ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಸೂ: ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ||
ಪದವಿಭಾಗ-ಅರ್ಥ: ಕುಸುಮಶರನ (ಹೂವಿನ ಬಾಣಗಳುಳ್ಳ ಮನ್ಮಥನ)+ ಉರವಣೆಯ= ಪರಾಕ್ರಮದ ಆಟೋಪದ= ಗಾಯದಲಿ+ ಎಸುಗೆ= ಭಾಣದ ಹೊಡೆತವನ್ನು, ವಡೆದನು ಕೀಚಕನು ತನ್ನ+ ಅಸುವಿನ(ಪ್ರಾಣವು)+ ಅಳತೆಯ( ತಾಳುವ ಶಕ್ತಿಯನ್ನು) ನೋಡದೆಯೆ ತುಡುಕಿದನು= ಹಿಡಿದು ಎಳೆದನು, ದ್ರೌಪದಿಯ.
ಅರ್ಥ:ಹೂವುಗಳನ್ನೇ ಬಾಣಗಳುಳ್ಳ ಮನ್ಮಥನ ಪರಾಕ್ರಮದ ಆಟೋಪದ ಭಾಣದ ಹೊಡೆತವನ್ನು ಕೀಚಕನು ವಡೆದನು. ಅದರಿಂದ ಆದ ಗಾಯದಲ್ಲಿ ತನ್ನ ಪ್ರಾಣವು ತಡೆದುಕೊಳ್ಳಬಲ್ಲ ಶಕ್ತಿಯನ್ನು ಪರಿಗಣಿಸದೆಯೇ ದ್ರೌಪದಿಯನ್ನು ತುಡಿಕಿ ಹಿಡಿದೆಳೆದನು.(ಅದರಿಂದ ಪ್ರಾಣವನ್ನು ಕಳೆದುಕೊಂಡನು- ಅದರಿಂದ ಪ್ರಾಣವನ್ನು ಕಳೆದುಕೊಂಡನು ಎಂದು ಭಾವ)[೧] [೨] [೩]
~~ಓಂ~~

ಪಾಂಡವರು ವಿರಾಟನ ಅರಮನೆಯಲ್ಲಿ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟನಗರಿಯಲಿ||
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ||1||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ನಿಮ್ಮಯ ಪೂರ್ವ ಪೃಥ್ವೀಪಾಲರು+ ಇದ್ದರು ಗುಪುತದಿಂದ= ಗುಪ್ತದಿಂದ- ರಹಸ್ಯವಾಗಿ ವಿರಾಟನಗರಿಯಲಿ= ಕೇಳು ಜನಮೇಜಯ ರಾಜನೇ ನಿಮ್ಮ ಪೂರ್ವಜ ರಾಜರು ಧರ್ಮಜ ಮೊದಲಾದವರು ರಹಸ್ಯವಾಗಿ ವಿರಾಟನಗರಿಯಲ್ಲಿ ಇದ್ದರು; ಕಾಲ ಸವೆದುದು ಹತ್ತು ತಿಂಗಳ= ಹತ್ತು ತಿಂಗಳ ಕಾಲ ಕಳೆಯಿತು.(ಹನ್ನಂದು ತಿಂಗಳೇ?) ಮತ್ತೊಂದು+ ಅತಿಶಯೋಕ್ತಿಯನು+ ಆಲಿಸೈ ವಿಸ್ತರದೊಳು+ ಅರುಪುವೆನೆಂದನಾ ಮುನಿಪ= ಇನ್ನೊಂದು ವಿಶೇಷ ಘಟನೆಯನ್ನು ವಿಶದವಾಗಿ ಹೇಳುವೆನು ಕೇಳು ಎಂದನು ವೈಶಂಪಾಯನ ಮನಿ.
ಅರ್ಥ: ಜನಮೇಜಯ ರಾಜನೇ ಕೇಳು, ನಿಮ್ಮ ಹಿಂದಿನ ರಾಜರಾದ ಧರ್ಮಜ ಮೊದಲಾದವರು ರಹಸ್ಯವಾಗಿ ವಿರಾಟನಗರಿಯಲ್ಲಿ ಇದ್ದರು; ಹಾಗೆ ಹತ್ತು ತಿಂಗಳಮೇಲೆ ಮತ್ತೊಂದು ಎಂದರೆ ಹನ್ನೊಂದು ತಿಂಗಳ ಕಾಲ ಕಳೆಯಿತು. ಆಗ ನೆಡೆದ ಇನ್ನೊಂದು ವಿಶೇಷ ಘಟನೆಯನ್ನು ವಿಶದವಾಗಿ ಹೇಳುವೆನು ಕೇಳು ಎಂದನು ವೈಶಂಪಾಯನ ಮನಿ.
ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು||
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕವಿಡಂಬವ ಕೇಳು ಭೂಪಾಲ ||2||
ಪದವಿಭಾಗ-ಅರ್ಥ: ಆ ವಿರಾಟನ ರಾಜಧಾನಿಯೊಳ+ ಈ ವಿಳಾಸದಿ& ಮುಸುಕಿ (ಮರೆಯಾಗಿ)= ಆ ವಿರಾಟನ ರಾಜಧಾನಿಯಲ್ಲಿ ಈ ಹಿಂದೆ ತಿಳಿಸಿದ ಹೆಸರಿನಲ್ಲಿ ಮರೆಮಾಚಿಕೊಂಡು, ತಾವ್ ಪರಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು= ಪಾಂಡವರು ಪರಸೇವೆಮಾಡುತ್ತಾ ಹತ್ತು ತಿಂಗಳನ್ನು ಕಳೆದರು; ರಾವಣನು ಮುನ್ನಂದು ಸೀತಾದೇವಿಗೆ+ ಅಳುಪಿದ ಕಥೆಯವೋಲ್ ಸಂಭಾವಿಸಿದ ಕೀಚಕ ವಿಡಂಬವ ಕೇಳು ಭೂಪಾಲ= ರಾವಣನು ಹಿಂದೆ ಸೀತಾದೇವಿಯನ್ನ ನೋಡಿ ಮನಸೋತ ಕಥೆಯಂತೆ ಸಂಭವಿಸಿದ ಕೀಚಕ ವಿಡಂಬನೆಯ ಕಥೆಯನ್ನು ರಾಜನೇ ಕೇಳು, ಎಂದನು ಮುನಿ
&::ಧರ್ಮಜ, ಸನ್ಯಾಸಿ ವೇಷದಲ್ಲಿ ಕಂಕ ಎಂಬ ಹಸರು ಪಡೆದು ಇದ್ದನು;, ಭೀಮನು ವಲಲ ಎಂಬ ಹೆಸರಿನಲ್ಲಿ ಬಾಣಸಿಗನಾಗಿ ಅಡಿಗೆನೆಯಲ್ಲಿ ಮನೆಯಲ್ಲಿ ಇದ್ದನು; ಇಂದ್ರನ ಮಗ ಅರ್ಜುನನು ಬೃಹನ್ನಳೆ ಎಂದು ಹೆಸರಿಟ್ಟುಕೊಂಡು ಶಿಖಂಡಿ ವೇಷದಲ್ಲಿ ಇದ್ದನು; ಅವಳಿ ಮಕ್ಕಳಾದ ನಕುಲ ಸಹದೇವರು ದಾಮಗ್ರಂಥಿ, ತಂತ್ರಿಪಾಲ ಎಂಬ ಹೆಸರಿನಲ್ಲಿ ಕುದುರೆ ಮತ್ತು ಆಕಳು ಕಾಯುವವರು ಮತ್ತು ನಿರ್ವಹಣೆ ಮಾಡುತ್ತಿದ್ದರು; ದ್ರೌಪದಿ ವಿರಾಟರಾಜನ ಪ್ರೀತಿಯ ರಾಣಿಗೆ ಅವಳ ಕೆಳದಿಯರ ಜೊತೆ ಸೇವೆಮಾಡುತ್ತಿದ್ದಳು.
ಅರ್ಥ: ಆ ವಿರಾಟನ ರಾಜಧಾನಿಯಲ್ಲಿ ಈ ಹಿಂದೆ ತಿಳಿಸಿದ ಹೆಸರಿನಲ್ಲಿ ಮರೆಮಾಚಿಕೊಂಡು, ಪಾಂಡವರು ಪರಸೇವೆಮಾಡುತ್ತಾ ಹತ್ತು ತಿಂಗಳನ್ನು ಕಳೆದರು. ರಾವಣನು ಹಿಂದೆ ಸೀತಾದೇವಿಯನ್ನ ನೋಡಿ ಮನಸೋತ ಕಥೆಯಂತೆ ಸಂಭವಿಸಿದ ಕೀಚಕ ವಿಡಂಬನೆಯ ಕಥೆಯನ್ನು ರಾಜನೇ ಕೇಳು, ಎಂದನು ಮುನಿ.
ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು||
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ||3||
ಪದವಿಭಾಗ-ಅರ್ಥ: ಒಂದು ದಿವಸ ವಿರಾಟನ+ ಅರಸಿಯ- ರಾಣಿ, ಮಂದಿರಕ್ಕೆ+ ಓಲೈಸಲೆಂದು+ ಐತಂದನು+ ಆಕೆಯ ತಮ್ಮ ಕೀಚಕನು= ಒಂದು ದಿವಸ ವಿರಾಟರಾಜನ ರಾಣಿಯ ಅರಮನೆಗೆ ಅವಳನ್ನು ಗೌರವಿಸಲು ಆಕೆಯ ತಮ್ಮ ಕೀಚಕನು ಬಂದನು; ಕೀಚಕನು+ ಅತುಳ ಭುಜಬಲನು= ಅವನು ಮಹಾ ಬಲಶಾಲಿ. ಹಿಂದೆ ಮುಂದೆ+ ಇಕ್ಕೆಲದ ಸತಿಯರ ಸಂದಣಿಯ ಮಧ್ಯದಲಿ ಮೆರೆವರ ವಿಂದವದನೆಯ ಕಂಡು= ರಾಣಿ ಸುದೀಷ್ಣೆಯ ಹಿಂದೆ ಮುಂದೆ ಮತ್ತೆ ಅಕ್ಕಪಕ್ಕದ ವನಿತೆಯರ ಸಮೂಹದ ಮಧ್ಯದಲ್ಲಿ ಶೋಬಿಸುತ್ತಿದ್ದ ಕಮಲನೇತ್ರೆಯಾದ ಅಕ್ಕನನ್ನು ಕಂಡು; ಕಾಣಿಕೆಗೊಟ್ಟು ಪೊಡಮಟ್ಟ= ಕಾಣಿಕೆ+ ಕೊ(ಗೊ)ಟ್ಟು ಪೊಡಮಟ್ಟ(ನಮಿಸಿದ)= ಕಾಣಿಕೆಯನ್ನು ನಮಸ್ಕಾರ ಮಾಡಿದ.
ಅರ್ಥ: ಹೀಗಿರುವಾಗ ಒಂದು ದಿವಸ ವಿರಾಟರಾಜನ ರಾಣಿಯ ಅರಮನೆಗೆ ಅವಳನ್ನು ಗೌರವಿಸಲು ಆಕೆಯ ತಮ್ಮ ಕೀಚಕನು ಬಂದನು. ಅವನು ಮಹಾ ಬಲಶಾಲಿ. ತನ್ನ ಅಕ್ಕ ರಾಣಿ ಸುದೀಷ್ಣೆಯ ಹಿಂದೆ ಮುಂದೆ ಮತ್ತೆ ಅಕ್ಕಪಕ್ಕದ ವನಿತೆಯರ ಸಮೂಹದ ಮಧ್ಯದಲ್ಲಿ ಶೋಬಿಸುತ್ತಿದ್ದ ಕಮಲನೇತ್ರೆಯಾದ ಅಕ್ಕನನ್ನು ಕಂಡು ಕಾಣಿಕೆಯನ್ನು ನಮಸ್ಕಾರ ಮಾಡಿದ.

ಕೀಚಕನು ಪಾಂಚಾಲ ನಂದನೆಯನ್ನು ಕಂಡನು[ಸಂಪಾದಿಸಿ]

ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ||
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ||4||
ಪದವಿಭಾಗ-ಅರ್ಥ: ಅನುಜನನು ತೆಗೆದಪ್ಪಿ ಸಿಂಹಾಸನದ ಕೆಲದಲಿ ಕುಳ್ಳಿರಿಸಿ= ತಮ್ಮನನ್ನು ಪ್ರೀತಿಯಿಂದ ಅಪ್ಪಿಕೊಂಡು ಕರೆದು ಸಿಂಹಾಸನದಲ್ಲಿ ತನ್ನಬಳಿ ಕುಳ್ಲಿರಿಸಿಕೊಂಡಳು. ಮನದಣಿಯಲು+ ಅಂಗನೆ ಮನ್ನಿಸಿದಳೈ ತತ್+ ಸಹೋದರನ= ಅವನ ಮನಸ್ಸು ತಣಿಯುವಂತೆ ರಾಣಿ ತಮ್ಮನನ್ನು ಆದರಿಸಿದಳು ತನುಪುಳಕ ತಲೆದೋರಲು+ ಅವನು+ ಉಬ್ಬಿನಲಿ ಸತ್ಕೃತನಾಗಿ ಕಮಳಾನನೆಯರನು ಕಂಡನು ಸುದೇಷ್ಣೆಯ ಮೇಳದ+ ಅಬಲೆಯರ= ಅಕ್ಕನ ಪ್ರೀತಿಯ ಸತ್ಕಾರದಿಂದ ಮೈಪುಳಕಗೊಂಡು ಸಂತೋಷ ಉಕ್ಕುತ್ತಿರಲು, ಅವನು ಸದೇಷ್ಣೆಯ ಸಖಿಯರ ಗುಂಪಿನ ವನಿತೆಯರ ಕಡೆ ದೃಷ್ಟಿ ಹಾಯಿಸಿದನು.
ಅರ್ಥ: ರಾಣಿಯು ತಮ್ಮನನ್ನು ಪ್ರೀತಿಯಿಂದ ಅಪ್ಪಿಕೊಂಡು ಕರೆದು ಸಿಂಹಾಸನದಲ್ಲಿ ತನ್ನಬಳಿ ಕುಳ್ಲಿರಿಸಿಕೊಂಡಳು. ಅವನ ಮನಸ್ಸು ತಣಿಯುವಂತೆ ರಾಣಿ ತಮ್ಮನನ್ನು ಆದರಿಸಿದಳು. ಅಕ್ಕನ ಪ್ರೀತಿಯ ಸತ್ಕಾರದಿಂದ ಮೈಪುಳಕಗೊಂಡು ಸಂತೋಷ ಉಕ್ಕುತ್ತಿರಲು, ಅವನು ಸದೇಷ್ಣೆಯ ಸಖಿಯರ ಗುಂಪಿನ ವನಿತೆಯರ ಕಡೆ ದೃಷ್ಟಿ ಹಾಯಿಸಿದನು.
ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ||
ಅವಯವದ ಪರಿಮಳಕೆ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ||5||
ಪದವಿಭಾಗ-ಅರ್ಥ: ಅವರ ಮಧ್ಯದಲಿ+ ಅಮಲ ತಾರಾನಿವಹದಲಿ ರೋಹಿಣಿಯವೋಲ್= ಆಯುವತಿಯರ ಮಧ್ಯದಲ್ಲಿ ನಕ್ಷತ್ರಗಳಗುಂಪಿನಲ್ಲಿ ಹೊಳೆಯುವ ರೋಹಿಣಿ ನಕ್ಷತ್ರದಂತೆ, ಸುರಯುವತಿಯರಲಿ+ ಊರ್ವಶಿಯವೋಲ್= ದೇವಲೋಕದ ಅಪ್ಸರೆಯರಲ್ಲಿ ಊರ್ವಸಿಯಂತೆ, ನದಿಗಳೊಳು ಜಾಹ್ನವಿಯ= ನದಿಗಳಲ್ಲಿ ಗಂಗೆಯಂತೆ ಇರುವ, ಅವಯವದ= ದೇಹದ, ಶರೀರದ, ಪರಿಮಳಕೆ ಪಸರಕೆ=ಪಸರಿಸು,ಪಸರಿಸಿದ, ಎಲ್ಲಡೆ ಹರಡಿದ, ಕವಿವ= ಮುತ್ತುತ್ತಿರುವ, ತುಂಬಿಯ ಸಾರ= ಇಂಪಾದ, ಸಂಗೀತವನು ಕೇಳುತ ಕಂಡನು+ ಅವ= ಅವನು, ಪಾಂಚಾಲ ನಂದನೆಯ= ಗಂಗೆಯಂತೆ ಇರುವ ಶರೀರದ ಎಲ್ಲಡೆ ಪಸರಿಸಿದ ಪರಿಮಳಕ್ಕೆ ಮುತ್ತುತ್ತಿರುವ, ತುಂಬಿಗಳ ಇಂಪಾದ ಸಂಗೀತವನನ್ನು ಕೇಳುತ್ತಾ ಪಾಂಚಾಲ ನಂದನೆ ದ್ರೌಪದಿಯನ್ನು ಅವನು ಕಂಡನು.
ಅರ್ಥ: ಆ ಯುವತಿಯರ ಮಧ್ಯದಲ್ಲಿ ನಕ್ಷತ್ರಗಳ ಗುಂಪಿನಲ್ಲಿ ಹೊಳೆಯುವ ರೋಹಿಣಿ ನಕ್ಷತ್ರದಂತೆ, ದೇವಲೋಕದ ಅಪ್ಸರೆಯರಲ್ಲಿ ಊರ್ವಸಿಯಂತೆ, ನದಿಗಳಲ್ಲಿ ಪರಿಶುದ್ದವಾದ ಗಂಗೆಯಂತೆ ಇರುವ ಶರೀರದ ಪಸರಿಸಿದ ಪರಿಮಳಕ್ಕೆ ಮುತ್ತುತ್ತಿರುವ ತುಂಬಿಗಳ ಇಂಪಾದ ಸಂಗೀತವನನ್ನು ಕೇಳುತ್ತಾ ಪಾಂಚಾಲ ನಂದನೆ ದ್ರೌಪದಿಯನ್ನು ಅವನು ಕಂಡನು.
ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟುವು ಕೀಳಲರಿದಾಯ್ತಾಲಿಗಳನಲುಗಿ||
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ||6||
ಪದವಿಭಾಗ-ಅರ್ಥ: ಮೊದಲೊಳು+ ಅವನು+ ಅವಳ+ ಅಂಗವಟ್ಟವನು+ ಒದವಿ= ಸೇರಿಸಿ, ಒತ್ತಾಸೆ, ಕಣ್ಣಿಟ್ಟು; ನೋಡಿದೊಡೆ+ ಅಲ್ಲಿಯೇ ಗಾಢದಲಿ ನಟ್ಟವು-(1. ಅಂಟು. 2. ಸೇರು. 3. ಬೆಸೆದುಕೊಳ್ಳು)= ಮೊದಲು ಸ್ವಾಭಾವಿಕವಾಗಿ ಅವನು ಅವಳ/ ದ್ರೌಪದಿಯ ಮೈಕಟ್ಟನ್ನು ಕಣ್ಣಿಟ್ಟು ನೋಡಿದಾಗ ಅವನ ದೃಷ್ಟಿ ಅಲ್ಲಿಯೇ ಗಾಢವಾಗಿ ನೆಟ್ಟವು; ಕೀಳಲು+ ಅರಿದಾಯ್ತು+ ಆಲಿಗಳನು+ ಅಲುಗಿ, ಮದನ ಮಸೆದು+ ಓರಿದನು= ಅವನಿಗೆ ಕಣ್ಣಿನ ಆಲಿಗಳನ್ನು ಅಲುಗಿಸಿ ದೃಷ್ಟಿಯನ್ನ ಅಲ್ಲಿಂದ ಕೀಳಲು ಅರಿಯದೇ ಹೋಯಿತು(ದೃಷ್ಟಿಯನ್ನ ಅಲ್ಲಿಂದ ಕೀಳಲು ಬುದ್ಧಿಯೇ ಓಡಲಿಲ್ಲ, ಸ್ತಬ್ಧನಾದನು).ಮದನ- ಮನ್ಮಥನು ಮಸದು - ಹರಿತಮಾಡಿ ಹೊಡೆದಿದ್ದನು, ಹೂಗಣೆ ಹೃದಯವನು ತಾಗಿದುದು= ಮನ್ಮಥನ ಹೂಬಾಣ ಹರದಯವನ್ನ ಹೊಕ್ಕಿತು. ಹರ ಹರ ಹೆದರಿದನು ಹಮ್ಮೈಸಿದನು= ಎಂದೂ ಸೋಲದವನು, ಇದೇನಾಯಿತು ಹರ ಹರ! ಎಂದು ಕಳವಳಪಟ್ಟು ಹೆದರಿ ಸಂಕಟಪಟ್ಟನು. ಖಳನು+ ಒಂದು ನಿಮಿಷದಲಿ= ಆ ದುಷ್ಟನು ಒಂದೇ ನಿಮಿಷದಲ್ಲಿ ಹಮ್ಮೈಸಿ ಸೋತುಹೋದನು.
ಅರ್ಥ: ಮೊದಲು ಸ್ವಾಭಾವಿಕವಾಗಿ ಕೀಚಕನು ದ್ರೌಪದಿಯ ಮೈಕಟ್ಟನ್ನು ಕಣ್ಣಿಟ್ಟು ನೋಡಿದಾಗ ಅವನ ದೃಷ್ಟಿ ಅಲ್ಲಿಯೇ ಗಾಢವಾಗಿ ನೆಟ್ಟವು; ಅವನಿಗೆ ಕಣ್ಣಿನ ಆಲಿಗಳನ್ನು ಅಲುಗಿಸಿ ದೃಷ್ಟಿಯನ್ನ ಅಲ್ಲಿಂದ ಕೀಳಲು ಬುದ್ಧಿಯೇ ಓಡಲಿಲ್ಲ, ಸ್ತಬ್ಧನಾದನು. ಮನ್ಮಥನು ಮಸೆದು ಹರಿತಮಾಡಿ ಹೂಬಾಣವನ್ನು ಹೊಡೆದಿದ್ದನು; ಅದು ಹೃದಯವನ್ನು (ತಾಗಿ) ಹೊಕ್ಕಿತು. ಎಂದೂ ಸೋಲದವನು, ಇದೇನಾಯಿತು ಹರ ಹರ! ಎಂದು ಕಳವಳಪಟ್ಟು ಹೆದರಿ ಸಂಕಟಪಟ್ಟನು. ಆ ದುಷ್ಟನು ಒಂದೇ ನಿಮಿಷದಲ್ಲಿ ಸೋತುಹೋಗಿ ಹಮ್ಮೈಸಿ ಸಂಕಟಪಟ್ಟನು.
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ||
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ||7||
ಪದವಿಭಾಗ-ಅರ್ಥ: ನಿಂದು= ಒಂದೇ ಸಮನೆ, ನೋಡಿದ ದ್ರೌಪದಿಯ ಮೊಗದ+ ಅಂದವನು= ದ್ರೌಪದಿಯ ಮುಖದ ಅಂದವನ್ನು ನೋಡಿದನು; ಕಂಡು ಆಗ ಕೀಚಕ ನೊಂದನು+ ಎನೆ (ನೋವಾಗುವ ಹಾಗೆ) = ಮೊಗ ತೆಗೆಯಲು+ ಎಚ್ಚನು=ಹೊಡೆದನು, ಕಾಮ ಕೈಗೂಡಿ(ಸಮಯನೋಡಿ,ಕೈಗೂಡಿತು- ಸಮಯ ಸಿಕ್ಕಿತು ಎಂದು)= ಅದನ್ನು ಕಾಮನು/ ಮನ್ಮಥನು ಕಂಡು ಆಗ ಕೀಚಕನು ಮುಖವನ್ನು ಅಲ್ಲಿಂದ ತೆಗೆದಾಗ ಕೀಚಕನಿಗೆ ನೋವಾಗುವ ಹಾಗೆ ಸಮಯ ಸಿಕ್ಕಿತು ಎಂದು, ಹೂಬಾಣದಿಂದ ಹೊಡೆದನು. ಅಂದು ಬೆರಗಾದನು ವಿಳಾಸಿನಿ(ಯಿ)ಇಂದು ತಳೆದಳು(ತಳೆ= 1. ರೂಪುತಳೆ. 2. ಮನವೊಲಿಸು, ಪ್ರೀತಿಯನ್ನು ತಳೆ..ಕ.ಸಾ.ಪ.ನಿಘಂಟು)= ವಿಳಾಸಿನಿ(ಯಿ)ಇಂದು= ಈ ಅಂದಗಾತಿ, ಈ ದಿನ ತನ್ನ, ಮನವನು+ ಇವಳಾರು+ ಎಂದು = ಮನಸ್ಸನ್ನು ಒಲಿಸಿಕೊಂಡ ಇವಳಾರು? ಈ ದಿನ ಇವಳು ಎಲ್ಲಿಂದ ಮೂಡಿಬಂದಳು! ಎಂದು ಭಾವಿಸಿ, ಯೋಚಿಸುತ್ತಾ, ಚಾಚಿದನು ಕದಪಿನಲಿ= ಕೆನ್ನೆಯಲ್ಲಿ, ಕರತಳವ (ಅಂಗೈಯನ್ನು)= ದಿಗ್ಭ್ರಮೆಯಿಂದ ಕೆನ್ನೆಗೆ ಕೈಯಿಟ್ಟು ಬೆರಗಾಗಿ ಚಿಂತಿಸಿದನು.
ಅರ್ಥ: ಒಂದೇ ಸಮನೆ ದ್ರೌಪದಿಯ ಮುಖದ ಅಂದವನ್ನು ನೋಡಿ, ಕೀಚಕನು ಮುಖವನ್ನು ಅಲ್ಲಿಂದ ತೆಗೆದಾಗ ಅದನ್ನು ಮನ್ಮಥನು ಕಂಡು ಆಗ ಕೀಚಕನಿಗೆ (ಹೃದಯಕ್ಕೆ) ನೋವಾಗುವ ಹಾಗೆ ಸಮಯ ಸಿಕ್ಕಿತು ಎಂದು ಹೂಬಾಣದಿಂದ ಹೊಡೆದನು. ಈ ಅಂದಗಾತಿ ಈ ದಿನ ತನ್ನ ಮನಸ್ಸನ್ನು ಒಲಿಸಿಕೊಂಡ ಇವಳಾರು? ಈ ದಿನ ಇವಳು ಎಲ್ಲಿಂದ ಮೂಡಿಬಂದಳು! ಎಂದು ಭಾವಿಸಿ, ದಿಗ್ಭ್ರಮೆಯಿಂದ ಕೆನ್ನೆಗೆ ಕೈಯಿಟ್ಟು ಬೆರಗಾಗಿ ಚಿಂತಿಸಿದನು.
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ||
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ||8||
ಪದವಿಭಾಗ-ಅರ್ಥ: ತಿಳಿಯಿವಳು= ತಿಳಿ+ ಇವಳು= ಇವಳನ್ನು ಹೀಗೆಂದು ತಿಳಿ, ತಿಳಿದುಕೊ/ ತಿಳಿದುಕೊಳ್ಳುತ್ತೇನೆ; ಮೂಜಗವ ಮೋಹಿಪ ತಿಲಕವೋ= ಮೂರು ಜಗತ್ತನ್ನೂ ಮೋಹಗಳಿಸುವ ಹಣೆಗಿಟ್ಟ ತಿಲಕವೋ (ತಿಲಕಪ್ರಾಯ- ಶ್ರೇಷ್ಠವಾದ ವಸ್ತುವೋ), ಕಾಮಂಗೆ ಕಟ್ಟಿದ ಕಳನ (ಕಳ=ಕಲ ಕಲಹಂಸ= ಮನೋಹರ ಸುಂದರ ಹಂಸ)= ಕಾಮನಿಗೆ ಕಟ್ಟಿದ ಸುಂದರವಾದ, ಭಾಷೆಗೆ ನಿಂದ ಮಾಸಾಳೋ=ಯೋಧ, ಸಾಹಸಿ, ಶೂರ,; = (ಕಾಮನಿಗೆ ಕಟ್ಟಿದ ಸುಂದರವಾದ),ಸ್ಪರ್ಧೆಗೆ ನಿಂತ ವೀರನೋ, ವೀರ ನಾರಿಯೋ! ಮಹಾದೇವ= ದೇವರೇ! ಕೊಲೆಗಡಿಗ ಕಂದರ್ಪಕನ ಕೂರಲಗೊ= ಇವಳು ಮನ್ಮಥನ ಚೂಪಾದ ಭಾಣದ ತುದಿಯೊ! ಮದನನ ಸೊಕ್ಕಿದಾನೆಯೊ= ಮನ್ಮಥನ ಸೊಕ್ಕಿದ ಆನೆಯೋ, ನಳಿನಮುಖಿ (ಯಿ) ಇವಳು+ ಆರ= ಯಾರ ಸತಿಯೆಂದು+ ಅಳುಪಿ (ಅಳುಪು= ಬಯಸು)ಇವಳು ಯಾರ ಪತ್ನಿಯಾಗಿರಬಹುದು ಎಂದು ಬಯಕೆಯಿಂದ ನೋಡಿದನು.
ಅರ್ಥ: ಇವಳನ್ನು ಹೀಗೆಂದು ತಿಳಿದುಕೊಳ್ಳುತ್ತೇನೆ ಎಂದುಕೊಂಡನು ಕೀಚಕ, ಇವಳು ಮೂರು ಜಗತ್ತನ್ನೂ ಮೋಹಗಳಿಸುವ ಹಣೆಗಿಟ್ಟ ತಿಲಕವೋ! ಕಾಮನಿಗೆ ಕಟ್ಟಿದ ಸುಂದರವಾದ ಸ್ಪರ್ಧೆಗೆ ನಿಂತ ವೀರ ನಾರಿಯೋ! ದೇವರೇ! ಇವಳು ಕೊಲೆಗಡಿಕನಾದ ಆ ಮನ್ಮಥನ ಬಾಣದ ಚೂಪಾದ ತುದಿಯೊ! ಮನ್ಮಥನ ಸೊಕ್ಕಿದ ಆನೆಯೋ! ಕಮಲಮುಖಿಯಾದ ಇವಳು ಯಾರ ಪತ್ನಿಯಾಗಿರಬಹುದು ಎಂದು ಆಸೆಪಟ್ಟು ನೋಡಿದನು.
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು ||
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ||9||
ಪದವಿಭಾಗ-ಅರ್ಥ: ಜಗವ ಕೆಡಹಲು ಜಲಜವಿಶಿಖನು= ಜಲಜ=ಕಮಲ, ವಿಶಿಖನು= ಬಾಣವುಳ್ಳವನು- ಮನ್ಮಥನು; ಬಿಗಿದ ಬಲೆಯಿವಳಲ್ಲಲೇ= ಜಗತ್ತನ್ನೇ ಕೆಡವಲು ಕಾಮನು ಬಿಗಿದ ಬಲೆಯು ಇವಳಲ್ಲಲೇ/ ಇವಳಿರಬಹುದೇ? ಯೋಗಿಗಳ ಯತಿಗಳನು+ ಎಸಲು= ಬಾಣದಿಮದ ಹೊಡೆಯಲು, ಕಾಮನು ಮಸೆದ= ಹರಿತಮಾಡಿದ, ಕೂರಲಗು= ಚೂಪಾದ ಆಯದದ ಅಲಗು ಇದ್ದಹಾಗಿದ್ದಾಳೆ. ಮುಗುದನಾದನು= ಮುಗ್ಧನಾದನು- ಕೀಚಕ ಏನೂ ತೋಚದಂತಾದನು, ಕಾಮನಂಬುಗಳು+ ಉಗಿದವು (ಹೊಕ್ಕವು, ನೆಟ್ಟವು)+ ಎದೆಯಲಿ ನಟ್ಟ ದೃಷ್ಟಿಯ ತೆಗೆಯಲಾರದೆ ಸೋತು ಕೀಚಕ ಪಾತಕವ (ಕೆಟ್ಟದ್ದನ್ನು ಮಾಡಲು) ನೆನೆದ= ಅವನ ಎದೆಯಲ್ಲಿ ಕಾಮನ ಬಾಣಗಳು ನೆಟ್ಟವು ಬುಗಳು+ ಉಗಿದವು+ ಎದೆಯಲಿ ನಟ್ಟು ಅವಳಿಂದ ದೃಷ್ಟಿಯನ್ನು ತೆಗೆಯಲಾರದೆ ಸೋತು ಕೀಚಕ ಕೆಟ್ಟದ್ದನ್ನು ಮಾಡಲು ಯೋಚಿಸಿದ.
ಅರ್ಥ:ಜಗತ್ತನ್ನೇ ಕೆಡವಲು ಕಾಮನು ಬಿಗಿದ ಬಲೆಯು ಇವಳಲ್ಲಲೇ/ ಇವಳಿರಬಹುದೇ? ಯೋಗಿಗಳನ್ನೂ ಯತಿಗಳನ್ನೂ ಬಾಣದಿಮದ ಹೊಡೆಯಲು ಕಾಮನು ಹರಿತಮಾಡಿದ ಚೂಪಾದ ಆಯಧದ ಅಲಗು ಇದ್ದಹಾಗಿದ್ದಾಳೆ. ಕೀಚಕ ಏನೂ ತೋಚದಂತಾದನು. ಅವನ ಎದೆಯಲ್ಲಿ ಕಾಮನ ಬಾಣಗಳು ನೆಟ್ಟವು ಬುಗಳು+ ಉಗಿದವು+ ಎದೆಯಲಿ ನಟ್ಟು ಅವಳಿಂದ ದೃಷ್ಟಿಯನ್ನು ತೆಗೆಯಲಾರದೆ ಸೋತು ಕೀಚಕ ಕೆಟ್ಟದ್ದನ್ನು ಮಾಡಲು ಯೋಚಿಸಿದ.
ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದದು ಕರಣದಲಿ ಕಳವಳದ ಬೀಡಾಯ್ತು||
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ (ಕಣ್ಣುರಿ)
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ||10||
ಪದವಿಭಾಗ-ಅರ್ಥ: ಸೂರೆವೋಯಿತು ಚಿತ್ತ (ಮನಸ್ಸು)= ಕೀಚಕನ ಮನಸ್ಸು ಕೊಳ್ಳೆಹೊಡೆದುಹೋಯಿತು; ಕಂಗಳು ಮಾರುವೋದವು= ಅವನ ಕಣ್ಣುಗಳು ಅವಳ ವಶವಾಯಿತು. ಖಳನ ಧೈರ್ಯವು ತೂರಿ ಪೋದದು= ಕೀಚಕನ ಧೈರ್ಯ ಗಾಳಿಯಲ್ಲಿ ತೂರಿಹೋಯಿತು. ಕರಣದಲಿ ಕಳವಳದ ಬೀಡಾಯ್ತು= ಆಂತಃಕರಣ- ಕೀಚಕನ ಓಳ ಮನಸ್ಸಿನಲ್ಲಿ ಕಳವಳವು ತುಂಬಿಕೊಂಡಿತು. ಮೀರಿ ಪೊಗುವ+ ಅಂಗಜನ ಶರದಲಿ ದೋರುವೋಯಿತು= ಡೊಗರುಬಿದ್ದಿತು ಹೃದಯ ಕಣ್ಣಿರಿಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ= ಕಣ್ಣಿರಿಗೆ- ಕಣ್ಣು ಇರಿಗೆ- ಇರಿಯುವ+ ಆರೆ- ಯಾರೆ ಯಿವಳಾರೆ+ ಎನುತ ಗಜಬಜಿಸಿದನು= ತೊದಲಿದನು ನಿಮಿಷದಲಿ (ಕೂಡಲೆ)= ತನ್ನ ಕಣ್ಣನ್ನು ಚುಚ್ಚುವ/ ಇರಿಯುವ ಇವಳು ಯಾರೆ ಅಕ್ಕಾ, ಇವಳಾರೆ ಎನ್ನುತ್ತಾ ಕೂಡಲೆ ಅಕ್ಕನೊಡನೆ ಸ್ಪಷ್ಟವಾಗಿ ಮಾತು ಹೊರಡದೆ ತೊದಲಿದನು.
ಅರ್ಥ: ಕೀಚಕನ ಮನಸ್ಸು ಕೊಳ್ಳೆಹೊಡೆದುಹೋಯಿತು; ಅವನ ಕಣ್ಣುಗಳು ಅವಳ ವಶವಾಯಿತು. ಕೀಚಕನ ಧೈರ್ಯ ಗಾಳಿಯಲ್ಲಿ ತೂರಿಹೋಯಿತು. ಕೀಚಕನ ಓಳ ಮನಸ್ಸಿನಲ್ಲಿ ಕಳವಳವು ತುಂಬಿಕೊಂಡಿತು. ಆಳವಾಗಿ ಹೊಗುವ ಮನ್ಮಥನ ಬಾಣದಿಂದ ಹೃದಯ ಡೊಗರುಬಿದ್ದಿತು. ಕೀಚಕನು ತನ್ನ ಕಣ್ಣನ್ನು ಇರಿಯುವ (ರೂಢಿಯ ನುಡಿ:ತನ್ನ ಕಣ್ಣನ್ನು ಕುಕ್ಕುವ ಇವಳಾರು)) ಇವಳು ಯಾರೆ ಅಕ್ಕಾ, ಇವಳಾರೆ ಎಂದು ಕೂಡಲೆ ಅಕ್ಕನನ್ನು ಕೇಳುತ್ತಾ, ಸ್ಪಷ್ಟವಾಗಿ ಮಾತು ಹೊರಡದೆ ತೊದಲಿದನು.
ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ||
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ||11||
ಪದವಿಭಾಗ-ಅರ್ಥ: ರತಿಯ ಚೆಲುವು+ ಅಂತು+ ಇರಲಿ= ಹಾಗಿರಲಿ, ಅತ್ತಕಡೆ ಇರಲಿ; ಸಿರಿ ಪಾರ್ವತಿಯ ರೂಪಂತಿರಲಿ; ಬೊಮ್ಮನಸತಿಯ= ಸರಸ್ವತಿಯ ಸೊಬಗಂತಿರಲಿ (ಯೀ) ಈ ಬಾಲಕಿಯ ರೂಪಿಂಗೆ ಪ್ರತಿಯ= ಸರಿಸಮಾನವಾದ ಮತ್ತೊಂದು ರೂಪವತಿಯನ್ನು, ಕಾಣೆನು, ಪಾಂಡವರ ದುರುಪತಿಯ=ದ್ರೌಪದಿಯ, ರೂಪಿಂಗೈದು= ರೂಪಿಂಗೆ ಐದು, ಐದುಮಡಿ= ಐದುಪಟ್ಟು ಹೆಚ್ಚಿನದು (ಯೀ+) ಈ ಸತಿಯ ವಿಭ್ರಮವ(ಅಂದ. 5. ಬೆಡಗು. 6. ವಿಜೃಂಭಣೆ. ನೆನಪಿನ ಶಕ್ತಿ ಇಲ್ಲವಾಗುವುದು. )+ ಐದಿತು+ ಎನ್ನಯ ಮನವನು+ ಎನುತಿರ್ದ - (ಕೀಚಕನು).
ಅರ್ಥ: ರತಿಯ ಚೆಲುವು ಅತ್ತಕಡೆ ಇರಲಿ; ಸಿರಿ ಪಾರ್ವತಿಯ ರೂಪ, ಸರಸ್ವತಿಯ ಸೊಬಗು ಇವು ಈ ಹೆಣ್ಣಿನ ರೂಪಿನ ಮುಂದೆ ಅತ್ತಕಡೆ ಇಡಬೇಕು.ಇವಳಿಗೆ ಸರಿಸಮಾನವಾದ ಮತ್ತೊಂದು ರೂಪವತಿಯನ್ನು ನಾನು ಕಂಡಿಲ್ಲ. ಪಾಂಡವರ ದ್ರೌಪದಿಯ,ರೂಪಿಗೆ ಇವಳ ರೂಪ ಐದುಪಟ್ಟು ಹೆಚ್ಚಿನದು. ಈ ಸತಿಯ ಅಂದ, ಬೆಡಗುಗಳು ನ್ನ ಮನಸ್ಸನ್ನು ಕೆಡಿಸಿತಲ್ಲಾ ಎನ್ನುತ್ತಿದ್ದನು ಮನಸ್ಸಿನಲ್ಲಿ ಕೀಚಕನು .
ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ||
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯನಾತನ ತನುವಿನಂತಸ್ತಾಪದೇಳ್ಗೆಯನು ||12||
ಪದವಿಭಾಗ-ಅರ್ಥ: ಅರಿವು ತಲೆಕೆಳಗಾಯ್ತು= ಕೀಚಕನ ತಿಳುವಳಿಕೆ ಕೆಟ್ಟುಹೋಯಿತು. ಧೈರ್ಯದ ನಿರಿಗೆ (ಉಟ್ಟ ಉಡುಗೆಯ ನಿರಿಗೆ ಕಳಚುವಂತೆ) ನಗೆಗೆ+ ಎಡೆಯಾಯ್ತು= ಅವಕಾಶಕೊಟ್ಟತು, ಲಜ್ಜೆಯ ಹೊರಿಗೆ= ಲಜ್ಜೆಯನ್ನು ಹೊತ್ತಿರುವ ಭಾವನೆ, ಬರಿದೊರೆಯಾಯ್ತು= ಬರಿ+ ತೊರೆಯಾಯತು= ಬತ್ತಿದ ಹೊಳೆಯಂತೆ ಇಲ್ಲವಾಯಿತು; ಕರಿಮೊಳೆಯೋಯ್ತು ಭಯಬೀಜ= ಪರ ಸತಿಯೊಡನೆ ಅಸಭ್ಯವಾಗಿ ನೆಡೆದುಕೊಳ್ಳಬಾರದೆಂಬ ಭಯದ ಬೀಜ- ಕರಿಮೊಳೆಯೋಯ್ತು ಮೊಳಕೆಯಲ್ಲಿಯೇ ಸುಟ್ಟುಕರಿಯಾಯಿತು., ಮರವೆ ಗರಿಗಟ್ಟಿತು= ಸರಿ ತಪ್ಪುಗಳ ಜ್ಞಾನ ಹೋಗಿ, ಮರೆವು ಮೇಲೆ ಎದ್ದಿತು. ಮನೋಭವನ+ ಇರಿಗೆಲಸ ಬಲುಹಾಯ್ತು= ಕಾಮನ- ಮನ್ಮಥನ ಬಾಣದ ಇರಿತದ ಕೆಲಸ ಬಲವಾಯಿತು. ಹೊಗಳುವಡೆ+ ಅರಿಯನು+ ಆತನ ತನುವಿನ+ ಅಂತಸ್ತಾಪದ+ ಏಳ್ಗೆಯನು= ಅವನ ದೇಹದಲ್ಲಿ ಹೆಚ್ಚುತ್ತಿರುವ ಒಳ-ಸಂಕಟವನ್ನು ಹೊಗಳುವಡೆ+ ಅರಿಯನು= ವರ್ಣಿಸಲು ತಿಳಿಯನು ಎಂದನು ವೈಶಂಪಾಯನ ಮುನಿ.
ಅರ್ಥ: ಕೀಚಕನ ತಿಳುವಳಿಕೆ ಕೆಟ್ಟುಹೋಯಿತು. ಧೈರ್ಯದ ನಿರಿಗೆ ಕಳಚಿ ನಗೆಗೆ ಅವಕಾಶಕೊಟ್ಟತು. ಲಜ್ಜೆಯನ್ನು ಹೊತ್ತಿರುವ ಭಾವನೆ ಬತ್ತಿದ ಹೊಳೆಯಂತೆ ಇಲ್ಲವಾಯಿತು; ಪರ ಸತಿಯೊಡನೆ ಅಸಭ್ಯವಾಗಿ ನೆಡೆದುಕೊಳ್ಳಬಾರದೆಂಬ ಭಯದ ಬೀಜ ಮೊಳಕೆಯಲ್ಲಿಯೇ ಸುಟ್ಟುಕರಿಯಾಯಿತು. ಸರಿ ತಪ್ಪುಗಳ ಜ್ಞಾನ ಹೋಗಿ, ಮರೆವು ಮೇಲೆ ಎದ್ದಿತು. ಮನ್ಮಥನ ಬಾಣದ ಇರಿತದ ಕೆಲಸ ಬಲವಾಯಿತು. ಅವನ ದೇಹದಲ್ಲಿ ಹೆಚ್ಚುತ್ತಿರುವ ಒಳ-ಸಂಕಟವನ್ನು ವರ್ಣಿಸಲು ತಿಳಿಯನು ಎಂದನು ವೈಶಂಪಾಯನ ಮುನಿ.
ಬೀಳುಗೊಂಡದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು||
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸುಗೊಂಡ ||13||
ಪದವಿಭಾಗ-ಅರ್ಥ: ಬೀಳುಗೊಂಡದು ಲಜ್ಜೆ= ನಾಚಿಕೆ ಅವನನ್ನು ಬಿಟ್ಟುಹೋಯಿತು. ಮಹಿಮೆಯಕೀಲು ಕಳಚಿತು= ತನ್ನ ಹಿರಿಮೆಯ ಕೀಲು ಕಳಚಿ ಬಿದ್ದುಹೋಯಿತು (ಬಂಡಿಯ ಕೀಲು ಕಳಚಿದರೆ ಗಾಲಿಸರಿದು ಬಂಡಿ ಬೀಳುವುದು- ಮಹಿಮೆಯ ಬಂಡಿ ಬಿದ್ದಿತು) ದ್ರುಪದ ತನುಜೆಯನು+ ಆಲಿಯಲಿ ನುಂಗಿದನು= ದ್ರುಪದನಮಗಳನ್ನು ಕಣ್ಣಿನಲ್ಲೇ ನುಂಗಿದನು- ಮನದಲಿ ಸತಿಯ ಸೆರೆವಿಡಿದು= ಮನಸಿಸನಲ್ಲಿ ಅವಳನ್ನು ಸೆರೆಹಿಡಿದಿಟ್ಟನು. ಕೇಳು ಬಿನ್ನಹವ+ ಅಕ್ಕ ನಿಮ್ಮಡಿಯ(ನಿಮ್ಮ ಪಾದದ ಆಶ್ರಯದಲ್ಲಿ)+ ಓಲೆಕಾತಿಯರೊಳಗೆ ಮೀಟಿನ ಮೇಲುಗೈ (ಯಿ) ಇವಳು+ ಅವಳೆಂದು+ ಅಗ್ರಜೆಯ ಬೆಸುಗೊಂಡ= ಕೀಚಕನು ಕೇಳಿದ,'ಅಕ್ಕಾ ನಿಮ್ಮಲ್ಲಿ ಒಂದು ಪ್ರಾರ್ಥನೆ ಕೇಳು, ನಿಮ್ಮ ಆಶ್ರಯದಲ್ಲಿರುವ ಓಲೆಕಾರ್ತಿಯರಲ್ಲಿ / ಸೇವೆಮಾಡುವವರಲ್ಲಿ ಎದ್ದುಕಾಣುವ ಮಿಗಿಲಾದ ಸುಂದರಿ ಇವಳು ಯಾರು,' ಎಂದು ಅಕ್ಕನನ್ನು ಕೇಳಿದ.
ಅರ್ಥ:ಕೀಚಕನನ್ನು ನಾಚಿಕೆ ಅವನನ್ನು ಬಿಟ್ಟುಹೋಯಿತು. ತನ್ನ ಹಿರಿಮೆಯ ಕೀಲು ಕಳಚಿ ಬಿದ್ದುಹೋಯಿತು ದ್ರುಪದ ತನುಜೆಯನು+ ಆಲಿಯಲಿ ನುಂಗಿದನು= ದ್ರುಪದನ ಮಗಳನ್ನು ಕಣ್ಣಿನಲ್ಲೇ ನುಂಗಿ ಮನಸಿಸನಲ್ಲಿ ಅವಳನ್ನು ಸೆರೆಹಿಡಿದಿಟ್ಟನು. ಕೀಚಕನು ಕೇಳಿದ,'ಅಕ್ಕಾ ನಿಮ್ಮಲ್ಲಿ ಒಂದು ಪ್ರಾರ್ಥನೆ ಕೇಳು, ನಿಮ್ಮ ಆಶ್ರಯದಲ್ಲಿರುವ ಓಲೆಕಾರ್ತಿಯರಲ್ಲಿ ಎದ್ದುಕಾಣುವ ಮಿಗಿಲಾದ ಸುಂದರಿ ಇವಳು ಯಾರು,' ಎಂದು ಅಕ್ಕನನ್ನು ಕೇಳಿದ.
ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು||
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ||14||
ಪದವಿಭಾಗ-ಅರ್ಥ: ಈಕೆ ಗಂಧರ್ವರ ರಮಣಿ= ಇವಳು ಗಂಧರ್ವರ ಪತ್ನಿ. ನಮ್ಮಾಕೆಯಾಗಿರೆ ಮಾನ್ಯವೃತ್ತಿಯೊಳು+ ಈಕೆಯನು ಸಲಹುವೆವು= ನಮ್ಮ ಆಶ್ರಯದಲ್ಲಿರುವುದರಿಂದ ಇವಳನ್ನು ಗೌರವದಿಂದ ಸಲಹುವೆನು. ಬಲ್ಲಿದರಿವಳ ವಲ್ಲಭರು= ಇವಳ ಪತಿಯರು ಬಲಶಾಲಿಗಳು, ಸಾಕು ಬೀಡಾರಕ್ಕೆ ನೀ ಹೋಗು+ ಈಕೆ ನಿನಗೆ+ ಅಹಳಲ್ಲ= ಅಹಳು ಅಲ್ಲ- ಆಗುವವಳಲ್ಲ, ನಿಂದಿರು ಕಾಕನು+ ಆಡದಿರು+ ಎನುತ ಬೀಳ್ಕೊಟ್ಟಳು ನಿಜ(ತನ್ನ)+ ಅನುಜನ(ತಮ್ಮನನ್ನು)= ತಮ್ಮಾ! ಸಾಕು ನೀನು ನಿನ್ನ ಮನೆಗೆ ಹೋಗು. ಈಕೆ ನಿನಗೆ ಒಲಿಯುವವಳಲ್ಲ. ನಿಂದು+ಇರು= ಇಲ್ಲಿಗೆ ನಿಲ್ಲಿಸು. ಕಾಕುನು+ ಆಡದಿರು+ ಎನುತ ಬೀಳ್ಕೊಟ್ಟಳು ನಿಜಾನುಜನ= ಕೆಟ್ಟವಿಚಾರದನ್ನು ಆಡಬೇಡ, ಎಂದು ಹೇಳಿ ತನ್ನ ತಮ್ಮನನ್ನು ಬೀಳ್ಕೊಟ್ಟಳು.
ಅರ್ಥ:ಇವಳು ಗಂಧರ್ವರ ಪತ್ನಿ. ನಮ್ಮ ಆಶ್ರಯದಲ್ಲಿರುವುದರಿಂದ ಇವಳನ್ನು ಗೌರವದಿಂದ ಸಲಹುತ್ತೇನೆ. ಇವಳ ಪತಿಯರು ಬಲಶಾಲಿಗಳು, ತಮ್ಮಾ! ಸಾಕು ನೀನು ನಿನ್ನ ಮನೆಗೆ ಹೋಗು. ಈಕೆ ನಿನಗೆ ಒಲಿಯುವವಳಲ್ಲ. ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸು. ಕೆಟ್ಟವಿಚಾರದನ್ನು ಆಡಬೇಡ, ಎಂದು ಹೇಳಿ ತನ್ನ ತಮ್ಮನನ್ನು ಬೀಳ್ಕೊಟ್ಟಳು.

ಕೀಚಕನ ಪ್ರೇಮಾಲಾಪ[ಸಂಪಾದಿಸಿ]

ತಾರಿತಂತಃಕ್ಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದದು ಮುಸುಕು ಮೋರೆಯಲಿ||
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ||15||
ಪದವಿಭಾಗ-ಅರ್ಥ: ತಾರಿತು+ ಅಂತಃಕ್ಕರಣ ಕಾಮನ ಕೂರುಗಣೆ ಕಾಲಿಕ್ಕಿದವು= ಅವನ ಒಳಮನಸ್ಸು / ಅಂತಃಕ್ಕರಣ ಬೆಂದು ಹೋಯಿತು. ಕಾಮನ ಕೂರುಗಣೆ ಕಾಲಿಕ್ಕಿದವು= ಮನ್ಮಥನ ಚೂಪಾದ ಬಾಣ ಓಳಗೆ ಸೇರಿತು; ಮನದೇರು ಮುಚ್ಚಿತು= ಮನದ ಏರು- ಉನ್ನತ ಭಾವನೆ ಅಡಗಿತು. ದುಗುಡ ಬಲಿದದು= ದುಗುಡ- ಇಷ್ಟವಾದುದು ಸಿಗದೆ ಸಂಕಟ ಹೆಚ್ಚಾಯಿತು. ಮುಸುಕು ಮೋರೆಯಲಿ ಮೀರಿ= ಮುಖದಲ್ಲಿ ಮಂಕು ಅತಿಯಾಗಿ ಕವಿದು, ನಿಜ(ತನ್ನ) ಮಂದಿರಕೆ ಮೈಯಲ್ಲಿ ಢಗೆ(ದಗೆ,ಕಾವು ) ಮೈದೋರೆ ಬಂದನು= ಅವನ ಮೈಯಲ್ಲಿ ಕಾವು ಏರುತ್ತಿದ್ದಂತೆ ತನ್ನ ಮನೆಗೆ ಬಂದನು. ಮರುದಿವಸ ತಲೆಮಾರಿ ಕಂಡನು ದ್ರೌಪದಿಯನು+ ಅರಮನೆಯ ಬಾಗಿಲಲಿ= ಮಾರನೆಯ ದಿನ ಅರಮನೆಯ ಬಾಗಿಲಲ್ಲಿ ಇದ್ದ ದ್ರೌಪದಿಯನ್ನು ಪಾದದಿಂದ ತಲೆಯವರೆಗೂ ಚೆನ್ನಾಗಿ ನೋಡಿದನು.
  • ತಾರು= ಬೆಂದುಹೋಗು. ಸುಡು. ಸೀಯು. ಒಣಗು.
ಅರ್ಥ:ಕೀಚಕನ ಅಂತಃಕ್ಕರಣ ಬೆಂದು ಹೋಯಿತು. ಮನ್ಮಥನ ಚೂಪಾದ ಬಾಣ ಓಳಗೆ ಸೇರಿತು; ಮನದ ಉನ್ನತ ಭಾವನೆ ಅಡಗಿತು.ಇಷ್ಟವಾದುದು ಸಿಗದೆ ಸಂಕಟ ಹೆಚ್ಚಾಯಿತು.ಮುಖದಲ್ಲಿ ಮಂಕು ಅತಿಯಾಗಿ ಕವಿದು, ಅವನ ಮೈಯಲ್ಲಿ ಕಾವು ಏರುತ್ತಿದ್ದಂತೆ ತನ್ನ ಮನೆಗೆ ಬಂದನು. ಮಾರನೆಯ ದಿನ ಅವನು ಅರಮನೆಗೆ ಬಂದಾಗ ಅರಮನೆಯ ಬಾಗಿಲಲ್ಲಿ ಇದ್ದ ದ್ರೌಪದಿಯನ್ನು ಪಾದದಿಂದ ತಲೆಯವರೆಗೂ ಚೆನ್ನಾಗಿ ನೋಡಿದನು.
ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು||
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ||16||
ಪದವಿಭಾಗ-ಅರ್ಥ: ಕಳುಹಿದನು ತನ್ನೊಡನೆ ಬಹ ಗಾವಳಿಯ ಪರಿವಾರವನು= ಕೂಡಲೆ ತನ್ನೊಡನೆ ಬರುತ್ತಿದ್ದ ಬರುತ್ತಿದ್ದ ಪರಿವಾರದ ಗುಂಪನ್ನು ಹಿಂದಕ್ಕೆ ಕಳುಹಿದನು. ತನ್ನಯ ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು= ತನ್ನ ಹತ್ತಿರವೇ ಇದ್ದ ವೀಳಯದ ಎಲೆಅಡಕೆಯ ಚೀಲ ಹೊರುವ ಬಾಲಕನನ್ನು ಹಿಂದಿಕ್ಕಿ ಸರಸರನೆ ನೆಡೆದುಬಂದು, ಒಲಿದು ಸಿಂಹದ ಸತಿಗೆ ನರಿ ಮನವ+ ಅಳುಪುವಂತಿರೆ= ಸಿಂಹದ ಜೊತೆಗಾತಿಗೆ ನರಿಯು ಒಲಿದು ಮನಸೋತು ಬಯಸಿದಂತರಲು, ಗರುಡನ+ ಅರಸಿಗೆ ನಲಿದು ಫಣಿ ಬಯಸುವವೊಲ್+ ಐದಿದ ಬಾಲಕಿಯ ಬಳಿಗೆ= ಮುಂದಿನ ಸಾವನ್ನು ಕಾಣದೆ, ಗರುಡನ ಪತ್ನಿಗೆ ಸಂತಸದಿಂದ ಸರ್ಪವು ಬಯಸುವಂತೆ, ಬಯಸುವವೊಲ್+ + ಐದಿದ(ಬಂದನು, ಹೋದನು) ಬಾಲಕಿಯ ಬಳಿಗೆ= ಕೀಚಕನು ದ್ರೌಪದಿಯ ಬಳಿಗೆ ಬಂದನು.
ಅರ್ಥ: ಕೂಡಲೆ ತನ್ನೊಡನೆ ಬರುತ್ತಿದ್ದ ಬರುತ್ತಿದ್ದ ಪರಿವಾರದ ಗುಂಪನ್ನು ಹಿಂದಕ್ಕೆ ಕಳುಹಿದನು. ತನ್ನ ಹತ್ತಿರವೇ ಇದ್ದ ವೀಳಯದ ಎಲೆಅಡಕೆಯ ಚೀಲ ಹೊರುವ ಬಾಲಕನನ್ನು ಹಿಂದಿಕ್ಕಿ ಸರಸರನೆ ಮುಂದೆ ನೆಡೆದು ಬಂದನು. ಅದು ಸಿಂಹದ ಜೊತೆಗಾತಿಗೆ ನರಿಯು ಒಲಿದು ಮನಸೋತು ಬಯಸಿದಂತಿತ್ತು ಮತ್ತು ಮುಂದಿನ ಸಾವನ್ನು ಕಾಣದೆ, ಗರುಡನ ಪತ್ನಿಗೆ ಸಂತಸದಿಂದ ಸರ್ಪವು ಬಯಸುವಂತೆ ಕೀಚಕನು ದ್ರೌಪದಿಯ ಬಳಿಗೆ ಬಂದನು.
ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ||
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ||17||
ಪದವಿಭಾಗ-ಅರ್ಥ: ಖಳನ ಮನದ+ ಇಂಗಿತವನು+ ಆಗಳೆ ತಿಳಿದು ಕಾಮಿನಿ ಬೆದರಿದಳು= ಕೀಚಕನ ಮನಸ್ಸಿನಲ್ಲಿರುವ ಉದ್ದೇಶವನ್ನು ಆ ಕೂಡಲೆ ತಿಳಿದುಕೊಂಡು ದ್ರವಪದಿ ಹೆದರಿದಳು. ಕಳವಳಿಗ ಸೋತನು ಕೆಟ್ಟೆನು+ ಎಂದಳು ತನ್ನ ಮನದೊಳಗೆ= ತನ್ನ ರೂಪಕ್ಕೆ ಮರುಳಾಗಿ ಬಯಕೆಯ ಸಂಕಟಕ್ಕೆ ಸಿಕ್ಕಿರುವನು, ಇವನ ಕಣ್ನಿಗೆ ಬಿದ್ದು ಕಷ್ಟಕ್ಕೆ ಸಿಕ್ಕಿದೆ- ಕೆಟ್ಟೆ ಎಂದು ಯೋಚಿಸಿದಳು. ತೊಲಗಿ ಹಿಂದೆ+ ಅಡಿಯಿಡಲು ಕೀಚಕನು+ ಅಳುಕದೆ+ ಐತಂದು+ ಅಬುಜವದನೆಯ ಬಳಿಗೆ ಬಂದನು= ಅಲ್ಲಿಂದ ಹೊರಟು ಹಿಂದಕ್ಕೆ ಹೆಜ್ಜೆಯಿಡಲು, ಕೀಚಕನು ಸಂಕೋಚಪಡದೆ, ಹೆದರದೆ ಮುಂದೆಬಂದು ಇವಳ ಬಳಿಗೇ ಬಂದನು; ನುಡಿಸಲಾಗದೆ (ನುಡಿಸಲು+ ಆಗದೆ= ನನ್ನನ್ನು ಮಾತನಾಡಿಸಲು ಅಗುವುದಿಲ್ಲವೇ)ತರಳೆ= ತರುಣಿ,ಯುವತಿ, ನೀನೆಂದ= ಮತ್ತೆ 'ನೀನು ನನ್ನನ್ನು ಮಾತನಾಡಿಸಬಾರದೆ ತರಳೆ,'ಎಂದ.
ಅರ್ಥ:ಕೀಚಕನ ಮನಸ್ಸಿನಲ್ಲಿರುವ ಉದ್ದೇಶವನ್ನು ಆ ಕೂಡಲೆ ತಿಳಿದುಕೊಂಡು ದ್ರೌಪದಿ ಹೆದರಿದಳು. ತನ್ನ ರೂಪಕ್ಕೆ ಮರುಳಾಗಿ ಬಯಕೆಯ ಸಂಕಟಕ್ಕೆ ಸಿಕ್ಕಿರುವನು, ಇವನ ಕಣ್ನಿಗೆ ಬಿದ್ದು ಕಷ್ಟಕ್ಕೆ ಸಿಕ್ಕಿದೆ- ಕೆಟ್ಟೆ ಎಂದು ಯೋಚಿಸಿದಳು. ಅಲ್ಲಿಂದ ಹೊರಟು ಹಿಂದಕ್ಕೆ ಹೆಜ್ಜೆಯಿಡಲು, ಕೀಚಕನು ಸಂಕೋಚಪಡದೆ, ಹೆದರದೆ ಮುಂದೆಬಂದು ಇವಳ ಬಳಿಗೇ ಬಂದನು; ಮತ್ತೆ 'ನೀನು ನನ್ನನ್ನು ಮಾತನಾಡಿಸಬಾರದೆ ತರಳೆ,'ಎಂದ.
ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು ||
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ||18||
ಪದವಿಭಾಗ-ಅರ್ಥ: ಎಲೆ ಮರುಳೆ ಬೇಡ+ ಅಳುಪುದಿರು(ಅಳುಪು= ಬಯಸು)= ಎಲೆ ಮರುಳೆ ನನ್ನನು ಬಯಸಬೇಡ; ಕೂರಲಗ ಕೊರಳಿಗೆ ಬಯಸದಿರು= ನಿನ್ನ ಕುತ್ತಿಗೆಗೆ ಹರಿತವಾದ ಕತ್ತಿಯನ್ನು ಪೆಟ್ಟನ್ನು ಬಯಸಬೇಡ; ನನಗಾಗಿ ಸಂಕಟಪಡಬೇಡ, ನಿನ್ನ ಕೈ ಕಾಲು ಜೋಪಾನವಾಗಿ ಇಟ್ಟುಕೊಂಡು ನಿನ್ನ ಅರಮನೆಗೆ ಹಿಂತಿರುಗಿ ಹೋಗು; ಸುಲಭೆ ನಾ ನಿನಗಲ್ಲ= ನಾನು ನಿನಗೆ ಸುಲಭವಾಗಿ ಸಿಗುವವಳಲ್ಲ. ನಿನ್ನನು ಕೆಲರು= ಅಕ್ಕಪಕ್ಕದವರು, ನಗುವರು= ನಿನ್ನನ್ನು ನೋಡಿ ಅಕ್ಕಪಕ್ಕದವರು ನಗುವರು; ಪರದ ಸದ್ಗತಿ ತೊಲಗುವುದು= ಪರರ ಪತ್ನಿಗಯನ್ನು ಬಯಸಿದರೆ ಸದ್ಗತಿ ಸಿಗುವುದಿಲ್ಲ; ಬೇಡ+ ಅಕಟಯೆಂದಳು ಪಾಂಡವರ ರಾಣಿ= ದ್ರೌಪದಿಯು ಬೇಡ ನನ್ನ ತಂಟೆಗೆ ಬರಬೇಡ ಎಂದಳು, ಅಕಟಾ ನನ್ನ ಮೇಲೆ ಇವನ ಕಣ್ಣು ಬಿತ್ತಲ್ಲಾ ಏನುಗತಿ ಎಂದುಕೊಂಡಳು.
ಅರ್ಥ: ಎಲೆ ಮರುಳೆ ನನ್ನನು ಬಯಸಬೇಡ; ನಿನ್ನ ಕುತ್ತಿಗೆಗೆ ಹರಿತವಾದ ಕತ್ತಿಯನ್ನು ಪೆಟ್ಟನ್ನು ಬಯಸಬೇಡ; ನನಗಾಗಿ ಸಂಕಟಪಡಬೇಡ, ನಿನ್ನ ಕೈ ಕಾಲು ಜೋಪಾನವಾಗಿ ಇಟ್ಟುಕೊಂಡು ನಿನ್ನ ಅರಮನೆಗೆ ಹಿಂತಿರುಗಿ ಹೋಗು; ಸುನಾನು ನಿನಗೆ ಸುಲಭವಾಗಿ ಸಿಗುವವಳಲ್ಲ. ನಿನ್ನನ್ನು ನೋಡಿ ಅಕ್ಕಪಕ್ಕದವರು ನಗುವರು; ಪರರ ಪತ್ನಿಯನ್ನು ಬಯಸಿದರೆ ಸದ್ಗತಿ ಸಿಗುವುದಿಲ್ಲ; ದ್ರೌಪದಿಯು ಬೇಡ ನನ್ನ ತಂಟೆಗೆ ಬರಬೇಡ ಎಂದಳು, ಅಕಟಾ ನನ್ನ ಮೇಲೆ ಇವನ ಕಣ್ಣು ಬಿತ್ತಲ್ಲಾ ಏನುಗತಿ ಎಂದುಕೊಂಡಳು.
ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ||
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನವ ||19||
ಪದವಿಭಾಗ-ಅರ್ಥ: ನಿಲ್ಲು+ ಎಲೆಗೆ ಸೈರಂಧ್ರಿ, ಕಾಮನ ಬಲ್ಲೆಹದ= ಈಟಿಯ, ಬಲುಗಾಯ ತಾಗಿತು= ನಿಲ್ಲು+ ಎಲೆಗ ಸೈರಂಧ್ರಿ, ನನ್ನ ಹೃದಯಕ್ಕೆ ಕಾಮನ ದೊಡ್ಡಗಾಯ ಮಾಡುವ ಈಟಿಯು ತಾಗಿತು (ನಿನಗೆ ಮರುಳಾಗಿದ್ದೇನೆ); ಬಲ್ಲೆ ನೀನು+ ಔಷಧಿಯ= ಈ ಕಾಮನ ಈಟಿಯ ಗಾಯವನ್ನು ವಾಸಿಮಾಡುವ ಔಷಧಿ ನಿನಗೆ ಗೊತ್ತಿದೆ. ರಕ್ಷಿಸಿಕೊಂಬುದು+ ಎನ್ನೊಡಲ= ನನ್ನ ಗಾಯವಾದ ದೇಹವನ್ನು= ನನ್ನ ಗಾಯವಾದ ಈ ದೇಹವನ್ನು ನೀನು ರಕ್ಷಿಸಿಕೊ! ಮೆಲ್ಲನೆ+ ಅಡಿಯಿಡು= ಮೆಲ್ಲನೆ ಹೋಗು, ಓಡಬೇಡ; ಮಾತ ಮನ್ನಿಸು= ನನ್ನ ಮಾತನ್ನು ಕೇಳು- ಒಪ್ಪು; ಚೆಲ್ಲೆಗಂಗಳನು(ವಿಶಾಲವಾದ ನಿನ್ನ ಚಂಚಲ ಕಣ್ಣುಗಳನ್ನು)+ ಎನ್ನ ಮುಖದಲಿ ಚೆಲ್ಲಿ ಸಪ್ರಾಣಿಸಲು= ಮತ್ತೆ ಬದುಕಿಸಬೇಕು, ಬೇಹುದು ವಿಗತಜೀವನವ= ವಿಗತ-ಹೋದ ಜೀವನವ- ಜೀವವನ್ನು= ನಿನ್ನ ವಿಶಾಲವಾದ ಚಂಚಲ ಕಣ್ಣುಗಳಿಂದ ನನ್ನ ಮುಖದ ಕಡೆ ನೋಡಿ ಈ ಹೋದ ನನ್ನ ಜೀವವನ್ನು ಮತ್ತೆ ಬದುಕಿಸಬೇಕು ಎಂದು ಬೇಡಿಕೊಂಡನು.
ಅರ್ಥ: ನಿಲ್ಲು ಎಲೆ ಸೈರಂಧ್ರಿ, ನನ್ನ ಹೃದಯಕ್ಕೆ ದೊಡ್ಡಗಾಯ ಮಾಡುವ ಕಾಮನ ಈಟಿಯು ತಾಗಿತು, ನಿನಗೆ ಮರುಳಾಗಿ ಸಂಕಟಪಡುತ್ತಿದ್ದೇನೆ; ಈ ಕಾಮನ ಈಟಿಯ ಗಾಯವನ್ನು ವಾಸಿಮಾಡುವ ಔಷಧಿ ನಿನಗೆ ಗೊತ್ತಿದೆ. ನನ್ನ ಗಾಯವಾದ ಈ ದೇಹವನ್ನು ನೀನು ರಕ್ಷಿಸಿಕೊ! ಮೆಲ್ಲನೆ ಹೋಗು, ಓಡಬೇಡ; ನನ್ನ ಮಾತನ್ನು ಕೇಳು - ಒಪ್ಪು; ನಿನ್ನ ವಿಶಾಲವಾದ ಚಂಚಲ ಕಣ್ಣುಗಳಿಂದ ನನ್ನ ಮುಖದ ಕಡೆ ನೋಡಿ ಈ ಹೋದ ನನ್ನ ಜೀವವನ್ನು ಮತ್ತೆ ಬದುಕಿಸಬೇಕು ಎಂದು ಬೇಡಿಕೊಂಡನು.
ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ||
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ||20||
ಪದವಿಭಾಗ-ಅರ್ಥ: ಎಲೆಗೆ ಪಾತಕಿ (ಪಾತಕ= ಕೊಲೆಗಾರ) ನಿನ್ನ ಕಣ್ಣೆಂಬ+ ಅಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ= ದ್ರೌಪದಿಯು ನಿಲ್ಲದೆ ಬೇಗ ಬೇಗ ಮುಂದೆ ಹೋಗಲು, ಕೀಚಕನು ತಡೆಯಲಾರದೆ, ಎಲೆ ಕೊಲೆಗಾತಿ, ನಿನ್ನ ಕಣ್ಣೆಂಬ ಬಾಣದ ಅಲಗಿನಲ್ಲಿ ತನ್ನ ಎದೆಯನ್ನು ನೋಯಿಸಿ ಹೋಗಬಹುದೇ? ಕರುಣವಿಲ್ಲವೆ ನಿನ್ನ ಮನದೊಳಗೆ= ನಿನ್ನ ಮನಸ್ಸಿನಲ್ಲಿ ಕರುಣವಿಲ್ಲವೆ; ಒಲಿದು ಬಂದೆನು= ನಿನಗೆ ಒಲಿದು ಬಂದಿದ್ದೇನೆ. ಕಾಮನ+ ಊಳಿಗ( ಕಾರ್ಯ. 2. ಉದ್ಯೋಗ. 3. ಕುಶಲಕರ್ಮ.) ಬಲುಹು= ಕಾಮನ ಕುಶಲಕಾರ್ಯದ ಶಕ್ತಿ ಬಹಳದೊಡ್ಡದು, ನನಗೆ ಪ್ರಾಣ ಹೋಗುವ ಭಯದಿಂದ ಸಂಕಟಪಡುತ್ತಿದ್ದೇನೆ; ಎನ್ನಯ=ನನ್ನ ಭಯವ ತಗ್ಗಿಸಿ ತಲೆಯ ಕಾಯಲು ಬೇಕು+ ಎನುತ ಕೀಚಕನು ಕೈಮುಗಿದ= ನನ್ನ ಭಯವನ್ನು ಹೋಗಲಾಡಿಸಿ ನನ್ನ ಜೀವವನ್ನು ನೀನು ಉಳಿಸಬೇಕು ಎನ್ನತ್ತಾ ಕೀಚಕನು ಕೈಮುಗಿದ.
ಅರ್ಥ: ದ್ರೌಪದಿಯು ನಿಲ್ಲದೆ ಬೇಗ ಬೇಗ ಮುಂದೆ ಹೋಗಲು, ಕೀಚಕನು ತಡೆಯಲಾರದೆ, 'ಎಲೆ ಕೊಲೆಗಾತಿ, ನಿನ್ನ ಕಣ್ಣೆಂಬ ಬಾಣದ ಅಲಗಿನಲ್ಲಿ ನನ್ನ ಎದೆಯನ್ನು ನೋಯಿಸಿ ಹೋಗಬಹುದೇ? ನಿನ್ನ ಮನಸ್ಸಿನಲ್ಲಿ ಕರುಣವಿಲ್ಲವೆ; ನಿನಗೆ ಒಲಿದು ಬಂದಿದ್ದೇನೆ. ಕಾಮನ ಕುಶಲಕಾರ್ಯದ ಶಕ್ತಿ ಬಹಳದೊಡ್ಡದು, ನನಗೆ ಪ್ರಾಣ ಹೋಗುವ ಭಯದಿಂದ ಸಂಕಟಪಡುತ್ತಿದ್ದೇನೆ; ನನ್ನ ಭಯವನ್ನು ಹೋಗಲಾಡಿಸಿ ನನ್ನ ಜೀವವನ್ನು ನೀನು ಉಳಿಸಬೇಕು ಎನ್ನತ್ತಾ ಕೀಚಕನು ಕೈಮುಗಿದನು.
ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯಳೊಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು||
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ||21||
ಪದವಿಭಾಗ-ಅರ್ಥ: ಪರರ ಸತಿಗೆ+ ಅಳುಪಿದೊಡೆ ಪಾತಕ ದೊರಕುವುದು= ಪರರ ಸತಿಯನ್ನು ಬಯಸಿದರೆ ಪಾಪ ದೊರಕುವುದು; ನಿಜ(ತನ್ನ)ಲಕ್ಷ್ಮಿ ತೊಲಗುಗು= ಅವನ ಸಂಪತ್ತು ನಷ್ಟವಾಗುವುದು; ಧರೆಯಳು+ ಅಗ್ಗದ ಕೀರ್ತಿ ಮಾಸುಗು= ಭೂಮಿಯಲ್ಲಿ ಅವನ ಉತ್ತಮವಾದ ಕೀರ್ತಿಗೆ ಕಳಂಕ ಬರುವುದು; ಮೇಲೆ ಗತಿಗೆ ಕೇಡಹುದು= ಸ್ವರ್ಗದ - ಪರಗತಿ ನಷ್ಟವಾಗುವುದು; ಕೊರಳು ಹಲವಾದ+ ಅಸುರನು+ ಅಂತಕ ಪುರವನು+ ಐದಿದ ಕಥೆಯ ನೀ ಕೇಳ್ದರಿಯಲಾ= ಹತ್ತುತಲೆಯ ದಶಕಂಠನು ಪರಸತಿಯನ್ನು ಬಯಸಿ ಯಮಲೋಕಕ್ಕೆ ಹೋದ ಕಥೆಯನ್ನು ಕೇಳಿಲ್ಲವೇ/ ಅದಿಲ್ಲದಿದ್ದರೆ ಕೇಳಿ ತಿಳಿದುಕೊ. ಡುಪಾಪಿ ಹೋಗೆಂದಳು ಸರೋಜಮುಖಿ= ಕಡುಪಾಪಿ ಹೋಗು ಎಂದಳು ದ್ರೌಪದಿ.
ಅರ್ಥ: ಪರರ ಸತಿಯನ್ನು ಬಯಸಿದರೆ ಪಾಪ ದೊರಕುವುದು; ಅವನ ಸಂಪತ್ತು ನಷ್ಟವಾಗುವುದು; ಭೂಮಿಯಮೇಲೆ ಅವನ ಉತ್ತಮವಾದ ಕೀರ್ತಿಗೆ ಕಳಂಕ ಬರುವುದು; ಸ್ವರ್ಗದ - ಪರಗತಿ ನಷ್ಟವಾಗುವುದು; ಹತ್ತು ಕೊರಳಿನ ದಶಕಂಠನು ಪರಸತಿಯನ್ನು ಬಯಸಿ ಯಮಲೋಕಕ್ಕೆ ಹೋದ ಕಥೆಯನ್ನು ಕೇಳಿಲ್ಲವೇ/ ಅದಿಲ್ಲದಿದ್ದರೆ ಕೇಳಿ ತಿಳಿದುಕೊ. ಕಡುಪಾಪಿ ಹೋಗು ಎಂದಳು ದ್ರೌಪದಿ.
ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ||
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳಹೆಂದ ||22||
ಪದವಿಭಾಗ-ಅರ್ಥ: ಮೇಲೆ ಸದ್ಗತಿ ಬೆಂದು ಹೋಗಲಿ= ಮೇಲೆ ಸ್ವರ್ಗದಲ್ಲಿರವ ಸದ್ಗತಿ ಬೆಂದು ಹೋಗಲಿ, ಹಾಳಾಗಲಿ; ಕಾಲನವರು+ ಐತರಲಿ= ಯಮನಕಡೆಯವರು ಬರಲಿ; ಬಂಧುಗಳು+ ಏಳಿಸುಲಿ= ನನ್ನ ಬಂಧುಗಳು ತೆಗಳಲಿ; ತನ್ನವರು ತೊಲಗಲಿ= ನನ್ನ ಹಿತೈಷಿಗಳು ಬಿಟ್ಟು ಹೋಗಲಿ; ರಾಣಿಯರು ಬಿಡಲಿ= ಪತ್ನಿಯರು ಬೇಕಾದರೆ ಬಿಟ್ಟು ಹೋಗಲಿ; ಬಾಲೆ ನಿನಗೆ+ ಆನು+ ಒಲಿದೆ, ಕಾಮನ ಕೋಲು(ಬಿಲ್ಲು, ಬಾಣ) ಎನ್ನನು ಮರಳಲು+ ಈಯದು(ಬಿಡದು)= ಹೆಣ್ಣೇ ನಿನಗೆ ನಾನು ಒಲಿದಿದ್ದೇನೆ; ಎದೆಯಲ್ಲಿ ಹೊಕ್ಕ ಕಾಮನ ಬಾಣವು ನನ್ನನು ಹಿಂತಿರುಗಲು ಬಿಡುತ್ತಿಲ್ಲ; ಲೋಲಲೋಚನೆ ಬಿರುಬ ನುಡಿಯದೆ ತನ್ನನು+ ಉಳಹು+ ಎಂದ= ಚಂಚಲಕಣ್ಣಿನ ಸುಂದರಿಯೇ ಬಿರುಸು ಮಾತುಗಳನ್ನಾಡದೆ ತನ್ನನ್ನು ಬದುಕಿಸಬೇಕು ಎಂದ ಕೀಚಕ.
  • ಪ್ರೊ. ಡಿ. ಎನ್. ಶಂಕರ ಭಟ್ ಇಂಗ್ಲಿಷ್-ಕನ್ನಡ ನಿಘಂಟು; reprove ಎಸಕಪದ; ಏಳಿಸು- (ಒಂಟಿಯೆಂದು ನನ್ನನ್ನು ಏಳಿಸಬೇಡ), ಅದಪು (ಅದಪುವ ಹಾಗೆ ಆತನೇನೂ ಮಾಡಿಲ್ಲ), ಬಯ್ಯು, ತೆಗಳು
ಅರ್ಥ:ಮೇಲೆ ಸ್ವರ್ಗದಲ್ಲಿರವ ಸದ್ಗತಿ ಬೆಂದು ಹೋಗಲಿ, ಹಾಳಾಗಲಿ; ಯಮನ ಕಡೆಯವರು, ದೂತರು ಬರಲಿ; ನನ್ನ ಬಂಧುಗಳು ತೆಗಳಲಿ; ನನ್ನ ಹಿತೈಷಿಗಳು ಬಿಟ್ಟು ಹೋಗಲಿ; ಪತ್ನಿಯರು ಬೇಕಾದರೆ ಬಿಟ್ಟು ಹೋಗಲಿ; ಹೆಣ್ಣೇ ನಿನಗೆ ನಾನು ಒಲಿದಿದ್ದೇನೆ; ಎದೆಯಲ್ಲಿ ಹೊಕ್ಕ ಕಾಮನ ಬಾಣವು ನನ್ನನು ಹಿಂತಿರುಗಲು ಬಿಡುತ್ತಿಲ್ಲ; ಚಂಚಲಕಣ್ಣಿನ ಸುಂದರಿಯೇ ಬಿರುಸು ಮಾತುಗಳನ್ನಾಡದೆ ತನ್ನನ್ನು ಬದುಕಿಸಬೇಕು ಎಂದ ಕೀಚಕ. (ತನ್ನ ಪ್ರಾಣವನ್ನು ಉಳಿಸು ಎಂದ.)
ಎಳೆನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು||
ಅಳಿಮನದ ಬಡತನವ ನಿನ್ನಯ
ಕಳಸ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ||23||
ಪದವಿಭಾಗ-ಅರ್ಥ: ಎಳೆನಗೆಯ ಬೆಳುದಿಂಗಳನು ನೀ +ತಳಿತು(ಹೊಂದಿ) ತಾಪವ ಕೆಡಿಸು= ನಿನ್ನ ಮುಗುಳುನಗೆಯ ಬೆಳುದಿಂಗಳನ್ನು ಬೀರಿ ನೀನು ನನ್ನ ಸಂಕಟವನ್ನು ಹೋಗಲಾಡಿಸು; ಮಧುರದ ಮೆಲುನುಡಿಯ ಸುಧೆಯಿಂದ ತೃಷ್ಣೆಯನು+ ಅಕಟ ಪರಿಹರಿಸು= ಮಧುರವಾದ ಮೆಲುನುಡಿಯೆಂಬ ಹಾಲಿನಿಂದ ನನ್ನ ಬಾಯಾರಿಕೆಯನ್ನು ಅಕಟ, ಅಯ್ಯೋ ಸಂಕಟಪಡುತ್ತಿದ್ದೇನೆ, ನೀನು ಅದನ್ನು ಪರಿಹರಿಸು; ಅಳಿಮನದ(ಅಳಿದ ಮನ- ಸತ್ತ- ಕುಗ್ಗಿದ ಮನ ಬಡಕಲಾಗಿರುವ) ಬಡತನವ(ಕೃಶವಾಗಿರುವ ಬಡಕಲಾಗಿರುವ) ನಿನ್ನಯ ಕಳಸ ಕುಚ ಲಕ್ಷ್ಮಿಯಲಿ ಕಳೆ= ಅರೆಜೀವವಾಗಿ ಬಡಕಲಾಗಿರುವ ನನ್ನ ಮನಸ್ಸನ್ನು ನಿನ್ನಯ ಕಳಸದಮತೆ ಉಬ್ಬಿದ ಕುಚಲಕ್ಷ್ಮಿಯಿಂದ ಹೋಗಲಾಡಿಸು; ಮನದ+ ಒಲವನು+ ಇತ್ತಲು ತಿದ್ದಬೇಹುದು ಕಾಂತೆ ಕೇಳೆಂದ= ನಿನ್ನ ಮನಸ್ಸಿನ ಒಲವನ್ನು ಇತ್ತ ನನ್ನಕಡೆಗೆ ತಿರುಗಿಸು, ಪ್ರಿಯೇ ನನ್ನ ಮಾತು ಕೇಳು ಎಂದ, ಕೀಚಕ.
ಅರ್ಥ:ನಿನ್ನ ಮುಗುಳುನಗೆಯ ಬೆಳುದಿಂಗಳನ್ನು ಬೀರಿ ನೀನು ನನ್ನ ಸಂಕಟವನ್ನು ಹೋಗಲಾಡಿಸು; ಮಧುರವಾದ ಮೆಲುನುಡಿಯೆಂಬ ಹಾಲಿನಿಂದ ನನ್ನ ಬಾಯಾರಿಕೆಯನ್ನು ಅಕಟ, ಅಯ್ಯೋ ಸಂಕಟಪಡುತ್ತಿದ್ದೇನೆ, ನೀನು ಅದನ್ನು ಪರಿಹರಿಸು; ಅರೆಜೀವವಾಗಿ ಬಡಕಲಾಗಿರುವ ನನ್ನ ಮನಸ್ಸನ್ನು ನಿನ್ನಯ ಕಳಸದಮತೆ ಉಬ್ಬಿದ ಕುಚಲಕ್ಷ್ಮಿಯಿಂದ ಹೋಗಲಾಡಿಸು; ನಿನ್ನ ಮನಸ್ಸಿನ ಒಲವನ್ನು ಇತ್ತ ನನ್ನಕಡೆಗೆ ತಿರುಗಿಸು, ಪ್ರಿಯೇ ನನ್ನ ಮಾತು ಕೇಳು ಎಂದ, ಕೀಚಕ.
ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ||
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ||24||
ಪದವಿಭಾಗ-ಅರ್ಥ:ಕೇಳಿ ಕಿವಿ ಮುಚ್ಚಿದಳು ತನ್ನಯ ಮೇಳದೈವರ ನೆನೆದು ಹರ ಹರ ಶೂಲಪಾಣಿ ಮುಕುಂದಯೆನುತವೆ= ದ್ರೌಪದಿಯು ಕೀಚಕನ ಪ್ರೇಮಾಲಾಪವನ್ನು ಕೇಳಿ ತನ್ನಕಿವಿಗಳನ್ನು ಮುಚ್ಚಿಕೊಂಡಳು. ತನ್ನ ಸಂಗಾತಿ- ಐವರನ್ನು ನೆನೆದು ಹರ ಹರ ಶೂಲಪಾಣಿ ಮುಕುಂದ- ಕೃಷ್ಣಾ ಎನ್ನುತ್ತಲೇ; ರವಿಯನು+ ಈಕ್ಷಿಸುತ= ನೋಡುತ್ತಾ, ಕಾಳುಮೂಳನಲಾ= ದುಷ್ನನಲಾ, ಖಳಾಗ್ರಣಿ= ಕೆಟ್ಟವರಲ್ಲಿ ಅತಿಕೆಟ್ಟಮನುಷ್ಯ, ಮೇಲುಗಾಣನಲಾ= ಮುಂದೇನೆಂದು ತೋಚದಾಗಿದೆಯಲ್ಲಾ, ಮದಾಂಧನ ಸೋಲಿಸುವರು+ ಆರುಂಟು+ ಎನುತ ತಲೆ ಬಾಗಿದಳು ತರಳೆ; ಮದಾಂಧನನ್ನು - ಸೊಕ್ಕಿನಿಂದ ಕುರುಡಾಗಿರುವವನನ್ನು, ಸೋಲಿಸುವವರು ಯಾರಿದ್ದಾರೆ ಎಂದು ಯೋಚಿಸುತ್ತಾ, ತಲೆ ಬಾಗಿಸಿಕೊಂಡು ಹೀಗೆ ಹೇಳಿದಳು ದ್ರೌಪದಿ.
  • ಕಾಳುಮೂಳ (ನಾ)= ದುಷ್ಟ,
ಅರ್ಥ: ದ್ರೌಪದಿಯು ಕೀಚಕನ ಪ್ರೇಮಾಲಾಪವನ್ನು ಕೇಳಿ ತನ್ನಕಿವಿಗಳನ್ನು ಮುಚ್ಚಿಕೊಂಡಳು. ತನ್ನ ಸಂಗಾತಿ- ಐವರನ್ನು ನೆನೆದು ಹರ ಹರ ಶೂಲಪಾಣಿ ಮುಕುಂದ- ಕೃಷ್ಣಾ ಎನ್ನುತ್ತಲೇ, ಸೂರ್ಯನನ್ನು ನೋಡುತ್ತಾ, ಇವನು ದುಷ್ಟನಲಾ, ಕೆಟ್ಟವರಲ್ಲಿ ಅತಿಕೆಟ್ಟಮನುಷ್ಯ, ಮುಂದೇನೆಂದು ತೋಚದಾಗಿದೆಯಲ್ಲಾ, ಸೊಕ್ಕಿನಿಂದ ಕುರುಡಾಗಿರುವ ಇವನನ್ನು ಸೋಲಿಸುವವರು ಯಾರಿದ್ದಾರೆ ಎಂದು ಯೋಚಿಸುತ್ತಾ, ತಲೆ ಬಾಗಿಸಿಕೊಂಡು ಹೀಗೆ ಹೇಳಿದಳು.
ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ||
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ||25||
ಪದವಿಭಾಗ-ಅರ್ಥ: ಎಲೆ ದುರಾತ್ಮ ಮಹಾಪರಾಧವ ಬಳಸುವರೆ ಬಯಲಿಂಗೆ= ಎಲೆ ದುಷ್ಟಬುದ್ಧಿಯವನೇ ಬಯಲು-ಸುಖಕ್ಕಾಗಿ (ಕ್ಷಣಿಕ ವ್ಯರ್ಥಸುಖಕ್ಕಾಗಿ) ಮಹಾಪರಾಧವ ಮಾಡುತ್ತರಯೇ?; ನಿನ್ನಯ ಕುಲದ ಬೇರನು ಕೊಯ್ವರೇ= ನಿನ್ನ ಕುಲದ ಮೂಲವನ್ನೇ ನಾಶ ಮಾಡವೆಯಾ? ಬಹುದು+ ಆವುದು+ ಇದರಿಂದ= ಇದರಿಂದ, ಈ ನಿನ್ನ ಬಯಕೆಯಿಂದ, ಹಳಿವು (ಹಳಿದನು- ನಿಂದಿಸಿದನು, ಹಳಿವು -ನಿಂದನೆ) ಹೊದ್ದದೆ= ಕೆಟ್ಟ ಹೆಸರು ಬರುವುದಿಲ್ಲವೇ? ಹೆತ್ತವರು ಮಕ್ಕಳುಗಳು+ ಎಂಬ ಈ ಬದುಕು ಮಾಣದೆಯೆಳಸಿಕೊಂಬಂತಾಯಿತು(ಮಾಣದೆ- ಬಿಡದೆ )+ ಎಂದಳು ಪಾಂಡವರ ರಾಣಿ= ನಿನ್ನ ರೀತಿ, ಈ ಬದುಕು, ಹೆತ್ತವರು ಮಕ್ಕಳು ಎಂದು ನೋಡದೆ ಅವರನ್ನು ಕಾಮಕ್ಕೆ ಬಳಸಿಕೊಳ್ಳುವಂತೆ ಆಯಿತು, ಎಂದಳು ಪಾಂಡವರ ರಾಣಿ- ದ್ರೌಪದಿ.
ಅರ್ಥ:ಎಲೆ ದುಷ್ಟಬುದ್ಧಿಯವನೇ ಬಯಲು-ಸುಖಕ್ಕಾಗಿ (ಕ್ಷಣಿಕವಾದ ವ್ಯರ್ಥಸುಖಕ್ಕಾಗಿ) ಮಹಾಪರಾಧವ ಮಾಡುತ್ತರಯೇ?; ನಿನ್ನ ಕುಲದ ಮೂಲವನ್ನೇ ನಾಶ ಮಾಡವೆಯಾ? ಇದರಿಂದ, ಈ ನಿನ್ನ ಬಯಕೆಯಿಂದ ನಿನಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಿನ್ನ ರೀತಿ, ನಿನ್ನ ಈ ಬದುಕು(ಆಸೆ), ಹೆತ್ತವರು ಮಕ್ಕಳು ಎಂದು ನೋಡದೆ ಅವರನ್ನು ಕಾಮಕ್ಕೆ ಬಳಸಿಕೊಳ್ಳುವಂತೆ ಆಯಿತು, ಎಂದಳು ಪಾಂಡವರ ರಾಣಿ- ದ್ರೌಪದಿ.
ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜಧರ್ಮದ ಚಿತ್ತಚಪಲವಲ||
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದುಳಿಂದುಮುಖಿ ||26||
ಪದವಿಭಾಗ-ಅರ್ಥ: ಕಾತರಿಸದಿರು ಮಂದಿವಾಳದ ಮಾತುಗಳು ಸಾಕು+ ಅಕಟ ತೊಲಗೈ= ಕಾತರಸಬೇಡ / ಅವಸರಪಟ್ಟು ಮುಂದುವರಿದು ದುಡುಕಬೇಡ, ಮಂದಿವಾಳದ ಮಾತುಗಳು ಸಾಕು+ ಅಕಟ ತೊಲಗೈ= ತಿಳುವಳಿಕೆ ಇಲ್ಲದವರು ಆಡುವ ಕೆಲಸಕ್ಕೆ ಬಾರದ ಮಾತುಗಳು ಸಾಕು; ಸೋತಡೆ+ ಏನದು= ಣಿನು ನನಗೆ ಮನಸೋತರೆ ಅದೇನು ದೊಡ್ಡ ವಿಷಯವಲ್ಲ. ಮನುಜಧರ್ಮದ ಚಿತ್ತಚಪಲವಲ= ಅದು ಸಾಮಾನ್ಯ ಮನುಷ್ಯನ ಗುಣ- ಚಿತ್ತಚಪಲವಲ್ಲವೇ- ಹೊಗಲಿ! ಈ ತತುಕ್ಷಣ ಜಾರು= ಈಗಿಂದೀಗ ಇಲ್ಲಿಂದ ಹೋಗಿಬಿಡು. ಕೇಳಿದಡೆ+ ಆತಗಳು ಸೈರಿಸರು= ಈ ನಿನ್ನ ದುಡುಕು ಕೇಳಿದರೆ ನನ್ನವರು ಸಹಿಸುವುದಿಲ್ಲ. ದೇವವ್ರಾತದಲಿ(ವ್ರಾತ= ಸಮೂಹ) ಬಲ್ಲಿದರು ತನ್ನವರು+ ಎಂದುಳು+ ಇಂದುಮುಖಿ= ನನ್ನವರು ದೇವತೆಗಳಸಾಲಿನಲ್ಲಿ ಬಲಿಷ್ಟರು ಎಂದಳು ದ್ರೌಪದಿ.
ಅರ್ಥ:ಅವಸರಪಟ್ಟು ಮುಂದುವರಿದು ದುಡುಕಬೇಡ, ತಿಳುವಳಿಕೆ ಇಲ್ಲದವರು ಆಡುವ ಕೆಲಸಕ್ಕೆ ಬಾರದ ಮಾತುಗಳು ಸಾಕು; ನೀನು ನನಗೆ ಮನಸೋತರೆ ಅದೇನು ದೊಡ್ಡ ವಿಷಯವಲ್ಲ,ಅದು ಸಾಮಾನ್ಯ ಮನುಷ್ಯನ ಗುಣ- ಚಿತ್ತಚಪಲವಲ್ಲವೇ- ಹೊಗಲಿ! ಈಗಿಂದೀಗ ಇಲ್ಲಿಂದ ಹೋಗಿಬಿಡು. ಈ ನಿನ್ನ ದುಡುಕುತನ ಕೇಳಿದರೆ ನನ್ನವರು ಸಹಿಸುವುದಿಲ್ಲ. ನನ್ನವರು ದೇವತೆಗಳಸಾಲಿನಲ್ಲಿ ಬಲಿಷ್ಟರು ಎಂದಳು ದ್ರೌಪದಿ.
ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು||
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ||27||
ಪದವಿಭಾಗ-ಅರ್ಥ: ಸಾವು ತಪ್ಪದು ತನಗೆ ಕಾಮನ ಡಾವರವು(ಹಿಂಸೆಯು)= ಕೀಚಕ ಹೇಳಿದ ತನಗೆ ಸಾವು ತಪ್ಪವುದಿಲ್ಲ ಏಕೆಂದರೆ ಕಾಮನ ಹಿಂಸೆಯು ನನ್ನನ್ನು ಸಾಯಿಸುವುದು (ನಿನ್ನಬಯಕೆಯ ತೀವ್ರತೆಯಿಂದಲೇ ಸತ್ತುಹೋಗುತ್ತೇನೆ), ಘನ ನಿನ್ನ ನೆರೆದೇ ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು= ಘನಳು- ಅತಿಸುಂದರಳಾದ ನಿನ್ನ ಸೇರಿಯೇ/ ಕೂಡಿಯೇ ಸಾಯುವೆನು, ಅದಲ್ಲದೆ ಕಾಮನಂಬಿಂಗೆ+ ಒಡಲನು(ದೇಹ)+ ಒಪ್ಪಿಸೆನು= ಅದಲ್ಲದೆ ಕಾಮನಬಾಣಕ್ಕೆ/ ನಿನ್ನನ್ನು ಬಯಸಿ ಸಂಕಟಪಟ್ಟು ಈ ದೇಹವನ್ನು ಸಾವಿಗೆ ಒಪ್ಪಿಸಲಾರೆನು; ಭಾವೆ(ಸುಂದರಿ) ನೂಕದಿರು+ ಎನ್ನ ವರ ರಾಜೀವಮುಖಿ ಕೃಪೆ ಮಾಡು= ಸುಂದರಿ ನನ್ನನ್ನು ದೂರ ತಳ್ಳಬೇಡ, ಶ್ರೇಷ್ಠಳಾಧ ಕಮಲಮುಖಿ ನನ್ನಮೇಲೆ ದಯೆ ತೋರಿಸು; ತನ್ನಯ ಜೀವನವನು+ ಉಳುಹು+ ಎನುತ ಕಮಲಾನನೆಗೆ ಕೈಮುಗಿದ= ಸುಂದರಿ ತನ್ನ ಜೀವವನ್ನು ಉಳಿಸು ಎನ್ನತ್ತಾ ಕಮಲಮುಖಿ ದ್ರೌಪದಿಗೆ ಕೈಮುಗಿದನು ಕೀಚಕ.
ಅರ್ಥ:ಕೀಚಕ ಹೇಳಿದ ತನಗೆ ಸಾವು ತಪ್ಪವುದಿಲ್ಲ ಏಕೆಂದರೆ ಕಾಮನ ಹಿಂಸೆಯು ನನ್ನನ್ನು ಸಾಯಿಸುವುದು (ನಿನ್ನಬಯಕೆಯ ತೀವ್ರತೆಯಿಂದಲೇ ಸತ್ತುಹೋಗುತ್ತೇನೆ), ಅತಿಸುಂದರಳಾದ ನಿನ್ನನ್ನು ಕೂಡಿಯೇ ಸಾಯುವೆನು, ಅದಲ್ಲದೆ ನಿನ್ನನ್ನು ಬಯಸಿ ಸಂಕಟಪಟ್ಟು ಈ ದೇಹವನ್ನು ಸಾವಿಗೆ ಒಪ್ಪಿಸಲಾರೆನು. ಸುಂದರಿ ನನ್ನನ್ನು ದೂರ ತಳ್ಳಬೇಡ, ಶ್ರೇಷ್ಠಳಾಧ ಕಮಲಮುಖಿ ನನ್ನ ಮೇಲೆ ದಯೆ ತೋರಿಸು, ಸುಂದರಿ ತನ್ನ ಜೀವವನ್ನು ಉಳಿಸು ಎನ್ನತ್ತಾ ಕಮಲಮುಖಿ ದ್ರೌಪದಿಗೆ ಕೈಮುಗಿದನು ಕೀಚಕ.
ಮರುಳತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು||
ಸೊರಹದಿರು ಅಪಕೀರ್ತಿ ನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ||28||
ಪದವಿಭಾಗ-ಅರ್ಥ: ಮರುಳತನ ಬೇಡೆಲವೊ ಗಂಧರ್ವರಿಗೆ ಹೆಂಡತಿ ತಾನು= ಎಲೆ ಕೀಚಕ ಮರುಳತನ ಮಾಡಬೇಡವೊ! ಗಂಧರ್ವರಿಗೆ ಹೆಂಡತಿ ತಾನು= ತಾನು ಗಂಧರ್ವರಿಗೆ ಹೆಂಡತಿಯು; ನಿನ್ನಯ ದುರುಳತನವನು ಸೈರಿಸರು= ನಿನ್ನ ದುರುಳತನದಿಂದ ನನ್ನನ್ನು ಹಿಂಸಿಸಿದರೆ ಅವರು ಸಹಿಸುವುದಿಲ್ಲ. ತನ್ನವರು ಬಲ್ಲಿದರು= ತನ್ನ ಪತಿಗಳು ಬಲಿಷ್ಟರು. ಸೊರಹದಿರು= ಅತಿಯಾಗಿ ಮಾತನಾಡಬೇಡ. ಅಪಕೀರ್ತಿ ನಾರಿಯ ನೆರೆಯದಿರು= ಪರಪತ್ನಿಯನ್ನು ನೆರೆಯದಿರು/ ಸೇರಬೇಡ ,ಅದರಿಂದ ಅಪಕೀರ್ತಿಬರುವುದು. ನೀ ನಿನ್ನ ನಿಳಯಕೆ ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು= ಕೈಯಲ್ಲಿ ಹುಲ್ಲುಕಡ್ಡಿಯನ್ನು ಹಿಇದು ಕೊಂಡು ಅವನನ್ನು ನೋಡದೆ, ಆ ಹುಲ್ಲಿನ ದಳವನ್ನು ನೋಡುತ್ತಾ, ನೀನು ನಿನ್ನ ಅರಮನೆಗೆ ಹಿಂತಿರುಗುವುದು ಒಳ್ಳೆಯದು ಎಂದು, ಸಾರಿ ಸಾರಿ ಹೇಳಿದಳು ದ್ರೌಪದಿ.
ಅರ್ಥ:ಎಲೆ ಕೀಚಕ ಮರುಳತನ ಮಾಡಬೇಡವೊ! ತಾನು ಗಂಧರ್ವರಿಗೆ ಹೆಂಡತಿಯು; ನೀನು ದುರುಳತನದಿಂದ ನನ್ನನ್ನು ಹಿಂಸಿಸಿದರೆ ಅವರು ಸಹಿಸುವುದಿಲ್ಲ. ತನ್ನ ಪತಿಗಳು ಬಲಿಷ್ಟರು. ಅತಿಯಾಗಿ ಮಾತನಾಡಬೇಡ. ಪರಪತ್ನಿಯನ್ನು ಸೇರಬೇಡ, ಅದರಿಂದ ಅಪಕೀರ್ತಿ ಬರುವುದು. ಕೈಯಲ್ಲಿ ಹುಲ್ಲುಕಡ್ಡಿಯನ್ನು ಹಿಇದು ಕೊಂಡು ಅವನನ್ನು ನೋಡದೆ, ಆ ಹುಲ್ಲಿನ ದಳವನ್ನು ನೋಡುತ್ತಾ, ನೀನು ನಿನ್ನ ಅರಮನೆಗೆ ಹಿಂತಿರುಗುವುದು ಒಳ್ಳೆಯದು ಎಂದು, ಸಾರಿ ಸಾರಿ ಹೇಳಿದಳು ದ್ರೌಪದಿ.
ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನದೇಗುವರು||
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ||29||
ಪದವಿಭಾಗ-ಅರ್ಥ: ದ್ರೌಪದಿಗೆ ಖಳ ನುಡಿದನು+ ಎನ್ನ+ ಆಟೋಪವನು ನೀನರಿಯೆ,= ದ್ರೌಪದಿಗೆ ಕೀಚಕ ಹೇಳಿದನು, 'ನನ್ನ ಶೌರ್ಯವನ್ನು ನೀನು ಅರಿತಿಲ್ಲ, "ಬಡವರ ಕೋಪ ವೌಡಿಗೆ (ಅವರ ದವಡೆಗೆ) ಮೃತ್ಯು"= (ಕೋಪಮಾಡಿದ ಬಡವ ಕೆನ್ನಗೆ ಏಟುತಿಂದು ದವಡೆ ಒಡೆಸಿಕೊಳ್ಳುತ್ತಾನೆ- ಅಷ್ಟೆ!) "ಬಡವರ ಕೋಪ ದವಡೆಗೆ ಮೃತ್ಯು" ಎಂಬ ಗಾದೆಯಂತೆ ಸಿಟ್ಟಿನಿಂದ ನನ್ನನ್ನು ಎದುರಿಸಿದರೆ ಅದು ಅವರಿಗೇ ಅಪಾಯ. ನಿನ್ನವರು+ ಎನ್ನ ದೇಗುವರು ಆಪೆನು = ನಿನ್ನವರು ನನ್ನನ್ನು ಎದುರಿಸುವರೇ? ನಾನು ಆಪೆನು- ಆಗುವೆನು- ಎದುರಿಸಬಲ್ಲೆ; (ಆಪೆನು+) ಅವರಂತಿರಲಿ= ಅವರು ಹಾಗಿರಲಿ, ನೀನು+ ಎನಗೆ+ ಓಪಳಾದರೆ ಸಾಕು= ನೀನು ನನಗೆ ಪ್ರೇಯಸಿಯಾದರೆ ಸಾಕು. ಮಲೆತಡೆಯು (ಮಲೆತಡೆ= ಯುದ್ಧಕ್ಕೆ ಬಂದರೆ)+ ಆ ಪಿನಾಕಿಗೆ= ಶಿವನಿಗೆ, ತೆರಳುವೆನೆ= ಹೆದರಿ ಓಡುವೆನೆ- ಇಲ್ಲ; ಬಳಿಕ+ ಅಲ್ಲಿ ನೋಡೆಂದ= ನೀನು ಒಲಿದು ಬಾ, ಆಮೇಲೆ ಅಲ್ಲಿ -ಯುದ್ಧದಲ್ಲಿ ನೋಡು, ಎಂದ.
ಅರ್ಥ: ದ್ರೌಪದಿಗೆ ಕೀಚಕ ಹೇಳಿದನು, 'ನನ್ನ ಶೌರ್ಯವನ್ನು ನೀನು ಅರಿತಿಲ್ಲ. "ಬಡವರ ಕೋಪ ದವಡೆಗೆ ಮೃತ್ಯು" ಎಂಬ ಗಾದೆಯಂತೆ ಸಿಟ್ಟಿನಿಂದ ನನ್ನನ್ನು ಎದುರಿಸಿದರೆ ಅದು ಅವರಿಗೇ ಅಪಾಯ. ನಿನ್ನವರು ನನ್ನನ್ನು ಎದುರಿಸುವರೇ? ಎದುರಿಸಬಲ್ಲೆ; ಅವರು ಹಾಗಿರಲಿ ನೀನು ನನಗೆ ಪ್ರೇಯಸಿಯಾದರೆ ಸಾಕು. ಯುದ್ಧಕ್ಕೆ ಬಂದರೆ ಆ ಶಿವನಿಗೆ, ಹೆದರಿ ಓಡುವೆನೆ? - ಇಲ್ಲ; ನೀನು ಒಲಿದು ಬಾ, ಆಮೇಲೆ ಅಲ್ಲಿ -ಯುದ್ಧದಲ್ಲಿ ನೋಡು, ಎಂದ.
ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ||
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ||30||
ಪದವಿಭಾಗ-ಅರ್ಥ:(ಮನ್ಮಥನ ಸಹಚರರುರಾದ, ಕಾಮೋದ್ರೇಕ ಕಾರಕಗಳಾದ) ಹುಳುಕನಲ್ಲಾ ತುಂಬಿ= ದುಂಬಿಯು ಕೀಟಲೆಯನ್ನು ಕೊಡುವವನಲ್ಲವೇ; ಕೋಗಿಲೆ ಗಳಹನಲ್ಲಾ= ಕೋಗಿಲೆ ಬಾಯಿಬಡುಕನಲ್ಲವೇ? ಶಶಿ ವಸಂತನ ಬಲುಹು= ಶಕ್ತಿ ಮಾನ್ಯರನು+ ಇರಿಯದೇ= ಚಂದ್ರ ವಸಂತನ ಶಕ್ತಿ ಸಜ್ಜನರನ್ನು ಇರಿಯದೇ(ಉದ್ರೇಕಗೊಳಿಸದೇ?)? ತಂಗಾಳಿ ಧಾರ್ಮಿಕನೆ= ಮನಸ್ಸನ್ನು ಉದ್ರೇಕಗೊಳಿಸುವ ತಂಗಾಳಿ ಧಾರ್ಮಿಕನೆ? ಖಳನಲಾ ಮಾಕಂದ (ಮಾ= ಲಕ್ಷ್ಮಿ- ಕಂದ= ಅವಳಮಗ- ಮನ್ಮಥ) ಲೋಕದ ಕೊಲೆಗಡಿಗನಲ್ಲಾ= ಮನ್ಮಥನು ದುಷ್ಟನಲ್ಲವೇ? ಅವನು ಲೋಕದ ಕೊಲೆಗಡಿಗನು! ಮನೋಭವನ (ಮನ್ಮಥನನ್ನು)+ ಇಳಿಕೆಗೊಂಬರೆ?(ಇಳಿಕೆ= ತಿರಸ್ಕಾರ) ಪಾಪಿ+ (ಯ+) ಒಲಿಯದೆ ಕೊಲುವರೇ? (ಯೆ)ಎಂದ= ಮನ್ಮಥನನ್ನು ತಿರಸ್ಕರಿಸಲು ಆಗುವುದೇ?) ಪಾಪಿ, ನೀನು ನನಗೆ ಒಲಿಯದೆ ಕೊಲ್ಲುವೆಯಾ? ಎಂದ ಕೀಚಕ.
ಅರ್ಥ: ಕಾಮೋದ್ರೇಕ ಕಾರಕಗಳಾಗಿ ಮನ್ಮಥನ ಸಹಚರರುರಾದ, ಸಾಧುವೆಂದು ಭಾವಿಸುವ, ದುಂಬಿಯು ಕೀಟಲೆಯನ್ನು ಕೊಡುವವನಲ್ಲವೇ; ಕೋಗಿಲೆ (ವಸಂತದಲ್ಲಿ ಹಾಡಿ) ಬಾಯಿಬಡುಕನಲ್ಲವೇ? ಚಂದ್ರ ಮತ್ತು ವಸಂತನ ಶಕ್ತಿ ಸಜ್ಜನರನ್ನು ಇರಿಯದೇ- ಉದ್ರೇಕಗೊಳಿಸದೇ? ಮನಸ್ಸನ್ನು ಉದ್ರೇಕಗೊಳಿಸುವ ತಂಗಾಳಿ ಧಾರ್ಮಿಕನೆ? ಮನ್ಮಥನು ದುಷ್ಟನಲ್ಲವೇ? ಅವನು ಲೋಕದ ಕೊಲೆಗಡಿಗನು! ಮನ್ಮಥನನ್ನು ತಿರಸ್ಕರಿಸಲು ಆಗುವುದೇ? (ಪ್ರಕೃತಿ ಸಹಜವಾದ ಕಾಮೋದ್ರೇಕವನ್ನು ತಡೆಯಲು ಆಗುವುದೇ?) ಪಾಪಿ, ನೀನು ನನಗೆ ಒಲಿಯದೆ ಕೊಲ್ಲಬಹುದೇ? ಎಂದ ಕೀಚಕ.
ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು||
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ||31||
ಪದವಿಭಾಗ-ಅರ್ಥ: ಒಲಿದು ನಿನ್ನನು ನಾವು ಕೊಲ್ಲೆವು= ನಿನಗೆ ಒಲಿದು ಬಂದು ನಿನ್ನನು ನಾವು ಕೊಲ್ಲುವುದಿಲ್ಲ. ಕೊಲುವ ಸುಭಟರು ಬೇರೆ= ನಿನ್ನನ್ನು ಕೊಲ್ಲುವ ವೀರರು ಬೇರೆಯವರು. ಬಯಲಿಗೆ ಹಲವ ಗಳಹಿದರೇನು - ಫಲವಿಲ್ಲಕಟ= ಅರ್ಥವಾಗದವರಿಗೆ ಹೇಳಿದರೆ ಬಯಲಿಗೆ ಹೇಳಿದಂತೆ, ಎಷ್ಟು ಹೇಳಿ ಏನು ಪ್ರಯೋಜನ? ಸಾರಿದೆನು ತಿಳುಪಿದೊಡೆಯೆನ್ನವರು ನಿನ್ನಯ ತಲೆಯನರಿದೂ ತುಷ್ಟರಾಗರು= ಸಾರಿಸಾರಿ ಹೇಳುತ್ತೇನೆ, ನನ್ನವರಿಗೆ ತಿಳಿಸಿದರೆ ಅವರು ನಿನ್ನ ತಲೆಯನ್ನು ಕತ್ತರಿಸಿಯೂ ತೃಪ್ತಿಹೊಂದುವುದಿಲ್ಲ, ಕಲಕುವರು ನಿನ್ನ+ ಅನ್ವಯ (ವಂಶದ ತಲೆಮಾರು)+ ಅಬ್ಧಿಯನು(ಸಮುದ್ರವನ್ನು)+ ಎಂದಳು+ ಇಂದುಮುಖಿ= ನಿನ್ನ ಅನ್ವಯದ ವಂಶವನ್ನೇ ನಾಶಮಾಡುವರು ಎಂದಳು ದ್ರೌಪದಿ.
ಅರ್ಥ: ನಿನಗೆ ಒಲಿದು ಬಂದು ನಿನ್ನನು ನಾವು ಕೊಲ್ಲುವುದಿಲ್ಲ. ನಿನ್ನನ್ನು ಕೊಲ್ಲುವ ವೀರರು ಬೇರೆಯವರು. ಅರ್ಥವಾಗದವರಿಗೆ ಹೇಳಿದರೆ ಬಯಲಿಗೆ ಹೇಳಿದಂತೆ, ಎಷ್ಟು ಹೇಳಿ ಏನು ಪ್ರಯೋಜನ? ಸಾರಿಸಾರಿ ಹೇಳುತ್ತೇನೆ, ನನ್ನವರಿಗೆ ತಿಳಿಸಿದರೆ ಅವರು ನಿನ್ನ ತಲೆಯನ್ನು ಕತ್ತರಿಸಿಯೂ ತೃಪ್ತಿಹೊಂದುವುದಿಲ್ಲ, ನಿನ್ನ ವಂಶದ ಎಲ್ಲರನ್ನೂ ನಾಶಮಾಡುವರು ಎಂದಳು ದ್ರೌಪದಿ.
ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು||
ಕೊಲೆಗಡಿಕೆಯೊ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ||32||
ಪದವಿಭಾಗ-ಅರ್ಥ: ಕುಲದೊಳು+ ಒಬ್ಬನು ಜನಿಸಿ ವಂಶವನು+ ಅಳಿದನು+ ಅಕಟಕಟ+ ಎಂಬ ದುರ್ಯಶವು+ಉಳಿವುದು= ಕುಲದಲ್ಲಿ ಒಬ್ಬನು ಹುಟ್ಟಿ ವಂಶವನ್ನೇ ನಾಶಮಾಡಿದನು, ಅಕಟಕಟ! ಎಂಬ ದುರ್ಯಶವು+ಉಳಿವುದು= ಅಪಕೀರ್ತಿಯು ಮಾತ್ರಾ ಉಳಿಯುವುದು;; (ಉಳಿವುದು+) ಅಲ್ಲದೆ ಲೇಸಗಾಣೆನು= ಅದಲ್ಲದೆ ಮತ್ತೇನೂ ಒಳ್ಳೆಯದನ್ನು ನಾನು ಕಾಣಲಾರೆನು; ಬರಿದೆ ಗಳಹದಿರು= ಸುಮ್ಮನೆ ಮಾತನಾಡಬೇಡ, ಹರಟಬೇಡ; ಕೊಲೆಗಡಿಕೆಯೊ ಪಾಪಿ ಹೆಂಗಸು ಹಲಬರನು ಕೊಲಿಸಿದಳು= ಆ ಹೆಂಗಸು ಕೊಲೆಗಡಕಿಯಪ್ಪಾ ಅನೇಕರನ್ನು ಕೊಲ್ಲಿಸಿದಳು, ಸುಡಲೆಂದು+ ಅಳಲುವರು= ಕೊನೆಗೆ ಅವಳ ಬಾಳು ಸುಡಲಿ ಎಂದು ಅಳುತ್ತಾರೆ-, ನಿನ್ನ+ ಅಖಿಳ ರಾಣಿಯರು+ ಎಂದಳು+ ಇಂದುಮುಖಿ= ನಿನ್ನ ಎಲ್ಲಾ ಪತ್ನಿಯರು ಎಂದಳು ದ್ರೌಪದಿ.
ಅರ್ಥ: ತಮ್ಮ ಕುಲದಲ್ಲಿ ಒಬ್ಬನು ಹುಟ್ಟಿ ವಂಶವನ್ನೇ ನಾಶಮಾಡಿದನು, ಅಕಟಕಟ! ಎಂಬ ಅಪಕೀರ್ತಿಯು ಮಾತ್ರಾ ಉಳಿಯುವುದು; ಅದಲ್ಲದೆ ಮತ್ತೇನೂ ಒಳ್ಳೆಯದನ್ನು ನಾನು ಕಾಣಲಾರೆನು; ಸುಮ್ಮನೆ ಮಾತನಾಡಬೇಡ; ನಿನ್ನ ಎಲ್ಲಾ ಪತ್ನಿಯರು ಆ ಹೆಂಗಸು ಕೊಲೆಗಡಕಿಯಪ್ಪಾ ಅನೇಕರನ್ನು ಕೊಲ್ಲಿಸಿದಳು ಕೊನೆಗೆ ಅವಳ ಬಾಳು ಸುಡಲಿ ಎಂದು ಅಳುತ್ತಾರೆ, ಎಂದಳು ದ್ರೌಪದಿ.
ಹರಿ ವಿರಂಚಿಗಳಾದೊಡೆಯು ಸಂ
ಗರದೊಳೆನಿಗಿದಿರಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ||
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯ್ತೆಂದಳಿಂದುಮುಖಿ ||33||
ಪದವಿಭಾಗ-ಅರ್ಥ: ಹರಿ ವಿರಂಚಿಗಳು+ ಆದೊಡೆಯು ಸಂಗರದೊಳು+ ಎನಿಗೆ+ ಇದಿರಲ್ಲ= ವಿಷ್ಣು- ಬ್ರಹ್ಮರೇ ಆದರೂ ಯುದ್ಧದಲ್ಲಿ ನನಗೆ ಸಮಾನರಲ್ಲ; ಮರುಳೇ ತರುಣಿ ನಿನ್ನೊಡನೆ+ ಏನು ತೋರಾ ನಿನ್ನ ವಲ್ಲಭರ= ಮರುಳು ಹೆಣ್ಣೇ ನಿನ್ನೊಡನೆ ಏನು ಮಾತು, ನಿನ್ನ ಗಂಡಂದಿರನ್ನು ತೋರಿಸು; ಪರಸತಿಯ ಸೆರೆಗೈಯೆ ಮುತ್ತಿತು ನೆರೆದು(ಒಟ್ಟಾಗಿ) ಕೋಡಗವಿಂಡು ಸುಭಟನು ಸರಿದನು+ ಅಂತಕ ನಗರಿಗರಿಯಾಯ್ತು+ ಎಂದಳು+ ಇಂದುಮುಖಿ= ಹೀಗೆ ಅಹಂಕಾರಪಟ್ಟು ಪರಸತಿಯಾದ ಸೀತೆಯನ್ನು ಸರೆಹಿಡಿದುದಕ್ಕೆ ಕೊನೆಗೆ ಕೋತಿಗಳು ಒಟ್ಟುಸೇರಿ ಲಂಕೆಯನ್ನು ಮುತ್ತಿತು ಆ ಮಹಾವಿರ ರಾವಣ ಯಮನ ನಗರಕ್ಕೆ/ ಲೋಕಕ್ಕೆ ಹೋದನು, ಎಂದಳು ದ್ರೌಪದಿ.
ಅರ್ಥ: ವಿಷ್ಣು- ಬ್ರಹ್ಮರೇ ಆದರೂ ಯುದ್ಧದಲ್ಲಿ ನನಗೆ ಸಮಾನರಲ್ಲ; ಮರುಳು ಹೆಣ್ಣೇ ನಿನ್ನೊಡನೆ ಏನು ಮಾತು, ನಿನ್ನ ಗಂಡಂದಿರನ್ನು ತೋರಿಸು ಎಂದನು ಕೀಚಕ; ಹೀಗೆ ಅಹಂಕಾರಪಟ್ಟು ಪರಸತಿಯಾದ ಸೀತೆಯನ್ನು ಸರೆಹಿಡಿದುದಕ್ಕೆ ಕೊನೆಗೆ ಕೋತಿಗಳು ಒಟ್ಟುಸೇರಿ ಲಂಕೆಯನ್ನು ಮುತ್ತಿತು, ಆ ಮಹಾವೀರ ರಾವಣ ಯಮಲೋಕಕ್ಕೆ ಹೋದನು, ಎಂದಳು ದ್ರೌಪದಿ.

ಕೀಚಕನ ಪ್ರೇಮಭಿಕ್ಷೆ[ಸಂಪಾದಿಸಿ]

ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ||
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನೆಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ||34||
ಪದವಿಭಾಗ-ಅರ್ಥ: ನೀರೆ ನೂಕದಿರು+ ಎನ್ನ ಮನ ಮುಮ್+ಮಾರುವೋದದು (ಮೊದಲೇ ಮಾರುಹೋಗಿದೆ(ನಿನಗೆ) - ವಶವಾಗಿಹೋಗಿದೆ)= ಹೆಣ್ಣೇ ನನ್ನನ್ನು ನಿರಾಕರಿಸಿ ನೂಕಬೇಡ, ನನ್ನ ಮನಸ್ಸು ಈಗಾಗಲೇ ನಿನಗೆ ವಶವಾಗಿಹೋಗಿದೆ; ನೀನು ಚಿತ್ತವ ಸೂರೆಗೊಂಡು+ ಈ ಮದನನ+ ಅಂಬಿಂಗೆ+ ಒಡಲ ಹೂಣಿಸುವೆ(1. ಹೊಂದಿಸುವೆ. 2. ನೀಡುವೆ)= ನೀನು ನನ್ನ ಮನಸ್ಸನ್ನು ನೀನು ಸೂರೆಗೊಂಡು ಈ ಮನ್ಮಥನ ಬಾಣಕ್ಕೆ ನನ್ನ ಒಡಲನ್ನು ಕೊಡುವೆ; ಜಾರದಿರು+(ಯೆ+) ಎನ್ನೆದೆಗೆ ತಾಪವ ಬೀರದಿರು ಕಾರುಣ್ಯವನು ಕೈದೋರು+ ಎನೆಗೆ ಕಮಲಾಕ್ಷಿ ಮರಣವ ಮಾಣಿಸು(ಇಲ್ಲವಾಗಿಸು- ತಪ್ಪಿಸು)+ ಅಕಟ+ ಎಂದ= ಹೊರಟುಹೋಗಬೇಡ, ನನ್ನೆದೆಗೆ ತಾಪವ ಬೀರಬೇಡ, (ಕೈದೋರು = ತೋರಿಸು) ಸ್ವಲ್ಪ ಕರುಣೆಯನ್ನು ತೋರಿಸು, ನನೆಗೆ ಕಮಲಾಕ್ಷಿ, ಸಾವನ್ನು ತಪ್ಪಿಸು- ಅಕಟ, ನೀನು ಸಿಗದಿದ್ದರೆ ಆ ಸಂಕಟದಲ್ಲಿ ಸತ್ತೇ ಹೊಗುತ್ತೇನೆ, ಅಯ್ಯೋ! ಎಂದು ಬೇಡಿಕೊಂಡ.
ಅರ್ಥ: ಪ್ರಿಯೇ, ನನ್ನನ್ನು ನಿರಾಕರಿಸಿ ನೂಕಬೇಡ, ನನ್ನ ಮನಸ್ಸು ಈಗಾಗಲೇ ನಿನಗೆ ವಶವಾಗಿ ಹೋಗಿದೆ; ನನ್ನ ಮನಸ್ಸನ್ನು ನೀನು ಸೂರೆಗೊಂಡಿದ್ದು ನೀನು ಸಿಗದಿದ್ದರೆ ಈ ಮನ್ಮಥನ ಬಾಣಕ್ಕೆ ನನ್ನ ಒಡಲನ್ನು ಕೊಡುವೆ; ಹೊರಟುಹೋಗಬೇಡ, ನನ್ನೆದೆಗೆ ತಾಪವ ಬೀರಬೇಡ, ನನೆಗೆ ಸ್ವಲ್ಪ ಕರುಣೆಯನ್ನು ತೋರಿಸು, ಕಮಲಾಕ್ಷಿ ಸಾವನ್ನು ತಪ್ಪಿಸು- ಅಕಟ, ನೀನು ಸಿಗದಿದ್ದರೆ ಆ ಸಂಕಟದಲ್ಲಿ ಸತ್ತೇ ಹೊಗುತ್ತೇನೆ, ಅಯ್ಯೋ! ಎಂದು ದೀನನಾಗಿ ಬೇಡಿಕೊಂಡ.
ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ||
ಗರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ||35||
ಪದವಿಭಾಗ-ಅರ್ಥ: ಮರುಳೆ ಮನದ ವಿಕಾರ ಮಾರಿಯ ಸರಸವಾಡುವರುಂಟೆ= ಮರುಳೆ, ಮನಸ್ಸಿನ ವಿಕಾರವೆಂಬ ಮಾರಿಯೊಡನೆ ಸರಸವಾಡುವರು ಇರವರೇ?>; ಮೃತ್ಯುವ ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ= ಉರಿಯುವ ಬೆಂಕಿ ಚಂದ ಹೆಣ್ಣಿನ ಪ್ರತಿಮೆಯಂತಿದ್ದರೆ ಅದನ್ನು ಅಪ್ಪುವರೇ? ಮೃತ್ಯುವನ್ನು ಕೂಡಿ ನೆರೆವರೇ- ಬೆರೆಯುವರೇ? >; ಬಯಸಿ ಗರಳಕೆ(ಗರಳ= ವಿಷ)+ ಅಂಗೈಸುವರೆ= ಬಯಸಿ ವಿಷಕ್ಕೆ ಯಾರಾದರೂ ಅಂಗೈ ಒಡ್ಡವರೇ? >; ಪಾಪಿಯೆ ಮರಳು ನಿನ್ನರಮನೆಗೆ+ ಯೆನ್ನಯ+ ಗರುವ ಗಂಡರು ಕಡಿದು ಹರಹುವರೆಂದಳು+ ಇಂದುಮುಖಿ= ಪಾಪಿಯೆ ಹಿಂತಿರೊಗಿ ಹೋಗು ನಿನ್ನ ಅರಮನೆಗೆ, ನನ್ನ ಶೂರ ಗಂಡರು ನಿನ್ನನ್ನು ಕಡಿದು ಚೂರು ಚುರು ಮಾಡುವರು ಎಂದಳು ದ್ರೌಪದಿ.
ಅರ್ಥ: ಮರುಳೆ, ಮನಸ್ಸಿನ ವಿಕಾರವೆಂಬ ಮಾರಿಯೊಡನೆ ಸರಸವಾಡುವರು ಇರವರೇ? ಮೃತ್ಯುವನ್ನು ಕೂಡಿನೆರೆವರೇ- ಬೆರೆಯುವರೇ? ಉರಿಯುವ ಬೆಂಕಿ ಚಂದ ಹೆಣ್ಣಿನ ಪ್ರತಿಮೆಯಂತಿದ್ದರೆ ಅದನ್ನು ಅಪ್ಪುವರೇ? ದಳ್ಳುರಿಯ ಪ್ರತಿಮೆ ಚಂದವಿದೆಯೆಂದು ಅದನ್ನು ಅಪ್ಪುವರೆ; ಬಯಸಿ ವಿಷಕ್ಕೆ ಯಾರಾದರೂ ಅಂಗೈ ಒಡ್ಡವರೇ? ; ಪಾಪಿಯೆ ಹಿಂತಿರೊಗಿ ಹೋಗು ನಿನ್ನ ಅರಮನೆಗೆ, ನನ್ನ ಶೂರ ಗಂಡರು ನಿನ್ನನ್ನು ಕಡಿದು ಚೂರು ಚೂರು ಮಾಡುವರು ಎಂದಳು ದ್ರೌಪದಿ.
ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು||
ಸೋಲಿಸಿದ ಗೆಲುವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ||36||
ಪದವಿಭಾಗ-ಅರ್ಥ:ತೋಳ ತೆಕ್ಕೆಯ(ಅಪ್ಪಿಗೆ) ತೊಡಿಸಿ ಕಾಮನಕೋಲ ತಪ್ಪಿಸು= ಸುಂದರಿ, ನಿನ್ನತೋಳುಗಳಿಂದ ನನ್ನನ್ನು ಅಪ್ಪಿ ಹಿಡಿದು ಆ ತೆಕ್ಕೆಯನ್ನು ತೊಡಿಸಿ ಕಾಮನ ಬಾಣದಿಂದ ತಪ್ಪಿಸು. ಖಳನ ಕಗ್ಗೊಲೆಯ+ ಊಳಿಗವ (ಊಳಿಡು-ಕಾಯಕ, ಊಳಿಡು -ಕೂಗು?,) ಕೇಳಿ+ ಉಸುರದೆ(ಮಾತನಾಡದೆ)+ ಇಹರೆ(ಇರುವರೇ?)= ಆ ಕಾಮನೆಂಬ ನೀಚನು ನನ್ನನ್ನು ಕಗ್ಗೊಲೆ ಮಾಡುವ ಕಾರ್ಯವನ್ನು (ನನ್ನ ಬಾಯಿಯಿಂದ) ಕೇಳಿಯೂ ಮಾತನಾಡದೆ ಇರುವರೇ? ಅದನ್ನು ತಪ್ಪಿಸದೇ ಇರಬಹುದೇ? ಸಮರ್ಥರಾದವರು ಸೋಲಿಸಿದ ಗೆಲವಿಂದ ಬಲು ಮಾತಾಳಿ (ಅತಿ ಮಾತನಾಡುವವನು)+ ಯಿವನು+ ಎನ್ನದಿರು= ಸಮರ್ಥರಾದವರು ನನ್ನನ್ನು ಸೋಲಿಸಿದಾಗ, ನೀನು ಗೆಲುವಿನಿಂದ ನನ್ನನ್ನು ಬಲು ಮಾತಾಳಿ ಇವನು ಎನ್ನಬೇಡ. ಹರಣದ(ಪ್ರಾಣ) ಮೇಲೆ ಸರಸವೆ= ಇದು ನನ್ನ ಪ್ರಾಣ ಹೋಗುವ ವಿಷಯ, ಅದರ ಮೇಲೆ ನೀನು ಸರಸವಾಡಬಹುದೇ? ಕಾಯಬೇಹುದು ಕಾಂತೆ ಕೇಳೆಂದ= ಪ್ರಿಯೆ, ನನ್ನ ಪ್ರಾಣ ಉಳಿಸಿ ಕಾಕಾಪಾಡಬೇಕು ನೀನು, ಕೇಳು ಎಂದ ಕೀಚಕ.
ಅರ್ಥ: ಸುಂದರಿ, ನಿನ್ನ ತೋಳುಗಳಿಂದ ನನ್ನನ್ನು ಅಪ್ಪಿ ಹಿಡಿದು ಆ ತೆಕ್ಕೆಯನ್ನು ತೊಡಿಸಿ ಕಾಮನ ಬಾಣದಿಂದ ತಪ್ಪಿಸು. ಆ ಕಾಮನೆಂಬ ನೀಚನು ನನ್ನನ್ನು ಕಗ್ಗೊಲೆ ಮಾಡುವ ಕಾರ್ಯವನ್ನು ನನ್ನ ಬಾಯಿಯಿಂದ ಕೇಳಿಯೂ ಮಾತನಾಡದೆ ಇರುವರೇ? ಅದನ್ನು ತಪ್ಪಿಸದೇ ಇರಬಹುದೇ? ಸಮರ್ಥರಾದವರು ನನ್ನನ್ನು ಸೋಲಿಸಿದಾಗ, ನೀನು ಗೆಲುವಿನಿಂದ ನನ್ನನ್ನು ಬಲು ಮಾತಾಳಿ ಇವನು ಎನ್ನಬೇಡ. ಇದು ನನ್ನ ಪ್ರಾಣ ಹೋಗುವ ವಿಷಯ, ಅದರ ಮೇಲೆ ನೀನು ಸರಸವಾಡಬಹುದೇ? ಪ್ರಿಯೆ, ನನ್ನ ಪ್ರಾಣ ಉಳಿಸಿ ಕಾಪಾಡಬೇಕು ನೀನು, ಕೇಳು, ಎಂದ ಕೀಚಕ.
ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ||
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ||37||
ಪದವಿಭಾಗ-ಅರ್ಥ: ಉಳಿದ ತನ್ನ+ ಅರಸಿಯರ ನಿನ್ನಯ ಬಳಿಯ ತೊತ್ತಿರ ಮಾಡುವೆನು, ಕೇಳು+ ಎಲೆಗೆ ತನ್ನ+ ಒಡಲಿಂಗೆ+ (ಯೊ) ಒಡೆತನ ನಿನ್ನದಾಗಿರಲಿ= ಉಳಿದ ತನ್ನ ಪತ್ನಿಯರನ್ನು ಸೈರಂದ್ರಿ ನಿನ್ನ ಬಳಿಯಲ್ಲಿ ಸೇವಕರಾಗಿರುವಂತೆ ಮಾಡುತ್ತೇನೆ., ಕೇಳು ಎಲೆ ಸುಂದರಿ ನನ್ನ ಈ ದೇಹಕ್ಕೆ ನಿನ್ನದೇ ಒಡೆತನ ಆಗಿರಲಿ, ನೀನೇ ನನಗೆ ಒಡತಿಯಾಗಿರು ನಾನು ನಿನ್ನ ಸೇವಕನಾಗಿರುತ್ತೇನೆ. ಲಲನೆ ನಿನ್ನೊಳು ನಟ್ಟ ಲೋಚನ ತೊಲಗಲಾರದು= ಪ್ರಿಯೆ, ನಿನ್ನಮೇಲೆ ನಟ್ಟಿರವ ನನ್ನ ಕಣ್ಣಿನ ದೃಷ್ಟಿ ಬೇರೆಕಡೆ ಹೋಗಲಾರದು; ತನ್ನ ಕಾಯವ ಬಳಲಿಸದೆ ಕೃಪೆ ಮಾಡಬೇಹುದು+ ಎನುತ್ತ ಕೈಮುಗಿದ= ತನ್ನ ಈ ದೇಹವನ್ನು ಬಳಲಿಸದೆ- ಬಹಳ ಆಯಾಸಪಡಿಸದೆ ಕೃಪೆತೋರಿಸಬೇಕು ಎನುತ್ತ ಕೈಮುಗಿದ.
ಅರ್ಥ:ಸೈರಂದ್ರಿ ಕೇಳು, 'ಉಳಿದ ನನ್ನ ಪತ್ನಿಯರನ್ನು ನಿನ್ನ ಬಳಿಯಲ್ಲಿ ಸೇವಕರಾಗಿರುವಂತೆ ಮಾಡುತ್ತೇನೆ., ಕೇಳು ಎಲೆ ಸುಂದರಿ, ನಾನು ನಿನ್ನ ಸೇವಕನಾಗಿರುತ್ತೇನೆ. ಪ್ರಿಯೆ, ನಿನ್ನ ಮೇಲೆ ನಟ್ಟಿರವ ನನ್ನ ಕಣ್ಣಿನ ದೃಷ್ಟಿ ಬೇರೆಕಡೆ ಹೋಗಲಾರದು.' ತನ್ನನ್ನು ಬಳಲಿಸದೆ ಸಂಕಟಕ್ಕೆ ಗುರಿಮಾಡದೆ ಕೃಪೆತೋರಿಸಬೇಕು, ಎನ್ನುತ್ತಾ ಕೈಮುಗಿದು ಬೇಡಿಕೊಂಡ ಕೀಚಕ.

ದ್ರೌಪದಿಯ ತಿರಸ್ಕಾರ - ಕೀಚಕ ಅಕ್ಕನ ಮೊರೆಹೋದ[ಸಂಪಾದಿಸಿ]

ನ್ಯಾಯವನು ಮಿಗೆ ಗೆಲುವದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು||
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲನರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ||38||
ಪದವಿಭಾಗ-ಅರ್ಥ: ನ್ಯಾಯವನು(ತರ್ಕವನ್ನು) ಮಿಗೆ(ಅತಿ ವಿಪರೀತ) ಗೆಲುವು ಅದು+ ಈಯ(ಈಯದು - ಕೊಡದು)= ತರ್ಕವನ್ನು ಅತಿ ಮಾಡಿದರೆ ಅದು ಧರ್ಮವನ್ನು ಕೊಡದು; ನ್ಯಾಯವು+ ಅಧಮನ ಧರ್ಮ ಮಾರ್ಗ= ಕು-ತರ್ಕವು ಅಧಮನ ಧರ್ಮ ಮಾರ್ಗ; ಸ್ಥಾಯಿಗಳ(ಸ್ಥಿರವಾಗಿರುವವುಗಳ) ತಿಮಿರಕ್ಕೆ (ಕತ್ತಲೆ) ಭಾಸ್ಕರಗೆ+ ಆವುದು+ ಅಂತರವು= ಸ್ಥಿರವಾಗಿರುವುದು ಯಾವುದು? ಕತ್ತಲೆಗೂ ಸುರ್ಯನಿಗೂ ವ್ಯತ್ಯಾಸ ಯಾವುದು? ನೀನು ಹೇಳುವ ಧರ್ಮ ಕತ್ತಲೆಗೂ ಸುರ್ಯನಿಗೂ ಇರುವ ಅಂತರದಷ್ಟಿದೆ; ಕಾಯರು (ತಡಮಾಡುವುದಿಲ್ಲ)+ ಎನ್ನವರು+ ಅವರ ಕೈಗುಣದ+ ಆಯತವ ಬಲ್ಲನರೆ ಬಲ್ಲರು= ತಿಳಿದರೆ ನನ್ನವರು ತಡಮಾಡುವುದಿಲ್ಲ, ಅವರ ಕೈಯಿನ ಸಾಮರ್ಥ್ಯವನ್ನು ತಿಳಿದವರು ಬಲ್ಲರು. ನಾಯಿ ಸಿಂಹಕ್ಕಿದಿರೆ= ನಾಯಿಯು ಸಿಂಹವನ್ನು ಎದುರಿಸಬಲ್ಲದೇ? ಫಡ ಹೋಗು+ ಎದು ತಿರುಗಿದಳು= ಛಿ! ಹೋಗು ಎಂದು ಹೇಳಿ ತಿರುಗಿ ಹೊರಟಳು.
ಅರ್ಥ:ತರ್ಕವನ್ನು ಅತಿ ಮಾಡಿದರೆ ಅದು ಕುತರ್ಕ- ಧರ್ಮವನ್ನು ಕೊಡದು; ಕು-ತರ್ಕವು ಅಧಮನ ಧರ್ಮ ಮಾರ್ಗ; ಸ್ಥಿರವಾಗಿರುವುದು ಯಾವುದು? ಅದನ್ನು ಅನುಸರಿಸಬೇಕು. ಕತ್ತಲೆಗೂ ಸುರ್ಯನಿಗೂ ವ್ಯತ್ಯಾಸ ಯಾವ ಬಗೆಯದು? ನೀನು ಹೇಳುವ ಧರ್ಮ ಕತ್ತಲೆಗೂ ಸುರ್ಯನಿಗೂ ಇರುವ ಅಂತರದಷ್ಟಿದೆ; ತಿಳಿದರೆ ನನ್ನವರು ತಡಮಾಡುವುದಿಲ್ಲ, ಅವರ ಕೈಯಿನ ಸಾಮರ್ಥ್ಯವನ್ನು ತಿಳಿದವರು ಮಾತ್ರಾ ಬಲ್ಲರು. ನಾಯಿಯು ಸಿಂಹವನ್ನು ಎದುರಿಸಬಲ್ಲದೇ? ಫಡ! ಛಿ! ಹೋಗು ಎಂದು ಹೇಳಿ ತಿರುಗಿ ಹೊರಟಳು.
ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದದು ಮನದ ಸರ್ವಸ್ವ||
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ||39||
ಪದವಿಭಾಗ-ಅರ್ಥ:ಹೂಣೆ (ಹೂಣ= 1. ಶಪಥ. 2. ಹವಣಿಕೆ.- ಹಠ - ತಂತ್ರ) ಹೊಕ್ಕುದು (ಮನಸ್ಸಿನಲ್ಲಿ ಹೊಕ್ಕಿತು) ವಿರಹದ+ ಆಸೆಯ ಕಾಣೆನು+ ಆಕೆಯ ಮಾತಿನಲಿ= ಅವನಲ್ಲಿ ಹೇಗಾದರೂ ಪಡೆಯಬೇಕೆಂಬ ಹಠ ಮನಸ್ಸಿನಲ್ಲಿ ಹುಟ್ಟಿ ಅದಕ್ಕೆ ತಂತ್ರವನ್ನು ಯೋಚಿಸಿದನು; ವಿರಹದ+ ಆಸೆಯ ಕಾಣೆನು+ ಆಕೆಯ ಮಾತಿನಲಿ= ವಿರಹದ+ ಆಸೆಯ ಕಾಣೆನು= ಆಕೆಯ ಮಾತನ್ನು ಗಮನಿಸಿದರೆ ಅವಳಿಗೆ ಪುರುಷರ ಬಯಕೆ - ವಿರಹವೇ ಇದ್ದಂತೆ ಕಾಣುವುದಿಲ್ಲ ಎಂದು ಕೀಚಕ ಚಿಂತೆಗೊಳಗಾದನು. ಮುಂಗಾಣಿಕೆಯಲೇ ಸೂರೆ ಹೋದದು ಮನದ ಸರ್ವಸ್ವ= ಮುಂಗಾಣಿಕೆಯಲೇ= ಮೊದಲ ಕಾಣಿಕೆ- ಮೊದಲ ಪ್ರೇಮ ನಿವೇದನೆಯಲ್ಲೇ ಮನದ ಆಸೆಯ ಸರ್ವಸ್ವವೂ ಕಳೆದುಹೋಯಿತು/ ನಷ್ಟವಾಯಿತು; ತ್ರಾಣ ಸಡಿಲಿತು= ನಿರಾಸೆಯಿಂದ ಶಕ್ತಿಗುಂದಿದ; ಬುದ್ಧಿ ಕದಡಿ ಕೃಪಾಣಪಾಣಿ ವಿರಾಟ ರಾಯನ ರಾಣಿಯ+ ಅರಮನೆಗೆ ಐದಿದನು= ಬುದ್ಧಿ ಕದಡಿಹೋಯಿತು- ದಿಕ್ಕು ತೋಚದಾಯಿತು; ಆಗ ಖಡ್ಗಧಾರಿಯಾದ ಕೀಚಕ ವಿರಾಟ ರಾಯನ ರಾಣಿಯಾದ ತನ್ನ ಅಕ್ಕನ ಅರಮನೆಗೆ ಮಂದನು, ಅಲ್ಲಿ ಮುಂದಿನ ಯೋಜನೆಗೆ ತನ್ನ ಅಕ್ಕನನ್ನು ಕಂಡನು.
ಅರ್ಥ:ಅವನಲ್ಲಿ ಹೇಗಾದರೂ ಪಡೆಯಬೇಕೆಂಬ ಹಠ ಮನಸ್ಸಿನಲ್ಲಿ ಹುಟ್ಟಿ ಅದಕ್ಕೆ ತಂತ್ರವನ್ನು ಯೋಚಿಸಿದನು; ಆಕೆಯ ಮಾತನ್ನು ಗಮನಿಸಿದರೆ ಅವಳಿಗೆ ಪುರುಷರ ಬಯಕೆ ಅಥವಾ ವಿರಹವೇ ಇದ್ದಂತೆ ಕಾಣುವುದಿಲ್ಲ ಎಂದು ಕೀಚಕ ಚಿಂತೆಗೊಳಗಾದನು. ತನ್ನ ಮೊದಲ ಪ್ರಯತ್ನದಲ್ಲಿಯೇ ಸೋಲು ಸಿಕ್ಕಿತು; ಮೊದಲ ಪ್ರೇಮ ನಿವೇದನೆಯಲ್ಲೇ ಮನದ ಆಸೆಯ ಸರ್ವಸ್ವವೂ ಕಳೆದುಹೋಯಿತು. ನಿರಾಸೆಯಿಂದ ಶಕ್ತಿಗುಂದಿದ. ಬುದ್ಧಿ ಕದಡಿಹೋಯಿತು- ದಿಕ್ಕು ತೋಚದಾಯಿತು; ಆಗ ಖಡ್ಗಧಾರಿಯಾದ ಕೀಚಕ ವಿರಾಟರಾಜನ ರಾಣಿಯಾದ ತನ್ನ ಅಕ್ಕನ ಅರಮನೆಗೆ ಬಂದನು, ಅಲ್ಲಿ ಮುಂದಿನ ಯೋಜನೆಗೆ ತನ್ನ ಅಕ್ಕನನ್ನು ಕಂಡನು.
ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ||
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ||40||
ಪದವಿಭಾಗ-ಅರ್ಥ: ಹಣೆಯನು+ ಅಂಘ್ರಿಗೆ (ಪಾದಕ್ಕೆ) ಚಾಚಲು+ ಎತ್ತಿದಳು+ ಅಣಕಿಗನ ತೆಗೆದಪ್ಪಿ ಮದವಾರಣನೆ(ಮದ್ದಾನೆಯೇ) ಕುಳ್ಳಿರು+ ಎನುತ್ತ ನೋಡಿದಳು+ ಆ ಸಹೋದರನ= ಕೀಚಕನು ತನ್ನ ಹಣೆಯನ್ನು ಅಕ್ಕನ ಪಾದಗಳಿಗೆ ಚಾಚಲು, ಅವಳು ತಮ್ಮನನ್ನ್ನು ಎತ್ತಿದಳು. ಅತಿಪ್ರೀತಿಯ ತಮ್ಮನನ್ನು ಎಳೆದು ಅಪ್ಪಿಕೊಂಡು ನನ್ನ ಮದ್ದಾನೆಯೇ ಕುಳಿತುಕೊ ಎಂದು ಹೇಳುತ್ತಾ ಆ ಸಹೋದರನ ಮುಖವನ್ನು ನೋಡಿದಳು= ಹೆಣ ಮುಸುಡು ಬಿದ್ದಿದೆ(ಮುಖ ಬಾಡಿ ಹೆಣದ ಮುಖದಂತೆ ಕಳೆಗುಂದಿದೆ); ಲತಾಂಗಿಯ(ಸೈರಂದ್ರಿಯನ್ನು) ಕೆಣಕಿದನೊ ಕಡುಪಾಪಿ= ಸುಂದರಿಯಾದ ಸೈರಂದ್ರಿಯನ್ನು ಕೆಣಕಿ ಅವಳಿಂದ ಅವಮಾನಿತನಾದನೊ ಹೇಗೋ ಎಂದು ಚಿಂತಿಸಿ, ಕಡುಪಾಪಿ ವಂಶವ ಹಣಿದವಾಡದೆ(ಹಣಿ= ಕತ್ತರಿಸು, ತುಂಡುಮಾಡು, ನಾಶಗೊಳಿಸು, ಧ್ವಂಸ ಮಾಡು), ಮಾಣನು (ಬಿಡನು) ಮಾಣನು+ ಏಗುವೆನು (ಏಗು- ಹೆಣಗು (ಕ್ರಿ), ಪ್ರಯಾಸ ಪಡು)+ + ಎನುತ ಮರುಗಿದಳು= ಈ ಕೆಟ್ಟ ಪಾಪಿಯು ಅವಳಿಗೆ ಮನಸೋತು ಇನ್ನು ತನ್ನ ವಂಶವನ್ನು ಧ್ವಂಸ ಮಾಡದೆ ಬಿಡುವುದಿಲ್ಲ. ಹೇಗಾದರೂ ಮಾಡಿ ಅವನನ್ನುಸಂತಯಸಲು ಹೆಣಗುವೆನು ಎಂದುಕೊಂಡು ದುಃಖಿತಳಾದಳು.
ಅರ್ಥ: ಕೀಚಕನು ತನ್ನ ಹಣೆಯನ್ನು ಅಕ್ಕನ ಪಾದಗಳಿಗೆ ಚಾಚಲು, ಅವಳು ತಮ್ಮನನ್ನ್ನು ಎತ್ತಿದಳು. ಅತಿಪ್ರೀತಿಯ ತಮ್ಮನನ್ನು ಎಳೆದು ಅಪ್ಪಿಕೊಂಡು ನನ್ನ ಮದ್ದಾನೆಯೇ ಕುಳಿತುಕೊ ಎಂದು ಹೇಳುತ್ತಾ ಆ ಸಹೋದರನ ಮುಖವನ್ನು ನೋಡಿದಳು. ಇವನ ಮುಖವು ನಿರಾಶೆಯಿಂದ ಬಾಡಿ ಹೆಣದ ಮುಖದಂತೆ ಕಳೆಗುಂದಿದೆ; ಸುಂದರಿಯಾದ ಸೈರಂದ್ರಿಯನ್ನು ಕೆಣಕಿ ಅವಳಿಂದ ಅವಮಾನಿತನಾದನೊ ಹೇಗೋ ಎಂದು ಚಿಂತಿಸಿ, ಈ ಕಡುಪಾಪಿಯು ಅವಳಿಗೆ ಮನಸೋತು ಇನ್ನು ತನ್ನ ವಂಶವನ್ನು ಧ್ವಂಸ ಮಾಡದೆ ಬಿಡುವುದಿಲ್ಲ. ಹೇಗಾದರೂ ಮಾಡಿ ಅವನನ್ನು ಸಂತಯಿಸಲು ಹೆಣಗುವೆನು ಎಂದುಕೊಂಡು ದುಃಖಿತಳಾದಳು.
ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ||
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ||41||
ಪದವಿಭಾಗ-ಅರ್ಥ: ಸುದೀಷ್ಣೆಯು ತಮ್ಮನ ಮುಖ ನೋಡಿ, ಅಳುಕಿತು+ ಅಗ್ಗದ ಮಹಿಮೆ= ನಿನ್ನ ಹಿರಿದಾದ ಮಹಿಮೆ ಕುಗ್ಗಿ ಹೋಗಿದೆ; ಮುಸುಡಿನ ಬೆಳಕು ಕಂದಿತು= ಮುಖದಲ್ಲಿ ತೇಜಸ್ಸು ಇಲ್ಲ; ಬಹಳ ಚಿಂತಾಜಲಧಿಯೊಳಗೆ+ ಅದ್ದಂತೆ ಸೊಂಪು+ ಅಡಗಿತು= ಬಹಳ ಚಿಂತೆಯ ಸಮುದ್ರದಲ್ಲಿ ಮುಳುಗಿದಂತೆ ಮುಖಕಾಂತಿ ಅಡಗಿದೆ; ನಿಜಾಕಾರ ಕುಲಶಿರೋಮಣಿ = ಕುಲಕ್ಕೆ ಶಿರೋಮಣಿಯಂತೆ ರೂಪನ್ನು ಹೋದಿರುವ ತಮ್ಮಾ; ಹೇಳು ಚಿತ್ತದ ನೆಲೆಯನು ಎನೆ(ಎನ್ನಲು)= ಹೇಳು ನಿನ್ನ ಮನಸ್ಸಿನ ಸ್ಥಿತಿಯನ್ನು ಎನ್ನಲು; ನಸುನಾಚಿ ಮದನನ ಹಿಳುಕು ಸುಮತಿಯ ಸೀಳೆ ಬಳಿಕ+ ಇಂತೆಂದನು+ ಅವ ನಗುತ= ಸ್ವಲ್ಪ ನಾಚಿಕೊಂಡು ಬಳಿಕ ಮನ್ಮಥನ ಬಾಣದತುದಿ ನನ್ನ ಶಾಂತ ಮನಸ್ಸನ್ನು ಸೀಳಿ ಹೀಗಾದೆ ಎಂದು ಅವನು ನಗುತ್ತಾ ಹೇಳಿದನು.
ಅರ್ಥ: ಸುದೀಷ್ಣೆಯು ತಮ್ಮನ ಮುಖ ನೋಡಿ, ನಿನ್ನ ಹಿರಿದಾದ ನಿಲುಮೆ ಕುಗ್ಗಿ ಹೋಗಿದೆ; ಮುಖದಲ್ಲಿ ತೇಜಸ್ಸು ಇಲ್ಲ; ಬಹಳ ಚಿಂತೆಯ ಸಮುದ್ರದಲ್ಲಿ ಮುಳುಗಿದಂತೆ ಮುಖಕಾಂತಿ ಅಡಗಿದೆ; ಕುಲಕ್ಕೆ ಶಿರೋಮಣಿಯಂತೆ ರೂಪವನ್ನು ಹೊಂದಿರುವ ತಮ್ಮಾ, ಹೇಳು ನಿನ್ನ ಮನಸ್ಸಿನ ಸ್ಥಿತಿಯನ್ನು ಎನ್ನಲು; ಸ್ವಲ್ಪ ನಾಚಿಕೊಂಡು, ಬಳಿಕ ಅವನು ನಗುತ್ತಾ ಮನ್ಮಥನ ಬಾಣದತುದಿ ನನ್ನ ಶಾಂತ ಮನಸ್ಸನ್ನು ಸೀಳಿ ಹೀಗಾದೆ ಎಂದನು.
ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ||
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ||42||
ಪದವಿಭಾಗ-ಅರ್ಥ: ಬೇರೆ ಬಿನ್ನಹವೇನು= ನಿನ್ನಲ್ಲಿ ನಾನು ಬೇರೆ ಏನು ಅರಿಕೆ ಮಾಡಲಿ? ಸತಿಯರ ನೂರು ಮಡಿ ಚೆಲುವಿನಲಿ ಚಿತ್ತವ ಸೂರೆಗೊಂಡಿಹಳು+ ಅವಳು ನಿನ್ನ+ ಒಲಗದ ಸತಿಯರಲಿ= ತರುಣಿಯರ ನೂರು ಪಟ್ಟು ಚೆಲುವನ್ನು ಹೊಂದಿದ್ದು,ನನ್ನ ಚಿತ್ತವನ್ನು ಪೂರ್ತಿ ಸೆರೆಹಿಡಿದಿದ್ದಾಳೆ, ನಿನ್ನ ಸಖಿಯರ ಸಮೂಹದ ರಮಣಿಯರಲ್ಲಿ- ಅವಳು!(ಸೈರಂದ್ರಿ); ಮಾರಿದಳು ಮದನಂಗೆ ಜೀವಿಸಲಾರೆನು+ ಆಕೆಯನು ಒಳಗು ಮಾಡಿಸಿ ತೋರಿದೊಡೆ ತನ್ನೊಡಲೊಳ+ ಅಸುವಿಂಗೆ+ ಇಹುದು ನಿರ್ವಾಹ= ಅವಳು ನನ್ನನ್ನು ಮದನನಿಗೆ ಮಾರಿದ್ದಾಳೆ. ಕಾಮನ ವಶಮಾಡಿದ್ದಾಳೆ; ಜೀವಿಸಲಾರೆನು+ ಆಕೆಯನು ಒಳಗು ಮಾಡಿಸಿ ತೋರಿದೊಡೆ= ಅವಳನ್ನು ಪಡೆಯದೆ ಜೀವಿಸಿರಲಾರೆನು; ಆಕೆಯು ನನ್ನ ವಶವಾಗುವಂತೆ ಮಾಡಿಕೊಟ್ಟರೆ ಮಾತ್ರಾ; ತನ್ನೊಡಲೊಳು + ಅಸುವಿಂಗೆ+ ಇಹುದು ನಿರ್ವಾಹ= ತನ್ನೊಡಲಿನಲ್ಲಿ- ದೇಹದಲ್ಲಿ ಪ್ರಾಣಕ್ಕೆ ಅವಕಾಶ ಇರುವುದು. ಪ್ರಾಣ ದೇಹದಲ್ಲಿ ನಿರ್ವಹಣೆ- ಕೆಲಸ ಮಾಡುವುದು. ಇಲ್ಲದಿದ್ದರೆ ನನ್ನ ಪ್ರಾಣಹೊಗುವುದು! ಎಂದನು ಕೀಚಕ.
ಅರ್ಥ: 'ನಿನ್ನಲ್ಲಿ ನಾನು ಬೇರೆ ಏನು ಅರಿಕೆ ಮಾಡಲಿ? ನಿನ್ನ ಸಖಿಯರ ಸಮೂಹದ ರಮಣಿಯರಲ್ಲಿ- ಅವಳು!(ಸೈರಂದ್ರಿ), ತರುಣಿಯರ ನೂರು ಪಟ್ಟು ಚೆಲುವನ್ನು ಹೊಂದಿದ್ದು, ನನ್ನ ಚಿತ್ತವನ್ನು ಪೂರ್ತಿ ಸೆರೆಹಿಡಿದಿದ್ದಾಳೆ. ಅವಳು ನನ್ನನ್ನು ಮದನನಿಗೆ ಮಾರಿದ್ದಾಳೆ- ಕಾಮನ ವಶಮಾಡಿದ್ದಾಳೆ; ಅವಳನ್ನು ಪಡೆಯದೆ ಜೀವಿಸಿರಲಾರೆನು; ಆಕೆಯು ನನ್ನ ವಶವಾಗುವಂತೆ ಮಾಡಿಕೊಟ್ಟರೆ ಮಾತ್ರಾ ಈ ನನ್ನ ದೇಹದಲ್ಲಿ ಪ್ರಾಣ ಇರುವುದು. ಇಲ್ಲದಿದ್ದರೆ ನನ್ನ ಪ್ರಾಣ ಹೊಗುವುದು! ಎಂದನು ಕೀಚಕ.
ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ||
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ||43||
ಪದವಿಭಾಗ-ಅರ್ಥ: ಕೀರ್ತಿಲತೆ ಕುಡಿಯೊಣಗಿತೈ= ವಂಶದ ಕೀರ್ತಿಯಬಳ್ಳಿಯ ಕುಡಿಯೇ ಒಣಗಿತಲ್ಲಾ! ಮದನಾರ್ತನಾದೈ ಕುಲಕೆ ಕಾಲನ ಮೂರ್ತಿ ನೀನವತರಿಸಿದೈ= ಮನ್ಮಥನ ಕೈಗೆಸಿಕ್ಕಿ ದೀನಾವಸ್ಥೆಪಡೆದೆಯಲ್ಲಾ! ಸಂಹರಿಸಿದೈ ಕುಲವ= ಕುಲವನ್ನೇ ನಾಶ ಮಾಡಿದೆಯಲ್ಲಾ! ಸ್ಫೂರ್ತಿಗೆ+ ಎಡೆ ಮನುಜರಿಗೆ ರಾವಣನ+ ಆರ್ತಿಯಪ್ಪುದು ಅರಿಯಲಾ= ಮನುಷ್ಯರಿಗೆ ದಾರಿತಪ್ಪಿದರೆ ರಾವಣನ ಗತಿಯಾಗುವದು, ಸ್ಫೂರ್ತಿಗೆ ಉದಾಹರಣೆ; ಅರಿಯಲಾ= ಅದನ್ನು ಅರಿತುಕೋ; ಕಡುಧೂರ್ತತನಕೆ+ ಅಂಜುವೆನು+ ಎನುತ ನಡುಗಿದಳು ನಳಿನಾಕ್ಷಿ= ನಿನ್ನ ಈ ಕೆಟ್ಟಬುದ್ಧಿಯನ್ನು ಕಂಡು ಭಯವಾಗುತ್ತಿದೆ ಎಂದು ಸುದೀಷ್ಣೆ ನಡುಗಿದಳು.
ಅರ್ಥ: ವಂಶದ ಕೀರ್ತಿಯಬಳ್ಳಿಯ ಕುಡಿಯೇ ಒಣಗಿತಲ್ಲಾ! ಮನ್ಮಥನ ಕೈಗೆಸಿಕ್ಕಿ ದೀನಾವಸ್ಥೆ ಪಡೆದೆಯಲ್ಲಾ! ಕುಲವನ್ನೇ ನಾಶ ಮಾಡಿದೆಯಲ್ಲಾ! ಮನುಷ್ಯರಿಗೆ ದಾರಿತಪ್ಪಿದರೆ ರಾವಣನ ಗತಿಯಾಗುವದು, ಸರಿ ನೆಡೆತೆಯ ಸ್ಫೂರ್ತಿಗೆ ಅವನು ಉದಾಹರಣೆ; ಅದನ್ನು ಅರಿತುಕೋ; ನಿನ್ನ ಈ ಕೆಟ್ಟಬುದ್ಧಿಯನ್ನು ಕಂಡು ಭಯವಾಗುತ್ತಿದೆ ಎಂದು ಸುದೀಷ್ಣೆ ನಡುಗಿದಳು.
ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ||
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ||44||
ಪದವಿಭಾಗ-ಅರ್ಥ: ಬೇಟವೇ ಪರವಧುವಿನಲಿ= ಪರಸ್ತ್ರೀಯಲ್ಲಿ ಕಾಮದಾಟವೇ? ಕೈ ಮಾಟವೇ ಪರವಿತ್ತದಲಿ(ಧನದಲ್ಲಿ)= ಪರರ ಧನದಲ್ಲಿ ಕೈಹಾಕುವರೇ? ತೆಗೆದು+ ಓಟವೇ ಕದನದಲಿ ಗುಣವೇ ರಾಜಪುತ್ರರಿಗೆ= ಯುದ್ಧಭೂಮಿಯಲ್ಲಿ ಓಡುವರೇ, ರಾಜಪುತ್ರರಿಗೆ ಅದು ಗುಣವೇ; ಆಟವಿಕರೊಡನಾಡಿ ಕಲಿತು ವಿರಾಟನನು ಕೊಲಲು+ ಎಣಿಸಿದೈ= ಅದವಿಯಜನರೊಡನೆ ಒಡನಾಡಿ ನಿನ್ನ ಭಾವ ವಿರಾಟನನ್ನು ಕೊಲ್ಲಲು ಎಣೆಸಿದೆಯಲ್ಲಾ! ನಿನ್ನಾಟಕೆ ಅಂಜುವೆನು+ ಎನುತ ಮುಖದಿರುಹಿದಳು ತರಲಾಕ್ಷಿ= ಈ ನಿನ್ನ ನೆಡೆತೆಯನ್ನು ನೋಡಿ ನನಗೆ ಭಯವಾಗತ್ತಿದೆ ಎಂದು ಅವನಿಂದ ಮುಖವನ್ನು ಅಡ್ಡ ತಿರುಗಿಸಿದಳು ಸುದೇಷ್ಣೆ.
ಅರ್ಥ: ಪರಸ್ತ್ರೀಯಲ್ಲಿ ಕಾಮದಾಟವಾಡುವರೇ? ಪರರ ಧನದಲ್ಲಿ ಕೈಹಾಕುವರೇ? ಯುದ್ಧಭೂಮಿಯಲ್ಲಿ ಓಡುವರೇ, ರಾಜಪುತ್ರರಿಗೆ ಅದು ಗುಣವೇ; ಅಡವಿಯ ಕಾಡು ಜನರೊಡನೆ ಒಡನಾಡಿ ಪಡೆದ ಗುಣದಿಂದ ನಿನ್ನ ಭಾವ ವಿರಾಟನನ್ನು ಕೊಲ್ಲಲು ಎಣೆಸಿದೆಯಲ್ಲಾ! ಈ ನಿನ್ನ ನೆಡೆತೆಯನ್ನು ನೋಡಿ ನನಗೆ ಭಯವಾಗತ್ತಿದೆ ಎಂದು ಅವನಿಂದ ಮುಖವನ್ನು ಅಡ್ಡ ತಿರುಗಿಸಿದಳು ಸುದೇಷ್ಣೆ.
ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು||
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ||45||
ಪದವಿಭಾಗ-ಅರ್ಥ:ಅವಳ ಗಂಡರು ಸುರರು= ಅವಳ ಗಂಡರು ದೇವತೆಗಳು- ಗಂದರ್ವರು; ಸುರರಿಗೆ ನವಗೆ+ ಅದು+ ಆವ+ ಅಂತರವು, ಮುಳಿದೊಡೆ ದಿವಿಜ ದಳಕೆ+ ಇದಿರು+ ಆರು= ಸುರರಿಗೂ ನಮಗೂ ಎಷ್ಟೊಂದು ವ್ಯೆತ್ಯಾಸ, ಅವರು ಕೋಪಗೊಂಡು, ಯುದ್ಧಕ್ಕೆ ಬಂದರೆ ದೇವ ಸೈನ್ಯಕ್ಕೆ ಯಾರು ಎದುರು ನಿಲ್ಲವವರು, ಯಾರೂ ಇಲ್ಲ; ನಮ್ಮನು+ ಅದಾರು ಕಾವವರು= ಆಗ ನಮ್ಮನ್ನು ಯಾರು ತಾನೆ ಕಾಪಾಡಬಲ್ಲರು; ಅವಳ ತೊಡಕೇ ಬೇಡ= ಅವಳ ತಂಟೆಯೇ ಬೇಡ, ಸತಿಯರ ನಿವಹದಲಿ ನೀನು+ ಆರ ಬಯಸಿದಡೆ+ ಅವಳ ನಾ ಮುಂದಿಟ್ಟು ಮದುವೆಯನು+ ಒಲಿದು ಮಾಡುವೆನು= ನನ್ನ ಬಳಿ ಇರುವ ವನಿತೆಯರಲ್ಲಿ ಉಳಿದ ಯಾರನ್ನಾದರೂ ಬಯಸಿದರೆ, ಅವಳನ್ನುನಾನೇ ಮುಂದೆನಿಂತುನಿನಗೆ ಪ್ರೀತಿಯಿಂದ ಮದುವೆಯನ್ನು ಮಾಡುತ್ತೇನೆ. (ಅವಳ ಆಸೆಯನ್ನು ಬಿಡು) ಎಂದಳು ಸುದೀಷ್ಣೆ.
ಅರ್ಥ: ಅವಳ ಗಂಡರು ದೇವತೆಗಳು- ಗಂದರ್ವರು; ಸುರರಿಗೂ ನಮಗೂ ಎಷ್ಟೊಂದು ವ್ಯೆತ್ಯಾಸ, ಅವರು ಕೋಪಗೊಂಡು, ಯುದ್ಧಕ್ಕೆ ಬಂದರೆ ದೇವ ಸೈನ್ಯಕ್ಕೆ ಯಾರು ಎದುರು ನಿಲ್ಲವವರು, ಯಾರೂ ಇಲ್ಲ; ಆಗ ನಮ್ಮನ್ನು ಯಾರು ತಾನೆ ಕಾಪಾಡಬಲ್ಲರು; ಅವಳ ತಂಟೆಯೇ ಬೇಡ, ನನ್ನ ಬಳಿ ಇರುವ ವನಿತೆಯರಲ್ಲಿ ಉಳಿದ ಯಾರನ್ನಾದರೂ ಬಯಸಿದರೆ, ಅವಳನ್ನುನಾನೇ ಮುಂದೆನಿಂತುನಿನಗೆ ಪ್ರೀತಿಯಿಂದ ಮದುವೆಯನ್ನು ಮಾಡುತ್ತೇನೆ. ಅವಳ ಆಸೆಯನ್ನು ಬಿಡು ಎಂದಳು ಸುದೀಷ್ಣೆ.
ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ||
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ||46||
ಪದವಿಭಾಗ-ಅರ್ಥ: ಅಕ್ಕ ಮರುಳೌ ಚಿತ್ತವು+ ಅವಳಲಿ ಸಿಕ್ಕಿ ಬೇರ್+ ವರಿಯಿತ್ತು (ಬೇರುವರಿಯಿತು- ಬೇರುಬಿಟ್ಟಿತು )= ಅಕ್ಕಾ ನಿನಗೆಲ್ಲೋ ಹುಚ್ಚು, ನನ್ನು ಮನಸ್ಸು ಅವಳಲ್ಲಿ ಸಿಕ್ಕಿ ಬೇರುಬಿಟ್ಟಿದೆ.; ಬರಿದೇ ಮಿಕ್ಕ ಡಿಂಬಕೆ ಮದುವೆಯುಂಟೇ, ಮನವ ಬೇರಿರಿಸಿ= ಮನವ ಬೇರೆ ಇಟ್ಟು ಬರಿದೇ ಉಳಿದ ಈ ದೇಹಕ್ಕೆ ಮದುವೆಯಾಗುವುದೇ? ಮಕ್ಕಳ+ ಆಟಿಕೆಯಾದಡೆ+ ಆಗಲಿ, ತಕ್ಕರು+ ಅಲ್ಲೆಂದು+ ಎನಲಿ, ಸಲಹುವಡೆ+ ಅಕ್ಕ= ಇದು ತಿಳುವಳಿಕೆ ಇಲ್ಲದ ಹುಡುಗಾಟಕೆ ಎಂದರೆ ಎನ್ನಲಿ, ತಿಳಿದವರು ಇದು ಸರಿಯಲ್ಲ ಎಂದು ಬೇಕಾದರೆ ಹೇಳಲಿ. ನನ್ನನ್ನು ಕಾಪಾಡಬೇಕು ಎನ್ನವುದಾದರೆ; ಸೈರಂಧ್ರಿಯನು ಸೇರಿಸಬೇಕು ತನಗೆ+ ಎಂದ= ಸೈರಂಧ್ರಿಯನ್ನು ನನ್ನೊಡನೆ ಸೇರಿಸಬೇಕು ಎಂದ ಕೀಚಕ.
ಅರ್ಥ:ಅಕ್ಕಾ ನಿನಗೆಲ್ಲೋ ಹುಚ್ಚು, ನನ್ನು ಮನಸ್ಸು ಅವಳಲ್ಲಿ ಸಿಕ್ಕಿಕೊಂಡು ಬೇರುಬಿಟ್ಟಿದೆ. ಮನಸ್ಸನ್ನು ಬೇರೆ ಇಟ್ಟು ಬರಿದೇ ಉಳಿದ ಈ ದೇಹಕ್ಕೆ ಮದುವೆಯಾಗುವುದೇ? ಇದು ತಿಳುವಳಿಕೆ ಇಲ್ಲದ ಹುಡುಗಾಟಕೆ ಎಂದರೆ ಎನ್ನಲಿ, ತಿಳಿದವರು ಇದು ಸರಿಯಲ್ಲ ಎಂದು ಬೇಕಾದರೆ ಹೇಳಲಿ. ನನ್ನನ್ನು ಕಾಪಾಡಬೇಕು ಎನ್ನವುದಾದರೆ ಸೈರಂಧ್ರಿಯನ್ನು ನನ್ನೊಡನೆ ಸೇರಿಸಬೇಕು ಎಂದ ಕೀಚಕ.
ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ||
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ||47||
ಪದವಿಭಾಗ-ಅರ್ಥ: ಸೊಗಸದು+ ಇತರರ ಮಾತು ಕಣ್ಣುಗಳು+ ಒಗಡಿಸವು ಮಿಕ್ಕವರ ರೂಹನು= ಬೇರೆಯವರ ಮಾತು ಇಷ್ಟವಾಗುವುದಿಲ್ಲ. ಕಣ್ಣುಗಳು+ ಒಗಡಿಸವು ಮಿಕ್ಕವರ ರೂಹನು; ಹಗೆಗಳಾಗಿಹವು+ ಉಳಿದವರ ನಾಮಗಳು ನಾಲಿಗೆಗೆ ಸೆಗಳಿಕೆಯ ಸಸಿಯಾದೆನು= ನನ್ನ ಕಣ್ಣುಗಳು ಬೇರೆಯವರ ರೂಪವನ್ನು ಕಂಡರೆ ಓಕರಿಸುತ್ತವೆ; ಹಗೆಗಳಾಗಿಹವು+ ಉಳಿದವರ ನಾಮಗಳು ನಾಲಿಗೆಗೆ= ಉಳಿದವರ ಹೆಸರುಗಳು ನನ್ನ ನಾಲಿಗೆಗೆ ಶತ್ರುಗಳ ಹೆಸರಿನಂತಾಗಿದೆ.; ಸೆಗಳಿಕೆಯ+ ಸಸಿಯಾದೆನು+ ಎನ್ನಯ ಬಗೆಯ ಸಲಿಸೌ= ನೀರಿಲ್ಲದೆ ಬಾಡಿದ ಸಸಿಯಂತೆ ಆಗಿದ್ದೇನೆ.; ಎನ್ನಯ ಬಗೆಯ= ಮನಸ್ಸಿನ, ಸಲಿಸೌ ಹರಿದ ಕರುಳಿನ ಮೃಗದ(ಜಿಂಕೆ) ಮರಿಯನು ಸಲಹಬೇಕೆಂದು+ ಎರಗಿದನು ಪದಕೆ= ನನ್ನ ಆಸೆಯನ್ನು ಈಡೇರಿಸಿಕೊಡು.; ಹರಿದ ಕರುಳಿನ ಮೃಗದ ಮರಿಯನು ಸಲಹಬೇಕೆಂದು+ ಎರಗಿದನು ಪದಕೆ= ಕರುಳು ಹರಿದುಹೋದ ಜಿಂಕೆಯ ಮರಿಯಂತಾಗಿದ್ದೇನೆ, ನನ್ನನ್ನು ಬದುಕಿಸು, ಕಾಪಾಡು ಎಂದು ಕೀಚಕ ಅಕ್ಕನ ಕಾಲಿಗೆ ಬಿದ್ದನು.
ಅರ್ಥ: ನನಗೆ ಬೇರೆಯವರ ಮಾತು/ ವಿಷಯ ಇಷ್ಟವಾಗುವುದಿಲ್ಲ. ನನ್ನ ಕಣ್ಣುಗಳು ಬೇರೆಯವರ ರೂಪವನ್ನು ಕಂಡರೆ ಓಕರಿಸುತ್ತವೆ; ಉಳಿದವರ ಹೆಸರುಗಳು ನನ್ನ ನಾಲಿಗೆಗೆ ಶತ್ರುಗಳ ಹೆಸರಿನಂತಾಗಿದೆ. ನೀರಿಲ್ಲದೆ ಬಾಡಿದ ಸಸಿಯಂತೆ ಆಗಿದ್ದೇನೆ. ನನ್ನ ಆಸೆಯನ್ನು ಈಡೇರಿಸಿಕೊಡು. ಕರುಳು ಹರಿದುಹೋದ ಜಿಂಕೆಯ ಮರಿಯಂತಾಗಿದ್ದೇನೆ, ನನ್ನನ್ನುಬದುಕಿಸು, ಕಾಪಾಡು ಎಂದು ಕೀಚಕ ಅಕ್ಕನ ಕಾಲಿಗೆ ಬಿದ್ದನು.
ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ||
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ||48||
ಪದವಿಭಾಗ-ಅರ್ಥ: ಆಲಿ ನೀರು+ ಏರಿದವು ತಮ್ಮನ ಮೇಲೆ ತಳಿತುದು ಮೋಹ= ವಿರಹತಾಪದಿಂದ ಕಂಗೆಟ್ಟ ತಮ್ಮನನ್ನು ನೋಡಿ ಸುದೀಷ್ಣೆಯ ಕಣ್ಣಿನ ಆಲಿಗಳಲ್ಲಿ ನೀರು ತುಂಬಿಕೊಂಡಿತು. ತಮ್ಮನ ಮೇಲೆ ಮೋಹ ಚಿಗುರಿತು; ಕಾಲನ ಪಾಳಯಕೆ= ಬೀಡು, ಕೈಗೊಟ್ಟಳು+ ಅಂಗನೆ ನೆಗಹಿದಳು ಖಳನ= ಯಮನ ನಗರಕ್ಕೆ ಕಳುಹಿಸಲು ಕೆಡುಕಿಯನ್ನು ರಾಣಿ ಕೈಗೊಟ್ಟು ಎಬ್ಬಿಸಿದಳು.; ಏಳು ಭವನಕೆ ಹೋಗು ತರುಣಿಯ ನಾಳೆ ನಾ ಕಳುಹುವೆನು ಪರಸತಿ ಮೇಳ ಲೇಸಲ್ಲ+ ಎನುತ ಬೀಳ್ಕೊಟ್ಟಳು ನಿಜ+ ಅನುಜನ= ತಮ್ಮಾ, ಏಳು ಅರಮನೆಗೆ ಹೋಗು, ತರುಣಿಯ ನಾಳೆ ನಾನು ಸೈರಂದ್ರಿಯನ್ನು ನಿನ್ನಬಳಿಗೆ ಕಳುಹಿಸುತ್ತೇನೆ.; ಪರಸತಿ ಮೇಳ ಲೇಸಲ್ಲ+ ಎನುತ ಬೀಳ್ಕೊಟ್ಟಳು ನಿಜ+ ಅನುಜನ= ಯೋಚಿಸು, ಪರಸತಿ ಸಹವಾಸ ಒಳ್ಳೆಯದಲ್ಲ, ಎನ್ನುತ್ತಾ ತನ್ನ ತಮ್ಮನನ್ನು ಬೀಳ್ಕೊಟ್ಟಳು.
ಅರ್ಥ: ವಿರಹತಾಪದಿಂದ ಕಂಗೆಟ್ಟ ತಮ್ಮನನ್ನು ನೋಡಿ ಸುದೀಷ್ಣೆಯ ಕಣ್ಣಿನ ಆಲಿಗಳಲ್ಲಿ ನೀರು ತುಂಬಿಕೊಂಡಿತು. ತಮ್ಮನ ಮೇಲೆ ಮೋಹ ಚಿಗುರಿತು; ಯಮನ ನಗರಕ್ಕೆ ಕಳುಹಿಸಲು ಕೆಡುಕಿಯನ್ನು ರಾಣಿ ಕೈ ಕೊಟ್ಟು ಎಬ್ಬಿಸಿದಳು. ತಮ್ಮಾ, ಏಳು ಅರಮನೆಗೆ ಹೋಗು, ನಾಳೆ ನಾನು ಸೈರಂದ್ರಿಯನ್ನು ನಿನ್ನ ಬಳಿಗೆ ಕಳುಹಿಸುತ್ತೇನೆ. ಯೋಚಿಸು, ಪರಸತಿ ಸಹವಾಸ ಒಳ್ಳೆಯದಲ್ಲ, ಎನ್ನುತ್ತಾ ತನ್ನ ತಮ್ಮನನ್ನು ಬೀಳ್ಕೊಟ್ಟಳು.
ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ||
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ||49||
ಪದವಿಭಾಗ-ಅರ್ಥ: ಮನದೊಳಗೆ ಗುಡಿ(ಭಾವುಟ)ಗಟ್ಟಿದನು= ಮನಸ್ಸಿನಲ್ಲೇ ವಿಜಯಧ್ವಜವನ್ನು ಹಾರಿಸಿಸಂತಸಪಟ್ಟನು.; ಮಾನಿನಿಯ ಕರುಣ+ ಉಪಾಂಗ (ಕಡೆಗಣ್ಣಿನ ನೋಟದ - ಸೊಂಟದ?) ರಸಭಾಜನವು (ರಸ ತುಂಬಿದ ಕೊಡ) ಪುಣ್ಯವಲಾಯೆನುತ= ಸುಂದರಿಯ ಕರುಣೆಯ ಕಡೆಗಣ್ಣಿನ ನೋಟದ (ಸೊಂಟದ? ನೋಟದ)ಸುಖರಸದ ಭಾಂಡವು/ ರಸದಹೊಳೆಯೇ ಸಿಕ್ಕಿದುದು ಪುಣ್ಯವಲ್ಲವೇ ಎನ್ನುತ್ತಾ,; ಬೀಳ್ಕೊಂಡನು+ ಅಗ್ರಜೆಯ= ಅಕ್ಕನನ್ನು ಬೀಳ್ಕೊಟ್ಟು ಹೊರಟನು. ಮನದೊಳು+ ಒದವಿದ ಮರುಳುತನದ+ ಉಬ್ಬಿನಲಿ ಹೊಕ್ಕನು ಮನೆಯನು+ ಇತ್ತಲು ದಿನಕರಂಗಾಯಿತ್ತು ಬೀಡು+ ಅಸ್ತಾಚಲಾದ್ರಿಯಲಿ= ಅವನು ಮನಸ್ಸಿನಲ್ಲಿ ಉಂಟಾದ ಮರುಳುತನದ ಸಂತಸದಿಂದ ಅರಮನೆಯನ್ನು ಹೊಕ್ಕನು. ಇತ್ತ ಸೂರ್ಯನು ಪಶ್ಚಿಮಬೆಟ್ಟದಲ್ಲಿ ಮುಳುಗಿದನು.
  • ಭಾಜನ=1. ಕೊಳಗ, ತಪ್ಪಲೆ, ತಟ್ಟೆ, ಬಟ್ಟಲು ಮುಂತಾದ ಸಾಧನ. 2. ನದಿ, ಹೊಳೆ, ಮುಂತಾದವು ಗಳ ಒಡಲು,- ವಿಸ್ತಾರ.
ಅರ್ಥ: ಕೀಚಕನು ಮನಸ್ಸಿನಲ್ಲೇ ವಿಜಯಧ್ವಜವನ್ನು ಹಾರಿಸಿ ಸಂತಸಪಟ್ಟನು. ಬಯಸಿದ ಸುಂದರಿಯ ಕರುಣೆಯ ಕಡೆಗಣ್ಣಿನ ನೋಟದ (ಸೊಂಟದ? ನೋಟದ)ಸುಖರಸದ ಭಾಂಡವು/ ರಸದಹೊಳೆಯೇ ಸಿಕ್ಕಿದುದು ಪುಣ್ಯವಲ್ಲವೇ ಎನ್ನುತ್ತಾ, ಅಕ್ಕನನ್ನು ಬೀಳ್ಕೊಟ್ಟು ಹೊರಟನು. ಹೀಗೆ ಅವನು ಮನಸ್ಸಿನಲ್ಲಿ ಉಂಟಾದ ಮರುಳುತನದ ಸಂತಸದಿಂದ ಅರಮನೆಯನ್ನು ಹೊಕ್ಕನು. ಇತ್ತ ಸೂರ್ಯನು ಪಶ್ಚಿಮಬೆಟ್ಟದಲ್ಲಿ ಮುಳುಗಿದನು.
ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ||
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದಳವನಿ ತಳತಳಿಸೆ ||50||
ಪದವಿಭಾಗ-ಅರ್ಥ: ವರ=ಶ್ರೇಷ್ಠವಾದ, ದಿಗಂಗನೆಯಿಟ್ಟ- ದಿಕ್+ ಅಂಗನೆ+ ಇಟ್ಟ, ಚಂದನ ತಿಲಕವೋ= ಶ್ರೇಷ್ಠವಾದ, ದಿಕ್ಕಿನ ದೇವತೆ ಹಣೆಗೆ ಇಟ್ಟುಕೊಂಡ ಚಂದನ ತಿಲಕವೋ! ; ಮನುಮಥನ ರಾಣಿಯ ಕರದಲಿಹ ಕನ್ನಡಿಯೊ= ಮನ್ಮಥನ ರಾಣಿ ರತಿಯು ಕೈಯಲ್ಲಿ ಹಿಡಿದ ಕನ್ನಡಿಯೊ!; ಮದನನ ಬಿರುದಿನ+ ಒಡ್ಡಣವೊ= ಮನ್ಮಥನ ಪ್ರಸಿದ್ಧ ಒಡ್ಯಾಣವೆಂಬ (ಸಂಗಾತಿಯೋ) ಆಭರಣವೊ! ; ಸುರತ ವಿರಹಿಯ ಸುಡುವ ಕೆಂಡದ ಹೊರಳಿಯೋ= ಹೆಣ್ಣಿನ ಬಯಕೆಯ ವಿರಹಿಯ ಸಂಕಟದ ಸುಡುವ ಕೆಂಡದ ಸುರಳಿಯೋ!; ಹೇಳು+ ಎನಲು ಮಿಗೆ ಹಿಮಕರನು(ಚಂದ್ರ) ಜನಿಸಿದ ರಜನಿ ಮಧ್ಯದಳು+ ಅವನಿ ತಳತಳಿಸೆ= ಇವುಗಳಲ್ಲಿ ಯಾವುದು ಹೇಳು ಎನ್ನುಂತೆ ಬಹಳ ಹೊಳೆಯುವ ಚಂದ್ರನು ಉದಯಿಸಿದನು, ರಾತ್ರಿಯ ಮಧ್ಯದಲ್ಲಿ, ಭೂಮಿ ತಳತಳನೆ ಹೊಳೆಯುವಂತೆ.
ಅರ್ಥ: ಶ್ರೇಷ್ಠವಾದ, ದಿಕ್ಕಿನ ದೇವತೆ ಹಣೆಗೆ ಇಟ್ಟುಕೊಂಡ ಚಂದನ ತಿಲಕವೋ! ಮನ್ಮಥನ ರಾಣಿ ರತಿಯು ಕೈಯಲ್ಲಿ ಹಿಡಿದ ಕನ್ನಡಿಯೊ!ಮನ್ಮಥನ ಪ್ರಸಿದ್ಧ ಒಡ್ಯಾಣವೆಂಬ (ಸಂಗಾತಿಯೋ) ಆಭರಣವೊ! ಹೆಣ್ಣಿನ ಬಯಕೆಯ ವಿರಹಿಯ ಸಂಕಟದ ಸುಡುವ ಕೆಂಡದ ಸುರಳಿಯೋ! ಇವುಗಳಲ್ಲಿ ಯಾವುದು ಹೇಳು ಎನ್ನುಂತೆ ರಾತ್ರಿಯ ಮಧ್ಯದಲ್ಲಿ, ಭೂಮಿ ತಳತಳನೆ ಹೊಳೆಯುವಂತೆ ಬಹಳ ಹೊಳೆಯುವ ಚಂದ್ರನು ಉದಯಿಸಿದನು,
ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ||
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ||51||
ಪದವಿಭಾಗ-ಅರ್ಥ: ಬೆಚ್ಚಿದವು ಚಕ್ರಾಂಕಯುಗ= ಹಗಲಿನ ಪಕ್ಷಿಗಳಾದ ಚಕ್ರವಾಕಗಳು ಚಂದ್ರ ಉದಯವನ್ನು ನೋಡಿ ಹೆದರಿದವು.; ತಾವ್+ ಕಚ್ಚಿದವು ಮರಿದುಂಬಿ ಕುಮುದವ= ಮರಿದುಂಬಿಗಳು ಕನ್ನೈದಿಲೆಯ ಹೋವಿಗೆ ಮುತ್ತಿದವು.; ಮುಚ್ಚಿದವು ಮುಸುಡುಗಳನು (ಮುಖಗಳನ್ನು)+ ಅಂಬುಜರಾಜಿ= ರಾತ್ರಿಯಾದಂತೆ ಕಮಲದ ಹೂವುಗಳ ಸಮೂಹ ಮುಖಗಳನ್ನು - ದಳಗಳನ್ನು ಮುಚ್ಚಿದವು. ತವತವಗೆ ಹೆಚ್ಚಿದವು ಸಾಗರದ ತೆರೆಗಳು= ಸಮುದ್ರದ ತರೆಗಳಲ್ಲಿ ತಾನಾಗಿಯೇ ಉಬ್ಬರ ಉಂಟಾಯಿತು; ಬೆಚ್ಚಿದರು ಜಾರೆಯರು= ಜಾರ ಸ್ತ್ರೀಯರು ಚಂದ್ರನ ಬೆಳಕಿನಲ್ಲಿ ತಮ್ಮ ರಹಸ್ಯ ಬಯಲಾಗುವುದೆಂದು ಹೆದರಿದರು. ಚಂದ್ರಮ ಕಿಚ್ಚನಿಕ್ಕಿದನು+ ಅಕಟ ಸಕಲ ವಿಯೋಗಜನ(ಅಗಲಿದ ಪ್ರೇಮಿಗಳ) ಮನಕೆ= ಚಂದ್ರನು ಹೀಗೆ ಅಗಲಿದ ಪ್ರೇಮಿಗಳ ಮನಸ್ಸಿಗೆ ತಾಪವನ್ನು ಉಂಟು ಮಾಡಿದನು.
ಅರ್ಥ: ಹಗಲಿನ ಪಕ್ಷಿಗಳಾದ ಚಕ್ರವಾಕಗಳು ಚಂದ್ರ ಉದಯವನ್ನು ನೋಡಿ ಹೆದರಿದವು. ಮರಿದುಂಬಿಗಳು ಕನ್ನೈದಿಲೆಯ ಹೋವಿಗೆ ಮುತ್ತಿದವು. ರಾತ್ರಿಯಾದಂತೆ ಕಮಲದ ಹೂವುಗಳ ಸಮೂಹ ಮುಖಗಳನ್ನು -ತಮ್ಮ ದಳಗಳನ್ನು ಮುಚ್ಚಿದವು. ಸಮುದ್ರದ ತರೆಗಳಲ್ಲಿ ತಾನಾಗಿಯೇ ಉಬ್ಬರ ಉಂಟಾಯಿತು; ಜಾರ ಸ್ತ್ರೀಯರು ಚಂದ್ರನ ಬೆಳಕಿನಲ್ಲಿ ತಮ್ಮ ರಹಸ್ಯ ಬಯಲಾಗುವುದೆಂದು ಹೆದರಿದರು. ಅಕಟಾ, ಚಂದ್ರನು ಹೀಗೆ ಅಗಲಿದ ಪ್ರೇಮಿಗಳ ಮನಸ್ಸಿಗೆ ತಾಪವನ್ನು ಉಂಟು ಮಾಡಿದನು.
ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ||
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ||52||
ಪದವಿಭಾಗ-ಅರ್ಥ: ಖಳನ ವಿರಹದ ತಾಪದ+ ಉರಿ ವೆಗ್ಗಳಿಸೆ (ಹೆಚ್ಚಲು)= ಆ ದುಷ್ಟನ ವಿರಹದ ವೇದನೆಯ ಉರಿ ಹೆಚ್ಚಲು,; ತನ್ನ+ ಅರಮನೆಗೆ ಬಂದನು ಕಳವಳಿಗ(ಸಂಕಟಕ್ಕೆ ಒಳಗಾದವನು) ಹಾಯೆನುತ ಕೆಡೆದನು ತಳಿರ ಹಾಸಿನಲಿ (ಚಿಗುರೆಲೆಯ ತಂಪು ಹಾಸಿನಲ್ಲಿ)= ವಿರಹ ಸಂಕಟಕ್ಕೆ ಒಳಗಾದ ಕೀಚಕ ತನ್ನ ಅರಮನೆಗೆ ಬಂದನು; ಅಲ್ಲಿ ಅವನು ಹಾ! ಎಂದು ನರಳಿ ಚಿಗುರೆಲೆಯ ತಂಪು ಹಾಸಿನ ಮೇಲೆ ಬಿದ್ದುಕೊಂಡನು. ; ನಳಿನವೈರಿಯ ಸುಳಿವು ತನ್ನಯ ಕೊಲೆಗೆ ಬಂದುದು ಪಾಪಿ= ಕಮಲದ ವೈರಿ ಚಂದ್ರನು ತನ್ನ ವಿರಹತಾಪವನ್ನು ಹೆಚ್ಚಿಸಿ ಕೊಲ್ಲಲು ಬಂದಿದ್ದಾನೆ ಪಾಪಿ ಎಂದು ಸಂಕಟಪಟ್ಟನು. ಕಮಲಜ(ಬ್ರಹ್ಮ) ಚಲಿತಲೋಚನೆಗೆ+ ಏಕೆ ಮಾಡಿದನು+ ಇನಿತು ಚೆಲುವಿಕೆಯ= ಬ್ರಹ್ಮನು ಈ ಚಂಚಲ ಕಣ್ಣಿನ ಸೈರಂದ್ರಿಗೆ ಇಷ್ಟೊಂದು ಅಂವವನ್ನು ಏಕೆ ಮಾಡಿದನು, ಎಂದು ಚಂತಿಸಿದನು.
ಅರ್ಥ: ಆ ದುಷ್ಟನ ವಿರಹದ ವೇದನೆಯ ಉರಿ ಹೆಚ್ಚಲು ವಿರಹ ಸಂಕಟಕ್ಕೆ ಒಳಗಾದ ಕೀಚಕ ತನ್ನ ಅರಮನೆಗೆ ಬಂದನು; ಅಲ್ಲಿ ಅವನು ಹಾ! ಎಂದು ನರಳಿ ಚಿಗುರೆಲೆಯ ತಂಪು ಹಾಸಿನ ಮೇಲೆ ಬಿದ್ದುಕೊಂಡನು. ಕಮಲದ ವೈರಿ ಚಂದ್ರನು ತನ್ನ ವಿರಹತಾಪವನ್ನು ಹೆಚ್ಚಿಸಿ ಕೊಲ್ಲಲು ಬಂದಿದ್ದಾನೆ ಪಾಪಿ ಎಂದು ಸಂಕಟಪಟ್ಟನು. ಬ್ರಹ್ಮನು ಈ ಚಂಚಲ ಕಣ್ಣಿನ ಸೈರಂದ್ರಿಗೆ ಇಷ್ಟೊಂದು ಅಂವವನ್ನು ಏಕೆ ಮಾಡಿದನೋ ಎಂದು ಚಂತಿಸಿದನು.
ಹಾಸಿದೆಳೆದಳಿರೊಣಗಿದವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು||
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ||53||
ಪದವಿಭಾಗ-ಅರ್ಥ: ಹಾಸಿದ+ ಎಳೆದಳಿರು+ ಒಣಗಿದವು, ಹೊಗೆ ಸೂಸಿದಾ ಸುಯಿಲಿನಲಿ,= ಕೀಚಕನು ಮಲಗಿದ ಚಿಗುರು ಎಲೆಯ ಹಾಸಿಗೆಯ ಎಳೆಯ ತಳಿರು ಇವನ ವಿರಹದ ಮೈ ಬಿಸಿಗೆ ಒಣಗಿಹೋಯಿತು. ಇವನ ನಿಟ್ಟುಸಿರಿನಲ್ಲಿ ಬಿಸಿ ಹೊಗೆ ಕಂಡಿತು. ಮೆಲ್ಲನೆ ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು= ಇವನಿಗೆ ತಣ್ಣಗಾಗಲಿ ಎಂದು ಎಳೆಯ ಸುಳಿ ಬಾಳೆಯಿಂದ ಗಾಳಿಬೀಸಿದರೆ ಅವನ ಮೈಝಳದಿಂದ ಅದು ಬಾಡಿಹೋಯಿತು. ಆ ಸಸಿಯ(ಚಂದ್ರನ) ಕೋಗಿಲೆಯ ತುಂಬಿಯನು+ ಆ ಸರೋಜವ ಮಲ್ಲಿಗೆಯ ಕೈವೀಸಿದನು ಕುಸುಮಾಸ್ತ್ರನು+ ಈ ಕೀಚಕನ ಕಗ್ಗೊಲೆಗೆ= ಮನ್ಮಥನು ತನ್ನ ಸೇನೆಯಾದ ಆ ಚಂದ್ರನನ್ನು, ಕೋಗಿಲೆಯನ್ನು, ತುಂಬಿಯನ್ನು, ಆ ಸರೋಜವ/ ಕಮಲವನ್ನು, ಮಲ್ಲಿಗೆಯನ್ನು ಕರೆತಂದು ಇವನ ಮೇಲೆ ಯುದ್ಧಮಾಡಲು ಆಜ್ನೆಯಸನ್ನೆಯಾಗಿ ಕೈಬೀಸಿದನು ಮನ್ಮಥನು, ಈ ಕೀಚಕನ ಕಗ್ಗೊಲೆಗೆ.
ಅರ್ಥ:ಕೀಚಕನು ಮಲಗಿದ ಚಿಗುರು ಎಲೆಯ ಹಾಸಿಗೆಯ ಎಳೆಯ ತಳಿರು ಇವನ ವಿರಹದ ಮೈ ಬಿಸಿಗೆ ಒಣಗಿಹೋಯಿತು. ಇವನ ನಿಟ್ಟುಸಿರಿನಲ್ಲಿ ಬಿಸಿ ಹೊಗೆ ಕಂಡಿತು. ಇವನಿಗೆ ತಣ್ಣಗಾಗಲಿ ಎಂದು ಎಳೆಯ ಸುಳಿ ಬಾಳೆಯಿಂದ ಗಾಳಿಬೀಸಿದರೆ ಅವನ ಮೈಝಳದಿಂದ ಅದು ಬಾಡಿಹೋಯಿತು. ಮನ್ಮಥನು ತನ್ನ ಸೇನೆಯಾದ ಆ ಚಂದ್ರನನ್ನು, ಕೋಗಿಲೆಯನ್ನು, ತುಂಬಿಯನ್ನು, ಆ ಕಮಲವನ್ನು, ಮಲ್ಲಿಗೆಯನ್ನು ಕರೆತಂದು ಮನ್ಮಥನು, ಈ ಕೀಚಕನ ಕಗ್ಗೊಲೆಗಾಗಿ ಯುದ್ಧಮಾಡಲು ಆಜ್ನೆಯಸನ್ನೆಯಾಗಿ ಕೈಬೀಸಿದನು.(ಸೇನಾ ನಾಯಕ ಸೈನ್ದ ಕಡೆ ತಿರುಗಿ ಕೈಬೀಸಿದರೆ - ಯುದ್ಧವನ್ನು ಆರಂಭಿಸಿ ಎಂದು ಆಜ್ನೆ ಕೊಟ್ಟಂತೆ)
ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ||
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ||54||
ಪದವಿಭಾಗ-ಅರ್ಥ: ಉರಿದುದು+ ಒಡಲೊಳು(ಹೊಟ್ಟೆಯಲ್ಲಿ) ವೀಳೆಯದ ಕರ್ಪುರದ ಹಳಕುಗಳು+ ಅಮಳ (ಅಮಲ- ಉತ್ತಮ) ಗಂಧದ ಸರಸ ಕರ್ದಮ ಕರಿಕುವರಿದುದು ಪೂಸಿದ(ಹಚ್ಚಿದ)+ ಅಂಗದಲಿ- ಹಚ್ಚಿದ ದೇಹಭಾಗದಲ್ಲಿ= ವೀಳೆಯದಲೆ ಕರ್ಪುರದ ಚೂರುಗಳನ್ನು ತಾಂಬೂಲದ ಜೊತೆ ಹಾಕಿಕೊಂಡರೆ ಅವು ಹೊಟ್ಟೆಯಲ್ಲಿ ತಂಪು ಮಾಡುವ ಬದಲು ಉರಿಯನ್ನುಂಟಮಾಡಿತು.; ಒಳ್ಳೆಯ ಗಂಧದ ರಸಭರಿತ ಮಿಶ್ರಣವನ್ನು ದೇಹಕ್ಕೆ ಹಚ್ಚಿದರೆ ಅಲ್ಲಿ ಅದು ಸುಟ್ಟು ಕರಿಕಲಾಯಿತು ಅಷ್ಟು ಬಿಸಿಯಾಗತ್ತು ಕೀಚಕನ ಮೈ.; ಹೊರಳೆ ನೀರಿನ ಪೊಟ್ಟಣವು ದಳ್ಳುರಿಯಲಾದುದು= ಹೊರಳಿದಾಗ ಬದಿಯಲ್ಲಿ ಇಟ್ಟ ತಣ್ಣನೆಯ ನೀರಿನ ಪೊಟ್ಟಣವು ಬಿಸಿಯಾಗಿ ದಳ್ಳುರಿಯಾಯಿತು.; ಬಲಿದ ಚಂದ್ರಿಕೆ ಕರಗಿ ಕಡುಗಿದ (ಕಡುಗ-ಕಾಲುಬಳೆಯಂತೆ) ತವರವಾದುದು ಕೀಚಕನ ದೆಸೆಗೆ(ಪರಿಸ್ಥಿತಿಗೆ)= ಚೆನ್ನಾಗಿಬೆಳಗಿದ ಬೆಳದಿಂಗಳು ಕರಗಿ ಕಡುಗವನ್ನು ಮಾಡುವ ತವರವಾಯಿತು, ಹೀಗೆ ಕೀಚಕನ ಪರಿಸ್ಥಿತಿ, ವಿರಹತಾಪದ ಉರಿ ಇತ್ತು.
  • ಕರ್ದಮ :ಕರ್ಪೂರ, ಕಸ್ತೂರಿ ಮುಂತಾದ ಸುಗಂಧದ್ರವ್ಯಗಳಿಂದ ತಯಾರಿಸಿದ ಒಂದು ಬಗೆಯ ಲೇಪನದ್ರವ್ಯ.
ಅರ್ಥ: ವೀಳೆಯದಲೆ ಕರ್ಪುರದ ಚೂರುಗಳನ್ನು ತಾಂಬೂಲದ ಜೊತೆ ಹಾಕಿಕೊಂಡರೆ ಅವು ಹೊಟ್ಟೆಯಲ್ಲಿ ತಂಪು ಮಾಡುವ ಬದಲು ಉರಿಯನ್ನುಂಟಮಾಡಿತು. ಒಳ್ಳೆಯ ಗಂಧದ ರಸಭರಿತ ಮಿಶ್ರಣವನ್ನು ದೇಹಕ್ಕೆ ಹಚ್ಚಿದರೆ ಅಲ್ಲಿ ಅದು ಸುಟ್ಟು ಕರಿಕಲಾಯಿತು ಅಷ್ಟು ಬಿಸಿಯಾಗತ್ತು ಕೀಚಕನ ಮೈ. ಮಗ್ಗುಲು ಹೊರಳಿದಾಗ ಬದಿಯಲ್ಲಿ ಇಟ್ಟ ತಣ್ಣನೆಯ ನೀರಿನ ಪೊಟ್ಟಣವು ಬಿಸಿಯಾಗಿ ದಳ್ಳುರಿಯಾಯಿತು. ಚೆನ್ನಾಗಿ ಬೆಳಗಿದ ಬೆಳದಿಂಗಳು ಕರಗಿ ಕಡುಗವನ್ನು ಮಾಡುವ ತವರವಾಯಿತು, ಹೀಗೆ ಕೀಚಕನ ಪರಿಸ್ಥಿತಿ, ವಿರಹತಾಪದ ಉರಿ ಇತ್ತು.(ಉತ್ಪ್ರೇಕ್ಷಾಲಂಕಾರ)
ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ||
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ (ಮಣಿಯ ಮಂಚದಲಿ)||55||
ಪದವಿಭಾಗ-ಅರ್ಥ: ಪರಿಮಳದಿ ಸುಳಿವಾಲ ವಟ್ಟದೊಳು(ಬೀಸಣಿಗೆ)+ ಇರದೆ ಪೂಸಿದ ಗಂಧ ಕರ್ಪುರವು+ ಅರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ= ಕೀಚಕನ ಕಾಮಾಗ್ನಿಯ ತಾಪದಲ್ಲಿ ಪರಿಮಳವನ್ನು ಸವರಿದ ಬೀಸುವ ಬೀಸಣಿಕೆಗೆ ತೊಡೆದ /ಪೂಸಿದ ಗಂಧ ಕರ್ಪುರಗಳು ಕೂಡ ಅರರೆ! ಸೀದುಹೋಯಿತು.; ಪರಮ ಪಾತಿವ್ರತೆಗೆ+ ಅಳುಪಿ(ಮನಸೊತು) ತಾನ್+ ಹರಣದಾಸೆಯ ಮರೆದು ಪಾತಕ ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ= ಪರಮ ಪತಿವ್ರತೆಗೆ ಮನಸೊತು ಕೀಚಕನು ಪ್ರಾಣದಾಸೆಯನ್ನು ಮರೆತು ಪಾಪಿಯು ಚಂದ್ರಕಾಂತದ ಮಂಚದಮೇಲೆ ಹೊರಳುತ್ತಿದ್ದನು.
  • ಆಲವಟ್ಟ= ಹುಲ್ಲು, ತಾಳೆಗರಿ ಅಥವಾ ಬಟ್ಟೆಯಿಂದ ಮಾಡಿದ ಬೀಸಣಿಗೆ.
ಅರ್ಥ:ಕೀಚಕನ ಕಾಮಾಗ್ನಿಯ ತಾಪದಲ್ಲಿ ಪರಿಮಳವನ್ನು ಸವರಿದ ಬೀಸುವ ಬೀಸಣಿಕೆಗೆ ತೊಡೆದ /ಪೂಸಿದ ಗಂಧ ಕರ್ಪುರಗಳು ಕೂಡ ಅರರೆ! ಸೀದುಹೋಯಿತು. ಪರಮ ಪತಿವ್ರತೆಗೆ ಮನಸೊತು ಕೀಚಕನು ಪ್ರಾಣದಾಸೆಯನ್ನು ಮರೆತು ಪಾಪಿಯು ಚಂದ್ರಕಾಂತದ ಮಂಚದಮೇಲೆ ಹೊರಳುತ್ತಿದ್ದನು.
ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ||
ಪರಿಮಳದ ಪಾವುದದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ||56||
ಪದವಿಭಾಗ-ಅರ್ಥ: ಅರೆಗಳಿಗೆ ಯುಗವಾಗಿ ನೂಕಿದನು+ ಇರುಳನು+ ಉದಯಾಚಲದ ಶಿರದಲಿ ತರಣಿ(ಸೂರ್ಯ) ತಲೆದೋರಿದನು ತೊಡೆದನು ಭುವನದ+ ಅಂಧತೆಯ= ಅರೆಗಳಿಗೆಯೂ ಯುಗವಾಗಿ ಕಾಣಲು ಕೀಚಕನು ಆ ರಾತ್ರಿಯನ್ನು ಕಳೆದನು. ಉದಯಾಚಲದ/ ಪೂರ್ವದಿಕ್ಕಿನ ಬೆಟ್ಟದಲ್ಲಿ ಸುರ್ಯನು ಹುಟ್ಟಿದನು.; ಅವನು ಲೋಕದ ಕತ್ತಲೆಯನ್ನು ಹೋಗಲಾಡಿಸಿದನು.; ಪರಿಮಳದ ಪಾವುದದಿಂ(ಪಾವುಡದಿ= ಉಡುಗೊರೆಯಿಂದ) (ನ+) ಅಳಿಗಳ(ದುಂಬಿ) ಕರೆಸಿದವು ತಾವರೆಗಳು+ ಎನೆ ಕಾತರ ಲತಾಂಗಿಯ (ಕಮಲದಹೂವಿನ) ಸುಯ್ಲು(ವಿರಹದ ನಿಟ್ಟುಸಿರು) ತಾಗಿತು ಕುಮುದಿನೀಪತಿಗೆ(ನೈದಿಲೆಯಪತಿ- ಚಂದ್ರನಿಗೆ)= ಪರಿಮಳದ ಉಡುಗೊರೆಯಿಂದ ದುಂಬಿಗಳನ್ನು ತಾವರೆಗಳು ಕರೆಸಿದವು ಎನ್ನುವಂತೆ, ಕಾತರದಿಂದ ಕಾಯುತ್ತಿದ ಲತಾಂಗಿಯಾದ ಕಮಲದಹೂವಿನ ರವಿ ಕಾಣಲಿಲ್ಲವಲ್ಲಾ ಎಂದು ಬಿಟ್ಟ ವಿರಹದ ನಿಟ್ಟುಸಿರು ಚಂದ್ರನಿಗೆ ತಾಗಿತು ಎಂಬಂತೆ ಅವನು ಅಡಗಿದನು.
  • ಪಾವುಡ= 1. ಬಟ್ಟೆ. 2. ತಲೆಗೆ ಸುತ್ತುವ ವಸ್ತ್ರ. 3. ಉಡುಗೊರೆ.
ಅರ್ಥ:ಅರೆಗಳಿಗೆಯೂ ಯುಗವಾಗಿ ಕಾಣಲು ಕೀಚಕನು ಆ ರಾತ್ರಿಯನ್ನು ಕಳೆದನು. ಉದಯಾಚಲದ/ ಪೂರ್ವದಿಕ್ಕಿನ ಬೆಟ್ಟದಲ್ಲಿ ಸುರ್ಯನು ಹುಟ್ಟಿದನು.; ಅವನು ಲೋಕದ ಕತ್ತಲೆಯನ್ನು ಹೋಗಲಾಡಿಸಿದನು. ಪರಿಮಳದ ಉಡುಗೊರೆಯಿಂದ ದುಂಬಿಗಳನ್ನು ತಾವರೆಗಳು ಕರೆಸಿದವು ಎನ್ನುವಂತೆ, ಕಾತರದಿಂದ ಕಾಯುತ್ತಿದ ಲತಾಂಗಿಯಾದ ಕಮಲದಹೂವಿನ ರವಿ ಕಾಣಲಿಲ್ಲವಲ್ಲಾ ಎಂದು ಬಿಟ್ಟ ವಿರಹದ ನಿಟ್ಟುಸಿರು ಚಂದ್ರನಿಗೆ ತಾಗಿತು ಎಂಬಂತೆ ಅವನು ಕಮಲದ ಮೇಲಿನ ಕರುಣೆಯಿಂದ ಅಡಗಿದನು. ಈ ರೀತಿಯಲ್ಲಿ ಸೂರ್ಯನು ಉದಯಿಸಿ ಚಂದ್ರನು ಮರೆಯಾದನು.[೪]
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ
  2. *ಕುಮಾರವ್ಯಾಸಭಾರತ-ಸಟೀಕಾ
  3. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
  4. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
  5. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
  6. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
  7. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
  8. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
  9. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
  10. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
  11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
  12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
  2. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  3. ದಾಸ ಸಾಹಿತ್ಯ ನಿಘಂಟು
  4. [೧] [೨] [೩] [೪]