ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)

ವಿಕಿಸೋರ್ಸ್ ಇಂದ
Jump to navigation Jump to search
<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೭)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಕದನ ಚೌಪಟ ಮಲ್ಲ ಪರಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ ||ಸೂಚನೆ||
ಪದವಿಭಾಗ-ಅರ್ಥ:ಕದನ ಚೌಪಟ ಮಲ್ಲ ಪರಬಲ ಮದನ ಮದಹರ ರುದ್ರನು+ ಅಹಿತರ ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ
 • ಕದನ ಚೌಪಟ ಮಲ್ಲ= ಯುದ್ಧದಲ್ಲಿ ಶ್ರೇಷ್ಠಯೋಧನೂ; ಪರಬಲ ಮದನ ಮದಹರ ರುದ್ರನು+= ಶತ್ರು ಸೈನ್ಯವೆಂಬ ಮನ್ಮಥನಿಗೆ ಮದನನ ಅಹಂಕಾರವನ್ನು ಸುಡುವ ರುದ್ರನಂತಿರುವ ಅರ್ಜುನನು,// ಅಹಿತರ- ಶತ್ರುಗಳನ್ನು ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ= ಶತ್ರುಗಳನ್ನು ಸದೆಬಡಿದು- ಸೋಲಿಸಿ, ಮರಳಿಚಿದನು ವಿರಾಟನ ನಿಖಿಳ ಗೋಕುಲವ= ವಿರಾಟನ ಎಲ್ಲಾ ಗೋವುಗಳನ್ನೂ ಮರಳಿ ಮತ್ಸ್ಯನಗರಕ್ಕೆ ತಂದನು.
ಅರ್ಥ:ಯುದ್ಧದಲ್ಲಿ ಶ್ರೇಷ್ಠಯೋಧನೂ, ಶತ್ರು ಸೈನ್ಯವೆಂಬ ಮನ್ಮಥನಿಗೆ ಮದನನ ಅಹಂಕಾರವನ್ನು ಸುಡುವ ರುದ್ರನಂತಿರುವ ಅರ್ಜುನನು, ಶತ್ರುಗಳನ್ನು ಸೋಲಿಸಿ, ವಿರಾಟನ ಎಲ್ಲಾ ಗೋವುಗಳನ್ನೂ ಮರಳಿ ಮತ್ಸ್ಯನಗರಕ್ಕೆ ತಂದನು. [೧][೨]
~~ಓಂ~~

ದ್ರೋಣ ಭೀಷ್ಮರು ಅರ್ಜುನನ ಬಂದುದನ್ನು ತಿಳಿದು ಹೊಗಳಿದರು[ಸಂಪಾದಿಸಿ]

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು |
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ || ೧ ||
ಪದವಿಭಾಗ-ಅರ್ಥ: ಭಯವು ಭಾರವಿಸಿತ್ತು ಜನಮೇಜಯ ಮಹೀಪತಿ ಕೇಳು ಕುರು ಸೇನೆಯಲಿ ಭೀಷ್ಮ ದ್ರೋಣರು+ ಅರಿದರು ಪಾರ್ಥನು+ ಎಂಬುದನು ಜಯವು ಜೋಡಿಸಲು+ ಅರಿಯದು+ ಇದು ಸಂಶಯದ ಸುಳಿವು+ ಉತ್ಪಾತ ಶತವಿದು ಲಯದ ಬೀಜವು ಭೀಷ್ಮ ಚಿತ್ತವಿಸು+ ಎಂದನು ಆ ದ್ರೋಣ.
 • ಭಯವು ಭಾರವಿಸಿತ್ತು ಜನಮೇಜಯ ಮಹೀಪತಿ ಕೇಳು ಕುರು ಸೇನೆಯಲಿ= ಜನಮೇಜಯ ರಾಜನೇ ಕೇಳು, ಕೌರವನ ಸೇನೆಯಲ್ಲಿ ಭಯವು ಆವರಿಸಿತ್ತು.// ಭೀಷ್ಮ ದ್ರೋಣು+ ಅರಿದರು ಪಾರ್ಥನು+ ಎಂಬುದನು= ಭೀಷ್ಮ ದ್ರೋಣರು ಬಂದವನು ಪಾರ್ಥನು ಎಂಬುದನ್ನು ಧನಷ್ಠಂಕಾರ ಕಪಿಯ ಘರ್ಜನೆ ಕೇಳಿ ತಿಳಿದು ಕೊಂಡರು.//ಜಯವು ಜೋಡಿಸಲು+ ಅರಿಯದು+= ಅವರು ಇದರಲ್ಲಿ ತಮಗೆ ಜಯವು ಲಭಿಸಲಾರದು,//+ ಇದು ಸಂಶಯದ ಸುಳಿವು+ ಉತ್ಪಾತ ಶತವಿದು= ಅನೇಕ ಅಪಶಕುನವಾಗುತ್ತಿದೆ; ಈ ನೂರಾರು ಅಪಶಕುನಗಳು ಜಯದ ಬಗೆಗೆ ಸಂಶಯದ ಸುಳಿವನ್ನು- ಸೂಚನೆಯನ್ನು ಕೊಡುವುದು.// ಲಯದ ಬೀಜವು ಭೀಷ್ಮ ಚಿತ್ತವಿಸು+ ಎಂದನು ಆ ದ್ರೋಣ= ಈ ಯುದ್ಧವು ಮುಂದಿನ ಕುಲದ ನಾಶದ ಬೀಜದಂತಿದೆ, ಭೀಷ್ಮನೇ ಗಮನಿಸಿ ಕೇಳು ಎಂದನು, ದ್ರೋಣ.
ಅರ್ಥ: ಜನಮೇಜಯ ರಾಜನೇ ಕೇಳು, ಕೌರವನ ಸೇನೆಯಲ್ಲಿ ಭಯವು ಆವರಿಸಿತ್ತು. ಭೀಷ್ಮ ದ್ರೋಣರು ಬಂದವನು ಪಾರ್ಥನು ಎಂಬುದನ್ನು ಧನಷ್ಠಂಕಾರ ಕಪಿಯ ಘರ್ಜನೆ ಕೇಳಿ ತಿಳಿದು ಕೊಂಡರು. ಅವರು ಇದರಲ್ಲಿ ತಮಗೆ ಜಯವು ಲಭಿಸಲಾರದು, ಅನೇಕ ಅಪಶಕುನವಾಗುತ್ತಿದೆ; ಈ ನೂರಾರು ಅಪಶಕುನಗಳು ಜಯದ ಬಗೆಗೆ ಸಂಶಯದ ಸೂಚನೆಯನ್ನು ಕೊಡುವುದು. ಈ ಯುದ್ಧವು ಮುಂದಿನ ಕುಲನಾಶದ ಬೀಜದಂತಿದೆ, ಭೀಷ್ಮನೇ ಗಮನಿಸಿ ಕೇಳು ಎಂದನು, ದ್ರೋಣ.
ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ೨
ಪದವಿಭಾಗ-ಅರ್ಥ: ಸುರಿಸುತಿವೆ ಕಂಬನಿಗಳನು ಗಜತುರಗಚಯ, ವೊರೆಯುಗಿದಡೆ+ ಆಯುಧ ಮುರಿದು ಬಿದ್ದುದು, ಬೀಸುತಿದೆ ಬಿರುಗಾಳಿ, ಬಲ ಬೆದರೆ ಹರಿವುತಿವೆ ತಾರಕಿಗಳು+ ಅಭ್ರದೊಳು+ ಅರುಣಮಯ ಜಲಧಾರೆಯಿದೆ ತರತರದಲಿದೆ ಪಡಿ- ಸೂರ್ಯಮಂಡಲವು+ ಎಂದನು+ ಆ ದ್ರೋಣ.
 • ಸುರಿಸುತಿವೆ ಕಂಬನಿಗಳನು ಗಜತುರಗಚಯ= ಆನೆ ಕುದುರೆಗಳ ಸಮೂಹ ಕಣ್ನಲ್ಲಿ ನೀರು ಸುರಿಸುತ್ತಿವೆ./ ವೊರೆಯುಗಿದಡೆ+ ಆಯುಧ ಮುರಿದು ಬಿದ್ದುದು= ಒರೆಯಿಂದ ಕತ್ತಿ ತೆಗೆದರೆ ಕತ್ತಿಯೇ ಮುರಿದು ಬಿದ್ದಿತು./ ಬೀಸುತಿದೆ ಬಿರುಗಾಳಿ, ಬಲ ಬೆದರೆ ಹರಿವುತಿವೆ ತಾರಕಿಗಳು+ ಅಭ್ರದೊಳು+= ಬಿರುಗಾಳಿ ಬೀಸುತ್ತಿದೆ. ಸೈನ್ಯ ಹೆದರುವಂತೆನಕ್ಷತ್ರಗಳು/ ಉಲ್ಕೆಗಳು ಆಕಾಶದಲ್ಲಿ ಬೀಳುತ್ತಿದೆ./ ಅರುಣಮಯ ಜಲಧಾರೆಯಿದೆ ತರತರದಲಿದೆ ಪಡಿ- ಸೂರ್ಯಮಂಡಲವು+= ಕೆಂಪು ಬಣ್ಣದ ಜಲಧಾರೆ- ಮಳೆ ಬರುತ್ತಿದೆ; ತರತರದಲಿದೆ ಪಡಿ- ಸೂರ್ಯಮಂಡಲವು ವಿಚಿತ್ರವಾಗಿದೆ. ಎಂದನು+ ಆ ದ್ರೋಣ.
ಅರ್ಥ:ಆನೆ ಕುದುರೆಗಳ ಸಮೂಹ ಕಣ್ನಲ್ಲಿ ನೀರು ಸುರಿಸುತ್ತಿವೆ. ಒರೆಯಿಂದ ಕತ್ತಿ ತೆಗೆದರೆ ಕತ್ತಿಯೇ ಮುರಿದು ಬಿದ್ದಿತು. ಬಿರುಗಾಳಿ ಬೀಸುತ್ತಿದೆ. ಸೈನ್ಯ ಹೆದರುವಂತೆ ನಕ್ಷತ್ರಗಳು- ಉಲ್ಕೆಗಳು ಆಕಾಶದಲ್ಲಿ ಬೀಳುತ್ತಿದೆ. ಕೆಂಪು ಬಣ್ಣದ ಮಳೆ ಬರುತ್ತಿದೆ; ಸೂರ್ಯಮಂಡಲವು ವಿಚಿತ್ರವಾಗಿದೆ. ಎಂದನು, ಆ ದ್ರೋಣ.
ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ |
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ || ೩ ||
ಪದವಿಭಾಗ-ಅರ್ಥ: ಇದೆ ಬಹಳ ಭೂಕಂಪವು+ ಅದುಭುತವು+ ಇದೆ ದಿಶಾವಳಿ ಧೂಮಕೇತುಗಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ ಇದು ಸಮಾಹಿತವು+ ಅಲ್ಲ (ಕ್ರಮವಾಗಿರಿಸಿದ. ಸಮಾಹಿತ+ ಅಲ್ಲ (ನಾ) ಪ್ರಸನ್ನಚಿತ್ತ. + ಅಲ್ಲ) ರಾಜಾಭ್ಯುದಯಕರವೇ ಭೀಷ್ಮ ನಮ್ಮನು ಸದೆಯದೆ+ ಇಹನೇ ಸುರಪನಂದನನು+ ಎಂದನು+ ಆ ದ್ರೋಣ
ಅರ್ಥ:ಭೀಷ್ಮಾ! ಬಹಳ ಭೂಕಂಪವು ತೋರುತ್ತಿದೆ; ದಿಶೆಗಳಲ್ಲಿ ಅದ್ಭುತವು ಕಾಣುತ್ತಿದೆ, ಧೂಮಕೇತುಗಳಿದೆ; ಪತಾಕೆಗಳು ಮರಿದು ಭಂಗವಾಗಿವೆ. ವಿಪರೀತ ಪರಿಸ್ತಿತಿ ಇದು. ಸರ್ವರಿಗೂ ಹಿತಕರವಾಗಿ ಕಾಣುವುದಿಲ್ಲ. ರಾಜನ ಅಭ್ಯುದಯಕರವೇ? ಭೀಷ್ಮ, ಅರ್ಜುನನು ನಮ್ಮನು ಹೊಡೆದುಹಾಕದೇ ಇರುವನೇ? ಎಂದನು ಆ ದ್ರೋಣ.
ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ |
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ || ೪ ||
ಪದವಿಭಾಗ-ಅರ್ಥ: ಬಿರಿಯಲು+ ಅಬುಜಭವಾಂಡವಿದೆ, ಕಪಿವರನ ಕಳಕಳ, ದೇವದತ್ತದ ಧರ, ಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆನರನ ನಿಷ್ಠುರ ಸಿಂಹ ರವವಿದೆತುರಗ ದಳ್ಳುರಿ ಸಾರುತಿದೆ ಸಂಗರಕೆ ಸಾಹಸ ಮಲ್ಲ ಮೊಳಗಿದನು+ ಎಂದನು+ ಆ ದ್ರೋಣ.
 • ಪ್ರಕೃತಿಯ ಸಂಕೇತಗಳನ್ನು ನೋಡಿ, ದ್ರೋಣ ತನ್ನ ಮೆಚ್ಚಿನ ಶಿಷ್ನ ಅರ್ಜುನನ ಆಗಮನದಿಂದ ಸಂತಸಗೊಂಡು ಅವನನ್ನು ಹೊಗಳಿ ಭೀಷ್ಮನಿಗೆ ಹೇಳಿದನು,'ಬಿರಿಯಲು+ ಅಬುಜಭವಾಂಡವಿದೆ- ಅಬುಜಾಂಡ= ಬ್ರಹ್ಮಾಂಡ, = ಬ್ರಹ್ಮಾಂಡವು ಬಿರಿಯುವಹಾಗಿದೆ; ಕಪಿವರನ ಕಳಕಳ- ಕೀಚುಸದ್ದು, ಕಪಿದ್ವಜದಿಂದ ಮಾರುತಿಯ ಕಿರಿಚಾಟವಿದೆ, ದೇವದತ್ತದ ಧರ- ಧರಿಸಿದವನು ಇದ್ದಾನೆ,= ದೇವದತ್ತ ಶಂಖವನ್ನು ಧರಿಸಿದ ಪಾರ್ಥನೇ ಬಂದಿದ್ದಾನೆ,, ಧುರದ ದೆಖ್ಖಾಳವಿದೆ- ಆರ್ಭಟವಿದೆ= ಯುದ್ಧದ ಆರ್ಭಟವಿದೆ ಮತ್ತು ಗಾಂಡಿವದ ಠೇಂಕಾರವಿದೆ.- ಠೇಂಕಾರ, ನರನ ನಿಷ್ಠುರ ಸಿಂಹ ರವವು - ಘರ್ಜನೆ + ಇದೆ= ಅರ್ಜುನನ ಸಿಂಹನಾದವಿದೆ, ತುರಗ ದಳ್ಳುರಿ ಸಾರುತಿದೆ = ಕುದುರೆಗಳು ಬುಸುಗುಟ್ಟುತ್ತಿವೆ;, ಸಂಗರಕೆ ಸಾಹಸ ಮಲ್ಲ ಮೊಳಗಿದನು+ ಎಂದನು+ ಆ ದ್ರೋಣ= ಯುದ್ಧವನ್ನು ಆರಂಬಿಸಲು ಅರ್ಜುನನು ದೇವದತ್ತ ಶಂಖವನ್ನು ಊದಿದನು,ಎಂದನು+ ಆ ದ್ರೋಣ.
ಅರ್ಥ:ಪ್ರಕೃತಿಯ ಸಂಕೇತಗಳನ್ನು ನೋಡಿ, ದ್ರೋಣ ತನ್ನ ಮೆಚ್ಚಿನ ಶಿಷ್ನ ಅರ್ಜುನನ ಆಗಮನದಿಂದ ಸಂತಸಗೊಂಡು ಅವನನ್ನು ಹೊಗಳಿ ಭೀಷ್ಮನಿಗೆ ಹೇಳಿದನು,'ಬ್ರಹ್ಮಾಂಡವು ಬಿರಿಯುವಹಾಗಿದೆ; ಕಪಿದ್ವಜದಿಂದ ಮಾರುತಿಯ ಕಿರಿಚಾಟವಿದೆ, ದೇವದತ್ತ ಶಂಖವನ್ನು ಧರಿಸಿದ ಪಾರ್ಥನೇ ಬಂದಿದ್ದಾನೆ, ಯುದ್ಧದ ಆರ್ಭಟವಿದೆ ಮತ್ತು ಗಾಂಡಿವದ ಠೇಂಕಾರವಿದೆ. ಅರ್ಜುನನ ಸಿಂಹನಾದವಿದೆ, ಕುದುರೆಗಳು ಬುಸುಗುಟ್ಟುತ್ತಿವೆ; ಯುದ್ಧವನ್ನು ಆರಂಬಿಸಲು ಅರ್ಜುನನು ದೇವದತ್ತ ಶಂಖವನ್ನು ಊದಿದನು,ಎಂದನು+ ಆ ದ್ರೋಣ .

ಭೀಷ್ಮ ದ್ರೋಣರಿಗೆ ಕರ್ಣನ ಭರ್ತ್ಸನೆ[ಸಂಪಾದಿಸಿ]

ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸಾಮಿಯ
ನಿಳಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ |
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ || ೫ ||
ಪದವಿಭಾಗ-ಅರ್ಥ: ಬಲವ(ಬಲ- ಸೈನ್ಯ) ಬೆದರಿಸಿ ಹಗೆಯ ಭುಜದ+ ಅಗ್ಗಳಿಕೆಯನೆ ಕೊಂಡಾಡಿ, ಸಾಮಿಯನು+ ಇಳಕೆಗಾಬಿರಿ, ನಿಮ್ಮ ಪೈಕಕೆ (ಜಾತಿ) ಖುಲ್ಲತನ ಸಹಜ ಫಲುಗುಣನೆಯಾಗಲಿ ಸುರೇಂದ್ರನೆ ನಿಲಲಿ ಭಾರ್ಗವ ರಾಮನಾಗಲಿ ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ.
ಅರ್ಥ:ನಮ್ಮ ಸೈನ್ಯವನ್ನೇ ಹೆದರಿಸಿ, ಶತ್ರುವಿನ ಭುಜದ ಪರಾಕ್ರಮವನ್ನು ಕೊಂಡಾಡಿ, ರಾಜನಾದ ಕೌರವ ಸ್ವಾಮಿಯನ್ನು ಕೀಳೆಂದು ತೆಗಳುವಿರಿ. ನಿಮ್ಮ ಜಾತಿಗೆ ದ್ರೋಹವು ಸಹಜವಾಗಿದೆ. ಫಲ್ಗುಣನೆ ಆಗಲಿ, ಅವನು ದೇವಲೋಕದ ಒಡೆಯ ಸುರೇಂದ್ರನೆ ಬಂದು ಯುದ್ಧಕ್ಕೆ ನಿಲ್ಲಲಿ, ಪರಷುರಾಮನಾಗಲಿ ನಿಮಿಷದಲ್ಲಿ ಗೆದ್ದು ಕೊಡುವೆನು ಎಂದು ಸಿಟ್ಟಿನಿಂದ ಕರ್ಣ ಹೇಳಿದ.
ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ |
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ || ೬ ||
ಪದವಿಭಾಗ-ಅರ್ಥ: ನರನು ನರನು+ ಎಂದು+ ಅನವರತ ತಲೆಬಿರಿಯೆ ಹೊಗಳುವಿರಿ+ ಆನು+ ಇರಲು ಸಂಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ, ನರನ ತೆತ್ತಿಗರು+ ಅಹಿರಿ ತತ್ತರೆ ಪುರದೊಳಗೆ ಕೌರವನವರು ದುಶ್ಚರಿತರೆ+ ಎರಡಿಟ್ಟು+ ಇಹಿರಿ ಖೂಳರು ನಿಮ್ಮೊಳು+ ಏನೆಂದ.
 • ನರನು ನರನು+ ಎಂದು+ ಅನವರತ= ಯಾವಾಗಲೂ, ತಲೆಬಿರಿಯೆ ಹೊಗಳುವಿರಿ+ ಆನು= ನಾನು+ ಇರಲು, ಸಂಗರಕೆ= ಯುದ್ಧಕ್ಕೆ, ತಲೆದೋರಿದೊಡೆ= ನಿಂತರೆ ತರಿವೆನು= ಕತ್ತರಿಸಿಹಾಕುವೆನು, ಲೋಕಪಾಲಕರ= ದೇವತೆಗಳನ್ನು, ನರನ ತೆತ್ತಿಗರು+ ಅಹಿರಿ= ಅರ್ಜುನನ ಸೇವಕರಾಗಿರುವಿರಿ, ತತ್ತರೆ- ಬಂದುಗಳು, ಪುರದೊಳಗೆ (ಹಸ್ತಿನಾಪುರದೊಳಗೆ) ಮಾತ್ರಾ! (ನಿಮಗೆ) ಕೌರವನವರು ದುಶ್ಚರಿತರೆ= ಕೆಟ್ಟವರೇ?+ ಎರಡಿಟ್ಟು+ ಇಹಿರಿ= ಕೌರವನಿಗೆ ಎರಡು ಬಗೆಯುತ್ತಿರುವಿರಿ ಖೂಳರು- ದುಷ್ಟರು, ನಿಮ್ಮೊಳು+ ಏನೆಂದ- ನಿಮ್ಮೊಡನೆ ಮಾತನಾಡಿ ಏನು ಪ್ರಯೋಜನ ಎಂದ ಕರ್ಣ.
ಅರ್ಥ:ನರನು ನರನು+ ಎಂದು ಯಾವಾಗಲೂ ತಲೆಬಿರಿಯುವಂತೆ ಅರ್ಜುನನ್ನು ಹೊಗಳುವಿರಿ. ಯುದ್ಧಕ್ಕೆ ನಾನು ಇರುವಾಗ, ಎದುರು ನಿಂತರೆ ದೇವತೆಗಳನ್ನು ಕತ್ತರಿಸಿಹಾಕುವೆನು. ನೀವು ಅರ್ಜುನನ ಸೇವಕರಾಗಿರುವಿರಿ, ಆದರೆ ಹಸ್ತಿನಾಪುರದೊಳಗೆ) ಮಾತ್ರಾ ಕೌರವನ ಬಂದುಗಳು. ನಿಮಗೆ ಕೌರವನ ಕಡೆಯವರು ಕೆಟ್ಟವರೇ? ಕೌರವನಿಗೆ ಎರಡು ಬಗೆಯುತ್ತಿರುವಿರಿ. ದುಷ್ಟರು, ನಿಮ್ಮೊಡನೆ ಮಾತನಾಡಿ ಏನು ಪ್ರಯೋಜನ ಎಂದ ಕರ್ಣ.
ಹೊಕ್ಕು ತಾ ಬಳಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ |
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ || ೭ ||
ಪದವಿಭಾಗ-ಅರ್ಥ: ಹೊಕ್ಕು ತಾ ಬಳಲಿಸಿದೊಡೆ ಹಿಂದಿಕ್ಕಿ ಕೊಂಬವರು+ ಆರು ಹಗೆವನ, ಸಿಕ್ಕಿದ+ ಉರಗವ ಸೆಳೆವನು+ ಆವನು ಗರುಡ ತುಂಡದಲಿ, ಎಕ್ಕತುಳದಲಿ ವೈರಿ ಪಾರ್ಥನನು+ ಒಕ್ಕಲಿಕ್ಕುವೆನು+ ಅರಸ ನಿನ್ನ+ ಈ ಚುಕ್ಕಿಗಳ ಚಾಪಲವ ಕೇಳದಿರು+ ಎಂದನು+ ಆ ಕರ್ಣ:
 • ಹೊಕ್ಕು ತಾ ಬಳಲಿಸಿದೊಡೆ ಹಿಂದಿಕ್ಕಿ ಕೊಂಬವರು+ ಆರು ಹಗೆವನ= ರಾಜನೇ, ತಾನು ಕೊಕ್ಕು- ನುಗ್ಗಿ ಬಳಲಿಸಿದೊಡೆ - ಸೋಲುವಂತೆ ಆಯಾಸಪಡಿಸಿದರೆ, ಆ ಶತ್ರುವನ್ನು ತಮ್ಮ ಬೆನ್ನುಹಿಂದೆ ಇಟ್ಟುಕೊಂಡು ರಕ್ಷಿಸುವವರು ಯಾರು ಈ ಪಡೆಯಲ್ಲಿ - ಅವರೇ ಈ ಭೀಷ್ಮದ್ರೋಣರು; ಸಿಕ್ಕಿದ+ ಉರಗವ ಸೆಳೆವನು+ ಆವನು ಗರುಡ ತುಂಡದಲಿ (ಗರುಡನ ತುಂಡದಲಿ- ಗರುಡನ ತುಂಡು- ಮಹಾವೀರ, ಗರುಡನಂಥ ವೀರರಲ್ಲಿ ಸಿಕ್ಕಿದ ಸರ್ಪವನ್ನು ಸರೆಹಿಡಿದವನು ಯಾರು? , ಎಕ್ಕತುಳದಲಿ- ಪರಾಕ್ರಮದಲ್ಲಿ ವೈರಿ ಪಾರ್ಥನನು+ ಒಕ್ಕಲಿಕ್ಕುವೆನು= ಗರುಡನಂಥ ವೀರನು- ನಾನು ಪರಾಕ್ರಮದಿಂದ ವೈರಿ ಪಾರ್ಥನನ್ನು ಸೋಲಿಸುವೆನು; ಒಕ್ಕಲಿಕ್ಕುವೆನು- ಸೋಲಿಸುವೆನು,+ ಅರಸ ನಿನ್ನ+ ಈ ಚುಕ್ಕಿಗಳ- ಅಲ್ಪರ, ಚಾಪಲವ- ಚಪಲದ ಮಾತುಗಳನ್ನು,ಕೇಳದಿರು+ ಎಂದನು+ ಆ ಕರ್ಣ.
ಅರ್ಥ:ರಾಜನೇ, ತಾನು ನುಗ್ಗಿ ಶತ್ರುಗಳು ಸೋಲುವಂತೆ ಆಯಾಸಪಡಿಸಿದರೆ, ಆ ಶತ್ರುವನ್ನು ತಮ್ಮ ಬೆನ್ನುಹಿಂದೆ ಇಟ್ಟುಕೊಂಡು ರಕ್ಷಿಸುವವರು ಯಾರು ಈ ಪಡೆಯಲ್ಲಿ? - ಅವರೇ ಈ ಭೀಷ್ಮದ್ರೋಣರು; ಗರುಡನಂಥ ವೀರರಲ್ಲಿ ಸಿಕ್ಕಿದ ಸರ್ಪವನ್ನು ಸರೆಹಿಡಿದವನು ಯಾರು? ಗರುಡನಂಥ ವೀರನು- ನಾನು ಪರಾಕ್ರಮದಿಂದ ವೈರಿ ಪಾರ್ಥನನ್ನು ಸೋಲಿಸುವೆನು. ಅರಸನೇ, ನಿನ್ನವರಾದ ಈ ಅಲ್ಪರ, ಚಪಲದ ಮಾತುಗಳನ್ನು ಕೇಳದಿರು ಎಂದನು, ಆ ಕರ್ಣ.

ಕರ್ಣನ ನಿಂದನೆ - ಅರ್ಜುನನ ಸಾಹಸ ವರ್ಣನೆ - ಕರ್ಣನ ವ್ಯಂಗ್ಯ- ವಾಗ್ವಾದ[ಸಂಪಾದಿಸಿ]

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು |
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಪರಿಗಳವಲ್ಲ ಬಲ್ಲೈ ಪಾರ್ಥನಧಟುಗಳ || ೮ ||
ಪದವಿಭಾಗ-ಅರ್ಥ: ಎನಲು ಭುಗಿಲೆಂದನು ಕೃಪಾಚಾರ್ಯನು, ಸುಯೋಧನ ಕೇಳು, ರಾಧಾತನಯನು+ ಇವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು, ಅನುವರದೊಳು (ಯುದ್ಧದಲ್ಲಿ)+ ಅರ್ಜುನನ ಗೆಲುವೊಡೆ+ ಯೆ + ಎನಗೆ ನಿನಗೆ+ ಈತಂಗೆ ಕೆಲಬರಿಗೆ+ ಅನಿಮಿಪರಿಗೆ (ದೇವತೆಗಳಿಗೆ)+ ಅಳವಲ್ಲ (ಸಾಧ್ಯವಿಲ್ಲ) ಬಲ್ಲೈ ಪಾರ್ಥನ+ ಅಧಟುಗಳ.
ಅರ್ಥ:ಕರ್ಣನು ಹಾಗೆ ಹೇಳಲು, ಸಿಟ್ಟಿನಿಂದ ಕೃಪಾಚಾರ್ಯನು ಬೆಂಕಿಯಂತೆ ಭುಗಿಲೆಂದು ಹೇಳಿದನು. ಸುಯೋಧನ ಕೇಳು, ಈ ರಾಧಾತನಯ ಕರ್ಣನು ಬೊಗುಳಿದ ಮಾತ್ರಕ್ಕೆ ನಿಶ್ಚಯವೆಂದು ನಂಬಬೇಡ. ಯುದ್ಧದಲ್ಲಿ ಅರ್ಜುನನನ್ನು ಗೆಲ್ಲಲು ನನಗೆ, ನಿನಗೆ, ಈತ ಕರ್ಣನಿಗೆ, ಉಳಿದ ಕೆಲವರಿಗೆ, ದೇವತೆಗಳಿಗೆ, ಸಾಧ್ಯವಿಲ್ಲ. ನೀನು ಬಲ್ಲೆಯಾ ಪಾರ್ಥನ ಪರಾಕ್ರಮ ಸಾಹಸಗಳನ್ನು?
ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ |
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ || ೯ ||
ಪದವಿಭಾಗ-ಅರ್ಥ: ಮಾಡಿದನು ಹರನೊಡನೆ ಖಾಡಾ ಖಾಡಿಯನು; ಸುರಪತಿಯ ತೋಟವ ಬೇಡಿದೊಡೆ ಬೇಳಿದನು ವಹ್ನಿಗೆ (ಅಗ್ನಿಗೆ- ಬೆಂಕಿಗೆ ಕೊಟ್ಟನು); ರಾಜಸೂಯದಲಿ ರೂಢಿಗ+ ಉತ್ತರ ಕುರುಗಳ+ ಅರ್ಥವ ಹೂಡಿಸಿದನು+ ಅರಮನೆಗೆ, ದೈತ್ಯರಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ.
ಅರ್ಥ:ಅರ್ಜುನನು ಹರನೊಡನೆ(ಶಿವ) ಖಾಡಾ ಖಾಡಿ (ಎದುರು ನಿಂತು) ಯುದ್ಧವನ್ನು ಮಾಡಿದನು; ಸುರಪತಿ ಇಂದ್ರನ ಖಾಂಡವ ತೋಟವನ್ನು ಅಗ್ನಿಯು ಬೇಡಿದ ಕೂಡಲೆ ಅಗ್ನಿಗೆ ಅಹುತಿ ಕೊಟ್ಟನು; ರಾಜಸೂಯ ಯಾಗದಲ್ಲಿ ರೂಢಿಗತವಾದ ಉತ್ತರ ಕುರುಗಳು ಬಿಟ್ಟುಹೋದ ಅರ್ಥವನ್ನು- ಧನವನ್ನು ಬಂಡಿ ಹೂಡಿಸಿ ಅರಮನೆಗೆ ತಂದನು; ನಿವಾತ ಕವಚರ ದೈತ್ಯರಬೀಡು ಹಿರಣ್ಯಕಪುರದ ನಿವಾಸಿಗಳನ್ನು ನಾಶಮಾಡಿ ಬರಿಗೈದನು. ಇಷ್ಠೇ ಅಲ್ಲ-.
ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ |
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ || ೧೦ ||
ಪದವಿಭಾಗ-ಅರ್ಥ: ಬಾಗಿಸಿದ ಬಿಲ್ಲಿನಲಿ ರಾಯರ ಮೂಗ ಕೊಯ್ದನು ಮದುವೆಯಲಿ; ನೀನು+ ಈಗಳು+ ಒದರುವೆ; ಕೌರವೇಂದ್ರನನು+ ಅಂದು ಬಿಡಿಸಿದೆಲ; ಆ ಗರುವ ಸೈಂಧವನ ಮುಡಿಯ ವಿಭಾಗಿಸಿದ (ತಲೆ ಬೋಳಿಸಿದ) ಭಟನು+ ಆರು? ಪಾರ್ಥನ ಲಾಗುವೇಗವನು+ ಆರು ಬಲ್ಲರು? ಕರ್ಣ ಕೇಳೆಂದ.
ಅರ್ಥ:ಅಂದು ದ್ರೌಪದಿಯ ಮದುವೆಯ ಸ್ವಯಂವರದಲ್ಲಿ ಸ್ಪರ್ಧೆಗಾಗಿ ಬಗ್ಗಿಸಿದ ಅದೇ ಬಿಲ್ಲಿನಲ್ಲಿ ವಿರೋಧಿಸಿದ ಎಲ್ಲ ರಾಜರನ್ನೂ ಸೋಲಿಸಿ ಮೂಗನ್ನು ಕೊಯ್ದನು (ಮಾನ ಕಳೆದನು); ನೀನು ಈಗ ಒದರುತ್ತಿರುವೆ ಆಗ ನಿನ್ನ ಶೌರ್ಯ ಎಲ್ಲಿ ಹೋಗಿತ್ತು?; ಕೌರವೇಂದ್ರನನ್ನು ಅಂದು ಗಂಧರ್ವನು ಕಾಮ್ಯಕ ವನದಲ್ಲಿ ಕಟ್ಟಿ ಸರೆಹಿಡಿದು ಹೊತ್ತುಕೊಂಡು ಹೋದಾಗ -(ನೀನು ಬಿಡಿಸಿದೆಲ?) ಪಾರ್ಥನೇ ಬಿಡಿಸಿದನು; ಕಾಡಿನಲ್ಲಿ ದ್ರೌಪದಿಯನ್ನು ಅಪಹರಿಸಿದಾಗ ಆ ಗರ್ವದ ಸೈಂಧವನನ್ನು ಹಿಡಿದು ತಲೆ ಬೋಳಿಸಿದ ವೀರ ಭಟನು ಯಾರು? ಪಾರ್ಥನ ಲಾಘವ,ವೇಗವು ಏನು ಎಂದು ಯಾರು ಬಲ್ಲರು? ಅದನ್ನು ಅಳೆಯಲು ಸಾದ್ಯವಿಲ್ಲ, ಕರ್ಣನೇ ಕೇಳು ಎಂದ ಕೃಪ.
ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ |
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ || ೧೧ ||
ಪದವಿಭಾಗ-ಅರ್ಥ: ಮರುಳ (ಮರುಳಾದ, ಮೋಹಕ್ಕೆ ಒಳಗಾದ) ಕಣ್ಣಿಗೆ ಕೊಡನ ತೋರದಲಿ (ದೊಡ್ಡದಾಗಿ, ತೋರ- ದೊಡ್ಡ )+ ಇರದೆ ಸಾಸವೆ ನಿಮ್ಮ ಕಣ್ಣಿಗೆ ನರನು ದೊಡ್ಡಿತು; ಉಳಿದ ವೀರರ ಕಣ್ಗೆ ತುಸು ಮಾತ್ರ ಮರುಳು ಹಾರುವ ಗದ್ಯಪದ್ಯದ ಸರಸ ವಿದ್ಯಗಳಲ್ಲದೆ+ ಈ ಸಂಗರದ ಕರ್ಕಶ ವಿದ್ಯೆ ನಿಮಗೇಕೆ+ ಏಂದನು+ ಆ ಕರ್ಣ.
ಅರ್ಥ:ವಯಸ್ಸಾದ ನಿಮ್ಮ ಮರುಳ ಕಣ್ಣಿಗೆ ಕೊಡದಷ್ಟು ತೋರದಲ್ಲಿ ಇರುದೆ, ಸಾಸವೆಕಾಳು ಕಾಣುತ್ತದೆ. ನಿಮ್ಮ ಕಣ್ಣಿಗೆ ಅರ್ಜುನನು ಬಹಳ ದೊಡ್ಡ ವೀರ; ಉಳಿದ ನಮ್ಮಂಥ ವೀರರಬಗ್ಗೆ ತಾತ್ಸಾರ;ನಮ್ಮ ವಿಷಯ ಬಂದಾಗ ಕಣ್ಣಿಗೆ ಸ್ವಲ್ಪ ಮರುಳು ಬಿದ್ದ ನೆವ ಮಾಡಿಕಾಣುವುದಿಲ್ಲ. "ನಿಮಗೆ ಬೇಡವಾದ ವಿಷಯ ಬಂದಾಗ ಕಣ್ಣಿಗೆ ಮರಳು ಹಾರುವ ಗದ್ಯಪದ್ಯದ ಸರಸ ವಿದ್ಯಗಳಲ್ಲದೆ" ನಿಮ್ಮ ಮಾತು? ಈ ಯುದ್ಧದ ಕರ್ಕಶ ವಿದ್ಯೆ ವಿಪ್ರರೂ ಮುದುಕರೂ (ಕೃಪ ದ್ರೋಣರಿಗೆ ಸುಮಾರು ೮೫ ವರ್ಷ ವಯಸ್ಸು- ಕರ್ಣನಿಗೆ ಸುಮಾರು ೭೦ ವರ್ಷ) ಆದ ನಿಮಗೇಕೆ? ಏಂದನು ಆ ಕರ್ಣ.
ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ |
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯವ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ || ೧೨ ||
ಪದವಿಭಾಗ-ಅರ್ಥ: ಹಣೆಗೆ ಮಟ್ಟಿಯ(ಗೋಪಿಚಂದನ) ಬಡಿದು ದರ್ಭೆಯ ಹಣಿದು ಬೆರಳಲಿ ಸೆಕ್ಕಿ ಧೋತ್ರದ ದಣಿಬವನು ನಿರಿವಿಡಿದು ಮಹಳದ(ಪಿತೃಪಕ್ಷದ) ಮನೆಯ ಚೌಕದಲಿ ಮಣೆಗೆ ಮಂಡಿಸಿ- ಕುಳ್ಳಿತು+ ಉಂಬ+ ಔತಣದ ವಿದ್ಯವ ಬಲ್ಲಿರಲ್ಲದೆ ರಣ ವಿಚಾರದ ವಿದ್ಯೆ ನಿಮಗೇಕೆ? ಎಂದನು+ ಆ ಕರ್ಣ
ಅರ್ಥ:ಕೃಪಾಚಾರ್ಯನನ್ನು ಕುರಿತು ಆ ಕರ್ಣನು ಅಷ್ಟೇ ವ್ಯಂಗವಾಗಿ,'ಹಣೆಗೆ ಗೋಪಿಚಂದನವನ್ನು ಬಡಿದುಕೊಂಡು ದರ್ಭೆಯ ಮಡಿಚಿ ಹೆಣಿದು (ಬಲಗೈ ಅನಾಮಿಕದಲ್ಲಿ ಧರಿಸುವ ಪವಿತ್ರವೆಂಬ ಮಡಿಚಿ ಹೆಣೆದ ೪ ಅಂಗುಲದ ಧರ್ಭೆಯ ಕುಡಿ), ಬೆರಳಲಿ ಸೆಕ್ಕಿಸಿಕೊಂಡು, ಧೋತ್ರವನ್ನು ಸೊಂಟಕ್ಕೆ ಕಟ್ಟಿ, ಉಳಿದ ಸೆರಗಿನ ದಣಿಬವನ್ನು ನಿರಿಗೆಮಾಡಿ ಸಿಕ್ಕಿಸಿಕೊಂಡು ಪಿತೃಪಕ್ಷದ ಶ್ರಾದ್ಧದ ಮನೆಯ ಸುತ್ತ ರಂಗೋಲಿ ಹಾಕಿದ ಚೌಕದಲ್ಲಿ ಮಣೆಗಯ ಮೇಲೆ ಕುಳಿತು ಉಣ್ಣುವ ಔತಣದ ವಿದ್ಯವನ್ನು ಚೆನ್ನಾಗಿ ಬಲ್ಲಿರಿ. ಅದಲ್ಲದೆ ರಣರಂಗದ ಯುದ್ಧದ ವಿಚಾರದ ವಿದ್ಯೆ ನಿಮಗೇಕೆ? ಎಂದನು.
ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು |
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ || ೧೩ ||
ಪದವಿಭಾಗ-ಅರ್ಥ: ಇಂದು ಪಿತೃದಿನವು+ ಇಂದು, ಸಂಕ್ರಮಣ+ ಇಂದು ಸೂರ್ಯಗ್ರಹಣ, ಹರಿದಿನವು+ ಇಂದು, ಯಜ್ಞ+ ಆರಂಭ ದಿನ ವಡ್ಡಂತಿ- ವರ್ಧಂತಿ-ಹುಟ್ಟುಹಬ್ಬ, ಲೇಸೆಂದು ಬಂದು, ನಾನಾ ಮುಖದ ದಾನಕೆ ತಂದ ವಸ್ತುವ ಬಾಚಿ ಹೊಳ್ಳಿಸಿ ತಿಂದು ಕೊಬ್ಬಿದ ನಿಮಗೆ ಸುಭಟರ ಮಾತು+ ಅದೇಕೆ+ ಎಂದ
ಅರ್ಥ:ಇಂದು ಪಿತೃದಿನವು, ಇಂದು ಸಂಕ್ರಮಣವು, ಇಂದು ಸೂರ್ಯಗ್ರಹಣ, ಇಂದು ಹರಿದಿನವು, ಯಜ್ಞದ ಆರಂಭ ದಿನವು, ಹುಟ್ಟುಹಬ್ಬ ಲೇಸು ಎಂದು ಬಂದು, ನಾನಾ ಮುಖದ- ತರಹೆಯ ದಾನಕೆ ತಂದ ವಸ್ತುವ ಬಾಚಿ, ಹೊಳ್ಳಿಸಿ ತಿಂದು, ಕೊಬ್ಬಿದ ನಿಮಗೆ ವೀರರ ಮಾತು ಅದೇಕೆ ಬೇಕು ಎಂದ ಕರ್ಣ.
ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ |
ಬಿಲ್ಲ ವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ || ೧೪ ||
ಪದವಿಭಾಗ-ಅರ್ಥ: ಬಲ್ಲಿರೈ ಕೌರವನ ಧನವನು ಹೊಳ್ಳಿಸಲು, ಮೃಷ್ಟಾನ್ನದಿಂದವೆ ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ, ಬಿಲ್ಲ ವಿದ್ಯಾ ವಿಷಯ ರಿಪುಭಟ ಮಲ್ಲರೊಡನೆಯ ಕದನವಿದು-ಶತ್ರುಭಟರಾದ ಶೂರರೊಡನೆ ಯುದ್ಧ. ಜಡರು+ ಎಲ್ಲರಿಗೆ ಸುಲಭವೆ ಜಪಾನುಷ್ಠಾನವು+ ಅಲ್ಲೆಂದ
ಅರ್ಥ:ಕರ್ಣನು ಮುಂದುವರಿದು, 'ನೀವು ಬಲ್ಲಿರಯ್ಯಾ, ಕೌರವನ ಧನವನ್ನು ಕರಗಿಸುವ ವಿದ್ಯೆಯನ್ನು; ರಾಜನು ನೀಡಿದ ಮೃಷ್ಟಾನ್ನವನ್ನು ಉಂಡು ಡೊಳ್ಳ (ಹೊಟ್ಟೆಯನನ್ನು) ಬೆಳಸಿಕೊಂಡು, ರಾಜಗುರುತನದ ಸ್ಥಾನವನ್ನು ಪಡೆದು ರಾಜನೊಂದಿಗೆ ಬೆರತಿರುವಿರಿ. ಈಗ ಇರುವುದು ಊಟವಲ್ಲ, ಬಿಲ್ಲ ವಿದ್ಯಾ ವಿಷಯ, ಶತ್ರುಭಟರಾದ ಶೂರರೊಡನೆ ಯುದ್ಧ. ಜಡರಾದ ಸೋಮಾರಿಗಳಾದ ಎಲ್ಲರಿಗೆ ಯುದ್ಧ ಸುಲಭವೆ? ಇದು ಕುಳಿತು ಮಾಡುವ ಜಪ ಅನುಷ್ಠಾನಗಳು ಅಲ್ಲ,' ಎಂದ.
ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗೆಗಳಲುಗಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ |
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ || ೧೫ ||
ಪದವಿಭಾಗ-ಅರ್ಥ: ಕೇಳಿದ+ ಅಶ್ವತ್ಥಾಮ ಕಿಡಿಗಳ ನಾಲಿಗೆಗಳಲಿ+ ಉಗಳಿದನು ಕೇಳೆಲೆ ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ ಕೀಳು ಜಾತಿಗೆ ತಕ್ಕ ನುಡಿಗಳು ಮೇಳವಿಸಿದವು ಕುಲವ ನಾಲಗೆ ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ.
 • ಕೇಳಿದ+ ಅಶ್ವತ್ಥಾಮ= ಕೃಪನ ತಂಗಿಯ ಮಗ ಅಶ್ವತ್ಥಾಮನು ವಯೋವೃದ್ದನಾದ ತನ್ನ ಮಾವನಿಗೆ ಅಪಮಾನ ಮಾಡುವ ನೆವದಲ್ಲಿ ಕೃಪನನ್ನೂ ವಿಪ್ರರನ್ನೂ ಅವಹೇಳನ ಮಾಡುವ ಕರ್ಣನ ಕುಹಕ ನುಡಿಗಳನ್ನು ಕೇಳಿ ಕೋಪೋದ್ರೇಕದಿಂದ, 'ಕಿಡಿಗಳ ನಾಲಿಗೆಗಳಲಿ'+ ಉಗಳಿದನು- ಬೆಂಕಿಯಂತೆ ಸುಡುವ ಮಾತುಗಳನ್ನು ಹೇಳಿದನು. 'ಕೇಳು+ ಎಲೆ ಖೂಳ ಸೂತನ ಮಗನೆ! ಸುಭಟಾಂಗದಲಿ- ಉತ್ತಮರಿರುವ ಈ ರಣರಂಗದಲ್ಲಿ ಖರೆಯನಲ- ಗಾದೆಯು ನಿಜ ವೆನ್ನವಂತೆ 'ಕೀಳು ಜಾತಿಗೆ ತಕ್ಕ ನುಡಿಗಳು ಮೇಳವಿಸಿದವು- ನಿನ್ನಬಾಯಿಂದ ಬಂದವು' 'ಕುಲವ ನಾಲಗೆ ಹೇಳಿತು' ಎಂಬುದು ತಪ್ಪದಾಯಿತು -ನಿನ್ನಿಂದ ಅದು ತಪ್ಪದೆ ನಿಜವಾಯಿತು, ಕರ್ಣನೇ ಕೇಳು,' ಎಂದ
ಅರ್ಥ:ಕೃಪನ ತಂಗಿಯ ಮಗ ಅಶ್ವತ್ಥಾಮನು ವಯೋವೃದ್ದನಾದ ತನ್ನ ಮಾವನಿಗೆ ಅಪಮಾನ ಮಾಡುವ ನೆವದಲ್ಲಿ ಕೃಪನನ್ನೂ ವಿಪ್ರರನ್ನಣ ಅವಹೇಳನ ಮಾಡುವ ಕರ್ಣನ ಕುಹಕ ನುಡಿಗಳನ್ನು ಕೇಳಿ ಕೋಪೋದ್ರೇಕದಿಂದ, 'ಕಿಡಿಗಳ ನಾಲಿಗೆಗಳಲಿ' ಬೆಂಕಿಯಂತೆ ಸುಡುವ ಮಾತುಗಳನ್ನು ಹೇಳಿದನು. 'ಕೇಳು ಎಲೆ ಖೂಳ ಸೂತನ ಮಗನೆ! ಉತ್ತಮರಿರುವ ಈ ರಣರಂಗದಲ್ಲಿ ಗಾದೆಯು ನಿಜ ವೆನ್ನವಂತೆ 'ಕೀಳು ಜಾತಿಗೆ ತಕ್ಕ ನುಡಿಗಳು ನಿನ್ನ ಬಾಯಿಂದ ಬಂದವು;' 'ಕುಲವನ್ನು ನಾಲಿಗೆ ಹೇಳಿತು' ಎಂಬ ಗಾದೆ ನಿನ್ನಿಂದ ತಪ್ಪದೆ ನಿಜವಾಯಿತು, ಕರ್ಣನೇ ಕೇಳು,' ಎಂದ.
ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ |
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗ್ರಹ ಯೋಗ್ಯವಲ್ಲೆಂದ || ೧೬ ||
ಪದವಿಭಾಗ-ಅರ್ಥ: ನಗುವೆ ವಿಪ್ರರನು+ ಆವ ರಾಯರ ಮಗನು ಹೇಳಾ, ದಾನ ಧರ್ಮಾದಿಗಳೊಳು+ ಅರ್ಧವನು+ ಆರು ಕೊಂಬರು ದ್ವಿಜರು ಹೊರಗಾಗಿ ಜಗವ ರಕ್ಷಿಸಲು ಆವು ಕೊಂಬೆವು ಮಗುಳೆ ಕೊಡುವೆವು ಕ್ಷತ್ರ ವೈಶ್ಯಾದಿಗಳು ಕೊಡುವರು; ತತ್ ಪ್ರತಿಗ್ರಹ ಯೋಗ್ಯವಲ್ಲೆಂದ.
 • ಅಶ್ವತ್ಥಾಮನು ಕರ್ಣನ್ನು ಕುರಿತು, 'ನಗುವೆ ವಿಪ್ರರನು+ ಆವ ರಾಯರ ಮಗನು ಹೇಳಾ= ವಿಪ್ರರನ್ನು - ಬ್ರಾಹ್ಮಣರನ್ನು ನೋಡಿ ಅಪಹಾಸ್ಯಮಾಡಿ ನಗುವೆಯಲ್ಲಾ! ನೀನು ಯಾವ ಕ್ಷತ್ರಿಯ ರಾಜನ ಮಗನಯ್ಯಾ?// ದಾನ ಧರ್ಮಾದಿಗಳೊಳು+ ಅರ್ಧವನು+ ಆರು ಕೊಂಬರು ದ್ವಿಜರು ಹೊರಗಾಗಿ= ಕ್ಷತ್ರಿಯರು ವೈಶ್ಯರು ಮಾಡುವ ದಾನ ಧರ್ಮಾದಿಗಳನ್ನು ಬ್ರಾಹ್ಮಣರಲ್ಲದೆ ಬೇರೆ ಯಾರು ತೆಗೆದುಳ್ಳುತ್ತಾರೆ? ಜಗವ ರಕ್ಷಿಸಲು ಆವು ಕೊಂಬೆವು= ಜಗತ್ತಿನ ಮತ್ತು ದಾನಿಗಳ ಕ್ಷೇಮಕ್ಕಾಗಿ ದಾನವನ್ನು ಪಡೆಯುತ್ತೇವೆ. ಮಗುಳೆ ಕೊಡುವೆವು= ಅದನ್ನು ಪುನಹ ಜಪ ತಪಾದಿಗಳ ಮೂಲಕ ದಾನಿಗಳಿಗೆ ಸುಖ ಸಂಪತ್ತನ್ನು ಹಾರೈಸುವೆವು, ಹಾಗೆ ಹಿಂತಿರುಗಿಸುವೆವು- ಕೊಡುವೆವು. ಕ್ಷತ್ರ ವೈಶ್ಯಾದಿಗಳು ಕೊಡುವರು; ತತ್ ಪ್ರತಿಗ್ರಹ ಯೋಗ್ಯವಲ್ಲೆಂದ= ಅದರೆ ಧಾರ್ಮಿಕ ಕಾರ್ಯದಲ್ಲಿ ಕ್ಷತ್ರಿಯರು ಮತ್ತು ವೈಶ್ಯಾದಿಗಳು ದಾನಗಳನ್ನು ಪಡೆಯಲು ಯೋಗ್ಯರಲ್ಲ, ಎಂದ.
ಅರ್ಥ:ಅಶ್ವತ್ಥಾಮನು ಕರ್ಣನ್ನು ಕುರಿತು, ಬ್ರಾಹ್ಮಣರನ್ನು ನೋಡಿ ಅಪಹಾಸ್ಯಮಾಡಿ ನಗುವೆಯಲ್ಲಾ! ನೀನು ಯಾವ ಕ್ಷತ್ರಿಯ ರಾಜನ ಮಗನಯ್ಯಾ? ಕ್ಷತ್ರಿಯರು ವೈಶ್ಯರು ಮಾಡುವ ದಾನ ಧರ್ಮಾದಿಗಳನ್ನು ಬ್ರಾಹ್ಮಣರಲ್ಲದೆ ಬೇರೆ ಯಾರು ತೆಗೆದುಳ್ಳುತ್ತಾರೆ? ಜಗತ್ತಿನ ಮತ್ತು ದಾನಿಗಳ ಕ್ಷೇಮಕ್ಕಾಗಿ ಯಜ್ಞಯಾಗಾದಿಗಳನ್ನೂ ಮಾಡಿಸಿ ದಾನವನ್ನು ಪಡೆಯುತ್ತೇವೆ. ಅದನ್ನು ಪುನಹ ಜಪ ತಪಾದಿಗಳ ವೇದಘೋಷಿತ ಆಶೀರ್ವಾದದ ಮೂಲಕ ದಾನಿಗಳಿಗೆ ಸುಖ ಸಂಪತ್ತನ್ನು ಹಾರೈಸುವೆವು, ಹಾಗೆ ಹಿಂತಿರುಗಿಸಿ ಕೊಡುವೆವು. ಕ್ಷತ್ರ ವೈಶ್ಯಾದಿಗಳು ಕೊಡುವರು; ಅದರೆ ಧಾರ್ಮಿಕ ಕಾರ್ಯದಲ್ಲಿ ಕ್ಷತ್ರಿಯರು ಮತ್ತು ವೈಶ್ಯಾದಿಗಳು ದಾನಗಳನ್ನು ಪಡೆಯಲು ಅರ್ಹರಲ್ಲ, ಆದ್ದರಿಂದ ಅವರು ದಾನ ಪಡೆಯುವುದು ಯೋಗ್ಯವಲ್ಲ, ಎಂದ.
ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬವನೊ ಕೊಡುವವನೊ |
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನವ ಭವವ ನೆನೆಯೆಂದ || ೧೭ ||
ಪದವಿಭಾಗ-ಅರ್ಥ: ಉಳಿದ ವರ್ಣತ್ರಯಕೆ ಬೆಸಕೈವ+ ಅಳತೆಯಲಿ ಶೂದ್ರನು ಕೃತಾರ್ಥನು, ತಿಳಿಯೆ ನೀನಾರು+ ಇದರೊಳಗೆ ಕೊಂಬವನೊ ಕೊಡುವವನೊ? ಕುಲವಿಹೀನನ ತಂದು ಕೌರವ ತಿಲಕ ಪತಿಕರಿಸಿದೊಡೆ- ಅಂಗೀಕರಿಸು. - ಆದರಿಸು. ನಾಲಗೆಯು+ ಉಲಿಯಲಾಯಿತು ಕರ್ಣ ನಿನ್ನವ ಭವವ ನೆನೆ+ ಯೆ+ ಎಂದ.
 • ಉಳಿದ ವರ್ಣತ್ರಯಕೆ ಬೆಸಕೈವ+ ಅಳತೆಯಲಿ ಶೂದ್ರನು ಕೃತಾರ್ಥನು= ಶೂದ್ರನು ಸೇವೆ ಮಾಡಿ ಕೃತಾರ್ಥನಾಗುತ್ತಾನೆ., ತಿಳಿಯೆ ನೀನಾರು+ ಇದರೊಳಗೆ ಕೊಂಬವನೊ ಕೊಡುವವನೊ? ಕುಲವಿಹೀನನ ತಂದು ಕೌರವ ತಿಲಕ ಪತಿಕರಿಸಿದೊಡೆ- ಅಂಗೀಕರಿಸದರೆ - ಆದರಿಸಿದರೆ, ನಾಲಗೆಯು+ ಉಲಿಯಲಾಯಿತು= ಕೌರವ ಶ್ರೇಷ್ಟನು ಕುಲವಿಹೀನನ್ನು ತಂದು ಅಂಗೀಕರಿಸಿ - ಆದರಿಸಿದರೆ ಅದಕ್ಕೆ ಪ್ರತಿಯಾಗಿ ನಿನ್ನ ನಾಲಗೆಯು ಕುಲವನ್ನು ಉಲಿಯಲಾಯಿತು- ಹೇಳಿತು; ಕರ್ಣ ನಿನ್ನ+ ಅವಭವವ- ಕೆಟ್ಟ ಪಾಪ, ದುಃಖ, ಕಷ್ಟಗಳನ್ನು ನೆನೆ+ ಯ+ ಎಂದ.
ಅರ್ಥ:'ಶೂದ್ರನು ಸೇವೆ ಮಾಡಿ ಕೃತಾರ್ಥನಾಗುತ್ತಾನೆ. ಇದರೊಳಗೆ ನೀನು ಕೊಂಬವನೊ ಕೊಡುವವನೊ ತಿಳಿಯೆ ನೀನಾರು? ಕೌರವ ಶ್ರೇಷ್ಟನು ಕುಲವಿಹೀನನ್ನು ತಂದು ಅಂಗೀಕರಿಸಿ - ಆದರಿಸಿದರೆ ಅದಕ್ಕೆ ಪ್ರತಿಯಾಗಿ ನಿನ್ನ ನಾಲಗೆಯು ಕುಲವನ್ನು ಹೇಳಿತು; ಕರ್ಣ ನಿನ್ನ ಕೆಟ್ಟ ಪಾಪ, ದುಃಖ, ಕಷ್ಟಗಳನ್ನು ನೆನೆ,' ಎಂದ ಅಶ್ವತ್ಥಾಮ.
ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ೧೮
ಪದವಿಭಾಗ-ಅರ್ಥ: ಪರರು ಪತಿಕರಿಸಿದೊಡೆ ಲಜ್ಜೆಗೆ ಶಿರವ ನಸುಬಾಗುವರು, ಗರುವರು ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ ಗರುವ ಮಾನ್ಯರು ಮೆಚ್ಚುವರೆ, ಸಸಿನಿರು (ಸುಮ್ಮನಿರು, ಬಾಯಿಮುಚ್ಚು), ಮಹಾತ್ಮರು ನಿನ್ನೊಡನೆ ಉತ್ತರವ ಕೊಡುವರೆ, ಗಳಹತನ (ಅಸಂಬದ್ಧವಾಗಿ ಮಾತನಾಡುವುದು.) ನಮ್ಮೊಡನೆ ಬೇಡೆಂದ.
ಅರ್ಥ:ಬೇರೆಯವರು ತಮಗೆ ಗೌರವವನ್ನು ತೋರಿಸಿ ಹೊಗಳಿದರೆ ಗೌರವವುಳ್ಳ ಮಾನ್ಯರು ಲಜ್ಜೆಯಿಂದ ಶಿರವನ್ನು ನಸುಬಾಗುವರು. ಗರ್ವವುಳ್ಳವರು ಹಾಗಲ್ಲ! ದುರುಳನು (ದುಷ್ಟನು) ನೀನು ಅಹಂಕಾರದಿಂದ ನಿನ್ನನ್ನೇ ನೀನು ಹೊಗಳಿಕೊಂಡರೆ, ಆ ಗರ್ವವನ್ನು ಮಾನ್ಯರು ಮೆಚ್ಚುವರೆ? ಬಾಯಿಮುಚ್ಚು! ಮಹಾತ್ಮರು ಅಹಂಕಾರಿಯಾದ ನಿನಗೆ ಉತ್ತರವ ಕೊಡುವರೆ? ನಮ್ಮೊಡನೆ ಅಸಂಬದ್ಧವಾಗಿ ಮಾತನಾಡುವುದು ಬೇಡ, ಎಂದ ಅಶ್ವತ್ಥಾಮ.
ತೆಗೆದು ತಾಳಿಗೆ ಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ |
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ || ೧೯ ||
ಪದವಿಭಾಗ-ಅರ್ಥ: ತೆಗೆದು ತಾಳಿಗೆ ಗಡಿತನಕ (ಗಂಟಲು ತನಕ) ನಾಲಗೆಯ ಕೀಳ್ವೆನು, ಮುನಿದು ತನ್ನೋಲಗವ ತೆಗೆಸಲಿ ಕೌರವನು ನಿನಗೆ+ ಒಲಿದು ಪತಿಕರಿಸಿ- ಗೌರವಿಸಿ, ಅಗಣಿತದ ಗರುವರನು ನಿಂದಿಸಿ ನಗುವೆ, ನಿನ್ನನು ಕೊಲುವೆನೆಂದು ಆಳುಗಳು ದೇವನು (ಗಣಗಳ ದೇವನು - ರುದ್ರಾಂಶನಾದವನು) ಸೆಳೆದನು+ ಅಶ್ವತ್ಥಾಮ ಖಂಡೆಯವ.
 • ಅಗಣಿತದ ಗರುವರನು - ಅಳತೆಗೆ ಮೀರಿದ ಬಹಳ ಗೌರವಾನ್ವಿತನು ಮತ್ತು ವಯೋವೃದ್ಧನು: ಕೃಪನು ವೇದ ಶಾಸ್ತ್ರಗಳಲ್ಲಿ ಹಾಗೂ ಯುದ್ಧವಿದ್ಯೆಯಲ್ಲಿ ಪರಿಣತನು. ಕೌರವ ಪಾಂಡವರರಿಗೆ ಮತ್ತು ಇತರ ರಾಜಕುಮಾರರಿಗೆ ವೇದ- ಶಾಸ್ತ್ರಗಳನ್ನೂ ಪ್ರಾಥಮಿಕ ಯುದ್ಧವಿದ್ಯೆಯನ್ನೂ ಕಲಿಸಿದ ಗುರುವು. ಕೌರವ ಪಾಂಡವರೂ, ಇತರ ರಾಜರೂ ಕೃಪ ದ್ರೋಣರನ್ನು ಗುರು ಸ್ಥಾನದಲ್ಲಿ ಬಹಳ ಗೌರವದಿಂದ ಕಾಣುವರು.
ಅರ್ಥ:ಅಶ್ವತ್ಥಾಮನು ಉಗ್ರಕೋಪದಿಂದ, 'ನಿನ್ನನ್ನು ತೆಗೆದು, ಗಂಟಲು ತನಕ ನಿನ್ನ ನಾಲಗೆಯನ್ನು ಬುಡಸಹಿತ ಕಿತ್ತುಹಾಕುತ್ತೇನೆ. ಕೌರವನು ಬೇಕಾದರೆ ನನ್ನ ಮೇಲಿನ ಸಿಟ್ಟಿನಿಂದ ನಿನ್ನ ಮೇಲಿನ ಪ್ರೀತಿ ಗೌರವದಿಂದ ತನ್ನ ರಾಜಸಭೆಯನ್ನು ಸೇರಿಸಿ ಚರ್ಚಿಸಲಿ. ಅಗಣಿತರಾದ ಅತಿ ಗೌರವಾನ್ವಿತರನ್ನು ನಿಂದಿಸಿ ನಗುವೆಯಲ್ಲವೇ?, ನಿನ್ನನು ಸುಮ್ಮನೆ ಬಿದುವುದಿಲ್ಲ, ಕೊಂದುಹಾಕುತ್ತೇನೆ, ಎಂದು ರುದ್ರಾಂಶನಾದ ಅಶ್ವತ್ಥಾಮನು ಖಡ್ಗವನ್ನು ಒರೆಯಿಂದ ಸೆಳೆದನು.

ಕೌರವನ ಸಮಾಧಾನದ ಮಾತುಗಳು - ಸಂಧಿಗೆ ಭೀಷ್ಮರ ಹಿತವಚನ[ಸಂಪಾದಿಸಿ]

ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗೆದನುಚಿತೋಕ್ತಿಯಲಿ ಸಂತೈಸಿ |
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ || ೨೦ ||
ಪದವಿಭಾಗ-ಅರ್ಥ: ಆಳು ಮತ್ಸರದ+ ಅಧಿಕ ರೋಷದ ಮೇಲುನುಡಿಯು ಅಂಕುರಿಸೆ, ಕುರು ಭೂಪಾಲನು+ ಇಬ್ಬರ ತೆಗೆದನು+ ಉಚಿತ+ ಉಕ್ತಿಯಲಿ ಸಂತೈಸಿ ಕಾಳಗಕೆ ತನ್ನವನೊಡನೆ ನಿಮ್ಮಾಳುತನವನು ತೋರಿ+ ಯ+ ಒಳಗೊಳಗೆ+ ಆಳು ವಾಸಿಯ ತೋಟಿ ಬೇಡೆಂದು+ ಅರಸ ಮಾಣಿಸಿದ.
 • ಆಳು (ವೈಯುಕ್ತಿಕ) ಮತ್ಸರದ (ಹೊಟ್ಟೆಕಿಚ್ಚಿನ)+ ಅಧಿಕ ರೋಷದ ಮೇಲುನುಡಿಯು= ಮಿತಿಮೀರಿದ ಮಾತುಗಳು, ಅಂಕುರಿಸೆ= ಹುಟ್ಟಲು ಬಾಯಿಂದ ಬರಲು, ಕುರು ಭೂಪಾಲನು- ಕೌರವನು+ ಇಬ್ಬರ ತೆಗೆದನು- ಇಬ್ಬರನ್ನೂ ಬೇರ್ಪಡಿಸಿದನು,+ ಉಚಿತ+ ಉಕ್ತಿಯಲಿ ಸಂತೈಸಿ= ಉಚಿತವಾದ ಮಾತುಗಳಿಂದ ಅವರನ್ನು ಸಮಾಧಾನ ಪಡಿಸಿ, ಕಾಳಗಕೆ ತನ್ನವನೊಡನೆ ನಿಮ್ಮಾಳುತನವನು= ಶೌರ್ಯವನ್ನು, ತೋರಿ+ ಯ+ ಒಳಗೊಳಗೆ+ ಆಳು ವಾಸಿಯ- ವೈಯುಕ್ತಿಕ, ತೋಟಿ ಬೇಡೆಂದು= ನಮ್ಮ ನಮ್ಮೊಳಗೆ ಪರಾಕ್ರಮದ ಸ್ಪರ್ಧೆಯು ಬೇಡ ಎಂದು ಹೇಳಿ,+ ಅರಸ ಮಾಣಿಸಿದ= ಅವರನ್ನು ಅರಸನು ತಡೆದನು, ಸುಮ್ಮನಿರಿಸಿದನು.
ಅರ್ಥ:ವೈಯುಕ್ತಿಕ ಮತ್ಸರದ ಅಧಿಕ ರೋಷದ ಮಿತಿಮೀರಿದ ಮಾತುಗಳು ಕರ್ಣ ಮತ್ತು ಅಶ್ವತ್ಥಾಮರಲ್ಲಿ ತಲೆದೋರಲು ಕೌರವನು ಅವರಿಬ್ಬರನ್ನೂ ಬೇರ್ಪಡಿಸಿದನು. ಉಚಿತವಾದ ಮಾತುಗಳಿಂದ ಅವರನ್ನು ಸಮಾಧಾನ ಪಡಿಸಿ, ನಿಮ್ಮ ಶೌರ್ಯವನ್ನು ಯುದ್ಧದಲ್ಲಿ ತೋರಿರಿ. ನಮ್ಮ ನಮ್ಮೊಳಗೆ ವೈಯುಕ್ತಿಕ ಪರಾಕ್ರಮದ ಸ್ಪರ್ಧೆಯು ಬೇಡ ಎಂದು ಹೇಳಿ, ಅವರನ್ನು ಅರಸನು ತಡೆದು ಸುಮ್ಮನಿರಿಸಿದನು.
ಬಂದು ಭೀಷ್ಮಂಗೆರಗಿ ಕೈಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ |
ಸಂದುದಿಲ್ಲಜ್ಞಾತವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ || ೨೧ ||
ಪದವಿಭಾಗ-ಅರ್ಥ: ಬಂದು ಭೀಷ್ಮಂಗೆ+ ಎರಗಿ ಕೈಮುಗಿದು+ ಎಂದನು+ ಈತನು ಪಾರ್ಥನಾದೊಡೆ ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ ಸಂದುದಿಲ್ಲ+ ಅಜ್ಞಾತವಾಸಕೆ ಮುಂದೆ ದಿನವುಂಟು+ ಎನ್ನ ಲೆಕ್ಕಕ್ಕೆ+ ಎಂದು ಕುರುಪತಿ ನುಡಿಯೆ, ನಗುತ+ ಇಂತೆಂದನು+ ಆ ಭೀಷ್ಮ.
ಅರ್ಥ:ದುರ್ಯೋಧನನು ಬಂದು ಭೀಷ್ಮನಿಗೆ ನಮಿಸಿ ಕೈಮುಗಿದು, ಹೇಳಿದನು,'ನಮ್ಮೊಡನೆ ಯುದ್ಧಕ್ಕೆ ಬಂದ ಈತನು ಪಾರ್ಥನಾಗಿದ್ದರೆ ಹಿಂದಿನ ನಿಯಮದಂತೆ ಇರಲು, ಪುನಃ ಹದಿಮೂರು ವರ್ಷ ಕಾಡಿನಲ್ಲಿ ಪಾಡವರು ನವೆಯಬೇಕು (ಕಷ್ಟಪಡಬೇಕು), ಏಕೆಂದರೆ ಇನ್ನೂ ಹದಿಮೂರು ವರುಷ ಸಂದಿಲ್ಲ; ಅಜ್ಞಾತವಾಸ ಮಗಿಯಲು ನನ್ನ ಲೆಕ್ಕದಂತೆ ಇನ್ನೂ ಕಲವು ಮುಂದೆ ದಿನವುಂಟು, ಎಂದು ಕುರುಪತಿ ಕೌರವನು ಹೇಳಲು, ಆ ಭೀಷ್ಮನಗುತ್ತಾ ಹೀಗೆಂದನು.-
ಮಗನೆ ಕೇಳಿರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ |
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ || ೨೨ ||
ಪದವಿಭಾಗ-ಅರ್ಥ: ಮಗನೆ ಕೇಳು+ ಈರೈದು(ಎರಡು+ ಐದು= ಹತ್ತು) ವರುಷಕೆ ಮಿಗುವವು+ ಎರಡೇ ಮಾಸ ಮಾಸಾದಿಗಳನು+ ಅವರು+ ಅನುಭವಿಸಿದರು. ಹದಿಮೂರು ವತ್ಸರವ ಮಿಗುವ+ ಅವಧಿ ಬುಧುರು(ಪಂಡಿತರು)+ ಅರಿಯೆ, ನಿನ್ನಿನ ಹಗಲು ನಿನ್ನದು, ಪಾಂಡುತನಯರು ಹೊಗುವಡೆ (ಹೊಕ್ಕು ಯುದ್ಧಕ್ಕೆ ಬಂದರೆ)+ ಇಂದಿನ ದಿವಸವು+ ಅವರದು ಕಂದ ಕೇಳೆಂದ.
ಅರ್ಥ:ಭೀಷ್ಮನು ಕೌರವನನ್ನು ಕುರಿತು, 'ಮಗನೆ ಕೇಳು ಹತ್ತು ವರುಷಕ್ಕೆ ಮಿಗುವವು- ಹೆಚ್ಚುವುವು, ಎರಡೇ ಅಧಿಕಮಾಸ. ಹನ್ನರಡು ವರಷಕ್ಕೆ ಸರಿಯಾಗಿ ಅದಿಕ ಮಾಸಗಳನ್ನೂ ಸೇರಿಸಿ ಒಂದು ವರ್ಷದ ಅಜ್ಞಾತ ಸೇರಿ ಅವರು ಅನುಭವಿಸಿದರು. ಹದಿಮೂರು ವರ್ಷದ ಅವದಿ ಮಿಕ್ಕಿದ ಅವಧಿಯು ಪಂಡಿತರು ತಿಳಿದಂತೆ ಮುಗಿಯಿತು. ನಿನ್ನಿನ ಹಗಲು ನಿನ್ನದು. ಅದು ಕಳೆದ ಮೇಲೆ ಪಾಂಡವರದು. ಪಾಂಡುತನಯರು ಹೊಕ್ಕು ಯುದ್ಧಕ್ಕೆ ಬಂದರೆ ಇಂದಿನ ದಿವಸ ಅವರದು ಕಂದ ಕೌರವನೇ ಕೇಳು, ಎಂದ.
ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ೨೩
ಪದವಿಭಾಗ-ಅರ್ಥ: ಜಲಧಿ ಮೇರೆಯನು+ ಒದೆದು ಹಾಯಲಿ, ನೆಲನನು+ ಇಳುಹಲಿ ದಿಗಿಭವಿನ ಮಂಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು ಅಳುಪಲು+ ಅರಿವನೆ ಸತ್ಯಭಾಷೆಗೆ ಕಲಿ ಯುಧಿಷ್ಠಿರ, ನೃಪತಿಯು+ ಅನ್ವಯ ತಿಲಕನಲ್ಲಾ ಕಂದ ಕೌರವ, (ಯ)ಎಂದನು+ ಆ ಭೀಷ್ಮ
ಅರ್ಥ:ಜಲಧಿ- ಸಮುದ್ರವು, ಮೇರೆಯನು+ ಒದೆದು ಹಾಯಲಿ= ತನ್ನ ಮೇರೆಯನ್ನು ದಾಟಿ ಹರಿದು ಬರಲಿ,, ನೆಲನನು+ ಇಳುಹಲಿ ದಿಗಿಭವಿನ ಮಂಡಲಕೆ= ನೆಲವು - ಭೂಮಿಯು ಆಕಾಶದ ಅಂಚಿಗೆ ಹೋಗಲಿ, ಕಾಳಿಕೆಯು ಹೆಜ್ಜೆ ಇಡಲಿ; ಕುಲಾದ್ರಿಗಳಾದ ಆ ದೊಡ್ಡ ಬೆಟ್ಟಗಳು ನಡೆದಾಡಲಿ,!ಕಲಿ- ಸತ್ಯವಾದಿ ಯುಧಿಷ್ಠಿರನು ತನ್ನ ಸತ್ಯಭಾಷೆಗೆ ತಪ್ಪುವನೇ? ಅದನ್ನು ಪಾಲಿಸದೆ ಅಳುಕಿ ಹಿಂಜರಿಯಲು ಅರಿವನೆ- ಯೋಚಿಸುವನೇ? ಇಲ್ಲ! ಯುಧಿಷ್ಠಿರ ನೃಪತಿಯು ಅನ್ವಯ ತಿಲಕನಲ್ಲಾ! ನುಡಿದಂತೆ ನೆಡೆಯುವ ಶ್ರೇಷ್ಠನಲ್ಲವೇ! ಕಂದ ಕೌರವ, ಎಂದನು ಆ ಭೀಷ್ಮ.
ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವಡೆ
ಬೇಕು ಬೇಡೆಂಬುವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ೨೪
ಪದವಿಭಾಗ-ಅರ್ಥ: ಸಾಕು+ ಅದಂತಿರಲಿ+ ಇನ್ನು ಕಾಳಗ ನೂಕಲು+ ಅರಿಯದು; ಪಾರ್ಥ ಕೊಲುವಡೆ ಬೇಕು ಬೇಡ+ ಎಂಬುವರ ಕಾಣೆನು; ಹಲವು ಮಾತೇನು ಆ ಕುಮಾರರ ಕರೆಸಿ ಸಂಧಿಯನು+ ಆಕೆವಾಳರ ಮುಂದೆ ಮಾಡಲು ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ'
ಅರ್ಥ:ದುರ್ಯೋಧನನೇ, ಸಾಕು ಅದೆಲ್ಲಾ ಹಾಗಿರಲಿ, ಇನ್ನು ಯುದ್ಧವನ್ನು ಮುಂದರಿಸಲು ಕಾರಣವು ತಿಳಿಯೆದು, ಯುದ್ಧಮಾಡುವುದರಲ್ಲಿ ಅರ್ಥವಿಲ್ಲ! ಪಾರ್ಥನು ಸಾಮರ್ಥ್ಯದಿಂದ ಯುದ್ಧದಲ್ಲಿ ಕೊಲ್ಲಲ್ಲು ಆರಂಬಿಸಿದರೆ, ಬೇಕು ಬೇಡ ಎನ್ನುವವರನ್ನು ನಾನು ಕಾಣೆನು; ಅವನನ್ನು ತಡೆಯಲು ಸಾಧ್ಯವಿಲ್ಲ. ಹೆಚ್ಚು ಮಾತುಗಳು ಏಕೆ? ಆ ಪಾಂಡು ಕುಮಾರರನ್ನು ಕರೆಸಿ ಸಂಧಿಯನ್ನು ಹಿರಿಯರ ಮುಂದೆ ನೀನು ಮಾಡಿದಲ್ಲಿ, ಕೇಳಯ್ಯಾ, ಲೋಕದಲ್ಲಿ ನಿನಗೆ ಸರಿ ಸಮಾನರು ಇಲ್ಲ,' ಎಂದ, ಭೀಷ್ಮ.

ಕೌರವನ ಯುದ್ಧ ನಿಶ್ಚಯ[ಸಂಪಾದಿಸಿ]

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ |
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ || ೨೫ ||
ಪದವಿಭಾಗ-ಅರ್ಥ: ಕಂಡುದು+ ಅಳವಿ(ಶಕ್ತಿ - ಪರಾಕ್ರಮ) ವಿರೋಧಿಗೆ+ ಎಮಗೆಯು, ಕೊಂಡುದೇ ಬಲುಗೈದು(ಬಲು+ ಕೈದು (ಕೈದು- ಶಸ್ತ್ರ) ಮನ ಮುಂಕೊಂಡು- ಮುಂದಾಲೋಚಿಸಿ, ಹೊಕ್ಕುದು ಕಳನ (ರಣರಂಗ),+ ಅದಲ್ಲದೆ ಪಾಂಡು ಸುತರೊಡನೆ ಉಂಡು ಮೇಣು+ ಉಟ್ಟು+ ಒಲಿದು ಬದುಕುವ ಭಂಡತನವು+ ಎನಗಿಲ್ಲ, ವೈರವಕೊಂಡು ಎಸಗಬೇಕೆಂದು ಬಿನ್ನವಿಸಿದನು ಕುರುರಾಯ.
ಅರ್ಥ: ಕೌರವನು, ನಮಗೂ ವಿರೋಧಿ ಪಾಂಡವರಿಗೂ ಇರುವ ಶಕ್ತಿಯನ್ನು ಈಗ ಕಂಡಾಯಿತು. ಬಲುಹಿನಿಂದ- ಬಲದಿಂದ ಶಸ್ತ್ರವನ್ನು ಹಿಡಿದಾಯಿತಲ್ಲವೇ?. ನಮ್ಮ ಮನಸ್ಸು ಮುಂದಾಲೋಚಿಸಿ ರಣರಂಗವನ್ನು ಹೊಕ್ಕಿದೆ. ಅದಲ್ಲದೆ ಪಾಂಡುಸುತರೊಡನೆ ಉಂಡು, ಉಟ್ಟು, ಒಲಿದು ಸಂತೋಷದಿಮದ ಬಾಳುವ ಭಂಡತನವು ನನಗೆ ಇಷ್ಟವಿಲ್ಲ. ವೈರವನ್ನೇ ಸಾದಿಸಿಕೊಂಡು ಯುದ್ಧವನ್ನು ಮಾಡಬೇಕೆಂದು ಭೀಷ್ಮನಿಗೆ ಬಿನ್ನವಿಸಿದನು.
ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ |
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭುಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ || ೨೬ ||
ಪದವಿಭಾಗ-ಅರ್ಥ: ಮೇಲೆ ನೆಗಳುವ- ಬೆಳವಣಿಗೆಯಾಗುವ ಹದನನು- ವಿಚಾರವನ್ನು + ಇಲ್ಲಿಂ ಮೇಲೆ(ಮುಂದಿನ) ನೀನೇ ಬಲ್ಲೆ+ ಯ+ ಎನುತ ವಿಶಾಲಮತಿ ಬಿಸುಸುಯ್ದು, ಕೌರವ ಕೆಟ್ಟನಕಟ ಎನುತ ಕಾಳಗವ ನಾವು+ ಆನುವೆವು -ಹೊರುವೆವು- ವಹಿಸಿಕೊಳ್ಳುವೆವು, ಪಶುಜಾಲ ಸಹಿತ+ ಇಭುಪುರಿಗೆ ನೀ ಕಿರಿದು ಆಳೊಡನೆ ನಡೆಯೆಂದು ಸೇನೆಯನು+ ಎರಡ ಮಾಡಿಸಿದ
ಅರ್ಥ: ದುರ್ಯೋದನನಿಗೆ, 'ಇದರಮೇಲೆ ಮುಂದೆ ನೆಡೆಯುವ ಘಟನೆಗಳನ್ನು ನೀನೇ ಬಲ್ಲೆ, ಎಂದು ವಿಶಾಲ ಮತನಸ್ಸಿನ ಭೀಷ್ಮನು ನಿಟ್ಟಸುರುಬಿಟ್ಟು, ಕೌರವನು ಕೆಟ್ಟನು ಅಕಟ! ಎನ್ನುತ್ತಾ, ಅವನಿಗೆ ಯುದ್ಧವನ್ನು ನಾವು ಮಾಡುವೆವು; ಗೋವುಗಳ ಸಹಿತ ನೀನು ಹಸ್ತಿನಾಪುರಿಗೆ ಸಣ್ಣ ಸೈನ್ಯದೊಡನೆ ನಡೆಯೆಂದು ಹೇಳಿ ,ಸೇನೆಯನ್ನು ಎರಡು ವಿಭಾಗ ಮಾಡಿಸಿದನು ಭೀಷ್ಮ.
ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ |
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ || ೨೭ ||
ಪದವಿಭಾಗ-ಅರ್ಥ: ಕೌರವೇಂದ್ರನ ಕೂಡೆ ಸೇನಾಭಾರವನು ಪರುಠವಿಸಿ (- ಅಣಿಗೊಳಿಸು; ) ಕಳುಹಿದನು+ ಆರುಭಟೆಯಲಿ ಭೀಷ್ಮ ನಿಂದನು ಥಟ್ಟ- ಸೇನೆಯ, ಮೇಳೈಸಿ ವೀರ ಕರ್ಣ ದ್ರೋಣ ಗೌತಮ ಭೂರಿಬಲ ಗುರುಸೂನು ಶಕುನಿ ಮಹಾರಥಾದಿಯ ಕೂಡಿಕೊಂಡನು ನರನ- (ಅರ್ಜುನನೊಡನೆ) ಸಂಗರಕೆ- ಯುದ್ಧಕ್ಕೆ.
ಅರ್ಥ:ಭೀಷ್ಮನು ಕೌರವೇಂದ್ರನ ಜೊತೆ ಸ್ವಲ್ಪ ಸೇನೆಯನ್ನು ಅಣಿಗೊಳಿಸಿ ಗೋವುಗಳ ಜೊತೆ ಹಸ್ತಿನಾವತಿಗೆ ಹೋಗೆಂದು ಕಳುಹಿದನು. ನಂತರ ಆರ್ಭಟೆಯಿಂದ ಸೇನೆಯನ್ನು ಒಟ್ಟುಗೂಡಿಸಿಕೊಂಡು, ವೀರ ಕರ್ಣ, ದ್ರೋಣ, ಗೌತಮ,ಭೂರಿಬಲ, ಗುರುಸೂನು- ಅಶ್ವತ್ಥಾಮ, ಶಕುನಿ, ಮಹಾರಥರ ಆದಿಯನ್ನು ಕೂಡಿಕೊಂಡನು ನರನೊಡನೆ ಯುದ್ಧಕ್ಕೆ ಸಿದ್ಧನಾಗಿ ಭೀಷ್ಮನು ನಿಂತನು.
ಇತ್ತಲಖಿಲ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ |
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ || ೨೮ ||
ಪದವಿಭಾಗ-ಅರ್ಥ: ಇತ್ತಲು+ ಅಖಿಲ ಮಹಾರಥ+ ಆದಿಯನು+ ಒತ್ತಲಿಕ್ಕಿ (ಒಟ್ಟಾಗಿ ಸೇರಿಸಿ), ಸುಯೋಧನನು ಪುರದತ್ತ ಗೋಕುಲ ಸಹಿತ ಹಾಯ್ದನು, ಪೂತು ಮಝರೆನುತ ಮುತ್ತಯನು ಮಾಡಿದ ನಿಯೋಗದ ತತ್ತವಣೆ (ಹಂಚಿಕೆ) ಲೇಸಾಯ್ತು, ಬೇಗದೊಳು+ ಉತ್ತರನೆ ಕೊಳ್ಳು+ ಎಡದ ವಾಘೆಯನು+ ಎಂದನು+ ಆ ಪಾರ್ಥ.
ಅರ್ಥ:ಇತ್ತಲಾಗಿ ಎಲ್ಲಾ ಭೀಷ್ಮನು ಆದಿಯಾಗಿ ಮಹಾರಥರನ್ನೂ ಒಟ್ಟಾಗಿ ಸೇರಿಸಿ, ಸುಯೋಧನನು ಹಸ್ತಿನಾಪುರದತ್ತ ಗೋವುಗಳ ಸಹಿತ ಓಡಿದನು. ಅರ್ಜುನನು ಪೂತು ಮಝ! ಎನ್ನುತ್ತಾ, ಮುತ್ತಯ್ಯ ಭೀಷ್ಮನು ಮಾಡಿದ ನಿಯೋಗದ (ದುರ್ಯೋಧನನ್ನು ಬೇರೆಯಾಗಿ ಕಳಿಸುವ) ಹಂಚಿಕೆಯು ಒಳ್ಳೆಯದೇ ಆಯಿತು, ಎಂದು ಹೇಳಿ, ಬೇಗ ಬೇಗ ಉತ್ತರನೆ + ಎಡದ ವಾಘೆಯನ್ನು ತೆಗೆದುಕೊಂಡು ಎಳೆದು ರಥವನ್ನು ತಿರುಗಿಸಿ ಕೌರವನಕಡೆ ಓಡಿಸು ಎಂದನು, ಆ ಪಾರ್ಥ.
ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗುವೇಗವ ನೋಡು ನೀನೆಂದ ೨೯
ಪದವಿಭಾಗ-ಅರ್ಥ: ತುರುಗಳನು ಮರಳಿಚುವದು+ ಇದು ನಮಗೆ+ ಉರುವ ಕಾರ್ಯವು, ಮಿಕ್ಕ ಕೆಲಸದ ಹೊರಿಗೆಯನು ನಿರ್ಣೈಸಿ ಬಳಿಕಿನಲಿ+ ಇವರ ಸಾಹಸವ ಅರಿದು ಕೊಂಬೆನು, ಕೊಳ್ಳು ವಾಘೆಯನು (ಸಾರಥಿಯ ಕೈಯಲ್ಲಿರುವ ಕುದುರೆಯ ಮುಖಕ್ಕೆ ಕಟ್ಟಿದ ಹಗ್ಗ.)+ ಇರಿತದ+ ಎಡೆಯಲಿ ಭೀತಿಗೊಳ್ಳದೆ ತರಿದು ತಿರುಗುವ ಲಾಗುವೇಗವ ನೋಡು ನೀನು+ ಎಂದ
ಅರ್ಥ:ಅರ್ಜುನನು ಉತ್ತರನನ್ನು ಕುರಿತು, ಗೋವುಗಳನ್ನು ಮರಳಿ ತರುವ ಕಾರ್ಯವು ನಮಗೆ ಮುಖ್ಯವಾದ ದೊಡ್ಡ ಕಾರ್ಯವು. ಉಳಿದ ಕೆಲಸದ ಕಾರ್ಯಭಾರವನ್ನು ಯೋಚಿಸಿ ನಿರ್ಣೈಸಿ ಬಳಿಕ ಭೀಷ್ಮ ಮತ್ತು ಉಳಿದ ಇವರ ಸಾಹಸವನ್ನು ತಿಳಿದುಕೊಳ್ಳುವೆನು. ಉತ್ತರಾ, ನೀನು ಕುದರೆಯ ವಾಘೆಯನ್ನು ಕೈಗೊಂಡು ರಥವನ್ನು ಓಡಿಸು. ಹೋರಾಟದ ಸಮಯದಲ್ಲಿ ಹೆದರದೆ, ನಾನು ತರಿದು- ಹೊಡೆದು ಹಾಕುವ, ರಣ ರಂಗದಲ್ಲಿ ತಿರುಗುವ ಲಾಗು ಮತ್ತು ವೇಗವನ್ನು ನೀನು ನೋಡು, ಎಂದ.

ಯುದ್ಧ[ಸಂಪಾದಿಸಿ]

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ |
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ || ೩೦ ||
ಪದವಿಭಾಗ-ಅರ್ಥ: ಎನಲು ಚಪ್ಪರಿಸಿದನು (ಓಡುವಂತೆ ತಟ್ಟಿದನು) ತೇಜಿಗಳ+ ಅನಿಲ (ವಾಯು) ಜವದಲಿ(ಜವ- ವೇಗ) ನಿಗುರಿದವು ಮುಂಮೊನೆಯವರ ಮನ್ನಿಸದೆ (ಮುಂದಿನ ಸೇನೆಯನ್ನು ಎದುರಿಸದೆ), ಬೆಂಬತ್ತಿದನು, ಕೌರವನ ಜನಪ ಬಿಡು ಬಿಡು ತುರುಗಳನು ಫಲುಗುಣ ಕಣಾ ಬಂದವನು, ಕುರುಕುಲವನ ದವಾನಳನು (ಕುರುಕುಲವೆಂಬ ವನಕ್ಕೆ ಕಾಳ್ಗಿಚ್ಚಿನಂತೆ ಇರುವವನು,)+ ಅರಿ+ ಯ+ ಎನುತಲು+ ಉತ್ತರನು ಬೊಬ್ಬಿರಿದ.
ಅರ್ಥ:ಅರ್ಜುನನು ಉತ್ತರನನ್ನು ಕುರಿತು ಹಾಗೆ ಹೇಳಲು, ಉತ್ತರನು ಕುದುರೆಗಳನ್ನು ಓಡುವ ಸನ್ನೆ ಮಾಡಿ ಚಪ್ಪರಿಸಿದನು. ಕುದುರೆಗಳು ವಾಯು ವೇಗದಲ್ಲಿ ನಾಗಾಲೋಟದಲ್ಲಿ ಹಾರಿದವು. ಮುಂದಿನ ಸೇನೆಯನ್ನು ಎದುರಿಸದೆ ಅರ್ಜುನನು ಕೌರವನನ್ನು ಬೆಂಬತ್ತಿದನು. ಉತ್ತರನು,ಕೌರವ ಜನಪನೇ, ಬಿಡು ಬಿಡು ಗೋವುಗಳನ್ನು ಫಲ್ಗುಣನು ಕಣಾ! ನಿನ್ನನ್ನು ಬೆನ್ನಟ್ಟಿ ಬಂದವನು, - ಕುರುಕುಲವೆಂಬ ವನಕ್ಕೆ ಕಾಳ್ಗಿಚ್ಚಿನಂತೆ ಇರುವವನು, ತಿಳಿದುಕೋ! ಎನ್ನುತ್ತಾ, ಉತ್ತರನು ಬೊಬ್ಬಿರಿದನು.
ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು |
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ || ೩೧ ||
ಪದವಿಭಾಗ-ಅರ್ಥ: ಎಲೆಲೆ ನರ ಜಾರಿದನು ರಾಯನ ಬಳಿಯ ಹತ್ತಿದನು (ಹೋದನು) + ಅಡ್ಡ ಹಾಯ್ದು+ ಅತಿ ಬಲನ ತೆಗೆ ನಮ್ಮತ್ತಲು+ ಎನುತ+ ಆ ದ್ರೋಣ ಗೌತಮರು (ಕೃಪರು) ಹಿಳುಕ (ಬಾಣದ ತುದಿಯ) ಕೆನ್ನೆಗೆ ಸೇದಿ- ಎಳೆದು, ಬೊಬ್ಬೆಯ ಕಳಕಳದಿಯ- ಗದ್ದಲದಿಂದ+ ಅಡಗಟ್ಟಿದರು ನಿಲ್ಲು+ ಎಲವೊ ಫಲುಗುಣ ಕಾದಿ ನೀನು+ ಒಟ್ಟೈಸಿ ಹೋಗು+ ಎನುತ.
ಅರ್ಥ:ಎಲೆಲೆ! ಅರ್ಜುನನು ನಮ್ಮನ್ನು ತಪ್ಪಿಸಿ ರಾಜ ಕೌರವನ ಬಳಿಜಾರಿ ಆತ್ತ ಹೋದನು. ಅವನನ್ನು ಅಡ್ಡ ಹಾಯ್ದು, ಅತಿ ಬಲಿಷ್ಟನಾದ ಅವನನ್ನು ನಮ್ಮತ್ತ ಬರುವಂತೆ ತೆಗೆ- ಎದುರಿಸಿ. ಎನ್ನುತ್ತಾ, ಆ ದ್ರೋಣ ಕೃಪರು ಬಾಣದ ತುದಿಯ ಬಿಲ್ಲಿಗೆ ಹೂಡಿ ಕೆನ್ನೆಯವರೆಗೆ ಸೇದಿ ಆರ್ಭಟಿಸಿ ಕಳಕಳದಿಂದ ಅಡ್ಡಗಟ್ಟಿದರು. ದ್ರೋನ ಕೃಪರು, ಅರ್ಜುನನಿಗೆ,'ನಿಲ್ಲು ಎಲವೊ ಫಲ್ಗುಣ, ನೀನು ಯುದ್ಧಮಾಡಿ ಎದುರಿಸಿ ಹೋಗು ಎನ್ನುತ್ತಾ ಅವನ ಕಡೆ ಹೋದರು.
ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ |
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ || ೩೨ ||
ಪದವಿಭಾಗ-ಅರ್ಥ: ನಗುತ ಫಲುಗುಣನು+ ಎರಡು+ ಎರಡು ಕೋಲುಗಳನು (ಭಾಣ)+ ಅವರ+ ಅವರ+ ಅಂಘ್ರಿಗೆ (ಪಾದ)+ ಎಚ್ಚನು ತೆಗೆದು ಹಾಯ್ದನು (ವೇಗವಾಗಿ ಹೋದನು) ಮುಂದೆ ಕೌರವ ರಾಯ ಮೋಹರಕೆ (ಸೈನ್ಯಕ್ಕೆ) ಹೊಗರು (ಬೆಂಕಿ, ಕಾಂತಿ)+ ಉಗುವ ಹೊಸ ಕಣೆಯ ದಡ್ಡಿಯ (ತರೆಯನ್ನು) ಬಿಗಿದನು+ ಎಡಬಲನ+ ಇದಿರಿನಲಿ ಸೆಗಳಿಗೆಯ (ಸೀಳಿದ, ಕತ್ತರಿಸಿದ) ಸಸಿಯಂತೆ+ ಆಯ್ತು ಕೌರವ ಸೇನೆ ನಿಮಿಷದಲಿ.
ಅರ್ಥ: ಫಲ್ಗುಣನು ತನ್ನ ಗುರುಗಳ ಮಾತಿಗೆ ನಗುತ್ತಾ, ಎರಡು ಎರಡು ಬಾಣಗಳನ್ನು ಗುರುಗಳಾದ ದ್ರೋಣನವರ ಮತ್ತು ಕೃಪ ಅವರ ಪಾದಗಳ ಬಳಿಗೆ ಬೀಳುವಂತೆ ಕಳಿಸಿ ತನ್ನ ಗೌರವ ಮತ್ತು ನಮಸ್ಕಾರಗಳನ್ನು ತೋರಿಸಿದನು. ನಂತರ ನಿಲ್ಲದೆ ತೆಗೆದು (ಹಾಯ್ದನು-) ವೇಗವಾಗಿ ಹೋಗಿ ಮುಂದೆ ಹೋಗುತ್ತಿರುವ ಕೌರವರಾಯನ ಸೈನ್ಯಕ್ಕೆ ಬೆಂಕಿಯನ್ನು ಹೊಮ್ಮಿಸುವ ಹೊಸ ಬಾಣದ ತೆರೆಯನ್ನು ಎಡಕ್ಕೂ ಬಲಕ್ಕೂ ಇದಿರಿನಲ್ಲೂ, ಕಟ್ಟಿದನು. ಆಗ ಕೌರವನ ಸೇನೆಯು ನಿಮಿಷದಲ್ಲಿ ತೋಟದಲ್ಲಿ ಕಡಿದುಬಿದ್ದ ಸಸಿಗಳಂತೆ ಆಯಿತು.
ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಡ ಗರ್ಜನೆಗೆ |
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ || ೩೩ ||
ಪದವಿಭಾಗ-ಅರ್ಥ: ಬಿರಿದವು+ ಆನೆಗಳು+ ಅರ್ಜುನನ ಬಿಲು+ ದಿ+ ತಿರುವಿನ (ಎಲ್ಲಾಕಡೆ ತಿರುಗಿಸಿ)+ ಅಬ್ಬರಕೆ+ ಅತಿರಥರ ಬಾಯ್ದು+ ಒರಳೆ (ಗೆದ್ದಲು ಒರಲೆ?) ಹಾಯ್ದವು ವೀರ ಹನುಮನ ಗಾಡ ಗರ್ಜನೆಗೆ ಶಿರ+ ವೊ+ ಒಡೆದು ಸಿಡಿಯಿತು ಕಿರೀಟಿಯ ಪರಮ ಶಂಖಧ್ವನಿಗೆ ಕುರುಬಲ ಹೊರಳಿ+ ಯೊ+ ಒಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ.
ಅರ್ಥ:ಅರ್ಜುನನು ಬಿಲ್ಲನ್ನು ಎಲ್ಲಾ ಕಡೆ ತಿರುಗಿಸಿ ಹೊಡೆಯುವ ಅಬ್ಬರಕ್ಕೆ, ಆನೆಗಳು ಸೀಳಿಹೋದವು; ಹೆದರಿ ಕಳೆದ ಅತಿರಥರ ಬಾಯಿಗೆ ಗೆದ್ದಲು ಹಾಯ್ದವು- ಹೊಕ್ಕವು; ವೀರ ಹನುಮನ ದೊಡ್ಡ ಗರ್ಜನೆಗೆ ಕೆಲವರ ಶಿರವು ಒಡೆದು ಸಿಡಿಯಿತು; ಅರ್ಜುನನ ಮಹಾ ಶಂಖಧ್ವನಿಗೆ ಕೌರವನ ಸೈನ್ಯ ಚದುರಿ ಹೆದರಿ ಬಳಲಿ ಹಾರಿ ಬಿದ್ದಿತು.
ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ |
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ || ೩೪ ||
ಪದವಿಭಾಗ-ಅರ್ಥ: ಎಲೆಲೆ ನರನೋ ಸುಭಟ ಜೀವನದ+ ಅಳವುಳಿಗನೋ ದಿಟ್ಟ ರಾಯರದಳದ ದಾವಾನಲನೊ ಪಾರ್ಥನೊ ಕಾಲಭೈರವನೊ ಗೆಲುವರು+ ಆವೆಡೆ= ಆವ+ ಎಡೆ- ಎಲ್ಲಿದ್ದಾರೆ? ಕರ್ಣ ಕೃಪ ಸೌಬಲ ಜಯದ್ರಥರು+ ಎಂಬವರ ಹೆಡತಲೆಗೆ (ನಾಯಕರ ತಲೆಗೆ) ನಾಲಗೆ ಹೋಯಿತು+ ಎಂದುದು ಕೂಡೆ- ಎಲ್ಲರೂ ಕುರುಸೇನೆ.
ಅರ್ಥ:ಕೌರವನ ಸೇನೆಯಲ್ಲಿ ಭಯ ಮಾಡಿತು; ಅವರು, 'ಎಲೆಲೆ ಇವನು ಅರ್ಜುನನೋ ಅಥವಾ ಸುಭಟರ - ವೀರರ ಜೀವನದ ಅಳವು ಉಳಿವನ್ನು ನಿರ್ಧರಿಸುವವನೋ, ಎಂದು ದಿಟ್ಟರಾದ ಕೌರವನ ಸೈನ್ಯದ ಕಾಳ್ಗಿಚ್ಚಿನ ಬೆಂಕಿಯ ಜ್ವಾಲೆಯೋ! ಇವನೇನು ಪಾರ್ಥನೊ ಅಥವಾ ಕಾಲಭೈರವನೊ! ಇವನನ್ನು ಗೆಲ್ಲುವವರು ಎಲ್ಲಿದ್ದಾರೆ? ಕರ್ಣ ಕೃಪ ಸೌಬಲ ಜಯದ್ರಥರು ಎಂಬುವವರ ಹೆಡತಲೆಗೆ ನಾಲಿಗೆ ಸತ್ತುಹೋಯಿತು ಎಂದು ಎಲ್ಲಾ ಕುರುಸೇನೆಯವರು ಹೇಳಿದರು.
ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು |
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟದು ರಾಯರಿದಿರಿನಲಿ || ೩೫ ||
ಪದವಿಭಾಗ-ಅರ್ಥ: ಮರಳಿ ಹೊಡೆ ಹಿಂಡು+ ಆಕಳನು, ಗೋವರನು ಬಿಡು, ಹೆಡಗೈಯ (ಬೆನ್ನು ಹಿಂದಕ್ಕೆ ಎಳೆದು ಕಟ್ಟಿದ ಕೈ) ಕೊಯ್, ನಮ್ಮ+ ಅರಸ ನಯ+ ದ+ ತಪ್ಪಿದನು ತುರು ಸೆರೆವಿಡಿವರೇ ನೃಪರು? ಕೊರಳ ಕಡಿತಕೆ ಹೊತ್ತ ಹಗೆವನ ಸರಳಿಗೆ+ ಅಸುಗಳ ತೆರೆದಿರು+ ಎಂದು+ ಅಬ್ಬರಿಸಿ ಕುರುಬಲ ಬಾಯಬಿಟ್ಟದು ರಾಯರ (ಕೌರವ ಮತ್ತು ಅವನ ತಮ್ಮಂದಿರು)+ ಇದಿರಿನಲಿ.
ಅರ್ಥ:ಸೇನೆಯ ನಾಯಕರು,'ಆಕಳ ಹಿಂಡುನ್ನು ಮರಳಿ ಹಿಂದಕ್ಕೆ ಹೊಡೆಯಿರಿ; ಗೋವಳರನ್ನು ಬಿಡುಗಡೆಮಾಡಿ; ಕಟ್ಟಿದ ಹೆಡಗೈಯ ಹಗ್ಗವನ್ನು ಕೊಯ್‍ರಿ; ನಮ್ಮ ಅರಸ ಕೌರವನು ನಯ ನೀತಿಯನ್ನು ತಪ್ಪಿದನು. ರಾಜರು ಹಸುಗಳನ್ನು ಸೆರೆ ಹಿಡಿಯುವರೇ? ಕೊರಳಲ್ಲಿ ಕಡಿತ- ತುರಿಕೆ ಬಂದಿದೆ ಎಂದು ಸರೆಹಿಡಿದ ಶತ್ರುವಿನ ಬಾಣಗಳಿಗೆ ಪ್ರಾಣಗಳನ್ನು ಕೊಟ್ಟಂತೆ ಆಗಬಾರದು ನಮ್ಮ ಸ್ಥಿತಿ,' ಎಂದು ಕೂಗುತ್ತಾ ಅಬ್ಬರಿಸಿ ಕೌರವನ ಸೈನ್ಯ ಕೌರವರಾಯರ ಎದುರಿನಲ್ಲೇ ಬಾಯಬಿಟ್ಟು ಹೇಳಿದರು.
ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ |
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ || ೩೬ ||
ಪದವಿಭಾಗ-ಅರ್ಥ: ಬೊಬ್ಬಿರಿದು ನರನು+ ಎಸಲು ಕಣೆಗಳು ಹಬ್ಬಿದವು ಹುರಿಗೊಂಡು ಹೂಣಿಗರು+ ಉಬ್ಬುಳಿಯ ಹರೆ+ ಗ+ ಕಡಿದು ಕರಿಗಳ ಹೊದರ ಮೆದೆ+ ಗೆ+ ಕೆಡಹಿತು+ ಎಬ್ಬನ+ ಒದೆದು+ ಉರೆ ಬಳಿಕ ಗರಿ ಮೊರೆದು+ ಉಬ್ಬರಿಸಿ ಕಬ್ಬಕ್ಕಿ ಗಗನವ ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ.
 • ಬೊಬ್ಬಿರಿದು ನರನು+ ಎಸಲು= ಅರ್ಜುನನು ಆರ್ಭಟಿಸಿ, ಹೊಡೆಯಲು, ಕಣೆಗಳು= ಬಾಣಗಳು ಹಬ್ಬಿದವು ಹುರಿಗೊಂಡು ಗಟ್ಟಿಯಾಗಿ- ತೀವ್ರವಾಗಿ, ಹೂಣಿಗರ (ಬಾಣವನ್ನು ಹೂಡುವವನು.)+ ಒಬ್ಬುಳಿಯ(ಒಬ್ಬನೂ ಉಳಿಯದಂತೆ - ಎಲ್ಲರ) ಹರೆಗಡಿದು- ಗಡಿ, ಮಿಯಮ, ತಪ್ಪಿ, ಕರಿಗಳ= ಆನೆಗಳ ಹೊದರ ಮೆದೆ (- ಗುಂಪುಗಳ ರಾಶಿ)+ ಗೆ+ ಕೆಡಹಿತು+ ಎಬ್ಬನ+ ಒದೆದು+ ಉರೆ (ಬಹಳ ಮತ್ತೂ) ಬಳಿಕ ಗರಿ ಮೊರೆದು+ ಉಬ್ಬರಿಸಿ ಕಬ್ಬಕ್ಕಿ ಗಗನವ ಹಬ್ಬಿದಂತಿರೆ ಮಸಗಿದವು- ಮುತ್ತು ಆವರಿಸಿದವು, ಫಲುಗುಣನ ಶರಜಾಲ- ಬಾಣಗಳ ಸಮೂಹ.
ಅರ್ಥ:ಅರ್ಜುನನು ಆರ್ಭಟಿಸಿ ಹೊಡೆಯಲು ಅವನ ಬಾಣಗಳು ತೀವ್ರವಾಗಿ ಎಲ್ಲಾಕಡೆ ಹಬ್ಬಿದವು. ಕೌರವನ ಪಾಳಯದ ಎಲ್ಲಾ ಬಿಲ್ಲುಗಾರರ ನಡೆ ತಪ್ಪಿಹೋಯಿತು. ಅವು ಆನೆಗಳ ಗುಂಪುನ್ನು ರಾಶಿ ರಾಶಿಯಾಗಿ ಕೆಡಹಿತು. ಅವು ಎದ್ದು ನಿಂತವನನ್ನು ಒದೆದು, ಮತ್ತೆ ಆ ಬಳಿಕ ಬಾಣದ ಗರಿ ಸದ್ದುಮಾಡುತ್ತಾ ಆರ್ಭಟಿಸಿ ಕಬ್ಬಕ್ಕಿ- ಕಪ್ಪು ಹಕ್ಕಿಗಳ ಸಾಲು ಆಕಾಶದಲ್ಲಿ ಹಬ್ಬಿದಂತಿರಲು ಫಲ್ಗುಣನ ಬಾಣಗಳ ಸಮೂಹ ಆ ಪ್ರದೇಶವನ್ನು ಆವರಿಸಿದವು.
ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ |
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳ ನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ || ೩೭ ||
ಪದವಿಭಾಗ-ಅರ್ಥ: ತುಡುಕಿ ಖಂಡವ ಕಚ್ಚಿ ಹಾರುವ ಗಿಡಗನಂತೆ+ ಇರೆ ಭಟರ ಗಂಟಲ ಕಡಿದು ಹಾಯ್ದ+ ಅಂಬುಗಳು ಬಳಿಯಲಿ ಕೊಂದ ತಲೆಗಳಲಿ ಅಡಸಿದವು- ನಿರಿನಿಟಿಲುಗರೆದು+ ಎಲುವೊಡೆಯೆ ಥಟ್ಟು+ ಉಗಿದು + ಆನೆಗಳ+ ನೆಡೆ+ ಗೆ+ ಕೆಡಹಿದವು, ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ.
 • ತುಡುಕಿ ಖಂಡವ ಕಚ್ಚಿ ಹಾರುವ ಗಿಡಗನಂತೆ+ ಇರೆ ಭಟರ ಗಂಟಲ ಕಡಿದು ಹಾಯ್ದ+ ಅಂಬುಗಳು ಬಳಿಯಲಿ ಕೊಂದ ತಲೆಗಳಲಿ ಅಡಸಿದವು- ಹೊಕ್ಕು ತುಂಬಿದವು; ನಿರಿನಿಟಿಲುಗರೆದು+ ಎಲುವೊಡೆಯೆ ಥಟ್ಟುಗಿದು (ಸೈನ್ಯ ಹಿಮ್ಮೆಟ್ಟಿ)+ ಆನೆಗಳ+ ನೆಡೆ+ ಗೆ+ ಕೆಡಹಿದವು- ತಡೆದವು; ಗರಿ ಸಹಿತ ಹಾಯ್ದವು- ಹೊಕ್ಕವು, ಹಯದ ಹೊಟ್ಟೆಯಲಿ.
ಅರ್ಥ:ಗಿಡಗವು ಆಕಾಶದಿಂದ ಸರ್ರನೆ ಇಳಿದು ಬೇಟೆಯನ್ನು ತುಡುಕಿ/ ಆಕ್ರಮಿಸಿ ಮಾಂಸವನ್ನು ಕಚ್ಚಿ ಹಾರುವ ಗಿಡಗನಂತೆ ಅರ್ಜುನನ ಬಾಣಗಳು ಇರಲು, ಅವು ಭಟರ ಗಂಟಲನ್ನು ಕಡಿದು ಮುಂದೆ ಹಾಯ್ದ - ನುಗ್ಗಿದ ಅಂಬುಗಳು ಹತ್ತಿರದಲ್ಲಿ ಕೊಂದು ಸತ್ತುಬಿದ್ದ ತಲೆಗಳಲಿ ಹೊಕ್ಕು ತುಂಬಿದವು; ಅರ್ಜುನನ ಆ ಬಾಣಗಳಿಂದ 'ನಿರಿನಿಟಿಲು' ಎಂದು ಸದ್ದು ಮಾಡುತ್ತಾ ಎಲುಬುಗಳು ಒಡೆಯಲು, ಸೈನ್ಯ ಹಿಮ್ಮಟ್ಟಿ, ಆನೆಗಳ ನಡೆಯನ್ನು ಕೆಡಹಿದವು- ತಡೆದವು. ಆ ಬಾಣಗಳು ಅದರ ಬುಡದಲ್ಲಿರುವ ಗರಿ ಸಹಿತ ಕುದುರೆಗಳ ಹೊಟ್ಟೆಯಲ್ಲಿ ಹೊಕ್ಕವು.
ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮ ಸೀಳಾಗಿ ಬಿದ್ದುವು ಗಜದ ಹೋಳುಗಳು |
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರುಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು || ೩೮ ||
ಪದವಿಭಾಗ-ಅರ್ಥ: ಕರುಳ ಬಾಯಲಿ ಕಾರಿ ಕಾಲಾಳು+ ಒರಳಿ ಕೆಡೆದುದು ಬೋಳೆಯ(ದೇವತೆಯ- ಮಂತ್ರಾಸ್ತ್ರಗಳು?) + ಅಂಬುಗಳು+ ಅರಿಯೆ ಸಮ ಸೀಳಾಗಿ ಬಿದ್ದುವು ಗಜದ ಹೋಳುಗಳು; ಕೊರಳು ಹರಿದು+ ಒರೆವೆದ್ದ ರಕುತದ ಹೊರಳಿಗಳ ಹೊನಲಿನಲಿ ಮುಳುಗಿತು ತುರುಗ ರಥದಳ ರಾಜಿ(ಗುಂಪು ಸಮೂಹ) ಹೊಸ ಕುಮ್ಮರಿಯ ಹೋಲಿಸಿತು
 • (ಬೋಳೆಯ (ನಾ)= 1. ದೇವತೆ. 2. ಕಪಟವನ್ನರಿಯದವನು. (ಕನ್ನಡ ಸಾಹಿತ್ಯ ಪರಿಷತ್ ನಿಘಂಟು)
 • ಕುಮ್ಮರಿ (ನಾ)= ಕಾಡನ್ನು ಕಡಿದು ಸಾಗುವಳಿ ಮಾಡಿದ ಪ್ರದೇಶ.(ಕನ್ನಡ ಸಾಹಿತ್ಯ ಪರಿಷತ್ ನಿಘಂಟು)
ಅರ್ಥ: ಅರ್ಜುನನ ಬಾಣಗಳ ಹೊಡೆತಕ್ಕೆ, ಕರುಳನ್ನು ಬಾಯಲ್ಲಿ ಕಾರಿಕೊಂಡು ಕಾಲಾಳುಗಳು - ಪದಾತಿ ಸೈನಿಕರು ಹೊರಳಿ ಬಿದ್ದರು. ದೈವಿಕ- ಮಂತ್ರದ? ಬಾಣಗಳು ಕತ್ತರಿಸಲು ಆನೆಗಳು ಸಮ ಸೀಳಾಗಿ ಹೋಳುಗಳಾಗಿ ಬಿದ್ದುವು; ಕುದುರೆಗಳು ಕೊರಳು ಹರಿದು, ಅದರ ಒರೆತೆಯಿಂದ ಎದ್ದ ರಕ್ತದ ಪ್ರವಾಹಗಳ ಹೊಳೆಯಲ್ಲಿ ಮುಳುಗಿತು. ಕುದುರೆ, ರಥಸೈನ್ಯ ಸಮೂಹ ನಾಶವಾಗಿ, ಕಾಡನ್ನು ಕಡಿದು ಸಾಗುವಳಿ ಮಾಡಿದ ಹೊಸ ಪ್ರದೇಶವನ್ನು ಹೋಲಿಸಿತು.
ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ೩೯
ಪದವಿಭಾಗ-ಅರ್ಥ: ಹರಿಗೆ ಖಂಡಿಸಿ ಜೋಡು ಸೀಸಕ ಜರಿದು ಬಲುದೋಳು+ ಉಡಿದು ಗೋಣು+ ಅರೆಹರಿದು ನಿಟ್ಟೆಲು ಮುರಿದು ತೊಡೆಯು+ ಅರೆಗಡಿದು ತಲೆಯೊಡೆದು ನರ ಹರಿದು ಕರುಳೊಕ್ಕು ನೆಣನುಬ್ಬರಿಸಿ ಕಾಳಿಜ ಹಾಯ್ದು ನೆತ್ತರುಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ.
 • ಹರಿಗೆ ಖಂಡಿಸಿ=ಅರ್ಜುನನು, ಶತ್ರುಗಳ ಹರಿವನ್ನು- ಪ್ರವಾಹವನ್ನು ಹೊಡೆದು ನಿಲ್ಲಿಸಿ, ಜೋಡು ಸೀಸಕ ಜರಿದು= ಜೋಡಿಸಿದ ಸೀಸಕದ ಕವಚವನ್ನು ಕಡಿದು ಕೆಡವಿ, ಬಲುದೋಳು+ ಉಡಿದು (ಉಡಿ= ಮುರಿ ಭಂಗವಾಗು)- ಕೌರವನ ಸೈನಿಕರ ಬಲತೋಳುಗಳು ಮುರಿದು, ಗೋಣು+ ಅರೆಹರಿದು= ಕುತ್ತಿಗೆ ಅರ್ಧ ಕತ್ತರಿಸಿ, ನಿಟ್ಟೆಲು ಮುರಿದು= (ನಿಟಿಲು= ಹಣೆ) ಹಣೆಯು ಒಡೆದು, ತೊಡೆಯು+ ಅರೆ+ ಗ+ ಕಡಿದು= ತೊಡೆಗಳು ಕತ್ತರಿಸಿ, ತಲೆಯೊಡೆದು, ನರ ಹರಿದು, ಕರುಳ+ ಒಕ್ಕು= ಕರುಳು ಮುದ್ದೆಯಾಗಿ, ನೆಣನುಬ್ಬರಿಸಿ= ಮೆದುಳು ಒಡೆದು ಉಬ್ಬಿ ಹೊರಚೆಲ್ಲಿ, ಕಾಳಿಜ (ಕಲಿಜ- ಪಿತ್ತಕೋಶ ಯಕೃತ್ತು) ಹಾಯ್ದು= ಯಕೃತ್ತು ಹೊಟ್ಟೆಯಿಂದ ಹೊರಬಿದ್ದು, ನೆತ್ತರು- ರಕ್ತ ಸುರಿದು, ಹರಿದ+ ತೊಗಲಿನಲಿ, ಹೊರಳಿತು ವೈರಿ ಪಾಯದಳ= ಕೌರವನ ಮುಖ್ಯ ಸೈನ್ಯ.
ಅರ್ಥ:ಅರ್ಜುನನು, ಶತ್ರುಗಳ ನುಗ್ಗುವ ಪ್ರವಾಹವನ್ನು ಹೊಡೆದು ನಿಲ್ಲಿಸಿ, ಅವರು ಎದೆಗೆ ಜೋಡಿಸಿಕೊಂಡ ಸೀಸಕದ ಕವಚವನ್ನು ಕಡಿದು ಕೆಡವಿದನು; ಅವನ ಭಾಣಗಳ ಹೊಡೆತಕ್ಕೆ, ಕೌರವನ ಸೈನಿಕರ ಬಲತೋಳುಗಳು ಮುರಿದು, ಕುತ್ತಿಗೆ ಅರ್ಧ ಕತ್ತರಿಸಿ, ಹಣೆಯು ಒಡೆದು, ತೊಡೆಗಳು ಕತ್ತರಿಸಿ, ತಲೆಯೊಡೆದು, ನರ ಹರಿದು, ಕರುಳು ಮುದ್ದೆಯಾಗಿ, ಒಡೆದ ತಲೆಯಿಂದ ಮೆದುಳು ಉಬ್ಬಿ ಹೊರಚೆಲ್ಲಿ, ಯಕೃತ್ತು ಹೊಟ್ಟೆಯಿಂದ ಹೊರಬಿದ್ದು, ರಕ್ತ ಸುರಿದು, ಹರಿದ ಚರ್ಮದಿಂದ ಕೌರವನ ಮುಖ್ಯ ಸೈನ್ಯ ಹೊರಳಾಡಿತು.
ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ |
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ || ೪೦ ||
ಪದವಿಭಾಗ-ಅರ್ಥ: ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು, ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು+ ಎಲೆ ಜನಮೇಜಯ ಕ್ಷಿತಿಪ.
 • ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು= ಮುಂದೆ ಆವರಿಸಿ ನುಗ್ಗಿದ ಬಾಣಗಳು ಕವರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ= ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ. ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು= ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಎಲೆ ಜನಮೇಜಯ ಕ್ಷಿತಿಪ.
ಅರ್ಥ:ಮುಂದೆ ಆವರಿಸಿ ನುಗ್ಗಿದ ಅರ್ಜುನನ ಬಾಣಗಳು ಕೌರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ.ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಎಲೈ ಜನಮೇಜಯ ರಾಜನೇ! ಎಂದನು ವೈಶಂಪಾಯನ ಮುನಿ.
ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ |
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ || ೪೦ ||
ಪದವಿಭಾಗ-ಅರ್ಥ: ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು, ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು+ ಎಲೆ ಜನಮೇಜಯ ಕ್ಷಿತಿಪ.
 • ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು= ಮುಂದೆ ಆವರಿಸಿ ನುಗ್ಗಿದ ಬಾಣಗಳು ಕವರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ= ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ. ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು= ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಎಲೆ ಜನಮೇಜಯ ಕ್ಷಿತಿಪ.
ಅರ್ಥ:ಮುಂದೆ ಆವರಿಸಿ ನುಗ್ಗಿದ ಅರ್ಜುನನ ಬಾಣಗಳು ಕೌರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ.ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಎಲೈ ಜನಮೇಜಯ ರಾಜನೇ! ಎಂದನು ವೈಶಂಪಾಯನ ಮುನಿ.
ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ |
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು || ೪೧ ||
ಪದವಿಭಾಗ-ಅರ್ಥ: ಹಿಕ್ಕುದವು ಹಯಬಲದ ಸುಭಟರನು+ ಒಕ್ಕಿ, ತೂರಿದವು+ ಆನೆಗಳ ಸಾಲು+ ಇಕ್ಕಿ, ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ, ಮುಕ್ಕಿದವು ಮಲೆತವರ ಮಾಂಸವನು,+ ಇಕ್ಕಿದವು ದ್ವಿಜಗಣಕೆ ಛತ್ರವನು,+ ಇಕ್ಕಿದವು ದಿಗುವಳೆಯದಲಿ- ದಿಕ್+ ವಲಯದಲಿ ರಣಧೀರನ+ ಅಂಬುಗಳು.
 • ಹಿಕ್ಕು = 1. ಎಳೆದುಕೊಳ್ಳು. 2. ಸೆಳೆದು ಅಪ್ಪಿಕೊಳ್ಳು. 3. ತಲೆಗೂದಲನ್ನು ಹಣಿಗೆಯಿಂದ ಹಿಕ್ಕು,- ಸಿಕ್ಕು ಬಿಡಿಸಿ ಓರಣಗೊಳಿಸು. 4. ದೋಚು. 5. ಒಟ್ಟುಗೂಡು.(ಸಾಹಿತ್ಯ ಪರಿಷತ್ ನಿಘಂಟು)
 • ಹಿಕ್ಕುದವು ಹಯಬಲದ ಸುಭಟರನು+ ಒಕ್ಕಿ, ತೂರಿದವು+ = ಹಯಬಲದ/ ಕುದುರೆ ಸೈನ್ಯದ ಸುಭಟರನ್ನು ಬಾಚಿ (ತಲೆಕೂದಲಿನಿಂದ ಹೇನನ್ನು ತೆಗೆಯುವಂತೆ ) ಒಟ್ಟುಗೂಡಿಸಿ ತೂರಿ ಓಡಿಸಿದವು. ಆನೆಗಳ ಸಾಲು+ ಇಕ್ಕಿ, ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ= ಅವನ ಬಾಣಗಳು ಆನೆಗಳನ್ನು ಸಾಲು ಸಾಲಾಗಿ (ಬತ್ತದ ಸಸಿಗಳನ್ನು ಇಕ್ಕಿ ನೆಡುವಂತೆ) ಬಡಿದು ಮಲಗಿಸಿ ರಕ್ತದ ಕೆಸರ ಕೈಗಳಲಿ ನೆಟ್ಟವು. ಮುಕ್ಕಿದವು ಮಲೆತವರ ಮಾಂಸವನು,+= ಎದುರು ನಿಂತವರ ಮಾಂಸವನ್ನು ಹೊಕ್ಕು ತಿಂದವು. ಇಕ್ಕಿದವು ದ್ವಿಜಗಣಕೆ ಛತ್ರವನು,= ಬ್ರಾಹ್ಮಣರಿಗೆ ಶ್ರಾದ್ಧದ ಊಟವನ್ನು ಛತ್ರದಲ್ಲಿ ಹಾಕಿಸಿದವು. + ಇಕ್ಕಿದವು ದಿಗುವಳೆಯದಲಿ- ದಿಕ್+ ವಲಯದಲಿ ರಣಧೀರನ+ ಅಂಬುಗಳು= ಎಲ್ಲಾ ದಿಕ್ಕಿನಲ್ಲಿ ರಣಧೀರ ಅರ್ಜುನನ ಅಂಬುಗಳು/ಬಾಣಗಳು ಇಕ್ಕಿದವು-ನೆಟ್ಟವು.
ಅರ್ಥ: ಅರ್ಜುನನ ಬಾಣಗಳು, ಕುದುರೆ ಸೈನ್ಯದ ಸುಭಟರನ್ನು ಬಾಚಿ (ತಲೆಕೂದಲಿನಿಂದ ಹೇನನ್ನು ತೆಗೆಯುವಂತೆ ) ಒಟ್ಟುಗೂಡಿಸಿ ತೂರಿ ಓಡಿಸಿದವು. ಅವನ ಬಾಣಗಳು ಆನೆಗಳನ್ನು ಸಾಲು ಸಾಲಾಗಿ (ಬತ್ತದ ಸಸಿಗಳನ್ನು ಇಕ್ಕಿ ನೆಡುವಂತೆ) ಬಡಿದು ಮಲಗಿಸಿ ರಕ್ತದ ಕೆಸರ ಕೈಗಳಲಿ ನೆಟ್ಟವು. ಎದುರು ನಿಂತವರ ಮಾಂಸವನ್ನು ಹೊಕ್ಕು ತಿಂದವು. ಭಟರನ್ನು ಸಾಯಿಸಿ ಬ್ರಾಹ್ಮಣರಿಗೆ ಶ್ರಾದ್ಧದ ಊಟವನ್ನು ಛತ್ರದಲ್ಲಿ ಹಾಕಿಸಿದವು. ಎಲ್ಲಾ ದಿಕ್ಕಿನಲ್ಲಿ ರಣಧೀರ ಅರ್ಜುನನ ಅಂಬುಗಳು ನೆಟ್ಟವು.
ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ |
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು || ೪೨ ||
ಪದವಿಭಾಗ-ಅರ್ಥ: ಒಗ್ಗೊಡೆಯದ+ ಔಕಿದ ಮಹೀಶರು ಮುಗ್ಗಿದರು, ಮುನ್ನಾಳ ಮೇಳದ ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರು+ ಒಡಲುಗಳ, ನುಗ್ಗುನುಸಿಯಾಯ್ತು+ ಅತಿರಥರು ಗಜ ಮೊಗ್ಗರದ ಮೊನೆ ಮುರಿದು ಕಾಲನ ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು.
 • ಒಗ್ಗೊಡೆಯದ+ ಔಕಿದ (ಒತ್ತಿದ, ಹಿಸುಕಿದ) ಮಹೀಶರು ಮುಗ್ಗಿದರು= ಒಗ್ಗಟ್ಟಾಗದ ವತ್ತಡಕ್ಕೆ ಸಿಲುಕಿದ ರಾಜರು ಮುಗ್ಗಿದರು- ಸೋತರು; ಮುನ್ನಾಳ ಮೇಳದ ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರು+ ಒಡಲುಗಳ= ಮುಂದಿನ ಸಾಲಿನ ಸೈನಿಕರು ಜೊತೆಸೇರಿಕೊಂಡು ಒಟ್ಟಾಗಿ ಮುಂದೆ ನಿಂತುಕೊಂಡು ಹೋರಾಡಿದ ಬಿರುದುಳ್ಳ ಶೂರರು, ಬಿಸುಟರು+ ಒಡಲುಗಳ- ಅರ್ಜುನನ ಬಾಣಕ್ಕೆ ದೇಹವನ್ನು ಬಿಟ್ಟು ಸ್ವರ್ಗಕ್ಕೆ ಹೋದರು, ಮರಣ ಹೊಂದಿದರು. ನುಗ್ಗುನುಸಿಯಾಯ್ತು+ ಅತಿರಥರು ಗಜ ಮೊಗ್ಗರದ (ಗುಂಪು- ದಳ) ಮೊನೆ ಮುರಿದು ಕಾಲನ ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು= ಅತಿರಥರು ಮತ್ತು ಗಜ ಸೈನ್ಯದ ದಳದ ಎದುರು ಸಾಲು ಮುರಿದುಬಿದ್ದು ನುಗ್ಗುನುಸಿಯಾಯಿತು, ನಿರ್ನಾಮವಾಯಿತು. ಕಾಲನ- ಯಮನ ಸಗ್ಗಳೆಯ ಸೆಳೆದಂತೆ= ಕಾಲನ ರಕ್ತ ತುಂಬಿದ ಚರ್ಮದ ಚೀಲ ಹರಿದಹಾಗೆ ರಕ್ತ ಧಾರೆಗಳು ಸುರಿದವು.
 • ಸಗ್ಗಳೆ= 1. ನೀರುತುಂಬುವ ಚರ್ಮದ ಚೀಲ. (ಸಾ.ಪ.ನಿ.)
ಅರ್ಥ:ಒಗ್ಗಟ್ಟಾಗದೆ ವತ್ತಡಕ್ಕೆ ಸಿಲುಕಿದ ರಾಜರು ಸೋತರು; ಮುಂದಿನ ಸಾಲಿನ ಸೈನಿಕರು ಮತ್ತು ಒಟ್ಟಾಗಿ ಮುಂದೆ ನಿಂತುಕೊಂಡು ಹೋರಾಡಿದ ಬಿರುದುಳ್ಳ ಶೂರರು, ಅರ್ಜುನನ ಬಾಣದಿಂದ ಮರಣ ಹೊಂದಿದರು. ಅತಿರಥರು ಮತ್ತು ಗಜ ಸೈನ್ಯದ ದಳದ ಎದುರು ಸಾಲು ಮುರಿದುಬಿದ್ದು ನಿರ್ನಾಮವಾಯಿತು. ಕಾಲನ ರಕ್ತ ತುಂಬಿದ ಚರ್ಮದ ಚೀಲ ಹರಿದಹಾಗೆ ರಕ್ತ ಧಾರೆಗಳು ಸುರಿದವು. (ಮಾನವರು ಸಗ್ಗಳೆಯ ಚೀಲದಲ್ಲಿ ನೀರು ತುಂಬಿಟ್ಟುಕೊಂಡರೆ- ಕಾಲನ ಚೀಲದಲ್ಲಿ ರಕ್ತ ಇರುವುದೆಂದು ಭಾವ, ಅದು ಹರಿದು ಬಿದ್ದರೆ ಹೇಗೆ ರಕ್ತ ಹರಿಯುವುದೋ ಅದೇ ರೀತಿ ರಣರಂದಲ್ಲಿ ರಕ್ತದ ಕೋಡಿ ಹರಿಯಿತು. ಉತ್ಪ್ರೇಕ್ಷಾಲಂಕಾರ.)
ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ |
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು || ೪೩||
ಪದವಿಭಾಗ-ಅರ್ಥ: ಕಾಲದಲಿ ಪರಿಪಕ್ವವಾದ ವಿಶಾಲಿತ ಸ್ಥಾವರದ ಜಂಗಮ ಜಾಲವನು ಕಾಲಾಗ್ನಿ ಕವಿಕವಿದು+ ಅಟ್ಟಿ ಸುಡುವಂತೆ ಮೇಲು ಮೇಲೆ+ ಒಡಗವಿವ ಬಾಣಜ್ವಾಲೆಯಲಿ ಕುರುಸೈನ್ಯ ಕಾನನಮಾಲೆಯನು ಕಲಿಪಾರ್ಥ ಪಾವಕನು+ ಉರುಹಿದನು ಮುಳಿದು.
 • ಕಾಲದಲಿ ಪರಿಪಕ್ವವಾದ ವಿಶಾಲಿತ ಸ್ಥಾವರದ ಜಂಗಮ ಜಾಲವನು ಕಾಲಾಗ್ನಿ ಕವಿಕವಿದು+ ಅಟ್ಟಿ ಸುಡುವಂತೆ= ಅನೇಕ ವರ್ಷಗಳಲ್ಲಿ ವಿಶಾಲವಾಗಿ ಬೆಳೆದ ಕಾಡು ಅಥವಾ ಅದರಲ್ಲಿಯ ಸ್ಥಾವರವಾದ ಸಸ್ಯಗಳು ಮತ್ತು ಅಲ್ಲಿ ವಾಶಿಸುವ ಜಂಗಮವಾದ ಪಶು ಪಕ್ಷಿಗಳ ಜಾಲವನ್ನು ಕಾಲ್ಗಿಚ್ಚು ಆವರಿಸಿ ಬೆನ್ನಟ್ಟಿ ಸುಡುವಂತೆ; ಮತ್ತು ಮೇಲು ಮೇಲೆ+ ಒಡ+ ಗ+ ಕವಿವ- ಆವರಿಸುವ ಬಾಣಜ್ವಾಲೆಯಲಿ ಕುರುಸೈನ್ಯ ಕಾನನಮಾಲೆಯನು ಕಲಿಪಾರ್ಥ ಪಾವಕನು (ಅಗ್ನಿಯು)+ ಉರುಹಿದನು- ಸುಟ್ಟನು, ಮುಳಿದು- ಸಿಟ್ಟಿನಿಂದ= ಮತ್ತು ಮೇಲಿಂದ ಮೇಲೆ ಒಡನೆ ಒಡನೆ ಆವರಿಸುವ ಬಾಣಜ್ವಾಲೆಯಲಿ- ಬಾಣವೆಂಬ ಬೆಂಕಿಯಲ್ಲಿ, ಕುರುಸೈನ್ಯವೆಂಬ ಕಾನನಮಾಲೆಯನು- ವನಮಾಲೆಯನ್ನು- ಕಾಡಿನ ಸಾಲುಸಾಲು ಮರಗಳನ್ನು, ಕಲಿಪಾರ್ಥ ಪಾವಕನು- ಕಲಿಪಾರ್ಥನೆಂಬ ಅಗ್ನಿಯು+ ಉರುಹಿದನು- ಸುಟ್ಟನು, ಮುಳಿದು- ಸಿಟ್ಟಿನಿಂದ.
ಅರ್ಥ:ಅನೇಕ ವರ್ಷಗಳಲ್ಲಿ ವಿಶಾಲವಾಗಿ ಬೆಳೆದ ಕಾಡು ಅಥವಾ ಅದರಲ್ಲಿಯ ಸ್ಥಾವರವಾದ ಸಸ್ಯಗಳು ಮತ್ತು ಅಲ್ಲಿ ವಾಶಿಸುವ ಜಂಗಮವಾದ ಪಶು ಪಕ್ಷಿಗಳ ಜಾಲವನ್ನು ಕಾಲ್ಗಿಚ್ಚು ಆವರಿಸಿ ಬೆನ್ನಟ್ಟಿ ಸುಡುವಂತೆ, ಮತ್ತು ಮೇಲಿಂದ ಮೇಲೆ ಒಡನೆ ಒಡನೆ ಆವರಿಸುವ ಬಾಣವೆಂಬ ಬೆಂಕಿಯಲ್ಲಿ, ಕುರುಸೈನ್ಯವೆಂಬ ಸಾಲುಸಾಲು ಮರಗಳನ್ನು, ಕಲಿಪಾರ್ಥನೆಂಬ ಅಗ್ನಿಯು ಸಿಟ್ಟಿನಿಂದ ಸುಟ್ಟುಹಾಕಿನು.
ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ |
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ || ೪೪ ||
ಪದವಿಭಾಗ-ಅರ್ಥ: ಯಾವ ಬಿಲ್ಲಾಳು+ ಆವ ಲಾಘವ+ ಅದು+ ಆವ ಗಾಡಿಕೆ, ಯಾವ ಚಳಕವು+ ಅದಾವ ಶರ ಸಂಧಾನವು,+ ಆವ ವಿಹಾರವು+ ಆವ ಪರಿ ರಾವಣನೊಳು+ ಇಂದ್ರಾರಿ - ಇಂದ್ರನ ಶತ್ರು, ರಾಘವದೇವ ಲಕ್ಷ್ಮಣರಲ್ಲಿ ಕಾಣೆನು+ ಇದು+ ಆವ ಧನು ಶರವಿದ್ಯೆ ಮಝ ಭಾಪು+ ಎಂದನು+ ಆ ಹನುಮ.
ಅರ್ಥ:ಅರ್ಜುನನ ಯುದ್ಧಕೌಶಲವನ್ನು ಬಾವುಟದ ಮೇಲಿದ್ದ ಹನುಮನು ನೋಡಿ, 'ಯಾವ ಬಿಲ್ಲಾಳುತನ (ಧನುರ್ವಿದ್ಯಾ ಪರಿಣತಿ). ಯಾವ ಲಾಘವ! ಅದು ಯಾವ ಗಾಡಿಕೆ- ವೈಕರಿ! ಯಾವ ಕೈಚಳಕವು! ಅದು ಯಾವ ಬಗೆಯ ಶರ ಸಂಧಾನವು! ಯಾವ ವಿಹಾರವು- ಸಂಚಲನ! ಯಾವ ಪರಿಯಪ್ಪಾ ಅರ್ಜುನನ ಯುದ್ಧ! ಇಂದ್ರನ ಶತ್ರು ರಾವಣನಲ್ಲಿ ಕಾಣಲಿಲ್ಲ! ರಾಘವದೇವ ಲಕ್ಷ್ಮಣರಲ್ಲಿ ಕಾಣಲಿಲ್ಲ! ಇದು ಯಾವ ಧನು-ಶರವಿದ್ಯೆಯಪ್ಪಾ! ಮಝ ಭಾಪು!' ಎಂದನು.
ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ |
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯ್ತು ಸುರ ಕಟಕ || ೪೫ ||
ಪದವಿಭಾಗ-ಅರ್ಥ: ಕಾಣಬಾರದು ಬಿಡುವ ಹೂಡುವ ಕೇಣವನು, ಪರಮಾಣು ಪುಂಜವ ಕಾಣವೇ ಕಣ್ಣುಗಳು, ನಮ್ಮವು ಮರ್ತ್ಯರ+ ಆಲಿಗಳೆ, ಜಾಣಪಣವಿದು ಶಿವ ಸುದರ್ಶನ ಪಾಣಿಗಳಿಗೆ+ ಅಹುದು+ (ಶಿವನಿಗೂ, ಸುದರ್ಶನವನ್ನು ಕೈಯಲ್ಲಿ ಹಿಡಿದವರಿಗೆ(ಸುದರ್ಶನವನ್ನು ಕೈಯಲ್ಲಿ ಹಿಡಿದವ= ಕೃಷ್ಣ - ವಿಷ್ಣು) ಸಾಧ್ಯ), ಅಮರಪತಿ ಪದದಾಣೆ ಹುಸಿಯಲ್ಲ+ ಎನುತ ಬೆರಗಾಯ್ತು ಸುರ ಕಟಕ.
 • ಕೇಣ = ವ್ಯಾಪಾರ ಶ್ರೇಣಿ, ವಿಧಾನ; ಮರ್ತ್ಯರ ಆಲಿಗಳು= ಮಾನವರ ಕಣ್ಣುಗಳು
ಅರ್ಥ: 'ಬಾಣವನ್ನು ಹೂಡುವ ಬಿಡುವ ವ್ಯಾಪಾರವನ್ನು ಕಾಣುವದೇ ಸಾಧ್ಯವಿಲ್ಲ. ಪರಮಾಣು ಪುಂಜವ-ಗುಚ್ಛವನ್ನು ಕಾಣಬಹುದೇವೇ ಈ ನಮ್ಮ ಮಾನವರ ಕಣ್ಣುಗಳು? ಇದು ಜಾಣಪಣವು- ಜಾಣವಿದ್ಯೆ; ಶಿವನಿಗೂ, ಸುದರ್ಶನವನ್ನು ಕೈಯಲ್ಲಿ ಹಿಡಿದವರಿಗೆ ಸಾಧ್ಯ. ಆ ದೇವೇಂದ್ರನ ಪಾದದಮೇಲೆ ಆಣೆ, ಸುಳ್ಳಲ್ಲ ಈ ಶೌರ್ಯ!' ಎನ್ನತ್ತಾ ಆಕಾಶದಲ್ಲಿ ಯುದ್ಧವನ್ನು ನೋಡುತ್ತಿದ್ದ ದೇವರೆಗಳ ಸಮೂಹ ಬೆರಗಾಯಿತು.
ಏರುವಡೆದರು ಕೆಲರು ಕೆಲರಸು
ಸೂರೆಯೋದದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ |
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ || ೪೬ ||
ಪದವಿಭಾಗ-ಅರ್ಥ: ಏರುವಡೆದರು ಕೆಲರು, ಕೆಲರ+ಅಸು ಸೂರೆಯೋದದು, ಮತ್ತೆ ಕೆಲರ+ ಎದೆ ಡೋರುಗಳ ಪೂರಾಯ ಗಾಯದಲು+ಇ+ ಉಸುರ ತೆಗೆಬಗೆಯ ಕಾರಿದರು ರಕ್ತವನು ಸಗ್ಗಕೆ ಗೂರು ಮಾರಾಡಿದರು ತಲೆಗಳ ಹೇರಿದರು ಹರಣವನುವೊಟ್ಟಿಗೆ ಕಾಲನ+ ಅರಮನೆಗೆ.
 • ಏರುವಡೆದರು (ಆಯಾಸದಿಂದ - ಉಬ್ಬಸದಿಂದ ಏದುಸಿರು ಬಿಟ್ಟರು) ಕೆಲರು, ಕೆಲರ+ಅಸು ಸೂರೆಯೋದದು= ಯುದ್ಧದಲ್ಲಿ ಕೌರವಬ ಸೇನೆಯ ಕೆಲವರು ಏದುಸಿರು ಪಡೆದರು, ಕೆಲವರ ಪ್ರಾಣವೇ ಹೊರಟುಹೋಯಿತು.// ಮತ್ತೆ ಕೆಲರ+ ಎದೆ ಡೋರುಗಳ ಪೂರಾಯ ಗಾಯದಲಿ+ ಉಸುರ ತೆಗೆ ಬಗೆಯ ಕಾರಿದರು ರಕ್ತವನು= ಎದೆಯಗೂಡಿನ ಆಳವಾದ ಗಾಯದಲ್ಲಿ, ಉಸಿರು ಬಿಟ್ಟರೆ ಅದರಲ್ಲಿ ರಕ್ತವನ್ನೇ ಕಾರಿದರು.// ಸಗ್ಗಕೆ ಗೂರು ಮಾರಾಡಿದರು ತಲೆಗಳ ಹೇರಿದರು ಹರಣವನುವೊಟ್ಟಿಗೆ ಕಾಲನ+ ಅರಮನೆಗೆ= ಕೆಲವರು ಹೆದರಿ ಉಬ್ಬಸ ಹೆಚ್ಚಿ ತಲೆಗಳ ಮಾಲೆಮಾಡಿದರು, ಅವರ ಪ್ರಾಣಗಳನ್ನು ಒಟ್ಟು ಸೇರಿಸಿ ಯಮನ ಅರಮನೆಗೆ ಹೇರಿ ಕಳಿಸದರು.
ಅರ್ಥ:ಯುದ್ಧದಲ್ಲಿ ಕೌರವಬ ಸೇನೆಯ ಕೆಲವರು ಏದುಸಿರು ಬಿಟ್ಟರು, ಕೆಲವರ ಪ್ರಾಣವೇ ಹೊರಟುಹೋಯಿತು. ಎದೆಯಗೂಡಿನ ಆಳವಾದ ಗಾಯದಲ್ಲಿ, ಉಸಿರು ಬಿಟ್ಟರೆ ಅದರಲ್ಲಿ ರಕ್ತವನ್ನೇ ಕಾರಿದರು. ಕೆಲವರು ಹೆದರಿ ಉಬ್ಬಸ ಹೆಚ್ಚಿ ಸತ್ತವರ ತಲೆಗಳ ಮಾಲೆಮಾಡಿದರು, ಅವರ ಪ್ರಾಣಗಳನ್ನು ಒಟ್ಟು ಸೇರಿಸಿ ಯಮನ ಅರಮನೆಗೆ ಹೇರಿ ಕಳಿಸಿದರು.
ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ |
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ || ೪೭ ||
ಪದವಿಭಾಗ-ಅರ್ಥ: ಚೆಲ್ಲಿ ಹೋಯಿತು ಕೆಲಕೆ (ಅಕ್ಕಪಕ್ಕ ) ಕೆಲಬರು ಬಿಲ್ಲ ಬಿರುಕೋಲುಗಳ ಬಿಸುಟರು ಗಲ್ಲೆ- ಶಕ್ತಿ+ಗ+ ಕೆಡೆದರು ಕೆಲರು ಪಾರ್ಥನ ಕೋಲ(ಬಾಣದ) ತೋಹಿನಲಿ, ಮೆಲ್ಲ ಮೆಲ್ಲನೆ ಸರಿವ ಕೌರವ ಮಲ್ಲನನು ಕಂಡು+ ಅಟ್ಟಿದನು ತುರುಗಳ್ಳ ಹೋಗದಿರು+ ಎನುತ ಮೂದಲಿಸಿದನು ಕಲಿಪಾರ್ಥ
ಅರ್ಥ: ಕವರವನ ಸೇನೆಯ ಭಟರ ಆಯುಧಗಳು ಅಕ್ಕಪಕ್ಕ ಬಿದ್ದು ಚೆಲ್ಲಾಪಲಿಯಾಗಿ ಹೋಯಿತು.ಕೆಲವರು ಬಿಲ್ಲಿನ ಬಿರುಸಾದ ದಂಡವನ್ನು ಯುದ್ಧಮಅಡಲಅರದೆ ಬಿಸುಟರು. ಕೆಲವರು ಪಾರ್ಥನ ಬಾಣದ ಹೊದೆತದಿಂದ ಶಕ್ತಿಗುಂದಿದರು. ಮೆಲ್ಲ ಮೆಲ್ಲನೆ ಯುದ್ಧದಿಂದ ಸರಿದು ಹೋಗುತ್ತಿರುವ ಕೌರವ ವೀರನನ್ನು ಕಂಡು, ಅವನನ್ನು ಅಟ್ಟಿ ತುರುಗಳ್ಳನೇ ಹೋಗಬೇಡ ಎನ್ನುತ್ತಾ ಕಲಿಪಾರ್ಥನು ಅವನನ್ನು ಮೂದಲಿಸಿದನು.
ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ |
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು || ೪೮ ||
ಪದವಿಭಾಗ-ಅರ್ಥ: ಕಾಯಲು+ ಆಪರೆ ಕರೆಯಿರಾ ಕರ್ಣ+ ಆಯತಾಸ್ತ್ರರನು+ ಅಕಟ ಕೌರವರಾಯ ಸಿಲುಕಿದನು+ ಎಲ್ಲಿ ಭೀಷ್ಮ ದ್ರೋಣ ಕೃಪರು+ ಎನುತ ಬಾಯ ಬಿಡೆ ಕುರುಸೇನೆ ಗುರು ಗಾಂಗೇಯ ಶಕುನಿ ವಿಕರ್ಣ ಕೃಪ ರಾಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು.
ಅರ್ಥ:ಕೌರವನ್ನು ಈ ಸಾಮಾನ್ಯ ಭಟರು ಕಾಯಲು ಸಾಧ್ಯವೇ? ಕರೆಯಿರಪ್ಪಾ ಕರ್ಣ ಮೊದಲಾದ ಬಲವಾದ ಅಸ್ತ್ರ ವಿಶಅರದರನ್ನು. ಅಕಟಾ! ಕೌರವರಾಯ ಸಿಕ್ಕಿ ಬಿದ್ದನು! ಭೀಷ್ಮ ದ್ರೋಣ ಕೃಪರು ಎಲ್ಲಿ? ಎನ್ನುತ್ತಾ, ಭಯದಿಂದ ಕುರುಸೇನೆ ಬಾಯಿ ಬಾಯಿ ಬಿಡಲು, ಗುರು ದ್ರೋಣ, ಗಾಂಗೇಯ(ಭೀಷ್ಮ), ಶಕುನಿ, ವಿಕರ್ಣ, ಕೃಪ, ರಾಧೇಯ(ಕರ್ಣ) ಸೈಂಧವ ಚಿತ್ರಸೇನ ಮೊದಲಾದವರು ಅಲ್ಲಿಗೆ ಸೇರಿಕೊಂಡರು.

ಗೋವುಗಳ ರಕ್ಷಣೆ[ಸಂಪಾದಿಸಿ]

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ |
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ || ೪೯ ||
ಪದವಿಭಾಗ-ಅರ್ಥ: ಇತ್ತ ತುರುಗಳ ಬಿಸುಟು ರಾಯನ ತೆತ್ತಿಗರು ತಲ್ಲಣಿಸಿ(ಹೆದರಿ) ಹಾಯ್ದರು ಹೊತ್ತಿದವು ಮುಸುಡುಗಳು ಸಂಗರ ವಿಜಯ ಗರ್ವಿತರ ಸುತ್ತ ಗೋವರ ಸನ್ನೆಯಲಿ ಪುರದತ್ತ ಮುಂದಾದವು ಪಶುವ್ರಜ ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ.
ಅರ್ಥ: ಇತ್ತ ಕೌರವನಿದ್ದ ಕಡೆ ಬದುಕಿ ಉಳಿದ ರಾಜನ ಕಾವಲಿನ ಸೈನಿಕರು ಗೋವುಗಳನ್ನು ಕೈಬಿಟ್ಟು ಹೆದರಿ ಓಡಿದರು. ಗೆದ್ದವರ ಮತ್ತು ಗೋಪಾಲಕರ ಮುಖಗಳು ಯುದ್ಧಗೆದ್ದ ಗರ್ವದಿಂದ ಹೊತ್ತಿದವು- ಬೆಳಗಿದವು. ಗೋವುಗಳು ಸುತ್ತುವರಿದ ಗೋವಳರ ಸನ್ನೆಯನ್ನು ಅನುಸರಿಸಿ ಪಶುಸಮೂಹ ಮತ್ಸ್ಯಪುರದತ್ತ ಹೊರಟವು. ಉತ್ತರನು ಅತಿಯಾದ ಸಂತೋಷ ಪ್ರವಾಹದಲ್ಲಿ ಮುಳುಗಿಹೋದನು.
ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ |
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ || ೫೦ ||
ಪದವಿಭಾಗ-ಅರ್ಥ: ಬಿಗಿದ ಕೆಚ್ಚಲ ತೊರೆದು+ ಉಗುವ (ಉಕ್ಕುವ, ಸುರಿಯುವ) ಹಾಲುಗಳ ಮಿಗೆ ಸೂಳೆದ್ದ ಬಾಲವ ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ ಅಗಿದು ಸರಳಿಸಿ ನಿಲುವ ಹೊಸಬರ ಸೊಗಡಿಗೆ+ ಅವ್ವಳಿಸುತ್ತ ಗೋವರು ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ.
ಟಿಪ್ಪಣಿ:ಕುಮಾರವ್ಯಾಸನು ದನಗಳ ಹಿಂಡು ಬೆದರಿದಾಗ ಇರುವ ರೀತಿ ಸಂಜೆಯಾದಂತೆ ಹಾಲುತುಂಬಿದ ಕೆಚ್ಚಲೊಡನೆ ತಮ್ಮ ಕೊಟ್ಟಿಗೆ ಕಡೆ ಬರುವ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿ ಇಲ್ಲಿ ವಿವರಿಸಿದ್ದಾನೆ. ಇದು ಒಬ್ಬ ಹುಟ್ಟುಕವಿ ಪ್ರಕೃತಿಯನ್ನೂ ಪ್ರಾಣಿ- ಮನುಷ್ಯರನ್ನೂ ಸಾಮಾನ್ಯರಿಗಿಂತ ಬೇರೆಯಾಗಿ ಅತಿ ಸೂಕ್ಷ್ಮವಾಗಿ ಗಮನಿಸುವ ಶಕ್ತಿಯನ್ನು ಹೊಂದಿರುವುದನ್ನು ತೊರುವುದು. ಹಸುಗಳಿದ್ದ ಕೊಟ್ಟಿಗೆಗೆ ಹೊಸಬರು ಬಂದರೆ ಅವು ಬೆದರಿ- ದೊಡ್ಡದಾಗಿ ಕಣ್ಣು ಬಿಟ್ಟುಕೊಂಡು ಮೂಗು ಅರಳಿಸಿ -ಅವ್ವಳಿಸಿ ನೊಡುತ್ತವೆ. ಕೆಲವು ಕೂಗುತ್ತವೆ.
ಅರ್ಥ:ಹಾಲು ತುಂಬಿ ಬಿಗಿದ ಕೆಚ್ಚಲುಳ್ಳ, ತೊರೆದು - ಸೊರತು ಉಕ್ಕಿ ಸುರಿಯುವ ಹಾಲುಗಳ ಹಸುಗಳು, ಮತ್ತೆ ಬೆದರಿ ಮೇಲಕ್ಕೆ ಎತ್ತಿ ಸೂಳೆದ್ದ ಬಾಲವನ್ನುಳ್ಳ, ಮುಖವನ್ನು ಮೇಲೆ ಎತ್ತಿಕೊಂಡು, ದೆಸೆದೆಸೆಯ- ದಿಕ್ಕುದಿಕ್ಕಿಗೆ ನೋಡುತ್ತಾ, ಬೆಚ್ಚಿ ತಿಂದ ಬಿರುವರಿವ-ಮೆಲಕುಹಾಕಿದ ಆಹಾರವನ್ನು ಅಗಿದು, ನಂಗಲು ಸರಳಿಸಿ- ಸಡಿಲಮಾಡಿ ನಿಲ್ಲುವ ಹಸುಗಳನ್ನೂ, ಹೊಸಬರನ್ನು ಕಂಡು ಅವರ ಮೈಸೊಗಡಿಗೆ- ವಾಸನೆಗೆ ಹೆದರಿ ಅವ್ವಳಿಸುತ್ತ- ಹೆದರಿ ಸಂಕಟಪಡುತ್ತಾ, ಇರುವ ಹಸುಗಳು ಸೈನಿಕರಿಂದ ಬಿಡುಗಡೆಹೊಂದಿ ಗೋವಳರು ತೋರಿಸಿದ ದಾರಿಯಲ್ಲಿ ಒತ್ತೊತ್ತಾಗಿ ಒಂದರ ಮೈಗೆ ಮತ್ತೊಂದು ಮೈತಿಕ್ಕುತ್ತಾ ತೆಕ್ಕೆಹಾಕಿದಂತೆ ಹಿಂಡು ಹಿಂಡಾಗಿ ನಗರದ ಕಡೆ ಮುಂದುವುರಿದವು.
ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು |
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದದು ಹಿಂಡು ಹಿಂಡಿನಲಿ || ೫೧ ||
ಪದವಿಭಾಗ-ಅರ್ಥ: ಕೆಲವು ಕಡೆಗಂದಿಗಳು ಬಾಲದ ಬಳಿಗೆ ಮೂಗಿಟ್ಟು+ ಅಡಿಗಡಿಗೆ ಮನನಲಿದು ಮೋರೆಯನು+ ಎತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು ಮಲೆತು ಕಾಲಲಿ ನೆಲನ ಕೆರೆದು+ಅವ್ವಳಿಸಿ ಮತ್ತೊಂದು+ ಇದಿರುವರೆ ಬಲುಸಲಗನು+ ಈಡಿ+ ಇರಿದು+ ಆಡುತಿರ್ದದು ಹಿಂಡು ಹಿಂಡಿನಲಿ
 • ಕಡೆಗಂದಿ = ಕೊನೆಯ ಕರು ಹಾಕಿದ ಹಸು; (ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.)- ಇಲ್ಲಿ ಬೆಳೆದ ಹೋರಿಗಳು ಎಂದು ಅರ್ಥಮಾಡುವುದೇ ಸರಿ- ಏಕೆಂದರೆ ಹಸುವಿನ ಬಾಲದ ಬುಡದ ಪುಚ್ಛಿಯ ವಾಸನೆ ನೋಡಿ ಆನಂದ ಪಡುವುದು ಹೋರಿಗಳು. ಮುಂದೆ ಹೋರಾಡುವ ಆಟವಾಡುವುದೂ ಹೋರಿಗಳ ಬಗೆಗೆ ಇದೆ.
 • ಕೆಲವು ಕಡೆಗಂದಿ ಹಸುಗಳು ಬಾಲದ ಬಳಿಗೆ ಮೂಗಿಟ್ಟು, ತಮ್ಮ ಊರುಕಡೆ ಹೋಗುತ್ತಿರುವುದನ್ನು ತಿಳಿದು,ಅಡಿಗಡಿಗೆ- ಮತ್ತೆ ಮತ್ತೆ ಮನನಲಿದು- ಮನಸ್ಸಿನಲ್ಲಿ ಆನಂದಪಟ್ಟು, ಮೋರೆಯನು-ಮುಸುಡಿಯನ್ನು- ಸುಂಡಿಯನ್ನು + ಎತ್ತಿ ಸುಕ್ಕಿಸಿ- ನಿರಿಗೆಮಾಡಿ, ಮತ್ತೆ ಹರಿ ಹರಿದು- ಮುಂದೆ ಮುಂದೆ ಹೋಗಿ, ಮಲೆತು- ಸೊಕ್ಕಿನಿಂದ ಕಾಲಲಿ ನೆಲನ- ನೆಲವನ್ನು ಕೆರೆದು+ಅವ್ವಳಿಸಿ- ಬೇಸರಪಟ್ಟು, ಮತ್ತೊಂದು ಹೋರಿ,+ ಇದಿರುವರೆ- ಇದಿರು ಬರಲು, ಬಲುಸಲಗನು ಗಟ್ಟಿಮುಟ್ಟಾದ ಹೋರಿಯು,+ ಈಡಿ-ಸುಂಡಿಯನ್ನು ಬಗ್ಗಿಸಿ ಕೋಡನ್ನು ಎದುರುಮಾಡಿ, ಗುರಿಯಿಟ್ಟು+ ಇರಿದು+ ಆಡುತಿರ್ದದು- ಆಡುತ್ತಿತ್ತು, ಹಿಂಡು ಹಿಂಡಿನಲಿ- ಹಿಂಡಿನಲ್ಲಿ.
ಅರ್ಥ:ಕೆಲವು ಕಡೆಗಂದಿ ಹಸುಗಳು (ಬೆಳೆದ ಹೋರಿಗಳು) ಎದುರು ಹಸುವಿನ ಬಾಲದ ಬಳಿಗೆ ಮೂಗನ್ನಿಟ್ಟು, ಆ ವಾಸನೆಗೆ ಮತ್ತೆ ಮತ್ತೆ ಮನಸ್ಸಿನಲ್ಲಿ ಆನಂದಪಟ್ಟು, ತನ್ನ ಸುಂಡಿಯನ್ನು ಎತ್ತಿ ಖುಶಿಯಿಂದ ಮೂಗನ್ನು ಸುಕ್ಕಿಸಿ ನಿರಿಗೆಮಾಡಿ, ಮತ್ತೆ ಮುಂದೆ ಮುಂದೆ ಹೋಗಿ, ಸೊಕ್ಕಿನಿಂದ ಕಾಲಲ್ಲಿ ನೆಲವನ್ನು ಕೆರೆದು, ಅವ್ವಳಿಸಿ- ಬೇಸರಪಟ್ಟು, ಮತ್ತೊಂದು ದನ ಅಥವಾ ಹೋರಿ ಎದುರಿಗೆ ಬರಲು, ಗಟ್ಟಿಮುಟ್ಟಾದ ಹೋರಿಯು, ಈಡಿ-ಸುಂಡಿಯನ್ನು ಬಗ್ಗಿಸಿ ಕೋಡನ್ನು ಎದುರುಮಾಡಿ, ಗುರಿಯಿಟ್ಟು ಮೆಲ್ಲಗೆ ಇರಿದು- ಕೋಡಿಗೆ ಕೋಡು ಸಿಕ್ಕಿಸಿ ಹಿಂಡು ಹಿಂಡಿನಲ್ಲಿ ಆಡುತ್ತಿದವು. (ಹಸುಗಳು ಹುಲ್ಲನ್ನು ಮೆಂದು ಹಿಂಡಿನಲ್ಲಿ ಮನೆಗೆ ಬರುವಾಗ ಹೀಗೆ ವರ್ತಿಸುತ್ತವೆ.)
ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ || ೫೨ ||
ಪದವಿಭಾಗ-ಅರ್ಥ: ತಿರುಗಿ ಕೆಂದೂಳ+ ಇಡುತ ತುರುಗಳು ಪುರಕೆ ಹಾಯ್ದವು, ನಲವು ಮಿಗಲು+ ಉತ್ತರ ಕಿರೀಟಿಗಳು+ ಆಂತುಕೊಂಡರು(ಅವಲಂಬಿಸಿದರು- ಆಯ್ದುಕೊಂಡರು) ಮತ್ತೆ ಕಾಳಗವ, ಅರಸು ಮೋಹರ ಮುರಿದು ಹರಿಬವ (ಕಾಳಗ) ಮರಳಿಚುವ ಮಿಡುಕುಳ್ಳ(ಶೌರ್ಯವುಳ್ಳ) ವೀರರ ಧುರಕೆ(ಯುದ್ಧಕ್ಕೆ) ಬರಹೇಳು+ ಎನುತ ಬಾಣವ ತೂಗಿದನು ಪಾರ್ಥ
ಅರ್ಥ:ಹಸುಗಳು ಹಿಂತಿರುಗಿ ಕೆಂದೂಳನ್ನು ಎಬ್ಬಿಸುತ್ತಾ ಮತ್ಸ್ಯಪುರಕ್ಕೆ ಹೋದವು. ಸಂತಸುವು ಉಕ್ಕುತ್ತಿರಲು ಉತ್ತರನೂ ಅರ್ಜುನನೂ ಮತ್ತೆ ಕಾಳಗವನ್ನು ಮಾಡುವ (ಮುಂದುವರಿಸುವ) ಕಾರ್ಯವನ್ನು ಆಯ್ದುಕೊಂಡರು. ಕೌರವ ಅರಸನ ಪಡೆ ಮುರಿದು- ಸೋತುಹೋಗಲು, ಕಾಳಗವನ್ನು ಮತ್ತೆ ಮಾಡುವ ಸಾಹಸ ಶಕ್ತಿಯುಳ್ಳ ವೀರರನ್ನು ಯುದ್ಧಕ್ಕೆ ಬರಲು ಹೇಳು ಎನ್ನುತ್ತಾ ಅರ್ಜುನನು ಸವಾಲು ಹಾಕಿ ಬಾಣವನ್ನು ಎತ್ತಿ ತೂಗಿದನು. [೩][೪][೫] [೬]
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
 3. [೧]
 4. [೨]
 5. ಕನ್ನಡ ಸಾಹಿತ್ಯ ಪರಿಷತ್ ನಿಘಂಟು.
 6. ಸಿರಿಗನ್ನಡ ಅರ್ಥಕೋಶ - ಶಿವರಾಮ ಕಾರಂತ