ನೂರಾರು ಅಪಶಕುನಗಳು ಆಯಿತು. ಇದೇನೋ ದೈವಕೃತವು. ಇದರ ಫಲವು ಯಾವುದು, ಇದಕ್ಕೆ ಪರಿಹಾರವೇನು ಎನ್ನತ್ತಾ, ಪುರೋಹಿತ ದೌಮ್ಯೃಷಿಗಳನ್ನು ಕರಸಿ ವಿಷಯ ತಿಳಿಸಲು, ಇದು ನಮ್ಮ ಅರಸುಗಳಾದ ನಿಮ್ಮ ಸೊದರರಿಗೆ ಅಪಘಾತ ಸೂಚಕವು. ಇದರ ಪರಿಹಾರ ತಿಳಿಯದು, ಎ೦ದಾಗ ನೃಪತಿ ಧರ್ಮಜನು ಯೋಚಿಸಿದ.
ಅರ್ಥ:ಧೌಮ್ಯರು ಶಕುನದ ಫಲವನ್ನು ಹೇಳಲು, ಧರ್ಮಜನು ತಮ್ಮಂದಿರಲ್ಲಿ ಭೀಮನನ್ನು ಕಾಣದೆ, ಭೀಮನು ಯಾವೆಡೆಯಲ್ಲಿ ಇದ್ದಾನೆ? ಎನ್ನಲು, ತಿಳಿದ ಜನರು ಬೇಡರ ಪಡೆ ಸಹಿತ ಬೇಟೆಯಾದುವ ಬಯಕೆಯಿಂದ ಕಾಡಿಗೆ ಹೋದನು ಎನ್ನಲು, ನೃಪ ಧರ್ಮಜನು ಆಶ್ರಮದಿಂದ ಬ್ರಾಹ್ಮಣರ ಸಮೂಹದೊಡನೆ ಕಾಡಿನಕಡೆ ಹೊರಹೊರಟನು. ಹಾಗೆ ಬರಬರುತ್ತಾ ಬರಲು ಸ೦ಗ್ರಾಮ ದೀರ ಭೀಮನ ಹೆಜ್ಜೆಹಿಡಿದು ಅವನು ಹೋದ ದಾರಿಯನ್ನು ತಿಳಿದು ಜನರ ಪ್ರೀತಿ ಪಾತ್ರರಾಜನು ಭೀಮನನ್ನು ಹುಡುಕುತ್ತಾ ಘೋರ ಕಾಡನ್ನು ಹೊಕ್ಕನು.
ಅರ್ಥ:ಆ ಭೂಪ ಧರ್ಮಜನು ಕಾಡಿನೊಳಗೆ ಭೀಮನನ್ನು ಹುಡುಕುತ್ತಾ ಬಂದಾಗ ಅಲ್ಲಿ, ಉತ್ತಮ ಶ್ರೇಷ್ಠ ಸತ್ವವು ಅಡಗಿಹೋದ ಭೀಮನನ್ನು ಕಂಡನು. ಭೀಮನ ಸ್ಥಿತಿಯು ದುಸ್ಸಾಹಸಮಾಡಿ ಕುಗ್ಗಿದ ಸತ್ವದ, ಸೋತ ಮನಸ್ಸಿನ, ಗದ್ಗಧಿತ- ಬಿಕ್ಕುವ ಕ೦ಠದ, ಎದ್ದುಕಾಣುವ ಭ೦ಗದ, ಅತಿ ಬಳಲಿ ತಿರುಗುವ ಕಣ್ಣು ಗುಡ್ಡೆಗಳ, ಹೆದರಿದ ಎದೆಯ, ಹೇರಾಳ ಶೋಕದ, ಕೆದರಿದ ತಲೆಯ, ಪಕ್ಕಕ್ಕೆ ಅವನ ಕೈಯಿಂದ ಜಾರಿದ ಗದೆಯ, ಶ್ರೇಷ್ಠನಾದ ಭೀಮನನ್ನು ಕ೦ಡನು ಆ ಧರ್ಮಜ.
ಅಕಟ ಹಿ೦ದನುಭವಿಸಿದೆನು ಕ೦
ಟಕ ಹಲವನೀ ಪರಿಯ ಬಲು ಕ೦
ಟಕ ಮಹಾ ಕರ್ದಮ ದೊಳದ್ದಿತೆ ವಿಧಿ ಮಹಾದೇವ |
ವಿಕಟ ನಾಗಾಯತ ಮದತ್ಪ್ರಾ
ಣಕನ ಸಾಹಸ ವಡಗಿತೇ ವನ
ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ || ೩೯ ||
ಪದವಿಭಾಗ-ಅರ್ಥ:ಅಕಟ ಹಿ೦ದೆ+ ಆನುಭವಿಸಿದೆನು ಕ೦ಟಕ(ಆಪತ್ತು) ಹಲವನು+ ಈ ಪರಿಯ ಬಲು ಕ೦ಟಕ ಮಹಾ ಕರ್ದಮದೊಳು(ಪಾಪ; ಕೆಸರು)+ ಅದ್ದಿತೆ ವಿಧಿ ಮಹಾದೇವ ವಿಕಟ(ಭೀಕರವಾದ,ಭಾರಿಯಾದ, ಸೊಕ್ಕಿದ,ಡೊಂಕು ) ನಾಗಾಯತ(ನಾಗ+ ಆಯತ= ನಾಗದ ನೆಲೆ) ಮದತ್(ನನ್ನ)+ ಪ್ರಾಣಕನ(ಪ್ರಾಣಸಮಾನನ) ಸಾಹಸವು+ ಅಡಗಿತೇ, ವನನಿಕಟ(ಕಾಡಿನಲ್ಲಿರುವ, ಕಾಡಿನ ಹತ್ತಿರ) ಭುಜಗಾಗವು)+ ಆಟೋಪ ಠೌಳಿಯೊಳು(ಮೋಸ, ವಂಚನೆ)+ ಎನುತ ಬಿಸುಸುಯ್ದ.
ಅರ್ಥ:ಧರ್ಮಜನು ಭೀಮನ ದೀನಸ್ಥಿತಿಯನ್ನು ಕಂಡು,'ಅಕಟ! ಮಹಾದೇವ, ಹಿ೦ದೆ ಹಲವು ಕ೦ಟಕಗಳನ್ನು ಆನುಭವಿಸಿದೆನು. ಆದರೆ ಈ ಪರಿಯ ಬಲು ದೊಡ್ಡ ಕ೦ಟಕವು ಬಂದಿರಲಿಲ್ಲ; ವಿಧಿಯು ತನ್ನನ್ನು ಮಹಾಕೆಸರು ಕೂಪದಲ್ಲಿ ಅದ್ದಿತೆ! ಮಹಾದೇವ ಭೀಕರವಾದ ಸೊಕ್ಕಿದ ಡೊಂಕುನಾಗದ ನೆಲೆಯಿಂದ ಕಾಡಿನಲ್ಲಿರುವ, ಹಾವಿನ ಆಟೋಪದ ವಂಚನೆಯಿಂದ ನನ್ನ ಪ್ರಾಣಸಮಾನನಾದ ಭೀಮನ ಸಾಹಸವು ಅಡಗಿತೇ!'ಎನ್ನುತ್ತಾ ನಿಟ್ಟುಸಿರುಬಿಟ್ಟನು.
ಏನು ಕು೦ತೀಸುತಗಪಾಯ ವಿ
ದೇನು ಫಣಿ ಬ೦ಧನ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೋ |
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವ ಶಿವಯೆನುತ ನುಡಿಸಿದನನಿಲ ನ೦ದನನ || ೪೦ ||
ಪದವಿಭಾಗ-ಅರ್ಥ:ಏನು ಕು೦ತೀಸುತಗೆ+ ಅಪಾಯವು+ ಇದೇನು, ಫಣಿ ಬ೦ಧನ ವಿಧಾನವು+ ಇದೇನು? ನಿನಗೆ ವಿನೋದವೋ ತ್ರಾಣಾಪಜಯ(ತ್ರಾಣ ಅಪಜಯ- ಶಕ್ತಿಹೀನತೆ) ವಿಧಿಯೋ, ಏನು+ ಇದಕೆ ಕರ್ತವ್ಯ, ನಮಗೆ+ ಈ ಹೀನ ದೆಸೆಗೆ ನಿಮಿತ್ತ ದುಷ್ಕೃತವೇನು(ಪಾಪದ ಕೆಲಸ)? ಶಿವ ಶಿವಯೆನುತ ನುಡಿಸಿದನು+ ಅನಿಲ ನ೦ದನನ.
ಅರ್ಥ:ಧರ್ಮಜನು, 'ಏನು ಕು೦ತೀಸುತನಿಗೆ ಅಪಾಯವು ಇದೇನು? ಫಣಿ ಬ೦ಧನ ವಿಧಾನವು ಇದೇನು ವಿಚಿತ್ರ? ಭೀಮಾ ನಿನಗೆ ವಿನೋದವೋ ಅಥವಾ ನಿಜವಾಗಿ ಶಕ್ತಿಹೀನತೆಯಾಯಿತೇ? ಇದು ವಿಧಿಯೋ(ಜನ್ಮಾಂತರದ ಕರ್ಮಫಲವೋ?), ಈಗ ಇದಕ್ಕೆ ನಾನು ಮಾಡಬೇಕಾದ ಕರ್ತವ್ಯ ಏನು? ನಮಗೆ ಈ ಹೀನ ದೆಸೆಗೆ ನಿಮಿತ್ತವಾದ ನಾವು ಮಾಡಿದ ದುಷ್ಕೃತವೇನು? ಶಿವ ಶಿವಯೆನ್ನುತ್ತಾ, ಅನಿಲ ನ೦ದನ ಭೀಮನನ್ನು ಕೇಳಿದನು.
ಅರ್ಥ:ಧರ್ಮಜನು ಭೀಮನನ್ನು ಮಾತನಾಡಿಸಲು, ಅವನು ಮುಚ್ಚಿದ ಕಣ್ಣನ್ನು ಬಿಟ್ಟು ನೋಡಿದನು. ಅವನ ಕುತ್ತಿಗೆಗೆ ಹೂಡಿದ ಉರುಗ- ಹೆಬ್ಬಾವಿನ ಘೋರ ಬ೦ಧನದ ಅತಿಯಾದ ಬಿಗಿಯಲ್ಲಿ, ಅವನ ಮಾತಿನ ದನಿ ತಗ್ಗಿರಲು ಮೆಲ್ಲಗೆ ಬೆರಳ ಸನ್ನೆಯನ್ನು ಮಾಡುತ್ತಾ ಹಾವನ್ನು ತೋರಿಸಿ ನುಡಿದನು- ಬೆರಳ ಸನ್ನೆಯಲ್ಲಿ ಇವನು ಹಾವಲ್ಲ ಎಂದು ಸನ್ನೆ ಮಾಡಿದನು. ಆಗ ಆಜಾತ ಶತ್ರು ಧರ್ಮಜನು,'ನಾಗರಾಜನನ್ನು ಮಾತಾಡಿಸಿದನು,'ಎಲೆ ನಾಗನೇ,ನೀನು ಸಾಧಾರಣವಾದ, ಸಾಮಾನ್ಯ ಗುಣವುಳ್ಳ ಹಾವಲ್ಲ, ನಾಟಕದ ಫಣಿಯು, ಯಾರು ನೀನು,' ಎ೦ದ.(ಇಲ್ಲಿ ಕವಿಯ ಆಶಯಕ್ಕೆ ತಕ್ಕಂತೆ ಅರ್ಥಮಾಡಿದೆ.)
ಅರ್ಥ:ನಂತರ ಧರ್ಮಜನು ನಾಗನನ್ನು ಕುರಿತು,'ಅನಿಲಸುತ ಭೀಮನು ನಿನಗೆ ತೊಂದರೆ ಮಾಡಿದ ಅಪರಾಧಿಯೋ? ನೀನು ವಿನಯ ಇಲ್ಲದ ದುಷ್ಟನೋ? ಅಥವಾ ಪರಪೀಡನೆ ಮಾಡುವ ಸ್ವಭಾವದವನೇ? ನಿನಗೆ ವೃಥಾ- ಸುಮ್ಮನೆ ದುಷ್ಕರ್ಮಮಅಡಿ ಪಾಪ ಸ೦ಗ್ರಹ ಬೇಕೇ? ಅದನ್ನು ಮಾಡಬಹುದೇ? ನೀನು ದನುಜನೋ? ಗ೦ಧರ್ವನೋ? ಯಕ್ಷನೋ? ಸರೀಸೃಪ (ಹಾವು) ರೂಪದಲ್ಲಿರುವ ದೇವೇ೦ದ್ರನೋ? ವಿಚಾರಮಾಡಿ ತಿಳಿಯಲು ನನ್ನಿಂದ ಆಗದು. ನೀನು ಯಾರು?' ಎ೦ದನು.
ಅರ್ಥ:ಧರ್ಮಜನ ಮಾತನ್ನು ಫಣಿ- ನಾಗನು ಕೇಳಿದನು. ಹೇಗೆಂದರೆ, ಭೀಮಸೇನನ ತಲೆಯನ್ನೇ ಹಾಸಿಗೆಯಂತೆ, ಅಲ್ಲಿ ನಾಗನು ಹೊಳೆಯುವ ತಲೆಯನ್ನಿಟ್ಟುಕೊಂಡು, ಸೀಳಿದ ನಾಲಗೆಯ ಚಲಿಸುವ ಕಣ್ಣುಗಳೊಂದಗೆ ಮುಖವನ್ನು ಮೇಲುಮಾಡಿಕೊಂಡು ನೃಪ ಧರ್ಮಜನ ನುಡಿಗಳನ್ನು ಆಲಿಸುತ್ತಾ ಭೀಕರನೂ, ಭಯಂಕರ ಉಗ್ರನೂ ಆದ ನಾಗನು ಅಂತರದಲ್ಲಿ ಹಲ್ಲು ಉಳ್ಳ, ಸುಮ್ಮನೆ ನಿಲ್ಲದ- ನಾಲಿಗೆನ್ನು ಬಡಿದು ಹೇಳಿದನು.
ಏನಹನು ನಿನಗೀತ ನೀನಾ
ರೇನು ನಿನ್ನಭಿದಾನ ವಿಪ್ರನ
ಸೂನುವೋ ಕ್ಷತ್ರಿಯನೋ ವೈಶ್ಯನೊ ಶೂದ್ರ ಸ೦ಭವನೊ |
ಏನು ನಿನಗೀ ವನಕೆ ಬರವು ನಿ
ದಾನವನು ಹೇಳೆನಲು ಕು೦ತೀ
ಸೂನು ನುಡಿದನು ತನ್ನ ಪೂರ್ವಾಪರದ ಸ೦ಗತಿಯ || ೪೪ ||
ಪದವಿಭಾಗ-ಅರ್ಥ:ಏನು+ ಅಹನು(ಆಗಿರುವನು) ನಿನಗೆ+ ಈತ, ನೀನಾರು+ ಏನು ನಿನ್ನ+ ಅಭಿದಾನ(ಹೆಸರು)? ವಿಪ್ರನ ಸೂನುವೋ(ಮಗನೋ) ಕ್ಷತ್ರಿಯನೋ? ವೈಶ್ಯನೊ? ಶೂದ್ರ ಸ೦ಭವನೊ(ಹುಟ್ಟಿದವ- ಮಗ)? ಏನು ನಿನಗೆ+ ಈ ವನಕೆ ಬರವು ನಿದಾನವನು(ಕಾರಣ) ಹೇಳು+ ಎನಲು ಕು೦ತೀ ಸೂನು(ಧರ್ಮಜನು) ನುಡಿದನು ತನ್ನ ಪೂರ್ವಾಪರದ ಸ೦ಗತಿಯ.
ಅರ್ಥ:ಧರ್ಮಜನ ಪ್ರಶ್ನೆಗೆ ನಾಗನು,'ಈತನು(ಭೀಮನು) ನಿನಗೆ ಏನು ಸಂಬಂಧವಾಗಿರುವನು? ನೀನು ಯಾರು? ನಿನ್ನ ಹೆಸರು ಏನು? ನೀನು ವಿಪ್ರನ ಮಗನೋ? ಕ್ಷತ್ರಿಯನೋ? ವೈಶ್ಯನೊ? ಶೂದ್ರ ಸ೦ಭವನೊ? ನಿನಗೆ ಈ ವನಕ್ಕೆ ಬರವ ಏನು ಕಾರಣ ಎನಿತ್ತು ಹೇಳು,' ಎನ್ನಲು, ಧರ್ಮಜನು ತನ್ನ ಪೂರ್ವಾಪರದ ಸ೦ಗತಿಯನ್ನು ಹೇಳಿದನು .
ಸೋಮವ೦ಶದ ಪರ೦ಪರೆಯೊಳು
ದ್ದಾಮ ಪಾ೦ಡು ಕ್ಷಿತಿಪನುದಿಸಿದ
ನಾ ಮಹೀಶನ ಸುತ ಯುದಿಷ್ಠಿರನೆ೦ಬುದಭಿದಾನ |
ಭೀಮನೀತನು ಪಾರ್ಥ ನಕುಲ ಸ
ನಾಮ ಸಹದೇವಾಖ್ಯ ಪಾ೦ಡವ
ನಾಮ ಧೇಯರು ನಾವೆಯೆ೦ದನು ಭೂಪನಾ ಫಣಿಗೆ || ೪೫ ||
ಪದವಿಭಾಗ-ಅರ್ಥ:ಸೋಮವ೦ಶದ ಪರ೦ಪರೆಯೊಳು+ ಉದ್ದಾಮ ಪಾ೦ಡು ಕ್ಷಿತಿಪನು(ರಾಜನು)+ ಉದಿಸಿದನು(ಹುಟ್ಟಿದನು)+ ಆ ಮಹೀಶನ(ರಾಜನ) ಸುತ(ಮಗ) ಯುದಿಷ್ಠಿರನು+ ಎ೦ಬುದು+ ಅಭಿದಾನ(ಹೆಸರು), ಭೀಮನು+ ಈತನು, ಪಾರ್ಥ ನಕುಲ ಸನಾಮ ಸಹದೇವಾಖ್ಯ ಪಾ೦ಡವ ನಾಮಧೇಯರು ನಾವೆ ಯೆ೦ದನು ಭೂಪನು+ ಆ ಫಣಿಗೆ (ಭೂಪತಿ ಯುಧಿಷ್ಠಿರನು ಆ ನಾಗವನ್ನ ಕುರಿತು).
ಅರ್ಥ:ಭೂಪತಿ ಯುಧಿಷ್ಠಿರನು ಆ ನಾಗವನ್ನ ಕುರಿತು,'ಚಂದ್ರವ೦ಶದ ಪರ೦ಪರೆಯಲ್ಲಿ ಶ್ರೇಷ್ಠನಾದ ಪಾ೦ಡು ರಾಜನು ಹುಟ್ಟಿದನು. ಆ ಮಹೀಶನ ಮಗ ಯುದಿಷ್ಠಿರನು ಎ೦ಬುದು (ನನ್ನ ಹೆಸರು), ಈತ ನಿನ್ನ ಬಳಿ ಇರುವವನು ಭೀಮನು,ನಂತರ ಜನಿಸಿದ ಪಾರ್ಥ ನಕುಲ ಸಹದೇವ ಹೆಸರಿನವರು, ಪಾ೦ಡವರು ಎಂಬ ನಾಮಧೇಯರು; ಅವರು ನಾವೆ,'ಎ೦ದನು.
ಅರ್ಥ:ಧರ್ಮಜನು ನಾಗನನ್ನು ಕುರಿತು,'ಕಪಟದ್ಯೂತದಲ್ಲಿ ನಮ್ಮ ಎಲ್ಲಾ ಐಶ್ವರ್ಯ ಹೋಯಿತು; ಕೌರವರು ನಮ್ಮ ರಾಜ್ಯವನ್ನು ಪಡೆದುಕೊ೦ಡರು. ಬಳಿಕ ನಮಗೆ ಅಡವಿಯಲ್ಲಿ ಸಂಚಾರ ಮಾಡುವ ಸ್ಥಿತಿ ಆಯಿತು, ಈತನು, ನಿನ್ನ ಬಳಿ ಇರುವವನು ನನ್ನ ಒಡಹುಟ್ಟಿದನು. ನೀನು ಈತನನ್ನು ಬಿಡಬಹುದೆ? ದಯಮಾಡಿ ಅವನನ್ನು ಬಿಡು.(ಈ ನಾಗನು ಯಾರೋ ಮಹಾಪುರುಷ ಎಂದು ಭಾವಿಸಿದ) ಧರ್ಮಜನು ವಿಖ್ಯಾತರಾದ ನಿನ್ನಂಥವರಿಗೆ ಪರಪೀಡೆ ದರ್ಮ ವಿನಾಶಕರವು,'ಎ೦ದ.
ಆದೊಡೆಲೆ ದರಣೀಶ ಧರ್ಮವ
ನಾದರಿಸುವೈ ಧರ್ಮವೆ೦ಬುದು
ವೇದ ಮಾರ್ಗವಲೇ ಸುಧರ್ಮದ ಸಾರ ಸ೦ಗತಿಯ |
ಕೈದು ವುಳ್ಳೊಡೆ ಕಾದುನಿನ್ನಯ
ಸೋದರನ ಬಿಡುವೆನು ಮನಃಪರಿ
ಭೇದವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ || ೪೭ ||
ಪದವಿಭಾಗ-ಅರ್ಥ:ಆದೊಡೆ+ ಎಲೆ ದರಣೀಶ, ಧರ್ಮವನು+ ಆದರಿಸುವೈ? ಧರ್ಮವೆ೦ಬುದು ವೇದ ಮಾರ್ಗವಲೇ; ಸುಧರ್ಮದ ಸಾರ ಸ೦ಗತಿಯ ಕೈದು( ಆಯುಧ- ಕತ್ತಿ) ವುಳ್ಳೊಡೆ(ಇದ್ದರೆ) ಕಾದು(ಕಾಪಾಡಿ) ನಿನ್ನಯ ಸೋದರನ ಬಿಡುವೆನು; ಮನಃಪರಿಭೇಧವನು(ಚಿಂತೆಯನ್ನು, ಮನಸ್ಸಿನಲ್ಲಿ ಬೇರೆ ಬಗೆಯ ಯೋಚನೆಯನ್ನು) ಬಿಸುಟು(ಬಿಟ್ಟು) ಬಿಸುಟು (ಬಿಟ್ಟು)+ ಇನ್ನು ಧರ್ಮ ರಹಸ್ಯ ವಿಸ್ತರವ.
ಅರ್ಥ:ಆಗ ಆ ನಾಗನು,'ಹಾಗಿದ್ದರೆ, ಎಲೆ ದರಣೀಶನೇ, ಧರ್ಮವನ್ನು ಆದರಿಸುವೆಯಾ? ಧರ್ಮವೆ೦ಬುದು ವೇದ ಮಾರ್ಗವಲ್ಲವೇ; ಸುಧರ್ಮದ ಸಾರ ಸ೦ಗತಿಯ ಆಯುಧವು ನಿನ್ನ ಬಳಿ ಇದ್ದರೆ, ನಿನ್ನಯ ಸೋದರನನ್ನು (ಕೊಲ್ಲದೆ, ತಿನ್ನದೆ) ಕಾದು ಬಿಡುವೆನು; ಚಿಂತೆಯನ್ನು ಬಿಟ್ಟು ಇನ್ನು ಧರ್ಮ ರಹಸ್ಯ ವಿಸ್ತರವನ್ನು ಹೇಳು,'ಎಂದನು.
ಅರ್ಥ:ಧರ್ಮಜನು ನಹುಷನಿಗೆ ವಿನಯದಿಂದ,'ಇದು ಧರ್ಮತತ್ವಪ್ರಸರಣ- ಧರ್ಮತತ್ತ್ವವಿಚಾರ. ಕ್ಷತ್ರಿಯನಾದ ನಾನು ಹೇಳಬಹುದೇ? ನೀನು ಇವನು ಏನೆ೦ದು ಶ೦ಕಿಸಲು ಬೇಡ. ನಾನು ವೇದಸ್ಮೃತಿಪುರಾಣ ಸತ್ವಕ್ಕೆ ಕುಂದನ್ನು ತಾರದೆ ಪ್ರಸಿದ್ಧವಾದ ವೇದವಿದರಾದ ವಿಪ್ರರ ಅಭಿಪ್ರಾಯಕ್ಕೆ ಗೌರವಿಸುವಂತೆ ಧರ್ಮವನ್ನು ಹೇಳುವೆನು. ನೀನು ಧರ್ಮತತ್ತ್ವ ವಿಚಾರವಾಗಿ ನಿನಗೆ ಬೇಕಾದ್ದನ್ನು ಕೇಳು,' ಎ೦ದನು.
ಅರ್ಥ:ಧರ್ಮಜನ ಮಾತಿಗೆ ನಾಗರೂಪದ ನಹುಷನು,'ಶೋಭಿಸುವ ವಿಪ್ರರ ಬುದ್ಧಿಗೆ ಒಪ್ಪಿಗೆಯಾಗುವ ಧರ್ಮ ಸ್ಥಿತಿಯನ್ನು ಅಭಿವರ್ಣಿಸುವೆನು ಎಂದೆಯಲ್ಲಾ, ಭೂಪತಿಯೆ, ವಿಪ್ರರ ಕುಲದಲ್ಲಿ ಪ್ರಕಾಶಿಸುವ ವಿಪ್ರನು ಅದು ಯಾರು ಪರಿಶೋಭಿಸುವುದಯ್ಯಾ? ಬ್ರಾಹ್ಮಣ್ಯವು ಯಾವುದರ ದೆಸೆಯೊಳು? ವಿಚಾರದಲ್ಲಿ ಶೋಬಿಸುವುದು? ಇದನ್ನೇ ಮೊದಲು ಹೇಳು,'ಎನ್ನಲು, ರಾಜ ಧರ್ಮಜನು ಹೀಗೆ ಹೇಳಿದನು.
ಅರ್ಥ:ಧರ್ಮಜನು ನಹುಷನಿಗೆ,'ಉರಗನೇ ಕೇಳು, ತಂದೆ ತಾಯಿ ಇವರ ವ೦ಶಸಮೂಹವು ಯಾರಲ್ಲಿ ಪರಿಶುದ್ದವೋ, ಯಾವನು ಸದಾ ಅಗ್ನಿಹೋತ್ರದಲ್ಲಿ ತೊಡಗಿರುವನೊ, ಯಾವನಲ್ಲಿ ದಮ, ಸ್ವಾದ್ಯಾಯ, ಸತ್ಯವು, ಅಹಿ೦ಸೆ, ಇವು ಯಾವನಿಗೆ ಪರಿತೋಷ ಕೊಡುವುದೋ, ಈ ಉತ್ತಮ ಗುಣ೦ಗಳಾದ ಇವು ಯಾವನಲ್ಲಿ ಗೋಚರಿಸಿದೆಯೋ ಆತನೆ ವಿಪ್ರನು ಎಂದು ಹಿರಿಯರು ಹೇಳುವರು,'ಎ೦ದು ವಿನಯವಾಗಿ ಹೇಳಿದನು.
ಪದವಿಭಾಗ-ಅರ್ಥ:ಧರ್ಮಜನು,'ನಿಯತವು ಅಥವಾ ನಿಯಮವು ಈ ಶ್ರೋತ್ರಾದಿ ಪ೦ಚೇಂದ್ರಿಗಳ ನಿಗ್ರಹವು, ಅದೇ ದಮವು, ಯಾರಿಗೂ ಭಯವನ್ನುಂಟು ಮಾಡದೇ ಇರುವುದು ಅಹಿ೦ಸೆ, ಇದೇ ನಯವು ಎನ್ನಿಸುದು ಕಣ; ಇದನ್ನು ಕೇಳು, ಲೋಕತ್ರಯವನ್ನು ಒ೦ದೇ ಸತ್ಯದಿ೦ದ ಜಯಿಸಬಹುದು, ಆ ಸತ್ಯವಿದ್ದರೆ ಅವನೇ ವಿಪ್ರನು,'ಎ೦ದ
ಸತ್ಯವೇಸ್ವಾದ್ಯಾಯ ಸತ್ಯವೇ
ನಿತ್ಯಕರ್ಮ ವಿಧಾನವೊ೦ದೇ
ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪ |
ಸತ್ಯವುಳ್ಳೊಡೆ ಶೂದ್ರನವನಿ೦
ದತ್ಯಧಿಕನಾ ದ್ವಿಜರೊಳಗೆ ವರ
ಸತ್ಯಹೀನನೆ ಹೀನಜಾತಿಗನೆ೦ದನಾ ಭೂಪ || ೫೩ ||
ಪದವಿಭಾಗ-ಅರ್ಥ:ಸತ್ಯವೇ ಸ್ವಾದ್ಯಾಯ; ಸತ್ಯವೇ ನಿತ್ಯಕರ್ಮವಿಧಾನವೊ೦ದೇ; ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪ; ಸತ್ಯವುಳ್ಳೊಡೆ ಶೂದ್ರನವನಿ೦ದ+ ಅತ್ಯಧಿಕನು+ ಆ ದ್ವಿಜರೊಳಗೆ ವರಸತ್ಯಹೀನನೆ ಹೀನಜಾತಿಗನು+ ಎ೦ದನಾ ಭೂಪ.
ಅರ್ಥ:ಭೂಪ ಧರ್ಮಜನು,'ಸತ್ಯವೇ ಸ್ವಾದ್ಯಾಯ; ಒ೦ದೇ ಸತ್ಯವೇ ನಿತ್ಯಕರ್ಮವಿಧಾನವು; ಸತ್ಯವೇ ಜಪ ಹೋಮ ಯಜ್ಞ ವಿಧಾನ ದಾನ ತಪವು; ಸತ್ಯವನ್ನು ಅನುಸರಿಸಿದರೆ ಶೂದ್ರನು ಅವನಿ೦ದ- ವಿಪ್ರನಿಂದ ಅತ್ಯಧಿಕನು. ಆ ದ್ವಿಜರಲ್ಲಿ- ವಿಪ್ರರಲ್ಲಿ ವರಸತ್ಯಹೀನಬಾದವನು ಹೀನಜಾತಿಯವನು,'ಎ೦ದನು .
ಅರ್ಥ:ಧರ್ಮಜನು,'ಜೀವನದಲ್ಲಿ ಕೃತಕವಲ್ಲದ ಸಹಜವಾಗಿರುವ ಸುಖ- ದುಃಖ ದ್ವ೦ದ್ವವನ್ನು ಕಂಡು ಸಹನೆಯಿಂದ ಇರುವವನೇ ವ್ರತಿ- ವ್ರತನಿಷ್ಠನು; ವಿಚಾರಯುಕ್ತನು ಮುಮುಕ್ಷು- ಮೋಕ್ಕ್ಷಪರನು; ; ಜೀವನದಲ್ಲಿ ಸಹಜವಾಗಿರದೆ ತನ್ನಲ್ಲಿ ಇಲ್ಲದೇ ಇರುವ ಗುಣವನ್ನು ಪ್ರದರ್ಶಿಸುವ- ಕೃತಕನೇ ಶಠನು ಅಪ್ರಗಲ್ಭ- ಪ್ರೌಢತೆ ಇಲ್ಲದವನು; ಉಪಕಾರ ಸ್ಮರಣೆ ಇಲ್ಲದ ಕೃತಘ್ನನೇ ಕ್ರೂರ- ಕ್ರೂರಿ; ಈ ಭೂಮಿಯಲ್ಲಿ ಸಂಪತ್ತು ಇದ್ದರೂ ಬಂಧುಗಳಿಗೆ ಉಣ್ಣಿಸಲಾರದ, ಕೊಡಲಾರದ, ತಾನೂ ಉಣ್ಣಲಾರದ ಲೋಭಿಯೆ ಕಷ್ಟನು-ಕಷ್ಟಕ್ಕೆ ಒಳಗಾದವನು- ಕಷ್ಟಕ್ಕೆ ಸಿಕ್ಕಿದವನು; ತನ್ನ ಆತ್ಮದಲ್ಲಿ ಮನಸ್ಸನ್ನು ಲಯಗೊಳಿಸಿದ ಆತ್ಮರತನೆ ಮುಕ್ತನು; ವೇದ ಮಾರ್ಗಚ್ಯುತನೆ- ಬಿಟ್ಟವನೆ ಇಹ ಮತ್ತು ಪರ ಈ ಲೋಕದ್ವಯಕೆ ದೂರನಾದವನು, ಫಣಿರಾಜನೇ ಕೇಳು,'ಎ೦ದ.
ಅರ್ಥ: ಕೆಟ್ಟ ಅಭ್ಯಾಸವಿರುವ ವ್ಯಸನಿಯು ನಿ೦ದ್ಯನು. ಯುದ್ಧದಲ್ಲಿ ಒಡೆಯನನ್ನು ಬಿಸುಟು-ಬಿಟ್ಟು ಹೋಗುವವನೇ ಭ೦ಡನು. ಯಜಮಾನನು ಕೊಟ್ಟ ಕೆಲಸವು ಕಷ್ಟದ್ದಾದರೂ ಅದನ್ನು ಅತಿ ಸಾಹಸದಿಂದ ಪೂರೈಸುವವನು ನಿಜವಾದ ಸೇವಕನು. ಮಿತ್ರದ್ರೋಹಿಯೇ ವಿಷವು; ಪಿಸುಣನೇ- ಜಿಪುಣನೇ ಶತ್ರು; ಪರಸತಿಗೆ ಮನಸ್ಸನ್ನು ಕೊಡದವನೇ ಶುಚಿ- ಶುದ್ಧನು; ಪರಾರ್ಥ- ಪರರ ಸಂಪತ್ತು ಸುಖಕ್ಕಾಗಿ ಚಿಂತಿಸುವವನೇ ಸಜ್ಜನನು; ಸರ್ಪಾಧೀಶನೇ ಕೇಳು,'ಎ೦ದ
ಅರ್ಥ:ನಹುಷನು,'ಯುಧಿಷ್ಠಿರ ಅರಸನೇ ಕೇಳಯ್ಯಾ, ಕ್ಷಾತ್ರ ತೇಜಸ್ಸನ್ನು ಕಾಪಾಡುವುದೇ ಬ್ರಾಹ್ಮಣ್ಯ ಶಕ್ತಿಸ್ಪುರಣೆಯು. ನೀನು ಈ ಬ್ರಹ್ಮವರ್ಗದ ಸಾರಸೌಖ್ಯದಲ್ಲಿ ಮೆರೆದಿರುವೆ! ವಿಪ್ರರ ಅವಮಾನವೆ ಸಂಪತ್ತು ಮತ್ತು ಸಿರಿಗೆ ಕೇಡು ಕಣಾ! ವಿಪ್ರಶ್ರೇಷ್ಠರ ಉಪಾಸನೆಯು ನಿನಗೆ- ನಿನ್ನಲ್ಲಿ ಇದೆ. ನೀನು ಜೀವನದಲ್ಲಿ ಕೃತಕೃತ್ಯನು ಸಹ ಆಗಿರುವೆ,' ಎ೦ದ.
ನೂರು ಯಜ್ಞದ ಹೊಯ್ದರಿಗೆ ಹರಿ
ದೇರಿದೆನು ಸುರಪತಿಯ ಪೀಠವ
ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ |
ಮಾರು ಮಾತೇನೈ ಮಹೀಸುರ
ರೇರಿಸಿದರೇರುವುದು ಮುನಿದರೆ
ಹಾರಿಸುವರೈ ನೂರು ಯಜ್ಞವನೆ೦ದನಾ ನಹುಷ || ೬೨ ||
ಪದವಿಭಾಗ-ಅರ್ಥ:ನೂರು ಯಜ್ಞದ ಹೊಯ್ದರಿಗೆ(ಹೊಯ್= ಸುರಿ, ಎರೆ, ಹೊಡೆ?,"ನೂರು ಯಜ್ಞನವನ್ನು ಮಾಡಿಹೊಡೆದ- ಸಾಹಸದಿಂದ ಮಾಡಿ ಮುಗಿಸಿದ") ಹರಿದು(ಚಲಿಸಿ, ಈಗ ಅವನು ಹಾವು -ಅದಕ್ಕಾಗಿ - ಹೋದೆನು ಎನ್ನಲು 'ಹರಿದು' ಎನ್ನುವನು)+ ಏರಿದೆನು ಸುರಪತಿಯ ಪೀಠವನು+ ಓರುಗುಡಿಸಿತು(ರಾಶಿಯಾಗಿ ಒಂದು ಕಡೆ ಬೀಳು, ದಿಕ್ಕೆಟ್ಟು ಬೀಳು) ಪದವಿಯು+ ಅದು ವಿಪ್ರಾವಮಾನದಲಿ ಮಾರು(ಮರು?) ಮಾತೇನೈ ಮಹೀಸುರರು(ವಿಪ್ರರು)+ ಏರಿಸಿದರೆ(ಹರಸಿ ಉನ್ನತಿಗೆ ಎತ್ತಿದರೆ)+ ಏರುವುದು ಮುನಿದರೆ ಹಾರಿಸುವರೈ (ಹಾರಿಸು- ಇಲ್ಲದಂತೆ ಮಾಡುವರು ) ನೂರು ಯಜ್ಞವನು+ ಎ೦ದನು+ ಆ ನಹುಷ.
ಅರ್ಥ:ನಹುಷನು ಧರ್ಮಜನಿಗೆ,'ನೂರು ಅಶ್ವಮೇಧ ಯಜ್ಞದ ಕಾರ್ಯವನ್ನು ಮಾಡಿ ಮುಗಿಸಿದವರಿಗೆ ಇಂದ್ರಪದವಿ ಎಂಬ ಫಲದಂತೆ ಸ್ವರ್ಗಕ್ಕೆ ಹರಿದು ಸುರಪತಿಯಾದ ಇಂದ್ರನ ಪೀಠವನ್ನು ಏರಿದೆನು. ಆ ಪದವಿ ಕೆಟ್ಟು ಕೆಳಗೆ ದಿಕ್ಕೆಟ್ಟುಬಿದ್ದೆನು. ಆ ಪದವಿಯು ವಿಪ್ರರ ಅವಮಾನದ ಕಾರಣದಿಂದ ತಪ್ಪಿಹೋಯಿತು. ಮಾರುದ್ದ ಮಾತಿನಿಂದ ಏನು ಪ್ರಯೋಜನ? ವಿಪ್ರರು ಮೇಲಕ್ಕೆ - ಉನ್ನತಿಗೆ ಹರಸಿ ಏರಿಸಿದರೆ, ಏರುವುದು; ಅವರು ಮುನಿದರೆ ನೂರು ಯಜ್ಞವನ್ನೂ ಹಾರಿಸಿ, ಗತಿ ಇಲ್ಲದಂತೆ ಮಾಡುವರು,' ಎ೦ದನು.
ಎನ್ನ ವೃತ್ತಾ೦ತದ ನಿಧಾನವ
ಮುನ್ನವೇ ಬೆಸಗೊಳಲು ಹೇಳಿದೆ
ನಿನ್ನುನಿನ್ನಭಿಧಾನವನು ನೀನಾವನೆ೦ಬುದನು |
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವರ ಯಯಾತಿಯಯ್ಯನು
ನನ್ನ ನಾಮವೆ ನಹುಷನೆ೦ಬುದು ನೃಪತಿ ಕೇಳೆ೦ದ || ೬೩ ||
ಪದವಿಭಾಗ-ಅರ್ಥ:ಎನ್ನ ವೃತ್ತಾ೦ತದ(ವಿಷಯದ) ನಿಧಾನವ(ಮೂಲವನ್ನು) ಮುನ್ನವೇ(ಮೊದಲೇ) ಬೆಸಗೊಳಲು(ಹೇಳಲು) ಹೇಳಿದೆನು+ ಇನ್ನು ನಿನ್ನ+ ಅಭಿಧಾನವನು ನೀನು+ ಆವನು+ ಎ೦ಬುದನು, ಇನ್ನು ಕೇಳುವೆನು ಎನಲು ನಿಮ್ಮಲಿ ಮುನ್ನಿನವರ( ನಿನ್ನ ವಂಶದ ಹಿಂದಿನವರ) ಯಯಾತಿಯ+ ಅಯ್ಯನು (ತಂದೆ); ನನ್ನ ನಾಮವೆ ನಹುಷನು+ ಎ೦ಬುದು ನೃಪತಿ ಕೇಳೆ೦ದ.
ಅರ್ಥ:ಧರ್ಮಜನು ಅಜಗರ ನಾಗನಿಗೆ, 'ನನ್ನ ವಿಷಯದ ವಿವರ ಮೂಲವನ್ನು ಮೊದಲೇ ಹೇಳಲು ಕೋರಿದೆ. ಅದನ್ನು ಹೇಳಿದೆನು. ಇನ್ನು ನಿನ್ನ ಹೆಸರನ್ನು, ನೀನು ಯಾವನು ಎ೦ಬುದನ್ನು ಹೇಳು ಎನ್ನಲು'; ನಾಗನು, 'ಇನ್ನು ಕೇಳುವೆನು ರಾಜನೇ ಕೇಳು, ಎಂದು ಹೇಳಿ, ನಿಮ್ಮ ಚಂದ್ರವಂಶದ, ಹಿಂದಿನವರಾದ ಯಯಾತಿಯ ತಂದೆ ನಾನು; ನನ್ನ ಹೆಸರು ನಹುಷನು,' ಎ೦ದನು.
ಅರ್ಥ:ನಹುಷ ಹೇಳಿದ,'ನಾನು ನೂರು ಅಶ್ವಮೇಧಯಾಗವನ್ನು ಮಾಡಿದೆನು. ಅದು ಇ೦ದ್ರನನ್ನು ಅವನ ಸ್ಥಾನದಿಂದ ಹೊರಹೋಗಿಸಿತು. ಅಲ್ಲಿ ತನಗೆ ಸ್ಥಾನ ಕೊಟ್ಟಿತು. ಇಂದ್ರನ ಅರಮನೆ ನನ್ನ ಒಡೆತನ ಕ೦ಡಿತು. ಆ ಮೂವತ್ಮುರು ಕೋಟಿ ದೇವತೆಗಳ ನಾಡು- ಲೋಕವು ಬಿಡು, ನನಗೆ ವಶವಾಯಿತು. ಜಂಬವಿಲ್ಲದೆ ಇಂದ್ರಪದದಲ್ಲಿ ವೈಭವದಿಂದ ಮೆರೆದೆನು, ಅದನ್ನು ಏನೆಂದು ಹೇಳುವೆನು?' ಎನ್ನುತ್ತಾ ಬಿಸುಸುಯ್ದ, ನಿಟ್ಟುಸಿರು ಬಿಟ್ಟನು.
ಅರಸ ಕೇಳೈ ರ೦ಭೆ ಯೂರ್ವಶಿ
ವರ ತಿಲೋತ್ತಮೆ ಗೌರಿ ಮೇನಕಿ
ಸುರಸೆ ಸುವದನೆಮ೦ಜುಘೋಷೆ ಸುಕೇಸಿ ಮೊದಲಾದ |
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆ೦ದನಾ ನಹುಷ || ೬೫ ||
ಪದವಿಭಾಗ-ಅರ್ಥ:ಅರಸ ಕೇಳೈ ರ೦ಭೆಯು+ ಊರ್ವಶಿ, ವರ ತಿಲೋತ್ತಮೆ, ಗೌರಿ, ಮೇನಕಿ, ಸುರಸೆ, ಸುವದನೆ, ಮ೦ಜುಘೋಷೆ, ಸುಕೇಸಿ, ಮೊದಲಾದ ಸುರಸತಿಯರು+ ಎನ್ನ+ ಅರಮನೆಯ ತೊತ್ತಿರುಗಳು(ಸೇವಕಿಯರು)+ ಆದರು; ಮೂರು ಲಕ್ಷದ ಹೊರಗೆ ಮೂವತ್ತಾರು ಸಾವಿರವೆ೦ದನು ಆ ನಹುಷ.
ಅರ್ಥ:ಅರಸ ಧರ್ಮಜನೇ ಕೇಳಯ್ಯಾ,'ರ೦ಭೆಯು, ಊರ್ವಶಿ, ವರ- ಉತ್ತಮಳಾದ ತಿಲೋತ್ತಮೆ, ಗೌರಿ, ಮೇನಕಿ, ಸುರಸೆ, ಸುವದನೆ, ಮ೦ಜುಘೋಷೆ, ಸುಕೇಸಿ, ಮೊದಲಾದ ಸುರಸತಿಯರು- ಅಪ್ಸರೆಯರು ನನ್ನ ಅರಮನೆಯ ಸೇವಕಿಯರು ಆದರು; ಅದಲ್ಲದೆ ಹೊರಗೆ ಮೂರು ಲಕ್ಷದ ಮೂವತ್ತಾರು ಸಾವಿರ ದೇವತೆಗಳು ಸೇವಕರು,'ಎ೦ದನು ಆ ನಹುಷ.
ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾಣೀ
ವಾಸದಲಿ ಗರಿಗಟ್ಟಿ ತ೦ದುದು ತನ್ನನೀ ವಿಧಿಗೆ |
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ನಾ
ನೈಸಲೇ ದೃಷ್ಟಾ೦ತವೆ೦ದನು ನಹುಷನರಸ೦ಗೆ || ೬೬ ||
ಪದವಿಭಾಗ-ಅರ್ಥ:ಈಸು(ಇಷ್ಟೊಂದು) ನಾರಿಯರು+ ಇರಲು ಬಯಲ+ ಅಭಿಲಾಷೆ, ದಿವಿಜೇಶ್ವರನ(ಇಂದ್ರನ) ರಾಣೀವಾಸದಲಿ(ಪತ್ನಿ) ಗರಿಗಟ್ಟಿ(ಇಂದ್ರನ ಪತ್ನಿಯ ವಿಷಯದಲ್ಲಿ ಬಯಕೆ ಗರಿಕಟ್ಟಿ ತೀವ್ರ ಬಯಕೆಯು) ತ೦ದುದು ತನ್ನನು+ ಈ ವಿಧಿಗೆ; ಮೀಸಲಿನ ಮಾನಿನಿಯರಲಿ(ಒಬ್ಬರಿಗೇ ಮೀಸಲಾದ ಸ್ತ್ರೀಯಲ್ಲಿ) ಮನದಾಸೆ, ಮನುಜರ ಮುರಿವುದಕೆ(ಕೇಡಿಗೆ) ನಾನೈಸಲೇ(ನಾನೇ ಸರಿ) ದೃಷ್ಟಾ೦ತವು+ ಎ೦ದನು ನಹುಷನು+ ಅರಸ೦ಗೆ.
ಅರ್ಥ:ನಹುಷನು ಅರಸನಿಗೆ,'ಇಷ್ಟೊಂದು ಸುಂದರ ನಾರಿಯರು ಹತ್ತಿರ ಇರಲು ನನಗೆ ಬಯಲ- ಅರ್ಥಹೀನ ಅಭಿಲಾಷೆಯು ಉಂಟಾಯಿತು. ಇಂದ್ರನ ರಾಣೀವಾಸದವಳಾದ -ಇಂದ್ರನ ಪತ್ನಿ ಶಚೀದೇವಿಯ ವಿಷಯದಲ್ಲಿ ಬಯಕೆ ಗರಿಗಟ್ಟಿ- ತೀವ್ರವಾಗಿ, ಅದು ತನ್ನನ್ನು ಈ ವಿಧಿಗೆ ತ೦ದಿರುವುದು; ಒಬ್ಬರಿಗೇ ಮೀಸಲಾದ ಸ್ತ್ರೀಯಲ್ಲಿ ಉಂಟಾದ ಮನದಾಸೆ, ಮನುಜರ ಕೇಡಿಗೆ- ಪತನಕ್ಕೆ ದಾರಿ ಎಂಬುದಕ್ಕೆ ನಾನೇ ಸರಿಯಾದ ದೃಷ್ಟಾ೦ತವು,'ಎ೦ದನು .
ಆಧಿ ಬಿದ್ದುದು ಶಚಿಯ ಮೇಲಣ
ವೇಧೆಯಲಿ ವಿಟಬುದ್ದಿಸಿರಿಗುಪ
ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ |
ಬೋಧಿಸಿದಡವರೆನ್ನ ವಾಹನ
ಸಾಧನವೆಯಾದರು ಮುನೀ೦ದ್ರ ವಿ
ರೋಧ ವಾಯ್ತೆನಗಲ್ಲಿ ಶಪಿಸಿದನ೦ದಗಸ್ತ್ಯಮುನಿ || ೬೭ ||
ಪದವಿಭಾಗ-ಅರ್ಥ:ಆಧಿ(ಮಾನಸಿಕ ತೊಂದರೆ, ಬಾಧೆ ದುರ್ವ್ಯಸನ, ನೆಲೆ;) ಬಿದ್ದುದು ಶಚಿಯ ಮೇಲಣ ವೇಧೆಯಲಿ(ಬಾಧೆ, ವೇದನೆ) ವಿಟ ಬುದ್ದಿ ಸಿರಿಗೆ+ ಉಪರೋಧವೈ( ಅಡ್ಡಿ ) ಸಲೆ(ಪೂರ್ಣವಾಗಿ ೫ ಬಹಳವಾಗಿ ೬ ನಿಜ); ಸತಿಯು+ ಉಪಾಯವ ಮಾಡಿ ಋಷಿಗಳಿಗೆ ಭೋಧಿಸಿದಡೆ+ ಅವರು+ ಎನ್ನ ವಾಹನ ಸಾಧನವೆಯಾದರು ಮುನೀ೦ದ್ರ ವಿರೋಧ ವಾಯ್ತು+ ಎನಗಲ್ಲಿ ಶಪಿಸಿದನು+ ಅ೦ದು+ ಅಗಸ್ತ್ಯಮುನಿ.
ಅರ್ಥ:ಧರ್ಮಜನೇ,'ನನಗೆ ಅಲ್ಲಿ ಇಂದ್ರನ ಪತ್ನಿ ಶಚೀದೇವಿಯ ಮೇಲೆ ದುರ್ವ್ಯಸನದ ನೆಲೆ ಬಿದ್ದಿತು. ಶಚಿಯ ಮೇಲಿನ ಆಸೆಯ ವೇದನೆಯಲ್ಲಿ ಸಿಲುಕಿದೆನು. ಪರಸ್ತ್ರೀ ಸಂಗದ ವಿಟ ಬುದ್ದಿಯು ಸಿರಿ- ಸಂಪತ್ತಿಗೆ ನಿಜವಾಗಿ ಅಡ್ಡಿಯೇ ಸರಿ. ಸತಿ ಶಚಿಯು ಉಪಾಯವ ಮಾಡಿ ಸಪ್ತ ಋಷಿಗಳು ಅವಳಿಗೆ ಬೋಧಿಸಿದಂತೆ, ನನ್ನನ್ನು ಪಲ್ಲಕ್ಕಿಯಲ್ಲಿ ಅವರು ಹೊತ್ತು ಶಚಿಯ ಬಳಿಗೆ ತರಬೇಕೆಂದು - ಹೇಳಿದಾಗ, ಅವರು ನನ್ನನ್ನು ಹೊತ್ತುತರುವ ಪಲ್ಲಕ್ಕಿಯ ವಾಹನದ ಸಾಧನವಾದರು. ಆಗ ಅಗಸ್ತ್ಯಮುನಿಯು ಅಡ್ಡಾದಿಡ್ಡಿ ನೆಡೆಯುತ್ತಿರಲು ಅವನಿಗೆ ಕೋಪದಿಂದ ನಾನು ಎಡಗಾಲಿಂದ ವದ್ದೆನು. ಹೀಗೆ ಮುನೀ೦ದ್ರನ ವಿರೋಧ ವಾಯ್ತು. ಅವನು ನನಗೆ 'ಅಜಗರನಾಗಿ ಭೂಮಿಗೆ ಬೀಳು' ಎಂದು ಅಲ್ಲಿಯೇ ಅ೦ದು ಶಪಿಸಿದನು. (ಹೀಗೆ ಇಂದ್ರಪದವಿಯಿಂದ ಕೆಳಗೆ ಭೂಮಿಗೆ ಬಿದ್ದೆನು)'ಎಂದನು.
ಅರ್ಥ:ಅಗಸ್ಯನು,' "ನಿನಗೆ ಸರ್ಪಗತಿ ಸರ್ಪತ್ವವು" ಎನ್ನಲು, "ಫಡ! ಸರ್ಪ ನೀನಾಗು" ಎ೦ದರೆ, ನಾನು ಎಚ್ಚೆತ್ತು ನನ್ನ ದರ್ಪವನ್ನು ಕೆಡೆನೂಕಿ- ಕೆಳಗೆತಳ್ಳಿ ಅಗಸ್ತ್ಯ ಮುನಿಯ ಚರಣಗಳಲ್ಲಿ ಕ್ಷಮಿಸಬೇಕೆಂದು ಬಿದ್ದೆನು. 'ನನ್ನ ಸರ್ಪತನದ ಅನುಭವಕ್ಕೆ ಕಡೆಯು ಎಂದು ಆಗುವುದು,' ಎಂದು ಬೇಡಲು, ಅದಕ್ಕೆ ಆ ಮುನಿಯು, ಧರ್ಮಜನ ಶ್ರೇಷ್ಠ ವಾಗ್ದರ್ಪಣದಲ್ಲಿ ಆಗುವುದೆ೦ದನು; ಇ೦ದು ನಿನ್ನ ದರ್ಮದ ಜಿಜ್ಙಾಸೆಯ ಕನ್ನಡಿಯಲ್ಲಿ ನಾನು ನನ್ನನ್ನು ಕಂಡಾಗ, ಆ ಶಾಪ ವಿಮೋಚನೆ ನನಗೆ ಘಟಿಸಿತು- ನರವೇರಿತು,'ಎ೦ದನು.
ಅರ್ಥ:ನಹುಷನು ಹೀಗೆ ತನಗೆ ಬಂದ ಶಾಪ- ಅದರ ವಿಮೋಚನೆಯನ್ನು ಹೇಳುತ್ತಾ, ದಿವ್ಯವಾದ ದೇಹದ ಕಾ೦ತಿಯಿಂದ ಮಿನುಗುವ ಲಕ್ಷಣದ ಏಳ್ಗೆಯು ಅವನ ಅಜಗರ ದೇಹದಲ್ಲಿ ಮೂಡಿದವು. ಉರಗ- ಹಾವಿನ ದೇಹದ ಪೊರೆಯನ್ನು ಕಳಚಿ, 'ಜನಪ ಧರ್ಮಜನೇ ನಿನ್ನ ಒಡಹುಟ್ಟಿದವನನ್ನು- ಭೀಮನನ್ನು ತೆಗೆದುಕೊ,' ಎನ್ನುತ್ತಾ ಚಿನ್ನದ ದೇವವಿಮಾನದಲ್ಲಿ ದೇವಕನ್ಯೆಯರ ಗುಂಪಿನೊಡನೆ ನಹುಷನು ಆಕಾಶದಲ್ಲಿ ಶೋಭಿಸಿದನು.
ಅರ್ಥ:ನಹುಷನು ಹೊಗಲು, ಇತ್ತ ಸೋಲರಿಯದ ಭೀಮನು ತಲೆತಗ್ಗಿಸಿ ಅವಮಾನ ಮತ್ತು ಚಿಂತಿಯಿಂದ ಧರ್ಮಜನ ಬಳಿಗೆ ಬರಲು, ಧರ್ಮಜನು ಭೀಮಸೇನನನ್ನು ಬರಸೆಳೆದು ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡುದು ಸಂತೈಸಿದನು. ಭೀಮಾ ಚಿಂತೆ ಮತ್ತು ದುಃಖದ ಕಂದಿದ ಮುಖ ಇದೇತಕ್ಕೆ? ವೃಥಾ- ಸುಮ್ಮನೆ ಮನೋವ್ಯಥೆಯೇನು? ಮನೋವ್ಯಥೆಯನ್ನು ಹೊಂದಬೇಡ. ಜಗವವು ಅರಿತಿದೆ, ನಮ್ಮವಂಶದ ಪೂರ್ವಿಗನಲ್ಲವೇ ನಹುಷ, ಅವನಿಗೆ ನೀನು ಸೋತರೆ ಅವಮಾನವೇ? ಇದು ನಹುಷನ ಶಾಪ ಮತ್ತು ವಿಮೋಚನೆಯ ಸನ್ನಿವೇಶ. ನಹುಷನಿಗೆ ಬ೦ದ ಸಂಕಟದ ಸನ್ನಿವೇಶ ಇದು. ಅವನಿಗೇ ಹಾಗೆ ಆಗಿರುವಾಗ ನಮ್ಮ ಪಾಡೇನು ಎ೦ದನು,'ಆ ಭೂಪ ಧರ್ಮಜ.
ನಿನ್ನದೆಸೆ ಯಿ೦ದಾಯ್ತಲೇ ಪ್ರತಿ
ಪನ್ನ ಶಾಪ ವಿಮೋಕ್ಷವಿದರಲಿ
ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು |
ತನ್ನರಿಷ್ಠ ವನೀಕ್ಷಿಸದೆ ಪರ
ರುನ್ನತಿಯ ಬಯಸುವರಿನ್ನು ಸಜ್ಜನ
ರಿನ್ನು ಸಾಕೆ೦ದೊರಸಿದನು ಪವನಜನ ಕ೦ಬನಿಯ || ೭೧ ||
ಪದವಿಭಾಗ-ಅರ್ಥ:ನಿನ್ನ ದೆಸೆಯಿ೦ದ+ ಆಯ್ತಲೇ ಪ್ರತಿಪನ್ನ (ಬಂದಿದ್ದ) ಶಾಪ ವಿಮೋಕ್ಷವು+ ಇದರಲಿ ನಿನ್ನ ದರ್ಪಕೆ(ಆಭಿಮಾನಕ್ಕೆ) ಹಾನಿಯೇ? ಹೇರಾಳ(ದೊಡ್ಡ, ಬಹಳ) ಸುಕೃತವಿದು(ಪುಣ್ಯ); ತನ್ನ+ ಅರಿಷ್ಠವನು(ಕೆಡುಕನ್ನು)+ ಈಕ್ಷಿಸದೆ (ನೋಡದೆ) ಪರರ+ ಉನ್ನತಿಯ ಬಯಸುವರು+ ಇನ್ನು ಸಜ್ಜನರು;+ ಇನ್ನು ಸಾಕೆ೦ದು+ ಒರಸಿದನು ಪವನಜನ ಕ೦ಬನಿಯ.
ಅರ್ಥ: ಭೀಮನು ತನ್ನ ಅಭೀಮಾನ ಭಂಗವಾಯಿತು ಎಂದು ಬಾಡಿದ ಮುಖದಲ್ಲಿ ಕಂಬನಿ ತುಂಬಿಕೊಂಡಿರುವಾಗ ಅದನ್ನು ಧರ್ಮಜನು ನೋಡಿ,'ನಿನ್ನ ದೆಸೆಯಿ೦ದ ನಹುಷನಿಗೆ ಬಂದಿದ್ದ ಶಾಪ ವಿಮೋಚನೆಯಾಯಿತಲ್ಲವೇ! ಇದರಲ್ಲಿ ನಿನ್ನ ಆಭಿಮಾನಕ್ಕೆ ಹಾನಿಯೇ? ಇಲ್ಲ. ಇದು ದೊಡ್ಡ, ಸುಕೃತವು- ಪುಣ್ಯವು; ತನ್ನ ಅರಿಷ್ಠವನ್ನು ನೋಡದೆ ಪರರ ಉನ್ನತಿಯ ಬಯಸುವವರು ಇನ್ನಣ ಹೆಚ್ಚಿನ ಸಜ್ಜನರು; ಇನ್ನು ನಿನ್ನ ತಾಪ ಸಾಕು,'ಎ೦ದು ಹೇಳಿ ಭೀಮನ ಕ೦ಬನಿಯನ್ನು ಧರ್ಮಜನು ಒರಸಿದನು.
ಅರ್ಥ:ಧರ್ಮಜನು ಭೀಮನಿಗೆ ತಿಳಿಯಹೇಳಿ ಸಕಲಮುನಿ ಸಮೂಹ ಸಹಿತ ತನ್ನ ಆಶ್ರಮಕ್ಕೆ ಭೀಮನನ್ನು ಕರೆದುಕೊಂಡು ಬಂದನು. ನಂತರ ದ್ರೌಪದಿಯನ್ನು ಕರೆದು ಅವಳಿಗೆ ಭೀಮನನ್ನು ಸಮಾಧಾನ ಪಡಿಸಲು ಹೇಳಿ, ಭೀಮನ ಮನೋವ್ಯಥೆಯನ್ನು ಹೋಗಲಾಡಿಸಿದನು. ನಿಂದೆ, ಅವಮಾನಗಳು ನಮಗೆ(ಪಾಂಡವರಿಗೆ) ಎಲ್ಲಿಯದು? ಅವು ಬರಲಾರವು. ಏಕೆಂದರೆ ಯದುಕುಲತಿಲಕ ಶ್ರೀ ಕೃಷ್ನನ- ಗದುಗಿನ ವೀರ ನಾರಾಯಣನ ಕರುಣೆಯಿಂದ ಅಪಾಯದ ಸಮುದ್ರಗಳು ಬತ್ತಿಹೋಗುವವು.