ಹತ್ತುಸಾವಿರ ರಥ ಸಹಿತ ಭಟರು+ ಒತ್ತಿ= ಮುಂದೆನುಗ್ಗಿ, ಕವಿದರು= ಮುತ್ತಿದರು, ಲಗ್ಗೆವರೆಯಲಿ (ಧಾಳಿ ಮಾಡುವ ವರಸೆಯಲ್ಲಿ) ಬಿತ್ತರಿಸಿ- ಬಹಳ ವಿಸ್ತಾರವಾಗಿ, ಬೈಬೈದು ಸಾರುವ ಗೌರುಗಹಳೆಗಳ (ಗಟ್ಟಿಯಾಗಿ ಧ್ವನಿ ಮಾಡುವ ಒಂದು ಬಗೆಯ ಕಹಳೆ.) ಸತ್ತಿಗೆಯ (ಕೊಡೆ- ರಾಜರ ಶ್ವೇತ ಛತ್ರಿ) ಸಾಲುಗಳೊಳು+ ಅಂಬರ- ಆಕಾಶ, ಕೆತ್ತುದು (ತುಂಬಿತು)+ ಎನೆ ಕುಲಶೈಲ ನಿಚಯದ (ಸಮೂಹದ) ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು (ನಿಸ್ಸಾಳ= ಒಂದು ಬಗೆಯ ಚರ್ಮವಾದ್ಯ - ಭೇರಿ)
ಅರ್ಥ: ಅರ್ಜುನನ್ನು ರಥ ಸಹಿತ ಹತ್ತುಸಾವಿರ ಭಟರು ಮುಂದೆನುಗ್ಗಿ ಮುತ್ತಿದರು. ಧಾಳಿ ಮಾಡುವ ವರಸೆಯಲ್ಲಿ ಬಹಳ ವಿಸ್ತಾರವಾಗಿ, ಬೈಬೈದು ಸಾರುವ ಗಟ್ಟಿಯಾಗಿ ಧ್ವನಿ ಮಾಡುವ ಕಹಳೆಯನ್ನು ಊದಿದರು; ಸತ್ತಿಗೆಯೆಂಬ ರಾಜರ ಶ್ವೇತ ಛತ್ರಿಯ ಸಾಲುಗಳಲ್ಲಿ ಆಕಾಶ ತುಂಬಿತು ಎನ್ನುವಂತಿರಲು, ಕುಲಶೈಲಗಳಾದ ದೊಡ್ಡಬೆಟ್ಟಗಳ ಸಮೂಹದ ನೆತ್ತಿ ಬಿರಿಯುವಂತೆ ಕಹಳೆ ಭೇರಿಮೊದಲಾದ ಕೋಟಿ ನಿಸ್ಸಾಳಗಳು ಮೊಳಗಿದವು.
ಅರ್ಥ: ಅರ್ಜುನನ ಮೇಲೆ ಯುದ್ಧ ಸಾರಲು, ಚಂಬಕ, ಹರೆ, ಡಕ್ಕೆ, ಡಮರುಗ, ಬೊಂಬುಳಿಯ, ಗೋಮುಖದ ಡೌಡೆಯಕೊಂಬು, ಕಹಳೆಯನ್ನೂ ರಾಯ ಗಿಡಿಮಿಡಿಗಳೆಂಬ ವಾದ್ಯಗಳನ್ನೂ, ಪಟಹ, ಡಿಂಡಿಮದ, ತಂಬಟ ಇವುಗಳ ಸದ್ದು ಆಕಾಶವನ್ನು ತುಂಬಿತು; ಆಗ ಕೌರವದೊರೆಯು ಸನ್ನೆಮಾಡಲು ನೆಲ ಕುಸಿಯುವಂತೆ ಸೈನ್ಯವು ಆಡಂಬರದಿಂದ ಅರ್ಜುನನ್ನು ಮುತ್ತಿತು.
ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ |
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು || ೪ ||
ಪದವಿಭಾಗ-ಅರ್ಥ: ಮರಳಿದವು ತುರುವೆಂಬ ಗರ್ವದಗಿರಿಗೆ ಕೋ ಕುಲಿಶವನು, ಸೇನೆಯನು+ ಒರೆಸಿದ+ ಉತ್ಸವ ಜಲಧಿಗೆ+ ಇದೆ ಕೋ ವಾಡಬಾನಲನ, ಅರಸನು+ ಅಲುಕಿದನೆಂಬ ಜಯದ+ ಉಬ್ಬರದ ಬೆಳೆಸಿರಿಗೆ+ ಇದೆ ನಿದಾಘದ (. ಬಿಸುಪು, ಬೆವರು) ಬಿರುಬಿಸಿಲು ಕೊಳ್ಳೆಂದು ಕೈಗೊಂಡು ಎಚ್ಚರು+ ಅತಿರಥರು
ಅರ್ಥ:ಕೌರವನ ಸೇನೆಯ ಅತಿರಥರು, 'ಗೋವುಗಳು ನಗರಕ್ಕೆ ಮರಳಿದವು ಎಂಬ ಗಿರಿಯಂಥ ಗರ್ವದ ನಿನ್ನ ಅಹಂಕಾರಕ್ಕೆ ತೆಗೆದುಕೋ ಈ ವಜ್ರಾಯುಧದಂತಿರುವ ಈ ಕುಲಿಶವನ್ನು ಎಂದು ಅರ್ಜುನನ ಮೇಲೆ ಅಸ್ತ್ರವನ್ನು ಪ್ರಯೋಗಿಸಿದರು. ಮತ್ತೆ ಕೆಲವರು ಕೌರವನ ಸೇನೆಯನ್ನು ಒರೆಸಿಹಾಕಿದ ನಿನ್ನ ಆನಂದದ ಉತ್ಸವದ ಸಮುದ್ರಕ್ಕೆ ಇದೆ ತೆಗೆದುಕೋ ಪ್ರಳಯಕಾಲದ ಸಮುದ್ರದ ಬೆಂಕಿಯಂತಿರುವ ಬಡಬಾನಲವಾದ ಆಗ್ನೇಯ ಅಸ್ತ್ರವನ್ನು ಎಂದು ಹೊಡೆದರು. ಅರ್ಜುನನ್ನು ಕುರಿತು, ತಮ್ಮ ಅರಸನನ್ನು ಸೋಲಿಸಿ ಅವನು ಅಳುಕಿದನು ಎಂಬ ಜಯದ ಅಹಂಕಾರದ ಉಬ್ಬರದ ಬೆಳೆಸಿರಿಗೆ- ಫಸಲಿಗೆ ಇದೆ ತೆಗೆದುಕೋ ಬೆವರು ಹರಿಸುವ ಬಿಸಿಯಾದ ನಿದಾಘದ ಬಿರುಬಿಸಿಲು ಅಸ್ತ್ರವನ್ನು ಎಂದು ಪ್ರತಿಭಟನೆಯನ್ನು ಕೈಗೊಂಡು ಅರ್ಜುನನ್ನು ಅತಿರಥರು ಹೊಡೆದರು.
ಮೊಗಕೆ ಹರಿಗೆಯನು+ ಒಡ್ಡಿ ಕಾಲಾಳು+ ಅಗಿದು ಕವಿದುದು ಸರಳ ಪರಿಯಲಿ= ಮುಖಕ್ಕೆ ಗುರಾಣಿಯನ್ನು ಒಡ್ಡಿಕೊಂಡು ಕಾಲಾಳು ಸೈನ್ಯವು ಸರಳನ್ನು ಜೋಡಿಸಿದಂತೆ ಒಟ್ಟಾಗಿ ಅರ್ಜುನನ್ನು ಮುತ್ತಿದರು. ಬಿಗಿದು ಬಿಲ್ಲಾಳುಗಳು ಔಕಿತು+ ಉರವಣಿಸಿದರು= ಬಿಲ್ಲಿನಿಂದ ಯುದ್ಧಮಾಡುವವರು ಬಲವಾಗಿ ಪರಾಕ್ರಮ ತೋರಿದರು. ಸಬಳಿಗರು ಉಗಿದಡೆ+ ಆಯುಧದಲಿ+ ಇರಿದರು= ಸಬಳಿಗರಾದ ಸೈನಿಕರು ಈಟಿಯನ್ನು ಉಗಿದು ತೆಗೆದು ಆ ಆಯುಧದಿಂದ ಇರಿಯಲು ಬಂದರು. ರಾವ್ತರು ಕೆಂಗರಿಯ ಕೋಲುಗಳ ಹೆಮ್ಮಳೆಗರೆದು- ಹಿರಿದು+ ಮಳೆ- ಹೆಮ್ಮಳೆ+ ಕರೆದು ಕವಿದರು-ಮುತ್ತಿದರು, ಜೋದರು- ಯೋಧರು+ ಉರವಣಿಸಿ- ಪರಾಕ್ರಮದಿಂದ= ಮಾಡು ಇಲ್ಲವೇ ಮಡಿ ಎಂಬ ಭಾಷೆಗಳನ್ನು ಹೊತ್ತ ಕುದುರೆ ರಾವುತರು ಕೆಂಪುಗರಿಗಳನ್ನು ಕಟ್ಟಿದ ಬಾಣಗಳ ದೊಡ್ಡ ಮಳೆಯನ್ನು ಅರ್ಜುನನ ಮೇಲೆ ಸುರಿಸಿದರು. ಹೀಗೆ ಅರ್ಜುನನ್ನು ಯೋಧರು ಪರಾಕ್ರಮದಿಂದ ಮುತ್ತಿದರು.
ಅರ್ಥ:ಮುಖಕ್ಕೆ ಗುರಾಣಿಯನ್ನು ಒಡ್ಡಿಕೊಂಡು ಕಾಲಾಳು ಸೈನ್ಯವು ಸರಳನ್ನು ಜೋಡಿಸಿದಂತೆ ಒಟ್ಟಾಗಿ ಅರ್ಜುನನ್ನು ಮುತ್ತಿದರು. ಬಿಲ್ಲಿನಿಂದ ಯುದ್ಧಮಾಡುವವರು ಬಲವಾಗಿ ಪರಾಕ್ರಮ ತೋರಿದರು. ಸಬಳಿಗರಾದ ಸೈನಿಕರು ಈಟಿಯನ್ನು ಉಗಿದು ತೆಗೆದು ಆ ಆಯುಧದಿಂದ ಇರಿಯಲು ಬಂದರು. ಮಾಡು ಇಲ್ಲವೇ ಮಡಿ ಎಂಬ ಭಾಷೆಗಳನ್ನು ಹೊತ್ತ ಕುದುರೆ ರಾವುತರು ಕೆಂಪುಗರಿಗಳನ್ನು ಕಟ್ಟಿದ ಬಾಣಗಳ ದೊಡ್ಡ ಮಳೆಯನ್ನು ಅರ್ಜುನನ ಮೇಲೆ ಸುರಿಸಿದರು. ಹೀಗೆ ಅರ್ಜುನನ್ನು ಯೋಧರು ಪರಾಕ್ರಮದಿಂದ ಮುತ್ತಿದರು.
ಅರರೆ ರಾವುತು ರಾವುತ+ ಎಂಬ+ ಅಬ್ಬರಣೆ ಮಸಗಿದುದೊಂದು ದೆಸೆಯಲಿ= ಅರರೆ ರಾವುತರು ರಾವುತತು ಬಂದರು ಎಂಬ ಕೂಗಾಟ ಒಂದು ದಿಕ್ಕಿನಲ್ಲಿ ತುಂಬಿತು. ಸರಿಸ ಸಬಳಿಗ ಪೂತು+ ಉಪಾಯಕುಯೆಂಬ ಕಳಕಳಿ ಕೆಧಿರೆ+= ಈಟಿಯನ್ನು ಹಿಡಿದವನಿಗೆ ಸರಿಸ ಸಬಳಿಗ ಭೇಷ್ ಎಂಬ ಕೂಗು ಕಕೇಳಿಸಿತು. ಉಪಾಯಕುಯೆಂಬ ಕಳಕಳಿ ಕೆಧಿರು; ಉರೆ- ಮತ್ತೂ ಸಾರಥಿ ಹಳು ಹಳೆಂಬ+ ಅಬ್ಬರಣೆ ಮಸಗಿದುದು+ ಒಂದು ಕಡೆಯಲಿ ಕರಿಘಟೆಯ ಕಡುಹು- ಶೌರ್ಯ+ ಒಂದು ಕಡೆಯಲಿ ಮುಸುಕಿತು+ ಅರ್ಜುನನ.
ಅರ್ಥ: ಅರರೆ ರಾವುತರು ರಾವುತತು ಬಂದರು ಎಂಬ ಕೂಗಾಟ ಒಂದು ದಿಕ್ಕಿನಲ್ಲಿ ತುಂಬಿತು. ಈಟಿಯನ್ನು ಹಿಡಿದವನಿಗೆ ಸರಿ ಸಬಳಿಗ ಭೇಷ್! ಎಂಬ ಕೂಗುಕೇಳಿಸಿತು. 'ಉಪಾಯ'ಎಂಬ ಕಳಕಳಿಯ ಕೂಗು, ಕುದುರೆ ನೆಲವನ್ನು ಕೆದಿರುವಿಕೆ(?), ಮತ್ತು ಸಾರಥಿಯು ಕುದುರೆಯನ್ನು ಓಡಿಸಲು ಅದರ ಬೆನ್ನು ತಟ್ಟಿ 'ಹಳು ಹಳು'- ಹಲ್ -ಹೈ ಹಲ್ ಹೈ, ಎಂಬ ಗದ್ದಲ ಅಲ್ಲಿ ಒಂದು ಕಡೆ ತುಂಬಿತು. ಮತ್ತೆ ಒಂದು ಕಡೆಯಲ್ಲಿ ಆನೆಗಳ ಉಗ್ರ ಧಾಳಿ ಅರ್ಜುನನ್ನು ಮುತ್ತಿತು.
ಸುರಪನ+ ಅಡವಿಯ ಚುಚ್ಚಿದೊಡೆ= ಇಂದ್ರನ ಖಾಂಡವ ವನವನ್ನು ಬಾಣದಿಂದ ಚುಚ್ಚಿ ಸುಟ್ಟರೆ, ಸುರರ+ ಅರಮನೆಯ ಗಾಯಕರ ಗೆಲಿದೊಡೆ= ದೇವಲೋಕದ ಗಾಯಕರಾದ ಗಂಧರ್ವರನ್ನು ಗೆದ್ದ ಮಾತ್ರಕ್ಕೆ ವೀರನೋ!, ಜರಡು ತಂತ್ರದ ಮೀನನು ಎಚ್ಚೊಡೆ= ದ್ರೌಪದಿ ಸ್ವಯಂವರದಲ್ಲಿ ದೊಡ್ಡ ಜರಡಿಯಮೇಲೆ ತಿರುಗುವ ಮೀನನ್ನು ಹೊಡೆದು ಕೆಡವಿದರೆ, ರಾಯ ಕಟಕದಲಿ ಗೊರವನೊಳು (= ಸಂನ್ಯಾಸಿಯೊಳು) ಕಾದಿದೊಡೆ= ಯುದ್ಧದಲ್ಲಿ ಶಿವನೆಂಬ ಹೆಸರಿನ ಬೇಡ- ಗೊರವನ ಜೊತೆ ಯುದ್ಧಮಾಡಿದ ಮಾತ್ರಕ್ಕೆ ನೀನು ಶೂರನೊ?, ಹೆಂಗುಸನು+ ಇರುಳು ಕದ್ದು+ ಓಡಿದೊಡೆ= ಸುಭದ್ರೆಯನ್ನು ಕದ್ದು ಓದಿಸಿಕೊಂಡು ಹೋದರೆ - ಶೂರನೋ? ದಿಟ- ನಿಜ, ನೀ ಧುರಕೆ ಧೀರನೆ -ಸರಿ! ಪಾರ್ಥ ಫಡ! ಯೆನುತ+ ಎಚ್ಚರು+ ಅತಿರಥರು= ಎಂದು ಹಂಗಿಸುತ್ತಾ ಅತಿರಥರು ಹೊಡೆದರು.
ಅರ್ಥ: ಇಂದ್ರನ ಖಾಂಡವ ವನವನ್ನು ಬಾಣದಿಂದ ಚುಚ್ಚಿ ಸುಟ್ಟರೆ, ದೇವಲೋಕದ ಗಾಯಕರಾದ ಗಂಧರ್ವರನ್ನು ಗೆದ್ದ ಮಾತ್ರಕ್ಕೆ ವೀರನೋ!, ದ್ರೌಪದಿ ಸ್ವಯಂವರದಲ್ಲಿ ದೊಡ್ಡ ಜರಡಿಯಮೇಲುಗಡೆ ತಿರುಗುವ ಮೀನನ್ನು ಹೊಡೆದು ಕೆಡವಿದರೆ, ಆರಂಭದಲ್ಲಿ ಭ್ರಹ್ಮ ಚಾರಿಯಾಗಿ ಸಂನ್ಯಾಸಿಯಂತೆಯೆ ಜೀವನ ನೆಡೆಸಿದ ಗೊರವನಾದ ವೃದ್ಧ ಭೀಷ್ಮನನ್ನು ಸೋಲಿಸಿದ ಮಾತ್ರಕ್ಕೆ ವೀರನೋ?,(ಅಥವಾ- ಯುದ್ಧದಲ್ಲಿ ಶಿವನೆಂಬ ಹೆಸರಿನ ಬೇಡ- ಗೊರವನ ಜೊತೆ ಯುದ್ಧಮಾಡಿದ ಮಾತ್ರಕ್ಕೆ ನೀನು ಶೂರನೊ?), ಸುಭದ್ರೆಯನ್ನು ರಾತ್ರಿ ಕದ್ದು ಓದಿಸಿಕೊಂಡು ಹೋದರೆ - ಶೂರನೋ? ನಿಜ ನಿಜ, ನೀನು ಯುದ್ಧಕ್ಕೆ ಧೀರನೆ -ಸರಿ! ಈಗ ನೋಡು, ಪಾರ್ಥ ಫಡ! ಎಂದು ಹಂಗಿಸುತ್ತಾ ಅತಿರಥರು ಹೊಡೆದರು.
ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ |
ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ || ೮ ||
ಪದವಿಭಾಗ-ಅರ್ಥ: ಭಂಡರು+ ಉಲಿದೊಡೆ ಗರುವರದ ಮಾರ್ಕೊಂಡು ನುಡಿವರೆ ಸಾಕು+ ಇದು+ ಏತಕೆ ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ ಗಂಡುಗೆಡದಿರಿ ನಿಮ್ಮ ಬಗೆಗಳ ಕಂಡು ಬಲ್ಲೆನು+ ಎನುತ್ತ ಫಲುಗುಣನು+ ಎಚ್ಚನು+ ಅತಿರಥರ
ಅರ್ಥ: ಮಾನವಿಲ್ಲದ ಭಂಡರಾದ ನೀವು ಹೇಳಿದರೆ ಗರ್ವವನ್ನು ಹೊದಿ ನುಡಿವರೆ ಏನು ಫಲ! ಸಾಕು ಇದು ನಿಮ್ಮ ಮಾತು ಏತಕ್ಕೆ ಬೇಕು? ನಿಮ್ಮ ಅಹಂಕಾರವನ್ನು ಅರಿದು ಹಾಕುವೆನು - ಕತ್ತರಿಸುವೆನು; ಒಂದು ನಿಮಿಷ ಸೈರಿಸಿಕೊಳ್ಲಿ. ನೀವು ಧೈರ್ಯದಿಂದ ನಿಂತು ಯುದ್ಧ ಮಾಡುವುದಾದರೆ, ನೀವು ಮುಂದೆ ಇಟ್ಟ ಹೆಜ್ಜೆಗೆ ಹಂಗಿಗರಾಗಿದ್ದೀರಿ - ಹಿಂದಕ್ಕೆ ಸರಿಯುವಂತಿಲ್ಲ. ನಂತರ ಧೈರ್ಯಗೆಡಬೇಡಿ, ನಿಮ್ಮ ಬಗೆಯ ವೀರರ ಮನಸ್ಸನ್ನು ನೋಡಿದ್ದೇನೆ, ಎನ್ನುತ್ತಾ ಪಾರ್ಥನು ಅತಿರಥರನ್ನು ಬಾಣದಿಂದ ಹೊಡೆದನು.
ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡೆನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ |
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ||೯ ||
ಪದವಿಭಾಗ-ಅರ್ಥ: ಗುರುಸುತನ ಬಳಿ ರಥವನು+ ಐಸಾವಿರವ ಕೊಂದನು, ಕರ್ಣನೊಡೆನೆಯವರ ಮಹಾರಥರು+ ಎಂಟು ಸಾವಿರವನು, ರಣಾಗ್ರದಲಿ ಗುರು ನದೀಜರ ಬಳಿ ರಥವ ಸಾವಿರವ, ಕೃಪ ಸೈಂಧವ ಸುಯೋಧನರ+ ಅರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ.
ಅರ್ಥ: ಅರ್ಜುನನು ಗುರುಸುತ ಅಶ್ವತ್ಥಾನ ಬಳಿಯ ರಥವನ್ನೂ, ಐದು ಸಾವಿರ ಯೋಧರನ್ನೂ ಕೊಂದನು, ಕರ್ಣನೊಡೆನೆ ಇದ್ದವರಾದ ಎಂಟು ಸಾವಿರ ಮಹಾರಥರನ್ನೂ, ರಣರಂದ ಎದುರಲ್ಲಿದ್ದ ಗುರು ದ್ರೋನ, ನದೀಜ ಭೀಷ್ಮರು, ಇವರ ಬಳಿ ಇದ್ದ ಸಾವಿರ ರಥವನ್ನೂ, ಕೃಪ ಸೈಂಧವ ಸುಯೋಧನರ ಮತ್ತು ಅರಸನ ಬೆಂಗಾವಲಿನ (ಅರಸು ಥಟ್ಟಿನ) ಸೈನ್ಯದ ಹತ್ತು ಸಾವಿರ ರಥವನ್ನು ಮುರಿದನು.
ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ ||
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ || ೧೦ ||
ಪದವಿಭಾಗ-ಅರ್ಥ: ತುರಗ ದಳವು+ ಎಂಬತ್ತು ಸಾವಿರ ಕರಿಘಟೆಯನು+ ಐವತ್ತು ಸಾವಿರ ವರರಥವ ಹುಡಿ ಮಾಡಿದನು, ಹನ್ನೆರಡು ಸಾವಿರವ ಧುರಕೆ ವೆಗ್ಗಳವಾದ ರಥಿಕರ ಶಿರವ ತರಿದನು, ಮೂರು ಕೋಟಿಯನು+ ಅರಸು ಕಾಲಾಳುಗಳ ಗಣನೆಯು+ ಅರಿಯೆ ನಾನೆಂದ.
ಅರ್ಥ: ಅರ್ಜುನನ ಕೌರವ ಸೈನ್ಯದಲ್ಲಿ, ಎಂಬತ್ತು ಸಾವಿರ ಕುದುರೆ ದಳದವರನ್ನೂ, ಐವತ್ತು ಸಾವಿರ ಕರಿಘಟೆ- ಆನೆ ದಳದವರನ್ನೂ, ಉತ್ತಮ ಹನ್ನೆರಡು ಸಾವಿರ ರಥಗಳನ್ನು ಹುಡಿ ಮಾಡಿದನು, ಯುದ್ಧಕ್ಕೆ ಶ್ರೇಷ್ಠರಾದ ಮೂರು ಕೋಟಿ ಅರಸುರಥಿಕರ ಶಿರವ ತರಿದನು; ಕಾಲಾಳುಗಳ ಲೆಕ್ಕವನ್ನು ತಾನು ಅರಿಯೆನೆ ಎಂದು ವೈಶಂಪಾಯನು ಜನಮೇಜಯನಿಗೆ ಹೇಳಿದನು.
ಅರ್ಥ: ತನ್ನ ಸೋದರಮಾವ ಕೃಪನನ್ನು ಹೀಯಾಳಿಸಿದ ಸಿಟ್ಟಿನಲ್ಲಿ, ದ್ರೋಣಸುತ ಅಶ್ವತ್ಥಾಮನು ನಗುತ್ತಾ ಕರ್ಣನನ್ನು ಕುರಿತು,'ಪಾಂಡವ ಕೌರವರ ಉಭಯ ರಾಯರ ಸೈನ್ಯದಲ್ಲಿ ವೀರನು ನಾನಿರುವಾಗ ನನ್ನನ್ನು ಮೀರಿಸಿದ ಇನ್ನಾವನು ಇದ್ದಾನೆ ಎಂದು, ಅಹಂಕಾರದಿಂದ ಉಬ್ಬಟೆಯ ಮಾತುಗಳನ್ನು ನುಡಿದು ಕೌರವನ ಧನವನ್ನು ಬಾಚಿದೆ. ನಿಜವಾದ ವೀರಭಟನು ಫಲ್ಗುಣನೇ ಆಗಿರುವನು; ಈಗ ತೋರಿಸು ಆ ನಿನ್ನ ಪಟುತನವನ್ನು; ಎಲೆ ಅಪಜಯ ವೀರನೆ, ಸ್ತ್ರೀವಿಟನೆ, ಗಾಯಗೊಂಡು ಸಂಕಟಕ್ಕೆ ಒಳಗಾದೆಯಲ್ಲಾ!' ಎಂದನು.
ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು |
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ || ೧೫ ||
ಪದವಿಭಾಗ-ಅರ್ಥ: ಆಗಲು+ ಏರಿಸಿ ನುಡಿದ ನುಡಿ ತಾನು+ ಈಗಳೇನಾಯಿತ್ತು ನುಡಿಗಳ ತಾಗನು+ ಅರಿಯದೆ (ತಾಗುವುದನ್ನು ಅರಿಯದೆ- ಆಡಿದ ನುಡಿಗಳು ಹೇಗೆ ಮನಸ್ಸಿಗೆ ತಾಗಿ ನೋಯಿಸುವುದೆಂಬುದನ್ನು ಅರಿಯದೆ) ತರಿಚುಗೆಡೆವರೆ ಗರುವರಾದವರು ಈಗಳಾವ್ ಹಾರುವರು, ಕ್ಷತ್ರಿಯನಾಗಿ ನೀಉ+ ಅರ್ಜುನನ ತುರುಗಳ ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ - (ಸತ್ಯವೇ ಸರಿ ಎಂದ)
ಅರ್ಥ:ಕರ್ಣನೇ, ಆಗ ಸೊಕ್ಕಿನಿಂದ ಏರಿಸಿ ಅತಿಯಾಗಿ ಆಡಿದ ಮಾತಿಗೆ ತಾನು ಹೀಗೆ ಹೇಳಬೇಕಾಯಿತು. ಈಗ ಅದರಿಂದ ಏನುಪ್ರಯೋಜನ? ಆಡಿದ ನುಡಿಗಳು ಹೇಗೆ ಮನಸ್ಸಿಗೆ ತಾಗಿ ನೋಯಿಸುವುದೆಂಬುದನ್ನು ಅರಿಯದೆ ಚುಚ್ಚಿ ಮಾತನಾಡುವರೇ ಗೌರವಸ್ಥರು? ಈಗ ನಾವು ಬ್ರಾಹ್ಮಣರು- ಹಾರುವರು - ಊಟಕ್ಕೆ ಮಾತ್ರಾ ಎಂದು ಹೇಳಿದ್ದೀಯ. ಕ್ಷತ್ರಿಯನಾಗಿ ನೀನು ಅರ್ಜುನನು ಹಿಂದಕ್ಕೆ ಕಳಿಸಿದ ಗೋವುಗಳನ್ನು ಬೇಗ ಮರಳಿಸಿ ತಂದು ತೋರದೆ ಇದ್ದರೆ, ನಾನು ನಿನಗೆ ಹೇಳಿದ ಮಾತು ದಿಟವೇ ಸರಿ ಎಂದ.
ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ |
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ || ೧೬ ||
ಪದವಿಭಾಗ-ಅರ್ಥ: ಎಲವೊ ಗರುಡಿಯ ಕಟ್ಟಿ ಸಾಮವ ಕಲಿಸಿ ಬಳಿಕ+ ಆ ಕೋಲ ಮಕ್ಕಳ ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆ+ ಎಮಗೆ ಕಲಹವು+ ಏತಕೆ? ಕಾಣ ಬಹುದು+ ಎಂದು+ ಅಲಘು ಭುಜಬಲ ಭಾನುಸುತ ಕಡುಮುಳಿದು ಫಡ ಫಡ ಪಾರ್ಥ ಮೈದೋರು+ ಎನುತ ಮಾರಾಂತ.
ಅರ್ಥ:ಎಲವೊ ಅಶ್ವತ್ಥಾಮ, ಯದ್ಧದ ಅಭ್ಯಾಸಕ್ಕೆ ಗರುಡಿಯನ್ಹು (ಅಭ್ಯಾಸದ ರಣರಂಗ) ಕಟ್ಟಿ ಸಾಮುಗಳನ್ನು - ನಾನಾ ಯದ್ಧವಿದ್ಯೆಯನ್ನ ಕಲಿಸಿ, ಬಳಿಕ ಆ ಬಿಲ್ಲುಗಾರರ ಮಕ್ಕಳ ಬಲದಿಂದ ಬದುಕುವ ಕೃಪಣ ವೃತ್ತಿಯ- ಬಡತನದ ಉದ್ಯೋಗ ಮಾಡುವ ನಿಮ್ಮ ಸಂಗಡ ನಮಗೆ ಕಲಹವು ಏಕೆ ಬೇಕು? ಈಗ ನೀನು ನನ್ನ ಶೌರ್ಯವನ್ನು ಕಾಣಬಹುದು, ಎಂದು ಅಸಮಾನ್ಯ ಭುಜಬಲನಾದ ಭಾನುಸುತ ಕರ್ಣನು ಬಹಳ ಸಿಟ್ಟಿನಿಂದ, ಫಡ ಫಡ! ಪಾರ್ಥ ಎದುರಿಗೆ ಬಾ ಎನ್ನುತ್ತಾ ಅರ್ಜುನನ್ನು ಎದುರಿಸಲು ನಿಂತನು.
ಅರ್ಥ: ಕರ್ಣನು ಅರ್ಜುನನ್ನು ಬೆಂಬತ್ತಿ ಹೋಗಿ ಅವನಿಗೆ ಕೂಗಿ ಹೇಳಿದ, 'ಇತ್ತ, ಈ ಕಡೆ, ಪಾರ್ಥ ನಿಲ್ಲು, ನಿಲ್ಲು; ಮುದುಕನಾದ ಮುತ್ತಯ್ಯ ಭೀಷ್ಮನನ್ನು, ಹಾರುವ- ಬ್ರಾಹ್ಮಣ ದ್ರೋಣ ಕೃಪರನ್ನು ಅಂಜುವಂತೆ ಮಾಡಿ, ಯುದ್ಧದಲ್ಲಿ ಕಾಲಕಳೆದರೆ ಮುಗಿಯಿತೇ? ನನ್ನೊಡನೆ ನಿನ್ನ ಕೈಚಳಕ ತೋರಿಸು, ಎದುರಿಗೆ ಬಾ,ಮೈದೋರು ಸಹಾಯಕರಿದ್ದರೆ ಕರೆ, ನಿನ್ನ ಬೇರನ್ನು ಕಿತ್ತು ಸಮುದ್ರದಲ್ಲಿ ತೊಳೆಯುವ ಈ ರಿಪುಭಟನೂ ನಿನ್ನ ಮೃತ್ಯುವೂ ಆದವನು ಈ ಕರ್ಣನು ಅರಿತುಕೋ!,' ಎನ್ನುತ್ತಾ ಅರ್ಜನನಿಗೆ ಎದುರಾಗಿ ಕರ್ಣ ಬಂದ.
ಅರ್ಥ: ಅರ್ಜುನನು ಕರ್ಣನಿಗೆ, 'ನೀನು ಧೈರ್ಯಶಾಲಿ, ಯುದ್ಧದಲ್ಲಿ ಗೆಲ್ಲಲು ನಿನಗೆ ಎಂಟೆದೆ ಉಂಟು. ವೀರರು ಕೌರವೇಂದ್ರನ ದೊಡ್ಡ ಸೈನ್ಯದಲ್ಲಿ ನಿನ್ನ ಹೋಲುವರುಂಟೆ? ಯಾರೂ ಇಲ್ಲ. ಕರ್ಣ ಕೇಳು, 'ಈಗ ಅಂಜುದೆ ನನಗೆ ಎದುರಾಗಿ ನಿಂತು ಯುದ್ಧಮಾಡು; ಅಹುತಿಗೆ ಹಾಕಿ ಸುಡಲು ನಿನ್ನ ದೇಹದ ಮಾಂಸದ ತುಂಡನ್ನು ಕೊಟ್ಟು, ಅರ್ಜುನನು ಎಲ್ಲಾ ಭೂತಗಳ ನೆಂಟನು ಎನಿಸಿಕೊಳ್ಳತ್ತೇನೆ,' ಎಂದ.
ಚಕಿತಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ |
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು || ೧೯ ||
ಪದವಿಭಾಗ-ಅರ್ಥ: ಚಕಿತಚಾಪರು ಗಾಢ ಬದ್ಧಭ್ರುಕುಟಿ ಭೀಷಣಮುಖರು ರೋಷ ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ ವಿಕಟ ಶೌರ್ಯೋತ್ಕಟ ಮಹಾ ನಾಯಕರು ನಿಷ್ಠುರ ಸಿಂಹ ಗರ್ಜನೆ ವಿಕಳಿತ+ ಆಚಲ ಸನ್ನಿವೇಶರು ಹೊಕ್ಕು ತರುಬಿದರು.
ಚಕಿತಚಾಪರು= ಚಕಿತ- ಅಚ್ಚರಿಗೊಳಿಸುವಂತೆ ಬಿಲ್ಲು ವಿದ್ಯೆಯಲ್ಲಿ ಪರಿಣತರು; ಗಾಢ ಬದ್ಧಭ್ರುಕುಟಿ ಭೀಷಣಮುಖರು= ತೀವ್ರವಾಗಿ ಹುಬ್ಬಗಂಟಿಕ್ಕಿದ ಉಗ್ರ ಮುಖವುಳ್ಳವರು; ರೋಷ ಪ್ರಕಟ ಪಾವಕ ವಿಸ್ಫುಲಿಂಗರು (ವಿಸ್ಫುಲಿಂಗ= ಬೆಂಕಿಯ ಕಿಡಿ.)= ಬೆಂಕಿಯ ಕಿಡಿಯಂತೆ ರೋಷವನ್ನು ತೋರುವವರು; ಹೊಕ್ಕು ಸಮತಳಿಸಿ ವಿಕಟ ಶೌರ್ಯೋತ್ಕಟ ಮಹಾ ನಾಯಕರು= ನುಗ್ಗಿ ಎದುರು- ಎದುರು ನಿಂತು ಉತ್ಕಟ ಶೌರ್ಯದಿಂದ ಹೋರಾಡುವವರು; , ನಿಷ್ಠುರ ಸಿಂಹ ಗರ್ಜನೆ ವಿಕಳಿತ+ ಆಚಲ ಸನ್ನಿವೇಶರು ಹೊಕ್ಕು ತರುಬಿದರು= ನಿಷ್ಠುರವಾಗಿ ಅಳುಕದೆ, ಸಿಂಹನಾದ ಮಾಡುತ್ತಾ, ಉನ್ಮಾದದಿಂದ ಸ್ಥರವಾಗಿ ನಿಂತು ಯುದ್ಧಮಾಡುವ ಸಮರ್ಥರು ನುಗ್ಗಿ ಒಬ್ಬರನ್ನೊಬ್ಬರು ಅಡ್ಡಗಟ್ಟಿ ಯುದ್ಧಮಾಡಿದರು.
ಅರ್ಥ:ಅಚ್ಚರಿಗೊಳಿಸುವಂತೆ ಬಿಲ್ಲು ವಿದ್ಯೆಯಲ್ಲಿ ಪರಿಣತರು; ತೀವ್ರವಾಗಿ ಹುಬ್ಬಗಂಟಿಕ್ಕಿದ ಉಗ್ರ ಮುಖವುಳ್ಳವರು; ಬೆಂಕಿಯ ಕಿಡಿಯಂತೆ ರೋಷವನ್ನು ತೋರುವವರು; ನುಗ್ಗಿ ಎದುರು- ಎದುರು ನಿಂತು ಉತ್ಕಟ ಶೌರ್ಯದಿಂದ ಹೋರಾಡುವವರು; ನಿಷ್ಠುರವಾಗಿ ಅಳುಕದೆ, ಸಿಂಹನಾದ ಮಾಡುತ್ತಾ, ಉನ್ಮಾದದಿಂದ ಸ್ಥರವಾಗಿ ನಿಂತು ಯುದ್ಧಮಾಡಲು ಸಮರ್ಥರಾದ ಅವರು, ನುಗ್ಗಿ ಒಬ್ಬರನ್ನೊಬ್ಬರು ಅಡ್ಡಗಟ್ಟಿ ಯುದ್ಧಮಾಡಿದರು.
ಅರ್ಥ: ಪೂತುರೇ - ಭಲೇ! ಬಿಲ್ಲುಗಾರನೇ ಸರಿ ಮಝರೇ! ಸೂತಪುತ್ರ ಕರ್ಣಾ, ಹೊಸಬಗೆಯ ಬಾಣ ರಚನೆಯ ಬಿಲ್ಲುವಿದ್ಯೆಯು, ಭಾರ್ಗವ ಪರುಷುರಾಮನ ಸಂಪ್ರದಾಯವಲ್ಲವೇ?, ಈಗ ನನ್ನ ಬಾಣಗಳ ಸಾಮರ್ಥ್ಯವನ್ನು ಎದುರಿಸಯ್ಯಾ! ನಿನ್ನದು ಯಾವ ಬಗೆಯ ಅತಿಶಯವು/' ಎನ್ನುತ್ತಾ ಕಲಿಪಾರ್ಥನು ಆಕಾಶದ ಅಂಗಳಕ್ಕೆ ಬಾಣಗಳ ಸೇತುವೆಯನ್ನೇ ಕಟ್ಟಿದನು.
ಅರ್ಥ: ಯುದ್ಧದಲ್ಲಿ ನೀನು ಈವರೆಗೆ ಮೇಲುಗೈ ಆಗಿರುವೆ. ಬಿರುದು ಪಡೆದವರಲ್ಲಿ ನೀನು ಉತ್ತಮ ಬಿಲ್ಲಾಳು ಆಗಿರುವುದು ನಿಜ; ಬೆಲ್ಲುವಿದ್ಯೆಯನ್ನು ಕಲಿತ ಮನೆ ನಿನಗೆ ಶಿವನ ಗರುಡಿಯಲ್ಲಿ ಅಲ್ಲವೇ? ಈಗ ಬಾಣದ ವರಸೆ ನಮ್ಮವು, ಆ ಕೆಲವು ವರಸೆಯಲ್ಲಿ ನಿಮಗೆ ನಾವು ಸಮಗೈಯಾಳೇ ಸರಿ, ಎನ್ನುತ್ತಾ, ನೋಡುವವರ ಕಣ್ಣುಗುಡ್ಡೆ ಝೋಂ- ಇಡುವಂತೆ ಕರ್ಣನು ಅಂಬಿನ ಸಮುದ್ರವನ್ನೇ ತುಂಬಿದನು.
ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ |
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ || ೨೨ ||
ಪದವಿಭಾಗ-ಅರ್ಥ: ಅಹಹ ಫಲುಗುಣ ನೋಡಲು+ ಅಮ್ಮೆನು(ನೋಡಲಾರೆನು) ಬಹಳ ಬಾಣ+ ಅದ್ವೈತವಾದುದು ಮಹಿ(ಭೂಮಿ) ಮಹಾದೇವ;+ ಎನುತ ಸಾರಥಿ ಮುಚ್ಚಿದನು ಮುಖವರಹವ(ವರ -ವರಹ- ಶ್ರೇಷ್ಠ) ಮಾಡದಿರು+ ಎಲವೊ; ತನಗೆ+ ಇದು ಗಹನವೇ ನೋಡು+ ಎನುತ ನರನು+ ಅತಿ ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ.
ಅರ್ಥ: ಉತ್ತರನು,'ಅಹಹ ಫಲ್ಗುಣ ನಾನು ನೋಡಲಾರೆನು, ಬಹಳ ಬಾಣಗಳು ಅದ್ವೈತವಾಗಿ ಸಂದಿಲ್ಲದೆ ಭೂಮಿ ಕಾಣದಂತೆ ಸೇರಿಹೋಗಿವೆ, ಮಹಾದೇವ!' ಎನ್ನುತ್ತಾ ಸಾರಥಿ ಉತ್ತರನು 'ಮುಖಭಾಗವು ಬಾಣಗಳಿಂದ ಮುಚ್ಚಿಹೋಹಿತು, ಹೀಗೆ ಮಾಡಲು ಬಿಡಬೇಡ ಎಲವೊ ಪಾರ್ಥ' ಎಂದನು. ಆಗ ಪಾರ್ಥನು, ತನಗೆ ಇದನ್ನು ತೆಗೆಯಲು ಕಷ್ಟವೇ? ನೋಡು ಎನ್ನುತ್ತಾ, ಪಾರ್ಥನು ಸಾಹಸದಿಂದ ಕರ್ಣನ ಬಾಣಪಂಜರವನ್ನು ಕತ್ತರಿಸಿ ಕೆದರಿ ಪರಿಹರಿಸಿದನು.
ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ |
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ || ೨೩ ||
ಪದವಿಭಾಗ-ಅರ್ಥ: ವೀರನಲ್ಲಾ! ಬನದ ರಾಜ ಕುಮಾರನಲ್ಲಾ! ಕೌರವನ ಬಡಿಹೋರಿಯಲ್ಲಾ! ತಿರಿದಿರೈ ದಿಟವೇ+ ಏಕಚಕ್ರದಲಿ? ನಾರಿಯರ ನಾಟಕದ ಚೋಹವನು+ ಆರು ತೆಗೆದರು ಪಾರ್ಥ? ನಿನಗೀ ಶೌರಿಯದ ಸಿರಿಯೆಂತು+ ಎನುತ ತೆಗೆದು+ ಎಚ್ಚನು (ಹೊಡೆದನು)+ ಆ ಕರ್ಣ
ಅರ್ಥ:ಕರ್ಣನು ಪಾರ್ಥನನ್ನು ಹಂಗಿಸಿ,' ನೀನು ವೀರನು ಅಲ್ಲವೇ! ಕಾಡಿನ ವಾಸದ ರಾಜ ಕುಮಾರನು ಅಲ್ಲವೇ! ಕೌರವನ ಬಡಿಯುವ ಹೋರಿಯು ಅಲ್ಲವೇ! ಏಕಚಕ್ರನಗರದಲ್ಲಿ ಭಿಕ್ಷೆಬೇಡಿದರಿದಿಟವೇ ನಿಜವೇ? ನೀನು ಈ ರಣರಂಗಕ್ಕೆ ಬರುವಾಗ ಇದ್ದ ಹೆಂಗಸರ ನಾಟಕದ ವೇಷವನ್ನು ಯಾರು ತೆಗೆದರು ಪಾರ್ಥ? ನಿನಗೆ ಈ ಶೌರ್ಯದ ಸಂಪತ್ತು ಹೇಗಪ್ಪಾ ಬಂದಿತು? ಎನ್ನತ್ತಾ ಬಾಣವನ್ನು ತೆಗೆದು ಪಾರ್ಥನನ್ನು ಹೊಡೆದನು ಆ ಕರ್ಣ.
ಅರ್ಥ: ಅರ್ಜುನನು ಕರ್ಣನಿಗೆ, ನೀನು ಮುಂಚೂಣಿಯ ಭಟ, ಕಂಟಕ, ಅಪಾಯಕಾರಿಯೂ ಆಗಿರುವೆ; ಬೇಟೆಗಾರರ ಬಳಗವುಳ್ಳವನೂ ಆಗಿರುವೆ; ವಿರೋಧಿಯ ಸೈನ್ಯಕ್ಕೆ ನೀನು ಅಡ್ಡಗಟ್ಟಿ ನಿಲ್ಲುವ ಭಟನೂ ಆಗಿರುವೆ; ಸ್ವಾಮಿ ಕಾರ್ಯದಲ್ಲಿ ತಲೆಯ ಕೊಡುವವನೂ ಆಗಿರುವೆ; ಆದರೆ ನಿನ್ನದುಕೀಲು ಭಾಷೆ! ನಿನ್ನ ವ್ಯಂಗದ ಕುಭಾಷೆಗೆ ಸಿಟ್ಟುಗೊಂಡು ಬುದ್ದಿಕಡಿಸಿಕೊಳ್ಲುವವರು ನಾವಲ್ಲ, ನಂತರ, ಈಗ ಸಹಿಸಿಕೋ ಎನ್ನುತ್ತಾ, ಕಲಿಪಾರ್ಥನು ಬಾಣಗಳ ಸುರಿಮಳೆಯನ್ನು ಸುರಿದನು.
ಅರ್ಥ: ಕರ್ಣನು ಅರ್ಉನನ ಬಾಣದ ಸಮುದ್ರದಲ್ಲಿ ಅದ್ದಲ್ಪಟ್ಟನೋ- ಮುಳುಗಿದನೋ! ಅಥವಾ ಒಡೆನೆಯೇ ಕೇಳಗಿನ ಲೋಕವಾದ ವಿತಳದಲ್ಲಿ ಬಿದ್ದನೋ, ಮತ್ತೆ ಅಧಿಕವಾಗಿ ಬಾಣ ಸಮುದ್ರದಲ್ಲಿ ಅದ್ದಿ ಮುಳುಗಿದನೋ! ಕರ್ಣನನ್ನು ಹೊಗಳುವುದು ಏತಕ್ಕೆ ಎಂದು ಕಾಣೆನು! ಇನಸುತನಾದ ಕರ್ಣನನ್ನು ಆತನ ವಿಧಿ (ಅಂತ್ಯಕ್ಕಾಗಿ) ಅವನ ಹಣೆಬರಹವನ್ನು ತಿದ್ದಿತು. ನದೀಸುತ ಭೀಷ್ಮನು ಸಮೀಪ ಇದ್ದಿದ್ದರೆ ಕರ್ಣನ ಸ್ಥಿತಿ ಹೀಗಾಗುತ್ತಿರಲಿಲ್ಲ. ಕೌರವೇಂದ್ರನ ಮುಂದಿನ ಗತಿ ಏನು ಹೇಳೆಂದು,' ಕುರುಸೇನೆ ಒಟ್ಟುಗೂಡಿಕೊಂಡು ಒದರುತಿತ್ತು- ಗೋಳಿಡುತ್ತಿತ್ತು.
ಅರ್ಥ:ಆಗ,'ಸೋಲಾಯಿತು ಕರ್ಣನಿಗೆ ಎಂಬುವವರ ನಾಲಗೆಯನ್ನು ಕೊಯ್ಯಿರಿ! ಎಲವೊ ಬಿಡು! ಧನುರ್ವಿದ್ಯೆಯಲ್ಲಿ ಪರಿಣತನಾದ ಕರ್ಣನು ಉತ್ತಮ ಬಿಲ್ಲಾಳು! ಕೌರವರಾಯನ ಪಟ್ಟದಾನೆ! ವಿರೋಧಿ ರಾಜರ ಹಣೆಬರಹವನ್ನು ತೊಡೆಯಿತೋ ಕರ್ಣನ ಶೌರ್ಯ! ಇನ್ನೇಕೆ ಯುದ್ಧ 'ತೆಗೆ ಕಾಳಗವನು' ಎಂದು ಎಲ್ಲಾ ಕುರುಸೈನ್ಯದ ಜಾಲ ಬೊಬ್ಬಿಟ್ಟು ಕೂಗಿದರು. ಕರ್ಣ ಮೆರೆದನು ಬಿಲ್ಲ ಬಲುಮೆಯಲಿ
ಓಟವೇ ಅಪಜಯದ ಬೊಡ್ಡಿಯ ಬೇಟವೇ ಬೆಸಗೊಳ್ಳಿರೈ(ಹೇಳಿರಿ)= ಪಾರ್ಥನೇ, ನನ್ನನ್ನು ಎದುರಿಸದೆ ಓಡುವುದೇ? ಅಥವಾ ಈ ಯುದ್ಧ ಜೂಜಿನಲ್ಲಿ ಸೋತ ಪ್ರತೀಕಾರವಾಗಿ ಬಡ್ಡಿಯ ಬೇಟೆಯೇ? ಹೇಳಪ್ಪಾ!ಒಳತೋಟಿಗೆ+ ಒತ್ತಾಳು+ ಅಹುದು ನಾಲಗೆಯೀಗಳು+ ಏನಾಯ್ತು= ನನ್ನೊಡನೆ ಯುದ್ಧಮಾಡುವುದೋ ಬೇಡವೋ ಎಂಬ ಒಳತೋಟಿ ಸಿಕ್ಕಿದ್ದರೆ ಅದು ಸರಿ, ಆದರೆ ನನ್ನನ್ನು ಬೇಡಿಕೊಳ್ಳಲು ಏನಾಯಿತು? ನಾಲಿಗೆ ಬರುವುದಿಲ್ಲವೇ? ಆಟವಿಕ ಭೂಪತಿಯ ಕೀರ್ತಿಯ ಕೂಟಣಿಗರ+ ಒಗ್ಗಾಯ್ತು ತೆಗೆ= ಕಾಡುಸೇರಿದ ಭೂಪತಿ ಧರ್ಮಜನ ಕೀರ್ತಿಯ ಜೊತೆಗೂಡಿರುವವರ ಅವನತಿಯಾಯಿತು, ಬಿಡು. ನನ್ನಡನೆ ಮರುಳಾಟವು ಏಕೆ? ಇನ್ನು ಬೇಡ. ಎನ್ನುತ್ತಾ ಪಾರ್ಥನನ್ನು ಎದುರಿಸಿದನು ದ್ರೋಣ.
ಅರ್ಥ: ಪಾರ್ಥನೇ, ನನ್ನನ್ನು ಎದುರಿಸದೆ ಓಡುವುದೇ? ಅಥವಾ ಈ ಯುದ್ಧವು ಜೂಜಿನಲ್ಲಿ ಸೋತ ಪ್ರತೀಕಾರವಾಗಿ ಬಡ್ಡಿಯ ಬೇಟೆಯೇ? ಹೇಳಪ್ಪಾ! ನನ್ನೊಡನೆ ಯುದ್ಧಮಾಡುವುದೋ ಬೇಡವೋ ಎಂಬ ಒಳತೋಟಿಯಲ್ಲಿ ಸಿಕ್ಕಿದ್ದರೆ, ಅದು ಸರಿ, ಆದರೆ ನನ್ನನ್ನು ಬೇಡಿಕೊಳ್ಳಲು ಏನಾಯಿತು? ನಾಲಿಗೆ ಬರುವುದಿಲ್ಲವೇ? ಕಾಡುಸೇರಿದ ಭೂಪತಿ ಧರ್ಮಜನ ಕೀರ್ತಿಯ ಜೊತೆಗೂಡಿರುವವರ ಅವನತಿಯಾಯಿತು, ಬಿಡು. ನನ್ನೊಡನೆ ಮರುಳಾಟವು ಏಕೆ? ಇನ್ನು ಅದು ಬೇಡ. ಎನ್ನುತ್ತಾ ಪಾರ್ಥನನ್ನು ಎದುರಿಸಿದನು ದ್ರೋಣ.
ಅರ್ಥ: ಎಲೈ ಪಾರ್ಥನೇ!, ನನ್ನನ್ನು ಎದುರಿಸಯ್ಯಾ! ಬ್ರಾಹ್ಮಣರಿಗೆ ಪರಾಕ್ರಮವು ಎಲ್ಲಿಯದು ಎಂದು ಭಾವಿಸಬೇಡ. ಕರ್ಣನನ್ನು ಸದೆಬಡಿದ ಸಾಹಸಕ್ಕೆ ಹಿಗ್ಗಬೇಡ. ನಮ್ಮ ಕೈಗುಣವನ್ನೂ ಯುದ್ಧದಲ್ಲಿ ನೀನು ನೋಡು. ಶಿವನಿಂದ ಅಸ್ತ್ರಗಳು ನಿನಗೆ ಕೈಸಾರಿದವು ಅಲ್ಲವೇ ಗಡ! ಶಿವನು ಹಿಡಿವ ಶ್ರೇಷ್ಠವಾದ ಅಸ್ತ್ರಗಳ ಮತ್ತು ಅದರ ರೀತಿ ಹೇಗೆ ಎಂಬುದನ್ನು ನಮಗೆ ಪ್ರಯೋಗಿಸಿ ತೋರಿಸಪ್ಪಾ, ಎಂದ ದ್ರೋಣ.
ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ |
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ || ೩೧ ||
ಪದವಿಭಾಗ-ಅರ್ಥ: ಇದಿರುಗೊಂಡೆನು ವಂದಿಸಿದೆನು+ ಎಮ್ಮ+ ಉದಯ ನಿಮ್ಮದು; ನಿಮ್ಮ ಕೃಪೆಯಲಿ ವಿದಿತವು+ ಎನಗೆ+ ಈ ವಿದ್ಯೆ, ನೀವ್ ಕಾಮಾರಿ ಮುರವೈರಿ, ಹೃದಯ ನಿಮ್ಮದು ಕಾಳಗಕೆ ನಿಮ್ಮ+ ಇದಿರೊಳು+ ಆಳೇ ತಾನು ಕರುಣಾಸ್ಪದರು ನೀವೆಂದು+ ಎಚ್ಚನು+ ಅರ್ಜುನನು+ ಅವರ ಸಿರಿಪದಕೆ.
ಅರ್ಥ: ಅರ್ಜುನನು,'ಗುರುಗಳೇ, ಇಗೋ, ಗೌರವದಿಂದ ಎದುರುಗೊಂಡೆನು, ವಂದಿಸಿದೆನು; ನಮ್ಮ ಉದಯ- ಏಳಿಗೆ ನಿಮ್ಮದು- ನಿಮ್ಮ ಕೃಪೆ; ನಿಮ್ಮ ಕೃಪೆಯಿಂದ ನನಗೆ ಈ ವಿದ್ಯೆ ಉಪದೇಶವಾಗಿದೆ., ನೀವೇ ಕಾಮಾರಿ- ಶಿವನು, ನೀವೇ ಮುರವೈರಿ ಕೃಷ್ಣ; ನಿಮ್ಮದು ದಯಾಳು ಹೃದಯ; ಕಾಳಗಕ್ಕೆ- ಯುದ್ಧಕ್ಕೆ ನಿಮ್ಮ ಎದುರಲ್ಲಿ ತಾನು ಸರಿಸಮಾನ ಆಳೇ- ಭಟನೇ? ಕರುಣಾಸ್ಪದರು ನೀವು,' ಎಂದು ಹೊಗಳಿ, ವಿನಯದಿಂದ ಅರ್ಜುನನು ಅವರ ಸಿರಿಪಾದದ ಬುಡಕ್ಕೆ ವಂದನಾ ಪೂರ್ವಕ ಬಾಣವನ್ನು ಹೊಡೆದನು.
ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು |
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ || ೩೨ ||
ಪದವಿಭಾಗ-ಅರ್ಥ: ವಿನಯವು+ ಉಚಿತವೆ ತತ್ತ ಸಮರದ ಮೊನೆಯೊಳು, ಆರು+ ಇದಿರಾದಡೆ+ ಇರಿವುದು ಜನಪರಿಗೆ ಕರ್ತವ್ಯವು+ ಅದು ಸಾಕು+ ಉಳಿದ ಮಾತೇನು, ತನುಜ ಸೈರಿಸು ಸೈರಿಸೆಂದು+ ಎಚ್ಚನು, ನಿರಂತರ ಬಾಣ ವರುಷವನು+ ಅನಿಮಿಷಾವಳಿ ಪೂತುರೆ+ ಎನೆ ಕೈದೋರಿದನು ದ್ರೋಣ.
ವಿನಯವು+ ಉಚಿತವೆ ತತ್ತ ಸಮರದ ಮೊನೆಯೊಳು (ಎದುರಿನಲ್ಲಿ, ಅಂಚಿನಲ್ಲಿ) , ಆರು(ಯಾರು)+ ಇದಿರಾದಡೆ+ ಇರಿವುದು ಜನಪರಿಗೆ ಕರ್ತವ್ಯವು+ ಅದು ಸಾಕು+ ಉಳಿದ ಮಾತೇನು, ತನುಜ(ತನ್ನ ಶಿಷ್ಯನಿಗೆ ಪ್ರೀತಿಯಿಂದ- ಮಗನೇ ಎಂದು ಕರೆದನು) ಸೈರಿಸು ಸೈರಿಸೆಂದು+ ಎಚ್ಚನು, ನಿರಂತರ ಬಾಣ ವರುಷವನು+ ಅನಿಮಿಷಾವಳಿ(ಅನಿಮಿಷ+ ಆವಳಿ = ದೇವತೆಗಳ ಸಮೂಹ) ಪೂತುರೆ+ ಎನೆ ಕೈದೋರಿದನು ದ್ರೋಣ.
ಅರ್ಥ:ದ್ರೋಣ ಹೇಳಿದ,'ಅರ್ಜುನಾ ಈ ಯುದ್ಧದ ಮೊನೆಯಲ್ಲಿ- ಅಂಚಿನಲ್ಲಿ ನಿಂತಾಗ, ವಿನಯವು ಉಚಿತವೆ? ಯಾರು ಎದುರು ನಿಂತರೂ ಇರಿಯುವುದು, ಹೊಡೆಯು ರಾಜರಿಗೆ ಕರ್ತವ್ಯವು. ಅದು ಸಾಕು ಉಳಿದ ಮಾತೇನು? ಬೇಡ, ಈಗ, ಮಗನೇ, ಸಹಿಸಿಕೊ, ಎಂದು ನಿರಂತರವಾಗಿ ಬಾಣಗಳ ಮಳೆಯನ್ನು ಅವನ ಮೇಲೆ ಸುರಿಸಿ ಹೊಡೆದನು. ಆಕಾಶದಲ್ಲಿದ್ದ ದೇವತೆಗಳು ಪೂತುರೆ- ಭೇಷ್! ಎನ್ನುವಂತೆ ದ್ರೋಣನು ತನ್ನ ಕೈಚಳಕವನ್ನು ತೋರಿದನು.
ಅರ್ಥ:ಭಾವಿಸಿ ನೋಡಿದರೆ ಪ್ರತಿಬಿಂಬದಲಲ್ಲಿ ಬೇರೆ ಯಾವುದು ಅತಿಶಯವು ಇರಲು ಸಾದ್ಯ; ನಾನು ಬಿಲ್ಲು ವಿದ್ಯೆಯಲ್ಲಿ ನಿಮ್ಮ ಪ್ರತಿಬಿಂಬದಂತೆ ಇದ್ದೇನೆ. ನೀವು ನನಗೆ ಯಾವ ರೀತಿಯಲ್ಲಿ ಕಲಿಸಿದಿರೋ ಅದನ್ನೇ ನಿಮಗ ಒಪ್ಪಿಸುವೆನು. ಅದನ್ನು ಈಗ ನೀವು ನೋಡುವದು, ಎನ್ನುತ್ತಾ ಪಾರ್ಥನು ಬಾಣಗಳನ್ನು ಹೊಡೆಯಲು, ಯಾವುದು ಆಕಾಶವು, ಯಾವುದು ಭೂಮಿಯು, ಅದು ಯಾವುದು ಶತ್ರುಸೈನ್ಯ ಎನ್ನುವುದು ಕಾಣವಂತೆ ಪಾರ್ಥನ ಶರಜಾಲ ಹಬ್ಬಿತು.
ಅರ್ಥ:ಪತ್ನಿಯಮೇಲಿನ ಮೋಹದಿಂದ ವಿಷಯ ಲಂಪಟತನದಲ್ಲಿ ಅವಳೊದನೆ ಕೂಡಿ ನಾವು ಅಶ್ವತ್ಥಾಮನನ್ನು ಸೃಷ್ಠಿಸಿದೆವು. ಅವನು ನಮ್ಮ ಬಿಲ್ಲುವಿದ್ಯೆಯ ಮೋಹದ ಕಂದನಯ್ಯಾ; ಆದರೆ ಎಲೆ ಪಾರ್ಥ! ನೀನು ನಮಗೆ ನನ್ನ ಬಿಲ್ಲುವಿದ್ಯೆಯ ಮಗ. ಅದಲ್ಲದಿದ್ದರೆ ಅದುಯಾರಿಗೆ ತಾನೆ ಈ ಶರವಿಸರ - ಬಿಲ್ಲುವಿದ್ಯೆಯ ಪರಿಣತಿ ಸಂಭವಿಸುವುದು. ಅದು ಯಾರಿಗೆ ತಾನೆ ಈ ಅಸಾಧಾರಣ ವೀರನ ಕೈಯ ಚಳಕವು ಬರುವುದು' ಎಂದನು ಆ ದ್ರೋಣ.
ಅರ್ಥ: ದ್ರೋಣನು ಹಾಗೆ ಹೇಳುತ್ತಾ, ಬಾಣಗಳ ಮಳೆಯನ್ನು ಸುರಿಸಿದನು. ಅವು ಬಾಣಗಳ ಸಾರದಂತೆ, ಅಗ್ನಿಯ ಗರ್ಭದ ಬಾಯ ಧಾರೆಗಳಂತೆ, ಅನಿಲ- ವಾಯುವಿನ ಗರ್ಭದ ಗರಿಗಳ ಸಿಡಿಲಿನಂತೆ, ಗರ್ಭದ ಕಿಡಿಗಳುಳ್ಳ ಗುಂಡು-ಬಾಣದ ಮೊನೆಯಂತೆ, ಬಂಬಲು-ಗೊಂಚಲು ಕಿಡಿಯ ಹೊರಗಿನ ತನಿ- ದಟ್ಟ ಹೊಗೆಯ ಹೊದರುಗಳುಳ್ಳ ಬಾಣಗಳ ಗರಿಗಳ ಸದ್ದಿನ ಒಂದರಮೇಲೆ ಒಂದರಂತೆ ದಟ್ಟಣೆಯಾಗಿ ಬಹಳವಾಗಿ ದ್ರೋಣನ ಅಂಬುಗಳು ಅರ್ಜುನನ್ನು ಕವಿದು ಮುಚ್ಚಿದವು.
ದೇವ ಭಾರದ್ವಾಜ ಬಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ |
ಕೋವಿದನು ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ || ೩೬ ||
ಪದವಿಭಾಗ-ಅರ್ಥ: ದೇವ ಭಾರದ್ವಾಜ (ಭರದ್ವಾಜ ಮಹರ್ಷಿಯ ಮಗ- ದ್ರೋಣ) ಬಲು ವಿದ್ಯಾ ವಿಷಯ ನವರುದ್ರ ಘನ ಶಸ್ತ್ರಾವಳೀ ನಿರ್ಮಾಣ ನೂತನ ಕಮಲಭವ (ಬ್ರಹ್ಮ)-ಯೆನುತ ಕೋವಿದನು (ಪಂಡಿತನು) ಶರ ತಿಮಿರವನು ಗಾಂಡೀವಿಯು+ ಅಗಣಿತ ಬಾಣ ಭಾನು ಕರಾವಳಿಯಲಿ+ ಅಪಹರಿಸಿದನು ಸುರರಾಜಸುತ(ಇಂದ್ರನ ಮಗ) ನಗುತ
ಅರ್ಥ: ದೇವ ಭಾರದ್ವಾಜ- ದ್ರೋಣ ದೇವನೇ, ಬಲು ವಿದ್ಯಾ ವಿಷಯಗಳನ್ನು ಅರಿತವನು ನೀನು, ಒಂಭತ್ತು ರುದ್ರರ ಘನ ಶಸ್ತ್ರಗಳ ಸಮೂಹವನ್ನು ನಿರ್ಮಾಣಮಾಡುವ ನೂತನ- ಹೊಸ ಬ್ರಹ್ಮನೇಸರಿ ನೀನು, ಎನ್ನುತ್ತಾ ಶಸ್ತ್ರ ಪಂಡಿತನಾದ ಇಂದ್ರನ ಮಗ ಗಾಂಡೀವಿ ಅರ್ಜುನನು ನಗುತ್ತಾ, ಬಾಣಗಳ ಕತ್ತಲೆಯನ್ನು, ಅನೇಕ ಸೂರ್ಯನಂತಿರುವ ಬಾಣಗಳ ಸಮೂಹದಿಂದ ತೆಗೆದು ಪರಿಹರಿಸಿದನು.
ಅರ್ಥ: ದ್ರೋಣನ ಬಾಣವನ್ನು ಪರಿಹರಿಸಿ, ಅರ್ಜುನನು ಬಾನಪ್ರಯೋಗ ಮಾಡಿದ ಬಳಿಕ ಪಾರ್ಥನ ಬಾಣಗಳಿಂದ ದ್ರೋಣನು ಆಯಾಸಗೊಳ್ಳಲು, ಅವನ ಸಾರಥಿಯು ಮೆಲ್ಲ ಮೆಲ್ಲನೆ ರಥವನ್ನು ದೂರ ತೆಗೆದುಕೊಂಡು ಹೋದನು. ಅದನ್ನು ನೋಡಿ ಕರ್ಣನು ಇತ್ತ ಅಪಹಾಸ್ಯ ಮಾಡುತ್ತಾ, 'ಎಲೆಲೆ! ಕಟಕಾಚಾರ್ಯ- ಯುದ್ಧವಿದ್ಯೆಯ ಗುರು ಅರ್ಜುನನ್ನು ಗೆದ್ದನು, ಇನ್ನೇನು ಕೌರವ ಸೈನ್ಯದ ಶತ್ರು ಇಲ್ಲವಾಯಿತು. ಇನ್ನು ಕೌರವನ ರಾಜಾಭ್ಯುದಯವು ಆಗುವುದು, ಎಂದನು.
ಅರ್ಥ: ದ್ರೋಣನ ಮಗ ಅಶ್ವತ್ಥಾಮನು ಸಿಟ್ಟಿನಿಂದ,ಫಡ ಫಡ! ಎಲವೊ ಕರ್ಣ! ನಿನ್ನ ಸಾರಥಿ ಯುದ್ಧದಲ್ಲಿ ಮಡಿದರೆ ಅದು ಏನು ನಿನ್ನ ಸೋಲಲ್ಲವೇ? ನೀನು ಸೋತು, ದ್ರೋಣರಿಗೆ ಕೆಟ್ಟದಾಗಿ ನುಡಿಯಬೇಡ) ನೋಡು ನಿನಗೆ ಸಾಧ್ಯವಾದರೆ ನನ್ನ ತಂದೆಯ ಕಷ್ಠದಲ್ಲಿ ಸಿಲುಕಿದರೂ ಕಠಿಣವಾದ ಯುದ್ಧವನ್ನು ನೋಡು; 'ಕೀಳು ನುಡಿಗೆ ಅವಕಾಶಸಿಕ್ಕಿತು, ಎಂಬ ನಿನ್ನಂತಹ ದುಷ್ಟರ ಬೆಡಗನ್ನು ನೋಡು. ಎನ್ನುತ್ತಾ ಉಗ್ರವಾದ ತನ್ನ ಬಿಲ್ಲನ್ನು ಮಿಡಿದು- ಠೇಂಕಾರ ಮಾಡಿ ರಥದಲ್ಲಿ ಕುಳಿತು ಹರನನ್ನು ಹೋಲುವ ಸುಭಟ ಅಶ್ವತ್ಥಾಮನು ಅರ್ಜುನನ್ನು ಎದುರಿಸಿದನು.
ಅರ್ಥ: ದ್ರೋಣನು ನಿರ್ಗಮಿಸಿದ ನಂತರ ಅವನ ಮಗ ಅಶ್ವತ್ಥಾಮನು ಅರ್ಜುನನ್ನು ಎದುರಿಸಿ, ಯಾವುದಯ್ಯಾ ನೀನು ತಿಳಿದ ಬಿಲ್ಲು ವಿದ್ಯಾ ವಿಷಯ? ನಮಗೆ ತಿಳಿಯದ ಘನ ಧನುರ್ವೇದದ ಸಮೂಹ ಸಂಪತ್ತು? ಶರಮೌಕ್ತಿಕ- ಶ್ರೇಷ್ಠ ಬಾಣವಿದ್ಯೆಯ ಉಪನ್ಯಾಸವು ಎಂತು, ಹೇಗೆ, ಎಂದು ತಿಳಿದ ಬ್ರಾಹ್ಮಣರ ಯುಕ್ತಿಯನ್ನು ನೀನು ಪಡೆದು ಕೊಂಡಿದ್ದೀಯಾ? ಶಸ್ತ್ರವಿದ್ಯಾ ಭಾವ ಗೋಷ್ಠಿಯನ್ನು ಅದರ ಚರ್ಚೆ- ವಿಮರ್ಶೆಯನ್ನು ಬಲ್ಲವನಾದರೆ ನಾನು ಬಿಡುವ ಬಾಣದಿಂದ ಅರಿತುಕೋ, ಎಂದು ಅರ್ಜುನನನ್ನು ಹೊಡೆದನು.
ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ |
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ || ೪೧ ||
ಪದವಿಭಾಗ-ಅರ್ಥ: ಅಕ್ರಮವ ತಿರಿ-ಭುವನ ವಿದ್ಯಾಚಕ್ರವರ್ತಿಗಳೆಂದು ನೀವು ಈ ವಿಕ್ರಮದ ಮಾತಿನಲಿ ಮೇಗರೆ( ಮೇಲೆ- ಎಂಬ ಅಹಂಕಾರದಿಂದ) ಮೆರೆವ ಭಟರುಗಳೆ ಶಕ್ರನಳುಕುವ- ಶಕ್ರನು+ ಉಳುಕುವ ಬಾಹುಬಲ ರಿಪು ಚಕ್ರದೊಳಗೆ+ ಇನ್ನಾರಿಗುಂಟು+ ಅದುವಕ್ರ ಭಣಿತೆಗೆ (ಚಟುವಟಿಕೆ, ರೀತಿ, ಸ್ಪಷ್ಟತೆ) ಸಲುವುದು+ ಅಶ್ವತ್ಥಾಮನ+ ಎನುತೆ+ ಎಚ್ಚ
ತಿರಿ- ಎಸಕಪದ= (ದೇ) ೧ ಸುತ್ತಾಡು, ತಿರುಗಾಡು, ಅಲೆ ೨ ಭಿಕ್ಷೆ ಬೇಡು ಯಾಚಿಸು ೩ (ಹೂವು, ಹಣ್ಣು ಮೊ.ವನ್ನು) ಕೀಳು, ಕೊಯ್ಯು ೪ ಎಸೆ, ಬಿಸಾಡು
ಅರ್ಥ:ಅಕ್ರಮವಾಗಿ ಭೂಮಿಯಲ್ಲಿ ಅಲೆದು (ತಿರಿದುಂಡು), ವಿದ್ಯಾಚಕ್ರವರ್ತಿಗಳೆಂದು ನೀವು ಈ ದ್ರೋಣನ ಮೇಲಿನ ವಿಜಯದಿಂದ ಮಾತಿನಲ್ಲಿ ಅಹಂಕಾರದಿಂದ ಮೆರೆವ ಶೂರರೆ, ಖಾಂಡವ ದಹನದಲ್ಲಿ ಇಂದ್ರನು ಸೋಲುವಂತೆ ಮಾಡುವ ಬಾಹುಬಲ ಈ ಶತ್ರು ಕೋಟೆಯಲ್ಲಿ ಇನ್ನಾರಿಗುಂಟು? ಅದು - ಇಂದ್ರನ ವನವನ್ನು ಸುಟ್ಟಿರುವುದು ವಕ್ರ ನೆಡತೆಗೆ ಸಲ್ಲುವುದು, ಎನ್ನುತ್ತಾ ಅಶ್ವತ್ಥಾಮನು ಅರ್ಜುನನ್ನು ಬಾಣದಿಂದ ಹೊಡೆದನು.
ಅರ್ಥ: 'ಅರ್ಜುನನ ಧನುರ್ವಿದ್ಯೆಯನ್ನು ವಿವರಿಸಲು (ದುರ್ಜಯವಲಾ- ಕಷ್ಟ) ಅಸಾದ್ಯವಲಾ! ಗರ್ವದಿಂದ ಗರ್ಜಿಸಿದರೆ ಏನು ಪ್ರಯೋಜನ?,' ಎನ್ನುತ್ತಾ ಅಶ್ವತ್ಥಾಮನು ಹರ್ಷದಿಂದ ದೇವತೆಗಳು ಮಝ! ಭಾಪುರೆ! ಎನ್ನುತ್ತಿರಲು ಬಿಲ್ಲನ್ನು ಚೆನ್ನಾಗಿ ಬಗ್ಗುವಂತೆ ಎಳೆದು ಹಗ್ಗದ-ತಿರುವುನಲ್ಲಿ ಯುದ್ಧದಲ್ಲಿ ಗೆಲ್ಲಲು ಅಸಾದ್ಯನಾದ ಅವನು ಹೊಡೆಯಲು, ಬಾಣಗಳು ಆಕಾಶವನ್ನು ಕವಿದು ಮುಚ್ಚಿದವು.
ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ |
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ || ೪೩ ||
ಪದವಿಭಾಗ-ಅರ್ಥ: ಗುರುತನೂಜನಲಾ! ವಿಭಾಡಿಸಿ ಹುರುಳುಗೆಡಿಸಲು ಬಹುದೆ ನೋಡು+ ಉತ್ತರ ಸುಯೋಧನ ಸೈನ್ಯ ಶರಧಿಯ ಗುಂಪಿನ+ ಅತಿಬಲರು+ ಅಹರನ ಸರಿದೊರೆಯ+ ಅಸ್ತ್ರ ವಿದ್ಯಾಧರರು ಮರ್ತ್ಯರೊಳು+ ಆರು ಲೇಸೆಂದು+ ಉರುಳೆಗಡಿದನು ಪಾರ್ಥನು+ ಅಶ್ವತ್ಥಾಮನ+ ಅಂಬುಗಳ.
ಅರ್ಥ:ಗುರುವಿನ -ಮಗನಲಾ! ಮಗನಲ್ಲವೇ! ಸದೆಬಡಿದು ಶಕ್ತಿಹೀನನ್ನಾಗಿ ಮಾಡಬಹುದೆ? ಅವಮಾನಿಸಲಾರೆ! ಉತ್ತರ, ಸುಯೋಧನನ ಸೈನ್ಯವೆಂಬ ಸಮುದ್ರಲ್ಲಿರುವ ಭಟರ ಗುಂಪಿನ ಅತಿಬಲಾಢ್ಯರು ಇರುವುದನ್ನು ನೋಡು; ನನಗೆ ಸರಿಸಮಾನರಾದ ಇವರು ಮಾನವರಲ್ಲಿ ಅಸ್ತ್ರ ವಿದ್ಯಾಧರರು. ಅವರಲ್ಲಿ ಯಾರು ಉತ್ತಮರು? ಎಂದು ಹೇಳುತ್ತಾ ಪಾರ್ಥನು ಅಶ್ವತ್ಥಾಮನ ಅಂಬುಗಳನ್ನು ಕಡಿದ ಕೆಡಗಿದನು.
ಅರ್ಥ:ಗುರುಸುತ ಅಶ್ವತ್ಥಾಮನ ಶರಜಾಲವನ್ನು ಅರ್ಜುನನು ಸಂಹರಿಸಿ ತಿರುಗಿ+ ಅಸ್ತ್ರಗಳ ಪ್ರವಾಹವನ್ನೇ ಹರಿಸಿದನು. ಕಲಿಪಾರ್ಥನು ಅಶ್ವತ್ಥಾಮನ ಬಾಣಗಳನ್ನು ಸವರಿಹಾಕಿ ಸೂರ್ಯನ ಬಿಂಬವನ್ನೂ ಆಕಾಶವನ್ನೂ ಹೂಕ್ಕಿತು. ಹೀಗೆ ಗುರುಸುತನ ಸಾಮರ್ಥ್ಯವು ನೋಡಲು ಇಬ್ಬರಿಗೆ ಸಮಬಲವಾಗಿ ರಣಕೇಳಿ ನೆಡೆದಿತ್ತು.
ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು |
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ || ೪೫ ||
ಪದವಿಭಾಗ-ಅರ್ಥ: ತೀರವು+ ಅರ್ಜುನನ+ ಅಂಬು ರಣದಲಿ, ತೀರಿದವು ಗುರುಸುತನ ಶರ, ಕೈವಾರವೇ( ಯುದ್ಧ ಸಹಾಯ ಸಲಕರಣೆ) ಕೈಗುಂದಿ ನಿಂದನು ದ್ರೋಣನಂದನನು ಮೇರು ಮೊಗದಿರುಹಿ+ ಇತ್ತಲು+ ಆ ರಣಧೀರನು+ ಅಶ್ವತ್ಥಾಮ ಸೋತನು ಸಾರೆನುತ ಕೃಪನು+ ಉರುಬಿದನು ತರುಬಿದನು (ಅಡ್ಡಹಾಕಿದನು). ಫಲುಗುಣನ.
ಅರ್ಥ: ಅಕ್ಷಯ ಬತ್ತಳಿಕೆಯಾದ್ದರಿಂದ ಅರ್ಜುನನ ಬತ್ತಳಿಕೆಯ ಅಂಬುಗಳು ಯುದ್ಧದಲ್ಲಿ ತೀರುವುದಿಲ್ಲ(ಮುಗಿದು ಹೋಗುವುದಿಲ್ಲ). ಆದರೆ ಗುರುಸುತ ಅಶ್ವತ್ಥಾಮನ ಬಳಿ ಇದ್ದ ಬಾಣಗಳು ತೀರಿದವು (ಮಗಿದವು.). ಯುದ್ಧ ಸಹಾಯ ಸಲಕರಣೆ ಇಲ್ಲವಾಗಿ ದ್ರೋಣನಂದನ ಅಶ್ವತ್ಥಾಮನು ಸುಮ್ಮನೆ ಮೇಲೆ ಮುಖಮಾಡಿ ಸುಮ್ಮನೆ ನಿಂತನು. ಇತ್ತ ಆ ರಣಧೀರ ಅಶ್ವತ್ಥಾಮನು ಸೋತನು ಸರಿದು ಹೋಗು ಎನ್ನುತ್ತಾ ಕೃಪನು ಪೌರುಷದಿಂದ ಫಲ್ಗುಣನನ್ನು ಅಡ್ಡಹಾಕಿದನು.
ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕನಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬
ಪದವಿಭಾಗ-ಅರ್ಥ: ತಂದೆ ಮಕ್ಕಳು(ದ್ರೋಣ ಅಶ್ವತ್ಥಾಮ) ಸೋತರು+ ಇನ್ನೇನು+ ಎಂದು ಮುಯ್ಯಾನದಿರು (ವಿಶ್ರಮಿಸಬೇಡ) ನಿಲು ನಿಲ್ಲೆಂದು ಕೃಪನು+ ಅಡ ಹಾಯ್ದು ಪಾರ್ಥನ ರಥವ ತರುಬಿದನು; ಬಂದ ಪರಿ ಲೇಸು+ ಎನುತ ಫಲುಗುಣನು+ ಒಂದು ಕನಲ(ಕೆಡುಕು ಮಾಡದಿರುವಂತಹುದು)+ ಅಂಬಿನಲಿ ಗುರುಗಳಿಗೆ+ ಇಂದು ವಂದಿಸಬೇಕು+ ಎನುತ ಕೀಲಿಸಿದನು (ಕೀಲಿಸು= ನಾಟು, ಬಿಗಿದು ಕಟ್ಟು) ಆ ರಥವ
ಅರ್ಥ:ಕೃಪನು ಅರ್ಜುನನ್ನು ಕುರಿತು. 'ತಂದೆ ಮಕ್ಕಳಾದ ದ್ರೋಣ ಅಶ್ವತ್ಥಾಮರು ಸೋತರು ಇನ್ನೇನು ಎಂದು ವಿಶ್ರಮಿಸಬೇಡ. ನಿಲ್ಲು ನಿಲ್ಲು ಎಂದು ಕೃಪನು ಅಡ್ಡ ಹಾಯಿದು ಹೋಗಿ ಪಾರ್ಥನ ರಥವನ್ನು ಅಡ್ಡಗಟ್ಟಿದನು; ಕೃಪನು ಬಂದ ರೀತಿ ಒಳ್ಳೆಯದೇ ಎನ್ನುತ್ತಾ ಫಲ್ಗುಣನು ಅಪಾಯವಾಗದಂತೆ ಒಂದು ಬಾಣದಿಂದ ಗುರುಗಳಿಗೆ ಇಂದು ವಂದಿಸಬೇಕು ಎನ್ನತ್ತಾ ಅವರ ರಥವನ್ನು ಬಾಣದಿಂದ ಚಲಿಸದಂತೆ ಗಾಲಿಗೆ ಹೊಡೆದು ನೆಲಕ್ಕೆ ಕೀಲಿಸಿದನು.
ತರಹರಿಸಿ ಶರವೈದರಲಿ ಸಂ
ಹರಿಸಿ ಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು |
ಕೆರಳಿ ಫಲುಗುಣನರ್ಧ ಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ || ೪೭ ||
ಪದವಿಭಾಗ-ಅರ್ಥ: ತರಹರಿಸಿ (ಚೇತರಿಸಿಕೊಂಡು) ಶರವು+ ಐದರಲಿ ಸಂಹರಿಸಿ ಕೊಳ್ಳೆಂದು+ ಎಚ್ಚೊಡೆ (ಹೊಡೆದಾಗ)+ ಈತನ ತುರಗವನು ತಾಗಿದವು, ನೊಂದವು ರಥದ ವಾಜಿಗಳು, ಕೆರಳಿ (ಸಿಟ್ಟಾಗಿ), ಫಲುಗುಣನು+ ಅರ್ಧ ಚಂದ್ರದ ಸರಳಿನಲಿ ಸಾರಥಿಯ, ತುರಗವ, ಕರದ ಬಿಲ್ಲನು ಕಡಿಯೆ, ತೊಲಗಿದನು+ ಆ ಕೃಪಾಚಾರ್ಯ.
ಅರ್ಥ: ಕೃಪನು ರಥವನ್ನು ಸರಿಪಡಿಸಿ, ಚೇತರಿಸಿಕೊಂಡು, ಇವನ್ನು ಸಂಹರಿಸಿಕೋ ಎಂದು ಐದು ಬಾಣಗಳಿಂದ ಹೊಡೆದಾಗ ವು ಪಾರ್ಥನ ಕುದುರೆಗಳಿಗೆ ತಾಗಿದವು. ಅದರಿಂದ ಅವನ ರಥದ ಕುದುರೆಗಳು ನೊಂದವು. ಆಗ ಫಲ್ಗುಣನು ಕೆರಳಿ ಅರ್ಧ ಚಂದ್ರದ ತುದಿಯುಳ್ಳ ಬಾಣಗಳಿಂದ ಸಾರಥಿಯನ್ನ ಹೊಡೆದು, ಅವನ ರಥದ ಕುದುರೆಗಳನ್ನೂ ಹೊಡೆದು, ಕೃಪನ ಕೈಯಲ್ಲಿದ್ದ ಬಿಲ್ಲನ್ನೂ ಕಡಿದನು. ಆಗ ಆ ಕೃಪಾಚಾರ್ಯನು ಅಲ್ಲಿಂದ ಹೊಟುಹೋದನು.
ಅರ್ಥ:ಕುರು ಸೈನ್ಯದ ಮಹಹಾವೀರರೆಲ್ಲರೂ ಪಾರ್ತನಿಗೆ ಸೋತುದನ್ನು ಕಂಡು ಕೌರವರಾಯನ ಸೇನೆ, ಆಚ್ಚರಿಯಿಂದ ಬಾಯ ಬಿಟ್ಟುಕೊಂಡು ನೋಡಿತು. ಸಕಲ ಸೇನೆಯ ಎದುರಲ್ಲಿ ಶೂರರು ಸೋತು ಓಡಿದರು. ತಡವೇನು ತೆರದು ಎಲ್ಲರಿಗೂ ಕಾಣುವಂತೆ ಸೇನೆಗೆ ನಾಯಕರಿಗೆ, ಕುರುಸೇನೆಗೆ ಮುಜುಗರವಾಯಿತು. ಶ್ರೇಷ್ಠನಾದ ಭೀಷ್ನನು ಸೇನೆಯ ಮಾನವನ್ನು ಕಾಯಬೇಕೆಂದು ಹೇಳುತ್ತಾ, ಬೆರಳಲ್ಲಿ ಬಿಲ್ಲನ್ನು ಮಿಡಿದು ಬಾಣವನ್ನು ತೂಗುತ್ತ ಪಾರ್ಥನ ಆರ್ಭಟವನ್ನು (ಪರಾಕ್ರಮವನ್ನು) ತಡೆದನು.
ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ |
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ || ೫೦ ||
ಪದವಿಭಾಗ-ಅರ್ಥ: ಓಡಿದವರು+ ಅಲ್ಲಲ್ಲಿ ಧೈರ್ಯವ ಮಾಡಿತು+ ಅಚ್ಚಾಳು (ವೀರಭಟರು)+ ಒಗ್ಗಿನಲಿ ಹುರಿಗೂಡಿತು (ಧೈರ್ಯಹೊಂದಿತು)+ ಅಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ ಕೂಡೆ ಗರಿಗಟ್ಟಿತು ಚತುರ್ಬಲ ಜೋಡು ಮಾಡಿತು ಕವಿದುದು+ ಈತನ (ಭೀಷ್ಮನ ) ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ
ಅರ್ಥ: ಸೋತು ಹೆದರಿ ಓಡಿದವರು ಭೀಷ್ಮನು ಎದುರು ನಿಂತುದನ್ನು ನೋಡಿ ಅಲ್ಲಲ್ಲಿ ಧೈರ್ಯವನ್ನು ಮಾಡಿ, ವೀರಭಟರು ಒಗ್ಗಟ್ಟಾಗಿ ಧೈರ್ಯಹೊಂದಿದರು. ಸೇನೆಯ ಅಬ್ಬರ ನಿಮಿಷದಲ್ಲಿ ಮತ್ತೆ ಹೆಚ್ಚಾಯಿತು. ಅದರ ಕೂಡೆ ಚತುರ್ಬಲ ಗರಿಗಟ್ಟಿತು- ಹುರುಪುಗೊಂಡಿತು. ಎಲ್ಲಾ ಜೋಡಸಿಕೊಂಡು ಒಟ್ಟು ಮಾಡಿತು. ಹೀಗೆ ಸೇನೆ ಅರ್ಜುನನ್ನು ಕವಿದು ಮುತ್ತಿತು. ಭೀಷ್ಮನ ಜೊತೆ ಸೇರಿ ಘನ ಗಂಭೀರವಾದ ಭೇರಿಯ ಸದ್ದಿನೊಡನೆ ಬಹಳ ರಭಸದಿಂದ ಅರ್ಜುನನ ಮೇಲೆ ಎರಗಿತು.
ಅರ್ಥ: ಭೀಷ್ಮನು ಯುದ್ಧಕ್ಕೆ ಬರಲು, ಕೌರವನ ಸೇನೆಯ ಮಹಾರಥರು ಅರ್ಜುನನಿಗೆ ಕೂಗಿ ಹೇಳಿದರು,'ಪಾರ್ಥನೇ ಹೊರಟು ಹೋಗು, ಕೌರವ ರಾಯನ ಸೈನ್ಯದ ನಾಯಕ ಪಿತಾಮಹ ಭೀಷ್ಮನ ಕ್ರೋಧ ಮತ್ತು ಶಕ್ತಿ ದೊಡ್ಡದು. ನಿನಗೆ ಸಹಾಯಕ್ಕೆ ಬಂಧುಗಳು ಇದ್ದಾರೆಯೇ? ರುದ್ರನನ್ನೂ, ನಳಿನನಾಭ ಕೃಷ್ಣನನ್ನೂ ಕರೆಸಿಕೋ!, ಭೀಷ್ಮನ ಎದುರು ನೀನು ಶಿಶು. ಸುಮ್ಮನೆ ದೂರ ಸಾರು- ಸಾರು ಹೋಗು ಎನ್ನುತ್ತಾ ಕೂಗುವ, ಭೀಷ್ಮನ ಬಳಿಯ ಮಹಾರಥರ ಕಳಕಳ ಸದ್ದಿನ, ಕಹಳೆಯ, ಹೊಗಳುಭಟರ- ಪಾಠಕರ ಗುಂಪಿನ ಕೂಗಿನ, ಬಹಳ ಬಿರುದಿನ ಘೋಷಣೆಯೊಡನೆ ಬಂದನು ಆ ಭೀಷ್ಮ.
ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು |
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ || ೫೨ ||
ಪದವಿಭಾಗ-ಅರ್ಥ: ಪೂತುರೇ ಕಲಿ (ವೀರ) ಪಾರ್ಥ ಭುವನ ಖ್ಯಾತನಾದೈ ಕಂದ (ಮಗನೇ- ಅರ್ಜುನ ಮೊಮ್ಮಗನಾಗಬೇಕು), ದ್ರೋಣನ, ಸೂತಸುತ, ಕೃಪ, ಗುರುತನೂಜರ ಗೆಲಿದೆ ಬಳಿಕ+ ಏನು ಬೀತುದೇ (ಅವಧಿ ತೀರಿತೇ, ಅವಧಿ ಮಗಿಯಿತೇ) ನಿಮ್ಮ+ ಅವಧಿ ಕುರುಕುಲಜಾತವನು ಹರೆಗಡಿದು(ಹೆರೆ ಕಡಿದು) ನಿಮ್ಮಯ ಭೂತಳವನು+ ಆಳುವಿರೆ ನೀವು+ ಎಂದು+ ಎಚ್ಚನ+ ಆ ಭೀಷ್ಮ
ಅರ್ಥ: ಭಲೇ! ಕಲಿ ಪಾರ್ಥ! ಈ ಭೂಮಂಡಲದಲ್ಲಿ ಪ್ರಸಿದ್ಧನಾದೆಯಯ್ಯಾ! ಕಂದ!, ದ್ರೋಣನನ್ನೂ, ಸೂತಸುತ ಕರ್ಣನನ್ನೂ, ಕೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ ಗೆದ್ದೆ! ಬಳಿಕ ಇನ್ನೇನು? ನಿಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತೇ? ಕುರುಕುಲಜಾತ ವಂಶವನ್ನು ಪ್ರತ್ಯೇಕ ವಿಭಾಗ ಮಾಡಿಕೊಂಡು ನಿಮ್ಮ ಪಾಲಿನ ಭೂಮಿಯನ್ನು (ರಾಜ್ಯವನ್ನು) ನೀವು ಆಳುವಿರೇ? ಎಂದು ಹೇಳಿ ಆ ಭೀಷ್ಮನು ಅರ್ಜುನನ ಮೇಲೆ ಬಾಣಪ್ರಯೊಗ ಮಾಡಿದನು.
ಅರ್ಥ: ಭೀಷ್ಮನು ಯುದ್ಧಕ್ಕೆ ಬರಲು, ಕೌರವನ ಸೇನೆಯ ಮಹಾರಥರು ಅರ್ಜುನನಿಗೆ ಕೂಗಿ ಹೇಳಿದರು,'ಪಾರ್ಥನೇ ಹೊರಟು ಹೋಗು, ಕೌರವ ರಾಯನ ಸೈನ್ಯದ ನಾಯಕ ಪಿತಾಮಹ ಭೀಷ್ಮನ ಕ್ರೋಧ ಮತ್ತು ಶಕ್ತಿ ದೊಡ್ಡದು. ನಿನಗೆ ಸಹಾಯಕ್ಕೆ ಬಂಧುಗಳು ಇದ್ದಾರೆಯೇ? ರುದ್ರನನ್ನೂ, ನಳಿನನಾಭ ಕೃಷ್ಣನನ್ನೂ ಕರೆಸಿಕೋ!, ಭೀಷ್ಮನ ಎದುರು ನೀನು ಶಿಶು. ಸುಮ್ಮನೆ ದೂರ ಸಾರು- ಸಾರು ಹೋಗು ಎನ್ನುತ್ತಾ ಕೂಗುವ, ಭೀಷ್ಮನ ಬಳಿಯ ಮಹಾರಥರ ಕಳಕಳ ಸದ್ದಿನ, ಕಹಳೆಯ, ಹೊಗಳುಭಟರ- ಪಾಠಕರ ಗುಂಪಿನ ಕೂಗಿನ, ಬಹಳ ಬಿರುದಿನ ಘೋಷಣೆಯೊಡನೆ ಬಂದನು ಆ ಭೀಷ್ಮ.
ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು |
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ || ೫೨ ||
ಪದವಿಭಾಗ-ಅರ್ಥ: ಪೂತುರೇ ಕಲಿ (ವೀರ) ಪಾರ್ಥ ಭುವನ ಖ್ಯಾತನಾದೈ ಕಂದ (ಮಗನೇ- ಅರ್ಜುನ ಮೊಮ್ಮಗನಾಗಬೇಕು), ದ್ರೋಣನ, ಸೂತಸುತ, ಕೃಪ, ಗುರುತನೂಜರ ಗೆಲಿದೆ ಬಳಿಕ+ ಏನು ಬೀತುದೇ (ಅವಧಿ ತೀರಿತೇ, ಅವಧಿ ಮಗಿಯಿತೇ) ನಿಮ್ಮ+ ಅವಧಿ ಕುರುಕುಲಜಾತವನು ಹರೆಗಡಿದು(ಹೆರೆ ಕಡಿದು) ನಿಮ್ಮಯ ಭೂತಳವನು+ ಆಳುವಿರೆ ನೀವು+ ಎಂದು+ ಎಚ್ಚನ+ ಆ ಭೀಷ್ಮ
ಅರ್ಥ: ಭಲೇ! ಕಲಿ ಪಾರ್ಥ! ಈ ಭೂಮಂಡಲದಲ್ಲಿ ಪ್ರಸಿದ್ಧನಾದೆಯಯ್ಯಾ! ಕಂದ!, ದ್ರೋಣನನ್ನೂ, ಸೂತಸುತ ಕರ್ಣನನ್ನೂ, ಕೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ ಗೆದ್ದೆ! ಬಳಿಕ ಇನ್ನೇನು? ನಿಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತೇ? ಕುರುಕುಲಜಾತ ವಂಶವನ್ನು ಪ್ರತ್ಯೇಕ ವಿಭಾಗ ಮಾಡಿಕೊಂಡು ನಿಮ್ಮ ಪಾಲಿನ ಭೂಮಿಯನ್ನು (ರಾಜ್ಯವನ್ನು) ನೀವು ಆಳುವಿರೇ? ಎಂದು ಹೇಳಿ ಆ ಭೀಷ್ಮನು ಅರ್ಜುನನ ಮೇಲೆ ಬಾಣಪ್ರಯೊಗ ಮಾಡಿದನು.
ಅರ್ಥ: ನಿಮ್ಮ ಕರುಣೆಯ ನೋಟವೆ ನಮ್ಮ ಸಂಪತ್ತು, ರಾಜ್ಯ. ಅದಿಲ್ಲದೆ ಬೇರೆ ನಮಗೆ ಕಾಳಗದ ಸಾಧನೆಯಿಂದ ಜಯದ ವಿವರಣ ಯುದ್ಧವಿದ್ಯೆ ಫಲಿಸುವುದೆ? ನಿಮ್ಮ ಯುದ್ಧದ ಪರಿಣತಿಯ ಅಭಿಮಾನವು ನಿಮ್ಮ ಬಂದುಗಳಾದ ಮೊಮ್ಮಕ್ಕಳಿಗೆ ಅಪಾಯವಾಗುವುದೆ? ನಮಗೆ ಬೇರೆ ರಾಜ್ಯದ ಹೆಮ್ಮೆ ತಾನೇ ನಮಗೇಕೆ ಬೇಕು, ನಿಮ್ಮ ಪ್ರೀತಿ ಸಾಕು, ಎನ್ನುತ್ತಾ ಕೈಯಲ್ಲಿದ್ದ ಗಾಂಡೀವದಿಂದ ಅರ್ಜುನುನು ಬಾಣವನ್ನು ಹೊಡೆದ.
ಅರ್ಥ:ಈ ತಿನಿಸನ್ನು ತೆಗದುಕೋ ತಿನ್ನು (ನೋವು ಸಂಕಟ ಕಡಿಮೆಯಾಗುವುದು). ಯುದ್ಧದಲ್ಲಿ ಬಾಣದ ಶಸ್ತ್ರಗಳಸಮೂಹದ ಪೆಟ್ಟು ಯೋಧನ ಧಾರಾಸ್ತಂಭವು, ಅದು ಯೋಧನನ್ನು ಗಟ್ಟಿಮಾಡುವ ಕಟ್ಟಡದ ಕಂಬವಿದ್ದಂತೆ. ಇನ್ನು ಯುದ್ಧದಲ್ಲಿ ಅಂಜಬೇಡ, ಎನ್ನುತ್ತಾ ಮದ್ದಿನ ತುತ್ತನ್ನು ಕೊಡಲು, ಉತ್ತರನು ತಾನು ಸತ್ತು ಬದುಕಿದೆ ಎಂದು ಭಾವಿಸಿ ದುಗುಡದಲ್ಲಿ, ಬಹಳ ದುಃಖದಿಂದ ಯುದ್ಧದ ತಲೆಬುಡವನ್ನು ಅರಿಯದಿದ್ದ ನನ್ನನ್ನು ಇಲ್ಲಿ ಸಾರಥಿಯಾಗಿ ಕೂರಿಸಿ ಕೊಂದವನು ನೀನೋ ಭೀಷ್ಮನೋ ಯಾವನು? ಎನ್ನಲು ಅವನ ಮಾತಿಗೆ ಅರ್ಜುನನು ನಗುತ್ತಾ, ನಿಜ ನನ್ನದು ಅಪರಾಧವು ಉಂಟು, (ಅನಿವಾರ್ಯವಾಗಿ ನಿನ್ನ ಸಹಾಯ ಪಡೆದೆ) ಎಂದ.
ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು |
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ || ೫೭ ||
ಪದವಿಭಾಗ-ಅರ್ಥ: ಹದುಳಿಸು+ ಇನ್ನು+ ಅಂಜದಿರು, ಬಾಣ+ ಓಘದ (ರಭಸ) ವಿದಾರಣವು+ ಇದು (ಸೀಳುವಿಕೆ), ವಿಚಾರಿಸಲು+ ಎದೆ ಬಿರಿದು ತಾ ನೊಂದೆನು+ ಇದೆ ನೋಡು+ ಎನ್ನ ಗಾಯವನು, ಒದೆದುಕೊಳುತ (ಒದ್ದಾಡು)+ಐ+ ಇದಾನೆ ಸಿಂಧದ (ಬಾವುಟದ) ತುದಿಯ ಹನುಮನು ವಜ್ರಮಯ ದೇಹದಲಿ ನಟ್ಟವು ಕೋಲು, ಮುನಿದೊಡೆ ರುದ್ರನು+ ಈ ಭೀಷ್ಮ.
ಅರ್ಥ:ಅರ್ಜುನನು, 'ಉತ್ತರಾ ಚೇತರಿಸಿಕೋ, ಇನ್ನು ಅಂಜಬೇಡ, ನಾನು ನಿನ್ನನ್ನು ರಕ್ಷಿಸುವೆನು' ಎಂದ. 'ಈಗ ಆದುದು ಭೀಷ್ಮನ ಬಾಣದ ಅತಿರಭಸ, ವೇಗ; ಅದರಿಂದ ಕವಚದಲ್ಲಿ ಈ ಸೀಳುವಿಕೆ ಆಗಿದೆ. ಹಾಗೆ ನೋಡಿದರೆ ನಿನ್ನಂತೆ ಎದೆಯ ಕವಚ ಬಿರಿದು ನಾನೂ ನೊಂದೆನು. ಇದೆ ನೋಡು ನನ್ನ ಗಾಯವನ್ನು! ನೋವಿನಿಂದ ಒದೆದುಕೊಳ್ಳುತ್ತಾ ಇದ್ದಾನೆ ಬಾವುಟದ ತುದಿಯಲ್ಲಿ ಕುಳಿತ ಹನುಮನು. ಅವನ ವಜ್ರಮಯ ದೇಹದಲ್ಲಿ ಬಾಣಗಳು ನೆಟ್ಟವು! ಈ ಭೀಷ್ಮನು ಮುನಿದರೆ ರುದ್ರನಂತೆ ಭೀಕರನು ಎಂದು ಹೇಳಿದ,
ಅರ್ಥ:ಅರ್ಜುನನು ಉತ್ತರನಿಗೆ ಹೆದರಬೇಡ ಎಂದು ಹೇಳಿ, ಮೂರು ಅಂಬುಗಳಿಂದ ಗಂಗಾನಂದನ ಭೀಷ್ಮನನ್ನು ಆಕ್ರಮಿಸಿದನು. ಅವನ ಸಾರಥಿ ಪೆಟ್ಟಾಗಿ ನೊಂದನು; ಅವನ ರಥದ ಆ ಧ್ವಜದ ದಂಡಮುರಿಯಿತು. ಭೀಷ್ಮನ ರಥ ಪುಡಿಯಾಯಿತು. ಆಗ ಭೀಷ್ಮನು ಮುಂದೆ ಏನುಮಾಡಲೂ ತೋಚದೆ ಕೆಟ್ಟನು. ಆಗ ಭೀಷ್ಮನು ಪ್ರೀತಿಯಿಂದ ಅಹುದೋ ತಂದೆ/ಮಗನೇ! ಎನ್ನುತ್ತಾ ಸರಿಯಾಯಿತು ಎಂದು, ಆರು ಆಂಬಗಳಿಂದ ಕೋಪಗೊಂಡು ಪಾರ್ಥನನ್ನು ಹೊಡೆಯಲು, ಒಟ್ಟೊಟ್ಟಿಗೆ ಬಿಲ್ಲಿನಿಂದ ಚಿಮ್ಮಿ ಅಂಬುಗಳು ಹಾರಿದವು.
ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ |
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ || ೫೯ ||
ಪದವಿಭಾಗ-ಅರ್ಥ: ಒರತುದು+ ಅರ್ಜುನನ+ ಒಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ (ಕೆಂಪು ನೀರು)+ ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ ತರಿದನು+ ಎಡೆಯಲಿ ಭೀಷ್ಮನು+ ಉರೆ ಬೊಬ್ಬಿರಿದು ಬಳಿಕ+ ಆಗ್ನೇಯ ಬಾಣದಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ
ಅರ್ಥ:ಭೀಷ್ಮನು ಹೊಡೆದ ಬಾಣ ಅರ್ಜುನನ ದೇಹಕ್ಕೆ ತಾಗಿ ಅವನ ಒಡಲಿನಿಂದ ಕೆಂಪು ರಕ್ತ ಒಸರಿತು. ಅದು ದುರುದುರಿಸಿ ಸುರಿಯಿತು. ಆಗ ಅರ್ಜುನನು ಸುಧಾರಿಸಿಕೊಂಡು ಸಿದ್ಧನಾಗಿ ಗಟ್ಟಿ ನಿಂತು ಮಹಾ ಅಸ್ತ್ರವನ್ನು ಬಿಟ್ಟನು. ಅದನ್ನು ಭೀಷ್ಮನು ಮಧ್ಯದಲ್ಲಿ ತರಿದು ಹಾಕಿದನು. ಬಳಿಕ ಅರ್ಜುನನು ದೊಡ್ಡದಾಗಿ ಆರ್ಭಟಿಸಿ ಆಗ್ನೇಯ ಬಾಣದಗರಿಯನ್ನು ಕುರುಸೇನೆ ಕಳವಳಿಸುವಂತೆ ಮಂತ್ರಿಸಿ ಹೂಡಿ ಬಿಟ್ಟನು.
ಅರ್ಥ: ಅರ್ಜುನನಿಗೆ ವಿರೋಧದಿಂದ ಎದುರಿಸಿ ನಿಲ್ಲುವುದಾದರೆ, ಭೀಷ್ಮನಲ್ಲದೆ ಬೇರೆಯವರು ಪಾರ್ಥನ ದಿವ್ಯ ಬಾಣಗಳ ಸಮೂಹದ ಗಾರಾಗಾರಿಗೆ- ಆರ್ಭಟಕ್ಕೆ ಎದುರು ನಿಲ್ಲವುದುಂಟೇ? ಭೀಷ್ಮನ ಪರಾಕ್ರಮಕ್ಕೆ ಶೂರನಾದ ಧನಂಜಯನಲ್ಲದೆ ಎದುರಿನಲ್ಲಿ ಬೇರೆಯವರು ನಿಲ್ಲುವವರು ಉಂಟೇ? ಇಲ್ಲವೇ ಇಲ್ಲ; ಭುಜಗರು- ನಾಗರು, ಸುರರು- ದೇವತೆಗಳು, ಮಾನವರು- ನರರೊಳಗೆ ಕೆಲವರೂ ಕೂಡಾ ಇಲ್ಲವೇ ಇಲ್ಲ,' ಎಂದು ತನ್ನ ತೋರು ಬೆರಳನ್ನು ಅಡ್ಡ ಅಡ್ಡ ಒಲೆದು ಒಲೆದು, ಆಕಾಶದಲ್ಲಿ ದೇವತೆಗಳೊಡನೆ ಯುದ್ಧವನ್ನು ನೋಡುತ್ತಿದ್ದ ಇಂದ್ರನು ಹೇಳಿದನು.
ಟಿಪ್ಪಣಿ: ಇಲ್ಲಿ 'ಸೀತೆ ಬನದಲಿ ನವೆವಳೇ' ಇದಕ್ಕೆ ಇಲ್ಲಿ ಅರ್ಥ ಹೊಂದಿಸುವುದು ಕಷ್ಟ.
ಅರ್ಥ: ಭಲೇ! ರಕ್ಷಣೆಯಲ್ಲಿ ಪಾರ್ಥನು, ಬಿಲ್ಲು ವಿದ್ಯೆಯ ಹೆಚ್ಚುಗಾರಿಕೆಯಲ್ಲಿ ಭೀಷ್ಮನು, ಇವರು ಈ ಇಂದ್ರನನ್ನೂ ಮೀರಿಸಿದರಲ್ಲಾ! ಮಹಾದೇವ! ಇವರು ಹಿಂದೆ ಕೃತ- ತ್ರೇತಾಯುಗಗಳಲ್ಲಿ ಜನಿಸಿದ್ದರೆ, ಭೂಮಿಯನ್ನು ಹಿರಣ್ಯಾಕ್ಷನು ಕದ್ದೊಯ್ಯುತ್ತಿದ್ದನೇ? ಇಲ್ಲ! ಸೀತೆಯು ವನದಲ್ಲಿ (ರಾವಣನಿಂದ) ಕಷ್ಟಕ್ಕೆ ಒಳಗಾಗುತ್ತಿದ್ದಳೇ? ಎಂದು ಆಕಾಶದಲ್ಲಿ ನಿಂತು ನೋಡುತ್ತಿದ್ದ ದೇವತೆಗಳು ಎನ್ನುತ್ತಿದ್ದರು. ಇವರು ಆಗ ಇದ್ದಿದ್ದರೆ ಹಿರಣ್ಯಾಕ್ಷನನ್ನೂ, ನಂತರ ರಾವಣನ್ನೂ ಕೊಲ್ಲುತ್ತಿದ್ದರು ಎಂದು ಭಾವ.
ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ |
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ || ೬೩ ||
ಪದವಿಭಾಗ-ಅರ್ಥ: ಹಿಂದೆ ಕರ್ಣನ ಕೈಮೆಯನು(ಕೈ ಕೌಶಲ-ಶೌರ್ಯ), ಗುರು ನಂದನನ (ಅಸ್ವತ್ಥಾಮನ) ಬಿಲುಗಾರತನವನು, ಮಂದರ+ ಉಪಮ (ಪರ್ವತಕ್ಕೆ ಸಮಾನ) ಧೈರ್ಯವು+ ಆಚಾರಿಯನ (ದ್ರೋಣನ) ಪರಿಣತೆಯ ಇಂದು ಕೃಪನ+ ಅಗ್ಗಳಿಕೆಯನು(ಶ್ರೇಷ್ಠತೆಯನ್ನು) ನಲವಿಂದ ಕಂಡೆನು+ ಇದಾರ ಪರಿಯಲ್ಲೆಂದನು+ ಉತ್ತರನು+ ಅರ್ಜುನಗೆ ಗಾಂಗೇಯನ+ ಉರವಣೆಯ (ಪರಾಕ್ರಮವನ್ನು).
ಅರ್ಥ: ಉತ್ತರನು ಭೀಷ್ಮನ ಪರಾಕ್ರಮವನ್ನು ನೋಡಿ, ತಾನು ಇಂದು ಮೊದಲು ಕರ್ಣನ ಕೈ ಕೌಶಲ ಮತ್ತು ಶೌರ್ಯವನ್ನೂ, ಗುರು ನಂದನನಾದ ಅಸ್ವತ್ಥಾಮನ ಬಿಲ್ಲುಗಾರತನವನ್ನೂ, ಮಂದರ ಪರ್ವತಕ್ಕೆ ಸಮಾನ ಧೈರ್ಯವುಳ್ಳ ದ್ರೋಣಾಚಾರ್ಯನ ಪರಿಣತೆಯನ್ನೂ, ಕೃಪನ ಶ್ರೇಷ್ಠತೆಯನ್ನೂ ಸಂತಸದಿಂದ ಕಂಡೆನು. ಆದರೆ ಅದು ಯಾವುದೂ ಈ ಭೀಷ್ಮನ ಪರಾಕ್ರಮದ ಪರಿಯಲ್ಲ, ಇದು ಅವೆಲ್ಲವನ್ನೂ ಮೀರಿಸಿದೆ' ಎಂದು ಉತ್ತರನು ಅರ್ಜುನನಿಗೆ ಹೇಳಿದನು.
ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿನ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು |
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ || ೬೪ ||
ಪದವಿಭಾಗ-ಅರ್ಥ: ಎನೆ (ಉತ್ತರನು ಹಾಗೆ ಹೇಳಲು) ಕುಮಾರಕ ಕಾರ್ತವೀರ್ಯಾರ್ಜುನನು+ ಆತನ ತೋರ (ಬಲವಾದ) ತೋಳಿನ ಬನವ ಕಡಿದನು ವೀರಭಾರ್ಗವ ರಾಮನು+ ಅತಿ ಬಲನು, ಮುನಿದು ಮಲೆತೊಡೆ ಭೀಷ್ಮನು ಆತನ ಮನಕೆ ಭೀತಿಯನು ಇತ್ತನು+ ಈತನೊಳು+ ಎನಗೆ ಸರಿನೂಕುವದೆ ಕಾಳಗವು+ ಎಂದನು+ ಆ ಪಾರ್ಥ.
ಅರ್ಥ: ಉತ್ತರನು ಹಾಗೆ ಹೇಳಲು, ಕುಮಾರಕನೇ, ಕಾರ್ತವೀರ್ಯಾರ್ಜುನನು ಮಹಾವೀರ, ಸಾವಿರ ತೋಳುಗಳನ್ನು ಹೊಂದಿದ್ದ. ಆತನ ಬಲವಾದ ತೋಳಿನ ಕಾಡನ್ನೇ ವೀರಭಾರ್ಗವ ರಾಮನು ಕಡಿದನು. ಭಾರ್ಗವನು ಅತಿ ಬಲಶಾಲಿ. ಆ ಭಾರ್ಗವನು ಸಿಟ್ಟಿನಿಂದ ಯುದ್ಧಕ್ಕೆ ಬಂದರೆ ಭೀಷ್ಮನು ಆತನ ಮನಸ್ಸಿಗೇ ಭೀತಿಯನ್ನು ಉಂಟು ಮಾಡಿದನು. ಈತನಲ್ಲಿ ನನಗೆ ಸರಿಸಾಮಾನ ಯುದ್ಧಮಾಡಲು ಸಾಗುವುದೇ? ಎಂದನು ಆ ಪಾರ್ಥ.
ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ |
ಹುತ್ತ ಕುರಗನು ಬಗಿದು ಹೊಗುವವೊ
ಲುತ್ತರಿಸಿದವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ || ೬೫ ||
ಪದವಿಭಾಗ-ಅರ್ಥ: ಮತ್ತೆ ಗಂಗಾಸೂನು ಪಾರ್ಥನ ತೆತ್ತಿಸಿದನು+ ಐದಂಬಿನಲಿ, ರಥಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ ಹುತ್ತ (ತ್ರಿಶೂಲ) ಕುರಗನು ಬಗಿದು ಹೊಗುವವೊಲು+ ಉತ್ತರಿಸಿದವು ಸರಳು, ಮಿಗೆ ಧೃತಿವೆತ್ತು ಫಲುಗುಣನು+ ಅವರನು+ ಎಚ್ಚನು ಹತ್ತು ಬಾಣದಲಿ.
ಕುರಗ= ಅಕ್ಕಸಾಲಿಗರು ಮತ್ತು ಕಮ್ಮಾರರು ಉಪಯೋಗಿಸುವ ಅಡಿಗಲ್ಲು.
ಅರ್ಥ: ಪುನಃ ಭೀಷ್ಮನು ಪಾರ್ಥನನ್ನು ಐದು ಅಂಬುಗಳಿಂದ ಹೊಡೆದನು. ಆಗ ರಥಕಿತ್ತು ಮಗುಚಲು, ಪಾರ್ಥನು ಮೂರು ವಜ್ರಾಸ್ತ್ರದಲಿ ತ್ರಿಶೂಲವು ಕುರಗವನ್ನು ಬಗಿದು ಹೊಗುವಂತೆ ಪಾರ್ಥನ ಬಾಣಗಳು ಉತ್ತರಿಸಿ ರಥವನ್ನು ಪುನಃ ಕೀಲಿಸಿ ಸರಳು ಮಿಗುವಂತೆ ನಿಲ್ಲಿಸಿದವು. ಧೃತಿವೆತ್ತು- ಗಟ್ಟಿ ಮನಸ್ಸಿನಿಂದ ಫಲ್ಗುಣನು ಅವರನ್ನು ಹತ್ತು ಬಾಣಗಳಿಂದ ಹೊಡೆದನು.
ಅರ್ಥ: ಅರ್ಜುನನ ಬಾಣಗಳಿಂದ ಭೀಷ್ಮನ ಎದೆ ದೇಹ ಬಿರಿಯುವಂತೆ ಗಾಯವಾಯಿತು. ಅವನ ಮೈ ಝೋಂಪಿಸಿ ತೂಗಾಡಿತು. ಸಲೆಮತ್ತೆ ಅದನ್ನು ತರಹರಿಸಲು- ಸುಧಾರಿಸಿಕೊಳ್ಳಲಾರದೆ ರಥದ ಕಂಬಕ್ಕೆ ಕಣ್ಣುಮುಚ್ಚಿ(ಮಲಗಿ) ಒರಗಿ ನಿಂತನು. ಅರರೆ! ಭೀಷ್ಮನು ಸೋತನು; ಇನ್ನೇನು ಗತಿ, ಉರಿದುದೋ ಕುರುಸೇನೆಯು ಭಸ್ಮವಾಗುದೋ ಎಂದು, ಯಾವ ಕಡೆ ರಕ್ಷಣೆ ಇದೆ ಎನ್ನುತ್ತಾ ಸೇನೆ ಭಯದಿಂದ ಬಾಯ್ಬಿಡುತ್ತಿರಲು ಕೌರವರಾಯನು ಬಂದು ಪಾರ್ಥನನ್ನು ಎದುರಿಸಿದನು.
ಅರ್ಥ: ಸೀಳು ನಾಯಿಯಂತೆ ಬಾಯಿಯುಳ್ಳ (ವೀರರಾದ) ಕೆಲಬಲದಲ್ಲಿರುವ ಯೋಧರ ಹಂಗಿನಲ್ಲಿ ದೊರೆಯು ಇರುವನೇ? ಸುಭಟರಾದವರ ಕೆಲವರ ಸೋಲು ಅದು ರಾಜನಿಗೆ ಸೋಲು ಆದ ಹಾಗೆಯೇ? ಅಲ್ಲ. ನೂಕು ನೂಕು- ನುಗ್ಗು ನುಗ್ಗು ಎನ್ನುತ್ತಾ ಬಾಣಗಳ ರಾಶಿಯ ಕಟ್ಟನ್ನು ಬಿಚ್ಚಿ ಹೊಂದಿಸಿಕೊಂಡು ಬಾವುಟದ ಮೇಲೆ ಹಾವಿನ ಚಿನ್ಹೆಹನ್ನು ಹಾಕಿ ಸಾರಥಿ ಸೇರಿಕೊಳ್ಳಲು ಕೌರವನ ರಥವನ್ನು ಬೆಂಬಲಕ್ಕೆ ಸುತ್ತುವರಿದು ಅತಿರಥರು ಬಂದು ಸೇರಿಕೊಂಡರು.
ಅರ್ಥ:ಕೌರವನು, ಪಾರ್ಥನೇ, ನೀನು ಬಾಲರನ್ನೂ ವೃದ್ಧರನ್ನೂ, ಬ್ರಾಹ್ಮಣರನ್ನೂ ಯುದ್ಧದಲ್ಲಿ ಓಡಿಸಿದೆನೆಂದು ಬಹಳ ಅಹಂಕಾರ ಪಡಬೇಡ. ನೀನು ಮರುಳಾದೆಯೋ! ನಿನಗೆ ಈ ಹಿಂದೆ ಹನ್ನರಡು ವರ್ಷ ಆಳಿದ ಅಡವಿಯ ರಾಜ್ಯವಲ್ಲದೆ ಮೇಲೆ ಬೇರೆ ರಾಜ್ಯವನ್ನು ಬಯಸಿದರೆ, ನಿಮಗೆ ಆಳಲು ನಾನು ಕೊಡುವೆನೆ? ಎಂದಿಗೂ ಕೊಡಲಾರೆ. ಹೋಗು ಹೋಗು ಪುನಃ ಆರಣ್ಯಕ್ಕೆ,' ಎನ್ನತ್ತಾ ಅವನನ್ನು ಬಾಣದಿಂದ ಹೊಡೆದನು.
ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ |
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ || ೭೨ ||
ಪದವಿಭಾಗ-ಅರ್ಥ: ಗಾರುಗೆಡುಯದಿರು (ಗಾಬರಿಯಾಗದಿರು)+ ಎಲವೊ ಸತ್ಯವ ಮೀರಲು+ ಅಮ್ಮದೆ (ಸಾಧ್ಯವಾಗದೆ) ಲೋಕ ನಿನ್ನನು ದೂರ ಬೇಕೆಂದು+ ಅಡವಿಯೊಕ್ಕೆವು ಹೊಲ್ಲೆಯು (ತಪ್ಪು)+ ಏನು+ ಇದಕೆ ಜಾರಿ ಹೋಯಿತ್ತು+ ಅವಧಿಯು+ ಇನ್ನು+ ಈ ಮೀರಿ ಗಳಹುವ (ಹೇಳುವ) ನಿನ್ನ ಗಂಟಲನು+ ಊರಿ ರಾಜ್ಯವ ತೆಗೆವೆ ಸೈರಿಸು ಎನ್ನುತ್ತ ನರನು+ ಎಚ್ಚ.
ಈ ಮೀರಿ ಗಳಹುವ (ತೂಕವಿಲ್ಲದ ಮಾತನಾಡುವ, ಹೇಳುವ) ನಿನ್ನ ಗಂಟಲನು+ ಊರಿ ರಾಜ್ಯವ ತೆಗೆವೆ= ಕಾಲಲ್ಲೆ ಗಂಟಲನ್ನು ಮೆಟ್ಟಿ ತಿಂದಿದ್ದನ್ನು ಹೊರತೆಗೆಯುವುದು.
ಅರ್ಥ:ಅರ್ಜುನನು ಹೇಳಿದ, 'ದುರ್ಯೋಧನಾ, ನಾನು ಹೇಳುವುದನ್ನು ಕೇಳಿ ಗಾಬರಿಯಾಗಬೇಡ. ಎಲವೊ ಸತ್ಯವ ಮೀರಲಾರದೆ ಮತ್ತು ಲೋಕವು ನಿನ್ನನು ಮೋಸಗಾರನೆಂದು ದೂರ ಬೇಕೆಂದು ಅಡವಿಯನ್ನು ಹೊಕ್ಕೆವು. ಇದರಲ್ಲಿ ತಪ್ಪೇನು? ಈಗ ವಚನ ಕೊಟ್ಟ ಅವಧಿಯು ಜಾರಿ ಹೋಯಿತು (ಮುಗಿಯಿತು). ಇನ್ನು ಈ ಮಿತಿಮೀರಿ ಒದರುವ ನಿನ್ನ ಗಂಟಲನ್ನು ಕಾಲಲ್ಲಿ ಮೆಟ್ಟಿ ನಿನ್ನಿಂದ ರಾಜ್ಯವನ್ನು ತೆಗೆವೆವು. ಈಗ ಸಹಿಸಿಕೋ ಎಂದು ಹೇಳಿ ಪಾರ್ಥನು ಬಾಣದಿಂದ ಹೊಡೆದನು.
ಅರ್ಥ: ಕೌರವನು ಅರ್ಜುನನಿಗೆ, 'ನೀನು ತಿಳಿದಿಲ್ಲ ಎಲೆ ಮರುಳೆ, ಗರುಡನ ಅಟ್ಟಿಸುವಿಕೆಯ ಸಮಯದಲ್ಲಿ ಹಾವು ಭೂಮಿಯಲ್ಲಿ ಕನ್ನವನ್ನು ಕೊರೆದು ಬದುಕುವದು ಸಾಧ್ಯವೇ? ನೀನು ವ್ಯರ್ಥವಾಗಿ ಬಯಸುವೆ; ಭೂಮಿಯ ಮೇಲಿನ ಆಸೆ ನಿನಗೇಕೆ? ನನಗೆ ನೀವು ಉರುವಲು ಸೌದೆಯಂತೆ; ನಿಮ್ಮ ಐದೂ ಜನರನ್ನು ಚೂರು ಚುರು ಮಾಡಿ ಐದು ಜನರ ತಲೆಬುರುಡೆಯನ್ನು ಕವಣೆಯಲ್ಲಿಟ್ಟು ತಿರಿಕಲ್ಲಾಡುವೆನು. ಅರ್ಜುನ ಬರಿದೆ ಹರಟಬೇಡ, ಎನ್ನುತ್ತಾ ಕೌರವರಾಯನು ಬಾಣವನ್ನು ತೆಗೆದು ಹೊಡೆದ.
ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪
ಪದವಿಭಾಗ-ಅರ್ಥ: ಗರುಡ ನೀನು+ ಅಹೆ(ಆಗಿರುವೆ), ನಿನ್ನ ಪಕ್ಕವ ಮುರಿದು ಹೆಡತಲೆಗೆ+ ಅಡರಿ (ಏರಿ) ಬೆನ್ನೆಲು ಮುರಿಯೆ ದುವ್ವಾಳಿಸುವ (ಆಕ್ರಮಿಸುವ) ಮುರರಿಪುವು(ಮುರ ರಾಕ್ಷಸನನ್ನು ಕೊಂದ ಕೃಷ್ಣ - ನಾನು, ಅಂಥವನು) ಎನ್ನ ನೀನು+ ಅರಿಯೆ ತರಹರಿಸಿ (ಸುಧಾರಿಸಿಕೊಂಡು) ಕಲಿಯಾಗುಯೆಂದು+ ಅಬ್ಬರಿಸಿ ಕೌರವನ+ ಎದೆಯ ನುಗುಳಿದನು+ ಎರಡು ಬಾಣದೊಳು+ ಅರುಣ ಜಲದ (ಕೆಂಪು ನೀರು - ಕೆನ್ನೀರು)+ ಒರೆತೆಗಳ ಕಾಣಿಸಿದ.
ಅರ್ಥ: ನೀನು ಗರುಡ ಆಗಿರುವೆಯೋ! ನಿನ್ನ ಪಕ್ಕವ ಮುರಿದು ಹೆಡತಲೆಗೆ ಏರಿ, ಬೆನ್ನೆಲುಬು ಮುರಿಯುವಂತೆ ಆಕ್ರಮಿಸುವ ಮುರರಿಪುವು ನಾನು; ನನ್ನನ್ನು ನೀನು ಇನ್ನೂ ಅರಿತಿಲ್ಲ. ಸುಧಾರಿಸಿಕೊಂಡು ಶೂರತನ ತೋರು, ಎಂದು ಅಬ್ಬರಿಸಿ ಕೌರವನ ಎದೆಯನ್ನು ಎರಡು ಬಾಣದಿಂದ ಹೊಡೆದು ಕವಚವನ್ನು ಹೊಗುವಂತೆ ಮಾಡಿದನು, ಹಾಗೆ ಅವನ ಎದೆಯಲ್ಲಿ ಗಾಯಮಾಡಿ ಕೆನ್ನೀರಿನ ಒರೆತೆಗಳನ್ನು ಕಾಣಿಸಿದ- ರಕ್ತ ಒಸರುವಂತೆ ಮಾಡಿದ.
ಅರ್ಥ: ಕೌರವನಿಗೆ ಆಗ ಹಾನಿಕಾರಕವಾಗಿ ಅವನ ಅವನು ಉಟ್ಟ ಧೋತರ ಇತರೆ ಬಟ್ಟೆಗಳು ರಕ್ತದಲ್ಲಿ ತೋದವು. ಅವನ ಲವಲವಿಕೆ ಹೋಗಿ ಚಲಿಸಲಾರದೆ ಸಾರಥಿಗೆ ಸೂಚಿಸಲು ಅವನು ರಥವನ್ನು ಹಿಂದಕ್ಕೆ ಮರಳಿಸಿದನು. ಆದರೆ ಅರ್ಜುನನು ಅವನನ್ನು ತಡೆದು, ಹಂಗಿಸಿದನು 'ಕೌರವನ ಪಲಾಯನವನ್ನು ಅಕಟಕಟ ನೋಡಲು ಸಾಧ್ಯವಿಲ್ಲ! ಶೂರ ಕ್ಷತ್ರಿಯರು ಓಡುವುದು ಪಂಥವೆ? ಹೆದರಿ ಓಡಬೇಡ ತಿರುಗಿ ಬಂದು ನಿಲ್ಲು. ನಿನ್ನನ್ನು ನಾನು ಕೊಲ್ಲವುದಿಲ್ಲ,' ಎಂದ.(ನಿರಾಯುಧರನ್ನು, ಓಡುವವರನ್ನು ಹೊಡೆಯುವುದಿಲ್ಲ, ಭೀಮನ ಶಪಥವಿದೆ. ಆದ್ದರಿಂದ ಅರ್ಜುನ ಕೊಲ್ಲಲಾರ)
ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ |
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ || ೭೬ ||
ಪದವಿಭಾಗ-ಅರ್ಥ: ಮಾತು ಹಳಸದ ಮುನ್ನ ಕೈಗಳು ಸೋತು ತೆಗೆದವೆ? ಹೊಳ್ಳುವಾತು+ ಇದು ನೀತಿಯೇ ನರಪತಿಗಳಿಗೆ ಬಹು ಭಂಗವು+ ಅನ್ವಯಕೆ? ಭೀತನಲ್ಲದೆ ಕಾದಿ ಮಡಿದನ ಮಾತುಗಳಲಾ (ಹೊಗಳಿ ಮಾತನಾಡುವುದು) ಪುಣ್ಯಕಥನವು. ಭೂತಳ+ ಅಧಿಪ(ಭೂಮಿಯನ್ನು ಆಳುವ ರಾಜ) ಮರಳಿ ನೋಡು+ ಎನ್ನಾಣೆ ನೀನು+ ಎಂದ.
ಅರ್ಥ: ಅರ್ಜುನಹು, 'ಕೌರವಾ ಪೌರಷದ ಮಾತು ಆಡಿ ನಿಮಿಷ ಕಳೆದಿಲ್ಲ, ಅದು ಹಳಸುವುದಕ್ಕೂ ಮೊದಲು, ನಿನ್ನ ಕೈಗಳು ಸೋತು ಯುದ್ಧವನ್ನು ಕೈಬಿಟ್ಟವೇ? ರಾಜ್ಯವಾಳುವ ನರಪತಿಗಳಿಗೆ ಜೊಳ್ಳುಮಾತು ಆಡುವುದು ನೀತಿಯೇ: ನೀನು ಓಡುವುದು ನಿನ್ನಕುಲದ ಅನ್ವಯ- ವಂಶ ಪರಂಪರೆಗೇ ಬಹಳ ಭಂಗವು- ದೊಡ್ಡ ಅವಮಾನ. ಭೀತಿಪಡದೆ ಯುದ್ಧಮಾಡಿ ಸಾವುಪಡೆದವನನ್ನು ಹೊಗಳಿ ಮಾತನಾಡುವುದು ಪುಣ್ಯಕಥನವಲ್ಲವೇ! ನೀನು ಆ ಪುಣ್ಯವನ್ನು ಪಡೆ! ಭೂತಳದ ರಾಜಾ! ನೀನು ಹಿಂತಿರುಗಿ ನೋಡು, ಬಾ ಯುದ್ಧಕ್ಕೆ ನನ್ನಾಣೆ,' ಎಂದ.
ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ (ಪಾ- ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ |
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ || ೭೭ ||
ಪದವಿಭಾಗ-ಅರ್ಥ: ಹುರುಳುಗೆಟ್ಟುದು ಗರುವತನವೆಂದು+ ಅರಸ ನಾಚಿದನು+ ಅಧಿಕ ಶೌರ್ಯೋತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ ದೊರೆಯ ದುಗುಡವ ಕಂಡು ತಮ ತಮಗೆ+ ಉರವಣಿಸಿದರು(ಪರಾಕ್ರಮವನ್ನು ತೋರಿಸಿದರು)- ಸಕಲ ಸುಭಟರು, ಹೊರಳಿಗಟ್ಟಿತು ಸೇನೆ ನಿಚ್ಚಟರು (ಧೃಡ ಸಂಕಲ್ಪರು)+ ಅಳಿವ (ಸಾವನ್ನು) ನಿಶ್ಚಯಿಸಿ.
ಅರ್ಥ:ಕೌರವನ ಗರ್ದದ ಠೀವಿಯ ಪೌರಷತನ ಹುರುಳುಗೆಟ್ಟುಹೋಯಿತು, ಅವಹೇಳನಕರವಾಯಿತು ಎಂದು ಅರಸ ಕೌರವನು ಬಹಳ ನಾಚಿಕೊಂಡನು. ಅದರಿಂದ ಅವನು ಪುನಃ ತನ್ನ ಹಿರಿಮೆಯನ್ನು ತೋರಿಸಲು, ಶೌರ್ಯದ ಉತ್ಕರ್ಷೆಯಲ್ಲಿ- ಉಬ್ಬರದಲ್ಲಿ ಶೂರನಾಗಿ ತಿರುಗಿ ನಿಂತನು. ಮತ್ತೆ ಯುದ್ಧಕ್ಕೆ ನಿಂತ ದೊರೆಯ ಚಿಂತೆಯನ್ನು ಕಂಡು, ಕೌರವನ ಕಡೆಯ ಎಲ್ಲಾ ವೀರರು ತಮ ತಮಗೇ ಉತ್ತೇಜನ ಪಡೆದು ಪರಾಕ್ರಮವನ್ನು ತೋರಿಸಿದರು. ಸಕಲ ಸುಭಟರ ಸೇನೆಯು ಪುನ: ಯುದ್ಧಕ್ಕೆ ಹುರುಪುಹೊಂದಿತು. ಅವರು ಧೃಡ ಸಂಕಲ್ಪರಾಗಿ ಸಾವನ್ನು ನಿಶ್ಚಯಿಸಿ ಯುದ್ಧಕ್ಕೆ ನಿಂತರು.
ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು |
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು || ೭೮ ||
ಪದವಿಭಾಗ-ಅರ್ಥ: ನೊಂದನು+ ಅವನಿಪನಿ+ ಇಂದು ಪಾರ್ಥನಕೊಂದು ತೋರುವೆನು+ ಎಂದು ರವಿಸುತನು+ ಒಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು, ಒಂದು ಕಡೆಯಲಿ ಮಸಗಿದರು= ಮುತ್ತಿದರು->. ಗುರುನಂದನನು ವೃಷಸೇನ ಸೈಂಧವರು+ ಒಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು
ಅರ್ಥ: ರಾಜ ಕೌರವನು ಬಾಣದ ಪಟ್ಟಿನಿಂದ ನೊಂದನು. ರವಿಸುತ ಕರ್ಣನು ತನ್ನ ದೊಡ್ಡ ಬಿಲ್ಲನ್ನು ಜೇಂಕಾರ ಮಾಡಿ ಇಂದು ಪಾರ್ಥನನ್ನು ಕೊಂದು ತೋರಿಸುತ್ತೇನೆ ಎಂದು ಒಂದು ದಿಕ್ಕಿನಲ್ಲಿ ಆರ್ಭಟಿಸಿದನು. ಮತ್ತೊಂದು ಕಡೆಯಲ್ಲಿ ಮಸಗಿದರು ಗುರುನಂದನ ಅಶ್ವತ್ಥಾಮ, ವೃಷಸೇನ, ಸೈಂಧವರು, ಮತ್ತೆ ಇನ್ನೊಂದು ಕಡೆಯಲ್ಲಿ ಭೀಷ್ಮ, ಕೃಪ, ದುಶ್ಶಾಸನ ಮೊದಲಾದವರು ಅರ್ಜುನನ್ನು ಮುತ್ತಿದರು.
ಅರ್ಥ: ಗುರು ದ್ರೋಣನು ಸಿಟ್ಟಿನಿಂದ) ಹೊಕ್ಕನು ಆ ಕೂಡಲೆ ವೀರಾವೇಶಹೊಂದಿದನು. ಬಾಹ್ಲಿಕನು, ಶೋಭಿಸುತ್ತಿದ್ದ ಕಳಿಂಗನು, ಸುಕೇತು, ಭೂರಿಶ್ರವನು, ದುಸ್ಸಹನು, ಇವರೆಲ್ಲಾ ಪಾರ್ಥನನ್ನು ಒಂದು ಕಡೆಯಿಂದ ಮುತ್ತಿದರು. ವೇಗವಾಗಿ ಚಲಿಸುವತ್ತಿರುವ ರಥದಲ್ಲಿ ರಥಕರು ಮತ್ತು ಸೈನ್ಯ ಸುತ್ತ ಆವರಿಸಿಕೊಂಡು ಶೂರ ಧನಂಜಯನನ್ನು ಮುತ್ತಿತು.
ಅರ್ಥ:ಅರ್ಜುನನ್ನು ಶತ್ರುಸೇನೆಯು ಆಕ್ರಮಿಸಿ ಮೇಲೆ ಬಿದ್ದತು. ಅದು ಲೋಕವನ್ನೇ ನುಂಗಿ ಕುಣಿಯಲು ಅಪೇಕ್ಷಿಸಿದ ತಾಂಡವ- ಶಿವನ ರಂಗಭೂಮಿಯನ್ನು ತೊಳೆಯುವ ಸಮುದ್ರದ ವೈಖರಿಯಲ್ಲಿತ್ತು. ಸೋತವರ ಮರು ಆಕ್ರಮಣದಲ್ಲಿ ದುರ್ಯೋಧನನ ಸರ್ವಾಂಗಬಲ- ಸೈನ್ಯ ಜೋಡಿಸಿಕೊಂಡು ನಿಂತಿತು. ಇದನ್ನು ನೋಡಿ ವಿರಾಟನ ಮಗ 'ಈಗ ನಮ್ಮ ಜೀವ ಉಳಿಯಲು ಉಪಾಯವೇನು,' ಎಂದು ಚಿಂತೆಗೆ ಒಳಗಾದ. ಅವನು ಇನ್ನು ನಾವು ಬದುಕಿ ಉಳಿಯುವಂತಿಲ್ಲ ಎಂದು ಭಾವಿಸಿದ.
ಅರ್ಥ:ಅತಿಯಾಗಿ ತುಂಬಿದ ದಟ್ಟೈಸಿದ ಕತ್ತಲೆಯ ಥಟ್ಟು ಸೂರ್ಯನನ್ನೇ ಓಡಿಸುವಂತೆ, ಆನೆಗಳಂತಿರುವ ಮೇಘದ ಸೇನೆಯು ವಾಯುವನ್ನು ಮುರಿದು ಔಕಿ ಒತ್ತಿ ಅವನ ಸೆರಗನ್ನು ಹಿಡಿವಂತೆ, ನುಗ್ಗಿ ಒತ್ತಾಗಿ ಆವರಿಸಿ ಕೌರವನ ಸೇನೆ ಆರ್ಭಟಿಸಿ ಹೆಣಗಳನ್ನು ತುಳಿದು ದಾಟಿ ಅರ್ಜುನನ ಮೇಲೆ ನುಗ್ಗಿ ಬರಲು ಪಾರ್ಥನು ಸನ್ಮೋಹನಾಸ್ತ್ರವನ್ನು ಹೂಡಿದನು .
(ಕವಿಗೆ, ಗ್ರಾಮ್ಯ ದೇಶಿ ಮಾರ್ಗ ಎಲ್ಲಾಬಗೆಯ ಪದಗಳ ಆಳ ಜ್ಞಾನ ಇರುವುದನ್ನು ಕಾಣಬಹುದು. ಅವನಿಗೆ ಭಾವ ಅಭಿವ್ಯಕ್ತಿಗೆ ಕನ್ನಡ ಪದಗಳ ಬರ ಇಲ್ಲ.)
ಅರ್ಥ:ಅರ್ಜುನನು ಸನ್ಮೋಹನದ ಅಸ್ತ್ರವನ್ನು ಪ್ರಯೋಗಿಸಲು, ಅದು ಎಲ್ಲಾ ಸೇನೆಯಲ್ಲಿಯೂ ಆವರಿಸಿತು. ಆಗ ಸೇನೆಯ ಎಲ್ಲಾ ಭಟರೂ ಅತಿನಿದ್ರೆಯ ಜಡತೆಯ ತೊಂದರೆಯಿಂದ ಕಂಗೆಟ್ಟ ಮನಸ್ಸಿನವರಾಗಿ ಮೈಯ್ಯನ್ನು ಒಲೆದು- ಒಲೆದು, ಉಸುರನ್ನು ಮೆಲ್ಲನೆ ಬಿಡುತ್ತಾ, ನಾಡಿಯು ಮೆಲ್ಲನೆ ಬಡಿಯಲು, ಎಲ್ಲಾ ಕುರುಸೇನೆ ಗೊರಕೆಯನ್ನು ಗುರುಕಿಡುತ ಕೊರೆದರು; ಅವರು ತಲೆಮುಸುಕು ಹಾಕಿದಂತೆ ತಲೆಯನ್ನು ಬಗ್ಗಿಸಿದರು ಮತ್ತು ನಿದ್ದೆಯಲ್ಲಿ ಸುರುಳಿಯಾಗಿ ರಾಶಿಯಾಗಿ ಬಿದ್ದರು. (ಗೊರಕೆ ಹೊಡೆದರು- ಗೊರಕೆ ಕೊರೆದರು. ಗೊರಕೆ ಕೊರೆಯುವುದು ಪದವೂ ರೂಢಿಯಲ್ಲಿದೆ.)
ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು |
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು || ೮೩ ||
ಪದವಿಭಾಗ-ಅರ್ಥ:(ಕದುರೆಗಳು) ತನುವನು+ ಒಲೆದವು ದಡದಡಿಸಿ ಕಿವಿಗೊನೆಯ ಜೋಲಿಸು+ ಅಲ್ಲಿ ಮಡಿಗಾಲಿನಲಿ ಕುಸಿದವು ಕೊರಳ ಮರಳಿಚಿ (ಕೊರಳ ಮಡಿಚಿ); ಕೈಯ್ಯನು+ ಒಳಗಿಟ್ಟು ತೊನೆದು ಕೆಡೆದವು (ಬಿದ್ದವು) ಜೋಧರು (ಯೋಧರು)+ ಆಗಳು; ಕನಲಿ (ಸಿಟ್ಟಿನಿಂದ) ಕೆಡೆದರು (ಬಿದ್ದರು) ಗುರು ನದೀಜರು+ ಘನ ಬಲಂಗಳೊಳು+ ಅಯುತ ಕೋಟಿ ಗಜಂಗಳು+ ಉರುಳಿದವು.
ಅರ್ಥ: ಕದುರೆಗಳು ದೇಹವನ್ನು ದಡದಡಿಸಿ ನಿದ್ದೆಯ ಜೋಂಪಜನಲ್ಲಿ ಒಲೆದವು. ಅವು ಜೋಂಪಿನಲ್ಲಿ ತಮ್ಮ ಕಿವಿಗೊನೆಯ ಜೋಲಿಸಿಸಿದವು, ಮತ್ತೆ ಅಲ್ಲಿ ಕಾಲನ್ನು ಮಡಿಸಿ, ಮಡಿಗಾಲಿನಲಿ ಕೊರಳ ಮಡಿಚಿ ನೆಲಕ್ಕೆ ಕುಸಿದವು; ಆಗ ಯೋಧರು ಕೈಯ್ಯನ್ನು ಒಳಗಿಟ್ಟು ತೊನೆದು ಕೆಳಗೆ ಬಿದ್ದರು. ಗುರು ದ್ರೋಣರು ಮತ್ತು ನದೀಜರಾದ ಭೀಷ್ಮರು ಸಂಮೊಹನ ಅಸ್ತ್ರ ಉಪಯೋಗಿಸಿದ್ದಕ್ಕಾಗಿ ಸಿಟ್ಟು ಮಾಡಿದರು ಆದರೆ ನಿದ್ದೆಯ ಜೋಂಪಿನ್ನಿ ಅಲ್ಲಿಯೇ ಕೆಡೆದು ಮಲಗಿದರು. ಆ ದೊಡ್ಡ ಸೈನ್ಯದಲ್ಲಿ ಸಾವರಾರುಕೋಟಿ ಆನೆಗಳು ನಿದ್ದೆಯಲ್ಲಿ ಉರುಳಿ ನೆಲಕ್ಕೆ ಬಿದ್ದವು.
ಅರ್ಥ:ಅತಿರಥರು ಬಿಲ್ಲು ಅದರ ದಾರ ತಪ್ಪಿ ಸೆಳೆದು- ಸೆಟೆದು ನೆಟ್ಟಗಾಯಿತು, ಆಯುಧಗಳು ಕೈಯಿಂದ ಜಾರಿದವು; ಆಗ ಒಬ್ಬರನು ಮತ್ತೊಬ್ಬರ ಬದಿಗೆ - ಮೇಲೆ ಮಲಗಿದರು; ಅವರ ಬೆನ್ನ ಬತ್ತಳಿಕೆ ಬದಿಯೊಳಗೆ ಅಡಗಿತು. ಅವರ ತೋಳುಗಳ ತಲೆಯನ್ನು ಆನಿಸಿದವು; ಆಗ ಅವರು ಗುರುಗುರಿಸಿ ಗೊರಕೆಯೊಡನೆ ರಥದೊಳಗೆ ಇರುವಂತೆಯೇ ಸಾರಥಿಯ ಜೊತೆಗೇ ನಿದ್ರೆಯು ಆವರಿಸಿದ ಜೊಂಪಿನಲ್ಲಿ ಜೊಂಪಿನಮೇಲೆ ಮೈಮರೆತು ಒರಗಿದರು.
ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ |
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ || ೮೬ ||
ಪದವಿಭಾಗ-ಅರ್ಥ: ಸರಳ ಸೊಕ್ಕು+ ಅವಗಡಿಸಿ ಸಲೆ ಮೈಮರೆದನು+ ಇತ್ತಲು ದ್ರೋಣ ರಥದಲಿ, ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ, ಕರದ ಬಿಲು ಶರ ಸರಿಯೆ ಕಂಗಳು ಮುರಿಯೆ ಕರ್ಣನು ಕೆನ್ನೆಗೆ+ ಎದೆಯೊಳು ದುರುಳ ದುರ್ಯೋಧನ ಸಹಿತ ಮೈಮರೆದುದು+ ಅರಿಸೇನೆ
ಅರ್ಥ:ಇತ್ತ ಒಂದುಕಡೆ ದ್ರೋಣನು ತನ್ನ ಭಾಣಗಳ ಸೊಕ್ಕಿನ ಶಕ್ತಿಯನ್ನು ತಗ್ಗಿಸಿ ಪೂರಾ ಮೈಮರೆತು ರಥದಲ್ಲಿ ಮಲಗಿದನು. ಅವನು ತನ್ನ ಮಗ ಅಶ್ವತ್ಥಾಮನ ಸಹಿತ ಪೂರಾ ನಿದ್ರೆಯಲ್ಲಿ ಮುಳುಗಿದನು. ಅವನ ಕೈಯಲ್ಲಿದ್ದ ಬಿಲ್ಲು ಶರ- ಬಾಣಗಳು, ಕಣ್ಣುಗಳು ಮುಚ್ಚಲು ಪಕ್ಕಕ್ಕೆ ಸರಿಯಿತು; ಕರ್ಣನು ತಲೆಜೋತು ಕೆನ್ನೆಗೆ ಎದೆಯನ್ನು ಕೊಟ್ಟನು; ದುರುಳ ದುರ್ಯೋಧನನ ಸಹಿತ ಶತ್ರು ಸೇನೆಯು ನಿದ್ದೆಯಲ್ಲಿ ಮೈಮರೆತಿತು.
ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ |
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು || ೮೭ ||
ಪದವಿಭಾಗ-ಅರ್ಥ: ಸೇನೆ ಮೈಮರೆದು+ ಒರಗಿದ+ ಅದಟ ನಿಧಾನವೊಗೆದು+ ಅರುಹು+ ಇತ್ತು (ಅರುಹು- ಹೇಳು; ತಿಳಿವಳಿಕೆ.) ನಿದ್ರಾಮಾನ ವಿಭ್ರಮಿಸಿತ್ತು (ವಿಭ್ರಮ= ನೆನಪಿನ ಶಕ್ತಿ ಇಲ್ಲವಾಗುವುದು, ವಿಜೃಂಭಣೆ.)ಬಲು ಸಂಸಾರದಂದದಲಿ (ಲೋಕವನ್ನು ಮುಸುಕಿದ ಬಲಿಷ್ಠ ಮಾಯೆಯಂತೆ)+ ಏನ ಹೇಳುವೆನು+ ಅದನು ಕದನದ ಕಾನನದೊಳು (ಯುದ್ಧವೆಂಬ ಅರಣ್ಯದಲ್ಲಿ ಅತಿರಥರು ಮತ್ತು ವಿಜಯ ಸಾದಿಸಲಾರದೆ ಸೈನ್ಯ)+ ಅತಿರಥರು ವಿಜಯ ವಿಹೀನಬಲ (ವಿಜಯ ಸಾದಿಸಲಾರದೆ ಸೈನ್ಯ) ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು.
ಅರ್ಥ: ಹೀಗೆ ಸಂಮೋಹನ ಅಸ್ತ್ರದಿಂದ ಸೇನೆಯು ಮೈಮರೆತು ನಿದ್ದೆಯಲ್ಲಿ ತನಗೆ ಒರಗಿದ ಶೌರ್ಯದ ಜಾಗ್ರತೆ ಮತ್ತು ತಿಳಿವಳಿಕೆ ಬಿಟ್ಟುಕೊಟ್ಟು, ನಿದ್ರಾಮಾನ- ಮನಸ್ಸಿನ ನಿದ್ದೆ ಲೋಕವನ್ನು ಮುಸುಕಿದ ಬಲಿಷ್ಠ ಮಾಯೆಯಂತೆ ವಿಭ್ರಮಿಸುತ್ತು- ವಿಜಯ ಸಾಧಿಸಿತ್ತು, ಅದನ್ನು ಏನೆಂದು ಹೇಳಲಿ! ಯುದ್ಧವೆಂಬ ಅರಣ್ಯದಲ್ಲಿ ಅತಿರಥರು ಮತ್ತು ವಿಜಯ ಸಾದಿಸಲಾರದೆ ಸೈನ್ಯ ಸನ್ಮೋಹನಾಸ್ತ್ರದ ಬಾಧೆಗೆ ಒಳಗಾಯಿತು.
ಅರ್ಥ: ಅವಸ್ಥಾತ್ರಯದಲ್ಲಿ ಕನಸು,ಎಚ್ಚರ ಮತ್ತು ಸುಷುಪ್ತಿಗಳು ಎಂಬ ಮೂರು ಅವಸ್ಥಗಳು. ಇದರಲ್ಲಿ ಜೀವನು ಮೋಹಗಂಡು ಬೀಳುವನು. ಅದಲ್ಲದೆ ಜೀವನು ಶರಕ್ಕೆ ಸಿಲುಕುವನೆ? ಜೀವನು ಸಿಕ್ಕುವುದಿಲ್ಲ ಆದರೆ ದೇಹ ಮಾತ್ರಾ ಬಾಣಕ್ಕೆ ಸಿಗುವುದು. ಇಷ್ಟು ದೊಡ್ಡ ಸೈನ್ಯ ತೂಕಡಿಸಿ, ಝೋಂಪಿಸಿ, ಶಕ್ತಿಗುಂದಿ ಮಲಗಿರಲು, ಭಾಗೀರಥೀ ನಂದನ ಭೀಷ್ಮನು ಸಂಮೋಹನಕ್ಕೆ ಸಿಲುಕದೆ, ನಿರ್ಮಲನಾಗಿ- ಪರಿಶುದ್ಧನಾಗಿ ರಥದೊಳಗೆ ತೊಳ ತೊಳಗಿ ಶೋಭಿಸುತ್ತಿದ್ದನು.
ಅರ್ಥ:ಈ ಘಟನೆಯನ್ನು ಗಮನಿಸಿವರೆ, ಹನ್ನೊಂದು ಅಕ್ಷೋಹಿಣಿಯ ಸಯನ್ನವನ್ನೂ ಪಾರ್ಥನು ಒಬ್ಬನೆ ಮೋಹನಮಂತ್ರ ಬಾಣದಿಂದ ಯುದ್ಧದಲ್ಲಿ ಕೆಡವಿದನು; ದೇವತೆಗಳು ಕುಣಿದು ಹೂವಿನ ಮಳೆಗಳ ರಾಶಿಯನ್ನು ಸೂಸಿದರು- ಚೆಲ್ಲಿದರು- ಸುರಿಸಿದರು; ಫಲ್ಗುಣನು ರಥವನ್ನು ತನ್ನ ಎದುರಿನ ರಾಜರು ಇದ್ದ ಕಡೆಗೆ ನೂಕಿದನು- ಚಲಿಸಿದನು.
ಪದವಿಭಾಗ-ಅರ್ಥ: ಎರಡು ಶರದಲಿ ಚಾಪವನು (ಬಿಲ್ಲನ್ನು) ಕತ್ತರಿಸಿ ಭೀಷ್ಮನ ನಿಲಿಸಿ ಕೌರವ ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು ತಿರುಗಿದನು ಕಲಿಪಾರ್ಥ ನಗುತ+ ಉತ್ತರ ಸಹಿತ ಬನ್ನಿಯಲಿ ಕೈದುವನು+ ಇರಿಸಿ ಮುನ್ನಿನ ಹುಲು ರಥದಿ ನಿಜನಗರಿಗೆ+ ಐತಂದ
ಅರ್ಥ: ಆಗ ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿ, ಭೀಷ್ಮನನ್ನು ಅಲ್ಲಿಯೇ ನಿಲ್ಲುವಂತೆ ಮಾಡಿ, ಕೌರವ ರಾಯನ ಕಿರೀಟವನ್ನು ಮೂರು ಬಾಣಗಳಿಂದ ಹೊಡೆದು ಕಡಿದು, ಶೂರ ಪಾರ್ಥನು ನಗುತ್ತಾ ಉತ್ತರನ ಸಹಿತ ಅಲ್ಲಿಂದ ಹಿಂತಿರುಗಿದನು. ಅವನು ಬನ್ನಿಯಮರದ ಬಳಿಬಂದು ಆಯಧಗಳನ್ನು ಮೊದಲಿನಂತೆಯೇ ಮರದ ಮೇಲೆ ಇರಿಸಿ, ವಿರಾಟನಗರದಿಂದ ಮೊದಲು ಬಂದಿದ್ದ ಸಾಮಾನ್ಯ ಹುಲು ರಥದಲ್ಲಿ ಉತ್ತರನೊಡನೆ ವಿರಾಟ ನಗರಕ್ಕೆ ಬಂದನು.
↑ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.