ಆದಿಪರ್ವ: ೧೮. ಹದಿನೆಂಟನೆಯ ಸಂಧಿ
ಆದಿಪರ್ವ – ಹದಿನೆಂಟನೆಯ ಸಂಧಿ
[ಸಂಪಾದಿಸಿ]ಸೂ. ದಾಯ ಭಾಗದೊಳಖಿಳ ರಾಜ್ಯ
ಶ್ರೀಯ ಹಸುಗೆಯ ಕೊಂಡು ಪಾಂಡವ
ರಾಯರೊಪ್ಪಿದರಿಂದ್ರ ನಿರ್ಮಿತ ರಾಜಧಾನಿಯಲಿ ||ಸೂಚನೆ||
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವಜರು ಸಮ
ಪಾಳಿಗಳ ಸೇರುವೆಯೊಳಿದ್ದರು ಸಾನುರಾಗದಲಿ
ಖೇಳಮೇಳದ ಬೇಟೆಗಳ ವೈ
ಹಾಳಿಗಳ ಜೂಜಿನ ಸಮಂಜಸ
ಲೀಲೆಗಳ ಕೇಳಿಯಲಿ ಕಳೆದರು ವರುಷ ಪಂಚಕವ ೧
ಕರೆಸಿದನು ಧೃತರಾಷ್ಟ್ರ ಭೂಪತಿ
ಮುರಹರನ ದ್ರುಪದನ ಯುಧಿಷ್ಠಿರ
ನರ ವೃಕೋದರ ಭೀಷ್ಮ ಗುರು ಕೃಪ ಕರ್ಣ ಶಕುನಿಗಳ
ಎರಡು ಭಾಗವ ಮಾಡಿ ವಿಶ್ವಂ
ಭರೆಯ ರಾಜ್ಯವನುಭಯ ರಾಯರು
ಹೊರೆ ಹೊಗದೆ ಪಾಲಿಸಲಿ ಪಂಥದೊಳೆಂದನಂಧ ನೃಪ ೨
ಅಹುದು ಹೊಲ್ಲೆಹವಲ್ಲ ಖುಲ್ಲರ
ಕುಹಕ ಕೊಳ್ಳದು ಬೇರೆ ರಾಜ್ಯದೊ
ಳಿಹರೆ ಸೇರುವೆ ದೃಢವಹುದು ದಾಯಾದ ಮಾರ್ಗದಲಿ
ಗಹನವೇಕಾಮಿಷ ಸಮುದ್ಭವ
ದಹಿತತನದುತ್ತರಣವತಿ ದು
ಸ್ಸಹವಲೇ ನೀ ನೆನೆದ ಹದ ಲೇಸೆಂದನಾ ಭೀಷ್ಮ ೩
ಅರಸ ಕೇಳೈ ಸಕಲ ರಾಜ್ಯವ
ನೆರಡು ಭಾಗವ ಮಾಡಿ ಪೂರ್ವೊ
ತ್ತರದ ದಕ್ಷಿಣ ಪಶ್ಚಿಮಂಗಳ ಹೆಚ್ಚು ಕುಂದುಗಳ
ಪುರನಗರ ಖರ‍್ವಟ ಮಡಂಬ
ಸ್ಫುರಿತ ಖೇಟ ಗ್ರಾಮವೆಂಬವ
ನೆರಡು ಭಾಗವ ಮಾಡಿದರು ಕೂಡಿದರು ಸಮವಾಗಿ ೪
ಪುರ ಸುರೇಂದ್ರ ಪ್ರಸ್ಥವರಸಂ
ಗಿರವು ಧರ್ಮಸುತಂಗೆ ಹಸ್ತಿನ
ಪುರ ಸುಯೋಧನಗುಭಯರಾಯರ ರಾಜಧಾನಿಗಳು
ಚರಮ ದಕ್ಷಿಣವಾಗಿ ಪೂರ್ವೋ
ತ್ತರ ವಿಲಂಬಿತವಾಗಿ ಹಿಮ ಸಾ
ಗರದ ಮಧ್ಯದ ಭೂಮಿಯನು ಸೇರಿಸಿದರೆರಡಾಗಿ ೫
ವಾರಣ ಪ್ರತತಿಯನಘಾಟದ
ವಾರುವಂಗಳ ಮಣಿಮಯದ ಹೊಂ
ದೇರುಗಳನಾಭರಣವನು ತೆಗೆಸಿದರು ಸಮವಾಗಿ
ಕೌರವರು ಪಾಂಡವರುಗಳ ಮನ
ದೋರೆ ಪೋರೆಯ ತಿಳುಹಿ ವೈರವಿ
ಕಾರವನು ಬಿಡಿಸಿದರು ಭೀಷ್ಮಾದಿಗಳು ಹರುಷದಲಿ ೬
ಬಳಿಕ ಸುಮುಹೂರ್ತದಲಿ ಹೊರಗುಡಿ
ಬಳಸಿ ಹೊಯಿದವು ರಾಣಿವಾಸದ
ನಿಳಯನಿಳಯದ ತಳಿಗೆದಂಬುಲ ಮಂಗಳಾರ್ತಿಗಳ
ಫಲಸಮೂಹದ ಕಾಣಿಕೆಯ ಕೈ
ಗೊಳುತ ಗಾಂಧಾರಿಗೆ ಮಹೀಶನ
ಲಲನೆಯರಿಗಭಿನಮಿಸಿ ಕಳುಹಿಸಿಕೊಂಡರುಚಿತದಲಿ ೭
ಕಳುಹಲೈತಂದಂಧ ನೃಪತಿಯ
ನಿಲಿಸಿದರು ನಿಳಯದಲಿ ಕೌರವ
ಕುಲದ ನೂರ್ವರ ಕರ್ಣ ಶಕುನಿ ಜಯದ್ರಥಾದಿಗಳ
ನಿಲಿಸಿದರು ಗಜಪುರದ ಯೋಜನ
ದಳತೆಯಲಿ ಗುರುಭೀಷ್ಮ ವಿದುರರು
ಕೆಲವು ಪಯಣವ ಬಂದು ಕಳುಹಿಸಿಕೊಂಡರುಚಿತದಲಿ ೮
ಭೂಮಿ ಲಂಬದ ನೃಪರ ಬಲದು
ದ್ದಾಮ ವಿಭವದೊಳಸುರರಿಪು ಸಹಿ
ತೀ ಮಹೀಪಾಲಕರು ಬಂದರು ಹಲವು ಪಯಣದಲಿ
ರಾಮಣೀಯಕ ರಚನೆಯಲಿ ಸು
ತ್ರಾಮ ನಗರಿಯ ಸೂತ್ರಧಾರೆಯ
ಲಾ ಮನೋಹರ ವಿಶ್ವಕರ್ಮ ವಿನಿರ್ಮಿತದ ಪುರಕೆ ೯
ಧರಣಿಪತಿ ಚಿತ್ತೈಸಿಳಾವೃತ
ವರುಷ ಮಧ್ಯದ ಹೇಮಗಿರಿಯವೊ
ಲರಮನೆಯ ಸಿರಿ ಸೋಲಿಸಿತು ಸುರರಾಜ ವೈಭವವ
ಹರಿಯ ವೀಧಿಯ ಸೋಮ ವೀಧಿಯ
ಮುರಿವುಗಳ ಕೇರಿಗಳ ನೆಲೆಯು
ಪ್ಪರಿಗೆಗಳ ಹೊಂಗೆಲಸದಲಿ ಹೊಳೆಹೊಳೆದುದಾ ನಗರ ೧೦
ಹೇಮ ನಿರ್ಮಿತ ದೇವಸದನ
ಸ್ತೋಮದಲಿ ಮಣಿಮಯದ ಫಣಿಪನ
ಹೇಮ ವಿಧಿಯಲಿ ವಿವಿಧ ರತ್ನಾವಳಿಯ ಹಸರದಲಿ
ಕಾಮರಿಪುವಿಂಗೊರೆಯ ಕಟ್ಟುವ
ವಾಮಲೋಚನೆಯರ ವಿಲಾಸದ
ಲಾ ಮಹಾಪುರವೆಸೆದುದಿಂದ್ರಪ್ರಸ್ಥ ನಾಮದಲಿ ೧೧
ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಮದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದೊಳಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳೆಂದ ೧೨
ಬಂದು ಕಂಡುದು ಸಕಲ ಪುರಜನ
ವಂದು ಕಾಣಿಕೆಯಿತ್ತು ಸುಭಟರ
ಸಂದಣಿಯ ಗಜ ಹಯ ರಥದ ಪದಧೂತ ಧೂಳಿಯಲಿ
ಮಂದಿರದ ಬಾಗಿಲ ಗತಾಗತ
ವೃಂದದೊತ್ತೊತ್ತೆಯಲಿ ಪುರಜನ
ನಿಂದುದಲ್ಲಿಯದಲ್ಲಿ ಪಡೆಯದೆ ರಾಜದರ್ಶನವ ೧೩
ಅತಿಶಯವನೇನೆಂಬೆನಮರಾ
ವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕ ರತುನದಂತಿರೆ ಮೆರೆದುದಾ ನಗರ
ಸತತವೀ ಪರಿ ವಿಭವವೀ ಜನ
ವಿತತಿಗಳ ಸನ್ಮಾರ್ಗದಲಿ ಸಂ
ಗತಿಗಳೀ ವಿಸ್ತಾರವೀ ಪರಿ ಭೂಪ ಕೇಳೆಂದ ೧೪
ದ್ರುಪದ ಧೃಷ್ಟದ್ಯುಮ್ನ ಮೊದಲಾ
ದಪರಿಮಿತ ಬಾಂಧವ ನಿಕಾಯವ
ನುಪಚರಿಸಿ ಕಳುಹಿದನು ಭೂಪತಿ ಪಂಚಕೈಕೆಯರ
ವಿಪುಳ ಕಾರುಣ್ಯದಲಿ ಪಾಂಡವ
ನೃಪ ಜನವ ಸಂತೈಸಿ ದಾನವ
ರಿಪು ನಿಜಾವಾಸಕ್ಕೆ ಬಿಜಯಂಗೈಯಲನುವಾದ ೧೫
ಕರೆಸಿ ಕುಂತಿಯ ದ್ರೌಪದಿಯರನು
ಕರಣ ವಚನಾಮೃತದ ರಸದಲಿ
ಹೊರೆದು ಕೃತದಾಯಾದ ವಿಷಯ ವಿರೋಧವರ್ತನವ
ಅರುಹಿ ಸುಯ್ದಾನದ ಸಮಾಹಿತ
ತರದ ಬುದ್ಧಿಯಗಲಿಸಿ ಯಾದವ
ರರಸ ಬಿಜಯಂಗೈದನಾ ದ್ವಾರಕಿಗೆ ಹರುಷದಲಿ ೧೬
ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡು ಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳೆಂದ ೧೭
ಯಾಗವಹ್ನಿಯ ಧೂಮದಲಿ ದಿಗು
ಭಾಗ ವಿವರಣವಡಗಿತು ಹವಿ
ರ್ಭಾಗ ಭೋಜನದಿಂದಲಾದುದಜೀರ್ಣವಮರರಿಗೆ
ಯಾಗ ದಕ್ಷಿಣೆಗಳಲಿ ಬಹಳ
ತ್ಯಾಗ ದಾನಕೆ ಲಟಕಟಿಸಿ ತಾ
ವಾಗಿ ಕೈಯಾನರು ಯುಧಿಷ್ಠಿರನೃಪನ ರಾಜ್ಯದಲಿ ೧೮
ಬಲಿಯ ನಹುಷನ ದುಂದುಮಾರನ
ನಳನ ಸಗರನ ನೃಗನ ಶಾಕುಂ
ತಳನ ಪುರು ಕುತ್ಸನ ಹರಿಶ್ಚಂದ್ರನ ಪುರೂರವನ
ಇಳೆಯ ವಲ್ಲಭರೆನಿಪ ರಾಜಾ
ವಳಿಯ ಮನಮೆಚ್ಚುಗಳನುರ್ವೀ
ಲಲನೆ ಮರೆದಳು ಮೆರೆದಳಾ ಧರ್ಮಜನ ರಾಜ್ಯದಲಿ ೧೯
ಆದಿಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾ ಪ್ರಭಾವದಲಿ
ಪಾದವೆರಡಡಗಿದವು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ ೨೦
ಅರಸ ಚಿತ್ತೈಸಾ ಯುಧಿಷ್ಠಿರ
ನರಪತಿಯ ರಾಜ್ಯಪ್ರಭಾವೋ
ತ್ಕರುಷ ವಿಸ್ತರವೇನನೆಂಬೆನು ಸಾಕದಂತಿರಲಿ
ಪರಮ ವಿಭವದೊಳೊಂದು ದಿನವೈ
ವರು ನಿಜಾಸ್ಥಾನದಲಿ ಹರಿ ವಿ
ಷ್ಟರದೊಳಿರ್ದರು ಕಂಡರತಿ ದೂರದಲಿ ನಾರದನ ೨೧
ಬಂದನಿವರೋಲಗಕೆ ಗಗನದಿ
ನಿಂದು ಮಂಡಲವಿಳಿವವೊಲ್ ನೃಪ
ವೃಂದವೆದ್ದಭಿನಮಿಸಿದುದು ಪದಯುಗಕೆ ಮುನಿಪತಿಯ
ಇಂದು ಧನ್ಯರು ನಾವಲಾ ಮುನಿ
ವಂದ್ಯ ದರ್ಶನವಾಯ್ತು ಪೂರ್ವವಿ
ದೆಂದು ಕುಂತೀ ತನುಜರಿದಿರೆದ್ದಂಘ್ರಿಗೆರಗಿದರು ೨೨
ಹರಸಿದನು ಮುನಿಯರ್ಘ್ಯಪಾದ್ಯೋ
ತ್ಕರವ ಮಧುಪರ್ಕಾಸನಾದಿಯ
ನರಸ ಮಾಡಿದನಮರಮುನಿ ಕೈಕೊಂಡು ಹರುಷದಲಿ
ಪರಿಮಿತದ ಸಮಯದ ವಚೋ ವಿ
ಸ್ತರಣವುಂಟೆನೆ ರಾಯನೋಲಗ
ಹರಿದುದವನೀಪಾಲ ಬಿನ್ನಹ ಮಾಡಿದನು ಮುನಿಗೆ ೨೩
ಏನು ಬಿಜಯಂಗೈದ ಹದನೆನ
ಗೇನನುಗ್ರಹ ವಚನ ನಿಮ್ಮಡಿ
ಗೇನನಾ ಬೆಸಗೈವುದೆನಗಾಜ್ಞಾಪಿಸುವುದೆನಲು
ನೀನಘಾಟದ ರಾಜಋಷಿ ನೀ
ಮಾನವನೆ ಧರ್ಮಸ್ವರೂಪನು
ನೀನು ಭವದಾಲೋಕನಾರ್ಥವು ನಮ್ಮ ಬರವೆಂದ ೨೪
ಅನುಜರು ಹೇಳುವರೆ ಭೀಮಾ
ರ್ಜುನರು ವಧುವಾರೆಂಬರಮರಾಂ
ಗನೆಯರಿಗೆ ನೂರೆಂಟು ಮಡಿಯಿ ದ್ರೌಪದಾದೇವಿ
ಘನ ಸಹಾಯನು ಹವಣಿನವನೆಂ
ಬೆನೆ ಚತುರ್ದಶಭುವನಪತಿ ನೃಪ
ನಿನಗೆ ಪಾಡೇ ಪನ್ನಗೇಂದ್ರ ಸುರೇಂದ್ರರಿಂದಿನಲಿ ೨೫
ಆದಡೊಂದಿಹುದೈವರಿಗೆ ವಧು
ವಾದಳೀ ದ್ರೌಪದಿ ಮಹೇಶ್ವರ
ನಾದಿಯಲಿ ಕರುಣಿಸಿದ ವರದಲಿ ಪುಣ್ಯ ಕಥನವಿದು
ಮೇದಿನಿಯೊಳೇಕಾಮಿಷ ಸ್ಥಿತಿ
ಯಾದಿಯಿದು ವಿಗ್ರಹಕೆ ತಮ್ಮೊಳು
ಕಾದಿದರು ಸುಂದೋಪಸುಂದರು ಭೂಪ ಕೇಳೆಂದ ೨೬
ಅರಸುಗಳು ತಾವಿಬ್ಬರೇಕೋ
ದರರು ಬಲುಗೈಗಳು ಸುರಾಸುರ
ನರರೊಳಡುಪಾಯೆಯಲಿ ವೆಂಠಣಿಸಿದರು ಭೂತಳವ
ನೆರೆದು ಸುರರು ಸರೋಜ ಪೀಠಂ
ಗರುಹಿದರು ಬಳಿಕಾತನಿವರನು
ಪರಿಹರಿಸುವುದಕೇನುಪಾಯವೆನುತ್ತ ಚಿಂತಿಸಿದ ೨೭
ಬಳಿಕಸಂಖ್ಯಾತದ ಸುರೋರಗ
ಲಲನೆಯರಲಿ ತಿಲಾಂಶಮಾತ್ರದ
ಚೆಲುವಿಕೆಯನೇ ತೆಗೆದು ನಿರ‍್ಮಸಿದನು ವರಾಂಗನೆಯ
ಬೆಳಗಿತಾಕೆಯ ಹೆಸರು ದಿವಿಜಾ
ವಳಿಯೊಳೈದೆ ತಿಲೋತ್ತಮಾಹ್ವಯ
ದಳಿಕುಲಾಳಕಿಗಬುಜಭವ ನೇಮಿಸಿದನೀ ಹದನ ೨೮
ಅವರ ಕೆಡಿಸುವ ಹದನ ಕೈಕೊಂ
ಡವನಿಗೈತಂದಳು ವಿನೋದದೊ
ಳಿವದಿರಿದ್ದರು ಬನದೊಳಗೆ ಮದಿರಾ ಮದೋದ್ಧತರು
ಯುವತಿಯನು ಕಂಡರು ಕಟಾಕ್ಷದ
ಸವಡಿಗೋಲಿಂದೊಡೆದುದೆದೆ ಹರಿ
ದವರು ಹಿಡಿದರು ವಾಮ ದಕ್ಷಿಣ ಕರಗಳಂಗನೆಯ ೨೯
ಎನಗೆ ವಧು ತಾ ಮುನ್ನ ಕಂಡೆನು
ತನಗೆ ಸತಿ ತಾ ಮುನ್ನ ಹಿಡಿದೆನು
ತನಗೆನಗೆ ನೀ ನಿಲ್ಲು ನೀ ನಿಲ್ಲೆನುತ ಹೊಯ್ದಾಡಿ
ಜನಪರಿಬ್ಬರು ಮಡಿಯಲಮರಾಂ
ಗನೆ ಮುಗುಳ್ನಗೆ ನಗುತಲಬುಜಾ
ಸವನ ಹೊರೆಗೈದಿದಳು ಕುಂತೀತನುಜ ಕೇಳೆಂದ ೩೦
ಅದರಿನೀ ಜೀವರಿಗೆ ದುಸ್ಥಿತಿ
ಸುದತಿಯರ ದೆಸೆಯಿಂದ ರಾಜ್ಯದ
ಹುದುವಿನಲಿ ಮೇಣರ್ಥಗತಿಯಲನರ್ಥ ತಪ್ಪದಲೆ
ಸುದತಿ ನಿಮ್ಮೈವರಿಗೆಯಿ ದ್ರೌ
ಪದಿ ಮಹಾಸತಿ ರಾಗ ಲೋಭದ
ಕದನದಲಿ ಕಾಳಾಗದಿದ್ದರೆ ತುದಿಗೆ ಲೇಸೆಂದ ೩೧
ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿ ಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದಡೆ ಬಳಿಕದಕೆ ಪ್ರಾಯಶ್ಚಿತ್ತ ವಿಧಿಯುಂಟು ೩೨
ಆರು ಕಂಡರು ಆತನೊಬ್ಬನೆ
ಧಾರುಣಿಯಲಿ ಸುತೀರ್ಥ ಯಾತ್ರಾ
ಭಾರದಲಿ ತಿರುಗುವುದು ಸುತ್ತಲು ವರುಷವೊಂದರಲಿ
ಚಾರು ನಿಷ್ಕೃತಿಯೆನಲು ಮುದದಲಿ
ನಾರದನ ದಿವ್ಯೋಪದೇಶಕೆ
ಸಾರಹೃದಯ ಹಸಾದವೆಂದನು ತಮ್ಮದಿರು ಸಹಿತ ೩೩
ಮಂಗಳವು ನಿಮಗೆಂದು ಹಂಸೆಯ
ಬೆಂಗೆ ಹಾಯ್ದನು ಬಳಿಕ ನಭದೊಳ
ಭಂಗ ಮುನಿಯಡಗಿದನು ತಮ್ಮೊಳಗೆಂದರೀ ನೃಪರು
ಅಂಗನಾ ವಿಷಯದಲಿ ಸೀಮಾ
ಸಂಗತಿಯ ಸೇರಿಸಿದನೈ ಮುನಿ
ಪುಂಗವನ ಕರುಣದಲಿ ಗದುಗಿನ ವೀರ ನಾರಯಣ ೩೪
ನೋಡಿ
[ಸಂಪಾದಿಸಿ]ಆದಿಪರ್ವ ಸಂಧಿಗಳು>: | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ |
> | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ೧೯ | ೨೦ |
ಪರ್ವಗಳು
[ಸಂಪಾದಿಸಿ]ಕುಮಾರವ್ಯಾಸ ಭಾರತ | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ