ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೭)[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ರಾಯ ಕಟಕಾಚಾರ್ಯನಿಂದ ವಿ

ಘಾಯದಲಿ ನೊಂದನಲ ಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ||
ಪದವಿಭಾಗ-ಅರ್ಥ: ರಾಯ = ರಾಜ ದ್ರುಪದನು, ಕಟಕಾಚಾರ್ಯನಿಂದ= ಯುದ್ಧವಿಶಾರದ ದ್ರೋಣನಿಂದ, ವಿಘಾಯದಲಿ= ವಿಶೇಷವಾದ ಪೆಟ್ಟಿನಿಂದ ನೊಂದು+ ಅನಲ= ಬೆಂಕಿ, ಮುಖದಲಿ= ಯಜ್ಞಮುಖದಲ್ಲಿ, ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ.
ಅರ್ಥ:ರಾಜ ದ್ರುಪದನು ಯುದ್ಧವಿಶಾರದನಾದ ದ್ರೋಣನಿಂದ ಆದ ತೀವ್ರವಾದ ಪೆಟ್ಟಿನಿಂದ ನೊಂದು, ಯಜ್ಞಮುಖದಲ್ಲಿ ರಾಜ ದ್ರುಪದನು ಧೃಷ್ಟದ್ಯುಮ್ನ ಮತ್ತು ದ್ರೌಪದಿಯರನ್ನು ಮಕ್ಕಳಾಗಿ ಪಡೆದನು. [೧] [೨] [೩] [೪]

♠♠♠

ಪಾಂಡವರು ಕೌರವರು ಶಸ್ತ್ರವಿದ್ಯಾಪರಿಣತಿ ಪಡೆದರು[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ ||
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು
ಪಾಳಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ || (೧) ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ(ಭೂಮಿಯನ್ನು ಪಾಲಿಸುವವನು)= ಧರಿತ್ರೀಪಾಲನಾದ ಜನಮೇಜಯನೇ ಕೇಳು, ಕಲಿತರು, ನಿಮ್ಮ ಪೂರ್ವ= ಹಿಂದಿನ ನೃಪಾಲಕರು= ರಾಜರು ಸ-ರಹಸ್ಯ= ರಹಸ್ಯವಾದ ಸಾಂಗ+ ಉಪಾಂಗ ವಿದ್ಯೆಗಳ,= ಸಾಂಗವೂ, ಉಪಾಂಗವೂ ಆದ ವಿದ್ಯೆಗಳಗಳನ್ನು ಸ್ಥೂಲದಲಿ ಸೂಕ್ಷ್ಮದಲಿ= ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ, ಬಹಳ ವಿಶಾಲದಲಿ= ವಿಸ್ತಾರವಾಗಿಯೂ, ಸಂಕೋಚದಲಿ= ಸಂಕ್ಷೇಪವಾಗಿಯೂ, ಲಘು ಪಾಳಿಯಲಿ ಹಾರದಲಿ (ಹಾರಾಟ?*)= ಮೆಲ್ಲಗೆ ಮಾಡುವ ಯುದ್ಧದಲ್ಲಿ, ಶಕ್ತಿ ಉಪಯೋಗಿಸಿ ಮಾಡುವ ಯುದ್ಧದಲ್ಲಿ (ಹಾರಿ ಮಾಡುವ ಯುದ್ಧದಲ್ಲಿ,?) ವಿವಿಧ+ ಅನುಪ್ರಯೋಗದಲಿ= ಅನೇಕ ಬಗೆಯ ಸಹಾಯಕ ಪ್ರಯೋಗದಲ್ಲಿ ಯುದ್ಧಮಾಡುವುದನ್ನು, ಕಲಿತರು.
 • ಹಾರ, ಹಾರದಲಿ = ಶಕ್ತಿ, ಶಕ್ತಿಯ ಉಪಯೋಗದಲ್ಲಿ, ಎಂದು ಎ.ವಿ. ಪ್ರಸನ್ನ (ಕುಮಾರವ್ಯಾಸ ಭಾರತ ಸಂಶೋಧನೆಯಲ್ಲಿ ಪಿ.ಎಚ್‍ಡಿ) ಅರ್ಥಮಾಡಿದ್ದಾರೆ. ಕಠಿಣ,ಗಟ್ಟಿ, ಹೊಡೆತ, ಪ್ರಹಾರ, ಅಂತಿಮ, ನಿರ್ಣಾಯಕ. ಪ್ರಹಾರ= ಬಲವಾದ ಹೊಡೆತ; ಹಾರ = ಹೊಡೆತ.[೫]
ಅರ್ಥ:ಧರಿತ್ರೀಪಾಲನಾದ ಜನಮೇಜಯನೇ ಕೇಳು, ಕಲಿತರು, ನಿಮ್ಮ ಹಿಂದಿನ ರಾಜರು ರಹಸ್ಯವಾದ ಸಾಂಗವೂ, ಉಪಾಂಗವೂ ಆದ ವಿದ್ಯೆಗಳಗಳನ್ನು ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ, ಬಹಳ ವಿಸ್ತಾರವಾಗಿಯೂ, ಸಂಕ್ಷೇಪವಾಗಿಯೂ, ಲಘು ಪಾಳಿಯಲ್ಲಿ- ಮೆಲ್ಲಗೆ ಮಾಡುವ ಯುದ್ಧದಲ್ಲಿ, ಶಕ್ತಿ ಉಪಯೋಗಿಸಿ ಮಾಡುವ ಯುದ್ಧದಲ್ಲಿ (ಹಾರಿ ಮಾಡುವ ಯುದ್ಧದಲ್ಲಿ,?) ಅನೇಕ ಬಗೆಯ ಸಹಾಯಕ ಪ್ರಯೋಗದಲ್ಲಿ ಯುದ್ಧಮಾಡುವುದನ್ನು ಕಲಿತರು.
ಎಡ ಬಲದ ಮಯಣಾಮ ಹೊಳಪಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸುತಿಯ ಸರಳ ಸೋಹಿನಲಿ |
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡದೃಢಾಯಾತಿಕೆಗಿದು
ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ || (೨)
ಪದವಿಭಾಗ-ಅರ್ಥ: ಎಡ ಬಲದ ಮಯಣಾಮ ಹೊಳಪಿನ=ಎಡ ಬಲದಲ್ಲಿ ಮಯಣದ (ರಾಳದ?) ಹೊಳಪಿನಂತೆ, ಕಡಲ ತೆರೆವೆರೆಯದ+ ಅತಿ ಬವರಿಯ (ಹೋರಾಡುವ ಭಟ)= ಸಮುದ್ರದ ತೆರೆಯಂತೆ (ಚಲಿಸುವ) ಬಿಡೆಯ= ಕಡುಮಿಂಚಿನ, ದುವ್ವಾಳಿಗಳ= ತೀವ್ರಗತಿಯ, ಸುತಿಯ=ಭೋಗಿಸುವರು, ಓಡಿಸುವವರು ; ಸರಳ ಸೋಹಿನಲಿ (ಸೋನೆ)= ಬಾಣಗಳ ಮಳೆಯಲ್ಲಿ ಕಡುಗಲಿಗಳ+ ಏರಾಟದಲಿ= ಪೌರುಷದಲ್ಲಿ, ಮಿಗೆಝಡಿ = ಅತಿಯಾದ ಹೊಡೆತಗಳಲ್ಲಿ, ಪವಾಡ ದೃಢಾಯಾತಿಕೆಗೆ+ ಇದುಪಡಿಯ (ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ)= ಇದು ಜಾಣತನದ ಪ್ರತಿರೂಪ ಎನ್ನುವಂತೆ, ನಳ ರೇವಂತರು+ ಎಂದುದು= ಎಂದು ನೋಡುಗರು ಹೇಳಿದರು, ರಾವುತಿಕೆಗಳಲಿ= ಕುದುರೆ ಸವಾರಿಕೆಯಲ್ಲಿ.
ಅರ್ಥ: ಎಡಬಲದಲ್ಲಿ ಹೊಳೆಯುತ್ತಿರುವ, ಕಡಲತೆರೆಗಳಂತೆ ಮೇಲೆ ಮೇಲೆ ಓಡುತ್ತಿರುವಂತೆ ಕುದುರೆಗಳನ್ನು ತಿರುಗಿಸುತ್ತಾ, ಬಾಣಗಳ ಮಳೆಯಲ್ಲಿ, ಅತಿಯಾದ ಹೊಡೆತಗಳಲ್ಲಿ, ಅದಕ್ಕೆ ಸಿಕ್ಕದಂತೆ ನೆಡೆಸುವ ಪವಾಡದಂತೆ ಧೃಡವಾದ ಕುದುರೆ ಸವಾರಿಯಲ್ಲಿ ಅದನ್ನು ಓಡಿಸುವ 'ರಾವತ'ತನದಲ್ಲಿ ಪಾಂಡವರು ಕೌರವರು ನಳ, ರೇವಂತರ ಪ್ರತಿರೂಪ ಅಥವಾ ಸರಿಸಮಾನ ಎಂದು ನೋಡುಗರು ಹೇಳಿದರು.(ಈ ಪದ್ಯದ ಅನ್ವಯ ಮತ್ತು ಅರ್ಥ ಕಠಿಣವಿದೆ)
ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗೆಳೆವ ವಿದೂರ ಪಾತದಿ
ಗಗನ ಯಂತ್ರವನೆಸುವ ಜೋಕೆಯ ಜೋದ ವಿದ್ಯದಲಿ |
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವನಿಯ ದಂತಿಶಿಕ್ಷೆಗೆ
ಮಿಗಿಲು ಭಗದತ್ತಾದಿಗಳಿಗೆಂದುದು ಕುಮಾರಕರ || (೩)
ಪದವಿಭಾಗ-ಅರ್ಥ: ನಗವನು+ ಒಡ್ಡಿದರೆ+ ಒಂದೆ ಸರಳಲಿ ಹುಗಿಲುಗೆಳೆವ= (ನಗ= ಬೆಟ್ಟ),(ಹುಗಿಲು=ಸೀಳಿರುವ ಸ್ಥಿತಿ) ಬೆಟ್ಟವನ್ನು ಎದುರಿಗೆ ಒಡ್ಡಿದರೂ ಒಂದೇ ಬಾಣದಲ್ಲಿ ಸೀಳುವ, ವಿದೂರ ಪಾತದಿ ಗಗನ ಯಂತ್ರವನು+ ಎಸುವ (ಎಸು= ಬಾಣದಿಂದ ಹೊಡೆ)=ದೂರದಿಂದ ಗಗನ ಯಂತ್ರವನ್ನು ಹೊಡೆಯುವ, ಜೋಕೆಯ ಜೋದ ವಿದ್ಯದಲಿ= ಎಚ್ಚರಿಕೆಯಿಂದ ಚುಚ್ಚುವ ವಿದ್ಯೆಯಲ್ಲಿ, ಉಗಿವ ಬಿಡುವ+ ಎಡ ಬಲನ ಬವರಿಯಲಿ+ ಉಗಿವ ಲವನಿಯ(ಉಗಿವ= ತೆಗೆಯುವ; (ಬವರ= ಯುದ್ಧ) (ಲವನ= ವಿದ್ಯಾವಂತ) ಭರ್ಚಿಯನ್ನು (?) ತೆಗೆಯುವ ಹೊಡೆಯುವ ಯುದ್ಧದಲ್ಲಿ, ದಂತಿಶಿಕ್ಷೆಗೆ=ಆನೆಯ ಮಾವುತ ಯುದ್ಧವಿದ್ಯೆಯಲ್ಲಿ, ಮಿಗಿಲು ಭಗದತ್ತಾದಿಗಳಿಗೆ+ ಎಂದುದು= ಭಗದತ್ತಾದಿಗಳಿಗಿಂತ ಹೆಚ್ಚಿನದು ಕುಮಾರಕರ= ಪಾಂಡವ ಕೌರವರ ಯುದ್ಧ ಕೌಶಲ.
ಅರ್ಥ: ಪಾಂಡವ ಕೌರವರ ಯುದ್ಧ ಕೌಶಲ. ಬೆಟ್ಟವನ್ನು ಎದುರಿಗೆ ಒಡ್ಡಿದರೂ ಒಂದೇ ಬಾಣದಲ್ಲಿ ಸೀಳುವ, ದೂರದಿಂದ ಗಗನ ಯಂತ್ರವನ್ನು ಹೊಡೆಯುವ, ಎಚ್ಚರಿಕೆಯಿಂದ ಚುಚ್ಚುವ ವಿದ್ಯೆಯಲ್ಲಿ, ಭರ್ಚಿಯನ್ನು ತೆಗೆಯುವ ಹೊಡೆಯುವ ಯುದ್ಧದಲ್ಲಿ, ಆನೆಯ ಮಾವುತ ಯುದ್ಧವಿದ್ಯೆಯಲ್ಲಿ, ನೋಡುತ್ತಿದ್ದವರು ಭಗದತ್ತಾದಿಗಳಿಗಿಂತ ಹೆಚ್ಚಿನದು ಎಂದರು.
ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ |
ಪ್ರಥಿತ ರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರ ನರರೊಳಿಲ್ಲೆಂದ || (೪) ||
ಪದವಿಭಾಗ-ಅರ್ಥ: ರಥವ ರಕ್ಷಿಸಿಕೊಂಡು ನಿಜ ಸಾರಥಿಯ ಕಾಯಿದು= ತನ್ನ ರಥವನ್ನು ರಕ್ಷಿಸಿಕೊಂಡು ತನ್ನ ಸಾರಥಿಯನ್ನು ಕಾಯ್ದುಕೊಂಡು, ಮುಂದೆ ಹೂಡಿದ ರಥಹಯಂಗಳ ಮೈಗಳಲಿ= ಮುಂದೆ ಹೂಡಿರುವ ಕುದುರೆಗಳಿಗೆ, ಮಸೆಗಾಣದಂದದಲಿ= ಬಾಣ ತಗುಲದಂತೆ, ಪ್ರಥಿತ=ಹೆಸರುವಾಸಿಯಾದ, ರಿಪು ಶಸ್ತ್ರಾಸ್ತ್ರವನು ರಿಪು=ಶತ್ರುಗಳ ಶಸ್ತ್ರಾಸ್ತ್ರವನ್ನು, ರಥಿಕರನು ಸಮರದಲಿ= ರಥಿಕರನ್ನು ಯುದ್ಧದಲ್ಲಿ, ಜಯಿಸುವ ರಥಿಕ ವಿದ್ಯೆದೊಳು+ ಇವರ ಸರಿ ಸುರ ನರರೊಳು ಇಲ್ಲೆಂದ= ಮನುಷ್ಯರಲ್ಲಿಯೂ ದೇವತೆಗಳಲ್ಲಿಯೂ ಇಲ್ಲ ಎಂದ.
ಅರ್ಥ: ತನ್ನ ರಥವನ್ನು ರಕ್ಷಿಸಿಕೊಂಡು ತನ್ನ ಸಾರಥಿಯನ್ನು ಕಾಯ್ದುಕೊಂಡು, ಮುಂದೆ ಹೂಡಿರುವ ಕುದುರೆಗಳಿಗೆ, ಬಾಣ ತಗುಲದಂತೆ,ಹೆಸರುವಾಸಿಯಾದ, ಶತ್ರುಗಳ ಶಸ್ತ್ರಾಸ್ತ್ರವನ್ನು, ರಥಿಕರನ್ನು ಯುದ್ಧದಲ್ಲಿ, ಜಯಿಸುವ ರಥಿಕ ವಿದ್ಯದಲ್ಲಿ ಇವರ ಸರಿಸಮಾನರು ಮನುಷ್ಯರಲ್ಲಿಯೂ ದೇವತೆಗಳಲ್ಲಿಯೂ ಇಲ್ಲ ಎಂದ.
ಇನಿಬರೊಳುಬಿಲುಗಾರನಾರ
ರ್ಜುನನೊಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ ||
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ || (೫) ||
ಪದವಿಭಾಗ-ಅರ್ಥ: ಇನಿಬರೊಳು= ಇವರಲ್ಲಿ, ಬಿಲುಗಾರನು+ ಆರ್+ ಅರ್ಜುನನೊ ಕರ್ಣನೊ ಭೀಮ ದುರ್ಯೋಧನರೊ ಮಾದ್ರೀಸುತರೊ ಮೇಣ್= ಮತ್ತೆ, ದುಶ್ಯಾಸನಾದಿಗಳೊ, ಇವರಲ್ಲಿ ಮನದಿ ಕೈಯಲಿ ಕಂಗಳೋ,= ಮನಸ್ಸಿನಲ್ಲಿ ಕೈ ಮತ್ತು ಕಣ್ಣಗಳೊ, ಲೋಚನವೆ= ದೃಷ್ಠಿಯೋ, ಕಂಗಳೊ,= ಅಥವಾ ಗುರಿ ಕೇವಲ ಕಣ್ನಿನಲ್ಲಿ ಮಾತ್ರಾ ಇದೆಯೋ ಕಾಣಬೇಕೆಂದು+ ಎನುತ, ತೀಳಿಯಬೇಕೆಂದು ಗುರು ರಚಿಸಿದನು ಲಕ್ಷ್ಯವನು+ ಒಂದು ವೃಕ್ಷದಲಿ = ಒಂದು ಮರದಲ್ಲಿ ಲಕ್ಷ್ಯವನ್ನು (ಗುರಿಯನ್ನು ಹೊಡೆಯಬೇಕಾದ ವಸ್ತುವನ್ನು ರಚಿಸಿದನು ದ್ರೋಣ)
ಅರ್ಥ: ಕೌರವರು ಮತ್ತು ಪಾಂಡವರು ಇವರಲ್ಲಿ, ಉತ್ತಮ ಬಿಲ್ಲುಗಾರನು ಯಾರು ಅರ್ಜುನನೊ, ಕರ್ಣನೊ, ಭೀಮ ದುರ್ಯೋಧನರೊ, ಮಾದ್ರೀಸುತರಾದ ನಕುಲ ಸಹದೇವರೋ, ಮತ್ತೆ ದುಶ್ಯಾಸನಾದಿಗಳೊ, ಇವರಲ್ಲಿ ಮನಸ್ಸಿನಲ್ಲಿ ಕೈ ಮತ್ತು ಕಣ್ಣಗಳೊ,ಅಥವಾ ದೃಷ್ಠಿಯೋ, ಅಥವಾ ಗುರಿ ಕೇವಲ ಕಣ್ನಿನಲ್ಲಿ ಮಾತ್ರಾ ಇದೆಯೋ ತೀಳಿಯಬೇಕೆಂದು ಗುರು ದ್ರೋಣನು ಒಂದು ಮರದಲ್ಲಿ ಲಕ್ಷ್ಯವನ್ನು - ಗುರಿಯನ್ನು ಹೊಡೆಯಬೇಕಾದ ವಸ್ತುವನ್ನು ರಚಿಸಿದನು.
ಕಾಣದಾರದು ಲಕ್ಷ್ಯ ವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದಿರೈ ಹೊಣಿಸಿದಿರೈ ಹೂಡಿದಂಬಿನಲಿ ||
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯಂಬೀ ಗುರುವಿನಣಕವ
ನಾಣಿಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ || (೬) ||
ಪದವಿಭಾಗ-ಅರ್ಥ: ಕಾಣದು+ ಆರದು= ಹೊಡೆಯಬೇಕಾದ ಲಕ್ಷ್ಯವು, ಗುರಿಯ ವಸ್ತು, ಕಾಣದಾರದು= ಯಾರ ಕಣ್ಣಿಗೂ ಸುಲಭದಲ್ಲಿ ಬೀಳದು. ಲಕ್ಷ್ಯವು+ ಅಗ್ಗದಜಾಣ ಭಟರಿಗೆ = ಅಗ್ಗದ = ಉತ್ತಮ ಕಟ್ಟಿದ+ ಒರೆಯಿದು= ಈ ಲಕ್ಷ್ಯವು ಉತ್ತಮ ಜಾಣ ಭಟರಿಗಾಗಿ ಕಟ್ಟಿದ ಒರೆ= ಪರೀಕ್ಷೆ, ಸವಾಲು, ಕಾಣಿಸಿದಿರೈ= ಕಂಡಿರಾ ಗುರಿಯನ್ನ, ಹೊಣಿಸಿದಿರೈ= ಗುರಿಇಡಬಲ್ಲಿರಾ, ಹೂಡಿದಂಬಿನಲಿ= ಬಿಲ್ಲಿಗೆ ಹೂಡಿದ ಬಾಣದಲ್ಲಿ? ಕಾಣಿರೇ ಕರ್ಣಾದಿ ಸುಭಟ ಶ್ರೇಣಿಯಂಬ+ ಈ ಗುರುವಿನ+ಅಣಕವನು = ಕರ್ಣ ಮೊದಲಾದ ವೀರರು ಗುರಿಯನ್ನು ಕಾಣಲಾಗಲಿಲ್ಲವೇ?, ಅಣಕವನು (ಕೇವಲ ಪರೀಕ್ಷೆಗಾಗಿ ಇಟ್ಟ ವಸ್ತುವನ್ನು)+ ಆಣಿಯಿಟ್ಟವೊಲ್+ ಎಚ್ಚು ಲಕ್ಷ್ಯವ ಕೆಡಹಿದನು ಪಾರ್ಥ = ಅಣಕ ಲಕ್ಷ್ಯವನ್ನು ಶಪಥಮಾಡಿ ಹೊಡೆಯುವಂತೆ ಪಾರ್ಥನು ಲಕ್ಷ್ಯವನ್ನು ಹೊಡೆದು ಕೆಡವಿದನು.
ಅರ್ಥ: ಹೊಡೆಯಬೇಕಾದ ಲಕ್ಷ್ಯವು ಯಾರ ಕಣ್ಣಿಗೂ ಸುಲಭದಲ್ಲಿ ಬೀಳದು. ಈ ಲಕ್ಷ್ಯವು ಉತ್ತಮ ಜಾಣ ಭಟರಿಗಾಗಿ ಕಟ್ಟಿದ ಪರೀಕ್ಷೆ, ಸವಾಲು. ಕಂಡಿರಾ ಗುರಿಯನ್ನ, ಬಿಲ್ಲಿಗೆ ಹೂಡಿದ ಬಾಣದಲ್ಲಿ ಗುರಿಇಡಬಲ್ಲಿರಾ, ಕರ್ಣ ಮೊದಲಾದ ವೀರರು ಗುರಿಯನ್ನು ಕೇವಲ ಪರೀಕ್ಷೆಗಾಗಿ ಇಟ್ಟ ವಸ್ತುವನ್ನು ಕಾಣಲಾಗಲಿಲ್ಲವೇ? ಆದರೆ ಅಣಕ ಲಕ್ಷ್ಯವನ್ನು ಶಪಥಮಾಡಿ ಹೊಡೆಯುವಂತೆ ಪಾರ್ಥನು ಲಕ್ಷ್ಯವನ್ನು ಹೊಡೆದು ಕೆಡವಿದನು.
ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲ ವ್ಯಕನ |
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ || (೭)
ಪದವಿಭಾಗ-ಅರ್ಥ:ಹಿರಿದು ಮೆಚ್ಚಿ= ಬಹಳವಾಗಿ ಮೆಚ್ಚಿ, ಧನಂಜಯನನು+ ಆದರಿಸಿ= ಗೌರವಿಸಿ, ಕೊಟ್ಟನು ಸಕಲ ವಿದ್ಯವನು+ ಉರುತರ ಪ್ರೇಮದಲಿ= ಬಹಳ ಪ್ರೀತಿಯಿಂದ, ಸೆಣಸಿದೊಡೆ+ ಏಕಲವ್ಯಕನ ಬೆರಳ ಕೊಂಡನು= ಯುದ್ಧಮಾಡಿದರೆ ಅವನಿಗಿಂತ ಹೆಚ್ಚಿನವನಾಗಬಾರದೆಂದು ಗುರುದಕ್ಷಿಣೆಯಾಗಿ ಏಕಲವ್ಯಕನ ಹೆಬ್ಬೆರಳನ್ನು ಪಡೆದುಕೊಂಡನು. ಪಾರ್ಥನನು ಪತಿಕರಿಸಿದನು=(1. ಅಂಗೀಕರಿಸು. 2. ಆದರಿಸು. 3. ಕೃಪೆಮಾಡು) ಆದರಿಸಿದನು, ತನಗಾದ ನೆಗಳಿನ (ಮೊಸಳೆಯ)+ ಅದರ ಧುರದ ಭೀತಿಯನು ಗೆಲಿದನು= ಮಸಳೆಯ ಜೊತೆ ಹೋರಾಡವ ಭಯವನ್ನು ಹೋಗಲಾಡಿಸಿಕೊಂಡನು, ನರನ= ಅರ್ಜುನನ ದೆಸೆಯಿಂದ.
ಅರ್ಥ:ದ್ರೋಣನು ಅರ್ಜುನನ್ನು ಬಹಳವಾಗಿ ಮೆಚ್ಚಿ, ಗೌರವಿಸಿ, ಸಕಲ ವಿದ್ಯವನ್ನೂ ಬಹಳ ಪ್ರೀತಿಯಿಂದ ಕಲಿಸಿ ಕೊಟ್ಟನು. ಯುದ್ಧಮಾಡಿದರೆ ಏಕಲವ್ಯನು ಇವನಿಗಿಂತ ಹೆಚ್ಚಿನವನಾಗಬಾರದೆಂದು ಗುರುದಕ್ಷಿಣೆಯಾಗಿ ಏಕಲವ್ಯಕನ ಹೆಬ್ಬೆರಳನ್ನು ಪಡೆದುಕೊಂಡನು. ಪಾರ್ಥನನ್ನು ಪ್ರಿಯಶಿಷ್ಯನನ್ನಾಗಿ ಅಂಗೀಕರಿಸಿದನು ಮತ್ತು ಆದರಿಸಿದನು. ಒಮ್ಮೆ ದ್ರೋಣನಿಗೆ ಮೊಸಳೆಯ ಆಕ್ರಮಣದ ಭೀತಿಯಾಯಿತು. ಮೊಸಳೆಯನ್ನು ಕೊಂದ ಅರ್ಜುನನಿಂದ ದ್ರೋಣನಿಗೆ ಅದರ ಜೊತೆ ಹೋರಾಡುವ ಭಯ ತಪ್ಪಿತು,
 • ಟಿಪ್ಪಣಿ: ಪಂಪ ಭಾರತ::ಅಶ್ವಾಸ೨- ಪದ್ಯ-೬೦:ಅರ್ಥ:ಒಮ್ಮೆ ಅರ್ಉನನಿಗೆ ಪ್ರತಿಬಿಂಬದ ಗುರಿಯನ್ನು ಒಡ್ಡಿ, ಆಳವಾದ ನೀರಿನಲ್ಲಿ ತನ್ನನ್ನು ಹಿಡಿದಿದ್ದ ಮೊಸಳೆಯನ್ನು ಅದು ಅರಚಿಕೊಂಡು ಸಾಯುವ ಹಾಗೆ ಬಾಣ ಪ್ರಯೋಗಮಾಡಿಸಿ ನೋಡಿ, ‘ಅರೆ, ಹೋ, ಅಜ, ಭಾಪು, ಎಂಬ ಮೆಚ್ಚಿಕೆಯ ಮಾತುಗಳಿಂದ ಗುರುವು ಅರ್ಜುನನನ್ನು ಹೊಗಳಿದನು.
ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ |
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ || (೮)
ಪದವಿಭಾಗ-ಅರ್ಥ: ಇರಲಿರಲು= ಹೀಗೆ ಹಸ್ತನಾವತಿಯಲ್ಲಿ ಇರುತ್ತಿರಲು, ಫಲುಗುಣನನು+ ಎಕ್ಕಟಿಗರೆದು= ಅರ್ಜುನನ್ನು ಏಕಾಂತಕ್ಕೆ ಕರೆದು, ಶಸ್ತ್ರಾಸ್ತ್ರ ಪ್ರಪಂಚದ ಪರಮ ಸಿದ್ಧಾಂತವನು= ಶಸ್ತ್ರಾಸ್ತ್ರಗಳ ಎಲ್ಲಾ ವಿಚಾರಗಳ ಪರಮ ಸಿದ್ಧಾಂತಗಳನ್ನು ಅರ್ಜುನನಿಗೆ ಕಲಿಸಿ, ಮಹಾಸ್ತ್ರ ಸಂಗತಿಯ ಕರುಣಿಸಿದನು+ ಆಗ್ನೇಯ ಪೌರಂದರ (ಇಂದ್ರಾಸ್ತ್ರ) ಮಹಾ ವಾಯವ್ಯ ವಾರುಣಹರಸಖ ಬ್ರಹ್ಮಾಸ್ತ್ರ ಸೌರ+ ಉರಗ ನಗಾದಿಗಳ = ಮಹಾಸ್ತ್ರಗಳಾದ ಆಗ್ನೇಯ, ಇಂದ್ರಾಸ್ತ್ರ, ಮಹಾವಾಯವ್ಯ ಅಸ್ತ್ರ, ವಾರುಣಹರಸಖ ಬ್ರಹ್ಮಾಸ್ತ್ರ, ಸೌರಾಸ್ತ್ರ, ಉರಗ- ಸರ್ಪಾಸ್ತ್ರ, ನಗ+ ಆದಿಗಳ ಸಂಗತಿಯ ಕರುಣಿಸಿದನು = ಉಪದೇಶಮಾಡಿ ಕಲಿಸಿದನು.
ಅರ್ಥ: ಹೀಗೆ ಹಸ್ತನಾವತಿಯಲ್ಲಿ ಇರುತ್ತಿರಲು, ಅರ್ಜುನನ್ನು ಏಕಾಂತಕ್ಕೆ ಕರೆದು, ಶಸ್ತ್ರಾಸ್ತ್ರಗಳ ಎಲ್ಲಾ ವಿಚಾರಗಳ ಪರಮ ಸಿದ್ಧಾಂತಗಳನ್ನು ಅರ್ಜುನನಿಗೆ ಕಲಿಸಿ, ಮಹಾಸ್ತ್ರ ಸಂಗತಿಯ ಕರುಣಿಸಿದನು. ಅವು ಆಗ್ನೇಯಾಸ್ತ್ರ, ಇಂದ್ರಾಸ್ತ್ರ, ಮಹಾವಾಯವ್ಯ ಅಸ್ತ್ರ, ವಾರುಣಹರಸಖ ಬ್ರಹ್ಮಾಸ್ತ್ರ, ಸೌರಾಸ್ತ್ರ, ಸರ್ಪಾಸ್ತ್ರ, ನಗಾಸ್ತ್ರ (ಬೆಟ್ಟಗಳ ಅಸ್ತ್ರ),ಮೊದಲಾದವುಗಳ ಸಂಗತಿಯನ್ನು = ಉಪದೇಶಮಾಡಿ ಕರುಣಿಸಿದನು- ಕಲಿಸಿದನು.

ಶಸ್ತ್ರಾಸ್ತ್ರ ಸ್ಪರ್ಧೆಯ ಪ್ರದರ್ಶನ[ಸಂಪಾದಿಸಿ]

ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ |
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ (೯) ||
ಪದವಿಭಾಗ-ಅರ್ಥ: ಒಂದು ದಿನ ವೊಡ್ಡೋಲಗಕೆ ಗುರುಬಂದು= ಒಂದು ದಿನ ದೃತರಾಷ್ಟ್ರನ ಒಡ್ಡೋಲಗಕೆ (ರಾಜಸಭೆಗೆ) ಗುರುದ್ರೋಣರು ಬಂದರು. ಬಂದು ಮನ್ನಿಸಿಕೊಂಡು= ಗೌರವವನ್ನು ಸ್ವೀಕರಿಸಿ,-> ಮುಗಳುನಗೆಯಿಂದ- ನಸುನಗುತ+ ಎಂದನು+ ಆ ಧೃತರಾಷ್ಟ್ರ ಗಂಗಾಸೂನು= ಭೀಷ್ಮ ವಿದುರರಿಗೆ, ಇಂದು ಪರಿಯಂತರವು= ಇಷ್ಟು ದಿನಗಳಕಾಲ, ನಿಮ್ಮಯ ನಂದನರನು (ಮಕ್ಕಳನ್ನು)+ ಓದಿಸಿದೆನು (ಶಸ್ತ್ರವಿದ್ಯಾಭ್ಯಾಸ ಮಾಡಿಸಿದೆನು)+ ಅವರು+ ಅಭಿನಂದನೀಯರೊ= ಮೆಚ್ಚುಗೆಗೆ ಯೋಗ್ಯರೊ, ನಿಂದ್ಯರೋ= ತೆಗಳಿಕೆಗೆ ಯೋಗ್ಯರೊ, ನೀವ್ ನೋಡಬೇಕು+ ಎಂದ.
ಅರ್ಥ: ಒಂದು ದಿನ ದೃತರಾಷ್ಟ್ರನ ಒಡ್ಡೋಲಗಕ್ಕೆ (ರಾಜಸಭೆಗೆ) ಗುರುದ್ರೋಣರು ಬಂದರು. ಬಂದು ಗೌರವವನ್ನು ಸ್ವೀಕರಿಸಿ, ಮುಗಳುನಗೆಯಿಂದ ಆ ಧೃತರಾಷ್ಟ್ರ, ಭೀಷ್ಮ ವಿದುರರಿಗೆ, ಇಷ್ಟು ದಿನಗಳಕಾಲ, ನಿಮ್ಮ ಮಕ್ಕಳನ್ನು ಶಸ್ತ್ರವಿದ್ಯಾಭ್ಯಾಸ ಮಾಡಿಸಿದೆನು. ಅವರು ಮೆಚ್ಚುಗೆಗೆ ಯೋಗ್ಯರೊ, ತೆಗಳಿಕೆಗೆ ಯೋಗ್ಯರೊ ಎಂದು ನೀವು ನೋಡಬೇಕು ಎಂದರು.
ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ಮಿಮಲ ವಿದ್ಯದಲಿ ||
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ || (೧೦) ||
ಪದವಿಭಾಗ-ಅರ್ಥ:ಸಕಲ ಶಸ್ತ್ರಾಸ್ತ್ರದಲಿ ಗಜ ಹಯ ನಿಕರದ+ ಏರಾಟದಲಿ= ಎಲ್ಲಾ ಶಸ್ತ್ರಾಸ್ತ್ರದಲ್ಲಿ, ಆನೆ, ಕುದುರೆ ಸಮೂಹಗಳ ಸ್ಪರ್ಧೆಯಲ್ಲಿ, ಲೋಕಪ್ರಕಟ ಮಾರ್ಗೀಕೃತ= ಶಾಸ್ತ್ರೀಯ ಚತುರ್ದಶ ಮಿಮಲ ವಿದ್ಯದಲಿ= ಲೋಕ ಪ್ರಸಿದ್ಧವಾದ ಶಾಸ್ತ್ರೀಯ ಹದಿನಾಲ್ಕು ವಿದ್ಯೆಗಳಲ್ಲಿ, ಸಕಲ ಲಕ್ಷಣ ಗಣಿತ ಗಾರುಡ ವಿಕಟ= ಘೋರ, ದೊಡ್ಡ, ಉಗ್ರವಾದ ಭರತಾದಿ+ ಅಖಿಲ ಕಳೆಯಲಿ= ವಿದ್ಯೆಗಳಲ್ಲಿ, ವಿಕಳರೋ= ದುರ್ಬಲರೋ, ಸಂಪೂರ್ಣ ವಿಶಾರದರೋ ನೀವು ನೋಡಬೇಕೆಉ ಎಂದ ದ್ರೋಣ.
ಅರ್ಥ: ಮುಂದುವರೆದು ದ್ರೋಣನು, ಇವರು ಎಲ್ಲಾ ಶಸ್ತ್ರಾಸ್ತ್ರದಲ್ಲಿ, ಆನೆ, ಕುದುರೆ ಸಮೂಹಗಳ ಸ್ಪರ್ಧೆಯಲ್ಲಿ,ಲೋಕ ಪ್ರಸಿದ್ಧವಾದ ಶಾಸ್ತ್ರೀಯ ಹದಿನಾಲ್ಕು ವಿದ್ಯೆಗಳಲ್ಲಿ, ಸಕಲ ಲಕ್ಷಣ ಗಣಿತ ಗಾರುಡ ಉಗ್ರವಾದ ಭರತ ಇತ್ಯಾದಿ ಎಲ್ಲಾ ವಿದ್ಯೆಗಳಲ್ಲಿ ದುರ್ಬಲರೋ, ಸಂಪೂರ್ಣ ವಿಶಾರದರೋ ನೀವು ನೋಡಬೇಕು ಎಂದನು.
ಲೇಸನಂದರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ವವವಲೇ ತಪ್ಪಾವುದುಚಿತವಲೆ |
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ || (೧೧)
ಪದವಿಭಾಗ-ಅರ್ಥ: ಲೇಸನು+ ಎಂದರಿ,= ಸರಿಯಾದುದನ್ನು ಹೇಳಿದಿರಿ, ಸುತರ ವಿದ್ಯಾಭ್ಯಾಸ ರಚಿತ ಶ್ರಮವನು= ಮಕ್ಕಳ ವಿದ್ಯಾಭ್ಯಾಸ ಕಲಿತ ಪರಿಣತಿಯನ್ನು, ಆವು (ನಾವು)+ ಅರಿದ+ ಏಸು ನಿಮಗೆ+ ಉತ್ವವವಲೇ= ನಾವು ತಿಳಿದರೆ ನಿಮಗೆ ಅದು ಉತ್ಸವವಾಗುವುದು, ಅಲ್ಲವೇ? ತಪ್ಪಾವುದು+ ಉಚಿತವಲೆ,= ನೀವು ಹೇಳಿದ್ದರಲ್ಲಿ ತಪ್ಪೇನು, ಅದು ಉಚಿತವಾದುದೇ. ಈಸು ದಿನವು+ ಈ ಮಕ್ಕಳೊಡನೆ+ ಆಯಾಸವು+ ಇದು ಸಾಮಾನ್ಯವೇ= ಇಷ್ಟು ದಿನ ನೀವು ಈ ಮಕ್ಕಳೊಡನೆ ವಿದ್ಯೆಕಲಿಸಲು ಆಯಾಸಪಟ್ಟಿರುವುದು ಅದೇನು ಸಾಮಾನ್ಯವೇ! ನಾವು+ ಏಸು ಧನ್ಯರೊ ನಿಮ್ಮ ದೆಸೆಯಿಂದ+ ಎಂದನು+ ಆ ಭೀಷ್ಮ= ನಾವು ನಿಮ್ಮ ಪರಿಶ್ರಮದಿಂದ ಬಹಳ ಧನ್ಯರಾದೆವು ಎಂದನು ಭೀಷ್ಮ.
ಅರ್ಥ: ಸರಿಯಾದುದನ್ನು ಹೇಳಿದಿರಿ, ನಮ್ಮ ಮಕ್ಕಳ ವಿದ್ಯಾಭ್ಯಾಸ ಕಲಿತ ಪರಿಣತಿಯನ್ನು, ನಾವು ತಿಳಿದರೆ ನಿಮಗೆ ಅದು ಉತ್ಸವವಾಗುವುದು, ಅಲ್ಲವೇ? ನೀವು ಹೇಳಿದ್ದರಲ್ಲಿ ತಪ್ಪೇನು, ತಪ್ಪಿಲ್ಲ. ಅದು ಉಚಿತವಾದುದೇ. ಇಷ್ಟು ದಿನ ನೀವು ಈ ಮಕ್ಕಳೊಡನೆ ವಿದ್ಯೆಕಲಿಸಲು ಆಯಾಸಪಟ್ಟಿರುವುದು ಅದೇನು ಸಾಮಾನ್ಯವೇ! ನಾವು ನಿಮ್ಮ ಪರಿಶ್ರಮದಿಂದ ಬಹಳ ಧನ್ಯರಾದೆವು ಎಂದನು ಭೀಷ್ಮ.
ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯದಲಿ ||
ವೈದಿಕದಲೀ ನಿಮ್ಮವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈಸಲೆಯೆಂದನಾ ಭೀಷ್ಮ || (೧೨) ||
ಪದವಿಭಾಗ-ಅರ್ಥ: ಆದಿಯಲಿ= ಎಲ್ಲಕ್ಕಿಂತ ಮೊದಲು, ಪುರವೈರಿ=ಶಿವನು, ಬಳಿಕಿನೊಳು+ ಆದನು+ ಅಗ್ಗದ ಪರಶುಧರನು= ಆ ನಂತರ ಪರಷುರಾಮನು ಈ ಮೇದಿನಿಯೊಳು, (ಈ ಭೂಮಿಯ ಮೇಲೆ) + ಈ ಯುಗದಲಿ+ಅನುಪಮ ಶಸ್ತ್ರ ವಿದ್ಯದಲಿ, ವೈದಿಕದಲಿ+ ಈ ನಿಮ್ಮವೋಲ್ = ಈ ಯುಗದಲ್ಲಿ ವೈದಿಕ ವಿದ್ಯೆಯಲ್ಲಿ ಮತ್ತು ಶಸ್ತ್ರವಿದ್ಯೆಯಲ್ಲಿ, ನಿಮ್ಮ ದೊರೆಯಾದನು= ನಮಗೆ ಸಮಾನನಾದವನು ಆರು= ಯಾರು ಇದ್ದಾರೆ? ಯಾರೂ ಇಲ್ಲ., ಕುಮಾರಕರ ಪುಣ್ಯೋದಯದ ಕಂದೆರವು+ ಐಸಲೆ ಯೆಂದನು ಆ ಭೀಷ್ಮ, = ನಮ್ಮ ಕುಮಾರರಿಗೆ ಅದೃಷ್ಟವು ಕಣ್ಣು ತೆರೆದುದರಿಂದ ನೀವು ಗುರುವಾಗಿ ಸಿಕ್ಕಿರುವುದು ಎಂದನು ಆ ಭೀಷ್ಮ.
ಅರ್ಥ:ಶಸ್ತ್ರವಿದ್ಯಾ ಪಾರಂಗತನು ಎಲ್ಲಕ್ಕಿಂತ ಮೊದಲು ಶಿವನು, ಆ ನಂತರ ಈ ಭೂಮಿಯ ಮೇಲೆ ಶಸ್ತ್ರವಿದ್ಯಾ ಪಾರಂಗತನಾದವನು ಶ್ರೇಷ್ಠ ಪರಷುರಾಮನು. ಈ ಯುಗದಲ್ಲಿ ವೈದಿಕ ವಿದ್ಯೆಯಲ್ಲಿ ಮತ್ತು ಶಸ್ತ್ರವಿದ್ಯೆಯಲ್ಲಿ ನಿಮಗೆ ಸಮಾನನಾದವರು ಯಾರು ಇದ್ದಾರೆ? ಯಾರೂ ಇಲ್ಲ. ನಮ್ಮ ಕುಮಾರರಿಗೆ ಅದೃಷ್ಟವು ಕಣ್ಣು ತೆರೆದುದರಿಂದ ನೀವು ಗುರುವಾಗಿ ಸಿಕ್ಕಿರುವುದು ಎಂದನು ಆ ಭೀಷ್ಮ.
ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭ ದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿಸಿದರು ||
ರಾಯನಾಜ್ಞೆಯೊಳಿಭ ಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ || (೧೩) ||
ಪದವಿಭಾಗ-ಅರ್ಥ: ಜೋಯಿಸನ ಕರೆದು+ ಅಖಿಳ= ಎಲ್ಲಾ, ದಿವಸದೊಳು+ ಆಯಿದರು= ದಿನಗಳಲ್ಲಿ ಆರಿಸಿಕೊಂಡರು. ಶುಭ ದಿನವನು+, ಅವಗೆ= ಜೋಯಿಸನಿಗೆ ಪಸಾಯದ (ಸಂಭಾವನೆಯ)+ ಉಡುಗೊರೆ= ಸಹಿತ ಮನ್ನಿಸಿ= ಗೌರವಿಸಿ, ಮನೆಗೆ ಕಳುಹಿಸಿದರು. - ರಾಯನ+ ಆಜ್ಞೆಯೊಳು+ ಇಭ ಪುರದ ಹೊರಗೆ+ ಆಯತದ ಭೂಮಿಯಲಿ= ರಾಜನ ಆಜ್ಞೆಯಂತೆ ಹಸ್ತನಾಪುರದ ಹೊರಗೆ ಆಯತದ ಭೂಮಿಯಲಿ ವಾಸ್ತು ವಿಧೇಯವೆನಲು (ವಾಸ್ತುವಿಗೆ ಸರಿಯಾಗಿ )=+ ಅಳವಡಿಸಿದರು ಹನ್ನೆರಡು ಯೋಜನವ.
ಅರ್ಥ:ಭೀಷ್ಮಾದಿಗಳು, ಜೋಯಿಸನನ್ನು ಕರೆದು ತಿಂಗಳ ಎಲ್ಲಾ ದಿನಗಳಲ್ಲಿ ಶುಭ ದಿನವನ್ನು ಆರಿಸಿಕೊಂಡರು. ಜೋಯಿಸನಿಗೆ ಸಂಭಾವನೆಯ ಉಡುಗೊರೆ ಸಹಿತ ಗೌರವಿಸಿ, ಮನೆಗೆ ಕಳುಹಿಸಿದರು. ಆಜ್ಞೆಯಂತೆ ರಾಜನ ಆಜ್ಞೆಯಂತೆ ಹಸ್ತಿನಾಪುರದ ಹೊರಗೆ ಆಯತದ ಭೂಮಿಯಲ್ಲಿ ವಾಸ್ತುವಿಗೆ ವಾಸ್ತುವಿಗೆ ಅನುಸಾರ ಹನ್ನೆರಡು ಯೋಜನ ಪ್ರದೇಶವನ್ನ ಸ್ಪರ್ಧೆಗೆ ಅಳವಡಿಸಿದರು.
ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಹ
ಪುರವ ತತ್ವಾರ್ಶ್ವದಲಿ ಭಾರಿಯ ಭದ್ರ ಭವನಿಕೆಯ ||
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ || (೧೪) ||
ಪದವಿಭಾಗ-ಅರ್ಥ: ತರವಿಡಿದು= ಅಂತರವನ್ನು ಹಿಡಿದು, ರಚಿಸಿದರು ನೆರೆ+ = ಹೆಚ್ಚಿನ, ಉಪ್ಪರಿಗೆಗಳ, ಹಂತಿಗಳನು+ ಅಂತಹಪುರವ ತತ್ ಪಾರ್ಶ್ವದಲಿ ಭಾರಿಯ ಭದ್ರ ಭವನಿಕೆಯ ಪುರಜನದ ಪರಿಜನದ ನೆಲೆಯ+ ಉಪ್ಪರಿಗೆಗಳ ರಚಿಸಿದರು ಹಸ್ತಿನಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ.
ಅರ್ಥ:ಅಳತೆಗೆ ತಕ್ಕ ಅಂತರವನ್ನು ಹಿಡಿದು ಹೆಚ್ಚಿನ ಉಪ್ಪರಿಗೆಗಳನ್ನೂ, ಹಂತಿಗಳನ್ನೂ+,ಅಂತಹಪುರವನ್ನೂ ರಚಿಸಿದರು ಅದರ ಪಕ್ಕದಲಿ ಭಾರಿಯ ಭದ್ರ ಭವನವನ್ನು ಕಟ್ಟಿದರು. ಪುರಜನದ ಪರಿವಾರದ ಜನರ ವಸತಿಯ ಉಪ್ಪರಿಗೆಗಳನ್ನು ರಚಿಸಿದರು. ಹಸ್ತಿನಾಪುರದ ಸಿರಿ- ಸಂಪತ್ತು ಸಾಮಾನ್ಯವೇ- ದೊಡ್ಡದು, ನರನಾಥ ಜನಮೇಜಯನೇ ಕೇಳು ಎಂದ ನುನಿ.
ನೆರೆದುದುಗಣಿತ ಕರಿ ತುರಂಗಮ
ವರವರೂಥಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂತತಿಯ |
ವರ ಮೂಹುರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನ ನಿಕರವೇನೆಂಬೆನದ್ಭುತವ || (೧೫) ||
ಪದವಿಭಾಗ-ಅರ್ಥ: ನೆರೆದುದು+ ಅಗಣಿತ ಕರಿ ತುರಂಗಮ್+ ಅವರ ವರೂಥ ಪದಾತಿ ಭೂಮೀಶ್ವರರು= ಸೇರಿದರು, ಲೆಕ್ಕವಿಲ್ಲದಷ್ಟು ಆನೆ, ಕುದುರೆ, ಅವರ ರಥ, ಪದಾತಿ ಸೈನ್ಯ ಮತ್ತ ರಾಜರು ಬಂದರು- ನೋಡಲೆಂದು, ದಿಗಂತ ಸಂತತಿಯ= ದಿಕ್ಕುಗಳ ಕೊನೆಗಳಲ್ಲಿರುವವರು, ವರ ಮೂಹುರ್ತದ ದಿವಸದಲಿ, ಸಾಗರದ ತೆರೆ ಬಿಟ್ಟಂತೆ ಕಳನೊಳು= ಸ್ಪರ್ಧೆಯ ಕಣದಲ್ಲಿ ನೆರೆದುಸೇರಿ, ನಿಂದುದು ಜನ ನಿಕರವು (ಸಮೂಹ)+ ಏನೆಂಬೆನು+ ಅದ್ಭುತವ
ಅರ್ಥ: ಅಲ್ಲಿಗೆ ಲೆಕ್ಕವಿಲ್ಲದಷ್ಟು ಆನೆ, ಕುದುರೆ, ಅವರ ರಥ, ಪದಾತಿ ಸೈನ್ಯ ಮತ್ತ ರಾಜರು ನೋಡಲೆಂದು ದಿಕ್ಕುಗಳ ಕೊನೆಗಳಲ್ಲಿರುವವರು, ಆ ಒಳ್ಳೆಯ ಮೂಹುರ್ತದ ದಿವಸ, ಬಂದು ಸೇರಿದರು. ಸ್ಪರ್ಧೆಯ ಕಣದಲ್ಲಿ ಸೇರಿ ಅದು- ಆ ಸಮೂಹ ಸಾಗರದ ತೆರೆ ಹಬ್ಬಿದ ಹಾಗೆ ಜನ ಸಮೂಹ ನಿಂತಿತ್ತು. ಆ ಅದ್ಭುತವನ್ನು ಏನೆಂದು ಹೇಳಲಿ!
ಸಂದಣಿಸಿ ನೃಪರಾಣಿ ವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ ||
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದಗಣಿತ ಪುರವಧೂ ನಿಕುರಂಬವೊಗ್ಗಿನಲಿ || (೧೬) ||
ಪದವಿಭಾಗ-ಅರ್ಥ: ಸಂದಣಿಸಿ ನೃಪರಾಣಿ ವಾಸದ ಗೊಂದಣದ (ಗೊಂದಣ= ಗುಂಪು) ದಂಡಿಗೆಗಳು+ ಇಳಿದವು-> = ರಾಜರು ರಾಣಿವಾದವರ ಒಟ್ಟುಗೂಡಿದ ಪಲ್ಲಕ್ಕಿಗಳ ಸಾಲುಗಳು ಅಲ್ಲಿ ಇಳಿದವು. ಮುಂದೆ ಹೊಯ್ಕಂಬಿಗಳ= ಎದುರಿಗಿರುವ ಹೊಡೆಯುವ ಕೂಗುವ ಕಾವಲುಗಾರರನ್ನು, ಜೋಡಿಯ(= ಒಟ್ಟೊಟ್ಟಿಗೆ? ಗುಂಪು?) ಜನ ಪಲಾಯನದ ಮುಂದೆ ಕಾವಲುಗಾರರ ಹಯಿಲು(ಕೂಗು) = ನೋಡಿ ಗುಂಪಾಗಿ ಪಲಾಯನ ಮಾಡುತ್ತಿರುವ ಜನರಿದ್ದರು. ಬಂದರು+ ಆ ಗಾಂಧಾರಿ ಕುಂತಿಯರು+ ಇಂದುಮುಖಿಯರ ಮೇಳದಲಿ ನಡೆತಂದುದು+ =ಗಾಂಧಾರಿ ಕುಂತಿಯರು ಸಖಿಯರ ಮೇಳದಲ್ಲಿ ಬಂದರು. <- ನಡೆತಂದುದು (ಬಂದಿತು)+ ಅಗಣಿತ= ಲೆಕ್ಕವಿಲ್ಲದಷ್ಟು, ದೋಡ್ಡ, ಪುರ-ವಧೂ ನಿಕುರಂಬವು (ನಿಕರ = ಗುಂಪು)+ ಒಗ್ಗಿನಲಿ= ನಗರದ ದೊಡ್ಡ ಸ್ತ್ರೀಯರ ಗುಂಪು ಬಂದಿತು
ಅರ್ಥ: ಸಂದಣಿಸಿ= ಸಂದಣಿ= ಗುಂಪು, ಒಟ್ಟಾಗಿ ಸಾಲಾಗಿ, ನೃಪರಾಣಿ ವಾಸದ ಗೊಂದಣದ (ಗೊಂದಣ= ಗುಂಪು) ದಂಡಿಗೆಗಳು+ ಇಳಿದವು-> = ರಾಜರು ರಾಣಿವಾದವರ ಒಟ್ಟುಗೂಡಿದ ಪಲ್ಲಕ್ಕಿಗಳ ಸಾಲುಗಳು ಅಲ್ಲಿ ಇಳಿದವು. ಮುಂದೆ ಹೊಯ್ಕಂಬಿಗಳ= ಎದುರಿಗಿರುವ ಹೊಡೆಯುವ ಕೂಗುವ ಕಾವಲುಗಾರರನ್ನು, ಜೋಡಿಯ(= ಒಟ್ಟೊಟ್ಟಿಗೆ? ಗುಂಪು?) ಜನ ಪಲಾಯನದ ಮುಂದೆ ಕಾವಲುಗಾರರ ಹಯಿಲು(ಕೂಗು) = ನೋಡಿ ಗುಂಪಾಗಿ ಪಲಾಯನ ಮಾಡುತ್ತಿರುವ ಜನರಿದ್ದರು. ಬಂದರು+ ಆ ಗಾಂಧಾರಿ ಕುಂತಿಯರು+ ಇಂದುಮುಖಿಯರ ಮೇಳದಲಿ ನಡೆತಂದುದು+ =ಗಾಂಧಾರಿ ಕುಂತಿಯರು ಸಖಿಯರ ಮೇಳದಲ್ಲಿ ಬಂದರು. <- ನಡೆತಂದುದು (ಬಂದಿತು)+ ಅಗಣಿತ= ಲೆಕ್ಕವಿಲ್ಲದಷ್ಟು, ದೋಡ್ಡ, ಪುರ-ವಧೂ ನಿಕುರಂಬವು (ನಿಕರ = ಗುಂಪು)+ ಒಗ್ಗಿನಲಿ= ನಗರದ ದೊಡ್ಡ ಸ್ತ್ರೀಯರ ಗುಂಪು ಬಂದಿತು.
ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಸಾಯಿತ ಸಚಿವ ಜನ ಸಹಿತ |
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣ ಕೋಟರವ || (೧೭)
ಪದವಿಭಾಗ-ಅರ್ಥ: ವಿದುರ ಧೃತರಾಷ್ಟ್ರರು ಸಹಿತ ಸುರ ನದಿಯ ಮಗನು+ = ಭೀಷ್ಮನು ಐತಂದು= ಬಂದು, ನವ ಭದ್ರದಲಿ= ಹೊಸ ಭದ್ರಾಸನದಲ್ಲಿ, ಕುಳ್ಳಿರ್ದನು= ಕುಳಿತಿದ್ದನು; ಪಸಾಯಿತ(ವಂದಿಗಳು, ಹೊಗಳುವವರು) ಸಚಿವ ಜನ ಸಹಿತ ಒದರುವ+ ಅಗ್ಗದ= ಒಳ್ಳೆಯ ವಂದಿಗಳ= ಹೊಗಳುವವ ವಂದಿಗಳು, ಸಚಿವ ಜನರ ಸಹಿತ ಬಿಡೆಸದೆವ= ಬಿಡುವಿಲ್ಲದೆ ಬಾರಿಸುವ, ಬಹು ವಿಧ ವಾದ್ಯರವ= ಸದ್ದು, ಮಿಕ್ಕು= ಹೆಚ್ಚಾಗಿ ಒದೆದು ಹೊಯ್ದುದು (ಬಡಿದು ಸದ್ದು ಮಾಡಿತು)= ಲೋಕ ಮೂರರ ಕರ್ಣ ಕೋಟರವ= ಮೂರು ಲೊಕದ ಜನರ ಕಿವಿಯ ತೂತನ್ನು, ಬಡಿದು ಸದ್ದು ಮಾಡಿತು
ಅರ್ಥ: ವಿದುರ ಧೃತರಾಷ್ಟ್ರರು ಸಹಿತ ಭೀಷ್ಮನು ಬಂದು ಹೊಸ ಭದ್ರಾಸನದಲ್ಲಿ ಮಂತ್ರಿ ಜನ ಸಹಿತ ಕುಳಿತಿದ್ದನು; ಒಳ್ಳೆಯ ವಂದಿಗಳು ಹೊಗಳುತ್ತಿದ್ದರು; ಬಿಡುವಿಲ್ಲದೆ ಬಾರಿಸುವ, ಬಹು ವಿಧ ವಾದ್ಯಗಳ ಸದ್ದು, ಹೆಚ್ಚಾಗಿ ಬಡಿದು ಸದ್ದು ಮಾಡಿ, ಮೂರು ಲೊಕದ ಜನರ ಕಿವಿಯ ತೂತನ್ನು, ಬಡಿದು ಸದ್ದು ಮಾಡಿತು.
ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನ ನಾ
ಲ್ವರು ಸಹಿತ ಯಮನಂದನರು ತಮ್ಮೆರಡು ಪಾರ್ಶ್ವದಲಿ |
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ || (೧೮)
ಪದವಿಭಾಗ-ಅರ್ಥ: ಪರಿಪರಿಯ ಶೃಂಗಾರದಲಿ= ನಾನಾ ಬಗೆಯಲ್ಲಿ ಸಿಂಗರಿಸಿಕೊಂಡು, ನೂರ್ವರು ಸಹಿತ ದುರ್ಯೋಧನ= ದುರ್ಯೋಧನನೂ ಸೇರಿಕೊಂಡು ನೂರು ಕೌರವರೂ, ನಾಲ್ವರು ಸಹಿತ ಯಮನಂದನರು, ಧರ್ಮಜನು ತನ್ನ ನಾಲ್ಕು ತಮ್ಮಂದಿರು ಸಹಿತ, ತಮ್ಮೆರಡು ಪಾರ್ಶ್ವದಲಿ= ಗುರು ದ್ರೋಣರ ಎರಡೂ ಪಕ್ಕಗಳಲ್ಲಿ, ಮತ್ತು ಗುರುತನುಜ= ಗುರುವಿನ ಮಗ ಅಶ್ವತ್ಥಾಮ, ಕೃಪ ಕರ್ಣ, ಸುಬಲ+ ಆದ್ಯರು ಮೊದಲಾದವರು (ಸೌಬಲ ಸುಬಲ= ಶಕುನಿ- ಸಿರಿಗನ್ನಡ ಅರ್ಥಕೋಶ ಕಾರಂತ) ಪುರೋಭಾಗದಲಿ= ಎದುರುಗಡೆ, ಭೂಮೀಶ್ವರು+ ಅಸಂಖ್ಯರು= ಬಹಳಜನ ರಾಜರು ಅವರ, ಹಿಂದೆ, ಬರಲು+ ಐತಂದನು (ಬಂದನು)+ ಆ ದ್ರೋಣ.
ಅರ್ಥ: ನಾನಾ ಬಗೆಯಲ್ಲಿ ಸಿಂಗರಿಸಿಕೊಂಡು,ದುರ್ಯೋಧನನೂ ಸೇರಿಕೊಂಡು ನೂರು ಕೌರವರೂ, ಧರ್ಮಜನು ತನ್ನ ನಾಲ್ಕು ತಮ್ಮಂದಿರು ಸಹಿತ, ಗುರು ದ್ರೋಣರ ಎರಡೂ ಪಕ್ಕಗಳಲ್ಲಿ ಮತ್ತು ಗುರುವಿನ ಮಗ ಅಶ್ವತ್ಥಾಮ, ಕೃಪ ಕರ್ಣ, ಶಕುನಿ ಎದುರುಗಡೆ ಹಾಗೂ ಬಹಳಜನ ರಾಜರು ಅವರ ಹಿಂದೆ ಬರರುತ್ತಿರಲು ಆ ದ್ರೋಣನು ಸ್ಪರ್ಧೆರಂಗಕ್ಕೆ ಬಂದನು.
ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೆನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ || (೧೯)
ಪದವಿಭಾಗ-ಅರ್ಥ: ಹೊಯ್ದು= ಕತ್ತರಿಸಿ, ಬಲಿಕೊಟ್ಟು, ಕೋಣನ ಕುರಿಯ ಹಿಂಡಿನ ತೊಯ್ದ ರಕ್ತ+ ಉದನದ= ಅನ್ನದ ರಾಶಿಯನು+ ಐದೆ= ಬರು, ಹೋಗು, ದೆಸೆದೆಸೆಗಳಲಿ= ದಿಕ್ಕುದಿಕ್ಕುಗಳಲ್ಲಿ, ಬಲಿದರು= ಬಲಿಯನ್ನು ಹಾಕಿದರು, ಭೂತ ತುಷ್ಟಿಗಳ=ಭೂತ ಪ್ರೇತಗಳ ತೃಪ್ತಿಗಾಗಿ, ಕೈದುಗಳ= ಆಯುಧಗಳ, ತನಿವೆಳಗು= ಕಾಂತಿ ನೈದಿಲಮೈದುನನ ಮಾರಂಕವು+ ಎನೆ= ಸೂರ್ಯನ ಪ್ರತಿಸ್ಪರ್ಧಿ ಎನ್ನುವಂತೆ, ಬಂದೈದೆ= ಬಂದು ಐದೆ= ಬಂದು . ರಂಗಸ್ಥಳವ ಹೊಕ್ಕುದು ರಾಜಸುತ ನಿಕರ= ರಾಜಕುಮಾರರ ಗುಂಪು.
ಅರ್ಥ: ಭೂತ ಪ್ರೇತಗಳ ತೃಪ್ತಿಗಾಗಿ, ಕೋಣ ಮತ್ತು ಕುರಿಯ ಹಿಂಡಿನ ರಕ್ತದಿಂದ ತೊಯ್ದ ಅನ್ನದ ರಾಶಿಯನ್ನು ತೆಗೆದುಕೊಂಡು ಹೋಗಿ ದಿಕ್ಕುದಿಕ್ಕುಗಳಲ್ಲಿ, ಬಲಿಯನ್ನು ಹಾಕಿದರು. ಸೂರ್ಯನ ಪ್ರತಿಸ್ಪರ್ಧಿಎನ್ನುವಂತಿರವ ಹಿಡಿದ ಆಯುಧಗಳ ಕಾಂತಿಯಿಂದ ಕೂಡಿ, ರಾಜಕುಮಾರರ ಗುಂಪು ಬಂದು ರಂಗಸ್ಥಳವನ್ನು ಹೊಕ್ಕಿತು.
 • ಟಿಪ್ಪಣಿ: ನೈದಿಲಮೈದುನನ= ನೈದಿಲೆ ಯ ಸೋದರಿ ಕಮಲ, ಕಮಲಸಖ- ಕಮಲದ ಸಖ - ಗಂಡ= ಸೂರ್ಯ; ಸೋದರಿಯ ಗಂಡ ಮೈದುನ= ಸೂರ್ಯ.
ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ |
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣಿ ಘಲ್ಲಿಸಿತು ಜಗವ || (೨೦) ||
ಪದವಿಭಾಗ-ಅರ್ಥ: ಬಾಗಿಲಲಿ ಕಟ್ಟಿಗೆಯ ಕೈಗಳಲಿ ಆ ಗುರೂದ್ಭವ= ಅಶ್ವತ್ಥಾಮ ಕೃಪರು ನಿಂದರು= ರಂಗಸ್ಥಳದ ಬಾಗಿಲಲ್ಲಿ ಕೈಗಳಲ್ಲಿ ಕೋಲು ಹಿಡಿದುಕೊಂಡು ಅಶ್ವತ್ಥಾಮ ಕೃಪರು ನಿಂತರು. ಸೀಗುರಿಯ= ಚಾಮರದ, ಸುಳಿವಿನ ತರಂಗದ, ಸಾಲಸತ್ತಿಗೆಯ= ಛತ್ರಿಯ ಸಾಲು, ಸಾಗರದ ಗಳ ಗರ್ಜನೆ+ಉದ್ಭಟೆ= ಸಮುದ್ರ ಘೋಷದ ಘರ್ಜನೆ, ಹೋಗಲಿ+ ಇದಕೆ+ ಅದು ಪಾಡೆಯೆನೆ=ಈ ಸಮಾರಂಭದ ಆರ್ಭಟಕ್ಕೆ ಸರಿಸಾಟಿಯೇ? ಅಲ್ಲ ಇನ್ನೂ ಹೆಚ್ಚು ಎನ್ನುವಂತೆ, ಚಾಪ+ ಆಗಮ+ ಆಚಾರ್ಯನ= ಬಿಲ್ಲುವಿದ್ಯೆಯ ಗುರು ದ್ರೋಣನ, ಘಡಾವಣಿ= ಆರ್ಭಟ, ಘಲ್ಲಿಸಿತು= ಅಬ್ಬರಿಸಿತು, ಅಲುಗಿಸಿತು ಜಗವ.
ಅರ್ಥ: ರಂಗಸ್ಥಳದ ಬಾಗಿಲಲ್ಲಿ ಕೈಗಳಲ್ಲಿ ಕೋಲು ಹಿಡಿದುಕೊಂಡು ಅಶ್ವತ್ಥಾಮ ಕೃಪರು ನಿಂತರು. ಚಾಮರಗಳ ಸುಳಿದು ಬೀಸುವಿಕೆಯ ತರಂಗದ ಮತ್ತು ಛತ್ರಿಯ ಸಾಲು, (ವಾದ್ಯಘೋಷ) ಸಮುದ್ರ ಘೋಷದ ಘರ್ಜನೆ ಈ ಸಮಾರಂಭದ ಆರ್ಭಟಕ್ಕೆ ಸರಿಸಾಟಿಯೇ? ಅಲ್ಲ ಇನ್ನೂ ಹೆಚ್ಚು ಎನ್ನುವಂತೆ ಇತ್ತು ಹೀಗೆ, ಬಿಲ್ಲುವಿದ್ಯೆಯ ಗುರು ದ್ರೋಣನ ವ್ಯವಸ್ಥೆಯ ಆರ್ಭಟ ಜಗವನ್ನು ಅಲುಗಿಸಿತು.
ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ |
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ || (೨೧) ||
ಪದವಿಭಾಗ-ಅರ್ಥ: ಆ ಮಹಾ ಕಳನ (ಸ್ಪರ್ಧೆಯ ರಣರಂಗದ)+ ಎಂಟು ದಿಕ್ಕಿನ ಹೋಮ ತೀರಲು= ಮುಗಿತ್ತಿದ್ದಂತೆ, ಘಳಿಗೆವಟ್ಟಲ ಸೌಮುಹೂರ್ತಿಕರು= ಘಳಿಗೆಬಟ್ಟಲನ್ನು ನೋಡುತ್ತಿದ್ದ ಮುಹೂರ್ತಿಕರು (ಮುಹೂರ್ತ ನೋಉವವರು) ಆಯತ ಧ್ವನಿ ಸಾರ ಸಮಯದಲಿ= ಸರಿಯಾದ ಸಮಯವೆಂದು ಧ್ವನಿ ಮಾಡಲು, ಸೋಮ ವಂಶೋದ್ಭವ ನೃಪಾಲ ಲಲಾಮನು+ ಅಗ್ಗದ ಧರ್ಮಸುತನು+ ಉದ್ದಾಮ ಗುರುವಿಂಗೆ+ ಎರಗಿ ನಿಂದನು= ಚಂದ್ರವಂಶದಲ್ಲಿ ಹುಟ್ಟಿದ ರಾಜರ ತಿಲಕದಂತಿರುವ ಶ್ರೇಷ್ಠನಾದ ಧರ್ಮಜನು ಗುರುದ್ರೋಣರಿಗೆ ನಮಿಸಿ ಧನಸ್ಸಿನ ನಾಣನ್ನು ಮಿಡಿದು ಠೇಂಕಾರ ಮಾಡಿದನು.
ಅರ್ಥ: ಆ ಮಹಾ ಸ್ಪರ್ಧೆಯ ರಣರಂಗದ ಎಂಟು ದಿಕ್ಕಿನ ಹೋಮ ಮುಗಿತ್ತಿದ್ದಂತೆ, ಘಳಿಗೆಬಟ್ಟಲನ್ನು ನೋಡುತ್ತಿದ್ದ ಮುಹೂರ್ತ ನೋಉವವರು ಸರಿಯಾದ ಮುಹೂರ್ತ ಸಮಯ ಬಂದಿತೆಂದು ಧ್ವನಿ ಮಾಡಲು, ಚಂದ್ರವಂಶದಲ್ಲಿ ಹುಟ್ಟಿದ ರಾಜರ ತಿಲಕದಂತಿರುವ ಶ್ರೇಷ್ಠನಾದ ಧರ್ಮಜನು ಗುರುದ್ರೋಣರಿಗೆ ನಮಿಸಿ ನುಡಿಸಿದನು ಧನುವ= ಧನಸ್ಸಿನ ನಾಣನ್ನು ಮಿಡಿದು ಠೇಂಕಾರ ಮಾಡಿದನು.
 • ಟಿಪ್ಪಣಿ:ಮುಹೂರ್ತ ಸಮಯವನ್ನು ತಿಳಿಯಲು, ಸೂರ್ಯೋದಯದಿಂದ ಎಣಿಸುವರು; ಬುಡದಲ್ಲಿ ತೂತವಿರುವ ಒಂದು ದೊಡ್ಡ ಘಳಿಗೆ-ಬಟ್ಟಲಲ್ಲಿ ನೀರು ತುಂಬಿ ನೇತು ಹಾಕುವರು. ಆದು ಖಾಲಿಯಾದಂತೆ ಮತ್ತೆ ತುಂಬುವರು, ಒಂದು ಸಾರಿ ಖಾಲಿಯಾದರೆ ಒಂದು ಘಳಿಗೆ; ಹೀಗೆ ಯಾವ ಘಳಿಗೆಗೆ ಮುಹೂರ್ತ ಬರುವುದೊ ಅದನ್ನು ನೋಡುತ್ತಿರುವ ಮುಹೂರ್ತಿಕರು, ನೋಡಿ ಮುಹೂರ್ತ ಬಂದ ತಕ್ಷಣ ಗಂಟೆ ಅಥವಾ ಜಾಗಟೆ ಬಡಿದು ಸೂಚನೆ ಕೊಡುವರು.
ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪ ವಿದ್ಯಾ
ನಿರತಿತಯಕೋಯೆಂದು ಗರ್ಜಿಸಿತಾ ಸಭಾ ಜಲಧಿ |
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾಖಿಳ ಶಸ್ತ್ರ ಶ್ರಮವ ತೋರಿಸಿದ || (೨೨)
ಪದವಿಭಾಗ-ಅರ್ಥ: ಅರಸ ಕೇಳು ಯುಧಿಷ್ಠಿರನು, ಪರಿಪರಿಯ (ಯೆ) ಎಸುಗೆಯ= ಬಾಣಬಿಡುವ ಚಾಪ= ಬಿಲ್ಲು ವಿದ್ಯಾ ನಿರತಿಶಯಕೆ (ಅತಿಶಯ ಜಾಣತನಕ್ಕೆ, )+ ಓ= ಬಿಲ್ಲಿನಲ್ಲಿ ಯುಧಿಷ್ಠಿರನು ನಾನಾವಿಧದಲ್ಲಿ ಬಾಣಬಿಡುವ ವಿದ್ಯೆಯ ಪ್ರಯೋಗವನ್ನು ತೋರಿಸಲು ಅತಿಶಯ ಜಾಣತನಕ್ಕೆ, ಓ-ಯೆಂದು, ಗರ್ಜಿಸಿತು ಆ ಸಭಾ ಜಲಧಿ= ಸಮುದ್ರ, ಸುರಗಿ= ಭರ್ಚಿ, ಹಿರಿಯುಬ್ಬಣವು (ದೊಡ್ಡ ಮುಂಡಿಗೆ)+ ಅಡಾಯುಧ= ಕತ್ತಿ (?) , ಹರಿಗೆ= ಗುರಾಣಿ, ಚಕ್ರ, ಮುಸುಂಡಿ, ಮುದ್ಗರ, ಪರಶು= ಕೊಡಲಿ, ಮೊದಲಾ(ದ)+ ಅಖಿಳ ಶಸ್ತ್ರ ಶ್ರಮವ ತೋರಿಸಿದ= ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ತೋರಿಸಿದನು.
ಅರ್ಥ: ಜನಮೇಜಯ ಅರಸನೇ ಕೇಳು, ಯುಧಿಷ್ಠಿರನು, ಬಿಲ್ಲಿನಲ್ಲಿ ನಾನಾವಿಧದಲ್ಲಿ ಬಾಣಬಿಡುವ ವಿದ್ಯೆಯ ಪ್ರಯೋಗವನ್ನು ತೋರಿಸಲು ಅವಬ ಅತಿಶಯ ಜಾಣತನಕ್ಕೆ, ಓ-ಯೆಂದು ಸಂತಸದಿಂದ ಗರ್ಜಿಸಿತು ಆ ಸಭಾಸಮುದ್ರ. ಭರ್ಚಿ, ದೊಡ್ಡ ಮುಂಡಿಗೆ, ಕತ್ತಿ (?), ಗುರಾಣಿ, ಚಕ್ರ, ಮುಸುಂಡಿ, ಮುದ್ಗರ, ಕೊಡಲಿ, ಮೊದಲಾದ ಎಲ್ಲಾ ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ತೋರಿಸಿದನು.
ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ ||
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು
ರ್ಮರುಪಣರು ತೋರಿದರು ಶ್ರಮವನು ನೂರ್ವರೊಗ್ಗಿ || (೨೩)||
ಪದವಿಭಾಗ-ಅರ್ಥ: ಕರಿ= ಆನೆ, ತುರಗದ+ ಏರಾಟ ಮೊದಲಾಗಿರೆ= ಕುದುರೆಗಳ ಸವಾರಿಯನ್ನು ಮೊದಲು ತೋರಿಸಿ, ಸಮಸ್ತ ನೃಪಾಲ ವಿದ್ಯಾಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ ಪರಿವಿಡಿಗಳಲಿ= (in sequence) ಒಬ್ಬರಾದ ಮೇಲೆ ಒಬ್ಬರಂತೆ, ನಕುಲ ಸಹದೇವರು ವಿವಿಂಶತಿ ಚಿತ್ರಬಲ= ಇಪ್ಪತ್ತು ವಿವಿಧದ ಸೈನ್ಯಗಳು, ದುರ್ಮರುಪಣರು ತೋರಿದರು ಶ್ರಮವನು= ಶಸ್ತ್ರವಿಗ್ಯೆಯನ್ನು, ನೂರ್ವರೊಗ್ಗಿನಲಿ= ನೂರ್ವರು+ ಒಗ್ಗಿನಲಿ = ಒಟ್ಟಾಗಿ, ನೂರು ಜನ ಕೌರವರು ಒಟ್ಟಿಗೆ ಶಸ್ತ್ರವಿಗ್ಯೆಯನ್ನು ಪ್ರದರ್ಶಿಸಿದರು
 • ಒಗ್ಗಿನಲಿ= ಒಟ್ಟಾಗಿ, ಒಟ್ಟಿಗೆ, ಒಗ್ಗು= ಗುಂಪು, ಸಮೂಹ.
ಅರ್ಥ:ಆನೆ, ಕುದುರೆಗಳ ಸವಾರಿಯನ್ನು ಮೊದಲು ತೋರಿಸಿದ ಸಮಸ್ತ ರಾಜಕುಮಾರರ ವಿದ್ಯಾಪರಿಣತಿಗೆ ಭೀಷ್ಮಾದಿಗಳು ಹರ್ಷದಿಂದ ಹಿಗ್ಗಿದರು- ಸಂತೋಷಪಟ್ಟರು. ಒಬ್ಬರಾದ ಮೇಲೆ ಒಬ್ಬರಂತೆ, ನಕುಲ ಸಹದೇವರು ಇಪ್ಪತ್ತು ವಿವಿಧದ ಸೈನ್ಯಗಳು, ದುರ್ಮರುಪಣರು, ನೂರು ಜನ ಕೌರವರು ಒಟ್ಟಿಗೆ ಶಸ್ತ್ರವಿಗ್ಯೆಯನ್ನು ಪ್ರದರ್ಶಿಸಿದರು.
ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ಧೀರ್ಘಕವಿಂದನಿವನಿಂತೀತನಿವನೆಂದು |
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ || (೨೪)
ಪದವಿಭಾಗ-ಅರ್ಥ: ಈತ ಧರ್ಮಜನು+ ಇವರು ಮಾದ್ರೀಜಾತರು+ ಈತ ಸುಲೋಚನನು, ಬಳಿಕ+ ಈತ ಧೀರ್ಘಕವಿಂದನು+ ಇವನು+ ಇಂತು+ ಈತನು+ ಇವನೆಂದು ಈತ ಧನುವಿನಲ+ ಈತ ಖಡ್ಗದಲಿ+ ಈತ ಪರಿಘದಲಿ+ ಈತ ಕುಂತದಲಿ+ ಈತ ಬಲುಹೆಂದು+ ಅಂಧ ಭೂಪತಿಗೆ+ ಅರುಹಿದನು= ಹೇಳಿದನು, ವಿದುರ
ಅರ್ಥ: ಇವನು ಧರ್ಮಜನು, ಇವರು ಮಾದ್ರೀಮಕ್ಕಳು, ಈತ ಸುಲೋಚನನು, ಬಳಿಕ, ಈತ ಧೀರ್ಘ ಕವಿಂದನು, ಇವನು ಹೀಗೆ, ಈತನು ಇವನು ಎಂದು ಹೇಳಿ, ಈತ ಧನುವಿನಲ್ಲಿ, ಇವನು ಖಡ್ಗದಲ್ಲಿ, ಇವನು ಪರಿಘದಲ್ಲಿ, ಈತ ಕುಂತದಲ್ಲಿ, ಈತ ಗಟ್ಟಿಗನು ಎಂದು, ಅಂಧ ರಾಜ ಧೃತರಾಷ್ಟ್ರನಿಗೆ ವಿದುರನು ಹೇಳಿದನು.
ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಾಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ |
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ || (೨೫) ||
ಪದವಿಭಾಗ-ಅರ್ಥ: ಬಳಿಕ ನಾನಾ ದೇಶದ+ ಅರಸುಗಳು+ ಇಳಿದು ತಮಗೆ+ ಅಳವಟ್ಟ= ಪರಿಣತಿ ಇದ್ದ, ಶಾಸ್ತ್ರಾವಳಿಗಳಲಿ= ಶಾಸ್ತ್ರ+ ಆವಳಿಗಳಲಿ= ನಾನಾ ಬಗೆ, ಅನೇಕ ವಿದ್ಯೆಗಳಲ್ಲಿ, ತೋರಿದರು, ಮೆಚ್ಚಿಸಿ ತನ್- ತತ್+ ಮಹಾಸಭೆಯ, ನೆಲನನು+ ಅಬ್ಬರಿಸುವ ಸಭಾ ಕಳಕಳದ ಮೊರೆಯನು= ದೊಡ್ಡ ಶಬ್ದವನ್ನು ತಿವಿವ ಪರಿ= ಮೀರಿಸುವಂತೆ ವೆಗ್ಗಳದ= ಹೆಚ್ಚಿನ, ಪಾಯ+ ಅವಧಾರು= ಕೇಳಿಸಿಕೊಳ್ಳಿ, ಮಸಗಿದುದು (ಹರಡು, ಆವರಿಸಿತು)+ ಒಂದು ಥಟ್ಟಿನಲಿ= ಕಡೆಯಲ್ಲಿ, ದಿಕ್ಕಿನಲ್ಲಿ.
ಅರ್ಥ: ಬಳಿಕ ನಾನಾ ದೇಶದ ಅರಸರುಗಳು ರಂಗಕ್ಕೆ ಇಳಿದು ತಮಗೆ ಪರಿಣತಿ ಇದ್ದ ನಾನಾ ಬಗೆಯ ಶಾಸ್ತ್ರಗಳಲ್ಲಿ ಕೌಶಲ್ಯವನ್ನು ತೋರಿಸಿ ಜನರನ್ನು ಮೆಚ್ಚಿಸಿದರು. ಆ ಮಹಾಸಭೆಯ ನೆಲವನ್ನು ಅಬ್ಬರಿಸುವ ಸಭೆಯ ಕಳಕಳದ ಸದ್ದನ್ನು ಮೀರಿಸುವಂತೆ ಹೆಚ್ಚಿನ,'ಪಾಯವಧಾರು'- ಕೇಳಿಸಿಕೊಳ್ಳಿ ಎಂಬ ಕೂಗು ಒಂದು ದಿಕ್ಕಿನಲ್ಲಿ ಕೇಳಿಸಿತು.
ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನ ಪ್ರಭೆಯ ಲಹರಿಯ ಲಾವಣಿಗೆ ಮಿಗಿಲು ||
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ || (೨೬) ||
ಪದವಿಭಾಗ-ಅರ್ಥ: ಹಗಲು ಕೈದೀವಿಗೆಯ ಬಿರುದಿನ ವಿಗಡನು(ವೀರನು)+ ಇವನಾರು+ ಎನಲು ಭೂಪ+ ಆಳಿಗಳ= ಸಮೂಹಗಳ, ರತ್ನ ಪ್ರಭೆಯ ಲಹರಿಯ= ಶೋಭೆಯನ್ನು, ಲಾವಣಿಗೆ ಮಿಗಿಲು= ವೈಖರಿಗೂ ಹೆಚ್ಚಿನ, ಝಗಝಗಿಪ ತನುರುಚಿಯ ಮಿಂಚನು ಮಿಗುವ= ಮೀರಿಸುವ, ಖಡ್ಗಚ್ಛವಿಯ= ಖಡ್ಗದ ಕಾಂತಿಯ, ತಲೆಯೊತ್ತುಗಳ= ಹಿರಿಯರ ಚಾವಡಿಯೊಳಗೆ= ಕಣದೊಳಗೆ ಕೌರವ ರಾಯನು+ ಐತಂದ= ಬಂದ.
ಅರ್ಥ: ಹಗಲು ಕೈದೀವಿಗೆಯ ಬಿರುದಿನ್ನು ಹೊಂದಿದ ವೀರನು ಇವನು ಯಾರಪ್ಪಾ ಎನ್ನುವಂತೆ, ರಾಜರ ಸಮೂಹಗಳು ಧರಿಸಿದ್ದ ರತ್ನಗಳ ಕಾಂತಿಯ ಶೋಭೆಯ ವೈಖರಿಗೂ ಹೆಚ್ಚಿನ ಝಗಝಗಿಸುವ ದೇಹಕಾತಿಯ ಮಿಂಚನ್ನು ಮೀರಿಸುವ ಖಡ್ಗದ ಕಾಂತಿಯುಳ್ಳ ಕೌರವ ರಾಯನು ಹಿರಿಯರ ಚಾವಡಿಯೊಳಗೆ (ಕಣದೊಳಗೆ) ಬಂದ.
ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ |
ಭಾನುವಿನ ಭಾರಣಿಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ || (೨೭)
ಪದವಿಭಾಗ-ಅರ್ಥ: ಹೋ! ನಿರಂತರ ಗಜಬಜವು ತಾನು+ ಏನು?= ಇದೇನು ಒಂದೇಸಮೆನೆ ಗಜಬಜ ಸದ್ದು ಹೋ! ನಿಲ್ಲಿಸಿ. ಜೀಯ+ ಅವಧಾರು= ಕೇಳಿರಿ, ಚಿತ್ತವಧಾನವು (ಮನಸ್ಸಿಟ್ಟು ಕೇಳಿ)+ ಎಂದುದು, ಸಾಲ ಕಂಚುಕಿ ನಿಕರ= ಗುಂಪು, ಕೈ ನೆಗಹಿ= ಸಾಲಾಗಿನಿಂತ ಕಂಚುಕಿಯರ ಗುಂಪು, ಕೈ ಎತ್ತಿ, ಭಾನುವಿನ= ಸೂರ್ಯನಂತೆ ಕಾಂತಿಯಂತೆ, ಭಾರಣಿಯವೋಲು= ತೆರೆದ ಭರಣಿ- ಕರಂಡಕದ+ ಉತ್ಥಾನಮುಖ= ಮೇಲೆತ್ತಿದ ಮುಖದಿಂದ ಚತುರಾಕ್ಷ ಭೂಪನಸೂನು= ಧೃತಾಷ್ಟ್ರನ ಮಗ ದುರ್ಯೋಧನನು ಹೊಕ್ಕನು= ಪ್ರವೇಶಿಸಿದನು, ರಂಗವನು ಭೀಷ್ಮಾದಿಗಳಿಗೆ+ ಎರಗಿ= ಭೀಷ್ಮ ಮೊದಲಾದವರಿಗೆ ನಮಸ್ಕರಿಸಿ.
ಅರ್ಥ: ಇದೇನು ಒಂದೇಸಮೆನೆ ಗಜಬಜ ಸದ್ದು ಹೋ! ನಿಲ್ಲಿಸಿ, ಕೇಳಿರಿ, ಸಾಲಾಗಿನಿಂತ ಕಂಚುಕಿಯರ ಗುಂಪು, ಕೈ ಎತ್ತಿ,ಮನಸ್ಸಿಟ್ಟು ಕೇಳಿ ಎಂದರು. ಸೂರ್ಯನಂತೆ ಕಾಂತಿಯ ಮೇಲೆತ್ತಿದ ಮುಖದಿಂದ ಧೃತಾಷ್ಟ್ರನ ಮಗ ದುರ್ಯೋಧನನು ಭೀಷ್ಮ ಮೊದಲಾದವರಿಗೆ ನಮಸ್ಕರಿಸಿ ರಂಗವನ್ನು ಪ್ರವೇಶಿಸಿದನು,
ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣಿಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ ||
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ || (೨೮) ||
ಪದವಿಭಾಗ-ಅರ್ಥ: (ಕತ್ತಿಯನ್ನು ಉಪಯೋಗಿಸಿ ಮಾಡುವ,)ಬವರಿಯಲಿ= ಬವರ = ಯುದ್ಧ, ಯುದ್ಧದಲ್ಲಿ, ಪಯಪಾಡಿನಲಿ= ಯುದ್ಧದಲ್ಲಿ ಹೆಜ್ಜೆ ಹಾಕುವುದರಲ್ಲಿ, . ಮೈ-ಲವಣಿಯಲಿ= ದೇಹ ಯುದ್ಧದ ಒಂದು ವರಸೆ,ಕಾಳಗದಲ್ಲಿ ಚಮತ್ಕಾರದಿಂದ ಹೋರಾಡುವುದಲ್ಲಿ.- ಚಳಕ . ಬಿನ್ನಾಣದಲಿ= ಗತ್ತಿನಲ್ಲಿ ಭಾರವಣಿಯಲಿ= ಆಟಾಟೋಪದಲ್ಲಿ, ದೆಖ್ಖಾಳದಲಿ= ವೈಭವ. 3. ಉಗ್ರತೆಯಲ್ಲಿ, ವೇಗಾಯ್ಲ ರೇಖೆಯಲಿ= ಶೀಘ್ರ ಗತಿಯ ನೆಡೆಯಲ್ಲಿ, ತಿವಿವ ಮೊನೆಯೊಂದರಲಿ= ನೂರಂಗವನು= ತಿವಿಯುವ ನೂರು ಬಗೆಯ ಅಂಗಸಾಧನೆಯನ್ನು, ತೋರ್ಪ= ತೋರಿಸುವ, ವಿಭೇದದಲಿ= ಬಗೆಬಗೆಯ ರೀತಿಯನ್ನು ಕೌರವ ಮಹೀಪತಿ ಕತ್ತಿವರಸೆಯಲ್ಲಿ ತೋರಿದನು= ತೋರಿಸಿದನು, ಶ್ರಮವನು= ವಿದ್ಯೆಯನ್ನು ಕಠಾರಿಯಲಿ= ಕತ್ತಿಯಲ್ಲಿ
ಅರ್ಥ: ಕತ್ತಿಯನ್ನು ಉಪಯೋಗಿಸಿ ಮಾಡುವ ಯುದ್ಧದಲ್ಲಿ, ಯುದ್ಧದ ಹೆಜ್ಜೆ ಹಾಕುವುದರಲ್ಲಿ, ಯುದ್ಧದಲ್ಲಿ ದೇಹದ ಒಂದು ವರಸೆಯನ್ನು,ಕಾಳಗದಲ್ಲಿ ಚಮತ್ಕಾರದಿಂದ ಹೋರಾಡುವ ಚಳಕ, ಗತ್ತಿನಲ್ಲಿ, ಆಟಾಟೋಪದಲ್ಲಿ, ವೈಭವ, ಉಗ್ರತೆಯಲ್ಲಿ, ಶೀಘ್ರ ಗತಿಯ ನೆಡೆಯಲ್ಲಿ, ಕತ್ತಿಯಿಂದ ತಿವಿಯುವ ನೂರು ಬಗೆಯ ಅಂಗಸಾಧನೆಯನ್ನು, ತೋರಿಸುವ, ಬಗೆಬಗೆಯ ರೀತಿಯನ್ನು ಕೌರವ ರಾಜಕುಮಾರನು ಕತ್ತಿವರಸೆಯಲ್ಲಿ ಯುದ್ಧವಿದ್ಯೆಯನ್ನು ತೋರಿಸಿದನು.
ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ |
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ || (೨೯)
ಪದವಿಭಾಗ-ಅರ್ಥ: ಸುರಗಿಯಲಿ= ಕಿರುಗತ್ತಿ, ಚಕ್ರದಲಿ, ಹಲದಲಿ= ನೇಗಿಲು, ಹರಿಗೆಯಲಿ= ಗುರಾಣಿ, ಕಕ್ಕಡೆಯಲಿ+ = ಅಸಿಯಲಿ=ದೊಡ್ಡಕತ್ತಿ, ಪರಿಘದಲಿ= ಅಗುಳಿಯಂತಿರುವ ಕಬ್ಬಿಣದ ಆಯುಧ, ಸಬಳದಲಿ= ಈಟಿ, ಗದೆಯಲಿ, ಬಿಂಡಿವಾಳದಲಿ, ಪರಿಪರಿಯ ಚಿತ್ರದ= ಚಿತ್ರವಿಚಿತ್ರ- ಚಮತ್ಕೃತಿಕರವ ತೋರಿಸಿದನು ಶರಾಸನ= ದುರ್ಯೋಧನ. ಶರ ವಿಸರ ಸಂಧಾನದೊಳಗೆ ಅಹುದೆನಿಸಿದನು ಸಭೆಯ= ಶರ=ಬಾಣ, ವಿಸರ= ಸಂಧಾನದೊಳಗೆ (ಬಾಣ ಹೂಡುವುದು,)+ ಅಹುದೆನಿಸಿದನು ಸಭೆಯ= ಬಾಣ ತೆಗೆದು ಬಿಡುವುದು, ಬಾಣ ಹೂಡುವುದು ಇವುಗಳಲ್ಲಿ, ಸಭೆಯನ್ನು ಮೆಚ್ಚಿಸಿದನು.
ಅರ್ಥ: ಕಿರುಗತ್ತಿ, ಚಕ್ರ, ನೇಗಿಲು, ಗುರಾಣಿ, ಕಕ್ಕಡೆ, ದೊಡ್ಡಕತ್ತಿ, ಪರಿಘವೆಂಬ ಅಗುಳಿಯಂತಿರುವ ಕಬ್ಬಿಣದ ಆಯುಧ, ಈಟಿ, ಗದೆ, ಬಿಂಡಿವಾಳ ಇವುಗಳ ಪ್ರಯೋಗದಲ್ಲಿ ಪರಿಪರಿಯ ಚಿತ್ರವಿಚಿತ್ರ- ಚಮತ್ಕೃತಿಕಾರ್ಯವನ್ನು ದುರ್ಯೋಧನನು ತೋರಿಸಿದನು. ಬಾಣ ಹೂಡುವುದು, ಬಾಣವನ್ನು ತೆಗೆದು ಬಿಡುವುದು, ಇವುಗಳಲ್ಲಿ, ಸಭೆಯನ್ನು ಮೆಚ್ಚಿಸಿದನು.
ಧೀರರೇ ಜಗಜಟ್ಟಿ ರಾಜ ಕು
ಮಾರ ಚೌಪಟಮಲ್ಲ ಕುರುಕುಲ
ಕೈರವಾಮೃತ ಕಿರಣ ಧಿರು ಧಿರು ಭಲರೆ ಭಲರೆನುತ |
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿಹರಕೆ ತಳಿತುದು ತಾಯ ನೇಮದಲಿ || (೩೦) ||
ಪದವಿಭಾಗ-ಅರ್ಥ: ಧೀರ- ರೇ!! (ದುರ್ಯೋಧನನು) ಜಗಜಟ್ಟಿ ರಾಜಕುಮಾರ, ಚೌಪಟಮಲ್ಲ, ಕುರುಕುಲಕೈರವ+ ಅಮೃತ ಕಿರಣ= ಕುರುಕುಲನೈದಿಲೆಗೆ ಅಮೃತ ಕಿರಣ= ಬೆಳದಿಂಳು ಕೊಡುವ ಚಂದ್ರ, ಧಿರು ಧಿರು ಭಲರೆ ಭಲರೆ+ ಎನುತ= ಧೀರ ಭಲರೇ ಎಂದು (ವಂದಿಮಾಗಧರು ಹೊಗಳಿದರು), ಭೂರಿ ಸಭೆಯಲಿ= ದೊಡ್ಡ ಸಭೆಯಲ್ಲಿ, ಸುಲಿದು ಬಿಸುಡುವ ಸೀರೆಗಳ,= ದೃಷ್ಠಿ ತಾಗದಂತೆ ಸೀರೆಗಳನ್ನು ನಿವಾಳಿಸಿದರು, ತೂಪಿರಿದು,= ಥೂ- ಎಂದು ಉಗುಳಿದರು, ಸುಳಿವ+ ಉಪ್ಪಾರತಿಯ= ಉಪ್ಪಾರತಿಯನ್ನು ಸುಳಿದು, ಆರತಿ ಬೆಳಗಿದರು, ತನಿಹರಕೆ ತಳಿತುದು= ಅವನ ದೇಹಕ್ಕೆ ಹೀಗೆ ದೃಷ್ಠಿ ತಾಗದಂತೆ ತನಿಹರಕೆ ಮಾಡಿದರು, ತಾಯ ನೇಮದಲಿ= ಅವನ ತಾಯಿಯ ಆಜ್ಞೆಯಂತೆ.
ಅರ್ಥ:ಜನರು ಧೀರ- ರೇ!! ದುರ್ಯೋಧನನು ಜಗಜಟ್ಟಿ ರಾಜಕುಮಾರ, ಚೌಪಟಮಲ್ಲ, ಕುರುಕುಲನೈದಿಲೆಗೆ ಬೆಳದಿಂಳು ಕೊಡುವ ಚಂದ್ರ, ಧೀರ ಭಲರೇ ಎಂದು ವಂದಿಮಾಗಧರು ಹೊಗಳಿದರು. ದೊಡ್ಡ ಸಭೆಯಲ್ಲಿ, ದೃಷ್ಠಿ ತಾಗದಂತೆ ಸೀರೆಗಳನ್ನು ನಿವಾಳಿಸಿದರು, ಕೆಟ್ಟ ಕಣ್ಣಿಗೆ ಥೂ- ಎಂದು ಉಗುಳಿದರು, ಉಪ್ಪಾರತಿಯನ್ನು ಸುಳಿದು, ಆರತಿ ಬೆಳಗಿದರು, ಅವನ ತಾಯಿಯ ಆಜ್ಞೆಯಂತೆ. ಅವನ ದೇಹಕ್ಕೆ ಹೀಗೆ ದೃಷ್ಠಿ ತಾಗದಂತೆ ತನಿಹರಕೆ ಮಾಡಿದರು.
ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ ||
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ || (೩೧)||
ಪದವಿಭಾಗ-ಅರ್ಥ: ಏರಿ ತೋರಿದನು+ ಅಶ್ವ ಗಜ ರಥವ+ ಆರನು+ ಏಳನು= ಕುದುರೆ ಆನೆ ಮತ್ತು ರಥಗಳನ್ನು ಏರುವುದನ್ನು, ನೆಡೆಸುವುದನ್ನು, ಆರೇಳು ಬಗೆಯಲ್ಲಿ ಮಾಡಿ ತೊರಿಸಿದನು, ಸಭೆಯೊಳು+ ಒಂದನು ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ,= ಸಭಿಕರಿಗೆ ಶಸ್ತ್ರಾಸ್ತ್ರ ಕೌಶಲವನ್ನು- ಚಮತ್ಕಾರವನ್ನು ಒಂದೊಂದನ್ನೂ ನೂರು ವಿಧದಲ್ಲಿ ಮಾಡಿತೋರಿಸಿದನು. ಮೀರಿ ಹೆಚ್ಚಿದ ಹರುಷದಿಂದ+ ಉಬ್ಬೇರಿದನು ಧೃತರಾಷ್ಟನು ಉಬ್ಬಿದಳು+ ಆರು ಮಡಿಯಲಿ=ಒಂದಕ್ಕೆ ಆರರಷ್ಟು ಜನನಿ ದುರ್ಯೋಧನನ ಪರಿಣತಿಗೆ.
ಅರ್ಥ: ದುರ್ಯೋಧನನು ಕುದುರೆ ಆನೆ ಮತ್ತು ರಥಗಳನ್ನು ಏರುವುದನ್ನು, ನೆಡೆಸುವುದನ್ನು, ಆರೇಳು ಬಗೆಯಲ್ಲಿ ಮಾಡಿ ತೊರಿಸಿದನು. ಸಭಿಕರಿಗೆ ಶಸ್ತ್ರಾಸ್ತ್ರ ಕೌಶಲವನ್ನು, ಚಮತ್ಕಾರವನ್ನು ಒಂದೊಂದನ್ನೂ ನೂರು ವಿಧದಲ್ಲಿ ಮಾಡಿ ತೋರಿಸಿದನು. ದುರ್ಯೋಧನನ ಶಸ್ತ್ರಾಸ್ತ್ರ ಕೌಶಲಪರಿಣತಿಯನ್ನು ಕೇಳಿ, ಧೃತರಾಷ್ಟ ಮತ್ತು ದುರ್ಯೋಧನನ ತಾಯಿ ಗಾಂಧಾರಿ ಸಂತೋಷದಿಂದ ಒಂದಕ್ಕೆ ಆರರಷ್ಟು ಉಬ್ಬಿಹೋದರು
ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರಿದಿದಿರಹ ವಜ್ರಧರನಂತೆ |
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ || (೩೨)
ಪದವಿಭಾಗ-ಅರ್ಥ: ಮಸಗಿದ+ ಆನೆಯ= ಮಸಗು=ಕೆರಳು; ಕೆರಳಿದ ಆನೆಯ, ಕುಂಭದಲಿ ಝಾಡಿಸುವ ಕೇಸರಿಯಂತೆ= ಕುಂಭಸ್ಥಳದಲ್ಲಿ ಝಾಡಿಸಿ ಹೊಡೆಯುವ ಕೇಸರಿಯಂತೆ= ಸಿಂಹದಂತೆ, ಜಂಭನ ಜಸದ= ಕೀರ್ತಿಯ, ಝಾಡಿಗೆ= ಹೊಡೆತಕ್ಕೆ ಬೆದರಿದೆ ಇದಿರಹ ವಜ್ರಧರನಂತೆ= ಇಂದ್ರನಂತೆ, ಪಸರಿಸಿದ ಪರಿವಾರ ಮಧ್ಯದೊಳು+ ಅಸಮಬಲ ಹೊಳಕಿದನು= ಸುತ್ತಲೂ ಕುಳಿತಿರುವ ಪರಿವಾರದ ಮಧ್ಯದಿಂದ, ಮೇಘದ ಮುಸುಕನು+ ಉಗಿದ+ ಇನನಂತೆ= ಕಪ್ಪು ಮೋಡದ ಮುಸುಕನ್ನು ಕಳಚಿಬಂದ ಸೂರ್ಯನಂತೆ, ಮೈದೋರಿದನು ಕಲಿಭೀಮ= ಶೂರನಾದ ಭೀಮ ಎದ್ದು ಬಂದನು.
ಅರ್ಥ: ಕೆರಳಿದ ಆನೆ, ಕುಂಭಸ್ಥಳದಲ್ಲಿ ಝಾಡಿಸಿ ಹೊಡೆಯುವ ಸಿಂಹದಂತೆ, ಜಂಭನ (ವೃತ್ರನ?) ಕೀರ್ತಿಯ ಹೊಡೆತಕ್ಕೆ ಬೆದರಿದೆ ಎದುರುನಿಲ್ಲುವ ಇಂದ್ರನಂತೆ, ಸುತ್ತಲೂ ಕುಳಿತಿರುವ ಪರಿವಾರದ ಮಧ್ಯದಿಂದ, ಮುಸುಕಿದ ಮೋಡದ ಮುಸುಕನ್ನು ಕಳಚಿ ಬಂದ ಸೂರ್ಯನಂತೆ, ಶೂರನಾದ ಭೀಮನು ಎದ್ದು ಬಂದನು.
ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯಧದ ಪರಿ
ಪರಿಯ ಚಿತ್ರ ಶ್ರಮವ ಸಾಂಗೋಪಾಂಗ ಕೌಶಲವ ||
ಕರಿ ತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ (೩೩)
ಪದವಿಭಾಗ-ಅರ್ಥ:ಗುರು ನದೀಸುತ ವಿದುರ ಧೃತರಾಷ್ಟ್ರರಿಗೆ ಕೈಮುಗಿದು+ ಆಯಧದ ಪರಿಪರಿಯ= ನಾನಾಬಗೆಯ, ಚಿತ್ರ ಶ್ರಮವ ಸಾಂಗೋಪಾಂಗ ಕೌಶಲವ ಕರಿ ತುರಗದ+ ಏರಾಟ ಮೊದಲಾಗಿರೆ ಸುಯೋಧನ ರಚಿತ ವಿದ್ಯಾಪರಿಣತಿಗೆ ವೆಗ್ಗಳವು+ ಇದು+ ಎನೆ ತೋರಿದನು ಕಲಿಭೀಮ
ಅರ್ಥ: ಗುರುದ್ರೋನರು, ನದೀಸುತ ಭೀಷ್ಮ, ವಿದುರ ಮತ್ತು ಧೃತರಾಷ್ಟ್ರರಿಗೆ ಕೈಮುಗಿದು, ಆಯಧದ ನಾನಾಬಗೆಯ ಚಿತ್ರವಿಚಿತ್ರ ಶ್ರಮವಸಾಹಸ ಚಮತ್ಕಾರಗಳನ್ನು ಸಾಂಗೋಪಾಂಗವಾಗಿ, ಮೊದಲಿಂದ ಕೊನೆಯವರೆಗೆ, ಕೌಶಲವ ಆನೆ ಕುದುರೆಗಳ ಏರಾಟ ಮೊದಲಾಗಿ ಉಳಿದ ಎಲ್ಲವನ್ನೂ ಸುಯೋಧನನಿಂದ ವಿರಚಿತವಾದ ಶಶ್ತ್ರಾಸ್ತ್ರ ವಿದ್ಯಾಪರಿಣತಿಗೆ ಹೆಚ್ಚಿನದು ಇದು ಎನ್ನುವಣತೆ ಕಲಿಭೀಮನು ಯುದ್ಧವಿದ್ಯಾ ಪರಿಣತಿಯನ್ನು ತೋರಿಸಿದನು.
ಕೋಲಗುರು ಚತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ ||
ಮೇಳವಿಸಿತೆರಡO*ಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಿಧಿಕ ರೋಷದಲಿ || (೩೪) ||
ಪದವಿಭಾಗ-ಅರ್ಥ: ಕೋಲಗುರು ಚತ್ತೈಸು= ಧನುರ್ವಿದ್ಯಾ ಗುರುಗಳೇ ಕೇಳಿಕೊಳ್ಳಿ, ಕುರುಭೂಪಾಲ ಸಮ್ಮುಖನಾಗು= ಕೌರವನೇ ಎದುರಿಸು, ಹಿಡಿ ಮಾರ್ಕೋಲನು+ ಎನ್ನೊಡನೆ+ ಎನುತ= ಹಿಡಿ ಬಿಲ್ಲನ್ನು ನನ್ನೊಡನೆ ಎಂದು, ತಿವಿದನು= ಕೆಣಕಿದನು ಭೀಮ ಕುರುಪತಿಯ= ದುರ್ಯೋಧನನ್ನು, ಮೇಳವಿಸಿತು+ ಎರಡOಕ= ಎರಡು ಗುಂಪುಗಳು ಸೇರಿದವು. ಬಂದಿಗೆ= ಆಯುಧದ, ಕೋಲ ಹೊಯ್ದಾಟದಲಿ= ಬಿಲ್ಲು ಯುದ್ಧದಲ್ಲಿ, ಬಳಿಕ+ ಆ ಕೀಲುಗದೆಗಳ ಹಿಡಿದು ತರುಬಿದರು+ ಅಧಿಕ ರೋಷದಲಿ= ನಂತರ ಕೀಲುಗಳುಳ್ಳ ಗದೆಗಳನ್ನು ಹಿಡಿದು ರೋಷದಿಂದ ಹೋರಾಡಿದರು.
ಅರ್ಥ: ಧನುರ್ವಿದ್ಯಾ ಗುರುಗಳೇ ಕೇಳಿಕೊಳ್ಳಿ, ಕೌರವನೇ ಎದುರಿಸು, ಹಿಡಿ ಬಿಲ್ಲನ್ನು ನನ್ನೊಡನೆ ಎಂದು ಭೀಮನು ದುರ್ಯೋಧನನ್ನು ಕೆಣಕಿದನು. ಕೂಡಲೆ ಎರಡು ಹೋರಾಡುವ ಗುಂಪುಗಳು ಸೇರಿದವು. ಆಯುಧದಲ್ಲಿ ಮೊದಲು ಬಿಲ್ಲು ಯುದ್ಧದಲ್ಲಿ, ಬಳಿಕ ಕೀಲುಗಳುಳ್ಳ ಗದೆಗಳನ್ನು ಹಿಡಿದು ರೋಷದಿಂದ ಹೋರಾಡಿದರು.
ಹೊಯ್ದರೊಡ್ಡಿದ ರಣದ ಮೊನೆಯಲಿ
ಹಾಯ್ದ ರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ |
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುಗಾರರು ಮನದ ಖತಿಗಿದಿ
ರೈದುದೆನೆ ಹೊಯ್ದಾ ಡಿದರು ಕಲಿಭೀಮ ಕೌರವರು || (೩೫)
ಪದವಿಭಾಗ-ಅರ್ಥ: ಹೊಯ್ದರು+ ಒಡ್ಡಿದ ರಣದ ಮೊನೆಯಲಿ ಹಾಯ್ದರು+ ಒಳ ಸುಳಿಯಿಂದ ಕಳೆದರು, ಕಾಯ್ದು ಹೆಣಗಿದರು+ ಉಪ್ಪರಕೆ ಜಾರಿದರು ಪಡಿತಳಕೆ ಮೈದೆಗೆದರು+ ಅಡ ಹೊಯ್ಲಿನಲಿ ಬಲು ಗೈದುಗಾರರು ಮನದ ಖತಿಗಿದಿರೈದುದು+ ಎನೆ ಹೊಯ್ದಾಡಿದರು ಕಲಿಭೀಮ ಕೌರವರು.
ಹೊಯ್ದರು= ಒಬ್ಬರನ್ನೊಬ್ಬರು (ಗದೆಯಿಂದ) ಹೊಡೆದರು, ಒಡ್ಡಿದ ರಣದ ಮೊನೆಯಲಿ ಹಾಯ್ದರು= ಒಡ್ಡಿದ ಹೊಡೆತಕ್ಕೆ ಸಿಕ್ಕದೆ ಕಣದಲ್ಲಿ ಓಡಿ ತಪ್ಪಸಿಕೊಂಡರು; ಒಳ ಸುಳಿಯಿಂದ ಕಳೆದರು= ಒಳಸುಳಿಯಿಂದ- ಬಗ್ಗಿಜಾರಿ ತಪ್ಪಿಸಿಕೊಂಡು ಸುಳಿದಾಡಿದರು, ಕಾಯ್ದು ಹೆಣಗಿದರು= ಹೋರಾಡಿ ಪ್ರಯಾಸಪಟ್ಟರು; ಉಪ್ಪರಕೆ ಜಾರಿದರು= ಮೇಲೆ ಹಾರಿದರು; ಪಡಿತಳಕೆ ಮೈದೆಗೆದರು= ನೆಲಕ್ಕೆ ತಗ್ಗಿ ಮೈಯನ್ನು ಹೊಡೆತದಿಂದ ತಪ್ಪಿಸಿಕೊಂಡರು, ಅಡ ಹೊಯ್ಲಿನಲಿ= ಅಡ್ಡಬಂದು ಹೊಡೆಯುವಲ್ಲಿ, ಬಲು ಗೈದುಗಾರರು= ಬಹಳ ಆಯುಧಪ್ರಯೋಗ ಕುಶಲರು, ಮನದ ಖತಿಗೆ ಇದಿರೈದುದು+ ಎನೆ= ಮನಸ್ಸಿನಲ್ಲಿದ್ದ ಸಿಟ್ಟಿಗೆ ಇದಿರು+ ಐದುದು= ಇದು ಎದುರು ಬಂದಿತು ಎನ್ನುವಂತೆ, ಹೊಯ್ದಾಡಿದರು= ಹೊಡೆದಾಡಿದರು, ಕಲಿಭೀಮ ಕೌರವರು
ಅರ್ಥ:ಒಬ್ಬರನ್ನೊಬ್ಬರು ಗದೆಯಿಂದ ಹೊಡೆದರು, ಒಡ್ಡಿದ ಹೊಡೆತಕ್ಕೆ ಸಿಕ್ಕದೆ ಕಣದಲ್ಲಿ ಓಡಿ ತಪ್ಪಸಿಕೊಂಡರು; ಒಳಸುಳಿಯಿಂದ ಬಗ್ಗಿಜಾರಿ ತಪ್ಪಿಸಿಕೊಂಡು ಸುಳಿದಾಡಿದರು, ಹೋರಾಡಿ ಪ್ರಯಾಸಪಟ್ಟರು; ಮೇಲೆ ಹಾರಿದರು; ನೆಲಕ್ಕೆ ತಗ್ಗಿ ಮೈಯನ್ನು ಹೊಡೆತದಿಂದ ತಪ್ಪಿಸಿಕೊಂಡರು, ಅಡ್ಡಬಂದು ಹೊಡೆಯುವಲ್ಲಿ, ಬಹಳ ಆಯುಧಪ್ರಯೋಗ ಕುಶಲರು, ಮನಸ್ಸಿನಲ್ಲಿದ್ದ ಸಿಟ್ಟಿಗೆ, ಇದು ಎದುರು ಮೂರ್ತ ರೂಪತಾಳಿ ಬಂದಿತು ಎನ್ನುವಂತೆ, ಕಲಿಭೀಮ ಕೌರವರು ಹೊಡೆದಾಡಿದರು.
ಎಲೆಲೆ ಹಿಡಿಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋಧನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ ||
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ || (೩೬) ||
ಪದವಿಭಾಗ-ಅರ್ಥ: ಎಲೆಲೆ ಹಿಡಿಹಿಡಿ ಭೀಮನನು= ಎಲೆ ಎಲೆ= ಯಾರಲ್ಲಿ ಎಲವೋ! ಹಿಡಿಹಿಡಿ ಭೀಮನನು,= ಭೀಮನನ್ನು ಹಿಡಿಯಿರಿ, ತೆಗೆಕೆಲಕೆ ದುರ್ಯೋಧನನು+ ಇದು ಮಂಗಳದ ಬೆಳೆಗೆ+ ಇಂಗಳಿನ= ಕೆಂಡದ ಮಳೆ ಸುರಿದುದೆ ಮಹಾದೇವ ಕಳವಳಿಸೆ ಭೀಷ್ಮಾದಿಗಳು ನೃಪತಿಲಕರ+ ಇಬ್ಬರ ನಡುವೆ ಹಾಯ್ದರು= ನುಗ್ಗಿದರು ಕುಲಗಿರಿಗಳ+ ಅಂದದಲಿ= ರೀತಿಯಲ್ಲಿ ಕೃಪ ಗುರುಸುತರು ವಹಿಲದಲಿ= ಬೇಗದಲ್ಲಿ.
ಅರ್ಥ:ಎಲೆ ಎಲೆ ಯಾರಲ್ಲಿ, ಎಲವೋ! ಭೀಮನನ್ನು ಹಿಡಿಯಿರಿ, ದುರ್ಯೋಧನನ್ನು ಪಕ್ಕಕ್ಕೆ ಎಳೆಯಿರಿ. ಇದು ಮಂಗಳಕರ ಕಾರ್ಯ, ಇದರ ಬೆಳೆಗೆ ಕೆಂಡದ ಮಳೆ ಸುರಿಯಿತೇ ಮಹಾದೇವ! ಎಂದು ಭೀಷ್ಮ ಮೊದಲಾದವರು ಕಳವಳಗೊಂಡು ಹೇಳಿದರು. ಕೃಪನೂ, ಅಶ್ವತ್ಥಾಮನೂ ಕುಲಗಿರಿಗಳ ರೀತಿಯಲ್ಲಿ ಬೇಗ ರಾಜಕುಮಾರಿಬ್ಬರ ನಡುವೆ ನುಗ್ಗಿದರು.
ತೆಗೆದರೀತನನಿತ್ತ ಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ |
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ || (೩೭) ||
ಪದವಿಭಾಗ-ಅರ್ಥ: ತೆಗೆದರು+ ‌ಈತನನು+ ಇತ್ತಲು+ ಆತನನು+ ಉಗಿದರು+ ಅತ್ತಲು= ದುರ್ಯೋಧನನ್ನು ಈ ಕಡೆ ಕರೆತಂದರು, ಭೀಮನನ್ನು ಆತ್ತಲಾಗಿ ಎಳೆದುಕೊಂಡು ಹೋದರು. ಜನದ ಗಳದಿಂದ+ ಒಗೆದ ಗಾಢದ ಗಜಬಜವ= ಜನರ ಕಂಠದಿಂದ ಹೊರಬಂದ ಗಜಬಜ ಸದ್ದನ್ನು, ಧಟ್ಟಿಸಿದರು+ ಅಲ್ಲಲ್ಲಿ= ತಟ್ಟಿ- ಹೊಡೆದು ನಿಲ್ಲಿಸಿದರು. ಬೆಗಡು= 1. ಆಶ್ಚರ್ಯ. 2. ಭಯ, ಭಯಾಶ್ಚರ್ಯಗಳು. ಮೊಳೆತುದು= ಉಂಟಾಯಿತು ಭೀಷ್ಮ ವಿದುರಾದಿಗಳ ಮನದಲಿ= ಮನಸ್ಸಿನಲ್ಲಿ, ಮೇಲೆ ಹಬ್ಬುವ ಹಗೆಗೆ+ ಇದು+ ಉಪಲಕ್ಷಣವಲಾಯೆಂದುದು ಬುಧವ್ರಾತ= ತಿಳಿದವರು.
ಅರ್ಥ: ದುರ್ಯೋಧನನ್ನು ಈ ಕಡೆ ಕರೆತಂದರು, ಭೀಮನನ್ನು ಆತ್ತಲಾಗಿ ಎಳೆದುಕೊಂಡು ಹೋದರು. ಜನರ ಕಂಠದಿಂದ ಹೊರಬಂದ ಗಜಬಜ ಸದ್ದನ್ನು, ಅಲ್ಲಲ್ಲಿ ಹೊಡೆದು ನಿಲ್ಲಿಸಿದರು. ಭೀಷ್ಮ ವಿದುರಾದಿಗಳ ಮನಸ್ಸಿನಲ್ಲಿ ಭಯಾಶ್ಚರ್ಯಗಳು ಉಂಟಾಯಿತು ತಿಳಿದವರು ಮುಂದೆ ಬೆಳೆಯುವ ಶತ್ರುತ್ವಕ್ಕೆ ಇದು ಸೂಚನೆ ಎಂದು ಆರಂಭದ ಸೂಚನೆ ಎಂದು ಹೇಳಿಹೊಂಡರು.
ಅಳಿಮಸಗಿದಂಬುಜದವೊಲ್ ಜನ
ಜಲಧಿ ಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ |
ಮೊಳಗಿದವು ಕಲ್ಪಾಂತ ಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ || (೩೮) ||
ಪದವಿಭಾಗ-ಅರ್ಥ: ಅಳಿಮಸಗಿದ+ ಅಂಬುಜದವೊಲ್ = ಜೇನುಹುಳುಗಳು ಮುತ್ತಿದ ಕಮಲದಂತೆ, ಜನಜಲಧಿ ಜಾತ ಕ್ಷೋಭೆಯಲಿ= ಜನರ ಸಮುದ್ರದಲ್ಲಿ ಹುಟ್ಟಿತು- ವೆಗ್ಗಳಿಸಿತು+ ಅಗ್ಗದ ಸಾಧು= ಸರಿಯಾದುದು ವಾದವಿವಾದ= ಅವನದು ಸರಿ, ಇವನದು ಸರಿಯಲ್ಲ ಎಂಬ ವಾದ ವಿವಾದಗಳು. ರಭಸದಲಿ ಮೊಳಗಿದವು= ವಾದ್ಯಗಳು ಸದ್ದು ಮಾಡಿದವು, ಕಲ್ಪಾಂತ ಮೇಘಾವಳಿಯ ಗುರುವೆನೆ ವಾದ್ಯತತಿ= ಪ್ರಳಯಕಾದಲ್ಲಿ ಮೊಳಗುವ ಮೋಡಗಳ ಸಮೂಹಗಳು ಗುಡುಗುವಂತೆ, ಆ ಕಳಕಳದೊಳು= ಸದ್ದು ಗದ್ದಲದಲ್ಲಿ, ಕಳಕಳದೊಳು+ ಅರ್ಜುನ ದೇವನು+ ಎದ್ದನು ಮುನಿಯ ಸನ್ನೆಯಲಿ= ದ್ರೋಣಾಚಾರ್ಯ ಮುನಿಯ ಸನ್ನೆಯನ್ನು ನೋಡಿ ಅರ್ಜುನನು ರಂಗವನ್ನು ಪ್ರವೇಶಿಸಲು ಎದ್ದನು..
ಅರ್ಥ:ಜೇನುಹುಳುಗಳು ಮುತ್ತಿದ ಕಮಲದಂತೆ, ಜನರ ಸಮುದ್ರದಲ್ಲಿ ಅವನದು ಸರಿ, ಇವನದು ಸರಿಯಲ್ಲ ಎಂಬ ವಾದ ವಿವಾದಗಳು ಹುಟ್ಟಿತು. ಪ್ರಳಯಕಾದಲ್ಲಿ ಮೊಳಗುವ ಮೋಡಗಳ ಸಮೂಹಗಳು ಗುಡುಗಿನಂತೆ ವಾದ್ಯಗಳು ಸದ್ದು ಮಾಡಿದವು. ಸದ್ದು ಗದ್ದಲದಲ್ಲಿ ದ್ರೋಣಾಚಾರ್ಯ ಮುನಿಯ ಸನ್ನೆಯನ್ನು ನೋಡಿ ಅರ್ಜುನನು ರಂಗವನ್ನು ಪ್ರವೇಶಿಸಲು ಎದ್ದನು.
ಈತನಾರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ |
ಭೀತ ಕಳಕಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳೆಂದ ||(೩೯) ||
ಪದವಿಭಾಗ-ಅರ್ಥ: ಈತನು+ ಆರ್ಜುನನೆ ! ಹೋ ಹೋ ಮಾತು ಮಾಣಲಿ= ನಿಲ್ಲಲಿ, ಮಾತು ನಿಲ್ಲಿಸಿ; ಮಾಣಲಿ+ ಎಂಬ+ ಈ ಮಾತು ಅಡಗುವ ಮೊದಲೇ, ಆ ಆಸ್ಥಾನದಲ್ಲಿ- ರಾಜಪರಿವಾರದಲ್ಲಿ ನಿಶ್ಶಬ್ಧ ನೆಲೆಗೊಂಡಿತು. ಭೀತ ಕಳಕಳರಂಗದಲಿ ಪುರುಹೂತಸುತ (ಇಂದ್ರನ ಮಗ)= ಆಗಲೆ ಭೀಮ ದುರ್ಯೋದನರ ಹೋರಾಟದಿಂದ ಭಯಗೊಂಡಿದ್ದ ಸಭೆಯ ಎದುರು ಕಣದಲ್ಲಿ ಅರ್ಜುನನು ಮೈದೋರಿದನು= ಬಂದು ನಿಂತನು, ಜನವು+ ಈತನನು ಕೊಂಡಾಡುತಿರ್ದುದು ರಾಯ ಕೇಳೆಂದ= ಜನರು ಇವನನ್ನು ಕೊಂಡಾಡುತ್ತಿದ್ದರು, ರಾಜನೇ ಕೇಳು ಎಂದ ವೈಶಂಪಾಯನ.
 • ಹಿಂಚು= ಹಿಂದೆ ಉಳಿ. 2. ಹಿಂದೆ ಸರಿ. 3. ತಡವಾಗು. 4. ಬಿಡು.
ಅರ್ಥ: ಈತನು ಆರ್ಜುನನೆ ! ಹೋ ಹೋ ಮಾತು ನಿಲ್ಲಲಿ, ಮಾತು ನಿಲ್ಲಿಸಿ ಎಂಬ ಈ ಮಾತು ಅಡಗುವ ಮೊದಲೇ, ಆ ಸ್ಥಾನದಲ್ಲಿ- ರಾಜಪರಿವಾರದಲ್ಲಿ ನಿಶ್ಶಬ್ಧ ನೆಲೆಗೊಂಡಿತು. ಆಗಲೆ ಭೀಮ ದುರ್ಯೋದನರ ಹೋರಾಟದಿಂದ ಭಯಗೊಂಡಿದ್ದ ಸಭೆಯ ಎದುರು ಕಣದಲ್ಲಿ ಅರ್ಜುನನು ಬಂದು ನಿಂತನು, ಜನರು ಇವನನ್ನು ಕೊಂಡಾಡುತ್ತಿದ್ದರು, ರಾಜನೇ ಕೇಳು ಎಂದ ವೈಶಂಪಾಯನ.
ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ ||
ಪ್ರಾಣ ಪಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ || (೪೦) ||
ಪದವಿಭಾಗ-ಅರ್ಥ: ದ್ರೋಣ ಕೃಪ ಮೊದಲಾದ ಮಾನ್ಯ ಶ್ರೇಣಿಗೆ+ ಎರಗಿದನು= ದ್ರೋಣ ಕೃಪ ಮೊದಲಾದ ಮಾನ್ಯರ ಸಾಲಿಗೆ ನಮಿಸಿದನು. ಎರಗಿದನು+ ಅಮರ ನಿಕರಕೆ= ದೇವತೆಗಳ ಸಮೂಹಕ್ಕೆ, ಗೋಣನು+ ಎತ್ತಿದನು (ಕತ್ತನ್ನು ಮೇಲೆತ್ತಿ,)+ ಇಟ್ಟು ಕರಪುಟವನು ಲಲಾಟದಲಿ= ಹಸ್ತಗಳನ್ನು ಹಣೆಗೆ ಜೋಡಿಸಿ, ಪ್ರಾಣ ಪಣವಿದು= ಪ್ರಾಣವನ್ನೇ ಫಣವಾಗಿಡುವ ನಿಖಿಳ ವಿದ್ಯದ ಜಾಣತನವಿದು= ಸಕಲ ವಿದ್ಯದ ಜಾಣತನ ಈ ಕ್ರಮ, ವಿನಯವೆಂದು+ ಇದು= ವಿನಯವೆಂದರೆ ಇದು, (ಎಂದು) ಕೇಣವಿಲ್ಲದೆ= ಹೊಟ್ಟೆಕಿಚ್ಚು, ಕೋಪ, ಹೆದರಿಕೆ ಇಲ್ಲದ ರೀತಿ ಇದು ಎಂದು, ನೆರವಿ= ಸೇರಿದ ಸಭೆ, ನೆರೆ= ಬಹಳವಾಗಿ ಹೊಗಳಿತು, ಧನಂಜಯನ.
 • ಕೇಣ= ಹೊಟ್ಟೆಕಿಚ್ಚು, ಕೋಪ, ಹೆದರಿಕೆ.
ಅರ್ಥ:ಅರ್ಜುನನು ದ್ರೋಣ, ಕೃಪ, ಮೊದಲಾದ ಮಾನ್ಯರ ಸಾಲಿಗೆ ನಮಿಸಿದನು. ದೇವತೆಗಳ ಸಮೂಹಕ್ಕೆ, ಕತ್ತನ್ನು ಮೇಲೆತ್ತಿ ಹಸ್ತಗಳನ್ನು ಹಣೆಗೆ ಜೋಡಿಸಿ ನಮಸ್ಕರಿಸಿದನು. ಪ್ರಾಣವನ್ನೇ ಫಣವಾಗಿಡುವ ಸಕಲ ವಿದ್ಯದ ಜಾಣತನವು ಈ ಕ್ರಮ, ವಿನಯವೆಂದರೆ ಇದು ಎಂದು, ಹೊಟ್ಟೆಕಿಚ್ಚು, ಕೋಪ, ಹೆದರಿಕೆ ಇಲ್ಲದ ರೀತಿ ಇದು ಎಂದು, ಸೇರಿದ ಸಭೆ, ಧನಂಜಯನನ್ನು ಬಹಳವಾಗಿ ಹೊಗಳಿತು.
ನಿಲುವಿನಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ ||
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ || (೪೧) ||
ಪದವಿಭಾಗ-ಅರ್ಥ: ನಿಲುವಿನಲಿ= ನಿಲುವಿನಲ್ಲಿ,ಯುದ್ಧ ಸಿದ್ಧತೆಯ ಭಂಗಿ, ಸ್ವಸ್ಥಾನದಲಿ, ಕೈಚಳಕದಲಿ, ಭಂಗಿಯಲಿ, ಭರದಲಿ= ವೇಗದಲ್ಲಿ, ಲುಳಿಯಲಿ= ಚತುರತೆ?, ಒಯ್ಯಾರದಲಿ, ಮೋಡಾಮೋಡಿಯ ಅಂದದಲಿ= ಕ್ರಮದಲ್ಲಿ, ಅಳವಿಯಲಿ= ಶಕ್ತಿಯಲ್ಲಿ, ಪರಿವಿಡಿಯಲಿ= ಕ್ರಮದಲ್ಲಿ, ಊಹಾಬಲದಲಿ, ಅವಧಾನದಲಿ= ಕೇಳಿಸಿಕೊಂಡು ಎಚ್ಚರಿಕೆಯಲ್ಲಿ, ಶಸ್ತ್ರಾವಳಿಯ= ನಾನಾಬಗೆಯ ಶಸ್ತ್ರಪ್ರಯೋಗದಲ್ಲಿ, ಸಾಂಗೋಪಾಂಗ= ಅಂಗ, ಉಪಾಂಗ - ಎಲ್ಲಾಬಗೆಯ ಶ್ರಮವನು= ಶಅfತ್ರ ಅಸ್ತ್ರ ವಿದ್ಯೆಯನ್ನು ತೋರಿದನು ಪಾರ್ಥ.
ಅರ್ಥ: ಯುದ್ಧಕ್ಕೆ ನಿಲ್ಲುವ ನಿಲುವಿನಲ್ಲಿ, ಯುದ್ಧ ಸಿದ್ಧತೆಯ ಭಂಗಿ, ಸ್ವಸ್ಥಾನದಲ್ಲಿ, ಕೈಚಳಕದಲ್ಲಿ, ಭಂಗಿಯಲ್ಲಿ, ವೇಗದಲ್ಲಿ, ಚತುರತೆ?, ಒಯ್ಯಾರದಲ್ಲಿ, ಕ್ರಮದಲ್ಲಿ, ಶಕ್ತಿಯಲ್ಲಿ, ಕ್ರಮದಲ್ಲಿ, ಊಹಾಬಲದಲ್ಲಿ, ಕೇಳಿಸಿಕೊಂಡು ಎಚ್ಚರಿಕೆಯಲ್ಲಿ, ನಾನಾಬಗೆಯ ಶಸ್ತ್ರಪ್ರಯೋಗದಲ್ಲಿ, ಅಂಗ, ಉಪಾಂಗ -ಈ ಎಲ್ಲಾ ಬಗೆಯ ಶಸ್ತ್ರ ಅಸ್ತ್ರ ವಿದ್ಯೆಯನ್ನು ಪಾರ್ಥನು ತೋರಿಸಿದನು .
ತುರಗಚಯ ರೇವಂತ ಮದ ಕುಂ
ಜರ ಮಹಾದಿವಿಜೇಂದ್ರ ಪಥ ಸಂ
ಚರಣ ವರ ಮಾರ್ತಾಂಡಯೆಂದಬ್ಬರಿಸಿ ಜನ ನಿಕರ |
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ || (೪೨)
ಪದವಿಭಾಗ-ಅರ್ಥ: ತುರಗಚಯ ರೇವಂತ= (ಚಯ= ಸ್ಥಿರವಲ್ಲದ, ಚಲನೆ.) ಅರ್ಜುನನು ಕುದುರೆ ಸವಾರಿಯಲ್ಲಿ ರೇವಂತನ ಸಮಾನ, ಮದ ಕುಂಜರ ಮಹಾದಿವಿಜೇಂದ್ರ= ಮದ್ದಾನೆಯನ್ನು ನೆಡೆಸುವುದರಲ್ಲೆ ಇಂದ್ರ; ಪಥ ಸಂಚರಣ ವರ ಮಾರ್ತಾಂಡಯೆಂದು+ ಅಬ್ಬರಿಸಿ= ರಥ (ಪಥ=ದಾರಿ) ಸಂಚರಣದಲ್ಲಿ ಪೂಜ್ಯ ಸೂರ್ಯನಂತೆ ಎಂದು,ಜನ ನಿಕರ = ಜನರ ನಮೂಹ ಅಬ್ಬರಿಸಿ ಕೂಗಿತು. ತುರಗ ಗಜ ರಥ ವಿವಿಧ ಶಿಕ್ಷಾಪರಿಣತಿಯ= ಹೀಗೆ ಕುದುರೆ, ಆನೆ, ರಥ ಇವುಗಳ ಶಿಕ್ಷಾಪರಿಣತಿಯನ್ನು, ತೋರಿದನು= ತೋರಿಸಿದನು. ಗುರು ಕೃಪ ಸುರನದೀಜರು= ಭೀಷ್ಮ ಇವರು, ಮುಳುಗಿದರು ಪುಳಕಾಂಬು ಪೂರದಲಿ(ಮೈ ಪುಳಕದಿಂದ ಬಂದ ಬೆವರಿನ ನೀರಿನಲ್ಲಿ ಮುಳುಗಿದರು)= ಸಂತೋಷದಿಂದ ಪುಳುಕಗೊಂಡರು.
ಅರ್ಥ: ತುರಗಚಯ ರೇವಂತ= (ಚಯ= ಸ್ಥಿರವಲ್ಲದ, ಚಲನೆ.) ಅರ್ಜುನನು ಕುದುರೆ ಸವಾರಿಯಲ್ಲಿ ರೇವಂತನ ಸಮಾನ, ಮದ ಕುಂಜರ ಮಹಾದಿವಿಜೇಂದ್ರ= ಮದ್ದಾನೆಯನ್ನು ನೆಡೆಸುವುದರಲ್ಲೆ ಇಂದ್ರ; ಪಥ ಸಂಚರಣ ವರ ಮಾರ್ತಾಂಡಯೆಂದು+ ಅಬ್ಬರಿಸಿ= ರಥ (ಪಥ=ದಾರಿ) ಸಂಚರಣದಲ್ಲಿ ಪೂಜ್ಯ ಸೂರ್ಯನಂತೆ ಎಂದು,ಜನ ನಿಕರ = ಜನರ ನಮೂಹ ಅಬ್ಬರಿಸಿ ಕೂಗಿತು. ತುರಗ ಗಜ ರಥ ವಿವಿಧ ಶಿಕ್ಷಾಪರಿಣತಿಯ= ಹೀಗೆ ಕುದುರೆ, ಆನೆ, ರಥ ಇವುಗಳ ಶಿಕ್ಷಾಪರಿಣತಿಯನ್ನು, ತೋರಿದನು= ತೋರಿಸಿದನು. ಗುರು ಕೃಪ ಸುರನದೀಜರು= ಭೀಷ್ಮ ಇವರು, ಮುಳುಗಿದರು ಪುಳಕಾಂಬು ಪೂರದಲಿ(ಮೈ ಪುಳಕದಿಂದ ಬಂದ ಬೆವರಿನ ನೀರಿನಲ್ಲಿ ಮುಳುಗಿದರು)= ಸಂತೋಷದಿಂದ ಪುಳುಕಗೊಂಡರು. (ಅಥವಾ ಆನಂದಾಶ್ರುಗಳನ್ನು ಸುರಿಸಿದರು.)
ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ ||
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೋಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ || (೪೩) ||
ಪದವಿಭಾಗ-ಅರ್ಥ: ಮತ್ತೆ ಕೊಂಡನು ಧನುವ= ನಂತರ ಧನುಸ್ಸನ್ನು ತೆಗೆದುಕೊಂಡು, ನೆರವಿಯನು+ ಅತ್ತ ಹೊಯ್ ಹೊಯ್ ಹೋಗ ಹೇಳ್= ಜನರಗುಂಪನ್ನು ದೂರ ಹೋಗಲಿ, ಹೊಯ್ ಎಂದು ಹೋಗ ಹೇಳು," ದುರ್ವೃತ್ತರ+ ಎದೆ ಜರ್ಝರಿತವಾಗಲು= ಕೆಟ್ಟನೆಡತೆಯವರ ಎದೆ ನಡುಗಲು- ಒಡೆಯಲು, ತೋರ ಬೇಕು+ ಎನುತ ಬತ್ತಳಿಕೆಯಿಂದ+ ಉಗಿದು ಹೂಡಿ= ಬತ್ತಳಿಕೆಯಿಂದ ಬಾಣವನ್ನು ತೆಗೆದು, ಹೂಡಿ ವಿಯತ್ತಳಕೆ= ಆಕಾಶಕ್ಕೆ, ಹಾಯ್ಸಿದನು= ಬಿಟ್ಟನು, ಕರ್ಬೋಗೆಸುತ್ತಿ ದಳ್ಳುರಿ= ಆಗ ಕಪ್ಪು ಹೊಗೆ ಸುತ್ತಿಕೊಂಡು ಬೆಂಕಿ ಹೊರಹೊಮ್ಮಿತು- ಸುರಿದುದು+ ಆಗ್ನೇಯಾಸ್ತ್ರ ಧಾರೆಯಲಿ= ಆಗ್ನೇಯಾಸ್ತ್ರದಿಂದ ಧಾರೆಯಾಗಿ ಬೆಂಕಿ ಸುರಿಯಿತು.
ಅರ್ಥ:ನಂತರ ಧನುಸ್ಸನ್ನು ತೆಗೆದುಕೊಂಡು, ಜನರ ಗುಂಪನ್ನು ದೂರ ಹೋಗಲಿ, ಹೊಯ್ ಎಂದು ಹೋಗ ಹೇಳು, ಎಂದು" ಕೆಟ್ಟನೆಡತೆಯವರ ಎದೆ ನಡುಗಲು- ಒಡೆಯಲು, ಬತ್ತಳಿಕೆಯಿಂದ ಬಾಣವನ್ನು (ಆಗ್ನೇಯಾಸ್ತ್ರ) ತೆಗೆದು, ಹೂಡಿ ಆಕಾಶಕ್ಕೆ ಬಿಟ್ಟನು,ಆಗ ಕಪ್ಪು ಹೊಗೆ ಸುತ್ತಿಕೊಂಡು ಬೆಂಕಿ ಹೊರಹೊಮ್ಮಿತು- ಆಗ್ನೇಯಾಸ್ತ್ರದಿಂದ ಧಾರೆಯಾಗಿ ಬೆಂಕಿ ಸುರಿಯಿತು.
ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದ್ದದ್ಭುತ ವಾರಿಯುಪಸಂಹರಿಸಿದನು ಮರಳಿ ||
ಹಗಲ ನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸುರ್ಯಾಸ್ತ್ರದಲಿ ಬೆರಗಾಗೆ ಸುರನಿಕರ || (೪೪) ||
ಪದವಿಭಾಗ-ಅರ್ಥ: ತೆಗೆಸಿದನು ಶಿಖಿಶರವ= ಆಗ್ನೇಯಾಸ್ತ್ರವನ್ನು ತೆಗೆಸಿ ಶಾಂತಗೊಳಿಸಿದನು, ಧನುವಿಂದ+ ಉಗಿಸಿದನು= ಬಿಲ್ಲನಿಂದ ಬಿಟ್ಟನು, ವಾರುಣವನು+ ಅಭ್ರವಮೊಗೆದುದ್ದು (ಅಬ್ರ= ಮೋಡ)+ ಅದ್ಭುತ ವಾರಿಯ (ಮಳೆಯನ್ನು)+ ಉಪಸಂಹರಿಸಿದನು, ವರುಣಾಸ್ತ್ರದಿಂದ ಮಳೆ ಸುರಿಸಿ ಅಗ್ನಿಯನ್ನು ಶಾಂತಗೊಳಿಸಿದನು, ಅಬ್ರ ಮೋಡ, ಮಳೆಕರೆಯುವ ಮೋಡ,= ನಂತರ ವಾರುಣಾಸ್ತ್ರವನ್ನು ಶಾಂತಗೊಳಿಸಿದನು. ಮರಳಿ ಹಗಲ ನೊಂದೇ ತುತ್ತು ಮಾಡಿದ ವಿಗಡ= ಉಗ್ರವಾದ ತಿಮಿರಾಸ್ತ್ರದಲಿ= ಕತ್ತಲೆಯ ಅಸ್ತ್ರದಿಂದ ಹಗಲನ್ನು ಒಂದೇ ತುತ್ತಿಗೆ ನುಂಗಿಸಿ ಕತ್ತಲು ಮಾಡಿದನು. ತಿಮಿರವ (ತಿಮಿರ = ಕತ್ತಲೆ) ತೆಗೆಸಿದನು ಸುರ್ಯಾಸ್ತ್ರದಲಿ= ಸೂರ್ಯಾಸ್ತ್ರವನ್ನು ಪ್ರಯೋಗಿಸಿ ಕತ್ತಲೆಯನ್ನು ತೆಗದನು. ಬೆರಗಾಗೆ ಸುರನಿಕರ= ಇದನ್ನು ನೋಡಿ ದೇವತೆಗಳೂ ಬೆರಗಾದರು.
ಅರ್ಥ: ಆಗ್ನೇಯಾಸ್ತ್ರವನ್ನು ತೆಗೆಸಿ ಶಾಂತಗೊಳಿಸಿದನು, ಬಿಲ್ಲನಿಂದ ವರುಣಾಸ್ತ್ರವನ್ನು ಬಿಟ್ಟನು, ವರುಣಾಸ್ತ್ರದಿಂದ ಮಳೆ ಸುರಿಸಿ ಅಗ್ನಿಯನ್ನು ಶಾಂತಗೊಳಿಸಿದನು, ನಂತರ ವಾರುಣಾಸ್ತ್ರವನ್ನು ಶಾಂತಗೊಳಿಸಿದನು. ಉಗ್ರವಾದ ತಿಮಿರಾಸ್ತ್ರದಿಂದ ಕ(ತ್ತಲೆಯ ಅಸ್ತ್ರದಿಂದ) ಹಗಲನ್ನು ಒಂದೇ ತುತ್ತಿಗೆ ನುಂಗಿಸಿ ಕತ್ತಲು ಮಾಡಿದನು. ಸೂರ್ಯಾಸ್ತ್ರವನ್ನು ಪ್ರಯೋಗಿಸಿ ಕತ್ತಲೆಯನ್ನು ತೆಗದನು. ಇದನ್ನು ನೋಡಿ ದೇವತೆಗಳೂ ಬೆರಗಾದರು.
ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನೂರು ಭುಜಂಗವನನಿಲ ಶರದಲಿ ತೀವ್ರ ಮಾರುತನ ||
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷ ಭಾರದಲಿ || (೪೫) ||
ಪದವಿಭಾಗ-ಅರ್ಥ: ಗಿರಿಶರದಲಿ+ ಅದ್ರಿಗಳ= ಬೆಟ್ಟಗಳ, ಮೇಘದಶರದಿಂ+ (ನ) ಅಭ್ರವನು, ಉರಗ ಬಾಣದಿ= ಸರ್ಪಾಸ್ತ್ರದಿಂದ, ನೂರು ಭುಜಂಗ (ಹಾವು)ವನು+ ಅನಿಲ ಶರದಲಿ= ವಾಯು ಅಸ್ತ್ರದಿಂದ, ತೀವ್ರ ಮಾರುತನ= ದೊಡ್ಡ ಬಿರುಗಾಳಿಯನ್ನು, ಪರುಠವವ= 1. ವಿಸ್ತಾರ. 2. ಹೆಚ್ಚಳ. 3. ಹಿರಿಮೆ; ತೋರಿದನು ಜನವುಬ್ಬರಿಸಲು (ಜನರು ಸಂತೋಷದಿಂದ ಉಬ್ಬಿ ಕೂಗಿದರು)+ ಅಡಿಗಡಿಗೆ (ಪದೇ ಪದೇ)+ ಅಂಧ ಭೂಪನಕೊರಳು= ಧೃತರಾಷ್ಟ್ರನ ಕೊಡಳು ದುಗುಡದಿಂದ ಕುಸಿಯಿತು. ಕುಸಿದುದು,; ನುಡಿಯ= ನುಡಿಯನು- ಮಾತನಾಡದ ಹಾಗೆ ನಟಿಸಿ ಸುಮ್ಮನಿದ್ದನು; ನಾಟಕ ಹರ್ಷ ಭಾರದಲಿ= ಅವನು ಕಪಟ ಸಂತೋಷದ ಭಾರದಿಂದ ಮಾತನಾಡದಂತೆ ಇದ್ದನು.
ಅರ್ಥ: ಗಿರಿಶರದಲಿ+ ಅದ್ರಿಗಳ= ಬೆಟ್ಟಗಳ, ಮೇಘದಶರದಿಂ+ (ನ) ಅಭ್ರವನು, ಉರಗ ಬಾಣದಿ= ಸರ್ಪಾಸ್ತ್ರದಿಂದ, ನೂರು ಭುಜಂಗ (ಹಾವು)ವನು+ ಅನಿಲ ಶರದಲಿ= ವಾಯು ಅಸ್ತ್ರದಿಂದ, ತೀವ್ರ ಮಾರುತನ= ದೊಡ್ಡ ಬಿರುಗಾಳಿಯನ್ನು ತೋರಿದನು (ಆ ಅಸ್ತ್ರಗಳನ್ನು ಪ್ರತಿ ಅಸ್ತ್ರದಿಂದ ಉಪಸಂಹರಿಸಿದನು); ಜನರು ಸಂತೋಷದಿಂದ ಪದೇ ಪದೇ ಉಬ್ಬಿ ಕೂಗಿದರು. ಧೃತರಾಷ್ಟ್ರನ ಕೊಡಳು ದುಗುಡದಿಂದ ಕುಸಿಯಿತು. ಅವನು ಕಪಟ ಸಂತೋಷದ ಭಾರದಿಂದ ಮಾತನಾಡದ ಹಾಗೆ ನಟಿಸಿ ಸುಮ್ಮನಿದ್ದನು.
ಇವರ ಮುಖವರಳಿದವು ಗಂಗಾ
ಭವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧ್ರುತರಾಷ್ಟ್ರಾದಿ ಕೌರವರ ||
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋಧನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ || (೪೬) ||
ಪದವಿಭಾಗ-ಅರ್ಥ: ಇವರ ಮುಖವು+ ಅರಳಿದವು ಗಂಗಾಭವ= ಭೀಷ್ಮ, ಕೃಪ ದ್ರೋಣಾದಿಗಳ= ಭೀಷ್ಮ, ಕೃಪ ದ್ರೋಣ ಮೊದಲಾದವರ ಮುಖವು ಸಂತೋಷದಿಂದ ಅರಳಿದವು; ಬಳಿಕ ಅವರ ತಲೆವಾಗಿದವು ಧ್ರುತರಾಷ್ಟ್ರಾದಿ ಕೌರವರ= ಧ್ರುತರಾಷ್ಟ್ರಾದಿ ಕೌರವರ ತಲೆಗಳು ಅಸಂತೋಷದಿಂದ ಬಾಗಿದವು. ಇವರ ಜನನಿಯ ಮುಖದ ಸುಮ್ಮಾನವನು= ಪಾಂಡವರ ತಾಯಿಯ ಸಂತೋಷವನ್ನೂ, ದುರ್ಯೋಧನನ ಜನನಿಯ ಜವಳಿ (ಜೊತೆಯಲ್ಲಿ ಹುಟ್ಟಿದ) ದುಮ್ಮಾನವನು= ಅದರ ಜೊತೆಗೇ ದುರ್ಯೋಧನನ ತಾಯಿಯಲ್ಲಿ ಹುಟ್ಟಿದ ದುಃಖವನ್ನು, ಬಣ್ಣಿಸಲು+ ಅರಿಯೆ (ತಿಳಿಯೆನು) ನಾನೆಂದ= ಬಣ್ಣಿಸಲು ನನಗೆ ಸಾಧ್ಯವಿಲ್ಲ ಎಂದನು ಮುನಿ.
ಅರ್ಥ: ಭೀಷ್ಮ, ಕೃಪ ದ್ರೋಣ ಮೊದಲಾದವರ ಮುಖವು ಸಂತೋಷದಿಂದ ಅರಳಿದವು; ಧ್ರುತರಾಷ್ಟ್ರಾದಿ ಕೌರವರ ತಲೆಗಳು ಅಸಂತೋಷದಿಂದ ಬಾಗಿದವು. ಪಾಂಡವರ ತಾಯಿಯ ಸಂತೋಷವನ್ನೂ, ಅದರ ಜೊತೆಗೇ ದುರ್ಯೋಧನನ ತಾಯಿಯಲ್ಲಿ ಹುಟ್ಟಿದ ದುಃಖವನ್ನೂ ಬಣ್ಣಿಸಲು ನನಗೆ ತಿಳಿಯದು, ಸಾಧ್ಯವಿಲ್ಲ ಎಂದನು ಮುನಿ.

ರಂಗಕ್ಕೆ ಕರ್ಣನ ಪ್ರವೇಶ[ಸಂಪಾದಿಸಿ]

ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತ ||
ಸಾಯಕವ ತಿರುಹುತ್ತಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ || (೪೭) ||
ಪದವಿಭಾಗ-ಅರ್ಥ: ಬಾಯ ಹೊಯ್ ಫಲುಗುಣನ ಹೊಗಳುವ ನಾಯಿಗಳನು ಏನಾಯ್ತು = ಅರ್ಜುನನ್ನು ಹೊಗಳುವ ನಾಯಿಗಳ ಬಾಯಿಮೇಲೆ ಹೊಡೆಯಿರಿ! ಹೊಗಳುವ ಕೆಲಸ ಏನಾಯ್ತು? ಕೌತುಕವಾಯಕೆ (ಆಶ್ಚರ್ಯವು ಯಾಕೆ?)+ ಇವದಿರ ಪಕ್ಷಪಾತವ ನೋಡು ನೋಡು+ ಎನುತ=ಅದರಲ್ಲಿ ಆಶ್ಚರ್ಯವೇನು? ಇವರ ಪಕ್ಷಪಾತವನ್ನು ನೋಡು, ನೊಡು ಎನ್ನತ್ತಾ ಸಾಯಕವ ತಿರುಹುತ್ತಲು (ಬಾಣವನ್ನು ತಿರುಗಿಸುತ್ತಾ)+ ಆಕರ್ಣಾಯತಾಂಬಕನು (ಆಕರ್ಣ+ ಆಯತ+ ಅಂಬಕನು- ಕಿವಿಯವರೆಗೂ ಹಬ್ಬಿದ ಕಣ್ಣುಳ್ಳವನು) (ವಿಶಾಲ ಕಣ್ಣಿನ ಕರ್ಣನು)+ ಎಡಬಲದ ಕುರುರಾಯನ+ ಅನುಜರ ಮೇಳದಲಿ= ಎಡಬಲದಲ್ಲಿ ಕೌರವನ ತಮ್ಮಂದಿರ ಜೊತೆಯಲ್ಲಿ,(ಆ ಕರ್ಣನು ರಂಗಭುಮಿಗೆ ಹೊರಟು ಬಂದನು) ಹೊರವಂಟನು+ ಆ ಕರ್ಣ.
ಅರ್ಥ: 'ಅರ್ಜುನನ್ನು ಹೊಗಳುವ ನಾಯಿಗಳ ಬಾಯಿಮೇಲೆ ಹೊಡೆಯಿರಿ! ಹೊಗಳುವ ಕೆಲಸ ಏನಾಯ್ತು? ಅದರಲ್ಲಿ ಆಶ್ಚರ್ಯವೇನು? ಇವರ ಪಕ್ಷಪಾತವನ್ನು ನೋಡು, ನೊಡು' ಎನ್ನತ್ತಾ ಬಾಣವನ್ನು ತಿರುಗಿಸುತ್ತಾ ವಿಶಾಲ ಕಣ್ಣಿನ ಕರ್ಣನು ಎಡಬಲದಲ್ಲಿ ಕೌರವನ ತಮ್ಮಂದಿರ ಜೊತೆಯಲ್ಲಿ ಆ ಕರ್ಣನು ರಂಗಭೂಮಿಗೆ ಹೊರಟು ಬಂದನು.
ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕರೆಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ ||
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ || (೪೮)||
ಪದವಿಭಾಗ-ಅರ್ಥ: ಗುರುಗಳಿಗೆ ಕೈಮುಗಿದು, ಶಿರದಲಿ ತರಣಿ ಮಂಡಲಕೆ+ ಎರೆಗಿ= ನಮಿಸಿ, ನೋಡುವ ನೆರವಿಗೆ (ಜನಸಮೂಹಕ್ಕೆ)+ ಇವನಾರು+ ಈತನು+ ಆರೆಂಬ+ ಅದ್ಭುತವ ಬೀರಿ,= ಆಶ್ಚರ್ಯವನ್ನುಂಟುಮಾಡಿ, ಅರಸ ಕೇಳೈ ವಿವಿಧ ಶಸ್ತ್ರೋತ್ಕರದ ಶ್ರಮವನು= ನಾನಾ ಬಗೆಯ ಶಸ್ತ್ರಾಸ್ತ್ರ ಪ್ರಯೋಗದ ಪರಿಣತಿಯನ್ನು, ತೋರಿದನು, ಕರಿ ತುರಗ ರಥವಾಹನದ= ಆನೆ, ಕುದುರೆ, ರಥ ಇವುಗಳ ಏರಾಟದ- ಶಿಕ್ಷಾ ವಿದ್ಯಗಳು ಸಹಿತ.
ಅರ್ಥ: ಗುರುಗಳಿಗೆ ಕೈಮುಗಿದು, ತಲೆಯನ್ನು ಬಗ್ಗಿಸಿ ಸೂರ್ಯ ಮಂಡಲಕ್ಕೆ ನಮಿಸಿ, ನೋಡುವ ಜನಸಮೂಹಕ್ಕೆ, ಇವನಾರು, ಈತನು ಯಾರಪ್ಪಾ, ಎಂಬ ಆಶ್ಚರ್ಯವನ್ನುಂಟುಮಾಡಿ, ಅರಸ ಕೇಳು, ಆನೆ, ಕುದುರೆ, ರಥ ಇವುಗಳ ಏರಾಟದ- ಶಿಕ್ಷಾ ವಿದ್ಯಗಳು ಸಹಿತ ಕರ್ಣನು ನಾನಾ ಬಗೆಯ ಶಸ್ತ್ರಾಸ್ತ್ರ ಪ್ರಯೋಗದ ಪರಿಣತಿಯನ್ನು ತೋರಿಸಿದನು.
ಆವ ವಿಧದಲಿ ಪಾರ್ಥ ತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ |
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ || (೪೯)
ಪದವಿಭಾಗ-ಅರ್ಥ:' ಆವ= ಯಾವ ವಿಧದಲಿ ಪಾರ್ಥ ತೋರಿದನೊ+ ಅವ ದಿವ್ಯಾಸ್ತ್ರಪ್ರಪಂಚವ ಪಾವಕ+ ಅನಿಲ ವಾರುಣ+ ಆದಿಯನು+ ಐದೆ= ಆ ಕ್ರಮ ಬರುವಂತೆ ವಿರಚಿಸಿದ= ತೋರಿಸಿದ. ಆ ವಿಧಾನದಲಿ+ ಆ ವಿಹಾರದಲಿ+ ಆ ವಿಬಂಧದಲಿ+ ಅರ್ಜುನನ ಬಾಣಾವಳಿಯ ಬಿನ್ನಾಣವನು= ಚಳಕವನ್ನು ತೋರಿದನು ಕಲಿಕರ್ಣ.
ಅರ್ಥ: ಯಾವ ವಿಧದಲ್ಲಿ ಪಾರ್ಥನು ಯಾವ ದಿವ್ಯಾಸ್ತ್ರಗಳನ್ನೆಲ್ಲಾ ತೋರಿಸಿದನೊ ಅದೇರೀತಿಯಲ್ಲಿ, ಅಗ್ನಿ, ವಾಯು, ವಾರುಣ, ಮೊದಲಾದವುಗಳನ್ನು ಅದೇ ರೀತಿ ತೋರಿಸಿದ. ಆ ವಿಧಾನದಲಲ್ಲಿ, ಆ ವಿಹಾರದಲ್ಲಿ- ನೆಡೆಯಲ್ಲಿ, ಆ ವಿಬಂಧದಲಿ - ಅದೇ ಬಂಧದಲ್ಲಿ ಅರ್ಜುನನ ವಿವಿಧ ಬಗೆಯ ಬಾಣಗಳ ಚಮತ್ಕಾರವನ್ನು ಕಲಿಕರ್ಣನು ತೋರಿಸಿದನು.
ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ ||
ಕಣಿ ಕಣಿಗಳಾಟದಲಿ ಶರ ಖಂ
ಡಣಿಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ || (೫೦) ||
ಪದವಿಭಾಗ-ಅರ್ಥ: ಕರ್ಣನು ಸೆಣಸುವಡೆ= ತನ್ನೊಡನೆ ಹೋರಾಡುವುದಾದರೆ, ಬಾಯೆಂದು ಪಾರ್ಥನ ಕೆಣಕಿದನು, ಘನರೋಷ ಶಿಖಿಯಲಿ= ಅತಿಯಾದ ಸಿಟ್ಟಿನ ಬೆಂಕಿಯಲ್ಲಿ, ಕುಣಿದವು+ ಇಬ್ಬರ ಮೀಸೆ, ಕಂಗಳೊಳು ಒಗುವ= 1. ಚೆಲ್ಲು. 2. ಆವರಿಸು. 3. ಹರಡು. 1. ಹೊರಹೊಮ್ಮುವ; ಕೆಂಪಿನಲಿ= ಕಣ್ಣಿನಲ್ಲಿ ತೋರುವ ಕೆಂಪಿನಲಿ , ಕಣಿ(ಬಾಣ) ಕಣಿಗಳ+ ಆಟದಲಿ= ಬಾಣಗಳನ್ನು ಒಬ್ಬರ ಮೇಲೆ ಒಬ್ಬರು ಬಿಟ್ಟರು, ಶರ ಖಂಡಣಿಯ ಕೋಲಾಟದಲಿ= ಹಾಗೆ ಬಿಟ್ಟ ಬಾಣಗಳನ್ನು ಪರಸ್ಪರ ಖಂಡಿಸಿದರು, ಖಣಿ ಖಣಿಖಣಿಲು ಖಣಿ ಖಣಿ ಮಸಗಲು+ ಎಚ್ಚಾಡಿದರು ಚಳಕದಲಿ= ಖಣಿಖಣಿಲು ಖಣಿ ಖಣಿ ಎಂದು ಬಾಣಗಳ ಸದ್ದು ಆವರಿಸುತ್ತಿರಲು ಯುದ್ಧಮಾಡಿದರು.
ಅರ್ಥ: ಕರ್ಣನು, ತನ್ನೊಡನೆ ಹೋರಾಡುವುದಾದರೆ ಬಾಯೆಂದು ಪಾರ್ಥನನ್ನು ಕೆಣಕಿದನು. ಅತಿಯಾದ ಸಿಟ್ಟಿನ ಬೆಂಕಿಯಲ್ಲಿ, ಇಬ್ಬರ ಮೀಸೆ ಕುಣಿದವು, ಕಣ್ಣುಗಳು ಸಿಟ್ಟಿನಿಂದ ಕೆಂಪಾಯಿತು. ಬಾಣಗಳನ್ನು ಒಬ್ಬರ ಮೇಲೆ ಒಬ್ಬರು ಬಿಟ್ಟರು. ಹಾಗೆ ಬಿಟ್ಟ ಬಾಣಗಳನ್ನು ಪರಸ್ಪರ ಖಂಡಿಸಿದರು. ಖಣಿಖಣಿಲು ಖಣಿ ಖಣಿ ಎಂದು ಬಾಣಗಳ ಸದ್ದು ಆವರಿಸುತ್ತಿರಲು ಇಬ್ಬರೂ ಯುದ್ಧಮಾಡಿದರು.
ರಾಯ ಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋ ಣಾದ್ಯರು ಧನಂಜಯನ ||
ಆಯಿತೆಲವೋ ಕರ್ಣ ನೀನನು
ನಾಯಕನೋ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ || (೫೧) ||
ಪದವಿಭಾಗ-ಅರ್ಥ: ರಾಯ ಸಭೆ ಕಳವಳಿಸೆ= ರಾಜಸಬೆ ಚಿಂತೆಗೊಳಗಾಗಲು, ಹೋ ಹೋ ಹೋ ಯಿದೇನು+ ಏನು+ ಎನುತ ಹಿಡಿದರು ವಾಯುಸುತ= ಭೀಮ, ಕೃಪ ಗುರುಜ= ಅಶ್ವತ್ಥಾಮ, ದ್ರೋಣ+ ಆದ್ಯರು= ಮೊದಲಾದವರು, ಧನಂಜಯನ, ಆಯಿತು+ ಎಲವೋ ಕರ್ಣ, ನೀನು ಅನುನಾಯಕನೋ ನೃಪಹಾರದಲಿ ಮೇಣ್+ ನಾಯಕನೊ ನೀನಾವನು+ ಎಂದನು ಕೃಪನು ಖಾತಿಯಲಿ= ಕೃಪನು ಸಿಟ್ಟಿನಿಂದ- ಎಲವೋ ಕರ್ಣ, ನೀನು ರಾಜರ ಸಾಲಿನಲ್ಲಿ ಉಪನಾಯಕನೋ- ಸಾಮಂತರಾಜನೋ, ಅಥವಾ ನಾಯಕನೊ, ರಾಜನೋ, ನೀನು ಯಾವನು? ಎಂದನು. (ಶತ್ರುಗಳೊಡನೆ ಯುದ್ಧವಲ್ಲದೆ ಹಾಗೆಯೇ ದ್ವಂದ ಯುದ್ಧಕ್ಕೆ ಕರೆಯಲು ಸಮಾನ ಸ್ಥಾನದವರಾಗಿರಬೇಕು ಎಂದು ಭಾವ.)
ಅರ್ಥ: ಸ್ಪರ್ಧೆಯ ಕಣದಲ್ಲಿ ದ್ವಂದ್ವಯುದ್ಧ ನೊಡಿ, ರಾಜಸಬೆ ಚಿಂತೆಗೊಳಗಾಗಲು, ಹೋ ಹೋ ಹೋ ಇದೇನು, ಏನು, ಎನುತ್ತಾ ಭೀಮ, ಕೃಪ ಅಶ್ವತ್ಥಾಮ, ದ್ರೋಣ ಮೊದಲಾದವರು ಕರ್ಣನ್ನೂ ಧನಂಜಯನನ್ನೂ ತಡೆಹಿಡಿದರು, ಆಗ ಕೃಪನು ಸಿಟ್ಟಿನಿಂದ-, ಆಯಿತು (ದ್ವಂದ ಯುದ್ಧಕ್ಕೆ ಒಪ್ಪಿಗೆ) ಎಲವೋ ಕರ್ಣ, ಮೊದಲು ಹೇಳು ನಿನ್ನ ಪರಿಚಯ, ನೀನು ರಾಜರ ಸಾಲಿನಲ್ಲಿ ಸಾಮಂತರಾಜನೋ ಅಥವಾ ರಾಜನೋ, ನೀನು ಯಾವನು? ಎಂದನು. (ಶತ್ರುಗಳೊಡನೆ ಯುದ್ಧವಲ್ಲದೆ ಹಾಗೆಯೇ ದ್ವಂದ ಯುದ್ಧಕ್ಕೆ ಕರೆಯಲು ಸಮಾನ ಸ್ಥಾನದವರಾಗಿರಬೇಕು- ಪರಿಚಯ ಹೇಳಿಕೊಳ್ಳಬೇಕು, ಎಂದು ಭಾವ. ಅದು ನಿಯಮ)

ಕರ್ಣನಿಗೆ ಅಂಗರಾಜ್ಯಾಭಿಷೇಕ[ಸಂಪಾದಿಸಿ]

ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ |
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರ ನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವ ಸಂಗತಿಯ || (೫೨)
ಪದವಿಭಾಗ-ಅರ್ಥ: ಈತನು+ ಆವನು= ಯಾರು?- ಕರ್ಣನೆಂಬವನು+ ಈತನು+ ಅರ್ಜುನನೊಡನೆ ತಾ ಮಾರಾತು= ಮಾರಾಂತು- ಎದುರಿಸಿ, ಕೈಮಾಡಿದನು= ಯುದ್ಧಮಾಡಿದನು, ಕೈಕೊಳ್ಳನು= ಹೋರಾಡುವಂತಿಲ್ಲಿವೇ ಧನಂಜಯನ (ಕೂಡೆ), ಈತ ತಪ್ಪಲ್ಲ+ ಎನುತ ಮಿಗೆ= ಬಹಳ ಮೈಯಾತನು(ಬೆಂಬಲಿಸಿದನು) +, ಆ ಧೃತರಾಷ್ಟ್ರನು+ ಈತನ= ಕರ್ಣನ ಮಾತೆ ಕಂಡಳು ಕುಂತಿ ನೆನೆದಳು ಪೂರ್ವ ಸಂಗತಿಯ.
ಅರ್ಥ: ಆ ಧೃತರಾಷ್ಟ್ರನು, ಕರ್ಣನೆಂಬವವನು ಈತನು ಯಾರು? ಈತನು ಅರ್ಜುನನೊಡನೆ ತಾನು ಎದುರಿಸಿ ಯುದ್ಧಮಾಡಿದದನು. ಧನಂಜಯನನೊಡನೆ ಹೋರಾಡುವಂತಿಲ್ಲಿವೇ? ಈತ ಹೋರಾಡಿದರೆ ತಪ್ಪಲ್ಲ, ಎನ್ನುತ್ತಾ, ಆ ಧೃತರಾಷ್ಟ್ರನು ಕರ್ಣನ್ನು ಬಹಳ ಬೆಂಬಲಿಸಿದನು. ಕರ್ನನ ತಾಯಿ ಅವನನ್ನು ನೋಡಿದಳು. ಕುಂತಿ ಅವನ (ಕರ್ಣ(ಕಿವಿಯ) ಕುಂಡಲಗಳನ್ನೂ ಕವಚವನ್ನೂ ನೋಡಿ) ಪೂರ್ವ ಸಂಗತಿಯನ್ನು ನೆನಪು ಮಾಡಿಕೊಂಡಳು. ತಾನು ಕುಂಡಲಗಳನ್ನೂ ಕವಚವನ್ನೂ ಉಳ್ಳಸೂರ್ಯನ ವರದಿಂದ ಪಡೆದ ಮಗುವನ್ನು ಗಂಗೆ ಹಾಕಿದುದನ್ನು ನೆನೆದು ಚಿಂತಿತಳಾದಳು.)
ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣುಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ ||
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ || (೫೩) ||
ಪದವಿಭಾಗ-ಅರ್ಥ: ಎನ್ನ ಮಗನು+ ಎನೆ ಬಂದುದಿಲ್ಲ+ ಅದು= ಕರ್ಣನು ನನ್ನ ಮಗನು ಎಂದು ಹೇಳಲು (ಕುಂತಿಗೆ) ಬಾಯಿ ಬರಲಿಲ್ಲ. ತನ್ನ ವಶವೇ ವಿಷ್ಣುಮಾಯೆಯ ಬಿನ್ನಣವಲೇ= ಘಟನೆ ನೆಡೆಯುವುದು ವಿಷ್ಣು ಮಾಯೆಯಿಂದ, ವ್ಯಕ್ತಿಯ ವಶವೇ? ಮಾತು ಬಿಗಿದುದು= ಕುಂತಿಗೆ ದುಃಖ ಬಾಚಿಕೆಯಿಂದ ಗಂಟಲು ಕಟ್ಟಿತು, ಮಾತು ಹೊರಡಲಿಲ್ಲ.. ಮನವನೊಳಗೆ+ ಇಕ್ಕಿ= ಬಿತ್ತಿದ ವಿಷಯ, ಅಲ್ಲೇನಿಂತು, ತನ್ನ ತಾನೇ ಮರುಗಿ= ವಿಷಯ ಮನಸ್ಸಿನಲ್ಲೇ ನಿಂತು, ತನಗೆ ತಾನೇ ಸಂಕಟ ಅನುಭವಿಸಿ, ಮೂರ್ಛಾಪನ್ನೆಯಾದಳು ಕುಂತಿ= ಕುಂತಿ ಮೂರ್ಛಾಪನ್ನೆಯಾದಳು ಯಿತ್ತಲು- > ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ= ಕೃಪನ ಮಾತಿನಿಂದ ಉತ್ತರಿಸಲಾರದೆ ಮನಸ್ಸಿನಲ್ಲಿ ನೊಂದು ಕರ್ಣನು ಅವಮಾನಿತನಾಗಿ ದುಃಖಿಯಾದನು.
ಅರ್ಥ:'ಕರ್ಣನು ನನ್ನ ಮಗನು,' ಎಂದು ಹೇಳಲು ಕುಂತಿಗೆ ಬಾಯಿ ಬರಲಿಲ್ಲ. ಘಟನೆ ನೆಡೆಯುವುದು ವಿಷ್ಣು ಮಾಯೆಯಿಂದ (ವಿಧಿ), ವ್ಯಕ್ತಿಯ ವಶವೇ? ಕುಂತಿಗೆ ದುಃಖ ಬಾಚಿಕೆಯಿಂದ ಗಂಟಲು ಕಟ್ಟಿತು, ಮಾತು ಹೊರಡಲಿಲ್ಲ. ಮನವನೊಳಗೆ ಬಿತ್ತಿದ ವಿಷಯ, ಅಲ್ಲೇ ನಿಂತು, ವಿಷಯ ಮನಸ್ಸಿನಲ್ಲೇ ನಿಂತು, ತನಗೆ ತಾನೇ ಸಂಕಟ ಅನುಭವಿಸಿ, ಕುಂತಿ ಮೂರ್ಛಾವಸ್ಥೆಗೆ ಹೋದಳು. ಕೃಪನ ಮಾತಿನಿಂದ ಉತ್ತರಿಸಲಾರದೆ ಮನಸ್ಸಿನಲ್ಲಿ ನೊಂದು ಕರ್ಣನು ಅವಮಾನಿತನಾಗಿ ದುಃಖಿಯಾದನು.
ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ ||
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ || (೫೪) ||
ಪದವಿಭಾಗ-ಅರ್ಥ: ಈತನು+ ಅರಸ+ ಅಲ್ಲ+ ಎಂದು, ಕೃಪ ಪಳಿವಾತನೇ= ಹಳಿಯುವವನೇ, ತಪ್ಪೇನು, ರಾಜ್ಯದೊಳು+ ಈತನ+ ಅರಸ+ ಎನಿಸುವೆನು= ರಾಜ್ಯದಿಂದ , ರಾಜ್ಯವನ್ನು ಕೊಟ್ಟು ಇವನನ್ನು 'ಅರಸ' ಎನ್ನುವಂತೆ ಮಾಡುವೆನು. ಕರೆ ನಮ್ಮಯ ಪುರೋಹಿತರ, ಶಾತ ಕುಂಭಾಸನವ (ಶಾತಕುಂಭ= ಚಿನ್ನ, ಹಿರಣ್ಯ) ಮಂಗಳ ಜಾತ ವಸ್ತುವ= ನಮ್ಮ ಪುರೋಹಿತರನ್ನ ಕರೆ, ಚಿನ್ನದ ಸಿಂಹಾಸನವನ್ನು, ತರಿಸು ತರಿಸು+ ಎಂದು ಆ, ತತುಕ್ಷಣದಲಿ= ಕೂಡಲೆ, ಸುಯೋಧನನು ಎದ್ದ ರಭಸದಲಿ.
ಅರ್ಥ: ಕರ್ಣನು ಅರಸಲ್ಲ ಎಂದು ಕೃಪನು ಹಳಿಯುತ್ತಿದ್ದಾನೆಯೇ? ತಪ್ಪೇನು? (ನಿಜ ಅರಸನಲ್ಲ). ಆಗಲಿ ರಾಜ್ಯವನ್ನು ಕೊಟ್ಟು ಇವನನ್ನು 'ಅರಸ' ಎನ್ನುವಂತೆ ಮಾಡುವೆನು. ನಮ್ಮಯ ಪುರೋಹಿತರನ್ನು ಕರೆದು ತನ್ನಿ, ಮಂಗಳಕರ ವಸ್ತುವನ್ನೂ ಚಿನ್ನದ ಸಿಂಹಾಸನವನ್ನೂ ಬೇಗ ತರಿಸು, ಎಂದು ಆ ಕೂಡಲೆ, ಸುಯೋಧನನು ರಭಸದಿಂದ ಎದ್ದನು.
ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗ ದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ ||
ದರುಶನವಿತ್ತಖಿಳ ಭೂಮೀ
ಶ್ವರರು ಕಂಡುರು ಪೂರ್ವ ಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ || (೫೫) ||
ಪದವಿಭಾಗ-ಅರ್ಥ: ತರಿಸಿ ಭದ್ರಾಸನದೊಳು+ ಈತಂಗೆ+ ಅರಸು ಪದವಿಯೊಳು+ ಅಂಗ ದೇಶದಸಿರಿಯನು+ ಇತ್ತನು, ರಚಿಸಿದನು ಮೂರ್ಧಾಭಿಷೇಚನವ, ದರುಶನವಿತ್ತು+ ಅಖಿಳ ಭೂಮೀಶ್ವರರು ಕಂಡುರು ಪೂರ್ವ ಶೈಲದ ತರಣಿಯಂತಿರೆ ಕರ್ಣನು ಎಸೆದನು ರಾಜತೇಜದಲಿ
ಅರ್ಥ: + ಅಂಗ ದೇಶದಸಿರಿಯನು+ ಇತ್ತನು, ಭದ್ರಾಸನವನ್ನು ತರಿಸಿ,ಕರ್ಣನನ್ನು ಅರಸು ಪದವಿಯಲ್ಲಿ ಕೂರಿಸಿದನು. ಕರ್ಣನಿಗೆ ಅಂಗದೇಶವನ್ನು ಕೊಟ್ಟು ಕ್ರಮಬದ್ಧವಾಗಿ ರಾಜ್ಯಾಭಿಷೇಕವನ್ನು,ಮಾಡಿದನು. ಅಲ್ಲಿದ್ದ ಎಲ್ಲರಿಗೂ ದರ್ಶನವನ್ನು ಕೊಟ್ಟನು. ಸಮಸ್ತ ರಾಜರೂ ಅದನ್ನು ಕಂಡುರು. ಆಗ ಕರ್ಣನು ಪೂರ್ವ ಬೆಟ್ಟದಲ್ಲಿ ಉದಯಿಸಿದ ಸೂರ್ಯನಂತೆ ರಾಜತೇಜಸ್ಸಿನಿಂದ ಶೋಭಿಸಿದನು.
ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ ||
ಸೂತ ಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ || (೫೬) ||
ಪದವಿಭಾಗ-ಅರ್ಥ:ಈತನ+ ಉತ್ಸವ ತನ್ನದು+ ಎಂದೇ ಪ್ರೀತಿಯಲಿ ಬರೆ= ಕರ್ಣನ ಪಟ್ಟಾಭಿಷೇಕದ ಉತ್ಸವ ತನ್ನದೇ ಪಟ್ಟಾಭಿಷೇಕ ಎನ್ನುವಂತೆ ಸೂತನು ಸಿಂಹಾಸನದ ಬಳಿಗೆ ಪ್ರೀತಿಯಿಂದ ಬರಲು, ಸಿಂಹಪೀಠವನು+ ಈತನು+ ಇಳಿದು+ ಎರಗಿದನು ಪದದಲಿ= ಕರ್ಣನು ಸಿಂಹಾಸನದಿಂದ ಇಳಿದು ಸಾಕುತಂದೆಯ ಪಾದಕ್ಕೆ ನಮಿಸಿದನು. ಬಳಿಕ ಜನಜನಿತ ಸೂತ ಸುತನು+ ಇವನೆಂದು ಭುವನಖ್ಯಾತವಾದುದು= ಆಗ ಎಲ್ಲರಿಗೂ ಅವನು ಸೂತ ಪುತ್ರನೆಂದು ತಿಳಿಯಿತು. ಆನಂತರ ಅಂಗರಾಜನಾದರೂ ಕರ್ಣನು ಸೂತ ಪುತ್ರನೆಂದು ಲೋಕದಲ್ಲಿ ಪ್ರಖ್ಯಾತನಾದನು. ಬಳಿಕ ನಸುನಗುತ+ ಈತನನು ಕುಲವೆತ್ತಿ ಭಂಗಿಸಿ ನುಡಿದನು ಆ ಭೀಮ= ಆಗ ಭೀಮನು ನಸುನಗುತ್ತಾ 'ಓ ಇವನು ಸೂತ' ಎಂಬ ಕುಲದ ಹೆಸರನ್ನೆತ್ತಿ ಕರ್ಣನನ್ನು ಅವಮಾನಿಸಿದನು
ಅರ್ಥ:ಕರ್ಣನ ಪಟ್ಟಾಭಿಷೇಕದ ಉತ್ಸವ ತನ್ನದೇ ಪಟ್ಟಾಭಿಷೇಕ ಎನ್ನುವಂತೆ ಸೂತನು ಪ್ರೀತಿಯಿಂದ ಸಿಂಹಾಸನದ ಬಳಿಗೆ ಬರಲು, ಕರ್ಣನು ಸಿಂಹಾಸನದಿಂದ ಇಳಿದು ಸಾಕುತಂದೆಯ ಪಾದಕ್ಕೆ ನಮಿಸಿದನು. ಆಗ ಎಲ್ಲರಿಗೂ ಅವನು ಸೂತ ಪುತ್ರನೆಂದು ತಿಳಿಯಿತು. ಆನಂತರ ಅಂಗರಾಜನಾದರೂ ಕರ್ಣನು ಸೂತಪುತ್ರನೆಂದು ಲೋಕದಲ್ಲಿ ಪ್ರಖ್ಯಾತನಾದನು. ಆಗ ಭೀಮನು ನಸುನಗುತ್ತಾ 'ಓ ಇವನು ಸೂತ' ಎಂಬ ಕುಲದ ಹೆಸರನ್ನೆತ್ತಿ ಕರ್ಣನನ್ನು ಅವಮಾನಿಸಿದನು.
 • ಟಿಪ್ಪಣಿ: ಕರ್ಣನ ಸಾಕುತಂದೆ ಸೂತನ ಹೆಸರು ಅಧಿರಥ, ಈತನು ಧೃತರಾಷ್ಟ್ರನ ಸಾರಥಿ.
ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯ ಗುರುಗಳ ತಾಯದಾವವಳೊ |
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ || (೫೭)
ಪದವಿಭಾಗ-ಅರ್ಥ: ಇವನ ತಂದೆಯು+ ಅದಾರು? ಪಾಂಡುವೊ? ಪವನನೋ? = ಆಗ ಕೌರವನು ಸಿಟ್ಟಿನಿಂದ, ಇವನ- ಈ ಭೀಮನ ತಂದೆ ಅದು ಯಾರು/ ಪಾಂಡುವೋ, ಅಥವಾ ವಾಯುವೋ? ಕೃಪ ನಿಮ್ಮ ಜನ್ಮವನು+ ಎವಗೆ ಹೇಳಿರೆ= ಕೃಪಾಚಾರ್ಯರೇ ನೀವು ಹೇಗೆ ಹುಟ್ಟಿದಿರಿ ನನಗೆ ಹೇಳಿ? ಹಿರಿಯ ಗುರುಗಳ ತಾಯಿ+ ಅದಾವ+ ಅವಳೊ?= ನಮ್ಮ ಹಿರಿಯ ಗುರುಗಳಾದ ದ್ರೋಣರ ತಾಯಿ ಅದು ಯಾರಪ್ಪಾ?? (ಇವರಿಬ್ಬರಿಗೂ ತಾಯಿಯೇ ಇಲ್ಲ - ಒಬ್ಬರು ಹುಲ್ಲು ಜೊಂಡಿನಲ್ಲಿ ಹುಟ್ಟಿದರು, ಮತ್ತೆ ದ್ರೋಣರು ದೊನ್ನೆಯಲ್ಲಿ ಹುಟ್ಟಿದರು - ಇವರ ಜಾತಿ ಯಾವುದು ಎಂದು ಕೌರವನ ಪ್ರಶ್ನೆ.) ಅವಘಡಿಸದಿರಿ= ಅವಮಾನಿಸಿ ಹಿಂಸಿಸಬೇಡಿ; ಹಿರಿಯತನಕೆ+ ಅಂಜುವೆನು ನಿಮಗೆ+ ಎನುತ+ ಅಡಿಗಡಿಗೆ ಕೌರವ ಮಹೀಪತಿ ಜರಿದು ನುಡಿದನು= ಹೆಚ್ಚು ಹೇಳಲು, ನಿಮ್ಮ ಹಿರಿಯತನಕ್ಕೆ ನಾನು ಅಂಜುತ್ತೇನೆ, ಎಂದು ದುರ್ಯೋಧನನು ಗುರು ಕೃಪಾದಿಗಳ= ಗುರು ದ್ರೋಣರನ್ನೂ ಕೃಪರನ್ನೂ ಜರಿದು ಹೇಳಿದನು.
 • ಅವಘಡಿಸು= ತೊಂದರೆಕೊಡು-
 • ಟಿಪ್ಪಣಿ: ಕೃಪ ದ್ರೋಣರ ಜನನ ಸಂಧಿ ೫;(ಇವರಿಬ್ಬರಿಗೂ ತಾಯಿಯೇ ಇಲ್ಲ - ಒಬ್ಬರು ಹುಲ್ಲು ಜೊಂಡಿನಲ್ಲಿ ಹುಟ್ಟಿದರು, ಮತ್ತೆ ದ್ರೋಣರು ದೊನ್ನೆಯಲ್ಲಿ ಅಥವಾ ಮಡಿಕೆ ಅಥವಾ ಚೊಂಬಿನಲ್ಲಿ ಹುಟ್ಟಿದರು (ಕುಂಭೋದ್ಭವ)- ಇವರ ಜಾತಿ ಯಾವುದು ಎಂದು ಕೌರವನ ಪ್ರಶ್ನೆ.)
ಅರ್ಥ:ಆಗ ಕೌರವನು ಸಿಟ್ಟಿನಿಂದ, ಇವನ- ಈ ಭೀಮನ ತಂದೆ ಅದು ಯಾರು/ ಪಾಂಡುವೋ, ಅಥವಾ ವಾಯುವೋ?(ಗಾಳಿಯೋ?) ಕೃಪಾಚಾರ್ಯರೇ ನೀವು ಹೇಗೆ ಹುಟ್ಟಿದಿರಿ ನನಗೆ ಹೇಳಿ? ನಮ್ಮ ಹಿರಿಯ ಗುರುಗಳಾದ ದ್ರೋಣರ ತಾಯಿ ಅದು ಯಾರಪ್ಪಾ? ಕರ್ಣನನ್ನು ಅವಮಾನಿಸಬೇಡಿ; ಹೆಚ್ಚು ಹೇಳಲು, ನಿಮ್ಮ ಹಿರಿಯತನಕ್ಕೆ ನಾನು ಅಂಜುತ್ತೇನೆ, ಎಂದು ದುರ್ಯೋಧನನು ಗುರು ದ್ರೋಣರನ್ನೂ ಕೃಪರನ್ನೂ ಜರಿದು ಹೇಳಿದನು.
ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ ||
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳೆಂದ || (೫೮) ||
ಪದವಿಭಾಗ-ಅರ್ಥ: ಒಳಗೆ ಗಜಬಜವಾಯ್ತು ಕೈದುವ ಸೆಳೆದುದ+ ಅಲ್ಲಿಯದು+ ಅಲ್ಲಿ= ಪಾಂಡವರ ಕೌರವರ ಪರವಹಿಸಿ ಪಾಳಯದ ಒಳಗೆ ಕೋಲಾಹಲವಾಯಿತು. ಕೆಲವರು ಆಯುಧಗಳನ್ನು ಸೆಳೆದು ಹೋರಾಟಕ್ಕೆ ಸಿದ್ಧರಾಗಲು, ಕೊನೆಗೆ ಅಲ್ಲಿಯ ಜಗಳ ಅಲ್ಲಿಗೆ ಕೊನೆಯಾಗಲಿ ಎಂದರು. ಆದರೆ, ಗುರು ಕೃಪರ+ ಉಲುಹ= ಗುರು ದ್ರೋಣರ ಮತ್ತು ಕೃಪರ ಮಾತನ್ನು ಕೇಳುವರಿಲ್ಲ= ಕೇಳುವರಿಲ್ಲದಾಯಿತು. ಕೈದೊಳಸಾಯ್ತು= ಕೈ+ ತೊಳಸಾಯ್ತು, ಕಳನೊಳಗೆ= ಸ್ಪರ್ಧೆಯಕಣದಲ್ಲಿ ಇಳಿದು= ಸ್ಪರ್ಧೆಯಕಣದಲ್ಲಿ ಇಳಿದು ಕೆಲವರು ಕೈ ಕೈಕೊಟ್ಟು ಹೋರಾಡಿದರು. ಭೀಷ್ಮಾದಿಗಳು ತಮ್ಮಯ ನಿಳಯಕೆ (ಮನೆಗೆ)+ ಐದಿದರು= ಹೋದರು. ಭೀಷ್ಮನೇ ಮೊದಲಾದವರು ತಮ್ಮ ಮನೆಗಳಿಗೆ ಹೋದರು. ಐದಿದರು+ ಎರಡು ಬಲ= ಪಂಗಡ, ತಮ್ಮೊಳಗೆ ತಾವೇ ಹಣಿದು ಹರಿದುದು (ಚದುರಿದರು- ಹೋದರು)= ಎರಡೂ ಪಕ್ಷದವರು ತಾವೇ ಹೊಡೆದಾಡಿ ಆಯಾಸಪಟ್ಟು ಹೊರಟುಹೋದರು, ರಾಯ ಕೇಳೆಂದ =ಜನಮೇಜಯನೇ ಕೇಳು ಎಂದ ವೈಶಂಪಾಯನ ಮುನಿ.
ಅರ್ಥ: ಪಾಂಡವರ ಕೌರವರ ಪರವಹಿಸಿ ಪಾಳಯದ ಒಳಗೆ ಕೋಲಾಹಲವಾಯಿತು. ಕೆಲವರು ಆಯುಧಗಳನ್ನು ಸೆಳೆದು ಹೋರಾಟಕ್ಕೆ ಸಿದ್ಧರಾಗಲು, ಕೊನೆಗೆ ಅಲ್ಲಿಯ ಜಗಳ ಅಲ್ಲಿಗೆ ಕೊನೆಯಾಗಲಿ ಎಂದರು. ಆದರೆ, ಗುರು ದ್ರೋಣರ ಮತ್ತು ಕೃಪರ ಮಾತನ್ನು ಕೇಳುವರಿಲ್ಲದಾಯಿತು. ಸ್ಪರ್ಧೆಯಕಣದಲ್ಲಿ ಇಳಿದು ಕೆಲವರು ಕೈ ಕೈಸೇರಿಸಿ ಹೋರಾಡಿದರು. ಭೀಷ್ಮನೇ ಮೊದಲಾದವರು ತಮ್ಮ ಮನೆಗಳಿಗೆ ಹೋದರು. ಎರಡೂ ಪಕ್ಷದವರು ತಾವೇ ಹೊಡೆದಾಡಿ ಆಯಾಸಪಟ್ಟು ಹೊರಟುಹೋದರು, ಜನಮೇಜಯನೇ ಕೇಳು ಎಂದ ವೈಶಂಪಾಯನ ಮುನಿ.
ಕೆಲವರು ಭೀಮನನರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ ||
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ || (೫೯) ||
ಪದವಿಭಾಗ-ಅರ್ಥ: ಕೆಲವರು ಭೀಮನನ+ ಅರ್ಜುನನ ಕೆಲಕೆಲರು= ಕೆಲವರು, ಕರ್ಣನ ಕೌರವೇಂದ್ರನ ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ, ಬಳಿಕಲಿ+ ಆ ಮರುದಿವಸದಲಿ ಮಕ್ಕಳುಗಳ+ ಎಲ್ಲರ ಕರೆಸಿ ಗರುಡಿಯ ನಿಳಯದಲಿ ಕುಳ್ಳಿರ್ದು= ಕುಳಿತು, ಗುರು= ದ್ರೋಣ, ನುಡಿದನು ಕುಮಾರರಿಗೆ
ಅರ್ಥ:ಕೆಲವರು ಭೀಮನನ್ನೂ ಅರ್ಜುನನ್ನೂ, ಕೆಲವರು ಕರ್ಣನನ್ನೂ ದುರ್ಯೋದನನ್ನೂ, ಹೊಗಳುತ್ತಾ ಹಸ್ತಿನಾಪುರಕ್ಕೆ ಬಂದರು. ಬಳಿಕ ಆ ಮರುದಿವಸದಲ್ಲಿ ಕವರವ ಪಾಂಡವ ಮಕ್ಕಳುಗಳನ್ನೂ, ಉಳಿದ ಎಲ್ಲರನ್ನೂ ಕರೆಸಿ ಗರುಡಿಯ ಆಬ್ಯಾಸದ ಶಾಲೆಯಲ್ಲಿ ಕುಳಿತು, ಗುರು ದ್ರೋಣರು ಕುಮಾರರನ್ನು ಕುರಿತು ಹೀಗೆ ಹೇಳಿದರು.

ದ್ರುಪದನ ಪಿಡಿದು ಒಪ್ಪಿಸಿದರೆ ನನಗೆ ಅದೇ ಗುರುದಕ್ಷಿಣೆ[ಸಂಪಾದಿಸಿ]

ಏನಿರೈ ಕೂರುವಂಶನಳಿನೀ
ಭಾನುಗಳಿರ ವಿದಗ್ಧ ಜನಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು ||
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವ ನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ || (೬೦) ||
ಪದವಿಭಾಗ-ಅರ್ಥ:ಏನಿರೈ ಕೂರುವಂಶ-ನಳಿನೀ-ಭಾನುಗಳಿರ= ಕುರುವಂಶ ಕಮಲಕ್ಕೆ ಸೂರ್ಯರೇ, ರವಿಯಂತೆ ಇರುವವರೇ, ವಿದಗ್ಧಜನ= ಪಂಡಿತರಿಗೆ,.ಸುರಧೇನುಗಳಿರ+ ಆವು+ ಇಂದು= ಕಾಮಧೇನುವಾಗಿ ಇರುವವರೇ, ನಾವು ಇಂದು, ನಿಮ್ಮಲಿ ದಕ್ಷಿಣಾರ್ಥಿಗಳು= ನಿಮ್ಮಲ್ಲಿ ಗುರುದಕ್ಷಿಣೆಯನ್ನು ಅಪೇಕ್ಷಿಸುವವರಾಗಿದ್ದೇವೆ. ಏನನು+ ಈವಿರಿ= ಏನನ್ನು ಕೊಡುವಿರಿ, ನಮಗೆ ಕೊಡೆ ಸಂಪೂರ್ಣರೈ= ನಮಗೆ ಗುರುದಕ್ಷಿಣೆ ಕೊಟ್ಟರೆ ನೀವು ಸಂಪೂರ್ಣರು, ಕೃತಾರ್ಥರು,ನಿಮಗೆ ಕೊಡಲಾಪ, ಕೊಡಲು+ ಆಪ= ಸಾಧ್ಯತೆಯ ಸತ್ವ ನಿಧಾನವುಂಟೇ= ಕೊಡುವ ಸಾಮರ್ಥ್ಯ ಮನಸ್ಸು ಮಾರ್ಗ ಇದೆಯೇ?, ಹೇಳಿಯೆಂದನು ದ್ರೋಣನು ಅನಿಬರಿಗೆ= ಅವರೆಲ್ಲರಿಗೆ.
ಅರ್ಥ: ಏನಿರೈ ಕುರುವಂಶ ಕಮಲಕ್ಕೆ ಸೂರ್ಯರೇ, ರವಿಯಂತೆ ಇರುವವರೇ, ಪಂಡಿತರಿಗೆ, ಕಾಮಧೇನುವಾಗಿ ಇರುವವರೇ, ನಾವು ಇಂದು ನಿಮ್ಮಲ್ಲಿ ಗುರುದಕ್ಷಿಣೆಯನ್ನು ಅಪೇಕ್ಷಿಸುವವರಾಗಿದ್ದೇವೆ. ಏನನ್ನು ಕೊಡುವಿರಿ, ನಮಗೆ ಗುರುದಕ್ಷಿಣೆ ಕೊಟ್ಟರೆ ನೀವು ಸಂಪೂರ್ಣರು, ಕೃತಾರ್ಥರು. ನಿಮಗೆ ಕೊಡುವ ಸಾಮರ್ಥ್ಯ ಮನಸ್ಸು ಮಾರ್ಗ ಇದೆಯೇ?, ದ್ರೋಣನು ಅವರೆಲ್ಲರಿಗೆ ಹೇಳಿಯೆಂದನು.
ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು |
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ || (೬೧)
ಪದವಿಭಾಗ-ಅರ್ಥ: ಆವುದನು ಬಯಸುವಿರಿ= ನೀವು ಯಾವುದನ್ನು ಅಪೇಕ್ಷೆಪಡುವಿರಿ ಹೇಳಿ. ನಿಮ್ಮಡಿಯಾವ ಕಾರ್ಯವ ಬೆಸಸಿದುದ= ಹೇಳಿದುದ, ತಂದು+ ಈವೆವು(ಕೊಡುವೆವು)+ ಇದಕೆ ವಿಚಾರವೇನು+ ಎಂದರು = ತಮ್ಮಪಾದವು(ತಾವು) ಯಾವ ಕಾರ್ಯವನ್ನು ಅಪೇಕ್ಷೆಪಡುವುದೋ ಅದನ್ನು ಹೇಳಿದರೆ ತಂದು ಕೊಡುವೆವು ಎಂದರು, ಕುಮಾರಕರು= ಕುಮಾರರು. ತೀವಿದ (ತುಂಬಿದ)+ ಅಗ್ಗದ(ಹೆಚ್ಚಿನ) ಹರುಷರಸದಲಿ ಭಾವ(ಮನಸ್ಸು) ನೆನೆದುದು(=ಒದ್ದೆಯಾಯಿತು, ತುಂಬಿತು) ಮುನಿಗೆ,= ದ್ರೋಣರಿಗೆ ಹರ್ಷರಸದಲ್ಲಿ ಮನಸ್ಸು ತುಂಬಿತು; ವರ ಶಿಷ್ಯಾವಳಿಗೆ ನುಡಿದನು ನಿಜ(=ತನ್ನ)+ ಅಭಿಪ್ರಾಯ ಸಂಗತಿಯ= ಶ್ರೇಷ್ಠರಾದ ತನ್ನ ಶಿಷ್ಯ ಸಮೂಹಕ್ಕೆ ತಮ್ಮ ಅಬಪ್ರಾಯವನ್ನೂ ಮಾಡಬೇಕಾದ ಸಂಗತಿ - ಕಾರ್ಯವನ್ನೂ ದ್ರೋಣರು ಹೇಳಿದರು.
ಅರ್ಥ: ನೀವು ಯಾವುದನ್ನು ಅಪೇಕ್ಷೆಪಡುವಿರಿ ಹೇಳಿ. ತಮ್ಮಪಾದವು(ತಾವು) ಯಾವ ಕಾರ್ಯವನ್ನು ಅಪೇಕ್ಷೆಪಡುವುದೋ ಅದನ್ನು ಹೇಳಿದರೆ ತಂದು ಕೊಡುವೆವು ಎಂದರು ಶಿಷ್ಯರು. ದ್ರೋಣರಿಗೆ ಹರ್ಷರಸದಲ್ಲಿ ಮನಸ್ಸು ತುಂಬಿತು; ಶ್ರೇಷ್ಠರಾದ ತನ್ನ ಶಿಷ್ಯ ಸಮೂಹಕ್ಕೆ ತಮ್ಮ ಅಬಪ್ರಾಯವನ್ನೂ ಮಾಡಬೇಕಾದ ಸಂಗತಿ - ಕಾರ್ಯವನ್ನೂ ದ್ರೋಣರು ಹೇಳಿದರು.
ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬವನತುಳ ಭುಜಬಲನು |
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದ ನೃ
ಪಾಲಕನ ಪಿಡಿದೊಪ್ಪಿಸಿದರೆಮಗಹುದು ಪರಿತೋಷ || (೬೨)
ಪದವಿಭಾಗ-ಅರ್ಥ: ಕೇಳಿ ಬಲ್ಲಿರೆ ಗಂಗೆಯ+ ಉತ್ತರಕೂಲದಲಿ ಪಾಂಚಾಲದೇಶ= ನೀವು ಕೇಳಿದ್ದೀರಾ? ಗೊತ್ತಿದೆಯೇ? ಗಂಗೆಯ ಉತ್ತರದಲ್ಲಿ ಪಾಂಚಾಲ ದೇಶವಿದೆ. ನೃಪಾಲನು+ ಅಲ್ಲಿಗೆ ದ್ರುಪದನೆಂಬವನು+ ಅತುಳ= ಬಹಳ ಭುಜಬಲನು(ಬಲಶಾಲಿ)= ಆ ರಾಜ್ಯಕ್ಕೆ ದ್ರುಪದನೆಂಬುವನು ರಾಜನು, ಬಹಳ ಬಲಶಾಲಿ. ಆಳುತನದ+ ಅಂಗದಲಿ ಪರರಿಗೆ ಸೋಲನು+ ಅವನ+ ಒಟ್ಟೈಸಿ= ಪರಾಕ್ರಮದಲ್ಲಿ ಪರರಿಗೆ-ಶತ್ರುಗಳಿಗೆ ಸೋಲುವುದಿಲ್ಲ. ಅವನನ್ನು ಆಕ್ರಮಿಸಿ, - ದ್ರುಪದ ನೃಪಾಲಕನ ಪಿಡಿದು+ ಒಪ್ಪಿಸಿದರೆ+ ಎಮಗೆ+ ಅಹುದು ಪರಿತೋಷ= ಆ ದ್ರುಪದ ರಾಜನನ್ನು ಆಕ್ರಮಿಸಿ ಹಿಡಿದು ತಂದು ನಮಗೆ ಒಪ್ಪಸಿದರೆ ನನಗೆ ಸಂತೋಷವಾಗುವುದು ಎಂದನು ದ್ರೋಣ. (ಗುರುದಕ್ಷಿಣೆ ಸಿಕ್ಕಿದ ತೃಪ್ತಿಯಾಗುವುದು).
ಅರ್ಥ: ರಾಜಕುಮಾರರೇ, ನೀವು ಕೇಳಿದ್ದೀರಾ? ಗೊತ್ತಿದೆಯೇ? ಗಂಗೆಯ ಉತ್ತರದಲ್ಲಿ ಪಾಂಚಾಲ ದೇಶವಿದೆ. ಆ ರಾಜ್ಯಕ್ಕೆ ದ್ರುಪದನೆಂಬುವನು ರಾಜನು, ಬಹಳ ಬಲಶಾಲಿ. ಪರಾಕ್ರಮದಲ್ಲಿ ಪರರಿಗೆ-ಶತ್ರುಗಳಿಗೆ ಸೋಲುವುದಿಲ್ಲ. ಆ ದ್ರುಪದ ರಾಜನನ್ನು ಆಕ್ರಮಿಸಿ ಹಿಡಿದು ತಂದು ನಮಗೆ ಒಪ್ಪಸಿದರೆ ನನಗೆ ಸಂತೋಷವಾಗುವುದು (ಗುರುದಕ್ಷಿಣೆ ಸಿಕ್ಕಿದ ತೃಪ್ತಿಯಾಗುವುದು), ಎಂದನು ದ್ರೋಣ.
ಐಸಲೇ ಗುರುದಕ್ಷಿಣಾರ್ಥ ವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈ ವೊಯ್ದು ತಮ್ಮೊಳು ನಗುತ ಕೌರವರು ||
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿ ಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ || (೬೩) ||
ಪದವಿಭಾಗ-ಅರ್ಥ: ಐಸಲೇ= ಹಾಗೊ, ಇಷ್ಟೇ ತಾನೆ! ಗುರುದಕ್ಷಿಣಾರ್ಥವು+ ಇದೇಸು ಘನ ತಂದು+ ಈವೆವೆಂದು (ಕೊಡುವೆವೆಂದು)= ಗುರುದಕ್ಷಿಣೆಯ ಬೇಡಿಕೆ ಇದೆನು ದೊಡ್ಡಕಾರ್ಯ! ದ್ರುಪದನನ್ನು ತಂದು ಕೊಡುವೆವು ಎಂದು, ಉಪಹಾಸದಲಿ= ಬೇಡಿಕೆಯನ್ನ ಉಪಹಾಸಮಾಡಿ ಲಘುವಾಗಿ ಪರಿಗಣಿಸಿ, ಕೈ ವೊಯ್ದು= ತಿರಸ್ಕಾರದಿಂದ ಕೈತಟ್ಟಿ, ತಮ್ಮೊಳು ನಗುತ= ತಮ್ಮತಮ್ಮಲ್ಲಿ ನಗುತ್ತಾ, ಕೌರವರು ಆ ಸುಯೋಧನ ಕರ್ಣಸಹಿತ ಮಹೀಶ ತನುಜರು= ಉಳಿದ ರಾಜಕುಮಾರರು, ಬೀಳುಕೊಂಡರು= ಆಯಿತು ಎಂದು ಹೇಳಿಹೋದರು. ವಾಸಿ= ಕಾರ್ಯವಾಸಿ, ಕಾರ್ಯಸಾಧನೆಯ ಸ್ಪರ್ಧೆ, ಬಿದ್ದುದು= ಪಾಂಡುಸುತ ಕೌರವ ಕುಮಾರರಿಗೆ.
  • ವಾಸಿ= ಕಾರ್ಯವಾಸಿ, ಕಾರ್ಯಸಾಧನೆಯ ಸ್ಪರ್ಧೆ,
ಅರ್ಥ: ಹಾಗೊ, ಇಷ್ಟೇ ತಾನೆ!ಗುರುದಕ್ಷಿಣೆಯ ಬೇಡಿಕೆ ಇದೆನು ದೊಡ್ಡಕಾರ್ಯ! ದ್ರುಪದನನ್ನು ತಂದು ಕೊಡುವೆವು ಎಂದು, ಏನು ದೊಡ್ಡದೆಂದು ಈ ಬೇಡಿಕೆ ಇಟ್ಟರು ಗುರುಗಳು ಎಂದು ಬೇಡಿಕೆಯನ್ನ ಉಪಹಾಸಮಾಡಿ ಲಘುವಾಗಿ ಪರಿಗಣಿಸಿ, ತಿರಸ್ಕಾರದಿಂದ ಕೈತಟ್ಟಿ, ತಮ್ಮತಮ್ಮಲ್ಲಿ ನಗುತ್ತಾ, ಕೌರವರು ಆ ಸುಯೋಧನ ಕರ್ಣಸಹಿತ ಉಳಿದ ರಾಜಕುಮಾರರು, ಆಯಿತು ಎಂದು ಹೇಳಿಹೋದರು. ಪಾಂಡುಸುತರಿಗೂ ಕೌರವ ಕುಮಾರರಿಗೂ ಕಾರ್ಯಸಾಧನೆಯ ಸ್ಪರ್ಧೆ ಬಿದ್ದಿತು.
ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ ||
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು || (೬೪) ||
ಪದವಿಭಾಗ-ಅರ್ಥ: ಧಾಳಿಯಿಟ್ಟುದು ರಾಯದಳ ಪಾಂಚಾಲದೇಶಕೆ= ಕೌರವರಾಯನ ಸೈನ್ಯ ಪಾಂಚಾಲದೇಶದ ಮೇಲೆ ಧಾಳಿಮಾಡಿತು. ಮುಂದೆ ಹೊಕ್ಕುದು ಚೂಳಿಕೆಯಲಿ ಸುಯೋಧನಾದಿಗಳು+ ಊರನು+ ಉರವಣಿಸಿ= ಪರಾಕ್ರಮದಿಂದ, ಧೂಳಿಗೋಟೆಯ ಕೊಂಡು+ ಇವರು= ದುರ್ಬಲ ಕೋಟೆಯನ್ನು ವಶಪಡಿಸಿಕೊಂಡು, ರಾಜಾಲಯಕೆ ಬರೆ= ರಾಜನ ಅರಮನೆಗೆ ಧಾಳಿ ಇಡಲು, ದ್ರುಪದನ+ ಅನುಜರು ಸೋಲಿಸಿದರೈ= ದ್ರುಪದನ ಸೋದರರು, ಕೌರವೇಂದ್ರನ ಬಲವ ಬರಿಕೈದು= ಕೌರವನ ಸೈನ್ಯವನನ್ನು ಬರಿಗೈದು - ನಾಶಮಾಡಿ ಅವರನ್ನು ಸೋಲಿಸಿಬಿಟ್ಟರು.
ಅರ್ಥ:ಕೌರವರಾಯನ ಸೈನ್ಯ ಪಾಂಚಾಲದೇಶದ ಮೇಲೆ ಧಾಳಿಮಾಡಿತು. ಪರಾಕ್ರಮದಿಂದ, ದುರ್ಬಲ ಕೋಟೆಯನ್ನು ವಶಪಡಿಸಿಕೊಂಡು, ರಾಜನ ಅರಮನೆಗೆ ಧಾಳಿ ಇಡಲು, ದ್ರುಪದನ ಸೋದರರು, ಕೌರವನ ಸೈನ್ಯವನನ್ನು ನಾಶಮಾಡಿ ಅವರನ್ನು ಸೋಲಿಸಿಬಿಟ್ಟರು.
ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು ||
ಗುರುಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ || (೬೫) ||
ಪದವಿಭಾಗ-ಅರ್ಥ: ಪುರದ ಹೊರ ಬಾಹೆಯಲಿ= ಪಾಂಚಾಲನಗರದ ಹೊರಭಾಗದಲ್ಲಿ, ತಾವೈವರು= ತಾವು ಪಾಂಡವರು ಐದೂ ಜನ, ಮಹಾ ಸನ್ನಾಹ ಚಾಪಸ್ಫುರಿತ= ಹೊಳೆಯವ ಬಿಲ್ಲು, ತೂಣೀಬದ್ಧ= ಬತ್ತಳಿಕೆಕಟ್ಟಿಕೊಂಡು, ಕಂಪಿತ ಖಡ್ಗಪಾಣಿಗಳು= ಕೈಯಲ್ಲಿ ಕತ್ತಿಯನ್ನ ಝಳಪಿಸುತ್ತಾ, ಗುರುಸಹಿತಲಿ= ದ್ರೋಣರ ಸಹಿತ, ಇವರಿದ್ದರು ಇತ್ತಲು ಪುರಜನಂಗಳ= ನಗರದ ಜನರ, ಮುಸಲ ಹತಿಯಲಿ= ಒನಕೆ ಬಡಿತದಿಂದ, ಮುರಿದು ಬಂದುದು= ಸೋತುಬಂದಿತು, ಕೌರವೇಂದ್ರನ ದಳ ವಿಘಾತಿಯಲಿ= ದುರ್ಯೋಧನನಸೈನ್ಯ ಗಾಸಿಗೊಂಡು ಬಂದಿತು.
ಅರ್ಥ:ಪಾಂಚಾಲನಗರದ ಹೊರಭಾಗದಲ್ಲಿ, ತಾವು ಪಾಂಡವರು ಐದೂ ಜನ, ಮಹಾ ಸನ್ನಾಹದಿಂದ ಹೊಳೆಯವ ಬಿಲ್ಲಿನೊಡನೆ, ಬತ್ತಳಿಕೆಕಟ್ಟಿಕೊಂಡು, ಕೈಯಲ್ಲಿ ಕತ್ತಿಯನ್ನ ಝಳಪಿಸುತ್ತಾ, ದ್ರೋಣರ ಸಹಿತ ಇವರಿದ್ದರು. ಆ ಕಡೆ ನಗರದ ಜನರ ಒನಕೆ ಬಡಿತದಿಂದ ದುರ್ಯೋಧನನ ಸೈನ್ಯ ಗಾಸಿಗೊಂಡು ಸೋತು ಬಂದಿತು,
ಆತು ಕೊಂಡರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ ||
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುಟ್ಟಿದರು ಗುರುಗಳಿ
ಗೀತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ || (೬೬) ||
ಪದವಿಭಾಗ-ಅರ್ಥ: ಆತುಕೊಂಡರು= ತಾವೇ ಮುಂದುವರೆಸಿದರು., ಪಾಂಡು ಸುತರು+ ಅಭಿಜಾತ ಸಮರವನು (ತಮಗೆ ತಾನಾಗಿ ಬಂದ ಯುದ್ಧವನ್ನು) + ಇವರ ಕೈಯಲಿ ಮಾತು ಹಲವಿಲ್ಲೆನುತ= ಸೋತು ಬಂದ ಕೌರವರೊಡನೆ, ಮಾತು ಹಲವು ಇಲ್ಲ ಎನುತ= ಚರ್ಚಿಸಿ ಪ್ರಯೋಜನವಿಲ್ಲವೆಂದು, ಹೊಕ್ಕರು= ನುಗ್ಗಿದರು, ಧಾಳಿಮಾಡಿದರು ಕೊಂದು ಪರಬಲವ(ಶತ್ರುಸೈನ್ಯ - ಪಾಂಚಾಲ ಸೈನ್ಯ)= ಪಾಂಚಾಲರ ಸೇನ್ಯದ ಮೇಲೆ ಧಾಳಿಮಾಡಿದರು. ಘಾತಿಗೆ+ ಆನುವರಿಲ್ಲ= ಇವರ ಹೊಡೆತಕ್ಕೆ ಹೊಣೆಹೊತ್ತುಎದುರಿಸುವರು ಇಲ್ಲದೆಹೋದರು. ದೊರೆಯೆನುತ+ ಆತನನು ಮುಟ್ಟಿದರು= ದ್ರುಪದರಾಜನು ಇವನು ಎನ್ನುತ್ತಾ ಹಿಡಿದರು, ಗುರುಗಳಿಗೆ+ ಈತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ= ಗುರುಗಳಿಗೆ ಇವನೇ ದಕ್ಷಿಣೆ ಎಂದು, ರಾಜ ದ್ರಪದನನ್ನು ಹಿಡಿದರು.
 • ಆತುಕೊಳ್ಳು= ಅವಲಂಬಿಸು ಆಧಾರವಾಗಿನಿಲ್ಲು, ಬೆಂಬಲಿಸು,: ಬೀಳುವವನನ್ನು ಆತುಕೊಂಡು ನಿಲ್ಲಿಸಿದನು; ಬೀಳುವವನು ಕಂಬವನ್ನು ಆತುಕೊಂಡು ನಿಂತನು.
ಅರ್ಥ:ಆತುಕೊಂಡರು= , ಪಾಂಡುವಿನ ಮಕ್ಕಳು ತಾನಾಗಿ ಬಂದ ಯುದ್ಧವನ್ನು ತಾವೇ ವಹಿಸಿಕೊಂಡು ಮುಂದುವರೆಸಿದರು. ಸೋತು ಬಂದ ಕೌರವರೊಡನೆ ಚರ್ಚಿಸಿ ಪ್ರಯೋಜನವಿಲ್ಲವೆಂದು, ಅವರು ಪಾಂಚಾಲರ ಸೇನ್ಯದ ಮೇಲೆ ನುಗ್ಗಿ ಧಾಳಿಮಾಡಿದರು. ಶತ್ರುಸೈನ್ಯವಾದ ಪಾಂಚಾಲ ಸೈನ್ಯವನ್ನು ಧಾಳಿಮಾಡಿ ಹೊಡೆದು ಕೊಂದರು. ಇವರ ಹೊಡೆತಕ್ಕೆ ಹೊಣೆಹೊತ್ತು ಎದುರಿಸುವರು ಇಲ್ಲದೆಹೋದರು. ದ್ರುಪದರಾಜನನ್ನು ನೋಡಿ ಇವನು ದೊರೆ ಎನ್ನುತ್ತಾ ಹಿಡಿದರು. ಗುರುಗಳಿಗೆ ಇವನೇ ದಕ್ಷಿಣೆ ಎಂದು, ರಾಜ ದ್ರಪದನನ್ನು ಬಂಧಿಸಿದರು.
ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ |
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನೆ ಮಾಡುವೆನೆಂದನಾ ದ್ರೋಣ || (೬೭)
ಪದವಿಭಾಗ-ಅರ್ಥ: ಕೊಂಡು ಬಂದರು ದ್ರೋಣನ+ ಇದಿರಲಿ, ದಿಂಡುಗೆಡಹಿದರು, ಈತನನು ಕೈಕೊಂಡನು+ ಎಲವೋ ದ್ರುಪದ ಸಖ ಪೂರ್ವವನು(ಹಿಂದಿನದನ್ನು) ನೆನೆ+(ಯೆ) ಎನುತ = ಹಿಂದೆ ನೀನು ಅವಮಾನ ಮಾಡಿದುದನ್ನೂ, ನನ್ನ ಪ್ರತಿಜ್ಞೆಯನ್ನೂ ನೆನಪು ಮಾಡಿಕೊ ಎಂದ ದ್ರೋಣನು, ಭಂಡನು+ ಇವನನು ನಾಚಿಕೆಗೆಟ್ಟ ಭಂಡನು ಇವನು, ಸಾಕು ಬಿಡಿ, ಸಲೆ ಚಂಡಿಯಾದನು= ಬಹಳ ಕೆಟ್ಟಹಟಮಾಡಿದನು; ದರ್ಪವಿಷ ಮುಂಕೊಂಡು= ದರ್ಪವೆಂಬ ವಿಷ ಇವನನ್ನು ಆವರಿಸಿಕೊಂಡಿತ್ತು. ಮೂರ್ಛಿತನ+ ಏನೆ ಮಾಡುವೆನು+ ಎಂದನು ಆ ದ್ರೋಣ= ಆ ದ್ರೋಣನು ಈ ಎಚ್ಚರವಿಲ್ಲದವನನ್ನು ಏನು ಮಾಡಲಿ, ಎಂದನು. (ಕವಿ- ಹಿಂದಿನ ಪ್ರತಿಜ್ಞೆಯಂತೆ ಇಲ್ಲಿ ದ್ರೋಣನು ದ್ರುಪದನನ್ನು ಎಡದಕಾಲಿನಲ್ಲಿ ಒದ್ದನು, ಎಂಬುದನ್ನು ಗಾಂಭೀರ್ಯಕ್ಕಾಗಿ ಬಿಟ್ಟಿರಬಹುದು)
ಅರ್ಥ:ಪಾಂಡವರು ದ್ರುಪದನನ್ನು ಸೆರೆಹಿಡಿದುಕೊಂಡು ಬಂದರು; ದ್ರೋಣನ ಎದುರಲ್ಲಿ, ಕಟ್ಟಿಕೆಡವಿದರು. ದ್ರುಪದನನ್ನು ದ್ರೋಣನು ವಿಚಾರಿಸಿಕೊಂಡನು. 'ಎಲವೋ ದ್ರುಪದ ಹಿಂದಿನ ಸ್ನೇಹವನ್ನು ನೆನಪುಮಾಡಿಕೋ, (ಹಿಂದೆ ನೀನು ಅವಮಾನ ಮಾಡಿದುದನ್ನೂ, ನನ್ನ ಪ್ರತಿಜ್ಞೆಯನ್ನೂ ನೆನಪು ಮಾಡಿಕೊ ಎಂದ ದ್ರೋಣನು,) ನಾಚಿಕೆಗೆಟ್ಟ ಭಂಡನು ಇವನು, ಸಾಕು ಬಿಡಿ, ಹಿಂದೆ ಬಹಳ ಕೆಟ್ಟಹಟಮಾಡಿದನು; ದರ್ಪವೆಂಬ ವಿಷ ಇವನನ್ನು ಆವರಿಸಿಕೊಂಡಿತ್ತು. ಆ ದ್ರೋಣನು ಈ ಎಚ್ಚರವಿಲ್ಲದವನನ್ನು ಏನು ಮಾಡಲಿ, ಎಂದನು.
ಎಲವೊ ಕೊಟ್ಟೆನು ಜೀವ ದಾನವ
ನಳಲು ನಿನಗೇಕಿನಿತು ಸಾಹಸ
ದಳವಿಯಲಿ ನೀ ನೆರಹು ಭಂಡ ಹೋಗೆಂದು ||
ಕಳೆದು ಕೊಟ್ಟೆನು ನಿನ್ನ ರಾಜ್ಯದ
ನೆಲದೊಳರ್ಧವನಿತ್ತು ನೀ ನೆಡೆ
ಬಳಕಲೆಂದೊಡಂಬಡಿಸಿ ದ್ರುಪದನ ಬಿಟ್ಟನಾ ದ್ರೋಣ ||೬೮ ||
ಪದವಿಭಾಗ-ಅರ್ಥ: ಎಲವೊ ಕೊಟ್ಟೆನು ಜೀವ ದಾನವನು+ ಅಳಲು ನಿನಗೇಕೆ+ ಇನಿತು,= ನಿನಗೆ ಜೀವದಾನವನ್ನು ಕೊಟ್ಟಿದ್ದೇನೆ. ನಿನಗೆ ಏಕೆ ಇಷ್ಟು ದುಃಖ? ಸಾಹಸದ+ ಅಳವಿಯಲಿ= ಶಕ್ತಿಗೆ ತಕ್ಕಂತೆ ನೀ ನೆರಹು(ವೈರವನ್ನು ಸಂಗ್ರಹಿಸಬೇಕು, ಮಾಡಬೆಕು)= ಭಂಡ ಹೋಗೆಂದು, ಕಳೆದು ಕೊಟ್ಟೆನು ನಿನ್ನ ರಾಜ್ಯದ ನೆಲದೊಳು+ ಅರ್ಧವನು+ ಇತ್ತು ನೀ ನೆಡೆ= ನಿನ್ನ ರಾಜ್ಯದಲ್ಲಿ ಅರ್ಧರಾಜ್ಯವನ್ನು ಕಳೆದುಕೊಂಡು ಉಳಿದ ಅರ್ಧರಾಜ್ಯವನ್ನ ನಿನಗೆ ಬಿಟ್ಟಿದ್ದೇನೆ. ಆ ಅರ್ಧವನ್ನು ನನಗೆ ಕೊಟ್ಟು ಬಳಿಕ ನೀನು ಹೋಗು ಎಂದು . ಬಳಿಕಲಿ+ ಎಂದು+ ಒಡಂಬಡಿಸಿ ದ್ರುಪದನ ಬಿಟ್ಟನು+ ಆ ದ್ರೋಣ= ಆ ದ್ರೋಣನು ಅವನು ಒಪ್ಪುವಂತೆ ವಚನ ಪಡೆದು ದ್ರುಪದನನ್ನು ಬಿಟ್ಟನು.
ಅರ್ಥ:ದ್ರೋನನು ಹೇಳಿದ, ಎಲವೊ, ನಿನಗೆ ಜೀವದಾನವನ್ನು ಕೊಟ್ಟಿದ್ದೇನೆ. ನಿನಗೆ ಏಕೆ ಇಷ್ಟು ದುಃಖ? ಶಕ್ತಿಗೆ ತಕ್ಕಂತೆ ನೀನು ವೈರವನ್ನು ಮಾಡಬೆಕು. ನಿನ್ನ ರಾಜ್ಯದಲ್ಲಿ ಅರ್ಧರಾಜ್ಯವನ್ನು ಕಳೆದುಕೊಂಡು ಉಳಿದ ಅರ್ಧರಾಜ್ಯವನ್ನ ನಿನಗೆ ಬಿಟ್ಟಿದ್ದೇನೆ. ಆ ಅರ್ಧವನ್ನು ನನಗೆ ಕೊಟ್ಟು ಬಳಿಕ ನೀನು ಹೋಗು ಎಂದು . ಆ ದ್ರೋಣನು ಅವನು ಒಪ್ಪುವಂತೆ ವಚನ ಪಡೆದು, ಭಂಡ ಹೋಗು, ಎಂದು ದ್ರುಪದನನ್ನು ಬಿಟ್ಟನು.

ದೃಪದನು ಯಜ್ಞದಿಂದ ದೃಷ್ಟದ್ಯುಮ್ನ ದ್ರೌಪದಿಯರನ್ನು ಮಕ್ಕಳಾಗಿ ಪಡೆದನು.[ಸಂಪಾದಿಸಿ]

ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರ ದೇಶದಲಿ ||
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ವೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ || (೬೯) ||
ಪದವಿಭಾಗ-ಅರ್ಥ: ಅರಸ ಕೇಳೈ ದ್ರುಪದನು ಈ ಪರಿ ಪರಿಭವಕೆ= ಅರಸನೇ ಕೇಳು, ದ್ರುಪದನು ಈ ಪರಿ= ರಿತಿಯಲ್ಲಿ, ಪರಿಭವಕೆ= ಸೋಲು ಮತ್ತು ಅವಮಾನಗಳಿಗೆ, ಗುರಿಯಾಗಿ, ತನ್ನಯ ಪುರವ ಹೊಗದೆ+ ಐತಂದು= ತನ್ನ ರಾಜಧಾನಿಗೆ ಹೋಗದೆ, ಬಂದು, ಗಂಗಾತೀರ ದೇಶದಲಿ =ಗಂಗಾತೀರ ಪ್ರದೇಶದಲ್ಲಿ, ಧರಣಿಸುರರಲಿ= ಬ್ರಾಹ್ಮಣರಿಂದ, ಪುತ್ರಕಾಮ್ಯ + ಅಧ್ವರವ (ಯಜ್ಞವನ್ನು)= ಪುತ್ರಕಾಮೇಷ್ಠಿ ಯಾಗವನ್ನು, ವಿರಚಿಸಲು+ ಆಗ= ಮಾಡಲು, ಆಗ ಸತ್ವ+ ಉತ್ಕರುಷವಂತರನು+ ಅರಸಿದನು ನಾನಾ + ಅಗ್ರಹಾರದಲಿ = ಸತ್ವಶಾಲಿಯಾದ ಶ್ರೇಷ್ಟ ಯಾಜ್ಞಿಕರನ್ನು ಅನೇಕ ಅಗ್ರಹಾರಗಳಲ್ಲಿ ಹುಡುಕಿದನು.
ಅರ್ಥ: ಅರಸನೇ ಕೇಳು, ದ್ರುಪದನು ಈ ಪರಿ ಪರಿಭವಕೆ= ಅರಸನೇ ಕೇಳು, ದ್ರುಪದನು ಈ ರೀತಿಯಲ್ಲಿ, ಸೋಲು ಮತ್ತು ಅವಮಾನಗಳಿಗೆ ಗುರಿಯಾಗಿ, ತನ್ನ ರಾಜಧಾನಿಗೆ ಹೋಗದೆ, ಗಂಗಾತೀರ ಪ್ರದೇಶದಲ್ಲಿ ಬಂದು, ಬ್ರಾಹ್ಮಣರಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡಲು, ಆಗ ಸತ್ವಶಾಲಿಯಾದ ಶ್ರೇಷ್ಟ ಯಾಜ್ಞಿಕರನ್ನು ಅನೇಕ ಅಗ್ರಹಾರಗಳಲ್ಲಿ ಹುಡುಕಿದನು.
ದ್ರೋಣ ಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣ ನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಬಾಣಸಿಗಗುಣಬಡಿಸೆ ದೇವ
ಶ್ರೇಣಿ ದಣಿದುದು ಸಲಿಸಿದರು ಪಾಂಚಾಲನಭಿಮತವ || (೭೦)
ಪದವಿಭಾಗ-ಅರ್ಥ: ದ್ರೋಣ ಭಯದಲಿ ಸಕಲ ವಿಪ್ರಶ್ರೇಣಿಯಿರೆ= ಬ್ರಾಹ್ಮಣರ ಸಮೂಹವೇ ದ್ರೋಣ ಭಯದಲಿ ಇದ್ದು ಯಾರೂ ಒಪ್ಪದಿರಲು; ಯಾಜೋಪಯಾಜರು ಪ್ರಾಣ ನಿಸ್ಪೃಹರಾಗಿ= ಯಾಜೋಪಯಾಜರು ಎಂಬುವವರು ಪ್ರಾಣದ ಆಸೆ ಬಿಟ್ಟು,, ಮಾಡಿಸಿದರು ಮಹಾಕ್ರತುವ= ಮಹಾಯಜ್ಞವನ್ನ ಮಾಡಿಸಿದರು. ಬಾಣಸಿಗಗೆ (ಯಜ್ಞೇಸ್ವರನಿಗೆ)+ ಉಣಬಡಿಸೆ = ಯಜ್ಞೇಸ್ವರನಿಗೆ ಯೋಗ್ಯ ಹವಿಸ್ಸುಗಳನ್ನು ಕೊಟ್ಟಾಗ, ದೇವಶ್ರೇಣಿ ದಣಿದುದು ಸಲಿಸಿದರು ಪಾಂಚಾಲನ+ ಅಭಿಮತವ.= ದೇವತೆಗಳು ತೃಪ್ತಿಹೊಂದಿ ಪಾಂಚಾಲ ರಾಜನ ಅಪೇಕ್ಷೆಯನ್ನು ಪೂರೈಸಿದರು. (ಎಲ್ಲಾ ದೇವತೆಗಳಿಗೂ ಅಗ್ನಿಯ ಮೂಲಕವೇ ಹವಿಸ್ಸುಗಳು ತಲುಪುತ್ತವೆ)
ಅರ್ಥ:ಬ್ರಾಹ್ಮಣರ ಸಮೂಹವೇ ದ್ರೋಣನ ಭಯದಲಿ ಇದ್ದು ಯಾರೂ ಒಪ್ಪದಿರಲು; ಯಾಜೋಪಯಾಜರು ಎಂಬುವವರು ಪ್ರಾಣದ ಆಸೆ ಬಿಟ್ಟು, ಮಹಾಯಜ್ಞವನ್ನ ಮಾಡಿಸಿದರು. ಯಜ್ಞೇಸ್ವರನಿಗೆ ಯೋಗ್ಯ ಹವಿಸ್ಸುಗಳನ್ನು ಕೊಟ್ಟಾಗ, ದೇವತೆಗಳು ತೃಪ್ತಿಹೊಂದಿ ಪಾಂಚಾಲ ರಾಜನ ಅಪೇಕ್ಷೆಯನ್ನು ಪೂರೈಸಿದರು.
ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರ ರೂಪೋ ತಾನಿದೇನೆನಲು |
ಶರವಡಾಯುಧ ಚಾಪ ವರ್ವೋ
ತ್ಕರಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿಭುಜವ ಸೂಳೈಸೆ || (೭೦)
ಪದವಿಭಾಗ-ಅರ್ಥ:ಅರಸ ಕೇಳೈ ಕುಂಡ ಮಧ್ಯದೊಳು+ ಉರಿಯ ಕರುವಿಟ್ಟು+ ಎರಕಿದರೊ (ಬೆಂಕಿಯನ್ನು ಎರಕಹೊಯಿದು ಮಾಡಿದರೋ), ಭಾಸುರ ಮಹಾ+ ಅನಲನ= ಅಗ್ನಿಯ ಪರ ರೂಪೋ= ಮತ್ತೊಂದು ರೂಪವೋ, ತಾನು+ ಇದು+ ಏನು+ ಎನಲು= ಇದೇನಪ್ಪಾ ಎನ್ನುವಂತೆ, ಶರವಡೆ= ಬಿಲ್ಲು ಬಾಣ, ಆಯುಧ ಚಾಪವು= ಕತ್ತಿ ಚಾಪ ವರ+ ಉತ್ಕರ= ಕವಚ? ಸಹಿತ ರೌದ್ರಾಂಗನು+ ಆಗ+ ಅವತರಿಸಿದನು= ಭಯಂಕರ ತೇಜಸ್ವಿಯು ಯಜ್ಞಕುಂಡದಿಂದ ಹುಟ್ಟಿಬಂದನು. ಪಾಂಚಾಲಭೂಪತಿ= ದ್ರುಪದ ರಾಜನು, ಭುಜವ ಸೂಳೈಸೆ= ಸಂತೋಷದಿಂದ ಭುಜವನ್ನು ತಟ್ಟಿಕೊಂಡನು.
ಅರ್ಥ: ಅರಸನೇ ಕೇಳು, ಕುಂಡ ಮಧ್ಯದಿಂದ ಬೆಂಕಿಯನ್ನು ಎರಕಹೊಯಿದು ಮಾಡಿದರೋ, ಅಗ್ನಿಯ ಮತ್ತೊಂದು ರೂಪವೋ, ಇದೇನು ಎನ್ನುವಂತೆ, ಬಿಲ್ಲು ಬಾಣ, ಆಯುಧ ಕತ್ತಿ ಬಿಲ್ಲು ಕವಚ? ಸಹಿತ ಭಯಂಕರ ತೇಜಸ್ವಿಯು ಯಜ್ಞಕುಂಡದಿಂದ ಹುಟ್ಟಿಬಂದನು. ದ್ರುಪದ ರಾಜನು ಸಂತೋಷದಿಂದ ಭುಜವನ್ನು ತಟ್ಟಿಕೊಂಡನು.
ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ ಮೋಹನ ಮಂತ್ರ ದೇವತೆಯೊ |
ಕಾದುವರೆ ಕರೆ ಹರಿ ಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ || (೭೨) ಯಜ್ಞಸೇನೆ
ಪದವಿಭಾಗ-ಅರ್ಥ: ವೇದಿ (ವೇದಿ=ಯಾಗದಲ್ಲಿ ಹೋಮ ಮಾಡುವುದಕ್ಕಾಗಿ ನಿರ್ಮಿಸಿದ ವೇದಿಕೆ ಯಲ್ಲಿಯ ಕುಳಿ.) ಮಧ್ಯವನು + ಒಡೆದು ಮೂಡಿದಳು(ಹುಟ್ಟಿದಳು)+ ಆದರಿಸೆ ಜನವು (ಜನರು ಗೌರವದಿಂದ ನೋಡುವಮತೆ)+ ಅಮಮ ಕಾಮನ ಕೈದುವೋ= ಅಬ್ಬಾ ಇವಳು ಕಾಮದೇವನ ಆಯುಧವೋ,, ತ್ರೈಲೋಕ ಮೋಹನ ಮಂತ್ರ ದೇವತೆಯೊ= ಮೂರು ಲೋಕವನ್ನೂ ಮಂತ್ರಮುಗ್ಧಮಾಡುವ ದೇವತೆಯೊ ಎನ್ನುಂತಿರುವ ಮಗಳು ದ್ರಪದನಿಗೆ (ಹುಟ್ಟಿದಳು), ಕಾದುವರೆ ಕರೆ ಹರಿ ಹರ ಬ್ರಹ್ಮಾದಿಗಳಿಗೆ+ ಒರೆಯೆಂಬ= ಯುದ್ಧಮಾಡುವುದಾದರೆ ಹರಿ ಹರ ಬ್ರಹ್ಮಾದಿಗಳಿಗೆ ಹೇಳು ಎಂಬ, ಹೂಂ ಕೃತಿಯಾದುದು= ಹೋಕರಿಸುವ ಆಯುಧವಾಯಿತು ಆ ಕಾಮಂಗೆ= ಆ ಮನ್ಮಥನಿಗೆ, ದ್ರುಪದ+ ಆತ್ಮಜೆಯ ಜನನದಲಿ= ದ್ರುಪದನ ಮಗಳು ಹುಟ್ಟಿದುದರಿಂದ.
 • (ಅವಳು ಕಪ್ಪಗಿದ್ದುದರಿಂದ, ಅವಳ ಹೆಸರು ಕೃಷ್ಣೆ ಎಂದಾಯಿತು.)
ಅರ್ಥ: ಒಂದು ಸುಂದರ ಕನ್ಯೆ ದ್ರುಪದನು ಮಾಡುತ್ತಿದ್ದ ಯಜ್ಞವೇದಿಕೆಯ ಮಧ್ಯವನ್ನು ಒಡೆದುಕೊಂಡುಬಂದು ಹುಟ್ಟಿದಳು ದ್ರುಪದನಿಗೆ. ಅವಳು, ಅಬ್ಬಾ ಇವಳು ಕಾಮದೇವನ ಆಯುಧವೋ, ಮೂರು ಲೋಕವನ್ನೂ ಮಂತ್ರಮುಗ್ಧಮಾಡುವ ದೇವತೆಯೊ ಎನ್ನುಂತಿದ್ದಳು. ಆ ಮನ್ಮಥನಿಗೆ, ದ್ರುಪದನ ಮಗಳು ಹುಟ್ಟಿದುದರಿಂದ ಯುದ್ಧಮಾಡುವುದಾದರೆ ಹರಿ ಹರ ಬ್ರಹ್ಮಾದಿಗಳಿಗೆ ಹೇಳು ಎಂದು, ಮನ್ಮಥನು ಹೂಂ ಕರಿಸುವ ಆಯುಧವಾಯಿತು.
ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ ||
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳೆಂದ || (೭೩)
ಪದವಿಭಾಗ-ಅರ್ಥ: ದ್ರೋಣವಧೆಗೆ+ ಈ ಮಗನು= ದ್ರೋಣನ್ನು ಕೊಲ್ಲಲು ಈ ಮಗನು, ಪಾರ್ಥಗೆ ರಾಣಿಯು+ ಈ ಮಗಳೆಂದು= ವೀರ ಅರ್ಜುನನ್ನು ವರಿಸಲು ಈ ಮಗಳು ಎಂದು, ದ್ರುಪದ ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ= ರಾಜ ದ್ರುಪದನು ಮಕ್ಕಳನ್ನು ಪ್ರೀತಿಯಿಂದ ಸಾಕಿದನು. ದ್ರೋಣನು+ ಈತನ ಕರೆಸಿ ಶಸ್ತ್ರದ ಜಾಣಿಕೆಯ ಕಲಿಸಿದನು= ದ್ರೋಣನು ದ್ರುಪದನ ಮಗ ದೃಷ್ಟದ್ಯುಮ್ನನ್ನು ಕರೆಸಿಕೊಂಡು ಶಸ್ತ್ರಾಸ್ತ್ರದ ವಿದ್ಯೆಯನ್ನು ಕಲಿದನು. ವಿಗಡರ= ಪರಾಕ್ರಮಿಗಳನ್ನು ಕಾಣೆನು+ ಈ ಕಲಶಜನ ಪರಿಯಲಿ= ಈ ದ್ರೋಣನಂತಹ ಪರಾಕ್ರಮಿಗಳನ್ನೂ, ಮಹನೀಯರನ್ನೂ ನಾನು ಕಂಡಿಲ್ಲ, ರಾಯ ಕೇಳೆಂದ: ರಾಜನೇ ಕೇಳು ಎಂದ.
ಅರ್ಥ: ದ್ರೋಣನ್ನು ಕೊಲ್ಲಲು ಈ ಮಗನು, ವೀರ ಅರ್ಜುನನ್ನು ವರಿಸಲು ಈ ಮಗಳು ಎಂದು, ರಾಜ ದ್ರುಪದನು ಮಕ್ಕಳನ್ನು ಪ್ರೀತಿಯಿಂದ ಸಾಕಿದನು. ದ್ರೋಣನು ದ್ರುಪದನ ಮಗ ದೃಷ್ಟದ್ಯುಮ್ನನ್ನು ಕರೆಸಿಕೊಂಡು ಶಸ್ತ್ರಾಸ್ತ್ರದ ವಿದ್ಯೆಯನ್ನು ಕಲಿದನು. ಈ ದ್ರೋಣನಂತಹ ಪರಾಕ್ರಮಿಗಳನ್ನೂ, ಮಹನೀಯರನ್ನೂ ನಾನು ಕಂಡಿಲ್ಲ, ರಾಜನೇ ಕೇಳು ಎಂದ.
ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿದ ದ್ರುಪದ ಭೂಪಾಲ |
ದುಗುಡದಲಿ ಕುರು ರಾಯನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳೆಂದ || (೭೪)
ಪದವಿಭಾಗ-ಅರ್ಥ: ಮಗನು ಧೃಷ್ಟದ್ಯುಮ್ನ; ದ್ರೌಪದಿ ಮಗಳು= ಧೃಷ್ಟದ್ಯುಮ್ನೆಂಬ ಮಗ, ದ್ರೌಪದಿ (ಕೃಷ್ಣೆ) ಎಂಬ ಮಗಳು; ಭಾರದ್ವಾಜನು+ ಎತ್ತಿದ ಹಗೆಗೆ ಹರುವು+ ಆಯ್ತು+ಎನುತ ಹಿಗ್ಗಿದ ದ್ರುಪದ ಭೂಪಾಲ= ದ್ರೋಣನು ಬೆಳಸಿದ ವೈರಕ್ಕೆ ಪರಿಹಾರವಾಯಿತೆಂದು ದ್ರುಪದನು ಹಿಗ್ಗಿದನು. ದುಗುಡದಲಿ ಕುರುರಾಯನು+ ಈ ದಾಯಿಗರ ಬಿರಿದಿನ ಬಿಂಕದ+ ಅಂಕೆಯ= ಕೌರವನು ತನ್ನ ದಾಯಾದಿಗಳ ಬಿರುದು, ಗೌರವ ಏಳಿಗೆಗಳು, ಬಿಗಿದ ಪರಿಯನು ನೆನೆದು= ಅವರಿಗೆ ಲಭಿಸಿದ ರೀತಿಯನ್ನು ಕಂಡು, ದುಃಖದಿಂದ ಮರುಗಿದನು+ ಅರಸ ಕೇಳೆಂದ.
ಅರ್ಥ:ಧೃಷ್ಟದ್ಯುಮ್ನೆಂಬ ಮಗ, ದ್ರೌಪದಿ (ಕೃಷ್ಣೆ) ಎಂಬ ಮಗಳು; ದ್ರೋಣನು ಬೆಳಸಿದ ವೈರಕ್ಕೆ ಪರಿಹಾರವಾಯಿತೆಂದು ದ್ರುಪದನು ಹಿಗ್ಗಿದನು. ದುಗುಡದಲಿ ಕುರುರಾಯನು+ ಈ ದಾಯಿಗರ ಬಿರಿದಿನ ಬಿಂಕದ+ ಅಂಕೆಯ= ಕೌರವನು ತನ್ನ ದಾಯಾದಿಗಳ ಬಿರುದು, ಗೌರವ ಏಳಿಗೆಗಳು, ಬಿಗಿದ ಪರಿಯನು ನೆನೆದು= ಅವರಿಗೆ ಲಭಿಸಿದ ರೀತಿಯನ್ನು ಕಂಡು, ದುಗುಡದಿಂದ ಮರುಗಿದನು, ಜನಮೇಜಯ ಅರಸನೇ ಕೇಳು, ಎಂದ ವೈಶಂಪಾಯನ ಮುನಿ.

[೬]

 

♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

 1. *ಕುಮಾರವ್ಯಾಸ ಭಾರತ
 2. * ಕುಮಾರವ್ಯಾಸಭಾರತ-ಸಟೀಕಾ
 3. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
 4. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
 5. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
 6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
 7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
 8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
 9. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
 10. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
 11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
 12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 2. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
 3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
 4. ದಾಸ ಸಾಹಿತ್ಯ ನಿಘಂಟು
 5. ಎ.ವಿ.ಪ್ರಸನ್ನ,ಗಮಕಸಂಪದ ಸಂಪುಟ ೧೬,ಸಂಚಿಕೆ ೩.; ಶಲ್ಯಪರ್ವ೩-೬೭- ಕೇಸುರಿಯ ಹಾರದಲಿ= ಸಿಂಹದ ಶಕ್ತಿಯಲ್ಲಿ; 'ಕಾಳೆಗಕೆ ಕಡೆಹಾರವೇ?' ಕರ್ಣಪರ್ವ೩-೬೭; ಕಠಿಣ,ಗಟ್ಟಿ, ಹೊಡೆತ, ಪ್ರಹಾರ, ಅಂತಿಮ, ನಿರ್ಣಾಯಕ. ಎಂದು ಅರ್ಥಾಂತರಗಳನ್ನು ಹೇಳಿದ್ದಾರೆ.
 6. 1, 2 ,3, 4