<ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೧)[ಸಂಪಾದಿಸಿ]
ಆದಿಪರ್ವ - ಪೀಠಿಕಾ ಸಂಧಿ(ಮೊದಲನೆಯ ಸಂಧಿ:)[ಸಂಪಾದಿಸಿ]
- ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
- ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ
- ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್
- ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್
- ॐ
- ಶ್ರೀವನಿತೆಯರಸನೆ ವಿಮಲ ರಾ
- ಜೀವ ಪೀಠನ ಪಿತನೆ ಜಗಕತಿ
- ಪಾವನನೆ ಸನಕಾದಿ ಸಜ್ಜನನಿಕರ ದಾತಾರ||
- ರಾವಾಣಾಸುರ ಮಥನ ಶ್ರವಣ ಸು
- ಧಾ ವಿನೂತನ ಕಥನ ಕಾರಣ
- ಕಾವುದಾನತ ಜನವ ಗದುಗಿನ ವೀರನಾರಯಣ ||೧||
- ಪದ್ಯ-೧:ಪದವಿಭಾಗ-ಅರ್ಥ: ಶ್ರೀವನಿತೆಯ ಅರಸನೆ = ಲಕ್ಷ್ಮಿಯ ಪತಿಯೇ; ವಿಮಲ ರಾಜೀವ ಪೀಠನ ಪಿತನೆ =ಪರಿಶುದ್ಧ ಕಮಲದ ಪೀಠದ ಆಸನವುಳ್ಳ ಬ್ರಹ್ಮನ ತಂದೆಯೇ, ಜಗಕೆ ಅತಿಪಾವನನೆ= ಜಗತ್ತಿಗೆಲ್ಲಾ ಅತಿ=ಬಹಳ ಪಾವನನೆ= ಪವಿತ್ರನಾದವನೇ, ಸನಕ ಆದಿ ಸಜ್ಜನ ನಿಕರ ದಾತಾರ = ಸನಕ ಸುನಂದ ಸನತ್ಕುಮಾರ ಸನತ್ಸುಜಾತನೇ ಮೊದಲಾದ ಸಜ್ಜನ= ಸತ್ಪುರುಷರ, ನಿಕರ= ಸಮೂಹಕ್ಕೆಲ್ಲಾ, ದಾತಾರ= (ಆನಂದವನ್ನು, ಕೇಳಿದ್ದನ್ನು) ಕೊಡುವವನೇ, ರಾವಣ ಅಸುರ ಮಥನ= ರಾವಣ ರಾಕ್ಷಸನನ್ನು ಕೊಂದವನೇ, ಶ್ರವಣ ಸುಧಾ ವಿನೂತನ ಕಥನ ಕಾರಣ= ಕೇಳಲು ಅಮೃತದಂತೆ ಸವಿಯಾಗಿರುವ ಸದಾ ಹೊಸದಾಗಿರುವಂತಿರುವ ಕಥೆ- ಇತಿಹಾಸದ (ರಾಮಾಯಣದ) ಕಥೆಗೆ ಕಾರಣನಾದ, ನಾಯಕನೇ; ಕಾವುದು ಆನತ ಜನವ= ಕಾಪಾಡಬೇಕು ತಲೆಬಾಗಿ ನಮಸ್ಕರಿಸುತ್ತಿರುವ ಭಕ್ತಜನರನ್ನು, ಗದುಗಿನ ವೀರನಾರಯಣ= ಗದುಗಿನ ದೇವಾಲಯದಲ್ಲಿ ನೆಲಸಿರುವ ವೀರ ನಾರಯಣನೇ!
- ಪದ್ಯ-೧:ಅರ್ಥ: ಲಕ್ಷ್ಮಿಯ ಪತಿಯೇ, ಪರಿಶುದ್ಧ ಕಮಲದ ಪೀಠದ ಆಸನವುಳ್ಳ ಬ್ರಹ್ಮನ ತಂದೆಯೇ, ಜಗತ್ತಿಗೆಲ್ಲಾ ಬಹಳ ಪವಿತ್ರನಾದವನೇ, ಸನಕ ಸುನಂದ ಸನತ್ಕುಮಾರ ಸನತ್ಸುಜಾತನೇ ಮೊದಲಾದ ಸತ್ಪುರುಷರ ಸಮೂಹಕ್ಕೆಲ್ಲಾ, ಆನಂದವನ್ನು, ಕೇಳಿದ್ದನ್ನು ಕೊಡುವವನೇ, ರಾವಣನೆಂಬ ರಾಕ್ಷಸನನ್ನು ಕೊಂದವನೇ, ಕೇಳಲು ಅಮೃತದಂತೆ ಸವಿಯಾಗಿರುವ ಸದಾ ಹೊಸದಾಗಿರುವಂತಿರುವ ಇತಿಹಾಸ ರಾಮಾಯಣದ ಕಥೆಗೆ ಕಾರಣನಾದ, ನಾಯಕನೇ, ಶ್ರೀರಾಮನೇ, ತಲೆಬಾಗಿ ನಮಸ್ಕರಿಸುತ್ತಿರುವ ಭಕ್ತಜನರನ್ನು, ಗದುಗಿನ ದೇವಾಲಯದಲ್ಲಿ ನೆಲಸಿರುವ ವೀರ ನಾರಯಣನೇ ಕಾಪಾಡಬೇಕು!
- ಶರಣಸಂಗವ್ಯಸನ ಭುಜಗಾ
- ಭರಣನಮರ ಕಿರೀಟ ಮಂಡಿತ
- ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ ||
- ಕರಣನಿರ್ಮಲ ಭಜಕರಘ ಸಂ
- ಹರಣ ದಂತಿ ಚಮೂರು ಚರ್ಮಾಂ
- ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ||೨ ||
- ಪದ್ಯ-೧:ಪದವಿಭಾಗ-ಅರ್ಥ: ಶರಣಸಂಗವ್ಯಸನ = ಶರಣರ ಸಂಗ = ಭಕ್ತರ ಸನಿಹದಲ್ಲಿರವ ವ್ಯಸನ= ಚಿಂತೆ ಅಥವಾ ಅಪೇಕ್ಷೆಯುಳ್ಳವನು, ಭುಜಗಾಭರಣನು= ಭುಜಗ ಆಭರಣನು=ಸರ್ಪವನ್ನು ಆಭರಣವಾಗಿ ಕುತ್ತಿಗೆಯಲ್ಲಿ ಧರಿಸಿದವನು, ಅಮರ=ದೇವತೆಗಳ, ಕಿರೀಟ ಮಂಡಿತ= ಕಿರೀಟವುಳ್ಳ ತಲೆಯನ್ನು ಇಟ್ಟಿರುವ, ಚರಣ= ಪಾದಗಳುಳ್ಳವನು, ಚಾರುಚರಿತ್ರ = ಸುಂದರ- ಉತ್ತಮ ಚಾರಿತ್ರ್ಯ= ಗುಣಸ್ವಭಾವ ಉಳ್ಳವನು, ನಿರುಪಮ ಭಾಳಶಿಖಿನೇತ್ರ= ನಿರುಪಮ ಭಾಳ ಶಿಖಿ ನೇತ್ರ = ಅಸಾಧಾರಣವಾದ ಹಣೆಯಲ್ಲಿ ಅಗ್ನಿಯ ಕಣ್ಣುಳ್ಳವನು, ಕರಣ ನಿರ್ಮಲ = ಅಂತ್ಃಕರಣ - ಮನಸ್ಸು ಬುದ್ಧಿಗಳು ಶುದ್ಧವಾಗಿರುವ, ಭಜಕರ ಅಘ + ಭಜಿಸುತ್ತಿರುವ ಭಕ್ತರ ಪಾಪಗಳನ್ನು, ಸಂಹರಣ + ಸಂಹರಣ = ನಾಶಮಾಡುವವನು ಪರಿಹರಿಸುವವನು, ದಂತಿ ಚಮೂರು + ಆನೆ ಮತ್ತು ಕೃಷ್ಣಮೃಗವೆಂಬ ಜಿಂಕೆಗಳ, ಚರ್ಮಾಂಬರನೆ = ಚರ್ಮದ ಅಂಬರನೆ=ಅಂಬರವನ್ನು - ಬಟ್ಟೆಯನ್ನು ಧರಿಸಿದವನೆ, ಸಲಹುಗೆ = ಸಲಹಲಿ; ಭಕುತ ಜನರನು = ಭಕ್ತರಾದ ಜನರನ್ನು (ನಮ್ಮನ್ನು) ಪಾರ್ವತೀ ರಮಣ = ಪಾರ್ವತಿಯ ಪತಿಯಾದ ಸದಾಶಿವನು,
- ಪದ್ಯ-೧:ಅರ್ಥ: ಭಕ್ತರ ಸನಿಹದಲ್ಲಿರವ ಚಿಂತೆ ಅಥವಾ ಅಪೇಕ್ಷೆಯುಳ್ಳವನೂ, ಸರ್ಪವನ್ನು ಆಭರಣವಾಗಿ ಕುತ್ತಿಗೆಯಲ್ಲಿ ಧರಿಸಿದವನೂ, ದೇವತೆಗಳು ಕಿರೀಟವುಳ್ಳ ತಮ್ಮ ತಲೆಯನ್ನು ಇಟ್ಟಿರುವ ಪಾದಗಳುಳ್ಳವನೂ, ಉತ್ತಮ ಗುಣಸ್ವಭಾವ ಉಳ್ಳವನೂ, ಹಣೆಯಲ್ಲಿ ಅಸಾಧಾರಣವಾದ ಅಗ್ನಿಯ ಕಣ್ಣುಳ್ಳವನೂ, ಮನಸ್ಸು ಬುದ್ಧಿಗಳು ಶುದ್ಧವಾಗಿರುವ, ಭಜಿಸುತ್ತಿರುವ ಭಕ್ತರ ಪಾಪಗಳನ್ನು ಪರಿಹರಿಸುವವನೂ, ಮತ್ತು ಆನೆ ಮತ್ತು ಕೃಷ್ಣಮೃಗವೆಂಬ ಜಿಂಕೆಗಳ ಚರ್ಮದ ಬಟ್ಟೆಯನ್ನು ಧರಿಸಿದವನೂ ಆದ, ಪಾರ್ವತಿಯ ಪತಿಯಾದ ಸದಾಶಿವನು ಭಕ್ತರಾದ ಜನರನ್ನು (ನಮ್ಮನ್ನು) ಸಲಹಲಿ.
- ವರಮಣಿಗಳಿಂದೆಸೆವ ಮೌಳಿಯ
- ಸರಸಿಜಾರಿಯ ಕಿರಣದೋಳಿಯ
- ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ ||
- ಕರಿ ನಿಭಾಕೃತಿಯೆನಿಪ ವದನದ
- ಕರದ ಪಾಶದ ಮೋದಕದ ವಿ
- ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||೩||
- ಪದ್ಯ-೧:ಪದವಿಭಾಗ-ಅರ್ಥ: ವರಮಣಿಗಳಿಂದ ಎಸೆವ=ಶ್ರೇಷ್ಠವಾದ ಮಣಿಗಳಿಂದ ಪ್ರಕಾಶಿಸುವ ಮೌಳಿಯ= ಕಿರೀಟದ, ಸರಸಿಜ ಅರಿಯ= ಕಮಲದ ಶತ್ರು- ಚಂದ್ರನ, ಕಿರಣದ ಓಳಿಯ= ಕಿರಣಗಳ ಸಮೂಹದಿಂದ ಕೂಡಿ ಪ್ರಕಾಶಿಸುವ, ವಿರಚಿಸಿದ ಸಿಂಧೂರ = ಹಚ್ಚಿರುವ ಕುಂಕುಮ ಅಥವಾ ಗಂಧದ ತಿಲಕವು ಭಾಳದಿ = ಹಣೆಯ ಮೇಲೆ; ಕುಣಿವ ಕುಂತಳದ = ನರ್ತಿಸುತ್ತಿರುವ ಮುಂಗುರುಳುಳ್ಳ, ಕರಿ= ಆನೆಯ, ನಿಭಾಕೃತಿ ಯೆನಿಪ=ವರ್ತನೆ ಹೊಲಿಕೆಯುಳ್ಳ (ಪ್ರೊ. ಜಿ. ವೆಂಕಟಸುಬ್ಬಯ್ಯ ಇಂಗ್ಲಿಷ್-ಕನ್ನಡ ನಿಘಂಟು:1) ವರ್ತನೆ, ನಡತೆ 2) ವದನದ = ಮುಖದ, ಕರದ= ಕೈಯಲ್ಲಿ ಹಿಡಿದಿರುವ, ಪಾಶದ ಮೋದಕದ= ಪಾಶವನ್ನೂ ಮೋದಕವನ್ನೂ, ವಿಸ್ತರದ ಗಣಪತಿ = ಇವುಗಳಿಂದ ಒಪ್ಪುವ ವಿನಾಯಕನೇ, ಮಾಡು ಎಮಗೆ = ನಮಗೆ ಮಾಡು(ಎಂದು ಪ್ರಾರ್ಥಿಸುತ್ತೇನೆ.) ನಿರ್ವಿಘ್ನದಾಯಕವ = ನಮಗೆ ವಿಘ್ನವಿಲ್ಲದಂತೆ
- ತಾತ್ಪರ್ಯ:ಚಂದ್ರನ ಕಿರಣಗಳಾದ ಬೆಳದಿಂಗಳಂತೆ ಪ್ರಕಾಶಿಸುವ ಶ್ರೇಷ್ಠವಾದ ಮಣಿಗಳ ಕಿರೀಟಹೊಂದಿರುವ, ಹಣೆಯ ಮೇಲೆ ಕುಂಕುಮ ಮತ್ತು ಗಂಧದ ತಿಲಕವನ್ನು ಹಚ್ಚಿರುವ, ನರ್ತಿಸುತ್ತಿರುವ ಮುಂಗುರುಳುಳ್ಳ, ಆನೆಯ ಹೊಲಿಕೆಯುಳ್ಳ ಮುಖದ, ಕೈಯಲ್ಲಿ ಪಾಶವನ್ನೂ ಮೋದಕವನ್ನೂ ಹಿಡಿದಿರುವ, ಇವುಗಳಿಂದ ಒಪ್ಪುವ- ಚಂದವಾಗಿ ಕಾಣುವ ವಿನಾಯಕನೇ, ನಮಗೆ ವಿಘ್ನವಿಲ್ಲದಂತೆ ಮಾಡು ಎಂದು ಪ್ರಾರ್ಥಿಸುತ್ತೇನೆ.
- ಗಜಮುಖನೆ ಮೆರೆವೇಕದಂತನೆ
- ನಿಜಗುಣಾನ್ವಿತ ಪರಶುಧಾರನೆ
- ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ ||
- ಅಜನು ಹರಿ ರುದ್ರಾದಿಗಳು ನೆರೆ
- ಭಜಿಸುತಿಹರನವರತ ನಿನ್ನನು
- ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ || ೪ ||
- ಪದ್ಯ-೧:ಪದವಿಭಾಗ-ಅರ್ಥ: ಗಜಮುಖನೆ ಮೆರೆವ ಏಕದಂತನೆ = ಗಜಮುಖನೇ! ಪ್ರಸಿದ್ಧನಾದ ಏಕದಂತನೆ* (ಒಂದು ದಂತದವನೇ) ನಿಜಗುಣ ಅನ್ವಿತ (ಪ್ರೊ. ಜಿ. ವೆಂ:ಒಡಗೂಡಿದ) = ಆತ್ಮಗುಣ ಸ್ವರೂಪನಾಗಿದ್ದು, ಪರಶು+ಧಾರನೆ= ಕೊಡಲಿಯನ್ನು ಹಿಡಿದವನೇ, ರಜತ ಗಿರಿಗೆ = ಬೀಳಿಯ ಹಿಮದ ಪರ್ವತಕ್ಕೆ, ಒಡೆಯನ ಕುಮಾರನೆ =ಒಡೆಯನಾದ ಶಿವನಮಗನೇ, ವಿದ್ಯೆವಾರಿಧಿಯೆ =(ವಾರಿಧಿ ಸಮುದ್ರ, ಸಾಗರ) ವಿದ್ಯೆಯ ಸಮುದ್ರ ಸ್ವರೂಪನೆ, ಅಜನು= ಬ್ರಹ್ಮನು, ಹರಿ = ವಿಷ್ಣುವು,ರುದ್ರ ಆದಿಗಳು = ರುದ್ರ ಮೊದಲಾದವರು, ನೆರೆ = ಬಹಳವಾಗಿ, ಭಜಿಸುತಿಹರು = ಭಜಿಸುತ್ತಿದ್ದಾರೆ, ಅನವರತ = ಸದಾಕಾಲ, ನಿನ್ನನು = ನಿನ್ನನ್ನು, ತ್ರಿಜಗ ವಂದಿತ = ಮೂರು ಲೋಕಗಳಿಂದಲೂ ನಮಸ್ಕರಿಸಲ್ಪಡುವ, ಗಣಪ = ಗಣಪತಿಯೇ ಮಾಳ್ಪುದು = ಮಾಡುವುದು ಮಾಡಬೇಕು, ಮತಿಗೆ ಮಂಗಳವ = ಬುದ್ಧಿಗೆ, ಮಂಗಳವನ್ನು, ಶುಭವನ್ನು.
- ಗಣಪತಿಗೆ ಏಕದಂತನೆಂದು ಹೆಸರು: ಗಣಪತಿ ಎಡವಿ ಬಿದ್ದಾಗ ಚಂದ್ರನು ನಕ್ಕನು; ಅದಕ್ಕೆ ಗಣಪತಿಯು ತನ್ನ ಒಂದು ದಂತವನ್ನು ಮುರಿದು ಚಂದ್ರನಿಗೆ ಹೊಡೆದನು ಹಾಗಾಗಿ ಚಂದ್ರನು ಮುಕ್ಕಾದನು- ಇವನು ಏಕದಂತನಾದನು- ಕಥೆ.
- ಪದ್ಯ-೧:ಅರ್ಥ:ಗಜಮುಖನೇ! ಪ್ರಸಿದ್ಧನಾದ ಏಕದಂತನೆ* ಆತ್ಮಗುಣ ಸ್ವರೂಪನಾಗಿರುವವನೇ, ಕೊಡಲಿಯನ್ನು ಹಿಡಿದವನೇ, ಹಿಮಾಲಯಕ್ಕೆ ಒಡೆಯನಾದ ಶಿವನ ಮಗನೇ, ವಿದ್ಯೆಯ ಸಾಗರ ಸ್ವರೂಪನೇ, ಬ್ರಹ್ಮ, ವಿಷ್ಣು, ರುದ್ರ ಮೊದಲಾದವರು, ಬಹಳವಾಗಿ ನಿನ್ನನ್ನು ಸದಾಕಾಲ ಭಜಿಸುತ್ತಿದ್ದಾರೆ, ಮೂರು ಲೋಕಗಳಿಂದಲೂ ನಮಸ್ಕರಿಸಲ್ಪಡುವ, ಗಣಪತಿಯೇ ನಮ್ಮ ಬುದ್ಧಿಗೆ ಶುಭವನ್ನು ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ.
- ವಾರಿಜಾಸನೆ ಸಕಲಶಾಸ್ತ್ರ ವಿ
- ಚಾರದುದ್ಭವೆ ವಚನರಚನೋ
- ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ ||
- ಶೌರಿ ಸುರಪತಿ ಸಕಲ ಮುನಿಜನ
- ಸೂರಿಗಳಿಗನುಪಮದ ಯುಕುತಿಯೆ
- ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ || ೫ ||
- ಪದ್ಯ-೧:ಪದವಿಭಾಗ-ಅರ್ಥ: ವಾರಿಜಾಸನೆ ಸಕಲಶಾಸ್ತ್ರ ವಿಚಾರದ ಉದ್ಭವೆ = ವಾರಿಜ-ಕಮಲ, ಕಮಲವನ್ನು ಆಸನವಾಗಿ ಉಳ್ಳವಳೇ, ವಚನರಚನ =ಶಬ್ದ ಪ್ರಯೋಗದ, ಕಾವ್ಯರಚನೆ ಮಾಡುವ ಕವಿಗಳ ಸಾಮರ್ಥ್ಯವನ್ನು, ಉದ್ಧಾರೆ = ಕಾಪಾಡುವವಳೇ, ಶ್ರುತಿ ಪೌರಾಣದ ಆಗಮ= ವೇದ, ಪುರಾಣ, ಆಗಮ ( ವೇದದ ಒಂದು ಅಂಗ, ವಿಧಿ) ಇವುಗಳ ಸಿದ್ದಿದಾಯಕಿಯೆ = ಸಿದ್ಧಿಯನ್ನು ಕೊಡುವವಳೇ, ಶೌರಿ (ಶೂರನ ಮಗ ಶೌರಿ-ಕೃಷ್ಣ) ಸುರಪತಿ ಸಕಲ ಮುನಿಜನ = ವಿಷ್ಣು, ಇಂದ್ರ, ಎಲ್ಲಾ ಮುನಿಗಳ ಮತ್ತು, ಸೂರಿಗಳಿಗೆ = ವಿದ್ವಾಂಸರಿಗೆ, ಅನುಪಮದ = ಶ್ರೇಷ್ಠವಾದ ಯುಕುತಿಯೆ = ಯುಕ್ತಿಯನ್ನು - ಅರಿಯುವ ಶಕ್ತಿಯಾದ ಜ್ಞಾನ ಸ್ವರೂಪಳೆ, ಶಾರದೆಯೆ ನರ್ತಿಸುಗೆ ನಲಿದು ಒಲಿದು= ಶಾರದಾಮಾತೆಯೆ ಆನಂದದಿಂದ ನನಗೆ ಒಲಿದು - ಪ್ರೀತಿಸಿ ನರ್ತಿಸು= ಭಾಷೆಯಯ ಸೌಂದರ್ಯವನ್ನು ತೋರಿಸು, ಎನ್ನ ಜಿಹ್ವೆಯಲಿ = ನನ್ನ ನಾಲಿಗೆಯಲ್ಲಿ.
- ಪದ್ಯ-೧:ಅರ್ಥ: ಕಮಲವನ್ನು ಆಸನವಾಗಿ ಉಳ್ಳವಳೇ, ಕಾವ್ಯರಚನೆ ಮಾಡುವ ಕವಿಗಳ ಸಾಮರ್ಥ್ಯವನ್ನು ಉತ್ತಮಪಡಿಸಿ ಕಾಪಾಡುವವಳೇ, ವೇದ, ಪುರಾಣ, ಆಗಮ ಇವುಗಳ ಸಿದ್ಧಿಯನ್ನು ಕೊಡುವವಳೇ, ವಿಷ್ಣು, ಇಂದ್ರ, ಎಲ್ಲಾ ಮುನಿಗಳು ಮತ್ತು ವಿದ್ವಾಂಸರಿಗೆ ಶ್ರೇಷ್ಠವಾದ ಯುಕ್ತಿಯ, ಅರಿಯುವ ಶಕ್ತಿಯಾದ ಜ್ಞಾನಸ್ವರೂಪಳೇ, ಶಾರದಾಮಾತೆಯೆ ಆನಂದದಿಂದ ನನಗೆ ಒಲಿದು - ಪ್ರೀತಿಸಿ ನನ್ನ ನಾಲಿಗೆಯಲ್ಲಿ ಭಾಷೆಯ ಸೌಂದರ್ಯವನ್ನು ತೋರಿಸು.
- ಆದಿ ನಾರಾಯಣಿ ಪರಾಯಣಿ
- ನಾದಮಯೆ ಗಜಲಕ್ಷ್ಮಿ ಸತ್ವಗು
- ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ ||
- ವೇದಮಾತೆಯೆ ವಿಶ್ವತೋಮುಖೆ
- ಯೈದು ಭೂತಾಧಾರಿಯೆನಿಪೀ
- ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ || ೬ ||
- ಪದ್ಯ-೧:ಪದವಿಭಾಗ-ಅರ್ಥ: ಆದಿ ನಾರಾಯಣಿ = ಆದಿದೇವತೆಯಾದ ನಾರಾಯಣನ ಸಹೊದರಿಯೇ, ಪರಾಯಣಿ = ಪರಿಪೂರ್ಣಳೇ ನಾದಮಯೆ = ನಾದ ಸ್ವರೂಪಳೇ, ಗಜಲಕ್ಷ್ಮಿ= ಆನೆಯ ಬಳಿಇರುವ ಗಜಲಕ್ಷ್ಮಿಯೇ, ಸತ್ವಗುಣ ಅಧಿದೇವತೆ = ಸತ್ವಗುಣಕ್ಕೆ ಅದಿದೇವತೆಯೇ, ಅಮರ ವಂದಿತ ಪಾದಪಂಕರುಹೆ (ಪಂಕ ರುಹ -ಕೆಸರಿನಲ್ಲಿ ಹುಟ್ಟಿದ್ದು- ಪಂಕಜ- ಕಮಲ)= ದೇವತೆಗಳು ನಮಿಸುವ ಕಮಲದಂತಿರುವ ಪಾದ ಉಳ್ಳವಳೇ, ವೇದಮಾತೆಯೆ = ವೇದಗಳಿಗೆ ಮಾತೃಸ್ವರೂಪಳೇ, ವಿಶ್ವತೋಮುಖೆ= ವಿಶ್ವವೇ ಮುಖವಾಗಿರುವವಳೇ, ಯೈದು ಭೂತಾಧಾರಿಯೆನಿಪೀ= ಐದು ಭೂತ ಆಧಾರೆ ಎನಿಪ ಈ = ಪಂಚ ಭೂತಗಳಿಗೆ- ಭೂಮಿ,ಜಲ, ವಾಯು,ಅಗ್ನಿ ಆಕಾಶಗಳಿಗೆ ಆಧಾರಳಾಗಿರುವ, ದ್ವಾದಶಾತ್ಮ ಜ್ಯೋತಿರೂಪಿಯೆ = ದ್ವಾದಶ ಸೂರ್ಯರ - ದ್ವಾದಶಾದಿತ್ಯರ ಅತ್ಮ ರೂಪಳೆ, ನಾದೆ ಶಾರದೆಯೆ = ನಾದಸ್ವರೂಪಳೇ ಶಾರದೆಯೇ ನನಗೆ ಪ್ರಸನ್ನಳಾಗು.
- ಪದ್ಯ-೧:ಅರ್ಥ:ಆದಿದೇವತೆಯಾದ ನಾರಾಯಣನ ಸಹೊದರಿಯೇ, ಪರಿಪೂರ್ಣಳೇ, ನಾದ ಸ್ವರೂಪಳೇ, ಆನೆಯ ಬಳಿಇರುವ ಗಜಲಕ್ಷ್ಮಿಯೇ, ಸತ್ವಗುಣಕ್ಕೆ ಅದಿದೇವತೆಯೇ, ದೇವತೆಗಳು ನಮಿಸುವ ಕಮಲದಂತಿರುವ ಪಾದ ಉಳ್ಳವಳೇ, ವೇದಗಳಿಗೆ ಮಾತೃಸ್ವರೂಪಳೇ, ವಿಶ್ವವೇ ಮುಖವಾಗಿರುವವಳೇ, ಪಂಚ ಭೂತಗಳಿಗೆ- ಭೂಮಿ,ಜಲ, ವಾಯು,ಅಗ್ನಿ ಆಕಾಶಗಳಿಗೆ ಆಧಾರವಾಗಿರುವ ದ್ವಾದಶ ಸೂರ್ಯರ ಅತ್ಮ ರೂಪಳೆ, ನಾದಸ್ವರೂಪಳೇ ಶಾರದೆಯೇ ನನಗೆ ಪ್ರಸನ್ನಳಾಗು.
- ವೀರನಾರಾಯಣನೆ ಕವಿ ಲಿಪಿ
- ಕಾರ ಕುವರವ್ಯಾಸ ಕೇಳುವ
- ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು ||
- ಚಾರುಕವಿತೆಯ ಬಳಕೆಯಲ್ಲ ವಿ
- ಚಾರಿಸುವೊಡಳವಲ್ಲ ಚಿತ್ತವ
- ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ || ೭ ||
- ಪದ್ಯ-೧:ಪದವಿಭಾಗ-ಅರ್ಥ: ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ = ಈ ಕಾವ್ಯವನ್ನು ರಚಿಸಿದ ಕವಿಯು ಗದುಗಿನ ವೀರನಾರಾಯಣನು, ಅದನ್ನು ಬರೆದ ಕುಮಾರವ್ಯಾಸನು ಕೇವಲ ಲಿಪಿಕಾರ. ಕೇಳುವ ಸೂರಿಗಳು {ಸೂರಿ ಹೆಸರುಪದ(ಸಂ) ಪಂಡಿತ, ವಿದ್ವಾಂಸ} = ಅದನ್ನು ಆಲಿಸುವ ಪಂಡಿತರು, ಸನಕಾದಿಗಳು ಜಂಗಮ (ನೆಡೆದಾಡುವ) ಜನಾರ್ದನರು = ದಿವ್ಯಜ್ಷಾನಿಗಳಾದ ಸನಕಾದಿ ಮುನಿಗಳಿಗೂ ಭೂಮಿಯಲ್ಲಿ ವಾಸಿಸುವ ಜನಾರಧನರಿಗೆ ಸಮಾನವಾದ ಭಕ್ತರು, ಚಾರುಕವಿತೆಯ ಬಳಕೆಯಲ್ಲ = ಇದು ಕೇವಲ ಕಾವ್ಯಲಕ್ಷಣಗಳನ್ನು ಬಳಸಿದ ಸುಂದರ ಕಾವ್ಯವಲ್ಲ, ವಿಚಾರಿಸುವೊಡೆ ಅಳವಲ್ಲ = ವಿಚಾರ ಮಾಡಿ ನೋಡಿದರೆ ಇದು ಗಹನವಾದುದು ಸುಲಭಕ್ಕೆ ತಿಳಿಯದು (ಶೃತ್ವಾಪ್ಯೇನಂ ವೇದನೈವ ಕಶ್ಚಿತ್ - ಗೀತೆಯ್ಲಿ ಹೇಳಿದಂತೆ.) ಚಿತ್ತ + ಅವಧಾರು; ಹೋ ಸರ್ವಜ್ಞರಾದರು = ಹೋ- ಗಮನಕೊಡಿ, ಪಂಡಿತರು ಮನಸ್ಸಿಟ್ಟು ಕೇಳಿರಿ, ಸಲುಗೆ ಬಿನ್ನಪವ = (ನನ್ನ) ವಿಜ್ಞಾಪನೆಯು (ತಮಗೆ) ಸಲ್ಲಲಿ.
- ಪದ್ಯ-೧:ಅರ್ಥ: ಗದುಗಿನ ವೀರನಾರಾಯಣನೆ ಈ ಕಾವ್ಯವನ್ನು ರಚಿಸಿದ ಕವಿಯು. ಅದನ್ನು ಬರೆದ ಕುಮಾರವ್ಯಾಸನು ಕೇವಲ ಲಿಪಿಕಾರ. ಅದನ್ನು ಆಲಿಸುವ ಪಂಡಿತರು, ದಿವ್ಯಜ್ಞಾನಿಗಳಾದ ಸನಕಾದಿ ಮುನಿಗಳಿಗೂ ಜನಾರ್ಧಧನರಿಗೆ ಸಮಾನವಾದ ಭೂಮಿಯಲ್ಲಿ ವಾಸಿಸುವ ಭಕ್ತರು, ಚಾರುಕವಿತೆಯ ಬಳಕೆಯಲ್ಲ = ಇದು ಕೇವಲ ಕಾವ್ಯಲಕ್ಷಣಗಳನ್ನು ಬಳಸಿದ ಸುಂದರ ಕಾವ್ಯವಲ್ಲ, ವಿಚಾರಿಸುವೊಡೆ ಅಳವಲ್ಲ = ವಿಚಾರ ಮಾಡಿ ನೋಡಿದರೆ ಇದು ಗಹನವಾದುದು ಸುಲಭಕ್ಕೆ ತಿಳಿಯದು. ಚಿತ್ತ + ಅವಧಾರು ಹೋ ಸರ್ವಜ್ಞರಾದರು = ಹೋ- ಗಮನಕೊಡಿ, ಪಂಡಿತರು ಮನಸ್ಸಿಟ್ಟು ಕೇಳಿರಿ, ಸಲುಗೆ ಬಿನ್ನಪವ = (ನನ್ನ) ವಿಜ್ಞಾಪನೆಯು (ತಮಗೆ) ಸಲ್ಲಲಿ.
- ಶ್ರೀಮದಮರಾಧೀಶ ನತಪದ
- ತಾಮರಸ ಘನವಿಪುಳ ನಿರ್ಮಲ
- ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ ||
- ಶ್ರೀಮದೂರ್ಜಿತ ಧಾಮ ಸುದಯಾ
- ನಾಮನಾಹವ ಭೀಮ ರಘುಕುಲ
- ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ || ೮ ||
- ಪದ್ಯ-೧:ಪದವಿಭಾಗ-ಅರ್ಥ: ಶ್ರೀಮತ್ ಅಮರಾಧೀಶ = ಪೂಜ್ಯನಾದ ದೇವತೆಗಳ ಒಡೆಯನು, ನತಪದ ತಾಮರಸ (ಕಮಲ)= ನಮಿಸಿದ ಪಾದ ಕಮಲದವನೂ, ಘನವಿಪುಳ ನಿರ್ಮಲ= ಶ್ರೇಷ್ಠ ಬಹಳ ಶುದ್ಧನಾದವನೂ, 'ರಾಮನು'- ಅನುಪಮ ಮಹಿಮ ಸನ್ಮುನಿ (ಸತ್ ಮುನಿ) ವಿನುತ=ಶ್ರೇಷ್ಠರಾದ ಮುನಿಗಳಿಂದ ಹೊಗಳಲ್ಪಟ್ಟ, ಜಗಭರಿತ = ಜಗತ್ತನ್ನು ಆವರಿಸಿರುವವನೂ, ಶ್ರೀಮದೂರ್ಜಿತ ಧಾಮ (ವಾಸಿ) = ವೈಕುಂಠದಲ್ಲಿ ವಾಸಿಸುವವನೂ, ಸುದಯಾ ನಾಮನು ಆಹವ ಭೀಮ = ಉತ್ತಮ ದಯಾಶೀಲನೆಂಬ ಹೆಸರುಳ್ಳವನೂ, ಯುದ್ಧದಲ್ಲಿ ಭಯಂಕರನೂ,, ರಘುಕುಲರಾಮ = ರಘುಲದಲ್ಲಿ ಜನಿಸಿದ ರಾಮನೂ, (ಆದ) ರಕ್ಷಿಸು ವೂಲಿದು ಗದುಗಿನ ವೀರನಾರಯಣ = ಆದ ಗದುಗಿನ ವೀರ ನಾರಾಯಣನೇ ಒಲಿದು -ಪ್ರೀತಿಯಿಂದ ರಕ್ಷಿಸು= (ನನ್ನನ್ನು) ಕಾಪಾಡು.
- ಪದ್ಯ-೧:ಅರ್ಥ: ಪೂಜ್ಯನಾದ ದೇವತೆಗಳ ಒಡೆಯ ಇಂದ್ರನು ನಮಿಸಿದ ಪಾದ ಕಮಲದವನೂ, ಶ್ರೇಷ್ಠನೂ ಬಹಳ ಶುದ್ಧನಾದವನೂ,(ಆದ'ರಾಮನ') ಶ್ರೇಷ್ಠರಾದ ಮುನಿಗಳಿಂದ ಹೊಗಳಲ್ಪಟ್ಟವನೂ, ಜಗತ್ತನ್ನು ಆವರಿಸಿರುವವನೂ, ವೈಕುಂಠದಲ್ಲಿ ವಾಸಿಸುವವನೂ, ಉತ್ತಮ ದಯಾಶೀಲನೆಂಬ ಹೆಸರುಳ್ಳವನೂ, ಯುದ್ಧದಲ್ಲಿ ಭಯಂಕರನೂ, ರಘುಕುಲದಲ್ಲಿ ಜನಿಸಿದ ರಾಮನೂ, ಆದ ಗದುಗಿನ ವೀರ ನಾರಾಯಣನೇ ಒಲಿದು -ಪ್ರೀತಿಯಿಂದ ರಕ್ಷಿಸು= (ನನ್ನನ್ನು) ಕಾಪಾಡು.
- ಶರಧಿಸುತೆ ಸನಕಾದಿ ವಂದಿತೆ
- ಸುರನರೋರಗ ಮಾತೆ ಸುಜನರ
- ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ ||
- ಪರಮ ಕರುಣಾ ಸಿಂಧು ಪಾವನ
- ಚರಿತೆ ಪದ್ಮಜ ಮುಖ್ಯ ಸಕಲಾ
- ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ || ೯ ||
- ಪದ್ಯ-೧:ಪದವಿಭಾಗ-ಅರ್ಥ: ಶರಧಿಸುತೆ= ಸಮುದ್ರದ ಮಗಳು (ಸಮುದ್ರಮಥನದಲ್ಲಿ ಕ್ಷೀರಸಾಗರದಲ್ಲಿ ಹುಟ್ಟಿದವಳು -ಲಕ್ಷ್ಮಿ), ಸನಕಾದಿ ವಂದಿತೆ = ಬ್ರಹ್ಮನ ಮಾನಸ ಪುತ್ರರಾದ ಸನಕ ಸುನಂದ ಸನತ್ಕುಮಾರ ಸನತ್ಸುಜಾತರಿಂದ ನಮ್ಕರಿಸಲ್ಪಟ್ಟವಳು, ಸುರ ನರ ಉರಗ ಮಾತೆ = ಸುರರಿಗೂ ಮನುಷ್ಯರಿಗೂ ನಾಗರಿಗೂ ತಾಯಿಯು (ಲಕ್ಷ್ಮಿಯು ಲೋಕಮಾತೆ, ಎಲ್ಲರಿಗೂ ತಾಯಿ) ಸುಜನರ ಪೂರೆವ ದಾತೆ = ಸಜ್ಜನರನ್ನು ಕಾಪಾಡುವವಳು, ಕೊಡುವವಳು, ಸುರ ಅಗ್ರಗಣ್ಯ ಸುಮೌನಿ ವರಸ್ತುತ್ಯೆ = ದೇವತೆಗಳು, ಹಿರಿಯ ಶ್ರೇಷ್ಠ ಮುನಿಗಳಿಂದ ಬಹಳ ಸ್ತುತಿಸಲ್ಟಟ್ಟವಳು, ಪರಮ ಕರುಣಾ ಸಿಂಧು= ಬಹಳ ಕರುಣೆಯು ಸಮುದ್ರವುಳ್ಳವಳು, ಪಾವನ ಚರಿತೆ= ಪವಿತ್ರವಾದ ಗುಣದವಳು, ಪದ್ಮಜ ಮುಖ್ಯ ಸಕಲಾಮರ ಸುಪೂಜಿತೆ= ಪದ್ಮದಲ್ಲಿ ಹುಟ್ಟಿದ ಬ್ರಹ್ಮನೇ ಮುಖ್ಯವಾಗಿ ಸಕಲ ದೇವತೆಗಳಿಂದ ಚೆನ್ನಾಗಿ ಪೂಜಿಸಲ್ಪಟ್ಟವಳೂ ಆಗಿರುವ, ಲಕ್ಷ್ಮಿ ಕೊಡುಗೆ ಎಮಗೆ ಅಧಿಕ ಸಂಪದವ = ಲಕ್ಷ್ಮಿಯು ನಮಗೆ ಬಹಳ ಸಂಪತ್ತನ್ನು ಕೊಡುಗೆ - ನೀಡಲಿ.
- ಪದ್ಯ-೧:ಅರ್ಥ: ಸಮುದ್ರದ ಮಗಳು ಲಕ್ಷ್ಮಿಯು, ಬ್ರಹ್ಮನ ಮಾನಸ ಪುತ್ರರಾದ ಸನಕ ಸುನಂದ ಸನತ್ಕುಮಾರ ಸನತ್ಸುಜಾತರಿಂದ ನಮ್ಕರಿಸಲ್ಪಟ್ಟವಳು, ಸುರರಿಗೂ ಮನುಷ್ಯರಿಗೂ ನಾಗರಿಗೂ ತಾಯಿಯು- ಲೋಕಮಾತೆಯು, ಸಜ್ಜನರನ್ನು ಕಾಪಾಡುವವಳು, ಕೊಡುವವಳು, ದೇವತೆಗಳು, ಹಿರಿಯ ಶ್ರೇಷ್ಠ ಮುನಿಗಳಿಂದ ಬಹಳ ಸ್ತುತಿಸಲ್ಟಟ್ಟವಳು, ಬಹಳ ಕರುಣೆಯು ಸಮುದ್ರವಾಗಿರುವವಳು, ಪವಿತ್ರವಾದ ಗುಣದವಳು, ಬ್ರಹ್ಮನೇ ಮುಖ್ಯವಾಗಿ ಸಕಲ ದೇವತೆಗಳಿಂದ ಚೆನ್ನಾಗಿ ಪೂಜಿಸಲ್ಪಟ್ಟವಳೂ ಆಗಿರುವ, ಲಕ್ಷ್ಮಿಯು ನಮಗೆ ಬಹಳ ಸಂಪತ್ತನ್ನು ನೀಡಲಿ.
- ಗಜಮುಖನ ವರಮಾತೆ ಗೌರಿಯೆ
- ತ್ರಿಜಗದರ್ಚಿತ ಚಾರು ಚರಣಾಂ
- ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ ||
- ಭಜಕರಘ ಸಂಹರಣೆ ಸುಜನ
- ವ್ರಜ ಸುಸೇವಿತೆ ಮಹಿಷ ಮರ್ದಿನಿ
- ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ || ೧೦ ||
- ಪದ್ಯ-೧:ಪದವಿಭಾಗ-ಅರ್ಥ: ಗಜಮುಖನ ವರಮಾತೆ ಗೌರಿಯೆ = ಗೌರಿಯೇ ನೀನು ಗಣಪತಿಯ ಶ್ರೇಷ್ಠ ತಾಯಿ. ತ್ರಿಜಗದ ಅರ್ಚಿತ ಚಾರು ಚರಣ + ಅಂಬುಭುಜೆಯೆ = ಮೂರು ಲೋಕವೂ ಪೂಜಿಸಿದ ಅಂದದ ಪಾದಪದ್ಮಗಳುಳ್ಳವಳು. ಪಾವನಮೂರ್ತಿ = ನೀನು ಪವಿತ್ರಳು, ಪದ್ಮಜಮುಖ್ಯ ಸುರಪೂಜ್ಯೆ = ಬ್ರಹ್ಮನೇ ಮೊದಲಾಗಿ ಮುಖ್ಯ ದೇವತೆಗಳಿಂದ ಪೂಜೆಗಳ್ಳವವಳು, ಭಜಕರಘ ಸಂಹರಣೆ = ಭಜಿಸುವವರ ಪಾಪಗಳನ್ನು ನಾಶ ಮಾಡುವವಳು; ಸುಜನ ವ್ರಜ ಸುಸೇವಿತೆ = ಸಜ್ಜನರಿಂದ ಸೇವೆ ಮಾಡಿಸಿಕೊಳ್ಳುವವಳು, ಮಹಿಷ ಮರ್ದಿನಿ = ಮಹಿಷಾಸುರನನ್ನು ಕೊಂದವಳು, ಭುಜಗ ಭೂಷಣನ + ಅರಸಿ = ಹಾವನ್ನು ಧರಿಸಿದವನ ಅರ್ಧಾಂಗಿ, ಕೊಡು ಕಾರುಣ್ಯದಲಿ ಮತಿಯ = ಕರುಣೆಯಿಂದ ಕಾವ್ಯ ರಚನೆಯ ಬುದ್ಧಿಯನ್ನು ನನಗೆ ಕೊಡು.
- ಪದ್ಯ-೧:ಅರ್ಥ: ಗೌರಿಯೇ ನೀನು ಗಣಪತಿಯ ಶ್ರೇಷ್ಠ ತಾಯಿ; ಮೂರು ಲೋಕವೂ ಪೂಜಿಸಿದ ಅಂದದ ಪಾದಪದ್ಮಗಳುಳ್ಳವಳು; ನೀನು ಪವಿತ್ರಳು; ಬ್ರಹ್ಮನೇ ಮೊದಲಾಗಿ ಮುಖ್ಯ ದೇವತೆಗಳಿಂದ ಪೂಜೆಗಳ್ಳವವಳು; ಭಜಿಸುವವರ ಪಾಪಗಳನ್ನು ನಾಶ ಮಾಡುವವಳು; ಸಜ್ಜನರಿಂದ ಸೇವೆ ಮಾಡಿಸಿಕೊಳ್ಳುವವಳು; ಮಹಿಷಾಸುರನನ್ನು ಕೊಂದವಳು; ಹಾವನ್ನು ಧರಿಸಿದ ಶಿವನ ಅರ್ಧಾಂಗಿ, ಕರುಣೆಯಿಂದ ನನಗೆ ಕಾವ್ಯ ರಚನೆಯ ಬುದ್ಧಿಶಕ್ತಿಯನ್ನು ಕೊಡು.
- ದುರಿತಕುಲಗಿರಿ ವಜ್ರದಂಡನು
- ಧರೆಯ ಜಂಗಮ ಮೂರ್ತಿ ಕವಿ ವಾ
- ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
- ತರಳನನು ತನ್ನವನೆನುತ ಪತಿ
- ಕರಿಸಿ ಮಗನೆಂದೊಲಿದು ಕರುಣದಿ
- ವರವನಿತ್ತನು ದೇವ ವೇದವ್ಯಾಸ ಗುರುರಾಯ || ೧೧ ||
- ಪದ್ಯ-೧:ಪದವಿಭಾಗ-ಅರ್ಥ: ದುರಿತ= ಪಾಪ ಪಾತಕಗಳೆಂಬ, ಕುಲಗಿರಿ = ಕುಲಪರ್ತಗಳಿಗೆ ವಜ್ರದಂಡನು= ನಾಶಮಾಡುವ ವಜ್ರಾಯುಧದಂತಿರುವವನು, ಧರೆಯ ಜಂಗಮ ಮೂರ್ತಿ= ಭೂಮಿಯಮೇಲೆ ಸದಾ ಸಂಚರಿಸುತ್ತಿರುವವನು, ಕವಿ ವಾರಿರುಹ (ವಾರಿ -ಜಲದಲ್ಲಿ, ರುಹ-ಹುಟ್ಟಿದ್ದು)=ಕವಿಗಳೆಂಬ ಕಮಲಗಳಿಗೆ, ದಿನಮಣಿ= ಸೂರ್ಯನು, (ಸೂರ್ಯ ಉದಯಿಸಿದಾಗ ಕಮಲಗಳು ಅರಳುತ್ತವೆ - ಹಾಗೆ ಕವಿಗಳಿಗೆ ವೇದವ್ಯಾಸ) ನಿಖಿಲ ಯತಿಪತಿ ದಿವಿಜ ವಂದಿತನು = ಎಲ್ಲಾ ಯತಿಶ್ರೇಷ್ಠರಿಮದಲೂ ದೇವತೆಗಳಿಂದಲೂ, ನಮಸ್ಕಾರ ಪಡೆದಿರುವವನು, ತರಳನನು ತನ್ನವನು ಎನುತ = ಈ ಬಾಲಕನಾದ ನನ್ನನ್ನು ತಮ್ಮವನು ಎಂದು ಭಾವಿಸಿ, ಪತಿಕರಿಸಿ= ದಯೆತೊರಿ, ಮಗನೆಂದು ಒಲಿದು = ಮಗನೆಂಬ ಪ್ರೀತಿಯ ಭಾವದಿಂದ, ಕರುಣದಿ = ಕರುಣೆತೋರಿ, ವರವನಿತ್ತನು ದೇವ ವೇದವ್ಯಾಸ ಗುರುರಾಯ = ದೇವನಾದ ವೇದವ್ಯಾಸ ಗುರುವು (ಕಾವ್ಯರಚನೆಗೆ) ವರವನ್ನು ಕೊಟ್ಟನು.
- ಕುಲಪರ್ತಗಳು = ಕುಲಾಚಲ, ನೀಲ, ನಿಷಧ, ವಿಂಧ್ಯ, ಪಾರಿಯಾತ್ರ ಮೊದಲಾದ ಎತ್ತರದ ಪರ್ವತಗಳು.
- ದಾಸ ಸಾಹಿತ್ಯ ನಿಘಂಟು;ಪತಿಕರಿಸು -ದಯೆತೋರು, ಅನುಗ್ರಹಿಸು, ಅಂಗೀಕರಿಸು, ಸ್ವೀಕರಿಸು, ಕಾಪಾಡು.
- ಪದ್ಯ-೧:ಅರ್ಥ: ಪಾಪ ಪಾತಕಗಳೆಂಬ ಕುಲಪರ್ತಗಳಿಗೆ ನಾಶಮಾಡುವ ವಜ್ರಾಯುಧದಂತಿರುವವನು, ಭೂಮಿಯಮೇಲೆ ಸದಾ ಸಂಚರಿಸುತ್ತಿರುವವನು, ಕವಿಗಳೆಂಬ ಕಮಲಗಳಿಗೆ, ಸೂರ್ಯನಾಗಿರುವವನು, ಎಲ್ಲಾ ಯತಿಶ್ರೇಷ್ಠರಿಂದಲೂ ದೇವತೆಗಳಿಂದಲೂ, ನಮಸ್ಕಾರ ಪಡೆದಿರುವವನು, ಈ ಬಾಲಕನಾದ ನನ್ನನ್ನು ತಮ್ಮವನು ಎಂದು ಭಾವಿಸಿ, ದಯೆತೊರಿ, ಮಗನೆಂಬ ಪ್ರೀತಿಯ ಭಾವದಿಂದ, ಕರುಣೆತೋರಿ ದೇವಸ್ವರೂಪನಾದ ವೇದವ್ಯಾಸ ಗುರುವು ಕಾವ್ಯರಚನೆ ಮಾಡುವ ಸಾಮರ್ಥ್ಯದ ವರವನ್ನು ಕೊಟ್ಟನು.
- ವಂದಿತಾಮಳ ಚರಿತನಮರಾ
- ನಂದ ಯದುಕುಲ ಚಕ್ರವರ್ತಿಯ
- ಕಂದ ನತಸಂಸಾರ ಕಾನನ ಘನ ದವಾನಳನು
- ನಂದನಂದನ ಸನ್ನಿಭನು ಸಾ
- ನಂದದಿಂದಲೆ ನಮ್ಮುವನು ಕೃಪೆ
- ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ || ೧೨ ||
- ಪದ್ಯ-೧:ಪದವಿಭಾಗ-ಅರ್ಥ: ವಂದಿತ ಅಮಳ ಚರಿತನು= ಶುದ್ಧ ಚಾರಿತ್ರನಾಗಿದ್ದು (ನಡತೆಯುಳ್ಳವನು) ಎಲ್ಲರಿಂದ ನಮಸ್ಕರಿಸಲ್ಪಡುವವನು, ಅಮರಾನಂದ (ಅಮರರಿಗೆ ಆನಂದನು)= ದೇವತೆಗಳಿಗೆ ಆನಂದವನ್ನುಂಟು ಮಾಡುವವನು, ಯದುಕುಲ ಚಕ್ರವರ್ತಿಯ ಕಂದ = (ವಿಷ್ಣುವು- ಕುಮಾರವ್ಯಾಸನ ದೈವ ಶ್ರೀಕೃಷ್ಣನು ಯದುಕುಲ ಕಂದ- ಅವನೇ ವಿಷ್ಣು- ಅತ್ರಿಯ ಮಗನಾಗಿ ಹುಟ್ಟಿದ, ಅತ್ರಿಯು ನೀನೇ ನನ್ನ ಮಗನಾಗಬೇಕು ಎಂದಾಗ- ವಿಷ್ಣುವು ತನ್ನನ್ನೆ ಅತ್ರಿಮುನಿಗೆ ದತ್ತ-ಎಂದರೆ ಕೊಟ್ಟನು, ದತ್ತನು ಅತ್ರಿಗೆ = ದತ್ತಾತ್ರೇಯನು) ಅತ್ರಿಮಹರ್ಷಿಯ ಮಗ ದತ್ತಾತ್ರೇಯನು, ನತ = ನಮಸ್ಕರಿಸುವವರ, ಸಂಸಾರ ಕಾನನ ಘನ = ಸಂಸಾರ ಅರಣ್ಯವೆಂಬ ದಟ್ಟ ಕಾಡಿಗೆ ದವಾನಳನು= ಅಗ್ನಿಸ್ವರೂಪನು, ನಂದನಂದನ ಸನ್ನಿಭನು =ನಂದನ ಮಗನಾದ ಶ್ರೀಕೃಷ್ಣನ ಸಮಾನನಾದವನು, ಸ + ಆನಂದದಿಂದಲೆ = ಬಹಳ ಸಂತೋಷದಿಂದ, ನಮ್ಮುವನು ಕೃಪೆಯಿಂದ = ದಯೆತೋರಿ ಹರಸುವನು, ಸಲಹುಗೆ ದೇವ ಜಗದಾರಾಧ್ಯ ಗುರುರಾಯ = ಜಗತ್ತೇ ಪೂಜಿಸುವ ಗುರುದೇವನಾದ ದತ್ತನು ನಮ್ಮನ್ನು ಕಾಪಾಡಲಿ.
- ಪದ್ಯ-೧:ಅರ್ಥ: ಶುದ್ಧ ಚಾರಿತ್ರನಾಗಿದ್ದು ಎಲ್ಲರಿಂದ ನಮಸ್ಕರಿಸಲ್ಪಡುವವನು, ದೇವತೆಗಳಿಗೆ ಆನಂದವನ್ನುಂಟು ಮಾಡುವವನು, ಅತ್ರಿಮಹರ್ಷಿಯ ಮಗನೂ, ನಮಸ್ಕರಿಸುವವರ, ಸಂಸಾರದ ಅರಣ್ಯವೆಂಬ ದಟ್ಟ ಕಾಡಿಗೆ ಅಗ್ನಿಸ್ವರೂಪನು, ನಂದನ ಮಗನಾದ ಶ್ರೀಕೃಷ್ಣನ ಸಮಾನನಾದವನು, ಬಹಳ ಸಂತೋಷದಿಂದ, ದಯೆತೋರಿ ಹರಸುವವನು, ಜಗತ್ತೇ ಪೂಜಿಸುವ ಗುರುದೇವನಾದ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ.
- ತಿಳಿಯ ಹೇಳುವೆ ಕೃಷ್ಣಕಥೆಯನು
- ಇಳೆಯ ಜಾಣರು ಮೆಚ್ಚುವಂತಿರೆ
- ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ ||
- ಹಲವು ಜನ್ಮದ ಪಾಪ ರಾಶಿಯ
- ತೊಳೆವ ಜಲವಿದು ಶ್ರೀಮದಾಗಮ
- ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ || ೧೩ ||
- ಪದ್ಯ-೧:ಪದವಿಭಾಗ-ಅರ್ಥ: ತಿಳಿಯ ಹೇಳುವೆ ಕೃಷ್ಣಕಥೆಯನು = ಕೃಷ್ಣನ ಕಥೆಯನ್ನು ತಿಳಿಯುವಂತೆ ಹೇಳುವೆನು; ಇಳೆಯ ಜಾಣರು ಮೆಚ್ಚುವಂತಿರೆ= ಅದು ಈ ಭೂಮಿಯ ಪಂಡಿತರು ಮೆಚ್ಚುವಂತೆ ಹೇಳುವೆನು; ನೆಲೆಗೆ ಪಂಚಮ ಶ್ರುತಿಯನು+ ಒರೆವೆನು= ಜೀವನಕ್ಕೆ ಶ್ರೇಯಸ್ಕರವಾದ ಪಂವಮವೇದವನ್ನಿಸಿದ ಮಹಾಭಾರತದ ಕಥೆಯನ್ನು ಹೇಳುವೆನು; ಕೃಷ್ಣ ಮೆಚ್ಚಲಿಕೆ= ಅದನ್ನು ಶ್ರೀಕೃಷ್ಣನು ಮೆಚ್ಚುವಂತೆ ಹೇಳುವೆನು; ಹಲವು ಜನ್ಮದ ಪಾಪ ರಾಶಿಯ ತೊಳೆವ ಜಲವಿದು= ಇದು ಈ ಕಥೆಯು ಅನೇಕ ಜನ್ಮದ ಪಾಪರಾಶಿಯನ್ನು ಹೋಗಲಾಡಿಸುವ ಜಲದಂತೆ ಇದೆ. ಶ್ರೀಮತ್ ಆಗಮ ಕುಲಕೆ ನಾಯಕ= ಇದು ಸಮಸ್ತ ಆಗಮಗಳಿಗೆ ನಾಯಕ ಸ್ಥಾನದಲ್ಲಿರುವ, ಭಾರತ+ ಆಕೃತಿ ಪಂಚಮ ಶ್ರುತಿಯ = ಮಹಾಭಾರತದ ರೂಪದಲ್ಲಿರುವ ಐದನೆಯ ವೇದವನ್ನು ಒರೆವೆನು= ಹೇಳುತ್ತೇನೆ.
- ನೆಲೆ: ಆಶ್ರಯಸ್ಥಾನ, ಹಿತಕರವಾದುದು, ಶ್ರೇಯಸ್ಕರವಾದುದು, ತಳಹದಿ.
- ಪದ್ಯ-೧:ಅರ್ಥ: ಕೃಷ್ಣನ ಕಥೆಯನ್ನು ಈ ಭೂಮಿಯ ಪಂಡಿತರು ಮೆಚ್ಚುವಂತೆ, ತಿಳಿಯುವಂತೆ ಹೇಳುವೆನು; ಜೀವನಕ್ಕೆ ಶ್ರೇಯಸ್ಕರವಾದ ಪಂವಮವೇದವನ್ನಿಸಿದ ಮಹಾಭಾರತದ ಕಥೆಯನ್ನು ಶ್ರೀಕೃಷ್ಣನು ಮೆಚ್ಚುವಂತೆ ಹೇಳುವೆನು; ಅದು- ಈ ಕಥೆಯು ಅನೇಕ ಜನ್ಮದ ಪಾಪರಾಶಿಯನ್ನು ಹೋಗಲಾಡಿಸುವ ಜಲದಂತೆ ಇದೆ. ಇದು ಪೂಜ್ಯಯವಾದ ಸಮಸ್ತ ಆಗಮಗಳಿಗೆ ನಾಯಕ ಸ್ಥಾನದಲ್ಲಿದೆ, ಮಹಾಭಾರತದ ರೂಪದಲ್ಲಿರುವ ಐದನೆಯ ವೇದವನ್ನು ಒರೆವೆನು,- ಹೇಳುವೆನು.
- ಪದದಪ್ರೌಢಿಯ ನವರಸಂಗಳ
- ವುದಿತವೆನುವಭಿಧಾನ ಭಾವವ
- ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ ||
- ಇದ ವಿಚಾರಿಸೆ ಬರಿಯ ತೊಳಸಿಯ
- ವುದಕದಂತಿರೆಯಲ್ಲಿ ನೋಳ್ಪುದು
- ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು || ೧೪ ||
- ಪದ್ಯ-೧:ಪದವಿಭಾಗ-ಅರ್ಥ: ಪದದಪ್ರೌಢಿಯ = ಪದಗಳ ಪ್ರೌಢಿಮೆಯನ್ನ, ನವರಸಂಗಳ ವುದಿತವೆನುವ ಅಭಿಧಾನ ಭಾವವ= ಕಾವ್ಯದಲ್ಲಿ ಉಪಯೋಗಿಸುವ ನವರಸಗಳನ್ನು ಉಂಟುಮಾಡುವ ಅಲಂಕಾರಗಳ ಭಾವವನ್ನು ಹುಡುಕಿ, ಬೆದಕಲಾಗದು= ತೆಗೆಯುವ ಪ್ರಯತ್ನ ಮಾಡಬಾರದು, ಬಲ್ಲ ಪ್ರೌಢರುಂ+ ಆ ಕಥಾಂತರಕೆ = ಕಾವ್ಯ ಪರಿಣತರು ಈ ಕಾವ್ಯದ ಕಥೆಯಲ್ಲಿ; ಇದ ವಿಚಾರಿಸೆ = ಈ ಕಥೆಯ ಬಗೆಗೆ ವಿಚಾರ ಮಾಡಿದರೆ ಅದು, ಬರಿಯ ತೊಳಸಿಯ ವುದಕದಂತಿರೆ +ಯಲ್ಲಿ= ಕೇವಲ ತುಳಸಿಯ ತೀರ್ಥದಂತೆ- ಅಲ್ಲಿ ಭಕ್ತಿ ಮಾತ್ರಾ ಇದೆ. ಅಲ್ಲಿ ನೋಳ್ಪುದು ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು= ಆದ್ದರಿಂದ ಈ ಕಾವ್ಯದಲ್ಲಿ ವಿಷ್ಣುವಿನ/ ಕೃಷ್ಣನ ಮಹಿಮೆಯನ್ನು ಮತ್ತು ಧರ್ಮವಿಚಾರವನ್ನು ಮಾತ್ರಾ ನೋಡಬೇಕು.
- ಅಭಿಧಾನ: ನೆಪ, ನಿಮಿತ್ತ, ಉಪಮಾಲಂಕಾರದಲ್ಲಿ ಒಂದು ಬಗೆ.
- ಪದ್ಯ-೧:ಅರ್ಥ:ಪದಗಳ ಪ್ರೌಢಿಮೆಯನ್ನ, ಕಾವ್ಯದಲ್ಲಿ ಉಪಯೋಗಿಸುವ ನವರಸಗಳನ್ನು ಉಂಟುಮಾಡುವ ಅಲಂಕಾರಗಳ ಭಾವವನ್ನು ಹುಡುಕಿ, ತೆಗೆಯುವ ಪ್ರಯತ್ನ ಮಾಡಬಾರದು, ಕಾವ್ಯ ಪರಿಣತರು ಈ ಕಾವ್ಯದ ಕಥೆಯಲ್ಲಿ, ಈ ಕಥೆಯ ಬಗೆಗೆ ವಿಚಾರ ಮಾಡಿದರೆ ಅದು, ಕೇವಲ ತುಳಸಿಯ ತೀರ್ಥದಂತೆ- ಅಲ್ಲಿ ಭಕ್ತಿ ಮಾತ್ರಾ ಇದೆ. ಆದ್ದರಿಂದ ಈ ಕಾವ್ಯದಲ್ಲಿ ವಿಷ್ಣುವಿನ/ ಕೃಷ್ಣನ ಮಹಿಮೆಯನ್ನು ಮತ್ತು ಧರ್ಮವಿಚಾರವನ್ನು ಮಾತ್ರಾ ನೋಡಬೇಕು. (ಇದು ಕವಿಯ ಆಶಯ, ವಿಯಪೂರ್ಕವಾಗಿ ವೀರನಾರಾಯಣನೆ ಕವಿ ಎಂದರೂ ನಾರಾಯಣಪ್ಪ ತನ್ನಕಾವ್ಯವನ್ನು ಹೇಗೆ ರಚಿಸಬೇಕೆಂಬುದರ ಬಗೆಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದನು.)
- ಹಲಗೆ ಬಳಪವ ಪಿಡಿಯದೊಂದ
- ಗ್ಗಳಿಕೆ ಪದವಿಟ್ಟಳುಪದೊಂದ
- ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ||
- ಬಳಸಿ ಬರೆಯಲು ಕಂಠಪತ್ರದ
- ವುಲುಹುಗೆಡದಗ್ಗಳಿಕೆಯೆಂಬೀ
- ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ || ೧೫ ||
- ಪದ್ಯ-೧:ಪದವಿಭಾಗ-ಅರ್ಥ: ಹಲಗೆ ಬಳಪವ ಪಿಡಿಯದೊಂದು ಅಗ್ಗಳಿಕೆ= ಹಲಗೆಮತ್ತು ಬಳಪಗಳನ್ನು ಬಳಸಿಕೊಂಡು ಬರೆದು ಪುನಃ ಪುನಃ ತಿದ್ದಿ ಬರೆಯದೆ ಒಂದೇ ಸಾರಿಗೆ ಬರೆದ ಹಿರಿಮೆ! ಪದವಿಟ್ಟು+ ಅಳುಪದ+ ಒಂದು+ ಅಗ್ಗಳಿಕೆ= ಒಂದು ಪದವನ್ನು ಬರೆದು ಅದನ್ನು ಅಳಿಸಿ ಮತ್ತೆ ಬರೆಯದ ಹಿರಿಮೆ! ಪರರ + ಒಡ್ಡವದ ರೀತಿಯ ಕೊಳ್ಳದ ಅಗ್ಗಳಿಕೆ= ಬೇರೆಯವರ ಕಾವ್ಯರಚನೆಯನ್ನು ಬಳಸಿಕೊಳ್ಳದೆ ಇರುವ ಹಿರಿಮೆ; ಬಳಸಿ ಬರೆಯಲು ಕಂಠಪತ್ರದ ವುಲುಹು+ ಕೆಡದ= ತಾಳೆಗರಿಯ ಓಲೆಯ ಮೇಲೆ ಕಂಠವೆಂಬ ಲೆಕ್ಕನಿಕೆಯಿಂದ ಬರೆಯುವಾಗ, ಆಗುವ ಸದ್ದು ನಿಲ್ಲದಂತೆ ಓತಪ್ರೋತವಾಗಿ ಬರೆದ ಅಗ್ಗಳಿಕೆ+ ಯೆಂಬ+ ಈ ಬಲುಹು= ಹಿರಿಮೆಯೆಂಬ ಈ ಸಾಮರ್ಥ್ಯ- ಗದುಗಿನ ವೀರನಾರಾಯಣನ ಕಿಂಕರಗೆ= ವೀರನಾರಯಣನ ಸೇವಕನಾದ ತನಗೆ ಇದೆ, ಎಂದು ನಾರಣಪ್ಪ ಹೇಳಿಕೊಂಡಿದ್ದಾನೆ. (ಈ ಸಾಮರ್ಥ್ಯ ವ್ಯಾಸರ ನಂತರ ಇವನದೇ - ಹಾಗಾಗಿ ಅನ್ವರ್ಥವಾಗಿ ಕುಮಾರವ್ಯಾಸ))
- ಒಡ್ಡವ: ಹೆಸರುಪದ (ದೇ) ವಿನ್ಯಾಸ, ರಚನಾಕ್ರಮ.(ಜಿವೆಂ)
- ಪದ್ಯ-೧:ಅರ್ಥ: ಹಲಗೆ ಮತ್ತು ಬಳಪಗಳನ್ನು ಬಳಸಿಕೊಂಡು ಬರೆದು ಪುನಃ ಪುನಃ ತಿದ್ದಿ ಬರೆಯದೆ ಒಂದೇ ಸಾರಿಗೆ ಬರೆದ ಹಿರಿಮೆ! ಪದವಿಟ್ಟು+ ಅಳುಪದ+ ಒಂದು+ ಅಗ್ಗಳಿಕೆ= ಒಂದು ಪದವನ್ನು ಬರೆದು ಅದನ್ನು ಅಳಿಸಿ ಮತ್ತೆ ಬರೆಯದ ಹಿರಿಮೆ! ಪರರ + ಒಡ್ಡವದ ರೀತಿಯ ಕೊಳ್ಳದ ಅಗ್ಗಳಿಕೆ= ಬೇರೆಯವರ ಕಾವ್ಯರಚನೆಯನ್ನು ಬಳಸಿಕೊಳ್ಳದೆ ಇರುವ ಹಿರಿಮೆ; ಬಳಸಿ ಬರೆಯಲು ಕಂಠಪತ್ರದ ವುಲುಹು+ ಕೆಡದ= ತಾಳೆಗರಿಯ ಓಲೆಯ ಮೇಲೆ ಕಂಠವೆಂಬ ಲೆಕ್ಕನಿಕೆಯಿಂದ ಬರೆಯುವಾಗ, ಆಗುವ ಸದ್ದು ನಿಲ್ಲದಂತೆ ಓತಪ್ರೋತವಾಗಿ ಬರೆದ ಅಗ್ಗಳಿಕೆ+ ಯೆಂಬ+ ಈ ಬಲುಹು= ಹಿರಿಮೆಯೆಂಬ ಈ ಸಾಮರ್ಥ್ಯ- ಗದುಗಿನ ವೀರನಾರಾಯಣನ ಕಿಂಕರಗೆ= ವೀರನಾರಯಣನ ಸೇವಕನಾದ ತನಗೆ ಇದೆ, ಎಂದು ನಾರಣಪ್ಪ ಹೇಳಿಕೊಂಡಿದ್ದಾನೆ. (ಈ ಸಾಮರ್ಥ್ಯ ವ್ಯಾಸರ ನಂತರ ಇವನದೇ - ಹಾಗಾಗಿ ಅನ್ವರ್ಥವಾಗಿ ಇವನು 'ಕುಮಾರವ್ಯಾಸ')
- ಕೃತಿಯನವಧರಿಸುವುದು ಸುಕವಿಯ
- ಮತಿಗೆ ಮಂಗಳವೀವುದಧಿಕರು
- ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು ||
- ನುತಗುಣರು ಭಾವುಕರು ವರಪಂ
- ಡಿತರು ಸುಜನರು ಸೂಕ್ತಿಕಾರರು
- ಮತಿಯನೀವುದು ವೀರನಾರಯಣನ ಕಿಂಕರಗೆ || ೧೬ ||
- ಪದ್ಯ-೧:ಪದವಿಭಾಗ-ಅರ್ಥ: ಕೃತಿಯನು+ ಅವಧರಿಸುವುದು= ಈ ಕಾವ್ಯವನ್ನು ಮನಸ್ಸಿಟ್ಟು ಕೇಳುವುದು, ಸುಕವಿಯ ಮತಿಗೆ ಮಂಗಳವ ಈವುದು+= ಉತ್ತಮ ಕವಿಯ ಮನಸ್ಸಿಗೆ ಮಂಗಳವನ್ನು/ ಶುಭವನ್ನು ಕೊಡಿ; ಅಧಿಕರು ಮಥಿಸುವುದು ತಿದ್ದುವುದು= ಶ್ರೇಷ್ಠ ಪಂಡಿತರು ವಿಮರ್ಶೆಮಾಡಿ ತಿದ್ದುವುದು; ಮೆರೆವುದು ಲೇಸ= ಉತ್ತಮವಾದುದನ್ನು ಹೊಗಳುವುದು; ಸಂಚಿಪುದು ನುತಗುಣರು= ಕೀರ್ತಿವಂತ ಗಣಶೀಲರು (ಉತ್ತಮವಾದುದನ್ನು) ಸಂಗ್ರಹಿಸಿರಿ; ಭಾವುಕರು ವರಪಂಡಿತರು ಸುಜನರು ಸೂಕ್ತಿಕಾರರು ಮತಿಯನೀವುದು= ಭಾವುಕ ಜನರು, ಉತ್ತಮ ಪಂಡಿತರು, ಗುಣಶೀಲ ಜನರು ಸೂಕ್ತಿರಚನಾ ಪಂಡಿತರು ವೀರನಾರಯಣನ ಸೇವಕನಿಗೆ ಮತಿಯನು- ಜ್ಞಾನವನ್ನು ನೀಡಿರಿ.
- ಪದ್ಯ-೧:ಅರ್ಥ:ಈ ಕಾವ್ಯವನ್ನು ಮನಸ್ಸಿಟ್ಟು ಕೇಳುವುದು, ಉತ್ತಮ ಕವಿಯ ಮನಸ್ಸಿಗೆ ಮಂಗಳವನ್ನು/ ಶುಭವನ್ನು ಕೊಡಿ; ಶ್ರೇಷ್ಠ ಪಂಡಿತರು ವಿಮರ್ಶೆಮಾಡಿ ತಿದ್ದುವುದು; ಉತ್ತಮವಾದುದನ್ನು ಹೊಗಳುವುದು; ಕೀರ್ತಿವಂತ ಗಣಶೀಲರು (ಉತ್ತಮವಾದುದನ್ನು) ಸಂಗ್ರಹಿಸಿರಿ; ಭಾವುಕ ಜನರು, ಉತ್ತಮ ಪಂಡಿತರು, ಗುಣಶೀಲ ಜನರು ಸೂಕ್ತಿರಚನಾ ಪಂಡಿತರು ವೀರನಾರಯಣನ ಈ ಸೇವಕನಿಗೆ ಮತಿಯನು- ಜ್ಞಾನವನ್ನು ನೀಡಿರಿ.
- ತಿಣಿಕಿದನು ಫಣಿರಾಯ ರಾಮಾ
- ಯಣದ ಕವಿಗಳ ಭಾರದಲಿ ತಿಂ
- ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ ||
- ಬಣಗು ಕವಿಗಳ ಲೆಕ್ಕಿಪನೆ ಸಾ
- ಕೆಣಿಸದಿರು ಶುಕರೂಪನಲ್ಲವೆ
- ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ || ೧೭ ||
- ಪದ್ಯ-೧:ಪದವಿಭಾಗ-ಅರ್ಥ:ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ= ಭೂಮಿಯನ್ನು ಹೊತ್ತಿರುವ ಆದಿಶೇಷನು ರಾಮಾಯಣ ಬರೆದ ಕವಿಗಳ ಮತ್ತು ಅವರ ಕಾವ್ಯದ ಭಾರವನ್ನು ಹೊಲಾರದೆ ತಿಣುಕಿದನು- ಕಷ್ಟಪಟ್ಟನು. (ಅವರದು ಅಷ್ಟೊಂದು ಸಂಖ್ಯೆ) ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ= ರಘುರಾಮನ ಚರಿತ್ರೆ- ರಾಮಾಯಣ ಕಾವ್ಯಗಳ ರಾಶಿ ಹೇರಳವಾಗಿದೆ.(ಕಾಲಿಡಲಿಕ್ಕೂ ಜಾಗವಿಲ್ಲದಷ್ಟು ತುಂಬಿದೆ); ಬಣಗು ಕವಿಗಳ ಲೆಕ್ಕಿಪನೆ ಸಾಕು+ ಎಣಿಸದಿರು= ಕುಮಾರವ್ಯಾಸನು ಸಾಮಾನ್ಯ ಕವಿಗಳನ್ನು ಲಕ್ಕಿಸುವುದಿಲ್ಲ. ಶುಕರೂಪನಲ್ಲವೆ?= ಇವನು ಶುಕನಂತೆ ಪಂಡಿತನು. ಕುಣಿಸಿ ನಗನೇ ಕವಿ ಕುಮಾರವ್ಯಾಸನು+ ಉಳಿದವರ = ಕವಿ ಕುಮಾರವ್ಯಾಸನು ಎಲ್ಲರನ್ನೂ ಸಂತಸದಿಂದ ಕುಣಿಸಿ, ಆನಂದಪಡುವನು.
- ದಾಸ ಸಾಹಿತ್ಯ ನಿಘಂಟು:ತಿಂತಿಣಿ= ತಿಂಥಿಣಿ - ಗುಂಪು, ಸಮೂಹ, ರಾಶಿ;
- ದಾಸ ಸಾಹಿತ್ಯ ನಿಘಂಟು: ಬಣಗು= ಕೀಳು, ಅಲ್ಪ;
- ಪದ್ಯ-೧:ಅರ್ಥ:ಭೂಮಿಯನ್ನು ಹೊತ್ತಿರುವ ಆದಿಶೇಷನು ರಾಮಾಯಣ ಬರೆದ ಬಹಳ ಸಂಖ್ಯೆಯ ಕವಿಗಳ ಮತ್ತು ಅವರ ಕಾವ್ಯದ ಭಾರವನ್ನು ಹೊಲಾರದೆ ತಿಣುಕಿದನು- ಕಷ್ಟಪಟ್ಟನು. ರಘುರಾಮನ ಚರಿತ್ರೆ- ರಾಮಾಯಣ ಕಾವ್ಯಗಳ ರಾಶಿ ಹೇರಳವಾಗಿದೆ.(ಕಾಲಿಡಲಿಕ್ಕೂ ಜಾಗವಿಲ್ಲದಷ್ಟು ತುಂಬಿದೆ); ಕುಮಾರವ್ಯಾಸನು ಸಾಮಾನ್ಯ ಕವಿಗಳನ್ನು ಲಕ್ಕಿಸುವುದಿಲ್ಲ. ಇವನು ಶುಕನಂತೆ ಪಂಡಿತನು. ಕವಿ ಕುಮಾರವ್ಯಾಸನು ಎಲ್ಲರನ್ನೂ ಸಂತಸದಿಂದ ಕುಣಿಸಿ, ಆನಂದಪಡುವನು.
- ಹರಿಯ ಬಸುರೊಳಗಖಿಲ ಲೋಕದ
- ವಿರಡವಡಗಿಹವೋಲು ಭಾರತ
- ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು ||
- ಪರಮ ಭಕ್ತಿಯಲೀ ಕೃತಿಯನವ
- ಧರಿಸಿ ಕೇಳ್ದಾನರರ ದುರಿತಾಂ
- ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ || ೧೮ ||
- ಪದ್ಯ-೧:ಪದವಿಭಾಗ-ಅರ್ಥ:ಹರಿಯ ಬಸುರೊಳಗೆ ಅಖಿಲ ಲೋಕದ= ವಿಷ್ಣುವಿನ ಉದರದಲ್ಲಿ ಎಲ್ಲಾ ಹದಿನಾಲ್ಕು ಲೋಕಗಳ, ವಿರಡವು ಅಡಗಿಹವೋಲು= ವಿರಾಟ್ (ಅನಂತ ಬ್ರಹ್ಮಾಂಡದ ಮೂಲ ತತ್ತ್ವ) ಅಡಗಿರುವಂತೆ, ಭಾರತಶರಧಿಯೊಳು ಅಗಡಗಿಹವು ಅನೇಕ ಪುರಾಣ ಶಾಸ್ತ್ರಗಳು= ಭಾರತವೆಂಬ ಸಮುದ್ರದಲ್ಲಿ ಅನೇಕ ಪುರಾಣ ಶಾಸ್ತ್ರಗಳು ಸೇರಿಕೊಂಡಿರುವುವು. ಪರಮ ಭಕ್ತಿಯಲಿ+ ಈ ಕೃತಿಯನು + ಅವಧರಿಸಿ ಕೇಳ್ದ+ ಆ ನರರ= ಅದನ್ನು- ಪರಮ ಭಕ್ತಿಯಿಂದ ಈ ಕೃತಿಯನ್ನು ಮನಸ್ಸಿಟ್ಟು ಕೇಳಿದ ಆ ಜನರ, ದುರಿತ ಅಂಕುರದ ಬೇರಿನ= ಪಾಪಗಳ ಮೊಳಕೆಯ ಬೇರು, ಬೇಗೆ (ಬೇಯುವುದು)+ ಯೆಂದು ಅರುಹಿದನು ಮುನಿನಾಥ= ಬೆಂಕಿಯಿಂದ ಸುಡುವುದು ಎಂದು ಹೇಳಿದನು ಮುನಿ ವೈಶಂಪಾಯನನು.
- ಪದ್ಯ-೧:ಅರ್ಥ: ವಿಷ್ಣುವಿನ ಉದರದಲ್ಲಿ ಎಲ್ಲಾ ಹದಿನಾಲ್ಕು ಲೋಕಗಳ, ವಿರಾಟ್ (ಅನಂತ ಬ್ರಹ್ಮಾಂಡದ ಮೂಲ ತತ್ತ್ವವು) ಅಡಗಿರುವಂತೆ, ಭಾರತವೆಂಬ ಸಮುದ್ರದಲ್ಲಿ ಅನೇಕ ಪುರಾಣ ಶಾಸ್ತ್ರಗಳು ಸೇರಿಕೊಂಡಿರುವುವು. ಪರಮ ಭಕ್ತಿಯಿಂದ ಈ ಕೃತಿಯನ್ನು ಮನಸ್ಸಿಟ್ಟು ಕೇಳಿದ ಆ ಜನರ, ಪಾಪಗಳ ಮೊಳಕೆಯ ಬೇರು ಬೆಂಕಿಯಿಂದ ಸುಡುವುದು ಎಂದು ಮುನಿ ವೈಶಂಪಾಯನನು ಹೇಳಿದನು.
- ಅರಸುಗಳಿಗಿದು ವೀರ ದ್ವಿಜರಿಗೆ
- ಪರಮ ವೇದದ ಸಾರ ಯೋಗೀ
- ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ ||
- ವಿರಹಿಗಳ ಶೃಂಗಾರ ವಿದ್ಯಾ
- ಪರಿಣತರಲಂಕಾರ ಕಾವ್ಯಕೆ
- ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ || ೧೯ ||
- ಪದ್ಯ-೧:ಪದವಿಭಾಗ-ಅರ್ಥ: ಅರಸುಗಳಿಗೆ+ ಇದು ವೀರ = ಅರಸರಿಗೆ ಮತ್ತು ಕ್ಷತ್ರಿಯರಿಗೆ ವೀರಗುಣವನ್ನು ಕೊಡುವುದು, ದ್ವಿಜರಿಗೆ ಪರಮ ವೇದದ ಸಾರ= = ಬ್ರಾಹ್ಮಣರಿಗೆ ವೇದದಸಾರವನ್ನು ತಿಳಿಸುವುದು, ಯೋಗೀಶ್ವರರ ತತ್ವವಿಚಾರ= ಯೋಗಿಗಗಳಿಗೆ ತತ್ತ್ವ ವಿಚಾರವನ್ನು ಕೊಡುವುದು, ಮಂತ್ರಿಜನಕ್ಕೆ ಬುದ್ಧಿಗುಣ= ಮಂತ್ರಿಗಳಿಗೆ ಬುದ್ಧಿಶಕ್ತಿಯನ್ನು ಕೊಡುವುದು, ವಿರಹಿಗಳ ಶೃಂಗಾರ= ವಿರಹಿಗಳಿಗೆ ಶೃಂಗಾರ ರಸನೀಡಿ ಶಾಂತಗೊಳಿಸುವುದು, ವಿದ್ಯಾಪರಿಣತರ ಅಲಂಕಾರ= ಪಂಡಿತರಿಗೆ ನಾನಾ ಬಗೆಯ ಅಲಂಕಾರದ ಕಾವ್ಯ, ಕಾವ್ಯಕೆ ಗುರುವೆನಲು = ಇದು ಕಾವ್ಯಕ್ಕೇ ಗುರು - ಹಾಗೆ ಇರುವಂತೆ, ರಚಿಸಿದ ಕುಮಾರವ್ಯಾಸ ಭಾರತವ = ಕುಮಾರವ್ಯಾಸನು ಭಾರತವನ್ನು ರಚಿಸಿದನು.
- ಪದ್ಯ-೧:ಅರ್ಥ:ಅರಸರಿಗೆ ಮತ್ತು ಕ್ಷತ್ರಿಯರಿಗೆ ವೀರಗುಣವನ್ನು ಕೊಡುವುದು, ಬ್ರಾಹ್ಮಣರಿಗೆ ವೇದದ ಸಾರವನ್ನು ತಿಳಿಸುವುದು, ಯೋಗಿಗಗಳಿಗೆ ತತ್ತ್ವ ವಿಚಾರವನ್ನು ಕೊಡುವುದು, ಮಂತ್ರಿಗಳಿಗೆ ಬುದ್ಧಿಶಕ್ತಿಯನ್ನು ಕೊಡುವುದು, ವಿರಹಿಗಳಿಗೆ ಶೃಂಗಾರ ರಸನೀಡಿ ಶಾಂತಗೊಳಿಸುವುದು, ಪಂಡಿತರಿಗೆ ನಾನಾ ಬಗೆಯ ಅಲಂಕಾರದ ಕಾವ್ಯವಾಗಿದೆ, ಇದು ಕಾವ್ಯಕ್ಕೇ ಗುರು - ಹಾಗೆ ಇರುವಂತೆ, ಕುಮಾರವ್ಯಾಸನು ಭಾರತವನ್ನು ರಚಿಸಿದನು.
- ವೇದ ಪಾರಾಯಣದ ಫಲ ಗಂ
- ಗಾದಿ ತೀರ್ಥಸ್ನಾನ ಫಲ ಕೃ
- ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ ||
- ಮೇದಿನಿಯನೊಲಿದಿತ್ತ ಫಲ ವ
- ಸ್ತ್ರಾದಿ ಕನ್ಯಾದಾನ ಫಲವಹು
- ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ || ೨೦ ||
- ಪದ್ಯ-೧:ಪದವಿಭಾಗ-ಅರ್ಥ: ವೇದ ಪಾರಾಯಣದ ಫಲ= ವೇದಗಳನ್ನು ಪಠಿಸಿದ ಫಲ,ಗಂಗಾದಿ ತೀರ್ಥಸ್ನಾನ ಫಲ = ಗಂಗೆ ಮೊದಲಾದ ಪುಣ್ಯನದಿಗಳಲ್ಲಿ ಮಿಂದ ಫಲ; ಕೃಚ್ಛ್ರಾದಿ ತಪಸಿನ ಫಲವು = ಸಾಂತಪನಾದಿ ವ್ರತ, ದೇಹವನ್ನು ಸೊರಗಿಸುವ ಕಠಿಣ ಆಚರಣೆ, ಆಹಾರ ಸೇವನೆ ನಿಯಮದ ವ್ರತಗಳನ್ನು ಮಾಡಿದ ಫಲ; ಜ್ಯೋತಿಷ್ಟೋಮಯಾಗ ಫಲ= ಯಾಗಗಳಲ್ಲೇ ಶ್ರೇಷ್ಠವೆನಿಸಿದ ಜ್ಯೋತಿಷ್ಟೋಮಯಾಗ ಮಾಡಿದ ಫಲವೂ; ಮೇದಿನಿಯನೊಲಿದಿತ್ತ ಫಲ= ಭೂಮಿಯನ್ನು ದಾನ ಮಾಡಿದ ಫಲವೂ; ವಸ್ತ್ರಾದಿ ಕನ್ಯಾದಾನ ಫಲವು+ ಅಹುದು + ಆದರಿಸಿ ಭಾರತದೊಳು+ ಒಂದು+ ಅಕ್ಷರವ ಕೇಳ್ದರಿಗೆ= ವಸ್ತ್ರವೇ ಮೊದಲಾದ,ಮತ್ತು ಕನ್ಯಾದಾನ ಮಾಡಿದ, ಫಲವು ಆಗುವುದು, ಆದರದಿಂದ ಭಾರತದಲ್ಲಿ ಒಂದು ಅಕ್ಷರವನ್ನು ಕೇಳಿದವರಿಗೆ.
- ಜ್ಯೋತಿಷ್ಮ = ಸೂರ್ಯ; ಜ್ಯೋತಿಷ್ಟೋಮಯಾಗ = ಸೂರ್ಯನನ್ನು ಕುರಿತ ಯಾಗ(?).
- ಪದ್ಯ-೧:ಅರ್ಥ: ವೇದಗಳನ್ನು ಪಠಿಸಿದ ಫಲ, ಗಂಗೆ ಮೊದಲಾದ ಪುಣ್ಯನದಿಗಳಲ್ಲಿ ಮಿಂದ ಫಲ; ಸಾಂತಪನಾದಿ ವ್ರತ, ದೇಹವನ್ನು ಸೊರಗಿಸುವ ಕಠಿಣ ಆಚರಣೆ, ಆಹಾರ ಸೇವನೆ ನಿಯಮದ ವ್ರತಗಳನ್ನು ಮಾಡಿದ ಫಲ; ಯಾಗಗಳಲ್ಲೇ ಶ್ರೇಷ್ಠವೆನಿಸಿದ ಜ್ಯೋತಿಷ್ಟೋಮಯಾಗ ಮಾಡಿದ ಫಲವೂ; ಭೂಮಿಯನ್ನು ದಾನ ಮಾಡಿದ ಫಲವೂ; ವಸ್ತ್ರವೇ ಮೊದಲಾದ, ಮತ್ತು ಕನ್ಯಾದಾನವನ್ನು ಮಾಡಿದ, ಫಲವು ಆದರದಿಂದ ಭಾರತದಲ್ಲಿ ಒಂದು ಅಕ್ಷರವನ್ನು ಕೇಳಿದವರಿಗೆ ಆಗುವುದು.
- ಹೇಮ ಖುರ ಶೃಂಗಾಭರಣದಲಿ
- ಕಾಮಧೇನು ಸಹಸ್ರ ಕಪಿಲೆಯ
- ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ ||
- ಶ್ರೀಮುಕುಂದಾರ್ಪಣವೆನಿಸಿ ಶತ
- ಭೂಮಿದೇವರಿಗಿತ್ತ ಫಲವಹು
- ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ || ೨೧ ||
- ಪದ್ಯ-೧:ಪದವಿಭಾಗ-ಅರ್ಥ: ಹೇಮ=ಚಿನ್ನ, ಖುರ= ಗೊರಸು, ಶೃಂಗ= ಕೋಡು, ಆಭರಣದಲಿ =ಆಭರಣ ಹಾಕಿ ಅಲಂಕರಿಸಿದ, ಕಾಮಧೇನು ಸಹಸ್ರ ಕಪಿಲೆಯ= ಕಪ್ಪು ಬಣ್ನದ ಸಾವಿರ ಕಾಮಧೇನು ಹಸುಗಳನ್ನು, ಸೋಮ ಸೂರ್ಯ ಗ್ರಹಣದಲಿ= ಚಂದ್ರಸೂರ್ಯ ಗ್ರಹಣದಲ್ಲಿ, ಸುರನದಿಯ ತೀರದಲಿ= ಗಂಗಾನದಿಯ ತೀರದಲ್ಲಿ, ಶ್ರೀಮುಕುಂದಾರ್ಪಣ ಎನಿಸಿ= ಕೃಷ್ಣಾರ್ಪಣ ಎಂದು ಮತ್ತು, ಶತಭೂಮಿ ದೇವರಿಗಿತ್ತ ಫಲವು + ಅಹುದು ಈ ಮಹಾಭಾರತದೊಳು ಒಂದು + ಅಕ್ಷರವ ಕೇಳ್ದರಿಗೆ =ನೂರು ಭೂಮಿಯನ್ನು ದೇವರಿಗೆ ಕೊಟ್ಟ ಫಲವಹುದು ಈ ಮಹಾಭಾರತದೊಳು ಒಂದು + ಅಕ್ಷರವ ಕೇಳ್ದರಿಗೆ = ನೂರು ಭೂಮಿಯನ್ನು ದೇವರಿಗೆ ಕೊಟ್ಟ ಫಲವು ಆಗುವುದು, ಈ ಮಹಾಭಾರತದಲ್ಲಿ ಒಂದು ಅಕ್ಷರವನ್ನು ಕೇಳಿದವರಿಗೆ.
- ಪದ್ಯ-೧:ಅರ್ಥ: ಗೊರಸು, ಕೋಡುಗಳಿಗೆ ಚಿನ್ನ,ದ ಆಭರಣ ಹಾಕಿ ಅಲಂಕರಿಸಿದ ಕಪ್ಪು ಬಣ್ನದ ಸಾವಿರ ಕಾಮಧೇನು ಹಸುಗಳನ್ನು,ಚಂದ್ರ ಸೂರ್ಯ ಗ್ರಹಣದಲ್ಲಿ, ಗಂಗಾನದಿಯ ತೀರದಲ್ಲಿ, ಕೃಷ್ಣಾರ್ಪಣ ಎಂದು ಮತ್ತು, ನೂರು ಭೂಮಿಯನ್ನು ದೇವರಿಗೆ ಕೊಟ್ಟ ಫಲವು ಈ ಮಹಾಭಾರತದಲ್ಲಿ ಒಂದು ಅಕ್ಷರವನ್ನು ಕೇಳಿದವರಿಗೆ ಆಗುವುದು.
- ಚೋರ ನಿಂದಿಸಿ ಶಶಿಯ ಬೈದಡೆ
- ಕ್ಷೀರವನು ಕ್ಷಯರೋಗಿ ಹಳಿದರೆ
- ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು ||
- ಭಾರತದ ಕಥನ ಪ್ರಸಂಗವ
- ಕ್ರೂರ ಕರ್ಮಿಗಳೆತ್ತ ಬಲ್ಲರು
- ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ || ೨೨ ||
- ಪದ್ಯ-೧:ಪದವಿಭಾಗ-ಅರ್ಥ: ಚೋರ ನಿಂದಿಸಿ ಶಶಿಯ ಬೈದಡೆ= ಕಳ್ಳನು ಬೆಳಕನ್ನು ಇಷ್ಟಪಡದೆ ಚಂದ್ರನನ್ನು ಕೆಟ್ಟದಾಗಿ ಬೈದರೆ, ಕ್ಷೀರವನು ಕ್ಷಯರೋಗಿ ಹಳಿದರೆ= ಕ್ಷಯರೋಗಿಯು ನಾಲಿಗೆ ಕೆಟ್ಟಿದ್ದರಿಂದ ಹಾಲನ್ನು ತೆಗಳಿದರೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೆ ಏನಹುದು= ನೆಡೆಯಲಾರದ ಹೆಳವನು ಕಾಶಿಕ್ಷೇತ್ರವನ್ನು ನಿಂದಿಸಿ ನಕ್ಕರೆ- ಕಾಶಿಗೆ ಕಳಂಕಬರಲಾರದು, ಭಾರತದ ಕಥನ ಪ್ರಸಂಗವ ಕ್ರೂರ ಕರ್ಮಿಗಳು ಎತ್ತ ಬಲ್ಲರು= ಹಾಗೆಯೇ ಭಾರತದ ಕಥೆಯ ಪ್ರಸಂಗವನ್ನು ದುಷ್ಟರು ಹೆಗೆ ತಿಳಿಯಬಲ್ಲರು- ತಿಳಿಯಲಾರರು. ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ= ಭಾರತವು ಅದನ್ನು ಕೇಳಿದ ಸಜ್ಜನರಿಗೆ ಕೆಟ್ಟ ನರಕವಾಸವನ್ನು ತಪ್ಪಿಸಬಲ್ಲದು.
- ಪದ್ಯ-೧:ಅರ್ಥ:ಕಳ್ಳನು ಬೆಳಕನ್ನು ಇಷ್ಟಪಡದೆ ಚಂದ್ರನನ್ನು ಕೆಟ್ಟದಾಗಿ ಬೈದರೆ, ಕ್ಷಯರೋಗಿಯು ನಾಲಿಗೆ ಕೆಟ್ಟಿದ್ದರಿಂದ ಹಾಲನ್ನು ತೆಗಳಿದರೆ ಏನು ಪ್ರಯೋಜನ? ಅದಕ್ಕೆ ಬೆಲೆಇಲ್ಲ. ನೆಡೆಯಲಾರದ ಹೆಳವನು ಕಾಶಿಕ್ಷೇತ್ರವನ್ನು ನಿಂದಿಸಿ ನಕ್ಕರೆ- ಕಾಶಿಗೆ ಕಳಂಕಬರಲಾರದು, ಹಾಗೆಯೇ ಭಾರತದ ಕಥೆಯ ಪ್ರಸಂಗವನ್ನು ದುಷ್ಟರು ಹೆಗೆ ತಿಳಿಯಬಲ್ಲರು- ತಿಳಿಯಲಾರರು.ಭಾರತವು ಅದನ್ನು ಕೇಳಿದ ಸಜ್ಜನರಿಗೆ ಕೆಟ್ಟ ನರಕವಾಸವನ್ನು ತಪ್ಪಿಸಬಲ್ಲದು.
- ವೇದ ಪುರುಷನ ಸುತನ ಸುತನ ಸ
- ಹೋದರನ ಹೆಮ್ಮಗನ ಮಗನ ತ
- ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
- ಕಾದಿ ಗೆಲಿದವನಣ್ಣನವ್ವೆಯ
- ನಾದಿನಿಯ ಜಠರದಲಿ ಜನಿಸಿದ
- ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ || ೨೩ ||
- ಪದ್ಯ-೧:ಪದವಿಭಾಗ-::ವೇದ ಪುರುಷನ ಸುತನ ಸುತನ ಸಹೋದರನ ಮೊಮ್ಮಗನ ಮಗನ ತಳೋದರಿಯ ಮಾತುಳನ ರೂಪನನು ಅತುಳ ಭುಜ ಬಲದಿ ಕಾದಿ ಗೆಲಿದವನ ಅಣ್ಣನ ಅವ್ವೆಯ
ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ (ಅಥವಾ -ಜನಿಸಿದನು ಆದಿ ಮೂರುತಿ) ಸಲಹೊ ಗದುಗಿನ ವೀರನಾರಯಣ.
- ಅರ್ಥ-:
ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ;
ಸುತನ -ನಾರದನ ; ಸಹೋದರನ - ಮರೀಚಿಯ ;
ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ)
(ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ )
ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ)
ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ
(ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ,
ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ;
ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ;
ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; )
ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ;
ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ;
ಕಾದಿ ಗೆಲಿದವನ - ಯುದ್ಧ ಮಾಡಿ ಗೆದ್ದವನ -ಭೀಮನ ; ಅಣ್ಣನ -ಯುಧಿಷ್ಠಿರನ ;
ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ
(ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ-
ನಾದಿನಿಯು -ವಸುದೇವನ ಪತ್ನಿ ದೇವಕಿ) ;
ನಾದಿನಿಯ ಜಠರದಲಿ ಜನಿಸಿದ -
ದೇವಕಿಯ ಗರ್ಭದಲ್ಲಿ ಜನಿಸಿದ ;
ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ )
ಸಲಹೊ - ಕಾಪಾಡು ; ಗದುಗಿನ ವೀರನಾರಯಣ -
ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ .[೧]
[೨][೩]
[೪] [೫] [೬] [೭]
- ವೇದಪುರುಷನ ಸುತನ ಸುತನ ಸ
- ಹೋದರನ ಹೆಮ್ಮಗನ ಮಗನ ತ
- ಳೋದರಿಯ ಮಾತುಳನ ಮಾವನನತುಳ ಭುಜಬಲದಿ ||
- ಕಾದಿ ಗೆಲಿದವನಣ್ಣನವ್ವೆಯ
- ನಾದಿನಿಯ ಜಠರದಲಿ ಜನಿಸಿದ
- ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ || ೨೩ ||
|