ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೫)[ಸಂಪಾದಿಸಿ]

ಸೂಚನೆ:
ವರಮುನಿಯ ಶಾಪದಲಿ ಸರಿದನು|
ಸುರರ ನಗರಿಗೆ ಪಾಂಡು ಹಸ್ತಿನ
ಪುರಕೆ ತಂದರು ಪರಮಮುನಿಗಳು ಪಾಂಡುನಂದನರ||

ಪದವಿಭಾಗ-ಅರ್ಥ: ವರಮುನಿಯ= ಶ್ರೇಷ್ಠ ಮುನಿಯ, ಪಾಂಡುವಿನ ಬಾಣದಿಂದ ಮರಣಹೊಂದಿದ ಜಿಂಕೆಯರೂಪದಲ್ಲಿದ್ದ ಮುನಿಯ, ಶಾಪದಲಿ= ಶಾಪದ ಕಾರಣ, ಸರಿದನು= ಸೇರಿದನು, ಸುರರ ನಗರಿಗೆ= ಸ್ವರ್ಗಕ್ಕೆ, ಪಾಂಡು, ಹಸ್ತಿನಪುರಕೆ ತಂದರು ಪರಮಮುನಿಗಳು= ಶೃಂಗ ಪರ್ತದಲ್ಲಿದ್ದ ಮುನಿಗಳು ಹಸ್ತಿನಾಪುರಕ್ಕೆ ತಂದು ಬಿಟ್ಟರು., ಪಾಂಡುನಂದನರ.
ಅರ್ಥ: ಪಾಂಡುವಿನ ಬಾಣದಿಂದ ಮರಣಹೊಂದಿದ ಜಿಂಕೆವೇದಲ್ಲಿದ್ದ ಋಉಷಿ ಕಿಂದಮ ಮುನಿಯ ಶಾಪದ ಕಾರಣ, ಪಾಂಡು ಸ್ವರ್ಗವನ್ನು ಸೇರಿದನು. ಶೃಂಗ ಪರ್ತದಲ್ಲಿದ್ದ ಮುನಿಗಳು ಪಾಂಡುವಿನ ಮಕ್ಕಳನ್ನು ಹಸ್ತಿನಾಪುರಕ್ಕೆ ತಂದು ಬಿಟ್ಟರು.

♠♠♠

ತಪೋವನದಲ್ಲಿ ಪಾಂಡು[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಶತಶೃಂಗಾದ್ರಿಯಲಿ ಭೂ
ಪಾಲನಿರ್ದನು ತನ್ನ ವೀರಕುಮಾರಕರು ಸಹಿತ ||
ವ್ಯಾಳ ವನಗಜ ಸಿಂಹ ವೃಕ ಶಾ
ರ್ದೂಲ ಭಯವನು ಪರಿಹರಿಸಿ ಮುನಿ
ಪಾಳಿಗ್ರಾಶ್ರಯವೆನಿಸಿದನು ಪಾವನ ತಪೋವನವ ||(೧)||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ= ರಾಜನೇ, ಶತಶೃಂಗಾದ್ರಿಯಲಿ= ಶತಶೃಂಗ ಪರ್ವತದಲ್ಲಿ, ಭೂಪಾಲನು+ ಇರ್ದನು= ಇದ್ದನು, ತನ್ನ ವೀರಕುಮಾರಕರು ಸಹಿತ ವ್ಯಾಳ= ಹಾವು ವನಗಜ= ಕಾಡಾನೆ, ಸಿಂಹ ವೃಕ= ತೋಳ, ಶಾರ್ದೂಲ= ಹುಲಿ, ಭಯವನು ಪರಿಹರಿಸಿ ಮುನಿಪಾಳಿಗೆ+ ಆಶ್ರಯವೆನಿಸಿದನು= ರಕ್ಷಕನು ಎನಿಸಿದ್ದನು. ಪಾವನ ತಪೋವನವ
ಅರ್ಥ: ಕೇಳು ಜನಮೇಜಯ ರಾಜನೇ, ಶತಶೃಂಗ ಪರ್ವತದಲ್ಲಿ ತನ್ನ ವೀರಕುಮಾರಕರ ಸಹಿತ ರಾಜನು ಇದ್ದನು, ಅಲ್ಲಿ ಹಾವು, ಕಾಡಾನೆ, ಸಿಂಹ, ತೋಳ, ಹುಲಿಗಳ ಭಯವನ್ನು ಪರಿಹರಿಸಿ ಮುನಿಗಳಿಗೆ, ಪಾವನ ತಪೋವನಕ್ಕೆ ರಕ್ಷಕನು ಎನಿಸಿದ್ದನು.
ಆ ಸಮಸ್ತ ಮುನೀಂದ್ರರೊಡನ
ಭ್ಯಾಸವಾ ದಿವ್ಯಾಶ್ರಮದ ಸಹ
ವಾಸವಾ ತಪವಾ ಕುಮಾರ ಪರಾಕ್ರಮಾಲೋಕ ||
ಆ ಸಮಂಜಸ ಸತಿಯರಿಬ್ಬರು
ಪಾಸನೆಗಳಾ ವಿಭವಕಿಭಪುರಿ
ಯಾ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ ||(೨)||
ಪದವಿಭಾಗ-ಅರ್ಥ: ಆ ಸಮಸ್ತ ಮುನೀಂದ್ರರೊಡನೆ+ ಅಭ್ಯಾಸವು+ ಆ ದಿವ್ಯಾಶ್ರಮದ ಸಹವಾಸವು+ ಆ ತಪವು+ ಆ ಕುಮಾರ ಪರಾಕ್ರಮ+ ಆಲೋಕ= ನೋಟ, ಆ ಸಮಂಜಸ ಸತಿಯರಿಬ್ಬರ+ ಉಪಾಸನೆಗಳು, ಆ ವಿಭವಕೆ+ ಇಭಪುರಿಯು+ ಆ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ.
ಅರ್ಥ: ಆ ಸಮಸ್ತ ಮುನಿಗಳೊಡನೆ ಯೋಗದ ಅಭ್ಯಾಸವು, ಆ ದಿವ್ಯಾಶ್ರಮದ ಸಹವಾಸವು, ಆ ತಪವು, ಆ ಕುಮಾರರ ಪರಾಕ್ರಮದ ನೋಟ, ಆ ಅನುಕೂಲವತಿಯರಾದ ಇಬ್ಬರು ಸತಿಯರ ಉಪಾಸನೆಗಳು, ಈ ಎಲ್ಲಾ ವೈಭವಕ್ಕೆ ಹೋಲಿಸಿದರೆ, ಹಸ್ತಿನಾವತಿಯ ಆ ಸಮಸ್ತ ಐಶ್ವರ್ಯವೂ ಕೂಡ ಪಾಂಡುವಿಗೆ ಹುಲ್ಲುಕಡ್ಡಿಗೆ ಸಮ ಎನಿಸಿತು.
ಸುತ ವಿನೋದದ ಸಿರಿಗೆ ಅಮರಾ
ವತಿಯಸಿರಿ ತೊತ್ತೆಂದು ವಿಮಲ
ವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು ||
ಯತಿ ಪದಾಂಬುಜ ನಿತ್ಯಸೇವಾ
ಸತಿಗೆ ದಾಸಿ ಜಗತ್ರಯಾದಿ
ಸ್ಥಿತಿ ಪದವಿಯೆಂದುಬ್ಬಿದನು ಕಲಿಪಾಂಡು ವಿಪಿನದಲಿ || (೩) ||
ಪದವಿಭಾಗ-ಅರ್ಥ: ಸುತ= ಮಕ್ಕಳ, ವಿನೋದದ ಸಿರಿಗೆ= ಸಂಪತ್ತಿಗೆ, ಅಮರಾವತಿಯ ಸಿರಿ ತೊತ್ತೆಂದು- ತೊತ್ತು+ ಎಂದು= ಸ್ವರ್ಗಲೋಕದ ಅಮರಾವತಿಯ ಸಂಪತ್ತು ದಾಸಿಗೆ ಸಮ ಎಂದೂ, ವಿಮಲವ್ರತ ತಪೋಲಕ್ಷ್ಮಿಗೆ= ಪರಿಶುದ್ಧ ವ್ರತ ಮತ್ತು ತಪಸ್ಸೆಂಬ ಸಂಪತ್ತಿಗೆ, ವಿಲಾಸಿನಿ ಮುಕ್ತಿವಧುವೆಂದು= ಆನಂದದ ಮುಕ್ತಿಯೇ ವಧು- ಮದುವೆಯಾಗುವ ಕನ್ಯೆ, ಯತಿ ಪದಾಂಬುಜ= ಋಷಿಗಳ ಪಾದಕಮಲಗಳಿಗೆ, ನಿತ್ಯಸೇವಾಸತಿಗೆ= ನಿತ್ಯಸೇವೆಮಾಡುವುದೇ ತನ್ನ ಸತಿ, ಆ ಸತಿಗೆ- ದಾಸಿ ಜಗತ್ರಯಾದಿ ಸ್ಥಿತಿ= ಮೂರು ಜಗತ್ತಿನ, ಪದವಿಯೆಂದು= ಒಡೆತನ ದಾಸಿಗೆ ಸಮ ಎಂದು, ಉಬ್ಬಿದನು= ಸಂತಸದಲ್ಲಿ ಉಬ್ಬಿದನು, ಕಲಿಪಾಂಡು= ವೀರನಾದ ಪಾಂಡು, ವಿಪಿನದಲಿ= ಕಾಡಿನಲ್ಲಿ
ಅರ್ಥ:ಪಾಂಡುವು, ಮಕ್ಕಳ ವಿನೋದದ ಸಂಪತ್ತಿಗೆ ಸ್ವರ್ಗಲೋಕದ ಅಮರಾವತಿಯ ಸಂಪತ್ತು ದಾಸಿಗೆ ಸಮ ಎಂದೂ, ಪರಿಶುದ್ಧ ವ್ರತ ಮತ್ತು ತಪಸ್ಸೆಂಬ ಸಂಪತ್ತಿಗೆ ಆನಂದದ ಮುಕ್ತಿಯೇ ವಧು- ಮದುವೆಯಾಗುವ ಕನ್ಯೆ ಎಂದು ತಿಳಿದನು, ಋಷಿಗಳ ಪಾದಕಮಲಗಳಿಗೆ ನಿತ್ಯಸೇವೆ ಮಾಡುವುದೇ ತನ್ನ ಸತಿ, ಆ ಸತಿಗೆ ಮೂರು ಜಗತ್ತಿನ ಒಡೆತನ ದಾಸಿಗೆ ಸಮ ಎಂದು ತಿಳಿದನು. ಹೀಗೆ ಭಾವಿಸಿದ ವೀರನಾದ ಪಾಂಡು ಕಾಡಿನಲ್ಲಿ ಸಂತಸದಲ್ಲಿ ಉಬ್ಬಿದನು.
ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು ||
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ || (೪) ||
ಪದವಿಭಾಗ-ಅರ್ಥ: ವರುಷ ಹದಿನಾರಾಯ್ತು ಧರಣೀಶ್ವರನ ಹಿರಿಯ ಮಗಂಗೆ= ಧರ್ಮರಾಯನಿಗೆ, ಭೀಮಗೆ ವರುಷ ಹದಿನೈದು+ ಅರ್ಜುನಗೆ ಹದಿನಾಲ್ಕು, ಹದಿಮೂರು ಕಿರಿಯರಿಬ್ಬರಿಗೆ ಅನಿಬರು(ಅವರೆಲ್ಲರೂ)+ ಆ ಮುನಿವರರಿನ+ ಅಧ್ಯಯನ+ ಆದಿ ವಿದ್ಯಾನಿರತರಾದರು ಬಂದುದು+ ಒಂದು ವಸಂತಮಯ ಸಮಯ.
ಅರ್ಥ: ಧರ್ಮರಾಯನಿಗೆ ಹದಿನಾರು ವರ್ಷ ಆಯಿತು; ಭೀಮನಿಗೆ ವರ್ಷ ಹದಿನೈದು ತುಂಬಿತು; ಅರ್ಜುನನಿಗೆ ಹದಿನಾಲ್ಕು ವರ್ಷ; ನಕುಲ ಸಹದೇವ ಕಿರಿಯರಿಬ್ಬರಿಗೆ ಹದಿಮೂರು ತುಂಬಿತು. ಅವರೆಲ್ಲರೂ ಮುನಿವರರಬಳಿ ಅಧ್ಯಯನ ಮೊದಲಾದ ವಿದ್ಯೆಯನ್ನು ಕಲಿಯುವುದರಲ್ಲಿ ನಿರತರಾದರು.ಆಗ ಒಂದು ವಸಂತ ಕಾಲ ಬಂದಿತು.

ವಸಂತಕಾಲದ ವರ್ಣನೆ[ಸಂಪಾದಿಸಿ]

ತೆಗೆದು ದಗ್ಗದ ತಂಪು ನದಿ ಸರ
ಸಿಗಳ ತಡಿಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ ||
ಸೊಗಸಿದವು ನೆಳಲುಗಳು ದೊರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೊಡೆ ಜನನಿಕರ ||(೫) ||
ಪದವಿಭಾಗ-ಅರ್ಥ: ತೆಗೆದು ದಗ್ಗದ ತಂಪು= ಶಿಶಿರ ಋತುವಿನ ಚಳಿ ಹೋಯಿತು. ನದಿ ಸರಸಿಗಳ ತಡಿಯಲಿ= ನದಿ ಮತ್ತು ಸರೋವರಗಳ ದಡದಲ್ಲಿ ಜನರು ಬರಲು ಆರಂಭಿಸಿದರು- ಹೆಜ್ಜೆಯಾದುದು= ಅವರ ಹೆಜ್ಜೆಗಳು ಅಲ್ಲಿ ಮೂಡಿದವು, ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ = ಹಗಲು ಹೆಚ್ಚಿದ್ದರಿಂದ ಪಾಚಿಗಳೆಲ್ಲಾ ಒಣಗಿ, ತಣ್ಣನೆಯ ನೀರನ್ನು ನಿವಾರಿಸಿತು- , ಸೊಗಸಿದವು ನೆಳಲುಗಳು ದೊರಕೆ= ಜನರಿಗೆ ನೆರಳು ದೊರಕಿದಾಗ ಇಷ್ಟವಾದವು. ಸೆಗಳಿಕೆಗಳು+ ಏರಿದವು= ಸೆಕಳಿ- ಸೆಕೆ ಹೆಚ್ಚಿತು, ತಂಗಾಳಿಗೆ ವಿಹಾರಿಸಿ ಮೈಯ ತೆತ್ತುದು ಕೊಡೆ ಜನನಿಕರ= ಜನರು ವಿಹಾರಮಾಡಿ (ನೆಡೆದು) ತಂಗಾಳಿಗೆ ಮೈಯನ್ನು ಒಡ್ಡಿದರು.
ಅರ್ಥ: ಶಿಶಿರ ಋತುವಿನ ಚಳಿ ಹೋಯಿತು. ವಸಂತವು ಆರಂಭವಾಯಿತು; ನದಿ ಮತ್ತು ಸರೋವರಗಳ ದಡದಲ್ಲಿ ಜನರು ಬರಲು ಆರಂಭಿಸಿದರು. ಅವರ ಹೆಜ್ಜೆಗಳು ಅಲ್ಲಿ ಮೂಡಿದವು. ಹಗಲು ಹೆಚ್ಚಿದ್ದರಿಂದ ಪಾಚಿಗಳೆಲ್ಲಾ ಒಣಗಿ, ತಣ್ಣನೆಯ ನೀರನ್ನು ನಿವಾರಿಸಿತು, ಜನರಿಗೆ ನೆರಳುಗಳು ದೊರಕಿದಾಗ ಇಷ್ಟವಾದವು. ಸೆಕಳಿ ಅಥವಾ ಸೆಕೆ ಹೆಚ್ಚಿತು, ಜನರು ವಿಹಾರಮಾಡಿ (ನೆಡೆದು) ತಂಗಾಳಿಗೆ ಮೈಯನ್ನು ಒಡ್ಡಿದರು.
ಯೋಗಿಗೆತ್ತಿದ ಖಡುಗ ಧಾರೆ ವಿ
ಯೋಗಿತೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು ||
ಆಗಮಿಕರೆದೆ ಶೂಲ ಗರ್ವಿತ
ಗೊಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ || (೬) ||
ಪದವಿಭಾಗ-ಅರ್ಥ: ಯೋಗಿಗೆ+ ಎತ್ತಿದ ಖಡುಗಧಾರೆ = ಈ ವಸಂತಕಾಲವು- ಯೋಗಿಗಳ ಮೆಲೆ ಎತ್ತಿದ ಖಡ್ಗದಂತೆ, ವಿಯೋಗಿ ತೆತ್ತಿದ ಸಬಳವು (ಪ್ರಿಯರಿಂದ ದೂರವಾದ ವಿಯೋಗಿಗಳಿಗೆ ಚುಚ್ಚಿದ ಈಟಿ- ಯಾ ಭರ್ಚಿಯಂತೆ ನೋವು ಕೊಡುವುದು)+ ಅಖಿಳ ವಿರಾಗಿಗಳ ಹೆಡತಲೆಯ ದಡಿ= ಎಲ್ಲಾ ವಿರಾಗಿಗಳಿಗೆ ಹಿಂದಲೆಗೆ ಎತ್ತಿದ ಅಥವಾ ಹೊಡೆದ ದೊಣ್ಣೆ, ನೈಷ್ಠಿಕರಿಗೆ+ ಅಲಗಣಸು= ನೇಮ ನಿಷ್ಟೆಯವರಿಗೆ ಅಥವಾ ಯಾವಜ್ಜೀವವೂ ಬ್ರಹ್ಮಚರ್ಯವನ್ನು ಪಾಲಿಸುವವರಿಗೆ ಈ ಕಾಲ ಅಲಗಣಸಿನಂತೆ (ಉದ್ದಕತ್ತಿ) ಅಪಾಯಕಾರಿ, ಆಗಮಿಕರ+ ಎದೆ ಶೂಲ= ಆಗಮಗಳನ್ನು ಪಠಿಸುವ ಧಾರ್ಮಿಕರಿಗೆ ಎದೆಗಿಟ್ಟ ಶೂಲದಂತೆ ಈ ಕಾಲ, ಗರ್ವಿತ ಗೊಗೆಗಳ ನಖಸಾಳವು (ಸಂಯಮಿಯೆಂದು ಗರ್ವ ಪಡುವವರಿಗೆ ಗೂಗೆಗಳ ಉಗುರಿನ ಆಳದ ಗಾಯದಂತೆ)+ ಅಗ್ಗದ ಭೋಗಿಗಳ ಕುಲದೈವವು= ಉತ್ತಮ ಭೋಗಿಗಳಿಗೆ, ಸುಖವನ್ನು ಅನುಭವಿಸುವವರಿಗೆ ಈ ವಸಂತಕಾಲವು ಕುಲದೈವವಿದ್ದಂತೆ ಪ್ರೀತಿಕರವಾದುದು. ಎಸೆದುದು= ಶೋಭಿಸಿತು, ಕುಸುಮಮಯ ಸಮಯ= ಹೀಗೆ ವಸಂತ ಸಮಯವು ಶೋಭಿಸಿತು.
ಅರ್ಥ: ಈ ವಸಂತಕಾಲವು ಯೋಗಿಗಳ ಮೆಲೆ ಎತ್ತಿದ ಖಡ್ಗದಂತೆ; ಪ್ರಿಯರಿಂದ ದೂರವಾದ ವಿಯೋಗಿಗಳಿಗೆ ಚುಚ್ಚಿದ ಈಟಿ- ಯಾ ಭರ್ಚಿಯಂತೆ ನೋವು ಕೊಡುವುದು; ಎಲ್ಲಾ ವಿರಾಗಿಗಳಿಗೆ ಹಿಂದಲೆಗೆ ಎತ್ತಿದ ಅಥವಾ ಹೊಡೆದ ದೊಣ್ಣೆ; ನೇಮ ನಿಷ್ಟೆಯವರಿಗೆ ಅಥವಾ ಯಾವಜ್ಜೀವವೂ ಬ್ರಹ್ಮಚರ್ಯವನ್ನು ಪಾಲಿಸುವವರಿಗೆ ಈ ಕಾಲ ಉದ್ದ ಕತ್ತಿ; ಅಪಾಯಕಾರಿ, ಆಗಮಗಳನ್ನು ಪಠಿಸುವ ಧಾರ್ಮಿಕರಿಗೆ ಎದೆಗಿಟ್ಟ ಶೂಲದಂತೆ ಈ ಕಾಲ, ಸಂಯಮಿಯೆಂದು ಗರ್ವ ಪಡುವವರಿಗೆ ಗೂಗೆಗಳ ಉಗುರಿನ ಆಳದ ಗಾಯದಂತೆ; ಉತ್ತಮ ಭೋಗಿಗಳಿಗೆ, ಸುಖವನ್ನು ಅನುಭವಿಸುವವರಿಗೆ ಈ ವಸಂತಕಾಲವು ಕುಲದೈವವಿದ್ದಂತೆ ಪ್ರೀತಿಕರವಾದುದು. ಹೀಗೆ ವಸಂತ ಸಮಯವು ಶೋಭಿಸಿತು.
ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ ||
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ || (೭) ||
ಪದವಿಭಾಗ-ಅರ್ಥ: ಮೊರೆವ ತುಂಬಿಯ ಗಾಯಕರ= ಈ ವಸಂತ ರಾಜನು - ಮೊರೆವ ದುಂಬಿಗಳೆಂಬ ಗಾಯಕರು, ನಯಸರದ ಕೋಕಿಲ ಪಾಠಕರ= ಇಂಪಾದ ಸ್ವರದಿಂದ ಕೂಡಿದ ಕೋಗಿಲೆಗಳೆಂಬ ವಂದಿ ವಂದಿಮಾಗಧರು, ಹೊಗಳುಭಟರು, ಬಂಧುರದ ಗಿಳಿಗಳ ಪಂಡಿತರ= ಚೆಲುವಾದ ಗಿಳಿಗಳು ಪಂಡಿತರು, ಮಾಮರದ ಕರಿಘಟೆಯ= (ಹೂ ಬಿಟ್ಟ) ಮಾವಿನ ಮರಗಳು ಅವನ ಸೈನ್ಯದ ಆನೆಗಳು, ಅರಳಿದಂಬುಜ= ಅರಳಿದ ಕಮಲಗಳು, ಸತ್ತಿಗೆಯ ಮಂಜರಿಯ= ಅವನ ಛತ್ರಿ, ಕುಸುಮದ ಚಾಮರದ= ಅರಳಿದ ಹೂವುಗಳು ಅವನ= ಚಾಮರ, ಚಾತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ= ಹೀಗೆ ವಂಸಂತ ರಾಜನು ತನ್ನ ಸೈನ್ಯದೊಂದಿಗೆ - ಪಾಂಡುರಾಜನ ಮೇಲೆ ಧಾಳಿಇಟ್ಟನು.
ಅರ್ಥ: ಶೃಂಗಪರ್ವತದಲ್ಲಿ ವಸಂತ ರಾಜನು ತನ್ನ ಸೈನ್ಯದೊಂದಿಗೆ ಪಾಂಡುರಾಜನ ಮೇಲೆ ಧಾಳಿಇಟ್ಟನು. ಅವನಿಗೆ ಮೊರೆವ ದುಂಬಿಗಳೆಂಬ ಗಾಯಕರು, ಇಂಪಾದ ಸ್ವರದಿಂದ ಕೂಡಿದ ಕೋಗಿಲೆಗಳೆಂಬ ವಂದಿ ವಂದಿಮಾಗಧರು, ಹೊಗಳುಭಟರು, ಚೆಲುವಾದ ಗಿಳಿಗಳು ಪಂಡಿತರು, ಹೂ ಬಿಟ್ಟ ಮಾವಿನ ಮರಗಳು ಅವನ ಸೈನ್ಯದ ಆನೆಗಳು, ಅರಳಿದ ಕಮಲಗಳು ಅವನ ಛತ್ರಿ, ಅರಳಿದ ಹೂವುಗಳು ಅವನ ಚಾಮರ, ಹೀಗೆ ಶೃಂಗಪರ್ವತದಲ್ಲಿ ವಸಂತ ರಾಜನು ಪಾಂಡುರಾಜನ ಮೇಲೆ ಧಾಳಿಇಟ್ಟನು.
ಫಲಿತ ಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಲಿತ ಕಮಲದ ಕಂಪುಗಳ ಬನಬನದ ಗುಂಪುಗಳ ||
ಎಳ ಲತೆಯ ನುಣ್ಣುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ || (೮) ||
ಪದವಿಭಾಗ-ಅರ್ಥ: ಫಲಿತ ಚೂತದ ಬಿಣ್ಪುಗಳ(ಗಾತ್ರ ವೈಭವ ಆಡಂಬರ)= ಹಣ್ಣಾದ ದೊಡ್ಡ ಮಾವಿನ ಹಣ್ಣುಗಳ ವೈಭವ, ನೆರೆ ತಳಿತ+ ಅಶೋಕೆಯ ಕೆಂಪುಗಳ= ಆಶೋಕವೃಕ್ಷಗಳ ಕೆಂಪು ಚಿಗುರು, ಪರಿದಲಿತ ಕಮಲದ ಕಂಪುಗಳ= ಅರಳಿದ ಕಮಲಗಳ ಸುವಾಸನೆ, ಬನಬನದ ಗುಂಪುಗಳ= ಅಲ್ಲಲ್ಲಿ ಕಾಡಿನ ಮರಗಳ ದಟ್ಟಣೆ, ಎಳ ಲತೆಯ ನುಣ್ಣುಗಳ= ಎಳೆಯ ಬಳ್ಳಿಗಳ ಕೋಮಲತೆ, ನವ ಪರಿಮಳದ ಪವನನ ಸೊಂಪುಗಳ= ಹೊಸ ಪರಿಮಳದ ಗಾಳಿಯ ಸೊಂಪು- ಸೊಗಸು, ವೆಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ= ವಸಂತಕಾಲದ ಈ ಹೆಗ್ಗಳಿಕೆ ಜನರ ಕಣ್ಣನ್ನೂ ಮನಸ್ಸನ್ನೂ ಢಾಳವಾಗಿ ಪ್ರಕಾಶಿಸಿ ಜನರ ಕಣ್ಣನ್ನೂ ಮನಸ್ಸನ್ನೂ ಸೂರೆಗೊಂಡಿತು.
ಅರ್ಥ: ಮಾವಿನ ಮರದಲ್ಲಿ ಹಣ್ಣಾದ ದೊಡ್ಡ ಮಾವಿನ ಹಣ್ಣುಗಳ ವೈಭವ, ಆಶೋಕ ವೃಕ್ಷಗಳ ಕೆಂಪು ಚಿಗುರು, ಅರಳಿದ ಕಮಲಗಳ ಸುವಾಸನೆ, ಅಲ್ಲಲ್ಲಿ ಕಾಡಿನ ಮರಗಳ ದಟ್ಟಣೆ, ಎಳೆಯ ಬಳ್ಳಿಗಳ ಕೋಮಲತೆ, ಹೊಸ ಪರಿಮಳದ ಗಾಳಿಯ ಸೊಂಪು- ಸೊಗಸು, ವಸಂತಕಾಲದ ಈ ಹೆಗ್ಗಳಿಕೆ ಢಾಳವಾಗಿ ಪ್ರಕಾಶಿಸಿ ಜನರ ಕಣ್ಣನ್ನೂ ಮನಸ್ಸನ್ನೂ ಜನರ ಕಣ್ಣನ್ನೂ ಮನಸ್ಸನ್ನೂ ಸೂರೆಗೊಂಡಿತು.
ಪಸರಿಸಿತು ಮಧು ಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು ||
ಒಸರ್ವ ಮಕರಂದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು || (೯) ||
ಪದವಿಭಾಗ-ಅರ್ಥ: ಪಸರಿಸಿತು ಮಧು ಮಾಸ= ವಸಂತ ಮಾಸವು ಆವರಿಸಿಕೊಂಡಿತು, ತಾವರೆಯೆಸಳ ದೋಣಿಯ ಮೇಲೆ= ಕಮಲದ ಎಸಳಿನ ದೋಣಿಯ ಮೇಲೆ, ಹಾಯ್ದವು ಕುಸುಮ ರಸದುಬ್ಬರದ ತೊರೆಯನು= ಹೂವಿನ ರಸದ ಉಕ್ಕುವ ಹೊಳೆಯನ್ನೇ, ಕೂಡೆ ತುಂಬಿಗಳು= ಜೇನುಹುಳುಗಳು ಸೇರಿಕೊಂಡವು, ಒಸರ್ವ ಮಕರಂದ= ಅದರಿಂದ ಜಿನುಗುವ ಮಕರಂದದ - ಜೇನುರಸ ಇರುವ, ತುಷಾರದ ಕೆಸರೊಳು+ ಅದ್ದವು (ಅದ್ದು - ಒದ್ದೆಯಾಗು, ಮುಳುಗು,ಇಳಿ)= ಮಂಜಿನ ಕೆಸರಿನಲ್ಲಿ ಇಳಿದು ಆಡಿದವು ಕೊಂಚೆಗಳು= ಹಂಸಗಳು, ಹಗಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು.
ಅರ್ಥ: ವಸಂತ ಮಾಸವು ಎಲ್ಲೆಡೆ ಆವರಿಸಿಕೊಂಡಿತು. ಕಮಲದ ಎಸಳಿನ ದೋಣಿಯ ಮೇಲೆ, ಹೂವಿನ ರಸವು ಉಕ್ಕುವ ಅದರಿಂದ ಜಿನುಗುವ ಮಕರಂದದ - ಜೇನುರಸ ಇರುವ ಹೊಳೆಯನ್ನೇ, ಜೇನುಹುಳುಗಳು ಸೇರಿಕೊಂಡವು. ಹಂಸಗಳು, ಹಗಲಿನಲ್ಲಿ ಶೋಭಿಸುವ ದಂಪತಿವಕ್ಕಿ, ಸಾರಸ ರಾಜಹಂಸಗಳು, ಮಂಜಿನ ಕೆಸರಿನಲ್ಲಿ ಇಳಿದು ಆಡಿದವು.
ಜಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು ||
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ || (೧೦) ||
ಪದವಿಭಾಗ-ಅರ್ಥ: ಜಗವ ಹೊರೆದುದು= ತುಂಬಿತು, ಬಹಳ ಪರಿಮಳದ+ ಒಗುಮಿಗೆಯ= ಹಿಚ್ಚಿನ ಮಿಗು- ಹೆಚ್ಚು ಒಗುಮಿಗು- ಸ್ವಲ್ಪಹೆಚ್ಚಿನ, ತಂಗಾಳಿ ವನ ವೀಧಿಗಳ= ಬೀದಿಗಳನ್ನು ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು= ವಿರಹಿಗಳು ತಂಗಾಳಿ ಬೀಸುವ ಪ್ರದೇಶವನ್ನು ಹೊಕ್ಕವರು ಹಿಂತಿರುಗಿ ಬರಲಿಲ್ಲ, ಅಲ್ಲೇ ಸಮಾಧಾನ ಹೊಂದುತ್ತಿದ್ದರು, ಹೊಗುವ ಕಾಮನ ದಳದ ಚೂಣಿಯ ಸೊಗಸು ಹೊಯ್ದರೆ= ನುಗ್ಗುವ ಮನ್ಮಥನ ಸೈನ್ಯದ ಮುಂಚೂಣಿಯ ಸೊಗಸು- ಆನಂದ ಧಾಳಿಮಾಡಿ, ಕೈದುವಿಕ್ಕಿತು= ಕೈಸೆರೆ ಹಿಡಿಯಿತು; ವಿಗಡ ಮುನಿಜನವ (ಧೀರರಾದ ಮುನಿಜನರನ್ನು ಕೂಡಾ,)+ ಏನನೆಂಬೆನು ನೃಪತಿ ಕೇಳೆಂದ = ವಸಂತದ ಪರಾಕ್ರಮವನ್ನು ಏನು ಹೇಳಲಿ ರಾಜನೇ ಕೇಳು ಎಂದನು ಮುನಿ..
ಅರ್ಥ: ಬಹಳ ಪರಿಮಳದ ಹೆಚ್ಚಿನ ತಂಗಾಳಿ ಜಗತ್ತನ್ನು ತುಂಬಿತು. ವಿರಹಿಗಳು ತಂಗಾಳಿ ಬೀಸುವ ಬೀದಿಗಳನ್ನೂ ಪ್ರದೇಶವನ್ನೂ ಹೊಕ್ಕವರು ಹಿಂತಿರುಗಿ ಬರಲಿಲ್ಲ, ಅಲ್ಲೇ ಸಮಾಧಾನ ಹೊಂದುತ್ತಿದ್ದರು, ಮುಂದೆ ನುಗ್ಗುವ ಮನ್ಮಥನ ಸೈನ್ಯದ ಮುಂಚೂಣಿಯ ಆನಂದ ಧಾಳಿಮಾಡಿ ಧೀರರಾದ ಮುನಿಜನರನ್ನು ಕೂಡಾ,ಕೈಸೆರೆ ಹಿಡಿಯಿತು.ವಸಂತದ ಪರಾಕ್ರಮವನ್ನು ಏನು ಹೇಳಲಿ ರಾಜನೇ ಕೇಳು ಎಂದನು ಮುನಿ.

ಪಾಂಡುವಿನ ಮರಣ[ಸಂಪಾದಿಸಿ]

ಆ ವಸಂತದೊಳೆಮ್ಮೆ ಮಾದ್ರೀ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ ||
ಅವಳಿವಳೂರ್ವಶಿಯೋ ರಂಭೆಯೊ
ದೇವವಧುಗಳ ಸುಳಿವೂ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ || (೧೧) ||
ಪದವಿಭಾಗ-ಅರ್ಥ: ಆ ವಸಂತದೊಳು+ ಒಮ್ಮೆ ಮಾದ್ರೀದೇವಿ ವನದೊಳಗೆ ಆಡುತಿರ್ದಳು= ವನದಲ್ಲಿ ವಿಹರಿಸುತ್ತಿದ್ದಳು, ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ= ಆನಂದದಿಂದ ಅಲಂಕರಿಸಿಕೊಂಡು, ಅವಳು+ ಅವಳನ್ನು ನೋಡಿ, ಇವಳು+ ಊರ್ವಶಿಯೋ ರಂಭೆಯೊ ದೇವವಧುಗಳ= ದೇವಕನ್ಯೆಯ, ಸುಳಿವೂ= ಸುಳಿದಾಡುವರೋ- ಅಲೆದಾಟವೋ, ತಾನು+ ಎನಲು+ ಆವ= ಯಾವ, ಚೆಲುವಿಕೆ ಶಿವಶಿವಾಯೆಂದು+ ಅರಸ ಬೆರಗಾದ.
ಅರ್ಥ: ಆ ವಸಂತದ ಸಮುದಲ್ಲಿ ಒಂದುದಿನ ಮಾದ್ರೀದೇವಿಯು ಹೂವಿನಲ್ಲಿ ತನ್ನನ್ನು ಸರ್ವಾಂಗ ಶೃಂಗಾರದ ವಿಲಾಸದ ಆನಂದದಿಂದ ಅಲಂಕರಿಸಿಕೊಂಡು ವನದಲ್ಲಿ ವಿಹರಿಸುತ್ತಿದ್ದಳು. ಅವಳನ್ನು ನೋಡಿದ ಪಾಂಡುವು, ಇವಳು ಊರ್ವಶಿಯೋ. ರಂಭೆಯೊ, ದೇವಕನ್ಯೆಯ ಸುಳಿದಾಟವೋ ಇದು ತಾನು ಎಂದುಕೊಳ್ಳುತ್ತಾ, ಇದು ಯಾವ ಬಗೆಯ ಚೆಲುವಿಕೆ ಶಿವಶಿವಾಯೆಂದು ಅರಸ ಪಾಂಡು ಬೆರಗಾದ. ದಿಗ್ಭ್ರಮೆಗೊಂಡು ಮೈಮರತ.
ತಾಗಿದವು ಶರನಿಕರ ಕಾಮನ
ಲಾಗು ವೇಗವದೆಂತುಟೋ ತೆಗೆ
ಹೂಗಣೆಗಳೈದಲ್ಲ ರೋಮಗಳೆಂಟು ಕೋಟಿಯಲಿ ||
ತೂಗಿ ನೆಟ್ಟವು ಕಣೆಗಳೆಂಬವೊ
ಲಾ ಗರುವನಳುಕಿದನು ಪ್ರಜ್ಞಾ
ಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು || (೧೨) ||
ಪದವಿಭಾಗ-ಅರ್ಥ: ತಾಗಿದವು ಶರನಿಕರ= ಕಾಮನ ಬಾಣಗಳ ಸಮೂಹವೇ ತಾಗಿತು ಪಾಂಡುವಿಗೆ, ಕಾಮನಲಾಗು= ಕಾಮನ ಬಾಣಪ್ರಯೋಗ ಕೌಶಲ, ವೇಗವು+ ಅದೆಂತುಟೋ= ಅವುಗಳ ವೇಗವು ಅದೆಂತಹುದೋ! ತೆಗೆ= ಕಾನಬಾಣಗಳು ಐದು ಎನ್ನವರು, ತೆಗೆ/ ಅದುಸುಳ್ಳು; ಹೂಗಣೆಗಳು ಐದಲ್ಲ, ರೋಮಗಳೆಂಟು ಕೋಟಿಯಲಿ ತೂಗಿ ನೆಟ್ಟವು= ಪಾಂಡುವಿನ ಮೈಮೇಲೆ ಎಷ್ಟು ರೋಮವುಂಟೋ - ಅಷ್ಟು , ಎಂಟು ಕೋಟಿ ಬಾಣಗಳು ಲೆಕ್ಕಮಾಡಿದಂತೆ ಕಣೆಗಳು ನಾಟಿದವು ಎಂಬಂತೆ ಅವನ ದೇಹದಲ್ಲಿ ನೆಟ್ಟವು. ಆ ಗರುವನು= ಶ್ರೇಷ್ಠವಾದವ ಹಿರಿಯನು, ಅಳುಕಿದನು= ಸೋತನು, ಪ್ರಜ್ಞಾ ಸಾಗರಂಗಳು= ಅವನ ಪ್ರಜ್ಞೆ- ಎಚ್ಚರಿಕೆಯ ಸಮುದ್ರವು, ಮಧ್ಯಕಟಿ= ಸೊಂಟ, ಜಾನು= ನೀಳವಾದ ತೋಳುಗಳು. ಅಂಘ್ರಿಗಳಿಗೆ= ಪಾದಗಳಿಗೆ, ಮಿತವಾಯ್ತು= ಸೀಮಿತವಾಯಿತು. ಮಾದ್ರಿಯ ಸೌಂದರ್ಯದಲ್ಲಿ ಮೈಮರೆತನು.
ಅರ್ಥ: ಕಾಮನ ಬಾಣಗಳ ಸಮೂಹವೇ ತಾಗಿತು ಪಾಂಡುವಿಗೆ. ಕಾಮನ ಬಾಣಪ್ರಯೋಗ ಕೌಶಲ, ಅವುಗಳ ವೇಗವು ಅದೆಂತಹುದೋ! ಕಾನಬಾಣಗಳು ಐದು ಎನ್ನವರು, ತೆಗೆ/ ಅದುಸುಳ್ಳು; ಹೂಗಣೆಗಳು ಐದಲ್ಲ, ಪಾಂಡುವಿನ ಮೈಮೇಲೆ ಎಷ್ಟು ರೋಮವುಂಟೋ - ಅಷ್ಟು, ಎಂದರೆ ಎಂಟು ಕೋಟಿ ಬಾಣಗಳು ಲೆಕ್ಕಮಾಡಿದಂತೆ ನಾಟಿದವು ಎಂಬಂತೆ ಅವನ ದೇಹದಲ್ಲಿ ನೆಟ್ಟವು. ಶ್ರೇಷ್ಠನಾದ ಹಿರಿಯ ಪಾಂಡು ಸೋತುಹೋದನು, ಅವನ ಪ್ರಜ್ಞೆ- ಎಚ್ಚರಿಕೆಯ ಸಮುದ್ರವು ಮಾದ್ರಿಯ ಸೊಂಟ, ನೀಳವಾದ ತೋಳುಗಳು ಪಾದಗಳಿಗೆ ಸೀಮಿತವಾಯಿತು. ಮಾದ್ರಿಯ ಸೌಂದರ್ಯದಲ್ಲಿ ಮೈಮರೆತನು.
ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತುರುಗಿದೆಳಲತೆ ವನದೊಳಾಡುವ ವಧುವ ಸಾರಿದನು ||
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋಂಪಿಸಿದ || (೧೩) ||
ಪದವಿಭಾಗ-ಅರ್ಥ: ಮರೆದು ಹಿಂದೆಲ್ಲವನು= ಹಿಂದಿನ ಶಾಪದ ವಿಷಯವೆಲ್ಲವನ್ನೂ ಮರೆತನು. ಕುಂತಿಯನು+ ಅರಿಯಲು+ ಈಯದೆ= ಕುಂತಿಗೆ ಗೊತ್ತಾದಂತೆ, ಮೆಲ್ಲಮೆಲ್ಲನೆ ತುರುಗಿ+ ದೆಳ+ ಲತೆ ವನದೊಳಾಡುವ ವಧುವ ಸಾರಿದನು= ಪತ್ನಿಯ ಹತ್ತಿರ ಹೋದನು, ಸೆರಗ ಹಿಡಿದರೆ ಬೇಡ ಬೇಡೆಂದು+ ಎರಗಿದಳು ಚರಣದಲಿ ತರುಣಿಯ ತುರುಬ ಹಿಡಿದು ಎತ್ತಿದನು ಹೆಣಗಿದರು+ ಒಡನೆ ಝೋಂಪಿಸಿದ= ಮೈಮರೆತ, ಬಲವಂತಮಾಡಿದ.
ಅರ್ಥ: ಪಾಂಡುವು ಹಿಂದಿನ ಶಾಪದ ವಿಷಯವೆಲ್ಲವನ್ನೂ ಮರೆತನು. ಕುಂತಿಗೆ ಗೊತ್ತಾದಂತೆ ಮೆಲ್ಲಮೆಲ್ಲನೆ ಎಳೆಯ ಬಳ್ಳಿಗಳು ತುಂಬಿದ ವನದಲ್ಲಿ ಅಡ್ಡಾಡುತ್ತಿದ್ದ ಮಡದಿಯ ಹತ್ತಿರ ಹೋದನು. ಅವನು ಅವಳ ಸೆರಗನ್ನು ಹಿಡಿದು ಎಳೆದಾಗರ, ಅವಳು 'ಬೇಡ ಬೇಡ' ಎಂದು ಅವನ ಕಾಲಗೆ ಬಿದ್ದಳು. ಆಗ ಅವನು ಪತ್ನಿಯ ತುರುಬನ್ನು ಹಿಡಿದು ಎತ್ತಿದನು. ಮಾದ್ರಿಯು ಬಿಡಿಸಿಕೊಳ್ಳಲು, ಪಾಂಡು ಅಪ್ಪಲು ಹೆಣಗಿದರು. ಒಡನೆ ಪಾಂಡು ಮೈಮರೆತು ಬಲವಂತಮಾಡಿದ.
ಕೊಂದೆಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದಲಾ ||
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲತಾಂಗಿ || (೧೪) ||
ಪದವಿಭಾಗ-ಅರ್ಥ: ಕೊಂದೆಲಾ ಕಡುಪಾಪಿ ಮರೆದು+ ಆ ಹಿಂದೆ ಮಾಡಿದ ಕೃತ್ಯವನು= ಪಾಪಿಯೇ ಮರೆತು ಕೊಂದುಕೊಂಡೆಯಲ್ಲಾ, ಹಿಂದೆ ಮಾಡಿದ ಮುನಿಹತ್ಯೆ ಮತ್ತು ಶಾಪವನ್ನು ಮರೆತು ನನ್ನನ್ನೂ ಕೊಂದೆ ನೀನೂ ಕೊಂದುಕೊಂಳ್ಳುತ್ತಿರುವೆ. ಮುನಿಯೆಂದ ನುಡಿ ಹೊಳ್ಳಹುದೆ= ಮನಿ ನುಡಿದ ಶಾಪ ಜೊಳ್ಳಾಗುವುದೇ? ಸುಡು ದುರ್ವಿಷಯಕೆ+ ಎಳಸಿದಲಾ= ನಿನ್ನ ನಡೆಯನ್ನು ಸುಡಬೇಕು! ಕಟ್ಟಯೋಚನೆ ಮಾಡಿದೆಯಲ್ಲಾ! ಬೆಂದುದೇ ನಿನ್ನ+ ಅರಿವು= ನಿನ್ನ ತಿಳುವಳಿಕೆ ಸುಟ್ಟಿತೇ? ಧೈರ್ಯವನು+ ಇಂದು ನೀಗಿದೆಯ+ ಅಕಟ= ಗಟ್ಟಿ ಮನಸ್ಸನ್ನು ಬಿಟ್ಟೆಯಾ ಅಕ್ಕಟಾ! ನಿನ್ನಯ ನಂದನರಿಗೆ+ ಆರುಂಟು+ ಎನುತ ಹೆಣಗಿದಳು ಲತಾಂಗಿ= ನೀನು ಮಡಿದರೆ ನಿನ್ನ ಮಕ್ಕಳಿಗೆ ಗತಿ ಯಾರಿದ್ದಾರೆ, ಎಂದು ಹೇಲುತ್ತಾ ಬಿಡಿಸಿಕೊಳ್ಳಲು ಹೆಣಗಾಡಿದಳು.
ಅರ್ಥ: ಪ್ರಿಯಾ ಪಾಂಡು, ನೀನು ಹಿಂದೆ ಮಾಡಿದ ಮುನಿಹತ್ಯೆ ಮತ್ತು ಅದರ ಶಾಪವನ್ನು ಮರೆತು ನನ್ನನ್ನೂ ಕೊಂದೆ ನೀನೂ ಕೊಂದುಕೊಂಳ್ಳುತ್ತಿರುವೆ. ಮನಿ ನುಡಿದ ಶಾಪ ಜೊಳ್ಳಾಗುವುದೇ? ನಿನ್ನ ನಡೆಯನ್ನು ಸುಡಬೇಕು! ಕಟ್ಟಯೋಚನೆ ಮಾಡಿದೆಯಲ್ಲಾ! ಗಟ್ಟಿ ಮನಸ್ಸನ್ನು ಬಿಟ್ಟೆಯಾ ಅಕ್ಕಟಾ! ನೀನು ಮಡಿದರೆ ನಿನ್ನ ಮಕ್ಕಳಿಗೆ ಗತಿ ಯಾರಿದ್ದಾರೆ, ಎಂದು ಹೇಳುತ್ತಾ ಮಾದ್ರಿ ಬಿಡಿಸಿಕೊಳ್ಳಲು ಹೆಣಗಾಡಿದಳು.
ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು ||
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ || (೧೫) ||
ಪದವಿಭಾಗ-ಅರ್ಥ: ಕೊಂಬುದೇ ಬಯಲು ಅರಿತಗಿರಿತದ ಡೊಂಬಿನ ಆಗಮ ನೀತಿಗೀತಿಯ= ಬಯಲುರೂಪದ - ನಿರಾಕಾರವಾದ ಕಾಮವು ಅರಿವು, ಆಗಮಶಾಸ್ತ್ರ, ನೀತಿಗಳನ್ನು ಕೊಂಬುದೇ/ ಲೆಕ್ಕಕ್ಕೆ ತೆಗೆದುಕೊಳ್ಳುವುದೇ? ಶಂಬರಾರಿಯ= (ಶಂಬರಾಸುರನನ್ನು ಕೊಂದ ಪ್ರದ್ಯುಮ್ನ ಕೃಷ್ಣನಮಗ - ಮನ್ನ್ಮಥನ ಅವತಾರ) ಮನ್ಮಥನ ಸಬಳವಲ್ಲಾ - ದೊಡ್ಡ ಈಟಿ= ಪಾಂಡುವಿಗೆ ಮನ್ಮಥನ ದೊಡ್ಡ ಬಾಣನಾಟಿದೆ- ಅದರಿಂದ, ಬೇಗೆ ಮೂಡಿದುದು= ಕಾಮದ ಬೆಂಕಿಯ ಉರಿ ಹುಟ್ಟಿತು, ಬೆಂಬಿಡದೆ ಮರಳಿದೊಡೆ= ಆ ಬಾಣ ಬೆನ್ನಟ್ಟಿಬಂದು ಹಿಂದಿರುಗಿದರೆ, ಮರುಮೊನೆ ಗೊಂಬುದೆಂಬವೊಲ್+ ಮತ್ತೆ ಬರುವುದೇ? ಎಂಬಂತೆ, ಈಗ ಸಿಕ್ಕಿದ ಅವಕಾಶ ಬಿಟ್ಟರೆ ಮತ್ತೆ ಸಿಗದು ಎಂಬಂತೆ, ಅವನಿಪತಿ+ (ಯೊ) ಒತ್ತಂಬರದಿ= ರಾಜ ಪಾಡುವುವು ಒತ್ತಾಯದಿಂದ, ಹಿಡಿದು ಅಬಲೆಯನು ಕೂಡಿದನು ಕಳವಳಿಸಿ= ನಿಸ್ಸಹಾಯಕಿ ಮಾದ್ರಿಯನ್ನು ಹಿಡಿದು ಕೂಡಿದನು.
ಅರ್ಥ:ಬಯಲುರೂಪದ - ನಿರಾಕಾರವಾದ ಕಾಮವು ಅರಿವು, ಆಗಮಶಾಸ್ತ್ರ, ನೀತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ? ಮನ್ಮಥನ ಸಬಳವಲ್ಲಾ - ದೊಡ್ಡ ಈಟಿ= ಪಾಂಡುವಿಗೆ ಮನ್ಮಥನ ದೊಡ್ಡ ಬಾಣ ನಾಟಿದೆ- ಅದರಿಂದ ರಾಜನಲ್ಲಿ ಕಾಮದ ಬೆಂಕಿಯ ಉರಿ ಹುಟ್ಟಿತು, (ಆ ಬಾಣವು) ಬೆನ್ನಟ್ಟಿಬಂದು ಹಿಂದಿರುಗಿದರೆ ಮತ್ತೆ (ಆ ಬಾಣಕ್ಕೆ) ಅವಕಾಶ ಬರುವುದೇ? ಎಂಬಂತೆ,ಅಥವಾ ಈಗ ಸಿಕ್ಕಿದ ಅವಕಾಶ ಬಿಟ್ಟರೆ ಮತ್ತೆ ಸಿಗದು ಎಂಬಂತೆ, ರಾಜ ಪಾಂಡುವು ಒತ್ತಾಯದಿಂದ ನಿಸ್ಸಹಾಯಕಿ ಪತ್ನಿ ಮಾದ್ರಿಯನ್ನು ಹಿಡಿದು ಭೋಗಿಸಿದನು.
ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು ||
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ || (೧೬) ||
ಪದವಿಭಾಗ-ಅರ್ಥ: ಆ ಸುಖದ ಝೋಂಪಿನಲಿ = ಆ ಭೋಗದ ಸುಖಾತಿಶಯದಲ್ಲಿ, ಮೈಮರೆದು ಓಸರಿಸಿದುದು ವದನ (ಮುಖ)= ಮೈಮರೆತು ಎಚ್ಚರವಿಲ್ಲದೆ ಮುಖವು ಪಕ್ಕಕ್ಕೆವಾಲಿತು. ಕಂಗಳು (ಪೈಸರ= ಹಿಂದಕ್ಕೆ ಸರಿಯುವುದು) ಪೈಸರಿಸಿದವು= ಕಣ್ಣುಗಳು ತೇಲಿದವು, ತೆಕ್ಕೆ ಸಡಲಿತು= ಅಪ್ಪುಗೆ ಸಡಿಲವಾಯಿತು, ದೇಹ ಬಾರಿಸಿತು= ದೇಹವು ಪೆಟ್ಟು ಬಿದ್ದಂತೆ ಕುಸಿಯಿತು, ಸೂಸಿದುದು ನಿಟ್ಟುಸುರು= ನಿಟ್ಟುಸಿರು ಬಿಟ್ಟು, ರಾಣೀವಾಸದ+ ಉರದಲಿ ಕದಪನಿಟ್ಟು= ತನ್ನ ರಾಣಿಯ ಎದೆಯಮೇಲೆ ಕೆನ್ನಯನ್ನಿಟ್ಟು, ಮಹೀಶನು+ ಒರಗಿದ ಹದನ ಕಂಡಳು= ರಾಜನು ಎಚ್ಚರವಿಲ್ಲದೆ ಮಲಗಿದ ರೀತಿಯನ್ನು ಅವನ ಪತ್ನಿ ಮಾದ್ರಿ ಬೆದರಿ ನೋಡಿದಳು, ಕಾಂತೆ ಭೀತಿಯಲಿ= ಅವನ ಪತ್ನಿ ಮಾದ್ರಿ ಬೆದರಿ- ನೋಡಿದಳು,
ಅರ್ಥ:ರಾಜನು ಪತ್ನಿಯೊಡನೆ ಆ ಭೋಗದ ಸುಖಾತಿಶಯದಲ್ಲಿದ್ದಾಗ, ಮೈಮರೆತು ಎಚ್ಚರವಿಲ್ಲದೆ ಅವನ ಮುಖವು ಪಕ್ಕಕ್ಕೆವಾಲಿತು. ಕಣ್ಣುಗಳು ತೇಲಿದವು, ಅಪ್ಪುಗೆ ಸಡಿಲವಾಯಿತು, ದೇಹವು ಪೆಟ್ಟು ಬಿದ್ದಂತೆ ಕುಸಿಯಿತು,ನಿಟ್ಟುಸಿರುಗಳು ಹೊರಬಂದವು, ತನ್ನ ರಾಣಿಯ ಎದೆಯಮೇಲೆ ಕೆನ್ನಯನ್ನಿಟ್ಟು ರಾಜನು ಎಚ್ಚರವಿಲ್ಲದೆ ಮಲಗಿದ ರೀತಿಯನ್ನು ಅವನ ಪತ್ನಿ ಮಾದ್ರಿ ನೋಡಿ ಬೆದರಿದಳು.
ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ ||
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ|| (೧೭) ||
ಪದವಿಭಾಗ-ಅರ್ಥ: ಅಕಟ ಪಾಂಡು ಮಹೀಶ ವಿಷಕನ್ನಿಕೆಯನು+ ಎನ್ನನು ಮುಟ್ಟಿದೈ = ಅಕಟಾ! ಪಾಂಡುರಾಜಾ, ನಾನು ವಿಷಕನ್ನಿಕೆಯಾದೆ, ನನ್ನನ್ನು ಮುಟ್ಟಿದೆಯಲ್ಲಾ! ಬೇಡ+ ಅಕಟ ಕೆಡಿಸದಿರು ಎನ್ನೆನೇ, ತಾನು+ ಅರಿಯನೇ ಹದನ(ಪರಿಣಾಮ) = ನಾನು, ಬೇಡ- ನನ್ನನ್ನು ಕೂಡಬೇಡ ಎನ್ನಲಿಲ್ಲವೇ? ಪರಿಣಾಮ ಹೀಗಾಗುವುದೆಂದು ತಾನು ತಿಳಿದಿಲ್ಲವೇ? ಪ್ರ+ ಅಕಟ= ಅಯ್ಯೋ! ಕುರುಕುಲ ತಿಲಕರೀ ಬಾಲಕರನು+ ಆರಿಗೆ ಕೊಟ್ಟೆ= ಕುರುಕುಲ ತಿಲಕರು ಈ ಬಾಲಕರು; ಅವರನ್ನು ಯಾರಿಗೆ ಕೊಟ್ಟೆ! ತನ್ನೊಡನೆ+ ಅಕಟ ಮುನಿದೈ= ಅಥವಾ ನನ್ನೊಡನೆ ಸಿಟ್ಟಿನಿಂದ ಮೌನವಾದೆಯಾ? ಮಾತಾನಾಡೆಂದು+ ಒರಲಿದಳು ಮಾದ್ರಿ= ರಾಜಾ ಮಾತನಾಡು ಎಂದು ಗೋಳಿಟ್ಟಳು ಮಾದ್ರಿ.
ಅರ್ಥ:ಮಾದ್ರಿಯು ತನ್ನ ಎದೆಯಮೇಲೆ ಎಚ್ಚರವಿಲ್ಲದೆ ಮಲಗಿದ ಪಾಂಡುವನ್ನು ನೋಡಿ, ಅಕಟಾ! ಪಾಂಡುರಾಜಾ, ನಾನು ವಿಷಕನ್ನಿಕೆಯಾದೆ, ನನ್ನನ್ನು ಮುಟ್ಟಿದೆಯಲ್ಲಾ! ನಾನು, ಬೇಡ- ನನ್ನನ್ನು ಕೂಡಬೇಡ ಎನ್ನಲಿಲ್ಲವೇ? ಪರಿಣಾಮ ಹೀಗಾಗುವುದೆಂದು ರಾಜನು- ತಾನು ತಿಳಿದಿಲ್ಲವೇ? ಅಯ್ಯೋ! ಕುರುಕುಲ ತಿಲಕರು ಈ ಬಾಲಕರು; ಅವರನ್ನು ಯಾರಿಗೆ ಕೊಟ್ಟೆ! ಅಥವಾ ನನ್ನೊಡನೆ ಸಿಟ್ಟಿನಿಂದ ಮೌನವಾದೆಯಾ? ರಾಜಾ ಮಾತನಾಡು ಎಂದು ಗೋಳಿಟ್ಟಳು ಮಾದ್ರಿ.
ಎನಿದೆತ್ತಣ ರಭಸ ಮಾದ್ರೀ
ಮಾನಿನಿಯೋ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ ||
ಏನು ಮಾರಿಯೋ ಶಿವಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು || (೧೮) ||
ಪದವಿಭಾಗ-ಅರ್ಥ: ಕುಂತಿ ಅಳುವ ಸದ್ದು ಕೇಳಿ, ಎನಿದು+ ಎತ್ತಣ ರಭಸ= ಏನಿದು ಯಾವಕಡೆಯಿಂದ ರೋದನದ ಸದ್ದು ಎಂದು, ಮಾದ್ರೀ ಮಾನಿನಿಯೋ= ಮಾದ್ರಿಯೋ ಅರಚುತ್ತಿರುವುದು,, ಹಾ ರಾಯನು+ ಆವೆಡೆ= ಅಯ್ಯೋ ರಾಜನು ಎಲ್ಲಿದ್ದಾನೆ? ಹಾನಿ ಹಿರಿದುಂಟು+ ಅರಿವೆನು+ ಅಂಗಸ್ಫುರಿತ ಶಕುನದಲಿ= ಏನೋ ಡೊಡ್ಡ ಅನಾಹುತವಾಗಿದೆ ಎಂದು ಭಾವಿಸುತ್ತೇನೆ, ಕಣ್ಣು ಅದರುವುದು ಮುಂತಾದ ದೇಹ ಕಂಪನದಿಂದ ಕೆದುಕನ್ನು ಭಾವಿಸುತ್ತೇನೆ, ಏನು ಮಾರಿಯೋ= ಏನು ಅಪಾಯವೋ! ಶಿವಶಿವಾ ಯೆನುತ+ ಶಿವ ಶಿವಾ ಎನ್ನತ್ತಾ, ಆ ನಿತಂಬಿನಿ= ಆ ಸುಂದರಿ ಕುಂತಿ, ಗಾಢ ಗತಿಯಲಿ ಕಾನನದೊಳು+ ಐತಂದಳು+ ಅಕ್ಕೆಯ=ಅಳುವಿಕೆ, ಸರದ ಬಳಿವಿಡಿದು- ಅಳುವ ದನಿಯ ದಿಕ್ಕು ಹಿಡಿದು = ಅಳುವ ದನಿಯ ದಿಕ್ಕು ಹಿಡಿದು ಬೇಗ ಬೇಗ ಕಾಡಿನಲ್ಲಿ ಬಂದಳು
ಅರ್ಥ: ಕುಂತಿ ಅಳುವ ಸದ್ದು ಕೇಳಿ, ಏನಿದು ಯಾವ ಕಡೆಯಿಂದ ರೋದನದ ಸದ್ದು ಎಂದು, ಮಾದ್ರಿಯೋ ಅರಚುತ್ತಿರುವುದು,ಅಯ್ಯೋ ರಾಜನು ಎಲ್ಲಿದ್ದಾನೆ? ಏನೋ ಡೊಡ್ಡ ಅನಾಹುತವಾಗಿದೆ ಎಂದು ಭಾವಿಸುತ್ತೇನೆ, ಕಣ್ಣು ಅದರುವುದು ಮುಂತಾದ ದೇಹ ಕಂಪನದಿಂದ ಕೆಡುಕನ್ನು ಭಾವಿಸುತ್ತೇನೆ, ಏನು ಅಪಾಯವೋ! ಶಿವ ಶಿವಾ ಎನ್ನತ್ತಾ, ಆ ಸುಂದರಿ ಕುಂತಿ, ಅಳುವ ದನಿಯ ದಿಕ್ಕು ಹಿಡಿದು ಬೇಗ ಬೇಗ ಕಾಡಿನಲ್ಲಿ ಬಂದಳು.
ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿ ಮಿಗೆ ಹಲುಬಿದಳು ಗೋಳಿಡುತ ||
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈವರೀತನ
ಕಂಡು ಹಾಯೆಂದೊರಲಿ ಹೊರಳಿದರವನಿಪನ ಮೇಲೆ || (೧೯) ||
ಪದವಿಭಾಗ-ಅರ್ಥ: ಬೇಗ ಬೇಗ ಕಾಡಿನಲ್ಲಿ ಬಂದಳು. ಕಂಡಳು+ ಅವರಿಬ್ಬರನು, ಧೊಪ್ಪನೆ ದಿಂಡುಗೆಡೆದಳು= ಉರುಳಿಬಿದ್ದಳು ಮೂರ್ಛೆಯಲಿ, ಮರೆಗೊಂಡುದು+ ಎಚ್ಚರು ಮೂರ್ಛೆಯಿಂದ ತಪ್ಪಿತು, ಮಾದ್ರಿ ಮಿಗೆ ಹಲುಬಿದಳು ಗೋಳಿಡುತ ಚಂಡಿಕೆಗಳು+ ಅಲ್ಲಾಡೆ= ಕೂದಲು ಬಿಚ್ಚಿ ಹಾರಾಡುತ್ತಿರಲು ಮಾದ್ರಿ ಬಹಳ ಹಲುಬುತ್ತಾ ಗೋಳಿಟ್ಟಳು,, ಹರಿದರು ಪಾಂಡುನಂದನರೈವರು+ = ಪಾಂಡುವಿನ ಮಕ್ಕಳುಐದೂಜನ ಬಂದರು; ಈತನ= ಪಾಂಡವನ್ನು, ಕಂಡು ಹಾಯೆಂದು+ ಒರಲಿ ಹೊರಳಿದರು+ ಅವನಿಪನ ಮೇಲೆ = ಅವರು ಮರಣಿಸಿದ ಪಾಂಡುವನ್ನು ಕಂಡು, ತಂದೆ ರಾಜನ ಮೈಮೈಮೇಲೆ ಬಿದ್ದು ಹೊರಳಾಡಿದರು.
ಅರ್ಥ: ಕುಂತಿ ಬೇಗ ಬೇಗ ಕಾಡಿನಲ್ಲಿ ಬಂದಳು. ಅವಳು ಅವರಿಬ್ಬರನ್ನೂ ಕಂಡಳು. ನೆಡೆದ ಘಟನೆ ಅರಿವಾಗಿ, ಮೂರ್ಛೆಹೋಗಿ ಉರುಳಿಬಿದ್ದಳು. ಮೂರ್ಛೆಯಿಂದ ಪ್ರಜ್ಞೆ ತಪ್ಪಿತು, ಕೂದಲು ಬಿಚ್ಚಿ ಹಾರಾಡುತ್ತಿರಲು ಮಾದ್ರಿ ಬಹಳ ಹಲುಬುತ್ತಾ ಗೋಳಿಟ್ಟಳು. ಅಲ್ಲಿಗೆ ಪಾಂಡುವಿನ ಮಕ್ಕಳು ಐದೂ ಜನ ಬಂದರು; ಅವರು ಮರಣಿಸಿದ ಪಾಂಡುವನ್ನು ಕಂಡು, ಹಾ! ಎಂದು ತಂದೆ ರಾಜನ ಮೈಮೈಮೇಲೆ ಬಿದ್ದು ಹೊರಳಾಡಿದರು.
ಬೊಪ್ಪ ದೇಶಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ ||
ಮುಪ್ಪಿನಲಿ ನಿನಗೀಯವಸ್ಥೆ ಯಿ
ದೊಪ್ಪದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು || (೨೦) ||
ಪದವಿಭಾಗ-ಅರ್ಥ: ಬೊಪ್ಪ ದೇಶಿಗರು ಆದೆವೈ= ತಂದೆಯೇ ನಾವು ಪರದೇಶಿಗಳಾದೆವು. ವಿಧಿತಪ್ಪಿಸಿತಲಾ= ವಿಧಿಯು - ನಮ್ಮ ಭಾಗ್ಯವನ್ನು ಕಿತ್ತುಕೊಂಡಿತಲ್ಲಾ; <- ನಮ್ಮ ಭಾಗ್ಯವನು+ ಒಪ್ಪಿಸಿದೆ ನೀನಾರಿಗೆ+ ಎಮ್ಮನು= ನಮ್ಮನ್ನು ನೀನು ಯಾರಕೈಗೆ ಒಪ್ಪಸಿದೆ? (ಪೂರ್ವ= ಹಿಂದೆ ಮುಂಚೆ, ಕಾಲದಲಿ,- ಹೋಗುವ ಮುಂಚೆ ನಮ್ಮನ್ನು ಯಾರ ಕೈಗೂ ಒಪ್ಪಿಸದೆ ಹೋದೆಯಲ್ಲಾ! - ಪೂರ್ವಕಾಲದಲಿ) ಮುಪ್ಪಿನಲಿ ನಿನಗೆ+ ಈ+ (ಯ) ಅವಸ್ಥೆಯಿದು+ ಒಪ್ಪದೇ= ಮುಪ್ಪಿನಲ್ಲಿ ನಿನಗೆ ಈ ಅವಸ್ಥೆ ಒಪ್ಪುವುದೇ? - ಹೇರಡವಿಯಲಿ ಮಲಗಿಪ್ಪುದೇಕೆ+ ಎಂದು+ ಒರಲಿ ಮರುಗಿದರು+ ಆ ಕುಮಾರಕರು. ರಾಜನಾಗಿ ಈದಟ್ಟಡವಿಯಲ್ಲಿ ಮಲಗಿರುವುದು ಏಕೆ - ಇದುನಿನಗೆ ತಕ್ಕುದೇ? ಎಂದು ಗೋಳಿಡುತ್ತಾ ದುಃಖಿಸಿದರು.
ಅರ್ಥ: ಬೊಪ್ಪ ತಂದೆಯೇ ನಾವು ಪರದೇಶಿಗಳಾದೆವು. ವಿಧಿಯು - ನಮ್ಮ ಭಾಗ್ಯವನ್ನು ಕಿತ್ತುಕೊಂಡಿತಲ್ಲಾ; ನಮ್ಮನ್ನು ನೀನು ಯಾರಕೈಗೆ ಒಪ್ಪಸಿದೆ? ಹೋಗುವ ಮುಂಚೆ ನಮ್ಮನ್ನು ಯಾರ ಕೈಗೂ ಒಪ್ಪಿಸದೆ ಹೋದೆಯಲ್ಲಾ! ಮುಪ್ಪಿನಲ್ಲಿ ನಿನಗೆ ಈ ಅವಸ್ಥೆ ಒಪ್ಪುವುದೇ? - ರಾಜನಾಗಿ ಈ ದಟ್ಟಡವಿಯಲ್ಲಿ ಮಲಗಿರುವುದು ಏಕೆ - ಇದು ನಿನಗೆ ತಕ್ಕುದೇ? ಎಂದು ಗೋಳಿಡುತ್ತಾ ಪಾಂಡು ಕುಮಾರರು ದುಃಖಿಸಿದರು.
ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕಡು ಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ ||
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನ ನಿಂದೆನುತ ||(೨೧) ||
ಪದವಿಭಾಗ-ಅರ್ಥ: ಕೇಳಿ ಹರಿತಂದುದು ಮುನಿವ್ರಜವು= ಪಾಂಡುವಿನ ವಿಷಯವನ್ನು ಕೇಳಿ ಮುನಿಗಳು ಅಲ್ಲಿಗೆ ಬಂದರು. ಮುನಿವ್ರಜವು+ ಏಳಿಗೆಯ ಕಡು ಶೋಕರಸದ ಛಡಾಳವನು ನಿಲಿಸಿದರು= ಅತಿಶಯ ದುಃಖದಲ್ಲಿದ್ದ ಅವರನ್ನು ಸಂತೈಸಿದರು. ಸಂತೈಸಿಯೆ ಕುಮಾರಕರ = ಕುಮಾರರನ್ನು ಸಮಾಧಾನಪಡಿಸಿದರು. ಆಲಿಸಿದಳು+ ಆ ಕುಂತಿ ಮೂರ್ಛಾ ವ್ಯಾಳವಿಷ ಪರಿಹರಿಸಿ= ಮನಿಗಳ ಮಾತನ್ನು ಆಲಿಸಿ ತಪ್ಪಿದ ಎಚ್ಚರವನ್ನು (ಹಾವಿನ ವಿಷವೆಂಬ ಮೈಮರೆವಿನಿಂದ ಪಾರು - ಮಾಡಿಕೊಂದು) ಪರಿಹರಿಸಿಕೊಂಡು (ಮಾಡಿಕೊಂದು) ಧರಣೀಪಾಲಕನ= ರಾಜನನ್ನು ನೋಡಿದಳು, ಬಿಸುಟೈ ತನ್ನನು ಇಂದು+ ಎನುತ= ನನ್ನನ್ನು ಬಿಟ್ಟು ಹೋದೆಯಾ ಎಂದು ಹೇಳುತ್ತಾ.
ಅರ್ಥ:ಪಾಂಡುವಿನ ವಿಷಯವನ್ನು ಕೇಳಿ ಮುನಿಗಳು ಅಲ್ಲಿಗೆ ಬಂದರು. ಅತಿಶಯ ದುಃಖದಲ್ಲಿದ್ದ ಅವರನ್ನು ಸಂತೈಸಿದರು. ಕುಮಾರರನ್ನು ಸಮಾಧಾನಪಡಿಸಿದರು. ಆ ಕುಂತಿ ಮನಿಗಳ ಮಾತನ್ನು ಆಲಿಸಿ ತಪ್ಪಿದ ಎಚ್ಚರವನ್ನು ಪರಿಹರಿಸಿಕೊಂಡು ತನ್ನನ್ನು ಬಿಟ್ಟು ಹೋದೆಯಾ ಎಂದು ಹೇಳುತ್ತಾ ರಾಜನನ್ನು ನೋಡಿದಳು.

ಮಾದ್ರಿ ಸಹಗಮನ ಮಾಡಿದಳು[ಸಂಪಾದಿಸಿ]

ಅರಸ ತನಗರುಹದೆ ಸುರ ಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರಬ ಕೊಯ್ದುವೆನವರ ತೊತ್ತಿರ ಮಾಡುವೆನು ತನಗೆ ||
ಅರಸಿ ನೀನೀ ಮಕ್ಕಳನು ಸಂ
ವರಿಸಿ ಕೊಂಡುಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ ||( ೨೨)||
ಪದವಿಭಾಗ-ಅರ್ಥ: ಅರಸ ತನಗೆ+ ಅರುಹದೆ=ಪಾಂಡು ರಾಜನು ತನಗೆ ಹೇಳದೆ, ಸುರ ಸ್ತ್ರೀಯರಿಗೆ ಹರಿದೈ= ದೇವಕನ್ಯೆಯರ ಬಳಿಗೆ ಹೋದೆಯಲ್ಲಾ, ನಿನ್ನ ವಧುಗಳ ತುರಬ ಕೊಯ್ದುವೆನು+ ಅವರ ತೊತ್ತಿರ ಮಾಡುವೆನು ತನಗೆ= ಅವರಕೂದಲನ್ನು ಕತ್ತರಿಸಿ ನನ್ನ ದಾಸಿಯರನ್ನಾಗಿ ಮಾಡಿಕೊಳ್ಳುತ್ತೇನೆ. ಅರಸಿ= ಮಾದ್ರಿಯೇ, ನೀನು ಈ ಮಕ್ಕಳನು ಸಂವರಿಸಿ ಕೊಂಡುಹುದೆಂದು= ಈ ಮಕ್ಕಳನ್ನು ಸಂಬಾಳಿಸಿಕೊಂಡಿರು ಎಂದು, ಮಾದ್ರಿಯ ಕರವ ಹಿಡಿದರೆ= ಮಾದ್ರಿಯ ಕೈಹಿಡಿದು ನಂಬಿಸಿದರೆ, ಕುಂತಿಗೆಂದಳು ಕಾಂತೆ ವಿನಯದಲಿ= ಕಾಂತೆ ಮಾದ್ರಿಯು ವಿನಯದಿಂದ ಕುಂತಿಗೆಹೀಗೆ ಹೇಳಿದಳು.
ಅರ್ಥ: ಪಾಂಡು ರಾಜಾ, ತನಗೆ ಹೇಳದೆ ದೇವಕನ್ಯೆಯರ ಬಳಿಗೆ ಹೋದೆಯಲ್ಲಾ, ನಾನು ಅರಸನೊಡನೆ ಹೋಗಿ, ಅಲ್ಲಿ ಅವರ ಕೂದಲನ್ನು ಕತ್ತರಿಸಿ ನನ್ನ ದಾಸಿಯರನ್ನಾಗಿ ಮಾಡಿಕೊಳ್ಳುತ್ತೇನೆ. ಮಾದ್ರಿಯೇ, ನೀನು ಈ ಮಕ್ಕಳನ್ನು ಸಂಬಾಳಿಸಿಕೊಂಡಿರು ಎಂದು, ಮಾದ್ರಿಯ ಕೈಹಿಡಿದು ನಂಬಿಸಿದರೆ, ಪಾಂಡುವಿನ ಕಾಂತೆ ಮಾದ್ರಿಯು ವಿನಯದಿಂದ ಕುಂತಿಗೆ ಹೀಗೆ ಹೇಳಿದಳು.

ಮರುಳೆಲೌ ನೀವಕ್ಕ ನಿಮ್ಮೈ ವರು ಕುಮಾರರು ನಿಮ್ಮ ಕೈಯೆಡೆ ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ || ಸುರವಧುಗಳೊಡನಿರಲಿ ನಿನ್ನಯ ಹರಿಬವೆನ್ನದು ನೋಡು ತನ್ನಯ ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ||(೨೩) ||

ಪದವಿಭಾಗ-ಅರ್ಥ: ಮರುಳೆಲೌ= ಅಕ್ಕಾ ನಿನ್ನದು ಎಂತಹ ಮರುಳು ಮಾತು, ನೀವು ಅಕ್ಕ= ನೀವು ಹಿರಿಯಳು, ಅಕ್ಕ; ನಿಮ್ಮೈವರು= ನಿಮ್ಮ+ ಐವರು ಕುಮಾರರು ನಿಮ್ಮ ಕೈಯೆಡೆ= ಕುಮಾರರು ಸದಾ ನಿಮ್ಮಬಳಿ ಇರುವರು; ಧರಣಿಪತಿ ನಿಡು ನಿದ್ರೆಗೈದನು= ರಾಜನೋ ದೀರ್ಘ ನಿದ್ರೆಮಾಡಿದನು- ನನ್ನ ತೋಳಿನಲಿ, ಸುರವಧುಗಳೊಡನೆ ಇರಲಿ ನಿನ್ನಯ ಹರಿಬವು ಎನ್ನದು= ಅಪ್ಸರಸ್ತ್ರೀಯರೊಡನೆ ನೀನು ಮಾಡಿದ ಪಂಥ ನನ್ನದು, ನೋಡು ತನ್ನಯ ಪರಿಯನು ಈತನ ನಿನಗೆ ಕೊಡೆನು+ ಎಂದು+ ಅಂಘ್ರಿಗೆ+ ಎರಗಿದಳು= ನೋಡು ನನ್ನ ಹೆಣಗಾಡಿದ (ಕೂಡಿದ) ಅವಸ್ಥೆಯನ್ನು, ಇವನ ಜೊತೆ ಹೋಗುವ ಕಾರ್ಯವನ್ನು ನಿನಗೆ ಬಿಟ್ಟು ಕೊಡುವುದಿಲ್ಲ ಎಂದಳು ಮಾದ್ರಿ.
ಅರ್ಥ: ಅಕ್ಕಾ ನಿನ್ನದು ಎಂತಹ ಮರುಳು ಮಾತು, ನೀವು ಅಕ್ಕ -ಹಿರಿಯವಳು; ನಿಮ್ಮ ಈ ಐವರು ಕುಮಾರರು ಸದಾನಿಮ್ಮ ಬಳಿ ಇರುವರು; ರಾಜನೋ ನನ್ನ ತೋಳಿನ ತೆಕ್ಕೆಯಲ್ಲಿ ದೀರ್ಘ ನಿದ್ರೆಮಾಡಿದನು (ಪ್ರಾಣ ಬಿಟ್ಟನು), ಅಪ್ಸರಸ್ತ್ರೀಯರೊಡನೆ ನೀನು ಮಾಡಿದ ಪಂಥ ನನ್ನದು, ನೋಡು ನನ್ನ ಹೆಣಗಾಡಿದ (ಕೂಡಿದ) ಅವಸ್ಥೆಯನ್ನು, ಇವನ ಜೊತೆ ಹೋಗುವ ಕಾರ್ಯವನ್ನು ನಿನಗೆ ಬಿಟ್ಟು ಕೊಡುವುದಿಲ್ಲ ಎಂದಳು ಮಾದ್ರಿ.
ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ ||
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು || (೨೪) ||
ಪದವಿಭಾಗ-ಅರ್ಥ: ಮುನಿಗಳು+ ಈಕೆಯ ತಿಳುಹಿ,= ಮುನಿಗಳು ಕುಂತಿಗೆ ತಿಳಿಹೇಳಿ ಒಪ್ಪಿಸಿದರು ಮತ್ತು ಮಾದ್ರಿಗೆ ಜನಪತಿಯ ಸಹಗಮನದಲಿ ಮತವೆನಿಸಿ,= ಮಾದ್ರಿಗೆ ರಾಜನೊಡನೆ ಸಹಗಮನ ಮಾಡಲು ಅನುಮತಿ ಕೊಟ್ಟರು. ಶವಸಂಸ್ಕಾರವನು= ರಾಜನ ಶವಸಂಸ್ಕಾರವನ್ನು, ವೈದಿಕ ವಿಧಾನದಲಿ ಮುನಿಗಳೇ ಮಾಡಿದರು, ಮಾದ್ರೀ ವನಿತೆ ತನ್ನ ಕುಮಾರರು+ ಇಬ್ಬರ= ಮಾದ್ರಿಯು ಸಹಗಮನಕ್ಕೆ ಮುಂಚೆ, ತನ್ನ ಕುಮಾರರು ನಕುಲ ಸಹದೇವ ಇಬ್ಬರನ್ನು, ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು= ಧರ್ರಾಯನನ್ನು ಕರೆದು ಮಗನೇ ನೀನು ಇವರನ್ನು ಕಾಪಾಡು ಅವನ ಕೈಯಲ್ಲಿ ಇಟ್ಟಳು.
ಅರ್ಥ: ಮುನಿಗಳು ಕುಂತಿಗೆ ತಿಳಿಯಹೇಳಿ ಮಾದ್ರಿಯ ಮತವನ್ನು ಒಪ್ಪಿಸಿದರು, ಮತ್ತು ಮಾದ್ರಿಗೆ ರಾಜನೊಡನೆ ಸಹಗಮನ ಮಾಡಲು ಅನುಮತಿ ಕೊಟ್ಟರು. ರಾಜನ ಶವಸಂಸ್ಕಾರವನ್ನು, ವೈದಿಕ ವಿಧಾನದಲ್ಲಿ ಮುನಿಗಳೇ ಮಾಡಿದರು. ಮಾದ್ರಿಯು ಸಹಗಮನಕ್ಕೆ ಮುಂಚೆ, ಧರ್ಮರಾಯನನ್ನು ಕರೆದು, ತನ್ನ ಕುಮಾರರಾದ ನಕುಲ ಸಹದೇವ ಇಬ್ಬರನ್ನು, ಮಗನೇ, ನೀನು ಇವರನ್ನು ಕಾಪಾಡು ಎಂದು ಅವನ ಕೈಯಲ್ಲಿ ಇಟ್ಟಳು.
 • ಟಿಪ್ಪಣಿ:: ಮಾದ್ರಿಯು ಕೊಟ್ಟ ಈ ಹೊಣೆಯನ್ನು ಧರ್ಮಜ ಎಂತಹ ಸಂಕಟ ಸಮಯದಲ್ಲೂ ಮರೆಯಲಿಲ್ಲ. ಅರಣ್ಯವಾಸದಲ್ಲಿ ಯಕ್ಷಸರೋವರದ ದಡದಲ್ಲಿ ನಾಲ್ಕು ತಮ್ಮಂದಿರೂ ಸತ್ತು ಬಿದ್ದಾಗ, ಯಕ್ಷನು, ನಿನ್ನ ಒಬ್ಬ ತಮ್ಮನನ್ನು ಬದುಕಿಸುತ್ತೇನೆ; ಯಾರನ್ನು ಬದುಕಿಸಲಿ ಎಂದಾಗ, ಧರ್ಮಜ ನಕುಲನನ್ನು ಬದುಕಿಸು ಎಂದ, ಮಹಾಶೂರಾದ ಭೀಮಾರ್ಜುನರನ್ನು ಬಿಟ್ಟು ನಕುಲನನ್ನು ಏಕೆ ಕೇಳಿದೆ- ಎಂದಾಗ, ಧರ್ಮಜ ಯಕ್ಷನಿಗೆ, ಕುಂತಿಗೆ ಮಗನಾಗಿ ನಾನು ಬದುಕಿದ್ದೇನೆ ಹಾಗೆಯೇ, ಮಾದ್ರೀ ತಾಯಿಗೆ ಮಗ ನಕುಲ ಬದುಕಿರಲಿ, ಎಂದ.
ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹಿತೀ ಕುಂತಿ ಮಿಂದು ಪರೇತಕೃತ್ಯವನು ||
ಶ್ರುತಿ ವಿಧಾನದೊಳಖಿಳ ಮುನಿ ಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ ||(೨೫) ||
ಪದವಿಭಾಗ-ಅರ್ಥ: ಪತಿಯ ಸಹಗಮನದಲಿ ಮಾದ್ರೀಸತಿ ಶರೀರವ ಬಿಟ್ಟಳು ()+ ಐವರು ಸುತರು ಸಹಿತ+ ಈ ಕುಂತಿ ಮಿಂದು= ಸ್ನಾನಮಾಡಿ, ಪರೇತ- ಕೃತ್ಯವನು ಶ್ರುತಿ ವಿಧಾನದೊಳು+ ಅಖಿಳ ಮುನಿ ಸಂತತಿಗಳನು ಮುಂದಿಟ್ಟು ಮಾಡಿಸಿ= ಮುಂದಿನ ಪ್ರೇತಸಂಸ್ಕಾರ ಕಾರ್ಯಗಳನ್ನು ವೇದಸಮ್ಮತವಾಗಿ ಎಲ್ಲಾ ಮುನಿಗಳನ್ನು ಮುಂದಿಟ್ಟುಕೊಂಡು ಮಾಡಿಸಿ, ಸುತರ ಪಾಲಿಸುತಿರ್ದಳು+ ಆ ಶತಶೃಂಗ ಶೈಲದಲಿ= ಆ ಶತಶೃಂಗ ಪರ್ವತದಲ್ಲಿ ಕುಂತಿಯು ಮಕ್ಕಳನ್ನು ಪಾಲಿಸುತ್ತಿದ್ದಳು
ಅರ್ಥ: ಪತಿಯ ಸಹಗಮನದಲ್ಲಿ ಮಾದ್ರೀಸತಿ ಶರೀರವ ಬಿಟ್ಟಳು. ಐವರು ಮಕ್ಕಳಸಹಿತ ಆ ಕುಂತಿಯು ಸ್ನಾನಮಾಡಿ, ಮುಂದಿನ ಪ್ರೇತಸಂಸ್ಕಾರ ಕಾರ್ಯಗಳನ್ನು ವೇದಸಮ್ಮತವಾಗಿ ಎಲ್ಲಾ ಮುನಿಗಳನ್ನು ಮುಂದಿಟ್ಟುಕೊಂಡು ಮಾಡಿಸಿ, ಆ ಶತಶೃಂಗ ಪರ್ವತದಲ್ಲಿ ಅವಳು ಮಕ್ಕಳನ್ನು ಪಾಲಿಸುತ್ತಿದ್ದಳು.

ಕುಂತಿ ಮತ್ತು ಪಾಂಡವರು ಹಸ್ತನಾವತಿಗೆ[ಸಂಪಾದಿಸಿ]

ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ ||
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರುದೊಳೊಪ್ಪಿಸಿಬಹುದು ಮತವೆಂದುದು ಮುನಿಸ್ತೋಮ || (೨೬) ||
ಪದವಿಭಾಗ-ಅರ್ಥ: ಅರಸನು+ಅಪಗತನಾದನು+ ಆ ನೃಪನ+ ಅರಸಿ ಬಾಲಕಿ,= ರಾಜನು ಮರಣಹೊಂದಿದನು. ಆ ರಾಜನ ಪತ್ನಿ ಬಾಲಕಿ- ಅರಿಯದ ಅಸಾಹಯಕಿ, ಮಕ್ಕಳೈವರು ಭರತ ಕುಲಜರು= ಮಕ್ಕಳು ಐದು ಜನ, ಭರತವಂಶದವರು. ನಾವು ತಪಸಿಗಳು+ ಇರ್ಪುದು+ ಆರಣ್ಯ ಅರಿಗಳು+ ಆ= ನಾವಾದರೋ ತಪಸ್ವಿಗಳು, ನಾವು ಇರುವುದು, ಕಾಡು, ರಾಕ್ಷಸರು= ಇಲ್ಲಿ ಶತ್ರುಗಳು ರಾಕ್ಷಸರು, ನಾವು+ ಇನ್ನಿರಿಸುವುದು ಮತವಲ್ಲ= ನಾವು ಈ ಮಕ್ಕಳನ್ನು ಇಲ್ಲಿ ಇಟ್ಟುಕೊಳ್ಳುವುದು ಯೋಗ್ಯವಲ್ಲ. ಹಸ್ತಿನಪುರುದೊಳು+ ಒಪ್ಪಿಸಿಬಹುದು ಮತವು+ ಎಂದುದು ಮುನಿಸ್ತೋಮ= ಇವರನ್ನು ಹಸ್ತಿನಾಪುರಕ್ಕೆ ಕರೆದುಕೊಂಡುಹೋಗಿ ಅಲ್ಲಿ ಹಿರಿಯರಿಗೆ ಒಪ್ಪಿಸುವುದೇ ಯೋಗ್ಯವು ಎಂದು ಮುನಿಗಳು ನಿಶ್ಚಯಿಸಿದರು.
ಅರ್ಥ: ರಾಜನು ಮರಣಹೊಂದಿದನು. ಆ ರಾಜನ ಪತ್ನಿ ಕುಂತಿ ಅರಿಯದ ಅಸಾಹಯಕಿ. ಮಕ್ಕಳು ಐದು ಜನ, ಭರತವಂಶದವರು. ನಾವಾದರೋ ತಪಸ್ವಿಗಳು, ನಾವು ಇರುವುದು, ಕಾಡು, ಇಲ್ಲಿ ಶತ್ರುಗಳು ಆ ರಾಕ್ಷಸರು. ನಾವು ಕುಂತಿಯನ್ನೂ ಈ ಮಕ್ಕಳನ್ನು ಇಲ್ಲಿ ಇಟ್ಟುಕೊಳ್ಳುವುದು ಯೋಗ್ಯವಲ್ಲ.ಇವರನ್ನು ಹಸ್ತಿನಾಪುರಕ್ಕೆ ಕರೆದುಕೊಂಡುಹೋಗಿ ಅಲ್ಲಿ ಹಿರಿಯರಿಗೆ ಒಪ್ಪಿಸುವುದೇ ಯೋಗ್ಯವು ಎಂದು ಮುನಿಗಳು ನಿಶ್ಚಯಿಸಿದರು.
ಎಂದು ಕುಂತೀದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ ||
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭಮುಹೂರ್ತದೊ

ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ || (೨೭) ||

ಪದವಿಭಾಗ-ಅರ್ಥ: ಎಂದು ಕುಂತೀದೇವಿ ಸಹಿತ+ ಆ ನಂದನರನು+ ಐವರನು= ಹೀಗೆ ಎಂದುಕೊಂಡು, ಆ ಐದು ಪಾಂಡುಕುಮಾರರನ್ನು, ಮುನಿಗಳು ತಂದರು+ ಇಭಪುರಿಗಾಗಿ= ಮುನಿಗಳು ಹಸ್ತಿನಾವತಿಗೆ ಕರೆದುಕೊಂಡುಬಂದರು. ಭೀಷ್ಮಾದಿಗಳಿಗೆ ಈ ಹದನ (ವಿಚಾರವನ್ನು) ಮುಂದೆ (ಮುಂದಾಗಿ) ಸೂಚಿಸಲು+ ಉತ್ಸವದಿ+ ಇದಿರ್ವಂದರು+ ಅನಿಬರು= ತಾವು ಕುಮಾರರೊಡನೆ ಬರುತ್ತಿರುವ ವಿಚಾರವನ್ನು ಮುಂದಾಗಿ ಭೀಷ್ಮಾದಿಗಳಿಗೆ ತಿಳಿಸಲು ಅವರು ವಿಜ್ರಂಭಣೆಯಿಂದ ಇವರನ್ನು ಎದುರುಗೊಂಡರು. ಶುಭಮುಹೂರ್ತದೊಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ= ಭೀಷ್ಮನು ಅಂದು ಪರಿತೋಷದಿಂದ ಶುಭಮುಹೂರ್ತದಲ್ಲಿ ನಗರವನ್ನು ಹೊಗಿಸಿದನು.
ಅರ್ಥ: ಹೀಗೆ ಎಂದುಕೊಂಡು, ಆ ಐದು ಪಾಂಡುಕುಮಾರರನ್ನು ಮುನಿಗಳು ಹಸ್ತಿನಾವತಿಗೆ ಕರೆದುಕೊಂಡುಬಂದರು. ತಾವು ಕುಮಾರರೊಡನೆ ಬರುತ್ತಿರುವ ವಿಚಾರವನ್ನು ಮುಂದಾಗಿ ಭೀಷ್ಮಾದಿಗಳಿಗೆ ತಿಳಿಸಲು ಅವರು ವಿಜ್ರಂಭಣೆಯಿಂದ ಇವರನ್ನು ಎದುರುಗೊಂಡರು. ಅಂದು ಭೀಷ್ಮನು ಕುಂತಿಯನ್ನೂ ಪಾಂಡುಕುಮಾರರನ್ನೂ ಸಂತೋಷದಿಂದ ಶುಭಮುಹೂರ್ತದಲ್ಲಿ ನಗರವನ್ನು ಹೊಗಿಸಿದನು.
ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ ||
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋರ್ಧ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು || (೨೮) ||
ಪದವಿಭಾಗ-ಅರ್ಥ: ಇವರ ಜನನ ಕ್ರಮವನು+ ಆ ಪಾಂಡುವಿನ ವಿಕ್ರಮವನು ತಪೋಧನನ ನಿವಹ= ಸಮೂಹ ಎಲ್ಲವನ್ನು,ಪಾಂಡುವಿನ ಮಕ್ಕಳ ಜನನ ಕ್ರಮದ ವಿಚಾರವನ್ನೂ, ಪಾಂಡುವಿನ ಶೌರ್ಯ ಸಾಹಸಗಳನ್ನೂ, ತಪಸ್ಸಿನ ಸಾಧನೆಯನ್ನೂ ಹೇಳಿ ಕೊಂಡಾಡಿದುದು= ಹೊಗಳಿದರು.. ಬಳಿಕಿನ= ನಂತರದ, ಮರಣಸಂಗತಿಯ ಅವನಿಪನ ಸಂಸ್ಕಾರ= ಪಾಡು ಮರಣಿಸಿದ ವಿಚಾರ, ಮರಣೋತ್ತರ ಸಂಸ್ಕಾರ ವಿಚಾರವನ್ನೂ, ಮಾದ್ರೀಯುವತಿ ಸಹಗಮನ+ ಊರ್ಧ್ವ ದೇಹಿಕ ವಿವಿಧ ಕೃತ್ಯವನು= ಮಾದ್ರಿ ಸಹಗಮನ ಮಾಡಿದುದನ್ನೂ, ಅವರಿಗೆ ಮಾಡಬೇಕಾದ ಉತ್ತರಕ್ರಿಯಾದಿಗಳನ್ನು ಮಾಡಿದುದನ್ನೂ, ಈ ಪ್ರಪಂಚವನು+ ಅವರಿಗೆ+ ಅರುಹಿದರು= ಈ ಎಲ್ಲಾವಿಚಾರಗಳನ್ನು ಭೀಷ್ಮಾದಿಗಳಿಗೆ ಮುನಿಗಳು ತಿಳಿಸಿದರು.
ಅರ್ಥ: ಪಾಂಡುವಿನ ಮಕ್ಕಳ ಜನನ ಕ್ರಮದ ವಿಚಾರವನ್ನೂ, ಪಾಂಡುವಿನ ಶೌರ್ಯ ಸಾಹಸಗಳನ್ನೂ, ತಪಸ್ಸಿನ ಸಾಧನೆಯನ್ನೂ ಹೇಳಿ ಹೊಗಳಿದರು. ನಂತರದಲ್ಲಿ, ಪಾಂಡು ಮರಣಿಸಿದ ವಿಚಾರ, ಮರಣೋತ್ತರ ಸಂಸ್ಕಾರ ಮಾಡಿದ ವಿಚಾರವನ್ನೂ, ಮಾದ್ರಿಯು ಸಹಗಮನ ಮಾಡಿದುದನ್ನೂ, ಅವರಿಗೆ ಮಾಡಬೇಕಾದ ಉತ್ತರಕ್ರಿಯಾದಿಗಳನ್ನು ಮಾಡಿದುದನ್ನೂ, ಈ ಎಲ್ಲಾವಿಚಾರಗಳನ್ನು ಭೀಷ್ಮಾದಿಗಳಿಗೆ ಮುನಿಗಳು ತಿಳಿಸಿದರು.
ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ ||
ಜನಪ ಧೃತರಾಷ್ಟ್ರದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂರ್ಧ್ವ ದೇಹಿಕವಾಯ್ತು ಮಗುಳಲ್ಲಿ || (೨೯) ||
ಪದವಿಭಾಗ-ಅರ್ಥ: ಮುನಿಗಳು+ ಆ ಕ್ಷಣ ಮರಳಿದರು. ತಜ್ಜನಪ ವೃತ್ತಾಂತವನು ವಿವರಿಸೆ ಜನಜನಿತ= ಆ ಎಲ್ಲಾ ವಿಚಾರಗಳು ಹರಡಿ ಜನಜನಿತವಾಯಿತು. ಬಳಿಕ+ ಉಬ್ಬಿ ಹರಿದುದು ಶೋಕರಸ ಜಲಧಿ = ನಂತರದ ಪಾಂಡು ,ಮಾದ್ರಿಯರ ಮರಣ ವಾರ್ತೆ ಕೇಳಿ ದುಃಖಸಾಗರದಲ್ಲಿ ಮುಳುಗಿದರು. ಜನಪ ಧೃತರಾಷ್ಟ್ರದಿ ಬಾಂಧವಜನ ಪುನಃ ಸಂಸ್ಕಾರದಲಿ ಭೂಪನನು ದಹಿಸಿದರು+ ಊರ್ಧ್ವ ದೇಹಿಕವಾಯ್ತು ಮಗುಳಲ್ಲಿ= ರಾಜ ಧೃತರಾಷ್ಟ್ರನೇ ಮೊದಲಾದ ಜ್ಞಾತಿಗಳು ಪುನಃ ಊರ್ಧ್ವ ದೇಹಿಕ ಮೊದಲಾದ ಉತ್ತರಕ್ರಿಯೆ ಮಾಡಿದರು.
ಅರ್ಥ: ಮುನಿಗಳು ಆ ಕೂಡಲೆ ಮರಳಿ ತಪೋವನಕ್ಕೆ ಹೋದರು. ಆ ಎಲ್ಲಾ ವಿಚಾರಗಳು ಹಸ್ತಿನಾವತಿಯಲ್ಲಿ ಹರಡಿ ಜನಜನಿತವಾಯಿತು. ನಂತರದಲ್ಲಿ ಪಾಂಡು ಮಾದ್ರಿಯರ ಮರಣ ವಾರ್ತೆ ಕೇಳಿ ದುಃಖಸಾಗರದಲ್ಲಿ ಮುಳುಗಿದರು. ರಾಜ ಧೃತರಾಷ್ಟ್ರನೇ ಮೊದಲಾದ ಜ್ಞಾತಿಗಳು ಪುನಃ ಊರ್ಧ್ವ ದೇಹಿಕ ಮೊದಲಾದ ಉತ್ತರಕ್ರಿಯೆ ಮಾಡಿದರು.
ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ ||
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ || (೩೦) ||
ಪದವಿಭಾಗ-ಅರ್ಥ: ಅರಸ ಕೇಳೈ ಭೀಷ್ಮ ಧೃತರಾಷ್ಟ್ರರನು ಬೋಧಿಸಿ ಬಹಳ ಶೋಕಜ್ವರಕೆ= ದುಃಖವನ್ನು ಬಿಡುಗಡೆ ಮಾಡಿದನು ಪಾರಾಶರಿವ್ರತಿಪ=ವೇದವ್ಯಾಸರು, ಕರೆದು ಯೋಜನಗಂಧಿಯನು ನೀವು+ ಇರಲು ಬೇಡೌ ತಾಯೆ ನಿಮ್ಮ+ ಈ ಭರತವಂಶದೊಳು ಒಗೆದ= ಉಂಟಾದ, ಹುಟ್ಟಿದ, ಕಿಚ್ಚು (ಬೆಂಕಿ)+ ಉರುಹುವುದು= ದಾಯಾದಿ ಮತ್ಸರದ ಬೆಂಕಿ ಸುಡುವುದು, ಹೊಟ್ಟೆಕಿಚ್ಚು, ನೃಪಕುಲವ= ರಾಜವಂಶವನ್ನು.
ಅರ್ಥ: ಅರಸನೇ ಕೇಳು, ಭೀಷ್ಮ ಮತ್ತು ಧೃತರಾಷ್ಟ್ರರನ್ನು ಸಂಬೋಧಿಸಿ ಅವರ ಪಾಂಡುವಿನ ಅಗಲಿಕೆಯ ಬಹಳವಾದ ದುಃಖವನ್ನು ವೇದವ್ಯಾಸರು ಶಾಂತಗೊಳಿಸಿ ಬಿಡುಗಡೆ ಮಾಡಿದರು. ತನ್ನ ತಾಯಿಯೂ ಧೃತರಾಷ್ಟ್ರನ ಅಜ್ಜಿಯೂ ಆದ ಯೋಜನಗಂಧಿಯನ್ನು ಪ್ರತ್ಯೇಕವಾಗಿ ಕರೆದು, ಅವಳನ್ನು ಕುರಿತು, ನಿಮ್ಮ ಈ ಭರತವಂಶದಲ್ಲಿ ಹುಟ್ಟಿದ ದಾಯಾದಿ ಮತ್ಸರದ ಬೆಂಕಿ ರಾಜವಂಶವನ್ನು ಸುಡುವುದು; ಆದ್ದರಿಂದ ನೀವು ಇನ್ನು ಇಲ್ಲಿ ಇರುವುದು ಬೇಡ ತಾಯೆ ಎಂದರು.
ಹೇಳ ಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವ ಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ || (೩೧) ||
ಪದವಿಭಾಗ-ಅರ್ಥ: ಹೇಳಬಾರದು ಮುಂದಣದು= ಮುಂದೆ ಆಗುವುದನ್ನು ಹೇಳಕೂಡದು. ದುಷ್ಕಾಲವು+ ಇಂದಿಗೆ, ನಾಳೆ - ನಾಳೆಗೆ,= ಇಂದಿನ ಸುಖದುಃಖಗಳು ಇಂದು ಅನುಭವಿಸಬೇಕು, ನಾಳೆಯ ಅಥವಾ ಮುಂದಿನ ಕೆಡುಕನ್ನು ಇಂದೇ ತಿಳಿದು ನೋವು ಅನುಭವಿಸುವುದು ಸರಿಯಲ್ಲ. ನಾಳೆ ಬೆಟ್ಟಿತು= ದೊಡ್ಡದು,= ಮುಂದೆ ದೊಡ್ಡ ಕಷ್ಟ ಇದೆ. ವರ್ಣಧರ್ಮಾಶ್ರಮದ ನೆಲೆಹೋಯ್ತು= ಚಾತುರ್ವರ್ಣ್ಯದ ತಳಹದಿ ಹೋಗುತ್ತಿದೆ. ಕಾಲ ವಿಷಮವು = ಮಂದಿನ ಕಾಲ ಕಡುಕಿನದು; ಕೌರವ ಕ್ಷಿತಿ ಪಾಲ= ಧೃತಟಾಷ್ಟ್ರ, ಪಾಂಡು ಕುಮಾರರಲಿ, ಕೈಮೇಳವಿಸುವುದು= ಯುದ್ಧವಾಗುವುದು. ತಾಯೆ ಬಿಜಯಂಗೈಯಿ(ಹೊರಡಿರಿ) ನೀವೆಂದ= ತಾಯೀ ನೀವು ತಪೋವನಕ್ಕೆ ಹೊರಡಬೇಕು ಎಂದರು ವೇದವ್ಯಾಸರು.
ಅರ್ಥ: ಮುಂದೆ ಆಗುವುದನ್ನು ಹೇಳಕೂಡದು. ಇಂದಿನ ಸುಖದುಃಖಗಳನ್ನು ಇಂದು ಅನುಭವಿಸಬೇಕು, ನಾಳೆಯ ಅಥವಾ ಮುಂದಿನ ಕೆಡುಕನ್ನು ಇಂದೇ ತಿಳಿದು ನೋವು ಅನುಭವಿಸುವುದು ಸರಿಯಲ್ಲ. ಮುಂದೆ ದೊಡ್ಡ ಕಷ್ಟ ಇದೆ. ಚಾತುರ್ವರ್ಣ್ಯದ ತಳಹದಿ ಹೋಗುತ್ತಿದೆ. ಮಂದಿನ ಕಾಲ ಕಡುಕಿನದು; ಧೃತಟಾಷ್ಟ್ರ ಮತ್ತು ಪಾಂಡು ಕುಮಾರರಲಿ ಯುದ್ಧವಾಗುವುದು. ತಾಯೇ, ನೀವು ತಪೋವನಕ್ಕೆ ಹೊರಡಬೇಕು ಎಂದರು ವೇದವ್ಯಾಸರು.
ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ ||
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ ||(೩೨)
ಪದವಿಭಾಗ-ಅರ್ಥ: ಎನಲು ಯೋಜನಗಂಧಿ ನಿಜ= ತನ್ನ, ನಂದನನ ನುಡಿಯೇ ವೇದಸಿದ್ಧವಿದೆನುತ= ಹೀಗೆ ಹೇಳಲು, ಯೋಜನಗಂಧಿಯು ತನ್ನ ಮಗನ ಮಾತು ವೇದವಾಕ್ಯದಂತೆ ನಿಜವಾದುದೆಂದು, ಸೊಸೆಯರು ಸಹಿತ ನಡೆದಳು ವರ ತಪೋವನಕೆ= ತನ್ನ ಮಗ ವಿಚಿತ್ರವೀರ್ಯನ ಪತ್ನಿಯರಾದ ಅಂಬಿಕೆ, ಅಂಬಾಲಿಕೆಯರೊಂದಿಗೆ ತಪೋವನಕ್ಕೆ ಹೋದಳು. ಮುನಿಪನತ್ತಲು ಬದರಿಕಾ ನಂದನಕೆ ಮರಳಿದನು+ ಇತ್ತ ಗಂಗಾತನುಜ= ಭೀಷ್ಮ; ಸಲಹಿದನು+ ಅಖಿಳ= ಎಲ್ಲಾ; ಪಾಂಡವ ಕೌರವ ವ್ರಜವ (ವ್ರಜ= ಸಮೂಹ, ಗುಂಪು}= ವ್ಯಾಸ ಮುನಿಯು ತನ್ನ ಬದರಿಕಾಶ್ರಮಕ್ಕೆ ಹಿಂತಿರುಗಿ ಹೋದನು. ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಮಕ್ಕಳಾದ ಕೌರವರನ್ನೂ, ಪಾಂಡುವಿನ ಮಕ್ಕಳನ್ನೂ ಭೀಷ್ಮನು ಸಲಹಿದನು.
ಅರ್ಥ: ವ್ಯಾಸರು ಹೀಗೆ ಹೇಳಲು, ಯೋಜನಗಂಧಿಯು ತನ್ನ ಮಗನ ಮಾತು ವೇದವಾಕ್ಯದಂತೆ ನಿಜವಾದುದೆಂದು, ತನ್ನ ಮಗ ವಿಚಿತ್ರವೀರ್ಯನ ಪತ್ನಿಯರಾದ ಅಂಬಿಕೆ, ಅಂಬಾಲಿಕೆಯರೊಂದಿಗೆ ತಪೋವನಕ್ಕೆ ಹೋದಳು. ವ್ಯಾಸ ಮುನಿಯು ತನ್ನ ಬದರಿಕಾಶ್ರಮಕ್ಕೆ ಹಿಂತಿರುಗಿ ಹೋದನು. ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಮಕ್ಕಳಾದ ಕೌರವರನ್ನೂ, ಪಾಂಡುವಿನ ಮಕ್ಕಳನ್ನೂ ಭೀಷ್ಮನು ಸಲಹಿದನು.[೧] [೨] [೩] [೪]
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

 1. *ಕುಮಾರವ್ಯಾಸ ಭಾರತ
 2. * ಕುಮಾರವ್ಯಾಸಭಾರತ-ಸಟೀಕಾ
 3. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
 4. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
 5. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
 6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
 7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
 8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
 9. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
 10. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
 11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
 12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 2. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
 3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
 4. ದಾಸ ಸಾಹಿತ್ಯ ನಿಘಂಟು