ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟನಂದನಗೆ ||ಸೂಚನೆ||
ಪದವಿಭಾಗ-ಅರ್ಥ:ವೈರಿಭಟ ಸಂವರ್ತ( ನಾಶ ಮಾಡುವವನು) ನೂತನ(ಹೊಸ) ಭೈರವನು(ಪ್ರಳಯ ಕಾಲದ ಶಿವನ ರೂಪ.) ಕಲಿಪಾರ್ಥ ಸಮರೋದ್ಧಾರ(ಸಮರದಲ್ಲಿ ಗೆಲುವು ಕೊಟ್ಟ ಉದ್ಧರಿಸುವವನು) ಸಾರಥಿಯಾದನು+ ಅಂದು ವಿರಾಟನಂದನಗೆ(ಅಂದು ವಿರಾಟನ ಮಗನಿಗೆ)
ಅರ್ಥ:ಅಂದು ವಿರಾಟನ ಮಗನಿಗೆ, ವೈರಿಭಟರನ್ನು ನಾಶ ಮಾಡುವವನು, ಹೊಸದಾಗಿ ಉದ್ಭವಿಸಿದ ಪ್ರಳಯ ಕಾಲದ ರುದ್ರನಣತಿರುವ ಕಲಿಪಾರ್ಥನು ಸಮರದಲ್ಲಿ ಗೆಲುವು ತಂದು ಕೊಟ್ಟು ಕಾಪಾಡುವ ಸಾರಥಿಯಾದನು.

[೧][೨]

~~ಓಂ~~

ಮತ್ಸ್ಯನಗರದ ಉತ್ತರಭಾಗದಲ್ಲಿ ಕೌರವನ ಧಾಳಿ[ಸಂಪಾದಿಸಿ]

ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ |
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ಸುಯೋಧನನ+ ಆಳು(ಸೈನಿಕ- ಸೈನಿಕರು) ಮುತ್ತಿತು ತುರುಗಳನು(ಗೋವುಗಳನ್ನು) + ಮೇಲೆ+ ಆಳು (ಕಾದಿಟ್ಟ ಸೈನ್ಯ) ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ, ಕೋಲ(ಕೋಲು- ಬಾಣದ) ಸೂಟಿಯ(ಪಂಜು, ವೇಗ) ಸರಿವಳೆಗೆ (ಸರಿವ ಅಲೆ- ಚಲಿಸುವ ಸೈನ್ಯದ ಅಲೆಗೆ?) ಗೋಪಾಲ ಪಡೆ ಮುಗ್ಗಿದುದು (ನೊಂದು ಸೋತಿತು) ಗೋವರಸಾಲ(ಸಾಲ- ಸಾಲು- ಸಮೂಹ) ಹೊಯ್ದರು(ಹೊಡೆದರು) ಕರ್ಣ ದುಶ್ಶಾಸನ ಜಯದ್ರಥರು.
ಅರ್ಥ:ಜನಮೇಜಯ ರಾಜನೇ ಕೇಳು, ದುರ್ಯೋಧನನ ಸೈನಿಕರು ಗೋವುಗಳನ್ನು ಮುತ್ತಿದರು. ಅದರ ಜೊತೆ ಕಾದಿಟ್ಟ ಸೈನ್ಯವೂ ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ, ಹೊಡೆದ ಬಾಣದ ವೇಗಕ್ಕೆ, ಚಲಿಸುವ ಸೈನ್ಯದ ಅಲೆಗೆ ಗೋವಳರ ಪಡೆ ನೊಂದು ಸೋತಿತು. ಕರ್ಣ ದುಶ್ಶಾಸನ ಜಯದ್ರಥರು ಗೋವಳರ ಸಾಲ- ಸಮೂಹವನ್ನು ಹೊಡೆದರು.
ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು |
ಸಾಯಲಲಸದ ಗೋವರನು ಕೈ
ಗಾಯದೆಸುತವ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ || ೨ ||
ಪದವಿಭಾಗ-ಅರ್ಥ:ರಾಯ ಚೂಣಿಯ ಚಾತುರಂಗದ ನಾಯಕರು ಮೇಳವಿಸಿ ಸಮರೋಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು ಸಾಯಲು+ ಅಲಸದ ಗೋವರನು ಕೈಗಾಯದ+ ಎಸುತವ ಸೆರೆಯ ಕೊಂಡರು ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ
ರಾಯ- ಕೌರವನ, ಚೂಣಿಯ= ಮುಂದಿನ, ಚಾತುರಂಗದ ನಾಯಕರು ಮೇಳವಿಸಿ= ಒಟ್ಟಾಗಿ, ಸಮರೋಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು(ಕೋಡ = ಬಾಣ ಹಿಡಿದವರು) ಸಾಯಲು+ ಅಲಸದ= ಹಿಂಜರಿಯದ, ಗೋವರನು= ಗೋವಳರ ನಾಯಕನು, ಕೈಗಾಯದ+ ಎಸುತವ = ಕಾಪಾಡಲಾರದ ಸ್ಥಿತಿಯನ್ನು ನೋಡಿ, ಸೆರೆಯ ಕೊಂಡರು(ಗೋವುಗಳನ್ನು ಸರೆಹಿಡಿದರು.) ಮಾಯವಾಯಿತು ಹರಿಬಕಾರರ()ಕರ್ತವ್ಯನಿರತರಾದ ಗೋವಳರ ಸೇನೆ. ಸೇನೆ ರಣದೊಳಗೆ (ಯುದ್ಧದಲ್ಲಿ)
ಅರ್ಥ:ಕೌರವನ ಮುಂದಿನ ಚತುರಂಗ ಸೇನೆಯಗೋವಳರನ್ನು ನಾಯಕರು ಒಟ್ಟಾಗಿ, ಸಮರೋಪಾಯದಲಿ ಬಿಲ್ಲು ಬಾಣ ಹಿಡಿದ ಸಾಯಲು ಹಿಂಜರಿಯದ ಗೋವಳರ ನಾಯಕನನ್ನು ಹಿಂದಿಕ್ಕಿ ನುಗ್ಗಿ ಮುತ್ತಿದರು, ಗೋವಳರ ನಾಯಕನ ಕಾಪಾಡಲಾರದ ಸ್ಥಿತಿಯನ್ನು ನೋಡಿ, ಗೋವುಗಳನ್ನು ಸರೆಹಿಡಿದರು. ಕರ್ತವ್ಯನಿರತರಾದ ಗೋವಳರ ಸೇನೆ ಯುದ್ಧದಲ್ಲಿ ಮಾಯವಾಯಿತು.
ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ |
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ || ೩ ||
ಪದವಿಭಾಗ-ಅರ್ಥ:ಮೇಲುದಳಕೆ+ ಇದಿರಾಗಿ ಬರೆ ಹರಿಗಾಳಗದೊಳು+ ಒಡೆಮುರಿದು ಗೋವರು ಧೂಳಿಗೋಟೆಯಗೊಂಡರು+ ಅಮರರ ರಾಜಧಾನಿಗಳ ಸಾಲರಿದು ಕೆಟ್ಟೋಡಿದರು, ಗೋಪಾಲನ+ ಒಬ್ಬನ ಹಿಡಿದು ಮೂಗಿನಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ.
ಮೇಲುದಳಕೆ (ಮುಖ್ಯದೊಡ್ಡ ಸೈನ್ಯಕ್ಕೆ)+ ಇದಿರಾಗಿ ಬರೆ-ಬರಲು, ಹರಿಗಾಳಗದೊಳು- ಕುದುರೆ ಸೈನ್ಯದಲ್ಲಿ,+ ಒಡೆಮುರಿದು- ಒಡೆಯನು- ನಾಯಕನು ಸತ್ತು, ಗೋವರು ಧೂಳಿಗೋಟೆಯಗೊಂಡರು- ಧೂಳಿಪಟವಾದರು, ಅನೇಕರುಉ ಸತ್ತು, ಪೂರ್ಣ ಸೋತುಹೋದರು,+ ಅಮರರ ರಾಜಧಾನಿಗಳ ಸಾಲರಿದು ಕೆಟ್ಟೋಡಿದರು= ದೇವತೆಗಳ ರಾಜಧಾನಿ ಅಮರಾವತಿಗೆ ಸತ್ತು ಓಡಿಹೋದರು- ಸ್ವರ್ಗಸ್ಥರಾದರು;, ಗೋಪಾಲನ+ ಒಬ್ಬನ ಹಿಡಿದು ಮೂಗಿನಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ= ಕೌರವರು ಗೋಪಾಲನ+ ಒಬ್ಬನ ಹಿಡಿದು- ಒಬ್ಬ ಗೋವಳನನ್ನು ಹಿಡಿದು ಮೂಗಿನಮೇಲೆ ಸುಣ್ಣವ ಬರೆದು, ಬಿಟ್ಟರು ಹಗೆಯ ಪಟ್ಟಣಕೆ- ವರಾಟನ ನಗರಕ್ಕೆ ಹೋಗಲು ಬಿಟ್ಟರು.
ಅರ್ಥ:ಮುಖ್ಯದೊಡ್ಡ ಸೈನ್ಯಕ್ಕೆ ಎದಿರಾಗಿ ಗೋವಳರು ಬರಲು, ಕುದುರೆ ಸೈನ್ಯದಲ್ಲಿ ಗೋವಳರ ನಾಯಕನು ಸತ್ತು, ಅನೇಕರು ಸತ್ತು, ಪೂರ್ಣ ಸೋತು ಸ್ವರ್ಗಸ್ಥರಾದರು. ಕೌರವರು ಒಬ್ಬ ಗೋವಳನನ್ನು ಹಿಡಿದು ಮೂಗಿನಮೇಲೆ ಸುಣ್ಣದ ನಾಮ ಬರೆದು, ವಿರಾಟನ ನಗರಕ್ಕೆ ಹೋಗಲು ಬಿಟ್ಟರು.
ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ |
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ || ೪ ||
ಪದವಿಭಾಗ-ಅರ್ಥ:ಗರುವ ಗೋವರು ಹುಯ್ಯಲಿಗೆ, ಹರಿಹರಿದು ಕೆಡೆದರು, ರಾಯಮೋಹರ ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ ಬಿರುದರನು ಬರಹೇಳು ಹೋಗು+ ಎನೆ ಕರದ ಬಿಲ್ಲನು ಬಿಸುಟು ಬದುಕಿದ ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ
ಗರುವ= ಗರ್ವದ -ಬಲಿಷ್ಠ ಗೋವರು ಹುಯ್ಯಲಿಗೆ= ಆರ್ಭಟಕ್ಕೆ, ಹರಿಹರಿದು= ಓಡು ಓಡುತ್ತಾ,(ಬಂದು ಎದುರಿಸಿ) ಕೆಡೆದರು= ಬಿದ್ದರು, ರಾಯಮೋಹರ= ರಾಜ ಸೈನ್ಯವು, ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು= ತೆರಳಿ ಮುಂದೆ ಹೋಗಿ, ತುರುಗಳ ಹಿಡಿದು- ಗೋವುಗಳನ್ನು ಹಿಡಿದುಕೊಂಡು, ಹಿಂದಿಕ್ಕಿದರು ಕಾಳಗಕೆ+= ಪುನಃ ಬಿರುದರನು ಬರಹೇಳು ಹೋಗು+ ಎನೆ= ಯುದ್ಧಕ್ಕೆ ದೊಡ್ಡವರನ್ನ ಬರಲು ಹೇಳು ಎನ್ನಲು,/ ಕರದ ಬಿಲ್ಲನು ಬಿಸುಟು ಬದುಕಿದ ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ= ಕೈಯಲ್ಲಿದ್ದ ಬಿಲ್ಲನ್ನು ಬಿಸುಟು-ಎಸೆದು, ಬದುಕಿದ ಶಿರವ ತಡವುತ= ಶತ್ರುಗಳು ಕಡಿಯದೆ ಬಿಟ್ಟ ತನ್ನ ತಲೆಯನ್ನ ಸವರಿಕೊಳ್ಳುತ್ತಾ,/ ಗೋವನೊಬ್ಬನು ಪುರಕೆ ಹರಿತಂದ= ಒಬ್ಬ ಗೋವಳನು ವಿರಾಟನಗರಕ್ಕೆ ಓಡಿಬಂದ.
ಅರ್ಥ:ಬಲಿಷ್ಠ ಗೋವಳರು ಸೈನಿಕರ ಆರ್ಭಟ ಕೇಳಿ ಓಡು ಓಡುತ್ತಾ ಬಂದು ಎದುರಿಸಿ ಸತ್ತುಬಿದ್ದರು. ಕೌರವರಾಜನ ಸೈನ್ಯವು, ಮುಂದೆ ಹೋಗಿ, ಗೋವುಗಳನ್ನು ಹಿಡಿದುಕೊಂಡು, ಗೋವಳರನ್ನು ಸೋಲಿಸಿ, ಯುದ್ಧಕ್ಕೆ ದೊಡ್ಡವರನ್ನ ಬರಲು ಹೇಳು ಎನ್ನಲು, ಕೈಯಲ್ಲಿದ್ದ ಬಿಲ್ಲನ್ನು ಎಸೆದು, ಶತ್ರುಗಳು ಕಡಿಯದೆ ಬಿಟ್ಟ ತನ್ನ ತಲೆಯನ್ನು ಮುಟ್ಟಿನೋಡಿಕೊಂಡು ಸವರಿಕೊಳ್ಳುತ್ತಾ, ಒಬ್ಬ ಗೋವಳನು ವಿರಾಟನಗರಕ್ಕೆ ಓಡಿಬಂದ.
ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣಿ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ |
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ || ೫ ||
ಪದವಿಭಾಗ-ಅರ್ಥ:ಗಣನೆಯಿಲ್ಲ+ ಅದು ಮತ್ತೆ ಮೇಲಂಕಣದ ಭಾರಣಿ ನೂಕಿತು+ ಎಲವೋ ರಣದ ವಾರ್ತೆಯು+ ಅದು+ ಏನು+ ಎನುತ ಜನವೆಲ್ಲ ಗಜಬಜಿಸೆ ರಣವು ಕಿರಿದಲ್ಲ+ ಎನುತ ಢಗೆ ಸಂದಣಿಸಲು+ ಅವನು+ ಐತಂದು ಮೇಳದ ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನು+ ಉತ್ತರನ.
ಗಣನೆಯಿಲ್ಲ+ ಅದು ಮತ್ತೆ ಮೇಲಂಕಣದ ಭಾರಣಿ ನೂಕಿತು+= ಲೆಕ್ಕಕ್ಕೆಸಿಗದಷ್ಟು ದೊಡ್ಡದು ಅದು, ಗೋವಳರಾದ ನಮ್ಮ ಶಕ್ತಿಯನ್ನು ಮೀರಿದ ಭಾರದ ಹೊಣೆ; ಎಲವೋ ರಣದ ವಾರ್ತೆಯು+ ಅದು+ ಏನು+ ಎನುತ ಜನವೆಲ್ಲ ಗಜಬಜಿಸೆ= ಎಲವೋ ಯುದ್ಧದ ವಾರ್ತೆಯ ವಿಚಾರ ಅದೇನು ಎನ್ನುತ್ತಾ ಜನರೆಲ್ಲಾ ಗಜಬಜಿಸಿ ಗದ್ದಲ ಮಾಡಲು, ಗೋವಳನು,/ ರಣವು ಕಿರಿದಲ್ಲ+ ಎನುತ= ಯುದ್ಧವು ಅದು ಸಾಮಾನ್ಯದ್ದಲ್ಲ ಎಂದು ಹೇಳುವಾಗ,/ ಢಗೆ ಸಂದಣಿಸಲು+= ಓಡಿಬಂದ ಆಯಾಸದಿಂದ ಮೇಲುಸಿರು ಸಿಕ್ಕಲು, ಏದುಸಿರು ಬಿಡುತ್ತಾ/ ಅವನು+ ಐತಂದು ಮೇಳದ- ಸಮೂಹದ ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನು+ ಉತ್ತರನ= ಅವನು ಬಂದು ಅರಮನೆಯ ವೇಶ್ಯೆಯರ ಸಮೂಹದ ಮಧ್ಯದಲ್ಲಿ ಮೆರೆದು ಶೋಭಿಸುತ್ತಿದ್ದ ವಿರಾಟನ ಮಗ ಉತ್ತರನನ್ನು ಕಂಡನು.
ಅರ್ಥ:ಆ ಸೈನ್ಯ, ಲೆಕ್ಕಕ್ಕೆಸಿಗದಷ್ಟು ದೊಡ್ಡದು ಅದು, ಗೋವಳರಾದ ನಮ್ಮ ಶಕ್ತಿಯನ್ನು ಮೀರಿದ ಭಾರದ ಹೊಣೆ; ಜನರು, ಎಲವೋ ಯುದ್ಧದ ವಾರ್ತೆಯ ವಿಚಾರ ಅದೇನು ಎನ್ನುತ್ತಾ ಗಜಬಜಿಸಿ ಗದ್ದಲ ಮಾಡಲು, ಯುದ್ಧವು ಅದು ಸಾಮಾನ್ಯದ್ದಲ್ಲ ಎಂದು ಹೇಳುವಾಗ, ಓಡಿಬಂದ ಆಯಾಸದಿಂದ ಮೇಲುಸಿರು ಸಿಕ್ಕಲು, ಏದುಸಿರು ಬಿಡುತ್ತಾ ಬಂದು ಅರಮನೆಯ ವೇಶ್ಯೆಯರ ಸಮೂಹದ ಮಧ್ಯದಲ್ಲಿ ಮೆರೆದು ಶೋಭಿಸುತ್ತಿದ್ದ ವಿರಾಟನ ಮಗ ಉತ್ತರನನ್ನು ಕಂಡನು.

ಉತ್ತರನ ಪೌರುಷ[ಸಂಪಾದಿಸಿ]

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ |
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ || ೬ ||
ಪದವಿಭಾಗ-ಅರ್ಥ:ಬೆಗಡು ಮುಸುಕಿದ ಮುಖದ ಭೀತಿಯ ಢಗೆಯ ಹೊಯ್ಲಿನ ಹೃದಯ ತುದಿ ನಾಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ ಅಗಿವ ಹುಯ್ಯಲುಗಾರ ಬಹಳ+ ಓಲಗಕೆ ಬಂದನು ನೃಪ ವಿರಾಟನ ಮಗನ ಕಾಲಿಂಗೆ+ ಎರಗಿದನು ದೂರಿದನು ಕಳಕಳವ.
  • ಬೆಗಡು= ಆಶ್ಚರ್ಯ. ಭಯ; ಮುಸುಕಿದ ಮುಖದ ಭೀತಿಯ ಢಗೆಯ ಹೊಯ್ಲಿನ ಹೃದಯ= ಏದುಸಿರಿನ, ಬಡಿದುಕೊಳ್ಳತ್ತಿರುವ ಹೃದಯದ ಸದ್ದಿನ, ತುದಿ ನಾಲಗೆಯ ತೊದಳಿನ ನುಡಿಯ= ನಾಲಗೆಯಾಡದೆ ತುದಿನಾಲಿಗೆಯಲ್ಲಿ ತೊದಲುತ್ತಿರುವ, ಬೆರಗಿನ= ಅಚ್ಚರಿಯ, ಬರತ ತಾಳಿಗೆಯ ಅಗಿವ= ಒಣಗಿದ ನಾಲಿಗೆ ಅಂಕುಲಿನೊಡನೆ ಬಾಯಿಬಾಯಿ ಬಿಡುತ್ತಿರುವ,, ಹುಯ್ಯಲುಗಾರ= ಗೋಳಾಡುವ, ಬಹಳ+ ಓಲಗಕೆ= ಬಹಳ ಹೆಂಗಳೆಯರೂ ಜನರೂ ಇದ್ದ ಸಭೆಗೆ ಬಂದನು. ನೃಪ ವಿರಾಟನ ಮಗನ ಕಾಲಿಂಗೆ+ ಎರಗಿದನು ದೂರಿದನು ಕಳಕಳವ= ನೃಪ ವಿರಾಟನ ಮಗನ ಕಾಲಿಗೆ ಬಿದ್ದು ಎದುರಾದ ಸಂಕಟವನ್ನು ದೂರಿದನು.
ಅರ್ಥ:ಆ ಗೋವಳನು, ಭಯವು ತುಂಬಿದ ಮುಖದ ಭೀತಿಯ, ಏದುಸಿರಿನ, ಬಡಿದುಕೊಳ್ಳತ್ತಿರುವ ಹೃದಯದ ಸದ್ದಿನ, ನಾಲಗೆಯಾಡದೆ ತುದಿನಾಲಿಗೆಯಲ್ಲಿ ತೊದಲುತ್ತಿರುವ, ಅಚ್ಚರಿಯ, ಒಣಗಿದ ನಾಲಿಗೆ ಅಂಕುಲಿನೊಡನೆ ಬಾಯಿಬಾಯಿ ಬಿಡುತ್ತಿರುವ, ಗೋಳಾಡುತ್ತಿರುವ, ಬಹಳ ಹೆಂಗಳೆಯರೂ ಜನರೂ ಇದ್ದ ಸಭೆಗೆ ಬಂದನು. ನೃಪ ವಿರಾಟನ ಮಗನ ಕಾಲಿಗೆ ಬಿದ್ದು ಎದುರಾದ ಸಂಕಟವನ್ನು ದೂರಿದನು.
ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ |
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ || ೭ ||
ಪದವಿಭಾಗ-ಅರ್ಥ:ಏಳು ಮನ್ನೆಯ ಗಂಡನಾಗು ನೃಪಾಲ ಕೌರವ ರಾಯ ತುರುಗಳ ಕೋಳ ಹಿಡಿದನು ಸೇನೆ ಬಂದುದು ಧರಣಿಯ+ ಅಗಲದಲಿ ದಾಳಿ ಬರುತಿದೆ ಕರೆಸಿಕೋ ನಿನ್ನಾಳು ಕುದುರೆಯ ರಾಣಿವಾಸದ ಗೂಳೆಯವ ತೆಗೆಸು+ ಎಂದು ನುಡಿದನು ಬಿನ್ನಹದ ಬಿರುಬ.
  • ಏಳು ಮನ್ನೆಯ ಗಂಡನಾಗು= ಗೋಪಾಲಕನು ಉತ್ತರನಿಗೆ, 'ಏಳು ಮನ್ನೆಯ- ಶೂರರ, ಗೌರವವುಳ್ಳವರ ಗಂಡನಾಗು- ಮುಖ್ಯನಾಗು, ನೃಪಾಲ ಕೌರವ ರಾಯ ತುರುಗಳ ಕೋಳ ಹಿಡಿದನು= ರಾಜ ಕೌರವರಾಯನು ತುರುಗಳ ಕೋಳ(ಕುಟ್ಟುವ ಕೆಲಸಕ್ಕೆ ಉಪಯೋಗಿಸುವ ಕಬ್ಬಿಣದ ಒಂದು ಉಪಕರಣ) ಹಿಡಿದನು= ನಮ್ಮ ಗೋವುಗಳ ಕೊರಳ ಹಗ್ಗವನ್ನು ಹಿಡಿದಿದ್ದಾನೆ. ಸೇನೆ ಬಂದುದು ಧರಣಿಯ+ ಅಗಲದಲಿ ದಾಳಿ ಬರುತಿದೆ+= ಭೂಮಿಯ ಅಗಲಕ್ಕೂ ತುಂಬಿದ ದೊಡ್ಡ ಸೇನೆ ಬಂದಿದೆ. ಅದು ದಾಳಿ ಮಾಡಲು ಬರುತ್ತಿದೆ. ತಡಮಾಡದೆ ನಿನ್ನ ಸೈನಿಕರಗಳನ್ನೂ, ಕುದುರೆಗಳನ್ನೂ ಕರೆಸಿಕೋ. ರಾಣಿವಾಸದ ಗೂಳೆಯವ ತೆಗೆಸು+ ಎಂದು ನುಡಿದನು ಬಿನ್ನಹದ ಬಿರುಬ -ಗಡುಸಾದ= ರಾಣಿವಾಸದ ಗುಂಪನ್ನು ತೆಗೆಸು, ಎಂದು ಗೋವಳಮು ಗಡುಸಾದ ಭಾಷೆಯಲ್ಲಿ ಬಿನ್ನಹ - ವಿಜ್ಞಾಪನೆಯನ್ನು ನುಡಿದನು- ಮಾಡಿದನು. -
ಅರ್ಥ:ಗೋಪಾಲಕನು ಉತ್ತರನಿಗೆ,'ಏಳು ಶೂರರ ಮುಖ್ಯನಾಗು, ರಾಜ ಕೌರವರಾಯನು ನಮ್ಮ ಗೋವುಗಳ ಕೊರಳ ಹಗ್ಗವನ್ನು ಹಿಡಿದಿದ್ದಾನೆ. ಭೂಮಿಯ ಅಗಲಕ್ಕೂ ತುಂಬಿದ ಅವನ ದೊಡ್ಡ ಸೇನೆ ಬಂದಿದೆ. ಅದು ದಾಳಿ ಮಾಡಲು ಬರುತ್ತಿದೆ. ತಡಮಾಡದೆ ನಿನ್ನ ಸೈನಿಕರಗಳನ್ನೂ, ಕುದುರೆಗಳನ್ನೂ ಕರೆಸಿಕೋ. ರಾಣಿವಾಸದ ಗುಂಪನ್ನು ತೆಗೆಸು, ಎಂದು ಗೋವಳಮು ಗಡುಸಾದ ಭಾಷೆಯಲ್ಲಿ ವಿಜ್ಞಾಪನೆಯನ್ನುಮಾಡಿದನು.
ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು |
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ || ೮ ||
ಪದವಿಭಾಗ-ಅರ್ಥ:ಏನು+ ಎಲವೊ ತುದಿ ಮೂಗಿನಲಿ ಬಿಳುಪೇನು ಢಗೆ ಹೊಯ್ದ+ ಏಕೆ ಬಂದೆ? +ಯಿ+ ಇದೇನು ನಿನ್ನಿನ ರಣವನು+ ಅಯ್ಯನು ಗೆಲಿದುದು+ ಏನಾಯ್ತು? ಏನು? ಭಯ ಬೇಡ+ ಇನ್ನು ಕಲಹ ನಿಧಾನ ವಾರ್ತೆಯು+ ಅದು+ ಏನು+ ಎನಲು ಕುರುಸೇನೆ ಬಂದುದು ತುರುವ ಹಿಡಿದರು ಬಡಗ(ಉತ್ತರ) ದಿಕ್ಕಿನಲಿ.
  • ಏನು+ ಎಲವೊ ತುದಿ ಮೂಗಿನಲಿ ಬಿಳುಪೇನು= ಏನಯ್ಯಾ, ಎಲವೊ ನಿನ್ನ ತುದಿ ಮೂಗಿನಲಿ ಬಿಳುಪ ನಾಮ ಅದೇಕೆ?// ಢಗೆ ಹೊಯ್ದ+ ಏಕೆ ಬಂದೆ?= ಏದುಸಿರು ಬಿಡುತ್ತಾ ಅದೇಕೆ ಹೀಗೆ ಬಂದೆ? +ಯಿ+ ಇದೇನು ನಿನ್ನಿನ ರಣವನು+ ಅಯ್ಯನು ಗೆಲಿದುದು+ ಏನಾಯ್ತು?= ಇದೇನು ನಿನ್ನೆಯ ದಿನ ಅಯ್ಯನು- ನನ್ನತಂದೆ, ಗೆಲಿದುದು- ಯುದ್ಧದಲ್ಲಿ ಗೆದ್ದುದು+ ಏನಾಯ್ತು? ಏನು?= ಏನು ಮತ್ತೆ ಸಮಾಚಾರ? ಭಯ ಬೇಡ'+ ಇನ್ನು ಕಲಹ ನಿಧಾನ ವಾರ್ತೆಯು+ ಅದು+ ಏನು+= ಇನ್ನು ಕಲಹ ಮುಖ್ಯ ವಾರ್ತೆಯು+ ಅದು+ ಏನು?+ ಎನಲು ಕುರುಸೇನೆ ಬಂದುದು ತುರುವ ಹಿಡಿದರು ಬಡಗ(ಉತ್ತರ) ದಿಕ್ಕಿನಲಿ= ಗೋವಳನು, ಕುರುಸೇನೆ ಬಂದಿದೆ; ಉತ್ತರ) ಈಗ ದಿಕ್ಕಿನಲಿ ತುರುವ- ಗೋವುಗಳನ್ನು ಹಿಡಿದರು ಬಡಗ(ಉತ್ತರ) ದಿಕ್ಕಿನಲಿ.
ಅರ್ಥ:'ಏನಯ್ಯಾ, ಎಲವೊ ಗೋಪಾಲಕ ನಿನ್ನ ತುದಿ ಮೂಗಿನಲಿ ಬಿಳುಪು ನಾಮ ಅದೇಕೆ ಹಾಕಿಕೊಂಡಿರುವೆ? ಏದುಸಿರು ಬಿಡುತ್ತಾ ಅದೇಕೆ ಹೀಗೆ ಬಂದೆ? ಇದೇನು ನೀನು ಹೇಳುತ್ತಿರುವುದು ನನ್ನ ತಂದೆ, ನಿನ್ನೆಯ ಯುದ್ಧದಲ್ಲಿ ಗೆದ್ದುದು ಏನಾಯ್ತು? ಏನು? ಏನು ಮತ್ತೆ ಸಮಾಚಾರ? ಭಯ ಬೇಡ', ಇನ್ನು ಯುದ್ಧದ ಮುಖ್ಯ ವಾರ್ತೆಯು ಏನು? ಎಂದು ಉತ್ತರನು ದಕ್ಷಿಣದ ಯುದ್ಧದ ವಿಷಯವನ್ನೇ ಕೇಳಿದ. ಅದಕ್ಕ ಗೋವಳನು, ಕುರುಸೇನೆ ಬಂದಿದೆ; ಈಗ ಉತ್ತರ ದಿಕ್ಕಿನಲ್ಲಿ ಗೋವುಗಳನ್ನು ಹಿಡಿದರು ಎಂದನು.
ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು |
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ || ೯ ||
ಪದವಿಭಾಗ-ಅರ್ಥ:ರಾಯ ತಾನು+ ಐತಂದನು+ ಆತನ ನಾಯಕರು ಗುರುಸುತನು ಗುರು ಗಾಂಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು ಜೀಯ ಬಿನ್ನಹ ದಳದ ತೆರಳಿಕೆ ತಾಯಿಮಳಲು+ ಅಂಬುಧಿಗೆ ಮೋಹರದ+ ಆಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ.
  • ರಾಯ ತಾನು+ ಐತಂದನು+ ಆತನ ನಾಯಕರು ಗುರುಸುತನು ಗುರು ಗಾಂಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು= ಕೌರವರಾಯನು ತಾನೇ+ ಐತಂದನು- ಬಂದಿರುವನು,+ ಆತನ ನಾಯಕರು ಗುರುಸುತನು- ಅಶ್ವತ್ಥಾಮ, ಗುರು- ದ್ರೋಣ, ಗಾಂಗೇಯ- ಭೀಷ್ಮ, ಶಕುನಿ, ವಿಕರ್ಣ, ಕರ್ಣ, ಜಯದ್ರಥ+ ಆದಿಗಳು - ಮೊದಲಾದವರು.// ಜೀಯ ಬಿನ್ನಹ ದಳದ ತೆರಳಿಕೆ ತಾಯಿಮಳಲು+ ಅಂಬುಧಿಗೆ ಮೋಹರದ+ ಆಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ= ಜೀಯ- ಒಡೆಯನೇ, ಬಿನ್ನಹ, ಅರಿಕೆ ಮಾಡುವೆನು, ದಳದ ತೆರಳಿಕೆ ತಾಯಿಮಳಲು+ ಅಂಬುಧಿಗೆ= ಸೈನ್ಯದ ನೆಡೆಯು ಸಮುದ್ರಕ್ಕೆ ಸಮವಾಗಿದೆ ತಾನು ದಡದ ಮರಳಿನಲ್ಲಿ ನಿಂತು ನೋಡಿದಂತಾಗಿದೆ.// ಮೋಹರದ+ ಆಯತವ- ವಿಸ್ತಾರವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ= ಸೈನ್ಯದ ವಿಸ್ತಾರವನ್ನು ಅದರ ಒಳಹೊಕ್ಕು ನೋಡಿದರೆ ಮತ್ರಾ ತಿಳಿಯುವುದು, ತಾನು ಹೇಗೆ ಊಹಿಸಲು ಸಾದ್ಯ, ಎಂದನು ಗೋವಳ.
ಅರ್ಥ:ಕೌರವರಾಯನು ತಾನೇ ಬಂದಿರುವನು,+ ಆತನ ನಾಯಕರು ಗುರುಸುತ ಅಶ್ವತ್ಥಾಮ, ಗುರು- ದ್ರೋಣ, ಗಾಂಗೇಯ- ಭೀಷ್ಮ, ಶಕುನಿ, ವಿಕರ್ಣ, ಕರ್ಣ, ಜಯದ್ರಥ ಆ ಮೊದಲಾದವರು. ಒಡೆಯನೇ, ಅರಿಕೆ ಮಾಡುವೆನು, ಸೈನ್ಯದ ನೆಡೆಯು ಸಮುದ್ರಕ್ಕೆ ಸಮವಾಗಿದೆ; ತಾನು ದಡದ ಮರಳಿನಲ್ಲಿ ನಿಂತು ನೋಡಿದಂತಾಗಿದೆ. ಸೈನ್ಯದ ವಿಸ್ತಾರವನ್ನು ಅದರ ಒಳಹೊಕ್ಕು ನೋಡಿದರೆ ಮತ್ರಾ ತಿಳಿಯುವುದು, ತಾನು ಹೇಗೆ ಊಹಿಸಲು ಸಾದ್ಯ, ಎಂದನು ಗೋವಳ.
ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಥವಾಜಿ (ಪಾಠ- ರಣವಾಜಿ)ರೂಢಿಯ ರಾಯ ರಾವುತರು |
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ || ೧೦ ||
ಪದವಿಭಾಗ-ಅರ್ಥ:ಎತ್ತ ದುವ್ವಾಳಿಸುವಡೆ+ ಆಲಿಗಳ+ ಅತ್ತಲು+ ಆನೆಯ ಥಟ್ಟು, ಕಾಲಾಳು+ ಒತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು ಸುತ್ತ ಬಳಸಿಹುದು+ ಎತ್ತ ಮನ ಹರಿವತ್ತ ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು ಜೀಯ ಹದನು+ ಇದು ವೈರಿ ವಾಹಿನಿಯ.
  • ಎತ್ತ ದುವ್ವಾಳಿಸುವಡೆ+ ಆಲಿಗಳ+= ಯಾವಕಡೆ ಕಣ್ಣೋಟ ಹರಿಸಿದರೆ,/ ಅತ್ತಲು+ ಆನೆಯ ಥಟ್ಟು= ಅಲ್ಲಿ ಆನೆಗಳ ಸಮೂಹ,, ಕಾಲಾಳು+ ಒತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು ಸುತ್ತ ಬಳಸಿಹುದು+= ಮತ್ತೆ ಸೈನಿಕರು, ಒತ್ತಿ ನಿಂತಿರುವ ರಥಗಳು- ಕುದುರೆಗಳು,// ಎತ್ತ ಮನ ಹರಿವತ್ತ ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಎತ್ತ -ಯಾವಕಡೆ, ಮನ ಹರಿವತ್ತ- ಮನಸ್ಸುಹರಿದ ಕಡೆ ನೋಡಿದರೂ, ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಸೈನ್ಯವಲ್ಲದೆ ಬೇರೆ ಏನನ್ನೂ ಕಾಣಲಿಲ್ಲ.// ಜೀಯ ಹದನು+ ಇದು ವೈರಿ ವಾಹಿನಿಯ (ಸೈನ್ಯದ)= ಓಡೆಯಯನೇ ಇದು ಸತ್ರು ಸೈನ್ಯದ ಹದನು- ನಿಜಸ್ಥಿತಿ, ಎಂದನು ಗೋವಳ.
ಅರ್ಥ:ಉತ್ತರನನ್ನು ಕುರಿತು ಗೋವಳನು, ಯಾವಕಡೆ ಕಣ್ಣೋಟ ಹರಿಸಿದರೂ ಅಲ್ಲಿ ಆನೆಗಳ ಸಮೂಹ, ಮತ್ತೆ ಸೈನಿಕರು, ಒತ್ತಿ ನಿಂತಿರುವ ರಥಗಳು- ಕುದುರೆಗಳು, ಯಾವಕಡೆ,- ಮನಸ್ಸು ಹರಿದ ಕಡೆ ನೋಡಿದರೂ, ಸೈನ್ಯವಲ್ಲದೆ ಬೇರೆ ಏನನ್ನೂ ಕಾಣಲಿಲ್ಲ. ಓಡೆಯಯನೇ ಇದು ಶತ್ರು ಸೈನ್ಯದ ನಿಜಸ್ಥಿತಿ, ಎಂದನು.
ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ |
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ || ೧೧ ||
ಪದವಿಭಾಗ-ಅರ್ಥ:ಒಡ್ಡಿದರೊ ಪಡಿನೆಲನನು+ ಅವನಿಯ ದಡ್ಡಿಯೋ ಮೇಣ್+ ಎನಲು ಝಲ್ಲರಿಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ ಅಡ್ಡ ಹಾಯ್ದಿನ ಕಿರಣ ಪವನನ ಖಡ್ಡತನ ನಗೆಯಾಯ್ತು ಕೌರವನ+ ಒಡ್ಡನು+ ಅಭಿವರ್ಣಿಸುವಡೆ+ ಅರಿಯೆನು ಜೀಯ ಕೇಳೆಂದ.
  • ಒಡ್ಡಿದರೊ (ತುಂಬಿಸಿದರೊ) ಪಡಿನೆಲನನು+ ಅವನಿಯ- ಭೂಮಿಯ, ದಡ್ಡಿಯೋ= ತೆರೆ, ಮುಸುಕು,/ ಮೇಣ್+ ಎನಲು ಝಲ್ಲರಿಯೊಡ್ಡು= ಗೊಂಡೆ, ಕೊಡೆ, ಬಲೆಯಂತಹಸಿಂಗಾರವಸ್ತ್ರಗಳ ರಾಶಿ;// ಗೊಂಡೆ;ಕೊಡೆ;ಬಲೆಯಂತಹಸಿಂಗಾರವಸ್ತ್ರ;= ಅಲಂಕಾರದ ಗೊಂಡೆಗಳು, ಬಿಳಿಯ, ಮತ್ತು ಬಣ್ಣದ ಕೊಡೆಗಳು; ಬಲೆಯಂತಹ ಸಿಂಗಾರವಸ್ತ್ರಗಳ ಬಾವುಟಗಳು; ಅಡ್ಡ ಹಾಯ್ದಿನ ಕಿರಣ ಪವನನ ಖಡ್ಡತನ ನಗೆಯಾಯ್ತು= ಅಡ್ಡ ಹಾಯ್ದಿನ ಕಿರಣ- ಸೂರ್ಯನ ಕಿರಣಗಳು ಅವನ್ನು ದಾಟಿ ಹಾಯಲಾರದಯ, ಪವನನ(ವಾಯು) ಖಡ್ಡತನ ನಗೆಯಾಯ್ತು= ಗಾಳಿಯು ಅದನ್ನು ದಾಟಲು ಹೋಗಿ ಆಗದೆ ನೆಗೆಪಾಟಲಾಗಿತ್ತು, ಅಷ್ಟು ಸೈನ್ಯ ದಟ್ಟೈಸಿದೆ. ಕೌರವನ+ ಒಡ್ಡನು+ ಅಭಿವರ್ಣಿಸುವಡೆ+ ಅರಿಯೆನು ಜೀಯ ಕೇಳೆಂದ= ಜೀಯ ಕೇಳು, ಕೌರವನ ಒಡ್ಡನು- ಸೈನ್ಯವನ್ನು, ಅಭಿವರ್ಣಿಸುವಡೆ- ವಿವರಿಸಲು, ಅರಿಯೆನು- ನನಗೆ ತಿಳಿಯದು. ಜೀಯ ಕೇಳು ಎಂದ ಗೋವಳ.
ಅರ್ಥ:ಗೋವಳನು ಉತ್ತರನನ್ನು ಕುರಿತು, ಆ ಸೈನ್ಯದಲ್ಲಿ, ಭೂಮಿಯಗಲ ನೆಲಕ್ಕೆ ತೆರೆಕಟ್ಟಿದಂತೆ ಮುಸುಕು ಹಾಕಿದಂತೆ, ಮತ್ತೆ ಅಲಂಕಾರದ ಗೊಂಡೆಗಳು, ಬಿಳಿಯ, ಮತ್ತು ಬಣ್ಣದ ಕೊಡೆಗಳು; ಬಲೆಯಂತಹ ಸಿಂಗಾರವಸ್ತ್ರಗಳ ಬಾವುಟಗಳು ತುಂಬಿವೆ; ಸೂರ್ಯನ ಕಿರಣಗಳು ಅವನ್ನು ದಾಟಿ ಹಾಯಲಾರದು, ಗಾಳಿಯು ಅದನ್ನು ದಾಟಲು ಹೋಗಿ ಆಗದೆ ನೆಗೆಪಾಟಲಾಗಿತ್ತು, ಅಷ್ಟು ಸೈನ್ಯ ದಟ್ಟೈಸಿದೆ. ಜೀಯ ಕೇಳು, ಆ ಕೌರವನ ಸೈನ್ಯವನ್ನು ವಿವರಿಸಲು ನನಗೆ ತಿಳಿಯದು. ಜೀಯ ಕೇಳು ಎಂದ .
ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು |
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡತುತ್ತರ ಬಿರುದ ಕೆದರಿದನು || ೧೨ ||
ಪದವಿಭಾಗ-ಅರ್ಥ:ಒಳಗೆ ನೀ ಕಾದುವೊಡೆ ದುರ್ಗವ ಬಲಿಸು ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೆ+ ಈಗಲು+ ಉಂಟೇ ನಡೆಯಬೇಕು+ ಎನಲು ಕೆಲಬಲನ ನೋಡಿದನು ಮೀಸೆಯನು+ ಅಲುಗಿದನು ತನ್ನ+ ಇದಿರ ಮೇಳದ ಲಲನೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು.
  • ಒಳಗೆ ನೀ ಕಾದುವೊಡೆ ದುರ್ಗವ ಬಲಿಸು=ಗೋಪಾಲಕ ಹೇಳಿದನು, ಕೋಟೆಯ ಒಳಗಿದ್ದು ಯುದ್ಧವನ್ನು ಮಾಡುವುದಾದರೆ ದುರ್ಗಕ್ಕೆ ಕಾವಲನ್ನು ಬಲಪಡಿಸು. ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೆ+ ಈಗಲುಂಟೇ= ಯುದ್ಧಕ್ಕೆ ಹಿಂದೆಗೆಯದೇ ಶತ್ರುವನ್ನು ಎದುರಿಸಲು ಈಗ ನಿನಗೆ ಮನಸ್ಸಿದೆಯೇ? ನಡೆಯಬೇಕು+ ಎನಲು= ಕೂಡಲೆ ನೀವು ಯುದ್ಧಕ್ಕೆ ಹೊರಡಬೇಕು,ಎನ್ನಲು,// ಕೆಲಬಲನ ನೋಡಿದನು ಮೀಸೆಯನು+ ಅಲುಗಿದನು= ಅತ್ತಿತ್ತ ಇದ್ದವರನ್ನು ನೋಡಿದನು; ತನ್ನ ಮೀಸೆಯನ್ನು ಕುಣಿಸಿದನು. ತನ್ನ+ ಇದಿರ ಮೇಳದ ಲಲನೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಎದುರಿನಲ್ಲಿ ಇದ್ದ ಮೇಳದ- ಗುಂಪಿನ ಲಲನೆಯರ/ ಹೆಂಗಳೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಮುಖವನ್ನು ನೋಡುತ್ತಾ ತನ್ನ ಶೌರ್ಯವನ್ನು ಕೊಚ್ಚಿಕೊಂಡನು/ ಹೊಗಳಿಕೊಂಡನು.
ಅರ್ಥ:ಗೋಪಾಲಕ ಹೇಳಿದನು, ಕೋಟೆಯ ಒಳಗಿದ್ದು ಯುದ್ಧವನ್ನು ಮಾಡುವುದಾದರೆ ದುರ್ಗಕ್ಕೆ ಕಾವಲನ್ನು ಬಲಪಡಿಸು. ಯುದ್ಧಕ್ಕೆ ಹಿಂದೆಗೆಯದೇ ಶತ್ರುವನ್ನು ಎದುರಿಸಲು ಈಗ ನಿನಗೆ ಮನಸ್ಸಿದೆಯೇ? ಕೂಡಲೆ ನೀವು ಯುದ್ಧಕ್ಕೆ ಹೊರಡಬೇಕು,ಎನ್ನಲು,ಉತ್ತರನು ಅತ್ತಿತ್ತ ಇದ್ದವರನ್ನು ನೋಡಿದನು; ತನ್ನ ಮೀಸೆಯನ್ನು ಕುಣಿಸಿದನು. ತನ್ನ ಎದುರಿನಲ್ಲಿ ಇದ್ದ ಮೇಳದ ಹೆಂಗಳೆಯರ ಮುಖವನ್ನು ನೋಡುತ್ತಾ ಉತ್ತರನು ತನ್ನ ಶೌರ್ಯವನ್ನು ಕೊಚ್ಚಿಕೊಂಡನು.
ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನೆಗೆ |
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ || ೧೩ ||
ಪದವಿಭಾಗ-ಅರ್ಥ:ನೂಕು ಕುನ್ನಿಯನು+ ಆಹವದ ಭೀತಾಕುಳನು, ತಾನು+ ಈಗ ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ+ ಒಟ್ಟೈಸಿ ಬಂದು+ ಎನೆಗೆ ಕಾಕ ಬಳಸುವನು+ ಇವನು ತಾನು+ ಉದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದು+ ಎಂದನು ಸತಿಯರ+ ಇದಿರಿನಲಿ
  • ನೂಕು ಕುನ್ನಿಯನು+ ಆಹವದ ಭೀತಾಕುಳನು,= ಈ ಗೋಪಾಲಕನನ್ನು ಆಚೆ ತಳ್ಳು- ತಳ್ಳಿರಿ;/ ತಾನು+ ಈಗ ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ+ ಒಟ್ಟೈಸಿ ಬಂದು+ ಎನೆಗೆ ಕಾಕ ಬಳಸುವನು+ ಇವನು= ಇವನು ತಾನು ಈಗ ತನ್ನ ಹೆಂಡಿರನ್ನು ಮೋಹದಿಂದ ಸಾಕಿ ಬದುಕುವ ಲೌಲ್ಯತೆಯಲಿ - ಲೋಲುಪ್ತಿಯಲ್ಲಿ- ಬಡಿವಾರದಲ್ಲಿ+ ಒಟ್ಟೈಸು ಬಂದು+ ಎನೆಗೆ ಕಾಕ ಬಳಸುವನು+ < ಇವನು- ಒತ್ತಡದಿಂದ ಬಂದು ತನಗೆ ಕೀಳಾಗಿ ಮಾತನಾಡುವನು.// ತಾನು+ ಉದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದು+ ಎಂದನು ಸತಿಯರ+ ಇದಿರಿನಲಿ= ತಾನು ಉದ್ರೇಕಿಸಿಯೆ- ಸಿಟ್ಟಿನಿಂದ, ಸಮರದಲಿ ನಿಲಲು- ಯುದ್ಧಕ್ಕೆ ನಿಂತರೆ, ಪಿನಾಕಧರನಿಗೆ ನೂಕದು+ = ತ್ರಿಶೂಲವನ್ನು ಧರಿಸಿದ ಶಿವನಿಗೂ ನನ್ನೊಡನೆ ಸೆಣಸಲು ನೂಕದು ಆಗದು,ಎಂದನು ಸತಿಯರ+ ಇದಿರಿನಲಿ- ಹೆಂಗಳೆಯರ ಎದುರಿನಲ್ಲಿ - ಉತ್ತರಕುಮಾರನು.
ಅರ್ಥ:ಉತ್ತರನು, ಈ ಗೋಪಾಲಕನನ್ನು ಆಚೆ ತಳ್ಳಿರಿ ಎಂದನು. 'ಇವನು ತಾನು ಈಗ ತನ್ನ ಹೆಂಡಿರನ್ನು ಮೋಹದಿಂದ ಸಾಕಿ ಬದುಕುವ ಲೋಲುಪ್ತಿಯ ಒತ್ತಡದಿಂದ ಬಂದು ತನಗೆ ಕೀಳಾಗಿ ಮಾತನಾಡುವನು. ಉತ್ತರಕುಮಾರನು ಹೆಂಗಳೆಯರ ಎದುರಿನಲ್ಲಿ, ತಾನು ಸಿಟ್ಟಿನಿಂದ ಯುದ್ಧಕ್ಕೆ ನಿಂತರೆ ತ್ರಿಶೂಲವನ್ನು ಧರಿಸಿದ ಶಿವನಿಗೂ ನನ್ನೊಡನೆ ಸೆಣಸಲು ಆಗದು,ಎಂದನು.
ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ |
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ || ೧೪ ||
ಪದವಿಭಾಗ-ಅರ್ಥ:ಎನಿತು ಬಲ ಘನವಾದೊಡೆ+ ಏನು+ ಅದು ನಿನಗೆ ಗಹನವೆ ಜೀಯ, ಜಗದಲಿ ದಿನಪನ+ ಇದಿರಲಿ ದಿಟ್ಟತನವೇ ತಮದ ಗಾವಳಿಗೆ ಬಿನುಗು ರಾಯರ ಬಿಂಕ ಗೋವರ ಮೊನೆಗೆ ಮೆರೆದೊಡೆ ಸಾಕು ನಿಂದಿರು; ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ.
  • ಎನಿತು ಬಲ ಘನವಾದೊಡೆ+ ಏನು+ ಅದು ನಿನಗೆ ಗಹನವೆ ಜೀಯ,= ದೊರೆಯೇ, ಎನಿತು ಬಲ-ಸೈನ್ಯವು ಘನವಾದೊಡೆ+ ಏನು+- ಎಷ್ಟು ದೊಡ್ಡದಾದರೇನು, ಅದು ನಿನಗೆ ಗಹನವೆ- ಕಷ್ಟವೇ? // ಜಗದಲಿ ದಿನಪನ+ ಇದಿರಲಿ ದಿಟ್ಟತನವೇ ತಮದ ಗಾವಳಿಗೆ= ಜಗತ್ತಿನಲ್ಲಿ ಸುರ್ಯನ ಎದುರಿನಲ್ಲಿ ತಮದ ಗಾವಳಿಗೆ- ಕತ್ತಲೆಯ ತಂಟೆಯು ದಿಟ್ಟತನ- ದೈರ್ಯವನ್ನುತೋರಬಲ್ಲದೇ? ಬಿನುಗು- ಅಲ್ಪರಾದ, ಕೌರವ ರಾಯರ ಬಿಂಕ- ಸೊಕ್ಕು ಶೌರ್ಯ, ಗೋವರ ಮೊನೆಗೆ ಮೆರೆದೊಡೆ- ಗೋಪಾಳಕರ ಎದುರು ತೋರಿಕೊಂಡರೆ ಲೆಕ್ಕವೇ. ಸಾಕು ನಿಂದಿರು- ಮಾತು ಸಾಕು, ನೀನು ಅವರ ಎದುರು ನಿಲ್ಲು; ಜನಪ,- ರಾಜನೇ, ತೋರಿಸು ಕೈಗುಣವ ಕೌರವನ ಥಟ್ಟಿನಲಿ= ನಿನ್ನ ಶೌರ್ಯವನ್ನು ಕೌರವರ ಸೈನ್ಯದಲ್ಲಿ ತೋರಿಸು, ಎಂದನು ಗೋವಳ.
ಅರ್ಥ:ದೊರೆಯೇ, ಸೈನ್ಯವು ಎಷ್ಟು ದೊಡ್ಡದಾದರೇನು, ಅದು ನಿನಗೆ ಲೆಕ್ಕವೇ? ಜಗತ್ತಿನಲ್ಲಿ ಸುರ್ಯನ ಎದುರಿನಲ್ಲಿ ಕತ್ತಲೆಯ ತಂಟೆಯು ದಿಟ್ಟತನ- ತೋರಬಲ್ಲದೇ? ಅಲ್ಪರಾದ ಕೌರವರಾಯರ ಸೊಕ್ಕು ಗೋಪಾಳಕರ ಎದುರು ತೋರಿಕೊಂಡರೆ ಲೆಕ್ಕವೇ? ಮಾತು ಸಾಕು, ನೀನು ಅವರ ಎದುರು ನಿಲ್ಲು; ರಾಜನೇ, ನಿನ್ನ ಶೌರ್ಯವನ್ನು ಕೌರವರ ಸೈನ್ಯದಲ್ಲಿ ತೋರಿಸು, ಎಂದನು ಗೋವಳ.
ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ |
ಸಂದಣಿಸಿ ರೋಮಾಂಚ ಕೆಲಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ || ೧೫ ||
ಪದವಿಭಾಗ-ಅರ್ಥ:ಎಂದಡೆ+ ಅಬ್ಬರಿಸಿದನು ತಾ ಕಲಿಯೆಂದು ಬಗೆದನು, ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ ಸಂದಣಿಸಿ ರೋಮಾಂಚ ಕೆಲಬಲದ+ ಇಂದುಮುಖಿಯರ ನೋಡಿದನು ನಲವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ.
  • ಎಂದಡೆ+ ಅಬ್ಬರಿಸಿದನು ತಾ ಕಲಿಯೆಂದು ಬಗೆದನು= ಗೋವಳನು ಇವನನ್ನು ಹೊಗಳಲು, ತಾನು ವೀರನೆಂದು ಭಾವಿಸಿದನು.// ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ ಸಂದಣಿಸಿ ರೋಮಾಂಚ= ಮೀಸೆಯನ್ನು ಬೆರಳಿನಿಂದದ ತಿರುಹುತ್ತಾ, ಮುಗುಳುನಗೆ ಸೂಸುತ್ತಾ, ಹರ್ಷದಿಂದ ಉಬ್ಬಿ ಮೈಮರೆತು, ಅವನ ದೇಹದಲ್ಲಿ ರೋಮಾಂಚನವು ಸಂದಣಿಸಲು,// ಕೆಲಬಲದ+ ಇಂದುಮುಖಿಯರ ನೋಡಿದನು= ತನ್ನ ಆಚೇ ಈಚೆ ಸುತ್ತಲೂ ಇದ್ದ ಅಂದದ ಹೆಂಗೆಳೆಯರನ್ನು ನೋಡಿದನು. ನಲವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ= ಅವರ ಎದುರಲ್ಲಿ ಆನಂದದಿಂದ. ತನ್ನ ಪೌರುಷತನದ ಪರಿಣತೆಯನ್ನು ಹೇಳಿದನು.
ಅರ್ಥ:ಗೋವಳನು ಇವನನ್ನು ಹೊಗಳಲು, ಉತ್ತರನು ತಾನು ವೀರನೆಂದು ಭಾವಿಸಿದನು. ಮೀಸೆಯನ್ನು ಬೆರಳಿನಿಂದದ ತಿರುಹುತ್ತಾ, ಮುಗುಳುನಗೆ ಸೂಸುತ್ತಾ, ಹರ್ಷದಿಂದ ಉಬ್ಬಿ ಮೈಮರೆತು, ಅವನ ದೇಹದಲ್ಲಿ ರೋಮಾಂಚನವು ಸಂದಣಿಸಲು, ತನ್ನ ಆಚೇ ಈಚೆ ಸುತ್ತಲೂ ಇದ್ದ ಅಂದದ ಹೆಂಗೆಳೆಯರನ್ನು ನೋಡಿದನು. ಅವರ ಎದುರಲ್ಲಿ ಆನಂದದಿಂದ ತನ್ನ ಪೌರುಷತನದ ಪರಿಣತೆಯನ್ನು ಹೇಳಿದನು.
ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ೧೬
ಪದವಿಭಾಗ-ಅರ್ಥ:ಅಹುದಹುದು ತಪ್ಪೇನು ಜೂಜಿನ ಕುಹಕದಲಿ ಪಾಂಡವರ ಸೋಲಿಸಿ ಮಹಿಯ ಕೊಂಡಂತೆ+ ಎನ್ನ ಕೆಣಕಿದನೇ ಸುಯೋಧನನು ಸಹಸದಿಂದವೆ ತುರುವ ಮರಳಿಚಿ ತಹೆನು ಬಳಿಕ+ ಆ ಕೌರವನ ನಿರ್ವಹಿಸಲು+ ಈವೆನೆ ಸೂರೆಗೊಂಬೆನು ಹಸ್ತಿನಾಪುರವ.
  • ಅಹುದಹುದು ತಪ್ಪೇನು= ನಿಜ ನಿಜ, ತಪ್ಪಿಲ್ಲ ಸುಯೋಧನನದು, ಏಕೆಂದರೆ, ಅವನು- ಜೂಜಿನ ಕುಹಕದಲಿ ಪಾಂಡವರ ಸೋಲಿಸಿ ಮಹಿಯ ಕೊಂಡಂತೆ= ಜೂಜಿನ ಮೋಸದ ಆಟದಲ್ಲಿ ಪಾಂಡವರನ್ನು ಸೋಲಿಸಿ ಭೂಮಿಯನ್ನು, ಕೊಂಡಂತೆ- ಅಪಹರಿಸಿದಂತೆ,+ ಎನ್ನ- ನನ್ನನ್ನು ಕೆಣಕಿದನೇ- ಸುಯೋಧನನು? ಸಹಸದಿಂದವೆ ತುರುವ ಮರಳಿಚಿ ತಹೆನು= ಸಾಹಸದಿಂದಲೇ ತುರುವ- ಹಸುಗಳನ್ನು ಮರಳಿಚಿ- ಹಿಂದಕ್ಕೆ ತಹೆನು- ತರುತ್ತೇನೆ. ಬಳಿಕ+ ಆ ಕೌರವನ ನಿರ್ವಹಿಸಲು+ ಈವೆನೆ ಸೂರೆಗೊಂಬೆನು ಹಸ್ತಿನಾಪುರವ= ಬಳಿಕ- ಆನಂತರ, ಆ ಕೌರವನ ನಿರ್ವಹಿಸಲು+ ಈವೆನೆ= ಆ ಕೌರವನಿಗೆ ರಾಜ್ಯದ ಆಡಳಿತವನ್ನು ನೆಡೆಸಲು ಬಿಡುವೆನೇ,// ಸೂರೆಗೊಂಬೆನು ಹಸ್ತಿನಾಪುರವ= ಹಸ್ತಿನಾಪುರವನ್ನು ಸೂರೆಗೊಂಬೆನು- ಕೊಳ್ಳೆಹಡೆಯುತ್ತೇನೆ ಎಂದನು ಉತ್ತರ.
ಅರ್ಥ:ನಿಜ ನಿಜ, ತಪ್ಪಿಲ್ಲ ಸುಯೋಧನನದು (ಅವನು ಮೋಸಗಾರ), ಏಕೆಂದರೆ, ಅವನು ಜೂಜಿನ ಮೋಸದ ಆಟದಲ್ಲಿ ಪಾಂಡವರನ್ನು ಸೋಲಿಸಿ ಭೂಮಿಯನ್ನು, ಅಪಹರಿಸಿದಂತೆ, ಸುಯೋಧನನು ನನ್ನನ್ನು ಕೆಣಕಿದನೇ? ಸಾಹಸದಿಂದಲೇ ಯುದ್ಧಮಾಡಿ ಹಸುಗಳನ್ನು ಹಿಂದಕ್ಕೆ ತರುತ್ತೇನೆ. ಆನಂತರ, ಆ ಕೌರವನಿಗೆ ರಾಜ್ಯದ ಆಡಳಿತವನ್ನು ನೆಡೆಸಲು ಬಿಡುವೆನೇ? ಇಲ್ಲ ಹಸ್ತಿನಾಪುರವನ್ನು ಕೊಳ್ಳೆಹಡೆಯುತ್ತೇನೆ ಎಂದನು ಉತ್ತರ.
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭
ಪದವಿಭಾಗ-ಅರ್ಥ:ಹಿಡಿದು ರಾಜ್ಯವ ಕೊಂಡು ಹೆಂಗುಸ ಬಡಿದು ಪಾಂಡವರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು+ ಎನ್ನೊಡನೆ ತೋರಿದನೆ ಬಡ ಯುಧಿಷ್ಠಿರನೆಂದು ಬಗೆದನೆ ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು+ ಅರಿಯನಲಾ!+ ಯ+ ಎನುತ ಸುಕುಮಾರ ಖತಿಗೊಂಡ.
  • ಹಿಡಿದು ರಾಜ್ಯವ ಕೊಂಡು ಹೆಂಗುಸ ಬಡಿದು ಪಾಂಡವರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು+ ಎನ್ನೊಡನೆ ತೋರಿದನೆ= ಪಾಂಡವರನ್ನು ಹಿಡಿದು (ಜೂಜಿಗೆ ಕರೆದು) ರಾಜ್ಯವವನ್ನು ಕಸಿದುಕೊಂಡು, ಹೆಂಗುಸನ್ನು ಬಡಿದು- ದ್ರೌಪದಿಯನ್ನ ಎಳೆದು ತಂದು ಹೊಡೆದು, ಪಾಂಡವರಾಯರನ್ನು ರಾಜ್ಯದಿಂದ ಹೊರಹೊಂಡಿಸಿ, ಕೌರವನು ತನ್ನ ಕೊಬ್ಬಿದ ಭುಜಬಲವನ್ನು- ಶೌರ್ಯವನ್ನು+ ಎನ್ನೊಡನೆ- ತನ್ನಡನೆ ತೋರಿಸಿದನೆ?// ಬಡ ಯುಧಿಷ್ಠಿರನೆಂದು ಬಗೆದನೆ= ತಾನು ಈ ಉತ್ತರನು, ಬಡ ಯುಧಿಷ್ಠಿರನೆಂದು ಬಗೆದನೆ- ತಿಳಿದುಕೊಂಡನೆ?// ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು+= (ಕಡುಗು- ಗಟ್ಟಿಯಾಗು) ಕಡುಗಿದೊಡೆ- ತಾನು ಸಿಟ್ಟಾಗಿ ನಿಂತರೆ ಕೌರವನ ಕೀರ್ತಿಯ ತೊಡೆವೆನು- ನಾಶಮಾಡುವೆನು.// ಅರಿಯನಲಾ!- ಇದನ್ನು ಕೌರವ ತಿಳಿಯದೇ ಹೋದನಲ್ಲಾ!+ ಯ+ ಎನುತ ಸುಕುಮಾರ ಖತಿಗೊಂಡ- ಎಂದು ಹೇಳುತ್ತಾ ಉತ್ತರ ಕೊಮಾರ ಕೋಪತಾಳಿದನು.
ಅರ್ಥ:ಪಾಂಡವರನ್ನು ಹಿಡಿದು (ಜೂಜಿಗೆ ಕರೆದು) ರಾಜ್ಯವವನ್ನು ಕಸಿದುಕೊಂಡು, ಹೆಂಗುಸಾದ- ದ್ರೌಪದಿಯನ್ನ ಎಳೆದು ತಂದು ಹೊಡೆದು, ಪಾಂಡವರಾಯರನ್ನು ರಾಜ್ಯದಿಂದ ಹೊರಹೊರಡಿಸಿದ ಕೌರವನು ತನ್ನ ಕೊಬ್ಬಿದ ಭುಜಬಲವನ್ನು ತನ್ನೊಡನೆ ತೋರಿಸಿದನೇ? ತನ್ನನ್ನು- ಈ ಉತ್ತರನನ್ನು ಬಡ ಯುಧಿಷ್ಠಿರನೆಂದು ತಿಳಿದುಕೊಂಡನೆ? ತಾನು ಸಿಟ್ಟಾಗಿ ನಿಂತರೆ ಕೌರವನ ಕೀರ್ತಿಯನ್ನು ನಾಶಮಾಡಬಲ್ಲೆ. ಇದನ್ನು ಕೌರವ ತಿಳಿಯದೇ ಹೋದನಲ್ಲಾ! ಎಂದು ಹೇಳುತ್ತಾ ಉತ್ತರ ಕೊಮಾರ ಕೋಪತಾಳಿದನು.
ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು |
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ || ೧೮ ||
ಪದವಿಭಾಗ-ಅರ್ಥ:ತನಗೆ ಬಡ ಪಾಂಡವರ ತೆವರಿದ ಮನದ ಗರ್ವದ ಕೊಬ್ಬು ಕಾಲನ ಮನೆಯನು+ ಆಳ್ವಿಪುದು+ ಅಲ್ಲದಿದ್ದೊಡೆ ತನ್ನ ವೈರವನು ನೆನೆದು ದುರ್ಯೋಧನನು ತಾ ಮೇದಿನಿಯನು ಆಳ್ವನೆ ಹಾ ಮಹಾ ದೇವ+ ಎನುತಲಿ+ ಉತ್ತರ ಬಿರುದ ನುಡಿದನು ಹೆಂಗಳ+ ಇದಿರಿನಲಿ.
  • ತನಗೆ- ಕೌರವನಿಗೆ ಬಡ ಪಾಂಡವರ ತೆವರಿದ (ತೆವರು= ಅಟ್ಟು) ಕಾಡಿಗೆ ಅಟ್ಟಿದ ಮನದ ಗರ್ವದ ಕೊಬ್ಬು ಕಾಲನ ಮನೆಯನು+ ಆಳ್ವಿಪುದು+= ತನಗೆ (ಕೌರವನಿಗೆ) ಬಡ ಪಾಂಡವರ ತೆವರಿದ (ತೆವರು= ಅಟ್ಟು)- ಕಾಡಿಗೆ ಅಟ್ಟಿದ, ಮನದ ಗರ್ವದ ಕೊಬ್ಬು ಕಾಲನ ಮನೆಯನು+ ಆಳ್ವಿಪುದು- (ಹಸ್ತಿನಾಪುರದಲ್ಲಿ ಆಳುವ ಬದಲು) ಯಮನ ಮನೆಯಲ್ಲಿ ಆಳಬೇಕಾಗುವುದು.// ಅಲ್ಲದಿದ್ದೊಡೆ - ಅದಲ್ಲದಿದ್ದರೆ, ತನ್ನ ವೈರವನು ನೆನೆದು- ತನ್ನ- ಉತ್ತರನ ವೈರತ್ವವನ್ನು ಬಯಸಿ-ಕಟ್ಟಿಕೊಂಡು, ದುರ್ಯೋಧನನು ತಾ ಮೇದಿನಿಯನು- ರಾಜ್ಯವನ್ನು ಆಳ್ವನೆ- ಆಳುವನೇ? ಹಾ ಮಹಾದೇವ+ ಎನುತಲಿ+- ದೇವರೇ (ಕೌರವ ಕೇಡುಗಾಲ ತಂದುಕೊಂಡ) ಎಂದು, ಉತ್ತರ ಬಿರುದ ನುಡಿದನು ಹೆಂಗಳ+ ಇದಿರಿನಲಿ= ಉತ್ತರನು ಬಿರುಸಾದ ಮಾತುಗಳನ್ನು ಹೆಂಗಳೆಯರ ಎದುರಿನಲ್ಲಿ ನುಡಿದನು.
ಅರ್ಥ:ಕೌರವನಿಗೆ ಬಡ ಪಾಂಡವರನ್ನು ಕಾಡಿಗೆ ಅಟ್ಟಿದ ಮನದ ಗರ್ವದ ಕೊಬ್ಬು, ಅದರ ಪರಿಣಾಮ ಹಸ್ತಿನಾಪುರದಲ್ಲಿ ಆಳುವ ಬದಲು ಯಮನ ಮನೆಯಲ್ಲಿ ಆಳಬೇಕಾಗುವುದು. ಅದಲ್ಲದಿದ್ದರೆ, ತನ್ನ (ಉತ್ತರನ) ವೈರತ್ವವನ್ನು ಬಯಸಿ ಕಟ್ಟಿಕೊಂಡು ದುರ್ಯೋಧನನು ತಾನು ರಾಜ್ಯವನ್ನು ಆಳಲು ಸಾದ್ಯವೇ? ಹಾ ಮಹಾದೇವ ದೇವರೇ! ಕೌರವ ತನಗೇ ಕೇಡುಗಾಲ ತಂದುಕೊಂಡ ಎಂದು, ಉತ್ತರ ಉತ್ತರನು ಬಿರುಸಾದ ಮಾತುಗಳನ್ನು ಹೆಂಗಳೆಯರ ಎದುರಿನಲ್ಲಿ ನುಡಿದನು.
ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ |
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು || ೧೯ ||
ಪದವಿಭಾಗ-ಅರ್ಥ:ಜವನ ಮೀಸೆಯ ಮುರಿದನೋ, ಭೈರವನ ದಾಡೆಯನು+ ಅಲುಗಿದನೊ, ಮೃತ್ಯುವಿನ ಮೇಲುದ ಸೆಳೆದನೋ, ಕೇಸರಿಯ ಕೆಣಕಿದನೊ, ಬವರವನು ತೊಡಗಿದನಲಾ ಕೌರವನು+ ಅಕಟ ಮರುಳಾದನು+ ಎಂದು ಆ ಯುವತಿಯರ ಮೊಗ ನೋಡುತ+ ಉತ್ತರ ಬಿರುದ ಕೆದರಿದನು
  • ಜವನ ಮೀಸೆಯ ಮುರಿದನೋ= ಯಮನ ಮೀಸೆಯನ್ನು ತಿರುಚಿದಂತೆ ಆಗಿದೆ, ಭೈರವನ ದಾಡೆಯನಲುಗಿದನೊ= ಕಾಲಭಯರವನ ಕೋರೆದಾಡೆಯನ್ನು ಅಲುಗಾಡಿಸಿದಂತಾಗಿದೆ, ಮೃತ್ಯುವಿನ ಮೇಲುದ ಸೆಳೆದನೋ= ಮಲಗಿದ್ದ ಮೃತ್ಯವಿನ ಮುಸುಕನ್ನು ತೆಗೆದು ಕರೆದಂತಾಗಿದೆ, ಕೇಸರಿಯ ಕೆಣಕಿದನೊ= ಸಿಂಹವನ್ನು ಕೆನಕಿದಂತಾಗಿದೆ, ಬವರವನು ತೊಡಗಿದನಲಾ ಕೌರವನು+= ಯುದ್ಧವನ್ನು ಆರಂಬಿದ್ದಾನಲ್ಲಅ ಈ ಕೌರವನು; ಅಕಟ ಮರುಳಾದನು+ ಎಂದು ಆ ಯುವತಿಯರ ಮೊಗ ನೋಡುತ+ ಉತ್ತರ ಬಿರುದ ಕೆದರಿದನು= ತನ್ನನ್ನು ಕೆಣಕಿ ಮರುಳಾದನು, ಮೂರ್ಖ ಕೆಲಸ ಮಾಡಿದನು, ಹುಚ್ಚುಕೆಲಸ ಮಾಡಿದನು, ಎಂದು ಆ ಯುವತಿಯರ ಮುಖವನ್ನು ನೋಡುತ್ತಾ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಂಡನು.
ಅರ್ಥ:ಕೌರವನು ತನ್ನ ಮೇಲೆ ಯುದ್ಧಕ್ಕೆ ಬಂದಿರುವುದು, ಯಮನ ಮೀಸೆಯನ್ನು ತಿರುಚಿದಂತೆ ಆಗಿದೆ, ಕಾಲಭಯರವನ ಕೋರೆದಾಡೆಯನ್ನು ಅಲುಗಾಡಿಸಿ ಕೆಣಕಿದಂತಾಗಿದೆ, ಮಲಗಿದ್ದ ಮೃತ್ಯವಿನ ಮುಸುಕನ್ನು ತೆಗೆದು ಕರೆದಂತಾಗಿದೆ,ಮಲಗಿದ್ದ ಸಿಂಹವನ್ನು ಕೆನಕಿದಂತಾಗಿದೆ, ಈ ಕೌರವನು ಯುದ್ಧವನ್ನು ಆರಂಬಿದ್ದಾನಲ್ಲಾ , ತನ್ನನ್ನು ಕೆಣಕಿ ಮೂರ್ಖ ಕೆಲಸ ಮಾಡಿದನು, ಎಂದು ಆ ಯುವತಿಯರ ಮುಖವನ್ನು ನೋಡುತ್ತಾ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಂಡನು.
ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು ||
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದುರಿನಲಿ || ೨೦ ||
ಪದವಿಭಾಗ-ಅರ್ಥ:ಆರೊಡನೆ- ಆರ+ಒಡನೆ ಕಾದುವೆನು ಕೆಲಬರು ಹಾರುವರು ಕೆಲರು+ ಆಂತಕನ ನೆರೆಯೂರವರು ಕೆಲರು+ ಅಧಮ ಕುಲದಲಿ ಸಂದು ಬಂದವರು ವೀರರೆಂಬವರು+ ಇವರು ಮೇಲೆ+ ಇನ್ನಾರ ಹೆಸರುಂಟು+ ಅವರೊಳು+ ಎಂದು ಕುಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳ+ ಇದುರಿನಲಿ
  • ಆರೊಡನೆ- ಆರ+ಒಡನೆ ಕಾದುವೆನು= ಯಾರೆಡನೆ ಯುದ್ಧಮಾಡಲಿ, ಕೆಲಬರು ಹಾರುವರು= ಕೆಲವರು ಬ್ರಾಹ್ಮಣರು - ಕೊಲ್ಲುವಂತಿಲ್ಲ (ದ್ರೋಣ ಅಸ್ವತ್ಥಾಮ, ಕೃಪ); ಕೆಲರು+ ಆಂತಕನ ನೆರೆಯೂರವರು= ಅದರಲ್ಲಕೆಲವರು ಮುಪ್ಪಿನ ಮುದುಕರು, ಅಂತಕನ- ಯಮನ ಊರಿನ ಪಕ್ಕದ ಊರಿಗೆ ಆಗಲೇ ಹೋಗಿದ್ದಾರೆ. (ಮುಟ್ಟಿದರೆ ಸಾಯುವರು - ಭೀಷ್ಮ ವಿದುರರು ಮುದುಕರು) ಕೆಲರು+ ಅಧಮ ಕುಲದಲಿ ಸಂದು ಬಂದವರು= ಕೆಲವರು ಕ್ಷತ್ರಿಯರೊಡನೆ ಯುದ್ಧಮಅಡಲು ಯೋಗ್ಯರಲ್ಲದ ಕುಲದವರು (ಕರ್ಣ); ವೀರರೆಂಬವರು+ ಇವರು ಮೇಲೆ+ ಇನ್ನಾರ ಹೆಸರುಂಟು+ ಅವರೊಳು+ = ಇವರೇ ಆ ಕೌರವನಸೈನ್ಯದಲ್ಲಿ ವೀರರು ಎಂದು ಬೀಗುವವರು! ಇವರಲ್ಲಿ ತನಗೆ ಸಮಾನರಾದ ವಿರರೇ ಇಲ್ಲ, ಯಾರೊಡನೆ ಯುದ್ಧಮಾಡಲಿ, ಎಂದು ಕುಮಾರ, ನೆಣಗೊಬ್ಬಿನಲಿ ನುಡಿದನು ಹೆಂಗಳ+ ಇದುರಿನಲಿ= ಹೀಗೆ ನೆಣದ ಕೊಬ್ಬು- ಮಾಂಸದ ಕೊಬ್ಬುನಿಂದ ಹೆಂಗಸರ ಎದುರಿನಲ್ಲಿ ಉತ್ತರಕುಮಾರ ಹೇಳಿದ.
ಅರ್ಥ:ಯಾರೊಡನೆ ಯುದ್ಧಮಾಡಲಿ, ಕೆಲವರು ಬ್ರಾಹ್ಮಣರು - ಕೊಲ್ಲುವಂತಿಲ್ಲ; ಅದರಲ್ಲಿ ಕೆಲವರು ಮುಪ್ಪಿನ ಮುದುಕರು, ಯಮನ ಊರಿನ ಪಕ್ಕದ ಊರಿಗೆ ಆಗಲೇ ಹೋಗಿದ್ದಾರೆ. ಮುಟ್ಟಿದರೆ ಸಾಯುವರು ಕೆಲವರು ಕ್ಷತ್ರಿಯರೊಡನೆ ಯುದ್ಧಮಅಡಲು ಯೋಗ್ಯರಲ್ಲದ ಕುಲದವರು; ಇವರೇ ಆ ಕೌರವನ ಸೈನ್ಯದಲ್ಲಿ ವೀರರು ಎಂದು ಬೀಗುವವರು! ಇನ್ನಾರಿದ್ದಾರೆ? ಇವರಲ್ಲಿ ತನಗೆ ಸಮಾನರಾದ ವಿರರೇ ಇಲ್ಲ, ಯಾರೊಡನೆ ಯುದ್ಧಮಾಡಲಿ, ಎಂದು ಕುಮಾರ, ಹೀಗೆ ಮಾಂಸದ ಕೊಬ್ಬುನಿಂದ ಹೆಂಗಸರ ಎದುರಿನಲ್ಲಿ ಉತ್ತರಕುಮಾರ ಹೇಳಿದ.
ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು |
ಕಡೆಗೆ ದುರಿಯತವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದಕುವನಾವನೆಂದನು ಖಂಡೆಯವ ಜಡಿದು || ೨೧ ||
ಪದವಿಭಾಗ-ಅರ್ಥ:ಪೊಡವಿಪತಿಗಳು ಬಂದು ತುರುಗಳ ಹಿಡಿವರೇ ಲೋಕದಲಿ ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು ಕಡೆಗೆ ದುರಿಯತ+ ವುಳಿವುದಲ್ಲದೆ ಬಿಡುವೆನೇ ಗೋಧನವನು+ ಎನ್ನೊಳು ತೊಡಕಿ ಬದಕುವನು+ ಆವನು+ ಎಂದನು ಖಂಡೆಯವ ಜಡಿದು.
  • ಪೊಡವಿಪತಿಗಳು= ಭೂಮಿಯ ಒಡೆಯರು - ರಾಜರು, ಬಂದು ತುರುಗಳ= ಗೋವುಗಳನ್ನು, ಹಿಡಿವರೇ ಲೋಕದಲಿ= ಈ ಜಗತ್ತಿನಲ್ಲಿ ಹಿಡಿಯುವರೇ? ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು= ಕೀಳು ಜನರಾದ ಹೆಂಗಸರ ಸೌಂದರ್ಯವಿದ್ದಂತಾಯಿತು ಕೌರವನ ನೆಡತೆ; ಕಡೆಗೆ ದುರಿಯತ+ ವುಳಿವುದಲ್ಲದೆ= ಕೊನೆಗೆ ಅವನಿಗೆ ಗೋವನ್ನು ಕದ್ದವನು ಎಂಬ ಕೆಟ್ಟಹೆಸರು ಉಳಿಯುವುದು; ಬಿಡುವೆನೇ ಗೋಧನವನು+ = ಅದಲ್ಲದೇ ಗೋವುಗಳನ್ನು ಬಿಡುವೆನೇ ಗೋಧನವನು+ ಎನ್ನೊಳು ತೊಡಕಿ= ನನ್ನೊಡನೆ ಯುದ್ಧದಲ್ಲಿ ತೊಡಗಿಕೊಂಡು. ಬದಕುವನು+ ಆವನು+ ಎಂದನು ಖಂಡೆಯವ ಜಡಿದು= ಯಾವನು ಬದುಕಬಲ್ಲನು ಎಂದು ಕತ್ತಿಯನ್ನು ಝಳಪಿಸಿ ಹೇಳಿದನು.
ಅರ್ಥ:ರಾಜರು, ಬಂದು ಗೋವುಗಳನ್ನು ಈ ಜಗತ್ತಿನಲ್ಲಿ ಹಿಡಿಯುವುದುಂಟೇ? ಕೀಳು ಜನರಾದ ಹೆಂಗಸರ ಸೌಂದರ್ಯವಿದ್ದಂತಾಯಿತು ಕೌರವನ ನೆಡತೆ; ಕೊನೆಗೆ ಅವನಿಗೆ ಗೋವನ್ನು ಕದ್ದವನು ಎಂಬ ಕೆಟ್ಟಹೆಸರು ಮಾತ್ರಾ ಉಳಿಯುವುದು; ಅದಲ್ಲದೇ ಗೋವುಗಳನ್ನು ಬಿಡುವೆನೇ? ನನ್ನೊಡನೆ ಯುದ್ಧದಲ್ಲಿ ತೊಡಗಿಕೊಂಡು ಯಾವನು ಬದುಕಬಲ್ಲನು ಎಂದು ಕತ್ತಿಯನ್ನು ಝಳಪಿಸಿ ಹೇಳಿದನು.
ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ |
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ || ೨೨ ||
ಪದವಿಭಾಗ-ಅರ್ಥ:ಖಳನ ಮುರಿವೆನು ಹಸ್ತಿನಾಪುರದೊಳಗೆ ಠಾಣಾಂತರವನು+ ಇಕ್ಕುವೆ, ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ ಗೆಲವ ತಹೆನೆಂದು+ ಉತ್ತರನು ಕೋಮಲೆಯರ+ ಇದಿರಲಿ ಬಾಯ್ಗೆ ಬಂದುದ ಗಳಹುತಿದ್ದನು ಬೇಕು ಬೇಡ+ ಎಂಬವರ ನಾ ಕಾಣೆ.
  • ಖಳನ ಮುರಿವೆನು ಹಸ್ತಿನಾಪುರದೊಳಗೆ ಠಾಣಾಂತರವನು+ ಇಕ್ಕುವೆ= ದುಷ್ಟ ದುರ್ಯೋಧನನ್ನು ಕೊಂದು ಹಾಕುತ್ತೇನೆ, ಹಸ್ತಿನಾಪುರಕ್ಕೆ ಧಾಳಿ ಇಟ್ಟು ಅಲ್ಲಿ ನಮ್ಮ ಹೊಸ ಠಾಣೆಯನ್ನು ಹೂಡುವೆನು, ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ= ಕೌರವನ ಸೇನೆಯನ್ನು ಸೋಲಿಸಿ ಧೂಳಿಪಟ ಮಾಡಿ ತೊಲಗಿಸುವೆ- ಓಡಿಸುತ್ತೇನೆ. ಗೆಲವ ತಹೆನೆಂದು+ ಕೌರವನ ಮೇಲೆ ವಿಜಯವನ್ನು ಸಾಧಿಸುತ್ತೇನೆ. ಎಂದ ಉತ್ತರನು ಕೋಮಲೆಯರ+ ಇದಿರಲಿ- ಎದುರಿನಲ್ಲಿ ಬಾಯ್ಗೆ- ಬಾಯಿಗೆ ಬಂದುದ ಗಳಹುತಿದ್ದನು- ಹೇಳುತ್ತಿದ್ದನು; ಬೇಕು ಬೇಡ+ ಎಂಬವರ ನಾ ಕಾಣೆ. ವೈಶಂಪಾಯನ ಮುನಿಯು ನಾನು ಕಾಣೆ- ತಿಳಿಯಲಾರೆ ಎಂದನು
ಅರ್ಥ:ದುಷ್ಟ ದುರ್ಯೋಧನನ್ನು ಕೊಂದು ಹಾಕುತ್ತೇನೆ, ಹಸ್ತಿನಾಪುರಕ್ಕೆ ಧಾಳಿ ಇಟ್ಟು ಅಲ್ಲಿ ನಮ್ಮ ಹೊಸ ಠಾಣೆಯನ್ನು ಹೂಡುವೆನು, ಕೌರವನ ಸೇನೆಯನ್ನು ಸೋಲಿಸಿ ಧೂಳಿಪಟ ಮಾಡಿ ಓಡಿಸುತ್ತೇನೆ. ಕೌರವನ ಮೇಲೆ ವಿಜಯವನ್ನು ಸಾಧಿಸುತ್ತೇನೆ, ಎಂದು ಉತ್ತರನು ಕೋಮಲೆಯರ ಎದುರಿನಲ್ಲಿ ಬಾಯಿಗೆ ಬಂದುದನ್ನು ಹೇಳುತ್ತಿದ್ದನು; ಅಲ್ಲಿ ಬೇಕು ಬೇಡ ಎಂಬವರನ್ನು ನಾನು ಕಾಣಲಾರೆ ಎಂದು ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಹೇಳಿದನು.
ಅರಿಯನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ |
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ || ೨೩ ||
ಪದವಿಭಾಗ-ಅರ್ಥ:ಅರಿಯನೇ ಗಾಂಗೇಯನನು, ತಾನು+ ಆರಿಯದವನೇ ದ್ರೋಣ; ಕುಲದಲಿ ಕೊರತೆಯೆನಿಸುವ ಕರ್ಣನೆಂಬವನು+ ಎನಗೆ ಸಮಬಲನೆ ಬರಿಯ ಬಯಲಾಡಂಬರದಿ ಬರಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆನೆಉ+ ಎಂದನು ನಾರಿಯರ ಮುಂದೆ.
  • ಉತ್ತರನು ಮುಂದುವರಿದು, ಗಾಂಗೇಯನನ್ನು ಅವನ ಶಕ್ತಿಯನ್ನು ನಾನು ಅರಿಯನೇ - ತಿಳಿದಿಲ್ಲವೇ!, ತಾನು+ ಆರಿಯದವನೇ ದ್ರೋಣ- ದ್ರೋಣನು ನನಗೆ ತಿಳಿಯದವನೇ!; ಕುಲದಲಿ ಕೊರತೆಯೆನಿಸುವ ಕರ್ಣನೆಂಬವನು+ ಎನಗೆ ಸಮಬಲನೆ- ಕೆಳ-ಕುಲದಲ್ಲಿ ಜನಿಸಿದ ದಾಸಿಪುತ್ರ ತನಗೆ ಸಮಬಲನೆ! ಅಲ್ಲವೇ ಅಲ್ಲ! ಬರಿಯ ಬಯಲಾಡಂಬರದಿ- ಸತ್ವ ಇಲ್ಲದ ಆಡಂಬರದಿಂದ ಕೇವಲ ಗೋವುಗಳನ್ನು ಹಿಡಿದರೆ-> ಬರಿ ತುರುವ ಹಿಡಿದೊಡೆ, ತನ್ನ ಹೆಂಡಿರ ಸೆರೆಯ ತಾರದೆ ಮಾಣೆನು- ಬಿಡೆನು+ ಎಂದನು ನಾರಿಯರ ಮುಂದೆ= ಅವರಹೆಂಡತಿಯರನ್ನು ಸೆರೆಹಿಡಿದು ತರದೆ ಬಿಡುವುದಿಲ್ಲ ಎಂದು ಆ ಹೆಂಗಳೆಯರ ಎದುರಲ್ಲಿ ಆರ್ಭಟಿಸಿದನು.
ಅರ್ಥ:ಉತ್ತರನು ಮುಂದುವರಿದು, ಗಾಂಗೇಯನನ್ನು ಅವನ ಶಕ್ತಿಯನ್ನು ನಾನು ತಿಳಿದಿಲ್ಲವೇ!, ದ್ರೋಣನು ನನಗೆ ತಿಳಿಯದವನೇ!; ಕೆಳ-ಕುಲದಲ್ಲಿ ಜನಿಸಿದ ದಾಸಿಪುತ್ರ ಕರ್ಣ ತನಗೆ ಸಮಬಲನೆ! ಅಲ್ಲವೇ ಅಲ್ಲ! ಸತ್ವ ಇಲ್ಲದ ಆಡಂಬರದಿಂದ ಕೇವಲ ಗೋವುಗಳನ್ನು ಹಿಡಿದರೆ ಅವರ ಹೆಂಡತಿಯರನ್ನು ಸೆರೆಹಿಡಿದು ತರದೆ ಬಿಡುವುದಿಲ್ಲ ಎಂದು ಆ ಹೆಂಗಳೆಯರ ಎದುರಲ್ಲಿ ಆರ್ಭಟಿಸಿದನು. (ಅವರು ಉತ್ತರನ ಪೌರುಷವನ್ನು ನಂಬಿ ಅವಾಕ್ಕಾಗಿ ನೋಡತ್ತಿದ್ದರು)
ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ |
ಗಡಣಿಸುವ ಸಾರಥಿಯನೊಬ್ಬನ
ಪಡೆದನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ || ೨೪ ||
ಪದವಿಭಾಗ-ಅರ್ಥ:ನುಡಿದು ಫಲವೇನು+ ಇನ್ನು, ಸಾರಥಿ ಮಡಿದ ನಿನ್ನಿನ ಬವರದಲಿ, ತಾನು+ ಉಡುಹನಾದೆನು ಶಿವ ಶಿವಾ+ ಯಿಂದು+ ಎನ್ನ ಕೈ ಮನಕೆ ಗಡಣಿಸುವ ಸಾರಥಿಯನು+ ಒಬ್ಬನ ಪಡೆದನಾದೊಡೆ ಕೌರವೇಂದ್ರನ ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ.
  • ನುಡಿದು ಫಲವೇನು+ ಇನ್ನು= ಹೆಚ್ಚು ಮಾತನಾಡಿ ಏನು ಫಲ?, ಸಾರಥಿ ಮಡಿದ ನಿನ್ನಿನ ಬವರದಲಿ,= ನಿನ್ನೆಯ ಯುದ್ಧದಲ್ಲಿ ತನ್ನ ಸಾರಥಿ ಸತ್ತನು- ಮಡಿದುಹೋದನು. ತಾನು+ ಉಡುಹನಾದೆನು (ಉಡುಹ-> ಉಡುಪ - ಕೈಕಾಲುಗಳಿಲ್ಲದ ಅಂಗಹೀನ)= ಈಗ ತಾನು ಕೈಯಿಲ್ಲದಂತಾದೆನು. ಶಿವ ಶಿವಾ+ ಯಿಂದು+ ಎನ್ನ ಕೈ ಮನಕೆ ಗಡಣಿಸುವ ಸಾರಥಿಯನು+ ಒಬ್ಬನ ಪಡೆದನಾದೊಡೆ= ದೇವರೇ, ನನ್ನ ಕೈಗೆ, ಮನಸ್ಸಿಗೆ ಗಡಣಿಸುವ- ಸೇರುವ ಹೊಂದುವ, ಒಪ್ಪುವ ಸಾರಥಿಯನು+ ಒಬ್ಬನ - ಒಬ್ಬನನ್ನು ಪಡೆದನಾದೊಡೆ, ಕೌರವೇಂದ್ರನ ಪಡೆಗೆ- ಸೈನ್ಯಕ್ಕೆ, ಹಬ್ಬವ ಮಾಡುವೆನು ತೋರುವೆನು (ತನ್ನ) ಕೈಗುಣವ.(ಹಬ್ಬ ಎಂದರೆ ಸಂತಸದಿಂದ ಗಲಾಟೆ- ಕೂಗಾಡುವುದು, ವ್ಯಂಗವಾಗಿ- ಬಾಯಿ ಬಡಿದುಕೊಂಡು ಗೋಳಾಡುವುದು- ಕಷ್ಟಕ್ಕೆ ಸಿಲುಕುವುದು)
ಅರ್ಥ:ಉತ್ತರನು ಹೇಳಿದ, ಹೆಚ್ಚು ಮಾತನಾಡಿ ಏನು ಫಲ?, ನಿನ್ನೆಯ ಯುದ್ಧದಲ್ಲಿ ತನ್ನ ಸಾರಥಿ ಸತ್ತನು. ಈಗ ತಾನು ಕೈಯಿಲ್ಲದವನಂತಾದನು ಎಂದನು. 'ದೇವರೇ, ನನ್ನ ಕೈಗೆ, ಮನಸ್ಸಿಗೆ ಹೊಂದುವ ಸಾರಥಿ ಒಬ್ಬನನ್ನು ಪಡೆದದ್ದೇ ಆದರೆ, ಕೌರವೇಂದ್ರನ ಸೈನ್ಯಕ್ಕೆ ಹಬ್ಬವನ್ನು ಮಾಡುವೆನು, ನನ್ನ ಕೈಗುಣವನ್ನು ತೋರುವೆನು.' ಎಂದನು ಉತ್ತರ.
ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ |
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ || ೨೫ ||
ಪದವಿಭಾಗ-ಅರ್ಥ:ಸಾರಥಿಯ ಶಿವ ಕೊಟ್ಟನಾದೊಡೆ ಮಾರಿಗೆ+ ಉಬ್ಬಸವಾಗದೆ+ ಅಂತಕ ನೂರು ತುಂಬದೆ, ದೊಳ್ಳು ನೂಕದೆ ರಣಪಿಶಾಚರಿಗೆ, ದೋರೆಗರುಳಲಿ- ದೋರೆ+ ಕರುಳಲಿ, ದಾನವಿಯರೊಡಲೇರು ಹತ್ತದೆ, ಹಬ್ಬವಾಗದೆ ಭೂರಿ ಬೇತಾಳರಿಗೆ, ಹೋಹುದೆ ಬರಿದೆ ರಣವು+ ಎಂದ
  • ಸಾರಥಿಯ ಶಿವ ಕೊಟ್ಟನಾದೊಡೆ ಮಾರಿಗೆ+ ಉಬ್ಬಸವಾಗದೆ+ = ದೇವ ಶಿವನು ಸಾರಥಿಯನ್ನು ನನಗೆ ಕೊಟ್ಟಿದ್ದೇ ಆದರೆ, ರಕ್ತಕುಡಿದು ಮಾರಿಗೆ ಉಬ್ಬಸವಾಗದೆ- ಏದುಸಿರು ಬರದೆ ಇರುವುದೆ? ಅಂತಕ ನೂರು ತುಂಬದೆ= ಯಮನ ಪಟ್ಟಣ ಸತ್ತವರ ಪ್ರೇತಗಳಿಂದ ತುಂಬದೆ ಇರುವುದೇ?, ದೊಳ್ಳು ನೂಕದೆ ರಣಪಿಶಾಚರಿಗೆ= ರಣರಂಗದಲ್ಲಿರುವ ರಣಪಿಶಾಚರುಗಳಿಗೆ ಹೆಣಗಳನ್ನು ತಿಂದು ಹೊಟ್ಟೆ ಮುಂದಕ್ಕೆ ಚಾಚದೇ ಇರುವುದೇ?, ದೋರೆ+ ಗ+ ಕರುಳಲಿ ದಾನವಿಯರ+ ಒಡಲು+ ಏರು ಹತ್ತದೆ= ರಣರಂಗಕ್ಕೆ ಮಾನವರ ರಕ್ತವನ್ನು ಕುಡಿಯುವ ರಕ್ಕಸಿಯರ ಹೊಟ್ಟೆ ಏರುಹತ್ತದೇ - ಉಬ್ಬಿ ಹೋಗದೇ?, ಹಬ್ಬವಾಗದೆ ಭೂರಿ ಬೇತಾಳರಿಗೆ= ಬೇತಾಳಗಳಿಗೆ ಸತ್ತವರ ಹೆಣದ ಊಟದಿಂದ ಭೂರಿ- ದೊಡ್ಡ ಹಬ್ಬವಾಗದೇ?, ಹೋಹುದೆ ಬರಿದೆ ರಣವು (ಯುದ್ಧ)+ ಎಂದ-= ಯುದ್ಧವು ಹಾಗೆಯೇ ಸುಮ್ಮನೇ ಹೋಗುವುದೇ?' ಎಂದ ಉತ್ತರ.
ಅರ್ಥ:'ದೇವನಾದ ಶಿವನು ಸಾರಥಿಯನ್ನು ನನಗೆ ಕೊಟ್ಟಿದ್ದೇ ಆದರೆ, ಯುದ್ಧದಲ್ಲಿ ಸತ್ತವರ ರಕ್ತ ಕುಡಿದು ಕುಡಿದು ಮಾರಿಗೆ ಏದುಸಿರು ಬರದೆ ಇರುವುದೆ? ಯಮನ ಪಟ್ಟಣ ಸತ್ತವರ ಪ್ರೇತಗಳಿಂದ ತುಂಬದೆ ಇರುವುದೇ? ರಣರಂಗದಲ್ಲಿರುವ ರಣಪಿಶಾಚರುಗಳಿಗೆ ಹೆಣಗಳನ್ನು ತಿಂದು ಹೊಟ್ಟೆ ಮುಂದಕ್ಕೆ ಚಾಚದೇ ಇರುವುದೇ? ರಣರಂಗಕ್ಕೆ ಮಾನವರ ರಕ್ತವನ್ನು ಕುಡಿಯುವ ರಕ್ಕಸಿಯರ ಹೊಟ್ಟೆ ರಕ್ತ ಕುಡಿದು ಉಬ್ಬಿ ಹೋಗದೇ? ಬೇತಾಳಗಳಿಗೆ ಸತ್ತವರ ಹೆಣದ ಊಟದಿಂದ ದೊಡ್ಡ ಹಬ್ಬವಾಗದೇ?, ಯುದ್ಧವು ಹಾಗೆಯೇ ಸುಮ್ಮನೇ ಹೋಗುವುದೇ?' ಎಂದ ಉತ್ತರ. (ಸರಿಯಾದ ಸಾರಥಿ ತನಗೆ ಸಿಕ್ಕಿದರೆ, ಹೀಗೆಲ್ಲ ಆಗುವುದು ಎಂದು ಉತ್ತರನ ಹೇಳಿಕೆ)
ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ |
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ || ೨೬ ||
ಪದವಿಭಾಗ-ಅರ್ಥ:ಕೇಳಿದನು ಕಲಿಪಾರ್ಥನು+ ಈತನ ಬಾಲ ಭಾಷೆಗಳೆಲ್ಲವನು ಪಾಂಚಾಲೆಗೆ+ ಎಕ್ಕಟಿ ನುಡಿದ ನಾವು+ ಇನ್ನು+ ಇಹುದು ಮತವಲ್ಲ ಕಾಲ ಸವೆದುದು ನಮ್ಮ ರಾಜ್ಯದ ಮೇಲೆ ನಿಲುಕಲು ಬೇಕು ಕೌರವರ+ ಆಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ.
  • ಕಲಿಪಾರ್ಥನು+ ಈತನ ಬಾಲ ಭಾಷೆಗಳೆಲ್ಲವನು= ಕಲಿಪಾರ್ಥನು- ವೀರನಾದ ಅರ್ಜುನನು+ ಈತನ- ಉತ್ತರನ ತಿಳುವಳಿಕೆ ಇಲ್ಲದ ಬಾಲ ಭಾಷೆಗಳೆಲ್ಲವನ್ನೂ ಕೇಳಿದನು .// ಪಾಂಚಾಲೆಗೆ+ ಎಕ್ಕಟಿ ನುಡಿದ ನಾವು+ ಇನ್ನು+ ಇಹುದು ಮತವಲ್ಲ= ಪಾಂಚಾಲೆ ದ್ರೌಪದಿಗೆ+ ಎಕ್ಕಟಿ- ಪ್ರತ್ಯೇಕವಾಗಿ ಕರೆದು ನುಡಿದ- ಹೇಳಿದನು. ನಾವು+ ಇನ್ನು+ ಇಹುದು ಮತವಲ್ಲ- ಇನ್ನು ಸುಮ್ಮನಿರುವುದು, ತಟಸ್ಥವಾಗಿರುವುದು ಯೋಗ್ಯವಾದ ಕ್ರಮವಲ್ಲ, ಸರಿಯಲ್ಲ.// ಕಾಲ ಸವೆದುದು= ನಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತು. ನಮ್ಮ ರಾಜ್ಯದ ಮೇಲೆ ನಿಲುಕಲು- ಕೈಹಾಕಬೇಕು, -ತಲುಪುವ ಪ್ರಯತ್ನ ಮಾಡಬೇಕು. ಕೌರವರ+ ಆಳು- ಸೈನ್ಯ, ನಮಗೋಸುಗವೆ- ನಮ್ಮನ್ನು ಹುಡುಕಲಾಗಿಯೇ ಬಂದಿದೆ- ಬಂದುದು, ಕಾಂತೆ ಕೇಳು+ ಎಂದ.
ಅರ್ಥ:ವೀರನಾದ ಅರ್ಜುನನು ಉತ್ತರನ ತಿಳುವಳಿಕೆ ಇಲ್ಲದ ಬಾಲ ಭಾಷೆಗಳೆಲ್ಲವನ್ನೂ ಕೇಳಿದನು. ಪಾಂಚಾಲೆ ದ್ರೌಪದಿಗೆ ಪ್ರತ್ಯೇಕವಾಗಿ ಕರೆದು ಹೇಳಿದನು. ನಾವು ಇನ್ನು ಸುಮ್ಮನಿರುವುದು ಯೋಗ್ಯವಾದ ಕ್ರಮವಲ್ಲ. ನಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತು. ನಮ್ಮ ರಾಜ್ಯದ ಮೇಲೆ ಕೈಹಾಕಬೇಕು. ಕೌರವರ ಸೈನ್ಯ ನಮ್ಮನ್ನು ಹುಡುಕಲಾಗಿಯೇ ಬಂದಿದೆ, ಕಾಂತೆ ಕೇಳು, ಎಂದ.
ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ |
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು || ೨೭ ||
ಪದವಿಭಾಗ-ಅರ್ಥ:ನರನ ಸಾರಥಿಯೆಂದು ನೀನು+ ಉತ್ತರೆಗೆ ಸೂಚಿಸಿ ತನ್ನನು+ ಈಗಳೆ ಕರೆಸು+ ಎನಲು ಕೈಕೊಂಡು ದುರುಪದಿ ಬಂದಳು+ ಒಲವಿನಲಿ ತರುಣಿ ಕೇಳು+ ಅರ್ಜುನನ ಸಾರಥಿ ವರ ಬೃಹನ್ನಳೆ ಖಾಂಡವಾಗ್ನಿಯ ಹೊರೆದನು+ ಇವ ತಾನು+ ಎಂದು ಸತಿಯು+ ಉತ್ತರೆಗೆ ಹೇಳಿದಳು.
  • ನರನ ಸಾರಥಿಯೆಂದು ನೀನು+ ಉತ್ತರೆಗೆ ಸೂಚಿಸಿ ತನ್ನನು+ ಈಗಳೆ ಕರೆಸು+ ಎನಲು= ಬೃಹನ್ನಳೆಯು ಹಿಂದೆ ನರನ- ಅರ್ಜುನನ, ಸಾರಥಿಯೆಂದು ನೀನು+ ಉತ್ತರೆಗೆ- ಉತ್ತರಕುಮಾರನ ತಂಗಿ ಉತ್ತರೆಗೆ ಸೂಚಿಸಿ- ಹೇಳಿ, ತನ್ನನು (ಅರ್ಜುನನ್ನು)+ ಈಗಳೆ ಕರೆಸು+ ಎನಲು- ಎಂದು ದ್ರೌಪದಿಗೆ ಹೇಳಲು,//ಕೈಕೊಂಡು- ಆ ಮಾತನ್ನು ಅನುಸರಿಸಿ, ದುರುಪದಿ ಬಂದಳು+ ಒಲವಿನಲಿ- ದ್ರೌಪದಿ ಸಂತಸದಿಂದ ಉತ್ತರೆಯ ಬಳಿಗೆ ಬಂದಳು;// ತರುಣಿ ಕೇಳು+ ಅರ್ಜುನನ ಸಾರಥಿ ವರ ಬೃಹನ್ನಳೆ ಖಾಂಡವಾಗ್ನಿಯ ಹೊರೆದನು+ ಇವ ತಾನು+ ಎಂದು ಸತಿಯು+ ಉತ್ತರೆಗೆ ಹೇಳಿದಳು= ತರುಣಿ- ಉತ್ತರೆಯೇ ಕೇಳು+ ವರ- ಶ್ರೇಷ್ಠನಾದ ಈ ಬೃಹನ್ನಳೆಯು ಅರ್ಜುನನ ಸಾರಥಿಯಾಗಿದ್ದನು, ಅವನು ಖಾಂಡವಾಗ್ನಿಯ- ಖಾಂಡವವನವನ್ನು ಅಗ್ನಿಯು ಸುಡುವಾಗ ಹೊರೆದನು- ಅರ್ಜುನನ ಸಾರಥ್ಯದ, ಇವ ತಾನು+- ಇವನು - ಬೃಹನ್ನಳೆಯು ಆ ಹೊರೆಯನ್ನು ವಹಸಿದ್ದನು+ ಎಂದು ಸತಿಯು- ದ್ರೌಪದಿಯು+ ಉತ್ತರೆಗೆ ಹೇಳಿದಳು.
ಅರ್ಥ:ಬೃಹನ್ನಳೆಯು ಹಿಂದೆ ಅರ್ಜುನನ ಸಾರಥಿಯಾಗಿದ್ದನೆಂದು ನೀನು ಉತ್ತರಕುಮಾರನ ತಂಗಿ ಉತ್ತರೆಗೆ ಸೂಚಿಸಿ ಹೇಳಿ, ತನ್ನನ್ನು (ಅರ್ಜುನನ್ನು) ಈಗಲೆ ಕರೆಸು ಎಂದು ಅರ್ಜುನನು ದ್ರೌಪದಿಗೆ ಹೇಳಲು, ಆ ಮಾತನ್ನು ಅನುಸರಿಸಿ, ದ್ರೌಪದಿ ಸಂತಸದಿಂದ ಉತ್ತರೆಯ ಬಳಿಗೆ ಬಂದಳು; ಉತ್ತರೆಯೇ ಕೇಳು 'ಶ್ರೇಷ್ಠನಾದ ಈ ಬೃಹನ್ನಳೆಯು ಅರ್ಜುನನ ಸಾರಥಿಯಾಗಿದ್ದನು, ಅವನು ಖಾಂಡವ ವನವನ್ನು ಅಗ್ನಿಯು ಸುಡುವಾಗ ಅರ್ಜುನನ ಸಾರಥ್ಯವನ್ನು ವಹಸಿದ್ದನು, ಎಂದು ದ್ರೌಪದಿಯು ಉತ್ತರೆಗೆ ಹೇಳಿದಳು.
ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ |
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣ ದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ || ೨೮ ||
ಪದವಿಭಾಗ-ಅರ್ಥ:ಕೇಳಿ ಹರುಷಿತೆಯಾದಳು+ ಉತ್ತರೆಯು+ ಓಲಗಕೆ ಬಂದು+ ಅಣ್ಣನ+ ಅಂಘ್ರಿಗೆ ಲೋಲಲೋಚನೆ+ಯೆ+ ಎರಗಿ ಕೈಮುಗಿದು+ ಎಂದಳು+ ಈ ಹದನ ಕೇಳಿದೆನು ಸಾರಥಿಯ ನೆಲೆಯನು, ಕಾಳಗಕೆ ನಡೆಯಣ್ಣ ದೇವ ನೃಪಾಲಕರ ಜಯಿಸು+ ಎಂದಡೆ+ ಉತ್ತರ ನಗುತ ಬೆಸಗೊಂಡ.
  • ಕೇಳಿ ಹರುಷಿತೆಯಾದಳು+ ಉತ್ತರೆಯು+= ಉತ್ತರೆಯ ಸಾರಥಿಯ ವಿಚಾರ ಕೇಳಿ ಹರ್ಷಗೊಂಡಳು.// ಓಲಗಕೆ ಬಂದು+ ಅಣ್ಣನ+ ಅಂಘ್ರಿಗೆ ಲೋಲಲೋಚನೆ+ಯೆ+ ಎರಗಿ ಕೈಮುಗಿದು+ ಎಂದಳು+= ಅವಳು ಓಲಗಕೆ- ಸಭೆಗೆ ಬಂದು+ ಅಣ್ಣನ+ ಅಂಘ್ರಿಗೆ- ಪಾದಕ್ಕೆ ಲೋಲಲೋಚನೆ+ಯೆ+ ಎರಗಿ- ಚಂಚಲಕಣ್ಣಿನ ಉತ್ತರೆ ನಮಸ್ಕರಿಸಿ ಕೈಮುಗಿದು+ ಎಂದಳು- ಹೇಳಿದಳು.+ ಈ ಹದನ= ಈ ಸಾರಥಿ ದೊರಕಿದ ವಿಚಾರವನ್ನು;// ಕೇಳಿದೆನು ಸಾರಥಿಯ ನೆಲೆಯನು, ಕಾಳಗಕೆ ನಡೆಯಣ್ಣ ದೇವ= ಸಾರಥಿಯು ಇರುವ ವಿಚಾರವನ್ನು ಕೇಳಿದೆನು; ಯುದ್ಧಕ್ಕೆ ನಡೆಯಣ್ಣ.//ನೃಪಾಲಕರ ಜಯಿಸು+ ಎಂದಡೆ+ ಉತ್ತರ ನಗುತ ಬೆಸಗೊಂಡ= ಅಣ್ಣದೇವ ನೃಪಾಲಕರನ್ನು- ರಾಜರನ್ನು ಜಯಿಸು+ ಎಂದಡೆ- ಎಂದಾಗ,+ ಉತ್ತರ ನಗುತ ಬೆಸಗೊಂಡ- ಕೇಳಿದ.
ಅರ್ಥ:ಉತ್ತರೆಯ ಸಾರಥಿಯ ವಿಚಾರ ಕೇಳಿ ಹರ್ಷಗೊಂಡಳು. ಅವಳು ಅಣ್ನನ ಸಭೆಗೆ ಬಂದು, ಅಣ್ಣನ ಪಾದಕ್ಕೆ ಚಂಚಲಕಣ್ಣಿನ ಉತ್ತರೆ ನಮಸ್ಕರಿಸಿ ಕೈಮುಗಿದು, ಸಾರಥಿ ದೊರಕಿದ ಈ ವಿಚಾರವನ್ನು ಹೇಳಿದಳು; ಉತ್ತರೆಯು, 'ಅಣ್ಣಾ ಸಾರಥಿಯು ಇರುವ ವಿಚಾರವನ್ನು ಕೇಳಿದೆನು, ಯುದ್ಧಕ್ಕೆ ನಡೆಯಣ್ಣ. ಅಣ್ಣದೇವ ರಾಜರನ್ನು ಜಯಿಸು,' ಎಂದಾಗ, ಉತ್ತರ ನಗುತ್ತಾ ಕೇಳಿದ.
ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ |
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ || ೨೯ ||
ಪದವಿಭಾಗ-ಅರ್ಥ:ತಂಗಿ ಹೇಳೌ ತಾಯೆ ನಿನಗೆ+ ಈ ಸಂಗತಿಯನು+ ಆರೆಂದರು+ ಆವವನು+ ಅಂಗವಣೆಯುಳ್ಳವನೆ? ಸಾರಥಿತನದ ಕೈಮೆಯಲಿ ಮಂಗಳವಲೇ, ಬಳಿಕ ರಣದೊಳ ಭಂಗನಹೆ ನಿನ್ನಾಣೆ ತನ್ನಯ ತುಂಗ ವಿಕ್ರಮತನವನು+ ಉಳುಹಿದೆ ಹೇಳು ಹೇಳೆಂದ.
  • ತಂಗಿ ಹೇಳೌ ತಾಯೆ ನಿನಗೆ+ ಈ ಸಂಗತಿಯನು+ ಆರೆಂದರು+= ತಂಗೀ, ಹೇಳು ತಾಯೀ, ನಿನಗೆ ಈ ಸಂಗತಿಯನ್ನು ಆರೆಂದರು- ಯಾರು ಹೇಳಿದರು? ಆವವನು+ ಅಂಗವಣೆಯುಳ್ಳವನೆ?= ಯಾರ ಕಡೆಯವನು, ಸಾಮರ್ಥ್ಯ ಉಳ್ಳವನೇ, ಸಾರಥಿತನದ ಕೈಮೆಯಲಿ=ವಿದ್ಯೆಯಲ್ಲಿ? ಮಂಗಳವಲೇ,= ಬಹಳ ಒಳ್ಳೆಯದು, ಬಳಿಕ ರಣದೊಳ ಭಂಗನು+ ಅಹೆ ನಿನ್ನಾಣೆ= ಅವನು ಸಾಮರ್ಥ್ಯವಿಲ್ಲದವನಾದರೆ ಬಳಿಕ ಯುದ್ಧದಲ್ಲಿ ಭಂಗಪಟ್ಟವನು- ಸೋತವನು ಅಹೆನು- ಆಗುವೆನು; ತನ್ನಯ ತುಂಗ ವಿಕ್ರಮತನವನು+ ಉಳುಹಿದೆ ಹೇಳು ಹೇಳೆಂದ= ತನ್ನ ತುಂಗ- ಶ್ರೇಷ್ಠ ವಿಕ್ರಮತನವನು- ಪರಾಕ್ರಮವನ್ನು+ ಉಳುಹಿದೆ- ಉಳಿಸಿದೆ, ಹೇಳು ಹೇಳೆಂದ- ಅದು ಯಾರು ಹೇಳು ಹೇಳು- ಬೇಗ ಹೇಳು ಎಂದ.
ಅರ್ಥ:ತಂಗೀ, ಹೇಳು ತಾಯೀ, ನಿನಗೆ ಈ ಸಂಗತಿಯನ್ನು ಯಾರು ಹೇಳಿದರು? ಯಾರ ಕಡೆಯವನು, ಸಾರಥಿತನದ ವಿದ್ಯೆಯಲ್ಲಿ ಸಾಮರ್ಥ್ಯ ಉಳ್ಳವನೇ? ಬಹಳ ಒಳ್ಳೆಯದು, ಅವನು ಸಾಮರ್ಥ್ಯವಿಲ್ಲದವನಾದರೆ ಬಳಿಕ ಯುದ್ಧದಲ್ಲಿ ಭಂಗಪಟ್ಟವನಾಗುವೆನು; ತನ್ನ ಶ್ರೇಷ್ಠ ಪರಾಕ್ರಮವನ್ನು ಉಳಿಸಿದೆ, ಅದು ಯಾರು ಹೇಳು ಹೇಳು- ಬೇಗ ಹೇಳು ಎಂದ.
ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ |
ಹಿಂದುಗಳೆಯದೆ ಕರೆಸು ನಮ್ಮ ಬೃ
ಹನ್ನಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರೇಂಧ್ರಿಗಿಂತೆಂದ || ೩೦ ||
ಪದವಿಭಾಗ-ಅರ್ಥ: ಎಂದಳು+ ಈ ಸೈರೇಂಧ್ರಿ ಸುರಪನ ನಂದನವ ಸುಡುವಂದು ಪಾರ್ಥನ ಮುಂದೆ ಸಾರಥಿಯಾದ ಗಡ, ನಾವು+ ಅರಿಯೆವು+ ಈ ಹದನ ಹಿಂದುಗಳೆಯದೆ ಕರೆಸು ನಮ್ಮ ಬೃಹನ್ನಳೆಯನು+ ಎನೆ ನಗುತ ಲೇಸಾಯ್ತು+ ಎಂದು ಪರಮೋತ್ಸಾಹದಲಿ ಸೈರೇಂಧ್ರಿಗೆ+ ಇಂತೆಂದ.
  • ಎಂದಳು+ ಈ ಸೈರೇಂಧ್ರಿ ಸುರಪನ- ಇಂದ್ರನ ನಂದನವ ಸುಡುವಂದು ಪಾರ್ಥನ ಮುಂದೆ ಸಾರಥಿಯಾದ ಗಡ,= ಇಂದ್ರನ ನಂದನವನವನ್ನು ಸುಡುವಾಗ ಪಾರ್ಥನ ಮುಂದೆ ರಥದಲ್ಲಿ ಕುಳಿತು ಸಾರಥಿಯಾಗಿದ್ದನಂತೆ, ನಾವು+ ಅರಿಯೆವು -ತಿಳಿದಿಲ್ಲ,+ ಈ ಹದನ- ವಿಚಾರವನ್ನು, ಹಿಂದುಗಳೆಯದೆ- ತಡಮಾಡದೆ, ಕರೆಸು ನಮ್ಮ ಬೃಹನ್ನಳೆಯನು+ ಎನೆ- ಎಂದಾಗ, ನಗುತ- ನಗುತ್ತಾ, ಲೇಸಾಯ್ತು (ಒಳ್ಳೆಯದಾಯಿತು)+ ಎಂದು ಪರಮೋತ್ಸಾಹದಲಿ ಸೈರೇಂಧ್ರಿಗೆ+ ಇಂತೆಂದ- ಹೀಗೆ ಹೇಳಿದ.
ಅರ್ಥ:ಉತ್ತರೆಯು ಅಣ್ನನಿಗೆ ಈ ಸೈರಂದ್ರಿ ಹೇಳಿದಳು ಎಂದಳು. ಪಾರ್ಥನು ಇಂದ್ರನ ನಂದನವನವನ್ನು ಸುಡುವಾಗ ಅವನ ಮುಂದೆ ರಥದಲ್ಲಿ ಕುಳಿತು ಬೃಹನ್ನಳೆಯು ಸಾರಥಿಯಾಗಿದ್ದನಂತೆ. ಈ ವಿಚಾರವನ್ನು, ನಾವು ತಿಳಿದಿಲ್ಲ. ಉತ್ತರನು ತಡಮಾಡದೆ, ಕರೆಸು ನಮ್ಮ ಬೃಹನ್ನಳೆಯನ್ನು ಎಂದನು. ಉತ್ತರನು ನಗುತ್ತಾ, ಒಳ್ಳೆಯದಾಯಿತು, ಎಂದು ಪರಮೋತ್ಸಾಹದಿಂದ ಸೈರೇಂಧ್ರಿಗೆ ಉತ್ತರನು ಹೀಗೆ ಹೇಳಿದ.
ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ |
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವದು || ೩೧ ||
ಪದವಿಭಾಗ-ಅರ್ಥ:ಸಾರಥಿಯ ಕೊಟ್ಟು+ ಎನ್ನನು+ ಉಳುಹಿದೆ ವಾರಿಜಾನನೆ ಲೇಸು ಮಾಡಿದೆ, ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ ನಾರಿ ನೀನೇ ಹೋಗಿ ಪಾರ್ಥನ ಸಾರಥಿಯ ತಾಯೆನಲು, ನಮ್ಮನು ವೀರ ಬಗೆಯನು, ನಿಮ್ಮ ತಂಗಿಯ ಕಳುಹಿ ಕರೆಸುವದು.
  • ಸಾರಥಿಯ ಕೊಟ್ಟು+ ಎನ್ನನು+ ಉಳುಹಿದೆ- ಉಳಿಸಿದೆ; ವಾರಿಜಾನನೆ- ಕಮಲಮುಖಿ ಲೇಸು- ಒಳ್ಳೆಯದನ್ನು ಮಾಡಿದೆ, ಕೌರವನ ತನಿಗರುಳ (ತನಿ-ಹೊಸ ಕರಳು) ಬಗೆವೆನು; (ಉತ್ತರನು) ತಡವ ಮಾಡಿಸದೆ ನಾರಿ- ಸೈರಂಧ್ರೀ ನೀನೇ ಹೋಗಿ ಪಾರ್ಥನ ಸಾರಥಿಯ ತಾ+ ಯೆ+ ಎನಲು- ಎನ್ನಲು, ದ್ರೌಪದಿಯು ನಮ್ಮನು ವೀರ ಬಗೆಯನು- ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ನಿಮ್ಮ ತಂಗಿಯ ಕಳುಹಿ ಕರೆಸುವದು (ಎಂದಳು).
ಅರ್ಥ:ಉತ್ತರನು ಸೈರಂದ್ರಿಯನ್ನು ಕುರಿತು, 'ಸಾರಥಿಯನ್ನು ಕೊಟ್ಟು ನನ್ನನು ಉಳಿಸಿದೆ; ಸುಂದರಿ ಒಳ್ಳೆಯದನ್ನು ಮಾಡಿದೆ, ಕೌರವನ ತನಿಗರುಳನ್ನು ಬಗೆಯುತ್ತೇನೆ; ತಡ ಮಾಡದೆ ಸೈರಂಧ್ರೀ ನೀನೇ ಹೋಗಿ ಪಾರ್ಥನ ಸಾರಥಿಯನ್ನು ಕರೆದು ತಾ,' ಎನ್ನಲು, ದ್ರೌಪದಿಯು, ವೀರ ಬೃಹನ್ನಳೆಯು ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ನಿಮ್ಮ ತಂಗಿಯ ಕಳುಹಿಸಿ ಕರೆಸುವದು ಎಂದಳು.

ಉತ್ತರೆಯ ವರ್ಣನೆ[ಸಂಪಾದಿಸಿ]

ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ |
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ || ೩೨ ||
ಪದವಿಭಾಗ-ಅರ್ಥ:ತಾಯೆ ನೀನೇ ಹೋಗಿ ಸೂತನ ತಾಯೆನಲು ಕೈಕೊಂಡು ಕಮಲದ ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ ರಾಯಕುವರಿ ನವಾಯಿ ಗತಿ ಗರುವಾಯಿಯಲಿ ಬರೆ ವಿಟರ ಕರಣದಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ
  • (ತಂಗಿಗೆ ಪ್ರೀತಿ - ಗೌರವದ ಸಂಬೋಧನೆ) ತಾಯೆ- ಉತ್ತರೆ, ನೀನೇ ಹೋಗಿ ಸೂತನ- ಸಾರಥಿಯನ್ನು, ತಾ+ ಯೆನಲು- ಕರೆದುಕೊಂಡು ಬಾ ಎನ್ನಲು, ಕೈಕೊಂಡು- (ಆ ಕಾರ್ಯವನ್ನು ಕೈಕೊಂಡು) ಅದಕ್ಕೆ ಒಪ್ಪಿ ಕಮಲದಳಾಯತಾಕ್ಷಿ (ಕಮಲದಳ+ ಆಯತ-ಅಗಲದ+ ಅಕ್ಷಿ- ಕಣ್ಣುಳ್ಳವಳು) ಮನೋಭವನ- ಮನ್ಮಥನ, ಮರಿಯಾನೆಯಂದದಲಿ ರಾಯಕುವರಿ- ರಾಜಕುಮಾರಿ, ನವಾಯಿ ಗತಿ (ಚಲುವಿನ ವೇಗ ಗತಿಯಲ್ಲಿ - ನೆಡಿಗೆಯಲ್ಲಿ) ಗರುವಾಯಿಯಲಿ- ಬೆಡಗಿನಿಂದ, ಬರೆ- ಬರಲು, ವಿಟರ ಕರಣದಲಿ+ ಆಯ- ಸಮತೋಲ, ತೊಡಕಿತು ತೆಗೆದಳು (ಸೆಳೆದುಕೊಂಡಳು)+ ಅಂಗನೆ ಜನರ ಕಣ್ಮನವ
ಅರ್ಥ:ಉತ್ತರನು, ತಾಯೀ ಉತ್ತರೆ, ನೀನೇ ಹೋಗಿ ಸಾರಥಿಯನ್ನು ಕರೆದುಕೊಂಡು ಬಾ ಎನ್ನಲು ಅವಳು ಅದಕ್ಕೆ ಒಪ್ಪಿ ಬಟ್ಟಲುಕಣ್ಣಿನ ರಾಜಕುಮಾರಿ ಉತ್ತರೆಯು ಮನ್ಮಥನ ಮರಿಯಾನೆಯಂತೆ ಚಲುವಿನ ವೇಗದ ನೆಡಿಗೆಯಲ್ಲಿ ಬೆಡಗಿನಿಂದ ಬರಲು, ವಿಟರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವುಂಟಾಯಿತು. ಬಾಲಯುವತಿ ಜನರ ಕಣ್ಮನವನ್ನು ಆಕ್ರಮಿಸಿ ಸೆಳೆದುಕೊಂಡಳು.
ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು |
ಒಯ್ದುಕೊಳ್ಳನೆ ಮುನಿಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ || ೩೩ ||
ಪದವಿಭಾಗ-ಅರ್ಥ:ಐದು ಶರವೇಕೆ+ ಒಂದು ಬಾಣವು+ ಇದು+ ಐದದೇ+ ಯ+ ಇನ್ನು+ ಅಮಮ ಕಾಮನ ಕೈದುಗಾರತನಕ್ಕೆ ಕೋಡದೆ ಕೊಂಕದೆ+ ಇಹರು+ ಆರು ಒಯ್ದುಕೊಳ್ಳನೆ ಮುನಿಮನವನು+ ಅಡಹಾಯ್ದು ಹಿಡಿಯನೆ ಹಿರಿಯರನು ವಿಧಿ ಕೊಯ್ದನು+ ಅಕಟಾ ಕೊರಳನು+ ಎಂದುದು ನಗುತ ವಿಟನಿಕರ.
  • ಐದು ಶರವೇಕೆ (ಜನರಿಗೆ ಕಾಮ ಉದ್ದೀಪನಗೊಳಿಸಲು ಮನ್ಮಥನಿಗೆ ಐದು ಬಾಣವೇಕೆ?)+ ಒಂದು ಬಾಣವು+ ಇದು+ ಐದದೇ (ಹೋಗದೇ- ಗುರಿತಲುಪದೇ?- ಸಾಕಾಗದೇ)+ ಯ+ ಇನ್ನು+ ಅಮಮ- ಅಬ್ಬಾ! ಕಾಮನ ಕೈದುಗಾರತನಕ್ಕೆ= (ಉತ್ತರೆ ಎಂಬ ಈ) ಆಯುಧ ಪ್ರಯೋಗಕ್ಕೆ) ಕೋಡದೆ (ಕೋಡು - ಚಳಿಯಾಗು, ನಡುಗು, ನೀರು ತಣ್ಣಗೆ ಕೋಡುತ್ತಿದೆ. ಅದರಲ್ಲಿ ಕೈಯಿಟ್ಟರೆ ಕೈ ಕೋಡಿ ನಡುಗುತ್ತದೆ.) ಕೊಂಕದೆ (ಬಗ್ಗದೆ)+ ಇಹರು (ಇರುವರು)+ ಆರು (ಯಾರು?); ಒಯ್ದುಕೊಳ್ಳನೆ ಮುನಿ ಮನವನು+ ಅಡಹಾಯ್ದು ಹಿಡಿಯನೆ ಹಿರಿಯರನು= ಒಯ್ದುಕೊಳ್ಳನೆ- ಅಪಹರಿಸದೆ ಇರುವನೆ ಮುನಿ ಮನವನು+ ಅಡಹಾಯ್ದು ಹಿಡಿಯನೆ ಹಿರಿಯರನು- ಮುದುಕರನ್ನೂ ಅಡ್ಡಹಾಕಿ ಮನ್ಮಥನು ಹಿಡಿಯದಿರುವನೆ? ವಿಧಿ ಕೊಯ್ದನು+ ಅಕಟಾ ಕೊರಳನು+ ಎಂದುದು ನಗುತ ವಿಟನಿಕರ= ವಿಟರ ಗುಂಪು ಉತ್ತರೆಯನ್ನು ಕಂಡು, ವಿಧಿಯು ಉತ್ತರೆಯನ್ನು ಸೃಷ್ಟಿಮಾಡಿ ನಮ್ಮನ್ನು ಮೋಹಗೊಳಿಸಿ ಜೀವತೆಗೆಯತ್ತಿದ್ದಾನೆ, ಅಕಟಾ, ಅಯ್ಯೋ! ನಮ್ಮ ಕೊರಳನು ಕೊಯ್ದನು ಎಂದು ನಗುತ್ತಾ ಹೇಳಿದರು. (ವಿಟರು: ಸದಾ ಹೆಣ್ಣಿನ ಮೋಹದಲ್ಲಿ ಮುಳುಗಿರುವವರು- ಅವರ ಸಂಗದಲ್ಲಿ ಸುಖ ಕಾಣುವವರು, ಹೆಣ್ನಿನ ಮೋಹದ ಸಂಕಟದಲ್ಲೂ ಸುಖಪಡುವವರು ವಿಟರು.)
ಅರ್ಥ:ಜನರಿಗೆ ಕಾಮ ಉದ್ದೀಪನಗೊಳಿಸಲು ಮನ್ಮಥನಿಗೆ ಐದು ಬಾಣವೇಕೆ? ಉತ್ತರೆ ಎಂಬ ಈ ಒಂದು ಆಯುಧ ಪ್ರಯೋಗಕ್ಕೇನೆ ಕೋಡದೆ ನಡುಗಿಹೊಗರೇ? ಬಗ್ಗದೆ- ಸೊಲದೇ ಇರುವರು ಯಾರು? ಮುನಿಗಳ ಮನವನ್ನು ಅಡ್ಡಹಾಯ್ದು ಹಿಡಿಯನೆ? ಮುದುಕರನ್ನೂ ಅಡ್ಡಹಾಕಿ ಮನ್ಮಥನು ಹಿಡಿಯದಿರುವನೆ? ವಿಟರ ಗುಂಪು ಉತ್ತರೆಯನ್ನು ಕಂಡು, ವಿಧಿಯು ಉತ್ತರೆಯನ್ನು ಸೃಷ್ಟಿಮಾಡಿ ನಮ್ಮನ್ನು ಮೋಹಗೊಳಿಸಿ ಆ ಸಂಕಟದಿಂದ ಜೀವ ತೆಗೆಯತ್ತಿದ್ದಾನೆ, ಅಕಟಾ, ಅಯ್ಯೋ! ನಮ್ಮ ಕೊರಳನು ಕೊಯ್ದನು, ಎಂದು ನಗುತ್ತಾ ಹೇಳಿದರು,
ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ |
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ || ೩೪ ||
ಪದವಿಭಾಗ-ಅರ್ಥ:ಅರಳುಗಂಗಳ= ಅರಳು+ ಕಂಗಳ- ಕಣ್ಣುಗಳ ಬೆಳಗು, ಹೊಯ್ದು+ ಅಬ್ಬರಿಸೆ ಚಿತ್ತದ ತಿಮಿರ= ಕತ್ತಲೆ, ಹೆಚ್ಚಿತು, ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ ಸರಸತರ= ಆನಂದದಪರಿ, ಲಾವಣ್ಯ ರಸದಿಂದ+ ಉರಿ ಮಸಗೆ= ತುಂಬಲು, ಜನ ಹೃದಯದಲಿ ಮೈಪರಿಮಳದ ಪಸರದಲಿ- ಹರಡುವಿಕೆಯಲ್ಲಿ, ಪದ್ಮಿನಿ ಬಂದಳು+ ಒಲವಿನಲಿ.
  • ಅರಳಿದ ಕಣ್ಣುಗಳ ಬೆಳಗು- ಬೆಳಕು, ಎಲ್ಲರಿಗೆ ಹೊಯ್ದು- ಹೊಡೆದು + ಅಬ್ಬರಿಸೆ- ಆರ್ಭಟಿಸಲು, ಚಿತ್ತದ ತಿಮಿರ= ಆ ಬೆಳಕಿಗೆ ಮನಸ್ಸಿಗೆ ಕತ್ತಲೆ, ಹೆಚ್ಚಿತು,- ಜನ ಕಂಗೆಟ್ಟರು. ಕುರುಳ ಕಾಳಿಕೆಯಿಂದ- ಸಂಕಟದಿಂದ ಮುಖ ಬಿಳುಪೇರಿ ವಿಟಜನದ ಸರಸತರ= ಆನಂದದಪರಿಯ, ಲಾವಣ್ಯ ರಸದಿಂದ+ ಉರಿ ಮಸಗೆ= ತುಂಬಲು, ಜನ ಹೃದಯದಲಿ (ಅವಳ) ಮೈಪರಿಮಳದ ಪಸರದಲಿ- ಹರಡುವಿಕೆಯಲ್ಲಿ, ಹರಡುತ್ತಾ ಪದ್ಮಿನಿ ಬಂದಳು+ ಒಲವಿನಲಿ- ಸಂತಸದಿಂದ. (ಪದ್ಮಿನಿ ಸ್ತ್ರೀಯರಿಗೆ ಮೋಹಗೊಳಿಸುವ ಮೈಪರಿಮಳವಿರುತ್ತದೆ ಎಂದು ಹೇಳಿಕೆ ಇದೆ. ಶಂತನು ಅದಕ್ಕೆ ಮರುಳಾಗಿದ್ದ.)
ಅರ್ಥ:ಉತ್ತರೆಯ ಅರಳಿದ ಕಣ್ಣುಗಳ ಬೆಳಕು, ಎಲ್ಲರಿಗೆ ಹೊಡೆದು ಆರ್ಭಟಿಸಲು, ಆ ಬೆಳಕಿಗೆ ನೋಡಿದ ಜನರ ಮನಸ್ಸಿನಲ್ಲಿ ಕತ್ತಲೆ ಹೆಚ್ಚಿತು. ಜನ ಕಂಗೆಟ್ಟರು. (ವಿಟರು) ಕೈಗೆ ಸಿಗದ ಸೌಂದರ್ಯಕ್ಕೆ ಕುರುಳ ಸಂಕಟದಿಂದ ಮುಖ ಬಿಳುಪೇರಿ ವಿಟಜನರ ಆನಂದದಪರಿಯ ಜೊತೆಗೆ ಲಾವಣ್ಯ ರಸದಿಂದ ಉರಿ ತುಂಬಲು, ಜನರ ಹೃದಯದೊಳಗೆ ಅವಳು ಮೈಪರಿಮಳವನ್ನು ಹರಡುತ್ತಾ ಆ ಪದ್ಮಿನಿ ಉತ್ತರೆ ಸಂತಸದಿಂದ ಬಂದಳು.
ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು |
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ || ೩೫ ||
ಪದವಿಭಾಗ-ಅರ್ಥ:ನಡೆ ನಡೆಯ ಬಂಧಿಸಿತು ನೋಟವ ನುಡುಗಿಸಿತು, ಕುಡಿನೋಟ ಸಖಿಯರ ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು- ನಿಲ್ಲಿಸಿತು, ಕೆಡಿಸಿತು+ ಅಧರದ ರಾಗ ರಾಗವ, ಬಡತನವ ಹೆಚ್ಚಿಸಿತು ನಡುವಿನ ಬಡತನವು, ವಿಟಜನಕೆ+ ಎನಲು ನಡೆತಂದಳು+ ಇಂದುಮುಖಿ
  • ನಡೆ ನಡೆಯ ಬಂಧಿಸಿತು ನೋಟವ ನುಡುಗಿಸಿತು= ಅವಳು ನೆಡೆದು ಬರುವಾಗ ನೋಡುಗರ ನಡೆಯು ನಿಂತಿತು- ನಿಂತುನೊಡುತ್ತಿದ್ದರು. ಕುಡಿನೋಟ ಸಖಿಯರ ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು- ನಿಲ್ಲಿಸಿತು= ಅವಳ ಕುಡಿನೋಟ ಮತ್ತು ಸಖಿಯರ ನುಡಿ, ಸಮೇಳದ- ಜನರಗುಂಪಿನ ಮಾತು- ಮಾತುಗಳನ್ನೂ, ಮನುಜರ ಮಾತ ಮಾಣಿಸಿತು-ಉಳಿದ ಜನರ ಮಾತುಗಳನ್ನೂ ನಿಲ್ಲಿಸಿತು, ಜನ ಮಾತು ನಿಲ್ಲಿಸಿ ಅವಳನ್ನು ಅವಾಕ್ಕಾಗಿ ನೋಡುತ್ತಿದ್ದರು! ಕೆಡಿಸಿತು+ ಅಧರದ ರಾಗ ರಾಗವ= ಅವಳ ತುಟಿಯ ಕೆಂಪುಬಣ್ಣ, ರಾಗವ-ಮೋಹವನ್ನು ಕೆಡಿಸಿತು(?), ಬಡತನವ ಹೆಚ್ಚಿಸಿತು ನಡುವಿನ ಬಡತನವು= ಮತ್ತು (ಸಣ್ಣ) ನಡುವಿನ ಬಡತನವು ನೋಡುಗರ ದೌರ್ಬಲ್ಯವನ್ನು ಹೆಚ್ಚಿಸಿತು - ವಿಟಜನಕೆ+ ಎನಲು ವಿಟರಿಗೆ ಎನ್ನುವಂತೆ ನಡೆತಂದಳು+ ಇಂದುಮುಖಿ- ಚಂದ್ರನಂತೆ ಮುಖವುಳ್ಳ ಉತ್ತರೆ.
ಅರ್ಥ:ಅವಳು ನೆಡೆದು ಬರುವಾಗ ನೋಡುಗರ ನಡೆಯು ನಿಂತಿತು- ನಿಂತು ನೊಡುತ್ತಿದ್ದರು. ಅವಳ ಕುಡಿನೋಟ ಮತ್ತು ಸಖಿಯರ ನುಡಿ, ಜನರಗುಂಪಿನ ಮಾತುಗಳನ್ನೂ, ಉಳಿದ ಜನರ ಮಾತುಗಳನ್ನೂ ನಿಲ್ಲಿಸಿತು- ಜನ ಮಾತು ನಿಲ್ಲಿಸಿ ಅವಳನ್ನು ಅವಾಕ್ಕಾಗಿ ನೋಡುತ್ತಿದ್ದರು! ಅವಳ ತುಟಿಯ ಕೆಂಪುಬಣ್ಣ, ತಮ್ಮವರ ಮೇಲಿನ ಮೋಹವನ್ನು ಕೆಡಿಸಿತು(?). ಮತ್ತು (ಅವಳ ಸಣ್ಣ) ನಡುವಿನ ಬಡತನವು ನೋಡುಗರ ದೌರ್ಬಲ್ಯವನ್ನು ಹೆಚ್ಚಿಸಿತು- ವಿಟರಿಗೆ ಎನ್ನುವಂತೆ ಚಂದ್ರನಂತೆ ಮುಖವುಳ್ಳ ಉತ್ತರೆ ನಡೆದುಬಂದಳು.
ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಪಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ |
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರುಬೆಮರಿಡುತ ನಡೆತರುತಿರ್ದಳಿಂದುಮುಖಿ || ೩೬ ||
ಪದವಿಭಾಗ-ಅರ್ಥ:ಕುರುಳ ತಿದ್ದುತ ಮೊಲೆಗೆ ಮೇಲುದ ಸರಿವುತ+ ಏಕಾವಳಿಯ ಮೆಲ್ಲನೆ ತಿರುಪಿ ಹಾಯ್ಕುತ ಬಿಡುಮುಡಿಯನು+ ಎಡಗೈಯೊಳೊಂದಿಸುತ ವರ ನಿಖಾರಿಯ ನಿರಿಯ ರಭಸದ ಚರಣದಂದುಗೆ ದನಿಯ ಗಮನದ ಭರದಿ ಕಿರುಬೆಮರಿಡುತ ನಡೆತರುತಿರ್ದಳು+ ಇಂದುಮುಖಿ.
  • ಎಳೆಪ್ರಾಯದ ಸುಂದರಿ ಉತ್ತರೆ ನೆಡೆದು ಬರುತ್ತಿರುವ ವೈಕರಿಯನ್ನು ಕವಿ ಹೇಳುತ್ತಿದ್ದಾನೆ. ಕುರುಳ ತಿದ್ದುತ= ಮುಂಗುರುಳನ್ನು ಕೈಯಿಂದ ತಿದ್ದಿಕೊಳ್ಳುತ್ತಾ, ಮೊಲೆಗೆ ಮೇಲುದ ಸರಿವುತ+= ನೆಡೆಯವಾಗ ಸರಿದ ಸೆರಗನ್ನು ಸರಿಪಡಿಸಿಕೊಳ್ಲುತ್ತಾ, ಏಕಾವಳಿಯ ಮೆಲ್ಲನೆ ತಿರುಪಿ ಹಾಯ್ಕುತ= ತನ್ನೇಕಾವಳಿ ಸರದ ತುದಿಯನ್ನು ಕೈಯ್ಯಲ್ಲಿ ತಿರುಪಿ ಹಾಕುತ್ತಾ, ಬಿಡುಮುಡಿಯನು (ಬಿಟ್ಟ ಮುಡಿ -ಜಡೆ?)+ ಎಡಗೈಯೊಳೊಂದಿಸುತ= ಎಡದಕೈಯಿಂದ ಹಿಂದಲೆಯ ಜಡೆಯನ್ನು (ಇಳಿಬಿಟ್ಟ ಕೂದಲನ್ನು? - ಹಿಂದೆ ಹಾಗೆಯೇ ಕೂದಲನ್ನು ಇಳಿಬಿಡುವ ಪದ್ದತಿ ಇರಲಿಲ್ಲ. 'ಬಿಟ್ಟ ಮಂಡೆಯ' ಎನ್ನುವುದು ದುಃಖದ ಸೂಚಕ) ಹೊಂದಿಸಿಕೊಳ್ಳ್ಲುತ್ತಾ, ವರ ನಿಖಾರಿಯ ನಿರಿಯ ರಭಸದ ಚರಣದಂದುಗೆ ದನಿಯ ಗಮನದ (ನೆಡಿಗೆ) ಭರದಿ= ನಿಖಾರಿ(ಜರಿ?) ಸೀರೆಯ ನಿರಿಗೆಯ ರಭಸದೊಂದಿಗೆ ಕಾಲಿನ ಅಂದುಗೆಯ (ಕಡಗದ) ಸದ್ದು ಮಾಡತ್ತಾ, ವೇಗದ ನಡಿಗೆಯಲ್ಲಿ// ಕಿರುಬೆಮರಿಡುತ ನಡೆತರುತಿರ್ದಳು+ ಇಂದುಮುಖಿ= ಇಂದುಮುಖಿ ಉತ್ತರೆ ಸಣ್ಣಗೆ ಬೆವರುತ್ತಾ ನೆಡೆದುಬರುತ್ತಿದ್ದಳು. (ಪ್ರಾಯದ ಹೆಣ್ಣಿನ ಅವಸರದ ನಡಿಗೆಯ ಪರಿಯನ್ನು ಕವಿಯು ಸೂಕ್ಷ್ಮವಾಗಿ ಗಮನಿಸಿದ ಬಗೆ ಹೀಗಿದೆ.)
ಅರ್ಥ:ಎಳೆಪ್ರಾಯದ ಸುಂದರಿ ಉತ್ತರೆ ನೆಡೆದು ಬರುತ್ತಿರುವ ವೈಕರಿಯನ್ನು ಕವಿ ಹೇಳುತ್ತಿದ್ದಾನೆ. ಮುಂಗುರುಳನ್ನು ಕೈಯಿಂದ ತಿದ್ದಿಕೊಳ್ಳುತ್ತಾ, ನೆಡೆಯವಾಗ ಸರಿದ ಸೆರಗನ್ನು ಸರಿಪಡಿಸಿಕೊಳ್ಲುತ್ತಾ, ತನ್ನ ಏಕಾವಳಿ ಸರದ ತುದಿಯನ್ನು ಕೈಯ್ಯಲ್ಲಿ ತಿರುಪಿ ಹಾಕುತ್ತಾ, ಎಡದಕೈಯಿಂದ ಹಿಂದಲೆಯ ಜಡೆಯನ್ನು ಹೊಂದಿಸಿಕೊಳ್ಳುತ್ತಾ, ಉತ್ತಮ ನಿಖಾರಿ(ಜರಿ?) ಸೀರೆಯ ನಿರಿಗೆಯನ್ನು ಚಿಮ್ಮುವ ರಭಸದೊಂದಿಗೆ, ಕಾಲಿನ ಅಂದುಗೆಯ ಸದ್ದು ಮಾಡತ್ತಾ, ವೇಗದ ನಡಿಗೆಯಲ್ಲಿ, ಇಂದುಮುಖಿ ಉತ್ತರೆಯು ಸಣ್ಣಗೆ ಬೆವರುತ್ತಾ ನೆಡೆದುಬರುತ್ತಿದ್ದಳು.
ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ |
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ || ೩೭ ||
ಪದವಿಭಾಗ-ಅರ್ಥ:ಬರವ ಕಂಡನು ಪಾರ್ಥನು+ ಏನು+ ಉತ್ತರೆ ಕುಮಾರಿ ಕಠೋರ ಗತಿಯಲಿ ಬರವು ಭಾರಿಯ ಕಾರಿಯವ ಸೂಚಿಸುವುದು+ ಎನೆ, ನಗುತ ಬರವು ಬೇರಿಲ್ಲ+ ಎನ್ನ ಮಾತನು ಹುರುಳುಗೆಡಿಸದೆ ಸಲಿಸುವೊಡೆ ನಿಮಗೆ ಅರುಹಿದಪೆನು+ ಎನೆ ಮೀರಬಲ್ಲೆನೆ ಮಗಳೆ ಹೇಳೆಂದ.
  • ಬರವ ಕಂಡನು ಪಾರ್ಥನು+= ಅರ್ಜುನನು ಉತ್ತರೆಯು ಬರುತ್ತಿರುವುದನ್ನು ನೋಡಿದನು. / ಏನು+ ಉತ್ತರೆ ಕುಮಾರಿ ಕಠೋರ ಗತಿಯಲಿ ಬರವು ಭಾರಿಯ ಕಾರಿಯವ ಸೂಚಿಸುವುದು+ ಎನೆ,= ಅರ್ಜುನನು,'ಏನು ಉತ್ತರೆ ಕುಮಾರಿ ಕಠೋರ- ಅವಸರದ- ಗತಿಯಲಿ-ನೆಡಿಗೆಯಲ್ಲಿ ಬರವು- ಬರುತ್ತಿರುವೆ! ಭಾರಿಯ ಕಾರಿಯವ ಸೂಚಿಸುವುದು+ = ಏನೋ ದೊಡ್ಡ ಕಾರ್ಯವಿದ್ದಂತೆ ತೊರುವುದು.; ಎನೆ= ಎನ್ನಲು,// ನಗುತ ಬರವು ಬೇರಿಲ್ಲ+ ಎನ್ನ ಮಾತನು ಹುರುಳುಗೆಡಿಸದೆ ಸಲಿಸುವೊಡೆ ನಿಮಗೆ ಅರುಹಿದಪೆನು+ ಎನೆ= ಅವಳು ನಗುತ್ತಾ ತನ್ನ ಬರವು ಬೇರೇನೂ ಇಲ್ಲ! ಆದರೆ ಎನ್ನ-ನನ್ನ ಮಾತನ್ನು ಹುರುಳುಗೆಡಿಸದೆ- ಪ್ರಯೋಜನವಿಲ್ಲ, ಹುರುಳಿಲ್ಲ, ಅರ್ಥವಿಲ್ಲ - ಎನ್ನದೆ ಸಲಿಸುವೊಡೆ- ಒಪ್ಪಿ ನೆಡೆಸಿಕೊಡುವುದಾದರೆ, ನಿಮಗೆ ಅರುಹಿದಪೆನು+= ನಿಮಗೆ ಹೇಳುತ್ತೇನೆ,' ಎನೆ=ಎನ್ನಲು; ಮೀರಬಲ್ಲೆನೆ ಮಗಳೆ ಹೇಳೆಂದ= 'ಮಗಳೇ ನೀನು ಕೇಳಿದರೆ ನಾನು ಇಲ್ಲ ಎನ್ನುತ್ತೇನೆಯೇ?' ಎಂದನು ಪಾರ್ಥ.(ಪಾರ್ಥನು ಉತ್ತರೆಗೆ ನೃತ್ಯವನ್ನು ಹೇಳಿಕೊಡುವ ಗುರುವಾಗಿದ್ದನು.)
ಅರ್ಥ: ಅರ್ಜುನನು ಉತ್ತರೆಯು ಬರುತ್ತಿರುವುದನ್ನು ನೋಡಿದನು. ಅರ್ಜುನನು,'ಏನು ಉತ್ತರೆ ಕುಮಾರಿ ಅವಸರ ಅವಸರವಾಗಿ ಬರುತ್ತಿರುವೆ! ಏನೋ ದೊಡ್ಡ ಕಾರ್ಯವಿದ್ದಂತೆ ತೊರುವುದು,' ಎನ್ನಲು, ಅವಳು ನಗುತ್ತಾ,'ತನ್ನ ಬರವು ಬೇರೇನೂ ಇಲ್ಲ! ಆದರೆ ನನ್ನ ಮಾತನ್ನು ಹುರುಳಿಲ್ಲ ಎನ್ನದೆ ಒಪ್ಪಿ ನೆಡೆಸಿಕೊಡುವುದಾದರೆ, ನಿಮಗೆ ನಿಮಗೆ ಹೇಳುತ್ತೇನೆ,' ಎನ್ನಲು; 'ಮಗಳೇ, ನೀನು ಕೇಳಿದರೆ ನಾನು ಇಲ್ಲ ಎನ್ನುತ್ತೇನೆಯೇ?' ಎಂದನು ಪಾರ್ಥ. (ಪಾರ್ಥನು ಉತ್ತರೆಗೆ ನೃತ್ಯವನ್ನು ಹೇಳಿಕೊಡುವ ಗುರುವಾಗಿದ್ದನು.)
ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ |
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ || ೩೮ ||
ಪದವಿಭಾಗ-ಅರ್ಥ:ಪುರಕೆ ಹಾಯ್ದರು-, ಹಸ್ತಿನಾಪುರದ+ ಅರಸುಗಳು ಹೊಲನೊಳಗೆ ಶತ ಸಾವಿರದ ತುರುಗಳ- ಗೋವುಗಳ, ಹಿಡಿದರು+, ಉಳಿದುದು ಗೋಪ ಪಡೆ, ಕಾದಿ- ಯುದ್ಧಮಾಡಿ, ಮರಳಿಚುವೊಡೆ+ ಎಮ್ಮಣ್ಣದೇವನ ಧುರಕೆ ಸಾರಥಿಯಿಲ್ಲ, ನೀವು+ ಆ+ ನರನ ಸಾರಥಿಯೆಂದು ಕೇಳಿದೆವು+ ಎಂದಳು+ ಇಂದುಮುಖಿ
ಅರ್ಥ:ಉತ್ತರೆ ಹೇಳಿದಳು, ಹಸ್ತಿನಾಪುರದ ಅರಸುಗಳು ನಮ್ಮ ಮತ್ಸ್ಯನಗರಕ್ಕೆ ದಾಳಿ ಇಟ್ಟರು. ಮೇವಿನಹೊಲದೊಳಗೆ ನುಗ್ಗಿ ನೂರು ಸಾವಿರ ಗೊವುಗಳನ್ನು ಹಿಡಿದರು. ಗೋಪಾಲಕರ ಪಡೆ ಸೋತು ಹಿಂದೆ ಉಳಿಯಿತು. ಯುದ್ಧಮಾಡಿ ಗೋವುಗಳನ್ನು ಮರಳಿತರವುದಾದರೆ ನಮ್ಮಣ್ಣದೇವನ ಯುದ್ಧಕ್ಕೆ ಸಾರಥಿಯಿಲ್ಲ. ನೀವು ಆ ಪಾರ್ಥನ ಸಾರಥಿಯೆಂದು ಕೇಳಿದೆವು ಎಂದಳು ಉತ್ತರೆ.
ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ |
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ || ೩೯ ||
ಪದವಿಭಾಗ-ಅರ್ಥ:ಇನ್ನು ನೀವೇ ಬಲ್ಲಿರಿ+ ಎನೆ; ನಡೆ ನಿನ್ನ ಮಾತನು ಮೀರಬಲ್ಲೆನೆ ಮುನ್ನ ಸಾರಥಿಯು+ ಅಹೆನು ನೋಡುವೆನು+ ಎನುತ ವಹಿಲದಲಿ ಬೆನ್ನಲಿ+ ಅಬಲೆಯನು+ ಐದಲು+ ಆ ಸಂಪನ್ನ ಬಲನ+ ಓಲಗಕೆ ಬರೆ ಹರುಷೋನ್ನತಿಯಲಿ+ ಉತ್ತರ ಕುಮಾರನು ಕರೆದು ಮನ್ನಿಸಿದ.
  • ಇನ್ನು ನೀವೇ ಬಲ್ಲಿರಿ+ ಎನೆ= ಹಿರಿಯನೂ ಗುರುವೂ ಆದ ಬರಹನ್ನಳೆಗೆ ಅವಳು ಅಣ್ಣನಿಗೆ (ಸೇವಕ)) ಸಾರಥಿಯಾಗು ಎಂದು ಹೇಳದೆ, ವಿನಯವಾಗಿ ಮುಂದೆ ಏನು ಮಾಡಬೇಕೆಂಬುದನ್ನು ನೀವೇ ನಿರ್ಧರಿಸಿ ಎಂದಳು.; ನಡೆ ನಿನ್ನ ಮಾತನು ಮೀರಬಲ್ಲೆನೆ ಮುನ್ನ ಸಾರಥಿಯು+ ಅಹೆನು ನೋಡುವೆನು+ ಎನುತ= ಆಗ ಅರ್ಜುನನು ಪ್ರೀತಿಯಿಂದ,'ನಡೆ ನಿನ್ನ ಮಾತನು ಮೀರಬಲ್ಲೆನೆ ಮುನ್ನ- ನಿನ್ನ ಅಣ್ನನ ಮುಂದೆ ಕುಳಿತು ಸಾರಥಿಯು+ ಅಹೆನು- ಆಗುವೆನು, ನೋಡುವೆನು- ನಿನ್ನ ಅಣ್ಣನನ್ನು ಕಾಣುವೆನು+ ಎನುತ- ಎನ್ನುತ್ತಾ, ವಹಿಲದಲಿ- ವೇಗವಾಗಿ, ಬೆನ್ನಲಿ+ ಅಬಲೆಯನು+ ಐದಲು+ = ಆ ಅಬಲೆ- ಉತ್ತರೆಯ ಬೆನ್ನಲ್ಲೇ ಹಿಂಬಾಲಿಸಿ ಐದಲು- ಬರಲು,ಆ ಸಂಪನ್ನ ಬಲನ+ ಓಲಗಕೆ ಬರೆ - ಉತ್ತರನ ಸಭೆಗೆ ಬರಲು, ಹರುಷೋನ್ನತಿಯಲಿ+ ಉತ್ತರ ಕುಮಾರನು ಕರೆದು ಮನ್ನಿಸಿದ= ಉತ್ತರ ಕುಮಾರನು ಅತಿ ಹರ್ಷದಿಂದ ಕರೆದು ಗೌರವಿಸಿದನು.
ಅರ್ಥ:ಹಿರಿಯನೂ ಗುರುವೂ ಆದ ಬರಹನ್ನಳೆಗೆ ಅವಳು ಅಣ್ಣನಿಗೆ (ಸೇವಕ)) ಸಾರಥಿಯಾಗು ಎಂದು ಹೇಳದೆ, ವಿನಯವಾಗಿ ಮುಂದೆ ಏನು ಮಾಡಬೇಕೆಂಬುದನ್ನು ನೀವೇ ನಿರ್ಧರಿಸಿ ಎಂದಳು. ಆಗ ಅರ್ಜುನನು ಪ್ರೀತಿಯಿಂದ,'ನಡೆ ನಿನ್ನ ಮಾತನು ಮೀರಬಲ್ಲೆನೆ? ನಿನ್ನ ಅಣ್ನನ ಮುಂದೆ ಕುಳಿತು ಸಾರಥಿ ಆಗುವೆನು. ನಿನ್ನ ಅಣ್ಣನನ್ನು ಕಾಣುವೆನು,ಎನ್ನುತ್ತಾ ವೇಗವಾಗಿ, ಆ ಉತ್ತರೆಯ ಬೆನ್ನಲ್ಲೇ ಹಿಂಬಾಲಿಸಿ ಉತ್ತರನ ಸಭೆಗೆ ಬರಲು, ಉತ್ತರ ಕುಮಾರನು ಅತಿ ಹರ್ಷದಿಂದ ಕರೆದು ಗೌರವಿಸಿದನು.

ಉತ್ತರನಿಗೆ ಅರ್ಜುನನ ಸಾರಥ್ಯ[ಸಂಪಾದಿಸಿ]

ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ |
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ || ೪೦ ||
ಪದವಿಭಾಗ-ಅರ್ಥ:ಎಲೆ ಬೃಹನ್ನಳೆ ತೆತ್ತುದು+ ಎನಗೆ+ ಅಗ್ಗಳೆಯರೊಳು ವಿಗ್ರಹವು, ಸಾರಥಿಯು+ ಅಳಿದನು+ ಎನ್ನವ ನೀನು ಸಾರಥಿಯಾಗಿ ಸಮರದಲಿ ಉಳುಹ ಬೇಹುದು ನೀ ಸಮರ್ಥನು ಫಲುಗುಣನ ಸಾರಥಿಯಲೈ ನೀನು+ ಒಲಿದು ಮೆಚ್ಚಲು ಕಾದಿ ತೋರುವೆನು+ ಅಹಿತ ಸೇನೆಯಲಿ.
  • ಎಲೆ ಬೃಹನ್ನಳೆ ತೆತ್ತುದು+ - ಕೊಟ್ಟಿದೆ- ಉಂಟಾಗಿದೆ,+ ಎನಗೆ- ತನಗೆ,+ ಅಗ್ಗಳೆಯರೊಳು- ಬಲಿಷ್ಠರಲ್ಲಿ, ವಿಗ್ರಹವು-ವಿರೋಧ, ಯುದ್ಧವು= ಎಲೆ ಬೃಹನ್ನಳೆ ನನಗೆ ಬಲಿಷ್ಠರಲ್ಲಿ ಯುದ್ಧವು ಕೈಗೂಡಿದೆ,/ ಸಾರಥಿಯು+ ಅಳಿದನು+ ಎನ್ನವ ನೀನು ಸಾರಥಿಯಾಗಿ ಸಮರದಲಿ ಉಳುಹ ಬೇಹುದು= ಎನ್ನವ- ನನ್ನ ಸಾರಥಿಯು (ಯುದ್ಧದಲ್ಲಿ) ಮಡಿದನು. ನೀನು ಸಾರಥಿಯಾಗಿ ಯುದ್ಧದಲ್ಲಿ ನನ್ನನ್ನು ಉಳಿಸಬೇಕು. // ನೀ ಸಮರ್ಥನು ಫಲುಗುಣನ ಸಾರಥಿಯಲೈ ನೀನು+ ಒಲಿದು ಮೆಚ್ಚಲು ಕಾದಿ ತೋರುವೆನು+ ಅಹಿತ ಸೇನೆಯಲಿ= ನೀನು ಸಮರ್ಥನು. ಫಲ್ಗುಣನ ಸಾರಥಿಯಾಗಿದ್ದೆ! ನೀನು ಒಲಿದು ಮೆಚ್ಚುವಂತೆ ಕಾದಿ- ಯುದ್ಧಮಾಡಿ ತೋರಿಸುವೆನು ಅಹಿತ- ಶತ್ರು ಸೇನೆಯಲಿ- ಸೇನೆಯೊಡನೆ. ಎಂದನು ಉತ್ತರ.
ಅರ್ಥ:'ಎಲೆ ಬೃಹನ್ನಳೆ ನನಗೆ ಬಲಿಷ್ಠರಲ್ಲಿ ಯುದ್ಧವು ಕೈಗೂಡಿದೆ, ನನ್ನ ಸಾರಥಿಯು ಯುದ್ಧದಲ್ಲಿ ಮಡಿದನು. ನೀನು ಸಾರಥಿಯಾಗಿ ಯುದ್ಧದಲ್ಲಿ ನನ್ನನ್ನು ಉಳಿಸಬೇಕು. ನೀನು ಸಮರ್ಥನು. ಫಲ್ಗುಣನ ಸಾರಥಿಯಾಗಿದ್ದೆ! ನೀನು ಒಲಿದು ಮೆಚ್ಚುವಂತೆ ಶತ್ರು ಸೇನೆಯೊಡನೆ ಯುದ್ಧಮಾಡಿ ತೋರಿಸುವೆನು,' ಎಂದನು ಉತ್ತರ.
ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ |
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈ ಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ || ೪೧ ||
ಪದವಿಭಾಗ-ಅರ್ಥ:ಭರತ ವಿದ್ಯಾ ವಿಷಯದಲಿ ಪರಿಚರಿಯತನ ನಮಗೆ;+ ಅಲ್ಲದೆ+ ಈ ಸಂಗರದ ಸಾರಥಿತನವ ಮರೆದೆವು ಹಲವು ಕಾಲದಲಿ; ಅರಿಭಟರು ಭೀಷ್ಮಾದಿಗಳು ನಿಲಲು+ ಅರಿದು, ಸಾರಥಿತನದ ಕೈ ಮನಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲ+ ಎಂದ.
  • ಭರತ ವಿದ್ಯಾ- ನೃತ್ಯ, ವಿಷಯದಲಿ ಪರಿಚರಿಯತನ- ಅನುಭವ, ನಮಗೆ;+ ಅಲ್ಲದೆ+ ಈ ಸಂಗರದ- ಯುದ್ಧದ, ಸಾರಥಿತನವ ಮರೆದೆವು ಹಲವು ಕಾಲದಲಿ- ಅನೇಕ ವರ್ಷಗಳ ಕಾಲದಲ್ಲಿ; ಅರಿಭಟರು- ಶತ್ರುಗಳು, ಭೀಷ್ಮಾದಿಗಳು ನಿಲಲು+ ಅರಿದು- ಎದುರಿಸಿ ನಿಲ್ಲಲು ತಿಳಿಯದು, ಸಾರಥಿತನದ ಕೈ- ವಿದ್ಯೆ, ಮನಬರಡರಿಗೆ- ಮನಸ್ಸು ಗಟ್ಟಿ ಇಲ್ಲದವರಿಗೆ- ಹೇಡಿಗಳಿಗೆ, ದೊರಕೊಂಬುದೇ- ಸಾದ್ಯವೇ? ರಣ- ಯುದ್ಧವು, ಸೂರೆಯಲ್ಲ- ಲೂಟಿಯಲ್ಲವೇ+ ಎಂದ
ಅರ್ಥ:ನೃತ್ಯದ ವಿಷಯದಲ್ಲಿ ನಮಗೆ ಅನುಭವ ಇದೆ; ಅದಲ್ಲದೆ ಈ ಯುದ್ಧದ ಸಾರಥಿತನವನ್ನು ಅನೇಕ ವರ್ಷಗಳ ಕಾಲದಲ್ಲಿ ಮರೆತೆವು. ಶತ್ರುಗಳು ಭೀಷ್ಮಾದಿಗಳು ಎದುರಿಸಿ ನಿಲ್ಲಲು ತಿಳಿಯದು. ಸಾರಥಿತನದ ವಿದ್ಯೆ ಮನಸ್ಸು ಗಟ್ಟಿ ಇಲ್ಲದವರಿಗೆ ಸಾದ್ಯವೇ? ಯುದ್ಧವು ದೊಡ್ಡ ಲೂಟಿಯಲ್ಲವೇ,' ಎಂದ ಅರ್ಜುನ.
ಆನಿರಲು ಭೀಷ್ಮಾದಿಗಳು ನಿನ
ಗೇನು ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ |
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ || ೪೨ ||
ಪದವಿಭಾಗ-ಅರ್ಥ:ಆನಿರಲು ಭೀಷ್ಮಾದಿಗಳು ನಿನಗೇನು ಮಾಡಲು ಬಲ್ಲರು+ ಅಳುಕದೆ ನೀನು ನಿಲು ಸಾಕು+ ಒಂದು ನಿಮಿಷಕೆ ಗೆಲುವೆನು+ ಅವರುಗಳ ತಾನು+ ಅದು+ ಆರೆಂದು+ ಅರಿಯಲಾ ಗುರುಸೂನು ಕರ್ಣ ದ್ರೋಣರೆಂಬವರು+ ಆನು+ ಅರಿಯದವರಲ್ಲ ಸಾರಥಿಯಾಗು ಸಾಕೆಂದ.
  • ಆನಿರಲು- ನಾನಿರುವಾಗ, ಭೀಷ್ಮಾದಿಗಳು ನಿನಗೇನು ಮಾಡಲು ಬಲ್ಲರು+; ಅಳುಕದೆ ನೀನು ನಿಲು ಸಾಕು+ ಒಂದು ನಿಮಿಷಕೆ ಗೆಲುವೆನು+ ಅವರುಗಳ= ಅಳುಕದೆ- ಹೆದರದೆ ನೀನು ನಿಲ್ಲು, ಸಾಕು+; ಒಂದು ನಿಮಿಷದಲ್ಲಿ ಗೆಲ್ಲುವೆನು+ ಅವರುಗಳನ್ನು//ತಾನು+ ಅದು+ ಆರೆಂದು+ ಅರಿಯಲಾ= ನಾನು ಯಾರು- ನನ್ನ ಸಾಮರ್ಥ್ಯ ಏನು ಎಂಬುದನ್ನು ನೀನು ತಿಳಿದಿಲ್ಲ. ಗುರುಸೂನು ಕರ್ಣ ದ್ರೋಣರೆಂಬವರು+ ಆನು+ ಅರಿಯದವರಲ್ಲ= ಅಶ್ವತ್ಥಾಮ, ಕರ್ಣ, ದ್ರೋಣರೆಂಬವರು, ತಾನು ಅರಿಯದೇ ಇದ್ದವರಲ್ಲ. (ನೀನು) ಸಾರಥಿಯಾಗು ಸಾಕೆಂದ, ಉತ್ತರ.
ಅರ್ಥ:* 'ನಾನಿರುವಾಗ, ಭೀಷ್ಮಾದಿಗಳು ನಿನಗೇನು ಮಾಡಬಲ್ಲರು? ಹೆದರದೆ ನೀನು ನಿಲ್ಲು, ಸಾಕು; ಒಂದು ನಿಮಿಷದಲ್ಲಿ ಅವರುಗಳನ್ನು ಗೆಲ್ಲುವೆನು. ನಾನು ಯಾರು- ನನ್ನ ಸಾಮರ್ಥ್ಯ ಏನು ಎಂಬುದನ್ನು ನೀನು ತಿಳಿದಿಲ್ಲ. ಅಶ್ವತ್ಥಾಮ, ಕರ್ಣ, ದ್ರೋಣರೆಂಬವರು, ತಾನು ಅರಿಯದೇ ಇದ್ದವರಲ್ಲ. ನೀನು ಸಾರಥಿಯಾಗು ಸಾಕು,' ಎಂದ ಉತ್ತರ.
ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು |
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ || ೪೩ ||
ಪದವಿಭಾಗ-ಅರ್ಥ:ವೀರನು+ ಅಹೆ, ಬಳಿಕ+ ಏನು ರಾಜ ಕುಮಾರನು+ ಇರಿವೊಡೆ ಹರೆಯವಲ್ಲಾ! ಸಾರಥಿತ್ವವ ಮಾಡಿ ನೋಡುವೆ ರಥವ ತರಿಸು+ ಎನಲು ವಾರುವದ ಮಂದಿರದಲಿ ಆಯಿದು ಚಾರು ತುರಗಾವಳಿಯ ಬಿಗಿದನು ತೇರ ಸಂವರಿಸಿದನು ರಥವ+ ಏರಿದನು ಕಲಿಪಾರ್ಥ.
  • ವೀರನು+ ಅಹೆ,= ನೀನು ವೀರನಿದ್ದೀಯೆ! ಬಳಿಕ+ ಏನು ರಾಜ ಕುಮಾರನು+ ಇರಿವೊಡೆ- ಯುದ್ಧಮಾಡಲು, ಹರೆಯವಲ್ಲಾ!= ಮುಂದೇನು ನೋಡಬೇಕು, ರಾಜಕುಮಾರನಿಗೆ ಯುದ್ಧಮಾಡಲು ಪ್ರಾಯದ ಹುಮ್ಮಸ್ಸು. ಸಾರಥಿತ್ವವ ಮಾಡಿ ನೋಡುವೆ ರಥವ ತರಿಸು+ ಎನಲು= ಆಯಿತು ನಾನು ಸಾರಥ್ಯವನ್ನು ಮಾಡಿ ನೋಡುತ್ತೇನೆ ರಥವನ್ನು ತರಿಸು ಎಂದನು ಪಾರ್ಥ ಹಾಗೆ ತರಿಸಿದಾಗ,// ವಾರುವದ ಮಂದಿರದಲಿ ಆಯಿದು ಚಾರು ತುರಗ+ ಆವಳಿಯ(ಗುಂಪು -೨ ಜೋಡಿ) ಬಿಗಿದನು= ಕುದುರೆ ಲಾಯದಿಂದ ನಾಲ್ಕು ಕುದುರೆಗಳನ್ನು ಆರಿಸಿತಂದು ರಥಕ್ಕೆ ಬಿಗಿದು ಸಂವರಿಸಿದನು-ಸಿದ್ಧಗೊಳಿಸಿದನು. ರಥವ+ ಏರಿದನು ಕಲಿಪಾರ್ಥ= ನಂತರ ರಥವನ್ನು ಏರಿ ಸಾರಥಿಯ ಸ್ಥಳದಲ್ಲಿ ಕುಳಿತನು.
ಅರ್ಥ: ಅರ್ಜುನನು,'ನೀನು ವೀರನಿದ್ದೀಯೆ!' ಎಂದು ಹೊಗಳಿ, ಮುಂದೇನು ಆಗುವುದು ಎಂದು ನೋಡಬೇಕು, ರಾಜಕುಮಾರನಿಗೆ ಯುದ್ಧಮಾಡಲು ಪ್ರಾಯದ ಹುಮ್ಮಸ್ಸು - ಎಂದುಕೊಂಡನು ಅರ್ಜುನ. 'ಆಯಿತು ನಾನು ಸಾರಥ್ಯವನ್ನು ಮಾಡಿ ನೋಡುತ್ತೇನೆ ರಥವನ್ನು ತರಿಸು,' ಎಂದನು ಪಾರ್ಥ; ಹಾಗೆ ತರಿಸಿದಾಗ, ಕುದುರೆ ಲಾಯದಿಂದ ನಾಲ್ಕು ಕುದುರೆಗಳನ್ನು ಆರಿಸಿತಂದು ರಥಕ್ಕೆ ಬಿಗಿದು ಸಿದ್ಧಗೊಳಿಸಿದನು. ನಂತರ ರಥವನ್ನು ಏರಿ ಸಾರಥಿಯ ಸ್ಥಳದಲ್ಲಿ ಕುಳಿತನು.
ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ |
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ ||೪೪ ||
ಪದವಿಭಾಗ-ಅರ್ಥ:ಮಂಗಳಾರತಿ+ ಯೆ+ ಎತ್ತಿದರು ನಿಖಿಳಾಂಗನೆಯರು+ ಉತ್ತರಗೆ ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ ಹೊಂಗೆಲಸ-ಮಯ ಕವಚವನು ಪಾರ್ಥಂಗೆ ಕೊಟ್ಟನು ಜೋಡು ಸೀಸಕದಂಗಿಗಳನು+; ಅಳವಡಿಸಿ ರಾಜಕುಮಾರನು+ ಅನುವಾದ.
  • ಮಂಗಳಾರತಿ+ ಯೆ+ ಎತ್ತಿದರು ನಿಖಿಳಾಂಗನೆಯರು+ ಉತ್ತರಗೆ= ಉತ್ತರನಿಗೆ ಎಲ್ಲಾ ಹೆಂಗಳೆಯರು ಸೇರಿ ಮಂಗಳಾರತಿ ಎತ್ತಿ ಶುಭಕೋರಿದರು. ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ (ದನು)ಹೊಂಗೆಲಸ-ಮಯ ಕವಚವನು=ಉತ್ತರನು ತನ್ನ ಸರ್ವಾಂಗ ಶೃಂಗಾರದಿಂದ ಸಿಂಗರಿಸಿಕೊಂಡು ಶೋಭಿಸುತ್ತಾ ಚಿನ್ನದ ಕುಸುರಿ ಹಾಕಿದ ಕವಚವನ್ನು ಧರಿಸಿ ರಥವನ್ನು ಹತ್ತಿದನು. ಪಾರ್ಥಂಗೆ ಕೊಟ್ಟನು ಜೋಡು ಸೀಸಕದಂಗಿಗಳನು+ = ಪಾರ್ಥನಿಗೆ ಜೋಡು ಸೀಸಕದಂಗಿಗಳನ್ನು ಧರಿಸಲು ಕೊಟ್ಟನು. (<- ಹೊಂಗೆಲಸ-ಮಯ ಕವಚವನು) ಅಳವಡಿಸಿ ರಾಜಕುಮಾರನು+ ಅನುವಾದ= ತಾನು ಚಿನ್ನದ ಕುಸುರಿ ಹಾಕಿದ ಕವಚವನ್ನು ಧರಿಸಿ ಯುದ್ಧಕ್ಕೆ ಹೊರಡಲು ಸಿದ್ಧನಾದನು.
ಅರ್ಥ:ಉತ್ತರನಿಗೆ ಎಲ್ಲಾ ಸುಮಂಗಲೆಯರು ಸೇರಿ ಮಂಗಳಾರತಿ ಎತ್ತಿ ಶುಭಕೋರಿದರು. ಉತ್ತರನು ತನ್ನ ಸರ್ವಾಂಗ ಶೃಂಗಾರದಿಂದ ಸಿಂಗರಿಸಿಕೊಂಡು ಶೋಭಿಸುತ್ತಾ ರಥವನ್ನು ಹತ್ತಿದನು. ಪಾರ್ಥನಿಗೆ ಜೋಡು ಸೀಸಕದಂಗಿಗಳನ್ನು (ಕವಚಗಳನ್ನು) ಧರಿಸಲು ಕೊಟ್ಟನು. ತಾನು ಚಿನ್ನದ ಕುಸುರಿ ಹಾಕಿದ ಕವಚವನ್ನು ಧರಿಸಿ ಯುದ್ಧಕ್ಕೆ ಹೊರಡಲು ಸಿದ್ಧನಾದನು.
ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ |
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು || ೪೫ ||
ಪದವಿಭಾಗ-ಅರ್ಥ:ನರನು ತಲೆ ಕೆಳಗಾಗಿ ಕವಚವ ಸರಿವುತಿರೆ ಘೊಳ್ಳೆಂದು ಕೈ ಹೊಯ್ದು+ ಅರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ ತಿರುಗಿ ಮೇಲ್ಮುಖವಾಗಿ ತೊಡಲು+ ಉತ್ತರೆ ಬಳಿಕ ನಸುನಗಲು ಸಾರಥಿಯು+ ಅರಿಯ ತಪ್ಪೇನು+ ಎನುತಲಿ+ ಉತ್ತರ ತಾನೆ ತೊಡಿಸಿದನು.
  • ನರನು ತಲೆ ಕೆಳಗಾಗಿ ಕವಚವ ಸರಿವುತಿರೆ- ತೊಡಲು ಪ್ರಯತ್ನಿಸುತ್ತಿರಲು, ಘೊಳ್ಳೆಂದು ಕೈ ಹೊಯ್ದು+ ಅರಸಿಯರು ನಗೆ- ನಗಲು, ನಾಚಿದಂತಿರೆ ಪಾರ್ಥ ತಲೆವಾಗಿ ತಿರುಗಿ ಮೇಲ್ಮುಖವಾಗಿ ತೊಡಲು+ = ನಾಚಿಕೊಂಡವನಂತೆ ಪಾರ್ಥನು ತಲೆವಾಗಿ- ತಲೆ ಬಗ್ಗಸಿಕೊಂಡು, ತಿರುಗಿ ಮೇಲ್ಮುಖವಾಗಿ ತೊಡಲು- ಪುನಃ ಕವಚವನ್ನು ಕಳಭಾಗವನ್ನು ಮೇಲೆ ಮಾಡಿ ತೊಡಲು,+- ಉತ್ತರೆ ಬಳಿಕ ನಸುನಗಲು, ಸಾರಥಿಯು+ ಅರಿಯ ತಪ್ಪೇನು+ ಎನುತಲಿ- ಎಂದು ಹೇಳುತ್ತಾ, + ಉತ್ತರ ತಾನೆ ತೊಡಿಸಿದನು.
ಅರ್ಥ:ಅರ್ಜುನನು ತಲೆ ಕೆಳಗಾಗಿ ಕವಚವನ್ನು ತೊಡಲು ಪ್ರಯತ್ನಿಸುತ್ತಿರಲು, ಆಗ ಘೊಳ್ಳೆಂದು ಕೈ ಹೊಯ್ದು ಅರಸಿಯರು ನಗಲು, ಆಗ ನಾಚಿಕೊಂಡವನಂತೆ ಪಾರ್ಥನು ತಲೆ ಬಗ್ಗಸಿಕೊಂಡು, ಪುನಃ ಕವಚವನ್ನು ಕಳಭಾಗವನ್ನು ಮೇಲೆ ಮಾಡಿ ತೊಡಲು ಪ್ರಯತ್ನಿಸಿದಾಗ, ಉತ್ತರೆಯೂ ಸಹ ನಸುನಗಲು, ಉತ್ತರನು ಸಾರಥಿಯು ತಿಳಿಯನು, ಅರಲ್ಲಿ ತಪ್ಪೇನು ಎಂದು ಹೇಳುತ್ತಾ, ಉತ್ತರನು ತಾನೆ ಕವಚವನ್ನು ಅರ್ಜುನನಿಗೆ ತೊಡಿಸಿದನು.
  • ಟಿಪ್ಪಣಿ: (ರಥಿಕರು) ಯುದ್ಧಕ್ಕೆ ಹೊರಡುವಾಗ ಸಾರಥಿಯೇ ಅತಿರಥ ಮಹಾರಥರಿಗೆ ಕವಚವನ್ನು ತೊಡಿಸುವ ನಿಯಮವಿತ್ತು. ಅದಕ್ಕಾಗಿ ಮುಂದೆ ಉತ್ತರನೇ ಸಾರಥಿಯಾಗವವನೆಂದೂ ತಾನೇ ಯುದ್ಧಮಾಡಬೇಕಾಗುವುದೆಂದೂ ಅರಿತ ಅರ್ಜುನನು ತಾನು ತಿಳಿಯದವನಂತೆ ನಟಿಸಿ ಅವನಿಂದಲೇ ಕವಚವನ್ನು ತೊಡಿಸಿಕೊಂಡನು.(ವ್ಯಾಸಭಾರತ)
ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು |
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ || ೪೬ ||
ಪದವಿಭಾಗ-ಅರ್ಥ:ಕವಚವನು ತೊಡಲ+ ಅರಿಯದವನು+ ಆಹವಕೆ ಸಾರಥಿತನವ ಮಾಡುವ ಹವಣು ತಾನೆಂತು+ ಎನುತಲಿದ್ದರು ನಿಖಿಳ ನಾರಿಯರು ಬವರವನು ನಮ್ಮಣ್ಣ ಗೆಲಿದಪನು+ ಅವರ ಮಣಿ ಪರಿಧಾನವ+ ಆಭರಣವನು ಸಾರಥಿ ಕೊಂಡು ಬಾ ಯೆ+ ಎಂದಳು ಸರೋಜಮುಖಿ.
  • ಕವಚವನು ತೊಡಲು+ ಅರಿಯದವನು+ ಆಹವಕೆ-ಯುದ್ಧಕ್ಕೆ ಸಾರಥಿತನವ ಮಾಡುವ ಹವಣು- ಕಾರ್ಯ, ಉತ್ಸಾಹ, ತಾನೆಂತು(ಹೇಗಪ್ಪಾ)+ ಎನುತಲಿದ್ದರು ನಿಖಿಳ- ಎಲ್ಲಾ ನಾರಿಯರು, ಬವರವನು- ಯುದ್ಧವನ್ನು, ನಮ್ಮಣ್ಣ ಗೆಲಿದಪನು- ಗೆಲ್ಲುವನು,+ ಅವರ - ಸೋತು ಬಿದ್ದವರ, ಮಣಿ ಪರಿಧಾನವ- ಮೊದಲಾದವುಗಳನ್ನೂ (ಬಟ್ಟೆ) ಆಭರಣವನ್ನೂ ಸಾರಥಿಯೇ ತೆಗೆದುಕೊಂಡುಕೊಂಡು ಬಾ,' ಎಂದಳು ಸರೊಜಮುಖಿ- ಕಮಲಮುಖಿ ಉತ್ತರೆ.
ಅರ್ಥ: ಎಲ್ಲಾ ನಾರಿಯರು,'ಕವಚವನು ತೊಡಲು ಅರಿಯದವನು ಯುದ್ಧಕ್ಕೆ ಸಾರಥಿತನವ ಮಾಡುವ ಕಾರ್ಯ ಹೇಗಪ್ಪಾ' ಎಂದು ಎನ್ನುತ್ತಿದ್ದರು, ಆಗ ಮುಗ್ಧೆ ಉತ್ತರೆ 'ಯುದ್ಧವನ್ನು ನಮ್ಮಣ್ಣ ಗೆಲ್ಲುವನು,' ಎಂದು ಹೇಳಿ, ಸಾರಥಿ ಅರ್ಜುನನಿಗೆ, 'ಸೋತು ಬಿದ್ದವರ, ಮಣಿ,ಮೊದಲಾದವುಗಳನ್ನೂ (ಬಟ್ಟೆ) ಆಭರಣವನ್ನೂ ಸಾರಥಿಯೇ ತೆಗೆದುಕೊಂಡುಕೊಂಡು ಬಾ,' ಎಂದಳು ಕಮಲಮುಖಿ ಉತ್ತರೆ.
ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು |
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತ ಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ || ೪೭ ||
ಪದವಿಭಾಗ-ಅರ್ಥ:ನಸುನಗುತ ಕೈಕೊಂಡನು+ ಅರ್ಜುನನು+ ಎಸಗಿದನು ರಥವನು ಸಮೀರನ ಮಿಸುಕಲು+ ಈಯದೆ, ಮುಂದೆ ಮಿಕ್ಕವು ವಿಗಡ ವಾಜಿಗಳು ಹೊಸ ಪರಿಯ ಸಾರಥಿಯಲಾ ನಮಗೆ+ ಅಸದಳವು ಸಂಗಾತ ಬರಲೆಂದು+ ಉಸುರದೆ+ ಉಳಿದುದು ಹಿಂದೆ ಪುರದಲಿ ಚಾತುರಂಗ ಬಲ.
  • ನಸುನಗುತ ಕೈಕೊಂಡನು+ ಅರ್ಜುನನು+= ಅರ್ಜುನನು ನಸುನಗುತ ಸಾರಥ್ಯವನ್ನು ಕೈಕೊಂಡನು. ಎಸಗಿದನು- ಮಾಡಿನು- ಓಡಿಸಿದನು, ರಥವನು ಸಮೀರನ- ವಾಯುವನ್ನು - ಗಾಳಿಯನ್ನು ಮಿಸುಕಲು+ ಈಯದೆ- ಅಲುಗಲು ಮುಂದೆಸಾಗಲು ಕೊಡದೆ ವಅಯುವೇಗವನ್ನೂ ಮೀರಿ, ಮುಂದೆ ಮಿಕ್ಕವು- ದಾಟಿ ಹೋದವು ವಿಗಡ- ಶಕ್ತಿಶಾಲಿ ವಾಜಿಗಳು-ಕುದುರೆಗಳು, (ಇವನು) ಹೊಸ ಪರಿಯ ಸಾರಥಿಯಲಾ ನಮಗೆ+ ಅಸದಳವು ಸಂಗಾತ ಬರಲೆಂದು= ನಮಗೆ ಅನುಸರಿಸಿ -ಹಿಂಬಾಲಿಸಿ ಹೋಗಲು ಅಸದಳ- ಅಸಾದ್ಯವು ಎಂದು,+ ಉಸುರದೆ- ಬಾಯಿ ಮುಚ್ಚಿಕೊಂಡು+ ಉಳಿದುದು ಹಿಂದೆ ಪುರದಲಿ (ಉತ್ತರನ)ಚಾತುರಂಗ ಬಲ- ಹಿಂದೆ ಪುರದಲ್ಲಿಯೇ ಉತ್ತರನ ಚಾತುರಂಗ ಸೈನ್ಯ ಉಳಿದುಬಿಟ್ಟಿತು.
ಅರ್ಥ:ಅರ್ಜುನನು ನಸುನಗುತ್ತಾ ಸಾರಥ್ಯವನ್ನು ಕೈಕೊಂಡನು. ವಾಯುವನ್ನು ಅಲುಗಲು- ಮುಂದೆ ಸಾಗಲು ಕೊಡದೆ ವಾಯುವೇಗವನ್ನೂ ಮೀರಿ ರಥವನ್ನು ಓಡಿಸಿದನು. ಶಕ್ತಿಶಾಲಿ ಕುದುರೆಗಳು ಎಲ್ಲರನ್ನೂ ದಾಟಿ ಹೋದವು. ಇವನು ಹೊಸ ಪರಿಯ ಸಾರಥಿಯಲಾ! ನಮಗೆ ಇವನನ್ನು ಹಿಂಬಾಲಿಸಿ ಹೋಗಲು ಅಸಾದ್ಯವು ಎಂದು, ಬಾಯಿ ಮುಚ್ಚಿಕೊಂಡು ಹಿಂದೆ ಪುರದಲ್ಲಿಯೇ ಉತ್ತರನ ಚಾತುರಂಗ ಸೈನ್ಯ ಉಳಿದುಬಿಟ್ಟಿತು.
ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು |
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ || ೪೮ || [೩][೪]
ಪದವಿಭಾಗ-ಅರ್ಥ:ಗತಿಗೆ ಕುಣಿದವು ನಾಸಿಕದ ಹುಂಕೃತಿಯ ಪವನನ ಹಳಿವ ಲುಳಿಯಲಿ ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು ವಿತತ ರಥ ಪದದಳಿತ ವಸುಧ+ ಉತ್ಪತಿತ ಧೂಳೀಪಟಲ ಪರಿ ಚುಂಬಿತ ದಿಶಾಮುಖನು+ ಐದಿದನು ಕುರುರಾಯ ಮೋಹರವ.
  • (ಕುದುರೆಗಳ) ಗತಿಗೆ- ವೇಗಕ್ಕೆ, ಕುಣಿದವು ನಾಸಿಕದ- ಕುದುರೆಗಳ ಮೂಗಿನ (ಹೊರಳೆಗಳ) ಹುಂಕೃತಿಯ ಪವನನ (ಗಾಳಿಯ)-ಮೂಗಿನಿಂದ ಉಸಿರುಬಿಡುವ ಹುಂ-ಕಾರದ ವಾಯವನ್ನು, ಹಳಿವ ಲುಳಿಯಲಿ (ದೇಹದ ಲಾಘವದ) ಗತಿಯ ಸಂಚಿತ- ಸೇರಿದ, ಪಂಚಧಾರಾ (ಪಂಚಧಾರೆ - ಕುದುರೆಯ ಐದು ಬಗೆಯ ನಡಗೆಗಳು. ಮಧುರ, ಸಕ್ಕರೆ) ಪ್ರೌಢ ವಾಜಿಗಳು- ಶ್ರೇಷ್ಠ ಕುದುರೆಗಳು, ವಿತತ (ವಿಸ್ತಾರ. ಸಮೂಹ.) ರಥ ಪದದಳಿತ ರಥದ ಓಟದಹೊಡೆತದಿಂದ, ವಸುಧೋತ್ಪತಿತ (ಭೂಮಿಯಿಂದ ಎದ್ದ) ಧೂಳೀಪಟಲ- ಧೂಳಿನ ಮೋಡದ, ಪರಿ ಚುಂಬಿತ ಪರಿಯಿಂದ ಮುಚ್ಚಿದ, ದಿಶಾಮುಖನು-(ಆ ದಿಕ್ಕಿಗೆಮುಖವಾಗಿ ಹೋಗುತ್ತಿರುವ) ಅರ್ಜುನನು+ ಐದಿದನು ಕುರುರಾಯ(ನ) ಮೋಹರವ- ಕೌರವನ ಸೈನ್ಯದ ಸಮೀಪಕ್ಕೆ ಹೋದನು.
ಅರ್ಥ: ಅರ್ಜುನನ ರಥದ ಕುದುರೆಗಳ ವೇಗಕ್ಕೆ, ಕುದುರೆಗಳ ಮೂಗಿನ ಹೊರಳೆಗಳು ಕುಣಿದವು, ಮೂಗಿನಿಂದ ಉಸಿರುಬಿಡುವ ಹುಂ-ಕಾರದ ವಾಯವನ್ನು, ದೇಹದ ಲಾಘವದ ವೇಗದ ಗತಿಯಜೊತೆ ಸೇರಿದ ಪಂಚಧಾರೆಯಂಬ ಕುದುರೆಯ ಐದು ಬಗೆಯ ನಡಗೆಗಳನ್ನು ಹೊಂದಿ ಶ್ರೇಷ್ಠ ಕುದುರೆಗಳು, ಸತತವಾದ ರಥದ ಗಾಲಿಯ ಓಟದ ಹೊಡೆತದಿಂದ, ಭೂಮಿಯಿಂದ ಎದ್ದ ಧೂಳಿನ ಮೋಡದ ಪರಿಯಿಂದ ಮುಚ್ಚಿದ ಅರ್ಜುನನು ಕೌರವನ ಸೈನ್ಯದ ಸಮೀಪಕ್ಕೆ ಹೋದನು.
♦♦♦
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. [೧]
  4. [೨]