ಆದಿಪರ್ವ: ೦೭. ಏಳನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಏಳನೆಯ ಸಂಧಿ[ಸಂಪಾದಿಸಿ]

ಸೂ. ರಾಯ ಕಟಕಾಚಾರ್ಯನಿಂದ ವಿ
ಘಾಯದಲಿ ನೊಂದನಳ ಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ||

        ॐ
ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ |
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು

ಪಾಲಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ || (೧)
ಎಡ ಬಲದ ಮಯಣೌಮ ಹೊಳಪಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸುತಿಯ ಸರಳ ಸೋಹಿನಲಿ |
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡದೃಢಾಯಾತಿಕೆಗಿದು

ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ || (೨)
ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗೆಳೆವ ವಿದೂರ ಪಾತದಿ
ಗಗನ ಯಂತ್ರವನೆಸುವ ಜೋಕೆಯ ಜೋದ ವಿದ್ಯದಲಿ |
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವನಿಯ ದಂತಿಶಿಕ್ಷೆಗೆ

ಮಿಗಿಲು ಭಗದತ್ತಾದಿಗಳಿಗೆಗೆಂದುದು ಕುಮಾರಕರ || (೩)
ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ |
ಪ್ರಥಿತ ರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರ ನರರೊಳಿಲ್ಲೆಂದ || (೪)

ಇನಿಬರೊಳುಬಿಲುಗಾರನಾರ
ರ್ಜುನನೊಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಯಾಸನಾದಿಗಳೊ |
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ || (೫)

ಕಾಣದಾರದು ಲಕ್ಷ್ಯ ವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದಿರೈ ಹೊಣಿಸಿದಿರೈ ಹೂಡಿದಂಬಿನಲಿ |
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯಂಬೀ ಗುರುವಿಣನಕವ
ನಾಣಿಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ || (೬)
ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲ ವ್ಯಕನ |
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ || (೭)

ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ |
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ || (೮)

ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ |
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ (೯) ||

ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ಮಿಮಲ ವಿದ್ಯದಲಿ |
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ || (೧೦)

ಲೇಸನಂದರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ವವವಲೇ ತಪ್ಪಾವುದುಚಿತವಲೆ |
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ || (೧೧)

ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯದಲಿ |
ವೈದಿಕದಲೀ ನಿಮ್ಮವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈಸಲೆಯೆಂದನಾ ಭೀಷ್ಮ || (೧೨)

ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭ ದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿಸಿದರು |
ರಾಯನಾಜ್ಞೆಯೊಳಿಧ ಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ || (೧೩)

ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಹ
ಪುರವ ತತ್ವಾರ್ಶ್ವದಲಿ ಭಾರಿಯ ಭದ್ರ ಭವನಿಕೆಯ |
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ || (೧೪)

ನೆರೆದುದುಗಣಿತ ಕರಿ ತುರಂಗಮ
ವರವರೂಥಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂತತಿಯ |
ವರ ಮೂಹುರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನ ನಿಕರವೇನೆಂಬೆನದ್ಭುತವ || (೧೫)

ಸಂದಣಿಸಿ ನೃಪರಾಣಿ ವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದ ಗಣಿತ ಪುರವಧೂ ನಿಕುರಂಬವೊಗ್ಗಿನಲಿ || (೧೬)

ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಾಸಾಯಿತ ಸಚಿವ ಜನ ಸಹಿತ |
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣ ಕೋಟ || (೧೭)

ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನ ನಾ
ಲ್ವರು ಸಹಿತ ಯಮನಂದನರು ತಮ್ಮೆರಡು ಪಾರ್ಶ್ವದಲಿ |
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ || (೧೮)

ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೇನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ || (೧೯)

ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ |
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣಿ ಘಲ್ಲಿಸಿತು ಜಗವ || (೨೦)

ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ |
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ || (೨೧)
 
ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪ ವಿದ್ಯಾ
ನಿರತಿತಯಕೋಯೆಂದು ಗರ್ಜಿಸಿತಾ ಸಭಾ ಜಲಧಿ |
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರತು ಮೊದಲಾಖಿಳ ಶಸ್ತ್ರ ಶ್ರಮವ ತೋರಿಸಿದ || (೨೨)

ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ |
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು
ರ್ಮರುಪಣರು ತೋರಿದರು ಶ್ರಮವನು ನೂರ್ವರೊಗ್ಗಿ || (೨೩)

ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ಧೀರ್ಘಕವಿಂದನಿವನಿಂತೀತನಿವನೆಂದು |
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ || (೨೪)

ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಾಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ |
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ || (೨೫)

ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನ ಪ್ರಭೆಯ ಲಹರಿಯ ಲಾವಣಿಗೆ ಮಿಗಿಲು |
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ || (೨೬)
ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ತವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ |
ಭಾನುವಿನ ಭಾರಣಿಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ || (೨೭)
 
ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣಿಯಲಿ ದೆಖ್ಖಾ ಳದಲಿ ವೇಗಾಯ್ಲ ರೇಖೆಯಲಿ |
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ || (೨೮)
 
ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ |
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ || (೨೯)
 
ಧೀರರೇ ಜಗಜಟ್ಟಿ ರಾಜ ಕು
ಮಾರ ಚೌಪಟಮಲ್ಲ ಕುರುಕುಲ
ಕೈರವಾಮೃತ ಕಿರಣ ಧಿರು ಧಿರು ಭಲರೆ ಭಲರೆನುತ |
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿಹರಕೆ ತಳಿತುದು ತಾಯ ನೇಮದಲಿ || (೩೦)
 
ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ |
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ || (೩೧)
 
ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರಿದಿದಿರಹ ವಜ್ರಧರಂತೆ |
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ || (೩೨)
 
ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯಧದ ಪರಿ
ಪರಿಯ ಚಿತ್ರ ಶ್ರಮವ ಸಾಂಗೋಪಾಂಗ ಕೌಶಲವ |
ಕರಿ ತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ (೩೩)
 
ಕೋಲಗುರು ಚತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ |
ಮೇಳವಿಸಿತೆರಡO*ಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಿಧಿಕ ರೋಷದಲಿ || (೩೪)**
 
ಹೊಯ್ದ ರೊಡ್ಡಿದ ರಣದ ಮೊನೆಯಲಿ
ಹಾಯ್ದ ರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ |
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುಗಾರರು ಮಂದ ಖತಿಗಿದಿ
ರೈದುದೆನೆ ಹೊಯ್ದಾ ಡಿದರು ಕಲಿಭೀಮ ಕೌರವರು || (೩೫)
 
ಎಲೆಲೆ ಹಿಡಿಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋಧನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ |
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ || (೩೬)
 
ತೆಗೆದರೀತನನಿತ್ತ ಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ |
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ || (೩೭)











ಅಳಿಮಸಗಿದಂಬುಜದವೊಲ್ ಜನ
ಜಲಧಿ ಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ |
ಮೊಳಗಿದವು ಕಲ್ಪಾಂತ ಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ || (೩೮)
 
ಈತನಾರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ |
ಭೀತ ಕಳಕಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳೆಂದ (೩೯)
 
ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ |
ಪ್ರಾಣ ಪಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ || (೪೦)
 
ನಿಲುವಿನಲ್ಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ |
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ || (೪೧)

ತುರಗಚಯ ರೇವಂತ ಮದ ಕುಂ
ಜರ ಮಹಾದಿವಿಜೇಂದ್ರ ಪಥ ಸಂ
ಚರಣ ವರ ಮಾರ್ತಾಂಡಯೆಂದಬ್ಬರಿಸಿ ಜನ ನಿಕರ |
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ || (೪೨)
 
ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ |
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೋಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ || (೪೩)
 
ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದ್ದದ್ಭುತ ವಾರಿಯುಪಸಂಹರಿಸಿದನು ಮರಳಿ |
ಹಗಲ ನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸುರ್ಯಾಸ್ತ್ರದಲಿ ಬೆರಗಾಗೆ ಸುರನಿಕರ || (೪೪)
 
ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನೂರು ಭುಜಂಗವನನಿಲ ಶರದಲಿ ತೀವ್ರ ಮಾರುತನ |
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷ ಭಾರದಲಿ || (೪೫)
 
ಇವರ ಮುಖವರಳಿದವು ಗಂಗಾ
ಭಾವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧ್ರುತರಾಷ್ಟ್ರಾದಿ ಕೌರವರ |
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋಧನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ || (೪೬)
 
ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತು |
ಸಾಯಕವ ತಿರುಹುತ್ತಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ || (೪೭)
 
ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕರೆಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ |
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ || (೪೮)
 
ಆವ ವಿಧದಲಿ ಪಾರ್ಥ ತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣೌದಿಯನೈದೆ ವಿರಚಿಸಿದ |
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
 ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ || (೪೯)
 
ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ |
ಕಣಿ ಕಣಿಗಳಾಟದಲಿ ಶರ ಖಂ
ಡಣಿಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ || (೫೦)

ರಾಯ ಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋ ಣಾದ್ಯರು ಧನಂಜ |
ಆಯಿತೆಲವೋ ಕರ್ಣ ನೀನನು
ನಾಯಕನೋ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ || (೫೧)
 
ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ |
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರ ನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವ ಸಂಗತಿಯ || (೫೨)
 
ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣುಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ |
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ || (೫೩)
 
ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ |
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ || (೫೪)
 
ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗ ದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ |
ದರುಶನವಿತ್ತಖಿಳ ಭೂಮೀ
ಶ್ವರರು ಕಂಡುರು ಪೂರ್ವ ಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ || (೫೫)
 
ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ |
ಸೂತ ಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ || (೫೬)
 
ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯ ಗುರುಗಳ ತಾಯದಾವವಳೊ |
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ || (೫೭)
 
ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ |
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳೆಂದ || (೫೮)
 
ಕೆಲವರು ಭೀಮನನ ರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ |
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ || (೫೯)
 
ಏನಿರೈ ಕೂರುವಂಶನಳಿನೀ
ಭಾನುಗಳಿರ ವಿದಗ್ದ ಜನಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು |
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವ ನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ || (೬೦)
 
ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು |
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ || (೬೧)
 
ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬವನತುಳ ಭುಜಬಲನು |
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದ ನೃ
ಪಾಲಕನ ಪಿಡಿದೊಪ್ಪಿಸಿದರೆಮಗಹುದು ಪರಿತೋಷ || (೬೨)
 
ಐಸಲೇ ಗುರುದಕ್ಷಿಣಾರ್ಥ ವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈ ವೊಯ್ದು ತಮ್ಮೊಳು ನಗುತ ಕೌರವರು |
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿ ಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ || (೬೩)
 
ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ |
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು || (೬೪)
 
ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಭ ಕಂಪಿತ ಖಡ್ಗ ಪಾಣಿಗಳು |
ಗುರುಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ || (೬೫)
 
ಆತು ಕೊಂಡುರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ |
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುಟ್ಟಿದರು ಗುರುಗಳಿ
ಗೀತನೇ ದಕ್ಷಿಣಯೆನುತ ಹಿಡಿದರು ಮಹೀಪತಿಯ || (೬೬)
 
ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ |
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನೆ ಮಾಡುವೆನೆಂದನಾ ದ್ರೋಣ || (೬೭)
 
ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರ ದೇಶದಲಿ |
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ಪೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ || (೬೮)
 
ದ್ರೋಣ ಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣ ನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಬಾಣಸಿಗಗುಣಬಡಿಸೆ ದೇವ
ಶ್ರೇಣಿ ದಣಿದುದು ಸಲಿಸಿದರು ಪಾಂಚಾಲನಭಿಮತವ || (೬೯)
 
ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆರಕಿದರೊ ಭಾ
ಸುರ ಮಹಾನಲನಪರ ರೂಪೋ ತನಿದೇನೆನಲು |
ಶರವಡಾಯುಧ ಚಾಪ ವರ್ವೋ
ತ್ಕರಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲಭೂಪತಿಭುಜವ ಸೂಳೈಸೆ || (೭೦)

ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ ಮೋಹನ ಮಂತ್ರ ದೇವತೆಯೊ |
ಕಾದುವರೆ ಕರೆ ಹರಿ ಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗ ದ್ರುಪದಾತ್ಮಜೆಯ ಜನನದಲಿ || (೭೨)
 
ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳೆಂದ || (೭೩)
 
ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿದ ದ್ರುಪದ ಭೂಪಾಲ |
ದುಗುಡದಲಿ ಕುರು ರಾಯನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳೆಂದ || (೭೪)

♦♦♦♦♦♦♦♦♦

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ