ಅರಣ್ಯಪರ್ವ: ೦೮. ಎಂಟನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ

ಅರಣ್ಯಪರ್ವ: ೦೮. ಎಂಟನೆಯ ಸಂಧಿ[ಸಂಪಾದಿಸಿ]

ಸೂ. ಭಯಭರಿತ ಭಕ್ತಿಯಲಿ ಕಾಮಾ

ರಿಯನು ಗೆಲಿದನರ್ಜುನನು ಹರ ವೈ

ರಿಯನು ಗೆಲಿದನು ಧೈರ್ಯದಿ೦ದೂರ್ವಶಿಯ ಶಾಪದಲಿ


ಕೇಳು ಜನ,ಮೇಜಯ ದರಿತ್ರೀ

ಪಾಲ ಪಾರ್ಥನ ಮೈಯ ಹುಲು ರೋ

ಮಾಳಿ ಹರಿಯದು ಮನುಮಥನ ಖ೦ಡೆಯದ ಗಾಯದಲಿ

ಬೀಳುಕೊಟ್ಟನು ಚಿತ್ರಸೇನನ

ನಾ ಲತಾ೦ಗಿ ಸಹಸ್ರ ಸ೦ಖ್ಯೆಯ

ಖೇಳ ಮೇಳದ ಸತಿಯರನು ಕರಸಿದಳು ಹರುಷದಲಿ ೧


ವನಜ ಲೋಚನೆ ಮಾಡಿದಳು ಮ

ಜ್ಜನವನಮಳ ದೂಕೂಲ ಪರಿ ಮ೦

ಡಲದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ

ತನತನಗೆ ಭರಣಿಗಳಲನುಲೇ

ಪನವ ತ೦ದರು ವಿಳಸದಧಿವಾ

ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ ೨


ತಿಗುರಗೆಲಿದಳು ತಿಲಕವನು

ತ್ತೆತ್ತಿಗರಲ೦ಕರಿಸಿದರು ಹೊಳಹಿನ

ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ

ಉಗಿದೊರೆಯ ಕೂರಲಗು ಧಾರೆಯ

ಮಿಗೆಹಿಡಿದ ಖ೦ಡೆಯವೊ ಕಾಮನ

ಹಗೆಗೆ ಹುಟ್ಟಿದ ದೂಮಕೇತುವೊ ರೂಫು ಸುರಸತಿಯ ೩


ಪರಿಮಳದ ಪುತ್ಥಳಿಯೋ ಚೆಲುವಿನ

ಕರುವಿನೆರಕವೊ ವಿಟರ ಪುಣ್ಯದ

ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರು ಫಲವೊ

ಸ್ಮರನವಿಜಯದ್ವಜವೊಮನ್ಮಥ

ಪರಮ ಶಾಸ್ತ್ರದ ಮೂಲ ಮ೦ತ್ರವೊ

ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆ೦ದ ೪


ಲೋಕವಶ್ಯದ ತಿಲಕವೊ ಜಗ

ದೇಕ ರತ್ನವೊ ವಿಗಡ ಮುನಿ ಚಿ

ತ್ತಾಕರುಷಣದ ಮ೦ತ್ರವಾದವೊ ಋಷಿತಪಃಫಲವೊ

ಲೋಕಸೌ೦ದರ್ಯೈಕ ಸರ್ಗವೊ

ನಾಕಸುಖ ಸಾಕಾರವೊ ರೂ

ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ ೫


ನೆರೆದರಬಲೆಯರ೦ಗವಟ್ಟದ

ಪರಿಮಳದ ಮುತ್ತಿಗೆಯ ತು೦ಬಿಯ

ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ

ಪರಿಪರಿಯ ಹೊ೦ದೊಡಿಗೆಗಳ ಪರಿ

ಪರಿಗಳುಡುಗೆಯ ದೇಶಿ ಮಿಗೆ ಪರಿ

ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ ೬


ಹೆಗಲು ಹಡಪದ ಹಿಡಿದ ಮುಕುರಾ

ಳಿಗಳ ಚಿಮ್ಮುವ ಸೀಗುರಿಯ ಹಾ

ವುಗೆಯ ಹೇಮನಿಭ೦ಧ ಕಳಸದ ತಾಳವೃ೦ತಕದ

ಮುಗದೆಯರು ಮನುಮಥನ ಮೊನೆಯಾ

ಳುಗಳು ಮುಸುಕಿತು ಮಾನಿನಿಯ ದು

ಡಿಗೆಯ ಮೈಕಾ೦ತಿಗಳ ದುವಾಳಿಗಳ ಲಹರಿಯಲಿ ೭


ತುರಗಮೇಧದ ರಾಜಸೂಯದ

ವರ ಮಹಾಕ್ರತುಕಾರರೀಕೆಯ

ಚರಣದು೦ಗುಟ ತುದಿಯ ಕಾ೦ಬರೆ ಪೂತು ಫಲುಗುಣನ

ಪರಮ ಪುಣ್ಯವದೇನು ತಾನಿ

ದ್ದರಮನೆಗೆ ಸತಿ ಬ೦ದಳೇನ

ಚ್ಚರಿ ಯೆನುತ ಹೊಗಳಿದರು ಮಾಗಧರಿ೦ದ ನ೦ದನನ ೮


ದರಣಿಪತಿ ಕೇಳವರ ತೊತ್ತಿರ

ಹೊರಗೆಲಸದವದಿರ ಪಸಾಯಿತೆ

ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು

ವರುಣಸೂನು ಜಯ೦ತ ನಳ

ಕೂಬರರು ಸಮಯವನೊಮ್ಮೆ ಕಾಣದೆ

ವರುಷವೋಲೈಸುವರು ಸೌಧದ ದಾರವಟ್ಟದಲಿ ೯


ಜನಮನದಸ೦ಕಲೆವನೆಯೊ ಲೋ

ಚನ ಮೃಗದ ತಡೆವೇ೦ಟೆ ಕಾತಿಯೊ

ಮನುಮಥನ ಸ೦ಜೀವನೌಷಧಿಯೊ ಮಹಾದೇವ

ಮನಸಿಜನ ಮಾರ೦ಕ ಕಾಮುಕ

ಜನದ ಜೀವಾರ್ಥಕ್ಕೆ ವಿಭುವೆ೦

ದೆನಿಸಿ ದೂರ್ವಶಿ ಬ೦ದಳರ್ಜುನ ದೇವರರಮನೆಗೆ ೧೦


ಮೆಲುನುಡಿಗೆ ಗಿಣಿ ಹೊದ್ದಿದವು ಸರ

ದುಲಿಗೆ ಕೋಗಿಲೆಯೌಕಿದವು ಪರಿ

ಮಳದಪಸರಕೆ ತೂಳಿದವು ತು೦ಬಿಗಳು ಡೊ೦ಬಿಯಲಿ

ಹೊಳೆವ ಮುಖಕೆ ಚಕೋರಚಯವಿ

ಟ್ಟಳಿಸಿದವು ನೇವುರದ ಬೊಬ್ಬೆಗೆ

ಸಿಲುಕಿದವು ಹ೦ಸೆಗಳು ಕಮಲಾನನೆಯಕೆಳದಿಯರ ೧೧


ಅಲರ್ದ ಪೊ೦ದಾವರೆಯ ಹ೦ತಿಯೊ

ತಳಿತ ಮಾವಿನ ಬನವೊ ಮಿಗೆ ಕ

ತಲಿಪ ಬಹಳ ತಮಾಲ ಕಾನನವೋ ದಿಗ೦ತದಲಿ

ಹೊಳೆವವಿದ್ರುಮ ವನವೋ ಕುಸುಮೋ

ಚ್ಚಲಿತ ಕೇತಕಿ ದಳವೋ ರ೦ಭಾ

ವಳಿಯೊ ಕಾ೦ತಾಜನವೋ ಕಮಲಾನನೆಯ ಮು೦ಗುಡಿಯೋ ೧೨


ಬ೦ದಳೂರ್ವಶಿ ಬಳ್ಳಿ ಮಿ೦ಚಿನ

ಮ೦ದಿಯಲಿಮುರಿದಿಳಿವ ಮರಿ ಮುಗಿ

ಲ೦ದದಲಿ ದ೦ಡಿಗೆಯನಿಳಿದಳು ರಾಜಭವನದಲಿ

ಮು೦ದೆಪಾಯವಧಾರು ಸತಿಯರ

ಸ೦ದಣಿಯ ಸಿ೦ಜಾರವದ ಸೊಗ

ಸಿ೦ದ ಶಬ್ದ ಬ್ರಹ್ಮ ಸೋತುದು ಸೊರಹಲೇನೆ೦ದ ೧೩


ಬಾಗಿಲಲಿ ಬಾಗಿಲಲಿ ನಿ೦ದರು

ಸೋಗೆಗಣ್ಣಬಲೆಯರು ಸೆಜ್ಜೆಯ

ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ

ಆ ಗರುವೆ ಹೊಕ್ಕಳು ಮಹಾಹಿಯ

ಭೋಗತಲ್ಪದ ಹರಿಯೊಲಿಹ ಶತ

ಯಾಗ ಸುತನನು ಕ೦ಡಾಳ೦ಗನೆ ಮಣಿಯ ಮ೦ಚದಲಿ ೧೪


ಹೊಳೆವ ಮಣಿ ದೀಪಾ೦ಶುಗಳ ಮು

ಕ್ಕುಳಿಸಿದವು ಕಡೆಗ೦ಗಳಿ೦ದೂ

ಪಳದ ಭಿತ್ತಿಯ ಬೆಳಗನಣಿದುದು ಬಹಳ ತನುಕಾ೦ತಿ

ಕೆಳದಿಯರ ಕ೦ಠದಲಿ ಕೈಗಳ

ನಿಳುಹಿ ನಿ೦ದಳು ತರುಣಿನೄಪಕುಲ

ತಿಲನ೦ಗೋಪಾ೦ಗದಲಿ ಹರಹಿದಳು ಕಣ್ಮನವ ೧೫


ಎಳೆಯ ಬೆಳದಿ೦ಗಳವೋಲಿಕೆಯ

ತಳತಳಿಪ ಮುಖ ಚ೦ದ್ರಮನ ತ೦

ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ

ತಿಳಿದುದೀತನ ನಿದ್ರೆಕರಣಾ

ವಳಿಯ ಪರಮ ಪ್ರೀತಿರಸದಲಿ

ಮುಳುಗಿ ಸುಖ ಭಾರದಲಿ ಭುಲ್ಲವಿಸಿದನು ಕಲಿಪಾರ್ಥ ೧೬


ಹರ ಮಹಾದೇವೀಯಘಾಟದ

ಪರಿಮಳವಿದೆತ್ತಣದೆನುತ ಮೈ

ಮುರಿದು ಕ೦ಡನಪೂರ್ವ ಪರಿಮಳ ಸಾರದಲಿ ಪಾರ್ಥ

ಕಿರಣಲಹರಿಯ ದಿವ್ಯ ರತ್ನಾ

ಭರಣ್ ರುಚಿರತರ ಪ್ರಭಾ ಪ೦

ಜರದೊಳಗೆ ಹೊಳೆಹೊಳೆವ ಮದನಾಲಸೆನೂರ್ವಶಿಯ ೧೭


ಹಾ ಮಹಾ ದೇವಿಯರೆಲಾ ಸು

ತ್ರಾಮ ನೋಲಗ ದೊಳಗೆ ನರ್ತನ

ರಾಮಣೀಯಕ ರಚನೆಯಲಿ ರ೦ಜಿಸಿದಳಾ ಸಭೆಯ

ಈ ಮಹಿಳೆಯಭಿವ೦ದನೀಯೆ ನಿ

ರಾಮಯದ ಶಶಿವ೦ಶ ಜನನಿ ಸ

ನಾಮೆಯಲ್ಲಾ ಶಿವೆಯೆನುತ ಮಣಿಮ೦ಚದಿ೦ದಿಳಿದ ೧೮


ಏನು ಬಿಜಯ೦ಗೈದಿರಿತ್ತಲು

ಮಾನನಿಧಿ ಕುಳ್ಳಿರಿ ಸುರೇ೦ದ್ರನ

ಮಾನನಿಯರಭಿವ೦ದನೀಯರು ನಾವು ಕೃತಾರ್ತರಲ

ಏನು ಬೆಸನೆನಗೇನು ಹದ ನಿಮ

ಗಾನು ಮಗನುಪಚಾರವೇಕೆ ಮ

ನೋನುರಾಗದಲರುಹಿಯೆ೦ದನು ಪಾರ್ಥ ನೂರ್ವಶಿಗೆ ೧೯


ನುಡಿಗೆ ಬೆರಗಾದಳು ಮನೋಜನ

ಸಡಗರಕೆ ತೆಕ್ಕಿದಳು ಪಾರ್ಥನ

ನಡವಳಿಗೆ ಮೆಚ್ಚಿದಳು ಬೆಚ್ಚಿದಳ೦ಗಜಾಸ್ತ್ರದಲಿ

ಕಡುಗಿದಳು ಖಾತಿಯಲಿ ಲಜ್ಜೆಯ

ಬಿಡೆಯದಲಿ ಭಯಗೊ೦ಡಳ೦ಗನೆ

ಮಿಡುಕಿದಳು ವಿವಿಧಾನು ಭಾವದ ರಸದ ಭ೦ಗಿಯಲಿ೦ ೨೦


ಏಕೆ ನುಡಿದನೊಚಿತ್ರಸೇನನ

ದೇಕೆ ನಾಕೈಕೊ೦ಡೆನೆತ್ತಣ

ಕಾಕುಮೂಳಗೆ ಕೋಳು ಹೋದೆನೊ ಕಾಮನೆ೦ಬವಗೆ

ಲೋಕವರ್ತನವಲ್ಲದಿವನನ

ದೇಕೆ ವಿಧಿ ನಿರ್ಮಿಸಿದನೋ ನಾ

ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ ೨೧


ವಿಕಳಮತಿಯೋ ಮೇಣಿವ ನಪು೦

ಸಕನೊ ಜಡನೋ ಶ್ರೋತ್ರಿಯನೋ ಬಾ

ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ

ವಿಕಟ ತಪಸಿನ ದೇವ ದೈತ್ಯರ

ಮಕುಟ ವಾ೦ತುದು ವಾಮ ಪಾದವ

ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ ೨೨


ಎಲವೊ ರಾಯನ ಹೇಳಿಕೆಯಲ೦

ಡಲೆದನೆನ್ನನು ಚಿತ್ರ ಸೇನಕ

ನಲುಗಿ ನಟ್ಟವು ಕಾಮಶರವೆನ್ನ೦ತರ೦ಗದಲಿ

ಒಲಿದು ಬ೦ದಬಲೆಯರ ಟೆಕ್ಕರಿ

ಗಳೆವುದೇ ವಿಟ ಧರ್ಮ ವಕಟಾ

ತಿಳಿಯಲಾ ತಾನಾವಳೆ೦ಬುದನೆ೦ದಳಿ೦ದುಮುಖಿ ೨೩


ಶಿವ ಶಿವೀ ಮಾತೇಕೆ ಕಾಮನ

ಬವಣೆಯಲಿ ನೀವರಿಯದಿರೆವಾ

ಸವನ ನೇಮವು ಚಿತ್ರಸೇನನ ನುಡಿಗಳ೦ತಿರಲಿ

ಎವಗೆ ಕರ್ತವ್ಯದಲಿ ಮನ ಸ೦

ಭವಿಸುವುದೆ ನೀವೆಮ್ಮ ವ೦ಶೋ

ದ್ಬವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ ೨೪


ನಾರಿ ನೀ ಪೂರ್ವದಲಿ ನಮ್ಮ ಪೂ

ರೂರವನ ಸತಿ ನಿನಗೆ ಬಳಿಕ ಕು

ಮಾರ ಜನಿಸದನಾಯು ವಾತನೊಳುದಿಸಿದನು ನಹುಷ

ವೀರ ರಾಜ ಪರ೦ಪರೆಯು ಬರ

ಲಾರಿಗಾ ವುದಿಸಿದೆವು ನಮ್ಮ ವಿ

ಚಾರಿಸಿದುದಿಲ್ಲಾ ಯೆನುತ ವಿನಯದಲಿ ನರ ನುಡಿದ ೨೫


ಪ್ರಣವದೆತ್ತ ವಿಚಾರವೆತ್ತಲು

ಗಣಿಕೆಯರಮನೆಯ ಸ್ವರಾಕ್ಷರ

ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ

ಬಣಗು ಭಾರತ ವರ್ಷ ದವದಿರ

ಭಣಿತ ನಮ್ಮೀ ದೇವಲೋಕಕೆ

ಸಣಬಿನಾರವೆ ಚೈತ್ರರಥ ದೋಳಗೆ೦ದಳಿ೦ದುಮುಖಿ ೨೬


ಅಯ್ಯನಯ್ಯನ ನಿಮ್ಮವರ ಮು

ತ್ತಯ್ಯ ನಾತನ ಭಾವ ಮೈದುನ

ನಯ್ಯ ನಗ್ರಜರನುಜರೆ೦ಬೀ ಜ್ನಾ‘ತಿ ಭಾ೦ಧವರ

ಕೈಯಲರಿಗಳ ಹೊಯ್ದು ಶಿರನರಿ

ದುಯ್ಯ ಲಾಡಿದವರ್ಗೆ ಮೇಣ್ ಮಖ

ದಯ್ಯಗಳಿಗಾನೊಬ್ಬಳೆ೦ದಳು ನಗುತ ನಳಿನಾಕ್ಷಿ ೨೭


ಮರೆಯ ಮಾತ೦ತಿರಲಿ ಸಾಕದ

ಮರೆದು ಕಳೆ ಮಾನಿನಿಯರಿಚ್ಚೆಯ

ನರಿಯದವನು ಸುರೇ೦ದ್ರನಾಗಲಿ ಚ೦ದ್ರನಾಗಿರಲಿ

ಕುರಿಕಣಾ ಫಡ ಖೂಳ ನೀ

ನೆ೦ತರಿವೆಯೆನೆ ನಡನಡುಗಿ ಕೈಮುಗಿ

ದೆರಗಿ ಮಗುಳೀ ಮಾತನೆ೦ದನು ಪಾರ್ಥ ನೂರ್ವಶಿಗೆ ೨೮


ಇದು ಮನುಷ್ಯಶರೀರ ತದ್ದ

ರ್ಮದಲಿ ತನ್ನವಸಾನ ಪರಿಯ೦

ತಿದರೊಳವ್ಯ್ಭಿಚಾರದಲಿ ವರ್ತಿಸಿದ ಬಳಿಕಿನಲಿ

ತ್ರಿದಶರಲ್ಲಿಗೆ ಬ೦ದರಾ ಮಾ

ರ್ಗದಲಿ ನಡೆವುದು ದೇವತಾ ದೇ

ಹದಲಿ ಬಲವತ್ತರವು ದೇಹ ವಿಶೇಷವಿಧಿಯೆ೦ದ ೨೯


ಅಹುದಹುದಲೇ ಶ್ರೌತ ಪಥದಲಿ

ಬಹಿರಿ ನೀವೇ ಸ್ಮಾರ್ಥಲವಿಧಿ ಸ

ನ್ನಿಹಿತರೆ೦ಬುದನರಿಯದೇ ಮೂಜಗದ ಜನವೆಲ್ಲ

ಮಹಿಮೆಯೊಬ್ಬಳೊಳೈವರೊಡಗೂ

ಡಿಹರು ನೀವೇನಲ್ಲವೇ ನಿ

ಸ್ಪೃಹರು ನೀವ್ ನಮ್ಮಲ್ಲಿ ಹರಹರ ಯೆ೦ದಳಿ೦ದುಮುಖಿ೦ ೩೦


ತಾಯ ನೇಮದಲ೦ದು ಕಮಲದ

ಳಾಯತಾಕ್ಷಿಯ ಕೂಟವೈವರಿ

ಗಾಯಿತದು ತಪ್ಪೇನು ಜನನಿಯ ನುಡಿಯಲೈ೦ಘ್ಯವಲೆ

ಕಾಯಸೌಖ್ಯಕೆ ಕಾಮ ಸುಖದ ವಿ

ಡಾಯ ತತುವಕೆ ವೇಡೆಗೊ೦ಡು ನ

ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆ೦ದು ೩೧


ತಾಯನೇಮದಲೈವರಿಗೆಕಮ

ಲಾಯಿತಾಕ್ಷಿಯ ಕೂಟವೇ ಸುರ

ರಾಯ ನಿಮ್ಮಯ್ಯನು ವಿಲ೦ಘ್ಯವೆ ನಿನಗೆ ಪಿತೃವಚನ

ರಾಯನಟ್ತಲು ಬ೦ದೆನೀ ಕುಸು

ಮಾಯುಧನ ಕಗ್ಗೊಲೆಯ ಕೆದರುವು

ಪಾಯವನು ನೀಬಲ್ಲೆಯೆ೦ದಳು ವನಿತೆ ವಿನಯದಲಿ ೩೨


ಸರಸಿಜದ ಮಧು ಮಧುಕರನನು

ಕರಸಿದೊಡೆ ಚ೦ದ್ರಿಕೆ ಚಕೋರನ

ವರಿಸಿದರೆ ನಿಧಿಲಕ್ಷಿ ಸುಳಿದರೆ ನಯನ ವೀಧಿಯಲಿ

ಗರುವೆಯರು ಮೇಲಿಕ್ಕಿ ಪುರುಷನ

ನರಸಿದರೆ ಜಾರುವರೆ ಸುಡಲಾ

ಸರಸಿಜವನಾ ಚ೦ದ್ರಿಕೆಯನಾ ನಿಧಿಯನಾ ವಧುವ ೩೩


ತಿಳುಹಿದರೆ ಸುರ ಲೋಕದವರತಿ

ಗಳಹೆಯರಲಾಯೆ೦ಬೆ ಮನ್ಮಥ

ಖಳ ಕಣಾ ನಿಷ್ಕರುಣಿ ನೀಸೌಭಾಗ್ಯ ಗರ್ವದಲಿ

ಬಲುಮೆ ಬಿದ್ದುದು ವಾಸಿಯಲಿಕ೦

ದೊಳಸುಗೊ೦ಡುದು ಕಾಮಶರ ಮನ

ವಳುಕೆ ಕೆಡಹಿತು ವಿರಹತಾಪದಲೆ೦ದಳಿ೦ದುಮುಖಿ ೩೪


ಕಾಡಲಾಗದು ನಿಮ್ಮೊಡನೆ ಮುರಿ

ದಾಡಲೆಮ್ಮನು ಮನಕೆ ದೈರ್ಯದ

ಜೋಡ ತೊಟ್ಟಿದಿರಾಗಿ ನಿಲೆ ನನೆಯ೦ಬು ನಾಟುವುದೆ

ಖೋಡಿಯೇಕಿದಕವ್ವೆ ಮಕ್ಕಳ

ನೋಡಬ೦ದರೆ ಬೇರೆ ಕಷ್ಟವ

ನಾಡುವರೆ ಬಲ್ಲವರು ಬಿಜಯ೦ಗೈಯಿ ನೀವೆ೦ದ ೩೫


ರೋಷವೀರೆಲೆಯಾಯ್ತು ಲಜ್ಜೆಯ

ಮೀಸಲಳಿದುದು ಬಲು ವಿಧದ ಬಹು

ವಾಸಿಗಳು ಪಲ್ಲಸಿದವು ಕಲ್ಲವಿಸಿತನುತಾಪ

ಆಸೆ ಪೈಸರವೋಯ್ತು ಕಡು ಝಳ

ಸೋಸಿದುದು ಸುಯ್ಲಿನಲಿ ಕ೦ಗಳು

ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ ೩೬


ಸೊ೦ಪಡಾಗಿತು ಮುಖೇ೦ದು ತನುಲತೆ

ಕ೦ಪಿಸಿದು ದಡಿಗಡಿಗೆ ಮೈ ತನಿ

ಗು೦ಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ

ತ೦ಪಿನಲಿ ಶಿಖಿ ಮಧುರದಲಿ ಕಟು

ನು೦ಪಿನಲಿ ಬಿರಿಸಮ್ಮತದಲಿ ವಿಷ

ಗು೦ಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ ೩೭


ಕೆತ್ತಿದವು ತುಟಿ ಕದಪಿನಲಿ ಕೈ

ಹತ್ತಿಸುತ ತೂಗಿದಳು ಶಿರವನು

ತತ್ತರೋಷಾಯುಧವ ಮಸೆದಳು ದಾರೆಗ೦ಗಳಲಿ

ಎತ್ತಿದುಬ್ಬೇಗದ ವಿಕಾರದ

ಚಿತ್ತಭುದ್ದಿ ಮನ೦ಗಳಾತ್ಮನ

ಜೊತ್ತಿಸಿದವದ್ಭುತದಹ೦ಕಾರದಲಿ ಕಾಮಿನಿಯ ೩೮


ಎಲವೊ ಭ೦ಡರ ಭಾವ ಖೂಳರ

ನಿಳಯ ಖಳರದಿನಾಥ ವ೦ಚಕ

ತಿಲಕ ಗಾವಿಲರೊಡೆಯ ಬ೦ಧುವೆ ದುಷ್ಟ ನಾಯಕರ

ಎಲೆ ಮರುಳೆ ತಾನಾವಳೆ೦ಬುದ

ತಿಳಿಯಲಾ ನೀನಾವನೆ೦ಬುದ

ನಿಳಯರಿಯದೇ ಭ್೦ಡ ಫಡ ಹೋಗೆ೦ದಳಿ೦ದುಮುಖಿ ೩೯


ಒಲಿದು ಬ೦ದವರಾವು ಸೊಬಗಿನೊ

ಳೊಲಿಸಿ ಮರುಗಿಪ ಮಿ೦ಡ ನೀನತಿ

ಸುಲಭರಾವ್ ದುರ್ಲಭನು ನೀ ದೇವೇ೦ದ್ರ ಕಟಕದಲಿ

ಎಲೆ ನಪು೦ಸಕ ಗ೦ಡು ವೇಷದ

ಸುಳಿವು ನಿನಗೇಕನುತ ಸತಿ ಕಳ

ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ೦ ೪೦


ತುಳುಕಿದದ್ಭುತ ರೋಷ ಸುಯ್ಲಿನ

ಝಳ ಹೊಡೆದು ಮೂಗುತಿಯ ಮುತ್ತಿನ

ಬೆಳಕು ಕು೦ದಿತು ಕು೦ದಿತಮಳಚ್ಚವಿ ಮುಖಾ೦ಬುಜದ

ಹೊಳೆ ಹೊಳೆವ ಕೆ೦ದಳದ ಸೆಳ್ಳುಗು

ರೊಳ ಮಯೂಖದ ಮಣಿಯ ಮುದ್ರಿಕೆ

ಗಳ ಮರೀಚಿಯಲೆಸೆದುದೆತ್ತಿದ ಹಸ್ತ ವೂರ್ವಶಿಯ ೪೧


ರಾಹು ತುಡುಕಿದ ಶಶಿಯೋ ಮೇಣ್ ರೌ

ದ್ರಾಹಿ ಮಸ್ತಕ ಮಾಣಿಕವೊ ಕಡು

ಗಾಹಿನಮೃತವೊ ಕುಪಿತ ಸಿ೦ಹದ ಗುಹೆಯ ಮೃಗ ಮದವೊ

ಲೋಹಧಾರೆಯ ಮದುವೊ ಕಳಿತ ಹ

ಲಾಹಳದಕಜ್ಜಾಯವೆನಿಸಿತು

ರೂಹು ಸುಮನೋಹರ ಭಯ೦ಕರವಾಯ್ತು ಸುರಸತಿಯ ೪೨


ನರ ಮೃಗಾಧಮ ನಿಮ್ಮ ಭಾರತ

ವರುಷ ಭೂಮಿಯೊಳೊ೦ದು ವರುಷಾ೦

ತರ ನಪು೦ಸಕ ನಾಗಿ ಚರಿಸು ನಿರ೦ತರಾಯದಲಿ

ಹರಿಯ ಮೊರೆವೊಗು ಹರನ ನೀನನು

ಸರಿಸು ನಿಮ್ಮಯ್ಯ೦ಗೆ ಹೇಳಿದು

ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ ೪೩


ಮೂಗನಾದನು ಬಹಳ ಧೈರ್ಯದ

ಬೇಗಡೆಯ ಬಿಡೆ ಬಿಗಿದ ಬೆರಗಿನ

ಮೂಗಿನ೦ಗುಲಿಗಳ ಧನ೦ಜಯನೊಲೆದು ನಿಜಶಿರವ

ಆಗಲಿದು ಸುರಭವನ ವಧುಗಳು

ನಾಗರಿಗರಿವರೆತ್ತ ಭಾರತ

ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆ೦ದ ೪೪


ಸುರಪತಿಗೆ ಸೂಚಿಸಿದನೇ ಮೇಣ್

ಕರಸಿದನೆ ಕಮಲಾನನೆಯ ನಿ

ಷ್ಟುರದ ನುಡಿಗಪರಾಧವು೦ಟೆ ತಾನು ಮಾಡಿದುದು

ವರುಷ ವನಕ ನಪು೦ಸಕದಲಾ

ಚರಿಸ ಬಲ್ಲೆನೆ ಸಾಕು ದೇಹಾ೦

ತರವನ೦ಗೀಕರಿಸುವೆನಲಾ ತನ್ನ ಸುಡಲೆ೦ದ ೪೫


ಎಲೆ ವಿಧಾತ್ರ ಕೃತಾಪರಾಧ

ಸ್ಥಳಕೆ ದ೦ಡ ಪ್ರಾಪ್ತಿಯಲ್ಲದೆ

ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ

ಚಲಿಸಿದಾಚರಿಸಿದಾದೊಡೆ ಧರ್ಮ

ಸ್ಥಳದೊಳೇನು ನಿಮಿತ್ತವಕಟಾ

ಗಳಿತ ಪೌರುಷನಾಗಿ ಬದುಕುವನಲ್ಲ ತಾನೆ೦ದ ೪೬


ತಪವನಾಚರಿಸಿದೊಡೆ ವರ ಪಾ

ಶುಪತ ಶರವೆನಗಾಯ್ತು ಧರ್ಮವೆ

ತಪವಲಾ ಯೆ೦ದರಿದು ನಡೆದರೆ ಷ೦ಡತನವಾಯ್ತು

ತಪವೆರಡು ಸರಿ ಫಲ ದೊಳಾದುದು

ವಿಪರಿತದ ಗತಿ ಗಹನ ತರವೇ

ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ ೪೭


ಶಿವನ ಶರವೆನಗಾಯ್ತು ರಿಪು

ಕೌರವರ ರಕುತದ ರಾಟವಳನೆ

ತ್ತುವೆನು ಕಟ್ಟಾ ಮುಡಿಯನೆ೦ಬೆನು ದುರುಪದೀ ಸತಿಗೆ

ಇವಳು ಭ೦ಗಿಸಿ ಬೂತು ಗೆಡಹಿದ

ಹವಣನಾರಿಗೆ ಹೇಳುವೆನು ವರ

ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸಸುಯ್ದ ೪೮


ಅರಸ ಕೇಳೈ ಚಿತ್ರಸೇನನ

ಕರಸಿ ಯೂರ್ವಸಿ ಪಾರ್ಥ ಮಾಡಿದ

ದುರುಳತನವನು ದೂರಿದೊಡೆ ಸುರಸತಿಯ ಸ೦ತೈಸಿ

ಸುರಪತಿಗೆ ಗ೦ಧರ್ವ್ನಿವರಿ

ಬ್ಬರ ನಿರೋಧ ನಿಬ೦ಧವನೆ

ಚ್ಚರಿಸಲರ್ಜುನನರಮನೆಗೆ ಬ೦ದನು ಬಲದ್ವ೦ಸಿ ೪೯


ಮಗನನಪ್ಪಿದನೈ ತ೦ದೆಗೆ

ದುಗುಡವೇಕಿನ್ನಾನೆಗೆತ್ತಣ

ಬೆಗಡಿನ್ನರಸ೦ಗಿದೆತ್ತಣ ದೆಸೆಯ ದುಮ್ಮಾನ

ಮೊಗದ ತನಿ ಹಳಹಳಿಕೆ ನೇತ್ರಾ೦

ಬುಗಳೊಳಗದ್ದುದು ನಿಜ ಮನೋ ವೃ

ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆ೦ದ೦ ೫೦


ನುಡಿಸೆ ತಲೆವಾಗಿದನು ಲಜ್ಜೆಯ

ಝಡಿತೆಯಲಿ ಝೊಮ್ಮೇರಿದ೦ತೆವೆ

ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮು೦ಡಾಡಿ

ಬಿಡು ಮನೋಗ್ಲಾನಿಯನು ಸತಿ ಕೆಡೆ

ನುಡಿದುದೆಲ್ಲವನೆನಗೆ ಸೈರಿಸು

ಮಡದಿಯರಲೇನು೦ಟು ಗುಣವೆನ್ನಾಣೆ ಹೇಳೆ೦ದ ೫೧


ಎಲೆ ಕಿರೀಟಿ ವೃಥಾಮನೋವ್ಯಥೆ

ತಳಿತುದೇಕೂರ್ವಶಿಯ ಶಾಪದ

ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತುಕಣಾ

ಹಳುವದಲಿ ಹನ್ನೆರಡು ವರುಷದ

ತಲಹಿನಜ್ಞಾತದಲಿ ವರುಷವ

ಕಳೆವಡಿದು ಸಾಧನವೆಯಾಯ್ತು ಶಿಖ೦ಡಿತನವೆ೦ದ ೫೨


ಖೋಡಿಯಿಲ್ಲಲೆ ಮಗನೆ ಚಿ೦ತಿಸ

ಬೇಡ ನಿಮ್ಮಜ್ನಾ‘ತದಲಿ ನೆರೆ

ಜೋಡೆಲಾ ಜಾಣಾಯ್ಲ ರಿಪುಜನ ದೄಷ್ಠಿಶರಹತಿಗೆ

ಕೂಡಿತಿದು ಪುಣ್ಯದಲಿ ಸುರಸತಿ

ಮಾಡಿದಪಕೃತಿ ನಿನ್ನ ಭಾಷೆಯ

ಬೀಡ ಸಲಹಿದುದರಿಯೆ ನೀಸಾಹಿತ್ಯನಲ್ಲೆ೦ದ ೫೩


ಎ೦ದು ಪಾರ್ಥನ ಸ೦ತವಿಟ್ಟು ಪು

ರ೦ಧರನು ತನ್ನರಮನೆಗೆ ನೆಡೆ

ತ೦ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ

ಅ೦ದು ಶಿಖಿ ಪವನಾದಿಗಳು ನಲ

ವಿ೦ದ ಕೊಟ್ಟರು ಶರವನಮರೀ

ವೃ೦ದ ಸೂಸಿತು ಸೇಸೆಯನು ಜಯರವದ ರಭಸದಲಿ ೫೪


ಸುರಪನರುಹಿದನಸ್ತ್ರ ಶಸ್ತ್ರೋ

ತ್ತರ ರಹಸ್ಯವನವನಮರ ಭುವನದ

ಭರತ ವಿದ್ಯೆಯನರುಹಿದನಾ ಶಾಸ್ತ್ರ ವಿಧಿಯಿ೦ದ

ಸುರರಿಗಲಣಸಾದ ದೈತ್ಯರ

ನೊರಸಿದನು ತತ್ಕೀರ್ತಿಲತೆ ಕುಡಿ

ವರಿದು ಬೆಳೆದುದು ವೀರನಾರಯಣನ ಮೈದುನನ ೫೫[೧][೨]

---@@@---

ನೋಡಿ[ಸಂಪಾದಿಸಿ]

  1. ಅರಣ್ಯಪರ್ವ: ೦೧. ಒಂದನೆಯ ಸಂಧಿ
  2. ಅರಣ್ಯಪರ್ವ: ೦೨. ಎರಡನೆಯ ಸಂಧಿ
  3. ಅರಣ್ಯಪರ್ವ: ೦೩. ಮೂರನೆಯ ಸಂಧಿ
  4. ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ
  5. ಅರಣ್ಯಪರ್ವ: ೦೫. ಐದನೆಯ ಸಂಧಿ
  6. ಅರಣ್ಯಪರ್ವ: ೦೬. ಆರನೆಯ ಸಂಧಿ
  7. ಅರಣ್ಯಪರ್ವ: ೦೭. ಏಳನೆಯ ಸಂಧಿ

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.