ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧) -[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಕಾಯಿದರು ಸತ್ಯವನು ವನವಾ
ಸಾಯತವ ನೆರೆ ಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟನಗರಿಯಲಿ ||||ಸೂ.||
ಪದವಿಭಾಗ-ಅರ್ಥ: ಕಾಯಿದರು ಸತ್ಯವನು= ಪಾಂಡವರು ಪಗಡೆಯಾಟದಲ್ಲಿ ಸೋತು ಫಣದ ವಚನದಂತೆ ಹನ್ನೆರಡು ವರ್ಷದ ವನವಾಸವನ್ನು ಅನಭವಿಸಿ ಸತ್ಯವನ್ನು ಅನುಸರಿಸಿದರು. ವನವಾಸ+ ಆಯತವ= ವಿಶಾಲವಾದ. ನೀಳವಾದ; ನೆರೆ= ಚೆನ್ನಾಗಿ, ಗೆಲಿದು= ಗೆದ್ದು= ಹೀಗೆ ವನವಾಸದ ದೊಡ್ಡಸಮಯವನ್ನು ಚೆನ್ನಾಗಿ ಪೂರೈಸಿ ಗೆದ್ದು, ಪಾಂಡವರಾಯರು ಓಲೈಸಿದರು ಬಂದು ವಿರಾಟನಗರಿಯಲಿ= ನಂತರ ಪಾಲಿಸಬೇಕಾದ ಒಂದು ವರ್ಷದ ಅಜ್ಞಾತವಾಸವನ್ನು ಪೂರೈಸಲು ಪಾಂಡವರಾಜಕುಮಾರರು ವಿರಾಟನಗರಕ್ಕೆ ಬಂದು ಸೇವೆಯಕಾರ್ಯವನ್ನು ಕೈಗೊಂಡರು.
ಅರ್ಥ:ಪಾಂಡವರು ಪಗಡೆಯಾಟದಲ್ಲಿ ಸೋತು ಫಣದ ವಚನದಂತೆ ಹನ್ನೆರಡು ವರ್ಷದ ವನವಾಸವನ್ನು ಅನಭವಿಸಿ ಸತ್ಯವನ್ನು ಅನುಸರಿಸಿದರು. ಹೀಗೆ ವನವಾಸದ ದೀರ್ಘಕಾಲವನ್ನು ಚೆನ್ನಾಗಿ ಪೂರೈಸಿ ಗೆದ್ದು, ನಂತರ ಪಾಲಿಸಬೇಕಾದ ಒಂದು ವರ್ಷದ ಅಜ್ಞಾತವಾಸವನ್ನು ಪೂರೈಸಲು ಪಾಂಡವರು ವಿರಾಟನಗರಕ್ಕೆ ಬಂದು ಸೇವೆಯ ಕಾರ್ಯವನ್ನು ಕೈಗೊಂಡರು. [೧][೨] [೩] [೪]
~~ಓಂ~~

ಪಾಂಡವರು ದ್ರೌಪದಿ ಸಹಿತ ವಿರಾಟನಗರದ ಬಳಿಗೆ ಬಂದರು[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರು ನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸಾರಿದರೊಂದು ವಟಕುಜವ ||1||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಮುನಿಜನ ನೃಪಜನಂಗಳ ಬೀಳುಗೊಟ್ಟನು= ಕಳಿಸಿದನು ಭೂಮಿಪತಿ ಬಲವಂದು= ಪ್ರದಕ್ಷಿಣೆಮಾಡಿ, ಹುತವಹನ= ಅಗ್ನಿಯನ್ನು, ಮೇಲು ಶಕುನದ ಚಾರು= ಸುಂದರ, ಸೊಗಸಾದ, ನಿನದವನು(ನಿನಾದ- ದನಿ, ಸದ್ದು)+ ಆಲಿಸುತ ಸೋದರರು ಸಹಿತ ವನಾಲಯವ ಹೊರವಂಟು ಸಾರಿದರು (ಬಂದು ಸೇರಿದರು)+ ಒಂದು ವಟಕುಜವ= ಆಲದಮರದ ಬಳಿಗೆ.
ಅರ್ಥ: ಕೇಳು ಜನಮೇಜಯ ರಾಜನೇ, ಧರ್ಮರಾಜನು ವನವಾಸದ ಅವಧಿ ಮುಗಿದ ನಂತರ ಅವನ ಬಳಿ ಇದ್ದ ಮುನಿಜನರನ್ನೂ, ಹಿತೈಷಿ ರಾಜರುಗಳನ್ನೂ ಅವರ ಪ್ರದೇಶಗಳಿಗೆ ಕಳಿಸಿಕೊಟ್ಟನು. ಧರ್ಮರಾಜನು (ವೈಶ್ವಾನರ - ವೈಶ್ವದೇವ) ಅಗ್ನಿಯನ್ನು ಪ್ರದಕ್ಷಿಣೆಮಾಡಿ, ಉತ್ತಮ ಶಕುನವನ್ನು ಕಾಣುತ್ತಾ ಹಕ್ಕಿಗಳ ಸೊಗಸಾದ ಕಲರವ ಆಲಿಸುತ್ತಾ ಸೋದರರ ಸಹಿತ ವನದವಾಸದ ತಾಣದಿಂದ ಹೊರವಂಟು ಒಂದು ಆಲದಮರದ ಬಳಿಗೆ ಬಂದು ಸೇರಿದರು.
ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿಂಗೇನು ಗತಿ ಬಳಿ
ಕೊಂದು ವರುಷಜ್ಞಾತವಾಸಕ್ಕಾವ ಠಾವೆಂದ ||2||
ಪದವಿಭಾಗ-ಅರ್ಥ: ಬಂದು ವಟಕುಜದ+ ಅಡಿಯಲಿ+ ಅನಿಬರು(ಅವರೆಲ್ಲರು) ನಿಂದು= ಬಂದು ಆಲದಮರದ ಕೆಳಗೆ ಅವರೆಲ್ಲರು ನಿಂತುಕೊಂಡು; ದುರುಪದಿ= ದ್ರೌಪದಿ, ಸಹಿತ ಬಳಲಿಕೆಯಿಂದ ವಿಶ್ರಮಿಸಿದರು= ದ್ರೌಪದಿ ಸಹಿತ ಆಯಾಸವನ್ನು ಪರಿಹರಿಸಿಕೊಳ್ಳಲು ಅಲ್ಲಿ ವಿಶ್ರಾಂತಿಪಡೆದರು. ಚಿಂತಿಸಿ ಧರ್ಮನಂದನನು= ಧರ್ಮರಾಯನು ಯೋಚಿಸುತ್ತಾ, ಹಿಂದೆ ಹನ್ನೆರಡು+ ಅಬುದ= ವರ್ಷ, ಸವೆದವು= ಕಳೆದೆವು, ಮುಂದಣ+ ಅನುವಿಂಗೆ+ ಏನು ಗತಿ= ಹಿಂದೆ ಹನ್ನೆರಡು ವರ್ಷ ವನವಾಸವನ್ನು ಕಳೆದೆವು; ಮುಂದಿನ ಅಜ್ಞಾತವಾಸಕ್ಕೆ () ಯಾರಿಗೂ ಪತಿಳಿಯಸಂತೆ- ಕೌರವರಿಗೆ ತಿಳಿಯದಮತೆ ವಾಸ) ಅನುಕೂಲವಾದ ಸ್ಥಳಕ್ಕೆ ಏನುಗತಿ= ಏನು ಮಾಡವುದು? ಬಳಿಕ+ ಒಂದು ವರುಷ+ ಅಜ್ಞಾತವಾಸಕ್ಕೆ+ ಆವ ಠಾವು(ವಾಸಸ್ಥಳ)+ ಎಂದ= ಮುಂದಿನ ಅಜ್ಞಾತವಾಸಕ್ಕೆ ಅನುಕೂಲವಾದ ಸ್ಥಳಕ್ಕೆ ಏನುಗತಿ= ಏನು ಮಾಡವುದು? ಬಳಿಕ+ ಒಂದು ವರುಷ+ ಅಜ್ಞಾತವಾಸಕ್ಕೆ+ ಆವ= ಯಾವ, ಠಾವು ()ಸ್ಥಳ+ ಎಂದ
ಅರ್ಥ:ಅರಣ್ಯವಾಸದಿಂದ ಬಂದು ಒಂದು ಆಲದಮರದ ಕೆಳಗೆ ದ್ರೌಪದಿ ಸಹಿತ ಅವರೆಲ್ಲರೂ ನಿಂತುಕೊಂಡು ಬಳಲಿಕೆಯಿಂದ ಆದ ಆಯಾಸವನ್ನು ಪರಿಹರಿಸಿಕೊಳ್ಳಲು ಅಲ್ಲಿ ವಿಶ್ರಾಂತಿಪಡೆದರು. ಆಗ ಧರ್ಮರಾಯನು ಯೋಚಿಸುತ್ತಾ, ಹಿಂದೆ ಹನ್ನೆರಡುವರ್ಷ ವನವಾಸವನ್ನು ಕಳೆದೆವು; ಮುಂದಿನ ಅಜ್ಞಾತವಾಸಕ್ಕೆ ಏನು ಮಾಡವುದು? ಮುಂದಿನ ಅಜ್ಞಾತವಾಸಕ್ಕೆ ಅನುಕೂಲವಾದ ಸ್ಥಳಕ್ಕೆ ಏನು ಮಾಡವುದು? ಒಂದು ವರುಷ ಯಾರಿಗೂ ಪರಿಚಯ ಸಿಗದಂತೆ ಅಜ್ಞಾತವಾಸ ಮಾಡಲು ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು, ಎಂದ.
ಬಡಗಲವರದು ಮೂಡಣರಸುಗ
ಳೊಡೆ ಗೆಣೆಯರಾಗಿಹರು ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಾವಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ||3||
ಪದವಿಭಾಗ-ಅರ್ಥ: ಅರ್ಜುನನು ಹೀಗೆಂದನು, ಬಡಗಲು(ಉತ್ತರದಿಕ್ಕು)+ ಅವರದು(ಅವರ ಅಧೀನದಲ್ಲಿದೆ.), ಮೂಡಣ (ಪೂರ್ವದ)+ ಅರಸುಗಳೊಡೆ ಗೆಣೆಯರು(ಅರಸುಗಳಿಗೆ ಅವರು ಗೆಣೆಯರು(ಗೆಳೆಯರು)+ ಆಗಿಹರು (ಆಗಿದ್ದಾರೆ.), ತೆಂಕಣ=ದಕ್ಷಿಣ. ಕಡೆಯವರು ಕಂಡಿಹರು= ನಮ್ಮನ್ನು ಕಂಡು ಚೆನ್ನಾಗಿ ಪರಿಚಯ ಉಳ್ಳವರು, ಕೆಲಬಲದವರು= ಅಕ್ಕಪಕ್ಕದವರು, ಕೊಂಡೆಯರು= ಚಾಡಿಕೋರ ಸ್ವಭಾವದವರು ಮತ್ತು ದರ್ಪದವರು. ಪಡುವಣವರು= ಪಶ್ಚಿಮದವರು+ ಅತಿ ಕೃಶರು= ಬಹಳ ಬಲಹೀನರು, ನಾವು+ ಇನ್ನು+ ಅಡಗಿರಲು ತೆರನು (ತೆರವಾದ- ಅನುಕೂಲ ಸ್ಥಳ)+ ಆವುದು= ಯಾವುದು+ ಎಂದೆನೆ= ಎಂದು ಹೇಳಲು, ನಾವು ಯಾರಿಗೂ ತಿಳಿಯದಂತೆ ಅಡಗಿರಲು, ನುಡಿದನು+ ಅರ್ಜುನ ದೇವನವ+ ಅನೀಪತಿಗೆ= ಧರ್ಮರಾಜನಿಗೆ ವಿನಯದಲಿ.
ಅರ್ಥ: ಧರ್ಮಜನು, ಉತ್ತರದಿಕ್ಕಿನ ರಾಜ್ಯಗಳು ಕೌರವರ ಅಧೀನದಲ್ಲಿದೆ. ಪೂರ್ವದ ಅರಸುಗಳಿಗೆ ಅವರು ಗೆಳೆಯರಾಗಿದ್ದಾರೆ.), ದಕ್ಷಿಣದ ಕಡೆಯವರು ನಮ್ಮನ್ನು ಕಂಡು ಚೆನ್ನಾಗಿ ಪರಿಚಯ ಉಳ್ಳವರು, ಅಕ್ಕಪಕ್ಕದವರು ಚಾಡಿಕೋರ ಸ್ವಭಾವದವರು ಮತ್ತು ದರ್ಪದವರು. ಪಶ್ಚಿಮದವರು ಬಹಳ ಬಲಹೀನರು. ನಾವು ಇನ್ನು ನಾವು ಯಾರಿಗೂ ತಿಳಿಯದಂತೆ ಅಡಗಿರಲು ಅನುಕೂಲವಾದ ಯಾವುಸ್ಥಳವನ್ನು ಆರಿಸಿಕೊಳ್ಳಬೇಕು ಎಂದು ಹೇಳಲು, ಧರ್ಮರಾಜನಿಗೆ ಅರ್ಜುನನು ವಿನಯದಿಂದ ಹೀಗೆಂದನು.
ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲ ವಿರಾಟನಿಗವನ ದೆಸೆಯಿಂ ಭಯವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿ ತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ||4||
ಪದವಿಭಾಗ-ಅರ್ಥ: ವಳಿತು(ಒಳ್ಳೆಯದು)+ ಅವನು= ಅವನು ನಮಗೆ ಒಳ್ಳೆಯವನು, ಹೊಕ್ಕಿರಿದು ಕೌರವರೊಳಗೆ ಹಗೆಯಾಗಿ+ ಇಹನು= ಅವನು ಕೀಚಕ, ಕುರುರಾಜ್ಯದೊಳಗೆ ನುಗ್ಗಿ ಯುದ್ಧಮಾಡಿ ಕೌರವರಿಗೆ ಶತ್ರುವಾಗಿದ್ದಾನೆ; ಕೀಚಕಬಲ ವಿರಾಟನಿಗೆ+ ಅವನ ದೆಸೆಯಿಂ ಭಯವಿಹೀನವು+ ಅದು= ವಿರಾಟನಿಗೆ ಕೀಚಕನ ಬೆಮಬಲವಿದೆ. ಅವನ ದೆಸೆಯಿಂದ ವಿರಾಟನು ಭಯವಿಲ್ಲದೆ ಇರುವನು. ಅದು- ವಿರಾಟ ರಾಜ್ಯ, ಮುಳಿದು= ಸಿಟ್ಟಿನಿಂದ ಹೇಳಿಕೆಯಾದ= ಪ್ರಸಿದ್ಧನಾದ ರವಿಸುತಕಲಿ= ಕರ್ಣನಲ್ಲಿ, ತ್ರಿಗರ್ತಾದಿಗಳು+ ಎನಿಪ ಮಂಡಳಿಕರನು= ಸಾಮಂತರಾಜರನ್ನು ಕೈಕೊಳ್ಳದೆ(ಲೆಕ್ಕಿಸದೆ - ಭಯಪಡದೆ)+ ಆಳುವರು+ ಅವರು ಪಶ್ಚಿಮವ= ಪಶ್ಚಿಮ ಪ್ರದೇಶವನ್ನು, ಎಂದನು ಅರ್ಜುನ.
ಅರ್ಥ: ವಿರಾಟ - ಅವನು ನಮಗೆ ಒಳ್ಳೆಯವನು. ಆ ಕೀಚಕ ಕುರುರಾಜ್ಯದೊಳಗೆ ನುಗ್ಗಿ ಯುದ್ಧಮಾಡಿ ಕೌರವರಿಗೆ ಶತ್ರುವಾಗಿದ್ದಾನೆ; ವಿರಾಟನಿಗೆ ಕೀಚಕನ ಬೆಮಬಲವಿದೆ. ಅವನ ದೆಸೆಯಿಂದ ವಿರಾಟನು ಭಯವಿಲ್ಲದೆ ಇರುವನು. ವಿರಾಟ ರಾಜ್ಯವು ಕೌರವನ ಪರರಾದ, ಸಿಟ್ಟಿನಿಂದ ಪ್ರಸಿದ್ಧನಾದ ಕರ್ಣನನ್ನೂ, ತ್ರಿಗರ್ತಾದಿಗಳು ಎಂಬ ಸಾಮಂತರಾಜರನ್ನೂ ಲೆಕ್ಕಿಸದೆ ಭಯಪಡದೆ ಪಶ್ಚಿಮ ಪ್ರದೇಶವನ್ನು ಆಳುವರು, ಎಂದನು ಅರ್ಜುನ.
ನೃಪತಿ ನಿಶ್ಚೈಯಿಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಕಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ||5||
ಪದವಿಭಾಗ-ಅರ್ಥ: ನೃಪತಿ ನಿಶ್ಚೈಯಿಸಿದನು ಮತ್ಸ್ಯಾಧಿಪನ ನಗರಿಯೊಳು+ ಅಲ್ಲಿ ಸೈರಿಸಿ ಕೃಪಣತನದಲಿ ನೂಕಬೇಕು+ ಅಹುದು ನುಡಿದ ವತ್ಸರವ ಗುಪಿತವೆಂತು+ ಅಳವಡುವುದು ಆಶ್ರಯದ+ ಅಪದೆಸೆಯನೆಂತು+ ಆನುವಿರಿ ನಿಷ್ಕೃಪೆಯೊಳು+ ಎಂತು+ ಆನು+ ಎಂಬೆನು+ ಎಂದನು ಧರ್ಮನಂದನನು
ನೃಪತಿ ನಿಶ್ಚೈಯಿಸಿದನು ಮತ್ಸ್ಯಾಧಿಪನ ನಗರಿಯೊಳು+ ಅಲ್ಲಿ ಸೈರಿಸಿ ಕೃಪಣತನದಲಿ ನೂಕಬೇಕು= ಧರ್ಮರಾಯನು ಮತ್ಸ್ಯರಾಜ ವಿರಾಟನ ನಗರದಲ್ಲಿ ದೈನ್ಯರೀತಿಯಲ್ಲಿ - ಅಲ್ಲಿಯ ಕಷ್ಟವನ್ನು ಸಹಿಸಿಕೊಂಡು ಒಂದು ವರ್ಷಕಾಲ ಕಳೆಯಬೇಕು ಎಂದು ನಿಶ್ಚೈಯಿಸಿದನು. + ಅಹುದು ನುಡಿದ ವತ್ಸರವ ಗುಪಿತವೆಂತು+ ಅಳವಡುವುದು= ಸರಿ, ಭಾಷೆಕೊಟ್ಟ ಒಂದುವರ್ಷ ಗುಪ್ತತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು? ಆಶ್ರಯದ+ ಅಪದೆಸೆಯನೆಂತು+ ಆನುವಿರಿ (ಅಳವಡಿಸಿಕೊಳ್ಳುವಿರಿ)= ಅವನಲ್ಲಿ ಆಶ್ರಯ ಪಡೆಯಲು ಯಾವ ಸೇವಾವೃತ್ತಿಯ ಅಪದೆಸೆಯನ್ನು ಹೇಗೆ ಮಾಡುವಿರಿ? ನಿಷ್ಕೃಪೆಯೊಳು (ಕರುಣೆಯಿಲ್ಲದೆ)+ ಎಂತು(ಹೇಗೆ)+ ಆನು (ನಾನು)+ ಎಂಬೆನು(ಹೇಳಲಿ)+ ಎಂದನು ಧರ್ಮನಂದನನು= ಕರುಣೆಯಿಲ್ಲದೆ ಹೀಗೇ ಇರಿ ಎಂದು ನಾನು ಹೇಗೆ ಹೇಳಲಿ ಎಂದನು ಧರ್ಮನಂದನನು= ಧರ್ಮರಾಯನು.
ಅರ್ಥ: ಧರ್ಮರಾಯನು, ಮತ್ಸ್ಯರಾಜ ವಿರಾಟನ ನಗರದಲ್ಲಿ ದೈನ್ಯರೀತಿಯಲ್ಲಿ - ಅಲ್ಲಿಯ ಕಷ್ಟವನ್ನು ಸಹಿಸಿಕೊಂಡು ಒಂದು ವರ್ಷಕಾಲ ದಿನಕಳೆಯಬೇಕು ಎಂದು ನಿಶ್ಚೈಯಿಸಿದನು. ಸರಿ, ಭಾಷೆಕೊಟ್ಟಂತೆ ಒಂದು ವರ್ಷ ಗುಪ್ತತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು? ಅವನಲ್ಲಿ ಆಶ್ರಯ ಪಡೆಯಲು ಯಾವ ಸೇವಾವೃತ್ತಿಯ ಅಪದೆಸೆಯನ್ನು ಹೇಗೆ ಅನುಭವಿಸುವಿರಿ? ಅವನಲ್ಲಿ ಆಶ್ರಯ ಪಡೆಯಲು ಯಾವ ಸೇವಾವೃತ್ತಿಯ ಅಪದೆಸೆಯನ್ನು ಹೇಗೆ ಮಾಡುವಿರಿ? ಕರುಣೆಯಿಲ್ಲದೆ ಹೀಗೇ ಇರಿ ಎಂದು ನಾನು ಹೇಗೆ ಹೇಳಲಿ ಎಂದನು.
ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ||6||
ಪದವಿಭಾಗ-ಅರ್ಥ: ದೇವ ನಿಮ್ಮಯ ಮತವೆ ಮತವು+ ಎಮಗೆ+ ಆವ ವೇಷದ ವಿವರ ನಿಮಗೆ ಅದ ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ,= ಅಣ್ನದೇವ ನಿಮ್ಮ ಅಭಿಪ್ರಾಯವೇ ನಮಗೆ ಒಪ್ಪತ ಅಭಿಪ್ರಾಯವು. ನಮಗೆ ಯಾವ ವೇಷ ಹಾಕಬೇಕು ಅದರ ವಿವರ ಹೇಳಿ. ನಿಮಗೆ ಯಾದ ವೇಷ ಅದನ್ನು ನೀವು ಹೇಳುವುದೆಂದು ಭೀಮಾರ್ಜುನರು ಕೇಳಿಕೊಂಡರು. ನಾವು ಭೂಸುರವೇಷದಲಿ ಸಂಭಾವಿತರು, ಮತ್ತೆ+ ಅಲ್ಲಿ ಸನ್ಯಾಸ+ ಅವಲಂಬನ= ಅವಲಂಬಿಸುವುದು, ಕಂಕನೆಂಬ+ ಅಭಿಧಾನ= ಹೆಸರು, ತನಗೆ+ ಎಂದ= ನಾವು(ನಾನು) ಬ್ರಾಹ್ಮಣ ವೇಷದಲ್ಲಿ ನಿಪುಣರು ಮತ್ತೆ ಅಲ್ಲಿ ವಿರಾಟನ ಬಳಿ ಸಂನ್ಯಾಸಿಯ ವೇಷವನ್ನು ಅವಲಂಬಿಸುವೆವು, ಕಂಕನೆಂಬ ಹೆಸರು ನಮಗೆ ಎಂದ ಧರ್ಮಜ.
ಅರ್ಥ: ಅಣ್ನದೇವ ನಿಮ್ಮ ಅಭಿಪ್ರಾಯವೇ ನಮಗೆ ಒಪ್ಪಿತ ಅಭಿಪ್ರಾಯವು. ನಮಗೆ ಯಾವ ವೇಷ ಹಾಕಬೇಕು ಅದರ ವಿವರ ಹೇಳಿ. ನಿಮಗೆ ಯಾದ ವೇಷ ಅದನ್ನು ನೀವು ಹೇಳುವುದೆಂದು ಭೀಮಾರ್ಜುನರು ಕೇಳಿಕೊಂಡರು. ನಾವು(ನಾನು) ಬ್ರಾಹ್ಮಣ ವೇಷದಲ್ಲಿ ನಿಪುಣರು; ಮತ್ತೆ ಅಲ್ಲಿ ವಿರಾಟನ ಬಳಿ ಸಂನ್ಯಾಸಿಯ ವೇಷವನ್ನು ಅವಲಂಬಿಸುವೆವು, ಕಂಕನೆಂಬ ಹೆಸರು ನಮಗೆ ಎಂದ ಧರ್ಮಜ.
ವಲಲನೆಂಬಭಿಧಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರ ನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ||7||
ಪದವಿಭಾಗ-ಅರ್ಥ: ವಲಲನೆಂಬ+ ಅಭಿಧಾನದಲಿ= ಹೆಸರಿನಲ್ಲಿ, ನೃಪನಿಳಯವನು= ರಾಜನ ಅರಮನೆಯನ್ನು ಸಾರುವೆನು=ಹೋಗುವೆನು, ತಾನು+ ಎಂದು+ ಉಲಿಯೆ= ಹೇಳಲು, ಮಾರುತಿ=ಭೀಮನು; ನುಡಿದ ವರ ನಾಟ್ಯವಿದ= ಶ್ರೇಷ್ಠ ನಾಟ್ಯಪಂಡಿತ ವೇಷವನು ಫಲುಗುಣನು; ಹಯ= ಕುದುರೆ, ಮತ್ತು ಗೋ= ಗೋವುಗಳ ನಿವಾಸಸ್ಥಳ (ಗೋಶಾಲೆಯ ಮೇಲ್ವಿಚಾರಣೆಯಲ್ಲಿ) ವಿಳಾಸಿತರು (ತಮಗೆ ಸಂತೋಷ)+ ಎನಲು ಯಮಳರು= ಅವಳಿ ಸೋದರರು, ಲಲನೆ ಬಿನ್ನಹ ಮಾಡಿದಳು= ದ್ರೌಪದಿ ಅರಿಕೆ ಮಾಡಿಕೊಂಡಳು, ಸೈರಂಧ್ರಿ= ರಾಣಿಗೆ ಅಲಂಕಾರ ಮಾಡುವವಳು ವೇಷವನು= ತಾನು ಸೈರಂಧ್ರಿ ವೇಷವನ್ನು ತೊಡುವುದಾಗಿ.
ಅರ್ಥ:ಭೀಮನು ತಾನು ವಲಲನೆಂಬ ಹೆಸರಿನಲ್ಲಿ ರಾಜನ ಅರಮನೆಗೆ ಹೋಗುವೆನು, ಎಂದು ಹೇಳಲು, ಫಲ್ಗುಣನು ಶ್ರೇಷ್ಠ ನಾಟ್ಯಪಂಡಿತ ವೇಷವನು ಧರಿಸುವೆನು ಎಂದನು. ಕುದುರೆ, ಮತ್ತು ಗೋವುಗಳ ಗೋಶಾಲೆಯ ಮೇಲ್ವಿಚಾರಣೆಯಲ್ಲಿ ತಮಗೆ ಸಂತೋಷ ಎಂದು ಅವಳಿ ಸೋದರರಾದ ನಕುಲ ಸಹದೇವರು ಹೇಳಿದರು. ದ್ರೌಪದಿಯು ತಾನು ಸೈರಂಧ್ರಿ ವೇಷವನ್ನು ತೊಡುವುದಾಗಿ ಅರಿಕೆ ಮಾಡಿಕೊಂಡಳು.
ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ||8||
ಪದವಿಭಾಗ-ಅರ್ಥ: ತೊಳಲಿದಿರಿ ಹನ್ನೆರಡು ವರುಷವು ಹಳುವದಲಿ= ಹನ್ನೆರಡು ವರ್ಷ ಕಾಡಿನಲ್ಲಿ ಅಲೆದಿರಿ; ಸೊಂಪಡಗಿ ಪರರೊಡನೆ+ ಉಳಿಗೆಲಸದ+ ಓಲಗವಿದು+ ಎಂತೈ ಸಾರ್ವಭೌಮರಿಗೆ= ಸಾರ್ವಭೌಮರಿಗೆ- ರಾಜರಿಗೆ ಸೊಂಪಡಗಿ- ಆನಂದವೆಲ್ಲಾ ಅಡಗಿಹೋಗಿ ಪರರಾಜರಲ್ಲಿ ಊಳಿಗ (ಬಿಟ್ಟಿಕೆಲಸ) ಮಾಡುವ ಸಂಭ್ರಮವು ಹೇಗಿದೆಯಪ್ಪಾ! ಬಳಲಿದಿರಿ ಹಿರಿದಾಗಿ ನಿಮ್ಮುವನ (ನಿಮ್ಮನ್ನು)+ ಅಳಲಿಸಿದೆನು+= ನೀವೆಲ್ಲಾ ಬಹಳವಾಗಿ ಕಾಡಿನಲ್ಲಿ ಬಳಲಿದಿರಿ, ನಿಮ್ಮನ್ನು ದುಃಖಕ್ಕೆ ಈಡುಮಾಡಿದೆನು. ಎನ್ನಿಂದ ಪಾಪಿಗಳೊಳು+ ಉರೆ= ಹೆಚ್ಚಿನವರು ಭುವನದೊಳು(ಭೂಮಿಯಲ್ಲಿ)+ ಎಂದು ಕುಂತೀಸೂನು ಬಿಸುಸುಯ್ದ= ನನಗಿಂತ ಪಾಪಿಗಳಲ್ಲಿ ಹೆಚ್ಚಿನವರು ಈ ಭೂಮಿಯಲ್ಲಿ ಯಾರಿದ್ದಾರೆ! ಯಾರೂ ಇಲ್ಲ! ಎಂದು ಧರ್ಮರಾಯನು ನಿಟ್ಟುಸಿರುಬಿಟ್ಟನು.
ಅರ್ಥ: ಹನ್ನೆರಡು ವರ್ಷ ಕಾಡಿನಲ್ಲಿ ಅಲೆದಿರಿ; ರಾಜರಿಗೆ ಆನಂದವೆಲ್ಲಾ ಅಡಗಿಹೋಗಿ ಪರರಾಜರಲ್ಲಿ ಊಳಿಗ (ಬಿಟ್ಟಿಕೆಲಸ) ಮಾಡುವ ಸಂಭ್ರಮವು ಹೇಗಿದೆಯಪ್ಪಾ! ನೀವೆಲ್ಲಾ ಬಹಳವಾಗಿ ಕಾಡಿನಲ್ಲಿ ಬಳಲಿದಿರಿ, ನಿಮ್ಮನ್ನು ದುಃಖಕ್ಕೆ ಈಡುಮಾಡಿದೆನು. ನನಗಿಂತ ಹೆಚ್ಚಿನ ಪಾಪಿಗಳು ಈ ಭೂಮಿಯಲ್ಲಿ ಯಾರಿದ್ದಾರೆ! ಯಾರೂ ಇಲ್ಲ! ಎಂದು ಧರ್ಮರಾಯನು ನಿಟ್ಟುಸಿರುಬಿಟ್ಟನು.
ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ||9||
ಪದವಿಭಾಗ-ಅರ್ಥ: ಒಡಲ= ದೇಹದ, ಬಳಿ ನೆಳಲಿಂಗೆ= ಅದರ ನೆರಳು ಇರುವುದು ಗತಿ ಬೇರ್ಪಡಿಸಿಹುದೆ= ಅದಕ್ಕೆ ಬೇರೆಕಡೆ ಹೋಗುವುದು ಸಾಧ್ಯವೇ? ಸುಖದುಃಖವಿವು ನಿಮ್ಮಡಿಗಳಲಿ= ಸುಖದುಃಖಗಳು ನಮಗೆ ನಿಮ್ಮ ಪಾದದೊಡನೆ ಇರುವುದು; ತನು=ದೇಹ ನಾಲ್ಕರಲಿ ಜೀವಾತ್ಮ ನೀವು+ ಎಮಗೆ= ನಮ್ಮ ನಾಲ್ಕು ದೇಹಗಳಲ್ಲಿ ನೀವೇ ಜೀವಾತ್ಮ; ಅಡವಿಯೇ ಸಾಮ್ರಾಜ್ಯ ನಿಮ್ಮ+ ಅಡಿಯೊಡನೆ(ಅಡಿ= ಪಾದ)+ ಇರಲು, ನೀವು+ ಇಲ್ಲದ+ ಆ ಪುರವು+ ಅಡವಿ ನಮಗೆ+ ಅಹುದೆಂದು= ಆಗಿರುವುದು ಎಂದು ಬಿನ್ನವಿಸಿದರು= ಅರಿಕೆಮಾಡಿದರು, ಭೂಪತಿಗೆ= ನಿಮ್ಮ ಪಾದದ ಹತ್ತಿರವಿದ್ದರೆ ನಮಗೆ ಅಡವಿಯೇ ಸಾಮ್ರಾಜ್ಯ; ನೀವು ಇಲ್ಲದೆ ಇರುವ ಆ ನಗರವು ನಮಗೆ ಅಡವಿಯೇ ಆಗಿರುವುದು, ಎಂದು ಧರ್ಮರಾಯನಿಗೆ ಅರಿಕೆಮಾಡಿ ಸಂತೈಸಿದರು.
ಅರ್ಥ:ದೇಹದ ಬಳಿ ಅದರ ನೆರಳು ಇರುವುದು, ಅದಕ್ಕೆ ಬೇರೆಕಡೆ ಹೋಗುವುದು ಸಾಧ್ಯವೇ? ಸುಖದುಃಖಗಳು ನಮಗೆ ನಿಮ್ಮ ಪಾದದೊಡನೆ (ನಿಮ್ಮೊಡನೆಯೇ) ಇರುವುದು; ನಮ್ಮ ನಾಲ್ಕು ದೇಹಗಳಲ್ಲಿ ನೀವೇ ಜೀವಾತ್ಮ; ನಿಮ್ಮ ಪಾದದ ಹತ್ತಿರವಿದ್ದರೆ ನಮಗೆ ಅಡವಿಯೇ ಸಾಮ್ರಾಜ್ಯ; ನೀವು ಇಲ್ಲದೆ ಇರುವ ಆ ನಗರವು ನಮಗೆ ಅಡವಿಯೇ ಆಗಿರುವುದು, ಎಂದು ಧರ್ಮರಾಯನಿಗೆ ಅರಿಕೆಮಾಡಿ ಅವನ ತಮ್ಮಂದಿರು ಸಂತೈಸಿದರು.
ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕ ದೆಸೆಗೆ ಸಹೋದರರು ಸಹಿತ
ದುಷ್ಟ ಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ||೧೧||
ಪದವಿಭಾಗ-ಅರ್ಥ: ತುಷ್ಟನಾದನು ನೃಪತಿ= ತಮ್ಮಂದಿರ ಮಾತಿನಿಂದ ಧರ್ಮರಾಯನಿಗೆ ತೃಪ್ತಿಯಾಯಿತು; ಕೃತ ಪರಿಶಿಷ್ಟಪಾಲನು= ಹೇಳಿದ ಮಾತನ್ನು ಪಾಲಿಸುವವನು; ಜಗದೊಳು+ ಉತ್ಯುತ್ಕೃಷ್ಟ ಚರಿತನು= ಜಗತ್ತಿನಲ್ಲಿ ಅತ್ಯುತ್ತಮವಾದ ವೆಡತೆಯುಳ್ಳವನು; ತೆಂಕ ದೆಸೆಗೆ ಸಹೋದರರು ಸಹಿತ ದುಷ್ಟ ಮೃಗಗಳ ಬೇಂಟೆಯಾಡಿ ವಸಿಷ್ಠ ಮುನಿಯಾಶ್ರಮದ ಸುಜನರ+ ಅರಿಷ್ಟವನು ಪರಿಹರಿಸುತ+ ಐತಂದನು(ಬಂದನು) ಸರಾಗದಲಿ= ದಕ್ಷಿಣ ದಿಕ್ಕಿಗೆಗೆ ಸಹೋದರರ ಸಹಿತ ದುಷ್ಟ ಮೃಗಗಳನ್ನು ಬೇಟೆಯಾಡಿ ವಸಿಷ್ಠ ಮುನಿಯ ಆಶ್ರಮದ ಸಜ್ಜನರನ್ನು ಕಾಡುವ ತೊಂದರೆಗಳನ್ನು ಪರಿಹರಿಸುತ್ತಾ ಸರಾಗವಾಗಿ ವಿರಾಟನಗರದ ಹೊರವಲಕ್ಕೆ ಧರ್ಮರಾಯನು ತಮ್ಮಂದಿರು ಮತ್ತು ದ್ರೌಪದಿ ಸಹಿತ ಬಂದನು.
ಅರ್ಥ:ತಮ್ಮಂದಿರ ಮಾತಿನಿಂದ ಧರ್ಮರಾಯನಿಗೆ ತೃಪ್ತಿಯಾಯಿತು; ಹೇಳಿದ ಮಾತನ್ನು ಪಾಲಿಸುವವನು; ಜಗತ್ತಿನಲ್ಲಿ ಅತ್ಯುತ್ತಮವಾದ ವೆಡತೆಯುಳ್ಳವನು; ದಕ್ಷಿಣ ದಿಕ್ಕಿಗೆಗೆ ಸಹೋದರರ ಸಹಿತ ದುಷ್ಟ ಮೃಗಗಳನ್ನು ಬೇಟೆಯಾಡಿ ವಸಿಷ್ಠ ಮುನಿಯ ಆಶ್ರಮದ ಸಜ್ಜನರನ್ನು ಕಾಡುವ ತೊಂದರೆಗಳನ್ನು ಪರಿಹರಿಸುತ್ತಾ ಸರಾಗವಾಗಿ ವಿರಾಟನಗರದ ಹೊರವಲಕ್ಕೆ ಧರ್ಮರಾಯನು ತಮ್ಮಂದಿರು ಮತ್ತು ದ್ರೌಪದಿ ಸಹಿತ ಬಂದನು.
ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣಿ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ||11||
ಪದವಿಭಾಗ-ಅರ್ಥ: ಕಾಳಿ, ಪರಮ ಕರಾಳಿ, ಸುರಮುನಿ+ ಮೌಳಿ+ ಮಂಡಿತ ಚರಣಿ=ದೇವತೆಗಳೂ ಮುನಿಗಳೂ ತಲೆಇಟ್ಟ ಪಾದ ಉಳ್ಳವಳೇ, ಖಳ ದನುಜ+ ಆಳಿ ಮರ್ದಿನಿ= ಕ್ರೂರ ರಾಕ್ಷಸರ ಸಮೂಹವನ್ನು ನಾಶಮಾಡಿದವಳೇ, ಘನ= ಶ್ರೇಷ್ಠ ಕಪರ್ದಿ= ಶಿವ ವರ+ ಅರ್ಧ ತನುಯುತಳೆ= ಶ್ರೇಷ್ಠನಾಸ ಶಿವನ ವರದ ಅರ್ಧ ತನು/ ಶರೀರಯುತಳೇ, ಶೂಲ ಪರಶು ಪರಶು+ ವಧಾದಿಗಳ (ಆಯಧಗಳ)+ ಆಳುತ+ ಒಪ್ಪುವ= ಧರಿಸಿದ, ಹೊಂದಿದ ಕರಚತುಷ್ಟಯೆ=ನಾಲ್ಕು ಕೈಯವಳೆ ಪಾಲಿಸೆಮ್ಮನು ಎನುತ್ತ ದುರ್ಗೆಯನು+ ಅಂದು ನುತಿಸಿದರು.
ಅರ್ಥ: ಕಾಳಿ, ಪರಮ ಕರಾಳಿ, ದೇವತೆಗಳೂ ಮುನಿಗಳೂ ತಲೆಇಟ್ಟ ಪಾದ ಉಳ್ಳವಳೇ, ಕ್ರೂರ ರಾಕ್ಷಸರ ಸಮೂಹವನ್ನು ನಾಶಮಾಡಿದವಳೇ, ಶ್ರೇಷ್ಠನಾಸ ಶಿವನ ವರದ ಅರ್ಧ ಶರೀರಯುತಳೇ, ಶೂಲ, ಪರಶು, ಮೊದಲಾದ ವಧೆಯ ಆಯಧಗಳ ಆಳುತ/ ಒಡತಿಯಾಗಿ ಧರಿಸಿದ ನಾಲ್ಕು ಕೈಯವಳೆ ಪಾಲಿಸೆಮ್ಮನು ಎನ್ನುತ್ತಾ ದುರ್ಗೆಯನ್ನು ಅಂದು ಸ್ತುತಿಸಿದರು.
ಬಂದು ಮತ್ಸ್ಯ ಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ||
ತಂದು ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು ||12||
ಪದವಿಭಾಗ-ಅರ್ಥ: ಬಂದು ಮತ್ಸ್ಯ ಪುರೋಪಕಂಠದ ನಂದನದ ಕೆಲ= ಬದಿಯ ಕಡೆಯಲಿ+ ಅನಿಬರು ನಿಂದು= ಮತ್ಸ್ಯ ಪುರವೆಂಬ ವಿರಾಟನಗರದ ಉಪನಂದನ ವನದದ ಬದಿಯ ಮೂಲೆಯಲ್ಲಿ ಅವರು ನಿಂತುಕೊಂಡು, ನಾಲಕು= ನಾಲ್ಕು ದಸೆಯನು(ದಿಕ್ಕನ್ನು)+ ಈಕ್ಷಿಸಿ(ನೋಡಿ, ಯಾರೂ ಇಲ್ಲದ್ದನ್ನು ನೋಡಿಕೊಂಡು,) ನಿಜ= ತಮ್ಮ ನಿವಾಸದಲಿ(ಹಿಂದಿನ ನಿವಾಸದಿಂದಲೇ ತಂದ/ ತಂದು= ಅದನ್ನು ತೆಗೆದು)= ತಂದು ಚರ್ಮದಲಿ+ ಅಖಿಳ= ಎಲ್ಲಾ, ಕೈದುವನು(ಆಯುಧಗಳನ್ನು)+ ಒಂದು ಹೆಣನ+ ಆಕಾರದಲಿ ಬಿಗಿದು+ ಒಂದು ಬನ್ನಿಯ ಮರನ ತುದಿಯಲಿ ಕಟ್ಟಲು+ ಏರಿದರು.
ಅರ್ಥ: ನಂತರ, ಮತ್ಸ್ಯ ಪುರವೆಂಬ ವಿರಾಟನಗರದ ಉಪನಂದನ ವನದ ಬದಿಯ ಮೂಲೆಯಲ್ಲಿ ಅವರು ನಿಂತುಕೊಂಡು, ನಾಲ್ಕು ದಿಕ್ಕನ್ನೂ ನೋಡಿ, ಯಾರೂ ಇಲ್ಲದ್ದನ್ನು ನೋಡಿಕೊಂಡು, ತಮ್ಮ ಹಿಂದಿನ ನಿವಾಸದಿಂದಲೇ ತಂದ ಚರ್ಮವನ್ನು ತೆಗೆದು, ಆ ಚರ್ಮದಲ್ಲಿ ಅವರ ಎಲ್ಲಾ ಆಯುಧಗಳನ್ನು ಒಂದು ಹೆಣದ ಆಕಾರದಲಿ ಬಿಗಿದು ಕಟ್ಟಿ, ಒಂದು ಬನ್ನಿಯ ಮರದ ತುದಿಯಲ್ಲಿ ಕಟ್ಟಲು ಮರವನ್ನು ಏರಿದರು.
ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ||
ವಿಗಡನೀ ಕಲಿಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ ||13||
ಪದವಿಭಾಗ-ಅರ್ಥ: ತೆಗೆಯದಿರಿ ನೀವು+ ಎಂದು ತುರುಗಾಹಿಗಳನು (ದನಕಾಯುವವರನ್ನು)+ ಅಂಜಿಸಿ= ದನಕಾಯುವವರನ್ನು, ನೀವು/ ಅವರು ಇದನ್ನು ತೆಗೆಯಬಾರದೆಂದು ಅಂಜುವಂತೆ ಮಾಡಿ, ಧರ್ಮಸುತ ದೃಗುಯುಗವ (ಯುಗ= ಎರಡು) ಮುಚ್ಚಿ= ಧರ್ಮಜನು ಎರಡೂ ಕಣ್ಣಗಳನ್ನು ಮುಚ್ಚಿ; ಸುರೇಂದ್ರ, ಯಮ, ವರುಣಾದಿಗಳಿಗೆ+ ಎರಗಿ= ಸುರೇಂದ್ರ, ಯಮ, ವರುಣಾದಿಗಳಿಗೆ ನಮಸ್ಕರಿಸಿ; ವಿಗಡನು+ ಈ ಕಲಿಭೀಮನು+ ಈ ಕೈ ದುಗಳನು+ ಈತಂಗೆ+ ಈಯದಿರಿ ಕೈಮುಗಿದು ಬೇಡಿದೆನು+ ಎಂದು ಸುರರಿಗೆ ನುಡಿದನು+ ಅವನೀಶ= 'ಈ ಕಲಿಭೀಮನು ಮಹಾ ಪ್ರತಾಪಿ ಕೋಪಿಷ್ಠನು ಈ ಆಯುಧಗಳನ್ನು ಈತನಿಗೆ ಕೊಡಬೇಡಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ,' ಎಂದು ದೇವತೆಗಳಿಗೆ ರಾಜ ಧರ್ಮಜನು ಹೇಳಿದನು.
ಅರ್ಥ: ದನಕಾಯುವವರನ್ನು ಗಮನದಲ್ಲಿ ಇರಿಸಿಕೊಂಡು, (ಅವರು ಇದನ್ನು ತೆಗೆಯಬಾರದೆಂದು ಆಯುಧಗಳನ್ನು ಹೆಣದ ಆಕಾರದಲ್ಲಿ ಚರ್ಮದ ಚೀಲದಲ್ಲಿ ಕಟ್ಟಿ) ಅಂಜುವಂತೆ ಮಾಡಿ, ಧರ್ಮಜನು ಎರಡೂ ಕಣ್ಣಗಳನ್ನು ಮುಚ್ಚಿ; ಸುರೇಂದ್ರ (ಇಂದ್ರ), ಯಮ, ವರುಣಾದಿಗಳಿಗೆ ನಮಸ್ಕರಿಸಿ, 'ಈ ಕಲಿಭೀಮನು ಮಹಾ ಪ್ರತಾಪಿ ಕೋಪಿಷ್ಠನು ಈ ಆಯುಧಗಳನ್ನು ಈತನಿಗೆ ಕೊಡಬೇಡಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ,' ಎಂದು ದೇವತೆಗಳಿಗೆ ರಾಜ ಧರ್ಮಜನು ಹೇಳಿದನು.
ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ||
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ ||14||
ಪದವಿಭಾಗ-ಅರ್ಥ: ಈವುದು+ ಆ(ಆಂ= ನಾನು) ಬೇಡಿದರೆ= 'ನಾನು ಕೇಳಿದರೆ ಕೊಡುವುದು, ಕೊಡಬೇಕು; ಪಾರ್ಥಂಗೆ+ ಈವುದು+ ಈ ಯ(ಅ)ಜ್ಞಾತ ವಾಸದೊಳು+ ಈ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ (ಸಿಟ್ಟಾದನು)= ಪಾರ್ಥನಿಗೆ ಕೊಡುವುದು- ಈ ಅಜ್ಞಾತ ವಾಸದ ಸಮಯದಲ್ಲಿ; ಈ ಪ್ರತಾಪಿಯಾದ ಭೀಮನಿಗೆ ಕೊಡಬೇಡಿ,' ಎನ್ನಲು ಭೀಮನು ಸಿಟ್ಟಾದನು. ನೀವು ಕುಂತಿಯ ಮಕ್ಕಳಾದಿರಿ ನಾವು ದುರ್ಯೋಧನನವರು ತಪ್ಪಾವುದು+ ಇದಕೆಂದು+ ಅನಿಲಸುತನು+ ಔಡೊತ್ತಿ ಗರ್ಜಿಸಿದ= ನೀವು ಮಾತ್ರಾ ಕುಂತಿಯ ಮಕ್ಕಳೋ, ನಾವು ದುರ್ಯೋಧನನ ಕಡೆಯವರೋ, ತಪ್ಪೇನು ಇದರಲ್ಲಿ! ಎಂದು ವ್ಯಂಗ್ಯವಾಗಿ ಹೇಳಿ ಭೀಮನು ಔಡೊತ್ತಿ - ಕೆಳದವಡೆಯನ್ನು ಸಿಟ್ಟಿನಿಂದ ಕಚ್ಚಿಹಿಡಿದು ಗರ್ಜಿಸಿದನು.
ಅರ್ಥ: ದರ್ಮಜನು ದೇವತೆಗಳಿಗೆ, 'ಈ ಅಜ್ಞಾತ ವಾಸದ ಸಮಯದಲ್ಲಿ ಆಯುಧಗಳನ್ನು, ನಾನು ಕೇಳಿದರೆ ಕೊಡುವುದು, ಕೊಡಬೇಕು; ಪಾರ್ಥನಿಗೆ ಕೇಳಿದರೆ ಕೊಡುವುದು. ಈ ಪ್ರತಾಪಿಯಾದ ಭೀಮನಿಗೆ ಕೊಡಬೇಡಿ,' ಎನ್ನಲು ಭೀಮನು ಸಿಟ್ಟಾದನು. ನೀವು ಮಾತ್ರಾ ಕುಂತಿಯ ಮಕ್ಕಳೋ, ನಾವು ದುರ್ಯೋಧನನ ಕಡೆಯವರೋ, ತಪ್ಪೇನು ಇದರಲ್ಲಿ! ಎಂದು ವ್ಯಂಗ್ಯವಾಗಿ ಹೇಳಿ ಭೀಮನು ಔಡೊತ್ತಿ - ಕೆಳದವಡೆಯನ್ನು ಸಿಟ್ಟಿನಿಂದ ಕಚ್ಚಿಹಿಡಿದು ಗರ್ಜಿಸಿದನು.
ಸುರನಿಕರ ಕಾದಿರಲಿ ಮೇಣೀ
ಧರಣಿ ಕೊಡೆನೆಂದಿರಲಿ ಹಸ್ತಿನ
ಪುರಿಗೆ ಧಾಳಿಯನಿಡುವೆನಮರರ ಮೋರೆಗಳ ತಿವಿದು||
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿದಪ್ಪಿ ಮೈದಡವಿದನು ಭೂಪಾಲ ||15||
ಪದವಿಭಾಗ-ಅರ್ಥ: ಸುರನಿಕರ ಕಾದಿರಲಿ= ದೇವತೆಗಳ ಸಮೂಹವೇ ಈ ಆಯುಧಗಳನ್ನು ಕಾದುಕೊಂದಡಿರಲಿ; ಮೇಣ್+ ಈ+ ಧರಣಿ ಕೊಡೆನೆಂದಿರಲಿ= ಈ ಭೂಮಿ ಕೊಡುವುದಿಲ್ಲ ಎಂದು ಹೇಳಿದರೂ; ಹಸ್ತಿನಪುರಿಗೆ ಧಾಳಿಯನಿಡುವೆನು+ ಅಮರರ ಮೋರೆಗಳ ತಿವಿದು ಉರುತರ(ಶ್ರೇಷ್ಠವಾದ)+ ಅಸ್ತ್ರವನು+ ಒಯ್ವೆನೆಂದು+ ಅಬ್ಬರಿಸಿ ಮಾರುತಿ ನುಡಿಯೆ= ಹಸ್ತಿನಾಪುರಕ್ಕೆ ಧಾಳಿಯನ್ನುಮಾಡುವೆನು, ದೇವತೆಗಳ ಮೋರೆಗಳ- ಮುಖಗಳನ್ನು ತಿವಿದು ಶ್ರೇಷ್ಠವಾದ ಅಸ್ತ್ರಗಳನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಅಬ್ಬರಿಸಿ ಭೀಮನು ಸಿಟ್ಟಿನಿಂದ ಆರ್ಭಟಿಸಲು ತಮ್ಮನನ್ನು ರಾಜ ಧರ್ಮಜನು ಪ್ರೀತಿಯಿಂದ ಬರಸೆಳೆದುಕೊಂಡು ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮೈದಡವಿ ಸಮಾಧಾನ ಮಾಡಿದನು.
ಅರ್ಥ: ದೇವತೆಗಳ ಸಮೂಹವೇ ಈ ಆಯುಧಗಳನ್ನು ಕಾದುಕೊಂದಡಿರಲಿ, ಈ ಭೂಮಿ ಕೊಡುವುದಿಲ್ಲ ಎಂದು ಹೇಳಿದರೂ, ಹಸ್ತಿನಾಪುರಕ್ಕೆ ಧಾಳಿಯನ್ನುಮಾಡುವೆನು, ದೇವತೆಗಳ ಮುಖಗಳನ್ನು ತಿವಿದು ಶ್ರೇಷ್ಠವಾದ ಅಸ್ತ್ರಗಳನ್ನು ತೆಗೆದುಕೊಂಡು ಹೋಗುತ್ತೇನೆ, ಎಂದು ಅಬ್ಬರಿಸಿ ಭೀಮನು ಸಿಟ್ಟಿನಿಂದ ಆರ್ಭಟಿಸಲು ತಮ್ಮನನ್ನು ರಾಜ ಧರ್ಮಜನು ಪ್ರೀತಿಯಿಂದ ಬರಸೆಳೆದುಕೊಂಡು ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮೈದಡವಿ ಸಮಾಧಾನ ಮಾಡಿದನು.
ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು||
ಅವನಿಯಲಿ ಹನ್ನೆರಡು ವರುಷವು
ನವೆದುದುದು ನಿಷ್ಫಲವಲಾ ಕೌ
ರವರಿಗತಿ ಲಾಗಹುದು ನೀನೇ ಬಲ್ಲೆ ಹೋಗೆಂದ ||16||
ಪದವಿಭಾಗ-ಅರ್ಥ: ಅವಧಿಯು+ ಒಂದೇ ವರುಷವು+ ಇದರೊಳಗೆ+ ಎವಗೆ ಸೈರಣೆಯುಂಟು,= ಅಜ್ಞಾತ ವಾಸದ ಅವಧಿಯು ಒಂದೇ ವರುಷವು. ಇದರ ಅವದಿ ಕಳೆಯಲು ನಮಗೆ (ನಾಲ್ವರಿಗೆ) ಸಹನೆ ಇದೆ.; ನೀ ಮುನಿದು+ ಅವಗಡಿಸಿದೊಡೆ ಬಳಿಕ ಸೈರಿಸಲು+ ಅರಿಯೆ(ಅರಿಯೆನು) ಮನ ಮುಳಿದು( ಸಿಟ್ಟುಮಾಡಿ)= ನೀನು ಮನಸ್ಸುತಡೆಯದೆ ಸಿಟ್ಟುಮಾಡಿ ನಿಯಮವನ್ನು ಕಡೆಗಣಿಸಿದರೆ, ಬಳಿಕ ಸಹಿಸಲು ಅಸಾಧ್ಯವಾಗುವುದು. ಮತ್ತೆ ಹನ್ನೆರಡುವರ್ಷ ವನವಾಸಕ್ಕೆ ಹೋಗಬೇಕಾಗುವುದು. ಅವನಿಯಲಿ ಹನ್ನೆರಡು ವರುಷವು ನವೆದುದುದು ನಿಷ್ಫಲವಲಾ= ಈ ಭೂಮಿಯಮೇಲೆ ಕಾಡಿನಲ್ಲಿ ಹನ್ನೆರಡು ವರುಷ ನವೆದುದುದು- ಕಷ್ಟಪಟ್ಟಿದ್ದು ನಿಷ್ಫಲವಾಗುವುದಲ್ಲಾ! ಕೌರವರಿಗೆ+ ಅತಿ ಲಾಗಹುದು ನೀನೇ ಬಲ್ಲೆ ಹೋಗೆಂದ= ಅದರಿಂದ ಕೌರವರಿಗೇ ಅತಿ ಅನುಕೂಲವಾಗುವುದು; ಇದನ್ನು ನೀನೇ ಬಲ್ಲೆ. ಸುಮ್ಮನೆ ಹೋಗಪ್ಪಾ ಎಂದ ಧರ್ಮಜ.
ಅರ್ಥ: ಅಜ್ಞಾತ ವಾಸದ ಅವಧಿಯು ಒಂದೇ ವರುಷವು. ಇದರ ಅವದಿ ಕಳೆಯಲು ನಮಗೆ (ನಾಲ್ವರಿಗೆ) ಸಹನೆ ಇದೆ.; ನೀನು ಮನಸ್ಸುತಡೆಯದೆ ಸಿಟ್ಟುಮಾಡಿ ನಿಯಮವನ್ನು ಕಡೆಗಣಿಸಿದರೆ, ಬಳಿಕ ಸಹಿಸಲು ಅಸಾಧ್ಯವಾಗುವುದು. ಮತ್ತೆ ಹನ್ನೆರಡುವರ್ಷ ವನವಾಸಕ್ಕೆ ಹೋಗಬೇಕಾಗುವುದು. ಈ ಭೂಮಿಯಮೇಲೆ ಇದುವರೆಗೆ ಕಾಡಿನಲ್ಲಿ ಹನ್ನೆರಡು ವರುಷ ನವೆದುದುದು- ಕಷ್ಟಪಟ್ಟಿದ್ದು ನಿಷ್ಫಲವಾಗುವುದಲ್ಲಾ! ಅದರಿಂದ ಕೌರವರಿಗೇ ಅತಿ ಅನುಕೂಲವಾಗುವುದು; ಇದನ್ನು ನೀನೇ ಬಲ್ಲೆ. ಸುಮ್ಮನೆ ಹೋಗಪ್ಪಾ ಎಂದ ಧರ್ಮಜ.
ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನ ಪುರಿಗೆ ಯತಿ ವೇ
ಷದಲಿ ಬಂದನು ಹೊನ್ನ ಸಾರಿಯ ಚೀಲ ಕಕ್ಷದಲಿ||
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ||17||
ಪದವಿಭಾಗ-ಅರ್ಥ: ಹದುಳವಿಟ್ಟನು= ಸಮಾಧಾನ ಪಡಿಸಿದನು, ಭೀಮನನು ನಿರ್ಮದನು= ಅಹಂಕಾರವಿಲ್ಲದವನು - ಧರ್ಮಜ, ಮತ್ಸ್ಯನ ಪುರಿಗೆ ಯತಿ ವೇಷದಲಿ ಬಂದನು= ಅಹಂಕಾರವಿಲ್ಲದವನು - ಧರ್ಮಜನು ಭೀಮನನನ್ನು ಸಮಾಧಾನ ಪಡಿಸಿದನು; ಅವನು ಮತ್ಸ್ಯನಗರಕ್ಕೆ ಯತಿಯ ವೇಷದಲ್ಲಿ ಬಂದನು; ಹೊನ್ನ ಸಾರಿಯ ಬಣ್ಣದ ಕಕ್ಷದಲಿ =ಅವನು ಚಿನ್ನದ (ಪಗಡೆಯುಳ್ಳ) ಕೆಂಪು ಬಣ್ಣದ ಚೀಲವನ್ನು ಕಂಕುಳಲ್ಲಿ ಇಟ್ಟುಕೊಂಡಿದ್ದನು. ಇದಿರೊಳ ಆನತರಾಯ್ತು= ನಮಿಸಿದರು, ಕಂಡವರು+ ಉದಿತ ತೇಜಃಪುಂಜದಲಿ= ಹೊಮ್ಮುತ್ತಿರುವ ಅವನ ತೇಜಸ್ಸನ್ನು ನೋಡಿ ಎದಿರಿನಲ್ಲಿ ಬಂದವರು ತಲೆ ಬಗ್ಗಿಸಿ ನಮಿಸಿದರು. ಸೊಂಪೊದವಿ= ತೇಜಸ್ಸು ತುಂಬಿ, ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ(ಕೇಳು)= ಹೀಗೆ ಮುಖದಲ್ಲಿ ತೇಜಸ್ಸು ತುಂಬಿಕೊಂಡು ಅರಮನೆಯ ಕಡೆಗೆ ಬಂದ ಅವನನ್ನು ವಿರಾಟನು ಎದುರುಗೊಂಡು ಅವನನ್ನು ವಿಚಾರಿಸಿದ.
ಅರ್ಥ: ಅಹಂಕಾರವಿಲ್ಲದ ಧರ್ಮಜನು ಭೀಮನನನ್ನು ಸಮಾಧಾನ ಪಡಿಸಿದನು; ಅವನು ಮತ್ಸ್ಯನಗರಕ್ಕೆ ಯತಿಯ ವೇಷದಲ್ಲಿ ಬಂದನು; ಅವನು ಚಿನ್ನದ (ಪಗಡೆಯುಳ್ಳ) ಕೆಂಪು ಬಣ್ಣದ ಚೀಲವನ್ನು ಕಂಕುಳಲ್ಲಿ ಇಟ್ಟುಕೊಂಡಿದ್ದನು. ಹೊಮ್ಮುತ್ತಿರುವ ಅವನ ತೇಜಸ್ಸನ್ನು ನೋಡಿ ಎದಿರಿನಲ್ಲಿ ಬಂದವರು ತಲೆ ಬಗ್ಗಿಸಿ ನಮಿಸಿದರು. ಹೀಗೆ ಮುಖದಲ್ಲಿ ತೇಜಸ್ಸು ತುಂಬಿಕೊಂಡು ಅರಮನೆಯ ಕಡೆಗೆ ಬಂದ ಅವನನ್ನು ವಿರಾಟನು ಎದುರುಗೊಂಡು ಅವನನ್ನು ವಿಚಾರಿಸಿದ.

ವಿರಾಟರಾಜನ ಅರಮನೆಯಲ್ಲಿ ಪಾಂಡವರು[ಸಂಪಾದಿಸಿ]

ವಿರಾಟನ ಅರಮನೆಯಲ್ಲಿ, ಪಾಂಡವರು ತಮ್ಮ ದೇಶಭ್ರಷ್ಟ ಅಜ್ಞಾತವಾಸದ 13 ನೇ ವರ್ಷವನ್ನು ವಿರಾಟನ ಮತ್ಸ್ಯನಗರದಲ್ಲಿ ಕಳೆಯುವರು. ವಿರಾಟ ಪರ್ವದಲ್ಲಿ ಪಾಂಡವರ ಮರೆಮಾಚುವ ಉದ್ಯೋಗಗಳನ್ನು (ಮೇಲೆ ತೋರಿಸಲಾಗಿದೆ), ಧರ್ಮಜ, ಭೀಮ, ಅರ್ಜುನ, ನಕುಲ,ಸಹದೇವ, ದ್ರೌಪದಿಯರು:- ಕಂಕ- ಸಂನ್ಯಾಸಿ, ವಲಲ- ಅಡುಗೆಯವ, ಬೃಹನ್ನಳೆ - ನೃತ್ಯ ಶಿಕ್ಷಕ; ಗ್ರಂಥಿಕ- ಅಶ್ವ ರಕ್ಷಕ; ತಂತಿಪಾಲ ಗೋರಕ್ಷಕ.ದ್ರೌಪದಿ ಸೈರಂಧ್ರಿ- ರಾಣಿಗೆ ಸಿಂಗರಿಸುವವಳು
ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು||
ಇತ್ತಪೆವು ಬೇಡಿದುದ ನಾವೆನೆ
ಸುತ್ತಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ||18||
ಪದವಿಭಾಗ-ಅರ್ಥ:ವಿರಾಟರಾಜನು ಸಂನ್ಯಾಸ ವೇಶದಲ್ಲಿದ್ದ ಧರ್ಮಜನನ್ನು ನೋಡಿ, ಇತ್ತ ಬಿಜಯಂಗೈಯಿ= ಈ ಕಡೆಗೆ ಬನ್ನಿರಿ. ಹಿರಿಯರು+ ಇದು+ ಎತ್ತಣಿಂದ+ ಐತಂದಿರೈ= ಹಿರಿಯರೇ ಈಗ ತಾವು ಯಾವಕಡೆಯಿಂದ ಬಂದಿರಿ. ಅತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು (ಬದುಕಿದ್ದು ಸಾರ್ಥಕವಾಯಿತು)= ಎಲ್ಲಾ ಆಶಮದಲ್ಲಿ ಶ್ರೇಷ್ಠವಾದ ಸಂನ್ಯಾಸದ ಉಡುಪಿನ ಮಹಾತ್ಮರಾದ ತಮ್ಮನ್ನು ಕಂದು ಬದುಕು ಸಾರ್ಥಕವಾಯಿತು. ಇತ್ತಪೆವು= ಕೊಡುವೆವು, ಬೇಡಿದುದ ನಾವು+ ಎನೆ= 'ನೀವು ಕೇಳಿದುದನ್ನು ನಾವು ಕೊಡುತ್ತೇವೆ' ಎನ್ನಲು. ಸುತ್ತಬಳಸೆವು= ಸುತ್ತಿ ಬಳಸಿ ವಿವರವಾಗಿ ಹೇಳುವುದಿಲ್ಲ, ರಾಜಸೇವೆ ನಿಮಿತ್ತ ಬಂದೆವು= ರಾಜನಾದ ನಿನ್ನ ಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇವೆ, (ಕಾರಣ) ಮುನ್ನಿನ(ಹಿಂದಿನ)+ ಓಲಗವು (ರಾಜಸಬೆಯು)+ ಅಂತರಿಸಿತಾಗಿ= ಅಂತರಿಸಿದ್ದರಿಂದ, ಇಲ್ಲದಂತಾದ್ದರಿಂದ.
ಅರ್ಥ: ವಿರಾಟರಾಜನು ಸಂನ್ಯಾಸ ವೇಶದಲ್ಲಿದ್ದ ಧರ್ಮಜನನ್ನು ನೋಡಿ, ಈ ಕಡೆಗೆ ಬನ್ನಿರಿ. ಹಿರಿಯರೇ ಈಗ ತಾವು ಯಾವಕಡೆಯಿಂದ ಬಂದಿರಿ. ಎಲ್ಲಾ ಆಶಮದಲ್ಲಿ ಶ್ರೇಷ್ಠವಾದ ಸಂನ್ಯಾಸದ ಉಡುಪಿನ ಮಹಾತ್ಮರಾದ ತಮ್ಮನ್ನು ಕಂದು ಬದುಕು ಸಾರ್ಥಕವಾಯಿತು. 'ನೀವು ಕೇಳಿದುದನ್ನು ನಾವು ಕೊಡುತ್ತೇವೆ' ಎನ್ನಲು. ಸುತ್ತಿ ಬಳಸಿ ವಿವರವಾಗಿ ಹೇಳುವುದಿಲ್ಲ, ಹಿಂದಿನ ರಾಜಸಬೆಯು ಆಶ್ರಯ ಇಲ್ಲದಂತಾದ ಕಾರಣ, ರಾಜನಾದ ನಿನ್ನ ಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇವೆ, ಎಂದನು ಧರ್ಮಜ.
ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟು ಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ||
ಬಿಟ್ಟರೆಮ್ಮನು ಜಠರಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿಧಾನ ತನಗೆಂದ ||19||
ಪದವಿಭಾಗ-ಅರ್ಥ: ಧರ್ಮರಾಯನು, ಕೆಟ್ಟುದು+ ಇಂದ್ರಪ್ರಸ್ಥ ಪಾಂಡವರು+ ಉಟ್ಟು ಹೋದರು ನಾರ ಸೀರೆಯನು+ ಅಟ್ಟಡವಿ ಮನೆಯಾಯ್ತು= ಇಂದ್ರಪ್ರಸ್ಥವು ಕೆಟ್ಟುಹಾಳಾಯಿತು; ಪಾಂಡವರು ಉಟ್ಟಬಟ್ಟೆಯಲ್ಲಿ ಹೋದರು; ನಾರ ಸೀರೆಯನು+ ಅಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ = ಚಂದ್ರವಂಶದ ರಾಜಾನ್ವಯದ ರಾಜರು ನಾರುಬಟ್ಟೆಯನ್ನು ಉಟ್ಟು ದಟ್ಟ ಅಡವಿಯಲ್ಲಿ ವಾಸಮಾಡಿದರು. ಬಿಟ್ಟರು+ ಎಮ್ಮನು= ಆಶ್ರಿತರಾದ ನಮ್ಮನ್ನು ಬಿಟ್ಟರು; ಜಠರಭರಣಕೆ ನೆಟ್ಟನೆ+ ಆಶ್ರಯವು+ ಇಲ್ಲದಿರೆ ಕಂಗೆಟ್ಟು(ದಿಕ್ಕುತೋಚದೆ) ಬಂದೆವು= ಹೊಟ್ಟೆಯನ್ನು ತುಂಬಲು ಸರಿಯಾದ ಆಶ್ರಯವು ಇಲ್ಲದ್ದರಿಂದ ದಿಕ್ಕುತೋಚದೆ ಇಲ್ಲಿಗೆ ಬಂದೆವು. ಕಂಕನೆಂಬ+ ಅಭಿಧಾನ ತನಗೆ+ ಎಂದ= ಕಂಕ ಎಂಬುದು ನನಗೆ ಹೆಸರು ಎಂದ.
ಅರ್ಥ: ಧರ್ಮರಾಯನು, ಇಂದ್ರಪ್ರಸ್ಥವು ಕೆಟ್ಟುಹಾಳಾಯಿತು; ಚಂದ್ರವಂಶದ ರಾಜಾನ್ವಯದ ರಾಜರಾದ ಪಾಂಡವರು ಉಟ್ಟಬಟ್ಟೆಯಲ್ಲಿ ಹೋದರು; ನಾರುಬಟ್ಟೆಯನ್ನು ಉಟ್ಟು ದಟ್ಟ ಅಡವಿಯಲ್ಲಿ ವಾಸಮಾಡಿದರು. ಆಶ್ರಿತರಾದ ನಮ್ಮನ್ನು ಬಿಟ್ಟರು, ಹೊಟ್ಟೆಯನ್ನು ತುಂಬಲು ಸರಿಯಾದ ಆಶ್ರಯವು ಇಲ್ಲದ್ದರಿಂದ ದಿಕ್ಕುತೋಚದೆ ಇಲ್ಲಿಗೆ ಬಂದೆವು. ಕಂಕ ಎಂಬುದು ನನ್ನ ಹೆಸರು, ಎಂದ.
ಓಲಗಕೆ ಬಂದಖಿಳರಾಯರ
ಮೌಳಿಮೌಕ್ತಿಕಮಣಿಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದಪದ್ಮಯುಗ
ಕಾಲವಾವನನಾವ ಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ||20||
ಪದವಿಭಾಗ-ಅರ್ಥ: ಓಲಗಕೆ ಬಂದ+ ಅಖಿಳರಾಯರ ಮೌಳಿ+ ಮೌಕ್ತಿಕಮಣಿ+ ಮಯೂಖ (ಕಾಂತಿ) ನಿವಾಳಿಯಲಿ ನೆರೆ (ಬಹಳ) ಮೆರೆವುದು+ ಆತನ ಪಾದಪದ್ಮಯುಗ(ಯುಗ=ಎರಡು),=ಧರ್ಮರಾಯನ ಓಲಗದ ರಾಜಸಬೆಗೆ ಬಂದ ಅಖಿಲ ರಾಜರ ತಲೆಯ(ಕಿರೀಟದ) ಮುತ್ತು ರತ್ನಗಳ ಕಾಂತಿಯ ಆರತಿಯ ನಿವಾಳಿಸುವಿಕೆಯಲ್ಲಿ ವಿಶೇಷವಾಗಿ ಮೆರೆಯುತ್ತಿತ್ತು ಆತನ (ಧರ್ಮರಾಯನ) ಪದ್ಮದಂತಹ ಎರಡು ಪಾದಗಳು. ಕಾಲವು+ ಆವನನು+ ಆವ ಪರಿಯಲಿ ಕೀಳು ಮಾಡದು(ಹೀನಸ್ಥಿತಿಗೆ ತಳ್ಳದು- ತಳ್ಳುವುದಿಲ್ಲ?)= ಕಾಲಸ್ಥಿತಿಯು ಯಾವನನ್ನು ಯಾವರೀತಿ ಹೀನಸ್ಥಿತಿಗೆ ತಳ್ಳುವುದಿಲ್ಲ?- ತಳ್ಳುವುದು ನೋಡು, ಧರ್ಮಪುತ್ರನನು+ ಆಳುಗೊಂಡನು ಮತ್ಸ್ಯನ (ಮತ್ಸ್ಯನ ಆಳಾದನು)+ ಎಲೆ ಜನಮೇಜಯ ಕ್ಷಿತಿಪ= ಎಲೆ ಜನಮೇಜಯ ರಾಜನೇ, ಧರ್ಮಪುತ್ರನು ಮತ್ಸ್ಯರಾಜನ ಸೇವೆಯಲ್ಲಿ ನಿಂತನು.
ಅರ್ಥ: ಧರ್ಮರಾಯನ ಓಲಗದ ರಾಜಸಬೆಗೆ ಬಂದ ಅಖಿಲ ರಾಜರ ತಲೆಯ(ಕಿರೀಟದ) ಮುತ್ತು ರತ್ನಗಳ ಕಾಂತಿಯ ಆರತಿಯ ನಿವಾಳಿಸುವಿಕೆಯಲ್ಲಿ ವಿಶೇಷವಾಗಿ ಮೆರೆಯುತ್ತಿತ್ತು ಆತನ ಪದ್ಮದಂತಹ ಎರಡು ಪಾದಗಳು. ಕಾಲಪರಿಸ್ಥಿತಿಉ ಯಾರನ್ನು ಯಾವರೀತಿ ಹೀನಸ್ಥಿತಿಗೆ ತಳ್ಳುವುದಿಲ್ಲ? ಕಾಲದ ಮಹಿಮೆ ಹಾಗಿದೆ - ನೋಡು, ಎಲೆ ಜನಮೇಜಯ ರಾಜನೇ, ಧರ್ಮಪುತ್ರನು ಮತ್ಸ್ಯರಾಜನ ಸೇವೆಯಲ್ಲಿ ನಿಂತನು.
ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು||
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪುಬಲ
ಭೇದಿ ಮಾರುತಿ ಬಂದು ಕಂಡನು ಮತ್ಸ್ಯಭೂಪತಿಯ ||21||
ಪದವಿಭಾಗ-ಅರ್ಥ: ಆದುದೈ ನಿರ್ವಾಹ(ವ್ಯವಸ್ಥೆ) ಕಂಕಂಗೆ+ ಆದುದು+ ಆ ಮತ್ಸ್ಯೇಶನಿಂದ= ಆ ವಿರಾಟರಾಜನಿಂದ ಧರ್ಮರಾಯನಿಗೆ ಕಂಕನೆಂಬ ಹೆಸರಿನಲ್ಲಿ ಆಶ್ರಯದ ವ್ಯವಸ್ಥೆ ಆಯಿತು. ವಿವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು= ಯಾವದೇ ವಿವಾದವಿಲ್ಲದೆ ನಿಜವಾಗಿ ಸೇವೆಮಾಡುವವನಂತೆ ಇದ್ದಾಗ, ಹೋದವಿತ್ತಲು ಕೆಲವು ದಿನ= ಕೆಲವು ದಿನಗಳು ಕಳೆದವು; ತನಗಾದ ಸಾಹಾಯ್ಯದಲಿ=ಉಪಕರಣಗಳ ಜೊತೆ, ರಿಪುಬಲಭೇದಿ= ಶತ್ರುಗಳ ಬಲವನ್ನು ನಾಶಮಾಡುವ, ಮಾರುತಿ= ಭೀಮನು ಬಂದು ಕಂಡನು ಮತ್ಸ್ಯಭೂಪತಿಯ(ವಿರಾಟರಾಜನನ್ನು)= ತನಗೆ ಬೇಕಾದ ಉಪಕರಣಗಳ ಜೊತೆ, ಶತ್ರುಗಳ ಬಲವನ್ನು ನಾಶಮಾಡುವ ಭೀಮನು ಬಂದು ವಿರಾಟರಾಜನನ್ನು ಕಂಡನು.
ಅರ್ಥ: ಆ ವಿರಾಟರಾಜನಿಂದ ಧರ್ಮರಾಯನಿಗೆ ಕಂಕನೆಂಬ ಹೆಸರಿನಲ್ಲಿ ಆಶ್ರಯದ ವ್ಯವಸ್ಥೆ ಆಯಿತು. ಯಾವದೇ ವಿವಾದವಿಲ್ಲದೆ ನಿಜವಾಗಿ ಸೇವೆಮಾಡುವವನಂತೆ ಇದ್ದಾಗ, ಕೆಲವು ದಿನಗಳು ಕಳೆದವು. ತನಗೆ ಬೇಕಾದ ಉಪಕರಣಗಳ ಜೊತೆ, ಶತ್ರುಗಳ ಬಲವನ್ನು ನಾಶಮಾಡುವ ಭೀಮನು ಬಂದು ವಿರಾಟರಾಜನನ್ನು ಕಂಡನು.
ಏನು ಪರಿಣತೆ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ||
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ||22||
ಪದವಿಭಾಗ-ಅರ್ಥ: ಏನು ಪರಿಣತೆ ನಿನಗೆ= ವಿರಾಟ ಭೀಮನನ್ನು ಕೇಳಿದ,'ನಿನಗೆ ಯಾವುದರಲ್ಲಿ ಪರಿಣತೆ- ವಿಶೇಷ ಜ್ಞಾನ ಇದೆ?' ಭೀಮನೆಂದ,'ಬಾಣಸಿಯು+ ಆನು= ನಾನು, ಭೀಮನ ಮನೆಯವನು= ನಾನು ಅಡುಗೆಯವನು, ಭೀಮನ ಮನೆಯಲ್ಲಿದ್ದವನು.' ಮತ್ತೇನು= 'ಮತ್ತೆ ಏನಾದರೂ ತಿಳಿದಿರುವೆಯಾ?' ಎಂದು ಕೇಳಿದ ವಿರಾಟ; ಭೀಮನು ತಾನು, ಭುಜಬಲವ+ ಅರಿವೆನು(ತಿಳಿದಿದ್ದೇನೆ ಎಂದನು)+ ನಗ್ಗದ ಮಲ್ಲವಿದ್ಯೆಯಲಿ ನೀನು+ ಅಧಿಕನೆಂದು+ ಆ ಸಮೀರನ ಸೂನುವನು= ಭೀಮನು ತಾನು ಭುಜಬಲದ ವಿದ್ಯೆಯನ್ನು ತಿಳಿದಿದ್ದೇನೆ ಎಂದನು. ನೀನು ಶ್ರೇಷ್ಠವಾದ ಮಲ್ಲವಿದ್ಯೆಯಲಿ ಅಧಿಕನೋ,' ಎಂದು ವಿರಾಟನು ಆ ವಾಯುಪುತ್ರ ಭೀಮನನ್ನು ಮನ್ನಿಸಿ ಮುಖ್ಯಬಾಣಸಿಗನಾಗಿ ನೇಮಿಸಿದನು. ಇತ್ತಲು ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನು+ ಆ ಹೊಳಲ= ಇತ್ತಕಡೆ ಮರುದಿನ ಮಾನನಿಧಿಯಾದ ಅರ್ಜುನನು ಆ ನಗರವನ್ನು ಹೊಕ್ಕನು.
ಅರ್ಥ:ವಿರಾಟ ಭೀಮನನ್ನು ಕೇಳಿದ,'ನಿನಗೆ ಯಾವುದರಲ್ಲಿ ಪರಿಣತೆ- ವಿಶೇಷ ಜ್ಞಾನ ಇದೆ?' ಭೀಮನೆಂದ, ನಾನು ಅಡುಗೆಯವನು, ಭೀಮನ ಮನೆಯಲ್ಲಿದ್ದವನು.'; 'ಮತ್ತೆ ಏನಾದರೂ ತಿಳಿದಿರುವೆಯಾ?' ಎಂದು ಕೇಳಿದ ವಿರಾಟ; ಭೀಮನು ತಾನು ಭುಜಬಲದ ವಿದ್ಯೆಯನ್ನು ತಿಳಿದಿದ್ದೇನೆ ಎಂದನು. ಓಹೊ! ನೀನು ಶ್ರೇಷ್ಠವಾದ ಮಲ್ಲವಿದ್ಯೆಯಲಿ ಅಧಿಕನೋ,' ಎಂದು ವಿರಾಟನು ಆ ವಾಯುಪುತ್ರ ಭೀಮನನ್ನು ಮನ್ನಿಸಿ ಮುಖ್ಯಬಾಣಸಿಗನಾಗಿ ನೇಮಿಸಿದನು. ಇತ್ತಕಡೆ ಮರುದಿನ ಮಾನನಿಧಿಯಾದ ಅರ್ಜುನನು ಆ ನಗರವನ್ನು ಹೊಕ್ಕನು.
ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ||
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ||23||
ಪದವಿಭಾಗ-ಅರ್ಥ:ಸುರಪನ+ ಅರಸಿಯ= ದೇವತೆಗಳೊಡೆಯ ಇಂದ್ರನ ಪ್ರೇಯಸಿಯ, ಶಾಪದಲಿ= ಶಾಪದಿಂದ ಸಿತತುರಗನು(ಸಿತ= ಬಿಳಿ, ಶ್ವೇತವಾಹನ- ಅರ್ಜುನನು)+ ಅರೆವೆಣ್ಣಾಗಿ= ನಪುಂಸಕನಾಗಿ, ಮತ್ಸ್ಯೇಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ ಇರಲು= ವಿರಾಟನ ಮಗಳಿಗೆ ನಾಟ್ಯವಿದ್ಯಾಭ್ಯಾಸವನ್ನು ಕಲಿಸುವ ಉದ್ಯೋಗಕ್ಕೆ ನೇಮಿಸಲ್ಪಟ್ಟನು; ಹಾಗ ಅವನು ಇರಲು ಯಮಳರು= ಮಾದ್ರಿಯ ಅವಳಿಮಕ್ಕಳಾದ ನಕುಲ ಸಹದೇವರು, ತುರಗ ಗೋವ್ರಜ ಭರಣರಾದರು= ಕುದುರೆ ಮತ್ತು ಗೋವುಗಳನ್ನು ಭರಣರು- ಭರಣ=ಹೊರು, ಹೊಣೆಹೊರುವವರು,ಪಾಲಿಸುವವರು ಆದರು. ಬಳಿಕ ಪಾಂಡವರರಸಿ ಸಾರಿದಳು (ಹೋದಳು)+ ಒಲವಿನಲಿ ವೈರಾಟ ಪಟ್ಟಣವ= ಆನಂತರ ಪಾಂಡವರ ರಾಣಿ ದ್ರೌಪದಿ ವಿರಾಟನ ಪಟ್ಟಣಕ್ಕೆ ಪ್ರೀತಿಯಿಂದ ಹೋದಳು.
 • ಟಿಪ್ಪಣಿ: ಅರ್ಜುನನು ಪಾಶುಪತಾಸ್ತ್ರವನ್ನು ಶಿವನಿಂದ ಪಡದನಂತರ ದೇವೇಂದ್ರನು ಅರ್ಜುನನ್ನು ದೇವ ಲೋಕಕ್ಕೆ ಕರೆಸಿಕೊಂಡನು. ಅಲ್ಲಿರುವಾಗ ಅಪ್ಸರೆ ಊರ್ವಸಿಯು ಇಂದ್ರನ ಅಪ್ಪಣೆಯಂತೆ ಅರ್ಜುನಿಗೆ ಪ್ರೇಮದ ಸೇವೆ ಮಾಡಲು ಹೋದಳು. ಆದರೆ ಅರ್ಜುನನು - ಅವಳು ತನ್ನ ತಂದೆಯಾದ ಇಂದ್ರನ ಪ್ರೇಯಸಿ ಮತ್ತು ಚಂದ್ರವಂಶದ ಮೊದಲ ತಾಯಿ (ಪುರೂರವನ ಪತ್ನಿ ಊರ್ವಸಿ - ಅಪ್ಸರೆ) ಎಂದು ಹೇಳಿ- ಪ್ರೇಮಭಿಕ್ಷೆಗಾಗಿ ಬಂದ ಅವಳನ್ನು ವಿರಾಕರಿಸಿದನು. ಅವಳು ಸ್ವರ್ಗ ಲೋಕದ ನಿಯಮದಲ್ಲಿ ಆ ನಂಟು ಅಪ್ಸರೆಯರಿಗೆ ಇಲ್ಲ; ಪ್ರೇಮ ಕಾತರಳಾಗಿ ಬಂದ ತನ್ನನ್ನು ನಿರಾಕರಿಸಿದ್ದಕ್ಕಾಗಿ ಕೋಪೋದ್ರೇಕಗೊಂಡು,"ನಪುಂಸಕನಾಗು" ಎಂದು ಶಪಿಸಿದಳು. ಕೊನೆಗೆ ಅವನು ಕ್ಷಮಿಸಲು ಕೇಳಿದಾಗ ಇಂದ್ರನ ಮಗನೆಂದು ನೆನೆದು,'ಒಂದು ವರ್ಷ ಮಾತ್ರಾ ಈ ಶಾಪ ಇರಲಿ ಮತ್ತು ಅದು ನೀನು ಬಯಸಿದ ಒಂದು ವರ್ಷ ಇರುವುದು,' ಎಂದು ಪರಿಹಾರ ಹೇಳಿದಳು. ಆ ಶಾಪವನ್ನು ಅರ್ಜುನನು ಇಲ್ಲಿ ನೆನೆದು ಅನುಭವಿಸಿದನು. ಚಂ
ಅರ್ಥ:ದೇವತೆಗಳೊಡೆಯ ಇಂದ್ರನ ಪ್ರೇಯಸಿಯ ಶಾಪದಿಂದ ಅರ್ಜುನನು ನಪುಂಸಕನಾಗಿ, ವಿರಾಟನ ಮಗಳಿಗೆ ನಾಟ್ಯವಿದ್ಯಾಭ್ಯಾಸವನ್ನು ಕಲಿಸುವ ಉದ್ಯೋಗಕ್ಕೆ ನೇಮಿಸಲ್ಪಟ್ಟನು; ಹಾಗ ಅವನು ಇರಲು, ಮಾದ್ರಿಯ ಅವಳಿಮಕ್ಕಳಾದ ನಕುಲ ಸಹದೇವರು, ಕುದುರೆ ಮತ್ತು ಗೋವುಗಳನ್ನು ಪಾಲಿಸುವವರಾದರು. ಆನಂತರ, ಪಾಂಡವರ ರಾಣಿ ದ್ರೌಪದಿ ವಿರಾಟನ ಪಟ್ಟಣಕ್ಕೆ ಪ್ರೀತಿಯಿಂದ ಹೋದಳು.
ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ||
ಹಿರಿದು ಸೈರಿಸಲಾರನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳ ಢಾಳವೊಪ್ಪಿರೆ ಬಂದಳಬುಜಮುಖಿ ||24||
ಪದವಿಭಾಗ-ಅರ್ಥ:ದ್ರೌಪದಿ ಮತ್ಸ್ಯನಗರ ಪ್ರವೇಶಮಾಡಲು ಬರುತ್ತಿರುವಳು ಆಗ: ತರಣಿಗೆ(ಸೂರ್ಯನಿಗೆ)+ ಅಂಜಿದಡೆ+ ಇಂದು= ಚಂದ್ರ- (ಚಂದ್ರಂತಿರುವ ದ್ರೌಪದಿಯ ಮುಖ) ತಲೆಗಾಯ್ದಿರಿಸಿದನೊ= ಕಾಪಾಡಲು ಇಟ್ಟನೋ, ಮರೆಯಾಗಿ ತಿಮಿರದ(ಕತ್ತಲೆಯ - ಕಪ್ಪು ಕೂದಲು) ಹೊರಳಿಗಳನು+ ಎನೆ= ದ್ರೌಪದಿಯ ಮುಖ ಚಂದ್ರನಂತೆ; ಅದನ್ನು ಸೂರ್ಯನಿಂದ ಕಾಪಾಡಲು ಕೂದಲೆಂಬ ಕತ್ತಲೆಯಿಂದ ಮರೆಮಾಡಿರುವನೋ ಎಂಬಂತೆ ದ್ರೌಪದಿಯ ತಲೆಕೂದಲು ಆವರಿಸಿತ್ತು. ಮುಡಿಗೆ ಮೋಹಿದ ವೇಣಿವಲ್ಲರಿಯ=ತಲೆಕೂದಲಿನ ಜಡೆಯ ಬಳ್ಳಿಯನ್ನು ಇಟ್ಟಿರುವನೋ- (ವಿಧಾತನು) ಹಿರಿದು ಸೈರಿಸಲಾರನೆಂದು+ ಒಡನಿರಿಸಿದನೊ= ದ್ರೌಪದಿಯ ಮುಖ ಚಂದ್ರನು ಸಹಿಸಲಾರನು ಎಂದು ಅದರೊಡನೆ; ಕೈರವವನು= ನೈದಿಲೆ, ಬಿಳಿಯ ನೈದಿಲೆಯನ್ನು, ಎನಲೆಂದು+ ಅರರೆ ಕಂಗಳ ಢಾಳವೊಪ್ಪಿರೆ= ಅಬ್ಬಾ ಆ ದೊಡ್ಡ ಕಣ್ನಗಳ ಕಾಂತಿ ಚಂದವಾಗಿ ತೋರುತ್ತಿರಲು, ಬಂದಳು+ ಅಂಬುಜಮುಖಿ= ಕಮಲಮುಖಿ ಕಮಲದಂತೆ ಸುಂದರವಾದ ಮುಖವುಳ್ಲ ದ್ರೌಪದಿ ಬಂದಳು ವಿರಾಟ ನಗರಿಗೆ.(ರೂಪಕವು ಅಧ್ಯಾಹಾರಗಳಿಂದ ಕೂಡಿ ತೊಡಕಾಗಿದೆ)
ಅರ್ಥ: ದ್ರೌಪದಿ ಮತ್ಸ್ಯನಗರ ಪ್ರವೇಶಮಾಡಲು ಬರುತ್ತಿರುವಳು ಅದು ಹೇಗೆ ಕಾಣುತ್ತಿತೆಂದರೆ, ಚಂದ್ರನಂತಿರುವ ದ್ರೌಪದಿಯ ಮುಖವನ್ನು ಸೂರ್ಯನ ತಾಪದಿಂದ ಕಾಪಾಡಲು ಕೂದಲೆಂಬ ಕತ್ತಲೆಯಿಂದ ಮರೆಮಾಡಿರುವನೋ ಎಂಬಂತೆ ದ್ರೌಪದಿಯ ತಲೆಕೂದಲು ಆವರಿಸಿತ್ತು. ಮುಡಿಗೆ ಮೋಹಕವಾದ ತಲೆಕೂದಲಿನ ಜಡೆಯ ಬಳ್ಳಿಯನ್ನು ವಿಧಾತನು ಇಟ್ಟಿರುವನೋ- ದ್ರೌಪದಿಯ ಮುಖ ಚಂದ್ರನು ರಾತ್ರಿ ಅರಳುವ ಬಿಳಿಯ ನೈದಿಲೆಯಂತೆ ಇದ್ದು, ಸೂರ್ಯನ ಬೆಳಕನ್ನು ಸಹಿಸಲಾರದು ಎಂದು ಅದರೊಡನೆ ಜಡೆಯ ಬಳ್ಳಿಯನ್ನು ವಿಧಾತನು ಇಟ್ಟಿರುವನೋ! ಅಬ್ಬಾ ಆ ದೊಡ್ಡ ಕಣ್ಣುಗಳ ಕಾಂತಿ ಚಂದವಾಗಿ ತೋರುತ್ತಿರಲು, ಕಮಲಮುಖಿ ದ್ರೌಪದಿ ವಿರಾಟ ನಗರಿಗೆ ಬಂದಳು.
ಮೊಲೆಯ ಮೇಲುದ ಜಾರೆ ಜಾರಿದ
ರಳಿ ಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟು ನಿಂದರು ಚಿತ್ತವಿಹ್ವಲರು||
ತೆಳುವಸರು ತಲೆದೋರೆ ತೋರಿದು
ದಲಗು ಮರು ಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ ||25||
ಪದವಿಭಾಗ-ಅರ್ಥ: ಮೊಲೆಯ ಮೇಲುದ ಜಾರೆ ಜಾರಿದರು+ ಅಳಿ ಮನರು= ಅವಳ ಮೊಲೆಯ ಮೇಲೆ ಹೊದೆದ ಸೆರಗು ಜಾರಿದಾಗ ಜಾರಿದರು+ ಅಳಿ ಮನರು= ದುರ್ಬಲ ಮನಸ್ಸಿನವರು ಅಳುಕಿದರು. ಕಂಗಳಿನ ಮಿಂಚಿನ ಹಿಳುಕಿನ+ ಎಡೆ (ಹಿಳುಕು= ಬಾಣ) ನಡೆಗೆಟ್ಟು ನಿಂದರು ಚಿತ್ತವಿಹ್ವಲರು= ಕಣ್ಣುಗಳ ಮಿಂಚಿನ ನೋಟದ ಬಾಣಕ್ಕೆ ಮನಸ್ಸು ಗೊಂದಲಗೊಂಡು ನಡಿಗೆತಪ್ಪಿ ನಿಂತುಬಿಟ್ಟರು. ತೆಳುವಸರು= ಸಣ್ಣ ಸೊಂಟ, ತಲೆದೋರೆ= ಕಂಡಾಗ ತೋರಿದುದು+ ಅಲಗು ಮರು ಮೊನೆಯೆನುತ ವಿಟರು+ ಅಳವಳಿಯೆ= ಅವಳ ಸಣ್ಣ ಸೊಂಟ ಕಂಡಾಗ ಬಾಣದ ತುದಿ/ ಕತ್ತಿಯ ಅಲಗು ಕಾಣಿಸಿತು ಮರು(ಮದುಳು, ಮೋಹದ)+ ಮೊನೆಯೆನುತ= ಮನ್ಮಥನ ಬಾಣದ ಅಲಗು ಹೃದಯಕ್ಕೆ ತಾಗಿತು ಎಂದು, ವಿಟರು+ ಅಳವಳಿಯೆ= ಹೆಣ್ಣಿನಪ್ರೇಮದ ಬಯಕೆಯ ಜನರು ಸಂಕಟಪಟ್ಟರು. ನಡೆತರುತಿರ್ದಳು+ ಅಂಗನೆ= ವನಿತೆ, ರಾಜವೀಧಿಯಲಿ= ರಾಜಬೀದಿಯಲ್ಲಿ ಹೀಗೆ ದ್ರೌಪದಿಯು ನೆಡೆದುಕೊಂಡು ಬರುತ್ತಿದ್ದಳು.
ಅರ್ಥ: ದ್ರೌಪದಿಯು ರಾಜಬೀದಿಯಲ್ಲಿ ನೆಡೆದು ಬರುತ್ತಿರುವಾಗ ಅಕಸ್ಮಾತ್ ಅವಳ ಎದೆಯ ಮೇಲೆ ಹೊದೆದ ಸೆರಗು ಜಾರಿದಾಗ ದುರ್ಬಲ ಮನಸ್ಸಿನವರು ಅಳುಕಿದರು. ಅವಳ ಕಣ್ಣುಗಳ ಮಿಂಚಿನ ನೋಟದ ಬಾಣಕ್ಕೆ ಮನಸ್ಸು ಗೊಂದಲಗೊಂಡು ನಡಿಗೆತಪ್ಪಿ ನಿಂತುಬಿಟ್ಟರು. ಅವಳ ಸಣ್ಣ ಸೊಂಟ ಕಂಡಾಗ ಮನ್ಮಥನ ಬಾಣದ ಅಲಗು ಹೃದಯಕ್ಕೆ ತಾಗಿತು ಎಂದು, ವಿಟಜನರು ಸಂಕಟಪಟ್ಟರು. ಹೀಗೆ ದ್ರೌಪದಿಯು ರಾಜಬೀದಿಯಲ್ಲಿ ನೆಡೆದುಕೊಂಡು ಬರುತ್ತಿದ್ದಳು.
ಎಲೆಲೆ ಮದನನ ಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟ ವಿದೂಷಕರ||
ಅಳುಕಿದರು ಮನುಮಥನ ಗರುಡಿಯ
ಬಲುವೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ||೨೬||
ಪದವಿಭಾಗ-ಅರ್ಥ: ಎಲೆಲೆ ಮದನನ= ಮನ್ಮಥನ ಗಜವು ತೊತ್ತಳ+ ದು-ತುಳಿದುದೋ ಕಾಮುಕರನು+ ಎನೆ ಗಾವಳಿಯೊಳಗೆ= ಜನರ ದೊಂಬಿಯ ಗುಂಪಿನಲ್ಲಿ ಗಾರಾಯ್ತು= ಘಾಸಿಯಾಯಿತು ಗರುವಿಕೆ= ಗರ್ವ,ಅಹಂಕಾರ ವಿಟ ವಿದೂಷಕರು ಅಳುಕಿದರು= ಸೋತರು, ಮನುಮಥನ= ಮನ್ಮಥನ, ಗರುಡಿಯ ಬಲುವೆಗಾರರು,= ಮನ್ಮಥನ ಗರುಡಿಯಲ್ಲಿ ತಯಾರಾದ ಗಟ್ಟಿಗ ವಿಟರು, ಬಂದಳು+ ಅಗ್ಗದ= ಶ್ರೇಷ್ಠ- ಎಲ್ಲರನ್ನೂ ಮೀರಿಸಿದ, ನಳಿನಮುಖಿ= ಕಮಲಮುಖಿ, ಬಹುಜನದ ಮನಕೆ+ ಅಚ್ಚರಿಯನು+ ಒದವಿಸುತ= ಅಲ್ಲಿರುವ ಅನೇಕರಿಗೆ ಆಶ್ಚರ್ಯವನ್ನುಂಟುಮಾಡುತ್ತಾ,
ಅರ್ಥ: ಎಲೆಲೆ ಏನಿದಾಶ್ಚರ್ಯ,! ಮನ್ಮಥನ ಆನೆಯು ಕಾಮುಕರನ್ನುಮೆಟ್ಟಿಮೆಟ್ಟಿ ತುಳಿಯಿತೋ ಎನ್ನುವಂತೆ ಜನರ ಗುಂಪು ಭಾವಿಸಿತು. ವಿಟ ವಿದೂಷಕರ ಗರ್ವ,ಅಹಂಕಾರ ಘಾಸಿಯಾಗಿ ಮನ್ಮಥನ ಗರುಡಿಯಲ್ಲಿ ತಯಾರಾದ ಗಟ್ಟಿಗ ವಿಟರು ಸೋತರು. ಹೀಗೆ ಎಲ್ಲರನ್ನೂ ಮೀರಿಸಿದ ಸುಂದರಳಾದ ದ್ರೌಪದಿ ಅಲ್ಲಿಯ ಬಹುಜನರ ಮನಸ್ಸಿಗೆ 'ಇವಳಾರು ಸುಂದರಿ, ಎಂದು ಅಲ್ಲಿರುವ ಅನೇಕರಿಗೆ ಆಶ್ಚರ್ಯವನ್ನುಂಟುಮಾಡುತ್ತಾ ರಾಜಬೀದಿಯಲ್ಲಿ ನೆಡದು ಬಂದಳು.
ಜನದ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು||
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ||೨೭||
ಪದವಿಭಾಗ-ಅರ್ಥ: ಜನದ ಜಾಣ(ಅರಿವು, ಜ್ಞಾನ)+ ಅಕ್ಕಾಡುಲು (= ಪೂರ್ತಿ ನಷ್ಟವಾಗಲು)+ ಆ ಮೋಹನ ಮಹಾಂಬುಧಿಯೊಳಗೆ= ಜನರ ಅರಿವು ಆ ಮೋಹನವೆಂಬ ಮಹಾಂಸಮುದ್ರದಲ್ಲಿ ಪೂರ್ತಿ ನಷ್ಟವಾಗಿಹೋಯಿತು, ಮುಳುಗಿಹೋಯಿತು; ನೃಪನ+ ಅಂಗನೆಯ ಭವನಕೆ ಬರಲು ಬೆರಗಾಯ್ತು+ ಅಖಿಳ ನಾರಿಯರು= ವಿರಾಟರಾಜನ ರಾಣಿಯ ಅರಮನೆಗೆ ಅವಳು ಬಂದಾಗ, ವನಿತೆ ಮಾನಿಸೆಯಲ್ಲ ಮನುಜರಿಗೆ+ ಇನಿತು ರೂಪೆಲ್ಲಿಯದು= ಈ ಹೆಣ್ಣು ಮನುಷ್ಯಜಾತಿಗೆ ಸೇರಿದವಳಲ್ಲ. ಏಕೆಂದರೆ ಮನುಷ್ಯರಿಗೆ ಇಂಥ ರೂಪವೆಲ್ಲಿಯದು! ಇಂಥ ರೂಪ ಇರಲು ಸಾಧ್ಯವಿಲ್ಲ. ಮನುಷ್ಯಳಾದರೆ ಇದು ವಿಸ್ಮಯವು, ಎನುತ= ಎನ್ನುತ್ತಾ ಮನದೊಳಗೆ+ ಅಳುಕಿದರು ಮತ್ಸ್ಯೇಶನ+ ಅರಸಿಯರು= ಮನಸ್ಸಿನಲ್ಲೇ ಭಯಪಟ್ಟರು ವಿರಾಟರಾಜನ ಪತ್ನಿಯರು.
ಅರ್ಥ: ದ್ರೌಪದಿಯ ರೂಪವನ್ನು ನೋಡಿ, ಜನರ ಅರಿವು ಆ ಮೋಹನವೆಂಬ ಮಹಾಂಸಮುದ್ರದಲ್ಲಿ ಪೂರ್ತಿ ಮುಳುಗಿಹೋಯಿತು. ವಿರಾಟರಾಜನ ರಾಣಿಯ ಅರಮನೆಗೆ ಅವಳು ಬಂದಾಗ, ಈ ಹೆಣ್ಣು ಮನುಷ್ಯಜಾತಿಗೆ ಸೇರಿದವಳಲ್ಲ. ಏಕೆಂದರೆ ಮನುಷ್ಯರಿಗೆ ಇಂಥ ರೂಪವೆಲ್ಲಿಯದು! ಇಂಥ ರೂಪ ಇರಲು ಸಾಧ್ಯವಿಲ್ಲ. ಮನುಷ್ಯಳಾದರೆ ಇದು ವಿಸ್ಮಯವು ಎನ್ನುತ್ತಾ, ವಿರಾಟರಾಜನ ಪತ್ನಿಯರು ಮನಸ್ಸಿನಲ್ಲೇ ಭಯಪಟ್ಟರು (ವಿರಾಟನು ಇವಳ ವಶನಾದರೆ ತಮ್ಮಗತಿ ಏನೆಂದು.).
ಬರವ ಕಂಡು ಸುದೇಷ್ಣೆ ಮನದಲಿ
ಹರುಷ ಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನನಿಬರನು||
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ ||೨೮||
ಪದವಿಭಾಗ-ಅರ್ಥ: ಬರವ ಕಂಡು ಸುದೇಷ್ಣೆ ಮನದಲಿ ಹರುಷ ಮಿಗೆ ಹೊಂಗಿದಳು(ಹೊಂಗು= ಅರಳು, ಉತ್ಸಾಹಿಸು, ತೀವ್ರತೆ)= ಸುಂದರಿಯಾದ ದ್ರೌಪದಿಯ ಬರುವಿಕೆಯನ್ನು ನೋಡಿ ಸಂತೋಷ ಉಕ್ಕಲು ಅವಳ ವಿಷಯ ತಿಳಿಯಲು ಉತ್ಸಾಹಗೊಂಡಳು. ಕರೆ ಕರೆ ತರುಣಿಯಾರೆಂದು+ ಅಟ್ಟಿದಳು ಕೆಳದಿಯರ+ ಅನಿಬರನು= ಅವಳನ್ನು ಬೇಗೆ ಕರೆಯಿರಿ ಎಂದು ತನ್ನ ಗೆಳತಿಯರನ್ನು ಅವಸರದಲ್ಲಿ ಕಳುಹಿಸಿದಳು. ಸರಸಿಜ (ಕಮಲ)+ ಆಯತದ(ಉಚಿತ,ನೀಳವಾದ)+ ಅಂದವನು ಮೋಹರಿಸಿ ಮುಂಚುವ(ಹೊರ ಹೊಮ್ಮುವ) ಪರಿಮಳವನು+ ಅಂದು+ ಅರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ= ಸುದೀಷ್ಣೆಯ ಗೆಳತಿಯರು ಬಂದು ಕರೆಯಲು, ಕಮಲದಂತೆ ಸುಂದರವಾದ ನೀಳವಾದ ದೇಹದ ಅಂದವನ್ನು ಬೀರಿ ಮೋಹಗಳಿಸುತ್ತಾ ಹೊರ ಹೊಮ್ಮುವ ಪರಿಮಳವನು ಬೀರುತ್ತಾ ಅಂದು ರಾಣಿ ದ್ರೌಪದಿಯು ಬಂದು ವಿರಾಟನ ರಾಜಮಂದಿರವನ್ನು ಹೊಕ್ಕಳು.
ಅರ್ಥ: ವಿರಾಟನ ರಾಣಿಯು ಸುಂದರಿಯಾದ ದ್ರೌಪದಿಯ ಬರುವಿಕೆಯನ್ನು ನೋಡಿ ಸಂತೋಷ ಉಕ್ಕಲು ಅವಳ ವಿಷಯ ತಿಳಿಯಲು ಉತ್ಸಾಹಗೊಂಡಳು. ಅವಳನ್ನು ಬೇಗೆ ಕರೆಯಿರಿ ಎಂದು ತನ್ನ ಗೆಳತಿಯರನ್ನು ಅವಸರದಲ್ಲಿ ಕಳುಹಿಸಿದಳು. ಸುದೀಷ್ಣೆಯ ಗೆಳತಿಯರು ಬಂದು ಕರೆಯಲು, ಕಮಲದಂತೆ ಸುಂದರವಾದ ನೀಳವಾದ ದೇಹದ ಅಂದದಿಂದ ಮೋಹಗಳಿಸುತ್ತಾ ಹೊರ ಹೊಮ್ಮುವ ಪರಿಮಳವನು ಬೀರುತ್ತಾ ಅಂದು ರಾಣಿ ದ್ರೌಪದಿಯು ಬಂದು ವಿರಾಟನ ರಾಜಮಂದಿರವನ್ನು ಹೊಕ್ಕಳು.
ಕೆಳದಿಯರು ಕಾಣಿಸಿದರರಸನ
ಲಲನೆಯನು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ||
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನ ವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ||೨೯||
ಪದವಿಭಾಗ-ಅರ್ಥ: ಕೆಳದಿಯರು ಕಾಣಿಸಿದರು+ ಅರಸನ ಲಲನೆಯನು= ಗೆಳತಿಯರು ದ್ರೌಪದಿಯನ್ನು ಕರೆತಂದು ತಮ್ಮ ಅರಸಿಯ ಎದುರಿಗೆ ಕರೆತಂದರು, ಪರಿಯಂಕ ಪೀಠದ ಕೆಲಕೆ ಕರೆದಳು ಕಮಲವದನೆಯನು+ ಉಚಿತ ವಚನದಲಿ= ರಾಣಿಯು ತನ್ನ ಮಲಗುವ/ ಕೂರುವ ಮಂಚದ ಪೀಠದ ಹತ್ತಿರಕ್ಕೆ ಕಮಲಮುಖಿಯಾದ ಅವಳನ್ನು ಕರೆದು, ನಯವಾದ ಮಾತಿನಲ್ಲಿ, ನಳಿನಮುಖಿ ನೀನಾರು ನಿನಗಾರು+ ಒಳರು(ಜೊತೆಯವರು) ರಮಣರು, ಮಾಸಿಕೊಂಡಿಹ ಮಲಿನ ವೃತ್ತಿಯಿದೇಕೆ+ ಎನುತ ಬೆಸಗೊಂಡಳು+ ಅಂಗನೆಯ= 'ನೀನು ಯಾರು, ನಿನ್ನ ಪತಿಗಳಾರು?, ಮಾಸಿಕೊಂಡಿರುವ ಬಟ್ಟೆಯನ್ನು ಉಟ್ಟಿರುವೆ, ಮಲಿನ ವೃತ್ತಿಯ ಕಷ್ಟ ಏಕೆ ಬಂದಿತು?' ಎಂದು ಅವಳನ್ನು ಕೇಳಿದಳು.
ಅರ್ಥ: ವಿರಾಟರಾಣಿಯ ಗೆಳತಿಯರು ದ್ರೌಪದಿಯನ್ನು ಕರೆತಂದು ತಮ್ಮ ಅರಸಿಯ ಎದುರಿಗೆ ಕರೆತಂದರು. ರಾಣಿಯು ತನ್ನ ಮಲಗುವ/ ಕೂರುವ ಮಂಚದ ಪೀಠದ ಹತ್ತಿರಕ್ಕೆ ಕಮಲಮುಖಿಯಾದ ಅವಳನ್ನು ಕರೆದು, ನಯವಾದ ಮಾತಿನಲ್ಲಿ,'ನೀನು ಯಾರು, ನಿನ್ನ ಪತಿಗಳಾರು?, ಮಾಸಿಕೊಂಡಿರುವ ಬಟ್ಟೆಯನ್ನು ಉಟ್ಟಿರುವೆ, ಮಲಿನ ವೃತ್ತಿಯ ಕಷ್ಟ ಏಕೆ ಬಂದಿತು?' ಎಂದು ಅವಳನ್ನು ಕೇಳಿದಳು.
ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯ ಮಾಡಿದರೊಂದು ವರುಷವು ಬಿಡುವೆನವರುಗಳ||
ಸತತವಾ ಕುಂತೀಕುಮಾರರ
ಸತಿಯರೋಲೈಸಿದ್ದೆ ಬಳಿಕವ
ರತಿ ಗಹನವನನಿಷ್ಠರಾದರು ತನಗೆ ಬರವಾಯ್ತು ||೩೦||
ಪದವಿಭಾಗ-ಅರ್ಥ: ಅತುಳಬಲ ಗಂಧರ್ವರು+ ಐವರು ಪತಿಗಳು+ ಎನಗೆ+ ಉಂಟು= ಅತಿಬಲರಾದ ಐವರು ಗಂಧರ್ವರು ಪತಿಗಳು ನನಗೆ ಇದ್ದಾರೆ; + ಎನ್ನ ಚಿತ್ತಕೆ ಖತಿಯ ಮಾಡಿದರೆ+ ಒಂದು ವರುಷವು ಬಿಡುವೆನು+ ಅವರುಗಳ= ನನ್ನ ಮನಸ್ಸಿಗೆ ಘಾಸಿಯನ್ನು ಮಾಡಿದರೆ, ನಾನು ಒಂದು ವರ್ಷ ಅವರನ್ನು ಬಿಡುವೆನು. ಸತತವು+ ಆ ಕುಂತೀಕುಮಾರರ ಸತಿಯರ+ ಓಲೈಸಿದ್ದೆ, ಬಳಿಕ+ ಅವರು+ ಅತಿ ಗಹನ+ ವನನಿಷ್ಠರಾದರು ತನಗೆ ಬರವಾಯ್ತು= ಸತತವಾಗಿ ಈ ಬಗೆಯ ಪರಿಸ್ಥತಿ ಬಂದಾಗ ಆ ಕುಂತೀಕುಮಾರರ ಪತ್ನಿಯರ ಸೇವೆಮಾಡಿಕೊಂಡಿದ್ದೆ; ಆನಂತರ ಅವರು ಅತಿ ದಟ್ಟ ಕಾಡಿನವಾಸಕ್ಕೆ ಹೋದರು. ಅದರಿಂದ ತನಗೆ ಇರಲು ಗತಿಯಿಲ್ಲದಾಯಿತು,' ಎಂದಳು ದ್ರೌಪದಿ.
ಅರ್ಥ: ಅತಿಬಲರಾದ ಐವರು ಗಂಧರ್ವರು ಪತಿಗಳು ನನಗೆ ಇದ್ದಾರೆ; ಅವರು ನನ್ನ ಮನಸ್ಸಿಗೆ ಘಾಸಿಯನ್ನು ಮಾಡಿದರೆ, ನಾನು ಒಂದು ವರ್ಷ ಅವರನ್ನು ಬಿಡುವೆನು. ಸತತವಾಗಿ ಈ ಬಗೆಯ ಪರಿಸ್ಥತಿ ಬಂದಾಗ ಆ ಕುಂತೀಕುಮಾರರ ಪತ್ನಿಯರ ಸೇವೆಮಾಡಿಕೊಂಡಿದ್ದೆ; ಆನಂತರ ಅವರು ಅತಿ ದಟ್ಟ ಕಾಡಿನವಾಸಕ್ಕೆ ಹೋದರು. ಅದರಿಂದ ತನಗೆ ಇರಲು ಗತಿಯಿಲ್ಲದಾಯಿತು,' ಎಂದಳು ದ್ರೌಪದಿ.
ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವ
ಸೂನ ಮುಡಿಸುವ ವರ ಕಟಾಕ್ಷಕೆ ಕಾಡಿಗೆಯನಿಡುವ||
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿಳಂದು ವಿನಯದಲಿ ||೩೧||
ಪದವಿಭಾಗ-ಅರ್ಥ: ಏನ ಮಾಡಲು ಬಲ್ಲೆಯೆಂದರೆ,= 'ನೀನು ಏನು ಕೆಲಸ ಮಾಡಬಲ್ಲೆ' ಎಂದು ರಾಣಿ ಕೇಳಿದಾಗ. ದ್ರೌಪದಿಯು; ಮಾನಿನಿಯ ಸಿರಿಮುಡಿಯ ಕಟ್ಟುವಸೂನ (ಸೂ= ಹೂವಿನ ದಂಡೆ) ಮುಡಿಸುವ= ರಾಣಿಯ ತಲೆ ಬಾಚಿ ಕಟ್ಟವಕೆಲಸ, ಹೂವು ಮುಡಿಸುವ ಕೆಲಸ, ವರ ಕಟಾಕ್ಷಕೆ= ಸುಂದರ ಕಣ್ಣಿಗೆ, ಕಾಡಿಗೆಯನು+ ಇಡುವ= ಕಣ್ಣಿಗೆ ಕಾಡಿಗೆಯನ್ನು ಇಡುವ ಕೆಲಸ, ಏನ ಹೇಳಿದ ಮಾಡಬಲ್ಲೆನು ಸ+ ಅನುರಾಗದೊಳು (ಪ್ರೀತಿಯಿಂದ)+ ಎಂದು+ ಎನಲು ವರಮಾನಿನಿಯ ನಸುನಗುತ ನುಡಿಸಿಳಂದು ವಿನಯದಲಿ= ಏನು ಹೇಳಿದರೂ ಮಾಡತ್ತೇನೆ ಎಂದಳು ದ್ರೌಪದಿ.
ಸೂಡಿ= ತಲೆಯ ಕೂದಲನ್ನು ಸೇರಿಸಿ ಕಟ್ಟುವ ಗಂಟು. ಗ್ರಾಮ್ಯ:ಹೂವಿನ ದಪ್ಪ ಉದ್ದ ದಂಡೆಯನ್ನು (ಗಿಡ್ಡ ಮಾಲೆ) ಸುರುಳಿಯಾಗಿ ದುಂಡಗೆ ಸುತ್ತಿದ್ದನ್ನು ಸೂಡಿ ಎನ್ನುವರು.
ಅರ್ಥ: ರಾಣಿಯು, 'ನೀನು ಏನು ಕೆಲಸ ಮಾಡಬಲ್ಲೆ' ಎಂದು ಕೇಳಿದಾಗ. ದ್ರೌಪದಿಯು ರಾಣಿಯ ತಲೆ ಬಾಚಿ ಕಟ್ಟವ ಕೆಲಸ, ಹೂವು ಮುಡಿಸುವ ಕೆಲಸ, ಸುಂದರ ಕಣ್ಣಿಗೆ ಕಾಡಿಗೆಯನ್ನು ಇಡುವ ಕೆಲಸ, ಏನು ಹೇಳಿದರೂ ಪ್ರೀತಿಯಿಂದ ಮಾಡತ್ತೇನೆ ಎಂದಳು ದ್ರೌಪದಿ.
ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳಬನಿರಿಗಾಯ್ತು ನಿರ್ವಾಹ||
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈ ಮರೆ
ಸನುಪಮಿತ ಭುಜಸತ್ವರಿದ್ದರು ಭೂಪ ಕೇಳೆಂದ ||೩೨||
ಪದವಿಭಾಗ-ಅರ್ಥ: ಎನಲು ಮೆಚ್ಚಿದಳು+ ಆ ವಿರಾಟನ ವನಿತೆ= ವಿರಾಟನ ರಾಣಿಯು ದ್ರೌಪದಿ ಹೇಳಿದುದನ್ನು ಕೇಳಿ ಮೆಚ್ಚಿದಳು. ವೀರರ ವಧುವನು+ ಆ ಸಖಿಜನದೊಳಗೆ ನೇಮಿಸಿದಳು+ = ವೀರ ಪಾಂಡವರ ಪತ್ನಿಯನ್ನು ಅಂತಃಪುರದ ಸಖಿಜನರ ಜೊತೆಯಲ್ಲಿ ಇರುವಂತೆ ನೇಮಿಸಿದಳು. ಅನಿಬರಿಗಾಯ್ತು ನಿರ್ವಾಹ= ಅವರೆಲ್ಲರಿಗೂ (ಪಾಂಡವರು ಮತ್ತು ದ್ರೌಪದಿ ಈ ಆರು ಜನರಿಗೂ) ಗುರತುಸಿಗದ ಹಾಗೆ ನಿರ್ವಹಣೆಯ ವ್ಯವಸ್ಥೆ ಆಯಿತು. ಮನದ ಢಗೆಯು+ ಅಡಗಿದವು= ಮನಸ್ಸಿನ ದುಗುಡ ಶಾಂತವಾಯಿತು. ಮತ್ಸ್ಯೇಶನ ಪುರ+ ಅಮತರದೊಳಗೆ ಮೈ ಮರೆಸಿ+ ಅನು+ ಉಪಮಿತ ಭುಜಸತ್ವರು+ ಇದ್ದರು ಭೂಪ ಕೇಳೆಂದ= ಸರಿಸಮಾನರಿಲ್ಲದ ವೀರರು ಮತ್ಸ್ಯರಾಜನ ನಗರದೊಳಗೆ ವೇಷಮರೆಸಿಕೊಂಡು ಇದ್ದರು ರಾಜನೇ ಕೇಳು ಎಂದ.
ಅರ್ಥ:ವಿರಾಟನ ರಾಣಿಯು ದ್ರೌಪದಿ ಹೇಳಿದುದನ್ನು ಕೇಳಿ ಮೆಚ್ಚಿದಳು. ವೀರ ಪಾಂಡವರ ಪತ್ನಿಯನ್ನು ಅಂತಃಪುರದ ಸಖಿಜನರ ಜೊತೆಯಲ್ಲಿ ಇರುವಂತೆ ನೇಮಿಸಿದಳು. ಹೀಗೆ ಅವರೆಲ್ಲರಿಗೂ (ಪಾಂಡವರು ಮತ್ತು ದ್ರೌಪದಿ ಈ ಆರು ಜನರಿಗೂ) ಗುರತುಸಿಗದ ಹಾಗೆ ನಿರ್ವಹಣೆಯ ವ್ಯವಸ್ಥೆ ಆಯಿತು. ಅವರ ಮನಸ್ಸಿನ ದುಗುಡ ಶಾಂತವಾಯಿತು. ಸರಿಸಮಾನರಿಲ್ಲದ ವೀರರು ಮತ್ಸ್ಯರಾಜನ ನಗರದೊಳಗೆ ವೇಷಮರೆಸಿಕೊಂಡು ಇದ್ದರು, ರಾಜನೇ ಕೇಳು ಎಂದ ಮುನಿ.
ಆ ಸುದೇಷ್ಣಾ ದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು||
ಆ ಸತಿಯ ಮನವೊಲಿದು ನಡೆವಳು
ಲೇಸು ಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ||೩೩||
ಪದವಿಭಾಗ-ಅರ್ಥ: ಆ ಸುದೇಷ್ಣಾ ದೇವಿಯರ ನಿಡುಕೇಶವನು ಹಿಕ್ಕುವಳು= ಆ ಸುದೇಷ್ಣಾ ದೇವಿಯ ಉದ್ದತಲೆಕೂದಲನ್ನು ಬಾಚುಹಣಿಗೆಯಿಂದ ಹಿಕ್ಕಿ ಸಿಕ್ಕು ಬಿಡಿಸಿ ಓರಣಗೊಳಿಸುತ್ತಿದ್ದಳು. ಮುದದಲಿ ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು= ಸಂತೋಷದಿಂದ ಮಲ್ಲಗೆ ಹೂವಿನ ದಂಡೆಸುರಳಿಯ ಸೂಸನ್ನು ಅವಳಿಗೆ ಮುಡಿಸುವಳು. ಆ ಸತಿಯ ಮನವೊಲಿದು ನಡೆವಳು = ಆ ರಾಣಿಯ ಮನಸ್ಸಿಗೆ ಪ್ರೀತಿಯಾಗುವಂತೆ ನೆದೆದುಕೊಳ್ಳವಳು. ಲೇಸು ಲೇಸೆಂದ+ ಎನಿಸಿ ಬಾಳುವ ಭಾಷೆಯನು ಸಲಿಸುತ್ತಲಿರ್ದಳು ಪತಿಗಳ+ ಆಜ್ಞೆಯಲಿ= ದ್ರೌಪದಿಯ ಪತಿಗಳ ಆದೇಶದಂತೆ, ಲೇಸು, ಚೆನ್ನಾಯಿತು, ಸರಿಯಾಗಿದೆ, ಎನ್ನಿಸಿಕೊಂಡು ದ್ರೌಪದಿ ಬಾಳುವೆ ಮಾಡುವ ಕ್ರಮವನ್ನು ಸಲ್ಲಿಸುತ್ತಲಿದ್ದಳು.
ಹಿಕ್ಕು= ತಲೆಗೂದಲನ್ನು ಹಣಿಗೆಯಿಂದ ಹಿಕ್ಕು,- ಸಿಕ್ಕು ಬಿಡಿಸಿ ಓರಣಗೊಳಿಸು.
ಅರ್ಥ:ಆ ಸುದೇಷ್ಣಾ ದೇವಿಯ ಉದ್ದದ ತಲೆಕೂದಲನ್ನು ಬಾಚುಹಣಿಗೆಯಿಂದ ಹಿಕ್ಕಿ ಸಿಕ್ಕು ಬಿಡಿಸಿ ಓರಣಗೊಳಿಸುತ್ತಿದ್ದಳು. ಸಂತೋಷದಿಂದ ಮಲ್ಲಗೆ ಹೂವಿನ ದಂಡೆಸುರಳಿಯ ಸೂಸನ್ನು ಅವಳಿಗೆ ಮುಡಿಸುವಳು. ಆ ರಾಣಿಯ ಮನಸ್ಸಿಗೆ ಪ್ರೀತಿಯಾಗುವಂತೆ ನೆದೆದುಕೊಳ್ಳವಳು. ದ್ರೌಪದಿಯು ಪತಿಗಳ ಆದೇಶದಂತೆ, ಲೇಸು, ಚೆನ್ನಾಯಿತು, ಸರಿಯಾಗಿದೆ, ಎನ್ನಿಸಿಕೊಂಡು ಬಾಳುವೆ ಮಾಡುವ ಕ್ರಮವನ್ನು ಸಲ್ಲಿಸುತ್ತಲಿದ್ದಳು.
ಜವನ ಮಗ ಸನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜರಾಯನ ತನಯನಿರ್ದ ಶಿಖಂಡಿ ವೇಷದಲಿ||
ಜವಳಿ ಮಕ್ಕಳು ತುರಗ ಗೋವ್ರಜ
ನಿವಹರಾದರು ಕಮಲಮುಖಿ ಕಾ
ಲವನು ಕಳೆದಳು ರಾಯನೊಲುಮೆಯ ಕೆಳದಿಯರ ಕೂಡ ||೩೪||
ಪದವಿಭಾಗ-ಅರ್ಥ: ಜವನ ಮಗ= ಯಮನ ಮಗ - ಧರ್ಮಜ, ಸನ್ಯಾಸಿ ವೇಷದಿ, ಪವನಸುತ= ವಾಯುವಿನ ಮಗ- ಭೀಮ ಬಾಣಸಿನ= ಅಡಿಗೆನೆಯಲ್ಲಿ ಮನೆಯಲಿ, ದಿವಿಜರಾಯನ ತನಯನು= ಇಂದ್ರನ ಮಗ, ಇರ್ದ= ಇದ್ದನು, ಶಿಖಂಡಿ ವೇಷದಲಿ, ಜವಳಿ ಮಕ್ಕಳು = ನಕುಲ ಸಹದೇವರು, ತುರಗ ಗೋವ್ರಜ ನಿವಹರಾದರು= ಕುದುರೆ, ಆಕಳು ಕಾಯುವವರು, ನಿರ್ವಹಣೆ ಮಾಡವವರು ಆದರು,, ಕಮಲಮುಖಿ ಕಾಲವನು ಕಳೆದಳು ರಾಯನ+ ಒಲುಮೆಯ ಕೆಳದಿಯರ ಕೂಡ.=
ಅರ್ಥ: ಧರ್ಮಜ, ಸನ್ಯಾಸಿ ವೇಷದಲ್ಲಿ ಕಂಕ ಎಂಬ ಹಸರು ಪಡೆದು ಇದ್ದನು;, ಭೀಮನು ವಲಲ ಎಂಬ ಹೆಸರಿನಲ್ಲಿ ಬಾಣಸಿಗನಾಗಿ ಅಡಿಗೆನೆಯಲ್ಲಿ ಮನೆಯಲ್ಲಿ ಇದ್ದನು; ಇಂದ್ರನ ಮಗ ಅರ್ಜುನನು ಬೃಹನ್ನಳೆ ಎಂದು ಹೆಸರಿಟ್ಟುಕೊಂಡು ಶಿಖಂಡಿ ವೇಷದಲ್ಲಿ ಇದ್ದನು; ಅವಳಿ ಮಕ್ಕಳಾದ ನಕುಲ ಸಹದೇವರು ದಾಮಗ್ರಂಥಿ, ತಂತ್ರಿಪಾಲ ಎಂಬ ಹೆಸರಿನಲ್ಲಿ ಕುದುರೆ ಮತ್ತು ಆಕಳು ಕಾಯುವವರು ಮತ್ತು ನಿರ್ವಹಣೆ ಮಾಡವವರು ಆದರು; ದ್ರೌಪದಿ ವಿರಾಟರಾಜನ ಪ್ರೀತಿಯ ರಾಣಿ ಮತ್ತು ಕೆಳದಿಯರ ಜೊತೆ ಸೇವೆಮಾಡುತ್ತಾ ಕಾಲವನ್ನು ಕಳೆದಳು. [೫]

 -

♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

 1. *ಕುಮಾರವ್ಯಾಸ ಭಾರತ
 2. *ಕುಮಾರವ್ಯಾಸಭಾರತ-ಸಟೀಕಾ
 3. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧)
 4. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೨)
 5. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೩)
 6. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)
 7. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೫)
 8. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)
 9. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)
 10. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)
 11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
 12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ

ಉಲ್ಲೇಖ[ಸಂಪಾದಿಸಿ]

 1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
 2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
 3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
 4. ದಾಸ ಸಾಹಿತ್ಯ ನಿಘಂಟು
 5. [೧] [೨] [೩] [೪]