ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ ||ಸೂಚನೆ||
ಪದವಿಭಾಗ-ಅರ್ಥ:ರಾಯ ಕೌರವ ಸೈನ್ಯ ಕದಳೀ ವಾಯುವು+ ಉತ್ತರ ಸಹಿತ ನಿಜಪರ ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ.
ಅರ್ಥ:ರಾಜಕೌರವನ ಸೈನ್ಯಕ್ಕೆ ಬಾಳೆಯತೋಟಕ್ಕೆ ಬಿರುಗಾಳಿಯಂತಿರುವ ಅರ್ಜುನನು ಮತ್ಸ್ಯ ಪುರ ರಾಜನಾದ ವಿರಾಟ ರಾಜನ ಮಗ ಉತ್ತರನ ಸಹಿತ ಬಂದು ಶ್ರೇಷ್ಠವಾದ ಮತ್ಸ್ಯಪುರವನ್ನು ಹೊಕ್ಕನು.
~~ಓಂ~~

ಉತ್ತರನ ಗೆಲುವಿನ ಸುದ್ದಿಗೆ ವಿರಾಟನ ಪ್ರತಿಕ್ರಿಯೆ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು |
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ || ೦೧||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಭಂಗದಲಿ+ ಅಖಿಳ ಕೌರವಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು ಮೇಲು ಮುಸುಕಿನ ಮೊಗದ ವಾದ್ಯದಮೇಳ ಮೋನದಲಿ+ ಅಖಿಳ ನೃಪರು ನಿಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ.
ಅರ್ಥ: ವೈಶಂಪಾಯನ ಮುನಿ ಹೇಳಿದ, ಕೇಳು ಜನಮೇಜಯ ರಾಜನೇ, ಸೋಲಿನ ಅವಮಾನದಲ್ಲಿ ಎಲ್ಲಾ ಕೌರವ ಸಮೂಹ ವ್ಯಥೆಯಿಂದ ಹಸ್ತಿನಾವತಿಗೆ ಹಿಂತಿರುಗಿತು. ಹಾಗೆ ಬಂದ ನಂತರ ಮುಖಕ್ಕೆ ಮೇಲು ಮುಸುಕು ಹಾಕಿದ ಸಪ್ಪೆ ಮುಖದಲ್ಲಿ ಮೇಳಗಾರರ ಮೌನ ವಾದ್ಯದ ವಾದನದಲ್ಲಿ ಬಂದು, ಎಲ್ಲಾ ರಾಜರು ತಮ್ಮ ಅರಮನೆಗೆ ಮನೋವೇದನೆಯನ್ನು ಹೊತ್ತು ಒಳಹೊಕ್ಕರು.(ಮೋನ ಪಟ್ಟಿಗೆಯಾಕಾರದ ಬಡಿತದ ವಾದ್ಯ - ಡೋಲು?; ಮೋನ= ಮೌನ; ಮೋನ- ಮೌನವೆಂಬ ವಾದ್ಯ; ಇಲ್ಲಿ ಮೌನ ವಾದ್ಯ ಸೂಕ್ತ. ಸೋತು ಬಂದ ಅವರು ಯಾವ ವಾದ್ಯವೂ ಇಲ್ಲದೆ ಪುರ- ಅರಮನೆ ಪ್ರವೇಶ ಮಾಡಿದರು ಎಂಬುದೇ ಸರಿ. ಇಲ್ಲಿ ದ್ವಂದಾರ್ಥವನ್ನು ಕಾಣಬಹುದು.)
ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨
ಪದವಿಭಾಗ-ಅರ್ಥ: ಬಳಿಕ ಫಲುಗುಣನು+ ಅತ್ತಲು+ ಆ ಮರದೊಳಗೆ ಕೈದುವನು+ ಇರಿಸಿ ಮುನ್ನಿನ ಹುಲು ರಥವ ಮೇಳೈಸಿ ಸಾರಥಿತನವನು+ ಅಳವಡಿಸೆ ಇಳಿದು ಪಾರ್ಥನ ಮೈದಡವಿ ಕಪಿ ಕುಲ ಲಲಾಮನು ವನಕೆ ಹಾಯ್ದನು ಹೊಳಲ ಹೊರೆಯಲಿ ನಿಂದು ನಗುತು+ ಉತ್ತರನೊಳು+ ಇಂತೆಂದ.
ಅರ್ಥ: ಬಳಿಕ ಫಲ್ಗುಣನು ಅತ್ತ ವಿರಾಟ ನಗರದ ಹೊರವಲಯದಲ್ಲಿ, ಆ ಶಮ್ಮೀ ಮರದೊಳಗೆ ಆಯುಧಗಳನ್ನು ಇರಿಸಿ, ಮೊದಲು ಬಂದ ಸಾಮಾನ್ಯ ಹುಲು ರಥವ ಸಿದ್ಧಪಡಿಸಿಕೊಂಡು ಸಾರಥಿತನವನು ಅವನೇ ಅಳವಡಿಸಿಕೊಂಡಾಗ, ಧ್ವಜದಲ್ಲಿದ್ದ ಹನುಮನು ರಥದಿಂದ ಇಳಿದು ಪಾರ್ಥನ ಮೈದಡವಿ ಅವನ ನೋವು ನಿವಾರಿಸಿ, ಕಪಿ ಕುಲ ಲಲಾಮನಾದ ಅವನು ವನಕ್ಕೆ ಹಾರಿಹೋದನು. ಅರ್ಜುನನು ಶಮೀ ಮರದ (ಬನ್ನಿಮರ) ಬಳಿಯಲ್ಲಿ ನಿಂತು ನಗುತ್ತಾ ಉತ್ತರನೊಡನೆ ಹೀಗೆ ಹೇಳಿದ.
ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ |
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ || ೦೩ ||
ಪದವಿಭಾಗ-ಅರ್ಥ: ಕರೆದು ದೂತರಿಗೆ+ ಅರುಹು ನೀನೇ ಧುರವ ಜಯಿಸಿದೆನು+ ಎನ್ನು ನಾವು+ ಇದ್ದ+ ಇರವನು+ ಅರುಹದಿರು (ಅರುಹು - ಹೇಳು. ಅರುಹದಿರು- ಹೇಳಬೇಡ)+ ಇಂದು ಪಸರಿಸು (ಹರಡು) ನಿನ್ನ ವಿಕ್ರಮವ ಅರಸ ನಿನ್ನನೆ ಮನ್ನಿಸಲಿ ಪುರ ಪರಿಜನಂಗಳು ನಿನ್ನ ವಿಜಯದ ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ.
ಅರ್ಥ: ಅರ್ಜುನನು ಉತ್ತರನಿಗೆ, 'ದೂತರನ್ನು ಕರೆದು ಹೇಳು; ನೀನೇ ಯುಧ್ಧವನ್ನು ಜಯಿಸಿದುದಾಗಿ ಹೇಳು. ನಾವು ಪಾಂಡವರು ಇದ್ದ ವಿಷಯ, ಇರುವುದನ್ನು ಯಾರಗೂ ಹೇಳಬೇಡ. ಇಂದು ನಿನ್ನ ಸಾಹಸವನ್ನು ಹರಡು; ಅರಸ ವಿರಾಟನು ನಿನ್ನನ್ನೆ ಮನ್ನಿಸಿ ಗೌರವಿಸಲಿ. ಪುರ ಪರಿಜನರೂ ನಿನ್ನ ವಿಜಯದ ಹರ್ಷದಲ್ಲಿ ಉಬ್ಬಿರಲಿ. ನೀನು ನಾನು ಅಜ್ಞಾಪಿಸಿದಂತೆ ಮಾಡು,' ಎಂದ.
ಎನಲು ನೀನೇ ಬಲ್ಲೆ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು |
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ || ೦೪ ||
ಪದವಿಭಾಗ-ಅರ್ಥ: ಎನಲು ನೀನೇ ಬಲ್ಲೆ ಕರ ಲೇಸು (ಒಳಿತನ್ನು)+ ಎನುತ ದೂತರ ಕರೆದು ಮತ್ಸ್ಯನತನಯ ಕೌರವ ಬಲವ ಜಯಿಸಿದನೆಂದು ಪೇಳುವುದು ಜನಕನಲ್ಲಿಗೆ ಪೋಗಿಯೆಂದು+ ಆತನು ನಿಯಾಮಿಸುತಿರ್ದನು+ ಅತ್ತಲು ಜನಪ ಕುಂತೀಸುತನು ಸಹಿತೈತಂದನು+ ಅರಮನೆಗೆ
ಅರ್ಥ: ಅರ್ಜುನನು ಹೀಗೆ ಹೇಳಲು, ಮತ್ಸ್ಯನ ಮಗ ಉತ್ತರನು,'ನೀನೇ ಬಲ್ಲೆ ಯಾವುದು ಯೋಗ್ಯವು ಎಂದು,' ಎನ್ನುತ್ತಾ ದೂತರನ್ನು ಕರೆದು ಉತ್ತರನು ತನ್ನ ತಂದೆಯಬಳಿಗೆ ಹೋಗಿ, 'ಕೌರವ ಸೇನಾಬಲವನ್ನು ಉತ್ತರನು ಜಯಿಸಿದನೆಂದು ಹೇಳುವುದು' ಎಂದು ಆತನು ಆಜ್ಞೆ ಮಾಡುತ್ತಿದ್ದನು; ಅಗ ಅತ್ತ ರಾಜ ವಿರಾಟನು ಧರ್ಮಜನ ಜೊತೆಗೆ ಅರಮನೆಗೆ ಬಂದನು.
ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫
ಪದವಿಭಾಗ-ಅರ್ಥ: ಅರಮನೆಯ ಹೊಕ್ಕ+ ಅವನಿಪತಿಯು+ ಉತ್ತರನ ಕಾಣದೆ ಕಂದನು+ ಎತ್ತಲು ಸರಿದನು+ ಎನೆ, ರಾಣಿಯರು ಬಿನ್ನವಿಸಿದರು ಭೂಪತಿಗೆ ಕುರು ಬಲವನು+ ಅಂಗೈಸೆ ಮಿಗೆ+ ಯು+ ಉತ್ತರೆಯ ಗುರು ಸಾರಥಿತನವನು+ ಅನುಕರಿಸಿದನು, ಕೆಲಬಲನ ಹಾರದೆ (ಹಾರೈಸದೆ- ಅಪೇಕ್ಷಿಸದೆ) ಕದನಕೆ+ ಐದಿದನು/
ಅರ್ಥ: ಅರಮನೆಯನ್ನು ಹೊಕ್ಕ ವಿರಾಟರಾಜನು, ಉತ್ತರನನ್ನು ಕಾಣದೆ ಮಗನು, ಎತ್ತ ಹೋದನು? ಎನ್ನಲು, ರಾಣಿಯರು ರಾಜನಿಗೆ ಅರಿಕೆಮಾಡಿದರು. ಉತ್ತರನು ಕುರುರಾಜ ಕೌರವನ ಸೈನ್ಯವನ್ನ್ನು ಎದುರಿಸಲು ಹೋದನು ಎಂದರು; ಮತ್ತೆ ಉತ್ತರೆಯ ಗುರು ಸಾರಥಿತನವನನ್ನು ವಹಿಸಿದನು, ಅವನು ಜೊತೆಗಿದ್ದ ರಕ್ಷಕ ಸೈನ್ಯವನ್ನು ಅಪೇಕ್ಷಿಸದೆ ಯುದ್ಧಕ್ಕೆ ಹೋದನು ಎಂದರು.
ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ |
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ || ೦೬ ||
ಪದವಿಭಾಗ-ಅರ್ಥ: ಎಂದರೆ+ ಒಡಲೊಳು ಕೂರಲಗು ಮುರಿದ+ ಅಂದದಲಿ ಕಳವಳಿಸಿದನು ಮನನೊಂದನು+ ಅಕಟ ಕುಮಾರನೆತ್ತಲು ರಾಯ ದಳವೆತ್ತ ಬಂದವರು ಭೀಷ್ಮಾದಿಗಳು ತಾನಿಂದು ತರಹರಿಸುವೊಡೆ ತಾನೇನು+ ಇಂದುಧರನೇ ಮರುಳಲಾ ಮಗನು+ ಎನುತ ಚಿಂತಿಸಿದ
ಅರ್ಥ:ಉತ್ತರನು ಕುರು ಸೇನೆಯೊಡನೆ ಯುದ್ಧಕ್ಕೆ ಹೋದನು ಎಂದರೆ, ವಿರಾಟ ರಾಜನ ಹೊಟ್ಟೆಯಲ್ಲಿ ಕೂರಲಗು ಮುರಿದ ಹಾಗೆ ಸಂಕದಿಂದ ಕಳವಳಪಟ್ಟನು. ಅವನು ಮನಸ್ಸಿನಲ್ಲಿ ನೊಂದು ಹೇಳಿದನು,'ಅಕಟ ನನ್ನ ಕುಮಾರ ಎತ್ತ, ಕೌರವರಾಯನ ಸೇನೆ ಎತ್ತ! ಬಂದವರು ಭೀಷ್ಮಾದಿಗಳು ಕುಮಾರನು ತಾನು ಇಂದು ಎದುರಿಸಿ ತಡೆಯಲು ತಾನೇನು ಇಂದುಧರ ಶಿವನೇ? ಮರುಳಲ್ಲವೇ ಮಗನು! ಎನ್ನುತ್ತಾ ಚಿಂತೆಗೊಳಗಾದ.
ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭
ಪದವಿಭಾಗ-ಅರ್ಥ: ಮಗಗೆ ಪಡಿಬಲವಾಗಿ ಬಲು ಮಂತ್ರಿಗಳನು+ ಅವನಿಪ ಬೀಳುಗೊಟ್ಟನು, ದುಗುಡದಿಂದ+ ಇರೆ, ಹೊಳಲು (ಪಟ್ಟಣ) ಕೈಸೂರುಗಳ ಕಳಕಳದ ಮೊಗದ ಹರುಷದಲಿ+ ಅಖಿಳ ದೂತಾಳಿಗಳು (ದೂತರ ಆಳಿ- ಗುಂಪು) ಬಂದುದು, ಗುಡಿಯ (ಬಾವುಟ) ಕಟ್ಟಿಸು ನಗರಿಯಲಿ ಕಳುಹಿ+ ಇದಿರುಗೊಳಿಸು (ಆದರದ ಸ್ವಾಗತ)ಕುಮಾರಕನನು+ ಎನುತ.
ಅರ್ಥ:ವಿರಾಟನು ಚಿಂತೆಯಿಂದ ಮಗನಿಗೆ ಬೆಂಬಲವಾಗಿ ಕೆಲವು ಮಂತ್ರಿಗಳನ್ನು ಕಳಿಸಿದನು. ಅದರೂ ಅವನು ಬಹಳ ಚಿಂತೆಯಲ್ಲಿ ಇರಲು, ನಗರದ ಹತ್ತಿರದಲ್ಲಿ ಕಳಕಳ ಸಂತೋಷದ ಮುಖದ, ಹರ್ಷದಿಂದ ಕೂಡಿದ ಎಲ್ಲಾ ದೂತರ ಸಮೂಹವೂ ಅರಸನ ಬಳಿಗೆ ಬಂದಿತು. ಅವರು ಅವನಿಗೆ, 'ನಗರದಲ್ಲಿ ವಿಜಯದ ಬಾವುಟಗಳನ್ನು ಕಟ್ಟಿಸು. ಮಂತ್ರಿಗಳನ್ನೂ ಸುವಾಸಿನಿಯರನ್ನೂ ಕಳಿಸು, ಮಗನನ್ನು ಎದುರುಗೊಳ್ಳು!' ಎನ್ನುತ್ತಾ ಬಂದರು.
ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ |
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ || ೦೮ ||
ಪದವಿಭಾಗ-ಅರ್ಥ: ರಾಯ ಕುವರ ಪಿತಾಮಹನು ರಿಪುರಾಯ ಕುವರ ಕುಠಾರ ಕೌರವರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ ಜೀಯ ಬಿನ್ನಹ ಕರ್ಣ ಗುರು ಗಾಂಗೇಯ ಮೊದಲಾದಖಿಳ ಕೌರವರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ
ಅರ್ಥ: ಅವರು ವಿರಾಟನಿಗೆ, 'ರಾಜನೇ ನಿಮ್ಮ ಕುಮಾರನು ಕುಲದ ಪಿತಾಮಹನು, ಶತ್ರುರಾಜರ ಕುಮಾರರ ಕುಠಾರ- ಕತ್ತರಿಸುವವನ, ಕೌರವರಾಯನ ಸೇನೆಯ ಧ್ವಂಸಕನು! ಕುರುಕುಲವೆಂಬ ಆನೆಗೆ ಐದು ಮುಖದ ರುದ್ರನು, ಜೀಯ ತಮ್ಮಲ್ಲಿ ಅರಿಕೆ ಮಾಡುವೆವು, ನಿಮ್ಮ ಮಗನು ಕರ್ಣ, ಗುರು ದ್ರೋಣ, ಗಾಂಗೇಯ- ಭೀಷ್ಮ, ಮೊದಲಾದ ಅಖಿಲ ಕೌರವರಾಯನ ಸೇನೆಯನ್ನು ಗೆದ್ದು, ಉತ್ತರ ರಾಜಕುಮಾರನು ಗೋವುಗಳನ್ನು ಮರಳಿ ತಂದನು,ಎಂದರು.
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು |
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ || ೦೯ ||
ಪದವಿಭಾಗ-ಅರ್ಥ: ಕೇಳಿ ಮಿಗೆ(ಬಹಳ) ಹಿಗ್ಗಿದನು ತನು ಪುಳಕಾಳಿ ತಳಿತುದು, ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು, ಕಂಗಳು+ ಅರಳಿದವು ಲಾಲಿಸುತ ಸರ್ವಾಂಗ ಹರುಷದೊಳು+ ಆಳೆ ಜನಪ ಪಸಾಯಿತವ (ಪಸಾಯಿತ= ಪ್ರೀತಿಪಾತ್ರ) ದೂತಾಳಿಗೆ+ ಇತ್ತನು ಸುಲಿದರು ಅವದಿರು ರಾಯನ+ ಓಲಗವ
ಅರ್ಥ:ಮಗ ಉತ್ತರನು ಯುದ್ಧದಲ್ಲಿ ಕುರು ಸೇನೆಯನ್ನು ಜಯಿಸಿದನು ಎಂಬುದನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ದೇಹದಲ್ಲಿ ರೋಮಾಂನ ಮೂಡಿತು. ಬಹಳ ಹರುಷದ ಆವೇಶದಲ್ಲಿ ಮನಸ್ಸು ಮುಂದಾಲೋಚನೆಯೂ ವಿಚಾರ ಶಕ್ತಿಯೂ ಕೆಟ್ಟಿತು. ಅವನ ಕಣ್ಣುಗಳು ಆನಂದದಿಂದ ಅರಳಿದವು. ಅದನ್ನೇ ಲಾಲಿಸುತ್ತಾ - ಪುನಃಪುನಃ ಭಾವಿಸುತ್ತಾ, ಅವನ ಸರ್ವಾಂಗವೂ ಹರ್ಷದಿಂದ ಆವರಿಸಲು, ರಾಜನು ಪ್ರೀತಿಪಾತ್ರರಾದ ಆ ದೂತರ ಗುಂಪಿಗೆ ಉದಾರವಾಗಿ ಬಹುಮಾನವನ್ನು ಕೊಟ್ಟನು; ಅವರೂ ರಾಜನ ಈ ಸಭಾಭೇಟಿಯನ್ನು ಕೇಳಿ ಪಡದು ಅವನನ್ನು ಸುಲಿದರು.
ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦
ಪದವಿಭಾಗ-ಅರ್ಥ: ಇದಿರುಗೊಳ ಹೇಳು+ ಎನಲು ಸರ್ವಾಂಗದಲಿ ಮಣಿ ಮೌಕ್ತಿಕದ ಸಿಂಗಾರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ ಸುದತಿಯರು ಹೊರವಂಟರು ಒಗ್ಗಿನ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನ+ ಅಲೆ+ ಎಸೆಯೆ ರಾಜಾಂಗನೆಯರು+ ಅನುವಾಯ್ತು
ಅರ್ಥ:ಜಯಶಾಲಿ ಉತ್ತರನನ್ನು ಇದಿರುಗೊಳ್ಳಲು ಹೇಳಿ ಎಂದು ದೂತರು ಹೇಳಿದ ತಕ್ಷಣ ಅರಮನೆಯ ಸುದತಿಯರು- ಮುತ್ತೈದೆಯರು ಅವರ ಸರ್ವಾಂಗದಲ್ಲಿಯೂ ಮಣಿ ಮುತ್ತುಗಳ ಸಿಂಗಾರಮಾಡಿಕೊಂಡು, ಸುಂದರ ಕಸೂತಿ ರೇಖೆಯ ಲಲಿತ- ನೋಡಲು ಮನೋಹರವಾದ ಚಿತ್ರಾವಳಿಯ ಮುಸುಕುಗಳನ್ನು ಧರಿಸಿ ಹೊರಹೊರಟರು; ಅದರ ಜೊತೆಗೆ ಒಟ್ಟಾಗಿ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನ ನಾದದ ಅಲೆಗಳು ಹೊಮ್ಮಿ ಶೋಭಿಸಲು ಎದುರುಗೊಳ್ಳಲು ಅನುವಾಧರು.
ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧
ಪದವಿಭಾಗ-ಅರ್ಥ: ಕವಿದು ನೂಕುವ (ಆವರಿಸಿ-ಒತ್ತರಿಸಿ ಬರುವ- ಒಳಗಿಂದ ಹೊರಕ್ಕೆ ಹೊಮ್ಮುವ) ಹರುಷವನು ಸಂತವಿಸಲು+ ಅರಿಯೆನು ಕಂಕ ನಿನ್ನೊಡನೆ+ ಎವಗೆ ವಿಮಳ ದ್ಯೂತಕೇಳಿಗೆ (ಪಗಡೆಯಾಟಕ್ಕೆ) ಚಿತ್ತವಾಯ್ತ+ ಎನಲು ಅವನಿಪತಿ ಕೇಳ್ ಜೂಜಿನಲಿ ಪಾಂಡವರು ಸಿಲುಕಿದರು+ ಅವರ ವಿಧಿಯನು ಭುವನದಲಿ ಬಲ್ಲವರು+ ಅದಾರು+ ಎಂದನು ವಿರಾಟಂಗೆ.
ಅರ್ಥ: ವಿರಾಟನು ಕಂಕನ ವೇಷದಲ್ಲಿದ್ದ ಧರ್ಮಜನನ್ನು ಕುರಿತು, 'ನನ್ನನ್ನು ಆವರಿಸಿ ಉಕ್ಕುತ್ತಿರುವ ಹರ್ಷವನ್ನು ಸಂತೈಸಿ ಸಮಾಧಾನ ಪಡಿಸಲು ಆಗುತ್ತಿಲ್ಲ. ಅದನ್ನು ಮರೆಯಲು ಕಂಕನೇ ನಿನ್ನೊಡನೆ ನಮಗೆ ವಿಮಲ- ದೋಷವಿಲ್ಲದ, ಫಣವಿಡದೆ ಪಗಡೆಯಾಟಕ್ಕೆ ಮನಸ್ಸಾಗಿದೆ, ಎನ್ನಲು, ಅವನು ರಾಜನೇ ಕೇಳು ಜೂಜಿನಲ್ಲಿ ಪಾಂಡವರು ಸಿಕ್ಕಿಕೊಂಡು, ಅವರಿಗಾದ ವಿಧಿಯನ್ನು- ಕಷ್ಟವನ್ನು ಬಲ್ಲವರು ಈ ಭೂಮಿಯಲ್ಲಿ ಯಾರಿದ್ದಾರೆ! ಎಂದನು ವಿರಾಟನಿಗೆ ಧರ್ಮಜ.
ಚಿತ್ರ:Shakuni is master of Dice Game.jpg
ದಾಳಗಳುಳ್ಳ ಪಗಡೆ ಆಟ- ನೆಲಕ್ಕೆ ಹಾಕಿರುವುದು ಮನೆಗಳುಳ್ಳ ಹಾಸು- ಹಾಸಂಗಿ
ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨
ಪದವಿಭಾಗ-ಅರ್ಥ: ಅವರು ರಾಜ್ಯವನು+ ಒಡ್ಡಿ ಸೋತವೊಲ್+ ಎವಗೆ ಪಣ ಬೇರಿಲ್ಲ, ಹರ್ಷೋತ್ಸವ ಕುಮಾರ+ ಅಭ್ಯುದಯ ವಿಜಯಶ್ರವಣ ಸುಖ ಮಿಗಲು ಎವಗೆ ಮನವಾಯ್ತು+ ಒಡ್ಡು ಸಾರಿಯ ನಿವಹವನು ಹೂಡೆನಲು ಹೂಡಿದನು+ ಅವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು.
  • ಹಾಸಂಗಿ= ಆಟಕ್ಕೆ ಚಿಕ್ಕ ಕಾಯಿಗಳನ್ನು ನೆಡೆಸುವ ಮನೆಗಳನ್ನು ಬಣ್ಣದಲ್ಲಿ ಗುರುತಿಸಿ ಹೊಲಿದಿರುವ ಬಟ್ಟೆಯ ಹಾಸು (ನೆಲದಮೆಲೆ ಹಾಸಿರುವ ಮನೆಗಳಿರುವ 'ಹಾಸನ್ನು' ನೋಡಿ).
ಅರ್ಥ: ಅದಕ್ಕೆ ವಿರಾಟನು, ಅವರು ರಾಜ್ಯವನು ಒಡ್ಡಿ ಸೋತಂತೆ ನಮಗೆ ಪಣ ಬೇರೆ ಬೇಡ, ಕೇವಲ ಹರ್ಷದ ಹಬ್ಬದಲ್ಲಿ ಕುಮಾರ ಉತ್ತರನ ಅಭ್ಯುದಯದ ವಿಜಯವಾರ್ತೆಯ ಸುಖ ಹೆಚ್ಚಲು ಅದನ್ನು ತಣಿಸಲು ನಮಗೆ ಆಟ ಆಡಲು ಮನಸ್ಸಾಯಿತು. ಎಲ್ಲಾ ಕಾಯಿಗಳ ರಾಶಿಯನ್ನು ಒಡ್ಡಿ ಹೂಡು, ಎಂದು, ರಾಜನು ನಸುನಗುತ್ತಾ ಹಾಸಂಗಿಯನು ಹಾಕಿದನು, ಧರ್ಮಜನು ಕಾಯಿಗಳನ್ನು ಹೂಡಿದನು.
ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ |
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ || ೧೩ ||
ಪದವಿಭಾಗ-ಅರ್ಥ: ಕೇಳಿ (ಆಟ) ಸಮತಳಿಸಿತ್ತು(ಸರಿಸಮವಾಗಿತ್ತು, ಒದಗಿತ್ತು ನಡೆಯುತ್ತಿತ್ತು) ಮತ್ಸ್ಯ ನೃಪಾಲನೆಂದನು ಕಂಕ ನೋಡೈ ಕಾಳಗವನು+ ಉತ್ತರನು ಗೆಲಿದನು ರಾಯ ಥಟ್ಟಿನಲಿ(ಥಟ್ಟು- ಸೇನೆ) ಶೂಲಪಾಣಿಗೆ ಸೆಡೆಯದ+ ಅಹಿತ ಭಟಾಳಿ ಸೋತುದು, ದಿವಿಜ ನರರೊಳು ಹೋಲುವವರು+ ಉಂಟೇ ಕುಮಾರನನು+ ಏನ ಹೇಳು+ ಎಂದ
ಅರ್ಥ: ಪಗಡೆಯ ಆಟ ಧರ್ಮಜ ವಿರಾಟರ ನಡುವೆ ನೆಡೆಯುತ್ತಿತ್ತು. ಮತ್ಸ್ಯ ರಾಜ ವಿರಾಟನು ಧರ್ಮಜನನ್ನು ಕುರಿತು ಹೇಳಿದನು.'ಕಂಕ ನೋಡಯ್ಯಾ ಕಾಳಗದ ವಿಚಾರವನ್ನು, ಉತ್ತರನು ಕೌರವರ ಸೇನೆಯೊಡನೆ ಯುದ್ಧಮಾಡಿ ಗೆದ್ದನು; ಶೂಲಪಾಣಿಗಯಾದ ಶಿವನಿಗೆ ಬಗ್ಗದ ಶತ್ರುಭಟರ ಸಮೂಹ, ಅದು ಸೋತುಹೋಹಿತು, ದೇವತೆಗಳಲ್ಲಿ ನರರಲ್ಲಿ ನನ್ನ ಕುಮಾರನ್ನು ಹೋಲುವವರು ಉಂಟೇ? ಏನ ಹೇಳುವೆ ಎಂದ.

ಸಾರಥಿ ಗೆದ್ದನು ಎಂದುದಕ್ಕೆ ವಿರಾಟ ಧರ್ಮಜನ ಹಣೆಗೆ ಹೊಡೆದ[ಸಂಪಾದಿಸಿ]

ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ |
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ || ೧೪ ||
ಪದವಿಭಾಗ-ಅರ್ಥ: ಸೋತುದು+ ಉಂಟು+ ಅರಿ ಸೇನೆ, ಸುರಭಿವ್ರಾತ ಮರಳಿದುದು+ ಉಂಟು, ಗೆಲವು+ ಇದು ಕೌತುಕವಲೇ ಬಗೆಯಲು+ ಅದ್ಭುತವು+ ಎಮ್ಮ ಚಿತ್ತದಲಿ ಮಾತು ಹೋಲುವೆಯು+ ಅಹುದು ಜಗ ವಿಖ್ಯಾತ ಸಾರಥಿಯಿರೆ ಕುಮಾರಗೆ ಭೀತಿ ಬಳಿಕೆಲ್ಲಿಯದು ತಪ್ಪೇನೆಂದನು+ ಆ ಕಂಕ.
ಅರ್ಥ:ರಾಜನೇ ನೀನು ಹೇಳಿದಂತೆ ಶತ್ರು ಸೇನೆ ಸೋತುದು ನಿಜ; ಗೋಸಮೂಹ ಮರಳಿದುದು ಕೂಡಾ ನಿಜ; ಈ ಗೆಲವು ಕೌತುಕವಲ್ಲವೇ! ಯೋಚಿಸಿದರೆ ಅದ್ಭುತವು. ನಮ್ಮ ಮನಸ್ಸಿನ ಮಾತು ಈ ಗೆಲುವಿಗೆ ಹೋಲಿಕೆ ಆಗುವುದು. ಜಗದ ವಿಖ್ಯಾತನಾದ ಸಾರಥಿಯಿದ್ದ ಬಳಿಕ ಉತ್ತರ ಕುಮಾರನಿಗೆ ಭೀತಿ ಎಲ್ಲಿಯದು? (ವಿಜಯ ಆಶ್ಚರ್ಯವಲ್ಲ) ತಪ್ಪೇನು ಎಂದನು ಆ ಕಂಕ.
ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು |
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ || ೧೫ ||
ಪದವಿಭಾಗ-ಅರ್ಥ: ಎಲೆ ಮರುಳೆ ಸನ್ಯಾಸಿ ಮತ್ಸರದೊಳಗೆ ಮುಳುಗಿದ ಚಿತ್ತ ನಿನ್ನದು ಗೆಲವಿನಲಿ ಸಂದೇಹವೇ ಹೇಳು+ ಆವುದು+ ಅದ್ಭುತವು, ಅಳುಕುವನೆ ಸುಕುಮಾರ ಸಾರಥಿ ಬಲುಹನು+ ಉಳ್ಳವನೇ ನಪುಂಸಕನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ.
ಅರ್ಥ: 'ಎಲೆ ಮರುಳೆ ಸನ್ಯಾಸಿ ನಿನ್ನದು ಮತ್ಸರದಲ್ಲಿ- ಹೊಟ್ಟೆಕಿಚ್ಚಿನಲ್ಲಿ ಮುಳುಗಿದ ಮನಸ್ಸು. ಗೆಲವಿನಲ್ಲಿ ಸಂದೇಹವೇ ಹೇಳು, ಯಾವುದು ಅದ್ಭುತವು, ನನ್ನ ಸುಕುಮಾರ ಸತ್ರುಗಳಿಗೆ ಅಳುಕುವನೆ, ಹೆದರುವನೇ? ಸಾರಥಿ ಪರಾಕ್ರಮ ಉಳ್ಳವನೇ? ನಪುಂಸಕನಲ್ಲಿ ನಿನ್ನದು ನಿರಂತರ ಪಕ್ಷಪಾತ' ಎಂದು ವಿರಾಟ ಸಿಟ್ಟುಮಾಡಿದ.
ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬
ಪದವಿಭಾಗ-ಅರ್ಥ: ನಾರಿಯರ ಮೈ+ ಗು+ ಕುರುಹು ಪುರುಷರ ಚಾರು ಚಿಹ್ನವ ಕೂಡಿಕೊಂಡಿಹ ಸಾರಥಿಯ ದೆಸೆಯಿಂದ ಕುವರನು ಗೆಲಿದನು+ ಎಂಬುದನು ಸೈರಿಸಿದೆ ನಾನು+ ಇನ್ನವರೆ ಮತ್ತಾರೊಡನೆ ಮಾತಾಡದಿರು ನಿಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗು+ ಎಂದ
ಅರ್ಥ: ಕಂಕನೇ ಸಾರತಿ ಬೃಹನ್ನಳೆಗೆ ನಾರಿಯಂತೆ ಮೈಗುರುತಿದೆ, ಕೇವಲ ಪುರುಷರ ಚಂದದ ಗಟ್ಟಿ ಚಿಹ್ನೆಯನ್ನು ಕೂಡಿಕೊಂಡಿರವ ಸಾರಥಿಯ ದೆಸೆಯಿಂದ ನನ್ನ ಕುವರನು ಗೆದ್ದನು ಎಂಬುದನ್ನು ನಾನು ಇನ್ನವರೆ- ಇಲ್ಲಿಯವರೆಗೆ ಸೈರಿಸಿದೆ; ನೀನು ಇದನ್ನು ಮತ್ತೆ ಯಾರೊಡನೆಯೂ ಹೇಳಬೇಡ. ಕಂಕ ನೀನು ನಿಸ್ಸಾರ ಹೃದಯನು! ದುಷ್ಟಾತ್ಮನು! ಹೋಗಯ್ಯಾ! ಎಂದ ವಿರಾಟ.
ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ |
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ || ೧೭ ||
ಪದವಿಭಾಗ-ಅರ್ಥ: ಖತಿಯ ಹಿಡಿಯದಿರು+ ಅರಸ ದಿಟ ನೀನು+ ಅತಿಶಯವ ಬಯಸುವರೆ, ಜನ ಸಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ, ಸುತನು ಸಾರಥಿಯೆಂದು ಸಾರಿಸು, ವಿತಥವಲ್ಲ+ ಇದು ಪಕ್ಷಪಾತಸ್ಥಿತಿಯನು+ ಆಡೆವು ಕವಲು ನಾಲಗೆಯಿಲ್ಲ ತನಗೆ+ ಎಂದ
ಅರ್ಥ: ಧರ್ಮಜನು,'ರಾಜನೇ ಹಟ ಹಿಡಿಯಬೇಡ; ಅರಸನೇ ನಾನು ಹೇಳಿದ್ದು ಸತ್ಯವು. ನೀನು ಮಗನಿಂದ ಅಸಾಧ್ಯವಾದ ಭೀಷ್ಮ ದ್ರೋಣ, ಕೃಪ, ಕರ್ಣರನ್ನು ಗೆಲ್ಲುವ ಅತಿಶಯವನ್ನು ಬಯಸಬಹುದೇ? ಜನ ಸಮ್ಮತವಾಗುವುದು, ಸಾರಥಿ ಗೆದ್ದನೆಂದೇ ಡಂಗುರವನ್ನು ಹೊಯಿಸು, ನಿನ್ನ ಮಗನು ಸಾರಥಿಯೆಂದು ಸಾರಿಸು; ಅಸತ್ಯವಲ್ಲ ಇದು! ಪಕ್ಷಪಾತ ಸ್ಥಿತಿಯನ್ನು ಅನುಸರಿಸಿ, ಯಾರನ್ನೂ ವಹಿಸಿ ನಾವು ಆಡುವಿದಿಲ್ಲ; ತನಗೆ ಎರಡು ನಾಲಗೆಯಿಲ್ಲ, ಎಂದ.
ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ |
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ || ೧೮ ||
ಪದವಿಭಾಗ-ಅರ್ಥ: ನಿನ್ನ ಮೋಹದ ಕಂಗಳಿಗೆ ಮಗನು+ ಉನ್ನತೋನ್ನತ ಸತ್ವನೆಂದೇ ಮುನ್ನ ತೋರಿತು, ಹೊಲ್ಲೆಹವೆ ಸಂಸಾರಕ ಭ್ರಮೆಗೆ ಇನ್ನು ಗೆಲಿದವನು+ ಆ ಬೃಹನ್ನಳೆ, ನಿನ್ನ ಮಗಗೆ+ ಅಳುಕುವರೆ ಭೀಷ್ಮನು ಕರ್ಣ ಕೃಪ ಗುರು ಗುರುತನೂಭವರು+ ಎಂದನು+ ಆ ಕಂಕ
ಅರ್ಥ:ರಾಜನೇ ತಪ್ಪಲ್ಲ ನಿನ್ನದು, ನಿನ್ನ ಮೋಹದ ಕಣ್ಣುಗಳಿಗೆ ಮಗನು ಬಹಳ ಉನ್ನತ ಸತ್ವನು ಎಂದೇ ಮೊದಲಿಗೆ ತೋರಿತು. ಅದೇನು ತಪ್ಪಲ್ಲ, ಸಂಸಾರದ ಮೋಹ - ಜಗತ್ತನ್ನು ಆವರಿಸಿದ ಭ್ರಮೆಗೆ ಹಾಗೆ ತೋರಿತು. ಇನ್ನಾದರೂ ತಿಳಿ, ಗೆದ್ದವನು ಆ ಬೃಹನ್ನಳೆ! ನಿನ್ನ ಮಗನಿಗೆ ಭೀಷ್ಮನು, ಕರ್ಣನು, ಕೃಪನು ಗುರು ದ್ರೋಣನು, ಗುರುತನೂಭವ ಅಶ್ವತ್ಥಾಮ ಇವರು ಅಳುಕುವರೆ- ಸೋಲುವರೇ?' ಎಂದನು ಆ ಕಂಕ.
ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯
ಪದವಿಭಾಗ-ಅರ್ಥ:ಎನಲು(ಹೇಳಲು) ಖತಿ ಬಿಗುಹೇರಿ ಹಲು ಹಲು+ ದ+ ತಿನುತೆ ಕಂಗಳಲಿ+ ಉರಿಯನು+ ಉಗುಳುತ ಕನಲಿ ಬಿಗಿದು+ ಔಡೊತ್ತಿ ಕನಕದ ಸಾರಿಯನು(ಗುಳಿಗೆ - ಚಿನ್ನದ ಪಗಡೆಕಾಯಿ ಅಥವಾ ದಾಳ) ನೆಗಹಿ, ಜನಪತಿಯ ಹಣೆಯು+ ಒಡೆಯಲು+ ಇಡೆ (ಹೊಡೆಯಲು) ಜಾಜಿನ(ಜಾಜು- ಕೆಂಪು) ಗಿರಿಯ ನಿರ್ಜರದವೊಲು ಭೋಂಕ್+ ಎನಲು ರುಧಿರದ(ರಕ್ತದ) ಧಾರೆ ಸಿಡಿದುದು ಶಿರದ ಸೆಲೆಯೊಡೆದು
ಅರ್ಥ:ಧರ್ಮಜನು ಹಾಗೆ ಹೇಳಲು, ವಿರಾಟನಿಗೆ ಸಿಟ್ಟು ಅತಿಯಾಗಿ ಏರಿ ಹಲ್ಲುಹಲ್ಲುಕಡಿಯುತ್ತ ಕಣ್ಣುಗಳಲಿ ಬೆಂಕಿಯನ್ನು ಉಗುಳುತ್ತಾ ಕೋಪದಿಂದ ದವಡೆಯನ್ನು ಒತ್ತಿ ಬಿಗಿದು ಚಿನ್ನದ ದಾಳವನ್ನು ಎತ್ತಿ, ಧರ್ಮರಾಜನ ಹಣೆಯು ಒಡೆಯುವಂತೆ ಹೊಡೆಯಲು, ಕೆಮ್ಮಣ್ಣಿನ ಬೆಟ್ಟದಲ್ಲಿ ಜಲ ಉಕ್ಕಿದಂತೆ ಭೋಂಕ್ ಎಂದು ರಕ್ತದ ಧಾರೆ ತಲೆಯ ಸೆಲೆಯೊಡೆದು ಸಿಡಿದು ಹರಿಯಿತು.
ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ |
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ || ೨೦ ||
ಪದವಿಭಾಗ-ಅರ್ಥ:ಸೈರಿಸುತ ಕೈಯೊಡ್ಡಿ ರಕುತದ ಧಾರೆಯನು ಕೈತುಂಬ ಹಿಡಿದತಿ ಧೀರನ+ ಓರೆಯ ನೋಟದಲಿ ಸೈರಂಧ್ರಿಯನು ಕರೆಯೆ ನಾರಿ ಹರಿತಂದು+ ಅಕಟ ನೊಂದನು ಕಾರುಣಿಕ (ಜ್ಞಾನಿ) ಸನ್ಯಾಸಿಯೆನುತ ವಿಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ (ರಕ್ತವನ್ನು).
ಅರ್ಥ: ಆಗ ಧರ್ಮಜನು ಅದನ್ನು ಶಾಂತವಾಗಿ ಸೈರಿಸಿಕೊಂಡು ಕೈಯೊಡ್ಡಿ ರಕ್ತದ ಧಾರೆಯನ್ನು ಕೈತುಂಬ ಹಿಡಿದು, ಅತಿ ಧೀರನಾದ ಅವನು ಓರೆನೋಟದ ಸನ್ನೆಯಿಂದ ಸೈರಂಧ್ರಿಯನ್ನು ಕರೆದನು. ಅವಳು ಅವಸರದಿಂದ ಓಡಿಬಂದು ಅಕಟ! ನೊಂದನು ಕಾರುಣಿಕ ಸನ್ಯಾಸಿ ಎಂದು ಅಸಹ್ಯ ಅಥವಾ ಬೇಸರ ಪಡದೆ ಸೆರಗಿನಲ್ಲಿ ಆ ಎಲ್ಲಾ ರಕ್ತವನ್ನೂ ಕೆಳಕ್ಕೆ ಬೀಳದಂತೆ ನೆನೆಸಿಕೊಂಡು ಹೋದಳು.
ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ |
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ || ೨೧ ||
ಪದವಿಭಾಗ-ಅರ್ಥ:ಮಡದಿ(ಪತ್ನಿ) ಕರಪಲ್ಲವದಲಿ (ಪಲ್ಲವ- ಚಿಗುರು ಎಲೆ)+ ಒರೆಸಿದಳು+ ಅಡಿಗಡಿಗೆ ಹಣೆಯನು ಕಪೋಲವ ತೊಡೆದು ತೊಳೆದಳು ಮುಖವನು+ ಅದನು+ ಅವ (ಅವನು- ವಿರಾಟ) ಕಂಡು ಬೆರಗಾಗಿ ಹಿಡಿದೆ ರಕುತವನು+ ಏಕೆ ಕಾಮಿನಿ ನುಡಿ ನಿಧಾನವನು (ಕಾರಣ)+ ಇವರು ನೊಂದರೆ ಮಿಡುಕಲು+ ಏತಕೆ ನೀನು+ ಎನುತ ದುರುಪದಿಯ ಬೆಸಗೊಂಡ.
ಅರ್ಥ:ಧರ್ಮಜನ ಮಡದಿ ದ್ರೌಪದಿ ತನ್ನ ಸುಂದರ ಕೈಗಳಿಂದ ಒರೆಸಿದಳು. ಮತ್ತೆ ಮತ್ತೆ ರಕ್ತ ಒಸರಿದ ತೊಡೆದ, ಹಣೆಯನ್ನು ಕಪೋಲವನ್ನೂ ಮುಖವನ್ನೂ ತೊಳೆದಳು. ವಿರಾಟನು ಅದನ್ನು ಕಂಡು ಬೆರಗಾಗಿ ರಕ್ತವನ್ನು ಏಕೆ ಹಿಡಿದೆ ಸುಂದರಿ? ಕಾರಣವನ್ನು ಹೇಳು; ಇವರು ನೊಂದರೆ ನೀನು ಏಕೆ ಸಂಕಟಪಡುವೆ? ಎನ್ನುತ್ತಾ ದ್ರೌಪದಿಯ ಕೇಳಿದನು.
ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨
ಪದವಿಭಾಗ-ಅರ್ಥ: ಉರಿದು ಹೋಹುದು ನಿನ್ನ ರಾಜ್ಯದ ಸಿರಿಯು ಬದುಕಿದೆಯೊಂದು ಕಣೆಯಕೆ ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ ಅರಸ ಕೇಳು+ ಈ ಮುನಿಯ ನೆತ್ತರು ಧರೆಯೊಳು+ ಒ(ಹೊ)ಕ್ಕೊಡೆ+ ಯು + ಆ ಪ್ರದೇಶವನು+ ಒರಸಿ ಕಳೆವುದು ದಿಟ ಬೃಹನ್ನಳೆಗೆ ಏರಿಸಿದ ಬಿರುದು.
ಅರ್ಥ: ದ್ರೌಪದಿ ಎಂದಳು, 'ಮಹಾರಾಜಾ! 'ನಿನ್ನ ರಾಜ್ಯದ ಸಂಪತ್ತು ಉರಿದು ಹೋಗುವುದು. ಒಂದು ಬಾಣದ ಹೊಡೆತದಿಂದ ನೀನು ಬದುಕಿದೆ. ಪರಮ ಯತಿ ನಿನ್ನನ್ನು ಕಾಪಾಡಿದನು; ಅವನು ಕೈಯಲ್ಲಿ ರಕ್ತವನ್ನು ತುಂಬಿ ನೆಲಕ್ಕೆ ಬೀಳದಂತೆ ತಡೆದನು. ಅರಸ ಕೇಳು ಈ ಮುನಿಯ ನೆತ್ತರು ಧರೆಯಲ್ಲಿ ಹೊಕ್ಕರೆ ಆ ಪ್ರದೇಶನ್ನು ಅವನು ಒರಸಿ ನಾಸಮಾಡುವುದು ದಿಟ. ಅದು ಬೃಹನ್ನಳೆಯು ಪಡೆದಿರುವ ಬಿರುದು.'
ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩
ಪದವಿಭಾಗ-ಅರ್ಥ: ವಿರಾಟ ಚಿಂತಿಸಿದ,'ಈಕೆ ಯಾರು? ಇವರಾರು? ನಾಟ್ಯವ್ಯಾಕರಣ ಪಂಡಿತ ಬೃಹನ್ನಳೆಯು ಈಕೆಗೆ+ ಏನಹನೊ+ ಅರಿಯ ಬಾರದು ಕಾಲು ಕೀಲುಗಳ; ಏಕೆ ನನಗೆ ಅದರ+ ಅರಿತವು+ ಎಂದು+ ಅವಿವೇಕಿಯಿರೆ, ಬಳಿಕ+ ಇತ್ತ ಪುರದಲಿ ನೂಕು ನೂಕಾಯಿತ್ತು ನೋಡುವ ನೆರವಿಯು+ ಉತ್ತರನ.
ಅರ್ಥ: ವಿರಾಟ ಚಿಂತಿಸಿದ,'ಈಕೆ ಯಾರು? ಇವರಾರು? ನಾಟ್ಯವ್ಯಾಕರಣ ಪಂಡಿತ ಬೃಹನ್ನಳೆಯು ಈಕೆಗೆ ಏನಾಗಬೇಕೊ? ಇದರ ಕಾಲು ಕೀಲುಗಳನ್ನು ಅರಿಯಲು ಸಾಧ್ಯವಿಲ್ಲ! ಹೊಗಲಿ ನನಗೆ ಏಕೆ ಅದರ ಅರಿಯುವ ವಿಚಾರ, ಎಂದು ವಿವೇಕವಿಲ್ಲದ ಅವನು ಸಮ್ಮನೆ ಇರಲು, ಬಳಿಕ ಇತ್ತ ನಗರದಲ್ಲಿ ಮಹಾ ವೀರರನ್ನು ಗೆದ್ದ ಉತ್ತರನನ್ನು ನೋಡಲು ನರೆದ ಜನರಿಂದ ನೂಕುನುಗ್ಗಾಯಿತು.

ಉತ್ತರನಿಗೆ ವೀರೋಚಿತ ಸ್ವಾಗತ - ಉತ್ತರನ ನಿರಾಕರಣೆ[ಸಂಪಾದಿಸಿ]

ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ |
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ || ೨೪ ||
ಪದವಿಭಾಗ-ಅರ್ಥ: ಇದಿರು ಬಂದರು ಮಂತ್ರಿಗಳು ವರ- ಸುದತಿಯರು ಸೂಸಿದರು(ಉದುರಿಸು, ಚೆಲ್ಲು) ಸೇಸೆಯ ನುದಿತ (ಬಾರಿಸಿದ) ಮಂಗಳ ಘೋಷ ವಾದ್ಯ ವಿತಾನ (ಅನೇಕ, ಸಮೂಹ) ಸ ರಭಸದಲಿ ವದನವಿದೆ ಕಳೆಗುಂದಿ ಜಯದ+ ಅಭ್ಯುದಯ ತಾನು+ ಎಂತು+ ಎನುತ ವರ ಕೋವಿದರು (ಉತ್ತಮ ಪಂಡಿತರು) ತಮ್ಮೊಳಗೆ+ ಆಡುತಿರ್ದರು ಕೂಡೆ ಗುಜುಗುಜಿಸಿ
ಅರ್ಥ:ಉತ್ತರನ ವಿಜಯೋತ್ಸವ ಆಚರಿಸಲು ಮಂತ್ರಿಗಳು ಬಂದು ಎದುರುಗಂಡರು; ಶ್ರೇಷ್ಠ ಮುತ್ತೈದೆಯರು ಹೂವುಗಳನ್ನು ಉತ್ತರನ ಮೇಲೆ ಸೂಸಿದರು; ಅನೇಕ ಮಂಗಳ ಘೋಷ ವಾದ್ಯಗಳ ಸದ್ದಿನಲ್ಲಿಸೇಸೆಯನ್ನು - ಮುತ್ತಿನ ಉಂಡೆಯನ್ನು ಸುಳಿದು ಆರತಿ ಬೆಳಗಿದರು; ಉತ್ತಮ ಪಂಡಿತರು ಜಯದ ಅಭ್ಯುದಯದಲ್ಲಿ ಉತ್ತರನು ಮುಖದಲ್ಲಿ ಸಂತೋಷವಿಲ್ಲದೆ ಕಳೆಗುಂದಿದ್ದಾನೆ ಎಂತು, ಏಕೆ ಎನ್ನುತ್ತಾ ಉತ್ತಮ ಪಂಡಿತರು ತಮ್ಮೊಳಗೆ ಮಾತಗಳನ್ನು ಆಡುತ್ತಿದ್ದರು, ಕೂಡಲೆ ಈ ಸುದ್ದಿ ಜನರಲ್ಲಿ ಗುಜುಗುಜಿಸಿ ಹರಡಿತು.
ಎಂದಿನವನುತ್ತರನು ಗಂಗಾ
ನಂದನನೀ ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ |
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ || ೨೫ ||
ಪದವಿಭಾಗ-ಅರ್ಥ:ಎಂದಿನ (ವಯಸ್ಸಿನ)+ ಇವನು+ ಉತ್ತರನು, ಗಂಗಾ ನಂದನನನು+ ಈ ಹೂಹೆ (1. ಹಸುಳೆ. 2. ಮರಿ. 3. ಗೊಂಬೆ. 4. ಅಲ್ಪ.) ಗೆಲಿದನು ಸಂದ (ಪ್ರಸಿದ್ಧ) ಸುಭಟ ದ್ರೋಣ ಕರ್ಣಾದಿಗಳನು+ ಓಡಿಸಿದ ಎಂದು ಕೆಲಬರು ಕೆಲಬರಿವ ಗೆಲಿದಂದವಾಗಿರದು+ ಈ ಬೃಹನ್ನಳೆಯಿಂದ ಸಂಭಾವಿಸುವುದು+ ಎಂದುದು ಮಂದಿ ತಮತಮಗೆ.
ಅರ್ಥ:(ತಿಳಿದ ಜನರು) 'ಹದಿನಾರು ಹದಿನೇಳು ವರ್ಷ ವಯಸ್ಸಿನ ಬಾಲನು, ಇವನು- ಈ ಉತ್ತರನು, ಗಂಗಾ ನಂದನ ಭೀಷ್ಮನನ್ನು ಈ ಹಸುಳೆ, ಈ ಅಲ್ಪಮರಿ ಗೆದ್ದನು! ಪ್ರಸಿದ್ಧ ಸುಭಟರಾದ ದ್ರೋಣ ಕರ್ಣಾದಿಗಳನ್ನು ಓಡಿಸಿದನು! ನಂಬಲಸಾದ್ಯ!' ಎಂದರು ಕೆಲವರು. ಕೆಲವರು, 'ಇವನು ಗೆದ್ದದ್ದು ಆಗಿರಲಾರದು; ಈ ಬೃಹನ್ನಳೆಯಿಂದ ಗೆಲುವು ಸಂಭವಿಸಿರಬಹುದು,' ಎಂದು ಮಂದಿ ತಮತಮಗೆ ಆಡಿಕೊಂಡರು.
ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ |
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ || ೨೬ ||
ಪದವಿಭಾಗ-ಅರ್ಥ: ಲೀಲೆ ಮಿಗಲು+ ಉತ್ತರನು ಪುರಜನಜಾಲ ಜೀಯೆನಲು+ ಇದಿರು ಬಂದ ನಿವಾಳಿಗಳ (ದೃಷ್ಟಿದೋಷ ತೆಗೆಯುವ ಕ್ರಮ) ನೂಕಿದನು ಕೈವಾರಿಗಳ (ಹೊಗಳುಭಟ್ಟರು) ಕೋಪಿಸುತ ಆಲಿಯು (ಕಣ್ಣುಗಳು)+ ಅವನಿಯ (ಭೂಮಿ) ಬರೆಯೆ ಮುಸುಕಿನ ಮೇಲು ದುಗುಡದ ಭಾರದಲಿ ರಾಜಾಲಯಕೆ ಬರಲು+ ಇದಿರು ಬಂದು+ ಅಪ್ಪಿದನು ನಂದನನ (ಮಗನನ್ನು).
ಅರ್ಥ:ಈ ವಿಜಯೋತ್ಸವದ ಆಟ ಹೆಚ್ಚುತ್ತಿರಲು, ಪುರಜನಸಮೂಹ ಜೀ, ಜೈ,ಎಂದು ಜಯಕಾರ ಹಾಕುತ್ತಿರಲು, ಉತ್ತರನು ಎದುರಿಗೆ ಬಂದ ನಿವಾಳಿಗಳನ್ನು- ದೃಷ್ಟಿದೋಷ ಪರಿಹಾರಕ್ಕಾಗಿ ಎತ್ತುವ ಉಪ್ಪಿನ ಆರತಿಗಳನ್ನು ಅತ್ತ ನೂಕಿದನು; ಹೊಗಳುಭಟ್ಟರನ್ನು ಕೋಪಿಸುತ್ತಾ ಕಣ್ಣುಗಳನ್ನು ನೆಲದಲ್ಲಿ ಬರೆಯವಂತೆ ನೆಟ್ಟು, ಹೊದೆದ ಮೇಲು ಶಲ್ಯ- ಶಾಲನ್ನು ತಲೆಯಮೇಲೆ ಇಟ್ಟುಕೊಂಡು ಮುಸುಕಿನ ದುಗುಡದ- ಚಿಂತೆಯ ಭಾರದಲಲಿ ರಾಜಾಲಯಕ್ಕೆ ಬಂದನು. ಆಗ ವಿರಾಟನು ಎದಿರುಬಂದು ಮಗನನ್ನು ಅಪ್ಪಿದನು.
ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ |
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ || ೨೭ ||
ಪದವಿಭಾಗ-ಅರ್ಥ:ಬಾ ಮಗನೆ ವಸುಕುಲದ ನೃಪ ಚಿಂತಾಮಣಿಯೆ ಕುರುರಾಯ ಮೋಹರ ಧೂಮಕೇತುವೆ ಕಂದ ಬಾಯೆಂದು+ ಅಪ್ಪಿ ಕುಳ್ಳಿರಿಸೆ ಕಾಮಿನಿಯರು+ ಉಪ್ಪಾರತಿಗಳ+ ಅಭಿರಾಮ ವಸ್ತ್ರ ನಿವಾಳಿ ರತ್ನಸ್ತೋಮ ಬಣ್ಣದ ಸೊಡರು ಸುಳಿದವು ಹರುಷದ+ ಒಗ್ಗಿನಲಿ (ತುಂಬಿಕೊಂಡು)
  • ಚಿಂತಾಮಣಿ= ಬಯಸಿದುದನ್ನು ನೀಡುವುದೆಂದು ನಂಬಲಾದ ರತ್ನ;ಉಪ್ಪಾರತಿ= ಉಪ್ಪನ್ನು ನಿವಾಳಿಸಿ ದೃಷ್ಟಿಯನ್ನು ತೆಗೆಯುವುದು.ಸೊಡರು= ಅರತಿಬತ್ತಿಯ ದೀಪ; ಸುಳಿದವು = ಆದರಿಸಲ್ಪಡುವವನ ಎದುರು- ಆರತಿಯನ್ನು ಅತ್ತಿಂದಿತ್ತ ಅಡಿಸಿ ಸುತ್ತಿ ಸುಳಿಯುವುದು.
ಅರ್ಥ: ವಿರಾಟನು ಮಗನನ್ನು ಪ್ರೀತಿ ಆದರದಿಂದ,'ಬಾ ಮಗನೆ ವಸುಕುಲದ ರಾಜರಿಗೆ ಚಿಂತಾಮಣಿಯೆ! ಕುರುರಾಯನ ಸೈನ್ಯದ ಧೂಮಕೇತುವೆ! ಕಂದ ಬಾ,' ಎಂದು ಅಪ್ಪಿ ಕುಳ್ಳಿರಿಸಲು, ವನಿತೆಯರು ಉಪ್ಪಾರತಿಗಳನ್ನು ಎತ್ತಿದರು, ಅಭಿರಾಮ ವಸ್ತ್ರ ನಿವಾಳಿಸಿ ರತ್ನತುಂಬಿದ ಸುಳಿಯುವ ಉಂಡೆಗಳುಳ್ಳ ತಟ್ಟೆಗಳಲ್ಲಿ ಬಣ್ಣದ ಆರತಿ ದೀಪಗಳು ಎಲ್ಲರಲ್ಲಿ ಹರ್ಷ ತುಂಬಿಕೊಂಡು ಬೆಳಗಿ ಸುಳಿದವು.
ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ |
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ || ೨೮ ||
ಪದವಿಭಾಗ-ಅರ್ಥ:ಬೊಪ್ಪ ಸಾಕು+ ಈ ಬಯಲ ಡೊಂಬು (ಸುಳ್ಳು ಮರ್ಯದೆಯ ಉಪಚಾರ)+ ಎನಗೊಪ್ಪುವುದೆ ವೀರೋಪಚಾರವು+ ಇದು+ ಒಪ್ಪುವರಿಗೆ+ ಒಪ್ಪುವುದು ತೆಗೆಸು+ ಎನಲು+ ಅರಸ ನಸುನಗುತ ದರ್ಪವುಳ್ಳಂಗೆ+ ಈಸು ಮಂಗಳವು+ ಒಪ್ಪದೇನೈ, ಜಗದೊಳು+ ಆವಂಗೆ+ ಬಪ್ಪುದು+ ಈ ಬಲವು+ ಈ ನಿಗರ್ವಿತೆಯು+ ಎಂದನು+ ಆ ಮತ್ಸ್ಯ.
ಅರ್ಥ:ಉತ್ತರನು ನಾಚಿ ತಲೆ ತಗ್ಗಿಸಿ, 'ಬೊಪ್ಪ- ಅಪ್ಪಾ ಸಾಕು ಈ ಬಯಲು ಆಡಂಬರ! ನನಗೆ ಒಪ್ಪುವುದೆ ಈ ವೀರೋಪಚಾರವು? (ಇಲ್ಲ); ಇದು ಒಪ್ಪುವವರಿಗೆ ಒಪ್ಪುವುದು. ಈ ಆಡಂಬರದ ಉಪಚಾರವನ್ನು ತೆಗೆಸು,' ಎನ್ನಲು, ಅರಸ ವಿರಾಟನು ನಸುನಗುತ್ತಾ ಸಾಹಸದ ದರ್ಪವುಳ್ಳವನಿಗೆ ಇಷ್ಟು ಮಂಗಳ ಸ್ವಾಗತವು ಒಪ್ಪದೇನಯ್ಯಾ! ಜಗತ್ತಿನಲ್ಲಿ ಯಾವನಿಗೆ ಬಬರುವುದು ಈ ಬಲವು? ಮತ್ತು ನಿನ್ನ ಈ ನಿಗರ್ವಿತೆಯು ಎಂದನು ಆ ಮತ್ಸ್ಯರಾಜ.
ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ |
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ || ೨೯ ||
ಪದವಿಭಾಗ-ಅರ್ಥ: ಮಗನೆ ಕರ್ಣ ದ್ರೋಣ ಭೀಷ್ಮಾದಿಗಳನು+ ಒಬ್ಬನೆ ಗೆಲಿದೆ+ ಯ+ ಈ ಕಾಳಗದ ಕಡುಗಲಿತನಗಳು+ ಉಂಟೇ ಪೂರ್ವ ಪುರುಷರಲಿ? ದುಗುಡವೇಕೆ+ ಎನ್ನಾಣೆ ಹೆತ್ತರ ಮೊಗಕೆ ಹರುಷವ ತಂದೆಲಾ! ಹಂಗಿಗನೆ? ನೀ ತಲೆ ಗುತ್ತಲೇಕೆ? ಎಂದು ಎತ್ತಿದನು ಮುಖವ.
ಅರ್ಥ:ಮಗ ಉತ್ತರನ ತಗ್ಗಿಸಿದ ಮುಖದಲ್ಲಿ ದುಗುಡವನ್ನು ನೋಡಿ, ರಾಜನು,'ಮಗನೆ ಕರ್ಣ, ದ್ರೋಣ, ಭೀಷ್ಮಾದಿಗಳನ್ನು ಒಬ್ಬನೆ ಗೆದ್ದೆಯಲ್ಲಾ! ಈ ಕಾಳಗದ ಕಡುಗಲಿತನ, ಶೌರ್ಯ ಹಿಂಇನ ಯಾವುದೇ ಪುರುಷರಲ್ಲಿ ಇತ್ತೇ! ನಿನ್ನ ಮುಖದಲ್ಲಿ ಏಕೆ ದುಗುಡ? ಎನ್ನಾಣೆ ಹೆತ್ತವರ ಮುಖಕ್ಕೆ ಹರುಷವನ್ನು ತಂದೆಯಲ್ಲಾ! ನಿನಗೆ ಯಾರ ಹಂಗಿದೆಯೇ? ನೀನೇನು ಹಂಗಿಗನೆ? ನೀ ತಲೆ ತಗ್ಗಿಸಲೇಕೆ?' ಎಂದು ಮಗನ ಮುಖವನ್ನು ಎತ್ತಿದನು.
ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು |
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ || ೩೦ ||
ಪದವಿಭಾಗ-ಅರ್ಥ: ಕಾದಿ ಗೆಲಿದವ ಬೇರೆ ಸಾರಥಿಯಾದ ತನಗೆ+ ಈಸು+ ಏಕೆ ನಿಮ್ಮಡಿಯ+ ಆದರಿಸಲು+ 'ಒಡೆಮುರಿಚ ಬಲ್ಲನೆ' ನಾಚಿಸದಿರು+ ಎನಲು ಕಾದಿದಾತನು ನೀನು, ಸಾರಥಿಯಾದವನು ತಂಗಿಯ ಬೃಹನ್ನಳೆ. ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ. (ಒಡೆಮುರಿ= ತಿರುಚು, ಗಾಯಮಾಡು)
ಅರ್ಥ:ಆಗ ಉತ್ತರನು, 'ಕಾದಾಡಿ ಗೆದ್ದವನು ಬೇರೆಯವನು; ನಿಮ್ಮ ಸೇವಕ ನಾನು, ಸಾರಥಿಯಾದ ತನಗೆ ಇಷ್ಟೊಂದು ಆದರಿಸುವುದು ಏಕೆ? ನಿಮಗೆ ನೋವು ಮಾಡ ಬಲ್ಲೆನೆ? ತಂದೆಯೇ ನನ್ನನ್ನು ನಾಚುವಂತೆ ಮಾಡಬೇಡಿ,'ಎನ್ನಲು, ರಾಜನು ನನಗೆ ಗೊತ್ತು,' ಯುದ್ಧಮಾಡಿದವನು ನೀನು! ಸಾರಥಿಯಾದವನು ತಂಗಿಯ ಗುರು ಬೃಹನ್ನಳೆ. ಎಲೆ ಮಗನೆ ವಾದ ಬೇಡ! ನಾನು ನಿನ್ನ ಪರಾಕ್ರಮವನ್ನು ಬಲ್ಲೆನು,'ಎಂದ ವಿರಾಟ.
ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು |
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ || ೩೧ ||
ಪದವಿಭಾಗ-ಅರ್ಥ: ಅದಟುತನವು+ ಎನಗುಂಟೆ ಬೆಂದುದ ಬೆದಕಿ ನೋಯಿಸಬೇಡ ಹಗಲಿನ ಕದನವನು ಗೆಲಿದಾತ ಬೇರೆ+ ಇಹ, ಬೊಪ್ಪ ನುಡಿಯದಿರು ಉದಯದಲಿ ಗೆಲಿದಾತನನು ನಿಮ್ಮಿದಿರಿನಲಿ ತೋರುವೆನು, ಬೀಳ್ಕೊಡಿ ಸದನಕೆಂದು ಕುಮಾರ ಕಳುಹಿಸಿಕೊಂಡನು+ ಅರಮನೆಗೆ
ಅರ್ಥ: ಉತ್ತರನು,'ತಂದೆಯೇ ನನಗೆ ಆ ಪರಾಕ್ರಮವು ಉಂಟೇ? ನೀವು ಸುಟ್ಟು ಬೆಂದ ಗಾಯದಲ್ಲಿ ಬರಳಿಟ್ಟು ಕೆದಕಿ ನೋಯಿಸಬೇಡಿ. ಈ ದಿನದ ಹಗಲಿನ ಯುದ್ಧವನ್ನು ಗೆದ್ದವನು ಬೇರೆ ಇದ್ದಾನೆ. ಬೊಪ್ಪ ಇನ್ನು ಮಾತು ಬೇಡ! ಬೆಳಗಾಗಲಿ ನಾನು ಗೆದ್ದಾತನನ್ನು ನಿಮ್ಮ ಎದುರಿನಲ್ಲಿ ಕರೆತಂದು ತೋರಿಸುವೆನು. ಈಗ ನನ್ನನ್ನು ಮನೆಗೆ ಬೀಳ್ಕೊಡಿ' ಎಂದು ಕುಮಾರ ತನ್ನನ್ನು ಅರಮನೆಗೆ ಕಳುಹಿಸಿಕೊಂಡನು.

ಪಾಂಡವರ ಸಮಾಲೋಚನೆ[ಸಂಪಾದಿಸಿ]

ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ |
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ || ೩೨ ||
ಪದವಿಭಾಗ-ಅರ್ಥ: ಇತ್ತಲು+ ಅರ್ಜುನ ದೇವ ಸಾರಿದನು (ಹೋದನು)+ ಉತ್ತರೆಯ ಭವನವನು ತಾ ತಂದ+ ಉತ್ತಮ ಅಂಬರ (ಬಟ್ಟೆ) ವಿವಿಧ ರತ್ನಾಭರಣ ವಸ್ತುಗಳ ಇತ್ತನು+ ಆ ಕನ್ನಿಕೆಗೆ ಮುದ ಮಿಗಲು (ಬಹಳ)+, ಉತ್ತರೆಯ ಮನೆಯಿಂದ ಶಶಿಕುಲಮತ್ತವಾರಣ(ಚಂದ್ರವಂಶದ ಮದವೇರಿದ ಆನೆ - ಅರ್ಜುನ) ಬಂದನು+ ಆ ಭೀಮಾಗ್ರಜನ(ಅಗ್ರಜ - ಅಣ್ಣ) ಹೊರೆಗೆ (ಕಡೆಗೆ).
ಅರ್ಥ: ಇತ್ತ ಅರ್ಜುನದೇವನು ಉತ್ತರೆಯ ಭವನವನಕ್ಕೆ ಹೋದನು. ತಾನು ತಂದ ಉತ್ತಮ ಅಂಬರವನ್ನೂ, ವಿವಿಧ ರತ್ನಾಭರಣ ವಸ್ತುಗಳನ್ನೂ ಆ ಕನ್ನಿಕೆ ಉತ್ತರೆಗೆ ಕೊಟ್ಟನು. ಅದರಿಂದ ಅವಳಿಗೆ ಬಹಳ ಮುದ- ಆನಂದವಾಯಿತು. ಅರ್ಜುನನು ಉತ್ತರೆಯ ಮನೆಯಿಂದ ಅಗ್ರಜನಾದ ಆ ಭೀಮನ ಕಡಗೆ ಬಂದನು.
ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ |
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ || ೩೩ ||
ಪದವಿಭಾಗ-ಅರ್ಥ: ಬಳಿಕ ಸಂಕೇತದಲಿ (ಸೂಚನೆಯಂತೆ) ಭೂಪನ ನಿಳಯವನು ಕಲಿಭೀಮ ಹೊಕ್ಕನು ನಳಿನಮುಖಿ ಸಹದೇವ ನಕುಲರು ಬಂದರು+ ಆ ಕ್ಷಣಕೆ (ಅದೇ ಸಮಯಕ್ಕೆ) ಫಲುಗುಣನು ಹೊಡವಂಟನು (ಪೊಡಮಟ್ಟನು ನಮಿಸಿದನು ಎನ್ನುವ ಅರ್ಥದಲ್ಲಿ)+ ಇಬ್ಬರಿಗೆ+ ಉಳಿದವರು ಪಾರ್ಥಂಗೆ ವಂದಿಸಲು+ ಒಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ.
ಅರ್ಥ:ಬಳಿಕ ಅರ್ಜುನನು ಸಂಕೇತಮಾಡಿದಂತೆ ಧರ್ಮರಾಯನ ಮನೆಯನ್ನು ಕಲಿಭೀಮನು ಹೊಕ್ಕನು. ನಳಿನಮುಖಿ ದ್ರೌಪದಿ, ಸಹದೇವ ನಕುಲರು ಸಹ ಅಲ್ಲಿಗೆ ಅದೇ ಸಮಯಕ್ಕೆ ಬಂದರು. ಫಲ್ಗುಣನು ಯುಧಿಷ್ಠರ ಮತ್ತು ಭೀಮ ಇಬ್ಬರಿಗೆ ನಮಸ್ಕರಿಸಿದನು. ಉಳಿದವರು ಪಾರ್ಥನಿಗೆ ವಂದಿಸಲು ಅರ್ಜುನನು ಸಮಬಲರಾದ ಅವರನ್ನು ಸಂತೋಷದಿಂದ ಮತ್ತು ಪ್ರೀತಿಯಿಂದ ಬಿಗಿಯಪ್ಪಿದನು.
ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು |
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ || ೩೪ ||
ಪದವಿಭಾಗ-ಅರ್ಥ:ಉಳಿದ ನಾಲ್ವರು ಕಲಿ ತ್ರಿಗರ್ತರ ಗೆಲಿದ ಪರಿಯನು ಪಾರ್ಥ ಕೌರವ ಬಲವ ಭಂಗಕೆ ತಂದ ಪರಿಯನು ಹೇಳುತ+ ಇರುತ+ ಇರಲು ನಿಲುಕಿ (ದಿಟ್ಟಿಸಿ) ರಾಯನ ಹಣೆಯ ಗಾಯವ ಬಳಿಕ ಕಂಡನು+ ಇದೇನು ನೊಸಲಿಂ ದಿಳಿವುತಿದೆ ನಸು (ಅಲ್ಪ) ರಕ್ತಬಿಂದುಗಳು+ ಎಂದನು+ ಆ ಪಾರ್ಥ
ಅರ್ಥ: ಪಾರ್ಥನು ಉಳಿದ ನಾಲ್ವರಿಗೆ, ಶೂರ ತ್ರಿಗರ್ತರನ್ನು ಗೆದ್ದ ಪರಿಯನ್ನೂ, ಕೌರವಮ ಸೈನ್ಯದ ಸೋಲನ್ನು ತಾನು ತಂದ ಪರಿಯನ್ನೂ ಹೇಳುತ್ತಾ ಇರುವಾಗ, ಅವನು ನಿಲುಕಿ- ದಿಟ್ಟಿಸಿ ಧರ್ಮರಾಯನ ಹಣೆಯಮೇಲಿನ ಗಾಯವನ್ನು ಕಂಡನು; ಬಳಿಕ ಇದೇನು ಹಣೆಯಿಂದ ಸಣ್ಣ ರಕ್ತಬಿಂದುಗಳು ಒಸರುತ್ತಿವೆ ಎಂದನು ಆ ಪಾರ್ಥ.
ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ |
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ || ೩೫ ||
ಪದವಿಭಾಗ-ಅರ್ಥ: ಅನವಧಾನದೊಳು+ ಆಯ್ತು ಸಾಕು+ ಅದ ನೆನೆಯಲು+ ಏತಕೆ ಮಾಣು+ ಎನಲು, ಮಿಗೆ ಕನಲುತ+ ಅರ್ಜುನನು+ ಅರಿದನು+ ಆ ದ್ರೌಪದಿಯ ಸೂರು+ ಉಳಿಸಿ ಮನದಲಿ+ ಉರಿದೆದ್ದನು ವಿರಾಟನ ತನುವ ಹೊಳ್ಳಿಸಿ ರಕುತವನು ಶಾಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ.
ಅರ್ಥ:ಅದಕ್ಕೆ ಧರ್ಮಜನು,'ತಾನು ಎಚ್ಚರಿಕೆ ವಹಿಸದಿದ್ದುರಿಂದ ಅದು ಆಯಿತು, ಆ ವಿಷಯ ಸಾಕು; ಅದನ್ನು ಗಮನಿಸುವುದೇಕೆ ಬಿಡು,' ಎನ್ನಲು, ಆ ದ್ರೌಪದಿಯಿಂದ ವಿಷಯನ್ನು ತಿಳಿದು ಬಹಳ ಸಿಟ್ಟಿನಿಂದ ಅರ್ಜುನನು ತಾನು ಆಣೆ ಇಟ್ಟುದನ್ನು ಉಳಿಸಲು, ಮನಸ್ಸಿನಲ್ಲಿ ಉರಿದುದ್ದನು; ವಿರಾಟನ ಒಡಲನ್ನು ಹೊರಳಿಸಿ, ಅವನ ರಕ್ತವನ್ನು ಶಾಕಿನಿಯರಿಗೆ ಹೊಯಿಸುವೆನು ಇದರಲ್ಲಿ ತಪ್ಪೇನು, ಹೇಳು, ಎಂದ. (ಧರ್ಮಜನ ಮೈಯಿಂದ ರಕ್ತವನ್ನು ನೆಲಕ್ಕೆ ಹರಿಸಿದವರನ್ನು ಕೊಲ್ಲುತ್ತೇನೆ, ಎಂಬುದು ಅರ್ಜುನನ ಆಣೆ- ಭಾಷೆ.)
ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ |
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ || ೩೬ ||
ಪದವಿಭಾಗ-ಅರ್ಥ: ಕಳುಹಬೇಕೇ ಕೀಚಕೇಂದ್ರನ ಬಳಗವಿದ್ದಲ್ಲಿಗೆ ವಿರಾಟನ ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ ನೆಲದೊಳ+ ಉಕ್ಕುದೆ ರಕ್ತವು+ ಅವದಿರ ಕುಲವ ಸವರುವೆನು+ ಇವನ ಸೀಳಿದು ಬಲಿಯ ಕೊಡುವೆನು ಭೂತಗಣಕೆ+ ಎನುತ+ ಎದ್ದನು ಆ ಭೀಮ
ಅರ್ಥ:ವಿರಾಟನನ್ನು ಕೀಚಕೇಂದ್ರನ ಬಳಗವಿದ್ದ ಯಮನಲ್ಲಿಗೆ ವಿರಾಟನ ತಲೆಯನ್ನು ಕಳುಹಿಸಬೇಕೇ? ಆದರೆ ಅವನ ಆಶ್ರಯ ಕೊಟ್ಟ ಉಪಕಾರದ ಋಣದ ಸಾಲಿಗನಾಗಿದ್ದೇನಲ್ಲಾ! ಶಿವ ಶಿವ ಮಹಾದೇವ! ಆದರೆ ಧರ್ಮಜನ ರಕ್ತವು ನೆಲದಲ್ಲಿ ವಿರಾಟನ ರಕ್ತದಿಂದ ಉಕ್ಕುದೆ? ಅವರ ಕುಲವನ್ನು ಸವರುವೆನು. ಇವನನ್ನು ಸೀಳಿ ಭೂತಗಣಕ್ಕೆ ಬಲಿಯನ್ನು ಕೊಡುವೆನು, ಎನ್ನುತ್ತಾ ಆ ಭೀಮ ಎದ್ದನು.
ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ |
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ || ೩೭ ||
ಪದವಿಭಾಗ-ಅರ್ಥ: ಕಾಕ ಬಳಸಲು ಬೇಡ ಹೋ ಹೋ ಸಾಕು ಸಾಕೈ ತಮ್ಮ ಮಾಣು+ ಉದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ ಈ ಕಮಲಲೋಚನೆಯ ಸೆರಗಿಗೆ ಸೇಕವಾಯಿತು (ಸೇಕ - ಅಭಿಷೇಕ- ನೆನೆ,ತೋಯಿಸು) ರಕುತವು+ ಅತಿ ಸ+ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನು+ ಅನಿಲಜನ.
ಅರ್ಥ:ಭೀಮಾ ವಂಶ ಸವರುವ ಕಾಕಮಾತು- ಕೆಟ್ಟ ಮಾತು ಬಳಸಬೇಡ! ಹೋ ಹೋ ಸಾಕು,ಭೀಮಾ ಸಾಕಯ್ಯಾ! ತಮ್ಮ ಉದ್ರೇಕವು ಬೇಡ; ನೆಲವು ನನ್ನ ರಕ್ತವನ್ನು ಕಂಡಿಲ್ಲ, ಕಂಡರೆ ನನ್ನ ಮೇಲಾಣೆ! ಈ ಕಮಲಲೋಚನೆ ದ್ರೌಪದಿಯು ಕೂಡಲೆ ರಕ್ತವನ್ನು ಸೆರಗಿನಲ್ಲಿ ಹಿಡಿದಳು; ರಕ್ತವು ಸೆರಗನ್ನು ತೋಯಿಸಿತು. ಸಹಜವಾದರೂ ಅತಿ ವ್ಯಾಕುಲತೆ ಬೇಡೆ, ಎಂದು ಧರ್ಮಜನು ಪ್ರೀತಿಯಿಂದ ಭೀಮನ ಗಲ್ಲವನ್ನು ಹಿಡಿದು ಅಲುಗಿಸಿ ಮುದ್ದು ಮಾಡಿದನು. (ಧರ್ಮಜನ ರಕ್ತವು ನೆಲಕ್ಕೆ ಬಿದ್ದರೆ ತಾನೆ ಕೊಲ್ಲುವ ಪ್ರತಿಜ್ಞೆ)
ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ |
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ || ೩೮ ||
ಪದವಿಭಾಗ-ಅರ್ಥ:ಕೊಂಬೆನು+ ಆತನ ಜೀವವನು ಪತಿಯೆಂಬ ಗರ್ವವನು+ ಅವನ ನೆತ್ತಿಯತುಂಬಿ ಬಿಡಲು+ ಎರಗುವೆನು ತರಿವೆನು (ಕತ್ತರಿಸುವೆನು) ಮತ್ಸ್ಯಸಂತತಿಯ ಅಂಬುಜಾಕ್ಷಿಯ ಕೀಚಕನ ಬೇಳಂಬವು+ ಈತನ ಕೂಟ ಭೂತ ಕದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ.
  • ಬೇಳಂಬ= 1. ವಿಡಂಬನೆ. 2. ಕೇಡು. 3. ಗೊಂದಲ. 4. ಮರುಳು. 5. ಮೋಸ.; ಕದಂಬ= ಸಾರಂಗ; ತುಷ್ಟಿ= ತೃಪ್ತಿ
ಅರ್ಥ:ಆಗ ಭೀಮನು, ವಿರಾಟನ ಜೀವವನ್ನು ತೆಗೆಯುವೆನು. ಅವನಿಪತಿಯೆಂಬ- ರಾಜನೆಂಬ ಗರ್ವವನ್ನು ಅವನ ನೆತ್ತಿಯಲ್ಲಿತುಂಬಿದ್ದನ್ನು ಹೊರಗೆಬಿಡಲು ಅವನ ಮೇಲೆ ಧಾಳಿಮಾಡುವೆನು; ಅವನ ತಲೆಯನ್ನು ತರಿಯುವೆನು. ಮತ್ಸ್ಯಸಂತತಿಯಾದ ವಿರಾಟನ ನೆಂಟ ಕೀಚಕನು ಮಾಡಿದ ಅಂಬುಜಾಕ್ಷಿ ದ್ರೌಪದಿಯ ಬಗೆಗಿನ ಕೆಡುಕಿಗೆ ಪ್ರತಿಯಾಗಿ, ಈತ ನಿರಾಟನ ಕೂಟವೆಂಬ ಸಾರಂಗಗಳನ್ನು ಭೂತಗಳಿಗೆ ತೃಪ್ತಿಯಾಗುವಂತೆ ಬಲಿಕೊಡಬೇಕು,ನನ್ನ ಸೆರಗನ್ನು ಬಿಡಿಯೆಂದ ಧರ್ಮಜನಿಗೆ.
ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು |
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ || ೩೯ ||
ಪದವಿಭಾಗ-ಅರ್ಥ: ಇವನ ನಾವು ಓಲೈಸಿ (ಸೇವೆಮಾಡಿ) ಕೈಯೊಡನೆ+ ಇವಗೆ ಮುನಿದೊಡೆ+ ಯ+ ಏನನು+ ಎಂಬುದು ಭುವನ ಜನವು, ಭ್ರಮಿಸದಿರು ಸೈರಣೆಗೆ ಮನ ಮಾಡು, ಎವಗೆ ನೋವಿನ ಹೊತ್ತು ದುಷ್ಕೃತ ವಿವರಣದ ಫಲವು+ ಇದಕೆ ಲೋಗರನು+ ಅವಗಡಿಸಿದೊಡೆ ಹಾನಿಯೆ ಮಗೆನೆ ಭೀಮನು+ ಇಂತು+ ಎಂದ
ಅರ್ಥ:ಅಜ್ಞಾತ ವಾಸದ ಒಂದು ವರ್ಷ ನಾವು ಇವನ ಆಶ್ರಯ ಪಡೆದು ಸೇವೆಮಾಡಿ, ಇವನ ಮೇಲೇ ಕೈಎತ್ತಿ ಇವನನ್ನು ಕೋಪಗೊಂಡು ಕೊಂದರೆ, ಈ ಭೂಮಿಯ ಜನರು ಏನು ಹೇಳುವರು? ಭೀಮಾ ಭ್ರಮೆಯನ್ನು ಬಿಡು. ಸೈರಣೆಗೆ ಮನಸ್ಸುಮಾಡು. ನಮಗೆ ಇದು ನೋವಿನ ಹೊತ್ತು- ಹಿಂದಿನ ದುಷ್ಕೃತದ ಬಲಿತ ಫಲವು. ಇದಕ್ಕೆ ಸಾಮಾನ್ಯ ಜನರನ್ನು ಬಡಿದರೆ ನಮಗೇ ಹಾನಿಯು, ಮಗೆನೇ, ಎಂದ ಯುಧಿಷ್ಠಿರ. ಅದಕ್ಕೆ ಭೀಮನು ಹೀಗೆ ಹೇಳಿದ.
ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ |
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ || ೪೦ ||
ಪದವಿಭಾಗ-ಅರ್ಥ:ಬರಿಯ ಧರ್ಮದ ಜಾಡ್ಯದಲಿ (ರೋಗದಲ್ಲಿ) ಮೈಮರೆದು ವನದಲಿ ಬೇವು ಬಿಕ್ಕೆಯನು+ ಅರಸಿ (ಅರಸು-ಕ್ರಿ.= ಹುಡುಕು, ಹೆಕ್ಕು) ತೊಳಲಿದು(ಕಷ್ಟದಿಂದ ಅಲೆದಿದ್ದು) ಸಾಲದೇ ಹದಿಮೂರು ವತ್ಸರದಿ (ವತ್ಸರ- ವರ್ಷ), ಉರುಕುಗೊಂಡೊಡೆ (ಸಿಟ್ಟು ಮಾಡಿದರೆ) ರಾಜ ತೇಜವ ಮೆರೆವ ದಿನವೆಂದು ಇಹುದು ನೀವು+ ಇನ್ನು+ ಅರಿಯಿರಿ+ ಎಮ್ಮನು ಹರಿಯ ಬಿಡಿ ಸಾಕು+ ಎಂದನು+ ಆ ಭೀಮ
ಅರ್ಥ: ಅಣ್ಣಾ! ನೀವು ಬರಿಯ ಧರ್ಮದ ಜಾಡ್ಯದಲ್ಲಿ ಮೈಮರೆತು, ಕಾಡಿನಲ್ಲಿ ಕಹಿಯಾದ ಬೇವುಬಿಕ್ಕೆಯನ್ನು ಹೆಕ್ಕಿ, ಹದಿಮೂರು ವರ್ಷ ಕಷ್ಟದಿಂದ ಅಲೆದೆವು. ಅದು ಸಾಲದೇ! ಸಿಟ್ಟು ಮಾಡಿದರೆ ತಪ್ಪೇ? ನಾವು ರಾಜತೇಜಸ್ಸನ್ನು ಮೆರೆಸುವ ದಿನ ಯಾವಾಗ ಬರುವುದು. ನೀವು ಇನ್ನು ನಮ್ಮ ಕಷ್ಟವನ್ನು ಅರಿಯಿರಿ. ನಮ್ಮನ್ನು ಮನಬಂದಂತೆ ಹರಿಯಲು(ನೆಡೆಯಲು) ಬಿಡಿ ಸಾಕು, ಎಂದನು ಆ ಭೀಮ.
ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ |
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ || ೪೧ ||[೧][೨]
ಪದವಿಭಾಗ-ಅರ್ಥ:ಉದಯದಲಿ ನಾವು ಅನಿಬರು+ ಆತನ ಸದನದಲಿ ನೃಪಪೀಠವನು ಗರ್ವದಲಿ ನೆಮ್ಮುವೆವು+ ಆತ ನಮ್ಮಲಿ ಖೋಡಿಯನು ಹಿಡಿಯೆ, ಮದಮುಖನನು+ ಒರಸುವೆವು ಹರುಷದಲಿ+ ಇದಿರುಗೊಂಡೊಡೆ ಮನ್ನಿಸುವ (ಕ್ಷಮಿಸೋಣ), ಮಾತು+ ಇದುವೆ ಸನ್ಮತವೆಂದು (ಸನ್+ ಮತ- ಉತ್ತಮ ಮಾರ್ಗ) ಸಂತೈಸಿದನು ಪವನಜನ
ಅರ್ಥ:ಅದಕ್ಕೆ ಧರ್ಮಜನು ನಾಳೆ ಉದಯವಾಗುತ್ತಿದ್ದಂತೆ ನಾವು ಎಲ್ಲರೂ ಆತನ ಸಭಾಭವದಲ್ಲಿ ರಾಜಪೀಠವನ್ನು ಠೀವಿಯಿಂದ ಆಕ್ರಮಿಸೋಣ. ಆತ ನಮ್ಮಲ್ಲಿ ಸಿಟ್ಟನ್ನು ಮಾಡಿದರೆ, ಅವನ ಮದ ಸ್ವಭಾವವನ್ನು ಒರೆಸಿ ತೆಗಯೋಣ; ಹರ್ಷದಿಂದ ನಮ್ಮನ್ನು ಎದುರುಗೊಂಡರೆ ಅವನನ್ನು ಮನ್ನಿಸೋಣ. ಇದೇ ಮಾತು. ಇದು ಉತ್ತಮ ಮಾರ್ಗ, ಸಜ್ಜನ ಸಮ್ಮತವೆಂದು ಭೀಮನನ್ನು ಧರ್ಮಜನು ಸಂತೈಸಿದನು. [೩] [೪]
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ
  2. * ಕುಮಾರವ್ಯಾಸಭಾರತ-ಸಟೀಕಾ
  3. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
  4. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
  5. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
  6. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
  7. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
  8. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
  9. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
  10. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
  11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
  12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಕನ್ನಡ ಸಾಹಿತ್ಯ ಪರಿಷತ್ ನಿಘಂಟು
  4. ಸಿರಿಗನ್ನಡ ಅರ್ಥಕೋಶ: ಸಂಪಾದಕ- ಶಿವರಾಮ ಕಾರಂತ