ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೬)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಸೂಚನೆ:

ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ ||ಸೂಚನೆ||
ಪದವಿಭಾಗ-ಅರ್ಥ:ಚಂಡ ರಿಪುಬಲ ವಿಲಯ ಹರನು+ ಉದ್ದಂಡ ಬಲ ಶಸ್ತ್ರಾಸ್ತ್ರವನು ಕೈಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ.
 • ಚಂಡ ರಿಪುಬಲ ವಿಲಯ ಹರನು= ಉಗ್ರ ಶತ್ರು ಸೈನ್ಯವನ್ನು ನಾಶಮಾಡುವವನು (ಪ್ರಲಯ ಕಾಲದ ಹರನಂತೆ ಇರುವವನು)+ ಉದ್ದಂಡ ಬಲ= ಪ್ರಬಲ ಬಲಯುತವಾದ, ಶಸ್ತ್ರಾಸ್ತ್ರವನು ಕೈಕೊಂಡು= ಪಡೆದು, ಸುರಪನ ಸೂನು= ಇಂದ್ರನ ಮಗ ಅರ್ಜುನನು, ನಡೆದನು ವೈರಿ ಮೋಹರವ= ಶತ್ರುಗಳ ಸೈನ್ಯವನ್ನು ಎದುರಿಸಲು ನೆಡೆದನು -ಹೋದನು.
ಅರ್ಥ: ಉಗ್ರವಾದ ಶತ್ರು ಸೈನ್ಯವನ್ನು ನಾಶಮಾಡುವವನೂ, ಪ್ರಲಯ ಕಾಲದ ಹರನಂತೆ ಇರುವವನೂ ಆದ ಇಂದ್ರನ ಮಗ ಅರ್ಜುನನು ಪ್ರಬಲ ಬಲಯುತವಾದ, ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಶತ್ರುಗಳ ಸೈನ್ಯವನ್ನು ಎದುರಿಸಲು ಹೋದನು.[೧][೨]
~~ಓಂ~~

ಕೌರವನ ಸೇನಾ ಸಾಗರ, ಉತ್ತರಕುಮಾರನ ದಿಗ್‍ಭ್ರಮೆ[ಸಂಪಾದಿಸಿ]

ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ |
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ || ೧ ||
ಪದವಿಭಾಗ-ಅರ್ಥ: ಎಲೆ ಪರೀಕ್ಷಿತ ತನಯ ಕೇಳ್ ನೃಪತಿಲಕನು+ ಅತಿ ವೇಗದಲಿ ರಥವನು ಕೊಳುಗುಳಕೆ ತರೆ, ಕಂಡನು+ ಉತ್ತರ ಮುಂದೆ ದೂರದಲಿ ತಳಿತ ಕುಂತದ ಬಾಯಿ ಧಾರೆಯ ಹೊಳವುಗಳ ಹೊದರಿ+ ಎದ್ದ ಸಿಂಧದ ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ
 • ಎಲೆ ಪರೀಕ್ಷಿತ ತನಯ- ಜನಮೇಜಯನೇ, ಕೇಳ್ ನೃಪತಿಲಕನು- (ಅರ್ಜುನನು)+ ಅತಿ ವೇಗದಲಿ ರಥವನು ಕೊಳುಗುಳಕೆ- ರಣರಂಗದ ಹತ್ತಿರ, ತರೆ- ತರಲು, ಕಂಡನು+ ಉತ್ತರ ಮುಂದೆ ದೂರದಲಿ ತಳಿತ= (ಚಿಗುರಿದ) ಎತ್ತಿ ಹಿಡಿದ ಕುಂತದ- ಕತ್ತಿ, ಈಟಿಗಳ, ಬಾಯಿ ಧಾರೆಯ ಹೊಳವುಗಳ- ಹೊಳಪುಗಳನ್ನು, ಹೊದರೆದ್ದ- ಗುಚ್ಛವಾಗಿ ಎತ್ತಿ ಹಿಡಿದಿರುವ,ಸಿಂಧದ ಸೆಳೆಯ= ವಿಧವಿಧವಾದ ಬಣ್ಣಗಳಿಂದ ಕೂಡಿದ ವಸ್ತು, ಚಿತ್ರದ ಪತಾಕೆಗಳನ್ನೂ, ಸೀಗುರಿಗಳ- ಚಾಮರಗಳನ್ನೂ, ಬಾವುಟಗಳನ್ನೂ, ಸುರಂಭದ ಸಕಲ ಮೋಹರವ= ಸಿದ್ಧವಾದ ಸಕಲ ಸೈನ್ಯವನ್ನೂ, ಉತ್ತರ ಮುಂದೆ ದೂರದಲ್ಲಿ ಕಂಡನು.
 • ಹೊದರು= ಗುಚ್ಛ; ಪೊದೆ; ಕುಂತ= ಒಂದು ಬಗೆಯ ಆಯುಧ.; ಸಿಂಧ= ವಿಧವಿಧವಾದ ಬಣ್ಣಗಳಿಂದ ಕೂಡಿದ ವಸ್ತು, ಚಿತ್ರದ ಪತಾಕೆ
ಅರ್ಥ: ಎಲೆ ಜನಮೇಜಯನೇ, ಕೇಳು, ಅರ್ಜುನನು ಅತಿ ವೇಗದಿಂದ ರಥವನ್ನು ರಣರಂಗದ ಹತ್ತಿರ ತರಲು, ಉತ್ತರನು ಮುಂದೆ ದೂರದಲ್ಲಿ, ಎತ್ತಿ ಹಿಡಿದ ಕತ್ತಿ, ಈಟಿಗಳ, ಬಾಯಿ ಧಾರೆಯ ಹೊಳಪುಗಳನ್ನು ಗುಂಪಾಗಿ ಎತ್ತಿ ಹಿಡಿದಿರುವಾಯುಧಗಳನ್ನೂ, ವಿಧವಿಧವಾದ ಬಣ್ಣಗಳಿಂದ ಕೂಡಿದ ಚಿತ್ರದ ಪತಾಕೆಗಳನ್ನೂ, ಚಾಮರಗಳನ್ನೂ, ಸಿದ್ಧವಾಗಿ ನಿಂತಿರುವ ಸಕಲ ಸೈನ್ಯವನ್ನೂ, ಮುಂದೆ ದೂರದಲ್ಲಿ ಕಂಡನು.
ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ |
ನರನಿಕಾಯದ ಜಲಚರೌಘದ
ತರದ ವಾದ್ಯಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ || ೨ ||
ಪದವಿಭಾಗ-ಅರ್ಥ: ಕರಿಘಟೆ+ ಆವಳಿಯ+ ಒಡ್ಡುಗಲ್ಲಿನ, ತುರಗ ನಿಕರದ ತೆರೆಯ, ತೇರಿನ ಹೊರಳಿಗಳ, ಸುಳಿಯ+ ಆತಪತ್ರದ- ಕೊಡೆ, ಛತ್ರಿ, ಬಹಳ ಬುದ್ಬುದದ, ನರನಿಕಾಯದ ಜಲಚರ+ ಔಘದ ತರದ ವಾದ್ಯಧ್ವನಿಯ ರವದ+ ಉಬ್ಬರದೊಳು+ ಇದ್ದುದು ಬಹಳ ಜಲನಿಧಿಯಂತೆ ಕುರುಸೇನೆ.
 • ಕರಿಘಟೆ+ ಆವಳಿಯ+ ಒಡ್ಡುಗಲ್ಲಿನ= ಆನೆಗಳ ಗುಂಪುಗಳ ಸೈನ್ಯ- ಸಮುದ್ರದಂಡೆಯ ಒಡ್ಡು ಕಲ್ಲುಗಳಂತೆ, ತುರಗ ನಿಕರದ ತೆರೆಯ= ಕುದುರೆಸವಾರರ ಸೈನ್ಯ ಸಮುದ್ರದ ತರೆಗಳಂತೆ, ತೇರಿನ ಹೊರಳಿಗಳ= ರಥಗಳ ಸಾಲು ಸಾಲು, ಸುಳಿಯ+- ಸಮುದ್ರದ ಸುಳಿಯಂತೆ, ಆತಪತ್ರದ- ಕೊಡೆ, ಛತ್ರಿ, ಬಹಳ ಬುದ್ಬುದದ- ಛತ್ರಿ, ಚಾಮರ ಬಾವುಟಗಳು ಸಮುದ್ರದ ನೊರೆಯಂತೆ, ಬಹಳ ನರನಿಕಾಯದ ಜಲಚರ+= ಅಲ್ಲಿದ್ದ ನರರು- ಸೈನಿಕರ ನಿಕಾಯ-ಸಮೂಹವು ಸಮುದ್ರದ ಜಲಚರಗಳಂತೆ, ಔಘದ(ಗುಂಪಿನ) ತರದ- ನಾನಾ ವಿಧದ, ವಾದ್ಯಧ್ವನಿಯ ರವದ+-ಸದ್ದಿನ,// ಉಬ್ಬರದೊಳು+ ಇದ್ದುದು ಬಹಳ ಜಲನಿಧಿಯಂತೆ- ದೊಡ್ಡ ಸಮುದ್ರದಂತೆ- ಕುರುಸೇನೆ- ಇದ್ದುದು.
ಅರ್ಥ: ಆನೆಗಳ ಗುಂಪುಗಳ ಸೈನ್ಯವು- ಸಮುದ್ರದಲ್ಲಿ ಎದ್ದಿರುವ ಒಡ್ಡು ಕಲ್ಲುಗಳಂತೆ, ಕುದುರೆ ಸವಾರರ ಸೈನ್ಯ ಸಮುದ್ರದ ತರೆಗಳಂತೆ, ರಥಗಳ ಸಾಲು ಸಾಲು, ಸಮುದ್ರದ ಸುಳಿಯಂತೆ, ಎತ್ತಿ ಹಿಡಿದ ಛತ್ರಿ, ಚಾಮರ ಬಾವುಟಗಳು ಸಮುದ್ರದ ಬುದ್ಬುದ ನೊರೆಯಂತೆ, ಅಲ್ಲಿದ್ದ ಸೈನಿಕರ ಸಮೂಹವು ಸಮುದ್ರದ ಜಲಚರಗಳಂತೆ, ಗುಂಪಿನ ನಾನಾ ವಿಧದ, ವಾದ್ಯಧ್ವನಿಯ ಸದ್ದು ಸಮುದ್ರಘೋಷದಂತೆ ತೊರಿ, ಉಬ್ಬರದಲ್ಲಿರುವ ಸಮುದ್ರದಂತೆ ಆ ಕುರುಸೇನೆ ದೊಡ್ಡ ಸಮುದ್ರದ ಹಾಗೆ ಇದ್ದಿತು.
ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ |
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ || ೩ ||
ಪದವಿಭಾಗ-ಅರ್ಥ: ಜಡಿವ ಖಡ್ಗದ ಕಿಡಿಯ ಸೇನೆಯ ಕಡುಹುಗಳ ಕೇಸುರಿಯ ಬಲದ+ ಉಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ ಇಡಿದ ಧೂಳಿಯ ಧೂಮ ರಾಶಿಯಪಡೆ ವಿರಾಟನ ಮಗನ ಕಂಗಳಿಗೆ+ ಒಡನೊಡನೆ ದಾವಾಗ್ನಿಯಂತಿರೆ ತೋರಿತು+ ಇದಿರಿನಲಿ.
 • ಜಡಿವ-ಝಳುಪಿಸುವ ಖಡ್ಗದ ಕಿಡಿಯ, ಸೇನೆಯ ಕಡುಹುಗಳ ಕೇಸುರಿಯ ಬಲದ+= ಉಗ್ರಸಿಂಹದ ಶಕ್ತಿಯ ಉಗ್ಗಡದ= ಪರಾಕ್ರಮದ, ರಭಸದ ರೌದ್ರರವ ಛಟಛಟಿತ ನಿಸ್ವನದ= ಛಟಛಟ ಎಂಬ ಸದ್ದಿನ, ಇಡಿದ= ತುಂಬಿದ, ಧೂಳಿಯ ಧೂಮ ರಾಶಿಯ ಪಡೆ- ಸೈನ್ಯ, ವಿರಾಟನ ಮಗನ ಕಂಗಳಿಗೆ+ ಒಡನೊಡನೆ- ಮತ್ತೆಮತ್ತೆ ದಾವಾಗ್ನಿಯಂತಿರೆ= ಪ್ರಳಯಕಾಲದ ಅಗ್ನಿಯಂತೆ, ತೋರಿತು+ ಇದಿರಿನಲಿ.
 • ಉಗ್ಗಡ (ನಾ)= ಉತ್ಕಟತೆ. ಗಟ್ಟಿಯಾದ ಕೂಗು. ಅತಿಶಯವಾದ; ಕಡುಹು= ಪರಾಕ್ರಮವನ್ನು ತೋರು. ಉಗ್ರತೆ. ವೇಗ. ಶೌರ್ಯ
ಅರ್ಥ: ಕೌರವನ ದೊಡ್ಡ ಸೇನೆಯಲ್ಲಿ ಕಾಣುವ ಝಳುಪಿಸುವ ಖಡ್ಗದ ಕಿಡಿಯ, ಸೇನೆಯ ಉಗ್ರಸಿಂಹ ಶಕ್ತಿಯ ಪರಾಕ್ರಮದ, ರಭಸದ ರೌದ್ರ ಸದ್ದು, ಛಟಛಟ ಎಂಬ ಸದ್ದಿನಿಂದ ತುಂಬಿದ ಮತ್ತು ಧೂಳಿನ ಧೂಮ(ಹೊಗೆ) ರಾಶಿಯಿಂದ ಆವರಿಸಿದ ಸೈನ್ಯ, ವಿರಾಟನ ಮಗನ ಕಣ್ಣುಗಳಿಗೆ ಮತ್ತೆಮತ್ತೆ ನೋಡುತ್ತಿದ್ದಂತೆ ಅವನ ಎದುರಿನಲ್ಲಿ ಪ್ರಳಯಕಾಲದ ಅಗ್ನಿಯಂತೆ ತೋರಿತು.
ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೊ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ |
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ || ೪ ||
ಪದವಿಭಾಗ-ಅರ್ಥ: ಪ್ರಳಯ ಮೇಘದ ಮಾತೃಕೆಯೊ ಕರಿಕುಲವೊ ಸಿಡಿಲಿನ ಗರುಡಿಯೊ ಕಳಕಳವೊ ಕಲ್ಪಾನಲನ ಧೂಮ+ ಆವಳಿಯೊ ಕೈದುಗಳೊ ನೆಲನ ದಡ್ಡಿಯ ಬೆಟ್ಟದ+ ಅಡವಿಯೊ ತಳಿತ ಟೆಕ್ಕೆಯವೋ ಜಗಂಗಳನು+ ಅಳಿವ ಜಲಧಿಯೊ ಸೇನೆಯೋ ನಾವು+ ಅರಿಯೆವು+ ಇದನು+ ಎಂದ
 • ಈ ಸೈನ್ಯ- ಪ್ರಳಯ ಮೇಘದ ಮಾತೃಕೆಯೊ= ಪ್ರಳಯಕಾಲದಲ್ಲಿ ಬರುವ ಮೇಘದ ಮಾತೃಕೆಯಾದ ಪರಾಶಕ್ತಿಯೋ! ಕರಿಕುಲವೊ= ಆನೆಗಳ ಹಿಂಡೋ! ಸಿಡಿಲಿನ ಗರುಡಿಯೊ= ಸಿಡಿಲಿನ ಆರ್ಭಟವೋ! ಕಳಕಳವೊ ಕಲ್ಪಾನಲನ= ಕಲ್ಪದ ಅಂತ್ಯದಲ್ಲಿ ಬರುವ ಪ್ರಳಯಕಾಲದ ಅಗ್ನಿಯ ಜ್ವಾಲೆಯ ಸದ್ದೋ!! ಧೂಮ+ ಆವಳಿಯೊ= ಅಥವಾ ಅದರ ಹೊಗೆಯ ಸಮೂಹವೋ! ಕೈದುಗಳೊ= ಆಯುಧಗಳ ವಡ್ಡು ಮತ್ತು ಸದ್ದೋ! ನೆಲನ ದಡ್ಡಿಯ ಬೆಟ್ಟದ+ ಅಡವಿಯೊ= ಇದು ಭೂಮಿಯ ಎತ್ತರದಮೇಲಿನ ಬೆಟ್ಟದ ಕಾಡೋ! ತಳಿತ ಟೆಕ್ಕೆಯವೋ= ಎತ್ತಿಹಿಡಿದ ಬಾವುಟಗಳೋ! ಜಗಂಗಳನು+ ಅಳಿವ ಜಲಧಿಯೊ= ಎಲ್ಲಾ ಜಗತ್ತನ್ನೂ ನಾಶಮಾಡುವ ಪ್ರಳಯ ಸಮುದ್ರವೋ! ಸೇನೆಯೋ ನಾವು+ ಅರಿಯೆವು+ ಇದನು+= ಇದೇನು ಸೇನೆಯೇ ಸರಿಯೋ! ನನಗೆ ತಿಳಿಯಲಾಗದು ಎಂದ.
ಅರ್ಥ: ಉತ್ತರಕುಮಾರನು ಯುದ್ಧವಿದ್ಯೆಯಲ್ಲಿ ಪರಿಣಿತನಾದರೂ ನಿಜವಾದ ಯುದ್ಧದಲ್ಲಿ ಭಾಗಿಯಾಗಿರಲಿಲ್ಲ; ದೊಡ್ಡ ಸೈನ್ಯವನ್ನು ಕಂಡಿರಲಿಲ್ಲ. ಈಗ ಕೌರವನ ಸೈನ್ಯವನ್ನು ನೋಡಿ ಉತ್ತರ ಬೆಚ್ಚಿಬಿದ್ದ. ಅವನು ಈ ಸೈನ್ಯವು ಪ್ರಳಯಕಾಲದಲ್ಲಿ ಬರುವ ಮೇಘದ ಮಾತೃಕೆಯಾದ ಪರಾಶಕ್ತಿಯೋ! ಆನೆಗಳ ಹಿಂಡೋ! ಸಿಡಿಲಿನ ಆರ್ಭಟವೋ! ಕಲ್ಪದ ಅಂತ್ಯದಲ್ಲಿ ಬರುವ ಪ್ರಳಯಕಾಲದ ಅಗ್ನಿಯ ಜ್ವಾಲೆಯ ಸದ್ದೋ!! ಅಥವಾ ಅದರ ಹೊಗೆಯ ಸಮೂಹವೋ! ಆಯುಧಗಳ ವಡ್ಡು ಮತ್ತು ಸದ್ದೋ! ಇದು ಭೂಮಿಯ ಎತ್ತರದಮೇಲಿನ ಬೆಟ್ಟದ ಕಾಡೋ! ಎತ್ತಿಹಿಡಿದ ಬಾವುಟಗಳೋ! ಎಲ್ಲಾ ಜಗತ್ತನ್ನೂ ನಾಶಮಾಡುವ ಪ್ರಳಯಕಾಲದಲ್ಲ ಉಕ್ಕಿಬರುವ ಸಮುದ್ರವೋ! ಇದೇನು ಸೇನೆಯೇ ಸರಿಯೋ! ನನಗೆ ತಿಳಿಯಲಾಗದು ಎಂದ ಉತ್ತರ.
ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ |
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ || ೫ ||
ಪದವಿಭಾಗ-ಅರ್ಥ: ಕಾಲಕೂಟದ- (ವಿಷ) ತೊರೆಯೊ, ಮಾರಿಯ ಗೂಳೆಯವೊ(ಗುಂಪು), ಮೃತ್ಯುವಿನ ಗಂಟಲತಾಳಿಗೆಯೊ, ಭೈರವನ ಥಟ್ಟೋ, ಜವನ ಜಂಗುಳಿಯೊ, ಕಾಲರುದ್ರನ ನೊಸಲ ವಹ್ನಿಜ್ವಾಲೆಯೋ, ಕೌರವನ ಸೇನಾಜಾಲವೋ, ಶಿವಯೆನುತ ಹೆದರಿದನು+ ಆಂದು ಸುಕುಮಾರ
ಅರ್ಥ: ಇದೇನು ಸೈನ್ಯವೋ ಅಥವಾ ಕಾಲಕೂಟ ವಿಷದ ನದಿಯೋ! ನರಭಕ್ಷಕ ಮಾರಿಯ ಗುಂಪೋ!, ಎಲ್ಲವನ್ನೂ ನುಂಗುವ ಮೃತ್ಯುವಿನ ಗಂಟಲತಾಳಿಗೆಯೊ! ಅನೇಕ ಭೈರವರ ದಂಡೋ!, ಯಮನ ಗುಂಪೋ!, ಪ್ರಳಯಕಾಲದಲ್ಲಿ ರುದ್ರನು ಬಿಡುವ ಹಣೆಗಣ್ಣಿನ ಬೆಂಕಿಯ ಜ್ವಾಲೆಯೋ!, ಅಥವಾ ನಿಜವಾಗಿ ಇದು ಕೌರವನ ಸೇನಾಜಾಲವೋ ಸೇನಾಸಮೂಹವೋ!, ಶಿವ- ಶಿವಾ! ಇದೇನು ಸೈನ್ಯ ಎಂದು ಅರಮನೆಯಲ್ಲಿ ಸುಖವಾಗಿ ಬೆಳೆದ ಸುಕುಮಾರ ಉತ್ತರನು ಅಂದು ಹೆದರಿ ಹೌಹಾರಿದನು.
ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ |
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ || ೬ ||
ಪದವಿಭಾಗ-ಅರ್ಥ: ಕಡೆಗೆ ಹಾಯವು ಕಂಗಳು+ ಈ ಬಲ+ ಗ+ ಕಡಲ ಮನವು ಈಸಾಡಲಾರದು ವೊಡಲು+ವಿ+ ಇಡಿದಿರಲು+ ಏನ ಕಾಣಲುಬಾರದು+ ಅದ್ಭುತವ ಪೊಡವಿ+ ಯ+ ಈದುದೊ ಮೋಹರವನು+ ಇದರೊಡನೆ ಕಾದುವನು+ ಆವನು+ ಆತನೆ ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ.
 • ಕಡೆಗೆ ಹಾಯವು ಕಂಗಳು+= ಈ ಸೈನ್ಯದ ಕಡೆ- ತುದಿಗೆ ಕಣ್ನುನೋಟ ಹೋಗದು; ಈ ಸೈನ್ಯದ ಅಂಚು-ತುದಿಯೇ ಕಣ್ಣಿಗೆ ಕಾಣುವುದಿಲ್ಲ! ಈ ಬಲ+ ಗ+ ಕಡಲ ಮನವು ಈಸಾಡಲಾರದು= ಈ ಸೈನ್ದದ ಸಮುದ್ರವನ್ನು ಮನಸ್ಸೇ ಈಜಲಾರದು - ಮನಷ್ಯ ಈಜುವುದುಂಟೇ?. ವೊ-ಒಡಲು+ವಿ+ ಇಡಿದಿರಲು+ ಏನ ಕಾಣಲುಬಾರದು+ ಅದ್ಭುತವ ಪೊಡವಿಯು+ ಈದುದೊ ಮೋಹರವನು+= ಭೂಮಿಯ ಹೊಟ್ಟೆ ಇಡಿದಿರಲು- ಬಿಡುವಿಲ್ಲದಂತೆ ತುಂಬಿಲು ಏನನ್ನೂ ಕಾಣದಂತಾಗಿದೆ.+ ಈ ಅದ್ಭುತವ ಪೊಡವಿಯು- ಭೂಮಿಯೇ + ಈದುದೊ ಮೋಹರವನು- ಈ ಸೈನ್ವನ್ನು ಜನಿಸಿತೇ (ಹಡೆಯಿತೇ))! ಇದರೊಡನೆ ಕಾದುವನು+ ಆವನು+ ಆತನೆ ಮೃಡನು= ಈಸೈನ್ಯದೊಡನೆ ಯಾರು ತಾನೇ ಯುದ್ಧ ಮಾಡುವರು? ಯುದ್ಧಮಾಡಿದರೆ ಅವನು ಶಿವನೇ ಸರಿ! ಶಿವ ಶಿವ ಕಾದಿ ಗೆಲಿದೆವು= ಯುದ್ಧಮಾಡಿ ಗೆದ್ದೆವು! ಬಲಕೆ- ಸೈನ್ಯಕ್ಕೆ, ನಮೊಯೆಂದ.ಇಗೋ ಸೈನ್ಯಕ್ಕೆ ನಮೋ ನಮಃ ಎಂದ. (ಈ ನಮಸ್ಕಾರದಿಂದ ಗೆದ್ದಂತಾಯಿತು - ಸಾಕು ಎಂದ.)
ಅರ್ಥ:ಈ ಸೈನ್ಯದ ಕಡೆ- ತುದಿಗೆ ಕಣ್ಣುನೋಟವೇ ಹೋಗದು; ಈ ಸೈನ್ಯದ ಅಂಚು-ತುದಿಯೇ ಕಣ್ಣಿಗೆ ಕಾಣುವುದಿಲ್ಲ! ಈ ಸೈನ್ದದ ಸಮುದ್ರವನ್ನು ಮನಸ್ಸೇ ಈಜಲಾರದು - ಮನಷ್ಯ ಈಜುವುದುಂಟೇ?. ಭೂಮಿಯ ಹೊಟ್ಟೆ ಬಿಡುವಿಲ್ಲದಂತೆ ತುಂಬಿರಲು ಏನೂ ಕಾಣದಂತಾಗಿದೆ. ಈ ಅದ್ಭುತವಾದ ಈ ಸೈನ್ವನ್ನು ಭೂಮಿಯೇ ಜನಿಸಿತೇ (ಹಡೆಯಿತೇ)! ಈ ಸೈನ್ಯದೊಡನೆ ಯಾರು ತಾನೇ ಯುದ್ಧ ಮಾಡುವರು? ಯುದ್ಧಮಾಡಿದರೆ ಅವನು ಶಿವನೇ ಸರಿ! ಶಿವ ಶಿವ ಯುದ್ಧಮಾಡಿ ಗೆದ್ದೆವು! ಸೈನ್ಯಕ್ಕೆ, ಇಗೋ ಸೈನ್ಯಕ್ಕೆ ನಮೋ ನಮಃ ಎಂದ. (ಈ ನಮಸ್ಕಾರದಿಂದ ಗೆದ್ದಂತಾಯಿತು - ಸಾಕು ಎಂದ.)

ಉತ್ತರಕುಮಾರನ - ಯುದ್ಧ ನಿರಾಕರಣೆ[ಸಂಪಾದಿಸಿ]

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು |
ಮಿಸುಕಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ || ೭ ||
ಪದವಿಭಾಗ-ಅರ್ಥ: ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತೆ+ ಆದೆನು ಬೃಹನ್ನಳೆ+ ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು ಮಿಸುಕಬಾರದು ಪ್ರಳಯ ಕಾಲನ ಮುಸುಕನು+ ಉಗಿವವನು+ ಆರು, ಕೌರವನು+ ಅಸಮ ಬಲನೈ ರಥವ ಮರಳಿಚು ಜಾಳಿಸುವೆನು+ ಎಂದ.
 • ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತೆ+ ಆದೆನು= ಹಸಿದಿರುವ ಮಾರಿ ಒಬ್ಬಳಲ್ಲ- ಅನೇಕ ಹಸಿದ ಮಾರಿಗಳ ಮದ್ಯೆ ನಾನು ಕುರಿಯಂತೆ ನುಗ್ಗಿದ ಹಾಗಾಯಿತು. ಬೃಹನ್ನಳೆ+ ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು, ಮಿಸುಕಬಾರದು= ಬೃಹನ್ನಳೆ ಕುದುರೆಗಳನ್ನು ಓಡಿಸಬೇಡ; ಕುದುರೆಗಳನ್ನು ತಡೆದು ನಿಲ್ಲಿಸು. ಚಿಮ್ಮಟಿಗೆಯನು ಬಿಸುಡು- ಎಸೆದುಬಿಡು! ಒಂದು ಹೆಜ್ಜೆಯನ್ನೂ ಮಿಸುಕಬಾರದು- ಇಡಬಾರದು. ಪ್ರಳಯ ಕಾಲನ ಮುಸುಕನು+ ಉಗಿವವನು+ ಆರು,= ಈ ಸೈನ್ಯ ಪ್ರಳಯಕಾಲದ ರುದ್ರನಂತಿದೆ- ಮಲಗಿದ ರುದ್ರನ ಮುಸಕನ್ನು ತೆಗೆಯುವವನು ಯಾರಿದ್ದಾರೆ? ಕೌರವನು+ ಅಸಮ ಬಲನೈ ರಥವ ಮರಳಿಚು ಜಾಳಿಸುವೆನು+ ಎಂದ= ಕೌರವನು ಅಸಮ- ಸರಿಸಾಟಿಯಿಲ್ಲದ ಬಲಶಾಲಿಯೇ ಸರಿ. ರಥವನ್ನು ಮರಳಿಚು- ಹಿಂದಕ್ಕೆ ಹೊಡಿ. ಹಿಂತಿರುಗುವೆನು- ನಡುಗುತ್ತಿದ್ದೇನೆ ಎಂದ.
ಅರ್ಥ: ಈ ಸೈನ್ಯವನ್ನು ನೋಡಿದರೆ- ಹಸಿದಿರುವ ಮಾರಿ ಒಬ್ಬಳಲ್ಲ- ಅನೇಕ ಹಸಿದ ಮಾರಿಗಳ ಮದ್ಯೆ ಕುರಿಯಂತೆ ನಾನು ನುಗ್ಗಿದ ಹಾಗಾಯಿತು. ಬೃಹನ್ನಳೆ ಕುದುರೆಗಳನ್ನು ಓಡಿಸಬೇಡ; ಕುದುರೆಗಳನ್ನು ತಡೆದು ನಿಲ್ಲಿಸು. ಚಿಮ್ಮಟಿಗೆಯನು ಬಿಸುಡು- ಎಸೆದುಬಿಡು! ಒಂದು ಹೆಜ್ಜೆಯನ್ನೂ ಮುಂದೆ ಇಡಬಾರದು. ಈ ಸೈನ್ಯ ಪ್ರಳಯಕಾಲದ ರುದ್ರನಂತಿದೆ- ಮಲಗಿದ ರುದ್ರನ ಮುಸಕನ್ನು ತೆಗೆಯುವವನು ಯಾರಿದ್ದಾರೆ? ಕೌರವನು ಸರಿಸಾಟಿಯಿಲ್ಲದ ಬಲಶಾಲಿಯೇ ಸರಿ. ರಥವನ್ನು ಹಿಂದಕ್ಕೆ ಹೊಡಿ. ಹಿಂತಿರುಗುವೆನು, ನಡುಗುತ್ತಿದ್ದೇನೆ ಎಂದ.
ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು |
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು || ೮ ||
ಪದವಿಭಾಗ-ಅರ್ಥ: ಎಲೆ ಕುಮಾರಕ ಮೊದಲ ಚುಂಬನದೊಳಗೆ ಹಲು ಬಿದ್ದಂತೆ, ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು, ಅಳುಕಲಾಗದು ನಿಮ್ಮ ತಂದೆಯ ಕುಲಕೆ ಕುಂದನು ತಾರದಿರು, ಮನಗೆಲವಿನಲಿ ಕಾದು+ ಎನುತ ರಥವನು ಬೇಗ ಹರಿಸಿದನು.
 • ಅರ್ಜುನನು, 'ಎಲೆ ಕುಮಾರನೇ! ಪ್ರೇಮದ ಮೊದಲ ಹಂತದಲ್ಲಿ ಚುಂಬನ ಮಾಡಿದಾಗ ಹಲ್ಲು ಉದುರಿದ ಹಾಗೆ ಆಯಿತು,'ಎಂದನು. ("ಮೊದಲ ಚುಂಬನದೊಳಗೆ ಹಲು ಬಿದ್ದಂತೆ", ಗಾದೆಗಳಲ್ಲಿ ಈ ಮಾತು ಸೇರಿದೆ.) ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು= ಯುದ್ಧವನ್ನು ಆರಂಭಿದುವ ಮೊದಲೇ ಯುದ್ಧಭೀತಿಯನ್ನು ಹೊಂದಿದೆಯಲ್ಲಾ!, ಅಳುಕಲಾಗದು ನಿಮ್ಮ ತಂದೆಯ ಕುಲಕೆ ಕುಂದನು ತಾರದಿರು, ಮನಗೆಲವಿನಲಿ ಕಾದು+ ಎನುತ ರಥವನು ಬೇಗ ಹರಿಸಿದನು= ಯುದ್ಧಕ್ಕೆ ಹೆದರಬಾರದು, ನಿಮ್ಮ ತಂದೆಯ ಕುಲಕ್ಕೆ ಕುಂದನ್ನು ತರಬೇಡ, ಮನ ಗೆಲವಿನಲಿ ಕಾದು+= ಧೈರ್ಯ ಮತ್ತು ಗೆಲುವಿನಿಂದ ಯುದ್ಧಮಾಡು ಎಂದು ಹೇಳಿ, ಪಾರ್ಥನು ರಥವನ್ನು ಬೇಗ ಮುಂದಕ್ಕೆ ಹರಿಸಿದನು.
ಅರ್ಥ: ಅರ್ಜುನನು, 'ಎಲೆ ಕುಮಾರನೇ! ಪ್ರೇಮದ ಮೊದಲ ಹಂತದಲ್ಲಿ ಚುಂಬನ ಮಾಡಿದಾಗ ಹಲ್ಲು ಉದುರಿದ ಹಾಗೆ ಆಯಿತು,'ಎಂದನು. ಯುದ್ಧವನ್ನು ಆರಂಭಿದುವ ಮೊದಲೇ ಯುದ್ಧಭೀತಿಯನ್ನು ಹೊಂದಿದೆಯಲ್ಲಾ! ಯುದ್ಧಕ್ಕೆ ಹೆದರಬಾರದು, ನಿಮ್ಮ ತಂದೆಯ ಕುಲಕ್ಕೆ ಕುಂದನ್ನು ತರಬೇಡ, ಧೈರ್ಯ ಮತ್ತು ಗೆಲುವಿನಿಂದ ಯುದ್ಧಮಾಡು ಎಂದು ಹೇಳಿ, ಪಾರ್ಥನು ರಥವನ್ನು ಬೇಗ ಮುಂದಕ್ಕೆ ಹರಿಸಿದನು.
ಸಾರಿ ಬರ ಬರಲವನ ತನು ಮಿಗೆ
ಬಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ |
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ || ೯ ||
ಪದವಿಭಾಗ-ಅರ್ಥ: ಸಾರಿ ಬರ ಬರಲು+ ಅವನ ತನು ಮಿಗೆ ಬಾರಿಸಿತು ಮೈ ಮುರಿದು ರೋಮ ವಿಕಾರ ಘನ ಕಾಹೇರಿತು+ ಅವಯವ ನಡುಗಿ ಡೆಂಡಣಿಸಿ ಭೂರಿ ಭಯ ತಾಪದಲಿ ತಾಳಿಗೆ ನೀರು+ ದ+ ತೆಗೆದುದು ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ.
 • ಸಾರಿ ಬರ ಬರಲು+ ಅವನ ತನು ಮಿಗೆ ಬಾರಿಸಿತು= ರಥವು ಮುಂದೆ ಸಾರಿ ಬರ ಬರುತ್ತಿಲು+,ಅವನ ತನು- ದೇಹ ಮಿಗೆ ಬಾರಿಸಿತು- ಕುಗ್ಗಿತು, ಮೈ ಮುರಿದು- ಹಿಂಡಿದಂತಾಗಿ, ರೋಮ ವಿಕಾರ ಘನ ಕಾಹೇರಿತು+= ರೋಮಗಳು ಎದ್ದುನಿಂತು ಮೈ ಬಿಸಿಯಾಯಿತು. ಅವಯವ ನಡುಗಿ ಡೆಂಡಣಿಸಿ= ದೇಹದ ಅಂಗಾಂಗಗಳು ನಡುಗಿ ದೇಹವು ಓಲಾಡಿ, ಭೂರಿ ಭಯ ತಾಪದಲಿ ತಾಳಿಗೆ ನೀರು+ ದ+ ತೆಗೆದುದು= ಅತಿಭಯದ ಸಂಕಟದಿಂದ ನಾಲಿಗೆ ಒಣಗಿತು. ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ= ತುಟಿಗಳು ಒಣಗಿದವು ಕಣ್ಣುಗಳು ಸೀದಂತೆ ಹೊರಚಾಚಿದವು. ಕರದಲಿ ಮುಚ್ಚಿದನು ಮುಖವ= ಆಗ ಅವನು ತನ್ನ ಕೇಗಳಿಂದ ಮುಖವನ್ನು ಮುಚ್ಚಕೊಂಡನು.
ಅರ್ಥ: ರಥವು ಮುಂದೆ ಸಾರಿ ಹೋಗುತ್ತಿರಲು ಅವನ ದೇಹ ಕುಗ್ಗಿತು, ಮೈ ಹಿಂಡಿದಂತಾಗಿ, ರೋಮಗಳು ಎದ್ದುನಿಂತು ಮೈ ಬಿಸಿಯಾಯಿತು. ದೇಹದ ಅಂಗಾಂಗಗಳು ನಡುಗಿ ದೇಹವು ಓಲಾಡಿ, ಅತಿಭಯದ ಸಂಕಟದಿಂದ ನಾಲಿಗೆ ಒಣಗಿತು. ತುಟಿಗಳು ಒಣಗಿದವು; ಕಣ್ಣುಗಳು ಸೀದಂತೆ ಹೊರಚಾಚಿದವು. ಆಗ ಅವನು ತನ್ನ ಕೈಗಳಿಂದ ಮುಖವನ್ನು ಮುಚ್ಚಕೊಂಡನು.
ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾಬಲವ |
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ || ೧೦ ||
ಪದವಿಭಾಗ-ಅರ್ಥ: ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ ಸುಡು ಸುಡು ಕಾಕಲಾ- ಕಣ್ಣು+ ಒಡೆದವೇ ಕಾಣಾ ಮಹಾಬಲವ ನಾಕ ನಿಳಯರಿಗೆ+ ಅರಿದು, ನಿನಗೆ ವಿವೇಕವು+ ಎಳ್ಳನಿತಿಲ್ಲ ತೆಗೆ ತೆಗೆಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ.
 • ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ= ಸಾರಥಿಯೇ ರಥವನ್ನು ಮುಂದಕ್ಕೆ ಓಡಿಸಿ ನನ್ನ ಗಂಟಲನ್ನು ಕೊಯ್ಯವ ಕೆಲಸ ಮಾಡುವೆ? ಸುಡು ಸುಡು ಕಾಕಲಾ(ಕಾಕು- ಕೆಟ್ಟ ಮನುಷ್ಯ) ಕಣ್ಣು+ ಒಡೆದವೇ= ಸುಡು ಸುಡು, ಕೇಡಿಗನಲಾ! ನೋಡುವ ಆ ನಿನ್ನ ಕಣ್ಣುಗಳು ಒಡೆದವೇ? ಕಾಣಾ ಮಹಾಬಲವ= ಎದುರಿಗೆ ಆ ಮಹಾ ಸೈನ್ಯವನ್ನು ಕಾಣೋ ನೋಡೋ!? ನಾಕ (ದೇವಲೋಕ) ನಿಳಯರಿಗೆ+ ಅರಿದು= ಅದನ್ನು ಎದುರಿಸಲು ದೇವಲೋಕದ ವಾಸಿಗಳಿಗೂ ಅರಿದು- ಅಸಾದ್ಯ. ನಿನಗೆ ವಿವೇಕವು+ ಎಳ್ಳನಿತಿಲ್ಲ - ಎಳ್ಳಿನಷ್ಟೂ ಇಲ್ಲ, ತೆಗೆ ತೆಗೆಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ= ನಿಲ್ಲಿಸು ಸಾಕು, ಕುದುರೆಯ ವಾಘೆಗಳನ್ನು ಹಿಡಿದು ತಿರುಗಿಸಿ ಹೊಡೆ ಎಂದ ಉತ್ತರ.
ಅರ್ಥ: ಸಾರಥಿಯೇ ರಥವನ್ನು ಮುಂದಕ್ಕೆ ಓಡಿಸಿ ನನ್ನ ಗಂಟಲನ್ನು ಕೊಯ್ಯವ ಕೆಲಸ ಮಾಡುವೆ? ಸುಡು ಸುಡು, ಕೇಡಿಗನೇ ನಿನ್ನ ನೋಡುವ ಆ ಕಣ್ಣುಗಳು ಒಡೆದವೇ? ಎದುರಿಗೆ ಆ ಮಹಾ ಸೈನ್ಯವನ್ನು ನೋಡೋ! ಅದನ್ನು ಎದುರಿಸಲು ದೇವಲೋಕದ ವಾಸಿಗಳಿಗೂ ಅಸಾದ್ಯ. ನಿನಗೆ ವಿವೇಕವು ಎಳ್ಳಿನಷ್ಟೂ ಇಲ್ಲ, ತೆಗೆ ತೆಗೆ ಸಾಕು ನಿಲ್ಲಿಸು, ಕುದುರೆಯ ವಾಘೆಗಳನ್ನು ಹಿಡಿದು ತಿರುಗಿಸಿ ಹೊಡೆ ಎಂದ ಉತ್ತರ.
ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆ ತೆಗೆದು |
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ || ೧೧ ||
ಪದವಿಭಾಗ-ಅರ್ಥ: ನುಡಿಯ ಕೇಳದೆ ಮುಂದೆ ಹತ್ತೆಂಟು+ ಅಡಿಯನು+ ಅರ್ಜುನ ರಥವ ಹರಿಸಲು ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನು ಅರೆ ತೆಗೆದು ಹಿಡಿ ಹಯವನು+ ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ ನಿನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ.
 • ಉತ್ತರನ ನುಡಿಯ- ಮಾತನ್ನು ಕೇಳದೆ ಮುಂದೆ ಹತ್ತೆಂಟು+ ಅಡಿಯನು+ ಅರ್ಜುನ ರಥವ ಹರಿಸಲು, ಉತ್ತರನು ಕೈಯಲ್ಲಿ, ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನು ಅರೆ ತೆಗೆದು- ಹಿಡಿತ ಸಡಿಲವಾಗಿ,// ಹಿಡಿ ಹಯವನು+ ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ ನಿನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ= ಹಿಡಿ ಹಯವನು+- ಸಾರಥಿ ಕುದುರೆಯನ್ನು ಹಿಡಿದು ನಿಲ್ಲಿಸು; ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ- ಕೊಲೆಗಾರ ಸಾರಥಿಯೇ, ನಿನ್ನೊಡೆಯರಲ್ಲಾ- ನಾವು ನಿನ್ನೊಡೆಯರಲ್ಲವೇ? ಸ್ವಾಮಿ ದುರುಹಿಕೆ ಲೇಸು ಲೇಸೆಂದ- ನೀನು ಮಾಡುವ ಸ್ವಾಮಿ ದ್ರೋಹಕ್ಕೆ - ಲೇಸು ಲೇಸು (ಓಳ್ಳೆಯ ಕಲಸ.), ಎಂದ
 • ಟಿಪ್ಪಣಿ: ಉತ್ತರನನ್ನು ಕರೆದುಕೊಂಡು ಅವನ ಚತುರಂಗ ಬಲವನ್ನೂ ರಥರಕ್ಷಕರನ್ನೂ ಸರಂಜಾಮನ್ನೂ ಹಿಂದೆ ಬಿಟ್ಟು, ಸಾಗರದ ಸಮಾನ ಶೂರರ ಸೇನೆಯ ಎದುರಿಗೆ ಅನನುಭವಿ ಉತ್ತರನನ್ನು ತಂದು ನಿಲ್ಲಿಸಿದ್ದಾನೆ ಅರ್ಜುನ. ಅರ್ಜುನನಿಗೆ ಈ ಸ್ಥಿತಿ ನಿರೀಕ್ಷಯಲ್ಲಿತ್ತು; ಅದರೆ ಉತ್ತರನಿಗೆ ಯಮನ ಬಾಯಿಯಲ್ಲಿ ಹೋಗುವಂತೆ ಆದುದು ಸಹಜ.
ಅರ್ಥ: ಉತ್ತರನ ಮಾತನ್ನು ಕೇಳದೆ ಮುಂದೆ ಹತ್ತೆಂಟು ಅಡಿದೂರ ಅರ್ಜುನ ರಥವನ್ನು ಹರಿಸಲು, ಉತ್ತರನು ಕೈಯಲ್ಲಿ, ಹಿಡಿದ ಬಿಲ್ಲಂಬುಗಳು ಕೈಹಿಡಿತ ಸಡಿಲವಾಗಿ ಬಿದ್ದವು. 'ಸಾರಥಿ ಕುದುರೆಯನ್ನು ಹಿಡಿದು ನಿಲ್ಲಿಸು; ಕೊಲೆಗಾರ ಸಾರಥಿಯೇ, ನಾವು ನಿನ್ನ ಒಡೆಯರಲ್ಲವೇ? ನೀನು ಮಾಡುವ ಸ್ವಾಮಿ ದ್ರೋಹಕ್ಕೆ - ಲೇಸು ಲೇಸು (ಓಳ್ಳೆಯ ಕಲಸ.),' ಎಂದ
ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ |
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ || ೧೨ ||
ಪದವಿಭಾಗ-ಅರ್ಥ: ಎಂದೊಡೆ+ ಅರ್ಜುನ ನಗುತ ರಥವನು ಮುಂದೆ ನಾಲ್ಕೆಂಟು+ ಅಡಿಯ ನೂಕಲು, ಕೊಂದನು+ ಈ ಸಾರಥಿಯೆ+ ಎನುತ ಸಂವರಿಸಿ ಮುಂಜೆರಗ ಬಂದು ಮೆಲ್ಲನೆ ರಥದ ಹಿಂದಕೆ ನಿಂದು, ಧುಮ್ಮಿಕ್ಕಿದನು ಬದುಕಿದೆನು+ ಎಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ.
 • ಉತ್ತರನು,'ನೀನು ಸ್ವಾಮಿದ್ರೋಹ ಮಾಡುತ್ತಿರುವೆ ಎಂದಾಗ, ಎಂದೊಡೆ+ ಅರ್ಜುನ ನಗುತ- ನಗುತ್ತಾ, ರಥವನು ಮುಂದೆ ನಾಲ್ಕೆಂಟು+ ಅಡಿಯ ನೂಕಲು= ರಥವನ್ನು ನಾಲ್ಕು-ಎಂಟು ಅಡಿಯಷ್ಟು ಮುಂದೆ ಹೊಡೆಯಲು,, ಕೊಂದನು+ ಈ ಸಾರಥಿಯೆ+ ಎನುತ ಸಂವರಿಸಿ- = ಉತ್ತರನು ಈ ಸಾರಥಿ ಯುದ್ಧಕ್ಕೆ ನೂಕಿ, ತನ್ನನ್ನು ಕೊಂದುಹಾಕುತ್ತಾನೆ ಎಂದುಕೊಂಡು, ಮುಂಜೆರಗ ಬಂದು ಮೆಲ್ಲನೆ ರಥದ ಹಿಂದಕೆ ನಿಂದು,= ರಥದ ಹಿಂಭಾಗದಲ್ಲಿ ಮುಂದೆ ಮುಂದೆ ಜರುಗಿ, ಎದ್ದುನಿಂತು ಕೆಳಗೆ ಹಾರಿ,/ ಧುಮ್ಮಿಕ್ಕಿದನು= ಹಾರಿ ಓಡಿದನು; ಬದುಕಿದೆನು+ ಎಂದು= ಬದುಕಿದೆ ಎಂದು ಕೊಂಡನು. ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ= ತಲೆಯ ಕೂದಲು ಎತ್ತಿಕಟ್ಟಿದ್ದು ಬಿಚ್ಚಿ ಕೆದರಿಹೋಯಿತು, ಹಾಗೆಯೇ ನಿಟ್ಟೋಟದಿಂದ (ನೇರವಾದ ಓಟ) ಹಿಂದಕ್ಕೆ ಓಡಿದನು.
ಅರ್ಥ: ಉತ್ತರನು,'ನೀನು ಸ್ವಾಮಿದ್ರೋಹ ಮಾಡುತ್ತಿರುವೆ ಎಂದಾಗ, ಅರ್ಜುನ ನಗುತ್ತಾ, ರಥವನ್ನು ನಾಲ್ಕು-ಎಂಟು ಅಡಿಯಷ್ಟು ಮುಂದೆ ಹೊಡೆಯಲು, ಉತ್ತರನು ಈ ಸಾರಥಿಯು ಯುದ್ಧಕ್ಕೆ ನೂಕಿ, ತನ್ನನ್ನು ಕೊಂದುಹಾಕುತ್ತಾನೆ ಎಂದುಕೊಂಡು, ರಥದ ಹಿಂಭಾಗದ ಕಡೆ ಮುಂದೆ ಮುಂದೆ ಜರುಗಿ, ಎದ್ದುನಿಂತು ಕೆಳಗೆ ಹಾರಿ ಓಡಿದನು; ಬದುಕಿದೆ ಎಂದು ಕೊಂಡನು. ('ಬದುಕಿದೆಯ ಬಡ ಜೀವ,' ಎಂದು) ತಲೆಯ ಕೂದಲು ಎತ್ತಿಕಟ್ಟಿದ್ದು ಬಿಚ್ಚಿ ಕೆದರಿಹೋಯಿತು, ಹಾಗೆಯೇ ನಿಟ್ಟೋಟದಿಂದ ಹಿಂತಿರುಗಿ ಓಡಿದನು.
ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ |
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ || ೧೩ ||
ಪದವಿಭಾಗ-ಅರ್ಥ: ನೋಡಿದನು ಕಲಿಪಾರ್ಥನು+ ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು+ ಎಲೆ ಪಾಪಿ ಹಾಯ್ದನು ಹಿಡಿಯಬೇಕು ಎನುತ ಕೂಡೆ ಸೂಟಿಯೊಳಟ್ಟಲಿಳೆಯು+ ಅಲ್ಲಾಡಲು+ ಅಹಿಪತಿ ಹೆದರಲು+ ಇತ್ತಲು ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ
 • ನೋಡಿದನು ಕಲಿಪಾರ್ಥನು+ ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು+= ಕಲಿಪಾರ್ಥನು ಈ ಕೇಡಾಡಿಯಾದ(ಕೆಡುಕನ್ನು ಮಾಡುವ) ಉತ್ತರನು ಕೆದರಿರುವ ಕೂದಲನ್ನು ಬಿಟ್ಟುಕೊಂಡು ಕೆಟ್ಟೋಡುತಿರಲು- ವೇಗವಾಗಿ ಓಡುತ್ತಿರುವುದನ್ನು ನೋಡಿದನು + // ಎಲೆ ಪಾಪಿ ಹಾಯ್ದನು ಹಿಡಿಯಬೇಕು ಎನುತ= ಎಲೆ ಪಾಪಿ- 'ಯುದ್ಧಬಿಟ್ಟೊಡುವ ಅಪರಾಧಿ', ಕೂಡೆ ಸೂಟಿಯೊಳು+ಅಟ್ಟಲು+ ಇಳೆಯು+ ಅಲ್ಲಾಡಲು+ ಅಹಿಪತಿ ಹೆದರಲು+= ತಕ್ಷಣ ಚುರುಕಾಗಿ ಬೆನ್ನಟ್ಟಿದನು, ಅವನ- ಅರ್ಜುನನ ಹೆಜ್ಜೆಯ ರಭಸಕ್ಕೆ ಭೂಮಿಯು ಅಲುಗಿ, ಅಹಿಪತಿ- ಭೂಮಿಯನ್ನು ಹೊತ್ತ ವಾಸುಕಿಯು ಹೆದರಿದನು- ಇದೇನು ಎಂದು! ಇತ್ತಲು ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ= ಇತ್ತಲು= ಇತ್ತ ಕೌರವನ ಸೇನೆಯಲ್ಲಿ ಇದನ್ನು ನೋಡಿ ಇಡೀ ಕೌರವಸೇನೆ;/ ಕೆಡೆದುದು ನಗೆಯ ಕಡಲೊಳಗೆ= ನಗೆಯ ಸಮುದ್ರದಲ್ಲಿ ಬಿದ್ದಿತು- ಮುಳುಗಿತು.
ಅರ್ಥ: ಕಲಿಪಾರ್ಥನು ಈ ಕೇಡಾಡಿಯಾದ ಉತ್ತರನು ಕೆದರಿರುವ ಕೂದಲನ್ನು ಬಿಟ್ಟುಕೊಂಡು ವೇಗವಾಗಿ ಓಡುತ್ತಿರುವುದನ್ನು ನೋಡಿದನು. ಎಲೆ ಪಾಪಿ ಎಲೆ ಪಾಪಿ-ಎಂದು, ತಕ್ಷಣ ಚುರುಕಾಗಿ ಬೆನ್ನಟ್ಟಿದನು, ಅರ್ಜುನನ ಹೆಜ್ಜೆಯ ರಭಸಕ್ಕೆ ಭೂಮಿಯು ಅಲುಗಿ, ಭೂಮಿಯನ್ನು ಹೊತ್ತ ವಾಸುಕಿಯು ಹೆದರಿದನು- ಇದೇನು ಎಂದು! ಇತ್ತ ಕೌರವನ ಸೇನೆಯಲ್ಲಿ ಇದನ್ನು ನೋಡಿ ಇಡೀ ಕೌರವಸೇನೆ ನಗೆಯ ಸಮುದ್ರದಲ್ಲಿ ಬಿದ್ದಿತು.
ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು |
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ || ೧೪ ||
ಪದವಿಭಾಗ-ಅರ್ಥ: ಎಲೆಲೆ ಕಾದಲು ಬಂದ ವೀರನ ಬಲುಹ ನೋಡಾ, ಶಿವ ಶಿವಾ ಬೆಂಬಳಿಯಲಿ+ ಅಟ್ಟುವ ವೀರನು+ ಆವನೊ ಸುಭಟನಹನು+ ಅವನು ತಿಳಿಯಲರಿದು+ ಇವನು+ ಆವನೋ ವೆಗ್ಗಳೆಯನಹನು+ ಆಕಾರದಲಿ ನೆರೆ ಫಲುಗುಣನ ಹೋಲುವನು+ ಎನುತ ಗಜಬಜಿಸಿತು+ ಅರಿ ಸೇನೆ.
 • ಎಲೆಲೆ ಕಾದಲು- ಯುದ್ಧಕ್ಕೆ ಬಂದ ವೀರನ ಬಲುಹ-ಶೌರ್ಯ, ನೋಡಾ, ಶಿವ ಶಿವಾ ಬೆಂಬಳಿಯಲಿ- ಬೆನ್ನಹಿಂದೆ+ ಅಟ್ಟುವ ವೀರನು+ ಆವನೊ- ಯಾವನೋ ಸುಭಟು+ ಅಹನು- ಆಗಿರುವನು+ ಅವನು ತಿಳಿಯಲು+ ಅರಿದು- ಅರಿಯಲಾಗದು,+ ಇವನು+ ಆವನೋ ವೆಗ್ಗಳೆಯನು- ಉತ್ತಮನು+ ಅಹನು- ಇದ್ದಾನೆ+ ಆಕಾರದಲಿ ನೆರೆ- ಬಹಳ ಫಲುಗುಣನ ಹೋಲುವನು+ ಎನುತ ಗಜಬಜಿಸಿತು+ ಅರಿ- ಶತ್ರು, ಸೇನೆ.
ಅರ್ಥ: ಎಲೆಲೆ ಣೋಡಿ! ಯುದ್ಧಕ್ಕೆ ಬಂದ ವೀರನ ಶೌರ್ಯವನ್ನು ನೋಡಾ! (ಹೆದರಿ ಓಡುವುದನ್ನು) ಶಿವ ಶಿವಾ ಬೆನ್ನಹಿಂದೆ ಅಟ್ಟಿಸಿಕೊಂಡು ಹೋಗುತ್ತಿರುವ ವೀರನು ಯಾವನೊ! ಯಾವನೋ ವೀರನಾಗಿದ್ದಾನೆ. ಅವನು ಯಾರೆಂದು ತಿಳಿಯಲಾಗದು; ಇವನು ಯಾವನೋ ಉತ್ತಮನಿದ್ದಾನೆ. ಆಕಾರದಲ್ಲಿ ಹೆಚ್ಚಾಗಿ ಅರ್ಜುನನ್ನು ಹೋಲುವನು, ಎನ್ನುತ್ತಾ ಶತ್ರು ಸೇನೆಯ ಜನರು ಗಜಬಜಿಸಿ ಮಾನಾಡಿಕೊಂರು.
ಈತ ಸಾರಥಿಯಳವಿನಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ವೀಕ್ಷಿಸಲು |
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ || ೧೫ ||
ಪದವಿಭಾಗ-ಅರ್ಥ: ಈತ ಸಾರಥಿಯ+ ಅಳವಿನಲಿ ಮಿಗುವಾತನು+ ಉತ್ತರನು+ ಅರ್ಜುನಂಗೆ+ ಈ ಸೂತತನವೆತ್ತಲು, ನಪುಂಸಕ ವೇಷ ವೀಕ್ಷಿಸಲು, ಈತನು+ ಅರ್ಜುನನು+ ಆಗಲಿ+ ಆ ಪುರುಹೂತನಾಗಲಿ ರಾಮನಾಗಲಿ ಆತಡೆ+ ಇರಿವೆನು ಬರಲಿಯೆಂದನು ಖಾತಿಯಲಿ ಕರ್ಣ.
 • ಈತ ಸಾರಥಿಯ+ ಅಳವಿನಲಿ-ಅಳವು- ಸಾಮರ್ಥ್ಯ- ಉದ್ಯೋದಲ್ಲಿ, ಮಿಗುವಾತನು (ಮತ್ತೊಬ್ಬನುನು)+ ಉತ್ತರನು+ ಅರ್ಜುನಂಗೆ+ ಈ ಸೂತತನವೆತ್ತಲು- ಸಾರಥಿತನ ಹೇಗೆ ಒಪ್ಪುವುದು?, ನಪುಂಸಕ ವೇಷ ವೀಕ್ಷಿಸಲು- ನೋಡಿದರೆ; ಈತನು+ ಅರ್ಜುನನು - ನೇ+ ಆಗಲಿ- ಆಗಿರಲಿ,+ ಆ ಪುರುಹೂತನಾಗಲಿ- ಇಂದ್ರನೇ ಆಗಿರಲಿ, ರಾಮನಾಗಲಿ ಆತಡೆ= ಎದುರಿಸಿ ನಿಂತರೆ+ ಇರಿವೆನು- ಕತ್ತರಿಸುವೆನು, ಬರಲಿಯೆಂದನು ಖಾತಿಯಲಿ- ಸಿಟ್ಇನಿಂದ, ಕರ್ಣ.
ಅರ್ಥ: ಈತ ಸಾರಥಿಯ ಉದ್ಯೋದಲ್ಲಿ ಸಮರ್ಥನು;, ಮತ್ತೊಬ್ಬನುನು ಉತ್ತರನು. ಅರ್ಜುನನಿಗೆ ಈ ಸಾರಥಿತನ ಹೇಗೆ ಒಪ್ಪುವುದು?, ನೋಡಿದರೆ ನಪುಂಸಕ ವೇಷ. ಆಗ ಈತನು ಅರ್ಜುನನೇ ಆಗಿರಲಿ, ಆ ಇಂದ್ರನೇ ಆಗಿರಲಿ, ರಾಮನಾಗಲಿ ಎದುರಿಸಿ ನಿಂತರೆ ಇವನನ್ನು ಕತ್ತರಿಸುವೆನು, ಬರಲಿಯೆಂದನು ಸಿಟ್ಟಿನಿಂದ, ಕರ್ಣ.
ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ |
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ || ೧೬ ||
ಪದವಿಭಾಗ-ಅರ್ಥ: ಇತ್ತಲು+ ಅರ್ಜುನನು+ ಉತ್ತರನ ಬೆಂಬತ್ತಿ ಬಂದನು ಹೋದೆಯಾದರೆ ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ ಮೃತ್ಯುವೋ ಸಾರಥಿಯೊ ಪಾಪಿಯನು+ ಎತ್ತಣಿಂದವೆ ಮಾಡಿ ಕೊಂಡೆನು ಎನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ
 • ಇತ್ತಲು= ಸೈನ್ಯದಿಂದ ಈ ಕಡೆ, ಇತ್ತಲು+ ಅರ್ಜುನನು+ ಉತ್ತರನ ಬೆಂಬತ್ತಿ ಬಂದನು, (ಮುಂದೆ)ಹೋದೆಯಾದರೆ ಕಿತ್ತು ಬಿಸುಡುವೆ- ಕತ್ತರಿಸಿಹಾಕುವೆ, ನಿನ್ನ ತಲೆಯನು; ನಿಲ್ಲು ನಿಲ್ಲು+ ಎನುತ; (ಇವನು)ಮೃತ್ಯುವೋ ಸಾರಥಿಯೊ ಪಾಪಿಯನು+ ಎತ್ತಣಿಂದವೆ(ಎಲ್ಲಿಂದ) ಮಾಡಿ ಕೊಂಡೆನು ಎನುತ್ತ ಮರಳಿದು- ತಿರುಗಿ ನೋಡಿ ನಿಲ್ಲದೆ ಮತ್ತೆ ಸೈವರಿದ- ಮುಂದೆ ಓಡಿದ.
ಅರ್ಥ: ಸೈನ್ಯದಿಂದ ಈ ಕಡೆ, ಅರ್ಜುನನು ಉತ್ತರನನ್ನು ಬೆಂಬತ್ತಿ- ಅಟ್ಟಿಸಿಕೊಂಡು ಬಂದನು, ಅವನು ಉತ್ತರನಿಗೆ, ನಿಲ್ಲು ನಿಲ್ಲು ಎನುತ್ತಾ, ಮುಂದೆ ಹೋದೆಯಾದರೆ ನಿನ್ನ ತಲೆಯನ್ನು ತ್ತರಿಸಿಹಾಕುವೆ ಎಂದು ಹೆದರಿಸಿದನು; ಉತ್ತರನು ಇವನು ಮೃತ್ಯುವೋ ಸಾರಥಿಯೊ! ಈ ಪಾಪಿಯನು ಎಲ್ಲಿಂದ ತಂದು ಸಾರಥಿಯನ್ನಾಗಿ ಮಾಡಿಕೊಂಡೆನಪ್ಪಾ, ಎನುತ್ತಾ ತಿರುಗಿ ನೋಡಿ ನಿಲ್ಲದೆ ಮತ್ತೆ ಮುಂದೆ ಓಡಿದ.
ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು |
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ || ೧೭||
ಪದವಿಭಾಗ-ಅರ್ಥ: ಇಟ್ಟಣಿಸಿ ನರ ನೂರು ಹಜ್ಜೆಯೊಳು+ ಅಟ್ಟಿ ಹಿಡಿದನು+, ಇದೇನ ಮಾಡಿದೆ ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು, ದಿಟ್ಟತನ ಮಿಗೆ ಹೆಂಗಳ+ ಇದಿರಲಿ ಹೊಟ್ಟುಗುಟ್ಟಿದೆ ಹಗೆಗಳ+ ಇದಿರಲಿ ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನ+ ಅನ್ವಯವ.
 • ಇಟ್ಟಣಿಸಿ(ಇಟ್ಟಣಿಸಿ= ಅತಿಶಯ, ಹೆಚ್ಚೆಂದರೆ), ನರ- ಅರ್ಜುನ, ನೂರು ಹಜ್ಜೆಯೊಳು+ ಅಟ್ಟಿ ಹಿಡಿದನು+, ಇದೇನ ಮಾಡಿದೆ= ಇದೇನು ಹೇಡಿತನದ ಕೆಲಸ ಮಾಡಿದೆ./ ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು= ತಂದೆಗೆ ಹುಟ್ಟಿದವನಲ್ಲವೇ?/, ದಿಟ್ಟತನ= ಧೈರ್ಯ, ಮಿಗೆ= ಬಹಳ ಹೆಂಗಳ+ ಇದಿರಲಿ ಹೊಟ್ಟುಗುಟ್ಟಿದೆ (ಸಾರವಿಲ್ಲದ ಜಂಬ ಕೊಚ್ಚಿದೆ)= ಸಾರವಿಲ್ಲದ ಜಂಬ ಕೊಚ್ಚಿದೆ;/ ಹಗೆಗಳ+ ಇದಿರಲಿ ಬಿಟ್ಟುಕೊಂಡೆ= ಶತ್ರುಗಳ ಇದುರಿನಲ್ಲಿ ಎದುರಿಸದೆ ಬಿಟ್ಟು ಓಡಿದೆ./ ದುರಾತ್ಮ ಮುರಿದೆ ವಿರಾಟನ+ ಅನ್ವಯವ= ಕೆಡುಕಿಯೇ ಯುದ್ಧ ಭೂಮಿಯಿಂದ ಓಡಿ ವಿರಾಟನ ವಂಶವನ್ನು ಮುರಿಯುವ ಕೆಲಸ ಮಾಡಿದೆ, ಎಂದನು ಪಾರ್ಥ.
ಅರ್ಥ:ಅರ್ಜುನನು ಹೆಚ್ಚೆಂದರೆ ನೂರು ಹಜ್ಜೆಯಲ್ಲಿ ಅಟ್ಟಿಕೋಡು ಹೋಗಿ ಉತ್ತರನನ್ನು ಹಿಡಿದನು. ಇದೇನು ಹೇಡಿತನದ ಕೆಲಸ ಮಾಡಿದೆ! ಕ್ಷತ್ರಿಯನಲ್ಲವೇ ನೀನು? ತಂದೆಗೆ ಹುಟ್ಟಿದವನಲ್ಲವೇ? ಬಹಳ ಧೈರ್ಯ,ಸಾಹಸಗಳ ಮಾತನ್ನು ಹೆಂಗಳೆಯರ ಇದಿರಿನಲ್ಲಿ ಸಾರವಿಲ್ಲದ ಜಂಬ ಕೊಚ್ಚಿದೆ; ಶತ್ರುಗಳ ಇದುರಿನಲ್ಲಿ, ಎದುರಿಸದೆ ಬಿಟ್ಟು ಓಡಿದೆ. ಕೆಡುಕಿಯೇ ಯುದ್ಧ ಭೂಮಿಯಿಂದ ಓಡಿ ವಿರಾಟನ ವಂಶವನ್ನು ಮುರಿಯುವ ಕೆಲಸ ಮಾಡಿದೆ, ಎಂದನು ಪಾರ್ಥ.
ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು |
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ || ೧೮ ||
ಪದವಿಭಾಗ-ಅರ್ಥ: ಹಲುಗಿರಿದು ಬಾಯೊಳಗೆ ಬೆರಳಿಟ್ಟು+ ಅಳುಕಿ ತಲೆವಾಗಿದನು ಸಾರಥಿ ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು; ಕೊಳುಗುಳದೊಳು ಈ ಯೊಡ್ಡ ಮುರಿವು+ ಅಗ್ಗಳೆಯರು+ ಉಂಟೇ ಲೋಗರಿಂದವೆ ಕೊಲಿಸದಿರು, ನೀ ಕುತ್ತಿ ಕೆಡಹು ಕಠಾರಿಯಿದೆ+ ಯೆ+ ಎಂದ.
 • ಹಲುಗಿರಿದು ಬಾಯೊಳಗೆ ಬೆರಳಿಟ್ಟು+ ಅಳುಕಿ ತಲೆವಾಗಿದನು= ನಾಚಿಕೆಯಿಂದ ಉತ್ತರಕೊಡಲಾಗದೆ, ಹಲ್ಲುಕಿರಿದು ಕೃತಕ ನಗುವನ್ನು ತೊರಿ, ನಾಚಿಕೆಯಿಂದ ತಲೆ ತಗ್ಗಿಸಿದನು. ಮತ್ತೆ ಹೇಳಿದನು, ಸಾರಥಿ ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು= ಸಾರಥಿಯೇ ನನ್ನನ್ನು ಬಿಟ್ಟು ಕಳಿಸಪ್ಪಾ! ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬಂದವನು ಎಂದು ಕೊಳ್ಳುತ್ತೇನೆ./ ಕೊಳುಗುಳದೊಳು ಈ ಯೊಡ್ಡ ಮುರಿವ+ ಅಗ್ಗಳೆಯರು+ ಉಂಟೇ= ಯುದ್ಧದಲ್ಲಿ ಈ ದೊಡ್ಡ ಸೈನ್ಯವನ್ನು ಒಬ್ಬರೇ ಸೋಲಿಸುವ ಶ್ರೇಷ್ಠವೀರರು ಇದ್ದಾರೆಯೇ? ಲೋಗರಿಂದವೆ ಕೊಲಿಸದಿರು, ನೀ ಕುತ್ತಿ ಕೆಡಹು ಕಠಾರಿಯಿದೆ+ ಯೆ+ ಎಂದ= ನಿನಗೆ ನನ್ನನ್ನು ಸಾಯಿಸಬೇಕೆಂದಿದ್ದರೆ- ಅವರಿವರಿಂದ ಕೊಲ್ಲಿಸಬೇಡ, ನೀನೇ ಕೊಂದುಬಿಡು - ಇಗೋ ಕತ್ತಿಯನ್ನು ತೆಗೆದುಕೋ, ಎಂದ ಉತ್ತರ.
ಅರ್ಥ:ನಾಚಿಕೆಯಿಂದ ಉತ್ತರಕೊಡಲಾಗದೆ, ಹಲ್ಲುಕಿರಿದು ಕೃತಕ ನಗುವನ್ನು ತೊರಿ, ಬಾಯಲ್ಲಿ ತುದಿಬೆರಳನ್ನು ಇಟ್ಟುಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿದನು. ಮತ್ತೆ ಹೇಳಿದನು, ಸಾರಥಿಯೇ, ನನ್ನನ್ನು ಬಿಟ್ಟು ಕಳಿಸಪ್ಪಾ! ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬಂದವನು ಎಂದು ಕೊಳ್ಳುತ್ತೇನೆ. ಈ ಯುದ್ಧದಲ್ಲಿ ಈ ದೊಡ್ಡ ಸೈನ್ಯವನ್ನು ಒಬ್ಬರೇ ಸೋಲಿಸುವ ಶ್ರೇಷ್ಠವೀರರು ಎಲ್ಲಿಯಾದರೂ ಇದ್ದಾರೆಯೇ? ನಿನಗೆ ನನ್ನನ್ನು ಸಾಯಿಸಬೇಕೆಂದಿದ್ದರೆ- ಅವರಿವರಿಂದ ಕೊಲ್ಲಿಸಬೇಡ, ನೀನೇ ಕೊಂದುಬಿಡು - ಇಗೋ ಕತ್ತಿಯನ್ನು ತೆಗೆದುಕೋ, ಎಂದ ಉತ್ತರ.

*ಟಿಪ್ಪಣಿ:ಹಿಂದಿನ ಅವನ ಹುಡುಗಾಟಿಕೆಯ ಜಂಬದ ಮಾತನ್ನು ಬಿಟ್ಟರೆ, ಅಗಾಧ ಸೈನ್ಯದ ಎದುರು ಅವನ ನೆಡೆ- ಅದು ಆ ಸಮಯಕ್ಕೆ ವಾಸ್ತವವಾಗಿತ್ತು.

ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ||
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ || ೧೯ ||
ಪದವಿಭಾಗ-ಅರ್ಥ: ಮನದಲಿ+ ಒಡಲು+ ಒಡೆವಂತೆ ನಗುತ+ ಅರ್ಜುನನು ಗಜರಿದನು+ ಎಲವೊ ಸಭೆಯಲಿ ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ಅನುವರದೊಳು+ ಏನಾಯ್ತು ರಿಪು ವಾಹಿನಿಯನು+ ಇರಿಯದೆ ನಾಡ ನರಿಯವೊಲ್+ ಎನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು= ಯುದ್ಧಮಾಡು ನಡೆಯೆಂದ.
 • ಮನದಲಿ+ ಒಡಲು+ ಒಡೆವಂತೆ ನಗುತ+ ಅರ್ಜುನನು ಗಜರಿದನು= ಅರ್ಜುನನು ಮನಸ್ಸಿನಲ್ಲಿ ಹೊಟ್ಟೆ ಬಿರಿಯುವಂತೆ ನಗುತ್ತಾ, ಗದರಿಸಿದನು;/ 'ಎಲವೊ ಸಭೆಯಲಿ ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ಅನುವರದೊಳು+ ಏನಾಯ್ತು= 'ಎಲವೊ! ಸಭೆಯಲ್ಲಿ ವನಿತೆಯರ ಮುಂದೆ (ಸೊರಹು= ಅತಿಯಾಗಿ ಮಾತನಾಡು)ಸುರಹಿದೆ, ಬಾಯ್ಗೆ ಬಂದಂತೆ ಅತಿಯಾಗಿ ಜಂಬಕೊಚ್ಚಿದೆ./ ಅನುವರದೊಳು+ ಏನಾಯ್ತು= ಆದರೆ ಆನಂತರದ ಯುದ್ಧಭೂಮಿಯಲ್ಲಿ ಏನು ಮಾಡಿದೆ?/ ರಿಪು ವಾಹಿನಿಯನು+ ಇರಿಯದೆ ನಾಡ ನರಿಯವೊಲ್+ ಎನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು= ಯುದ್ಧಮಾಡು ನಡೆಯೆಂದ= ರಿಪು ವಾಹಿನಿಯನು- ಶತ್ರುಸೈನ್ಯದವನ್ನು ಹೊಡೆದುಹಾಕದೆ, ನಾಡ ನರಿಯವೊಲ್ - ನಾಯಿಯಂತೆ ಎನೆಗೆ-ನನಗೆ, ನೀ ಹಲುಗಿರಿಯೆ ಬಿಡುವೆನೆ ಕಾದು- ಯುದ್ಧಮಾಡು/ ನೀನು ಹಲ್ಲುಕಿರಿದರೆ, ಬಿಡುವುದಿಲ್ಲ, ಯುದ್ಧಮಾಡು ನಡೆಯೆಂದ, ಅರ್ಜುನ.
ಅರ್ಥ: ಅರ್ಜುನನು ಮನಸ್ಸಿನಲ್ಲಿ ಹೊಟ್ಟೆ ಬಿರಿಯುವಂತೆ ನಗುತ್ತಾ, ಗದರಿಸಿದನು; 'ಎಲವೊ! ಸಭೆಯಲ್ಲಿ ವನಿತೆಯರ ಮುಂದೆ ಬಾಯಿಗೆ ಬಂದಂತೆ ಅತಿಯಾಗಿ ಜಂಬಕೊಚ್ಚಿದೆ. ಆದರೆ ಆನಂತರದ ಯುದ್ಧಭೂಮಿಯಲ್ಲಿ ಏನು ಮಾಡಿದೆ? ಶತ್ರುಸೈನ್ಯದವನ್ನು ಹೊಡೆದುಹಾಕದೆ, ನಾಯಿಯಂತೆ ನನಗೆ, ನೀನು ಹಲ್ಲುಕಿರಿದರೆ, ಬಿಡುವುದಿಲ್ಲ, ಯುದ್ಧಮಾಡು ನಡೆಯೆಂದ, ಅರ್ಜುನ.
ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು |
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ||೨೦ ||
ಪದವಿಭಾಗ-ಅರ್ಥ: ಹೇವ ಬೇಡಾ ವೀರರು+ ಈ ಪರಿಜೀವಗಳ್ಳರ ಪಥವ ಹಿಡಿವರೆ, ಸಾವಿಗೆ+ ಅಂಜಿದೆವು+, ಈ ನಪುಂಸಕರು+ ಎಮ್ಮ ನೋಡು+ ಎನಲು, ನೀವು ವೀರರು ನೆರೆ ನಪುಂಸಕರು+ ಆವು, ಸಾವವರು+ ಅಲ್ಲ ಲೋಕದ ಜೀವಗಳ್ಳರಿಗೆ+ ಅವು ಗುರುಗಳು ಬಿಟ್ಟು ಕಳುಹು+ ಎಂದ.
 • ಹೇವ ಬೇಡಾ ವೀರರು+ ಈ ಪರಿಜೀವಗಳ್ಳರ ಪಥವ ಹಿಡಿವರೆ= ಅರ್ಜುನ ಎಂದ -ಹಿಂಜರಿಕೆ ಬೇಡ, ಹೆದರಬೇಡ', ಅದಕ್ಕೆ ಉತ್ತರನು, ಸಾವಿಗೆ+ ಅಂಜಿದೆವು- ಸಾವಿಗೆ ಹೆದರುತ್ತೇನೆ ಎಂದ; +, ಈ ನಪುಂಸಕರು+ ಎಮ್ಮ ನೋಡು+ ಎನಲು= 'ನಾವು ನಪುಂಸಕರು, ನಮ್ಮನ್ನು ನೋಡು - ಹೆದರುವುದಿಲ್ಲ', ಎಂದ ಅರ್ಜುನ. ಹಾಗೆನ್ನಲು, ನೀವು ವೀರರು ನೆರೆ ನಪುಂಸಕರು+ ಆವು- ನಾವು, ಸಾವವರು- ಸಾಯುವವರಲ್ಲ+ ಅಲ್ಲ, ಲೋಕದ ಜೀವಗಳ್ಳರಿಗೆ+ ಅವು- ನಾವು, ಗುರುಗಳು ಬಿಟ್ಟು ಕಳುಹು- ಕಳುಹಿಸು+ ಎಂದ.
ಅರ್ಥ: ಅರ್ಜುನ ಎಂದ - ಹೆದರಬೇಡ', ಅದಕ್ಕೆ ಉತ್ತರನು, ಸಾವಿಗೆ ಹೆದರುತ್ತೇನೆ ಎಂದ; 'ನಾವು ನಪುಂಸಕರು, ನಮ್ಮನ್ನು ನೋಡು - ಹೆದರುವುದಿಲ್ಲ', ಎಂದ ಅರ್ಜುನ. ಹಾಗೆನ್ನಲು, ನೀವು ವೀರರು, ಆಶದರೆ ನಾವೇ ನೆರೆ- ದೊಡ್ಡ ನಪುಂಸಕರು; ಸಾಯುವವರಲ್ಲ ಲೋಕದ ಜೀವಗಳ್ಳರಿಗೆಲ್ಲಾ ನಾವು, ಗುರುಗಳು ಎಂದು ತಿಳಿ, ಬಿಟ್ಟು ಕಳುಹಿಸು' ಎಂದ ಉತ್ತರ.
ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು |
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ || ೨೧ ||
ಪದವಿಭಾಗ-ಅರ್ಥ: ಹರುಕನೇ ನೀನು+, ಎಲವೊ ರಾಯರೊಳು+ ಉರುವ ನೃಪ ನಿಮ್ಮಯ್ಯ ನೀನಿಂದು+ ಇರಿದು ಮೆರೆವ+ ಅವಸರವಲಾ ಜವ್ವನದ ಧುರಭರವು ಸರಿ+ಗ+ ಕಳೆಯದ+ ಅಪಕೀರ್ತಿ ರವಿ ಶಶಿ ಮುರಿದು ಬೀಳ್ವನ್ನ ಬರವು+ ಎಲೆ ನರ+ಗು+ ಕುರಿಯೆ ನಡೆ ಕಾಳಗಕೆ+ ಎನುತ ಹಿಡಿದೆಳೆದನು+ ಉತ್ತರನ.
 • ಹರುಕನೇ ನೀನು+, ಎಲವೊ ರಾಯರೊಳು+ ಉರುವ ನೃಪ ನಿಮ್ಮಯ್ಯ= ಹರುಕನೇ- ಕೈಲಾಗದವನೇ, ಅಲ್ಪನೇ ನೀನು+, ಎಲವೊ! ರಾಯರೊಳು+ ಉರುವ ನೃಪ ನಿಮ್ಮಯ್ಯ- ರಾಜರಲ್ಲಿ ಉತ್ತಮ ರಾಜನು ನಿನ್ನ ತಂದೆ.//ನೀನಿಂದು+ ಇರಿದು ಮೆರೆವ+ ಅವಸರವಲಾ ಜವ್ವನದ ಧುರಭರವು= ಯೌವನದಲ್ಲಿ ನೀನು ಇಂದು ಹೋರಾಡಿ ಮೆರೆಯುವ ಯದ್ಧಸಂಭ್ರಮವು ಅವಸರವಲಾ- ಬಂದಿದೆಯಲ್ಲಾ. ಸರಿ+ಗ+ ಕಳೆಯದ+ ಅಪಕೀರ್ತಿ ರವಿ ಶಶಿ ಮುರಿದು ಬೀಳ್ವನ್ನ ಬರವು+= ತೆಗೆದು ಹಾಕಲಾಗದ- ಕಳೆಯಲಾಗದ ಅಪಕೀರ್ತಿಸೂರ್ಯ ಚಂದ್ರರು (ಬೀಳುವವರಗೂ)ಇರುವವರೆಗೂ ಬರುವುದು. ಎಲೆ ನರ+ಗು+ ಕುರಿಯೆ ನಡೆ ಕಾಳಗಕೆ+ ಎನುತ ಹಿಡಿದೆಳೆದನು+ ಉತ್ತರನ= ಎಲೆ ಮಾನವ ಕುರಿಯೇ ಯುದ್ಧಮಾಡು ನೆಡೆ ಎಂದು ಉತ್ತರನನ್ನು ಹಿಡಿದು ಎಳೆದನು.
ಅರ್ಥ: ಕೈಲಾಗದವನೇ, ಅಲ್ಪನೇ ನೀನು, ಎಲವೊ! ರಾಜರಲ್ಲಿ ಉತ್ತಮ ರಾಜನು ನಿನ್ನ ತಂದೆ. ಯೌವನದಲ್ಲಿ ನೀನು ಇಂದು ಹೋರಾಡಿ ಮೆರೆಯುವ ಯದ್ಧಸಂಭ್ರಮವು ಬಂದಿದೆಯಲ್ಲಾ. ಕಳೆಯಲಾಗದ ಅಪಕೀರ್ತಿಸೂರ್ಯ ಚಂದ್ರರು ಇರುವವರೆಗೂ ಬರುವುದು. ಎಲೆ ಮಾನವ ಕುರಿಯೇ ಯುದ್ಧಮಾಡು ನೆಡೆ ಎಂದು ಅರ್ಜುನನು ಉತ್ತರನನ್ನು ಹಿಡಿದು ಎಳೆದನು.
ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ |
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲವನುಗ್ಗಡಿಸುವನು ವೀರ ಸ್ವರ್ಗವಹುದೆಂದ || ೨೨ ||
ಪದವಿಭಾಗ-ಅರ್ಥ: ಕೊಳುಗುಳದೊಳು+ ಓಡಿದೊಡೆ ಹಜ್ಜೆಗೆ ಫಲ- ಮಹಾಪಾತಕವು; ಮುಂದಣಿಗೆ+ ಒಲಿದು ಹಜ್ಜೆಯನು+ ಇಡಲು ಹಜ್ಜೆಯೊಳು+ ಅಶ್ವಮೇಧ ಫಲ ಅಳಿದನು+ ಆದೊಡೆ ದೇವಲೋಕದ ಲಲನೆಯರು ತೊತ್ತಿರು; ಸುರೇಂದ್ರನು ನೆಲವನು+ ಉಗ್ಗಡಿಸುವನು ವೀರ ಸ್ವರ್ಗವು+ ಅಹುದು+ ಎಂದ.
 • ಕೊಳುಗುಳದೊಳು+ ಓಡಿದೊಡೆ ಹಜ್ಜೆಗೆ ಫಲ- ಮಹಾಪಾತಕವು= ಯುದ್ಧದಲ್ಲಿ ಓಡಿಹೋದರೆ ಪ್ರತಿ ಹೆಜ್ಜೆಗೆ ಮಹಾ ಪಾಪಬರುವುದು. ; ಮುಂದಣಿಗೆ+ ಒಲಿದು ಹಜ್ಜೆಯನು+ ಇಡಲು ಹಜ್ಜೆಯೊಳು+ ಅಶ್ವಮೇಧ ಫಲ= ಅದೇ ಮುಂದಕ್ಕೆ ಹೆಜ್ಜೆಯನ್ನಿಟ್ಟರೆ ಅಶ್ವಮೇಧ ಮಾಡಿದ ಫಲ ಸಿಗುವುದು. ಅಳಿದನು+ ಆದೊಡೆ ದೇವಲೋಕದ ಲಲನೆಯರು ತೊತ್ತಿರು= ಸತ್ತರೆ ದೇವಕನ್ಯೆಯರು ಸೇವೆಮಾಡುವರು; ಸುರೇಂದ್ರನು ನೆಲವನು+ ಉಗ್ಗಡಿಸುವನು-ಹೊಗಳುವನು, ವೀರ ಸ್ವರ್ಗವು+ ಅಹುದು+ ಎಂದ= ದೇವೇಂದ್ರನು ಭೂಮಿಗೆ ಬಂದು ಹೊಗಳಿ ಕರೆದುಕೊಂಡು ಹೋಗುವನು. ವೀರಸ್ವರ್ಗ ಸಿಗುವುದು ಎಂದ, ಅರ್ಜುನ.
ಅರ್ಥ: ಯುದ್ಧದಲ್ಲಿ ಓಡಿಹೋದರೆ ಪ್ರತಿ ಹೆಜ್ಜೆಗೆ ಮಹಾ ಪಾಪಬರುವುದು. ಅದೇ ಮುಂದಕ್ಕೆ ಹೆಜ್ಜೆಯನ್ನಿಟ್ಟರೆ ಅಶ್ವಮೇಧ ಮಾಡಿದ ಫಲ ಸಿಗುವುದು. ಸತ್ತರೆ ದೇವಕನ್ಯೆಯರು ಸೇವೆಮಾಡುವರು; ದೇವೇಂದ್ರನು ಭೂಮಿಗೆ ಬಂದು ಹೊಗಳಿ ಕರೆದುಕೊಂಡು ಹೋಗುವನು. ವೀರಸ್ವರ್ಗ ಸಿಗುವುದು ಎಂದ, ಅರ್ಜುನ.
ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ |
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರಪದವಿಯು ಬಿಟ್ಟು ಕಳುಹೆಂದ || ೨೩ ||
ಪದವಿಭಾಗ-ಅರ್ಥ: ಧುರದಲಿ+ ಓಡಿದ ಪಾತಕವ ಭೂಸುರರು ಕಳೆದಪರು+ ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದು ಎಮಗೆ ಸುರರ ಸತಿಯರನು+ ಒಲ್ಲೆವು+ ಎಮಗೆ+ ಎಮ್ಮ+ ಅರಮನೆಯ ನಾರಿಯರೆ ಸಾಕು+ ಎಮ್ಮರಸುತನವು+ ಎಮಗೆ+ ಇಂದ್ರಪದವಿಯು, ಬಿಟ್ಟು ಕಳುಹೆಂದ.
 • ಧುರದಲಿ+ ಓಡಿದ ಪಾತಕವ ಭೂಸುರರು ಕಳೆದಪರು+= ಯುದ್ಧದಲ್ಲಿ ಓಡಿದ ಪಾಪವನ್ನು ಬ್ರಾಹ್ಮಣರು ಪ್ರಾಯಶ್ಚಿತಮಾಡಿ ಕಳೆಯುವರು.//ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದು= ಇಲ್ಲಿ ಯುದ್ಧದಲ್ಲಿ ಸತ್ತು ಅಶ್ವಮೇಧದ ಪುಣ್ಯಗಳಿಸುವ ಬದಲು ಪ್ರತ್ಯಕ್ಷವಾಗಿಯೆ ಮಾಡಬಹುದು.// ಎಮಗೆ ಸುರರ ಸತಿಯರನು+ ಒಲ್ಲೆವು+= ಸತ್ತಮೇಲೆ ಸಿಗುವ ದೇವಲೋಕದ ಕನ್ಯೆಯರು ನಮಗೆ ಬೇಡ; - ಎಮಗೆ+ ಎಮ್ಮ+ ಅರಮನೆಯ ನಾರಿಯರೆ ಸಾಕು+= -ನನಗೆ- ನಮಗೆ+ ನಮ್ಮ+ ಅರಮನೆಯ ವನಿತೆಯರೇ ಸಾಕು.// ಎಮ್ಮ+ ಅರಸುತನವು+ ಎಮಗೆ+ ಇಂದ್ರಪದವಿಯು,=- ನಮಗೆ ಸತ್ತಮೇಲೆ ಸಿಗುವ ಇಂದ್ರಪದವಿ ಬೇಡ; ನಮ್ಮ+ ಅರಸುತನವೇ+ ನಮಗೆ+ ಇಂದ್ರಪದವಿಯು; ನನ್ನನ್ನು ಬಿಟ್ಟು ಕಳುಹು+ ಎಂದ,; ಬೃಹನ್ನಳೇ, ನನ್ನನ್ನು ಬಿಟ್ಟು ಕಳುಹಿಸಪ್ಪಾ ಎಂದ ಉತ್ತರ.
ಅರ್ಥ: ಯುದ್ಧದಲ್ಲಿ ಹಿಂದಕ್ಕೆ ಓಡಿದ ಪಾಪವನ್ನು ಬ್ರಾಹ್ಮಣರು ಪ್ರಾಯಶ್ಚಿತಮಾಡಿ ಕಳೆಯುವರು. ಇಲ್ಲಿ ಯುದ್ಧದಲ್ಲಿ ಸತ್ತು ಅಶ್ವಮೇಧದ ಪುಣ್ಯಗಳಿಸುವ ಬದಲು ಪ್ರತ್ಯಕ್ಷವಾಗಿಯೆ ಮಾಡಬಹುದು. ಸತ್ತಮೇಲೆ ಸಿಗುವ ದೇವಲೋಕದ ಕನ್ಯೆಯರು ನಮಗೆ ಬೇಡ; ನಮಗೆ+ ನಮ್ಮ ಅರಮನೆಯ ವನಿತೆಯರೇ ಸಾಕು. ನಮಗೆ ಸತ್ತಮೇಲೆ ಸಿಗುವ ಇಂದ್ರಪದವಿ ಬೇಡ; ನಮ್ಮ+ ಅರಸುತನವೇ ನಮಗೆ ಇಂದ್ರಪದವಿಯು; ಬೃಹನ್ನಳೇ, ನನ್ನನ್ನು ಬಿಟ್ಟು ಕಳುಹಿಸಪ್ಪಾ ಎಂದ ಉತ್ತರ.
ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಭಾಷ್ಕಳಗೆಡೆದು ಬಂದೀಗ |
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ || ೨೪ ||
ಪದವಿಭಾಗ-ಅರ್ಥ: ಆಳೊಳು+ ಉಡ್ಡುಳ್ಳವನು ಭಾರಿಯ ತೋಳುಗಳ ಹೊತ್ತವನು ಮನೆಯಲಿ ಸೂಳೆಯರ ಮುಂದೆ+ ಒದರಿ ಭಾಷ್ಕಳಗೆಡೆದು ಬಂದು+ ಈಗ ಕೋಲನಿಕ್ಕದೆ ಗಾಯವಡೆಯದೆ ಕಾಲುವೇಗವ ತೋರಿದೊಡೆ ನಿನ್ನ+ ಓಲಗದೊಳು+ ಎಂತು+ ಅಕಟ ನಾಚದೆ ಕುಳ್ಳಿತಿಹೆ+ಯ+ ಎಂದ.
 • ಅರ್ಜುನನು, ಆಳೊಳು+ ಒಡ್ಡುಳ್ಳವನು ಭಾರಿಯ ತೋಳುಗಳ ಹೊತ್ತವನು= ಜನರಲ್ಲಿ ಗೌರವವುಳ್ಳ ಯುವರಾಜನಾದ ನೀನು,ಬಲಿಷ್ಠ ತೋಳುಗಳನ್ನು ಹೊಂದಿ/ ಮನೆಯಲಿ ಸೂಳೆಯರ ಮುಂದೆ+ ಒದರಿ ಭಾಷ್ಕಳ+ಗ+ ಕೆಡೆದು ಬಂದು+= ಅರಮನೆಯಲ್ಲಿ ರಾಣೀವಾಸದ ದಾಸಿವನಿತೆಯರ ಮುಂದೆ ದೊಡ್ದದಾಗಿ ಘರ್ಜಿಸಿ ಶೌರ್ಯದ ಭಾಷೆಗಳನ್ನು ಕೆಡೆದು- ನಾಲಿಗೆಯಿಂದ ಉದುರಿಸಿ, ಯುದ್ಧಮಾಡದೆ, ಅದರಲ್ಲಿ ವೀರರಂತೆ ಗಾಯಪಡದೆ,/ ಕಾಲುವೇಗವ ತೋರಿದೊಡೆ= ಕಾಲಿಗೆ ವೇಗವನ್ನು ತೋರಿಸಿ ಯುದ್ಧದಿಂದ ಓಡಿಹೋದರೆ// ನಿನ್ನ+ ಓಲಗದೊಳು+ ಎಂತು+ ಅಕಟ ನಾಚದೆ ಕುಳ್ಳಿತಿಹೆ+ಯ+ ಎಂದ= ನಿನ್ನ ಆ ವನಿತೆಯರ ಸಭೆಯಲ್ಲಿ, ದೇವರೇ, ಅಕ್ಕಟಾ, ನಾಚಿಕೆ ಪಡದೆ ಹೇಗೆ ಕುಳಿತುಕೊಳ್ಳುವೆ, ಎಂದ.
ಅರ್ಥ: ಅರ್ಜುನನು, ಜನರಲ್ಲಿ ಗೌರವವುಳ್ಳ ಯುವರಾಜನಾದ ನೀನು, ಬಲಿಷ್ಠ ತೋಳುಗಳನ್ನು ಹೊಂದಿ, ಅರಮನೆಯಲ್ಲಿ ರಾಣೀವಾಸದ ದಾಸಿವನಿತೆಯರ ಮುಂದೆ ದೊಡ್ದದಾಗಿ ಘರ್ಜಿಸಿ ಶೌರ್ಯದ ಭಾಷೆಗಳನ್ನು ನಾಲಿಗೆಯಿಂದ ಉದುರಿಸಿ, ಈಗ ಕೋಲನಿಕ್ಕದೆ ಗಾಯವಡೆಯದೆ= ಯುದ್ಧಮಾಡದೆ, ಅದರಲ್ಲಿ ವೀರರಂತೆ ಗಾಯಪಡದೆ, ಕಾಲಿಗೆ ವೇಗವನ್ನು ತೋರಿಸಿ ಯುದ್ಧದಿಂದ ಓಡಿಹೋದರೆ, ನಿನ್ನ ಆ ವನಿತೆಯರ ಸಭೆಯಲ್ಲಿ, ದೇವರೇ, ಅಕ್ಕಟಾ, ನಾಚಿಕೆ ಪಡದೆ ಹೇಗೆ ಕುಳಿತುಕೊಳ್ಳುವೆ, ಎಂದ.
ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ೨೫
ಪದವಿಭಾಗ-ಅರ್ಥ: ಕೆತ್ತುಕೊಂಡ+ ಆ ನಾಚಿಕೆಗೆ ನೆರೆ ಕುತ್ತಿಕೊಳಬೇಕು+ ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ ನಾವು+ ಅಂಜುವೆವು ಕಾಳಗಕೆ ತೆತ್ತಿಗನು, ನೀನು+ ಅಹಿತನಂತೆ+ ಇರೆ ಮಿತ್ತುವು+ ಅಹರೇ, ನಿನಗೆ ಬೇಡಿದನು+ ಇತ್ತು ಸಲಹುವೆನು+ ಎನ್ನ ಕೊಲ್ಲದೆ ಬಿಟ್ಟು ಕಳುಹು+ ಎಂದ.
 • ಕೆತ್ತುಕೊಂಡ (ಎತ್ತಿಹಿಡಿದ- ಹೆಚ್ಚಾಗು- ಕೆತ್ತಿದ ಶಾಸನ- ಅಂಟಿದ.)+ ಆ ನಾಚಿಕೆಗೆ ನೆರೆ ಕುತ್ತಿಕೊಳಬೇಕು+ ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ= 'ಮನಸ್ಸಿಗೆ ಹತ್ತಿದ ಹೆಚ್ಚಾದ ಆ ನಾಚಿಕೆಗೆ ಕುತ್ತಿಗೆ ಕೊಡಬೇಕು'; 'ಹತ್ತಿದ ನಾಚಿಕೆಗೆ ಕುತ್ತಿಗೆ ಕೊಡಬೇಕು' ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ- ಇಲ್ಲಿ ಹೊಂದಿಸಿ ತರಬೇಡ.// ನಾವು+ ಅಂಜುವೆವು ಕಾಳಗಕೆ, (ತೆತ್ತಿಗ= ಬಂಧು.ಸೇವಕ.ಹೊಣೆಗಾರ.) ತೆತ್ತಿಗನು ನೀನು+ ಅಹಿತನಂತೆ+ ಇರೆ ಮಿತ್ತುವು+ ಅಹರೇ= ಸೇವಕನಾಗಿದ್ದು ವಿರೋಧಿಯಂತೆ ಇದ್ದು, ಮಿತ್ತು- ಮೃತ್ಯುವಿನಂತೆ ಆಗುವರೇ- ವರ್ತಿಸಬಹುದೇ?, ನಿನಗೆ ಬೇಡಿದನು+ ಇತ್ತು ಸಲಹುವೆನು+ ಎನ್ನ ಕೊಲ್ಲದೆ ಬಿಟ್ಟು ಕಳುಹು+= ನಿನಗೆ ಕೇಳಿದ್ದನ್ನು ಕೊಟ್ಟು ಸಾಕುತ್ತೇನೆ, ನನ್ನನ್ನು ಬಿಟ್ಟು ಕಳುಹಿಸು' ಎಂದ ಉತ್ತರ.
ಅರ್ಥ: 'ಮನಸ್ಸಿಗೆ ಹತ್ತಿದ ಆ ನಾಚಿಕೆ ಹೆಚ್ಚಾದರೆ ಕುತ್ತಿಗೆ ಕೊಡಬೇಕು' ಎಂಬ ಗಾದೆಯನ್ನು ಇಲ್ಲಿ ಹೊಂದಿಸಿ ತರಬೇಡ. ಇಲ್ಲಿ ನಾವು ಕಾಳಗಕ್ಕೆ ಅಂಜುವೆವು, ನೀನು ಸೇವಕನಾಗಿದ್ದು ವಿರೋಧಿ ಮೃತ್ಯುವಿನಂತೆ ವರ್ತಿಸಬಹುದೇ? ನಿನಗೆ ಕೇಳಿದ್ದನ್ನು ಕೊಟ್ಟು ಸಾಕುತ್ತೇನೆ, ನನ್ನನ್ನು ಬಿಟ್ಟು ಕಳುಹಿಸು' ಎಂದ ಉತ್ತರ.
 • ಟಿಪ್ಪಣಿ: ಹದಿನಾರು- ಹದಿನೇಳು ವರ್ಷದ ಏರುಜವ್ವನದ ಹುಡುಗಾಟಿಕೆಯ ಹುಡುಗ - ಈಗಿನ ಸ್ಥಿತಿಯೋ- ಎದುರು ಮಹಾವೀರರ ಅಗಾಧ ಸೈನ್ಯ- ಒಂಟಿಯಾಗಿ ಬಂದು ನಿಂತಿದ್ದಾನೆ; ಇನ್ನು ಏನು ತಾನೆ ಹೇಳಬೇಕು.
ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ |
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ || ೨೬ ||
ಪದವಿಭಾಗ-ಅರ್ಥ: ವಳಿತವನು ವಾರುವನು ಮುಕ್ತಾವಳಿಯ+ ಅಲಂಕಾರವನು ರಥವನು ಲಲನೆಯರ ನಾನು+ ಈಸಿ ಕೊಡುವೆನು ರಾಜಭವನದಲಿ (ನನ್ನನ್ನು ಬಿಡು), ಎಲೆ ಬೃಹನ್ನಳೆ ನಮ್ಮ ಬೊಪ್ಪನು ಸಲಹಿದಕೆ ಕೈಯೊಡನೆ ತೋರಿದೆ ಕಲುಮನವಲಾ ನಿನ್ನದೆಂದಡೆ ಪಾರ್ಥನಿಉ+ ಇಂತೆಂದ
 • ವಳಿತವನು (ಸಂಪತ್ತನ್ನು), ವಾರುವನು ( ಜಾನುವಾರುಗಳನ್ನು) ಮುಕ್ತಾವಳಿಯ+ ಅಲಂಕಾರವನು ರಥವನು ಲಲನೆಯರ ನಾನು+ ಈಸಿ- ಪಡೆದು, ಕೊಡುವೆನು ರಾಜಭವನದಲಿ, ಎಲೆ ಬೃಹನ್ನಳೆ ನಮ್ಮ ಬೊಪ್ಪನು ಸಲಹಿದಕೆ ಕೈಯ+ ಒಡನೆ ತೋರಿದೆ (ಕೈಕೊಟ್ಟೆ- ಈಗ ಮೋಸ ಮಾಡಿದೆ, ನಿನ್ನ ಗುಣವನ್ನು ತೋರಿಸಿದೆ) ಕಲುಮನವಲಾ ನಿನ್ನದು+ ಎಂದಡೆ- ಎಂದಾಗ, ಪಾರ್ಥನು+ ಇಂತು+ ಎಂದ
ಅರ್ಥ:ನಿನಗೆ ಸಂಪತ್ತನ್ನು, ಜಾನುವಾರುಗಳನ್ನು, ಮುಕ್ತಾವಳಿಯ ಅಲಂಕಾರಗಳನ್ನು, ರಥವನ್ನು, ದಾಸಿಯರನ್ನು ನಾನು ತಂದೆಗೆ ಹೇಳಿ ರಾಜಭವನದಲ್ಲಿ ಪಡೆದುಕೊಂಡು ಕೊಡುವೆನು ನನ್ನನ್ನು ಬಿಡು, ಎಲೆ ಬೃಹನ್ನಳೆ! ನಮ್ಮ ಅಪ್ಪನು ನಿನ್ನನ್ನು ಸಲಹಿದ್ದಕ್ಕೆ ನೀನು ಕೈಕೊಟ್ಟೆ- ಈಗ ಮೋಸ ಮಾಡಿದೆ. ಕಲ್ಲು ಮನಸ್ಸಪ್ಪಾ ನಿನ್ನದು, ಎಂದಾಗ ಪಾರ್ಥನು ಹೀಗೆ ಹೇಳಿದ.

ಅರ್ಜುನನ ಭರವಸೆ - ತನ್ನ ಆಯುಧಗಳ ಸಂಗ್ರಹ[ಸಂಪಾದಿಸಿ]

ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ |
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ || ೨೭ ||
ಪದವಿಭಾಗ-ಅರ್ಥ: ಪೊಡವಿಪತಿಗಳ ಬಸುರ ಬಂದು+ ಈ ಯ+ ಒಡಲ ಕಕ್ಕುಲಿತೆಯನು ಕಾಳಗದೆಡೆಗೆ ಮಾಡಿದರಿಲ್ಲ, ಭೂತ ಭವಿಷ್ಯ(ವರ್ತ)ಮಾನದಲಿ; ನುಡಿಯಬಹುದೇ ಬಂಜೆವಾತನು ಸುಡು ಸುಡೆಲವೋ ರಾಜಬಾಹಿರ, ನಡೆ ವರೂಥದ ಹೊರೆಗೆ ಕಾದಲು ಬೇಡ ಬಾ+ ಯ+ ಎಂದ.
 • ಪೊಡವಿಪತಿಗಳ ಬಸುರ ಬಂದು+ ಈ ಯ+ ಒಡಲ (ದೇಹದ) ಕಕ್ಕುಲಿತೆಯನು(ಪ್ರೀತಿ) ಕಾಳಗದೆಡೆಗೆ ಮಾಡಿದರಿಲ್ಲ= ರಾಜರ ಹೊಟ್ಟೆಯಲ್ಲಿ ಹುಟ್ಟಿಬಂದು ಈ ರೀತಿ ದೇಹದ ಮೇಲೆ ಮೋಹವನ್ನು ಮಾಡಿದವರು ಇಲ್ಲ;/ ಭೂತ ಭವಿಷ್ಯ(ವರ್ತ)ಮಾನದಲಿ= ಹಿಂದೆಯಾಗಲಿ, ಈಗಾಗಲಿ ಮುಂದೆಯಾಗಲಿ ಈ ತ್ರಿಕಾಲದಲ್ಲಿ ಮಾಡುವವರು ಇರಲಾರರು; ನುಡಿಯಬಹುದೇ ಬಂಜೆವಾತನು ಸುಡು ಸುಡೆಲವೋ ರಾಜಬಾಹಿರ (ಕ್ಷತ್ರಿಯರಿಗೆ ಹೊರತಾದ)= ರಾಜಬಾಹಿರ- ಕ್ಷತ್ರಿಯರಿಗೆ ಹೊರತಾದ ಹೇಡಿಮಾತನ್ನು ನುಡಿಯಬಹುದೇ? ಈ ಬಾಳನ್ನು ಸುಡು ಸುಡು!; ಎಲವೋ! ನಡೆ ವರೂಥದ ಹೊರೆಗೆ ಕಾದಲು(ಯುದ್ಧಮಾಡುವುದು) ಬೇಡ ಬಾ+ ಯ+ ಎಂದ= ರಥವಿದ್ದಕಡೆಗೆ ನೆಡೆ, ನೀನು ಯುದ್ಧಮಾಡುವುದು ಬೇಡ ಎಂದ, ಅರ್ಜುನ.
ಅರ್ಥ: ಅರ್ಜುನನು, 'ರಾಜರ ಹೊಟ್ಟೆಯಲ್ಲಿ ಹುಟ್ಟಿ ಬಂದು ಈ ರೀತಿ ದೇಹದ ಮೇಲೆ ಮೋಹವನ್ನು ಮಾಡಿದವರು ಹಿಂದೆಯಾಗಲಿ, ಈಗಾಗಲಿ ಮುಂದೆಯಾಗಲಿ ಈ ತ್ರಿಕಾಲದಲ್ಲಿ ಮಾಡುವವರು ಇರಲಾರರು; ಕ್ಷತ್ರಿಯರಿಗೆ ಹೊರತಾದ ಹೇಡಿಮಾತನ್ನು ನುಡಿಯಬಹುದೇ? ಈ ಬಾಳನ್ನು ಸುಡು ಸುಡು!; ಎಲವೋ! ರಥವಿದ್ದ ಕಡೆಗೆ ನೆಡೆ, ನೀನು ಯುದ್ಧಮಾಡುವುದು ಬೇಡ,' ಎಂದ.
ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು |
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ || ೨೮ ||
ಪದವಿಭಾಗ-ಅರ್ಥ: ಕಾದುವೆನು ಮಾರೊಡ್ಡಿನಲಿ ನೀನು+ ಐದಿ ಸೆನ್ನಯ ರಥವ ಮನದಲಿ ಭೇದತನವನು ಬಿಟ್ಟು ಸಾರಥಿಯಾಗು ಸಾಕು+ ಎನಲು; ಆದಿಯಲಿ ನೀನಾವ ರಾಯರ ಕಾದಿ ಗೆಲಿದೈ ಹುಲು ಬೃಹನ್ನಳೆಯಾದ ನಿನಗೆ+ ಈ ಕದನ ನಾಟಕ ವಿದ್ಯು+ ಅಲ್ಲ+ ಎಂದ.
 • ಕಾದುವೆನು ಮಾರೊಡ್ಡಿನಲಿ ನೀನು+ ಐದಿ ಸೆನ್ನಯ ರಥವ ಮನದಲಿ ಭೇದತನವನು ಬಿಟ್ಟು ಸಾರಥಿಯಾಗು ಸಾಕು+ ಎನಲು=ಅರ್ಜುನನು, 'ನಾನು ಮಾರು+ಒಡ್ಡಿನಲಿ- ಆ ಡೊಡ್ಡ ಸೈನ್ಯದೊಡನೆ- ಯುದ್ಧಮಾಡುವೆನು. ನೀನು ಐದಿ-ಬಂದು ಮನಸ್ಸಿನಲ್ಲಿ ಭೇದತನವನು- ರಾಜಕುಮಾರನೆಂಬ ಸಂಕೋಚವನ್ನು ಬಿಟ್ಟು ರಥದಲ್ಲಿ ಸೆನ್ನಯ- ನೆಪಮಾತ್ರ ಸಾರಥಿಯಾಗು ಸಾಕು,' ಎನ್ನಲು; ಉತ್ತರನು, ಆದಿಯಲಿ ನೀನು+ ಆವ ರಾಯರ ಕಾದಿ ಗೆಲಿದೈ= ನೀನು ಹಿಂದೆ ಯಾವ ರಾಜರೊಡನೆ ಯುದ್ಧಮಾಡಿ ಗೆದ್ದಿದ್ದೀಯಾ? ಹುಲು ಬೃಹನ್ನಳೆಯಾದ ನಿನಗೆ+ ಈ ಕದನ ನಾಟಕ ವಿದ್ಯು+ ಅಲ್ಲ+ ಎಂದ= ಹುಲು(ಹುಲ್ಲುಕಡ್ಡಿಯ ಸಮಾನನಾದ, ಅಲ್ಪನಾದ) ಬೃಹನ್ನಳೆಯಾದ ನಿನಗೆ ಈ ಯುದ್ಧವು ನೀನು ಕಲಿಸುವ ನಾಟಕ- ನೃತ್ಯವಿದ್ಯೆಯಲ್ಲ, ಹುಡುಗಾಟಿಕೆ ಮಾಡಬೇಡ,' ಎಂದ.
ಅರ್ಥ:ಅರ್ಜುನನು,'ನಾನು ಆ ಡೊಡ್ಡ ಸೈನ್ಯದೊಡನೆ ಯುದ್ಧಮಾಡುವೆನು. ನೀನು ರಾಜಕುಮಾರನೆಂಬ ಸಂಕೋಚವನ್ನು ಬಿಟ್ಟು ರಥದಲ್ಲಿ ನೆಪಮಾತ್ರ ಸಾರಥಿಯಾಗು ಸಾಕು,' ಎನ್ನಲು; ಉತ್ತರನು, 'ನೀನು ಹಿಂದೆ ಯಾವ ರಾಜರೊಡನೆ ಯುದ್ಧಮಾಡಿ ಗೆದ್ದಿದ್ದೀಯಾ? ಹುಲು ಬೃಹನ್ನಳೆಯಾದ ನಿನಗೆ ಈ ಯುದ್ಧವು ನೀನು ಕಲಿಸುವ ನಾಟಕ- ನೃತ್ಯವಿದ್ಯೆಯಲ್ಲ, ಹುಡುಗಾಟಿಕೆ ಮಾಡಬೇಡ,' ಎಂದ.
ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ |
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ || ೨೯ ||
ಪದವಿಭಾಗ-ಅರ್ಥ: ಎನ್ನವಂದಿಗ ರಾಜಪುತ್ರರಿಗೆ+ ಇನ್ನು ಮೊಗಸಲು(ಬಯಕೆ - ಯುದ್ಧದ ಅಪೇಕ್ಷೆ) ಬಾರದಿದೆ, ನೀನು+ ಎನ್ನ ಸಾರಥಿ ಮಾಡಿಕೊಂಡು+ ಈ ಬಲವ ಜಯಿಸುವೆಯ, ಅನ್ಯರನು ಮನಗಾಂಬು+ ಅಲ್ಲದೆ ತನ್ನ ತಾ ಮನಗಾಂಬರೇ (ಯ+) ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು+ ಎಂದ.
 • ಎನ್ನವಂದಿಗ ರಾಜಪುತ್ರರಿಗೆ+ ಇನ್ನು ಮೊಗಸಲು(ಬಯಕೆ - ಯುದ್ಧದ ಅಪೇಕ್ಷೆ) ಬಾರದಿದೆ= ನನ್ನಂತಹ ಕ್ಷತ್ರಿಯ ರಾಜಪುತ್ರರಿಗೆ ಇನ್ನು ಇಲ್ಲಿ ಯುದ್ಧ ಮಾಡುವ ಮನಸ್ಸು ಬಾರದೆಹೋಗಿದೆ; ನೀನು+ ಎನ್ನ ಸಾರಥಿ ಮಾಡಿಕೊಂಡು+ ಈ ಬಲವ ಜಯಿಸುವೆಯ= ಇನ್ನು ನೀನು ನನ್ನನ್ನು ಸಾರಥಿ ಮಾಡಿಕೊಂಡು ಈ ದೊಡ್ಡಸೈನ್ಯವನ್ನು ಜಯಿಸುವೆಯ? ಅನ್ಯರನು ಮನಗಾಂಬು- ಅಲ್ಲದೆ ತನ್ನ ತಾ ಮನಗಾಂಬರೇ = ಮನುಷ್ಯ ಇನ್ನೊಬ್ಬರ ಶಕ್ತಿ ಗುಣವನ್ನು ತಿಳಿಯಬಹುದು, ಆದರೆ ತನ್ನ ಗುಣ ಮತ್ತು ಶಕ್ತಿಯನ್ನು ಕಾಣಲಾರ ಅಲ್ಲವೇ?// ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು+ ಎಂದ= ನಿನ್ನ ತಂತ್ರವನ್ನು ನಾವು ತಿಳಿದಿದ್ದೇವೆ- ನಮ್ಮನ್ನು ಏನೋ ನೆವದಿಂದ ಶತ್ರುಗಳ ಬಲೆಗೆ ಕೆಡಗುವುದು, ಅಲ್ಲವೇ? ಅದೆಲ್ಲಾ ನಅಟಕ ಬೇಡ - ನನ್ನನ್ನು ಬಿಟ್ಟು ಕಳುಹಿಸು ಸಾಕು ಎಂದ.
ಅರ್ಥ: ನನ್ನಂತಹ ಕ್ಷತ್ರಿಯ ರಾಜಪುತ್ರರಿಗೆ ಇನ್ನು ಇಲ್ಲಿ ಯುದ್ಧ ಮಾಡುವ ಮನಸ್ಸು, ಧೈರ್ಯ ಬಾರದೆಹೋಗಿದೆ; ಇನ್ನು ನೀನು ನನ್ನನ್ನು ಸಾರಥಿ ಮಾಡಿಕೊಂಡು ಈ ದೊಡ್ಡಸೈನ್ಯವನ್ನು ಜಯಿಸುವೆಯ? ಮನುಷ್ಯ ಇನ್ನೊಬ್ಬರ ಶಕ್ತಿ ಗುಣವನ್ನು ತಿಳಿಯಬಹುದು, ಆದರೆ ತನ್ನ ಗುಣ ಮತ್ತು ಶಕ್ತಿಯನ್ನು ಕಾಣಲಾರ ಅಲ್ಲವೇ? ನಿನಗೆ ಆ ಸಾಮರ್ಥ್ಯ ಇಲ್ಲ. ನಿನ್ನ ಈ ತಂತ್ರವನ್ನು ನಾವು ತಿಳಿದಿದ್ದೇವೆ- ನಮ್ಮನ್ನು ಏನೋ ನೆವದಿಂದ ಶತ್ರುಗಳ ಬಲೆಗೆ ಕೆಡಗುವುದು, ಅಲ್ಲವೇ? ಅದೆಲ್ಲಾ ನಾಟಕ ಬೇಡ - ನನ್ನನ್ನು ಬಿಟ್ಟು ಕಳುಹಿಸು ಸಾಕು ಎಂದ ಉತ್ತರ.
ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ |
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹದರಿನೊಳೌಂಕಿ ತಂದನು ರಥವನೇರಿಸಿದ || ೩೦ ||
ಪದವಿಭಾಗ-ಅರ್ಥ: ಎಲವೊ ಸಾರಥಿಯಾಗು ನಡೆ, ನೀ ಗಳಹಿದೊಡೆ ಕಟವಾಯ ಕೊಯ್ವೆನು, ಕೊಲುವೆನು+ ಈ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ, ಬಳಿಕ ನೀ ನಗು ನಡೆಯೆನುತ ರಿಪುಬಲ ಭಯಂಕರನು+ ಉತ್ತರನ ಹೆಡತಲೆಯ ಹದರಿನೊಳು+ ಔಂಕಿ ತಂದನು ರಥವನು ಏರಿಸಿದ.
 • ಎಲವೊ ಸಾರಥಿಯಾಗು ನಡೆ, ನೀ ಗಳಹಿದೊಡೆ- ಹರಟಿದರೆ, ಕಟವಾಯ- ಕಟಬಾಯಿ, ಕೊಯ್ವೆನು, ಕೊಲುವೆನು+ ಈ ಪ್ರತಿಭಟ ನಿಕಾಯವ- ಸೈನ್ಯವನ್ನು, ನಿನ್ನ ಸಾಕ್ಷಿಯಲಿ- ನಿನ್ನೆದುರಿಗೆ - ನಿನ್ನಾಣೆ, ಬಳಿಕ ನೀ ನಗು ನಡೆ+ ಯ+ ಎನುತ ರಿಪುಬಲ ಭಯಂಕರನು+ ಉತ್ತರನ ಹೆಡತಲೆಯ (ಹದರ=ಹೆದರಿಸು) ಹದರಿನೊಳು+ ಔಂಕಿ ತಂದನು ರಥವನು ಏರಿಸಿದ.
ಅರ್ಥ:ಅರ್ಜುನನು ಗದರಿಸಿ,'ಎಲವೊ ಸಾರಥಿಯಾಗು ನಡೆ, ನೀನು ಹರಟಿದರೆ, ಕಟಬಾಯನ್ನು ಕೊಯ್ಯುತ್ತೇನೆ. ಎದುರಿಸಿ ನಿಂತ ಸೈನ್ಯವನ್ನು ನಿನ್ನ ಎದುರಿಗೇ ಕೊಲ್ಲತ್ತೇನೆ, ನಿನ್ನಾಣೆ; ಬಳಿಕ ನೀ ನಗುವಿಯಂತೆ ನಡೆ, ಎನ್ನತ್ತಾ ಶತ್ರುಭಯಂಕರ ಅರ್ಜುನನು ಉತ್ತರನ ಹೆಡತಲೆಯನ್ನು ಔಕಿ ಹಿಡಿದುಕೊಂಡು ಹೆದರಿಸಿ ಕರೆತಂದು ರಥವನ್ನು ಹತ್ತಿಸಿದ.
ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು |
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ || ೩೧ ||
ಪದವಿಭಾಗ-ಅರ್ಥ: ಖೇಡತನ ಬೇಡ+ ಎಲವೊ ರಣದೊಳಗೆ+ ಓಡಿಸುವೆನು+ ಅಹಿತರನು, ಹರಣವ ಹೂಡಿಸುವೆನು+ ಅಂತಕನ ನಗರಿಗೆ ಥಟ್ಟನ+ ಅಡೆಹೊಯ್ದು ಕೋಡದಿರು ಕೊಂಕದಿರು ಧೈರ್ಯವಮಾಡಿ ಸಾರಥಿಯಾಗು+ ಎನುತ ಕಲಿಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ.
 • ಖೇಡತನ= ಹೆದರಿಕೆ, ಬೇಡ+ ಎಲವೊ ರಣದೊಳಗೆ+ ಓಡಿಸುವೆನು+ ಅಹಿತರುನು= ಶತ್ರುಗಳನ್ನು, ಹರಣವ= ಜೀವವನ್ನು ಹೂಡಿಸುವೆನು- ನೆಲೆಗೊಳಿಸುವೆನು+ ಅಂತಕನ- ಯಮನ, ನಗರಿಗೆ ಥಟ್ಟನ+ ಅಡೆಹೊಯ್ದು ಕೋಡದಿರು-ಹಟ ಮಾಡಬೇಡ, ಕೊಂಕದಿರು= ಕೊಂಕುಮಾತನಾಡಬೇಡ, ಧೈರ್ಯವಮಾಡಿ ಸಾರಥಿಯಾಗು+ ಎನುತ ಕಲಿಮಾಡಿ= ಶೂರನನ್ನು ಮಾಡಿ, ಧೈರ್ಯತುಂಬಿ, ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ= ಶಮೀವೃಕ್ಷದ ಬಳಿಗೆ ಅವನನ್ನು ರಥದಲ್ಲಿ ಕರೆದುಕೊಂಡು ಹೋದನು.
ಅರ್ಥ: ಉತ್ತರನೇ, ಹೆದರಿಕೆ ಬೇಡ, ಎಲವೊ ಯುದ್ಧಲ್ಲಿ ಈ ಶತ್ರುಗಳನ್ನು ಓಡಿಸುವೆನು. ಇವರ ಜೀವವನ್ನು ಯಮನ ನಗರದಲ್ಲಿ ನೆಲೆಗೊಳಿಸುವೆನು. ಥಟ್ಟನೆ ಅಡ್ಡಹೊಡೆದು ವಿರೋಧಮಾಡಿ ಹಟ ಮಾಡಬೇಡ, ಕೊಂಕುಮಾತನಾಡಬೇಡ, ಧೈರ್ಯವಮಾಡಿ ಸಾರಥಿಯಾಗು, ಎಂದುಹೇಳಿ ಉತ್ತರನನ್ನು ಧೈರ್ಯತುಂಬಿ ಶೂರನನ್ನು ಮಾಡಿ, ತನ್ನ ಶಸ್ತ್ರಗಳನ್ನಿಟ್ಟಿದ್ದ ಶಮೀವೃಕ್ಷದ ಬಳಿಗೆ ಅವನನ್ನು ರಥದಲ್ಲಿ ಕರೆದುಕೊಂಡು ಹೋದನು.
ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ || ೩೨ ||
ಪದವಿಭಾಗ-ಅರ್ಥ: ಮರನನು+ ಏರು+ ಇದರೊಳಗೆ ಪಾಂಡವರು+ ಇರಿಸಿ ಹೋದರು ಕೈದುಗಳ, ಮಿಗೆಹರಣ ಭರಣ ಕ್ಷಮೆಗಳಲಿ ನೀನು+ ಎನಗೆ ನೀಡು+ ಎನಲು ಅರಸು ಮಕ್ಕಳು ಮುಟ್ಟಲು+ ಅನುಚಿತ ಮರದ ಮೇಲಣ ಹೆಣನು+ ಇದೇನೈ, ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ
 • ಎಲೈ ಉತ್ತರ, (ಆ) ಮರನನು+ ಎರು+ ಇದರೊಳಗೆ ಪಾಂಡವರು+ ಇರಿಸಿ ಹೋದರು ಕೈದುಗಳ= ಎಲೈ ಉತ್ತರನೇ, ಆ ಈ ಶಮೀ ಮರವನ್ನು+ ಎರು- ಹತ್ತು+ ಇದರೊಳಗೆ ಪಾಂಡವರು+ ಇರಿಸಿ ಹೋದರು- ಹೋಗಿದ್ದಾರೆ ಕೈದುಗಳ- ಆಯುಧಗಳನ್ನು.// ಮಿಗೆ ಹರಣ ಭರಣ ಕ್ಷಮೆಗಳಲಿ ನೀನು+ ಎನಗೆ ನೀಡು+ ಎನಲು= ಮಿಗೆ ಮತ್ತೆ, ತೆಗೆದು ಹಿಡಿದುಕೊಂಡು ಎಚ್ಚರಿಕೆಯಿಂದ ನನಗೆ ಕೊಡು,' ಎಂದನು ಅರ್ಜುನ.// ಅರಸು ಮಕ್ಕಳು ಮುಟ್ಟಲು+ ಅನುಚಿತ ಮರದ ಮೇಲಣ ಹೆಣನು+ ಇದೇನೈ, ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ= ಅದಕ್ಕೆ ಉತ್ತರನು,'ಅರಸು ಮಕ್ಕಳು ಮುಟ್ಟಲು ಅನುಚಿತವಾದದ್ದು, ಮರದ ಮೇಲಿರುವ ಹೆಣವು; ಇದೇನಯ್ಯಾ ಗುಣವಂತ ಬೃಹನ್ನಳೆ, ಮತ್ತೆ- ಬೇರೆ ಕೆಲಸವನ್ನು ಹೇಳು ತನಗೆ,' ಎಂದ.
ಅರ್ಥ:ಎಲೈ ಉತ್ತರನೇ, 'ಈ ಶಮೀ ಮರವನ್ನು ಹತ್ತು ಇದರೊಳಗೆ ಪಾಂಡವರು ಇರಿಸಿ ಆಯುಧಗಳನ್ನು ಹೋಗಿದ್ದಾರೆ. ಮತ್ತೆ, ತೆಗೆದು ಹಿಡಿದುಕೊಂಡು ಎಚ್ಚರಿಕೆಯಿಂದ ನನಗೆ ಕೊಡು,' ಎಂದನು ಅರ್ಜುನ. ಅದಕ್ಕೆ ಉತ್ತರನು,'ಅರಸು ಮಕ್ಕಳು ಮುಟ್ಟಲು ಅನುಚಿತವಾದ ಮರದ ಮೇಲಿರುವ ಹೆಣವು; ಇದೇನಯ್ಯಾ ಗುಣವಂತ ಬೃಹನ್ನಳೆ, ಮತ್ತೆ- ಬೇರೆ ಕೆಲಸವನ್ನು ಹೇಳು ತನಗೆ,' ಎಂದ.
ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು |
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು || ೩೩ ||
ಪದವಿಭಾಗ-ಅರ್ಥ:ಹೊರಗೆ ತೊಗಲಲಿ ಬಿಗಿದು ಕೆಲಬಲನು+ ಅರಿಯದಂದದಿ ಪಾಂಡು ನಂದನರು+ ಉರುವ ಕೈದುವ ಕಟ್ಟಿದರು ಹೆಣನಲ್ಲ; ತೆಗೆಯೆ+ ಎನಲು ಸೆರಗನು+ ಅಳವಡಿಸಿ+ ಇಕ್ಕಿ ಭೀತಿಯ ತೊರೆದು ತುದಿಗೇರಿದನು; ನೇಣ್ಗಳ ಹರಿದು ಕೈದುವ ಬಿಟ್ಟು ಕಂಡು+ ಅಂಜಿದನು ಭಯ ಹೊಡೆದು.
 • ಹೊರಗೆ ತೊಗಲಲಿ ಬಿಗಿದು ಕೆಲಬಲನು+ ಅರಿಯದಂದದಿ + ಉರುವ- ಉಗ್ರವಾದ, ಕೈದುವ ಕಟ್ಟಿದರು, ಹೆಣನಲ್ಲ= ಉತ್ತರಾ,'ಅದು ಹೆಣವಲ್ಲ ಪಾಂಡವರು ಹೊರಗೆ ತೊಗಲಿನಿಂದ ಬಿಗಿದು ಬೇರೆಯವರು ತಿಳಿಯಲಾರದಂತೆ ಉಗ್ರವಾದ ಆಯುಧಗಳನ್ನು ಅದರಲ್ಲಿ ಕಟ್ಟಿದರು. ನೀನು ಅದನ್ನು ತೆಗೆ,' ಎನ್ನಲು ಉತ್ತರನು ಸೆರಗನ್ನು ಅಳವಡಿಸಿ- ಅಳವಡಿಸಿಕೊಂಡು ಬಿಗಿದು ಇಕ್ಕಿ- ಕಟ್ಟಿ, ಭೀತಿಯ ತೊರೆದು- ಹೆದರದೆ (ಮರದ) ತುದಿಗೆ+ ಏರಿದನು; ನೇಣ್ಗಳ-ಹಗ್ಗಗಳನ್ನು ಹರಿದು, ಕೈದುವ ಬಿಟ್ಟು- - ಆಯುಧಗಳ+- ಆಯುಧಗಳನ್ನು ಕಂಡು ಮುಟ್ಟದೆ ಬಿಟ್ಟು+, ಅಂಜಿದನು = ಅದರ ಕಾಂತಿಗೆ ಭಯ ಹೊಡೆದು ಹೆದರಿದನು.
ಅರ್ಥ:ಉತ್ತರಾ,'ಅದು ಹೆಣವಲ್ಲ ಪಾಂಡವರು ಆಯುಧಗಳನ್ನು ಇಟ್ಟು ಹೊರಗೆ ತೊಗಲಿನಿಂದ ಬಿಗಿದು ಬೇರೆಯವರು ತಿಳಿಯಲಾರದಂತೆ ಉಗ್ರವಾದ ಆಯುಧಗಳನ್ನು ಅದರಲ್ಲಿ ಕಟ್ಟಿದರು. ನೀನು ಅದನ್ನು ತೆಗೆ,' ಎನ್ನಲು; ಉತ್ತರನು ಸೆರಗನ್ನು ಅಳವಡಿಸಿಕೊಂಡು ಬಿಗಿದು ಕಟ್ಟಿ, ಹೆದರದೆ ಮರದ ತುದಿಗೆ ಏರಿದನು. ಹಗ್ಗಗಳನ್ನು ಹರಿದು, ಆಯುಧಗಳನ್ನು ಕಂಡು ಮುಟ್ಟದೆ ಬಿಟ್ಟು, ಅದರ ಕಾಂತಿಗೆ ಭಯ ಹೊಡೆದು ಹೆದರಿ ಹಿಂಜರಿದನು.
ಕಾಲ ಭುಜಗನ ನಾಲಿಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ |
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು || ೩೪ ||
ಪದವಿಭಾಗ-ಅರ್ಥ: ಕಾಲ ಭುಜಗನ ನಾಲಿಗೆಯೊ, ಶರಜಾಲವೋ ಕಲ್ಪಾಂತ ವಹ್ನಿಜ್ವಾಲೆಯೋ, ಕೈದುಗಳೊ, ಕಾಲಾಂತಕನ ದಾಡೆಗಳೊ, ತೋಳು ಧರಿಸುವವೆಂತು? ನೋಡಿದಡೆ+ ಆಲಿಯು+ ಉರೆ ಬೆಂದವು ಬೃಹನ್ನಳೆ ಕಾಳು ಮಾಡಿದೆ ಕೊಂದೆಯೆನುತ+ ಓರಂತೆ ಹಲುಬಿದನು.
 • ಕಾಲ ಭುಜಗನ ನಾಲಿಗೆಯೊ, ಶರಜಾಲವೋ ಕಲ್ಪಾಂತ ವಹ್ನಿಜ್ವಾಲೆಯೋ, ಕೈದುಗಳೊ= ಇದೇನು? ಮೃತ್ಯುವಿನ ಕೊರಳ ಸರ್ಪದ ನಾಲಿಗೆಯಂತಿದೆ!, ಬಾಣಗಳ ರಾಶಿಯೋ ಅಥವಾ ಪ್ರಳಯಕಾಲದ ಯಮನ ಕೋರೆ ದಾಡೆಗಳೊ,// ತೋಳು ಧರಿಸುವವೆಂತು?= ಕೈಯಲ್ಲಿ ಹಿಡಿಯುವುದು ಹೇಗೆ!// ನೋಡಿದಡೆ+ ಆಲಿಯು+ ಉರೆ ಬೆಂದವು= ನೋಡಿದರೆ ಕಣ್ಣುಗುಡ್ಡೆಗಳು ಸುಡುತ್ತವೆ!// ಬೃಹನ್ನಳೆ ಕಾಳು ಮಾಡಿದೆ ಕೊಂದೆಯೆನುತ+ ಓರಂತೆ ಹಲುಬಿದನು= ಎಲೆ ಬೃಹನ್ನಳೆ ನನಗೆ ಕೇಡು ಮಾಡಿದೆ, ಕೊಂದೆ, ಯೆನ್ನತ್ತಾ ಒಂದೇಸಮನೆ ಹಲುಬಿದನು- ಗೋಳಿಟ್ಟನು.
ಅರ್ಥ:ಉತ್ತರನು ಆಯುಧಗಳನ್ನು ನೋಡಿ, 'ಇದೇನು? ಮೃತ್ಯುವಿನ ಕೊರಳ ಸರ್ಪದ ನಾಲಿಗೆಯಂತಿದೆ!, ಬಾಣಗಳ ರಾಶಿಯೋ ಅಥವಾ ಪ್ರಳಯಕಾಲದ ಯಮನ ಕೋರೆ ದಾಡೆಗಳೊ, ಕೈಯಲ್ಲಿ ಹಿಡಿಯುವುದು ಹೇಗೆ! ನೋಡಿದರೆ ಕಣ್ಣುಗುಡ್ಡೆಗಳು ಸುಡುತ್ತವೆ! ಎಲೆ ಬೃಹನ್ನಳೆ ನನಗೆ ಕೇಡು ಮಾಡಿದೆ, ಕೊಂದೆ,' ಎನ್ನತ್ತಾ ಒಂದೇಸಮನೆ ಗೋಳಿಟ್ಟನು.
ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ |
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ || ೩೫ ||
ಪದವಿಭಾಗ-ಅರ್ಥ: ಹೊಗರ ಹೊರಳಿಯ ಹೊಳೆವ ಬಾಯ್ಧಾರೆಗಳ, ತಳಪದ ಕಾಂತಿ ಹೊನ್ನಾಯುಗದ, ಬಹಳ ಪ್ರಭೆ ಶರೌಘ+ ಅನಲನ ಗಹಗಹಿಸಿ ಝಗಝಗಿಸೆ ಕಣ್ಮುಚ್ಚಿ ಕೈಗಳ ಮುಗಿದು ಸಾರಥಿಗೆಂದನು+ ಎನ್ನನು ತೆಗೆದುಕೊಳ್ಳೈ ತಂದೆ ಸಿಲುಕಿದೆನು+ ಅಸ್ತ್ರ ಸೀಮೆಯಲಿ.
 • ಹೊಗರ ಹೊರಳಿಯ ಹೊಳೆವ ಬಾಯ್ಧಾರೆಗಳ= ಪ್ರಕಾಶಿಸುವ (ಮಗ್ಗುಲುಗಳು)ಹೊರಳುಗಳುಳ್ಲ, ತಳಪದ ಕಾಂತಿ ಹೊನ್ನಾಯುಗದ- ಚಿನ್ನದಂತೆ ಆಯುಗಳುಳ್ಲ, ಬಹಳ ಪ್ರಭೆ ಶರೌಘ- ಬಾಣಗಳ ಸಮೂಹಗಳು,+ ಅನಲನ- ಅಗ್ನಿಯೇ ಗಹಗಹಿಸಿ ಝಗಝಗಿಸೆ- ಹೊಳೆಯಲು, ಕಣ್ಮುಚ್ಚಿ ಕೈಗಳ ಮುಗಿದು ಸಾರಥಿಗೆ+ ಎಂದನು+ ಎನ್ನನು ತೆಗೆದುಕೊಳ್ಳೈ ತಂದೆ ಸಿಲುಕಿದೆನು+ ಅಸ್ತ್ರ ಸೀಮೆಯಲಿ- ಅಸ್ತ್ರ ಪ್ರಭೆಯಲ್ಲಿ ಸಿಕ್ಕಿಬಿದ್ದೆನು,' ಎಂದನು ಉತ್ತರ.
ಅರ್ಥ: ಚರ್ಮದ ಚೀಲವನ್ನು ಬಿಚ್ಚಿದಾಗ ಉತ್ತರನು, ಪ್ರಕಾಶಿಸುವ ಹೊರಳುಗಳುಳ್ಳ, ಚಿನ್ನದಂತೆ ಆಯುಗಳುಳ್ಳ, ಬಹಳ ಪ್ರಭೆಯ ಬಾಣಗಳ ಸಮೂಹಗಳನ್ನು ಕಂಡನು. ಅವು ಅಗ್ನಿಯೇ ಗಹಗಹಿಸಿ ಝಗಝಗಿಸೆ ಹೊಳೆಯುವಂತೆ ಕಾಣಲು, ಅವನು ಕಣ್ಮುಚ್ಚಿ ಕೈಗಳನನು ಮುಗಿದು, ಸಾರಥಿಗೆ, 'ನನ್ನನು ಕೆಳಗೆ ತೆಗೆದುಕೊಳ್ಳಯ್ಯಾ ತಂದೆ! ಅಸ್ತ್ರಗಳ ಪ್ರಭೆಯಲ್ಲಿ ಸಿಕ್ಕಿಬಿದ್ದೆನು,' ಎಂದನು ಉತ್ತರ
ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು |
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ || ೩೬||
ಪದವಿಭಾಗ-ಅರ್ಥ: ತುಡುಕಬಹುದೇ ದೋಷಿ ಹಾವಿನ ಕೊಡನ ನಿನಗ+ ಇವು ಕೈದುಗಳೆ ಬರಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲು+ ಅಂಜುವೆನು ಬಿಡಿಸು ಸಾರಥಿಯೆ+ ಎನ್ನನೆ+ಉ+ ಎನೆ, ಫಡ ನಡುಗದಿರು ಫಲುಗುಣನ ನೆನೆ ಕೈದುಡುಕು ಕೈವಶವು+ ಅಹವು ತೆಗೆ ಸಾಕೆಂದನು+ ಆ ಪಾರ್ಥ.
 • ತುಡುಕಬಹುದೇ ದೋಷಿ ಹಾವಿನ ಕೊಡನ= ದೋಷಿಯಾದವನು ಹಾವಿರುವ ಕೊಡಕ್ಕೆ ಕೈ ಹಾಕಬುದೇ? (ಹಿಂದೆ ಸತ್ಯವನ್ನು ಪರೀಕ್ಷಿಸಲು ಕೊಡದಲ್ಲಿ ಸರ್ಪವನ್ನು ಪರೀಕ್ಷೆಗಾಗಿ ಇಡುತ್ತಿದ್ದರು, - ಆಪಾದಿತನು ಅದರಲ್ಲಿ ಕೈ ಇಡಬೇಕಿತ್ತು, ಕಚ್ಚಿದರೆ ದೋಷಿ, ಕಚ್ಚದಿದ್ದರೆ ವಿರ್ದೋಷಿ) ನಿನಗೆ+ ಇವು ಕೈದುಗಳೆ- ಆಯುಧಗಳೇ, ಬರಸಿಡಿಲ ದಾವಣಿಯಾಗುತಿವೆ- ಆಕ್ರಮಣವಗತ್ತಿದೆ, ಕೈಯಿಕ್ಕಲು+ ಅಂಜುವೆನು, ಬಿಡಿಸು ಸಾರಥಿಯೆ,+ ಎನ್ನನು+ ಎನೆ, ಫಡ ನಡುಗದಿರು ಫಲುಗುಣನ ನೆನೆ, ಕೈದುಡುಕು- ನಂತರ ಕೈಹಾಕು, ಕೈವಶವು+ ಅಹವು (ಆಗುವುವು), ತೆಗೆ- ಭಯವನ್ನು ಬಿಡು, ಸಾಕು,+ ಎಂದನು+ ಆ ಪಾರ್ಥ
ಅರ್ಥ:ದೋಷಿಯಾದವನು ಹಾವಿರುವ ಕೊಡಕ್ಕೆ ಕೈ ಹಾಕಬುದೇ? (ಹಿಂದೆ ಸತ್ಯವನ್ನು ಪರೀಕ್ಷಿಸಲು ಕೊಡದಲ್ಲಿ ಸರ್ಪವನ್ನು ಪರೀಕ್ಷೆಗಾಗಿ ಇಡುತ್ತಿದ್ದರು, - ಆಪಾದಿತನು ಅದರಲ್ಲಿ ಕೈ ಇಡಬೇಕಿತ್ತು, ಕಚ್ಚಿದರೆ ದೋಷಿ, ಕಚ್ಚದಿದ್ದರೆ ವಿರ್ದೋಷಿ). ಉತ್ತರನು,'ನಿನಗೆ ಇವು ಆಯುಧಗಳೇ? ಇದರಿಂದ ಬರಸಿಡಿಲ ಆಕ್ರಮಣವಗತ್ತಿದೆ. ಅದಕ್ಕೆ ಕೈಹಾಕಲು ಅಂಜುವೆನು, ನನ್ನನ್ನು ಬಿಡಿಸು ಸಾರಥಿಯೆ', ಎನ್ನಲು, ಫಡ! (ಹಾಗೋ) ಅರ್ಜುನ ಹೇಳಿದನು, 'ನಡುಗದಿರು ಫಲುಗುಣನನ್ನು ನೆನೆಸು, ನಂತರ ಕೈಹಾಕು, ಆಯುಧಗಳು ಕೈವಶವಾಗುವುವು. ಭಯವನ್ನು ಬಿಡು, ಸಾಕು, ಎಂದನು,' ಆ ಪಾರ್ಥ.
ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ |
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ || ೩೭ ||
ಪದವಿಭಾಗ-ಅರ್ಥ: ಉಲಿದು ಸತ್ವದೊಳು+ ಔಕಿ ಕಾಯವ ಬಲಿದು ತೆಕ್ಕೆಯೊಳು+ ಒತ್ತಿ ಬೆವರಿದು ಬಳಲಿ ನೀಡಿದನು+ ಅರ್ಜುನನ ಕರತಳಕೆ ಗಾಂಡಿವವ ಬಲುಹಿನಿಂದ+ ಅವಡೊತ್ತಿ ತೆಗೆ ತೆಗೆದು+ ಉಳಿದ ಬಿಲುಗಳ ನೀಡಿ ಮರನನು ಮಲಗಿ ಢಗೆಯಿಂ+ ಅಳ್ಳೆವೆ+ ಒಯ್ದು ಕುಮಾರನಿಉ+ ಇಂತೆಂದ.
 • ಉಲಿದು- ಹೇಳಿ ಸತ್ವದೊಳು+ ಔಕಿ ಕಾಯವ ಬಲಿದು ತೆಕ್ಕೆಯೊಳು+ ಒತ್ತಿ= ಅರ್ಜುನನ ಹೆಸರು ಹೇಳಿ, ದೇಹವನ್ನು ಗಟ್ಟಿಮಾಡಿಕೊಂಡು, ತೋಳಿನಿಂದ ಒತ್ತಿ,// ಬೆವರಿದು ಬಳಲಿ ನೀಡಿದನು- ಕೊಟ್ಟನು+ ಅರ್ಜುನನ ಕರತಳಕೆ- ಕೈಗೆ, ಗಾಂಡಿವವ ಬಲುಹಿನಿಂದ+ ಅವಡೊತ್ತಿ- ಹಲ್ಲು ಕಚ್ಚಿ ತೆಗೆ ತೆಗೆದು+ ಉಳಿದ ಬಿಲುಗಳ ನೀಡಿ ಮರನನು ಮಲಗಿ ಢಗೆಯಿಂ- ಏದುಸಿರು ಬಿಡುತ್ತಾ + ಅಳ್ಳೆವೆ+ ಒಯ್ದು ಕುಮಾರನು+ ಇಂತೆಂದ.
ಅರ್ಥ:ಉತ್ತರನು ಅರ್ಜುನನ ಹೆಸರು ಹೇಳಿ, ದೇಹವನ್ನು ಗಟ್ಟಿಮಾಡಿಕೊಂಡು, ತೋಳಿನಿಂದ ಒತ್ತಿ ಬೆವರಿ ಬಳಲಿ ಆಯಾಸಗೊಂಡು ಆಯುಧಗಳನ್ನು ನೀಡಿದನು. ಗಾಂಡಿವವನ್ನು ಬಲ ಉಪಯೋಗಿಸಿ ಹಲ್ಲುಕಚ್ಚಿ ಹಿಡಿದು ಅರ್ಜುನನ ಕೈಗೆ ಕೊಟ್ಟನು. ತೆಗೆ ತೆಗೆದು+ ಉಳಿದ ಬಿಲ್ಲುಗಳನ್ನು ನೀಡಿ, ಮರದಲ್ಲೇ ಒರಗಿ ಮಲಗಿಕೊಂಡು, ಏದುಸಿರು ಬಿಡುತ್ತಾ ಕಣ್ಣುಬಿಡುತ್ತಾ ಉತ್ತರಕುಮಾರನು ಹೀಗೆಂದನು.
ಗಿರಿಯನೆತ್ತಲು ಬಹುದು ಬಿಲುಗಳ
ಕೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ |
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು || ೩೮ ||
ಪದವಿಭಾಗ-ಅರ್ಥ: ಗಿರಿಯನು+ ಎತ್ತಲು ಬಹುದು ಬಿಲುಗಳ ಕೆರಳಿಚುವಡೆ+ ಆರೆನು ಬೃಹನ್ನಳೆ ಧರಿಸಲಾಪೈ ನೀ ಸಮರ್ಥನು ನಿನಗೆ ಶರಣು+ ಎನುತ ಸರಳ ಹೊದೆಗಳ ದೇವದತ್ತವ, ಪರಶು, ತೋಮರ, ಕುಂತವಸಿ, ಮುದ್ಗರ, ಗದಾ ದಂಡ,+ ಆದಿ ಶಸ್ತ್ರವ ತೆಗೆದು ನೀಡಿದನು
 • ಗಿರಿಯನು+ ಎತ್ತಲು ಬಹುದು ಬಿಲುಗಳ ಕೆರಳಿಚುವಡೆ+ ಆರೆನು= ಬೆಟ್ಟವನನು ಎತ್ತಬಹುದು ಆದರೆ ಇವುಗಳನ್ನು ಎತ್ತುವುದು ಕಷ್ಟ. ಉಗ್ರ ಬಿಲ್ಲುಗಳನ್ನು ತೆಗೆಯಲಾರೆನು.// ಬೃಹನ್ನಳೆ ಧರಿಸಲಾಪೈ ನೀ ಸಮರ್ಥನು ನಿನಗೆ ಶರಣು+ ಎನುತ= ಬೃಹನ್ನಳೆ ಈ ಬಿಲ್ಲನ್ನು ಧರಿಸಲುಬಲ್ಲೆಯಾ? ಹಾಗಿದ್ದರೆ ನೀನು ನಿಜವಾಗಿ ಸಮರ್ಥನೇ ಸರಿ. ನಿನಗೆ ಶರಣು- ನಮಸ್ಕಾರ,' ಎನ್ನುತ್ತಾ,// ಸರಳ ಹೊದೆಗಳ= ಬಾಣಗಳ ಕಟ್ಟುಗಳನ್ನು, ದೇವದತ್ತವ, ಪರಶು, ತೋಮರ, ಕುಂತವ, ಅಸಿ-ಕತ್ತಿ, ಮುದ್ಗರ, ಗದಾದಂಡ,+ ಆದಿ-ಮೊದಲಾದ ಶಸ್ತ್ರವ ತೆಗೆದು ನೀಡಿದನು.
ಅರ್ಥ:ಉತ್ತರನು ಹೇಳಿದನು, 'ಬೆಟ್ಟವನ್ನು ಎತ್ತಬಹುದು ಆದರೆ ಇವುಗಳನ್ನು ಎತ್ತುವುದು ಕಷ್ಟ. ಉಗ್ರ ಬಿಲ್ಲುಗಳನ್ನು ತೆಗೆಯಲಾರೆನು. ಬೃಹನ್ನಳೆ ಈ ಬಿಲ್ಲನ್ನು ಧರಿಸಬಲ್ಲೆಯಾ? ಹಾಗಿದ್ದರೆ ನೀನು ನಿಜವಾಗಿ ಸಮರ್ಥನೇ ಸರಿ. ನಿನಗೆ ನಮಸ್ಕಾರ,' ಎನ್ನುತ್ತಾ, ಬಾಣಗಳ ಕಟ್ಟುಗಳಹೊರೆಯನ್ನು, ದೇವದತ್ತವನ್ನೂ, ಪರಶು, ತೋಮರ, ಕುಂತವ, ಅಸಿ-ಕತ್ತಿ, ಮುದ್ಗರ, ಗದಾದಂಡ,ಮೊದಲಾದ ಶಸ್ತ್ರಗಲನ್ನು ತೆಗೆದು ಅರ್ಜುನನಿಗೆ ನೀಡಿದನು.
ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸೆಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು |
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ || ೩೯ ||
ಪದವಿಭಾಗ-ಅರ್ಥ:ಹೇಳು ಸಾರಥಿ ಬಿಲ್ಲಿ +ಇದು+ ಆವನ ತೋಳಿಗೆ+ ಅಳವಡುವುದು, ಮಹಾ ಶರಜಾಲ ಬೆಸೆಗೈದಪವು+ ಇದು+ ಆರಿಗೆ ಮಿಕ್ಕ ಬಿಲ್ಲುಗಳು ಕಾಳಗದೊಳು+ ಇವನು+ ಆರು ತೆಗೆವರು, ಮೇಲುಗೈದುಗಳು+ ಅರಿಗೆ+ ಇವು ಕೈಮೇಳವಿಸುವವು, ಮನದ ಸಂಶಯ ಹಿಂಗೆ, ಹೇಳೆಂದ.
 • ಹೇಳು ಸಾರಥಿ ಬಿಲ್ಲು +ಇದು+ ಆವನ ತೋಳಿಗೆ+ ಅಳವಡುವುದು= ಉತ್ತರನು ಕೇಳಿದನು, ಸಾರಥಿಯೇ ಹೇಳು, ಈ ಬಿಲ್ಲು, ಇದು ಯಾವನ ತೋಳಿಗೆ ಅಳವಡುವುದು- ಹೊಂದುವುದು. ಮಹಾ ಶರಜಾಲ ಬೆಸೆಗೈದಪವು- ಹೇಳು+ ಇದು+ ಆರಿಗೆ= ಈ ಮಹಾ ಬಾಣಗಳ ಸಮೂಹ, ಮಂತ್ರಾಸ್ತ್ರಗಳು ಯಾರ ಜೊತೆ ಮಾತನಾಡುವುವು? ಮಿಕ್ಕ ಬಿಲ್ಲುಗಳು ಕಾಳಗದೊಳು+ ಇವನು+ ಆರು ತೆಗೆವರು= ಉಳಿದ ಬಿಲ್ಲುಗಳನ್ನು ಯುದ್ಧದಲ್ಲಿ ಯಾರು ತೆಗೆದು ಉಪಯೋಗಿಸುವರು? ಮೇಲುಗೈದುಗಳು+ ಅರಿಗೆ+ ಇವು ಕೈಮೇಳವಿಸುವವು ಮತ್ತೆ ಇನ್ನುಳಿದ ದೊಡ್ಡ ಆಯುಧಗಳು ಯಾರಕೈಗೆ ಹೊಂದುವುವು?,// ಮನದ ಸಂಶಯ ಹಿಂಗೆ, ಹೇಳೆಂದ= ನನ್ನ ಮನಸಸ್ಸಿನ ಸಂಶಯವನ್ನು ಕಳೆಯಲು ಹೇಳು,' ಎಂದು ಉತ್ತರನು ಅರ್ಜುನನಿಗೆ ಹೇಳಿದನು.
ಅರ್ಥ:ಉತ್ತರನು ಕೇಳಿದನು, ಸಾರಥಿಯೇ ಹೇಳು, ಈ ಬಿಲ್ಲು, ಇದು ಯಾವನ ತೋಳಿಗೆ ಹೊಂದುವುದು. ಈ ಮಹಾ ಬಾಣಗಳ ಸಮೂಹ, ಮಂತ್ರಾಸ್ತ್ರಗಳು ಯಾರ ಜೊತೆ ಮಾತನಾಡುವುವು? ಉಳಿದ ಬಿಲ್ಲುಗಳನ್ನು ಯುದ್ಧದಲ್ಲಿ ಯಾರು ತೆಗೆದು ಉಪಯೋಗಿಸುವರು? ಮತ್ತೆ ಇನ್ನುಳಿದ ದೊಡ್ಡ ಆಯುಧಗಳು ಯಾರಕೈಗೆ ಹೊಂದುವುವು? ನನ್ನ ಮನಸಸ್ಸಿನ ಸಂಶಯವನ್ನು ಕಳೆಯಲು ಹೇಳು,' (ಎಂದು ಉತ್ತರನು ಅರ್ಜುನನಿಗೆ ಹೇಳಿದನು.)
ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು |
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ || ೪೦ ||
ಪದವಿಭಾಗ-ಅರ್ಥ: ಇದು ಕಣಾ ಗಾಂಡೀವವೆಂದು+ ಎಂಬುದು ಮಹಾಧನು ಪಾರ್ಥನದು, ಬಳಿಕ+ಇದು ಯುಧಿಷ್ಠಿರ ಚಾಪವು+ ಈ ಧನು ಭೀಮಸೇನನದು ಇದು ನಕುಲ ಕೋದಂಡ ಬಿಲು ತಾನು+ ಇದುವೆ ಸಹದೇವನದು, ಭಾರಿಯಗದೆಯಿದು+ ಅನಿಲಜನದು ಕಿರೀಟಿಯ ಬಾಣವಿವು+ ಯ+ ಎಂದ.
 • ಇದು ಕಣಾ ಗಾಂಡೀವವೆಂದು+ ಎಂಬುದು ಮಹಾಧನು ಪಾರ್ಥನದು, ಬಳಿಕ+ ಇದು ಯುಧಿಷ್ಠಿರ ಚಾಪವು- ಬಿಲ್ಲು+ ಈ ಧನು ಭೀಮಸೇನನದು ಇದು ನಕುಲ ಕೋದಂಡ ಬಿಲು ತಾನು+ ಇದುವೆ ಸಹದೇವನದು, ಭಾರಿಯಗದೆಯಿದು+ ಅನಿಲಜನದು-ಭೀಮಸೇನನದು ಕಿರೀಟಿಯ ಬಾಣವಿವು+ ಯ+ ಎಂದ.
ಅರ್ಥ:ಉತ್ತರನೇ ನೋಡು, ಇದು ಕಣಾ ಗಾಂಡೀವವೆಂದು ಕರೆಯುವುದು, ಮಹಾಧನುಸ್ಸು - ಪಾರ್ಥನದು, ನಂತರ ಇದು ಯುಧಿಷ್ಠಿರನ ಬಿಲ್ಲು. ಈ ಬಿಲ್ಲು ಭೀಮಸೇನನದು, ಇದು ನಕುಲನ ಬಿಲ್ಲು, ಇದುವೆ ಬಿಲ್ಲು ಸಹದೇವನದು, ಭಾರಿಯ ಗದೆಯಿದು ಭೀಮಸೇನನದು. ಇವು ಅರ್ಜುನನ ಬಾಣಗಳು, ಎಂದು ಅರ್ಜುನ ತೋರಿಸಿದ.
ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ |
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ || ೪೧ ||
ಪದವಿಭಾಗ-ಅರ್ಥ: ಅವರವರ ಬತ್ತಳಿಕೆ ಚಾಪವನು+ ಅವರ ಶರವನು ಕಂಬು ಖಡುಗವ ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ ವಿವಿಧ ಶಸ್ತ್ರಾಸ್ತ್ರವನು ಫಲುಗುಣ ವಿವರಿಸಲು ಬೆರಗಾಗಿ ಸಾರಥಿಯಿವನು ತಾನು+ ಆರೆಂದು ಮತ್ಸ್ಯನ ಸೂನು ಬೆಸಗೊಂಡ.
 • ಅವರವರ= ಪ್ರತಿಯೊಬ್ಬ ಪಾಂಡವರ ಬತ್ತಳಿಕೆ ಚಾಪವನು-ಬಿಲ್ಲನ್ನು+ ಅವರ ಶರವನು=ಬಾಣಗಳನ್ನು, ಕಂಬು= ಶಂಖವನ್ನು, ಖಡುಗವ= ಖಡ್ಗವನ್ನು, ಕವಚ ಸೀಸಕ ಜೋಡುಗಳ, ಬಿರುದುಗಳ ಟೆಕ್ಕೆಯವ- ಬಾವುಟವ, ವಿವಿಧ ಶಸ್ತ್ರಾಸ್ತ್ರವನು ಫಲುಗುಣ ವಿವರಿಸಲು ಬೆರಗಾಗಿ ಸಾರಥಿ+ಯ+ ಇವನು ತಾನು+ ಆರೆಂದು ಮತ್ಸ್ಯನ ಸೂನು ಬೆಸಗೊಂಡ= ಕೇಳಿದ.
ಅರ್ಥ: ಪ್ರತಿಯೊಬ್ಬ ಪಾಂಡವರ ಬತ್ತಳಿಕೆ ಬಿಲ್ಲನ್ನು, ಅವರ ಬಾಣಗಳನ್ನು, ಶಂಖವನ್ನು, ಖಡ್ಗವನ್ನು, ಸೀಸಕದ ಕವಚ ಜೋಡುಗಳಣ್ನು, ಬಿರುದುಗಳ ಚಿನ್ಹೆಗಳನ್ನು, ಬಾವುಟವನ್ನು, ವಿವಿಧ ಶಸ್ತ್ರಾಸ್ತ್ರಗಳನ್ನೂ ಫಲ್ಗುಣನು ವಿವರಿಸಲು, ಉತ್ತರನು ಬೆರಗಾಗಿ ಈ ಸಾರಥಿ ಹಾಗಿದ್ದರೆ, ಅವರಲ್ಲಿ ನೀನು ಯಾರು ಹೇಳು ಎಂದು ಉತ್ತರನು ಕೇಳಿದ.
ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ |
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ || ೪೨ ||
ಪದವಿಭಾಗ-ಅರ್ಥ: ಆರು ನೀನು+ ಅರ್ಜುನನೊ ನಕುಲನೊ ಮಾರುತನ ಸುತನೋ ಯುಧಿಷ್ಠಿರ ವೀರನೋ ಸಹದೇವನೋ ಮೇಣ್+ ಅವರ ಬಾಂಧವನೊ ಧೀರ ಹೇಳೈ ಬೇಡಿಕೊಂಬೆನು ಕಾರಣವ ವಿಸ್ತರಿಸು ಪಾಂಡು ಕುಮಾರರ+ ಆಯುಧ ತತಿಯ ನೀನೆಂಉ+ ಅರಿವೆ ಹೇಳೆಂದ
 • ಆರು- ಯಾರು, ನೀನು+ ಅರ್ಜುನನೊ ನಕುಲನೊ ಮಾರುತನ ಸುತನೋ- ಭೀಮನೋ, ಯುಧಿಷ್ಠಿರ ವೀರನೋ ಸಹದೇವನೋ; ಮೇಣ್- ಮತ್ತೆ+ ಅವರ ಬಾಂಧವನೊ ಧೀರ ಹೇಳೈ ಬೇಡಿಕೊಂಬೆನು ಕಾರಣವ ವಿಸ್ತರಿಸು ಪಾಂಡು ಕುಮಾರರ+ ಆಯುಧ ತತಿಯ- ರಾಶಿಯ ನೀನು+ ಎಂತು+ ಅರಿವೆ-ನೀನು ಹೇಗೆ ತಿಳಿದಿರುವೆ? ಹೇಳೆಂದ- ಹೇಳು ಎಂದ ಉತ್ತರ.
ಅರ್ಥ: ಬ್ರಹನ್ನಳೆ! ನೀನು ಯಾರು? ಅರ್ಜುನನೊ, ನಕುಲನೊ, ಭೀಮನೋ, ಯುಧಿಷ್ಠಿರ ವೀರನೋ, ಸಹದೇವನೋ, ಅಥವಾ ಅವರ ಬಾಂಧವನೊ? ಧೀರನೇ ಬೇಡಿಕೊಳ್ಳುತ್ತೇನೆ ಹೇಳಯ್ಯಾ, ಪಾಂಡವರಾದರೆ ಇಲ್ಲಿ ಬಂದ ಕಾರಣವನ್ನು ವಿಸ್ತರಿಸಿ ಹೇಳು; ಪಾಂಡು ಕುಮಾರರ ಆಯುಧದ ರಾಶಿಯು ಇಲ್ಲಿರುವುದನ್ನು ನೀನು ಹೇಗೆ ತಿಳಿದಿರುವೆ? ಹೇಳು, ಎಂದ ಉತ್ತರ.
ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ |
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ || ೪೩ ||
ಪದವಿಭಾಗ-ಅರ್ಥ: ಆದೊಡೆ, ಆನು+ ಅರ್ಜುನನು, ಬಾಣಸಿಯಾದ ವಲಲನು ಭೀಮ, ವರ ಯತಿಯಾದ ಕಂಕನು ಧರ್ಮಪುತ್ರನು, ನಿಮ್ಮ ಗೋಕುಲವ ಕಾದವನು ಸಹದೇವ, ರಾವುತನಾದವನು ನಕುಲನು, ವಿಳಾಸಿನಿಯಾದವಳು ಸೈರಂಧ್ರಿ ರಾಣೀವಾಸವು+ ಎಮಗೆ+ ಎಂದ.
 • ಆದೊಡೆ- ಹಾಗಿದ್ದರೆ ಕೇಳು, ಆನು- ನಾನು+ ಅರ್ಜುನನು, ಬಾಣಸಿಯಾದ- ಅಡುಗೆಮಾಡುವವ, ವಲಲನು ಭೀಮ, ವರ ಯತಿಯಾದ ಕಂಕನು ಧರ್ಮಪುತ್ರನು, ನಿಮ್ಮ ಗೋಕುಲವ- ಹಸುಗಳನ್ನು, ಕಾದವನು ಸಹದೇವ,; ಕುದರೆಗಳ ಕ್ಷೇಮ ನೋಡುವ ರಾವುತನಾದವನು ನಕುಲನು, ವಿಳಾಸಿನಿಯಾದವಳು- ರಾಣಿ ಸುದೀಷ್ಷ್ಣೆಗೆ ಅಲಂಕಾರ ಮಾಡುವವಳು, ಸೈರಂಧ್ರಿಯು (ದ್ರೌಪದಿ), ರಾಣೀವಾಸವು- ಅಂತಃಪರದ ಹೆಂಗಸರ ಜೊತೆಗಿದ್ದು ನ್ಋತ್ಯ ಗೀತ ಕಲಿಸುವ ಕೆಲಸ+ ಎಮಗೆ- ನಮ್ಮದು+ ಎಂದ (ಅರ್ಜುನ)
ಅರ್ಥ:ಹಾಗಿದ್ದರೆ ಕೇಳು, ನಾನು ಅರ್ಜುನನು, ಬಾಣಸಿಯಾದ ಅಡುಗೆಮಾಡುವ ವಲಲನು ಭೀಮ, ಪೂಲ್ಯ ಯತಿಯಾದ ಕಂಕನು ಧರ್ಮಪುತ್ರ ಯುಧಿಷ್ಠಿರನು, ನಿಮ್ಮ ಹಸುಗಳನ್ನು, ಕಾದವನು ಸಹದೇವ, ಕುದರೆಗಳ ಕ್ಷೇಮ ನೋಡುವ ರಾವುತನಾದವನು ನಕುಲನು, ರಾಣಿ ಸುದೀಷ್ಷ್ಣೆಗೆ ಅಲಂಕಾರ ಮಾಡುವವಳು, ಸೈರಂಧ್ರಿಯು ದ್ರೌಪದಿ, - ಅಂತಃಪರದ ಹೆಂಗಸರ ಜೊತೆಗಿದ್ದು ನೃತ್ಯ ಗೀತ ಕಲಿಸುವ ಕೆಲಸ ನಮ್ಮದು ಎಂದ, ಅರ್ಜುನ.
ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ |
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ || ೪೪ ||
ಪದವಿಭಾಗ-ಅರ್ಥ: ಅಹುದು ಬಳಿಕ+ ಏನು+ ಉಳಿದವರಿಗೆ+ ಈ ಮಹಿಮೆ ತಾನೆಲ್ಲಿಯದು, ಕಾಣಲು ಬಹುದಲಾ ಜೀವಿಸಿದರೆ+ ಅತಿಶಯವನು ಮಹಾದೇವ ಗಹನ ಮಾಡದೆ ನುಡಿದ ತಪ್ಪಿನ ಬಹಳತೆಯ ಭಾವಿಸದೆ, ತನ್ನನು ಕುಹಕಿಯೆನ್ನದೆ ಕಾಯಬೇಕೆಂದು+ ಎರಗಿದನು ಪದಕೆ.
 • ಅಹುದು- ಇದು ಸತ್ಯವೇ! ಬಳಿಕ+ ಏನು+ ಉಳಿದವರಿಗೆ- ಬೇರೆಯವರಿಗೆ + ಈ ಮಹಿಮೆ ತಾನೆಲ್ಲಿಯದು- ಹೇಗೆ ಬರಲು ಸಾದ್ಯ?, ಕಾಣಲು ಬಹುದಲಾ ಜೀವಿಸಿದರೆ+ ಅತಿಶಯವನು ಮಹಾದೇವ= ಬದುಕಿದ್ದರೆ ನಿಮ್ಮ ಸಾಹಸವನ್ನು ನೊಡಬಹುದಲ್ಲವೇ? ಗಹನ ಮಾಡದೆ ನುಡಿದ ತಪ್ಪಿನ ಬಹಳತೆಯ ಭಾವಿಸದೆ,= ತಾನು ಕುಹಕದಿಂದ ಬಹಳ ತಪ್ಪಾಗಿ ಬಹಳ ಮಾತನಾಡಿದುದನ್ನು ಮನಸ್ಸಿಗೆ ತೀವ್ರವಾಗಿ ತೆಗೆದುಕೊಳ್ಳದೆ,/ ತನ್ನನು ಕುಹಕಿಯೆನ್ನದೆ ಕಾಯಬೇಕೆಂದು+ ಎರಗಿದನು ಪದಕೆ= ತನ್ನನ್ನು ಕುಹಕಿ ಎಂದು ಹೇಳದೆ ಕ್ಷಮಿಸಿ ಕಾಪಾಡಬೇಕು ಎಂದು ಉತ್ತರನು ಅರ್ಜುನನ ಪಾದಕ್ಕೆ ನಮಸ್ಕಾರ ಮಾಡಿದನು.
ಅರ್ಥ: ಇದು ಸತ್ಯವೇ! ಬಳಿಕ ಏನು, ಬೇರೆಯವರಿಗೆ ಈ ಮಹಿಮೆ ಹೇಗೆ ಬರಲು ಸಾದ್ಯ?, ಬದುಕಿದ್ದರೆ ಈ ಅಸ್ತ್ರಗಳನ್ನೂ,ನಿಮ್ಮ ಸಾಹಸವನ್ನು ನೊಡಬಹುದಲ್ಲವೇ? ತಾನು ಕುಹಕದಿಂದ ಬಹಳ ತಪ್ಪಾಗಿ ಅರಿಯದೆ ಬಹಳ ಮಾತನಾಡಿದುದನ್ನು ಮನಸ್ಸಿಗೆ ತೀವ್ರವಾಗಿ ತೆಗೆದುಕೊಳ್ಳದೆ, ತನ್ನನ್ನು ಕುಹಕಿ ಎಂದು ಹೇಳದೆ ಕ್ಷಮಿಸಿ ಕಾಪಾಡಬೇಕು ಎಂದು ಉತ್ತರನು ಅರ್ಜುನನ ಪಾದಕ್ಕೆ ನಮಸ್ಕಾರ ಮಾಡಿದನು.
ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ |
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ || ೪೫ ||
ಪದವಿಭಾಗ-ಅರ್ಥ: ಮೌಳಿಯನು ನೆಗಹಿದನು ನಿನ್ನಯ ಮೇಲೆ ತಪ್ಪಿಲ್ಲೆನುತ ಫಲುಗುಣ ಬೋಳವಿಸೆ, ನಿಂದಿರ್ದು ಕೈಮುಗಿದು+ ಉತ್ತರನು ನಗುತ ಬಾಲಕನ ಬಿನ್ನಪವನು+ ಒಂದನು ಕೇಳಬೇಹುದು ನಿಮ್ಮ ದಶನಾಮ+ಆ(ವ)ಳಿಯನು (ಆವಳಿ- ಗುಂಪು.) ಪೇಳ್ದು+ ಅಲ್ಪಮತಿಯನು ತಿಳುಹಬೇಕು+ ಎಂದ.
ಮೌಳಿಯನು ನೆಗಹಿದನು=ಅರ್ಜುನನು, ನಮಿಸಿದ ಉತ್ತರನ ತಲೆಯನ್ನು ಎತ್ತಿದನು. ನಿನ್ನಯ ಮೇಲೆ ತಪ್ಪಿಲ್ಲ+ ಎನುತ ಫಲುಗುಣ ಬೋಳವಿಸೆ,= ನಿನ್ನ ಮೇಲೆ ತಪ್ಪನ್ನು ಹೇಳುವುದಿಲ್ಲ- ನಿನ್ನದೇನೂ ತಪ್ಪಿಲ್ಲ, ಎಂದು ಕೈಮುಗಿದಿದ್ದ ಉತ್ತರನಿಗೆ ಹೇಳಿ ಅರ್ಜುನನು ಉತ್ತರನ ತಲೆಯನ್ನು ಪ್ರೀತಿಯಿಂದ ಸವರಿದನು.// ನಿಂದಿರ್ದು ಕೈಮುಗಿದು+ ಉತ್ತರನು ನಗುತ ಬಾಲಕನ ಬಿನ್ನಪವನು+ ಒಂದನು ಕೇಳಬೇಹುದು ನಿಮ್ಮ ದಶನಾಮ+ಆ(ವ)ಳಿಯನು (ಆವಳಿ- ಗುಂಪು.) ಪೇಳ್ದು+ ಅಲ್ಪಮತಿಯನು ತಿಳುಹಬೇಕು+ ಎಂದ= ಹಾಗೆ ಕೈಮುಗಿದು ನಿಂತಿದ್ದ ಉತ್ತರನು ನಗತ್ತಾ ಈ ಹುಡುಗನ ಒಂದು ಬೇಡಿಕೆಯನ್ನು ಒಂದನ್ನು ನೆರವೇರಿಸಬೇಕು, ನಿಮ್ಮ ಹತ್ತು ಹೆಸರುಗಳನ್ನು (ಸಮುಚ್ಚಯವನ್ನು) ತಿಳುವಳಿಕೆ ಇಲ್ಲದ ನನಗೆ ತಿಳಿಸಬೇಕು ಎಂದ.
ಅರ್ಥ: ಅರ್ಜುನನು, ನಮಿಸಿದ ಉತ್ತರನ ತಲೆಯನ್ನು ಎತ್ತಿದನು. ನಿನ್ನದೇನೂ ತಪ್ಪಿಲ್ಲ, ಎಂದು ಕೈಮುಗಿದಿದ್ದ ಉತ್ತರನಿಗೆ ಹೇಳಿ, ಅರ್ಜುನನು ಉತ್ತರನ ತಲೆಯನ್ನು ಪ್ರೀತಿಯಿಂದ ನೇವರಿಸಿದನು. ಹಾಗೆಯೇ ಕೈಮುಗಿದು ನಿಂತಿದ್ದ ಉತ್ತರನು ನಗತ್ತಾ ಈ ಹುಡುಗನ ಒಂದು ಬೇಡಿಕೆ ಒಂದನ್ನು ನೆರವೇರಿಸಬೇಕು, ನಿಮ್ಮ ಹತ್ತು ಹೆಸರುಗಳನ್ನು (ಸಮುಚ್ಚಯವನ್ನು) ತಿಳುವಳಿಕೆ ಇಲ್ಲದ ನನಗೆ ತಿಳಿಸಬೇಕು ಎಂದ.
ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ |
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ || ೪೬ ||
ಪದವಿಭಾಗ-ಅರ್ಥ: ಎನಲು ನಸುನಗುತ+ ಅರ್ಜುನನು, 'ಫಲುಗುಣ, ಧನಂಜಯ, ಜಿಷ್ಣು, ಸಿತವಾಹನ, ವಿಜಯ, ಬೀಭತ್ಸು, ಪಾರ್ಥ, ಕಿರೀಟಿ, ಮೊದಲಾದ ವಿನುತ ಕೃಷ್ಣನು, ಸವ್ಯಸಾಚಿಗಳು, ಎನಿಪ ಪೆಸರನು ತಿಳುಹಿ ಪುನರಪಿ ತನಗೆ ಬಂದ+ ಅಂದವನು ವಿಸ್ತರವಾಗಿ ವಿರಚಿಸಿದ.
 • ಎನಲು= ಉತ್ತರನು ನಿನ್ನ ಹತ್ತು ಹೆಸರುಗಳನ್ನು ಹೇಳು ಎನ್ನಲು, (ತಾನು ಅರ್ಜುನನು ನಿಜವೇ, ಅಲ್ಲವೇ ಎಂದು ಪರೀಕ್ಷಿಸಲು ಕೇಳುತ್ತಿದ್ದಾನೆ ಎಂದು ಭಾವಿಸಿ) ನಸುನಗುತ+ ಅರ್ಜುನನು, 'ಫಲುಗುಣ, ಧನಂಜಯ, ಜಿಷ್ಣು, ಸಿತವಾಹನ, ವಿಜಯ, ಬೀಭತ್ಸು, ಪಾರ್ಥ, ಕಿರೀಟಿ, ಮೊದಲಾದ ವಿನುತ ಕೃಷ್ಣನು, ಸವ್ಯಸಾಚಿಗಳು, ಎನಿಪ- ಎಂಬ ಪೆಸರನು- ಹೆಸರುಗಳನ್ನು, ತಿಳುಹಿ ಪುನರಪಿ- ಪುನಃ, ತನಗೆ ಬಂದ+ ಅಂದವನು ವಿಸ್ತರವಾಗಿ ವಿರಚಿಸಿದ- ಹೇಳಿದ.
ಅರ್ಥ: ಉತ್ತರನು ನಿನ್ನ ಹತ್ತು ಹೆಸರುಗಳನ್ನು ಹೇಳು ಎನ್ನಲು, ಅರ್ಜುನನು ನಸುನಗುತ್ತಾ, 'ಫಲುಗುಣ, ಧನಂಜಯ, ಜಿಷ್ಣು, ಸಿತವಾಹನ, ವಿಜಯ, ಬೀಭತ್ಸು, ಪಾರ್ಥ, ಕಿರೀಟಿ, ಮೊದಲಾದ ಶ್ರೇಷ್ಠ ಕೃಷ್ಣ, ಸವ್ಯಸಾಚಿಗಳು, ಎಂಬ ಹೆಸರುಗಳನ್ನು ತಿಳುಹಿಸಿ ಪುನಃ, ತನಗೆ ಅವು ಬಂದ ರಿತಿಯನ್ನು ವಿಸ್ತಾರವಾಗಿ ಹೇಳಿದನು.
ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಹು ರೂಪು |
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ || ೪೭ ||
ಪದವಿಭಾಗ-ಅರ್ಥ: ನಂಬಿದೆನು ಲೇಸಾಗಿ ನಿಶ್ಚಯವು+ ಇಂಬುಗೊಂಡುದು ಪಾರ್ಥ ನಿನಗೆ+ ಈ ಡೊಂಬು+ ಇದು+ ಏಕೈ ಹುಲು ಬೃಹನ್ನಳೆತನದ ಬಹು ರೂಪು, ಅಂಬುಜಾಕ್ಷನ ಸಾಹಸ ಪ್ರತಿಬಿಂಬವಲ್ಲಾ ನೀನು ನಿನ್ನ ವಿಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ.
 • ನಂಬಿದೆನು ಲೇಸಾಗಿ ನಿಶ್ಚಯವು+ ಇಂಬುಗೊಂಡುದು= ಈಗ ನೀನು ನಿಜವಾಗಿ ಅರ್ಜುನನೆಂದು ನಂಬಿದೆ, ಮನಸ್ಸಿಗೆ ಚೆನ್ನಾಗಿ ನಿಶ್ಚಯವಾಯಿತು. ಪಾರ್ಥ ನಿನಗೆ+ ಈ ಡೊಂಬಿದು+ ಏಕೈ ಹುಲು ಬೃಹನ್ನಳೆತನದ ಬಹು ರೂಪು,= ಎಲೈ ಪಾರ್ಥನೇ ನಿನಗೆ ಈ ಡೊಂಬು- ಮೋಸದ ಹೀನ ಸೋಗು ಏಕೆ? ಹುಲು ಬೃಹನ್ನಳೆತನದ ಬಹು ರೂಪು- ಕೀಳುತನದ ಅಲ್ಪತನದ ಶಿಖಂಡಿಯ ರೂಪು ಬಂದಿದ್ದು ಏಕೆ?;// ಅಂಬುಜಾಕ್ಷನ ಸಾಹಸ ಪ್ರತಿಬಿಂಬವಲ್ಲಾ ನೀನು= - ಸಾಹಸಿಯಾದ ಕೃಷ್ಣನ ಪ್ರತಿಬಿಂಬವಲ್ಲವೇ ನೀನು? ನಿನ್ನ ವಿಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ= ನಿನ್ನನ್ನು ಹೀಗೆ ಅಪಹಾಸ್ಯಕ್ಕೆ ಒಳಗಾಗುವ ರೂಪು ಬರಲು ಕಾರಣವೇನು, ಹೇಳು ಎಂದ ಉತ್ತರ.
ಅರ್ಥ:ಈಗ ನೀನು ನಿಜವಾಗಿ ಅರ್ಜುನನೆಂದು ನಂಬಿದೆ, ಮನಸ್ಸಿಗೆ ಚೆನ್ನಾಗಿ ನಿಶ್ಚಯವಾಯಿತು. ಎಲೈ ಪಾರ್ಥನೇ ನಿನಗೆ ಮೋಸದ ಹೀನ ಸೋಗು ಏಕೆ? ಕೀಳುತನದ ಅಲ್ಪತನದ ಶಿಖಂಡಿಯ ರೂಪು ಬಂದಿದ್ದು ಏಕೆ?; ಸಾಹಸಿಯಾದ ಕೃಷ್ಣನ ಪ್ರತಿಬಿಂಬವಲ್ಲವೇ ನೀನು? ನಿನ್ನನ್ನು ಹೀಗೆ ಅಪಹಾಸ್ಯಕ್ಕೆ ಒಳಗಾಗುವ ರೂಪು ಬರಲು ಕಾರಣವೇನು, ಹೇಳು ಎಂದ ಉತ್ತರ.
ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ |
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ || ೪೮ ||
ಪದವಿಭಾಗ-ಅರ್ಥ: ಇದು ಕಣಾ ಧರ್ಮಜನ ಸತ್ಯಾಭ್ಯುದಯಕೋಸುಗ ಊರ್ವಶಿಯ ಶಾಪದಲಿ ಬಂದುದು, ಹೊತ್ತು ನೂಕಿದೆನೊಂದು ವತ್ಸರವ ಇದಕೆ ನಿಜ್ಜೋಡಾಯ್ತು ನಿರ್ವಿಘ್ನದಲಿ ನೂಕಿದೆವು+ ಅವಧಿಯನು ತನ್ನ+ ಅದಟುತನವನು ಭೀತಿಗೊಳ್ಳದೆ ನೋಡು ನೀನೆಂದ.
 • ಇದು ಕಣಾ ಧರ್ಮಜನ ಸತ್ಯಾಭ್ಯುದಯಕೋಸುಗ ಊರ್ವಶಿಯ ಶಾಪದಲಿ ಬಂದುದು= ಉತ್ತರನೇ, ಇದು ಕಣಾ! ಧರ್ಮರಾಜನ ಸತ್ಯಾಭ್ಯುದಯಕ್ಕಾಗಿ ಎಂಬಂತೆ ಊರ್ವಶಿಯ ಶಾಪದಿಂದ ಬಂದಿತು. ಹೊತ್ತು ನೂಕಿದೆನೊಂದು ವತ್ಸರವ ಇದಕೆ ನಿಜ್ಜೋಡಾಯ್ತು ನಿರ್ವಿಘ್ನದಲಿ ನೂಕಿದೆವು+ ಅವಧಿಯನು= ಆ ಶಾಪವನ್ನು ಹೊತ್ತುಕೊಂಡು, ಊರ್ವಶಿಯು ಕೊಟ್ಟ ಪರಿಹಾರವಾಗಿ ಈ ಅಜ್ಞಾತಕಾಲಲ್ಲಿ ಒಂದು ವರ್ಷವರೆಗೆ ಈ ಅವಧಿಯಲ್ಲಿ ಶಾಪವನ್ನು ಬರಮಾಡಿಕೊಂಡು ಅನಭವಿಸಿ, ನೂಕಿದೆನೊಂದು ವತ್ಸರವ- ಒಂದು ವರ್ಷ ಕಳೆದೆನು. ಇದಕೆ ನಿಜ್ಜೋಡಾಯ್ತು ನಿರ್ವಿಘ್ನದಲಿ ನೂಕಿದೆವು+ ಅವಧಿಯನು= ಈ ಶಾಪವು ಅಜ್ಞಾತವಾಸಕ್ಕೆ ಸರಿಯಾಗಿ ಜೋಡಣೆಯಾಗಿ ನಿರ್ವಿಘ್ನದಲ್ಲಿ ಒಂದು ವರ್ಷ ಕಳೆದೆವು; ತನ್ನ+ ಅದಟುತನವನು ಭೀತಿಗೊಳ್ಳದೆ ನೋಡು ನೀನೆಂದ= ಉತ್ತರನಿಗೆ, ತನ್ನ ಶೌರ್ಯವನ್ನು 'ಹೆದರದೆ ನೋಡು ನೀನು', ಎಂದ ಅರ್ಜುನ.
ಅರ್ಥ: ಉತ್ತರನೇ, ಇದು- ಈ ನಪುಂಸಕತೆ, ಕಣಾ! ಧರ್ಮರಾಜನ ಸತ್ಯಾಭ್ಯುದಯಕ್ಕಾಗಿ ಎಂಬಂತೆ ಊರ್ವಶಿಯ ಶಾಪದಿಂದ ಬಂದಿತು. ಆ ಶಾಪವನ್ನು ಹೊತ್ತುಕೊಂಡು, ಊರ್ವಶಿಯು ಕೊಟ್ಟ ಪರಿಹಾರವಾಗಿ ಈ ಅಜ್ಞಾತಕಾಲದ ಅವಧಿಯಲ್ಲಿ ಒಂದು ವರ್ಷವರೆಗೆ ಶಾಪವನ್ನು ಬರಮಾಡಿಕೊಂಡು ಅನಭವಿಸಿ, ಒಂದು ವರ್ಷ ಕಳೆದೆನು. ಈ ಶಾಪವು ಅಜ್ಞಾತವಾಸಕ್ಕೆ ಸರಿಯಾಗಿ ಜೋಡಣೆಯಾಗಿ ನಿರ್ವಿಘ್ನದಲ್ಲಿ ಒಂದು ವರ್ಷ ಕಳೆಯಿತು; ಉತ್ತರನಿಗೆ, ತನ್ನ ಶೌರ್ಯವನ್ನು 'ಹೆದರದೆ ನೋಡು ನೀನು', ಎಂದ ಅರ್ಜುನ.
ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ |
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ || ೪೯ ||
ಪದವಿಭಾಗ-ಅರ್ಥ: ಬಳೆಯ ನೆಗ್ಗಿ+ ಒತ್ತಿದನು ಕೌರವಬಲದ ಗಂಟಲ ಬಳೆಯ ಮುರಿವವೊಲ್; ಅಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ; ತಲೆ ನವಿರ ಹಿಣಿಲ+ ಇರಿದು ತಿಲಕವ ಗೆಲಿದು ಕಿಗ್ಗಟ್ಟಿನ ಕಠಾರಿಯ ಹೊಳೆವ ಗೊಂಡೆಯ ಮೆರೆಯೆ ಗಂಡು+ ಅಂದವನು ಕೈಕೊಂಡ.
 • ಬಳೆಯ ನೆಗ್ಗಿ+ ಒತ್ತಿದನು ಕೌರವಬಲದ ಗಂಟಲ ಬಳೆಯ ಮುರಿವವೊಲ್= ಕೈಗಳಿಗೆ ತೊಟ್ಟಿದ್ದ ಬಳೆಗಳನ್ನು ನೆಗ್ಗಿಸಿ- ಒತ್ತಿ ಒಡೆದುಹಾಕಿದನು, ಅದು ಕೌರವಸೈನ್ಯದ ಗಂಟಲ ಬಳೆಯನ್ನು ಮುರಿಯುವಂತೆ ಇತ್ತು. ; ಅಲಘು ಸಾಹಸಿ ಘಳಿಯನು(ಮಡಿಸಿಟ್ಟ ಪಂಚೆ)+ ಉಟ್ಟನು ಮಲ್ಲಗಂಟಿನಲಿ= ಅಸಾಧಾರಣ ಸಾಹಸಿ ಪಂಚೆಯನ್ನು (ಪಂಚೆಯ ಎರಡೂ ಕುಡಿಯನ್ನು ಹಿಂದಕ್ಕೆ ಸಿಕ್ಕಿಸಿ) ಮಲ್ಲಗಂಟನ್ನು ಹಾಕಿ ಉಟ್ಟನು;// ತಲೆ ನವಿರ (ನವಿರು-ಕೂದಲು) ಹಿಣಿಲ+ ಇರಿದು ತಿಲಕವ ಗೆಲಿದು ಕಿಗ್ಗಟ್ಟಿನ ಕಠಾರಿಯ ಹೊಳೆವ ಗೊಂಡೆಯ(ಕತ್ತಿ, ಬಾಕು ಮೊದಲಾದ) ಆಯುಧಗಳನ್ನು ಇಡುವ ಚೀಲ.) ಮೆರೆಯೆ ಗಂಡು+ ಅಂದವನು ಕೈಕೊಂಡ= ತಲೆಯ ಉದ್ದ ಕೂದಲ ಜಡೆಯ ತುದಿಯನ್ನು ಕತ್ತರಿಸಿ ಗಂಟುಹಾಕಿದ; ತಿಲಕವ ಗೆಲಿದು= ಗೆಲುವಿನ ಗುರುತಾಗಿ ಹಣೆಗೆ ತಿಲಕ ಹಚ್ಚಿದ;// ಕಿಗ್ಗಟ್ಟಿನ ಕಠಾರಿಯ ಹೊಳೆವ ಗೊಂಡೆಯ(ಕತ್ತಿ, ಬಾಕು ಮೊದಲಾದ) ಆಯುಧಗಳನ್ನು ಇಡುವ ಚೀಲ.) ಮೆರೆಯೆ ಗಂಡು+ ಅಂದವನು ಕೈಕೊಂಡ= ಸೊಂಟದ ಕಿಗ್ಗಟ್ಟಿನಲ್ಲಿ ಕಠಾರಿಯನ್ನು ಹೊಳೆಯುವ ಗೊಂಡೆಯದಲ್ಲಿ ಇಟ್ಟುಕೊಂಡು, ಮೆರೆಯುವ- ಶೋಭಿಸುವ ಗಂಡಸು + ಅಂದವನು- ರೂಪವನ್ನು ಅರ್ಜುನನು, ಕೈಕೊಂಡ- ಧರಿಸಿದನು.
ಅರ್ಥ: ಅರ್ಜುನನು ಕೈಗಳಿಗೆ ತೊಟ್ಟಿದ್ದ ಬಳೆಗಳನ್ನು ನೆಗ್ಗಿಸಿ- ಒತ್ತಿ ಒಡೆದುಹಾಕಿದನು, ಅದು ಕೌರವಸೈನ್ಯದ ಗಂಟಲ ಬಳೆಯನ್ನು ಮುರಿಯುವಂತೆ ಇತ್ತು. ಅಸಾಧಾರಣ ಸಾಹಸಿಯು ಪಂಚೆಯನ್ನು ಪಂಚೆಯ ಎರಡೂ ಕುಡಿಯನ್ನು ಹಿಂದಕ್ಕೆ ಸಿಕ್ಕಿಸಿ ಮಲ್ಲಗಂಟನ್ನು ಹಾಕಿ ಉಟ್ಟನು. ತಲೆಯ ಉದ್ದಕೂದಲ ಜಡೆಯ ತುದಿಯನ್ನು ಕತ್ತರಿಸಿ ಗಂಟುಹಾಕಿದ. ಗೆಲುವಿನ ಗುರುತಾಗಿ ಹಣೆಗೆ ತಿಲಕ ಹಚ್ಚಿದ. ಸೊಂಟದ ಕಿಗ್ಗಟ್ಟಿನಲ್ಲಿ ಕಠಾರಿಯನ್ನು ಹೊಳೆಯುವ ಗೊಂಡೆಯದಲ್ಲಿ ಇಟ್ಟುಕೊಂಡು,ಶೋಭಿಸುವ ಗಂಡಸು ರೂಪವನ್ನು ಅರ್ಜುನನು ಧರಿಸಿದನು.
ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ |
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣಿ ಮಿಗೆ ಧನುವ ಕೊಂಡನು ತಿರುವನೇರಿಸಿದ || ೫೦ ||
ಪದವಿಭಾಗ-ಅರ್ಥ: ತೇರ ತೆಗೆದನು ತನ್ನ ಮುನ್ನಿನ ವಾರುವಂಗಳ ಹೂಡಿದನು ಕಪಿವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ ಚಾರು ಸೀಸಕ ಜೋಡು ಕುಲಿಶದಸಾರ ಕವಚವ ಬಿಗಿದು ಬೊಬ್ಬೆಯ ಭಾರವಣಿ ಮಿಗೆ ಧನುವ ಕೊಂಡನು ತಿರುವನು+ ಏರಿಸಿದ.
 • ತೇರ ತೆಗೆದನು ತನ್ನ ಮುನ್ನಿನ ವಾರುವಂಗಳ ಹೂಡಿದನು ಕಪಿವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ= = ಅರ್ಜುನನು ರಥವನ್ನು ತೆಗೆದು ಹಿಂದಿನ ಕುದುರೆಗಳನ್ನು ಹೂಡಿದನು. ಚಾರು- ಸುಂದರ, ಸೀಸಕ ಜೋಡು ಕುಲಿಶದ (ವಜ್ರ) ಸಾರ ಕವಚವ ಬಿಗಿದು ಬೊಬ್ಬೆಯ- (ಸಂಭ್ರಮ- ಉತ್ಸಾಹ, ಆರ್ಭಟ) ಯುದ್ಧದ ಉತ್ಸಾಹವು ಭಾರವಣಿ- ಆಟಾಟೋಪ, ಮಿಗೆ- ಹೆಚ್ಚಲು= ಸುಂದರವಾದ ಸೀಸಕದ ಜೋಡು ವಜ್ರದ ಸತ್ವದ ಕವಚವನ್ಉ ಬಿಗಿದುಕೊಂಡನು; ಆಯುದ್ಧದ ಉತ್ಸಾಹವು ಆಟಾಟೋಪ ಹೆಚ್ಚಲು,// ಧನುವ ಕೊಂಡನು ತಿರುವನು (ನಾಣು, ವಿಶಿಷ್ಠ ದಾರ)+ ಏರಿಸಿದ= ಅರ್ಜುನನು ತನ್ನ ಗಾಂಡೀವವನ್ನು ಕೈಗೆ ತೆಗೆದುಕೊಂಡು ಬಿಲ್ಲನ್ನು ಬಗ್ಗಿಸಿ ಅದಕ್ಕೆ ನಾಣನ್ನು ಕಟ್ಟಿದನು.
ಅರ್ಥ: ಅರ್ಜುನನು ರಥವನ್ನು ತೆಗೆದು ಹಿಂದಿನ ಕುದುರೆಗಳನ್ನು ಹೂಡಿದನು. ಸುಂದರವಾದ ಸೀಸಕದ ಜೋಡು ವಜ್ರದ ಸತ್ವದ ಕವಚವನ್ನು ಬಿಗಿದುಕೊಂಡನು; ಆಯುದ್ಧದ ಉತ್ಸಾಹವು ಆಟಾಟೋಪ ಹೆಚ್ಚಲು, ಅರ್ಜುನನು ತನ್ನ ಗಾಂಡೀವವನ್ನು ಕೈಗೆ ತೆಗೆದುಕೊಂಡು ಬಿಲ್ಲನ್ನು ಬಗ್ಗಿಸಿ ಅದಕ್ಕೆ ನಾಣನ್ನು ಕಟ್ಟಿದನು.
ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ |
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ

ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ || ೫೧ ||

ಪದವಿಭಾಗ-ಅರ್ಥ: ರಾಯ ಧರ್ಮಜ ಬಾಳುಗೆ+ ಎನುತ ನಿಜ+ ಆಯುಧದ ಗುರುವಿಂಗೆ+ ಎರಗಿ ಸುರರಾಯ ನಂದನನು+ ಒಲವಿನಲಿ ಗಾಂಡಿವವ ಜೇವಡಿಸಿ, ರಾಯ ಕುವರನ ಸೂತತನದ ವಿಡಾಯಿಯ+ ಅರಿಯಲು ಬಹುದು+ ಎನುತ ಸಮರ+ ಆಯತ+ ಅಸ್ತ್ರನು ಪಾರ್ಥ ಮೈದೋರಿದನು ಪರಬಲಕೆ.
 • ರಾಯ ಧರ್ಮಜ ಬಾಳುಗೆ+ ಎನುತ= ಧರ್ಮರಾಯನಿಗೆ ಶುಭವಾಗಲಿ ಎಂದು ಹಾರೈಸಿ, ನಿಜ+ ಆಯುಧದ ಗುರುವಿಂಗೆ+ ಎರಗಿ= ತನ್ನ ಗುರುವಿಗೆ ನಮಿಸಿ, ಸುರರಾಯ ನಂದನನು- ಇಂದ್ರನ ಮಗ ಅರ್ಜುನನು+ ಒಲವಿನಲಿ ಗಾಂಡಿವವ ಜೇವಡಿಸಿ= ಸಂತಸದಿಂದ ಗಾಂಡೀವವನ್ನು ಠೇಂಕಾರ ಮಾಡಿದನು.// ರಾಯ ಕುವರನ ಸೂತತನದ ವಿಡಾಯಿಯ(ಸಂಭ್ರಮ- ಜಾಣತನ)+ ಅರಿಯಲು ಬಹುದು+ ಎನುತ ಸಮರ+ ಆಯತ (ಅತಿಶಯ)+ ಅಸ್ತ್ರನು ಪಾರ್ಥ ಮೈದೋರಿದನು ಪರಬಲಕೆ= ರಾಜ ಕುಮಾರನ ಸೂತತನದ ಸಂಭ್ರಮವನ್ನು ಅರಿಯಬಹುದು ಎನ್ನುತ್ತಾ ಯುದ್ಧದ ಅತಿಶಯ ಅಸ್ತ್ರ ವಿಶಾರದ ಪಾರ್ಥನು ವೈರಿಸೈನ್ಯಕ್ಕೆ ಮೈದೋರಿದನು- ಪ್ರತ್ಯಕ್ಷನಾದನು, ತೋರಿಕೊಂಡನು, ಎದುರುನಿಂತನು.
ಅರ್ಥ: ಅರ್ಜುನನು ಧರ್ಮರಾಯನಿಗೆ ಶುಭವಾಗಲಿ ಎಂದು ಹಾರೈಸಿ, ತನ್ನ ಗುರುವಿಗೆ ನಮಿಸಿ, ಇಂದ್ರನ ಮಗ ಅರ್ಜುನನು ಸಂತಸದಿಂದ ಗಾಂಡೀವವನ್ನು ಠೇಂಕಾರ ಮಾಡಿದನು. ರಾಜ ಕುಮಾರ ಉತ್ತರನ ಸೂತತನದ ಸಂಭ್ರಮವನ್ನು ಅರಿಯಬಹುದು ಎನ್ನುತ್ತಾ, ಯುದ್ಧದ ಅತಿಶಯ ಅಸ್ತ್ರವಿಶಾರದ ಪಾರ್ಥನು ವೈರಿಸೈನ್ಯದ ಎದುರು ಪ್ರತ್ಯಕ್ಷನಾದನು.
ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು |
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು || ೫೨ ||
ಪದವಿಭಾಗ-ಅರ್ಥ: ಸಡಿಲ ಬಿಡೆ ವಾಘೆಯನು ಚಿಮ್ಮಿದವು+ ಒಡನೊಡನೆ ವೇಗಾಯ್ಲ ತೇಜಿಗಳು+ ಒಡೆದುದು+ ಇಳೆಯನೆ(ಇಳೆ- ಭೂಮಿ) ಗಜರು ಮಿಗೆ ಗರ್ಜಿಸಿದವು+ ಅಳ್ಳಿರಿದು ಕುಡಿ ನೊರೆಯ ಕಟವಾಯ ಲೋಳೆಯಳು+ ಒಡಲ ಸಂಚದ ನುಡಿಯ ಘುಡು ಘುಡುಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು.
 • ಕುದುರೆಯ ವಾಘೆಯ ಹಗ್ಗವನ್ನು, ಸಡಿಲ ಬಿಡೆ ವಾಘೆಯನು ಚಿಮ್ಮಿದವು+ ಒಡನೊಡನೆ- ಕೂಡಲೆ ವೇಗಾಯ್ಲ ತೇಜಿಗಳು+ ಒಡೆದುದು+ ಇಳೆಯನೆ= ಕುದುರೆಯ ವಾಘೆಯ ಹಗ್ಗವನ್ನು ಅಲುಗಿಸಿ ಸನ್ನೆಮಾಡಿ, ಸಡಿಲ ಬಿಡಲು ಕುದುರೆಗಳು ಚಿಮ್ಮಿ ಓಡಿದವು. ಕೂಡಲೆ ವೇಗವನ್ನು ಹೊಂದಿ ಕುದುರೆಗಳು, ಭೂಮಿಯು ಒಡೆಯಿತು ಎನ್ನುವಂತೆ,// ಗಜರು ಮಿಗೆ- ಸಾರಥಿಯ ಗದರುವಿಕೆ ಹೆಚ್ಚಲು, ಕುದುರೆಗಳು ಗರ್ಜಿಸಿದವು. ಅವು ಅಳ್ಳು+ ಇರಿದು ಕುಡಿ ನೊರೆಯ ಕಟವಾಯ ಲೋಳೆಯಳು+ ಒಡಲ ಸಂಚದ ನುಡಿಯ ಘುಡು ಘುಡುಘುಡಿಪ ನಾಸಾಪುಟದ ಹುಂಕೃತಿ ಮಸಗೆ- ಹೆಚ್ಚಲು ಮುಂಚಿದವು (ಎದುರು ಬಂದು ನಿಂತವು)= ಗಜರು ಮಿಗೆ- ಸಾರಥಿಯ ಗದರುವಿಕೆ ಹೆಚ್ಚಲು, ಕುದುರೆಗಳು ಗರ್ಜಿಸಿದವು. ಅವು ಹಗ್ಗವು ಅಳ್ಳು ಇರಿದು- ಕಟಬಾಯಿಯನ್ನು ಚುಚ್ಚಿ, ಕುಡಿ ನೊರೆಯ ಕಟವಾಯ ಲೋಳೆಸುರಿಯಲು, ದೇಹದ ಏರಿಳಿತದ ನುಡಿಯ- ಭಾಷೆಯ ಘುಡು ಘುಡುಘುಡಿಪ ಸದ್ದಿನೊಡನೆ ನಾಸಾಪುಟದ- ಮೂಗಿನ ಉಸಿರಾಟದ ಹುಂಕೃತಿಯು ಹೆಚ್ಚಲು ಕುದುರೆಗಳು ಕೌರವನ ಸೇನೆಯ ಎದುರು ಬಂದು ನಿಂತವು.
ಅರ್ಥ: ಕುದುರೆಯ ವಾಘೆಯ ಹಗ್ಗವನ್ನು ಸನ್ನೆಮಾಡಿ, ಸಡಿಲ ಬಿಡಲು ಕುದುರೆಗಳು ಚಿಮ್ಮಿ ಓಡಿದವು. ಕೂಡಲೆ ವೇಗವನ್ನು ಹೊಂದಿ ಕುದುರೆಗಳು, ಭೂಮಿಯು ಒಡೆಯಿತು ಎನ್ನುವಂತೆ, ಸಾರಥಿಯ ಗದರುವಿಕೆ ಹೆಚ್ಚಲು, ಕುದುರೆಗಳು ಗರ್ಜಿಸಿದವು. ಅವುಗಳ ಹಗ್ಗವು ಅಳ್ಳು ಇರಿದು- ಕಟಬಾಯಿಯನ್ನು ಚುಚ್ಚಿ, ಕುಡಿ ನೊರೆಯು ಕಟವಾಯಿಯಿಂದ ಲೋಳೆಸುರಿಯಲು, ದೇಹದ ಏರಿಳಿತದ ಭಾಷೆಯ ಘುಡು ಘುಡುಘುಡಿಪ ಸದ್ದಿನೊಡನೆ ಮೂಗಿನ ಉಸಿರಾಟದ ಹುಂಕೃತಿಯು ಹೆಚ್ಚಲು ಕುದುರೆಗಳು ಕೌರವನ ಸೇನೆಯ ಎದುರು ಬಂದು ನಿಂತವು.

ಸಾರಥಿ ಉತ್ತರನಿಗೆ ಕೌರವ ಸೇನೆಯ ಪರಿಚಯ[ಸಂಪಾದಿಸಿ]

ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು |
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ || ೫೩ ||
ಪದವಿಭಾಗ-ಅರ್ಥ: ಆರು ಕೌರವನು+ ಅಲ್ಲಿ ಭೀಷ್ಮನು+ ಅದು+ ಆರು ಕೃಪನು+ ಆವವನು ದ್ರೋಣನು+ ಅದು+ ಆರು ಬಲದೊಳಗೆ+ ಅವನು+ ಅಶ್ವತ್ಥಾಮನು+ ಎಂಬವನು, ವೀರ ತಿಳುಹು+ ಎನಗೆ+ ಇಲ್ಲಿ ಕರ್ಣನು+ ಅದಾರು ನಾ ಕಂಡು+ ಅರಿಯೆನು+ ಎನಲು+ ಆ ವೈರಿ+ದ+ ತಲ್ಲಣ ಪಾರ್ಥ ನಗುತ+ ಉತ್ತರನೊಳು+ ಇಂತೆಂದ
 • ಯಾರು ಕೌರವನು?+ ಅಲ್ಲಿ ಭೀಷ್ಮನು+ ಅದು+ ಆರು-ಯಾರು? ಕೃಪನು+ ಆವವನು? ದ್ರೋಣನು+ ಅದು+ ಆರು-ಯಾರು? ಬಲದೊಳಗೆ- ಸೈನ್ಯದಲ್ಲಿ+ ಅವನು- ಯಾವನು+ ಅಶ್ವತ್ಥಾಮನು+ ಎಂಬವನು?, ವೀರ ತಿಳುಹು- ಹೇಳು,+ ಎನಗೆ- ನನಗೆ,+ ಇಲ್ಲಿ ಕರ್ಣನು+ ಅದಾರು? ನಾ- ನಾನು ಕಂಡು+ ಅರಿಯೆನು- ನೋಡಿಲ್ಲ.+ ಎನಲು- ಎನ್ನಲು,+ ಆ ವೈರಿ+ದ+ ತಲ್ಲಣ= ಆ ವೈರಿ ಭಯಂಕರ ಪಾರ್ಥನು ನಗುತ- ನಗತ್ತಾ+ ಉತ್ತರನೊಳು - ಉತ್ತರನಿಗೆ- + ಇಂತೆಂದ- ಹೀಗೆ ಹೇಳಿದ.
ಅರ್ಥ: ಉತ್ತರನು ಅರ್ಜುನನ್ನು ಕುರಿತು ಹೀಗೆ ಕೇಳಿದ,- ಕೌರವನು ಯಾರು ? ಅಲ್ಲಿ ಭೀಷ್ಮನು ಅದು ಯಾರು? ಕೃಪನು ಯಾವನು? ದ್ರೋಣನು ಅದು ಯಾರು? ಸೈನ್ಯದಲ್ಲಿ ಯಾವನು+ ಅಶ್ವತ್ಥಾಮನು ಎಂಬವನು? ವೀರನೇ ನನಗೆ ತಿಳಿಸಿ- ಹೇಳು. ಇಲ್ಲಿ ಕರ್ಣನು ಅದು ಯಾರು? ನಾನು ನೋಡಿಲ್ಲ, ಎನ್ನಲು,+ ಆ ವೈರಿ ಭಯಂಕರ ಪಾರ್ಥನು ನಗತ್ತಾ, ಉತ್ತರನಿಗೆ ಹೀಗೆ ಹೇಳಿದ.
ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಸಿ ಬೆಳಗುವ ಕೊಡನ ಹಳವಿಗೆಯ |
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ || ೫೪ ||
ಪದವಿಭಾಗ-ಅರ್ಥ: ಉದಯದ+ ಅರುಣನ ಕರುವ ಹಿಡಿದ+ ಅಂದದಲಿ ವರ್ಣಚ್ಛವಿಯಲಿ+ ಒಪ್ಪುವ ಕುದುರೆಗಳ ತಳತಳಸಿ ಬೆಳಗುವ ಕೊಡನ ಹಳವಿಗೆಯ ಗದಗದಿಪ ಮಣಿಮಯದ ತೇರಿನ ಕದನ ಕೋಳಾಹಳನು ಗರುಡಿಯ ಸದನ ಸರ್ವಜ್ಞನನು ನೋಡೈ ದ್ರೋಣನು+ ಅವನೆಂದ.
 • ಉದಯದ+ ಅರುಣನ ಕರುವ ಹಿಡಿದ+ ಅಂದದಲಿ= ಸೂರ್ಯ ಉದಯದ ಕಾಲದಲ್ಲಿ ಸೂರ್ಯನ ಸಾರಥಿಯಾದ ಅರುಣನ-ಕರುವ- ಕುದುರೆಯನ್ನು ಹಿಡಿದ+ ಅಂದದಲಿ- ಹಿಡಿದ ರೀತಿಯಲ್ಲಿ//ವರ್ಣಚ್ಛವಿಯಲಿ+ ಒಪ್ಪುವ= ತಿಳಿಕೆಂಪು ಬಣ್ನದಲ್ಲಿ ಶೋಭಿಸುವ, ತಳತಳಸಿ ಬೆಳಗುವ ಕೊಡನ ಹಳವಿಗೆಯ- ಬಾವುಟದ, ಗದಗದಿಪ ಮಣಿಮಯದ ತೇರಿನ- ರಥದ, ಕದನ ಕೋಳಾಹಳನು-ಯುದ್ಧ ವಿಶಾರದನು, ಗರುಡಿಯ ಸದನ ಸರ್ವಜ್ಞನನು= ಯುದ್ಧವಿದ್ಯೆಯನ್ನು ಪೂರ್ಣ ಅರಿತವನು, ನೋಡೈ ದ್ರೋಣನು+ ಅವನು+ ಎಂದ.(ಸೂರ್ಯೋದಯದ ಕಾಲದಲ್ಲಿ ದಿಗಂತದಲ್ಲಿ ಏರುತ್ತಿರುವ ಸೂರ್ಯನು, ದಿಗಂತಕ್ಕೆ ಸ್ವಲ್ಪವೇ ತಾಗಿದಾಗ ಚಿನ್ನದ ಕೊಡದಂತೆ ಕಾಣುವನು- ಆಗುಂಬೆ ಸೂರ್ಯಾಸ್ತ ದೃಶ್ಯ) [೩]
ಅರ್ಥ: ಸೂರ್ಯನ ಸಾರಥಿಯಾದ ಅರುಣನು ಕುದುರೆಯೊಡನೆ ತಿಳಿಕೆಂಪು ಬಣ್ನದಲ್ಲಿ ಉದಯದ ಕಾಲದಲ್ಲಿ ಸೂರ್ಯನು ಕಾಣುವಂತೆ ತಳತಳಸಿ ಬೆಳಗುವ ಚಿನ್ನದ ಕೊಡದ ಬಾವುಟವುಳ್ಳ ಮತ್ತು ಹೊಳೆಯುವ ಮಣಿಮಯದ ರಥದಲ್ಲಿ ಕುಳಿತ ಯುದ್ಧ ವಿಶಾರದನು, ಯುದ್ಧವಿದ್ಯೆಯನ್ನು ಪೂರ್ಣ ಅರಿತವನೂ ಆದ ಅವನು ನೋಡಯ್ಯಾ ದ್ರೋಣನು, ಎಂದು ತನ್ನ ಗುರುವನ್ನು ತೋರಿಸಿದ ಅರ್ಜುನ.
ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ |
ಬವರ ಭೈರವನಾತನತಿಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ || ೫೫ ||
ಪದವಿಭಾಗ-ಅರ್ಥ: ನವರತುನ ಕೇವಣದ ರಥವತಿ ಜವದ ತೇಜಿಯ ತೆಕ್ಕೆಗಳ ರೌರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ ಬವರ ಭೈರವನು+ ಆತನು+ ಅತಿಬಲ ಶಿವನ ನೊಸಲಂದದಲಿ ಮೆರೆವವನು+ ಇವನು ಜಿತಸಂಗ್ರಾಮನು+ ಅಶ್ವತ್ಥಾಮ ನೋಡು+ ಎಂದ.
 • ನವರತುನ ಕೇವಣದ- ಹಚ್ಚಿದ, ರಥವತಿ ಜವದ- ವೇಗದ, ತೇಜಿಯ ತೆಕ್ಕೆಗಳ- ಕಟ್ಟಿದ, ರೌರವದ ರೌದ್ರಾಯುಧದ- ಭಯಂಕರ ರೌದ್ರ ಆಯುಧವನ್ನು ಹಿಡಿದ; ಗಡಣದ- ಗುಂಪಿನ,// ಹರಿಯ ಹಳವಿಗೆಯ= ಕುದುರೆಯ ಬಾವುಟದ, ಬವರ ಭೈರವನು+= ಯುದ್ಧದಭಯರವ ಸ್ವರೂಪನು, ಆತನು+ ಅತಿಬಲ- ಬಹಳ ಬಲಶಾಲಿ, ಶಿವನ ನೊಸಲಂದದಲಿ ಮೆರೆವವನು+= ಶಿವನಂತೆ ಹಣೆಯಲ್ಲಿ ಕಣ್ಣನ್ನು ಹoಂದಿದ್ದಾನೆ. ಇವನು ಜಿತಸಂಗ್ರಾಮನು = ಯುದ್ದದಲ್ಲಿ ಸದಾ ಜಯಶಾಲಿ, ಅವನು+ ಅಶ್ವತ್ಥಾಮ ನೋಡು+ ಎಂದ
ಅರ್ಥ: ನವರತ್ನ ಹಚ್ಚಿದ ರಥವು, ವೇಗದ ಕುದುರೆ ಕಟ್ಟಿದ, ಭಯಂಕರ ರೌದ್ರ ಆಯುಧವನ್ನು ಹಿಡಿದ, ಸಮೋಹದಲ್ಲಿರುವ, ಕುದುರೆಯ ಬಾವುಟದ, ಯುದ್ಧದ ಭಯಂಕರ ಸ್ವರೂಪನು, ಆತನು ಬಹಳ ಬಲಶಾಲಿ; ಶಿವನಂತೆ ಹಣೆಯಲ್ಲಿ ಒಮದು ಕಣ್ಣನ್ನು ಹೊಂದಿದ್ದಾನೆ. ಇವನು ಯುದ್ದದಲ್ಲಿ ಸದಾಜಯಶಾಲಿ, ಅವನೇ ಅಶ್ವತ್ಥಾಮ, ನೋಡು ಎಂದ ಅರ್ಜುನ.
ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ ||
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿಬಲ ಕೃಪಾಚಾರಿಯನು ನೋಡೆಂದ || ೫೬ ||
ಪದವಿಭಾಗ-ಅರ್ಥ: ಖುರದ ಲವನಿಯ ಹೊಯ್ದು ಲಹರಿಯಲಿ+ ಉರಿ ಮಸಗಲು+ ಉಬ್ಬೆದ್ದ ತೇಜಿಯ ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ ಸರಳ ತಿರುಹುತ ನಿಂದು ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು+ ಅತಿಬಲ ಕೃಪಾಚಾರಿಯನು ನೋಡೆಂದ.
 • ಖುರದ ಲವನಿಯ ಹೊಯ್ದು ಲಹರಿಯಲಿ= ಕುದುರೆಯ ಖುರಪುಟ ಸದ್ದಿನ ಲಹರಿಯಲ್ಲಿ- ಆಲಿಸುವಿಕೆಯಿಂದ// + ಉರಿ ಮಸಗಲು- ಕೋಪ ಹೆಚ್ಚಲು+// ಉಬ್ಬೆದ್ದ ತೇಜಿಯ ಮೆರೆವ= ಉದ್ರೇಗೊಂಡ ಕುದುರೆಗಳೊಡನೆ ಶೋಭಿಸುವ,// ಮುಕ್ತಾವಳಿಯ ತೇರಿನ ನವ ವಿಳಾಸದಲಿ= ಮತ್ತಿನ ಸರಗಳಿಂದ ಹೊಸ ಬಗೆಯ ವಿಲಾಸದಲ್ಲಿ, ಸರಳ ತಿರುಹುತ ನಿಂದು= ಬಾಣವನ್ಉ ತಿರುಗಿಸುತ್ತಾ ನಿಂತು, ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು= ಬಿಲ್ಲನ್ನು ಬಿಡದೆ ನೊಡುತ್ತಾ ನಾಣನ್ನು ಮಿಡಿದು ಧನುಷ್ಠಂಕಾರ ಮಾಡುತ್ತಿರುವವನು, + ಅತಿಬಲ ಕೃಪಾಚಾರಿಯನು- ಕೃಪಾಚಾರ್ಯನು ನೋಡೆಉ+ ಎಂದ
ಅರ್ಥ:ಕುದುರೆಯ ಖುರಪುಟ ತಾಳಬದ್ಧ ಸದ್ದಿನ ಲಹರಿಯಲ್ಲಿ- ಆಲಿಸುವಿಕೆಯಿಂದ ಕೋಪ ಹೆಚ್ಚಲು ಉದ್ರೇಗೊಂಡ ಕುದುರೆಗಳೊಡನೆ ಶೋಭಿಸುವ, ಮತ್ತಿನ ಸರಗಳಿಂದ ಹೊಸ ಬಗೆಯ ವಿಲಾಸದಲ್ಲಿ, ಬಾಣವನ್ನು ತಿರುಗಿಸುತ್ತಾ ನಿಂತು, ಬಿಲ್ಲನ್ನು ಬಿಡದೆ ನೊಡುತ್ತಾ ನಾಣನ್ನು ಮಿಡಿದು ಧನುಷ್ಠಂಕಾರ ಮಾಡುತ್ತಿರುವವನು, ಅತಿಬಲ ಕೃಪಾಚಾರ್ಯನು, ನೋಡು, ಎಂದ ಅರ್ಜುನ.
ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ |
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು || ೫೭ ||
ಪದವಿಭಾಗ-ಅರ್ಥ: ಲಲಿತ ರತ್ನಪ್ರಭೆಯ ತೇರಿನಲು+ ಉಲಿವ ಬಹುವಿಧ ವಾದ್ಯ ರಭಸದ ಕಳಕಳದ ಕಡು ದರ್ಪದಿಂದ+ ಅಳ್ಳಿರಿವ ತೇಜಿಗಳ ಲಳಿಯ ಲಹರಿಯ ಲಗ್ಗೆಗಳ ಮೋಹಳಿಸಿ ಬಿಲು ಝೇಂಕಾರ ರವದಿಂದ+ ಉಲಿವವನು ಕಲಿಕರ್ಣನು+ ಅತುಳ ಪರಾಕ್ರಮ+ ಅನಲನು.
 • ಲಲಿತ ರತ್ನಪ್ರಭೆಯ ತೇರಿನಲು+ ಉಲಿವ ಬಹುವಿಧ ವಾದ್ಯ ರಭಸದ= ಸುಂದರವಾದ ರತ್ನಪ್ರಭೆಯ ರಥದಲ್ಲಿ ಬಹುವಿಧವಾದ ವಾದ್ಯ ರಭಸದ ,// ಕಳಕಳದ ಕಡು ದರ್ಪದಿಂದ+ ಅಳ್ಳಿರಿವ ತೇಜಿಗಳ ಲಳಿಯ ಲಹರಿಯ ಲಗ್ಗೆಗಳ ಮೋಹಳಿಸಿ= ಕಳಕಳದ ಸದ್ದಿನೊಡನೆ, ಬಹಳ ದರ್ಪದಿಂದ+ ಅಳ್ಳಿರಿವ ತೇಜಿಗಳ- ಉಸಿರಾಟದಲ್ಲಿ ಮೂಗನ್ನು ಅರಳಿಸಿರುವ ಲಳಿಯ- ತಾಳಬದ್ಧ ಗೊರಸಿನ ಸದ್ದಿನ, ಲಹರಿಯ ಲಗ್ಗೆಗಳ ಮೋಹಳಿಸಿ= ಲಹರಿಯ ಹೊಡೆತದಲ್ಲಿ ಗುಂಪಾಗಿ ,// ಬಿಲು ಝೇಂಕಾರ ರವದಿಂದ+ ಉಲಿವವನು ಕಲಿಕರ್ಣನು+ ಅತುಳ ಪರಾಕ್ರಮ+ ಅನಲನು= ಬಿಲ್ನ್ನು ಝೇಂಕಾರದ ಸದ್ದಿನಮೂಲಕ ಕೂಗುವವನು ಶೂರನಾದ ಕಲಿಕರ್ಣನು+; ಅತುಳ- ಅಸಮಾನ ಪರಾಕ್ರಮ+ ಅನಲನು- ಅಗ್ನಿಯು.
ಅರ್ಥ: ಸುಂದರವಾದ ರತ್ನಪ್ರಭೆಯ ರಥದಲ್ಲಿ ಬಹುವಿಧವಾದ ವಾದ್ಯ ರಭಸದ ಕಳಕಳದ ಸದ್ದಿನೊಡನೆ, ಬಹಳ ದರ್ಪದಿಂದ ಉಸಿರಾಟದಲ್ಲಿ ಮೂಗನ್ನು ಅರಳಿಸಿರುವ ತಾಳಬದ್ಧ ಗೊರಸಿನ ಸದ್ದಿನ ಲಹರಿಯ ಹೊಡೆತದಲ್ಲಿ ಗುಂಪಾಗಿ ಬಿಲ್ಲಿನ ಝೇಂಕಾರದ ಸದ್ದಿನಮೂಲಕ ಆರ್ಭಟಿಸುವವನು ಶೂರನಾದ ಕಲಿಕರ್ಣನು; ಅಸಮಾನ ಪರಾಕ್ರಮದ ಅಗ್ನಿಯು.
ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ |
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ || ೫೮ ||
ಪದವಿಭಾಗ-ಅರ್ಥ: ಅತ್ತಲು+ ಐದನೆ, ಬಹಳ ಬಲದ+ ಒತ್ತೊತ್ತೆಯಲಿ ನಮ್ಮ+ ಉಭಯ ರಾಯರ ಮುತ್ತಯನು ತಾನು+ ಎನಿಸಿ, ಹೂಡಿದ ಬಿಳಿಯ ತೇಜಿಗಳ ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ ರಿಪುಕುಲ ಮೃತ್ಯುವು+ ಆತನು ವೀರ ಗಂಗಾಸುತನು ನೋಡೆಂದ.
 • ಅತ್ತಲು+ ಐದನೆ= ಆ ಕಡೆ ಬಂದರೆ, ಬಹಳ ಬಲದ+ ಒತ್ತೊತ್ತೆಯಲಿ= ಬಹಳಸೈನ್ಯದ ಇಕ್ಕಟ್ಟಾದ ಸ್ಥಳದಲ್ಲಿ, ನಮ್ಮ+ ಉಭಯ ರಾಯರ ಮುತ್ತಯನು ತಾನ+ ಎನಿಸಿ= ನಮ್ಮ ಕೌರವರು - ಪಾಂಡವರು ಈ ಇಬ್ಬರೂ ರಾಜಕುಮಾರರ ಅಜ್ಜ ಮತ್ತಯ್ಯ ತಾನು ಎನಿಸಿಕೊಂಡು,// ಹೂಡಿದ ಬಿಳಿಯ ತೇಜಿಗಳ ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ= ರಥಕ್ಕೆ ಹೂಡಿದ ಬಿಳಿಯ ಕುದುರೆಗಳ, ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ= ಎದ್ದುಕಾಣುವ ಚಿನ್ನದ ವೈಭವದ ಬಾವುಟಗಳ ಸಾಲಿನಲ್ಲಿ- //ರಿಪುಕುಲ ಮೃತ್ಯುವು+ ಆತನು ವೀರ ಗಂಗಾಸುತನು ನೋಡೆಂದ= ಕಾನುವ ಅವನು ಶತ್ರುಕುಲಕ್ಕೆ ಉಮಸ್ವರೂಪನು,+ ಆತನು ವೀರ ಗಂಗಾಸುತ - ಭೀಷ್ಮನು ನೋಡು ಎಂದ.
ಅರ್ಥ: ಆ ಕಡೆ ಬಂದರೆ, ಬಬಹಳ ಸೈನ್ಯದ ಇಕ್ಕಟ್ಟಾದ ಸ್ಥಳದಲ್ಲಿ, ನಮ್ಮ ಕೌರವರು - ಪಾಂಡವರು ಈ ಇಬ್ಬರೂ ರಾಜಕುಮಾರರ ಅಜ್ಜ ಮತ್ತಯ್ಯ ತಾನು ಎನಿಸಿಕೊಂಡು, ರಥಕ್ಕೆ ಹೂಡಿದ ಬಿಳಿಯ ಕುದುರೆಗಳ, ತೆತ್ತಿಸಿದ ಎದ್ದುಕಾಣುವ ಚಿನ್ನದ ವೈಭವದ ಬಾವುಟಗಳ ಸಾಲಿನಲ್ಲಿ ಕಾಣುವ ಅವನು ಶತ್ರುಕುಲಕ್ಕೆ ಉಮಸ್ವರೂಪನು ಆತನು ವೀರ ಗಂಗಾಸುತ ಭೀಷ್ಮನು ನೋಡು ಎಂದ.
ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ |
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ || ೫೯ ||
ಪದವಿಭಾಗ-ಅರ್ಥ: ಅಗಿವ ಹಾವಿನ ಹಳವಿಗೆಯ ಮಿಗೆ ನೆಗಹಿ ಮುಸುಕಿದ ಝಲ್ಲರಿಯ ಜೋಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ ನೆಗಹಿ ನಿಗುರುವ ಟೆಕ್ಕೆಯದ ಮದವೊಗುವ ಕರಿಗಳ ಮಧ್ಯದಲಿ ತಾನು+ ಅಗಡು ದುರಿಯೋಧನನು ಜೂಜಿನ ಜಾಣನು+ ಅವನು+ ಎಂದ.
 • ಅಗಿವ ಹಾವಿನ ಹಳವಿಗೆಯ= ಕಚ್ಚುವ ಹಾವಿನ ಬಾವುಟದ,/ ಮಿಗೆ ನೆಗಹಿ ಮುಸುಕಿದ ಝಲ್ಲರಿಯ ಜೋಡಿಗಳ= ಮತ್ತೆ ಆವರಿಸಿರುವ ಜೋಡಿ ಗೊಂಡೆಗಳ,/ ತುಡುಕುವ ತಂಬಟಂಗಳ ಮೊರೆವ ಚಂಬಕದ= ಹಿಡುದು ಬಡಿಯುವ ತಮಟೆಗಳ ದೊಡ್ಡ ಸದ್ದು ಮಾಡುವ ಜಾಗಟೆಗಳ,/ ನೆಗಹಿ ನಿಗುರುವ ಟೆಕ್ಕೆಯದ= ಎತ್ತಿ ಹಾರಿಸುತ್ತಿರುವ ಬಾವುಟಗಳ,/ ಮದವೊಗುವ ಕರಿಗಳ ಮಧ್ಯದಲಿ= ಮದದಿಂದ ಉಕ್ಕುತ್ತಿರುವ ಆನೆಗಳ ಮದ್ಯದಲ್ಲಿ,/ ತಾನು+ ಅಗಡು ದುರಿಯೋಧನನು ಜೂಜಿನ ಜಾಣನು+ ಅವನು+ ಎಂದ= ತಾನು ಪರಾಕ್ರಮಿ ಜೂಜಿನಲ್ಲಿ ಜಾಣನಾದ ದುರ್ಯೋಧನನು, ಅವನು ನೋಡು, ಎಂದ ಅರ್ಜುನ.
ಅರ್ಥ: ಕಚ್ಚುವ ಹಾವಿನ ಬಾವುಟದ, ಮತ್ತೆ ಅವನನ್ನು ಆವರಿಸಿರುವ ಜೋಡಿ ಗೊಂಡೆಗಳ, ಹಿಡುದು ಬಡಿಯುವ ತಮಟೆಗಳ ದೊಡ್ಡ ಸದ್ದು ಮಾಡುವ ಜಾಗಟೆಗಳ, ಎತ್ತಿ ಹಾರಿಸುತ್ತಿರುವ ಬಾವುಟಗಳ, ಮತ್ತು ಮದದಿಂದ ಉಕ್ಕುತ್ತಿರುವ ಆನೆಗಳ ಮದ್ಯದಲ್ಲಿ ತಾನು ಪರಾಕ್ರಮಿಯಾಗಿರುವ, ಜೂಜಿನಲ್ಲಿ ಜಾಣನಾದ ದುರ್ಯೋಧನನು, ಅದೋ ಅವನು ನೋಡು, ಎಂದ ಅರ್ಜುನ.
ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು |
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ || ೬೦ ||
ಪದವಿಭಾಗ-ಅರ್ಥ: ಅವನ ಬಲವಂಕದಲಿ ನಿಂದವನು+ ಅವನು ಭೂರಿಶ್ರವನು, ಮತ್ತೆ ಆ ಭುವನಪತಿಯ+ ಎಡವಂಕದಲಿ ನಿಂದವ ಜಯದ್ರಥನು, ತವತವಗೆ ಬಲುಗೈಗಳೆನಿಸುವ ಶಿವನ ನೊಸಲಂದದಲಿ ಮೆರೆವವರು+ ಅವನಿಪಾಲಕನ+ ಅನುಜರನು ನೋಡೆಂದನು+ ಪಾರ್ಥ. (ಅಂಕ- ಯುದ್ಧಭೂಮಿ)
 • ಅವನ ಬಲವಂಕದಲಿ ನಿಂದವನು+ ಅವನು ಭೂರಿಶ್ರವನು= ಅವನ ಬಲಗಡೆ ಅಂಕದಲ್ಲಿ ನಿಂತವನು- ಅವನು ಭೂರಿಶ್ರವನು,/ ಆ ಭುವನಪತಿಯ+ ಎಡವಂಕದಲಿ ನಿಂದವ ಜಯದ್ರಥನು= ಮತ್ತೆ ಆ ಕೌರವನ+ ಎಡಗದೆಯ ರಣಭೂಮಿಯಲ್ಲಿ ನಿಂತವನು ಜಯದ್ರಥನು,/ ತವತವಗೆ ಬಲುಗೈಗಳು ಎನಿಸುವ ಶಿವನ ನೊಸಲಂದದಲಿ ಮೆರೆವವರು+ ಅವನಿಪಾಲಕನ+ ಅನುಜರನು ನೋಡೆಂದನು+= ತಮತವಗೆ ಬೆಂಬಲಿಗರಾಗಿ ಬಲುಗೈಗಳು ಎಂದುಕರೆದುಕೊಳ್ಳವ, ಶಿವನ ಹಣೆಗಣ್ಣಿನಂತೆ ಮೆರೆಯುವವರು ಆ ರಾಜನ ತಮ್ಮಂದಿರು, ಅವರನ್ನು ನೋಡು ಎಂದನು ಪಾರ್ಥ. (ಅಂಕ- ಯುದ್ಧಭೂಮಿ)
ಅರ್ಥ: ದುರ್ಯೋಧನನ ಬಲಗಡೆ ಅಂಕದಲ್ಲಿ ನಿಂತ ಆ- ಅವನು ಭೂರಿಶ್ರವನು; ಮತ್ತೆ ಆ ಕೌರವನ ಎಡಗದೆಯ ರಣಭೂಮಿಯಲ್ಲಿ ನಿಂತವನು ಜಯದ್ರಥನು; ತಮತವಗೆ ಬೆಂಬಲಿಗರಾಗಿ ಬಲುಗೈಗಳು ಎಂದು ಕರೆದುಕೊಳ್ಳವ, ಶಿವನ ಹಣೆಗಣ್ಣಿನಂತೆ ಮೆರೆಯುವವರು ಆ ರಾಜನ ತಮ್ಮಂದಿರು, ಅವರನ್ನು ನೋಡು, ಎಂದನು ಪಾರ್ಥ.
ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು |
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು || ೬೧ ||
ಪದವಿಭಾಗ-ಅರ್ಥ:ಹೊಗಳಲು+ ಅನುಪಮ ಸೈನ್ಯವು+ ಇಂತು+ ಈ ದ್ವಿಗುಣವು+ ಅಂಧಧಾಸುರನ ಸೇನೆಗೆ ತ್ರಿಗುಣವಿದು ರಾವಣನ ಮೋಹರಕೆ+ ಎನುತ ಫಲುಗುಣನು ಹಗೆಯ ಭುಜದ+ ಅಗ್ಗಳಿಕೆಯನು ನಾಲಗೆ ದಣಿಯೆ ಕೈವಾರಿಸುತ ಮಿಗೆ ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು.
 • ನಿಗುಚು=1. ನೀಡು. 2. ನೆಟ್ಟಗೆ ಮಾಡು. 3. ನೆಟ್ಟಗಾಗು. 4. ಅಗಲಮಾಡು. 5. ಹೊಡೆ ಬಡಿ. 6. ಪ್ರಯೋಜನಕ್ಕೆ ಬರು.
 • ಹೊಗಳಲು->+ ಅನುಪಮ-ಹೋಲಿಕೆ ಇಲ್ಲದ, ಸೈನ್ಯವು+ ಇಂತು- ಹೀಗೆ+ ಈ ದ್ವಿಗುಣವು+ ಅಂಧಧಾಸುರನ ಸೇನೆಗೆ,= ಹೀಗೆ ಹೋಲಿಕೆ ಇಲ್ಲದ ಈ ಸೈನ್ಯವು ಈ ಅಂಧಧಾಸುರನ ಸೇನೆಗೆ ಎರಡರಷ್ಟು ಗುಣವುಳ್ಳದ್ದು; // ತ್ರಿಗುಣವಿದು ಇಂತು- + ರಾವಣನ ಮೋಹರಕೆ- ಸೈನ್ಯಕ್ಕೆ+= ಇಂತು- ರಾವಣನ ಸೈನ್ಯಕ್ಕೆ ಮೂರರಷ್ಟು, ಎನುತ ಫಲುಗುಣನು ಹಗೆಯ ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆಮಾಡಿ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ= ಎನ್ನುತ್ತಾ ಫಲುಗುಣನು ಹಗೆಯ-ಶತ್ರುವಿನ, ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ
ಅರ್ಥ: ಹೀಗೆ ಹೋಲಿಕೆ ಇಲ್ಲದ ಈ ಸೈನ್ಯವು ಈ ಅಂಧಧಾಸುರನ ಸೇನೆಗೆ ಎರಡರಷ್ಟು ಗುಣವುಳ್ಳದ್ದು; ರಾವಣನ ಸೈನ್ಯಕ್ಕೆ ಮೂರರಷ್ಟು ಎಂದು ಹೊಗಳಿದನು. ಹೀಗೆನ್ನುತ್ತಾ ಫಲುಗುಣನು ಶತ್ರುವಿನ, ಭುಜದ ಪರಾಕ್ರಮವನ್ನು ನಾಲಗೆ ಸೂಲುವಷ್ಟು ಹೊಗಳಿ ತೋರಿಸುತ್ತಾ, ನಂತರ ಫಲುಗುಣನು ಗಾಂಡಿವವನ್ನು ಥೇಂಕಾರ ಮಾಡಿ ಅದನ್ನು ಮೇಲೆ ನೆಟ್ಟಗೆ ಎತ್ತಿಹಿಡಿದನು,
ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ |
ಅರೆರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ || ೬೨ ||
ಪದವಿಭಾಗ-ಅರ್ಥ: ಖುರಪುಟದಲಿ+ ಆಕಾಶ ಭಿತ್ತಿಯ ಬರೆವವೋಲ್ ಸೂರಿಯನ ತುರಗವ ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡೆ+ ಆಹವಕೆ ಅರೆರೆ ಪೂತುರೆ ಹಯವು+ ಎನುತೆ ಚಪ್ಪರಿಸಲು+ ಒಡೆ ನಿಗುರಿದವು ಕೆಂದೂಳಿರದೆ ನಭಕೆ+ ಉಪ್ಪರಿಸಿ ರವಿ ಮಂಡಲವನು+ ಅಂಡಲೆಯೆ.
 • ಖುರಪುಟದಲಿ+ ಆಕಾಶ ಭಿತ್ತಿಯ ಬರೆವವೋಲ್= ಕುದುರೆಗಳ ಖುರಪುಟದಲಲ್ಲಿ (ಗೊರಸಿನ ಹೆಜ್ಜೆಯಲ್ಲಿ)+ ಆಕಾಶ ಭಿತ್ತಿಯ ಬರೆವವೋಲ್= ಆಕಾಶದಲ್ಲಿ ಬರಹದಪಟ್ಟಿ ಬರೆಯುವಂತೆ ; //ಸೂರಿಯನ ತುರಗವ ಕರೆವವೋಲ್= ಸೂರ್ಯನ ತುರಗವ- ಕುದುರೆಯನ್ನು ಕರೆಯುವಂತೆ; ಕೈಗಟ್ಟಿ- ಕೈಸನ್ನೆಮಾಡಿ ದುವ್ವಾಳಿಸುವಡೆ- ವೇಗವಾಗಿ ಓಡಿಸುವಮತೆ;+ ಆಹವಕೆ ಅರೆರೆ ಪೂತುರೆ ಹಯವು+ ಎನುತೆ ಚಪ್ಪರಿಸಲು+= ಯುದ್ಧಕ್ಕೆ ಅರೆರೆ ಪೂತುರೆ (ಭೇಷ್)! ಹಯವು- ಕುದುರೆಯನ್ನು+ ಎನುತೆ ಚಪ್ಪರಿಸಲು+// ಒಡೆ ನಿಗುರಿದವು= ಕೂಡಲೆ ನೆಗೆದವು; ಕೆಂದೂಳು+ ಇರದೆ ನಭಕೆ+ ಉಪ್ಪರಿಸಿ ರವಿ ಮಂಡಲವನು+ ಅಂಡಲೆಯೆ= ಕೆಂದೂಳು+ ಇರದೆ- ನೆಲದಿಂದ ಆಕಾಶಕ್ಕೆ+ ಉಪ್ಪರಿಸಿ- ಹಾರಿ, ರವಿ ಮಂಡಲವನು+ ಅಂಡಲೆಯೆ- ಸುತ್ತುವರಿಯಲು.
ಅರ್ಥ: ಕುದುರೆಗಳ ಖುರಪುಟದಲಲ್ಲಿ ಆಕಾಶದಲ್ಲಿ ಅರ್ಜುನ ಬಂದ ಎಂಬ ಬರಹದಪಟ್ಟಿ (ಬೋರ್ಡ್) ಬರೆಯುವಂತೆ, ಸೂರ್ಯನ ಕುದುರೆಯನ್ನು ಕರೆಯುವಂತೆ, ಕೈಸನ್ನೆಮಾಡಿ ವೇಗವಾಗಿ ಓಡಿಸುವಂತೆ, ಯುದ್ಧಕ್ಕೆ ಅರೆರೆ ಪೂತುರೆ ! ಎನ್ನುತ್ತಾ ಕುದುರೆಯನ್ನು ಚಪ್ಪರಿಸಲು, ಕೂಡಲೆ ಅವು, ಕೆಂದೂಳು ನೆಲದಿಂದ ಆಕಾಶಕ್ಕೆ ಹಾರಿ, ರವಿ ಮಂಡಲವನ್ನು ಸುತ್ತುವರಿಯುವಂತೆ ನೆಗೆದವು,
ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ |
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯ ಲಹಿತ ಬಲ ಹರಿಯೆ || ೬೩ ||
ಪದವಿಭಾಗ-ಅರ್ಥ: ತುರಗ ಗರ್ಜನೆ ರಥದ ಚೀತ್ಕೃತಿ ವರ ಧನುಷ್ಟಂಕಾರ ಕಪಿಯಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ, ಅರರೆ ಹೊದರೆದ್ದವು ಗಿರಿವ್ರಜ ಬಿರಿಯೆ ಜಲನಿಧಿ ಜರಿಯೆ ತಾರಕಿ ಸುರಿಯೆ ಸುರಕುಲ ಪರಿಯೆ ಭೀತಿಯ ಲಹಿತ ಬಲ ಹರಿಯೆ.
 • ತುರಗ ಗರ್ಜನೆ ರಥದ ಚೀತ್ಕೃತಿ ವರ ಧನುಷ್ಟಂಕಾರ ಕಪಿಯ+ ಉಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ= ಕುದುರೆಗಳ ಹೇಷಾರವದ ಗರ್ಜನೆ, ರಥದ ಗಾಲಿಗಳ ಚೀತ್ಕೃತಿಯ ಸದ್ದು, ವರ- ಉತ್ತಮ ಧನುಷ್ಟಂಕಾರ, ಕಪಿಯ+ ಉಬ್ಬರಣೆ- ಕೂಗು, ಪಾರ್ಥನ ಬೊಬ್ಬೆ- ಆರ್ಭಟ, ನಿಷ್ಠುರವಾದ ದೇವದತ್ತ ಶಂಖದ ರವ- ಮೊಳಗು, ಅರರೆ ಹೊದರೆದ್ದವು ಗಿರಿವ್ರಜ- ಬೆಟ್ಟಗಳು ಅಲುಗಾಡಿ ಮೇಲೆದ್ದು ಬಿರಿಯೆ- ಬಿರುಕು ಬಿಟ್ಟವು; ಜಲನಿಧಿ ಜರಿಯೆ- ಸಮುದ್ರ ತಗ್ಗಿತು; ತಾರಕಿ ಸುರಿಯೆ- ನಕ್ಷತ್ರಗಳು ಉದುರಿದವು; ಸುರಕುಲ ಪರಿಯೆ- ದೇವತೆಗಳು ಚಲಿಸಿದರು- ಓಡಿದರು; ಭೀತಿಯ ಲಹಿತ ಬಲ ಹರಿಯೆ- ಭಯದ ಅಪಾಯ ಭಾವನೆ ಸೈನ್ಯದಲ್ಲಿ ಹರಿದಾಡಿತು.
ಅರ್ಥ: ಅರ್ಜುನನ ಕುದುರೆಗಳ ಹೇಷಾರವದ ಗರ್ಜನೆ, ರಥದ ಗಾಲಿಗಳ ಚೀತ್ಕೃತಿಯ ಸದ್ದು, ಉತ್ತಮ ಧನುಷ್ಟಂಕಾರ, ಬಾವುಟದಲ್ಲಿದ್ದ ಕಪಿಯ ಕೂಗು, ಪಾರ್ಥನ ಆರ್ಭಟ, ನಿಷ್ಠುರವಾದ ದೇವದತ್ತ ಶಂಖದ ಮೊಳಗು, ಅರರೆ ಬೆಟ್ಟಗಳು ಅಲುಗಾಡಿ ಮೇಲೆದ್ದು ಬಿರುಕು ಬಿಟ್ಟವು; ಸಮುದ್ರ ತಗ್ಗಿತು; ನಕ್ಷತ್ರಗಳು ಉದುರಿದವು; ದೇವತೆಗಳು ಓಡಿದರು; ಅಪಾಯ ಭಾವನೆಯ ಭಯ ಸೈನ್ಯದಲ್ಲಿ ಹರಿದಾಡಿತು.
ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ |
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯ ನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ || ೬೪ ||
ಪದವಿಭಾಗ-ಅರ್ಥ: ಶಿರವ ಸಿಡಿಲು+ ಎರಗಿದವೊಲು+ ಉತ್ತರ ತಿರುಗಿ ಬಿದ್ದನು ಮೂರ್ಛೆಯಲಿ, ಹೊಡೆ ಮರಳಿದವು ಕಣ್ಣಾಲಿ ಕಾರಿದವು+ ಅರುಣ ವಾರಿಗಳ ಹೊರಳುತಿರಲು+ ಎಲೆ ಪಾಪಿ ಸೈರಿಸಲು+ ಅರಿಯ ನಿನ್ನ+ ಏನು+ ಎನುತ ಫಲುಗುಣ ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ.
 • ಶಿರವ ಸಿಡಿಲು+ ಎರಗಿದವೊಲು- ಹೊಡೆದಂತೆ+ ಉತ್ತರ ತಿರುಗಿ ಬಿದ್ದನು ಮೂರ್ಛೆಯಲಿ, ಹೊಡೆ ಮರಳಿದವು ಕಣ್ಣಾಲಿ ಕಾರಿದವು+ ಅರುಣ ವಾರಿಗಳ- ಕೆಂಪು ನೀರನ್ನು- ರಕ್ತ, ಹೊರಳುತಿರಲು+ ಎಲೆ ಪಾಪಿ ಸೈರಿಸಲು+ ಅರಿಯ- ತಿಳಿಯನು- ಸಹಿಸಿಕೊಳ್ಳಲಾರ, ನಿನ್ನ+ ಏನು+ ಎನುತ ಫಲುಗುಣ ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ.
ಅರ್ಥ: ಯುದ್ಧಕ್ಕೆ ಹೊಸಬನಾದ ಉತ್ತರನು ಈ ಆರ್ಭಟಕ್ಕೆ ತಲೆಗೆ ಸಿಡಿಲು ಬಡಿದಂತೆ, ಮೂರ್ಛೆಹೊಗಿ ಹೊರಳಿ ಬಿದ್ದನು. ಹೊಡೆ- ಭಯದ ಭಾವಗಳು ಮತ್ತೆ ಬಂದವು. ಕಣ್ಣಾಲಿಗಳಲ್ಲಿ ಕೆಂಪಡರಿ ರಕ್ತ ಚಿಮ್ಮುವಂತೆ ಆಯಿತು. ಅವನು ಸಂಕಟದಿಂದ ಹೊರಳುತ್ತಿರಲು, ಅರ್ಜುನನು ಕರುಣೆಯಿಂದ, ಎಲೆ ಪಾಪದವನೇ! ಸಹಿಸಿಕೊಳ್ಳಲು ತಿಳಿಯನು! ಆರ್ಭಟವನ್ನು ಸಹಿಸಿಕೊಳ್ಳಲಾರ. ನಿನ್ನನ್ನು ಏನು ಮಾಡಲಿ! ಎನ್ನುತ್ತಾ ಅರ್ಜುನನು ತನ್ನ ಸೆರಗಿನಿಂದ ಗಾಳಿಬೀಸಿ ರಥದೊಳಗೆ ಕುಳ್ಳಿರಿಸಿ ಸಂತೈಸಿದದನು.
ಏನು ಮತ್ಸ್ಯಕುಮಾರ ಭವಣೆಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿಧಾನವ ಮಾಣು ಮಾಣೆನೆ ಪಾರ್ಥನಿಂತೆಂದ ೬೫
ಪದವಿಭಾಗ-ಅರ್ಥ: ಏನು ಮತ್ಸ್ಯಕುಮಾರ! ಭವಣೆಯಿದೇನು ನಿನಗೆ+ ಎಂದೆನಲು ಜಗದ+ ಅವಸಾನದಂದದಿ ಸಿಡಿಲು ಸುಳಿದುದು, ಬಿರಿದುದು+ ಎನ್ನೊಡಲು ಆನಲು+ ಆಪೆನೆ ನಿನ್ನ ಬಹಳ+ ಅಧ್ವಾನವನು, ಸಾಕು+ ಎನ್ನ ಕಳುಹು, ಮಹಾ ನಿಧಾನವ ಮಾಣು ಮಾಣು,+ ಎನೆ ಪಾರ್ಥನು+ ಇಂತೆಂದ.
 • ಏನು ಮತ್ಸ್ಯಕುಮಾರ! ಭವಣೆಯಿದೇನು ನಿನಗೆ+ ಎಂದೆನಲು= ಅರ್ಜುನನು, ಇದೇನಪ್ಪ ನಿನ್ನ ಬವಣೆ- ಕಠಿಣ ಸ್ಥಿತಿ? ಎಂದು ಕೇಳಲು, ಅವನು, ಜಗದ+ ಅವಸಾನದಂದದಿ ಸಿಡಿಲು ಸುಳಿದುದು= ಪ್ರಳಯಕಾಲದಲ್ಲಿ ಬರುವಂತೆ ಸಿಇಲು ಹೊಡೆಯಿತು; ಬಿರಿದುದು+ ಎನ್ನೊಡಲು= ನನ್ನ ಎದೆ ಒಡೆದಂತಾಯಿತು ಎಂದನು, ಆನಲು+ ಆಪೆನೆ ನಿನ್ನ ಬಹಳ+ ಅಧ್ವಾನವನು= ನಿನ್ನ ಈ ಆರ್ಭಟವನ್ನು ನಾನು ಸಹಿಸಬಲ್ಲೆನೇ? ಸಾಕು+ ಎನ್ನ ಕಳುಹು= ಸಾಕು ನನ್ನನ್ನು ಕಳಿಸಿಬಿಡು,, ಮಹಾ ನಿಧಾನವ ಮಾಣು ಮಾಣು,+= ದೊಡ್ಡ ಎಚ್ಚರಿಕೆಯ ಆರ್ಭಟ ಮಾಡಲೇ ಬೇಡ, ಎನೆ- ಎನ್ನಲು, ಪಾರ್ಥನು+ ಇಂತೆಂದ= ಅರ್ಜುನನು ಹೀಗೆ ಹೇಳಿದನು. (ಅರ್ಜುನನ ಗಾಂಡೀವದ ಠೇಂಕಾರ ಹಾಗೆ ಬರಸಿಡಿಲಿನಂತೆ ಇತ್ತು,ಎಂದು ಭಾವ.)
ಅರ್ಥ: ಏನು ಮತ್ಸ್ಯಕುಮಾರ! ಭವಣೆಯಿದೇನು ನಿನಗೆ+ ಎಂದೆನಲು= ಅರ್ಜುನನು, ಇದೇನಪ್ಪ ನಿನ್ನ ಬವಣೆ- ಕಠಿಣ ಸ್ಥಿತಿ? ಎಂದು ಕೇಳಲು, ಅವನು, ಜಗದ+ ಅವಸಾನದಂದದಿ ಸಿಡಿಲು ಸುಳಿದುದು= ಪ್ರಳಯಕಾಲದಲ್ಲಿ ಬರುವಂತೆ ಸಿಇಲು ಹೊಡೆಯಿತು; ಬಿರಿದುದು+ ಎನ್ನೊಡಲು= ನನ್ನ ಎದೆ ಒಡೆದಂತಾಯಿತು ಎಂದನು, ಆನಲು+ ಆಪೆನೆ ನಿನ್ನ ಬಹಳ+ ಅಧ್ವಾನವನು= ನಿನ್ನ ಈ ಆರ್ಭಟವನ್ನು ನಾನು ಸಹಿಸಬಲ್ಲೆನೇ? ಸಾಕು+ ಎನ್ನ ಕಳುಹು= ಸಾಕು ನನ್ನನ್ನು ಕಳಿಸಿಬಿಡು,, ಮಹಾ ನಿಧಾನವ ಮಾಣು ಮಾಣು,+= ದೊಡ್ಡ ಎಚ್ಚರಿಕೆಯ ಆರ್ಭಟ ಮಾಡಲೇ ಬೇಡ, ಎನೆ- ಎನ್ನಲು, ಪಾರ್ಥನು+ ಇಂತೆಂದ= ಅರ್ಜುನನು ಹೀಗೆ ಹೇಳಿದನು.
ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ || ೬೬ ||
ಪದವಿಭಾಗ-ಅರ್ಥ: ಖೇಡನಾಗದಿರು+ ಅದುಭುತ ಧ್ವನಿಮಾಡೆನು+ ಅಂಜದಿರು+ ಅಂಜದಿರು ಧೃತಿಮಾಡಿಕೊಂಡು+ ಈ ರಥವ ಜೋಡಿಸು+ ಎನುತ್ತ ಸಂತೈಸಿ ಮೂಡಿಗೆಯ ಅಂಬುಗಿದು ತಿರುವಿಗೆ ಹೂಡಿದನು ಫಲುಗುಣನ ಕದನವ ನೋಡಲು+ ಅಮರಶ್ರೇಣಿ ಮೇಳೈಸಿತ್ತು ಗಗನದಲಿ.
 • ಖೇಡನಾಗದಿರು+ ಅದುಭುತ ಧ್ವನಿಮಾಡೆನು+ ಅಂಜದಿರು+ ಅಂಜದಿರು= ಅಂಜುಬುರುಕನಾಗಬೇಡ, ಅದ್ಭುತವಾದ ಠೇಂಕಾರವನ್ನು ಇನ್ನು ಮಾಡುವುದಿಲ್ಲ; ಭಯಪಡಬೇಡವೊ ಭಯಪಡಬೇಡವೊ! ಧೃತಿಮಾಡಿಕೊಂಡು+ ಈ ರಥವ ಜೋಡಿಸು+ ಎನುತ್ತ= ಧಯರ್ಯ ಮಾಡಿಕೊಂಡು ಈ ರಥವನ್ನು ಓಡಿಸು, ಎನ್ನುತ್ತಾ, ಅರ್ಜುನನು ಉತ್ತರನನ್ನು ಸಂತೈಸಿ,// ಮೂಡಿಗೆಯ- ಬತ್ತಳಿಕೆಯ, ಅಂಬು+ ಉಗಿದು ತಿರುವಿಗೆ ಹೂಡಿದನು ಫಲುಗುಣನ ಕದನವ ನೋಡಲು+ ಅಮರಶ್ರೇಣಿ ಮೇಳೈಸಿತ್ತು ಗಗನದಲಿ= ಮೂಡಿಗೆಯ- ಬತ್ತಳಿಕೆಯಿಂದ ಅಂಬು+ ಉಗಿದು- ಬಾಣವನ್ನು ತೆಗೆದು, ತಿರುವಿಗೆ ಹೂಡಿದನು- ಬಿಲ್ಲಿನ ನಾಣಿಗೆ- ಹಗ್ಗಕ್ಕೆ ಹೂಡಿದನು. ಫಲುಗುಣನ ಕದನವ ನೋಡಲು+ ಅಮರಶ್ರೇಣಿ- ದೇವತೆಗಳ ಸಮೂಹ ಮೇಳೈಸಿತ್ತು ಗಗನದಲಿ.
ಅರ್ಥ:ಉತ್ತರಾ, ಅಂಜುಬುರುಕನಾಗಬೇಡ, ಅದ್ಭುತವಾದ ಠೇಂಕಾರವನ್ನು ಇನ್ನು ಮಾಡುವುದಿಲ್ಲ; ಭಯಪಡಬೇಡವೊ ಭಯಪಡಬೇಡವೊ! ಧೈರ್ಯ ಮಾಡಿಕೊಂಡು ಈ ರಥವನ್ನು ಓಡಿಸು, ಎನ್ನುತ್ತಾ, ಅರ್ಜುನನು ಉತ್ತರನನ್ನು ಸಂತೈಸಿ, ಬತ್ತಳಿಕೆಯಿಂದ ಬಾಣವನ್ನು ತೆಗೆದು, ಬಿಲ್ಲಿನ ನಾಣಿಗೆ ಹೂಡಿದನು. ಅವನ ಯುದ್ಧವನ್ನು ನೋಡಲು ದೇವತೆಗಳ ಸಮೂಹ ಆಕಾಶದಲ್ಲಿ ಗುಂಪುಗೂಡಿತ್ತು.[೪][೫]
♦♦♦
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
 3. (ಹಳವಿಗೆ= ಬಾವುಟ- ಶಿರಿಗನ್ನಡ ಅರ್ಥಕೋಶ - ಕಾರಂತ)
 4. [೧]
 5. [೨]