ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೬)[ಸಂಪಾದಿಸಿ]

ಸೂಚನೆ:

ಭೀಮ ದುರ್ಯೋಧನ ಸೆಣಸಿನ
ತಾಮಸಿಕೆ ಹೆಚ್ಚಿದುದು ಕದನೋ
ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ||
ಪದವಿಭಾಗ-ಅರ್ಥ: ಭೀಮ ದುರ್ಯೋಧನ ಸೆಣಸಿನ ತಾಮಸಿಕೆ= ವಿರೋಧ, ದ್ವೇಷ, ಹೆಚ್ಚಿದುದು ಕದನದ್ದಾಮರು+ ಅಸ್ತ್ರಾಭ್ಯಾಸವನು. ಕೌರವರು ಪಾಂಡವರು, ಅಸ್ತ್ರಾಭ್ಯಾಸವನ್ನು, ಮಾಡಿದರು ದ್ರೋಣನಲಿ||
ಅರ್ಥ: ಭೀಮ ದುರ್ಯೋಧನ ಮಧ್ಯೆ ವಿರೋಧ ಮತ್ತು ದ್ವೇಷ ಹೆಚ್ಚಿತು. ಸ್ವಲ್ಪ ಕಾಲದ ನಂತರ ದ್ರೋಣಾಚಾರ್ಯರ ಬಳಿ ಕೌರವರು ಪಾಂಡವರು, ಶಸ್ತ್ರಾಭ್ಯಾಸವನ್ನು ಮಾಡಿದರು.

♠♠♠

ಭೀಮ ದುರ್ಯೋಧನರ ಸೆಣಸು[ಸಂಪಾದಿಸಿ]

ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೇಳೀವ್ಯಸನಿಗಳು ಹೊರ ವಳಯದಲಿ ಪುರದ ||
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ || (೧) ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಮಹೀಪತಿ= ಜನಮೇಜಯ ಮಹಾರಾಜ ಕೇಳು, ಬಾಲಕರು ನೂರಾರು(ನೂರಾ ಆರು ಮಕ್ಕಳು) ಮೆರೆದರು ಬಾಲಕೇಳೀ ವ್ಯಸನಿಗಳು (ವ್ಯಸನ:ಆಸಕ್ತಿ, ಹಂಬಲ, ತತ್ಪರತೆ, ಅಭ್ಯಾಸ, ಗೀಳು)=ಮಕ್ಕಳು ಆಡುವ ಆಟಗಳಲ್ಲಿ ಮೆರೆದರು, ಮಗ್ನರಾದರು. ಹೊರ ವಳಯದಲಿ ಪುರದ = ನಗರದ ಹೊವಲಯದಲ್ಲಿ, ಆಳಿನೇರಿಕೆ, ಹಿಡಿಗವಡೆ, ಗುರಿಯಾಳು, ಚೆಂಡಿನ ಹೊಣಕೆ, ಚಿಣಿ ಕೋಲಾಳು, ಗೊತ್ತಿನ ದಂಡೆಯನೆ ನಾನಾ ವಿನೋದದಲಿ..
ಅರ್ಥ: ಜನಮೇಜಯ ಮಹಾರಾಜ ಕೇಳು, ಕೌರವ ಪಾಂಡವರ - ನೂರಾ ಆರು ಬಾಲಕರು ಹಸ್ತಿನಾವತಿ ನಗರದ ಹೊವಲಯದಲ್ಲಿ ಮಕ್ಕಳು ಆಡುವ ಆಟಗಳನ್ನು ಆಡುತ್ತಾ ಮಕ್ಕಳು ಆಡುವ ಆಟಗಳಲ್ಲಿ ಮಗ್ನರಾದರು. ಅವರು ಆಡಿದ ಆಟಗಳು- ಆಳಿನೇರಿಕೆ, ಹಿಡಿಗವಡೆ, ಗುರಿಯಾಳು, ಚೆಂಡಿನ ಹೊಣಕೆ, ಚಿಣಿ ಕೋಲಾಟ, ಗೊತ್ತಿನ ದಂಡೆಯೆಂಬ ಮೊದಲಾದ ನಾನಾ ವಿನೋದದ ಆಟಗಳಲ್ಲಿ ಮಗ್ನರಾದರು.
ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣಿ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣಿ ||
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೋಂದಾಗಿ || (೨) ||
ಪದವಿಭಾಗ-ಅರ್ಥ: ಗುಡುಗು,=ಕಬಡ್ಡಿ? ಗುತ್ತಿನಚೆಂಡು,=ಲಗ್ಗೆಯ ಚೆಂಡು, ಚೆಂಡನ್ನು ಮುಚ್ಚಿಟ್ಟುಕೊಂಡು ಎದುರು ಪಕ್ಷದವರಿಗೆ ಹೊಡೆಯುವುದು. ಗುಮ್ಮನಬಡಿವ ಕತ್ತಲೆ= ಕಣ್ಣು ಮುಚ್ಚಾಲೆ (ಇರಬಹುದು); ಗುದ್ದುಗಂಬದ ಗಡಣಿ= ಎದರು ಪಕ್ಷದವರಿಗೆ ಕೈಗೆ ಸಿಗದಂತೆ ಕಂಬ ಹಿಡಿಯುವುದು(?), ಕಣ್ಮುಚ್ಚಸಗವರಿ= ಕಣ್ಣು ಮುಚ್ಚಾಲೆ (?), ಹರಿಹಲಗೆ= ಹಲಗೆಗೆ ಚೆಂಡು ಹೊಡೆಯುವುದು- ಹಲಗೆ ಎದುರು ನಿಂತವರನ್ನು ತಪ್ಪಸಿ ಹೊಡೆಯುವುದು(ಕ್ರಿಕೆಟ್ ಬದಲಿ). ನಿಡುಗವಣಿ ಕೆಡಹು= ಕವಣೆ ಕಲ್ಲಾಟ, ಕುಟ್ಟಿಗನು= (?) ಆದಿಯಾದ+ ಅವಗಡ= ಸಾಹಸ, ವಿನೋದದಲಿ+ ಆಡಿದರು ಪಂಗಡದಲಿ+ ಐವರು = ಒಂದು ಕಡೆ ಐವರು ಪಾಂಡವರು, ನೂರ್ವರು ಇವರು+ ಇತ್ತಂಡವು+ ಒಂದಾಗಿ = ಮತ್ತೊಂದು ಕಡೆ ಇವರು ನೂರುಜನ, ಎರಡು ತಂಡವಾಗಿ ವಿನೋದದಿಂದ ಆಡಿದರು
ಅರ್ಥ: ಗುಡುಗು- ಗುಡಿಗುಡಿ-ಕಬಡ್ಡಿ? ಲಗ್ಗೆಯ ಚೆಂಡು, ಚೆಂಡನ್ನು ಮುಚ್ಚಿಟ್ಟುಕೊಂಡು ಎದುರು ಪಕ್ಷದವರಿಗೆ ಹೊಡೆಯುವುದು. ಕಣ್ಣು ಮುಚ್ಚಾಲೆ ಗುದ್ದುಗಂಬದ ಗಡಣಿಕಣ್ಮುಚ್ಚಸಗವರಿ= ಕಣ್ಣು ಮುಚ್ಚಾಲೆ, ಹಲಗೆಗೆ ಚೆಂಡು ಹೊಡೆಯುವುದು- ಹಲಗೆ ಎದುರು ನಿಂತವರನ್ನು ತಪ್ಪಸಿ ಹೊಡೆಯುವುದು(ಕ್ರಿಕೆಟ್ ಬದಲಿ). ಕವಣೆ ಕಲ್ಲಾಟ, ಕುಟ್ಟಿಗನು(?) ಮೊದಲಾದ ಸಾಹಸದ ವಿನೋದದಲ್ಲಿ ಆಡಿದರು. ಒಂದು ಕಡೆ ಐವರು ಪಾಂಡವರು, ಮತ್ತೊಂದು ಕಡೆ ಕೌರವರು ನೂರುಜನ, ಎರಡು ತಂಡವಾಗಿ ಸಾಹಸದ ಆಟಗಳನ್ನು ವಿನೋದದಿಂದ ಆಡಿದರು
ಅದರೊಳೊಬ್ಬನೆ ಭೀಮನನಿಬರ
ಸದೆವ ತಾ ಸೋತರೆ ವಿಭಾಡಿಸಿ
ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳದು ||
ಸದೆದು ಬಿಡುವನು ಮುನ್ನ ಭೀಷ್ಮಂ
ಗೊದರಿ ದೂರವನನಿಬರನು ಮೇ
ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು || (೩) ||
ಪದವಿಭಾಗ-ಅರ್ಥ: ಅದರೊಳು+ ಒಬ್ಬನೆ ಭೀಮನನು+ ಅನಿಬರ ಸದೆವ= ಎಲ್ಲರನ್ನೂ ಹೊಡೆಯುವನು, ತಾ ಸೋತರೆ ವಿಭಾಡಿಸಿ= ತಾನು ಸೂತರೆ ತೆಗಳಿ, ಕೆದರುವನು= ಸಿಟ್ಟಾಗುವನು, ಗೆದ್ದು ಓಡಿದರೆ ಬೆಂಬತ್ತಿ ಹಿಡಿದು+ ಎಳದು ಸದೆದು ಬಿಡುವನು= ಗೆದ್ದು ಓಡಿದರೆ ಬೆನ್ನುಹತ್ತಿ ಹಿಡಿದು, ಹೊಡೆದುಬಿಡುವನು, ಮುನ್ನ ಭೀಷ್ಮಂಗೆ+ ಒದರಿ= ಕೂಗಿ, ದೂರವನು+ ಅನಿಬರನು-ಎಲ್ಲರಮೇಲೆ = ಭೀಷ್ಮನಿಗೆ ಮೊದಲೇ ಹೋಗಿ ಕೂಗಿ ಎಲ್ಲರಮೇಲೆ ದೂರು ಹೇಳುವನು. ಮೇಳದಲಿ ಮಗುಳು+ ಒಂದಾಗಿ ಸಂಗಡವಹರು ಸೂರು+ ಉಳಿದು= ಆಟದಲ್ಲಿ ಮತ್ತೆ ಐವರು ಮತ್ತು ನೋರು ಬಾಲಕರು ಒಂದಾಗಿ ಆಡುವರು.
ಅರ್ಥ: ಅದರಲ್ಲಿ, ಭೀಮನು ಒಬ್ಬನೆ ಎಲ್ಲರನ್ನೂ ಹೊಡೆಯುವನು, ತಾನು ಸೂತರೆ ಬೈದು ಸಿಟ್ಟಾಗುವನು. ಕೌರವರು ಗೆದ್ದು ಓಡಿದರೆ ಬೆನ್ನುಹತ್ತಿ ಹಿಡಿದು, ಹೊಡೆದುಬಿಡುವನು. ತಾನೇ ಮೊದಲೇ ಹೋಗಿ ಭೀಷ್ಮನಿಗೆ ಕೂಗಿ ಕೂಗಿ, ಎಲ್ಲರ ಮೇಲೆ ದೂರು ಹೇಳುವನು. ಆಟದಲ್ಲಿ ಮತ್ತೆ ಐವರು ಮತ್ತು ನೋರು ಬಾಲಕರು ಒಂದಾಗಿ ಆಡುವರು.
ಕೆಣಕಿ ದುರ್ಯೋಧನನ ನೆತ್ತಿಯ
ನಣಿದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ |
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೈಮರೆಸಿ ಮರೆಯಲಿ
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು || (೪)
ಪದವಿಭಾಗ-ಅರ್ಥ: ಕೆಣಕಿ ದುರ್ಯೋಧನನ ನೆತ್ತಿಯ ನಣಿದು ಹಾಯ್ವನು= ದುರ್ಯೋಧನನನ್ನು ಕೆಣಕಿ ನೆತ್ತಿಯ ನಣಿದು= ಬಡಿದು, ಹಾಯ್ವನು= ಓಡುವನು,, ನಿಮ್ಮ ನೂರ್ವರ ಬಣಗುಗಳಿಗೆ (ಶಕ್ತಿ ಹೀನರಿಗೆ, ಜೊಳ್ಲುಗಳಿಗೆ )+ ಎಡಗಾಲ ತೊಡರಿದೆ= ಎಡಗಾಲಿನಲ್ಲಿ ತೊಡರು- ಬೀಳುವಂತೆ ಅಡ್ಡಗಾಲು ಕೊಡುವೆನು, ಬನ್ನಿ ನೀವು+ ಎನುತ=ಎಂದು ಹೇಳುತ್ತಿರಲು, ಗುಣವ ನುಡಿದು+ ಒಂದಾಗಿ= ಅವನ ಗುಣವನ್ನು ಹೊಗಳಿ, ಒಂದಾಗಿ = ಜೊತೆ ಸೇರಿ, ಕೆಳೆಗೊಂಡು= ಸ್ನೇಹ ಮಾಡಿ, ಅಣಕಿಸದೆ= ಅವನನ್ನು ಅಣಕಿಸದೆ ಸ್ನೇಹ ಮಾಡಿ, (ಅವನ) ಮೈಮರೆಸಿ= ಅವನಿಗೆ ತನ್ನ ಬಗೆಗೆ ಎಚ್ಚರಿಕೆ ತಪ್ಪಿಸಿ, ಮರೆಯಲಿ ಹಣಿದು ಬಿಡುವರು ಭೀಮನನು= ಮರೆಗೆ (ಯಾರೂ ಕಾಣದ ಸ್ಥಳಕ್ಕೆ) ಕರೆದು= ಚೆನ್ನಾಗಿ ಹಣಿದು= ಹೊಡೆದು ಬಿಡುವರು- ದುರ್ಯೋಧನಾದಿಗಳು
ಅರ್ಥ: ಭೀಮನು ದುರ್ಯೋಧನನನ್ನು ಕೆಣಕಿ ನೆತ್ತಿಯ ಬಡಿದು ಓಡುವನು, ನಿಮ್ಮ ನೂರ್ವರು ಶಕ್ತಿ ಹೀನರಿಗೆ, ಜೊಳ್ಲುಗಳಿಗೆ ಎಡಗಾಲಿನಲ್ಲಿ ತೊಡರು- ಬೀಳುವಂತೆ ಅಡ್ಡಗಾಲು ಕೊಡುವೆನು ಬನ್ನಿ ನೀವು ಎಂದು ಹೇಳುತ್ತಿರಲು, ಕೌರವರು ಅವನ ಗುಣವನ್ನು ಹೊಗಳಿ ಅವನ ಜೊತೆ ಸೇರಿ, ಅವನನ್ನು ಅಣಕಿಸದೆ ಸ್ನೇಹ ಮಾಡಿ, ಅವನ ಮೈಮರೆಸಿ ಎಂದೆ ಅವನಿಗೆ ತನ್ನ ಬಗೆಗೆ ಎಚ್ಚರಿಕೆ ತಪ್ಪಿಸಿ, ಯಾರೂ ಕಾಣದ ಸ್ಥಳಕ್ಕೆ ಕರೆದು ದುರ್ಯೋಧನಾದಿಗಳು ಚೆನ್ನಾಗಿ ಹೊಡೆದು ಬಿಡುವರು.
ಹೇಳುವರು ಯಮಜಂಗೆ ನಿನ್ನವ
ನೂಳಿಗವ ನಿಲಿಸೆಂದು ಪಾರ್ಥಗೆ
ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ ||
ಕೇಳುವನು ಹೈಯೆಂದು ತನ್ನಯ
ಸೋಲದಲಿ ಮೈಯೊಡ್ಡುವನು ಮೇ
ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ || (೫) ||
ಪದವಿಭಾಗ-ಅರ್ಥ: ಹೇಳುವರು ಯಮಜಂಗೆ= ಧರ್ಮಜನಿಗೆ, ನಿನ್ನವನ+ ಊಳಿಗವ=ಮೋಸ, ವಂಚನೆಯನ್ನು, ತೊಂದರೆಯನ್ನ(ಪ್ರೊ. ಜಿ. ವೆಂ) ನಿಲಿಸೆಂದು, ಪಾರ್ಥಗೆ ಹೇಳುವರು, ಬಳಿಕ+ ಅವರು ಭೀಮನ ಕರೆದು ಗಾರುಡಿಸೆ= ಗದರಿಸಲು, ಕೇಳುವನು; ಹೈಯೆಂದು ತನ್ನಯಸೋಲದಲಿ ಮೈಯೊಡ್ಡುವನು= ಹಾಯ್ ಎಂದು, ತಾನು ಸೋತಂತೆ ಬಗ್ಗಿ ನಿಲ್ಲುವನು,; ಮೇಲಾಳನೇರಿಸಿ=ಮೇಲೆ+ ಆಳನು+ಜನರನ್ನು ಏರಿಸಿ- , ಬಾಲಕರನ್ನು ತನ್ನಮೇಲೆ ಏರಿಸಿ; ಆಗ ಕೌರವರು ಅವನ ಮೇಲೆ ಏರಿ ಕುಳಿತುಕೊಳ್ಳುವಂತೆ ಮಾಡಿ, ಹರಿದು ಸದೆವನು= ಹೊತ್ತು ಓಡಿ ಬಡಿಯುವನು, ಗುತ್ತಿನಲಿ ಕೆಡಹಿ= ತಗ್ಗಿನಲ್ಲಿ ಬಾವಿಯಲ್ಲಿ ಕಡವಿ ಬಡಿಯುವನು. (ಗುತ್ತಿ= ಬಾವಿ- ಪ್ರೊ. ಜಿ. ವೆಂ)
ಅರ್ಥ: ಕೌರವ ಬಾಲಕರು, ಧರ್ಮಜನಿಗೆ ದೂರು ಹೇಳುವರು, ನಿನ್ನವನಾದ ಭೀಮನ ತೊಂದರೆಯನ್ನು ನಿಲ್ಲಿಸೆಉ ಎಂದು. ನಂತರ ಪಾರ್ಥನಿಗೆ ಹೇಳುವರು, ಬಳಿಕ ಅವರು ಭೀಮನನ್ನು ಕರೆದು ಗದರಿಸಲು. ಭೀಮನು ಅವರ ಮಾತನ್ನು ಕೇಳುವನು; ಅವನು ಹಾಯ್ ಎಂದು, ತಾನು ಸೋತಂತೆ ಬಗ್ಗಿ ನಿಲ್ಲುವನು; ಆಗ ಕೌರವರು ಅವನ ಮೇಲೆ ಏರಿ ಕುಳಿತುಕೊಳ್ಳುವಂತೆ ಮಾಡಿ, ಹೊತ್ತು ಓಡಿ ಬಡಿಯುವನು, ಗುಂಡಿಯಲ್ಲಿ ಕಡವಿ ಬಡಿಯುವನು.
ಅಳುತ ಧೃತರಾಷ್ಟ್ರಂಗೆ ಭೀಮನು
ಕಳೆದ ಹಲುಗಳನೊಡೆದ ಮೊಳಕಾ
ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು ||
ಮುಳು ಮೊನೆಗಳಲಿ ಗೀರಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದುಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ || (೬) ||
ಪದವಿಭಾಗ-ಅರ್ಥ: ಅಳುತ ಧೃತರಾಷ್ಟ್ರಂಗೆ ಭೀಮನು ಕಳೆದ= ಮುರಿದ ಹಲುಗಳನು+ ಒಡೆದ ಮೊಳಕಾಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು; ಮುಳು ಮೊನೆಗಳಲಿ ಗೀರಿ ನೆತ್ತರಗಳೆದು= ರಕ್ತ ಒಸರಿ, ಹುಡಿಯಲಿ= ಧೂಳಿನಲ್ಲಿ, ಹೊರಳಿ, ತಾ= ತಾನು ಬಂದು+ ಅಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ.
ಅರ್ಥ: ಕೌರವರು (ದುರ್ಯೋಧನಾದಿಗಳು) ಅಳುತ್ತಾ ಧೃತರಾಷ್ಟ್ರನಿಗೆ ಭೀಮನು ಮುರಿದ, ಬಿದ್ದ ಹಲ್ಲುಗಳನ್ನೂ,ಒಡೆದ ಮೊಳಕಾಲುಗಳನ್ನು ತೋರಿಸಿ ದೂರುವರು. ಭೀಮನು ತಾನು ಅಳುತ್ತಾ ಬಂದು, ಮುಳ್ಳು ಮೊನೆಗಳಿಂದ ಗೀರಿಕೊಂಡು ರಕ್ತ ಒಸರುವಂತೆ ಮಾಡಿಕೊಂಡು, ಧೂಳಿನಲ್ಲಿ ಹೊರಳಿ, ಧೃತರಾಷ್ಟ್ರನಿಗೆ ಭೀಷ್ಮನಿಗೆ ಕೌರವರಬಗೆಗೆ ದೂರುವನು.
ಆಕೆವಾ(ಳು)ಳರು ಭೀಷ್ಮ ವಿದುರರು
ಸಾಕು ನಿಮ್ಮೊಳು ನೂರು ನಾಲ್ವರು
ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು |
ನೂಕಿ ಸೂರುಳು ಮಾಡಿ ಬಿಟ್ಟರೆ
ನಾಕು ಜಾವದೊಳಿಹರು ಮರುದಿನ
ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ || (೭)
ಪದವಿಭಾಗ-ಅರ್ಥ: ಆಕೆವಾಳರು= ಶೂರರಾದ, ಭೀಷ್ಮ ವಿದುರರು, ಸಾಕು ನಿಮ್ಮೊಳು ನೂರು ನಾಲ್ವರು ಆ ಕುಮಾರರು= ನೀವು ನೂರು ಜನ, ಭೀಮನನ್ನು ಬಿಟ್ಟು ಅವರು ನಾಲ್ಕುಜನ ಆಡಿಕೊಳ್ಳಿ, ಎಂದರೆ, ಬೇರೆ ನೀನಿಹುದೊಬ್ಬ ಬೇರೆಂದು ನೂಕಿ ಸೂರುಳು ಮಾಡಿ ಬಿಟ್ಟರೆ = ಭೀಮನನ್ನು ಬಿಟ್ಟು ಅವರು ನಾಲ್ಕುಜನ ಆಡಿಕೊಳ್ಳಿ, ಎಂದರೆ, ನಾಕು ಜಾವದೊಳಿಉ ಇಹರು ಅರ್ಧ ದಿನ ಮಾತ್ರಾ ಹಾಗಿರುವರು, ಮರುದಿನವು ಆ ಕುಮಾರರು ತಮ್ಮೊಳೊಂದಾಗಿ+ ಇಹರು ಗೆಳೆಯಾಗಿ= ಮರುದಿನವವೇ, ಆ ಕುಮಾರರು ತಮ್ಮೊಳೊಂದಾಗಿ ಗೆಳೆಯಾಗಿ ಇಹರು = ಆ ಕುಮಾರರು ತಮ್ಮೊಲ್ಲಿ ಒಂದಾಗಿ ಗೆಳೆಯರಾಗಿ ಆಡಿಕೊಂಡು ಇರುವರು.
ಅರ್ಥ: ಶೂರರಾದ, ಭೀಷ್ಮ ವಿದುರರು, ನೀವು ನೂರು ಜನ, ಭೀಮನನ್ನು ಬಿಟ್ಟು ಅವರು ನಾಲ್ಕುಜನರೊಡನೆ ಆಡಿಕೊಳ್ಳಿ- ಎಂದರೆ, ಅರ್ಧ ದಿನ ಮಾತ್ರಾ ಹಾಗಿರುವರು, ಮರುದಿನವವೇ, ಆ ಕುಮಾರರು ತಮ್ಮೊಲ್ಲಿ ಒಂದಾಗಿ ಗೆಳೆಯರಾಗಿ ಆಡಿಕೊಂಡು ಇರುವರು.
ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು |
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತ್ತು ಮರನನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ || (೮)
ಪದವಿಭಾಗ-ಅರ್ಥ: ಒಂದು ದಿನ ನೂರಾರು ಮಾನಿಸರು+ ಒಂದು ಗೆಳೆಯಲಿ= ಒಂದು ದಿನ ನೂರಾರು ಬಾಲಕರು, ಮಾನಿಸರು+ ಒಂದು ಗೆಳೆಯಲಿ ಪುರದ ಹೊರಗಿಹುದೊಂದು= ಗೆಳೆಯರಾಗಿ ಆಡಲು, ಹಸ್ತಿನಾಪುರದ ಹೊರಗೆಇರುವ ಒಂದು ಠಾವು= ಸ್ಥಳದಲ್ಲಿ ಪ್ರಮಾಣ ವೃಕ್ಷವ= ಆಲದ ಮರವ, ಕಂಡು ನಡೆತರಲು,ಬರಲು, ಬಂದು ನಿಂದರು ಕೋಲ ಬಿಸುಟು+ ಈ ವೃಂದ ಹತ್ತಿತ್ತು ಮರನನು+ ಇವನು+ ಐತಂದು= ಕೋಲನ್ನು ಬಿಸುಟು ನೂರು ಬಾಲಕರೂ ಮರವನ್ನು ಹತ್ತಿ ಅಡಗಿದರು. ಇವನು ಐತಂದು= ಭೀಮನು ಬಂದು, ಎಡೆಯಾಡಿ ಬಳಲಿದು= ಅಲ್ಲಿ ತಿರುಗಾಡಿ ಹುಡುಕಿದರೂ ಕಾಣದೆ ಬಳಲಿದನು. ನೋಡಿದನು ಭೀಮ.= ಕೊನೆಗೆ ಅವರು ಮರದಮೇಲೆ ಅಡಗಿರುವುದನ್ನು ನೋಡಿದನು.
ಅರ್ಥ: ಒಂದು ದಿನ ನೂರಾರು ಬಾಲಕರು, ಗೆಳೆಯರಾಗಿ ಆಡಲು, ಹಸ್ತಿನಾಪುರದ ಹೊರಗೆ ನೆಡೆದು ಬರುವಾಗ ಇರುವ ಒಂದು ಸ್ಥಳದಲ್ಲಿ ಆಲದ ಮರವನ್ನು ಕಂಡು ಅಲ್ಲಿಗೆ ಬಂದು ನಿಂತು, ಕೋಲನ್ನು ಬಿಸುಟು ನೂರು ಬಾಲಕರೂ ಮರವನ್ನು ಹತ್ತಿ ಅಡಗಿದರು. ಭೀಮನು ಬಂದು ಅಲ್ಲಿ ತಿರುಗಾಡಿ ಹುಡುಕಿದರೂ ಕೌರವರನ್ನು ಕಾಣದೆ ಬಳಲಿದನು. ಕೊನೆಗೆ ಅವರು ಮರದಮೇಲೆ ಅಡಗಿರುವುದನ್ನು ನೋಡಿದನು.
ಮರನ ಹಿಡಿದಲುಗಿದರೆ ಬಿದ್ದರು
ಭರತಕುಲಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ ||
ಶಿರವೊಡೆದು ಬೆನ್ನೊಡೆದು ಮೊಳಕಾ
ಲ್ಜರಿದು ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ || (೯) ||
ಪದವಿಭಾಗ-ಅರ್ಥ: ಮರನ ಹಿಡಿದು+ ಅಲುಗಿದರೆ ಬಿದ್ದರು ಭರತಕುಲಪಾಲಕರು ನೂರು+ ಇವರು= ಭೀಮನು ಮರವನ್ನು ಹಿಡಿದು ಅಲುಗಾಡಿಸದಾಗ ಈ ನೂರು ಕೌರವರೂ ಮರದಿಂದ ಕೆಳಗೆ ಬಿದ್ದರು; ಮಹಾವಾತದಲಿ= ಮಹಾ ಬಿರುಗಾಳಿಯಲ್ಲಿ, ತರುಫಲನಿಕರ ಬೀಳ್ವಂತೆ= ಮರದಹಣ್ಣು ರಾಶಿ ಬೀಳುವ ಹಾಗೆ, ಶಿರವೊಡೆದು ಬೆನ್ನೊಡೆದು ಮೊಳಕಾಲ್ಜರಿದು= ಕೆಲವರಿಗೆ ತಲೆ ಒಡೆಯಿತು, ಕೈಗಳು ಮುರಿದು= ಕೆಲವರಿಗೆ ಕೈಗಳು ಮುರಿದವು, ನೆತ್ತರು ಸುರಿದು= ಕೆಲವರಿಗೆ ರಕ್ತ ಸುರಿಯಿತು, ಧೃತರಾಷ್ಟ್ರಂಗೆ ದೂರಿದರು+ ಅನಿಬರು ಈ ಹದನ= ಅವರೆಲ್ಲರೂ ಹೋಗಿ ಧೃತರಾಷ್ಟ್ರನಿಗೆ ದೂರು ಹೇಳಿದರು.
ಅರ್ಥ: ಭೀಮನು ಮರವನ್ನು ಹಿಡಿದು ಅಲುಗಾಡಿಸದಾಗ ಈ ನೂರು ಕೌರವರೂ ದೊಡ್ಡ ಬಿರುಗಾಳಿಯಲ್ಲಿ, ಮರದ ಹಣ್ಣುಗಳ ರಾಶಿ ಬೀಳುವ ಹಾಗೆ ಮರದಿಂದ ಕೆಳಗೆ ಬಿದ್ದರು; ಕೆಲವರಿಗೆ ತಲೆ ಒಡೆಯಿತು, ಕೆಲವರಿಗೆ ಕೈಗಳು ಮುರಿದವು, ಕೆಲವರಿಗೆ ರಕ್ತ ಸುರಿಯಿತು. ಅವರೆಲ್ಲರೂ ಹೋಗಿ ಧೃತರಾಷ್ಟ್ರನಿಗೆ ದೂರು ಹೇಳಿದರು.
ದುರುಳನವನೊಡನಾಡ ಬೇಡೆಂ
ದರಸನನಿಬರ ಸಂತವಿಟ್ಟನು
ಹರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ |
ಮರಳಿ ತಾವೊಂದಾಗುತಾತನ
ಕರಸಿ ವಿವಿಧ ಕ್ರೀಡೆಯಲಿ ಮೈ
ಮರೆಸಿ ಭೀಮನ ಕಟ್ಟಿಹಾಯ್ಕಿದರೊಂದು ಮಡುವಿನಲಿ || (೧೦)
ಪದವಿಭಾಗ-ಅರ್ಥ: ದುರುಳನು+ ಅವನೊಡನಾಡ ಬೇಡೆಂದು+ ಅರಸನು+ ಅನಿಬರ ಸಂತವಿಟ್ಟನು= ಭೀಮನು ದುರುಳನು ಅವನೊಡನೆ ಆಡಬೇಡಿ ಎಂದು ಧೃತರಾಷ್ಟ್ರನು ಮಕ್ಕಳನ್ನು ಸಂತೈಸಿದನು.; ಹರಿದು= ಮುಂದುವರಿದು ಹೆಚ್ಚಿತು ಭೀಮ ದುರ್ಯೋಧನರಿಗೆ+ ಅತಿ ವೈರ= ಮುಂದುವರಿದು ಭೀಮ ಮತ್ತು ದುರ್ಯೋಧನರಿಗೆ ವೈರವು ಅತಿಯಾಗಿ ಹೆಚ್ಚಿತು; ಮರಳಿ ತಾವು+ = ಪುನಃ ತಾವು ಮತ್ತು ಪಾಂಡವರು ಒಂದಾಗುತ+ = ಒಂದಾಗುತ್ತಾ,ಆತನ ಕರಸಿ= ಭೀಮನನ್ನು ಕರೆಸಿ, ವಿವಿಧ ಕ್ರೀಡೆಯಲಿ ಮೈಮರೆಸಿ,= ಆಟದಲ್ಲಿ ಮೈಮರೆಸಿ, ಭೀಮನ= ಭೀಮನನ್ನು ಕಟ್ಟಿ ಹಾಯ್ಕಿದರು+ ಒಂದು ಮಡುವಿನಲಿ= ಭೀಮನನ್ನು ಕಟ್ಟಿ ಒಂದು ಮಡುವಿನಲ್ಲಿ ಹಾಕಿದರು.
ಅರ್ಥ: ಭೀಮನು ದುರುಳನು ಅವನೊಡನೆ ಆಡಬೇಡಿ ಎಂದು ಧೃತರಾಷ್ಟ್ರನು ಮಕ್ಕಳನ್ನು ಸಂತೈಸಿದನು. ಮುಂದುವರಿದಂತೆ ಭೀಮ ಮತ್ತು ದುರ್ಯೋಧನರಿಗೆ ವೈರವು ಅತಿಯಾಗಿ ಹೆಚ್ಚಿತು; ಪುನಃ ತಾವು ಮತ್ತು ಪಾಂಡವರು ಒಂದಾಗುತ್ತಾ, ಭೀಮನನ್ನು ಕರೆಸಿ, ನಾನಾ ಆಟಗಳಲ್ಲಿ ಅವನ ಮೈಮರೆಸಿ, ಭೀಮನನ್ನು ಕಟ್ಟಿ ಒಂದು ಮಡುವಿನಲ್ಲಿ ಹಾಕಿದರು.
ಪಾಶವನು ಹರಿದೆದ್ದು ಬಂದತಿ
ರೋಷಿ ಸದೆದನು ಮತ್ತೆ ತಮ್ಮೊಳು
ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ |
ಆ ಸಿತಗ ಮೈಮರೆದ ಹೊತ್ತು ಮ
ಹಾಸುರದ ಫಣಿಗಳಲಿ ಕಚ್ಚಿಸಿ
ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ || (೧೧)
ಪದವಿಭಾಗ-ಅರ್ಥ: ಪಾಶವನು=ಭೀಮನು ತನ್ನನ್ನು ಕಟ್ಟಿದ ಹಗ್ಗವನ್ನು ಹರಿದು+ ಎದ್ದು ಬಂದು+ ಅತಿರೋಷಿ= ಬಹಳ ಕೋಪದಲ್ಲಿ, ಸದೆದನು= ಕೌರವರನ್ನು ಬಡಿದನು. ಮತ್ತೆ ತಮ್ಮೊಳು ಭಾಷೆಗಳಲಿ+ ಒಂದಾಗಿ ಕೂಡಿದರು= ಪುನಃ ತಮ್ಮಲ್ಲಿ (ತೊಂದರೆ ಕೊಡದಿರಲು)ಮಾತುಕೊಟ್ಟು ಕೂಡಿದರು= ಒಂದಾದರು. ಕೂಡಿದರು+ ಒಂದು ದಿವಸದಲಿ ಆ ಸಿತಗ= ಬಲಿಷ್ಠ, ಮೈಮರೆದ ಹೊತ್ತು ಮಹಾಸುರದ= ಭಯಂಕರವಾದ ಫಣಿಗಳಲಿ= ಹಾವುಗಳಿಂದ, ಕಚ್ಚಿಸಿ ಘಾಸಿ ಮಾಡಲು= ಅಪಾಯಕ್ಕೆ ದೂಡಲು, ಬದುಕಿ ಬೇಸರನು+ ಅಡಿಗಡಿಗೆ ಭೀಮ= ಮತ್ತೆ ಮತ್ತೆ ತೊಂದರೆಕೊಟ್ಟರೂ ಬೇಸರ ಮಾಡಿಕೊಳ್ಳಲಿಲ್ಲ.
ಅರ್ಥ: ಭೀಮನು ತನ್ನನ್ನು ಕಟ್ಟಿದ ಹಗ್ಗವನ್ನು ಹರಿದು ಎದ್ದು ಬಂದು ಬಹಳ ಕೋಪದಲ್ಲಿ ಕೌರವರನ್ನು ಬಡಿದನು. ಪುನಃ ತಮ್ಮಲ್ಲಿ ತೊಂದರೆ ಕೊಡದಿರಲು)ಮಾತುಕೊಟ್ಟು ಒಂದಾದರು. ಒಂದು ದಿವಸ ಬಲಿಷ್ಠ ಭೀಮನು ಮೈಮರೆದ ಹೊತ್ತಿನಲ್ಲಿ ಭಯಂಕರವಾದ ಹಾವುಗಳಿಂದ ಕಚ್ಚಿಸಿ ಅವನನ್ನು ಅಪಾಯಕ್ಕೆ ದೂಡಿದರು, ಮತ್ತೆ ಮತ್ತೆ ಅವರು ತೊಂದರೆ ಕೊಟ್ಟರೂ ಭೀಮ ಬೇಸರ ಮಾಡಿಕೊಳ್ಳಲಿಲ್ಲ.
ಅರಸ ಕೇಳ್ ಆಯುಷ್ಯವುಳ್ಳರೆ
ಹರಿಹರಬ್ರಹ್ಮಾದಿಗಳು ಸಂ
ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ |
ಭರತ ವಂಶದ ಬಾಹಿರರು ನಿ
ಮ್ಮರಸುಗಳು ಭೀಮಂಗೆ ಮಾಡಿದ
ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳೆಂದ || (೧೨)
ಪದವಿಭಾಗ-ಅರ್ಥ: ಅರಸ ಕೇಳ್ ಆಯುಷ್ಯವುಳ್ಳರೆ= ರಾಜನೇ ಕೇಳು ಆಯುಷ್ಯವಿದ್ದರೆ, ಹರಿಹರಬ್ರಹ್ಮಾದಿಗಳು ಸಂಹರಿಸಲು+ ಅರಿಯರು= ಸಂಹಾರ ಮಾಡಲು ಸಾಧ್ಯವಿಲ್ಲ. ಬರಿದೆ ದೈನ್ಯಂ ಬಡುವುದು ಈ ಲೋಕ= ಸುಮ್ಮನೆ ಈ ಲೋಕದಜನ ಕೊಲ್ಲಲು ಕಷ್ಟಪಡುವುದು. ಭರತ ವಂಶದ ಬಾಹಿರರು= ಯೋಗ್ಯರಲ್ಲದವರಾದ ನಿಮ್ಮ+ ಅರಸುಗಳು= ಕೌರವರು, ಭೀಮಂಗೆ ಮಾಡಿದ ಹುರಿಯನು= ಕುತಂತ್ರವನ್ನು, ಆ ಹುರಿ ಹರಿದ ಪರಿಯನು= ಆ ತಂತ್ರವು ಫಲಿಸದೆಹೋದ ಬಗೆಯನ್ನು, ಮತ್ತೆ ಕೇಳೆಂದ= ಮುಂದೆ ಕೇಳು ಎಂದ ಮುನಿ.
ಅರ್ಥ: ರಾಜನೇ ಕೇಳು ಆಯುಷ್ಯವಿದ್ದರೆ, ಹರಿಹರಬ್ರಹ್ಮಾದಿಗಳು ಸಂಹಾರ ಮಾಡಲು ಸಾಧ್ಯವಿಲ್ಲ. ಸುಮ್ಮನೆ ಈ ಲೋಕದಜನ ಕೊಲ್ಲಲು ಕಷ್ಟಪಡುವುದು. ಭರತ ವಂಶದಲ್ಲಿ ಯೋಗ್ಯರಲ್ಲದವರಾದ ನಿಮ್ಮ ಕೌರವರು, ಭೀಮನಿಗೆ ಮಾಡಿದ ಕುತಂತ್ರವನ್ನು, ಆ ತಂತ್ರವು ಫಲಿಸದೆಹೋದ ಬಗೆಯನ್ನು, ಮುಂದೆ ಕೇಳು ಎಂದ ಮುನಿ.
ಕಾಳಿಕೂಟ ಹಾಲಹಲವ ಕಾ
ರ್ಕೊಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕಾವ ಶೌಕ್ಲಿಕ ಸುಪ್ರದೀಪಕವ ||
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ || (೧೩) ||
ಪದವಿಭಾಗ-ಅರ್ಥ: ಕಾಳಿಕೂಟ, ಹಾಲಹಲವ= ಹಾಲಹಲ, ಕಾರ್ಕೊಲ, ದಾರದ, ವತ್ಸನಾಭಿ, ಕರಾಳ, ಸೌರಾಷ್ಟ್ರಿಕಾವ, ಶೌಕ್ಲಿಕ, ಸುಪ್ರದೀಪಕ-ವ ಹೇಳಲು+ ಅರಿದು+ ಎನಿಪ+ ಎಂಟು ವಿಷವನು ಮೇಳವಿಸಿ= ಸೇರಿಸಿ, ಬಳಿಕುಳಿದ ಮಧುರ= ಸಿಹಿ ವಿಶಾಲ= ಬಹಳ, ಅನೇಕ, ವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ. (ಅರಿದು= ಸಾಧ್ಯವಿಲ್ಲ ಎನಿಪ= ಎಂಬ)
ಅರ್ಥ:ಭೀಮನನ್ನು ಸಾಯಿಸಲು ಕಾಳಿಕೂಟ, ಹಾಲಹಲ, ಕಾರ್ಕೊಲ, ದಾರದ, ವತ್ಸನಾಭಿ, ಕರಾಳ, ಸೌರಾಷ್ಟ್ರಿಕಾವ, ಶೌಕ್ಲಿಕ, ಸುಪ್ರದೀಪಕ-ಗಳೆಂಬ ಹೇಳಲು- ವಿವರಿಸಲು ಸಾಧ್ಯವಿಲ್ಲ ಎಂಬ ಎಂಟು ವಿಷವನ್ನು ಸೇರಿಸಿ, ಬಳಿಕ ಉಳಿದ ಮಧುರವಾದ , ಸಿಹಿಯಾದ ಅನೇಕ ವಸ್ತುಗಳನ್ನು ಅದಕ್ಕೆ ಸೇರಿಸಿ ಕೌರವನು ಸಿಹಿಯಾದ ಕಜ್ಜಾಯಗಳನ್ನು ಮಾಡಿಸಿದ.
ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈಕರಣದ ಸುವಾರದ ವಿದ್ಯವೇನರಿದೊ |
ಕೊಟ್ಟರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿಟ್ಟು ಮುರಿಯಾಟದಲಿ ಸದೆದನು ಮತ್ತೆ ಕೌರವರ || (೧೪)
ಪದವಿಭಾಗ-ಅರ್ಥ: ದಿಟ್ಟಿಸಿದರೆ+ ಎವೆ= ಕಣ್ಣಿನ ರೆಪ್ಪೆಯು ಸುಟ್ಟು ಕರುಕಲಾಗಿವುದು ( ಸೀವುದು), ಸೀವುದು+ ಅಂಗೈ ಮುಟ್ಟಿದರೆ ಹುಗುಳಹುದು= ಗುಳ್ಳೆ ಬರುವುದು, ಬಳಿಕ+ ಅವನು + ಅಟ್ಟ= ಬೇಯಿಸಿದ, ಕೈಕರಣದ= ಬೇಯಿಸಿದ ಕೈಚಳಕ, ಹಸ್ತಕೌಶಲದ ಸುವಾರದ ವಿದ್ಯವು+ ಏನು+ ಅರಿದೊ= ವಿದ್ಯೆ ಎಷ್ಟು ಜಾಣತನದ್ದೊ! ಅರಿಯಲಾರದ್ದೋ! ಕೊಟ್ಟರು+ ಈತಂಗೆ+ ಎಲ್ಲವನು= ಅವೆಲ್ಲವನ್ನೂ ಈತ - ಭೀಮನಿಗೆ ಕೊಟ್ಟರು. ಜಗಜಟ್ಟಿ ಹಾಯಿಕಿ ಕೊಂಡು= ಜಗಜಟ್ಟಿ ಭೀಮ ಅದೆಲ್ಲವನ್ನೂ ತಿಂದು, ನುಣ್ಣನೆ= ಚಿಟ್ಟು ಮುರಿಯಾಟದಲಿ ಸದೆದನು ಮತ್ತೆ ಕೌರವರ= ಚಿಟ್ಟು ಮುರಿಯಾಟದಲ್ಲಿ ಮತ್ತೆ ಕೌರವರನ್ನು ಚೆನ್ನಾಗಿ ಸದೆಬಡಿದನು.
ಅರ್ಥ: ಆ ವಿಷವನ್ನು ದಿಟ್ಟಿಸಿದರೆ ಕಣ್ಣಿನ ರೆಪ್ಪೆಯು ಸುಟ್ಟು ಕರುಕಲಾಗಿವುದು, ಮುಟ್ಟಿದರೆ ಅಂಗೈ ಗುಳ್ಳೆ ಬರುವುದು, ಬಳಿಕ ಅವನ್ನು ಬೇಯಿಸಿದ ಕೈಚಳಕ, ವಿದ್ಯೆ ಎಷ್ಟು ಜಾಣತನದ್ದೊ! ಅರಿಯಲಾರದ್ದೋ! ಅವೆಲ್ಲವನ್ನೂ ಈತ - ಭೀಮನಿಗೆ ಕೊಟ್ಟರು. ಜಗಜಟ್ಟಿ ಭೀಮ ಅದೆಲ್ಲವನ್ನೂ ತಿಂದು, ಚಿಟ್ಟು ಮುರಿಯಾಟದಲ್ಲಿ ಮತ್ತೆ ಕೌರವರನ್ನು ಚೆನ್ನಾಗಿ ಸದೆಬಡಿದನು.
ಮಡುವಿನಲಿ ಹಾಯ್ಕಿ ದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲು ವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ ||
ಕೆಡಹಲನು ಮಾಡಿದಿರಿ ನೂರ್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ || (೧೫) ||
ಪದವಿಭಾಗ-ಅರ್ಥ: ಮಡುವಿನಲಿ ಹಾಯ್ಕಿದಿರಿ= ಹಾಕಿದಿರಿ, ಹಾವಿನ ಹೆಡೆಯ ಕೊಂಡೂರಿದಿರಿ= ಹಾವಿನಿಂದ ಕಚ್ಚಿಸಿದಿರಿ, ಬಲು ವಿಷದ+ ಅಡಿಗೆಗಳ ಮೆಲಿಸಿದಿರಿ= ತಿನ್ನಿಸಿದಿರಿ= ಬಹಳ ತೀವ್ರ ವಿಷದ ಅಡಿಗೆಗಳನ್ನು ಮಾಡಿ ತಿನ್ನಿಸಿದಿರಿ, ಬಲ್ಲಂದದ= ಗೊತ್ತಿರುವ ಎಲ್ಲ ರೀತಿಯ, ವಿಕಾರದಲಿ ಕೆಡಹಲು (ಸಾಯಿಸಲು)+ ಅನು ಮಾಡಿದಿರಿ= ತನ್ನನ್ನು ಸಾಯಿಸಲು (ಅನುವು=) ಉಪಾಯ ಮಾಡಿದಿರಿ. ನೂರ್ವರ ಕಡಿದು= ನಿಮ್ಮ ನೂರು ಜನರನ್ನೂ ಕಡಿದು, ಶಾಕಿನಿಯರಿಗೆ ರಕುತವ ಕುಡಿಸಿದ+ ಅಲ್ಲದೆ= ಸ್ಮಶಾನದಲ್ಲಿರುವ ಸ್ಮಶಾನದಲ್ಲಿರುವ ಕ್ಷುದ್ರ ದೇವತೆಗಳಾದ ಶಾಕಿನಿಯರಿಗೆ ರಕ್ತವನ್ನು ಕುಡಿಸುವ ಕಾರ್ಯ ಮಾಡವ, ಮುನ್ನ= ಅದಕ್ಕೆ ಮೊದಲು, ಸಾವೆನೆ= ಸಾಯುವೆನೆ? ಇಲ್ಲ; ಕೇಳಿ ನೀವು+ ಎಂದ= ನಾನು ಸಾಯುವುದಿಲ್ಲ ಎಂದು ಭೀಮ ಹೇಳಿದ.
ಅರ್ಥ:ಕೌರವರೇ ನೀವು ನನ್ನನ್ನು, ಮಡುವಿನಲಿ ಹಾಕಿದಿರಿ, ಹಾವಿನಿಂದ ಕಚ್ಚಿಸಿದಿರಿ, ಬಹಳ ತೀವ್ರ ವಿಷದ ಅಡಿಗೆಗಳನ್ನು ಮಾಡಿ ತಿನ್ನಿಸಿದಿರಿ, ಗೊತ್ತಿರುವ ಎಲ್ಲ ರೀತಿಯ,ತನ್ನನ್ನು ಸಾಯಿಸಲು ಎಲ್ಲ ರೀತಿಯ ಉಪಾಯ ಮಾಡಿದಿರಿ. ಇದಕ್ಕೆ ಪ್ರತೀಕಾರವಾಗಿ, ನಿಮ್ಮ ನೂರು ಜನರನ್ನೂ ಕಡಿದು, ಸ್ಮಶಾನದಲ್ಲಿರುವ ಕ್ಷುದ್ರ ದೇವತೆಗಳಾದ ಶಾಕಿನಿಯರಿಗೆ ರಕ್ತವನ್ನು ಕುಡಿಸುವ ಕಾರ್ಯ ಮಾಡವದಕ್ಕೆ ಮೊದಲು ನಾನು ಸಾಯುವುದಿಲ್ಲ ಕೇಳಿಕೊಳ್ಳಿ ಎಂದು ಭೀಮ ಹೇಳಿದ.
ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಿಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು |
ಬಲುಹುಗುಂದದೆ ಬೀಷ್ಮ ವಿದುರರ
ಬಳಕೆಯಲಿತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು || (೧೬)
ಪದವಿಭಾಗ-ಅರ್ಥ: ಒಳಗೆ ಬೆಳೆದುದು ವೈರಶಿಖಿ (ಶಿಖಿ= ಬೆಂಕಿ)= ಕೌರವರ (ಮತ್ತು ಪಾಂಡವರ ಮಧ್ಯೆ) ಮನಸ್ಸಿನಲ್ಲಿ ವೈರತ್ವದ ಬೆಂಕಿ ಬೆಳೆಯಿತು. ಕಡೆಗಳಿಕೆ ಹಾಯ್ದುದು= ಅದರ ಉರಿ ಗಡಿದಾಟಿ ಬಂದಿತು; ಜನನಿ ಜನಕರ ಬಲು= ಬೆಂಬಲದ, ನುಡಿಗಳಲಿ= ತಾಯಿ ತಂದೆಯರ ಬೆಂಬಲದ ಮಾತುಗಳಿಂದ ಬಲ ಪಡೆದು, ನೂರ್ವರು+ ಇರ್ದರು ಶಕುನಿ ಮತವಿಡಿದು (= ಸಲಹೆ ಪಡೆದು,)= ಜೊತೆಗೆ ತಾಯಿ ಗಾಂಧಾರಿಯ ಅಣ್ಣ ಶಕುನಿಯ ಸಲಹೆಯನ್ನು ಪಡೆದು ನೆಡೆಯುತ್ತಿದ್ದರು. ಬಲುಹುಗುಂದದೆ- ಬಲುಹು+ ಕುಂದದೆ = ಬೀಷ್ಮ ವಿದುರರ ಬಳಕೆಯಲಿ ತಾವಡಗಿ ಗುಣದಲಿ= ಪಾಂಡವರು ಶಕ್ತಿಗುಂದದೆ, ದಯರ್ಯ ಬಿಡದೆ, ಬೀಷ್ಮ ವಿದುರರ ಬಳಕೆಯಲಿ= ಬಳಸಿಕೊಂಡು, ಬೆಂಬಲದಿಂದ, ಕೆಲನ= ಸುತ್ತಲಿನ ಜನರನ್ನು ಮೆಚ್ಚಿಸಿ ನಡೆದು+ ಅರಿವರು ಯುಧಿಷ್ಠಿರಾದಿಗಳು= ಯುಧಿಷ್ಠಿರ ಎಂದರೆ ಧರ್ಮಜ ಮತ್ತು ಅವನ ಸಹೋದರರು ನಡೆದು+ ಅರಿವರು; ಅರಿತು= ತಿಳುವಳಿಕೆಯಿಂದ ನಡೆದುಕೊಳ್ಳುತ್ತಿದ್ದರು.
ಅರ್ಥ: ಕೌರವರು ಮತ್ತು ಪಾಂಡವರ ಮಧ್ಯೆ ಮನಸ್ಸಿನಲ್ಲಿ ವೈರತ್ವದ ಬೆಂಕಿ ಬೆಳೆಯಿತು. ಅದರ ಉರಿ ಗಡಿದಾಟಿ ಬಂದಿತು; ಕೌರವರು ತಾಯಿ ತಂದೆಯರ ಬೆಂಬಲದ ಮಾತುಗಳ ಬಲ ಪಡೆದು, ಜೊತೆಗೆ ತಾಯಿ ಗಾಂಧಾರಿಯ ಅಣ್ಣ ಶಕುನಿಯ ಸಲಹೆಯನ್ನು ಪಡೆದು ನೆಡೆಯುತ್ತಿದ್ದರು. ಪಾಂಡವರು ಶಕ್ತಿಗುಂದದೆ, ಧೈರ್ಯ ಬಿಡದೆ, ಬೀಷ್ಮ ವಿದುರರನ್ನು ಬಳಸಿಕೊಂಡು, ಅವರ ಬೆಂಬಲದಿಂದ, ಸುತ್ತಲಿನ ಜನರನ್ನು ಮೆಚ್ಚಿಸಿ ಯುಧಿಷ್ಠಿರ ಎಂದರೆ ಧರ್ಮಜ ಮತ್ತು ಅವನ ಸಹೋದರರು ನಡೆದು ತಿಳುವಳಿಕೆಯಿಂದ ನಡೆದುಕೊಳ್ಳುತ್ತಿದ್ದರು.
 • ಟಿಪ್ಪಣಿ:( ಧರ್ಮಜನಿಗೆ ಅವನ ಮೂಲ ಹೆಸರು ಯುಧಿಷ್ಠಿರ ಎಂದು ಇಲ್ಲಿ ಮೊಟ್ಟ ಮೊದಲಿಗೆ ಬಂದಿದೆ.)
ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ ||
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ || (೧೭) ||
ಪದವಿಭಾಗ-ಅರ್ಥ: ಆಟದಲಿ ತೊಡಗಿದರು ಮೊದಲಲಿ= ಈ ಕೌರವ ಪಾಂಡವ ಮಕ್ಕಳು ಮೊದಲಲ್ಲಿ ಆಟಗಳಲ್ಲಿ ತೊಡಗಿಕೊಂಡಿದ್ದರು. (ನಂತರ ಕಾದಾಟದಲ್ಲಿ ತೊಡಗಿದರು)ತೋಟಿಯನು= ಕಲಹ, ಜಗಳ, ಕಾದಾಟವನ್ನು; ಸಾಕು+ ಈತಗಳ= ಇವರ, ಕಾಲಾಟವನು= ತಿರುಗಾಟ. 2. ನರ್ತನ. ತುಂಟಾಟವನ್ನು; ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ= ಶಸ್ತ್ರಾಸ್ತ್ರ ಅಭ್ಯಾಸದಲ್ಲಿ ಇವರನ್ನು ತೊಡಗಿಸಿ ಇವರ ತುಂಟಾಟವನ್ನು ನಿಲ್ಲಿಸುತ್ತೇನೆ ಎಂದು ಭೀಷ್ಮನು ಎಂದು ಇವನು ಯೋಚಿಸಿದನು. ಇವರ=ಇವರಿಬ್ಬರ ಗುಂಪಿನಲ್ಲಿ, ಆಟವಿಕರ= ಕಾಡುಜನರಂತೆ ಸಂಸ್ಕಾರವಿಲ್ಲದ ಇವದಿರಲಿ= ಇವರಿಬ್ಬರ ಗುಂಪಿನಲ್ಲಿ, ಬಲಿದು= ಒಳತೋಟಿ= ಒಳದ್ವೇಷ ಬಲಿತು, ಬರಿದೇ ಬಿಡದು= ಹಾಗೆಯೇ ಬಿಡುವುದಿಲ್ಲ. ಮೃತ್ಯುವಿನ+ ಊಟ, ಮುಂದೆ+ ಇಹುದೆಂದು= ಮುಂದೆ ಇದು ಮೃತ್ಯವಿನ ಊಟವಾದ ಯುದ್ಧ ಒದಗುವುದು, ಎಂದು ಯೋಚಿಸಿ, ಕರೆಕರೆಗುಂದಿದನು- ಕರೆಕರೆ+ ಕುಂದಿದನು= ಮನಸ್ಸಿಗೆ ಕರಕರೆ ಮಾಡಿಕೊಂಡು- ಚಿಂತೆಮಾಡಿಕೊಂಡು ಭೀಷ್ಮನು ಕುಗ್ಗಿದನು.
ಅರ್ಥ: ಭೀಷ್ಮ ಯೋಚಿಸಿದ, ಈ ಕೌರವ ಪಾಂಡವ ಮಕ್ಕಳು ಮೊದಲಲ್ಲಿ ಆಟಗಳಲ್ಲಿ ತೊಡಗಿಕೊಂಡಿದ್ದರು. ನಂತರ ಕಾದಾಟದಲ್ಲಿ ತೊಡಗಿದರು. ಜಗಳ, ಕಾದಾಟ ಸಾಕು. ಇವರ ಕಾಲಾಟವನು= ಕಾದಾಟವನ್ನೂ ತುಂಟಾಟವನ್ನೂ ಶಸ್ತ್ರಾಸ್ತ್ರ ಅಭ್ಯಾಸದಲ್ಲಿ ಇವರನ್ನು ತೊಡಗಿಸಿ ನಿಲ್ಲಿಸುತ್ತೇನೆ ಎಂದು ಭೀಷ್ಮನು ಯೋಚಿಸಿದನು. ಕಾಡುಜನರಂತೆ ಸಂಸ್ಕಾರವಿಲ್ಲದ ಇವರಿಬ್ಬರ ಗುಂಪಿನಲ್ಲಿ ಒಳದ್ವೇಷ ಬಲಿತು, ಹಾಗೆಯೇ ಬಿಡುವುದಿಲ್ಲ. ಮುಂದೆ ಇದು ಮೃತ್ಯವಿನ ಊಟವಾದ ಯುದ್ಧದಲ್ಲಿ ತೊಡಗುವುದು, ಎಂದು ಯೋಚಿಸಿ, ಮನಸ್ಸಿಗೆ ಕರಕರೆ ಮಾಡಿಕೊಂಡು- ಚಿಂತೆಮಾಡಿಕೊಂಡು ಭೀಷ್ಮನು ಕುಗ್ಗಿದನು.

ಕೃಪ ಕೃಪೆ ಮತ್ತು ದ್ರೋಣರ ಜನನ[ಸಂಪಾದಿಸಿ]

ಧರಣಿಪತಿ ಚಿತ್ತೈಸು ಗೌತಮ
ವರಮುನಿಗೆ ಜನಿಸಿದ ಶರದ್ವನು
ಪರಮಋಷಿಯಾತನು ತಪೋಯುತನಾಗಿ ಧನು ಸಹಿತ ||
ಇರುತ ಕಂಡನು ದೈವ ಗತಿಯಲಿ
ಸುರವಧುವನಾ ಕ್ಷಣಕೆ ಕಾಮ
ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ || (೧೮) ||
ಪದವಿಭಾಗ-ಅರ್ಥ: ಧರಣಿಪತಿ ಚಿತ್ತೈಸು= ಜನಮೇಜಯ ರಾಜನೇ ಕೇಳು, ಗೌತಮ ವರಮುನಿಗೆ ಜನಿಸಿದ ಶರದ್ವನು =ಗೌತಮ ಶ್ರೇಷ್ಠಮುನಿಗೆ ಜನಿಸಿದ ಮಗ ಶರದ್ವನು ಉತ್ತಮ ಋಷಿಯಾಗಿದ್ದನು. ಪರಮಋಷಿಯು+ ಆತನು ತಪೋಯುತನಾಗಿ ಧನು ಸಹಿತ ಇರುತ= ಆತನು ಧನುಸ್ಸು ಸಹಿತ ತಪಸ್ಸು ಮಾಡುತ್ತಿದ್ದನು. ಅವನು - ಕಂಡನು ದೈವ ಗತಿಯಲಿ= ವಿಧಿಯ ವಿಲಾಸದಿಂದ ಅಪ್ಸರಸ್ತ್ರೀಯರಾದ ದೇವಕನ್ಯೆಯರನ್ನು ಕಂಡನು, ಸುರವಧುವನು= ದೇವಕನ್ಯೆಯರನ್ನು+ ಆ ಕ್ಷಣಕೆ = ಆ ಕೂಡಲೆ ಅವನಿಗೆ, ಕಾಮ ಜ್ವರಿತನಾದನು= ಕಾಮೋದ್ರೇಕವುಂಟಾಯಿತು. ಚಲಿಸಿತು+ ಆತನ ವೀರ್ಯವು+ ಅವನಿಯಲಿ (ಅವನಿ=ಭೂಮಿ)= ಆಗ ಅವನ ವೀರ್ಯವು ಸ್ಕಲನವಾಗಿ ಭೂಮಿಯಮೇಲೆ ಬಿತ್ತು.
ಅರ್ಥ: ಜನಮೇಜಯ ರಾಜನೇ ಕೇಳು, ಗೌತಮನೆಂಬ ಶ್ರೇಷ್ಠಮುನಿಗೆ ಜನಿಸಿದ ಮಗ ಶರದ್ವನು ಉತ್ತಮ ಋಷಿಯಾಗಿದ್ದನು. ಆತನು ಧನುಸ್ಸು ಸಹಿತ ತಪಸ್ಸು ಮಾಡುತ್ತಿದ್ದನು. ವಿಧಿಯ ವಿಲಾಸದಿಂದ ಅವನು ಅಪ್ಸರಸ್ತ್ರೀಯರಾದ ದೇವಕನ್ಯೆಯರನ್ನು ಕಂಡನು. ಆ ಕೂಡಲೆ ಅವನಿಗೆ ಕಾಮೋದ್ರೇಕವುಂಟಾಯಿತು. ಆಗ ಅವನ ವೀರ್ಯವು ಸ್ಕಲನವಾಗಿ ಭೂಮಿಯಮೇಲೆ ಬಿತ್ತು.
 • ಟಿಪ್ಪಣಿ: ಗೌತಮನು ಹೋಮ ಮಾಡುವಾಗ ಹೋಮದಿಂದ ಅವನ ಮಗನು ಧನುಸ್ಸು ಶರ/ಬಾಣಗಳ ಸಹಿತ ಹೋಮಕುಂಡದಿಂದ ಹುಟ್ಟಿಬಂದನು. ಅದರಿಂದ ಅವನಿಗೆ ಶರಧನ್ವ ಎಂಬ ಹೆಸರು ಬಂತು.
ಅದು ಶರಸ್ತಂಭದಲಿ ನೆಲೆಯಾ
ದುದು ಮುನಿಚ್ಯುತ ವೀರ್ಯ ಮುನಿಸುತ
ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ ||
ಸದನದಲಿ ತನ್ಮಿಥುನವನು ಸಲ
ಹಿದನು ಕೃಪ ಕೃಪೆಯೆಂಬ ಹೆಸರಾ
ದುದು ಮಹಾ ಬಳನಾದನಾತನ ಕರೆಸಿದನು ಭೀಷ್ಮ || (೧೯) ||
ಪದವಿಭಾಗ-ಅರ್ಥ: ಅದು ಶರಸ್ತಂಭದಲಿ= ಬೆಳೆದ ಹುಲ್ಲಿನ ಪೊದೆಯಲ್ಲಿ, ನೆಲೆಯಾದುದು ಮುನಿಚ್ಯುತ ವೀರ್ಯ, ಮುನಿಸುತರು+ ಉದಿಸಿದರು, ಶಂತನು ಮಹೀಪತಿ ಕಂಡು ಕೃಪೆಯಿಂದ ಸದನದಲಿ ತನ್+ ಮಿಥುನವನು= ಜೋಡಿ, ಅವಳಿ ಮಕ್ಕಳನ್ನು ಸಲಹಿದನು, ಕೃಪ (ತಂಗಿ) ಕೃಪೆಯೆಂಬ ಹೆಸರಾದುದು, ಮಹಾ ಬಳನಾದನು (ವೀರ)+ ಆತನ ಕರೆಸಿದನು ಭೀಷ್ಮ.
ಅರ್ಥ: ಅದು-ಮುನಿಚ್ಯುತ= ಬಿದ್ದ ವೀರ್ಯ= ಆ ಶರದನ್ವನಿಂದ ಸ್ಕಲನವಾದ ವೀರ್ಯವು ಬೆಳೆದ ಹುಲ್ಲಿನ ಪೊದೆಯಲ್ಲಿ ನೆಲೆಸಿತು. ಅದರಿಂದ ಒಂದು ಗಂಡು- ಒಂದು ಹೆಣ್ಣು -(ಮುನಿಯ) ಅವಳಿ ಮಕ್ಕಳು ಜನಿಸಿರು. ಬೇಟೆಗಾಗಿ ಬಂದ ಶಂತನು ರಾಜನು ಆ ಮಕ್ಕಳನ್ನು ಕಂಡು ಕೃಪೆಯಿಂದ (ಕರುಣೆಯಿಂದ) ತನ್ನ ಅರಮನೆಗೆ ತಂದು ಸಾಕಿದನು. ಅವರಿಗೆ ಕೃಪ, (ತಂಗಿ) ಕೃಪೆಯೆಂದು ನಾಮಕರಣ ಮಾಡಿದನು. ನಂತರ ಅಲ್ಲಿಗೆ ಬಂದ ತಂದೆ ಶರಧನ್ವನಿಂದ ಕೃಪನು ಎಲ್ಲಾ ವಿದ್ಯೆ ಕಲಿತು ಮಹಾ ಬಲಶಾಲಿಯಾದನು. ಅದನ್ನು ತಿಳಿದ ಭೀಷ್ಮ ಆತನನ್ನು ಹಸ್ತಿನಾವತಿಗೆ ಕರೆಸಿದನು.
ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು ||
ಲೋಕ ವೈದಿಕಮುಖ್ಯ ಸಕಲ ಕ
ಲಾ ಕುಶಲರಾದರು ಧನುಃ ಪ್ರವಿ
ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ || (೨೦)||
ಪದವಿಭಾಗ-ಅರ್ಥ: ಆ ಕೃಪಾಚಾರಿಯನ ದೆಸೆಯಿಂದ+ ಈ ಕುಮಾರರು= ಕೌರವ ಪಾಂಡವ ಕುಮಾರರು, ನಿಖಿಳ= ಎಲ್ಲಾ, ತರ್ಕವ್ಯಾಕರಣ ಮೊದಲೆನೆ ಚತುರ್ದಶ= ಹದಿನಾಲ್ಕು ವಿದ್ಯೆಗಳನು+ ಅರಿದು= ತಿಳಿದು, ಲೋಕ ವೈದಿಕಮುಖ್ಯ ಸಕಲ ಕಲಾ ಕುಶಲರಾದರು; ಧನುಃ ಪ್ರವಿವೇಕ=ಹೆಚ್ಚಿನ, ನಿಪುಣರನು+ ಅರಸುತಿದ್ದನು= ಹುಡುಕುತ್ತಿದ್ದನು ಮತ್ತೆ ಗಾಂಗೇಯ= ಭೀಷ್ಮ.
ಅರ್ಥ: ಆ ಕೃಪಾಚಾರ್ಯನ ಕಡೆಯಿಂದ ಈ ಕೌರವ ಪಾಂಡವ ಕುಮಾರರು ಎಲ್ಲಾ ತರ್ಕ, ವ್ಯಾಕರಣ, ಮೊದಲಾಗಿ ಹದಿನಾಲ್ಕು ಬಗೆಯ ವಿದ್ಯೆಗಳನ್ನು ತಿಳಿದು ಲೋಕ ವೈದಿಕಮುಖ್ಯ ಸಕಲ ಕಲಾ ಕುಶಲರಾದರು; ಧನುರ್ವಿದ್ಯೆಯಲ್ಲಿ ಹೆಚ್ಚಿನ ನಿಪುಣರನ್ನು ಭೀಷ್ಮನು ಮತ್ತೆ ಹುಡುಕುತ್ತಿದ್ದನು.
 • ಟಿಪ್ಪಣಿ: ನಾಲ್ಕು ವೇದಗಳು, ಆರು ವೇದಾಂಗಗಳು, ಧರ್ಮಶಾಸ್ತ್ರ, ಮೀಮಾಂಸ, ನ್ಯಾಯ ಅಥವಾ ತರ್ಕ, ಪುರಾಣ. (ಧನುರ್ವಿದ್ಯೆ? ಕೃಪನೂ ಧನುರ್ವಿದ್ಯಾ ಪಂಡಿತ)
ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ ||
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಬಿದಾನನು ಮುನಿಯ ದೆಸೆಯಿಂದ || (೨೧) ||
ಪದವಿಭಾಗ-ಅರ್ಥ: ಮುನಿ ಭರದ್ವಾಜಾಖ್ಯನು+ ಇರ್ದನು ಘನ ತಪೋನಿಷ್ಠೆಯಲಿ= ಒಮ್ಮೆ ಪ್ರಸಿದ್ಧ ಮುನಿ ಭರದ್ವಾಜನು ಘನ ತಪೋನಿಷ್ಠೆಯಲಿ ಇದ್ದನು, ದಿವಿಜಾಂಗನೆಯ ಕಂಡನು = ಆಗ ಅಲ್ಲಿಗೆ ಬಂದ ದೇವಲೋಕದ ಕನ್ಯೆಯರನ್ನು ಕಂಡನು. ಗಾಯವಡೆದನು ಮದನನ+ ಎಸುಗೆಯಲಿ= (ಎಸುಗೆ= ಬಾಣದ ಹೊಡೆತ) ಮದನ- ಮನ್ಮಥನ ಬಾಣದ ಹೊಡೆತದಲ್ಲಿ ಅವನು ಗಾಯಗೊಂಡನು, ಆ ಅಪ್ಸರ ಸ್ತ್ರೀಯನ್ನು ನೋಡಿ ಕಾಮೋದ್ರೇಕಗೊಂಡನು. ತನು ಪರಿಚ್ಯುತ ವೀರ್ಯವನು= ತನು= ದೇಹ, ಪರಿಚ್ಯತ= ಸ್ಖಲನವಾದ, ದೇಹದಿಂದ ಹೊರಬಿದ್ದ ಸತ್ಕನಕ=ಸತ್+ ಕನಕ= ಚಿನ್ನದ (ದೊನ್ನೆ - ಚಿನ್ನದ ದೊನ್ನೆ) ಕಲಶದೊಳು+ ಇರಿಸಲು+ ಅಲ್ಲಿಯೆ ಜನಿಸಿದನು, ದ್ರೋಣ + ಅಬಿದಾನನು= ಹೆಸರಿನವನು, ಮುನಿಯ ದೆಸೆಯಿಂದ.
ಅರ್ಥ: ಒಮ್ಮೆ ಪ್ರಸಿದ್ಧ ಮುನಿ ಭರದ್ವಾಜನು ಘನ ತಪೋನಿಷ್ಠೆಯಲಿ ಇದ್ದನು. ಆಗ ಅಲ್ಲಿಗೆ ಬಂದ ದೇವಲೋಕದ ಕನ್ಯೆಯನ್ನು (ಘೃತಾಚಿ) ಕಂಡನು. ಗಾಯವಡೆದನು ಮದನನ+ ಎಸುಗೆಯಲಿ= (ಎಸುಗೆ= ಬಾಣದ ಹೊಡೆತ) ಮದನ- ಮನ್ಮಥನ ಬಾಣದ ಹೊಡೆತದಲ್ಲಿ ಅವನು ಗಾಯಗೊಂಡನು, ಆ ಅಪ್ಸರ ಸ್ತ್ರೀಯನ್ನು ನೋಡಿ ಕಾಮೋದ್ರೇಕಗೊಂಡನು. ತನ್ನ ದೇಹದಿಂದ ಹೊರಬಿದ್ದ ವೀರ್ಯವನ್ನು ಶ್ರೇಷ್ಠ ಚಿನ್ನದ ಕಲಶದಲ್ಲಿ ಇರಿಸಲು, ಕೂಡಲೆ ಅಲ್ಲಿಯೆ ದ್ರೋಣ ಎಂಬ ಹೆಸರಿನ ಬಾಲಕನು ಮುನಿಯ ವೀರ್ಯದಿಂದ ಜನಿಸಿದನು.
ದ್ರೋಣಕಲಶದೊಳಾದದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ ||
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಾಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು || (೨೨) ||
ಪದವಿಭಾಗ-ಅರ್ಥ: ದ್ರೋಣಕಲಶದೊಳು ಆದ ದೆಸೆಯಿಂ ದ್ರೋಣನಾದನು, ಬಳಿಕ ಮುನಿಯು+ ಆ ದ್ರೋಣಗೆ+ ಉಪನಯನ+ ಆದಿ= ಮೊದಲಾದ, ವಿಪ್ರಕ್ರಿಯೆಗಳನು ರಚಿಸಿ (ಮಾಡಿ)= ಬ್ರಾಹ್ಮಣ ವಟುವಿಗೆ ಮಾಡಬೇಕಾದ ಸಂಸ್ಕಾರ ಕ್ರಯೆಗಳನ್ನು ಮಾಡಿ, ದ್ರೋಣನೊಡನೆ+ ಓದಿಸಿ ನೃಪಾಲ= ಕ್ಷತ್ರಿಯ ವಿದ್ಯೆಗಳ ಶ್ರೇಣಿಯನು= ಎಲ್ಲಾ ಬಗೆಯ, ಶಾಸ್ತ್ರಾಸ್ತ್ರ ಕಳೆಯಲಿ= ಕಲೆಯಲ್ಲಿ, ಜಾಣರನು ಮಾಡಿದನು ಭಾರದ್ವಾಜ ಮುನಿಯು+ ಅಂದು.
ಅರ್ಥ: ದ್ರೋಣ ಎಂಬ ಕಲಶದಲ್ಲಿ ಹುಟ್ಟಿದ ದೆಸೆಯಿಂದ ಅವನಿಗೆ 'ದ್ರೋಣ' ಎಂಬ ಹೆಸರಾಯಿತು. ಬಳಿಕ ಮುನಿಯು ಆ ದ್ರೋಣನಿಗೆ ಉಪನಯನ ಮೊದಲಾದ ಬ್ರಾಹ್ಮಣ ವಟುವಿಗೆ ಮಾಡಬೇಕಾದ ಸಂಸ್ಕಾರ ಕ್ರಯೆಗಳನ್ನು ಮಾಡಿಸಿ, ದ್ರೋಣನನ್ನು ರಾಜಕುಮಾರರೊಡನೆ ಕ್ಷತ್ರಿಯ ವಿದ್ಯೆಗಳ ಎಲ್ಲಾ ಬಗೆಯ ಶಾಸ್ತ್ರಾಸ್ತ್ರ ಕಲೆಯಲ್ಲಿ, ಭಾರದ್ವಾಜ ಮುನಿಯು ಆ ಕಾಲದಲ್ಲಿ ಮಗನನ್ನು ಜಾಣನನ್ನಾಗಿ ಮಾಡಿದನು.
ಕೃಪನನುಜೆಯನು ತಂದು ದ್ರೋಣಂ
ಗುಪಯಮವ ಮಾಡಿದನು ಹರ್ಷದಿ
ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ |
ಕೃಪೆಯಲೀ ದ್ರೋಣಂಗೆ ಜನಿಸಿದ
ನಪರ ಶಂಕರ ರೂಪನಾಹವ
ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ || (೨೩)
ಪದವಿಭಾಗ-ಅರ್ಥ: ಕೃಪನ+ ಅನುಜೆಯನು= ತಂಗಿಯನ್ನು ತಂದು ದ್ರೋಣಂಗೆ+ ಉಪಯಮವ= ಉಪ= ಸಹ, ಯಮ= ಧರ್ಮ, ಸಹಧರ್ಮಿಣಿ, ಪತ್ನಿಯನ್ನಾಗಿ, ಮಾಡಿದನು; ಹರ್ಷದಿ ದ್ರುಪದ ಬಂದು ಈ ದ್ರೋಣನೊಡನೆ ಅರಿದನು(ಅರಿ= ತಿಳಿ; ತ= ದ)= ಕಲಿತನು, ಧನುಶ್ರುತಿಯ= ಧನುರ್ವಿದ್ಯೆಯನ್ನು; ಕೃಪೆಯಲಿ+ ಈ ದ್ರೋಣಂಗೆ ಜನಿಸಿದನು+ ಅಪರ ಶಂಕರ ರೂಪನು (ಪರಶಿವನ ಅಂಶದವನಾದ )+ ಆಹವ=ಯುದ್ಧ, ನಿಪುಣನು+ ಅಶ್ವತ್ಥಾಮ ಭಾರದ್ವಾಜ ಗೋತ್ರದಲಿ.
ಅರ್ಥ: ಅನಂತರ ಭರದ್ವಾಜನು ಕೃಪನ ತಂಗಿಯನ್ನು ತಂದು ದ್ರೋಣನಿಗೆ ಪತ್ನಿಯನ್ನಾಗಿ ಮಾಡಿದನು. ದ್ರುಪದ ರಾಜಕುಮಾರನು ಬಂದು ಈ ದ್ರೋಣನೊಡನೆ ಹರ್ಷದಿಂದ ಧನುರ್ವಿದ್ಯೆಯನ್ನು ಕಲಿತನು. ಈ ದ್ರೋಣನಿಗೆ ಕೃಪೆಯಲ್ಲಿ ಪರಶಿವನ ಅಂಶದವನಾದ ಅಶ್ವತ್ಥಾಮನು ಭಾರದ್ವಾಜ ಗೋತ್ರದಲಿ ಜನಿಸಿದನು. ಅವನು ಯುದ್ಧ ನಿಪುಣನು. ಭರದ್ವಾಜನ ಮೊಮ್ಮಗನಾದ್ದರಿಂದ ಭಾರದ್ವಾಜ ಗೋತ್ರ.
ತಂದೆಯೊಳ್ ಶ್ರಮ ಮಾಡಿದರು ನೃಪ
ವೃಂದಸಹಿತೀ ದ್ರೋಣ ದ್ರುಪದರು
ನಿಂದನಾ ದ್ರುಪದಾಖ್ಯನಯ್ಯನು ದಿವಿಜ ನಗರಿಯಲಿ ||
ಅಂದು ಸಖ್ಯಪ್ರೀತಿಯನು ಸಾ
ನಂದದಲಿ ದ್ರೋಣಂಗೆ ವಿರಚಿಸಿ
ಬಂದು ನಿಜ ರಾಜ್ಯಭಿಷೇಕವ ಧರಿಸಿದನು ದ್ರುಪದ || (೨೪) ||
ಪದವಿಭಾಗ-ಅರ್ಥ: ತಂದೆಯೊಳ್ ಶ್ರಮ ಮಾಡಿದರು= ವಿದ್ಯೆಯನ್ನು ಕಲಿತರು, ನೃಪವೃಂದ ಸಹಿತ+ ಈ ದ್ರೋಣ ದ್ರುಪದರು= ರಾಜಕುಮಾರರೊಡನೆ ಈ ದ್ರೋಣ ದ್ರುಪದರು ವಿದ್ಯೆಯನ್ನು ಕಲಿತರು, ನಿಂದನು ಆ ದ್ರುಪದ+ ಆಖ್ಯನ (ಶ್ರೇಷ್ಠ)+ ಅಯ್ಯನು ದಿವಿಜ ನಗರಿಯಲಿ= ಆ ಶ್ರೇಷ್ಠ ದ್ರುಪದನ ತಂದಯು ದೇವತೆಗಳ ನಗರ ಅಮರಾವತಿಯಲ್ಲಿ ಸೇರಿಅಲ್ಲಿ ನಿಂತನು- ಸ್ವರ್ಗಸ್ಥನಾದನು. ಅಂದು= ಹೇಳಿ, ಸಖ್ಯಪ್ರೀತಿಯನು ಸಾನಂದದಲಿ ದ್ರೋಣಂಗೆ ವಿರಚಿಸಿ= ದ್ರೋಣನಿಗೆ ತನ್ನ ಸ್ನೇಹ ಪ್ರೀತಿಯನ್ನು ಹೇಳಿ ವ್ಯಕ್ತಪಡಿಸಿ, ಬಂದು= ಪಾಂಚಾಲ ನಗರಕ್ಕೆ ಬಂದು, ನಿಜ ರಾಜ್ಯಭಿಷೇಕವ ಧರಿಸಿದನು ದ್ರುಪದ= ದ್ರುಪದನು ತನ್ನ ಪಟ್ಟಾಭಿಷೇಕ ಮಾಡಿಕೊಂಡನು.
ಅರ್ಥ: ದ್ರೋಣನ ತಂದೆಯ ಬಳಿ ಈ ದ್ರೋಣ ದ್ರುಪದರು ರಾಜಕುಮಾರರೊಡನೆ ಸೆರಿಕೊಂಡು ವಿದ್ಯೆಯನ್ನು ಕಲಿತರು. ಆ ಶ್ರೇಷ್ಠ ದ್ರುಪದನ ತಂದಯು ಸ್ವರ್ಗಸ್ಥನಾದನು. ದ್ರೋಣನಿಗೆ ತನ್ನ ಸ್ನೇಹ ಪ್ರೀತಿಯನ್ನು ಹೇಳಿ ವ್ಯಕ್ತಪಡಿಸಿ ದ್ರುಪದನು ಪಾಂಚಾಲ ನಗರಕ್ಕೆ ಬಂದು ಪಟ್ಟಾಭಿಷೇಕ ಮಾಡಿಕೊಂಡನು.
ಇತ್ತಲೀ ದ್ರೋಣನ ಪಿತನು ಸುರ
ರತ್ತ ಸರಿದನು ಕೆಲವು ದಿವಸಕೆ
ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ ||
ಹೊತ್ತ ದಾರಿದ್ರ್ಯದಲಿ ಮನಮರು
ಗುತ್ತ ದೇಶಾಂತರದೊಳೆಗೆ ತೊಳ
ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ || (೨೫) ||
ಪದವಿಭಾಗ-ಅರ್ಥ: ಇತ್ತಲು+ ಈ ದ್ರೋಣನ ಪಿತನು ಸುರರತ್ತ ಸರಿದನು (ಹೋದನು)= ಈ ಕಡೆ ದ್ರೋಣನ ತಂದೆ ದೇವತೆಗಳ ಬಳಿಗೆ ಹೋದನು,- ಸ್ವರ್ಗಸ್ಥನಾದನು. ಕೆಲವು ದಿವಸಕೆ ತತ್ತಪೋವನದಲ್ಲಿ= ಕೆಲವು ದಿನ ಆತಪೋವನದಲ್ಲಿ ಇದ್ದು, ವಿಪ್ರಕ್ರಿಯೆಗಳನು= ಉತ್ತರಕ್ರಿಯೆಗಳನ್ನು, ಮಾಡಿ ಹೊತ್ತ ದಾರಿದ್ರ್ಯದಲಿ= ಕಡು ಬಡತನದ ಸ್ಥಿತಿಯನ್ನು ಹೊತ್ತು/ ಹೊಂದಿ, ಮನ ಮರುಗುತ್ತ= ಮನಸ್ಸಿನಲ್ಲಿ ದುಃಖ ಪಡುತ್ತಾ, ದೇಶಾಂತರದೊಳೆಗೆ ತೊಳಲುತ್ತ = ದೇಶ ದೇಶಗಳಲ್ಲಿ ಅಲೆಯುತ್ತಾ, ಬಂದನು ತನ್ನ ಮಗ ಸಹಿತ+ ಅಡವಿಯಲಿ= ತನ್ನ ಮಗ ಅಶ್ವತ್ಥಾಮನ ಜೊತೆ ಕಾಡಿಗೆ ಬಂದನು.
ಅರ್ಥ: ಈ ಕಡೆ ದ್ರೋಣನ ತಂದೆ ಸ್ವರ್ಗಸ್ಥನಾದನು. ದ್ರೋಣನು ಕೆಲವು ದಿನ ಆ ತಪೋವನದಲ್ಲಿ ಇದ್ದು, ತಂದೆಯ ಉತ್ತರಕ್ರಿಯೆಗಳನ್ನು ಮಾಡಿ, ಕಡು ಬಡತನದ ಸ್ಥಿತಿಯನ್ನು ಹೊಂದಿ, ಮನಸ್ಸಿನಲ್ಲಿ ದುಃಖ ಪಡುತ್ತಾ ದೇಶ ದೇಶಗಳಲ್ಲಿ ಅಲೆಯುತ್ತಾ, ತನ್ನ ಮಗ ಅಶ್ವತ್ಥಾಮನ ಜೊತೆ ಕಾಡಿಗೆ ಬಂದನು.
ಪರುಶುರಾಮಾಶ್ರಮಕೆ ಮುನಿಯೈ
ತರಲು ಭಾರದ್ವಾಜನನು ಸ
ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ ||
ಧರೆಯನಿತ್ತನು ದ್ವಿಜರಿ ಗೀಯವ
ಸರದೊಳಾ ನಿರ್ಧನನು ನೀನೇ
ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ || (೨೬) ||
ಪದವಿಭಾಗ-ಅರ್ಥ: ಪರುಶುರಾಮ+ ಆಶ್ರಮಕೆ ಮುನಿಯು+ ಐತರಲು= ಬರಲು, ಭಾರದ್ವಾಜನನು ಸತ್ಕರಿಸಿ ನುಡಿದನು= ಭರದ್ವಾಜನ ಮಗ ದ್ರೋಣನನ್ನು ಜಾಮದಗ್ನ್ಯನು= ಪರಷುರಾಮನು, ಮಧುರ ವಚನದಲಿ= ಮೃದುವಾದ ಮಾತಿನಲ್ಲಿ, ಧರೆಯನಿತ್ತನು ದ್ವಿಜರಿಗೆ (ಬ್ರಾಹ್ಮಣರಿಗೆ)+ ಈ +ಯ, ಅವಸರದೊಳು (ಸಂದರ್ಭದಲ್ಲಿ )+ ಆ= ಆಂ- ನಾನು ನಿರ್ಧನನು- ಹಣವಿಲ್ಲದವನು, ನೀನೇ ಪರಮ ಋಷಿಯು+ ಆತಿಥ್ಯ ಪೂಜೆಗೆ+ ಅಭಾಗ್ಯ ನಾನೆಂದ
ಅರ್ಥ: ಪರುಶುರಾಮನ ಆಶ್ರಮಕ್ಕೆ ಮುನಿ ದ್ರೋಣನು ಬರಲು, ಭರದ್ವಾಜನ ಮಗನಾದ ದ್ರೋಣನನ್ನು ಸತ್ಕರಿಸಿ, ಜಮದಗ್ನಿಯ ಮಗನಾದ ಪರಷುರಾಮನು ಮೃದುವಾದ ಮಾತಿನಲ್ಲಿ, ಬ್ರಾಹ್ಮಣರಿಗೆ ಭೂಮಿಯನ್ನೆಲ್ಲಾ ದಾನ ಮಾಡಿದೆನು. ಈ ಸಂದರ್ಭದಲ್ಲಿ ನಾನು ನಿರ್ಧನನು, ಸಂಪತ್ತು ಇಲ್ಲದವನು, ನೀನು ಪರಮ ಋಷಿಯು; ಕೇಳಿದ್ದನ್ನು ಕೊಟ್ಟು ಆತಿಥ್ಯ ಪೂಜೆ ಮಾಡಲು ಭಾಗ್ಯವಿಲ್ಲದವನು ನಾನು ಎಂದನು.
ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯ ಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ ||
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರನ್ಜನವೇ ಬೇಹುದು ಶರವ ಕೊಡಿಯೆಂದ || (೨೭) ||
ಪದವಿಭಾಗ-ಅರ್ಥ: ಧನರಹಿತ= ಸಂಪತ್ತು ಇಲ್ಲದವನು, ನಾ ಹೊತ್ತ ಭಾರಿಯ ಧನುವು+ ಇದೊಂದು+ಇದೆ, ದಿವ್ಯ ಶರವಿದೆ= ಅಸ್ತ್ರದ ಬಾಣವಿದೆ, ಮನಕೆ ಬಂದುದ ವರಿಸು ನೀನು+ ಎನೆ= ನಿನ್ನ ಮನಸ್ಸಿಗೆ ಇಷ್ಟವಾದುದನ್ನು ತೆಗೆದುಕೋ ಎನ್ನಲು, ದ್ರೋಣ ನಸುನಗುತ ಎನಗೆ ನಿಮ್ಮಡಿಗಳ= ನಿಮ್ಮ ಪಾದಗಳ, ಕೃಪಾ+ ಅಲೋಕನವಲೇ= ಕೃಪಾದೃಷ್ಠಿಯಲ್ಲಿಯೇ ಪರಿಯಾಪ್ತಿ= ಸಾಕು, ತೃಪ್ತಿ, ಲೋಕದಜನ= ಜನರ ಮನೋರನ್ಜನವೇ= ಮನಸ್ಸಿನ ಸುಖವನ್ನು, ಬೇಹುದು= ಕಾಯುವುದು, ರಕ್ಷಿಸುವುದು, ಶರವ ಕೊಡಿಯೆಂದ= ದಿವ್ಯ ಶರವನ್ನು ಕೊಡಿ ಎಂದನು ದ್ರೋಣ.
ಅರ್ಥ: ಪರಷುರಾಮನು, ದ್ರೋಣನು ತನ್ನ ಬಡತನ ನೀಗಲು ಸಂಪತ್ತು ಬಯಸಿ ಬಂದವನೆಂದು ತಿಳಿದು, ತಾನು ಸಂಪತ್ತು ಇಲ್ಲದವನು. ನಾನು ಧರಿಸಿದ ಭಾರಿಯ ಧನಸ್ಸು ಒಂದಿದೆ, ಮತ್ತೆ ಅಸ್ತ್ರದ ಬಾಣವಿದೆ, ನಿನ್ನ ಮನಸ್ಸಿಗೆ ಇಷ್ಟವಾದುದನ್ನು ತೆಗೆದುಕೋ ಎನ್ನಲು, ದ್ರೋಣ ನಸುನಗುತ್ತಾ, ನನಗೆ ನಿಮ್ಮ ಕೃಪಾದೃಷ್ಠಿಯಲ್ಲಿಯೇ ತೃಪ್ತಿ, ಲೋಕದ ಜನರ ಮನಸ್ಸಿನ ಸುಖವನ್ನು ರಕ್ಷಿಸುವುದು ದಿವ್ಯ ಶರ, ಆದ್ದರಿಂದ ದಿವ್ಯ ಶರವನ್ನು ಕೊಡಿ ಎಂದನು ದ್ರೋಣ.

'ವಾಮ ಪಾದದಿ ತಲೆಯನೊದೆವೆನು' ಎಂದು ದ್ರೋಣನ ಶಪಥ[ಸಂಪಾದಿಸಿ]

ಇವು ಮಹಾ ನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರ ನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ |
ಇವು ಮಹಾ ರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯುವೆನುತ್ತ ಚಿಂತಿಸಿದ || (೨೮)
ಪದವಿಭಾಗ-ಅರ್ಥ: ಇವು ಮಹಾ ನಿಸ್ಸೀಮತರ ವೈಷ್ಣವವಲೇ ದಿವ್ಯಾಸ್ತ್ರ ನಿವಹವನು+ ಅವರು = ಇವು ಮಹಾ ಶಕ್ತಿಶಾಲಿ ವೈಷ್ಣವ ದಿವ್ಯಾಸ್ತ್ರಗಳ ಸಮೂಹವು; ಅವನ್ನು ಅವರು ಕೊಟ್ಟರು; ಕೊಂಡನು+ ಉಚಿತ ವಿಧಾನದಲಿ ದ್ರೋಣ= ಅವನ್ನು ಉಪದೇಶ, ಪ್ರಯೋಗ, ಉಪಸಂಹಾರ ಈ ಯೋಗ್ಯವಾದ ವಿಧಾನಗಳನ್ನು ಅನುಸರಿಸಿ ತೆಗೆದುಕೊಂಡನು, ಪರಷುರಾಮರಿಂದ ಪಡೆದನು, ಇವು ಮಹಾ ರಣರಂಗದಲಿ ಶಾತ್ರವ ನಿವಾರಣವು+ ಐಸಲೆ+ ಎಮ್ಮ+ ಈ ವ್ಯವಹೃತಿಗೆ ತಾನೆ+ ಏನು+ ಉಪಾಯುವು+ ಎನುತ್ತ ಚಿಂತಿಸಿದ= ಈ ಆಸ್ತ್ರಗಳು ಮಹಾ ರಣರಂಗದಲ್ಲಿ ಶತ್ರುಗಳನ್ನು ನಿವಾರಿಸಲು ಐಸಲೇ= ಇರುವುದಲ್ಲವೇ! ನಮ್ಮ ಈ ನಿತ್ಯವ್ಯವಹಾರಕ್ಕೆ, ಹೊಟ್ಟೆಯಪಾಡಿಗೆ ಏನು ಉಪಾಯ ಮಾಡುವುದು ಎಂದು ದ್ರೋಣ ಚಿಂತಿಸಿದ.
ಅರ್ಥ:ಇವು ಮಹಾ ಶಕ್ತಿಶಾಲಿ ವೈಷ್ಣವ ದಿವ್ಯಾಸ್ತ್ರಗಳ ಸಮೂಹವು ಎಂದು ಅವನ್ನು ಪರಷುರಾಮ ಋಷಿಗಳು ಕೊಟ್ಟರು. ದ್ರೋಣನು ಅವನ್ನು ಉಪದೇಶ, ಪ್ರಯೋಗ, ಉಪಸಂಹಾರ ಈ ಯೋಗ್ಯವಾದ ವಿಧಾನಗಳನ್ನು ಅನುಸರಿಸಿ ಪರಷುರಾಮರಿಂದ ಪಡೆದನು. ಈ ಆಸ್ತ್ರಗಳು ಮಹಾ ರಣರಂಗದಲ್ಲಿ ಶತ್ರುಗಳನ್ನು ನಿವಾರಿಸಲು ಇರುವುದಲ್ಲವೇ! ನಮ್ಮ ಈ ನಿತ್ಯವ್ಯವಹಾರಕ್ಕೆ, ಹೊಟ್ಟೆಯಪಾಡಿಗೆ ಏನು ಉಪಾಯ ಮಾಡುವುದು ಎಂದು ದ್ರೋಣ ಚಿಂತಿಸಿದ.
ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ |***
ಹೋಗುವ ನಡೆ ಪಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ || (೨೯)
ಪದವಿಭಾಗ-ಅರ್ಥ: ಮಗನೆ ಬಲ್ಲೈ= ನಿನಗೆ ಗೊತ್ತೇ, ದ್ರುಪದ ಭೂಪತಿ ಮಗುವುತನದಿಂದ+ ಎಮ್ಮ ಸಖನು+ ಓಲಗಿಸುವೆವು ನಾವು+ = ಮಗು ಅಶ್ವತ್ಥಾಮ, ನಿನಗೆ ಗೊತ್ತೇ, ದ್ರುಪದ ರಾಜನು ಚಿಕ್ಕಂದಿನಿಂದ ನನ್ನ ಸ್ನೇಹಿತನು. ನಾನ ಅವನನ್ನು ಆಶ್ರಯಿಸಿ ಸೇವೆ ಮಾಡೋಣ, ನಾವು+ ಅಲ್ಲಿ ಸಲಹನೆ ಮಿತ್ರ ಭಾವದಲಿ= ಸ್ನೇಹದ ಭಾವದಿಂದ ನಮ್ಮನ್ನು ಸಲಹಲಾರನೇ? ಖಂಡಿತ ಸಹಾಯ ಮಾಡುವನು. ಹೋಗುವ ನಡೆ ಪಂಚಾಲರಾಯ ನಗರಿಯನು ನಾವೆಂದು= ನಾವು ಪಾಂಚಾಲ ನಗರಕ್ಕೆ ಹೋಗೋಣ ನೆಡೆ ಎಂದು, ಮುನಿ ಮೌಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ= ಮುನಿಗಳ ಶಿರಸ್ಸಿನ ಮಣಿಯಂತಿರುವ ರೇಣುಕಾದೇವಿಯ ಮಗನಾದ ಪರಷುರಾಮನನ್ನು ಬೀಳುಕೊಂಡು ಹೊರಟನು.
ಅರ್ಥ:ಮಗು ಅಶ್ವತ್ಥಾಮ, ನಿನಗೆ ಗೊತ್ತೇ, ದ್ರುಪದ ರಾಜನು ಚಿಕ್ಕಂದಿನಿಂದ ನನ್ನ ಸ್ನೇಹಿತನು. ನಾನ ಅವನನ್ನು ಆಶ್ರಯಿಸಿ ಸೇವೆ ಮಾಡೋಣ, ಹಿಂದಿನ ಸ್ನೇಹದ ಭಾವದಿಂದ ನಮ್ಮನ್ನು ಸಲಹಲಾರನೇ? ಖಂಡಿತ ಸಹಾಯ ಮಾಡುವನು. ನಾವು ಪಾಂಚಾಲರಾಜನ ನಗರಕ್ಕೆ ಹೋಗೋಣ ನೆಡೆ ಎಂದು, ಮುನಿಗಳ ಶಿರಸ್ಸಿನ ಮಣಿಯಂತಿರುವ ರೇಣುಕಾದೇವಿಯ ಮಗನಾದ ಪರಷುರಾಮನನ್ನು ಬೀಳ್ಕೊಂಡು ಹೊರಟನು.
ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ ||
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿಧಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ || (೩೦) ||
ಪದವಿಭಾಗ-ಅರ್ಥ: ಬಂದನು+ ಈತನು ದ್ರುಪದ ರಾಯನ ಮಂದಿರಕೆಯ+ ಆ ಬಾಗಿಲವನೊಡನೆ+ ಎಂದನು+ ಎಲವೋ ನಾವು ನಿಮ್ಮ+ ಅರಸಂಗೆ ಪೂರ್ವದಲಿ= ಹಿಂದೆ ಸಂದ= ಆಗಿದ್ದ, ಮಿತ್ರರು, ದ್ರೋಣಮುನಿಪತಿಯೆಂದು ನಮ್ಮ+ ಅಭಿಧಾನ= ಹೆಸರು, ನೀ ಹೇಳೆಂದು ಕಳುಹಲು, ಬಂದು ಬಿನ್ನಹ ಮಾಡಿದನು ಹದನ= ವಿಷಯ;
ಅರ್ಥ: ದ್ರೋಣನು ಪಾಂಚಾಲ ನಗರಕ್ಕೆಬಂದು ದ್ರುಪದನ ಅರಮನೆಗೆ ಬಂದನು. ಈತ ದ್ರೋಣನು ದ್ರುಪದ ರಾಜನ ಅರಮನೆಯ ಆ ಕಾವಲಿದ್ದ ಬಾಗಿಲ ಕಾಯುವವನೊಡನೆ ಹೇಳಿದನು, 'ಎಲವೋ ನಾವು ನಿಮ್ಮ ಅರಸನಿಗೆ ಹಿಂದೆ ಮಿತ್ರರಾಗಿದ್ದವರು; ದ್ರೋಣ ಮುನಿಪತಿಯೆಂದು ನಮ್ಮ ಹೆಸರು. ನೀನು ಅರಸನಿಗೆ ಹೇಳು,' ಎಂದು ಕಳುಹಿಸಲು, ಆ ಕಾವಲುಗಾರ ಬಂದು ಅರಸನಿಗೆ ಈ ವಿಷಯವನ್ನು ಬಿನ್ನಹ ಮಾಡಿದನು.
ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ |
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯ ಬೇಡನೆ ಬಂದು ಬಾಗಿಲಲವ ನಿವಾರಿಸಿದ || (೩೧)
ಪದವಿಭಾಗ-ಅರ್ಥ:ಸಿರಿಯ ಮದವು+ ಅಧಿಕ ಪ್ರತಾಪ ಉತ್ಕರದ ಮದ= ಸಂಪತ್ತಿನಮದ- ಧನಮದ, ಮೊದಲಾದ ಮದ ಸಂಚರಣ (ಚೆನ್ನಾಗಿ ಆವರಿಸಿ, ವ್ಯಾಪಿಸಿ)= ಮದಗಳು ರಜದಲಿ= ರಜೋಗುಣದಲ್ಲಿ = ಅಹಂಕಾರದ ಕೋಪದಲ್ಲಿ, ಮಾಸಿತು+ ಈತನ ಮನದ= ದ್ರುಪದನ ಮನಸ್ಸನ್ನು ಕೆಡಿಸಿತು. ಮಡಿ ವರ್ಗ= ಶುದ್ಧತೆಯ ಗುಣ, ತಿರಿವ ಹಾರುವರೊಡನೆ ಭೂಮೀಶ್ವರರಿಗೆ+ ಎತ್ತಣ ಮೈತ್ರಿ= ಭಿಕ್ಷೆ ಬೇಡುವ ಬ್ರಾಹ್ಮಣರೊಡನೆ ಭೂಮಿಗೆ ಒಡೆಯರಾದ ರಾಜರಿಗೆ+ ಎತ್ತಣ ಮೈತ್ರಿ= ಎಲ್ಲಿಯ ಸ್ನೇಹ, ಹೋಗಲಿ= ಹಾಗೆಯೇ ಹೋಗಲೆ, ಕರೆಯ ಬೇಡ+ ಎನೆ= ಅವನನ್ನು ಕರೆಯಬೇಡ ಎನ್ನಲು, ಬಂದು ಬಾಗಿಲಲಿ+ ಅವ ನಿವಾರಿಸಿದ= ಕಾವಲುಗಾರ ಬಂದು ಬಾಗಿಲಲ್ಲಿ ದ್ರೋಣನನ್ನು ಹೋಗು ಎಂದು ನಿವಾರಿಸಿದ- ತಳ್ಳಿದ.
ಅರ್ಥ: ಸಂಪತ್ತಿನಮದ ಅಥವಾ ಧನಮದ ಮೊದಲಾದ ಮದಗಳು ಚೆನ್ನಾಗಿ ವ್ಯಾಪಿಸಿ, ಮದಗಳು ರಜೋಗುಣದಲ್ಲಿ ಅಹಂಕಾರದಲ್ಲಿ ದ್ರುಪದನ ಮನಸ್ಸಿನ ಶುದ್ಧತೆಯ ಗುಣವನ್ನು ಕೆಡಿಸಿತು. ಭಿಕ್ಷೆ ಬೇಡುವ ಬ್ರಾಹ್ಮಣರೊಡನೆ ಭೂಮಿಗೆ ಒಡೆಯರಾದ ರಾಜರಿಗೆ ಎಲ್ಲಿಯ ಸ್ನೇಹ? ಹಾಗೆಯೇ ಹೋಗಲಿ, ಅವನನ್ನು ಕರೆಯಬೇಡ ಎನ್ನಲು, ಅವನು- ಕಾವಲುಗಾರ ಬಂದು ಬಾಗಿಲಲ್ಲಿ ದ್ರೋಣನನ್ನು ಹೋಗು ಎಂದು ತಳ್ಳಿದ.
ಮರೆದನೇ ತಪ್ಪೇನು ನಾ ಕಂ
ಡರುಹಿ ಮರಳುವೆವೈಸಲೇಯೆನು
ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ |
ಒರೆಯನುಗುಳಿಚಿ ಖಡ್ಗದಲಿ ಬಿಡ
ದರಿದನಿಕ್ಕೆಲದವರನೋಲಗ
ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ || (೩೨)
ಪದವಿಭಾಗ-ಅರ್ಥ:ಮರೆದನೇ ತಪ್ಪೇನು= ಓಹೋ ದ್ರುಪದನು ಹಿಂದಿನದನ್ನು ಮರೆತುಬಿಟ್ಟನೇ? ಆಗಲಿ ಅದರಲ್ಲಿ ತಪ್ಪೇನು? ನಾ= ನಾನು ಕಂಡು+ ಅರುಹಿ= ಹೇಳಿ ಮರಳುವೆವು+ ಐಸಲೇಯೆನು= ಹಿಂತಿರುಗಿ ಬರುವೆವು, ಅಷ್ಟರಲ್ಲಿ ಏನು ಎಂದು ಒಳಗೆಹೋಗಲು, ದ್ವಾರಪಾಲಕರು ದ್ರೋಣನ್ನನ್ನು ತುರುಬಿದರೆ ತರುಬಿದರು,= ಸುತ್ತುಗಟ್ಟಿ ತಡೆದರು; ಕಂಬಿಯನಿಕ್ಕಿ= ಸರಳನ್ನು ಹಿಡಿದು ಅಡ್ಡಗಟ್ಟಿದರ,- ಬಾಗಿಲಲಿ= ಬಾಗಿಲಲ್ಲಿ, ಆಗ ದ್ರೋಣನು, ಒರೆಯನು+ ಉಗುಳಿಚಿ= ಖಡ್ಗವನ್ನು ಒರೆಯಿಂದ ತೆಗೆದು, ಖಡ್ಗದಲಿ ಬಿಡದೆ+ ಅರಿದನು+ ಇಕ್ಕೆಲದವರನು+= ಖಡ್ಗದಿಂದ ಎರಡೂ ಕಡೆ ಇದ್ದವರನ್ನು ಅರಿದನು= ಕತ್ತರಿಸಿದನು; ಇಕ್ಕೆಲದವರನು+ ಓಲಗಕೆ+ ಉರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ= ರಾಜನ ಸಭೆಗೆ ನುಗ್ಗಿದನು,ಅಲ್ಲಿ ದ್ರುಪದ ರಾಜನ ಎದುರು ನಿಂತನು.
ಅರ್ಥ: ಓಹೋ ದ್ರುಪದನು ಹಿಂದಿನದನ್ನು ಮರೆತುಬಿಟ್ಟನೇ? ಆಗಲಿ ಅದರಲ್ಲಿ ತಪ್ಪೇನು? ನಾನು ಕಂಡು ಹೇಳಿ ಹಿಂತಿರುಗಿ ಬರುವೆವು, ಅಷ್ಟರಲ್ಲಿ ಏನು ಎಂದು ಒಳಗೆಹೋಗಲು, ದ್ವಾರಪಾಲಕರು ದ್ರೋಣನ್ನನ್ನು ಸುತ್ತುಗಟ್ಟಿ ತಡೆದರು;ಸರಳನ್ನು ಅಡ್ಡ ಹಿಡಿದು ಬಾಗಿಲಲ್ಲಿ ಅಡ್ಡಗಟ್ಟಿದರು; ಆಗ ದ್ರೋಣನು, ಖಡ್ಗವನ್ನು ಒರೆಯಿಂದ ತೆಗೆದು, ಖಡ್ಗದಿಂದ ಎರಡೂ ಕಡೆ ಇದ್ದವರನ್ನು ಅವರಿಗೆ ತಡೆಯಲು ಬಿಡದೆ ಕತ್ತರಿಸಿದನು; ರಾಜನ ಸಭೆಗೆ ನುಗ್ಗಿದನು,ಅಲ್ಲಿ ದ್ರುಪದ ರಾಜನ ಎದುರು ನಿಂತನು.
ಏನೆಲವೋ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೋ
ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ ||
ಏನು ಬಂದಿರಿಯೆಂಬ ಗುಣವಚ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಮಗಿಲ್ಲೆಂದನಾ ದ್ರೋಣ || (೩೩) ||
ಪದವಿಭಾಗ-ಅರ್ಥ: ಏನು ಎಲವೋ! ಪಾಂಚಾಲ= ದ್ರುಪದಾ, ಚಿಕ್ಕಂದು (ಚಿಕ್ಕಂದಿನಲ್ಲಿ)+ ಆನು= ನಾನು ನೀನು+ ಒಂದಾಗಿ ತಂದೆಯೋಳು+ ಏನನು+ ಅರಿದೆವು= ಕಲಿತೆವು, ಮರೆದು ಕಳೆದಾ= ಮರೆತು ಬಿಟ್ಟೆಯಾ, ಹಾ ಮಹಾದೇವ! ಏನು ಬಂದಿರಿಯೆಂಬ ಗುಣವಚನ+ ಅನುರಾಗವು ಸಾಲದೇ= ಅಷ್ಟಾದರೂ ಬೇಡವೇ? ಧನವೇನು ಫಲ ಕಕ್ಕುಲಿತೆ (ಪ್ರೀತಿ)+ ಎಮಗಿಲ್ಲೆಂದನು (ನಮ್ಮ ಬಗೆಗೆ ಇಲ್ಲ ಎಂದನು)+ ಆ ದ್ರೋಣ.
ಅರ್ಥ: ಏನು ಎಲವೋ! ದ್ರುಪದಾ! ಚಿಕ್ಕಂದಿನಲ್ಲಿ ನಾನು ನೀನು ಒಂದಾಗಿ ನನ್ನ ತಂದೆಯಿಂದ ಏನನ್ನು ಕಲಿತೆವು ಎಂಬುದನ್ನು ಮರೆತು ಬಿಟ್ಟೆಯಾ; ಹಾ ಮಹಾದೇವ! 'ಏನು ಬಂದಿರಿ'ಯೆಂಬ ಗುಣವಚನದ ಒಳ್ಳೆಯ ಮಾತು, ಪ್ರೀತಿ ಅಷ್ಟಾದರೂ ಬೇಡವೇ ನಿನಗೆ? ಧನವೇನು ಫಲ! ನಮ್ಮ ಬಗೆಗೆ ಆ ಕಕ್ಕುಲತೆ -ಪ್ರೀತಿ ನಿನಗೆ ಇಲ್ಲವಲ್ಲಾ ಎಂದನು ದ್ರೋಣ.
ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ |
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ || (೩೪)
ಪದವಿಭಾಗ-ಅರ್ಥ: ಸೂರಿಗಳಿಗೆ+ ಅತಿ ಮೂರ್ಖರಿಗೆ= ಪಂಡಿತರಿಗೂ ಮೂರ್ಖರಿಗೂ, ಗಂಭೀರರಿಗೆ ಭಂಡರಿಗೆ= ಗಂಭೀರವಾಗಿರುವವರಿಗೂ ಭಂಡರಿಗೂ, ವೇದಾಚಾರ ಸಂಯುಕ್ತರಿಗೆ+ ಅನಾಚಾರ ಪ್ರಸಕ್ತರಿಗೆ= ವೇದಾಚಾರ ಉಳ್ಳವರಿಗೆ ಮತ್ತು ಅನಾಚಾರ ನೆಡೆಸುವವರಿಗೆ, ಧೀರರಿಗೆ ಹಂದೆಗಳಿಗೆ= ಧೈರ್ಯಶಾಲಿಗಳಿಗೆ ಮತ್ತು ಹೇಡಿಗಳಿಗೂ ಹಂದೆಗಳಿಗೆ+ ಎತ್ತಣ ಸೇರುವೆಗಳೈ = ಹೇಗೆ ಹೊಂದಾಣಿಕೆಯಾಗುವುದು? ಭೂಪರಿಗೆ ಬಡಹಾರುವರಿಗೆ (ಬಡಬ್ರಾಹ್ಮಣರಿಗೆ)+ ಎತ್ತಣದು ಸಖತನವೆಂದನು+ ಆ ದ್ರುಪದ.
ಅರ್ಥ: ಪಂಡಿತರಿಗೂ ಮೂರ್ಖರಿಗೂ, ಗಂಭೀರವಾಗಿರುವವರಿಗೂ ಭಂಡರಿಗೂ, ವೇದಾಚಾರ ಉಳ್ಳವರಿಗೆ ಮತ್ತು ಅನಾಚಾರ ನೆಡೆಸುವವರಿಗೆ,ಧೈರ್ಯಶಾಲಿಗಳಿಗೆ ಮತ್ತು ಹೇಡಿಗಳಿಗೂ ಹೇಗೆ ಹೊಂದಾಣಿಕೆಯಾಗುವುದು? ಹಾಗೆಯೇ, ಭೂಪರಿಗೂ ಬಡಬ್ರಾಹ್ಮಣರಿಗೂ ಎಲ್ಲಿಯದು ಸಖತನವು, ಎಂದು ಆ ದ್ರುಪದ ತಿರಸ್ಕಾರದಿಂದ ಹೇಳಿದನು.
ಎಲವೋ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ |
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮ ಪಾದದಿ
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ || (೩೫)
ಪದವಿಭಾಗ-ಅರ್ಥ: ಎಲವೋ! ನಿನ್ನ+ ಆಸ್ಥಾನ ಸಹಿತ+ ಈ ಹೊಳಲ= ನಗರವನ್ನು, ಸುಡುವೆನು; ನಿನ್ನ ಸೀಳಿದು= ಸಿಗಿದು ಬಲಿಯ ಕೊಡುವೆನು ಭೂತಗಣಕೆ+ ಇದಿರಲ್ಲ ನೀನು+ ಎನಗೆ, ಕಲಿತ ವಿದ್ಯದ ಕೋಲ ಮಕ್ಕಳ= ಧನುರ್ಧರರ, ಕಳುಹಿ= ಇಲ್ಲಿಗೆ ಕಳುಹಿಸಿ ಕಟ್ಟಿಸಿ= ನಿನ್ನನ್ನು ಕಟ್ಟಿಹಾಕಿಸಿ, ವಾಮ ಪಾದದಿ ತಲೆಯನು ಒದೆವೆನು= ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ. ಮರೆಯದಿರು= ಈ ಶಪತವನ್ನು ಮರೆಯಬೇಡ, ನೀನು+ ಎಂದನು+ ಆ ದ್ರೋಣ.
ಅರ್ಥ: (ದ್ರೋಣನು ಕೋಪದಿಂದ,) ಎಲವೋ! ನಿನ್ನ ಆಸ್ಥಾನ ಸಹಿತವಾಗಿ ಈ ನಗರವನ್ನು ಸುಡಬಲ್ಲೆ; ನಿನ್ನನ್ನು ಸಿಗಿದು ಭೂತಗಣಕ್ಕೆ ಬಲಿಯ ಕೊಡಬಲ್ಲೆ, ನೀನು ನನಗೆ ಧನುರ್ವಿದ್ಯೆಯಲ್ಲಿ ಸರಿಸಾಟಿಯಲ್ಲ. ಧನುರ್ವಿದ್ಯೆಯನ್ನು ಕಲಿತ ಧನುರ್ಧರ ಮಕ್ಕಳನ್ನು ಇಲ್ಲಿಗೆ ಕಳುಹಿಸಿ ನಿನ್ನನ್ನು ಕಟ್ಟಿಹಾಕಿಸಿ ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ. ನೀನು ಈ ಶಪಥವನ್ನು ಮರೆಯಬೇಡ ಎಂದನು, ಆ ದ್ರೋಣ.

ಹಸ್ತಿನಾವತಿಗೆ ಬಂದು ದ್ರೋಣ ಗುರುವಾದ[ಸಂಪಾದಿಸಿ]

ಎಂದು ಭಾಷೆಯ ಮಾಡಿ ತನ್ನಯ
ನಂದನನೊಡಗೊಂಡು ಜನಪದ
ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ |
ಅಂದು ಸಕಲ ಕುಮಾರಕರು ನಲ
ವಿಂದ ನಗರಿಯ ಹೊರೆಗೆ ಗುರಿಗಳ
ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ || (೩೬)
ಪದವಿಭಾಗ-ಅರ್ಥ: ಎಂದು ಭಾಷೆಯ ಮಾಡಿ= ಪ್ರತಿಜ್ಞೆಮಾಡಿ, ತನ್ನಯ ನಂದನನ+ ಒಡಗೊಂಡು= ಜೊತೆಗೂಡಿಕೊಂಡು, ಜನಪದ ವೃಂದ ಹಲವನು ಕಳೆದು= ಅನೇಕ ರಾಜ್ಯಗಳನ್ನು ದಾಟಿ, ಬಂದನು ಹಸ್ತಿನಾಪುರಿಗೆ, ಅಂದು ಸಕಲ ಕುಮಾರಕರು= ಕೌರವ ಪಾಂಡವ ಕುಮಾರರು, ನಲವಿಂದ= ಸಂತೋಷದಿಂದ, ನಗರಿಯ ಹೊರೆಗೆ ಗುರಿಗಳ ಮುಂದುವರಿದು ಎಸುತಿರಲು= ಗುರಿಯಿಟ್ಟು ಬಾಣ ಬಿಡುತ್ತಿರುವುದನ್ನು, ಮುದದಲಿ= ಸಂತೋಷದಿಂದ ಕಂಡನು+ ಆ ದ್ರೋಣ
ಅರ್ಥ:ದ್ರೋಣನು ಹೀಗೆ ದ್ರುಪದನ ಆಸ್ಥಾನದಲ್ಲಿ ಪ್ರತಿಜ್ಞೆಮಾಡಿ, ತನ್ನ ಮಗನನ್ನು ಜೊತೆಗೂಡಿಕೊಂಡು, ಅನೇಕ ರಾಜ್ಯಗಳನ್ನು ದಾಟಿ ಹಸ್ತಿನಾಪುರಕ್ಕೆ ಬಂದನು. ಅಂದು ಸಕಲ ಕೌರವ ಪಾಂಡವ ಕುಮಾರರು ಸಂತೋಷದಿಂದ, ನಗರದ ಹೊರೆಗೆ ಗುರಿಯಿಟ್ಟು ಬಾಣ ಬಿಡುತ್ತಿರುವುದನ್ನು ದ್ರೋಣನು ಸಂತಸದಿಂದ ನೋಡಿದನು.
ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ ||
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು || (೩೭) ||
ಪದವಿಭಾಗ-ಅರ್ಥ: ಬೆರಸಿದನು= ಅವರೊಡನೆ ಸೇರಿಕೊಂಡು, ನೆರವಿಯನು= ಬಾಲಕರ ಗುಂಪನ್ನು, ಸಮೂಹ; ನೋಡುತ್ತಿರೆ, ಯುಧಿಷ್ಠಿರನೃಪನ ಹರಳುಂಗುರ ವಿಘಾತಿಯೊಳು+ ಉಗಿದು= ಬೆರಳಿಂದ ಕಳಚಿ, ಬಿದ್ದುದು+ ಅಗಾಧ ಕೂಪದಲಿ= ಆಳವಾದ ಬಾವಿಯಲ್ಲಿ, ನೆರೆದು ತಡಿಯಲಿ= ಎಲ್ಲರೂ ಒಟ್ಟಾಗಿ, ನಿಂದು= ನಿಂತು, ನೂರರು+ ಅವರು= ನೂರಾ ಮತ್ತು ಅವರು ಐವರು, ನಿರೀಕ್ಷಿಸಿ= ನೋಡಿ ಸಾಧ್ಯವಲ್ಲ+ ಎನುತಿರೆ= ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳತ್ತಿರುವಾಗ, ಮಗಂಗೆ ಮುನೀಂದ್ರನು+ ಎಮದನು= ದ್ರೋಣನು ಮಗನಿಗೆ ಬೇಗ ತೆಗೆಯೆಂದು.
ಅರ್ಥ: ದ್ರೋಣನು ಅವರೊಡನೆ ಸೇರಿಕೊಂಡನು. ಅವನು ಬಾಲಕರ ಗುಂಪನ್ನು ನೋಡುತ್ತಿರಲು, ಯುಧಿಷ್ಠಿರ ರಾಜಕುಮಾರನ ಹರಳು ಉಂಗುರವು ಹೊಡೆತದಲ್ಲಿ ಬೆರಳಿಂದ ಕಳಚಿ, ಆಳವಾದ ಬಾವಿಯಲ್ಲಿ ಬಿದ್ದಿತು. ಎಲ್ಲರೂ ನೂರು ಮತ್ತು ಅವರು ಐವರು,ಒಟ್ಟಾಗಿ ಬಾವಿಯ ದಡದಲ್ಲಿ ನಿಂತು ನೋಡಿ, ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿರುವಾಗ,ದ್ರೋಣನು ಮಗನಿಗೆ ಬೇಗ ತೆಗೆ ಎಂದನು.
ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣಿಯೆಚ್ಚು ಬಂಧದಲಿ ||
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಣಿಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನ ಮುದ್ರಿಕೆಯ || (೩೮) ||
ಪದವಿಭಾಗ-ಅರ್ಥ: ಸರಳ ತೊಡಚಿ= ಬಾಣವನ್ನು ಹೂಡಿ, ತದೀಯ= ಅದೇ, ಮಣಿ ಬಂಧುರದ= ಜೋಡಿಸಿದ ಮುದ್ರಿಕೆಗೆ+ ಎಚ್ಚು- ಬಾಣದಿಂದ ಹೊಡೆದು= ವಜ್ರದ ಮಣಿಯನ್ನು ಜೋಡಿಸಿದ ಉಂಗುರಕ್ಕೆ ಬಾಣದಿಂದ ಹೊಡೆದು, ಹಿಳುಕಿನ (ಹಿಳುಕು=1. ಬಾಣದ ಹಿಳುಕು. 2. ಒನಕೆಯ ತುದಿ, ಅಳವಡಿಸುವ ಲೋಹದ ಕಟ್ಟು ಅಥವಾ ಗೊಣಸು. 3. ಜೋಡಣೆಯ ಸ್ಥಾನ. 4. ಆಯುಧದ ಮೊನೆ - ತುದಿ.) ಬಾಣದ ಹಿಡಿಕೆಯ ತುದಿಗೆ, ಶಿರಕೆ= ಶರವ ಆ ಹಿಳುಕಿನಲಿ ಕಣಿಯೆಚ್ಚು ಬಂಧದಲಿ= ಒಂದಕ್ಕೊಂದು ಸೇರವಂತೆ, ಸರಳ ಸಂದರ್ಭದಲಿ= ಬಾಣದ ಸಂಧಿಯಲ್ಲಿ, ನಿಮಿಷಾಂತರಕೆ= ನಿಮಿಷ ನಿಮಿಷದಲ್ಲಿ, ಫಣಿಪನ ಹೆಡೆವಣಿಯನು+ ಉದ್ಧರಿಸುವಂತೆ+ ಇರೆ= ಹಾವಿನ ಹೆಡೆಮಣಿಯನ್ನು ಒಂದನ್ನೊಂದು ಕಾಪಾಡಲು ಕಚ್ಚಿದಂತೆ ಇರಲು, ತೆಗೆದು ಬಿಸುಟನು ರತುನ ಮುದ್ರಿಕೆಯ= ರತ್ನದ ಮುದ್ರಿಕೆಯನ್ನು ಬಾಣದ ಜೋಡಣೆಯ ಮೂಲಕ ಎಳೆದು ತೆಗೆದು ಮಕ್ಕಳ ಕಡೆ ಬಿಸುಟನು.
ಅರ್ಥ: ಅಶ್ವತ್ಥಾಮನು ಬಿಲ್ಲಿನಲ್ಲಿ ಬಾಣವನ್ನು ಹೂಡಿ, ವಜ್ರದ ಮಣಿಯನ್ನು ಜೋಡಿಸಿದ ಉಂಗುರಕ್ಕೆ ಬಾಣದಿಂದ ಹೊಡೆದು, ನಂತರ ಬಾಣದ ಹಿಡಿಕೆಯ ತುದಿಗೆ ಬಾಣವು ಒಂದಕ್ಕೊಂದು ಸೇರವಂತೆ, ಬಾಣದ ಹಿಡಿಕೆಯ ಸಂಧಿಯಲ್ಲಿ ನಿಮಿಷ ನಿಮಿಷದಲ್ಲಿ ಹಾವಿನ ಹೆಡೆಮಣಿಯನ್ನು ಒಂದನ್ನೊಂದು ಕಾಪಾಡಲು ಕಚ್ಚಿದಂತೆ ಇರುವಹಾಹಗೆ ಇರಲು ಆ ರತ್ನದ ಮುದ್ರಿಕೆಯನ್ನು ಬಾಣದ ಜೋಡಣೆಯ ಮೂಲಕ ಎಳೆದು ತೆಗೆದು ಮಕ್ಕಳ ಕಡೆ ಬಿಸುಟನು.
ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು ||
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗೆ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ || (೩೯) ||
ಪದವಿಭಾಗ-ಅರ್ಥ: ಕಂಡು ಬೆರಗಾದುದು ಕುಮಾರರ ತಂಡ= ಆ ಮಕ್ಕಳ ತಂಡ ಈ ಗುರಿಯ ಚಮತ್ಕಾರವನ್ನು ಕಂಡು ಬೆರಗಾಯಿತು. ತನತನಗೆ+ ಐದಿ= ತಾವು ತಾವೇ (ಮಾತನಾಡಿಕೊಂಡು) ಭೀಷ್ಮನನು+ ಅಂಡಲೆದುದು+ ಈ= ಭೀಷ್ಮನ ಬಳಿಹೋಗಿ ಬಹಳವಾಗಿ ಬೇಡಿಕೊಂಡರು; ಈ ಮುನಿಯನು+ ಈಗಲೆ ಸಂತವಿಡಿಯೆಂದು,= ಈ ಮುನಿಯನ್ನು ಈಗಲೇ ಕರೆಸಿ ಸಂತೈಸಿ ಇಟ್ಟುಕೊಳ್ಳಿ ಎಂದು; ಚಂಡ ಭುಜಬಲನು (ವೀರ) + ಅವರ ಕಾಣಿಸಿಕೊಂಡು= ವೀರನಾದ ಭೀಷ್ಮನು ಅವರನ್ನು ಕಂಡು, ಕೊಟ್ಟನು ಭೀಷ್ಮನು+ ಅವರಿಗೆ ಖಂಡ= ಹೇರಳವಾಗಿ, ವಿಭವವನು (ವೈಭವವನ್ನು- ಸಂಪತ್ತನ್ನು,)+ ಅತುಳ= ಮಹಾ ದೊಡ್ಡ, ಧನಪತಿಯಾದನು+ ಆ ದ್ರೋಣ .
ಅರ್ಥ: ಆ ಮಕ್ಕಳ ತಂಡ ಈ ಗುರಿಯ ಚಮತ್ಕಾರವನ್ನು ಕಂಡು ಬೆರಗಾಯಿತು. ತಾವು ತಾವೇ ಮಾತನಾಡಿಕೊಂಡು ಭೀಷ್ಮನ ಬಳಿಹೋಗಿ ಬಹಳವಾಗಿ ಬೇಡಿಕೊಂಡರು; ಈ ಮುನಿಯನ್ನು ಈಗಲೇ ಕರೆಸಿ ಸಂತೈಸಿ ಇಟ್ಟುಕೊಳ್ಳಿ ಎಂದು; ವೀರನಾದ ಭೀಷ್ಮನು ದ್ರೋಣನನ್ನು ಕಂಡು, ಅವರಿಗೆ ಹೇರಳವಾಗಿ ಸಂಪತ್ತನ್ನು ಕೊಟ್ಟನು. ಆ ದ್ರೋಣನು ಮಹಾಧನಪತಿಯಾದನು.
ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದ ದ್ರೋಣನ ಕೈಯಲಾ ಭೀಷ್ಮ |
ಗರುಡಿ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ || (೪೦)
ಪದವಿಭಾಗ-ಅರ್ಥ: ವರ= ಶುಭ ಮುಹೂರ್ತದೊಳು+ ಅವರ ನೂರು+ ಅರುವರನು= ನೂರು ಕೌರವರು ಐದು ಪಾಂಡವರು, ಒಬ್ಬ ದಾಸಿಪುತ್ರ ಒಟ್ಟು ನೂರಾ ಆರು ಬಾಲಕರನ್ನು, ಭೀಷ್ಮನು ದ್ರೋಣನಿಗೆ ವಹಿಸಿ ಕೊಟ್ಟನು. ಅವರನ್ನು ಶಸ್ತ್ರವಿದ್ಯಾಪರಿಣತರ ಮಾಡೆಂದ= ಮಾಡು+ ಎಂದ; ದ್ರೋಣನ ಕೈಯಲಿ+ ಆ ಭೀಷ್ಮ ಗರುಡಿ ಕಟ್ಟಿತು, ನೂರು ಯೋಜನವರೆಯ ವಿಸ್ತಾರದಲಿ, ಸಾವಿರ ಕುರಿಯ ಹೊಯ್ದರು= ಕತ್ತರಿಸಿದರು, ಪೂಜಿಸಿದರು ಆ ಚದುರಚಂಡಿಕೆಯ.
ಅರ್ಥ: ಶುಭ ಮುಹೂರ್ತದಲ್ಲಿ ಅವರ ನೂರಾ ಆರು ಬಾಲಕರನ್ನು ಭೀಷ್ಮನು ದ್ರೋಣನಿಗೆ ವಹಿಸಿ ಕೊಟ್ಟನು. ಅವರನ್ನು ಶಸ್ತ್ರವಿದ್ಯಾಪರಿಣತರನ್ನಾಗಿ ಮಾಡಿರಿ ಎಂದು ಹೇಳಿದನು. ದ್ರೋಣನ ಕೈಯಿಂದ ಆ (ಭೀಷ್ಮ-ಗರುಡಿ) ದೊಡ್ಡ ಶಸ್ತ್ರ ಅಭ್ಯಾಸದ ರಂಗ ಭೂಮಿ ಕಟ್ಟಲ್ಪತು. ಅದು ನೂರು ಯೋಜನವರೆಗಿನ ವಿಸ್ತಾರದಲ್ಲಿ ನಿರ್ಮಿಸಲಾಗಿತ್ತು. ಆರಂಬದಲ್ಲಿ ಆ ಚದುರಚಂಡಿಕೆಯನ್ನು ಸಾವಿರ ಕುರಿಯನ್ನು ಬಲಿಕೊಟ್ಟು ಪೂಜಿಸಿದರು .
ಗರುಡಿ ಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ |
ಬರುತಲಿದ್ದರು ಕೊಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ || (೪೧)
ಪದವಿಭಾಗ-ಅರ್ಥ:ಗರುಡಿ ಪೂಜಾ ವಿಭವ= ವೈಭವ, ಸಮನಂತರದಲಿ+ ಅನಿಬರು = ನಂತರದಲ್ಲಿ ಅವರೆಲ್ಲರೂ, ಸಮವ= ಶ್ರಮವ, ತೊಡಗಿದರು+ ಅರಸು ಮಕ್ಕಳು= ಶಸ್ತ್ರ ಅಭ್ಯಾಸದ ಶ್ರಮದಲ್ಲಿ ರಾಜ ಕುಮಾರರು ತೊಡಗಿಕೊಂಡರು. ಕೇಳಿದರು ನಾನಾ ದಿಗಂತದಲಿ= ನಾನಾ ದಿಕ್ಕಿನ ದೇಶದವರು ಇದರ ವಿಷಯ ಕೇಳಿ, ಬರುತಲಿದ್ದರು ಕೊಡೆ= ಮತ್ತೆ, ಹಸ್ತಿನಪುರಿಗೆ ವಿದ್ಯಾರ್ಥಿಗಳು ಪಾರ್ಥಿವ (=ಕ್ಷತ್ರಿಯ)+ ಅವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ.
ಅರ್ಥ: ಗರುಡಿ ಪೂಜೆಯ ವೈಭವದ ನಂತರದಲ್ಲಿ ಅವರೆಲ್ಲರೂ - ರಾಜ ಕುಮಾರರು ಶಸ್ತ್ರ ಅಭ್ಯಾಸದ ಶ್ರಮದಲ್ಲಿ ತೊಡಗಿಕೊಂಡರು. ನಾನಾ ದಿಕ್ಕಿನ ದೇಶದವರು ಇದರ ವಿಷಯ ಕೇಳಿ ಕ್ಷತ್ರಿಯ ಕುಮಾರರು ವಿದ್ಯಾರ್ಥಿಗಳಾಗಿ ಬರುತ್ತಿದ್ದರು, ಅವರು ಹಸ್ತಿನಾಪುರಿಗೆ ಬಂದು ಶಸ್ತ್ರ ಪಂಡಿತನಾದ ದ್ರೋಣನ್ನು ಕಂಡು ಶಿಷ್ಯರಾದರು.
ರಾಯ ಬಲ್ಲೈ ಮುನ್ನ ಶಿಶುವನು
ತಾಯಿ ಬಿಸುಟಳು ಗಂಗೆಯಲಿ ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ |
ಅಯತಾಕ್ಷನು ಪರಶುರಾಮನೊ
ಳಾಯುಧದ ಶ್ರಮಗಲಿತು ಬಳಿಕದು
ವಾಯುವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ || (೪೨) ||
ಪದವಿಭಾಗ-ಅರ್ಥ: ರಾಯ= ಜನಮೇಜಯ ರಾಜನೇ, ಬಲ್ಲೈ = ತಿಳಿದಿರುವೆ, ಮುನ್ನ ಶಿಶುವನುತಾಯಿ ಬಿಸುಟಳು ಗಂಗೆಯಲಿ= ಹಿಂದೆ ತಾಯಿ ಕುಂತಿ ಮಗನನ್ನು ಅಪವಾದಕ್ಕೆ ಹೆದರಿ ಗಂಗೆಯಲ್ಲಿ ಹಾಕಿದಳು. ಅವನು, ರಾಧೇಯನಾದನು, ರಾಧೆಯೆಂಬವಳು + ಒಲಿದು ಸಾಕಿದರೆ ಅಯತಾಕ್ಷನು= ವಿಶಾಲ ಕಣ್ಣಿನ ಕರ್ಣನು, ಪರಶುರಾಮನೊಳು ಆಯುಧದ ಶ್ರಮಗಲಿತು= ಶಸ್ತ್ರ ಅಭ್ಯಾಸಮಾಡಿ, ಬಳಿಕ+ ಅದು ವಾಯುವಾದೊಡೆ= ಅವನ ಶಾಪದಿಂದ ಗಾಳಿಯಂತೆ ನಿಷ್ಫಲವಾಯಿತು, ಅದರಿಂದ ಅವನು ಬಂದನು+ ಆ ಗಜಪುರಿಗೆ= ಹಸ್ತಿನಾಪುರಕ್ಕೆ, ಕಲಿಕರ್ಣ
ಅರ್ಥ:ಜನಮೇಜಯ ರಾಜನೇ, ನೀನು ತಿಳಿದಿರುವೆ, ಹಿಂದೆ ತಾಯಿ ಕುಂತಿ ಮಗನನ್ನು ಅಪವಾದಕ್ಕೆ ಹೆದರಿ ಗಂಗೆಯಲ್ಲಿ ಹಾಕಿದಳು. ಅವನು, ರಾಧೆಯೆಂಬವಳು ಪ್ರೀತಿಯಿಂದ ಸಾಕಿದರೆ ರಾಧೇಯನಾದನು. ವಿಶಾಲ ಕಣ್ಣಿನ ಕರ್ಣನು ಪರಶುರಾಮನ ಬಳಿ ಶಸ್ತ್ರ ಅಭ್ಯಾಸಮಾಡಿ, ಬಳಿಕ ಅದು ಅವನ ಶಾಪದಿಂದ ಗಾಳಿಯಂತೆ ನಿಷ್ಫಲವಾಯಿತು; ಅದರಿಂದ ಅವನು- ಕಲಿಕರ್ಣ ಆ ಹಸ್ತಿನಾಪುರಕ್ಕೆ ಬಂದನು.
ಬಂದು ಹಸ್ತಿನಪುರಿಗೆ ರಾಧಾ
ನಂದನನು ದುರ್ಯೋಧನನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ |
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳೆಂದ || (೪೩) ||
ಪದವಿಭಾಗ-ಅರ್ಥ: ಬಂದು ರಾಧಾನಂದನನು= ಹಸ್ತಿನಾಪುರಕ್ಕೆ ಕರ್ಣನು ಬಂದಾಗ, ದುರ್ಯೋಧನನನು+ ಐತಂದು ಕಂಡನು= ದುರ್ಯೋಧನನನು ಅದನ್ನು ತಿಳಿದು ಬಂದು ಕರ್ಣನನ್ನು ಕಂಡನು. ಕೌರವೇಶ್ವರನು+ ಇವರ= ದ್ರೋಣರ, ಕಾಣಿಸಿದ= ಕೌರವನು ಅವನನ್ನು ಕರೆದುಕೊಂಡು ಬಂದು ದ್ರೋಣರಿಗೆ ಪರಿಚಯ ಮಾಡಿಸಿದ. ಅಂದು ಮೊದಲಾಗಿ+ ಅವರ ಸಖ್ಯಕೆ ಸಂದ (ಬಿರುಕ)= ಸ್ನೇಹದಲ್ಲಿ ಬಿರುಕನ್ನು, ಕಾಣೆನು ಕರ್ಣ ಕುರುಪತಿಗೆ+ ಒಂದೆ ಜೀವನ+ ಒಂದೆ ಮನ, ಮತವು+ = ಅಭಿಪ್ರಾಯವು ಒಂದೆ, ಕೇಳೆಂದ
ಅರ್ಥ: ಹಸ್ತಿನಾಪುರಕ್ಕೆ ಕರ್ಣನು ಬಂದಾಗ, ದುರ್ಯೋಧನನನು ಅದನ್ನು ತಿಳಿದು ಬಂದು ಕರ್ಣನನ್ನು ಕಂಡನು. ಕೌರವನು ಅವನನ್ನು ಕರೆದುಕೊಂಡು ಬಂದು ದ್ರೋಣರಿಗೆ ಪರಿಚಯ ಮಾಡಿಸಿದ. ಅಂದು ಮೊದಲಾಗಿ ಅವರ ಸ್ನೇಹದಲ್ಲಿ ಬಿರುಕನ್ನು ಕಾಣೆನು; ಕರ್ಣ ಕುರುಪತಿಗೆ ಒಂದೇ ಬಗೆಯ ಜೀವನ, ಒಂದೆ ಮನ, ಅಭಿಪ್ರಾಯವು ಒಂದೆ, ಕೇಳು ರಾಜನೇ ಎಂದ ಮುನಿ.
ಬೇಟೆ ಕರ್ಣನ ಕೂಡೆ ಹಗಲಿರು
ಳಾಟ ಕರ್ಣನ ಕೂಡೆ ಷಡು ರಸ
ದೂಟ ಕರ್ಣನ ಕೂಡೆ ಶಾಸ್ತ್ರಾಭ್ಯಾಸವವ ಕೂಡೆ|
ತೋಟಿ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ || (೪೪)
ಪದವಿಭಾಗ-ಅರ್ಥ: ಬೇಟೆ ಕರ್ಣನ ಕೂಡೆ, ಹಗಲಿರುಳು+ ಆಟ ಕರ್ಣನ ಕೂಡೆ, ಷಡುರಸದೂಟ ಕರ್ಣನ ಕೂಡೆ, ಶಾಸ್ತ್ರಾಭ್ಯಾಸವು+ ಅವ ಕೂಡೆ, ತೋಟಿ= ಮನಸ್ಸಿನ ಹೊಯ್ದಾಟ, ಮನದಲಿ ನಗೆಯ ಮಧುರದ ನೋಟ ಕಣ್ಣಿನೊಳು+ ಉಳಿದವರ ಕೂಡಾಟಗಳು ತಾವಿಬ್ಬರು+ ಒಂದೆನಿಸಿದರು ಜಗವರಿಯೆ
ಅರ್ಥ:ಅಂದಿನಿಂದ ದುರ್ಯೋದನ ಮತ್ತು ಕರ್ಣನ ಸ್ನೇಹ ಗಾಢವಾಯಿತು. ಹೇಗಿತ್ತೆಂದರೆ- ಬೇಟೆ ಕರ್ಣನ ಕೂಡೆ, ಹಗಲಿರುಳು ಆಟ ಕರ್ಣನ ಕೂಡೆ, ಷಡ್ರಸದ ಊಟ ಕರ್ಣನ ಕೂಡೆ, ಶಾಸ್ತ್ರಾಭ್ಯಾಸವೂ ಅವನ ಕೂಡೆ, ಮನಸ್ಸಿನ ಹೊಯ್ದಾಟವಿದ್ದರೆ ಅದು ಮನದಲ್ಲಿ ಮಾತ್ರಾ ಇರುತ್ತಿತ್ತು. ಕಣ್ಣಿನಲ್ಲಿ ಪರಸ್ಪರ ನಗೆಯ ಮಧುರದ ನೋಟ, ಉಳಿದವರ ಕೂಡೆ ಆಟಗಳಲ್ಲಿ ತಾವಿಬ್ಬರೂ ಒಂದೆನಿಸಿ ಆಡಿದರು. ಇದನ್ನು ಜಗತ್ತೇ ಅರಿಯುವಂತೆ ಇತ್ತು.
ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ ||
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಾಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ || (೪೫) ||
ಪದವಿಭಾಗ-ಅರ್ಥ: ಸುರಗಿ= ಕಿರುಗತ್ತಿ, ಸಬಳ= ಈಟಿ, ಕಠಾರಿಯು ಉಬ್ಬಣ= ಕಬ್ಬಿಣದ ಕೋಲು, ಹರಿಗೆ= ಗುರಾಣಿ, ಹಿರಿಯು ಅಬ್ಬಣವು (ದೊಡ್ಡಮಂಡಿಗೆ)+ ಅಡಾಯುಧ, ಪರಿಘ, ಚಕ್ರ, ಮುಸುಂಡಿ, ತೋಮರ, ಭಿಂಡಿವಾಳ, ಚಯ, ಪರಶು=ಕೊಡಲಿ ಕಕ್ಕಡೆ= ಉರಿಯುವ ಪಂಜಿನ ಆಯಧ, ಮುಸಲ= ಒನಕೆ, ಹಲ = ನೇಗಿಲು, ಮುದ್ಗರ= (ಸುತ್ತಿಗೆ), ಧನುರ್=ಬಿಲ್ಲು, ದಂಡ= ದೊಣ್ಣೆ, ಆದಿ= ಮೊದಲಾದದ ಶಾಸ್ತ್ರ= ಆಯುಧ ಉತ್ಕರದಲಿ = ಪ್ರಯೋಗದಲ್ಲಿ,+ ಅನಿಬರು= ಇಬ್ಬರೂ. ಕುಶಲರಾದರು= ಪ್ರವೀನರಾದರು, ಮುನಿಯ ಗರುಡಿಯಲಿ.
ಅರ್ಥ:ಕಿರುಗತ್ತಿ,ಈಟಿ, ಕಠಾರಿಯು, ಕಬ್ಬಿಣದ ಕೋಲು, ಗುರಾಣಿ, ಹಿರಿಯು ಅಬ್ಬಣವು (ದೊಡ್ಡಮಂಡಿಗೆ), ಅಡಾಯುಧ, ಪರಿಘ, ಚಕ್ರ, ಮುಸುಂಡಿ, ತೋಮರ, ಭಿಂಡಿವಾಳ, ಚಯ, ಕೊಡಲಿ ಉರಿಯುವ ಪಂಜಿನ ಆಯಧ, ಒನಕೆ, ನೇಗಿಲು, ಸುತ್ತಿಗೆ, ಬಿಲ್ಲು,ದೊಣ್ಣೆ, ಮೊದಲಾದದ ಆಯುಧಗಳ ಪ್ರಯೋಗದಲ್ಲಿ, ಮುನಿಯ ಗರುಡಿಯಲ್ಲಿ ಇಬ್ಬರೂ ಪ್ರವೀನರಾದರು, .
ಜನಪ ಕೇಳೈ ಭೀಮ ದುರ್ಯೋ
ಧನರು ಗದೆಯಲಿ ಮಿಗಿಲು ಕರ್ಣಾ
ರ್ಜುನರು ಧನುವಿನಲಧಿಕರಾದರು ನೃಪ ಕುಮಾರರಲಿ |
ತನತನಗೆ ಸರ್ವಾಯುಧಂಗಳ
ಲನಿಬರರಿದರು ಕೊಡೆ ಗುರುವಿನ
ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ || (೪೬)

ಪದವಿಭಾಗ-ಅರ್ಥ: ಜನಪ= ರಾಜನೇ ಕೇಳೈ= ಕೇಳು, ಭೀಮ ದುರ್ಯೋಧನರು ಗದೆಯಲಿ ಮಿಗಿಲು= ಪ್ರವೀಣರಾದರು, ಕರ್ಣಾರ್ಜುನರು ಧನುವಿನ ಯುದ್ಧದಲ್ಲಿ ಅಧಿಕರಾದರು, ನೃಪ= ರಾಜ ಕುಮಾರರಲಿ, ತನತನಗೆ ಸರ್ವ+ ಆಯುಧಂಗಳಲಿ+ ಅನಿಬರು= ಎಲ್ಲರೂ, ಅರಿದರು=ಕಲಿತರು. ಕೂಡೆ= ವಿಶೇಷವಾಗಿ, ಗುರುವಿನ ಮನಕೆ ಹತ್ತೆಯವಾದನು + ಅರ್ಜುನನು+ ಅಸ್ತ್ರ ಶಿಕ್ಷೆಯಲಿ
ಅರ್ಥ: ರಾಜನೇ ಕೇಳು, ಭೀಮ ದುರ್ಯೋಧನರು ಗದೆಯ ಯುದ್ಧದಲ್ಲಿ ಪ್ರವೀಣರಾದರು, ಕರ್ಣಾರ್ಜುನರು ಧನುವಿನ ಯುದ್ಧದಲ್ಲಿ ಅಧಿಕರಾದರು, ರಾಜಕುಮಾರರಲ್ಲಿ ತಮ ತಮಗೆ ಇಷ್ಟವಾದುದಲ್ಲದೆ, ಸರ್ವ ಆಯುಧಂಗಳಲ್ಲಿಯೂ ಎಲ್ಲರೂ, ಯುದ್ಧಮಾಡುವುದನ್ನು ಕಲಿತರು. ಅಸ್ತ್ರ ಶಿಕ್ಷೆಯಲ್ಲಿ(ವಿದ್ಯೆಯಲ್ಲಿ) ವಿಶೇಷವಾಗಿ ಗುರುವಿನ ಮನಸ್ಸಿಗೆ ಮೆಚ್ಚಿಗೆಯವಾದನು ಅರ್ಜುನನು. [೧] [೨] [೩] [೪]

♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

 1. *ಕುಮಾರವ್ಯಾಸ ಭಾರತ
 2. * ಕುಮಾರವ್ಯಾಸಭಾರತ-ಸಟೀಕಾ
 3. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
 4. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
 5. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
 6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
 7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
 8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
 9. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
 10. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
 11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
 12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

 1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 2. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
 3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
 4. ದಾಸ ಸಾಹಿತ್ಯ ನಿಘಂಟು